ವಿಷ್ಣುತುಂಗನ ಶ್ರೀ ಭಾಗವತೊ

ತುಳು ಕಾವ್ಯ ‘ಶ್ರೀ ಭಾಗವತೊ’ದ ತಾಡವಾಲೆ ದೊರೆತದ್ದು ಕಾಸರಗೋಡು ಹತ್ತಿರದ ಮಧೂರು ಶಿವನಾರಾಯಣ ಸರಳಾಯರ ಮನೆಯಲ್ಲಿ, ಅದನ್ನು ಸಂಶೋಧಿಸಿದ ಕೀರ್ತಿ ವಿದ್ವಾನ್ ವೆಂಕಟರಾಜ ಪುಣಿಂಚಿತ್ತಾಯರಿಗೆ ಸಲ್ಲುತ್ತದೆ. ಇದು ದೊರೆತಿರುವ ಏಕೈಕ ಹಸ್ತಪ್ರತಿಯಾದುದರಿಂದ ಪಾಠಾಂತರಗಳಿವೆ ಅವಕಾಶವಿಲ್ಲ. ಆದರೆ ದೊರೆತ ಕಾವ್ಯ ಸಂಪೂರ್ಣವೆಂದು ಹೇಳಲಿಕ್ಕಾಗದು. ಏಕೆಂದರೆ ಈ ಕಾವ್ಯದಲ್ಲಿರುವ ಕೇವಲ ಮೂರು ಸ್ಕಂಧಗಳ ವ್ಯಾಪ್ತಿಯಲ್ಲಿ ೪೯ ಅಧ್ಯಾಯಗಳಲ್ಲಿರುವ ೧೯೮೮ ಪದ್ಯಗಳು. ಸಂಸ್ಕೃತದಲ್ಲಿ ೧೮, ೦೦೦ ಶ್ಲೋಕಗಳು, ಕನ್ನಡದಲ್ಲಿ ೧೨, ೦೦೦ ಭಾಮಿನಿ ಷಟ್ಪದಿಗಳೂ ಆಗಿರುವ ಭಾಗವತ ಕಾವ್ಯರಾಶಿಯನ್ನು ಗಮನಿಸಿದರೆ ಇದು ಅತ್ಯಲ್ಪವೆಂದೇ ಹೇಳಬೇಕು. ಅದರಲ್ಲೂ ಭಾಗವತದಲ್ಲಿ ಅತ್ಯಂತ ಪ್ರಮುಖ ಭಾಗವೆನಿಸಿದ ಶ್ರೀ ಕೃಷ್ಣ ಲೀಲಾಪಾರಮ್ಯದ ದಶಮ ಸ್ಕಂಧವೇ ದೊರೆತಿಲ್ಲವಾದ್ದರಿಂದ ಕವಿ ಪ್ರತಿಭೆಯ ಸಮ್ಯಕ್ ದರ್ಶನ ಸಾಧ್ಯವಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಕಾವ್ಯದ ಕೊನೆಯಲ್ಲಿ ಕಾವ್ಯ ಪರಿಸಮಾಪ್ತಿಯ ಪದ್ಯಗಳಾಗಲಿ, ಫಲಶ್ರುತಿಯ ಪದ್ಯಗಳಾಗಲೀ ಕಂಡುಬರುವುದಿಲ್ಲ. ಕೃತಿಯ ಅಂತಿಮ ಪದ್ಯವು ಮುಂದಿನ ಅಧ್ಯಾಯದ ನಾದಿ ಪದ್ಯದಂತಿದೆ! ಹೀಗಾಗಿ‘ಶ್ರೀ ಭಾಗವತೊ’ ಕೂಡ ಅಸಮಗ್ರ ಕಾವ್ಯವೆಂದೇ ಹೇಳಬೇಕಾಗುತ್ತದೆ.

ಕವಿಯು ತನ್ನ ಕೃತಿಯಲ್ಲಿ ಅಲ್ಲಲ್ಲಿ ಪ್ರಯೋಗಿಸಿರುವ ಕಾವ್ಯ ಶೀರ್ಷಿಕೆಯ ಪದ್ಯಗಳನ್ನು ಇಲ್ಲಿ ಗಮನಿಸಬೇಕು.

೧. ಭಕುತೀಟಭಿವಂದಿತ್ ವರ್ಣಿಪುಕೇ ಶ್ರೀಭಾಗವತಾರ್ಥೊ (೧-೧-೮)
೨. ವೇದಂಕುಳೆ ಸಾರರಹಸ್ಯಮತೀ ಶ್ರೀ ಭಾಗವತಾರ್ಥೊ (೧-೧-೯)
೩. ಧರಣೀಸುರೆ ವಿಷ್ಣು ರೆಚೀತಿ ಕಥೆ ಶ್ರೀಭಾಗತಾರ್ಥೊ (೧-೧-೧೭)
೪. ಇತೆ ಪಂಡ್ ಣಸ್ಟೆಯ್ಯನುಮಾನಿಪುಟಾ ಶ್ರೀ ಭಾಗವತಾರ್ಥೊ (೨-೫-೪೬)

೫. ಶುದ್ಧಾತ್ಮಕ ತತ್ತ್ವವಿಭೆದಮತೊ ಶ್ರೀ ಭಾಗವತಾರ್ಥೊ (೨-೬-೨೦)
೬. ಗುಣಸಾಗರಸನ್ನತ ಸತ್ಕವಿತೇ ಶ್ರೀ ಭಾಗವತಾರ್ಥೊ (೧-೧೮-೪೦)
೭. ಸರ್ವಜ್ಞಮುನೀಂದ್ರೆರೆ ನಿರ್ಧರಿಪೀ ಶ್ರೀ ಭಾಗವತಾರ್ಥೊ (೨-೧-೧)
೮. ವಿರಚೀಪ್ಪೇನ್ ನಾಣಲ ಮಿತ್ತಕಥೇ ಶ್ರೀ ಭಾಗವತಾರ್ಥೊ (೨-೩-೧)
೯. ವರಭಾಗವತಾರ್ಥ ರೆಹಸ್ಯೊಮಿನೀ ಕೊಂಡಾಡ್ ಸ್ಟ್ ನುಂಬೂ (೩-೧-೩)
೧೦. ಸುಮನೋಹರೊಮಾಸ್ಟಿ ವಿಲಾಸಕಥೇ ಶ್ರೀ ಭಾಗವತಾರ್ಥೊ (೩-೫-೨೮)
೧೧. ಅಲೋಚಿತ್ ಕೇಂಡ್ ವಿಚಾರಿತಿನಾ ಶ್ರೀಭಾಗವತಾರ್ಥೊ (೨-೪-೪೪)
೧೨. ತೆರಿತೆಂಕುಪದೇಶಿತೆರಾ ಮುನಿಪೇ ಶ್ರೀ ಭಾಗವತಾರ್ಥೊ (೨-೫-೫೨)
೧೩. ಮೂಜೀ ವರಸ್ಕಂಧಂಟುಳ್ಳ ಕಥೇ ಶ್ರೀ ಭಾಗವತಾರ್ಥೊ (೩-೬-೩೫)
೧೪. ವಾರಾಹಾವತಾರ ಪುರಾಣಕಥೇ ಶ್ರೀ ಭಾಗವತಾರ್ಥೊ (೩-೮-೩೨)

ಈ ಮೇಲಿನ ಪದ್ಯಗಳಲ್ಲಿ ‘ಶ್ರೀ ಭಾಗವತಾರ್ಥೊ’ಎಂಬ ಹೆಸರನ್ನು ಮತ್ತೆ ಮತ್ತೆ ಬಳಸಿರುವುದನ್ನು ನೋಡಿದರೆ ಕಾವ್ಯದ ಹೆಸರು ‘ಶ್ರೀ ಭಾಗವತೊ’ ಎಂದಾಗಿರದೆ ‘ಶ್ರೀ ಭಾಗವತಾರ್ಥೊ’ಎಂದೇ ಆಗಿರಬೇಕೆಂದು ತೋರುತ್ತದೆ.

ಕವಿ – ಕಾಲ

ಗುರುಕನ್ನಿಟ್ ತಾಲಿಟ್ ಚಂದ್ರಮೆಯಾ ಬುಧೆ ಧಾರಿಣಿಪುತ್ರೆ
ವರಭಾಸ್ಕರೆ ಚೇಳ್ ಟ್ ಸೂರ್ಯಜೆಲಾ ಚಾಪೊಂಟಣೆಸ್ಟ್ ಪ್ಪಾ
ಉರಗೇ ಮಕರೊಂಟ್ ಪ ಕರ್ಕಿಟ್ ಪಾ ಶಿಖಿ, ತುಂಗಕುಲೊಂತಾ
ಧರಣೀಸುರೆ ವಿಷ್ಣು ರೆಚೀತಿ ಕಥೇ ಶ್ರೀ ಭಾಗವತಾರ್ಥೊ   (೧-೧-೧೭)

       
ಚಂದ್ರ     ಕೇತು
ರಾಹು      
ಶನಿ ಕುಜ, ಬುಧ, ರವಿ ಶುಕ್ರ ಗುರು

ಕವಿಯು ತನ್ನ ಜಾತಕವನ್ನು ಇಲ್ಲಿ ಹೇಳಿರುವುದು ವಿಶೇಷವಾಗಿದೆ. ಇದು ಕವಿಯ ಜಾತಕವಾಗಿರದೆ ಕಾವ್ಯ ರಚನಾ ಕಾಲದ ಗ್ರಹಸ್ಥಿತಿ ಎಂದು ಡಾ| ಪಾದೆಕಲ್ಲು ವಿಷ್ಣುಭಟ್ಟರು ಅಭಿಪ್ರಾಯಪಟ್ಟಿರುತ್ತಾರೆ.

[1] ‘ಮಹಾಭಾರತೊ’ ಮತ್ತು ‘ಕರ್ಣಪರ್ವ’ ತುಳು ಕಾವ್ಯಗಳಲ್ಲಿಯೂ ಇದೇ ರೀತಿಯ ಜಾತಕ ಪದ್ಯಗಳಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಜಾತಕದ ಆಧಾರದಲ್ಲಿ ಕವಿಯ ಕಾಲವನ್ನು ಕ್ರಿ. ಶ. ೧೬೩೬ ಎಂದು ನಿರ್ಧರಿಸಲಾಗಿದೆ. ಕವಿಯು ತಾನು ‘ತುಂಗಕುಲೋಂತ ಧರಣೀಸುರೇ ವಿಷ್ಣು’ ಎಂದು ಹೇಳಿಕೊಂಡಿರುವುದರಿಂದ ಕವಿಯು ‘ತುಂಗ’ ಕುಲನಾಮವುಳ್ಳ ಕೋಟಿ ಬ್ರಾಹ್ಮಣ ಪಂಗಡಕ್ಕೆ ಸೇರಿದವನೆಂದು ಭಾವಿಸಬಹುದು. ವಿಷ್ಣುತುಂಗನು ಜ್ಯೋತಿಷ್ಯಶಾಸ್ತ್ರದಲ್ಲಿ ಪಂಡಿತನಿರಬೇಕೆಂದು ತೋರುತ್ತದೆ. ಮಳೆ ಬರುವ ಲಕ್ಷಣದ ಗೃಹಗತಿಯನ್ನು ಪದ್ಯವೊಂದರಲ್ಲಿ ಅವನು ಉಲ್ಲೇಖಿಸಿರುವುದರಿಂದ ಈ ಊಹೆಗೆ ಸಮರ್ಥನೆ ದೊರೆಯುತ್ತದೆ. ಆದರೆ ಅವನ ಜಾತಕ ಪದ್ಯದಲ್ಲಿ ಶುಕ್ರಗ್ರಹದ ಸ್ಥಾನ ನಿರ್ದೇಶವಿಲ್ಲದಿರುವುದರಿಂದ ‘ತುಂಗ ಕುಲೋಂತ’ ಎಂಬಲ್ಲಿ ಪಾಠಾಂತರಗಳಿರುವುದನ್ನು ನಿರಾಕರಿಸುವುದಿಲ್ಲ. ಜ್ಯೊತಿಷ್ಯದ ಆಧಾರದಲ್ಲಿ ರವಿ ಮತ್ತು ಶುಕ್ರರಿಗೆ ಗರಿಷ್ಟ ೪೫ ಡಿಗ್ರಿ ಅಂತರವಿರಬೇಕಾದುದರಿಂದ ಶುಕ್ರನು ತುಲಾ ರಾಶಿಯಲ್ಲಿರುವುದು ಸಾಧ್ಯ. ಹಾಗಾಗಿ ‘ತುಂಗಕುಲೋಂತ’ ಎಂಬಲ್ಲಿ ‘ಕುಲ’ ಎಂಬುದಕ್ಕೆ ‘ಏಳರ ಸಂಕೇತ’ ಎಂದು ಕಲ್ಪಿಸಿ ‘ತುಂಗ’ ಎಂದರೆ ಶುಕ್ರನೆಂದು ಅರ್ಥೈಸಿ ಏಳನೆಯದಾದ ತುಲಾರಾಶಿಯಲ್ಲಿ ಶುಕ್ರನಿದ್ದಾನೆಂದು ಭಾವಿಸಬಹುದಾಗಿದೆ. ತುಂಗ ಪರಾಕ್ರಮ, ಶುಕ್ರ, ವೀರ್ಯ, ಶುಕ್ರ – ಶುಕ್ಲ-ಶ್ವೇತ-ಬೆಳ್ಳಿ (ತುಳುವಿನ ಬೊಳ್ಳಿ) ಮೊದಲಾದ ಅರ್ಥಚ್ಛಾಯೆಗಳಿಂದ ಶುಕ್ರನೆಂಬುದಕ್ಕೆ ಸಂವಾದಿಯಾಗಿ ‘ತುಂಗ’ ಶಬ್ದವನ್ನು ಕವಿ ಬಳಸಿರಬಹುದು. ಮನ್ಮಥನನ್ನು ‘ಕಾಂತು’ ಎಂದು ಕರೆ ಶುಕ್ರನಿಗೂ ‘ತುಂಗ’ ನೆಂದು ಹೊಸ ಹೆಸರಿಟ್ಟು ಕರೆದಿರಬಹುದು. ‘ತುಂಗ’ ಎನ್ನುವುದನ್ನು ವಿಶೇಷಣ ಪದವನ್ನಾಗಿ ಗ್ರಹಿಸಿ ‘ಶ್ರೇಷ್ಠ’ ಕುಲವೆನಿಸಿದ ಬ್ರಾಹ್ಮಣ ವಂಶದಲ್ಲಿ’ ಎಂದು ಅರ್ಥೈಸಿರಬಹುದು.

ತುಳು ಭಾಗವತದಲ್ಲಿ ಕನ್ನಡ ಭಾಗವತದ ಪ್ರಭಾವವಿರುವದರಿಂದ ನಿತ್ಯಾತ್ಮ ಸುಖಯೋಗಿ ಚಾತುವಿಠ್ಠಲನಥರಿಗೆ ಗದುಗಿನ ಭಾರತದಿಂದ ಸ್ಫೂರ್ತಿ ದೊರೆತಿರುವುದರಿಂದಲೂ ವಿಷ್ಣುತುಂಗನ ಕಾಲವನ್ನು ಕ್ರಿ. ಶ. ೧೬೩೬ ಎಂದು ನಂಬಲಾಗಿದೆ. ಆದರೆ ವಾದಿರಾಜ ಯತಿಗಳ ಕಾಲಕ್ಕಾಗಲೇ (ಕ್ರಿ. ಶ. ೧೫೬೦) ತುಳುವಿನಲ್ಲಿ ‘ಸ್ಟ್ ಧ್ವನಿಮಾ’ ಮರೆಯಾಗಿರುವುದರಿಂದ ‘ಸ್ಟ್’ ಧ್ವನಿಮಾ ಪ್ರಯೋಗಗೊಂಡ ಶ್ರೀ ಭಾಗವತೊದ ಕಾಲವನ್ನು ಪುನರಾಲೋಚಿಸಬೇಕಾಗಿದೆ. ಚಾಟುವಿಟ್ಯಲನಾಥನ ಕಾಲವನ್ನು ಕ್ರಿ. ಶ. ೧೫೩೦ ಎಂದು ಹೇಳಲಾಗಿದ್ದರೂ, ಅದು ಅಸಮರ್ಪಕವೆನ್ನದ ನಿರ್ವಾಹವಿಲ್ಲ. ಯಾಕೆಂದರೆ ಅವನ ಕಾವ್ಯದ ಹಸ್ತಪ್ರತಿಯ ಕಾಲವೇ ಕ್ರಿ. ಶ. ೧೫೧೯. ‘ಮದರಾಸಿನ ಪ್ರಾಚ್ಯಕೋಶಗಾರದ ಒಂದು ಪ್ರತಿಯಲ್ಲಿ ಅದನ್ನು ಪ್ರತಿಮಾಡಿದ ಕಾಲ ಶಾಲಿವಾಹನ ಶಕ ನಾಲ್ಕು ನೂರ ನಲ್ವತ್ತೊಂದನೇ ವರ್ಷವೆಂದು ಹೇಳಿದೆ. ಅಂದರೆ ಕ್ರಿ. ಶ. ೧೫೧೯. ಕುಮಾರವ್ಯಾಸನ ಆದರ್ಶವನ್ನಿಟ್ಟುಕೊಂಡು ಆತನ ಗ್ರಂಥರಚನಾ ಪದ್ಧತಿಯನ್ನು ಅನುಸರಿಸಿ ಬರೆದ ಹಾಗೆ ತೋರುವುದರಿಂದ ಈ ಕಾವ್ಯ ಕುಮಾರವ್ಯಾಸನ (ಕ್ರಿ. ಶ. ೧೪೩೦) ಅನಂತರ ಕ್ರಿ. ಶ. ೧೫೦೦ರೊಳಗೆ ರಚಿತವಾಗಿರಬೇಕೆಂದು ನಂಬಬಹುದು”[2] ಎಂಬ ಕೆ. ವೆಂಕಟರಾಮಪ್ಪ ನವರ ಮುನ್ನುಡಿಯ ಮಾತುಗಳನ್ನು ಇಲ್ಲಿ ವಿವೇಚಿಸಬೇಕಾಗುತ್ತದೆ. ಸದಾನಂದ ಯತಿ (ನಿತ್ಯಾತ್ಮ ಸುಖಯೋಗಿ)ಯ ಗುರು ಅಚ್ಯುತಾರಣ್ಣ ಯತಿಗಳು ಆಚಾರ್ಯ ಮಧ್ವರ (ಕ್ರಿ. ಶ. ೧೨೭೦) ಗುರುಗಳಾದ ಅಚ್ಯುತಪ್ರೇಕ್ಷ (ಅಚ್ಯುತಪ್ರಜ್ಞ) ಯತಿಗಳ ಪರಂಪರೆಯವರೇ ಆಗಿರಬಹುದು. ಹಾಗಾಗಿ ಕನ್ನಡ ಭಾಗವತದ ಕಾಲವನ್ನು ಹದಿಮೂರನೇ ಶತಮಾನದ ಕೊನೆ ಎಂದು ತರ್ಕಿಸಲು ಸಾಧ್ಯ. ಕುಮಾರವ್ಯಾಸನ ಕಾಲವನ್ನು ಮಂಜೇಶ್ವರ ಗೋವಿಂದ ಪೈಗಳು ನಿರ್ಧರಿಸಿದಂತೆ ಕ್ರಿ. ಶ. ೧೨೩೦ ಎಂದಿಟ್ಟುಕೊಂಡರೆ ಆಗ ಕನ್ನಡ ಭಾಗವತಕಾರನ ಕಾಲವನ್ನು ಕ್ರಿ. ಶ. ೧೩೦೦ ಎಂದು ನಿರ್ಧರಿಸಬಹುದು. ಈ ವಿವೇಚನೆಯಿಂದ ತುಳು ಭಾಗವತದ ಕಾಲವನ್ನು ಕ್ರಿ. ಶ. ೧೩೦೦ರ ಅನಂತರವೆಂದೇ ಊಹಿಸಬೇಕಾಗುತ್ತದೆ. ಮೇಲೆ ಕಾಣಿಸಿದ ಜಾತಕ ಪದ್ಯದ ಕಾಲವನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರದ ೨೬೬ ವರ್ಷಗಳಷ್ಟು ಹಿಂದೆ ಕೊಂಡೊಯ್ಯಲು ಸಾಧ್ಯವಿರುವುದರಿಂದ ವಿಷ್ಣುತುಂಗನ ಕಾಲವನ್ನು ಕ್ರಿ. ಶ. ೧೩೭೦ ಎಂದು ಪುನನಿರ್ಣಯ ಮಾಡಬೇಕಾಗುತ್ತದೆ. ‘ಪ್ರಾಚೀನ ತುಳು ಕೃತಿಗಳಿಂದ ಕನ್ನಡದ ಮೇಲೆ ಬೆಳಕು’ಎಂಬ ಲೇಖನಲದಲ್ಲಿ ಪಾದೇಕಲ್ಲು ವಿಷ್ಣುಭಟ್ಟರು ವಿಷ್ಣುತುಂಗನ ಕಾಲವನ್ನು ಕ್ರಿ. ಶ. ೧೩೭೦ ಎಂದು ನಿಶ್ಚಯಿಸಿರುತ್ತಾರೆ. ಈ ಅಭಿಪ್ರಾಯವನ್ನು ಅವರ ಪ್ರಾಚೀನ ತುಳು ಸಾಹಿತ್ಯದ ಮಹತ್ವ ಎಂಬ ಲೇಖನಲ್ಲಿ ಕಾಣಬಹುದು.[3] ಕಾವ್ಯದಲ್ಲಿ ‘ಕ್ಷೀರಾಬ್ದಿ ಪುರಂಟ್’ (೨-೧-೪೧) ‘ದುಗ್ದಾಬ್ದಿ ನಿವಾಸಪದಂ’ (೧-೧೪-೪೨). ‘ಅಬ್ದೀಪುರಿಟಾಸ್ಟ್’ (೩-೧೭-೩೬) ಮುಂತಾದ ಸೂಚನೆಗಳಿರುವುದರಿಂದ ಕವಿಯ ಕಾಸರಗೋಡು ತಾಲೂಕಿನ ಹೇರೂರನವನೆಂದು ಹೇಳಲಾಗಿದೆ. ಚಾಟು ವಿಠ್ಠಲನಾಥನ ಕನ್ನಡ ಭಾಗವತದಲ್ಲೂ ವೈಕುಂಠ ಶಬ್ದಕ್ಕೆ ಪರ್ಯಾಯವಾಗಿ ಇಂಗಡಲು ದುಗ್ಧವಾರ್ಧಿ ಮುಂತಾದ ಪದಪ್ರಯೋಗಗಳಿವೆ. ಉದಾಹರಣೆ : ‘ಓಲಗಕೆ ಹರಿಚಕ್ರ ವಿಂಗಡ ಲಾಲಯದ ಕಡೆಯಿಂದ ಲೈತಹ’ (೧-೭-೧), ‘ಕರುಣಾನಿಧಿಯನೆಬ್ಬಿಸಿದೆ ನಿಂಗಡಲೊಳಗಿರಲು’ (೨-೩-೧೫), ‘ದುಗುಧವಾರ್ಧಿಯಲಾಳುವಾ ಬಲು ನಗವನಾಂತನನಂತ ಮಹಿಮನು’ (೨-೩-೨) ಇತ್ಯಾದಿ. ಆದುದರಿಂದ ‘ಕ್ಷಿರಾಬ್ದಿಪುರ’ವನ್ನು ಕವಿಯು ನೆಲಸಿದ ಸ್ಥಳವೆಂದು ಊಹಿಸುವುದಕ್ಕೆ ಆಧಾರ ಸಾಲದು. ಅಷ್ಟೇ ಅಲ್ಲದೆ ‘ಹೆರೂರು’ ಎಂಬ ಸ್ಥಳವು ಉಡುಪಿಯ ಬ್ರಹ್ಮಾವರದ ಹತ್ತಿರದಲ್ಲೂ ಇರುವುದರಿಂದ ಕವಿಯು ಕಾಸರಗೋಡಿನವನೆಂದೇ ಹೇಳಲಾಗುವುದು. ಉಡುಪಿಯ ಬ್ರಹ್ಮಾವರ ಪರಿಸರದಲ್ಲಿ ಕೋಟಿ ಬ್ರಾಹ್ಮಣ ಕುಟುಂಬಗಳು ಹೇರಳವಾಗಿರುವುದರಿಂದ ಹಾಗೂ ಆರೂರಿನ ವಿಷ್ಣುಮೂರ್ತಿ ದೇವಸ್ಥಾನವು ಆ ಪರಿಸರದ ಪ್ರಮುಖ ದೇವಸ್ಥಾನವೂ ಆಗಿರುವುದರಿಂದ ಕವಿಯು ಬ್ರಹ್ಮಾವರ ಹೇರೂರಿನವನೆಂದು ಹೇಳಬಹುದು. ಕವಿ ಭಾಷಾಶೈಲಿಯು ಕಾಸರಗೋಡು ಪ್ರದೇಶದ ಆಡುಭಾಷೆಯನ್ನೇ ಹೋಲುವುದೆಂದು ಒಪ್ಪಲಾಗದು. ಏಕೆಂದರೆ ಅರುಣಾಬ್ಜ ಕವಿಯ ‘ತುಳುಮಹಾಭಾರತ’ವು ಉಡುಪಿಯ ಪರಿಸರದಲ್ಲೇ ರಚನೆಗೊಂಡಿದ್ದು ಅದರ ಭಾಷೆಯು ‘ಶ್ರೀ ಭಾಗವತೊ’ ಕಾವ್ಯದ ಭಾಷೆಗೆ ಸಮೀಪವಿರುವುದರಿಂದ ವಿಷ್ಣುತುಂಗನು ಉಡುಪಿಯ ಸುತ್ತಮುತ್ತಲಿನವನೆಂದೇ ಊಹಿಸಬೇಕಾಗುತ್ತದೆ. ಆದರೆ ಕ್ರಿ. ಶ. ೧೩೮೩ರಲ್ಲಿ ‘ಮಹಾಭಾರತೊ’ ಕಾವ್ಯರಚನೆ ಮಾಡಿದ ಅರುಣಾಬ್ಜ ಕವಿ ಉಡುಪಿಯವನೇ ಆದ ವಿಷ್ಣುತುಂಗನನ್ನು ಯಾಕೆ ಸ್ಮರಿಸಲಿಲ್ಲ ಎಂಬ ಪ್ರಶ್ನೆಗೆ ಅವನು ಸಮಕಾಲೀನವನೆಂಬುದೇ ಉತ್ತರವೆನಿಸುತ್ತದೆ. ಅಂತೂ ತುಳು ಕಾವ್ಯ ಕೃತಿಗಳ ಕಾಲನಿರ್ಣಯದಿಂದ ಕನ್ನಡ ಕವಿಗಳಾದ ಕುಮಾರವ್ಯಾಸ-ಚಾಟು ವಿಠ್ಠಲನಾಥರ ಕಾಲನಿರ್ಣಯವು ಪುನರಾಲೋಚನೆಗೆ ಒಳಗಾಗುವುದು ಒಂದು ಮುಖ್ಯ ಸಂಗತಿ.

ಪೂರ್ವಕವಿಸ್ಮರಣೆ

ಕವಿಯು ತನ್ನ ಪೂರ್ವ ಕವಿಗಳನ್ನು ಸ್ತುತಿಸಿದ ಪದ್ಯ ಹೀಗಿದೆ:
ಕಾಳಿದಾಸರೆ ಭಟ್ಟೆಭಾರವಿ ಮೇಘೆಯಡ್ಡ ಮಯೂರೆಯಾ
ಕಾಳಕಂಠಸಮಾನೆ ವ್ಯಾಸಕುಮಾರಸೆರ ವಾಲ್ಮಿಕೀ
ಕೋಳಿನಾಥ ರೆಚೀತೆರಾದಿಜನಂತ ಶಾಸ್ತ್ರ ಪುರಾಣೆಮೀ
ಕೇಳಿಸ್ಟೇನ್‌ಲ ವಂದಿತಾಕುಳೆ ವರ್ಣಿಪ್ಪುಪ್ಪೆನತೀಕಥೆ        (೧-೧-೧೧)

ಸಂಸ್ಕೃತ ಕವಿಗಳಾದ ವ್ಯಾಸ, ವಾಲ್ಮೀಕಿ, ಕಾಳಿದಾಸ, ಬಾಣಭಟ್ಟ, ಭಾರವಿ, ಮೇಘ, ಮಯೂರಾದಿಗಳನ್ನು ಸ್ತುತಿಸಿ ಕನ್ನಡ ಕುಮಾರವ್ಯಸನನ್ನು ಸ್ಮರಿಸಿರುವುದರಿಂದ ವಿಷ್ಣುತುಂಗನು ಕುಮಾರವ್ಯಾಸನ ಅನಂತರದವನೆಂಬುದು ಸ್ಪಷ್ಟ. ಅದಕ್ಕಿಂತ ಮೊದಲು

‘ಕಥೆತರ್ಥೊಮಿ ನಂಬು ಪರಲೋಕಹಿತಾರ್ಥೊಮಿ ಕನ್ನಡಿಟ್ ಆರಾಧ್ಯೆ ರೆಚೀತೆರ್’

ಎಂದು ಹೇಳಿರುವುದನ್ನು ಗಮನಿಸಿದರೆ, ಕವಿಯು ಚಾಟುವಿಠಲನಾಥನ ಕನ್ನಡ ಭಾಗವತವನ್ನು ಕುರಿತಾಗಿ ಹೇಳುತ್ತಿದ್ದಾನೆಂದು ಭಾವಿಸಬಹುದು.

‘ಚಾಟುವಿಠ್ಠಲನಾಥನಿಗೆ ಸದಾನಂದ ಯೋಗಿ ಎಂಬ ಹೆಸರು ಇರುವುದರಿಂದ ‘ಯೋಗಿ’ ಎಂಬರ್ಥದಲ್ಲಿ ‘ಆರಾಧ್ಯ’ ಎಂದು ಹೇಳಿರಲೂಬಹುದು. ಚಾಟುವಿಠಲನಾಥನ ಭಾಗವತದ ಪ್ರಭಾವವು ವಿಷ್ಣುತುಂಗನ ಕಾವ್ಯದುದ್ದಕ್ಕೂ ಸಾಕಷ್ಟು ಕಂಡುಬರುತ್ತದೆ.[4]

ಮಂದಭಾಗೈರತೀ ಮನುಷ್ಯೆರ್ ಮುಂದಬುದ್ಧೆರತೇನ್ಯಲಾ
ಮಂದಕರ್ಮಫಲಾಶ್ರಿತೆಕ್ಕುಳು ಮಂದಚೇತನ ಭಾವೆರ್
ಕುಂದ್ ಸ್ಟೀನಲ್ಪಾಯುಷೇರ್ಕುಳು ಶೌಚಸತ್ಯವಿಹೀನೆರ್
ಇಂದಿನೀ ಕಲಿಕಾಲಜಂತುಕ್ ಮುಕ್ತಿಯೆಮಚನುಕೂಲಿಪು (೧-೧-೨೬)
ಈ ಪದ್ಯವು ಕನ್ನಡ ಭಾಗವತದ
ಮುಂದಭಾಗ್ಯರಲಾ ಮನುಷ್ಯರು
ಮಂದಮತಿಗಳಲಾ ವೃಥಾಶ್ರಮ
ದಿಂದ ಮಂದೋದ್ಯೋಗಿಗಳು ಪುರುಷಾರ್ಥವಿಷಯದಲಿ || (೧-೧-೫)

ಎಂಬ ಪದ್ಯದ ಅನುವಾದವೆಂಬುದು ಸತ್ಯ. ಕನ್ನಡ ಭಾಗವತಕ್ಕೆ ಸಂಸ್ಕೃತ ಭಾಗವತವು ಆಧಾರವಾಗಿರುವದೂ ಅಷ್ಟೇ ಸತ್ಯ. ಈ ಭಾಗವು ಮೂಲ ಸಂಸ್ಕೃತ ಭಾಗವತದಲ್ಲಿ-

‘ಮಂದಾಃ ಸುಮಂದಮತಯೋ|ಮಂದಭಾಗ್ಯಹ್ಯುಪದ್ರತಾ ||’(೧-೧-೧೦)
ಎಂದು ಹೇಳಲ್ಪಟ್ಟಿದೆ. ಅಂತೆಯೇ
ಲೆಕ್ಕೊಮಾಂಪೊಳಿನಂಬರಂಟ್ ಪ ಚೋಜಕೀನುಡುಸಂಕುಲಂ
ಲೆಕ್ಕೊಮಾಂಪೊಳಿ ಭೂಮಿಟೇ ನಿದೆಸ್ಟತ್ತಿಧೂಳ್ ತ ರಾಶಿನಿ
ಲೆಕ್ಕೊಮಾಂಪೊಳಿ ವರ್ಷಧಾರೆನಿ ಸಾಗರಾತಿರಮಾಲೆನೀ
ಲೆಕ್ಕೊಮಾಂಪಿಯರೇರ್ ಶ್ರೇಷ್ಠೆರನಂತಮೂರ್ತಿಗುಣೊಂಕುಳೇ (೧-೨-೩೨)
ಎಂಬುದಕ್ಕೆ ಕನ್ನಡ ಭಾಗವತದ-
ಜಗುದುದರನವತಾರ ಸಂಖ್ಯೆಯ
ಬಗೆದು ಬಲ್ಲವರಾರು, ಭೂಪಾಂ-
ಸುಗಳನಭ್ರದ ತಾರೆಗಳನಾ ಸಾರಬಿಂದುಗಳಾ || (೧-೧-೧೨)
ಎಂಬ ಪದ್ಯದ ಪ್ರಭಾವವಿದೆಯೆಂಬುದು ತಿಳಿಯುತ್ತದೆ.

ಭಾಷೆ

‘ಶ್ರೀ ಭಾಗವತೊ’ ಕಾವ್ಯದ ಭಾಷಾಶೈಲಿಯು ವೈಶಿಷ್ಟ್ಯ ಪೂರ್ಣವಾದ ಪಳಂತುಳುವನ್ನು ನಮಗೆ ಪರಿಚಯಿಸುತ್ತದೆ. ‘ಸ್ಟ್’ ಧ್ವನಿಮಾ ಮತ್ತು ರಳಾಕ್ಷರದ ಬಳಕೆ ಇಲ್ಲಿಯ ವಿಶೇಷ. ಈಗಿನ ತುಳುವಿನಲ್ಲಿ ತಕಾರವನ್ನೋ ದಕಾರವನ್ನೋ ಪಡೆದ ಈ ‘ಸ್ಟ್’ ಪ್ರಯೋಗ ಪ್ರಾಚೀನ ತುಳುವಿನಲ್ಲಿ ಹೇಗೆಬಳಕೆಯಾಗಿತ್ತು ಎಂಬುದು ಅಚ್ಚರಿ ಹುಟ್ಟಿಸುವ ವಿಷಯ. ವಿದ್ವಾನ್ ವೆಂಕಟರಾಜ ಪುಣಿಂಚತ್ತಾಯರು ಹೇಳುವಂತೆ – ‘ಅತ್ಯಂತ ಮೃದುಲ ಭಾಷೆಯೆನಿಸಿದ ತುಳುವಿನ ಜಾಯಮಾನಕ್ಕೆ ಒಗ್ಗದ ಈ ಸಂಯುಕ್ತಾಕ್ಷರವು ತುಳುಭಾಷೆಯೊಳಗೆ ಹೇಗೆ ವ್ಯಾಪೃತವಾಯಿತು ಎಂದು ಊಹಿಸುವುದೇ ಕಷ್ಟಸಾದ್ಯವಾಗಿದೆ.[5]

ಕಟ್ಟಸ್ಟ್, ಪತ್ತಸ್ಟ್, ತೊಷ್ಟ್ ಸ್ಟ್, ಆರೆಸ್ಟ್, ಏಸ್ಟ್, ಪೋಸ್ಟ್, ಮುಂತಾದ ಪದಗಳ ಜೊತೆಗೇ ‘ಸ್ಟ್’ ಕಾರದಿಂದಲೇ ಆರಂಭವಾಗುವ ಪದಗಳೂ ಶ್ರೀ ಭಾಗವತೊದಲ್ಲಿ ಅಲ್ಲಲ್ಲಿ ದೊರೆಯುತ್ತವೆ.

ಸ್ಟ್ ಬೆರ್ (ಇವರು), ಸ್ಟ್ ಪ್ಪೊಡು (ಇರಬೇಕು), ಸ್ಟ್ ಪ್ಪುನಾನಿ (ಇರುವಂದು), ಸ್ಟೀಕುಳು (ನೀವು) ಇತ್ಯಾದಿ.

ರಳಾಕ್ಷರ

ಕನ್ನಡದಲ್ಲಿ ೧೧ ನೇ ಶತಮಾನದವರೆಗೆ ಮಾತ್ರ ಬಳಕೆಯಲ್ಲಿದ್ದ ರಳ ಪ್ರಯೋಗ ತುಳುವಿನಲ್ಲಿ ೧೩ ನೇ ಶತಮಾನದ ಅನಂತರವೂ ಉಳಿದು ಬಂದಿರುವುದು ವಿಶೇಷವಾಗಿದೆ. ಚಾಟುವಿಠಲನಾಥನ ಕಾಲಕ್ಕೆ ಕನ್ನಡದಲ್ಲಿ ರಳಾಕ್ಷರದ ಬಳಕೆ ಕಂಡುಬರುವುದಿಲ್ಲವಾದರೂ, ಅವನಿಂದ ಪ್ರಭಾವಿತನಾದ ವಿಷ್ಣುತುಂಗನು ರಳವನ್ನು ಬಳಸಿರುವುದನ್ನು ಗಮನಿಸಿದರೆ, ತುಳುಭಾಷಾ ಶೈಲಿಯನ್ನು ಅದರ ಅನಿವಾರ್ಯತೆ ಆ ಕಾಲದಲ್ಲಿತ್ತೆಂದು ಭಾವಿಸಬಹುದು.

ಅ್ ೞೆ (ಎಳೆಯ), ಅ್ ೞತರ್ (ಬರು), ಅ್ ೞೆಸಾಧಿಪು (ರಾಜ್ಯವಾಳು), ಅ್ ೞೆಲ್ (ಜ್ವಲಿಸು), ಅ್ ೞ್(ದುಃಖಿಸು), ಎೞಿ (ಸಾಧ್ಯವಾಗು), ಒೞ್ಪು (ಒಳಿತು), ಕೞಿ (ಸಯು), ಕೊೞ್ (ಕೊಡು), ತೞ್ಗ್ (ತಗ್ಗು), ಪುೞಲ್ (ಕೊಳಲು), ಬೞಲ್ (ಬಳಲು), ಬೆೞ್ ತ್ (ಬಳಿಕ) – ಇತ್ಯಾದಿ ಪದಗಳಲ್ಲಿ ರಳಾಕ್ಷರದ ಬಳಕೆಯನ್ನು ಕಾಣಬಹುದು.

ರಳಕುಳುಗಳು ಪಲ್ಲಟವಾದಲ್ಲಿ ಅರ್ಥ ವ್ಯತ್ಯಾಸವಾಗುವ ಸಂಭವವೂ ಇರುವುದರಿಂದ, ಉಚ್ಚಾರದಲ್ಲಿ ಸ್ಪಷ್ಟವಾದ ಭಿನ್ನತೆಯಿತ್ತೆಂಬುದನ್ನು ಮನಗಾಣಬಹುದು. ಆದರೆ ಶ್ರೀ ಭಾಗವತೊದ ಪ್ರತಿಯಲ್ಲಿ ಕೆಲವೆಡೆ ಈ ಗೊಂದಲ ಕಂಡುಬರುವುದರಿಂದ ಪ್ರತಿಕಾರನ ಕಾಲಕ್ಕಾಗಲೇ (ಕ್ರಿ. ಶ. ೧೮೭೦) ರಳದ ಬಳಕೆ ಬಿದ್ದು ಹೋಗಿತ್ತೆಂದು ತೀರ್ಮಾನಿಸಬಹುದು.

ರಳ -ಕುಳಗಳ ಅರ್ಥವ್ಯತ್ಯಾಸ

ಪುೞಿ (ಹುಳು)- ಪುಳಿ(ಹುಳಿ)
ಕೊೞ್ (ಕೊಡು) – ಕೊಳ್ (ಸಿಲುಕು)
ತೞುವು (ತಬ್ಬಿಕೊ)- ತಳುವು (ತಡಮಾಡು)
ಎೞಿ (ಎಬ್ಬಿಸು)- ಎಳಿ (ಸಾಧ್ಯವಾಗು)
ಬಾೞ್ (ಜೀವಿಸು) – ಬಾಳ್ (ಬೆಳೆಸು)

ಬಹುವಚನ ರೂಪಗಳು

ದೂರ್ವಾಸಾವ್, ಪಿತಾವ್, ಮಾತಾವ್, ಮುಂತಾದು ಪ್ರಯೋಗಗಳು ಗೌರವಾರ್ಥದಲ್ಲಿ ಬಳಕೆಯಾಗುವುದು ಇಲ್ಲಿ ವಿಶೇಷವಾಗಿದೆ. ಉಳಿದಂತೆ ನೃಪೆರ್, ಕುಮಾರೆರ್, ಸೂರಿಕುಳು, ಅಧ್ಯಾಯೊಂಕುಳು, ನಾರಿಮರ್ಕುಳು – ಮೊದಲಾದ ರೂಪಗಳನ್ನು ಕಾಣಬಹುದು.

ಕ್ರಿಯಾಸಮಾಸ ವಿಶೇಷತೆ

‘ದ್ರೋಣನಂದನ ಕಟ್ಟ್ ಸ್ಟೇ’- ದ್ರೋಣನಂದನನನ್ನು ಕಟ್ಟಿದನು. ‘ಅತಿಥಿ ವಂಚಿತ್ – ಅತಿಥಿಯನ್ನು ವಂಚಿಸಿ
ಈ ಎರಡೂ ಪ್ರಯೋಗಗಳಲ್ಲಿ ದ್ವಿತೀಯಾವಿಭಕ್ತಿ ಲೋಪವಾಗಿರುವುದು ಗಮನಾರ್ಹ.

ಸಂಧಿ ಸ್ವಾರಸ್ಯ

೧. ಈಕುಳುಂಬುಳುಳ್ಳನ್ನಗೊಮುಳ್ಳಾ
೨. ನಾಮಾಕುಳೆಕಾಪ್ತೆರ್ ನಾಕುಳೆಮಾ
೩. ನಡುಪಾತೆಡೊಂಕಾರ್ ಳಪೀಡೆಕವಾಪಿನ

ಇತ್ಯಾದಿ ಧೀರ್ಘಸಂಧಿ ಪದಗಳ ಜೊತೆಗೆ, ‘ಆರ್+ಎನ’ = ಆರೆನ, ಎಂಬಲ್ಲಿ ‘ಅವರ’ ಎಂದರ್ಥ ನೀಡದೆ ‘ಅವರು + ನನ್ನ’ ಎಂದಾಗುವುದು ವೈಶಿಷ್ಟ್ಯಪೂರ್ಣವಾಗಿದೆ. ಜೊತೆಗೆ ‘ಭಾಷೆ+ ಉಂದುವೆಂದ್ = ಭಾಷೇಂದುವೆಂದ್’, ‘ಆಣೆ+ಇದ್ದಿ = ಆಣೆದ್ದಿ’, ‘ಬುಡಂತೆ + ಅತಿವಿಘ್ನಿಪೊನಾ = ಬುಡಂತೆತಿವಿಘ್ನಿಪೊನಾ – ಮುಂತಾದ ಲೋಪಸಂಧಿಯ ಉದಾಹರಣೆಗಳಲ್ಲಿ ಉತ್ತರಪದ ಅದಿಸ್ವರವೇ ಲೋಪವಾಗಿರುವುದೂ ಇಲ್ಲಿ ಮಹತ್ವದ ಅಂಶವಾಗಿದೆ.

ಪದಪ್ರಯೋಗ

೧. ‘ಆಪು’ ಎಂಬ ಪ್ರತ್ಯಯದ ಬಳಕೆಯಲ್ಲಿ ಪಳಂತುವಿಗೂ ಹೊಸ ತುಳುವಿಗೂ ವ್ಯತ್ಯಾಸವಿರುವುದನ್ನು ಗಮನಿಸಬಹುದು.

ವೆಂದ್‌ತಾಪು – ಮಾಡಿದ್ದನು (ನಿರ್ಧಾರಾತ್ಮಕ – ಫಲಂತುಳು)
ತಿಂದೆ ಆಪು – ತಿಂದಿರಬೇಕು (ಅನಿರ್ಧಾರಾತ್ಮಕ – ಹೊಸತುಳು)

೨. ಶೌನಕೆರೆನ್ ಪ್ರತಿ (ಶೌನಕರನ್ನು ಕುರಿತು), ಕೇಳೊಂಡೆಂಬುಟ (ಕೇಳಬೇಕೆಂದಾದರೆ), ಪುಲೆಂಜಾ (ಮೆಚ್ಚುವಂತೆ), ಪಂಡರೊಡು (ಹೇಳಿಕೊಡಬೇಕು), ಕೇಳಿಲೆನ (ಕೇಳಿರಿ), ಮಂಪೊಳಿನ (ಮಾಡಬಹುದು), ಏಯ್ (ಹೇಳು), ಚೂವಾಗಲೂ (ನೋಡಿರಿ), ಸತ್ಕರಿಕಾ (ಸತ್ಕರಿಸುವುದು), ಸದಾಂತೊ(ಯಾವಾಗಲೂ), ಚೂವನತೇಪ್ಪರ್ (ಮಾಡದಿರುವರು)- ಮುಂತಾದ ಪ್ರಯೋಗಗಳು ಈಗ ರೂಢಿಯಲ್ಲಿಲ್ಲದೆ ಹೋಗಿವೆ.

೩. ‘ಅಲ್ಪೊಮಾಸ್ಟಿ ಕುಶೇಲ್ಕುಳುಳ್ಳ’ಎಂಬಲ್ಲಿ (೩-೬-೧೮) ‘ಅಲ್ಪ’ ಎಂಬುದಕ್ಕೆ ಅನೇಕ ಎಂಬ ಅರ್ಥವಿರುವುದು ಗಮನಾರ್ಹವಾಗಿದೆ. (ಈಗಲೂ ಹವ್ಯಕ ಭಾಷೆಯಲ್ಲಿ ಇದೇ ಅರ್ಥ ರೂಢಿಯಲ್ಲಿದೆ!)

೪. ‘ಹತ್ತೊಂಬತ್ತು’ ಎಂಬರ್ಥದ ‘ಒಂಜುಂದಿರುವೊ’ ಎಂಬುದಕ್ಕೆ ಸಂಸ್ಕೃತದ ‘ಏಕೋನವಿಂಶತಿ’ಯ ವೃತ್ಪತ್ತಿಯ ಪ್ರಭಾವವಿದೆ.

೫. ವಿಶಾ (ಬೇಗ), ವೀರಿ (ಕಾಡ್ಗಿಚ್ಚು), ಪುರವಟ್ಟ (ಗುರುಕುಲ)- ಮೊದಲಾದ ಪದಪ್ರಯೋಗಗಳ ಜೊತೆಗೇ ಗುತ್ತ್ ಬೂಡ್, ಪರಿಶೆ, ಅಬ್ಬಲಿಕೆ, ಪೆರ್ಗಿ, ಉಳ್ಳಾಯೆ, ಪಂದೆಲ್ – ಮುಂತಾದ ದೇಸೀ ಪದಗಳ ಬಳಕೆಯೂ ವ್ಯಾಪಕವಾಗಿವೆ.

೬. ‘ಕುಲೆಕಟ್ಟಿಯೆರ್ ತ್ತನೊ ಮುಂಡೆಮಗಾ’ – (೧-೧೭-೩೩) ಎಂಬಲ್ಲಿ ಗ್ರಾಮ್ಯ ಭಾಷೆಯ ಬಳಕೆಯನ್ನು ಗಮನಿಸಬಹುದು. (ಕನ್ನಡ ಭಾಗವತದಲ್ಲಿರುವ ‘ಕಾಳಮುಂಡೆಯ ಮಗನೆ’ ಎಂಬ ಪದಪ್ರಯೋಗವನ್ನೇ ಇಲ್ಲಿ ‘ಮುಂಡೆಮಗಾ’ ಎಂದು ಹೇಳಲಾಗಿದೆ.

೭. ನಾಗಪಜೆ, ನಾಗಪಾಸ್, ಪಂಷಸಾಯಕನಮ್ಮ, ಕಾಂತುಮಂದಿರ ಕಾರಂಘ್ರಿ, ಗೋಣವಾಹನ, ಕೆಂಜಟಾಧರ, ಮುಂತಾದ ಅರಿಮಾಸಗಳು ಗಮನಸೆಳೆಯುತ್ತವೆ.

ಛಂದಸ್ಸು

ಶ್ರೀ ಭಾಗವತೊದಲ್ಲಿ ತರಳ, ಮಲ್ಲಿಕಾಮಾಲೆ, ತೋಟಕ, ವನ, ಮಯೂರ, ಚಿತ್ರಪದ ಮುಂತಾದ ಸಂಸ್ಕೃತ ವೃತ್ತಗಳ ಜೊತೆಗೆ ತೋಟಕಜನ್ಯ ತೋಟಕದೀರ್ಘಗಳೆಂಬ ವೃತ್ತವಿನ್ಯಾಸಗಳನ್ನೂ ಕಾಣಬಹುದು-

ತೋಟಕ ವೃತ್ತ

È È –  È È –  È È –  È È –
ಮಹಮಾ. ಯೆತಶ. ಕ್ತಿನಿಜಾ. ಪಣ್ ಕೋ
ಮಹಲೋ. ಕೊಮಿಮೋ. ಹಿಪೊ ಅ.ತ್ಯಧಿಕೋ
ಮಹಮೇ. ಕುಳೆತಾ.ನೆಮನಂ.ಟಿಣಿತ್
ಮಹಿಮಾ.ರ್ಣವೆಚೋ.ದ್ಯೊವಹೀ.ತೆರ್ ನಾ     (೩-೨-೩೩)

ತೋಟಕಜನ್ಯ

—    È È – È È – È È –
೧. ಶ್ರೀ ಭಾ.ಗವತಾ.ರ್ಥರಹ.ಸ್ಯೊಮಿನೀ
ಈಭೂ.ಮಿಕ್ ವ.ರ್ಷಿತ್ ನಾ.ರದೆರ್
ಆಭಾ.ರತಕ.ರ್ತುಕ್ ಬೋ.ಧಿಪೊಸ್ಟೇ
ಶ್ರೀಭ.ಕ್ತಿತಲೇ.ಶೊಪ್ರಕಾ.ಶಿತೆರ್ೕ     (೧-೫-೪೯)

– È È  È È –   È È –  È È –
೨. ಪಂಚಮ.ವರ್ ಷೊಂ.ಟೆನತಾ.ಯಿಸುಖಂ
ಪಂಚತೆ.ಪಡೆತೊಂ.ಡಳ್ ಕ.ರ್ಮಗತೀ
ವಂಚಿತ್.ಣೆನಿನೆಂ.ದ್ ದಿನಂ.ಪ್ರತಿಲಾ
ಕಂಚುಕಿ.ಪತಿಶಾ.ಯಿನಿಚಿಂ.ತಿತ್ ನೇ     (೧-೫-೧೪)

ಇಲ್ಲಿ ‘ತೋಜಕಜನ್ಯದ’ದ ಉದಾಹರಣೆಗಳಲ್ಲಿ ಮೊದಲ ಸಗಣವನ್ನು ‘ದ್ವಿಗುರು’ ಮತ್ತು ‘ಭಗಣ’ಗಳನ್ನಾಗಿಸಿದ ಎರಡು ಪ್ರಕಾರಗಳನ್ನು ಗಮನಿಸಬಹುದು. ಹಾಗೆಯೇ ತೋಟಕವೃತ್ತದ ಪಾದಕ್ಕೆ ಎರಡು ಸಗಣ ಮತ್ತೊಂದು ಗುರುವನ್ನು ಸೇರಿಸಿ ಸಗಣಗಳನ್ನು ಚತುರ್ಮತ್ರಾಗತಿಯ ಗಣವನ್ನಾಗಿ ಪರಿಗ್ರಹಿಸಿದ ವೃತ್ತಗಳೂ ಶ್ರೀಭಾಗವತೊದಲ್ಲಿ ಕಂಗೊಳಿಸುತ್ತವೆ. ಈ ರೀತಿಯ ತೋಟಕದೀರ್ಘವೃತ್ತಗಳು ತುಳುಕಾವ್ಯ ಪರಂಪರೆಯಲ್ಲಿ ಸಾಮಾನ್ಯವೆಂಬುದನ್ನು ಮರೆಯಬಾರದು. ಶ್ರೀ ಭಾಗವತೊ ಕಾವ್ಯವು ಆರಂಭವಾಗುವುದೇ ಈ ವೃತ್ತದಿಂದ ಎಂಬುದು ಮಹತ್ತ್ವದ ಅಂಶ.

ತೋಟಕ ದೀರ್ಘ

೧. ಎಂದಿಂ.ಚಮುನೀ. ಶ್ವರವಾ. ಕ್ಸುಧೆತಾ. ಸಾರಾ.ಯೊಮಿಕೇಂ. ಡ್
ಮಂದ.ಸ್ಮಿ. ತೆಯಾ. ಸ್ಟ್ ಮನಂ. ಟಧಿಕೊ.ಕೌತೂ.ಹಲಿತೊಂ. ಡ್
ಚಂದ್ರಾಂ. ಶಜೆಭ. ಕ್ತಿಟ್ ಚೊ. ದಿತೆನಾ. ಈಧಾ. ರಣಯೋ. ಗೋ
ಪಿಂದೊ. ಳ್ಕಿನುಪಾ. ಯೊಮಿನಿ ಸ್ತರಿಪೀ. ಕುದಿಳೊ. ಳ್ಕಿಪ್ರಕಾ. ರೋ (೨-೧-೨೯)

೨. ಅಂಚಾ. ವನತೆ. ಪ್ಪುಟಯೋ. ಗನಿಧೀ. ಪುರುಷೋ. ತ್ತಮೆದೇ. ಹಂ
ವಂಚೀ. ಪಿಯೆರಿ. ಚ್ಛಿಪುಕೀ. ಸಮಯಂ. ಟಿನನಾ. ರೆಸ್ಟ್ ಣಾ. ತೋ
ಮೆಂಚೇ. ಚ. ರೆನಿಣೀ. ತ್ತೆರ್ ಭೂ. ಮಿತುಳೈ. ಯೀರಾ. ವನತೆ.ತ್ತ್
ದಂಚಾ. ರೆನಿಮ. ನ್ನಿತ್ ಣಾ. ಶ್ಚರ್ಯೋ. ಗಾಢಂ. ಟ್‌ಪತೊ.ಷ್ಷ್

ವನಮಯೂರವೃತ್ತ:

ರಕ್ತಜಲ, ವೃಷ್ಟಿಜೊರಿ, ಯುರ್ಪುಣ್ ನ, ನೇಕೊ
ಮಿತ್ತಮುಗ, ಲಾವನೆಧ್ವ, ನೀಪ್ಪುಣ್ ನ, ಮೇಷೊ
ಚುತ್ಥ ಚುೞಿ, ಕಾತ್ ಟ್ ಮು. ದಿಪ್ಪೊಮರ. ಗುಲ್ಮೊ
ಕರ್ತ್ಥಲೆ ಜೆ. ನೀಪ್ಪೊರೆವಿ. ಮಧ್ಯದಿವ. ಸೊಂಟ್            (೧-೧೩-೧೩)

‘ವನಮಯೂರ’ದ ನಿಯತ ಗುರುಲಘುವಿನ್ಯಾಸವನ್ನು ಮುರಿದು ಪಂಚಮಾತ್ರಾಗಣಗಳ ಸಂಯೋಜನೆಯಿಂದ ರಚಿಸಿದ ಅದೇ ಧಾಟಿಯ ವೃತ್ತಗಳನ್ನೂ ಇಲ್ಲಿ ವಿವೇಚಿಸಬೇಕಾಗುತ್ತದೆ.

೧. ಶಿವಶಿವಮ. ಹೇಶಜಗ. ದೇಕಸುರ. ವಂದ್ಯ
ಭವಭಯವಿ. ನಾಶಕರು. ಣಾರ್ಣವಗು. ಣಾಢ್ಯ  (೧-೧೩-೧೯)
೨. ಸಿದ್ಧಯೊಮ. ಮಾಜಿಸ್ಟ್ ಣೊ. ಶ್ರೀಕಮಲ. ನಾಭ
ಸಿದ್ಧಜನೊಂ. ಕಾವನತೆ. ಸಿದ್ಧಿಪನ. ತೇನ್ಯ
೩. ಅರೆಮತಂ. ಟಾನಿಸುರ. ಲೋಕತರು. ಸಲ್ತೀ
ಶ್ರೀರಮಣೆ. ಯುಳ್ಳೆರೊಸು. ಖೀತ್ ನರ. ನಾಥ

ಇಲ್ಲಿ ಮೊದಲನೆಯ ಉದಾಹರಣೆಗಳಲ್ಲಿ ಸರ್ವಲಘುಗಳು ಪಾದಾದಿಯಲ್ಲಿ ನೆಲೆನಿಂತು ಪಂಚಮಾತ್ರಾಗತಿಗೆ ಅಳವಟ್ಟಿರುವುದನ್ನು ಗಮನಿಸಬಹುದು. ಎರಡು ಮತ್ತು ಮೂರನೇ ಉದಾಹರಣೆಯಲ್ಲಿ ‘ಸಿದ್ಧಜನೊಂ’ ಮತ್ತು ‘ಅರೆಮತಂ’ ಎಂಬ ಪ್ರಯೋಗವನ್ನು ಗಮನಿಸಿದರೆ ಅದು ರುದ್ರಗಣವಾಗಿ ಪ್ರಯುಕ್ತಗೊಂಡಿರುವುದು ವೇದ್ಯವಾಗುತ್ತದೆ. ಇದರಿಂದಾಗಿ, ಆ ಕಾಲದಲ್ಲಿ ಅಂಶವಲಯದಲ್ಲಿ ವೇದ್ಯವಾಗುತ್ತದೆ. ಇದರಿಂದಾಗಿ, ಆ ಕಾಲದಲ್ಲಿ ಅಂಶಲಯದಲ್ಲಿ ಈ ವೃತ್ತಗಳನ್ನು ಹಾಡುತ್ತಿದ್ದಿರಬಹುದೇ ಎಂಬ ಊಹೆಯನ್ನು ಮಾಡಲು ಸಾಧ್ಯ.

ಚಿತ್ರಪದವೃತ್ತ

ಈರೆಗು. ಣಂಕುಳೆ. ವಿಸ್ತರಿ.ತ್
ನಾರದೆ. ರಾದಿಟ್. ಸೂಚಿಪ.ಪಾ
ಮಾರಶ, ರೊಂಟ್ ಮ. ಪಾದಗು.ಹೇ
ಟಾರೊಳಿ. ತ್ ಪ್ಪರ. ಕಲ್ಪಿತ್.ಣಾ

ಇದರ ಮೊದಲ ಗುರುವಿನ ಬದಲಾಗಿ ಎರಡು ಲಘುಗಳನ್ನಿರಿಸಿದ ಹೊಸ ವೃತ್ತವೂ ಅವನ ಸ್ಟೋಪಜ್ಷಕಲ್ಪನೆಗೆ ಸಾಕ್ಷಿ.

ಸರುವ.ಸ ವುಂದರೊ. ವರ್ಧಿತಿ.ನಾ
ಪುರುವದಿ. ನೇಂದುನಿ. ಭಾವನೆ. ಟಾ
ಸರುವಗು. ಣೊಂಕುಳೆ. ಟ್‌ಪ್ಪೆಸ.ದಾ
ಉರುವಿಟ್. ಪುತ್ರೆಯು. ದೀಪಿಕೆ.ನಾ    (೩-೧೬-೪೦)

ಇದನ್ನು ಅಂಶಗಣವಾಗಿ ಕಲ್ಪಿಸಿಕೊಂಡಾಗ ‘ಕಿರಿಯಕ್ಕರ’ ವಾಗಿ ಕಾಣಿಸುತ್ತದೆ!

 

[1] ಪ್ರಾಚೀನತುಳುಕೃತಿಗಳಿಂದಕನ್ನಡದಮೇಲೆಬೆಳಕು- ಉದಯವಾಣಿ, ೨-೨-೨೦೦೧

[2] ಕನ್ನಡಭಾಗವತಮೊದಲ, ಪುಟ೧೨

[3] ‘ಜಾಗೃತಿ’ – ಪುತ್ತೂರುವಿವೇಕಾನಂದಕಾಲೇಜುರಜತೋತ್ಸವಸಂಚಿಕೆ, ೧೯೯೦, ಪುಟ೨೪-೨೮

[4] ಶ್ರೀಭಾಗವತೊ- ಪ್ರಸ್ತಾವನೆ, ಪು. ೫

[5] ಶ್ರೀಭಾಗವತೊ- ಪ್ರಸ್ತಾವನೆಪು. ೧೮