ಸುಮಾರು ನಾಲ್ಕು ನೂರು ವರುಷಗಳಷ್ಟು ಪ್ರಾಚೀಲವಾದ ತುಳು ಬರಹದ ತುಳುಭಾಷೆಯ ರಾಮಾಯಣವೆಂಬ ಹೆಸರಿನ ತಾಡವೋಲೆ ಗ್ರಂಥವೊಂದು ಲಭ್ಯವಾಗಿದ್ದು ಹಳೆಯ ತುಳು ಕಾವ್ಯಗಳ ಪಟ್ಟಿಗೆ ಸೇರ್ಪಡೆಯಾದ ಅಪರೂಪದ ಕೃತಿಯಾಗಿದೆ. ಈ ಕಾವ್ಯದಲ್ಲಿ ಕವಿಯ ಹೆಸರಾಗಲೀ, ಕಾಲ ದೇಶದ ವಿಚಾರವಾಗಲಿ ಎಲ್ಲೂ ತಿಳಿಯುವುದಿಲ್ಲ. ಓರ್ವ ಸ್ವತಂತ್ರ ಕವಿ ಸಂಸ್ಕೃತ, ಕನ್ನಡ ಮತ್ತು ತುಳು ಭಾಷೆಗಳನ್ನು ಬಲ್ಲವನಾಗಿದ್ದು, ಸಂಸ್ಕೃತ ಭಾಗವತದಿಂದ ಸ್ಪೂರ್ತಿ ಪಡೆದುಕೊಂಡು ಈ ಕಾವ್ಯವನ್ನು ರಚಿಸಿದ್ದರೂ, ಕಾವ್ಯದುದ್ದಕ್ಕೂ ತನ್ನ ಸ್ವಂತ ಶ್ರಮದಿಂದಾಗಲೇ ಗ್ರಂಥವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಕವಿಯು ಸಂಸ್ಕೃತ ಭಾಗವತವನ್ನು ತನ್ನ ಕಾವ್ಯದ ಮೂಲ ವಸ್ತುವನ್ನಾಗಿರಿಸಿಕೊಂಡು ಹಳೆಯ ತುಳು ಭಾಷೆಯಲ್ಲಿ ಇಕ್ವ್ಷಾಕುವಂಶದ ಪೂರ್ವಜರ ಕತೆಯನ್ನು ಜನಸಾಮಾನ್ಯರಿಗೆ ತಿಳಿಹೇಳುವುದೇ ಕವಿಯ ಪರಮ ಉದ್ದೇಶವಾಗಿದೆ. ಭಾಗವತದಲ್ಲಿ ಬರುವ ಒಂಬತ್ತನೇ ಸ್ಕಂದದ ಒಂದನೇ ಅಧ್ಯಾಯದಲ್ಲಿ ಪ್ರಾರಂಭವಾಗಿ ಹದಿಮೂರನೇ ಅಧ್ಯಾಯದ ತನಕ ಇಕ್ಷ್ವಾಕುವಂಶದ ಕಥೆಯನ್ನು ಪ್ರತ್ಯೇಕವಾಗಿ ವರ್ಣಿಸಿ ಹೇಳುವುದಾಗಿದೆ. ಮೂಲ ಕಾವ್ಯವನ್ನೇ ಎಲ್ಲಾ ಹಂತಗಳಲ್ಲೂ ಕವಿಯು ಅನುಸರಿಸಿದ್ದು, ಶ್ರೀರಾಮನ ಕಥೆಯನ್ನು ಮಾತ್ರ ಸ್ವಲ್ಪ ದೀರ್ಘವಾಗಿ ಅಂದರೆ ಮೂರು ಅಧ್ಯಾಯಗಳಲ್ಲಿ ವರ್ಣಿಸಿರುವುದು ಈ ಕಾವ್ಯದ ವೈಶಿಷ್ಯವಾಗಿದೆ. ಈ ಕವಿ ತುಳುನಾಡಿನ ಮಣ್ಣಿನ ಸಂಸ್ಕೃತಿಯಲ್ಲಿ ಹುಟ್ಟಿದ ಪದಗಳನ್ನೇ ಉಪಯೋಗಿಸಿಕೊಂಡು ಕಾವ್ಯವನ್ನು ರಚಿಸಿದ್ದಾನೆ; ಆಸ್ವಾದಿಸಿದ್ದಾನೆ. ಕಾವ್ಯದ ಸ್ವರೂಪವನ್ನು ಒಟ್ಟು ಪರಾಮರ್ಶಿಸಿದಾಗ ಈತನು ಸಮಗ್ರ ಕಾವ್ಯವನ್ನೇ ರಚಿಸಿರಬಹುದೆಂದು ಊಹಿಸಬಹುದು. ಕವಿಯ ಧ್ಯೇಯವು ಕೇವಲ ಒಂಬತ್ತನೆಯ ಸ್ಕಂದದ ಒಂದು ಭಾಗವಷ್ಟೇ ಬರದಿರಲಾರದು ಅಥವಾ ಸಮಗ್ರ ಕಾವ್ಯವನ್ನು ಬರೆಯಲು ಪ್ರಯತ್ನಿಸಿ ಯಾವುದೇ ಕಾರಣದಿಂದ ಅಪೂರ್ಣವಾಗಿರಬಹುದು. ಗ್ರಂಥದ ಪೀಠಿಕಾ ಪ್ರಕರಣದಲ್ಲಿ ಕೃತಿಯ ಬಗ್ಗೆ ಹಾಗೂ ತನ್ನ ಪ್ರತಿಭೆಯ ಒಗ್ಗೆ ಏನೂ ಹೇಳದಿರುವುದು ಗ್ರಂಥಾಂತ್ಯದಲ್ಲಿ ತಾತ್ಕಾಲಿಕ ಸಮಾಪ್ತಿಯನ್ನಷ್ಟೆ ಸೂಚಿಸಿರುವುದು ಗಮನಿಸತಕ್ಕ ಅಂಶಗಳಾಗಿವೆ. ಪ್ರಾರಂಭದ ಪದ್ಯದಲ್ಲಿ

ತತ್ವೊ ಮೀನಿದುವತ್ತನಾಲ ಸೃಜೀತ್ ತಾನವೆನೆಯ್ಯಲಾ
ಸೂತ್ರಿಪೊಂಸ್ಟುಡೆ ಪಿಂನ್ ಪೊಸ್ಟೀ ಗುರುಮೂರ್ತಿ ಶ್ರೀ ಚರಣಾಬ್ಜೊಮೀ |
ಪತ್ತ್ ಸ್ಟೇನಭಿವಂದಿತೊಂಡ್ ಸದಾಂತೊಮಾರೆನನುಜ್ಞೆಟ್
ವಿಸ್ತರೀಪಿಯೆರ್ ತ್ತೆನೀ ನವಮೊಂತ ಸ್ಕಂದ ಪ್ರಸಂಗೊಮೀ || ೧ ||[1]

ತನ್ನ ಗುರುವಿನ ಚರಣಗಳನ್ನು ಮುಟ್ಟಿ ನಮಸ್ಕರಿಸಿ ಯಾವಾಗಲೂ ಅವರ ಅಪ್ಪಣೆಯಂತೆ ವಿಸ್ತಾರವಾಗಿ ನವಮಸ್ಕಂದವನ್ನು ಪ್ರಾರಂಭಿಸುವೆನೆಂಬುದಾಗಿ ಹೇಳುವನು. ಇಲ್ಲಿ ಕವಿಯು ಗುರುವಿಗೆ ನಮಿಸಿ ಮುಂದೆ ಕಾವ್ಯದ ವಸ್ತುವಿಗೆ ಬಂದಿರುತ್ತಾನೆ ಎಂಬುದಕ್ಕೆ ಮುಂದಿನ ಪದ್ಯ ಆಧಾರ.

ಸಪ್ತಮಾ ಮನುವಾ ವಿವಸ್ಟತ ವಂಶವರ್ಧನೆರಾಸ್ಟಿನಾ
ದಿತ್ಯ ಪುತ್ರಕೆರಾಸ್ಟಿನಾಮಕ್ಷ್ವಾಕು ಪೂರ್ವಜೆರೇ ಕಥೇ
ವಿಸ್ತರೀಪಿಲನಾಂದ್ ಶೌನಕೆರೇವಪಾಪು ಪುರಾಣಿಕೆ
ಸ್ವಸ್ತಿಯೆಂದ್ ತುಡೆಂಗ್ ಸ್ಟಾ ಶುಕರಾಯೆ ಪಂಡ್ ನ ಕೇಳಿಲ || ೨ ||[2]

ಸೂತ ಪುರಾಣಿಕೆರು ಶೌನಕಾದಿ ಮಹಿರ್ಷಿಗಳಿಗೆ ಹೇಳುತ್ತಾರೆ. ವೈವಸ್ವತ ಮನುವಿನ ಮಕ್ಕಳಾದಿ ಇಕ್ಷ್ವಾಕುವೇ ಮೊದಲಾದ ರಾಜದ ವಂಶವಳನ್ನೂ, ಅವರಲ್ಲಿ ಹುಟ್ಟಿದ ಪುತ್ರರ ಸಚ್ಚಾರಿತ್ರೆಯ ಕಥೆಗಳನ್ನು ವಿಸ್ತಾರವಾಗಿ ಪರಿಚಯಿಸುವೆನೆಂಬುದಾಗಿ ಕವಿಯು ತಿಳಿಸುತ್ತಾನೆ. ಇಲ್ಲಿ ಮೂಲಭಾಗವತವನ್ನಾಧರಿಸಿ ಬರೆದಿದ್ದರೂ ಕವಿಯು ದಶರಥನ ಮಗನಾದ ರಾಮನ ಕಥೆಯನ್ನು ವಿಸ್ತಾರವಾಗಿ ಪ್ರಧಾನವಾಗಿ ವಿವರಿಸಿರುವುದು ನಮ್ಮ ಗಮನಕ್ಕೆ ಬರುತ್ತದೆ. ಮೂಲ ಗ್ರಂಥದಲ್ಲಿ ಎರಡು ಅಧ್ಯಾಯಗಳಲ್ಲಿ ಸೀಮಿತಗೊಳಿಸಿದ್ದರೆ, ಈ ಕಾವ್ಯದಲ್ಲಿ ರಾಮನ ವರ್ಣನೆಯನ್ನು ಮೂರು ಅಧ್ಯಾಯಗಳಲ್ಲಿ ವರ್ಣಿಸಲ್ಪಟ್ಟು ಹೆಚ್ಚು ಮಹತ್ತ್ವ ಪಡೆದಿದೆ. ಈ ತುಳು ಕಾವ್ಯದ ಮೊದಲ ಅಧ್ಯಾಯವು ವ್ಯವಸ್ವತ ಮನುವಿನ ಮಗನಾದ ಸುದ್ಯನ್ನು ರಾಜನ ಕಥೆಯಿಂದ ಪ್ರಾರಂಭವಾಗಿ ಹದಿಮೂರನೆಯ ಅಧ್ಯಾಯದಲ್ಲಿ ಚಂದ್ರವಂಶದ ವರ್ಣನೆಯನ್ನು ಹೇಳಿರುವುದರಿಂದ ಕವಿಯು ಮುಂದಿನ ಭಾಗಗಳನ್ನು ಬರೆದಿರಬಹುದೆಂದ ಊಹಿಸಬಹುದಾಗಿದ್ದು, ಗ್ರಂಥದ ಪ್ರತಿ ಅಧ್ಯಾಯದಲ್ಲಿ ಐವತ್ತರಿಂದ ಅರವತ್ತೈದು ಪದ್ಯಗಳಿವೆ. ಒಟ್ಟು ಏಳುನೂರ ಮೂವತ್ತು ಪದ್ಯಗಳುಳ್ಳ ಎಪ್ಪತ್ತೈದು ತಾಡವಾಲೆ ಪತ್ರಗಳಿರುವ ಉತ್ತಮ ಗ್ರಂಥ.

ವಿಷ್ಣುತುಂಗ ವಿರಚಿತ ಶ್ರೀ ಭಾಗವತೊ ತುಳು ಕಾವ್ಯವು[3] ವೆಂಕಟರಾಜ ಪುಣಿಂಚಿತ್ತಾಯರಿಂದ ಸಂಪಾದಿಸಲ್ಪಟ್ಟು ಪ್ರಕಟಗೊಂಡಿದ್ದು, ಅದರಲ್ಲಿ ಕರ್ತೃವಿನ ಕಾಲ ಕ್ರಿ. ಶ. ಹದಿನಾರನೆಯ ಶತಮಾನವೆಂದು ತನ್ನ ಪ್ರಸ್ತಾವನೆಯಲ್ಲಿ ಹೇಳುತ್ತಾರೆ. ಈ ಕಾವ್ಯವಾದರೂ ಒಂದನೇ ಸ್ಕಂದದಿಂದ ಮೂರನೆಯ ಸ್ಕಂದ ಮಾತ್ರ ಇವರಿಗೆ ಲಭ್ಯವಾಗಿದ್ದು ಅಸಮಗ್ರವಾಗಿದೆ. ಈ ಒಂದು ಹಿನ್ನೆಲೆಯನ್ನಾ ಧರಿಸಿ ನಾವು ನಮಗೆ ಲಭ್ಯವಾದ ತುಳು ರಾಮಾಯಣದ ಕಾಲವನ್ನು ಕ್ರಿ. ಶ. ಹದಿನೇಳನೆಯ ಶತಮಾನವೆಂದು ಅಭಿಪ್ರಾಯಪಡಬಹುದು. ಆದರೆ ಪುಣಿಂಚಿತ್ತಾಯರಿಗೆ ಲಭ್ಯವಾದ ತುಳು ಭಾಗವತೋ ಉದ್ದಕ್ಕೂ ಕವಿಯು ಅಲ್ಲಲ್ಲಿ ದೇಸಿ ಪದಗಳನ್ನು ಕಾವ್ಯದಲ್ಲಿ ಬಳಸಿರುತ್ತಾನೆ.[4] ಈ ಕಾವ್ಯದಲ್ಲಿ ಅದು ಬಳಸಿರುವುದರಿಂದ ಕಾಲದ ಬಗ್ಗೆ ಯಾವುದೇ ಖಚಿತ ನಿಲುವನ್ನು ಹೊಂದಲು ಅಸಾಧ್ಯವಾಗಿದೆ.

ತುಳು ರಾಮಾಯಣ ಗ್ರಂಥವು ಕವಿಯ ಸ್ವಹಸ್ತಪ್ರತಿಯಲ್ಲ, ಇದು ಮೂಲ ಪ್ರತಿಯನ್ನಾಧರಿಸಿ ಬರೆದ ಒಂದು ಪ್ರತಿಯಾಗಿರಬೇಕು. ಇಲ್ಲಿ ಲಿಪಿಕಾರನ ಕಾಲ ದೇಶಗಳ ಬಗ್ಗೆ ಯಾವುದೇ ವಿವರಗಳಿಲ್ಲ. ಇದು ಸ್ವಹಸ್ತ ಪ್ರತಿಯಾಗಿ ಸಮಗ್ರವಾಗಿದ್ದರೆ ತನ್ನ ಹೆಸರನ್ನು ನಮೂದಿಸಬಹುದಾಗಿತ್ತು. ಯಾಕೆಂದರೆ ಈ ಹಿಂದೆ ಲಭ್ಯ ತುಳುಭಾಗವತೊ ತುಳು ಮಹಾಭಾರತೊ[5] ಕಾವ್ಯಗಳಲ್ಲಿ ಕವಿಯು ತನ್ನ ಹೆಸರನ್ನು ಮೊದಲಿಗೆ ಹೇಳಿಕೊಂಡಿದ್ದಾನೆ. ಈ ಕಾವ್ಯದಲ್ಲಿ ಯಾವುದೇ ವಿವರಗಳಿಲ್ಲ.

ಈ ಕಾವ್ಯವು ಹಲವಾರು ವಿಷಯಗಳಿಂದ ವೈವಿಧ್ಯಮಯವಾಗಿದೆ. ಭಾಷೆ ಹಳೆಯದು, ಬಳಸಿರುವ ತುಳೂ ಸಮಾಜದಲ್ಲಿ ಮಾತನಾಡುವ ಭಾಷೆಗಿಂತ ಪ್ರತ್ಯೇಕವಾದುದು. ಕನ್ನಡದಲ್ಲಿ ಹಳೆಗನ್ನಡ ಹೇಗೋ ತುಳುವಿನಲ್ಲಿ ಹಾಗೆ ಹಳೆಯ ತುಳು ಎಂಬುದಾಗಿ ಇದನ್ನು ವಿವರಿಸಬಹುದು. ಈ ಕಾವ್ಯವು ಹಳೆಯ ತುಳುವನ್ನು ಪ್ರತಿಬಿಂಬಿಸುವ ತುಳು ಬರಹ, ತುಳುಭಾಷೆಯಲ್ಲಿ ರಚಿಸಿದ ತುಳು ಕಾವ್ಯವಾಗಿದೆ. ಇದನ್ನು ಲಿಪಿಕಾರರು ಗ್ರಂಥದ ಪ್ರಾರಂಭದ ಪತ್ರದಲ್ಲಿ ‘ತುಳುಬರಹ ತುಳು ಭಾಷೆ ರಾಮಾಯಣ’ ಎಂಬುದಾಗಿ ಸ್ಪಷ್ಟವಾಗಿ ನಮೂದಿಸಿರುತ್ತಾರೆ. ಇದರಿಂದ ತುಳುವಿಗೆ ಸ್ವತಂತ್ರವಾದ ಲಿಪಿ, ಸಾಹಿತ್ಯ ಹಿಂದೆಯೇ ಇತ್ತು ಅದುವೇ ಇದು ಎಂಬುದನ್ನು ಈ ಪದದಿಂದ ದೃಢಪಡಿಸುತ್ತಾನೆ.

ತುಳು ಲಿಪಿಯನ್ನು ರೂಪಿಸಿದವರು ತುಳುವರು. ಇವರು ತಮ್ಮ ವೇದ ಮಂತ್ರಗಳನ್ನು ಹಾಗೂ ಆಚಾರ ವಿಚಾರಗಳನ್ನು ಬರೆದಿಟ್ಟುಕೊಳ್ಳುವ ಬಳಕೆಗೆ ತಂದೆ ಲಿಪಿ ಸಂಪ್ರದಾಯವೇ ತುಳು ಲಿಪಿ ಎಂದು ಪ್ರಸಿದ್ಧಿ ಪಡೆಯಿತು. ಈ ತುಳುಲಿಪಿಯನ್ನು ಕೇರಳೀಯರು ಆರ್ಯ ಎಳುತ್ತು ಅಥವಾ ತುಳು ಮಲೆಯಾಳ ಲಿಪಿ ಎಂದು ಕರೆದರು. ಮಲೆಯಾಳಕ್ಕೊಂದು ಲಿಪಿಯನ್ನು ರೂಪಿಸಿದವರು ತುಳುವರು.[6]

ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಸಾಕಷ್ಟು ತುಳುಲಿಪಿಯಲ್ಲಿ ಬರೆಯಲಾದ ಸಂಸ್ಕೃತ ಗ್ರಂಥಗಳಿದ್ದು ಅವೇದಸಂಹಿತಾ, ಉಪನಿಷತ್ತು, ತಂತ್ರ- ಮಂತ್ರ, ಆಗಮ, ಕಾವ್ಯ ಇತಿಹಾಸ, ಪುರಾಣ, ನಾಟಕ, ವೈದ್ಯ, ಜ್ಯೋತಿಷ್ಯ ಇತ್ಯಾದಿ ಮೂವತ್ತಕ್ಕಿಂತಲೂ ಅಧಿಕ ವಿಷಯಗಳನ್ನೊಳಗೊಂಡ ಸಾವಿರಾರು ಗ್ರಂಥಗಳನ್ನು ಈಗಲೂ ನಾವು ಕಾಣಬಹುದು.[7] ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಯವರಾದ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಸಲ್ಪಡುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಹಸ್ತಪ್ರತಿ ಭಂಡಾರವೊಂದರಲ್ಲಿ ತುಳುಲಿಪಿಯಲ್ಲಿ ಬರೆದ ಸಂಸ್ಕೃತ ಗ್ರಂಥಗಳ ಸಂಖ್ಯೆ ಸಾವಿರಕ್ಕಿಂತಲೂ ಅಧಿಕವಿದ್ದು, ಇದು ಕನ್ನಡ ನಾಡಿನ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ದೊರೆತ ಅಮೂಲ್ಯಕೊಡುಗೆಯಾಗಿದೆ. ಇವುಗಳಲ್ಲಿ ಹಲವು ಗ್ರಂಥಗಳ ಲಿಪಿ ತುಳುವಾಗಿದ್ದು ಭಾಷೆ ವ್ಯಾಖ್ಯಾನ ಕನ್ನಡದಲ್ಲಿದೆ. ಉದಾಹರಣೆಗೆ : ಗ್ರಾಮಪದ್ದತಿ, ತೌಳವದೇಶ, ಅಮರ ಕೋಶಟೀಕಾ, ಕೊಕ್ಕೋಶ ಶಾಸ್ತ್ರ, ವಿದ್ಯಾಮಾಧವೀಯ ವ್ಯಾಖ್ಯಾ ಇತ್ಯಾದಿ ಸಂಗ್ರಹಗಳಿವೆ. ‘ವಿನಾಯಕ ಹವನ ವಿಧಿ’ ಮತ್ತು ‘ಪುಣ್ಯಾಹವಿಧಿ’ ಎಂಬ ಎರಡು ವಿಷಯಗಳಿದ್ದು[8] ಅವುಗಳ ಅನುಷ್ಠಾನ ವಿಧಾನಗಳ ನಿರೂಪಣೆಯನ್ನು ಬರೆದಿರುತ್ತದೆ ಮತ್ತು ಈ ಲೇಖನದ ಪ್ರಮುಖ ಕೇಂದ್ರ ಬಿಂದುವಾದ ಶ್ರೀ ಭಾಗವತಾಂತವರ್ಗತವಾದ ‘ತುಳುಬರಹ ತುಳುಭಾಷೆ ರಾಮಾಯಣ’ ಸಂಪಾದಿಸಲ್ಪಟ್ಟಿದ್ದು ಶ್ರೀ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ, ಉಜಿರೆ – ವತಿಯಿಂದ ಪ್ರಕಟವಾಗಿದೆ.

ಈ ಮಹಾಕಾವ್ಯದುದ್ದಕ್ಕೂ ಸಂಸ್ಕೃತ, ಕನ್ನಡ ಮತ್ತು ತುಳುಭಾಷೆಗಳ ಮಿಶ್ರಣವನ್ನು ನಾವು ಕಾಣಬಹುದು. ಸಂಸ್ಕೃತ ಪದಗಳನ್ನು ಸಾಕಷ್ಟು ಬಳಸಿದ್ದರೂ ಸಮಾಸ ಪದಗಳಿಗೆ ಲೋಪ ಬಾರದಂತೆ ಕವಿ ನೋಡಿಕೊಂಡಿದ್ದಾನೆ. ಸಂಸ್ಕೃತದ ಅನೇಕ ಕ್ರಿಯಾದಪಗಳನ್ನು ತುಳುವಿಗೆ ಬದಲಾಯಿಸಿದ್ದಾನೆ.

ಉದಾಹರಣೆ: ಪಾಲಿಪು, ಸಾಧಿಪು, ವರ್ಣಿಪು, ರೆಚೀಪು ಇತ್ಯಾದಿ.

ವಿಷ್ಣುತುಂಗನ ತುಳುಭಾಗವತೋ ಕಾವ್ಯದಲ್ಲಿ ಬಹಳಷ್ಟು ದೇಸಿ ಪದಗಳನ್ನು ಬಳಸಿರುವುದು ಕಂಡುಬರುತ್ತದೆ. ಉದಾಹರಣೆಗೆ; ಗುತ್ತ್, ಬೂಡ್, ಪೆರ್ಗಾ, ಉಳ್ಳಾಯೆ, ದುಡಿ ಮುಂತಾದವುಗಳು. ಈ ಕಾವ್ಯದಲ್ಲಿ ಇದರ ಬಳಕೆ ಕಂಡು ಬರುವುದಿಲ್ಲ ಹಾಗೆಂದು ‘ಸ್ಟ್’ಕಾರದ ಧ್ವನಿ ಸಂಕೇತವು ತುಳುವಿನ ಎಲ್ಲಾ ಹಳೆಯ ಕಾವ್ಯಗಳಲ್ಲಿ ಬಂದಂತೆ ಈ ಕಾವ್ಯದಲ್ಲಿಯೂ ಕಂಡುಬಂದಿದೆ. ಓದುವಾಗ್ಗೆ ಸ್ವಲ್ಪ ಕಷ್ಟಸಾಧ್ಯವಾದ ಈ ಪದ ಶೈಲಿಯು ಕಾವ್ಯದುದ್ದಕ್ಕೂ ವ್ಯಾಪಿಸಿದೆ. ಪ್ರಾಚೀನ ತುಳುವಿನ ಯಾವುದೋ ಒಂದು ವಿಶಿಷ್ಟ ಧ್ವನಿಮಾ ಇದಾಗಿರಬೇಕು.

ಉದಾಹರಣೆಗೆ: ಪುಟ್ ಸ್ಟಿ, ಚೊಸ್ಟ್, ನಂಬಸ್ಟ್, ಸಲ್ಲುಸ್ಟ್, ತುಡೆಂಗ್ ಸ್ಟ್ ಇತ್ಯಾದಿ. ಆಪು, ಕುಳು ಮುಂತಾದ ಪದ ಪ್ರಯೋಗಗಳು ಉಳಿದ ತುಳು ಕಾವ್ಯದಲ್ಲಿ ಬಂದಂತೆ ಇದರಲ್ಲೂ ಬಂದಿವೆ. ಭಾಗವತಾಂತರ್ಗತ ತುಳುರಾಮಾಯಣ ಮಹಾಕಾವ್ಯದಲ್ಲಿ ವರ್ಣಿತವಾಗಿರುವ ಅನೇಕ ವಿಚಾರಗಳು ವೈಶಿಷ್ಟದಿಂದ ಹಾಗೂ ಭಿನ್ನತೆಯಿಂದ ಕೂಡಿದೆ. ಉದಾಹರಣೆಗೆ ಕೆಲವೊಂದು ಕಾವ್ಯಗಳನ್ನು ಕಾಣಬಹುದು.

೧. ವೈವಸ್ವತ ಮನುವಿನ ಮಗಳಾದ ಇಲೆಯನ್ನು ಹೋತ್ಯಕಾರ್ಯಗಳಿಗಾಗಿ ಮಹರ್ಷಿ ವಸಿಷ್ಠರು ಪುರುಷರನ್ನಾಗಿ ಪರಿವರ್ತಿಸಬೇಕೆಂದು ನಿಶ್ಚಿಯಿಸಿ, ಶ್ರೀಮನ್ನಾರಾಯಣನನ್ನು ಸ್ತೋತ್ರ ಮಾಡಿದಾಗ, ಇಲೆಯು ಪರುಷತ್ವವನ್ನು ಪಡೆದು ಸುದ್ಯುಮ್ನನೆಂಬ ಹೆಸರಿನಿಂದ ಪ್ರಸಿದ್ಧಳಾದಳು. ಈತನು ಒಂದು ದಿನ ಬೇಟೆಗಾಗಿ ತನ್ನ ಪರಿವಾರದೊಡನೆ ಆನೆ, ಅಶ್ವಸಮೇತನಾಗಿ ಮೇರು ಪರ್ವತದತ್ತ ಹೋಗಿ ಅದರ ತಪ್ಪಲಿನ ಪ್ರದೇಶವಾದ ಸುಂದರವನವನ್ನು ಸೇರಿದನು. ಅದೇ ವನದಲ್ಲಿ ಭಗವಾನ್ ಶಂಕರನು ಪಾರ್ವತಿಯೊಡನೆ ಕ್ರೀಡೆ ನಿರತನಾಗಿದ್ದನು. ಇವರನ್ನು ಕಂಡ ಶಂಕರನು ಸುದ್ಯುಮ್ನ ಮತ್ತು ಆತನ ಪರಿವಾರದವರನ್ನು ಈ ರೀತಿಯಾಗಿ ಶಪಿಸಿದನು.

ಔಸ್ಟ್ ಕಾರಣೊ ಈತ್ ಮಂದೆಲ ನಾರಿ ವೇಷೊ ಧರೀತ್ ಣಾಂ
ದೇವಪಾಋಷಿ ಪಣ್ಕೆರಾಯಟ ನುಂಬು ವರ್ತಿನವಸ್ಥೆ ನೀ
ಚೂಸ್ಟ್ ಶಾಪಿತಿ ಪಾರ್ವೆತೀ ಕಥೆನೋನೋಂಪೆ ಕೇಳಿಲ ಪಂಡಪೆ
ನಾಷ್ಟಿಕೌತುಕೊ ಸೂಕ್ಷಿಪು ಪರಮೇಶ್ವರನ್ ಮಹಲೀಲೆನೀ || || ೧-೧೦ ||[9]

ಭಗವಾನ್ ಶಂಕರನ ಶಾಪದ ಕಾರಣದಿಂದ ಸುದ್ಯುಮ್ನ ಹಾಗೂ ಅವನ ಪರಿವಾರದವರೆಲ್ಲ ನಾರಿಯರಗಿ ಪರಿವರ್ತಿತರಾದರು. ಈ ಅವಸ್ಥೆಯನ್ನು ದೇವ ಋಷಿಗಳೆಲ್ಲರೂ ಕೇಳುವವರಾಗಲಿ. ಆ ಪಾರ್ವತಿಯ ಕಥೆಯನ್ನು ಹೇಳುವೆನು. ಆ ಪರಮೇಶ್ವರನ ಮಹಾಲೀಲೆಯು ಕೌತುಕಮಯವಾಗಿದೆ.

೨. ಮನುವು ಪುತ್ರ ಕಾಮನಾಗಿ ಯಮುನಾ ನದಿ ತೀರದಲ್ಲಿ ಶ್ರೀಹರಿಯನ್ನು ಕುರಿತು ತಪಸ್ಸನ್ನಾಚರಿಸಲು ಹರಿಯ ಅನುಗ್ರಹದಿಂದ ಹತ್ತು ಮಂದಿ ಪುತ್ರರನ್ನು ಪಡೆದನು. ಅವರಲ್ಲಿ ಒಬ್ಬನ ಹೆಸರು ಪ್ರಷದ್ರ. ಗುರುಗಳಾದ ವಸಿಷ್ಠರು ಪ್ರಷದ್ರನನ್ನು ಗೋವುಗಳನ್ನು ಕಾಯಲು ನಿಯಮಿಸಿದರು. ಒಂದು ದಿನ ರಾತ್ರಿ ಮಳೆಯು ಜೋರಾಗಿ ಸುರಿಯುತ್ತಿದ್ದು ಅದೇ ಸಮಯಕ್ಕೆ ಹುಲಿಯೊಂದು ದನಗಳ ಕೊಟ್ಟಿಗೆಗೆ ನುಗ್ಗಿ ಹಸುವೊಂದನ್ನು ಹಿಡಿದ ಸಂದರ್ಭ ನಡೆದ ಘಟನೆಯನ್ನು ಕವಿಯು-

ಮನ್ನ ತಾನ್ಯುದ ಯೊಂಕ್ ಪೋಸ್ಟ್ ನಿರೀಕ್ಷಿಪಾಪಿಲಿ ಶ್ರೋತ್ರೊಮಿ
ಭಿನ್ನೊಮಾಕೊಸ್ಟ್ ಯಾತ್ರಿಪಾ ಪಶುಚ್ಯೆತ್ ಣೀಕ್ಷಿತ್ ಭೂಪತೀ |
ಎನ್ನೆ ಕರ್ಮೊಮೆಯೆಂದ್ ದುಃಖಿತ್ ಪೋಸ್ಟ್ ಶ್ರೀಗುರುಟೇವಪಾ
ಅನ್ಯಾಯೀ ಪಶುಹಿಂ ಸ ಶೂದ್ರ ಪ್ರವೃತ್ತಿ ಸಾಧಿಪಿಲಾಂದೆರ್ || ೨-೨೨ ||[10]

ಹುಲಿಯಾದರೂ ಹಸುವನ್ನು ಹಿಡಿದು ಅದು ಅರಚುವುದನ್ನು ಕೇಳಿ ಪ್ರಷದ್ರಮನು ಅದರ ಬಳಿಗೆ ಓಡಿ ಹೋಗಿ ಕತ್ತಿಯನ್ನೆತ್ತಿ ಹುಲಿಯೆಂಬ ಭ್ರಾಂತಿಯಿಂದ ಹಸುವಿನ ತಲೆಯನ್ನು ಕತ್ತಿರಿಸಿಬಿಟ್ಟನು. ತನ್ನ ಪಾಪ ಕರ್ಮದಿಂದ ದುಃಖಿತನಾಗಿ ಗುರುಗಳಲ್ಲಿ ತಿಳಿಸಲಾಗಿ, ಅವರು ಅವನಿಗೆ ಅನ್ಯಾಯವಾಗಿ ಈ ಗೋವಧೆಯಿಂದ ಕ್ಷತ್ರಿಯನಾಗಿ ಉಳಿಯಲಾರೆ, ಶೂದ್ರನಾಗಿ ಬಾಳುವೆ ಎಂದು ಶಪಿಸಿದನು. ಈ ಶಾಪವನ್ನು ಬದ್ಧಾಂಜಲಿಯಾಗಿ ಸ್ವೀಕರಿದನು.

೩. ಈ ಮುಂದಿನ ಪದ್ಯದಲ್ಲಿ ತುಳುನಾಡಿನ ಬೆಳೆಯುವ ಅಥವಾ ದೊರೆಯುವ ಸುಂದರ ಪುಷ್ಪಗಳ ಹೆಸರನ್ನು ಕವಿಯು ವರ್ಣಿಸಿದ್ದಾನೆ. ಇದರಿಂದ ಕವಿಯು ತುಳುನಾಡಿನವನೆಂಬುದು ಸ್ಪಷ್ಟವಾಗಿ ತಿಳಿಯಬಹುದು. ಒಮ್ಮೆ ಮನುವಿನ ಮತ್ತೊಬ್ಬ ಮಗನಾದ ಶರ್ಯಾತಿ ರಾಜನು ತನ್ನ ಮಗಳಾದ ಸುಕನ್ಯೆಯೊಡಗೂಡಿ ಚ್ಯವನ ಮಹರ್ಷಿಗಳ ಆಶ್ರಮದ ಕಡೆಗೆ ಹೋಗುವನು. ದಾರಿಯ ಮಧ್ಯೆಯಲ್ಲಿ ಸುಕನ್ಯೆಯು ತನ್ನ ಸಖಿಯರೊಡಗೂಡಿ ಸಂಚರಿಸುತ್ತಾ ವನದಲ್ಲಿದ್ದ ವೃಕ್ಷಗಳ ಹಾಗೂ ಹೂವುಗಳ ಶೋಭೆಯನ್ನು ನೋಡಿ ಆನಂದಿಸುತ್ತಾಳೆ. ಆ ವನದಲ್ಲಿ ಪುಷ್ಪಗಳಾದ:

ಮುಲ್ಲೆಮಲ್ಲಿಕೆ ಜೌದಿ ಕೇತಕಿ ರೆಂಜೆ ದಾಸನ ಕುಂದೊಮ
ಮಲ್ಲಿಕೇ ಕರವೀರೊ ಶೋಕೆಯ ನಾಗದುರ್ದರೊ ಮರ್ಕ್ಕೊಮ
ಬೆಲ್ಲ ಪತ್ರೆಯ ಅಂಬೆಲಬ್ಬಲಿಕೇಯ ನೆಯ್ಯಳ್ ವಾರಿಜೊ
ಮೆಲ್ಲಮೆಲ್ಲನೆ ಯಾತ್ರಿತಾ ವನೊಂಟೆಯ್ಯಾ ದರ್ಶಿತಳಕ್ಷಿಣೊ || ೨-೫ ||[11]

ಈ ರೀತಿಯಾಗಿ ಕಾಡಿನ ಪುಷ್ಪಗಳ ಹೆಸರುಗಳನ್ನು ಬಿಡಿ ಬಿಡಿಯಾಗಿ ತಿಳಿಸುತ್ತಾನೆ.

ಜನಕರಾಜನ ಪಟ್ಟಣದಲ್ಲಿ ಸೀತಾ ಸ್ವಯಂವರಕ್ಕೆ ಸಕಲ ಸಿದ್ಧತೆಗಳಾಗುತ್ತಿದ್ದವು. ಭೂಮಂಡಲದಲ್ಲಿ ಮಹಾವೀರನೆನಿಸಿ ಕೊಂಡಿದ್ದ ರಾವಣಾದಿ ಬಲಾಢ್ಯರೆಲ್ಲರೂ ಅಲ್ಲಿಗೆ ಆಗಮಿಸಿದ್ದರು. ಸ್ವಯಂವರಕ್ಕೆ ಸಿದ್ಧಗೊಂಡಿದ್ದ ಧನುಸ್ಸನ್ನು ಶ್ರೀರಾಮನು ಇವರೆಲ್ಲರ ಮಧ್ಯದಲ್ಲಿ-

ಮುನ್ನೂದ್ ಗೆಜೊಂಕುಳು ಕೊಂಡತಿನಾ ತ್ರಿಯಂಬಕ ಚಾಪೊ
ಸನ್ನದ್ಧೆರೆ ಜೆರ್ಪೆರತೀರನತೇ ದೇಶಕಂಧರೆರಾದೀ
ಧನ್ಯೇರ್ಕ್ಕುಳೆ ನುಂಬುಟ್ ಶ್ರೀ ರಘುಜೆಯೆೞ್ ಸ್ಟೇ ಧನುಜೈಪಾ
ಕನ್ಯಾವು ಸ್ವಯಂಬರ ಮಾಲೆಡ್ ಸೈರ್ ಶ್ರೀರಾಮಗಳಂಕ್ || ೧೦-೧೭ ||[12]

ಮುನ್ನೂರು ಅನೆಗಳ ಮೂಲಕ ಶಿವಧನಸ್ಸನ್ನು ತರಲಾಯಿತು. ಈ ಧನಸ್ಸನ್ನು ಮೇಲೆತ್ತಲು ಬೇರೆ ಬೇರೆ ದೇಶದ ರಾಜರು ಪ್ರಯತ್ನಿಸಿ ಸೋತು ತಮ್ಮ ನಿಜವೇಷವನ್ನು ಕಾಣಲು, ಶ್ರೀರಾಮನು ನಿರಾಯಾಸವಾಗಿ ಮೇಲೆತ್ತಿ ಧನ್ಯನೆನಿಸಿಕೊಂಡನು. ತಕ್ಷಣ ಸೀತೆಯ ಸ್ವಯಂವರ ಮಾಲೆಯೊಂದಿಗೆ ಶ್ರೀರಾಮನ ಕೊರಳಲ್ಲಿ (ಹೃದಯದಲ್ಲಿ) ಧರಿಸಿದವಳಾದಳು. (ಶ್ರೀರಾಮನ ಕೊರಳಿಗೆ ಸ್ವಯಂವರ ಮಾಲೆಯನ್ನು ಹಾಕಿದಳು ಎಂಬರ್ಥ.)

೫. ಶ್ರೀರಾಮ ಲಕ್ಷ್ಮಣರು ವೈದೇಹಿಯನ್ನು ಕಳೆದುಕೊಂಡು ದುಃಖದಿಂದ ಕೂಡಿದವರಾಗಿ ಅರಣ್ಯದಲ್ಲಿ ಸಂಚರಿಸುತ್ತಾ ಹೀಗೆ ಹೇಳಿದರು.

ಸೀತೇ ಮನ ಪ್ರೀತೇ ಜಗತ್ರಯಂಕ್ ಮಾತೇ ಜಗನ್ನಾಥೇ
ಖ್ಯಾತೇ ಶುಭ ಜಾತೆ ಮಹೌಘವ್ರಾತಾಕುಲ ಘಾತೆಂ
ದೆತಾಟಲ ದುಃಖಿತ್ ನಾಡರಪಾನೈತ್ ಕ್ ಡತ್ ತ್ತಿ
ಸೀತಾಪತಿ ದರ್ಶಿತಿ ಪಕ್ಷಿ ಜಟಾಯು ವಿ ಚೂಷ್ಟೆರ್ ರಾಮೆರ್ || ೧೧-೪ ||[13]

ಮೇಲಿನ ಪದಗಳಿಂದ ಸೀತಾಮಾತೆ, ಜಗನ್ನಾಥೆ ಇತ್ಯಾದಿ ಪದಗಳಿಂದ ಸೀತೆಯನ್ನು ಕೊಂಡಾಡಿ ದುಃಖಿಸುತ್ತಾ ಸೀತಾಪತಿಯಾದ ಶ್ರೀ ರಾಮ ಪಕ್ಷಿ ಜಟಾಯುವಿನಿಂದ ಸೀತಾಪರಣದ ವಿಚಾರವನ್ನು ತಿಳಿದವರಾಗಿ, ಅದಕ್ಕೆ ಮೋಕ್ಷವನ್ನುಂಟು ಮಾಡಿದರು.

೬. ವಾನರ ಸಮೂಹವು ನಾನಾ ದಿಕ್ಕುಗಳಲ್ಲಿ ನಾಲ್ಕು ಮಾಸಗಳ ಪರ್ಯಂತ ಪಯಣಿಸಿ, ಅನ್ವೇಷಿತ ಸೀತಾದೇವಿಯನ್ನು ಕಾಣದೆ ಹಿಂತಿರುಗಿದರು. ಈ ವೇಳೆಗೆ ಮಾರುತಿಯು ಶ್ರೀರಾಮನ ಮುಂದೆ ಕೈಜೋಡಿಸಿ ನಿಂತು ವಿನಯದಿಂದ ಆವೇಶದಿಂದ ದೇವಿಯನ್ನು ಕುರಿತಾಗಿ ಈ ಮುಂದೆ ಹೇಳುವಂತೆ ಹೇಳುವನು.

ಭೂಮಿಟ್‌ಪ್ಪಡ್ ಸ್ವರ್ಗೊಂಟ್‌ಪ್ಪಡ್ ಸಪ್ತದ್ವೀಪುಟಡೆಂಗಡ್
ಭೂಮಿಟ್‌ತ್ತಡಿಟೇೞ್‌ಟ್ ಪ್ಪಡ್‌ಯೇ ೞೆ ಮಿತ್ತ್ ಯೆಟ್‌ಪ್ಪಡ್
ಬೂಮಿಜೆದೃಶಿಟೀಕ್ಷಿಪಂತೆ ಪೆರಪ್ಪೆ ಯಾತ್ರಿತೆನವುಟಾ
ರಾಮ ಸ್ವಾಮಿಮಭೃತ್ಯೆಯಾತ್ ತೆನೆಂದ್ ಮಾರುತಿ ಯಾತ್ರಿತೆ || ೧೧-೯ ||[14]

ಭೂಮಿಯಲ್ಲಿರಲಿ, ಸ್ವರ್ಗಲೋಕದಲ್ಲಿರಲಿ, ಸಪ್ತದೀಪಗಳಲ್ಲಿ ಅಡಗಿಸಿರಲಿ, ಭೂಮಿಯ ಅಡಿಯಲ್ಲಿಯಾಗಲಿ, ಮೇಲಾಗಲಿ, ಭೂಮಿಯಲ್ಲಿ ಬೇರೆ ಎಲ್ಲೆ ಇರಲಿ ದೇವಿಯನ್ನು ನೋಡದೆ ಮತ್ತೆ ನಾನು ಯಾತ್ರೆಯಿಂದ ಹಿಂತಿರುಗಲಾರೆ ಎಂದು ಶ್ರೀರಾಮನ ಸೇವಕನಾಗಿ ಭಾಷೆಯನ್ನು ಕೊಟ್ಟು ಹನುಮನು ಯಾತ್ರೆಯನ್ನು ಕೈಗೊಳ್ಳುವನು.

೭. ಶ್ರೀರಾಮನು ರಾವಣನನು ಸಂಹರಿಸಿ ಸೀತೆಯನ್ನು ಪಡೆದು ಲಕ್ಷ್ಮಣನೊಂದಿಗೆ ಅಯೋಧ್ಯೆಯನ್ನು ಪ್ರವೇಶಿಸಿದನು. ಮುಂದೆ ಸಕಲ ವಿಧಿವಿಧಾನಗಳೊಂದಿಗೆ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಿದರು. ಪಟ್ಟಾಭಿಷಿಕ್ತನಾದ ಶ್ರೀರಾಮನು ಅನೇಕ ವರುಷಗಳ ತನಕ ಭೂಮಿಯನ್ನು ಪರಿಪಾಲಿಸುತ್ತಿರಲು:

ಮೇದಿನೀ ಪರಿಪಾಲಿತಿಂಚ ಅನೇಕ ವತ್ಸರೊ ಪೋವಡಾ
ಆ ದಯಾ ನಿದಿಯೊಂಜಿನೋ ಮೊರಿಯೇ ಪಿದಾಡ್ ಸ್ಟ್ ರಾತ್ರಿಟ್
ಚೋದಿತಿಂಚ ವಿಚಾರಿಪುಷ್ಟಿನ ವಸ್ಥೆಟಾಪೋರಿ ಛಾರ್ಯೆ ನೀ
ಖೇದಿತ್ೕ ಛೆಡಿಪುಪ್ಪಿಶಬ್ದೊಮಿ ಕೇಂಡೆರಾ ರಘುಪುಂಗವೇ || ೧೨-೪೬ ||[15]

ಹೀಗಿರಲು ಅನೇಕ ಮಾಸಗಳನ್ನು ಕಳೆಯಲಾಗಿ ಒಮ್ಮೆ ಶ್ರೀರಾಮನು ತನ್ನ ಪ್ರಜೆಗಳ ಸ್ಥಿತಿಗತಿಗಳನ್ನು ತಿಳಿಯುವ ಸಲುವಾಗಿ ಮಾರು ವೇಷದಲ್ಲಿ ಒರ್ವನೇ ರಾತ್ರಿಯಲ್ಲಿ ಪಟ್ಟಣದ ಬೀದಿಗಳಲ್ಲಿ ಅಡ್ಡಾಡುತ್ತಿರಲು, ತನ್ನ ಭಾರ್ಯೆಯನ್ನು ಉದ್ದೇಶಿಸಿ ಜನರು ಆಡಿಕೊಳ್ಳುತ್ತಿದ್ದ, ಛೇಡಿಸುವ ಮಾತುಗಳನ್ನು ಶ್ರೀರಾಮನು ಕೇಳಿಸಿಕೊಂಡನು ಎಂಬರ್ಥ.

೮. ಮುಂದಿನ ಪದ್ಯದಲ್ಲಿ ಶ್ರೀರಾಮನು ಕೇಳಿಸಿಕೊಂಡ ಮಾತುಗಳನ್ನು ಕವಿಯು ಬಹಳ ಮಾರ್ಮಿಕವಾಗಿ ಸಮಯೋಚಿತವಾಗಿ ವಿವರಿಸಿದ್ದಾನೆ ಅದು ಅತ್ಯಂತ ತೀಕ್ಷ್ಣವಾದ ಮಾತುಗಳಾಗಿದ್ದವು.

ಭರ್ತೃ ಟೂಡ ಪಣಂತೆ ತಂದೆಗೃಹಂ ಪ್ರವೇಶಿತ್ ಮನ್ನತಾ
ನ್ಯಸ್ತಮಾನ ದಿನೊಂಟ್ ಚೋಜಪ ಭಗ್ಗ್‌ಸ್ಟಾಯೆ ಗೆಮೀ ಪೊಯೆ ||
ವೃತ್ತಿ ತಪ್ಪೊಸ್ಟೊಂಡ್ ಪ್ಪೆರೇನ್‌ರೆಘಕ್ಷತ್ರಿಯಾಧಿಪ ಯಾತ್ ನಾಂ
ದ್‌ತ್ತ್‌ಣೌರ್ತ್ತಡೆಯೋಲ್ತೇಧಟ್ಟಿತ್ ಚಿತ್ರವಲ್ಲಭೆ ನಾಪಳೆ || ೧೨-೪೨ ||

ತನ್ನ ಗಂಡನಿಗೂ ತಿಳಿಸದೆ ತಂದೆಯ ಮನೆಯನ್ನು ಪ್ರವೇಶಿಸಿರುವ ದುಷ್ಟಳಾದ ನೀನು ಮತ್ತೆ ಅಲ್ಲಿಗೆ ಹೋಗು. ಕ್ಷತ್ರಿಯಾಧಿಪನಾದ ರಘುವಿನಂತೆ ನಾನು ಹಾಗೆ ಮಾಡುವುದಿಲ್ಲ. ಈ ರೀತಿಯಾಗಿ ಆಲಿಸಿದ ಮಾತುಗಳಿಂದ ಲೋಕಾಪವಾದಕ್ಕೆ ಗುರಿಯಾದ ಸೀತೆಯನ್ನು ಶ್ರೀರಾಮನು ತ್ಯಜಿಸಿ ಅರಣ್ಯಕ್ಕೆ ಕಳುಹಿಸಿದನು.

ಹೀಗೆ ತುಳು ಕಾವ್ಯವು ಅಪೂರ್ಣವಾಗಿದ್ದರೂ ದೊರೆತಿರುವ ಭಾಗಗಳಲ್ಲಿ ಕಾವ್ಯದ ಸಮಗ್ರ ನೋಟವನ್ನು ಅರ್ಥಮಾಡಿಕೊಳ್ಳಲು ಅವಕಾಶವಿದೆ. ಇತರ ಲಭ್ಯಕಾವ್ಯಗಳಂತೆ ಅದರದ್ದೇ ಆದ ಒಂದು ಛಂದೋ ಮಾರ್ಗವನ್ನು ಈ ಕಾವ್ಯವೂ ನೀಡಿದೆ. ಸಾಕಷ್ಟು ಕವಿತ್ವ ಸಿದ್ಧಿ ಈ ಕವಿಗೆ ಇದೆ ಎನ್ನಬಹುದು. ವೃತ್ತಗಳ ಬಂಧದಲ್ಲಿ ಹೆಚ್ಚು ಸ್ವಾತಂತ್ರ್ಯ ವಹಿಸಿರುವುದು ಕಾಣುತ್ತದೆ. ವಜೋವಿಲಾಸಗಳು ಈತನೊಬ್ಬ ಘನ ಪಂಡಿತನೆಂಬಂಶವನ್ನು ಹೊರಗೆಡಹುತ್ತದೆ. ತುಳು ಪ್ರತ್ಯಯಗಳನ್ನು ಸಂಸ್ಕೃತಕ್ಕೆ ಹೆಚ್ಚುವಾಗ ಕವಿ ಯಾವುದೇ ಸಂಕೋಚವಿಲ್ಲದೆ ಕ್ರಾಂತಿಪರ ಸೃಷ್ಟಿಶೀಲನಾಗಿ ವರ್ತಿಸಿರುವುದು ಬಹಳ ಸ್ವಾರಸ್ಯಕರ ವಿಷಯ. ಹೀಗೆ ಇನ್ನೂ ಅನೇಕ ವಿಚಾರಗಳು ಈ ಕಾವ್ಯದಿಂದ ಬೆಳಕನ್ನು ಕಾಣಬೇಕಾಗಿದೆ.

ಆಕರಸೂಚಿ

೧. ಶ್ರೀ ಮದ್ಭಾಗವತಮ್ (ಸಂಸ್ಕೃತ), ೧೯೯೮

೨. ಶ್ರೀ ಮದ್ಭಾಗವತಮ್, ಭಾರತ ದರ್ಶನ, ೧೯೯೪

೩. ಶ್ರೀ ಮದ್ವಾಲ್ಮೀಕಿ ರಾಮಾಯಣಮ್, ೧೯೫೮

೪. ಕೆ. ವೆಂಕಟರಾಮಪ್ಪಚಾಟು. ವಿಠಲನಾಥ, ಕನ್ನಡ ಭಾಗವತ

೫. ವೆಂಕಟರಾಜ ಪುಣಿಂಚಿತ್ತಾಯ ತುಳುಮಹಾಭಾಗವತೊ, ೧೯೮೪

೬. ವೆಂಟಕರಾಜ ಪುಣಿಂಚಿತ್ತಾಯ ತುಳು ಮಹಾಭಾರತೋ, ೨೦೦೦

೭. ಡಾ. ಯಸ್. ಆರ್. ವಿಘ್ನರಾಜ, ತುಳುಲಿಪಿ ಹಸ್ತಪ್ರತಿನಿಗಳ ಸೂಚಿ, ೧೯೯೭

೯. ಡಾ. ಯು. ಪಿ. ಉಪಾಧ್ಯಾಯ: ತುಳು ನಿಘಂಟು (ಸಂಪುಟಗಳು)

೯. ಡಾ. ಯಸ್. ಆರ್. ವಿಘ್ನರಾಜ, ತುಳು ರಾಮಾಯಣ, ೨೦೦೫

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ವಿಘ್ನರಾಜ್ಎಸ್. ಆರ್. (ಸಂ), ೨೦೦೫ ‘ತುಳುರಾಮಾಯಣತಾಡವಾಲೆ’, ಪ್ರಕಾಶಕರು: ಶ್ರೀಮಂಜುನಾಥೇಶ್ವರಪುಸ್ತಕಪ್ರಕಾಶನಮಾಲೆ, ಉಜಿರೆ

[2] ಅದೇ: ಪದ್ಯ೧-೨

[3] ವೆಂಕಟರಾಜಪುಣೀಂಚತ್ತಾಯ (ಸಂ) ವಿಷ್ಣುತುಂಗ: ಶ್ರೀಭಾಗವತೊ, ಕನ್ನಡವಿಭಾಗಮಂಗಳೂರುವಿಶ್ವವಿದ್ಯಾಲಯ)

[4] ಅದೇಪೂರ್ವೋಕ್ತಪ್ರಸ್ತಾವನೆಪುಟ-೩೧

[5] ವೆಂಕಟರಾಜಪುಣಿಂಚತ್ತಾಯ (ಸಂ. ) ಅರಣೌಬ್ಬ-ತುಳುಮಹಾಭಾರತೊಪ್ರಕಾಶಕರು : ಕರ್ನಾಟಕತುಳುಸಾಹಿತ್ಯಅಕಾಡೆಮಿ, ಮಂಗಳೂರು೨೦೦೦

[6] ವೆಂಕಟರಾಜಪುಣಿಂಚಿತ್ತಾಯ (ಸಂ) ವಿಷ್ಣುತುಂಗ: ಶ್ರೀಭಾಗವತೋಅದೇಪೂರ್ವೋಕ್ತಪ್ರಸ್ತಾವನೆಪುಟ೧೪

[7] ವಿಘ್ನರಾಜಯಸ್. ಆರ್(ಸಂ) ತುಳುಪಿಲಿಹಸ್ತಪ್ರತಿಗಳಸೂಚಿಪ್ರಕಾಶಕರುಶ್ರೀಮಂಜುನಾಥೇಶ್ವರಪುಸ್ತಕಪ್ರಕಾಶನಮಾಲೆ, ಉಜಿರೆ-೧೯೯೭

[8] ಅದೇಪೂರ್ವೋಕ್ತ : ಪುಟ೯೬-೯೭

[9] ವಿಘ್ನರಾಜಯುಸ್ಆರ್ (ಸಂ). ತುಳುರಾಮಾಯಣ: ಅದೇಪದ್ಯ೧-೧೦

[10] ಅದೇಪೂರ್ವೋಕ್ತಪದ್ಯ೧-೨೨

[11] ಅದೇಪೂರ್ವೋಕ್ತಪದ್ಯ೨-೨೫

[12] ಅದೇಪೂರ್ವೋಕ್ತಪದ್ಯ೧೦-೧೭

[13] ಅದೇಪೂರ್ವೋಕ್ತಪದ್ಯ೧೧-೪

[14] ಅದೇಪೂರ್ವೋಕ್ತಪದ್ಯ೧೧-೯

[15] ಅದೇಪೂರ್ವೋಕ್ತಪದ್ಯ೧೨-೪೬