ಸಿ. ಜೆ. ವುರ್ಟ್ಲೆ

೨೧-೧೧-೧೮೩೩ರಲ್ಲಿ ಜರ್ಮನಿಯ ವ್ಯುಟೆಂಬರ್ಗ್‌ನಲ್ಲಿ ಜನನ. ೧೮೫೮ರಲ್ಲಿ ಮ್ಯಾನರ್‌ರೊಂದಿಗೆ ಭಾರತಕ್ಕೆ ಬಂದರು. ಉಡುಪಿಯಲ್ಲಿ ಕೆಮರರ್‌ರೊಂದಿಗೆ ಸೇವೆ ಆರಂಭ. ೧೮೫೯ರಲ್ಲಿ ನೀಲಗಿರಿಗೆ ತೆರಳಿದರು. ಕನ್ನಡ ತುಳುವಿನೊಂದಿಗೆ ತಮಿಳು ಭಾಷೆಯನ್ನೂ ಕಲಿತಿದ್ದರು. ೨-೨-೧೮೬೩ರಲ್ಲಿ ನಿಧನ. ತುಳುವಿನಲ್ಲಿ ಮೂರು, ಇತರರೊಂದಿಗೆ ಒಂದು, ತುಳು ಸಂಗೀತ ಭಾಗವನ್ನು ರಚನೆ ಮಾಡಿರುತ್ತಾರೆ.

ಜೆ. ಜೆ. ಬ್ರಿಗೆಲ್‌

ಜರ್ಮನಿಯ ವುಟೆಂಗ್‌ಬರ್ಗ್‌ನ ಎರ್‌ಪ್ರಿಂಗನ್‌ ಎಂಬಲ್ಲಿ ೪-೧೨-೧೮೩೨ರಲ್ಲಿ ಜನನ. ಬಾಸೆಲ್‌ನ ದೈವಜ್ಞಾನ ಕಾಲೇಜಿಗೆ ಸೇರಿ ತರಬೇತಿ ಪಡೆದು ೧೮೫೮ರಲ್ಲಿ ಮಂಗಳೂರಿಗೆ ಆಗಮನ. ಮೆನ್ನರ್‌ರೊಂದಿಗೆ ಮೂಲ್ಕಿಯಲ್ಲಿ ಸೇವೆ ಆರಂಭ. ನಂತರ ಮಂಗಳೂರಿನ ಸಭೆಗಳ ಅಧಿಕಾರ ವಹಿಸಿಕೊಂಡು ೧೮೭೪ರ ತನಕ ಸೇವೆ. ೭ ವರ್ಷಗಳ ಬಳಿಕ ಸ್ವದೇಶಕ್ಕೆ ತೆರಳಿದರು. ಅಲ್ಲಿ ೧೮೭೮ ಸೇವೆಯಲ್ಲಿದ್ದು ೧೮೮೦ರಲ್ಲಿ ನಿವೃತ್ತಿ ಹೊಂದಿದರು. ೨-೧-೧೮೮೬ರಲ್ಲಿ ನಿಧನ. ತುಳುವಿನ ಮೊತ್ತ ಮೊದಲ ವ್ಯಾಕರಣ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ತುಳು ವ್ಯಾಕರಣವನ್ನು ಇಂಗ್ಲಿಷ್‌ನಲ್ಲಿ ಬರೆದವರು ಬ್ರಿಗೆಲ್‌. ತುಳುವಿನಲ್ಲಿ ೬ ಸಂಗೀತದ ರಚನೆ ಮಾಡಿರುತ್ತಾರೆ.

ಎಚ್‌. ಬಾಚ್ಲೆ

ಜರ್ಮನಿಯಿಂದ ೧೮೯೩ರಲ್ಲಿ ಭಾರತಕ್ಕೆ ಆಗಮನ. ಕಾರ್ಕಳ, ಮುಲ್ಕಿ, ಕಲ್ಯಾಣಪುರ, ಉಡುಪಿ, ಕಾಸರಗೋಡು ಪ್ರದೇಶಗಳಲ್ಲಿ ಸಭೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾರೆ. ೧೯೧೩ರಲ್ಲಿ ಸ್ವದೇಶಕ್ಕೆ ಹಿಂದೆ. ೧೧-೩-೧೯೨೧ರಂದು ನಿಧನ. ಇವರು ಒಂದು ತುಳು ಸಂಗೀತವನ್ನು ಇತರರೊಂದಿಗೆ ರಚನೆ ಮಾಡಿರುತ್ತಾರೆ.

ರುಡೋಲ್ಫ್‌ ಬುನ್ಸ್‌

ಜರ್ಮನಿಯಿಂದ ೧೯೦೧ರಲ್ಲಿ, ಭಾರತಕ್ಕೆ ಆಗಮನ. ಕಾರ್ಕಳ, ಮಡಿಕೇರಿ, ಮಂಗಳೂರು ಇವರ ಸೇವಾಕ್ಷೇತ್ರ. ೧೯೧೧ರಲ್ಲಿ ಜಿಲ್ಲೆಯ ಮಿಶನ್‌ ಸಂಸ್ಥೆಯ ನಾಯಕನಾಗಿ ಸೇವೆ ೧೯೩೪ರಲ್ಲಿ ಸ್ವದೇಶಕ್ಕೆ, ಸಂಗೀತ ಪುಸ್ತಕದ ೧೮ನೇ ಆವೃತ್ತಿಯನ್ನು ಇತರ ದೇಶೀಯರೊಂದಿಗೆ ಸಂಪಾದಿಸಿದ್ದಾರೆ. ತುಳುವಿನಲ್ಲಿ ೨೫ ಸಂಗೀತಗಳನ್ನೂ, ಇತರರೊಂದಿಗೆ ೫ನ್ನೂ ತರ್ಜುಮೆ ಮಾಡಿರುತ್ತಾರೆ.

ಜಿ. ರಿಟ್ಟರ್‌

ಜರ್ಮನಿಯಿಂದ ೧೯೦೫ರಲ್ಲಿ ಭಾರತಕ್ಕೆ ಆಗಮನ. ಇವರು ಈ ಹಿಂದೆ ಜಿಲ್ಲೆಯಲ್ಲಿದ್ದ ಗುಸ್ತಾವ್‌ ರಿಟ್ಟರ್‌ (೧೮೪೪-೧೯೩೫) ಎಂಬವರ ಮಗ. ಮಂಗಳೂರು, ಉಡುಪಿ, ಪುತ್ತೂರು, ಕಾರ್ಕಳ ಮುಂತಾದ ಸ್ಥಳಗಳಲ್ಲಿ ೧೯೩೫ರರ ತನಕ ಸೇವೆ ಸಲ್ಲಿಸಿರುತ್ತಾರೆ. ಇವರು ತುಳುವಿನಲ್ಲಿ ‘ದೇವರೆ ರಾಜ್ಯದ ಮುತ್ತುಳು’ ಎಂಬ ಕೃತಿಯೊಂದನ್ನು ರಚಿಸಿರುತ್ತಾರೆ.

ಇವರುಗಳಲ್ಲದೆ ವಿದೇಶೀಯರಾದ ಬುಚ್ಚರ್‌, ಬಾರ್ನೆಟ್‌, ಕ್ಯಾಂಪ್‌ಬೆಲ್‌, ಕೊಲೆನ್ಸೊ, ಕುಕ್‌, ಪ್ಲಟಿಕ್‌, ಪೌಲರ್‌, ಗ್ಯಾರೆಟ್‌, ಗಾರ್ತ್‌ವೈರ್ಟ್‌, ಗ್ರೇಟರ್‌, ಹಂಟರ್‌, ಕೀಸ್‌, ಕಿಟ್ಟೆಲ್‌, ಲೇಯರ್ಸ್‌, ಲೂತಿ, ಮ್ಯಾಕ್‌, ಮಾರ್ಸ್‌ಡೆನ್‌, ಮೋಗ್ಲಿಂಗ್‌, ಮೋರಿಸ್‌, ಒಹಿಲರ್‌, ಪ್ಲೈಡರರ್‌, ಸೋಶರ್‌, ಸ್ಟೋಲ್ಜ್‌, ಪ್ಲೇಬ್ಸ್ಟ್‌, ವಾಲ್ಟ್‌, ವುರ್ತ್‌, ಜೀಗ್ಲರ್‌, ಬರ್ನೆಲ್‌, ಹೆರ್ಮಲಿಂಕ್, ಒತ್ತ್‌, ಹಾರ್ಟ್‌ಮೆನ್‌ ಮುಂತಾದವರುಗಳು ಜಿಲ್ಲೆಯಲ್ಲಿದ್ದು, ಜಿಲ್ಲೆಯಲ್ಲಿ ಪ್ರಕಟವಾದ ಪಠ್ಯ ಪುಸ್ತಕ, ನಿಘಂಟು, ವ್ಯಾಕರಣ ಮುಂತಾದ ಸಾಹಿತ್ಯ ಕೃತಿಗಳನ್ನು ನಿರ್ಮಿಸುವಲ್ಲಿ ತಮ್ಮನ್ನು ಪೂರ್ಣ ತೊಡಗಿಸಿಕೊಂಡಿದ್ದಾರೆ.

ಮಿಶನರಿಗಳ ಕಾಲದ ದೇಶೀಯ ತುಳು ಸಾಹಿತಿಗಳು

ಮಿಶನರಿಗಳ ಕಾಲದಲ್ಲಿ ಮಿಶನರಿಗಳೊಂದಿಗೆ ಹಲವಾರು ಮಂದಿ ದೇಶೀಯರು ತುಳು ಸಾಹಿತ್ಯ ಕ್ಷೇತ್ರದಲ್ಲಿ ದುಡಿದಿದ್ದಾರೆ. ಶಾಲಾ ಉಪಾಧ್ಯಯರಾಗಿ, ಪಠ್ಯಪುಸ್ತಕ ರಚಕರಾಗಿ, ಮುದ್ರಣಾಲಯದ ಸಹಾಯಕರಾಗಿ ಮಿಶನರಿಗಳಿಗೆ ಭಾಷಾ ಗುರುಗಳಾಗಿ ಸೇವೆ ಸಲ್ಲಿಸಿದ್ದು ಇವರಿಂದ ತುಳು ಸಾಹಿತ್ಯಕ್ಕೆ ಸಂದ ಕೊಡುಗೆ ಅಪಾರ. ಇವರುಗಳು ಮಾಹಿತಿಗಳು ಅಲಭ್ಯವಾಗಿದ್ದರೂ ಲಭ್ಯವಿರುವ ಹಲವರ ಸಂಕ್ಷಿಪ್ತ ಪರಿಚಯವನ್ನು ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ.

ಎಲಿಯೇಜರ್ ಪಿ. ಕಾರಟ್‌

೧೮೪೩ರಲ್ಲಿ ಕಾರ್ಕಳದಲ್ಲಿ ಜನಿಸಿದರು. ಉಪಾಧ್ಯಾಯರಾಗಿ, ಭೋಧಕರಾಗಿ, ಮಂಗಳೂರು, ಬಸ್ರೂರು, ಕುಂದಾಪುರ, ಉಚ್ಚಿಲ ಸಭೆಗಳಲ್ಲಿ ಸೇವೆ ಸಲ್ಲಿಸಿದರು. ೧೯೨೪ರಲ್ಲಿ ನಿಧನ. ಇವರು ತುಳುವಿನಲ್ಲಿ ೭, ಇತರರೊಂದಿಗೆ ೧ ಸಂಗೀತ ಕೃತಿಗಳನ್ನೂ ರಚಿಸಿದ್ದಾರೆ. ಅಲ್ಲದೆ ಕನ್ನಡದಲ್ಲಿ ೧೭ ಸಂಗೀತಗಳನ್ನು ರಚಿಸಿದ್ದಾರೆ.

ತಿಮೋಥಿ ಫುರ್ಟಾಡೊ

ಇವರು ಕಾರ್ಕಳದಲ್ಲಿ ೧೮೫೮ರಲ್ಲಿ ಜನಿಸಿದರು. ೧೮೮೦ರಲ್ಲಿ ಕ್ರೈಸ್ತ ಬೋಧಕರಾಗಿ ಗುರುದೀಕ್ಷೆ ಹೊಂದಿದ ಇವರು ಉಡುಪಿ, ಉದ್ಯಾವರ, ಬಾರ್ಕೂರು, ಬಸ್ರೂರು, ಶಿರ್ವ, ಮುಲ್ಕಿ, ಮಂಗಳೂರು ಪ್ರದೇಶಗಳಲ್ಲಿ ಸೇವೆ. ೧೯೧೪ರಲ್ಲಿ ಮಂಗಳೂರಿನಲ್ಲಿ ನಿಧನ. ತುಳುವಿನಲ್ಲಿ ೩ ಸಂಗೀತವನ್ನೂ ಇತರರೊಂದಿಗೆ ೩ನ್ನೂ ರಚಿಸಿದ್ದಾರೆ.

ಗಾಬ್ರಿಯೇಲ್ ಪ್ರೇಮಯ್ಯ

೧೮೬೪ರಲ್ಲಿ ಮುಲ್ಕಿಯಲ್ಲಿ ಜನನ. ಕ್ರೈಸ್ತ ವೇದವಿದ್ಯಾಬ್ಯಾಸದ ನಂತರ ಮಡಿಕೇರಿಯಲ್ಲಿ ಸೇವೆ ಆರಂಭ. ಬೊಲ್ಯ, ಪರ್ಕಳ, ಚಾರ, ಬಸ್ರೂರು, ಮುಲ್ಕಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ೧೯೪೦ ರಲ್ಲಿ ಬೈಂದೂರಿನಲ್ಲಿ ನಿಧನರಾದರು. ಇವರು ತುಳುವಿನಲ್ಲಿ ೩ ಸಂಗೀತಗಳನ್ನು ರಚಿಸಿದ್ದಾರೆ.

ಜೆರಮಿಯಾ ಸೊನ್ನ

ಜೆರಮಿಯಾ ಸೊನ್ನೆರವರು ೧೮೫೦ರಲ್ಲಿ ಜನನ. ೧೮೭೫ರಲ್ಲಿ ಇವರು ಮಿಶನ್ ಸೇವೆಗೆ ಸೇರಿ ಉಪಾಧ್ಯಾಯರಾಗಿ, ಬೋಧಕರಾಗಿ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೇಟಗೀರಿ, ಗದಗ, ಮಂಗಳೂರು, ಹಳೆಯಂಗಡಿ, ಬೊಂಬಾಯಿ ಪ್ರದೇಶಗಳಲ್ಲಿ ಸೇವೆ. ಇವರು ತುಳುವಿನಲ್ಲಿ ಒಂದು ಸಂಗೀತವನ್ನೂ ಇತರರೊಂದಿಗೆ ಒಂದನ್ನೂ ಅಲ್ಲದೆ ೯ ಕನ್ನಡ ಸಂಗೀತಗಳನ್ನು ರಚಿಸಿದ್ದಾರೆ.

ಇವರುಗಳಲ್ಲದೆ ದೇಶೀಯರುಗಳಾದ ಕ್ರಿಶ್ಷ್ಯನ್ ಚಿನ್ನಪ್ಪ, ಟೈಟಸ್ ಕೋಸ್ತ, ಪಿ. ಕೈಶಿಕ್, ಕ್ರಿಶ್ಚ್ಯನ್‌ ಅರ್ನೆಸ್ಟ್‌, ಸಿ.ವಿ.ಗಣಪಯ್ಯ, ವೆಂಕಟರಾವ್ ಗುಲ್ವಾಡಿ, ಕೆ.ವಿ. ಜೋಶೀಯ, ಪಿ.ಪಿ. ಕಂಸಿಕ, ಜೆ.ಬಿ, ಕರ್ಕಡ, ಎಸ್‌. ಐಮನ್, ಎಚ್‌.ಎ. ಕೌಂಡಿನ್ಯ, ಜೆ. ಕೌಶಿಕ್‌, ಕಿಸ್ತಾನುಜ ವತ್ಸ, ಎನ್‌. ಕೃಷ್ಣರಾವ್‌, ವಿ. ಲಕ್ಷ್ಮಣರಾವ್, ಜಾನ್ ಲಾರೆನ್ಸ, ಕ್ರಿಶ್ಚ್ಯನ್‌ಮಾಬೆನ್, ಪಿ.ಪಿ. ಮಾಬೆನ್, ಟಿ.ಜಿ. ಮಾಬ್ನ್‌, ಬಿ. ಮಲ್ಲಪ್ಪ, ಮಾರ್ಕ್ ಸಂಜೀವರಾವ್, ನರಸಿಂಹಾಚಾರ್ಯ, ಎಚ್‌. ನಾರಾಯಣರಾವ್, ನಿಂಬಾಳ್‌ಕರ್‌, ನಿರೋಡಿಕರ್‌, ಮುಲ್ಕಿ ರಾಮಕೃಷ್ಣಯ್ಯ, ಬೋಳಾರ ರಾಮಕೃಷ್ಣಯ್ಯ, ಹೊಸಬೆಟ್ಟು ರಾಮರಾವ್‌, ಕೆ. ರಾಮರಾವ್‌, ಜೇಸುವಾನಂದ ಸೋನ್ಸ್‌, ಸತ್ಯಮಿತ್ರ ಬಂಗೇರ, ಎಸ್‌. ಶ್ರೀನಿವಾಸ ರಾವ್‌, ಎಮ್‌. ಸುಬ್ಬರಾವ್‌, ಸುವಾರ್ತಪ್ಪ ವಾತ್ಸ, ವಾಸುದೇವಯ್ಯ, ಕಾಪುವಿನ ಮಧ್ವರಾಯ, ಮೂಲ್ಕಿಯ ಸೀತಾರಾಮ, ಸರ್ವೋತ್ತಮ ಪೈ, ಇಸ್ರಾಯೇಲ್‌ ಆರೋನ್ಸ್‌, ಶಿವರಾವ್‌ ಮುಂತಾದವರು ಮಿಶನರಿಗಳ ಕಾಲದಲ್ಲಿ ಭಾಷಾಂತರ, ಪಠ್ಯಪುಸ್ತಕ ರಚನೆ ಅಲ್ಲದೆ ಬೇರೆ ಬೇರೆ ಸಾಹಿತ್ಯ ಪ್ರಕಾರಗಳಲ್ಲಿ ಮಿಶನರಿಗಳೊಂದಿಗೆ ಮತ್ತು ಮಿಶನರಿಗಳ ಕಾಲದಲ್ಲಿ ಜಿಲ್ಲೆಯ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜಿಲ್ಲೆಯಲ್ಲಿ ಅಮೋಘ ಸೇವೆಯನ್ನು ಗೈದಿದ್ದಾರೆ.

ಮಿಶನರಿಗಳ ಕಾಲದಲ್ಲಿ ತುಳು ಸಾಹಿತ್ಯವನ್ನು ಧಾರ್ಮಿಕ, ಭಾಷೆ, ಸಂಸ್ಕೃತಿ ಹೀಗೆ ಮೂರು ವಿಭಾಗಗಳಲ್ಲಿ ವಿಭಾಗಿಸಿ ನೋಡಬಹುದು.

ಧಾರ್ಮಿಕ: ಈ ಕ್ಷೇತ್ರದಲ್ಲಿಯ ಸಾಹಿತ್ಯ ಪ್ರಕಾರಗಳನ್ನು

೧. ಸಭಾಕ್ರಮ ೨. ಸತ್ಯವೇದ ೩. ಸತ್ಯವೇದ ಆಧಾರಿತ ಸಾಹಿತ್ಯಗಳು ೪.ಕ್ರೈಸ್ತ ಸಂಸ್ಕಾರಗಳು ೫. ನೀತಿಬೋಧೆ ೬. ಸಂಗೀತ ಈ ರೀತಿಯಾಗಿ ವಿಭಾಗಿಸಬಹುದು.

ಬಾಸೆಲ್‌ಮಿಶನ್‌ಗ್‌ ಹಿಂದೂಸ್ಥಾನೊಡುಪ್ಪು ಸೌವಾರ್ತಿಕ ಕಭೆತ್ತ ಕಟ್ಟ್‌

Rules for the BGEM Churches in South India in Tulu (1903)

ಈ ಕೃತಿಯು ೮೫ ಪುಟಗಳನ್ನು ಹೊಂದಿದ್ದು ತುಳುವಿನಲ್ಲಿ ಪ್ರಕಟಗೊಂಡಿದೆ. ಜಿಲ್ಲಾ ಸಭೆ, ಠಾಣ್ಯದ ಸಭೆ, ಸರ್ಕೀಟು ಸಭೆ, ಸಭೆಗೆ ಸೇರಿಸುವುದು ಹೇಗೆ, ಆರಾಧನಾ ಕ್ರಮ, ಸಂಸ್ಕಾರಗಳು, ಲೌಕಿಕ ಬಾಳುವೆ, ಉದ್ಯೋಗ, ಆಸ್ತಿ, ನೆರೆಹೊರೆ, ಸರಕಾರ, ಸಭಾ ಶಿಕ್ಷೆಗಳು, ತನಿಖೆ, ಸಭಾ ಆಸ್ತಿ, ಬಡವರು ಹೀಗೆ ಹಲವಾರು ವಿಭಾಗಗಳಿದ್ದು ಸಭಾ ನಾಯಕರ ಹಾಗೂ ಸಭಾ ಸದಸ್ಯರು ಪಾಲಿಸಬೇಕಾದ ನಿಯಮ, ಕರ್ತವ್ಯಗಳನ್ನು ತಿಳಿಸುತ್ತದೆ. ಈ ಕೃತಿಗಿಂತ ಮೊದಲು ಹಿಂದೂಸ್ಥಾನದಲ್ಲಿಯೂ ಆಫ್ರಿಕದಲ್ಲಿಯೂ ಇರುವ ಬಾ. ಮಿ. ಸುವಾರ್ತಾ ಪಕ್ಷದ ಸಭೆಗಳ ಕ್ರಮಗಳು ಎಂಬ ಪುಸ್ತಕವೊಂದು ಕನ್ನಡ ಮತ್ತು ತುಳು ಭಾಷೆಯಲ್ಲಿ ಪ್ರಕಟಗೊಂಡಿದ್ದು ಇದೇ ಪುಸ್ತಕದ ತಿದ್ದಿದ ಆವೃತ್ತಿ ಇದಾಗಿರುತ್ತದೆ.

ಸತ್ಯವೇದ

ಕ್ರೈಸ್ತರ ಪವಿತ್ರ ಗ್ರಂಥವಾಗಿರುತ್ತದೆ. ಇದರಲ್ಲಿ ಹಳೆ ಒಡಂಬಡಿಕೆ ಹಾಗೂ ಹೊಸ ಒಡಂಬಡಿಕೆ ಎಂಬ ಎರಡು ವಿಭಾಗಗಳಿವೆ. ಹಳೆ ಒಡಂಬಡಿಕೆಯಲ್ಲಿ ೩೯ ಪುಸ್ತಕಗಳಿದ್ದು ಇದರಲ್ಲಿ ಕೇವಲ ೬ ಪುಸ್ತಕಗಳು ಮಾತ್ರವೂ, ಹೊಸ ಒಡಂಬಡಿಕೆಯ ಎಲ್ಲಾ ಪುಸ್ತಕಗಳೂ ತುಳುವಿಗೆ ಭಾಷಾಂತರಗೊಂಡಿವೆ. ಬಾಸೆಲ್‌ಮಿಶನಿನ ಸಾಹಿತ್ಯ ವಿಭಾಗದಲ್ಲಿ ಸತ್ಯವೇದ ಭಾಷಾಂತರ ಸಮಿತಿಯಿದ್ದು ಮಲಯಾಳಂ, ಕನ್ನಡ, ತುಳು ಭಾಷೆಗಳ ಸತ್ಯವೇದವನ್ನು ಭಾಷಾಂತರ ಮಾಡುತ್ತಿತ್ತು. ೧೮೯೦ರಲ್ಲಿದ್ದ ತುಳು ಸತ್ಯವೇದ ಭಾಷಾಂತರ ಸಮಿತಿಯಲ್ಲಿ ವಿದೇಶೀಯರಾದ ಎ. ಮ್ಯಾನರ್‌, ಪಿ. ಓತ್ತ್‌, ಜೆ. ಹೆರ್ಮಲಿಂಕ್‌, ಜಿ. ರಿತ್ತರ್‌ಹಾಗೂ ದೇಶೀಯರಾದ ಸಿ. ಗೋಜರ್‌, ಜೆರೋದ್‌, ಸೋನ್ಸ್‌, ಒಬೆದ್‌ಸುಮಿತ್ರ ಇವರುಗಳು ಸದಸ್ಯರಾಗಿದ್ದರು. ಹಳೆ ಒಡಂಬಡಿಕೆ ವಿಭಾಗಗಳ ಈ ಕೆಳಗಿನ ಪುಸ್ತಕಗಳು ತುಳುವಿಗೆ ಭಾಷಾಂತರವಾಗಿದೆ.

ಮೋಸೆನವು ದುಂಬುದ ಪುಸ್ತಕ ಉತ್ಪತ್ತಿ (೧೯೦೫-ಪು. ೧೨೦)

ಈ ಕೃತಿಯು ಲೋಕದ ಸೃಷ್ಟಿಯನ್ನು ತಿಳಿಸುತ್ತದೆ.

ಮೋಸೆನವು ರಡ್ಡನೇ ಪುಸ್ತಕ ಹೊರಡೋಣವು (೧೯೦೯-ಪು. ೯೨)

ಸೃಷ್ಟಿಯ ನಂತರ ನಡೆದ ಚರಿತ್ರೆಗಳನ್ನೊಳಗೊಂಡಿದೆ.

ಯೋಹಾನ ಪುಸ್ತಕ (೧೯೦೦-ಪು. ೧೨)

ದಾನಿಯೆಲ್‌ ಪ್ರವಾದಿ ಪುಸ್ತಕ (೧೯೧೨-ಪು. ೩೯) ಈ ಪುಸ್ತಕಗಳು

ಪ್ರವಾದಿಗಳ ಚರಿತ್ರೆಯ ಪುಸ್ತಕವಾಗಿವೆ.

ಕೀರ್ತನೆಗಳು (ಪು. ೨೧೫)

ದಾವೀದನ ಕೀರ್ತನೆಯೆಂದು ಕರೆಸಿಕೊಳ್ಳುವ ಈ ಕೃತಿ ಕ್ರೈಸ್ತರೆಲ್ಲರಿಗೆ ಆದರಣೆ, ನೀತಿಬೋಧೆಯನ್ನು ತಿಳಿಸುವ ಗ್ರಂಥವಾಗಿದೆ. ೧೮೬೩, ೧೮೯೯, ೧೯೦೨ರಲ್ಲಿ ಪ್ರಕಟಗೊಂಡಿದೆ.

ನೀತಿವಚನೊಳು (ಪು. ೮೩)

ಈ ಕೃತಿಯನ್ನು ಗಾದೆಗಳು ಎಂದು ಕರೆಯುತ್ತಾರೆ. ಸೋಲೊಮೋನನೆಂಬ ಪ್ರವಾದಿಯ ರಚನೆ ಇದಾಗಿದ್ದು ೧೮೯೦, ೧೯೦೩ರಲ್ಲಿ ಪ್ರಕಟಗೊಂಡಿದೆ.

೧. ಅನ್ಯಾಯೊನು ಬಿತ್ತುನಾಯೆ ಆಪತ್ತ್‌ನ್‌ ಕೊಯಿಪೆ (ಅನ್ಯಾಯವನ್ನು ಬಿತ್ತುವವನು ಆಪತ್ತನ್ನು ಕೊಯ್ಯುತ್ತಾನೆ)

೨. ಐಶ್ವರ್ಯೊಡ್ಡು ಕೀರ್ತಿ ಮಲ್ಲೆ (ಐಶ್ವರ್ಯಕ್ಕಿಂತ ಕೀರ್ತಿ ದೊಡ್ಡದು)

೩. ಬೊಳ್ಳಿ ಬಂಗಾರೊಡ್ದು ದಯೆತ ಮನಸ್ಸ್‌ಎಡ್ಡೆ (ಬೆಳ್ಳಿ ಬಂಗಾರಕ್ಕಿಂತ ದಯೆಯ ಮನಸ್ಸು ಒಳ್ಳೆದು)

೪. ಬೆನ್ಪಿನಾಯನ ಬಡವು ಆಯನ್‌ ಬೆನ್ಪಾವುಂಡು (ದುಡಿಯುವವನ ಹಸಿವೆ ಅವನನ್ನು ದುಡಿಸುತ್ತದೆ)

೫. ನ್ಯಾಯದ ಇಲ್ಲ್‌ದ ಸಬಿತ ಒಣಸ್‌ಡ್ದ್‌ ಸಮಾದಾನದ ಇಲ್ಲದ ಪೊಟ್ಟು ಒಣಸ್‌ ಎಡ್ಡೆ (ನ್ಯಾಯದ ಮನೆಯ ಸಿಹಿ ಊಟಕ್ಕಿಂತ ಸಮಾಧಾನದ ಮನೆಯ ಸಾದಾ ಊಟ ಒಳ್ಳೆಯದು) ಇಂತಹ ಒಳ್ಳೊಳ್ಳೆಯ ಗಾದೆಮಾತುಗಳಿವೆ.

ಪೊಸ ಒಡಂಬಡಿಕೆ (ಹೊಸ ಒಡಂಬಡಿಕೆ)

ಈ ಕೃತಿಯು ಸತ್ಯವೇದದ ಎರಡನೇ ಭಾಗವಾಗಿದ್ದು ೨೭ ಪುಸ್ತಕಗಳನ್ನೊಳಗೊಂಡಿದ್ದು ಸುಮಾರು ೬೦೦ ಪುಟಗಳಾಗುವಷ್ಟಿದೆ. ಹೊಸ ಒಡಂಬಡಿಕೆಯು ಯೇಸುಕ್ರಿಸ್ತನ ಅವತಾರದ ನಂತರ ರಚನೆಯಾದದ್ದು. ಇವುಗಳನ್ನು ಯೇಸುವಿನ ಶಿಷ್ಯರು ಮತ್ತು ಪರಿವಾರದವರು ಬರೆದಿರುವರು. ಹಿಬ್ರು ಭಾಷೆಯಿಂದ ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಭಾಷಾಂತರಗೊಂಡ ಈ ಕೃತಿ ೧೮೪೭ರಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಮತ್ತು ೧೮೫೮, ೧೮೯೯, ೧೯೨೧, ೧೯೩೨ರಲ್ಲಿ ತಿದ್ದಿದ ಆವೃತ್ತಿಗಳಾಗಿ ಮರುಮುದ್ರಣಗೊಂಡಿದೆ. ೨೭ ಪುಸ್ತಕಗಳ ಮೊದಲ ೪ ಪುಸ್ತಕಗಳನ್ನು ‘ಸುವಾರ್ತೆ’ಗಳೆನ್ನುತ್ತಾರೆ. ಇದರಲ್ಲಿ ಯೇಸುವಿನ ಅವತಾರ, ಬದುಕು ಬೋಧನೆಗಳ ವಿಚಾರಗಳಿದ್ದರೆ ಬೇರೆ ಪುಸ್ತಕಗಳಲ್ಲಿ ಯೇಸುಸ್ವಾಮಿಯ ನಂತರ ನಡೆದ ಸಭಾಚರಿತ್ರೆ ಮುಂತಾದವುಗಳು ಅಡಕಗೊಂಡಿದೆ. ಈ ಕೃತಿಯು ಈಗಲೂ ಜಿಲ್ಲೆಯಲ್ಲಿ ಬಳಕೆಯಲ್ಲಿದೆ.

ಪರ ಪೊಸ ಒಡಂಬಡಿಕೆದ ಕಥೆಳು (ಪು. ೩೭೦)

(ಹಳೆ ಹೊಸ ಒಡಂಬಡಿಕೆಯ ಕತೆಗಳು) ಸತ್ಯವೇದದ ಮಕ್ಕಳಿಗೆ, ಹೊಸತಾಗಿ ಕ್ರೈಸ್ತರಾದವರಿಗೆ ಸುಲಭ ರೀತಿಯಲ್ಲಿ ಅಭ್ಯಾಸ ಮಾಡುವಲ್ಲಿ ಸಹಕಾರಿಯಾಗುವಂತೆ ಚಿತ್ರಗಳೊಂದಿಗೆ ಪ್ರಕಟಿಸಲಾಗಿದ್ದು ೧೮೬೨, ೧೮೭೮, ೧೮೭೯, ೧೮೯೦, ೧೮೯೯, ೧೯೧೦ರಲ್ಲಿ ತಿದ್ದಿದ ಆವೃತ್ತಿಯಾಗಿ ಮುದ್ರಣಗೊಂಡಿದೆ.

ದೇವೆರೆನ ವಾಕ್ಯದ ಎಲ್ಯ ಕಥೆಳು (ಪು. ೯೭)

(ದೇವರವಾಕ್ಯದ ಸಣ್ಣ ಕತೆಗಳು) ಎಂಬ ಕೃತಿಗಳು ಚಿತ್ರಗಳೊಂದಿಗೆ ೧೮೭೯, ೧೮೯೦, ೧೯೦೦, ೧೯೧೭ರಲ್ಲಿ ಪ್ರಕಟಗೊಂಡಿವೆ. ಸತ್ಯವೇದದ ಹೆಚ್ಚಿನ ಕತೆಗಳನ್ನು ಕಥಾರೂಪದ ಚಿತ್ರಗಳೊಂದಿಗೆ ಪ್ರಕಟಿಸಿದ್ದು ಸತ್ಯವೇದಾಭ್ಯಾಸಕ್ಕೆ ಸಹಕಾರಿಯಾಗಿದೆ.

ರಕ್ಷಣೆದ ಕ್ರಮದ ಪ್ರಕಾರ ಜತ್ತ್‌ದ್‌ ದೆತ್ತಿ ವಚನೊಳು (ಪುಟ. ೧೩೪)

(ರಕ್ಷಣೆಯ ಕ್ರಮದ ಪ್ರಕಾರ ಆರಿಸಿ ತೆಗೆದ ವಚನಗಳು), ೧೮೬೭, ೧೮೮೪, ೧೮೯೫ರಲ್ಲಿ ಪ್ರಕಟಗೊಂಡಿವೆ. ಇವುಗಳು ಮಕ್ಕಳು ಬಾಯಿಪಾಠ ಕಲಿಯಲಿಕ್ಕಾಗಿ ಸತ್ಯವೇದದಿಂದ ಆರಿಸಿ ತೆಗೆದ ಸೂಕ್ತಿಗಳಾಗಿವೆ.

ಕ್ರೈಸ್ತೆರೆ ಜೋಕುಳು ಕಲ್ಪೊಡಾಯಿ ವಚನಲಾ ಗೀತಲಾ (ಪು. ೧೦೫)

(ಕ್ರೈಸ್ತರ ಮಕ್ಕಳು ಕಲಿಯಬೇಕಾದ ವಚನಗಳೂ ಗೀತಗಳೂ) ೧೯೦೧, ೧೯೦೯, ೧೯೧೭ರಲ್ಲಿ ಮುದ್ರಣಗೊಂಡಿದ್ದು ಈ ಕೃತಿಯಲ್ಲಿ ಭಾನುವಾರ ಶಾಲೆಯಲ್ಲಿ ಕ್ರೈಸ್ತ ಮಕ್ಕಳು ಕಲಿಯಲಿಕ್ಕಾಗಿ ಸತ್ಯವೇದದಿಂದ ಆರಿಸಿ ತೆಗೆದ ಸೂಕ್ತಿಗಳೂ ಸಣ್ಣ ಸಣ್ಣ ಪದ್ಯಗಳೂ ಇವೆ.

ಯೇಸು ಮಲ್ತಿ ಪರ್ವತ ಪ್ರಸಂಗ (ಪು. ೨೦)

(ಯೇಸು ಮಾಡಿದ ಪರ್ವತ ಪ್ರಸಂಗ) ೧೯೦೦ರಲ್ಲಿ ಈ ಕೃತಿಯು ಪ್ರಕಟಗೊಂಡಿದ್ದು ಕ್ರೈಸ್ತ ಬೋಧಕರುಗಳಿಗೆ ಬೋಧನೆ ಕೊಡಲು ಉಪಯೋಗವಾಗುವಂತೆ ತಯಾರಿಸಲಾಗಿದೆ. ಇದು ಸತ್ಯವೇದದಲ್ಲಿ ಬರುವ ಹೊಸ ಒಡಂಬಡಿಕೆಯಲ್ಲಿರುವ ಯೇಸುಕ್ರಿಸ್ತನ ಪರ್ವತ ಪ್ರಸಂಗದಿಂದ ಆರಿಸಿ ತೆಗೆದ ನೀತಿ ವಿಷಯಗಳಾಗಿರುತ್ತದೆ.

ಕ್ರೈಸ್ತಗ್‌ ರಕ್ಷಣೆ ಆಂಡ್‌ ಇನ್ಪಿ ನಿಶ್ಚಯ ಆಯಿನಿ ಎಂಚ (ಪು. ೩೩)

(ಕ್ರೈಸ್ತನಿಗೆ ರಕ್ಷಣೆ ಆಯಿತು ಎನ್ನುವ ನಿಶ್ಚಯ ಆಗುವುದು ಹೇಗೆ?) ೧೮೯೯ರಲ್ಲಿ ಪ್ರಕಟವಾದ ಈ ಕೃತಿಯು ಕ್ರೈಸ್ತರಲ್ಲಿರುವ ರಕ್ಷಣೆಯ ವಿಚಾರವನ್ನು ತಿಳಿಸುವಂತದ್ದಾಗಿರುತ್ತದೆ.

ಕರ್ತನ ಸೇವಕೆರೆ ಮಾನಸಾಂತರಲಾ ಆಕುಳೆ ಸೇವೆಲಾ (ಪು. ೧೬)

(ಕರ್ತನ ಸೇವಕರ ಮಾನಸಾಂತರವೂ ಅವರ ಸೇವೆಯೂ) ೧೯೦೧ರಲ್ಲಿ ಪ್ರಕಟವಾದ ಈ ಕೃತಿಯು ಕ್ರಿಸ್ತನ ಸೇವಕರೆನಿಸಿಕೊಳ್ಳುವವರ ಸೇವೆ ಮತ್ತು ಅದರ ಮಾನಸಾಂತರ ವಿವರಗಳನ್ನು ತಿಳಿಸುತ್ತದೆ.

ಪರಲೊಕ ಮಹಿಮೆಡ್‌ ಸೇರಿ ಯೇಸು

ತನ ಸಬೆಟ್ಟ್‌ ನಡಪು ಕೆಲಸದ ವಿಷಯೊಡು (ಪು. ೩೧)

(ಪರಲೋಕ ಮಹಿಮೆಯಲ್ಲಿ ಸೇರಿದ ಯೇಸು ಕ್ರಿಸ್ತ ತನ್ನ ಸಭೆಯಲ್ಲಿ ನಡೆಸುವ ಕೆಲಸದ ವಿಷಯದಲ್ಲಿ) ೧೯೦೦ರಲ್ಲಿ ಪ್ರಕಟಗೊಂಡ ಈ ಕೃತಿಯು ಕ್ರೈಸ್ತ ಸಭೆಗಳಲ್ಲಿ ನಡೆಯಬೇಕಾದ ಕ್ರಮ ನಿಯಮಗಳನ್ನು ಸತ್ಯವೇದದ ಆಧಾರದಿಂದ ಆರಿಸಿ ತೆಗೆದ ವಿಚಾರಗಳನ್ನು ತಿಳಿಸುತ್ತದೆ.

ದೇವೆರೆ ರಾಜ್ಯದ ಮುತ್ತುಳು

ಈ ಕೃತಿಯನ್ನು ರಚಿಸಿದವರು ರಿತ್ತರ್‌. ೧೯೩೪ರಲ್ಲಿ ಪ್ರಕಟಗೊಂಡಿದ್ದು ಈ ಕೃತಿಯಲ್ಲಿ ಹೊಸ ಒಡಂಬಡಿಕೆಯಿಂದ ಆಯ್ದ ಸಾಮ್ಯಗಳನ್ನು ಆರಿಸಿ ತೆಗೆದು ಬೋಧನೆಗಳಿಗೆ ಉಪಯೋಗವಾಗುವಂತೆ ಕತೆ ಹೇಳುವ ರೀತಿಯಲ್ಲಿ ರಚಿಸಲಾಗಿದೆ. ಬೆಲೆಯುಳ್ಳ ಮುತ್ತು ತಪ್ಪಿಹೋದ ಕುರಿ, ತಪ್ಪಿಹೋದ ಮಗ, ಹೀಗೆ ಬೇರೆ ಬೇರೆ ಕತೆಗಳಿವೆ. ಈ ಕೃತಿ ಮುದ್ರಣಗೊಂಡದ್ದು ಮಂಗಳೂರಿನ ಸರಸ್ವತೀ ಪ್ರಿಂಟಿಂಗ್‌ವರ್ಕ್ಸ್‌ಎಂಬಲ್ಲಿ ಈ ಪುಸ್ತಕ ಬಿಡುಗಡೆಯಾದಾಗ, ‘ಕರ್ಣಾಟಕ ಕ್ರೈಸ್ತ ಬಂಧು’ (ಜನವರಿ ೧೯೩೪, ಪು. ೨೨೫) ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಗ್ರಂಥ ವಿಮರ್ಶೆ ಹೀಗಿದೆ.

“ತುಳುನಾಡಿನ ಅಚ್ಚ ತುಳುವಿಗೆ ತವರೂರಾದ ಕಾರ್ಕಳದಲ್ಲಿ ತುಳುವರ ಮಧ್ಯೆ ಸೇವಾವೃತ್ತಿಯನ್ನು ಕೈಗೊಂಡಿರುವ ಟಿ. ರಿತ್ತರ್‌ರವರು ತುಳುವರ ಪ್ರಯೋಜನಾರ್ಥವಾಗಿ ಈ ಗ್ರಂಥವನ್ನು ಪ್ರಕಟಿಸಿರುವರು. ಬಡ ಹಳ್ಳಿಗರಾದ ತುಳುವರ ತೀರಾ ಕನಿಷ್ಠಾವಸ್ಥೆಯನ್ನು, ಕನ್ನಡ ಭಾಷೆಯ ಅರಿವಿನ ಸಂಬಂಧವಾಗಿ ಅವರಲ್ಲಿರುವ ಕೊರತೆಯನ್ನು ಸ್ಪಷ್ಟವಾಗಿ ಮನಗಂಡು, ಇಂತಹ ಒಂದು ಪುಸ್ತಕವು ಇರುತ್ತಿದ್ದರೆ ಎಷ್ಟೋ ಸಹಾಯಕವಾಗುವುದು ಎಂಬುದನ್ನು ಪದೇ ಪದೇ ಹೇಳಿರುತ್ತಾರೆ. ಈ ಲೋಪವನ್ನು ನಿವಾರಿಸುವುದಕ್ಕೆ ರಿತ್ತರ್‌ದೊರೆ ಮುಂದೆ ಬಂದದ್ದು, ಅದು ಅವರ ಸೇವೆಯ ಅನುಭವದಲ್ಲಿ ದೊರೆತ ಫಲದ ಕಾಣಿಕೆಯಾಗಿದೆ ಎಂತ ತಿಳಿಯುತ್ತೇವೆ. ತುಳುವರ ನೆಲೆಗನುಗುಣವಾದ ವಿವರಣೆ ಸಮೇತ ಪೋಣಿಸಿರುವ ಈ ಗ್ರಂಥದ ವಿಷಯ ಪ್ರಸ್ತಾಪಗಳೂ ಭಾಷಾ ಶೈಲಿಯೂ ಮನಮೋಹಕವಾಗಿದೆ. ಹಗಲು ಹೊತ್ತಿನಲ್ಲಿ ತುಳುವನು ತನ್ನ ಕೆಲಸವನ್ನು ಮುಗಿಸಿ ಹೊತ್ತು ಮುಳುಗುವುದರೊಳಗೆ ತನ್ನ ಹುಲ್ಲು ಮನೆಯನ್ನು ಸೇರಿಕೊಂಡು ಬೇಗನೆ ಊಟ ಮಾಡಿ ಮಿಣ ಮಿಣ ಉರಿಯುವ ಬೆಳಕಿನ ಬಳಿಯಲ್ಲಿ ಕುಳಿತುಕೊಂಡು ಈ ಗ್ರಂಥವನ್ನು ಪಾರಾಯಣ ಮಾಡುವುದರಿಂದ ಉಂಟಾಗುವ ರಸಾಸ್ವಾದನೆಯು ಪ್ರತಿಯೊಬ್ಬ ತುಳುವನಿಗೆ ದೊರೆಯುವಂತೆ ತುಳುನಾಡಿನ ತುಳುವರ ಮಧ್ಯೆ ಸೇವೆಗೈಯುವ ಸೇವಕರು ತುಳು ರಾಷ್ಟ್ರದಲ್ಲೆಲ್ಲಾ ಈ ಗ್ರಂಥವನ್ನು ಪ್ರಚುರಗೊಳಿಸುವುದಕ್ಕೆ ಪರಿಶ್ರಮ ತೋರಿಸಿದರೆ ಅದೆಂದೂ ವ್ಯರ್ಥವಾಗದು”.

ಸ್ವರ್ಗಯಾತ್ರೆ, ಪುಟ ೧೬೪, ೧೯೦೧

John Bunyan’s Piligrim’s Progress ನ ತುಳು ಭಾಷಾಂತರ ಕೃತಿ. ಯಾತ್ರಿಕನ ಸಂಚಾರವೆಂಬ ಹೆಸರಲ್ಲಿ ಕನ್ನಡದಲ್ಲಿ ಪ್ರಕಟವಾದ ಈ ಕೃತಿಗೆ ತುಳುವಿನಲ್ಲಿ ‘ಸ್ವರ್ಗಯಾತ್ರೆ’ ಎಂಬ ಹೆಸರಿದೆ. ಜಿ. ವೈಗ್ಲೆ, ಮೋಗ್ಲಿಂಗ್‌, ಕ್ರಿಸ್ತಾನುಜ, ವಾತ್ಸ ಇವರುಗಳು ಇದನ್ನು ಕನ್ನಡಕ್ಕೆ ಅನುವಾದಿಸಿದ್ದು ಬಿ. ರೈಸ್‌ಈ ಕೃತಿಯನ್ನು ಸಂಪಾದಿಸಿದ್ದಾರೆ.

ಕ್ರೈಸ್ತ ಸಂಸ್ಕಾರಗಳು ದಿನದಿನತ ಪ್ರಾರ್ಥನೆಳು (ಪು. ೫೫)

೧೮೬೯, ೧೯೦೭, ೧೯೩೪ರಲ್ಲಿ ಪ್ರಕಟಗೊಂಡಿದ್ದು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಮಾಡುವ ನಾಲ್ಕು ವಾರಗಳ ಪ್ರಾರ್ಥನೆಗಳನ್ನೊಳಗೊಂಡಿದೆ.

ದೇವರೆ ವಾಕ್ಯದ ಬೋಧನೆದ ಪ್ರಶ್ನೋತ್ತರ (ಪು. ೩೦)

೧೮೮೫, ೧೮೮೭, ೧೮೯೫, ೧೯೦೨, ೧೯೦೮, ೧೯೧೫, ೧೯೨೫, ೧೯೩೭ರಲ್ಲಿ ಪ್ರಕಟಗೊಂಡಿದೆ. ಈ ಕೃತಿಯಲ್ಲಿ ಕ್ರೈಸ್ತರಾಗ ಬಯಸುವವರು ಕಲಿಯಬೇಕಾದ ಕ್ರೈಸ್ತ ಬೋಧನೆಗಳ ವಿಷಯಗಳಿವೆ. ಕ್ರೈಸ್ತ ಸಂಸ್ಕಾರ, ಆಚರಿಸಬೇಕಾದ ಕ್ರಮ ನಿಯಮಗಳ ಬಗ್ಗೆ ೬೭ ಪ್ರಶ್ನೆಗಳ ರೂಪಗಳಲ್ಲಿ ಈ ಬೋಧನೆಗಳಿವೆ. ಅಲ್ಲದೆ ಕೊನೆಯಲ್ಲಿ ಬೆಳಗ್ಗೆ, ಸಾಯಂಕಾಲದ ಪ್ರಾರ್ಥನೆಗಳು, ಊಟದ ಮೊದಲು ಮತ್ತು ನಂತರ ಮಾಡುವ ಪ್ರಾರ್ಥನೆಗಳೂ ಇವೆ.

ದೃಢೀಕರಣ ಪ್ರಶ್ನೋತ್ತರ (ಪು. ೬೪)

೧೮೮೫, ೧೮೯೫, ೧೯೦೩, ೧೯೧೧, ೧೯೩೨, ೧೯೫೩ರಲ್ಲಿ ಪ್ರಕಟಗೊಂಡಿದ್ದು ಈ ಕೃತಿಯಲ್ಲಿ ಕ್ರೈಸ್ತ ಸಭೆಗೆ ಪೂರ್ಣ ಸಭಾಂಗಿಯಾಗಿ ಸ್ವೀಕರಿಸಲ್ಪಡುವಾಗ ಅಭ್ಯರ್ಥಿಯು ಕಲಿಯತಕ್ಕ ೫೨ ಪಾಠಗಳನ್ನೊಳಗೊಂಡ ಕ್ರಮ ನಿಯಮಗಳು ಇದರಲ್ಲಿವೆ. ಈ ಕೃತಿಯ ಕನ್ನಡ ಆವೃತ್ತಿ ಈಗಲೂ ಬಳಕೆಯಲ್ಲಿದೆ.

ದೃಢೀಕರಣದ ವಿಷಯಗಳ (ಪುಟ ೧೬)

೧೮೯೭ರಲ್ಲಿ ಪ್ರಟಕಗೊಂಡ ಈ ಕೃತಿಯಲ್ಲಿ ದೃಢಿಕರಣವೆಂದರೇನು? ದೃಢೀಕರಣದ ಬೋಧನೆಗ ಹೇಗೆ ಕೊಡಬೇಕು, ದೃಢೀಕರಣದ ನಂತರ ಕ್ರಿಸ್ತನ ಪವಿತ್ರ ಪ್ರಸಾದದಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಹಲವಾರು ಮಾಹಿತಿಗಳಿವೆ.

ದೇವಾರಾಧನೆದ ಕ್ರಮ (ಪು. ೨೪೯)

೧೮೫೯, ೧೮೯೭ ಹೀಗೆ ಹಲವಾರು ಬಾರಿ ತಿದ್ದುಪಡಿಗೆ ಒಳಗಾಗಿ ಪ್ರಕಟಗೊಂಡಿರುವ ಈ ಕೃತಿಯು ಕ್ರೈಸ್ತನ ಬೋಧಕರುಗಳ ಕೈಪಿಡಿಯಾಗಿರುತ್ತದೆ. ಪ್ರಾರ್ಥನೆ, ಸಂಸ್ಕಾರಗಳ ವಿಧಿ – ವಿಧಾನಗಳನ್ನೊಳಗೊಂಡಿದ್ದು ಕ್ರೈಸ್ತನ ಸಂಸ್ಕಾರಗಳ ಆರಾಧನೆಯಲ್ಲಿ ಉಪಯೋಗ ಮಾಡುವಂತೆ ಆರಾಧನಾ ಕ್ರಮವಾಗಿರುತ್ತದೆ. ಮದುವೆ, ಶವಸಂಸ್ಕಾರ, ದೃಢೀಕರಣ, ನಾಮಕರಣ, ಗೃಹ ಪ್ರವೇಶ, ಗುರುದೀಕ್ಷೆ ಮುಂತಾದ ಎಲ್ಲಾ ಸಂದರ್ಭಗಳಲ್ಲಿ ಇದು ಬಳಕೆಯಾಗುತ್ತಿದ್ದು ಈಗಲೂ ತುಳು ಆರಾಧನೆಗಳನ್ನು ನಡೆಸುವಲ್ಲಿ ಇದನ್ನು ಉಪಯೋಗಿಸುತ್ತಾರೆ. ಇದರ ಕನ್ನಡ ಅವತರಣಿಕೆ ಬಾಸೆಲ್ ಮಿಶನ್ ಸ್ಥಾಪಿಸಿದ ಸಭೆಗಳಲ್ಲಿ ಈಗಲೂ ಬಳಕೆಯಲ್ಲಿದೆ.

ದೇವಾರಾಧನೆದ ಕ್ರಮ (ಉತ್ತರ ಪ್ರತ್ಯುತ್ತರ) (ಪು. ೫೮)

೧೯೪೫ರಲ್ಲಿಯೂ ಆ ಹಿಂದೆಯೂ ಪ್ರಕಟಗೊಂಡಿದ್ದ ಈ ಕೃತಿಯು ಉತ್ತರ ಪ್ರತ್ಯುತ್ತರ ರೂಪದಲ್ಲಿದ್ದು ಆದಿತ್ಯವಾರದ ಆರಾಧನೆಯಲ್ಲಿ ಸಭಾಪಾಲಕರೂ, ಸಭಿಕರೂ ಇದನ್ನು ಉಪಯೋಗಿಸುತ್ತಿದ್ದರೂ. ಆದರೆ ಈಗ ಇದು ಬಳಕೆಯಲಿಲ್ಲ. ಈ ಕೃತಿಯು ಇಂಗ್ಲಿಷ್‌ನಲ್ಲಿಯೂ ಕನ್ನಡದಲ್ಲಿಯೂ ಪ್ರಕಟಗೊಂಡಿದೆ.

ನೀತಿಬೋಧೆ : ಕಳುವೆ ವೀರಪ್ಪನ ಮಾನಸಾಂತರ (೧೯೦೯, ಪು,೧೬)

(The conversion veerappa rhe Robber) ಕಳ್ಳನಾದ ವೀರಪ್ಪನ ಮಾನಂಸಾಂತರ ಎಂಬ ಕೃತಿಯ ಸಾರಾಂಶ ಹೀಗಿದೆ : ‘‘ಹಿಂದಿನ ಕಾಲದಲ್ಲಿ ರಾತ್ರಿ ಪ್ರಯಾಣವು ಕಷ್ಟಕರವಾಗಿತ್ತು. ದಾರಿಹೋಕರನ್ನು ಕಳ್ಳರ ಗುಂಪು ದೋಚುತ್ತಿತ್ತು. ಲೂಟಿ ಮಾಡಿ ಕೊಲೆ ಮಾಡುತ್ತಿದ್ದರು. ಕಳ್ಳರು ಗವಿಗಳಲ್ಲಿ, ಕಾಡು ಪ್ರದೇಶಗಳಲ್ಲಿ ಅವಿತುಕೊಳ್ಳುತ್ತಿದ್ದರು. ಲಾಡ್‌ವಿಲಿಯಂ ಬೆಂಟಿಂಕ್‌ ಈ ಕಳ್ಳರುಗಳನ್ನು ಹಿಡಿಯಲು ಇಂಗ್ಲಿಷ್‌ ಸಿಪಾಯಿಗಳನ್ನು ಕಳುಹಿಸಿ ಅವರು ಸುಮಾರು ೧೫೦೦ ಕಳ್ಳರನ್ನು ಬಂಧಿಸಿದರು. ಹೀಗೆ ಕಳ್ಳರ ಕಾಟ ಕಡಿಮೆಯಾಯಿತು. ಆದ್ದರಿಂದ ಇವತ್ತಿಗೂ ಲಾರ್ಡ್‌ ವಿಲಿಯಂ ಬೆಂಟಿಕ್‌ನನ್ನು ಹೊಗಳುತ್ತಾರೆ. ಸುಮಾರು ೪೦ ವರ್ಷಗಳ ಹಿಂದೆ ವೀರಪ್ಪನೆಂಬೊಬ್ಬ ಕಳ್ಳರ ನಾಯಕ ಇದ್ದ ೨೦ ಜನರನ್ನು ಕೊಂದವನೆಂದು ಬಿರುದು ಇವನಿಗಿತ್ತು. ಕಳ್ಳರ ಬಂಧನದಲ್ಲಿ ಇವನ ಕೈಕೆಳಗಿನವರೆಲ್ಲರನ್ನು ಬಂಧಿಸಲಾಯಿತು. ಇದರಿಂದ ಇವನ ಬಲ ಕಡಿಮೆಯಾಗಿ ಹುಚ್ಚನಂತಾದ. ಪರಿಚಯವಿಲ್ಲದ ಊರಿಗೆ ಹೋಗಿ ಪ್ರಾಯಶ್ಚಿಯಕ್ಕಾಗಿ ದಾನಧರ್ಮ, ಪುಣ್ಯಸ್ಥಳ ಸಂದರ್ಶನ ಮಾಡಿದ. ಮೈ ಕೈಗಳಿಗೆ ಗಾಯ ಮಾಡಿಕೊಂಡು ಪಶ್ಚಾತ್ತಾಪ ಪಟ್ಟ. ಇದನ್ನು ನೋಡಿದ ಗ್ರಾಮಸ್ಥರು ಇವನು ಗುರುವೆಂದು ನೆನೆಸಿ ಅವನ ಪಾದಗಳಿಗೆ ಅಡ್ಡಬಿದ್ದರು. ಆದರೂ ಅವನಿಗೆ ನೆಮ್ಮದಿ ಬರಲಿಲ್ಲ.

ಪಾದಗು ತಕ್ಕ ಪಾಪಸ್‌, ಪಾಪೊಗು ತಕ್ಕ ಪ್ರಾಯಶ್ಚಿತ್ತ

(ಪಾದಕ್ಕೆ ತಕ್ಕ ಪಾದರಕ್ಷೆ, ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ)

ಎಂಬ ಗಾದೆಮಾತಿನಂತೆ ನನ್ನ ಪಾಪಕ್ಕೆ ಪ್ರಾಯಶ್ಚಿತ್ತ ಸಿಕ್ಕರೆ ಆಗಬಹುದು ಎಂದು ಮನಸ್ಸಿದ್ದರಿಂದ ಗಂಗೆಯಲ್ಲಿ ಸ್ನಾನ ಮಾಡಿದ. ಆದರೂ ತನ್ನ ಪಾಪ ಹೊರಲಾರದಷ್ಟು ಎಂದು ಕಂಡುಬಂತು. ನಂತರ ಒಮ್ಮೆ ಕ್ರೈಸ್ತರು ಆರಾಧನೆ ಮಾಡುವ ಸ್ಥಳಕ್ಕೆ ಬೇಟಿ ಮಾಡಿದಾಗ ಅಲ್ಲಿ ಮಾಡುತ್ತಿದ್ದ ಬೋಧನೆಯನ್ನು ಕೇಳಿ ಯೇಸುಕ್ರಿಸ್ತರು ಸರ್ವರ ಪಾಪಗಳನ್ನು ಕ್ಷಮಿಸುವರೆಂದು ಅರಿತು ತಾನು ಸಮಾಜದಲ್ಲಿ ಧರ್ಮ ಪರಿವರ್ತಿತನಾಗಿ ಬದುಕತೊಡಗಿದ”

ಯಾನ್‌ ಆಳೆಗ್‌ ಪಗೆ ಬೂಟಂದೆ ಕುಳ್ಳಯೆ (೧೯೦೯ ಪು.೨೪)

(ನಾನು ಅವಳಿಗೆ ಹಗೆ ತೀರಿಸದೆ ಬಿಡೆನು)

ಈ ಕೃತಿಯಲ್ಲಿ ಹುಡುಗಿಯೊಬ್ಬಳು ಜಂಬದಿಂದ ಒಬ್ಬಾಕೆ ಮಾಡಿದ ತಪ್ಪನ್ನು ಕ್ಷಮಿಸದೆ ಅವಳಿಗೆ ಅನ್ಯಾಯ ಮಾಡಲು ಹೋಗುವಾಗ ಆಗುವ ತೊಂದರೆಗಳಿಂದ ತನ್ನ ತಪ್ಪನ್ನು ತಿದ್ದಿಕೊಂಡು ತನ್ನನ್ನು ಸರಿಪಡಿಸಿಕೊಳ್ಳುವಿಕೆಯ ಸಾರಾಂಶವಿದೆ.

ದೆತೊಣುನೆಡ್ದ್‌ ಕೊರ್ಪಿನವೇ ಎಡ್ಡರೆ (೧೯೦೯, ಪು. ೨೪)

(ತೆಗೆದುಕೊಳ್ಳುವುದಕ್ಕಿಂತ ಕೊಡುವಿಕೆಯೇ ಒಳ್ಳೆಯದು)

ಪರದೇಶದಲ್ಲಿ ಕೂಲಿ ಕೆಲಸ ಮಾಡುವವರ ಕಷ್ಟದ ವಿವರ, ಬೆವರಿಳಿಸಿ ದುಡಿದೂ ಫಲವಿಲ್ಲ, ಅಪಾಯಕಾರಿ ಕೆಲಸ ಇಂತಹವರಿಗೆ ಸಹಾಯ ಮಾಡಲು ಒಂದು ನಿಧಿ ಸ್ಥಾಪನೆ, ಕ್ರಮದಲ್ಲಿರುವವರಿಗೆ ಸಹಾಯ, ಅಸಾಯಕಕರ ಬಗ್ಗೆ ವಿವರ, ಮಕ್ಕಳ ಆಟಿಕೆಗಳನ್ನು ಮಾಡಿ ಮಾರಿ ಅದನ್ನು ಬಡ ಬಗ್ಗರಿಗೆ ಸಹಾಯ ಮಾಡುವ ರೀತಿ ನೀತಿಗಳು ಇವೆ.

ಎಂಕ್‌ಲಾ ಒಂಜಿ ಇಲ್ಲ್ ಉಂಡು

(ನನಗೂ ಒಂದು ಮನೆ ಇದೆ) (ಪು. ೧೬)

೧೮೭೭, ೧೮೯೬, ೧೯೦೧ರಲ್ಲಿ ಪ್ರಟಕಗೊಂಡ ಈ ಕೃತಿಯ ಲೇಖಕರು ಮಾನ್ನರ್‌. ಅನಾಥ ಹುಡುಗಿಯೊಬ್ಬಳು ಬಾಲಿಕಾಶ್ರಮದಲ್ಲಿದ್ದಾಗ ನಡೆದ ಘಟನೆ. ಎಲ್ಲರೂ ಊರಿಗೆ ಹೋಗುವ ಸಂದರ್ಭ. ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋಗುವ ಸಡಗರ. ಆದರೆ ತಂದೆ, ತಾಯಿ, ಮನೆ ಇಲ್ಲದ ಈ ಹುಡುಗಿ ಎಲ್ಲಿಗೆ ಹೋಗುವುದು? ನನಗೆ ಯಾರು ಇಲ್ಲವೆಲ್ಲವೆಂಬ ಚಿಂತೆ. ಕೊನೆಗೆ ಸತ್ಯವೇದದಲ್ಲಿ ಸ್ವರ್ಗವೆಂಬ ಮನೆ ಇದೆ ಎಂದು ತಿಳಿದು ಚಿಂತೆ ಬಿಟ್ಟು ಅಳುವುದನ್ನು ನಿಲ್ಲಿಸಿ ‘ನನಗೂ ಒಂದು ಮನೆ ಇದೆ. ಅದು ದೇವರ ಮನೆ. ಅಲ್ಲಿ ನನ್ನ ತಂದೆ ತಾಯಿ ಎಲ್ಲರೂ ಇದ್ದಾರೆ’ ಎಂದು ಸಮಾಧಾನಪಟ್ಟು ಕೊಳ್ಳುತ್ತಾರೆ. ಮಾನ್ನರ್ ರವರು ತನ್ನ ಧರ್ಮಪತ್ನಿಯೊಂದಿಗೆ ಮೂಲ್ಕಿಯ ಹೆಣ್ಮಕ್ಕಳ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿರುವ. ಈ ಕಥೆಯು ಅವರ ಸೇವೆಯ ಅವಧಿಯಲ್ಲಾದ ಅನುಭವದ ಕಥೆಯಾಗಿರಬಹುದು.

ಗುಡ್ಡೆನ್‌ ಲಕ್ಕಾದ ಪಾಡುನ ವಿಶ್ವಾಸ

(ಗುಡ್ಡವನ್ನು ತೆಗೆದು ಹಾಕುವ ನಂಬಿಕೆ) (೧೯೦೭, ಪು. ೧೫)

ಅಸಹಾಯಕನಾಗಿದ್ದ ಕಾಲು ಬಾರದ ಹುಡುಗನೊಬ್ಬನ ಕತೆಯನ್ನು ತಿಳಿಸುತ್ತದೆ. ಆ ಹುಡುಗನಿಗೆ ಶಾಲೆಗೆ ಹೋಗಿ ವಿದ್ಯ ಕಲಿಯಲು ಆಶೆ. ಆದರೆ ಏನು ಮಾಡುವುದು. ನಡೆದಾಡಲು ಕಾಲಿಲ್ಲ. ತಂದೆ ತಾಯಿಯವರ ಬೋಧನೆಯಿಂದ ಪ್ರಾರ್ಥನೆಯಿಂದ ಗುಡ್ಡವನ್ನೂ ಅಲುಗಾಡಿಸಬಹುದು ಎಂಬ ನಂಬಿಕೆ ಬೇರೂರಲು ದೇವರಲ್ಲಿ ನಂಬಿಕೆ ಇಟ್ಟು ಪ್ರಾರ್ಥಿಸಿದ. ಆತನ ಪ್ರಾರ್ಥನೆಯನ್ನು ಆಲಿಸಿದ ದೇವರು ಆತನಿಗೆ ಉತ್ತರ ದೊರಕಿಸಿದನೋ ಎಂಬಂತೆ ಒಬ್ಬ ಸಹಾಯಕನು ಈ ಬಾಲಕನನ್ನು ಶಾಲೆಗೆ ಹೊತ್ತುಕೊಂಡು ಹೋಗಲು ಒಪ್ಪಿದ. ಈ ಕತೆಯು ನಂಬಿ ಪ್ರಾರ್ಥಿಸಿದರೆ ಫಲವಿದೆ ಎಂಬ ನೀತಿಯನ್ನು ತಿಳಿಸುತ್ತದೆ.

ದೇವರೆನ್‌ ನಂಬಿನಾಯಗ್‌ ಇಂಬು ನಂಬಂದಿನಾಯಗ್‌ ಅಂಬು

(ದೇವರನ್ನು ನಂಬಿದವನಿಗೆ ಪ್ರತಿಫಲ ಖಂಡಿತ) (ಪು. ೧೦)

೧೯೦೩, ೧೯೦೭ರಲ್ಲಿ ಪ್ರಕಟಗೊಂಡ ಈ ಕೃತಿಯು ಸತ್ಯವೇದ ಆಧಾರಿತವಾಗಿದ್ದು ದೇವರನ್ನು ನಂಬಿದವರಿಗೆ ಒಳ್ಳೆಯ ಪ್ರತಿಫಲ ದೊರೆಯುತ್ತದೆ ಎನ್ನುವ ಸಾರಾಂಶ ಹೊಂದಿದ ಕತೆಯನ್ನೊಳಗೊಂಡಿದೆ.

ಅರಸು ಮಗ ಉಂಗಿಲದ ಸಾಮ್ಯ

(ಅರಸನ ಮಗನ ಉಂಗುರದ ಕತೆ) (ಪು. ೨೮)

೧೮೮೯, ೧೮೯೨, ೧೮೯೬, ೧೯೦೧ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿರುವ ಕತೆಯ ಸಾರಾಂಸ ಹೀಗಿದೆ:

ಸಾಧುವೊಬ್ಬ ಅರಸನ ಮಗನಿಗೆ ಒಂದು ಪವಿತ್ರ ಉಂಗುರವನ್ನು ಕೊಟ್ಟ. ಅದರ ಪಾವಿತ್ರ್ಯವನ್ನು ಕಾಪಾಡಿ ಅದನ್ನು ಜೋಪಾನ ಮಾಡಲು ಹೇಳಿದ್ದ. ಆದರೆ ಅರಸನು ಮಗನು ಅಜಾಗ್ರತೆಯಿಂದ ಆ ಉಂಗುರವನ್ನುನ ಕಳೆದುಕೊಂಡ. ಇದರಿಂದ ಅವನಿಗೆ ಕಷ್ಟ ಸಂಕಟಗಳು ಬಂದವು. ಕೊನೆಗೆ ದೇವರಲ್ಲಿ ಭಯ ಭಕ್ತಿ ಹುಟ್ಟಿತು.

ಕೆಟ್ಟ ಬುದ್ಧಿ ಪರಿಹಾರ ಆಯಿನವು (ಪು. ೨೦)

(ಕೆಟ್ಟ ಬುದ್ಧಿ ಪರಿಹಾರ ಆದದ್ದು)

೧೮೮೭೩, ೧೮೭೮, ೧೮೯೪, ೧೮೯೮, ೧೯೦೩ರಲ್ಲಿ ಈ ಪ್ರಕಟಗೊಂಡಿದೆ. ೧೮೯೪ರ ನಂತರದ ಕೃತಿಗಳು‘ ‘ಕೆಟ್ಟ ಬೊಕ್ಕ ಬುದ್ಧಿ ಸೈತಿ ಬೊಕ್ಕ ದುಃಖ’ ಎಂಬ ಹೆಸರಿನೊಂದಿಗೆ ಪ್ರಕಟಗೊಂಡಿದೆ. ಕೆಟ್ಟ ಮೇಲೆಯೇ ಬುದ್ಧಿ ಬರುವುದು ಎಂಬ ಸಾರಾಂಶವುಳ್ಳ ಕೃತಿ ಇದಾಗಿದೆ.