ದೇವಿ ಮಹಾತ್ಮೆ

ಕನ್ನಡ ವಡ್ಡಾರಾಧನೆಯನ್ನು ನೆನಪಿಗೆ ತರುವ ‘ದೇವೀ ಮಹಾತ್ಮೆ’ ತುಳುಭಾಷೆಯ ಪ್ರಾಚೀನ ರೂಪವನ್ನು ನಮ್ಮ ಮುಂದೆ ತೆರೆದಿಡುತ್ತದೆ. ವಡ್ಡಾರಾಧನೆಯಲ್ಲಿ ಜೈನ ಕಥಾಸರಣಿ ನಿರೂಪಿತವಾಗಿದ್ದರೆ, ಇಲ್ಲಿ ದೇವೀ ಮಹಾತ್ಮೆಯ ಜನಪ್ರಿಯ ಕಥೆ ಮಾರ್ಕಾಂಡೇಯ ಉವಾಚಶೈಲಿಯಲ್ಲಿ ಪ್ರೋಕ್ತವಾಗಿದೆ. ಸಂಸ್ಕೃತದ ‘ಸಪ್ತಶತೀ ಎಂಬ ಪಾರಾಯಣ ಕೃತಿಯ ಸುಂದರ ಅನುವಾದವಾಗಿರುವ ಈ ಗದ್ಯಗ್ರಂಥ ತುಳು ಭಾಷೆ ಹಾಗೂ ತುಳು ಸಂಸ್ಕೃತಿಗಳೆರಡರ ದೃಷ್ಟಿಯಿಂದ ಅತ್ಯಂತ ಮಹತ್ತ್ವದ ಕೃತಿಯಾಗಿ ನಿಲ್ಲುತ್ತದೆ.

ಈ ಗ್ರಂಥದ ತಾಡವಾಲೆ ಪ್ರತಿ ದೊರೆತದ್ದು ಕಾಸರಗೋಡಿನ ಪುಲ್ಲೂರಿನ ತೆಂಕಿಲ್ಲಾಯರ ಮನೆಯಲ್ಲಿ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಗ್ರಂಥ ಭಂಡಾರದಲ್ಲಿ ಸಂರಕ್ಷಿತವಾಗಿದ್ದ ಇದನ್ನು ಮೊದಲು ಸಂಪಾದಿಸಿ ಅದನ್ನು ಸಾತಸ್ವತಲೋಕಕ್ಕೆ ಪರಿಚಯಿಸಿದ ಕೀರ್ತಿ, ಖ್ಯಾತ ಸಂಶೋಧಕ ವಿದ್ವಾನ್ ವೆಂಕಟರಾಜ ಪುಣಿಂಚತ್ತಾಯರಿಗೆ ಸಲ್ಲುತ್ತದೆ.

ಕವಿ, ಕಾಲ

ಭಾಷಾ ಪ್ರಯೋಗದ ದೃಷ್ಟಿಯಿಂದ ವಿವೇಚಿಸಿದ ಗ್ರಂಥದ ಸಂಪಾದಕರು ಅದರ ಕಾಲವನ್ನು ‘ಶ್ರೀ ಭಾಗವತೊ’ ದ ಕಾಲ (ಕ್ರಿ. ಶ. ೧೬೨೬)ಕ್ಕಿಂತ ಪ್ರಾಚೀನವೆಂದು ಹೇಳಿದ್ದಾರೆ.

[1] ಗ್ರಂಥದ ತಾಡವಾಲೆ ಪ್ರತಿಯು ಪುಲ್ಲೂರಿನ ತೆಂಕಿಲ್ಲಾಯರ ಮನೆಯಲ್ಲಿ ದೊರೆತುದರಿಂದ, ಕಾವ್ಯದ ಕರ್ತೃವೂ ತೆಂಕಿಲ್ಲಾಯ ಕುಲದವನೆಂದೇ ಊಹಿಸಲಾಗಿದೆ. ಆದರೆ ಕೃತಿಯಲ್ಲಿ ಎಲ್ಲಿಯೂ ಕೃತಿಕಾರನ ಕುರಿತಾದ ಉಲ್ಲೇಖಗಳಿಲ್ಲದಿರುವುದರಿಂದ ಅದು ಕೇವಲ ಊಹೆಯಾಗಿಬಿಡುತ್ತದೆ. ಕಾವ್ಯದಲ್ಲಿ ಬಳಕೆಯಾಗಿರುವ ಭಾಷಾ ಶೈಲಿಯಂತೂ ತುಳುವಿನ ಅತ್ಯಂತ ಪ್ರಾಚೀನ ರೂಪವೆಂಬುದನ್ನು ಗಮನಿಸಿದಾಗ, ಈ ಕೃತಿಯ ಕಾಲವನ್ನು ಸುಮಾರು ಕ್ರಿ. ಶ. ೧೨೦೦ಕ್ಕೆ ಒಯ್ಯಲು ಸಾಧ್ಯವಿದೆ. ಇತ್ತೀಚೆಗೆ ದೊರೆತ ಅರುಣಾಬ್ಜಕವಿಯ ‘ಮಹಾಭಾರತೊ’ ಕಾವ್ಯದ ಕಾಲವನ್ನು ಚಾರಿತ್ರಿಕವಾಗಿ ಕ್ರಿ. ಶ. ೧೩೮೩ ಎಂದು ನಿರ್ಣಯಿಸಿಲು ಸಾಧ್ಯವಾಗಿರುವುದರಿಂದ, ‘ದೇವಿ ಮಹಾತ್ಮೆ’ ಅದಕ್ಕಿಂತಲೂ ಎರಡು ಶತಮಾನಗಳಷ್ಟು ಹಿಂದೆಯೇ ರಚನೆಗೊಂಡಿರಬೇಕೆಂದು ತರ್ಕಿಸಬಹುದು.

ಅಪೂರ್ವ ಭಾಷಾಶೈಲಿ

ದೇವೀ ಮಹಾತ್ಮೆಯನ್ನು ಓದುವಾಗ ಹಿಂದಿನ ಕಾಲದ ತುಳುವರು ಒಂದು ಭಾಷೆಯನ್ನು ಹೀಗೂ ಮಾತಾಡುತ್ತಿದ್ದಿರಬಹುದೇ ಎಂದೆನಿಸುವುದು ಸಹಜ. ಪದಪ್ರಯೋಗ, ವಾಕ್ಯರಚನೆ, ಭಾಷಾಶೈಲಿಯ ಅಪೂರ್ವ ಮಾದರಿಗಳಿಂದ ಈ ಕೃತಿ ಅಧ್ಯಯನ ಯೋಗ್ಯವಾಗಿದೆ. ಅಂಬುಡಿಕೆ (ಬತ್ತಳಿಕೆ), ತೆರ್ವೆತೃ (ಬಿಲ್ಲಿನ ಹಗ್ಗ), ಬೆೞ್ಟು(ಬೆಳಕು), ಕೊಳ್ಳಿಮೆನ್ನ್, (ಉಲ್ಕೆ), ಒನೀತ (ಸ್ವಲ್ಪ). ಮೊದಲಾದ ಅಪೂರ್ವ ಪದಗಳು ಇಲ್ಲಿ ಬಳಕೆಯಾಗಿವೆ. ಗುತ್ತ್ ಪಾರ್ (ಜಿಗಿಯು), ನೀರ್ಪು (ವಾಸಿಸು), ಒಡ್ ಪು (ನಿಯಂತ್ರಿಸು), ಉಬೆಪು (ಸೀಳು). ಮೊದಲಾದ ಧಾತುರೂಪಗಳೂ ಅಪೂರ್ವವಾಗಿವೆ.

ಗಂಧರ್ವಶ್ರೇಷ್ಠರ್ಕುಳಾಸ್ದ್ ನಾಕುಳು ಗಾನೊಮಿನಿ ಬೆಂದೆರ್,
ವಿಜ್ಞಾಪನೊ ಬೆಂದಿ ವಚನೊ ಕೇಂಡ್ ತ್ತ್
ಬಾಹುಕುಳೇಟಾವ ಯುದ್ಧೊಮಿನಿ ಬೆಂದೆರ್
ಜಾಸ್ದ್ ಬೆನ್ ಕೇನ್?

ಇಲ್ಲಿ ಬಳಕೆಗೊಂಡ ‘ಬೆನ್’ ಧಾತು‘ ಮಾಡು’ಎಂಬರ್ಥದಲ್ಲಿದ್ದು ಆಧುನಿಕ ತುಳುವಿನಲ್ಲಿ ‘ದುಡಿ’ ಎಂಬ ಅರ್ಥಚ್ಛಾಯೆಯಲ್ಲಿ ಮಾತ್ರ ಇದೆ. ಹಾಗೆಯೇ ಈಗ ಶಿವಳ್ಳಿ ತುಳುವಿನಲ್ಲಿ ಅಪೂರ್ವವಾಗಿರುವ ‘ಈರ್’, ‘ಆರ್’ ಪದಪ್ರಯೋಗ ಆ ಕಾಲದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿತ್ತೆಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿದುಕೊಳ್ಳಬಹುದು.

ಈರ್ ಸ್ವಾಹಾದೆವಿಯಾಸ್ದ್ ನಾರ್
ಅಂಬಿಕಾದೇವಿಯಾಕ್ ಣಾರ್
ಮಹಾಲಕ್ಷ್ಮೀ ಸ್ವರೂಪೊಂತಾವ ನೀರ್ತತ್ತ್ ನಾರ್
ಈರ್ ಸಮಸ್ತ ಸಂಪತ್ತ್ ಕಳೆ ಕೊೞ್ಪ್ ಣಾರ್

ಈಗ ಇದು ನಿಂಕುಳು, ಅಕುಳು ಎಂಬ ರೂಪದಲ್ಲಿ ಬಳಕೆಯಾದರೂ, ಮಠಾಧಿಪತಿ – ಸನ್ಯಾಸಿಗಳಲ್ಲಿ ಸಂಭಾಷಿಸುವಾಗ ಪ್ರಾಚೀನ ರೂಪವನ್ನೇ ಪಡೆಯುತ್ತದೆ ಎಂಬುದನ್ನು ಗಮನಿಸಬೇಕು.

ಸ್ದ್ ಕಾರ ವಿಶೇಷತೆ

ಪ್ರಾಚೀನ ತುಳುವಿನಲ್ಲಿ ವಿಶೇಷವಾಗಿ ಕಂಡು ಬರುವ ‘ಸ್ಟ್’ ಧ್ವನಿಮಾ ಇಲ್ಲಿ ಸ್ದ್, ಆಸ್ದ್ ಎಂಬ ರೂಪವನ್ನು ತಳೆದಿದೆ. ಇದು ಹಳಗನ್ನಡ ‘ಅತ್ತು’ ಎಂಬ ಪದಕ್ಕೆ ಸಂವಾದಿಯಾದುದು. ಕಿಟ್ಟೆಲ್ ನಿಘಂಟಿನಲ್ಲಿ ನೀಡಿದ ಉದಾಹರಣೆ –

ಶಿರಃಕರೋಟಿ ನಗುವಂತೆ ಇರ್ದತ್ತು
ಪಸರಿಸಿದತ್ತು ಮೂಡಣ ದೆಸೆಯೊಳ್ ಬೆಳರ್ಗೆಂಪು –
(ಶಬ್ದ ಮಣಿದರ್ಪಣ)

ಇದೇ ಅರ್ಥದಲ್ಲಿ ಪಳಂತುಳುವಿನ ಪ್ರಯೋಗಗಳಿವೆ:
ಎನಸ್ದ್ – ನನ್ನದು (ನನ್ನ+ಅದು)
ಉಳ್ಳಸ್ದ್ – ಇರುವಂತಾದ್ದು (ಇರುವಂತ+ಅದು)
ಜಾಸ್ದ್ – ಯಾವುದು (ಯಾವ + ಅದು)

‘ಶ್ರೀ ಭಾಗವತೊ’ ಕಾವ್ಯದಲ್ಲಿ ‘ಸ್ಟ್’ ಕಾರದಿಂದ ಆರಂಭವಾಗುವ ಕೇವಲ ನಾಲ್ಕು ಪದಗಳೂ (ಸ್ಟ್ ಬೆರ್, ಸ್ಟೀಕುಳು, ಸ್ಟ್ ಪ್ಪೊಡು, ಸ್ಟ್ ಪ್ಪುನಾನಿ), ಕಾವೇರಿ ಕಾವ್ಯದಲ್ಲಿ ಹನ್ನೊಂದು ಪದಗಳೂ (ಸ್ಟ್, ಸ್ಟ್೦ದ್‌, ಸ್ಟಿಂಗ್, ಸ್ಪಿಣೆಯಿ, ಸ್ಪಿಪೆನ, ಸ್ಪುದ್, ಸ್ಪೇ, ಸ್ಟೌರ್ತ್, ಸ್ಟೆಡೆಪಿನ್, ಸ್ಟ್ ಳಪು) ದೊರೆತಿದೆ. ದೇವೀ ಮಹಾತ್ಮೆಯಲ್ಲಿ ‘ಆಸ್ದ್’ ಪದ ವ್ಯಾಪಕವಾಗಿ ಬಳಕೆಗೊಂಡಿರುವುದು ವಿಶೇಷವಾಗಿದೆ. ಉದಾ: ಅಸ್ದ್, ಆಸ್ದ್ ನವು, ಆಸ್ದ್ ಸ್ತ್, ಆಸ್ದ್ ತ್ತ್ ಡ್, ಅಸ್ದ್ ನಾಯೆ, ಉಳ್ಳಸ್ದ್, ಬುಡ್ ಸ್ದ್, ಕೂಡುತ್ನಸ್ದ್, ಬೋಡಾತ್ನಸ್ದ್, ಇತ್ಯಾದಿ.

ಪದಾರಂಭದಲ್ಲಿ – ಸ್ದ್೦ಡ್, ಸ್ದ್೦ಡಾತ್ನಸ್ದ್, ಸ್ದ್೦ಡಾಪ್ಪೆರ್, ಸ್ದ್೦ಡಾವರ್ ತ್ರೆ, ಸ್ದ್‌೦ಡಾಸ್ದ್, ಸ್ದ್‌೦ಬೆನಿ, ಸ್ದ್ ದ್ಯೊ, ಸ್ದ್ ಪ್ಪುವೆರ್, ಸ್ದ್ ಡಪುಟ್ದ್, ಸ್ದ್ ಡಪ, ಸ್ದ್ ತ್ತರ್ಪೊ, ಸ್ದ್ ೞೆತರ್ಪಿ, ಸ್ದ್ ಳ್ಳಂಚಿತ್ತಿನಾಯೆ, ಸ್ದ್ ತ್ತೞ್ತೆರ್,

ಒಂದೇ ಪದದಲ್ಲಿ ದ್ವಿಪ್ರಯೋಗ – ಅಸ್ದ್ ನಸ್ದ್ ಸ್ದ್೦ಡಾಸ್ದ್, ಸ್ದ್೦ಡಾತ್ನಸ್ದ್, ಸ್ದ್೦ಡಾಸ್ದ್ ನ್.

ಅಪೂರ್ಣ ಕ್ರಿಯಾರೂಪ ಮತ್ತು ಭೂತಕಾಲದಲ್ಲಿ – ಆಸ್ದ್, ಆಸ್ದ್ ತ್ತ್, ಶುಸ್ದ್ ತ್ತ್,

ಸ್ದ್ ಕಾರಲೋಪ : ಸರಿಆ ಉಳ್ಳಂಚಿತ್ತಿ, ಛಿನ್ನಾಬೂಳಕೊ, ನಾನಾಪ್ರಕಾರೊಮಾ ಉಳ್ಳ.

ಈ ಪ್ರಯೋಗಬಾಹುಳ್ಯವನ್ನು ಗಮನಿಸಿದರೆ, ದೇವೀ ಮಹಾತ್ಮೆಯ ಕಾಲದಲ್ಲಿ ‘ಸ್ದ್’ ಧ್ವನಿಮಾ ಒತ್ತಕ್ಷರವೇ ಆಗಿದ್ದು (ಈಗ ತಮಿಳು ಮಲೆಯಾಳಗಳ ವರ್ತ್ಸ್ಯ್ ವರ್ಣಗಳ ಹಾಗೆ) ಮಹಾಭಾರತೊ ಮತ್ತು ಶ್ರೀಭಾಗವತೊ ಕಾಲಕ್ಕೆ ಶಿಥಿಲದ್ವತ್ವವಾಗಿ ಪರಿಣಮಿಸಿರಬೇಕು. ಕಾಲಕ್ರಮೇಣ ಶ್ರುತಿಕಷ್ಟವೆನಿಸಿದ ಈ ಪ್ರಯೋಗ ಸುಲಭೋಚ್ಛಾರಣೆಯ ಪ್ರೀತಿಯಿಂದ ಮರೆಯಾಗಿರಬಹುದು. ಆಧುನಿಕ ಕನ್ನಡಿಗರು ‘ರಳ’ವನ್ನು ಮರೆತಂತೆ ಆಧುನಿಕ ತುಳುವರು ‘ಸ್ದ್’ ಧ್ವನಿಮಾವನ್ನು ಮರೆತಿರಬೇಕು.

ರಳಾಕ್ಷರದ ಬಳಕೆ

ಪಳಂತುವಿನಲ್ಲಿ ರಳಾಕ್ಷರದ ಬಳಕೆಯೂ ವ್ಯಾಪಕವಾಗಿತ್ತೆಂದೇ ಹೇಳಬಹುದು. ಆದರೆ ದೇವೀ ಮಹಾತ್ಮೆಯಲ್ಲಿ ಕೆಲವು ಪದಗಳು ಎರಡೂ ರೂಪಗಳಲ್ಲಿ ಕಾಣಸಿಗುವುದರಿಂದ ಕೃತಿಕಾರ ಮತ್ತು ಪ್ರತಿಕಾರನ ಕಾಲದ ಭಾಷೆಯಲ್ಲಿ ವ್ಯತ್ಯಾಸವಿದೆಯೆಂದು ತರ್ಕಿಸಬಹುದು. ‘ಬರ್ಳ್ತಿ’ ಅವುಳ್ ಎಂಬ ಪದಗಳು ರಳರಹಿತವಾಗಿಯೂ ಬಳಕೆಯಾಗಿರುವುದರಿಂದ ಪ್ರತಿಕಾರನ ಕಾಲಕ್ಕೆ ರಳಾಕ್ಷರದ ಬಳಕೆ ಕಡಿಮೆಯಾಗಿತ್ತೆಂದು ಊಹಿಸಬಹುದು, ‘ಬರ್ೞ್ತಿ(ಒಬ್ಬಳು) ಬೆೞ್ಪು (ಬೆಳಕು), ಔೞ್ತ್ (ಅಲ್ಲಿಂದ), ತೊೞ್ಪು (ತುಳಿಯು), ಒೞ್ಪಿ(ಎಲ್ಲಿ), ಬೋೞ್ತ್ ನ್ (ಬೇಕಾಗಿದೆ), ಶುೞ್ಯು (ಸುಳಿ)ಮುಂತಾದವುಗಳು ರಳಾಕ್ಷರದ ಬಳಕೆಯನ್ನು ಸ್ಥಿರೀಕರಿಸಿದರೆ, ಕೆಳಗಿನ ಪದಪ್ರಯೋಗಗಳಿಂದ ‘ರಳ’ ರಹಿತ ಬಳಕೆಯೂ ಸಾಮಾನ್ಯವಗಿತ್ತೆಂದು ಭಾವಿಸಬಹುದು.

ಕೊೞ್ ಕೊಳ್ (ಕೊಡು)
ಶಿಗ್ ೞ್ತ್ ತಿಗ್ ಳ್ತ್ (ಸೀಳಿ)
ಅವುೞ್ತ್ ಅವುಳ್ತ್ (ಅಲ್ಲಿಂದ)
ಖೞ್ಗೊ ಖಟ್ಗೊ (ಖಡ್ಗ)
ಬೂೞ್ತತೆ ಬೂರ್ತತೆ (ಬೀಳಿಸಿದವನು)
ಜ್ಯಾಒರ್ೞ್ತಿ ಜಾಸ್ದೊತಿ (ಯುವಳೊಬ್ಬಳು)

ಕರ್ಮಣಿ ಪ್ರಯೋಗ

ತುಳುವಿನಲ್ಲಿ ಕರ್ಮಣಿ ಪ್ರಯೋಗ ಸಾಧ್ಯತೆ ಅಸಂಭವವೆಂಬ ಭಾವನೆಯಿತ್ತು. ಆಧುನಿಕ ತುಳುವಿನಲ್ಲಿ ಇದು ಎಲ್ಲರ ಅನುಭವಕ್ಕೂ ಬಂದ ಮಾತು. ಆದರೆ ದೇವೀಮಹಾತ್ಮೆಯಲ್ಲಿ ಕರ್ಮಣಿ ಪ್ರಯೋಗವೂ ಬಳಕೆಯಾಗಿರುವುದನ್ನೂ ಗಮನಿಸಿದಾಗ, ಕವಿಯ ಜಾಣ್ಮೆಯನ್ನು ಪ್ರಶಂಸಿಬೇಕಾಗುತ್ತದೆ. ಬೇರಾವುದೇ ತುಳು ಕಾವ್ಯಗಳಲ್ಲಿ ದೊರೆಯದ ಈ ಪ್ರಯೋಗವಿಶೇಷತೆ ದೇವೀ ಮಹಾತ್ಮೆಯ ಅನನ್ಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.

೧. ಬ್ರಹ್ಮ ದೇವೆರೆಟಾವ ಸ್ತುತಿಪೋವೋಂಡೆರ್
(ಬ್ರಹ್ಮ ದೇವರಿಂದ ಸ್ತುತಿಸಲ್ಪಟ್ಟರು)

೨. ಆ ಋಷಿಯಿಂದ ಬಹುಮಾನಿಪೊವೊಂಡೆರ್
(ಆ ಋಷಿಯಿಂದ ಬಹುಮಾನಿಸಲ್ಪಟ್ಟವರು)

೩. ರಾಜ್ಯೋ ಎನಟಾವ ಬುಡ್ ಪೋವಪ್ಪಡ್ ನ್
(ರಾಜ್ಯವು ನನ್ನಿಂದ ಬಿಡಲ್ಪಟ್ಟಿತು)

೪. ಅಂಬಕ್ ಳೆಟಾವ ನಿರಾಕರಿಪೊವೊಂಡೆ)
(ಇವರಿಂದ ನಿರಾಕರಿಸಲ್ಪಟ್ಟವನು)

ಸಮುಚ್ಚಯ ಬೋಧಕಾವ್ಯಯಗಳು

೧. ಸುಂಭಾಸುರಕಾ ಪರಮೇಶ್ವರಿಕಾ ಯುದ್ಧೋ ತುಡೆಂಗ್ ಸ್ದ್ ನ್
(ಶುಭಾಸುರನಿಗೂ ಪರಮೇಶ್ವರಿಗೂ ಯುದ್ಧ ಆರಂಭವಾಯಿತು)

೨. ಆಯ ದೇಹೊಮಿನಾ ಶಿರೊಮಿನಾ ಬೇತೆ ಬೇತೆ ಆಕೋಯೆ
(ಅವನ ದೇಹವನ್ನೂ ಶಿರವನ್ನು ಬೇರೆ ಬೇರೆ ಮಾಡಿದ)

೩. ದಂತೊತಾವನ ಮುಷ್ಟಿಪ್ರಹಾರೊಂತಾವನಾ ಮರಣೊ ಪ್ರಾಪಿತೆ
(ದಂತದಿಂದಲೂ ಮುಷ್ಟಿಯ ಆಘಾತದಿಂದಲೂ ಸತ್ತನು)

ಲೋಪಸಂಧಿ

ಕನ್ನಡದ ಲೋಪ ಸಂಧಿನಿಯಮ ಪ್ರಕಾರ ಪೂರ್ವಪದಾಂತ್ಯದ ಸ್ವರವು ಲೋಪವಾಗಿ ಉತ್ತರ ಪದದ ಆದಿಯ ಸ್ವರವು ಉಳಿಯುತ್ತದೆ. ಆದರೆ ಪಳಂತುವಿನ ಕೆಲವು ಸಂಧಿ ಪ್ರಯೋಗಗಳನ್ನು ಗಮನಿಸಿದರೆ, ಇದಕ್ಕೆ ವಿರುದ್ಧವಾದ ನಿಯಮವೊಂದನ್ನು ಅನುಸರಿಸಿರುವುದು ಕಂಡುಬರುತ್ತದೆ. ಉದಾ:

ಸಂಶಯೊ + ಇದ್ದಿ = ಸಂಶಯೊದ್ದಿ
ಮಹಿಮೆ + ಉಳ್ಳಂಚಿತ್ತಿ = ಇರಾವಂತೆತ್ತ್
ಈರಾವಂತೆ + ಅತ್ತ್ = ಈರಾವಂತೆತ್ತ್
ಪರಾಜಯೊ + ಇದ್ಯಂತೆ + ಇತ್ನಂಚಿತ್ತಿ = ಪರಾಜಯೊದ್ಯಂತೆತ್ನಂಚಿತ್ತಿ
ಬೇತೆ + ಇದ್ದಿ = ಬೇತೆದ್ದಿ
ಕೂಡಂತೆ +ಇತ್ನ = ಕೂಡಂತೆತ್ನ

ಇಲ್ಲಿ ಉತ್ತರಪದದ ಆದಿಯ ಸ್ವರವೇ ಲೋಪವಾಗಿರುವುದು ವಿಶೇಷವಾಗಿದೆ. ಇದು ತುಳು ವ್ಯಾಕರಣ ವಿಭಾಗದ ಒಂದು ವಿಶಿಷ್ಟ ಲಕ್ಷಣವಾಗಿ ನಿಲ್ಲುತ್ತದೆ.

ಪಳಂತುವಿನಲ್ಲಿ ಮಾತ್ರವಲ್ಲ ಹೊತುಳುವಿನಲ್ಲಿಯೂ ಈ ಲಕ್ಷಣವು ಗೋಚರಿಸುತ್ತದೆ ಎಂಬುದನ್ನು ಗಮನಿಸಬೇಕು.

ಪುಗೆ + ಇರೆ = ಪುಗೆರೆ
ಬತ್ತ್ ನ + ಇದ್ದಿ = ಬತ್ತ್ ನದ್ದಿ
ಪೋನ +ಇದ್ದಿ = ಪೋನದ್ದಿ

ಇತ್ಯಾದಿ ಪಳಂತುಳುವಿನ ಇತರ ಕಾವ್ಯಗಳಲ್ಲಿಯೂ ಈ ರೀತಿ ಉತ್ತರಪದಾಂತ ಲೋಪಸಂಧಿಗೆ ಉದಾಹರಣೆಗಳಿವೆ.

ವಿಭಕ್ತಿ ಪ್ರತ್ಯಯ

ದೇವೀ ಮಹಾತ್ಮೆಯಲ್ಲಿ ದೊರೆಯುವ ವಿಭಕ್ತಿಗಳ ಪ್ರತ್ಯಯ ವೈಶಿಷ್ಟ್ಯವನ್ನು ಗಮನಿಸಿದರೆ ಪಳಂತುವಿನಲ್ಲಿ ಭಾಷಾಸಮೃದ್ಧಿ ಅಚ್ಚರಿ ಹುಟ್ಟಿಸುತ್ತವೆ. ಇಷ್ಟೊಂದು ವಿಪುಲವಾದ ವಿಭಕ್ತಿಪ್ರತ್ಯಯಗಳು ಬೇರೆ ಭಾಷೆಗಳಲ್ಲಿಲ್ಲವೆಂಬುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಕನ್ನಡದಲ್ಲಂತೂ ಮತ, ಮರವನ್ನು, ಮರದಿಂದ, ಮರಕ್ಕೆ, ಮರದ ದೆಸೆಯಿಂದ, ಮರದ, ಮರದಲ್ಲಿ, ಎಂಬ ಏಳೇ ವಿಭಕ್ತಿಗಳನ್ನು ಕಾಣಲು ಸಾಧ್ಯ. ಇದರಲ್ಲಿ ಅತ್ತಣಿಂ (ದೆಸೆಯಿಂದ) ಎಂಬ ಪಂಚಮೀ ವಿಭಕ್ತಿಯಂತೂ ಹೊಸಗನ್ನಡದಲ್ಲಿ ಮಾಯವಾಗಿ ಬಿಟ್ಟಿದೆ. ತುಳುವಿನಲ್ಲಿ ಪಂಚಮೀ ವಿಭಕ್ತಿಯು ವ್ಯಾಪಕವಾಗಿ ಬಳಕೆಯಾಗಿರುವುದು ವಿಶೇಷವಾಗಿದೆ.

ಪ್ರಥಮಾವಿಭಕ್ತಿ

-ಅ/ಆ ವ್ಯಾಧಿಯ, ಸ್ನಾನೊಂಕುಳ
-ಮ/ಮಾ ದೇಹೊಮ
-ಮ/ವು ರಾಜಾವು, ಮಾತಾವು, ಪಿತಾವು, ಕನ್ಯಾವು

ದ್ವಿತೀಯಾವಿಭಕ್ತಿ

-ನಿ ಭೂಮಿನಿ, ಎನನಿ
-ಒಮಿನಿ ವಶೊಮಿನಿ

ತೃತೀಯಾವಿಭಕ್ತಿ

-ಒಂತವ ಕೋಂಪೊಂತವ
-ಒಂತಾವ ಸಂತೋಷೊಂತಾವ
-ತ್ತಾ ಬುದ್ಧಿತ್ತಾ, ಅಯೆತ್ತಾ
-ತ್ತಾವ ತೇಜಸ್ಸ್ ತ್ತಾವ, ಅಯೆತ್ತಾವ
-ಎತ್ತಾವ ಈಕ್ ಳೆತ್ತಾವ
-ಟಾವ ಕಾಂ
-ಎಟಾವ ಋಷಿಕ್ ಳೆಟಾವ
-ಟತ್ತ್ ಎನಟ್ ತ್ತ್, ಅಗ್ನಿಟ್ ತ್ತ್

 

ಚತುರ್ಥಿವಿಭಕ್ತಿ

-ಕಾವ ದುರ್ಗಾದೇವಿಕಾವ
-ಎಕಾವ ಈರೆಕಾವ
-ಒಂಕಾವ ಸಮೀಪೊಂಕಾವ
-ಎಕ್ ಜಲೊಂಕ್ ಳಕ್
-ಕ್ ಜಗತ್ತ್ ಕ್

 

ಪಂಚಮೀ ವಿಭಕ್ತಿ

-ತ್ತ್ ತೇರ್ ತ್ತ್
-ಒಂತ್ ಅಂದಳೊಂತ್
-ಟ್ ತ್ ಸಮಯೊಂಟ್ ತ್
ಅ ತ್ತ ಧರೆಟ್ ತ್ತ್
-ಒಂಟೆತ್ತ ಮಸ್ತಕೊಂಟ್ ತ್ತ್

 

ಷಷ್ಠೀ ವಿಭಕ್ತಿ

-ಅಂತ ದೇಹಂತ
-ತ ನದಿತ, ಕೆಕ್ಕಿತ
-ನ ಎನ
-ನೊ ಆಯನೊ

 

ಸಪ್ತಮೀ ವಿಭಕ್ತಿ

-ಎಟ್ ಮುನಿಕುಳೆಟ್
-ಎಟ ಸ್ತ್ರೀಕುಳೆಟ
-ಎಟ್ ಪ್ಪ ರಾತ್ರಿಕ್ ಳೆಟ್ ಪ್ಪ
-ಒಂಟ್ ಪ್ಪ ದಿವೊಂಟ್ ಪ್ಪ
-ಒಂಟೆಪ್ಪಕ್ ವನೊಂಟ್ಟಪ್ಪ ಕ್
-ಉಪ್ಪ ಅವುಳುಪ್ಪ
-ಒಂಟ್ ಪೂರ್ವೊಂಟ್, ಅನಂತರೊಂಟ್
-ಅಪ್ಪ್ ರಣಕಳಟ್ ಪ್ಪ, ಕುರೆಟ್ ಪ್ಪ
-ಟ್ ಭೂಮಿಟ್, ಎದ್ ರ್ ಟ್
-ಟ ಪರಮೇಶ್ವರಿಟ, ಬ್ರಾಹ್ಮಣೋತ್ತಮಟ

ಈ ಎಲ್ಲಾ ಭಾಷಾಶಾಸ್ತ್ರೀಯ ವಿಶೇಷತೆಗಳೀಂದಾಗಿ ದೇವೀ ಮಹಾತ್ಮೆ ತುಳುವಿನ ಪ್ರಾಚೀನ ಕೃತಿ ಎಂಬುದರಲ್ಲಿ ಅನುಮಾನವಿಲ್ಲ.

ಅನುವಾದದ ಸೊಗಸು

‘ಸಂಸ್ಕೃತ ಸಪ್ತಶತೀ’ ಎಳುನೂರು ಶ್ಲೋಕಗಳ ಪ್ರಸಿದ್ಧ ಪಾರಾಯಣ ಕೃತಿ, ದುರ್ಗಾದೇವಿಯ ಆರಾಧನೆಯಲ್ಲಿ ಇಂದಿಗೂ ಬಹುಮುಖ್ಯವಾದ ಈ ಕೃತಿಯಲ್ಲಿ ಹದಿಮೂರು ಅಧ್ಯಾಯಗಳಿವೆ. ಮಾರ್ಕಂಡೇಯ ಪುರಾಣಾಂತರ್ಗತವಾದ ದೇವೀ ಮಹಾತ್ಮೆಯ ಕಥೆ ಇಲ್ಲಿಯ ಮೂಲವಸ್ತು. ಮಧು ಕೈಟಭವಧೆ, ಮಹಿಷಾಸುರವಧೆ, ಚಂಡಮುಂಡವಧೆ, ಶುಂಬನಿಶುಂಭವಧೆ, – ಮುಂತಾದ ಕಥಾವಿವರಗಳೋಂದಿಗೆ ದುರ್ಗಾದೇವಿಯನ್ನು ಸ್ತುತಿಸುವ ಸ್ತ್ರೋತ್ರಮಾಲಿಕೆ ಇಲ್ಲಿ ಚೆನ್ನಾಗಿ ಮೂಡಿಬಂದಿದೆ. ಇದರ ತುಳು ಅನುವಾದರೂಪವೇ ಪ್ರಸ್ತುತ ಗದ್ಯಕಾವ್ಯ. ಪ್ರತಿ ಅಧ್ಯಾಯದ ವಿಂಗಡಣೆ, ಆರಂಭ, ಅಂತ್ಯ, ಕಥಾಹಂದರ ಎಲ್ಲವೂ ಮೂಲಕೃತಿಯ ಸುಂದರ ಗದ್ಯನಿರೂಪಣೆ ಎಂಬುದು ಮಹತ್ವದ ವಿಚಾರ. ಆದರೆ ಅದನ್ನು ಕೇವಲ ಶುಷ್ಕಾನುವಾದವೆನ್ನುವುದು ಸರಿಯಲ್ಲ. ಸಂಕ್ಷೇಪವಾದ ಶ್ಲೋಕಗಳು ವಿಸ್ತಾರ ಕಥನಕ್ಕೆ ಎಡೆಮಾಡಿರುವುದು ಸರಿಯಲ್ಲ. ಸಂಕ್ಷೇಪವಾದ ಶ್ಲೋಕಗಳು ವಿಸ್ತಾರ ಕಥನಕ್ಕೆ ಎಡೆಮಾಡಿರುವುದೂ ಉಂಟು. ಸಾಂದರ್ಭಿಕವಾದ ಸುಂದರ ಸಂವಾದಗಳಿಂದ ಕೆಲವೆಡೆ ನಾಟಕದ ನೆನಪಾಗುವುದುಂಟು. ಮೂಲಪಠ್ಯದ ಹಿನ್ನೆಲೆಯಲ್ಲಿರುವುದರಿಂದ, ಎಷ್ಟೋ ಕಡೆ ಪಳಂತುವಿನ ಪದಪ್ರಯೋಗದ ಅರ್ಥನಿರ್ಣಯಕ್ಕೆ ಸಹಕಾರಿಯಾಗುತ್ತದೆ. ಕಬ್ಯಲ (ಸರ್ವ) ಅಗ್ಯಕಾಲ(ಕೆಟ್ಟಕಾಲ), ನುಂಬತೌಳ್ (ಅಂಗಣ) ಕಂದಿಕೆ(ನೂಪುರ)-ಮುಂತಾದ ಪದಗಳಿಗೆ ಮೂಲಾರ್ಥವೇನೆಂದು ನಿಷ್ಕರ್ಷಿಸುವುದು ಇದರಿಂದ ಸುಲಭವಾಗುತ್ತದೆ. ಜೊತೆಗೆ ಪದ್ಯಕ್ಕೆ ಸುಲಲಿತವಾಗಿ ಹೇಳುವ ಅರ್ಥದಂತೆ ಹೃದ್ಯವಾಗಿರುವ ಇಲ್ಲಿಯ ಅನುವಾದಶೈಲಿ ಮನಂಬುಗುವಂತಿದೆ. ಕಿರಿದಾದ ಶ್ಲೋಕಪಾದಗಳೂ ಮನೋಜ್ಞವಾಗಿ ಭಾಷಾಂತರಗೊಂಡಿರುವುದನ್ನು ಗಮನಿಸಿದಾಗ, ಕವಿ ಪ್ರತಿಭೆಯ ಸಮ್ಯಕ್ ದರ್ಶನವಾಗುತ್ತದೆ.

‘ಭಾಸಯಂತೀ ಹಿಮಾಚಲಂ’
ಹಿಮವತ್ಪರ್ವತೊಮಿನಿ ಬೆಳ್ಪಾಕೊವೊಂಡ್
ಭಯೇಭ್ಯಸ್ತ್ರಾಹಿನೊ ದೇವಿ’
ಬರ್ಪಿಂಚಿತ್ತಿ ಭಯೊಮಿನಿ ಚೆಟ್ಟೋಸ್ದ್ ತ್ತ್ ರಕ್ಷಿಪುಲೆ
ಸರ್ವಂ ಮಮೈತನ್ಮಾಹಾತ್ಮ್ಯ ಪಂಡ
‘ಕೃತ್ವಾ ಮೂರ್ತಿಂ ಮಹೀಮಯೀಮ್’
ಸ್ವರೊಪೊಮಿನಿ ವೃತ್ತಿಕೆಟ್ ಅಕೊಸ್ದರ ತ್ತ್
‘ನೈವಕಾದೃಕ್ ಕ್ವಚಿದ್ರೂಪಂ ದೃಷ್ಟಂ ಕೇನಚಿದುತ್ತಮಮ್’
ಅಂಚಿತ್ತಿ ಸ್ವರೂಪೊಮಿನಿ ಯೆವುಳುಲಾ ಯೇರಾಯೆಲಾ ಶೂತ್ನದ್ದಿ
ವಿಮಾನಂ ಹಂಸಸಂಯುಕ್ತಮೇತತ್ತಿಷ್ಠತಿ ತೇs -ಗಣೆ
ಹಂಸಪಕ್ಷಿಕ್ ಳೆಟಾವ ಅಡತ್ ನಂಚಿತ್ತಿ ಬ್ರಹ್ಮದೇವೆರೆ ವಿಮಾನೊ
ಯಿನ ನುಂಬತೌಳ್ ನೀರ್ತೊಂಡ್ ತ್ತಂಡ್

ಕೆಲವು ಪ್ರಸಿದ್ಧ ಶ್ಲೋಕಗಳು ತುಳುವಿನ ಗದ್ಯದಲ್ಲಿ ಹೇಗೆ ಸಾಕಾರಗೊಂಡಿವೆ ಎಂಬುದನ್ನು ಈ ಮುಂದಿನ ಉದಾಹರಣೆಗಳಿಂದ ತಿಳಿಯಬಹುದು

೧. ದಿವಾಂಧಾಃ ಪ್ರಾಣಿನಃ ಕೇಚಿತ್ ರಾತ್ರಾವಂಧಾಸ್ತಥಾಪರೇ |
ಕೇಚಿದ್ದಿವಾ ತಥಾ ರಾತ್ರೌ ಪ್ರಾನಿನಸ್ತುಲ್ಯದೃಷ್ಟಯಃ || -(೧-೪೮)
ಶಿಲು ಜೀವರಾಶಿಕುಳು ದಿವೊಟ್ ಪ್ಪ ಅಂಧೇರ್ಕುಳು ಅಸ್ದ್ ನವು
ಶಿಲು ಜೀವರಾಶಿಕುಳು ರಾತ್ರಿಟ್ ಪ್ಪಂಧೇರ್ಕುಳಾಸ್ದ್ ನವು
ಅಂಚನೆ ಬೇತೆಲ ಶಿಲು ಪ್ರಾಣಿಕುಳು ದಿವೊಂಟ್ ಲ ರಾತ್ರಿಟ್ ಲ
ಸಮಾನೊಮಾಸ್ದ್ ಳ್ಳಂಚಿತ್ತೀ ದೃಷ್ಟಿಕುಳ್ಳವು ||

೨ ಯದಭೂಚ್ಛಾಂಭವಂ ತೇಜಸ್ತೇನಾಜಾಯತ ತನ್ಮುಖಮ್ |
ಯಾಮ್ಯೇನ ಚಾಭವನ್ ಕೇಶಾ ಬಾಹವೇ ವಿಷ್ಣುತೇಜಸಾ || -(೨-೧೪)
ಮಹಾದೇವರೆರೆ ತೇಜಸ್ಸ್ ತ್ತಾವ ಪರಮೇಶ್ವರಿಕ್ ಮುಖೊಂಡಾಸ್ದ್ ನ್
ಯಮದೇವೆರೆ ತೇಜಸ್ಸ್ ತ್ತಾವ ಕೇಶೊಂಕುಳುಂಡಾಯೊ
ಶ್ರೀ ನಾರಾಯಣದೇವೆರೆ ತೇಜಸ್ಸ್ ತ್ತಾವ ಹಸ್ತೊಂಕುಳುಂಡಾಯೊ |
೩. ತತಃ ಕ್ರುದ್ಧ ಜಗನ ಆಮತಾ ಚಂಡಿಕಾ ಪಾನಮುತ್ತಮಮ್
ಪಪೌ ಪುನಃ ಪುನಶ್ಚೈವ ಜಹಾಸಾರುಣಲೋಚನಾ ||

ಆ ಸಮಯಯೊಂಟ್ ಜಗತ್ತ್ ಕ್ ಮಾತಾವಾಸ್ಥ್ ಳ್ಳಂಚಿತ್ತಿ ಚಂಡಿಕಾದೇವಿ
ಯಾಸ್ದ್ ನಾರ್ ಕೋಪಿತ್, ಉತ್ತಮೊಮಾ ಉಳ್ಳಂಚಿತ್ತಿ, ಮಧುಪಾನೊಮಿನಿ, ಮಗ್
ಳ್ ಲ ಮಗ್ ಳ್ ಲ ಪಾನೊ ಬೆನೊಪ್ಣಾರ್, ಕೆಂಪಾಕೋವಪ್ಪಡತ್ತಿ ದೃಷ್ಟಿಕುಳುಳ್ಳಾರ್
ತೆಳಿತೆರ್ ||

೪. ಯಾದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ |
ಸಮಸ್ತಸೈ ನಮಸ್ತಸೈನಮಸ್ತಸೈ ನಮೋನಮಃ || -(೫೧೪)
ಜಾಸ್ದೊರ್ಳ್ತಿ ಶೋಭೀಪ್ಪಿ ದುರ್ಗಾದೆವಿಯಾಸ್ಟ್ ನಾರ್ ಸಕಲ ಜೀವರಾಶಿಕ್
ಳೆಟ್ ಪ್ಪಕ್ ವಿಷ್ಣುಮಾಯೇಂದಿಂಚ ಪಣ್ಪೋವೋಣ್ ಪ್ಣಾರೆಕಾವ
ನಮಸ್ಕಾರೊ ನಮಸ್ಕಾರೊ ನಮಸ್ಕಾರೊ |

೫. ಯೇ ಮಾಂ ಜಯತಿ ಸಂಗ್ರಾಮೇ ಯೊಮೇ ದರ್ಪಂ ವ್ಯಪೋಹತಿ |
ಯೋಮೇ ಪ್ರತಿಬಲೊ ಲೋಕೇ ಸಮೇ ಭರ್ತಾ ಭವಿಷ್ಯತಿ || -(೫-೧೨)
‘ಜಾವೊರಿ ಯೆನನಿ ಯುದ್ದೊಂಟ್ ಪ್ಪಕ್ ಜಯಿಪುವೆ, ಜಾವೊರಿ ಯೆನ ಗರ್ವೊಮಿನಿ ಒಡ್ ಪುವೆ, ಜಾವೊರಿ ಲೋಕೊಂಟ್ ಪ್ಪ ಯೆಂಕ್ ಸರಿಯಾಯಿ ಬಲೊ ಉಳ್ಳಂಚಿತ್ತ್ ನಾಯೆ. ಆಯೆ ಯೆಂಕ್ ಭರ್ತಾವು ಆವೊಂಡೂಂದಿಂಚ
ಪ್ರತಿಜ್ಞೆ ಪಂಡೋಣ್ತೇನ್ ||

೬. ಮಯೂರ ಕುಕ್ಕುಟವೃತೇ ಮಹಾಶಕ್ತಿಧರೇನಷೇ ಕೌಮಾರೀ ರೂಪಸಂಸ್ಥಾನೇ
ನಾರಾಯಣಿ ನಮೋಸ್ತುತೇಃ || -(೧೧-೧೫)
ಮೈರವಾಹನೊಂಟ್ ಓಲಕಾಸ್ದ್, ಕುಕ್ಕುಟಧ್ವಜೊಂತಾವ ಶೋಭೀಪ್ಣಾರ್ |
ಮಹಾಶಕ್ತಿನ್ ಪ್ಪಿ ಆಯುಧೊಮಿನಿ ಧರಿತ್ನಾರ್ |
ಕೌಮಾರೀ ಸ್ವರೂಪೊಂಡಾವ ನಿರ್ತ್‌ನಂಚಿತ್ತಿ ನಾರಾಯಣಿಯೇ
ಈರೆಕಾವ ನಮಸ್ಕಾರೊ ||

೭. ರೋಗವಶೇಷಾನಪಹರಿಸಿ ತುಪ್ಟಾ ರುಷ್ಟಾತು ಕಾಮಾನ್ಸ ಕಲಾನಭೀಷ್ಟಾನ್ |
ತ್ವಾಮಾಶ್ರೀತಾನಾಂ ನವಿಪನ್ನರಾಣಾಂ
ತ್ವಾಮಾಶ್ರೀತಾಹ್ಯಾಶ್ರಯಾತಾಂ ಪ್ರಯಾತಿ || -(೧೧-೨೯)
ಸಮಸ್ತ ರೋಗೊಂಕ್ ಳೆನಿ ಚೆಟ್ಟೊಸ್ದ್ ತ್ತ್ ಇಚ್ಛಿನಂಚಿತ್ತಿ ಅಭಿಷ್ಟೋಂಕ್ ಳೆನಿ
ಅನುಗ್ರಹೀಪ್ಪರ್ | ಈರೆನಿ ಆಶ್ರ್ಯೆತ್ ನಾಕ್ ಳೆಗ್ ಮಗ್ ೞ್ತೊನಾಶ್ರ್ಯೆಪೊೞ್ತಿನದ್ದಿ |

೮. ಬಲಿಪ್ರದಾನೇ ಪೂಜಾಯಾಮಗ್ನಿಕಾರ್ಯೇ ಮಹೋತ್ಸವೇ |
ಸರ್ವಂ ಮಮೈತನ್ಮಾಹಾತ್ಮ್ಯ ಮುಚ್ಚಾರ್ಯ ಶ್ರಾವ್ಯಮೇವ ಚ ||
ಜಾನತಾಜಾನತಾ ವಾಲಿ ಬಲಿಪೂಜಾಂ ಯಥಾಕೃತಮ್ |
ಪ್ರತೀಕ್ಷೀಷ್ಯಾಮ್ಯಹಂ ಪ್ರೀತ್ಯಾ ವಹ್ನಿಹೋಮಂ ಕಥಾಕೃತಮ್ ||
(೧೨-೧೦, ೧೧)

ಬಲಿಪ್ರಧಾನೊಂಕ್ ಳೆಟ್ ಪ್ಪ ಅಗ್ನಿಕಾರ್ಯೊಂಕ್ ಳೆ ಟ್ಟಪ್ಪ, ಮಹೋತ್ಸ ಹೊಂಕ್ ಳೆಟ್ಟ್ ಪ್ಪ, ಕಬ್ಯಲಾಯೆನ್ ಮಹಾತ್ಮೆ ಪಂಡ ಕೇಂಡ ಬೆಂದೆ ರಂದತ್ನಾವುಟ, ಜಾವೊರಿ ಪಿಂದಾವಡ್ ಪಿನಂತೆ ಅವಡ್ ಬಲಿಪೂಜೆ ಅಂಚನೆ ಅಗ್ನಿಕಾರ್ಯೊಂಕ್ ಳೆಟ್ ಪ್ಪ ಬೆಂದ್ ನಂಚಿತ್ತಿ ಕರ್ಮೊಂಕ್ ಳೆನಿ ಸಫಲೊಮಾಕೊಸ್ದ್ ಸಂತೋಷೊಂತಾವ ತಿಗೆತೊಂಬೆನ್ |

ತುಳುಪೂಜೆ

ಸಂಸ್ಕೃತ ಪೂಜೋಪಾಸನೆಯ ಆ ಕಾಲದಲ್ಲಿ, ಸಪ್ತಶತಿಯ ತುಳು ಅನುವಾದದ ಅವಶ್ಯಕತೆ ಯಾಕೆ ಉಂಟಾಯಿತು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಈಗಿನ ಸತ್ಯನಾರಾಯಣ ವ್ರತಕಥೆ, ಶನೈಶ್ವರ ವ್ರತಕಥೆಯಂತೆ ಆ ಕಾಲದಲ್ಲಿ ದುರ್ಗಾಪೂಜೆಯ ಅನಂತರ ತುಳುವಿನಲ್ಲಿ ಕಥಾವಾಚನ ಮಾಡುವ ಸಂಪ್ರದಾಯ ಇದ್ದರಬಹುದೆ? ಹಾಗೆಂದು ಭಾವಿಸಿದರೆ, ಕುಂಬಳೆ ಸೀಮೆಯ ತೆಂಕಿಲ್ಲಾಯರ ಮನೆ ಆ ಕಾಲದ ಪುರೋಹಿತರ ಮನೆಯಾಗಿದ್ದಿರಬಹುದೆಂದು ಮಾತ್ರ ಹೇಳಬಹುದು. ಕೃತಿಯಲ್ಲಿ ಎಲ್ಲಿಯೂ ಕೃತಿಕಾರನ ಉಲ್ಲೇಖವಿಲ್ಲದಿರುವುದರಿಂದ ತೆಂಕಿಲ್ಲಾಯನೆಂಬಾತ ಕೃತಿಕರ್ತೃವೆಂದು ಭಾವಿಸುವುದು ಸಮಂಜಸವೆನಿಸುವುದಿಲ್ಲ. ಇಲ್ಲಿ ‘ಕರ್ತೃ’ ಯಾರೆಂಬುದಕ್ಕಿಂತಲೂ ‘ಕರ್ಮ’ ಮುಖ್ಯವೆನಿಸುತ್ತದೆ. ವೈದಿಕಪೂಜಾ ಪರಂಪರೆಯ ಆ ಕಾಲದಲ್ಲಿ ಆಡುಭಾಷೆಯಲ್ಲಿಯೂ ದೇವರನ್ನು ಉಪಾಸಿಸುವ ಪರಂಪರೆಯಿತ್ತೆಂದು ಊಹಿಸಲಿಕ್ಕೆ ಸಾಧ್ಯವಿದೆ. ದೇವೀ ಮಹಾತ್ಮೆಯ ಐದನೇ ಅಧ್ಯಾಯದ ‘ನಮಸ್ತಸೈನಮಸ್ತಸೈ ನಮಸ್ತಸೈ ನಮೋನಮಃ’ ಎಂಬ ಸ್ತುತಿಪಾಠವನ್ನು ಕವಿಯು ಮೂರಾವರ್ತಿ ‘ನಮಸ್ಕಾರೊ’ ಎಂದು ಪ್ರಯೋಗಿಸಿರುವುದನ್ನು ನೋಡಿದರೆ, ಪೂಜಾ ವಿಧಾನದಲ್ಲೂ ತುಳು ಬಳಕೆಯಾಗಿತ್ತೆಂದು ಹೇಳಬಹುದು. ಕಥಾನಿರೂಪಣೆ ಮಾತ್ರವಾಗಿದ್ದರೆ ಮೂರು ಬಾರಿ ಹಾಗೆ ಹೇಳಬೇಕಾದ ಅಗತ್ಯವಿಲ್ಲ ತಾನೆ?

ಈಗಲೂ ವೈದಿಕ ವಿಧಿವಿಧಾನದ ಸ್ಥಂಡಿಲ ರಚನೆಗಳಲ್ಲಿ ಗುರುಮಂಡಲ ಬರೆಯುವಾಗ, ತುಳುಲಿಪಿಯ ಶ್ರೀಕಾರ ಬರೆಯುವ ಕ್ರಮವಿರುವುದನ್ನು ಗಮನಿಸಿದರೆ, ಇದು ಪ್ರಾಚೀನ ತುಳು ಪೂಜಾ ಪರಂಪರೆಯೊಂದರ ಪಳೆಯುಳಿಕೆ ಎಂದು ಧಾರಾಳವಾಗಿ ಹೇಳಬಹುದು. ಸರಸ್ವತಿ ಸರ್ವಭಾಷಾಮಯಿ ತಾನೇ? ಇದರಿಂದಾಗಿ ಮಂತ್ರಪಠನ ಶೈಲಿಯಲ್ಲಿರುವ ‘ದೇವೀ ಮಹಾತ್ಮೆ’ ಗದ್ಯಕಾವ್ಯ ತುಳು ಸಂಸ್ಕೃತಿಯ ಚಿಂತನೆಯಲ್ಲೂ ತುಂಬಾ ಮಹತ್ತ್ವದ ಕೃತಿಯಾಗಿ ನಿಲ್ಲುತ್ತದೆ.

 

[1] ಪ್ರಸ್ತಾವನೆ- ಪು. ೧೨