ಹೋಲಿಕೆಗಳು

ಅರೆಬೇಸ್ಯಟ್ ಪ್ಪಾಜಿಸ್ಟಿನಾ ನದಿಕುಳು ವರ್ಷೋಜೋರಿನಾಪೂ
ಕರೆ ಮೀರ್ ಸ್ಟ್ ಘೋಷಿತ್ ಕೊಂದಳಿತ್ ನಾನಾ ದಿಶೆಟ್ ತ್ತ್
ಪರಿತ್ಯೆತ ತ್ ಸಾಗರೊಮಿನ್ ಪೊಗಿಕೀ ಪರಿಶೇ ಹೃದಯೊಂತ
ವಿರಹೊಂಟ್ ಳತಚ್ಯುತನೀಕ್ಷಿತೆರ್ ವಿಧಿಪೂರ್ವಕೊಮಾವಾ || (೧-೧೦-೮)

ಇಲ್ಲಿ ಕವಿಯು ಸುಂದರ ಚಿತ್ರವೊಂದನ್ನು ಕಟ್ಟಿಕೊಡುತ್ತಾನೆ- ‘ನಡು ಬೇಸಗೆಯಲ್ಲಿ ಬತ್ತಿಹೋದ ನದಿಗಳು ಮಳೆ ಬಂದಾಗ ತುಂಬಿಕೊಂಡು ಮೇರೆಮೀರಿ ಉಬ್ಬ ಅಬ್ಬರಿಸಿ, ಹರಿದು ಸಮುದ್ರ ಸೇರುವಂತೆ, ವಿರಹದಿಂದೆದ್ದು ಭಗವಂತನನ್ನು ನೋಡಿದರು’. ಇದೇ ಆಶಯವನ್ನು ಹೊತ್ತ ಇನ್ನೊಂದು ಪದ್ಯವನ್ನೂ ನೋಡಬಹುದು.

ಬಾಡ್ ಕಿ ಬೇಸ್ಯತ ಕ್ಷೇತ್ರನಡೂ
ಬೋಡ್ ಕಿ ವೃಷ್ಟಿ ಜನೀಪಪನೇ
ಕೂಡ್ ಸ್ಟ್ ವರ್ಧಿಪಿನಂದೊಮುನೀ
ಬಾಡ್ ಸ್ಟಿ ದೇಹೊ ಕುಳಿರ್ತ್ ಣ್ ನಾ || (೧-೧೬-೧೯)

‘ಬೇಸಿಗೆ ಕಾಲದಲ್ಲಿ ಗದ್ದೆಯ ಮಧ್ಯಕ್ಕೆ ಮಳೆನೀರು ಬಿದ್ದಾಗ, ಸಸ್ಯರಾಶಿ ಚಿಗುರೊಡೆದಂತೆ’ ಎಂಬ ಉಪಮೆಯ ಸೊಗಸು ಮನೋಜ್ಞವಾಗಿದೆ.

ಹಾಗೆಯೇ-

೧. ಕಾಡ್ ಟ್ ಪ್ಪುಕಿ ವ್ಯಾಘ್ರಮಂದಿರೊ ಪೆತ್ತ ಪ್ರಾಪಿಪಿನಂದಮೆ (೩-೧೧-೧೬)
೨. ಭೂರಿಪುಂಜ ತೃಣಂಕ್ ಬೀರಿಜಿನಂದಮಾಕೊಯೆರೆಂದರ್ (೩-೨-೧೪)
೩. ಹುತಾಶನೆ ಗಾಸಿಮಾಂಪುಕ್ ಣಂದೊ ಪರ್ತಿತ ಗುಡ್ಡೆ (೩-೧೪-೩೨)
೪. ಪೇರ್ ಪ್ಪಳೆ ಸಂಧಿಪಿನಾ ಪರಿಶೆ (೩-೨೨-೩೨)

ಮುಂತಾದ ಸಾಲುಗಳಲ್ಲಿ ಉಪಮಾಲಂಕಾರದ ಚೆಲುವನ್ನು ಕಾಣಬಹುದು.

ಶಬ್ದಾಲಂಕಾರ

ಅಂಕುಶಧ್ವಜ ವಜ್ರರೇಖೆಯವಾಂಕುರೊಂಟ್ ವಿರಾಜಿತೇ
ಪಂಕಜೋದರಮೂರ್ತಿ ಶ್ರೀಪದಪಂಕದಂತಡೆಯಾಳೊಮೀ
ಅಂಕಿಕೊಂಟೆ ಧರೀತನೇಕಮಹಂಕರೀವು ಕಾರಣೊ
ನಂಕ್ ಚೋಜನತಂದೊ ಯಾತ್ರಿತೆರೆನ್ಕೆರಚ್ಯುತೆ ಸತ್ಯೊಮೆ || (೧-೧೬-೨೯)
ಮೃದುಲಗುತ್ವೋಮ ಮಧುರಗಂಹರ ಸದುವಿನಯಗುಣ ಸಂಪದಂ
ತುದಿತಿ ವಾಕ್ಸುಧೆನ್ ಡೆಬುಡಂತೆ ಪ್ರಸನ್ನೊಮಾಪ್ಪುಣ ದೆರ್ಶಿತ್
ಬೆದರದೃಷ್ಟಿಟ ವದನೊಮೀಕ್ಷಿ ಕೆದಿಸ್ಟಿ ಪುತ್ಥಳಿತಂದೊಮೇ
ಉದ್ ಸ್ಟನೆತ್ತ್ ತಿ ಸದಮಳಜ್ಞೆರೆ ಹೃದಯೊ ಪಲ್ಲವೊಮಾಸ್ಟ್ ಣ್ || (೩-೧೨-೨೫)

ಆಶುಕಾವ್ಯ

ಬೋಡಯೇಂದೆಣಿಪಂತೆ ಭಕ್ತಿತ ಗಾಢೊಂಟಾರೆ ಪದೊಂಕುಳೆ
ನೀಡ್ ಸ್ಟಂಗೊಮಿ ಪಾರ್ತ್ ಸ್ತುತ್ಯೊಮಿ ಪಾಡ್ ಮಾಂತ್ ಸ್ತುತೀಪ್ಪೆರ್ (೩-೧೧-೨೦)

ಇಲ್ಲಿ ಶ್ರೀಹರಿಯನ್ನು ಸನಕಾದಿ ಮುನಿಗಳು ಹಾಡು ಕಟ್ಟಿ ಸ್ತುತಿಸಿದರು (ಪಾಡ್ ಮಾಂತ್ ಸ್ತುತೀಪ್ಪೆರ್) ಎಂಬುದು ನಮ್ಮ ಗಮನ ಸೆಳೆಯುತ್ತದೆ. ತತ್ ಕ್ಷಣದಲ್ಲಿಯೇ ಪದ್ಯ ಕಟ್ಟಿ ಹಾಡುವ ಆಶುಕಾವ್ಯ ವೈಭವ ಆ ಕಾಲದಲ್ಲಿ ಪ್ರಚಲಿತವಾಗಿದ್ದಿತೆಂಬ ವಿಚಾರವೂ ಇದರಿಂದ ತಿಳಿದುಬರುತ್ತದೆ. ಕುಮಾರವ್ಯಾಸನ ಗದುಗಿನ ಭಾರತದಲ್ಲಿ ಬರುವ ‘ಸಲೆಸಮಸ್ಯದನಂತಪದ್ಯವ ಘಳಿಲನನ್ವ್ಯೆಸುವ’ ಆಶುಕವಿಗಳ ಪ್ರೌಢಿಮೆ ವಿಷ್ಣುತುಂಗನ ಕಾಲದಲ್ಲೂ ಇದ್ದಿರಬೇಕೆಂದು ಭಾವಿಸಬಹುದು.

ಹೀಗೆ ವಿಷ್ಣುತುಂಗನ ಶ್ರೀಭಾಗವತೊ ತುಳುಭಾಷೆ, ಛಂದಸ್ಸು, ಕಾವ್ಯ ಸೌಂದರ್ಯಗಳ ತ್ರಿಪಥಗಾಮಿನಿಯಾಗಿ ಸಹೃದಯರಿಗೆ ಸಂತಸವನ್ನುಂಟು ಮಾಡುತ್ತದೆ.

ಅಪೂರ್ಣ ಕಾವ್ಯ ಕಾವೇರಿ

ಅಜ್ಞಾತಕರ್ತೃಕವಾದ ಈ ಕಾವ್ಯದ ಉಪಲಬ್ಧ ಭಾಗ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಹಸ್ತಪ್ರತಿ ಭಂಡಾರದಲ್ಲಿದೆ. ಇದರ ಪ್ರಾರಂಭದ ೧೧೯ ವಾಲೆಗಳೂ, ಮಧ್ಯಭಾಗದ ೨೩ ವಾಲೆಗಳೂ, ಕೊನೆಯ ಕೆಲವು ವಾಲೆಗಳೂ ನಷ್ಟವಾಗಿವೆ. ಒಟ್ಟು ಹದಿನೈದು ಅಧ್ಯಾಯಗಳಿರಬೇಕಾದ ಈ ಕಾವ್ಯದ ೬ನೆ ಅಧ್ಯಾಯದ ಮುಕ್ಕಾಲು ಭಾಗ, ೧೦ನೇ ಅಧ್ಯಾಯದ ಕೊನೆಯ ಭಾಗ ಮತ್ತು ೧೧ನೇ ಅಧ್ಯಾಯದ ಆರು ಪದ್ಯಗಳು – ಇಷ್ಟು ಮಾತ್ರ ದೊರೆತಿವೆ. ಅಂದರೆ ಸುಮಾರು ಮೂರನೇ ಒಂದು ಭಾಗದಷ್ಟು ಮಾತ್ರ ಉಪಲಬ್ಧವಾಗಿದೆ ಎಂದಷ್ಟೇ ಹೇಳಬಹುದು. ವಿದ್ವಾನ್ ವೆಂಟಕರಾಜ ಪುಣಿಂಚಿತ್ತಾಯರಿಂದ ಸಂಶೋಧಿತವಾದ ಈ ಕಾವ್ಯದ ೧೯೮೭ರಲ್ಲಿ ಬೆಳಕಿಗೆ ಬಂದಿತು.

ಕವಿ – ಕಾಲ

ಕಾವೇರಿ ಕಾವ್ಯದ ಪ್ರಾರಂಭದ ವಾಲೆಗಳು ನಷ್ಟವಾಗಿರುವುದರಿಂದ ಕಾವ್ಯದ ಕರ್ತೃ ಯಾರೆಂದು ಹೇಳುವುದು ಕಷ್ಟವಾಗಿದೆ. ಆದರೆ ಕಾವ್ಯದ ಭಾಷೆ ಮತ್ತು ಛಂದಸ್ಸುಗಳನ್ನು ಪರಿಶೀಲಿಸಿದಾಗ ಬಹುಮಟ್ಟಿಗೆ ವಿಷ್ಣುತುಂಗನ ಶ್ರೀಭಾಗವತೊ ಕಾವ್ಯವನ್ನೇ ಹೋಲುವುದುರಿಂದ, ಈ ಕವಿಯು ಅವನ ಸಮಕಾಲೀನನರಿಬಹುದೆಂದು ಹೇಳಲು ತೊಂದರೆಯಿಲ್ಲ.

ಪ್ರಾಜೋತ್ಸತ್ಯ ಸುವತ್ಸರೊಂಟೀ ಕಥೆನೊರಿ ಬ್ರಾಹ್ಮಣಮುಖ್ಯೆ
ಈ ಜೀವಕುಳೇನನುರಾಗತೆಟ್ ಮಹಲೋಹಕಿತೊಂಕ್
ವ್ಯಾಜೋ ತೆರಿತಾತ್ ರಚೀತ್ ಣವೂ ಸರ್ವಜ್ಞೆರ್ ಕೇಂಡ್
ಸೂಜೀಮುನೆತಾತ ತರೋ ವರನಂದೊಮೆ ತಿರ್ದ್ ಕ್ ಣಯ್ಯೋ (೧೦-೬೧)

ಈ ಪದ್ಯದ ಆಧಾರದ ಮೇಲೆ ಹೇಳುವುದಾದರೆ ಕವಿಯು ಪ್ರಜೋತ್ಪತ್ತಿ ಸಂವತ್ಸರದಲ್ಲಿ ಕಾವ್ಯಸಮಾಪ್ತಿ ಮಾಡಿದ್ದಾನೆಂದು ತಿಳಿಯಬಹುದು. ವಿಷ್ಣುತುಂಗನ ಕಾಲವನ್ನು ಕ್ರಿ. ಶ. ೧೩೭೦ ಎಂದು ತೀರ್ಮಾನಿಸಿದರೆ ಈ ಶತಮಾನದ ಪ್ರಜೋತ್ಪತ್ತಿ ಸಂವತ್ಸರವೊಂದರಲ್ಲಿ (೧೩೯೧) ಕಾವೇರಿ ಕಾವ್ಯದ ರಚನೆಯಾಗಿದೆ ಎಂದು ಹೇಳಬಹುದು.

ಕಾವ್ಯದ ಪ್ರತಿ ಅಧ್ಯಾಯದ ಆರಂಭ ಮತ್ತು ಅತ್ಯಂದಲ್ಲಿ ಶಿವಸ್ತುತಿಯಿರುವುದರಿಂದ, ಕವಿಯು ಶೈವಬ್ರಾಹ್ಮಣನಾಗಿರಬೇಕೆಂದು ಊಹಿಸಲು ಸಾಧ್ಯವಿದೆ. ಆದರೂ, ಹೆಸರು ಮತ್ತು ಊರು ಯಾವುದೆಂದು ಹೇಳಲು ಆಧಾರಗಳು ಸಾಲವು.

ಕಾವ್ಯವಸ್ತು

ಸ್ಕಾಂದಪುರಾಣಂತರ್ಗತವಾದ ಕಾವೇರಿ ಮಹಾತ್ಮೆ ಇಲ್ಲಿಯ ವಸ್ತು. ಸಂಸ್ಕೃತ ಕಾವೇರಿ ಮಹಾತ್ಮೆಯನ್ನು ಆಧಾರವಾಗಿಟ್ಟುಕೊಂಡು ಬರೆಯಲ್ಪಟ್ಟ ಈ ತುಳುಕಾವ್ಯ ಸಂಸ್ಕೃತದ ನೇರ ಅನುವಾದವಲ್ಲ. ವಿವಿಧ ವೃತ್ತಗಳಲ್ಲಿ ರಚನೆಗೊಂಡ ಈ ಸ್ಟೋಪಜ್ಞ ಸುಂದರ ಕಾವ್ಯಕೃತಿ ಮೃದುಮಧುರವಾದ ವರ್ಣನೆಗಳಿಂದ ಕನ್ನಡನಾಡಿನ ಜೀವನದಿಯಾದ ಕಾವೇರಿಯ ಕಥೆಯನ್ನು ಅನಾವರಣಗೈಯುತ್ತದೆ.

ನೈಮಿಷಾರಣ್ಯದಲ್ಲಿ ಸೂತಮಹಾಮುನಿಯಿಂದ ಆರಂಭವಾಗುವ ಕಥಾಪ್ರವಚನ, ಶಿವಪಾರ್ವತಿಯರ ಸ್ಕಂದವನಸಂದರ್ಶನ, ಕವೇರಮುನಿಯ ತಪಸ್ಸು, ಬ್ರಹ್ಮನಿಂದ ವರಪ್ರದಾನ, ಅಗಸ್ತ್ಯಲೋಪಮುದ್ರಾ, ವಿವಾಹ, ಕಾವೇರಿಯ ನದೀರೂಪಗಮನ ಇತ್ಯಾದಿ ಕಥಾಭಾಗಗಳು ಕಾವೇರಿ ಕಾವ್ಯದ ಆದಿಭಾಗದಲ್ಲಿ ಇದ್ದಿರಬೇಕೆಂದು ಭಾವಿಸಬಹುದು. ನಮಗೆ ಉಪಲಬ್ಧವಾದ ಕಾವ್ಯದ ಆರನೆ ಅಧ್ಯಾಯದ ಅನಂತರದ ಭಾಗದಲ್ಲಿ ತ್ರಿಮೂರ್ತಿಗಳು ಹೇಳಿದ ಅನ್ನದಾನ ಮಹಿಮೆ, ತ್ರಿಗುಣಿಗೆ ಮೋಕ್ಷಪ್ರಾಪ್ತಿ, ಶ್ಯೇನ – ತ್ರಿಜಟ ಸಂವಾದ, ಗಂಗಾ-ಕಾವೇರಿ ಸಂವಾದ, ಕುಕಲದಾನವ ಕಥೆ, ವಿರಾಟ ವಾನರನ ಸ್ವರ್ಗಪ್ರಯಾಣ, ಕುಂಡಿಕಾ ತೀರ್ಥಮಹಿಮೆ, ಚಂಡಾಲ ಮೋಕ್ಷಪ್ರಸಂಗ, ಶಿವಪಾರ್ವತಿಯರ ವರ್ಣನೆ, ಸತ್ಯಥಾಶ್ರವಣ ತತ್ತ್ವಬೋಧೆ- ಇತ್ಯಾದಿ ನಿರೂಪಣೆಯಿದೆ.

ಕಾವ್ಯದ ಭಾಷೆ

ಶ್ರೀ ಭಾಗವತೊ ಮತ್ತು ಕಾವೇರಿ ಕಾವ್ಯಗಳ ಭಾಷಾಶೈಲಿಯಲ್ಲಿ ಸಮೀಪದ ಸಂಬಂಧ ಕಂಡುಬಂದರೂ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಪಸ್ವಲ್ಪ ವ್ಯತ್ಯಾಸಗಳನ್ನೂ ಗುರುತಿಸಲು ಸಾಧ್ಯ.

ಶ್ರೀಭಾಗವತೊ ಕಾವೇರಿಕಾವ್ಯ
ಪುಲೆಂಜ್ ಪುಲಂಜ್ (ತಿಳಿಯು)
ಕಯ ಕೞಿ (ಕೆರೆ)
ಚುತ್ಥ ಚುತ್ತ (ಸುತ್ತಲೂ)
ಪತ್ಥ ಪತ್ತ (ಎಲ್ಲ)
ಎನಿಕ್, ನನ್ಕ್ ನೆನ್ ಕ್ (ನನಗೆ)
ಎನ ನೆನ, ಮೆನ (ನನ್ನ)
ಎನಿನ್, ಎನಿನಿವ್ ನೆನ್ ನಿ (ನನ್ನನ್ನು)
ಈಯ್ಯ್, ನೀಯ್ಯ್ ಇಯ್ಯೀ, ನೀಯಿ (ನೀನು)

ಶ್ರೀಭಾಗವತೊ ಕಾವ್ಯದಲ್ಲಿರುವಂತೆಯಢ ಇದರಲ್ಲಿಯೂ ‘ಸ್ಟ್’ ಧ್ವನಿಮಾ ಮತ್ತು ರಳಾಕ್ಷರದ ಬಳಕೆ ವಿಪುಲವಾಗಿದೆ. ಉದಾ:

ರಳ

ಎೞ್ ಸ್ಟೋಟ್ (ಮೇಲೆತ್ತು)
ಕೞಿ (ಮುಗಿಸು)
ತೊೞಿಪು (ತುಳಿಯು)
ಅೞಿಲ್ (ಪ್ರಕಾಶಿಸು)
ಏೞ್ (ಏಳು)
ಕೋೞ್ (ಕೊಡು)
ನೂೞ್ (ನುಗ್ಗು)
ಸ್ಟ್

ಸ್ಟ್ (ಅದು), ಸ್ಟ್‌೦ದ್ (ಇದು), ಸ್ಟೇ (ಆ), ಸ್ಟ್‌೦ದ (ಇಗೊ), ಸ್ಟೌರ್ತ್ (ಅಲ್ಲಿಂದ), ಸ್ಟ್‌ಡೆಪಿನ್ (ತಿಳಿಯು), ಸ್ಟಿಂಗ್ (ತಲೆಬಾಗು), ಸ್ಟಿತೆನ (ಈಗ), ಸ್ಟುದ್ (ಆದರಿಸು), ಸ್ಟ್‌ಳಪು (ಹೊರಡು), ಸ್ಟಿಣೆಯಿ (ಜೊತೆಯಾಗಿರುವ)

ಇದು ಪದಾದಿಯ ‘ಸ್ಟ್’ ಧ್ವನಿಮಾಕ್ಕೆ ಉದಾಹರಣೆಗಳುಕ, ಹಾಗೆಯೇ ಭೂತ ಕಾಲಸೂಚಕವಾಗಿಯೂ ಅದರ ಬಳಕೆಯಿದೆ –

ಚೂಸ್ಟ್, ಮನಸಾರ್ ಸ್ಟ್, ಮಂದಸ್ಮಿ ತೆರಾಸ್ಟ್, ಕೊಂಡಾಡ್‌ಸ್ಟ್, ನಿಜೊಮಾಸ್ಟ್, ಕಳೆಸ್ಟ್ ಇತ್ಯಾದಿ.

ಸಂಸ್ಕೃತ ಪದಗಳನ್ನು ತುಳುವಿಗೆ ಸಮರ್ಥವಾಗಿ ತರುವ ಪ್ರಯತ್ನದ ಫಲವಾಗಿ ಪದಾದಿಯ ವ್ಯಂಜನವು ಏಕಾರಾಂತವಾಗಿರುವುದನ್ನು ಇಲ್ಲಿ ಗಮನಿಸಬಹುದು.

ರೆಶ್ಮಿ (ರಶ್ಮಿ), ರೆಕ್ಷಿಪು (ರಕ್ಷಿಪು), ರೆಚಿಪು (ರಚಿಸು), ಜೆಗತ್ತು (ಜಗತ್ತು), ಜೆನೊ(ಜನ), ಗೆಂಗೆ (ಗಂಗೆ) ಇತ್ಯಾದಿ.

ಹಾಗೆಯೇ ಸಮಸ್ತಪದ ರಚನೆಯಲ್ಲಿ ಪೂರ್ವೊತ್ತರ ಪದಗಳು ಸ್ಥಾನಪಲ್ಲಟವೂ ಇಲ್ಲಿ ಗಮನಸೆಳೆಯುತ್ತದೆ. ಉದಾ:

ಮಂಡಲಜವೊ (ಜಗನ್ಮಂಡಲ), ಕಂಜುೞಿ (ಉರೆಕಂಜಿ – ಜಿಂಕೆಮರಿ), ಪುಂಗವ ದ್ವಿಜೇಂದ್ರ (ದ್ವಿಜೇಂದ್ರಪುಂಗವ), ಕಂಧರಾಶಶಿ (ಶಶಿಕಂಧರ) ಇತ್ಯಾದಿ.

ಅಪೂರ್ವ ಪದಪ್ರಯೋಗ

ಗೆಂಗೆ ಸಹಿತೊಂಟ್ ಪ್ರಕಟಿಪ್ಪ ಮುನಿನಾಥೇ
ಅಂಗಯಿಕುಳೊಪ್ಪಿಜಿಸ್ಟ್ ಮಸ್ತಕತಟೊಂಟ್     (೭-೫೬)

ಇಲ್ಲಿ ‘ಮಸ್ತಕತಟದಲ್ಲಿ ಅಂಗೈಗಳನ್ನು ಒಪ್ಪಿಸಿಟ್ಟು’ ಎಂದು ಕಾವ್ಯಾತ್ಮಕವಾಗಿ ಹೇಳಿರುವುದು ಮನೋಹರವಾಗಿದೆ. ಪ್ರಾರ್ಥನಾ ನಮಸ್ಕಾರಗಳಲ್ಲಿ ಈ ಹಸ್ತಮುದ್ರೆಯನ್ನು ಈಗಲೂ ಗಮನಿಸಬಹುದು. ಅಂತೆಯೇ ಉದ್ದಂಡನಮಸ್ಕಾರವೆಂಬ ಅರ್ಥದಲ್ಲಿ ಕವಿಯು ಬಳಸಿದ ‘ನೀಳೂಬೂೞ್’, ‘ಅಂಗೊಮುಡಲಾ’ ಇತ್ಯಾದಿ ಪ್ರಯೋಗಗಳೂ ಗಮನ ಸೆಳೆಯುತ್ತವೆ.

ಚೋದ್ಯೊಮತಿ ಚೋದ್ಯೊಮುಂದು ಸಾಧ್ವಿಜನಭೇದ್ಯಂ
ಚೋದ್ಯೊಮುಂದು ವದ್ಕೊ ತ್ರಿಜಗೊಂಟೀನ್‌ಟ ಮಿತ್ತ್   (೭-೧೧)

ಇಲ್ಲಿ ‘ವದ್ಯ’ ಎಂಬುದಕ್ಕೆ ಯುಕ್ತವಾದ ಮಾತು ಎಂಬ ಅರ್ಥವನ್ನು ನೀಡಲಾಗಿದೆ. (ಕಾವೇರಿ; ಅರ್ಥಸೂಚಿ, ಪು. ೬೪), ಕಿಟ್ಟೆಲ್ ನಿಘಂಟಿನಲ್ಲಿ ನೀಡಿರುವ ‘ಹೇಳಬೇಕಾದ’ ಎಂಬ ಅರ್ಥವನ್ನೂ ಸ್ವೀಕರಿಸಬಹುದು. ಕವಿ ಮುದ್ದಣನು ತನ್ನ ರಾಮಾಶ್ವಮೇಧದಲ್ಲಿ ಪ್ರಯೋಗಿಸಿರುವ ಪ್ರಸಿದ್ಧವಾದ ‘ಪದ್ಯಂ ಪದ್ಯಂ ಗದ್ಯಂ ಹೃದ್ಯಂ’ ಎಂಬ ಸೂಕ್ತಿಯಲ್ಲಿಯೂ ಈ ಅರ್ಥವೇ ಸ್ವೀಕಾರಾರ್ಹವಾದುದು. ‘ಪದ್ಯವು ವಿವರಣೆಯನ್ನು ಅಪೇಕ್ಷಿಸುವಂತಹದು; ಗದ್ಯವು ಸರಳವಾಗಿ ಹೃದ್ಗತವಾಗುವಂತಹುದು’ ಎಂಬುದೇ ಮುದ್ದಣನ ವಿವಕ್ಷೆ. ಅದು ಬಿಟ್ಟು ಪದ್ಯವನ್ನು ‘ವದ್ಯ’ವೆಂದು ಹೇಳಿದರೆ ನಾವು ಕವಿಭಾವಕ್ಕೆ ದ್ರೋಹ ಬಗೆದಂತೆಯೇ ಸರಿ. ತುಳುಭಾಷೆಯಲ್ಲಿಯೂ ಅದೇ ಅರ್ಥಚ್ಛಾಯೆಯಿರುವುದನ್ನು ಕಾವೇರಿ ಕಾವ್ಯ ಸಾಕ್ಷೀಕರಿಸುತ್ತದೆ. ಪಳಂತುವಿನಲ್ಲಿ ‘ಮನಿಪು’ ಎಂಬುದಕ್ಕೆ ‘ಹೇಳು’ ಎಂಬರ್ಥವಿದ್ದರೂ, ನಮ್ಮ ಆಧುನಿಕ ತುಳುವಿನಲ್ಲಿ ಈ ಪ್ರಯೋಗ ತುಂಬಾ ಕಡಿಮೆಯಾಗಿದೆ. ಆದರೆ ಅದರ ನಿಷೇಧಾತ್ಮಕ ರೂಪ ‘ಮನಿಪಂತೆ’ (ಹೇಳದೆ ಇರು, ಸುಮ್ಮನಿರು) ಎಂಬುದು ಈಗಲೂ ಪ್ರಚಲಿತವಿದೆ. ಇನ್ನು ‘ಬಂಜಮರ’ (ಹೊಟ್ಟೆತುಂಬ’ ಎಂಬುದು) ಎಂಬುದು ಭಾಷಾ ಮಿತವ್ಯಯಾಸಕ್ತಿಯಿಂದ ಅಧುನಿಕ ತುಳುವಿನಲ್ಲಿ ‘ಬಂಜರ’ ಎಂದಾಗಿರುವುದೂ ಗಮನಾರ್ಹ, ಹಾಗೆಯೇ ಮಜಕಂಠೆ (ಕಪ್ಪು ಗೊರಳ), ಪರೇಲ್ಮಣಿ (ಮುತ್ತು) ತರೆಕಾಡ್ (ತಲೆನೋವು) – ಮುಂತಾದ ಪದಪ್ರಯೋಗಗಳೂ ವಿಶೇಷವಾಗಿವೆ.

ಸ್ತುತಿಪದ್ಯಗಳು

ಸಂಧ್ಯೊಟುದ್ಭವಿತ್‌ತ್ತ್‌ಣಾರೆನ ಕಂದವಾಕ್ಸುಧೆ ಸೇವಿತ್
ಬಂಧನಂ ಕಳೆಸ್ಟಾತ್ಮಸನ್ಮತಿ ಸಂಧಿತೀ ಪಿತಭಾರ್ಯೆನಾ
ಬಂಧುಮಿತ್ರನ ಪುತ್ರಜ್ಯೇಷ್ಠನ ಧರ್ಮಪತ್ನಿನಿ ಧ್ಯಾನಿತ್
ಗ್ರಂಥೊಮೀ ರಚಿಪುಪ್ಪೆ ಲೋಕೆರೆ ಬಂಧನಕ್ಷಯೊಂಕಾಸ್ಟಾತ್ || (೮-೪)

ಇದು ಕುಮಾರವ್ಯಾಸ ಕವಿಯ ‘ವೇದಪುರುಷನ ಸುತನ ಸುತನ’ ಎಂಬ ಪದ್ಯವನ್ನು ಹೋಲು ಪಾಂಡಿತ್ಯಪೂರ್ಣ ರಚನೆ. ಚಿತ್ರಕವಿತಾ ಪ್ರಬೇಧಗಳಲ್ಲಿ ಈ ರೀತಿಯ ರಚನೆಗಳನ್ನು ‘ಪಾರಿಹಾರಿಕಿ’ ಎಂದು ಕರೆಯಲಾಗುತ್ತದೆ. ನಡುಗನ್ನಡ ಕಾವ್ಯಗಳಾದ ಮಣ್ಣೇಶ್ವರಕಾವ್ಯ, ಮುನಿಸುವ್ರತಚರಿತೆ, ರಾತ್ರಿಯನಲ್ಲನ ಪದ್ಯ, ಕಂಠೀರವ ನರಸರಾಜ ವಿಜಯ, ಸೌಂದರಚಾರಿತ್ರ, ಪದ್ಮರಾಜಪುರಾಣ ಮುಂತಾದವುಗಳಲ್ಲಿ ಈ ರೀತಿಯ ಬಾಂಧವ್ಯದ ಕುಣಿಕೆಗಳಿರುವ ಪದ್ಯಗಳನ್ನು ಕಾಣಬಹುದು. ಹರಿದಾಸರ ಕೀರ್ತನೆಗಳಲ್ಲಿಯೂ ಇಂತಹ ಚಿತ್ರಕಾವ್ಯ ಲಕ್ಷಣಗಳನ್ನು ಗುರುತಿಸಬಹುದು. ‘ಪಳಂತುಳು ಕಾವ್ಯವೂ’ ಇದಕ್ಕೆ ಹೊರತಾದುದಲ್ಲ. ಪ್ರಸ್ತುತ ಕಾವೇರಿ ಕಾವ್ಯದಲ್ಲಿ ಅಂತಹ ಎರಡು ಸ್ತುತಿಪದ್ಯಗಳು ದೊರೆತಿವೆ. ಮೇಲಿನ ಪದ್ಯಕ್ಕೆ ಈ ರೀತಿ ಅರ್ಥ ಹೇಳಬಹುದು-

“ಸಂಧ್ಯೆಯಲ್ಲಿ ಜನಿಸಿದ ವೇದವ್ಯಾಸ ಋಷಿಯ – ಪುತ್ರನಾದ ಶಂಕಮುನಿಯ – ಭಾಗವತಮೃತವನ್ನು ಕೇಳಿ ಅತ್ಮಜ್ಞಾನ ಪಡೆದ ಪರೀಕ್ಷಿತನ – ತಂದೆಯಾದ ಅಭಿಮನ್ಯುವಿನ – ಹೆಂಡತಿಯಾದ ಉತ್ತರೆಯ – ಬಾಂಧವನಾದ ಶ್ರೀಕೃಷ್ಣನ (ಶ್ರೀಮನ್ನಾರಾಯಣನ)- ಹಿರಿಮಗನಾದ ಬ್ರಹ್ಮನ ಪತ್ನಿಯಾದ ಶಾರದೆಯನ್ನು ಸ್ತುತಿಸಿ ಈ ಗ್ರಂಥ ರಚಿಸುತ್ತೇನೆ”.

ದೆಶಮೂಲವತಾರಸುತಾತ್ಮಜನಾ ತನಯನ್ ಸುಕುಮಾರ
ದೆಶೆತಪ್ಪೊಸ್ಟ್ ಣಾಯನ ಸೋದರನಾ ರಿಪುತಾತಕುಲೇಶಾ
ಶಶಿವಕ್ತ್ರೆನಿ ವಂಚಿತಿ ದಾನವಕ್ ಸತಿನಿನ್ ಕೊೞ್ ಸ್ಟ್ ತ್ತೀ
ದೆಶಹಸ್ತ ತನೋಜಪದಾಂಬುಜೋಮೀನಭಿವಂದಿತೊಳ್ ಪ್ಪೇ || (೯-೫)

ಇದು ಮೇಲಿನಂತಹ ಒಗಟಿನ ಪದ್ಯವೇ. ಇದನ್ನು ಹೀಗೆ ಬಗೆಹರಿಸಬಹುದು, ‘ದಶಾವತಾರಿಯಾದ ವಿಷ್ಣುವಿನ – ಸುತನಾದ ಬ್ರಹ್ಮನ ಮಗನಾದ ಅತ್ರಿಯ- ಪುತ್ರನಾದ ಚಂದ್ರನನ್ನು ಶಪಿಸಿದಂತಹ ದಕ್ಷನ- ಸೋದರನಾದ ಶಿವನ (ಬ್ರಹ್ಮನ ಬಲಗೈಯಿಂದ ದಕ್ಷನೂ, ಉಂಗುಷ್ಠದಿಂದ ಶಿವನೂ ಜನಿಸಿದರೆಂದು ಪುರಾಣಗಳಲ್ಲಿ ಉಕ್ತವಾಗಿದೆ.) ವೈರಿಯಾದ ಯಮನ- ತಂದೆಯಾದ ಸೂರ್ಯನ ವಂಶದಲ್ಲಿ ಜನಿಸಿದ ಸೀತೆಯನ್ನು ವಂಚಿಸಿದ ರಾವಣನಿಗೆ- ಸತಿಯನ್ನು ನೀಡಿದ ಶಿವನ- ಸುತನಾದ ಗಣಪತಿಯ ಪದಕಮಲಗಳಿಗೆ ನಮಸ್ಕರಿಸುತ್ತೇನೆ”.

ಕಾಲೊ ಕಳೆವಂತೆ ಗುಣಸಾತ್ವಿಕಸುತತ್ವೊ
ನಾಲಕೆಟ್ ಚೂಪೊವಿಲೆ ಭಾರತಿ ಮನೋಜ್ಞೇ
ನಾಲ್ ದಿಶೆಟುಳ್ಳ ಜೆನೊ ಮಾನಿಪುಕ್ ಣಂದೊ
ನಾಲ್ ಪದ ಪ್ರಾಸೊ ತಿಗೆಯಾ ಕರುಣಿಪೊಡು    (೭-೨)
ಅಮಲಾಬ್ದನಿವಾಸ ಮನೋರಮಣೀಯ ಕಮನೀಯ ಶುಭಾಂಗೇ
ವಿಮಲಾಯತನೇತ್ರಕಿ ಚಂದ್ರಮುಖೀ ಕಲಶಾಕ್ಷಕರಾಢ್ಯೇ
ಸುಮನೋಹರಿ ಪುಸ್ತಕ ಪದ್ಮಕರೇ ಮಮ ಜುಂಹೆತಳೊಂಟ್
ಅಮೃತಾತ್ಮ ಸ್ವಭಾವೆ ಪ್ರಸಾದಿಪಿಲೇ ಶ್ರೀಶಾರದೆ ನಿತ್ಯೋ           (೯-೩)

ಇವೆರಡೂ ಸರಸ್ವತೀ ಪ್ರಾರ್ಥನೆಯ ಪದ್ಯಗಳು. ಸತ್ತ್ವಗುಣವನ್ನೂ ಕವಿತಾಶಕ್ತಿಯನ್ನೂ ಬೇಡುತ್ತಾ ಕಾವ್ಯವು ಜನಮಾನ್ಯವಾಗುವ ಆಶಯವನ್ನು ಕವಿಯು ಬಳಸಿರುವುದು ವಿಶೇಷವಾಗಿದೆ. ಅಂತಹ ಶ್ರೀಭಾರತಿಯ;ತನ್ನ ನಾಲಗೆಯ ಮೇಲೆ ನೆಲೆ ನಿಲ್ಲಬೇಕೆಂಬ ಭಾವನೆ ಮನೋಜ್ಞವಾಗಿದೆ.

ಕೆಂಜೆಡೆಟ್ ಚಂದ್ರಮನ ಗೆಂಗೆನ ಧರೀತ್
ಕಂಜುೞಿಯ ಶೂಲೊ ಮರಿಕಂಕಣೊ ಕರೊಂಟ್
ನಿಂಜ ಭಸಿತಂ ತುಡೆತ್ ಚಾರ್ತುಡೆತ್ ಚರ್ಮೊಧ-
ನಂಜಯಟ ಮುಷ್ಟಿ ಪಡೆಕೊಂಡಿ ಜಯಶಂಭು ||            (೭-೩)
ಅಗ್ನಿರೇತ ಕಪರ್ದಿ ಧೂರ್ಜಟಿ ಉಗ್ರಭರ್ಗ ಪಿನಾಕ ಧೃ-
ಕ್ಕಗ್ನಿಭೂರ್ಗುಹತಾತ ಭೂತಸಮೇತ ಪಾತಕನಾಶನಾ
ಅಗ್ನಿಜಾತಪತೀ ಸುಭಾಂಗ ಕರೋಟಿ ಮಸ್ತಕ ಭೂಷಣಾ
ಅಗ್ನಿ ಭಾಸ್ಕರ ಚಂದ್ರಲೋಚನ ವನ್ಹಿತೊಳ್ಪೆನೆನಾತ್ಮೆಟ್
ಕಾಳಕಂಠ ಮಹೇಶ ಈಶ ಗಿರೀಶ ಕಾಮವಿನಾಶನಾ
ಪಾಲಲೋಚನ ಕಾಲಕಂತಕ ನೀಲಲೋಹಿತ ಶ್ರೀಹರಾ
ಧೂಳಿತಾಂಗ ಉಮಾಂಗ ಢಂಗರಿಕಾಂಗ ಮಂಗಲ ಸಂಗಮಾ
ವ್ಯಾಳಭೂಷಣ ಕೆಂಜಟಾಧರ ನಿಂಜಭಕ್ತಿ ಪ್ರಸಾದಿಪೀ       (೮-೨)
ಪುಣ್ಯಾಶ್ರಮೊವಾಸಿ ನಮೋಸ್ತು ಹರಾ ಸುರದಾನವ ವಂದ್ಯಾ
ಪುಣ್ಯಾಹ ವಿಭೂಷಿತ ಶೂಲಧರಾ ಭವಭೀಮ ಉಮೇಶಾ
ತಣ್ಣೀರ್ ಜಟಾಧರ ಚಂದ್ರಕಲಾಶುದ್ಧಸ್ಫಟಿಕಾಂಗ
ಕಣ್ಣೊಂಜಧಿಕೊಂತೆರ್ ವಾಹಕೇನಭಿವಂದಿತೊಳ್ ಪ್ಪೇ    (೯-೧)
ನೀಲರೋಹಿತ ಬಾಲಚಂದ್ರ ಲಲಾಟ ಫಾಲವಿಲೋಚನಾ
ಶೂಲಪಾಣಿಕಪರ್ದಿ ಶಂಕರ ಕಾಲಕರ್ಮನಿಷೂದನಾ
ಲೀಲೆಟೀ ಜೆಗೊ ಸೃಷ್ಟಿತ್ ಹರಿಪುಪ್ಪಿ ಸ್ಥೂಲ ಮಹೇಶ್ವರಾ
ಪಾಲಿಪೋಡೆನ್ ಕೀರ್ ತೀರ್ಥ ಪ್ರಸಾದೊಮೆಂದಭಿವಂದಿಗಾ           (೯-೨೨)]

ಈ ಪದ್ಯಗಳಲ್ಲಿ ಶಿವನ ವರ್ಣನೆ ಸಮಗ್ರವಾಗಿ ಮೂಡಿಬಂದಿದೆ. ಶಿವಸ್ತುತಿಯ ವ್ಯಾಪಕತೆಯಿಂದ, ಕವಿಯು ಶೈವನಿರಬಹುದೆಂಬ ಊಹೆಯನ್ನು ಅಲ್ಪಗಳೆಯಲಾಗದು.

ಅಲಂಕಾರಗಳು

ಕವಿಯು ದೃಷ್ಟಾಂತರಗಳಣ್ನು ಕಟ್ಟುವುದರಲ್ಲಿ ನಿಸ್ಸೀಮನೆಂದು ಕಂಡುಬರುತ್ತದೆ. ರೂಪಕ ದೀಪಕಾದಿ ಅಲಂಕಾರಗಳನ್ನು ಕಾಣಲಾರೆವಾದರೂ ಉಪಮೆಯ ಚಿತ್ರಣಗಳನ್ನು ಅಲ್ಲಲ್ಲಿ ಆಸ್ವಾದಿಸಬಹುದು.

ಯೀರೆನಂದೊಮೆ ಸತ್ಯವಾದಿಕುಳಾಯಿ ಸಾಧುವಿನ್ ಸಂಗಿಪಿನ್
ಸೂರ್ಯರಶ್ನಿನ್ ಚೂಸ್ಟಿ ಕರ್ತತೆತಂದೊಮಾಪಳೆ ಚೆಟ್ಟುವೋ
ಘೋರಮಾಸ್ಟಿ ಸಹಸ್ರಜನ್ಮಕೃತೊಂತ ಪಾತಕರಾಶಿಲಾ
ತೀರುವಾಪಳೆ ಬೀರಿ ಪತ್ತ್ ಸ್ಟಿ ವೇಣುತಾ ಮಲೆತಂದೊಮೆ (೬-೧೧೨)

“ನಿಮ್ಮಂತಹ ಸತ್ಯವಾದಿಗಳ ಸಾಧುಗಳ ಸಂಗದಿಂದ ಸಾವಿರ ಜನ್ಮದ ಪಾಪರಾಶಿಗಳು ಸೂರ್ಯಕಿರಣ ತಾಗಿದ ಕತ್ತಲೆಯಂತೆ, ಬೆಂಕಿ ತಾಗಿದ ಬಿದರ ಮೆಳೆಯ ಪರ್ವತದಂತೆ ನಾಶವಾಗುತ್ತದೆ” ಎಂದು ಹೇಳುವಾಗ ನೀಡುವ ಹೋಲಿಕೆಗಳು ಸಮರ್ಪಕವಾಗಿವೆ. ಹಾಗೆಯೇ ‘ಬಂಗರಗ್ನಿಟ್ ಪಾಡ್ ಗೇಪುಕಿನಂದೊ’, ‘ಆತಪನಿ ಕಾರ್ಮುಗಲ್ ನಿಂಗ್ ಪ್ರಕಾರೊ’, ‘ಎಣ್ಣೆಮುಟ್ಟ್ ಸ್ಟಿ ಸೀಗೆತಂದೊಮೆ’, ‘ಬೀಯೊಂಕುಳೆ ತನ್ನೆ ಮಿರೇ ಕೊಳಕೀ ಪರಿಶೆ’, ‘ಶ್ವಾನಕೆಡ್ಡಸುಗಂಧ ಚೂಪೊಸ್ಟೀ ಪರಿಶೆ’- ಇತ್ಯಾದಿ ಉಪಮಾಚಿತ್ರಗಳು ಹೃದಯಂಗಮವಾಗಿವೆ.

ಛಂದಸ್ಸು        

ಕಾವೇರಿ ಕಾವ್ಯದಲ್ಲಿ ತರಳ, ಮಲ್ಲಿಕಾಮಾಲೆ, ವನಮೂಯರ, ತೋಟಕದೀರ್ಘಗಳೆಂಬ ವೃತ್ತಗಳನ್ನು ಕವಿಯು ಬಳಸಿಕೊಂಡಿದ್ದಾನೆ. ಅವುಗಳಲ್ಲಿ ಮಲ್ಲಿಕಾಮಾಲೆ ಹಾಗೂ ತೋಟಕದೀರ್ಘ ಛಂದಸ್ಸುಗಳು ಅವನಿಗೆ ಹೆಚ್ಚು ಪ್ರಿಯವಾದುದೆಂದು ಹೇಳಬಹುದು.

ವನಮಯೂರ

ಕವಿಯು ಬಳಸಿದ ವನಮಯೂರ ವೃತ್ತದ ಪದ್ಯಗಳನ್ನು ನೋಡಿದಾಗ, ಅವನಿಗೆ ಛಂದೋನಿಯಮಕ್ಕಿಂತಲೂ ವೃತ್ತದ ಲಯದ ಕಡೆಗೆ ಹೆಚ್ಚು ಒಲವಿದ್ದಿರಬೇಕೆಂದು ತೋರುತ್ತದೆ. ಈ ಮಾತಿನ ಯಥಾರ್ಥತೆಗಾಗಿ ಕೆಲವು ಪದ್ಯಪಾದಗಳನ್ನು ಗಮನಿಸಬಹುದು.

ಸರ್ವದುರಿ, ತೊಂಕ್ ಳೆನಿ, ಸಂಹರಿತ ನಿತ್ಯೊ -(೭-೧)
ದೇವಕ್ಕೆ, ಲಾಸಗಿರಿ, ವಾಸ ಪರ, ಮೇಶ -(೭-೬)
ಪಂಡೆರ್ ನ. ನೇಕೊಪೌ, ರಾಣಶ್ರುತಿ, ಧರ್ಮೊ -(೭-೯)
ಮಹವನಿತೆ, ಕುಂಡಿಕೆನಿ. ವರ್ಣಿಪುಕ್, ಣೇರ್ -(೭-೧೨)
ಕಾವೇರಿ, ಕಲ್ಪಗುಣ, ಸಾರೊಮಿನಿ, ಪಿಂದ್ -(೭-೧೩)

ಇಲ್ಲಿಯ ಮೊದಲನೇ ಉದಾಹರಣೆ ಶುದ್ಧ ವನಮಯೂರವೃತ್ತವಾದರೆ, ಅನಂತರದ ಪಾದವಿನ್ಯಾಸಗಳೆಲ್ಲ ವನಮಯೂರ ಲಕ್ಷಣಕ್ಕೆ ಬಹಿರ್ಭೂತವಾದವುಗಳು. ಅವುಗಳಲ್ಲಿ ಕೇವಲ ಪಂಚಮಾತ್ರಾಲು ಸ್ಫರಣೆಯನ್ನು ಕಾಣಬಹುದು. ದೇವಕ್ಕೆ, ನೇಕೊಪೌ, ಮಹವನಿತೆ, ಕಾವೇರಿ-ಈ ಗಣಗಳಲ್ಲಿ ಗುರುಲಘು ವಿನ್ಯಾಸಮತೆ ಕಾಣದೆ, ಒಟ್ಟಾರೆಯಾಗಿ ಪಂಚಮಾತ್ರಾಗತಿ ಮಾತ್ರ ವೇದ್ಯವಾಗುತ್ತದೆ.

ಚೋದ್ಯೊಮತಿ. ಚೋದ್ಯೊಮುಂದು. ಸಾದ್ವಿಜನ. ಭೇದ್ಯಂ -(೭-೧೧)
ಮಹಪುರುಷ ಕೇಳ್ ಕಲಿ. ಕಾಲೊಯುಗೊಂ. ಟ್ ಪ್ಪಾ – (೭-೧೨)

ಈ ಪದ್ಯಗಳಲ್ಲಿ ‘ಚೋದ್ಯೊಮುಂದು’, ‘ಕಾಲಯುಗೊಂ’ ಗಣಗಳನ್ನು ಗಮನಿಸಿದರೆ ರುದ್ರಗಣವೆಂಬುದು ಹೊಳೆಯುತ್ತದೆ. ಶಿಥಿಲೋಚ್ಚಾರಣೆಯಿಂದ ಆ ಗಣಗಳನ್ನು ತೇಲಿಸಿ ಹಾಡಬಹುದಾದರೂ, ಅದು ಶಾಸ್ತ್ರಸಮ್ಮತವಲ್ಲ. ಹಾಗಾದರೆ, ಇವು ರುದ್ರಗಣ ಸಂಯೋಜನೆಯ ಅಂಶಲಯವುಳ್ಳ ರಚನೆಯಾಗಿರಬಹುದೆ ಎಂಬ ಊಹೆಗೆ ಪುಷ್ಟಿ ದೊರೆಯುತ್ತದೆ. ನಾಗವರ್ಮ ಪ್ತೊಕ್ತ ಮದನವತಿಯ ರುದ್ರಲಯ ವಿವಕ್ಷೆಯನ್ನು ಒಪ್ಪಿಕೊಂಡರೆ, ಈ ರಚನೆಗಳನ್ನು ‘ಮದಮತಿ’ ಎನ್ನಬೇಕಾಗುತ್ತದೆ.

ತೋಟಕದೀರ್ಘ

ಶಿವಮೌ. ಲಕೃತಾ. ಲಯೆಬ್ರ. ಹ್ಮಕರಾ. ಕಲಶೋ. ದ್ಭವೆ ಶು. ಭ್ರೆ
ಭವನಾ. ಶಿನಿ. ವಿ. ಷ್ಣುನಖೋ. ದ್ಗಳಿತೇ. ಹಿಮವಾನ್. ಗ್ರನಿವಾ. ಸೇ (೮-೨೯)

ಇದು ತೋಟಕವೃತ್ತದ ನಾಲ್ಕು ಸಗಣಗಳಿಗೆ ಎರಡು ಸಗಣ ಮತ್ತು ಒಂದು ಗುರುವನ್ನು ಸೇರಿಸಿದ ವಿನೂತನ ವಿನ್ಯಾಸ. ಈ ರೀತಿ ಛಂದೋಬಂಧವು ಶ್ರೀಭಾಗವತೊದಲ್ಲಿಯೂ ಪ್ರಯುಕ್ತವಾಗಿರುವುದನ್ನು ಗಮನಿಸಿದರೆ, ಇದು ತುಳು ಕಾವ್ಯಗಳಲ್ಲಿ ಸಾಮಾನ್ಯವಾಗಿರುವ ಛಂದೋಬಂಧವೆಂದು ಹೇಳಬಹುದು. ಕೆಲವು ಕಡೆ ಸಗಣಗಳ ಬದಲಿಗೆ ಚತುರ್ಮಾತ್ರಾಗತಿಯ ಇತರ ರೂಪಗಳನ್ನು ಬಳಸಿರುವುದನ್ನು ನೋಡಿದರೆ, ಕವಿಗೆ ಧಾಟಿಯೇ ಹೆಚ್ಚು ಮುಖ್ಯವಾಗಿತ್ತೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉದಾ:

ಕಲಿಕ. ಲ್ಮಷನಾ. ವಿನಿಚೂ. ಸ್ಪಧಿಕೋ. ಹರ್ಷಾ. ನ್ವಿತೆಯಾ. ಸ್ಟ್ (೮-೩೦)
ಯೇನೇ. ಯತಿಶ್ರೇ. ಷ್ಠೆತಿಯೆಂ. -ದ್ ಣವೂ. ಪರಮಾ. ರ್ಥೊಮೆಭ. ದ್ರೇ. (೮-೪೦)

ಇಲ್ಲಿ ಬರುವ ‘ಆರು ಚತುರ್ಮಾತ್ರಾಗಣ ಮತ್ತು ಒಂದು ಗುರು’ವಿನ ವಿನ್ಯಾಸವನ್ನು ‘ನಾಲ್ಕು ಷಣ್ಮಾತ್ರಾಗಣ ಮತ್ತು ಒಂದು ಗುರು’ವನ್ನಾಗಿಯೂ ಸ್ವೀಕರಿಸಬಹುದು-

ಮಂದಾಕಿನಿ, ನೀಕ್ಷಿತೆರಿಂ, ದುಮುಖೀ ಛಂ. ದೊಂಟೆವರ್. ಪ್ಪೀ (೮-೨೮)

ಇಲ್ಲಿಯ ‘ಛಂದ’ ಪದಪ್ರಯೋಗಳನ್ನು ಗಮನಿಸಿದರೆ, ಕವಿಯ ಶ್ಲೇಷೆಯಿಂದ ‘ವೈವಿಧ್ಯಪೂರ್ಣ ಛಂದೋಗತಿ’ಯನ್ನು ಕುರಿತಾಗಿ ಹೇಳಬಹುದೆಂದು ಊಹಿಸಬಹುದು.

ಅತೀತಾಕ್ಷರ

ತಾಳಕ್ಕಿಂತ ಮೊದಲು ಬರುವ ಗೇಯಾಕ್ಷರಕ್ಕೆ ಸಂಗೀತ ಅರ್ಥಕೋಶದಲ್ಲಿ ‘ಅತೀತಗ್ರಹ’ ಎಂದು ಕರೆಯಲಾಗಿದೆ. ಅತೀತಾಕ್ಷರವಾಗಿ ಒಂದು ಅಕ್ಷರವನ್ನು ಸಂಯೋಜಿಸಿದ ಕಾವೇರಿ ಕಾವ್ಯದ ಕರ್ತೃವು. ಈ ವಿಧಾನದಲ್ಲಿಯೂ ವಿಷ್ಣುತುಂಗನನ್ನೇ ಅನುಸರಿಸಿದನೆಂದು ಹೇಳಬೇಕಾಗುತ್ತದೆ. ಉದಾ:

ಧ – ನಂಜಯಟ ಮುಷ್ಟಿ ಪಡೆಕೊಂಡಿ ಜಯಶುಂಭು -(೭-೩)
ವಿ – ರಿಂಚಗಿರಿಟ್ ತ್ತಿ ಪತಿ ಸಂಗ್ರಹಿತಿ ವೆರ್ತ್ -(೭-೨೭)

ಇದರಿಂದ ಛಂದಸ್ಸಿನ ಶುಷ್ಕ ಗಣಿತವನ್ನೂ ಮೀರಿದ ಲಯಪ್ರಜ್ಞೆ ಕವಿಗೆ ಪ್ರಾಮುಖ್ಯವಾಗಿತ್ತೆಂಬುದನ್ನು ಅರ್ಥಮಾಡಿಕೊಳ್ಳಬಹುದು.

ಅನುಪ್ರಾಸ

ಗೆಂಗೆ ಶುಭ. ರಂಗೆಭವ. ಸಂಗೆಗುಣ. ತುಂಗೆ
ಮಂಗಲಮ. ಹಾಂಗೆಸ. ರ್ವಾಗಕುಲ. ನಂಗೆ
ತುಂಗಗಿರಿ. ಶೃಂಗೆಭವ, ಭಂಗೆ ಜನ. ರಂಗೆ
ಅಂಗಜಪಿ. ತಾಂಗುಲಿ ಸು. ಸಂಗಮೆ ನ. ಮಸ್ತೇ   – (೭-೩೬)
ರಂಗನಾಥ ನಮೋಸ್ತುತೇ ದುರಿತಾಂಗಭಂಗ ನಮೋಸ್ತುತೆ
ಜಂಗಮಸ್ಥಿರ ದೇವದಾನವ ಮಂಗಲಾತ್ಮ ನಮೋಸ್ತುತೇ
ಅಂಗಜಾಂತಕ ಸುಂಗನಂಗಪಿತಾಂಗ ಗಂಗ ಮನೋಹರಾ

[1] ಭಂಗಶ್ರೀ ವನಮಾಲಿ ಶೋಭಭಾಂಗ ಸ್ವಾಮಿ ಮನೋಸ್ತುತೇ || (೮-೭೯)

ಇಲ್ಲಿ ಪ್ರಾಸಾನುಪ್ರಾಸದ ಚೆಲುವನ್ನು ನೋಡಿದರೆ, ಕವಿಗೆ ಶಬ್ದಾಲಂಕಾರದಲ್ಲಿಯೂ ಪ್ರೀತಿಯತ್ತೆಂದು ಹೇಳಬಹುದು. ಮುಖ್ಯೊಮತಿ ನರ್ಮದೆ (೭-೨೩), ಬ್ರಹ್ಮಸುತೆಯಾಯಿ ನದಿಯಾರ್ (೭-೨೫), ದುರ್ಲಭೊನ ಭೂಮಿ (೭-೪೭), ಸರ್ವಪಾಪಮಯೊಂಕುಳೇ (೮-೧೬), ನಾಸ್ತೀ ಇನತುಲ್ಯೊ (೮-೩೬), ಶ್ರೀತಂಗನಿ ಚೂಸ್ಟ್ (೮-೮೦), ಪಂಚಸಾಯಕವೈರಿ ಕಣ್ಕರಿತೀ (೯-೬), ಅತೀರ್ಥಡತಿಕ್ಕ್ ಟ್ (೯-೩೬), ಧನ್ಯೆಯಾಸ್ಟೆನತೇನೆನೀ ಪಿತೃ (೯-೫೬), ಪನನೆತ್ತ್ ಲ ಲೋಹೊ (೯-೧೦೧)- ಮುಂತಾದ ಪದ್ಯಗಳಲ್ಲಿ ‘ಲಾಟಾನುಪ್ರಾಸದ’ ಚೆಲುವನ್ನು ಗಮನಿಸಬಹುದು.

ಕಾವ್ಯದ ಸೊಬಗು

ಚೋರೆ ರಾತ್ರಿಟ್ ಚಂದ್ರದೂರುವೆ ಕ್ಷೀರೊ ಪೈತ್ತಿಕೆ ನಿಂದಿಪೆ
ವಾರಣಾಶಿನಿ ಜಾಡ್ಯೆ ಭಾಷಿಪೆ, ಅಂಧೆ ದರ್ಪಣೊ ನಿಂದಿಪೆ
ಸಾರೊಂತಾ ಕಥೆ ಮೂರ್ಖೆ ನಿಂದಿಪೆ ದೋಷೊ ಮಾನವರೇರಲಾ
ಸೇರನೆತ್ತ್ ವಚೀಪುಕೀ ಕಥೆ ಸಜ್ಜನೇರ್ಕುಳು ಜಾನಿಪೀ || (೧೧-೪)
ಈ ಪದ್ಯವು ಕುಮಾರವ್ಯಾಸನ ಗದುಗಿನ ಭಾರತದ-
ಚೋರನಿಂದಿಸಿ ಶಶಿಯ ಬೈದಡೆ
ಕ್ಷೀರವನ್ನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು (ಆದಿಪರ್ವ, ಸಂಧಿ ೧-೩೩)

ಎಂಬ ಭಾಮಿನೀ ಷಟ್ಪದಿಯ ಪ್ರೇರಣೆಯಿಂದ ಕೂಡಿದೆ ಎಂಬುದು ಸ್ಪಷ್ಟ.

ಕಾವ್ಯದಲ್ಲಿ ಒಂದೆಡೆ ಬರುವ
ದೈವಾಧಿನೊಮಾಯಿ ಜಗತ್ತಂದು ತಾನ್ ತ್ರೈಲೋಕ್ಯಮಡೆಂಗಾ
ದೈವಾಧಿನೊಮಾಕ್ ಣ ವೇದಶ್ರುತೀ ಮಂತ್ರೊಂಕುಳೆಟ್ಪ್ಪು
ದೈವೊತ್ತಮ ಮಂತ್ರಸುಸಾಧಕೊಮೌ ವಿಪ್ರಾಂಗತಳೊಂಟ್
ದೈವೊಂತ ಸಮಸ್ತ ನಿವಾಸ ಜಯಾ ವಿಪ್ರಾಯ ನಮಸ್ತೇ   (೯-೮೬)

ಇದು ಸಂಸ್ಕೃತ ಸುಭಾಷಿತವೊಂದರ ಅನುವಾದ. (ದೈವಾಧೀನಂ ಜಗತ್ ಸರ್ವಂ) ಮಂತ್ರಾಧೀನಂ ತು ದೈವತಂ | ತನ್ಮಂತ್ರಂ ಬ್ರಾಹ್ಮಣಧೀನಂ | ಬ್ರಾಹ್ಮಣೋ ಮಮ ದೇವತಾ ||) ಇದರಿಂದಾಗಿ ಕವಿಗೆ ಸಂಸ್ಕೃತ, ಕನ್ನಡ ಭಾಷೆ-ಸಾಹಿತ್ಯಗಳಲ್ಲಿ ಸಾಕಷ್ಟು ಪ್ರವೇಶವಿತ್ತೆಂದು ಅವುಗಳ ಪ್ರಭಾವ ಕಾವೇರಿ ಕಾವ್ಯದ ಮೇಲಾಗಿದೆಯಾದರೂ ಭಾವಿಸಬಹುದು.

ಮಲ್ಲ ದಬ್ಬಣೊ ಮೂಕ್ ಕೊಡ್ ಸ್ಟ್‌ೕ ಅಗ್ನಿಟ್‌ೕ ಚುಡಿಯಾಕುಳು
ಘಲ್ಲಿತ್ೕ ಫಲುವಾರೊ ಮರ್ದಿತ್ ಮರ್ದಿತ್ೕ ಭಟಮಾರ್ಕುಳ
ಮಲ್ಲನಾಯಿತ ಮಧ್ಯೊಂಟೇ ಒಯಿತೌರ್ತ್ ಪ್ರೇತವರಾಜನಾ
ಇಲ್ಲಕೊಂಡೊಸ್ಟ್ ನುಂಬುಟಾಕೊಸ್ಟ್ ಸ್ಟ್‌೦ದ ಕೊಂಡೆತೊಮೆಂದೆರ್ || (೧೦-೪೦)

ಕಾವ್ಯದಲ್ಲಿ ದೊರೆಯುವ ‘ನರಕ ವರ್ಣನೆ’ಯ ಈ ಪದ್ಯವನ್ನು ಹೀಗೆ ಅನುವಾದಿಸಬಹುದು -‘ಯಮದೂತರು ಪಾಪಿಗಳ ಮೂಗಿಗೆ ದಬ್ಬಣವನ್ನು ಚುಚ್ಚುತ್ತಾರೆ; ಬೆಂಕಿಯಲ್ಲಿ ಸುಡುತ್ತಾರೆ; ಗುದ್ದಿ ಗುದ್ದಿ ಹಿಂಸಿಸುತ್ತಾರೆ. ದೊಡ್ಡ ದೊಡ್ಡ ನಾಯಿಗಳ ನಡುವೆ ಎಳೆದೊಯ್ದು, ಕೊನೆಗೆ ಯಮರಾಜನಲ್ಲಿಗೆ ಕೊಂಡೊಯ್ದು ‘ಇಗೋ ತಂದಿದ್ದೆನೆ ಎನ್ನುತ್ತಾರಂತೆ!

ಕ್ಷಿರೋಸರ್ಕರೆ ನೆಯ್ಯಿವುಂಬೆನಿ ನಿಂಜಕೋರ್ ಸ್ಟ್ ಮಾತುವೀ
ಸಾರೊಮಾಕ್ ಣ ಮಾಂತ ಚೋರ್ ಸ್ಟ್ ದೋಷೊ ಸಂಗ್ರಹಿಸಿಕೊಳ್ಳವಾ
ಧಾರಿಣಿಟರಿಪೇತ ತುಲ್ಕಕೆರಾಸ್ಟ್ ನಾಕುಳು ದೂಷಿಪೀ
ಸಾರೊ ಪಿನ್ಕಿ ಮಹತ್ತುಕುಳುಂಬೇ ಸಾರೊ ಪಿಂಬೆರ್ ಸತ್ಕೊನಾ (೧೧-೫)

‘ಹಾಲು ಸಕ್ಕರೆ ತುಪ್ಪಗಳನ್ನು ಸೋಸುಪಾತ್ರೆಗೆ ಹಾಕಿ ಸೋಸಿದಾಗ, ಅದರ ಸಾರವೆಲ್ಲ ಕೆಳಗೆ ಹರಿದು, ಕಸವೆಲ್ಲ ಮೇಲೆ ನಿಂತ ಹಾಗೆ, ಭೂಮಿಯಲ್ಲಿ ದುರ್ಜನರು ಸದ್ವಿಚಾರಗಳನ್ನು ಬಿಟ್ಟು, ದುರ್ವಿಚಾರಗಳನ್ನೇ ಹುಡುಕುತ್ತಿದ್ದಾರೆ’ ಎಂದು ತನ್ನ ಕಾವ್ಯವನ್ನು ಟೀಕಿಸುವವರ ಕುರಿತಾಗಿ ಕವಿ ಹೇಳುವ ಮಾತುಗಳು ತುಂಬಾ ಮಾರ್ಮಿಕವಾಗಿವೆ.

‘ಮಂದೇಕೆನ ಲೋಕೊಮನುಗ್ರಹೀಪೇ ನಾರಾಯಣನಾಜೆ’ (೧೦-೫೩) ಎಂಬ ಪರಮೇಶ್ವರ ವಾಕ್ಯದ ಮೂಲಕ, ಕಾವ್ಯವಾಚನದ ಫಲಶ್ರುತಿಯಿಂದ ದಿವ್ಯಲೋಕ ಪ್ರಾಪ್ತಿಸುತ್ತದೆ ಎಂಬುದನ್ನು ಕವಿ ಸಾರುತ್ತಾನೆ. ಜೊತೆಗೆ ‘ಪುಣ್ಯೊಮುಳ್ಳ ಗುಣೊಂತ ಕಾವ್ಯೊಮಿ ಕೇಳವಾ ಮತಿಹೀನೆರೆ’ ಎಂಬ ಬುದ್ಧಿವಾದದ ಮಾತುಗಳನ್ನೂ ಅವನು ಹೇಳುತ್ತಾನೆ. ‘ಶುಭೋ ವರ್ಧಿಗನೀ ಕಥೆ’ ಎನ್ನುತ್ತಾ ಹೇಳಿದವರಿಗೆ, ಕೇಳಿದವರಿಗೆ ಕವಿಗೆ ಹಾಗು ಸಮಸ್ತ ಲೋಕಕ್ಕೆ ಕಲ್ಯಾಣವಾಗಲೆಂದು ಹಾರೈಸುತ್ತಾ-

ಸತ್ಯೊಂಕುಳು ತೀರ್ಥೊನೆ ಜ್ಞಾನಮಹಾದಯೆ ಶಾಂತಿಲ ತೀರ್ಥೊ
ನಿತ್ಯೋ ದಮೆ ಪಂಡಿತ ಸಂಗತಿಲಾ ಸರ್ವದ್ವಯಭಾವೊ (೧೦-೩೪)

ಎಂದು ‘ಜೀವನದಲ್ಲಿ ಸತ್ಯ, ಜ್ಞಾನ, ದಯೆ, ಶಾಂತಿ, ದಮೆ, ಪಂಡಿತ ಸಹವಾಸ, ಅದ್ವೈತಭಾವ ಮುಂತಾದವುಗಳಲ್ಲ ತೀರ್ಥಸಮಾನ’ವೆಂದು ಹೇಳುವಲ್ಲಿ ಕವಿ ತೋರಿದ ಲೋಕೋತ್ತರ ಗುಣಗಳು ನೂರ್ಕಾಲ ನಿಲ್ಲುವಂತಹುದು.

ಕಂರ್ಬುಸೇವಿತಿನಂದೊಮೀ ಕಥೆ ಮಿತ್ತ್ ಮಿತ್ತತಿ ರಮ್ಯೊನಾ
ಕಂರ್ಬು ಖಂಡಿತ್ ಜುಂಹೆಕ್ ತ್ತ ಕ್ ಣಂದೊಮೀರವೆ ಛೇದಿತ್ (೯-೯)

‘ಕಬ್ಬಿನ ಜಲ್ಲೆಯನ್ನು ಜಗಿಯುತ್ತಾ ಹೋದ ಹಾಗೆ ಸವಿಯು ಹೆಚ್ಚಾಗುತ್ತಾ ವರುವಂತೆ, ಅತಿರಮ್ಯವಾದ ಕಥೆ ಇನ್ನು ಮುಂದಿದೆ’ಎಂದು ಒಂದೆಡೆ ಕವಿಯು ಉದ್ಗರಿಸುತ್ತಾನೆ. ಆದರೆ ಕಾವೇರಿ ಕಾವ್ಯದ ಪೂರ್ಣಭಾಗ ದೊರೆಯದೆ ಹೋದ ಕಾರಣದಿಂದ, ಇನ್ನಷ್ಟು ಉತ್ತಮ ಕಾವ್ಯಾನಂದದ ಅವಕಾಶದಿಂದ ನಾವು ವಂಚಿತರಾದವೆಂದೇ ಹೇಳಬೇಕಾಗುತ್ತದೆ.

 

[1] ಅಂಗಜಾಂತಕಸಂಗ =ಶಿವಪ್ರಿಯ, ಅನಂಗಪಿತ= ಮನ್ಮಥಜನಕ, ಅಂಗಗಂಗಮನೋಹರ= ಉಂಗುಷ್ಠದಲ್ಲಿಗಂಗೆಯನ್ನುಪಡೆದಚೆಲುವ, ಅಭಂಗಶ್ರೀವನಮಾಲಿ = ಬಾಡದಿರುವತುಲಸೀಹಾರಭೂಷಿತ.