ಹಿನ್ನೆಲೆ

“ಬಡಕ್ಕಾಯಿ ಗಂಗೆಡ್ದ್‌ ತೆನ್ಕಾಯಿ ಮಲ್ಯಾಲ ಮುಟ್ಟ” – ಎಂದರೆ ಉತ್ತರದ ಗಂಗೊಳ್ಳಿಯಿಂದ ದಕ್ಷಿಣದ ಮಲಯಾಳದವರೆಗೆ ತುಳುನಾಡಿನ ವ್ಯಾಪ್ತಿಯೆಂದು ಸೂಚಿಸುವ ತುಳುವಿನ ‘ಪಾಡ್ದನಗಳು’ ಮೌಖಿಕ ಸಾಹಿತ್ಯವೆಂಬುದರಿಂದಲೂ, ಇವುಗಳಲ್ಲಿ ಹೆಚ್ಚಾಗಿ ಐತಿಹ್ಯಗಳು ತುಂಬಿರುವುದರಿಂದಲೂ, ಇವನ್ನು ಶಿಷ್ಟ ಸಾಹಿತ್ಯದ ಪರಿಧಿಯಿಂದ ದೂರವೇ ಇರಿಸಲಾಗಿದೆ. ಪಾಡ್ದನ, ಸಂದಿ, ಕಬಿತೆ, ಗಾದೆ, ನುಡಿಕಟ್ಟು, ಉರಲ್‌, ಅಜ್ಜಿಕತೆ – ಮೊದಲಾದ ತುಳುವಿನ ವಿಪುಲ ಸಾಹಿತ್ಯ ಪ್ರಕಾರವನ್ನು ‘ಜನಪದ ಸಾಹಿತ್ಯ’ವೆಂದೇ ಗಣಿಸಲಾಗುತ್ತದೆ. ಆದರೆ ಈಗೀಗ ಅವುಗಳ ವಿಭಿನ್ನ ಪಾಠಾಂತರಗಳು ವಿದ್ವಾಂಸರ ಒಳನೋಟದಲ್ಲಿ ಹೊಸ ಬಗೆಯ ಅರ್ಥಗಳನ್ನು ಪಡೆಯುತ್ತ ಬೌದ್ಧಿಕ ಪರಿಭಾಷೆಗೆ ಒಳಗಾಗುವುದನ್ನು ನಾವು ನೋಡುತ್ತಿದ್ದೇವೆ. ಇದು ನಿರಂತರ ನಡೆಯುವ ಕ್ರಿಯೆ.

ಇದರ ಹೊರತಾಗಿ ತುಳುವಿನಲ್ಲಿ ಸ್ವತಂತ್ರ ಸಾಹಿತ್ಯ ರಚನೆಯಾದ ಸಂದರ್ಭಗಳೆಡೆಗೆ ದೃಷ್ಟಿ ಹಾಯಿಸಿ, ಇಪ್ಪತ್ತನೆಯ ಶತಮಾನದ ಆರಂಭದ ದಶಕಗಳಲ್ಲಿ, ಇದು ಹುಲುಸಾಗಿ ಬೆಳೆದು ಸಾಹಿತ್ಯದ ಅರುಣೋದಯಕ್ಕೆ ಹೆಜ್ಜೆ ಇಡಲು ಒದಗಿದ ಪ್ರೇರಣೆಗಳೇನು, ಆಶಯಗಳಾವುವು, ಎಂಬುದನ್ನು ವಿಸ್ತರಿಸುವುದು ಈ ಲೇಖನದ ಉದ್ದೇಶ.

ಉಡುಪಿಯಲ್ಲಿ ಕ್ರಿ. ಶ. ೧೪೮೦-೧೬೦೦ರ ಅವಧಿಯಲ್ಲಿ ಶ್ರೀ ವಾದಿರಾಜ ಯತಿಗಳಿಂದ ರಚಿತವಾದ ತುಳುವಿನ ದಶಾವತಾರದ ಹಾಡು, ಈಗಲೂ ಜನರ ಬಾಯಲ್ಲಿ ಇರುವುದರಿಂದ, ಅದಾಗಲೇ ತುಳುವಿನ ಬಗೆಗೆ ಆಸಕ್ತಿ ಇದ್ದಿತೆಂದು ತಿಳಿಯಬಹುದು. ಇದಕ್ಕೆ ಸಂವಾದಿಯಾಗಿ ಅರುಣಾಬ್ಜ ಕವಿವಿರಚಿತ ‘ಮಹಾಭಾರತೊ’ ತುಳು ಕಾವ್ಯ (೧೪-೧೫ನೇ ಶತಮಾನ), ವಿಷ್ಣುತುಂಗ ಕವಿ ರಚಿತ ‘ಶ್ರೀ ಭಾಗವತೊ’ ತುಳು ಕಾವ್ಯ (ಸು. ೧೭ನೆಯ ಶತಮಾನ), ಕಾವೇರಿ ತುಳು ಕಾವ್ಯ, (ಕವಿ: ಅಜ್ಞಾತ, ಕಾಲ. ಸು. ೧೭ನೆಯ ಶತಮಾನ), ತೆಂಕಿಲ್ಲಾಯ ಕುಲನಾಮ ಉಳ್ಳ ಕವಿ ವಿರಚಿತ ತುಳು ಕಾವ್ಯ ‘ದೇವೀ ಮಹಾತ್ಮೆ’ (ಕಾಲ ಸು. ೧೫ನೇ ಶತಮಾನ) ಕವಿ ಅರುಣಾಬ್ಜನಿಂದಲೇ ರಚಿತವಾದುದು ಎಂಬ ಅಭಿಪ್ರಾಯವುಳ್ಳ ತುಳು ಕಾವ್ಯ ‘ಮಹಾಭಾರತೊ’ (ಕಾಲ. ಸು. ೧೫-೧೫ನೇ ಶತಮಾನ). ಇದೇ ಕಾವ್ಯದಲ್ಲಿ ಕವಿ ಉಲ್ಲೇಖಿಸಿದ ‘ರಾಮಾಯಣೋ’- ಈ ಪ್ರಾಚೀನ ಕಾವ್ಯಗಳು ಕಳೆದ ಶತಮಾನದಲ್ಲಿ ಬೆಳಕಿಗೆ ಬಂದವುಗಳು. ಇವುಗಳ ಗುಣಲಕ್ಷಣಗಳನ್ನು ಮುಂದೆ ವಿವರಿಸಲಾಗುತ್ತದೆ.

ಆದರೆ ತುಳುವಿನ ಜಾನಪದವು ಸಂಸ್ಕೃತಿಯ ಸ್ತರದಲ್ಲೇ ಉಳಿದಿದ್ದರೂ ಕ್ರೈಸ್ತ ಮಿಶನರಿಗಳು ತುಳುನಾಡನ್ನು ಪ್ರವೇಶಿಸಿದ ಮೇಲೆ, ತುಳು ಸಾಹಿತ್ಯ ಸೃಷ್ಟಿಗೊಂಡು, ಮಹತ್ವದ ಕಾಲಘಟ್ಟವೊಂದನ್ನು ನಿರ್ಮಿಸಿದ ಬಗೆ ಅತಿ ಮಹತ್ವದ್ದು. ಇದರಲ್ಲಿ ಪಾಡ್ದನ ಸಾಹಿತ್ಯವೂ ಒಳಗೊಂಡಿದೆ ಎಂಬುದು ಗಣನೀಯ ಅಂಶ. ತಮಿಳುನಾಡಿನ ವಿಶಿಷ್ಟ ಸಂಸ್ಕೃತಿಯನ್ನು ಬಿಂಬಿಸುವ ಪಾಡ್ದನಗಳು ಮಿಶನರಿಗಳನ್ನು ವಿಶೇಷವಾಗಿ ಆಕರ್ಷಿಸಿದ್ಧರಿಂದ, ಜಾನಂಗಿಕ ಅಧ್ಯಯನದ ನೆಲೆಯಲ್ಲಿಯೂ ಇದು ಮಹತ್ವವನ್ನು ಪಡೆಯುತ್ತದೆ.

‘ತಮಿಳುನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಬಾಸೆಲ್‌ಮಿಷನಿನ ಇತಿಹಾಸವೂ ಹೆಣೆದುಕೊಳ್ಳುತ್ತದೆ’ (ಅಮೃತ ಸೋಮೇಶ್ವರ ೧೯೯೭: ಪು. ೨೧೭). ಅಂತೆಯೇ ತುಳುವಿನಲ್ಲಿ ‘ಬರೆದಿಟ್ಟ ಸಾಹಿತ್ಯವಿಲ್ಲದಿಲ್ಲದಿದ್ದರೂ ಪ್ರಾಚೀನ ಕಾಲದಿಂದ ಹರಿದು ಬಂದ ಜನಪದ ಸಾಹಿತ್ಯದ ದೊಡ್ಡರಾಶಿಯೇ ತುಳುವಿನಲ್ಲಿ ಉಂಟು… ಪಾಡ್ದನಗಳಲ್ಲಿ ಬರುವ ವರ್ಣನೆ, ಚಿತ್ರಣಗಳು ಒಂದು ಶಿಷ್ಟ ಕಾವ್ಯಪರಂಪರೆಯಲ್ಲಿ ಕಂಡುಬರುವ ಚಿತ್ರಣಗಳಿಗಿಂತ ಕಡಿಮೆಯಲ್ಲ’ ಎಂದು ಕು. ಶಿ. ಹರಿದಾಸ ಭಟ್ಟರು ‘ಪ್ರಥಮ ತುಳು ಸಾಹಿತ್ಯ ಸಮ್ಮೇಳನ’ದ ಸಂದರ್ಭದಲ್ಲಿ ಆಡಿದ ನುಡಿಯೂ (ತುಳು, ತುಳುತೊ ಬುಳೆ, ನಿಲೆ, ಬಿಲೆ ೧೯೮೩) ಮಿಶನರಿಗಳ ತುಳು ಸೇವೆಯ ಹಿನ್ನೆಲೆಯನ್ನು ಕುರಿತದ್ದೇ ಆಗಿದೆ.

ಪ್ರೇರಣೆ

ತುಳುವಿನಲ್ಲಿ ಬರವಣಿಗೆಯ ಸಾಹಿತ್ಯ ಹುಟ್ಟದೇ ಇರಲು ಅದಕ್ಕೆ ರಾಜಾಶ್ರಯ ದೊರಕದಿರುವುದೇ ಕಾರಣವೆಂದು ವಿದ್ವಾಂಸರ ಅಭಿಮತ. ಕನ್ನಡವನ್ನೇ ಆಡಳಿತ ಭಾಷೆಯನ್ನಾಗಿಸಿಕೊಂಡ ತಮಿಳುನಾಡಿನ ಅರಸರು ತುಳುವಿಗೆ ಪ್ರೋತ್ಸಾಹ ನೀಡಲಿಲ್ಲವೆಂಬುದು ಸರಿಯೇ. ಆದರೆ ಮುಂದೆ ಮತ ಪ್ರಚಾರವನ್ನೇ ಉದ್ದೇಶವಾಗಿಟ್ಟುಕೊಂಡು ತಮಿಳುನಾಡಿಗೆ ಕಾಲಿಟ್ಟ ಮಿಶನರಿಗಳು ಸ್ಥಾನೀಯರನ್ನು ಒಲಿಸಿಕೊಳ್ಳಲೆಂದು ಅವರ ಭಾಷೆಯನ್ನು ಕಲಿಯಲು ಮುಂದಾದರು. ಹಾಗೆ ಕಲಿತಾಗ ತುಳು ಭಾಷೆಯಲ್ಲಿರುವ ಸಮೃದ್ಧತೆ, ಸಾಂಸ್ಕೃತಿಕ ಸಂಪತ್ತು ಅವರನ್ನು ಬೆರಗುಗೊಳಿಸಿದ್ದರಿಂದ ಅವರು ಸಾಹಿತ್ಯ ರಚನೆಗೆ ಮೊದಲು ಮಾಡಿದರು. ಇದೊಂದು ರೀತಿಯಿಂದ ಭಾಷೆಗೆ ವರದಾನವಾಗಿ ಪರಿಣಮಿಸಿತೆಂದೇ ಹೇಳಬೇಕು. ಉದ್ದೇಶ ಮತ ಪ್ರಚಾರವೆಂಬುದು ಅಷ್ಟೇ ಸತ್ಯ.

ಕ್ರೈಸ್ತ ಮಿಶನರಿಗಳ ಕೊಡುಗೆ

ತುಳು ಸಾಹಿತ್ಯದ ಅರುಣೋದಯವೆಂದು ನಾವು ದಾಖಲಿಸುವ ಕಾಲಖಂಡಕ್ಕೆ ತೋರಣದ ರೇಖುವಿನಂತೆ ಮೂಡಿ ಬಂದ ಈ ದೇಶೀ ಸಾಹಿತ್ಯವು ಭಾಷಾ ಪ್ರೇಮ, ಶಿಕ್ಷಣ, ಸಂಸ್ಕೃತಿಯ ಅನಾವರಣ, ಧರ್ಮನಿಷ್ಠೆ ಮೊದಲಾದ ಬಹುಮುಖೀ ಉದ್ದೇಶಗಳನ್ನಿಟ್ಟುಕೊಂಡು ಮೆರೆಯಿತು. ಆವರೆಗೆ ಬಾಯ್ದೆರೆಯಾಗಿ ಉಳಿದುಕೊಂಡಿದ್ದ ತುಳು ಖನಿಯ ಉತ್ಖನನ ನಡೆಸಿದ ಈ ವಿದ್ವಾಂಸರು ಅದನ್ನು ಬೋಧನೆಯ ರೂಪದಲ್ಲಿ ಮನೆ, ಮನಗಳಿಗೆ ಹಂಚಿದರು. ಅವರ ಆಸಕ್ತಿಯ ಕಣ್ಣಲ್ಲಿ ಶಬ್ದಗಳು ಕುಣಿಯತೊಡಗಿದಾಗ ತುಳು ನಿಘಂಟು, ಜನ್ಮತಾಳಿತು. ಬೈಬಲಿನ ಭಾಷಾಂತರ, ನೀತಿ ವಚನಗಳು, ಕೀರ್ತನೆಗಳು, ಬೈಬಲಿನ ಕತೆಗಳು, ಪ್ರಾರ್ಥನೆ, ಗೀತೆಗಳು ಪ್ರಕಟಗೊಂಡುವು. ಇವೆಲ್ಲ ಬೈಬಲ್‌ಸಾಹಿತ್ಯದ ಅನುವಾದಗಳು. ತುಳು ಅಕ್ಷರಮಾಲೆ, ಕನ್ನಡ-ತುಳು, ಇಂಗ್ಲಿಷ್‌ಮಂಜರಿ, ಭೂತಾರಾಧನೆ, ಸಹಸ್ರಾರ್ಧ ತುಳುಗಾದೆಗಳು, ಇಂಗ್ಲಿಷ್‌ನಲ್ಲಿ ತುಳು ವ್ಯಾಕರಣ-ಇವೆಲ್ಲ ಮಿಶನರಿಗಳು ತುಳುವನ್ನು ಅಭ್ಯಸಿಸಿ ನಡೆಸಿದ ಸಾಹಸಗಳು.

೧೯ನೆಯ ಶತಮಾನದಲ್ಲಿ ಮಿಶನರಿಗಳು ನಡೆಸಿದ ತುಳು ಸಾಹಿತ್ಯ ಸೇವೆಯನ್ನು ಈ ಕೆಳಗಿನಂತೆ ವಿಂಗಡಿಸಿ ಸೂಚಿಸಬಹುದು:.

ಗ್ರೈನರ್‌ರೆ. ಎಂಬವರು ಪ್ರಕಪಟಿಸಿದ ‘ಮತ್ತಾಯೆ ಬರೆತಿ ಸುವರ್ತಮಾನ’ (Gospel of Mathew)-೧೮೪೧

ಜೆ. ಅಮ್ಮನ್‌ ಇವರು ರಚಿಸಿದ ಬೈಬಲಿನ ತುಳು ಭಾಷಾಂತರ (೨ನೇ ಆವೃತ್ತಿ)-೧೮೫೯

ಜಿ. ಕೆಮರರ್‌ ಮತ್ತು ಜೆ. ಅಮ್ಮನ್‌ ಜೊತೆಗೂಡಿ ಬೆಳಕಿಗೆ ತಂದ ‘ತುಳು ಗೀತೊಳೆ ಪುಸ್ತಕ’ -೧೮೬೪

ಜೆ. ಬ್ರಿಗಲ್‌ ಬರೆದ ‘ಗ್ರಾಮರ್‌ ಆಫ್‌ ತುಳು ಲ್ಯಾಂಗ್ವೇಜ್‌’ ೧೮೭೨

ಬಾಸೆಲ್‌ಮಿಶನ್‌ಪ್ರಕಟಪಡಿಸಿದ ‘ಸಹಸ್ರಾರ್ಧ ತುಳು ಗಾದೆಲು’ ೧೮೭೪

ಜಿ. ಬ್ರಿಗಲ್‌ ಬರೆದ ‘ಗ್ರಾಮರ್‌ ಆಫ್‌ ತುಳು ಲ್ಯಾಂಗ್ವೇಜ್‌’ ೧೮೭೨

ಬಾಸೆಲ್‌ಮಿಶನ್‌ಪ್ರಕಟಪಡಿಸಿದ ‘ಸಹಸ್ರಾರ್ಧ ತುಳು ಗಾದೆಲು’-೧೮೭೪

ಜಿ. ರಿಟ್ಟರ್‌ ರಚಿಸಿದ ‘ತುಳು ಜೋಕುಲೆ ಗೀತೊಳು’ ೧೮೭೯

ಅಗಸ್ಟ್‌ ಮೇನರ್‌ ಬರೆದ ‘ತುಳು-ಇಂಗ್ಲಿಷ್‌ ನಿಘಂಟು -೧೮೮೯ ಅವರೇ ರಚಿಸಿದ ಇಂಗ್ಲಿಷ್‌ ತುಳು ನಿಘಂಟು ಮತ್ತು ‘ಪಾಡ್ಡನೊಳು’ ಪಾಡ್ದನಗಳ ಸಂಗ್ರಹ)

ಹಾಗೆಯೇ ೧೮೯೨ರಲ್ಲಿ ಬೈಬಲಿನ ‘ಹಳೆ ಒಡಂಬಡಿಕೆ’ಯ ಆದಿ ಕಾಂಡದ ತುಳು ಅನುವಾದವು ತಿದ್ದಿದ ಆವೃತ್ತಿಯೊಂದಿಗೆ ‘ಉತ್ಪತ್ತಿ’ ಎಂಬ ಹೆಸರಿನಿಂದ ಪ್ರಕಟಗೊಂಡಿತು.

ಈ ಮೇಲೆ ಹೆಸರಿಸಿದ ವಿದೇಶಿಯರಲ್ಲದೆ ಕೇರಳದಿಂದ ತುಳುನಾಡಿಗೆ ಬಂದಿದ್ದ ಭಾರತೀಯ ಧರ್ಮ ಬೋಧಕರಲ್ಲಿ ಎಲೀಸರ್‌ ಪಿ. ಕಾರಟ್‌ (Elizer P. Karat ೧೮೪೩-೧೯೨೪) ಬೈಬಲಿನ ೭ ಸ್ತೋತ್ರಗಳನ್ನು ತುಳುವಿನಲ್ಲೂ, ೧೭ಸ್ತೋತ್ರಗಳನ್ನು ಕನ್ನಡದಲ್ಲೂ ಬರೆದಿದ್ದಾರೆ…. ತಿಮೋತಿ ಫುರ್ಟಾಡೊ (Thimothy Furtado) ಇವರು ಮೂರು ಸ್ತೋತ್ರಗಳನ್ನು ಮೂಲ್ಕಿಯ ಗಾಬ್ರಿಯೆಲ್‌ ಪ್ರೇಮಯ ೩ ಸ್ತೋತ್ರ ಗೀತೆಗಳನ್ನೂ ಜೆರೇಮಿಯಸ್‌ ಸೊನ್ನ ಮತ್ತು ನೆಹಸ್ಸನ್‌ವೀರಾ – ಇವರು ಒಂದೊಂದು ಸ್ತೋತ್ರವನ್ನು ತುಳುವಿಗೆ ಅನುವಾದಿಸಿದ್ದಾರೆಂದು ಅಮೃತ ಸೋಮೇಶ್ವರ ಬರೆದಿದ್ದಾರೆ (ತುಳುವರಿವರು – ಪು ೨೧)

ಅಗಸ್ಟ್‌ ಮೆನ್ನರ್‌ ಇವರು ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಈ ಹಿಂದೆ ಹೆಸರಿಸಿದ ಕೃತಿಗಳಲ್ಲದೆ A canarese Tulu Book ಎಂಬುದನ್ನೂ ಅವರು ರಚಿಸಿದ್ದಾರೆ. ‘ಎಂಕ್‌ಲಾ ಒಂಜಿ ಇಲ್ಲ್‌ ಉಂಡು’ (ನನಗೂ ಒಂದು ಮನೆ ಉಂಟು), ಕಲಿಗಂಗಸರದ ತಯಾರಿ ಕ್ರೈಸ್ತರೆಗ್‌ ಯೋಗ್ಯದವು ಆದುಂಡಾ (ಕಳ್ಳು, ಸರಾಯಿ ಯತಾರಿ – ಇದು ಕ್ರೈಸ್ತರಿಗೆ ಯೋಗ್ಯವಾದದ್ದೇ) – ಇಂಥ ಸಾಮಾಜಿಕ ಜಾಗೃತಿಯ ಅರಿವು ಮೂಡಿಸುವ ಕೃತಿಗಳನ್ನು ಅವರು ಬರೆದಿದ್ದಾರೆ. ಧಾರ್ಮಿಕ ನೆಲೆಯಲ್ಲಿದ್ದಕೊಂಡೇ, ಸಾಹಿತ್ಯ ರಚನೆಯ ಕಾರ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಂಡ ಮೇನರ್‌ ಇವರನ್ನು ತುಳುವರು ಮರೆಯುವಂತಿಲ್ಲ.

ಜೆ. ಬ್ರಿಗೆಲ್‌ ಇವರು ಇಂಗ್ಲಿಷಿನಲ್ಲಿ ಬರೆದ ತುಳು ವ್ಯಾಕರಣ ಗ್ರಂಥದ ವೈಶಿಷ್ಟ್ಯವೆಂದರೆ, ಆ ಪುಸ್ತಕದ ಮುನ್ನುಡಿಯಲ್ಲಿ ‘ಬಾಸೆಲ್ ಮಿಶನ್‌’ ಸಂಸ್ಥೆಯಿಂದ ಪ್ರಕಟಗೊಂಡ ಕೃತಿಗಳ ಮಾಹಿತಿ ಲಭ್ಯವಿರುವುದು ಇದೊಂದು ಶಾಶ್ವತ ದಾಖಲೆ ಎನಿಸಿದೆ. ಅಂತೆಯೇ ಬ್ರಾಹ್ಮಣರಾಡುವ ತುಳುವಿನಲ್ಲಿ ಒಂದು ಪದ್ಯ, ಪಾಡ್ದನದ ಒಂದು ತುಣುಕು, ಐವತ್ತು ತುಳು ಗಾದೆಗಳು – ಇವು ಗ್ರಂಥದ ಅನುಬಂಧದಲ್ಲಿ ಕಾಣಸಿಗುವುದರಿಂದಲೂ ಆ ಕಾಲದ ತುಳುವಿನ ಬರವಣಿಗೆಯ ಸ್ವರೂಪ ಹೇಗಿತ್ತು ಎಂಬುದನ್ನು ನಿರ್ಣಯಿಸಬಹುದಾಗಿದೆ. ಇವರು ಆರು ಸ್ತೋತ್ರಗಳನ್ನೂ ತುಳುವಿನಲ್ಲಿ ರಚಿಸಿದ್ದಾರೆ. ಗೇಯತೆಯಿಂದ ಕೂಡಿದ ಇವುಗಳು ತುಳು ಸಂಗೀತಗಳೆಂದೂ ಕರೆಯಲ್ಪಡುತ್ತವೆ.

ತುಳುಗೀತಗಳ ರಚನೆಯಲ್ಲಿ ಅಮ್ಮನ್‌, ಕೆಮರರ್‌, ಮೆನ್ನರ್‌, ಆರ್‌. ಬುನ್ಸ್‌ ಇವರು ಪ್ರಸಿದ್ಧರು. ಹೀಗೆ ರಚನೆಗೊಂಡ ‘ತುಳು ಗೀತೋಳು’ (Tulu Hymn Book) ಗ್ರಂಥದಲ್ಲಿ ಹನ್ನೊಂದು ವಿಭಾಗಗಳಿದ್ದು ಅವುಗಳಲ್ಲಿ ಹಬ್ಬದ ಗೀತೆಗಳು, ಕೊನೆಗಾಲದ ಗೀತೆಗಳು – ಹೀಗೆ ವಿವಿಧತೆ ಇದ್ದು ಗೀತ ರಚಯಿತರ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ. ಈ ಗೀತೆಗಳು ಇಂಗ್ಲಿಷ್‌ ಮತ್ತು ಜರ್ಮನ್‌ ಭಾಷೆಗಳಿಂದ ಅನುವಾದಿತಗೊಂಡವುಗಳು. ತುಳು ಭಾಷೆಯನ್ನು ದುಡಿಸಿಕೊಂಡು ರಚಿಸಿದ ಗೀತೆಗಳ ಭಾಷಾ ಸೌಂದರ್ಯಕ್ಕೆ ಉದಾಹರಣೆಗಳೆಂದು ಈ ಕೆಳಗಿನವುಗಳನ್ನು ನೋಡಬಹುದು.

“ಪ್ರಿಯ ಅಮ್ಮಾ ಯೇಸುಗಾದ್‌
ಯೆನನ್‌ ಸೇರಾವೊಂಡ
ಯಾನ್‌ನಿನ ಬಾಲೆ ಆದ್‌
ಉಪ್ಪು ಲೆಕ್ಕ ಮಲ್ತ್‌ದ
ನಿಕ್ಕ್‌ಪೂರ್ತಿ ವಶ ಆದ್‌
ಶುದ್ಧ ಪ್ರೀತಿ ಮೆಲ್ಪೆರೆ
ಪಾಪೊಲೆಗ್‌ ದೂರ ಆದ್‌
ಬದ್‌ಕೆರೆ ಒಪ್ಪಿಯೆ”
(ಅನು: ಎ. ಮೆನ್ನರ್‌, ತುಳುವರಿವರು, ಪು. ೨೨೬)

ಇದರ ಕನ್ನಡಾನುವಾದವನ್ನು ಹೀಗೆ ನೀಡಬಹುದು

ಪ್ರಿಯ ತಂದೆ ಯೇಸುವಿಗಾಗಿ
ಎನ್ನ ಸೇರಿಸಿಕೊಂಡೆ
ನಾನು ನಿನ್ನ ಶಿಶುವಾಗಿ
ಇರುವಂತೆ ಮಾಡಿದೆ
ನಿನಗೆ ಪೂರ್ಣ ವಶವು ನಾನು
ಶುದ್ಧ ಪ್ರೀತಿ ಮಾಡಲು
ಪಾಪಗಳಿಗೆ ದೂರವಾಗಿ
ಒಪ್ಪಿದೆ ನಾ ಬದುಕಲು

ಮೇಲಿನ ಗೀತೆಗಳಲ್ಲಿ ಸಮರ್ಪಣ ಭಾವ ಕಂಡರೆ ಕೆಳಗಿನ ಗೀತೆಗಳಲ್ಲಿ ಭಗವಂತನನ್ನು ಸ್ನೇಹಿತನಂತೆ ಕಂಡು ಲೋಕದ ಅನ್ಯಾಯಗಳನ್ನು ದೂರ ಮಾಡುವ ಬೇಡಿಕೆ ಇದೆ. ಪಾಪ ಭೂಮಿಯಿಂದ ಬಿಡುಗಡೆಗೊಳ್ಳುವ ಆರ್ತತೆ ಇದೆ.

ಈ ನರಲೋಕ ಸುಖ
ಸಾಕಾಂಡ್‌ ದೇವರೇ
ನಿನತಿ ಪ್ರಿಯ ಮುಖ
ಬುಡಂದೆ ನಾಡುವೆ
(ಅನು: ಕೆಮರರ್‌, ತುಳುವರಿವರು, ಪು. ೨೨೮)

ಇದರ ಕನ್ನಡಾನುವಾದವನ್ನು ಹೀಗೆ ನೀಡಬಹುದು-

ಈ ನರಲೋಕದ ಸುಖ
ಸಾಕಾಯ್ತು ದೇವರೇ
ನಿನ್ನ ಪ್ರಿಯ ಮುಖವನ್ನು
ಬಿಡದೆ ನಾ ಅರಸುವೆ

ಜೆ. ಅಮ್ಮನ್‌ ರಚಿಸಿದ ಗೀತೆಗಳ ಒಂದು ಉದಾಹರಣೆ:-

ಕಷ್ಟ ಬನ್ನಗ ಕೈತಲುಂತುಲ
ಅನುಪತ್ಯ ದುನ್ನ ಆಂಡ
ಎಂಕ್‌ಲೆನ್‌ ಮಲ್ಪುಶಾಂತ
ಮೂಲು ಇಕ್ಕಟ್ಟೇ, ಔಲು ಮಹಿಮೆ
(ತುಳುವರಿವರು ಪು. ೨೨೮)

ಇದರ ಕನ್ನಡಾನುವಾದವನ್ನು ಹೀಗೆ ಮಾಡಬಹುದು.

ಕಷ್ಟ ಬಂದಾಗ ಹತ್ತಿರದಿ ನಿಲ್ಲು
ಹೆಚ್ಚಿದರೆ ದುಗುಡ-ದುಮ್ಮಾನಗಳು
ಶಾಂತಗೊಳಿಸು ಎಮ್ಮನು
ಇಲ್ಲಿ ಇಕ್ಕಟ್ಟು, ಅಲ್ಲಿದೆ ಮಹಿಮೆ

ಇಂಥ ಗೀತೆಗಳನ್ನು ಸಲೀಸಾಗಿ ಹಾಡಲು ಬಾರದು. ಆದರೂ ಕಷ್ಟಗಳನ್ನು ಪರಿಹರಿಸಿ ಮೋಕ್ಷದ ದಾರಿಯನ್ನು ಕರುಣಿಸೆಂದು ಬೇಡಿಕೊಳ್ಳುವ ಭಕ್ತನ ಬೇಡಿಕೆಯ ಹಿಂದೆ ಶುದ್ಧ ಭಕ್ತಿ, ಅಂತಃಕರಣ್ ಆವಿಷ್ಕಾರವಿದೆ.

ಬದುಕಿನಲ್ಲಿ ನೀತಿಯೇ ಪ್ರಧಾನವೆಂಬುದನ್ನು ತೋರಿಸುವ ಬ್ರಿಗೆಲ್ಲರ ಗೀತೆಗಳಲ್ಲಿಯ ಒಂದು ಉದಾಹರಣೆ:

ನಾಶಾಪಿ ಮಾರ್ಗೊಡು
ಈ ಪೋಪದಾಯೆ
ಕ್ರಿಸ್ತ್ಯೇಸು ನುಗೊನು
ತುಂಬೊಣುನಾಯೆ
(ತುಳುವರಿವರು ಪು. ೨೨೯)

ಕನ್ನಡಕ್ಕೆ:
ನಾಶದ ಹಾದಿಯಲ್ಲಿ
ನೀಪೋಪುದಕ್ಕೆ
ಕ್ರಿಸ್ತಯೇಸು ನೊಗವನು
ಹೊತ್ತು ಕೊಳ್ಳುವವನು

ಅನೀತಿಯಿಂದ ಸರ್ವನಾಶ; ನೀತಿ ಮಾರ್ಗದಲ್ಲಿ ನಡೆದವನನ್ನು ಯೇಸು ಆಧರಿಸುವನು ಎಂಬುದು ಇಲ್ಲಿಯ ಭಾವಾರ್ಥ. ದಾಸರ ‘ಕೆಡಬೇಡ ಮನುಜ ಎಲ್ಲರನು ಸಲಹುವನು’ ಎಂಬ ಆಶ್ವಾಸನೆಯ ನುಡಿಗಳಂತಿರುವ ಈ ಸಾಲುಗಳು ತುಳು ಭಾಷೆಯಲ್ಲಿ ಹೆಚ್ಚು ಜನಜನಿತವಾದುವು.

ನ್ಯೂಮನ್‌ ಕವಿಯ `Lead Kindly light’ ಕವಿತೆಯನ್ನು ಬುನ್ಸ್‌ಎಂಬವರು ತುಳುವಿಗೆ ಅನುವಾದಗೊಳಿಸಿದ್ದಾರೆ. ಅದರ ತಲೆ ಬರಹ ‘ವಿಶ್ವಾಸ’

ಪ್ರಕಾಶ ಕೊರ್ದು ಯೆನನ್ನಡಪಾಲಾ
ಸ್ವಾಮಿ ಯೇಸೋ
ಗರ್ಗಂಡ ಕತ್ತಲುಂಡು, ಊರು ದೂರ
ಈ ದುಂಬಬು ಪೋ
ದಂಟಂದಿಲೆಕ್ಕ ಪರ್ತ್ತ್ ಯೆನ ಕೈ
ಸಾದಿನ್‌ ಒಂತೆ ಮಾತ್ರ ತೂಂಡ ಸೈ
……….
……….
(ತುಳುವರಿವರು ಪು. ೨೩೦)

ಆರಂಭದ ಈ ಊರು ಸಾಲುಗಳು ತುಳುವಿಗೆ ಸಮರ್ಥವಾಗಿ ಅನುವಾದಗೊಂಡಿವೆ. ನ್ಯೂಮನನ ಈ ಇಂಗ್ಲಿಷ್‌ ಕವಿತೆಯನ್ನು ಈಗಾಗಲೆ ಬಿ. ಎಂ. ಶ್ರೀಯವರು ಎಂ. ಎನ್‌. ಕಾಮತರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆದರೂ ಇಲ್ಲಿಯ ತುಳುಭಾಷೆಗೆ ಅನ್ವಯಿಸಿ ಮೇಲಿನ ಸಾಲುಗಳು ಅನುವಾದವನ್ನು ಹೀಗೆ ನೀಡಬಹುದು:-

ಬೆಳಕುದೋರಿ ನಡೆಸು ಎನ್ನನು
ಯೇಸು ಸ್ವಾಮಿಯೇ
ಹಬ್ಬಿದ ಕಗ್ಗತ್ತಲು, ಊರು ದೂರ ಎನ್ನದು
ನೀ ಮುಂದೆ ನಡೆ ದೇವರೇ
ಎಡವದಂತೆ ಕೈಯ ಹಿಡಿಯೊ
ಸ್ವಲ್ಪದೂರ ಸಾಕು ಎನಗೆ
…….
…….

ಬೈಬಲಿನ ಗದ್ಯಾನುವಾದಕ್ಕೆ ಒಂದು ಉದಾಹರಣೆ:

‘ಆಯೆ ಪರ್ವತೊಡ್ದು ಜಪ್ಪುನಗ, ದಿಂಜನ ಆಯ ಬೆರಿಯೆ ಬತ್ತೆರ್‌ಬೊಕ್ಕ ಇಂದಾ, ಕೊಷ್ಟದಾಯೆ ಒರಿಬತ್ತ್ ದ್‌ಆಯಗ್‌ಅಡ್ದ ಬೂರುದು, ಕರ್ತವಾ ನಿಕ್ಕ್‌ಮನಸ್‌ಉಂಡುಡ ಯೆನನ ಶುದ್ಧ ಮಾಲ್ಪೊಲಿ ಇದೆ. ಅಪಗ ಯೇಸು ಕೈ ನೀಡ್‌ದ್‌, ಆಯನೆಎ ಮುಟ್ಟುದು, ಎಂಕ್‌ಮನಸ್‌ಉಂಡು, ಶುದ್ಧ ಆದುಪ್ಪುಲ ಅಂದೇ – ಅಪಗನೇ ಆಯ ಕೊಷ್ಟಪೋದು ಶುದ್ಧ ಆಯೆ’ (ಮತ್ತಾಯೆ ಬರೆತಿ ಸುವರ್ತಮಾನ – ಸಂಧಿ ೮ ಆಧಾರ: ತುಳುವರಿವರು ಪು. ೩೩೩)

ಇದರ ಕನ್ನಡಾನುವಾದ:

‘ಅವನು ಪರ್ವತದಿಂದ ಇಳಿದು ಬರುವಾಗ ತುಂಬ ಜನರು ಅವನ ಹಿಂದೆಯೇ ಬಂದರು. ಆಗ, ನೋಡು, ಕುಷ್ಠರೋಗಿಯೊಬ್ಬನು ಬಂದು ಅವನಿಗೆ ಅಡ್ಡಬಿದ್ದು ಕರ್ತೃವೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಗೊಳಿಸಬಹುದು ಎಂದ. ಆಗ ಯೇಸುವೂ ಕೈ ನೀಡಿ, ಅವನನ್ನು ಸ್ಪರ್ಶಿಸಿ ‘ನನಗೆ ಮನಸ್ಸಿದೆ, ಶುದ್ಧವಾಗು’ ಎಂದ ಕೂಡಲೇ ಅವನ ಕುಷ್ಟ ಮಾಯವಾಗಿ ಶುದ್ಧವಾದ.

ಮಿಶನರಿಗಳು ರಚಿಸಿದ ‘ಕೀರ್ತನೆಗಳು’ -ಇದರ ಒಂದು ಉದಾಹರಣೆ

‘ಪಂಡಿಕೆಂತಿನಾಕುಲೆ ಬುದ್ಧಿಡ್‌ ನಡತೊನಂದೆ ಪಾಪಿಲೇ ಮಾರ್ಗೊಡು ಉಂತಂದೆ, ಹಾಸ್ಯಗಾರೆರ ಕೂಟೊಡು ಕುಲ್ಲಂದೆ, ಯಹೋವ ನ್ಯಾಯಕಟ್ಟ್ ಗ್ ಮೆಚ್ಚಿದ, ಆಯ ನ್ಯಾಯಕಟ್ಟ್ ನ್ ಇರ್ಲ್ ಪಗೆಲ್‌ ಗುಣಿತೊಣುದುಪ್ಪು ನರಮಾನ್ಯಗ್‌ ಭಾಗ್ಯನೇ ಸೈ. ಇಂಚಿತ್ತಿನಾಯೆ, ನೀರ ತೋಡುದ ಬರಿಟ್‌ ನಡ್‌ತಿನವು, ತಕ್ಕ ಸಮಯೊಡು ತನ ಫಲ ಕೊರ್ಪಿನವು, ಇರೆ ಬಾಡ್‌ದ್‌ಪೋವಂದಿನವು. ಮರತ ಲೆಕ್ಕನೆ ಉಲ್ಲೆ. ಉಂದತ್ತಂದೆ ಆಯೆ ಮಲ್ಪುನವು ಮಾತಲಾ ಕೈ ಕೂಡುದು ಬರ್ಪುಂಡು’-

(ತುಳುವರಿವರು. ಪು. ೨೨೩)

ಇದರ ಕನ್ನಡಾನುವಾದವನ್ನು ಹೀಗೆ ನೀಡಬಹುದು.

‘ಕೆಟ್ಟವರ ಬುದ್ಧಿಗೆ ಅನುಸಾರವಾಗಿ ನಡೆಯದೆ, ಪಾಪಿಗಳ ದಾರಿಯಲ್ಲಿ ನಿಲ್ಲದೆ, ಕುಹಕಿಗಳ ಕೂಟದಲ್ಲಿ ಸೇರದೆ, ಯೆಹೋವನ ನ್ಯಾಯಕಟ್ಟಳೆಯನ್ನು ಮೆಚ್ಚಿ ಅವನ ನ್ಯಾಯ ಕಟ್ಟಳೆಯನ್ನು ಆಹೋರಾತ್ರಿ ಧ್ಯಾನಿಸುವ ಮನುಷ್ಯನೇ ಭಾಗ್ಯವಂತನು. ಇಂಥವನು, ಹಳ್ಳದ ಬಳಿಯಲ್ಲಿ ನೆಟ್ಟ, ತಕ್ಕ ಸಮಯದಲ್ಲಿ ಫಲ ಕೊಡುವ ಎಲೆಗಳು ಬಾಡಿಹೋಗದ ಮರದ ಹಾಗೆ ಇರುವನು. ಇದಲ್ಲದೆ ಅವನು ಮಾಡುವ ಎಲ್ಲ ಕೆಲಸಗಳಿಗೂ ಕೈಗೂಡುತ್ತವೆ.’

ಈ ಮೇಲಿನ ತುಳು ಗದ್ಯದ ಶೈಲಿಯನ್ನು ಅವಲೋಕಿಸಿದರೆ ಮಿಶನರಿಗಳ ಭಾಷಾ ಪ್ರೌಢಿಮೆಯನ್ನು ನಾವು ಮೆಚ್ಚುವಂತಾಗುತ್ತದೆ. ವ್ಯಾಕರಣ ಶುದ್ಧಿ ಮತ್ತು ಸುಲಲಿತ ಶೈಲಿಯೆಡೆಗೆ ಅವರು ಹೆಚ್ಚು ಲಕ್ಷ್ಯ ಕೊಡದೇ ಇದ್ದಿರಬಹುದು. ಆದರೆ ಮೂಲದ ಆಶಯವನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಅವರು ಭಾಷೆಯ ಸೌಂದರ್ಯವನ್ನು ಹೆಚ್ಚಿಸಲು ಸಂಸ್ಕೃತ ಪದಗಳನ್ನು ಬಳಸಿದ್ದು ಸ್ಪಷ್ಟವಾಗುತ್ತದೆ. ಏನಿದ್ದರೂ ತುಳುವಿನಲ್ಲಿ ಪ್ರಥಮವಾಗಿ ಮುದ್ರಿತ ಗ್ರಂಥಗಳು ಬೆಳಕಿಗೆ ಬರಲು ಕಾರಣವಾದ ಕ್ರೈಸ್ತ ಮಿಷನರಿಗಳ ಕೊಡುಗೆ ಅವಿಸ್ಮರಣೀಯ. ಆಗ ಕನ್ನಡ ಭಾಷೆಯನ್ನು ಶಿಕ್ಷಣದಲ್ಲಿ ಬಳಸುತ್ತಿದ್ದುದರಿಂದ, ಮಿಶನರಿಗಳು ಬೈಬಲಿನ ತುಳು ಅನುವಾದಕ್ಕೆ ಕನ್ನಡ ಲಿಪಿಯನ್ನೇ ಬಳಸಿಕೊಂಡರು. ಬಹು ಸಂಕ್ಯೆಯಲ್ಲಿ ಜನರಾಡುವ ತುಳು ಭಾಷೆಯನ್ನು ಮತ ಪ್ರಚಾರದ ಮಾಧ್ಯಮವಾಗಿ ಅವರು ಸ್ವೀಕರಿಸಿಕೊಂಡದ್ದರಿಂದ ಸಾಮಾನ್ಯರು ಕೂಡ ಈ ಭಾಷೆಯನ್ನು ಸೊಗಸನ್ನು ಅರಿತುಕೊಳ್ಳುವಂತಾಯಿತು.

ಗ್ರಂಥ ರಚನೆಯ ಘಟ್ಟದಲ್ಲಿ ವ್ಯಾಕರಣದ ಅವಶ್ಯಕತೆಯನ್ನು ಕಂಡುಕೊಂಡು ಮಿಶನರಿಗಳು ಮೊದಲು ಇಂಗ್ಲಿಂಷಿನಲ್ಲಿ ತುಳು ವ್ಯಾಕರಣ ಗ್ರಂಥವನ್ನು ರಚಿಸಿದರೆ (ಬ್ರಿಗೆಲ್‌ A grammer of tulu language) ಮುಂದೆ ಎಸ್‌. ಯು. ಪಣಿಯಾಡಿವರು ‘ತುಳು ವ್ಯಾಕರಣ’ ಗ್ರಂಥವನ್ನು ಹೊರತರಲು ಇದೇ ಪ್ರೇರಣೆಯಾಯಿತೆಂಬುದನ್ನು ಮರೆಯುವಂತಿಲ್ಲ.

ಕ್ರೈಸ್ತ ಮಿಶನರಿಗಳು ತುಳುನಾಡಿನಲ್ಲಿ ನಡೆಸಿದ ಅದ್ಭುತ ಕೆಲಸಗಳ ಬಗೆಗೆ ನಮ್ಮ ವಿದ್ವಾಂಸರು ಹೀಗೆ ಹೇಳುತ್ತಾರೆ :

“ಭಾಷೆ ಹಾಗೂ ಸಂಸ್ಕೃತಿಯ ಪುನರುಜ್ಜೀವನದ ಕಾಲದಲ್ಲಿ ವ್ಯಾಕರಣಗಳ ಪಾತ್ರ ಬಹಳ ಮಹತ್ವದ್ದು. ಜನಸಾಮಾನ್ಯರ ದೃಷ್ಟಿಯಿಂದ ಈ ವ್ಯಾಕರಣ ಗ್ರಂಥಗಳ ಪ್ರಕಟಣೆಗಳು ಅಷ್ಟೊಂದು ಮಹತ್ವದ ಘಟನೆಗಳದಿದ್ದರೂ ವಿದ್ವಾಂಸರ, ಸಾಹಿತಿಗಳ ಹಾಗೂ ಭಾಷಾಭ್ಯಾಸಿಗಳ ದೃಷ್ಟಿಯಿಂದ ಇವುಗಳ ಉಪಯೋಗ ಅಷ್ಟಿಷ್ಟೆಂದು ಹೇಳಲಿಕ್ಕಾಗುವುದಿಲ್ಲ. ತಮಗೆ ಅಪರಿಚಿತವಾದ ಭಾಷೆಯಾಗಿದ್ದ ತುಳುವನ್ನು ಕಲಿತು ಮುಂದೆ ಕಲಿಯುವವರಿಗಾಗಿ ಆಧಾರ ಸಾಮಗ್ರಿಗಳನ್ನು ಕೋಶ ವ್ಯಾಕರಣಗಳ ಮೂಲಕ ಸೃಷ್ಟಿಮಾಡಿದುದು ಆ ಕಾಲದ ಕ್ರೈಸ್ತ ಮಿಶನರಿಗಳ ಹೆಚ್ಚುಗಾರಿಕೆಯೇ ಸರಿ”

(ಯು.ಪಿ. ಉಪಾಧ್ಯಾಯ – ತುಳುವರಿವರು ಪು. ೨೩೯)

“ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಮುಖ್ಯ ಸಾಹಿತ್ಯ ಸಾಧನಗಳು ಎರಡು: ಒಂದು ವ್ಯಾಕರಣ, ಇನ್ನೊಂದು-ನಿಘಂಟು. ವಿದೇಶದಿಂದ ಭಾರತೀಯ ಭಾಷೆಗಳನ್ನು ಪ್ರಯತ್ನ ಪೂರ್ವಕ ಕಲಿತು ಮೊದಲು ಕೆಲಸವೇ ತಾವು ಕಲಿತ ಭಾಷೆಗಳ ವ್ಯಾಕರಣವನ್ನು ಬರೆದು ನಿಘಂಟುವನ್ನು ತಯಾರಿಸಿದ್ದು. ಈ ಶಾಸ್ತ್ರ ಸಾಹಿತ್ಯದ ಬುನಾದಿಯ ಮೇಲೆ ನಿಂತು ಕ್ರೈಸ್ತ ಮಿಶನರಿಗಳು ಉಳಿದ ಸಾಹಿತ್ಯ ಪ್ರಕಾರಗಳ ಬೆಳವಣಿಗೆ ಕಾರಣಕರ್ತರಾದರು” (ಪದ್ಮನಾಭ ಕೇಕುಣ್ಣಾಯ ೧೯೭೭ ಪು. ೨೪-೪೨)

ಮಿಶನರಿಗಳು ಸೃಷ್ಟಿಸಿದ ಹಲ ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ಹೆಚ್ಚಿನವು ಬೈಬಲಿನ ಅನುವಾದಗಳೆಂದು ಈ ಹಿಂದೆ ಉಲ್ಲೇಖಿಸಿದ್ದೇನೆ > ಈ ರೀತಿಯಾಗಿ ಕನ್ನಡದಿಂದಲೂ ತುಳುವಿಗೆ ಇಳಿದುಬಂದ ಕೃತಿಯೊಂದಿದೆ. ಅದು ೧೯ನೆಯ ಶತಮಾನದ ಕೊನೆಯ ದಶಕಗಳಲ್ಲಿ ಸೃಷ್ಟಿಗೊಂಡ ‘ಪಚವಟಿ ವಾಲಿ ಸುಗ್ರೀವೆರೆ ಕಾಳಗೂ’ ಎಂಬ ತುಳು ಯಕ್ಷಗಾನ ಪ್ರಸಂಗ. ಇದನ್ನು ವಿಟ್ಲಸೀಮೆಯ ಯಕ್ಷಗಾನ ಭಾಗವತ – ಸಂಕಯ್ಯ ಭಾಗವಂತರು ೧೮೮೭ರಲ್ಲಿ ಬರೆದುದಾಗಿ ಕವಿ ಹೇಳಿಕೆಯಿಂದ ನಿರ್ಣಯಿಸಲಾಗಿದೆ. ಇದು ಕುಂಬಳಿಯ ಪಾರ್ತಿಸುಬ್ಬ ವಿರಚಿತ ‘ಪಂಚವಟಿ-ವಾಲಿ ಸುಗ್ರೀವರ ಕಾಳಗ’ ಎಂಬ ಕನ್ನಡ ಕೃತಿಯ ತುಳು ಅನುವಾದ.

“ಅದನ್ನು ಸಂಕಯ್ಯ ಭಗವತರು ತುಳುವಿನಲ್ಲಿ ಇನ್ನಷ್ಟು ಹೆಚ್ಚಿನ ಮೆರುಗು ಉಂಟಾಗುವಂತೆ, ಅಲ್ಲಲ್ಲಿಯ ಆಡುಮಾತಿನ ನುಡಿಗಟ್ಟುಗಳಿಂದ, ಗಾದೆಯ ನುಡಿಗಳಿಂದ ಮಾತುಗಳಿಗೆ ಅಲಂಕಾರದ ತೊಡುಗೆಯನ್ನು ತೊಡಿಸಿ ನಿರೂಪಣೆ ಮಾಡಿರುತ್ತಾರೆ. ಮೂಲ ಕವಿಯ ಶೈಲಿಗೆ ಸರಿಸಾಟಿಯ ಶೈಲಿ, ಮೂಲ ಕವಿತೆಯ ಛಂದಸ್ಸಿಗೆಸ ಮಾನವಾದ ಛಂದಸ್ಸು, ಮೂಲ ಕೃತಿಯ ರಾಗ-ತಾಳಗಳಿಗೆ ಸರಿದೂಗುವ ರಾಗತಾಳಗಳು – ಇವುಗಳಿಂದಾಗಿ ಈ ತುಳು ಯಕ್ಷಗಾನ ಹೆಚ್ಚು ಜನಪ್ರಿಯವಾದುದೆನ್ನಬಹುದು” (ಕೇಶವ ಭಟ್ಟ ೧೯೭೭ ಪು. ೧೧)

ತುಳುವಿಗೆ ಅನುವಾದಗೊಂಡ ಕೃತಿ ಎಂದರೂ ಕವಿ ಪ್ರತಿಭೆಯಿಂದ ಮೂಡಿ ಬಂದು ಭಾಷಾ ಶೈಲಿಗೆ ಒಂದು ಉದಾ:

ಕನ್ನಡ:
ನಾಗವೇಣಿಯ ಕಂಡು ಸೈರಿಸದೆ ಮನವು ನಿನ
ಗಾಗಿ ಕೈಯಿಕ್ಕಿದೆನು ಸತಿಗೆ
ಆಗ ಲಕ್ಷ್ಮಣನೆಂಬ ಹುಡುಗ ನನ್ನೆರಡು ಮೊಲೆ
ಮೂಗು ಸಹ ಕೊಯ್ದ ರಣಶೂರ ||

ತುಳು:
‘ಸೀತೆ ಕೈತಳ್‌ ಪೋತು ಪಾತೇರ್ನಗಾ ರಾಮೆ
ತೂತು ಲಕ್ಷ್ಮಣ ಕೈಟ್‌ಪಂಡೇ
ಘತಾಕತನೊಟ್ಟಾಯೆ ಕೆಬಿಮೂಂಕು ಮಿರೆ ಕೊಯ್ಯೆ
ಈತ್‌ ಬಂಙೊನ್‌ ಮಾಳ್ತು ಬುಡಿಯೇ’

ತುಳು ಭಾಷೆಯ ಪಾಡ್ದನಗಳನ್ನು ಕನ್ನಡಕ್ಕೆ ತಂದವರಲ್ಲಿ ಮಂಜೇಶ್ವರ ಗಣಪತಿ ರಾವ್ ಐಗಳು ಒಬ್ಬರು. ಇವರು ತುಳುನಾಡಿನ ಅರಸುಮನೆತನಗಳ ಬಗೆಗಿನ ಇತಿಹಾಸವನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಉದಾ: ಕುಂಬಳೆ ಅರಸರು, ವಿಟ್ಲದ ಡೊಂಬ ಹೆಗ್ಗಡೆ ಮನೆತನ, ಸುರಾಲದ ತೊಳಹರ, ಮೂಡಬಿದಿರೆಯ ಚೌಟರು, ಅಳದಂಗಡಿಯ ಅಜಿಲರು, ಬಂಗಾಡಿಯ ಬಂಗರು – ಇತ್ಯಾದಿ ಇವು ಕನ್ನಡ ಗ್ರಂಥಗಳಾದರೂ ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕಾರರಿಗೆ ಉತ್ತಮ ಆಕರಗಳೆನಿಸಿವೆ.

ಅಂತೆಯೇ ತುಳುನಾಡಿನ ಇತಿಹಾಸವನ್ನು ಇಂಗ್ಲಿಷಿನಲ್ಲಿ ಬರೆದಿರುವ ಭಾಸ್ಕರ ಆನಂದ ಸಾಲೆತ್ತೂರ್‌ಇವರು ತುಳುನಾಡಿನ ‘ಕೋಳಿಯಂಕ’, ತುಳು ಶಬ್ದದ ವ್ಯುತ್ಪತ್ತಿ, ಪಾಡ್ದನಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸಿದ್ದಾರೆ.

ಬಡಕಬೈಲು ಪರಮೇಶ್ವರಯ್ಯನವರು (ಜನನ: ೧೮೮೧) ಮೊದಲು ಕನ್ನಡದಲ್ಲಿ ಬರೆಯುತ್ತಿದ್ದು, ಅನಂತರ ಪಂಜೆ ಮಂಗೇಶರಾಯರ ಹೇಳಿಕೆಯಂತೆ ತುಳುವಿನಲ್ಲಿ ಕೃತಿರಚನೆ ಮಾಡಿದರೆಂದು ಹೇಳಲಾಗುತ್ತದೆ. ಇವರು ಶಂಕರಾಚಾರ್ಯರ ‘ಭಜಗೋವಿಂದಂ’ ಸಂಸ್ಕೃತ ಕೃತಿಯನ್ನು ತುಳುವಿಗೆ ಅನುವಾದ ಮಾಡಿದ್ದಲ್ಲದೆ ‘ತುಳುನೀತಿ ಪದ್ಯೊಲು’ ಎಂಬ ಸುಭಾಷಿತ ಸಂಗ್ರಹವನ್ನು ಪ್ರಕಟಪಡಿಸಿದ್ದಾರೆ. ದೇವಿದಾಸ ಕವಿ ವಿರಚಿತ ‘ಶ್ರೀಕೃಷ್ಣ ಸಂಧಾನ’ ಯಕ್ಷಗಾನ ಪ್ರಸಂಗವನ್ನು ತುಳುವಿಗೆ ಅನುವಾದಿಸಿ ‘ಕಿಟ್ಣರಾಜಿ ಪರ್ಸಂಗೊ’ ಎಂಬ ಹೆಸರಿನಿಂದ ಜನಪ್ರಿಯಗೊಳಿಸಿದ್ದಾರೆ.

ಕಪಟನಾಟಕಿ – ಸುಳದಳುದ ಗೊಬ್ಬುದಾಯೆ, ಸಾರಥ್ಯ – ಬೋಯಿಕೆಲಸ, ಗದೆ – ತಂದೆಲ್‌, ಅಚ್ಯುತ – ಮಾಜಂದಿನಾಯೆ – ಇತ್ಯಾದಿ. ಪದ್ಯದ ಒಂದು ಸಾಲು, ತುಳುವಿಗೆ ಇಳಿದು ಬಂದ ಸೊಗಸು –

ಕನ್ನಡ: ಕೋಮಾಲಾಂಗಿ ಕೇಳೇ ಮದಗಜಗಾಮಿನಿ ಪಾಂಚಾಲೆ

ತುಳು: ಕೇಣ್‌ಲ ಪಾಂಚಾಳೇ ಮೆದುಮೈಯಾನೆ ನಡಕೆದಾಳೇ (ತುಳುವರಿವರು -ಪು.೬೦)

ಮೂಡಬಿದಿರೆಯ ಕವಿ ರತ್ನಾಕರವರ್ಣಿ, ಹೊಸಗನ್ನಡ ಮುಂಗೋಳಿ ಮುದ್ದಣ ಕವಿ – ಇವರು ತಮ್ಮ ಕೃತಿಗಳನ್ನು ತುಳು ಭಾಷೆಯ ಚೆಹರೆಯಿಂದ ಸೊಗಯಿಸಿದ್ದಾರೆ.

ಇಪ್ಪತ್ತನೆ ಶತಮಾನದ ಆದಿಯಲ್ಲಿ ಪ್ರಕಟಗೊಂಡ ತುಳುವಿನ ಎರಡು ಕಿರುಹೊತ್ತಗೆಗಳೆಂದರೆ ‘ತುಳು ಕನ್ಯೋಪದೇಶ’ (ಎಂ. ಆರ್‌. ಸುಬ್ರಹ್ಮಣ್ಯಶಾಸ್ತ್ರಿ – ಮೂಡಬಿದರೆ) ಮತ್ತು ‘ಕೀರ್ತನಾಮೃತ’ (ಪಣಂಬೂರು ಶ್ರೀ ಗುರು ಸದಾನಂದ) ಇವೆರಡೂ ಬ್ರಾಹ್ಮಣರಾಡುವ ತುಳು ಭಾಷೆಯಲ್ಲಿವೆ. ನೀತಿಯ ಪದಗಳನ್ನು ತುಳುವಿನಲ್ಲಿ ಸರಳವಾಗಿ ಅಷ್ಟೇ ಮಾರ್ಮಿಕವಾಗಿ ಬರೆಯಲು ಸಾದ್ಯವೆಂಬುದನ್ನು ಇವು ತೋರಿಸಿಕೊಟ್ಟಿವೆ. ಉದಾ:

ಎಡ್ಡೆ ಕೇಣೊಂತು ಲೋಕೊಂಟು
ಪನಿ ಬಾಳ್ಯಡಲಾ ನಮ
ಪಾಪವ್ವೆ, ಬೋತ್ರಿ ಹಾಳಾಯಿ
ದೀರ್ಘ ಕಾಲಂತ ಬಾಳ್ಪೆಲಾ
(ತುಳು ಕನ್ಯೋಪದೇಶ)

ಕನ್ನಡಕ್ಕೆ:
ಪೆಸರಗಳಿಸಿ ಜಗದೊಳು
ಅಲ್ಪಕಾಲದ ಬಾಳುವೆಯು
ಸಾಕೆಮಗೆ, ಬೇಡವದು
ಕೆಡುಕಿನ ದೀರ್ಘಕಾಲದ ಬಾಳ್ವೆಯು ||
‘ಯಾನ್‌ ಮೇಲ್‌ ಈ ಕೀಳ್‌೦ದ್‌ | ಪಣ್ಪೇರತ್ತಾಂದೆ
ತಾನ್‌ ಉಪ್ಪಿ ವಿಚಾರ ಮಲ್ಪುಜೆರ್‌
ತನನ್ ತಾನ್‌ ಮೇಲ್‌೦ದ್‌ ಅನ್ಯೆರೆನ್‌ ಮಲ್ತ್ ದ್‌
ಅನ್ಯರೆನ ಪಾಪ ಮಾತ | ತನ್ನ ತರೆಟ್‌ ತುಂಬುನಾಕ್ಳ್‌”
(ಕೀರ್ತನಾಮೃತ)

ಕನ್ನಡಕ್ಕೆ:
ನಾಮೇಲು ನೀಕೀಳೆಂದು ಜರೆವರಲ್ಲದೆ
ತನ್ನ ತಾನರಿದು ಬದುಕಲರಿಯರು
ತನ್ನ ತಾನೇ ಪೊಗಳಿ ಅನ್ಯರನು ತೆಗಳುತ್ತ
ಅವರ ಪಾಪಂಗಳನು ಹೊತ್ತು ಕೊಳುವವರು

ತುಳು ಸಾಹಿತ್ಯದ ಅರುಣೋದಯಕ್ಕೆ ಹಿನ್ನೆಲೆಯಾಗಿ ತಮ್ಮ ತಮ್ಮ ಬೆಳಕಿನ ಕಿರಣಗಳನ್ನು ಒಡ್ಡಿದ ಅನೇಕ ಮಹನೀಯರಲ್ಲಿ ಶ್ರೀನಿವಾಸ ಪಣಿಯಾಡಿಯವರು ಅಗ್ರಗಣ್ಯರು. ಅವರ ‘ಸತೀ ಕಮಲೇ’ ತುಳುವಿನ ಪ್ರಥಮ ಕಾದಂಬರಿ ಎನಿಸಿದೆ. (೧೯೨೧)’ ತುಳು ಸಾಹಿತ್ಯ ಮಾಲೆ’ಯನ್ನು ಆರಂಭಿಸಿ ಪಣಿಯಾಡಿಯವರು ತುಳು ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡಿದರು. ನಂದಳಿಕೆ ಶ್ರೀನಪ್ಪ ಹೆಗ್ಗಡೆ, ನಾರಾಯಣ ಕಿಲ್ಲೆ – ಮೊದಲಾದವರು ತುಳುವಿನಲ್ಲಿ ಬರೆಯಲು ಇದೂ ಒಂದು ಪ್ರೇರಕಶಕ್ತಿಯಾಯಿತು. ಮಾಧವ ತಿಂಗಳಾಯ, ಸತ್ಯಮಿತ್ರ ಬಂಗೇರ. ವಿಠ್ಠಲ ಹೆಗ್ಗಡೆ, ಬಡಕಬೈಲು ಪರಮೇಸ್ರಾಯೆರು ಇವರೆಲ್ಲ ಪಣಿಯಾಡಿಯವರ ಜೊತೆಯಲ್ಲಿ ದುಡಿದು ಸಾಹಿತ್ಯ ಸೇವೆಗೆ ಮುಂದಾದವರು.

ಹೀಗೆ ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ, ಹಾಗೂ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಕಾಲವೂ ತುಳು ಸಾಹಿತ್ಯ ಸೃಷ್ಟಿಯ ಸುವರ್ಣಯುಗವೆಂದರೂ ಸಲ್ಲುವುದು. ಅನುವಾದದ ಜೊತೆಗೆ ಸ್ವಂತಿಕೆಯನ್ನು ಮೈದುಂಬಿಸಿಕೊಂಡ ಆರಂಭದ ಕಾಲಖಂಡವೇ ಮುಂದಿನ ಸಮೃದ್ಧಿಗೆ ಹೇತುವೆಂಬುದನ್ನು ನಾವು ಮರೆಯುವಂತಿಲ್ಲ. ಸಂಶೋಧನೆಯ ನಿಟ್ಟಿನಲ್ಲಿ ತುಳುಭಾಷೆಯ ಹೆಗ್ಗಳಿಕೆಯನ್ನು ಸಾರಿದ ಮಂಜೇಶ್ಚರ ಗೋವಿಂದ ಪೈಗಳು, ತುಳು ಜಾನಪದದ ಸತ್ವವನ್ನೇ ಮೊಗೆ ಮೊಗೆದು ಸಾಹಿತ್ಯದ ಅಣಿಮುತ್ತುಗಳನ್ನಾಗಿ ಮಾರ್ಪಡಿಸಿಕೊಂಡ ಪಂಜೆಮಂಗೇಶರಾಯರು, ಸೇಡಿಯಾಪು ಕೃಷ್ಣಭಟ್ಟರು – ಇವರೆಲ್ಲ ಆರಂಭದ ತುಳು ಕೃಷಿಯಿಂದ ಪ್ರೇರಿತರಾದವರು. ಆ ನೆಲವನ್ನು ಮತ್ತೆ ಹಸನುಗೊಳಿಸಿದವರು. ತುಳು ಸಾಹಿತ್ಯದ ಅರುಣೋದಯದ ಮುಂಬೆಳಕಿನಲ್ಲಿ ಮಿಂದವರು.

ಇಲ್ಲಿಯ ಆಶಯಗಳೇನು, ಎಂದು ನಾವು ಪ್ರಶ್ನಿಸಿದ್ದಾದರೆ ನೆಲದೊಡಲಿನ ಸಂಸ್ಕೃತಿಯ ಬೇರುಗಳ ಹುಡುಗಾಟವೆನ್ನುವುದೇ ಹೆಚ್ಚು ಸರಿಯಾದೀತು. ಅದರಲ್ಲೂ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸುವ ಸಾಂಸ್ಕೃತಿಕ ನಿಲುವು ಇಲ್ಲಿ ಪ್ರಧಾನ.

ತುಳು ಭಾಷೆಯ ಪ್ರಾಚೀನತೆಯನ್ನು ಕ್ರಿಸ್ತಪೂರ್ವಕ್ಕೆ ಒಯ್ಯಬಹುದಾದರೂ ಸಾಹಿತ್ಯ ರಚನೆಯ ಕಾಲವನ್ನು ಶೋಧಿಸ ಹೊರಟವರಿಗೆ ಕ್ರಿ.ಶ. ೧೭ನೆಯ ಶತಮಾನದ್ದೆಂದು ಹೇಳಲಾಗುವ ಪ್ರಾಚೀನ ತುಳು ಕಾವ್ಯಗಳ ಖನಿಯೊಂದು ಗೋಚರಿಸಿದ್ದು ಇತ್ತೀಚಿಗಿನ ಬೆಳವಣಿಗೆ. ಸಂಶೋಧಕರಾದ ವೆಂಕಟರಾಜ ಪುಣಿಂಚತ್ತಾಯರು ತುಳುವಿನ ಮಹಾಕಾವ್ಯ ‘ಶ್ರೀ ಭಾಗವತೊ’ ಇನ್ನೊಂದು ಕಿರುಕಾವ್ಯ ‘ಕಾವೇರಿ’ ಮತ್ತು ಗದ್ಯ ಗ್ರಂಥವಾದ ‘ದೇವಿ ಮಹಾತ್ಮೆ’, ‘ಮಹಾಭಾರತೊ ಕಾವ್ಯ’ ಇವುಗಳನ್ನು ಬೆಳಕಿಗೆ ತಂದರು. ತಾಳೆಗರಿಯ ಕಟ್ಟಿನಿಂದ ಅವುಗಳನ್ನು ಬಿಡಿಸಿ ಮಂಗಳೂರು ವಿ.ವಿ. ಮತ್ತು ಗೋವಿಂದ ಪೈ ಸಂಶೋಧನ ಕೇಂದ್ರದ ನೆರವಿನಿಂದ ಅಚ್ಚು ಹಾಕಿಸಿದ್ದಲ್ಲದೆ ತುಳುವಿನ ಪ್ರಾಚೀನ ಶಬ್ದ ಪ್ರಯೋಗಗಳ ಕಡೆಗೂ ದೃಷ್ಟಿ ಹರಿಸುವಂತೆ ಮಾಡಿದರು. ಇದೀಗ ಮಹಾಭಾರತೊ ಕಾವ್ಯದೊಳಗೆ ಉಲ್ಲೇಖಗೊಂಡ ‘ರಾಮಾಯಣ’ವನ್ನು ಪತ್ತೆ ಹಚ್ಚಿ ಲಿಖಿತ ತುಳು ಸಾಹಿತ್ಯ ಸಂಪತ್ತಿನ ಅರಿವನ್ನು ಕನ್ನಡಕ್ಕೂ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ.

ಈ ಪ್ರಾಚೀನ ಕಾವ್ಯಗಳನ್ನು ಒಟ್ಟಾಗಿ ವಸಂತ ಭಾರದ್ವಾಜರು ‘ಪಳಂತುಳು ಕಾವ್ಯ’ ಎಂದಿದ್ದಾರೆ.

“ಕನ್ನಡದ ವಡ್ಡಾರಾಧನೆಯನ್ನು ನೆನಪಿಗೆ ತರುವ ‘ದೇವಿ ಮಹಾತ್ಮೆ’ ತುಳು ಭಾಷೆಯ ಪ್ರಾಚೀನ ರೂಪವನ್ನು ನಮ್ಮ ಮುಂದೆ ತೆರೆದಿಡುತ್ತದೆ. … ಕಾವ್ಯದಲ್ಲಿ ಬಳಕೆಯಾಗಿರುವ ಭಾಷಾ ಶೈಲಿಯಂತೂ ತುಳುವಿನ ಅತ್ಯಂತ ಪ್ರಾಚೀನ ರೂಪವೆಂಬುದನ್ನು ಗಮನಿಸಿದಾಗ ಈ ಕೃತಿಯ ಕಾಲವನ್ನು ಸುಮಾರು ಕ್ರಿ. ಶ. ೧೨೦೦ಕ್ಕೆ ಒಯ್ಯಲು ಸಾಧ್ಯವಿದೆ.” ಇತ್ತೀಚೆಗೆ ದೊರೆತ ಅರುಣಾಬ್ಜ ಕವಿಯ ‘ಮಹಾಭಾರತೊ’ ಕಾವ್ಯದ ಕಾಲವನ್ನು ಚಾರಿತ್ರಿಕವಾಗಿ ಕ್ರಿ. ಶ. ೧೩೮೩ ಎಂದು ನಿರ್ಣಯಿಸಲು ಸಾಧ್ಯವಾಗಿರುವುದರಿಂದ ‘ದೇವಿ ಮಹಾತ್ಮೆ’ ಅದಕ್ಕಿಂತಲೂ ಎರಡು ಶತಮಾನದಷ್ಟು ಹಿಂದೆಯೇ ರಚನೆಗೊಂಡಿರಬೇಕೆಂದು ತರ್ಕಿಸಬಹುದು” (ಪಳಂತುಳು ಕಾವ್ಯ-ದೇವೀ ಮಹಾತ್ಮೆ ಪು.೧) ಎನ್ನುವ ವಸಂತ ಭಾರದ್ವಾಜರು ಕೆಲವು ಅಪೂರ್ವ ಪದಪ್ರಯೋಗಗಳನ್ನು ಉಲ್ಲೇಖಿಸಿದ್ದಾರೆ. ಉದಾ: ಕೊಳ್ಳಿಮೆನ್ನ್‌(ಉಲ್ಕೆ), ಗುತ್ತ್‌ಪಾರ್‌ (ಜಿಗಿಯು), ಒನೀತ (ಸ್ವಲ್ಪ), ಅಂಬುಡಿಕೆ (ಬತ್ತಳಿಕೆ) ಇತ್ಯಾದಿ. ತುಳುವಿನಲ್ಲಿ ಕರ್ಮಣಿ ಪ್ರಯೋಗ ಸಾಧ್ಯವಿಲ್ಲವೆಂಬ ಸಾಮಾನ್ಯ ಭಾವನೆ. ಆದರೆ ‘ದೇವೀ ಮಹಾತ್ಮೆ’ಯಲ್ಲಿ ಈ ಪ್ರಯೋಗ ವಿಶೇಷತೆ ಇದೆ, ಎಂದು ಅವರು ಬರೆದಿದ್ದಾರೆ. ಉದಾ:

ಬ್ರಹ್ಮ ದೇವೆರಟಾವ ಸ್ತುತಿ ಪೋವೊಂಡೆರ್‌
(ಬ್ರಹ್ಮ ದೇವರಿಂದ ಸ್ತುತಿಸಲ್ಪಟ್ಟರು) (ಪಳುಂತುಳು ಕಾವ್ಯ ಪು.೪)

ಕವಿ ವಿಷ್ಣುತುಂಗನಿಂದ ರಚಿತವಾದ ‘ಶ್ರೀ ಭಾಗವತೊ’ ಕೃತಿಯು ಮೂರು ಸ್ಕಂದಗಳನ್ನು ಒಳಗೊಂಡು ೪೯ ಅಧ್ಯಾಯಗಳಿವೆ. ಇದು ಸಂಸ್ಕೃತ ಭಾಗವತ ಪ್ರಭಾವವೂ ಇಲ್ಲಿ ಕಾಣುತ್ತದೆ. ಪದ್ಯಗಳು ಮಾತ್ರ ಸಂಸ್ಕೃತ ವೃತ್ತಗಳಲ್ಲಿವೆ. ಕಾವ್ಯದ ಕೊನೆಯಲ್ಲಿ ಮಂಗಳ ಪದ್ಯವಾಗಲೀ, ಫಲಶ್ರುತಿಯ ಪದ್ಯಗಳಾಗಲೀ ಕಾಣದಿರುವುದರಿಂದ ಇದೊಂದು ಸಂಪೂರ್ಣ ಕಾವ್ಯವಲ್ಲವೆಂಬುದು ವಿದ್ವಾಂಸರ ಅಭಿಮತವಾಗಿದೆ. ಪೂರ್ವಕವಿಗಳನ್ನು ಸ್ಮರಿಸುವ ಸಂದರ್ಭದಲ್ಲಿ ವಾಲ್ಮೀಕಿ, ಕಾಳಿದಾಸ, ಬಾಣಭಟ್ಟ, ಭಾರವಿ ಮೇಘ, ಮಯೂರಾದಿಗಳ ಜೊತೆಯಲ್ಲಿ ಕುಮಾರವ್ಯಾಸನನ್ನೂ ಸ್ತುತಿಸುವುದರಿಂದ ವಿಷ್ಣುತುಂಗನು ಕುಮಾರವ್ಯಾಸನ ಕಾಲದ ನಂತರದವನೆಂದು ನಿರ್ಣಯಿಸುವುದು ಸಾಧ್ಯವಾಗುತ್ತದೆ (ಕಾಲ. ಸು. ೧೭ನೆಯ ಶತಮಾನ). ಭಾಷಾದೃಷ್ಟಿಯಿಂದ ಪ್ರಾಚೀನ ತುಳುವಿಗೆ ವಿಶಿಷ್ಟವಾದ ‘ರ’ಳಾಕ್ಷರದ ಬಳಕೆ ಮತ್ತು ‘ಸ್ಟ್‌’ ಮತ್ತು ‘ಸ್ಟ್‌’ ಧ್ವನಿಮಾ ಇಲ್ಲಿ ಪ್ರಯೋಗಗೊಂಡಿವೆ.

ಅಜ್ಞಾತ ಕವಿಯಿಂದ ರಚಿಸಲ್ಪಟ್ಟುದು ಎಂದು ತಿಳಿದುಕೊಂಡಿರುವ ಕಾವೇರಿ ತುಳು ಕಾವ್ಯದಲ್ಲಿ ಕಾವೇರಿ ನದಿಯ ಮಹಿಮೆಯನ್ನು ಬಣ್ಣಿಸಲಾಗಿದೆ. ಇದು ಕೂಡ ಸಂಪೂರ್ಣ ಕಾವ್ಯವಲ್ಲ. “ಒಟ್ಟು ೧೫ ಅಧ್ಯಾಯಗಳಿರಬೇಕಾದ ಈ ಕಾವ್ಯದ ೬ನೆಯ ಅಧ್ಯಾಯದ ಕೊನೆಯ ಭಾಗ, ೭-೮ ಅಧ್ಯಾಯಗಳ ಸಮಗ್ರಭಾವ, ೯ನೆಯ ಅಧ್ಯಾಯದ ಮುಕ್ಕಾಲು ಭಾಗ, ೧೦ನೆಯ ಅಧ್ಯಾಯದ ಕೊನೆಯ ಭಾಗ ಮತ್ತು ೧೧ನೆಯ ಅಧ್ಯಾಯದ ಒಟ್ಟು ಆರು ಪದ್ಯಗಳು ಹೀಗೆ ಇಷ್ಟು ಮಾತ್ರ ನಮಗೆ ಸಿಕ್ಕಿವೆ….. ಕಾವೇರಿ ಕಾವ್ಯದ ಮೂಲ ವಸ್ತುವು ಸ್ಕಾಂಧ ಪುರಾಣಾಂತರ್ಗತವಾದ ಕಾವೇರಿ ಮಹಾತ್ಮ ೧೫ ಅಧ್ಯಾಯಗಳಷ್ಟು ವಿಸ್ತಾರವಾದ ಕಾವೇರಿಯ ಕಥೆಯನ್ನು ಕವಿಯು ತುಳು ಭಾಷೆಯಲ್ಲಿ ವಿವಿಧ ವೃತ್ತಗಳ ರೂಪದಲ್ಲಿ ಹೆಣೆದಿದ್ದಾನೆ” ಎಂದು ಈ ಕಾವ್ಯವನ್ನು ಬೆಳಕಿಗೆ ತಂದ ವೆಂಕಟರಾಜ ಪುಣಿಂಚತ್ತಾಯರು ಕಾವ್ಯದ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ. ‘ಪ್ರಾರಂಭದ ಭಾಗವು ಲಭ್ಯವಿಲ್ಲದ್ದರಿಂದ ಇದನ್ನು ಬರೆದ ಕವಿ ಯಾರೆಂದು ತಿಳಿಯುವುದು ಸಾಧ್ಯವಾಗಿಲ್ಲ. ಆದರೆ ‘ಶ್ರೀ ಭಾಗವತೊ’ ಕಾವ್ಯದ ಶೈಲಿಯನ್ನು ಈ ಕೃತಿಯ ಶೈಲಿಯೂ ಹೋಲುವುದಲ್ಲದೆ, ಛಂದೋರಚನೆಯಲ್ಲಿ ಅದಕ್ಕಿಂತಲೂ ಮಿಗಿಲೆನಿಸಿದೆ’ ಎಂದೂ ಅವರು ಬರೆದಿದ್ದಾರೆ.

ಮೇಲೆ ಉಲ್ಲೇಖಿಸಿದ ಮೂರು ಕೃತಿಗಳೂ ತುಳುನಾಡಿನ ತೆಂಕಣಭಾಗದ ಕಾಸರಗೋಡು ಪ್ರದೇಶದಲ್ಲಿ ರಚಿತವಾಗಿದೆ ಮತ್ತು ಅವುಗಳ ಭಾಷೆಯು ಅಲ್ಲಿಯು ಶಿವಳ್ಳಿ ಬ್ರಾಹ್ಮಣರಾಡುವ ಭಾಷೆಯನ್ನೇ ಹೋಲುತ್ತದೆ.

‘ಅರುಣಾಬ್ಜ’ ಕಾವ್ಯನಾಮದಿಂದ ಅಜ್ಞಾತ ಕವಿಯೊಬ್ಬನು ರಚಿಸಿರುವ ‘ಮಹಾಭಾರತೊ’ ತುಳು ಕಾವ್ಯದಲ್ಲಿ ಸಂಸ್ಕೃತ ಮಹಾಭಾರತದ ಆದಿ ಪರ್ವದಲ್ಲಿಯ ಸಂಭವ ಪರ್ವದಿಂದ ಮುಂದಿನ ‘ಖಾಂಡವ ದಹನ’ದವರೆಗಿನ ಹನ್ನೆರಡು ಪರ್ವಗಳ ಕಥಾ ನಿರೂಪಣೆ ಇದೆ. ಇದರಲ್ಲಿ ಅಧ್ಯಾಯಗಳಿಗೆ ‘ಸಂಧಿ’ ಎಂದೂ, ಪದ್ಯಗಳಿಗೆ ‘ಪಾಡ್‌’ ಎಂದೂ ಹೆಸರೂ ಕೊಟ್ಟಿರುವುದು ಒಂದು ವಿಶೇಷ. ಕವಿಯು ಕುಮಾರವ್ಯಾಸನ ಭಾರತದಿಂದಲೂ ಪ್ರಭಾವಿತನಾಗಿದ್ದಾನೆ. ಆದರೆ ತುಳು ಸಂಸ್ಕೃತಿಯಿಂದಲೂ ಆತ ಹೆಚ್ಚು ಅಂಶಗಳನ್ನು ಸ್ವೀಕರಿಸಿದ್ದನೆಂಬುದಕ್ಕೆ ಆತನು ನೀಡಿರುವ ಕರ್ಜೂರದ ಉಲ್ಲೇಖ, ತುಳುನಾಡಿನ ವಾದ್ಯಗಳ ವರ್ಣನೆ, “ಮಾಡಾಂಬಿ ಭೂತದ ಮೈಮೆ, ಭೂತಕೋಲ ಇತ್ಯಾದಿಗಳು ಸಾಕ್ಷಿ ಎನಿಸುತ್ತವೆ (ಕಾಲ : ೧೪-೧೫ನೆಯ ಶತಮಾನ). ತನಗಿಂತ ಪೂರ್ವದಲ್ಲಿ ಗುಡ್ಡೆತರಾಯೆ, ಎನ್ನುವ ಕವಿಯು ತುಳುವಿನಲ್ಲಿ ಕೀಚಕವಧೆ, ರುಕ್ಮಿಣೀ ಸ್ವಯಂವರ, ಬಾಣಾಸುರ ವಧೆ-ಕಾವ್ಯಗಳನ್ನು ರಚಿಸಿದ್ದಾನೆ ಎಂದು ಕಾವ್ಯದ ಆರಂಭದಲ್ಲಿ ಈತನು ಉಲ್ಲೇಖಿಸುವುದರಿಂದ ಈ ಮೊದಲೇ ತುಳುವಿನ ಕಾವ್ಯ ಸಂಪತ್ತು ಸಮೃದ್ಧವಾಗಿತ್ತೆಂದು ಊಹಿಸಬಹುದಾಗಿದೆ. ಸಂಸ್ಕೃತ ಕಾವ್ಯಪರಂಪರೆಯ ಶಾಸ್ತ್ರಮಾರ್ಗದ ನೆರಳಿನಲ್ಲಿ ಹುಟ್ಟಿಯೂ ತುಳುಮಣ್ಣಿನ ಜೀವಸತ್ವವನ್ನು ಮೈಗೂಡಿಸಿಕೊಂಡಿರುವ ‘ತುಳು ಮಹಾಭಾರತೊ’-ತುಳು ಭಾಷೆ, ಸಂಸ್ಕೃತಿ ಆಲೋಚನಾ ವಿಧಾನಗಳ ದೃಷ್ಟಿಯಿಂದ ಮುಖ್ಯವಾದುದು” (ಬಿ.ಎ. ವಿವೇಕ ರೈ-ಮಹಾಭಾರತೊ-ಮುನ್ನುಡಿ).

ಅಜ್ಞಾತ ಕವಿಯ ‘ರಾಮಾಯಣೊ’ ಇನ್ನೊಂದು ಉಪಲಬ್ಧ ತುಳು ಕಾವ್ಯ ಅರುಣಾಬ್ಜ ಕವಿಯು ತನ್ನ ‘ಮಹಾಭಾರತೊ’ ಕಾವ್ಯದಲ್ಲಿ ಉಲ್ಲೇಖಿಸಿದ ‘ರಾಮಾಯಣೊ’ ಇದೇ ಆಗಿರಬಹುದೆಂಬ ಅಭಿಪ್ರಾಯವಿದೆ. ಈ ತುಳು ಕಾವ್ಯವು ಎಪ್ಪತ್ತೈದು ತಾಡವಾಲೆಗಳಲ್ಲಿ ಅಡಕವಾಗಿದೆ. ಇದರಲ್ಲಿ ಏಳ್ನೂರ ಮುವ್ವತ್ತು ಪದ್ಯಗಳಿವೆ. ಹದಿನೈದು ಅಧ್ಯಾಯಗಳನ್ನು ಒಳಗೊಂಡ ಈ ಕಾವ್ಯದಲ್ಲಿ ಅಂಬರೀಷೋಪಾಖ್ಯನದ ಕಥೆಯಿದೆ. ಕಾವ್ಯದಲ್ಲಿ ಎಲ್ಲಿಯೂ ತನ್ನ ಹೆಸರನ್ನಾಗಲೀ, ಕಾಲ ದೇಶಗಳ ಬಗೆಗಾಗಲೀ ಕವಿಯು ಹೇಳಿಕೊಂಡಿಲ್ಲ. ಆದರೆ ಭಾಷಾ ಶೈಲಿಯನ್ನು ಗಮನಿಸಿದ ವಿದ್ವಾಂಸರು ಇದು ಹದಿನೈದನೇ ಶತಮಾನದ ಕೃತಿಯಾಗಿರಬೇಕೆಂದು ಊಹಿಸಿದ್ದಾರೆ.

‘ಮೂಲ ಭಾಗವತದ ನವಮಸ್ಕಂದದಲ್ಲಿ ಅಂಬರೀಷೋಪಾಖ್ಯಾನವಿರುವುದರಿಂದ ಲಭ್ಯ ತುಳು ರಾಮಾಯಣ ಕಾವ್ಯವು ‘ಶ್ರೀಭಾಗವತೊ’ದ ಒಂಬತ್ತನೇ ಸ್ಕಂದವೇ ಆಗಿರಬೇಕೆಂದು ಶಂಕಿಸಬಹುದು. (ಡಾ. ವಸಂತ ಭಾರದ್ವಾಜ ಪಳಂತುಳು ಕಾವ್ಯದ ಪು. ೮೧).

ಅಂತೆಯೆ ಅರುಣಾಬ್ಜ ಕವಿಯು ‘ಮಹಾಭಾರತೊ’ ಕಾವ್ಯದ ನಾಂದಿ ಪದ್ಯದಲ್ಲಿ ಹೇಳಿದ (ತುಳು ಭಾಷೆಯ ಕವಿಗಳು) ಎಂಬೀ ನುಡಿಗಳು ರಾಮಾಯಣವನ್ನು ಒಬ್ಬರಿಗಿಂತ ಹೆಚ್ಚು ಕವಿಗಳು ಬರೆದಿರಬೇಕೆನ್ನುವ ನಿರ್ಣಯವನ್ನು ಗಟ್ಟಿಗೊಳಿಸುತ್ತವೆ.

ಒಟ್ಟಿನಲ್ಲಿ ಈವರೆಗೆ ದೊರೆತಿರುವ ಪ್ರಾಚೀನ ತುಳು ಕೃತಿಗಳು ಛಂದೋ ಬಂಧದಿಂದ ಅಂದಗೊಂಡು, ಗದ್ಯದ ಗತಿಯಲ್ಲಿ ಲಾಸ್ಯವನ್ನು ಮೈದುಂಬಿಕೊಂಡು, ತುಳು ಭಾಷೆಯ ಪ್ರೌಢಿಮೆಯನ್ನು ಸಾರುವುದರಿಂದ, ತಾಡವೋಲೆಯನ್ನು ತುಳು ಲಿಪಿಯನ್ನೇ ಬಳಸಿಕೊಂಡಿರುವುದರಿಂದ ತುಳು ಸಾಹಿತ್ಯ ಚರಿತ್ರೆಯನ್ನು ಕ್ರಿ. ಶ. ಹದಿಮೂರನೇ ಶತಮಾನಕ್ಕಿಂತಲೂ ಹಿಂದೆ ಒಯ್ಯುವ ಸಾಧ್ಯತೆ, ಮತ್ತಷ್ಟು ನಿಚ್ಚಳವಾಗಿದೆ.

ತುಳು ಸಾಹಿತ್ಯದ ಅರಣೋದಯವೆಂದರೆ ಹಿನ್ನೆಲೆಯಲ್ಲಿ ದೀರ್ಘವಾಗಿ ಚಾಚಿಕೊಂಡಿರುವ ಪಯಣದ ಹಾದಿಯಲ್ಲಿ ಒಮ್ಮೆಲೇ ಎದ್ದುನಿಂತ ಗರುಡಗಂಬದಂತೆ. ಅದರ ಗರಿಮೆ! ಈ ಕಂಬಕ್ಕೆ ವಂದಿಸುವುದೆಂದರೆ ಮೂಡಿಬಂದ ಹೆಜ್ಜೆಗಳಿಗೆ ನಮಿಸಿದಂತೆ.

ತುಳುವಿನ ಪ್ರಾಚೀನ ಕಾವ್ಯಗಳು ಹುಟ್ಟಿಬಂದ ಆಶಯಗಳಲ್ಲಿ ಪ್ರಧಾನವಾದುದು ಪಾಂಡಿತ್ಯ ಪ್ರದರ್ಶನ; ಮಲೆಯಾಳಿ ಭಾಷೆಯ ನಡುವೆ ತುಳು ಭಾಷೆಯ ಅಸ್ತಿತ್ವವನ್ನು ತಿಳಿಸಿಕೊಂಡು ಮಹತ್ಕಾರ್ಯದೊಂದಿಗೆ ಭಾಗವತ ಸಂಪ್ರದಾಯದ ಒಲವನ್ನು ಪ್ರಚುರಗೊಳಿಸುವ ಧಾರ್ಮಿಕ ಕಾಳಜಿಯೂ ಇತ್ತೆನ್ನುವುದು ಬರಿಯ ಊಹೆಯಲ್ಲ. ಸಂಸ್ಕೃತಬಲ್ಲ ವಿದ್ವಾಂಸರು ಮಲೆಯಾಳಿ ಲಿಪಿಯನ್ನು ಹೋಲುವ ತುಳು ಲಿಪಿಯನ್ನು ಉಪಯೋಗಿಸಿದ್ದು ಕೂಡ ಜನಮನ್ನಣೆಯ ಆಶಯವೇ ಆಗಿದೆ. ಏನಿದ್ದರೂ ಪ್ರಾಚೀನತೆಯನ್ನು ದಾಖಲಿಸಬಹುದಾದ ಕಾಲಖಂಡವೊಂದು ತುಳು ಸಾಹಿತ್ಯ ಚರಿತ್ರೆಯನ್ನು ಕಟ್ಟಲು ನೆರವಾದುದು ಮಹತ್ವದ ಸಂಗತಿಯಾಗುತ್ತದೆ.

ತಾತ್ವಿಕಾಂಶಗಳು

ತುಳು ಭಾಷೆಯ ಪ್ರಾಚೀನ ಕಾವ್ಯಗಳು ದೊರೆತುದರಿಂದ ಆ ಕಾಲದ ಭಾಷಾ ಸ್ವರೂಪವನ್ನು ಅರಿತುಕೊಳ್ಳಬಹುದಾಗಿದೆ. ಭಾಷಾವಿಜ್ಞಾನದ ದೃಷ್ಟಿಯಿಂದಲೂ ಇದು ಅತಿ ಮಹತ್ವದ್ದು. ವ್ಯಾಕರಣ ದೃಷ್ಟಿಯಿಂದ ಗಮನಿಸಬಹುದಾದ ಇನ್ನೊಂದು ಅಂಶವೆಂದರೆ ಸಂಸ್ಕೃತ ಪದಗಳಿಗೆ ತುಳು ಪ್ರತ್ಯಯಗಳನ್ನು ಹಚ್ಚಿ ಉಂಟಾಗುವ ಕ್ರಿಯಾಪದಗಳ ಹೊಸತನ. ಉದಾ: ಆಲೋಚಿಪು, ಕ್ಲೇಶಿಪು ಇತ್ಯಾದಿ. ಪ್ರಾಚೀನ ತುಳುವಿನಲ್ಲಿ ಕನ್ನಡದಂತೆ ರಳಾಕ್ಷರಗಳ ಪ್ರಯೋಗ ಇತ್ತೆಂಬುದನ್ನು ಈ ಕೆಳಗಿನ ಶಬ್ದಗಳಿಂದ ಸೃಷ್ಟೀಕರಿಸಬಹುದು.

ಉದಾ: ಅವುೞ್‌ (ಅಲ್ಲಿ), ಒಲ್ಪು (ಎಲ್ಲಿ), ತೊೞ್ಪ್‌ (ತುಳಿಯು) ಇತ್ಯಾದಿ.

ಎಂದರೆ ಸಂಸ್ಕೃತ, ಕನ್ನಡ ಭಾಷೆಗಳ ಆಧಾರವಿದ್ದರೂ ತುಳು ಕಾವ್ಯಗಳನ್ನು ಭಿನ್ನ ನೆಲೆಯಲ್ಲಿ ಸೃಷ್ಟಿಸುವ ಛಲಗಾರಿಕೆ ಅಂದಿನ ಕವಿಗಳಲ್ಲಿತ್ತು ಎಂಬುದು ನಿರ್ವಿವಾದ. ಪಾಶ್ಚಾತ್ಯ ವಿದ್ವಾಂಸರ ತುಳು ಸೇವೆಯಿಂದಾಗಿ, ಸಾಹಿತ್ಯವು ಜನ ಸಾಮಾನ್ಯರನ್ನು ಓಲೈಸಿ, ತತ್ವಶಃ ಭಾಷಾಭಿಮಾನಕ್ಕೆ ಎಡೆಮಾಡಿಕೊಟ್ಟಿದ್ದಲ್ಲದೆ, ಸಾಹಿತ್ಯವು ಪಂಡಿತರ ಭುಜದಿಂದ ಪಾಮರರ ಮಡಿಲಿಗೆ ಇಳಿಯಿತು.

ಈಜಿಪ್ಟ್‌ನ ಆಕ್ಸಿರಿಂಕಸ್‌ ವಲ್ಕ ಲೇಖದಲ್ಲಿರುವ ಗ್ರೀಕ್‌ ಪ್ರಹಸನದಲ್ಲಿ ಕಂಡುಬರುವ ಮಾತುಗಳು ತುಳುಭಾಷೆಯವು ಎಂಬ ವಾದವನ್ನು ಮುಂದಿಟ್ಟಿದ್ದಾರೆ (Antiquity of Tulu Language and Oxirinchus papyri Paper presented in All Tulu Conference, Bangalore 1983).

ಆದರೆ ಇದನ್ನು ಪುನರ್ವಿಮಶೆಗೆ ಒಳಪಡಿಸಿದ ಪುಂಡಿಕ್ಕಾ ಗಣಪಯ್ಯ ಭಟ್ಟರು ‘ಇದು ಒಂದು ಐತಿಹಾಸಿಕ ಘಟನೆಯ ನಿರೂಪಣೆಯಲ್ಲ, ಬದಲಾಗಿ ಕೇವಲ ಕಾಲ್ಪನಿಕ ಘಟನೆಯೊಂದರ ಚಿತ್ರಣ… ಈ ಪ್ರಹಸನವು ಖ್ಯಾತ ಗ್ರೀಕ್‌ ನಾಟಕಕಾರ ಯುರಿಪಿಡಿಸನ ‘ಇಫಿಜೀನಿಯಾ ಇನ್‌ ಟೌರಿಸ್‌’ ಎಂಬ ನಾಟಕದ ಕೀಳುಮಟ್ಟದ ಅನುಕರಣೆ’- ಎಂದು ಆಧಾರದ ಮೂಲಕ ವ್ಯಕ್ತಪಡಿಸಿದ್ದಾರೆ (ತೌಳವ ೧೯೯೭ ಪು. ೨೫). ಪ್ರಹಸನಕಾರನು ಹೇಳುವ ಹಿಂದೂ ಸಾಗರದ ತೀರ ಪ್ರದೇಶ ಸಿಂಧೂ, ಸೌರಾಷ್ಟ್ರ, ಗುಜರಾತ್‌ನ ತೀರ ಪ್ರದೇಶಗಳಾಗಿರುವ ಸಾಧ್ಯತೆಯೇ ಹೆಚ್ಚು. ಹೊರತು ಕರ್ನಾಟಕದ ತೀರ ಪ್ರದೇಶವಾಗಿರುವುದು ಅಸಂಭವ’ವೆಂದೂ ಅವರು ಬರೆದಿದ್ದಾರೆ (ತೌಳವ ೧೯೯೭ ಪು. ೨೫).

ಆದರೆ ಗ್ರೀಕ್‌ ನಾಟಕದಲ್ಲಿ ಬರುವ ಗ್ರೀಕ್‌ ಭಾಷೆಯದಲ್ಲದ ಸಂವಾದಗಳು, ಹಾಡುಗಳು, ತುಳು ಭಾಷೆಯನ್ನು ಹೋಲುತ್ತವೆ ಎಂಬ ಹೇಳಿಕೆಗಳನ್ನು ಮತ್ತೆ ಮತ್ತೆ ಪರಾಮರ್ಶಿಸುವ ಅಗತ್ಯವಿದೆ. ತಾತ್ವಿಕ ನೆಲೆಗಟ್ಟಿನಲ್ಲಿ ಯಾವುದೂ ನಿಂತ ನೀರಲ್ಲ.

ಆಕರಸೂಚಿ

೧. ತುಳುತ ಬುಳೆ, ನಿಲೆ, ಬಿಲೆ – ಕು. ಶಿ. ಹರಿದಾಸ ಭಟ್ಟ, ಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ, ೧೯೮೩

೨. ತುಳುವರಿವರು – (ಸಂ.)ಪಾದೆಕಲ್ಲು ವಿಷ್ಣುಭಟ್ಟ ಪ್ರಕಟಣೆ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ೧೯೯೭

೩. ಪಳಂತುಳು ಕಾವ್ಯ-ಡಾ. ಕಬ್ಬಿನಾಲೆ ವಸಂತ ಭಾರದ್ವಾಜ – ಮಧುಮತಿ ಪ್ರಕಾಶನ, ಬೆಂಗಳೂರು, ೨೦೦೧

೪. ತೌಳವ – ಡಾ. ಪುಂಡಿಕ್ಯಾ ಗಣಪಯ್ಯ ಭಟ್ಟ, ಸಿಂಧೂರ ಪ್ರಕಾಶನ, ಮೂಡಬಿದರೆ, ೧೯೯೭

೫. ತುಳು ಕನ್ಯೋಪದೇಶ-(ಮೂರನೆಯ ಮುದ್ರಣ) ಎಂ. ಆರ್‌. ಸುಬ್ರಹ್ಮಣ್ಯ ಶಾಸ್ತ್ರಿ-ಪ್ರಕಟಣೆ; ಮನ್ಮಧ್ವ ಸಿದ್ಧಾಂತ ಗ್ರಂಥಾಲಯ, ಉಡುಪಿ, ೧೯೮೦

೬. ಕೀರ್ತನಾಮೃತ (ಮೂರನೆಯ ಸಂಪುಟ), ಲೇ. ಪಣಂಬೂರು ಶ್ರೀಗುರು ಸದಾನಂದರು, ಸಂ. ಪಿ. ಪುರಷೋತ್ತಮ ಭಟ್‌ ಪ್ರ. ವಿಜಯ ಸಾಹಿತ್ಯಮಾಲೆ, ಸುರತ್ಕಲ್‌, ೧೯೮೦