ಹತ್ತೊಂನತ್ತನೇ ಶತಮಾನವು ಭಾರತವು ಇತಿಹಾಸದಲ್ಲಿ ಒಂದು ವಿಶಿಷ್ಟ ಕಾಲ. ಆಧುನಿಕತೆಯ ಹೊಸ್ತಿಲಲ್ಲಿ ವಿವಿಧ ಬಲಗಳು, ಸಮುದಾಯಗಳು ತಮ್ಮ ತಮ್ಮ ಆಶೋತ್ತರಗಳನ್ನು ರೂಪಿಸಿಕೊಳ್ಳಲು ಪ್ರಯತ್ನ ಪಡುತ್ತಿದಂಥಾ ಕಾಲ. ಒಂದು ಕಡೆಯಲ್ಲಿ ವಿವಿಧ ಜಾತಿ, ಪಂಗಡ ಮತ್ತು ಸಮುದಾಯಗಳು ಆಧುನಿಕತೆಯ ಫಲಗಳನ್ನು ಪಡೆಯುವ ತವಕದಲ್ಲಿದ್ದರೆ ಇನ್ನೊಂದೆಡೆಯಲ್ಲಿ ಆಧುನಿಕತೆಗೆ ಕಾರಣವಾದ ವಸಾಹತುಶಾಹಿಯನ್ನು ಬೇರೆ ಬೇರೆ ರೀತಿಯಲ್ಲಿ ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಬ್ರಿಟಿಷ್‌ಆಡಳಿತಗಾರರು, ಪಾಶ್ಚಾತ್ಯ ವಿದ್ವಾಂಸರು, ಮಿಶನರಿಗಳು ಮತ್ತು ಪ್ರವಾಸೀ ಬರಹಗಾರರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆಡಳಿತ, ಅಧ್ಯಯನ, ಧರ್ಮ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಈ ಪೈಕಿ ಅಧ್ಯಯನದ ವಿಷಯಕ್ಕೆ ಬರುವಾಗ ಪಾಶ್ಚಾತ್ಯ ಅಧ್ಯಯನದ ಮೂಲಕ ‘ಇಂಡಾಲಜಿ’ ಎಂಬ ಒಂದು ಹೊಸ ಅಧ್ಯಯನದ ವಿಭಾಗವೇ ಹುಟ್ಟಿಕೊಂಡಿತು. ದೇಶೀಯ ಜನಗಳ ನಡವಳಿಕೆ, ಆಚರಣೆ, ಶಾತ್ರ, ಧರ್ಮ, ಸಾಹಿತ್ಯ, ಇತಿಹಾಸ ಇತ್ಯಾದಿಗಳ ಬಗ್ಗೆ ದೊಡ್ಡ ಜ್ಞಾನ ಭಂಡಾರವನ್ನು ಉತ್ಪಾದಿಸಲಾಯಿತು. ಆದರೆ ಎಲ್ಲದಕ್ಕೂ ಮುಂಚೆ ಭಾಷೆಯ ಅರಿವು ಅಗತ್ಯವಾದ್ದರಿಂದ ಭಾಷಾ ಕಲಿಕೆಯು ಪ್ರಾಥಮಿಕತೆಯನ್ನು ಪಡೆಯಿತು. ಬ್ರಿಟಿಷರಿಗೆ ಆಡಳಿತಾತ್ಮಕವಾಗಿ ಅದು ಅಗತ್ಯವಾಗಿದ್ದರೆ ಮಿಶನರಿಗಳಿಗೆ ಮತ ಪ್ರಚಾರಕ್ಕೋಸ್ಕರ ಹಲವು ಭಾಷೆಗಳ ಅಧ್ಯಯನ ಅವಶ್ಯಕವಾಗಿತ್ತು. ಆದ್ದರಿಂದ ಕೆಲವೊಮ್ಮೆ ಒಗ್ಗೂಡಿಯೂ, ಮತ್ತೆ ಕೆಲವೊಮ್ಮೆ ಸ್ವಂತವಾಗಿಯೂ ಈ ಗುಂಪುಗಳು ಭಾಷಾಧ್ಯಯನವನ್ನು ಕೈಗೊಂಡವು. ಹಾಗೆ ಮಾಡಬೇಕಾದರೆ ಸ್ಥಳೀಯ ಗುಂಪುಗಳು ನಿಷ್ಕ್ರಿಯವಾಗಿ ತಮ್ಮನ್ನು ತಾವು ನಿವೃತ್ತಿ ಭಾವದಿಂದ ಅಧ್ಯಯನಕ್ಕೆ ಒಪ್ಪಿಸಿಕೊಂಡವೆಂದೇನೂ ಅಲ್ಲ. ಈ ಗುಂಪುಗಳು ಮತ್ತು ಸಮುದಾಯಗಳು ಇಂಥ ಒಂದು ಸಂದರ್ಭವನ್ನು ತಮ್ಮದೇ ಆದ ರೀತಿಯಲ್ಲಿ ತಮ್ಮ ತಮ್ಮ ಉಪಯೋಗಗಳಿಗೆ ಬಳಸಿಕೊಂಡವು. ಆ ಅಧ್ಯಯನವು ಮಿಶನರಿಗಳು, ಬ್ರಿಟಿಷರು ಹಾಗೂ ಸ್ಥಳೀಯ ಸಮುದಾಯಗಳ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ತಿಕ್ಕಲಾಟಕ್ಕೆ ಒಂದು ಹೊಸ ನೆಲೆಯನ್ನು ಒದಗಿಸಿತ್ತು. ಈ ಪ್ರಬಂಧದ ಉದ್ದೇಶವೆಂದರೆ ಭಾಷೆಯೆಂದರೆ ಒಂದು ನಿರ್ವಾತದಲ್ಲಿ ಬೆಳೆಯುವುದಲ್ಲವೆಂದೂ ಅದರ ಅಧ್ಯಯನವು ಅಲ್ಲಿನ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಂಶಗಳಲ್ಲಿ ಭದ್ರವಾಗಿ ನೆಲೆಗೊಂಡಿದೆಯೆಂಬುದನ್ನು ಸೂಚಿಸುವುದು ಹಾಗೂ ವಸಾಹತುಶಾಹಿಯನ್ನು ಬಲಪಡಿಸುವಲ್ಲಿ ವಿಲಿಯಂ ಜೋನ್ಸ್‌ರಂತಹವರ ಸಂಸ್ಕೃತ ಭಾಷೀಯ ಅಧ್ಯಯನ ಮಾತ್ರವಲ್ಲದೇ ಹತ್ತೊಂಬತ್ತನೇ ಶತಮಾನದ ತುಳು ಭಾಷೆ ಮತ್ತು ಸಂಸ್ಕೃತಿಗಳ ಅಧ್ಯಯನದ ಸಂದರ್ಭವೂ ಕೂಡಾ ಒದಗಿ ಬಂತೆಂಬುದನ್ನು ತೋರಿಸಿಕೊಡುವುದು.

ಮಿಶನರಿಗಳ ಅಧ್ಯಯನದ ಹಿನ್ನೆಲೆ

೧೮೧೩ನೇ ಇಸವಿಯ ಚಾರ್ಟರ್‌ ಆಕ್ಟ್‌ನ ಪ್ರಕಾರ ಭಾರತದಲ್ಲಿ ಕೆಲಸ ಮಾಡಲು ಬ್ರಿಟಿಷ್‌ಮಿಶನರಿಗಳಿಗೆ ಒಪ್ಪಿಗೆ ಕೊಡಲಾಯಿತು. ಬ್ರಿಟಿಷೇತರ ಮಿಶನರಿಗಳಿಗೆ ಭಾರತಕ್ಕೆ ಬರುವ ಅವಕಾಶವನ್ನು ಮುಂದಿನ ಇಪ್ಪತ್ತು ವರ್ಷಗಳ ನಂತರ, ಅಂದರೆ ೧೮೩೩ರಲ್ಲಿ ನೀಡಲಾಯಿತು. ಹೀಗೆ ಬಂದ ಮಿಶನರಿ ಸಂಸ್ಥೆಗಳಲ್ಲಿ ಕೆಲವೆಂದರೆ ಪ್ರೊಟೆಸ್ಟೆಂಟ್‌ ಲೂತರನ್‌ ಮಿಶನರಿ ಸೊಸೈಟಿ, ಅಮೆರಿಕನ್‌ ಬ್ಯಾಪ್ಟಿಸ್ಟ್‌ ಯೂನಿಯನ್‌, ಅಮೆರಿಕನ್‌ ಬೋರ್ಡ್‌, ಅಮೆರಿಕನ್‌ ಪ್ರೆಸ್ಟಿಟೇರಿಯನ್‌ ಮಿಶನ್‌ಬೋರ್ಡ್‌ ನಾರ್ತ್‌, ಬಾಸೆಲ್‌ಮಿಶನ್‌ ಇವ್ಯಾಂಜಲಿಕಲ್‌ ಸೊಸೈಟಿ, ಇತ್ಯಾದಿ. ಇದಕ್ಕೆ ಮುಂಚೆ ೧೮೧೩ರ ಚಾರ್ಟರ್‌ ಆಕ್ಟ್‌ ಮೂಲಕ ಬಂದ ಮಿಶನರಿ ಸಂಸ್ಥೆಗಳಲ್ಲಿ ಲಂಡನ್‌ ಮಿಶನರಿ ಸೊಸೈಟಿ ಮತ್ತು ಕ್ರಿಶ್ಚಿಯನ್ ಮಿಶನರಿ ಸೊಸೈಟಿ ಮುಖ್ಯವಾದವು. ಹತ್ತೊಂಬತ್ತನೇ ಶತಮಾನದ ಆದಿ ಭಾಗದಲ್ಲಿ ನಡೆದಂಥ ಈ ಘಟನೆಗಳು ಬಹಳಷ್ಟು ಮಿಶನರಿ ಸಂಸ್ಥೆಗಳ ಆಗಮನ, ಕಾರ್ಯಕ್ಷೇತ್ರಕ್ಕಾಗಿ ಅವುಗಳ ಹುಡುಕಾಟ ಮತ್ತು ಇದರ ಪರಿಣಾಮ ಹಿಂದೆಂದೂ ಕಂಡಿರದಂಥಾಗಿತ್ತು.

ಈ ಮಿಶನರಿ ಸಂಸ್ಥೆಗಳು ಬಹಳ ಮಹತ್ವಾಕಾಂಕ್ಷೆಯಿಂದ ಭಾರತವನ್ನು ಪ್ರವೇಶಿಸಿದವು. ಗೌರಿ ವಿಶ್ವನಾಥನ್‌ಅವರ ಪ್ರಕಾರ “ಹಿಂದೂಯಿಸಂ ಅನ್ನುವುದು ತನ್ನ ಪಂಚಾಂಗದಿಂದ ಒಂದಲ್ಲ ಒಂದುದಿನ ಬೀಳುತ್ತದೆ ಮತ್ತು ಸುರ್ವಾತೆಯು ಅದರ ಅವಶೇಷಗಳ ಮೇಲೆ ಕಟ್ಟಲ್ಪಡುತ್ತದೆ. ವಿಜ್ಞಾನ ಮತ್ತು ಆಧುನಿಕ ಅಧ್ಯಯನದ ಮೂಲಕ ನಾವೆಲ್ಲರೂ ಒಂದೇ ಧರ್ಮಕ್ಕೆ ಬರಬೇಕು” ಎನ್ನುವುದು ಮಿಶನರಿಗಳ ಸ್ಪಷ್ಟ ನಂಬಿಕೆಯಾಗಿತ್ತು (ವಿಶ್ವನಾಥನ್‌ ೧೯೯೦:೬೨). ಆದರೆ ಮಿಶನರಿ ಕಾರ್ಯಕ್ರಮದ ಧಾರ್ಮಿಕ ಮಗ್ಗುಲಿನ ಜೊತೆಜೊತೆಯಲ್ಲಿ ಅವರು ಕೈಗಾರಿಕೆ, ಸಾಹಿತ್ಯ, ವೈದ್ಯಕೀಯ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಸತತವಾಗಿ ದುಡಿದವರು. ಈ ಕ್ಷೇತ್ರಗಳಲ್ಲಿ ದುಡಿಯದೆ ಧರ್ಮದ ಬಗ್ಗೆ ಯೋಚಿಸುವುದು ಹೆಚ್ಚಿನ ಸಂದರ್ಭಗಳಲ್ಲಿ ಕಷ್ಟಕರವಾಗಿತ್ತು. ಕೆಲವೊಮ್ಮೆ ಧಾರ್ಮಿಕ ಕಾರ್ಯಗಳು ಅಚಾನಕವಾಗಿ ಅನಿರೀಕ್ಷಿತ ಸಂದರ್ಭಗಳ ಮೂಲಕ ಹೊಸ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತಿದ್ದವು. ಈ ಮಿಶನರಿ ಸಂಸ್ಥೆಗಳ ನೂರಕ್ಕಿಂತಲೂ ಹೆಚ್ಚು ವರ್ಷಗಳ ಕೆಲಸದಿಂದಾಗಿ ಅಸಂಖ್ಯೆ ದಾಖಲೆಗಳು, ಲೇಖನಗಳು, ಕಿರುಪುಸ್ತಕಗಳು, ಟ್ರ್ಯಾಕ್ಟ್‌ಗಳು ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ವಿಶಿಷ್ಟ ಸಾಮಾಜಿಕ ಪರಿಸ್ಥಿತಿಗಳು ನಮಗೆ ಅಧ್ಯಯನಕ್ಕೆ ಲಭ್ಯವಿವೆ.

ಈ ಕಾಲದ ಮಿಶನರಿ ಚಟುವಟಿಕೆಗಳು ಯೂರೋಪಿನ ಎನ್‌ಲೈಟನ್‌ಮೆಂಟ್‌ ಹಾಗೂ ಮಾನವತಾವಾದದಿಂದ ತನ್ನ ಕೆಲವು ಮೂಲತತ್ವಗಳನ್ನು ಪಡೆದಿದ್ದವು. ಎನ್‌ಲೈಟನ್‌ಮೆಂಟ್‌ ಎಂಬುದು ಯೂರೋಪಿನಲ್ಲಿ ಬಹಳಷ್ಟು ಬದಲಾವಣೆ ತಂದ ಮತ್ತು ಜೀವನದ ಎಲ್ಲ ಮಗ್ಗುಲುಗಳಲ್ಲಿ ತನ್ನ ಪ್ರಭಾವ ಬೀರಿದ ಒಂದು ವಿಚಾರಧಾರೆಯಾಗಿತ್ತು. ಕೋಪರ್ನಿಕಸ್‌, ಬೇಕನ್‌, ಗೆಲಿಲಿಯೋ, ಜಾನ್‌ಲಾಕ್‌, ಸ್ಪಿನೋಜ್‌, ಐಸಾಕ್‌ ನ್ಯೂಟನ್‌ರಂತಹ ಆ ಹಿಂದಿಗಿಂತ ಬೇರೆ ಬಗೆಯ ಚಿಂತಕರನ್ನು ಹಾಗೂ ವಿಜ್ಞಾನಿಗಳನ್ನು ಕೊಟ್ಟಂತಹ ಒಂದು ಹೊಸ ಆಲೋಚನಾಲಹರಿಯಾಗಿತ್ತು. ಮನುಷ್ಯನಿಗೆ ಎಲ್ಲವನ್ನು ತಿಳಿಯಲು ಅಥವಾ ಗ್ರಹಿಸಲು ಸಾಧ್ಯವಿದೆ; ಈಗ ತಿಳಿಯದೇ ಇರುವಂಥಾದ್ದು ಭವಿಷ್ಯತ್ತಿನಲ್ಲಿ ತಿಳಿದು ಬರುತ್ತದೆ; ಆದ್ದರಿಂದ ಜ್ಞಾನ ಎನ್ನುವಂಥಾದ್ದು ಕ್ರಮೇಣ ಸಂಗ್ರಹಗೊಳ್ಳುತ್ತಾ ಹೋಗುವಂಥಾ ಒಂದು ಭಂಡಾರ-ಇತ್ಯಾದಿ ಆಲೋಚನೆಗಳು ಎನ್‌ಲೈಟನ್‌ಮೆಂಟ್‌ನ ಕೊಡುಗೆ. ಇದೇ ರೀತಿ ಅಭಿವೃದ್ಧಿ ಅಥವಾ ಏಳಿಗೆ ಎನ್ನುವ ಕಲ್ಪನೆ ಕೂಡಾ ಎನ್‌ಲೈಟನ್‌ಮೆಂಟ್‌ನ ಮೂಲಕ ಪ್ರಕಟಗೊಂಡದ್ದಾಗಿತ್ತು. ಈ ಕಲ್ಪನೆಯಲ್ಲಿ ‘ಅಭಿವೃದ್ಧಿ’ಯ ನೇರ ಹಾಗೂ ಶಾಶ್ವತ ಸಮೀಕರಖವನ್ನು ಪಾಶ್ಚಾತ್ಯ-ಯೂರೋಪಿಯನ್ ದೇಶಗಳೊಂದಿಗೆ ಮಾಡಲಾಯಿತು. ಪೌರ್ವಾತ್ಯ ರಾಷ್ಟ್ರಗಳು ಅಭಿವೃದ್ಧಿ ಹೊಂದಬೇಕಾದರೆ ಅದೇ ಮಾರ್ಗವನ್ನು ಅನುಸರಿಸಬೇಕೆನ್ನುವ ಧೋರಣೆ ಕೂಡಾ ಇದರೊಂದಿಗಿತ್ತು. ಇದರಿಂದ ಪ್ರಪಂಚ ವ್ಯವಸ್ಥೆಯಲ್ಲಿ ಕ್ರಮೇಣ ಒಂದು ಶ್ರೇಣಿಕರಣ ತಲೆದೋರಿತು. ಈ ಶ್ರೇಣಿಕರಣ ಮಿಶನರಿ ಚಟುವಟಿಕೆಯನ್ನು ಮಾತ್ರವಲ್ಲ, ಹೆಚ್ಚು ಕಡಿಮೆ ವಸಾಹತುಶಾಹೀ ಧೋರಣೆಯನ್ನು ನಿರ್ದೇಶಿಸುತ್ತಿದ್ದವು.[1] ಪಶ್ಚಿಮದ ದೇಶಗಳು ಪೌರ್ವಾತ್ಯ ದೇಶಗಳನ್ನು ಆಳುವುದಕ್ಕೆ ಮತ್ತು ಅವುಗಳಿಗೆ ‘ಮಾರ್ಗದರ್ಶನ’ ಮಾಡಲಿಕ್ಕೆ ಇದರಿಂದ ಒಂದು ಯಥಾರ್ಥತೆ ದೊರೆತಂತಾಗಿತ್ತು. ಹೀಗೆ ಆಳುವುದಕ್ಕೆ ಆಳಲ್ಪಡುವ ಜನಗಳಿಗೆ ಸಂಬಂಧಿಸಿದ ಅಪಾರ ಜ್ಞಾನವು ಅವಶ್ಯಕವಾಯಿತು. ಅವರ ರೀತಿ-ರಿವಾಜು, ಕಟ್ಟು-ಕಟ್ಟಲೆಗಳು, ಭಾಷೆ, ಜೀವನಶೈಲಿ ಇತ್ಯಾದಿಗಳು ಅಧ್ಯಯನಯೋಗ್ಯ ವಸ್ತುಗಳಾಗಿ ಕಂಡುಬಂದವು. ಪಶ್ಚಿಮದ ಪ್ರಜೆಯು ಜ್ಞಾತೃವಾಗಿ, ಪೂರ್ವದ ಮನುಷ್ಯ ಅಧ್ಯಯನಕ್ಕೆ ವಸ್ತುವಾಗಿ ಮೂಡಿ ಬಂದರು. ವಸಾಹತುಶಾಹಿ ಸಂದರ್ಭದಲ್ಲಿ ಬೇರೆಬೇರೆ ಶಿಸ್ತುಗಳಲ್ಲಿ ಜ್ಞಾನ ಮತ್ತು ಅದರ ವರ್ಗೀಕರಣ ನಡೆಯಿತು. ಯೂರೋಪೇತರ ‘ಅನ್ಯ’ ಜನರ ಮೇಲಿನ ಜ್ಞಾನವು ‘ಮಾನವ ಶಾಸ್ತ್ರ’ವೆಂದು ನಾಮಕರಣಗೊಂಡಿತು.

ಇಂತಹ ಶಿಸ್ತುಗಳಲ್ಲಿ ಜ್ಞಾನೋತ್ಪಾದನೆಯ ಹಿಂದಿನ ನಿಯಮವೆಂದರೆ ನೋಡುಗನ ಅವಲೋಕನ (Observation)ಕ್ಕೆ ಗೋಚರವಾಗುವ ವಿಷಯಗಳೆಲ್ಲವೂ ತಥ್ಯ; ಆದ್ದರಿಂದ ತಥ್ಯವು ನೋಡುಗನ ಹೊರತಾಗಿದೆ; ಒಂದು ಸಂಗತಿಯನ್ನು (Phenomenon) ಯಾರು ನೋಡಿ ದಾಖಲಿಸಿದರೂ, ಸರಿಯಾದ ನಿಯಮಗಳನ್ನು ಪಾಲಿಸಿದರೆ ಅದು ಒಂದೇ ರೀತಿಯ ಫಲಿತಾಂಶ ಅಥವಾ ದಾಖಲೆಯನ್ನು ಕೊಡುವುದು ಎನ್ನುವುದು (positivism). ಆದ್ದರಿಂದ ನೋಡುಗನಿಗೆ ಅಥವಾ ದಾಖಲೆಗಾರನಿಗೆ ತನ್ನ ಅಧ್ಯಯನದಲ್ಲಿ ತಟಸ್ಥ ಸ್ಥಾನ ದೊರೆಯಿತು. ಈ ತಾಟಸ್ಥ್ಯದಿಂದ ತಾನು ಪೂರ್ವಾಗ್ರಹ ಪೀಡಿನಾಗಿ ಯಾವುದೇ ಕೆಲಸ ಮಾಡುತ್ತಿಲ್ಲ ಹಾಗೂ ತಾನು ಮಾಡಿದ ಕೆಲಸಗಳಿಂದ ವಸಾಹತುಗಳಿಗೆ ಉಪಯೋಗವೇ ಸರಿ ಎಂಬ ನಂಬುಗೆಯನ್ನು ವಸಾಹತು ಶಾಹಿಯು ತನಗೆ ತಾನೇ ಕೊಟ್ಟುಕೊಳ್ಳಲು ಸಹಾಯಕವಾಯಿತು. ವಸಾಹತುಶಾಹಿ ಸಂದರ್ಭದಲ್ಲಿ ಈ ಹಿಂದೆ ಹೇಳಿದಂತೆ ಆಡಳಿತಗಾರರು, ಮಿಶನರಿಗಳು, ಪ್ರವಾಸಿಗಳು ನಡೆಸಿದ ಮಾನವ ಅಧ್ಯಯನ ಮತ್ತು ಬರವಣಿಗೆಗಳು ಇದೇ ಲಕ್ಷಣಗಳನ್ನು ಹೊಂದಿದ್ದವು. ಹೆಚ್ಚು ಹೇಳಬೇಕೆಂದರೆ ಮಾನವಶಾಸ್ತ್ರವು ಜನಾಂಗೀಯ ಬರಹ (Ethnography)ಗಳಿಂದಲೇ ಅಭಿವೃದ್ಧಿ ಪಡಸಿಕೊಂಡ ಒಂದು ವೈಜ್ಞಾನಿಕ ಶಿಸ್ತಾಗಿತ್ತು.

ರೊಮ್ಯಾಂಟಿಸಮ್‌ ಈ ಕಾಲದ ಅಧ್ಯಯನದ ಇನ್ನೊಂದು ಲಕ್ಷಣವಾಗಿತ್ತು. ಜರ್ಮನಿಯ ರೊಮ್ಯಾಂಟಿಸ್ಟರಾದ ಹರ್ಡರ್‌ (Herder) ಮತ್ತು ಗಾತಿ (Geothe) ಮೊದಲಾದ ಕವಿಗಳು ಮತ್ತು ವಿಮರ್ಶಕರು ಪುರಾತನ ಭಾರತೀಯ ಸಂಸ್ಕೃತ ಕಾವ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿದ್ದರು. ವಿಲಿಯಂ ಜೋನ್ಸ್‌ ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದ ‘ಶಾಕುಂತಲ’ವನ್ನು ಫೋಸ್ಟರ್‌ ಎಂಬವರು ಜರ್ಮನ್‌ಗೆ ತರ್ಜುಮೆ ಮಾಡಿದ್ದರು. ಅದನ್ನು ಓದಿದ ಹರ್ಡರ್‌ “ಇದು ಗ್ರೀಸ್‌ಅಥವಾ ಬೇರೆ ಯಾವುದೇ ದೇಶದ ಕೊಡುಗೆಗಳಿಗಿಂತ ದೊಡ್ಡದು” ಎಂದನು. (ಫಿಗ್ವೇರ ೧೯೯೧:೧೪). ಅವನು ಆ ಕಾವ್ಯದಲ್ಲಿ ರೊಮ್ಯಾಂಟಿಕ್‌ಕಾವ್ಯದ ಲಕ್ಷಣಗಳನ್ನು ಕಂಡನು. ಆ ಲಕ್ಷಣಗಳನ್ನು ಜನಾಂಗದ ಶೈಶವತೆಯೊಂದಿಗೆ ಸಮೀಕರಿಸಲಾಯಿತು. ಆದಿಯುಗ (primitive)ದ ಅತ್ಯುತ್ತಮ ಕಾವ್ಯವನ್ನು ಸೃಷ್ಟಿಬಲ್ಲರು ಎಂಬ ನಿರ್ಣಯಕ್ಕೆ ಹರ್ಡರ್‌ನಂದನು. ಇನ್ನೊಂದೆಡೆಯಲ್ಲಿ ಗಾತಿ ಕೂಡಾ ಇದೇ ಕಾವ್ಯದ ಬಗ್ಗೆ ಭಾರೀ ಒಲವುಳ್ಳವನಾಗಿದ್ದನು. ನಿಜವಾಗಿ ನೋಡುವುದಾದರೆ ಗಾತಿಗೆ ಭಾರತ, ಅಲ್ಲಿಯ ಧರ್ಮ, ಮತ್ತು ಸಾಹಿತ್ಯಗಳ ಬಗ್ಗೆ ಒಲವಿರಲಿಲ್ಲ. ಆದರೆ ಶಾಕುಂತಲವನ್ನು ಭಾರತದ ಬಗ್ಗೆ ಇರುವ ತನ್ನ ಇತರ ಅಭಿಪ್ರಾಯಗಳಿಂದ ಪ್ರತ್ಯೇಕಿಸಿ ಓದುತ್ತಾನೆ ಮತ್ತು ಕಾಳಿದಾಸನನ್ನು ಪ್ರಶಂಸಿಸುತ್ತಾನೆ (ಫಿಗ್ವೇರ ೧೯೯೧:೧೩-೧೩). ಈ ಇಬ್ಬರು ವಿದ್ವಾಂಸರುಗಳ ಅಭಿಪ್ರಾಯಗಳು ಅಂದಿನ ಯುರೋಪಿನಲ್ಲಿ ಬಹಳ ಮುಖ್ಯವಾಗಿವೆ. ಮುಂದೆ ಗಾತಿಯು ಯೂರೋಪಿಯನ್‌ಜ್ಞಾನ ಮತ್ತು ವಿಜ್ಞಾನವನ್ನು ಸಂಶೋಧನೆ ಮಾಡುವ ಮತ್ತು ಕ್ರಿಶ್ಚಿಯನ್‌ಮಿಶನ್‌ಗಳ ಮೂಲಕ ಪ್ರಸರಿಸುವ ಒಂದು ಅಧ್ಯಯನವೃತ್ತ (Study circle)ದ ಸದಸ್ಯನೂ ಆದನು.

ರೊಮ್ಯಾಂಟಿಸಮ್‌ ಅನ್ನುವುದು ಬರೇ ಕವಿಗಳ ಮತ್ತು ವಿಮರ್ಶಕರ ಪಾಲಿನ ಒಂದು ದೃಷ್ಟಿಕೋನವಾಗಿರಲಿಲ್ಲ. ಅದು ಒಂದು ಚಳುವಳಿಯಾಗಿ, ವಿದ್ವಾಂಸರು ತಮ್ಮ ಅಧ್ಯಯನದಲ್ಲಿ ಮತ್ತು ಕೃತಿಗಳಲ್ಲಿ ಪ್ರಪಂಚವನ್ನು ಅರ್ಥೈಸಿಕೊಳ್ಳುವ ಒಂದು ವಿಧವಾಗಿತ್ತು. ಬರೇ ಕಾವ್ಯಗಳನ್ನಷ್ಟೇ ಅಲ್ಲ, ವೇದ, ಉಪನಿಷತ್‌ಗಳಂಥಾ ಕೃತಿಗಳನ್ನೂ ರೊಮ್ಯಾಂಟಿಕ್‌ ದೃಷ್ಟಿಯಿಂದ ಕಂಡರು. ಟ್ಯೂಬಿಂಜನ್‌ ವಿಶ್ವವಿದ್ಯಾಲಯದ ರುಡಾಲ್ಪ್‌ವಾನ್‌ ರಾತ್‌ ಎಂಬ ಪ್ರಸಿದ್ಧ ಜರ್ಮನ್‌ ವಿದ್ವಾಂಸ ಬಹಳ ಉತ್ಸುಕತೆಯಿಂದ ಋಗ್ವೇದವನ್ನು ತರ್ಜುಮೆಗೊಳಿಸಿದ್ದ. ಅದರ ಸಾಹಿತ್ಯಿಕ ಗುಣಗಳು, ವೀರತೆ (heroism) ಮತ್ತು ಹೊಸತನ ಅವನನ್ನು ಆಶ್ಚರ್ಯಪಡಿಸಿದ್ದವು (ಬ್ರಕ್ನರ್‌ ೧೯೯೮:೧೧೫). ಮುಂದೆ ಅವನ ಶಿಷ್ಯರನೇಕರು ಇಂಡಾಲಜಿಸ್ಟರಾಗಿ ಪ್ರಸಿದ್ಧರಾದರು. ವಿದ್ವಾಂಸ ರಾತ್‌ಮಂಗಳೂರಲ್ಲಿ ನೆಲೆಸಿದ್ದ ಮೀಸನರಿ ಹೆರ್ಮನ್‌ ಮೋಗ್ಲಿಂಗ್‌ನ ಭಾಷಾ ಚಟುವಟಿಕೆಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದನು. ಮೋಗ್ಲಿಂಗ್‌ಕೂಡಾ ಟ್ಯೂಬಿಂಗನ್‌ನಲ್ಲೇ ಅಧ್ಯಯನ ಮಾಡಿದ್ದು ರಾತ್‌ ಅವನನ್ನು ಬಲ್ಲವನಾಗಿದ್ದನು. ಮುಂದೊಂದು ದಿನ ಮೆಗ್ಲಿಂಗ್‌ನ ಅಪಾರ ಭಾಷಾ ಚಟುವಟಿಕೆಗಳಿಗಾಗಿ ಟ್ಯೂಬಿಂಜನ್‌ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಶಿಫಾರಸು ಮಾಡಿ ಅದನ್ನು ದೊರಕಿಸಿ ಕೊಟ್ಟಿದ್ದನು (ಬಾಮನ್‌೧೯೯೮:೧೩೨). ಇನ್ನೊಬ್ಬ ಮಿಶನರಿಯಾದ ಹೆರ್ಮನ್‌ ಗುಂಡರ್ಟ್ ಅಲ್ಲೇ ಡಾಕ್ಟರೇಟ್‌ ಪಡೆದುಕೊಂಡೇ ಭಾರತಕ್ಕೆ ಬಂದಿದ್ದನು. ಹೀಗೆ ಮಿಶನರಿ ಚಟುವಟಿಕೆಯಲ್ಲಿ ತೊಡಗಿದ್ದರೂ ಮಿಶನರಿ-ವಿದ್ವಾಂಸರುಗಳಿಗೆ ಶೈಕ್ಷಣಿಕ ಸ್ಥಾನಮಾನ-ಗೌರವ ಕೊರತೆಯಿರಲಿಲ್ಲ.

ಟ್ಯೂಬಿಂಗ್‌ನ ವಿಶ್ವವಿದ್ಯಾಲಯಕ್ಕೂ, ಧರ್ಮಶಾಸ್ತ್ರ (Theology)ದ ಅಧ್ಯಯನಕ್ಕೂ ಬಹಳ ಅನ್ಯೋನ್ಯ ಸಂಬಂಧವಿತ್ತು. ೧೪೭೭ರಲ್ಲೇ ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯವು ಕ್ಯಾಥೋಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಧರ್ಮಶಾಸ್ತ್ರಗಳೆರಡರಲ್ಲೂ ಅಧ್ಯಯನ ವಿಭಾಗವನ್ನು ಹೊಂದಿದ್ದವು. ಹಾಗೆಯೇ ರೊಮ್ಯಾಂಟಿಕ್‌ ಅವಧಿಯ ಜರ್ಮನ್‌ ಸಾಹಿತ್ಯ ಸಂಪ್ರದಾಯ ಕೂಡಾ ಟ್ಯೂಬಿಂಗನ್‌ನಲ್ಲಿ ಆಳವಾಗಿ ನೆಲೆಯೂರಿತ್ತು. ಶೆಲ್ಲಿಂಗ್‌, ಹೆಗೆಲ್‌, ಹೋಲ್ಡರ್ಲಿನ್‌, ಉಲ್ಯಾಂಡ್‌ ಮತ್ತು ಮೆರಿಕ್‌ರಂತಹ ರೊಮ್ಯಾಂಟಿಕ್‌ ಕಾಲದ ವಿದ್ವಾಂಸರು ವಿದ್ಯಾರ್ಥಿ ಜೀವನವನ್ನು ಇಲ್ಲೇ ಕಳೆದಿದ್ದರು (ಅದೇ, ಪುಟ ೧೨೯). ಅದೇ ವಿಶ್ವವಿದ್ಯಾಲಯದಲ್ಲಿ ಮೋಗ್ಲಿಂಗ್‌ಮತ್ತು ಗುಂಡರ್ಡ್‌ರಂತಹ ಮಿಶನರಿಗಳೂ ಕೂಡಾ ವಿದ್ಯಾರ್ಥಿಗಳಾಗಿದ್ದರು, ಮೋಗ್ಲಿಂಗ್‌ ವಿದ್ಯಾರ್ಥಿ ಯಾಗಿರುವಾಗ ಸಾಹಿತ್ಯ ಮತ್ತು ಸೌಂದರ್ಯಶಾಸ್ತ್ರದಲ್ಲಿ ಆಸಕ್ತನಾಗಿದ್ದು, ಧರ್ಮಸಾಸ್ತ್ರವನ್ನು ಅಷ್ಟೊಂದು ಇಷ್ಟಪಡುತ್ತಿರಲಿಲ್ಲ (ಫ್ರೆಂಚ್‌ ೧೯೯೭:೬೫) ಇದೇ ಸಮಯದಲ್ಲಿ ಮೋಗ್ಲಿಂಗ್‌ ರಚನಾತ್ಮಕ ಸಾಹಿತ್ಯದಲ್ಲಿ ಕೈಯಾಡಿಸಿರುವುದೂ ಕೂಡಾ ಕಂಡುಬರುತ್ತದೆ. (ಅದೇ, ಪು. ೭೮). ಇಲ್ಲಿ ಗಾತಿಯ ಪ್ರಭಾವ ಮೋಗ್ಲಿಂಗ್‌ ಮೇಲಾಗಿರುವುದು ಕಂಡುಬರುತ್ತದೆ. ಗಾತಿಯು ತನ್ನ ಲೇಖನಗಳಲ್ಲಿ ಶಿಫಾರಸು ಮಾಡಿದ ಕೃತಿಗಳನ್ನು ಮೋಗ್ಲಿಂಗ್‌ ಓದುವ ದಾಖಲೆಗಳಲ್ಲಿ ನಮಗೆ ಸಿಗುತ್ತವೆ. ಒಂದು ಕಡೆಯಲ್ಲಂತೂ ಗ್ರೀಕರು, ರೋಮನ್ನರು, ಷಿಲ್ಲರು ಮತ್ತು ಗಾತಿ ನನ್ನ ಸವಸ್ವವಾಗಿದ್ದರು, ಎನ್ನುತ್ತಾನೆ ಮೋಗ್ಲಿಂಗ್‌ (ಅದೇ, ಪುಟ ೬೩-೬೪)

ಬೇರೆ ಸಂಸ್ಕೃತಿಗಳಿಗೆ ತೆರೆದುಕೊಳ್ಳುವ ಒಂದು ಗುಣವೇ ರೊಮ್ಯಾಂಟಿಸಮ್‌ನ ಒಂದು ಲಕ್ಷಣವಾಗಿತ್ತು. ಹೊಸ ದೇಶ/ಪ್ರದೇಶಗಳಿಗೆ ಹೋಗುವುದು, ಅಲ್ಲಿನ ಜನರ ಬಗ್ಗೆ ಬರೆಯುವುದು, ಇದರಲ್ಲೆಲ್ಲಾ ಮಾನವಶಾಸ್ತ್ರ ಎಷ್ಟಿದೆಯೋ ಅಷ್ಟೇ ರೊಮ್ಯಾಂಟಿಸಮ್‌ಕೂಡಾ ಇದೆ. ತನಗೆ ಗೊತ್ತಿಲ್ಲದ ಪ್ರದೇಶಗಳಲ್ಲಿ ಕುತೂಹಲ, ಅಲ್ಲಿ ಹುದುಗಿರುವ ಸೌಂದರ್ಯ, ಸ್ವಪ್ರನಸದೃಶ ವೈಚಿತ್ರ್ಯ, ಎದುರಾಗಬಹುದಾದ ಅಪಾಯಗಳು ಅಥವಾ ಭಯಾನಕತೆ, ಅದನ್ನೆದುರಿಸುವಂಥಾ ಹುಮ್ಮಸ್ಸು, ಇವೆಲ್ಲ ರೊಮ್ಯಾಂಟಿಕ್‌ ಭಾವಗಳೇ. ಹೆರ್ಮನ್‌ ಮೋಗ್ಲಿಂಗ್‌ ಭಾರತಕ್ಕೆ ಬರುತ್ತಾ ಮುಂಬೈಯಲ್ಲಿಳಿದಾಗ ಅವನ ಹೇಳಿಕೆಗಳು ನಮ್ಮ ಗಮನ ಸೆಳೆಯುತ್ತವೆ: “ನನ್ನ ಬಾಲ್ಯದಿಂದಲೂ ನನ್ನನ್ನು ಭಯಭೀತನನ್ನಾಗಿ ಮಾಡಿದ ಒಂದು ವಿಚಿತ್ರ ಸ್ವಪ್ನ ನನಗೆ ನೆನಪಿದೆ. ಒಂದು ದೊಡ್ಡ ಮೈದಾನದಲ್ಲಿ ಚಂದ್ರನ ಪ್ರಕಾಶದಲ್ಲಿ ತೋರುವ ವೃತ್ತಾಕಾರದ ತಗ್ಗಾದ ಒಂದು ಗೋಡೆ; ಅದರ ಒಳಗೆ ಇಳಿಯುತ್ತಿರುವ ಮತ್ತು ಹೊರಬರುತ್ತಿರುವ ಕಪ್ಪಾದ ಆಕೃತಿಗಳು. ಇದೇ ಚಿತ್ರವನ್ನು ನಾನು ೧೮೩೬ರಲ್ಲಿ ಬಾಂಬೆಯ ಮೈದಾನವೊಳದರಲ್ಲಿ ಕಂಡೆ; ಆದರೆ ಈಗ ಭಯಭೀತನಾಗದೆ. ಅಲ್ಲಿ ಹೆಚ್ಚು ಕಡಿಮೆ ಬತ್ತಲೆಯೆನ್ನಬಹುದಾದ ಹಿಂದೂಗಳು ಮುಸ್ಸಂಜೆಯ ಹೊತ್ತಿಗೆ ಸಾರ್ವಜನಿಕ ಬಾವಿಯಿಂದ ನೀರನ್ನು ತರುತ್ತಿದ್ದರು” (ಅದೇ, ಪುಟ ೫೫). ಈ ವಿವರದಲ್ಲಿ ಮೋಗ್ಲಿಂಗನ ರೊಮ್ಯಾಂಟಿಕ್‌ ಕಲ್ಪನೆಗಳು ಸ್ಥಳೀಯ ಜನರ ಮೇಲಿನ ಬರವಣಿಗೆಯಲ್ಲಿ ಭಟ್ಟಿ ಇಳಿಯುತ್ತವೆ. ಈ ಸಂದರ್ಭದಲ್ಲಿ ಒಬ್ಬ ಯುರೋಪಿಯನ್‌ ಆಗಿ, ಮಿಶನರಿಯಾಗಿ ಭಯಭೀತನಾಗುವ ಅಗತ್ಯವಿರಲಿಲ್ಲ ಯಾಕೆಂದರೆ ಅವನು ಈಗ ಆ ಸ್ಥಳೀಯ ಜನರನ್ನು ನಿರ್ದೇಶಿಸುವಂತಹ ಸ್ಥಾನದಲ್ಲಿದ್ದ. ಮುಂದೆ ಇಂತಹ ಅನೇಕ ಪರಿಸ್ಥಿತಿಗಳನ್ನು ಇದೇ ಮನಃಸ್ಥಿತಿಯಿಂದ ಹಾಗೂ ಒಬ್ಬ ಮಿಶನರಿಯ ಉತ್ಸುಕತೆಯಿಂದ ಬರೇ ಮೋಗ್ಲಿಂಗ್‌ ಮಾತ್ರವಲ್ಲ, ಅನೇಕ ಮಿಶನರಿಗಳು ಮತ್ತು ವಿದ್ವಾಂಸರು ತುಳುನಾಡಿನಲ್ಲಿ ಎದುರಾಗುವ. ಅವರ ಈ ತರಹದ ಅನುಭವಗಳು ಮುಂದೆ ಭೂತದ ಕೋಲದಂಥ ಸಂದರ್ಭಗಳಲ್ಲಿ ಅವರ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಪಾತ್ರವಹಿಸಿದವು.

ಬಾಸೆಲ್‌ಮಿಶನ್‌ ಮತ್ತು ತುಳು

೧೮೩೪ರಲ್ಲಿ ಬಾಸೆಲ್‌ಮಿಶನಿನ ಮೂವರು ಮಿಶನರಿಗಳಾದ ಜೆ.ಸಿ. ಲೇನರ್‌, ಸಿ.ಎಲ್‌. ಗ್ರೈನರ್‌, ಸ್ಯಾಮುವೆಲ್‌ ಹೆಬಿಕ್‌ರವರು ಮಂಗಳೂರಿಗೆ ಬಂದರು. ಇದರಲ್ಲಿ ಇಬ್ಬರಿಗೆ ಕನ್ನಡವೂ, ಒಬ್ಬರಿಗೆ ಕೊಂಕಣಿಯೂ ಗೊತ್ತಿದ್ದಿತು. ಆದರೆ ತುಳು ಕಲಿಯಬೇಕೆಂಬುದು ಅವರಿಗೆ ಕೂಡಲೇ ತಿಳಿಯಿತು. ಯಾಕೆಂದರೆ ತುಳು ಮಾತನಾಡುವ ಜನ ಮತಾಂತರ ಹೊಂದುವ ಸಾಧ್ಯತೆ ಜಾಸ್ತಿ ಇದೆಯೆಂಬುದು ಅವರಿಗೆ ತಿಳಿಯಿತು. ಮೊದಲಿನಿಂದಲೂ ಕೂಡಾ ಮಿಶನರಿ ಕೆಲಸದ ಪ್ರಮುಖ ಅಂಗವಾಗಿದ್ದದ್ದು ‘ವಿಧರ್ಮಿಗಳಿಗೆ ಉಪದೇಶ’ (sermon to the Heathens) ಅಥವಾ ಬಜಾರ್‌ ಉಪದೇಶ (Bazar Sermons). ಹೆಬಿಕ್‌ ತನ್ನನ್ನು ಈ ಕೆಲಸದಲ್ಲಿ ಚೆನ್ನಾಗಿ ತೊಡಗಿಸಿಕೊಂಡಿದ್ದನು. ತುಳು ಚೆನ್ನಾಗಿ ಬಾರದೇ ಇದ್ದರೂ ತನಗೆ ಬರುತ್ತಿದ್ದ ಅರ್ಧಮರ್ಧ ತುಳುವಿನಲ್ಲಿ ಬೈಬಲ್ಲಿನ ಸರಳ ಉಪದೇಶಗಳನ್ನು ಗಟ್ಟಿಯಾಗಿ ಸಾರಿ ಹೇಳುತ್ತಿದ್ದನು. ಇದಕ್ಕೆ ಜನರಿಂದ ಪ್ರತಿಕೂಲ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಅವರ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತಿತ್ತು. ಕೆಲವೊಮ್ಮೆ ಹಬ್ಬ ಹರಿದಿನ ಅಥವಾ ಜಾತ್ರೆಗಳ ಸಂದರ್ಭದಲ್ಲಿ ಜನರು ಕಲ್ಲು ಮತ್ತು ಸೆಗಣಿಯಿಂದ ಹೊಡೆದ ಸಂದರ್ಭಗಳೂ ಇವೆ (ಬ್ರುಕ್ನರ್‌ ೧೯೯೬:೧೮೧). ಆದರೆ ಇದಕ್ಕೆ ತಕ್ಕ ತರಬೇತಿ ಈ ಮೀಸನರಿಗಳಿಗೆ ಬಾಸೆಲ್‌ನಲ್ಲಿ ಆಗಿತ್ತು ಉದಾಹರಣೆಗೆ ಜರ್ಮನಿಯ ಕ್ಲೀನ ಬಾಸೆಲ್‌(Klein Basel) ಎಂಬಲ್ಲಿ ಮಿಶನರಿಗಳಾಗಿ ತರಬೇತಿ ಹೊಂದುತ್ತಿದ್ದವರು ಸೆಗಣಿ ತುಂಬಿದ ಗಾಡಿಗಳನ್ನು ಜನರ ಅಪಹಾಸ್ಯಕ್ಕೀಡಾಗುತ್ತಾ ಎಳೆಯಬೇಕಾಗಿತ್ತು (ಬೀದರ್‌ ೧೯೮೫:೩೭). ಆದ್ದರಿಂದ ಮಿಶನರಿಗಳಾಗಿ ಕೆಲಸ ಮಾಡುವಾಗ ಅದನ್ನೆಲ್ಲ ಲೆಕ್ಕಿಸದೆ ತಮ್ಮ ಕಾರ್ಯದಲ್ಲಿ ಮುಂದುವರಿಯಲು ಅವರಿಗೆ ಸಾದ್ಯವಾಯಿತು.

೧೮೫೦ರ ದಶಕದಲ್ಲಿ ಬಾಶೆಲ್‌ ಮಿಶನ್ನಿನಿಂದ ಮತಾಂತರ ಹೊಂದಿದ ಪ್ರೊಟೆಸ್ಟೆಂಟರ ಧಾರ್ಮಿಕ ಭಾಷೆ ತುಳು ಆಗಬೇಕೋ ಅಥವಾ ಕನ್ನಡವೋ ಎಂಬ ಪ್ರಶ್ನೆಯನ್ನು ಎತ್ತಿಕೊಳ್ಳಲಾಯಿತು. ಇಷ್ಟರ ತನಕ ಆ ಪ್ರಶ್ನಡ ತಲೆಯೆತ್ತಿರಲಿಲ್ಲವೆಂದು ಇದರ ಅರ್ಥವಲ್ಲ. ಆ ಪ್ರಶ್ನೆಯನ್ನು ಅಷ್ಟರವರೆಗೆ ಮುಂದೂಡಲಾಯಿತು. ೧೮೫೧ರಲ್ಲಿ ಬಾಸೆಲ್‌ನಿಂದ ಬಂದ ಒಬ್ಬ ಇನ್ಸ್‌ಪೆಕ್ಟರ್‌ ಮುಂದೂಡಲ್ಪಟ್ಟ ಈ ತರಹದ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವಲ್ಲಿ ಮಧ್ಯಸ್ತಿಕೆ ವಹಿಸಿದ. ಕೊನೆಗೆ ಮಂಗಳೂರಿನಲ್ಲಿ ಒಂದು ಕನ್ನಡ ಹಾಗೂ ಒಂದು ತುಳು ಚರ್ಚನ್ನು ಸ್ಥಾಪಿಸುದೆಂದು ನಿರ್ಧರಿಸಲಾಯಿತು. ತುಳುವು ಚರ್ಚಿನ ಧಾರ್ಮಿಕ ಭಾಷೆಯಾಗಬೇಕೆಂಬುದಕ್ಕೆ ಪರವಾದ ಒಂದು ವಾದವೆಂದರೆ ಚರ್ಚಿನ ಧಾರ್ಮಿಕ ಪ್ರಾಂತ್ಯ (Parish)ದಲ್ಲಿ ಕನ್ನಡಬಲ್ಲ ಮೇಲ್ಜಾತಿಯವರಿಗೆ ತುಳು ಗೊತ್ತಿದೆ; ಆದರೆ ಶೂದ್ರ ಜಾತಿಗಳಾದ ಮೊಗವೀರ, ಬಿಲ್ಲವ ಮತ್ತು ಬಂಟರಲ್ಲಿ ಹೆಚ್ಚಿನವರಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲ. ಕ್ರಿಶ್ಚಿಯನ್‌ ಧರ್ಮಕ್ಕೆ ಹೆಚ್ಚಾಗಿ ಈ ಜಾತಿಗಳವರೇ, ಅದರಲ್ಲೂ ಬಿಲ್ಲವರೇ ಹೆಚ್ಚಾಗಿ ಮಂತಾತರ ಹೊಂದುತ್ತಿದ್ದುದರಿಂದ ತುಳುವಿನ ಅಗತ್ಯ ಕನ್ನಡಕ್ಕಿಂತ ಹೆಚ್ಚಾಗಿತ್ತು (ಬ್ರುಕ್ನರ್‌ ೧೯೯೬ : ೧೮೪). ಹೀಗಾಗಿ ಬಾಸೆಲ್‌ಮಿಶನರಿಗಳಿಗೆ ತುಳುವಿನ ಅಧ್ಯಯನ ಅಗತ್ಯವಾಗಿ ಕಂಡುಬಂತು.

ಆದರೆ ಹತ್ತೊಂಬತ್ತನೇ ಶತಮಾನದ ಒಬ್ಬ ಮುಖ್ಯ ಮಿಶನರಿಯಾದ ಮೋಗ್ಲಿಂಗ್‌ ಅವರು ಕನ್ನಡದಲ್ಲಿ ಕೆಲಸ ಮಾಡಿದಂತೆ ತುಳುವಿನಲ್ಲಿ ಕೆಲಸ ಮಾಡಿದ್ದು ಕಂಡುಬರುವುದಿಲ್ಲ. ಕನ್ನಡದಲ್ಲಿ ಅವರು ಪ್ರಕಟಿಸಿದ ಬಿಬ್ಲಿಯೋಥಿಕ ಕನಾಠಿಕ ಬಹಳ ಪ್ರಶಂಸೆ ಗಳಿಸಿದ ಕೆಲಸವಾಗಿತು. ಆದರೆ ತುಳುವಿನ ಬಗ್ಗೆ ಅವರಲ್ಲಿ ಅಷ್ಟೊಂದು ಉತ್ತಮ ಅಭಿಪ್ರಾಯವಿರಲಿಲ್ಲ. ಅವರು ತುಳುವಿನ ಬಗ್ಗೆ ಮಾತನಾಡುತ್ತಾ “ತುಳುವಿನ ಬುದ್ಧಿಮತ್ತೆ, ವೈವಿಧ್ಯತೆ ಹಾಗೂ ಶ್ರಾವ್ಯತೆಯನ್ನು ಹೊರತುಪಡಿಸಿ ಆ ಭಾಷಾ ಪ್ರಭೇದದಲ್ಲಿ ತುಂಬಾ ಒರಟಾದ ಮತ್ತು ಹುರುಳಿಲ್ಲದ ವಸ್ತುಗಳೂ ಇವೆ. ಅದರ ಗುಣಮಟ್ಟ ಎಷ್ಟು ಕೆಳತರದ್ದೆಂದರೆ ಪ್ರತಿಯೊಂದು ಹಳ್ಳಿಗೂ ಪದಕೋಶ ಹಾಗೂ ಉಚ್ಚಾರಣೆ ಬದಲಾಗಿ ಅದರದ್ದೇ ಆದ ತುಳು ಇದೆ”.[2] ಮೋಗ್ಲಿಂಗ್‌ನ ಪ್ರಕಾರ ಕನ್ನಡಕ್ಕೇ ಹೆಚ್ಚು ಒತ್ತು ಕೊಡಬೇಕಾಗಿತ್ತು. ಭಾಷೆಯ ಪ್ರಮಾಣೀಕರಣದ ಪ್ರಶ್ನೆ ಬರುವಾಗ ಮೋಗ್ಲಿಂಗ್ ಅವರ ಅಭಿಪ್ರಾಯಗಳೂ ಬಹಳ ಮುಖ್ಯವಾದವು. ಮೋಗ್ಲಿಂಗ್‌ಅವರ ಪ್ರಕಾರ ಮಿಶನ್‌ನ ಇನ್ನೊಂದು ಕರ್ತವ್ಯವೆಂದರೆ ಇಂತಹ ಭಾಷಾ ಪ್ರಬೇಧಗಳನ್ನು ತೊಡೆದು ಹಾಕಿ ಕೃಷಿ ಮಾಡಲ್ಪಟ್ಟ, ಸುಸಂಸ್ಕೃತ ಭಾಷೆಯನ್ನು ಪ್ರತಿಷ್ಠಾಪಿಸುವುದು. ದಕ್ಷಿಣಕನ್ನಡದ ತುಳು, ನೀಲಗಿರಿಯ ಬಡಗ ಭಾಷೆಗಳಂಥವುಗಳನ್ನು ಸ್ವತಂತ್ರ ಭಾಷೆಗಳೆಂದು ಕರೆಯದೇ ಉಪಭಾಷೆಗಳೆಂದು ಅವರು ಕರೆದರು. ಮಿಶನರಿ ಅಮ್ಮನ್‌ ಅವರು ಹೊಸ ಒಡಂಬಡಿಕೆಯನ್ನು ತುಳುವಿಗೆ ಅನುವಾದಿಸಿದಾಗ ಮೋಗ್ಲಿಂಗ್‌ ಅವರು ಸಂತೋಷ ವ್ಯಕ್ತಪಡಿಸಿದರೂ ಕೂಡಾ ಹಳೆ ಒಡಂಬಡಿಕೆಯನ್ನು ತುಳುವರು ಕನ್ನಡದಲ್ಲೇ ಓದಬೇಕೆಂಬ ಆಲೋಚನೆಯನ್ನು ವ್ಯಕ್ತಪಡಿಸಿದನು. ಇಷ್ಟೇ ಅಲ್ಲದೆ ಶಾಲೆಗಳು ಕನ್ನಡ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಲು ಪ್ರಾರಂಭಿಸಬೇಕೆಂದು ಅವರು ಹೇಳಿದರು. ಮೋಗ್ಲಿಂಗ್‌ ಅವರು ಒಬ್ಬ ಮಿಶನರಿಯ ಕೆಲಸವನ್ನು ಸುಲಭವಾಗಿಸಲಿಕ್ಕಾಗಿ ಕನ್ನಡಕ್ಕೆ ಹೆಚ್ಚು ಮಹತ್ವ ಕೊಟ್ಟಿರಬಹುದು. ಆದರೆ ಅವರ ಅಭಿಪ್ರಾಯಗಳು ಮುಖ್ಯವಾಗಿವೆ. ಏಕೆಂದರೆ ಅವರು ಬಹುಶಃ ಪ್ರಥಮ ಬಾರಿಗೆ ಈ ಪ್ರಾತ್ಯದಲ್ಲಿ ಭಾಷೆಯ ಶ್ರೇಣಿಕರಣ ಮಾಡುತ್ತಿದ್ದರು. ಇಂದೇ ಪ್ರಾಂತ್ಯದಲ್ಲಿ ಹಲವು ಭಾಷೆಗಳ ಅಸ್ತಿತ್ವ ಅವರಿಗೆ ಯುರೋಪಿಯನ್‌ರಾಷ್ಟ್ರಗಳಿಗೆ ತದ್ವಿರುದ್ಧವಾಗಿ ಅಶಿಕ್ಷಿತ, ಅನಾಗರಿಕ ಸಮಾಜದ ಒಂದು ಒರಟು ಲಕ್ಷಣವಾಗಿ ಕಂಡಿರಬೇಕು. ಅದನ್ನು ಶಿಕ್ಷಣದ ಮೂಲಕ ‘ಸರಿಪಡಿಸುವ’ ಹಾಗೂ ಸಾಹಿತ್ಯವನ್ನು ಒಂದು ಅಧ್ಯಯನದ ವಸ್ತುವನ್ನಾಗಿ ಮಾಡುವ ಮೂಲಕ ಸರಿಯಾದ ಶಿಕ್ಷಣವನ್ನು ನೀಡುವತ್ತ ಅವರು ಸಂಜ್ಞೆ ಮಾಡಿದರು. ಇತರ ಮಿಶನರಿಗಳು ಉತ್ಸುಕರಾಗಿ ತುಳುವಿನಲ್ಲಿ ಕೆಲಸ ಮಾಡಲು ಯತಾರಿದ್ದಾಗ ಮೆಗ್ಲಿಂಗ್ ತುಳುವಿಗೊಂದು ಮಿತಿಯನ್ನು ಕೂಡಾ ಹಾಕಿದನು. ತುಳುವಿನ ಉಪಯುಕ್ತತೆ ಬಗ್ಗೆ ಸಂಶಯವಿದ್ದರೂ ಮಿಶನರಿಗಳು ಆ ಭಾಷೆಯನ್ನು ಕಲಿತರು, ಹಾಗೂ ಅದರಲ್ಲಿ ಹಲವು ಪಾಡ್ದಗಳನ್ನೂ, ಗಾದೆಗಳನ್ನೂ ಸಂಗ್ರಹಿಸಿದರು (ಬ್ರುಕ್ನರ್‌ ೧೯೯೬:೧೮೯).

ಭಾಷೆಯ ಅಧ್ಯಯನ ಮಾಡಲು ಒದಗಿ ಬಂದಂಥಾ ಸಂದರ್ಭಗಳಲ್ಲಿ ತುಳು ಪಾಡ್ದನ / ಭೂತಕೋಲವು ಒಂದು. ಬಿಲ್ಲವರು ಭೂತಾರಾಧನೆಯ ಆಧಾರ ಸ್ತಂಭವಾದ್ದರಿಂದ ಭಾಷೆಯ ಜೊತೆಜೊತೆಗೆ ಮಿಶನರಿಗಳಿಗೆ ಸಂಸ್ಕೃತಿಯನ್ನು ಮತ್ತು ಆರಾಧನಾ ರೀತಿಯನ್ನು ಅಧ್ಯಯನ ಮಾಡಲು ಅವಕಾಶವೊದಗಿ ಬಂತು. ೧೮೫೦ನೇ ಇಸವಿಯಲ್ಲಿ ಭುತಾರಾಧನೆಯ ಮೇಲೆ ಒಂದು ಅಭಿಪ್ರಾಯ ದಾಖಲಾಗಿರುವುದು ಸಿಗುತ್ತದೆ. ಇನ್ಸ್ ಪೆಕ್ಟರ್‌ ಜೊಸೆನ್‌ ಹ್ಯಾನ್ಸ್‌ ಎನ್ನುವವರು ತನ್ನ ರಿಪೋರ್ಟಿನಲ್ಲಿ ಈ ಬಗ್ಗೆ ಗಮನಹರಿಸಿ “ಭೂತಾರಾಧಕರು ಹೆಚ್ಚಾಗಿ ಕೆಳಜಾತಿಗಳಲ್ಲಿ ಕಂಡುಬರುತ್ತಾರೆ… ಬ್ರಾಹ್ಮಣ ಧರ್ಮದವರು ಇದಕ್ಕೆ ಹೆಚ್ಚಾಗಿ ಸಂಬಂಧಪಟ್ಟಂತೆ ಕಂಡುಬರುವುದಿಲ್ಲ… ಭೂತಗಳೆಂದರೆ ಅಸುರೀ ಶಕ್ತಿಗಳು… ಕೆಲವು ಭೂತಗಳು ಬಹಳ ಹೆದರಲ್ಪಡುತ್ತವೆ… ಭೂತದ ಸ್ಥಾನಗಳು ಸಣ್ಣ ಸಣ್ಣ ಕಟ್ಟಡಗಳಾಗಿದ್ದು ನಿಕೃಷ್ಟವಾಗಿರುತ್ತವೆ… ಭೂತದ ಪೂಜಾರಿಯು ಬ್ರಾಹ್ಮಣ ಜಾತಿಯವರಾಗಿರದೆ ಕಳ್ಳು ಇಳಿಸುವ ಜಾತಿಯವರಾಗಿರುತ್ತಾರೆ” – ಇತ್ಯಾದಿ ಹೇಳಿಕೆಗಳು ನಮಗೆ ಸಿಗುತ್ತವೆ (ಬ್ರುಕ್ನರ್‌ ೧೯೯೬: ೧೮೭-೮). ಆದರೆ ಈ ಸಮಯದ ಹೇಳಿಕೆಗಳೆಲ್ಲಾ ಭೂತಾರಾಧನೆ ಅಥವಾ ಪಾಡ್ಡನದ ಮೇಲ್ಮೈಯ ಜ್ಞಾನವನ್ನು ತೋರಿಸುತ್ತದೆಯೇ ವಿನಾ ಅದೊಂದು ಆಳವಾದ ಅಧ್ಯಯನದ ಫಲವಾಗಿರಲಿಲ್ಲ. ೧೮೭೨ನೆಯ ಇಸವಿಯಲ್ಲಿ ಜೆ.ಜೆ. ಬ್ರಿಗಲ್‌ ಎಂಬುವವರು ‘ತುಳು ವ್ಯಾಕರಣವನ್ನು’ ಪ್ರಕಟಿಸಿದರು. ಅದರ ಅನುಬಂಧದಲ್ಲಿ ಬ್ರಾಹ್ಮಣ ಮತ್ತು ಕೆಳಜಾತಿಯ ತುಳುವಿಗೆ ಉದಾಹರಣೆಯಾಗಿ ಕೆಲವು ಸಣ್ಣ ಪಠ್ಯಭಾಗಗಳನ್ನು ಕೊಟ್ಟಿದ್ದರು. ಅದೇ ವರ್ಷದಲ್ಲಿ ಭೂತಾರಾಧನೆಯ ವೀಕ್ಷಣೆ ಮತ್ತು ದಾಖಲಾತಿ ನಡೆದ ಬಗ್ಗೆ ಒಂದು ಮುಖ್ಯ ಮಾಹಿತಿ ಪ್ರಥಮವಾಗಿ ದೊರೆಯುತ್ತದೆ. ತುಳು ಪಾಡ್ದನಗಳನ್ನು ಸಂಗ್ರಹಿಸುವ ಕೆಲಸ ಮಾಡಿದ ಮಿಶನರಿಗಳಲ್ಲಿ ಪ್ರಥಮವಾಗಿ ಉಲ್ಲೇಖ ಸಿಗುವುದು ಹೆರ್ಮನ್‌ ಮೋಗ್ಲಿಂಗ್‌ ಅವರದು. ಈ ಉಲ್ಲೇಖವು ‘ದ ಡೆವಿಲ್‌ ವರ್ಶಿಪ್‌ ಆಫ್‌ ದ ತುಳುವಾಸ್‌’ (`The Devil worship of Tuluvas’) ಎಂಬ ಲೇಖನದಲ್ಲಿ ಸಿಗುತ್ತದೆ. ಈ ಲೇಖನವು ದ ಇಂಡಿಯನ್‌ ಆಂಟಿಕ್ವೇರಿ (The Indian Antiquary) ಎಂಬ ಪತ್ರಿಕೆಯಲ್ಲಿ ೧೮೯೪ ರಿಂದ ೧೮೯೭ರ ತನಕ ಪ್ರಕಟವಾಯಿತು. ಈ ಲೇಖನದ ಪ್ರಾಮುಖ್ಯತೆಯೇನೆಂದರೆ ನಾಲ್ಕೈದು ಜನ ಒರಿಯೆಟಲಿಸ್ಟರ (ಬರ್ನಲ್‌, ಟೆಂಪಲ್‌, ಹಸ್ಸೆ, ಮೇನರ್‌, ಮೆಗ್ಲಿಂಗ್‌ ಇವರು) ಭೂತಾರಾಧನೆಯ ಬಗ್ಗಿನ ಕೆಲಸ ಮತ್ತು ಅಭಿಪ್ರಾಯಗಳು ಒಂದೇ ಕಡೆಯಲ್ಲಿ ದೊರಕುವಂಥಾದ್ದು. ಈ ಶೀರ್ಷಿಕೆಯಲ್ಲಿ ಸುಮಾರು ಮೂವತ್ತು ಪಾಡ್ದನಗಳು ಪ್ರಕಟಗೊಂಡವು. ಇದರಲ್ಲಿ ಮೊದಲಿನ ಐದು ಪಾಡ್ದನಗಳು ಮೆಂಗ್ಲಿಂಗ್ ಅವರ ಸಂಗ್ರಹವೆಂದು ತಿಳಿದು ಬರುತ್ತದೆ. (ಟೆಂಪಲ್‌ ೧೮೯೪). ಆ ತನಕ ತುಳುವಿನಲ್ಲಿ ಕ್ರೈಸ್ತ ಸಾಹಿತ್ಯವನ್ನು ಬಿಟ್ಟರೆ ಮಿಶನರಿಗಳಿಂದ ಇತರೆ ರೀತಿಯ ಬಹಳ ಕೆಲಸಗಳಾಗಿರಲಿಲ್ಲ. ಪಾಡ್ಡನಗಳ ಜೊತೆಜೊತೆಗೇ ಈ ಕೃತಿಯಲ್ಲಿ ಒಬ್ಬ ಬ್ರಿಟಿಷ್‌ಅಧಿಕಾರಿ ಎ.ಸಿ. ಬರ್ನೆಲ್‌ ಮತ್ತು ಬಾಸೆಲ್‌ಮಿಶನಿನ ಮಿಶನರಿಯಾದ ಜೊಹಾನೆಸ್‌ ಹಸ್ಸೆ ಎಂಬುವರು ಈ ಕುರಿತು ಜೊತೆಯಾಗಿ ಮಾಡಿದ ಕ್ಷೇತ್ರಕಾರ್ಯದ ಬಗ್ಗೆ ತಿಳಿದು ಬರುತ್ತದೆ. ಈ ಘಟನೆಯು ಮಂಗಳೂರಿನಲ್ಲಿ ೨೩ರಿಂದ ೨೬ನೇ ಮಾರ್ಚ್‌, ೧೮೭೨ನೇ ಇಸವಿಯಲ್ಲಿ ಧೂಮಪ್ಪ ಎಂಬ ಬಿಲ್ಲವರ ಮನೆಯಲ್ಲಿ ನಡೆಯಿತು. ಈ ಲೇಖನವು ದಕ್ಷಿಣಭಾರತದಲ್ಲಿ ಭುತಾರಾಧನೆಯಂತಹ ಪದ್ಧತಿಗಳ ಬಗ್ಗೆ ಒಂದು ಸಣ್ಣ ಪರಿಚಯದೊಂದಿಗೆ ಆರಂಭವಾಗುತ್ತದೆ. ಆ ದಿನ (ಮಾರ್ಚ್ ೨೩, ೧೮೭೨) ಅಲ್ಲಿ ನಡೆದ ಭೂತನೇಮದ ಪ್ರತೀ ಸಣ್ಣ ವಿವರವನ್ನು ಕೂಲಂಕುಷವಾಗಿ ನೀಡುತ್ತದೆ. ಇಷ್ಟೇ ಅಲ್ಲದೇ ಇದರ ವೀಕ್ಷಣೆಯ ತರುವಾಯ ಬರ್ನೆಲ್‌ ನಡೆಸಿದ ಅಧ್ಯಯನವು ಕೆಲವು ನೋಟ್‌ಗಳ ರೂಪದಲ್ಲಿ ಸಿಗುತ್ತವೆ. ಮ್ಯಾನರ್‌ ಅವರು ತರ್ಜುಮೆಯಲ್ಲಿ ಕೆಲವು ತಿದ್ದುಪಡಿಯನ್ನು ತರುತ್ತಾರೆ. ಜೊತೆಗೆ ಭೂತಗಳ ಉಗಮದ ಬಗ್ಗೆ ಅವರು ಸಂಗ್ರಹಿಸಿದ ಒಂದು ಪಾಡ್ದನವನ್ನೂ ನೀಡುತ್ತಾರೆ. ಇದರೊಂದಿಗೆ ಇತರ ‘ಜಾನಪದ’ ಎನ್ನಬಹುದಾದ ಕ್ರೀಡೆ/ಸಂಪ್ರದಾಯಗಳ ವಿವರಗಳನ್ನೂ ಮಿಶನರಿಗಳು ಪಡೆದುಕೊಂಡಿದ್ದರು. ಉದಾಹರಣೆಗೆ ತುಳು ಶಬ್ದಕೋಶದ ಕರ್ತೃವಾದ ಮ್ಯಾನರ್‌ ಅವರು ತನ್ನ ಒಂದು ರಿಪೋರ್ಟಿನಲ್ಲಿ ಕೋಳಿ. ಜೂಜಿನ ಬಗ್ಗೆ ವಿವರವಾದ ಬರಹವೊಂದನ್ನು ೧೮೭೮ರಲ್ಲಿ ಕಳಿಸುತ್ತಾನೆ. (ಇದು ಅಚ್ಚಿಗೆ ಬರದೇ ಉಳಿದುಕೊಂಡಿದೆ. ನೋಡಿ, ಬ್ರುಕ್ನರ್‌೧೯೯೬: ೧೭೮). ಈ ಎಲ್ಲಾ ಬರಹಗಳು ಆಗಿನ ಓರಿಯೆಂಟಲಿಸ್ಟ್‌ಅಧ್ಯಯನದ ಲಕ್ಷಣಗಳನ್ನು ತಿಳಿಯಲು ಬಹಳ ಮುಖ್ಯವಾಗಿವೆ.

ಈ ಹಿಂದೆ ಹೇಳಿದಂತೆ ಹೆಚ್ಚಾಗಿ ಮತಾಂತರ ಹೊಂದುತ್ತಿದ್ದುದು ‘ಬಿಲ್ಲವ’ ಜಾತಿಯಿಂದ. ಬಿಲ್ಲವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದವರಾಗಿದ್ದರು. ಒಂದು ಎಣಿಕೆಯ ಪ್ರಕಾರ ೧೮೫೧ರಲ್ಲಿ ಬಿಲ್ಲವರ ಸಂಖ್ಯೆ ೧,೫೧,೪೯೧ ಆಗಿದ್ದು ಜನಸಂಖ್ಯೆಯ ಐದನೇ ಒಂದು ಭಾಗವನ್ನು ಹೊಂದಿದ್ದರು. (ಡೇವಿಡ್‌ ೧೯೮೫: ೧೬೭). ಬಿಲ್ಲವರೆಂದರೆ ‘ಬಿಲ್ಲಿ’ನವರಾಗಿದ್ದು ಹಳೆ ಕಾಲದಲ್ಲಿ ರಾಜರ ಸೈನ್ಯದ ಒಂದು ಮುಖ್ಯ ಭಾಗವಾಗಿದ್ದರು. ಇತ್ತೀಚಿನವರೆಗೆ ಕಳ್ಳು ತಯಾರಿಸುವುದು ಹಾಗೂ ವ್ಯವಸಾಯದಲ್ಲಿ ಸಹಕರಿಸುವುದು ಅವರ ಮುಖ್ಯ ಉದ್ಯೋಗವಾಗಿತ್ತು. ಈಗಲೂ ಹಲವು ಬಿಲ್ಲವರನ್ನು ಆ ಉದ್ಯೋಗದಲ್ಲಿ ನೋಡಬಹುದು. ಕೆಲವರು ಭೂತದ ಪೂಜೆಯನ್ನು ಮಾಡುವ ಪೂಜಾರಿಗಳೂ ಆಗಿದ್ದರು. ಅವರು ಅಸ್ಪೃಶ್ಯರಲ್ಲದಿದ್ದರೂ ಸಮಾಜದಲ್ಲಿ ಅವರಿಗೆ ನಿಕೃಷ್ಟ ಸ್ಥಾನವಿತ್ತು. ಬಾಸೆಲ್‌ಮಿಶನ್‌ ಈ ಹಿಂದೆ ಹೇಳಿದಂತೆ ಅವರನ್ನು ಮತಾಂತರಗೊಳಿಸಬಹುದಾದ ಮುಖ್ಯ ಗುಂಪಾಗಿ ಕಾಣಿಸತೊಡಗಿತು. ಬಿಲ್ಲವರೆಲ್ಲರೂ ಮುಖ್ಯವಾಗಿ ಭೂತದ ಆರಾಧಕರಾಗಿದ್ದರಿಂದ ಭೂತದ ಆರಾಧನೆಯ ಅಧ್ಯಯನವು ಬಾಸೆಲ್‌ಮಿಶನರಿಗಳಿಗೆ ಪ್ರಾಥಮಿಕ ಎಂದು ಕಂಡುಬಂತು.

ತುಳುನಾಡಿನಲ್ಲಿ ಮೇಲೆ ಹೇಳಿದಂತಹ ಕ್ಷೇತ್ರಕಾರ್ಯವಲ್ಲದೇ ಮಿಶನರಿಗಳು ಇತರ ಆಧುನಿಕವೆನ್ನಬಹುದಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆರೋಗ್ಯ ಮತ್ತು ಶಿಕ್ಷಣ ಇದರಲ್ಲಿ ಮುಖ್ಯವಾದವು ೧೮೩೬ರಲ್ಲಿ ಮಂಗಳೂರಿನಲ್ಲಿ ಒಂದು ಕನ್ನಡ ಶಾಲೆಯನ್ನು ತೆರೆದರು. ಇದರಲ್ಲಿ ಒಬ್ಬ ಶೂದ್ರನಿಗೆ ಉಪಾಧ್ಯಾಯ ವೃತ್ತಿಯನ್ನು ಕಲ್ಪಿಸಿಕೊಡಲಾಯಿತು. ಸಮಯ ಕಳೆದಂತೆ ಬೇರೆ ಇತರ ಶಾಲೆಗಳನ್ನೂ ತೆರೆದರು. ಈ ಶಾಲೆಗಳಲ್ಲಿ ಎಲ್ಲಾ ಜಾತಿಯ ಮಕ್ಕಳಿಗೆ ಶಿಕ್ಷಣವನ್ನು ಜೊತೆಗೆ ಕೊಡಲಾಗುತ್ತಿತ್ತು. ಹೀಗೆ ಶಿಕ್ಷಣ ಪಡೆದವರಿಗೆ ಮಂಗಳೂರಿನ ಈಸ್ಟ್‌ ಇಂಡಿಯಾ ಕಂಪೆನಿಯ ಆಫೀಸುಗಳಲ್ಲಿ ಕೆಲಸ ಸುಲಭವಾಗಿ ದೊರೆಯುತ್ತಿತ್ತು. ಹೀಗೆ ಬಾಸೆಲ್‌ಮಿಶನ್‌ ಶಾಲೆಗಳು ಮಂಗಳೂರಿನಲ್ಲಿ ಈಸ್ಟ್‌ಇಂಡಿಯಾ ಕಂಪೆನಿಗೆ ರ್ನಕರರನ್ನೊದಗಿಸುವ ಕೆಲಸವನ್ನೂ ಮಾಡಿದವು. ಇಲ್ಲಿ ಆಧುನಿಕತೆಯ ಆರಂಭದ ಒಂದು ಸಂಕೀರ್ಣತೆ ಇತ್ತು. ಎಲ್ಲಾ ಜಾತಿಯವರಿಗೂ ಕೆಲಸಗಳು ದೊರೆಯುತ್ತಿದ್ದುದರಿಂದ ಬ್ರಾಹ್ಮಣನೊಬ್ಬನಿಗೆ ಶೂದ್ರನು ಮೇಲಧಿಕಾರಿಯಾಗಿ ಬರುವ ಪ್ರಮೇಯಗಳೂ ಇದ್ದುವು. ಇದೇ ಸಮಯದಲ್ಲಿ ಮಂಗಳೂರಿನ ಬ್ರಾಹ್ಮಣರಿಂದ ಮಂಗಳೂರಿನ ಜಡ್ಡರಿಗೆ ಮನವಿಯೊಂದು ಹೋಯಿತು. ಆ ಮನವಿಯ ಪ್ರಕಾರ ಮಂಗಳೂರಿನ ಆಫೀಸುಗಳಲ್ಲಿ ಬಿಲ್ಲವರಿಗೆ ಕೆಲಸ ಕೊಟ್ಟಿದ್ದೇ ಆದರೆ ಅವರು ಬ್ರಾಹ್ಮಣ ನೌಕರರಿಗೆ ಮೇಲಧಿಕಾರಿಯಾಗಿ ಅವರ ಮಾತುಗಳನ್ನು ಪಾಲಿಸುವಂತಹ ಪ್ರಮೇಯವಿರುವುದರಿಂದ ಬಿಲ್ಲವರಿಗೆ ಕೆಲಸ ಕೊಡಬಾರದೆಂದು ಆಗಿತ್ತು. ಆದರೆ ಆ ಜಡ್ಜ್‌ ಉತ್ತರದಲ್ಲಿ ಕಂಪೆನಿಯ ನೌಕರಿಯು ಜಾತಿ, ಸಂಪ್ರದಾಯ ಮತ್ತು ಮತಧರ್ಮಗಳ ಆಧಾರದ ಮೇಲೆ ಕೊಡುವಂತದ್ದಲ್ಲವೆಂದು ಖಚಿತವಾಗಿ ಹೇಳಿದನು (ಡೇವಿಡ್‌ ೧೯೮೫: ೧೬೭). ಹೀಗೆ ವಸಾಹತುಶಾಹಿಯನ್ನು ಬಲಪಡಿಸುವುದರೊಂದಿಗೆ ವಸಾಹತುಶಾಹೀ ಆಧುನಿಕತೆಯಲ್ಲಿ ವಿವಿಧ ಸಮುದಾಯಗಳು ತಮ್ಮ ತಮ್ಮ ಪಾಲನ್ನು ಕೇಳುವಂತಹ ಪ್ರಕ್ರಿಯೆಯನ್ನು ತೀವ್ರಗೊಳಿಸುವಲ್ಲಿ ಬಾಸೆಲ್‌ಮಿಶನ್‌ ಒಂದು ಕಾರ್ಯಭಾರಿ (agent)ಯಾಗಿ ಕಾರ್ಯನಿರ್ವಹಿಸಿತು.

ಬಿಲ್ಲವರೊಳಗೆ ಮತಾಂತರದ ಕೆಲಸ ಮಾಡುವುದು ಹೆಚ್ಚು ಫಲದಾಯಕವೆಂದು ಬಾಸೆಲ್‌ಮಿಶನ್ನಿಗೆ ತಿಳಿಯುವ ಮುಂಚೆ ಅಂದರೆ ೧೮೩೦ ಮತ್ತು ೪೦ರ ದಶಕದಲ್ಲಿ ಬಾಸೆಲ್‌ಮಿಶನ್‌ ಎಲ್ಲಾ ಜಾತಿಗಳಲ್ಲೂ ಮತಾಂತರಕ್ಕೆ ಪ್ರಯತ್ನಿಸಿತ್ತು. ೧೮೪೦ರ ದಶಕದಲ್ಲಿ ಮೂವರು ಗೌಡ ಸಾರಸ್ವತ ಬ್ರಾಹ್ಮಣ ಹುಡುಗರ ಮತಾಂತರ ಬಹಳ ಗೊಂದಲವನ್ನುಂಟುಮಾಡಿತ್ತು. ಮಂಗಳೂರಿನ ಬ್ರಾಹ್ಮಣ ಮತ್ತು ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಇದರಿಂದ ಬೆದರಿಕೆಯುಂಟಾಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿದರು. ಮಂಗಳೂರಿನ ಇಂಗ್ಲಿಷ್ ಶಾಲೆಯಲ್ಲಿ ಏಳು ಮಂದಿ ಪೋರ್ಚುಗೀಸ್‌ ಮಕ್ಕಳನ್ನು ಬಿಟ್ಟರೆ ಬೇರೆ ವಿದ್ಯಾರ್ಥಿಗಳೇ ಉಳಿಯಲಿಲ್ಲ. ಬ್ರಾಹ್ಮಣ ಹುಡುಗರ ಮತಾಂತರ ನಡೆದ ಸ್ವಲ್ಪವೇ ದಿನಗಳಲ್ಲಿ ಮಂಗಳೂರಿನ ಬಲ್ಮಠದಲ್ಲಿರುವ ಮಿಶನ್ನಿನ ಕಛೇರಿ, ಮನೆಗಳ ಮೇಲೆ ಧಾಳಿ ನಡೆಯಿತು. ಸುಮಾರು ಇನ್ನೂರು ಮಂದಿಯಷ್ಟು ಜನ ಬ್ರಾಹ್ಮಣರು, ಮುಸ್ಲಿಮರು, ಮತ್ತಿತರ ಸಮುದಾಯಗಳಿಗೆ ಸೇರಿದವರು ಈ ಧಾಳಿಯನ್ನು ನಡೆಸಿದರು. ಈ ಧಾಳಿಯು ಮತಾಂತರ ಹೊಂದಿದ ಮೂವರನ್ನು ವಾಪಾಸು ಪಡೆಯಲಿಕ್ಕಾಗಿ ನಡೆಸಿದ್ದಾಗಿತ್ತು. ಆದರೆ ಆ ಸಮಯದಲ್ಲಿ ಮಿಶನರಿಗಳು ಧಾಳಿಯನ್ನೆದುರಿಸಿ ಮತಾಂತರಗೊಂಡವರನ್ನು ಉಳಿಸಿಕೊಂಡರು. ಇದು ನಡೆದ ಸ್ವಲ್ಪ ದಿನಗಳಲ್ಲೇ ಮತಾಂತರಗೊಂಡ ಒಬ್ಬ ಹುಡುಗನ ಸಂಬಂಧೀಗಳು ಮುಸ್ಲಿಮರನ್ನು ತಮ್ಮ ಹೋರಾಟದಲ್ಲಿ ಇನ್ನೂ ಹೆಚ್ಚಾಗಿ ತೊಡಗಿಸಿಕೊಳ್ಳಲು ಒಂದು ಉಪಾಯ ಹೂಡಿದರು. ಮಂಗಳೂರಿನ ಮಸೀದಿಯೊಂದರ ಕೆರೆಯಲ್ಲಿ ಬಾಸೆಲ್‌ಮಿಶನ್ನಿನವರಿಂದ ನಡೆದದ್ದೆಂಬಂತೆ ಒಂದು ಹಂದಿಯ ತಲೆಯನ್ನೆಸೆದರು. ಇದರಿಂದಾಗಿ ಮುಸಲ್ಮಾಮರು ಬಾಸೆಲ್‌ಮಿಶನ್ನಿನ ವಿರುದ್ಧ ಎಷ್ಟು ತೀವ್ರವಾಗಿ ತಿರುಗಿ ಬಿದ್ದರೆಂದರೆ ದೊಡ್ಡದೊಂದು ಗಲಭೆ ನಡೆಯುವಂತಹ ಸ್ಥಿತಿ ತಲೆದೋರಿತು. ಕಂಪನಿ  ಸರಕಾರದ ತೋಪುಗಳು ಮೈದಾನದಲ್ಲಿ ಸಿದ್ಧಗೊಂಡು ನಿಂತವು. ಕೊನೆಗೆ ಮಂಗಳೂರಿನ ಕಂಪೆನಿ ಅಧಿಕಾರಿಯಾದ ಬ್ಲೇರ್‌ ಎಂಬುವನು ಮುಸಲ್ಮಾನರನ್ನು ಕರೆಸಿ ಮಧ್ಯಸ್ತಿಕೆ ವಹಿಸಿ ಮಾತಾಡಿದಾಗ ಪರಿಸ್ಥಿತಿ ತಣ್ಣಗಾಯಿತು. ಈ ಕಂಪನಿ ಅಧಿಕಾರಿ ಮುಸಲ್ಮಾನರಿಗೆ ಸಮಜಾಯಿಸಿ ಕೊಡುವಾಗ ಮುಸಲ್ಮಾನರಿಗಾದ ಅವಮಾನದ ಹಿಂದೆ ಇರುವ ಕೃತ್ಯ ಮಿಶನರಿಗಳದ್ದಲ್ಲವೆಂದೂ, ಅದು ಕೆಲವು ಬ್ರಾಹ್ಮರ ಕೃತ್ಯವೆಂದೂ ಹೇಳಿದನಲ್ಲದೇ ಇಡೀ ಘಟನೆಯ ತನಿಖೆ ನಡೆಸುವುದಾಗಿ ಹೇಳಿ ಅವರಿಗೆ ಕೆರೆಯ ಶುದ್ಧೀಕರಣಕ್ಕಾಗಿ ಬೇಕಾದ ಹಣವನ್ನೂ ಕೊಟ್ಟನು (ಫ್ರೆಂಚ್‌ ೧೯೯೭:೧೩೪-೧೩೫).

ಹೀಗೆ ಬಾಸೆಲ್‌ಮಿಶನ್ನಿನ ಹತ್ತೊಂಬತ್ತನೇ ಶತಮಾನದ ಪ್ರಯತ್ನಗಳು ಬೇರೆಬೇರೆ ಸಮುದಾಯಗಳ ನಡುವಿನ ಪ್ರಸ್ತಾವಗಳಿಗೆ, ಸಂಧಾನಗಳಿಗೆ (negotiations) ಮತ್ತು ಚಟುವಟಿಕೆಗಳಿಗೆ ಒಂದು ಉತ್ಕಟತೆಯನ್ನು ತಂದುಕೊಟ್ಟಿತ್ತು. ಅದು ವಸಾಹತುಶಾಹಿಯನ್ನು ಬಲಪಡಿಸುವುದರೊಂದಿಗೆ[3] ವಸಾಹತುಶಾಹೀ ಆಧುನಿಕತೆಯನ್ನು ದಕ್ಷಿಣ ಕನ್ನಡದ ವಿಭಿನ್ನ ಸಮುದಾಯಗಳಿಗೆ ಮುಟ್ಟಿಸುವ ಕೆಲಸವನ್ನು ಬಹುಮಟ್ಟಿಗೆ ಮಾಡಿದವು. ವಸಾಹತುಶಾಹೀ ಸಂದರ್ಭದಲ್ಲಿ ಈ ಸಮುದಾಯಗಳ ಬೇಡಿಕೆಗಳು, ಲಭ್ಯವಿದ್ದ ಹೊಸ ಆಯ್ಕೆಗಳು, ಬಾಸೆಲ್‌ ಮಿಶನ್‌ಮತ್ತು ಕಂಪೆನಿ ಸರಕಾರ ಅವುಗಳಿಗೆ ಸ್ಪಂದಿಸಿದ ರೀತಿ, ಈ ಹಿಂದೆಂದೂ ಕಂಡು ಬರದಿದ್ದಂಥಾದ್ದಾಗಿತ್ತು. ದಕ್ಷಿಣ ಕನ್ನಡದ ‘ತುಳು ಸಮಾಜ’ವು ವಸಾಹತುಶಾಹೀ ಆಧುನಿಕತೆಯ ಬೆಳಕಿನಲ್ಲಿ ಒಂದು ಸಮಾಜವಲ್ಲ; ಪರಸ್ಪರ ವಿರೋಧಾಭಾಸಗಳಿರುವ ವಿವಿಧ ಸಮುದಾಯಗಳಿಂದ ರೂಪಿತವಾದ ಸಮಾಜ ಎಂದು ತಿಳಿಯಲು ಸಾಧ್ಯವಾಯಿತು. ಬಾಸೆಲ್‌ಮಿಶನರಿಗಳ ತುಳು ಅಧ್ಯಯನವು ಈ ಎಲ್ಲಾ ಪ್ರಕ್ರಿಯೆಗಳ ಭಾಗವಾಗಿ ಆಧುನಿಕ ತುಳು ಅಧ್ಯಯನಕ್ಕೆ ನಾಂದಿ ಹಾಡಿತ್ತು.

ಆಕರಸೂಚಿ

ಟೆಂಪಲ್‌, ಆರ್‌. ಸಿ. (೧೮೯೪), ‘ಡೆವಿಲ್‌ ವರ್ಶಿಪ್‌ ಆಫ್‌ ದ ತುಳುವಾಸ್‌’, ಇಂಡಿಯನ್‌ ಆಂಟಿಕ್ವೇರಿ, ಸಂ. ೨೩

ಡೇವಿಡ್‌, ಮೋಹನ್‌ ಡಿ. (೧೯೮೫), ‘ಕಾಸ್ಟ್‌ ಬ್ಯಾಕ್‌ ಗ್ರೌಂಡ್‌ ಆಫ್‌ ಬಾಸೆಲ್‌ಮಿಶನ್‌ಕ್ರಿಶ್ಚಿಯನ್ಸ್‌’, ಗಾಡ್ವಿನ್‌ ಶಿರಿಯಿಂದ ಸಂಪಾದಿಸಲ್ಪಟ್ಟ ಹೋಲ್‌ನೆಸ್‌ ಇನ್‌ ಕ್ರೈಸ್ಟ್‌ಬ್ಯಾಕ್‌ ಗ್ರೌಂಡ್‌ ಆಫ್‌ ಬಾಸೆಲ್‌ಮಿಶನ್‌ಕ್ರಿಶ್ಚಿಯನ್ಸ್‌’, ಗಾಡ್ವಿನ್‌ ಶಿರಿಯಿಂದ ಸಂಪಾದಿಸಲ್ಪಟ್ಟ ಹೋಲ್‌ನೆಸ್‌ ಇನ್‌ ಕ್ರೈಸ್ಟ್‌: ದ ಬಾಸೆಲ್‌ಮಿಶನ್‌ಇನ್‌ ಇಂಡಿಯದಲ್ಲಿ, ಮಂಗಳೂರು: ಕರ್ನಾಟಕ ಥಿಯಾಲಾಜಿಕಲ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌.

ಫಿಗ್ವೇರ, ಡೊರತಿ ಮೆಟಿಲ್ಡ್‌ (೧೯೯೧), ಟ್ರಾನ್ಸ್‌ಲೇಟಿಂಗ್‌ ದ ಓರಿಯೆಂಟ್‌: ದ ರಿಸೆಪ್ಶನ್‌ ಆಫ್‌ ಶಾಕುಂತಲ ಇನ್‌ ನೈಂಟೀಂತ್‌ ಸೆಂಚುರಿ ಯೂರಪ್‌, ಆಲ್ಬೆನಿ: ಸ್ಟೇಟ್‌ ಯೂನಿರ್ವಸಿಟಿ ಆಫ್‌ ನ್ಯೂಯಾರ್ಕ್‌

ಫ್ರೆಂಜ್‌, ಅಲ್ಬ್ರೆಕ್ಟ್‌(೧೯೯೭), ಸಂ. ಹರ್ಮನ್‌ ಮೆಗ್ಲಿಂಗ್‌, ಕೊಟ್ಟಯಂ: ಡಿ.ಸಿ. ಬುಕ್ಸ್‌

ಬಾಮನ್‌, ಜಾರ್ಜ್‌ (೧೯೯೮), ‘ಎ ಫ್ಯೂ ಇಂಟೆಲೆಕ್ಚುವಲ್‌ ಪ್ರಿಡೆಸೆಸರ್ಸ್‌ ಆಫ್‌ ಫರ್ಡಿನಾಂಡ್‌ ಕಿಟೆಲ್‌ ಇನ್‌ ನೈಂಟೀಂತ್‌ ಸೆಂಚುರಿ ಟ್ಯೂಬಿಂಜನ್‌’, ವಿಲಿಯಂ ಮಾಡ್ತ, ಮತ್ತಿತರರಿಂದ ಸಂಪಾದಿಸಲ್ಪಟ್ಟ ಎ ಡಿಕ್ಶನರಿ ವಿದ್‌ ಎ ಮಿಶನ್‌ಎಂಬ ಪುಸ್ತಕದಲ್ಲಿ, ಮಂಗಳೂರು : ಕರ್ನಾಟಕ ತಿಯಲಾಜಿಕಲ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌, ಪುಟ ೧೨೮-೧೪೨.

ಬೀದರ್‌, ವರ್ನರ್‌(೧೯೮೫), ‘ಹಿಸ್ಟರಿ ಆಫ್‌ದ ಬಾಸೆಲ್‌ಮಿಶನ್‌ಇನ್‌ರಿಲೇಶನ್‌ ಟು ದ ಕ್ರಿಶ್ಚಿಯನ್‌ ಹೋಪ್‌’, ಗಾಡ್ವಿನ್‌ ಶಿರಿಯಿಂದ ಸಂಪಾದಿಸಲ್ಪಟ್ಟ ಹೋಲ್‌ನೆಸ್‌ ಇನ್‌ ಕ್ರೈಸ್ಟ್‌: ದ ಬಾಸೆಲ್‌ಮಿಶನ್‌ಇನ್‌ ಇಂಡಿಯಾದಲ್ಲಿ, ಮಂಗಳೂರು: ಕರ್ನಾಟಕ ಥಿಯಲಾಜಿಕಲ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌

ಬ್ರುಕ್ನರ್‌, ಹೈಡ್ರನ್‌(೧೯೯೬), ‘ದ ಬಾಸೆಲ್‌ಮಿಶನ್‌ಆಂಡ್‌ ದ ಭೂತ ಕಲ್ಟ್‌’, ಯು. ಪಿ. ಉಪಾಧ್ಯಾಯರಿಂದ ಸಂಪಾದಿಸಲ್ಪಟ್ಟ ಕೋಸ್ಟಲ್‌ ಕರ್ನಾಟಕದಲ್ಲಿ, ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಪುಟ ೧೭೭-೧೯೬.

………..(೧೯೯೮), ‘ಫರ್ಡಿನಾಂಡ್‌ ಕಿಟ್ಟೆಲ್‌ ಇನ್‌ ದ ಕಾಂಟೆಕ್ಸ್ಟ್‌ಆಫ್‌ ನೈಂಟೀಂತ್‌ ಸೆಂಚುರಿ ಜರ್ಮನ್‌ ಇಂಡಾಲಜಿ’, ವಿಲಿಯಂ ಮಾಡ್ತ, ಮತ್ತಿತರರಿಂದ ಸಂಪಾದಿಸಲ್ಪಟ್ಟ ಎ ಡಿಕ್ಶನರಿ ವಿದ್‌ ಎ ಮಿಶನ್‌ಎಂಬ ಪುಸ್ತಕದಲ್ಲಿ, ಮಂಗಳೂರು: ಕರ್ನಾಟಕ ಥಿಯಾಲಾಜಿಕಲ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌, ಪುಟ ೧೦೩-೧೨೭.

ವಿಶ್ವನಾಥನ್‌, (೧೯೯೦), ಮಾಸ್ಕ್ಸ್‌ ಆಫ್‌ ಕಾಂಕ್ವೆಸ್ಟ್‌, ಲಂಡನ್‌: ಫೇಬರ್‌ ಮತ್ತು ಫೇಬರ್‌.

ಶಶಿಕಾಂತ ಕೆ. (೨೦೦೦), ದ ಪೊಲಿಟಿಕ್ಸ್‌ ಆಫ್‌ ಟ್ರಾನ್ಸ್ಲೇಶನ್‌: ಎ ಸ್ಟಡಿ ಆಫ್‌ ಸಿಲೆಕ್ಟ್‌ ಬಾಸೆಲ್‌ಮಿಶನ್‌ಟೆಕ್ಸ್ಟ್ಸ್‌, ಹೈದರಾಬಾದ್‌ ವಿ. ವಿ. ಗೆ ಒಪ್ಪಿಸಿದ ಎಮ್‌. ಫಿಲ್‌. ಪ್ರಬಂಧ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಇಡೀ ಪ್ರಪಂಚದ ಬೇರೆ ಬೇರೆ ಭಾಗಗಳು ಅಥವಾ ದೇಶಗಳು ಅಭಿವೃದ್ಧಿಯ ಬೇರೆ ಬೇರೆ ಹಂತದಲ್ಲಿವೆ ಹಾಗೂ ಯೂರೋಪಿಯನ್‌ ದೇಶಗಳು ಅವುಗಳಿಗೆ ದಾರಿ ತೋರಿಸುತ್ತವೆ ಎನ್ನುವ ಅಭಿಪ್ರಾಯ ಬರಲು Bibrical Chronological ಎಂಬ ಜ್ಞಾನ ಶಾಖೆ ಕಾರಣ ಎಂದು ಹೈಡ್ರನ್‌ ಬ್ರುಕ್ನರ್‌ ಅವರ ಅಭಿಪ್ರಾಯ. ಎನ್‌ಲೈಟನ್‌ಮೆಂಟನ್ನು ಪ್ರತಿನಿಧಿಸುವ ಪ್ರಸಿದ್ಧ ಇತಿಹಾಸಜ್ಞ ಹೆಗೆಲ್‌ ಈ ತರಹದ ಏಕರೇಖೀಯ (unilinear) ಇತಿಹಾಸವನ್ನು ಪ್ರತಿಪಾದಿಸಿದನು. ಇವನು ಟ್ಯೂಬಿಂಗನ್‌ಎಂಬಲ್ಲಿನ ಪ್ರೊಟೆಸ್ಟೆಂಟ್‌ ಹಾಸ್ಟೆಲ್‌ ಆದ ‘ಸ್ಟಿಫ್ಟ್‌’ನಲ್ಲಿ ವಿದ್ಯಾರ್ಥಿಯಾಗಿ ಉಳಿದುಕೊಂಡಿದ್ದನು. ಕಾಕತಾಳೀಯವೆಂಬಂತೆ ಮುಂದೆ ಬಾಸೆಲ್‌ಮಿಶನ್ನಿನ ಮೋಗ್ಲಿಂಗ್‌ ಮತ್ತು ಗುಂಡರ್ಟ್‌ ಇದೇ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡಿದ್ದರು.

[2] ೨. “…. Besides much intelligence, a rich variety of forms and music, there are also many crude, co-incidental and mean things in a dialect is on a low level that different villages have their own kind of Tulu with their own vocabulary and special pronunciation’’ (ಫ್ರೆಂಜ್‌೧೯೯೭: ೧೭೨).

[3] ಬಾಸೆಲ್‌ಮಿಶನ್ನಿನ ಅಧ್ಯಯನ ವಸಾಹತುಶಾಹಿಯನ್ನು ಯಾವ ರೀತಿಯಿಂದ ಬಲಪಡಿಸಿತೆನ್ನುವ ಹೆಚ್ಚಿನ ವಿವರಗಳಿಗಾಗಿ ನೋಡಿ, ಶಶಿಕಾಂತ ೨೦೦೦.