ಅರುಣಾಬ್ಜನ ಮಹಾಭಾರತೊ

ಅರುಣಾಬ್ಜ’ ಎಂದು ಹೆಸರು ತುಳುವಿನದಲ್ಲ. ಅದು ಅವನ ಕಾವ್ಯನಾಮವಾಗಿರಬೇಕು. ಅವನು ರಚಿಸಿದ ‘ಮಹಾಭಾರತೊ’ ೧೬೫೭ ಪದ್ಯಗಳಿರುವ ಒಂದು ಮಹಾಕಾವ್ಯ. ಇದರ ತಾಳೆಗರಿ ಗ್ರಂಥ ಮೂಡನೂರು ಗ್ರಾಮದ ಮುಂಡ್ಯ ಶ್ರೀ ಲಕ್ಷ್ಮೀನಾರಾಯಣ ಕೇಕುಣ್ಣಯರ ಮನೆಯಲ್ಲಿದ್ದದ್ದು, ವಿದ್ವಾನ್ ವೆಂಕಟರಾಜ ಪುಣೀಂಚತ್ತಾಯರಿಂದ ಬೆಳಕಿಗೆ ಬಂದು ಪ್ರಕಟವಾಗಿದೆ. ಪ್ರಾಚೀನ ತುಳುಭಾಷೆ – ಸಂಸ್ಕೃತಿಗಳ ಕುರಿತಾಗಿ ಅಧ್ಯಯನ ನಡೆಸಲು ಈ ಮಹಾಕಾವ್ಯ ವಿಪುಲ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಮಹಾಭಾರತದ ಆದಿಪರ್ವದ ಕಥಾಭಾಗ ಇಲ್ಲಿ ತುಳುವಿನಲ್ಲಿ ಚಿಗುರೊಡೆದಿದೆ. ಅರುಣಾಬ್ಜನ ಕಾವ್ಯ ಕೇವಲ ಆದಿಪರ್ವದ ಕಥೆಗೆ ಸೀಮಿತವಾಗಿತ್ತೆಂದು ಭಾವಿಸಲು ಆಧಾರಗಳು ಸಾಲವು. ಮಹಾಭಾರತದ ಇತರ ಪರ್ವಗಳ ಕಥೆಯೂ ಪಳಂತುವಿನಲ್ಲಿ ಅಭಿವ್ಯಕ್ತಗೊಂಡಿರಬಹುದು. ಆ ಬಗ್ಗೆ ಹೊಸ ಶೋಧನೆಗಳು ನಡೆದಾಗಲಷ್ಟೇ ಹೆಚ್ಚಿನ ವಿಚಾರ ತಿಳಿಯಬಹುದು.

ಅರುಣಾಬ್ಜ ಕವಿ ಮಹಾಭಾರತವನ್ನು ಬರೆಯುವ ಮೊದಲೇ ರಾಮಾಯಣ ಕಾವ್ಯ ತುಳುವಿನಲ್ಲಿ ಅವತರಿಸಿತ್ತೆಂಬುದು ‘ತುಳು ಮಹಾಭಾರತೊ’ ಕಾವ್ಯದ ಪೀಠಿಕೆಯಿಂದ ತಿಳಿಯುತ್ತದೆ.

ಏಣಾಪಾಣಿಮುಕುಂದಾ
ನಾಣಿಲ್ತಾನೆ ಭಜೀತೆ
ಕ್ಷೋಣಿಟುತ್ತಮೆಯಾಸ್ಟೀ ದ್ವಿಜಕುಲಾಢ್ಯೇ
ಜಾಣೇ ನಿರ್ಮಿತೆ ಕಾವ್ಯೊ
ಮಾಣಾನೇ ವಿಕಸೀತ್
ಮಾಣೀ ಯೇನಾಯನ್ ಶಿಷ್ಯೆರೆಕ್ ಶಿಷ್ಯೆ          (೧-೮)

(ಲೋಕದಲ್ಲಿ ಉತ್ತಮವಾದ ವಿಪ್ರವಂಶಸಂಭೂತನಾದ ಶಂಕರ ನಾರಾಯಣ ನಾಣೀಲ್ತಾಯನು ಕಾವ್ಯವನ್ನು ರಚಿಸಿದನು. ನಾನು ಅವನ ಶಿಷ್ಯರಿಗೆ ಶಿಷ್ಯ)

ತೆಳಿವುಳ್ಳಾಕುಳು ಭೂಮಿ
ತುಳ್ಕೆ ರಾಮಾಯಣ ಕಾವ್ಯೊ
ತುಳುಭಾಷೇ ಕವಿಕುಳು ವಿಸ್ತರಿತೆರೈಯೇರ್
ಅಳಿಯೇನಾಕುಳೆ ಪಾದ
ನಳಿನೊಂತಾ ಮಧುವುಣ್ಕೀ
ಯಿಳೆಟ್ ಭಾರತಕಾವ್ಯೊ ರಚಿಯೀಪುಪ್ಪೆ ||       (೧-೯)

(ಭೂಮಿಯಲ್ಲಿ ಪ್ರತಿಭಾವಂತ ಕವಿಗಳು ತುಳುಭಾಷೆಯಲ್ಲಿ ರಾಮಾಯಣವನ್ನು ಬರೆದನು. ಅವರ ಪಾದಕಮಲಭೃಂಗನಾದ ನಾನು ಭಾರತಕಾವ್ಯ ರಚಿಸುತ್ತೇನೆ. )

ಇಲ್ಲಿ ‘ತುಳುಭಾಷೆ ಕವಿಕುಳು’ ಎಂಬು ಪದಪ್ರಯೋಗವಿರುವುದರಿಂದ ರಾಮಾಯಣ ಕಾವ್ಯವನ್ನು ಕನಿಷ್ಠಪಕ್ಷ ಇಬ್ಬರಾದರೂ ತುಳುವಿನಲ್ಲಿ ರಚಿಸಿದ್ದಿರಬಹುದೆಂದು ಭಾವಿಸಲು ಸಾಧ್ಯವಿದೆ. ಜೊತೆಗೆ ‘ಏಣಾಪಾಣಿ ಮುಕುಂದ ನಾಣಿಲ್ತಾಯ’ (ಶಂಕನಾರಾಯಣ ನಾಣಿಲ್ತಾಯ?) ನೆಂಬ ಕವಿವರನನ್ನೂ ಗುರುಭಾವದಿಂದ ನೆನೆದು, ತಾನು ಆತನ ಶಿಷ್ಯರಿಗೆ ಶಿಷ್ಯ ಎಂದಿರುವುದೂ ಗಮನಿಸಬೇಕಾದ ಅಂಶ. ಹಾಗಾದರೆ ಆ ಕವಿಯು ಬರೆದ ಕಾವ್ಯವಾದರೂ ಯಾವುದು? ಎಂಬ ಪ್ರಶ್ನೆ ಹುಟ್ಟುತ್ತದೆ. ಪ್ರಾಯಶಃ ಆ ಕವಿಯು ರಾಮಾಯಣವನ್ನೇ ಬರೆದಿರಬೇಕೆಂದು ಊಹಿಸಬಹುದು. ಪೂರ್ವಕವಿಗಳ ಪಾದಕಮಲಭೃಂಗನಾದ ತಾನು ‘ಭಾರತಕಾವ್ಯ’ ಬರೆಯುತ್ತೇನೆಂಬ ಕವಿಯ ಆಶಯದಲ್ಲಿ ಅಂತಹ ಒಂದು ಸೂಚನೆ ಅಂತರ್ಗತವಾಗಿದೆ.

ಹರಿಶ್ರೀರುಕ್ಮಿಣಿದೇವೀ
ವರಿಯೀತಿನ್ ಕಥೆ, ಭೀಮೆ
ಕೆರಯೆ ಕೀಚಕನೆನ್ಕೀ ಚರಿತೇ, ಬಾಣನ್
ಕರೊ ಸಾರಾ ಮುರವೈರಿ
ತರಿತೀ ಕಥೆಯಾ ವಿ-
ಸ್ತರಿತ್ ಗುಡ್ಡೆರ ರಾಯೆ ನಿರ್ಮಿತೆ ಲೋಕೊಂಟ್            (೧-೧೦)

‘ಗುಡ್ಡೆತರಾಯೆ’ ಎಂಬ ಕವಿಯು ರುಕ್ಮಿಣೀಸ್ವಯಂವರ, ಕೀಚಕವಧೆ, ಬಾಣಾಸುರ ವಧೆ ಎಂಬ ಕಾವ್ಯಗಳನ್ನು ಬರೆದಿರುವನೆಂಬ ಉಲ್ಲೇಖ ಇಲ್ಲಿ ತುಂಬಾ ಮಹತ್ವದ್ದು. ಏಕಾದಶೀವ್ರತಾಚರಣೆಯ ಅಂಬರೀಷೋಪಾಖ್ಯಾನವೆಂಬ ಕಾವ್ಯವನ್ನೂ ಅವನೇ ಬರೆದಿರಬೇಕೆಂಬುದನ್ನೂ ಅನಂತರದ ಪದ್ಯದಿಂದ ತಿಳಿಯಬಹುದು.

ಲೋಕೊಂಟುತ್ತಮ ಮುತ್ಥಟ್
ಏಕಾದಶ್ಯುಪವಾಸೊಂ
ತಾ ಕಾವ್ಯೊ ರೆಚಿಯೀತೀ ಮಹಮೇ ಕೊಂಡ್
ಶ್ರೀ ಕೃಷ್ಣೇ ತುಣೀಯಾಯನ್
ಆಕರ್ಷಿತೆರೇ ಸಾಕ್ಷಾತ್
ಆ ಕವಿಕುಲನಾಥಕಭಿವಂದೀಪ್ಪೆ

ಈ ಉಲ್ಲೇಖಗಳಿಂದ ತುಳುವಿನಲ್ಲಿ ‘ಏಣಾಪಾಣಿ’ (ಶಂಕರ ನಾರಾಯಣ) ಮತ್ತು ‘ಗುಡ್ಡೆತರಾಯೆ’ (ಗಿರಿರಾಜ) ಎಂಬ ಇಬ್ಬರು ಕವಿಗಳ ಹೆಸರುಗಳೂ ರಾಮಾಯಣ, ರುಕ್ಮೀಣೀ ಸ್ವಯಂವರ, ಬಾಣಾಸುರ ವಧೆ, ಕೀಚಕ ವಧೆ, ಅಂಬರೀಷೋಪಾಖ್ಯಾನಗಳೆಂಬ ಐದು ಕಾವ್ಯಗಳ ಹೆಸರುಗಳೂ ದೊರೆಯುವುದು ವಿಶೇಷವಾಗಿದೆ. ಆದರೆ ಇಲ್ಲಿ ‘ಶ್ರೀ ಭಾಗವತೊ’ ಬರೆದ ವಿಷ್ಣುತುಂಗನ ಪ್ರಸ್ತಾಪವೇ ಇಲ್ಲದಿರುವುದು ಸೋಜಿಗವೆನಿಸುತ್ತದೆ.

ಕವಿಯ ಕಾಲ-ದೇಶ        

ಕುಡವೂರ್ ಟುದೀಯತಿ
ಮೃಡರಾಮಾ ಚರಣಾಬ್ಜಂ
ತುಡಿಟುಳ್ಳಾ ಪೊಡಿನಿಂಜೊ ಮುಡಿತೊಂಡೇನ್
ಉಡರೀಪುಪ್ಪೆನ್ ಕಾವ್ಯೊ
ಮುಡೆಟೆಂಕೊಂಜುಡವೂ ವ-
ರ್ತಡೆಂಪತಿ ಪರಿಶೇ ರಕ್ಷಿಪಿಲೆ ಸ್ವಾಮಿ ||            (೧-೭)
. . . . . . . . . . . . . . . . . . . . . . . . . . . . . . . . . . .
. . . . . . . . . . . . . ಮೂಡಿಲ್ಲಾರ್
ವನಜಾರೀ ಸಮೆ ಶಿವಾ ನೆಡಂಬುದಾರ್
ಅನುಪಮೇರಿರುವೇರ್
ಅನುಮಾತೀೞ್ತಿನ ಕಾವ್ಯೊ
ವನರುಹೋ ವಿಕಸೀಪೊಡುನ ಲೋಕೊಂಟ್     (೧-೧೬)

ಉಡುಪಿಯ ಹತ್ತಿರದ ‘ಕೊಡುವೂರು’ ಕವಿಯ ವಾಸಸ್ಥಳವಾಗಿತ್ತೆಂದೂ ಅವನು ಅಲ್ಲಿಯ ಪ್ರಸಿದ್ಧ ಶಂಕರನಾರಾಯಣ ದೇವಸ್ಥಾನದ ಪರಮಭಕ್ತನೆಂದೂ ಇದರಿಂದ ತಿಳಿಯಬಹುದು. ಪರಶುರಾಮನ ಕೊಡಲಿ ಬಿದ್ದ ಮನೆ ಪ್ರದೇಶಕ್ಕೆ ‘ಕುಡಾರ’

[ಕುಠಾರ(ಸಂ), ಕೊಡಲಿ (ಕ)=ಕುಡಾರಿ (ತುಳು)] ಎಂಬ ಹೆಸರು ಇದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಿಡಂಬೂರು ಬಲ್ಲಾಳರ ಆಡಳಿತಕ್ಕೊಳಪಟ್ಟ ಹನ್ನೊಂದು ಗ್ರಾಮಗಳಿಗೆ ಕೊಡವೂರಿನ ಶಂಕರನಾರಾಯಣ ದೇವಸ್ಥಾನವು ಸೀಮೆ ದೇವಸ್ಥಾನವಾಗಿತ್ತೆಂಬುದನ್ನು ಇಲ್ಲಿ ಗಮನಿಸಬೇಕು. ನಿಡಂಬೂರು ಬೀಡಿನ ಅರಸರಾದ ಶಿವನಿಡಂಬೂರಿನ ರಾಜಾಶ್ರಯದಲ್ಲಿ ಕವಿಯು ತನ್ನ ಕಾವ್ಯವನ್ನು ರಚಿಸಿರಬೇಕೆಂದೂ ತಿಳಿಯಬಹುದು. ಚಿಟ್ಪಾಡಿ ಬೀಡಿನ ಮೂಡಿಲ್ಲಾರ್ ಮತ್ತು ನಿಡಂಬೂರು ಬೀಡಿನ ನಿಡಂಬುರಾರ್ ಎಂಬ ಈರ್ವರು ಅರಸರ ಆಶ್ರಯದಲ್ಲಿ ಕಾವ್ಯ ಕಮಲವು ಅರಳಲಿ ಎಂಬುದು ಕವಿಯ ಅಪೇಕ್ಷೆಯಾಗಿರುವುದರಿಂದ ‘ಶಿವನೆಡುಂಬರಾರ್’ ಮತ್ತು ಅರುಣಾಬ್ಜ ಕವಿ ಸಮಕಾಲೀನರಾಗಿದ್ದರೆಂಬ ವಿಚಾರವೂ ವೇದ್ಯವಾಗುತ್ತದೆ. ಶಿವನೆಡಂಬುರಾರರಿಗೆ ಸಂಬಂಧಿಸಿದ ಒಂದು ಶಾಸನವು (ಕ್ರಿ. ಶ. ೧೩೮೩) ಉಡುಪಿ ತಾಲೂಕಿನ ಬೆಣಗಲ್ಲು ಸಮೀಪದ ಸಾಸ್ತಾವು ಎಂಬಲ್ಲಿದೆ.[1] ಅಣ್ಣ ನಿಡಂಬೂರನು ರಾಜ ಕಾರ್ಯದಲ್ಲಿ ನಿರತನಾಗಿದ್ದಾಗ ಮರಣವನ್ನಪ್ಪಿದ ಕಾರಣ, ಶಿವನಿಡಂಬೂರನಿಗೆ ಸಾಸ್ತಾವು ಗ್ರಾಮದ ತೆರಿಗೆಯನ್ನು ಪರಿಹಾರವಾಗಿ ನೀಡಲಾಯಿತೆಂದು ಈ ಶಾಸನ ತಿಳಿಸುತ್ತದೆ. ಈ ಶಾಸನದ ಕಾಲವು ‘ಶ್ರೀ ಜಯಾಭ್ಯುದಯ ಶಕವರುಷ ೧೩೦೫ ರುಧಿರೋದ್ಗಾರಿ ಸಂವತ್ಸರ’ ವಾಗಿರುವುದರಿಂದ ಕ್ರಿ. ಶ. ೧೩೮೩ ಕ್ಕೆ ಅದು ಸರಿಹೋಗುತ್ತದೆ. ಹಾಗಾಗಿ ಶಿವ ನಿಡಂಬೂರಿನ ಸಮಕಾಲೀನನಾದ ಅರುಣಾಬ್ಜ ಕವಿಯು ಸುಮಾರು ೧೪ನೇ ಶತಮಾನದ ಕೊನೆಯಲ್ಲಿ ಈ ಕಾವ್ಯವನ್ನು ರಚಿಸಿರಬೇಕೆಂದು ನಿರ್ಧರೊಸಬಹುದು. ಇದಕ್ಕೆ ಪೂರಕವಾಗಿ ಕವಿಯ ಜಾತಪಪದ್ಯವೊಂದು ಕೂಡಾ ತುಳು ಮಹಾಭಾರತದಲ್ಲಿ ದೊರೆಯುತ್ತದೆ.

ಗುರುಚಾಪೊಂಟುರಗೆಯಾ
ಹರಿಸೂನುವಹಿತಸ್ಥೇ
ವರ ಶುಕ್ರೇ ತುಲೆಟ್ ಕೇತುವ ಮೇಷೊಂಟ್
ಹರಿ ಭೌಮೆ ಶಶಾಂಕೆ
(ರಿರುವೆರಾ) ವೃಷಭೋಂಟ್ ಪ್ಪ
ಅರುಣಾಬ್ಜೇ ರಚಯೀತೆ ಕಥೆ ಭಾರತೊನ್       (೧-೧೨)

  ಕೇತು ಚಂದ್ರ
ಕುಜ
 
       
       
ಗುರು   ಶುಕ್ತ
ರಾಹು
ಶನಿ, ರವಿ
 

ಇಲ್ಲಿ ‘ಅಹಿತಸ್ಥೆ’ ಎಂಬುದನ್ನು ಗ್ರಹಿಸಲು ಸುಲಭವಾಗುವಂತೆ, ‘ವರಶುಕ್ರೆ’ ಮತ್ತು ‘ಹರಿಭೌಮೆ’ ಎಂಬ ಪಾದಾರಂಭಗಳನ್ನು ‘ಹರಿಶುಕ್ರೆ’ ಮತ್ತು ‘ವರಭೌಮೆ’ ಎಂದು ಪರಸ್ಪರ ಬದಲಿಸಿಕೊಳ್ಳಬೇಕಾಗುತ್ತದೆ. ಆಗ ಜಾತಕಪದ್ಯದ ಅರ್ಥವನ್ನು ಹೀಗೆ ಸಂಗ್ರಹಿಸಬಹುದು. ಧನುವಿನಲ್ಲಿ ಗುರುವೂ ರಾಹು – ಶನಿ – ಶುಕ್ರರೊಂದಿಗೆ ಶತ್ರು ಸ್ಥಾನವಾದ ತುಲಾರಾಶಿಯಲ್ಲಿ ರವಿಯೂ ಮೇಷದಲ್ಲಿ ಕೇತುವೂ ವೃಷಭದಲ್ಲಿ ಕುಜಚಂದ್ರರೂ ಇರುತ್ತಾರೆಂಬ ಸೂಚನೆಯಿಂದ ಜಾತಕಕಾಲವನ್ನು ಕ್ರಿ. ಶ. ೧೩೮೩ ರಂದು ನಿರ್ಧರಿಸಬಹುದು.[2]

ಅರುಣಾಬ್ಜನ ಕಾಲನಿಷ್ಕರ್ಷೆಯಿಂದ ಕುಮಾರವ್ಯಾಸನ ಕಾಲ ನಿರ್ಣಯಕ್ಕೂ ಸಹಾಯವಾಗುತ್ತದೆ. ಗದುಗಿನ ಭಾರತದ ಪ್ರಭಾವವು ತುಳೂ ಮಹಾಭಾರತದಲ್ಲಿ ಸ್ಪಷ್ಟವಾಗಿ ಗೋಚರಿಸುವುದರಿಂದ ಗೋವಿಂದ ಪೈಗಳು ಹೇಳಿದ ಕುಮಾರವ್ಯಾಸ ಕಾಲ (ಕ್ರಿ. ಶ. ೧೨೩೦ -೧೨೩೫) ಸಮರ್ಪಕವಾದುದೆಂದು ತೀರ್ಮಾನಕ್ಕೆ ಬರಬಹುದು.

ಭಾಷೆ

ರಳಾಕ್ಷರದ ಬಳಕೆ : ‘ಮಹಾಭಾರತೊ’ ಕಾವ್ಯದಲ್ಲಿ ರಳಾಕ್ಷರದ ಬಳಕೆ ವಿಪುಲವಾಗಿ ಕಂಡುಬರುತ್ತದೆ. ಕೆಲವೆಡೆ ರಳವು ‘ಕುಳ’ವಾದ ಉದಾಹರಣೆಗಳೂ ದೊರೆಯುವುದರಿಂದ ಅರುಣಾಬ್ಜನ ಕಾಲಕ್ಕಾಗುವಾಗಲೇ ರಳಾಕ್ಷರವು ಮರೆಯಾಗುತ್ತಾ ಬಂದಿರಬೇಕೆಂದು ಊಹಿಸಬಹುದಾಗಿದೆ. ಕಾವ್ಯದಲ್ಲಿ ಬಳಕೆಗೊಂಡ ಕೆಲವು ರಳ ಪ್ರಯೋಗಗಳನ್ನು ಹೀಗೆ ಪಟ್ಟಿ ಮಾಡಬಹುದು.

ಔೞ್ತ್ (ಅಲ್ಲಿಂದ), ಕೊೞ್ ಸ್ಟ್ (ಕೊಟ್ಟು), ಅೞ್ (ದುಃಖಿಸು), ಪೆರವುೞ್ತ್ (ಹಿಂದಿನಿಂದ), ಓೞ್ಟು (ಮರೆಮಾಚು), ಕೞ್ತ್ (ಕಿತ್ತು ಹಾಕಿ), ಕೞಿಪು(ಮಾಡು), ಕೞಿಯ (ಕಟುವಾದ), ಕುೞಿ (ಹೊಂಡ), ಕುೞಿರ್ಪು (ರೋಮಾಂಚನಗೊಳ್ಳು), ಗೞ್ ಪ್ಪು (ಬಿಡಿಸು), ಚುೞಪು(ಆರತಿ ಎತ್ತು), ಚುೞಿಲ್ (ಬೀಸು), ತಾೞ್ (ತಗ್ಗು), ತಿಗ್ ೞ್ (ಸೀಳು), ನೌೞ್ (ಊಳಿಡು), ಪಳ್ ಸ್ಟಿ (ಅಕ್ಕ), ಪುೞಲ್ (ಕೊಳಲು), ಬೞಿ (ದಾರಿ), ಬುೞ್ತಪು (ಬೀಳಿಸು), ಬೆೞ್ಪು (ಬೆಳಕು), ಬೇೞ್ಪು (ಬೇಹುಗಾರಿಕೆ), ಬೋೞಿಪು (ಕ್ಷೌರ ಮಾಡು), ಮಗುೞ್ (ಮಗುಚು), ಮೞಗ್ (ಮೊಳಗು) ಇತ್ಯಾದಿ.

‘ಸ್ಟ್’ ಧ್ವನಿಮಾ

ಆಧುನಿಕ ಕನ್ನಡಿಗರು ರಳವನ್ನು ಮರೆತಂತೆಯೇ ಆಧುನಿಕ ತುಳುವರು ‘ಸ್ಟ್’ ಧ್ವನಿಮಾವನ್ನು ಮರೆತಿದ್ದಾರೆಂದು ಹೇಳಬೇಕಾಗುತ್ತದೆ. ಅದರ ಉಚ್ಚಾರಸ್ವರೂಪ ಹೇಗೆಂಬುದೇ ಒಂದು ಸಮಸ್ಯೆಯಾಗಿದೆ. ಸ್ಟ್ ಕಾರದ ಹೆಚ್ಚಿನ ಪ್ರಯೋಗಗಳು ಹೊಸ ತುಳುವಿನಲ್ಲಿ ತ್ ಕಾರ್ ಮತ್ತು ದ್ ಕಾರವಾಗಿ ಪರಿಣಮಿಸಿದೆ. ಕೆಲವೆಡೆಯಲ್ಲಿ ಅದು ಯಕಾರಕ್ಕೆ ಪ್ರಾಸಾಕ್ಷರವಾಗಿ ಬಳಕೆಗೊಂಡದ್ದೂ ಇದೆ!(ಉದಾ: ಸಂರ್ಧಿ, ಪಾಡ್ ೫೦, ೯-೮೯, ೧೩-೨೨).

ಪಿದಾಡ್ ಸ್ಟೆನ್, ಪತ್ತ್ ಸ್ಟೆನ್ ಮುಂತಾದ ರೂಪಗಳು ಆಧುನಿಕ ತುಳುವಿನಲ್ಲಿ ಪಿದಾಡ್ ಯೆ, ಪತ್ತೆಯೆ ಎಂದಾಗುತ್ತದೆ. ಸ್ಟೆರಡ್, ಸ್ಟೇನ್, ಸ್ಟೀಯ್ಯ್, ಸ್ಟ್ ದ್ಧಿ, ಸ್ಟ್ ತ್ತೆರ್, ಸ್ಟ್ ಪ್ಪೊಡು ಪ್ರಯೋಗಗಳು ಕ್ರಮವಾಗಿ ಯೆರಡ್, ಯೇನ್, ಯೀ, ಯಿದ್ದಿ, ಇತ್ತೆರ್, ಯಿಪ್ಪೊಡು ಎಂದು ಯಕಾರವನ್ನು ಆಶ್ರಯಿಸಿರುವುದನ್ನು ಗಮನಿಸಬಹುದು.

ಕ್ರಿಯಾರೂಪದಲ್ಲಿ

ಪೋಸ್ಟ್ ಣ್, ಪುಷ್ಟ್ ಸ್ಟ್, ಏಸ್ಟೆರ್, ಮುಂಗಸ್ಟ್ ತ್ತ್

ಸರ್ವನಾಮ ಸ್ಥಾನದಲ್ಲಿ

ಆಸ್ಟೆನ್ (ಅದನ್ನು), ಅಸ್ಟೆಕ್ (ಅದಕ್ಕೆ), ಅಸ್ಟೆಟ್ (ಅದರಲ್ಲಿ)

ಪದಾದಿ ಸರ್ವನಾಮಗಳಲ್ಲಿ

ಸ್ಟೇನ್ (ನಾನು), ಸ್ಟೀಯ್ಯ್ (ನೀನು), ಸ್ಟಂಬೆ (ಇವನು), ಸ್ಟಂಬಳು (ಇವಳು), ಸ್ಟಾಯೆ (ಅವನು).

ಸ್ವರಾದಿ ಸಂಖ್ಯಾವಾಚಕ

ಸ್ಟೊಂಜಿ (ಒಂದು), ಸ್ಟಿರಡ್ (ಎರಡು), ಸ್ಟೊರಿಯೆ (ಒಬ್ಬ), ಐಸ್ಟೆರಕಾಲ (ಐವರಿಗೂ).

ಪದಾದಿಯಲ್ಲಿ

ಸ್ಟ್ ದ್ದಿ, ಸ್ಟಂದ್, ಸ್ಟ್ ತ್ತಿರಿ, ಸ್ಟರಿ.

ಸಂಸ್ಕೃತ ಪದಾದಿಯಲ್ಲಿ

ಸ್ಟರ್ಥೊ, ಸ್ಟಂಬರೊ, ಸ್ಟರ್ಜುನೆ, ಸ್ಟನುಜೆ, ಸ್ಟಶ್ವತ್ಥಾಮಾ

ಆದ್ಯಂತಗಳಲ್ಲಿ

ಸ್ಟ್ ಡ್ ಸ್ಟ್ (ಇರಿಸಿ)

ದ್ವಿಪ್ರಯೋಗ

ಚೂಸ್ಟಸ್ಟೆ, ಆಸ್ಟೆಸ್ಟೂಡ್ ಸ್ಟ್

ಲೋಪರೂಪ

ಪರೊ (ಪರೊಸ್ಟ್), ತರ್ಪೊ (ತರ್ಪೊಸ್ಟ್), ತೊಡ್ (ತೊಡ್ ಸ್ಟ್).

ಭಾಷಾಪ್ರಯೋಗ ವೈಶಿಷ್ಟ್ಯ

. ಲೋಪಸಂಧಿ

ಸ್ವರದ ಮುಂದೆ ಸ್ವರವು ಬಂದಾಗ, ಪೂರ್ವ ಪದಾಂತ್ಯದ ಸ್ವರವು ಲೋಪವಾಗದೆ, ಉತ್ತರಪದಾದಿಯ ಸ್ವರವು ಲೋಪವಾಗುತ್ತದೆ. (ಕನ್ನಡದಲ್ಲಿ ಇದರ ವಿಲೋಮ ನಿಯಮವಿದೆ). ಉದಾ:

ಮಗ + ಈಯ್ಯ್ = ಮಗಯ್ಯ್
ಪುರುಷೆ+ ಈಯ್ಯ್ = ಪುರುಸೇಯ್ಯ್

. ಆದೇಶ ಸಂಧಿ

ಅವನೀಶ +ಆಕುಳೆ = ಅವನೀಶನಾಕುಳೆ
ನಿನೆತ್ + ಅನರಾಗ = ನಿನೆತ್ ಮನರಾಗ
ಕೇಳುವೋ + ಅತ್ತಿಭಕ್ರಿಟ್= ಕೇಳುವೋಮತಿಭಕ್ತಟ್.
ಇಲ್ಲಿ ‘ನತ್ವಾದೇಶ’ ಮತ್ವಾದೇಶ’ ಗಳನ್ನು ಗಮನಿಸಬಹುದು

. ‘ಅವು’ ಪ್ರತ್ಯಯ

ಬಹುವಚನರೂಪವಾದ ರಾಜಾವು, ಕರ್ತಾವು, ಕನ್ಯಾವು, ಪಿತಾವು, ಮಾತಾವು ಮುಂತಾದ ಪದಗಳಲ್ಲಿ ‘ಅವು’ ಪ್ರತ್ಯಯದ ಬಳಕೆಯನ್ನು ಕಾಣಬಹುದು. ಕನ್ನಡ ಶಿಷ್ಟ ಸಾಹಿತ್ಯದಲ್ಲಿರುವ ‘ಕನ್ಯಾವು’ಎಂಬ ಪದವೇ ಜಾನಪದ ಸಾಹಿತ್ಯದಲ್ಲಿ ಕನ್ಯಾಪು ಎಂದಾಗಿದೆ. ಮಲೆಯಾಳ ಭಾಷೆಯಲ್ಲೂ ಈ ಪ್ರತ್ಯಯವಿರುವುದರಿಂದ ಪಳಂತುವಿನ ಈ ರೂಪವು ದ್ರಾವಿಡ ಭಾಷೆಗಳ ಸಾಮಾನ್ಯ ಲಕ್ಷಣವೆಂದು ತಿಳಿಯಬಹುದು.

. ‘ಅತ್ತ್ ’ ಧಾತು

‘ಕೊಡು’ ಎಂಬರ್ಥದಲ್ಲಿರುವ ‘ಅತ್ತ್’ ಎಂಬ ಧಾತುವಿನ ಹಿನ್ನೆಲೆಯಲ್ಲಿ ಬಾಲಭಾಷೆಯಲ್ಲಿ ಸಾಮಾನ್ಯವಾಗಿರುವ ‘ಇತ್ತಾ’ ಎಂಬ ಪ್ರಯೋಗವನ್ನು ಸ್ಮರಿಸಿಕೊಳ್ಳುಬಹುದು. ಈ ಪ್ರಯೋಗವನ್ನು ವಿಷ್ಣುತುಂಗನ ‘ಶ್ರೀ ಭಾಗವತೊ’ದಲ್ಲಿಯೂ ಕಾಣಬಹುದಾಗಿದೆ. ಈರ್ ಪಂಡ್ ಣಾಸ್ಟ್ ತ್ತಪೋ (ಮಹಾಭಾರತೊ ೪-೨). ಪಾನಕೀನೆನ್ ಕ್ ತ್ತ ಖಂಡಿಪೆ (ಶ್ರೀ ಭಾಗವತೊ ೧-೬-೨೯).

. ಪುಟ್ಟ್ -ಪುಷ್ಟ್

ಪಳಂತುವಿನಹಲ್ಲಿ ‘ಪುಟ್ಟ್’ (ಹುಟ್ಟು) ಎಂಬುದು ಪುಷ್ಟ್ ಎಂದಾಗಿರುವುದನ್ನು ಗಮನಿಸಬಹುದು. ಕೆಲೆವೆಡೆ ಅದು ಪುಟ್ಟ್ ಸ್ಟ್, ಪುಸ್ಟ್ ಸ್ಟ್ ಎಂಬ ರೂಪದಲ್ಲಿ ಕಂಡುಬರುತ್ತದೆ.

. ಆಪು -ವಾಕ್ಯಶೈಲಿ

ಹೊಸ ತುಳುವಿನಲ್ಲಿ ‘ಆಪು’ ಎಂಬುದು ಉಹಾರ್ಥಕವಾಗಿದ್ದರೆ, ಪಳಂತುವಿನಲ್ಲಿ ಅದು ನಿರ್ಣಯಾತ್ಮಕವಾಗಿರುವು ಗಮನಾರ್ಹವೆನಿಸುತ್ತದೆ. ಉದಾ: ಆಡೆಯೊಂಡರ್ ನಾಪು- ಹೊರಟರು; ಕರುವಂಶಜೆ ರಾಪು- ಕುರುವಂಶದವರಾದ.

. ಹೇಪಲಾ – ಹೇನ್ಯಲಾ -ಹೇಷಳ್ಳಾ

‘ಮಹಾಭಾರತೊ’ದಲ್ಲಿ ಹಕಾರದಿಯಾದ ಕೆಲವು ಪದಗಳು ನಮ್ಮ ಗಮನ ಸೆಳೆಯುತ್ತವೆ. ಉದಾ: ಹೇತಲಾ (ಎಷ್ಟಾದರೂ), ಹೇನ್ಮಲಾ- ಹೇನ್ಯಾ-ಹೇಯಲಪ-ಹೇಪಳ್ಳಾ (ಯಾವಾಗಲೂ), ಹೇಪರ್ತಂದೊಮೆ (ಎಂದಿನಂತೆ), ಹೇಯಾಲ (ಯಾವುದಾದರೂ), ಹೇಸ್ಟಲಾ (ಎಷ್ಟಕ್ಕೂ)- ಇತ್ಯಾದಿ.

ಇವುಗಳಲ್ಲಿ ಕೆಲವು ಆಧುನಿಕ ತುಳುವಿನಲ್ಲಿ ಏತಲಾ, ಏಪಳ್ಳಾ ಮುಂತಾದ ಸ್ವರಾದಿ ರೂಪಗಳನ್ನು ಧರಿಸಿವೆ.

೮. ‘ಮನ್ನತ’ ಎಂಬುದು ‘ಮರು’ ಎಂಬುದಕ್ಕೆ ಸಂವಾದಿಯಾಗಿದ್ದು, ಮನ್ನತ ದಿನೊಂಟ್ (ಮರುದಿನ), ಮನ್ನತವರ್ಷೊ (ಮರುವರ್ಷ), ಮನ್ನತಾಳ್ (ಮಗುದೊಬ್ಬಳು) – ಮುಂತಾದ ಪದಪ್ರಯೋಗಕ್ಕೆ ಇಂಬು ನೀಡಿದೆ. ಹೊಸ ತುಳುವಿನಲ್ಲಿ ‘ಮನದಾನಿ’ (ಮರುದಿನ) ಎಂಬುದಾಗಿ ಬಳಕೆಯಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.

೯. ಐತವಾ (ಆದ್ದರಿಂದ), ಭ್ರಾಂತ್ ತವಾ (ಭ್ರಾಂತಿಯಿಂದ), ಬುದ್ಧಿತವಾ (ಬುದ್ಧಿಯಿಂದ) – ಮೊದಲಾದ ಪ್ರಯೋಗಗಳು ತೀರಾ ಇತ್ತಿಚಿನವರೆಗೂ ರೂಢಿಯಲ್ಲಿದ್ದುದು ಕಂಡುಬರುತ್ತದೆ. ರುಣಾಬ್ಜನು ಬಳಸಿದ ‘ಉಂಡಾಯಿರಿ’ (ಉಂಟಾಗಲಿಲ್ಲ) ಎಂಬಲ್ಲಿರುವ ‘ಆಯಿರಿ’ ಸ್ವರೂಪದ ಅನೇಕ ನಿಷೇಧಾರ್ಥಕ ಪದಗಳು ಕಾರ್ಕಳ ತಾಲೂಕಿನ ಕಬ್ಬಿನಾಲೆ ಗ್ರಾಮದ ಹೆಬ್ಬಾರ ಬ್ರಾಹ್ಮಣರ ಆಡುಭಾಷೆಯಲ್ಲಿ ಈಗಲೂ ಬಳಕೆಯಲ್ಲಿರುವುದು ವಿಶೇಷವಾಗಿದೆ.

೧೦. ತೆರ್ವಟೆ (ದಾರಿ), ತೆಂಬಡ (ಇನ್ನೂ), ಬೆಳಿರ್ (ವಿಶಾಲ)- ಮುಂತಾದ ಪದಪ್ರಯೋಗಗಳೊಂದಿಗೆ ಕವಿಯೇ ಸೃಷ್ಟಿಸಿದ ಮಾರ್ಕೋಲು (ಪ್ರತಿಬಾಣ), ಕಾಟಾಳೆರ್ (ಕಿರಾತರು), ಕಾಟಾಗ್ನಿ (ಕಾಳ್ಗಿಚ್ಚು) ಇತ್ಯಾದಿ ಶಬ್ದಗಳೂ ವಿಶೇಷವಾಗಿದೆ. ಪಕ್ವಗೊಳ್ಳದ ಜ್ಞಾನವುಳ್ಳವರೆಂಬ ಅರ್ಥಚ್ಛಾಯೆಯಲ್ಲಿ ಕವಿಯು ಪ್ರಯೋಗಿಸಿದ ‘ಪಜಿವೋದೆರ್’, ಧನಸ್ಸು ಹಿಡಿದು ಹೋರಾಡುವವರೆಂಬ ಧ್ವನಿಯುಳ್ಳ ‘ಬಿರುವೇಚಾಡ್ ಕುಳು’, ದುರ್ಬುದ್ಧಿ ಎಂಬ ಅರ್ಥವುಳ್ಳ ‘ರೆಂಗಬುದ್ಧಿ’ ಮುಂತಾದ ಪದಪ್ರಯೋಗಗಳೂ ಕವಿಯ ಶಬ್ದಸೃಷ್ಟಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ.

ಛಂದಸ್ಸು

ಅರುಣಾಬ್ಜ ಕವಿ ತನ್ನ ಕಾವ್ಯದ ವೃತ್ತಗಳೆಂದು ಕರೆಯದೆ ‘ಪಾಡ್’ ಗಳೆಂದು ಹೆಸರಿಸಿರುವುದು ಅವನ ತುಳು ಪ್ರೀತಿಗೆ ಸಾಕ್ಷಿ. ಸಂಸ್ಕೃತದ ಮಲ್ಲಿಕಾಮಾಲೆ, ತೋಟಕ ಹಾಗೂ ಅವುಗಳ ಪ್ರೇರಣೆಯಿಂದ ತುಳು ಕವಿಗಳು ಕಟ್ಟಿಕೊಂಡ ತೋಟಕಜನ್ಯ (ದೀರ್ಘ) ಮುಂತಾದ ವೃತ್ತಧಾಟಿಗಳಿಗೆ ತುಳು ಸಂಸ್ಕೃತಿಯ ಗಂಧವಿರುವ ‘ಪಾಡ್’ ಗಳೆಂಬ ಹೆಸರಿಟ್ಟಿರುವುದು ಕವಿಯ ತುಳು ಭಾಷಾಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಕನ್ನಡದಲ್ಲಿ ಬಿದ್ದುಹೋದ ಅಂಶಷಟ್ಪದಿಗಳನ್ನು ತನ್ನ ಕಾವ್ಯದಲ್ಲಿ ವಿಪುಲವಾಗಿ ಪ್ರಯೋಗಿಸಿರುವುದೂ ಅವನ ರುಚಿಶುದ್ಧಿಗೆ ಪುರಾವೆಯಾಗಿವೆ. ಸುಮಾರು ೮೮೩ ಅಂಶಷಟ್ಪದ (ಒಟ್ಟು ಪದ್ಯಗಳು -೧೬೫೭)ಗಳನ್ನು ಬಳಸಿರುವ ಕವಿಗೆ, ಮರೆಯಾಗಿ ಹೋಗುತ್ತಿದ್ದ ಛಂದೋಬಂಧಗಳ ಕಡೆಗೆ ಒಲವೂ ಅವುಗಳನ್ನು ಮತ್ತೆ ಜನಮನದಲ್ಲಿ ಪ್ರತಿಷ್ಠಾಪಿಸಬೇಕೆಂಬ ಛಲವೂ ಪ್ರಬಲವಾಗಿ ಇದ್ದಿತೆಂದು ಇದರಿಂದ ವಿಶದವಾಗುತ್ತದೆ.

ಅಂಶಷಟ್ಪದ

ತಾಮಸೀಪನತೆತ್ತ್
ಭೂಮೀವಲ್ಲಭಕಾವಾ
ಕಾಮಲೈನಸ್ತ್ರೊಂಟ್ ಕೊೞ್ ಸ್ಟೊಂಡಿಯ್ಯೆ
ಹೇ ಮಹೀಪತಿ ಕೇಳ್
ಭೀಮಾವಿಕ್ರಮೆ ಪೋಸ್ಟ್
ಕಾಮಿನೀ ಕರೊಮಿನ್ ಪಸ್ಸೆಳೆತೇ ವೇಗೊ         (೨-೮೦)

ಅಯ್ಯೋ ಸ್ವಾಮಿಂದು ಜಾಸ್ಟ್
ಚೆಯ್ಯೆರಿಚ್ಛಿತಿ ಕಾರ್ಯೊ
ಪೊಯ್ಯಾವೊ ಮುನಿವಾಕ್ಯೊಮೆಲೆ ಭೂಪಾಲ
ಕಯ್ಯೀ ಬುೞ್ಪೋಸ್ಟೊಂಡೌಳ್
ಶಯ್ಯೆತಂದೊಮೆ ಬೂೞ್ ಸ್ಟ್
ಪೊಯ್ಯೇಟ್ ಪುಡೆರ್ ಸ್ಟ್ ಪುಡವಾಡಿಯಲ್     (೨-೮೧)

ತೋಟದ ವೃತ್ತ

ಕರೆಟಾವಪ ಪಾಂಡವೆರೈವೆರ್ ಲ
ತರಸಾಕುಳ ತನ್ನೆಸಮೇತೊ ಜತ್
ತೆರಿತಾಕುಳು ಯಾತ್ರೆಕುಪಕ್ರಮಿಪಾ
ಬೆರಿಷತ್ತ್ ಸ್ಟ್ ವಂದಿತೆ ನಾವಿಕೆಲಾ (೮-೨೧)

ಇಲ್ಲಿ ಪ್ರತಿ ಪಾದಗಳಲ್ಲೂ ನಾಲ್ಕು ಸಗಣಗಳು ಬಂದಿವೆ. ಅದೇ ಪದವಿನ್ಯಾಸದಲ್ಲಿ, ಮೊದಲ ಲಘುವನ್ನು ಗುರುವನ್ನಾಗಿಸಿ, ತೋಟಕವೃತ್ತ ಪ್ರಯೋಗರೂಪಗಳನ್ನು ಕವಿ ಹೆಣೆದಿರುವುದುದಿದೆ. ಉದಾ:

ಬಾಯಿನಂಗೊಸ್ಟ್ ಮುಟ್ಟಟ್ಟ್ ನೆತ್ತ್ ಪಪಾ
ವಾಯುನಂದನೆ ಜುಂಹೆನಿ ನೀಳೆನಪಾ
ಆಯುನೇಕೊಲ ನೀಳೊವ ನಾಲಕೆನಿನ್
ಆಯೆ ತಪ್ಪೊವರೆಣ್ಣ್ ಸ್ಟ್ ಮಾರುತಿಲಾ (೮-೨೩)

ತೋಟಕವೃತ್ತಪಾದಕ್ಕೆ ಎರಡು ಸಗಣಗಳೂ ಮತ್ತು ಒಂದು ಗುರುವನ್ನು ಸೇರಿಸಿದ ‘ತೋಟಕ ದೀರ್ಘ’ ವೃತ್ತಗಳೂ ಸ್ಟೋಪಜ್ಞಸುಂದರವಾಗಿವೆ.

ಕುರುಭೂಪತಿ ಕೇಳಲನೀ ಧರೆಟ್ ಬಿರುವಿದ್ಯೆ ವಿದಗ್ಧೇ
ಫೆರಿಯಾತ್ ನ ಮೂವೆರೆ ಸೂಕ್ಷಿಪುಟಾ ಬಲವೀರ್ಯ ಗುಣಜ್ಞೆರ್
ಧರೆಟೇರೊರಿ ಮಾನವಕೊಂಜಿ ಗುಣೋ ಗುಣೊಮೂಜಿನ ಪಾರ್ಥ-
ಟರಿಯೇರೆಕ ಶಸ್ತ್ರಯುಧೀಕೆದ್ ರೇ ನಿಲೆ ನಿಲ್ಪಯರಾಂದೇ (೬-೧೩)

ಮಲ್ಲಿಕಾಮಾಲೆ

ನಂದಿವಾಹನ ಸೂನು ಕಣ್ಕರಿತೀ ಕಥೇರೆಸ ಭಾವೊಮಿನ್
ವೊಂದೊಸ್ಟ್ ಹೃದಯೊಂಟ್ ಲೋಕೆರ್ ನಿಂದಿಪಂತಿ ಪ್ರಕಾರೊಮೇ
ಪಿಂದ್ ಬ್ರಹ್ಮನ ಭಾರ್ಯೆನಾಲಕೆಟ್ ತ್ತ ನೃತ್ತಿಪೊಡೇಪಳಾ
ವಂದಿತೇ ಗುರುಪಾದೊಪದ್ಮೊಮಿ ವಿಸ್ತರೀಪೆರತಾ ಮುನೀ || (೪-೧೯)

ಅರುಣಾಬ್ಜನ ಕಾವ್ಯದಲ್ಲಿ ಅರ್ಧಕ್ಕೂ ಹೆಚ್ಚು ಪದ್ಯಗಳು ಅಂಶ ಷಟ್ಪದದ ಛಂದಸ್ಸಿನಲ್ಲಿ ಇರುವುದು ಗಮನಾರ್ಹ. ಅಂಶಷಟ್ಪದ ನಾಗವರ್ಮನ ಹೇಳಿದ ಅಚ್ಚಗನ್ನಡ ಛಂದಸ್ಸುಗಳಲ್ಲಿ ಒಂದು. ಆದರೆ ಕನ್ನಡದಲ್ಲಿ ಅದರ ಬಳಕೆ ತುಂಬಾ ಕಡಿಮೆ. ದೊರೆತಿರುವ ಉದಾಹರಣೆಗಳಲ್ಲಿ ಹೆಚ್ಚಿನವು ಶಾಸನ ಮತ್ತು ಲಕ್ಷಣಗ್ರಂಥಗಳಲ್ಲಿ ಉಪಲಬ್ಧವಾಗಿರುವಂತಹವು. ಸೊಲ್ಲಾಪುರದ ಶಾಸನವೊಂದರಲ್ಲಿರುವ ‘ವಿವಾಹ ಪುರಾಣ’ ಕಾವ್ಯದಲ್ಲಿ (ಕಾಲ ಸುಮರು ಕ್ರಿ. ಶ. ೧೨೦೦) ಹದಿನಾರು ಅಂಶಷಟ್ಪದಗಳಿವೆಯೆಂದೂ ಅದನ್ನು ಕನ್ನಡದ ಮೊದಲ ಷಟ್ಪದಕಾವ್ಯವೆಂದೂ ಚಿದಾನಂದಮೂರ್ತಿ ಹೇಳುತ್ತಾರೆ.[3]

ಆದರೆ ಅವುಗಳೆಲ್ಲ ಪ್ರಯತ್ನಜಾತ ಷಟ್ಪದಗಳೇ ವಿನಾ ಸಹಜವಾದ ಅಂಶಷಟ್ಪದಗಳಲ್ಲ. ಆ ಶಾಸನದ ಮೊದಲ ಪದ್ಯವಂತೂ ಸೊಬಗಿನಸೋನೆ ಛಂದಸ್ಸಿಗೆ ಹತ್ತಿರವಾಗಿದೆ. ಹಾಗಾಗಿ ವಿವಾಹಪುರಾಣವನ್ನು ಕನ್ನಡದ ಮೊದಲ ಷಟ್ಪದಕಾವ್ಯ ಎನ್ನಲಾಗದು. ಈ ಹಿನ್ನೆಲೆಯಲ್ಲಿ ತುಳು ಮಹಾಭಾರತದ ಅಂಶಷಟ್ಪದ ಪ್ರಯೋಗ, ಅಂಶಷಟ್ಪದದ ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ವದ ಸಂಗತಿಯೆನಿಸುತ್ತದೆ.

‘ಮಹಾಭಾರತೊ’ ಕಾವ್ಯದ ಉಳಿದ ಛಂದಸ್ಸುಗಳಲ್ಲಿ ಹೆಚ್ಚಿನವು ಮಲ್ಲಿಕಾಮಾಲೆ ಮತ್ತು ತೋಟಕದೀರ್ಘವೃತ್ತಗಳು, ತರಳವೃತ್ತ ಮತ್ತು ತೋಟಕಗಳು ತುಂಬಾ ಕಡಿಮೆ. ನಾಲ್ಕು ಸಗಣಗಳು ತೋಟಕವೃತ್ತಗಳು ಮೊದಲ ಲಘುವನ್ನು ಗುರುವನ್ನಾಗಿಸಿ ‘ತೋಟಕಜನ್ಯ’ ತುಳುಕವಿಗಳ ಪ್ರಯೋಗ ಕೌಶಲಕ್ಕೆ ಸಾಕ್ಷಿ. ಸಂಸ್ಕೃತದ ದ್ರುತವಿಲಂಬಿತ ವೃತ್ತದ ಕಿಂಚಿತ್ ಪರಿವರ್ತಿತ ರೂಪವಿದು. ಇದೇ ರೀತಿಯ ಛಂದೋಬಂಧವನ್ನು ಶ್ರೀ ಭಾಗವತೊ ಕಾವ್ಯದಲ್ಲೂ ಕಾಣಬಹುದು. ತರಳ ಮಲ್ಲಿಕಾಮಾಲೆಗಳಲ್ಲಾಗಲೀ, ತೋಟಕ ದೀರ್ಘವೃತ್ತದಲ್ಲಾಗಲೀ ನಿಯಲ ಲಘುಗುರುಗಳು ವಿನ್ಯಾಸಕ್ಕಿಂತಲೂ, ಅವುಗಳುಂಟು ಮಾಡುವ ಮಾತ್ರಾಲಯವೇ ಕವಿಗೆ ಮುಖ್ಯವಾದಂತೆ ಭಾಸವಾಗುತ್ತದೆ. ಎಷ್ಟೋ ಕಡೆ ಎರಡು ಲಘುಗಳು ಒಂದು ಗುರುವನ್ನಿಟ್ಟು ಹೆಣೆದ ವೃತ್ತಗಳಿರುವುದರಿಂದ, ಕವಿಗೆ ಗೇಯತೆಯ ಕಡೆಗೇ ಮುಖ್ಯ ಲಕ್ಷ್ಯವಿದ್ದಂತೆ ಕಾಣಿತ್ತದೆ.

 

[1] ಉಡುಪಿತಾಲೂಕಿನಶಾಸನಗಳು-ಡಾ. ವಸಂತಶೆಟ್ಟಿಬಿ.

[2] ಇಲ್ಲಿಯಗ್ರಹಸ್ಥಾನನಿರ್ಣಯಮತ್ತುಕಾಲನಿರ್ಣಯಕ್ಕೆಪ್ರಸಿದ್ದಜ್ಯೋತಿಷ್ಯವಿದ್ವಾಂಸರಾದಶ್ರೀಕಬಿಯಾಡಿಜಯರಾಮಆಚಾರ್ಯರಸಲಹೆಪಡೆಯಲಾಗಿದೆ.

[3] ಛಂದೋತರಂಗ, ಡಾ. ಎಂ. ಚಿದಾನಂದಮೂರ್ತಿ, ಪು. ೧೯೩- ೨೧೯.