ಹೆಸರಲ್ಲೇನಿದೆ? ‘ತುಂಗಕುಲೊಂತು ಧರಣೀಸುರೆ ವಿಷ್ಣು ರೆಚೀತಿ’ ತುಳು ಭಾಗವತ ಸದ್ಯಕ್ಕೆ ತುಳುವರು ಆದಿ ಮಹಾಕಾವ್ಯವೆಂದೇ ಪರಿಗಣಿತವಾಗಿದೆ. ಪ್ರೌಢವಾದ ಕಾವ್ಯ ರಚನೆಗೆ ಈ ಭಾಷೆ ಒಗ್ಗಲಾರದು. ಅದರಲ್ಲೂ ಆ ರೀತಿಯ ಕಾವ್ಯಗಳು ರಚನೆಯಾಗಿಲ್ಲ ಎನ್ನುವ ಆಪಾದನೆ ವಿಷ್ಣುತುಂಗನ ಮೂಲಕ ತಿರಸ್ಕೃತವಾಗಿದೆ. ಸಂಸ್ಕೃತ ಮತ್ತು ಕನ್ನಡ ಪದಗಳೊಂದಿಗೆ ತುಳುವನ್ನು ಬೆರೆಸುವುದರ ಮೂಲಕ ಅದನ್ನು ಜನಸಾಮಾನ್ಯರಿಗೇಕೆ? ಪಂಡಿತರಿಗೇ ಕಬ್ಬಿಣದ ಕಡಲೆಕಾಯಿಯನ್ನಾಗಿಸಬಹುದೆಂಬುದನ್ನು ಕವಿ ತೋರಿಸಿಕೊಡುತ್ತಾನೆ. (ತುಳುವಿನ ಮಾಧುರ್ಯದ ಮೊರೆತವನ್ನು ವಿಸ್ತಾರವಾದ ಕಾವ್ಯವಾಹಿನಿಯಲ್ಲಿ ನೂರಾರು ವರ್ಷಗಳ ಹಿಂದೆಯೆ ಧಾರೆಯಾಗಿ ಝೇಂಕರಿಸಿದ ಕವಿಯ ಪ್ರಯತ್ನ ಬೆರಗುಗೊಳಿಸುವಂತಹದ್ದು).

(ತುಳು ಭಾಗವತ ಸಂಪಾದಕರಾದ ವಿದ್ವಾನ್ ಪುಣಿಂಚಿತ್ತಾಯರು ಕಾವ್ಯಕ್ಕೆ ‘ಶ್ರೀ ಭಾಗವತೊ’ ಎನ್ನುವ ಹೆಸರನ್ನಿತ್ತಿದ್ದಾರೆ. ಕಾವ್ಯವನ್ನು ಅದ್ಯಂತ್ಯವಾಗಿ ಓದಿದ ಬಳಿಕ ನನಗೆ ಈ ಹೆಸರಿನ ಬಗ್ಗೆ ಅಭಿಪ್ರಾಯ ಭೇದವಿದೆ. ಅದಕ್ಕಿಂತ ಮುಂದೆ ಕಾವ್ಯದ ಹೆಸರಿನ ಕುರಿತಾಗಿಯೇ ಒಂದೆರಡು ಮಾತುಗಳನ್ನು ಬರೆಯಬೇಕು).

ಕೃತಿಗೆ ಕವಿಯೋರ್ವ ಹೆಸರನ್ನಿಡುವಾಗ ಅದರ ಕುರಿತು ನೇರವಾಗಿ ಹೇಳುವ ಕ್ರಮವಿದೆ. ಮಾದರಿಗಾಗಿ ಕೃತಿಗೆ ‘ನಾಮಂ ಹರಿಶ್ಚಂದ್ರ ಚಾರಿತ್ರ್ಯ’ ಎಂದು ರಾಘವಾಂಕ ‘ಭರತೇಶ ವೈಭವ’ ವೆಂಬ ಕೃತಿಯನಿದನೊರೆದನು’ ಎಂದು ರತ್ನಾಕರವರ್ಣಿ ಹೇಳಿರುವುದನ್ನು ನೆನಪಿಸಬಹುದು. ಆಶ್ವಾಶದ ಕೊನೆಯ ‘ದೃಶ್ಯ ಮಪ್ಪ ಗದ್ಯದಲ್ಲಿ’ ಕರತಿಯ ನಾಮದ ಕುರಿತು ಹೇಳುವುದು ಇನ್ನೊಂದು ಕ್ರಮ. ಪಂಪ, ರನ್ನ, ಮೊದಲಾದ ಚಂಪೂ ಕವಿಗಳ ಅಭ್ಯಾಸ ಈ ತೆರನದ್ದು. ಈ ಎರಡು ಕ್ರಮಗಳಿಗೆ ಹೊರತಾಗಿ ಕೆಲವು ಕಾವ್ಯಗಳು ನೇರವಾದ ಹೆಸರನ್ನು ಸೂಚಿಸದೆ ಅದನ್ನು ಹ್ರಸ್ವಗೊಳಿಸಿಯೋ ಇಲ್ಲವೆ ಅದಕ್ಕೆ ಸಂವಾದಿಯಾದಿ ಇತರ ಪದಗಳನ್ನು ಬಳಸುವುದೋ ಅಥವಾ ಹೆಸರಿನ ಕಡೆಗೆ ಒಂದು ದಿವ್ಯ ನಿರ್ಲಕ್ಷವನ್ನು ತೋರುವುದರ ಮೂಲಕವೋ – ಮೇಲಿನ ಎರಡೂ ಕ್ರಮಗಳಿಂದ ಭಿನ್ನವಾಗುತ್ತವೆ. ಶುಕಯೋಗಿ ವಿರಚಿತ ‘ಭಾಗವತ” ವಿಷ್ಣು ತುಂಗನ ‘ತುಳು ಭಾಗವತ’ ಈ ಮಾದರಿಗಳು.

ಸಂಪಾದಕರು (ಆಗಲೇ ಹೇಳಿರುವಂತೆ) ‘ಶ್ರೀ ಭಾಗವತೋ’ಎಂಬುದಾಗಿ ವಿಷ್ಣುತುಂಗನ ಕೃತಿಯನ್ನು ಕರೆದಿದ್ದಾರೆ. ಆದರೆ ಕಾವ್ಯದಲ್ಲಿ ಅದರ ಅಧ್ಯಾಯದ ಮುಕ್ತಾಯದಲ್ಲಿ ಬೇರೆ ಬೇರೆ ಹೆಸರುಗಳನ್ನು ಬಳಸಲಾಗಿದೆ. ಅದರಲ್ಲಿ ಮುಖ್ಯವಾದವುಗಳು ‘ಶ್ರೀ ಭಾಗವಥೊ’, ಶ್ರೀ ಭಾಗತ್ಕಥೇ’, ಶ್ರೀ ಭಾಗವತೋ’- ಈ ನಾಮಗಳು. ಇನ್ನೂ ಕೆಲವು ಹೆಸರುಗಳು ಉಲ್ಲೇಖಿತವಾಗಿವೆಯಾದರೂ ಅವುಗಳ ಈ ಮೂರು ಮುಖ್ಯ ಹೆಸರುಗಳಿಗೆ ಸಂವಾದಿಯಾಗಿಯೆ ಬಳಕೆಯಾಗುತ್ತದೆ. (ಉದಾ: ಶ್ರೀ ಭಾಗವತಾರ್ಥೊ – ವರ ಭಾಗವತಾರ್ಥೊ) ಇದರಲ್ಲಿ ‘ಶ್ರೀ ಭಾಗವತಾರ್ಥೋ ಎನ್ನುವ ಹೆಸರು ಎನಿಲ್ಲವೆಂದರೂ ೨೦ ಬಾರಿ ಉಲ್ಲೇಖಿತವಾಗಿದೆ. ‘ಶ್ರೀ ಭಾಗವತೋ’ವು ಕೇವಲ ಒಂದೇ ಕಡೆಯಲ್ಲಿ ಉಲ್ಲೇಖಿತವಾಗಿದೆ. ‘ಶ್ರೀ ಭಗವತ್ಯಥೇ’ ೮ ಸಲವೂ ‘ಶ್ರೀ ಭಾಗವತೋ’ ವು ಕೇವಲ ಒಂದೇ ಕಡೆಯಲ್ಲಿ ಬಳಕೆಯಾಗಿದೆ.

ಮೂರು ಮುಖ್ಯ ಹೆಸರುಗಳಿಗೆ ಸಂವಾದಿಯಾಗಿ ಇತರ ಪದಗಳು ಬಳಕೆಯಾಗಿವೆ ಎಂದೆ ಇಲ್ಲಿ ಒಂದು ಪ್ರಶ್ನೆ, ಯಾವುದಕ್ಕೆ ಯಾವುದು ಸಂವಾದಿ? ಶ್ರೀ ಭಾಗವತೋ’ ಎನ್ನವುದುಕ್ಕೆ ಶ್ರೀ ಭಾಗವತಾರ್ಥೋ’ ಸಂವಾದಿಯೇ ಅಥವಾ ‘ಶ್ರೀ ಭಾಗವತಾರ್ಥೋ’ ಎನ್ನುವುದಕ್ಕೆ ‘ಶ್ರೀ ಭಾಗವತೊ’ ಸಂವಾದಿಯೇ? ಈ ಪ್ರಶ್ನೆಗೆ ಕಾವ್ಯದ ಆಧಾರದಿಂದಲೇ ಉತ್ತರಿಸುವುದಾದರೆ ‘ಶ್ರೀ ಭಾಗವತಾರ್ಥೋ’ ಎನ್ನುವುದಕ್ಕೆ ‘ಶ್ರೀ ಭಾಗವತೊ’ ಎನ್ನುವುದು ಸಂವಾದಿಯಾದ ಪದ. ಎಂದರೆ ‘ಶ್ರೀ ಭಾಗವತೊ’ಎನ್ನುವುದ ಸಂಸ್ಕೃತದ ‘ಶ್ರೀಮದ್ಭಾಗವತಂ’, ಆದರೆ ‘ಶ್ರೀ ಭಾಗವತಾರ್ಥೊ’ಎಂದಾಗ ಅದು ಶ್ರೀ ಮದ್ಭಾಗವತದ ಅರ್ಥವನ್ನು ಇನ್ನೊಬ್ಬ ಕಂಡುಕೊಂಡ ರೀತಿ ಎಂದರ್ಥವಾಗುತ್ತದೆ. ವಿಷ್ಣುತುಂಗನ ಉದ್ದೇಶವೇ ಆದಾದುದರಿಂದ ಕಾವ್ಯನಾಮವೂ, ಅನ್ವರ್ಥಕವಾಗಲೇಬೇಕು. ಆ ದೃಷ್ಟಿಯಿಂದ ಕಾವ್ಯಕ್ಕೆ ಒಪ್ಪುವ ಕವಿ ಮತ್ತೆ ಮತ್ತೆ ಪುನರಾವರ್ತಿಸುಬ ಹೆಸರು ‘ಶ್ರೀ ಭಾಗತಾರ್ಥೊ’, ಅದೇನಿದ್ದರೂ ಕೊನೆ ಪಕ್ಷ ‘ಶ್ರೀ ಭಾಗವತಾರ್ಥೊ’ ಅಥವಾ ‘ಶ್ರೀ ಭಾಗವತೊ’ಎನ್ನುವ ಹೆಸರುಗಳಿಂದಾದರೂ ಕಾವ್ಯವನ್ನು ಕರೆಯಬಹುದು. ‘ಕರ್ಣಾಟ ಭಾರತ ಕಥಾ ಮಂಜರಿ’ಅಥವಾ ‘ಗದುಗಿನ ಭಾರತ’ ಎಂದ ಹಾಗೆ.

(ಅನ್ನದ ಗುಣ ಅಗುಳಿನಲ್ಲಿ, ಸಂಸ್ಕೃತ ಪುರಾಣವನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಕವಿಯ ನಾಮದ ಸ್ಪಷ್ಟತೆ ಇಲ್ಲದಿರುವುದಾದರೂ ನಿತ್ಯಾತ್ಮ ಶುಕಯೋಗಿ ವಿರಚಿತ ‘ಕನ್ನಡ ಭಾಗವತ’ವೆಂದು ಆ ಕಾವ್ಯವನ್ನು ಕರೆಯಲಾಗುತ್ತದೆ. ಆ ಕಾವ್ಯವನ್ನು ಮುಂದಿಟ್ಟುಕೊಂಡು, ಜತೆಯಲ್ಲಿ ಸಂಸ್ಕೃತ ಭಾಗವತದತ್ತಲೂ ಕಣ್ಣಾಡಿಸಿಕೊಂಡು, ತುಳುವಿನಲ್ಲಿ ಬರೆಯಲಿಕ್ಕೆ ಹೊರಟ ಹೊರಟ ‘ವಿಷ್ಣುತುಂಗನ’ಬಗ್ಗೆ ಈ ಗೊಂದಲವಿಲ್ಲ. ವಿಷ್ಣುತುಂಗನ ಕಾವ್ಯಕ್ಕೆ ಆಕರ ಸಂಸ್ಕೃತದಲ್ಲಿದೆಯಾದರೂ ಆದರ್ಶ ಕನ್ನಡದ್ದೇ. ಅದರೊಂದಿಗೆ ತುಳು ಭಾಗವತವನ್ನು ಹೋಲಿಸಿ ನೋಡುವುದೇ ಈ ಪ್ರಬಂಧದ ಉದ್ಧೇಶ, ಕನ್ನಡ- ತುಳು ಭಾಗವತಗಳ ತೌಲನಿಕ ಅಧ್ಯಯನನವೆಂದಾಗ ಮುಖ್ಯ ಗಮನವಿರುವುದು ತುಳು ಭಾಗವತದತ್ತಲೇ. ಅದು ಕನ್ನಡ ಭಾಗವತವನ್ನು ಅನುಸರಿಸಿದ, ಹಾಗೆ ಅನುಸರಿಸುವಾಗಲೂ ಅದರ ವೈಶಿಷ್ಟವೇನು ಎನ್ನುವುದರ ಕುರಿತಾಗಿಯೇ).

ಈ ಎರಡು ಕಾವ್ಯಗಳು ತುಂಬ ವಿಸ್ತಾರವಾಗುವಾದವುಗಳು. ಪೂರ್ಣ ಪ್ರಮಾಣದಲ್ಲಿ ಅವುಗಳ ತುಲನಾತ್ಮಕ ಅಧ್ಯಯನವೆಂದರೆ ದೊಡ್ಡ ಗ್ರಂಥವೊಂದನ್ನು ಬರೆದಂತೆಯೇ. ಆ ಸಾಹಸಕ್ಕೆ ಇಲ್ಲಿ ಕೈ ಇಕ್ಕದೆ ‘ಅನ್ನದ ಗುಣ ಅಗುಳಿನಲ್ಲಿ’ ಎಂಬ ಹಾಗೆ ಸಂಕ್ಷಿಪ್ತವಾದ ವಿವರಣೆಯಾದರೂ ಸಮಗ್ರ ಕಾವ್ಯಕ್ಕೆ ಅನ್ವಯವಾಗುವು ರೀತಿಯಲ್ಲಿ ಅನುಸರಿಸಲಾಗಿದೆ. ಆ ದೃಷ್ಟಿಯಿಂದ ತೌಲನಿಕವಾಗಿ ಕಾವ್ಯಗಳನ್ನು ನೋಡುವಾಗ ಅನುವಾದಿತ ಪದ್ಯಗಳು, ಪ್ರೇರಿತ ಪದ್ಯಗಳು, ಸ್ವರಚನೆಗಳು, ಮೂಲಕ್ಕಿಂತ ಸೊಗಸಾದ ರಚನೆಗಳು ಎನ್ನುವ ನಾಲ್ಕು ಶಿರೋನಾಮೆಯಡಿಯಲ್ಲಿ ಬರವಣಿಗೆಯನ್ನು ಬೆಳೆಸಲಾಗಿದೆ. ಈ ಮುಖ್ಯ ಹಣೆಪಟ್ಟಿಯೊಳಗಡೆ ಆಯ್ದು ಕೊಳ್ಳುವ ಪದ್ಯಗಳೂ ಪ್ರಬಂಧದ ಮಿತಿಗೆ ಅನುಗುಣವಾಗಿ ಕೇವಲ ಕಾವ್ಯದ ವೈಶಿಷ್ಟ್ಯದತ್ತ ತೋರ್ಬೆರಳು ಮಾಡು ಪ್ರಯತ್ನಗಳೇ.

ಅನುವಾದಿತ ಪದ್ಯಗಳು ಕನ್ನಡ ಕವಿಗಳು ಸಂಸ್ಕೃತ ಕಾವ್ಯಗಳನ್ನು ಅನುಸರಿಸುವಾಗ ಮಾಡುವ ‘ನೊಣಪ್ರತಿಯ’ ಮಾದಿರಗಳಿವು. ಕನ್ನಡ ಭಾಗವತವನ್ನು ಆದರ್ಶವಾಗಿರಿಸಿಕೊಳ್ಳುವ ಕವಿ ಇಲ್ಲಿ ಯಥಾಪ್ರಕಾರವಾಗಿ ಕಣ್ಣು ಮುಚ್ಚಿಕೊಂಡು ತುಳುವಿಗೆ ಅನುವಾದಿಸುತ್ತಾನೆ. ಒಂದರ್ಥದಲ್ಲಿ ಆಗ ಆತ ಬರಿಯ ‘ಲಿಪಿಕಾರ’- ‘ನಿತ್ಯಾತ್ಮ ಶುಕಯೋಗಿಯೇ’ ಕವಿ! ಮಾದರಿಗಾಗಿ ಕೆಳಗಿನ ಪದ್ಯಗಳನ್ನೇ ನೋಡಬಹುದು.

ನೈಮಿಷಾರಣ್ಯದಲ್ಲಿ ಶೌನಕಾದಿಗಳ ಒಡ್ಡೋಲಗಕ್ಕೆ ಸೂತ ಮುನಿ ಬಂದಾಗ ಅವರು ಇತಿಹಾಸದ ಪುರಾಣ ಕಥೆಯನ್ನು ಮನುಷ್ಯರ ಉದ್ದಾರಕ್ಕಾಗಿ ಹೇಳಿದರು ಏಕೆಂದರೆ –

ಮುಂದಭಾಗ್ಯೆರತೀ ಮನುಷ್ಯೆರ್ ಮಂದಬುದ್ಧರತೇನ್ಯಲಾ!
ಮಂದಕರ್ಮ ಫಲಾಶ್ರೀತೆಕ್ಕುಳು ಮಂದಚೇನಭಾವೆರ್
ಕುಂದ್ ಸ್ಟೀನಲ್ಲಾಯುಷೇರ್ಕುಳು ಶೌಚಸತ್ಯವಿಹೀನೆರ್
ಇಂದಿನೀ ಕಲಿಕಾಲ ಜಂತುಕ್ ಮುಕ್ತಿಯೆಂಚನು ಕೂಲಿಪೂ || ೨೬ ||
(ಶ್ರೀ ಭಾಗವತೊ-ಪುಟ ೮)

ಇದನ್ನೇ ಕನ್ನಡ ಭಾಗವತದಲ್ಲಿ ಹೀಗೆ ಹೇಳಲಾಗಿದೆ
ಮಂದ ಭಾಗ್ಯರಲಾ ಮನುಷ್ಯರು
ಮಂದ ಮತಿಗಳಲಾ ವೃಥಾಶ್ರಮ
ದಿಂದ ಮಂದೋದ್ಯೋಗಿಗಳು ಪುರುಷಾರ್ಥ ವಿಷಯದಲಿ
ಇಂದಿನೀ ಯುಗದೊಳಗೆ ಕಾಲನ
ಬಂದಿಯನು ಕಳಚುವಡುಪಾಯವ
ನೊಂದನೇ ನಿಶ್ಚಯಿಸಿ ಕರುಣಿಸಬೇಹುದೆಮಗೆಂದ || ೧೨ ||
(ಕನ್ನಡ ಭಾಗವತ, ಪ್ರ. ಸ್ಕಂದ)

ಇಲ್ಲಿಯ ‘ಮಂದಭಾಗ್ಯೆರ್’ ಮನುಷ್ಯೆರ್ ಮಂದಬುದ್ಧೆರ್ ಇತ್ಯಾದಿ ಪದಗಳೆಲ್ಲ ಕನ್ನಡ ಭಾಗವತದ್ದೇ. ಮಾತ್ರವಲ್ಲ. ಧಾಟಿಯಲ್ಲೂ ವ್ಯತ್ಯಾಸವಿಲ್ಲ. ‘ಅಲಾ’ ಎನ್ನುವುದಕ್ಕೆ‘ಅತಾ ಎನ್ನುವ ಸಂಭೋದನಾ ವಾಚಕಪದವನ್ನು ಗಮನಿಸಬೇಕು.

ನಿತ್ಯಾತ್ಮ ಶುಕಯೋಗಿಯಷ್ಟೆ ನಮ್ಮ ಕವಿಯು ಶ್ರೀ ಕೃಷ್ಣನು ಭಕ್ತ. ಪ್ರಥಮ ಸ್ಕಂಧದಲ್ಲಿ ಪಾಂಡವರ ಬಾಯಿಯಿಂದ ಕೃಷ್ಣನನ್ನು ಹೊಗಳುವ ರೀತಿ ಹೀಗೆ:

ನಸುಹಾಸವಿಲಾಸೊಮ ಕೆಂಪುದೃಶಂ ರದನೊಂಕುಳ ಪಂಥೀ
ವಿಸಜೋದರ ಗಂಡೊಮ ಮಂಡಿಕೆಯಾ ವರಕುಂಡಲ ಹಾರಂ
ಪೊಸತಾಯಿ ಸುಕೌಸ್ತುಭ ಕಂಧರೊಮಾ ವಕ್ಷಸ್ಥಲೊ ಪೀತಾ
ವಸನೋ ಚುಳಿನಾಭಿಯ ಶ್ರಿ ಚರಣಂಡ್ ತೆ ಜೋಜೊಡು ಸ್ವಾಮಿ || ೨೭ ||
(ಶ್ರೀ ಭಾಗತೊ ಪ್ರ. ಸ್ಕಂಧ ಪು. ೭೭)

ಈ ಭಾವ ಕನ್ನಡ ಭಾಗವತದಲ್ಲಿ ಹೀಗಿದೆ:

ಸಿರಿಮೊಗದ ನಸುನಗೆಯ ಕೆಂಪೆಸ
ವರಳುಗಂಗಳ ದಂತಪಕ್ತಿಯ
ಕೊರಳ ಕೌಸ್ತುಭಹಾರ ಮಣಿಗಳ ಮಕರ ಕುಂಡಲದ
ಮೆರೆವ ಕಾಂಚೀಗಣದ ಪೀತಾಂ
ಬಂದ ಮಂಗಳ ಮೂರ್ತಿಯಲಿ ಗೋಚರಿಸಬೇಕೆಂದ || ೪೪ ||
(ಕನ್ನಡ ಭಾಗವತ, ಪ್ರ. ಸ್ಕಂಧ ಪು: ೨೦)

ಇಲ್ಲಿ ನಸುಹಾಸೊ > ನಸುನಗೆ, ಕೆಂಪು ದೃಶಂ > ಕೆಂಪೆಸೆ, ದಂತಪಂಕ್ತಿ > ದಂತ ಪಂಥೀ, ಪೀತಾವಸನೊ > ಪೀತಾಂಬರ, ಸುನಾಭಿ > ಚುಳಿನಾಭಿ ಈ ಪ್ರಯೋಗಗಳು ಗಮನೀಯ ಶುಕಯೋಗಿ ‘ನಗೆ ಎನ್ನುವ ಒಂದಾದರೂ ಅರ್ಥಪೂರ್ಣ ಪದವನ್ನು ಪ್ರಯೋಗಿಸಿರುವವನಾದರೂ ವಿಷ್ಣು ತುಂಗ ತುಳುವಿನ ಜಾಯಮಾನಕ್ಕೆ ಒಗ್ಗುವ ಒಂದು ಪದವನ್ನೂ ಬಳಸದೆ ಸಂಸ್ಕೃತ ಭೂಯಿಷ್ಠವಾಗಿಯೇ ವರ್ಣನೆಗಳನ್ನು ಮಾಡಿ ಬಿಡುತ್ತಾನೆ. ಇನ್ನೊಂದು ಮುಖ್ಯ ವಿಷಯವೆನೆಂದರೆ ಕನ್ನಡದಲ್ಲೇನೂ ಸಂಸ್ಕೃತ ಪದಗಳ ಬೆರಕೆ ನಾದಮಾಧುರ್ಯವನ್ನು ಕೊಡುತ್ತದೆಯಾದರೂ ವಿಷ್ಣುತುಂಗನ ಪದ್ಯದಲ್ಲಿ ಆ ರೀತಿಯ ಗೇಯತೆಯೂ ಇಲ್ಲದೆ ನೀರಸವೆನಿಸುತ್ತದೆ.

ಇದೇ ರೀತಿಯ ಇನ್ನೊಂದು ವರ್ಣನೆ, ಅದು ಶ್ರೀ ಕೃಷ್ಣ ಪಾಂಡವರನ್ನು ಸಂತಿಯಿಸಿ ದ್ವಾರಕೆಗೆ ಮರುಳುವ ಸಂದರ್ಭ. ಆಗ ದ್ವಾರಕೆಯ ವರ್ಣನೆ

ಪುರಲಕ್ಷ್ಮಿ ಕಟಾಕ್ಸರವಿಂದ ಗುಣಾ ಕಳಹಂಸೆರೆ ಗೀತಂ
ಮರಿತುಂಬಿತ ಗಾನೊಮ ಕೋಗಿಲೆರೇಕಳರಾವ ವಿನೋದಂ
ಮರುಟುಳ್ಳ ಫಲೊಂಕುಳೆ ಪುಷ್ಪರಸಂತಾ ಮಾರುತಗಂಧಂ
ತರಸೀಕ್ಷಿತ್ ಮೆಲ್ಲನೆ ಯಾತ್ರಿತೆರೇ ದ್ವಾರಾಲಯಕಾವ || ೨೭ ||
(ಶ್ರೀ ಭಾಗವತೊ ಪ್ರ. ಸ್ಕಂಧ ಪು. ೯೭)

ಇದಕ್ಕೆ ಆಧಾರ ಕನ್ನಡ ಭಾಗವತ ಈ ಪದ್ಯ

ಪುರದ ವರಲಕ್ಷ್ಮೀಯನು ಕಮಲಾ
ಕರದ ಕಳಹಂಸಿಗಳ ಗತಿಯನು
ಮೊರೆವ ತುಂಬಿಯ ಗೀತವನು ಕೋಗಿಲೆಯ ಸುಸ್ವರದ
ಭರಿತ ಫಲಭಾರದಲಿ ಕುಸುಮೋ
ತ್ಕರದಲೆರಗಿದ ಕಲ್ಪತರುಗಳ
ತರತರದ ತಲೆವಾಗುಗಳ ನೀಕ್ಷಿಸುತ ನಡೆತಂದ || ೨೧ ||

ಇಲ್ಲಿಯೂ ಮತ್ತದೇ ಸಮಸ್ಯೆ, ಸಂಸ್ಕೃತ ಪದಗಳ ಮಣಭಾರವನ್ನು ತುಳುಭಾಷೆಯ ಮೃದುಲ ಪ್ರತ್ಯಯಗಳು ತಾಳದೇ ಕುಸಿಯುವಂತಿದೆ.

ಅಂತಹದೇ ಇನ್ನೊಂದು ಪದ್ಯ. ಸೂತನು ಶೌನಕಾದಿಗಳಿಗೆ ವಿಷ್ಣುವಿನ ವಿಶ್ವರೂಪದ ವರ್ಣನೆ ಮಾಡುವ ಸಂದರ್ಭ –

ಪಾತಾಳೊ ಪದಂ ಪ್ರಪದಂಟ್ ರಸಾತಳೊ, ಜಂಘೆಟ್ ಸ್ವಾಮಿ
ಏತೊಂಡ್ ತಳಾತಳೊ, ಜಾನುಟ್ ಪಾ ಸುತಳಂ ತುಟೆಟ್ ಪ್ಪ-
ಪಾತೊಂಡ್ ಮಹಾತಳೊಮೊಕ್ಕಟ್ ಪಾ ವಿತಳಂ ಅತಳಂಕುಳೆ
ಧಾತಾರಿ ಧರೀತ್ತೆರೆ ಸ್ತಂಭಸಮಂ ಚಿತ್ತೇಳ್ ಜಗತ್ತೀ || ೨೭ ||

ಕನ್ನಡ ಭಾಗವತದ ವರ್ಣನೆ ಹೀಗಿದೆ-

ಚರಣದಲಿ ಪಾತಾಳವಿರೆ ಮೇ
ಲಿರೆ ರಸಾತಳ ಗುಲ್ಫದಲಿ ಮೆರೆ
ದಿರೆ ಮಹಾತಳವಿರೆ ತಳಾತಳವಮಳ ಜಂಘೆಯಲಿ೧
ಇರೆ ಸುತಳ ಜಾನುಗಳಲೆಸೆದೊ
ಪ್ಪಿರೆ ವಿತಳ ತೊಡೆಗಳಲಿ ಕಟಿಗಳ
ಲಿರತಳವಿಂತೇಳು ಲೋಕ ವಿಕಲ್ಪವಾಯ್ತೆಂದ || ೩೦ ||
(ಕನ್ನಡ ಭಾಗವತ ದ್ವಿ, ಸ್ಕಂದ ಪು. ೬೭)

ಕನ್ನಡಿಗ ಕಣ್ಮುಚ್ಚಿ ಸಂಸ್ಕೃತದ ಶೈಲಿಯನ್ನು ಅನುಸರಿಸಿದ ರೀತಿಯಲ್ಲಿಯೇ ವಿಷ್ಣುತುಂಗನೂ ಸಾಗುತ್ತಾನೆ. ಶರೀರದ ಅಂಗಾಂಗಗಳಿಗೆ ತುಳುವಿನ ಪದಗಳಿದ್ದರೂ (ಅವುಗಳನ್ನು ಇತರ ಸಂದರ್ಭಗಳಲ್ಲಿ ಬಳಸಿದ್ದರೂ) ಅದನ್ನು ಕೈಬಿಟ್ಟು ಪದಂ, ಪ್ರಪದಂ, ಜಂಘೆ, ಜಾನು ಇತ್ಯಾದಿ ಪದಗಳನ್ನು ಪ್ರಯೋಗಿಸುತ್ತಾನೆ.

ಕೊನೆಯದಾಗಿ ಒಂದು ಪದ್ಯವನ್ನು ನೋಡುವ ದ್ವಿತೀಯ ಸ್ಕಂಧಲ್ಲಿ ನಾರದನಿಗೆ ಬ್ರಹ್ಮನು ವಿಷ್ಣುವಿನ ಮಹಿಮೆಯನ್ನು ವಿವರಿಸುತ್ತಾ ಹೀಗೆನ್ನುತ್ತಾನೆ.

ಫಲೋಜಾಸ್ಟ ಜನೀತ್ ಮನಷ್ಯತೆಟೇ ವೇದಾದಿ ಪುರಾಣೊ,
ನಿಲೆಯಾಕೊಸ್ಟ್, ಜಾಸ್ಟಯೆಟ್ ತ್ತ್ ಗೆತೀ ಧರ್ಮೊಂಕುಳೆ ಸಾರೂ
ಫಲೊ ಜಾಸ್ಟಡೆಪಿಂದ್ ಸುಸಾಂಖ್ಯಮತಾನುಷ್ಠಾನ ವಿರಕ್ತೀ
ಫಲವೊಂಜೆ ನಿರೀಕ್ಷಿಪುಟೀ ಪ್ರಜೆಕೇ ಹರಿಭಕ್ತಿತ ಸಾರೊ || ೪೭ ||
(ಶ್ರೀ ಭಾಗವತೊ ದ್ವಿ. ಸ್ಕಂದ ಪು. ೨೨೧)

ವಿಷ್ಣು ತುಂಗನಿಗೆ ಈ ಪದ್ಯ ಬರೆಯುವುದಕ್ಕೆ ಆಧಾರವಾದ ಕನ್ನಡ ಭಾಗವತದ ಪದ್ಯ ಇದು-

ಏನು ಫಲ ಮಾನುಷ್ಯದಲಿ ಫಲ
ವೇನು ವೇದ ಪುರಾಣ ಶಾಸ್ತ್ರದ
ಲೇನು ತದ್ವಿಹಿತಾಖಿಳಾನುಷ್ಠಾನ ಕರ್ಮದಲಿ ||
ಏನು ಫಲ ಸಾಂಖ್ಯದಲಿ ಯೋಗದ
ಲೇನು ಫಲ ಹರಿಪದ ಕಮಲ ಭಕ್ತವಿ
ಹೀನವಾದರೆ ಬಳಿಕ ತಪದಲಿ ಸಿದ್ಧಿಯೇನೆಂದ || ೪೪ ||
(ಕನ್ನಡ ಭಾಗವತ ದ್ವಿ. ಸ್ಕಂದ)

ಇಲ್ಲಿ ಪದಗಳನ್ನು ಹಿಂಬಾಲಿಸಿಕೊಂಡು ಹೋಗುವ ಕ್ರಿಯೆ, ‘ಮಾನುಷ್ಯ ಎಂಬ ಪದವನ್ನು ತುಳುವಿಗೆ ‘ಮನುಷ್ಯತೆ’ ಎಂದು, ಅಕ್ಷರ ಅಕ್ಷರವೂ ಹೊಂದಿಕೆಯಾಗಬೇಕೆನ್ನುವ ಚಪಲವೆನಿಸುತ್ತದೆ.

ಈವರೆಗೆ ಅನುವಾದಿತ ಪದ್ಯಗಳೆಂಬ ಶೀರ್ಷಿಕೆಯಡಿಯಲ್ಲಿ ನೋಡಿದ ಪದ್ಯಗಳಿಂದ ‘ಕನ್ನಡ ಭಾಗವತಕ್ಕೆ’ ತುಳು ಭಾಗವತ’ ಎಷ್ಟರಮಟ್ಟಿಗೆ ಋಣಿಯಾಗಿರಬೇಕೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಆದರೆ ಇದು ವಿಷ್ಣುತುಂಗನೊಬ್ಬನ ಕೊರತೆಯೇನಲ್ಲ. ಶುಕಯೋಗಿಯೂ ಮೂಲಸಂಸ್ಕೃತದ ಶ್ಲೋಕಗಳನ್ನು ಇದ್ದಕ್ಕಿದ್ದಂತೆ ಅನುವಾದಿಸಿಕೊಂಡವನೇ – ಅವನೇಕೆ- ಪಂಪನಂತಹ ಮಹಾಕವಿಗಳೇ ತಮ್ಮಕಾವ್ಯಗಳಲ್ಲಿ ಇದ್ದ ಹಾಗೆಯೇ ಮೂಲದ ಶ್ಲೋಕಗಳನ್ನು ಅನುವಾದಿಸುತ್ತಾರೆ. ಒಂದು ಕಾವ್ಯಕ್ಕೆ ಪ್ರೇರಣೆಯಾಗಿ ಇನ್ನೊಂದು ಕಾವ್ಯವನ್ನು ತೆಗೆದುಕೊಂಡಾಗ ಅಲ್ಲಿಯೂ ಕಂಡುಬರುವ ಗುಣ ಇದು. ಆ ದೃಷ್ಟಿಯಿಂದ ವಿಷ್ಣುತುಂಗನ ಕಾವ್ಯದ ಮೇಲೆ ಗೂಬೆ ಕೂರಿಸು ಪ್ರಯತ್ನ ಮಾಡಬೇಕಾಗಿಲ್ಲ. ಆದರೆ ಹೇಳಬೇಕಾದ ಮಾತುಗಳೆಂದರೆ ತುಳು ಭಾಗವತದಲ್ಲಿರುವ ಅನುವಾದಿತ ಪದ್ಯಗಳು ಅಪಾರ ಸಂಖ್ಯೆಯವು. ಅವುಗಳ ಮೂಲಕ ವಿಷ್ಣುತುಂಗನ ಭಾಷಾ ಪ್ರಭುತ್ವವನ್ನಂತೂ ಅಲ್ಲಗಳೆಯುವಂತಿಲ್ಲ. ಆತ ಓರ್ವ ಪ್ರಕಾಂಡ ಪಂಡಿತನೇ ಸರಿ. ಅಕ್ಷರಶಃ ಅನುವಾದ ಮಾಡಿದಾಗ ಈ ಹಿಂದೆಯೇ ಗುರುತಿಸಿದಂತೆ, ಕನ್ನಡ ಪದಗಳು ಸಂಸ್ಕೃತದೊಂದಿಗೆ ಹೊಂದಿಕೊಳ್ಳುವಂತೆ ತುಳು ಪದಗಳು ಅಷ್ಟು ಸುಲಭವಾಗಿ ಹೊಂದಿಕೊಳ್ಳುವುದಿಲ್ಲವೆಂದೆನಿಸುತ್ತದೆ. ಬಹುಶಃ ಇದು ವಿಷ್ಣು ತುಂಗನಿಗೆ ಸಂಸ್ಕೃತದ ಮೇಲಿರುವ ವ್ಯಾಮೋಹವನ್ನು, ಸಂಸ್ಕೃತ ಪದಗಳ ಜತೆಯಲ್ಲಿ ತುಳು ಪದಗಳು ಸೇರಿದಾಗ ಅವುಗಳಿಗೆ ಭಾರ ಬರಬಹುದೆಂಬ ಮನೋಭಾವವನ್ನೂ ತೋರಿಸುತ್ತವೆಯೋ ಏನೋ.

ಪ್ರೇರಿತ ಪದ್ಯಗಳು : ಈ ಮಾದಿರಿಯ ಪದ್ಯಗಳು ಅನುವಾದಿತ ಪದ್ಯಗಳಿಗಿಂತ ಭಿನ್ನವಾದವು. ಇವುಗಳ ರಚನೆಯ ಹಿಂದೆ ಸ್ವಲ್ಪಮಟ್ಟಿಗೆ ಕನ್ನಡ ಭಾಗವತದ ಪ್ರೇರಣೆ ಇದೆಯಾದರೂ ವಿಷ್ಣುತುಂಗನದೇ ಆದ ಸ್ವಂತಿಕೆಯೂ ಇದೆ. ಪ್ರಮಾಣದ ದೃಷ್ಟಿಯಿಂದ ಹೇಳುವುದಾದರೆ ಎರಡನೆಯ ಸ್ಥಾನ ಇದಕ್ಕಿದೆ. ಕವಿಯ ಪ್ರೇರಿತ ಪದ್ಯಗಳು ಮಾದರಿಯನ್ನು ಇದೀಗ ನೋಡಬಹುದು.

ಭಾಗವತ ಮಹಿಮೆಯನ್ನು ವಿವರಿಸುವ ಸಂದರ್ಭದಲ್ಲಿ ಕನ್ನಡ ಭಾಗವತದಲ್ಲಿರುವ ಪದ್ಯ ಈ ರೀತಿ ಇದೆ:

ವಿಷಮ ವೇದ ಮಹಾಸುರಧ್ರುಮ
ದೆಸೆವ ಭಾಗವತಾಖ್ಯ ಫಲವಿದು
ವಸುಮತಿಗೆ ಶುಕಮುಖ ಸರೋರುಹಗಳಿತವಾಯ್ತಿದೆಲಾ
ರಸಿಕರಿರ ಭಾವುಕರಿರಾ ಸೇ
ವಿಸುವುದೊಡಲುಳ್ಳನ್ನಕ್ಕ ಕಡು
ಹಸಿತವರಿಗೆ ನಿಧಾನ ಬರೆ ತಿದುಣ್ಣಲೇಕೆಂದ || ೧೦ ||
(ಕನ್ನಡ ಭಾಗತ ಪ್ರ. ಸ್ಕಂಧ ಪು. ೧೩)

ಇಲ್ಲಿ ವಿಷ್ಣುತುಂಗ ಅತ್ಯಂತ ಸ್ವಾತಂತ್ರ್ಯ ವಹಿಸಿಕೊಳ್ಳುತ್ತಾನೆ. ಈ ಭಾಮಿನೀ ಷಟ್ಪದಿಯ ಮೊದಲರ್ಧವನ್ನು ಆತ ಒಡೆದು ಪ್ರತ್ಯೇಕವಾದ ಒಂದು ವೃತ್ತರಚನೆ ಮಾಡುತ್ತಾನೆ.

ವಿಷಮವೇದ ಮಹಾಸುರದ್ರಮೊಮಾಸ್ಟಿ ಶ್ರೀ ಭಗವತ್ಪಲೋ
ಋಷಿಶುಕೇಂದ್ರ ಮುಖಾಂಬುಜಂತೊಳ್ ಸ್ಟಲ್ದಿ ದಿವ್ಯ ಸುಧಾರಸೋ
ರಸಿಕೆರಾಸ್ಟಿ ಗುಣಜ್ಞೆರಾ ಪರಮಾರ್ಥೆರಾ (ತತ್ವಜ್ಞೆರಾ)
ವಿಷಮಬುದ್ಧಿಟ್ ಸೂಕ್ಷಿತೋರ್ಪಿಲೆ ಸಾಧು ಸಂಗತಿಟಾವನೆ || ೧೨ ||
(ಶ್ರೀ ಭಾಗವತೊ ಪ್ರ. ಸ್ಕಂಧ. ಪು. ೫೫)

ಇಲ್ಲೇನು ವಿಶೇಷತೆಯಿಲ್ಲ. ಹೆಚ್ಚಿನ ವೇಳೆ ಇಡೀ ಭಾಮಿನಿಯನ್ನೇ ಒಂದು ವೃತ್ತಕ್ಕೆ ಸಂಕ್ಷೇಪಿಸುವ ಕವಿ, ಅರ್ಧವನ್ನು ಒಂದು ವೃತ್ತ ವ್ಯಾಪಿಸಿದಷ್ಟೇ ಅವರ ಸ್ವಂತಿಕೆ. ಆದರೆ ಷಟ್ಪದಿಯ ಮುಂದಿನ ಅರ್ಥವನ್ನಾಧರಿಸಿ ಒಂದು ರಚನೆಯನ್ನು ಆತ ಮಾಡುವುದು ಹೀಗೆ:

ತಡಿಯ ತಂತಿ ನಿಧಾನೊ ಚೂವನೆ ಲೋಕೆರೇರತಿದೆಂಡಿತ್
ಹಡಪೊ ಪತ್ತಸ್ಟ್ ಭೈಕ್ಷೊನಾಟ್ಟ್ ಕಣಂದೆಪೊ ಮನುಜೇರ್ಕುಳು
ಉಡಲ್ ಟ್ ತ್ತಿ ಪರಾತ್ಮ ಸೂಕ್ಷಿಪನೆತ್ತ್ ಕರ್ಮಶತಂಕುಳೇ
ಕಟಲ್ ಟಂಳ್ಗ್ ಕೆರೀ ವ್ರತಾದಿ ಪ್ರತಿಜ್ಞೆ ಸಾಧಿತ್ ಮೂಢೆರ್ || ೧೩ ||
(ಶ್ರೀ ಭಾಗವತೊ ಪ್ರ. ಸ್ಕಂಧ ಪು. ೫೫)

ಇಲ್ಲಿನ ತಡಿಯ ತಂತಿ ನಿಧಾನೊ ಎನ್ನುವುದ ನಿಧನ ಬರೆ ಎನ್ನುವ ಕನ್ನಡ ಭಾಗವತದ್ದೇ. ಕನ್ನಡ ಭಾಗವತದಲ್ಲಿ ತಿರಿಮಣ್ಣು ಎಂದಷ್ಟೇ ಇದ್ದರೆ ಇಲ್ಲಿ ಅತಿದೆಂಡಿತ್ ಹಡಪೊ ಪತ್ತ್ ಸ್ಟ್ ‘ಭೈಕ್ಷೊ ನಟ್ಟ್ ಕಣ’ ಎಂದು ಇನ್ನಷ್ಟು ತೀವ್ರತೆಯಿಂದು ವಿವರಿಸಲಾಗಿದೆ. ಆದರೆ ಮುಂದಿನ ‘ಉಡಲ್ ಟಿತ್ತಿನ ಪರಾತ್ಮ ಸೂಕ್ಷಿಪನೆತ್ತ್ ಕರ್ಮ ಶತಂಕುಳೇ ಕಡಲ್ಟಂಳ್ಗ್ ಕೆರ್…. ’ ಎನ್ನುವುದ ವಿಷ್ಣುತುಂಗನ ಸೇರ್ಪಡೆ.

ಇದೇ ಮಾದರಿಯ ಇನ್ನೊಂದು ಪದ್ಯ
ವೆಂದ್ ಜಾಫಲೊ ಶಾಸ್ತ್ರ ಕರ್ಮೊಮಿ ವಿಷ್ಣು ಭಕ್ರದನೆಪ್ಪುಟಾ
ಮಂದಭಾಗೈರ್ ಪುಟ್ಟು ಜಾಫಲೊ ವಿಪ್ರರಾವುಟ ಔಷಲೊ
ಕೆಂದೆ ಪೆತ್ತನಿ ರಕ್ಷಿತ್ ಫಲೊ ಜಾಸ್ಟ್ ಪೇರ್ ದನೆಪ್ಪುಟಾ
ನಿಂದ್ ಸ್ಟೇನ್ಯ ಭವಾಬ್ದಿಟೇ ಕರೆಯುಂತ್ಯ ಚೂವನತೇಪ್ಪೆರ್ || ೯ ||
(ಶ್ರೀ ಭಾಗವತೊ ಪ್ರ. ಸ್ಕಂದೊ. ಪು. ೧೨)

ಸೂತ ಪುರಾಣಿಕನಲ್ಲಿ ಶೌನಕಾದಿಗಳು ಭಾಗವತನ ಬಗ್ಗೆ ಹೇಳಬೇಕೆಂದು ಕೇಳುತ್ತಾರೆ. ಆಗ ಅತ ಪೀಠಿಕೆಯಾಗಿ ವಿಷ್ಣುಭಕ್ತಿಯ ಬಗ್ಗೆ ಹೇಳಬೇಕೆಂದು ಕೇಳುತ್ತಾರೆ. ಆಗ ಆತ ಪೀಠಿಕೆಯಾಗಿ ವಿಷ್ಣುಭಕ್ತಿಯ ಬಗ್ಗೆ ಈ ಮಾತನ್ನು ಹೇಳುತ್ತಾನೆ. ಕನ್ನಡ ಭಾಗವತದಲ್ಲಿ ಇದೇ ಸಂದರ್ಭದ ಪದ್ಯ ಹೀಗಿದೆ.

ಏನು ಫಲ ಧರ್ಮದಲಿ ವಿಪ್ವ
ಕ್ಸೇನ ಗುಣಲೀಲಾ ಕಥಾಮೃತ
ಪಾನರಸದಲಿ ಸೊಗಸನುತ್ಪಾದಿಸಲು ನೆರೆಯದೆಡೆ
ಧೇನುಗಡ ದುಗ್ಧವನು ಸಲಹಿದ
ಮಾನವರಿಗಣು ಮಾತ್ರವೀಯದ
ದೇನು ಫಲವದರಲಿ ಪರಿಶ್ರಮ ಮಾತ್ರವಹುದೆಂದ || ೨೭ ||
(ಕನ್ನಡ ಭಾಗವತ ಪ್ರ. ಸ್ಕಂದ ಪು. ೩)

ಇಲ್ಲಿ ವಿಷ್ಣುತುಂಗ ಕನ್ನಡ ಭಾಗವತವನ್ನು ನೋಡಿಯೂ ನೋಡದವರಂತೆ ಕಾಣುತ್ತಾನೆ. ಏಕೆಂದರೆ ವಿಷ್ಣು ತುಂಗ ಕೇಳುವ ‘ವೆಂದ್ ಜಾಫಲೊ ಶಾಸ್ತ್ರಕರ್ಮೊಮಿ ವಿಷ್ಣುಭಕ್ತಿದನೆಪ್ಪುಟಾ ಎಂಬುದಕ್ಕೂ ವಿಷ್ಪಕ್ಷೇನ ಗುಣಲೀಲಾ ಕಥಾಮೃತ ಪಾನರಸದಲಿ ಸೊಗಸನುತ್ಪಾದಿಸಲು ನೆರೆಯದೆಡೆ-ಏನು ಫಲ ಎನ್ನುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಮುಂದೆ ತುಳುವ ಕೇಳುವ ಮಂದಭಾಗೈರ್ ಮತ್ತು ವಿಪ್ರೆರಾವುಂಟ ಜಾಫಲೋ ಎನ್ನುವ ಮಾತುಗಳು ಕನ್ನಡದಲ್ಲಿಲ್ಲ. ಪದ್ಯದ ಕೊನೆಯ ಭಾಗ ಸೊಗಸಾಗಿದೆ. ಶುಕಯೋಗಿಯು ಸಾಕಿದ ಮಾನವರಿಗೆ ಅಣು ಮಾತ್ರವೂ ಹಾಲನ್ನೂ ಹಸು ಕೊಡದಿದ್ದರೆ ಸಾಕಿದ್ದಕ್ಕೆ ಫಲವೇನು- ಎಂದು ಕೇಳುತ್ತಾನೆ. ಆದರೆ ತುಳುಭಾಗವತದಲ್ಲಿ ‘ಕಪಿಲೆ ದನವನ್ನು ಸಾಕಿ ಜಾಸ್ತಿ ಹಾಲು ಸಿಗದಿದ್ದರೆ ಏನು ಫಲ? ಎನ್ನುವ ಪ್ರಶ್ನೆಯಿದೆ ಕನ್ನಡದಲ್ಲಿರುವ ‘ಧೇನು’ ಎನ್ನುವಲ್ಲಿ ಅರ್ಥ ಸ್ಪಷ್ಟತೆಗೆ ಅನುಕೂಲ ಕಡಿಮೆ. ಏಕೆಂದರೆ ಅದು ‘ಗೊಡ್ಡುಧೇನು’ವೂ ಆಗಬಹುದದ ಸಾಧ್ಯತೆಗಳಿವೆ. ಆದರೆ ‘ಕೆಂದ ಪೆತ್ತ’ ಎಂದರೆ ಆಗ ನಮ್ಮ ಕಲ್ಪನೆಯೇ ಬೇರೆ ‘ಕಪಿಲೆ’, ‘ಕವಿಲ್ತಿಪೆತ್ತ’ ಎನ್ನುವುದು ತುಳುನಾಡಿನ ಜಾನಪದ ಕತೆಯಲ್ಲಿಯೂ ಹೆಸರು ಪಡೆದುದು. ‘ಕಪಿಲೆ ಪೆತ್ತ’ ಎನ್ನುವುದು ತುಳುನಾಡಿನ ಜಾನಪದ ಕತೆಯಲ್ಲಿಯೂ ಹೆಸರು ಪಡೆದುದು. ‘ಕಪಿಲೆದನ’ ಎಂದಾಕ್ಷಣ ಹಾಲಿನ ಮಟ್ಟಿಗೆ ಅಕ್ಷಯಪಾತ್ರೆ ಎಂದೇ ನಮ್ಮ ಪರಿಕಲ್ಪನೆ. ಅಂತಹ ‘ಕೆಂದ ಪೆತ್ತ’ ವೇ ಜಾಸ್ತಿ ಹಾಲು ಕೊಡದಿದ್ದರೆ ಏನು ಫಲ? ಎನ್ನುವಲ್ಲಿ ವಿಡಂಬನೆ ಹರಿತವಾಗುತ್ತದೆ. ಮುಂದಿನ ಸಾಲು ‘ಭವಾಬ್ದೀಟೇ ಕರೆಯಂತ್ಯ ಚೂವನತೇಪ್ಪರ್’ ಎನ್ನುವುದೂ ವಿಷ್ಣುತುಂಗನದೇ.

ವಿಷ್ಣು ತುಂಗನ ಪ್ರೇರಿತ ಪದ್ಯಕ್ಕೆ ಇನ್ನೊಂದು ಉದಾಹರಣೆ.
ಚಂದ್ರಕೇ ಕಲೆಯಾವಾಪಾ ಕಲೆ ಪ್ರಜ್ವಲೀಪುಕ್ ಣಂದೊಮೆ
ಕೊಂದಳೀಪ್ಪುಣ ತೀರೆ ಬುದ್ಧತ ಕಲ್ಮಪೊಂಕುಳೆ ವಾಸನೆ
ಕುಂದ್ ಜಾಸ್ಟಿಮುಕೀ ಚರಾಚರಸಾಕ್ಷಿಯಾತೊ ಮುನೀಶ್ವರಾ
ವೆಂದರೀರತಿ ಲೋಕಪಾವನಂಕಾರೆ ಪುಣ್ಯ ಪ್ರಸಂಗೊಮಿ || ೩೧ ||
(ತುಳು ಭಾಗವತ ಪ್ರ. ಸ್ಕಂಧ ಪು. ೨೯)

ಈಗ ಕನ್ನಡ ಭಾಗವತದ ಪದ್ಯ
ಜಗದ ಕಂಗಳ ಕತ್ತಲೆಯ ಮು
ತ್ತಿಗೆಯ ತೆಗೆಸುವ ತ್ರೀವ್ರತೇಜದ
ಗಗನ ಮಣಿ ಮಂಡಲ ನಂಡಲೆಯುತ್ತಲೂ ತಿಮಿರ
ಬಗೆಯಲೇಂ ಮುಸುಕವುದೆ ತಿಳುಹುವ
ಬಗೆಯ ಬಲ್ಲ ಮಹಾತ್ಮರಾರೈ ತಂದೆ ಹೇಳಂದ || ೧೬ ||
(ಕನ್ನಡ ಭಾಗವರ ಪ್ರ. ಸ್ಕಂದ ಪು… )

ಈ ಪದ್ಯಗಳ ಸಂದರ್ಭವನ್ನು ಗ್ರಹಿಸಿದರೆ ಇಬ್ಬರ ಮನೋದೃಷ್ಟಿಗಳು ಸ್ಪಷ್ಟವಾಗುತ್ತವೆ. ವೇದಾದಿಪುರಾಣಗಳನ್ನು ರಚಿಸಿದ ವ್ಯಾಸಮುನಿಗೆ ಮನುಷ್ಯರು ಇನ್ನೂ ಭವಾಬ್ಧಿಯಲ್ಲಿ ಪರಿತಪಿಸುವುದರಿಂದ ದುಃಖವಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿರುತ್ತಾನೆ. ಅಲ್ಲಿಗೆ ನಾರದನ ಪ್ರವೇಶವಾಗುತ್ತದೆ. ಆಗ ಶುಕಯೋಗಿ ಹೇಳುವಂತೆ ‘ಸೂರ್ಯನಿಗೆ ಕತ್ತಲೆ ಮುತ್ತಿಗೆ ಹಾಕಿದರೆ ಕತ್ತಲೆ ಗೆಲ್ಲಬಹುದೋ’-‘ಸೂರ್ಯನನ್ನೇ ಕತ್ತಲೆ ಮುಸುಕಬಹುದೇ ಎಂದು ನಾರದನ ಪ್ರಶ್ನೆ. ಇಲ್ಲಿ ವ್ಯಾಸನು ಸೂರ್ಯನಾದರೆ ಅವನು ದುಗುಡ ಕತ್ತಲೆ. ವಿಷ್ಣು ತುಂಗ ಅದನ್ನೇ ಹೇಳುವುದು – ಚಂದ್ರಕೇ ಕಲೆಯಾವಪಾ ಕಲೆ ಪ್ರಜ್ವಲೀಪುಕ್ ಣಂದೊಮೆ’ ಇಲ್ಲಿ ಚಂದ್ರನಿಗೇ ಕಲೆಯಾದರೆ ಆ ಕಲೆ ಪ್ರಜ್ವಲಿಸುವ ಹಾಗೆ ಎಂದಾಗಿ ವ್ಯಾಸ ಚಂದ್ರನಾದ ಅವನ ದುಃಖ ಆ ಚಂದ್ರಮಂಡದಲ್ಲಿರುವ ಕಲೆಯಾಯಿತು. ಕನ್ನಡಿಗ ಮತ್ತು ತುಳುವರೀರ್ವರು ಎರಡು ಭಿನ್ನವಾದ ಹೋಲಿಕೆಯನ್ನು ಕೊಡುತ್ತಾರೆ. ಮೊದಲಿನ ಹೋಲಿಕೆಯಲ್ಲಿ ನೀನು ಅಸಾಮಾನ್ಯ ಎನ್ನುವ ಧ್ವನಿಯಿದ್ದರೆ (ಎಂದರೆ ಕನ್ನಡ ಭಾಗವತದಲ್ಲಿ) ಎರಡನೇ ಹೋಲಿಕೆಯಲ್ಲಿ ನೀನು ಅಸಾಮಾನ್ಯ ಹೌದು. ಆದರೆನಿನಗೆ ಕಳಂಕವಾದರೆ ಅದು ಪ್ರಜ್ವಲಿಸುತ್ತಲೇ ಇರುತ್ತದೆ ಎನ್ನುವ ಧ್ವನಿಯಿದೆ. ನೀನು ಅಸಾಮಾನ್ಯ, ಹಾಗಾದುದರಿಂದಲೇ ನಿನ್ನ ಕಳಂಕವೂ ಅಸಾಮಾನ್ಯ ಎಂದು ಹೊಗಳಿಕೆಯೂ ಅಲ್ಲ. ತೆಗಳಿಕೆಯೂ ಅಲ್ಲದ ಮಾತದು. ಚಂದ್ರ ಪ್ರಜ್ವಲಿಸುತ್ತಾ ಹೋದಂತೆ ಚಂದ್ರಮಂಡಲದಲ್ಲಿರುವ ಕಲೆ ಕೂಡಾ ಪ್ರಜ್ವಲಿಸುವ ಹಾಗೆ ನಿನ್ನ ದುಃಖದಿಂದಾಗಿ ಚರಾಚರಗಳಿಗೆಲ್ಲ ದುಃಖವಾಗಿದೆ. ಅವುಗಳ ದುಃಖಕ್ಕೆ ನೀನೇ ಕಾರಣ ಎಂದು ವ್ಯಾಸನನ್ನು ನಾರದ ನೇರವಾಗಿ ವಿಮರ್ಶೆ ಮಾಡುತ್ತಾನೆ. ವೇದಾದಿ ಪುರಾಣಗಳ ಮತ್ತು ಭಾಗವತ ಸಂಹಿತೆಗಳೊಳಗಿನ ಚರ್ಚೆ ಇದರ ಮೂಲಕ ಪ್ರಕಟಗೊಳ್ಳುವ ರೀತಿ ಅದ್ಭುತವಾಗಿದೆ.

ಈ ಮಾದರಿಯ ಪದ್ಯಕ್ಕೆ ಇನ್ನೊಂದೇ ಉದಾಹರಣೆ ಕೊಟ್ಟು ನಿಲ್ಲಿಸಬಹುದೆನಿಸುತ್ತದೆ. ಶ್ರೀ ಕೃಷ್ಣ ದ್ವಾರಾವತಿಗೆ ಆಗಮಿಸುವ ವೇಳೆಗೆ ಹಸ್ತಿನಾವತಿಯಿಂದ ಮರಳುವ ಹೊತ್ತು – ಆತನ ನಿರೀಕ್ಷಣೆಗೆ ಜನರಲ್ಲಿ ಎಷ್ಟರಮಟ್ಟಿಗೆ ಕಾತರವಿತ್ತು ಎಂಬುದಕ್ಕೆ ಒಂದು ವರ್ಣನೆ. ಮೊದಲಿಗೆ ಕನ್ನಡ ಭಾಗವತದಲ್ಲಿಯ ವಿವರಗಳನ್ನು ನೋಡಬಹುದು.

ದೇವ ದೇವನನೀಕ್ಷಿಸಲು ಯದು
ದೇವಿಯರು ಹರಿದೇರಿದರು ಹ
ರ್ಮ್ಯಾವಳಿಯುವುಣುಕುಳಿತವರು ಗಂಗಳವ ಬಿಸಾಡಿ
ಆವ ಕೆಲಸದಲ್ಲಿದ್ದರವದನಾ
ನಾವಿಧದಲೆ ಹರಿವದ
ನಾವಲೋಕನ ಪರಮ ಸುಖ ಪರವಶೆಯರೆಂದೆನಿಸಿ || ೨೬ ||
(ಕನ್ನಡ ಭಾಗವತ ಪ್ರ. ಸ್ಕಂದ. ಪು. ೨೮)

ಇದನ್ನು ವಿಷ್ಣು ತುಂಗ ವಿವರಿಸುವ ರೀತಿ ಹೀಗೆ
‘ಇರೆತುಂಪಿನಿ ಚೆಚ್ಚಿಸ್ಟ್ ಬಾಲೆಕುಳೇ ತಿಗೆತೊ ಕರಬೀತ್
ವರಕುಂಜಿಕುಳಿಲ್ಲಡ್ ಪಾಕೊಸ್ಟತ್ ಪರಿಮಾರ್ಕುಳೆ ಭಗ್ಗ್
ವರಮಾಡಮದಲುಳು ಗೋಪುರೊಮಾ ತಿಣೆನಡ್ಡಗವಾಕ್ಷಂ
ತುರಟಾಸ್ಟ್ ನಿ[ರೀ]ಕ್ಷಿತಣಾಶ್ವರಿಯೋ ವಿರಹೊಂಟ್ ಮುಕುಂದ || ೩೩ ||