ಕನ್ನಡ – ತುಳು – ಇಂಗ್ಲಿಷ್‌ ಭಾಷಾಮಂಜರಿ

(A Kannada Guide to – English conversation)ಈ ಕೃತಿಯ ಲೇಖಕರು ಆರ್‌. ಟಿ, ಮಾಬೆನ್‌. ೧೯೦೫ರಲ್ಲಿ ಪ್ರಕಟವಾದ ಈ ಪುಸ್ತಕವು ೫೦ ಪುಟಗಳನ್ನೊಳಗೊಂಡಿದೆ. ತುಳು ಮಾತಾಡಲು ಕಲಿಯಲು ಸಹಾಯಕವಾಗುವ ಈ ಕೃತಿ ಭಾಷಾ ಸಾಹಿತ್ಯಕ್ಕೆ ಒಂದು ಆಕರ ಗ್ರಂಥವಾಗಿರುತ್ತದೆ.

Elements of south – Indian palaeography

From the Fouth to the Seventeen Century A.D.being an introduction to the study South – Indian Inscriptions and MSS

ಬ್ರಿಟಿಷ್ ಅಧಿಕಾರಿಯಾಗಿದ್ದ ಎ.ಸಿ. ಬರ್ನೆಲ್‌ ಈ ಕೃತಿಯ ಲೇಖಕನಾಗಿದ್ದು ೧೮೭೪ರಲ್ಲಿ ಮಂಗಳೂರಿನ ಬಾಸೆಲ್‌ ಮಿಶನ್ ಪ್ರೆಸ್‌ನಲ್ಲಿ ಮುದ್ರಣಗೊಂಡಿದ್ದು ಇದನ್ನು London : Trubner & Co. Ludgate Hill ಎಂಬಲ್ಲಿಂದ ಪ್ರಕಾಶಿಸಲಾಗಿದೆ. ಮಿಶನರಿಗಳಾದ ಕಿಟ್ಟೆಲ್‌, ಗುಂಡರ್ಟ್ ರಿಟ್ಟರ್‌, ಸಿಕೆಮೇಯರ್‌ ಎಂಬವರುಗಳ ಸಹಕಾರ ಪಡೆಯಲಾಗಿದೆ ಎಂದು ಲೇಖಕರು ಮುನ್ನುಡಿಯಲ್ಲಿ ತಿಳಿಸುತ್ತಾರೆ. ೧೯೭೮ರಲ್ಲಿ ಈ ಕೃತಿಯ ವಿಸ್ತೃತ ಆವೃತ್ತಿ ಪ್ರಕಟಗೊಂಡಿದ್ದು ೧೪೨ ಪುಟಗಳನ್ನೂ ೩೪ ಬೇರೆ ಬೇರೆ ಭಾಷೆಯ ೩೨ ಚಿತ್ರಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ತುಳು ಲಿಪಿಯ ಒಂದು ನಕಾಶೆ ಇದೆ. ಅಲ್ಲದೆ ಮಲಯಾಳಂ ತುಳು ಭಾಷೆಗಳ ವಿವರಗಳಿವೆ ಭಾಷಾವಿಜ್ಞಾನ ಅಭ್ಯಾಸಿಗಳಿಗೆ ಮತ್ತು ತುಳು ಲಿಪಿಯ ಬಗ್ಗೆ ವಿವರ ಇರುವ ಕೃತಿ ಇದಾಗಿದ್ದು ತುಳುಸಾಹಿತ್ಯ ಚರಿತ್ರೆಗೆ ಸೇರುವ ಕೃತಿಯಾಗಿರುತ್ತದೆ.

English, German, canarese,Tulu & Malayalam polygol vocabulary (ಪು. ೧೧೪)

ಕೃತಿಯು ೧೮೮೦ರಲ್ಲಿ ಪ್ರಕಟಗೊಂಡಿದೆ. ಇದರ ಲೇಖಕರು ಯಾರೂ ಎಂಬ ಮಾಹಿತಿ ಲಭ್ಯವಿಲ್ಲದಿದ್ದರೂ ಇದು ಬರ್ನೆಲನ ಕೃತಿಯಾಗಿರಬೇಕೆಂದು ಹೇಳಬಹುದು.

ಸಂಸ್ಕೃತಿ ಸಂಬಂಧಿ ಗ್ರಂಥಗಳು

ಈ ವಿಭಾಗವನ್ನು ಪಾಡ್ದನಗಳು, ಭೂತಾರಾಧನೆ, ಗಾದೆಗಳು ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಬಹುದು.

“ತುಳು ಸಂಸ್ಕೃತಿ ಹಾಗೂ ಚರಿತ್ರೆಯ ವಿಸ್ತೃತವಾದ ತಿಳುವಳಿಕೆ ನಾಂದಿಯಾದದ್ದು ಕಳೆದ ಶತಮಾನದಲ್ಲಿ ಬಾಸೆಲ್‌ ಮಿಶನರಿಗಳು ಕೈಗೊಂಡ ಗುರುತರಕಾರ್ಯಗಳಿಂದ. ಮಿಶನರಿಗಳ ಕೃತಿಗಳು ಈ ವಿಷಯಗಳಿಗೆ ಸಂಬಂಧಿಸಿದಂತೆ ಆಕರ ಗ್ರಂಥಗಳೆನಿಸಿ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಮ್ಯಾನರ್‌ ಮತ್ತು ಬರ್ನೆಲನ ಕೃತಿಗಳು ಲಭ್ಯ ಕೃತಿಗಳಲ್ಲೆ ಅಪೂರ್ವದ್ದು ಬೆಲೆಯುಳ್ಳದ್ದು ಆಗಿದೆಯಲ್ಲದೆ, ಧಾರ್ಮಿಕ ಮತ್ತು ಕಲಾಸ್ವರೂಪಗಳ ವಿಕಾಸ ವ್ಯಾತ್ಯಾಸಗಳ ಕುರಿತದ ಚಾರಿತ್ರಿಕ ಅಧ್ಯಯನಕ್ಕೆ ಬುನಾದಿ ರೇಖೆಗಳಾಗಿವೆ”.[1]

“ಮ್ಯಾನರ್‌ನ ಪಾಡ್ದನ, ಇದು ತುಳು ಪಾಡ್ದನ ಸಂಕಲನದಲ್ಲಿ ಮೊತ್ತಮೊದಲನೆಯದು. ಅಷ್ಟೇ ಅಲ್ಲ ಈವರೆಗೆ ಪ್ರಕಟವಾಗಿರುವವುಗಳಲ್ಲಿ ಸಮರ್ಪಕವಾದ ದೊಡ್ಡದಾದ ಒಂದೇ ಒಂದು ಸಂಕನವೂ ಹೌದು. ಈ ಗ್ರಂಥವು ಪಾಡ್ದಗಳ ಅಧ್ಯಯನ ಮಾಡುವವರಿಗೆ ಸಿದ್ಧವಾಗಿ ಸಂಕಲನ ರೂಪದಲ್ಲಿ ಸಿಗುವ ಅಮೂಲ್ಯ ಆಕರವಾಗಿದೆ”.[2]

ಪಾಡ್ಡನೊಳು (ಪಾಡ್ಡನಗಳು) ಎಂಬ ಕೃತಿಯು ೭೦ ಪುಟಗಳನ್ನು ಹೊಂದಿದ್ದು ಮ್ಯಾನರ್‌ ಸಂಗ್ರಹ ಇದಾಗಿದ್ದು ೧೮೮೬ರಲ್ಲಿ ಪ್ರಕಟಗೊಂಡಿದೆ. ಸಂಗ್ರಾಹಕರು ಮುನ್ನಡಿಯಲ್ಲಿ ಭೂತಾರಾಧನೆಯಲ್ಲಿ ಇಂತಹ ಹಲವಾರು ಕತೆಗಳ ಸಂಗ್ರಹವಿದೆ, ನಮಗೆ ಬೇಕಾಗಿರುವವುಗಳನ್ನು ಮಾತ್ರ ಇಲ್ಲಿ ಸಂಗ್ರಹಿಸಿದ್ದು, ಈ ಸಂಗ್ರಹ ಮಿಶನರಿಗಳ ಉಪಯೋಗಕ್ಕಾಗಿ ಮಾತ್ರವಾಗಿದ್ದು ಮಾರಾಟಕ್ಕಾಗಿ ಅಲ್ಲವೆಂದು ಸ್ಪಷ್ಟವಾಗಿ ವಿಶದಪಡಿಸಿದ್ದಾರೆ. There are many stories of This Kind, but we have selected only these few which we thought in the interest of our purpose. It whom, as before said such information is peculiarly valuble, and not with any intent to give wider publicakion to these stories that we have had them printed and have in hand a small number of coies for sale at cost-price or Missionaries and mission-workers only, strictly prohibiting the loan or sale of such under any circumstances whatever, to the heathen. This collection of stories is never to be handed over to the Book Depository, but must reman entirely the property of Tulu Missionaries as represented by the District President.

ನಿಗದಿತ ಪ್ರತಿಗಳನ್ನು ಮಾತ್ರ ಮುದ್ರಿಸಿದ್ದುದರಿಂದ ಪುಸ್ತಕದ ಮೊದಲ ಪುಟದಲ್ಲಿ Printed as Manuscript ಎಂಬುದಾಗಿ ನಮೂದಿಸಿದ್ದಾರೆ.

ಈ ಕೃತಿಯಲ್ಲಿ ಈ ಕೆಳಗಿನ ಪಾಡ್ಡನಗಳಿವೆ :

ಬೊಬ್ಬರ್ಯ, ಪಂಜುರ್ಲಿ – ೧, ಪಂಜುರ್ಲಿ – ೨, ಜುಮಾದಿ – ೧, ಸಾರಾಳ ಜುಮಾದಿ – ೨ ಜಾರಂತಾಯ , ಕಾಂತುನೆಕ್ರಿ ಭೂತ, ಮಗ್ರಂದಾಯ, ಕಲ್ಕುಡೆ, ಕಲ್ಲುರ್ಟಿ, ಪೊಸ ಭೂತ, ಪೊಸ ಮಹಾರಾಯೆ ಅತ್ತಾವರ ದೈಯೊಂಗುಳು, ಮುಡದೇರ್ ಕಾಳ ಬೈರವೆ, ತೊಡಕಿನಾರ್. ದೇಯಿ ಬೈದೆದಿ, ಕೋಟಿಚೆನ್ನಯೆ -೧, ಕೋಟಿ ಚೆನ್ನಯೆ -೨, ಧುಮಾವತಿ ಭೂತ, ಪಂಜುರ್ಲಿ – ೩, ಎಂಬ ೨೦ ಭೂತಗಳ ಪಾಡ್ದನಗಳ ತುಳುವಿನಲ್ಲಿದ್ದರೆ ಪಿಲಿಚಾಮುಂಡಿ ಎಂಬ ಭೂತದ ಪಾಡ್ದನವು ಇಂಗ್ಲಿಷ್‌ನಲ್ಲಿದೆ.

ತುಳುವೆರೆಡ್‌ನಡಪು ಭೂತ ಸೇವೆ – ೧೮೯೧ ಪು. ೨೪

(ತುಳುವರಲ್ಲಿ ನಡೆಯುವ ಭೂತಸೇವೆ) ಈ ಕೃತಿಯು ಮ್ಯಾನರ್‌ರಚಿಸಿದ್ದು. ಇದರಲ್ಲಿ ಭೂತಾರಾಧನೆಗೆ ಸಂಬಂಧಪಟ್ಟ ಹಲವಾರು ವಿಷಯಗಳನ್ನು ಕಲೆಹಾಕಲಾಗಿದೆ. ಮೊದಲ ‘ಎ’ ವಿಭಾಗದಲ್ಲಿ ಪಿಶಾಚಿ. ಭೂತ, ಪ್ರೇತ, ರಾಹು, ಕುಲೆ, ಗಣ ಇವುಗಳ ಬಗ್ಗೆ ವಿವರಗಳಿವೆ.

ಪಿಶಾಚಿ: ಎಂದರೆ ಮದುವೆ ಆಗದೆ, ಉತ್ತರಕ್ರಿಯೆ ಆಗದೆ ಇರುವ ಕೆಟ್ಟ ಆತ್ಮಗಳು. ಈ ಆತ್ಮಗಳು ರಾಕ್ಷಸರೊಂದಿಗೆ ಸೇರಿರುವುದರಿಂದ ಬ್ರಹ್ಮಪಿಶಾಚಿ, ಬೆರ್ಮ ರಕ್ಕಸ ಎನ್ನುವರು. ಕಾಡು ಪ್ರದೇಶಗಳಲ್ಲಿ, ಗಾಳಿ ಇಲ್ಲವೆ ಬೆಂಕಿಯ ರೂಪದಲ್ಲಿ ತೋರಿಬರುತ್ತವೆ. ಪಿಶಾಚಿಗಳು ಎಂದಿಗೂ ಸದ್ಗತಿ ಹೊಂದುವುದಿಲ್ಲ.

ಭೂತ: ಈಶ್ವರ ದೇವರು ತನ್ನ ಹತ್ತಿರವಿರುವ ಹಲವು ಆತ್ಮಗಳನ್ನು ನೋಡಿಕೊಳ್ಳಲು ಆಗದೆ ನೀವು ಭೂಲೋಕಕ್ಕೆ ಹೋಗಿ ಮನುಷ್ಯರಲ್ಲಿ ಅನ್ನ ಆಹಾರ ತೆಗೆದುಕೊಳ್ಳಿ ಎಂದು ಶಾಪ ಕೊಟ್ಟ. ಆದರೆ ಕೆಲವರು ಲೋಕಸೃಷ್ಟಿಯ ಮೊದಲೇ ರಾವಣ, ಖಡ್ಗರಾವಣ, ಬಹಿರಾವಣ, ರಕ್ತೇಶ್ವರಿ ಇಂತಹ ಭೂತಗಳು ಸೃಷ್ಟಿಯಾಗಿವೆ ಎಂದೂ ಹೇಳುತ್ತಾರೆ. ಹಿಂದೆ ದುಷ್ಟರಾಗಿ ಇದ್ದದ್ದರಿಂದ ಶಿಕ್ಷೆಗೊಳಗಾಗಿ ಭೂತಗಳಾಗಿವೆ ಎಂದೂ ಹೇಳುತ್ತಾರೆ.

ಬಬ್ಬರ್ಯ ಎನ್ನುವವ ಮುಸಲ್ಮಾನ, ಒಬ್ಬನನ್ನು ಕೊಂದ. ಒಬ್ಬ ಅಬ್ಬಗ ದಾರಗ, ನೀಚ ಎನ್ನುವ ಕೊರಗ, ಕಂಬೆರ್ಲು ಎನ್ನುವ ಹರಿಜನ, ಮೈಸಂದಾಯ, ಜಾರಂದಾಯ, ಪಿಲಿಚಂಡಿ, ಧೂಮಾವತಿ, ಜುಮಾದಿ, ಸಾರಾಲ್‌ಜುಮಾದಿ, ಕಾಂತನೆಕ್ರಿ, ಕಲ್ಕುಡೆ, ಮುಂಡದಾಯೆ, ಕಲ್‌ರುಟ್ಟಿ, ತೊಡಕಿನಾರ್‌, ಭೂತಗಳು ಹೆಚ್ಚಾಗಿ ಮನುಷ್ಯರಿಗೆ ಕಣ್ಣಿಗೆ ಕಾಣದೆ ವಿಧ ವಿಧವಾದ ರೋಗ ರುಜಿನಗಳನ್ನು ಕೊಟ್ಟು ತಮಗೆ ಅನ್ನ ಆಹಾರಗಳನ್ನು ತೆಗೆದುಕೊಳ್ಳಬೇಕಲ್ಲದೆ ಯಾರನ್ನೂ ಕೊಲ್ಲಬಾರದು. ಪಂಜುರ್ಲಿ ಮಾತ್ರ ಇನ್ನು ೧೨ ವರ್ಷ ಆಯುಷ್ಯ ಇರುವವನನ್ನು ಕೊಲ್ಲಬಹುದಂತೆ. ಇದಕ್ಕೂ ಸದ್ಗತಿ ಇಲ್ಲವೆಂದು ಹೇಳುತ್ತಾರೆ.

ಪ್ರೇತ: ಪ್ರ+ಇತ ಅಂದರೆ ಮುಂದೆ ಹೋದವರು ಎಂಬ ಅರ್ಥವಿದೆ. ಆದರೆ ಇಲ್ಲಿ ಪ್ರೇತ ಎನ್ನುವುದಕ್ಕೆ ಆಯುಷ್ಯ ಮುಗಿಯದೆ ಮರಣ ಹೊಂದಿದ್ದು ಎನ್ನುವ ಅರ್ಥ ಆಗುತ್ತದೆ. ಕಾಲ ಬರುವುದಕ್ಕಿಂತ ಮೊದಲೇ ನೀರಿಗೆ ಬಿದ್ದು, ಹಾವು ಕಚ್ಚಿ, ಹುಲಿ ತಿಂದು, ನೇಣು ಹಾಕಿಕೊಂಡು, ದೋಣಿ ಮುಳುಗಿ, ಕಳ್ಳರ ಕೈಗೆ ಸಿಕ್ಕಿ ಹೀಗೆ ಸತ್ತವರ ಆತ್ಮಗಳಿಗೆ ಪ್ರೇತ ಎನ್ನುತ್ತಾರೆ. ಇವರು ಸತ್ತು ೧೧ ದಿನ ಆದ ಮೇಲೆ ಉತ್ತರಕ್ರಿಯೆ, ವೈಕುಂಠ ಸಮಾರಾಧನೆ ಆಗದಿದ್ದರೆ ಪ್ರೇತತ್ವವನ್ನು ಪಡೆದುಕೊಳ್ಳುವುದಂತೆ. ಹಾಗಾಗಿ ಈ ಪ್ರೇತಗಳು ಅಕಾಲ ಮೃತ್ಯುವಿನಿಂದ ಸತ್ತವರ ಸಂಗಡ ಸೇರುವವರೆಗೆ ಭೂತಗಳು ಅವುಗಳನ್ನು ಹಿಡಿದುಕೊಂಡು ಭೂಲೋಕದಿಂದ ಹೊರಡಲು ಬಿಡದೆ ಅವುಗಳ ಮುಖಾಂತ್ರ ಮನುಷ್ಯರಿಗೆ ಉಪದ್ರ ಕೊಡುವುದಂತೆ. ಆದರೆ ಪ್ರೇತಗಳಿಗೆ ಪ್ರೇತತ್ವ ಪರಿಹಾರ ಆದರೆ ಅವುಗಳು ಯಮದೂತರ ಎದುರು ವಿಚಾರಣೆ ಆಗಿ ಒಳ್ಳೆಯದಾದರೆ ಸ್ವರ್ಗಕ್ಕೆ, ಕೆಟ್ಟದಾಗಿದ್ದರೆ ನರಕಲೋಕಕ್ಕೆ ಹೋಗುತ್ತವೆ ಎನ್ನುವರು. ಇದಲ್ಲದೆ ಒಬ್ಬ ಸತ್ತರೆ ಅಂದಿನಿಂದ ೧೦ ದಿನಗಳವರೆಗೆ ಸತ್ತವನ ಮಗ ಮಾಡಬೇಕಾಗಿರುವ ಕ್ರಿಯೆಗಳಲ್ಲಿ ಉಂಟಾಗುವ ರೂಪಕ್ಕೆ ಪ್ರೇತ ಎನ್ನುವರು. ಮುಂದಕ್ಕೆ ಪಿಂಡ ಇಡುವ ಕ್ರಮಗಳ ಪಟ್ಟಿಯು ಈ ಕ್ರಮದಲ್ಲಿದೆ.

ಒಂದನೇ ದಿನ-ತಲೆ, ಎರಡನೇ ದಿನ – ಕುತ್ತಿಗೆ, ಮೂರನೇ ದಿನ – ಹೃದಯ, ನಾಲ್ಕನೇ ದಿನ – ಬೆನ್ನು, ಐದನೇ ದಿನ – ನಾಭಿ, ಆರನೇ ದಿನ – ಮನಸ್ಥಾನ, ಏಳನೇ ದಿನ – ಅದರ ರಂಧ್ರ, ಎಂಟನೇ ದಿನ – ತೊಡೆ, ಒಂಬತ್ತನೇ ದಿನ – ಪಾದ, ಹತ್ತನೇ ದಿನ-ಜೀವಾತ್ಮ

ಪ್ರೇತಗಳು ಮನುಷ್ಯರಿಗೆ ಹೆಚ್ಚು ಉಪದ್ರವ ಕೊಡುವುದಿಲ್ಲವಾದರೂ ಹೆಚ್ಚಾಗಿ ಹೆಣ್ಣುಮಕ್ಕಳ ಒಳಗೆ ಹೊಕ್ಕು ತಮ್ಮ ಅಪೇಕ್ಷೆಗಳನ್ನು ಹೇಳಿಸಿಕೊಳ್ಳುವುದಂತೆ. ಅವುಗಳು ಕೇಳಿದ್ದನ್ನು ಕೊಟ್ಟುಬಿಟ್ಟರೆ ಬಿಟ್ಟುಹೋಗುತ್ತವೆ ಮತ್ತು ಕೊಟ್ಟ ಆಹಾರವನ್ನು ಪ್ರೇತ ಹಿಡಿದವಳು. ತಿನ್ನುವಳು. ಕೆಲವೊಮ್ಮೆ ಪರಭಾಷೆ ತಿಳಿಯದ ಹೆಣ್ಣುಗಳ ಒಳಗೆ ಹೊಕ್ಕು ಪರಭಾಷೆಯನ್ನು ಮಾಡುತ್ತದೆ. ಓದಲು ತಿಳಿಯದವರು ಓದುವುದು ಹೊಕ್ಕು ಪರಭಾಷೆಯನ್ನು ಮಾತಾಡುತ್ತದೆ. ಓದಲು ತಿಳಿಯದವರು ಓದುವುದು ಸಹಾ ಉಂಟಂತೆ.

ಕುಲೆ: ಪ್ರೇತಕ್ಕೆ ತುಳುವಿನಲ್ಲಿ ಕುಲೆ ಎನ್ನುವರು. ಆದರೆ ಪ್ರೇತ ಎನ್ನುವುದು ಬ್ರಾಹ್ಮಣ, ಕೊಂಕಣರು, ಇಂತಹ ಕುಲದವರು ಸತ್ತ ಆತ್ಮಗಳು ಅವುಗಳಿಗೆ ಅನ್ನ, ಅರಳು, ಸೀಯಾಳ, ಹಣ್ಣು, ತುಪ್ಪ, ಹಾಲು, ಸಕ್ಕರೆ ಬೇಕಾಗುವುದಂತೆ. ಆದರೆ ಶೂದ್ರರು ಸತ್ತರೆ ಅವುಗಳಿಗೆ ಕುಲೆ ಎನ್ನುತ್ತಾರೆ. ಇವುಗಳಿಗೆ ಅನ್ನ, ಮೀನು, ಕೋಳಿ, ಶರಾಯಿ ಆಗುತ್ತದೆ. ಹಲವು ಮಂದಿ ಕುಲೆ ಹಿಡಿದವರು ಕೋಳಿಯ ನೆತ್ತರನ್ನೂ ಕುಡಿಯುತ್ತಾರೆ.

ರಾವು ಎನ್ನುವುದಕ್ಕೆ ಗರುತು ನೆರಳು, ಗಾಳಿ ಎಂದು ಹೇಳುತ್ತಾರೆ. ಆಕಾಶದಲ್ಲಿ ಭೂತಗಳು ಸಂಚಾರ ಮಾಡುವಾಗ ಭೂಮಿಗೆ ತೋರುವ ನೆರಳಿಗೆ ರಾವು ಎನ್ನುತ್ತಾರೆ. ಹಲವು ಮಂದಿ ಒಂಬತ್ತು ನಕ್ಷತ್ರಗಳಲ್ಲಿ (ನವಗ್ರಹ) ಒಂದಾಗಿರುವ ರಾಹು ನಕ್ಷತ್ರ ಎಂದೂ ಹೇಳುತ್ತಾರೆ. ಇನ್ನು ಕೆಲವು ಮಂದಿ ಮಾಟ ಮಂತ್ರದಲ್ಲಿ ಸತ್ತ ಆತ್ಮಗಳು ಎಂದೂ ಹೇಳುತ್ತಾರೆ. ಆದರೆ ತುಳು ಜನರು ಹೇಳುವ ರಾವು ಎನ್ನುವ ಶಬ್ದಕ್ಕೆ ಬಹಳಹಂಗು, ಆಸೆ ಎನ್ನುವುದನ್ನು ನೋಡುವಾಗ, ತಿಂದಷ್ಟೂ ಸಾಕಾಗದ ಭೂತಗಳು ಇದ್ದಾವೆ ಎನ್ನುವುದನ್ನು ತೋರಿಸಿದ ಹಾಗಾಯಿತು.

ಗಣ ಅಥವಾ ಭೂತಗಣ ಎಂದರೆ ಗುಂಪು, ಪಂಗಡ ಎನ್ನುವ ಅರ್ಥ ಬರುತ್ತದೆ. ಶಿವನು ತನ್ನ ಜಡೆಯನ್ನು ಕಟ್ಟಿ ಕೂದಲನ್ನು ಜಾಡಿಸುವಾಗ ೩೨ ಸಾವಿರ ಗಣಗಳನ್ನು ಸೃಷ್ಟಿ ಮಾಡಿ ಗಣಪತಿ ಎನ್ನುವವನ ಬಳಿ ಇಟ್ಟ. ಅದರಲ್ಲಿ ವೀರಭದ್ರ, ಭೈರವ, ಮಾರಿ ಎನ್ನುವ ಹೆಸರಿನವರೂ ಇದ್ದಾರಂತೆ. ಈ ಗಣಗಳು ಹೆಚ್ಚಾಗಿ ಯುದ್ಧದ ಸ್ಥಳದಲ್ಲಿ, ಸನ್ನಿ ಮೈಲಿಗೆಯವರಲ್ಲಿ, ಸತ್ತವರನ್ನು ಹೂಳುವಲ್ಲಿ, ಸುಡುಗಾಡಿನಲ್ಲಿ ಇದ್ದು ಅಲ್ಲಿ ಮನುಷ್ಯರ ಹೆಣಗಳನ್ನು ತಿನ್ನುವುದಂತೆ. ಜನರು ಹೆಚ್ಚಾಗಿ ಮಾರಿಗೆ ಹೆದರಿ ಅದಕ್ಕೆ ಪೂಜೆ ಮಾಡುತ್ತಾರೆ. ಯಾಕೆಂದರೆ ಅವುಗಳು ಹೆಚ್ಚಾಗಿ ಮನುಷ್ಯರಿಗೆ ಉಪದ್ರವ ಕೊಡುತ್ತವೆ ಎಂದು. ಅದಕ್ಕೆ ಹೆಚ್ಚು ಮಂದಿ ಹೆದರುತ್ತಾರೆ. ಈಗ ಗಣಗಳಲ್ಲಿ ಪ್ರಥಮ ಗಣ, ಪರಿವಾರ ಗಣ ಎನ್ನುವ ಎರಡು ಪಾಲು ಮಾಡುತ್ತಾರೆ.

ಬಿ ವಿಭಾಗದಲ್ಲಿ ಗರಡಿ, ಭೂತಸ್ಥಾನ, ಭೂತ ಕೊಟ್ಟ, ಬೆರ್ಮಸ್ಥಾನ – ಇವುಗಳನ್ನು ಹೇಗೆ ಕಟ್ಟಬೇಕು, ಉದ್ದ ಅಳತೆ, ಹತ್ತಿರ ಕೊಳ ಇರಬೇಕು, ಹಿಂದೆ ಮುಂದೆ ಯಾವ ಮರ ಇರಬೇಕು, ಕೋಣೆಗಳೆಷ್ಟಿರಬೇಕು ಎನ್ನುವ ವಿವರಗಳಿವೆ.

ಸಿ ವಿಭಾಗದಲ್ಲಿ ಕೋಲ, ನೇಮ, ಅಗೆಲ್‌, ತಂಬಿಲ, ಬಂಡಿ, ಅಯನ, ಕೋಲದ ಸಮಯ, ಕೋಲ ನಡೆಯುವ ಸ್ಥಳ, ಚಪ್ಪರ, ಕೋಲದ ಜನ, ಕೋಲ ಕೊಟ್ಟವರು ಇತ್ಯಾದಿ ವಿವರಗಳಿವೆ.

ಡಿ ವಿಭಾಗದಲ್ಲಿ ಕೋಲದ ವಿವಿಧ ಬಗೆಗಳು, ಬಾಳ್‌ಭಂಡಾರ ಇಳಿಸುವುದು, ಮಂಡಲ ಹಾಕುವುದು, ಭೂತದ ಪಾಡ್ದನ ಹೇಳುವುದು, ನುಡಿ, ಪ್ರಸಾದ ಕೊಡುವುದು, ಕೋಲದ ಅಂತ್ಯ, ಕಟ್ಟೆ-ಕಟ್ಟೆಯಲ್ಲಿ ನಡೆಯುವ ಪೂಜೆ, ಕೋಲ ಕಟ್ಟುವ ಕಾರಣ ಇವುಗಳೆಲ್ಲ ಇವೆ.

ನಂತರದ ಅಧ್ಯಾಯಗಳಲ್ಲಿ ಅಗೆಲ್‌, ಅಗೆಲ್‌ನ ಸಮಯ, ಅಗೆಲ್‌ ಸಂದಾಯ, ಅಗೆಲ್‌ನ ಜನ, ಅಗೆಲ್‌ ಬಳಸುವುದು, ಅಗೆಲ್‌ನ ಹೆಚ್ಚು ಕಡಿಮೆ, ತುಂಬಿಲ, ನಾಗತಂಬಿಲ, ಭೂತ ತಂಬಿಲ ವಿಷಯಗಳಲ್ಲಿ ಬೆರ್ಮ ತಂಬಿಲಕ್ಕೆ ಸುತ್ತೆ, ಗಜ್ಜಾಯ, ಹೂ, ನಂದಿಗೋಣನಿಗೆ ಬೇಯಿಸಿದ ಹುರುಳಿ, ಬಬ್ಬರ್ಯನಿಗೆ ಕಡುಬು, ಶೇಂದಿ, ಮೈಸಂದಾಯನಿಗೆ ಹಾಲು ತುಪ್ಪ, ತಂಬಿಲದ ಸ್ಥಳ, ತಂಬಿಲ ಕೊಡುವ ಕಾರಣ ಇವುಗಳ ವಿವರ ಇದೆ. ಕೊನೆಯಲ್ಲಿ ಬಂಡಿ ಉತ್ಪತ್ತಿ ಮಾಡುವ ಕಥೆ, ಆಯನ ಇವುಗಳ ವಿವರಗಳೂ ಇವೆ. ಭೂತಾರಾಧನೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಕಲೆಹಾಕಿ ಸಿದ್ಧಪಡಿಸಿದ ಮೊದಲ ವಿಶೇಷ ತುಳುಕೃತಿ ಇದಾಗಿದೆ.

ಕನ್ನಡದಲ್ಲಿ ಭೂತಾರಾಯಧನೆಯ ಸಾಹಿತ್ಯ

ಭೂತ ವಿದ್ಯೆಯ (ಸಂಭಾಷಣೆಗಳಲ್ಲಿ ವಿವರಿಸಿದ್ದು) (On Demons) ಮೊದಲ ಆವೃತ್ತಿ ೧೮೬೭ ಪುಟ ೧೧೭, ಎರಡನೆಯದು ೧೯೧೨, ಪುಟ ೧೨೬) ಎಂಬ ಕೃತಿಯೊಂದು ಪ್ರಕಟಿಸಲ್ಪಟ್ಟಿದ್ದು ಮ್ಯಾನರ್‌ ಎಂಬುವವರೇ ಲೇಖಕರೆಂದು ಹೇಳಬಹುದು ಅಥವಾ ಬರ್ನೆಲನಂಥ ಪಾಶ್ಚಾತ್ಯ ವಿದ್ವಾಂಸನ ಕತಿ ಇದಾಗಿದೆ ಎಂದು ಹೇಳಬಹುದು. (ಇದಕ್ಕೆ ಯಾವ ಆಧಾರಗಳೂ ಇಲ್ಲ). ಈ ಕೃತಿಯು ಪಾದ್ರಿ, ರಾಮಶೆಟ್ಟಿ, ಪಾಟಾಳಿ ಪೂಜಾರಿ, ಚಂದ್ರಾಚಾರಿ, ಪುಟ್ಟಣ್ಣಾಚಾರಿ ಎಂಬ ಹೆಸರಿನವರೊಂದಿಗೆ ನಡೆದ ಸಂಭಾಷಣೆಯ ರೂಪದಲ್ಲಿದೆ. ೧ ಭೂತವೆಂದರೇನು ೨. ಭೂತಗಳ ಉಪದ್ರವ ೩. ಭೂತಗಳ ಉಪದ್ರವಗಳಿಗೆ ಪರಿಹಾರ ಮಾರ್ಗವು ಈ ಮೂರನೇ ವಿಭಾಗದಲ್ಲಿದ್ದು, ಸುಮಾರು ೧೨೬ ಪುಟಗಳಷ್ಟಿರುವ ಈ ಕೃತಿಯು ಭೂತಾರಾಧನೆಯ ಬಗ್ಗೆ ಸಿಗುವ ಮೊಟ್ಟಮೊದಲ ದೊಡ್ಡ ಕನ್ನಡ ಭಾಷೆಯಲ್ಲಿರುವ ಪುಸ್ತಕವಾಗಿದೆ ಎನ್ನುವುದಕ್ಕೆ ಸಂಶಯವೇ ಇಲ್ಲ.

ಭೂತವೆಂದರೇನು ಎಂಬ ಭಾಗದಲ್ಲಿ ಸಂಭಾಷಣೆ ಹೀಗೆ ಆರಂಭವಾಗುತ್ತದೆ:

ಒಬ್ಬ ಪಾದ್ರಿ ದೊರೆ ಹೋದ ಮಳೆಗಾಲದಲ್ಲಿ ಪೂರ್ವದ ದಿಕ್ಕಿನಲ್ಲಿ ಒಂದು ಊರಿಗೆ ಹೋಗುವಾಗ ಮಳೆ ಬಂತು. ಅದಕ್ಕಾಗಿ ದಾರಿಯಲ್ಲಿರುವ ಒಂದು ಅಂಗಡಿಯಲ್ಲಿ ಕೂತರು. ಆ ಅಂಗಡಿಯ ಹತ್ತಿರ ಒಂದು ನಾಗಕಲ್ಲು ಇಟ್ಟಿದೆ. ಅಂಗಡಿಯವನಾಗಿರುವ ರಾಮಶೆಟ್ಟಿಯೂ, ಕೃಷ್ಣರಾಯನೆಂಬ ಬ್ರಾಹ್ಮಣನೂ ಊರಿನ ಭೂತಸ್ಥಾನದಲ್ಲಿ ಕುಣಿದಾಡುವ ಪಾಟಾಳಿ ಪೂಜಾರಿಯೂ ಇದ್ದು ಮಾತಾಡುವವರಾಗಿ ಸಿಕ್ಕಿದರು. ಪಾದ್ರಿ ದೊರೆ ಬರುವುದನ್ನೇ ನೋಡಿ ನಗಾಡಿ, ಚಾಪೆ ಹಾಕಿ ಕೂತುಕೊಳ್ಳಿರಿ ಎಂದು ಹೇಳಿ ‘ನಮ್ಮ ಊರಿಗೆ ಏನು ಬಂದಿರಿ?’ ಎಂದು ಕೇಳಿದಾಗ ನಿಮ್ಮ ಕ್ಷೇಮ ಸಮಾಚಾರಕ್ಕಾಗಿ ಬಂದೆನೆಂದು ಹೇಳಿದರು.

ರಾಮಶೆಟ್ಟಿಯು: ನಮ್ಮ ಕ್ಷೇಮ ನಿಮಗೇನು?

ಪಾಟಾಳಿ ಪೂಜಾರಿಯು: ಅಹಹ. ಇವರು ಅದರ ವಿಷಯ ಚಿಂತಿಸುವುದು ನಿಶ್ಚಯವೇ. ಯಾವ ಸಂಕಟದವನಾದರೂ ಅವರ ಹತ್ತಿರ ಬಂದು ಮದ್ದು ಕೇಳಿದರೆ ಉಚಿತವಾಗಿ ಎಲ್ಲರಿಗೆ ಕೊಡುತ್ತಾರೆ. ಅನೇಕರಿಗೆ ಗುಣವಾಯಿತು.

ಪಾದ್ರಿ : ಹೌದು. ನಾವು ಕೂಡುವಷ್ಟು ಪ್ರಯತ್ನ ಮಾಡಿ ನಿಮ್ಮ ಊರುಗಳಿಗೆ ಬಂದು ನಿಮ್ಮನ್ನು ನೋಡಿ ನಿಮ್ಮಲ್ಲಿರುವ ಸಂಕಟದವರಿಗೆ ತಿಳಿಯುವಷ್ಟು ಔಷಧ ಕೊಟ್ಟು ದೇವರ ಸಹಾಯದಿಂದ ನಿಮಗೆ ಗುಣವಾಗುವ ಹಾಗೆಯೂ ವಿಶೇಷವಾಗಿ ಎಲ್ಲಾ ರೋಗಗಳ ಕಾರಣವಾಗಿರುವ ಪಾಪದಿಂದಲೂ, ಸೈತಾನನಿಂದಲೂ ನಿಮಗೆ ಬಿಡುಗಡೆ ಆಗುವ ಮಾರ್ಗವನ್ನು ತಿಳಿಸುವ ಹಾಗೆಯೂ, ಚಿಂತಿಸಿ ಪ್ರಾರ್ಥನೆ ಮಾಡುತ್ತಾ ಇದ್ದೇವೆ.

ಅಷ್ಟರವರೆಗೆ ಏನೂ ಮಾತಾಡದ ಕೃಷ್ಣರಾಯರು ಈಗ ಮಾತಾಡಿದ್ದು ನಿಮ್ಮನ್ನು ಯಾರು ಕಳುಹಿಸಿದರು? ನೀವು ಸರ್ಕಾರಿಯವರಾಗಿದ್ದು ನಮಗಿರುವ ಈ ಉದ್ಯೋಗಕ್ಕಾಗಿ ಒಳ್ಳೆ ಸಂಬಳ ತಿಂದು ಈ ಪ್ರಕಾರ ಮಾಡಿ, ಜಾತಿ ಕೆಡಿಸುತ್ತಿರಲ್ಲವೋ? ಸಿಟ್ಟು ಮಾಡಬೇರಿಸಿ, ಹಾಗೆ ಹೇಳುತ್ತಾರಪ್ಪ.

ಪಾದ್ರಿ: ನಾವು ಸರ್ಕಾರದವರಲ್ಲ. ಭೂಪರಲೋಕಗಳಲ್ಲಿ ಮತಪ್ರಚಾರ ಮಾಡಲು ಸಮಸ್ತ ಅಧಿಕಾರವು ನಮಗೆ ಕೊಡಲ್ಪಟ್ಟಿದೆ. ಆದುದರಿಂದ ನೀವು ಲೋಕದ ಕಟ್ಟ ಕಡೆಯವರೆಗೆ ಹೋಗಿ ದೇವರ ವಾಕ್ಯವನ್ನು ಸಾರಿರಿ ಎಂಬ ದೇವರ ಆಜ್ಞೆಯ ಪ್ರಕಾರ ಬಂದು ನಮ್ಮ ದಿನದ ಖರ್ಚಿಗೆ ತಕ್ಕಷ್ಟು ಹೊಂದುವದಲ್ಲದೆ ಏನೂ ಸಂಬಳ ತೆಗೆದುಕೊಳ್ಳುವವರಲ್ಲ.

ಅವರು ನಂಬಲಿಕ್ಕೆ ಸ್ವಲ್ಪ ಮೆಲ್ಲಗೆ ಮಾಡಿದ್ದಾಗ್ಯೂ ಕಡೆಗೆ ‘ನೀವು ಸುಳ್ಳು ಹೇಳುವವರಲ್ಲವೆಂದು ನಾವು ಬಲ್ಲೆವು’ ಅಂದರು. ಅಷ್ಟೊರಳಗೆ ಪಾದ್ರಿ ಎದ್ದು ಹೊರಗೆ ನೋಡಿದರು. ಬಹಳ ಮಳೆ ಬಂದುದರಿಂದ ರಾಮ ಶೆಟ್ಟಿಯು ಈಗ ಹೋಗಲಾಗದು ಈ ಹೊತ್ತು ಇಲ್ಲಿ ಕೂತುಕೊಳ್ಳಿರಿ ಎಂದು ಹೇಳುವಾಗ

ಪಾದ್ರಿ : ಅಪ್ಪಣೆ ಇದ್ದರೆ ಹ್ಯಾಗೂ ಮಳೆ ಹೋಗುವ ಪರಿಯಂತ ಇಲ್ಲಿ ಕೂತುಕೊಳ್ಳುತ್ತೇನೆ.

ಪಾದ್ರಿಯು ಪಾಟಾಳಿ ಪೂಜಾರಿಗೆ: ನೀವು ಕುಣಿದಾಡಿಸುವಂಥ ಭೂತಸ್ಥಾನ ಎಲ್ಲಿ? ಎಂದು ಹೇಳಿದರು.

ಪಾಟಾಳಿ ಪೂಜಾರಿ : ಅದು ದೂರದಲ್ಲಿ ಅದೆ ಎಂದು ಬೆರಳಿನಿಂದ ತೋರಿಸಿ ಅದರ ಭೂತಗಳ ಹೆಸರುಗಳನ್ನು ಹೇಳಿದನು.

ಪಾದ್ರಿ : ಹೌದು ಇಂತಹವುಗಳಿಗೆ ನೀವು ಹೆದರಿ ಸೇವೆ ಮಾಡಿ ಪೂಜಿಸುತ್ತೀರಿ. ಆದರೆ ನಮ್ಮೆಲ್ರನ್ನುಂಟುಮಾಡಿದ ಒಬ್ಬನಾಗಿರುವ ಜೀವವುಳ್ಳ ದೇವರಿಗೆ ಭಯಪಟ್ಟು ನಂಬುವುದಿಲ್ಲವಲ್ಲ; ನೋಡಿರಿ ಅದರಿಂದಲೇ ನಿಮಗೆ ಮೋಸ ಬರುತ್ತದೆ…

ರಾಮಶೆಟ್ಟಿ : ನಿಮ್ಮ ಹತ್ತಿರ ಯಾರಾದರೂ ಬಂದು ನಿಮ್ಮ ಸಂಗಡ ಮಾತಾಡಲಿಕ್ಕೆ ನೋಡಿದರೆ ಮೊದಲು ನಿಮ್ಮ ಚಾಕರಿಯವರನ್ನು ಹಿಡಿದು ಬಾಗಿಲು ಸಿಕ್ಕುವ ಹಾಗೆ ನೋಡುತ್ತಾರೆ. ಒಂದೊಂದು ಸಾರಿ ಅವರಿಗೆ ಲಂಚ ಸಹಾ ಕೊಡುತ್ತಾರೆ. ಆಗಲವರ ಕಾರ್ಯವು ಬೇಗ ನಡೆಯುತ್ತದಲ್ಲ. ಅದೇ ಪ್ರಕಾರ ನೆಟ್ಟಗೆ ದೇವರ ಹತ್ತಿರ ಹೋಗಲಿಕ್ಕೆ ನಮ್ಮಿಂದ ಆಗುವುದಿಲ್ಲ. ಸ್ವಾಮಿ ದೇವರೇ ಎಂದು ಕರೆಯುತ್ತೇವೆ ಹೊರ್ತು ನಮಗೆ ನೋಡಲಿಕ್ಕೆ ಸಿಕ್ಕುವುದಿಲ್ಲ. ಅದಕ್ಕಾಗಿ ದೇವರ ಚಾಕ್ರಿಯವರಾಗಿರುವ ಈ ಭೂತಗಳನ್ನು ಹಿಡಿದು ಲಂಚ ಕೊಡುವಾಗ ನಮ್ಮ ಕಾರ್ಯವು ನಡೆಯುತ್ತದೆ.

ಪಾದ್ರಿ: ಕೃತ್ರಿಮ ಕೆಲಸಗಳೂ ಮಂತ್ರವಾದಗಳೂ ಬಹಳ ನಡೆದು ದೋಷವೂ, ದ್ರೋಹವೂ ಹೆಚ್ಚಾಗುತ್ತಾ ಬಂದದ್ದರಿಂದ ಸೈತಾನನ ತಂತ್ರವೂ ಬಲವೂ ಅವಲಂಬಿಸಿತೆಂದು ನೆನೆಸತಕ್ಕದ್ದು.

ಕೃಷ್ಣರಾಯ: ಇದು ಸತ್ಯವೇ. ಅದೇ ಪ್ರಕಾರ ದಾಸರ ಪದಗಳಲ್ಲಿ ಹೇಳಿರುವುದೇನೆಂದರೆ,

ಆರಾರ ಪಡೆದು ತಿರುದುಂಬುದಕ್ಕಿಂತ
ಕಾಡ ದೆವ್ವಗಳನ್ನು ಚಿನ್ನ ಬೆಳ್ಳಿಗಳಿಂದಂ
ಮಾಡಿ ಕೊಂಡದ ಪೂಜೆಯನು ಮಾಡಿ
ಕಾಡು ಕಳ್ಳರು ಬಂದು ಅವುಗಳನ್ನು ಕೊಂಡೊಯ್ಯೆ
ಮಾಡಿಕೊಂಡಿರ್ದುದಕೆ ಬಾಯ ಬಡಕೊಳ್ಳುವಿ
ಯಾತಕೆ ಮರುಳಾದೆಯೋ ಮನವೇ ಯಾತಕ್ಕೆ ಮರುಳಾದೆ
ಕಾಕು ದೈವವ ನಂಬಿ, ಕಾತರಪಟ್ಟು ನೀತಿಮಾರ್ಗವ ಬಿಟ್ಟು
ಮಾರಿಯೂ ಮಸಣಿಯೂ ಕಾಯ್ವದೇ

ತುಳು ದೇಶದಲ್ಲಿ ಕುಡುಮಂದಾಯನೆಂಬ ಭೂತಕ್ಕೆ ಕಾಶಿಯಲ್ಲಿ ಖಡ್ಗ ಭೈರವನೂ, ಗಂಗ ಕುಮಾರನೂ ಎಂಬ ಹೆಸರುಂಟು. ಜಾರಂದಾಯನಿಗೆ ಕಾಶಿಯಲ್ಲಿ ನೀಲಕಂಠನೂ, ಕಾಲಭೈರವನೂ ಎಂಬ ಹೆಸರುಗಳಿವೆ. ಜುಮಾದಿ ಎಂಬುವವನಿಗೆ ತಿರುಪತಿಯಲ್ಲಿ ಕೆಂಜುರಾಯನೆಂದು ಹೇಳುತ್ತಾರೆ. ಮನುಷ್ಯರಿಗೂ, ಭೂತಗಳಿಗೂ ಇರುವ ಸಂಬಂಧ, ಹರಕೆ, ಆಚರಣೆ – ಹೀಗೆ ಹಲವಾರು ವಿಷಯಗಳಲ್ಲಿ ಸಂಭಾಷಣೆ ಮುಂದುವರಿಯುತ್ತದೆ. ದೀರ್ಘ ಸಂಭಾಷಣೆ ರೂಪದಲ್ಲಿರುವ ಈ ಕೃತಿಯು ಕ್ರೈಸ್ತ ಮತ ಪ್ರಚಾರದ ಉದ್ದೇಶದಿಂದ ತಯಾರಿಸಲ್ಪಟ್ಟಿದ್ದರೆಂದು ತಿಳಿಯುತ್ತದೆ. ಯಾವುದೇ ಉದ್ದೇಶದಿಂದ ತಯಾರಿಸಲ್ಪಟ್ಟಿದ್ದೆಂದು ತಿಳಿಯುತ್ತದೆ. ಯಾವುದೇ ಉದ್ದೇಶದಿಂದ ಈ ಕೃತಿ ರಚಿತವಾಗಿದ್ದರೂ ಭೂತಾರಾಧನೆಯ ಬಗ್ಗೆ ತಿಳಿದುಕೊಳ್ಳಲು ಮಾಡಿದ ಕೃತಿ ಇದಾಗಿದೆ ಎಂದು ಸ್ಪಷ್ಟವಾಗುತ್ತದೆ. ಏನೇ ಇರಲಿ, ಈ ಕೃತಿಯು ಭೂತಾರಾಧನೆಯ ಬಗ್ಗೆ ಕನ್ನಡದಲ್ಲಿ ಬರೆದ ಮೊದಲ ಕೃತಿಯಾಗಿದ್ದು ಸಂಶೋಧನೆಗೆ ಒಂದು ಆಕರವಾಗಿರುತ್ತದೆ ಎನ್ನುವುದಕ್ಕೆ ಸಂಶಯವೇ ಇಲ್ಲ.

ಇಂಗ್ಲಿಷ್‌ನಲ್ಲಿ ಪ್ರಕಟವಾದ ಭೂತಾರಾಧನೆಯ ಕೃತಿಗಳು

Devil Worship of the Tuluvas
By A. C. Burnell

ಈ ಗ್ರಂಥವು ಮಂಗಳೂರಿನ ಬಾಸೆಲ್‌ಮಿಶನ್‌ಪ್ರೆಸ್‌ನಲ್ಲಿ ಪ್ರಕಟಗೊಂಡಿದ್ದು ನಂತರ ಅದನ್ನು Indian Antiquary ಎಂಬ ನಿಯತಕಾಲಿಕೆಯಲ್ಲಿ ೧೮೯೪-೧೮೯೭ ತನಕ ಪ್ರಕಟಿಸಲಾಗಿದೆ. ಮ್ಯಾನರರ ಷಾಡ್ದನ ಸಂಗ್ರಹದ ನಂತರ ಭೂತಾರಾಧನೆಯ ಬಗ್ಗೆ ಇಂಗ್ಲಿಷ್‌ನಲ್ಲಿ ಪ್ರಕಟವಾದ ಮಹತ್ತರ ಕೃತಿ ಇದಾಗಿದೆ. ಈ ಕೃತಿಯ ಸಂಶೋಧನ ಪ್ರಬಂಧಗಳ ಮಾಲಿಕೆಯು ಮೂಲಭೂತವಾಗಿ ಪಾಡ್ದನಗಳ ಒಂದು ಸಂಕಲನವಾಗಿದೆ. ಇದರಲ್ಲಿ ೨೬ ಭೂತಗಳ ಪಾಡ್ದನಗಳನ್ನು ಇಂಗ್ಲಿಷ್‌ನಲ್ಲಿ ಕೊಡಲಾಗಿದೆ. ಕೆಲವು ಪಾಡ್ದನಗಳ ತುಳು ಮೂಲವನ್ನು ರೋಮನ್‌ಲಿಪಿಯಲ್ಲಿ ಬರೆದು ಅವುಗಳ ಇಂಗ್ಲಿಷ್‌ಅನುವಾದವನ್ನು ಕೊಡಲಾಗಿದೆ. ಆರ್‌. ಸಿ. ಟೆಂಪಲ್‌ರವರು ತನ್ನ ಪ್ರಸ್ತಾವನೆಯಲ್ಲಿ ಭೂತಾರಾಧನೆಯ ಕುರಿತಂತೆ ಕೆಲವು ಮಾತುಗಳನ್ನು ಹೇಳಿದ್ದಾರೆ. ಭೂತಾರಾಧನೆಯ ದೃಷ್ಟಿಯಲ್ಲಿ ಈ ಕೃತಿಯ ಪ್ರಾರಂಭದ ಕೆಲವು ಅಧ್ಯಾಯಗಳು ಬಹಳ ಮೌಲಿಕವಾಗಿವೆ.

ಮ್ಯಾನರ್‌ರವರು ತಯಾರಿಸಿದ ೧೩೩ ಭೂತಗಳ ಹೆಸರುಗಳು, ಭೂತಗಳ ಉಗಮಕ್ಕೆ ಸಂಬಂಧಿಸಿದ ಪಾಡ್ದನವೊಂದರ ತುಳು ಮೂಲ ಮತ್ತು ಇಂಗ್ಲಿಷ್‌ಅನುವಾದವನ್ನೊಳಗೊಂಡ ಅಧ್ಯಾಯವಿದೆ. ಈ ಅಧ್ಯಾಯವು ಭೂತಾರಾಧನೆಯ ಕೆಲವು ಮುಖಗಳನ್ನು ವಿವರಿಸುತ್ತದೆ. ಜುಮಾದಿ, ಪಂರ್ಜುಲಿ, ಕೋಟಿಚೆನ್ನಯ, ಕಲ್ಲುರ್ಟಿ, ಬೊಬ್ಬರ್ಯ, ಅತ್ತಾವರ ದ್ಯೆಯೊಂಗುಳು, ಮರುಳು ಜುಮಾದಿ, ತೊಡಕಿನಾರ್‌, ಕಾಳಭೈರವ – ಹತ್ತು ಭೂತಗಳ ವೇಷಸಹಿತವಾಗಿರುವ ಬಣ್ಣದ ಚಿತ್ರಗಳನ್ನು ಕೊಡಲಾಗಿದೆ. ಕ್ಷೇತ್ರಕಾರ್ಯದ ಮೂಲಕ ಭೂತಾರಾಧನೆಯ ಆಚರಣಾತ್ಮಕ ಸ್ವರೂಪಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಸಂಗ್ರಹಿಸಿರುವ ವಿಧಾನವು ಜಾನಪದ ಅಧ್ಯಯನ ದೃಷ್ಟಿಯಿಂದ ಮುಖ್ಯವಾಗುತ್ತದೆ.[3]

ಈ ಕೃತಿಯಲ್ಲಿ ಮ್ಯಾನರ್‌ ಬರೆದ on Demons ಎಂಬ ಲೇಖನ ಭೂತಗಳ ಸೃಷ್ಟಿಯನ್ನು ತಿಳಿಸುವ ಲೇಖನ. ಅದರ ಕನ್ನಡ ಅವತರಣಿಕೆ ಹೀಗಿದೆ:

ನಾರಾಯಣ ದೇವರು ಭೂಮಿಯನ್ನು ಸೃಷ್ಟಿ ಮಾಡುವಾಗ ಅವರ ಬಲಭಾಗದಲ್ಲಿ ಈಶ್ವರನೂ ಎಡ ಭಾಗದಲ್ಲಿ ಬ್ರಹ್ಮನೂ ಕುಳಿತುಕೊಂಡು ಅವರಿಬ್ಬರೂ ನಾರಾಯಣ ದೇವರಲ್ಲಿ ಕೇಳಿದ್ದು ಏನೆಂದರೆ ‘ನೋಡು ಭೂಮಿಯಲ್ಲಿ ನೀನು ಮನುಷ್ಯ, ಪ್ರಾಣಿ, ಪಕ್ಷಿ, ಇರುವೆ, ೮೪ ಲಕ್ಷ ಪ್ರಾಣಿಗಳನ್ನು ಸೃಷ್ಟಿ ಮಾಡಿ ಅವುಗಳಿಗೆ ತಕ್ಕ ಆಹಾರಗಳನ್ನು ಕೊಟ್ಟೆ. ನಿನ್ನ ಭೂಮಿಗೆ ಎಂಟು ದಿಕ್ಕುಗಳಿಗೆ ಎಂಟು ಅರಸರನ್ನು ನೇಮಿಸಿದ್ದಿ. ಅವರ ಹೆಸರುಗಳು – ಇಂದ್ರ, ಅಗ್ನಿ, ಯಮ, ನೈಋತ್ಯ, ವರುಣ, ವಾಯುವ್ಯ, ಕುಬೇರ, ಈಶಾನ್ಯ ಇಂತಹ ಎಂಟು ಗಣ ಅರಸರುಗಳಿಗೆ ದಿಕ್ಕುಗಳ ಅಧಿಕಾರ ಕೊಟ್ಟು ರಾತ್ರಿ ಹಗಲು ಆಗುವಂತೆ ಆಕಾಶದಲ್ಲಿ ಸೂರ್ಯ ಚಂದ್ರರೆನ್ನುವದೆರಡನ್ನು ನೀನು ಇಟ್ಟೆ. ಇದಲ್ಲದೆ ಆರು ತಿಂಗಳು ಮಳೆಗಾಲ, ಆರು ತಿಂಗಳು ಸೆಕೆಗಾಲ, ಶೀತೋಷ್ಣ ಇಂತಹವುದನ್ನು ಎಲ್ಲಾ ಮಾಡಿದಿ. ಇದೆಲ್ಲಾ ನಮಗೆ ಸಂತೋಷ ತಂದಿದೆ’ ಎಂದು ಹೇಳುವಾಗ, ನಾರಾಯಣ ದೇವರು ಈಶ್ವರನಲ್ಲಿ ಹೇಳಿದ್ದೇನೆಂದರೆ, ನೋಡು-ನೀನೂ, ನಾನೂ ಆ ಬ್ರಹ್ಮ ನಾವು ಮೂವರೂ ಭೂಲೋಕ, ಪರಲೋಕ ಮತ್ತು ಎಲ್ಲಾ ಲೋಕಗಳ ಅಧಿಕಾರವನ್ನು ನೋಡಿಕೊಳ್ಳಬೇಕು. ಬ್ರಹ್ಮ, ಈಶ್ವರ, ಮಹೇಶ್ವರ ಎಂಬ ಮೂರು ಹೆಸರುಳ್ಳವಾಗಿರಬೇಕು. ನನಗೆ ಸೃಷ್ಟಿ ಮಾಡುವ ಉದ್ಯೋಗ, ಬ್ರಹ್ಮನಿಗೆ ಸ್ಥಿತಿ ಮಾಡುವ ಉದ್ಯೋಗ, ಮಹೇಶ್ವರನಿಗೆ ಲಯ ಮಾಡುವ ಉದ್ಯೋಗ, ಇಂತಹ ಉದ್ಯೋಗ ನಾವು ಮಾಡಬೇಕು ಎಂದು ತಮ್ಮೊಳಗೆ ನೇಮಕ ಮಾಡಿಕೊಂಡು ನಾರಾಯಣನಿಗೆ ವಾಸ ಮಾಡಲು ವೈಕುಂಠ, ಈಶ್ವರನಿಗೆ ವಾಸ ಮಾಡಲು ಕೈಲಾಸ, ಬ್ರಹ್ಮನಿಗೆ ವಾಸ ಮಾಡಲು ಸತ್ಯಲೋಕ ಇಂತಹ ಸ್ಥಳಗಳನ್ನು ಮಾಡಿಕೊಂಡು ಮತ್ತೆ ದೇವಲೋಕ ಸೃಷ್ಟಿಸುತ್ತಾರೆ.

ಮೂವತ್ತಮೂರು ಕೋಟಿ ದೇವತೆಗಳನ್ನು ಸೃಷ್ಟಿ ಮಾಡಿ ಋಷಿಗಳನ್ನು, ಗಂಧರ್ವರನ್ನು, ಅಪ್ಸರೆಯರನ್ನು, ಯಕ್ಷರನ್ನು ಸೃಷ್ಟಿ ಮಾಡಿ ಇವರಿಗೆ ಎಲ್ಲಾ ವಿಚಾರಕ್ಕೆ ದೇವೇಂದ್ರ ಎಂಬ ಅರಸನನ್ನು ಆದಿ ರಕ್ಷಕನಾಗಿ ಇರಿಸಿ ಹದಿನಾಲ್ಕು ಲೋಕ ರಕ್ಷಣೆ ಮಾಡಿಕೊಂಡು ಇರುವಾಗ ಕೈಲಾಸದಲ್ಲಿ ಈಶ್ವರನು ತನ್ನ ಸಿಂಹಾಸನದಲ್ಲಿ ಕುಳಿತು ತನ್ನ ಸಾವಿರದೊಂದು ಗಂಡ ಗಣಗಳೂ, ಸಾವಿರದೊಂದು ಭೂತಗಳೂ, ವೀರಭದ್ರಾದಿ ಪ್ರಮಥರು ಆಗಿರುವ ಮುಖ್ಯ ಗಣಗಳ ನಡುವಿನಲ್ಲಿ ಇರುವಾಗ ಅವರ ಹೆಂಡತಿ-ಪಾರ್ವತಿದೇವಿ ಸಂತೋಷದಲ್ಲಿ ಗಂಡನ ಬಳಿ ಕೇಳಿದ್ದೇನೆಂದರೆ,

“ಈಶ್ವರನೇ, ಭೂಲೋಕದಲ್ಲಿರುವ ಜನರು ಹಲವು ಮಂದಿ ಪಾಪಿಷ್ಟರು, ಹಲವು ಮಂದಿ ಪುಣ್ಯವಂತರು ಆಗಲು ಕಾರಣವೇನು? ಅದನ್ನು ನೀವು ನನಗೆ ವಿಸ್ತಾರವಾಗಿ ಹೇಳಬೇಕು ಎಂದು ಕೇಳಿದಾಗ, ಈಶ್ವರ ಹೇಳಿದ್ದು ಪಾರ್ವತಿಯೇ ಕೇಳು. ನನ್ನ ಪಾರ್ಶ್ವ ಭಾಗದಲ್ಲಿ ಸಾವಿರದೊಂದು ಗಂಡಗಣಗಳೂ, ಸಾವಿರದೊಂದು ಭೂತಗಳೂ ಉದ್ಭವದಿಂದ ಹುಟ್ಟಿತು. ಅವರುಗಳು ನನ್ನನ್ನು ಯಾವಾಗಲೂ ಸೇವೆ ಮಾಡಿಕೊಂಡು ನನ್ನನ್ನು ಆಶ್ರಯಿಸಿಕೊಂಡು ಇದ್ದರು. ಆಗ ನಾನು ಅವರನ್ನು ಮೆಚ್ಚಿ ಸಹಾಯಕ್ಕೆ ಬೇಕಾಗಿ ಸಾವಿರದೊಂದು ರೋಗಗಳನ್ನು ಹುಟ್ಟಿಸಿದೆ. ಯಾಕೆಂದರೆ ಲೋಕದಲ್ಲಿ ಹಲವು ಮಂದಿ ದುಷ್ಟರನ್ನೂ ಹಲವು ಮಂದಿ ದ್ರವ್ಯಾಶೆಯಿದ್ದವರು ಅಹಂಕಾರಿಗಳು ಎನ್ನುವ ಪಾಪಿಷ್ಠರನ್ನು ಕಷ್ಟಪಡಿಸಲು ಬೇಕಾಗಿ ಇದನ್ನು ಮಾಡಬೇಕೆಂದು ಇಲ್ಲವಾದರೆ ಈ ಲೋಕದ ಜನರ ಗರ್ವ ಹೆಚ್ಚಿ ಬಡವರಿಗೆ ಹೆಚ್ಚಾಗಿ ಉಪದ್ರವ ಮಾಡುವರು ಎಂದು ನೋಡಿ ಹೀಗೆಯೇ ಮಾಡಬೇಕೆಂದು ಆ ಸಮಯದಲ್ಲಿ ಈ ಭೂತಗಳು ಎಲ್ಲವೂ ಸೇರಿ ನನ್ನ ಎದುರು ಅಡ್ಡಬಿದ್ದು ಹೇಳಿದ್ದು ಏನೆಂದರೆ, ಓ ದೇವರೇ ನೀನು ನಮ್ಮನ್ನು ಸೃಷ್ಟಿ ಮಾಡಿದ್ದೀ. ನಮಗೆ ಆಹಾರ ಕೊಡು. ನಾವು ಹಸಿವೆ ಬಾಯಾರಿಕೆ ತಡೆಯದೆ ಕುಳಿತುಕೊಂಡಿದ್ದೇವೆ ಎಂದು ಬೇಡಿಕೊಳ್ಳುವಾಗ, ನಾನು ಅವರಿಗೆ ಅಪ್ಪಣೆ ಕೊಟ್ಟು ಹೇಳಿದ್ದು

ನೀವು ಭೂಲೋಕಕ್ಕೆ ಹೋಗಿ ಪಾಪಿಷ್ಟರಿಗೆ ಉಪದ್ರವ ಕೊಟ್ಟು ಅವರ ಕೈಯಿಂದ ನೀವು ಆಹಾರ ತೆಗೆದುಕೊಳ್ಳಿ, ನನ್ನನ್ನು ನಂಬುವವರಿಗೆ ಉಪದ್ರವ ಕೊಡಬೇಡಿ ಎಂದು ಹೇಳಿ ಅಪ್ಪಣೆ ಮಾಡಿದನು.

ಆಜ್ಞೆ ಕೊಡುವಾಗ ಭೂತಗಳು ಕೇಳಿದ್ದು ದೇವರೇ ನೀನು ಅಪ್ಪಣೆ ಕೊಟ್ಟದ್ದು ನಮಗೆ ಸಂತೋಷ ಆಯಿತು.

ಆದರೂ ಲೋಕದಲ್ಲಿ ಪಾಪಿಷ್ಟರು ಆಗಿರುವವರು ಯಾರು? ಎನ್ನುವುದು ನಮಗೆ ತಿಳಿಯುವುದಿಲ್ಲ. ಅದು ತಿಳಿಯುವ ಹಾಗೆ ಮಾತ್ರ ಅಪ್ಪಣೆ ಕೊಡಬೇಕು ಎಂದು ಭೂತಗಳು ಬೇಡಿಕೊಳ್ಳುವಾಗ, ನಾನು ಅಪ್ಪಣೆ ಕೊಟ್ಟದ್ದು ಏನೆಂದರೆ ‘ಲೋಕದ ಪಾಪಿಷ್ಟರಿಗೆ ನಾನು ರೋಗ, ಬೇನೆ, ಸಂಕಟ, ಬೇರೆ ಬೇರೆ ತರದ ಉಪದ್ರಗಳನ್ನು ತಂದು ಹಾಕಿಸುತ್ತೇನೆ. ಆಗ ನೀವು ಅಂತವರನ್ನು ನೋಡಿ ಹಿಡಿಯಿರಿ. ಹಿಡಿದರೆ ನಿಮಗೆ ಆಹಾರ ಸಿಗುತ್ತದೆ’ ಎಂದು ಹೇಳಿ ಅಪ್ಪಣೆ ಕೊಡುವಾಗ, ಆ ಭೂತಗಳು ತಿರುಗಿ ಅರಿಕೆ ಮಾಡಿ ಕೇಳಿದ್ದು ಏನೆಂದರೆ ‘ದೇವರೇ ಇಂತಹ ರೋಗ ಸಂಕಟಗಳು ಇರುವ ಜನರನ್ನು ನಾವು ಹಿಡಿದಿದ್ದೇವೆ ಎಂದು ಅವರಿಗೆ ತಿಳಿಯುವುದು ಹೇಗೆ? ಇದಕ್ಕೆ ಏನು ಸಂಕೇತ’ ಎಂದು ಅರಿಕೆ ಮಾಡಿ ಕೇಳಿದರು.

ಆಗ ನಾನು ಹೇಳಿದ್ದು ಏನೆಂದರೆ ‘ಲೋಕದಲ್ಲಿ ಬಲ್ಮೆಯವರು, ಜ್ಯೋತಿಷ್ಯರು, ಯಂತ್ರಗಾರರೂ ಇದ್ದಾರೆ. ಅವರನ್ನು ನಾನು ಸೃಷ್ಟಿ ಮಾಡಿ ಇಟ್ಟಿದ್ದೇನೆ. ಅವರ ಮುಖೇನ ತಿಳಿದು ನಿಮಗೆ ಆಹಾರ ಕೊಡುವರು. ಇದು ನಿಮಗೆ ಸಾಕು. ಇನ್ನು ನೀವು ಹೆಚ್ಚಿಗೆ ಮಾತಾಡಬೇಡಿ’ ಎಂದು ಅಪ್ಪಣೆ ಕೊಟ್ಟೆ, ಆದರೂ ಆ ಭೂತಗಳು ತಿರುಗಿ ಈಶ್ವರನ ಬಳಿ ಬಂದು ಅವರಲ್ಲಿ ಅರಿಕೆ ಮಾಡಿ ಕೇಳಿದ್ದು.

‘ದೇವರೇ, ನಾವು ಭೂಲೋಕಕ್ಕೆ ಇಳಿದು ಹೋಗಲು ಅಪ್ಪಣೆ ಕೊಟ್ಟಿದ್ದೀರಿ. ಆದರೆ ನಾವು ಎಲ್ಲಿಗೆ ಹೋಗಬೇಕು ಎಲ್ಲಿ ಇರಬೇಕು’ ಎಂದು ತಿರುಗಿ ಬೇಡಿಕೊಳ್ಳುವಾಗ, ಈಶ್ವರನು ಅವರಿಗೆ ಉತ್ತರ ಕೊಟ್ಟು ಹೇಳಿದ್ದು ‘ನಿಮ್ಮ ಹೆಸರುಗಳು ನಾನು ಪ್ರತ್ಯೇಕ ಪ್ರತ್ಯೇಕವಾಗಿ ಕೊಡುತ್ತೇನೆ’ ಎಂದು ಹೇಳಿ ನೀವು ಬೊಬ್ಬರ್ಯ, ಕುಡ್ಲರಾವಣ, ಪಾತಿಕೊಂಡೆಯ ಇಂತಹವರು ಉತ್ತರ ರಾಜ್ಯದಲ್ಲಿ (ಬಡಕಾಯಿ) ವಾಸ ಮಾಡಿ. ಇನ್ನು ನಿಮ್ಮ ಬಳಗಕ್ಕೆ ಹಲವು ಭೂತಗಳನ್ನೂ, ದೈವಗಳನ್ನೂ ಕಳುಹಿಸುತ್ತೇನೆ. ಇದಲ್ಲದೆ ಮಲರಾಯ, ಅಣ್ಣಪ್ಪ, ತಟ್ಟಿಗೆ ಎನ್ನುವ ಭೂತಗಳನ್ನು ಪಶ್ಚಿಮ ರಾಜ್ಯದಿಂದ (ಪಡ್ಡಾಯಿ) ಪೂರ್ವರಾಜ್ಯದವರೆಗೆ (ಮೂಡಾಯಿ) ನಾನು ಕಳುಹಿಸುತ್ತೇನೆ ಎಂದು ಭೂತಗಳಿಗೆ ಇಂತಹ ಅಪ್ಪಣೆ ಕೊಡುವಾಗ ಮಹಾಕಾಳಿಯೂ, ವೀರಭದ್ರನೂ ಮಾರಿಯೂ ಎದ್ದು ಕಣ್ಣು ಕೆಂಪು ಮಾಡಿಕೊಂಡು ಈಶ್ವರನಲ್ಲಿ ಹೇಳಿದ್ದು

‘ಏನೆಂದಿರಿ ಓ ಈಶ್ವರ ದೇವರೇ ನೀವು ಭೂತಗಳಿಗೆ ಆಹಾರಕ್ಕೆ ಅಪ್ಪಣೆ ಕೊಟ್ಟು ಕಳುಹಿಸಿದಿರಿ. ನಮ್ಮನ್ನು ನೀವು ಮರೆತಿಲ್ಲವೇ? ಆದರೂ ನಿಮಗೆ ಮರೆತರೂ ನಮಗೆ ಮರೆಯಲಿಲ್ಲ. ನಮಗೂ ಈಗ ದಾರಿ ತೋರಿಸಿ’ ಎಂದು ಆ ದೇವತೆಗಳು ಬೇಡಿಕೊಳ್ಳುವಾಗ ಈಶ್ವರ ಹೇಳಿದ್ದು-

ಧೂಮಾವತಿ ಎನ್ನುವ ಭೂತ ಭೂಮಿಯಲ್ಲಿ ತುಳು ದೇಶದಲ್ಲಿ ಮೂಡಬಿದ್ರೆಯಲ್ಲಿ ಚಾಂತರ ಸೀಮೆಯಲ್ಲಿ ಬೈಲಪರಿ ಬಲ್ಲಾಳರ ಜಾಗದಲ್ಲಿ ಹೊಯಿಗೆ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಇದು ಅಲ್ಲಿಂದ ಪಶ್ಚಿಮದ ಸಮುದ್ರದವರೆಗೂ ನಿನ್ನ ಪ್ರಸ್ತಾಪ ಎಬ್ಬಿಸಿ ನೀನು ನಿನ್ನ ಭಾಗದಲ್ಲಿ ಕೋಲ, ಬಲಿ ತೆಗೆದುಕೊಂಡು ನಿನ್ನ ಆಹಾರ ತಿಂದು ಸಂತೋಷದಲ್ಲಿ ಇರು ಎಂದು ಅಪ್ಪಣೆ ಕೊಟ್ಟು ಅವರನ್ನು ಕಳುಹಿಸಿದರು.

ಭೂತಾಳ ಪಾಂಡ್ಯನ ಅಳಿಯ ಸಂತಾನ ಕಟ್ಟ್‌ (೧೮೫೭, ಪು. ೨೮)

ಈ ಕೃತಿಯು ಅಳಿಯ ಸಂತಾನ ಕಟ್ಟು ಕಟ್ಟಳೆಗಳನ್ನು ತಿಳಿಸುವಂತದ್ದಾಗಿರುತ್ತದೆ.

ಗಾದೆಗಳ ವಿಭಾಗ

ಸಹಸ್ರಾರ್ಧ ತುಳು ಗಾದೆಳು

೧೮೭೪ರಲ್ಲಿ ಪ್ರಕಟಗೊಂಡಿದೆ. ೩೨ ಪುಟಗಳನ್ನು ಹೊಂದಿದ್ದು ೫೦೦ ಗಾದೆಗಳಿವೆ.

ತೌಳವಗಾಥ ಮಂಜರಿ ಅಂದ್‌೦ಡ ಸಾವಿರ ತುಳು ಗಾದೆಳು

೧೮೯೬ರಲ್ಲಿ ಪ್ರಕಟಗೊಂಡಿದೆ. ೫೬ ಪುಟಗಳನ್ನು ಹೊಂದಿದ್ದು ೧೦೦೦ ಗಾದೆಗಳಿವೆ. ಈ ಎರಡು ಕೃತಿಗಳ ಲೇಖಕರು ಮ್ಯಾನರ್‌.

೧. ಅಂಗಾರ್‌ಗಟ್ಟಿ ಇತ್ತ್‌೦ಡ ಬಂಗಾಳ ಮುಟ್ಟ ಪೋದು ಬರುವೆ
(ಅಂಗಾಲು ಸರಿ ಇದ್ದರೆ ಬಂಗಾಳ ತನಕ ಹೋಗಿ ಬರುವೆ)

೨. ಅಮ್ಮಗ್‌ ಮಗೆ ಬೊಡ್ಚಾಂಡ ಅಜ್ಜಗ್‌ಪುಲ್ಲಿ ಬೋಡಾ?
(ತಂದೆಗೆ ಮಗ ಬೇಡವಾದರೆ ಅಜ್ಜನಿಗೆ ಮೊಮ್ಮಗ ಬೇಕೋ?)

೩. ಅಮ್ಮೆ ಪುಟ್ಟಂದಿ ದುಂಬು ಮಗೆ ಕುಬಲ್‌ಡ್‌ ಉಳ್ಳೆಗೆ
(ತಂದೆ ಹುಟ್ಟುವ ಮೊದಲ ಮಗ ಅಟ್ಟದ ಮೇಲೆ ಇದ್ದಾನಂತೆ)

ಇಂತಹ ಗಾದೆಗಳೂ ಇರುವುದಾದರೂ ಎರಡೂ ಕೃತಿಗಳಲ್ಲಿ ಈ ಕೆಳಗಿನವುಗಳಂತಹ ಸಣ್ಣ ಸಣ್ಣ ಗಾದೆಗಳಿದ್ದು ಅವನ್ನು ಗಾದೆಗಳ ಸಂಖ್ಯೆಗಳಿಗೆ ಸೇರಿಸಲಾಗಿದೆ.

೧. ಆಯನ ಪತೆರ ತಿಗತ್ತ ಲೆಕ್ಕ (ಅವನ ಮಾತು ಜೇನಿನಂತೆ)

೨. ಆಯೆ ಕೊಂರ್ಗುದ ಲೆಕ್ಕ (ಆತ ಕೊಕ್ಕರೆಯ ಹಾಗೆ)

೩. ಆಸೆ ಮುಟ್ಟಿನವುಲೆ ಸಂದ್‌ (ಆಸೆ ಮುಟ್ಟಿದಲ್ಲೇ ಎಡೆ)

೪. ಅಪ್ಪೆ ಸೈತಿ ಬಾಲೆದ ಲೆಕ್ಕ (ತಾಯಿ ಸತ್ತ ಮಗುವಿನ ಹಾಗೆ)

ಇವುಗಳು ನಿಜವಾಗಿ ಗಾದೆಗಳಾಗಿರದೆ ಹೇಳಿಕೆಗಳಂತಿವೆ. ಅಂತೂ ಈ ಸಂಗ್ರಹವು ತುಳು ಗಾದೆಗಳ ಮೊದಲ ಸಂಗ್ರಹವಾಗಿರುತ್ತದೆ.

ಮಿಶನರಿಗಳ ಕಾಲದಲ್ಲಿ ಬಾಸೆಲ್‌ಮಿಶನರಿಗಳ ಪ್ರಕಟಣೆಗಳಲ್ಲದೆ ಇತರ ದೇಶೀಯರ ಬರಹಗಳಲ್ಲಿ ಜಿಲ್ಲೆಯ ಆಕರಗಳನ್ನು ನೋಡಬಹುದು. ಇವು ಬಾಸೆಲ್‌ಮಿಶನ್‌ ಪ್ರೆಸ್‌ನಲ್ಲಿ ಅಲ್ಲದೆ ಬೇರೆ ಮುದ್ರಣಾಲಯದಲ್ಲಿಯೂ ಪ್ರಕಟಗೊಂಡಿದೆ. ಇವುಗಳಲ್ಲಿ ವಿದೇಶೀಯ ಆಕರಗಳೂ ಸೇರಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆಯ ಇತರ ಪ್ರಕಟಣೆಗಳು

ಕನ್ನಡ ಎರಡನೆಯ ಪುಸ್ತಕ, ಪಂಜೆ ಮಂಗೇಶರಾವ್‌, ೧೯೨೫ ಪು. ೬೦ ಈ ಕೃತಿಯಲ್ಲಿ ಕಡೆಕಂಜಿ (ಕೊನೆಯ ಮಗು) ಮತ್ತು ತುಳುನಾಡ ರಾಣಿ ಎಂಬ ಎರಡು ಪದ್ಯಗಳಿವೆ. ಕಡೆಕಂಜಿ (ಗೋವಿನ ಕಥೆಯ ಮಟ್ಟು) ಪದ್ಯದ ಕೆಲವು ಚರಣಗಳು ಹೀಗಿವೆ:

೧. ತುಳುವ ನಾಡೊಳು ಹೊಳೆಲು ಮೆರೆವುದು! ಹಳೆಯ ಕಾರ್ಕಳ ಎಂಬುದು ಕೊಳವು ಕುಂಟೆಯು ಪೈರುಪಚ್ಚೆಯು! ತಳೆದ ಮನೆ ಅಲ್ಲಿದ್ದವು

೨. ಅರಸು ಒಂದಿನ ತಿರುಗುತಿರೆ, ಆ!ಚ್ಚರಿಯ ಒಂದನು ಕಂಡನು- ಮರುಕ ತೋರುವ ಕರೆದು ಚೀರುವ! ಬಿರುವ ಸೆಟ್ಟಿಯ ಕಂಡನು-

೩. ಕಂದು ಮೋರೆಯ, ನಾಂದ ಕಣ್ಣಿನ! ಮಿಂದ ಕೆನ್ನೆಯ ಮುಸುಕಿನಾ ಬೆಂದು ಹೊರಡುವ ಮೂಗುಸುಯ್ಲಿನ, ನೊಂದು ನೋಯುವ ಸೆಟ್ಟಿಯಾ

(ಇಂತಹ ಒಟ್ಟು ೪೨ ಚರಣಗಳಿವೆ)

ಚಿತ್ರಮಯ ದಕ್ಷಿಣ ಕನ್ನಡ (ಬಾಲಕರ ಭೂಗೋಲ)

ಶಿವರಾಮ ಕಾರಂತ ೧೯೩೪

ಈ ಕೃತಿಯಲ್ಲಿ ಜಿಲ್ಲೆಯ ವಿವರ ಇದ್ದು ಜಿಲ್ಲೆಯನ್ನು ಪ್ರತಿಬಿಂಬಿಸುವ ೯೬ ಫೋಟೋಗಳಿವೆ. ಇದೇ ಚಿತ್ರಗಳನ್ನೊಳಗೊಂಡ ಕೃತಿಯು ೧೯೩೩ರಲ್ಲಿ ಪ್ರಕಟಗೊಂಡಿದ್ದು ಅದರಲ್ಲಿ ೯೬ ಚಿತ್ರಗಳ ವಿವರವನ್ನು ಇಂಗ್ಲಿಷ್‌ನಲ್ಲಿ ಕೊಡಲಾಗಿದೆ. ಇದೇ ೯೬ ಚಿತ್ರಗಳನ್ನು ಸೇರಿಸಿ 140 Pictures of South Kanara ಎಂಬ ಪುಸ್ತಕವನ್ನೂ ಬಾಸೆಲ್‌ಮಿಶನ್‌ಪ್ರಕಟಿಸಿದೆ.

ರೋಗ ಚಿಕಿತ್ಸೆಯು, ೧೮೩೦, ಪು. ೨೩೨

ಭಾ. ಕೇಶವರಾವ್‌ ಇದರ ಸಂಪಾದಕರಾಗಿದ್ದು ಈ ಕೃತಿಯು ಕೆಲವು ಊರ ಔಷಧಗಳ ಪ್ರಯೋಗ, ಆರೋಗ್ಯ ರಕ್ಷಣೆ, ಪಥ್ಯ, ರೋಗ ಪರೀಕ್ಷೆ ಮುಂತಾದ ವಿವರಗಳನ್ನೊಳಗೊಂಡಿದೆ. ಇದು ೧೮೭೬-೧೮೮೮ರಲ್ಲಿ ಬಾಸೆಲ್‌ಮಿಶನ್‌ಪ್ರೆಸ್‌ನಿಂದ ಪ್ರಕಟಗೊಳ್ಳುತ್ತಿದ್ದ ಕನ್ನಡ ಪಂಚಾಂಗದಲ್ಲಿ ಶರೀರ ಚಿಕಿತ್ಸೆ ಎಂಬ ಲೇಖನಗಳ ಸಂಗ್ರಹವಾಗಿದೆ. ಈ ಸಂಗ್ರಹವೆಲ್ಲವೂ ವೈದ್ಯ ಪಂಡಿತರ ಇಂಗ್ಲಿಷ್‌ಗ್ರಂಥಗಳ ಭಾಷಾಂತರವಾಗಿದೆ.

ಸಹಸ್ರಾರ್ಧ ವೃಕ್ಷಾದಿಗಳ ವರ್ಣಣೆ (Five hundred Indian Plants, Their use in medicine and the arts)

ಈ ಕೃತಿಯನ್ನು ಸಿ. ಸ್ಟೋಲ್‌ಝ್‌ ಮತ್ತು ಜಿ. ಪ್ಲೆಬೆಸ್ಟ್‌ ಸಂಪಾದಿಸಿದ್ದು ೧೮೮೧ರಲ್ಲಿ ಮೊದಲ ಬಾರಿ ಪ್ರಕಟಗೊಂಡಿದ್ದು ೧೯೦೫ ಮತ್ತು ೧೯೨೨ರಲ್ಲಿ ವಿಸ್ತೃತ ಆವೃತ್ತಿಯೂ ಪ್ರಕಟಗೊಂಡಿದೆ. ಕನ್ನಡ ಪಂಚಾಂಗದಲ್ಲಿ ಬಂದ ಮಾಹಿತಿಗಳ ಸಂಗ್ರಹ ಇದಾಗಿದ್ದು ೨೭೪ ಪುಟಗಳನ್ನು ಹೊಂದಿದ ಪುಸ್ತಕವಾಗಿರುತ್ತದೆ. ಈ ಪುಸ್ತಕವು ಮರ ಮತ್ತು ಗಿಡಮೂಲಿಕೆಗಳ ವಿವರ, ಉಪಯೋಗಗಳನ್ನು ತಿಳಿಸುವಂತಾದ್ದಾಗಿರುತ್ತದೆ. ೫೩೩ ವೃಕ್ಷಾದಿಗಳ ಹೆಸರಿನಡಿಯಲ್ಲಿ ಅದರ ಹುಟ್ಟು, ಗುಣ, ಉಪಯೋಗ ಮತ್ತು ಇಂಗ್ಲಿಷ್‌, ಕನ್ನಡ, ಕೊಂಕಣಿ, ತುಳು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಅದರ ಹೆಸರುಗಳನ್ನು ಕೊಡಲಾಗಿದೆ. ಕೊನೆಯಲ್ಲಿ ವೃಕ್ಷಾದಿಗಳ ಉಪಯೋಗದ ಪಟ್ಟಿ, ವೃಕ್ಷಾದಿಗಳ ಅಕಾರಾದಿ ಪಟ್ಟಿಯನ್ನು ಎಲ್ಲಾ ಭಾಷೆಯಲ್ಲೂ, ಅವೆಲ್ಲವನ್ನೂ ಇಂಗ್ಲಿಷ್‌ನಲ್ಲಿ ಲಿಪ್ಯಂತರ ಮಾಡಿಯೂ ಕೊಡಲಾಗಿದೆ.

 

[1] ಪೀಟರ್‌ ಜೆ. ಕ್ಲಾಸ್‌ (ಅನು. ಅಮೃತ ಸೋಮೇಶ್ವರ), ಲೇಖನ ಪು. ೪೪೬, ಸಿರಿ, ಅಮೃತ ಸೋಮೇಶ್ವರ ಅಭಿನಂದನ ಗ್ರಂಥ ಸೋಮೇಶ್ವರ ಉಚ್ಚಿಲ

[2] ಬಿ.ಎ. ವಿವೇಕ ರೈ, ಪು. ೧೮, ತುಳು ಜನಪದ ಸಾಹಿತ್ಯ, ಪ್ರ : ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

[3] ಕೆ. ಚಿನ್ನಪ್ಪಗೌಡ, ಭೂತಾರಾಧನೆ ಜಾನಪದೀಯ ಅಧ್ಯಯನ ಪುಟ ೩, ಪ್ರ. : ಮದಿಪು ಪ್ರಕಾಶನ, ಮಂಗಳಗಂಗೋತ್ರಿ