ವಿಷ್ಣುತುಂಗನ ವಿವರವಣೆಯ ಸಾಚಾತನವನ್ನು ನೋಡಲು ಆತನ‘ಇರೆ ತುಂಪಿನಿ’ ಎಂಬ ಪದವನ್ನು ಬಳಸಿದುರ ಹಿನ್ನೆಲೆಯಲ್ಲಿ ನೋಡಬೇಕು. ‘ಎಲೆಯ ಅನ್ನವನ್ನು ಬಿಸಾಡಿ-ಅದೂ-ಬಾಲಕರು ನೆಗೆದರಂತೆ, ಕೈ ತಪ್ಪಿಸಿ, ಬಾಳಲೆಯಲ್ಲಿ ಉಣ್ಣುವುದು ತುಳುವರ ಸಂಸ್ಕೃತಿಯಲ್ಲವೇ? ಉಣ್ಣುವ ಎಲೆಯನ್ನು ಬಿಸಾಕಿ ಬಾಲಕರೇ ನೆಗೆದರೆಂದು ಮೇಲೆ’ (ಕ. ಭಾಗವತದಲ್ಲಿ ಎಷ್ಟಿರಬೇಡ! ಅದಲ್ಲದೆ ಸ್ತ್ರೀಯರು ಕರುಗಳನ್ನು ಅವುಗಳ ಆಶ್ರಯದಲ್ಲಿಯೇ ಕಟ್ಟಿ (ಕರು ಬಿಡುತ್ತಿದ್ದವರು) ತಮ್ಮ ಪತಿಯರನ್ನು ಬಳಸಿಯೂ ಉಪ್ಪರಿಗೆ, ದರೆಗಳಲ್ಲಿ ಹಾಗೂ ಜಗಲಿಯ ಮೇಲೆ ನಿಂತು ಹಾರೈಸಿದರಂತೆ, ಇಲ್ಲಿ ಬಾಲಕರು ಮತ್ತು ಸ್ತ್ರೀಯರು ಕುತೂಹಲಗಳನ್ನಷ್ಟೇ ಕವಿ ಹೇಳಿದರೂ ಸಹ ಔಚಿತ್ಯಪೂರ್ಣವಾದುದೇ. ಇದು ವಿಷ್ಣು ತುಂಗನ ಸೂಕ್ಷ್ಮಗುಣಗ್ರಾಹಿ ಗುಣಕ್ಕೆ ಸಾಕ್ಷಿಯಾದುದು.

ಇಷ್ಟರವರೆಗೆ ಪ್ರೇರಿತ ಪದ್ಯಗಳು ಎನ್ನುವ ಹೆಸರಿನಲ್ಲಿ ವಿಶ್ಲೇಷಿಸಿದ ವಿಶ್ಲೇಷಣೆ ‘ಕಾವ್ಯಮೀಮಾಂಸೆ’ಯ ಸ್ವೀಕರಣದ ಪರಿಭಾಷೆಗೆ ಸಂಬಂಧಿಸಿದುದು. ಇದು ವಿಷ್ಣು ತುಂಗ ಕನ್ನಡಭಾಗವತವನ್ನು ಅನುಸರಿಸಿದಾಗಲೂ ತೋರಿಸಿದ ಎಚ್ಚರಿಕೆಯನ್ನು ತಿಳಿಸುವಂತದ್ದಾಗಿದೆ. ಸ್ವಲ್ಪ ಸರಳವಾಗಿ ಹೇಳುವುದಿದ್ದರೆ, ಮೊದಲ ವಿಭಾಗದ ಪದ್ಯಗಳು (ಅನುವಾದಿತ) ವಿಷ್ಣುತುಂಗನ ಕಾವ್ಯದ ರಸಗಟ್ಟಿಯನ್ನು ಪಡೆಯುವಲ್ಲಿ ನಮಗೆ ಎದುರಾಗುವ ಶುಷ್ಕ ಪದವಾದರೆ ನಂತರದ ಪದ್ಯಗಳು ಒಳ ಪ್ರವೇಶಿಸಿದರೆ ಪ್ರಯೋಜನವಾದೀತು ಎಂದು ಆಶಾವಾದವನ್ನು ಉಂಟು ಮಾಡುವ ಕುರುಹುಗಳು. ಈ ಮಾದರಿಯ ಪದ್ಯಗಳು ಕಾವ್ಯದಲ್ಲಿ ತುಂಬ ಇವೆ. ಇವು ಕೇವಲ ಮಾದರಿಗಳಷ್ಟೇ.

ಸ್ವರಚನೆಗಳು : ವಿಷ್ಣುತುಂಗ ಪ್ರೇರಿತ ಪದ್ಯಗಳನ್ನು ಬರೆದನೆಂದ ಮೇಲೆ ಅವನದೇ ಆದ ಸ್ವಂತಿಕೆ ಏನಾದರೂ ಇದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅದಕ್ಕೇ ಉತ್ತರ ಈ ರೀತಿಯ ಪದ್ಯಗಳ ವಿಶ್ಲೇಷಣೆ ಮಾಡುವುದರ ಮೂಲಕ ಕೊಡಬಹುದು.

ವಿಷ್ಣುತುಂಗ ಕಾವ್ಯದ ಪ್ರಾರಂಭದಲ್ಲಿ ತುಂಬ ಆಕರ್ಷಕ ರೀತಿಯಲ್ಲಿಯೇ ತೊಡಗುತ್ತಾನೆ. ನಮ್ಮ ಕನ್ನಡ ಕವಿಗಳಲ್ಲಿ ಬಹು ಮಂದಿ ‘ವೀರ ನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸನೆಂಬ ವಿನಯವನ್ನು ತೋರಿಸಿದವರೇ ‘ಎಂಟೆರ್ದೆಯೇ’ ಎಂದು ಎದೆ ತೋರಿಸಿದವರು ಬಹಳ ಕಡಿಮೆ. ವಿಷ್ಣು ತುಂಗ ಈ ಲಿಪಿಕಾರರ ಸಾಲಿಗೆ ಸೇರಿದವನು ನಾನು ಭಾಗವತವನ್ನು ಹೇಳುವ ರೀತಿ ಹೇಗೆ ಎಂಬುದನ್ನು ಅವನ ಬಾಯಿಂದಲೇ ಕೇಳುವ-

ಕಂಕಣೀ ಕೆಡಕ್ ತ್ತಿ ಬಾಲೆರ್ ಚಂದ್ರನಿಚ್ಛಪಿ ನಂದೊಮೆ
ಮಂಕಣೀ ತೆರಿಯಂತಿ ಮೂಢೆ ಸಮುದ್ರೊ ನೀಂದ್ ಕ್ ಣಂದೊಮೆ
ಕಂಕುಳೇನ್ಯಲ್ ದಂತಿನಂದಕೆ ವಿಂಧ್ಯೋಪ್ರಾಪಿನಂದೊಮೆ
ಶಂಕಿಪುಪ್ಪೆನತೀ ಕಥೆ ತೆರಿತೊಂಪೆ ವರ್ಣಿ ಪೆರಾಂದ್ ತ್ || ೧೨ ||
(ಶ್ರೀ ಭಾಗವತೊ ಪ್ರ. ಸ್ಕಂದೊ. ಪ್ರ. ೫)

ಕವುಚಿ ಬಿದ್ದಿರುವ ಮಗುವು ಚಂದ್ರನನ್ನು ಬಯಸುವ ಹಾಗೆ ಮೇಲ್ಮುಖವಾಗಿಸುವುದಕ್ಕೆ ತಿಳಿಯದ ಮೂಢ ಸಮುದ್ರವನ್ನು ಈಜುವುದಕ್ಕೆ ಬಯಸುವ ಹಾಗೆ, ಕಂಕುಳಗಳಿಲ್ಲದಿರುವ ಅಂಧನು ವಿಂಧ್ಯವನ್ನು ಸೇರುವ ಹಾಗೆ ನಾನು ಈ ಮಹಾಕತೆಯನ್ನು ತಿಳಿಯ ಹೇಳುವೆ ಎನ್ನುತ್ತಾರೆ ಕವಿ. ವಿಶಾಲವಾದ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯ ವಾಹಿನಿಯ ಎದುರಲ್ಲಿ ತುಳು ಭಾಷೆಯಲ್ಲಿ ಕಾವ್ಯ ರಚನೆಗೆ ಹೊರಟ ಆತ ಹಾಗೆ ಹೇಳಲು ಚಾರಿತ್ರಿಕ ಕಾರಣಗಳಿವೆ. ಇಷ್ಟೊಂದು ದೈನ್ಯದಿಂದ ಹೇಳಬೇಕೊ ಎಂದು ಆಕ್ಷೇಪಿಸಬಹುದಾದರೂ ಆ ಭಾವನೆಯನ್ನು ಹೇಳುವಲ್ಲಿ ಬಳಸಿಕೊಂಡ ಉಪಮೆಗಳಂತೂ ಪರಿಣಾಮಕಾರಿಯಾಗಿವೆ. ಎಂಬುದನ್ನು ಅಲ್ಪಗಳೆಯಲಾಗುವುದಿಲ್ಲ.

ವಿಷ್ಣು ತುಂಗ ಬ್ರಹ್ಮನನ್ನು ವರ್ಣಿಸುವ ಇನ್ನೊಂದು ಪರಿಣಾಮಕಾರಿಯಾದ ರಚನೆ-

ನಳಿನಾಸನೆರನ್ನಿ ಮಹಾಕುಳತಾ ನಡುವಂಟಪ ನಾಲ್
ನಳಿನಾಯತ ವಕ್ರ್ತಸುಕರ್ಣೀಕೆಟೇ ನಿಲ್ ತೇನ್ಯೊಸವುಪ್ಪೀ
ಕಳಹಂಸಮಹಾಗತ ವರ್ಣಶುಭೇ ನಳಿನಾಯತನೇತ್ರೇ
ತುಳುಭಾಷೆ ಕವಿತ್ವೊ ಪ್ರಸಾದಿಪುಲೇ ಮಮ ಜುಂಹೆಟ್ ವತ್ || ೭ ||
(ಶ್ರೀ ಭಾಗವತೊ ಪ್ರ. ಸ್ಕಾಂಧೊ ಪು. ೩)

ವೆಂಕಟರಾಜ ಪುಣಿಂಚತ್ತಾಯರು ‘ಪೀಠಿಕೆ’ಯ ಭಾಗದಲ್ಲಿ ಈ ಪದ್ಯದ ಕುರಿತು ಹೀಗೆಂದಿದ್ದಾರೆ – ‘ಬ್ರಹ್ಮನೆಂಬ ಒಂದು ಕೆರೆ. ಅದರ ಮೇಲುಗಡೆ ಆತನ ಮುಖವೆಂಬ ನಾಲ್ಕು ಕಮಲಕೋಶಗಳು, ಅವುಗಳ ನಡುವೆ ಉಪಸ್ಥಿತಳಾಗಿರುವ ಎಲೈ ಹಂಸವರ್ಣದವಳೇ ನನ್ನ ನಾಲಿಗೆಯ ಮೇಲೆ ಕುಳಿತು ತುಳುಭಾಷೆಯ ಕವಿತಾಶಕ್ತಿಯನ್ನು ಅನುಗ್ರಹಿಸು.

ಇಲ್ಲಿ ಕವಿಯು ಸರಸ್ವತೀ ದೇವಿಯ ಹೆಸರನ್ನು ಪ್ರಸ್ತಾಪಿಸಿದ್ದರೂ ಆಕೆಯೇ ಎಂಬ ಆರ್ಥ ಬರುವಂತೆ ಧ್ವನಿಪೂರ್ಣವಾಗಿ ಹೇಳಿದ್ದಾನೆ. ಬ್ರಹ್ಮನ ನಾಲ್ಕು ಮುಖಗಳಲ್ಲಿ ನಾಲ್ಕು ವೇದಗಳು ಹುಟ್ಟಿದುವೆಂದೂ ಅವೈದಿಕ ವಾಙ್ಮಯವೇ ಸರಸ್ವತಿಯಾಗಿದ್ದಾಳೆಂದೂ ಕವಿಯು ಅಲ್ಲಿ ವ್ಯಕ್ತಪಡಿಸಿದ್ದಾನೆ.

ಆತನ ಇನ್ನೊಂದು ಸ್ವರಚನೆ-
ಪುಟ್ಟ್ ನಾನಿ ತುಂಡೆಂಗ್ ಸ್ಟೀಂಟ್ ದಿನೋಟ್ಟಲಾರೆ ನನುಗ್ರಹ
ಕಟ್ಟಟೇ ನಡತ್ ತ್ತೊಮಾವುಸ್ಟೆತ್ತ್ ಜಾಫಲೊ ನೀರ್ ಟೇ
ಪುಟ್ಟ್ ಸ್ಟೀ ನಳಿನೊಂತ ಮಿತ್ತೆ ವಸೀತೊ ಕಪ್ಪೆ ಸದಾಂತೊಲಾ
ಇಷ್ಟೆಲಾ ಪರಿಶಾಯೊ ಸಾರೊಮಿ ನಾಮೂ ಪಿಂದರಿಯಗ್ರಜಾ || ೬ ||
(ಶ್ರೀ ಭಾಗವತೊ ಪ್ರ. ಸ್ಕಾಂಧೊ ಪು. ೧೩೩)

ಶ್ರೀ ಕೃಷ್ಣ ನಿರ್ವಾಣದ ನಂತರ ಅರ್ಜುನನು ಧರ್ಮರಾಯನಲ್ಲಿ ತಿಳಿಸಿ ಪರಿತಪಿಸುವ ಇದು ‘ನೀರಿನಲ್ಲಿ ಹುಟ್ಟಿದ ಕಮಲದಲ್ಲಿ ವಾಸಿಸುತ್ತಿದ್ದ ಕಪ್ಪೆಯ ಹಾಗೆಯೇ ನಾವೂ ಹುಟ್ಟಿನಿಂದ ಈವರೆಗೆ ಶ್ರೀ ಕೃಷ್ಣನ ಅನುಗ್ರಹದ ಕಟ್ಟಿನಲ್ಲಿಯೇ ವಾಸಿಸುತ್ತಿದ್ದು ‘ಅವನೇನು ಎಂಬುದನ್ನು ತಿಳಿಯಲಾರದೆ ಹೋದೆವಲ್ಲಾ’ಎಂಬುದು ಇಲ್ಲಿಯ ಭಾವ. ತಾವರೆಯ ಮೇಲೆಯೇ ಕಪ್ಪೆ ವಾಸಿಸುತ್ತಿದ್ದರೂ ಅದಕ್ಕೆ ತಾವರೆಯ ಪರಿಮಳವಾಗಲೀ ಅದರ ಸೌಂದರ್ಯವಾಗಲೀ ಅರಿವಿಗೆ ಬರುವುದು ಸಾಧ್ಯವೇ? ಇಲ್ಲಿ ಪಾಂಡುವರನ್ನು ಅದರ ಸೌಂದರ್ಯವಾಗಲೀ ಅರಿವಿಗೆ ಬರುವುದು ಸಾಧ್ಯವೇ? ಇಲ್ಲಿ ಪಾಂಡವರನ್ನು ಕಪ್ಪೆ ಎಂದೂ ಕೃಷ್ಣನನ್ನು ತಾವರೆಯೆಂದೂ ವರ್ಣಿಸಿರುವುದು ಮನೋಜ್ಞವಾಗಿದೆ.

ಇದಕ್ಕಿಂತಲೂ ಅದ್ಭುತವಾದ ಒಂದು ಕಲ್ಪನೆ ವಿಷ್ಣುತುಂಗನಲ್ಲಿದೆ. ಭಕ್ತಿಯು ಹೇಗಿರಬೇಕು. ವಿರಕ್ತರ ಸುಖವೇನು ಎಂಬುದನ್ನು ಆತ ಹೇಳುವ ರೀತಿ ಹೀಗಿದೆ:

ಸೇವಿತೇ ಲೆಯೊಮಾವನೆತ್ತಿನ ಕೇವಲಾಮೃತಸಿಂಧುವೀ
ಶ್ರೀ ವರೇಣ್ಯವಯಂತ ಕಣ್ಣಿಟ್ ಚಿರ್ಕ್‌ಸ್ಟೀ ಮನಪಕ್ಷಿನೀ
ಬಾವೆಲಾ ಕೃತಿ ನೇಲ್ ಸ್ಟೌಳೆ ವಿಲಾಸೊಕೊಂಡಿ ವಿರಕ್ತರೇ-
ಕೇವಿ ಪತ್ತ್ ಲ ಪೊರ್ದನಪ್ಪ ಮನಾಸುಖೊಂಟ್ ರೆಮೀಪೋಳೀ || ೧೬ ||
(ಶ್ರೀ ಭಾಗವತೊ ತೃ. ಸ್ಕಂಧೊ. ಪು. ೩೬೬)

ಇದರ ಅರ್ಥವಿಷ್ಟು: ಸೇವಿಸಿ ಅಶೇಷವಾಗದ ಕೇವಲ ಅದ್ಭುತ ಸಿಂಧುವು ಸಿಗಬೇಕಾದರೆ ಶ್ರೀ ಕೃಷ್ಣ ಅವಯವವೆಂಬ ಕಣ್ಣಿನಲ್ಲಿ ಮನಸ್ಸೆಂಬ ಪಕ್ಷಿಯನ್ನು ಸಿಕ್ಕಿಸಿ ಬಾವಲಿಯ ಹಾಗೆ ಓಲಾಡಿಸುತ್ತಿರಬೇಕು. ಮನಸ್ಸನ್ನು ಬಾವಲಿಯ ಹಾಗೆ ಓಲಾಡಿಸುತ್ತಿರಬೇಕು. ಎಂಬುದು ವಿಶಿಷ್ಟವಾದ ಕಲ್ಪನೆ. ಬಾವಲಿಯ ಹಿಡಿತ ಭರವಾದುದು. ಶರೀರ ಅಧೋಮುಖವಾಗಿ ದೃಷ್ಟಿ ಊರ್ಧ್ವಮುಖವಾಗಿಸಿ ಓಡಾಡುವ ಗುಣ ಅದರದು. ಹಾಗೆ ಮನಸ್ಸನ್ನು ಊರ್ಧ್ವಮುಖ ಮಾಡಿಸಬೇಕು ಎಂದರೆ ಆತ್ಮನಲ್ಲಿ ಎಳೆ ಎಳೆಯಾಗಿ ವಿವರಿಸಬಹುದಾದ ಸುಂದರ ಪದ್ಯವಿದು. ಹಿಂಜಿದಷ್ಟು ಆರ್ಥವಿಸ್ತಾರ ಪಡೆಯಬಲ್ಲದು.

ವಿಷ್ಣುತುಂಗ ಮನಸ್ಸು ಮಾಡಿದರೆ ವರ್ಣನೆಯನ್ನು ಅತ್ಯಂತ ಮನೋಜ್ಞಗೊಳಿಸಬಲ್ಲನೆಂಬುದಕ್ಕೆ ಇನ್ನೊಂದು ಉದಾಹರಣೆ. ಮಗು ಜನನಿಯ ಉದರದಿಂದ ಹೇಗೆ ಉದುರುತ್ತದೆ ಎಂಬುದು ಕವಿಯ ಲೇಖನಿಯಲ್ಲಿ ಪಡಿ ಮೂಡಿದ ರೀತಿ ಇದು.

ಅಟ್ಟ್ ಡೇಟತಿ ಕಪ್ಟಿತೇ ಸಖಿ ಮಾರ್ಕುಳಿರ್ದಿಶೆಟ್ ತ್ತ್ ಲಾ
ಫೆಟ್ಟಿಪೇಪ್ಪೆರ್ ಮುಟ್ಟೆ ಪತ್ತ್ ಸ್ಟ್ ಬಾಲನೀಕರ ಮಾಂಪೆರ್
ಚೆಟ್ಟ್ ಸ್ಟೀ ಮನೊಂಟಾವ ಮೇದಿನಿಟ್ಸ್ ಪ ಬುಳುವೆನಂದವೇ
ವಿಷ್ಠೆಮಾಂಸ ಶರೀರೆಯಾಸ್ಟಿ ಕುಮಾರ ಚೂವುಟ ಕೌತಕೋ || ೫ ||
(ಶ್ರೀ ಭಾಗವತೊ ಪ್ರ. ಸ್ಕಾಂಧೊ ಪು. ೩೭೭)

ಕವಿಯ ಮಾತನ್ನು ಅನುವಾದ ಮಾಡಹೊರಟರೆ ಮೂಲ ಸ್ವಾತಂತ್ರ್ಯ ಕೆಡುತ್ತದೆ ಎಂದು ಗೊತ್ತಿದ್ದೂ ಇದನ್ನು ಅನುವಾದಿಸುವುದೆಂದರೆ ‘ಇಕ್ಕಟ್ಟಾದ ಎಡೆಯಲ್ಲಿ ಇಕ್ಕೆಡಗಳಲ್ಲಿ ದಾದಿಯರು ಬಾಲನ ತಲೆಯನ್ನು ಎಳೆಯುತ್ತಾರೆ, ಹೊಡೆಯುತ್ತಾರೆ. ಆಗ ಕೊಳೆಯಿಂದ ಕೂಡಿದ ಮಾಂಸದ ಮುದ್ದೆಯು ಭೂಮಿಗೆ ಬೀಳುತ್ತದೆ. ‘ಇದು ವರ್ಣನೆಯೂ ಹೌದು. ವಿವರಣೆಯೂ ಹೌದು.

ಇನ್ನು ಯಮನ ಕಿಂಕರರು ಕೊಡುವ ಶಿಕ್ಷೆಯನ್ನು ನೋಡುವ
ದೇಹೊಂಕಡೆಯಾ ಬಸ್ಟೀ ಚುತ್ಥಸ್ಥೇ ತೂಪತ್ತೊವೆರೆಡ್ಡಾ
ದೇಹೊಂಕುಳೆ ಪೂಳೊವೆರೇ ಮಡುಟೇ ಚಜಪ್ಪುಪ್ಪೆರ್ ಚಣ್ಣೋ
ದೇಹೊಂಕುಳೆ ಬಾಳ್ ಟೆ ಖಂಡಿಪೇರೇ ಪೊದ್ ಪೇರಕಿತೇನ್ಯಾ
ದೇಹೀ ನಿನೆಪಂತಿ ಫಲಂಕುಳೆಟೇ ನಭೆಪುಪ್ಪುಣ ಚೋದ್ಯೊ || ೨೪ ||
(ಶ್ರೀ ಭಾಗವತೊ ಪ್ರ. ಸ್ಕಂಧೊ ಪು. ೩೭೩)

ಈ ಯಮದೂತರು ಯಮಲೋಕದವರಾದರೂ ಅವರಿಗೆ ತುಳುನಾಡಿನ ಸಂಸರ್ಗವಿರಬೇಕು. ಬತ್ತಿಗೆ ಬೆಂಕಿ ಹಾಕಿ ಉರಿಸುವುದನ್ನೂ ಅವರು ಯಥೇಚ್ಛವಾಗಿ ತುಳುನಾಡಿನಲ್ಲಿ ನೋಡಿರಬೇಕು. ಅಂತೆಯೇ ತುಳುನಾಡಿನಲ್ಲಿ ಮಡುವಿನಿಂದ ಸೌದೆ ಇತ್ಯಾದಿಗಳನ್ನು ಹೋಳುಹೋಳನ್ನಾಗಿ ಮಾಡುವುದನ್ನು, ಸೊಪ್ಪು ಇತ್ಯಾದಿಗಳನ್ನು ಸಣ್ಣದಾಗಿ ಕೊಚ್ಚುವುದನ್ನು ಚೆನ್ನಾಗಿ ಅರೆದು ಹುರಿಯುವುದನ್ನೂ ನೋಡಿರಬೇಕು. ಹಾಗಾದುದರಿಂದ ಜೀವರಿಗೂ ಅದೇ ರೀತಿಯ ಶಿಕ್ಷೆಯನ್ನು ಯಮಲೋಕದಲ್ಲಿ ಕೊಡುತ್ತಾರೆ.

ವೃದ್ಧಾಪ್ಯ ಬಂದಾಗ ನರನ ದೇಹ ಸ್ಥಿತಿ ಹೇಗಾಗುತ್ತದೆ ಎಂಬುದನ್ನೂ ಕವಿ ಇನ್ನಿಲ್ಲವೆಂಬ ಹಾಗೆ ಚಿತ್ರಿಸುತ್ತಾನೆ.

ಕಾರೆವೂ ಸ್ವರೊಮಂಚಚಿಪನಿಂಚಿಪನಾ ಶ್ಲೇಷ್ಮೊ ಮಡೆತೊಂಡ್
ವರನೋಳಿತ ಧಾರೆಕುಳುದ್ಭವಿಪೂ, ಚಿತ್ತಸ್ವರೊ ಪೋವೋ
ಕರ್ ಳೇ ಪಿದಯಾವು ಅಪಾನತೆಟೇ ತನು ಮೂಜಮುಡಂಕೂ
ಪೆರಿಯಾ ಮಲೊ ತಾನ್ಪಿನನೇ ಬರುವೂ ಜಾಪಣ್ಕ್ ಣಸ್ಟಪ್ಪಾ || ೧೦ ||
(ಶ್ರೀ ಭಾಗವತೊ ಪ್ರ. ಸ್ಕಂಧೊ ಪು. ೩೭೧)

ಶ್ಲೇಷ್ಮವು ಅವರಿಸಿಕೊಂಡು (ಆ ಕಡೆ, ಈ ಕಡೆ) ಸ್ವರವೂ ಕೊರೆಯಲ್ಪಡುತ್ತದೆ. ಲೋಳೆಯು ಧಾರೆಯಾಗಿ ಇಳಿಯುವುದರಿಂದ ಚಿತ್ತಸ್ವರ ಹೋಗುತ್ತದೆ. ಕರುಳ್ ಹೊರಗಾಗುತ್ತದೆ. ಶರೀರ ಮೂರು ಮೂಲೆಯಾಗಿ ವಕ್ರವಾಗುತ್ತದೆ. ಮಲವು ತನಗೆ ತಿಳಿಯದೆ ಹೊರಬರುವುದು.

ಹೀಗೆ ವಿಷ್ಣುತುಂಗ ಮೂಲದಿಂದ ಇದ್ದಕ್ಕಿದ್ದಂತೆ ಪಠ್ಯವನ್ನು ಅನುವಾದಿಸಲೂ ಇಲ್ಲ. ಮೂಲದಿಂದ ಪ್ರೇರತಿವಾಗಿ ಪದ್ಯರಚನೆಯನ್ನು ಮಾಡಬಲ್ಲ. ಮೂಲವನ್ನು ದೂರವಿರಿಸಿ ಸ್ವರಚನೆಯನ್ನು ಮಾಡಿಯೂ ಸೈ ಎನಿಸಬಲ್ಲ. ಹಿಂದಿನ ಭಾಗದಲ್ಲಿ ಹೇಳಿದ ಮಾತುಗಳನ್ನು ನೆನಪಿಸಿ ಮತ್ತೆ ಮುಂದುವರಿಯುವುದಾದರೆಈ ರೀತಿಯ ಪದ್ಯಗಳು ರಸವನ್ನು ಹೊರಚೆಲ್ಲುವ ರಸಘಟ್ಟಿಗಳು. ವಿಷ್ಣುತುಂಗನ ಸ್ವಂತಿಕೆಗೆ ಸಾಕ್ಷೀಭೂತವಾದ ಪದ್ಯಗಳು. ಈ ರಚನೆಗಳಿ ವಿಷ್ಣುತುಂಗನಿಗೆ ಮಹಾಕವಿಗಿರುವ ಯೋಗ್ಯತೆಯನ್ನು, ಪ್ರತಿಭೆಯನ್ನು, ಸೂಕ್ಷ್ಮಗುಣಗ್ರಾಹಿತ್ವನ್ನೂ ತೋರಿಸಿಕೊಡುತ್ತದೆ.

ಮೂಲಕ್ಕಿಂತ ಸೊಗಸಾದ ರಚನೆಗಳು : ವಿಷ್ಣುತುಂಗ ‘ಸ್ವೀಕರಣ ಮಾಡುತ್ತಾನೆ ಎಂದ ಮೇಲೆ ಆ ಸ್ವೀಕರಣವು ಎಂತಹದ್ದಂಬುದನ್ನು ಅಲ್ಲಿ ವಿವರಿಸುವ ಗೋಜಿಗೆ ಹೋಗಲಿಲ್ಲ. ಕನ್ನಡ ಭಾಗವತದಿಂದ ರತ್ನಗಳನ್ನು ಆಯ್ದುಕೊಂಡರೂ ತನಗೆ ಬೇಕಾದಂತೆ ಸೊಗಸಾಗಿ ಆಭರಣಗಳನ್ನು ತಯಾರಿಸಿದ ಆತನ ಔಚಿತ್ಯಪ್ರಜ್ಞೆಯನ್ನು ಗಮನಿಸಬೇಕು. ಮೂಲದ ಭಾವನೆ ವಿಷ್ಣುತುಂಗನ ಕೈಯಲ್ಲಿ ಪರಿಪಾಕ ಪಡೆಯುತ್ತದೆ ಎಂಬುದನ್ನು ಮತ್ತೊಮ್ಮೆ ಮೂಲದೊಂದಿಗೆ ಹೋಲಿಸುವ ಪ್ರಯತ್ನ ಇಲ್ಲಿದೆ.

ಶ್ರೀಕೃಷ್ಣನ ಅವತಾರಗಳ ಕುರಿತು ಸೂತ ಹೇಳುವ ಮಾತು ಕನ್ನಡ ಭಾಗವತದಲ್ಲಿ ಹೀಗಿದೆ:

ಜಗದುದಾರನವತಾರ ಸಂಖ್ಯೆಯ
ಬಗೆಯ ಬಲ್ಲವರಾತು ಭೂಪಾ
ಶುಗಳನಭದ್ರನ ತಾರೆಗಳನಾಸಾರ ಬಿಂದುಗಳ
ತೆಗೆದು ಲೆಕ್ಕಿಸಬಹುದು ಭೃಗ್ವಾ
ದಿಗಳು ಸುನರರವರು ಮನ್ವಾ
ದಿಗಳು ಹರಿಯಂಶಾಂಶ ಸಂಭವರಿವರು ಕೇಳೆಂದ || ೧೨ ||
(ಕ. ಬಾಗವತ ಪ್ರ. ಸ್ಕಂದ. ಪು. ೫)

ವಿಷ್ಣುತುಂಗನ ಕೈಯಲ್ಲಿ ಅದು ಫಳಗಿದ ರೀತಿ ಹೀಗೆ-
ಲೆಕ್ಕೊಮಾಂಪೊಳಿನಂಬರಂಟ್ಪ ಚೋಜಿಕೀನುಡುಸಂಕುಲಂ
ಲೆಕ್ಕೊಮಾಂಪೊಳಿ ಭೂಮಿಟೇ ನಿದೆಸ್ಟ್ ತ್ತಿ ಧೂಳಂತ ರಾಶಿನೀ
ಲೆಕ್ಕೊಮಾಂಪೊಳಿ ವರ್ಷಧಾರೆನಿ ಸಾಗರಾತಿರಮಾಲೆನೀ
ಲೆಕ್ಕೊ ಮಂಪಿಯರೇರ್ ಶ್ರೇಷ್ಠರನಂತ ಮೂರ್ತಿಗುಣೊಂಕುಳೆ || ೩೨ ||
(ಶ್ರೀಭಾಗವತೊ. ಪ್ರ. ಸ್ಕಂದೊ. ಪು. ೧೮)

ಅಂಬರದಲ್ಲಿರುವ ನಕ್ಷತ್ರಗಳನ್ನು ಲೆಕ್ಕಿಸಬಹುದು, ಭೂಮಿಯಲ್ಲಿರುವ ಧೂಳಿನ ರಾಶಿಯನ್ನು ಲೆಕ್ಕಿಸಬಹುದು. ಸಾಗರದ ತರಂಗಗಳ ಮಾಲೆಯನ್ನೇ ಲೆಕ್ಕಿಸಬಹುದು. ಆದರೆ ಕೃಷ್ಣನ ಅನಂತಮೂರ್ತಿಯ ಗುಣಗಳನ್ನು ಲೆಕ್ಕ ಮಾಡುವುದಾದರೂ ಹೇಗೇ? ಇಲ್ಲಿ ಗಮನಿಸಬೇಕಾದ ಮಾತೆಂದರೆ ಸಾಧ್ಯತೆಗಳನ್ನು ಮೊದಲಿಗೇ ಹೇಳಿ ಆ ಬಳಿಕ ಅದಕ್ಕೆ ಕೊನೆಯಾಗಿ ಅಸಾಧ್ಯತೆಯನ್ನು ಹೇಳಿರುವ ರೀತಿಯನ್ನು ಸಾಧ್ಯತೆಯ ವರ್ಣನೆಯನ್ನು ಮಾಡುತ್ತಾ ಅಸಾಧ್ಯತೆಯನ್ನು ಒಂದೇ ಮಾತಿನಲ್ಲಿ ಹೇಳುವುದರ ಮೂಲಕ, ಅಸಾಧ್ಯತೆಯನ್ನು ವರ್ಣಿಸುವುದಾದರೂ ಹೇಗೆಂದು ಸೂಕ್ಷ್ಮವಾಗಿ ಪರಿಣಾಮಕಾರಿಯಾಗಿ ವರ್ಣನೆಯೇ ಮಾಡದೆ ಯಥಾಸ್ಥಿತಿಯಲ್ಲಿಯೇ ಬಳಸಿರುವುದರಿಂದ ಮೊದಲ ವರ್ಣನೆಗಳಿಂದ ಕೊನೆಯದು ಬೆಳಗುತ್ತದೆ. ಆದರೆ ಕನ್ನಡ ಭಾಗವತದಲ್ಲಿ ಈ ಕುಸುರಿ ಕೆಲಸ ನಡೆದಿಲ್ಲ. ಅಲ್ಲಿ ಒಂದೇ ಉಸುರಿಗೆ ‘ಭೂಪಾಕುಗಳನಭ್ರದ ತಾರೆಗನಾಸುರ ಬಿಂದುಗಳ ತೆಗೆದು ಲೆಕ್ಕಿಸಬಹುದು’ ಎಂದು ಹೇಳಿದೆ. ಇದರಿಂದ ಅದು ವಿಷ್ಣುವಿನ ಗುಣದ ಅನಂತತೆಯನ್ನು ಹೇಳಬೇಕಾದ ರೀತಿಯಲ್ಲಿ ಹೇಳುವುದರಲ್ಲಿ ಸೋತಿದೆ ಎನ್ನಬಹುದು.

ಈ ಮಾತುಗಳನ್ನು ಮತ್ತಷ್ಟು ಸ್ಪಷ್ಟಪಡಿಸುವುದಕ್ಕೆ ಮುಂದಿನ ಪದ್ಯಗಳಿಗೆ ಹೋಗುವ-

ಮುರವಿರೋಧಿಯ ತೋಟಿ ಕಂಸಾ
ಸುರ ಕೃತಾಂತನ ತೋಟಿ ಸಾಲ್ವನ
ಶಿರವನೊಡೆದನ ತೋಟಿ ನರಕಾಂತಕನ ಬಲು ತೋಟಿ
ಪರಮಪುರುಷನ ತೋಟಿ ಲೋಕೋ
ತ್ತರವಿಹಾರನ ತೋಟಿ ಬೇಡೆಂ
ದಿರದ ನಾೞಿದವಗಡಿಗೆ ಸೂಳಗಿದ ಕಹಳೆಗಳು || ೨೩ ||
(ಕನ್ನಡ ಭಾಗವತ ಪ್ರ. ಸಂಪುಟ ಪು. ೨೪)

ಶ್ರೀ ಕೃಷ್ಣ ಪಾಂಡವರ ಮನೆಗೆ ಬಂದಾಗ ವಾಸ್ಯ ಮೊಳಗಿದ ರೀತಿಯಲ್ಲಿ (ವಾದ್ಯದ ಧ್ವನಿಯಲ್ಲಿ) ಕವಿ ವರ್ಣಿಸುವ ರೀತಿಯದು. ವಿಷ್ಣುತುಂಗನಲ್ಲಿಯೂ ಈ ಪದ್ಯವಿದೆ. ಇಡೀ ಪದ್ಯದ ಮುಖ್ಯಪದವಾದ ತೋಟಿಯೂ ಬಳಕೆಯಲ್ಲಿದೆ.

‘ನರಕಂತಕ ತೋಟಿ ಪಿನಾಕಿಸಖಾ ಮುರವೈರಿನ ತೋಟಿ
ವರಸಾಲ್ವನ ಕಂಸನ ಮಲ್ಲವೆರೇ ಜೈತೀ ಹರಿ ಕೋಟಿ
ಗರುಡಧ್ವಜ ತೋಟಿ ಪರಾತ್ಪಾರುಷಾ ಖರಮರ್ದನ ತೋಟೀಂ
ದುರಿಪುಪ್ಪೆರ್ ನಾರ್ ಪ್ರತಾಪೊಮಿನೀ ಜನೊ ಕೇಳ್ ಕ್ ಣಂದೊ || ೨೫ ||
(ಶ್ರೀ ಭಾಗವತೊ ಪ್ರ. ಸ್ಕಂಧೊ ಪು. ೮೭)

ತುಳು ಭಾಗವತದ ಈ ಪದ್ಯ ಅದರಷ್ಟಕ್ಕೇ ಸೊಗಸಾಗದುದು. ಅದು ಅರ್ಥ ವಿವರಣೆ ಮಾಡಿದಾಗ ಪೂರ್ತಿಯಾಗಿ ಸತ್ವವನ್ನೇ ಕಳೆದುಕೊಳ್ಳುವ ಗುಣವುಳ್ಳದ್ದು. ಒಂದು ಮತ್ತು ಮೂರನೇ ಸಾಲಿನಲ್ಲಿ ‘ತೋಟಿ’ ಎಂದು ಮೊದಲಿಗೇ ಎರಡು ಬಾರಿ ಪುನರಾವರ್ತಿಸಿದರೆ ಎರಡು ಮತ್ತು ನಾಲ್ಕನೇ ಸಾಲಿನಲ್ಲಿ ಅದನ್ನು ಕೊನೆಯಲ್ಲಿ ಬಳಸುವುದರ ಮೂಲಕ ಕವಿ ಆ ತೂರ್ಯಗಳ ಮೊಳಗುವಿಕೆಯನ್ನು ಕಿವಿಗೆ ಕೇಳುವ ಹಾಗೆ ವರ್ಣಿಸುತ್ತಾನೆ. ಶಬ್ದಗಳ ಮೂಲಕವೇ ವಾದ್ಯದ ಮೊಳಗುವಿಕೆಯನ್ನು ಸಮರ್ಥವಾಗಿ ಸೆರೆಹಿಡಿಯುವುದು ಸಣ್ಣ ಮಾತಲ್ಲ. ಕನ್ನಡ ಭಾಗವತದ ಕರ್ತೃ ಪರಿಣಾಮಗೊಳಿಸುವ ದೃಷ್ಟಿಯಿಂದ ಸೋತಿದ್ದಾನೆ. ಆತನ ವಾದ್ಯಗಳು ಸಾಯಿಸುವುದಾದರೆ ವಿಷ್ಣುತುಂಗನ ವಾದ್ಯಗಳನ್ನು ‘ಉರಿಪುಪ್ಪನ್’ ಊದುವುದು ಹಾಗಿದ್ದುರಿಂದಲೇ ಮೊದಲಿನ ಮತ್ತು ಎರಡನೆಯ ಪದ್ಯಗಳ ರಚನೆಯ ಸೌಂದರ್ಯವೇ ಒಡೆದು ತೋರುವಷ್ಟರ ಮಟ್ಟಿಗೆ ಬೇರೆಯಾಗುತ್ತದೆ.

ಈಗ ಇನ್ನೊಂದು ಪದ್ಯವನ್ನು ನೋಡುವ, ಆದಿವರಾಹನೊಂದಿಗೆ ಹಿರಣ್ಯಾಕ್ಷನ ಯುದ್ಧದ ಸಂದರ್ಭದಲ್ಲಿಯ ಪದ್ಯವಿದು. ಯುದ್ಧದಲ್ಲಿ ಹಿರಣ್ಯಾಕ್ಷ ಮಾಯೆಯಿಂದ ರಾಕ್ಷಸರನ್ನು ಸೃಷ್ಟಿಸುತ್ತಾನೆ. ಆ ರಾಕ್ಷಸ ಸಂದೋಹ ವರಾಹವನ್ನು ಮುತ್ತುತ್ತದೆ.

ಎಲೆಲೆ ಕವಿ ಕವಿ ಸೀಳು ಹಂದಿಯ
ತಲೆಯ ತಿವಿ ತೆಗೆ ಕರುಳತಿದಿಯನು
ಸುಲಿ ಸುರೌಘದ ದೇಹಿತಿಂದಿನಾಲಾಗಲವಸಾನ
ಕೊಳುಗುಳಿಕೆ ತಾ ಹಾರಿ ಗಡ ತಾ
ನಳವಿಗೊಟ್ಟುದು ಕೊಲ್ಲೆನುತ ಕಳ
ಕಳದ ಕಿತ್ತಾಯುಧದಲೈದಿತು ರಾಕ್ಷಸಪ್ರಾತ || ೨೬ ||
(ಕನ್ನಡ ಭಾಗವತ ದ್ವಿ. ಸ್ಕಂಧ. ಪು. ೩೫)

ಇದನ್ನೇ ವಿಷ್ಣುತುಂಗ ವಿವರಿಸುವ ಬಗೆ ಹೀಗೆ-
ಪತ್ತ್ ಲೇ ತಳ್ ಪೀ ವರಾಹನೀ ಚುತ್ಯಲಾ ಬಲೆಯೊಡ್ಡಿಲೇ
ಕುತ್ತ್ ಸ್ಟೇ ಚೆಡ್ ಸ್ಟೇ ತಿಗ್ ಲ್ಪುಲೆ ಕಾರ್ ಕೈಶಿರೋ ಖಂಡಿಪೀ
ನೆತ್ತೆರುರ್ಪಿಲೆ ಬಟ್ಟಲೊಟ್ಟ್ ಸ್ಟ್ ತೂವುಟ್ ಪ್ಪನೆ ಬ್ಯೆಪವೀಂ
ದಾರ್ತ್ ನಾಲಿಶೆಟ್ ತ್ತ್ ಲಾಕುಳು ಫೆರ್ಜಿಪುಪ್ಪುಣ ಕೌತುಕೊ || ೨೯ ||
(ಶ್ರೀ ಭಾಗವತೊ ತೃ. ಸ್ಕಂಧಾ. ಪು. ೩೨೫)

ಎರಡು ಪದ್ಯಗಳನ್ನು ಜತೆಯಲ್ಲಿಟ್ಟು ನೋಡಿದರೆ ರೌದ್ರತೆ ಮೊದಲನೆಯದರಿಂದ ಎರಡನೆಯದರಲ್ಲಿಯೇ ಹೆಚ್ಚು ಕುದಿಯುವುದನ್ನು ನೋಡಬಹುದು. ಒಂದು ಹಂದಿ ನಿಜವಾಗಿಯೂ ಎದುರಾದರೆ ಜನ ಹೇಗೆ ಪ್ರತಿಕ್ರಿಯಿಸಬಹುದೆಂಬುದರ ಸರಿಯಾದ ಚಿತ್ರಣ ವಿಷ್ಣುತುಂಗ ಕೊಡುತ್ತಾನೆ. ಒಂದರ ಮೂಲಕ ಒಂದು ಕ್ರಿಯೆಯನ್ನು ಪೋಣಿಸುತ್ತಾ- ಹಿಡಿಯಿರಿ(ಪತ್ತ್ ಲೇ), ತಡೆಯಿರಿ (ತಳ್ ಪಿ), ಸುತ್ತಲೂ ಬಲೆಯೊಡ್ಡಿ (ಚುತ್ಯಲಾ ಬಲೆಯೊಡ್ಡಿಲೇ), ಕುತ್ತಸ್ಟೇ (ಕುತ್ತುವುದರಿಂದ), ಚೆಡ್ ಸ್ಟೇ(ಕೆಡಹಿ), ತಿಗ್ ಲ್ಪುಲೇ (ಸಿಗಿಯಿರಿ), ಕಾರ್ ಕೈ ಶಿರೋ ಖಂಡಿಪೀ (ಕಾಲು ಕೈ ತಲೆ ಕತ್ತರಿಸಿ), ನೆತ್ತರುರ್ಪಿಲೆ ಬಟ್ಟಲೊಟ್ಟ ಸ್ಟ್(ಬಟ್ಟಲು ಒಡ್ಡಿ ನೆತ್ತರನ್ನು ಹೀರಿ), ತೂವುಟಪ್ಪನೆ ಭೈಪವಿ (ಬೆಂಕಿಯಲ್ಲಿ ಬೇಯಿಸಿ) ಹಂದಿಯನ್ನು ಮುತ್ತುವ ಕ್ರಿಯೆ ಮೂಲಕ್ಕಿಂತ ಹೆಚ್ಚು ಸತ್ತ್ವಶಾಲಿಯಾದುದು. ‘ನೆತ್ತದುರ್ಪಿಲೆ ಬಟ್ಟ ಲೊಟ್ ಸ್ಟ್’ ಎನ್ನುವದು ಭೂತಾರಾಧನೆ ಸಂಬಂಧಿಸಿದ ಮಾತು ಎಂದೆನಿಸುತ್ತದೆ.

‘ವರಾಹ ಮತ್ತು ಹಿರಣ್ಯಾಕ್ಷನ ಯುದ್ಧ ಸಂದರ್ಭವನ್ನು ಇದೇ ಸಂದರ್ಭದಲ್ಲಿ ನೋಡಬಹುದು. ಮುಷ್ಟಿಯುದ್ಧ ವಿವರಣೆಯು ಕನ್ನಡಭಾಗವತದಲ್ಲಿ ಈ ರೀತಿ ಇದೆ.

ಎಲವೊ ತಿವಿ ತಿವಿ ತೀರಿತೇ ಭುಜ
ಬಲದ ನಿನ್ನಗ್ಗಳಿಕ ಕೆಲಸಕೆ
ಕಳಸವಿದೆ ನೋಡಿಲ್ಲ ತಡವಿನ್ನೊಂದು ಗಾಯದಲಿ
ಕೊಲುವೆನೆಸುತೆಡಗಾಲಲೊದೆದನು
ಕಳನ ಕನ್ಯೆಯನೊರಲುವವನಿಗೆ
ಕಳೆವರನ ಚಾಚಿದನು ಬಿದ್ದನು ಬಿಟ್ಟ ಕಂಗಳಲಿ || ೩೬ ||
(ಕನ್ನಡ ಭಾಗವತ ದ್ವಿ. ಸ್ಕಂದ. ಪು. ೩೬)

ಇದೇ ಸಂಧರ್ಭದಲ್ಲಿ ತುಳುಭಾಗವತದಲ್ಲಿ ವರ್ಣಿಸಿರುವುದು ಹೀಗೆ

ಫಟ್ಟಿಪುಪ್ಪೆರ್ ಮುಟ್ಟಪಾಯಿಸ್ಟ್ ಮೊಟ್ಟ್ ಸ್ಟ್ ಮುಡುಪಾಯಿಸ್ಟ್
ಕಷ್ಟಿಪುಪ್ಪೆರ್ ಚೆಟ್ಟ್ ರೆಚ್ಛಿತ್ ಬಟ್ಟೊಮಾ ಚುಲುಯರ್ಪೆರ್
ಮುಟ್ಟೆ ಮರ್ಗಿಲ್ ಬಟ್ಟಿ ಜಾನು ವ ಚೆಟ್ಟ್, ಸ್ಟೋ ರುಧಿರಂತವಾ
ಮುಷ್ಟಿಯುದ್ದೋಮಿನಿಂಚ ದಾನವೆಸೃಷ್ಟಿನಾಥೆಯ ವೆಂದೆರಂ || ೧೧ ||
(ಶ್ರೀ ಭಾಗವತೊ ತೃ. ಸ್ಕಂಧೊ, ಪು. ೩೦೮)

ನಿಜವಾಗಿ ಹೇಳುವುದಾದರೆ ಕನ್ನಡ ಭಾಗವತದಲ್ಲಿ ಮುಷ್ಟಿಯುದ್ಧವನ್ನು ಈ ರೀತಿಯಾಗಿ ಕಣ್ಣಿಗೆ ಕಟ್ಟುವಂತೆ ಹೇಳುವ ಪದ್ಯವಿಲ್ಲ. ಇದೆ ಎಂದು ಗುರುತಿಸಬಹುದಾದ ಪದ್ಯ ಈಗಾಗಲೇ ಹೇಳಿರುವಂಥದ್ದು. ಅದರಲ್ಲಿ ಮುಷ್ಟಿ ಯುದ್ದವನ್ನು ‘ತಿವಿ ತಿವಿ’ ಎಂದು ಹೇಳುತ್ತಲೇ ನಿಲ್ಲಿಸಲಾಗಿದೆ. ಈ ದೃಷ್ಟಿಯಿಂದ ವಿಷ್ಣುತುಂಗನ ಕನ್ನಡ ಭಾಗವತಕಾರನಿಗಿಂತ ಮುಂದೆ ಇದ್ದಾನೆ ಎನ್ನಬಹುದು. ಮತ್ತೆ ಮತ್ತೆ ಅನುರಣಿತವಾಗಿರುವ ‘ಟ್’ ಮತ್ತು ‘ಸ್ಟ್’ ಕಾರಗಳು ವರ್ಣನೆಯನ್ನು ಸಲಿಲಗೊಳಿಸುತ್ತದೆ. ಮೂಲಕ್ಕಿಂತ ಸೊಗಸಾಗಿದೆಎಂದು ಹೇಳಬಹುದಾದ ಪದ್ಯವಿದು.

[ಈವರೆಗೆ ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ ತುಳಿಭಾಗವತ ಮತ್ತು ಕನ್ನಡ ಭಾಗವತವನ್ನು ಮುಖಾಮುಖಿಯಾಗಿ ನೋಡಲಾಗಿದೆ. ಅನ್ನ ಬೆಂದಿದೆಯೋ ಎಂದು ನೋಡುವುದೇ ಇಲ್ಲಿಯ ಉದ್ಧೇಶ. ಅದು ಬಿಟ್ಟು ಬಕಾಸುರನ ಹಾಗೆ ಅನ್ನದ ಬಂಡಿಗೇ ಕೈಯಿಕ್ಕುವ ಪ್ರಯತ್ನ ಇದಲ್ಲವಾದುದರಿಂದ ಅಗುಳನ್ನಷ್ಟೇ ಮುಟ್ಟಿ ನೋಡಲಾಗಿದೆ]. ಇಲ್ಲಿಯವರೆಗೆ ಸಮೀಕ್ಷಿಸಿದ ಪದ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಭಾಗವತ ರಚನೆಗೆ ಸಂಬಂಧಿಸಿದಂತೆ ವಿಷ್ಣುತುಂಗನದು ತನ್ನ ಕೈಗಳನ್ನು ತಾನೇ ಕಟ್ಟಿಕೊಂಡವನ ರೀತಿಯದಾಗಿದೆ. ಆತನ ಸ್ವರಚನೆಯನ್ನು ಸಮರ್ಥವಾಗಿ ಮಾಡಬಲ್ಲ. ಮೂಲವನ್ನು ಅನುಸಿರಿಸುವಾಗಲೂ ಸ್ವಂತಿಕೆ ಛಾಪನ್ನು ಹಾಕಬಲ್ಲ. ಕೆಲವೊಮ್ಮೆ ಮೂಲವನ್ನು ಮತ್ತಷ್ಟು ಸೊಗಯಿಸಬಲ್ಲ. ಈ ಸಾಮರ್ಥ್ಯವಿದ್ದರೂ ಆತ ಕನ್ನಡದ ಶ್ರೇಷ್ಠಕವಿಗಳಾದ ಪಂಪ, ಕುಮಾರವ್ಯಾಸ ಹಾಗೆ ‘ಕಾವ್ಯಕೆ ಗುರು’ವಾಗಬೇಕು ಎನ್ನುವ ಉದ್ದೇಶವಿರಿಸಿಕೊಂಡವನಲ್ಲ. ‘ಅಂಬುಜ ಪ್ರಿಯನುಂಬುಟೇ ನಲಿಪುಪ್ಪಿ ಮೆನ್ಪುಲಿಂತಂದೆವೇ’ ಎನ್ನುವ ವಿನಯವನ್ನು ಕಾವ್ಯದ ಉದ್ದಕ್ಕೂ ಪಾಲಿಸಿದ್ದಾನೆ. ಕವಿಗೆ ವಿನಯ ಬೇಕು. ಆದರೆ ಆ ವಿನಯ ‘ವ್ಯಾಸ ಮುನೀಂದ್ರ ವಚನಾಮೃತ ವಾರ್ಧಿಯನೀಸುವೆಂ’ ಎಂಬ ಆತ್ಮ ವಿಶ್ವಾಸದೊಂದಿಗೆ’ ಕವಿವ್ಯಾಸನೆಂಬ ಗರ್ವಮೆನಗಿಲ್ಲ’ ಎನ್ನುವ ವಿನಯದಿಂದಿರಬೇಕು. ವಿಷ್ಣುತುಂಗನಿಗೆ ವಿನಯವೇ ಮುಖ್ಯವಾದುದರಿಂದ ಪ್ರತಿಭಾವಂತನಾದ ಕವಿಯೋರ್ವ ‘ಹೀಗೆ ಮಾಡಬಹುದೇ’ ಎನ್ನುವ ವೇದನೆಯುಂಟಾಗುತ್ತದೆ. ಅವನ ಕಾವ್ಯದ ರಾಶಿ ರಾಶಿಯಾದ ನೀರಸ ಭಾಗಗಳನ್ನು ಓದಿದಾಗ ಇದಕ್ಕೆ ಕಾರಣ ವಿಷ್ಣುತುಂಗ ಕಣ್ಣ ಮುಂದೆ ಇರಿಸಿಕೊಂಡ ಕನ್ನಡ ಭಾಗವತವೇ. ಕನ್ನಡ ಭಾಗವತದ ಕರ್ತೃಗೆ ಶ್ರೀಹರಿಯ ಲೀಲೆಯನ್ನು ವರ್ಣಿಸುವ ಉದ್ದೇಶ ಮಾತ್ರವೇ ಇರುವುದರಿಂದ ಅಲ್ಲಿ ಕಾವ್ಯಗುಣ ಎರಡನೇ ದರ್ಜೆಯಾಗುತ್ತದೆ.

ವಿಷ್ಣುತುಂಗ ಕೂಡಿಸಿ – ಕಳೆದದ್ದು

ಕಾವ್ಯದ ನೆಲೆಯಲ್ಲಿ ಕನ್ನಡ ಮತ್ತು ತುಳು ಭಾಗವತಗಳ ವೈಶಿಷ್ಟ್ಯವನ್ನು ನೋಡಿಯಾಯಿತು. ಒಂದರ್ಥದಲ್ಲಿ ಕವಿಯೋರ್ವನ ಪ್ರತಿಭೆಯ ಆಳಹರವುಗಳನ್ನು ಕಂಡುಕೊಳ್ಳುವುದು ಇಲ್ಲಿಯೆ ಎಂದೆನ್ನಬಹುದು. ಈಗ ವಿಷ್ಣುತುಂಗನ ಸ್ವಂತಿಕೆಗೆ ಸಂಬಂಧಿಸಿದ ಕೆಲ ಮಾರ್ಪಾಡುಗಳು. ಸಂಸ್ಕೃತದಲ್ಲಿ ಸ್ಕಂಧಗಳು ಅಧ್ಯಾಯಗಳಾಗಿವೆ. ಆದರೆ ಕನ್ನಡ ಭಾಗವತದಲ್ಲಿ ಸ್ಕಂಧಗಳನ್ನು ಸಂದಿಯಾಗಿ ಮಾಡಿದರೆ ತುಳು ಭಾಗವತದಲ್ಲಿ ಸ್ಕಂಧಗಳು ಅಧ್ಯಾಯಗಳಾಗಿಯೇ ವಿಂಗಡಿಸಲ್ಪಟ್ಟಿವೆ. ಇದು ಸಂಸ್ಕೃತದ ಮಾದರಿಯನ್ನು ಅನುಸರಿಸಿದ ರೀತಿಯಾಗಿದೆ. ಕನ್ನಡ ಭಾಗವತದಲ್ಲಿ ಸಂಧಿಯ ಪ್ರಾರಂಭಕ್ಕೆ ೧/೨ ಭಾಮಿನಿಯೊಂದು ಕಥೆಯ ಸಾರವನ್ನು ಹೇಳಿದರೆ ತುಳು ಭಾಗವತದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಅಧ್ಯಾಯದ ಕೊನೆಯ ಪದ್ಯ ಸಾರವನ್ನು ವಿವರಿಸುತ್ತದೆ. ಕೆಲವು ಕಡೆ ವರ್ಣನೆಯ ಸಂದರ್ಭದಲ್ಲಿ ವಿಷ್ಣುತುಂಗ ಕನ್ನಡ ಭಾಗವತಕ್ಕೆ ಭಿನ್ನವಾಗಿ ನಿಲ್ಲುತ್ತಾನೆ. ಸಂಸ್ಕೃತ ಭಾಗವತದಲ್ಲಿ ವಿಷ್ಣುವಿನ ‘ವಿಶುದ್ಧ ಸತ್ತ್ವಮಯ’ ರೂಪದ ವರ್ಣನೆ ಇದೆ. ಕನ್ನಡ ಭಾಗವತದಲ್ಲಿ ಅದಿಲ್ಲ. ತುಳುಭಾಗವತದಲ್ಲಿ ಇದರ ಪ್ರಸ್ತಾಪವಿದೆ. ತೃತೀಯ ಸ್ಕಂಧದಲ್ಲಿ ವಿಷ್ಣುವಿನ ವಿವರವಾದ ವರ್ಣನೆಯಿದೆ. ಕನ್ನಡ ಭಾಗವತದಲ್ಲಿ ಒಂದೇ ಪದ್ಯದಲ್ಲಿ ಒಂದೊಂದು ಅವತಾರವನ್ನು ವಿವರಿಸುವ ಪ್ರಯತ್ನವಿದೆ. ಕೌರವ ಪಾಂಡವರ ಯುದ್ಧವನ್ನು ನಿತ್ಯಾತ್ಮ ಒಂದೇ ಭಾಮಿನಿಯಲ್ಲಿ ಮುಗಿಸಿದ್ದರೆ ವಿಷ್ಣುತುಂಗ ಅದನ್ನು ಮೂರು – ನಾಲ್ಕು ಪದ್ಯಗಳಿಂದ ವಿವರಿಸುತ್ತಾನೆ. ಅದಲ್ಲದೆ ಕಪಿಲದ ಉದ್ದೇಶವೂ ಕನ್ನಡ ಭಾಗವತದ ಮಾದರಿಯಲ್ಲಿಲ್ಲದೆ ಅದು ಸಂಸ್ಕೃತ ಭಾಗವತದ ಮಾದರಿಯನ್ನೇ ಕೆಲವೊಮ್ಮೆ ಅನುಸರಿಸುವಂತಿದೆ. ಕತೆಯು ಅಧ್ಯಾಯ ಕ್ರಮದಲ್ಲಿ ವಿಂಗಡನೆಗೊಂಡು ಸಾಗುವಾಗ ಕೆಲವೊಮ್ಮೆ ವಿವರಗಳು ಕನ್ನಡ ಭಾಗವತಕ್ಕಿಂತ ಬೇರೆಯೇ ರೀತಿಯಲ್ಲಿ ವಿಭಾಗಗೊಳ್ಳುತ್ತವೆ. ಅಂದರೆ ಕನ್ನಡ ಭಾಗವತದಲ್ಲಿ ಒಂದು ಅಧ್ಯಾಯದಲ್ಲಿ ಮುಕ್ತಾಯಗೊಂಡ ವಿವರ ಇದರಲ್ಲಿ ಮತ್ತೊಂದು ಅಧ್ಯಾಯಕ್ಕೂ ಮುಂದುವರಿಯುತ್ತದೆ. ವಿಷ್ಣುತುಂಗ ಬಹಳಷ್ಟು ಸ್ವಂತಿಕೆಯನ್ನು ತೋರಿಸುವುದು ಛಂದಸ್ಸಿನ ಪ್ರಯೋಗದಲ್ಲಿ. ವಿದ್ವಾಂಸರು ಈ ದಿಸೆಯಲ್ಲಿ ಆತ ಓರ್ವ ಪ್ರಯೋಗಶೀಲನಾದ ಕವಿ ಎಂಬುದನ್ನು ಹೇಳಿದ್ದಾರೆ. ಆತನ ಛಂದಸ್ಸಿನ ಕುರಿತಾಗಿ ಪ್ರತ್ಯೇಕ ಅಧ್ಯಯನವನ್ನೇ ಮಾಡಬಹುದು. ಪ್ರಸ್ತುತ ಪ್ರಬಂಧವನ್ನು ಎರಡು ಕಾವ್ಯಗಳ ಕಾವ್ಯಗುಣವನ್ನಷ್ಟೇ ತೌಲನಿಕವಾಗಿ ನೋಡುವುದರಿಂದ ಛಂದಸ್ಸಿನ ಮಾತು ಈ ಪ್ರಬಂಧದ ವ್ಯಾಪ್ತಿಗೆ ಮೀರಿ ನಿಲ್ಲುತ್ತದೆ. ಅದಲ್ಲದೆ ಛಂದೋ ರಚನೆಗಳಿಗೆ ಸಂಬಂಧಿಸಿದಂತೆ ತುಲನಾತ್ಮಕ ಅಧ್ಯಯನವು ವಿಶೇಷವಾದುದೇನನ್ನೂ ಹೇಳದೆ ಕವಿಯ ಪ್ರಯೋಗಶೀಲತೆಯನ್ನಷ್ಟೆ ಹೇಳುವಂತಹದಾಗಿರುವುದರಿಂದ ಅದನ್ನು ಕೈಬಿಡಲಾಗಿದೆ.

ಆಕರಸೂಚಿ

೧. ವಿಷ್ಣುತುಂಗ, ೧೯೮೪
ಶ್ರೀ ಭಾಗವತೊ, ಕನ್ನಡ ವಿಭಾಗ, ಮಂಗಳಗಂಗೋತ್ರಿ
[ಸಂ. ] ವೆಂಕಟರಾಜ ಪುಣಿಂಚತ್ತಾಯ

೨. ನಿತ್ಯಾತ್ಮ ಶುಕಯೋಗಿ ವಿರಚಿತ ಕನ್ನಡ ಭಾಗವತ, ೧೯೯೦
ಶಾರದಾ ಮಂದಿರ, ರಾಮಯ್ಯರ್ ರಸ್ತೆ (ದ್ವಿತೀಯ ಸಂಪುಟ), ಮೈಸೂರು
(ಸಂ.) ವೆಂಕಟರಾಮಪ್ಪ ಕೆ.

೩. ನಿತ್ಯಾತ್ಮ ಶುಕಯೋಗಿ ವಿರಚಿತ ಕನ್ನಡ ಭಾಗವತ, ೧೯೭೫
ಶಾರದಾ ಮಂದಿರ, ರಾಮಯ್ಯರ್ ರಸ್ತೆ (ದ್ವಿತೀಯ ಸಂಪುಟ), ಮೈಸೂರು
(ಸಂ.) ವೆಂಕಟರಾಮಪ್ಪ ಕೆ.

೪. ಕೆ. ರಾ. ವೆ. ಸುಬ್ರಹ್ಮಣ್ಯ ಶಾಸ್ತ್ರಿ, ೧೯೮೪
ಶ್ರೀ ಭಾಗವತ ದರ್ಶನ, ಶ್ರೀ ಭಾಗವತ ಪ್ರಕಾಶನ ಸಂಪುಟ ೧,
ಬೆಂಗಳೂರು (ಕಪಿಲ)