ದ್ರುತಬಿಲಂಬಿತವೃತ್ತ

ಭಂಡೆರಾ. ಯಿವಿಕಲ್ಪೆ. ರೆ. ತಿರ್ದಯೆರಾ
ಪಂಡಿತೇ. ರ್ಕುಳು. ತೀರ.ನೆ. ಕುಳ್ಳ್ ತೆರ್
ಉಂಡ್ ಮಾಂ. ತೆರ್. ವ್ಯಾಸೆ.ರ್. ಜಾಕಸ್ಟೆನಿ
ಖಂಡಿಪು. ಪ್ಪೆರಂದಾಕು.ಳು. ತರ್ಕಿತೆರ್(೧-೪-೩೧)

ಇಲ್ಲಿಯ ಪ್ರತಿಪಾದಗಳಲ್ಲಿ ನ+ಭ+ಭ+ರ ಗಣಗಳಿರುತ್ತವೆ. ಈ ಗಣಸಂಯೋಜನೆ ಯನ್ನು ಮಾತ್ರಾಗತಿಗೆ ಅಳವಡಿಸಿದರೆ ‘ನಸಲ ಭಾನಸ ಭಾನಸ | ರಾಜಭಾ || (೫. ೫. ಗು. ೫) ಎಂದಾಗಿ ಸರ್ವತ್ರ ವರಣವಿರುವ ಯಕ್ಷಗಾನದ ಕೇದಾರಗೌಳ ಝಂಪೆಯ ಛಂದೋಗತಿಯನ್ನು ಹೋಲುತ್ತದೆ.

ಇದರ ಕೊನೆಯ ರಗಣವನ್ನು ಭಗಣವನ್ನಾಗಿ ಪರಿವರ್ತಿಸಿ, ಅದಕ್ಕೊಂದು ಗುರುವನ್ನು ಸೇರಿಸಿ, ಹೊಸತಾದ ಒಂದು ವೃತ್ತವನ್ನು ಹೊಸೆದಿರುವುದು ವಿಶೇಷವಾಗಿದೆ.

ಪರಮ. ವೈಷ್ಣವೆ. ರಾಸ್ಟ್ ಮ. ಹತ್ತ್ ಕು.ಳೂ
ಉರ್ ಳ್. ಪೋವಯೆ. ರೇನ್ಯಲ. ದುರ್ಗತಿ.ಕ್
ಪರಮ. ಭಕ್ತರೆ. ಸಂಗತಿ. ನೀಲೆಭಿ.ತ್
ಪರಮ. ತತ್ಸುಖ. ಗುಡ್ಡೆಟ್. ಶೋಭಿಪೆ.ರ್     (೧-೪-೪೪)

ತರಳ ವೃತ್ತವು ಮಲ್ಲಕಾಮಾಲೆಯಾಗುವ ಹಾಗೆ ಇರುವ ಪಾದಾದಿಯ ‘ನಗಣ’ವನ್ನು ಗುರ್ವಾದಿಯಾಗಿ ತ್ರಿಮಾತ್ರಗಣವನ್ನಾಗಿ ಭಾವಿಸಿಕೊಂಡು, ಮತ್ತೊಂದು ವೃತ್ತವನ್ನು ಹೆಣೆದಿರುವುದೂ ಇದೆ.

ಸಾಧು. ಸಂಗತಿ. ಟ್ ತ್ತಸ. ಹಸ್ರಗು. ಣಂ.
ಸಾಧಿ. ಪೆನ್ಕಿಪ್ರ. ಸಂಗೊಮಿ. ನಾರದೆ.ರ್
ಬೋಧಿ. ಪೋಪ್ಪೆರ್. ನಂಬುತ. ಜನ್ಮಫ. ಲಂ
ಸಾಧು. ಸಜ್ಜನೆ. ರೆಯೆ ರ್ಯ. ಸೂಕ್ಷಿಪಿ. ಲೆ        (೧-೫-೩)

ಇದು ತೋಟಕ ವೃತ್ತದ ಮೊದಲ ಲಘುವನ್ನು ಗುರುವನ್ನಾಗಿಸಿದ ‘ಛದ್ಮ ಬಂಧ’ ಎಂಬುದನ್ನೂ ಸೂಕ್ಷ್ಮಾವಲೋಕನದಿಂದ ತಿಳಿಯಬಹುದು.

ವಿಷ್ಣುತುಂಗನು ಇಲ್ಲಿ ಪ್ರಯೋಗಿಸಿರುವ ಎಲ್ಲ ವಿನೂತನ ವೃತ್ತಗಳನ್ನು ಗಮನಿಸಿದರೆ, ಒಂದು ವಿಚಾರ ಸ್ಪಷ್ಟವಾಗುತ್ತದೆ. ಅವನಿಗೆ ಗುರು ಲಘುಗಳ ವರ್ಣವೃತ್ತನಿಯಮಕ್ಕಿಂತಲೂ, ಅದು ಉಂಟುಮಾಡುವ ‘ಲಯಪ್ರತೀತಿ’ ಮುಖ್ಯವೆಂದು ಕಂಡಿರಬೇಕು. ಆ ಕಾರಣದಿಂದಲೇ ತೋಟಕ, ಚಿತ್ರಪದ, ವನಮಯೂರ, ದ್ರುತವಿಲಂಬಿತಾದಿ ವೃತ್ತಗಳು ಮಾತ್ರಾಗತಿಯಲ್ಲಿ ನರ್ತಿಸತೊಡಗಿದವೆಂದು ತೋರುತ್ತದೆ. ‘ಛಂದಸ್ಸಿನ ಆತ್ಯಂತಿಕ ಸಾರ್ಥಕ್ಯ ಕಾವ್ಯದ ಗಾಯನದಲ್ಲೇ’ ಎಂಬುದು ವಿಷ್ಣುತುಂಗನ ಅಭಿಪ್ರಾಯವಾಗಿತ್ತೆಂಬುದನ್ನೂ ನಾವಿಲ್ಲಿ ಗ್ರಹಿಸಬಹುದು.

ಸಂಸ್ಕೃತ ವೃತ್ತಛಂದಸ್ಸುಗಳನ್ನು ಚೆನ್ನಾಗಿ ಅಭ್ಯಾಸಮಾಡಿದ ಕವಿಗೆ ಅವುಗಳಲ್ಲಿ ಹುದುಗಿದ್ದ ‘ಸತಾಲಗತಿ’ ವೇದ್ಯನಾಗಿರಬೇಕು. ಆ ಕಾರಣದಿಂದಾಗಿಯೇ ಸಂಸ್ಕೃತ ವೃತ್ತಛಂದೋಗತಿಯನ್ನು ದಾಟಿ ಅವನು ಮುನ್ನಡೆಯುವುದು ಸಾಧ್ಯವಾಯಿತು. ಪಾದಾಂತದಲ್ಲಿ ಲಘುವಿದ್ದರೂ ಅದನ್ನು ಗುರುವೆಂದು ಪರಿಗಣಿತವಾಗುತ್ತದೆ. ವಿಷ್ಣುತುಂಗ ಸಂಸ್ಕೃತನಿಯಮವನ್ನು ಬಳಸಿಕೊಂಡಿರುವುದು ಇಲ್ಲಿ ಗಮನಾರ್ಹ. ಕನ್ನಡದ ದ್ವಿತೀಯಾಕ್ಷರಪ್ರಾಸವನ್ನು ಒಪ್ಪಿಕೊಂಡರು, ಪ್ರತಿ ಪದಾಂತ್ಯದಲ್ಲಿ ಹ್ರಸ್ವವಾಗಿದ್ದ ಅಕ್ಷರವನ್ನೂ ದೀರ್ಘವೆಂದೇ ಪರಿಗ್ರಹಿಸಿದ್ದು, ಅವನ ಕಾವ್ಯರಚನಾಕೌಶಲ! ಇದರಿಂದ ಪ್ರತಿ ಪದ್ಯಪಾದದ ಕೊನೆಗೆ ಗುರುಸಂಜ್ಞೆಯುಳ್ಳ ಪದಗಳನ್ನೇ ಹುಡುಕುವ ಪರಿಶ್ರಮ ನಿವಾರಣೆಯಾಗಿದೆ. ಇನ್ನು ಕೆಲವೆಡೆ ಪದ್ಯದ ಎರಡು ಮತ್ತು ನಾಲ್ಕನೇ ಪದದ ಮೊದಲಿಗೆ ಲಯಪೂರ್ವಗ್ರಾಹಿಯಾದ ಗಣನಿಯಮಕ್ಕೊಳಪಡದ ಒಂದು ಅತೀತಾಕ್ಷರದ ಬಳಕೆ ಕಂಡುಬರುತ್ತದೆ. ಉದಾ:

೧. ಪ್ರ- ಲಂಬಸೂದನೆ ಗಾಂದಿನೀ ಸುತೆಯಾರೆ ದಿವ್ಯಕುಮಾರೆರ

೨. ವಿ- ರಿಂಚೇರ್ಕುಳೆ ಸಂಘೊಮುದೀತ್ ಲೆಯಿತಾನಂದಿತರ್ ಪ್ಪಾ

೩. ಅ – ಧರ್ಮೇ ನಡೆತಾಡೆ ಪ್ರವೇಶಿತೆನಾ ರೋಷಾನ್ವಿತೆಯಾಸ್ಟ್

೪. ಅ- ನೇಕವೀರ್ಯ ಪರಾಕ್ರಮೊಂಟತಿ ಚೋರ್ಕ್‌ಸ್ಟ್ ಮತಿವರ್ಧಿತ್

ಇದರಿಂದ ಪದ್ಯದ ಗೇಯತೆಗೆ ತೊಡಕಾಗದೆ, ಒಂದು ರೀತಿಯ ಗತಿರೋಚಕತ್ವ ಉಂಟಾಗುವುದು. ಇಲ್ಲಿಯ ವಿಶೇಷತೆ, ವಿಷ್ಣುತುಂಗನು ಪದ್ಯದ ಧಾಟಿಯ ಕಡೆಗೆ ಗಮನವಿಟ್ಟುಕೊಂಡು, ಉದ್ದೇಶಪೂರ್ವಕವಾಗಿಯೇ ಛಂದಃಶಾಸ್ತ್ರದ ಗಡುಸಾದ ನಿಯಮ – ನಿಬಂಧನೆಗಳನ್ನು ಮೀರುವ ಸೃಜನಶೀಲ ಕವಿಯಾಗಿದ್ದನೆಂಬುದು ಇದರಿಂದ ವೇದ್ಯವಾಗುತ್ತದೆ.

ಅಂಶಷಟ್ಪದ

ವಾರಿಜಾ, ಸನಭಾರ್ಯೆ
ನಾರೆಸ್ಟ್, ಹೃದಯಂಟ್
ಮಾರಾರಿ, ತನಯಕಂ, ಚೆರಗ್ ಸ್ಟೊಂಡ್ |
ಘೋರೊಮಾ, ಯಿನಸೈನ್ಯ
ದ್ವಾರಕೀ, ಪೊಗ್ ಸ್ಟ್ ತ್ತಿ. ಕಥೆ. ರೆಚಿಪ್ಪೆ ||

ಇದು ‘ಮಂದರಧರಗಣಂ ಬಂದಿರ್ಕಾರಂತ್ಯದೊಳ್ ಕುಂದವೆ ನೆಲಸುಗೆ ಮದನ ಹರಂ’ ಎಂಬ ನಾಗವರ್ಮನ ಛಂದೋಂಬುಧಿಯ ಲಕ್ಷಣಕ್ಕೆ ಅನುಗುಣವಾದ ಅಂಶಷಟ್ಪದ. ತ್ರಿಮೂರ್ತಿಗಣಬದ್ಧವಾದ ಈ ‘ಮೂಲಷಟ್ಪದಿ’ ಕನ್ನಡ ಕಾವ್ಯಲೋಕದಲ್ಲಿ ಸುಮಾರು ೧೦-೧೧ನೇ ಶತಮಾನದಲ್ಲಿಯೇ ನಶಿಸಿಹೋಯಿತು. ಇದುವರೆಗೆ ಕನ್ನಡ ಕಾವ್ಯಗಳಲ್ಲಿ ಗುರುತಿಸಲಾದ ಈ ಮೂಲಷಟ್ಪದಿಗಳ ಸಂಖ್ಯೆ ಕೇವಲ ಹನ್ನೆರಡು! ಅದರಲ್ಲೂ ಮದನತಿಲಕ, ಸುಕುಮಾರಚರಿತೆಗಳ ಎರಡು ಉದಾಹರಣೆಗಳನ್ನು ಬಿಟ್ಟರೆ ಉಳಿದುವೆಲ್ಲ ಶಾಸ್ತ್ರ ಮತ್ತು ಶಾಸನಗಳಲ್ಲಿ ದೊರೆತವುಗಳು. ಈ ಛಂದೋಬಂಧ ಶುದ್ಧ ಸಾಹಿತ್ಯದಲ್ಲಿ ಸ್ಥಾನ ಪಡೆಯಲೇ ಇಲ್ಲ. ಆದರೆ ಈ ಬಂಧವನ್ನು ನಮ್ಮ ಯಕ್ಷಗಾನ ಕವಿಗಳು ಚೆನ್ನಾಗಿಯೇ ಬಳಸಿಕೊಂಡರು. ಅಂಗದಸಂಧಾನ, ಗಿರಿಜಾಕಲ್ಯಾಣ, ಮೈರಾವಣ ಕಾಳಗ, ಮೀನಾಕ್ಷಿ ಕಲ್ಯಾಣ-ಮುಂತಾದ ಯಕ್ಷಗಾನ ಪ್ರಸಂಗಗಳಲ್ಲಿ ಅಂಶಷಟ್ಪದಗಳು ತಾಲಬಂಧಗಳಾಗಿ ಬಳಕೆಗೊಂಡಿವೆ. ಪ್ರಾಯಃ ಈ ಪ್ರಯೋಗಪ್ರಾಚುರ್ಯದಿಂದಲೇ ತುಳುಕಾವ್ಯ ಲೋಕಕ್ಕೂ ಇವುಗಳು ಪ್ರವೇಶ ಪಡೆದಿರಬೇಕು. ‘ಶ್ರೀ ಭಾಗವತೊ’ದಲ್ಲಿ ಇಂತಹ ಹದಿನಾರು ಅಂಶಪಟ್ಟಿಗಳು ದೊರೆತಿರುವುದನ್ನು ಡಾ. ಪಾದೇಕಲ್ಲು ವಿಷ್ಣುಭಟ್ಟರು ಸಂಶೋಧಿಸಿದ್ದಾರೆ. (ಕರ್ನಾಟಕ ಲೋಚನ – ದಶಂಬರ, ೧೯೯೦)-

೧. ವಾರಿಜಾಸನ ಬಾರ್ಯೆನಾರೆಸ್ಟ್ – (೧-೧೦-೧)

೨. ಮುನಿಮುಖ್ಯೇರ್ಕುಳೆ ಮುನ್ನಾ – (೧-೧೦-೨)

೩. ಓಲಕೊಂಕ್ ಮುಕುಂದ – (೧-೧೦-೩)

೪. ಉದಯಪರ್ವತಶೃಂಗ – (೧-೧೦-೪)

೫. ಅಂಗಜಾಂತಕಪುತ್ರಕಿಂಗಸ್ಟ್ – (೧-೧೯-೧)

೬. ಪಂಚಭೂತೊಮತೈನ್   – (೩-೧೮-೨೪)

೭. ಈತತ್ವಂಕುಳೆಕರ್ಮವ್ರಾತೊ – (೩-೧೮-೨೫)

೮. ಚಿತ್ತಜಾರಿಕುಮಾರ – (೩-೨೦-೧)

೯. ತನಪುತ್ರ ವಚನಂತ ವಿನಯ – (೩-೨೦-೨)

೧೦. ಅಪ್ಪಾ ಕೇಳೀಲೆ ಭಕ್ತಿಟ್ ಪ್ಪೋಡೆನ್ಕಿ – (೩-೨೦-೩)

೧೧. ಕಲಹೊ ಕಂಡಕೊಮಾಯಿ – (೩-೨೦-೪)

೧೨. ಎನನಾಮಸ್ತುತಿ ಕೇಂಡಂಚೆನ – (೩-೨೦-೫)

೧೩. ಎನ ಭಕ್ತಿ ಧೃಡಿಯೀತ್ – (೩-೨೦-೬)

೧೪. ಎನ ಭಕ್ತೇರ್ಕುಳೆಟೂಡ್ – (೩-೨೦-೭)

೧೫. ನಿಜಭಕ್ತಿವೈರಾಗ್ಯೊ – (೩-೨೨-೩)

೧೬. ದೇವೀ ಭಾರತಿಗಂಗಾದೇವಿ – (೩-೨೪-೧)

ಆದರೆಅರುಣಾಬ್ಜನ ‘ಮಹಾಭಾರತೊ’ಕಾವ್ಯಕ್ಕೆ ಹೋಲಿಸಿದರೆ ಇಲ್ಲಿ ಬಳಕೆಗೊಂಡ ಅಂಶಷಟ್ಪದಿಗಳ ಸಂಖ್ಯೆ ತೀರಾ ಕಡಿಮೆಯೆನ್ನಬೇಕು.

ಕಾವ್ಯದ ಸೊಗಸು

ನಾಂದೀಪದ್ಯಗಳು

ಜನ್ಮಾದಿಕುಳಾಯಿ ತ್ರಿಸಗೊಮಿನೀ ಅರ್ಥಾದಿಸ್ವರಜ್ಞೇ
ಬ್ರಹ್ಮಾದಿಕವೀಶ್ವರ ಸೂರಿಕುಳೊ ತನಿ ಪಿನ್ಕಿ ಪ್ರಕಾರೊ
ನಿರ್ಮಿತೇರ್ ವಾರಿತ ತೇಜದೃಶಂ ಮೃತ್ಪಿಂಡಿಪ್ರಕಾರೊ
ನಾಮ್ನಾಯ ನಿರಸ್ತಕುಹಚ್ಚಕ ಸತ್ಯ ಪರಾತ್ಮಕ್ ವಂದೇ || (೧-೧-೧)

ಇದು ಸಂಸ್ಕೃತ ಭಾಗವತ ಪ್ರತಿಚ್ಚಾಯೆ. ಮೂಲದಲ್ಲಿರುವ ‘ಜನ್ಮದೃಸ್ಯಯತೋನ್ನಯಾ’ ಎಂಬ ಪ್ರಸಿದ್ದ ವೃತ್ತದಲ್ಲಿರುವ ಪರಬ್ರಹ್ಮ ಸ್ತುತಿಯನ್ನು ಇಲ್ಲಿ ತುಳುವಿನಲ್ಲಿ ಅನುವಾದಿಸಲಾಗಿದೆ. ಪೌರಾಣಿಕವಾದ ಯಾವುದೇ ಕಲ್ಪನೆ ವರ್ಣಿನೆಗಳಿಲ್ಲದ ಈ ತತ್ವಾರ್ಥಗರ್ಭಿತವಾದ ಪದ್ಯದ ಕೊನೆಯಲ್ಲಿ ಬರುವ ಸತ್ಯಂ ಪರಂ ಧೀಮಹಿ’ ಎಂಬ ವಾಕ್ಯವು ಗಾಯತ್ರೀ ಮಂತ್ರಾರ್ಥವನ್ನು ಪ್ರತಿಪಾದಿಸುತ್ತದೆ. ಈ ಮೂಲಶ್ಲೋಕದ ಆಶಯವನ್ನೇ ಅಲ್ಪಸ್ವಲ್ಪ ವ್ಯತ್ಯಾಸ ಮಾಡಿ, ಕವಿ ವಿಷ್ಣುತುಂಗನು ತನ್ನ ಕಾವ್ಯದ ನಾಂದೀ ಪದ್ಯವಾಗಿ ಹೆಣೆದಿದ್ದಾನೆ. ಪದ್ಯದ ಆರ್ಥವಿವರಣೆ ಮನಂಬುಗುವಂತಿದೆ.

“ಬ್ರಹ್ಮಾದಿ ದೇವತೆಗಳೂ, ಪಂಡಿತರೂ ಜ್ಞಾನಿಗಳೂ ತನ್ನನ್ನು ತಿಳಿಯುವಂತೆ ಸರ್ವಜ್ಞನಾದ ಯಾವ ಪಂಡಿತರೂ, ಜ್ಞಾನಿಗಳೂ ತನ್ನನ್ನು ತಿಳಿಯುವಂತೆ ಸರ್ವಜ್ಞನಾದ ಯಾವ ಪರಮಾತ್ಮನು ಪೃಥ್ವಿ-ಆಪ್ ತೇಜಗಳಿಂದ ಸೃಷ್ಟಿ ಸ್ಥಿತಿ ಲಯಗಳಿರುವ ಸತ್ತ್ವರಜಸ್ತಮಗಳನ್ನು ಸತ್ಯಸ್ವರೂಪನೂ ಪರವಸ್ತವೂ ಜ್ಞಾನರೂಪಿಯೂ ಆದ ಭಗವಂತನಿಗೆ ನಮಸ್ಕರಿಸುತ್ತೆನೆ.”

ಅನಂತರದ ಎರಡು ಪದ್ಯಗಳನ್ನು ಮೂಲದ ಆಶಯವನ್ನೇ ಆಧರಿಸಿದೆ, .
ಧರ್ಮೊಕುಳೆ ಸಾರೊಮಿ ತಾನ್ನಿನೆತೇ ವೇದಂತ ರಹಸ್ಯೊ
ನಿರ್ಮತ್ಸರೆರೇನ್ಯಲ ಪಿನ್ಕಿ ವಿಧಂ ತಾಪತ್ರಯನಾಶೊ
ಸನ್ಮಾರ್ಗೊಮಿ ಚೂಪೊಸ್ಟ್ ಭಾಗವತಂ ರಚಿತಿತ್ತನ ವ್ಯಾಸ
ಬ್ರಹ್ಮಜ್ಞ ಮಹಾಮುನಿ ಶ್ರೀಚರಣಂಕಭಿವಂದಿತೊಳ್ ಪ್ಪೇ ||          (೧-೧-೨)
ನಿಗಮೋನ್ಕಿನ ಕಲ್ಪತರುನ್ತುದಿಟೇ ಫಲೊಮಾಸ್ಟೊಸಗ್ ಪ್ಪೀ
ಭಗವತ್ಕಥೆಯೆನ್ಕಿ ಮಹಾರಸೊಮೀ ಶುಕುಯೋಗಿಮುನೀಂದ್ರೆ
ತಿಗೆಪಂತೆ ಮುಖಾಂಬುಜಂಟಾರಿತಯೇ ಯೀ ಲೋಕಜನಂಕ್
ಸೊಗಸಾಕಿ ಪ್ರಕಾರೊ ಪ್ರಕಾಶಿತಿನಾ ಗುರು! ವಂದಿತೊಳ್ ಪ್ಪೇ ||     (೧-೧-೩)

ಇಲ್ಲಿ ಎರಡನೇ ಪದ್ಯವಂತೂ ಪ್ರಸಿದ್ಧವಾದ ‘ನಿಗಮಕಲ್ಪತ ರೋರ್ಗಳಿತಂ ಫಲಂ’ ಎಂಬ ಪದ್ಯದ ಅರ್ಥಚ್ಛಾಯೆಯನ್ನೇ ಪಡೆದಿದೆ. ‘ಎಲೈರಸಿಕರೇ! ಭಾಗವತಾಮೃತ ರಸವನ್ನು ಮತ್ತೆ ಮತ್ತೆ ಸವಿಯಿರಿ’ ಎಂಬ ಮೂಲದ ಆಶಯವು ವಿಷ್ಣುತುಂಗನಲ್ಲಿ ‘ಅಂತಹ ಮಹಾರಸವನ್ನು ಈ ಲೋಕದ ಜನರಿಗಾಗಿ ಪ್ರಕಟಿಸಿದೆ ಎಲೈ ಗುರುವೇ, ನಿನಗೆ ನಮಸ್ಕಾರ’ ಎಂದು ಪರಿವರ್ತನೆಗೊಂಡಿದೆ.

ಅನಂತರದ ಸತಸ್ವತಿಸ್ತುತಿಯಂತೂ ಮನೋಹರವಾಗಿದೆ.
ನಳಿನಾಸನೆರೆನ್ಕೀ ಮಹಾಕುಳತಾ ನಡುವಂಟ್ ಪ ನಾಲ್
ನಳಿನಾಯತ ವಕ್ತ್ರ ಸುಕರ್ಣಿಕೆಟ್ ನಿಲೆತೇನ್ಮೊಸವುಪ್ಪೀ
ಕಳಹಂಸ ಮಹಾಗತವರ್ಣಶುಭೇ ನಳಿನಾಯತನೇತ್ರೇ!
ತುಳುಭಾಷೆ ಕವಿತ್ವೊ ಪ್ರಸಾದಿಪುಲೇ ಮಮಜುಂಹೆಟ್ ವರ್ತ್ ||    (೧-೧-೭)

ಇಲ್ಲಿ ನೇರವಾಗಿ ‘ಶಾರದೆ’ಎಂಬ ಪದಪ್ರಯೋಗವಿಲ್ಲದಿರುವುದು ಗಮನಾರ್ಹ. ‘ಬ್ರಹ್ಮನೆಂಬ ಸರೋವರದ ನಡುವಿನಲ್ಲಿ ನಾಲ್ಕು ಕಮಲಗಳ ಕೋಶದೊಳಗೆ ಶೋಭಿಸುವ ಶುಭ್ರಾಂಗೀ, ನನ್ನ ನಾಲಗೆಯಲ್ಲಿ ನೆಲೆನಿಂತು, ತುಳುಭಾಷಾ ಕವಿತ್ವವನ್ನು ಕರುಣಿಸಮ್ಮಾ’- ಎಂಬ ಪ್ರಾರ್ಥನೆಯಲ್ಲಿ ಹೊಸತನವಿದೆ. ಇಲ್ಲಿ ಬ್ರಹ್ಮನನ್ನು ಒಂದು ಸರೋವರವನ್ನಾಗಿಯೂ ಅವನ ಚತುರ್ಮುಖವನ್ನು ಪದ್ಮಕೋಶವನ್ನಾಗಿಯೂ ಕಲ್ಪಸಿ, ವೇದವಾಣಿಯಾದ ಸರಸ್ವತಿಯನ್ನು ಸ್ತುತಿಸಿರುವುದು ಅನನ್ಯವಾಗಿದೆ. ಇಲ್ಲಿ ‘ತುಳುಭಾಷಾ ಕವಿತ್ವ’ವನ್ನು ಪ್ರಾರ್ಥಿಸಿದ ಕವಿಯು, ಮುಂದೆ ಒಂದೆಡೆ ‘ಗ್ರಂಥಜ್ಞೆತಿ’ಯಾದ ಸರಸ್ವತಿಯಲ್ಲಿ ‘ಕೈಕುಳೇ ಮುಗಿಸ್ಟೇನ್ ವಂದಿತ್ ಪ್ರಾಕೃತೊಂಡುಡರೋಪ್ಪೇನ್’ ಎಂದು ನಿವೇದಿಸಿಕೊಳ್ಳುತ್ತಾನೆ. (೩-೧೩-೧). ತಾನು ಸಂಸ್ಕೃತ ಕಾವ್ಯಮಾರ್ಗವನ್ನು ಬಿಟ್ಟು ಪ್ರಾಕೃತವೆನಿಸಿದ ತುಳುಭಾಷೆಯಲ್ಲಿ ಕಾವ್ಯ ರಚಿಸುತ್ತೇನೆಂಬ ಕವಿಯ ವಾಕ್ಯಪ್ರಯೋಗ ಗಮನಾರ್ಹವೆನಿಸುತ್ತದೆ.

ಕಂಕಣೀ ಕ್ ಡತ್ ತ್ತಿ ಬಾಲೆರ್ ಚಂದ್ರನಿಚ್ಛಿಪಿನಂದೊಮೆ
ಮಂಕಣೀ ತೆರಿಯಂತ ಮೂಢೆ ಸಮುದ್ರೊ ನೀಂದ್ ಕಣಂದೊಮೆ
ಕುಂಕುಳೇನ್ಯಲ್ ದಂತಿನಂಧಕೆ ವಿಂಧ್ಯೊಪ್ರಾಪಿಪಿನಂದೊಮೆ
ಶಂಕಿಪುಪ್ಪೆನತೀ ಕಥೇ ತೆರಿತೊಂಪೆ ವರ್ಣಿಪೆರಾಂದ್ ತ್ || (೧-೧-೧೨)

ಇಲ್ಲಿಯ ಆಶಯ ಚೆನ್ನಾಗಿದೆ. ‘ಈಗ ತಾನೇ ಕವುಚಿಬಿದ್ದ ಮಕ್ಕಳು ಚಂದ್ರಮನನ್ನು ಬಯಸಿದಂತೆ, ಈಜು ಬಾರದಿದ್ದ ಮೂಢನು ಸಮುದ್ರ ದಾಟಲು ಆಶಿಸಿದಂತೆ, ಕಣ್ಣಿಲ್ಲದ ಕುರುಡನು ವಿಂಧ್ಯ ಪರ್ವತವೇರಲು ಇಚ್ಛಿಸಿದಂತೆ ಮಹಾಕಾವ್ಯ ಬರೆಯುವ ಸಾಮರ್ಥ್ಯವಿಲ್ಲದೆ ತನಗೆ ಈ ಸಾಹಸ ತೆರಿತೊಂಪೆ ವರ್ಣಿಪೆರಾಂದ್ ತ್’ ಎನ್ನುವ ಸಾಲಂತೂ ಅರ್ಥಪೂರ್ಣವಾಗಿದೆ. ಇದು ಕಥೆಯನ್ನು ಅರ್ಥವಿಸಿಕೊಳ್ಳುವ ಪ್ರಯತ್ನ ಮಾತ್ರವೆಂದೂ ಕಾವ್ಯವಾಗಿ ವರ್ಣಿಸುವುದು ಅಸಾಧ್ಯದ ಕೆಲಸವೆಂದೂ ಹೇಳುವ ಕವಿಯ ವಿವಕ್ಷೆಯಲ್ಲಿ ವಿನಯವಿದೆ. ಇದೇ ವಿನೀತ ಮುಂದಿನ ಪದ್ಯದಲ್ಲಿ ಮತ್ತೆ ಪ್ರಕಟವಾಗುತ್ತದೆ.

ನುಂಬು ನಿರ್ಮಿತಿನೆಡ್ಡ ಸತ್ಯವಿಮುಖ್ಯೆರೇ ಪದಪಾಂಸುವೀ-
ನಿಂಬುಟೇ ತಿಗೆತೊಂಡ್ ವಂದಿತ್ ಮಸ್ತಕೊಂಟ್ ಪ ಸ್ಥಾಪಿತ್
ಅಂಬುಜಪ್ರಿಯ ನುಂಬುಟ್ ನಲಿಪುಪ್ಪಿ ಮೆನ್ಪುಲಿತಂದೊಮೇ
ಸಂಭ್ರಮಿಪ್ಪೆನತೀ ಕಥೆ ತೆರಿತೊಂಪೆ ವರ್ಣಿಪೆರಾಂದ್ ತ್ ||             (೧-೧-೧೪)

‘ಪೂರ್ವಸೂರಿಗಳ ಪಾದಧೂಳಿಯನ್ನು ಶಿರಸ್ಸಿನಲ್ಲಿ ಧರಿಸಿಕೊಂಡು, ಸೂರ್ಯನೆದುರು ಕುಣಿಯುವ ಮಿಣಿಕುಹುಳಗಳಂತೆ ಈ ಮಹಾಕಾವ್ಯ ವರ್ಣನೆಗೆ ಅಳುಕುತ್ತೇನೆ’.

ಶ್ರೀ ಭಾಗವತೋನ್ಕಿ ಮಹಾರ್ಣವಂತಾ ಕರೆತಂತ್ ಟ್ ಪೋಸ್ಟ್
ಅಭಾಸೆ ತನಂಗೈಟೊಂಪೆ ಜಲೊ ತಿಗೆತೊಂಡಕ್ ಣಂದೊ
ಸ್ವಾಭಾವೊ ಪಿನಂತೆ ರೆಚಿಪ್ಪೆನತೀ ತುಳುಭಾಷೆಟ್ ಪಾಕೊ
ಶ್ರೀಭಾರತಿ ನಿತ್ಕೊಮ ನೃತ್ತಿಪುಲೇ ಮಮ ಜುಂಹೆಟ್ ವರ್ತ್ (೧-೧-೧೫)

‘ಭಾಗವತವೆಂಬ ಸಮುದ್ರತಟದಲ್ಲಿ ನಿಂತು ಭ್ರಾಂತನೊಬ್ಬ ತನ್ನ ಅಂಗೈಯಲ್ಲಿ ಒಂದಿಷ್ಟು ನೀರು ಎತ್ತಿಕೊಂಡ ಹಾಗೆ’ ತಾನು ತುಳುಭಾಷಾ ಕವಿತೆಗೆ ತೊಡಗಿದ್ದೇನೆಂದು ಹೇಳುವಲ್ಲಿಯೂ ಕವಿಯ ಸಜ್ಜನಿಕೆ ವೇದ್ಯವಾಗುತ್ತದೆ.

ವೇದಗಳ ಸಾರವನ್ನು ತಿಳಿದವರು, ಇದನ್ನು ‘ತುಳುಭಾಷೆ’ಎಂದು ಭಾವಿಸಿ, ವಿಷಾದಿಸಬಾರದೆಂದೂ ಕವಿ ಹೇಳುತ್ತಾನೆ.

ವೇದೂಂಕುಳೆ ಸಾರೊ ಪಿನ್ ಪ್ಪಿ ಜನೋ ತುಳುಭಾಷೆಂದುವೆಂದ್
ಖೇದಿಪನನೇಪ್ಪೊಡು ಸೂಕ್ಷಿಪುಟಾ ತೊವಹ್ನಿಯೆನ್ ಪ್ಪೀ
ವಾದಂತುಳೆಯುಂಡಾ ವಿಕಲ್ಪಮತೀಯಯೆನಂದೊಮೆ ನಿತ್ಯೊ
ಶ್ರೀದೇವಕೀನಂದನ ಲೀಲೆಕುಳೀ ಕಥೆಕೋರ್ತ್ತ್ ಣ್ ಭೇದೋ (೧-೧-೧೬)

ಬೆಂಕಿಯನ್ನು ತುಳುವಿನಲ್ಲಿ ‘ತೊ’ ಎಂದರೂ, ಸಂಸ್ಕೃತದಲ್ಲಿ ‘ವಹ್ನಿ’ ಎಂದರೂ ಅದು ಸೂಚಿಸುವ ವಸ್ತು ಒಂದೇ ಆಗಿರುವುದರಿಂದ ತುಳುಭಾಷೆಯಲ್ಲಿ ಹೇಳಲ್ಪಡುವ ಕಥೆ ಶ್ರೀಕೃಷ್ಣನದೇ ಅಲ್ಲವೇ? ಹಾಗಾಗಿ ಭೇದಭಾವವೇಕೆ? ಎಂಬುದು ಕವಿಯ ಪ್ರಶ್ನೆ. ಕನ್ನಡ ಭಾಗವತದಲ್ಲಿ ಚಾಟುವಿಠಲನಾಥನು –

ಕನ್ನಡ ನುಡಿಯೆಂದುವಜ್ಞಾ-
ಪನ್ನರಾಗದಿರಕಟ ದರ್ಪಣ

ಕನ್ನಡಿಯಿದೆಂದೆನಲದಾವುದು ಕೊರತೆ ನೋಡುವಡೆ || (ಪೀಠಾಕಾಸಂಧಿ ೮)ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಸಂಧಿಸೂಚನೆ

ಕುಮಾರವ್ಯಾಸನು ಪ್ರತಿ ಸಂಧಿಯ ಆರಂಭದಲ್ಲಿ ಕಥಾಸೂಚನೆಯನ್ನು ಅರ್ಧ ಭಾಮೀನಿಷಟ್ಪದಿಯಲ್ಲಿ ಹೇಳಿದ್ದಾನೆ. ಆದರೆ ವಿಷ್ಣುತುಂಗನು ಅಧ್ಯಾಯಾರಂಭದಲ್ಲಿ ಪದ್ಯಪಾದದ ಮೂಲಕವೇ ಕಥಾನಿರ್ದೇಶ ಮಾಡುತ್ತಾನೆ. ಉದಾ:

ಶ್ರೀಗರುಡವಾಹನವಿಯೋಗಕಥೆ ಪಣ್ಕೇ -(೧-೧೩-೧)
ಅಭಿಮನ್ಯುತನೂಜ ವಿಶೇಷಕಥೇ ಮಹಲೋಕೆರ್ ಕೇಳಿ – (೧-೧೬-೧)
ಕಲಿಕಟ್ಟ್ ಸ್ಟ್ ರಾಜ್ಯೊ ವಿರಾಜಿಪೊಸ್ಟೀಕಥೆ ಲೋಕೆರ್ ಕೇಳಿ -(೧-೧೭-೧)
ನಿಜದ್ವಾರಕಿಕಾವ ಗೆಮೀತಿ ಕಥೆ ಮಹಲೋಕೆರ್ ಕೇಳಿ – (೧-೯-೧)
ನೃಪಜಾತಿಕುಳಿಂಚ ಗೆಮೀತಿಕಥೇ ಸಭೆಮಾಂತೆರ್ ಕೇ-(೧-೧೫-೧೨)

ಹಾಗೆಯೇ ಪ್ರತಿ ಅಧ್ಯಾಯದ ಕೊನೆಯಲ್ಲಿ -‘ಮೂಜಿನೀಡೆ ಕಧ್ಯಾಯೊ’, ‘ಪಂಚಮಾಸ್ಟ್ ಣಧ್ಯಾಯೊ’, ‘ಯೀಡೆಕುಂದು ಅಧ್ಯಾಯೊಮೆ ಪತ್ತ್’, ‘ಅಧ್ಯಾಯೊ ದ್ವಾದಶೋಮಾಸ್ಟ್ ಣ್’- ಇತ್ಯಾದಿ ವಾಕ್ಯಗಳಿಂದ ಅಧ್ಯಾಯ ಸಂಖ್ಯೆಯನ್ನು ತಿಳಿಸುವುದೂ ವಿಶೇಷವಾಗಿದೆ.

ಪರೀಕ್ಷಿತನ ಜಾತಕಫಲ

ಸತ್ಯೊಂಟ್ ಪರಾಮೆ ಸಮಾಶ್ರಿತೊಂಟಾ ಶಿಬಿಯರ್ಜುನೆ ಯುದ್ದೊಂ-
ಟುತ್ತುಂಗಗುಣೊಂಟಿಕ್ಷ್ವಾಕುವೆತ್ ಸೌದಂತಿ ಸುಕರ್ಮಂ
ಕ್ಷಾತ್ರೊಂಟ್ ಸಮುದ್ರೆನ, ದುರ್ಧರ್ಷಂಟಾವಗ್ನಿಕ್ ತುಲ್ಯಂ
ಪೋರ್ತ್ಥೊಂಟ್ ಪ ಸಿಂಹಪರಾಕ್ರಮೆನಾ ಹರಿಟೊಪ್ಪೆ ಗುಣೊಂಟ್ || (೧-೧೧-೧೦)
ಧೈರ್ಯೊಂಟ್ ಗುಣೊಂಟ್ ಸಮಸ್ತವಿಭಂ ಬಲಿದಾನವಟೊಪ್ಪೆ
ಫೆರ್ಯಾಶ್ರಯರೆಕ್ಷೆಟ್ ರಂತಿ ನೃಪೇ ಭಕ್ತಿ ಪ್ರಹಲ್ಲಾದೆ
ಆರ್ಯಾಶ್ರಮ ಪ್ರೀತಿಟ್ ಪ್ಪೀಶ್ವರೆನಾ, ದೃಢಂಟ್ ಪ್ಪ ಹಿಮಾದ್ರಿ
ಸೂರ್ಯಪ್ರಭೆಟೊಪ್ಪನ ತಾಮಸಂಕ್ ವಿಧಿಟೊಪ್ಪೆ ಪ್ರವೃತ್ತೀ || (೧-೧೧-೧೧)
ಕಲಿಕಟ್ಟ್ ಸ್ಟ್ ಧರ್ಮೊಮಿನುದ್ಧರಿತ್ ತೆರು ಸುಸ್ಥಿರೊ ಮಾಂತ್
ಖಲೆರೆಯ್ಯರ್ ಶಿಕ್ಷಿತ್ ಸಜ್ಜನೆರೇಕನುಕೂಲೊಮಿ ಮಾಂತ್
ನಿಲ್ ತಿಂಚ ವಸೀಪಪನೇಕದಿನೊಂಟೊರಿ ಬ್ರಾಹ್ಮಣಶಾಪೊ
ಕಲಿ ತಕ್ಷಕೆ ಚುಚ್ಚಿಸ್ಟ್ ಮುಕ್ತಿಪದಂ ಲೆಭಿಪೇ ಗುಣವಾನೇ || (೧-೧೧-೧೨)

ಈ ಮೂರು ಪದ್ಯಗಳಲ್ಲಿ ಪರೀಕ್ಷಿತನ ಜಾತಕಫಲವನ್ನು ಹೇಳಲಾಗಿದೆ. ಋಷಿಗಳಾದ ಧೌಮ್ಯರಲ್ಲಿ ಧರ್ಮರಾಯ ಮಗುವಿನ ಜನನಫಲ ಕೇಳಿದಾಗ, ಋಷಿಗಳು ಪರೀಕ್ಷಿತನ ಗುಣಗಳನ್ನು ವರ್ಣಿಸುತ್ತಾರೆ.

‘ಪರೀಕ್ಷಿತನು ಸತ್ಯದಲ್ಲಿ ಶ್ರೀರಾಮ, ದಾನದಲ್ಲಿ ಶಿಬಿ ಚಕ್ರವರ್ತಿ, ಯುದ್ಧದಲ್ಲಿ ಅರ್ಜುನ, ಸದ್ಗುಣದಲ್ಲಿ ಇಕ್ವ್ಷಾಕು, ಕ್ಞಾತ್ರತೇಜದಲ್ಲಿ ಸಮುದ್ರರಾಜ, ಪ್ರತಾಪದಲ್ಲಿ ಅಗ್ನಿ, ಧೈರ್ಯದಲ್ಲಿ ಬಲಿ, ರಕ್ಷೆಯಲ್ಲಿ ರಂತಿ, ಭಕ್ತಿಯಲ್ಲಿ ಪ್ರಹ್ಲಾದ, ಪ್ರೀತಿಯಲ್ಲಿ ಶಿವ-‘ಕಲಿಯನ್ನು ಬಂಧಿಸಿ, ಧರ್ಮವನ್ನುದ್ಧರಿಸಿ ಸುಸ್ಥಿರವಾದ ಪಥವನ್ನು ನಿರ್ದೇಶಕಿ, ಖಳರನ್ನು ಶಿಕ್ಷಿಸಿ, ಸುಜನರನ್ನು ಸಲಹುತ್ತಾ, ಮುಂದೊಂದು ದಿನ ಬ್ರಾಹ್ನಣಶಾಪದಿಂದಾಗಿ ತಕ್ಷಕ ಸರ್ಪನಿಂದ ಕಚ್ಚಲ್ಪಟ್ಟು ಮುಕ್ತಿಯನ್ನೈದುತ್ತಾನೆ’ ಎಂದು ಭವಿಷ್ಯ ನುಡಿಯುತ್ತಾರೆ.

ಕಲಿಸ್ಥಾನ ನಿರ್ದೇಶ

ಅದರಂತೆ ಮುಂದೆ ಪರೀಕ್ಷಿತ ಮಹಾರಾಜ ರಾಜ್ಯಭಾರವೆಸಗುತ್ತಾರೆ. ಗೋರೂಪದಲ್ಲಿರುವ ಧರಣೀದೇವಿಯನ್ನು ರಕ್ಷಿಸಿ, ಕಲಿಪುರುಷನನ್ನು ಶಿಕ್ಷಿಸುತ್ತಾನೆ. ಶರಣಾಗತನಾದ ಕಲಿಗೆ ವಾಸಸ್ಥಾನಗಳನ್ನು ಕಲ್ಪಿಸಿಕೊಡುವ ಸನ್ನಿವೇಶ ಹೀಗಿದೆ-

ಕಲಿ ಪ್ರಾನಭಯಂಕತಿ ವಿಂಹ್ವಲಿತ್ ನಟ್ಟ್ ಪ್ಪುಣ ಕೇಂಡ್
ಜಲಜಾಸನಕಲ್ಪನೆ ತಪ್ಪೊಯೆನೆಂದಪರಾಧೊಮೆ ಬೋಡಾ
ನಿಲೆ ನಿಲ್ಪಲ ಮಾಂಸೊಮ ದ್ಯೂತ ಸುರಾಪಾನೋಂದಂ ಬೆಟಾವಾ
ಲಲನೇಕುಳ ಬುದ್ಧಿಟ ಪೋಲ, ಸುಖೋ ಕಳಿಕೊಳ್ಳಿನ ಕಾಲೊ || (೧-೧೭-೩೯)

‘ಮಾಂಸ, ದ್ಯೂತ, ಮದ್ಯಪಾನ, ಪರಸ್ತ್ರೀ ಸಮಗವೆಂಬ ನಾಲ್ಕು ವಿಷಯಗಳಲ್ಲಿ ನೆಲೆಯಾಗಿ ಸುಖವಾಗಿರು’ ಎಂದು ಪರೀಕ್ಷಿತರಾಜ ಅಜ್ಞಾಪಿಸಿದಾಗ –

ಸ್ಥಿರೊ ತಪ್ಪನೆ ನಾಲ್ ನಿವಾಸತೆಟ್ ಪರಿಣಾಮಿಪಿಲಾಂದ್
ಧರಣೀಶೆ ವಚೀಪಪ ಕೈಮುಗಿಸ್ಟ್ ನಿನೆತೊಂಜ ಪಣ್ ಪ್ಪೆ
ಪೊರ್ ಳೆಂಕಂದೆಟ್ ತ್ತೆ ಭವೀತಿರಿ, ನಾಣೊಂಜೊಪ್ಪಿಲೆಂದ್
ದುರುಳೇ ಪಣಕೇಂಡೌಳೊಪ್ಪಿತೆನಾ ಕನಕೊಂತ ನಿವಾಸೊ || (೧-೧೭-೪೦)

“ನನಗಿಷ್ಟೇ ಸಾಲದು; ಇನ್ನೊಂದು ಜಾಗ ಬೇಕು’ ಎಂದು ಕಲಿಯು, ಕೇಳಿದಾಗ, ಐದನೆಯದಾಗಿ ‘ಚಿನ್ನ’ವನ್ನೂ ಪರೀಕ್ಷಿತ ಸೂಚಿಸುತ್ತಾನೆ. ಇದರಿಂದ ತೃಪ್ತನಾದ ಕಲಿಪುರುಷ ‘ಇದರಿಂದಲೇ ಇಡೀ ಭೂಮಂಡಲವನ್ನು ವಶಪಡಿಸಿಕೊಳ್ಳುತ್ತೇನೆ’ಎಂದು ಹೇಳಿ ಹೊರಡುತ್ತಾನೆ. ಕೆಟ್ಟ ಚಾಳಿಗಳಿಗೆ ಈಡಾಗಿ ಬದುಕನ್ನೇ ಬರಡಾಗಿಸಿಕೊಳ್ಳುವ ಮನುಕುಲದ ದುರಂತ ಚಿತ್ರಣಕ್ಕೆ ಈ ಶಬ್ದ ಚಿತ್ರ ಸುಂದರ ವ್ಯಾಖ್ಯೆಯಂತಿದೆ!

ಪರೀಕ್ಷಿತನಿಗೆ ಶಾಪ

‘ಅಂಚೊಂಜಿ ಮಹಾಮಲೆ ಪ್ರಾಪಿತೆನಾ ಮೃಗಯಾವ್ಯಸನೊಂಟ್’

ಪರೀಕ್ಷಿತನೊಮ್ಮೆ ಬೇಟೆಗಾಗಿ ಅರಣ್ಯಪ್ರವೇಶ ಮಾಡಿ, ತಪೋಮಗ್ನನಾಗಿರುವ ಋಷಿಯೊಬ್ಬನನ್ನು ಕಂಡು ಬಾಯಾರಿಕೆಯಿಂದ ನೀರನ್ನು ಕೇಳುತ್ತಾನೆ. ಆದರೂ ಮಾತಾಡದೇ ಮೌನಿಯಾಗಿರುವ ಮುನಿಯನ್ನು ಕಂಡು ಸಿಟ್ಟೇರಿದ ರಾಜ (ಒಂಜಹಿತಾ ಶವೋ ಗೇತ್ ಧನುಸ್ಟ್ ಟೆಂದೆತ್ತಿ) ಒಂದು ಸತ್ತ ಹಾವಿನ ಶವವನ್ನು ಬಿಲ್ಲಿನಿಂದೆತ್ತಿ ಋಷಿಯ ಕುತ್ತಿಗೆಗೆ ಹಾಕಿ ತೆರಳುತ್ತಾನೆ. ಅನಂದರ ಬಂದ ಋಷಿಪುತ್ರ ಕಂಶಿಕ ತನ್ನ ತಂದೆಯ ದುಃಸ್ಥಿತಿಯನ್ನು ನೋಡಿ

ಶೋಕಿಪ್ಪುಣ ಜಾಸ್ಟೆಕನೇಕವಿಧೋ ನಡ್ ಸ್ಟ್ ಪ್ಪುಕಿ ರಂಭೆ
ನೂಕೀಯೆ ರಕಲ್ಪವಸಾನತೆತಾ ಮಹಮಾರುತೆ ಜಾಕ್
ಈ ಕಷ್ಟನಿಯೇಳಿವೆನಮತಾನ್ಯುದಿತೀ ರೆವಿ ಕಂತನತೊಲ್ಲೇ
ಆ ಕಶ್ಮಲ ತಕ್ಷಕೆ ಮುಟ್ಟ್ ಸ್ಟ್ ತ್ ಗೆತೊಮಾವಡ್ ನಾಂದೆರ್ || (೧-೧೮-೧೫)

“ಯಾಕೆ ಈ ರೀತಿ ಶೋಕಿಸಬೇಕು? ನಟ್ಟ ಬಾಳೆಯ ಗಿಡವನ್ನು ದೂಡಲು ಕಲ್ಪಾಂತರದ ಬಿರುಗಾಳಿ ಬೇಕೆ? ಈ ನೀಚನನ್ನು ಏಳುದಿನಗಳೊಳಗೆ ಹಾವು ಕಚ್ಚಿ ಸಾಯಿಸಲಿ” ಎಂದು ಶಪಿಸುತ್ತಾನೆ.

ಪಶ್ಚಾತ್ತಾಪದಿಂದ ದಗ್ಧನಾದ ಪರೀಕ್ಷಿತ ತನ್ನ ಮಗನಾದ ಜನಮೇಯನಿಗೆ ಪಟ್ಟಾಭಿಷೇಕ ಮಾಡಿ, ಗಂಗಾತೀರಕ್ಕೆ ಬಂದು ಮಹರ್ಷಿಗಳ ದರ್ಶನ ಮಾಡುತ್ತಾನೆ. ಆಗ ಅಲ್ಲಿಗೆ ಶುಕಮಹಾಮುನಿ ಬರುತ್ತಾನೆ. ಅವನ ಚರಣಕಮಲಗಳಿಗೆ ಪೊಡಮಟ್ಟ ಪರೀಕ್ಷಿತ-

‘ಸಪ್ತವಾಸರತುಂಬೆ ಮುಕ್ತಿ ತವಸ್ಥೆ ಜೋಜಿಕಿ ಮಾರ್ಗೊಮಿ’-

‘ಏಳು ದಿನಗಳೊಳಗೆ ಮೋಕ್ಷಪ್ರಾಪ್ತಿಯಾಗುವ ದಾರಿ ತೋರಬೇಕೆಂದು ಪ್ರಾರ್ಥಿಸುತ್ತಾನೆ’. ಆಗ ಶುಕಮುನಿಯಿಂದ ಭಾಗವತ ಪ್ರವಚನ ಪ್ರಾರಂಭವಾಗುತ್ತದೆ.

ಆಧ್ಯಾತ್ಮ

ಶುಕನು ಪ್ರಪಂಚದ ಸೃಷ್ಟಿ ವಿಚಾರವನ್ನು ತಿಳಿಸುವ ಸಂದರ್ಭ ಮನೋಜ್ಞವಾಗಿದೆ-

ಮರ್ ಳಾ ಇನ್ ಟೇನ್ ತೆ ಜಾಪಣ್ ಕೇ ಹರಿಯೋ ಹರಿ ಕಾಡ್
ಟರ್ ಳ್ ಟೊರಿ ಗೌಡ ಮಹಾಕುರುಡನ್ನಿಜವಲ್ಲಭೆ ಕೇಳ್
ತರುಣೀ ಬಧಿರಾಂಧೆತಿ ತನ್ನ ವರನ್ಚಕ್ರೇಶ್ವರಯೆಂದ್
ಧರಿತ್ ಪ್ಪುಕ್ ಣಾಕೃತಿಯೀಯ್ಯೆನ್ ಟಾ ಚೋದೀಪ್ಪುಣ ಪುತ್ರಾ || (೨-೪-೮)

“ಎಲಾ ಹುಚ್ಚಾ! ನಿನ್ನಲ್ಲಿ ಏನೆಂದು ಹೇಳಲಿ? ರಾತ್ರಿಯಲಿ ಮಧ್ಯ ಕಾಡಿನೊಳಗೆ ಕಿವುಡಿಯೂ ಕುರುಡಿಯೂ ಆದ ಗೌಡತಿಯೊಬ್ಬಳು ಕುರುಡನಾದ ತನ್ನ ಗಂಡನನ್ನು ಚಕ್ರವರ್ತಿ ಎಂದು ಭಾವಿಸಿಕೊಂಡಂತೆ, ನೀನು ನನ್ನನ್ನು ತಿಳಿದಿರುವೆ. ಈ ಸೃಷ್ಟಿಯ ರಹಸ್ಯವನ್ನು ಶ್ರೀಹರಿಯಲ್ಲದೆ ಬೇರೆ ಯಾರು ಬಲ್ಲರು?”

(ಕನ್ನಡ ಭಾಗವತ ‘ಮರುಳು ಮಗನೇ ಭಾಪು ಹಳ್ಳಿಯ ಕುರುಡು ಗೌಡಿಗೆ ಗೌಡ ಚಕ್ರೇಶ್ವರನಲಾ ತಪ್ಪೇನು?’ ಎಂಬುದನ್ನೇ ಸ್ವಲ್ಪ ವಿವರಿಸಿ ಹೇಳಿದ್ದಾನೆ.)

ಶ್ರೀಕೃಷ್ಣನನ್ನು ಕುಂತಿ ಸ್ತುತಿಸುವ ಒಂದು ಸಂದರ್ಭ ಹೀಗಿದೆ
ನಿತ್ಯೊಂಕ್ ವರೇಪ್ಪಡನರ್ಥೊ ಜಯಾ ವಿಪರೀತೊಮೆ ಕೃಷ್ಣಾ
ಚಿತ್ತೊಂಟಮಿನಾರೆವರ್ ದ್ದಿಯತೀ ಕುಶೆಲಾವನತೆತ್ತ್
ಸ್ವಸ್ಥೊಂಟ್ ವಸೀಪುಟ ಚೋಜನ್ ಮಾ ಜ್ಞಾನಾಕ್ಷಿ ವಿವೇಕ
ತತ್ವಾರ್ಥೊ, ವಿಪತ್ತತಿ ಸಾಧಕೊನ ಯಿಮ ಭಕ್ತಿಕ್ ಮೂಲೋ || (೧-೭-೨೧)

“ಹೇ ಶ್ರೀಹರೀ! ಸದಾ ಕ್ಷೇಮವಾಗಿದ್ದರೆ ಯಾರು ನಿನ್ನನ್ನು ಧ್ಯಾನಿಸಲಾರರು. ಹಾಗೆಯೇ ಸುಖವಾಗಿರುವಾಗ ಜ್ಞಾನವಿವೇಕ ತತ್ತ್ವಾರ್ಥಗಳು ಹೊಳೆಯಲಾರವು. ನಿಮ್ಮಲ್ಲಿ ಭಕ್ತಿಯುಂಟಾಗಬೇಕಾದರೆ, ವಿಪತ್ತುಗಳೇ ಮೂಲಸಾಧನೆ. ಆದುದರಿಂದ ಯಾವಾಗಲೂ ನಮಗೆ ಅನರ್ಥ ಪರಾಜಯಗಳೇ ಉಂಟಾಗುತ್ತಿರಲಿ” ಎಂಬ ಈ ಪದ್ಯದ ಆಶಯದಲ್ಲಿ ಕಷ್ಟಸಹಿಷ್ಣುವದ ಭಾರತೀಯ ಮನಸ್ಸು ಅತ್ಯಂತ ಸಮರ್ಥವಾಗಿ ಅಭಿವ್ಯಕ್ತಗೊಂಡಿದೆ.

ಧನಮ್ಯೆಶ್ವರ್ಯಂಕುಳು ಶತ್ರುಕುಳೂಯಿಮ ಪಾದರಸರೋಜೊ
ನಿನೆಪೇರ ಬುಡಂತೇತಿ ವಿಘ್ನಿಪೊನಾ ನಾನಾ ವಿಷಯೊಂಟ್ || (೧-೭-೨೨)

“ಸಿರಿ ಸಂಪತ್ತುಗಳು ನಿಜವಾದ ವೈರಿಗಳೆಂದೂ, ಅವು ಪರಮಾತ್ಮನನ್ನು ನೆನೆಯಲು ಬಿಡಲಾರವೆಂದೂ, ಹೇಳುವ ಭೋಗವಿಮುಖವಾದ ಆಧ್ಯಾತ್ಮ ಇಲ್ಲಿ ಗಮನಾರ್ಹವಾಗಿದೆ.

ಶ್ರೀಕೃಷ್ಣಲೀಲೆ

ಮಿರೆಯುಂಟ್ ತ್ ಪೂತನೆ ಸಂಹರಿತ್ ಶಕಟನ್;ಪೊಡಿಮಾಂತ್
ತಿರಿತೌರ್ತ ವಧೀತೆರ್ ಮಾರುತನಾ ತನುವಾಯಿನ ದೈತ್ಯನ್
ಕರ ನರ್ತೆರೆಂದಪ್ಪೆ ಊಲೂಖಲಂಟೇ ಬಂಧಪ್ಪಡ್ ಪೋವ
ಧರೆಟಾಕೊಸ್ಟೆರಾರಮಳಾರ್ಜುನೆರೇ ಶಾಪಂ ಕಳೆಸ್ಟಾನೀ || (೨-೫-೨೦)
ಕರನರ್ತ್‌ಣ ಜಾಕಂಬುೞೆಂದಧಿಕೋ ರೋಷೊಂಟ್ ಯಶೋದೆ
ತರಳನ್ತನು ಬಂದಿತೆರೊಂಜುಜಿಡೇಟಿರಡಂಗುಲೊ ಬಳ್ಳ್
ತರೊ ತಪ್ಪೌಳುಳ್ಳವೆ ಕಟ್ಟ್ ಡ್ ಸ್ಟ್ ಬೞಿಲಾ ಪ್ರಥಮೊಂತಾ
ವರ ಬಳ್ಳ್ ಟೆ ಬಂಧಿತ್ ಪಣ್ಪೊಯೆ ದಾಮೋದರೆಯೆಂದ್ || (೨-೫-೨೪)
ತುಡೆನಿಚ್ಚಿಟ್ ಪ್ಪೇತೊಸ್ಟ್ ಶ್ರೀರಮಣನ್ ತನ ನಂದನೆಯೆಂದ್
ನಡುಮುಂದಿಲ್ ತ್ತೊರ್ ಣವುಳಂಡಾ ಪದಿನಾಲ್ ಜಗತ್ತ್
ಕಡೆಕೂಡಲ ಚೋಜಪ ಚುಸ್ಟಸ್ಟೆನೀನ್ನೈಕೊಂಡೆರೊ ಕಾಂತೆ
ಖಡುಮಾಯೆಟ್ ಕಂತೊಸ್ಟ್ ಮಾಜೊಸ್ಟೆರ್ ನಳಿನಾಯರ ನೇತ್ರೆ || (೨-೫-೨೫)

ಇಲ್ಲಿ ಶ್ರೀಕೃಷ್ಣಾವತಾರದ ಕಥೆ ಸಂಕ್ಷೇಪವಾಗಿ ಹೇಳಲ್ಪಟ್ಟಿದೆ. ಭಗವಂತನ ದಶಾವತಾರಗಳ ವಿವರಗಳನ್ನೊಳಗೊಂಡ ಭಾಗವಿದು. ಇಲ್ಲಿ ಪೂತನಾಸಂಹಾರ, ಶಕಟಾಸುರಭಂಜನ, ಯುಮಳಾರ್ಜುನಭಂಗ, ಕಾಳೀಂಗ ಮರ್ದನ, ಗೋವರ್ಧನೋದ್ಧಾರ, ಕಂಸವಧೆ- ಮುಂತಾದ ಪ್ರಸಂಗಗಳನ್ನು ಉಲ್ಲೇಖಿಸುತ್ತಾ, ತಾಯಿ ಯಶೋಧೆಗೆ ಬಾಯೊಳಗೆ ಬ್ರಹ್ಮಾಂಡ ತೋರಿಸಿದ್ದು, ವೃಂದಾವನದಲ್ಲಿ ಮೋಹನ ಮುರಳೀಗಾನದಿಂದ ಗೋಪಿಕೆಯನ್ನು ಮೋಹಿಸಿದ್ದು ಮೊದಲಾದ ಲೀಲೆಗಳನ್ನು ಕವಿ ಚುಟುಕಾಗಿ ಹೇಳಿಮುಗಿಸುತ್ತಾನೆ. ಶ್ರೀಕೃಷ್ಣನ ಲೀಲಾಪಾರಮ್ಯವನ್ನು ದಶಮ ಸ್ಕಂಧದಲ್ಲಿ ವಿಸ್ತಾರವಾಗಿ ಹೇಳಲಿಕ್ಕಿರುವುದರಿಂದಲೇ ಇಲ್ಲಿ ಅದು ಸಂಕ್ಷೇಪವಾಗಿ ಮೂಡಿದೆಯೆಂದು ನಾವು ಭಾವಿಸುಬೇಕಾಗಿದೆ. ಆದರೆ ‘ದಶಮಸ್ಕಂದ’ ಉಪಲಬ್ಧವಾಗಿಲ್ಲವೆನ್ನುವುದು ಅಷ್ಟೇ ಬೇಸರದ ಸಂಗತಿ.

ಶೃಂಗಾರ ರಸ

ಮೈತ್ರೇಯರು ವಿದುರನಿಗೆ ಶ್ರೀಹರಿಯ ಮಹಿಮೆಗಳನ್ನು ವರ್ಣಿಸುತ್ತಾ, ಹಿರಣ್ಯಾಕ್ಷ – ಹಿರಣ್ಯಕಶಿಪುಗಳ ಜನನ ಕಥೆಯನ್ನು ಆರಂಭಿಸುತ್ತಾರೆ. ಒಮ್ಮೆ ದಿತೀದೇವಿಗೆ ಕಾಮಾಸಕ್ತಿಯುಂಟಾಗಿ ಗಂಡನಾದ ಕಶ್ಯಪನಲ್ಲಿಗೆ ಬಂದು ಬಿನ್ನವಿಸಿಕೊಳ್ಳುತ್ತಾನೆ.

ವರ್ತ್‌ವಲ್ಲಭೆ ಭರ್ತುನಂತ್ ಕ್ ಪೊರ್ತ್ ಕುಂತ್ ಕಿ ವೇಲೆಟ್
ಚುತ್ಥ್ ಸ್ಟ್ ಪ್ಪುಕಿ ಧೋತ್ರೊ ಕಯ್ಯಿಟ್ ಪತ್ತ್ ಸ್ಟಾರ್ ಳೆತಾಪಳ್
ಚಿತ್ತಯೀಪಿಲೆ ಚಿತ್ತಜೇ ಕೈಕತ್ತಿಟೇ ಯೆನ ದೇಹೊಮೀ
ಕೆತ್ತ್ ಕೇ ನ್ ಮ ಶಕ್ತಿಟಾಪೊರಿ ಪುತ್ರನೆಂಕಮಕೂಲಿಪೀ || (೩-೯-೭)

ಸೂರ್ಯಾಸ್ತದ ಹೊತ್ತಲ್ಲಿ ಬಂದು, ಗಂಡನನ್ನು ಬರೆಸೆಳೆಯುತ್ತಾ ‘ಚಿತ್ತಜನು ಕೂರಲಗಿನಿಂದ ನನ್ನ ದೇಹವನ್ನು ಕೆತ್ತುತ್ತಿದ್ದಾನೆ; ಅದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ; ಪುತ್ರಭಿಕ್ಷೆಯನ್ನು ನೀಡುವ ಮನಸ್ಸು ಮಾಡಿ ಎಂದು ಬೇಡುತ್ತಾಳೆ. ಇದು ಸೂಕ್ತವಲ್ಲದ ಕಾಲವೆಂದು ಕಶ್ಯಪ ಋಷಿ ‘ಸೈರಿಪೊಂಜಿ ಮೂಹೂರ್ತೊ’ ಎಂದು ಬುದ್ಧಿ ಹೇಳುತ್ತಾನೆ. ‘ಸಂಜೆಕಾವನ್ ವೇದ ಮೈಥುನ ನಿದ್ರೆ ಭೋಜನವೃತ್ತಿ’ ಎಂದು ನಿರಾಕರಿಸುತ್ತಾನೆ. ‘ಮಂಜರೇರ್ಕುಳೆನೆಂದೊ ಕಾಟಡ’ (ಅಜ್ಞಾನಿಗಳಂತೆ ಕಾಡಬೇಡ) ಎಂದು ತಿಳಿಹೇಳುತ್ತನೆ. ದಿತಿದೇವಿ ಈ ಮಾತನ್ನು ಕೇಳದೆ (ಕಾಮಬಾಧೆಟ್ ತ್ತಾರೆ ಪತ್ತೊಯಿತಾ ಮುಹೂರ್ತೊಮಿ ತಪ್ಪನೆ ಕಾಮಿನಿಯನುಭೈತೆರಾರೆನಿ) ತನ್ನ ಆಸೆಯನ್ನು ಪೂರೈಸುತ್ತಾಳೆ.

ವೈಕುಂಠ ವರ್ಣನೆ

ಸನಾಕದಿಗಳು ಒಮ್ಮೆ ಶ್ರೀಹರಿಯ ದರ್ಶನಕ್ಕೆಂದುಯ ವೈಕುಂಠಕ್ಕೆ ಬರುತ್ತಾರೆ. ಆಗ ಕವಿಯ ವರ್ಣನಾಶಕ್ತಿ ಗರಿಗೆದರುತ್ತದೆ.

ಕಳಿಹಂಸೆರ ಸಾರಸಚಕ್ರವಕಾ ಕ್ರೌಂಚಾದಿ ಸಮೂಹೊ
ಗ್ ಳಿ ಕೋಕಿಲ ಮಾಯುರವಾನರೆರಾ ಕಾರಂಡಸಮೂಹೊ
ಕಳರಾಮೊಮಿನಿಯ್ಯಾಂ ನಿಲ್ಪುಡ್ ಸ್ಟ್ ಶೃಂಗಾರಿಪಗೀತಂ-
ಕುಳೆ ಕೇಂಡ್ ರೆಸೀಪ್ಪುಣ ಜಾಪಣ್ ಕೋ ನಾನಾ ಮೃಗಜಾತಿ || (೩-೧೦-೧೩)
ಮಂದಾರೊಮ ನೆಯ್ಯಳ ಶಂಪಕೆಯಾ ಕರವೀರೊಮ ರೆಂಜಾ
ಕೆಂದಾಮರೆ ನೇರೆಲ ಪಾರಿಜಾತಾ ಬಕುಳೋ ವರಜಾದೀ
ಕುಂದೊಂಕುಳ ಕೇತಕಿಯಬ್ಬಲಿಕೇ ಸುರಗೀಯರಪಚ್ಚೆ
ಮಂದೀಪ್ಪೆರ್ ಶ್ರೀತುಳಸೀದಳೊಮಿ ಹರಿವಲ್ಲಭೆಯೆಂದ್ || (೩-೧೦-೧೪)
ಕೆದುಕೂವೆಲ್ ಟೆಯ್ಯಮೃತೊಂಕುಳೆನಾ, ಸುರಭೀ ಪಶುವೃಂದೊ
ನಿದೆಯೀ ಮರಮಾಂತಲ ಕಲ್ಪಕೊಮೇ, ಮುನಿಕುಳು, ವಿಹಗೇಕ್ಕುಳು,
ಸೆದನೊಂಟ್ ನ ಗಾಯಕ ಭೃಂಗಮೆರ್, ದೇವೇರ್ಕುಳೂ ನಿಲ್ತೀ
ಕುದುರೇಕುಳು, ಜಾಸ್ಟ ರೆಚೀಪುಕ್ ಣಾ ವೈಕುಂಠ ವಿಶೇಷೊ || (೩-೧೦-೧೫)

ಇಲ್ಲಿ ಪಕ್ಷಿ-ಮೃಗ-ಪುಷ್ಪ- ಪ್ರಕೃತಿವರ್ಣನೆಗಳಿದ್ದರೆ, ಅನಂತರ ನಗರವರ್ಣನೆ ಕಂಡುಬರುತ್ತವೆ.

ದ್ವಾರಬಂಧ ಮುಖೊಂಟ್ ನಿಲ್ಪೊಸ್ಟಿ ಮತ್ತ್ ತೆತ್ತಿತಿನುತ್ತಮಾ
ತೋರಣಂಕುಳೆ ಕಾಂತಿ ಪ್ರಜ್ವಲಿಪುಪ್ಪೊ ಪತ್ತಿಶೆಕಕ್ಷಿಣಂ
ಚಾರುರೆತ್ನಮಯಂ ವೀಥಿಯ ಕೇರಿ ವಂದೆಲ್ ಚುತ್ಥಲಾ
ಸೌರಭಂಕುಳ ಚಾಂದ್ ಚಂದನ ಕಸ್ತುರೀಟತಿಧೂಳಿತೋ || (೩-೧೦-೨೨)

(ಮೂಲದಲ್ಲಿ ‘ಚಾತು’ ಎಂದಿರುವುದನ್ನು ಪ್ರಾಸನಿಯಮದಂತೆ ಬದಲಿಸಿಕೊಳ್ಳಲಾಗಿದೆ. )

ಪೂವಲೀಕುಳೆ ವೀಥಿಯಾ ಘನೊಮಾಯಿ ಲಾಜಲತಾವಳೀ
ಸೇವ್ಯೊಮಾಯಿ ಪಟ್ಟಾವಳೀ ಮದೆರಂಬರೋ ಕಡೆಕೂಡಲಾ
ರಾಮೊಮಾಯಿ ವಿಚಿತ್ರೊಗೀತೊ ವಿನೋದೊ ಗಾನೊ ಮಹಾಸ್ತುತೀ-
ಕಾ ವಿನೋದೊಮಿ ಚೂಸ್ಟ್ ಭಕ್ತೆರ್ ಮೆಲ್ಲಮೆಲ್ಲ್ ಳತರ್ಪೆರ್ || (೩-೧೦-೨೩)

(ದ್ವಾರಗಳಲ್ಲಿ ನಿಲ್ಲಿಸಿರುವ ಮುತ್ತಗಳನ್ನು ಕೀಲಿಸಿದ ತೋರಣಗಳು, ಹತ್ತು ದಿಕ್ಕುಗಳಿಗೂ ಪ್ರಕಾಶಬೀರುವ ರತ್ನಮಯ ಬೀದಿಗಳು, ಚಪ್ಪರದ ಸುತ್ತಲೂ ಚಂದನಕಸ್ತೂರಿ ಸುಗಂಧದ್ರವ್ಯಗಳಿಂದ ತುಂಬಿಕೊಂಡು ಕೇರಿಯೆಲ್ಲ ಧೂಳೀಮಯವಾಯಿತು. ಅರಳು – ಹೂವುಗಳೀಂದ ಬರೆದ ರಂಗೋಲಿಗಳು, ರೇಷ್ಮೆಯ ಮೇಲುಹಾಸುಗಳು, ಸುತ್ತಲೂ ಕೇಳಿಬರುವ ಗೀತಗಾನಸ್ತುತಿ ಪದ್ಯಗಳು… ಇದನ್ನೆಲ್ಲಾ ಭಕ್ತಜನರು ಮೆಲ್ಲಮೆಲ್ಲನೆ ಬಂದರು.)

ಭ್ರೂಣವಿಜ್ಞಾನ

ಕಪಿಲ ಋಷಿಯು ತನ್ನ ತಾಯಿಯಾದ ದೇವಹೂತಿಗೆ ಜನನಮರಣ ಚಕ್ರದ ಆಧ್ಯಾತ್ಮ ವಿಚಾರವನ್ನು ಉಪದೇಶಿಸುವ ಸಂದರ್ಭವಿದು-

ದಿನೊಮುಂಡಯಕಪ್ಪ ನಿಧಾನಿಪಿಲೇ ಹೃದಯಂತುಳೆಯಾಕೀ
ದಿನೊ ಮುಪ್ಪೆಟ್ ತ್ತರ್ಧೊ ಪ್ರವೇಶಿಪೊಡೂ ದ್ವಾರಂ ತ್ ದಪುಪ್ಪಾ
ದಿನೊಮೈನಯೆ ವರ್ಜ್ಯೊ ರಜಸ್ವಲೆತಾ ಋತುಕಾಲೊಮಯೆರ್ತ್
ದಿನೊ ಪತ್ತೆಟ ನುಂಬೆ ಪ್ರವೇಶಿಪುಟಾಪವು ಜನ್ಮನಿವಾಸೊ || (೩-೨೨-೩೧)

“ರಜಸ್ವಾಲೆಯಾದಂದಿನಿಂದ ಐದು ದಿನಸಗಳ ಕಾಲ ಗರ್ಭ ನಿಲ್ಲದು. ಅನಂತರ ಗರ್ಭಕೋಶದ ದ್ವಾರವು ತೆರೆದಿರುವುದರಿಂದ, ಆರರಿಂದ ಹತ್ತು ದಿನಗಳ ಪರ್ಯಂತ ಋತುಸಮಯದಲ್ಲಿ ಸ್ತ್ರೀಸಂಗ ಮಾಡಿದರೆ ಮಾತ್ರ ಗರ್ಭಾಂಕುರವಾಗುತ್ತದೆ”. ಇಲ್ಲಿ ವರ್ಣಿತವಾದ ಭ್ರೂಣವಿಜ್ಞಾನವು ಅತ್ಯಂತ ಮಹತ್ತ್ವದ ಉಲ್ಲೇಖವಾಗುತ್ತದೆ. ಅದರಲ್ಲೂ ಋತುಸಮಯದ ಸ್ತ್ರೀಸಂಗದಿಂದ ಮಾತ್ರ ಗರ್ಭಾಂಕುವಾಗುತ್ತದೆಂಬ ವಿಚಾರ, ಸಂಸ್ಕೃತ ಕನ್ನಡದ ಭಾಗವತಗಳಲ್ಲೂ ಕಂಡುಬರುವುದಿಲ್ಲ.

ಪೇರ್ ಪ್ಪಳೆ ಸಂಧಿಪಿನಾ ಪರಿಶೇ ಬಲಿಸ್ಟ್ ತನುರಕ್ತಂ
ಆರ್ ಸ್ಟವುಳೇಕಸ್ವರೂಪೊಮಿನಿನ್ಧರಿಪೇಪಳ್ ಮಾಯೆ
ಮೀರ್ ಸ್ಟತಿ ಮುಪ್ಪೊದಿನೊ ಕಳಿಸ್ಟೀ ಸಮಯಂಟ್ ಪ ವೆರ್ತ್
ಕಾರಶಿರಸ್ಸಂಗೊ ಪ್ರಕಾಶಿಪುನಾ ಮಾಸೋಮಿರಡುವಾ || (೩-೨೨-೩೨)

“ಹಾಲಿಗೆ ಹೆಪ್ಪು ಹಾಕಿದಂತೆ ಸ್ತ್ರೀಪುರುಷರ ಶೋಣಿಶುಕ್ಲ ಸಂಯೋಗದಿಂದ ಗರ್ಭೋತ್ಪತ್ತಿಯಾಗಿ ಮೂವತ್ತು ದಿನಗಳಲ್ಲಿ ಮಾಂಸರೂಪವನ್ನು ಧರಿಸಿ, ಎರಡನೇ ತಿಂಗಳ ಹೊತ್ತಿಗೆ ನವದ್ವಾರ, ಎಲುಬು, ರೋಮಾದಿಗಳು ಮೂರನೇ ತಿಂಗಳಲ್ಲಿ ಧಾತುಗಳೂ, ನಾಲ್ಕರಲ್ಲಿ ಹಸಿವುತೃಷೆಗಳೂ ಐದು ಆರನೇ ತಿಂಗಳಲ್ಲಿ ಚಲನೆಯೂ ಪ್ರಾರಂಭವಾಗುತ್ತದೆ. ಎಳನೇ ತಿಂಗಳಲ್ಲಿ ಜ್ಞಾನಶಕ್ತಿಯುಂಟಾಗಿ, ಪೂರ್ವಜನ್ಮಕೃತ ವಿಚಾರಗಳು ನೆನಪಾಗುತ್ತವೆ. ಹೀಗೆ ಒಂಬತ್ತು ತಿಂಗಳಾದಾಗ ಶಿಶುವು ಜನಿಸುತ್ತದೆ”.

ಇಲ್ಲಿ ಬರುವ ವಿಚಾರವು ಪುರಂದರದಾಸರ ‘ಮಾಸವೆರಡಲಿ ಶಿರ ಮಾಸಮೂರರೊಳಂಗ’ ಎಂಬ ಕೀರ್ತನೆಯನ್ನು ನೆನಪಿಗೆ ತರುತ್ತದೆ. ಕನ್ನಡ ಭಾಗವತದಲ್ಲೂ ‘ತಿಂಗಳಿಗೆ ತಲೆ, ಮಾಸವೆರಡರಲಂಗ, ‘ಏಳನೆಯ ತಿಂಗಳಲಿ ಪೂರ್ವಭವಾಳಿಯಲಿ ತಾನಾರ್ಜಿಸಿದ ಕರ್ಮಾಳಿಗಳ’ ಮುಂತಾದ ವಿವರಗಳಿವೆ (೨-೪-೨೦). ವಿಷ್ಣತುಂಗನು ಶುಕ್ಲಶೋಣಿತ ಸಂಯೋಗವನ್ನು ಕುರಿತು ಹೇಳುವ ‘ಪೇರ್ ಪ್ಪಳೆ ಸಂಧಿಪಿನಾ ಪರಶೇ’ ಎಂಬ ಉಪಮೇಯಂತೂ ಮನನೀಯವಾಗಿದೆ. ಈ ತೆರನಾದ ಸಾಲೊಂದು ಭೂತಾರಾಧನೆಯ ಪಾಡ್ದನದಲ್ಲಿ ಕೇಳಿದ ನೆನಪು. ಸಾಧಾರಣವಾಗಿ ಕೇಳಿಬರುವ ಮಾತುಗಳನ್ನೇ ಕವಿಪ್ರತಿಭೆ ಎರಕ ಹೊಯ್ದು ರಮಣೀಯಾರ್ಥ ಬರುವಂತೆ ಬಳಸುತ್ತದೆ. ಉಕ್ತಿರಮಣೀಯತೆಯೇ ಕಾವ್ಯ ತಾನೇ?

ಶಿಶುಜನನದ ಚಿತ್ರವನ್ನು ಕವಿ ಕಟ್ಟಿಕೊಡುವ ರೀತಿ ನೋಡಿ-
ಆಟ್ಟ್ ಡೇಟತಿಕಷ್ಟಿತ್ ಸಖಿಮಾರ್ಕುಳೀರ್ದಿಶೇಟ್ ತ್ತಲಾ
ಘೆಟ್ಟಿಪೇಪ್ಪರ್ ಮುಟ್ಟೆ ಪತ್ತ್ ಸ್ಟ್ ಬಾಲನೀಕರ ಮಾಂಪೆರ್
ಚೆಟ್ಟ್ ಸ್ಟೀ ಮನೊಂಟಾವ ಮೇದಿನಿಟ್ ಪ್ಪ ಬೂಳುವೆ ನಂದನೇ
ವಿಷ್ಠೆ ಮಾಂಸ ಶರೀರೆಯಾಸ್ಟಿ ಕುಮಾರ ಚೂವಟ ಕೌತುಕೋ || (೩-೨೩-೫)

“ಇಕ್ಕಟ್ಟಾದ ಎಡೆಯಲ್ಲಿ ಇಬ್ಬದಿಗಳಲ್ಲಿಯೂ ದಾದಿಯರು ಪ್ರಯಾಸದಿಂದ ಒತ್ತುತ್ತಾ ತಿಕ್ಕುತ್ತಾ ಶಿಶುವಿನ ತಲೆಯನ್ನು ಹಿಡಿದು ಈ ಕಡೆ ಎಳೆಯುತ್ತಾರೆ, ನೊಂದ ಮನಸ್ಸಿನಿಂದಲೂ ಕೊಳೆ ತುಂಬಿದ ಮೈಯ್ಯಿಂದಲೂ ಮಗುವು ಭೂಮಿಗೆ ಬೀಳುತ್ತದೆ.

ಇನ್ನು ಶೈಶವದ ದುಃಖ ಒಂದೇ ಎರಡೇ? ‘ಪಿಜಿನ್ ಪುಳಿಪಾತೇ’ ಮೊದಲಾಗಿ ಅನೇಕ ಕ್ರಿಮಿಕೀಟಗಳಿಂದ ಕಚ್ಚಿಸಿಕೊಂಡು ದೇಹವನ್ನು ಚಲಿಸಲಾಗದೆ, ಮಗು ಒದ್ದಾಡುತ್ತಿರುತ್ತದೆ.

ಶಿಶುತನದಲಿಮತ ಪದಾರ್ಥದ
ನುಸುರಲರಿಯನು ಬಾಧಿಸುವ ನೊಣ
ನುಸಿತಗುಣಿಗಳಿಗಿತ್ತು ಕಾಯವನಿರಿಸಿದಂತಿರ್ದು
ಮಿಸುಕಲರಿಯದೆ, ದೇಹವನು ಚೇ-
ಷ್ಠಿಸಲು ನೆರೆಯದೆ ದುಃಖ ಶೋಕ
ಪ್ರಸರ ಪರಿವೃತನಾಗಿಹನು ಬಾಲತ್ವದೊಳಂಗೆಂದಾ ||     (೩-೧೪-೨೯)
ಒಂದರಿಚ್ಛೆಯಲಳುತಿರಲು ಮ-
ತ್ತೊಂದುನೀವ ಸ್ವಜನಬಾಂಧವ
ವೃಂದದಲಿ ತನುದೆಳೆವನತಿದುಃಖದಲಿ ನೆರೆ ಮುಳುಗಿ
ಬೆಂದು ಶೋಕಾಗ್ನಿಯಲಿತೆರೆ ತಾ
ಕಂದಿ ಕಾಮಿತ ಸಿದ್ಧ ಮನದೊಳ
ಗೊಂದದಿರಲುನುತಾಪವಿಹ್ವಲನಹನು ಕೇಳೆಂದ ||         (೩-೧೪-೩೦)
ನಡೆಯಲತಿಯದ ದುಃಖ, ನೆನೆದುದು
ನುಡಿಯಲಾರದ ದುಃಖವೆಂದುದ
ಪಡೆಯಲಾರದ ದುಃಖ ದಂತೋದ್ಭವಪತನ ದುಃಖ
ಬಿಡದೆ ಗುರುಗೃಹದಲಿ ನಿರೋಧಂ
ಬಡುತ ತಾಡನ ತರ್ಜನಂಗಳಿ
ಗೊಡಲನೊಪ್ಪಿಸಿ ಕರ್ಣವೇಧಾದ್ಯಧಿಕತರ ದುಃಖ ||        (೩-೪-೩೧)

ಕನ್ನಡ ಭಾಗವತದ ಈ ಸುಂದರ ವರ್ಣನೆ, ಶ್ರೀ ಭಾಗವತೊದಲ್ಲಿ ಅದೇ ಭಾವವನ್ನು ಅನಾವರಣಗೈಯುತ್ತದೆ.

ಒಂಜಿನಿಚ್ಛಿತ್ ದುಕ್ಖಿಪಾಮೆಂಚೊಂಜ ಭಾವಿಪೆರೀ ಜನೋ
ಮೊಂಜಲಾತವು ಕಲ್ಪಿತೀ ನಿನೆವೇರ್ ಪಿಂಬೆರ್ ಸರ್ವಥಾ
ಬಂಜಿಕಾಪ್ಪುಣ ಬಾಯಿಕಾವನ್ ವ್ಯಂಜೀತ್ ಬಹುದುಕ್ಖೊಮೀ
ವ್ಯಂಜಿಪೇ ತನ ದೇಹಪಥ್ಯೊಮಿ ವ್ಯಂಜಿಪೋವಿಯೆರಾವನೇ || (೩-೨೩-೯)

“ಒಂದನ್ನು ಬಯಸಿ ದುಃಖಿಸಿದರೆ ಜನ ಬೇರೆ ಇನ್ನೊಂದನ್ನು ಅರ್ಥೈಸಿಕೊಂಡು ನೀಡುತ್ತಾರೆ. ಹೊಟ್ಟಾಗಾಗುವುದು ಬಾಯಿಗೆ ರುಚಿಸದು. ತನಗೇನು ಬೇಕೆಂದು ಮಗುವಿಗೆ ಹೇಳಲಿಕ್ಕಾಗದು”- ಈ ತೊಳಲಾಟವನ್ನು ಕವಿ ತುಂಬಾ ಸಮರ್ಥವಾಗಿ ವ್ಯಂಜಿಸಿದ್ದಾನೆ.