ಕಾವ್ಯವಸ್ತು ವಿವೇಚನೆ

ಮಹಾಭಾರತದ ಆದಿಪರ್ವದ ಸಂಭಪರ್ವದಿಂದ ತೊಡಗಿ ಖಾಂಡವದಾಹದವರೆಗಿನ ಹನ್ನೆರಡು ಉಪಪರ್ವಗಳ ಕಥೆಯನ್ನು ಕವಿ ಇಲ್ಲಿ ಸಂಕಲ್ಪಿಸಿದ್ದಾನೆ. ೨೪ ಸಂಧಿಗಳಲ್ಲಿ ಪ್ರವಹಿಸುವ ಕಥಾವಾಹಿನಿಯಲ್ಲಿ ಕುರುಪಾಂಡವ ಜನನ, ಪಾಂಡು ಮರಣ, ಭೀಮಕೌರವ ವೈರ, ಶಸ್ತ್ರಾಭ್ಯಾಸ, ದ್ರಪದ ಗರ್ವಭಂಗ, ಗನೋಹಿ, ಅರಗಿನಮನೆ, ಹಿಡಿಂಬಾವಿವಾಹ, ಅಂಗಾರಪರ್ಣ, ವೃತ್ತಾಂತ, ದ್ರೌಪದೀ ಸ್ವಯಂವರ, ಸುಭದ್ರಾಪರಿಣಯ, ಖಾಂಡವದಹನ ಪ್ರಸಂಗಗಳಿವೆ. ಸಂಧಿವಿಂಗಡಣೆಯಲ್ಲಾಗಲೀ ವರ್ಣನೆಯಲ್ಲಾಗಲೀ ಅರುಣಾಬ್ಜನು ಸ್ವೋಪಜ್ಞವಾದ ಕವಿ. ಆದರೂ ಕೆಲವು ಕಡೆಗಳಲ್ಲಿ ಕುಮಾರವ್ಯಾಸ ಮಹಾಕವಿಯ ಪ್ರಭಾವ ಪ್ರೇರಣೆ ಅರುಣಾಬ್ಜನನ್ನು ಆವರಿಸಿರುವುದುಂಟು.

ಶಾರದೇಂದುನಿಭಾಸ್ಯೆ
ಕ್ಷೀರಾಣ್ವವವಿಶುದ್ಧೇ
ವಾರಿಜಾಸನಕಿಷ್ಟಪ್ರಿಯೆ ಕಲ್ಯಾಣಿ
ಭಾರತಾಮೃತೊಮೆನ್ಕೀ
ಸಾರೊಮೆನ್ಕ್ ರೆಚೀಪೆರ
ಈರ್ ನೃತ್ತಿಪೊಡೆನ್ನಾ ಮುಖರಂಗಂಟ್          (೧-೪)

(ಚಂದ್ರಮುಖಿಯೂ ಶ್ವೇತವಸನೆಯೂ ಬ್ರಹ್ಮನಿಗೆ ರಾಣಿಯಾಗಿಯೂ ಇರುವ ಶಾರದಾಂಬೆಯು ಭಾರತಾಮೃತವೆಂಬ ಕಾವ್ಯ ರಚಿಸುವುದಕ್ಕಾಗಿ ನನ್ನ ಮುಖರಂಗದಲ್ಲಿ ನರ್ತಿಸಬೇಕು. )

ಈ ನಾಂದೀಪದ್ಯದಲ್ಲಿಯೇ ಕುಮಾರವ್ಯಾಸನು ಹೇಳಿದ ‘ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ’ ಎಂಬ ಪ್ರಾರ್ಥನೆಯ ಛಾಯೆಯಿದೆ. ಇನ್ನೊಂದೆಡೆ-

ಸಂತೋಷಿತೆನ್ ಕೈನ್
ಮಂತ್ರೋ ಪಂಡತೆರಾದ್
ಮಂತ್ರೀತಿಯಮರೆರೆಟಿನ್ ಕಾಸ್ಟ್ ತ್ತಿನ್           (೨-೫)

ಕುಂತಿಗೆ ದುರ್ವಾಸರು ಐದು ಮಂತ್ರಗಳನನು ಉಪದೇಶಿಸಿದರೆಂಬ ಉಲ್ಲೇಖ ಬರುತ್ತದೆ. ಸಂಸ್ಕೃತ ಭಾರತದಲ್ಲಿ ಈ ಸಂದರ್ಭದಲ್ಲಿ ಒಂದೇ ಮಂತ್ರವನ್ನು ಉಪದೇಶ ಮಾಡಿದ ಉಲ್ಲೇಖವಿದೆ.

ಆದರೆ ಕುಮಾರವ್ಯಾಸ –
ಮಗಳೆ ಬಾ ಕೊಳ್ ಐದು ಮಂತ್ರಾ
ಳಗಳವಿದು ಸಿದ್ಧ ಪ್ರಯೋಗವು
ಸೊಗಸು ದಿವಿಜರೊಳಾವ ಮೇಲುಂಟವರ ನೆನೆ ಸಾಕು || (ಆದಿಪರ್ವ ೩-೧೬)

ಎಂದೇ ಹೇಳುತ್ತಾನೆ. ಅರುಣಾಬ್ಜನೂ ಇದರಿಂದ ಪ್ರೇರಣೆ ಪಡೆದಂತಿದೆ.

ದ್ರೌಪದಿಯನ್ನು ಗೆದ್ದು ತಂದ ಅರ್ಜುನ
ಉದ್ ಸ್ಟ್ ವಿನ್ನಪೊವೆಂದ
ಬೆದರೋಸ್ಟ್ ನೃಪೆರೆನಿಸ್
ಪುದಿಯೊಂಜಿ ರತ್ನೊ ಕೊಂಡತೆನೇನೆಂದೆ           (೧೬-೫೭)

“ಕ್ಷತ್ರಿಯರನ್ನು ಬೆದರಿಸಿ, ವಿನೂತನ ರತ್ನವೊಂದನ್ನು ತಂದೆನೆಂದು ಪ್ರೀತಿಯಿಂದ ಬಿನ್ನೈಸುತ್ತಾನೆ”. ಇವನ ‘ರತ್ನ’ ಪ್ರಯೋಗಕ್ಕೆ ಗದುಗಿನ ಭಾರತದ ‘ಮೌಕ್ತಿಕವೇ ಆಧಾರ.

ತಾಯೆ ಬಿನ್ನಹವಿಂದು ಧರಣೀ
ರಾಯರೆಲ್ಲರ ಗೆಲಿದುತಂದೆನು
ನಾಯಕವನನುಪಮಿತ ಮೌಲ್ಯದನಮಲಮೌಕ್ತಿಕವ ||

ಹೊಸತಾಗಿ ತಂದ ಸೊಸೆಯನ್ನು ಕುಂತಿ ಮಡಿಲಲ್ಲಿ ಕುಳ್ಳಿರಿಸಿ ಆದರಿಸುವ ಪರಿ ನೋಡಿ –

ಪ್ರೇಮಿತಂಕರಳೊಂಟ್
ಮಾಮಿಕುಳ್ಳಟ್ ಪವೊಂಡ್
ಭೀಮ ಭಿಕ್ಷಾನ್ನ ಶೇಷೊಮಿನುಣ್ಪೋಯೆರ್     (೧೬-೬೫)

ಇದೂ ‘ಆದರಣೆಯಲ್ಲಿ ಕುಂತಿ ಸೊಸೆಗೆ ವ್ಯಕೋದರನ ಭಿಕ್ಷಾನ್ನ ಭಾಗದ ಭೇದವನು ತಿಳುಹಿದಳು ತೊಡೆಯಲಿ ತೆಗೆದು ಕುಳ್ಳಿರಿಸೀ’ ಎಂಬ ಕುಮಾರವ್ಯಾಸನ ಸಾಲುಗಳ ಭಾವಾನುವಾದವೇ.

ತೀರ್ಥಯಾತ್ರೆಗಾಗಿ ಬಂದ ಅರ್ಜುನ ಪುರಬಾಹೆಯಲ್ಲಿ ಚಳಿಗಾಳಿಗೆ ಸಿಲುಕಿ, ನಲುಗುತ್ತಿರುವಾ, ಶ್ರೀಕೃಷ್ಣ ಮನದೊಳಗೆ ನಗುತ್ತಾನೆ. ಕುಮಾರವ್ಯಾಸ ಆ ಸಂದರ್ಭದಲ್ಲಿ ಹೇಳುತ್ತಾನೆ.

ದೇವದತ್ತಾ ಸತ್ಯಭಾಮಾ
ದೇವಿಯರ ಮೇಳದಲಿಯಿರುತಿ –
ರ್ದೀ ವಿಲಾಸವ ನೆನೆದು ನಕ್ಕನು ಶಕ್ರನಂದವನ |
ಅವಳೋ ನೆಹಿನಲಿ ಸುಳಿದಳು
ಭಾವದಲಿ ಸುಮ್ಮಾನವೇನೆನೆ
ದೇವಿ ಬೇರೊಂದಿಲ್ಲ ಮನ ನಿನ್ನಾಣೆ ಕೇಳೆಂದಾ ||          (೧-೧೯-೨೪)

‘ಹಟ್ಟಿಯಂಗಡಿ ರಾಮ ಭಟ್ಟ’ನ ಯಕ್ಷಗಾನ ಪ್ರಸಂಗ ‘ಸುಭದ್ರಾ ಕಲ್ಯಾಣ’ದಲ್ಲೂ ಇದೇ ಭಾವಾಭಿವ್ಯಕ್ತಿಯ ಸಾಲುಗಳಿಗೆ-

ಅವ ನಾರಿಯ ಮೇಲೆ ಮನವಾಯ್ತು ನಿಮಗೆ
ಈ ವಿಧದಿ ನಗಲೇಕೆ ಕಾಂತ ಪೇಳೆನಗೆ ||

ಯಕ್ಷಗಾನ ಕವಿಗೂ ಕುಮಾರವ್ಯಾಸನೇ ಪ್ರೇರಕಶಕ್ತಿ, ಅರುಣಾಬ್ಜ ಕವಿಯೂ ಈ ಸಂದರ್ಭದಲ್ಲಿ.

ಹರಿಮೂರ್ತಿ ಅರಂತುಳೆಯೀ ಭಾಮಾ ತುಣೀಶಯನಂಟ್
ಪರಿಣಾಮಿತಂಚಿತ್ತ್ ಣೌರ್ರ್ತಂಬೆಯನೇ ವರಕಾರ್ ಡೆ ಪಿಂದ್
ಹರ್ ಷಾನ್ವಿತೆಯಾಸ್ಟ್ ಮನಸ್ಸಿನುಳೈ ತೆಳೆಪಾರೆನಿನ್ ಚೂಸ್ಟ್
ಹರಿಯೋ ಹರ ಸ್ಟೇರೆ ನಿರೂಪಿತೆರಂದತಿ ಚಿಂತಿತೆರ್ ದೇವೀ || (೨೦-೧೪)
ಏಳಾಳಿಮ ಚಿತ್ತೊ ಪ್ರವೇಶಿತಣಾಳ್ ತೆನೆಂದಮಲಾಂಗೀ
ಅರೆ ಪ್ರತೀ ಚೀದಿಪನಾ ತೆಳಿತ್ ನಮ ಪಾಂಡವೆರೆನ್ಕೀನ್
ಧೀರೇರ್ಕುಳೆ ಪಿಂವ್ ಕೆಂಡ್ ಲವುರ್ತೋರಿಯರ್ಜುನೆಯೆನ್ಕೀನ್
ವೀರೇ ಸ್ಟ್ ತೆ ವರ್ತ್ ವನೊಂಟ್ ನಮನರಿನಂದೊ ನಭೆಪ್ಪೇ ||       (೨೦-೧೫)

(ಅಂತಃಪುರದಲ್ಲಿ ಸತ್ಯಭಾಮೆಯೊಂದಿಗಿದ್ದ ಶ್ರೀಕೃಷ್ಣಮೂರ್ತಿಯು ಅರ್ಜುನನ ಆಗಮನವನ್ನು ತಿಳಿದು, ಸಂತಸ ತಾಳಿ ಮನದೊಳಗೇ ನಕ್ಕನು. ಅದನ್ನು ನೋಡಿದ ಸತ್ಯಭಾಮೆಯು ‘ನಿಮ್ಮ ಮನವನ್ನು ಪ್ರವೇಶಿಸಿದ ಸ್ತ್ರೀ ಯಾರಿರಬಹುದು?’ ಎಂದು ಪ್ರಶ್ನಿಸಲು, ಪಾಂಡವವೀರ ಅರ್ಜುನನೀಗ ನಮ್ಮ ಉಪವನದಲ್ಲಿ ನರಿಯಂತೆ ತೊಳಲಾಡುತ್ತಿದ್ದಾನೆಂದು ವಿವರಿಸುತ್ತಾನೆ. )

ಇಲ್ಲಿಯ ‘ಅವಳೋ ನೆನಹಿದಲಿ ಸುಳಿದಳು’, ‘ಆವ ನಾರಿಯ ಮೇಲೆ ಮನವಾಯ್ತು?’, ‘ಏರಾಳಿಮಚಿತ್ತೊ ಪ್ರವೇಶಿತ್ ಣಾಳ್?’ಎಂಬಸಾಲುಗಳ ಭಾವಸಾಮ್ಯ ಗಮನಾರ್ಹವಾಗಿದೆ.

ದ್ರೌಪದೀ ಸ್ವಯಂವರಕ್ಕೆ ಬಂದ ಬಲರಾಮನೂ ಮತ್ಸ್ಯ ಯಂತ್ರ ಭೇದನಕ್ಕೆ ಪ್ರಯತ್ನಪಡುವ ಉತ್ಸಾಹದಿಂದ ಎದ್ದು ನಿಂತಾದ, ಶ್ರೀ ಕೃಷ್ಣ ಅವನ್ನು ತಡೆದು ಪ್ರಶ್ನಿಸುತ್ತಾನೆ-

ಲೋಕಾವರ್ತಕೊಂಡೀರೆ –
ಕಾ ಕಾಂತೀ ಜಾಸ್ಟಾವೆರ್
ಆ ಕಾಂತೆ ಮಾಮಿ ತತ್ಸುತೆರ್ ವೆರ್ತ್
ಆಕುಳು ನಣ್ಕಡಿಕುಳು –
ನಾಕುಳೆ ಭಾರ್ಯೆಕುಳಾಸ್ಟೀ
ಸ್ತ್ರೀಕುಳಾಕ್ ಣ ತಂಗಾಟ್ಯಡಿಕುಳಾತೋ          (೧೪-೫೩)
ಇದು ಕೂಡಾ ಕುಮಾರವ್ಯಾಸನ
ಏನಹರು ನಿಮಗಿಂದು ಕುಂತೀ
ಮಾನಿನಿಯರತ್ತೆಯರಲೇ ತ-
ತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು
ಎಂಬುದರ ಭಾವಾನುವಾದವೇ ಆಗಿದೆ.

‘ಕರ್ನಾಟಭಾರತ ಕಥಾಮಂಜರಿ’ ಯಂತಹ ಮಹಾಕಾವ್ಯವನ್ನು ಮುಂದಿಟ್ಟುಕೊಂಡು ಅರುಣಾಬ್ಜ ತನ್ನ ಕಾವ್ಯವನ್ನು ರಚಿಸುವಾಗ ಎಷ್ಟೋ ಕಡೆಗಳಲ್ಲಿ ಪ್ರಭಾವ ಪ್ರೇರಣೆಗಳು ಸಹಜವೇ. ಆದರೆ ವಿಷ್ಣುತುಂಗನು ಚಾಟು ವಿಠಲನನ್ನು ಅನುವಾದಿಸಿದಂತೆ, ಅರುಣಾಬ್ಜ ಕವಿ ಕುಮಾರವ್ಯಾಸನನ್ನು ನೇರವಾಗಿ ಅನುಕರಿಸಲಿಲ್ಲ. ಕಾವ್ಯದ ಹೆಚ್ಚಿನ ಕಡೆಗಳಲ್ಲಿ ತನ್ನ ಸ್ವಂತಿಕೆಯನ್ನೇ ಮೆರೆದು ಸೃಜನಶೀಲತೆಯನ್ನು ಪ್ರದರ್ಶಿಸಿದ ಉದಾಹರಣೆಗಳೇ ವಿಪುಲ. ಕುಮಾರವ್ಯಾಸನು ಸಂಕ್ಷೇಪವಾಗಿ ಹೇಳಿದ ಎಷ್ಟೋ ಪ್ರಸಂಗಗಳನ್ನು ಅರುಣಾಬ್ಜನು ವಿಸ್ತರಿಸುವುದು ವಿಶೇಷವಾಗಿದೆ. ಗಂಗೆಯ ಶಾಪವೃತ್ತಾಂತವು ಕುಮಾರವ್ಯಾಸನಲ್ಲಿ ಒಂದು ಭಾಮಿನಿಯಲ್ಲಿ ಮುಗಿದುಹೋದರೆ, ‘ತುಳು ಮಹಾಭಾರತೊ’ ದಲ್ಲಿ ಇಪ್ಪತ್ತಾರು ಪದ್ಯಗಳು ಹರಹಿನಲ್ಲಿ ಅದು ಮಡುಗಟ್ಟಿದೆ. ಕುಂತೀ ಭೋಜನಿಗೆ ಕುಂತಿಯ ಮಗಳಾಗಿ ಹುಟ್ಟಿದ ಕಥೆ ಗದುಗಿನ ಭಾರತದಲ್ಲಿ ಒಂದೇ ಭಾಮಿನಿಯಲ್ಲಿ ವ್ಯಕ್ತವಾಗಿದ್ದರೆ, ಅರುಣಾಬ್ಜನು ಅದನ್ನು ಆರು ಪದ್ಯಗಳಲ್ಲಿ ವಿವರಿಸಿದ್ದಾನೆ. ಹಾಗಾಗಿ ಅವನ ಕಾವ್ಯವನ್ನು ಅನುಕರಣೆಯೆಂದು ಹೇಳಲಾಗದು. ‘ಅವನಿಗೆ ಕುಮಾರವ್ಯಾಸ ಒಬ್ಬ ಮಾರ್ಗದರ್ಶಕ ಗುರು ಮಾತ್ರ. ಆ ಗುರುವು ತೋರಿದ ಮಾರ್ಗದಲ್ಲಿ ಆತ ತನ್ನ ಕಾಲುಗಳಲ್ಲೇ ನಡೆದಿದ್ದಾನೆ’ ಎಂಬ ವಿದ್ವಾನ್ ವೆಂಕಟರಾಜ ಪುಣೀಂಚತ್ತಾಯರ ಮಾತನ್ನು ಇಲ್ಲಿ ಸ್ಮರಿಸಬಹುದು.

ಕವಿಯ ಸ್ವೋಪಜ್ಞತೆ

ಇಬ್ಬರು ಹೆಂಡಿರೊಂದಿಗೆ ಸುಖವಾಗಿರುವ ಪಾಂಡು ಭೂಪತಿಯನ್ನು ಕವಿ ಉಪಮಿಸಿರುವ ರೀತಿ ಮನೋಜ್ಞವಾಗಿದೆ.

ಆ ಹರೀ ರ್ ಮೆನಾ ಧರಿತ್ರಿನಾಮದ್ ತ್ತೆರಾಕುಳು, ಶಂಕರನ್
ದೇಹೊಮೀ ತೆರಿತೊಂಡಿ ಗೌರಿನ ಗೆಂಗೆನಂದೊಮೆ ಚೂವುಟ
ಸಾಹಸಂಟ್ ಸವಿತ್ರಿನಾ ಉಷನಂದೊಮಾ ನೃಪಸಿಂಹಟ
ಸ್ನೇಹಿತ್ ಅನುಕೂಲೆರಾಸ್ಟವುೞ್ ತ್ತೆರ್ ಕುಂತಿಯ ಮಾದ್ರಿಯಾ    (೧-೧೪)

“ಮಹಾವಿಷ್ಣುವಿಗೆ ಶ್ರೀದೇವಿ’ ಭೂದೇವಿಯರಿದ್ದಂತೆ, ಪರಮೇಶ್ವರನಿಗೆ ಗೌರಿ – ಗಂಗೇಯರಿದ್ದಂತೆ, ಸೂರ್ಯನಿಗೆ ಸಾವಿತ್ರಿ – ಉಷೆಯರಿದ್ದಂತೆ ಪಾಂಡುಭೂಪತಿಗೆ ಕುಂತೀ – ಮಾದ್ರಿಯರು ಅನುಕೂಲೆಯರಾಗಿದ್ದರು” ಎಂಬ ಈ ವರ್ಣನೆ ಅರುಣಾಬ್ಜನ ಪ್ರತಿಭಾಸೃಷ್ಟಿ. ಕುಮಾರವ್ಯಾಸನಲ್ಲಿ ಈ ವರ್ಣನೆಯಿಲ್ಲ. ಈ ಮಾಲೋಪನೆಯಲ್ಲಿ ಸಾದೃಶ್ಯ ಸೌಖ್ಯವಿರುವುದರಿಂದ ಸಾರ್ಥಕಾಲಂಕಾರವುಂಟಾಗಿದೆ. ಇದೇ ರೀತಿಯ ಇನ್ನೊಂದು ವರ್ಣನೆ, ಮಾದ್ರಿಯನ್ನು ಪಾಂಡುವು ಬಲಾತ್ಕರಿಸಿದ ಸಂದರ್ಭದಲ್ಲಿ ಬರುತ್ತದೆ.

ಪಿಲಿಟಾ ತಾಗ್ ಸ್ಟ್ ಪೆತ್ತ
ಬಲಸೇರಾಕಣಲುಂಡೊ
ಎಲಿಕುಳೂ ಮರಿಕುಳೆ ಗೇಲ್ ಕುಣುಂಡೊ
ಫಲುಗಂಜೊಂಕುಳು ಸಿಂಹ
ನಿಲೆತಪ್ಪೊಕ್ ಣಾಂದುಂಡೊ
ಯೆಲೆ ಭೂಪಾ ಸತಿಕುಳು ಗೆಲ್ವೆರೋ ಭರ್ತಾವೀ(೨-೮೫)

ಇಲ್ಲಿ ಹುಲಿ-ಧನ, ಹಾವು-ಇಲಿ, ಸಿಂಹ-ಆನೆಗಳ ವಿರೋಧ ಚಿತ್ರಮಾಲೆಯಂತೆಯೇ ಗಂಡನನ್ನು ಎದುರಿಸಿ ಹೆಂಡತಿ ಗೆಲ್ಲಲಾರಳೆಂಬ ಸಮಾನ ಧರ್ಮದ ಕಾಣ್ಕೆಯಿದೆ.

ಕಾವ್ಯದಲ್ಲಿ ಕವಿ ಪ್ರಯೋಗಿಸಿದ ಉಪಮಾಲಂಕಾರಗಳೂ ಗಮನಾರ್ಹವಾಗಿವೆ. ಉದಾ:

ಕ್ಷೀರಾಬ್ದೀ ಕಡೆನಾಗೀ ವಾರುಧಿತ್ತ್ ಜನೀತಿ
ಸ್ತ್ರೀರತ್ನೊ ಹರಿ ಪೋಷ್ಟಾಶ್ರಿಪಿನೆಂದೂ          (೧೬-೭)
ಪಾಂಡವೇರ್ಕುಳೆನ್ ಪ್ಪಿನಗ್ನಿಕ್ ಕೃಷ್ಣೆ ವಾಯು ಸಹಾದೊಮ       (೧೮-೨೦)
ಭೂಮಿಕಾದಿತ್ಯ ಮೂಡ್ ಕ್ ಣಂದೊಮಾಸ್ಟ್ ಣ್          (೧೮-೭೩)
ಥಳಾಥಳಾ ಥಳ್ ಗ್ ಪ್ಪಿ ನಳಿನವೈರಿ ದಿವೊಂಟ್
ತ್ತ್ ಳತ್ ತಾಮೆ ವರ್ಕೆರೋವೆನ್ನಂದೂ(೧೮-೮೪)
ಮುಂತಾದ ಹೋಲಿಕೆಗಳು ಮನಂಬಗುವಂತಿದೆ

ಗಜನೋಹಿ

ಕುಮಾರವ್ಯಾಸ ಭಾರತದಲ್ಲಾಗಲೀ ಸಂಸ್ಕೃತ ಭಾರತದಲ್ಲಾಗಲೀ ಇಲ್ಲದ ‘ಗಜನೋಹಿ’ಯ ಕಥೆಯಂತೂ ತುಳು ಮಹಾಭಾರತದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ‘ಐರಾವತ’ವೆಂಬ ಈ ಕಥಾಪ್ರಸಂಗಕ್ಕೆ ಜಾನಪದ ಮೂಲವಿದ್ದಿರಬೇಕು. ಕುಮಾರವ್ಯಾಸನು ‘ಐರಾವತ’ ಎಂಬ ಹೆಸರಿನ ಒಂದು ಖಂಡಕಾವ್ಯವನ್ನು ರಚಿಸಿರುವನೆಂಬ ಪ್ರತೀತಿಯಿದೆ. ಮುದ್ದಣ ಕವಿಯೂ ಇದೇ ಹೆಸರಿನ ಕಾವ್ಯವೊಂದನ್ನು ಬರೆದಿರಬೇಕೆಂಬ ಊಹೆಯಿದೆ. ಕುಂಬಳೆಯ ಪಾರ್ತಿಸುಬ್ಬನ ‘ಐರಾವತ’ ಯಕ್ಷಗಾನ ಕೃತಿ ಬಹಳ ಪ್ರಸಿದ್ಧವಾದುದು. ಆದರೆ ಪ್ರಾಚೀನತೆಯ ದೃಷ್ಟಿಯಿಂದ ತುಳು ಮಹಾಭಾರತದಲ್ಲಿ ಪ್ರೋಕ್ತವಾದ ಗಜನೋಹಿಯ ಕಥೆ ಅತ್ಯಂತ ಮಹತ್ವ ಪಡೆಯುತ್ತದೆ.

ಒಂದು ದಿನ ವೇದವ್ಯಾಸರು ಬಂದು ಗಾಂಧಾರಿಗೆ ‘ಗಜನೋಹಿ’ ಯನ್ನು ಮಾಡುವಂತೆ ಹೇಳುತ್ತಾರೆ.

ಗಜೊಮೈರಾವತನಂದೊ
ನಿಜಮಣ್ಣಾನೆನಿ ಮಾಂತ್
ಅಜಪಾಯಿ ಬಹುಭಕ್ಷೊಂಕುಳನೀ ಚಾರ್ತ್
ಬಜಿಲಿಕ್ಷುಕದಳಿ ಕೂ
ಟಿಜಿಸ್ಟ್ ಬ್ರಾಹ್ಮಣೆರೆನಿ
ಭಜಿತ್ ಪೂಜಿಪಿಲಾ ಸೇರುವೊ ಸೌಭಾಗ್ಯೊ      (೫-೭)

ಅದರಂತೆ ಗಾಂಧಾರಿಯ ಮಕ್ಕಳು ಮಣ್ಣಿನಾನೆಯನ್ನು ಮಾಡಿ, ಅದಕ್ಕೆ ‘ಉನ್ನತ್ಕೆಶ್ವರ್ಯೊಂಟ್ ಸ್ವರ್ಣದಂತೊ ಸೃಜೀತ್’ ಶೃಂಗರಿಸುತ್ತಾರೆ. ಐಶ್ವರ್ಯದ ಅಹಂಕಾರದಿಂದ ಗಾಂಧಾರಿಯು ಕುಂತಿಯನ್ನು ಕರೆಯಲು ಮರೆಯುತ್ತಾಳೆ. ಇದನ್ನು ತಿಳಿದ ಕುಂತಿಯು ನೊಂದುಕೊಂಡು ಒಳಮನೆ ಸೇರುತ್ತಾಳೆ. ಇದನ್ನು ಕಂಡ ಪಾಂಡವರಿಗೆ ಅತೀವ ದುಃಖವುಂಟಾಗಿ, ಕಾರಣವೇನೆಂದು ಬಗೆಬಗೆಯಾಗಿ ಕೇಳುತ್ತಾರೆ. ಅರ್ಜುನನಂತೂ –

ನಿನೆತ್ ತ್ತಿ ವರಕಾರ್ಯೊ
ಮನಿಪೊಡೀ ಸಮಯೊಂಟ್
ಕನೆಲೋಡೆ ಹೃದಯೊಂಟ್ ಪ್ಪಿಜಿವೊಂಡೀರ್
ಯೆನ ಶೌರ್ಯಬುಧಿಟ್ ತ್ತ್
ಯಿಮ ದುಃಖೊಮಡಸ್ಟೋವೆಂ-
ದನುವಾಯೆ ಧನುವೀ ಪತ್ತಿಯೆರಾ ಪಾರ್ಥೆ ||    (೫-೨೯)
ಹರಕ್ಕೆಲಾಸಪುರೊಂಟೋ
ಸುರರಜಾಭವನೊಂಟೋ
ಹರಿವೈಕುಂಠಪುರೊಂಟೋ ಬ್ರಹ್ಮಾಂಡೊಂಟೋ
ತೆರಿತೊಂಜಾಲವುಳುಳ್ಳ
ಸ್ಟರಿಯೆಂದ್ ಪಣನೆತ್ತ್
ತರಸಾ ತರ್ಪೊವೆನೆಂದೆ ಸುರಪನ್ ಪುತ್ರೆ ||         (೫-೩೦)

(“ನೆನೆದ ಕಾರ್ಯವೇನೆಂಬುದನ್ನು ಈಗ ಹೇಳಿರಿ. ಅದನ್ನು ಮನದಲ್ಲೇ ಇಟ್ಟುಕೊಂಡು ದುಃಖಪಡಬಾರದು. ನನ್ನ ಸಾಹಸದಿಂದ ನಿಮ್ಮದುಃಖವನ್ನು ಅಡಿಗಿಸುತ್ತೇನೆ. ಕೈಲಾಸ, ಸ್ವರ್ಗ, ವೈಕುಂಠ, ಬ್ರಹ್ಮಾಂಡದಲ್ಲಿ ಏನು ಬೇಕಿದ್ದರೂ ಹೇಳಿ ತಂದುಕೊಡುತ್ತೇನೆ. ”)

ಎಂದು ಸಂತೈಸುತ್ತಾನೆ. ಆಗ ಕುಂತಿಯು ತನ್ನ ದುಃಖದ ಕಾರಣವನ್ನು ತಿಳಿಸುತ್ತಾಳೆ.

ಪುತ್ರೇರ್ಕುಳನೇಕೆರೆಟೂಟ್ ಸ್ಟ್ ತ್ ಕಲುಮಣ್ಣಿನಿ ಕೊಂಡ್
ಚಿತ್ರೀಕೆರೆ ಕೊಂಡತ್ ಚಿತ್ರಿಪೋಸ್ಟ್ ಮಣ್ಣಾನೆನಿ ಮಾಂತ್
ವೃತ್ತೋ ಬಹುಪೂಜೆಕುಳೆ ನಡಪೋಸ್ಟ್ ಗಾಂಧಾರಿಬುಳೆಂಚ
ವರ್ತೀ ವಿಷಯೊಂಟೆನಾಡ್ ಸ್ಟಿರಿ ತನಯಾಂರೆರ್ ಕುಂತಿ ||             (೫-೩೬)
ಭರ್ತಾವುಟಿ ಕೂಡ ಲಯೀಪುಟವು ಪ್ರಾಪ್ತೊಂದ್ ಡೆ ಪಿಂದ್
ಬೆತ್ತೀಕುಳೆಕೇರೊರಿ ಸ್ಟ್ ದ್ದಿಯಂತೆಂದಸ್ಟ್ ನೆತ್ತ್ ಸ್ಟೆನಾನಿ
ಸತ್ಯೊಂಟ್ ಜಯೋ ವರುವೆಂದದೀಕೋ ನಿನೆತ್ತ್ ತ್ತ್ ಮನೊಂಟ್
ಪುತ್ರಾಯೆನ್ ಕೀ ವಿಧಿಯಾಸ್ಟ್‌ಣತಂದೞ್ ಸ್ಟೆರ್ ನಾ ಕುಂತಿ ||       (೫-೩೮)

(ಅನೇಕ ಮಂದಿ ಪುತ್ರರೊಂದಿಗೆ ಮಣ್ಣಿನಾನೆಯನ್ನು ಮಾಡಿಸಿ ಪೂಜಿಸಿ, ಸಂಭ್ರಮದಲ್ಲಿದ್ದ ಗಾಂಧಾರಿ ನನ್ನನ್ನು ಗಮನಿಸದೇ ಹೋದಳು. ನನ್ನ ಭಾಗ್ಯವೆಲ್ಲ ಗಂಡನೊಂದಿಗೆ ನಷ್ಟವಾಯಿತು. ನೀವು ಯಾರೊಬ್ಬರೂ ಆಗ ಇರಲಿಲ್ಲ. ಸತ್ಯವಿದ್ದರೆ ಜಯ ದೊರಕೀತೆಂದು ಮನದಲ್ಲಿ ಭಾವಿಸುತ್ತಿದ್ದೇನೆ. ಮಗನೇ. . . ನನಗೀ ವಿಧಿಯಾಯಿತಲ್ಲಾ !!. . . . ಎಂದು ಕುಂತು ಅತ್ತಳು. )

ಇದನ್ನು ಕೇಳಿದ ಅರ್ಜುನ ಹೀಗೆ ಪ್ರತಿಜ್ಞಾಬದ್ಧನಾಗುತ್ತಾನೆ.
ಇಂದ್ರನ್ ಗಜರಾಜನ ಕಲ್ಪಕೊಮಾ ಸುರಧೇನುವಿ ಕೂಡ
ಮಂದೀಪನೆ ತರ್ಪೊವೆ ಚೂಲೆ ರಾಜಾಂಗಣಂಕಾವ
ಸಂದೇಹಿಪನೇ ಸುರೆರಾ ನರೆರಾ ಬಹುಮಾನಿಪಿನಂದೊ
ಅಂದಾಕವುನೆಪ್ಪುಟ ಮಿತ್ತ್ ಕೆನಾ ಬಿರು ಪತ್ತಯೆನೆಂದೆ ||    (೫-೪೦)

ಎಂದಾಪು ಕಿರೀಟಿ ನಮಸ್ಕರಿತೇ ದೇವೇಂದ್ರನಿ ಮುನ್ನಾ
ಸಂದೇಹಿಪನೇ ಬರಲೋಲೆ ತನಾ ಸರಳಾ ಮುನೆಟ್ ಪ್ಪ
ಸಂಧಿತಯೆ ತೆರ್ವುಟ್ ಕೊೞ್ತಿಜಿಸ್ಟ್ ಬಲಿತ್ ಕೆಬಿಮುಟ್ಟ
ಮಂದಾರಗಿರೀ ಧರೆಯಾ ಥಳರಾ ಧ್ವನಿಯಾಸ್ಟ್ ಣತಾವು ||          (೫-೪೧)

(“ನಮ್ಮ ರಾಜಾಂಗಣಕ್ಕೆ ಇಂದ್ರ ಐರಾವತ, ಕಲ್ಪವೃಕ್ಷ, ಕಾಮಧೆನುಗಳನ್ನೇ ತರಿಸದಿದ್ದರೆ ನೋಡಿ. ಸುರನರರು ಮನ್ನಿಸುವಂತೆ ಮಾಡಿದಿದ್ದರೆ, ಇನ್ನು ಮುಂದೆ ಧನುಸ್ಸನ್ನೇ ಹಿಡಿಯುವುದಿಲ್ಲ” ಎಂದು ಶಪಥ ಮಾಡಿ ದೇವೇಂದ್ರನಿಗೆ ನಮಸ್ಕರಿಸಿ ಪತ್ರ ಬರೆದು, ಅದನ್ನು ಬಾಣದ ಮೊನೆಯಲ್ಲಟ್ಟು ಬಿಲ್ಲಿ ಸಿಲುಕಿಸಿ, ಆಕರ್ಣಾಂತವಾಗಿ ಹೆದೆಯೇರಿಸಿ ಪ್ರಯೋಗಿಸಲು ಭೂಮಿಯೇ ನಡುಗಿತು. )

ಅದನ್ನು ಓದಿದ ಇಂದ್ರನಿಗೆ ಸಿಟ್ಟೇರಿದರೂ, ನಾರದರ ಸಲಹೆಯಮತೆ ‘ವ್ಯೋಮೊಂಕಾ ಪೃಥಿವೀಕ ತೆರ್ವಟೆ ತಾನೆ ಆಕವಡೆಂದೆನಾ. ಅದರಂತೆ ಅನೆಯಿಳಿಯಲು ದಾರಿಯನ್ನು ನಿರ್ಮಿಸುವಂತೆ ಹೇಳುತ್ತಾನೆ. ಅದರಂತೆ ಸ್ವರ್ಗಮರ್ತ್ಯಗಳನ್ನು ಸಂಧಿಸುವ ಶರಸೇತುವನ್ನು ಅರ್ಜುನ ನಿರ್ಮಿಸುತ್ತಾನೆ. ಅದರಲ್ಲಿ ಐರಾವತಗಜ ಕೆಳಗಿಳಿದು ಬರುತ್ತದೆ. ಅದರೊಂದಿಗೆ ಕಲ್ಪವೃಕ್ಷ – ಕಾಮಧೇನುವೇ ಮೊದಲದ ಸ್ವರ್ಗದ ಸಿರಿಸಂಪದಗಳೂ ಭೂಮಿಗೆ ಬರುತ್ತವೆ.

ಈಗ ಗಜನೋಹಿಯ ಸಂಭ್ರಮ ಕುಂತಿಯದು. ಅದಕ್ಕಾಗಿ ಗಾಂಧಾರಿಯನ್ನು ಕರೆಯಲು ಕುಂತಿ ಹೋಗುವುದು, ಅವರೀರ್ವರಲ್ಲಿ ನಡೆಯುವ ಸಂವಾದ, ಅನಂತರ ಕುಂತಿ ಐರಾವತವನ್ನೇರಿ ನಗರಪ್ರದಕ್ಷಿಣೆಗೆ ಹೊರಡುವುದು – ಮುಂತಾದವುಗಳು ಗಮನ ಸೆಳೆಯುತ್ತವೆ. ಇಲ್ಲಿ ‘ಶ್ರೀಕೃಷ್ಣ ಭಕ್ತಿ ಪಾರಮ್ಯ’ದ ಕುರಿತಾಗಿ ಯಾವುದೇ ಉಲ್ಲೇಖಗಳು ಕಂಡುಬರುವುದಿಲ್ಲ. ಕುಮಾರವ್ಯಾಸನಾದರೋ ‘ತಿಳಿಯ ಹೇಳುವ ಕೃಷ್ಣ ಕಥೆಯನು’ ಎಂದು ಹೇಳಿ ಹೆಜ್ಜೆ ಹೆಜ್ಜೆಗೆ ವೀರನಾರಾಯಣನನ್ನು ಸ್ತುತಿಸಿದನು. ಆದರೆ ಅರುಣಾಬ್ಜನ ಕಾವ್ಯದಲ್ಲಿ ಎಲ್ಲಿಯೂ ಇಂತಹ ಪರಮವೈಷ್ಣವಭಕ್ತಿ ಪ್ರಟಕವಾಗಿವದಿಲ್ಲ. ಗಜನೋಹಿಯ ಸಂದರ್ಭದಲ್ಲಿ ಅರ್ಜುನನು ಬಾಣಪ್ರಯೋಗದ ಮುನ್ನ ಶ್ರೀಹರಿಯನ್ನು ಸ್ತುತಿಸುವುದಾಗಲೀ, ಶರಸೇತುವಿಗೆ ಶ್ರೀಹರಿಯ ದಿವ್ಯ ರಕ್ಷೆ ಸಿದ್ಧಿಸುವುದಾಗಲೀ (ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗದಲ್ಲಿರುವಂತೆ) ವ್ಯಕ್ತವಾಗುವುದಿಲ್ಲ. ‘ಹರಿನಾ ಹರನಾ ನಿನೆತ್’ ಎಂದಷ್ಟೇ ಹೇಳಿ ಅರ್ಜುನ ಶರ ಪ್ರಯೋಗಿಸುತ್ತಾನೆ. ಕುಂತಿಯೂ ‘ಉರಗ ಶಯನನಿ ನಿನೆತ್’ ಐರಾವತವನ್ನೇರುತ್ತಾಳೆ. ಉಪಾಖ್ಯಾನದ ಕೊನೆಯಲ್ಲಿ ‘ಶ್ರೀ ಕ್ ಮಂದಿರೆಯಾಸ್ಟಿ ಕೃಷ್ಣನಿ ಧ್ಯಾನಿತ್ ಸುಖಿತೆತ್ತೆರ್’ ಎಂಬ ಸಾಲಿದ್ದರು, ಅದು ‘ಮೃಡರಾಮ’ ಸ್ತುತಿಗೆ ಸಂಬಂಧಿಸಿದುದೆಂಬುದು ಅನಂತರದ ಪದ್ಯದಿಂದ ವೇದ್ಯವಾಗುತ್ತದೆ. ಪರಮಾತ್ಮ ಧ್ಯಾನಕ್ಕೆಂದೆ ರಚನೆಗೊಂಡ ಯಾವುದೇ ಸ್ತುತಿಪದ್ಯಗಳಿಲ್ಲದಿರುವುದು ಇಲ್ಲಿ ಗಮನಾರ್ಹವಾಗಿದೆ.

ಇನ್ನೊಂದು ಮುಖ್ಯವಾದ ಅಂಶವೆಂದರೆ, ಇಲ್ಲಿ ‘ಗಜಗೌರಿ’ ಎಂಬ ಪದ್ರಪಯೋಗವಿಲ್ಲ. ಹಾಗಾಗಿ ಕೇವಲ ಆನೆಗೆ ಪೂಜೆ ನಡೆಯುತ್ತದೆ. ಅಂತರ್ಯಾಮಿಯಾದ ಯಾವ ದೇವತಾರಾಧನೆ ಎಂಬುದು ಸ್ಪಷ್ಟವಾಗುವುದಿಲ್ಲ. ಪಾರ್ತಿಸುಬ್ಬನ ಯಕ್ಷಗಾನ ಕಾವ್ಯದಲ್ಲಿ ಗಜಗೌರೀಪೂಜೆಯೆಂಬುದು ನಿರ್ದಿಷ್ಟವಾಗಿದೆ. ಅರುಣಾಬ್ಜನ ಕಾವ್ಯದಲ್ಲಿ ಗೌರಿಯನ್ನುಆವಾಹಿಸುವ ಬದಲಿಗೆ ಸ್ವತಃ ಕುಂತಿಯೇ ಗಜಾರೂಢೆಯಾಗಿ ನಗರಪ್ರದಕ್ಷಿಣೆಗೆ ಹೊರಡುವುದು ಸ್ವಲ್ಪಮಟ್ಟಿಗೆ ಅಸಂಬಂದ್ಧವೆಂದೇ ತೋರುತ್ತದೆ.

‘ವಿಧವೆಯಾದ ತನ್ನ ತಾಯಿಗೆ ಸಮಾಜದಲ್ಲಿ ಗೌರವವಿರಲಿಲ್ಲವೆಂಬ ಕೊರಗು ಪಾರ್ತಿಸುಬ್ಬನಿಗಿದ್ದಿತೆಂದೂ, ಆ ನೋವನ್ನು ಪ್ರಕಟಿಸುವುದಕ್ಕಾಗಿ ವ್ರತದೀಕ್ಷಿತೆಯಾದ ಸುಮಂಗಲಿ ಕುಂತಿಯ ಚಿತ್ರಣವುಳ್ಳ ಯಕ್ಷಗಾನ ಕಾವ್ಯವನ್ನು ಅವನು ಬರರೆದನೆಂದೂ ನಂಬಲಾಗಿದೆ. ಆದರೆ ಅರುಣಾಬ್ಜನ ಕಾವ್ಯದಲ್ಲೂ ವಿಧವೆಯಾದ ಕುಂತಿಯು ಸರ್ವಾಲಂಕಾರಭೂಷಿತೆಯಾಗಿ ಗಜಪೂಜೆ ನೆರವೇರಿಸುವುದನ್ನು ನೋಡಿದರೆ ಪಾರ್ತಿಸುಬ್ಬನ ಕುರಿತಾದ ಈ ಹೇಳಿಕೆ ಕೇವಲ ಕಲ್ಪನೆಯೆನಿಸುತ್ತದೆ.

ಅಂಬಿಗನ ಕಥೆ

ಅರಕಿಲ್ಲ್ ಟ್ ತ್ತಾ ಬಿಲೊಮಿನ್ ಪೊಗಿಸ್ಟ್
ಇರ್ ಳೇ ಪಿದೆಯಾಯೆರ್ ಪಾಂಡವೆರ್
ಪೆರ್ ತೆರ್ವಟೆ ತಪ್ಪಸ್ಟ್ ವೈತೆರುವೆ
ತರಸಾಕ್ಳು ಗೆಮೀತೆರೆ ಸಂಭ್ರಮಿತ್     (೮-೨)

ಅರಗಿನರಮನೆಯಿಂದ ತಪ್ಪಿಸಿಕೊಂಡ ಪಾಂಡವರು ಸುರಂಗ ಮಾರ್ಗದಲ್ಲಿ ಹೊರಬಂದು, ಕತ್ತಲಾಗುವ ಹೊತ್ತಿಗೆ ಗಂಗಾತೀರಕ್ಕೆ ಬಂದು ದೋಣಿಯ ಮೂಲಕ ನದಿಯನ್ನು ದಾಟಿಸುವಂತೆ ಅಂಬಿಗನೊಬ್ಬನಲ್ಲಿ ವಿನಂತಿಸುತ್ತಾರೆ. ದೋಣಿಯಲ್ಲಿ ಸಾಗುತ್ತಿರುವಷ್ಟರಲ್ಲಿ ’ಅಂಬಿಗನೇನಾದರೂ ತಮ್ಮ ಕುರಿತು ಯಾರಲ್ಲಾದರೂ ಹೇಳಿದರೆ ಮುಂದೆ ಅಪಾಯವುಂಟಾಗಬಹುದೆಂದು’ ಧರ್ಮರಾಯನಿಗೆ ಭಯವುಂಟಾಗುತ್ತದೆ. ಅದಕ್ಕೆ ಭೀಮಸೇನನು ಕೂಡಲೇ ಒಂದು ಉಪಾಯ ಹೂಡಿ, ಅಂಬಿಗನಿಗೆ ಭವಿಷ್ಯಫಲವನ್ನು ಹೇಳತೊಡಗುತ್ತಾನೆ-

ತಂದೆತಾಯಿಕುಳುಳ್ಲೆರತಾಪಿನ್ಕ್
ಬಂದುವರ್ಗೊಮ ಗೋಧನೊಮುಂಡಧಿಕಂ
ಕುಂದ್ ದಂತಿ ಮಹಾಬಲವೀರ್ಯಕೆನಾ
ಛಂದೊಮುಂಡಿನ ಲಕ್ಷಣ ಸೌಂದರಿಯಂ                       (೮-೧೫)
ಮಿತ್ತೆರುಳ್ಳೆರ್ ಮೂವೆರ್ ಕೂಡುದಿತಿನ್
ಪುತ್ರೆರುಳ್ಳೆರ್ ಪಂಚಬಲಾಢ್ಯೆಕೆರ್
ಓರ್ತಿ ಪೊಣ್ಣಸ್ಟೆಟ್ ತ್ತ್ ಗುಣಜ್ಞೆತಿನಾ
ಭರ್ತ್ರುವಾಳೆಕ್ ನುಂಬೊರಿ ಮಾಜಿಸ್ಟೆನಾ         (೮-೧೮)

(ನಿನಗೆ ತಂದೆತಾಯಿಗಳೂ, ಬಂಧುಬಾಂಧವರೂ ಇದ್ದಾರೆ. ಗೋಸಂಪತ್ತು ಹೆಚ್ಚಾಗಿದೆ. ಮಹಾಸಾಮರ್ಥ್ಯವಿರುವ ನಿನ್ನ ಲಕ್ಷಣ ತುಂಬಾ ಚೆನ್ನಾಗಿದೆ. ಮೂವರು ಗೆಳೆಯರು, ಐವರು ಮಕ್ಕಳೂ, ಒಬ್ಬಳು ಹೆಂಡಿತಿಯೂ ಇದ್ದಾರೆ. ಹೆಂಡತಿಗೆ ಮೊದಲೊಬ್ಬ ಗಂಡನಿದ್ದು, ಅವನು ಬಿಟ್ಟುಹೋಗಿದ್ದಾನೆ. )

ಈ ಲಕ್ಷಣಫಲಗಳನ್ನು ಕೇಳಿದ ಅಂಬಿಗನಿಗೆ ಸಂತೋಷವಾಗುತ್ತದೆ. ಅಷ್ಟರಲ್ಲಿ ನಾವೆಯು ನದಿಯ ದಡವನ್ನು ತಲುಪುತ್ತದೆ. ಆಗ ಭೀಮನು ‘ನಾಲಗೆಯ ಲಕ್ಷಣವನ್ನು ಹೇಳುತ್ತೇನೆಂದು’ ನಾಲಗೆಯನ್ನು ತೋರಿಸುವಂತೆ ಹೇಳುತ್ತಾನೆ. ಅಂಬಿಗನು ಬಾಯಿ ತೆರೆದು ನಾಲಗೆಯನ್ನು ಹೊರಚಾಚಿದ ತಕ್ಷಣ ಭೀಮನು ಒಂದು ಕೈಯಿಂದ ಅವನ ತಲೆಯನ್ನೂ ಇನ್ನೊಂದು ಕೈಯಿಂದ ಗಲ್ಲವನ್ನೂ ಒಮ್ಮೆಗೇ ಒತ್ತಿಬಿಡುತ್ತಾನೆ. ಅಂಬಿಗನ ನಾಲಗೆ ತುಂಡಾಗಿ ದೇಹವೆಲ್ಲಾ ರಕ್ತಮಯವಾಗಿ ವಿಲವಿಲನೆ ಒದ್ದಾಡುತ್ತಿರುವಾಗ ಪಾಂಡವರು ಅಲ್ಲಿಂದ ಮರೆಯಾಗಿ ಹೋಗುತ್ತಾರೆ. ಅಂಬಿಗನಾದರೋ ಗೋಳೋ ಎಂದು ಅಳುತ್ತಾ ಬೀದಿ ಸುತ್ತಾಡಿ, ಕೊನೆಗೆ ಹಸ್ತಿನಾವತಿಗೆ ಬರುತ್ತಾನೆ. ನಾಲಗೆಯೇ ಇಲ್ಲದಿರುವಾಗ, ಅವನ ಗೋಳಿನ ಕಥೆ ಯಾರಿಗೆ ತಾನೆ ಅರ್ಥವಾಗುತ್ತದೆ?

ಹಸ್ತೊಕಾಟ್ ಸ್ಟ್ ಹೂಂಕೃತಿ ಸಲ್ಲ್ ಸ್ಟ್ ತ್
ಪೆತ್ತತಾ ಪರಿಶೇ ಧ್ವನಿತಾಪಧಿಕೋ
ವಿಸ್ತರೀಪ್ಪುಣ ಕೇಳುಪನಾ ವಿದ್ರುವೇ
ವರ್ತೆರಂತ್ ಕ್ ಕೌರವಭೂಪತಿನಾ      (೮-೩೪)

ಕೌರವನ ಆಸ್ಥಾನದಲ್ಲಿ ಕೈಸನ್ನೆಯಿಂದ ತೋರಿಸಿ, ಹಸುವಿನಂತೆ ಹೂಂಕರಿಸುತ್ತಾ ಅಂಬಿಗನು ತನ್ನ ಕಥೆಯನ್ನು ಹೇಳಿಕೊಂಡಾಗಲೂ ವಿದುರನು ಅದಕ್ಕೆ ಬೇರೆಯೇ ಅರ್ಥ ಹೇಳುತ್ತಾನೆ. ‘ಕುಂಬಾರನು ಐದು ಮಡಿಕೆಗಳನ್ನು ಮಾಡಿ ಹೊತ್ತುಕೊಂಡು ಬರುವಾಗ, ಅದರಲ್ಲೊಂದು ದೊಡ್ಡ ಮಡಿಕೆಯು ಜಾತಿ ಕೆಳಗುರುಳಿ ಬಿದ್ದು ಪುಡಿಯಾಯಿತು’ ಎಂದ ವಿದುರನ ಮೇಲೆ ಅಂಬಿಗನಿಗೆ ಇನ್ನಷ್ಟು ಸಿಟ್ಟು ಬರುತ್ತದೆ. ಆದರೆ ಅವರ ಆಕ್ರಂದನ ಯಾರಿಗೂ ಅರ್ಥವಾಗದೇ ಹೋಗುತ್ತದೆ. ಒಂದು ದುರಂತ ಚಿತ್ರಣವಾಗಿ ಈ ಕಥೆ ನಮ್ಮ ಮನಸ್ಸನ್ನು ಕಲುಕಿಬಿಡುತ್ತದೆ. ಮೂಲ ಮಹಾಭಾರತದಲ್ಲಾಗಲೀ, ಗದುಗಿನ ಭಾರತದಲ್ಲಾಗಲೀ ಈ ಕಥೆಯ ಎಳೆಯಿಲ್ಲ. ಅದನ್ನು ಅರುಣಾಬ್ಜ ಎಲ್ಲಿಂದ ಆಯ್ದುಕೊಂಡನೆಂಬುದು ತಿಳಿಯದು. ಆಕಾರಣವಾಗಿ ಸಂದೇಹಿಸುವ ಧರ್ಮರಾಯ, ನಿರಪರಾಧಿಯೊಬ್ಬನನ್ನು ಹಿಂಸಿಸುವ ಭೀಮ, ಮಹಾಭಾರತದ ಪಾತ್ರಚಿತ್ರಣಕ್ಕೆ ಅಪವಾದವಾಗಿ ನಿಲ್ಲುತ್ತಾರೆ. ಇದು ನಮ್ಮ ಹರಿಕಥೆಗಳಲ್ಲಿ ಕೇಳಿಬರುವ ಉಪಕಥೆಯ ಹಾಗಿದೆ. ದ್ವೈತ ಸಿದ್ಧಾಂತ ಸಂಸ್ಥಾಪನೆಯ ಅನಂತರ ಹುಟ್ಟಿಕೊಂಡ ಹರಿಕಥಾ ಕಾಲಕ್ಷೇಪದ ರಂಜನೀಯ ಉಪಕಥೆಗಳಿಂದ ಈ ಅಂಬಿಗನ ಉಪಕಥೆಯನ್ನು ಅರುಣಾಬ್ಜನು ಸಂಗ್ರಹಿಸಿದನೆಂದು ಊಹಿಸಬಲ್ಲದು.

ಸ್ತ್ರೀವರ್ಣನೆ

ದ್ರೌಪದೀ ಸ್ವಯಂವರ ಸಂದರ್ಭದಲ್ಲಿ ಕವಿಯು ದ್ರೌಪದಿಯ ಸಖಿಯರನ್ನು ವರ್ಣಿಸುವ ಪರಿ ಹೀಗಿದೆ :

ಧರಿತೀ ಕಸ್ತುರಿಗಂಧಂ
ವರಚರ್ಮೊ ಪಲವೆಕುಳು
ಬಿರುಪುರ್ಬು ಶರೋಮಕ್ಷಿಸ್ಟ್ ಳವಾಸೆತಾ
ಕರದಾಳ್ ನಳಿತೋಳಾ
ಫೆರಿಯಾ ಲವುಡಿನಖಂತಾ
ಚುತಿಯೇಯುಳ್ಳಾಂಡಂಗನೆ ಸಂಘಾತೊ          (೧೨-೩೯)

ಕಸ್ತೂರಿಗಂಧಗಳನ್ನು ಲೇಪಿಸಿಕೊಂಡ ಮೈಯ ಚರ್ಮವೇ ಒಂದು ಗುರಾಣಿ! ಹುಬ್ಬಗಳೇ ಬಿಲ್ಲು! ಕಣ್ಣನೋಟವೇ ಶರಪ್ರಯೋಗ! ನಳನಳಿಸುವ ತೋಳುಗಳೇ ಕಠಾರಿಗಳು! ಉಗುರುಗಳೇ ಖಡ್ಗಗಳು! ಅಂತಹ ಸಖೀ ಸ್ತ್ರೀಸಮೂಹವೇ ಮನ್ಮಥನ ಚತುರಂಗಸೇನೆ!

ಮಿರುಕುಳಾನೆತ ಪುಂಡ್
ಪೆರಮಾರಾ ರಥೊಮೆಡ್ಡಾ
ತುರಗೋಮಾಸ್ಟೌಳ್ ಚಂಚಲನೇತ್ರೊಂಕ್ಳು|
ವರಪತಾಕೆಕುಳಾಷ್ಟು-
ತ್ತರಿಯೆತಾ ವಸನಂಕ್ಳು
ಹರವೈರೀ ಚತುರಂಗೊ ನಡತ್ ಣಿಂಚ |          (೫-೪೦)

ಸ್ತ್ರೀಯರ ಸ್ತನಮಂಡಲಗಳೇ ಗಜಸಮೂಹ! ಪೃಷ್ಠಗಳೇ ರಥ! ಚಂಚಲನೇತ್ರಗಳೇ ತುರಗಸಂಕುಲ! ಸೀರೆಯ ಸೆರಗುಗಳೇ ಪತಾಕೆಗಳು!(ಇಲ್ಲಿ ‘ಪತಾಕೆ’ ಎಂಬುದು ‘ಪದಾತಿ’ ಎಂದಾಗಿರಬೇಕು. ಹಾಗಾದಾಗಲೇ ಚತುರಂಗ ಸೇನೆಯ ಲಕ್ಷಣ ಪೂರ್ಣವಾಗುತ್ತದೆ. )

ಮನ್ಮಥನ ಚತುರಂಗ ಸೈನ್ಯವೇ ಎದ್ದುಬಂದಂತೆ ಅವರು ನಡೆದುಬಂದರೆಂದು ಈ ವರ್ಣನೆಯಲ್ಲಿ ಸ್ಟೋಪಜ್ಞತೆಯ ಹೊಳಹಿದೆ. ದ್ರೌಪದಿಯ ಸಖಿಯರೇ ಇಷ್ಟು ಸುಂದರಿಯರಿರುವಾಗ ಆಕೆ ಎಷ್ಟು ಚೆಲುವೆಯಾಗಿರಬಹುದೆಂಬುದು ಕವಿಯ ಆಶಯವಾಗಿರಬಹುದು.

ಇಳೆಟ್ ದ್ರೌಪತಿದೇವಿ-
ನಳಕೊಮಾ ಮುಡಿಯಾ ಚೂ-
ಸ್ಟೆಳ್ ಸ್ಟಾತೇರೆಕ್ ಲಾ ಕಣ್ಣಿರವಿಯೆರಾ
ನಳಿತೋಳ್ಕುಳಿರಡಾ ಕೆಂ-
ದಳೊಮಾ ದೆರ್ಶಿಪಿನಕ್ಷೀ
ಕಳೆಯೋೞ್ಕ್ ಣಾಸ್ಟೇಕೊಂಪಿಕಳುವಾಸ್ಟ್ ಪ್ಪೂ ||         (೧೨-೯)
ವದನೊಮೀಕ್ಷಿ ತಿನಕ್ಷಿ
ಪಿದೆಯಿಪ್ಪಾ ಬರಯೊ ಜಾ
ಕದ್ ರ್ ಕೋ ಕಂಠೊಂಟಾವಿನಿ ವೆರ್ತೌಳ್
ಮದತ್ ನೋಡುವಿನೌಳೇ
ಕೆದಿಯೀಣಾವನೆಯುಂಡೋ
ಕದುವೋವೆರೆಳಿಯೋ ಚೂವುಟ ಯುಗ್ಮಂತ್ ||             (೧೨-೧೦)

ವಧುವಾಗಿ ಬರುವ ದ್ರೌಪದಿಯ ವರ್ಣನೆಯಿದು. ಅವಳ ಸೌಂದರ್ಯವೆಷ್ಟೆಂದರೆ ನೋಡುವವರ ದೃಷ್ಟಿ ಆಕೆಯ ಒಂದೊಂದು ಅಂಗಾಂಗದಲ್ಲಿ ನೆಟ್ಟುಬಿಡುತ್ತದೆ. ಆಕೆಯ ಮುಂಗುರುಳು, ಮುಡಿ, ತೋಳುಗಳಿಂದ ಕಣ್ಣನೋಟವನ್ನು ಹಿಂತೆಗೆಯಲು ಸಾಧ್ಯವಿಲ್ಲವಂತೆ!

ಇಂಚಿತ್ತಿ ಮಡರಿನೀ
ಮೆಂಚೊಂಜೇಟುಪಮೀತ್
ಯೆಂಚ ವರ್ಣಿಪೂಳೀ ಕವಿಕುಳೆಕ್
ಅಂಚೆರ್ಕಾಂಚನೊ ಕಾಜಾ
ಮೆಂಚಿಕ್ ಸರಿಯೆಂದ್
ಅಂಚಲಾ ಪುಗಳ್ ಕ್ ಣೌ ವಂಚಿಕ್ಕಾ ||            (೧೨-೧೩)

ಇಂತಹ ಚೆಲುವೆಯನ್ನು ಹೇಗೆ ವರ್ಣಿಸುವುದೆಂದೂ ಯಾವುದಕ್ಕೆ ಹೋಲಿಸುವುದೆಂದೂ ಈ ಕವಿಗಳಿಗೆ ತಿಳಿಯದು! ಹಂಸೆ, ಕಾಂಚನ, ಗಾಜು, ಮಿಂಚುಗಳಿಗೆ ಸರಿಯೆಂದು ಹೊಗಳಿದರೂ, ಅವುಗಳು ವಂಚಿಸಿಬಿಡುತ್ತವೆ. ಅರ್ಥಾತ್ ಉಪಮೆ ಸಾಮರ್ಥಕವಾಗಲಾರದೆಂದು ಕವಿಯ ಭಾವನೆ.

ಅಂಗಾರಪರ್ಣ ವೃತ್ತಾಂತದಲ್ಲಿ ಗಂಧರ್ವ ಸ್ತ್ರೀಯರು ಜಲವಿಹಾರ ವರ್ಣನೆಯಂತೂ ಮನೋಜ್ಞವಾಗಿ ಮೂಡಿಬಂದಿದೆ.

ಅರವಿಂದೊಮಿರ್ ಳ್ ಟೀ
ಅರಲ್ ಕೀ ಪರಿಶಿತ್ತೊ
ಸರಸೀತಂಗನೆಕುಳೆ ಮುಖಪದ್ಮೊಂಕ್ಳು
ಕುರುಳಾಳಿಯಯೆ ಮಿತ್ತೌ
ಳೇರವುಕಿ ಮಧುವುಣ್ಕೀ
ವರ ತುಂಬೀಕುಳೆನಂದೊಮತಿ ಶೋಭಿಪ್ಪೊ ||
ಶಶಿಬಿಂಬೊ ತಂಕುಳೆನಂದೊ
ನಿಶಿಟ್ ಮೆಂಚಿಸ್ಟ್ ನಾಲ್
ದಿಶೆಕ್ ಶೋಭಿತೊ ವಕ್ತ್ರೊ ಕುಚಭಾರೊಂಕ್ಳು
ದಶಿರಿಕ್ಕ್ ತಿಮಿರೋಮಿನ್
ವಶೊಮಾಕೋಭೊನ ಕೂಡ
ಕುಶರುಹಾಕ್ಷಿಕುಳೇ ಲೀಲೆಕ್ ಭೂಪಾಲ
ಪಳ*ವೆಂದಂಗನೆಕುಳು
ತೆಳಿಪಾಪ ದೆಶನಂಕುಳು
ಧಳಗ್ ಪ್ಪೊ ನಿಶಿಕ್ ಮೆಂಚಿಕುಳೆ ಜ್ಯಾತಿ
ಅಳ ಬಾಳೇಕುಳೆನಂದೊ
ಬುಳೊವುಪ್ಪೀ ನಯನಂಕುಳು
ಅಳನೀಲಾಳಕಿಕುಳ ಕ್ರೀಡಿಪುಕೇರಿಂಚಾ   (೧೦-೩೦)

“ಇರುಳಲ್ಲಿ ಅರಳಿದ ಅರವಿಂದ’ದಂತಿರುವ ಮುಖಪದ್ಮದ ಮಧುವೀಂಟಲು ಬಂದ ‘ಮುಂಗುರುಳ ಸಾಲುದುಂಬಿಗಳು’ ಸ್ತ್ರೀವರ್ಣನೆಯ ಒಂದು ಸರಳ ಸುಂದರ ಚಿತ್ರ. ಶಶಿಬಿಂಬದ ತನುಕಾಂತಿ, ದಶದಿಕ್ಕುಗಳನ್ನೂ ವಶಗೊಳಿಸುವ ಕುಚಭಾರ, ದಾಡಿಮಫಲದಂತಹ ದಂತಪಕ್ತಿ, ಎಳೆ ಬಾಳೆಮೀನುಗಳಂತಿರುವ ಮಿನುಗುಕಣ್ಣುಗಳು ಪ್ರತಿಯೊಂದು ಕವಿಯ ರಸಿಕತೆಗೆ ಸಾಕ್ಷಿಯಾಗಿದೆ.

 

* ಇಲ್ಲಿಪಳ = ಫಲ= ದಾಡಿಮಫಲಎಂದುಅರ್ಥೈಸಲಾಗಿದೆ.)