ಸಂಕೀರ್ಣ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ‘ಜಾತಿ ಪದ್ಧತಿ’ ಅನೇಕ ಒಳಿತು ಕೆಡುಕುಗಳನ್ನು ಹೊಂದಿದೆ. ಸಾವಿರಾರು ಪಂಥ, ವರ್ಗವ್ಯವಸ್ಥೆ, ಜಾತಿಗಳಾಗಿ ಒಡೆದು ಹೋಗಿರುವ ಭಾರತೀಯ ಸಮಾಜ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳುವುದಕೋಸ್ಕರ ವ್ಯವಸ್ಥಿತವಾಗಿ ಜಾತಿ ವ್ಯವಸ್ಥೆಯನ್ನು ಅನುಸರಿಸುತ್ತಿದೆ ಎಂದು ಭಾಸವಾಗುತ್ತದೆ. ಬಹುಶಃ ಮೇಲು – ಕೀಳು ಎಂಬ ವರ್ಗ ವಿಭಜನೆಯಿಂದ ಗುಲಾಮಗಿರಿಗೆ ತನ್ನನ್ನು ತೆರೆದುಕೊಂಡಿತು ಭಾರತೀಯ ಸಮಾಜ. ಹೀಗೆ ಉಚ್ಚವರ್ಣೀಯರು ನಿಮ್ನ ವರ್ಗದವರನ್ನು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡು ‘ಜೀತ ಪದ್ಧತಿಗೆ’ ನಾಂದಿ ಹಾಡಿದರು. ಇದರ ಕರಾಳ ಛಾಯೆ ದೇಶದಾದ್ಯಂತ ಪಸರಿಸಿದ್ದು, ಸಾವಿರಾರು ಜನರ ಬದುಕನ್ನು ಹೀನಾಯ ಸ್ಥಿತಿಗೆ ದೂಡಿದ್ದು ಇತಿಹಾಸದ ದುರಂತ. ಆಂಗ್ಲರ ಆಗಮನದ ನಂತರವೂ ಜೀತ ಪದ್ಧತಿ ಬದಲಾವಣೆಗೆ ಸ್ಪಂದಿಸದೆ ಇದ್ದುದು ವಿಪರ್ಯಾಸ. ಹಾಗಿದ್ದರೂ ಇಡೀ ಭಾರತವನ್ನು ಮುಖ್ಯ ಭೂಮಿಕೆಯನ್ನಾಗಿ ತೆಗೆದುಕೊಂಡರೆ ‘ಗುಲಾಮಗಿರಿ’ ಎಲ್ಲಾ ಪ್ರದೇಶಗಳಲ್ಲಿ ಏಕ ಪ್ರಕಾರವಾಗಿ ಹಂಚಿಹೋಗಿಲ್ಲ ಎಂಬುದು ತಿಳಿಯುತ್ತದೆ. ಹಾಗೇನೆ, ಜಾತಿ ವ್ಯವಸ್ಥೆ – ಜೀತ ಪದ್ಧತಿ ಒಂದೇ ತೆರನಾಗಿಲ್ಲ ಎಂಬುದು ಗಮನಾರ್ಹ. ಕರ್ನಾಟಕ ಕರಾವಳಿಯುದ್ದಕ್ಕೂ ಭಿನ್ನ ರೀತಿಯ ಗುಲಾಮಗಿರಿಯನ್ನು ಗುರುತಿಸಬಹುದು. ಈ ನಿಟ್ಟಿನಲ್ಲಿ ೧೯ ನೇ ಶತಮಾನದಲ್ಲಿ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿದ ವಿದೇಶೀ ಪ್ರವಾಸಿಗರ ದಾಖಲೆಗಳು, ಅಧಿಕಾರಿಗಳ ದಾಖಲೆಗಳನ್ನು ಪರಿಶೀಲಿಸಿದಾಗ ತುಳುನಾಡಿನಲ್ಲಿ ಅಸ್ತಿತ್ವದಲ್ಲಿದ್ದ ಗುಲಾಮಗಿರಿಗೆ ಸ್ಪಷ್ಟ ವ್ಯಾಖ್ಯಾನ ನೀಡಬಹುದೇನೋ!

ಮುಖ್ಯವಾಗಿ ಕರಾವಳಿ ತೀರ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದಂತಹ, ಗುಲಾಮಗಿರಿ ಜಾತಿ ಪದ್ಧತಿಯೊಂದಿಗೆ ಸಮ್ಮಿಳಿತಗೊಂಡಿದೆ. ಈ ಸಮಸ್ಯೆಯತ್ತ ನಿಖರವಾದ ದೃಷ್ಟಿಕೋನ ಬೀರಲು ಸಾಧ್ಯವಾಗದೇ ಇದ್ದರೂ, ಕೆಳಸ್ತರ ಕೃಷಿ ಕಾರ್ಮಿಕರು ಮತ್ತು ಅವರತ್ತ ಅಧ್ಯಯನ ನಡೆಸಿದಾಗ ಆ ಕಾಲದ ಸಾಮಾಜಿಕ ರಚನೆಹಾಗೂ ಆರ್ಥಿಕತೆಯ ಅರಿವಾಗುವುದು. ಈ ರೀತಿಯ ಸಾಮಾಜಿಕ ಸ್ತರ ವಿನ್ಯಾಸ ಈ ಭಾಗದಲ್ಲಿ ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವುದನ್ನು ಗುರುತಿಸಬಹುದಾಗಿದೆ. ಗುಲಾಮಗಿರಿಯ ನಿರ್ಮೂಲನೆಗೆ ಜಾರಿಗೊಳಿಸಿದ ಸುಧಾರಣೆಗಳು ಕೇವಲ ಈ ಕೆಟ್ಟ ಸಮಸ್ಯೆಯನ್ನು ಹೋಗಲಾಡಿಸುವುದಲ್ಲದೆ, ಸಾಮಾಜಿಕವಾಗಿ ಬಹಿಷ್ಕೃತಗೊಂಡ ಅತ್ಯಂತ ಕೆಳಸ್ತರ ಹಿಂದೂ ವರ್ಗದ ಅಭಿವೃದ್ಧಿಯ ಸಾಧ್ಯತೆಯನ್ನು ಪ್ರತಿನಿಧಿಸುವುದು. ಈ ಲೇಖನದಲ್ಲಿ ತುಳುನಾಡಿನಲ್ಲಿದ್ದ ಗುಲಾಮಗಿರಿ ಪದ್ಧತಿಯ ಸ್ವರೂಪವನ್ನು ಮತ್ತು ಅದನ್ನು ನಿರ್ಮೂಲನ ಮಾಡಲು ೧೯ನೇ ಶತಮಾನದ ಬ್ರಿಟಿಷ್ ಆಡಳಿತ ಕೈಗೊಂಡು ಸುಧಾರಣಾ ಕ್ರಮಗಳನ್ನು ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.

ಒಂದರ್ಥದಲ್ಲಿ ಬ್ರಿಟಿಷ್ ಸಾಮಾಜಿಕ ಸುಧಾರಣೆಯು ಆಸಕ್ತಿದಾಯಕವಾಗಿರುವುದು ಏಕೆಂದರೆ, ಅದು ಆಳುವ ವರ್ಗ ಮತ್ತು ಆಳಲ್ಪಡುವವರ ನಡುವಿನ ಸಂಬಂಧದ ಕುರಿತು ಸ್ಪಷ್ಟ ಮಾಹಿತಿ ನೀಡುತ್ತದೆ. ಹಾಗೇನೆ, ಈ ಎರಡು ಗುಂಪುಗಳ ಪ್ರಭಾವವನ್ನು ಸೂಚ್ಯವಾಗಿ ತಿಳಿಸುತ್ತದೆ. ಬ್ರಿಟಿಷರ ಆಳ್ವಿಕೆಯ ಸ್ಥಾಪನೆ ಕೇವಲ ಪಾಶ್ಚಿಮಾತ್ಯ ಪರಿಕಲ್ಪನೆ ಮತ್ತು ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಸ್ಥಾಪಿಸುವುದರ ಪ್ರಭಾವ ಬೀರುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಈ ಮಣ್ಣಿನಲ್ಲಿ ಪ್ರಚಲಿತದಲ್ಲಿದ್ದ ಸಂಸ್ಕೃತಿ – ಸಂಪ್ರದಾಯಗಳು ಬ್ರಿಟಿಷ್ ಅಧಿಕಾರಿಗಳ ಮೇಲೆ ಸಾಕಷ್ಟು ಪ್ರಭಾವ ಆಗಿದೆ.  ಕಾಲ ಸರಿದು ಹೋದಂತೆ ಇಲ್ಲಿವೈದಿಕ (ಹಿಂದೂ) ಸಂಸ್ಕೃತಿಕ  ಕೊಡುಗೆಗಳಾದ ಸಾಮಾಜಿಕ ನೆಲೆಯಲ್ಲಿ ಆಚರಣೆಯಲ್ಲಿದ್ದ ಅನಿಷ್ಟ ಪದ್ಧತಿಗಳು, ಕ್ರೂರ ಆಚರಣೆಗಳು ಬ್ರಿಟಿಷ್ ಬುದ್ಧಿ ಜೀವಿಗಳ ಗಮನಕ್ಕೆ ಬಾರದೇ ಇರಲಿಲ್ಲ. ಹಾಗೂ ಹೆಚ್ಚೆಚ್ಚು ಭಾರತೀಯ ಸಂಸ್ಕೃತಿಯ ಅರಿವಾಗುತ್ತಿದ್ದಂತೆ ಆಶ್ಚರ್ಯಚಕಿತರಾಗಿದ್ದರೆಂಬುದು ಉಲ್ಲೇಖನೀಯ. ಇದನ್ನು ಗಮನದಲ್ಲಿಟ್ಟುಕೊಂಡು ಬ್ರಿಟಿಷ್ ಆಡಳಿತ ಈ ಭಾಗದಲ್ಲಿ ನೆರವೇರಿಸಬಹುದಾದ ಯೋಜನೆಗಳನ್ನು ರೂಪಿಸಲು ಪ್ರಯತ್ನಗಳನ್ನು ಬ್ರಿಟಿಷ್ ಅಧಿಕಾರಿಗಳು ಮಾಡಿರುವುದು ನಿಯಮಗಳು ಸಡಿಲಗೊಳ್ಳುತ್ತಿದ್ದಂತೆ, ಒರಿಯಂಟಲಿಸ್ಟ್‌ಸ್ಕೂಲ್‌ಗೆ ಸೇರಿದ ಅನೇಕ ಬ್ರಿಟಿಷ್ ನಾಗರಿಕ ಸೇವೆಯಲ್ಲಿನ ಅಧಿಕಾರಿಗಳು ಇಲ್ಲಿನ ಸಂಸ್ಕೃತಿಯ ಅಧ್ಯಯನದ ಕುರಿತು ವಿಶೇಷವಾದ ಆಸಕ್ತಿ ತೋರಲು ಉತ್ಸುಕರಾದರು. ಭಾರತದ ಉದ್ದಗಲಕ್ಕೂ ಬ್ರಿಟಿಷರ ನಿಯಂತ್ರಣ ವೃದ್ಧಿಸುತ್ತಿದ್ದಂತೆ, ಕಂಪನಿ ಆಡಳಿತ ರೂಪಿಸುವ ಎಲ್ಲಾ ನೀತಿಗಳ ಮೇಲೆ ಆಂಗ್ಲಿಕರ ಗುಂಪು  ತನ್ನ ಪ್ರಭಾವವನ್ನು ವ್ಯಕ್ತಪಡಿಸಲು ಸನ್ನದ್ಧವಾಯಿತ್ತು. ಬಹುಶಃ ಕಂಪೆನಿ ಆಡಳಿತದ ಒಂದು ಮುಖ್ಯವಾದ ಲಕ್ಷಣವೆಂದರೆ ಬ್ರಿಟಿಷರು ಸಾಮಾಜಿಕ ಪರಿವರ್ತನೆಗೆ ಸಂಬಂಧಿಸಿ ಅಭಿವೃದ್ಧಿಗೊಳಿಸಿದ ಯೋಜನೆಯ ಸಿದ್ಧಾಂತ.

ಗುಲಾಮಗಿರಿಯ ಸ್ಥಿತಿಗತಿಗಳು

ಆರಂಭದಲ್ಲಿ ಪ್ರಸ್ತಾಪಿಸಿದಂತೆ ಭಾರತದಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಗುಲಾಮಗಿರಿಯ ಬಗ್ಗೆ ಸ್ಪಷ್ಟ ವ್ಯಾಖ್ಯಾನ ನೀಡಲು ಸಾಧ್ಯವಾಗದು. ಜೊತೆಗೆ ಗುಲಾಮರು ಕಾರ್ಮಿಕರ ನಡುವಿನ ಭಿನ್ನತೆಯನ್ನೂ ಗುರುತಿಸುವುದೂ ಕಷ್ಟ. ಭಾರತದಲ್ಲಿ ಗುಲಾಮಗಿರಿ ಅತ್ಯಂತ ಹಳೆಯ ಮತ್ತು ವ್ಯವಸ್ಥಿತವಾಗಿ ನಿರ್ಮಾಣಗೊಂಡು ಸಂಸ್ಥೆಯಾಗಿದ್ದು, ಇದನ್ನು ಬಹುತೇಕವಾಗಿ ಹಿಂದೂ ಮತ್ತು ಮುಸ್ಲಿಂ ಕಾನೂನುಗಳು ಒಪ್ಪಿಕೊಂಡಿವೆ.

[1]ಮನೆಗೆಲಸಕ್ಕೆ ಸಂಬಂಧಿಸಿದ ಗುಲಾಮಗಿರಿ ದೇಶದಾದ್ಯಂತ ಅಸ್ತಿತ್ವದಲ್ಲಿದ್ದರೆ, ಕೃಷಿ ಜೀತ ಪದ್ಧತಿ ಕೆಲವಷ್ಟೇ ಪ್ರದೇಶಗಳಲ್ಲಿ ಹಂಚಿಹೋಗಿವೆ. ಎಲ್ಲಾ ಶ್ರೀಮಂತ ಹಾಗೂ ಮಧ್ಯಮ ವರ್ಗಗಳು ತಮ್ಮ ಮನೆ ಕೆಲಸಕ್ಕೆ ಕೆಲಸದಾಳುಗಳನ್ನು ಹೊಂದಿದ್ದವು. ಕೆಲವು ಪ್ರಮುಖ ರಾಜವಂಶಗಳು, ಭೂಮಾಲೀಕರು ಹಾಗೂ ಜಮೀನ್ದಾರರು ತಮ್ಮ ಪ್ರತಿಷ್ಠೆಗಾಗಿ, ಗೌರವಕ್ಕಾಗಿ ಕೆಲಸದಾಳುಗಳನ್ನು ಗುಲಾಮರನ್ನಾಗಿ ಇರಿಸಿಕೊಳ್ಳುತ್ತಿದ್ದರು. ಅವರ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿ ಹೊಂದಿರುವ ಗುಲಾಮರ ಸಂಖ್ಯೆಗೆ ಅನುಗುಣವಾಗಿ ಆತನ ಸ್ಥಾನಮಾನ ಮತ್ತು ಪ್ರತಿಷ್ಠೆ ಸಮಾಜದ ಮುಖ್ಯವಾಹಿನಿಯಲ್ಲಿ ನಿರ್ಧರಿಸಲ್ಪಡುತ್ತದೆ. ಈ ಕೆಲಸದಾಳುಗಳ ಉದ್ಯೋಗದ ಸ್ವರೂಪ ಹಾಗೂ ಸ್ಥಿತಿಗತಿಗಳು ದೇಶದ ಎಲ್ಲಾ ಭಾಗಗಳಲ್ಲೂ ಏಕರೂಪವಾಗಿರಲಿಲ್ಲ. ಅಂದರೆ ಈ ಆಳುಗಳು ವಾಸಿಸುತ್ತಿರುವ ಪ್ರದೇಶ ಹಾಗೂ ಬೆಳೆಯುತ್ತಿದ್ದ ಬೆಳೆಗಳಿಗೆ ಅನುಗುಣವಾಗಿ ಅವರ ಪರಿಸ್ಥಿತಿಯಲ್ಲಿ ಭಿನ್ನತೆಯನ್ನೂ ಗುರುತಿಸಬಹುದು. ಉದಾಹರಣೆಗೆ, ಮಲಬಾರ್ ಪ್ರಾಂತದಲ್ಲಿ ವ್ಯಕ್ತಿಗತ ಮಾಲೀಕತ್ವದ ಎಸ್ಟೇಟ್‌ಗಳಿದ್ದು, ಈ ಜಮೀನುಗಳಲ್ಲಿ ಕೃಷಿಯನ್ನು ಅವರು ಹೊಂದಿರುವ ಜೀತದಾಳುಗಳಿಂದ ಮಾಡಿಸುತ್ತಿದ್ದರು. ಬಿಹಾರ್ ನಲ್ಲಿ ಜೀತದಾಳುಗಳು ಸಣ್ಣ ಸಣ್ಣ ಭೂಮಾಲೀಕರ ಅಧೀನದಲ್ಲಿದ್ದು, ಅವರು ಭೂಮಿಯ ಕೃಷಿ ಚಟುವಟಿಕೆಗಳಿಗೆ ಅಂಟಿಕೊಂಡಿದ್ದರು. ಆದರೆ, ತಂಜಾವೂರಿನಲ್ಲಿ ಈ ಜೀತದಾಳುಗಳು ಸಾಮಾನ್ಯವಾಗಿ ಇಡೀ ಗ್ರಾಮ ಸಮುದಾಯಕ್ಕೆ ಸೇರಿರುತ್ತಾರೆ. ಇದನ್ನು ಗಮನಿಸಿದಾಗ ಭಾರತದಲ್ಲಿ ಚಾಲ್ತಿಯಲ್ಲಿರುವ ‘ಗುಲಾಮಗಿರಿ’ ಎಂಬ ಪದಕ್ಕೆ ನಿರ್ದಿಷ್ಟ ವ್ಯಾಖ್ಯಾನ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಇಲ್ಲಿ ಕಠೋರ ಗುಲಾಮಗಿರಿಗೂ, ನಿಯಮಕ್ಕೊಳಪಟ್ಟ ದಾಸ್ಯ ಪದ್ಧತಿಗೂ ನಡುವಿನ ಭಿನ್ನತೆಯನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ. ಅಮೇರಿಕ ಮತ್ತು ವೆಸ್ಟ್‌ಇಂಡೀಸ್‌ಗಳಲ್ಲಿರುವ ಗುಲಾಮರು, ಅಲ್ಲಿಯ ಯಜಮಾನರ ಸಂಪೂರ್ಣ ಆಸ್ತಿಯಾಗಿದ್ದು, ಆ ಯಜಮಾನ ತನ್ನ ಗುಲಾಮನ ಶ್ರಮ ಮತ್ತು ಶಕ್ತಿಯ ಪೂರ್ಣ ನಿಯಂತ್ರಕನಾಗಿರುತ್ತಾನೆ. ಆದರೆ, ಭಾರತದಲ್ಲಿ ಗುಲಾಮಗಿರಿ ನೀತಿ, ರಿವಾಜುಗಳು ಪ್ರೆಸಿಡೆನ್ಸಿಯಿಂದ ಪ್ರೆಸಿಡೆನ್ಸಿಗೆ ಮತ್ತು ಜಿಲ್ಲೆಗಳಿಂದ ಜಿಲ್ಲೆಗೆ ಬೇರೆ ಬೇರೆಯಾಗಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಇದು ಆಯಾಯ ಸ್ಥಳೀಯ ಪದ್ಧತಿಗಳು ಮತ್ತು ಸಂಪ್ರದಾಯಗಳಿಗನುಗುಣವಾಗಿ ಹಾಗೂ ಯಜಮಾನನ ಅವಲಂಬಿಕೆಯನ್ನು ಅನುಸರಿಸಿ ಅಭಿವೃದ್ಧಿಗೊಂಡಿದೆ.[2]

ತುಳುನಾಡಿನಲ್ಲಿ ಗುಲಾಮರನ್ನ ಅಸ್ಪೃಶ್ಯರೆಂದು ಉಳಿದ ಮೇಲ್ವರ್ಗದ ವರ್ಗಗಳು ಪರಿಗಣಿಸುತ್ತಿದ್ದವು. ಎಷ್ಟು ನಿಕೃಷ್ಟ ಬದುಕು ಇವರದ್ದಾಗಿತ್ತೆಂದರೆ, ಸಮಾಜದ ಮುಖ್ಯವಾಹಿನಿಯಿಂದ ಮಾರುದೂರದಲ್ಲಿ ಅವರು ತಮ್ಮ ಗುಡಿಸಲುಗಳನ್ನು ಕಟ್ಟಿಕೊಳ್ಳಬೇಕಾಗಿತ್ತು. ಅಲ್ಲದೆ, ಇನ್ನಿತರ ಮೇಲ್ಜಾತಿಗಳ ವಾಸ್ತವ್ಯ ನೆಲೆಗಳ ಸಮೀಪದಲ್ಲಿ ತಮ್ಮ ಮನೆಗಳನ್ನು ಕಟ್ಟುವ ಹಾಗಿರಲಿಲ್ಲ. ಗುಲಾಮ ಜಾತಿಯ ಆಳುಗಳ ಚಲನವಲನಗಳನ್ನು ನಿಯಂತ್ರಿಸಲು ನಿರ್ದಿಷ್ಟ ನೀತಿಗಳನ್ನು ಅವರ ಮೇಲೆ ಹೇರಿ ಪಾಲಿಸಲು ಆದೇಶಿಸಲಾಗಿತ್ತು. ಗುಲಾಮಿ ಅಸ್ಪೃಶ್ಯರು ರಸ್ತೆಗಳಲ್ಲಿ ಸಂಚರಿಸವಾಗ, ತಮ್ಮ ಬರುವಿಕೆಯನ್ನು ನಾಲ್ಕೈದು ಬಾರಿ ಕೂಗು ಹಾಕಿ ಸೂಚನೆ ನೀಡಬೇಕಿತ್ತು. ಒಂದು ವೇಳೆ ಆತನ ಕೂಗುವಿಕೆಗೆ ಉಚ್ಚವರ್ಣೀಯರು ಸ್ಪಂದಿಸಿದರೆ, ತಕ್ಷಣ ಆತನ ದೃಷ್ಟಿಗೆ ಬೀಳದ ಹಾಗೆ ರಸ್ತೆಯನ್ನು ಬಿಟ್ಟುದೂರ ಸರಿಯಬೇಕಿತ್ತು. ಈ ವ್ಯವಸ್ಥೆ ಉತ್ತರ ಕರ್ನಾಟಕದ ಕರಾವಳಿಯಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆಯನ್ನು ಹೊಂದಿತ್ತು. ಆದರೆ ನಾವಿಂದು ತುಳುನಾಡೆಂದು ಯಾವ ಭೂಪ್ರದೇಶವನ್ನು ಗುರುತಿಸುತ್ತೇವೋ ಅಲ್ಲಿ ಈ ನಿಯಮಾವಳಿಗಳನ್ನು  ಕಡ್ಡಾಯವಾಗಿ ಶಿಸ್ತಿನಿಂದ ಪಾಲಿಸಲಾಗುತ್ತಿತ್ತು.

ಆಂಗ್ಲ ದಾಖಲೆಗಳಲ್ಲಿ ಗುಲಾಮರ ಹಾಗೂ ಅಸ್ಪೃಶ್ಯತೆಯ ಬಗ್ಗೆ ನಿಖರ ಮಾಹಿತಿಗಳು ದೊರೆತಿಲ್ಲ. ಇದಕ್ಕೆ ಕಾರಣವನ್ನೂ ಗುರುತಿಸಬಹುದು. ನಿರ್ದಿಷ್ಟ ವಿಶಾಲ ಪ್ರದೇಶದ ಆಡಳಿತವನ್ನು ನೋಡಿಕೊಳ್ಳುತ್ತಿದ್ದುದರಿಂದ, ಜಿಲ್ಲಾ ಆಡಳಿತಗಾರರಿಗೆ ಸ್ಥಳೀಯ ಜನರ ಸಂಪ್ರದಾಯ, ಆಚರಣೆಗಳು, ಮತ್ತು ಶಿಷ್ಟಾಚಾರದ ವರ್ತನೆಗಳನ್ನು ತಿಳಿಯಲು ಸಮಯದ ಅಭಾವವೂ ಇತ್ತೆಂಬುದು ಸ್ಪಷ್ಟ. ಒಂದು ವೇಳೆ ಅವರು ನೀರಾ ಉತ್ಸುಕರಾಗಿದ್ದಲ್ಲಿ ಒಂದೇ ಭೌಗೋಳಿಕ ಪ್ರದೇಶದಲ್ಲಿ ಸಂಪೂರ್ಣ ಮಾಹಿತಿ ತಿಳಿಯುವರೆ ದೀರ್ಘ ಕಾಲದವರೆಗೆ ಉಳಿಯಬೇಕಿತ್ತು. ಆಡಳಿತದ ಸೇವೆಯಲ್ಲಿ ಅಂತಹ ಅವಕಾಶಗಳೂ ವಿರಳ. ಸ್ಥಳೀಯರಿಂದ ಕಲೆ ಹಾಕಿದ ಮಾಹಿತಿಗಳನ್ನು ಕೂಡಾ ಮೇಲ್ವರ್ಗ ಹಾಗೂ ಪ್ರತಿಷ್ಠಿತ ವರ್ಗಗಳಿಂದಲೇ ಪಡೆಯುತ್ತಿದ್ದರು. ಇವರು ಗುಲಾಮಗಿರಿಯನ್ನು ಸಾಧ್ಯವಾದಷ್ಟು ಮೃದುವಾಗಿ ಬಿಂಬಿಸುವಲ್ಲಿ ಆಸಕ್ತಿಯನ್ನು ಹೊಂದಿದ್ದರು. ಸ್ವಾಭಾವಿಕವಾಗಿ ಸ್ಥಳೀಯ ಅಧಿಕಾರಿಗಳ ಮಾಹಿತಿಗಳು ಯಜಮಾನನ ಪರವಾಗಿಯೇ ಇತ್ತೆನ್ನುವುದೂ ಸಹಜ. ಅಷ್ಟೇ ಅಲ್ಲದೆ ಗುಲಾಮಗಿರಿ ಖಾಸಗಿ ಅಂಶವಾಗಿದ್ದರಿಂದ ಸರಕಾರದ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವೂ ಇರಲಿಲ್ಲ.[3]ಆದಾಗ್ಯೂ ತುಳುನಾಡಿನಲ್ಲಿ ೧೯ನೇ ಶತಮಾನದ ಅವಧಿಯಲ್ಲಿ ಸೇವೆಯಲ್ಲಿದ್ದ ಜಿಲ್ಲಾಧಿಕಾರಿಗಳ ವರದಿಗಳಿಂದ ಗುಲಾಮತನದ ಬೇರೆ ಬೇರೆ ಸ್ವರೂಪಗಳನ್ನು ಅವರ ಸ್ಥಿತಿಗತಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಿಪುಲ ಮಾಹಿತಿಗಳನ್ನು ಪಡೆಯಬಹುದಾಗಿದೆ. ಕೆಲವೊಮ್ಮೆ ಪ್ರವಾಸಿಗರ ವರದಿಯು ಕೂಡ ಮುಖ್ಯ ಆಧಾರವಾಗಿ ಲಭಿಸುತ್ತವೆ. ತುಳುನಾಡಿಗೆ ಸಂಬಂಧಿಸಿ ಫ್ರಾನ್ಸಿಸ್‌ಬುಕನನ್‌ರವರ ವರದಿ ಪ್ರಮುಖ ಆಧಾರವಾಗಿದೆ. ಈ ಎಲ್ಲಾ ಮಾಹಿತಿಗಳನ್ನು ಕ್ರೋಡೀಕರಿಸಿದರೆ, ಬ್ರಿಟಿಷರು ತಮ್ಮ ಸಾಮಾಜಿಕ ನೀತಿ ರಚಿಸಲು ಕಾರಣಗಳನ್ನು ತಿಳಿಯಬಹುದು. ಮತ್ತು ಒಂದು ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತದೆ.

ತುಳುನಾಡಿನುದ್ದಕ್ಕೂ ಅಸ್ವಿತ್ವದಲ್ಲಿದ್ದ ಗುಲಾಮಗಿರಿಯ ಉಗಮದ ಬಗ್ಗೆ ನಿಖರವಾಗಿ ಪರಾಮರ್ಶಿಸಲು ಸಾಧ್ಯವಾಗದೇ ಹೋದರೂ, ಅದರ ಉಗಮಕ್ಕೆ ಕಾರಣವನ್ನಂತೂ ನೀಡಲು ಸಾಧ್ಯವಿದೆ. ಒಂದು ಆಕ್ರಮಣ. ತಾನು ಆಕ್ರಮಿಸಿಕೊಂಡ ಪ್ರದೇಶದ ಜನರನ್ನು ಜೀತದಾಳುಗಳನ್ನಾಗಿ ಪರಿವರ್ತಿಸುವುದು ಸಾಮಾನ್ಯವಾದ ಅಂಶವಾಗಿತ್ತು. ದಾಖಲೆಗಳ ಪ್ರಕಾರ ಟಿಪ್ಪುಸುಲ್ತಾನ್‌ಕೊಡಗು ಭೂಭಾಗಕ್ಕೆ ಧಾಳಿ  ಮಾಡಿದಾಗ  ಸುಮಾರು ೭೦ ಸಾವಿರದಷ್ಟು ಜನರನ್ನು ಸೆರೆ ಹಿಡಿದು ತನ್ನ  ಮೈಸೂರಿನ ಮುಖಜ ಭೂಮಿಯಲ್ಲಿ ಕೃಷಿ ಕಾರ್ಮಿಕರನ್ನಾಗಿ ಪರಿವರ್ತಿಸಿ ಜಮೀನ್ದಾರರ ವಶಕ್ಕೆ ನೀಡಿದ್ದನು. ಕಾಲಕ್ರಮೇಣ ಈ ಜನರ ವಂಶದವರು ಗುಲಾಮರಾಗಿ ಉಳಿಯುತ್ತಿದ್ದರು.[4] ಇನ್ನೊಂದು ಮುಖ್ಯ ಕಾರಣ, ಕೃಷಿ ಕಾರ್ಮಿಕರು ತಮ್ಮ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪ್ರಬಲ ಜಮೀನ್ದಾರನ ಕೆಲಸದಾಳುಗಳಾಗಿ ಸೇರಿಕೊಳ್ಳುತ್ತಿದ್ದರು. ಈ ಒಪ್ಪಂದದಲ್ಲಿ ಗುಲಾಮ ಮತ್ತು ಆತನ ಕುಟುಂಬ ಎಲ್ಲಾ ಸಂದರ್ಭದಲ್ಲೂ, ಎಲ್ಲಾ ಪರಿಸ್ಥಿತಿಯಲ್ಲೂ ಬದುಕು ನಡೆಸುವ ಭರವಸೆ ಇತ್ತು. ಇಂತಹ ಒಪ್ಪಂದಗಳು ಮೊದಲಿಗೆ ಯಜಮಾನ ಮತ್ತು ಗುಲಾಮನೊಂದಿಗೆ ವೈಯಕ್ತಿಕ ನೆಲೆಯಲ್ಲಿ ನಡೆಯುವಂತಹದ್ದು, ಆದರೆ ಈ ಒಪ್ಪಂದದ ಶರ್ತಗಳು ಅವನ ನಂತರದ ತಲೆಮಾರಿನವರಿಗೂ ಅನ್ವಯಿಸಿ ಅವರೂ ಕೂಡ ಆ ಯಜಮಾನಿಕೆಗೆ ಖಾಯಂ ಜೀತದವರಾಗಿರಬೇಕು. ಇನ್ನೊಂದು ನೆಲೆಯಲ್ಲಿ ಕೃಷಿ ಕಾರ್ಮಿಕರಲ್ಲಿ ವಿಶೇಷವಾಗಿ ಇರುವ ಮೂಢನಂಬಿಕೆ, ಬಡತನ ಮತ್ತು ಅವರಲ್ಲಿರುವ ಮೌಢ್ಯವೂ  ಕೂಡ ಆರ್ಥಿಕ ಶೋಷಣೆಗೆ ಅವಕಾಶ ನೀಡಿ, ಕೊನೆಗೆ ಅವರು ಗುಲಾಮರಿಗೆ ಶರಣಾಗುತ್ತಿದ್ದರು. ಈ ರೀತಿಯ ಒಪ್ಪಂದವನ್ನು ಅವಲಂಬನೆಯ ಬಂಧನವೆಂದು ಭಾವಿಸಲಾಗಿತ್ತು ಮತ್ತು ಅಂತಿಮವಾಗಿ ಕೃಷಿ ಕಾರ್ಮಿಕರು ಗುಲಾಮತನದಲ್ಲಿ ಪರ್ಯಾವಸಾನಗೊಳ್ಳುತ್ತಿದ್ದರು. ಬಹುಶಃ ಈ ಅಂಶ ಕೂಡ ಗುಲಾಮಗಿರಿಯ ಉಗಮಕ್ಕೆ ಕಾರಣ.

ಭೂಮಾಲೀಕರು ಸಣ್ಣ ಹಿಡುವಳಿಗಾರರಿಗೆ, ಕಾರ್ಮಿಕರಿಗೆ ಮುಂಗಡವಾಗಿ ಹಣದ ನೆರವು ನೀಡುತ್ತಿದ್ದರು. ನೆರವು ಅಥವಾ ಸಾಲ ಪಡೆದು ಸಣ್ಣ ರೈತ/ಕೂಲಿ ಕಾರ್ಮಿಕ ಮರು ಪಾವತಿಯವರೆಗೆ ಸಾಲ ನೀಡಿದ ಜಮೀನ್ದಾರನಿಗೆ ಅಡಿಯಾಳಾಗಿರುವ ನಿಯಮಕ್ಕೆ ಒಳಗಾಗುತ್ತಿದ್ದ.[5] ವಿಪರ್ಯಾಸವೆಂದರೆ, ಸಾಲದ ಹೊರೆ ವೃದ್ಧಿಸುತ್ತಲೇ ಇತ್ತು. ಹಾಗೂ ಒಮ್ಮೆ ರೈತ ಸಾಲಗಾರನಾಗಿಯೇ ಸತ್ತರೆ, ಆ ಹೊರೆ ವಿಧವೆ ಹೆಂಡತಿಗೂ, ಮಕ್ಕಳಿಗೂ ಹಸ್ತಾಂತರಿಸ್ಪಡುತ್ತಿತ್ತು.  ಜಮೀನ್ದಾರನ ಒತ್ತಾಯದಿಂದ ಲಿಖಿತ ಒಪ್ಪಂದಕ್ಕೂ ಒಳಗಾಗಿ ಕೊನೆಯವರೆಗೂ  ಅವರು ಗುಲಾಮಗಿರಿಯಲ್ಲಿ ಬಂಧಿಸಲ್ಪಡುತ್ತಿದ್ದರು. ಈ ರೀತಿ ಗುಲಾಮಗಿರಿ ಅಘೋಷಿತವಾಗಿ ಸ್ಥಳೀಯ ಬೇಡಿಕೆಗಳಿಗನುಗುಣವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತೆನ್ನಬಹುದು.

ಆದರೆ ಹಿಂದೂ ಕಾನೂನುಗಳು  ಗುಲಾಮಗಿರಿಯ ಸ್ಥಾನಮಾನವನ್ನು ಅಂಗೀಕರಿಸಿತ್ತು[6] ಮತ್ತು ಈ ಪದ್ಧತಿಯ ಆಚರಣೆಗೆ ಸಂಬಂಧಿಸಿ ಕೆಲವು ಸಾಮಾನ್ಯ ನೀತಿಗಳನ್ನು ಪಾಲಿಸಲು ಶರತ್ತುಗಳನ್ನು ಸೂಚಿಸುತ್ತವೆ. ಇದರ ಆಚಾರ-ವಿಚಾರ, ಕಾನೂನು ಕಟ್ಟಳೆಗಳು ಸ್ಥಳೀಯ ಪದ್ಧತಿಯ ಆಚರಣೆಗೆ ಅನುಗುಣವಾಗಿರುತ್ತಿತ್ತು. ಹಿಂದೂ ಕಾನೂನು ನಮೂದಿಸಿರುವಂತೆ ಸುಮಾರು ಹದಿನೈದು ರೀತಿಯ ದಾಸ್ಯ ಪದ್ಧತಿಗಳಿವೆ. ಅದರ ಪ್ರಕಾರ, ಹುಟ್ಟಿನಿಂದ, ಸೆರೆ ಹಿಡಿಯುವುದರಿಂದ, ಖರೀದಿಸುವುದರಿಂದ, ದಾನದ ರೂಪದಿಂದ, ಜೂಜಾಟದಿಂದ, ಅನುವಂಶೀಯವಾಗಿ, ಸ್ವ ಇಚ್ಛೆಯಿಂದ ಶರಣಾಗುವುದರಿಂದ, ವೈಯಕ್ತಿಕವಾಗಿ ತನ್ನನ್ನು ತಾನು ಮಾರಿಕೊಳ್ಳುವುದರಿಂದ, ಬರಗಾಲ ಎದುರಾದಾಗ, ಅಥವಾ ಧಾರ್ಮಿಕ ಆದೇಶಗಳಿಂದ ಒಬ್ಬ ವ್ಯಕ್ತಿ ಗುಲಾಮಗಿರಿಗೆ ಒಳಗಾಗುತ್ತಾನೆ. ತಾತ್ಕಾಲಿಕ ‘ಗುಲಾಮಗಿರಿ’ ಸಾಮಾನ್ಯವಾಗಿ ಸಾಲದ ಉದ್ದೇಶದಿಂದ ಸೇವಕನಾಗಿರುತ್ತಿದ್ದನು.  ಈ ವ್ಯವಸ್ಥೆಯಲ್ಲಿ ಗುಲಾಮನು ತನ್ನ ಗುಲಾಮತನವನ್ನು ಸಾಲ ತೀರಿಸುತ್ತಿದ್ದಂತೆ ಮುಕ್ತಿಗೊಳಿಸಬಹುದಿತ್ತು. ಕೆಲವೊಮ್ಮೆ ನಿರ್ದಿಷ್ಟ ಅವಧಿಯವರೆಗೆ ಗುಲಾಮನಾಗಿದ್ದು, ತನ್ನ ಜೀವನ ನಡೆಸಲು ಕೂಡ ಒಬ್ಬ ಗುಲಾಮ ಪದ್ಧತಿಗೆ ಶರಣಾಗುತ್ತಾನೆ. ಹಿಂದೂ ಕಾನೂನಿನಂತೆ, ಗುಲಾಮನು ತನ್ನ ಒಡೆಯನ ಸಂಪೂರ್ಣ ಆಸ್ತಿಯಾಗಿದ್ದ. ಅವನ ಮೇಲೆ ತನ್ನ ಅಧಿಕಾರವನ್ನು ಬಳಸಿಕೊಂಡು ಯಜಮಾನ ಗುಲಾಮನನ್ನು ನಿರ್ದಾಕ್ಷಿಣ್ಯವಾಗಿ ಯಾವುದೇ ಶಿಕ್ಷೆ ನೀಡದೆ ಕೊಲ್ಲಬಹುದು ಇಲ್ಲವೆ ಸುಟ್ಟು ಹಾಕಬಹುದಿತ್ತು. ಕಾನೂನಿನಲ್ಲಿ ಗುಲಾಮನ ರಕ್ಷಣೆಗೆ ಯಾವುದೇ ಅವಕಾಶವಿರಲಿಲ್ಲ. ಯಜಮಾನನ ವಿರುದ್ಧ, ಆತನ ಕ್ರೂರತೆ ಕೆಟ್ಟ ನಡವಳಿಕೆಯ ವಿರುದ್ಧ ಧ್ವನಿ ಎತ್ತುವ ಹಕ್ಕು ಗುಲಾಮನಿಗಿರಲಿಲ್ಲ. ಅದು ಹೆಂಗಸಾಗಲಿ, ಗಂಡಸಾಗಲಿ, ಒಂದೊಮ್ಮೆ ತನ್ನ ಯಜಮಾನನ ಪ್ರಾಣವನ್ನು ಸಂಭಾವ್ಯ ದುರಂತದಿಂದ ಪಾರು ಮಾಡಿದ್ದಲ್ಲಿ ಅವನು ದಾಸ್ಯದಿಂದ ಮುಕ್ತನಾಗುತ್ತಿದ್ದನು. ಯಜಮಾನ ನೀಡಿದ ಹೊರತಾಗಿ ಗುಲಾಮನಿಗೆ ಆಸ್ತಿಯಲ್ಲಿ ಯಾವುದೇ ಹಕ್ಕು ಇರಲಿಲ್ಲ. ಹೆಣ್ಣು ಒಬ್ಬಳು ಗುಲಾಮಗಿರಿಗೆ ಒಳಗಾಗಿದ್ದಲ್ಲಿ, ಅವಳ ಯಜಮಾನನಿಗೆ ಗಂಡು ಮಗು ಇಲ್ಲದಾಗ ಆತನಿಗೆ ಗಂಡು ಮಗುವನ್ನು ಹೆತ್ತು ಕೊಟ್ಟಲ್ಲಿ ಅವಳು ದಾಸ್ಯದಿಂದ ಮುಕ್ತಿ ಪಡೆಯುವ ಬೇಡಿಕೆ ಸಲ್ಲಿಸಬಹುದಾಗಿತ್ತು[7] ಇದು ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುತ್ತಿತ್ತು.

ತುಳುನಾಡಿನ ಗುಲಾಮಗಿರಿಯ ಕುರಿತು ಫ್ರಾನ್ಸಿಸ್‌ಬುಕನನ್‌ನ ದೃಷ್ಟಿಕೋನ

ತುಳುನಾಡಿನ ಕೃಷಿ ಕಾರ್ಮಿಕರ ಜೀತಗಾರಿಕೆಯ ಕುರಿತು ಹತ್ತೊಂಬತ್ತನೆಯ ಶತಮಾನಕ್ಕೆ ಮೊದಲು ಸರಕಾರಿ ದಾಖಲೆಗಳಲ್ಲಿ ಇರುವ ಮಾಹಿತಿಗಳು ತುಂಬಾ ವಿರಳ. ಅವರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ದಾಖಲೆಗಳು ತೀರಾ ವಿರಳ. ಅವರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ದಾಖಲೆಗಳು ತೀರಾ ವಿರಳ. ಆದರೆ ಕ್ರಿ. ಶ. ೧೮೦೦ರಲ್ಲಿ  ಭಾರತದ ಗವರ್ನರ್ ಜನರಲ್ ಲಾರ್ಡ್‌ವೆಲ್ಲೆಸ್ಲಿ, ಬಂಗಾಳ ಪ್ರಾಂತದಲ್ಲಿ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಫ್ರಾನ್ಸಿಸ್‌ ಬುಕನನ್‌ನನ್ನು ದಕ್ಷಿಣ ಭಾರತದ ಪ್ರಾಂತಗಳಾದ ಮೈಸೂರು, ಮಲಬಾರ್ ಮತ್ತು ಕೆನರಾ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲು ನಿಯೋಜಿಸುತ್ತಾನೆ. ಮುಖ್ಯವಾಗಿ ಈ ಪ್ರದೇಶಗಳ ಆಸಕ್ತಿದಾಯಕ ಇತಿಹಾಸ, ಧಾರ್ಮಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ವಿಸ್ತೃತವಾದ ವರದಿ ರಚಿಸಲು ಆದೇಶಿಸುತ್ತಾನೆ. ಈ ಹಿನ್ನೆಲೆಯಿಂದ ರಚಿಸಲ್ಪಟ್ಟ ಬುಕನನ್‌ನ ವರದಿ ಅಷ್ಟೇ ಅಮೂಲ್ಯವೂ ಹಾಗೂ ಆಸಕ್ತಿದಾಯಕವೂ ಆಗಿದೆ. ಇದರಲ್ಲಿ ಈ ಭಾಗದ ಕುರಿತು ಉಪಯುಕ್ತ ಮಾಹಿತಿಗಳು ಅಡಕವಾಗಿವೆ.[8]

ತುಳುನಾಡು ಅಥವಾ ಕರಾವಳಿ ತೀರ ಪ್ರದೇಶದಲ್ಲಿ ಭಿನ್ನ ಭಿನ್ನ ರೀತಿಯ ದಾಸ್ಯಕ್ಕೆ ಒಳಗಾದ ಒಂದು ಗುಂಪು ಇತ್ತು. ‘ಹೊಲೆಯ’ ಅಥವಾ ‘ದರ್ಸ್‌’ ಎಂದು ಕರೆಸಲ್ಪಡುವ ವರ್ಗ ವಿವಿಧ ಹಂತಗಳಲ್ಲಿ ದಾಸ್ಯಕ್ಕೆ ಒಳಗಾಗುತ್ತಿತ್ತು. ಈ ವರ್ಗ ತನ್ನ ಒಡೆಯನ ಕೃಷಿ ಭೂಮಿಗಳಲ್ಲಿ ಉಳುಮೆ ಮುಂತಾದ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದು, ಪ್ರತಿಫಲವಾಗಿ ಅತೀ ಕಡಿಮೆ ವೇತನವನ್ನು ಪಡೆಯುತ್ತಿತ್ತು. ಅಧಿಕೃತ ವರದಿಗಳಲ್ಲಿ ಈ ರೀತಿಯ ಗುಲಾಮಗಿರಿ ತುಳುನಾಡಿನಲ್ಲಿ ಚಾಲ್ತಿಯಲ್ಲಿದ್ದುದನ್ನು ಉಲ್ಲೇಖಿಸುತ್ತದೆ.[9] ಬುಕನನ್‌ ತಾನು ಭೇಟಿ ಕೊಟ್ಟ ಸ್ಥಳಗಳಲ್ಲೆಲ್ಲಾ ಕೃಷಿ ಕಾರ್ಮಿಕರ ಸ್ಥಿತಿಗತಿಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳುತ್ತಿದ್ದ. ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದ ಕೃಷಿ ಕಾರ್ಮಿಕರ ವೇತನಗಳ ಕುರಿತು ಕೂಡ ಉಲ್ಲೇಖಿಸಿದ್ದಾನೆ. ಅವನ ಅನುಭವದಂತೆ, ದುಡಿಯುವ ವರ್ಗ ಕೆಲವು ಸಂದರ್ಭಗಳಲ್ಲಿ ತಮ್ಮ ವೇತನವನ್ನು ಹಣದ ರೂಪದಲ್ಲಿಯೋ ಅಥವಾ ಕೆಲವು ಸಲ ವಸ್ತುವಿನ ರೂಪದಲ್ಲಿಯೋ ಪಡೆಯುತ್ತಿದ್ದರು. ಹಾಗಾಗಿ ನಿಖರವಾಗಿ ಇಂತಿಷ್ಟೇ ವೇತನವನ್ನು ಪಡೆಯುತ್ತಿದ್ದರು ಹಾಗಾಗಿ ನಿಖರವಾಗಿ ಇಂತಿಷ್ಟೇ ವೇತನವನ್ನು ಪಡೆಯುತ್ತಿದ್ದರು ಎಂಬುದನ್ನು ತಿಳಿಯಲು ಸಾಧ್ಯವಾಗದು. ಬುಕನನ್ ಹೆಚ್ಚಾಗಿ ಕರಾವಳಿ ಜಿಲ್ಲೆಯ ಅಧಿಕಾರಿಗಳು ಭಾರತಕ್ಕೆ ಬಂದ ಮೊದಲ ಹಂತದ ಸೇವಕರಾಗಿದ್ದರಿಂದ ವಿವೇಚನಾಯುಕ್ತ ಮಾಹಿತಿಯನ್ನು ನೀಡಿರುವುದನ್ನು ನಂಬಬಹುದಾಗಿದೆ.

ಬುಕನನ್‌ನ ವರದಿಯನ್ನು ಅಧರಿಸಿ ತುಳುನಾಡಿನಲ್ಲಿ ಗುಲಾಮಗಿರಿ ಎಲ್ಲಾ ಪ್ರದೇಶಗಳಲ್ಲೂ ಹರಡಿತ್ತು ಎಂದು ಹೇಳಬಹುದು. ಇಲ್ಲಿ ಎಲ್ಲಾ ಗುಲಾಮರು ಯಜಮಾನನ ಖಾಸಗಿ ಆಸ್ತಿಯಾಗಿರುತ್ತಿದ್ದರು. ಇವರ ಸ್ಥಿತಿ ಚಿಂತಾಜನಕವಾಗಿತ್ತು ಮತ್ತು ಅವರ ಸ್ಥಿತಿಗತಿಗಳನ್ನು ಆ ಕಾಲದ ಸ್ವತಂತ್ರ ಕೆಲಸದಾಳುಗಳಿಗೆ ಹೋಲಿಸಲು ಅಸಾಧ್ಯ. ಇಲ್ಲಿ ಹಂಚಿ ಹೋಗಿರುವ ಗುಲಾಮತನದ ದಟ್ಟನೆಯ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಾಗದೇ ಹೋದರೂ, ಭಿನ್ನ ರೀತಿಯ ಮಾಹಿತಿಗಳು ವರದಿಗಳಿಂದ ದೊರೆಯುತ್ತವೆ. ಒಂದು ಸಂದರ್ಭದಲ್ಲಿ ಬುಕನನ್ ತುಳುನಾಡಿನಲ್ಲಿ ಸುಮಾರು ೬೦,೦೦೦ದಷ್ಟು ಗುಲಾಮರಿದ್ದರು ಎಂದು ವರದಿ ಮಾಡುತ್ತಾನೆ. ೧೮೦೧ರಲ್ಲಿ ಕರಾವಳಿ ಪ್ರದೇಶದ ದಕ್ಷಿಣ ಭಾಗದ ಕಂದಾಯ ಅಧಿಕಾರಿಯಾಗಿದ್ದ ಜೆ.ಜಿ. ರವೆನ್ ಶಾಹ ತುಳುನಾಡಿನ ಒಟ್ಟು ಜನಸಂಖ್ಯೆಯಾದ ೩,೯೬,೬೭೨ರಲ್ಲಿ ಸುಮಾರು ೫೨,೦೨೨ರಷ್ಟು ಜನರು ಗುಲಾಮರಾಗಿದ್ದರು ಎಂದು ತನ್ನ ವರದಿಯಲ್ಲಿ ದಾಖಲಿಸಿದ್ದಾನೆ.[10] ಇದರಲ್ಲಿ ಸುಮರು ೭೨೨ರಷ್ಟು ಮಹಿಳೆಯರು ಮತ್ತು ಮಕ್ಕಳು ಹಾಗೂ ಅರಬ್‌ ಪ್ರಾಂತದಿಂದ ಆಮದು ಮಾಡಿಕೊಂಡಿರುವ ಗುಲಾಮರನ್ನು ತನ್ನ ವರದಿಯಲ್ಲಿ ಸೇರಿಸಿದ್ದಾನೆ.[11] ೧೮೧೯ರಲ್ಲಿ ಥೋಮಸ್ ಹ್ಯಾರಿಸ್‌ಎಂಬ ಅಧಿಕಾರಿ ತುಳುನಾಡಿನಲ್ಲಿ ಸುಮಾರು ೮೨,೦೦೦ದಷ್ಟು ಗುಲಾಮರಿದ್ದರು ಎಂದು ವರದಿ ಮಾಡುತ್ತಾನೆ. ಇದರಲ್ಲಿ ಸುಮಾರು ೬೦ ಸಾವಿರ ಗುಲಾಮರು ಕೃಷಿ ಕಾರ್ಮಿಕರಾಗಿದ್ದರು.[12] ೧೮೨೬ರಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಅಂದಾಜಿನ ಪ್ರಕಾರ ೬೦,೦೦೦ ವಂಶಪಾರಂಪರ್ಯ ಗುಲಾಮರಾಗಿದ್ದರು ಎಂದು ವರದಿ ಮಾಡುತ್ತಾ, ಅವರಲ್ಲಿ ಸುಮಾರು ೪,೫೦೦ ಮಂದಿ ಗುಲಾಮರು ತಮ್ಮನ್ನು ತಾವೇ ಯಜಮಾನನಿಗೆ ಮಾರಿಕೊಂಡವರು.[13]ಉಳಿದ ೨೨,೦೦೦ ಗುಲಾಮರು ಯುದ್ಧದಲ್ಲಿ ಸೆರೆಯಾಳಾಗಿ ಸಿಕ್ಕಿದವರು ಹಾಗೂ ಜಾತಿಭ್ರಷ್ಟ ಬ್ರಾಹ್ಮಣ ಮಹಿಳೆಯರು ಸೇರಿದ್ದರು. ಆದಾಗ್ಯೂ ಈ ಅಂಕೆ ಸಂಖ್ಯೆಯನ್ನು ನಿಖರವಾಗಿ ಹೇಳಲು ಯಾವುದೇ ಜನಗಣತಿ ವರದಿಗಳು ಹತ್ತೊಂಬತ್ತನೆ ಶತಮಾನದ ಮೊದಲ ಎರಡು ದಶಕಗಳಲ್ಲಿ ನಡೆದಿರಲಿಲ್ಲ.[14]೧೮೦೧ರಿಂದ ೧೮೨೭ರ ನಡುವೆ ಜನಸಂಖ್ಯೆಯ ಹೆಚ್ಚಳದ ಶೇಕಡಾವಾರು ಅಂಶವನ್ನು ಗಮನಿಸಿ ಅಂದಾಜು ಮಾಡಿ ೧೮೧೯ರಲ್ಲಿ ಗುಲಾಮರ ಸಂಖ್ಯೆ ಸುಮಾರಿಗೆ ಒಟ್ಟು ಜನಸಂಖ್ಯೆಯ ಹತ್ತು ಶೇಕಡಾವಿತ್ತೆಂದು ಟಿ. ಹ್ಯಾರಿಸ್‌ಉಲ್ಲೇಖಿಸುತ್ತಾನೆ. ಹಾಗೇನೆ, ೧೮೫೧ರಲ್ಲಿ ನಡೆದ ಜನಗಣತಿಯಂತೆ, ತುಳುನಾಡಿನಲ್ಲಿ ಒಟ್ಟು ಗುಲಾಮರ ಜನಸಂಖ್ಯೆ ಸರಿಸುಮಾರು ೧,೦೫೬,೩೩೩ ರಷ್ಟಿತ್ತೆಂದು ಪರಿಗಣಿಸಲಾಗಿದೆ. ಕೆನರಾಕ್ಕೆ ಕಂದಾಯ ಅಧಿಕಾರಿಗಳಾಗಿ ನೇಮಕವಾದವರ ದೃಷ್ಟಿಕೋನದಂತೆ ೧೮೦೧ರ ಹೊತ್ತಿಗೆ ತುಳುನಾಡಿನಲ್ಲಿ ಗುಲಾಮರು ಇಡೀ ಕೃಷಿ ಭೂಮಿಯನ್ನು ಉಳುಮೆ ಮಾಡುವ ವರ್ಗವಾಗಿ ಪರಿವರ್ತನೆಗೊಂಡಿತ್ತು. ಅಲ್ಲದೆ, ಜಮೀನುಗಳು, ಗುಲಾಮರಿಲ್ಲದಿದ್ದರೆ  ಮೌಲ್ಯವನ್ನು ಕಳೆದುಕೊಳ್ಳುತ್ತಿತ್ತೆಂಬ ಅಭಿಪ್ರಾಯವು ಇತ್ತು. ಇದು ಮುಖ್ಯವಾಗುತ್ತದೆ. ಏಕೆಂದರೆ, ಆ ಕಾಲದಲ್ಲಿ ಕೂಲಿ ಆಳುಗಳ ಆಭಾವವು ಒಂದು ಸಮಸ್ಯೆಯಾಗಿ ಇತ್ತು. ಸಂಪ್ರದಾಯದಂತೆ, ಮಾಲೀಕ ಬೇಕಾಗುವ ಆಹಾರೋತ್ಪನ್ನಗಳನ್ನು ನೀಡುತ್ತಿದ್ದನು. ಬೆಳೆ ಕಟಾವಿನ ಸಮಯದಲ್ಲಿ ಗುಲಾಮನು ದಿನಗೂಲಿ ಪಡೆಯಲು ಅರ್ಹನಲ್ಲ. ಆದರೆ ಗುಲಾಮನು ಕಟಾವು ಮಾಡಿದ ಭತ್ತವನ್ನು ಪಡೆಯುತ್ತಿದ್ದನು. ಒಂದು ವರ್ಗದ  ಗುಲಾಮರು ಕೆಲವು  ನಿರ್ದಿಷ್ಟ ಶರತ್ತುಗಳ ಮೇಲೆ, ಅಂದರೆ ಮಾಲೀಕನೆ ಅವರ ಮದುವೆ ವೆಚ್ಚ ಭರಿಸುವುದು ಹಾಗೂ ಇನ್ನೊಂದು ಮಾಲೀಕನಿಗೆ ಮಾರಾಟ ಮಾಡದ ನಿಯಮದ ಮೇಲೆ ಸೇವೆಗೆ ಸೇರಿಕೊಳ್ಳುತ್ತಿದ್ದರು. ಗುಲಾಮರಲ್ಲಿ ಅವ್ಯಾಹತವಾಗಿದ್ದ ಒಂದು ಹೆದರಿಕೆಯೆಂದರೆ ಅವರ ಮಾಲೀಕನು ತಮ್ಮ ತಂದೆ-ತಾಯಿಗಳಿಂದ ಮಕ್ಕಳನ್ನು ಗಂಡ-ಹೆಂಡಿರನ್ನು ಬೇರ್ಪಡಿಸುವ ಹಾಗೂ ಮಾರಾಟ ಮಾಡುವ ಪದ್ಧತಿ. ಮಾಲೀಕರಲ್ಲಿಯೂ ತಮ್ಮ ಗುಲಾಮರ ಬಗ್ಗೆ ಇದೇ ರೀತಿಯ ಭಯವಿತ್ತು. ಕುಟುಂಬದಿಂದ ಬೇರ್ಪಟ್ಟ ಗುಲಾಮ ಹೊಸ ಮಾಲೀಕನ ಹಿಡಿತದಿಂದ ಪಾರಾಗಲಿಕ್ಕೆ ಪ್ರಯತ್ನಿಸಬಹುದೆಂದು.

ಬುಕನನ್ ತುಳುನಾಡಿನ ಗುಲಾಮರ ಜನಜೀವನದ ಚಿತ್ರಣವನ್ನು ನೀಡುತ್ತಾನೆ.  ಗುಲಾಮರು ಸೂರ್ಯೋದಯದೊಳಗೆ ಹೊಲ ಗದ್ದೆಯನ್ನು ತಲುಪಿ ಸೂರ್ಯಸ್ತವಾಗುವವರಗೆ ದುಡಿಯಬೇಕಾಗಿತ್ತು. ಈ ನಡುವೆ ಕೇವಲ ೨೪ ನಿಮಿಷಗಳ ವಿರಾಮ ಮಧ್ಯಾಹ್ನ ಊಟದ ಸಮಯದಲ್ಲಿ ದೊರೆಯುತ್ತಿತ್ತಷ್ಟೆ. ಆದರೆ, ಮಹಿಳಾ ಕಾರ್ಮಿಕ ಗುಲಾಮರಿಗೆ ಬೆಳಿಗ್ಗೆ ಎಂಟು ಗಂಟೆಯ ತನಕ ರಿಯಾಯಿತಿ ಇತ್ತು. ಯಾಕೆಂದರೆ ಹೊಲದಲ್ಲಿ ದುಡಿಯುತ್ತಿರುವ ಪುರುಷರಿಗೆ ಹಾಗೂ ಅವರಿಗೆ ಮಧ್ಯಾಹ್ನದ ಊಟದ ಬುತ್ತಿಯನ್ನು ತರಬೇಕಾಗಿತ್ತು.[15] ಆ  ನಂತರ ಅವರು ಪುರುಷರೊಂದಿಗೆ ಹೊಲದಲ್ಲಿ ದುಡಿಯಬೇಕು. ಬುಕನನ್ ಕಲೆಹಾಕಿದ ಮಾಹಿತಿಯಂತೆ ಮಂಗಳೂರು ಸುತ್ತಮುತ್ತ ಗುಲಾಮರಿಗೆ ಹಾಗೂ ಸ್ವತಂತ್ರದಿನಗೂಲಿ ನೌಕರರಿಗೆ ವೇತನವನ್ನು  ಆಹಾರೋತ್ಪನ್ನಗಳ ಮೌಲ್ಯದಂತೆ ನೀಡಲಾಗುತ್ತಿತ್ತು. ಬುಕನನ್‌ವಿಶ್ಲೇಷಣೆಯಂತೆ ಸ್ವತಂತ್ರ ಕಾರ್ಮಿಕರು ತಮ್ಮ ಸೇವೆಗೆ ತಕ್ಕ ಪ್ರತಿಫಲ  ಪಡೆಯುತ್ತಿದ್ದರು. ಆದರೆ, ಗುಲಾಮರು ಕೇವಲ ದಿನಗೂಲಿ ನೌಕರರು ಪಡೆಯುತ್ತಿರುವ ವೇತನದ ೨/೩ ರಷ್ಟು ಮಾತ್ರ ಪಡೆಯುತ್ತಿದ್ದರು. ಮತ್ತು ಸ್ವತಂತ್ರ ದಿನಗೂಲಿ ನೌಕರರು,  ಒಂದು ಮಾಲೀಕನಿಂದ ಇನ್ನೊಂದು ಮಾಲೀಕರನ್ನು ಸಾಲದ ತೀವ್ರತೆಯನ್ನು ಅನುಸರಿಸಿ ಬದಲಾಯಿಸಬಹುದು. ಅಂತಹ ಸ್ವಾತಂತ್ರ್ಯ ಗುಲಾಮರಿಗೆ ಇರುವುದಿಲ್ಲ ಕೆಲವೊಮ್ಮೆ, ಮಾಲೀಕರನು ತನ್ನ ಗುಲಾಮರನ್ನು ಇನ್ನೊಂದು ಮಾಲೀಕನಲ್ಲಿ ಗೇಣಿಗೆ ಒತ್ತೆ ಇಡಲೂಬಹುದು, ಅಥವಾ ದೀರ್ಘ ಕಾಲದವರೆಗೆ ಬಾಡಿಗೆಗೆ ಕೊಡಬಹುದು.[16] ಈ ರೀತಿಯ ಪದ್ಧತಿ ತುಳುನಾಡಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿತ್ತು ಎಂದು  ಬುಕನನ್ ಅಭಿಪ್ರಾಯಪಡುತ್ತಾನೆ. ಈ ವ್ಯವಸ್ಥೆಯಲ್ಲಿ ಎರವು ತೆಗೆದುಕೊಂಡು ಮಾಲೀಕ ಗುಲಾಮನ ಸೇವೆಯ ಜವಾಬ್ದಾರ ನಾಗಿರುತ್ತಿದ್ದ ಹಾಗೂ ಅವನಿಗೆ ಜೀವನಾಂಶವನ್ನು ಕೊಡಬೇಕಾಗಿತ್ತು.  ನಿಜವಾಗಿ ಹೇಳಬೇಕೆಂದರೆ, ಗುಲಾಮರನ್ನು ತುಂಬಾ ಕೆಟ್ಟದಾಗಿ  ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ಬುಕನನ್ ತನ್ನ ವರದಿಯಲ್ಲಿ ಉಲ್ಲೇಖಿಸುತ್ತಾನೆ. ಸಾಮಾನ್ಯವಾಗಿ ಕೆಳಜಾತಿಯ ಪುರುಷರು ತಮ್ಮ ಯುವ ರಕ್ತ ಸಂಬಂಧಿಗಳನ್ನು ಸಾಲ ತೀರಸಲೋಸುಗ ಗುಲಾಮಗಿರಿಗೆ ತಳ್ಳುತ್ತಿದ್ದರು.[17] ಉತ್ತರ ಕರ್ನಾಟಕದ ಕರಾವಳಿಯ ಹೊನ್ನಾವರ ತಾಲೂಕಿನಲ್ಲಿ ಜಮೀನ್ದಾರರು ಬಹುತೇಕ ಬ್ರಾಹ್ಮಣರಾಗಿದ್ದರು. ಇವರನ್ನು ಮೂಲಾವುಗದಾರರು ಎಂದು ಕರೆಯುತ್ತಿದ್ದರು. ಇವರ ಹೊಲಗದ್ದೆಗಳನ್ನು ಗುಲಾಮರೇ ಉಳುಮೆ ಮಾಡುತ್ತಿದ್ದರು. ಬುಕನನ್ ಸೂಚಿಸುವಂತೆ, ಗುಲಾಮರು ತಮಗೆ ಸಿಗುವ ಅತ್ಯಲ್ಪ ವೇತನ (ಹಿಡಿಗೂಳು)ದಲ್ಲೇ ತಮ್ಮ ಮಕ್ಕಳನ್ನು ಹಾಗೂ ಹಿರಿಯರನ್ನು ಸಾಕಲೇಬೇಕಾಗಿತ್ತು.[18]

ತುಳುನಾಡಿನಲ್ಲಿ ತಾನು ಗಮನಿಸಿದ ವ್ಯವಸ್ಥೆಯ ಕುರಿತು ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಿ ಗುಲಾಮಗಿರಿ ಪದ್ಧತಿಯನ್ನೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಲಿಸಿ ನೋಡಲು ಬುಕನನ್ ತನ್ನ ಪ್ರವಾಸವನ್ನು ಮತ್ತಷ್ಟು ಉತ್ತರಕ್ಕೆ ಮುಂದವರಿಸುತ್ತಾನೆ. ಅಂಕೋಲ ತಾಲೂಕಿನಲ್ಲಿ ಗುಲಾಮಗಿರಿ ಅಸ್ತಿತ್ವದಲ್ಲಿರಲಿಲ್ಲ ಎಂದು ಗಮನಿಸಿದ ಅವನು ಅಲ್ಲಿ ಸ್ವತಂತ್ರದಿನಗೂಲಿಕಾರರು ಇದ್ದರು ಎಂಬುದನ್ನು ಉಲ್ಲೇಖಿಸುತ್ತಾನೆ. ಮತ್ತೆ ತಮ್ಮ ಭೇಟಿಯನ್ನು ಮುಂದುವರಿಸುತ್ತಾ ಗಿರಿ ತಪ್ಪಲು ಪ್ರದೇಶಗಳಲ್ಲಿ ಮತ್ತು ಸೂಂಡ ತಾಲೂಕಿನ ಪಶ್ಚಿಮ ಭಾಗದಲ್ಲಿ ಕೂಲಿಯಾಳುಗಳಿಂದ ಸ್ವತಃ ಬ್ರಾಹ್ಮಣರೇ ಕೃಷಿ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದನ್ನು ಗುರುತಿಸುತ್ತಾನೆ. ಆದರೆ, ಬನವಾಸಿ-ಬಳಿಗಿ  ತಾಲೂಕುಗಳಲ್ಲಿ ಮತ್ತೆ ಗಣನೀಯ ಪ್ರಮಾಣದಲ್ಲಿ ಗುಲಾಮರ ಸಂಖ್ಯೆಯಲ್ಲಿ ಹೆಚ್ಚಾಗಿರುವುದನ್ನು ಉಲ್ಲೇಖಿಸುತ್ತಾನೆ. ಇಲ್ಲಿ ಈ ಗುಲಾಮರು ಬ್ರಾಹ್ಮಣ ಮಾಲೀಕರ ಆಸ್ತಿಯಾಗಿದ್ದರು.[19] ಬುಕನನ್‌ನ  ವರದಿಯಲ್ಲಿರುವ ಅಂಶಗಳಿಗೆ ಪೂರಕವಾಗಿ, ಒಂದಷ್ಟು ಸರಕಾರಿ ದಾಖಲೆಗಳನ್ನು ಬಳಸಿಕೊಳ್ಳಬಹುದು. ೧೮೦೧ರಲ್ಲಿ ಕೆನರಾ ಪ್ರದೇಶದಲ್ಲಿ ಕಲೆಕ್ಟರ್ ಆಗಿದ್ದ ಜೆ. ಜೆ. ರವೆನ್‌ಶಾ ಬನ್ನೂರು ತಾಲೂಕಿಗೆ ಭೇಟಿ ಮಾಡಿ,  ತಮ್ಮ ಯಜಮಾನ ನೀಡುತ್ತಿರುವ ಅಮಾನುಷ ಉಪಟಳ, ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುವುದರ ಬಗ್ಗೆ ದೂರು ನೀಡುತ್ತಾರೆ. ಇದನ್ನು ಗಮನಿಸಿದ ರವೆನ್‌ಶಾಹ ಈ ಪ್ರದೇಶದಲ್ಲಿಕಂಡುಬರುವ ಬೇರೆ ಬೇರೆ ರೀತಿಯ ಗುಲಾಮಗಿರಿ ಪದ್ಧತಿಯನ್ನು ವರದಿ ಮಾಡಿ, ಅವರು ಬೇರೆ ಬೇರೆ ಬಗೆಯ ಬಂಧನಕ್ಕೆ ಒಳಗಾಗಿರುವುದನ್ನು ಉಲ್ಲೇಖಿಸುತ್ತಾನೆ. ಈತನ ಅಂದಾಜಿನಂತೆ,  ಬನ್ನೂರು ತಾಲೂಕಿನಲ್ಲಿ ಸುಮಾರು ೫,೮೯೪ ಮಂದಿ ಗುಲಾಮರಿದ್ದು, ಅವರಲ್ಲಿ ಮೂರು ವರ್ಗಕ್ಕೆ ಸೇರಿದ ಗುಲಾಮರು ಬೇರೆ ಬೇರೆ ಮಾಲೀಕರ ಅಧೀನಕ್ಕೆ ಒಳಪಟ್ಟಿದ್ದರು ಎಂದು ತಿಳಿಸುತ್ತಾನೆ.  ಮತ್ತು  ಈ ಮೂರು ಗುಂಪುಗಳ ನಡುವೆ  ಅತ್ಯಂತ ಕಡಿಮೆ ಸಂಪರ್ಕವಿತ್ತು. ಆ ವರ್ಗಗಳು ಹೀಗಿವೆ. ಮುಂಡಾಳರು, ಮೊಗೇರರು ಮತ್ತು ಮೌರೇಯರು ಎಂಬ ಗುಲಾಮ ಗುಂಪುಗಳು. ಇವರೆಲ್ಲರೂ ಅಸ್ಪೃಶ್ಯರೇ ಆಗಿದ್ದರೂ ಕೂಡ ಅಸ್ಪೃಶ್ಯತೆಯ ಆಚರಣೆ ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಭಿನ್ನವಾಗಿತ್ತು. ಮುಂಡಾಲ ಮತ್ತು ಮೊಗೇರರು ದನ ಮತ್ತು ಎತ್ತುಗಳ ಮಾಂಸ ಸೇವನೆಯಿಂದ ದೂರವಿರುತ್ತಿದ್ದರು. ಮುಂಡಾಲರು ದಾಸ್ಯತನದಲ್ಲಿ ಇರಲಿಲ್ಲ. ಆದರೆ, ಅವರು ಕೊನೆಯವರೆಗೂ ಒಬ್ಬ ಯಜಮಾನನ ಸೇವೆಯಲ್ಲಿರುತ್ತಿದ್ದರು. ಏಕೆಂದರೆ, ಇವರ ಕುಟುಂಬ ಸದಸ್ಯರ ಮದುವೆ ಹಾಗೂ ಇನ್ನಿತರ ಖರ್ಚು ವೆಚ್ಚಗಳನ್ನು  ಯಜಮಾನನೇ ಭರಿಸುತ್ತಿದ್ದ. ಇವರನ್ನು ಇನ್ನೊಂದು ಮಾಲೀಕನಿಗೆ ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇವರ ಶ್ರಮವನ್ನು ಮಾರಾಟ ಮಾಡಲಾಗುತ್ತಿತ್ತು. ಮೊಗೇರರು ಮಾತ್ರ ಜನ್ಮತಃ ಗುಲಾಮರಾಗಿದ್ದರು. ಅವರನ್ನು ಯಜಮಾನ ತನ್ನ ಮನ ಬಂದಂತೆ ಮಾರಾಟ ಮಾಡಬಹುದಾಗಿತ್ತು. ಮೌರೇಯರ ಸೇವೆಯಲ್ಲಿ ಏಕತನಾನತೆ ಇರಲಿಲ್ಲ. ಇವರಲ್ಲಿ  ಕೆಲವರು ತಮ್ಮ ಮದುವೆಯ ಖರ್ಚು ನಿಭಾಯಿಸಲೋಸುಗ ಸ್ವತಃ ಯಜಮಾನನಿಗೆ ಸೇವಕರಾಗಿ ಸೇರಿಕೊಳ್ಳುತ್ತಿದ್ದರು. ಇನ್ನು ಕೆಲವರು ಯಜಮಾನನ ವೈಯಕ್ತಿಕ ಗುಲಾಮರಾಗಿರುತ್ತಿದ್ದರು.[20]

೧೮೨೬ರಲ್ಲಿ ಒಬ್ಬ ಗುಲಾಮನ ಬೆಲೆ ಸುಮಾರು ೧೨ ರಿಂದ ೧೬ ರೂಪಾಯಿವರೆಗೆ ಇತ್ತು.[21] ಉತ್ತರ ಕನ್ನಡದಲ್ಲಿ ಪ್ರತಿಯೊಬ್ಬ ಪುರುಷನು ೧ ೧/೨ ಆಣೆಯಷ್ಟು ಅಕ್ಕಿಯನ್ನು ದಿನಗೂಲಿಯಾಗಿ ಪಡೆಯುತ್ತಿದ್ದ; ಮತ್ತು ಒಬ್ಬ ಮಹಿಳೆಯು ಒಂದು ಆಣೆಯಂತೆ ಕೂಲಿ ಪಡೆಯುತ್ತಿದ್ದರು. ಪ್ರತಿ ವರ್ಷ ಪ್ರತಿ ಗುಲಾಮನಿಗೆ ಎರಡೂವರೆ ರೂಪಾಯಿ ಬೆಲೆಯ ಬಟ್ಟೆಯನ್ನು ನೀಡಲಾಗುತ್ತಿತ್ತು. ಇದಲ್ಲದೆ ಬೇರೆ ಯಾವ ಸಹಾಯವನ್ನು ಪಡೆಯದ ಕಾರಣ ತಮಗೆ ಸಿಗುವ ಹಿಡಿಕಾಸಿನಿಂದ ತಮ್ಮ ಕುಟುಂಬದ ನಿರ್ವಹಣೆಯನ್ನು ಮಾಡಬೇಕಾಗಿತ್ತು. ಮಕ್ಕಳು, ವಯಸ್ಕರು ಮತ್ತು ಹಿರಿಯರ ಜವಾಬ್ದಾರಿಯನ್ನು ಹೊರಬೇಕಾಗಿತ್ತು. ಈ ಸ್ಥಳೀಯ ಮೌಲ್ಯವನ್ನು ಇಂಗ್ಲಿಷ್‌ಮೌಲ್ಯಕ್ಕೆ ಪರಿವರ್ತಿಸಿದರೆ, ಪ್ರತಿಯೊಬ್ಬ ಮಹಿಳೆ ವರ್ಷಕ್ಕೆ ಮಾರುಕಟ್ಟೆ ಬೆಲೆಯ ೧೪ ೧/೨ ರೂಪಾಯಿಯ ಹದಿನೈದು ಗ್ಯಾಲನ್‌ಗಳಷ್ಟು ಭತ್ತವನ್ನು ಪಡೆಯುತ್ತಿದ್ದಳು. ಅವಳಿಗೆ ಸಿಗುವ ಒಟ್ಟು ಸೌಲಭ್ಯವನ್ನು ಸೇರಿಸಿ ಲೆಕ್ಕ ಹಾಕಿದರೆ, ವರ್ಷದಲ್ಲಿ ಒಬ್ಬ ಮಹಿಳೆ ಪಡೆಯುವ ಕೂಲಿ ಕೇವಲ ಹದಿನೇಳು ರೂಪಾಯಿಯಷ್ಟು ಮಾತ್ರ.[22]  ಕರಾವಳಿಯ ಇತರ ಭಾಗದಲ್ಲಿ ಗಂಡಸರು, ಮಹಿಳೆಯರಿಗಿಂತ ೧ ೧/೩ ಸೇರು ಭತ್ತ, ಎರಡು ರೂಪಾಯಿಯಷ್ಟು ಉಪ್ಪು, ಸ್ವಲ್ಪ ಅಡಿಕೆ ಮತ್ತು ವೀಳ್ಯದೆಲೆ ಹೆಚ್ಚುವರಿಯಾಗಿ ಪಡೆಯುತ್ತಿದ್ದರು. ಹಾಗೇನೆ ಮಹಿಳೆಗೆ ಒಂದು ಸೇರು ಭತ್ತ; ಮತ್ತು ಮಕ್ಕಳಿಗೆ ೩/೪ ರಷ್ಟು ಭತ್ತವನ್ನು ಮಾತ್ರ ಸಂಬಳದ ರೂಪದಲ್ಲಿ ನೀಡಲಾಗುತ್ತಿತ್ತು.[23]

 

[1] W.H. Macnaghten, Principles and Prescedents of Hindu Law, Two Volumes, Calcutta 1829-9

[2] ಭಾರತದಲ್ಲಿ ಅಸ್ತಿತ್ವದಲ್ಲಿದ್ದು ಗುಲಾಮಗಿರಿ ಪರಿಕಲ್ಪನೆಯನ್ನು ಆಧರಿಸಿ, ಜೀತದಾಳು ಮತ್ತು ಸ್ವತಂತ್ರ  ಕೃಷಿ ಕೂಲಿ ಕಾರ್ಮಿಕನ ನಡುವಿನ ವ್ಯತ್ಯಾಸವನ್ನು  ವ್ಯಾಖ್ಯಾನಿಸಲು ಸಾಧ್ಯವಾಗದು. ಅವರೆಲ್ಲರೂ ಸಮಾಜದ ಕೆಳವರ್ಗಕ್ಕೆ ಸೇರಿದವರಾಗಿದ್ದಾರೆ. ತುಳುನಾಡಿನಲ್ಲಿ ಶೂದ್ರ ಸಮುದಾಯದವರು ಒಂದಲ್ಲ ಒಂದು ರೀತಿಯ ಬಂಧನಕ್ಕೊಳಗಾಗಿರುವುದು ಕಂಡುಬರುತ್ತದೆ. ಇಲ್ಲಿ ಸಾಮಾನ್ಯವಾಗಿ ಕೆಳ ವರ್ಗದವರು ಗುಲಾಮರನ್ನಾಗಿಯೇ ನೋಡಲಾಗುತ್ತಿತ್ತು. ಆದರೆ ವಿಶೇಷವೆಂದರೆ ಎಲ್ಲಾ ಜಾತಿಯಲ್ಲಿ ಗುಲಾಮರಿರುವುದು ಕಂಡುಬರುತ್ತದೆ. ಮುಖ್ಯವಾಗಿ ಮನೆ ಕೆಲಸ ಮಾಡಲು ಬಳಸಿಕೊಳ್ಳುವ  ಸೇವಕರು. ಗುಲಾಮಗಿರಿಯ ಒಂದು ಸಾಮಾನ್ಯ ಲಕ್ಷಣವೇನೆಂದರೆ, ಅದೊಂದು ಆನುವಂಶೀಯವಾಗಿ ಬಂದಿರುವ ಪದ್ಧತಿಯಾಗಿದ್ದು, ಒಂದು ಸಾರಿ ಈ ಆಚರಣೆಗೆ ಬಲಿಯಾದರೆ, ಅಂತವರು ಜೀವನ ಪೂರ್ತಿ ಬಲಿಯಾಗುತ್ತಾರೆ ವಿನಾ ಯಾವ ಪ್ರಯತ್ನದಿಂದಲೂ ತಪ್ಪಿಸಿಕೊಳ್ಳಲು ಅಸಾಧ್ಯ.

[3] ಈ ನಿಟ್ಟಿನಲ್ಲಿ ಶೋಲಾಪುರದ ಕಂದಾಯ ಅಧಿಕಾರಿ ಹೀಗೆ ಹೇಳುತ್ತಾರೆ. ‘…there is probably no subject on which it is so difficult to procure correct information from the natives as this, arising from their extreme jealousy of our interference in matters which they consider as their domestic concerns’ -Parliamentary papers (PP) 1983 -38 vol.  II P. 436

[4] Asiatic Journal, vol. XV (1823), P.257

[5] A Deed of Sale into slavery: ”I, Jumuni (a female Muslim) am destitute of means of support and in debt. On that account, in consideration of seventy five rupees received from A. (Hindu land holder) of have let out…. in hire, my son C aged seven and daughter D, aged eight years, during the term of eighty years ending 1820 Fussy. I engage and covenant that the said parties so let out in hire, receiving support, shall attend and render servile services to the said hires. They shall not be recussant: and without his leake shall go nowhere nor shall they run away during the term. Every child be getter or produced by the said persons, shall be the property of the hirer, so also, their remotest descendants who may hereafter be born. Neither of, nor my said child shall oppose or object on any account.  Therefore, have I written this deed of hire for higher years. Dated 30th August, 1832, corresponding with 14th, Cgyt, 1239 Fussly’ Report of the Indian Law Commissioners on Slavary In India, Vol. 1, Appendix II P, 179.

[6] N.H. Macnallghten, op. Cit, Vol. I

[7] Ibid, Vol. I. PP. 113-119,227 and Vol. II PP. 273-276

[8] Fancis Bunchanan Hamilton, A Journey from Madras through the countries of Mysore, Canara and Madras Through the countries of Mysore, Canara and Madras, 3 volumes (London, 1807). The author inherited the family  name, Hamilton, late in life.

[9] ಎಲ್ಲಿ ಎಲ್ಲಾ ಬುಕನನ್‌ಹೋಗುತ್ತಾನೋ ಅಲ್ಲೆಲ್ಲಾ ಬಹಳ ಜಾಗರೂಕತೆಯಿಂದ ಕೃಷಿ ಕಾರ್ಮಿಕರ ಸ್ಥಿತಿಗತಿಗಳನ್ನು ವಿಚಾರಿಸುತ್ತಾನೆ. ಈ ಸೇವಕರಿಗೆ ದೇಶದ ಬೇರೆ ಭಾಗಗಳ ಕೊಡಲಾಗುತ್ತಿದ್ದ ವೇತನವನ್ನು ವಿವರವಾಗಿ ದಾಖಲಿಸಿ ಹೋಲಿಕೆ ಮಾಡುತ್ತಾನೆ. ಕೆಲವೊಮ್ಮೆ ಕೂಲಿಕಾರರು ತಮ್ಮ ವೇತನವನ್ನು ಹಣದ ರೂಪದಲ್ಲಿ ಪಡೆಯುತ್ತಾರೆ. ಇನ್ನೂ ಕೆಲವೊಮ್ಮೆ ಧಾನ್ಯದ ರೂಪದಲ್ಲಿ ಪಡೆಯುತ್ತಿದ್ದು ವಿರಳವಾಗಿ ಧಾನ್ಯ ಮತ್ತು ಹಣವನ್ನು ಪಡೆಯುತ್ತಿದ್ದುದನ್ನು ಬುಕನನ್ ದಾಖಲಿಸುತ್ತಾನೆ. ಹಾಗಾಗಿ  ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಪರಿಚಯ ಮಾಡಿಕೊಳ್ಳದ ಹೊರತು ಈ ಕೂಲಿಕಾರರ ದುಡಿಮೆಯ ಮೌಲ್ಯವನ್ನು ತೀರ್ಮಾನಿಸಲು ಅಸಾಧ್ಯವಾಗುತ್ತಿತ್ತು. ಆದಾಗ್ಯೂ ಬುಕನನ್ ಕೊಡುವ ಮಾಹಿತಿಗಳು ತುಂಬಾ ಉಪಯುಕ್ತವಾಗಿವೆ. ಮುಖ್ಯವಾಗಿ ಎಲ್ಲ ಧಾನ್ಯದ ರೂಪದಲ್ಲಿ ವೇತನವನ್ನು ನೀಡಲಾಗುತ್ತಿತ್ತೊ. ಅಲ್ಲಿ ಅಧಿಕಾರಿಗಳ ವರದಿಗೆ ಹೋಲಿಸಿ ಮೌಲ್ಯ ಮಾಪನ ಮಾಡಲು ಸುಲಭವಾಗುತ್ತಿತ್ತು.

[10] Buchanan, op. cit. Vol. III PP. 5-8, see also report of J.G. Ravenshaw to the Madras Board  of Revenue, 7. August 1801, in Madras Board  of Revenue proceedings, 20 August 1801.

[11] Report from J.G. Ravenshaw to William Petrie, President of the Board of Revenue, dated 7 August 1801, Parlimentary papers (PP) (Judicial), 1828 paras 15 and 18.

[12] The Magistrate of Canara described the remaining 22,000 in 1819 as descendants of persons take in bottle or Brahmin women who had lost caste. Slavery papers 1828, pp. 843-4.

[13] From T. Harris, collector in Canara, to the president and members of the Board of Revenue, dated 10 July 1819; Ibid, para 7, P. 844, Report from J.G. Ravenshaw to William petrie, President of the Board of Revenue, dated 7 August 1801, PP (Judicial), 1828, Paras 15 and 18

[14] From T Harris, Collector in Canara, to the President and Members of the Board of Revenue, dated 10 July 1819; Ibid, para 7, 9. 844.

[15] Francis Buchanan Hamilton, Op: Cit, Vol. III, P. 371

[16] ಗುಲಾಮರ ಯಜಮಾನರು ತಮ್ಮ ಜೀತದಾಳುಗಳನ್ನು ಇನ್ನೊಬ್ಬರಿಗೆ ಒತ್ತೆ ಕೊಡುವುದು ಅಥವಾ ಅವರ ದುಡಿಮೆಯನ್ನು ಬಾಡಿಗೆಯಾಗಿ ನೀಡುವುದು ಸಾಮಾನ್ಯವಾಗಿತ್ತು. ಇಂತಹ ಸಂದರ್ಭಗಳಲ್ಲಿ  ಈ ಆಳುಗಳಿಗೆ ಆಹಾರವನ್ನು ಒದಗಿಸುವುದು ಕೊಂಡುಕೊಳ್ಳೂವವನ ಕರ್ತವ್ಯವಾಗಿ. ಎಲ್ಲಿಯವರೆಗೆ ಆ ಯಜಮಾನರು ಕೊಂಡುಕೊಂಡ ಆಳುಗಳನ್ನು ತಮ್ಮ ಸೇವೆಗಾಗಿ ಬಳಸಿಕೊಳ್ಳುತ್ತಾರೋ ಅಲ್ಲಿಯವರೆಗೆ ಅವರ ಕ್ಷೇಮವನ್ನು ನೋಡುವ ಹೊಣೆ ಹೊರಬೇಕಾಗಿತ್ತು. ಬುಕನನ್ ತನ್ನ ಅನುಭವದ ಆಧಾರದ ಮೇಲೆ ವೆಸ್ಟ್‌ಇಂಡೀಸ್‌ನಲ್ಲಿರುವ ಗುಲಾಮರಿಗಿಂತ ಕೆನರಾದ ಕೂಲಿ ಅಳುಗಳ ಸ್ಥಿತಿಗತಿ ಹೀನಾಯವಾಗಿತ್ತು ಎಂದು ಪಶ್ಚಾತ್ತಾಪಪಡುತ್ತಾನೆ. ಹಾಗಾಗಿ ಅವನು ಕೆನರಾದಲ್ಲಿ ಗುಲಾಮರನ್ನು ಕ್ರೂರವಾಗಿ ಹಿಂಸಿಸಲಾಗುತ್ತಿತ್ತು ಎಂದು ಆಪಾದಿಸುತ್ತಾನೆ. ಅವರನ್ನು ನೋಡಿ ಕೆನರಾದ ಆಳುಗಳಿಗೆ ಒಳ್ಳೆಯ ಪೌಷ್ಟಿಕಾಂಶ ಆಹಾರ ನೀಡುವ ಅಗತ್ಯವಿದೆ ಎಂದು ಹೇಳುವ ಅಭಿಪ್ರಾಯದಲ್ಲಿ ಅವರು ಎಂತಹ ಶೋಷಣೆಗೆ ಒಳಪಡಿಸಿರಬಹುದು ಎಂಬುದು ಅರಿವಾಗುತ್ತದೆ. Buchanan, Op. Cit Vol. II, PP. 370-71

[17] Idid, Vol. III, pp. 35-37

[18] Ibid P. 140

[19] Ibid, PP. 181, 218, 226 and 243

[20] Report from J.G. Ravenshaw to the Madras board of Revenue, dated 7 August 1801, in Madras Board of Revenue Consultations, 20 August, 1801,

[21] PP (1828) Vo. XXIV PP. 548-50 843-44, Pp (1834) Vol XLIV PP. 4-5 report of the census of the Madras presidency 1871, P.9, Report of Indian Law commission, Appendix IX P. 440

[22] Buchernan, op. Cit. Vol. III, Chapter XVI P. 140

[23] PP (Judicial), 1828 PP. 833-34, From Thomas Harris, Collector of Canara to the Board of Revenue, dated 10 July 18190.