ಬಾಸೆಲ್‌ಮಿಶನರಿಗಳು ತುಳು ಸಾಹಿತ್ಯದಲ್ಲಿ ಮಾಡಿದ ವ್ಯವಸಾಯವು ಅಪಾರವಾದದ್ದು. ಇವರು ತುಳು ಸಾಹಿತ್ಯದಲ್ಲಿ ಧಾರ್ಮಿಕ ಕ್ಷೇತ್ರವನ್ನು ಕೇಂದ್ರವಾಗಿರಿಸಿ ತಮ್ಮ ಸಾಹಿತ್ಯ ಪ್ರಜ್ಞೆಯನ್ನು ಮುಂದುವರಿಸಿದರು, ಬೈಬಲಿನ ಭಾಷಾಂತರದ ಕಾರ್ಯದಲ್ಲಿ, ಆರಾಧನಾ ಕ್ರಮದ (ಧಾರ್ಮಿಕ ಆಚರಣೆಯ) ಕುರಿತಾಗಿ ಮತ್ತು ಕ್ರೈಸ್ತ ನೀತಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ತುರ್ಜುಮೆ ಮಾಡಿದರು. ಕೆಲವನ್ನು ಸ್ವತಃ ರಚಿಸಿದರು. ಇಂದಿಗೂ ಹೆಚ್ಚು ಪ್ರಚಲಿತದಲ್ಲಿರುವ ತುಳು ಗೀತೆಗಳು (ತುಳು ಗೀತೊಳು) ಕ್ರೈಸ್ತ ಆರಾಧನೆಗಳಲ್ಲಿ ಮಹತ್ವದ ಸ್ಥಾನವನ್ನು ವಹಿಸಿರುವುದು ಅವಿಸ್ಮರಣೀಯವಾದದ್ದು.[1] ಆಗಿನ ಕಾಲದಲ್ಲಿ ಜನಸಾಮಾನ್ಯರಿಗೆ ತಲುಪುವ ಭಾಷೆ ತುಳುವಾಗಿತ್ತು. ಮತ್ತು ಅದು ಸುಸಂಸ್ಕೃತ ಭಾಷೆಯೂ ಆಗಿದ್ದಿತು. ಯಾಕೆಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ, ಆಸುಪಾಸಿನ ಎಲ್ಲಾ ಸ್ಥಳಗಳಲ್ಲಿಯೂ ತುಳು ಆಡುಭಾಷೆಯಾಗಿದ್ದಿತು.

ದೇವಾಲಯಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ತುಳು ಭಾಷೆಯನ್ನೇ ಬಳಸುತ್ತಿದ್ದುದರಿಂದ ಮಿಶನರಿಗಳು ತುಳು ಧಾರ್ಮಿಕ ಸಾಹಿತ್ಯದ ಕಡೆಗೆ ಹೆಚ್ಚು ಒಲವು ತೋರಿಸಿದರು. ತುಳು ಸಾಹಿತ್ಯವನ್ನು ಮತಾಂತರದ ಸಾಧನವನ್ನಾಗಿ ಬಳಸಿಕೊಂಡರೆನ್ನಲಾಗುವುದಿಲ್ಲ.[2] ವಸ್ತು ನಿಷ್ಠವಾಗಿ ಹೇಳಬೇಕಾದೆ ಮಿಶನರಿಗಳು ತುಳು ಭಾಷೆಯ ಬಗೆಗೆ ಅಪಾರವಾದ ಗೌರವವಿತ್ತು. ಅದು ಅವರು ಕೊಟ್ಟ ಕೊಡುಗೆಯಿಂದಲೇ ವ್ಯಕ್ತವಾಗುತ್ತದೆ. ಒಂದರ್ಥದಲ್ಲಿ ಅವರಿಗೆ ತುಳು ಭಾಷೆಯು ಹೆಚ್ಚು ‘ಪ್ರಭಾವಿ ಭಾಷೆ’ ಎಂದು ಕಂಡುಬಂದಿರಬೇಕು. ಇದಕ್ಕೆ ತುಳುವಿನ ಶ್ರೀಮಂತ ಸಂಸ್ಕೃತಿ ಮತ್ತು ಜನರು ಕಾರಣವಾಗಿದ್ದಾರೆ.

ಧಾರ್ಮಿಕ ಸಾಹಿತ್ಯ ದೃಷ್ಟಿಕೋನದಿಂದ ಪ್ರಕಟಗೊಂಡ ತುಳು ಪುಸ್ತಕಗಳನ್ನು ನಾಲ್ಕು ವಿಧವಾಗಿ ವಿಭಾಗಿಸಬಹುದಾಗಿದೆ. ಈ ವಿಭಾಗವು ಒಂದಕ್ಕೊಂದು ಸಂಬಂಧವನ್ನು ಹೊಂದಿದೆ ಮತ್ತು ಇವೆಲ್ಲವೂ ಕ್ರೈಸ್ತ ಆಧ್ಯಾತ್ಮಿಕ ವೃದ್ಧಿಗೆ ಕಾರಣೀಭೂತವಾದದ್ದು. ಇದನ್ನು ಅದರ ಅಡಕ ಮತ್ತು ಚೌಕಟ್ಟನ್ನು ಅವಲಂಬಿಸಿ ವರ್ಗೀಕರಿಣ ಮಾಡಲಾಗಿದೆ.

೧.೧ ಬೈಬಲ್‌ಪುಸ್ತಕಗಳು ಇವೆಲ್ಲ ಬೈಬಲ್‌ಭಾಷಾಂತರಗಳು.

೧.೨ ಆರಾಧನಾ ಕ್ರಮಕ್ಕೆ ಸಂಬಂಧಿಸಿದ ಪುಸ್ತಕಗಳು ಇಲ್ಲವೇ ಧಾರ್ಮಿಕ ನಿಯಮಗಳು.

೧.೩ ನೀತಿಗೆ ಸಂಬಂಧಿಸಿದ ಪುಸ್ತಕಗಳು

೧.೪ ಆಧ್ಯಾತ್ಮಿಕ ಗೀತೆಗಳು

ಇವೆಲ್ಲವೂ ಕೂಡಾ ಕ್ರೈಸ್ತ ಧಾರ್ಮಿಕತೆಯ ಮಟ್ಟವನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುವ ಸಾಧನಗಳಾದವು. ತುಳು ಭಾಷೆಯನ್ನು ಕಲಿತು ಅದರಲ್ಲಿ ಜನಸಾಮಾನ್ಯರು ಬಳಸುತ್ತಿದ್ದ ಪದಗಳನ್ನು ಈ ಧಾರ್ಮಿಕ ಸಾಹಿತ್ಯದಲ್ಲಿ ಅಳವಡಿಸಿದ್ದು ವಿಶೇಷವಾದದ್ದು. ತುಳು ಸಮಾಜದಲ್ಲಿ ವಿವಿಧ ಧರ್ಮದ ತುಳು ಧಾರ್ಮಿಕ ಸಾಹಿತ್ಯಗಳು ಫಲಭರಿತವಾಗಿದ್ದು ಅವು ಮೌಖಿಕ ಸಂಪ್ರದಾಯದಲ್ಲೇ ಇದ್ದುವು. ‘ತುಳುವ ಸಮಾಜವು ಯಾವಾಗಲೂ ಲಿಖಿತ ಪರಂಪರೆಗಿಂತ ಮೌಖಿಕ ಪರಂಪರೆಗೆ ಹೆಚ್ಚು ಮಹತ್ವ ಕೊಟ್ಟಿದೆ’ ಎಂದು ಪ್ರೊ. ಕು.ಶಿ ಹರಿದಾಸ ಭಟ್ಟರು ಅಭಿಪ್ರಾಯಪಡುತ್ತಾರೆ.[3] ಆದರೆ ಮಿಶನರಿಗಳು ತುಳುವಿನ ಮಣ್ಣಿ ವಾಸನೆಯನ್ನು ಆಹ್ಲಾದಿಸಿದರು ಮಾತ್ರವಲ್ಲದೆ ತಮ್ಮ ದೇಣಿಗೆಯಾಗಿ ತುಳು ಲಿಖಿತ ಸಾಹಿತ್ಯವನ್ನು ಬೆಳಕಿಗೆ ತಂದರು.

೧೯ನೆ ಶತಮಾನದಲ್ಲಿ ಮತ್ತು ಮುಂದಕ್ಕೆ ಮಿಶನರಿಗಳು ಧರ್ಮಪ್ರಚಾರದ ಕಾರ್ಯಕ್ಕಾಗಿ ಜನರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದುದರಿಂದ ಜನರ ಭಾಷೆಯ ಕುರಿತಾಗಿ ಇವರಿಗೆ ಹೆಚ್ಚಿನ ತಿಳುವಳಿಕೆ ಮತ್ತು ಆಸಕ್ತಿ ಇತ್ತು. ಆದ್ದರಿಂದಲೇ ಜನರಿಂದ ಕಲಿತದ್ದನ್ನು, ತಮ್ಮ ದೇಶದ ಸಂಸ್ಕೃತಿ ತಮಗೆ ಕಲಿಸಿದ್ದನ್ನೂ ತಮ್ಮ ಅನುಭವಯುಕ್ತವಾದ ಸಾಹಿತ್ಯ ಬೀಜವನ್ನು ತುಳು ಮಣ್ಣಿನಲ್ಲಿ ಬಿತ್ತಿದರು. ಆ ಬೀಜ ಮುಂದೊಂದು ದಿನ ತುಳು ಲಿಖಿತ ಸಾಹಿತ್ಯಕ್ಕೆ ನಾಂದಿಯಾಗುತ್ತದೆ ಎಂಬ ಕಲ್ಪನೆಯನ್ನೂ ಆ ದೂರರ್ಶಿತ್ವವನ್ನೂ ಹೊಂದಿದ್ದರು ಎನ್ನುವುದು ಸ್ಪಷ್ಟ. ಧಾರ್ಮಿಕ ಕ್ಷೇತ್ರದಲ್ಲಿ ಮಿಶನರಿಗಳಿರಿಸಿದ ಹೆಜ್ಜೆಯ ಗುರುತುಗಳನ್ನು ಅವರ ಪ್ರಕಟಿತ ಗ್ರಂಥಗಳ ಅವಲೋಕದಿಂದ ಕಂಡುಕೊಳ್ಳಬಹುದು.

ಬೈಬಲ್‌ಪುಸ್ತಕಗಳು ಇಲ್ಲವೆ ಬೈಬಲ್‌ಭಾಷಾಂತರಗಳು

ಮಿಶನರಿಗಳು ಬೈಬಲನ್ನು ತುಳು ಭಾಷೆಗೆ ಭಾಷಾಂತರಿಸಿದ್ದರಲ್ಲಿ[4] ಅವರ ಪರಿಶ್ರಮ ಮತ್ತು ಪರಿಣಾಮ ಎರಡೂ ವ್ಯಕ್ತವಾಗುತ್ತದೆ. ಇಲ್ಲಿ ಬೈಬಲ್‌ಭಾಷಾಂತರವೆಂದರೆ ಅದು ಕೇವಲ ಭಾಷೆಯ ತರ್ಜುಮೆ ಮಾತ್ರವಲ್ಲ; ಬದಲಾಗಿ ಸಂಸ್ಕೃತಿಯ ವಿಚಾರಗಳನ್ನು, ಭಾಷಾ ರಚನೆಯ ಪ್ರಭೇದಗಳನ್ನು, ವ್ಯಾಕರಣವನ್ನೂ ಒಳಗೊಂಡಿದ್ದಾಗಿರುತ್ತದೆ. ಬೈಬಲ್‌ನ ಸಂಪೂರ್ಣ ಹಳೆ ಮತ್ತು ಹೊಸ ಒಡಂಬಡಿಕೆಯ ತರ್ಜುಮೆ ಕಾರ್ಯವು ಪೂರ್ತಿ ಇಲ್ಲಿ ನಡೆಯಲಿಲ್ಲ. ಬದಲಾಗಿ ಹಳೆ ಒಡಂಬಡಿಕೆಯ ಕೆಲವು ಪುಸ್ತಕಗಳು (೬ ಪುಸ್ತಕಗಳು) ತುಳುವಿಗೆ ಭಾಷಾಂತರಗೊಂಡಿರುವುದು ಹೊಸ ಒಡಂಬಡಿಕೆಯ ಸಂಪೂರ್ಣವಾಗಿ (೨೭ ಪುಸ್ತಕಗಳು) ಭಾಷಾಂತರಗೊಂಡಿರುವುದು ಸಂತಸದ ವಿಷಯವಾಗಿದೆ.

ಮುಖ್ಯವಾಗಿ ತುಳು ಹೊಸ ಒಡಂಬಡಿಕೆಯ ಕಾಲಘಟ್ಟವನ್ನು ಗಮನಿಸುದಾದರೆ ೧೮೪೧[5]ರಲ್ಲಿ ಆರಂಭವಾಗಿ ೧೯೬೦ರಲ್ಲಿ[6] ತರ್ಜುಮೆಯ ಕಾರ್ಯ ಮುಕ್ತಾಯಗೊಂಡಿತು. ಇದರಲ್ಲಿ ಶ್ರಮಿಸಿದ ಮಿಶನರಿಗಳಲ್ಲಿ ಮುಖ್ಯವಾದವೆಂದರೆ – ಅಮ್ಮನ್‌,[7] ಗ್ರೈನರ್‌, ಬ್ರೂರರ್‌ ಮುಂತಾದವರು. ಇವರ ಜೊತೆಗೆ ಭಾಷಾಂತರದ ಕಾರ್ಯದಲ್ಲಿ ಮಿಶನರಿಗಳಿಗೆ ಭಾರತೀಯ ಕ್ರೈಸ್ತರೂ ಕೂಡಾ ಸಹಾಯ ಮಾಡಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಇವರ ಸಾಹಿತ್ಯ ರಚನೆಯ ಹಿನ್ನೆಲೆಯಲ್ಲಿ ತುಳುವರ ಬೆಂಬಲವಿತ್ತು ಎನ್ನುವುದನ್ನು ಇವರಿಂದ ತರ್ಜುಮೆಯಾದ ತುಳು ಹೊಸ ಒಡಂಬಡಿಕೆಯ ಗ್ರಂಥದಿಂದ ವ್ಯಕ್ತವಾಗುತ್ತದೆ. ಇದು ಮುಂದಕ್ಕೆ ಪರಿಷ್ಕರಣೆಗೊಂಡಿತು. ತುಳು ಬೈಬಲ್‌ಗಳನ್ನು ಜನರು ಹೆಚ್ಚಾಗಿ ಬಳಸುತ್ತಿದ್ದರು. ಮುಖ್ಯವಾಗಿ ಆರಾಧನೆಯಲ್ಲಿ ತುಳು ಬೈಬಲ್‌ಪಠಣವೂ ಆಗುತ್ತಿತ್ತು. ಆದುದರಿಂದ ತುಳು ಬೈಬಲ್‌ಗಳು ಹೆಚ್ಚು ಬೇಡಿಕೆಯನ್ನು ಹೊಂದಿ ಪ್ರಚಲಿತದಲ್ಲಿತ್ತು. ಒಂದು ವಿಧದಲ್ಲಿ ಬೈಬಲ್‌ಭಾಷಾಂತರಗಳು ಕೇವಲ ಧಾರ್ಮಿಕ ಚೌಕಟ್ಟನ್ನು ಮಾತ್ರ ಹೊಂದಿದೆ ಎಂದೆನಿಸಿದರೂ ಅದು ಸಾಹಿತ್ಯ ಮೌಲ್ಯದ ಸ್ತರದಲ್ಲಿ ಮಹತ್ತರದ ಸ್ಥಾನವನ್ನು ಪಡೆದಿರುವುದು ಗಮನಾರ್ಹ.

ಬೈಬಲ್‌ಅನುವಾದ ಕಾರ್ಯದಲ್ಲಿ ಮಿಶನರಿಗಳ ಭಾಷಾ ಪ್ರಯೋಗಶೀಲತೆಯನ್ನು ಪರಿಶೀಲಿಸಿ ಅದರ ಗುಣಮಟ್ಟವನ್ನು ಅಳೆಯಬಹುದು. ಅನುವಾದದ ಕಾರ್ಯವು ತೀರಾ ಸುಲಭದ ಕೆಲಸವಲ್ಲ. ಇಲ್ಲಿಯ ಸಂದರ್ಭದಲ್ಲಂತೂ (ಬೈಬಲ್‌ವಿಚಾರದಲ್ಲಿ) ಹೇಳಬೇಕಾದುದ್ದನ್ನು ಸ್ಪಷ್ಟವಾಗಿ ಹಾಗೂ ಮೂಲಕ್ಕೆ ಕುಂದು ಬರದಂತೆ ವಸ್ತುನಿಷ್ಠವಾಗಿ ಹೇಳಬೇಕಾದ ಅನಿವಾರ್ಯತೆ ಇದೆ. ಈ ಜವಾಬ್ದಾರಿಯನ್ನು ಮಿಶನರಿಗಳು ಬಹುಮಟ್ಟಿಗೆ ಚೆನ್ನಾಗಿಯೇ ನಿರ್ವಹಿಸಿದನ್ನು ಕಾಣಬಹುದು.[8] ಇವರು ಅನುವಾದದ ಕಾರ್ಯದಲ್ಲಿ ಮೂಲಾರ್ಥವನ್ನು ಕೆಡಿಸಲಿಲ್ಲ. ಮತ್ತು ಸೂಕ್ತವಾದ ಅರ್ಥಕೊಡುವ ಪದಗಳನ್ನೇ ಬಳಸಿದ್ದಾರೆ. ಬೈಬಲ್‌ಭಾಷಾಂತರ ಕಾರ್ಯವೊಂದು ‘ಹಂಚಿಕೆಯ ಪ್ರಕ್ರಿಯೆ’ಯಾಗಿದೆ. ಆದುದರಿಂದ ಬೈಬಲ್‌ಭಾಷಾಂತರ ಕಾರ್ಯವು ೧೮೫೮[9]ರಲ್ಲಿ ಸಂಪೂರ್ಣಗೊಂಡಿದ್ದರೂ ತದನಂತರದಲ್ಲಿ ಅದು ಪುನರ್ವಿಮರ್ಶೆಗೆ ಒಳಪಟ್ಟಿತ್ತು. ಇದು ಎರಡು ರೀತಿಯಲ್ಲಿ ಸಹಾಯಕವಾಯಿತು. ಒಂದು ವಿಧದಲ್ಲಿ ತುಳು ಭಾಷೆಯ ಮಟ್ಟವನ್ನು ಹೆಚ್ಚಿಸಲು ಸಹಾಯಕವಾದರೆ ಇನ್ನೊಂದು ವಿಧದಲ್ಲಿ ಭಾಷಾಂತರ ಕಾರ್ಯದಲ್ಲಾದ ತಪ್ಪುಗಳನ್ನು ತಿದ್ದಲು ಇದು ಮಾರ್ಗವಾಯಿತು.

ಬೈಬಲ್‌ನಲ್ಲಿ ಉಪಯೋಗವಾದ ತುಳುಬಾಷೆಯು ಅದು ವಿವಿಧ ಪ್ರದೇಶಗಳಿಂದ ಸಂಕಲಗೊಂಡದ್ದಾಗಿದೆ. ತುಳು ಬೈಬಲ್‌ಅದು ದೈವಿಕತೆಯನ್ನು ಸಾರಲು ಮತ್ತು ಧಾರ್ಮಿಕ ವಿಷಯದ ನಂಬಿಕೆಯ ನಿರೂಪಣೆಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿತ್ತು. ಅದು ಆಡುಭಾಷೆಯ[10] ತಾಂತ್ರಿಕ ಪದಗಳನ್ನು ಬಳಸುತ್ತಿದ್ದರಿಂದ ಜನಸಾಮಾನ್ಯರಿಗೆ ತುಳು ಭಾಷೆಯಲ್ಲೇ ಆರಾಧನೆ ನಡೆಸಲು ಜನರು ತಮ್ಮ ನಂಬಿಕೆಯನ್ನು ಅರ್ಥೈಸಿಕೊಳ್ಳಲು[11] ಈ ಭಾಷಾಂತರಗಳು ಸಹಾಯಕವಾದವು. ಬೈಬಲ್‌ಧಾರ್ಮಿಕ ಗ್ರಂಥವಾದ್ದರಿಂದ ಭಾಷಾಂತರ ಕಾರ್ಯದಲ್ಲಿ ಹೆಸರುಗಳ ನಮೂದಿಸುವಿಕೆಯಲ್ಲಿ ತಪ್ಪುಗಳಾಗದಂತೆ ಎಚ್ಚರ ವಹಿಸುವಂತದ್ದು ಅವಶ್ಯಕವಾಗಿತ್ತು. ಈ ಬೈಬಲ್‌ವಿದೇಶಿ ಭಾಷೆಯಿಂದ ತರ್ಜುಮೆಯಾಗಿರುವುದರಿಂದ ಇದರಲ್ಲಿ ಹೆಚ್ಚಿನ ಹೆಸರುಗಳು ವಿದೇಶಿ ಹೆಸರುಗಳೇ. ಮುಖ್ಯವಾಗಿ ಸ್ಥಳದ ಹೆಸರು ಜನರ ಹೆಸರುಗಳನ್ನು ತುಳು ಬೈಬಲ್‌ನ ಭಾಷಾಂತರ ಕಾರ್ಯದಲ್ಲಿ ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಿ ತುಳು ಭಾಷೆಯ ಶಬ್ದೋಚ್ಚಾರದಲ್ಲಿ ಸರಿದೂಗಿಸಿ ಬರೆದಿದ್ದಾರೆ.[12] ಮಿಶನರಿಗಳು ಭಾಷಾಂತರ ಕಾರ್ಯದಲ್ಲಿ ಕೆಲವೊಂದು ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಂಡಿದ್ದರು. ಅದನ್ನು ಉದಾಹರಣೆಗಳಲ್ಲಿ ಕಂಡುಕೊಳ್ಳಬಹುದು ಭಾಷಾಂತರದಲ್ಲಿ ಕೇವಲ ಸಾಹಿತ್ಯ ಶೈಲಿ ಮಾತ್ರವಲ್ಲ ಮಿಶನರಿಗಳ ಸಾಂಸ್ಕೃತಿಕ ಹಿನ್ನೆಲೆಯೂ ಇದರಲ್ಲಿ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು. ಇಲ್ಲಿನ ಜನತೆಗೆ ಅರ್ಥವಾಗುವ ರೀತಿಯಲ್ಲಿ ವಾಕ್ಯಗಳ ಜೋಡಣೆಯನ್ನು ಸರಿಹೊಂದಿಸುವಲ್ಲಿನ ಇವರ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಮೊತ್ತಮೊದಲನೆಯದಾಗಿ ಇವರು ಬೈಬಲ್‌ನಲ್ಲಿ ಭಾಷಾಂತರ ಕಾರ್ಯಕ್ಕೆ ಕೈಗೆತ್ತಿಕೊಂಡ ವಿಷಯ ಸುವಾರ್ತಾ ಭಾಗ. ಏಕೆಂದರೆ ಪ್ರವಚನ ಇಲ್ಲವೇ ಪ್ರಸಂಗದಲ್ಲಿ ಈ ಸುವಾರ್ತೆಭಾಗ ಕೇಂದ್ರ ಸ್ಥಾನವನ್ನು ಹೊಂದಿತ್ತು. ಹಾಗಾಗಿ ಇಡೀ ಬೈಬಲ್‌ನ ತಿರುಳುಗಳಾಗಿರುವ ಸುವಾರ್ತೆಯನ್ನು ಜನರಿಗೆ ಮೊದಲು ಪರಿಚಯಿಸಿದರು. ಸುವಾರ್ತಗಳಲ್ಲಿರುವ ಅನೇಕ ರೀತಿಯ ಮಾಹಿತಿಗಳು ಅಂದರೆ ಸಾಮ್ಯ ಇಲ್ಲವೇ ಸಾಮತಿಗಳು ಜನರಿಗೆ ಹೆಚ್ಚು ಅರ್ಥಪೂರ್ಣವೆಂದು ತಿಳಿದು ಹಳೆ ಒಡಂಬಡಿಗಿಂತಲೂ ಹೊಸ ಒಡಂಬಡಿಕೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟರು. ಇವರು ಮಹಾಯುದ್ಧದ ಸಮಯದಲ್ಲಿ ಹಿಂತಿರುಗಿದ್ದರಿಂದ ಹಳೆ ಒಡಂಬಡಿಕೆಯು ತರ್ಜುಮೆಯಾಗದೆ ಉಳಿಯಲು ಕಾರಣವಾಯಿತು.[13] ಇಂದಿಗೂ ಅವರು ಮಾಡಿದ ಪುಸ್ತಕಗಳನ್ನಷ್ಟೇ ಬಿಟ್ಟರೆ ಬೈಬಲ್‌ನ ಹಳೆ ಒಡಂಬಡಿಕೆಯ ಉಳಿದ ಪುಸ್ತಕಗಳು ಭಾಷಾಂತರಗೊಳ್ಳದೆ ನೆನೆಗುದಿಗೆ ಬಿದ್ದಿರುವುದು ಶೋಚನೀಯ. ಇವರು ಭಾಷಾಂತರ ಕಾರ್ಯಕ್ಕೆ ಕೊಟ್ಟ ಒತ್ತಿನಿಂದ ತಿಳಿದು ಬರುವುದೇನೆಂದರೆ ಧಾರ್ಮಿಕ ವಿಚಾರವನ್ನು ಇವರು ಬೋಧಿಸುವಾಗ ಅದನ್ನೊಂದು ವ್ಯವಸ್ಥಿತವಾದ[14] ನೆಲೆಗಟ್ಟಿನಲ್ಲಿ ಬೋಧಿಸಿದ್ದಾರೆ ಎನ್ನುವುದನ್ನು ಮುಖ್ಯ. ಬೈಬಲ್‌ಭಾಷಾಂತರ ಕಾರ್ಯವು ಕೂಡಾ ಒಂದು ಸಾಮೂಹಿಕ ಕ್ರಿಯೆಯಾಗಿ ಮುಂದುವರೆದಿದ್ದು ಇದು ಇವರ ಧಾರ್ಮಿಕ ಆಡಳಿತ ವ್ಯವಸ್ಥಗೆ ಹಿಡಿದ ಕೈಗನ್ನಡಿಯಾಗಿದೆ. ಈ ಪೂರ್ವಯೋಜಿತ ಗುರಿಯನ್ನು ಕಂಡುಕೊಂಡಿದ್ದ ಮಿಶನರಿಗಳು ತುಳು ಭಾಷೆಯ ಸಾಹಿತ್ಯದಲ್ಲಿ ಕೂಡಾ ದೊಡ್ಡ ದರ್ಶನವನ್ನು ಕಂಡಿದ್ದರು ಮತ್ತು ಆ ದರ್ಶನದ ಸಂಪೂರ್ತಿಗೆ ಪಣತೊಟ್ಟಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಭಾಷಾಂತರ ಕಾರ್ಯವು ಕೇವಲ ಅಕ್ಷರಶಃ ಭಾಷಾಂತರ ಮಾತ್ರವಾಗಿರದೆ ಅದರಲ್ಲಿ ತಮ್ಮ ಸೃಜನಾತ್ಮಕತೆಯನ್ನು[15] ಮಿಶನರಿಗಳು ಮೆರೆದಿದ್ದಾರೆ. ಯಾಕೆಂದರೆ, ಯಾವುದೇ ಭಾಷೆಯಲ್ಲಿದ್ದ ಲಿಖಿತ ವಿಷಯಗಳನ್ನು ಇನ್ನೊಂದು ಭಾಷೆಗೆ ತರುವಾಗ ಅನೇಕ ರೀತಿಯ ಭಾಷಾ ತೊಡಕು ಉಂಟಾಗುವುದು ಸಹಜವಾಗಿದೆ. ಇದನ್ನು ನಿವಾರಿಸಿ ಆ ಮೂಲಕ ತಮ್ಮ ಭಾಷಾಂತರದಲ್ಲಿ ಸೃಜನಾತ್ಮಕತೆಯನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಸೃಜನಾತ್ಮಕತೆಯ ಉದಾಹರಣೆಗಳನ್ನು ಮುಂದೆ ಉಲ್ಲೇಖಿಸಲಾಗಿದೆ. ಮಿಶನರಿಗಳಿಗೆ ಭಾಷಾಂತರ ಕಾರ್ಯದಲ್ಲಿ ಎಲ್ಲೆಡೆಯೂ ಗೆಲುವೇ ಆಗಿದೆ. ಎಂದಲ್ಲ. ೧೮೫೫ರಲ್ಲಿ ರೆವೆ. ಜೆ.ಜೆ. ಅಮ್ಮನ್‌ರವರ ಬಳಿಯಿದ್ದ ಅನೇಕ ಪುಸ್ತಕಗಳು ಬೆಂಕಿಗಾಹುತಿಯಾದುವು.[16] ಇದು ಅವರ ಇಡೀ ಭಾಷಾಂತರ ಕಾರ್ಯಕ್ಕೆ ತಣ್ಣಿರೇರಚಿದ ಸ್ಥಿತಿಯಾಯಿತು. ಆದರೂ ಎದೆಗುಂದದೆ ಅವರು ಕಂಡ ದರ್ಶನವನ್ನು ಸಂಪೂರ್ತಿಗೊಳಿಸುವ ಕಾರ್ಯದಲ್ಲಿ ಮುಂದೆ ಸಾಗುತ್ತಾ ಹೋದರು. ಬಹುಶಃ ತುಳು ಎಂಬ ಪದಕ್ಕೆ ಮೃದು ಎಂಬ ಅರ್ಥವೂ ಇದೆ ಎಂಬುದು ತುಳು ಮೂಲದಿಂದ ಕಂಡುಬಂದಿದೆ.[17] ಇಂತಹ ತುಳುನಾಡಿನಲ್ಲಿ ಸಾಧನೆಯ ಗುರಿಯ ಕಡೆಗೆ ನಡೆವಲ್ಲಿ ‘ತುಳುಭಾಷೆ’ ಸ್ಫೂರ್ತಿಯಾಯಿತೋ ಏನೋ? ಅವರ ಸಾಧನೆ ಸೋಲು ಗೆಲುವಿನ ನಡುವೆ ಮೃದುತ್ವದಿಂದಲೇ ಮುಂದೆ ಸಾಗಿತು. ಈ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನೇ ಮಾಡಿತು.

ಬೈಬಲ್‌ಭಾಷಾಂತರದ ಕೆಲವೊಂದು ತುಣುಕುಗಳು

ಈ ತುಣುಕುಗಳು ಮಿಶನರಿಗಳ ಭಾಷಾ ಪ್ರಯೋಗಶಿಲತೆಯನ್ನು ಅವರು ಸಾಹಿತ್ಯ ರಂಗದಲ್ಲಿ ಮೂಡಿಸಿದ ಛಾಪನ್ನು ತಿಳಿಸುವಂತದ್ದಾಗಿದೆ. ಮುಖ್ಯವಾಗಿ ಈ ತುಣುಕುಗಳು ಅವರು ಬಳಸಿದ ಪರಿಭಾಷೆಯ ವಿಶಿಷ್ಟತೆಯನ್ನು ಹೇಳುತ್ತವೆ.

ಮತ್ತಾಯ ೬ : ೨೭ – ೨೯

ತುಳು : ನಿಕುಳೆಡ್‌ ಏರ್‌ ಚಿಂತೆ ಮಳ್ತದ್‌, ತನ ಉದ್ದೊಗು ಒಂಜಿ ಮೊರಂಗೆನ್‌ ಕೂಡಾ ವೊಣೊಲಿ? ಬೊಕ್ಕ ತುತ್ತು ಪೊದೆಪುಗಾದ್‌ ನಿಕುಳು ಏವುದಪ್ಪುದೆ ಮಳ್ಪನವು ದಾನೆ? ಕಾಡ್‌ದ ಪೂ ಎಂಚ ಬಳಪುಂಡು? ಅಂದ್‌ದ್‌ ತೂದಿ ಎಣ್ಣೊಣ್ಲೆ; ಅವು ಕಷ್ಟ ಮಳ್ಪುಜಿ, ನೆಯಿಪುಜಿ, ಆಂಡ ನಿಕುಳೆಗ್‌ ಪಣ್ಪೆ ಸೋಲೊಮೋನುಲಾ ತನ ಮಾತ ಮಲ್ಲಾದಿಗೆಡ್‌ ಉಂದೆಟ್‌ ಒಂಜೆತ ಲೆಕ್ಕನೆ ಪೊದೆತೊಂಜೆ.

ಕನ್ನಡ : ಚಿಂತೆ ಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು? ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆ ಮಾಡುವುದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ. ಅವು ದುಡಿಯುವುದಿಲ್ಲ, ನೂಲುವುದಿಲ್ಲ. ಅದಾಗ್ಯೂ ಈ ಹೂವಿನಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ.

ಇಲ್ಲಿ ಬಳಸಲಾದ ಪದಗಳು ‘ಚಿಂತೆ ಮಳ್ತದ್‌’ ಚಿಂತೆ ಮಾಡಿ ಎಂಬುವುದು ಮುಂದಕ್ಕೆ ಚಿಂತೆ ಮಾಡುವುದೇಕೆ ಎಂಬುದನ್ನು ‘ಏವುದಪ್ಪುದೆ ಮಳ್ಪುನವು ದಾನೆ’ ಎಂಬುದಾಗಿದೆ. ಅಂದರೆ ಈ ಸೂಕ್ತ ಪದ ಗಾಢ ಚಿಂತೆಯನ್ನು ಸೂಚಿಸುವ ಪದವಾಗಿದೆ. ಉಡುಪಿನ ಎಂಬ ಪದಕ್ಕೆ ಬಳಕೆಯಾದ ಪದ ‘ತುತ್ತು ಪೊದೆಪುಗಾದ್‌’ ಅಂದರೆ ಉಟ್ಟುಕೊಳ್ಳುವ, ತೊಟ್ಟುಕೊಳ್ಳುವ ವಿಷಯದಲ್ಲಿ ಎಂಬರ್ಥ ಬರುತ್ತದೆ. ‘ನೆಯಿಪುಜಿ’ ನೂಲುವುದಿಲ್ಲ, ಮಾತ ಮಲ್ಲಾದಿಗೆ – ಸಕಲ ವೈಭವ ಎನ್ನುವ ಪದವು ಸೂಕ್ತವೆನಿಸಿದೆ.

ಲೂಕ ೯ : ೫೮

ತುಳು : ಯೇಸು ಆಯಡ – ಕುದಿಕೆರ್ಳೆಗೆ ಮಾಟೆ, ಆಕಾಶದ ಪಕ್ಕಿಳೆಗ್‌ ಪಟ್ಟ್‌ ಉಂಡು; ಆಂಡ ನರಮಾನ್ಯ ಮಗಕ್‌ತರೆ ದೀವರೆ ಅಡಿ ಇಜ್ಜಿ ಅಂದ್‌ದ್‌ ಪಂಡೆ.

ಕನ್ನಡ : ಷಿಯೇಸು ಆತನಿಗೆ – ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯ ಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ ಎಂದು ಹೇಳಿದನು.

ರೋಮಾ ೬ : ೨೩

ತುಳು : ಪಾಪದ ಸಂಬಳ ಮರಣ, ಆಂಡ ದೇವರೆ ಉಡಿಗೆರೆ ನಮ ಕರ್ತವೆ ಆಯಿ ಕ್ರಿಸ್ತ ಯೇಸುಡು ನಿತ್ಯಜೀವ.

ಕನ್ನಡ : ಪಾಪವು ಕೊಡುವ ಸಂಬಳ ಮರಣ, ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿರುವ ನಿತ್ಯಜೀವ.

‘ಉಚಿತಾರ್ಥವರವನ್ನು’ – ಉಡಿಗೆರೆ ಎಂಬುದಾಗಿ ಭಾಷಾಂತರಿಸಿದ್ದಾರೆ. ಪಾಪದ ಸಂಬಳ – ಪಾಪವು ಕೊಡುವ ಸಂಬಳ. ಈ ಭಾಷಾಂತರದ ನಡುವೆ ಪದದ ಅರ್ಥ ಕೆಡದಂತೆ ಚಿಕ್ಕದಾದ ವಾಕ್ಯ ರಚನೆಗೆ ಎಡೆ ಮಾಡಿಕೊಟ್ಟಿರುತ್ತಾರೆ.

ಯಾಕೋಬ ೧ : ೫

ತುಳು : ನಿಕುಳೆಡ್‌ ಒರಿಯಗ್‌ ಬುದ್ಧಿ ಕಡಿಮೆ ಇತ್ತ್‌೦ಡ, ಆಯೆ ಮಾತೆರೆಗ್‌ ಎರವುದಾಂತೆ ಕುಚ್ಚೊಣಂದೆ ಕೊರ್ಪಿ ದೇವೆರೆಡ ನಟ್ಟೊಣಡ್‌, ಅಪಗ ಆಯಗ್‌ ಕೊರುವೆ.

ಕನ್ನಡ : ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ. ಅದು ಅವನಿಗೆ ದೊರಕುವದು. ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.

ಜ್ಞಾನಕ್ಕೆ ಬಳಸಲಾದ ಪದ ‘ಬುದ್ಧಿ’ ಹಂಗಿಸದೆ ಎಂಬುದಕ್ಕೆ ‘ಕುಚ್ಚೊಣಂದೆ’, ಕೊಡುವ ಎಂಬುದಕ್ಕೆ ‘ಕೊರ್ಪಿ’ ಎಂಬ ಪದ ಬಳಸಲಾಗಿದೆ. ಇಲ್ಲೊಂದು ವಿಶೇಷತೆ ಎಂದರೆ ಮೂರು ವಾಕ್ಯವಿರುವುದನ್ನು ತುಳುವಿನಲ್ಲಿ ಸಾರಾಂಶವಾಗಿ ಎರಡು ವಾಕ್ಯಕ್ಕೆ ಇಳಿಸಲಾಗಿದೆ. ಇದು ಭಾಷಾಂತರ ಕಾರ್ಯದಲ್ಲಿ ಮಿಶನರಿಗಳು ತೋರಿದ ಕೌಶಲ್ಯವಾಗಿದೆ.

ಪ್ರಕಟಣೆ : ೧ : ೧೧

ತುಳು : ಅವು ಈ ತೂಪಿನೆನ್‌ ಒಂಜಿ ಪುಸ್ತಕೊಡು ಬರೆದ್‌ ಎಫೆಸು ಸ್ಮುರ್ನ ಪರ್ಗಮು ಥುವತೈರ ಸಾರ್ದೆಸ್‌ ಫಿಲದೆಲ್ಪಿಯ ಲವೂದಿಕೆಯ ಇನ್ಪಿ ಈ ಏಳು ಸಭೆಗಳ್‌ ಕಡಪುಡುಲ ಅಂದ್‌ದ್‌ ಪಣ್‌೦ಡ.

ಅನುವಾದ : ಅದು – ನೀನು ನೋಡುವುದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪಗೆಮ, ಥುವತೈರ, ಸಾರ್ದೆಸ್‌, ಫಿಲದೆಲ್ಫಿಯ, ಲವೂದಿಕೆಯ ಎಂಬೀ ಏಳು ಪಟ್ಟಣಗಳ ಸಭೆಗಳಿಗೆ ಕಳುಹಿಸಬೇಕೆಂದು ನುಡಿಯಿತು.

ಇಲ್ಲಿ ಪಟ್ಟಣಗಳ ಹೆಸರನ್ನು ತುಳುವಿಗೆ ಭಾಷಾಂತರಿಸುವಾಗ ಸ್ವಲ್ಪ ಬದಲಾವಣೆಗಳನ್ನು ಮಾಡಿದ್ದಾರೆ. ಇದು ತುಳುವಿನ ಉಚ್ಚಾರಣೆಗೆ ಹೆಚ್ಚು ಸುಲಲಿತವಾಗುತ್ತದೆಂಬ ಉದ್ದೇಶಕ್ಕೆ ಈ ರೀತಿಯಾದ ಬದಲಾವಣೆಗಳನ್ನು ತಂದಿದ್ದಾರೆ. ಇಡೀ ಬೈಬಲಿನಲ್ಲಿ ಈ ರೀತಿಯಾದ ಬದಲಾವಣೆಯು ಅಲ್ಲಲ್ಲಿ ಕಂಡುಬರುತ್ತದೆ.

ಯೇಸು ಮಳ್ತಿ ಪರ್ವತ ಪ್ರಸಂಗ

ಈ ಚಿಕ್ಕ ಪುಸ್ತಕ ಅದು ಹೊಸ ಒಡಂಬಡಿಕೆಯ ಆಯ್ದ ಕೆಲವು ಭಾಗಗಳನ್ನು ಒಳಗೊಂಡಿದೆ.

ಅ) ಯೇಸು ಶಿಷ್ಟರೆ ಭಾಗ್ಯಲಾ ಮಲ್ಲಾದಿಗೆಲ್ಲಾ ಆ) ಧರ್ಮ – ಪ್ರಾರ್ಥನೆ, ಉಪವಾಸ, ದೇವರಾಜ್ಯ ನ್ಯಾಯ ತೀರ್ವಿಕೆ, ಪ್ರಾರ್ಥನೆಯ ಬಲ ಕೆಲವು ಜೀವನ ಸೂತ್ರದ ಕುರಿತಾಗಿ ಬರೆದಿದೆ. (ಇದು ಸುಮಾರು ೩೦೦ ಪ್ರತಿ ಅಚ್ಚಾಗಿದೆ ಎಂದರೆ ಹೆಚ್ಚು ಜನರು ಓದಲು ಬಳಸಿದರೆನ್ನಬಹುದು.) ಇದು ಅಂಗೈಯಗಲದ ಪುಸ್ತಕ. ಇವರ ಪ್ರಕಟಣೆಯಲ್ಲಿ ಇದೇ ಚಿಕ್ಕ ಪುಸ್ತಕವಿರಬೇಕು.

ನಮ್ಮ ಕರ್ತವೆ ಆಯಿ ಯೇಸುಕ್ರಿಸ್ತ ಶ್ರಮಳೆ ವರ್ತಮಾನ
(ನಾಲ್ಕು ಸುವಾರ್ತೆಗಳಿಂದ ಎತ್ತಿ ಪೋಣಿಸಿದ್ದು)

ಯೇಸುಕ್ರಿಸ್ತನ ಶ್ರಮೆ ಮರಣದ ಕುರಿತಾಗಿ ಒಂದು ವಿವರವನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಇದು ದೇವರಾಧನಾ ಪದ್ಧತಿಯ ಪುಸ್ತಕದಲ್ಲು ಕೂಡಾ ಇದೆ. ಇದರಲ್ಲಿ ನಾಲ್ಕು ಸುವಾರ್ತಮಾನದಿಂದ ತೆಗೆದ ಅಂಶಗಳನ್ನು ಒಟ್ಟು ಸೇರಿಸಿ ಕಥನವನ್ನು ಮುಂದುವರಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಯೇಸುವಿನ ಜೀವನದ ಕಡೇ ಗಳಿಗೆಯನ್ನು ವಿವರಿಸಲಾಗಿದೆ. ಜನರಿಗೆ ಯೇಸುವಿನ ಜೀವನದ ಮೂಲ ಸಂದೇಶ ತಿಳಿಯಬೇಕೆನ್ನುವುದೇ ಮಿಶನರಿಗಳ ಮೂಲ ಉದ್ದೇಶವಾಗಿದ್ದಿತು. ಅದಕ್ಕಾಗಿಯೇ ಸುವಾರ್ತೆಯ ಶ್ರಮಾಚರಿತ್ರೆಯನ್ನು ಕ್ರೋಡೀಕರಿಸಿದ್ದಾರೆ. ಇಲ್ಲಿ ಗಮನಿಸಬೇಕಾದಸ ಅಂಶ ಎಂದರೆ ಅಚ್ಚಾದ ಪುಸ್ತಕದಲ್ಲಿನ ಕೆಲವಾರು ತಪ್ಪುಗಳನ್ನು ಕೊನೆಯ ಪುಟದಲ್ಲಿ ನೀಡಿದ್ದಾರೆ.

ಉದಾ : ನಿತ – ನಿತ್ಯ, ದೇವರೆ – ದೇವರೆ, ಅವ್ವೇ – ಅವ್ವೆ.[18] ಇದರಿಂದಾಗಿ ತಿಳುದುಬರುವುದೇನೆಂದರೆ ತುಳು ಭಾಷೆಯು ಕಡೆಗೆ ಅವರಿಗಿದ್ದ ಹಂಬಲ ಮತ್ತು ಕಲಿಯಬೇಕೆನ್ನುವ ಉತ್ಕಟತೆ, ಮನಸ್ಸು, ತಪ್ಪಾದಲ್ಲಿ ಸರಿಪಡಿಸಿಕೊಳ್ಳುವ ವಿಶಾಲತೆ, ತಿದ್ದಿಕೊಳ್ಳುವ ಜಾಣ್ಮೆ – ಇದೆಲ್ಲವೂ ತುಳು ಸಾಹಿತ್ಯವು ಬೆಳೆಯುವಂತೆ ಮಾಡಿದುದರಲ್ಲಿ ಮಿಶನರಿಗಳ ಕೊಡುಗೆಯಿದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಅವರು ತೆಗೆದುಕೊಂಡ ನಿರ್ಧಾರಗಳನ್ನು ಸಾಹಿತ್ಯದೃಷ್ಟಿಯಿಂದ ನೋಡುವುದಾದರೆ ಅದು ಸಾಹಿತ್ಯದ ಬೆಳವಣಿಗೆ ತೆಗೆದುಕೊಂಡ ವಿಶೇಷವಾದ ನಿಲುವುಗಳಾಗಿದ್ದವು.

ನೀತಿ ವಚನೊಲು : ಜ್ಞಾನೋಕ್ತಿಗಳು

ಜ್ಞಾನೋಕ್ತಿ ಅನ್ನುವುದನ್ನು ತರ್ಜುಮೆಗೊಳಿಸಿದಾಗ ನೀತಿವಚನೊಲು (ನೀತಿವಚನ) ಎಂಬುದಾಗಿ ಮಾಡಿದ್ದಾರೆ. ಇದು ನೀತಿಯ ಸಂಬಂಧವಾಗಿ ತಿಳಿಸುವ ಬೈಬಲ್‌ಭಾಷಾಂತರವಾಗಿದೆ.

ಜ್ಞಾನೋಕ್ತಿ ೩:೯

ತುಳು : ನಿನ ಬದ್‌ಕ್‌ ಭಾಗ್ಯೊಡ್ದುಲಾ ನಿನ ಮಾತ ಹುಟ್ಟೊಳಿದ ಪೊಸ ಫಲೊಡ್ದುಲಾ ಯೆಹೋವಗ್‌ ಮಾನ ಕೊರ್ಲ.

ಕನ್ನಡ : ನಿನ್ನ ಆದಾಯದಿಂದಲೂ ಬೆಳೆಯ ಪ್ರಥಮ ಫಲದಿಂದಲೂ ಯಹೋವನನ್ನು ಸನ್ಮಾನಿಸು.

ಜ್ಞಾನೋಕ್ತಿ ೨೦ : ೨೦

ತುಳು : ತನ ಅಪ್ಪೆ ಅಮ್ಮನ್‌ ಶಾಪಿಯುನಾಯೆ ಯೇರಾ, ಆಯೆ ತುಡರ್‌ ತೆಕ್ಕ್ ದ ಗರ್ಗಂಡ ಕತ್ತಲೆಡ್‌ ಬೂರುವೆ.

ಕನ್ನಡ : ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನ ದೀಪವು ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವುದು.

ಹಳೆ ಒಡಂಬಡಿಕೆಯ ಮೊದಲನೆಯ ಪುಸ್ತಕವಾದ ಆದಿಕಾಂಡ ಇಲ್ಲವೇ ಉತ್ಪತ್ತಿಯನ್ನು (Jenesis) ‘ಮೋಸೆನವು ದುಂಬುದ ಪುಸ್ತಕ ಉತ್ಪತ್ತಿ’ ಎಂಬುದಾಗಿ ಭಾಷಾಂತರಿಸಿದ್ದಾರೆ. ಇದು ಒಂದು ಚಿಕ್ಕ ಪುಸ್ತಕವಾಗಿಯೇ ಹೆಚ್ಚು ಪ್ರಚಲಿತದಲ್ಲಿತ್ತೆಂದು ಮಿಶನರಿ ವರದಿ[19] ಯಿಂದ ಕಂಡುಕೊಳ್ಳಬಹುದಾಗಿದೆ.

ಉತ್ಪತ್ತಿ ೨:೯:೧೪

ತುಳು : ಬೊಕ್ಕ ಯೆಹೋವೆ ದೇವರ್‌ ತೂವೆರೆ ಪೊರ್ಲುಲಾ ತಿನಿಯರೆ ಎಡ್ಡೆಲಾ ಆದುಪ್ಪು ಮಾತ ತರತ ಮರಕುಳೆನ್‌, ತೊಟದ ನಡುಟು ಜೀವನ ಮರೊನು ಎಡ್ಡೆ ಪಡಿಕೆ ಪಿನ್ಪಾವು ಜ್ಞಾನದ ಮರೊನುಲಾ ಭೂಮಿಡ್‌ ಕೊಡಿಪಾಯೆ. ತೋಟೊನು ನೆನೆಪೆರೆ ಯೋದೆನ್‌ಡ್‌ ಒಂಜಿ ತುದೆ ಪುಟ್ಟ್‌೦ಡ್‌. ಅವು ಅಳ್ತ್‌ಪಾಲಾದ್‌ ನಾಲ್‌ಕೈ ಆಂಡ್‌ ಒಂಜನೆದೆತ್ತ ಪಿದರ್‌ ಫಿಶೋನ್‌; ಅವು ಇಡೀ ಹವಿಲ ದೇಶದ ಸುತ್ತ ಪುರಪುಂಡು. ಅವುಳು ಬಂಗಾರ ಉಂಡು. ಆ ದೇಶದ ಬಂಗಾರ್ ಎಡ್ಡೆ ಬಂಗಾರ್‌; ಅವುಳು ಬೆದೋಳ, ಗೋಮೇಧಿಕ, ಕಲ್ಲ್‌ಉಂಡು. ರಡ್ಡನೇ ತುದೆತ ಪುದರ್‌ ಗಿಹೋನ್‌; ಅವು ಇಡೀ ಕೂಷ್‌ದೇಶದ ಸುತ್ತ ಪರಪುಂಡು. ಮೂಜಿನೇ ತುದೆತ ಪುದರ್‌ ಹಿದೆಕಲ್‌. ಅವು ಅಶೂರ್ಯದ ಮೂಡಯಿಡೆ ಪರಪುಂಡು. ನಾಲ್ಕನೇ ತುದೆ ಫ್ರಾತ್‌.

ಕನ್ನಡ : ಯಹೋವ ದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯ ಮಾಡಿದನು. ಅದಲ್ಲದೆ ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನೂ, ಒಳ್ಳೆದರ ಕೆಟ್ಟದರ ಅರುಹವನ್ನೂ ಹುಟ್ಟಿಸುವ ವೃಕ್ಷವನ್ನೂ ಬೆಳೆಯಿಸಿದನು. ಈ ಏದೆನ್‌ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತ್ತು. ಅದು ಆಚೆ ಕಡೆಯಲ್ಲಿ ಒಡೆದು ನಾಲ್ಕು ಶಾಖೆಗಳಾಯಿತು. ಮೊದಲನೆಯ ಹೆಸರು ಪೀಶೋನ್‌; ಅದು ಬಂಗಾರ ದೊರಕುವ ಹವೀಲ ದೇಶವನ್ನೆಲ್ಲ ಸುತ್ತುವದು. ಆ ದೇಶದ ಬಂಗಾರವು ಶ್ರೇಷ್ಠವಾದದ್ದು. ಅಲ್ಲಿ ಬದೋಲಖ ಧೂಪವು, ಗೋಮೇಧಿಕ ರತ್ನವೂ ಸಿಕ್ಕುತ್ತದೆ. ಎರಡನೇ ನದಿಯ ಹೆಸರು ಗಿಹೋನ್‌. ಅದು ಕೂಷ್‌ದೇಸವನ್ನೆಲ್ಲ ಸುತ್ತುವದು. ಮೂರನೆಯ ನದಿಯ ಹೆಸರು ತಿದ್ದೆಕಲ್‌. ಅದು ಅಶೂರ್ಯ ದೇಶದ ಮುಂದೆ ಹರಿಯುವದು. ನಾಲ್ಕನೆಯದು ಯುಪ್ರೇಟೀಸ್‌ನದಿ.

ಇಲ್ಲಿ ಜೀವದಾಯಕ ವೃಕ್ಷಕ್ಕೆ ಬಳಸಲಾದ ಪದ – ಜೀವದ ಮರೋ ನಾಲ್ಕು ಶಾಖೆಯಾಯಿತು ಎಂಬುದನ್ನು ತುಳುವಿನಲ್ಲಿ ಭಾಷಾಂತರಿಸುವಾಗ ‘ನಾಲ್‌ಕೈ ಆಂಡ್‌’ ಎಂಬುದಾಗಿದೆ. ಇದನ್ನೊಂದು ಉಪಮೆಯಾಗಿ ಬಳಸಿದ್ದಾರೆ. ನದಿಯನ್ನು ಕೈಗೆ ಹೋಲಿಸಿದ್ದಾರೆ. ಬದೋಲಖ – ಬೆದೋಳ, ಯುಪ್ರೇಟಿಸ್‌ಫ್ರಾತ್‌ಎಂಬುದಾಗಿ ಭಾಷಾಂತರಿಸಿದ್ದಾರೆ. ಕೆಲವು ವೇಳೆ ಉಚ್ಚಾರದ ಬದಲಾವಣೆಗಾಗಿ ಹೆಸರುಗಳನ್ನು ಬದಲಾಯಿಸಿದರೆ, ಕೆಲವು ಕಡೆ ಯುಪ್ರೇಟೀಸ್‌ಗೆ ‘ಫ್ರಾತ್‌’ ಎಂಬುದಾಗಿ ಬಳಸಿದ್ದಲ್ಲಿ ಬೈಬಲನ್ನು ಹೆಚ್ಚು ಪರಿಸರಬದ್ಧರಾಗಿ ನೋಡಬಯಸಿದ್ದಾರೆ.

ಉತ್ಪತ್ತಿ ೨೫ : ೩೪

ತುಳು : ಆಪಗ ಯಾಕೋಬ್‌ ಯೇಸಾಬ್‌ಗ್‌ ರೊಟ್ಟಿಲಾ ಪದೆಂಗಿದ ಪಾಯಸಲಾ ಕೊರಿಯೆ; ಆಯೆ ಉಂಡುದು ತಿಂದ್‌ದ್‌ ಲಕ್ಕದ್ ಪೋಯೆದ್ರಿಯೆ. ಇಂಚೆನೆ ಯೇಸಾವು ತನ ಕಡೀರ್‌ ಹಕ್ಕ್‌ನ್‌ ಅಗ್ಗ ಮಳ್ತೆ.

ಅನುವಾದ : ಆಗ ಯಾಕೋಬನು ಯೇಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯನ್ನೂ ಕೊಟ್ಟನು. ಯೇಸಾವನು ತಿಂದು ಕುಡಿದು ಎದ್ದು ಹೋದನು. ಹೀಗೆ ಅವನು ತನ್ನ ಚೊಚ್ಲತನದ ಹಕ್ಕನ್ನು ತಾತ್ಸಾರ ಮಾಡಿದನು.

ಅಲಸಂದಿ ಗುಗ್ಗರಿಗೆ ಬಳಸಲಾದ ಪದ -‘ಪದೆಂಗಿದ ಪಾಯಿಸ’. ಇದು ತುಳು ಭಾಷೆಯಲ್ಲಿ ಹೆಚ್ಚು ಪ್ರಚಲಿತವಿರುವ ಒಂದು ತಿನಿಸಾಗಿದೆ. ಇದನ್ನು ಪರಿಸರಕ್ಕೆ ತಕ್ಕಂತೆ ಭಾಷಾಂತರಿಸಿದ್ದಾರೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ. ಚೊಚ್ಚಲತನಕ್ಕೆ ಕಡೀರ್‌ ಎಂಬ ಸರಿಯಾದ ಪದವನ್ನು ಬಳಸಿರುವುದು ಅವರ ಭಾಷಾಪ್ರೌಢಿಮೆಯನ್ನು ತಿಳಿಸುವಂತಹದ್ದಾಗಿದೆ.

ಉತ್ಪತ್ತಿ ೨೮ :೧೦

ತುಳು : ಯಾಕೊಬ್‌ ಬೇರ್ಷಬಡ್ದ್‌ ಪಿದಾಡ್‌ದ ಹಾರಾನುಗು ಪೋನಗ

ಕನ್ನಡ : ಯಾಕೋಬನು ಹಾರಾನಿಗೆ ಹೋಗಬೇಕೆಂದು ಬೇರ್ಷಬದಿಂದ ಹೊರಟನು. ಇಲ್ಲಿ ಒಂದು ವಾಕ್ಯ ಸಂಪೂರ್ತಿಗೊಳ್ಳುತ್ತಿದ್ದರೆ ತುಳು ಭಾಷಾಂತರದಲ್ಲಿ ಅದನ್ನು ಮುಂದುವರಿಯುವ ವಾಕ್ಯವನ್ನಾಗಿ ರಚಿಸಿದ್ದಾರೆ.

ಉತ್ಪತ್ತಿ ೫೦ : ೧೯ – ೨೦

ತುಳು : ಯೇಸೇಫ್‌ ಆಕುಳೆಡ್‌ – ಪೋಡಿಯೆಡೆ ಯಾನ್‌ ದೇವರೆ ಜಾಗಡ್‌ ಉಳ್ಳೆನಾ? ನಿಕುಳು ಎಂಕ್‌ಕೇಡ್‌ ಬಗೆಯರ್‌ ಅಂದ್‌; ಐನ್‌ ಎಡ್ಡಗ್‌ ತಿರ್‌೦ಗಾಯೆ;

ಕನ್ನಡ : ಯೇಸೇಫನು ಅವರಿಗೆ ಹೆದರಬೇಡಿ, ನಾನೇನು ದೇವರ ಪ್ರತಿನಿಧಿಯೇ? ನೀವಂತೂ ನನಗೆ ಕೇಡಾಗಬೇಕೆಂದು ಎನ್ನಿಸಿದ್ದೀರಿ. ಆದರೆ ದೇವರು ಮೇಲಾಗಬೇಕೆಂದು ಸಂಕಲ್ಪಿಸಿದನು.

ದೇವರ ಪ್ರತಿನಿಧಿ ಎಂಬುದಕ್ಕೆ ಬಳಸಲಾದ ಪದ – ‘ದೇವೆರೆ ಜಾಗೂಡು ಉಳ್ಳೆನಾ’ ಇದು ಪ್ರತಿನಿಧಿತ್ವವನ್ನು ಸೂಚಿಸುವ ಪದವಾಗಿದೆ. ಮೇಲಾಗಬೇಕೆಂದು ಸಂಕಲ್ಪಿಸಿದನು ಎಂಬುದನ್ನು ಸ್ವಲ್ಪ ಬದಲಿಸಿ – ‘ಏನ್‌ಎಡ್ಡಗ್‌ತಿರ್‌೦ಗಾಯೆ’ ಎಂಬುದಾಗಿ ಭಾಷಾಂತರಿಸಿದ್ದಾರೆ.

ಮೋಶೆಯ ಎರಡನೆಯ ಪುಸ್ತಕ – ಹೊರಡೋಣ (ವಿಮೋಚನಾ ಕಾಂಡ – Exodus) ‘ಮೋಸೆನವು ರಡ್ಡನೆ ಪುಸ್ತಕ ಹೊರಡೋಣ ಎಂಬುದಾಗಿ ಭಾಷಾಂತರಿಸಿದ್ದಾರೆ.

ಹೊರಡೋಣ ೨ : ೧೬

ತುಳು : ಅವುಳು ಒಂಜಿ ಗುವೆಲ್‌ದ ಕೈತಳ್‌ ಕುಳ್ಳಿಯೆ.

ಕನ್ನಡ : ಅಲ್ಲಿ ಒಂದು ಬಾವಿಯ ಹತ್ತಿರ ಕೂತುಕೊಂಡಿರಲು….. ಇಲ್ಲಿ ವಾಕ್ಯ ರಚನೆ ಮುಂದುವರೆದಿದ್ದರೆ ತುಳು ಭಾಷಾಂತರದಲ್ಲಿ ವಾಕ್ಯ ರಚನೆಗೆ ಪೂರ್ಣ ವಿರಾಮವನ್ನು ಕೊಟ್ಟಿರುತ್ತಾರೆ. ಬಾವಿಗೆ ಕೆಲವೆಡೆ ಗುವೆಲ್‌ ಕೆಲವೆಡೆ ಉಗ್ಗೆಲ್‌ ಎಂಬುದಾಗಿ ಉಪಯೋಗಿಸುತ್ತಾರೆ ಈ ಪದ ಬಳಕೆಯು ಭಾಷಾಂತರ ಕ್ರಿಯೆ ಸ್ಥಳದಲ್ಲಿನ ಪ್ರಭಾವವನ್ನು ತಿಳಿಸುವಂಥಹದ್ದಾಗಿದೆ.

ಹೊರಡೋಣ ೪ : ೯

ತುಳು : ಈ ರಡ್ಡ್‌ ಗುರ್ತೊಗು ಆಕುಳ ನಂನಂದೆ ನಿನ ಪಾತರೇ ಕೇಣಂದೆ ಪೋಂಡ ತುದೆತ ನೀರ್‌ ದೆತ್ತುದ್‌ ನುಂಗೆಲ್‌ ನೆಲಕ್ ಮೈಪುಲ. ಈ ದೆತ್ತಿ ತುದೆತ ನೀರ್‌ ನುಂಗೆಲ್‌ ನೆಲಟ್‌ ನೆತ್ತರ್ ಆವು ಅಂದೆ.

ಕನ್ನಡ: ಈ ಎರಡು ಮಹತ್ಕಾರ್ಯಗಳನ್ನು ಅವರು ಮನಸ್ಸಿನ ತೆಗೆದುಕೊಳ್ಳದೆಯೂ ನಿನ್ನ ಮಾತನ್ನು ನಂಬದೆಯೂ ಹೋದರೆ ನೀನು ನೈಲ್‌ ನದಿಯಿಂದ ನೀರನ್ನು ತೆಗೆದುಕೊಂಡು ಒಣಗಿದ ನೆಲದಲ್ಲಿ ಸುರಿಯಬೇಕು. ಆಗ ನೆಲದಲ್ಲಿ ಸುರಿದ ನೀರು ರಕ್ತವಾಗುವದು ಎಂದು ಹೇಳಿದನು.

ಇಲ್ಲಿ ‘ತುದೆತ ನೀರ್‌’ ಎಂಬುದಾಗಿ ಮಾತ್ರವಿದೆ. ಬೇರೆ ಭಾಷಾಂತರದಲ್ಲಿ (ಇತರ ಭಾಷೆಯ ಬೈಬಲ್‌ಲ್ಲಿ) ನೈಲ್‌ ನದಿಯ ನೀರು ಎಂಬುದಾಗಿದೆ. ಅನೇಕ ಕಡೆ ನೈಲ್‌ ನದಿ ಎಂಬುದನ್ನು ಬಳಸದಿದ್ದದು ಏಕೆ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ.

ಹೊರಡೋಣ ೧೦ : ೨೨

ತುಳು : ಮೋಸೆ ತನ ಕೈಬಾನೊಗು ನೀಡ್‌ನಗ ಐಗುಪ್ತ ದೇಶೊಡು ಒರ್ಮೆಲಾ ಮೂಜಿ ದಿನತ ಗರ್ಗಂಡ ಕತ್ತಲೆ ಆಂಡ್‌.

ಕನ್ನಡ : ಮೋಸೆ ಆಕಾಶಕ್ಕೆ ಕೈಚಾಚಿದಾಗ ಐಗುಪ್ತದ ದೇಶದಲ್ಲೆಲ್ಲಾ ಮೂರು ದಿವಸ ಕಾರ್ಗತ್ತಲು ಮುಚ್ಚಿಕೊಂಡಿತು.

ದೇಶದಲ್ಲೆಲ್ಲಾ ಅಥವಾ ದೇಶದ ಎಲ್ಲಾ ಕಡೆ ಎಂಬುದಕ್ಕೆ ‘ದೇಶೊಡು ಒರ್ಮೆಲಾ’ ಎಂಬ ಪದ ಬಳಸಲಾಗಿದೆ. ಕಾರ್ಗತ್ತಲು ಎಂಬುದಕ್ಕೆ ಗರ್ಗಂಡ ಕತ್ತಲೆ ಎಂಬುದು ಆಗಿ ಭಾಷಾಂತರಿಸಲಾಗಿದೆ. ಈ ಭಾಷಾಂತರಗಳ ಶೈಲಿಯು ಉತ್ತಮವಾಗಿದೆ.

ಹೊರಡೋಣ ೨೦ : ೧ – ೩

ತುಳು : ದೇವರ್‌ ಈ ಮಾತ ಪಾತೆರೊಲೆನ್‌ ಪಾತೆರಾದ್‌ ಪಂಡಿನಿ ನಿನಗ್‌ ಐಗುಪ್ತ ದೇಶೊಡ್ದು ಗುಲಾಮತನದ ಇಲ್ಲಡ್ದ್‌ ಪಿದಯಿ ಲೆತ್ತೊಣ್ಣು ಬತ್ತಿ ನಿನ ದೇವೆರಾದುಪ್ಪು ಕರ್ತವೆ ಯಾನೇ ಎನ ಹೊರ್ತು ನಿಕ್ಕ್‌ಬೇತೆ ದೇವೆರುಳು ಉಪ್ಪೆರೆ ಆವಂದ್‌.

ಕನ್ನಡ : ದೇವರು ಮುಂದಣ ಆಜ್ಞೆಗಳನ್ನೆಲ್ಲಾ ಕೊಟ್ಟನು. ನೀನು ದಾಸತ್ವದಲ್ಲಿದ್ದ ಐಗುಪ್ತ ದೇಶದೊಳಗಿಂದ ನಿನ್ನನ್ನು ಬಿಡುಗಡೆ ಮಾಡಿದ ಯೆಹೋವನು (ಕರ್ತನು) ಎಂಬ ನಿನ್ನ ದೇವರು ನಾನೇ. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.

ಇಲ್ಲಿ ಕನ್ನಡ ಬೈಬಲಿನಲ್ಲಿರುವಂತೆ ಯೆಹೋವ ಎಂಬ ಪದ ಬಳಕೆಯಾಗಿಲ್ಲ. ಬದಲಾಗಿ ‘ಕರ್ತವ’ ಎಂಬ ಪದ ಬಳಸಿದ್ದಾರೆ. ಬೇರೆ ಕಡೆ ಯೆಹೋವ ಎಂದು ಬಳಸಲಾಗಿದೆ. ಉದಾ : ೪೦ : ೨೪ರಲ್ಲಿ ಬಳಸಿದ್ದಾರೆ. ದೇವರುಗಳು ಎಂಬುದಕ್ಕೆ ‘ದೇವರುಳು’ ಎಂಬುದಾಗಿ ಭಾಷಾಂತರವಾಗಿದೆ.

ಕೀರ್ತನೆಗಳು : ಇದಕ್ಕೆ ಶಿರೋನಾಮೆಯನ್ನು ಕೊಡಲಾಗಿದೆ. ಹೊಸ ಒಡಂಬಡಿಕೆಯಲ್ಲಿ ಈ ರಿತೀಯ ಶಿರೋನಾಮೆ ಇಲ್ಲ. ಕೀರ್ತನೆಗಳಲ್ಲಿ ಇದು ನಂತರದ ಪ್ರಯತ್ನವಾಗಿದೆ.

ತುಳು : ಕೀರ್ತನೆ ೧೯ : ೧೦

ತುಳು : ಅವು ಭಂಗಾರ್‌ಡ್‌ದ್‌ಲಾ ದಿಂಜ ಪುತ್ತೊಲಿ ಭಂಗಾರ್‌ಡ್‌ಲಾ ಬಿಲೆ ಇತ್ತಿನವು. ತಿಗತ ನೆಯಿಡ್‌ದ್‌ಲಾ ತಿಗತ ತೀಪೆಡ್‌ದ್‌ಲಾ ಕಡು ಇತ್ತಿನವು.

ಕನ್ನಡ : ಅದು ಬಂಗಾರಕ್ಕಿಂತಲೂ ಅಪರಂಜಿಗಿಂತಲೂ ಅಪೇಕ್ಷಿಸ ತಕ್ಕವುಗಳು. ಅವು ಜೇನಿಗಿಂತಲೂ ಶೋಧಿಸಿದ ಜೇನುತುಪ್ಪಕ್ಕಿಂತಲೂ ಸಿಹಿಯಾಗಿದೆ.

ಅಪರಂಜಿಗೆ ಬಳಸಲಾದ ಪದ ‘ದಿಂಜ ಪುತ್ತೊಲಿ ಬಂಗಾರ್‌ಡ್‌ದ್‌ಲಾ ಎಂಬುದಾಗಿದೆ.

ಕೀರ್ತನೆ ೯೦ : ೩

ತುಳು : ನರಮಾನ್ಯ ಕುಡ ಧೂಳು ಆಪಿಲೆಕಕ ಮಳ್ತದ್‌ನರಮಾನ್ಯ ಬಾಲೆಳೆ ತಿರ್‌೦ಗ್‌ದ್‌ಬಲ್ಲೆ ಅಂದ್‌ದ್‌ಪಣ್ಪೆ.

ಕನ್ನಡ : ಮನುಷ್ಯರಿಗೆ ಬಳಸಲಾದ ಪದ -‘ನರಮಾನ್ಯ’. ಇಲ್ಲಿ ಮನುಷ್ಯರೇ ತಿರುಗಿ ಬನ್ನಿ ಎಂದು ಹೇಳುತ್ತಾನೆ ಎಂಬುದು ಇಲ್ಲಿ ಹೆಚ್ಚುವರಿ ಭಾಷಾಂತರವಾಗಿದೆ ಎಂದು ಹೇಳಬಹುದು.

ಕೀರ್ತನೆ ೯೫ : ೧

ತುಳು : ಬಲ್ಲೆ, ಯಹೋವಗ್‌ ಸಂತೋಷದ ರಾಗ ಒಯಿಪುಗ;

ಕನ್ನಡ : ಬನ್ನಿರಿ, ಯಹೋವನಿಗೆ ಉತ್ಸಾಹ ಧ್ವನಿಯ್ಯುವಾ;

ಉತ್ಸಾಹ ಧ್ವನಿಗೆಯ್ಯುವ ಎಂಬುವಂಥದ್ದು ಸಂತೋಷದ ರಾಗ ಒಯಿಪುಗ ಎಂದು ಭಾಷಾಂತರಿಸಲಾಗಿದೆ.

ಕೀರ್ತನೆಯಲ್ಲಿ ಬಳಕೆಯಾದ ಕೆಲವೊಂದು ಪದಗಳು ಬೈಬಲ್‌ನ ಇತರ ಭಾಷಾಂತರಕ್ಕಿಂತ ಬೇರೆ ರೀತಿಯಲ್ಲಿದೆ. ತುಳು ಸಾಹಿತ್ಯ ಮಟ್ಟದಲ್ಲಿ ಈ ಭಾಷಾಂತರವು ಅಷ್ಟಾಗಿ ತೃಪ್ತಿಕರವಾಗಿಲ್ಲ, ಬಹುಶಃ ಭಾಷಾಂತರಕಾರನ ಕೌಶಲ್ಯದ ಮೇಲೆ ಇದು ಆಧಾರವಾಗಿರಬೇಕು. ಇದನ್ನು ಇನ್ನೂ ಪುನರ್ವಿಮರ್ಶೆಗೆ ಬಳಸಿ ಪರಿಷ್ಕರಿಸುವ ಅಗತ್ಯವಿದೆ.[20]

ದಾನಿಯೇಲ್‌ ೧ : ೨೧

ತುಳು : ದಾನಿಯೇಲ್‌ ಕೊರೇಷು ಅರಸು ದುಂಬುದ ವರ್ಷ ಮುಟ್ಟ ಬದ್‌ಕಿಯೆ.

ಕನ್ನಡ : ದಾನಿಯೇಲನು ರಾಜನಾ ಕೊರೇಷನ ಆಳ್ವಿಕೆಯ ಮೊದಲನೆಯ ವರುಷದ ತನಕ ಸನ್ನಿಧಿ ಸೇವಕನಾಗಿಯೇ ಇದ್ದನು.

ಇಲ್ಲಿ ‘ಬದ್‌ಕ್‌ಯೆ’ ಎಂಬುದು ಬದುಕುಳಿದನು ಎಂಬುದಾಗಿ ಅರ್ಥವಿದೆ. ಕನ್ನಡದಲ್ಲಿ ಮುಂದುವರಿದನು ಎಂಬುದಾಗಿದೆ.

ದಾನಿಯೇಲ್‌ ೬ : ೨೮

ತುಳು : ಈ ದಾನಿಯೇಲ್‌ ದರೀಯ ಆಳಿಕೆಡ್‌ಲಾ ಪಾರ್ಸಿಯದ ಕೊರೇಷು ಆಳಿಕೆಡ್‌ಲಾ ಬೆಳಗೊಣುದಿತ್ತೆ.

ಕನ್ನಡ : ಈ ದಾನಿಯೇಲನು ದಾರ್ಯಾವೇಷದ ಆಳ್ವಿಕೆಯಲ್ಲೂ ಪಾರಸಿಯನಾದ ಕೊರೇಷನ ಆಳ್ವಿಕೆಯಲ್ಲಿಯೂ ಧನವಂತನಾಗಿ ಬಾಳಿದನು.

ದಾರಿಯಾವೇಷ – ‘ದರಿಯ’ ಎಂದು ಪರ್ಶಿಯಕ್ಕೆ – ‘ಪಾರ್ಸಿಯ’ ಎಂಬ ಹೆಸರು ಬಳಸಲಾಗಿದೆ. ಧನವಂತನಾಗಿ ಬಾಳಿದನು ಎಂಬುದನ್ನು ‘ಬೆಳಗೊಣುದಿತ್ತೆ’ ಎಂದು ನಿಖರವಾಗಿ ಮತ್ತು ಮೂಲಾರ್ಥಕ್ಕೆ ಕುಂದು ಬಾರದ ರೀತಿಯಲ್ಲಿ ಭಾಷಾಂತರ ಮಾಡಲಾಗಿದೆ.

ದಾನಿಯೇಲ್‌ ೧೨ : ೩

ತುಳು : ಬುದ್ಧಿವಂತೆರ್‌ ಬಾನದ ಜಳಕೊಗು ಸಮ, ದಿಂಜಗ್‌ನೀತಿ ಮಾರ್ಗ ಪಂಡ್‌ದ್‌ ಕೊರ್ಪಿನಾಕುಳು ಬೊಳ್ಳಿಗ್‌ ಸಮ. ಯೇನಿತ್ಯೇನಿಗ್‌ಲಾ ಬೆಳಗೊಣ್ದುಪ್ಪೆರ್.

ಕನ್ನಡ : ಜ್ಞಾನಿಗಳು ತೇಜೋಮಯವಾದ ಆಕಾಶಮಡಲದಂತೆ ಪ್ರಕಾಶಿಸುವರು. ಬಹುಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗ ಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು. ತೇಜೋಮಯಕ್ಕೆ ಜಳಕೊಗು ಎಂದು, ನಕ್ಷತ್ರಕ್ಕೆ ‘ಬೊಳ್ಳಿ’ ಎಂದು ಭಾಷಾಂತರಿಸುತ್ತಾರೆ. ವಿಶೇಷವಾಗಿ ಯುಗ ಯುಗಾಂತರಗಳಲ್ಲಿ ಎಂಬುದಕ್ಕೆ ಬಳಸಲಾದ ಪದ ‘ಯೇನಿತ್ಯೇನಿಗ್ಲಾ’ ಎಂಬುದೊಂದು ಉತ್ತಮ ಭಾಷಾಂತರವಾಗಿದೆ.

ತುಳು ಬೈಬಲ್‌ಭಾಷಾಂತರಗಳು ಸಾಕಷ್ಟು ಉತ್ತಮವಾದದ್ದೇ ಎಂದು ಹೇಳಬಹುದು. ಯಾಕೆಂದರೆ ಕೆಲವು ಕಡೆಯ ಭಾಷಾಂತರಗಳಲ್ಲಿ ಸರಿಯಾದ ತುಳು ಶಬ್ದ ಉಪಯೋಗವಾಗಿಲ್ಲ. ಆದರೆ ಇನ್ನು ಕೆಲವೆಡೆ ಉತ್ತಮ ಶಬ್ದಗಳು ಮೂಡಿಬಂದಿರುವುದು ಶ್ಲಾಘನೀಯ. ಈ ಭಾಷಾಂತರಗಳು ಜರ್ಮನ್‌ ಮತ್ತು ಗ್ರೀಕ್‌ ಭಾಷೆಯನ್ನು ಹೋಲುತ್ತದೆ. ಯಾಕೆಂದರೆ ಗ್ರೀಕ್‌ ಭಾಷೆಯಲ್ಲಿ ದೊಡ್ಡ ಅರ್ಥವಿರುವ (ವಿಶಾಲಾರ್ಥವಿರುವ) ವಾಕ್ಯಗಳಿಗೆ ಚಿಕ್ಕ ವಾಕ್ಯಗಳನ್ನು ಬಳಸಬಹುದು. ಅದೇ ಲಕ್ಷಣವನ್ನು ತುಳು ಭಾಷೆಯಲ್ಲಿ ಮಿಶನರಿಗಳು ಕಂಡುಕೊಂಡರು. ಉದಾ : ಆಂಡ ಮರಿಯ ಈ ಮಾತ ಪಾತೆರೊಳೆನ್‌ ಹೃದಯೊಡು ಗುಣಿತೊಣ್ದು ದೀವೊಂಡಲ್‌.

ಇಲ್ಲಿ ಗುಣಿತೊಂದು ದೀವೊಂಡಲ್‌ ಎನ್ನುವುದಕ್ಕೆ ಗ್ರೀಕ್‌ ಶಬ್ದದಲ್ಲಿ ಯೋಚನೆ, ತರ್ಕ, ದೀವೊನುನವು ಎಂಬ ಅರ್ಥ ಬರುವ ಹಾಗೆ ಈ ತುಳು ಭಾಷಾಂತರವೇ ಸರಿ ಎಂದು ಸತ್ಯಮಿತ್ರ ಬಂಗೇರರು ಅಭಿಪ್ರಾಯಪಡುತ್ತಾರೆ.[21]

ಆದಿಕಾಂಡದಲ್ಲಿ ಬರುವ ವಾಕ್ಯ – ‘ದೇವರ್‌ ಕತ್ತಲೆನ್‌ಲಾ ಬೊಳ್ಪುನುಲಾ ಅದಲ್‌ ಬದಲ್‌ ಮಳ್ತೆರ್‌’. ಇಲ್ಲಿ ಅದಲ್‌ ಬದಲ್‌ ಮಳ್ತೆರ್‌ಎನ್ನುವ ಶಬ್ದ ಅದು ಹಿಬ್ರೂ ಭಾಷೆಯಲ್ಲಿಯೂ ಇದೆ. ಇದು ಮೂಲ ಶಬ್ದಕ್ಕೆ ಹತ್ತಿರದಲ್ಲಿದೆ. ಇಂತಹ ಅನೇಕ ಭಾಷಾಂತರಗಳು ಇವರ ಪುಸ್ತಕಗಳಲ್ಲಿ ಸಮ್ಮಿಳಿತಗೊಂಡಿದೆ. ಮಿಶನರಿಗಳು ತುಳುವನ್ನು ಕಲಿತು ಮಾಡಿದ ಅನುವಾದ ಎಷ್ಟೇ ಕೃತಕವಾದುದೇ ಆದರೂ ವಾಙ್ಮಯದ ಬೆಳವಣಿಗೆಯ ಇತಿಹಾಸದ ದೃಷ್ಟಿಯಿಂದ ಇಂತಹ ಕೃತಿಗಳು ಮುಖ್ಯವಾಗುತ್ತವೆ. ಬೈಬಲ್‌ನ ಗದ್ಯಬರವಣಿಗೆ ಒಂದು ವಿಶಿಷ್ಟ ಭಾಷೆಯಲ್ಲಿದೆ. ಪಾಶ್ಚಾತ್ಯ ಭಾಷೆಯಿಂದ ಅನುವಾದಿಸುವಾಗ ಉಂಟಾಗುವ ತುಳುವಿನ ರೂಪವನ್ನು ಬೈಬಲ್‌ಭಾಷಾಂತರದಿಂದ ತಿಳಿದುಕೊಳ್ಳಬಹುದಾಗಿದೆ.[22]

 

[1] Godwin Shiri, ed., Wholeness in Christ (Mangalore: The Karnataka Theological Research Institute Balmatta, 1985), 142

[2] ಕೆ. ಚಿನ್ನಪ್ಪ ಗೌಡ ಸಂ. ಪನಿಯಾರ ನೆನಪಿನ ಸಂಚಿಕೆ (ಮಂಗಳೂರು: ತುಳುಕೂಟ (ರಿ) ೧೯೮೯)

[3] ಪದ್ಮನಾಭ ಕೇಕುಣ್ಣಾಯ A Comparative study of Tulu Daialects ಕು. ಶಿ. ಹರಿದಾಸ ಭಟ್ಟರ ಉಲ್ಲೇಖ (ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ೧೯೯೪), ಬೆನ್ನುಡಿ

[4] ರಾಮಕೃಷ್ಣ ಟಿ. ಶೆಟ್ಟಿ, ತುಳು ಸಂಪೊತ್ತು, ಹೊಸದೆಹಲಿ: ತುಳುವೆರ್‌ಪ್ರಕಾಶನಾಲಯ ೧೯೮೮

[5] The Third Report of the German Mission, in the Southern Mahratta, Canara and Malbar Provinces. Madras: The American Mission Press, 1842, 20

[6] Report of the Basel Evangelical Missionary Society forty third year 1859 Twentieth Report of the German Evangelical Mission, in South Western India (Mangalore: German Mission Press, 1860), 9

[7] The Third Report of the German Mission, in the Southern Mahratta, Canara and Malbar Provinces. (Madras : The American Mission Press, 1843), 39

[8] ಪಾದೇಕಲ್ಲು ವಿಷ್ಣುಭಟ್‌, ಸಂ. ತುಳುವರಿವರು (ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ೧೯೯೨), ಪುಟ ೨೨೪

[9] Report of the Basel Evangelical Missionary Society forty third year 1859 Twentieth Report of German Evangelical Mission, in South Western India (Mangalore: German Mission Press, 1860), 9

[10] ಎ. ವಿ. ನಾವಡ ಅವರೊಂದಿಗೆ ಸಂದರ್ಶನ, ತುಳು ಸಾಹಿತಿಗಳು / ಸಂಶೋಧಕರು, ಮಂಗಳೂರು, ೨೨ ಜನವರಿ ೨೦೦೭.

[11] ಜೆ. ಎಸ್‌. ಸದಾನಂದ, ಅವರೊಂದಿಗೆ ಸಂದರ್ಶನ, ಕ್ರೈಸ್ತ ದೈವಶಾಸ್ತ್ರ ವಿದ್ವಾಂಸರು, ಮಂಗಳೂರು, ೨೨ ಜನವರಿ ೨೦೦೭

[12] ಉತ್ಪತ್ತಿ – ಪುಸ್ತಕದ ಉದಾಹರಣೆಯು ಈ ಅಧ್ಯಾಯದ ಪುಟ-೧೩ರಲ್ಲಿದೆ ನೋಡಿ.

[13] Godwin shri, ed. Wholeness in Christ (Mangalore: The Karnataka Theological Research Institute Balmatta, 1985), 142

[14] ಪ್ರಭಾಕರ ಜೋಶಿ ಅವರೊಂದಿಗೆ ಸಂದರ್ಶನ, ಲೇಖಕರು, ಮಂಗಳೂರು, ೧೯ ಜನವರಿ ೨೦೦೭

[15] ಅಮೃತ ಸೋಮೇಶ್ವರ ಅವರೊಂದಿಗೆ ಸಂದರ್ಶನ, ತುಳು ಸಾಹಿತಿಗಳು, ಮಂಗಳೂರು, ೧೮ ಜನವರಿ ೨೦೦೭

[16] Report of the Basel Evangelical Missionary Society Sixteenth Report of the German Evangelical Mission Press, 1856, 14

[17] ಹೆರಂಜೆ ಕೃಷ್ಣ ಭಟ್ಟ, ಮುರಳೀಧರ ಉಪಾಧ್ಯ ಹಿರಿಯಡಕ, ಸಂ. ಗೋವಿಂದ ಪೈ ಸಂಶೋಧನ ಕೇಂದ್ರ, ೧೯೯೫, ೫೮೮

[18] ಹೋಲಿಕೆ-ಯು. ಪಿ.ಉಪಾಧ್ಯಾಯ ಅವರೊಂದಿಗೆ ಸಂದರ್ಶನ, ತುಳು ಸಾಹಿತಿಗಳು, ಉಡುಪಿ, ೧೧ ಜನವರಿ ೨೦೦೭

[19] The sixty-seventh Report of the Basel German Evangelical Missionary Society in South-Western India for 1906 (Mangalore: The Basel Mission Press 1907), 103

[20] ಎ. ವಿ. ನಾವಡ ಅವರೊಂದಿಗೆ ಸಂದರ್ಶನ, ತುಳು ಸಾಹಿತಿಗಳು / ಸಂಶೋಧಕರು, ಮಂಗಳೂರು, ೨೨ ಜನವರಿ ೨೦೦೭

[21] ಪೀಟರ್‌ ವಿಲ್ಸನ್‌ ಪ್ರಭಾಕರ್‌, ಸತ್ಯಮಿತ್ರ ಬಂಗೇರ, ಪ್ರ: ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ೧೯೯೭), ೨೩

[22] ಯು. ಪಿ. ಉಪಾಧ್ಯಾಯ ಪ್ರ. ಸಂ. ತುಳು ನಿಘಂಟು ಸಂಪುಟ-೧. (ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ೧೯೮೮), ೫೭