ಕರ್ನಾಟಕದ ಪಶ್ಚಿಮ ಘಟ್ಟದ ಮೇಲಿನ ಪ್ರದೇಶಗಳಿಂದ ಪ್ರತ್ಯೇಕವಾಗಿ ವಿಭಿನ್ನ ಸಂಸ್ಕೃತಿಯನ್ನು ಹೊಂದಿದ ಭೂಭಾಗವೇ ತುಳುನಾಡು. ತುಳುನಾಡು ದಕ್ಷಿಣದಲ್ಲಿ ಚಂದ್ರಗಿರಿ ನದಿಯಿಂದ ಉತ್ತರದಲ್ಲಿ ಕರ್ನಾಟದಕ ಪಶ್ಚಿಮ ಕರಾವಳಿಯಲ್ಲಿ ಭಟ್ಕಳದವರೆಗೆ ವಿಸ್ತರಿಸಲ್ಪಟ್ಟಿದೆ. ಇತ್ತೀಚಿನವರೆಗೆ ಪ್ರಾಗಿತಿಹಾಸದ ಯಾವುದೇ ಅವಶೇಷಗಳು ದೊರೆಯದೇ ಇದ್ದುದರಿಂದ ಈ ಭಾಗದಲ್ಲಿ ಮಾನವ ಯಾವಾಗ ವಾಸಿಸಲು ಆರಂಭಿಸಿದ ಎನ್ನುವ ವಿವರ ತಿಳಿದಿರಲಿಲ್ಲ. ಈ ಭಾಗದಲ್ಲಿ ಹೆಚ್ಚಿನ ಪ್ರಚಾರವನ್ನು ಪಡೆದಿರುವ ‘ಪರಶುರಾಮ ಸೃಷ್ಟಿಯ’ ಐತಿಹ್ಯ ಕಬ್ಬಿಣಯುಗದ ಜನರು ಈ ಭಾಗದಲ್ಲಿ ಜೀವನ ನಡೆಸಿದ್ದನ್ನು ನೆನಪಿಸುವ ಐತಿಹ್ಯ ಎನ್ನುವುದು ಕೆಲವು ವಿದ್ವಾಂಸರ ಅಭಿಮತ (ರಮೇಶ್ ೧೯೬೯; ೧೭).

ಪುರಾತತ್ವ ಸಂಶೋಧಕರು ತುಳುನಾಡಿಗೆ ತಾಗಿಕೊಂಡಿರುವ ಮಲೆನಾಡಿನ ಪ್ರದೇಶದಲ್ಲಿ ಹಾಗೂ ಕೊಂಕಣ ಗೋವ ಹಾಗೂ ಕೇರಳದ ಕೆಲವು ಭಾಗಗಳಲ್ಲಿ ದೊರೆತ ಶಿಲಾಯುಗ ಕಾಲದ ಅವಶೇಷಗಳು ದೊರೆತವು. (ಸುಂದರ ೧೯೮೦) ಇದು ಇನ್ನೂ ಹೆಚ್ಚಿನ ಸಂಶೋಧನೆಗೆ ಇಂಬು ನೀಡಿತು. ಆನಂತರ ನೇತ್ರಾವತಿ ನದಿ ತೀರದ ಉಪ್ಪಿನಂಗಡಿ ಹಾಗೂ ಮಾಣಿಯಲ್ಲಿ ಬೆಳಕಿಗೆ ಬಂದ ಅಂತ್ಯ ಶಿಲಾಯುಗದ ಅವಶೇಷಗಳು, ಆಗಿನ ಕಾಲದ ಮಾನವನ ಚಟುವಟಿಕೆಗಳನ್ನು ವಿವರಿಸುವ ಆಧಾರಶಿಲೆಗಳಾದವು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ತ – ಶಿಲಾಯುಧಗಳು ದೊರೆತಿದ್ದು, ಅವುಗಳು ಭಾರತ ಕರಾವಳಿಯ ಇತರ ಭಾಗಗಳಲ್ಲಿ ದೊರೆತ ಆಧಾರಗಳೊಂದಿಗೆ ಸಾಮ್ಯತೆ ಹೊಂದಿವೆ. ತುಳುನಾಡಿನ ಇತರ ಭಾಗಗಳಲ್ಲಿಯೂ ಸೂಕ್ಷ್ಮ ಶಿಲಾಯುಗದ ಅವಶೇಷಗಳು ದೊರೆತಿವೆ (ಶಿವತಾರಕ್ ೨೦೦೧).

ತುಳುನಾಡಿನ ಇತಿಹಾಸದ ನಂತರದ ಹಂತ ನೂತನ ಶಿಲಾಯುಗ. ಈ ಹಂತದ ಅತೀ ಮುಖ್ಯ ಆಧಾರವಾದ ನೂತನ ಶಿಲಾಯುಗ ಕಾಲದ ಕೊಡಲಿ ದೊರೆತಿದ್ದು, ಉಡುಪಿ ತಾಲೂಕಿನ ಭಂಡಿ ಮಠದಲ್ಲಿ (ಜಗದೀಶ ಶೆಟ್ಟಿ, ೨೦೦೩). ಇದನ್ನು ಡಾಲರೈಟ್ ಕಲ್ಲಿನಿಂದ ತಯಾರಿಸಲಾಗಿದೆ. ಇಂತಹದೇ ಕೊಡಲಿಗಳು ಉಡುಪಿ ತಾಲೂಕಿನ ನಡೂರು, ಹಾರಾಡಿ ಗ್ರಾಮದ ಕುಕ್ಕುಡೆ ಹಾಗೂ ಕೋಟೆತಟ್ಟು ಗ್ರಾಮದಲ್ಲಿ ದೊರೆತಿವೆ. ಇವುಗಳಲ್ಲಿ ಕುಕ್ಕುಡೆಯಲ್ಲಿ ದೊರೆತ ಕೊಡಲಿ ಅತ್ಯಂತ ದೊಡ್ಡದಾಗಿದೆ. ಈ ಕೊಡಲಿಗಳು ಇಲ್ಲಿನ ನೂತನ ಶಿಲಾಯುಗ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತವೆ (ವಸಂತ ಶೆಟ್ಟಿ, ೧೯೯೦).

ಶಿಲಾಯುಗ ಸಂಸ್ಕೃತಿಯ ನಂತರದ ಹಂತವಾದ ಕಬ್ಬಿಣಯುಗದಲ್ಲಿ ತುಳುನಾಡಿನಲ್ಲಿ ಯಾವ ರೀತಿಯ ಬೆಳವಣಿಗೆ ಆಗಿತ್ತೆಂಬುದಕ್ಕೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುವ ಗೋರಿಗಳೇ ಸಾಕ್ಷಿ. ತುಳುನಾಡಿನ ಪ್ರಾಗಿತಿಹಾಸದ ಮೇಲೆ ಪ್ರಪ್ರಥಮವಾಗಿ ಬೆಳಕು ಚೆಲ್ಲಿದವರು ಡಾ. ಪಿ.ಗುರುರಾಜ ಭಟ್ ಮತ್ತು ಡಾ. ಅ. ಸುಂದರ, ೧೯೬೯ರಲ್ಲಿ ಡಾ. ಭಟ್ಟರು ಮಂಗಳೂರಿಗೆ ಹತ್ತಿರವಿರುವ ಬಡಕಜೆಕಾರು ಎಂಬಲ್ಲಿ ಬೃಹತ್ ಶಿಲಾಯುಗ ಕಾಲದ ಗೋರಿಗಳನ್ನು ಸಂಶೋಧಿಸಿದರು. ಇವುಗಳನ್ನು ಜನರು ಪಾಂಡವರ ಕಲ್ಲು ಎಂದು ಕರೆಯುತ್ತಿದ್ದರು. ದೊಡ್ಡದಾದ ನಾಲ್ಕು ಶಿಲಾಚಪ್ಪಡಿಗಳನ್ನು ನಿಲ್ಲಿಸಿ, ಅಷ್ಟೇ ಗಾತ್ರದ ಚಪ್ಪಡಿಯೊಂದನ್ನು ಮುಚ್ಚಿ ಈ ಗೋರಿಗಳನ್ನು ರಚಿಸಲಾಗಿತ್ತು. ನೆಟ್ಟಗೆ ನಿಲ್ಲಿಸಲಾದ ಒಂದು ಚಪ್ಪಡಿಯಲ್ಲಿ ತೂತೊಂದನ್ನು (port hole) ಮಾಡಲಾಗಿದ್ದು ಇವಿಷ್ಟು, ಇಂತಹ ಕೋಟಿ ಗೋರಿಗಳಲ್ಲಿ ಕಂಡುಬರುವ ಮುಖ್ಯ ಲಕ್ಷಣಗಳು (ಸುಂದರ್ ೧೯೮೯). ಪುತ್ತೂರಿನ ಬೀರಮಲೆ ಎಂಬಲ್ಲಿ ಬೇರೆ ರೀತಿಯ ಅಂದರೆ ‘ಮೃತ್ಪಾತ್ರೆ’ ಸಮಾಧಿಗಳು ದೊರೆತಿವೆ. ಇಲ್ಲಿನ ಸಮಾಧಿಯೊಂದರಲ್ಲಿ ಹಿಡಿ ಸಿಕ್ಕಿಸಲು ಸಾಧ್ಯವಿರುವ ಉಳಿಯಂತಹ ಆಯುಧ ಮೊದಲಾದವುಗಳು ದೊರೆತಿವೆ (ಗುರುರಾಜ ಭಟ್ ೧೯೭೫).

ಉಡುಪಿ ತಾಲೂಕಿನ ಮೂಡನಿಡಂಬೂರಿನಲ್ಲಿ ಕೆಂಪು ಕಲ್ಲು (Laterite) ಮಿಶ್ರಿತ ಗಟ್ಟಿಯಾದ ಮಣ್ಣಿನಲ್ಲಿ ಕೊರೆದು ಮಾಡಲಾದ ಗುಹಾ ಸಮಾಧಿಯನ್ನು ಡಾ. ಗುರುರಾಜ ಭಟ್ಟ್ ಮತ್ತು ಡಾ. ಸುಂದರ ಸಂಶೋಧಿಸಿ ಪ್ರಕಟಿಸಿದ್ದಾರೆ. ಮೃತ್ಪಾತ್ರೆಗಳೂ ಇಲ್ಲಿ ದೊರೆತಿವೆ. ಸಾಂತೂರಿನಲ್ಲಿಯೂ ಇಂತಹ ಅವಶೇಷಗಳು ದೊರೆತಿವೆ. ಇಂತಹ ಸಮಾಧಿಗಳು ದೊರೆತ ಇನ್ನೊಂದು ಊರೆಂದರೆ ವಡ್ಡರ್ಸೆ. ಈ ಎಲ್ಲಾ ಸಂಶೋಧನೆಗಳು ಇದುವರೆಗೆ ಕೇರಳದಲ್ಲಿ ಹೆಚ್ಚಾಗಿ ದೊರೆತಿದ್ದ ಇಂತಹ ಬೃಹತ್ ಶಿಲಾಯುಗದ ಕಾಲದ ಗೋರಿಗಳ ನಿರ್ಮಾಣ, ತುಳುನಾಡಿನಲ್ಲಿಯೂ ಪ್ರಚಾರದಲ್ಲಿದ್ದ ಬಗ್ಗೆ ಆಧಾರ ನೀಡುತ್ತವೆ (ಅದೇ, ೧೯೭೫). ಬಡಕಜೆಕಾರಿನಲ್ಲಿ ದೊರೆತಂತಹ ಕೋಣಿ ಗೋರಿಗಳ ಅವಶೇಷಗಳು ಕುಂದಾಪುರ ತಾಲೂಕು ಬೇಳೂರು – ಚೌಂತಾಡಿಯಲ್ಲಿಯೂ ದೊರೆತಿದ್ದರೂ ಅವುಗಳು ಸುಸ್ಥಿತಿಯಲ್ಲಿಲ್ಲ. ಒಂದೆರಡು ಕಲ್ಲುಗಳು ಮಾತ್ರ ಉಳಿದುಕೊಂಡಿವೆ. ಇವುಗಳು ತೂಂತಕಲ್ ಎಂದು ಸ್ಥಳೀಯವಾಗಿ ಪ್ರಚಾರದಲ್ಲಿವೆ. ಇಲ್ಲಿ ಮೃತ್ಪಾತ್ರೆ ಚೂರುಗಳೂ ದೊರೆತಿವೆ. ಶಿಲಾಕೋಣಿ ಗೋರಿಗಳು ದೊರೆತ ಇತರ ಊರುಗಳೆಂದರೆ ಬೋರ್ಕಟ್ಟೆ ಮತ್ತು ಕೊಣಾಜೆ. ಇವುಗಳು ಬಹಳ ವಿಶಿಷ್ಟವಾದ ಅವಶೇಷಗಳು.

ಡಾ. ಬಿ. ವಸಂತ ಶೆಟ್ಟಿಯವರು ಆನಂತರ ಸಂಶೋಧನೆ ಮಾಡಿದ ಶಿಲಾಯುಗ ಕಾಲದ ಅನೇಕ ಅವಶೇಷಗಳು ಈ ಸಂಸ್ಕೃತಿ ಬಹಳ ವ್ಯಾಪಕವಾಗಿತ್ತೆಂಬ ಅಂಶವನ್ನು ದೃಡೀಕರಿಸುತ್ತವೆ. ಬ್ರಹ್ಮಾವರ ಸಮೀಪದ ಮಟಪಾಡಿ ಬೋಳುಗುಡ್ಡೆಯಲ್ಲಿ ದೊರೆತ ಕಲ್ಲಿನಲ್ಲಿ ಕೊರೆದು ನಿರ್ಮಿಸಿದ ಗುಹಾ ಸಮಾಧಿ ಇದಕ್ಕೆ ಒಂದು ಉತ್ತಮ ಉದಾಹರಣೆ. ಅಲ್ಲದೆ ತುಳುನಾಡಿನ ಕುಂಜಾಲು ಮೈರೆಕೋಮೆ, ಬಾರಾಳಿ, ಕೆರಾಡಿ, ಹಳ್ಳಾಡಿ, ಹರ್ಕಾಡಿ, ಬೆಳ್ಳಿರ್ಪಾಡಿ, ಬೇಳಿಂಜೆ ಹೆಬ್ರಿ, ಚಾರ, ವಳ್ತೂರು ಮತ್ತು ನಿಡ್ಲಾಡಿಯಲ್ಲಿಯೂ ಇಂತಹ ಅವಶೇಷಗಳು ದೊರೆತಿವೆ. ಮೃತ್ಪಾತ್ರೆ ಸಮಾಧಿಗಳು ಹಿರಿಯಡ್ಕ ಸಮೀಪದ ಅಂಜಾರಿನಲ್ಲಿ ಮತ್ತು ಕುಂದಾಪುರ ತಾಲೂಕಿನ ಅಮಾವಾಸೆಬೈಲಿನಲ್ಲಿ ಪತ್ತೆಯಾಗಿವೆ (ವಸಂತ ಶೆಟ್ಟಿ, ೧೯೮೫). ಅನೇಕ ಗುಹಾಸಮಾಧಿಗಳು ತುಳುನಾಡಿನಾದ್ಯಂತ ಕಂಡುಬಂದಿವೆ. ಉದಾ : ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನದ ಹೊರಸುತ್ತಿನಲ್ಲಿ ದೊರೆತ ಸಮಾದಿ ಹಾಗೂ ಉಡುಪಿ ಪೇಟೆಯ ಸಂಸ್ಕೃತ ಕಾಲೇಜಿನ ಇದಿರು ಇರುವ ವೃತ್ತದ ಸಮೀಪ ದೊರೆತ ಅವಶೇಷ.

ತುಳುನಾಡಿನ ಉತ್ತರಭಾಗದಲ್ಲಿ ಇತಿಹಾಸ ಪೂರ್ವಕಾಲದ ಸಂಸ್ಕೃತಿ ಹೆಚ್ಚು ಸಂಪದ್ಭರಿತವಾದ ರೀತಿಯಲ್ಲಿತ್ತು ಎಂಬುದನ್ನು ಸಮರ್ಥಿಸುವ ಮಹತ್ವದ ಆಕರಗಳು ದೊರೆತಿರುವುದು ಉಡುಪಿ ತಾಲೂಕಿನ ಕಕ್ಕುಂಜೆಯಲ್ಲಿ. ೧೨ ಕೋಣಿ ಗೋರಿಗಳು ಇಲ್ಲಿ ದೊರೆತಿವೆ. ಇತಿಹಾಸ ಪೂರ್ವಕಾಲದಲ ಸಂಶೋಧನೆಯಲ್ಲಿ ಪ್ರಮುಖ ಮೈಲಿಗಲ್ಲು ಕುಂದಾಪುರ ತಾಲೂಕಿನ ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿ ದೊರೆತ ಪ್ರಾಗೈತಿಹಾಸಿ ಕಾಲದ ಚಿತ್ರಗಳು. ಇಲ್ಲಿ ಕೊರೆದಿರುವ ಗೂಳಿಯ ಚಿತ್ರ ಬಹಳ ಆಕರ್ಷಣೀಯವಾಗಿದ್ದು, ಇದು ಆಗಿನ ಕಾಲದಲ್ಲಾದ ಕಲೆಯ ಬೆಳವಣಿಗೆಗೆ ಒಂದು ಉತ್ತಮ ಉದಾಹರಣೆ. ಒಟ್ಟಿನಲ್ಲಿ ಇತಿಹಾಸಪೂರ್ವ ಕಾಲದಲ್ಲಿ ತುಳುನಾಡು ಮಾನವನ ಚಟುವಟಿಕೆಗಳ ತಾಣವಾಗಿತ್ತು. ತುಳುನಾಡಿನಲ್ಲಿ ದೊರೆಯುವ ಇತಿಹಾಸ ಪೂರ್ವಕಾಲದ ವಿವರಗಳು ಮಾನವನ ಪ್ರಗತಿಯ ವಿವಿಧ ಹಂತಗಳ ಪೂರ್ಣ ಮಾಹಿತಿಯನ್ನು ನೀಡುತ್ತವೆ.

ಇತಿಹಾಸ ಕಾಲಕ್ಕೆ ಬಂದರೆ ತುಳುನಾಡಿನಲ್ಲಿ ಅನೇ ರಾಜವಂಶಗಳು ಆಳ್ವಿಕೆ ನಡೆಸಿವೆ. ಅವುಗಳಲ್ಲಿ ಅತ್ಯಂತ ಪ್ರಾಚೀನ ರಾಜವಂಶವೆಂದರೆ ಆಳುಪ ಅರಸು ಮನೆತನ. ಗ್ರೀಕ್ ದೇಶದ ಭೂಗೋಲ ಶಾಸ್ತ್ರಜ್ಞ ಟೊಲೆಮಿಯು ಉಲ್ಲೇಖಿಸಿರುವ ಒಲೊಖೊಯ್ರವು ಆಳ್ವಖೇಡ ಎಂಬುದು ವಿದ್ವಾಂಸರ ಅಭಿಮತ. ಈಗಾಗಲೇ ತುಳುನಾಡು ಆಳುಪ ( ಆಳ್ವ) ರಾಜ ವಂಶದ ಅಧಿಕಾರ ವ್ಯಾಪ್ತಿಗೆ ಸೇರಿರಬೇಕು. ಈ ಎಲ್ಲಾ ಅಭಿಪ್ರಾಯಗಳಿಗೆ ಅಳುಪರ ನಿರಂತರ ಇತಿಹಾಸ ನಮಗೆ ಕಂಡುಬರುವುದು ಕ್ರಿ.ಶ. ೭ನೇ ಶತಮಾನದ ಮಧ್ಯಭಾಗದಿಂದ ಎಂಬುದು ಗಮನೀಯವಾದ ಅಂಶ. ಹಾಗಾದರೆ ಇದಕ್ಕೆ ಮೊದಲು ಅವರ ಸ್ಥಾನಮಾನ ಏನಿತ್ತು? ಎಂಬುದು ಮುಖ್ಯವಾದ ವಿಷಯ. ೫ನೇ ಶತಮಾನದ ಕನ್ನಡದ ಅತ್ಯಂತ ಪ್ರಾಚೀನ ಶಾಸನವಾದ ಹಲ್ಮಿಡಿ ಶಾಸನ ೭ನೇ ಶತಮಾನಕ್ಕೆ ಮೊದಲಿನ ಅಳಪರ ಸ್ಥಾನಮಾನದ ಮೇಲೆ ಬೆಳಕು ಚೆಲ್ಲುತ್ತದೆ. ಅದರ ಪ್ರಕಾರ ಅಳುಪರು ಕದಂಬರ ಅಧೀನದಲ್ಲಿದ್ದರು. ಗುಡ್ನಾಪುರ ಶಾಸನವೂ ಇದನ್ನು ದೃಢೀಕರಿಸುತ್ತದೆ.

ಕ್ರಿ.ಶ. ೭ನೇ ಶತಮಾನದ ಸುಮಾರಿಗೆ ಅಳುಪ ಅರಸರ ಇತಿಹಾಸವು ನಿರಂತರವಾಗಿ ಅರಂಭವಾಗುತ್ತದೆ. ಆಗ ಮಂಗಳೂರು ರಾಜಧಾನಿಯಾಗಿತ್ತು. ಅಳುಪ ಅರಸು ಒಂದನೇ ಅಳುವರಸ ರಾಜನಾಗಿದ್ದನು. ಅವನ ಆಡಳಿತ ಕಾಲದಲ್ಲಿ ತುಳುನಾಡಿನೊಂದಿಗೆ ಶಿವಮೊಗ್ಗ ಜಿಲ್ಲೆಯ ಪೊಂಬುಚ್ಚ ಮತ್ತು ಕದಂಬ ಮಂಡಲ ಅವರ ಅಧಿಕಾರ ವ್ಯಾಪ್ತಿಗೆ ಸೇರಿದ್ದವು[1]- ಒಂದನೇ ಅಳುಪರಸ ಬಾದಾಮಿ ಚಾಲುಕ್ಯರ ಅರಸನಾದ ಒಂದನೇ ವಿಕ್ರಮಾದಿತ್ಯನ ಮಿತ್ರತ್ವವನ್ನು ಸಂಪಾದಿಸಿದ್ದು ಮಾತ್ರವಲ್ಲ ಸಾಮಂತನಾಗಿದ್ದನು. ಪಲ್ಲವರ ಧಾಳಿಯಿಂದಾಗಿ ತನ್ನ ಹಿಂದಿನ ವೈಭವವನ್ನು ಕಳೆದುಕೊಂಡು ಶಕ್ತಿಗುಂದಿದ್ದ ಚಾಲುಕ್ಯ ವಂಶದ ಪ್ರಾಬಲ್ಯವನ್ನು ಪುನಃ ಸ್ಥಾಪಿಸುವಲ್ಲಿ ಸಹಾಯ ನೀಡಿದ್ದವರಲ್ಲಿ ಆಳುಪರಸನೂ ಒಬ್ಬನು. ಈ ಸಹಾಯಕ್ಕಾಗಿ ವಿಕ್ರಮಾದಿತ್ಯ ಅವನನ್ನು ಕದಂಬ ಮಂಡಲದ ಅಧಿಪತಿಯನ್ನಾಗಿ ನೇಮಿಸಿರಬೇಕು. ಡಾ. ಕೆ.ವಿ. ರಮೇಶರವರು ಇವನ ಕಾಲವನ್ನು ಕ್ರಿ.ಶ. ೬೫೦-೬೮೦ ಎಂಬುದಾಗಿ ತೀರ್ಮಾನಿಸಿದ್ದಾರೆ[2].  ಅವನ ಪ್ರಮುಖ ಶಾಸನವೆಂದರೆ ವಡ್ಡರ್ಸೆ ಶಿಲಾಶಾಸನ[3].

ಒಂದನೇ ಅಳುವರಸನ ತರುವಾಯ ಒಂದನೇ ಚಿತ್ರವಾಹನನು ಪಟ್ಟಕ್ಕೆ ಬಂದನು. ಆಗಾಗಲೇ ಆಡಳಿತದಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದಿದ್ದ ಚಿತ್ರವಾಹನನ ಆಳ್ವಿಕೆ ಅಳುಪರ ಆಡಳಿತದ ಅತ್ಯುತ್ತಮ ಕಾಲ ಎಂಬುದಾಗಿ ಕರೆಯಬಹುದು. ಇವನ ಕಾಲದಲ್ಲಿ ಅಳುಪ ಚಾಲುಕ್ಯರ ನಡುವಣ ಮೈತ್ರಿ ತುಂಬಾ ಗಾಢವಾಗಿತ್ತು. ಅವನು ಚಾಲುಕ್ಯ ರಾಜಕುಮಾರಿ ಕುಂಕುಮ ಮಹಾದೇವಿಯನ್ನು ಮದುವೆಯಾಗಿದ್ದನು[4] – ಚಿತ್ರವಾಹನನ ನಂತರ ಎರಡನೇ ಅಳುವರಸನು ಪಟ್ಟಕ್ಕೆ ಬಂದನು. ಇವನ ಕಾಲದಲ್ಲಿ ಅಳುಪರ ಇತಿಹಾಸ ಸ್ವಲ್ಪ ಮಟ್ಟಿಗೆ ಇಳಿಮುಖವನ್ನು ಕಂಡಿತು. ಅಳುಪರು ಕದಂಬ ಮಂಡಲವನ್ನು ಕಳೆದುಕೊಂಡರು. ಇದಕ್ಕೆ ಅಳುಪರು ಕದಂಬ ಮಂಡಲವನ್ನು ಕಳೆದುಕೊಂಡರು. ಇದಕ್ಕೆ ಅಳುಪ ರಾಜನ ದೌರ್ಬಲ್ಯ ಕಾರಣವಾಗಿರದೆ, ಆಗ ಕರ್ನಾಟಕದ ರಾಜಕೀಯದಲ್ಲಿ ಆದ ಕ್ಷಿಪ್ರಗತಿಯೇ ಬೆಳವಣಿಗೆಯೇ ಕಾರಣವಾಗಿತ್ತು.ಅದು ಬಾದಾಮಿ ಚಾಲುಕ್ಯರು ದುರ್ಬಲರಾಗಿ ರಾಷ್ಟ್ರಕೂಟರು ಪ್ರಬಲರಾಗುತ್ತಿದ್ದ ಕಾಲ. ಹೀಗಾಗಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಅಳುಪರು ಚಾಲುಕ್ಯರಿಂದ ದೂರವಾಗಿ ಪಲ್ಲವರ ಸ್ನೇಹ ಸಂಪಾದನೆ ಮಾಡಿದಂತೆ ಕಂಡುಬರುತ್ತದೆ. ಈ ಬಗ್ಗೆ ಬೆಳಕು ಚೆಲ್ಲುವ ಆಂಧ್ರಪ್ರದೇಶದ ಮಲ್ಲಂನಲ್ಲಿ ದೊರೆತಿರುವ ಶಾಸನದ ಪ್ರಕಾರ[5] ಆಳುವರಸನ ಕೋರಿಕೆ ಮೇರೆಗೆ ಪಲ್ಲವರಾಜ ಎರಡನೇ ನಂದಿವರ್ಮ ಮಲ್ಲಂ ಗ್ರಾಮದ ಸುಬ್ರಹ್ಮಣ್ಯ ದೇವರಿಗೆ ಒಂದಿಷ್ಟು ನಾಣ್ಯಗಳನ್ನು ದಾನ ಮಾಡಿದ್ದನೆಂದು ತಿಳಿದುಬರುತ್ತದೆ. ಎರಡನೇ ಆಳುವರಸನ ಕಾಲದಲ್ಲು ಉಡುಪಿ ತಾಲೂಕಿನ ಉದಯಪುರ (ಇಂದಿನ ಉದ್ಯಾವರ) ಪ್ರಧಾನ ರಾಜಧಾನಿಯಾಯಿತು. ಇದುವರೆಗೆ ದೊರೆತ ಅತ್ಯಂತ ಪ್ರಾಚೀನ ಕನ್ನಡ ತಾಮ್ರ ಶಾಸನವನ್ನು (ಬೆಳ್ಮಣ್ಣು ಶಾಸನ) ಬರೆಯಿಸಿದ ಕೀರ್ತಿ ಎರಡನೇ ಅಳುವರಸನಿಗೆ ಸಲ್ಲುತ್ತದೆ. ಡಾ. ಪಿ. ಗುರುರಾಜ ಭಟ್ಟರು ಸಂಶೋಧಿಸಿ ಪ್ರಕಟಿಸಿರುವ ಈ ಶಾಸನ ಶಿವಳ್ಳಿ ಸಭೆಗೆ ಅನ್ವಯವಾಗುವಂತಹ ಕಟ್ಟುಕಟ್ಟಳೆಗಳ ಮರ್ಯಾದೆಯನ್ನು ಬೆಳ್ಮಣ್ಣು ಸಭೆಗೆ ಪಾಣಿಗ್ರಹಣಗೆಯ್ದುದನ್ನು ತಿಳಿಸುತ್ತದೆ (ರಮೇಶ್, ಶರ್ಮಾ, ೧೯೬೮).

ಎರಡನೇ ಆಳುವರಸನ ಉತ್ತರಾಧಿಕಾರಿ ಎರಡನೇ ಚಿತ್ರವಾಹನನು ಉದ್ಯಾವರದಲ್ಲಿ ನೆಲಸದೆ, ಶಿವಮೊಗ್ಗ ಜಿಲ್ಲೆಯ ಪೆರ್ಗುಂಜಿಯಿಂದ ರಾಜ್ಯವಾಳತೊಡಗಿದನು. ತುಳುನಾಡಿನ ರಾಜ್ಯಭಾರದ ಜವಾಬ್ದಾರಿ ಅವನ ತಮ್ಮನಾದ ರಣಸಾಗರನದ್ದಾಯಿತು. ರಣಸಾಗರ ತುಳುನಾಡಿನ ನಿಜವಾದ ಅಧಿಪತಿಯಾಗಿದ್ದನು ಎಂಬ ಅಂಶ ಶಾಸನಗಳಿಂದ ತಿಳಿದುಬರುತ್ತದೆ. ಉದಾ: ಉದ್ಯಾವರ ಚೆಂಬುಕಲ್ಲ ದೇವರಿಗೆ ರಣಸಾಗರನು ನೀಡಿದದಾನವನ್ನು ಉಲ್ಲೇಖಿಸುವ ಶಾಸನದಲ್ಲಿ ಚಿತ್ರವಾಹನನ ಪ್ರಸ್ತಾಪವೇ ಕಂಡುಬರುವುದಿಲ್ಲ[6]. ಪೆರ್ಗುಂಜಿಯಿಂದ ರಾಜ್ಯವಾಳುತ್ತಿದ್ದ ಚಿತ್ರವಾಹನ ರಾಷ್ಟ್ರಕೂಟ ಮೂರನೇ ಕೃಷ್ಣನ ಅವಕೃಪೆಗೆ ಒಳಗಾದನು. ಮೂರನೇ ಗೋವಿಂದ ಮತ್ತು ಸ್ತಂಭನ ನಡುವೆ ಅಂತರ್ಯುದ್ಧ ಆರಂಭವಾದಾಗ ಸ್ತಂಭನಿಗೆ ಸಹಾಯ ಮಾಡಿದ ೧೨ ಜನ ಸಾಮಂತ ರಾಜರಲ್ಲಿ ಇವನೂ ಒಬ್ಬನಾಗಿರಬೇಕು ಎಂಬುದು ಕೆ.ವಿ.ರಮೇಶ್‌ರವರ ಅಭಿಪ್ರಾಯ[7]. ಈ ಅಂತರ್ಯುದ್ಧದಲ್ಲಿ ಮೂರನೇ ಕೃಷ್ಣ ಜಯಶಾಲಿಯಾದಾಗ, ಚಿತ್ರವಾಹನನು ಅವನ ಪ್ರಭುತ್ವವನ್ನು ಒಪ್ಪಲು ನಿರಾಕರಿಸಿದ. ಇದರಿಂದ ಅವನಿಗೆ ತುಂಬಾ ಕಷ್ಟ ನಷ್ಟಗಳು ಉಂಟಾದವು.

ಈ ಎಲ್ಲಾ ಬೆಳವಣಿಗೆಯ ನಂತರ ಚಿತ್ರವಾಹನ ಉದ್ಯಾವರಕ್ಕೆ ಹಿಂದಿರುಗಿದ. ಆಗ ಅವನ ಮತ್ತು ಆವಾಗಲೇ ಇಲ್ಲಿ ನೆಲೆಯೂರಿದ್ದ ರಣಸಾಗರನ ಮಧ್ಯೆ ಅಂತಃಕಲಹ ಆರಂಭವಾಯಿತು. ರಣಸಾಗರ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದಾಗ ಆರಂಭವಾದ ಯುದ್ಧ ೨೦ – ೨೫ ವರ್ಷಗಳವರೆಗೆ ನಡೆದು ತುಳುನಾಡಿನ ರಾಜಕೀಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಯಿತು[8]. ಕ್ರಿ.ಶ. ಸು. ೮೧೫ರ ಹೊತ್ತಿಗೆ ಪೃಥ್ವೀಸಾಗರನು ಆಳುಪ ಸಿಂಹಾಸನವನ್ನು ವಶಪಡಿಸಿಕೊಳ್ಳುವುದರೊಂದಿಗೆ ಒಳಜಗಳ ಕೊನೆಗೊಳ್ಳುವಂತಾಯಿತು. ಇವನ ನಂತರ ವಿಜಯಾದಿತ್ಯ ಮಾರದಮ್ಮ ತುಳುನಾಡಿನ ಅಧಿಪತಿಯಾಗಿ ಆಳಿದನು. ಎರಡನೇ ಚಿತ್ರವಾಹನನ ಕಾಲದಿಂದ ವಿಜಯಾದಿತ್ಯ ಮಾರದಮ್ಮನವರೆಗೆ ಎಲ್ಲರೂ ಉದಯಪುರದಿಂದ ಕಾರ್ಯಭಾರ ನಡೆಸುತ್ತಿದ್ದರು. ವಿಜಯಾದಿತ್ಯನ ನಂತರ ಅವನ ಮಗನಾದ ವಿಮಳಾದಿತ್ಯನು ಅಧಿಕಾರಕ್ಕೆ ಬಂದಂತೆ ಕಂಡುಬರುತ್ತದೆ. ಆಗ ರಾಷ್ಟ್ರಕೂಟರ ಧಾಳಿ ಹಾಗೂ ಅಧಿಕಾರ ಸ್ಥಾಪನೆಯು ಈ ತುಳುನಾಡಿನ ಮೇಲೆ ನಡೆದ ಬಗ್ಗೆ ಸುಳಿವು ನೀಡುವ ಶಾಸನವೊಂದು ದೊರೆತಿದೆ[9]. ಆನಂತರ ರಣಂಜಯ ಅವನ ಉತ್ತರಾಧಿಕಾರಿಯಾಗಿ ತುಳುನಾಡನ್ನು ಆಳಿದನೆಂದು ಊಹಿಸಬಹುದು. ರಣಂಜಯನ ಮರಣವಾದಾಗ ಅವನ ಪುತ್ರನಾದ ಕುಂದವರ್ಮ ಪ್ರಾಯ ಪ್ರಬುದ್ಧನಾಗಿರಲಿಲ್ಲ. ಹಾಗಾಗಿ ರಣಂಜಯನ ತಮ್ಮ ದತ್ತಾಳುಪ ಅಧಿಕಾರ ಗ್ರಹಣ ಮಾಡುತ್ತಾನೆ. ಆದರೆ ಕುಂದವರ್ಮ ಪ್ರಾಯಪ್ರಬುದ್ಧನಾದಾಗ ದತ್ತಾಳುಪ ಅಧಿಕಾರ ಬಿಟ್ಟುಕೊಡದ್ದರಿಂದ ಕುಂದವರ್ಮ ಬಲಪ್ರಯೋಗದಿಂದ ದತ್ತಾಳುಪನನ್ನು ಬದಿಗೊತ್ತಿ ತನಗೆ ನ್ಯಾಯಯುತವಾಗಿ ಸೇರಬೇಕಾಗಿದ್ದ ಅಧಿಪತ್ಯವನ್ನು ತನ್ನದಾಗಿಸಿಕೊಂಡನು[10]. ಕುಂದವರ್ಮನ ಆಡಳಿತ ಅಳುಪರ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟ ಎನ್ನಬಹುದು. ತುಳುನಾಡಿನ ಇದುವರೆಗೆ ಲಭ್ಯವಿರುವ ಕಾಲನಿರ್ದೇಶನವಿರುವ ಶಾಸನಗಳಲ್ಲಿ ಅತೀ ಪ್ರಾಚೀನವಾದುದು ಕುಂದವರ್ಮನ ಆಳ್ವಿಕೆಯಿದ್ದು. ಆದುದರಿಂದ ಇತಿಹಾಸ ಪರಿಶೋಧಕರು ಕುಂದವರ್ಮನ ಕಾಲದಿಂದ ಮಧ್ಯಯುಗದ ಇತಿಹಾಸವನ್ನು ಆರಂಭಿಸುತ್ತಾನೆ.

ಕದ್ರಿ ಮಂಜುನಾಥ ದೇವಸ್ಥಾನದಲ್ಲಿರುವ ಶಾಸನ[11] ಕುಂದವರ್ಮನ ಗುಣಗಾನವನ್ನು ಮಾಡುತ್ತದೆ. ಇವನು ಸ್ವತಂತ್ರನಾಗಿ ರಾಜ್ಯವಾಳಿದನು. ಇವನ ಆಳ್ವಿಕೆಯ ಕೊನೆಯ ದಿನಗಳಲ್ಲಿ ತುಳುನಾಡಿನ ಮೇಲೆ ಚೋಳರ ದಾಳಿ ನಡೆಯಿತು. ಪ್ರಸಿದ್ಧ ಚೋಳ ಚಕ್ರವರ್ತಿ ರಾಜರಾಜನ ಆಳ್ವಿಕೆಯಲ್ಲಿ ಯುವರಾಜ ರಾಜೇಂದ್ರಚೋಳ ಈ ಭಾಗದ ಮೇಲೆ ಧಾಳಿ ಮಾಡಿ ಅದನ್ನು ವಶಪಡಿಸಿಕೊಂಡನು.[12] ಈ ಘಟನೆ ಸುಮಾರು ಕ್ರಿ.ಶ. ೧೦೦೦ದಲ್ಲಿ ನಡೆದಿರಬೇಕು. ಚೋಳ ಸಾಮ್ರಾಜ್ಯದ ಸೇನೆ ಮತ್ತು ಅಧಿಕಾರಿಗಳು ಬೀಡುಬಿಟ್ಟಿದ್ದರಿಂದ ರಾಜಧಾನಿ ಬಾರಕೂರಿನ ಒಂದು ಭಾಗಕ್ಕೆ ಚೌಳಿಯ ಅಥವಾ ಚೋಳಿಯ ಕೇರಿ ಎಂಬ ಹೆಸರು ಬಂದಿರಬೇಕು ಎಂದು ಡಾ. ಕೆ.ವಿ. ರಮೇಶ್ ಮತ್ತು ಎಂ.ಜೆ.ಶರ್ಮ ಅಭಿಪ್ರಾಯಪಡುತ್ತಾರೆ.[13] ಆದರೆ ಡಾ. ಬಿ.ವಸಂತ ಶೆಟ್ಟಿಯವರು ಬೇರೆ ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ಚೋಳ ಧಾಳಿಯ ಮೊದಲೇ ಈ ರೀತಿಯ ಆಡಳಿತಾತ್ಮಕ ವಿಭಾಗ ಅಸ್ತಿತ್ವಕ್ಕೆ ಬಂದಿರಬೇಕು. ಒಂದು ಶಾಸನದ ಪ್ರಕಾರ ಬಾರಕೂರಿನ ಈ ಭಾಗಕ್ಕೆ ಚೌಳಿಯ ಬೆಟ್ಟು ಎಂದು ಹೆಸರಿತ್ತು[14]. ಆಡಳಿತದ ಅನುಕೂಲಕ್ಕಾಗಿ ಬಾರಕೂರನ್ನು ಕೇರಿಗಳಾಗಿ ವಿಂಗಡಿಸಿದಾಗ ಚೌಳಿಬೆಟ್ಟು ಚೌಳಿಕೇರಿಯಾಗಿ ಮಾರ್ಪಟ್ಟಿರಬೇಕು ಎಂಬುದು ಶೆಟ್ಟಿಯವರ ಅಭಿಪ್ರಾಯ[15]. ತುಳುನಾಡು ಚೋಳರಿಂದ ಮುಕ್ತವಾಗಲು ಕಾರಣರಾದವರು ಆಳುಪ ಅರಸ ಒಂದನೇ ಬಂಕಿದೇವ ಮತ್ತು ಅವನ ಸಾಮಂತ ಶಾಂತರ ಅರಸ ಅಮ್ಮಣ್ಣ -ಬಾರಕೂರಿನ ಅಪೂರ್ಣ ಶಾಸನವೊಂದು ಅಳುಪ ರಾಜನಿಗೆ ಶಾಂತನ ಮನೆನತದ ಅಮ್ಮಣ ಈ ಕಾರ್ಯದಲ್ಲಿ ನೆರವಾದದ್ದು ಮಾತ್ರವಲ್ಲ, ಇತರ ಮಾಂಡಲಿಕರನ್ನು, ತುಂಡರಸರನ್ನು ಸೋಲಿಸಿ ಅಳುಪ ರಾಜನಿಗೆ ಒಪ್ಪಿಸಿದನೆಂದೂ ತಿಳಿಸುತ್ತದೆ[16]. ಅಳುಪರಿಗೂಈ ಶಾಂತರಿಗೂ ನಿಕಟವಾದ ರಾಜಕೀಯ ಹಾಗೂ ಕೌಟುಂಬಿಕ ಸಂಬಂಧ ಮೊದಲಿನಿಂದ ಇದ್ದು, ಬಂಕಿದೇವನ ಕಾಲದಲ್ಲಿ ಇನ್ನೂ ನಿಕಟವಾಯಿತು. ಬಂಕಿದೇವನ ತರುವಾಯ ಉಳಿದ ಅಳುಪ ಅರಸುಗಳ ಹೆಸರುಗಳು ವರಾಂಗದ ಜೈನ ಶಾಸನದಿಂದ ತಿಳಿಯುತ್ತದೆ[17].

ಪಟ್ಟೆಯೊಡೆಯ ಬಂಕಿದೇವನ ಉತ್ತರಾಧಿಕಾರಿಯಾದನು ಇವನ ಕಾಲದಲ್ಲಿ ಅಳುಪರಿಗೂ, ಶಾಂತರರಿಗೂ ವೈವಾಹಿಕ ಸಂಬಂಧವೇರ್ಪಟ್ಟಿತು[18]. ಇವನ ಕಾಲದಲ್ಲಿ ಕಲ್ಯಾಣಿ ಚಾಲುಕ್ಯರ ಸಾಮಂತ ಗೋವೆಯ ಕದಂಬರಾಜ ತುಳುನಾಡಿನ ಮೇಲೆ ದಂಡೆತ್ತಿ ಬಂದದ್ದರಿಂದ ಪಟ್ಟೆಯೊಡೆಯ ಚಾಲುಕ್ಯರ ಆಧಿಪತ್ಯವನ್ನು ಒಪ್ಪಿಕೊಳ್ಳಬೇಕಾಯಿತು[19]. ಆದರೆ ಅವನ ನಂತರ ಪಟ್ಟಕ್ಕೆ ಬಂದ ಪಾಂಡ್ಯ ಪಟ್ಟೆಯೊಡೆಯ ಪಾಂಡ್ಯ ಮಹಾರಾಜಾಧಿರಾಜ, ಪರಮೇಶ್ವರ, ಪರಮಭಟ್ಟಾರಕ ಎಂಬ ಸ್ವತಂತ್ರ ಬಿರುದುಗಳನ್ನು ಧರಿಸಿರುವುದರಿಂದ ಅವನು ಚಾಲುಕ್ಯರ ಸಾರ್ವಭೌಮತ್ವವನ್ನು ತಿರಸ್ಕರಿಸಿರುವ ಸಾಧ್ಯತೆ ಇದೆ. ಆದರೆ ಇವನ ಕಾಲದಲ್ಲೇ ಚಾಲುಕ್ಯ ಚರ್ಕವರ್ತಿ ಆರನೇ ವಿಕ್ರಮಾದಿತ್ಯನ ಸಾಮಂತರಲ್ಲೊಬ್ಬನಾದ ಹೊಯ್ಸಳ ವಿಷ್ಣುವರ್ಧನನ ಕೆಂಗಣ್ಣಿಗೆ ಗುರಿಯಾಗಿ ಯುದ್ಧವನ್ನು ಮಾಡಬೇಕಾಯಿತು. ಮಾತ್ರವಲ್ಲ ಸೋಲನ್ನೂ ಅನುಭವಿಸಿದ. ಆದರೆ ಈ ಧಾಳಿ ಅಳುಪರ ಸ್ಥಾನಮಾನಕ್ಕೆ ಯಾವುದೇ ಭಂಗವನ್ನು ತರಲಿಲ್ಲ[20].

ಮುಂದಿನ ರಾಜ ಕವಿ ಆಳುಪೇಂದ್ರ ಇವನು ಸಹ ಹೊಯ್ಸಳ ವಿಷ್ಣುವರ್ಧನನಿಂದ ಪರಾಭವಗೊಂಡರೂ[21] ಅಳುಪರು ಸ್ವತಂತ್ರರಾಗಿಯೇ ಉಳಿದರು. ಅವರು ಹೊಂದಿದ್ದ ಪಾಂಡ್ಯ ಚಕ್ರವರ್ತಿ, ಸಮಸ್ತ ಭುವನಾಶ್ರಯ, ಪೃಥ್ವೀವಲ್ಲಭ, ಮಹಾರಾಜಾಧಿರಾಜ ಮುಂತಾದ ಬಿರುದುಗಳು ಅವರ ಸ್ಥಾನಮಾನದ ಪ್ರತೀಕವಾಗಿದ್ದವು. ಅವರ ರಾಣಿ ಪಾಂಡ್ಯ ಮಹಾದೇವಿಯೂ ಆಡಳಿತದಲ್ಲಿ ಭಾಗಿಯಾಗಿದ್ದಳು. ಅವರ ಕಾಲದ ಒಂದು ಪ್ರಮುಖ ಘಟನೆಯೆಂದರೆ ಅವನ ರಾಜಧಾನಿ ಉದ್ಯಾವರದಿಂದ ಬಾರಹಕನ್ಯಾಪುರಕ್ಕೆ ವರ್ಗಾವಣೆಯಾದುದು[22].

ಕ್ರಿ.ಶ. ೧೧೬೦ರಲ್ಲಿ ಕವಿ ಅಳುಪೇಂದ್ರನ ನಂತರ ಕುಲಶೇಖರ ಅಧಿಕಾರ ವಹಿಸಿಕೊಂಡನು. ಕಲಚುರಿ ಬಿಜ್ಜಳನ ಧಾಳಿಯನ್ನು ಎದುರಿಸಲೋಸುಗ ಕುಲಶೇಖರ ಶಾಂತರ ಅರಸನಿಗೆ ಸಹಾಯ ಮಾಡಿದನು. ಕುಲಶೇಖರ ಶೈವ ಧರ್ಮಾವಲಂಬಿಯಾಗಿದ್ದನು. ಅವನ ರಾಣಿ ಚಾಕಲ ಮಹಾದೇವಿ ಪರಮ ಜಿನಭಕ್ತೆಯಾಗಿದ್ದಳು. ಅವಳು ವರಾಂಗದಲ್ಲಿ ಕೆರೆಯೊಂದನ್ನು ಕಟ್ಟಿಸಿದಳು. ಕುಲಶೇಖರನ ನಂತರ ಶಾಂತರ ಮನೆತನದ ಕುಂಡಣ ಅಧಿಕಾರಕ್ಕೆ ಬಂದನು. ಬಹುಶಃ ಕುಲಶೇಖರನ ಮರಣ ಕಾಲಕ್ಕೆ ಅಳುಪ ರಾಜಕುಮಾರರು ಪ್ರಾಪ್ತ ವಯಸ್ಕರಾಗಿಲ್ಲದ ಕಾರಣ ಉತ್ತಮ ಬಾಂಧವ್ಯ ಹೊಂದಿದ್ದು ಶಾಂತರ ಮನೆತನದ ಕುಂಡಣನು ಅವರ ಪರವಾಗಿ ತುಳುನಾಡನ್ನು ಆಳಿರಬೇಕು[23].

ಕುಂಡಣನ ಆಳ್ವಿಕೆ ಕೊನೆಗೊಂಡ ನಂತರ ವಲ್ಲಭದೇವ ಆಳುಪೇಂದ್ರ ಅಧಿಕಾರ ವಹಿಸಿಕೊಂಡನು. ಅವನು ಪಾಂಡ್ಯ ಚಕ್ರವರ್ತಿ ರಾಯ ಗಜಾಂಕುಶ ಎಂಬ ಬಿರುದನ್ನು ಹೊಂದಿದ್ದನು. ಆಮೇಲೆ ಆಳುಪ ವಂಶದ ರಾಜನಾದ ವೀರಪಾಂಡ್ಯದೇವ ಆಳುಪೇಂದ್ರನು ಅತ್ಯಂತ ವೈಭವೋಪೇತವಾಗಿ ರಾಜ್ಯವಾಳಿದನು. ಅವನ ಆಳ್ವಿಕೆಯ ಆರಂಭದ ದಿನಗಳಲ್ಲಿ ತಾಯಿ ಪಟ್ಟ ಮಹಾದೇವಿ ಮತ್ತು ಕೊನೆಯ ಹಂತದಲ್ಲಿ ಪತ್ನಿ ಬಲ್ಲ ಮಹಾದೇವಿ ಆಡಳಿತದಲ್ಲಿ ಭಾಗಿಗಳಾಗಿದ್ದರು. ಇವನ ಕಾಲದಲ್ಲಿ ನರಸಿಂಹ ಹೆಗ್ಗಡೆ, ಅಳಿಯ ಬಂಕಿದೇವ, ಮೈದುನ ಒಡ್ಡಮದೇವ, ಬಿಲ್ಲ ಪೆರ್ಗಡೆ ಮತ್ತು ಮಾರದಮ್ಮ ಅಧಿಕಾರಿ ಆಡಳಿತದಲ್ಲಿ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದರು. ಅವನು ಸಮಸ್ತ ಭುವನ ವಿಖ್ಯಾತ. ಪಾಂಡ್ಯ ಮಹಾರಾಜಾಧಿರಾಜ, ಪರಮೇಶ್ವರ, ಪರಮ ಭಟ್ಟಾರಕ ಮುಂತಾದ ಸಾರ್ವಭೌಮ ಸೂಚಕವಾದ ಬಿರುದುಗಳನ್ನು ಹೊಂದಿದ್ದನು[24].

ವೀರ ಪಾಂಡ್ಯನ ಮರಣಾನಂತರ ಅವನ ರಾಣಿ ಬಲ್ಲ ಮಹಾದೇವಿ ಆಳುಪ ಸಿಂಹಾಸನವನ್ನೇರಿದಳು. ಅದಕ್ಕೆ ಕಾರಣ ಅವಳ ಮಗ ನಾಗದೇವರಸ ಪ್ರಾಪ್ತ ವಯಸ್ಕನಾಗಿರಲಿಲ್ಲ. ಆದರೆ ಅವಳು ತನ್ನ ಆಡಳಿತ ಕಾಲದಲ್ಲಿ ಒಂದು ಹೊಸ ಸಮಸ್ಯೆಯನ್ನು ಎದುರಿಸಬೇಕಾಯಿತು. ಅಂದರೆ ಅವಳ ಪತಿ ವೀರಪಾಂಡ್ಯದೇವನ ಅಳಿಯ ಹಾಗೂ ಪ್ರಧಾನನಾಗಿದ್ದ ಬಂಕಿದೇವನು ಅವಳಿಗೆ ಆರಂಭದಲ್ಲಿ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದನು. ಕ್ರಿ.ಶ. ೧೨೮೫ರ ಸುಮಾರಿಗೆ ಅವನಿಗೇ ತಾನೇ ರಾಜನಾಗಬೇಕೆಂಬ ಆಸೆಯುಂಟಾಗಿ ಅವಳ ವಿರುದ್ಧ ದಂಗೆಯೆದ್ದನು. ಬಲ್ಲ ಮಹಾದೇವಿ ದಂಗೆಯನ್ನು ಅಡಗಿಸಲು ವಿಫಲಳಾಗಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ರಾಜ್ಯವನ್ನು ಇಬ್ಭಾಗ ಮಾಡಿ, ಮಂಗಳೂರಿನ ಸುತ್ತಮುತ್ತಲಿನ ಭಾಗವನ್ನು ಅವನಿಗೆ ಬಿಟ್ಟುಕೊಟ್ಟಳು[25]. ಹೀಗಾಗಿ ಕ್ರಿ.ಶ. ೧೨೮೫ರಿಂದ ೧೩೦೦ರವರೆಗೆ ತುಳುನಾಡಿನಲ್ಲಿ ಎರಡು ಅಳುಪ ಅಧಿಕಾರ ಕೇಂದ್ರಗಳಿದ್ದವು. ಬಲ್ಲ ಮಹಾದೇವಿ ಮತ್ತು ಅವಳ ಮಗ ನಾಗದೇವರಸನನ್ನು ತುಳುನಾಡಿನ ಜಂಟಿ ಅಧಿಪತಿಯೆಂದು ಘೋಷಿಸಿದರೂ ನಾಗದೇವರಸ ಅಧಿಕಾರ ವಹಿಸಿಕೊಂಡ ಕೆಲವೇ ವರ್ಷಗಳಲ್ಲಿ ಬಂಕಿದೇವ (ಕ್ರಿ.ಶ. ೧೩೦೦)ರಲ್ಲಿ ಅವನನ್ನು ಪದಚ್ಯತಗೊಳಿಸಿ ಇಡೀ ತುಳುನಾಡಿಗೇ ತಾನೇ ಅಧಿಪತಿಯಾದನು. ಅವನ ಕಾಲದಲ್ಲಿ ತುಳುನಾಡು ಅನಾವೃಷ್ಟಿಯಿಂದ ಬಳಲಿತು. ಆಗ ಬಂಕಿದೇವನು ಸಕಾಲಕ್ಕೆ ಮಳೆ ಬಂದು ಬರಗಾಲದ ಭೀಕರ ತೊಂದರೆಗಳು ತೊಲಗಿದರೆ ತಿಮಿರೇಶ್ವರ ದೇವಾಲಯಕ್ಕೆ ದಾನ ಮಾಡುವುದಾಗಿ ಹರಕೆ ಹೊತ್ತನು. ಅದರಂತೆ ಅವನ ರಾಜ್ಯದ ಕಷ್ಟ ನಿವಾರಣೆಯಾಯಿತು. ಅವನು ಸಂತುಷ್ಟನಾಗಿ ದಾನ ಮಾಡಿದನೆಂದು ಸುಜೀರು ಶಾಸನ ತಿಳಿಸುತ್ತದೆ[26].

ಅಳಿಯ ಬಂಕಿದೇವ ಕ್ರಿ.ಶ. ೧೩೧೫ರಲ್ಲಿ ತೀರಿಕೊಂಡಾಗ ಸೋಯಿದೇವ ಅಳುಪೇಂದ್ರ ಪಟ್ಟಕ್ಕೆ ಬಂದನು. ಅವನು ರಾಜಧಾನಿಯನ್ನು ಮಂಗಳೂರಿನಿಂದ ಬಾರಕೂರಿಗೆ ವರ್ಗಾಯಿಸಿದನು. ಸೋಯಿದೇವನ ಕಾಲದಲ್ಲಿ ಹೊಯ್ಸಳ ದೊರೆ ಮೂರನೇ ಬಲ್ಲಾಳ ತುಳುನಾಡಿನ ಮೇಲೆ ನಡೆಸಿದ ಧಾಳಿಯು ಮಹತ್ತರವಾದ ಬದಲಾವಣೆಯನ್ನು ಉಂಟು ಮಾಡಿತು. ಹೊಯ್ಸಳರ ವಿರುದ್ಧ ಕಾದಾಡಿ ಗೆಲುವು ಸಾಧಿಸುವುದು ಕಷ್ಟಸಾಧ್ಯವೆಂದು ಮನಗಂಡ ಸೋಯಿದೇವ ತನ್ನ ಮನೆತನದ ರಾಜಕುಮಾರಿ ಚಿಕ್ಕಾಯಿತಾಯಿಯನ್ನು ಅವನಿಗೆ ಮದುವೆ ಮಾಡಿಕೊಟ್ಟನು. ಈ ವೈವಾಹಿಕ ಸಂಬಂಧ ತುಳುನಾಡಿನಲ್ಲಿ ಒಂದು ಹೊಸ ರಾಜಕೀಯ ವ್ಯವಸ್ಥೆಗೆ ನಾಂದಿ ಹಾಡಿತು. ಅಂದರೆ ತುಳುನಾಡಿನ ಮಟ್ಟಿಗೆ ಅಳುಪರು ಪ್ರಭುಗಳಾಗಿ ಮುಂದುವರಿದರು. ಹೊಯ್ಸಳರೂ ಈ ಭಾಗದ ಅಧಿಪತಿಗಳಾದರು. ಇಬ್ಬರಿಗೂ ಬಾರಹ-ಕನ್ಯಾಪುರ ರಾಜಧಾನಿಯಾಗಿತ್ತು. ಕ್ರಿ.ಶ ೧೩೩೩ ರಿಂದ ೧೩೪೮ರವರೆಗೆ ತುಳುನಾಡಿನಲ್ಲಿ ಹೊಯ್ಸಳರ ಮತ್ತು ಅಳುಪರ ಶಾಸನಗಳು ದೊರೆತಿದ್ದು ಅಳುಪರ ಶಾಸನಗಳಲ್ಲಿ ಹೊಯ್ಸಳರ ಪ್ರಸ್ತಾಪ ಇಲ್ಲ. ಹೊಯ್ಸಳ ಶಾಸನಗಳಲ್ಲಿ ಅಳುಪರ ಪ್ರಸ್ತಾಪ ಇಲ್ಲ[27].

ಸೋಯಿದೇವನ ಆಳ್ವಿಕೆ ಕ್ರಿ.ಶ. ೧೩೩೫ರಲ್ಲಿ ಕೊನೆಗೊಂಡು ಎರಡನೇ ಕುಲಶೇಖರ ಅಧಿಕಾರಕ್ಕೆ ಬಂದನು. ಅವನ ಆಡಳಿತಾವಧಿಯಲ್ಲಿ ಅಳುಪರ ಪ್ರಭಾವ ಕಡಿಮೆಯಾಗುತ್ತಾ ಬಂತು ೧೩೩೩ರಿಂದ ೧೩೪೨ರವರೆಗಿನ ಹೊಯ್ಸಳ ಶಾಸನಗಳಲ್ಲಿ ಮೂರನೇ ಬಲ್ಲಾಳ ಮತ್ತು ಚಿಕ್ಕಾಯಿತಾಯಿ ಕಾಣಿಸಿಕೊಳ್ಳುತ್ತಾರೆ. ಕ್ರಿ.ಶ. ೧೩೪೨ ರಿಂದ ೧೩೪೮ರ ವರೆಗಿನ ಅವಧಿಯಲ್ಲಿ ಚಿಕ್ಕಾಯಿ ತಾಯಿಯೊಬ್ಬಳೇ ತನ್ನ ಪತಿಯ ಎಲ್ಲ ಬಿರುದುಗಳೊಂದಿಗೆ ತುಳುನಾಡಿನ ಹೊಯ್ಸಳ ಅಧಿಪತಿಯಾಗಿ ಮುಂದುವರಿದಳು. ಕ್ರಿ.ಶ. ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ತುಳುನಾಡು ವಿಜಯನಗರ ಸಾಮ್ರಾಜ್ಯದ ಪ್ರಭಾವಕ್ಕೊಳಗಾಯಿತು. ಕ್ರಿ.ಶ. ೧೩೪೫ರ ಸುಮಾರಿಗೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ವಿಜಯನಗರ ಸಾಮ್ರಾಜ್ಯದ ಭಾಗವಾಯಿತು[28]. ಎರಡನೇ ಕುಲಶೇಖರನ ಆಳ್ವಿಕೆಯ ನಂತರ ೩ನೇ ಬಂಕಿದೇವ, ೩ನೇ ಕುಲಶೇಖರ ಪ್ರಮುಖ ರಾಜರು. ೩ನೇ ಕುಲಶೇಖರನ ಆಡಳಿತದ ಆರಂಭದಲ್ಲಿ ಬಾರಹ – ಕನ್ಯಾಪುರ ರಾಜಧಾನಿಯಾಗಿತ್ತು. ಆನಂತರ ಅವನು ಮೂಡಬಿದಿರೆಯ ‘ಬಸದಿಯೊಳು’ ರತ್ನ ಸಿಂಹಾಸನಾರೂಢನಾಗಿ ಆಳಲು ಆರಂಭಿಸಿದನೆಂದು ತಿಳಿದುಬರುತ್ತದೆ[29]. ರಾಜಧಾನಿ ಬಾರಕೂರಿನಲ್ಲಿ ವಿಜಯನಗರ ಅರಸರ ಪ್ರಭಾವ ಹೆಚ್ಚಾದಂತೆ, ಅಳುಪರ ಪ್ರಭಾವ ಕಡಿಮೆಯಾಗಿ ಮೂಡಬಿದಿರೆಯನ್ನು ಆರಿಸಿಕೊಂಡಿರಬೇಕು. ಎರಡನೇ ವೀರ ಪಾಂಡ್ಯದೇವ ಆಳುಪ ಕೊನೆಯ ಅರಸು.

ಸ್ಥಳೀಯವಾದ ಅಳುಪ ಅರಸು ಮನೆತನ, ಹೊರಗಿನ ರಾಜಕೀಯ ಶಕ್ತಿಯಾದ ಹೊಯ್ಸಳರ ಹಿಡಿತದ ನಂತರ, ತುಳುನಾಡು ದಕ್ಷಿಣ ಭಾರತದ ಪ್ರಮುಖ ರಾಜವಂಶವಾದ ವಿಜಯನಗರದ ಕೈ ಕೆಳಗೆ ಬಂತು. ಮೊದಲು ಅಧಿಕಾರದಲ್ಲಿದ್ದ ರಾಜವಂಶಗಳ ಪ್ರತಿರೋಧ ಇಲ್ಲದಿದ್ದುದರಿಂದ ವಿಜಯನಗರ ಸಾಮ್ರಾಜ್ಯದ ವಿಸ್ತರಣೆ ಸುಲಭ ಸಾಧ್ಯವಾಯಿತು. ವಿಜಯನಗರದ ಪ್ರತಿಯೊಬ್ಬ ರಾಜನೂ ತುಳುನಾಡಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದು ಮಾತ್ರವಲ್ಲ, ತಮ್ಮ ಆಳ್ವಿಕೆಗೆ ಸಂಬಂಧಿಸಿದಂತೆ ಒಂದೆರಡು ಶಾಸನಗಳನ್ನಾದರೂ ಬಿಟ್ಟು ಹೋಗಿದ್ದಾರೆ.ಇದು ವಿಜಯನಗರ ಅರಸರಿಗೆ ತುಳುನಾಡಿನ ಬಗ್ಗೆ ಇದ್ದ ಕಾಳಜಿಯ ಪ್ರತೀಕವಾಗಿದೆ. ಇದಕ್ಕೆ ಮುಖ್ಯ ಕಾರಣ ಭೌಗೋಳಿಕ ಸನ್ನಿವೇಶ ಮತ್ತು ವ್ಯಾಪಾರದ ಅನುಕೂಲತೆಗಳು. ವಿಜಯನಗರದ ಪಾಲಾದ ತುಳುನಾಡನ್ನು ಸಂಗಮ ದೊರೆಗಳು (ಒಂದನೇ ಹರಿಹರ – ಒಂದನೇ ಬುಕ್ಕರು) ಆಡಳಿತದ ಅನುಕೂಲಕ್ಕಾಗಿ ಬಾರಕೂರು ಮತ್ತು ಮಂಗಳೂರು ರಾಜ್ಯಗಳಾಗಿ (ಪ್ರಾಂತ) ವಿಂಗಡಿಸಿದರು. ಬಾರಕೂರು ಮತ್ತು ಮಂಗಳೂರು ಈ ಪ್ರಾಂತಗಳ ರಾಜಧಾನಿಗಳಾದವು. ತುಳುನಾಡಿನ ಎರಡು ರಾಜ್ಯಗಳ ಆಡಳಿತ ನಿರ್ವಹಣೆಗಾಗಿ, ನಿಷ್ಠಾವಂತರೂ, ನಿಪುಣರೂ ಆದ ಅಧಿಕಾರಿಗಳನ್ನು ರಾಜ್ಯಪಾಲರಾಗಿ ನೇಮಿಸುತ್ತಿದ್ದರು. ಅವರ ಕಾಲದಲ್ಲಿ ಬಾರಕೂರು ರಾಜ್ಯದಲ್ಲಿ ೪ ಜನ ರಾಜ್ಯಪಾಲರು[30]ಮತ್ತು ಮಂಗಳೂರು ರಾಜ್ಯದಲ್ಲಿ ನಾಲ್ಕು ಜನ ರಾಜ್ಯಪಾಲರು ಅಧಿಕಾರದಲ್ಲಿದ್ದರು[31]. ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯನ ಆಳ್ವಿಕೆಯ ನಂತರ ತುಳುನಾಡು ವಿಜಯನಗರದ ಅರಸು ಎರಡನೇ ಹರಿಹರನ ಆಳ್ವಿಕೆಗೊಳಪಟ್ಟಿತು.

೧೩೭೭ರಿಂದ ೧೪೦೪ ಅವಧಿಯ ಹರಿಹರನ ಆಳ್ವಿಕೆಯಲ್ಲಿ ಬಾರಕೂರು ರಾಜ್ಯದಲ್ಲಿ ಆಳಿದ ಪ್ರಮುಖ ರಾಜ್ಯಪಾಲರುಗಳೆಂದರೆ ಬೊಮ್ಮರಸ ಒಡೆಯ, ಜಕ್ಕಣ್ಣ ಒಡೆಯ, ಮಲ್ಲಪ್ಪ ಒಡೆಯ, ಶಂಕರದೇವ ಒಡೆಯ, ನಾಗರಸ ಒಡೆಯ ಮತ್ತು ಬಸವಣ್ಣ ಒಡೆಯ[32]. ಅದೇ ರೀತಿ ಮಂಗಳೂರು ರಾಜ್ಯದಲ್ಲಿ ೧೧ ಜನ ರಾಜ್ಯಪಾಲರುಗಳು ಅಧಿಕಾರದಲ್ಲಿದ್ದರು. ಎರಡನೇ ಹರಿಹರ ತನ್ನ ಮಗ ಇಮ್ಮಡಿ ಬುಕ್ಕನಿಗೆ ಆಡಳಿತದಲ್ಲಿ ತರಬೇತಿ ನೀಡಲೋಸುಗ ಉಡುಪಿ ತಾಲೂಕಿನ ನೀಲಾವರದ ಆಡಳಿತವನ್ನು ಅವನಿಗೆ ವಹಿಸಿಕೊಟ್ಟಿದ್ದನು[33]. ಹರಿಹರನ ಆಳ್ವಿಕೆಯಲ್ಲಿ ಕ್ರಿ.ಶ. ೧೩೯೮ರಲ್ಲಿ ಒಂದು ದಂಗೆಯೂ ನಡೆಯಿತು[34]. ಆದರೆ ಅದು ವಿಜಯನಗರದ ಆಡಳಿತಕ್ಕೆ ಯಾವ ತೊಂದರೆಯನ್ನೂ ಮಾಡಲಿಲ್ಲ. ಇಮ್ಮಡಿ ಹರಿಹರನ ಆಳ್ವಿಕೆಯ ಕೊನೆಯ ದಿನಗಳಲ್ಲಿ ಆಳುಪರ ಆಡಳಿತ ಕೊನೆಗೊಂಡು ವಿಜಯನಗರ ಅರಸರು ತುಳುನಾಡಿನ ಮೇಲೆ ಪೂರ್ಣ ಹಿಡಿತವನ್ನು ಸಾಧಿಸುವಂತಾಯಿತು. ಇಮ್ಮಡಿ ಹರಿಹರನ ನಂತರ ಅಧಿಕಾರಕ್ಕೆ ಬಂದ ಒಂದನೇ ವಿರೂಪಾಕ್ಷ, ಎರಡನೇ ಬುಕ್ಕ ಮತ್ತು ಒಂದನೇ ದೇವರಾಯನ ಕಾಲದಲ್ಲೂ ತುಳುನಾಡು ವಿಜಯನಗರ ಸಾಮ್ರಾಜ್ಯದ ಪ್ರಮುಖ ಆಡಳಿತ ವಿಭಾಗವಾಗಿ ಮುಂದುವರಿಯಿತು. ಕ್ರಿ.ಶ. ೧೩೮೭ರಿಂದ ಕ್ರಿ.ಶ. ೧೪೨೩ರ ಅವಧಿಯಲ್ಲಿ ಮಂಗಳೂರು ಮತ್ತು ಬಾರಕೂರು ರಾಜ್ಯಗಳು ಬೇರೆ ಬೇರೆ ರಾಜ್ಯಪಾಲರುಗಳ ಕೈಕೆಳಗಿದ್ದರೂ, ಇಡಿಯ ತುಳುನಾಡಿನ ಮೇಲ್ವಿಚಾರಣೆಯ ಅಧಿಕಾರ ಆಡಳಿತ ನಿಷ್ಣಾತನಾಗಿದ್ದ ಮಹಾಪ್ರಧಾನ ಬೈಚಯ್ಯ ದಂಡನಾಯಕನ ಕೈಯಲ್ಲಿತ್ತು[35].

ಒಂದನೇ ದೇವರಾಯ ತೀರಿಕೊಂಡಾಗ ಅವನ ಮಕ್ಕಳಾದ ರಾಮಚಂದ್ರ ಮತ್ತು ವಿಜಯರಾಯ ಈ ತುಳುನಾಡಿನ ಅಧಿಪತಿಗಳಾಗಿ ಸ್ವಲ್ಪ ಕಾಲ ಅಧಿಕಾರದಲ್ಲಿದ್ದರು. ನಂತರ ಎರಡನೇ ದೇವರಾಯ ಪಟ್ಟವೇರಿದನು. ಇವನ ಕಾಲದಲ್ಲಿ ತುಳುನಾಡಿನ ಬಾರಕೂರು ರಾಜ್ಯದಲ್ಲಿ ಆಳಿದ ಪ್ರಮುಖ ರಾಜ್ಯಪಾಲರುಗಳೆಂದರೆ ಮಹಾಮಂತ್ರಿ ನರಸಿಂಹದೇವ ಒಡೆಯ, ಮಹಾಪ್ರಧಾನ ಚಂಡರಸ ಒಡೆಯ, ಅಣ್ಣಪ್ಪ ಒಡೆಯ, ತಿಮ್ಮಣ್ಣ ಒಡೆಯ, ರೂಪಣ್ಣ ಒಡೆಯ[36]. ಮಂಗಳೂರು ರಾಜ್ಯದಲ್ಲಿ ಮಹಾಪ್ರಧಾನ ತಿಮ್ಮಣ್ಣ ಒಡೆಯ, ಅಪ್ಪಣ್ಣ ಒಡೆಯ, ಚಂಡರಸ ಒಡೆಯ ಪ್ರಮುಖರು[37]. ಇಮ್ಮಡಿ ದೇವರಾಯ ಕ್ರಿ.ಶ. ೧೪೪೬ರಲ್ಲಿ ತೀರಿಕೊಂಡ ಎಂಬುದು ಸಾಮಾನ್ಯ ನಂಬಿಕೆ. ಆದರೆ ಕ್ರಿ.ಶ. ೧೪೪೯ರಲ್ಲಿ ಬರೆಸಲಾದ ಬಾರಕೂರಿನಲ್ಲಿ ದೊರೆತ ಶಾಸನವೊಂದು ಕ್ರಿ.ಶ. ೧೪೪೯ರಲ್ಲಿ ಅವನಿಗೆ ಬಂದ ಕಂಟಕ ನಿವಾರಣೆಗಾಗಿ ನೀಡಿದ ದಾನವನ್ನೂ ಉಲ್ಲೇಖಿಸುತ್ತದೆ[38]. ಕ್ರಿ.ಶ. ೧೪೪೬ರ ಸುಮಾರಿಗೆ ಅವನ ಕೊಲೆ ಯತ್ನವೂ ನಡೆದು, ಅವನು ಬದುಕಿ ಉಳಿದನಾದರೂ ರಾಜ್ಯಭಾರ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಕ್ರಿ.ಶ. ೧೪೪೬ರ ನಂತರ ವಿಜಯರಾಯ, ಮಲ್ಲಿಕಾರ್ಜುನ ಹಾಗೂ ವಿರೂಪಾಕ್ಷ ಕ್ರಮವಾಗಿ ಅಧಿಕಾರ ನಿರ್ವಹಿಸಿದರು. ಆಗಲೂ ತುಳುನಾಡು ವಿಜಯನಗರದ ಅಧೀನದಲ್ಲಿತ್ತು.

ಆಮೇಲೆ ಅಧಿಕಾರದಲ್ಲಿದ್ದ ವಿಜಯನಗರದ ಎರಡನೇ ರಾಜವಂಶ ಸಾಳುವ ವಂಶದ ಆಳ್ವಿಕೆಯಲ್ಲೂ ತುಳುನಾಡು ಮಹತ್ವದ ಪಾತ್ರ ವಹಿಸಿತ್ತು. ಮೂರನೇ ರಾಜವಂಶ ತುಳುವ ವಂಶದ ಆಡಳಿತದಲ್ಲಿ, ಕೃಷ್ಣದೇವರಾಯನ ಕಾಲದಲ್ಲಿ ತುಳುನಾಡಿನಲ್ಲಿಯ ರಾಜಕೀಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲತಕ್ಕ ಅನೇಕ ದಾಖಲೆಗಳು ದೊರೆತಿವೆ.ಕೃಷ್ಣದೇವರಾಯನ ಆಡಳಿತದಲ್ಲಿ ರತ್ನಪ್ಪ ಒಡೆಯ, ವಿಜಯಪ್ಪ ಒಡೆಯ, ವೀರರಸ ಒಡೆಯ ಪ್ರಮುಖ ರಾಜ್ಯಪಾಲರಾಗಿ ಬಾರಕೂರು ರಾಜ್ಯದಲ್ಲಿದ್ದರು[39]. ಮಂಗಳೂರು ರಾಜ್ಯದಲ್ಲಿ ರತ್ನಪ್ಪ ಒಡೆಯ ಪ್ರಮುಖನಾಗಿದ್ದನು[40]. ಕೃಷ್ಣದೇವರಾಯನ ನಂತರ ಅಚ್ಯುತರಾಯ ಹಾಗೂ ಸದಾಶಿವರಾಯನ ಕಾಲದಲ್ಲೂ ತುಳುನಾಡು ವಿಜಯನಗರದ ಭಾಗವಾಗಿ ಮುಂದುವರಿಯಿತು. ಕೊಂಡಪ್ಪ ಒಡೆಯ, ಪುಂಡರಿದೇವ ಒಡೆಯ, ಅಚ್ಚಪ್ಪ ಒಡೆಯ, ಏಕದಳಖಾನ ಒಡೆಯ, ಮಲ್ಲಪ್ಪ ಒಡೆಯ ಮತ್ತು ಕಲೆಯ ಯೆಲ್ಲಪ್ಪ ಒಡೆಯ ಪ್ರಮುಖ ರಾಜ್ಯಪಾಲರಾಗಿ ಅಧಿಕಾರ ನಡೆಸಿದರು[41]. ಕ್ರಿ.ಶ. ೧೫೫೦ರ ಸುಮಾರಿಗೆ ವಿಜಯನಗರದ ದೊರೆ ಸದಾಶಿವರಾಯನು ಕೆಳದಿ ಅರಸು ಮನೆತನದ ಸದಾಶಿವ ನಾಯಕನಿಗೆ ಇಡಿಯ ತುಳುನಾಡನ್ನು ಅವರ ಮಾಗಣೆಯಾಗಿ ನೀಡಿದನು.

ವಿಜಯನಗರದ ಆಡಳಿತ ಕಾಲದಲ್ಲಿ ತುಳುನಾಡಿನಲ್ಲಿ ಕಾರ್ಯ ನಿರ್ವಹಿಸಿದ ಎಲ್ಲಾ ರಾಜ್ಯಪಾಲರುಗಳು ಮಹಾಪ್ರಧಾನರ ಸಮಾನ ಅಧಿಕಾರಿಗಳಾಗಿದ್ದರು. ಆಗ ರಾಜ್ಯಪಾಲರುಗಳಿಗೆ ಮಿಲಿಟರಿ ಅರ್ಹತೆಯೂ ಅತ್ಯವಶ್ಯಕವಾಗಿತ್ತು. ಸಾಮಾನ್ಯವಾಗಿ ಈ ರಾಜ್ಯಪಾಲರುಗಳು ಎರಡರಿಂದ ಮೂರು ವರ್ಷ ಹುದ್ದೆಯಲ್ಲಿರುತ್ತಿದ್ದರು. ಆದರೆ ಕೆಲವು ರಾಜ್ಯಪಾಲರುಗಳು ಹೆಚ್ಚಿನ ಅವಧಿಗೆ ಮುಂದುವರಿದಿದ್ದ ನಿದರ್ಶನಗಳು ಇವೆ. ಕೆಲವೊಮ್ಮೆ, ಒಮ್ಮೆ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದವರು ಪುನಃ ಅದೇ ರಾಜ್ಯಕ್ಕೆ ಬರುತ್ತಿದ್ದುದೂ ಇದೆ.ಸ ಕೆಲವು ಸಂಧರ್ಭಗಳಲ್ಲಿ ರಾಜ್ಯಪಾಲರುಗಳಾಗಿ ನೇಮಿಸಲ್ಪಟ್ಟ ವ್ಯಕ್ತಿಗಳು ತಮ್ಮ ಆಯ್ಕೆಯ ಕೆಲವು ವ್ಯಕ್ತಿಗಳನ್ನು ರಾಜ್ಯಪಾಲರುಗಳಾಗಿ ನೇಮಿಸಿದ ಉಲ್ಲೇಖವೂ ಇದೆ. ಉದಾ : ವಿಜಯನಗರದ ದೊರೆ ಕೃಷ್ಣದೇವರಾಯನ ಕಾಲದಲ್ಲಿ ಬಾರಕೂರು ರಾಜ್ಯದ ರಾಜ್ಯಪಾಲನಾಗಿ ರತ್ನಪ್ಪ ಒಡೆಯನನ್ನು ನೇಮಿಸಲಾಯಿತು. ಆನಂತರ ರತ್ನಪ್ಪ ಒಡೆಯ ತನ್ನ ಮಗ ವಿಜೆಯಪ್ಪ ಒಡೆಯನನ್ನು ರಾಜ್ಯಪಾಲನಾಗಿ ನೇಮಿಸಿದ ಪ್ರಸಂಗವೂ ಇದೆ. ಇನ್ನೊಂದು ಉದಾಹರಣೆ ನೀಡುವುದಿದ್ದರೆ, ಅಚ್ಯುತರಾಯನ ಕಾಲದಲ್ಲಿ ಬಾರಕೂರು ರಾಜ್ಯದ ರಾಜ್ಯಪಾಲನಾಗಿ ಶಂಕರ ನಾಯಕನನ್ನು ನೇಮಿಸಲಾಯಿತು. ಅವನು ನಂತರ ಕೊಂಡೆಪ್ಪ ಒಡೆಯನನ್ನು ರಾಜ್ಯಪಾಲನಾಗಿ ನೇಮಿ ಮಾಡಿದ[42].

ಅಲ್ಲದೆ ಹತ್ತಿರದ ಸಂಬಂಧಿಗಳನ್ನು ಒಬ್ಬರ ನಂತರ ಒಬ್ಬರಂತೆ ರಾಜ್ಯಪಾಲರಾಗಿ ನೇಮಿಸಿದ ಉಲ್ಲೇಖಗಳೂ ಇವೆ. ಮೂವರು ಸಹೋದರರಾದ ಬಸವರಸ, ಸೋಮಣ್ಣ ಮತ್ತು ಮಲ್ಲಪ್ಪ ಒಬ್ಬರ ನಂತರ ಒಬ್ಬರು ಬಾರಕೂರಿನ ರಾಜ್ಯಪಾಲರಾಗಿದ್ದರು[43]. ರಾಜ್ಯಪಾಲರುಗಳಿಗೆ ವಿಶೇಷವಾದ ಅಧಿಕಾರಗಳಿದ್ದವು. ಆದರೆ ಅವರು ತಮ್ಮ ಅಧಿಕಾರದ ದುರುಪಯೋಗಪಡಿಸಿಕೊಂಡಾಗ ಜನರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ ಅನೇಕ ಸಂದರ್ಭಗಳಿವೆ. ಉದಾಹರಣೆ ನೀಡುವುದಿದ್ದರೆ –

೧. ಕ್ರಿ.ಶ ೧೪೦೪ರಲ್ಲಿ ಬಾರಕೂರಿನ ರಾಜ್ಯಪಾಲ ಮಹಾಬಲದೇವ ಒಡೆಯ ನಖರ ಹಂಜ ಮಾನದವರ ವಿಶೇಷಾಧಿಕಾರವನ್ನು ರದ್ದುಗೊಳಿಸಿದನು. ಆಗ ಅವರು ರಾಜ ಇಮ್ಮಡಿ ಬುಕ್ಕನಿಗೆ ಮನವಿ ಮಾಡಿದರು. ರಾಜ ತನಿಖೆ ನಡೆಸಿ ರಾಜ್ಯಪಾಲ ತಪ್ಪಿತಸ್ಥನೆಂದು ಕಂಡುಬಂದಾಗ ತೊಂದರೆಗೊಳಗಾದವರಿಗೆ ಪರಿಹಾರ ನೀಡಲಾಯಿತು. ಅಲ್ಲದೇ ಮಹಾಬಲದೇವ ಒಡೆಯ ರಾಜ್ಯಪಾಲ ಪದವಿಯನ್ನು ಕಳೆದುಕೊಂಡ[44].

೨. ಕ್ರಿ.ಶ. ೧೪೧೮ರಲ್ಲಿ ಮಂಗಳೂರಿನ ರಾಜ್ಯಪಾಲನಾಗಿದ್ದ ತಿಮ್ಮಣ್ಣ ಒಡೆಯ ಹಂಜಮಾನರ ಸ್ವತ್ತುಗಳನ್ನು ನಾಶಪಡಿಸಿದ್ದು ಮಾತ್ರವಲ್ಲ ಅವರ ಮಸೀದಿಯನ್ನು ಸುಟ್ಟು ಹಾಕಿದ. ಆಗ ಮುಸ್ಲಿಮರು ಊರುಬಿಟ್ಟು ಹೋದರು. ರಾಜ ಒಂದನೇ ದೇವರಾಯನಿಗೆ ವಿಷಯ ತಿಳಿದು ತನಿಖೆ ನಡೆಸಿದ. ರಾಜ್ಯಪಾಲನದ್ದೇ ತಪ್ಪು ಎಂಬುದು ಕಂಡುಬಂದಾಗ ಮುಸ್ಲಿಮರನ್ನು ವಾಪಾಸು ಕರೆಸುವಂತೆ ರಾಜ್ಯಪಾಲರಿಗೆ ಸೂಚಿಸಿ ಅವರಿ ಪರಿಹಾರ ನೀಡಲಾಯಿತು[45].

೩. ಇಂತಹ ಘಟನೆ ಬಾರಕೂರಿನ ರಾಜ್ಯಪಾಲ ಅಣ್ಣಪ್ಪ ಒಡೆಯ ಕಾಲದಲ್ಲಿ ಉಡುಪಿಯಲ್ಲಿ ನಡೆದಿದೆ[46]. ಬ್ರಹ್ಮಾವರ ಭಾಗದಲ್ಲಿ ನಡೆದ ಉಲ್ಲೇಖ ಇದೆ[47]. ಉಪ್ಪೂರಿನಲ್ಲಿ ರಾಜ್ಯಪಾಲ ಕೊಂಡಪ್ಪ ಒಡೆಯ ದಾಳಿ ಮಾಡಿದಾಗ ಆ ಗ್ರಾಮದ ‘ಹೆಣ್ಣಿನ ನಿರಿಗೆಗೆ’ ಮತ್ತು ‘ಗಂಡಿನ ತಲೆಗೆ’ ತಪ್ಪಿದ್ದಕ್ಕೆ ಅವನು ತೆರಿಗೆಯ ಕೆಲವು ಆದಾಯಗಳನ್ನು ಆ ಊರಿನ ಶಿವ ಕೇಕುಡೆಯವರಿಗೆ ಪರಿಹಾರವಾಗಿ ಕೊಟ್ಟ ನಿದರ್ಶನವಿದೆ[48].

ಈ ಎಲ್ಲಾ ಘಟನೆಗಳು ವಿಜಯನಗರದ ಆಡಳಿತ ಕಾಲದಲ್ಲಿ ತುಳುನಾಡಿನ ಆಗುಹೋಗುಗಳಬಗ್ಗೆ ದೂರದ ಹಂಪೆಯಲ್ಲಿದ್ದ ರಾಜರುಗಳು ಯಾವ ರೀತಿಯಲ್ಲಿ ಗಮನಹರಿಸುತ್ತಿದ್ದರು ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

ಆರಂಭದಲ್ಲಿ ಕೆಳದಿ ಸದಾಶಿವ ನಾಯಕನು ವೀರಪ್ರತಾಪ ಸದಾಶಿವ ಮಹಾರಾಯನ ನಿರೂಪದಂತೆ ಆಡಳಿತ ನಿರ್ವಹಿಸಿದನು.[49] ಕೆಳದಿ ನಾಯಕರು ತುಳುನಾಡಿನ ಸ್ಥಳೀಯ ಅರಸು ಮನೆತನಗಳಾದ ಹೊನ್ನೆಯ ಕಂಬಳಿ, ಸೂರಾಲಿನ ತೊಳಹರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆಂಬುದು ಸುರಾಲು ಮತ್ತು ಹಟ್ಟಿಯಂಗಡಿ ಶಾಸನಗಳಿಂದ ತಿಳಿದುಬರುತ್ತದೆ.[50] ಮುಂದಿನ ಕೆಳದಿ ನಾಯಕರಾದ ವೆಂಕಟಪ್ಪ ನಾಯಕ, ವೀರಭದ್ರ ನಾಯಕ ಮುಂತಾದವರ ಕಾಲದಲ್ಲಿ ಈ ಭಾಗ ಅವರ ನೇರ ಹಿಡಿತಕ್ಕೆ ಒಳಪಟ್ಟಿತು. ಅವರು ತುಳುನಾಡಿನಲ್ಲಿ ಕೋಟೆಗಳನ್ನು ನಿರ್ಮಿಸುವುದರ ಮೂಲಕ ತಮ್ಮ ಹಿಡಿತವನ್ನು ಭದ್ರಪಡಿಸಿಕೊಂಡರು.

ತುಳುನಾಡಿನಲ್ಲಿ ವಿಜಯನಗರದ ಆಡಳಿತ ಕಾಲದಲ್ಲಿ ಅನೇಕ ಸ್ಥಳೀಯ ಅರಸು ಮನೆತನಗಳು ತಮ್ಮ ಪ್ರಾಬಲ್ಯವನ್ನು ಹೊಂದಿದ್ದವು. ಅವುಗಳ ಅಸ್ತಿತ್ವ ಬ್ರಿಟಿಷರ ಆಗಮನದವರೆಗೆ ಮುಂದುವರಿಯಿತು. ಈ ಅವಧಿಯಲ್ಲಿ ಅವುಗಳು ಪೂರ್ಣ ಸ್ವಾತಂತ್ರ್ಯವನ್ನು ಹೊಂದಿರಲಿಲ್ಲ. ವಿಜಯನಗರದ ಅರಸರು ಈ ಸ್ಥಳೀಯ ರಾಜ ಮನೆತನಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಮಾತ್ರವಲ್ಲ ತುಳುನಾಡಿನ ಆಡಳಿತದಲ್ಲಿ ಅವರ ಸಹಾಯವನ್ನು ಪಡೆದಿದ್ದರು. ಅವರಲ್ಲಿ ಒಂದು ಅರಸ ಮನೆತನವೆಂದರೆ ಬಂಗರು, ಬಂಗಾಡಿ ಅಥವಾ ಬಂಗವಾಡಿ ಅವರ ರಾಜಧಾನಿಯಾಗಿತ್ತು. ಬಂಗರು ಮಂಗಳೂರಿನಲ್ಲಿಯೂ ಒಂದು ಅರಮನೆಯನ್ನು ಹೊಂದಿದ್ದರು ಎಂಬುದು ಶಾಸನವೊಂದರಿಂದ ತಿಳಿದುಬರುತ್ತದೆ. ಈ ಶಾಸನ ಕ್ರಿ.ಶ. ೧೪೬೯ರಲ್ಲಿ ಮಂಗಳೂರಿನ ವಿಜಯನಗರ ರಾಜ್ಯಪಾಲ ವಿಠಲರಸ ಒಡೆಯ ಕೊಡಿಯಾಲ ಬಂಗರ ಅರಮನೆಯನ್ನು ನಾಶ ಮಾಡಿದ ವಿಷಯವನ್ನು ತಿಳಿಸುತ್ತದೆ.[51] ಅವರ ಮೂಲದ ಬಗ್ಗೆ ಹಾಗೂ ವಂಶಾವಳಿಯ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ.ಬಂಗರು ೧೪ನೇ ಶತಮಾನದ ಆರಂಭದಿಂದ ಬ್ರಿಟಿಷರು ಇಲ್ಲಿ ನೆಲೆಯೂರುವವರೆಗೆ ಅಧಿಕಾರ ಹೊಂದಿದ್ದರು. ಅವರ ಬಗ್ಗೆ ಪ್ರಥಮ ಶಾಸನಿಕ ಆಧಾರ ಸಿಗುವುದು ಕ್ರಿ.ಶ. ೧೪೧೦ರಲ್ಲಿ.[52] ಬ್ರಿಟಿಷರು ಪ್ರಬಲರಾದಂತೆ ಬಂಗರು ರಾಜಕೀಯವಾಗಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡರು. ವಿಜಯನಗರ ಅರಸರ ಆಡಳಿತಾವಧಿಯಲ್ಲಿ ಸ್ಥಳೀಯ ರಾಜ್ಯಪಾಲರುಗಳು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಅವರು ಜೈನ ಮತಾವಲಂಬಿಗಳಾಗಿದ್ದರೂ ಬೇರೆ ಧರ್ಮಗಳ ಬಗ್ಗೆ ಆಸಕ್ತಿ ಹೊಂದಿದ್ದರು. ಸೋಮನಾಥ ಅವರ ಕುಲದೇವರು.

ಪುತ್ತಿಗೆಯ ಮೂಡಬಿದರೆ ಚೌಟರು ಇನ್ನೊಂದು ಪ್ರಮುಖ ಸ್ಥಳೀಯ ರಾಜವಂಶ. ಚೌಟರು ೧೨ನೇ ಶತಮಾನದ ಉತ್ತರಾರ್ಧದಲ್ಲಿ ಉಳ್ಳಾಲ ಸೋಮೇಶ್ವರ ಪ್ರದೇಶದಲ್ಲಿ ಆಡಳಿತವನ್ನು ಆರಂಭಿಸಿದ್ದರೂ ಅವರ ಬಗ್ಗೆ ಪ್ರಥಮ ಶಾಸನಿಕ ಆಧಾರ ಸಿಗುವುದು ಕ್ರಿ.ಶ. ೧೩೯೦ರಲ್ಲಿ. ಪುತ್ತಿಗೆ ಅವರ ಕೇಂದ್ರಸ್ಥಾನವಾಗಿತ್ತು. ಅವರು ವಿಜಯನಗರದ ವಿರುದ್ಧ ೧೩೯೮ರಲ್ಲಿ ನಡೆದ ದಂಗೆಯ ನೇತೃತ್ವವನ್ನು ವಹಿಸಿದ್ದರೂ ಸೋಲೊಪ್ಪಿಕೊಳ್ಳಬೇಕಾಯಿತು.[53] ನಂತರ ವಿಜಯನಗರದ ಅರಸರ ಅಧಿಪತ್ಯವನ್ನು ಒಪ್ಪಿಕೊಳ್ಳಬೇಕಾಯಿತು. ವಿಜಯನಗರದ ಆಡಳಿತದ ನಂತರ ಅವರು ತಮ್ಮ ಕೇಂದ್ರಸ್ಥಾನವನ್ನು ಮೂಡಬಿದಿರೆಗೆ ಬದಲಾಯಿಸಿಕೊಂಡರು. ಚೌಟರು ಮತ್ತು ಬಂಗರ ಮಧ್ಯೆ ಮೊದಲು ವೈರತ್ವವಿತ್ತು. ಆದರೆ ನಂತರ ಅವರು ಅದನ್ನು ಸರಿಪಡಿಸಿಕೊಂಡರು. ಚೌಟರು ಮತ್ತು ಮೂಲ್ಕಿಯ ಸಾವಂತ ಅರಸರ ಸಂಬಂಧ ಬಹಳ ಚೆನ್ನಾಗಿತ್ತು; ಅವರೂ ಕಾರ್ಕಳದ ಬೈರರಸರೂ ಉತ್ತಮ ಸಂಬಂಧ ಹೊಂದಿದ್ದರು. ಅವರು ಜೈನ ಧರ್ಮದವರಾಗಿದ್ದರೂ ಧರ್ಮ ಸಹಿಷ್ಣುತೆಗೆ ಹೆಸರಾಗಿದ್ದರು.[54]

ಸ್ಥಳೀಯ ಸಂಸ್ಥಾನಗಳಲ್ಲಿ ಪ್ರಮುಖರಾದವರೆಂದರೆ ಕಳಸ ಕಾರ್ಕಳ ರಾಜ್ಯ ನಗಿರೆ ರಾಜ್ಯ ಮತ್ತು ಹಾಡುವಳ್ಳಿ ರಾಜ್ಯ.[55] ಕಾರ್ಕಳ ತಾಲೂಕಿನ ಕೆರವಸೆಯು ಕಳಸ ಕಾರ್ಕಳ ಪ್ರಧಾನ ಕೇಂದ್ರವಾಗಿತ್ತು. ಕಳಸ ಕಾರ್ಕಳ ಅರಸು ಒಮ್ಮೆ ವಿಜಯನಗರದ ದೊರೆ ಕೃಷ್ಣದೇವರಾಯನನ್ನು ಎದುರಿಸಿದ ವಿವರವಿದೆ. ಆದರೆ ಅವನಿಗೆ ಸೋಲುಂಟಾಗಿ ನಂತರ ವಿಜಯನಗರ ಚಕ್ರವರ್ತಿಯ ಸಾಮಂತನಾಗಿಯೇ ಕಾಣಿಸಿಕೊಳ್ಳುತ್ತಾನೆ.[56] ಅದೇ ರೀತಿ ತುಳುನಾಡಿನ ಉತ್ತರಭಾಗದಲ್ಲಿ ಪ್ರಮುಖ ರಾಜವಂಶಗಳೆಂದರೆ ನಗಿರೆ ಮತ್ತು ಹಾಡುವಳ್ಳಿ ರಾಜ್ಯ.ಸ ಇವರು ಕ್ರಿ.ಶ. ೧೩ನೆಯ ಶತಮಾನದಿಂದಲೇ ಪ್ರಮುಖರಾಗಿದ್ದರಂತೆ ಕಂಡುಬರುತ್ತಾರೆ. ಇವರು ತಮ್ಮನ್ನು ಸಾಳುವ ವಂಶದವರೆಂದು ಹೇಳಿಕೊಂಡಿದ್ದಾರೆ. ಈ ಎರಡು ಮನೆತನಗಳು ಕೆಳದಿಯವರ ಕಾಲದಲ್ಲಿ ಅವನತಿ ಹೊಂದಿರಬೇಕು.[57] ತುಳುನಾಡಿನ ಸ್ಥಳೀಯ ಅರಸು ಮನೆತನಗಳಲ್ಲಿ ಇನ್ನೊಂದು ಪ್ರಮುಖವಾದ ರಾಜವಂಶವೆಂದರೆ ಸೂರಾಲಿನ ತೊಳಹರದ್ದು. ಅವರ ಪ್ರಾಚೀನ ಉಲ್ಲೇಖ ಕಂಡುಬರುವುದು ಕ್ರಿ.ಶ. ೧೧೩೯ರ ಶಾಸನದಲ್ಲಿ.[58] ಆಗ ತುಳುನಾಡಿನಲ್ಲಿ ಪ್ರಬಲರಾಗಿದ್ದ ಆಳುಪರೊಂದಿಗೆ ತೊಳಹರು ಸುಮಧುರ ಬಾಂಧವ್ಯವನ್ನು ಹೊಂದಿದ್ದರು. ವಿಜಯನಗರದ ಕಾಲದಲ್ಲಿಯೂ ತೊಳಹರು ತುಳುನಾಡಿನ ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ತುಳುನಾಡಿನ ಇತರ ರಾಜವಂಶಗಳೆಂದರೆ ಪೂಂಜಳಿಯ ಅಜಿಲರು, ಮೂಲ್ಕಿಯ ಸಾವಂತರು, ಹೊಸಂಗಡಿಯ ಹೊನ್ನೆಯ ಕಂಬಳಿ, ವಿಟ್ಲದ ದೊಂಬ ಹೆಗ್ಗಡೆ, ಕಾಪಿನ ಮದ್ದ ಹೆಗ್ಗಡೆ, ಎರ್ಮಾಳಿನ ಮಾರಮ್ಮ ಹೆಗ್ಗಡೆ, ಎಲ್ಲೂರಿನ ಕುಂದ ಹೆಗ್ಗಡೆ, ಕಿನ್ನಿಕ ಹೆಗ್ಗಡೆ.[59]

ಒಟ್ಟಿನಲ್ಲಿ ತುಳುನಾಡು ವಿವಿಧ ರಾಜವಂಶಗಳ ಆಡಳಿತದ ರುಚಿಯನ್ನು ಕಂಡ ಪ್ರದೇಶ. ಒಂದೇ ಕಾಲದಲ್ಲಿ ಅನೇಕ ರಾಜವಂಶಗಳು ಇಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದರೂ ಅವುಗಳ ಮಧ್ಯೆ ಇದ್ದಂತಹ ಹೊಂದಾಣಿಕೆ ತುಂಬಾ ಫಲಕಾರಿಯಾಯಿತು. ಈ ಎಲ್ಲಾ ರಾಜವಂಶಗಳ ಆಡಳಿತದ ನಂತರ ಈ ತುಳುನಾಡು ಹೈದರ್ ಮತ್ತು ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟು ನಂತರ ಬ್ರಿಟಿಷ್ ಅಧಿಪತ್ಯಕ್ಕೆ ಸೇರಿಹೋಯಿತು. ೧೯೪೭ ಆಗಸ್ಟ್ ೧೫ರಂದು ಇತರ ಪ್ರದೇಶಗಳಂತೆ ಸ್ವತಂತ್ರ ಭಾರತದ ಒಂದು ಭಾಗವಾಯಿತು.

 

[1] ಕೆ.ವಿ.ರಮೇಶ್ : ತುಳುನಾಡಿನ ಇತಿಹಾಸ, ಮೈಸೂರು, ೧೯೬೮, ಪು. ೨೬.

[2] Ibid

[3] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಶಾಸನಗಳು, ಪು. ೯-೧೦.

[4] ಕೆ.ವಿ. ರಮೇಶ್ : ತುಳುನಾಡಿನ ಇತಿಹಾಸ ಮೈಸೂರು ೧೯೬೮ ಪು. ೩೨.

[5] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಶಾಸನಗಳು, ಪು. ೧೨-೧೪.

[6] SII.Vol. VII : No. 284.

[7] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯ, ಉಜಿರೆ ೧೯೮೫,ಪು.೮.

[8] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಶಾಸನಗಳು ಸಂಖ್ಯೆ : ೬-೧೭.

[9] AR.EP – 1943 – 44; B.K. No. 26

[10] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಶಾಸನಗಳು ಸಂಖ್ಯೆ ೨೫.

[11] Ibid

[12] EP. 2d; XII : P.P. 213, ff and plates (೩೧ನೆಯ ಪದ್ಯ) ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯ ಪು. ೧೭

[13] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯ, ಉಜಿರೆ ೧೯೮೫, ಪು. ೧೭.

[14] ಇಲಿ ಗಣಪತಿ ದೇವಸ್ಥಾನದ ಮುಂದಿರುವ ಶಾಸನ Arsie, 1930-31 : No. 282

[15] ಬಿ. ವಸಂತ ಶೆಟ್ಟಿ : Barakuru, A Metropolitan City of Antiquity. Its History and Culture. Unpublished Ph.D Thesis, Mysore 1984, p.277.

[16] SII. Vol. VII No. 327.

[17] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಶಾಸನಗಳು ಪುಟಗಳು ೭೫-೮೦.

[18] EP.Carn. VIII : No.35

[19] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯ ಉಜಿರೆ ೧೯೮೫, ಪು. ೨೦.

[20] Ibid : ಪುಟ.೨೦

[21] EP.Carn. Vol. V.BL. 58,71.

[22] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯ, ಪು. ೨೧.

[23] ಕೆ.ವಿ. ರಮೇಶ್ : ತುಳುನಾಡಿನ ಇತಿಹಾಸ, ಮೈಸೂರು, ೧೯೬೮ ಪು. ೫೭

[24] Ibid : ಪು. ೫೮

[25] Ibid : ಪು. ೫೯ – ೬೦

[26] ARSTE 1930 – 31 : No. 338

[27] ಕೆ.ವಿ. ರಮೇಶ್ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯ, ಪು. ೨೬, ೨೭

[28] ಕೆ.ವಿ. ರಮೇಶ್ : ತುಳುನಾಡಿನ ಇತಿಹಾಸ ಪು. ೬೩.

[29] Ibid : ಪು. ೬೫

[30] ಬಿ. ವಸಂತ ಶೆಟ್ಟಿ : ಅಪ್ರಕಟಿತ ಪಿಎಚ್.ಡಿ. ಪ್ರಬಂಧ ಪುಟಗಳು ೧೫೮-೧೬೬.

[31] ಕೆ.ವಿ. ರಮೇಶ್ : ತುಳುನಾಡಿನ ಇತಿಹಾಸ ಮೈಸೂರು, ೧೯೬೮, ಪು. ೮೩.

[32] ಬಿ. ವಸಂತ ಶೆಟ್ಟಿ : ಅಪ್ರಕಟಿತ ಪಿಎಚ್.ಡಿ. ಪ್ರಬಂಧ ಪುಟಗಳು ೧೬೭-೧೭೮.

[33] ARSIE. 1928 – 29 : No.497

[34] ಕೆ.ವಿ. ರಮೇಶ್ : ತುಳುನಾಡಿನ ಇತಿಹಾಸ ಪು. ೮೫.

[35] Ibid : ಪು. ೮೭

[36] ಬಿ. ವಸಂತ ಶೆಟ್ಟಿ : ಅಪ್ರಕಟಿತ ಪಿಎಚ್.ಡಿ. ಪ್ರಬಂಧ ಪುಟಗಳು ೧೮೭-೨೦೧

[37] ಕೆ.ವಿ. ರಮೇಶ್ : ತುಳುನಾಡಿನ ಇತಿಹಾಸ, ಪು.೮೮

[38] SII Vol. VII : No. 337

[39] ಬಿ. ವಸಂತ ಶೆಟ್ಟಿ : ಅಪ್ರಕಟಿತ ಪಿಎಚ್.ಡಿ. ಪ್ರಬಂಧ ಪುಟಗಳು ೨೧೪-೨೨೦

[40] ಕೆ.ವಿ. ರಮೇಶ್ : ತುಳುನಾಡಿನ ಇತಿಹಾಸ, ಪು.೧೦೪

[41] ಬಿ. ವಸಂತ ಶೆಟ್ಟಿ : ಅಪ್ರಕಟಿತ ಪಿಎಚ್.ಡಿ. ಪ್ರಬಂಧ ಪುಟಗಳು ೨೨೧-೨೨೭

[42] Ibid : ಪು. ೨೫೮

[43] Ibid

[44] SII Vol. VII : No. 349, K.V.Ramesh : A History of South Kanara, P. 162

[45] ಬಿ. ವಸಂತ ಶೆಟ್ಟಿ : ವಿಜಯನಗರ ಪ್ರಾಂತೀಯ ಧೋರಣೆಗೆ ಸ್ಥಳೀಯ ಪ್ರತಿಕ್ರಿಯೆ, ಇತಿಹಾಸ ದರ್ಶನ ಬೆಂಗಳೂರು ೧೯೯೧, ಪು. ೧೧೬

[46] SII Vol. VII : No.296, ಬಿ. ವಸಂತ ಶೆಟ್ಟಿ : ಅಪ್ರಕಟಿತ ಪಿಎಚ್.ಡಿ. ಪ್ರಬಂಧ, ಪು. ೧೯೩ – ೧೯೪.

[47] ಬಿ. ವಸಂತ ಶೆಟ್ಟಿ : ಬ್ರಹ್ಮಾವರದ ಇತಿಹಾಸ, ಬ್ರಹ್ಮಾವರ ೧೯೮೮, ಪು. ೨೩-೨೫.

[48] ARSIE. 1928 – 29 : No. 487

[49] SII Vol. IX Pt. 11 : No’s 655-659

[50] ARSIE. 1930-31 : No.s 331, 562, 564

[51] ARSIE. 1928 – 29 : No.482

[52] SII Vol. VII : No.259

[53] Ibid : No 229

[54] ಹೆರಂಜೆ ಕೃಷ್ಣ ಭಟ್, ಎಸ್.ಡಿ.ಶೆಟ್ಟಿ ಸಂಪಾದಕರು : ತುಳು ಕರ್ನಾಟಕದ ಅರಸು ಮನೆತನಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ ಪು. ೧೭೭

[55] ಕೆ.ವಿ. ರಮೇಶ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯ ಪು.೬೬

[56] Ibid : ಪುಟ. ೭೦

[57] Ibid : ಪುಟ. ೮೫

[58] SII Vol. VII : No. 381

[59] ಕೆ.ವಿ. ರಮೇಶ ಮತ್ತು ಎಂ.ಜೆ. ಶರ್ಮ : ತುಳುನಾಡಿನ ಅರಸು ಮನೆತನಗಳು ಮತ್ತು ಧರ್ಮ ಸಮನ್ವಯ ಪು. ೯೪ – ೯೫.