ತುಳು ಸಾಹಿತ್ಯಕ್ಕೆ ವಿದೇಶೀ ಮಿಶನರಿಗಳು ನೀಡಿದ ಕೊಡುಗೆಯ ಪರಿಚಯ ಮಾಡಿಕೊಳ್ಳುವ ಉದ್ದೇಶವಾದರೂ ಏನು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಸಾಹಿತ್ಯಾಭ್ಯಾಸಿಗಳು ಪೂರ್ವಜರು ಮಾಡಿದ ಸಾಧನೆಯನ್ನು ತಿಳಿದುಕೊಂಡು ಅದರಿಂದ ಸುಪ್ರೇರಣೆ ಪಡೆಯಬೇಕು. ಆಗಿನ ವಿದೇಶೀಯ ಮತ್ತು ದೇಶೀಯ ಮಹಾಪುರುಷರುಗಳು ಸಾಹಿತ್ಯ ಕ್ಷೇತ್ರದ ನಿರ್ಮಾಣಕ್ಕಾಗಿ ತೋರಿದ ಸಾಹಸ, ತಾಳ್ಮೆ, ಪ್ರೀತಿಗಳನ್ನು ಸ್ಮರಿಸಬೇಕು. ಚರಿತ್ರೆ ಉಳಿದರೆ ಇದು ಮುಂದಿನ ಪೀಳಿಗೆಯವರಿಗೆ ಮಾರ್ಗದರ್ಶಿಯಾಗಿರುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಭಾರತಕ್ಕೆ ಬಂದ ವಿದೇಶಿಯರು ಮತ್ತು ಅವರ ಕಾಲದಲ್ಲಿ ತುಳುನಾಡಿನ ಭಾಷೆಗೆ, ಸಂಸ್ಕೃತಿಗೆ, ಇತಿಹಾಸಕ್ಕೆ ನೀಡಿದ ಕೊಡುಗೆಗಳನ್ನು ಮತ್ತು ಅವರೊಂದಿಗಿದ್ದ ದೇಶಿಯ ಸಾಹಿತಿಗಳ ಸಾಹಿತ್ಯ ಪ್ರಕಾರಗಳನ್ನು ಕಲೆಹಾಕಿ ಪರಿಚಯ ಮಾಡಿಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ.

ಭಾರತದಲ್ಲಿ ವಿದೇಶಿಯರು

ಪಾಶ್ಚಾತ್ಯ ದೇಶಗಳಿಂದ ಕ್ರೈಸ್ತ ಬೋಧಕರುಗಳೂ, ವ್ಯಾಪಾರಿಗಳೂ ಇತರ ಪ್ರವಾಸಿಗರು ಸುಮಾರು ಎರಡು ಸಾವಿರ ವರ್ಷಗಳಿಂದಲೂ ಈ ದೇಶಕ್ಕೆ ಬರುತ್ತಾ ಇದ್ದರು. ಕ್ರಿ.ಶ. ೧೬ನೇ ಶತಮಾನದಿಂದ ಇವರ ಸಂಖ್ಯೆ ಹೆಚ್ಚುತ್ತಾ ಬಂತು. ತಮ್ಮ ತಮ್ಮದೇಶಗಳಲ್ಲಿದ್ದ ವ್ಯಾಪಾರ ಸಂಸ್ಥೆಗಳ ಮೂಲಕವಾಗಿ ಪೋರ್ಚುಗೀಸರೂ, ಡಚ್ಚರೂ ಪ್ರಾರಂಭದಲ್ಲಿ ಈ ದೇಶಕ್ಕೆ ಬಂದು ಕರಾವಳಿ ಪ್ರದೇಶಗಳಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದರು. ಇವರುಗಳಿಗೆ ಆಗ ವ್ಯಾಪಾರ ಮಾಡುವ ಉದ್ದೇಶವಿತ್ತೇ ಹೊರತು ಇಲ್ಲಿ ತಮ್ಮ ಸ್ವಂತಕ್ಕಾಗಿ ಅಥವಾ ಅಧಿಕಾರ ನಡೆಸುವ ಯಾವ ಅಭಿಲಾಷೆಯೂ ಇರಲಿಲ್ಲ.

ವಿದೇಶಿಯರ ಬರುವಿಕೆಯಿಂದ ಈ ದೇಶದಲ್ಲಿ ಸುಮಾರು ಒಂದು ಸಾವಿರ ವರ್ಷಗಳಿಂದ ಹಿಂದಿದ್ದ ನಾಗರಿಕತೆ ಪುನರ್ಜನ್ಮವೆತ್ತಿದಂತೆ ತೋರಿತು. ವ್ಯಾಪಾರಿಗಳಾಗಿ, ಪ್ರವಾಸಿಗರಾಗಿ, ಕ್ರೈಸ್ತ ಮತ ಪ್ರಚಾರಕರಾಗಿ ಬಂದ ಪಾಶ್ಚಾತ್ಯರು ನಮ್ಮ ದೇಶದ ಹಲವಾರು ಭಾಷೆಗಳನ್ನು ಕಲಿತರಲ್ಲದೆ ಅವರ ಪೈಕಿ ವಿದ್ವಾಂಸರಾದ ಹಲವರು ಈ ದೇಶದ ಪ್ರಾಚೀನ ಭಾಷೆಗಳಲೆಲ್ಲ ವಿಶೇಷ ಪರಿಣತಿ ಪಡೆದು ಭಾಷಾ ಸೇವೆ, ಮತಪ್ರಚಾರ, ಭಾರತೀಯ ಸಂಸ್ಕೃತಿಯ ಪ್ರಚಾರ ಇತ್ಯಾದಿಗಳನ್ನು ನಡೆಸಿದರು ನಮ್ಮ ಸನಾತನ ಧರ್ಮಶಾಸ್ತ್ರ, ಕಾವ್ಯ, ವ್ಯಾಕರಣ, ನ್ಯಾಯ, ಮೀಮಾಂಸೆ ಮೊದಲಾದವುಗಳನ್ನು ತಿಳಿಯಬೇಕೆನ್ನುವ ಅವರ ಹಂಬಲವು ಅವರಿಗಿಂತ ನಮಗೆ ಪ್ರಯೋಜನವಾಯಿತು. ಈ ನಮಗೆ ಪ್ರಯೋಜನವಾಯಿತು. ಈ ಪಾಶ್ಚಾತ್ಯ ಕರ್ಮಯೋಗಿಗಳು ಕಳೆದ ೧೫೦ ವರ್ಷಗಳಲ್ಲಿ ಮುಟ್ಟದೆ ಇದ್ದ, ಅವರ ಅವಗಾಹನೆಗೆ ಬಾರದೆ ಇದ್ದ, ಅವರ ಸೂಕ್ಷ್ಮದೃಷ್ಟಿಗೆ ಸಿಗದೇ ಇದ್ದ ವಿಷಯಗಳು ಯಾವುವೂ ಇರಲಿಲ್ಲವೆಂದು ಹೇಳಿದರೆ ತಪ್ಪಾಗಲಾರದು.

ಪಾಶ್ಚಾತ್ಯ ವಿದ್ವಾಂಸರು ಈ ದೇಶದಲ್ಲಿ ತಮ್ಮ ಮತೀಯ ವ್ಯವಹಾರಗಳನ್ನು ಎಷ್ಟು ಶ್ರದ್ಧೆಯಿಂದ ನಡೆಸಿದರೋ ಅದೆಷ್ಟೋ ಸಾಹಸದಿಂದ ತಮ್ಮ ಸಾಮ್ರಜ್ಯದ ಸ್ಥಾಪನೆಗೆ ಹೋರಾಡಿದರೋ ಅಷ್ಟೇ ನಿಷ್ಠಯಿಂದ ಈ ದೇಶದ ಚಾರಿತ್ರಿಕ ಪರಿಶೋಧನೆ ಭೌಗೋಳಿಕ ಅನ್ವೇಷಣೆ, ಪ್ರಾಚೀನ ಸಾಹಿತ್ಯ ಸಂಸ್ಕೃತಿಗಳ ಪ್ರಚಾರ ಮತ್ತು ಹಲವು ದುಷ್ಟ ಪದ್ಧತಿಗಳು ನಿವಾರಣೆಗೆ ಶ್ರಮಿಶಿದರು. ಈ ಎಲ್ಲ ಕ್ಷೇತ್ರಗಳಲ್ಲಿಯೂ ಬಹು ದಕ್ಷತೆಯಿಂದ ದುಡಿಯಲು ಯುರೋಪಿನ ವಿವಿಧ ಭಾಗಗಳಿಂದ ತಜ್ಞರಾದ ಸಾಧಕರೂ, ಆಡಳಿತಗಾರರೂ ಒಬ್ಬರ ನಂತರ ಒಬ್ಬರಾಗಿ ಬಂದು ಈ ದೇಶದ ಪ್ರಗತಿಯಲ್ಲಿ ಸುಧಾರಣೆಗಳನ್ನೂ ನವೀನತೆಯನ್ನೂ ತಂದುದು ಮಾತ್ರವಲ್ಲದೆ ಇತರ ಹಲವು ಕ್ಷೇತ್ರಗಳಲ್ಲೂ ಅವರು ಮಾಡಿದ ಸಾಧನೆಗಳನ್ನು ಅದರ ಫಲಿತಾಂಶಗಳಿಂದಲೇ ನಾವು ತಿಳಿಯಬಹುದಾಗಿದೆ.

ಪಾಶ್ಚಾತ್ಯ ಸಂಪರ್ಕಗಳಲ್ಲಿ ಹೊಸ ಶಿಕ್ಷಣ ಕ್ರಮವೇ ಎದ್ದು ಕಾಣುವಂತದ್ದು. ತಮ್ಮ ಅನುಕೂಲಕ್ಕೆ ಸರಕಾರವೂ, ಮಿಶನರಿಗಳೂ ಇಂಗ್ಲಿಷ್‌ಶಾಲೆಗಳನ್ನು ತೆರೆದೊಡನೆ ಭಾರತೀಯ ಆ ವಿದ್ಯಾಪ್ರವಾಹದಲ್ಲಿ ಈಸು ಬಿದ್ದರು. ಅವರ ಅಧ್ಯಯನಕ್ಕಾಗಿ ಕಾದಿದ್ದ ಆಧುನಿಕ ವಿಜ್ಞಾನ, ಪ್ರಪಂಚ ಪರಿಚಯ, ಇಂಗ್ಲಿಷ್‌ವಾಙ್ಮಯ ಎಲ್ಲವೂ ಅವರಿಗೆ ಹೊಸತೊಂದು ಜಗತ್ತನ್ನು ತೆರೆದು ತೋರಿಸಿತು. ಈ ಸಂಪರ್ಕಗಳ ಅಪ್ರತ್ಯಕ್ಷ ಪರಿಣಾಮವೆಂಬಂತೆ, ಜೀವನದ ನೈತಿಕ ಮೌಲ್ಯಗಳು ಮಾರ್ಪಟ್ಟವು. ಜನತೆಯಲ್ಲಿ ಸ್ವಾಭಿಮಾನ ಹಾಗೂ ಸ್ವತಂತ್ರ ವಿಚಾರಸರಣಿಗಳನ್ನು – ಇವು ಒಡಮೂಡಿಸಿದವು. ಮಿಶನರಿಗಳು ಹಿಂದೂ ಧರ್ಮವನ್ನು ಮನಸಾರೆ ತೆಗಳಿ, ಜನರನ್ನು ಆ ಧರ್ಮದಿಂದ ವಿಮುಖರನ್ನಾಗಿ ಮಾಡಬಯಸಿದಷ್ಟೂ ಜನತೆಯಲ್ಲಿ ತಮ್ಮ ಪುರಾತನ ಮತತ್ವ- ಪರಂಪರೆಗಳಲ್ಲಿ ಅಭಿಮಾನ ಹೆಚ್ಚುತ್ತಾ ನಡೆಯಿತು. ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ ಮುಂತಾದವರಿಂದಲೂ ಆರ್ಯಸಮಾಜ, ಬ್ರಹ್ಮಸಮಾಜದಂತಹ ಸಂಸ್ಥೆಗಳಿಂದಲೂ ನಡೆದ ಧಾರ್ಮಿಕ ಜಾಗೃತಿ ಮತ್ತು ಸಾಮಾಜಿಕ ಸುಧಾರಣಾ ಕಾರ್ಯವು ಅಭೂತಪೂರ್ವವೆನಿಸಿತು.

ಪಾಶ್ಚಾತ್ಯ ಸಂಪರ್ಕದ, ಸಾಮಾಜಿಕ ರೀತಿಯ ಪರಿಣಾಮ ವಿಶೇಷವೆಂದರೆ ಮಧ್ಯಮ ವರ್ಗದ ಪ್ರತಿಷ್ಠಾಪನೆ ಮತ್ತು ಆ ವರ್ಗೀಯರು ಬೆಳೆಸಿಕೊಂಡ ಚಿಕಿತ್ಸಕ ಮನೋವೃತ್ತಿ. ತಾವು ಪಡೆದ ಹೊಸ ಬಗೆಯ ಶಿಕ್ಷಣದ ಪರಿಣಾಮವಾಗಿ ಅವರಲ್ಲಿ; ‘ಪುರಾಣಮಿತ್ಯೇವ ನ ಸಾಧು ಸರ್ವಂ’ (ಪುರಾಣ ಗ್ರಂಥಗಳಲ್ಲಿ ಹೇಳಿದ್ದೆಲ್ಲವೂ ಸರಿಯಲ್ಲ) ಎಂಬ ಮನೋಭಾವ ಉದಯಿಸಿತು. ಸಾಮಾಜಿಕ ಸ್ಥಿತ್ಯಂತರದ ಇನ್ನೊಂದು ವೈಶಿಷ್ಟ್ಯವೆಂದರೆ ಭಾರತೀಯರಲ್ಲಿ ಮೂಡಿಬಂದ ಲೌಕಿಕ ಹಾಗೂ ವ್ಯಕ್ತಿಗತವಾದ ದೃಷ್ಟಿಕೋನ. ಇದುವರೆಗೆ ಮತಧರ್ಮದ ಆವರಣದಲ್ಲಿ ಬೆಳೆದು ಬಂದ ಅವನ ಮನೋವೃತ್ತಿಯು ಸಮಷ್ಟಿಯಾಗಿತ್ತು. ಪಾಶ್ಚಾತ್ಯ ಪ್ರಭಾವದಿಂದ ಮೂಡಿದ ಲೌಕಿಕ ವಿಚಾರಗಳಿಂದಾಗಿ ಜೀವನಕ್ರಮವು ಹೆಚ್ಚು ಹೆಚ್ಚು ವ್ಯಕ್ತಿಪರವಾಗುತ್ತಾ ನಡೆಯಿತು ಮತ್ತು ಇಹಲೋಕದ ನಡವಳಿಕೆಗಳಿಗೆ ಪ್ರಾಧಾನ್ಯವನ್ನೀಯಬೇಕಾದ ಪರಿಸ್ಥಿತಿಯು ತಲೆದೋರಿತು.[1]

ಭಾರತಕ್ಕೆ ಕ್ರೈಸ್ತ ಮಿಶನರಿಗಳು

ಈಸ್ಟ್‌ಇಂಡಿಯಾ ಕಂಪೆನಿಯ ಅಧಿಕಾರಿಗಳು ತಮ್ಮ ವ್ಯಾಪಾರ ವ್ಯವಹಾರ ಮಾಡುವ ಧೋರಣೆಯಲ್ಲಿ ಅನೇಕ ರಾಜ, ಸಾಮಂತ, ನವಾಬ, ಪಾಳೆಯಗಾರರನ್ನು ಗೆದ್ದುಕೊಂಡು ರಾಜ್ಯ ವಿಸ್ತರಣೆ ಮಾಡುವುದರಲ್ಲಿ ನಿರತರಾಗಿದ್ದರು. ಇಂತಹ ಸಂದಿಗ್ಧ ರಾಜಕೀಯ ಪರಿಸ್ಥಿತಿಯಲ್ಲಿ ಇಂಗ್ಲೆಂಡಿನಿಂದ ಬಂದು ಕ್ರೈಸ್ತ ಧರ್ಮ ಸ್ಥಾಪನೆ ಮಾಡುವ ಕಾರ್ಯಗಳು ಕಂಪೆನಿಯ ಕಾರ್ಯಾಭಿವೃದ್ಧಿಗಳಿಗೆ ಅಡ್ಡಿ ಆತಂಕಗಳಾಗುವುದೆಂದು ಗ್ರಹಿಸಿ ಭಾರತಕ್ಕೆ ಬರುವ ಮಿಶನರಿಗಳ ಪ್ರವೇಶಕ್ಕೆ ತಡೆಯಾಜ್ಞೆ ಹಾಕಿದ್ದರು.

ಇಂಗ್ಲೆಂಡಿನಿಂದ ಭಾರತಕ್ಕೆ ಕ್ರೈಸ್ತ ಮಿಶನರಿಗಳಾಗಿ ಬರಲಿಚ್ಛಿಸುವವರು ಲಂಡನ್‌ನಲ್ಲಿರುವ ಭಾರತ ಭವನದಲ್ಲಿ ೫೦೦ ಪೌಂಡ್‌ಗಳಷ್ಟು ಹಣವನ್ನು ಭದ್ರತಾನಿಧಿಯಾಗಿ ಪಾವತಿ ಮಾಡಿ ಕಂಪೆನಿ ಆಡಳಿತಕ್ಕೆ ಅಧಿಕಾರಕ್ಕೆ ಧಕ್ಕೆ ತಾರದೆ ಯೋಗ್ಯವಾಗಿ ವರ್ತಿಸುತ್ತೇವೆಂದು ವಿಶೇಷ ಜಾಮೀನಿನ ಮುಚ್ಚಳಿಕೆಯನ್ನು ಕೊಟ್ಟು ಭಾರತಕ್ಕೆ ಬರಬೇಕಾಗಿತ್ತು. ಕಂಪನಿಯ ಯಾವುದೇ ವಿಧವಾದ ಕಾರ್ಯ, ಧೋರಣೆ, ರೀತಿ ನೀತಿಗಳನ್ನು ತಿದ್ದುಪಡಿ ಮಾಡುವ ಅಧಿಕಾರವು ಬ್ರಿಟನ್ನಿನ ಪಾರ್ಲಿಮೆಂಟಿನ ಮಹಾ ಸಂಸತ್‌ಗೆ ಮಾತ್ರ ಸೇರಿತ್ತು. ಪಾರ್ಲಿಮೆಂಟಿನ ಗಣ್ಯ ಸದಸ್ಯರನೇಕರು ಭಾರತದಲ್ಲಿ ಪ್ರಜೆಗಳಿಗೆ ವಿದ್ಯಾವಕಾಶವನ್ನೊದಗಿಸಿ ಸಾಮಾಜಿಕ ಸುಧಾರಣೆಗಳನ್ನು ಮಾಡುವುದು ಈಸ್ಟ್‌ ಇಂಡಿಯಾ ಕಂಪೆನಿಯ ಹೊಣೆಯಾಗಿರುತ್ತದೆಂದು ಪ್ರತಿಪಾದಿಸುತ್ತಿದ್ದರು. ಬ್ರಿಟಿಷ್‌ ಪಾರ್ಲಿಮೆಂಟು ಇಪ್ಪತ್ತು ವರ್ಷಗಳಿಗೊಮ್ಮೆ ತನ್ನ ಆಡಳಿತ ಕ್ರಮವನ್ನು ಪರಿಶೀಲಿಸಿ ಅಗತ್ಯವಾದ ತಿದ್ದುಪಡಿಗಳ ಶಾಸನವನ್ನು ಅನುಮೋದಿಸುತ್ತಿತ್ತು. ಕಂಪೆನಿಯ ಶಾಸನವನ್ನು ಪರಿಶೀಲಿಸಿ ತಿದ್ದುಪಡಿ ಮಾಡಲು ಮಹಾಸಂಸತ್ತಿನಲ್ಲಿ ಹೋರಾಡಿ ಕಡೆಗೆ ಬ್ರಿಟನ್‌ನಲ್ಲಿ ಸ್ಥಾಪಿತವಾದ ಮಿಶನರಿ ಸಂಸ್ಥೆಗಳು ಇನ್ನು ಮೇಲೆ ಭಾರತಕ್ಕೆ ಹೋಗಿ ಅಲ್ಲಿ ಸಾಮಾಜಿಕ, ಧಾರ್ಮಿಕ, ನೈತಿಕ ಸುಧಾರಣೆಗಳನ್ನು ಮಾಡಿ ಜನತೆಯ ಜೀವನದ ಮಟ್ಟವನ್ನು ಮೇಲೆತ್ತಿ ಅಭಿವೃದ್ಧಿ ಮಾಡಬಹುದೆಂದೂ, ಹಿಂದೆ ಇದ್ದ ಈಸ್ಟ್‌ ಇಂಡಿಯಾ ಕಂಪೆನಿಯು ಭಾರತ ದೇಶದಲ್ಲಿ ಮಿಷನರಿಗಳಿಗಿದ್ದ ನಿರ್ಬಂಧವನ್ನು ರದ್ದು ಮಾಡಿ ತಿದ್ದುಪಡಿಯ ಅಪ್ಪಣೆಯನ್ನು ೧೮೧೩ರಲ್ಲಿ ನೂತನವಾಗಿ ಹೊರಡಿಸಿತು. ಈ ನಿಷೇಧಾಜ್ಞೆಯು ರದ್ದಾದುದರ ಫಲವಾಗಿ ಅನೇಕ ಬ್ರಿಟಿಷ್‌ಮಿಶನರಿ ಸಂಸ್ಥೆಗಳು ಭಾರತದ ವಿವಿಧೆಡೆಗಳಲ್ಲಿ ತಮ್ಮ ಸೇವಾ ಕೇಂದ್ರಗಳನ್ನು ಸ್ಥಾಪಿಸಿದವು.

೧೮೦೦ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾದ ಸೆರಂಪೂರ್‌ ಮಿಶನ್ ಸಂಸ್ಥೆಯು ವಿಲಿಯಂ ಕೇರಿ ಎಂಬವರ ನಾಯಕತ್ವದಲ್ಲಿ ಪ್ರಾರಂಭಗೊಂಡು ಕ್ರೈಸ್ತ ಸಭೆಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ, ಭಾರತದ ಭಾಷೆಗಳಾದ ಮರಾಠಿ, ಬಂಗಾಳಿ, ಕನ್ನಡ ಮುಂತಾದ ಭಾಷಾ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿರುತ್ತದೆ. ಕನ್ನಡದ ಮೊದಲಃ

ವ್ಯಾಕರಣ ಗ್ರಂಥವೆನಿಸಿದ ಪುಸ್ತಕವು ೧೮೧೭ರಲ್ಲಿ ಸೆರಂಪೂರ್‌ ಮಿಶನ್‌ಪ್ರೆಸ್‌ನಲ್ಲಿ ಮುದ್ರಣಗೊಂಡಿತ್ತು. ಅಲ್ಲದೆ ೧೮೨೩ರಲ್ಲಿ (ಬೈಬಲ್‌) ಸತ್ಯವೇದದ ಹೊಸ ಒಡಂಬಡಿಕೆ ಕೃತಿಯು ಇದೇ ಮುದ್ರಣಾಲಯದಲ್ಲಿ ಪ್ರಕಟಗೊಂಡಿತ್ತು.

ಕರ್ನಾಟಕದಲ್ಲಿ ವಿದೇಶೀ ಮಿಶನರಿಗಳು

ಲಂಡನ್‌ ಮಿಶನ್‌

ಕ್ರಿ. ಶ. ೧೭೯೫ರಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಾರಂಭಗೊಂಡ ಲಂಡನ್‌ ಮಿಶನ್‌ ಸಂಸ್ಥೆಯು ಜಾನ್‌ ಹ್ಯಾಂಡ್ಸ್‌ರವರ ನಾಯಕತ್ವದಲ್ಲಿ ೧೮೧೦ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ತನ್ನ ಕಾರ್ಯಕ್ಷೇತ್ರವನ್ನು ತೆರೆಯಿತು. ಹಡಗಲಿ, ಹೊಸಪೇಟೆ, ಸಂಡೂರು, ಸಿರಗುಪ್ಪ, ಬೇವಿನಹಳ್ಳಿ ಮುಂತಾದ ಕಡೆಗಳಲ್ಲಿ ಕ್ರೈಸ್ತ ಸಭೆಗಳನ್ನೂ ಪಾಠಶಾಲೆಗಳನ್ನೂ ಪ್ರಾರಂಭ ಮಾಡಿತು. ಇದೇ ಮಿಶನ್‌ ಸಂಸ್ಥೆಯು ಒಂದು ಮುದ್ರಣಾಲಯವನ್ನು ಸ್ಥಾಪಿಸಿದ್ದು (ಬಳ್ಳಾರಿ ಮಿಶನ್‌ಪ್ರೆಸ್‌೧೮೨೧-೧೮೫೪) ೧೮೨೧ರಲ್ಲಿ ಸತ್ಯವೇದವನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಿತ್ತು. ಕನ್ನಡದ ಮೊದಲ ಪತ್ರಿಕೆಯಾದ ‘ಮಂಗಳೂರು ಸಮಾಚಾರ’ವು ಮಂಗಳೂರಿನ ಬಾಸೆಲ್‌ಮಿಶನ್‌ಪ್ರೆಸ್‌ನಲ್ಲಿ ಮೊದಲ ವರ್ಷ ಪ್ರಕಟವಾಯಿತು. ನಂತರ ಅದು ಬಳ್ಳಾರಿ ಮಿಶನ್‌ಪ್ರೆಸ್‌ನಲ್ಲಿ ಮುದ್ರಣಗೊಂಡಿತು.

ವೆಸ್ಲಿಯನ್‌ ಮೆಥೊಡಿಸ್ಟ್‌ ಮಿಶನ್‌

೧೮೧೩ರಲ್ಲಿ ಇಂಗ್ಲೆಂಡಿನಲ್ಲಿ ಸ್ಥಾಪನೆಯಾದ ಸಂಸ್ಥೆಯು ೧೮೨೧ರಲ್ಲಿ ಕರ್ನಾಟಕಕ್ಕೆ ಬಂದು ಸೇವೆಯನ್ನು ಪ್ರಾರಂಭಮಾಡಿತು. ೧೮೩೬ ನಂತರ ತುಮಕೂರು ಸಮೀಪದ ಗುಬ್ಬಿಯನ್ನು ಕೇಂದ್ರವಾಗಿರಿಸಿಕೊಂಡು ಕರ್ನಾಟಕದ ತುಮಕೂರು, ಬೆಂಗಳೂರು, ಕೋಲಾರ, ಶಿವಮೊಗ್ಗ, ಮೈಸೂರು, ಹಾಸನ, ಮಂಡ್ಯ ಮತ್ತು ಚಿಕ್ಕಮಗಳೂರು ಕಡೆಗಳಲ್ಲಿ ಕ್ರೈಸ್ತ ಮತ ಪ್ರಚಾರ ಮಾಡುತ್ತಾ ಸಭೆ, ಶಾಲೆಗಳನ್ನು ಸ್ಥಾಪಿಸಿತು. ಥಾಮಸ್‌ ಹಡ್ಸನ್‌ರವರ ನಾಯಕತ್ವದಲ್ಲಿ ಆರಂಭವಾದ ಸೇವೆಯು ದೀನ ದಲಿತರ, ಶೋಷಣೆಗೆ ಒಳಗಾದವರ ಮಧ್ಯೆ, ವೈದ್ಯಕೀಯ, ಶಿಕ್ಷಣ, ಮುದ್ರಣ, ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಮಾಡಿದೆ. ಈ ಸಂಸ್ಥೆಯು ೧೮೪೦ ಬೆಂಗಳೂರು-ಮೈಸೂರಿನಲ್ಲಿ ಸ್ಥಾಪಿಸಿದ ವೆಸ್ಲಿಯನ್‌ ಮಿಶನ್‌ಪ್ರೆಸ್‌ ಇತ್ತೀಚಿಗಿನ ತನಕ ಮುದ್ರಣ ಕ್ಷೇತ್ರದಲ್ಲಿ ಕಾರ್ಯವೆಸಗುತ್ತಿತ್ತು. ವ್ಯಾಕರಣ, ನಿಘಂಟು, ಪತ್ರಿಕೆ ಮುಂತಾದ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ಈ ಸಂಸ್ಥೆಯು ಹೊರತಂದಿದೆ. ಅಲ್ಲದೆ ಪತ್ರಿಕಾ ರಂಗದ ಚರಿತ್ರೆ ಸೇರಿದ ವೃತ್ತಾಂತ ಪತ್ರಿಕೆ ಮುದ್ರಣಗೊಂಡು ಪ್ರಕಟಗೊಳ್ಳುತ್ತಿದ್ದುದು ಇಲ್ಲಿಂದ. ಈ ಸಂಸ್ಥೆಗಳಲ್ಲದೆ ಡೇನಿಷ್‌ ಮಿಷನ್‌ ಸಂಸ್ಥೆಯು ಕನ್ನಡ ಪ್ರದೇಶಗಳಾದ ಕೊಳ್ಳೆಗಾಲ ಮತ್ತಿತರ ಕಡೆಗಳಲ್ಲಿ ಲೂಥರನ್‌ಸಭೆಗಳನ್ನು ಸ್ಥಾಪಿಸಿದ್ದು, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಮಾಡಿರುತ್ತವೆ.

‘ಮೆಥೊಡಿಸ್ಟ್‌ ಚರ್ಚ್‌ ಇನ್‌ ಸದರನ್‌ ಏಷ್ಯಾ’ ಸಂಸ್ಥೆಯು ೧೮೮೫ರಿಂದ ಕರ್ನಾಟಕದಲ್ಲಿ ಸೇವೆಯನ್ನಾರಂಭಿಸಿತು. ಬೆಳಗಾಂ, ಕೋಲಾರ, ರಾಯಚೂರು, ಬೀದರ್‌ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ವಿಶೇಷವಾಗಿ ಕೆಲಸ ಮಾಡಿದ ಈ ಮಿಶನರಿಗಳಲ್ಲಿ ಹೇಳಿಕೊಳ್ಳುವಷ್ಟು ಸಾಹಿತಿಗಳಾಗಲಿ, ಕಲಾವಂತರಾಗಲಿ ಕಾಣಬರುವುದಿಲ್ಲ. ಆದರೂ ಅವರು ಮಾಡಿದ ಬಹುದೊಡ್ಡ ಕೆಲಸವೆಂದರೆ ದೇಶಿಯ ಸಂಸ್ಕೃತಿಗಳನ್ನು, ಆಚರಣೆಗಳನ್ನು ಹಾಗೆಯೇ ಉಳಿಸಿಕೊಂಡು ಮುಂದುವರೆಯುವಂತೆ ಮಾಡಿದ್ದು.

ತಮಿಳುನಾಡು

ಕಾಸರಗೋಡಿನ ಹತ್ತಿರವಿರುವ ಪಯಸ್ವಿನಿ ನದಿಯಿಂದ ಪೂರ್ವದ ಉಡುಪಿ ಹತ್ತಿರವಿರುವ ಕಲ್ಯಾಣಪುರದವರೆಗೆ ದಕ್ಷಿಣದ ಘಟ್ಟಪ್ರದೇಶದ ಬುಡದಿಂದ ಪಶ್ಚಿಮಕ್ಕೆ ಅರಬಿ ಸಮುದ್ರದವರೆಗೆ ಆವರಿಸಿಕೊಂಡಿರುವ ಸ್ಥಳಕ್ಕೆ ತುಳುನಾಡು ಎನ್ನುತ್ತಾರೆ. ೧೭೯೯ರಲ್ಲಿ ಟಿಪ್ಪು ಸುಲ್ತಾನನು ಯುದ್ಧದಲ್ಲಿ ಅಸುನೀಗಿ ಸೋತಾಗ ಕರಾವಳಿ ಜಿಲ್ಲೆಯ ಪ್ರದೇಶಗಳು ಬ್ರಿಟಿಷರ ಆಡಳಿತಕ್ಕೆ ಸೇರಿ ಮದ್ರಾಸು ಆಧಿಪತ್ಯದ ಅಂಗವಾಗಿದೆ. ಬ್ರಿಟಿಷರು ಮತ್ತು ಮಿಶನರಿಗಳು ಈ ಜಿಲ್ಲೆಯನ್ನು Tulu Country-ತುಳುನಾಡು ಎಂದೇ ಆಗ ಕರೆಯುತ್ತಿದ್ದರು. ೧೮೬೨ರಲ್ಲಿ ಈ ಜಿಲ್ಲೆಯು ಎರಡು ಭಾಗವಾಗಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡವೆಂದಾಯಿತು. ಆಗ ಉತ್ತರ ಕನ್ನಡವು ಬೊಂಬಾಯಿ ಆಧಿಪತ್ಯದಲ್ಲಿಯೂ, ದಕ್ಷಿಣ ಕನ್ನಡವು ಮದ್ರಾಸು ಆಧಿಪತ್ಯದಲ್ಲಿಯೂ ಇತ್ತು. ೧೯೫೬ರಲ್ಲಿ ರಾಜ್ಯಗಳು ವಿಂಗಡನೆ ಆದಾಗ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದ ಕಾಸರಗೋಡನ್ನು ಪ್ರತ್ಯೇಕ ಮಾಡಿ ಕೇರಳ ರಾಜ್ಯಕ್ಕೆ ಸೇರಿಸಲಾಯಿತು. ಈಗ ತಿರುಗಿ ದಕ್ಷಿಣ ಕನ್ನಡ ಜಿಲ್ಲೆಯು ಎರಡು ಭಾಗವಾಗಿ (೧೯೯೮) ಅದರಲ್ಲಿಯೇ ಉಡುಪಿ ಜಿಲ್ಲೆಯೂ ಹುಟ್ಟಿಕೊಂಡಿದೆ.

ತುಳು ಭಾಷೆ

ತುಳು ಭಾಷೆಯು ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಅಲ್ಲದೆ ಭಾರತದ ಪ್ರಾಚೀನ ಭಾಷೆಗಳಲ್ಲೊಂದು ಎಂಬ ಸ್ಥಾನವನ್ನು ಪಡೆದಿದೆ. ತುಳು ಶಬ್ದದ ವ್ಯುತ್ಪತ್ತಿಯ ಬಗ್ಗೆ ವಿದ್ವಾಂಸರುಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ತುಳು ಅಂದರೆ ಮೆದು, ಸಾಧು ಎಂದು ಕೆಲವರು ಅಭಿಪ್ರಾಯಪಟ್ಟರೆ, ಶೌರ್ಯ, ಪರಾಕ್ರಮ ಎಂಬ ಅರ್ಥವನ್ನೂ ಹೇಳುತ್ತಾರೆ. ತುಳು ಒಂದು ಧರ್ಮದ ಭಾಷೆಯಲ್ಲ. ಅದು ಒಂದು ನಾಡಿನ ಭಾಷೆ. ಐತಿಹಾಸಿಕ, ರಾಜಕೀಯ ಕಾರಣಗಳಿಂದ ತುಳು ಭಾಷೆಗೆ ಅಷ್ಟು ಪ್ರಾಧಾನ್ಯ ಬರಲಿಲ್ಲವೆಂದು ಚರಿತ್ರೆಯಲ್ಲಿ ನಾವು ನೋಡಬಹುದು. ತುಳು ಭಾಷೆ, ತುಳು ಸಂಸ್ಕೃತಿಯ ಬಗ್ಗೆ ವಿದೇಶೀ ಆಕರಗಳಲ್ಲಿ ಬೇಕಾದಷ್ಟು ಪುರಾವೆಗಳು ಸಿಗುತ್ತವೆ. ವಿದೇಶೀ ವಿದ್ವಾಂಸರುಗಳು ತುಳುವಿನ ಬಗ್ಗೆ ತಮ್ಮ ಗ್ರಂಥಗಳಲ್ಲಿ ವಿಭಿನ್ನವಾಗಿ ವರ್ಣಿಸಿರುವುದನ್ನು ಈ ಕೆಳಗಿನ ಹೇಳಿಕೆಗಳಿಂದ ತಿಳಿದುಕೊಳ್ಳಬಹುದು:

The Language called Tuluva or Tulu is spoken by 300,000 inhabitants of the tract described above, the centre of which is Mangalore, It is considered one of six cultivated Dravidian Languages, though it has no literature, and is written either in the Malayalam or in the Kanarese Character.[2]

The Language of Tuluva has a strong resemblance to that of Malayalam, and the written Characters are the same, but in the language of Tuluva there is a very great admixture of words from all the countries containing the five Southern nations of India.[3]

Tulu is described by Dr. Caldwell as one of the most highly develoed languages of the Dravidian family. But there is no Tulu literature or separate Tulu character and though Tulu inscriptions are to be found here and there in other districts of the Presidency, the spoken language is now practically confined to S. K. Where it shows no signs of dying out.[4]

ಜಿಲ್ಲೆಗೆ ಬಾಸೆಲ್‌ಮಿಶನ್‌

ಜರ್ಮನಿಯ ಸ್ವಿಜರ್ಲೆಂಡಿನ ಬಾಸೆಲ್ ಪಟ್ಟಣದಲ್ಲಿ ೧೮೧೫ರಲ್ಲಿ ಬಾಸೆಲ್‌ಇವೆಂಜಲಿಕಲ್‌ ಮಿಶನ್‌ ಎಂಬ ಸಂಘವೊಂದು ಸ್ಥಾಪನೆಯಾಯಿತು. ಈ ಸಂಘದ ಮೂಲ ಉದ್ದೇಶ ಕ್ರೈಸ್ತ ಮತದ ಪ್ರಸಾರವನ್ನು ಮಾಡುವುದಾದರೂ, ಈ ಉದ್ದೇಶವನ್ನು ಪೂರೈಸಲು ಜನರನ್ನು ಜ್ಞಾನದ ಕಡೆಗೆ ನಡೆಸುವುದು ಬಹು ಅಗತ್ಯ ಎಂದರಿತ ಮಿಶನರಿಗಳು ಭಾರತಕ್ಕೆ ಬರಲು ಹಲವು ವರ್ಷಗಳಿಂದ ಪ್ರಯತ್ನಪಡುತ್ತಿದ್ದರು. ಇದ್ದ ಅಭ್ಯಂತರಗಳು ೧೮೩೩ರಲ್ಲಿ ತೊಲಗಿದ್ದರಿಂದ ೧೮೩೪ರಲ್ಲಿ ಮೊದಲ ನಿಯೋಗದಲ್ಲಿ ಮೂವರು ಮಿಶನರಿಗಳಾದ ಜೆ. ಸಿ. ಲೆಹ್ನರ್‌, ಸಿ. ಎಲ್‌. ಗ್ರೇನರ್‌, ಸಾಮುವೆಲ್‌ ಹೆಬಿಕ್‌ ಮಂಗಳೂರಿಗೆ ಆಗಮಿಸಿದರು. ಈ ಸಂಸ್ಥೆಯು ೧೯೧೪ರ ತನಕ ಬಾಸೆಲ್‌ಮಿಶನ್ ಎಂಬ ಹೆಸರಿನಿಂದ ಆಡಳಿತ ನಡೆಸುತ್ತಿತ್ತು. ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ನೀಲಗಿರಿ, ಮಹಾರಾಷ್ಟ್ರ, ಕಾಸರಗೋಡು, ಉತ್ತರ ಕೇರಳ, ಮಲಬಾರ್‌, ಬೆಟಗೇರಿ, ಗುಳೇದಗುಡ್ಡ, ಹುಬ್ಬಳ್ಳಿ, ವಿಜಾಪುರಗಳಲ್ಲಿ ಸಭಾಠಾಣ್ಯಗಳನ್ನು ಸ್ಥಾಪಿಸಿದರು. ಅದರೊಂದಿಗೆ ಶಿಕ್ಷಣ, ಮುದ್ರಣ, ಸಾಹಿತ್ಯ, ಹಂಚು, ನೇಯ್ಗೆ, ವೈದ್ಯಕೀಯ ಮುಂತಾದ ರಂಗಗಳಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು.

೧೯೧೪ರಲ್ಲಿ ನಡೆದ ಪ್ರಥಮ ಜಾಗತಿಕ ಸಮರದ ಸಂದರ್ಭದಲ್ಲಿ ಬಾಸೆಲ್‌ಮಿಶನ್‌ ಸ್ಥಾಪಿಸಿದ ಕಾರ್ಯಗಳನ್ನು ಮುಂದುವರಿಸುವುದಕ್ಕೆ ಬ್ರಿಟಿಷ್‌ ಸರ್ಕಾರವು ತಡೆ ಹಾಕಿತು. ಮಿಶನರಿಗಳು ತಮ್ಮ ಸ್ವದೇಶಕ್ಕೆ ಹಿಂತೆರಳಬೇಕಾದುದರಿಂದ ತಾವು ನಡೆಸುತ್ತಿದ್ದ ಕೇಂದ್ರಗಳಾದ ಮಲಬಾರನ್ನು ದಕ್ಷಿಣ ಹಿಂದೂಸ್ಥಾನದ ಅನ್ಯೋನ್ಯ ಸಭೆಗೂ, ಕೊಡಗು ನೀಲಗಿರಿಯನ್ನು ವೆಸ್ಲಿಯನ್‌ ಮಿಶನ್‌ಗೂ, ಹೊನ್ನಾವರವನ್ನು ಭಾರತೀಯ ಸುವಾರ್ತಾ ಪ್ರಸರಣ ಸಂಸ್ಥೆಗೂ, ದಕ್ಷಿಣ ಕನ್ನಡವನ್ನು ಕೆನರಿಸ್‌ ಇವಾಂಜಲಿಕಲ್‌ ಮಿಶನ್‌ಗೂ ನಡೆಸಲು ಕೊಟ್ಟಿತು. ಹಂಚು ಕಾರ್ಖಾನೆಗಳನ್ನು ಬ್ರಿಟಿಷ್‌ ಸರಕಾರವು ವಶಪಡಿಸಿಕೊಂಡು ಕಾಮನ್‌ವೆಲ್ತ್‌ ಟ್ರಸ್ಟ್‌ಗೆ ನಡೆಸಲು ಕೊಟ್ಟಿತು. ೧೯೧೪ರಿಂದ ೧೯೨೭ರ ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಸಭೆ, ಶಿಕ್ಷಣ ಮತ್ತಿತರ ಸಂಘ ಸಂಸ್ಥೆಗಳನ್ನು ಕೆನರಿಸ್‌ ಇವಾಂಜಲಿಕಲ್‌ ಮಿಶನ್‌ ನಡೆಸುತ್ತಿತ್ತು.

೧೯೨೭ರಲ್ಲಿ ಭಾರತಕ್ಕೆ ಹಿಂದೆ ಬಂದ ಮಿಶನರಿಗಳು ತಾವು ನಡೆಸಲು ಕೊಟ್ಟಿದ್ದ ಎಲ್ಲಾ ಠಾಣ್ಯಗಳನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಪುನಃ ಬಾಸೆಲ್‌ಮಿಶನ್‌ ಎಂಬ ಹೆಸರಿನಿಂದ ನಡೆಸುತ್ತಿದ್ದರು. ೧೯೩೪ರಲ್ಲಿ ಬಾಸೆಲ್ ಮಿಶನ್‌ ಸಂಸ್ಥೆಯು ಭಾರತಕ್ಕೆ ಬಂದು ನೂರು ವರ್ಷಗಳಾಯಿತು. ಈ ಸಂದರ್ಭದಲ್ಲಿ ದೇಶೀಯ ಸಭೆಗಳನ್ನು ಸ್ವತಂತ್ರ ಮಾಡುವ ಉದ್ದೇಶದಿಂದ ಅದರ ವ್ಯವಸ್ಥೆಯನ್ನು ಬದಲಾವಣೆ ಮಾಡಿಸಲಾಯಿತು. ದೇಶೀಯ ನಾಯಕರು ಆಡಳಿತ ವ್ಯವಸ್ಥೆಯಲ್ಲಿ ಸೇರಿಕೊಂಡರು. ಹೀಗೆ ೧೯೩೪ ರಿಂದ ೧೯೬೮ರ ತನಕ ಈ ಸಂಸ್ಥೆಯು ‘ಯುನೈಟೆಡ್‌ ಬಾಸೆಲ್‌ಮಿಶನ್‌ ಇನ್‌ ಇಂಡಿಯಾ’ ಎಂಬ ಹೆಸರಿನಿಂದ ನಡೆಸಲ್ಪಡುತ್ತಿತ್ತು. ೧೯೬೮ರ ನಂತರ ಭಾರತದಲ್ಲಿ ಬಾಸೆಲ್‌ಮಿಶನ್‌ ಸಂಸ್ಥೆಯು ಸ್ಥಾಪಿಸಿದ ಎಲ್ಲಾ ಕೇಂದ್ರಗಳನ್ನು ಭಾರತೀಯರಿಗೇ ನಡೆಸಲು ಅನುವು ಮಾಡಿಕೊಟ್ಟಿರುವುದರಿಂದ, ನಂತರದಿಂದ ಭಾರತದಲ್ಲಿ ಬಾಸೆಲ್‌ಮಿಶನ್‌ ಸಂಸ್ಥೆಯು ಸ್ಥಾಪಿಸಿದ ಎಲ್ಲಾ ಕೇಂದ್ರಗಳನ್ನು ‘ದಕ್ಷಿಣ ಭಾರತ ಸಭೆ’ ಮುಂತಾದವು ನಡೆಸುತ್ತಿವೆ.

೧೮೩೪ ರಿಂದ ೧೮೬೮ರ ತನಕ ಹೆಬಿಕ್‌, ಗ್ರೇನರ್‌, ಲೇಹ್ನರ್‌, ಮೊಗ್ಲಿಂಗ್‌, ರಿಟ್ಟರ್‌, ಗ್ರೇಟರ್‌, ಕೆಮರರ್‌, ಅಮ್ಮನ್ನ್‌, ಬ್ರಿಗೆಲ್‌, ಜೀಗ್ಲರ್‌, ಲೇಯರ್‌, ವೈಗ್ಲೆ ಹೀಗೆ ನೂರಾರು ಮಿಶನರಿಗಳು ಬಾಸೆಲ್‌ಮಿಶನ್‌ ಸಂಸ್ಥೆಯಿಂದ ಭಾರತಕ್ಕೆ ಬಂದಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ಇವರುಗಳ ಆಗಮನದ ನಿಮಿತ್ತ ಜಿಲ್ಲೆಯ ಭಾಷೆಯಾದ ತುಳುವಿನ ಚರಿತ್ರೆಯೇ ಮತ್ತೆ ಆರಂಭವಾಗಿದೆ.

ಮೂಢನಂಬಿಕೆಗಳಿಂದ ಕೂಡಿದ್ದ ಅವಿದ್ಯಾವಂತ ಜನರನ್ನು ಜ್ಞಾನದ ಬೆಳಕಿನಡೆಗೆ ನಡೆಸುವಲ್ಲಿ ಈ ಮಿಶನರಿಗಳು ಹಲವಾರು ಸುಧಾರಣೆಗಳನ್ನು ಮಾಡಿದ್ದಾರೆ. ತೋರಿಕೆಗೆ ಇದು ಏನೂ ತಿಳಿಯದ ಜನರನ್ನು ಮಂಕುಬೂದಿ ಎರಚಿ ಅವರ ಮತ ಪರಿವರ್ತನೆಗೊಳಿಸುವ ಒಂದು ವೇಷವೆಂದು ಕಂಡುಬಂದರೂ, ಅವರ ನಿಸ್ವಾರ್ಥ ಸೇವೆಯನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಮಾತಿನಂತೆ ಮಿಶನರಿಗಳು ಸೇವೆ ಮಾಡದ ಕ್ಷೇತ್ರವಿಲ್ಲವೆಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಧಾರ್ಮಿಕ, ವೈದ್ಯಕೀಯ, ಶಿಕ್ಷಣ, ತಾಂತ್ರಿಕ, ಮುದ್ರಣ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹತ್ತರವಾದ ಸಾಧನೆಯನ್ನು ಅವರು ಮಾಡಿರುತ್ತಾರೆ.

ಅವರ ಸೇವೆ, ತ್ಯಾಗಗಳು ಈಗ ಚರಿತ್ರೆಗೆ ಸೇರಿರುವುದಾದರೂ ಹಲವಾರು ಕ್ಷೇತ್ರಗಳಲ್ಲಿ ಅವರು ಹಾಕಿದ ಅಡಿಗಲ್ಲು ಈಗಲೂ ಎಲ್ಲರ ಗಮನ ಸೆಳೆಯುತ್ತದೆ, ಮನಸ್ಸನ್ನು ತಟ್ಟುತ್ತದೆ, ಸೇವಾಕ್ಷೇತ್ರಗಳಲ್ಲಿ ನಮ್ಮನ್ನು ಹುರಿದುಬಿಂಬಿಸುತ್ತಿದೆ. ತುಳು ಜಿಲ್ಲೆಯಲ್ಲಿ ವಿದೇಶೀಯರು ಮಾಡಿದ ಸೇವೆಯನ್ನು ತಿಳಿದುಕೊಳ್ಳುವ ಮೊದಲು ಅವರು ಯಾಕಾಗಿ ಮಾಡಬೇಕಾಯಿತು, ಅದರಿಂದ ನಮ್ಮ ನಾಡಿಗೆ ಆದ ಲಾಭವೇನೆಂದು ಸೂಕ್ಷ್ಮವಾಗಿ ತಿಳಿದುಕೊಳ್ಳುವುದು ಯುಕ್ತವಾಗಿರುತ್ತದೆ.

ಮಿಶನರಿಗಳ ಯಾವುದೇ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಕಾರ್ಯವನ್ನು ತೆಗೆದುಕೊಳ್ಳಲಿ, ಅದರ ಹಿಂದೆ ಕ್ರೈಸ್ತಧರ್ಮ ಪ್ರಸಾರ ಮತ್ತು ಮತಾಂತರ ಏಕಮೇವ ಪ್ರಚೋದನೆಯಾಗಿದ್ದಿತು. ಶಬ್ದಕೋಶದ ರಚನೆಯಲ್ಲಿ ಧಾರ್ಮಿಕ ಉದ್ದೇಶವೇನಿದ್ದಿತು ಎಂದು ನಮಗೆ ಮೇಲುನೋಟಕ್ಕೆ ತೋರಬಹುದು. ವಿಸ್ತಾರವಾದ ಮರಾಠಿ-ಇಂಗ್ಲಿಷ್‌ ಕೋಶವನ್ನು ಸಿದ್ಧಪಡಿಸಿದ ಮೊಲ್ಸ್‌ವರ್ಥನ್‌ ಹೇಳಿದ ಈ ಮಾತುಗಳನ್ನು ಗಮನಿಸಬೇಕು:

It was undertaken not from a thirst after honour or emolument, but from an humble desire of promoting the propagation of the glorious Gospel; and it was continued by the energy of this desire, through sickness and weakness and against troubles and difficulties and grievous discouragement.

ಹೀಗೆ ಮಿಶನರಿ ಜನರು ಭಾರತೀಯರಾಗಿ, ಅವರ ಏಳಿಗೆಗಾಗಿ ಇಂಥ ಕಾರ್ಯವನ್ನು ಕೈಕೊಂಡವರೇನಲ್ಲ. ಅವರು ಭಾರತದ ಪ್ರಾಚೀನ ಗ್ರಂಥಗಳಲ್ಲಿ, ಸಾಂಸ್ಕೃತಿಕ ಪರಂಪರೆಯಲ್ಲಿ ಆಸಕ್ತಿ ವಹಿಸಿದ್ದರೆ, ಅದು ಸ್ವಮತ ಪ್ರಸಾರದ ಉದ್ದೇಶ ಸಾಧನೆಗಾಗಿಯೇ. ಅವರ ಸಾಹಿತ್ಯಿಕ ಕಾರ್ಯವು ಪ್ರೀತಿಮ್‌ ಸೊರೊಕಿನ್‌ ಒಂದೆಡೆ ಹೇಳಿದಂತೆ byproduct ಸ್ವರೂಪದಲ್ಲಿ ಭಾರತೀಯರ ಪ್ರಯೋಜನ್ಕೆ ಒದಗಿಬಂದಿತು. ಈ ಮಾತುಗಳನ್ನು ನಿಚ್ಚಳವಾಗಿ ತಿಳಿದುಕೊಂಡಷ್ಟೂ ಅವರ ಗ್ರಂಥೋದ್ಯಮದ ನಿಜವಾದ ನೆಲೆ-ಬೆಲೆಗಳನ್ನು ಕಂಡುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಆದರೆ ಯಾವುದೊಂದು ವಿಷಯದಲ್ಲಿ ಸಂಪೂರ್ಣ ತಲ್ಲೀನರಾಗಿ ಆಳವಾದ ಅಭ್ಯಾಸವನ್ನು ಕೈಕೊಂಡು ಆ ಕುರಿತು ಗ್ರಂಥರಚನೆ ಮಾಡಿದ್ದಾಗ ಮತೀಯ ದೃಷ್ಟಿಯು ಹಿಂದುಳಿದು, ಕೃತಿಯು ಸರ್ವಜನಾಗ್ರಾಹ್ಯವಾದ ಸಂದರ್ಭಗಳೂ ಇವೆ. ಅಂಥ ಗ್ರಂಥಗಳು ಇಂದಿಗೂ ಪ್ರಮಾಣಭೂತವಾಗಿ ಉಳಿಯುವಷ್ಟು ಸತ್ವವನ್ನು ಪಡೆದಿವೆ.[5]

೧೯ನೆಯ ಶತಮಾನದಲ್ಲಿ ದಕ್ಷಿಣ ಭಾರತಕ್ಕೆ ಅನೇಕ ಮಂದಿ ಐರೋಪ್ಯ ವಿದ್ವಾಂಸರು ಬಂದಿದ್ದರು. ಇವರಲ್ಲಿ ಕೆಲವರ ಸಾಧನೆಯಿಂದ ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ಕೊಡಗು ಮೊದಲಾದ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ವಿಶೇಷ ಪ್ರಯೋಜನವುಂಟಾಯಿತು. ಭಾಷೆ, ಸಾಹಿತ್ಯ ಸಂಬಂಧವಾದ ವಿವಿಧ ಚಟುವಟಿಕೆಗಳಿಂದಾಗಿ ನವಮನ್ವಂತರದ ಬಾಗಿಲನ್ನೇ ತೆರೆದಂತಾಯಿತು. ಈ ಅಪೂರ್ವ ಕಾಯದಲ್ಲಿ ಮಗ್ನರಾಗಿದ್ದವರಲ್ಲಿ ಹೆಚ್ಚಿನವರು ಕ್ರೈಸ್ತ ಧರ್ಮ ಬೋಧಕರಾಗಿದ್ದರು. ಅವರು ಜನಸಾಮಾನ್ಯರೊಂದಿಗೆ ಬೆರೆತು ಬಾಳಬೇಕಾಗಿದ್ದುದು ಹಾಗೂ ಪ್ರಾದೇಶಿಕ ಭಾಷೆಗಳನ್ನು ಕಲಿತು ವ್ಯವಹರಿಸಬೇಕಾಗಿದ್ದುದು ಅನಿವಾರ್ಯವಾಗಿದ್ದರೂ ಕೇವಲ ಅಷ್ಟಕ್ಕೇ ಮಾತ್ರ ಅವರ ಕಾರ್ಯಗಳು ಸೀಮಿತವಾಗಿರಲಿಲ್ಲ. ಕೆಲವರು ಈ ವಿದೇಶೀ ಮಿಶನರಿಗಳಲ್ಲಿ ಕೇವಲ ಮತ ಪ್ರಚಾರದ ಚಹರೆಯನ್ನು ಮಾತ್ರ ಗುರುತಿಸುವುದಿದೆ. ಧರ್ಮಬೋಧೆಯ ಕಾರ್ಯವನ್ನು ಅವರು ತಮ್ಮ ಜೀವನ ಧ್ಯೇಯಕ್ಕೆ ಅನುಗುಣವಾಗಿ ಮುಖ್ಯವಾಗಿ ನಿರ್ವಹಿಸಿದ್ದರೂ ಎಷ್ಟೋ ವೇಳೆ ಧರ್ಮ ಬೋಧೆ, ಮತಾಂತರಗಳನ್ನು ಮೀರಿದ ಭಾಷಾಪ್ರೇಮ, ಸಾಹಿತ್ಯ ನಿರ್ಮಿತಿಯ ಪ್ರವೃತ್ತಿಯನ್ನು ಅವರಲ್ಲಿ ಕಾಣುತ್ತೇವೆ. ತುಳುನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಬಾಸೆಲ್‌ಮಿಶನಿನ ಇತಿಹಾಸವೂ ಹೆಣೆದುಕೊಳ್ಳುತ್ತದೆ. ತುಳುನಾಡಿನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಇತ್ಯಾದಿ ರಂಗಗಳು ಬಾಸೆಲ್‌ಮಿಶನಿನ ಸಂಪರ್ಕದಿಂದ ಹೊಸ ದಿಕ್ಕುಗಳನ್ನು ಕಂಡುಕೊಂಡದ್ದು ಸರ್ವವಿದಿತ.[6]

ತುಳು ಭಾಷೆಯ ಅಭಿವೃದ್ಧಿಯಲ್ಲಿ ಬಾಸೆಲ್‌ಮಿಶನರಿಗಳ ಕೊಡುಗೆ ಬಹಳ ಮಹತ್ವದ್ದಾಗಿದೆ. ಆಧುನಿಕ ತುಳು ಸಾಹಿತ್ಯದ ಬೆಳವಣಿಗೆಗೆ ಮಿಶನರಿಗಳ ಭಾಷಾ ಕಾರ್ಯಗಳೇ ಪ್ರೇರಕ ಶಕ್ತಿಗಳು ಎಂದರೂ ತಪ್ಪಾಗಲಾರದು. ಕ್ರೈಸ್ತ ಮಿಶನರಿಗಳು ಈ ಪ್ರದೇಶದ ಆಡುನುಡಿಯಾದ ತುಳುವನ್ನು ಗಮನಿಸಿ ಜನಸಾಮಾನ್ಯರನ್ನು ಸಂಪರ್ಕಿಸಬೇಕಾದರೆ, ಜನಸಾಮಾನ್ಯರಿಗೆ ಬೈಬಲ್‌ಸಾಹಿತ್ಯದ ಸಂದೇಶ ಮುಟ್ಟಿಸಬೇಕಾದರೆ ತುಳು ಭಾಷೆಯೇ ಉತ್ತಮ ಎಂದು ಮನಗಂಡರು. ಶೈಕ್ಷಣಿಕ ಭಾಷೆಯಾಗಿ ಕನ್ನಡದ ಬಳಕೆಯಿದ್ದುದರಿಂದ ಕನ್ನಡ ಲಿಪಿಯ ಮೂಲಕವೇ ತುಳುವಿನಲ್ಲಿ ಬೈಬಲ್‌ಸಾಹಿತ್ಯದ ಅನುವಾದ ಮಾಡುವುದು ಸೂಕ್ತವೆಂದು ಆ ಲಿಪಿಯನ್ನೇ ಬಳಕೆಗೆ ತಂದರು. ಬಹುತೇಕ ವರ್ಗದವರ ಆಡುನುಡಿಯಾದ ಸಾಮಾನ್ಯ ತುಳುವನ್ನೇ ತಮ್ಮ ಮತ ಪ್ರಚಾರಕ್ಕೆ ಮಾಧ್ಯಮವಾಗಿ ಅಳವಡಿಸಿಕೊಂಡರು. ಬೈಬಲ್‌ಸಾಹಿತ್ಯದ ಅನುವಾದ ಮಾತ್ರವಲ್ಲದೆ ಇತರ ತುಳು ಸಾಹಿತ್ಯಗಳನ್ನೂ ರಚಿಸಿದರು. ಹೀಗೆ ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಹಿತ್ಯ ನಿರ್ಮಾಣಕ್ಕೆ ಬೇಕಾದ ಲಿಪೀಕರಣ, ಪ್ರಮಾಣೀಕರಣ ಹಾಗೂ ನವೀಕರಣ ಈ ಮಿಶನರಿಗಳ ಕಾರ್ಯಗಳಿಂದ ನೆರವೇರಿತು.[7]

ಕನ್ನಡ ಲಿಪಿಯಲ್ಲಿ ತುಳು ಸಾಹಿತ್ಯ ಮತ್ತು ಮುದ್ರಣ ಪ್ರಾರಂಭ

೧೮೪೦ಕ್ಕಿಂತಲೂ ಹಿಂದೆ ತುಳುವನ್ನು ಕನ್ನಡ ಲಿಪಿಯಲ್ಲಿ ಬರೆಯುವ ರೂಢಿ ಇದ್ದರೂ ಅದು ಬೆಳಕಿಗೆ ಬಂದಿರಲಿಲ್ಲ. ಯಾಕೆಂದರೆ ಅಷ್ಟರವರೆಗೆ ಈ ಜಿಲ್ಲೆಯಲ್ಲಿ ಮುದ್ರಣದ ವ್ಯವಸ್ಥೆಯೇ ಇರಲಿಲ್ಲ. ೧೮೩೫ ರಿಂದ ಬಾಸೆಲ್‌ನಿಂದ ಕ್ರೈಸ್ತ ಮತ ಪ್ರಚಾರಕ್ಕೆ ಬಂದ ಮಿಶನರಿಗಳು ಇಲ್ಲಿ ವ್ಯವಹರಿಸಲು ತುಳು ಭಾಷೆಯೇ ಪ್ರಮುಖವಾದದ್ದು ಎಂದು ಮನಗಂಡು ತುಳು ಭಾಷೆಯನ್ನು ಕಲಿಯತೊಡಗಿದರು. ದೇಶೀಯ ವಿದ್ವಾಂಸರೊಡನೆ ತುಳು ಭಾಷೆಯನ್ನು ಮಾತ್ರವಲ್ಲದೆ ತುಳು ಸಂಸ್ಕೃತಿಯನ್ನೂ ಅರಗಿಸಿಕೊಂಡು ಒಳಗೊಂಡ ಸಾಹಿತ್ಯಗಳನ್ನು ರಚಿಸಿದರು. ೧೮೩೮ರಲ್ಲಿ ಸ್ಥಾಪನೆಯಾದ ಶಾಲೆಗಳಿಗೆ ಮತ್ತು ಈ ಮೊದಲೇ ಸ್ಥಾಪನೆಗೊಂಡ ಸಭೆಗಳಿಗೆ ಬೇಕಾಗುವ ಕರಪತ್ರ, ಶಾಲಾ ಪಠ್ಯ ಪುಸ್ತಕಗಳನ್ನು ಮುಂಬಯಿಯಲ್ಲಿ ಮುದ್ರಿಸಿ ತರುತ್ತಿದ್ದರು.

೧೮೪೧ರಲ್ಲಿ ಭಾರತಕ್ಕೆ ಬಂದ ಜಿ. ಹೆಚ್‌. ವೈಗ್ಲೆ ಎಂಬವರು ಬೊಂಬಾಯಿಯಿಂದ ಒಂದು ಕಲ್ಲಚ್ಚು ಮುದ್ರಣ ಯಂತ್ರವನ್ನು ತಂದರು. ಈ ಶಿಲಾಯಂತ್ರದಲ್ಲಿ ಮೊದಲು ಮುದ್ರಣಗೊಂಡ ಕೃತಿ ‘ಸತ್ಯವೇದ’ದ ಒಂದು ಭಾಗವಾಗಿರುವ ‘ಮತ್ತಾಯನು ಬರೆದ ಸುವಾರ್ತೆ’. ಇದು ಭಾರತಕ್ಕೆ ಮೊದಲು ಬಂದ ಮಿಶನರಿಗಳಲ್ಲೊಬ್ಬರಾದ ಸಿ. ಎಲ್‌. ಗ್ರೇನರ್‌ ಎಂಬವರ ಭಾಷಾಂತರವಾಗಿದೆ. ಹೀಗೆ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣಗಳು ಜಿಲ್ಲೆಯಲ್ಲಿ ಆರಂಭವಾಯಿತು. ೧೮೪೨ರಲ್ಲಿ ಇನ್ನೊಂದು ಶಿಲಾಯಂತ್ರವನ್ನು ಮದ್ರಾಸಿನಿಂದ ತರಿಸಲಾಯಿತು. ಸುಮಾರು ೧೨ ವರ್ಷಗಳವರೆಗೆ ಕಲ್ಲಚ್ಚು ಮುದ್ರಣದಲ್ಲಿಯೇ ತುಳು ಸತ್ಯವೇದ, ಶಾಲೆಗೆ ಬೇಕಾಗುವ ಪಠ್ಯ ಪುಸ್ತಕಗಳು, ಧರ್ಮಪ್ರಚಾರಕ್ಕೆ ಬೇಕಾಗುವ ಪುಸ್ತಕಗಳು, ದಾಸರ ಪದಗಳು, ಚೆನ್ನಬಸವ ಪುರಾಣ, ಜೈಮಿನಿ ಭಾರತ, ಕನ್ನಡ ಗಾದೆಗಳು, ಯಾತ್ರಿಕನ ಸಂಚಾರ ಮುಂತಾದ ಹಲವಾರು ದೊಡ್ಡ ದೊಡ್ಡ ಕೃತಿಗಳು ಅಲ್ಲದೆ ಕನ್ನಡದ ಮೊದಲ ಪತ್ರಿಕೆಯಾದ ‘ಮಂಗಳೂರು ಸಮಾಚಾರ’ವೂ ಪ್ರಕಟಗೊಂಡಿವೆ.

೧೮೫೧ರಲ್ಲಿ ಭಾರತಕ್ಕೆ ಬಂದ ಚಾರ್ಲ್ಸ್‌ಜಾರ್ಜ್‌ಅಂಡ್ರ್ಯೂ ಪ್ಲೆಬ್ಸೈ (೧೮೨೩-೧೮೮೮) ಎಂಬ ಮಿಶನರಿಯ ನಾಯಕತ್ವದಲ್ಲಿ ಇಲ್ಲಿ ಲೆಟರ್‌ಪ್ರೆಸ್‌ನ ಸ್ಥಾಪನೆಯಾಯಿತು. ಹೊಸ ಮುದ್ರಾಕ್ಷರ ಯಂತ್ರಗಳು, ಅಚ್ಚುಮೊಳೆಗಳನ್ನು ತರಿಸಲಾಯಿತು. ೧೮೫೨ರಲ್ಲಿ ಕನ್ನಡ ಪಂಚಾಂಗ ಮೊದಲು ಮುದ್ರಣವಾಗುವುದರೊಂದಿಗೆ ಜಿಲ್ಲೆಯಲ್ಲಿ ಲೆಟರ್‌ ಪ್ರೆಸ್‌ನಲ್ಲಿ ಪುಸ್ತಕಗಳು ಪ್ರಕಟಗೊಳ್ಳಲು ಆರಂಭವಾಯಿತು. ಸಾವಿರಾರು ಪುಸ್ತಕಗಳು ಬೇರೆ ಬೇರೆ ಭಾಷೆಯಲ್ಲಿ ಮುದ್ರಣಗೊಂಡವು. ಬೊಂಬಾಯಿ ಸರಕಾರದ, ಮದ್ರಾಸ್‌ ಸರಕಾರದ ಪರವಾಗಿ ಪಠ್ಯಪುಸ್ತಕಗಳು ಇಲ್ಲಿ ಪ್ರಕಟಗೊಳ್ಳುತ್ತಿದ್ದವು. ೧೮೬೨ರಲ್ಲಿ ತಿರುಗೊಂದು ಹೊಸ ಛಾಪಾಯಂತ್ರ ತರಿಸಲಾಯಿತು. ೧೮೬೬ರಲ್ಲಿ ಕನ್ನಡ, ಮಲಯಾಳಂನಲ್ಲಿ ಬಾಸೆಲ್‌ಟೈಪ್‌ ಎಂಬ ಸುಂದರ ಮೊಳೆಗಳು ಬಾಸೆಲ್‌ನಲ್ಲಿ ಕೆತ್ತಿಸಲ್ಪಟ್ಟು ಇಲ್ಲಿ ಎರಕ ಹೊಯಿಸಲಾಯಿತು. ಅಲ್ಲದೆ ಬೇರೆ ಹಲವಾರು ಚಿತ್ತಾಕ್ಷರಗಳು ಕೆತ್ತಿಸಲ್ಪಟ್ಟವು. ೧೮೭೪ರಲ್ಲಿ ಬರ್ನೆಲನ Elements of South-India Palaeography ಎಂಬ ಲಿಪಿಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥವೊಂದು ಈ ಮುದ್ರಣ ಶಾಲೆಯಲ್ಲಿ ಮುದ್ರಿತವಾಯಿತು. ಈ ಉದ್ದೇಶಕ್ಕಾಗಿಯೇ ಲೆಪ್ಸಿಯನ್‌ ತಜ್ಞರ ಪ್ರಕಾರ ದೇಶ ಭಾಷೆಗಳನ್ನೆಲ್ಲಾ ಒಂದೇ ಬರಹದಿಂದ ಛಾಪಿಸುವ ಹಾಗೆ ಪ್ರತ್ಯೇಕ ಉಚ್ಚಾರ ಸೂಚಕ ನಿಶಾನಿಗಳಿರುವ ಅಕ್ಷರವನ್ನು ಕೆತ್ತಲಾಯಿತು. ಈ ಗ್ರಂಥದ ಮುದ್ರಣದಿಂದ ಬಾಸೆಲ್‌ಮಿಶನ್‌ಪ್ರೆಸ್‌ಅನೇಕ ವಿದೇಶೀಯರ ಮತ್ತು ದೇಶೀಯ ವಿದ್ವಾಂಸರ ಪ್ರಶಂಸೆಗೆ ಕಾರಣವಾಯಿತು.

“ಮುದ್ರಣದ ಯಾವ ಅಂಶವನ್ನು ತೆಗೆದುಕೊಂಡರೂ ಬಾಸೆಲ್‌ಮಿಶನ್ನಿನವರ ಕಾರ್ಯವು ಮಹೋನ್ನತವಾಗಿದೆ. ೧೯ನೇ ಶತಮಾನದ ಉತ್ತರಾರ್ಧದಲ್ಲಿ ಅದು ಕರ್ನಾಟಕದಲ್ಲಿ ಯಾವುದೇ ಪ್ರೆಸ್‌ಗಿಂತ ದೊಡ್ಡದಿದ್ದು, ಕನ್ನಡ, ಇಂಗ್ಲಿಷ್‌, ತುಳು ಮಾತ್ರವಲ್ಲದೆ ತಮಿಳು, ಮಳಯಾಳಂ, ಸಂಸ್ಕೃತ, ಜರ್ಮನ್‌ ಈ ಭಾಷೆಗಳ ಗ್ರಂಥ ಮುದ್ರಣವು ಅಲ್ಲಿ ನಡೆಯುತ್ತಿದ್ದವು. ಅಚ್ಚಾದ ಪುಸ್ತಕಗಳ ಹೊರನೋಟದ ಚೆಲುವು ಅನುಪಮವಾದುದು. The Basel Mission Press at Mangalore Canerese printing is unequalled for beauty by any other press in India- ಎಂಬ ಅಖಿಲ ಭಾರತ ಮನ್ನಣೆಯನ್ನು ಅಂದಿನ ಮದ್ರಾಸು ಸರಕಾರವು ಸಲ್ಲಿಸಿದುದು ಯಥಾರ್ಥವಾದದ್ದೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಸುಮಾರು ಅರ್ಧ ಶತಮಾನದವರೆಗೆ (ಕೊಡಿಯಾಲ್‌ ಬೈಲ್‌ ಪ್ರೆಸ್‌ ಒಂದನ್ನು ಬಿಟ್ಟರೆ) ಇದುವೇ ಏಕೈಕ ಮುದ್ರಣಾಲಯವಾಗಿದ್ದಿತು. ಜಿಲ್ಲೆಯಲ್ಲಿ ಆಮೇಲೆ ಸ್ಥಾಪಿತವಾದ ಅಚ್ಚುಕೂಟಗಳಾದರೂ ಇಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದವರ ನೆರವನ್ನೇ ಹೆಚ್ಚಾಗಿ ಪಡೆದವು.”[8]

೧೬೨ ವರ್ಷಗಳ ಹಿಂದೆ ಸ್ಥಾಪನೆಯಾದ ಈ ಮುದ್ರಣ ಶಾಲೆಯು ಪ್ರಸ್ತುತ ಬಲ್ಮಠ ಇನ್ಸ್‌ಟ್ಯೂಟ್‌ ಆಫ್‌ ಪ್ರಿಂಟಿಂಗ್‌ ಟೆಕ್ನಾಲಜಿ ಎಂಬ ಹೆಸರಿನಲ್ಲಿ ಇಂದಿಗೂ ಕಾರ್ಯವೆಸಗುತ್ತಾ ಇದೆ. ಇದೇ ಮುದ್ರಣಶಾಲೆಯಲ್ಲಿ ೧೬೨ ವರ್ಷಗಳ ಹಿಂದೆ ಕನ್ನಡ ಲಿಪಿಯಲ್ಲಿ ತುಳು ಸಾಹಿತ್ಯವು ಮುದ್ರಣಗೊಂಡು ಪ್ರಕಟಣೆಗೆ ಸಿದ್ಧವಾಗುತ್ತಿದ್ದವು. ಮೊದಲ ನೂರು ವರ್ಷಗಳಲ್ಲಿ ಪ್ರಕಟಗೊಂಡ ತುಳು ಕೃತಿಗಳ ಪ್ರಕಾರಗಳು, ಅಲ್ಲದೆ ಆ ಕಾಲಕ್ಕೆ ಪ್ರಕಟವಾದ ತುಳು ಸಾಹಿತ್ಯ ಚರಿತ್ರೆಗೆ ಸಂಬಂಧಪಟ್ಟ ಪುಸ್ತಕಗಳನ್ನೂ, ಪುಸ್ತಕ ಪ್ರಕಟಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿದೇಶೀಯರ ಮತ್ತು ದೇಶೀಯರ ಬಗ್ಗೆ ತಿಳಿದುಕೊಳ್ಳುವುದೇ ಈ ಲೇಖನದ ಉದ್ದೇಶವಾಗಿದೆ.

ಮಿಶನರಿ ಕಾಲದ ತುಳು ಸಾಹಿತಿಗಳು

ಜಿಲ್ಲೆಯಲ್ಲಿ ತುಳು ಭಾಷೆಯ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಹಲವರಿದ್ದಾರೆ. ಅವರುಗಳ ಪರಿಚಯ ಮಾಡಿಕೊಳ್ಳುವುದು ಇಲ್ಲಿ ಸೂಕ್ತವಾಗಿರುವುದರಿಂದ ಆಯ್ದ ಕೆಲವು ಮಿಶನರಿಗಳ ಸಂಕ್ಷಿಪ್ತ ಚರಿತ್ರೆಯನ್ನು ಇಲ್ಲಿ ಸಂಗ್ರಹಿಸಿಕೊಡಲಾಗಿದೆ.

ಕ್ರಿಸ್ಟೋಫ್‌ ಲಿಯೊನಾರ್ಡ್ ಗ್ರೈನರ್‌

ಜರ್ಮನಿಯ ಗೊಪ್ಪಿಂಗನ್‌ಎಂಬಲ್ಲಿ ೧೮೦೦ರಲ್ಲಿ ಜನನ. ೧೮೨೪ರಲ್ಲಿ ಭಾರತಕ್ಕೆ ಬಂದ ಮೊದಲ ಮೂರು ಮಿಶನರಿಗಳಲ್ಲಿ ಒಬ್ಬರು. ೧೮೫೪ರ ತನಕ ಮಂಗಳೂರಿನ ಸಭೆಗಳಲ್ಲಿ ಸೇವೆ ಸಲ್ಲಿಸಿ ಮುಂದೆ ಉಡುಪಿಯಲ್ಲಿ ತಮ್ಮ ಕ್ರೈಸ್ತ ಸೇವಾಕಾರ್ಯವನ್ನು ಮುಂದುವರಿಸಿದರು. ೧೮೫೬ರಲ್ಲಿ ಸ್ವದೇಶಕ್ಕೆ ಮರಳಿದರು. ಶ್ರೀಮತಿ ಗ್ರೈನರ್‌ ಮಂಗಳೂರಿನ ಹುಡುಗಿಯರ ವಸತಿಶಾಲೆಯಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು. ಮೊದಲ ತುಳು ಭಾಷಾಂತರಕಾರರೆಂಬ ಖ್ಯಾತಿಗೆ ಪಾತ್ರರಾದ ಇವರು ಹೊಸ ಒಡಂಬಡಿಕೆಯ ಮತ್ತಾಯನ ಸುವಾರ್ತೆಯನ್ನು ತುಳುವಿಗೆ ಭಾಷಾಂತರಿಸಿದ್ದಾರೆ. ಅಲ್ಲದೆ ಹೊಸ ಒಡಂಬಡಿಕೆಯ ಭಾಷಾಂತರದಲ್ಲಿ ಅಗ್ರಗಣ್ಯರೂ ಆಗಿದ್ದಾರೆ. ಕನ್ನಡದಲ್ಲಿ ಎರಡು ಸಂಗೀತ ಕೃತಿಗಳನ್ನು ರಚಿಸಿದ್ದಾರೆ.

ಜೆ. ಜೆ. ಅಮ್ಮನ್ನ್‌

ಸ್ವಿಜರ್ಲೆಂಡಿನಲ್ಲಿ ೬-೭-೧೮೧೬ರಲ್ಲಿ ಜನಿಸಿದ ಇವರು ೧೮೩೫ರಲ್ಲಿ ವೇಗಲ್‌ರೊಂದಿಗೆ ಭಾರತಕ್ಕೆ ಬಂದರು. ಬೊಂಬಾಯಿಯಲ್ಲಿದ್ದುಕೊಂಡು ಕನ್ನಡ ಭಾಷೆಯನ್ನು ಕಲಿತು ೧೮೪೦ರಲ್ಲಿ ಮಂಗಳೂರಿಗೆ ಆಗಮಿಸಿದರು. ಕದಿರೆ, ಹಳೆಯಂಗಡಿ, ಮೂಲ್ಕಿ, ಉಡುಪಿ, ಮಂಗಳೂರು, ಹೊನ್ನಾವರ ಇವರ ಸೇವಾ ಕ್ಷೇತ್ರಗಳು. ೧೮೫೮ರಲ್ಲಿ ತುಳು ಭಾಷೆಗೆ ಸತ್ಯವೇದದ ಹೊಸ ಒಡಂಬಡಿಕೆಯ ಕೆಲವು ಭಾಗಗಳ ಭಾಷಾಂತರ ಕೆಲಸವನ್ನು ಮಾಡಿಕೊಟ್ಟರು. ಸತ್ಯವೇದ ಭಾಷಾಂತರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ತುಳುವಿನಲ್ಲಿ ೮ ಸಂಗೀತ ಕೃತಿಗಳ ರಚನೆ ಹಾಗೂ ತರ್ಜುಮೆ ಮಾಡಿದರು. ಇತರರೊಂದಿಗೆ ೨ ತುಳು ಸಂಗೀತ ರೂಪಕಗಳ ರಚನೆ ಹಾಗೂ ತರ್ಜುಮೆ ಮಾಡಿದರು. ಇವು ಇವರ ಸಾಹಿತ್ಯಿಕ ಕೊಡುಗೆಯಾಗಿರುತ್ತದೆ. ೨-೧-೧೮೬೩ರಲ್ಲಿ ಉಡುಪಿಯಲ್ಲಿ ನಿಧನ. ಹಳೆಯಂಗಡಿಯಲ್ಲಿರುವ ಅಮ್ಮನ್ನ್‌ಸ್ಮಾರಕ ದೇವಾಲಯ ಇವರ ನೆನಪಿಗಾಗಿ ರಚಿತವಾಯಿತು.

ಜಿ. ಕೆಮರರ್‌

ಜರ್ಮನಿಯ ವುಟೆನ್‌ಬರ್ಗ್‌ನ ಲಂಗೆನೌ ಎಂಬಲ್ಲಿ ೨೨-೧-೧೮೩೧ಲ್ಲಿ ಜನನ. ಬಾಸೆಲ್‌ಕಾಲೇಜಿನಲ್ಲಿ ದೈವಜ್ಞಾನ ತರಬೇತಿ ಪಡೆದು ೧೮೫೫ರಲ್ಲಿ ಭಾರತಕ್ಕೆ ಬಂದು ಅಮ್ಮನ್‌ರೊಂದಿಗೆ ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬಂದ ವರ್ಷದಲ್ಲೇ ತುಳು ಭಾಷೆಯನ್ನು ಕಲಿತು ತುಳು ಭಾಷೆಯಲ್ಲಿ ಕ್ರೈಸ್ತ ಬೋಧನೆಗಳನ್ನು ಕೊಡುತ್ತಿದ್ದರು. ಅಲ್ಪಕಾಲದ ಸೇವಾ ಅವಧಿಯಲ್ಲಿ ಅಸೌಖ್ಯದಿಂದ ೯-೧೧-೧೮೫೮ರಲ್ಲಿ ಉಡುಪಿಯಲ್ಲಿ ನಿಧನ ಹೊಂದಿದರು.

ತುಳು ನಿಘಂಟು ರಚನೆಗೆಂದು ೨೦೦೦ ಶಬ್ದಗಳ ಸಂಗ್ರಹ, ೧೨ ತುಳು ಸಂಗೀತ ಕೃತಿಗಳ ರಚನೆ, ಇತರರೊಂದಿಗೆ ೫ ತುಳು ಸಂಗೀತಗಳ ರಚನೆ, ಅಮ್ಮನ್ನ್‌ರೊಂದಿಗೆ ೧೨೦ ಗೀತಗಳನ್ನು ಸಂಪಾದಿಸಿ ಪ್ರಕಟಣೆ ಇವು ಇವರ ಸಾಹಿತ್ಯ ಸಾಧನೆಯಾಗಿದೆ.

ಆಗಸ್ಟ್‌ ಮೆನ್ನರ್‌

ಜರ್ಮನಿಯ ವುಟೆಂಬರ್ಗ್‌ನ ಓಸ್‌ವೆಲ್‌ ಎಂಬಲ್ಲಿ ೨೨-೭-೧೮೨೧ರಂದು ಇವರ ಜನನ. ೧೮೫೭ರಲ್ಲಿ ಭಾರತಕ್ಕೆ ಆಗಮನ. ಮೊದಲಿಗೆ ೨೦ ವರ್ಷ ಮುಲ್ಕಿಯಲ್ಲಿ ನಂತರ ಉಡುಪಿಯಲ್ಲಿ ಅವರ ಸೇವೆ. ಸಭಾ ಸೇವೆಯೊಂದಿಗೆ ಅಸೌಖ್ಯದಲ್ಲಿದ್ದವರಿಗೆ ವೈದ್ಯಕೀಯ ನೆರವು ನೀಡುತ್ತಿದ್ದರು. ೧೮೭೮ರಲ್ಲಿ ಮಂಗಳೂರಿನ ದೊಡ್ಡ ಸಭೆಯ ಅಧಿಕಾರ ವಹಿಸಿಕೊಂಡರು. ಜಿಲ್ಲೆಯ ಮುಖ್ಯ ಮಿಶನರಿಯಾಗಿ ಅಲ್ಲದೆ ಭಾರತದಲ್ಲಿರುವ ಬಾಸೆಲ್‌ಮಿಶನ್‌ಸಭೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೩೩ ವರ್ಷಗಳ ಬಳಿಕ ೧೮೯೧ರಲ್ಲಿ ತನ್ನ ಸ್ವದೇಶಕ್ಕೆ ಮರಳಿ ನಾಲ್ಕು ವಾರಗಳೊಳಗೆ ೨೫-೪-೧೮೯೧ರಲ್ಲಿ ನಿಧನರಾದರು. ತುಳು ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಗಣ್ಯರೆಂಬ ಸ್ಥಾನ ಪಡೆದ ಮ್ಯಾನರ್‌ರವರ ಸಾಹಿತ್ಯ ಕೃತಿಗಳು ಇವು :

೧. ತುಳು ಇಂಗ್ಲಿಷ್‌ನಿಘಂಟು-೧೮೮೬

೨. ಇಂಗ್ಲಿಷ್‌ತುಳು ನಿಘಂಟು-೧೮೮೮

೩. ಪಾಡ್ದನೊಳು

೪.ಎಂಕ್‌ಲಾ ಒಂಜಿ ಇಲ್ಲ್‌ ಉಂಡು

೫. ಕಲಿ ಗಂಗಸರ ಮಳ್ತ್‌ದ್‌ ಮಾರುನವು ಕ್ರೈಸ್ತೆರೆಗ್‌ ಯೋಗ್ಯದವು ಆದುಂಡಾ?

೬. ಸಹಸ್ರಾರ್ಧ ತುಳು ಗಾದೆಳು

೭. ಕೊಂಕಣಿ ಪುಸ್ತಕ (ಕ್ರಿಸ್ಮಸ್‌ ವಿಷಯದಲ್ಲಿ)

೮. ೧೬ ಕನ್ನಡ ಸಂಗೀತ ರೂಪಕಗಳ ರಚನೆ / ತರ್ಜುಮೆ

೯. ೧೬೮ ತುಳು ಗೀತಗಳ ರಚನೆ / ತರ್ಜುಮೆ

೧೦. ಬಾಲಕರ ಗೀತಗಳ ಸಂಗ್ರಹದಲ್ಲಿ ಒಂದು ಕನ್ನಡ ಸಂಗೀತ ಭಾಗದ ರಚನೆ

೧೧. ತುಳುವೆರೆಡ್‌ ನಡಪು ಭೂತ ಸೇವೆ

೧೨. ಭೂತವಿದ್ಯೆ

೧೩. ಸತ್ಯವೇದದ ಕೆಲವು ಭಾಗಗಳ ಭಾಷಾಂತರ

೧೪. ಸಂಗೀತ ಕ್ರಿಯೆಗಳ ಸ್ವರದ ಪುಸ್ತಕ ಸಂಪಾದಕರಾಗಿ ಸೇವೆ.

೧೫. ‘ಕನ್ನಡ ಪಂಚಾಂಗ’ ಮತ್ತು ‘ಕ್ರೈಸ್ತ ಸಭಾಪತ್ರ’ ಪತ್ರಿಕೆಗಳ ಸಂಪಾದಕರಾಗಿ ಸೇವೆ.

೧೬. On Bhutas – an article

೧೭. The Origin of the Demouns-an article

ಮ್ಯಾನರ್‌ರವರ ತುಳು ನಿಘಂಟು, ತುಳು ಸಂಗೀತ ರಚನೆಗಳು, ಭೂತಾರಾಧನೆ, ಪಾಡ್ದನಗಳು – ಇವುಗಳು ತುಳು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸ್ಥಾನ ಪಡೆದಿದ್ದು, ಇದರಿಂದ ಇವರು ಮಿಶನರಿಗಳ ಕಾಲದ ಅಗ್ರಗಣ್ಯ ತುಳು ಸಾಹಿತಿ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ.

 

[1] ಶ್ರೀನಿವಾಸ ಹಾವನೂರು, ಪು.೧೧. ಹೊಸಗನ್ನಡ ಅರುಣೋದಯ

[2] Hunter W.W., (p. 143), Imperial Gazeteer of India Vol. IX, London : Trubnur & 1881).

[3] Buchanan, Francis, (P. 90 A Journey From Madras through the countries of Mysore, Canara and Malabar Vol.III, 1870)

[4] Sturrock., (p. 136), Madras District Manual Vol. I, 1886)

[5] ಶ್ರೀನಿವಾಸ ಹಾವನೂರು, ಪು. ೧೪, ಹೊಸಗನ್ನಡ, ಅರುಣೋದಯ, ಪ್ರ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ೧೮, ೨೦೦೧

[6] ಅಮೃತ ಸೋಮೇಶ್ವರ, ೧೯ನೇ ಶತಮಾನದಲ್ಲಿ ತುಳು ಸಾಹಿತ್ಯಕ್ಕೆ ಮಿಶನರಿಗಳ ಕೊಡುಗೆ, (ತುಳುವರಿವರು), ಪುಟ ೨೧೭, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ

[7] ಯು. ಪಿ. ಉಪಾಧ್ಯಾಯ, ಲೇಖನ – ತುಳುವಿನ ಮೊದಲ ವೈಯಾಕರಣ (ತುಳುವರಿವರು), ಪುಟ ೨೩೪, ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನೆ ಕೇಂದ್ರ, ಉಡುಪಿ

[8] ಶ್ರೀನಿವಾಸ ಹಾವನೂರ, ಪು, ೩೭, ಹೊಸಗನ್ನಡ ಅರುಣೋದಯ