ಆರಾಧನಾ ಕ್ರಮಕ್ಕೆ ಸಂಬಧಿಸಿದ ಪುಸ್ತಕಗಳು ಇಲ್ಲವೇ ಧಾರ್ಮಿಕ ನಿಯಮಗಳು

ಬೈಬಲ್‌ಎಷ್ಟು ಪ್ರಾಮುಖ್ಯವೋ ಅದನ್ನು ಕ್ರಮಬದ್ಧವಾಗಿ ಆರಾಧನೆಯಲ್ಲಿ ತೊಡಗಿಸಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ ಎಂದು ಮಿಶನರಿಗಳು ತಿಳಿದಿದ್ದರು. ಆದುದರಿಂದ ಬೈಬಲ್‌ನ್ನು ಮಾತ್ರ ಭಾಷಾಂತರಿಸಿ ಸುಮ್ಮನಿರದ ಮಿಷನರಿಗಳು ಆರಾಧನಾ ಕ್ರಮವನ್ನು ‘ಇಲ್ಲಿಯ ಕ್ರೈಸ್ತರ ಮಾತೃಭಾಷೆ’ಯಲ್ಲಿ ಮಾಡಬೇಕೆಂಬ ಕುತೂಹಲದಿಂದ ಈ ಪ್ರಯತ್ನಕ್ಕೆ ಕೈಹಚ್ಚಿದರು. ಮುಖ್ಯವಾಗಿ ತುಳುವಿನಲ್ಲಿ ಅನೇಕ ಪ್ರಾರ್ಥನೆಗಳನ್ನು ರಚಿಸಿದರು. ಇಂತಹ ಮಾತೃಭಾಷೆಯಲ್ಲಿ ಪ್ರಾರ್ಥನೆಗಳು ಜನರಿಗೆ ಹೆಚ್ಚು ಅರ್ಥ ವಾಗುತ್ತಿದ್ದವು, ಮತ್ತು ಆರಾಧನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಈ ಭಾಷಾಂತರಗಳು ಹೆಚ್ಚು ಸಹಾಯಕವಾದವು.

[1] ಕ್ರೈಸ್ತ ಧಾರ್ಮಿಕತೆಯ ಮೂಲವಾದ ವಿಷಯಗಳನ್ನೊಳಗೊಂಡ ಬೋಧನೆಯ ಸಾರವನ್ನು ಪುಸ್ತಜಗಳಾಗಿ ಪರಿವರ್ತಿಸಿದ್ದಾರೆ. ಅದನ್ನು ಪ್ರಶ್ನೋತ್ತರ ಮಾದರಿಯಲ್ಲಿ ತಯಾರಿಸಿದ್ದಾರೆ.

ದೇವತಾರಾಧನೆಯ ಕ್ರಮದ ಮುಖ್ಯ ಉದ್ದೇಶವನ್ನು ಹೀಗೆ ಒತ್ತಿ ಹೇಳಿದ್ದಾರೆ –

ತುಳು : “ಸಭೆತಾಕುಳ ಒಗಟು ಕೂಡುನಾತ್‌ ಸರ್ತಿ ಕರ್ತವೇ ಆಯಿ ಯಢಸು ಕ್ರಿಸ್ತಡ್‌ ತಿಕ್ಕಿ ಆಶ್ಚರ್ಯ ಇತ್ತಿ ಉಡಿಗೆರೆಳೆನ್‌ ಪೊಸತಾದ್‌ ಅನುಭವೊಗು ದೆತ್ತೊಣ್ದು, ಇಂಚ ದೇವೆರೆನ್‌ ಆತ್ಮೊಡುಲಾ ಸತ್ಯೊಡಲಾ ಆರಾಧನೆ ಮಳ್ಪುಲೆಕ್ಕ ಸಹಾಯ ಮಳ್ಪುನವೇ ದೇವಾರಾಧನೆದ ಕ್ರಮತ ನೋಟ.[2]

ಕನ್ನಡ : ಸಭೆಯವರು ದೇವರನ್ನು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ಹಾಗೆ ಆರಾಧಿಸುವುದಕ್ಕೆ ಆರಾಧನೆಗೆ ಬರುವಷ್ಟು ತಯಾರಿ ಸದಸ್ಯರು ಯೇಸುಕ್ರಿಸ್ತನಲ್ಲಿ ದೇವರು ಅನುಗ್ರಹಿಸಿದ ಆತನ ಅದ್ಭುತವಾದ ದಾನವನ್ನು ಪುನರಪಿ ಅನುಭವಿಸುವುದಕ್ಕೂ ಸಹಾಯ ಮಾಡಬೇಕೆನ್ನುವೆದೇ ಈ ದೇವಾರಾಧನೆಯ ಕ್ರಮದ ಉದ್ಧೇಶ.

ದೇವೆರೆ ವಾಕ್ಯದ ಬೋಧನೆದ ಪ್ರಶ್ನೋತ್ತರ

ಈ ಪುಸ್ತಕವು ಕ್ರೈಸ್ತ ಬೋಧನೆಯ ಬಗ್ಗೆ ವಿವರಿಸುವ ಪುಸ್ತಕವಾಗಿದೆ. ಇದರಲ್ಲಿ ೬೭ ಪ್ರಶ್ನೋತ್ತರಗಳಿವೆ. ಇದು ಕ್ರೈಸ್ತ ದೈವಶಾಸ್ತ್ರದ ಮೂಲ ಸತ್ವವನ್ನು ತಿಳಿಸುವಂತಹದ್ದಾಗಿದೆ.

ದೃಢೀಕರಣದ ಪ್ರಶ್ನೋತ್ತರ

ಇದರಲ್ಲಿ ಕೂಡಾ ಪರಿಶುದ್ಧ ಸಂಸ್ಕಾರಗಳ ವಿಷಯವಾಗಿಯೂ ವಿಶ್ವಾಸಸೂತ್ರದ ಕುರಿತಾಗಿಯೂ ವಿವರಿಸಲಾಗಿದೆ. ‘ದೇವೆರೆ ವಾಕ್ಯದ ಬೋಧನೆದ ಪ್ರಶ್ನೋತ್ತರ’ದ ಹಲವು ಪ್ರಶ್ನೆಗಳು ಈ ಪುಸ್ತಕದಲ್ಲಿದೆ. ಕೊನೆಯಲ್ಲಿ ಕೊಟ್ಟಿರುವ ಕರ್ತನ ಭೋಜನದ ಪ್ರಾರ್ಥನೆಯು ಮಾನವರ ಇಡೀ ಪ್ರೀತಿ ವಿಶ್ವಾಸಕ್ಕೆ ನಾಂದಿ ಹಾಡುತ್ತದೆ. ಕ್ರೈಸ್ತತ್ವಕ್ಕೆ ಸ್ವೀಕಾರಗೊಳ್ಳುವವರು ಕೇವಲ ಆಕಸ್ಮಿಕವಾಗಿ ಇಲ್ಲವೇ ವಿಶ್ವಾಸರಹಿತವಾಗಿ ಕ್ರೈಸ್ತತ್ವವನ್ನು ಸ್ವೀಕರಿಸಬಾರದು. ಬದಲಾಗಿ ನಿಶ್ಚಯತ್ವದಿಂದ ಸ್ವೀಕರಿಸಬೇಕೆನ್ನುವುದು ಮಿಶನರಿಗಳ ಉದ್ದೇಶವಾಗಿತ್ತು. ಈ ಪುಸ್ತಗಳು ಸ್ಥಳೀಯ ಭಾಷೆಯಲ್ಲಿ ಇರುವುದರಿಂದ ವಿಶ್ವಾಸದ ಕುರಿತಾಗಿ ಜನರು ತಮ್ಮ ನಿಲುವನ್ನು ತಾಳಲು ಉಪಯುಕ್ತವಾಗಿದೆ.

ದಿನ ದಿನತ ಪ್ರಾರ್ಥನೆಗಳು (ದಿನ ದಿನದ ಪ್ರಾರ್ಥನೆಗಳು)

ದೈನಂದಿನ ಜೀವನಕ್ಕೆ ಉಪಯುಕ್ತವಾಗುವ ಪ್ರಾರ್ಥನಾಮಾಲೆಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಇಡೀ ಕುಟುಂಬ ಮತ್ತು ಸಬೇಯಾಗಿ ಪ್ರಾರ್ಥನೆ ಮಾಡುವ ಪಟ್ಟಿಯನ್ನು ನೀಡಲಾಗಿದೆ. ಇದರ ಒಂದನೇ ಭಾಗದಲ್ಲಿ – ಕರ್ತನ ಪ್ರಾರ್ಥನೆ, ವಿಶ್ವಾಸದ ಅರಿಕೆ, ದಶಾಜ್ಞೆಗಳು, ಊಟಕ್ಕೆ ಕುಳಿತುಕೊಳ್ಳುವಾಗ ಮಾಡುವ ಪ್ರಾರ್ಥನೆ, ಊಟ ಆದ ತರುವಾಯ ಮಾಡುವ ಪ್ರಾರ್ಥನೆ, ದೇವಾರಾಧನೆಯ ಸಮಯದಲ್ಲಿ ಮಾಡುವ ಪ್ರಾರ್ಥನೆಯೂ ಇದೆ. ಎರಡನೇ ಭಾಗದವರಿಗೆ ಆದಿತ್ಯವಾರದಿಂದ ಶನಿವಾರದವರೆಗೆ ಬೆಳಗ್ಗೆ ಸಾಯಂಕಾಲದ ಪ್ರಾರ್ಥನೆಯಿದೆ. ಮೂರು ನಾಲ್ಕನೆ ಭಾಗದಲ್ಲಿ ವೈಯಕ್ತಿಕ ಪ್ರಾರ್ಥನೆ ಇದೆ. ನಾಲ್ಕನೆಯ ಭಾಗದಲ್ಲಿ ಕುಟುಂಬ ಪ್ರಾರ್ಥನೆ. ಐದನೇ ಭಾಗದಲ್ಲಿ ಎಲ್ಲಾ ಹಬ್ಬಗಳಿಗೆ ಬೇಕಾದ ಪ್ರಾರ್ಥನೆ ಇದೆ. ಆರನೇ ಭಾಗ ಕಷ್ಟ ಸಂಕಟದ ಸಮಯದಲ್ಲಿ ಮಾಡುವ ಪ್ರಾರ್ಥನೆಯ ಭಾಗವಾಗಿದೆ, ಮರಣದ ಗಳಿಗೆಯಲ್ಲಿರುವವರು ಮಾಡುವ ಪ್ರಾರ್ಥನೆ ಕೂಡ ಇದರಲ್ಲಿದೆ. ಕೊನೆಯಲ್ಲಿ ಆಶೀರ್ವಾದದ ಮಾತುಗಳನ್ನೂ ನೀಡಲಾಗಿದೆ. ವೈಯಕ್ತಿಕತೆಯಷ್ಟೇ ಸಾಮುದಾಯಿಕತೆಗೂ ಸಮಾನ ಸ್ಥಾನವನ್ನು ಕಲ್ಪಿಸಿದ್ದಾರೆ. ಇಲ್ಲಿ ಇವರ ದೈವಶಾಸ್ತ್ರೀಯ ಅಂಶ, ಸಾಮುದಾಯಿಕತೆಗೆ ಕೊಟ್ಟ ಒತ್ತು ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಸಾಮಾನ್ಯ ಮಾನವರ ಜೀವನದಲ್ಲಿ ಉಂಟಾಗುವ ಪರಿಸ್ಥಿತಿಗಳಿಗೆ ತಕ್ಕಂತೆ ಪ್ರಾರ್ಥನೆಗಳನ್ನು ರಚಿಸಿದ್ದಾರೆ. ಆಧ್ಯಾತ್ಮಿಕ ಅರ್ಥವನ್ನೂ ಆದರಪೂರಿತವಾದ ನಿರೀಕ್ಷೆಯ ವಚನಗಳನ್ನೂ ನೀಡಿ ಈ ಪ್ರಾರ್ಥನೆಯನ್ನು ರಚಿಸಿದ್ದಾರೆ. ಇದು ತುಳುನಾಡಿನ ಜನರ ಜೀವನಕ್ಕೆ ಹೆಚ್ಚು ಸಮೀಪವಿರುವ ಪ್ರಾರ್ಥನೆಯಾಗಿದೆ. ಆಧ್ಯಾತ್ಮಿಕತೆಯ ಗುಣಮಟ್ಟವನ್ನು ಮೇಲಕ್ಕೆತ್ತಲು ತುಳು ಪ್ರಾರ್ಥನಾ ಮಾಲೆಯು ಹೆಚ್ಚು ಸಹಕಾರಿಯಾಗಿದೆ ಎನ್ನಬಹುದು.

ಪ್ರಾರ್ಥನೆಯ ಒಂದು ತುಣುಕು

ತುಳು : ಇತ್ತೆ ಕಣನೀರ್‌ಡ್‌ ಬಿತ್ತುನಾಕುಳ ಬೊಕ್ಕ ಸಂತೋಷೊಡು ಕೊಯಿಪಿಲೆಕ್ಕ ಇತ್ತೆಂದ ಬಂಙೊಡುಲಾ ದುಃಖೊಡುಲಾ ಎಂಕುಳೆ ಹೇದಯಳೆನ್‌ನಿನ ಕೈತಡೆಗೆಎ ಒಯಿತೊಣ್ಣ ಯೇಸುಕ್ರಿಸ್ತಗಾದ್‌ ಎಂಕುಳೇ ಅರಿಕೆನ್‌ ಕೇಂಡ್ದ್‌ ತರಕೊಣ್ಣ ಆಮೇನ್‌.

ಕನ್ನಡ : ಈಗ ಕಣ್ಣೀರಿನಲ್ಲಿ ಬಿತ್ತುವವರು ಮತ್ತೆ ಸಂತೋಷದಿಂದ ಕೊಯ್ಯುವ ಹಾಗೆ ಈಗಿರುವ ಕಷ್ಟವನ್ನು ದುಃಖವನ್ನು ನಮ್ಮ ಹೃದಯವನ್ನು ನಿನ್ನ ಕೈಗೆ ತೆಗೆದುಕೋ ಯೇಸು ಕ್ರಿಸ್ತನಿಗಾಗಿ ನಮ್ಮ ಪ್ರಾರ್ಥನೆಯನ್ನು ಕೇಳಿ ಉತ್ತರ ದಯಪಾಲಿಸು ಆಮೆನ್‌.

(ಒಬ್ಬಭಕ್ತನು / ಳು ಸಹಾಯಕ್ಕಾಗಿ ದೇವರ ಬಳಿ ತನ್ನ ಕಷ್ಟವನ್ನು ಪಾರು ಮಾಡಲು ಬೇಡುವುದಾಗಿದೆ.)

ಹೆಚ್ಚಿನ ಪ್ರಾರ್ಥನೆಯಲ್ಲಿ Incusive language ಬಳಸಿದ್ದಾರೆ.

ಉದಾ : ಈ ಸಹೋದರನ್‌ ಸಹೋದರಿನ್ ನಿನ ಕೈಕ್‌ ಒಚ್ಚಿದ್‌ ಕೊರ್ಪ. ಕರ್ತವಾ ದೇವೆರೇ ಪರಲೋಕಸ ಅಮ್ಮಾ ಆಯನ್‌ ಆಳೆನ್‌ ಕರುಣೆ ಮಳ್ಪುಲ. ಆಯೆ ನಿನ ಬಾಲೆ ಅತ್ತಾ.

ಈ ಸಹೋದರ ಸಹೋದರಿಯನ್ನು ನಿನ್ನ ಕೈಗೆ ಒಪ್ಪಿಸಿ ಕೊಡುತ್ತಿದ್ದೇವೆ. ಕರ್ತವಾ! ದೇವರೇ! ಪರಲೋಕಸ ತಂದೆಯೇ ಅವನನ್ನು ಅವಳನ್ನು ಕರುಣಿಸು. ಅವನು ಅವಳು ನಿನ್ನ ಮಕ್ಕಳಲ್ಲವೇ?

ಈ inclusive language ಬಳಸಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಈಗ ಮಹಿಳಾವಾದಿಗಳ ಹೋರಾಟದ ಪ್ರಯತ್ನವನ್ನು ಮಿಶನರಿಗಳು ಅಂದೇ ಪ್ರಾರಂಭ ಮಾಡಿದ್ದಾರೆ.

ಹಿಂದೂ ದೇಶೊಡು ಸ್ಥಾಪನೆ ಆಯಿ ಸುವಾರ್ತಮಾನ ಸಭೆಳೆಡ್‌ ಪ್ರಯೋಗಿಸ್‌ದಿ ದೇವಾರಾಧನೆದ ಪದ್ಧತಿ

ಇದರಲ್ಲಿ ಇಡೀ ದೇವಾರಾಧನಾ ಪದ್ಧತಿಗಳಿವೆ. ಸಾಮಾನ್ಯ ಆದಿತ್ಯವಾರಗಳಿಗೂ ವಿಶೇಷ ಹಬ್ಬದ ದಿನಗಳಿಗೂ ತಕ್ಕಂತೆ ಪ್ರಾರ್ಥನೆಗಳನ್ನು ಕೊಡಲಾಗಿದೆ. ದೃಡೀಕರಣದ ಪ್ರಶ್ನೋತ್ತರಗಳನ್ನು ಮತ್ತು ಮದುವೆಯಲ್ಲಿ ಉಪಯೋಗಿಸುವ ಪ್ರಾರ್ಥನಾ ವಿಧಿ ಇದರಲ್ಲಿದೆ. ಮರಣದ ಕ್ರಮವಿಧಿಗಳನ್ನೂ ನೀಡಲಾಗಿದೆ. ಇಲ್ಲಿ ಪ್ರಾರ್ಥನೆಗಳ ಆಯ್ಕೆ ಇದೆ. ಬೇರೇಬೇರೆ ಪ್ರಾರ್ಥನೆಯನ್ನು ಒಟ್ಟು ಮಾಡಿ ಇಲ್ಲಿ ವಿಭಾಗ ವಿಭಾಗವಾಗಿ ನೀಡಿದ್ದಾರೆ. ಬಹುಶಃ ಮಿಶನರಿಗಳಿಗೆ ಅರ್ಥವಾಗಲಿಕ್ಕೇನೋ ಜರ್ಮನ್‌ ಶಿರೋನಾಮೆಯನ್ನು ಬರೆದಿದ್ದಾರೆ. ಈ ಪುಸ್ತಕದ ಅಚ್ಚು, ಅಕ್ಷರಗಳು ಅದು ವಿಭಿನ್ನ ರೀತಿಯಾಗಿದೆ.

ಹಿಂದುಸ್ತಾನೊಡು ಉಪ್ಪು ಒಕ್ಕಟ್ಟಾಯಿ ಬಾಸೆಲ್‌ಮಿಶನ್‌ ಸಭೆತ ದೇವಾರಾಧನೆದ ಕ್ರಮ ಅಥವಾ ಆರಾಧಕೆರೆ ಕೈಪಿಡಿ

ಇದರಲ್ಲಿ ಆರಾಧನೆಯ ಕುರಿತಾಗಿ ಸಾರಾಂಶವಿದೆ. ಸುಮಾರು ಹನ್ನೆರಡು ವರ್ಷಗಳ, ಬೇರೆ ಬೇರೆ ಊರು, ದೇಶಗಳ ಕ್ರಮವನ್ನು ಒಟ್ಟಿಗೆ ಸೇರಿಸಲಾಗಿದೆ. ಪಿಠಿಕೆಯಲ್ಲಿ ತಿಳಿಸುವ ಪ್ರಕಾರ ಇದೇ ಹಿಂದುಸ್ಥಾನದಲ್ಲಿ ಒಂದು ದೇವಾರಾಧನ ಕ್ರಮವಿರಬೇಕೆಂಬುದು ಇವರ ಆಶಯವಾಗಿತ್ತು. ಅದಕ್ಕಾಗಿಯೇ ಈ ಪುಸ್ತಕ ಪ್ರಕಟಣೆಯಾಗಲು ದಾರಿಯಾಯಿತು. ಯಾವ ಮೂಲದಿಂದ ಪ್ರಾರ್ಥನೆಯನ್ನು ಬಳಸಿಕೊಂಡಿದ್ದಾರೆ ಎಂದು ತಿಳಿಸಲಿಕ್ಕಾಗಿ ಅಲ್ಲಲ್ಲಿಯೇ ಗುರುತುಗಳನ್ನು ಹಾಕಿದ್ದಾರೆ.

ಕ್ರೈಸ್ತ ವಿಶ್ವಾಸಿಯು ಮೂಲಭೂತ ವಿಷಯಗಳನ್ನು ಕಲಿಯಬೇಕಾದ ಎಲ್ಲಾ ವಿವರಗಳನ್ನು ಇವುಗಳಲ್ಲಿ ಕೊಡಲಾಗಿದೆ. ದೇವಾರಾಧನೆಯ ಕ್ರಮ ಇಲ್ಲವೇ ಸಭೆಯ ಕ್ರಮಗಳ, ಕಟ್ಟಳೆಯ ಬಗ್ಗೆ ವಿವರ, ಕಿರು ಕೈಪಿಡಿ ಇದೆಲ್ಲವೂ ಕೂಡಾ ಆರಾಧನೆಯ ಚೌಕಟ್ಟನ್ನು ಹೆಚ್ಚು ಕ್ರಮಬದ್ಧಗೊಳಿಸಲು ಸಹಾಯಕವಾದವು. ಇಂದು ಕರ್ನಾಟಕದಲ್ಲಿ ಪ್ರದೇಶಿಕ ಭಾಷೆಯಾದ ಕನ್ನಡವು ಆಡಳಿತ ಕ್ರಮದಲ್ಲಿ ಸಂಪೂರ್ಣವಾಗಿ ಜಾರಿಗೆ ಬರಬೇಕೆಂಬ ಧ್ವನಿಗಳು ಹೇಗೆ ತಿಳಿಸುತ್ತದೆಯೋ, ಹಾಗೆಯೇ ಅದಕ್ಕಿಂತ ಎಷ್ಟೋ ಮುಂಚಿತವಾಗಿ ದೇವಾರಾಧನೆಯ ಕ್ರಮಕಟ್ಟಳೆಗಳಲ್ಲಿ ಹಾಗೂ ಪ್ರರ್ಥನಾ ವಿಧಿಗಳೆಲ್ಲವೂ ಸ್ಥಳೀಯ ಭಾಷೆಯಲ್ಲಿ ಪ್ರಯೋಗಗೊಳ್ಳಬೇಕೆನ್ನುವುದು ಮಿಶನರಿಗಳ ಧ್ಯೇಯವಾಗಿದ್ದಿತ್ತು.

ನೀತಿಗೆ ಸಂಬಂಧಿಸಿದ ಪುಸ್ತ

ಧಾರ್ಮಿಕ ಸಾಹಿತ್ಯದ ಕ್ಷೇತ್ರದಲ್ಲಿಯೇ ಮೂರನೇ ಭಾಗವಾಗಿ ನೀತಿಗೆ ಸಂಬಂಧಿಸಿದ ಪುಸ್ತಕಗಳನ್ನು ಪಟ್ಟಿ ಮಾಡಬಹುದು. ಮುಖ್ಯವಾಗಿ ಬೈಬಲ್‌ನ ಮೂಲಸತ್ವವನ್ನು ಕ್ರೋಡೀಕರಿಸಿಕೊಂಡು ಕಥೆಯಾಗಿಯೂ, ಚಿತ್ರಗಳ ಮೂಲಕವಾಗಿಯೂ ಬೈಬಲ್‌ಕಥೆಯನ್ನೇ ಸಂಕ್ಷಿಪ್ತವಾಗಿ ಅರ್ಥವಾಗುವಂತೆ ಹೇಳುವ ಕಲೆಯನ್ನು ತಮ್ಮ ಪುಸ್ತಕದಲ್ಲಿ ಸಮೀಕರಿಸಿಕೊಂಡಿರುತ್ತಾರೆ. ಇದರಲ್ಲಿ ನೀತಿಗೆ ಸಂಬಂಧಿಸಿದ ವಿಷಯಗಳು ಸಮ್ಮಿಳಿತಗೊಂಡಿವೆ. ಈ ನೀತಿಗೆ ಸಂಬಂಧಿಸಿದ ಪುಸ್ತಕದಲ್ಲಿ ಕೇವಲ ಕ್ರೈಸ್ತತ್ವದ ಬೋಧನೆಯ ವಿವರಣೆಗಳು ಮಾತ್ರವಲ್ಲದೆ ಕ್ರೈಸ್ತತ್ವಕ್ಕೂ – ಸಾಮಾಜಿಕ ಬದುಕಿಗೂ ಏನು ಸಂಬಂಧ ಎಂಬುದನ್ನು ತಿಳಿಸಲು ಈ ಪುಸ್ತಕ ಉಪಯುಕ್ತವಾಗಿದೆ. ಕೌಟುಂಬಿಕ ವಿಚಾರಗಳು, ಧಾರ್ಮಿಕತೆಯ ಆಚರಣೆಯ ಬಗೆಗಿನ ಒಳಾರ್ಥಗಳು ಸಾಮಾಜಿಕ ಚಿಂತನೆಗಳು ಇದರಲ್ಲಿ ಸೇರಿದೆ. ಮುಖ್ಯವಾಗಿ ‘ಕ್ರೈಸ್ತರ್‌ಮೂರುದು ಕಲಿಗಂಗಸರ ಮುಳ್ತ್ ದ್ ಮಾರುನವು ಸಮನಾ,[3] (ಕ್ರೈಸ್ತರು ಕಳ್ಳು ಮಾಡಿ ಮಾರುವುದು ಸರಿಯೇ?) ಎಂಬ ಪುಸ್ತಕ ಸಾಮಾಜಿಕ ಕಳಕಳಿಯಿಂದಲೂ ಹಾಗೂ ಧಾರ್ಮಿಕ ನಿಷ್ಠೆಯನ್ನು – ನೈತಿಕತೆಯನ್ನು ಬೋಧಿಸುವ ಪುಸ್ತಕವಾಗಿ ರೂಪುಗೊಂಡಿದೆ.[4] ಇಂದೊಂದು ಉದಾಹರಣೆ ಮಾತ್ರ. ಇಂತಹ ಅನೇಕ ಪುಸ್ತಕಗಳು ಇವರು ಪ್ರಕಟಿಸಿದ್ದಾರೆ.[5]

ಮುಖ್ಯವಾಗಿ ಈ ನೀತಿಯ ವಿಷಯದಲ್ಲಿ ಹೆಚ್ಚಿನ ವಿಷಯಗಳು ಐರೋಪ್ಯರ ಪ್ರಭಾವಕ್ಕೆ ಒಳಗಾಗಿದೆ.[6] ಸ್ಥಳೀಯ ನೀತಿಯ ವಿಚಾರಗಳನ್ನು ಹೆಚ್ಚು ಸಂಗ್ರಹಿಸಿ ಬರೆಯಲು ಬಹುಶಃ ಇವರಿಂದ ಸಾಧ್ಯವಾಗಲಿಲ್ಲವೋ ಏನೋ? ಯಾಕೆಂದರೆ ಕೆಲವು ನೈತಿಕತೆಯ ಸಾರ್ವತ್ರಿಕ ನೆಲೆಯನ್ನು ಹೊಂದಿಕೊಂಡಿರುತ್ತದೆ. ನೈತಿಕತೆಯನ್ನು ಪರಿಸಬದ್ಧವಾಗಿ ಅರ್ಥೈಸುವುದು ಅಗತ್ಯವಾಗಿದೆ. ಆದರೆ ಇಲ್ಲಿ (ಮಂಗಳೂರು ಮತ್ತು ಕರ್ನಾಟಕ ಇತರೆಡೆಗಳಲ್ಲಿ) ಬಾಸೆಲ್‌ಮಿಶನರಿಗಳು ಸಾರಿದ ಕ್ರೈಸ್ತತ್ವವು ಸಂಪೂರ್ಣವಾಗಿ ಐರೋಪ್ಯದ ಪ್ರಭಾವಕ್ಕೆ ಒಳಗಾಗಿದ್ದು ಸ್ಥಳೀಯವಾಗಿ ಹೊಂದಿಕೊಳ್ಳಲು ಇನ್ನೂ ಕಷ್ಟಕರವಾಗಿರುವುದು ಇದೇ ಕಾರಣಕ್ಕಾಗಿಯೇ ಎಂಬುದನ್ನು ಮಿಮರ್ಶಿಸಬೇಕಾಗಿದೆ. ಮೋದಲೇ ಸ್ಥಳೀಕ ಆಲೋಚನಾಸರಣಿಯಲ್ಲಿ ನೈತಿಕತೆಯ ವಿಚಾರಗಳನ್ನು ಆಲೋಚಿಸಿದ್ದರೆ ಉತ್ತಮವಾಗಿದ್ದಿತ್ತು. ಯಾಕೆಂದರೆ ಇವರು ನೀತಿಯ ಬಗ್ಗೆ ಪ್ರಕಟಿಸಿದ ಪುಸ್ತಕಗಳು ಅತಿ ಹೆಚ್ಚಿನ ಪ್ರಮಾಣವನ್ನು ಹೊಂದಿತ್ತು. ಆದುದರಿಂದ ಇದು ಜನಸಾಮಾನ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಪರ ಪೊಸ ಒಡಂಬಡಿಕೆದ ಕಥೆಗಳು (ಹಳೆ ಹೊಸ ಒಡಂಬಡಿಕೆಯ ಕಥೆಗಳು)

ಈ ಪುಸ್ತಕದಲ್ಲಿರುವ ಒಂದು ವಿಶೇಷತೆ ಎಂದರೆ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸತ್ಯವೇದದ ಆಯ್ದ ಕಥೆಗಳನ್ನು ವಿವರಿಸಲಾಗಿದೆ. ವಿಶೇಷವಾಗಿ ಅದಕ್ಕನುಗುಣವಾದ ಚಿತ್ರಗಳನ್ನು ನೀಡಿದ್ದಾರೆ. ಕೆಲವೆಡೆಯಲ್ಲಿ ಒಂದು ರೇಖಾಚಿತ್ರವನ್ನು ಕೊಟ್ಟು ವಿವರಿಸಲಾಗಿದೆ. ಇದು ಹೆಚ್ಚು ಅರ್ಥಗರ್ಭಿತವಾಗಿ ಸಾಮಾನ್ಯ ಜನರಿಗೆ ಮತ್ತು ಮುಖ್ಯವಾಗಿ ಮಕ್ಕಳಿಗೆ ಅರ್ಥವಾಗುವ ವಿಷಯವಾಗಿದೆ, ಬೈಬಲ್‌ಗಿಂತ ಈ ಕಥೆಗಳು ಹೆಚ್ಚು ಜನಪ್ರಿಯವಾಗಿತ್ತೆಂದು ಮೌಖಿಕ ಅಭಿಪ್ರಾಯದಿಂದ ತಿಳಿದು ಬರುತ್ತದೆ.

ಈ ಕಥೆಗಳು ಹಳೆ ಒಡಂಬಡಿಕೆಯ ಭಾಷಾಂತರವಾಗದ ಪುಸ್ತಕದ ಪಟ್ಟಿಯಿಂದಲೂ ವಿಶೇಷವಾದ ಆಯ್ದ ಭಾಗಗಳನ್ನು ಒಳಗೊಂಡಿರುತ್ತದೆ. ಈ ಕಥೆಗಳು ವಿಭಾಗಗಳು ಬೈಬಲ್‌ನ ಚಾರಿತ್ರಿಕ ದೃಷ್ಟಿಕೋನದಿಂದ ಚಿತ್ರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಶಿಷ್ಟವಾಗಿ ಭಾಷಾಂತರಗೊಳ್ಳುವಾಗ ಘಟನೆಗಳನ್ನು ಕಥೆಗಳಾಗಿ ಉಲ್ಲೇಖಿಸಿದ್ದು ಗಮನಿಸಬಹುದಾಗಿದೆ. ಮುಖ್ಯವಾಗಿ ನ್ಯಾಯಸ್ಥಾಪಕರ ಕಾಲದಿಂದ ಆರಂಭ ಮಾಡುತ್ತಾರೆ. ಕ್ರಿಸ್ತ ಪೂರ್ವ (ಕ್ರಿಸ್ತಗ್‌ದುಂಬು) ೧೪೨೦-೧೦೮೦ ಎಂದು ಕಾಲಗತಿಯನ್ನು ತಿಳಿಸುತ್ತಾರೆ. ಇದನ್ನು ವಿವರಿಸುವಾಗ ಧಾರ್ಮಿಕ ಸಾಹಿತ್ಯದಲ್ಲಿಯೂ ಕೂಡಾಚಾರಿತ್ರಿಕ ಅಂಶಗಳು ಇರಬೇಕೆಂದು ಮಿಶನರಿಗಳು ತೋರಿಸಿಕೊಟ್ಟಿರುತ್ತಾರೆ.

ಹಳೆ ಒಡಂಬಡಿಕೆಯ ಕಥೆಗಳು ನಂತರದಲ್ಲಿ ಅಂದರೆ ಹೊಸ ಒಡಂಬಡಿಕೆಯ ಕಥೆಗಳ ನಡುವಿನ ಅಂತರದಲ್ಲಿ ಜೋಡಣೆಯನ್ನು ಕಲ್ಪಸಿದ್ದಾರೆ. ಮುಖ್ಯವಾಗಿ ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ‘ಮಧ್ಯಂತರ’ ಕಾಲವನ್ನು (Inter- Testamental period) ನೀಡಲಾಗಿದೆ. ಒಂದು ಚಿಕ್ಕ ಟಿಪ್ಪಣಿಯಲ್ಲಿ ಯಾವ ಅರಸರು ಆಳಿದರು ಎಂಬ ಬಗ್ಗೆ ಚಾರಿತ್ರಿಕ ಹಿನ್ನೆಲೆಯನ್ನು ಕೊಟ್ಟಿರುವುದು ಇಡೀ ಹೊಸ ಒಡಂಬಡಿಕೆಗೆ ಕೊಂಡಿ ಬೆಸೆದಂತಿದೆ. ಈ ಬೆಸುಗೆಯ ಚಾಣಾಕ್ಷತನವನ್ನು ಮಿಶನರಿಗಳು ಕೇವಲ ‘ಕಥೆ’ ಎಂದು ಹೇಳುವ ಸಾಹಿತ್ಯದಲ್ಲಿಯೂ ಅದನ್ನು ತೋರ್ಪಡಿಸಿದ್ದಾರೆ. ಯೇಸು ಕ್ರಿಸ್ತ ಹುಟ್ಟುವ ಮೊದಲೇ – ೪೦ ವರ್ಷ ಹೆರೋದ ಆಳಿದ, ಯೇಸುವು ಹುಟ್ಟಿದ ಒಂದು ವರುಷದಲ್ಲಿ ಆತ ತೀರಿಕೊಂಡ ಬಗ್ಗೆಯೂ, ಆತನ ಹೆಂಡತಿ ಮಕ್ಕಳ ಪಟ್ಟಿಯನ್ನು ಕೂಡಾ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಅಲ್ಲಿ ಬೈಬಲ್‌ನ ವಚನಗಳನ್ನು ಉಲ್ಲೇಖಿಸಿದ್ದಾರೆ.

ವಿಶೇಷವಾಗಿ ಈ ಕಥೆಗಳೆಲ್ಲವೂ ಬೈಬಲ್‌ನ ತರ್ಜುಮೆ ಮಾತ್ರವಲ್ಲ, ಸಾರಾಂಶದಿಂದ ಕೂಡಿದ ಕಥೆಗಳಾಗಿವೆ. ಮುಖ್ಯವಾಗಿ ಸುವಾರ್ತೆಯಲ್ಲಿ ಮತ್ತಾಯ ೩:೪ ಮತ್ತು ಲೂಕ ೪ನೇ ಅಧ್ಯಾಯವನ್ನು ಅನುಸರಿಸಿ ಯೇಸುವಿಗಾದ ದೀಕ್ಷಾಸ್ನಾನ ಮತ್ತು ಶೋಧನೆಯ ವಿಷಯವಾಗಿ ತಿಳಿಸಲಾಗಿದೆ. (ಯೇಸುಗು ಆಯಿ ಸ್ನಾನಲಾ ಶೋಧನೆಲ್ಲಾ) ಈ ವಿಷಯವು ಎರಡು ಸುವಾರ್ತೆಗಳ ಒಗ್ಗೂಡಿಸುವಿಕೆ ಮಾತ್ರವಲ್ಲ; ಕಥೆಯನ್ನು ಸಂಪೂರ್ಣವಾಗಿ ಸಾರಾಂಶಯುಕ್ತಗೊಳಿಸಿ ಸತ್ವಭರಿತ ಕಥೆಯನ್ನಾಗಿಸುವುದು ಇದರ ಮೂಲ ಉದ್ದೇಶವಾಗಿದೆ. ಯಾಕೆಂದರೆ ಸುವಾರ್ತೆಗಳು ಬೇರೆ ಬೇರೆ ಮೂಲದಿಂದ ಬರೆಯಲ್ಪಟ್ಟದೆಂದು ದೈವಜ್ಞಾನಿಕ ಅಧ್ಯಯನದಿಂದ ತಿಳಿದುಕೊಂಡಿದೆ ಮಿಶನರಿಗಳು ತುಳುವಿನಲ್ಲಿ ಬೈಬಲ್‌ಕಥೆಗಳನ್ನು ಬರೆಯುವಾಗ ಎಲ್ಲಾ ಮೂಲದ ಕಥೆಗಳನ್ನು ಅವಧರಿಸಿ, ಸಂಕಲನ ಮಾಡಿ ಅದನ್ನು ರೂಒಕ್ಕೆ ತಂದಿದ್ದಾರೆ. ಇವರು ಸುವಾರ್ತಾ ಪರಿಚ್ಛೇದಗಳನ್ನು ಪೋಣಿಸುವ ಕಾರ್ಯದಲ್ಲಿಯೂ ಸಂಕಲನದ ಕಾರ್ಯದಲ್ಲಿಯೂ ಹೆಚ್ಚು ಶ್ರಮವಹಿಸಿದ್ದಾರೆ.

ಈ ಕಥೆಯ ಕೊನೆಯಲ್ಲಿ ಅಪೊಸ್ತಲರ ವರದಿಯ ಬಗ್ಗೆ ಹೆಚ್ಚಿನ ವಿವರಣೆ ನೀಡಲಾಗಿದೆ. ವಿಶೇಷವಾಗಿ ಯಾವ ಕಾಲಘಟ್ಟದಲ್ಲಿ ಬರೆಯಲ್ಪಟ್ಟಿತು ಎಂಬ ಬಗ್ಗೆ ಚಿಕ್ಕ ವರದಿಯನ್ನು ವಿವರಿಸಲಾಗಿದೆ. ಕೊನೆಯಲ್ಲಿ ಆದಾಮನಿಂದ – ಮಕ್ಕಬೀಯರ ಕಾಲದವರೆಗೆ, ಅಲ್ಲಿಂದ ಯೇಸುವಿನ ಕಾಲಘಟ್ಟ ತದನಂತರದಲ್ಲಿ ಯೇರೂಸಲೇಮಿನ ನಾಶನ, ಕೊನೆಗೆ ಯೇಹಾನನ ಮರಣದವರೆಗೆ ತಿಳಿಸಲಾಗಿದೆ. ಸುಮಾರು ಕ್ರಿ. ಪೂ. ೪೦೦೦ದಿಂದ ಕ್ರಿ.ಶ ೧೦೦ರ ವರೆಗಿನ ಕಾಲಾನುಕ್ರಮದ ಪಟ್ಟಿ ನೀಡಲಾಗಿದೆ. ಹಳೆ ಒಡಂಬಡಿಕೆಯನ್ನು ೧೦ ಭಾಗ ಮಾಡಿ ಚರಿತ್ರೆಯ ಪಟ್ಟಿಯನ್ನೂ, ಬೈಬಲ್‌ಉಲ್ಲೇಖಿತ ಆಧಾರವನ್ನೂ ನೀಡಲಾಗಿದೆ. ಇದು ತುಂಬಾ ಕಷ್ಟದ ಕೆಲಸ; ಆದರೂ ಅದು ಜನಸಾಮಾನ್ಯರಿಗೆ ತಿಳಿಯಬೇಕೆಂಬ ಉದ್ದೇಶದಿಂದ ಈ ವಿಷಯಗಳ ಪಟ್ಟಿಯನ್ನು ನೀಡಿದ್ದರೆನ್ನಬಹುದು.

ಹೊಸ ಒಡಂಬಡಿಕೆಯಲ್ಲಿ ಚರಿತ್ರೆಯ ಪಟ್ಟಿ ಮತ್ತು ಬೈಬಲ್‌ನ ಉಲ್ಲೇಖಗಳನ್ನು ನೀಡಲಾಗಿದೆ. ಯೇಸುವಿನ ಜೀವನ, ಬೋಧನೆ ಮತ್ತು ಶ್ರಮೆಯ ಕುರಿತಾದ ಪಟ್ಟಿ ಮಾಡಲಾಗಿದೆ. ಅದರಲ್ಲಿ ಶ್ರಮಾವಾರದ ಆರಂಭವು ಶನಿವಾರದಿಂದ ಆರಂಭಿಸಿ – ಮತ್ತೊಂದು ಶನಿವಾರದವರೆಗೆ ಅದನ್ನು ವಿವರಿಸಿದ್ದಾರೆ. ಅಂದರೆ ಯೇಸುವಿನ ಶವವನ್ನು ಸಮಾಧಿಯಲ್ಲಿಟ್ಟ ಸ್ಥಳದವರೆಗೆ ವಿವರಣೆ ನೀಡಲಾಗಿದೆ. ಈ ಇಡೀ ಪವಿತ್ರ ವಾರದಲ್ಲಿ (Holy week) ನಡೆದ ಘಟನೆಯನ್ನು ಸುವಿಸ್ತಾರವಾಗಿ ವಿವರಿಸಿದ್ದಾರೆ. ಚಾರಿತ್ರಿಕವಾಗಿ ಯೇಸುವಿನ ಚಿತ್ರಣವನ್ನು ಕೊಟ್ಟಿದ್ದಾರೆ. ನಂತರದಲ್ಲಿ ಯೇಸುವಿನ ಪುನರುತ್ಥಾನದಿಂದ – ದಿವಾರೋಹಣ ಆಗುವ ಸಮಯದವರೆಗಿನ ವಿವರಣೆಯನ್ನು ನೀಡಲಾಗಿದೆ. ಒಟ್ಟಿನಲ್ಲಿ ‘ಪರಪೊಸ ಒಡಂಬಡಿಕೆಯ ಕಥೆಕುಳು’ ಕೇವಲ ಬೈಬಲ್‌ವಿಷಯಳನ್ನು ಸರಳವಾಗಿ ತಿಳಿಸಲು ಹೇಳುವ ಸಾಧನ ಮಾತ್ರವಾಗಿರದೆ ಚಾರಿತ್ರಿಕವಾಗಿ ಮತ್ತು ನಿರ್ದಿಷ್ಟವಾಗಿ ಜನರಿಗೆ ತಿಳಿಯಹೇಳುವ ಸಾಧನವನ್ನಾಗಿ ಬಳಸಲಾಗಿದೆ. ಇವರ ಪ್ರಕಟಣೆಯಲ್ಲಿ ಪುಸ್ತಕ ವಿಶಿಷ್ಟ ಸ್ಥಾನವನ್ನು ಪಡೆದಿರುತ್ತದೆ.

ಕೆಲವು ಪ್ರಬಂಧಗಳನ್ನು ಒಂದು ಪುಸ್ತಕವಾಗಿ ಛಾಪಿಸಿದ್ದಾರೆ.[7] ಇದು ಹೆಚ್ಚಾಗಿ ಕನ್ನಡ ಜಿಲ್ಲೆಯ ಉಪದೇಶಿಗಳ ಕೂಟದಲ್ಲಿ ಓದಿದ ಪ್ರಬಂಧವಾಗಿತ್ತು.

ಪರಲೋಕಸದ ಮಹಿಮೆಡ್‌ ಶೇರಿ ಯೇಸು ಕ್ರಿಸ್ತ ತನ ಸಭೆಟ್‌ ನಡಪುನ ಕೆಲಸದ ವಿಷಯೊಡು

ಇಲ್ಲಿ ಪ್ರಸ್ತುತದ ಕೆಲವು ವಿಷಯ ಕುರಿತಾಗಿ ಚರ್ಚೆ ನಡೆಸಲಾಗಿದೆ ಮುಖ್ಯವಾಗಿ ಸಭೆಯಲ್ಲಿ ನಡೆಯಬೇಕಾದ ಅಥವಾ ಮುಂದುವರಿಯಬೇಕಾದ ಕೆಲಸದ ವಿಷಯವಾಗಿ ಇಲ್ಲಿ ವಿವರಣೆ ನೀಡಲಾಗಿದೆ. ಇದರಲ್ಲಿ ಬಳಕೆಯಾದ ಕೆಲವು ಪದಗಳ ಬಗ್ಗೆ ಹೆಚ್ಚು ಗಮನಹರಿಸಬೇಕಾದುದು ಅವಶ್ಯಕ. ಯಾಕೆಂದರೆ ದೈವಶಾಸ್ತ್ರೀಯ ಮಟ್ಟದಲ್ಲಿ ಇಂತಹ ಪದಗಳು ತರ್ಜುಮೆಗೊಂಡಿರುವುದು ಧಾರ್ಮಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯಾಗಿದೆ. ಕೆಲವೊಂದು ಪದಗಳು ಉದಾಹರಣೆಗಾಗಿ ಇಂತಿವೆ.

ಮತ ವಿಚಾರ ಕೂಟ – Religious Congress, ಶಾಸ್ತ್ರದಕುಳು – Retionalists, ಅನ್ಯಮನ್ಯಲಾ – Mystical Union ಇತ್ಯಾದಿ.

ಕ್ರೈಸ್ತಗ್‌ ರಕ್ಷಗ್‌ ಆಂಡ್‌ ಇನ್ಪಿ ನಿಶ್ಚಯ ಆಯಗ್‌ ಆಪಿನಿ ಯೆಂಚ?

ಈ ಪುಸ್ತಕದಲ್ಲಿ ಅಲ್ಲಲ್ಲಿ ಆಂಗ್ಲ ಭಾಷೆ ಬಳಸಿರುತ್ತಾರೆ. ಇದರಿಂದಾಗಿ ಹೆಚ್ಚು ಆಂಗ್ಲ ಶಬ್ದಗಳು ಕೂಡಾ ತುಳುವಿನಲ್ಲಿ ತೂರಿಕೊಂಡಿದೆ ಎನ್ನಬಹುದು. ಸಂವೇದನೆ – Feeling, ಕ್ರೈಸ್ತರೆ ವಿದ್ವಾಂಸೆರ್‌ Apologists, ರಸಾಯನ ಶಾಶ್ತ್ರ -Chemist, ಮೂಲಿಕ ವಿದ್ವಾಂಸೆ – Botanist, ಭೂಗಣಿತ ರೇಖಾ, ವಿದ್ಯಾದಾಂತಿ – Geometer ಇಂತಹ ಪದಗಳು ಸರಿಯಾಗಿ ಅರ್ಥವಾಗುವುದಕ್ಕಾಗಿ ಆಂಗ್ಲಭಾಷೆ ಬಳಸಿದ್ದಾರೆ.

ರಾತ್ರೆ ಭೋಜನದ ಅರ್ಥೊನು ತೋಜಾವುನವು ಒಂಜಿ ಪ್ರಸಂಗ ಯೋಹಾನೆ

೬ : ೪೭ -೫೮ (A Sermon on John)

ಇಲ್ಲಿ ಒಂದು ಪ್ರಸಂಗ ಭಾಗವನ್ನು ವಿವರಿಸುವುದರ ಬಗ್ಗೆ ಮತ್ತು ಅದನ್ನು ಅರ್ಥವತ್ತಾಗಿ ತಿಳಿಯಹೇಳಿದುದರ ಬಗ್ಗೆ ವಿವರಣೆ ಇದೆ. ಅಲ್ಲಲ್ಲಿ ಪ್ರಶ್ನಾವಳಿಯನ್ನು ಬಳಸಿ ಇಡೀ ಪ್ರಸಂಗ ಭಾಗವನ್ನು ಮುಂದುವರಿಸಲಾಗಿದೆ.

ಸ್ವರ್ಗಯಾತ್ರೆ

ಜಾನ್‌ ಬುನಿಯನ್‌ ಅವರ pilgrims progressನ್ನು ತುಳುವಿಗೆ ಭಾಷಾಂತರಿಸಲಾಗಿದೆ. ಇದರಲ್ಲಿ ಸಂಭಾಷಣೆ ಇದೆ. ಇಲ್ಲಿ ಹಟ, ಹುಂಬತನ, ಲೋಕ ಇತ್ಯಾದಿ ವಿಷಯಗಳನ್ನು ಪಾತ್ರವಾಗಿ ಪರಿವರ್ತಿಸಿದ್ದಾರೆ. ಇದರಲ್ಲಿ ಹೆಚ್ಚು ಆಡುಭಾಷೆಯ ಮಾತುಗಳು ಮಿಶ್ರಿತವಾಗಿದೆ. ಯಾಕೆದರೆ, ಆಧ್ಯಾತ್ಮಿಕ ಪುಸ್ತಕವಾದ ಬೈಬಲ್‌ನ ಭಾಷಾಂತರಕ್ಕಿಂತಲೂ ಈ ಭಾಷಾಂತರದಲ್ಲಿ ಹೆಚ್ಚು ಜನ ಬಳಕೆ ಮಾಡುತ್ತಿದ್ದ ಮಾತುಗಳನ್ನು ಸೇರಿಸಲಾಗಿದೆ. ಸ್ವರ್ಗ ಯಾತ್ರೆಯ ಪ್ರಯಾಣದ ಕುರಿತಾಗಿ ಉಲ್ಲೇಖ ಮಾಡಲಾಗಿದೆ.

ಪುಟ ೧೧೫ : ತುಳು : ಆತ್‌ ಪೊರ್ತುದಗ ನೆಲೆಮಾಳಿಗೆಡ್‌ ಇತ್ತಿ ಪ್ರಯಾಣದಾಕುಳ ಶನಿವಾರ ನಡೀರ್‌ ಪತ್ತ್‌ದ್ ಐತ್ವಾರ ಪುಲ್ಯಾನೆಂಗ ಪ್ರಾರ್ಥನೆ ಮಳ್ತೊಣ್ದಿತ್ತೆರ್.

ಕನ್ನಡ : ಅಷ್ಟು ಹೊತ್ತಿಗೆ ನೆಲಮಾಳಿಗೆಯಲ್ಲಿ ಪ್ರಯಾಣದಲ್ಲಿದ್ದವರು, ಶನಿವಾರ ಮಧ್ಯರಾತ್ರಿಯಿಂದ ಬೆಳಕು ಹರಿಯುವ ತನಕ/ ಮುಂಜಾವಿನವರೆಗೆ ಪ್ರಾರ್ಥನೆ ಮಾಡುತ್ತಿದ್ದರು.

ದೇವರೆ ರಾಜ್ಯದ ಮುತ್ತುಳು

ಈ ಪುಸ್ತಕ ಸರಸ್ವತಿ ಪ್ರಿಟಿಂಗ್‌ವರ್ಕ್ಸ್ ಲಿಮಿಟೆಡ್‌ ಮಂಗಳೂರು (೧೯೩೪) ರಲ್ಲಿ ಅಚ್ಚಾದದ್ದು.[8] ಇದರಲ್ಲಿ ಬೈಬಲ್‌ನ ಸಾಮ್ಯದ ಕಥೆಯನ್ನು ಸವಿಸ್ತಾರವಾಗಿ ನೀಡಲಾಗಿದೆ. ಇದರಲ್ಲಿ ಅನೇಕ ಉಪಕಥೆಗಳೂ ಇವೆ.

ಪುಟ ೧೨ : ಆಳ್‌ ಬುಡಾರ್‌ ಇತ್ತಿ ಒಂಜೇ ಕೋಣೆಡ್‌ ತನಕ್‌ ಬೋಡಾಪಿ ಸಾಮಾನ್‌, ಬೇಂಚಿ, ಪೆಟ್ಟಿಗೆ, ಮನೆ, ಸ್ಕ್ರೀನ್‌, ಪಜೆ, ಕುಂಟು, ನನ ಚೆಂಬು, ಕೊಡಪಾನ, ಬಟ್ಟಲ್‌, ಕೋಪ್‌, ಕರ, ಬಿಸಲೆ ಇಂಚಿತ್ತಿ ಮಾತ ಸಾಮಾನ್‌ ನೆಲಟೇ ದೀತಳ್‌.[9]

ಈ ಮೇಲಿನ ಪಟ್ಟಿಯಲ್ಲಿ ಹೆಚ್ಚಿನದು ಇಂಗ್ಲಿಷ್‌ ಮೂಲದ ಪದ. ಆದರೆ ಹೆಚ್ಚಿನ ಪದ ಉದಾ : ಕರ, ಬಿಸಲೆ ಇದು ದಿನ ಬಳಕೆಯಲ್ಲಿ ಬಳಸಲಾಗುವ ವಸ್ತುಗಳಾಗಿದ್ದವು. ಆದುದರಿಂದ ಬೈಬಲ್‌ನ ಸಾಮ್ಯದ ವಿವರಣೆಯಲ್ಲಿ ಈ ಪದಗಳೂ ಸೇರಿಕೊಂಡದ್ದು, ಸಂಸ್ಕೃತಿಗೂ-ಧರ್ಮಕ್ಕೂ ನಿಕಟ ಸಂಬಂಧವನ್ನು ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಪದಗಳು ತುಳು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಪದಗಳಾಗಿವೆ.

Christ[10] : (ಇಂಗ್ಲಿಷ್‌ಕನ್ನಡ-ತುಳು-ಮಲೆಯಾಳಿ ಭಾಷೆಯಲ್ಲಿ ಚಿತ್ರಕಥೆ) ಈ ಪುಸ್ತಕ ನಾಲ್ಕು ಭಾಷೆಯಲ್ಲಿದೆ. ಯೇಸುವಿನ ಜನನ, ಭೋಧನೆಯನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಬೈಬಲ್‌ನ ವಾಕ್ಯಗಳು ಮತ್ತು ಚಿತ್ರಗಳು ಸುಂದರವಾಗಿ ಚಿತ್ರಿತವಾಗಿದೆ.

ತುಳು ಕಥೆಗಳಲ್ಲಿ ನೀತಿಯು ಸಮ್ಮಿಳಿತಗೊಂಡಿದೆ. ಮುಖ್ಯವಾಗಿ ಈ ಕಥೆಗಳು ಬೈಬಲ್‌ಆಧಾರಿತವಾಗಿದ್ದು, ಜನರು ಬದುಕಿನ ಚಿತ್ರಣಕ್ಕೆ ಹತ್ತಿರದಲ್ಲಿ ಹೋಲುವ ವಿಚಾರಗಳನ್ನು ಅಳವಡಿಸಿ ಕಥೆಗಳನ್ನೂ ಹೆಣೆಯಲಾಗಿದೆ, ಕಥೆಗಳು – ಆಧ್ಯಾತ್ಮಿಕ ವಿಷಯಗಳ ಮತ್ತು ಚಾರಿತ್ರಿಕ ಸಂವಾದದ ‘ವಸ್ತು’ವಾಗಿತ್ತು ಎಂದು ಹೇಳಬಹುದು. ಕಥೆಗಳು ಹೆಚ್ಚಾಗಿ ‘ಕ್ರೈಸ್ತನೀತಿ ಶಾಸ್ತ್ರ’ಕ್ಕೆ ಹೆಚ್ಚು ಒತ್ತು ಕೊಟ್ಟಿತ್ತು. ಮುಖ್ಯವಾಗಿ ಧಾರ್ಮಿಕ ಚೌಕಟ್ಟಿಗಿಂತ ಹೊರಗೆ ಕಥೆಗಳಾಗಲಿ, ನೀತಿಯುಕ್ತ ವಿಷಯಗಳಾಗಲೀ ಬಾಸೆಲ್‌ಮಿಶನರಿಗಳಿಂದ ಪ್ರಕಟಗೊಳ್ಳಲಿಲ್ಲ. ಇಂತಹ ಸೃಜನಾತ್ಮಕ ಕಲೆಗೆ ಮಿಶನರಿಗಳು ಕೈಹಾಕಲಿಲ್ಲ ಬದಲಾಗಿ ಧಾರ್ಮಿಕ ರಂಗದಲ್ಲಿ ನೀತಿಯ ವಿಷಯವನ್ನು ಕಥೆ, ವಿಮರ್ಶೆ, ಚರ್ಚೆಯ ರೀತಿಯಲ್ಲಿ ಪ್ರಕಟಿಸಿದ್ದಾರೆ.

ಸಾಹಿತ್ಯ ಕ್ಷೇತ್ರವು ಜನ ಸಾಮಾನ್ಯರ ಬದುಕಿನಲ್ಲಿ ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ನೀತಿಗೆ ಸಂಬಂಧಿಸಿದ ಪುಸ್ತಕದ ಹಿನ್ನೆಲೆಯಲ್ಲಿ ನಾವು ಅಧ್ಯಯನ ನಡೆಸುವುದು ಅಗತ್ಯವಿದೆ.‘ಎತ್ತಣ ಮಾಮರ – ಎತ್ತಣ ಕೋಗಿಲೆ ಎತ್ತಣದಿಂದೆತ್ತಣ ಸಂಬಂಧವಯ್ಯಾ’ ಎಂದ ಹಾಗೆ ಐರೋಪ್ಯದ ನೈತಿಕತೆಯ ಪ್ರಭಾವವು – ತುಳುನಾಡಿನ ಮಣ್ಣಿನಲ್ಲಿ ಇಂದಿಗೂ ಜೀವಂತವಾಗಿ ಉಳಿದಿದೆ ಎನ್ನುವುದು ಅವರ ಪ್ರಕಟಿತ ಪುಸ್ತಕದ ಮೂಲಕ ತಿಳಿಯಬಹುದಾಗಿದೆ.

ಆಧ್ಯಾತ್ಮಿಕ ಗೀತೆಗಳು

ಸಂಗೀತವು ಮಾನವರ ಜೀವನದಲ್ಲಿ ಹಾಸುಹೊಕ್ಕಾಗಿರುವ ಅಂಶ. ಪ್ರತಿಯೊಂದು ಧರ್ಮದಲ್ಲೂ ಆಧ್ಯಾತ್ಮಿಕ ಸಂಗೀತಕ್ಕೆ ಅದರದ್ದೇ ಆದ ಪ್ರಾಧಾನ್ಯ ಇದೆ. ಕ್ರೈಸ್ತಧರ್ಮದಲ್ಲೂ ಕೂಡಾ ಆರಾಧನೆಯ ದೃಷ್ಟಿಯಿಂದಲೂ ಆಧ್ಯಾತ್ಮಿಕ ದೃಷ್ಟಿಯಿಂದಲೂ ಸಂಗೀತವು ವಿಶಿಷ್ಟ ಸ್ಥಾನದಲ್ಲಿದೆ. ಮಿಶನರಿಗಳ ಪ್ರಭಾವದಿಂದಾಗಿ ಮುಖ್ಯವಾಗಿ ತುಳು ಸಂಗೀತಗಳು (ಗೀತಗಳಲ್ಲಿ) ಹೆಚ್ಚಾಗಿ ಭಾಷಾಂತರಗೊಂಡದ್ದರಿಂದ ಅದು ಭಾರತೀಯ ಶೈಲಿಗಿಂತ ಹೆಚ್ಚಾಗಿ ಪಾಶ್ಚಾತ್ಯ ಶೈಲಿಯನ್ನೇ ಮೈಗೂಡಿಸಿಕೊಂಡು ಬೆಳೆದವು. ಬಹುಶಃ ಮಿಶನರಿಗಳು ಸಂಗೀತ ರಚನೆಯನ್ನು ಭಾರತೀಯ ಶೈಲಿಯಲ್ಲಿ ಮಾಡಿ ಭಾರತೀಯ ಸಂಗೀತ ಸ್ವರಗಳನ್ನು ಪ್ರಾರಂಭಿಸಿದ್ದರೆ ಸಾಹಿತ್ಯ ದೃಷ್ಟಿಕೋನದಿಂದ ಸಂಗೀತ ಹೆಚ್ಚು ಪ್ರಭಾವಶಾಲಿಯಾಗುತ್ತಿತ್ತು. ಆದರೆ ಇತರೆ ದೃಷ್ಟಿಕೋನದಿಂದ ಇಲ್ಲವೇ ಅಧ್ಯಾತ್ಮಿಕ ಗೀತೆಗಳು ಸಾಹಿತ್ಯ ದೃಷ್ಟಿಕೋನದಿಂದ ಅಷ್ಟಾಗಿ ಕೊಡುಗೆಯನ್ನು ಕೊಟ್ಟಿಲ್ಲ.[11]

ಆದರೆ ಆ ಸಂಗೀತಗಳು ಆಧ್ಯಾತ್ಮಿಕ ಚೌಕಟ್ಟಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿವೆ. ಗೀತೆಗಳ ಆರಾಧನೆಗಳಲ್ಲಿ ಪ್ರಧಾನ ಸ್ಥಾನ ವಹಿಸಿರುವುದು ಇದಕ್ಕೆ ಸಾಕ್ಷಿ.[12] ಈ ಸಂಗೀತಗಳು ದೈವಶಾಸ್ತ್ರೀಯ ವಿಷಯಗಳನ್ನು ಹೆಚ್ಚು ಪ್ರತಿಫಲಿಸುತ್ತದೆ. ಕ್ರೈಸ್ತತ್ವದ ಅರ್ಥವಿವರಣೆ, ನೈತಿಕತೆ ಮತ್ತು ಧಾರ್ಮಿಕ ವಿಧಿಯ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತದೆ. ಗೀತೆಗಳಲ್ಲಿ ಆರಾಧನೆಗೆ ಬಳಸುವ ಗೀತಗಳು, ಮಕ್ಕಳ ಗೀತಗಳು, ಸಂಸ್ಕಾರ ವಿಧಿ-ಆಚರಣೆಯ ಬಗೆಗಿನ ಪಟ್ಟಿಯನ್ನು ಮಾಡಿದ್ದಾರೆ. ಇದರಿಂದಾಗಿ ಈ ಆಧ್ಯಾತ್ಮಿಕ ಸಂಗೀತಗಳು ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಅಂಶವಾಗಿದೆ.[13]

ಪ್ರೊ. ಅಮೃತ ಸೋಮೇಶ್ವರರು ಕ್ರೈಸ್ತ ಗೀತಗಳ ಬಗ್ಗೆ ಹೀಗೆ ಹೇಳುತ್ತಾರೆ, ‘ಎಲ್ಲ ಮತ ಧರ್ಮಗಳಲ್ಲೂ ಸ್ತೋತ್ರ ಗೀತಗಳು, ಧಾರ್ಮಿಕ ಸಂಗೀತ ಇವು ವಿಶೇಷ ಕ್ರಿಯಾಶಾಲೀ ಪಾತ್ರವಹಿಸಿವೆ. ಪದ್ಯಗಳ ಗೇಯತೆ, ಸಂಗೀತದ ನಾದಶಕ್ತಿ, ಭಾವನೆಗಳ ಉತ್ಕಟತೆ ಇವುಗಳಿಂದಾಗಿ ಸ್ತೋತ್ರಕ್ರಿಯೆ ಭಾವುಕ ಭಕ್ತರಲ್ಲಿ ಆಳವಾದ ಪ್ರಭಾವವನ್ನು ಉಂಟು ಮಾಡುತ್ತದೆ.[14] ಇತರ ಧರ್ಮಗಳಲ್ಲಿರುವಂತೆ ಕ್ರೈಸ್ತ ಧರ್ಮದಲ್ಲೂ ಅನುಭವ ಪದಗಳು, ತತ್ವ ಪದಗಳು ದೇವರ ಸ್ತುತು ಗೀತೆಗಳು ಜನಪ್ರಿಯವಾಗಿವೆ. ಮತ್ತು ಧಾರ್ಮಿಕ ಕಲಾಪಗಳ ಅವಿಭಾಜ್ಯ ಅಂಗಗಳಾಗಿವೆ.’

ತುಳು ಗೀತೆಗಳು

ಇದರಲ್ಲಿ ಹೆಚ್ಚಿನ ಗೀತಗಳು ಜರ್ಮನಿಯ ಮತ್ತು ಇತರ ಭಾಷೆಯಿಂದ ತರ್ಜುಮೆಗೊಂಡ ಗೀತಗಳಾಗಿವೆ. ಈ ಗೀತಗಳು ತುಳುವಿಗೆ ಭಾಷಾಂತರಗೊಂಡದ್ದು ಒಂದು ಮುಖ್ಯ., ಈ ಗೀತೆಗಳು ಹೊತ್ತು ತಂದ ದೈವಶಾಸ್ತ್ರೀಯ ಅಂಶಗಳು ಇನ್ನೊಂದು ಮುಖ. ಹೆಚ್ಚಿನ ಗೀತಗಳು ೧೮೮೬ರಲ್ಲಿ ಛಾಪಿಸಲ್ಪಟ್ಟ ತದನಂತರದಲ್ಲಿ ತಿದ್ದುಪಟಿಗೆ ಒಳಪಟ್ಟಿತು.[15] ಈ ಗೀತಗಳ ಸಾಲುಗಳು ಮೇಲ್ನೋಟಕ್ಕೆ ಭಾರತೀಯ ವಚನಗಳಂತೆ ಕಂಡುಬರುತ್ತವೆ.

ಉದಾ. ವಿಶ್ವಾಸದವು ಜನ ಒಳಾಂಡ್ಲಾ ಕರ್ತವೆ
ಆಯಾಮ ವಿದ್ಯಮಾನ ಪೊರ್ತ್ಯಾದ್‌ಪಿಂದೊಂಡೆ
ನಾಶಾದ್‌ ಪೋಪುಜೆರ್‌; ವಾ ಕಷ್ಟಡಾಂಡಲಾ
ಆಧಾರ ಹೊಂದುವೆರ್‌ ಈ ಗತಿ ನಿಶ್ಚಯ!
(೧೮೮೬ರ ‘ತುಳು ಗೀತೊಳು’ ಪುಸ್ತಕದ್ದು)
ವಿಶ್ವಾಸದವು ಜನ ಓಳೋಳು ಇತ್ತ್‌೦ಡ್ಲಾ
ಆಕ್ಳಾಕ್ಳೆ ವಿದ್ಯಮಾನ ಕ್ರಿಸ್ತೇಸು ಪಿಂಬೆತ್ತಾ?
ನಾಶಾದ್‌ ಪೋಪುಜೆರ್‌, ವಾ ಕಷ್ಟೊಡಾಂಡಲಾ
ಆಧಾರ ಹೊಂದುವೆರ್‌ ಉಂದೇತೋ ನಿಶ್ಚಯ
(೧೯೯೬ರ ‘ತುಳು ಗೀತೊಳು ಪುಸ್ತಕದ್ದು’)
ಗೀತ ೧೬೯:೧-ಎ. ಮೆನ್ನರ್‌

ನಮರಾಗೊಳು (ನಮ್ಮ ರಾಗಗಳು)

ಇಲ್ಲಿರುವ ರಾಗಗಳು ಆಯಾಯ ಕಾಲಕ್ಕೆ ತಕ್ಕುದಾದ ರಾಗಗಳಾಗಿವೆ. ಹೆಚ್ಚಿನ ರಾಗಗಳು ತರ್ಜುಮೆಗೊಂಡ ರಾಗಗಳಾಗಿವೆ. ಆದರೂ ಅದರ ಅಡಕ ಮತ್ತು ಶಬ್ದಗಳನ್ನು ಪ್ರಾಸನದ್ಧವಾಗಿ ರಚಿಸುವಲ್ಲಿ ಇವರ ಶ್ರಮ ಎದ್ದು ಕಾಣುವಂತಹದ್ದಾಗಿದೆ. ಕೆಲವು ರಾಗಗಳು ಮೂರು ಸ್ವರದಲ್ಲಿ (3 Voice), ಕೆಲವು ರಾಗ ನಾಲ್ಕು ಸ್ವರದಲ್ಲಿ (4 Voice) ಹಾಡುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಉದಾ : ಒಟ್ಟಾದ್‌ನಮ ದೇವುಗ್‌
ಸಂಗೀತ ಮಳ್ಪುಲೆ
ತನತಿ ಪ್ರಿಯಮಗನ್‌[:ನಂಕಾದ್ ಕೊರಿಯೆ:]

ಇದರಲ್ಲಿರುವ ಮತ್ತೊಂದು ವೈಶಿಷ್ಟ್ಯವೆಂದರೆ ೩/೪ ಅಂಶ ಅಚ್ಚಾದ ರಾಗಗಳಿದ್ದರೆ ೧/೪ ಭಾಗ ಖಾಳಿಯಾದ ಹಾಳೆಗಳಿವೆ. ಇದರರ್ಥ ಹೆಚ್ಚಾಗಿ ರಚಿಸಿದ ಅಥವಾ ಕಲಿತ ರಾಗಗಳನ್ನು ಅಳವಡಿಸಿಕೊಳ್ಳಬೇಕೆನ್ನುವ ದೂರದೃಷ್ಟಿಯನ್ನು ಮಿಶನರಿಗಳು ಹೊಂದಿದ್ದರು.[16] ಈ ರಾಗಗಳು ಸಾಹಿತ್ಯ ವಾಗಿಯೂ ಆಧ್ಯಾತ್ಮಿಕವಾಗಿಯೂ ಹೆಚ್ಚು ಮೌಲ್ಯಯುತವಾದವುಗಳಾಗಿವೆ.

ಎಲೀಮ್‌ ಕೋರಸುಗಳು[17]

ಇದರಲ್ಲಿ ಬರುವ ರಾಗದ ಅಡಕಗಳು ಹೆಚ್ಚಾಗಿ ಕ್ರಿಸ್ತ ಕೇಂದ್ರಿತವಾಗಿವೆ. ಬಹುಶಃ ಹೆಚ್ಚಾಗಿ ಸುವರ್ತೆಯ ದೈವಶಾಸ್ತ್ರವನ್ನು ಆಧಾರವಾಗಿರಿಸಿ ಈ ಗೀತೆಗಳನ್ನು ಬರೆದರು. ಎಲೀಮ್‌ಕೋರಸುಗಳು ಹೆಚ್ಚು ಜನಪ್ರಿಯವಾಗಿದ್ದ ರಾಗ ಪುಸ್ತಕವೂ ಆಗಿದ್ದಿತ್ತು. ಇದಕ್ಕೆ ತನ್ನದೇ ಆದ Tune Book ಇತ್ತು.

ಉದಾ: ಎಚ್ಚರಿಗೆ ಆದುಪ್ಪುಲೆ
ಕ್ರಿಸ್ತೇಸು ಬರ್ಪಿ ವೇಳ್ಯ ಆಂಡ್‌
ನಡೀರ್‌ಡಾ ಪಗೆಲ್ದ ಗೌಜಿಡಾ
ಮಂಚಿಡ್‌ಆಯೆ ಬರ್ಪೆ
(ಪುಟ ಸಂಖ್ಯೆ – ೩೧ ಎಲೀಮ್‌ ಖೋರಸ್‌೧)
ಯೆನ ಪಾಪದ ಪುದೆ
ತುಂಬಿಯೆ ಕರ್ತವೆ ಯೇಸು
ಯೆನ ಬಚವುಗಾದ್‌
ಕ್ರುಸುಡು ಸೈತೆ
(ಪುಟ ಸಂಕ್ಯೆ – ೩೪ ಮಕ್ಕಳು ಖೋರಸ್‌ ೨೦)

ತುಳು ಜೋಕುಳೆ ಗೀತೊಳು (ತುಳು ಮಕ್ಕಳ ಗೀತೆಗಳು)

ಮುಖ್ಯವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಚಿಕ್ಕದಾದ ಹಾಗೂ ಸರಳವಾಗಿರುವ ಗೀತಗಳನ್ನು ಇಲ್ಲಿ ರಚಿಸಿದ್ದಾರೆ. ನೀತಿಯನ್ನು ರಾಗರೂಪವಾಗಿ ವಿವರಿಸಿ ಹೇಳುವ ಪವರಯತ್ನ ದೇವರ ಕಡೆಗಿನ ಭಕ್ತಿ – ಶ್ರದ್ಧೆಯನ್ನು ಹೆಚ್ಚು ಮಾಡುವ ಕಾರ್ಯ ಇಲ್ಲಿ ನಡೆದಿದೆ. ಕೆಲವೆಡೆ Tune Noteನ್ನು ಕೂಡಾ ಕೊಡಲಾಗಿದೆ. ಇದು ಕ್ರಮಬದ್ಧವಾದ ರೀತಿಯಲ್ಲಿ ರಾಗಗಳನ್ನು ಹಾಡಲು ಮಾಡಿದ ಪ್ರಯತ್ನ.

ಯೆನ ಯೆಡ್ಡೆ ಜೋಕುಳೆ ಕಥೆ ಇತ್ತೆ ಪಿನ್ಪಾವೆ
ಯಡ್ಡೆ ಕಥೆ ಪಣ್ಣಗ ಕೆಬಿ ಕೊರ್ಲೆ ಮಾತೆರ್ಲಾ
ಕಾಂಡೆ ಯೆಡ್ಡೆ ಜೋಕುಳು ಜೆತ್ತಿನಳ್ತ್‌ ಲಕ್ಕೊಣ್ದು
ದೇವ್ರೆ ದಯ ನಟ್ಟೊಡು ಕುಂಟು ಮಿನಿ ಪಾಡೊಡು
ಪುಲ್ಯಕೆಲಾಂಡ್‌ ನಿದ್ರೆದಾಯ
ಮೂಡ್೦ಡ್‌ ಪೊರ್ತು ತೂಪುಜನಾ
ಪಕ್ಕಿಳೆ ರಾಗ್‌ ಕೇಣುಂಡತ್ತಾ?
ತೂಲ ಈ ಪೂತ ಕಮ್ಮೆನಲಾ.
ಒರ್ಮೆಲಾ ಪನಿ ಮೆಂಚುಂಡತ್ತಾ
ತಿಗತ ಪುರಿ ಮಿಜುಲುಜಾ?
ಮಾತಲಾ ರಾಗ ಹರ್ಷ ಮಳ್ಪುನಗ
ನಮಲಾ ರಾಗ ಮಳ್ಪುಡತ್ತಾ?

ಇಡೀ ಸೃಷ್ಟಿಯನ್ನು ಕೇಂದ್ರೀಕರಿಸಿ ಸೃಷ್ಟಯ ಜೊತೆಗೆ ಬೆಳಗಿನ ವ್ಯವಹಾರವನ್ನು ಮುಂದುವರೆಸುತ್ತಾ ದೇವರಿಗೆ ಸ್ತೋತ್ರವನ್ನು ಹಾಡುವ ರಾಗ ಇದಾಗಿದೆ. ಇದು ತುಂಬಾ ಸರಳ ಹಾಗೂ ಚಿಕ್ಕ ಚರಣಗಳುಳ್ಳ ರಾಗಗಳಾಗಿವೆ. ಪರಿಸರ ದೈವಶಾಸ್ತ್ರ (Eco-Theology)ವನ್ನು ಇವರು ಗೀತಗಳಲ್ಲಿ ಅಳವಡಿಸಿದ್ದಾರೆ. ‘Lead Kindly Light’ ಎನ್ನುವ ಪ್ರಸಿದ್ಧ ಸಂಗೀತ ನ್ಯೂಮನ್ರವರದ್ದು ಇದು ಕನ್ನಡಕ್ಕಿಂತ ಮೋದಲೇ ತುಳುವಿನಲ್ಲಿ ಭಾಷಾಂತರಗೊಂಡದ್ದು ಗಮನಾರ್ಹವಾದ ಅಂಶ. ನಂತರದಲ್ಲಿ ಇದು ತರ್ಜುಮೆಯಾದರೂ ಕನ್ನಡದ ಆಧ್ಯಾತ್ಮಿಕ ಗೀತೆಯ ಸಾಲಿನಲ್ಲಿ ಅಂದರೆ ಕ್ರೈಸ್ತಗೀತೆಗಳಲ್ಲಿ ಸೇರಿಕೊಂಡಿಲ್ಲ. ಆದರೆ ತುಳುವಿನಲ್ಲಿ ಇದು ಅಧ್ಯಾತ್ಮಿಕ ಗೀತೆಯ ಸಾಲಿನಲ್ಲಿ ಸೇರಿಕೊಂಡಿರುತ್ತದೆ.

ಉದಾ: ‘Lead Kindly Light’ನ ತರ್ಜುಮೆ:

ಪ್ರಕಾಶ ಕೊರ್ದು ಯೆನನ್ನಡಪಾಲಾ,
ಸ್ವಾಮೀ ಯೇಸೋ!
ಗರ್ಗಂಡ ಕತ್ತಲುಂಡು, ಊರು, ದೂರ,
ಈ ದುಂಬು ಪೋ!
ದಂಟಂದಿಲೆಕ್ಕ ಪತ್ತ್‌ಯೆನ ಕೈ,
ಸಾದಿನ್‌ ಒಂತೆ ಮಾತ್ರ ತೂಂಡ ಸೈ.
R. Bunz (ತುಳುಗೀತ-೧೭೫:೧ ಪುಟ ಸಂಖ್ಯೆ ೧೨೩)

Melodion – Tune-Book, (ಕನ್ನಡ-ತುಳು)

ಈ ಪುಸ್ತಕದಲ್ಲಿ ಕನ್ನಡದ ಜೊತೆಗೆ ತುಳುವಿನ ಗೀತದ ಶ್ರುತಿಗೂಡಿಸುವ (Tune-Book) ಕುರಿತಾದ ವಿವರವಿದೆ. ಈ ಗೀತಗಳ ಪಾಶ್ಚಾತ್ಯ ಮೂಲದ ತರ್ಜುಮೆಯಾದುದರಿಂದ ಅದರದ್ದೇ ಆದ ದಾಟಿಯಲ್ಲಿದೆ. ಕ್ರಮಬದ್ಧವಾಗಿ ಸಂಗೀತಗಳನ್ನು ಹಾಡಲು ಈ ಪುಸ್ತಕವು ಹೆಚ್ಚು ಪ್ರಯೋಜನವಾದದ್ದು ತುಳುಗೀತೆಗಳ ಕಡೆಗೆ ಅವರಿಗಿದ್ದ ಒಲವು ಕ್ರಮಬದ್ಧತೆಯ ಈ ಪುಸ್ತಕದಲ್ಲಿ ಕಂಡುಬರುತ್ತದೆ. ಮಿಶನರಿಗಳ ಆರಾಧನೆಯಲ್ಲಿ ಸಂಗೀತ ಕೂಡಾ ಅತಿ ಪ್ರಾಮುಖ್ಯ ಅಂಗವಾಗಿತ್ತು.

ತುಳು ಗೀತೆಗಳ ಭಾಷಾಂತರ ರಚನೆಯಲ್ಲಿ ಮಿಶನರಿಗಳ ಜೊತೆಗೆ ಭಾರತೀಯ ಕ್ರೈಸ್ತರೂ ಕೊಡುಗೆ ನೀಡಿದ್ದಾರೆ. ಉದಾ: ಕಾರಟ್‌, ಪ್ರೇಮಯ್ಯ, ಜೆ. ಸೊನ್ನ, ಟಿ. ಪುರ್ತಾದೋ ಮುಂತಾದವರು ತುಳು ಗೀತೆಗಳು ದೇವಾಲಯದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಇದು ಸಭೆಯ ದೈವಶಾಸ್ತ್ರವಾಗಿದ್ದಿತು. (Congreational Theology) ಪ್ರಾರ್ಥನೆ, ಪ್ರಸಂಗಕ್ಕಿಂತಲೂ ಗೀತದಲ್ಲಿ ಅಡಕವಾಗಿರುವ ಮೌಲ್ಯ ಅತ್ಯಂತ ಮಹತ್ವದ ಸ್ಥಾನ ಪಡೆಯಿತು.[18] ಇದು ಹಳ್ಳಿಯ ದೈವಶಾಸ್ತ್ರವನ್ನು ಬೆಳೆಸಲು ಸಹಾಯಕವಾದವು. ಒಂದರ್ಥದಲ್ಲಿ ಇವರು ದೇಶೀಯ ದೈವಶಾಸ್ತ್ರಕ್ಕೆ ಕೊಟ್ಟ ಕೊಡುಗೆಯ ಒಂದು ಭಾಗವೇ – ‘ತುಳು ಗೀತೆಗಳು’ ಎಂದರೆ ತಪ್ಪಾಗಲಾರದು.

ಬೈಬಲ್‌ಭಾಷಾಂತರದಲ್ಲಿ, ಆರಾಧನಾ ಕ್ರಮದಲ್ಲಿ, ನೀತಿಕಥೆಗಳಲ್ಲಿ ಹಾಗೂ ಆಧ್ಯಾತ್ಮಿಕ ಗೀತೆಗಳಲ್ಲಿ, ದೇವರಿಗೆ -ಯೆಹೋವ, ಕರ್ತ, ಕರ್ತವೆ, ಪರಿಪಾಲಕೆ, ದೇವೆರ್, ಅಮ್ಮ ಇತ್ಯಾದಿ ಪದಗಳು ವಳಕೆಯಾಗಿದೆ. ಇಂತಹ ವಿಶೇಷಣಗಳು ಬಳಕೆಯಾದದ್ದು ಭಾಷಾಂತರಕ್ಕೆ ಮೆರಗನ್ನು ತಂದುಕೊಟ್ಟಿತು. ‘ಭಾಷಾಂತರದಲ್ಲಿ ಸೃಜನಾತ್ಮಕತೆ’ಯನ್ನು ಬಳಸಿಕೊಂಡು ಸಾಹಿತ್ಯ ಪ್ರಪಂಚಕ್ಕೆ ಕೊಡುಗೆ ಕೊಟ್ಟಿತ್ತೆನ್ನಬಹುದು. ಈ ಭಾಷಾಂತರ ಅನೇಕ ಹೊಸ ಹೊಸ ಶಬ್ದ ಭಂಡಾರಗಳನ್ನು ಹೊತ್ತು ತಂದಿತು. ಮುಖ್ಯವಾಗಿ ದ್ರಾವಿಡ ಭಾಷೆಯಾದ ತುಳುವಿನಲ್ಲಿ ಇದ್ದ ಪದಗಳಾಗಿವೆ. ಈ ಮೂಲವು ಸ್ಥಳೀಯರ ಆಡುಭಾಷೆಯಲ್ಲಿತ್ತು. ಈ ಪದಗಳು ಕೂಡಾ ಭಾಷಾಂತರದಲ್ಲಿ ಅಡಗಿಕೊಂಡಿದೆ. ವಾಕ್ಯರಚನೆಯಲ್ಲಿ ತಮ್ಮದೇ ಆದ ಶೈಲಿಯನ್ನು ಬಳಸಿಕೊಂಡಿದ್ದಾರೆ. ‘ಇದಮಿತ್ಥಂ’ ಎಂಬಂತೆ ಭಾಷಾಂತರ ಕಾರ್ಯದಲ್ಲಿ ಮಾಡಲಾಗದು, ಬದಲಾಗಿ ಅದರಲ್ಲಿ ಸಂಪೂರ್ಣ ಸರಿಯಾದ ಅರ್ಥವಿರುವ ವಾಕ್ಯ ರಚನೆಗಳು ಅಗತ್ಯವಾಗುತ್ತದೆ. ಈ ಪ್ರಯತ್ನವನ್ನು ಸಾಕಷ್ಟು ಚೆನ್ನಾಗಿ ಮಿಶನರಿಗಳು ಮಾಡಿ ಮುಗಿಸಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಸಾಹಿತ್ಯ ಕಾರ್ಯವನ್ನು ಮುಂದುವರಿಸಿದ ಮಿಶನರಿಗಳು ಮುಂದಕ್ಕೆ ತಮ್ಮ ತುಳು ಸಾಹಿತ್ಯದ ಪ್ರಜ್ಞೆಯನ್ನು ವಿಶಾಲಗೊಳಿಸಿದರು. ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಇತರೆ ದೃಷ್ಟಿಯಿಂದಲೂ ಅನೇಕ ಪುಸ್ತಕಗಳನ್ನು ಪ್ರಕಟಗೊಳಿಸಿದರು. ಧಾರ್ಮಿಕ ಪುಸ್ತಕಗಳೆಲ್ಲವೂ ಸಾಹಿತ್ಯಕ ದೃಷ್ಟಿಕೋನದಿಂದ ಲಿಖಿತ ಪರಂಪರೆಗೆ ಅಡಿಪಾಯವನ್ನು ಹಾಕಿಕೊಟ್ಟಿದೆ ಎನ್ನುವಂತಹದನ್ನು ಎಂದಿಗೂ ಮರೆಯುವಂತಿಲ್ಲ. ತುಳುವಿಗೆ ಭಾಷಾಂತರವಾದ ಧಾರ್ಮಿಕ ಪುಸ್ತಕಗಳೆಲ್ಲವೂ ದೈವಶಾಸ್ತ್ರೀಯ ದೃಷ್ಟಿಕೋನದಿಂದಲೂ ವಿಶಿಷ್ಟವಾಗಿವೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಜೆ. ಎಸ್‌. ಸದಾನಂದ ಅವರೊಂದಿಗೆ ಸಂದರ್ಶನ, ಕ್ರೈಸ್ತ ದೈವಶಾಸ್ತ್ರ ವಿದ್ವಾಂಸರು, ಮಂಗಳೂರು, ೧೯ ಜನವರಿ ೨೦೦೭

[2] ಅನುಬಂಧ ೧ ರಲ್ಲಿರುವ ದೇವಾರಾಧನಾ ಪದ್ಧತಿ ನೋಡಿ.

[3] Report of Basel Evangelical Missionary Society Forty nine 1878, Thirty ninth Report of the German Evangelical Mission, in South Western India (Mangalore : German Mission Press, 1879), 69-71

[4] ಎ. ವಿ. ನಾವಡ ಅವರೊಂದಿಗೆ ಸಂದರ್ಶನ, ತುಳು ಸಾಹಿತಿಗಳು / ಸಂಶೋಧಕರು, ಮಂಗಳೂರು, ೨೨ ಜನವರಿ ೨೦೦೭

[5] ಅನುಬಂಧದಲ್ಲಿರುವ ನೀತಿಯ ಪುಸ್ತಕಗಳ ಪಟ್ಟಿ ನೋಡಿ.

[6] ಸಿ. ಎಲ್‌. ಪುರ್ತಾದೋ, ಅವರೊಂದಿಗೆ ಸಂದರ್ಶನ, ಕ್ರೈಸ್ತ ದೈವಶಾಸ್ತ್ರ ವಿದ್ವಾಂಸರು, ಮಂಗಳೂರು, ೨೦ ಜನವರಿ ೨೦೦೭, ತುಳು ಪರಿಸರದಲ್ಲಿ

[7] The sixty-third. Report of the Basel German Evangelical Missionary Society in South-Western India for 1902 (Mangalore : The Basel Mission Press, 1902), 49-51

[8] Th. Ritter (Mangalore: Saraswathi Printing Press Ltd., 1934)

[9] Th. Ritter (Mangalore: Saraswathi Printing Press Ltd. 1934), 12

[10] F. H. Raulder Life of Christ (Mangalore B. M.-Press S. K. India)

[11] ಪಾದೆಕಲ್ಲು ವಿಷ್ಣುಭಟ್‌, ಸಂ. ತುಳುವರಿವರು, (ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ೧೯೯೨), ೨೨೪

[12] Godwin shiri, ed., Wholeness in Christ (Mangalore : The Karnataka Theological Research Institute Balmatta, 1985), 140-142

[13] Godwin shiri, ed., Wholeness in Christ (Mangalore: The Karnataka Theological Research Institute Balmatta,1985), 142

[14] ಪಾದೆಕಲ್ಲು ವಿಷ್ಣುಭಟ್‌, ಸಂ. ತುಳುವರಿವರು, (ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ೧೯೯೨), ೨೨೪

[15] Godwin shiri, ed., Wholeness in Christ (Mangalore: The Karnataka Theological Research Institute Balmatta, 1985), 142

[16] ವಾಮನ ನಂದಾವರ ಅವರೊಂದಿಗೆ ಸಂದರ್ಶನ, ತುಳು ಸಾಹಿತಿಗಳು, ಮಂಗಳೂರು, ೧೬ ಜನವರಿ ೨೦೦೭

[17] Elim Chorus, (Mangalore: Basel Mission Book Dept 1955)

[18] Godwin shiri, ed., Wholeness in Christ (Mangalore: The Karnataka Theological Research Institute Balmatta. 1985), 142