ಪೀಠಿಕೆ

ಉತ್ತರಕ್ಕೆ ಗಂಗಾವಳಿ ನದಿಯಿಂದ (ಉತ್ತರ ಕನ್ನಡ ಜಿಲ್ಲೆ), ದಕ್ಷಿಣಕ್ಕೆ ಪಯಸ್ವಿನೀ ನದಿಯವರೆಗೆ ಹಬ್ಬಿತ್ತು. ಪ್ರಾಚೀನ ತುಳುನಾಡು. ಈ ಕಿರಿದಾದ ಕರಾವಳಿ ಪ್ರದೇಶದಲ್ಲಿ ರಂಗು ರಂಗಿನ ಮತ್ತು ವೈವಿಧ್ಯಮಯವಾದ ಧಾರ್ಮಿಕ ಪರಂಪರೆಗಳು ಬೆಳೆದುಬಂದವು. ಇಲ್ಲಿ ಬೆಳೆದುಬಂದ ಧರ್ಮಗಳು ಮತ್ತು ಅವುಗಳ ಆಚರಣೆಗಳು ಈ ಪ್ರದೇಶದ ಸಾಂಸ್ಕೃತಿಕ ಅಧ್ಯಯನಕ್ಕೆ ಮುಖ್ಯ ಆಕರಗಳಲ್ಲಿ ಒಂದಾಗಿದೆ. ಈ ಧರ್ಮ, ನಂಬಿಕೆ ಮತ್ತು ಆಚರಣೆಗಳು ಸಂಕೀರ್ಣ ರಚನೆಯುಳ್ಳದಾಗಿವೆ. ತುಳುನಾಡಿನ ಸಮಾಜದ ತಾತ್ವಿಕ ಮತ್ತು ಸಾಮಾಜಿಕ ಚೌಕಟ್ಟು ವಾಸ್ತವವಾಗಿ ರೂಪುಗೊಂಡಿರುವುದು ಧಾರ್ಮಿಕ ಆಚರಣೆಗಳ ಮೂಲಕ. ಈ ವಿಚಾರಗಳ ಸ್ವರೂಪ ಮತ್ತು ಚಿಂತನೆಗಳು ಕಾಲ ಕಳೆದಂತೆ ಹೊಸ ಆಯಾಮವನ್ನು ಕಂಡುಕೊಂಡಿತ್ತು. ಕ್ರಮೇಣ ಧಾರ್ಮಿಕ ಇತಿಹಾಸ ಅಧ್ಯಯನವು ಎಷ್ಟು ಪ್ರಾಮುಖ್ಯತೆ ಪಡೆದಿತ್ತೆಂದರೆ ಇದೂ ತುಳುನಾಡಿನ ಒಟ್ಟು ಜಾತಿ ವ್ಯವಸ್ಥೆಯನ್ನು ನಿರ್ಧರಿಸುವಷ್ಟು ಸಾಮರ್ಥ್ಯವನ್ನು ಹೊಂದಿತ್ತು. ಧಾರ್ಮಿಕ ಇತಿಹಾಸದ ಅಧ್ಯಯನದ ವಿವಿಧ ಆಯಾಮಗಳು ಮತ್ತು ಚಿಂತನೆಗಳು ತುಳುನಾಡಿನ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಹೊಸ ದಾರಿಯನ್ನು ಕಲ್ಪಿಸಿತು. ತುಳುನಾಡಿನ ಧಾರ್ಮಿಕ ಪರಂಪರಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಗಮನಿಸಬಹುದು. ಇವುಗಳಲ್ಲಿ ನಮ್ಮ ಗಮನಕ್ಕೆ ಬರುವುದು ಹಲವು ಪಂಥಗಳು, ದೇವ-ದೈವಗಳ ಹೊಂದಾಣಿಕೆ, ಇಷ್ಟಲ್ಲದೆ ಪ್ರಾಚೀನ ತುಳುನಾಡಿನವರ ಧಾರ್ಮಿಕ ಸಮನ್ವಯತೆ – ಈ ಸಂಗತಿಗಳನ್ನು ತಿಳಿಸುವ ಆಕರ ಸಾಮಗ್ರಿಗಳು ವಿಫಲವಾಗಿವೆ.

ಆಕರಗಳು, ಅವುಗಳ ಸ್ವರೂಪ

ತುಳುನಾಡಿನ ಧಾರ್ಮಿಕ ಇತಿಹಾಸವನ್ನು ತಿಳಿಸುವ ಆಕರಗಳು ವಿಪುಲವಾಗಿದ್ದರೂ ಅವುಗಳನ್ನು ಇತಿಹಾಸ ಅಧ್ಯಯನಕ್ಕೆ ಉಪಯೋಗಿಸಿಕೊಂಡದ್ದು ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ. ಈ ಆಕರಗಳ ಸಂಗ್ರಹ ಯತ್ನಕ್ಕೆ ಮೊದಲು ತೊಡಗಿಸಿಕೊಂಡವರು ವಿದೇಶೀ ವಿದ್ವಾಂಸರು. ಭಾರತೀಯ ಧರ್ಮದ ಅಹಿತಕರ ಸಂಗತಿಗಳನ್ನು ಬೆಳಕಿಗೆ ತಂದು ಜನರಲ್ಲಿ ತಮ್ಮ ಕ್ರೈಸ್ತ ಧರ್ಮದ ಶ್ರೇಷ್ಠತೆಯನ್ನು ಪ್ರಕಟಿಸುವ ಉದ್ದೇಶದಿಂದ ಈ ವಿದ್ವಾಂಸರು ಸಂಶೋಧನಾ ಕ್ಷೇತ್ರಕ್ಕೆ ತೊಡಗಿಸಿಕೊಂಡರು. ಆದರೆ ಇವರು ತಮ್ಮ ಉದ್ದೇಶದ ವಿರುದ್ಧವಾದ ಸಂಗತಿಗಳನ್ನು ತಂದುಕೊಂಡರು. ಇದರಿಂದಾಗಿ ಭಾರತೀಯ ಧರ್ಮದ ಮಹತ್ವ ಹೆಚ್ಚಿತು. ಈ ಪಾಶ್ಚಿಮಾತ್ಯ ವಿದ್ವಾಂಸರು ತುಳುನಾಡಿನ ಪ್ರಾಗೈತಿಹಾಸ ಸ್ಮಾರಕಗಳು, ಶಾಸನಗಳು, ಸಾಹಿತ್ಯ ಕೃತಿಗಳು ಮತ್ತು ತುಳುನಾಡಿನ ಜನಪದ ಗೀತೆಗಳು, ಇತ್ಯಾದಿಗಳನ್ನು ಬೆಳಕಿಗೆ ತಂದರು. ಕೆಲವು ವಿದ್ವಾಂಸರುಗಳು ಈ ಆಕರಗಳನ್ನು ಯಾವ ರೀತಿಯಲ್ಲಿ ವಿಶ್ಲೇಷಿಸಿ ಅವುಗಳಿಂದ ಐತಿಹಾಸಿಕ ಮಹತ್ವವನ್ನು ತಿಳಿದುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟರು. ಇಂತಹ ವಿದ್ವಾಂಸರುಗಳಲ್ಲಿ ಗಮನಾರ್ಹ ವ್ಯಕ್ತಿಗಳೆಂದರೆ ಎ.ಸಿ.ಬರ್ನಲ್, ವಾಲ್‌ಹೌಸ್, ಜೆ.ಎಫ್. ಪ್ಲೀಟ್, ಮ್ಯಾನರ್. ಆದರೆ ಆಗಿನ ಕಾಲದ ಪರಿಸ್ಥಿತಿ ಮತ್ತು ತಾತ್ವಿಕ ಚೌಕಟ್ಟಿನ ಮಿತಿಯಿಂದಾಗಿ ವಿದ್ವಾಂಸರುಗಳಿಗೆ ತಾವು ಸಂಶೋಧಿಸಿದ ಸಂಗತಿಗಳನ್ನು ಹೆಚ್ಚಿಗೆ ವಿಶ್ಲೇಷಿಸಲು ಆಗದೆ ಹೋಯಿತು.

ಇಪ್ಪತ್ತನೇ ಶತಮಾನದ ಮಧ್ಯಾವಧಿಯಲ್ಲಿ ಸಂಶೋಧನೆ ಮತ್ತು ಅವುಗಳ ವಿಶ್ಲೇಷಣಾತ್ಮಕ ಅಧ್ಯಯನವು ನಡೆಯಿತು. ಧಾರ್ಮಿಕ ಇತಿಹಾಸ ಅಧ್ಯಯನಿಸುವಲ್ಲಿ ಮುಖ್ಯವಾಗಿ ಇರುವ ಆಕರಗಳಾವುದೆಂದರೆ, ಪುರಾತನ ಐತಿಹಾಸಿಕ ಸ್ಮಾರಕಗಳು, ಶಾಸನಗಳು, ಸಾಹಿತ್ಯ ಕೃತಿಗಳು, ವಿದೇಶೀಯ ದಾಖಲೆಪತ್ರಗಳು ಮತ್ತು ವಿದೇಶೀಯರ ಪ್ರವಾಸ ವರದಿಗಳು. ಈ ಆಕರಗಳು ಧಾರ್ಮಿಕ ಬೆಳವಣಿಗೆ ಯಾವ ಯಾವ ಹಂತದಲ್ಲಿ ನಡೆಯಿತು ಎಂಬುದರ ವಿವರಗಳನ್ನು ನೀಡುತ್ತವೆ. ಪುರಾತನ ಐತಿಹಾಸಿಕ ಸ್ಮಾರಕಗಳಲ್ಲಿ ದೇವಾಲಯದ ರಚನೆ, ಅಲ್ಲಿನ ಮೂರ್ತಿಶಿಲ್ಪ ಮತ್ತು ಇನ್ನಿತರ ಅವಶೇಷಗಳು ಹಿಂದೂ ಪಥದ ಇತಿಹಾಸ ತಿಳಿದುಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕೆ ಮುಖ್ಯ ಉದಾಹರಣೆ ಗೋಕರ್ಣದ ಮಹಾಬಲೇಶ್ವರ, ಹಳದೀಪುರದ ಚಂದ್ರೇಶ್ವರ, ಭಟ್ಕಳದ ಚಾಳ್ವೇಶ್ವರ, ಬೈಂದೂರಿನ ಶನಿಯೇಶ್ವರ, ಬನ್ನಂಜೆ ಮಹಾಲಿಂಗೇಶ್ವರ, ಕಾಪಿನ ಜನಾರ್ದನ, ತೋಕೂರಿನ ಸುಬ್ರಹ್ಮಣ್ಯ,ಕದ್ರಿ ಮಂಜುನಾಥೇಶ್ವರ, ಪುತ್ತೂರಿನ ಮಹಾಲಿಂಗೇಶ್ವರ, ಮಧೂರಿನ ಗಣಪತಿ ಇತ್ಯಾದಿ. ಮೂರ್ತಿಶಿಲ್ಪದ ಅಧ್ಯಯನದ ಹಿನ್ನೆಲೆಯಲ್ಲಿ ಶೈವ, ವೈಷ್ಣವ, ಗಣಪ, ಶಾಕ್ತ, ಆದಿತ್ಯ ದೇವರುಗಳ ಆರಾಧನಾ ಕ್ರಮ ಇದ್ದ ಸಂಗತಿಗಳು ತಿಳಿದುಬರುತ್ತವೆ. ಉದಾಹರಣೆಗೆ ಗೋಕರ್ಣ ಕ್ಷೇತ್ರವು ಅಲ್ಲಿ ಶೈವ ಕ್ಷೇತ್ರದೊಂದಿಗೆ ವೈಷ್ಣವ ಮತ್ತು ಆದಿತ್ಯ ಆರಾಧನಾ ಕ್ರಮವು ಕ್ರಿ.ಶ. ೯ನೇ ಶತಮಾನದಷ್ಟು ಪ್ರಾಚೀನವಾಗಿದ್ದುವೆಂದು ಇಲ್ಲಿನ ವಾಸ್ತುಶಿಲ್ಪದ ಅಧ್ಯಯನದಿಂದ ತಿಳಿದುಬರುತ್ತದೆ.

ಶಾಸನಗಳು

ತುಳುನಾಡಿನ ಧಾರ್ಮಿಕ ಇತಿಹಾಸದ ಕಾಲ ನಿರ್ಧರಿಸುವಲ್ಲಿ ಶಾಸನವು ಬಹಳ ಸಹಕಾರಿಯಾಗಿದೆ. ಇಲ್ಲಿನ ದೇವಾಲಯದ ಆವರಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ರೀತಿಯ ಶಿಲಾ ಬರಹಗಳ ದಾಖಲೆ ಇದೆ.ಇದಲ್ಲದೆ ಅಸಂಖ್ಯ ತಾಮ್ರ ಶಾಸನಗಳು ಇವೆ. ಇಂತಹ ದಾಖಲೆಗಳಲ್ಲಿ ಪ್ರಕಟವಾದುದರ ಸಂಖ್ಯೆ ಬಹಳ ಕಡಿಮೆ. ಹೆಚ್ಚಿನವು ಅಪ್ರಕಟಿತ. ಇವುಗಳ ಪತ್ತೆಯ ಯತ್ನ ನಡೆಯುತ್ತಾ ಇದೆ.

ತುಳುನಾಡಿನ ಶಾಸನಗಳ ಸ್ವರೂಪ ಹೇಗೆ ಇದ್ದರೂ ಅವುಗಳು ಒಂದಲ್ಲ ಒಂದು ರೀತಿಯಲ್ಲಿ ಧಾರ್ಮಿಕ ಇತಿಹಾಸದಲ್ಲಿ ನಡೆಯುವ ಘಟನೆಗಳನ್ನು ತಿಳಿಸುವುದನ್ನು ಮರೆಯುವುದಿಲ್ಲ. ಶಾಸನಗಳಲ್ಲಿ ದೇವಾಲಯ, ಅಲ್ಲಿ ನಡೆಯುವ ಧಾರ್ಮಿಕ ಪದ್ಧತಿಗಳನ್ನು ತೇದಿಯೊಂದಿಗೆ ತಿಳಿಸುತ್ತವೆ. ಇನ್ನೂ ಕೆಲವು ಶಾಸನಗಳು ದೇವಾಲಯದಲ್ಲಿ ನಡೆಯುವ ಪೂಜಾಪದ್ಧತಿಗಳನ್ನು ತಿಳಿಸುವುದು ಗಮನಾರ್ಹ. ಈ ವಿಚಾರಗಳನ್ನು ಸಮರ್ಥಿಸಲು ಬೆಳ್ಮಣ್ಣು ತಾಮ್ರ ಶಾಸನ (೮ನೇ ಶತಮಾನ) ಕುಲಶೇಖರ ಮಂಗಳೂರು ಶಾಸನ (ಕ್ರಿ.ಶ. ೧೨೦೪) ಇತ್ತೀಚೆಗೆ ಬೆಳಕಿಗೆ ಬಂದ ಪಾವಂಜೆ ದೇವಾಲಯದ ಶಿಲಾಶಾಸನ (೧೪೩೭), ಕೊಲ್ಲೂರಿನ ಕ್ರಿ.ಶ. ೧೪೮೦ರ ಶಾಸನ ಇತ್ಯಾದಿ, ಕೆಲವು ಶಾಸನಗಳು ದೇವಾಲಯದ ಪಕ್ಕದಲ್ಲಿ ವಿದ್ಯಾಕೇಂದ್ರವಿದ್ದುದನ್ನು ತಿಳಿಸುವುದರೊಂದಿಗೆ ಅಲ್ಲಿ ಗ್ರಂಥಾಲಯವಿರುವುದನ್ನು ತಿಳಿಸುತ್ತವೆ. ಇದಕ್ಕೆ ಉದಾಹರಣೆ ವಾಂಟಳ್ಳಿ ಮತ್ತು ಕೆಂದೂರು ಶಾಸನಗಳೇ ಸಾಕ್ಷಿ. ಪಡುಪಣಂಬೂರಿನ ಶಿಲಾಶಾಸನದಲ್ಲಿ (೧೫೫೯) ವಿದ್ಯಾದಾನ ನಡೆಯುತ್ತಿದ್ದುದನ್ನು ತಿಳಿಸುತ್ತದೆ. ಇನ್ನೂ ಕೆಲವು ಶತಮಾನಗಳಿಂದ ದೇವಾಲಯ ಕಟ್ಟಿದವರ ಹೆಸರುಗಳು ಇವೆ. ಉದಾ : ಬ್ರಹ್ಮಾವರದ ಹೆಗ್ಗಡೆ ದೇವಸ್ಥಾನದಲ್ಲಿ ಹೊಬಸಣ್ಣ ಸೆಟ್ಟಿಯ ಅಳಿಯ ಸಂಕುಹೆಗಡೆ ಗೋಪಿನಾಥ ದೇವರನ್ನು ಪ್ರತಿಷ್ಠಾಪಿಸಿದ್ದನ್ನು ತಿಳಿಸುವುದು, ಇದಲ್ಲದೆ ಹೆಬ್ರಿಯ ಅನಂತೇಶ್ವರ ದೇವಾಲಯವನ್ನು ಕುಂದ ಹೆಗ್ಗಡೆ ಅಕ್ಕ ಹಾಡುತಿಯ ಮಗ ಮಲ್ಲು ಹಡಿಯರು ಕಟ್ಟಿಸಿದ್ದನ್ನು ತಿಳಿಸುವುದು ಗಮನಾರ್ಹ. ಕೆಲವು ಶಾಸನಗಳಲ್ಲಿ ದೇವ ಮತ್ತು ಸ್ಥಳೀಯ ಗ್ರಾಮದೇವತೆಗಳ ಹೊಂದಾಣಿಕೆ ಇದ್ದದ್ದನ್ನು ತಿಳಿಸುತ್ತವೆ. ಇದರಿಂದಾಗಿ ತುಳುನಾಡಿನ ದೇವರು ಮತ್ತು ದೇವಿ ಚಿಕ್ಕಮ್ಮದೇವಿ, ಮರ್ಲ್‌ದೇವಿ ಮತ್ತು ಬೊಬ್ಬರ್ಯನ ಆರಾಧನೆಯ ಇತಿಹಾಸದ ಕಾಲವನ್ನು ತಿಳಿಯಲು ಸಹಾಯಕವಾಗಿದೆ. ಶಾಸನಗಳಲ್ಲಿ ದೇವಾಲಯ ರಚಿಸುವಲ್ಲಿ ಮತ್ತು ಅವುಗಳನ್ನು ಸಂರಕ್ಷಿಸುವಲ್ಲಿ ಅಬ್ರಾಹ್ಮಣರ ಪಾತ್ರ ಬಹಳವಿದೆ ಎಂದು ತಿಳಿಸಿದ್ದು ಗಮನಾರ್ಹ.

ಜೈನ ಮತ್ತು ಬೌದ್ಧ ಧರ್ಮ ತುಳುನಾಡಿನಲ್ಲಿ ಬೆಳೆದು ಬಂದ ಇತಿಹಾಸ ತಿಳಿಸುವ ಶಾಸನಗಳು ಸಾಕಷ್ಟು ಸಂಖ್ಯೆಗಳಲ್ಲಿ ಸಿಕ್ಕಿವೆ. ಕ್ರಿ.ಶ. ೫ನೇ ಶತಮಾನದಲ್ಲಿ ಜೈನಧರ್ಮವಿದ್ದಿತೆಂದು ಸೂಚಿಸುವಕ ಒಂದು ಶಾಸನ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದು ಪರ್ಕಳದಲ್ಲಿ ಸಿಕ್ಕಿದೆ (ಈ ಶಾಸನವನ್ನು ಇನ್ನಷ್ಟು ಹೆಚ್ಚಿನ ಅಧ್ಯಯನ ನಡೆಸುವ ಅವಶ್ಯಕತೆ ಇದೆ). ಕ್ರಿ.ಶ. ೯ನೇ ಶತಮಾನದಿಂದ ೧೬ನೇ ಶತಮಾನಗಳವರೆಗೆ ಜೈನ ಧರ್ಮದ ಪ್ರಗತಿಯ ಇತಿಹಾಸವನ್ನು ತಿಳಿಸಲು ತುಳುನಾಡಿನ ಶಾಸನಗಳು ಸಮರ್ಥನೀಯವಾಗಿವೆ. ಬೌದ್ಧ ಧರ್ಮದ ಇತಿಹಾಸ ತಿಳಿಸುವ ಶಾಸನಗಳು ಸ್ವಲ್ಪ ಸಂಖ್ಯೆಯಲ್ಲಿವೆ. ಆದರೂ ಇವುಗಳಿಂದ ತಿಳಿದುಬರುವ ಈ ಧರ್ಮದ ಇತಿಹಾಸವನ್ನು ಅಲಕ್ಷಿಸುವಂತಿಲ್ಲ. ಇಂತಹ ಶಾಸನಗಳಲ್ಲಿ ಕುಮಟಾ ಸಮೀಪದ ಹಿರೆಗುತ್ತಿ, ಹೊನ್ನಾವರ (ಕೈಕೇಯ ಚಿತ್ರಸೇನರ ಉಲ್ಲೇಖ) ತಾಮ್ರಶಾಸನ (ಆರನೇ ಶತಮಾನ) ಮತ್ತು ಕದಿರೆಯ ಮಂಜುನಾಥ ದೇವಸ್ಥಾನದ ಕುಂದವರ್ಮನ ಶಾಸನ. ಕೊನೆಯ ಶಾಸನದಲ್ಲಿ ಉಕ್ತವಾಗಿರುವ ಬಾಲಚಂದ್ರ ಶಿಖಾಮಣಿಯು ಬೌದ್ಧಭಿಕ್ಷುವೆಂದೂ ಲೋಕೇಶ್ವರನು ಬೌದ್ಧ ಧರ್ಮದ ದೇವತೆಗಳಲ್ಲೊಬ್ಬನಾದ ಅವಲೋಕಿತೇಶ್ವರನೆಂದೂ ವಿಹಾರ ಶಬ್ದವು ಬೌದ್ಧ ದೇವಾಲಯವೆಂದೂ ಕೆಲವು ವಿದ್ವಾಂಸರು ವಾದಿಸಿದ್ದಾರೆ. ಆದರೆ ಇದನ್ನು ಪ್ರಶ್ನಿಸುವ ವಿದ್ವಾಂಸರೂ ಇದ್ದಾರೆ. ಇನ್ನು ಬೌದ್ಧ ಧರ್ಮದ ಹಲವು ತತ್ವಗಳು ಕೆಲವು ಶೈವ ಪಂಥಗಳ ಮೇಲೆ ಪರಿಣಾಮಕಾರಿಯಾದ ವರ್ಚಸ್ಸು ಬೀರಿದ್ದನ್ನು ತಿಳಿಸುವ ಕೆಲವು ಶಾಸನಗಳಿವೆ. ಇದನ್ನು ತಿಳಿಸುವ ಶಾಸನಗಳು ಕದಿರೆಯ ದೇವಾಲಯದಲ್ಲಿದೆ. ಈ ಶಾಸನಗಳು ೧೨ ಮತ್ತು ೧೪ನೆಯ ಶತಮಾನಗಳ ಕಾಲದ್ದು.

ಕಾಸರಗೋಡಿನಲ್ಲಿ ಸಿಕ್ಕಿದ ಅರೇಬಿಕ್ ಶಾಸನ ಕ್ರಿ.ಶ. ೭ನೆಯ ಶತಮಾನದಲ್ಲಿ ತುಳುನಾಡಿನ ಅಂಚಿನಲ್ಲಿ ಇಸ್ಲಾಂ ಮತ್ದ ಆಗಮನವನ್ನು ತಿಳಿಸುತ್ತದೆ. ಗೋವಾ, ಭಟ್ಕಳ, ಹೊನ್ನಾವರ, ಬಸರೂರು, ಬಾರಕೂರು ಮತ್ತು ಮಂಗಳೂರುಗಳಲ್ಲಿ ಸಿಕ್ಕಿದ ಶಾಸನಗಳು. ಈ ಮತದವರ ಆರ್ಥಿಕ ಚಟುವಟಿಕೆಗಳನ್ನು ತಿಳಿಸುವುದು ಗಮನಾರ್ಹ.

ಶಾಸನಗಳಲ್ಲದೆ ಸ್ಥಳೀಯ ದಾಖಲೆಗಳು ತುಳುನಾಡಿನ ಧಾರ್ಮಿಕ ಇತಿಹಾಸವನ್ನು ತಿಳಿಸುತ್ತವೆ. ಇಂತಹವುಗಳಲ್ಲಿ ಪ್ರಮುಖವಾದುದು ಕಡತ. ಕಪ್ಪು ಬಟ್ಟೆಯ ಮೇಲೆ ಬಿಳಿ ಚಾಕಿನಿಂದ ಬರೆದ ಸುಣ್ಣದ ಬರಹ. ಇಂತಹ ದಾಖಲೆಗಳನ್ನು ಬೀಸಣಿಗೆಯಂತೆ ಎಡಕ್ಕೊಮ್ಮೆ, ಬಲಕ್ಕೊಮ್ಮೆ ಮಡಚಿ ಪುಸ್ತಕದಂತೆ ಇಡಬಹುದು. ರಕ್ಷಣೆಗಾಗಿ ಇದರ ಮೇಲೆ ಮರದ ತೆಳ್ಳಗಿನ ಪಟ್ಟಿ ಇಟ್ಟಿರುತ್ತಾರೆ. ಇಂತಹ ದಾಖಲೆಗಳನ್ನು ಬೆಳಕಿಗೆ ತಂದು ಅಧ್ಯಯನಿಸಿದ ಮತ್ತು ಇವುಗಳಲ್ಲಿ ಅಡಕವಾಗಿದ್ದ ಸಾಂಸ್ಕೃತಿಕ ಸಂಗತಿಗಳನ್ನು ನಿರೂಪಿಸಿದ ಕೀರ್ತಿ ಡಾ. ಅನಂತಕೃಷ್ಣ ಶಾಸ್ತ್ರಿಯವರಿಗೆ ಸಲ್ಲುತ್ತದೆ. ಇವರು ಶೃಂಗೇರಿ ಮತ್ತು ಸ್ವರ್ಣವಲ್ಲಿ ಮಠಗಳಲ್ಲಿದ್ದ ಇಂತಹ ಅಪೂರ್ವ ದಾಖಲೆಗಳನ್ನು ಬೆಳಕಿಗೆ ತಂದಿದ್ದಾರೆ. ಡಾ. ಕೆ.ಜಿ.ವಸಂತ ಮಾಧವರು ಹಲಸನಾಡು, ಕೊಲ್ಲೂರು, ಧರ್ಮಸ್ಥಳ, ಕೋಟೇಶ್ವರ ಮತ್ತು ಮಂಜೇಶ್ವರಗಳಲ್ಲಿದ್ದ ಕಡತಗಳಲ್ಲಿ ಭಾಷೆಗಿಂತ ವಿಷಯ ನಿರೂಪಣೆಗೆ ಹೆಚ್ಚಿನ ಮಹತ್ವವಿದೆ. ಆದುದರಿಂದ ಇಲ್ಲಿ ತಿಳಿಸಿದ ಧಾರ್ಮಿಕ ಇತಿಹಾಸ ಘಟನೆಗಳಲ್ಲಿ ನೈಜತೆ ಇವೆ ಮತ್ತು ಐತಿಹಾಸಿಕ ಮೌಲಿಕತೆಯೂ ಇದೆ. ಈ ಕಡತಗಳಲ್ಲಿ ಬರೆಯಲ್ಪಟ್ಟ ಬರಹಗಳು ಹದಿನೇಳರಿಂದ ಹತ್ತೊಂಬತ್ತನೆಯ ಶತಮಾನದ ಆರಂಭದವರೆಗಿನ ಕಾಲದವುಗಳು, ಕನ್ನಡ ಕರಾವಳಿಯ ದೇವಾಲಯಗಳು, ಅಲ್ಲಿ ನಡೆಯುವ ಹಬ್ಬ, ಉತ್ಸವ, ನೇಮಗಳ ಆಚಾರ ವಿಚಾರಗಳು, ದೇವಾಲಯ ಮತ್ತು ಮಠಗಳ ಸಂಬಂಧ ಇತ್ಯಾದಿ ಮಾಹಿತಿಗಳನ್ನು ಕಡತದ ಅಧ್ಯಯನದಿಂದ ಪಡೆಯಬಹುದು. ಉದಾ : ಮಂಜೇಶ್ವರ ದೇವಾಲಯದಲ್ಲಿರುವ ಕಡತ ಒಂದರಲ್ಲಿ ಕ್ರಿ.ಶ. ೧೬೭೯, ಕ್ರಿ.ಸ. ೧೭೮೫ರ ಕಾಲದಲ್ಲಿ ವಿಠಲ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ಆಯನೋತ್ಸವ, ಚವುತಿ ಅದರಲ್ಲಿ ಭಾಗವಹಿಸಿದ ಕೆಲಸಗಾರರು ಮತ್ತು ಅವರ ಸಂಬಳ ವಿವರಗಳು ಇವೆ. ನಂದಾದೀಪೋತ್ಸವ, ವಸಂತೋತ್ಸವ, ರಂಗಪೂಜೆ, ಸೋಣೆ ಆರತಿ, ಸಂಕ್ರಾಂತಿ ಪೂಜೆ, ನಾಗಪಂಚಮಿ, ನವರಾತ್ರಿಕ ಪೂಜಾ ಕಟ್ಟಳೆಗಳು, ವಾರ್ಷಿಕ ರಥೋತ್ಸವ, ಅದರಲ್ಲಿ ನಡೆಯುವ ಖರ್ಚಿನ ವಿವರಗಳು ಇತ್ಯಾದಿ ಕೋಟೇಶ್ವರ ಮತ್ತು ಕೊಲ್ಲೂರು ದೇವಾಲಯಗಳಲ್ಲಿ ಸಿಕ್ಕಿದ ಕಡತಗಳಿಂದ ತಿಳಿದುಬರುತ್ತದೆ.

ಹಲಸನಾಡು ದಿ. ವಿಶ್ವೇಶ್ವರಯ್ಯನವರ ಮನೆಯಲ್ಲಿ ಸಿಕ್ಕಿದ ಕಡತ ಆ ಊರಿನ ಆಸುಪಾಸಿನಲ್ಲಿರುವಕ ದೇವಾಲಯಗಳ ಹೆಸರುಗಳನ್ನು ತಿಳಿಸಿ ಅಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಟ್ಟಳೆಗಳ ಚಾರಿತ್ರಿಕ ಮಾಹಿತಿಗಳನ್ನು ಒದಗಿಸುತ್ತವೆ.

ಕೆಲವು ಪತ್ರ ದಾಖಲೆಗಳಲ್ಲಿ ತುಳುನಾಡಿನ ದಾರ್ಮಿಕ ಇತಿಹಾಸದ ಕೆಲವು ಅಪರೂಪ ಸಂಗತಿಗಳು ಅಡಕವಾಗಿವೆ. ಇಂತಹ ದಾಖಲೆಗಳು ಕೊಚ್ಚಿ, ಪಣಜಿ ಮತ್ತು ಚಿತ್ರಾಪುರ (ಶಿರಾಲಿ) ಮಠದ ಪತ್ರಾಗಾರಗಳಲ್ಲಿ ಇವೆ. ತುಳುನಾಡಿನ ಧಾರ್ಮಿಕ ಇತಿಹಾಸಕ್ಕೆ ಸಂಬಂದಿಸಿದ ಐತಿಹಾಸಿಕ ಸಂಗತಿಗಳು ಕೆಳದಿ ಗುಂಡಾ ಜೋಯಿಸರು ಸಂಗ್ರಹಿಸಿದ ದಾಖಲೆ ಪತ್ರಗಳಲ್ಲಿವೆ. ಕೊಚ್ಚಿ ಪತ್ರಾಗಾರದಲ್ಲಿರುವ ಕನ್ನಡ ಭಾಷೆಯ ದಾಖಲೆ ಪತ್ರಗಳು ಕೊಚ್ಚಿ ರಾಜ ಮತ್ತು ಕನ್ನಡ ಕರಾವಳಿಯ ದೇವಾಲಯಗಳ ಸಂಬಂಧಗಳನ್ನು ತಿಳಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಕೊಚ್ಚಿ, ಚರಕಲ್ ಮತ್ತು ಕೊಲಸ್ತೇರಿ ರಾಜರುಗಳು ಭಕ್ತಿಪೂರ್ವಕವಾಗಿ ಬಿಟ್ಟ ಉಂಬಳಿ ಮತ್ತು ಇನ್ನಿತರ ಸೇವೆಗಳು ಹದಿನೆಂಟನೆ ಶತಮಾನದ ಉತ್ತರಾರ್ಧಕ್ಕೆ ಸರಿಹೊಂದುತ್ತವೆ. ಇಷ್ಟಲ್ಲದೆ ಕೊಚ್ಚಿಯ ಅರಸರು ಉಡುಪಿ ಶ್ರೀಕೃಷ್ಣದೇವರೊಂದಿಗೆ ಧಾರ್ಮಿಕ ಸಂಪರ್ಕವನ್ನು ಇಟ್ಟುಕೊಂಡಿದ್ದರೆಂಬ ಸಂಗತಿ ತಿಳಿದುಬರುವುದು ಕೊಚ್ಚಿಯ ಪತ್ರಾಗಾರದ ಕಾಗದಪತ್ರಗಳಿಂದ. ಚಿತ್ರಾಪುರ ಮಠ (ಶಿರಾಲಿ, ಉತ್ತರಕನ್ನಡ)ದಲ್ಲಿರುವ ಕ್ರಿ.ಶ. ೧೭೨೦, ೧೭೨೨ ಮತ್ತು ೧೭೩೯ರ ದಾಖಲೆಪತ್ರಗಳು ಸಾರಸ್ವತ ಸಮಾಜದವರು ತಮ್ಮ ಗುರುಗಳನ್ನು ಸ್ವೀಕರಿಸಿದ ರೀತಿ, ಆ ಸ್ವಾಮಿಗಳು ತಮ್ಮ ಮಠದ ಶಿಷ್ಯರುಗಳಿಗೆ ವಿಧಿಸಿದ ಧಾರ್ಮಿಕ ನಿಯಮಾವಳಿ ಮತ್ತು ಕಟ್ಟುಕಟ್ಟಳೆಗಳು ಮತ್ತು ಮಠದಲ್ಲಿ ನಡೆಯುವ ಧಾರ್ಮಿಕ ಉತ್ಸವಗಳು ಸಾಂಗವಾಗಿ ನಡೆದು ಬರಲು ಕೆಳದಿ ಬಸವಪ್ಪ ನಾಯಕನು ಉಳುವರೆ ಗ್ರಾಮದ ಕಂದಾಯ ಉತ್ಪತ್ತಿ ಬಿಟ್ಟ ವಿವರಗಳಿವೆ.

ಕೆಳದಿ ಗುಂಡಾ ಜೋಯಿಸರು ಸಂಗ್ರಹಿಸಿದ ದಾಖಲೆಪತ್ರಗಳಲ್ಲಿ ಕೊಲ್ಲೂರು – ಕೊಡಚಾದ್ರಿ, ಹೊನ್ನಾವರ ಗೋಕರ್ಣ ದೇವಾಲಯಗಳ ಧಾರ್ಮಿಕ ಪರಂಪರೆಯ ಮಾಹಿತಿಗಳು ಇವೆ.

ಕೈಫಿಯತ್ತುಗಳು ಧಾರ್ಮಿಕ ಇತಿಹಾಸ ತಿಳಿಸುವ ಆಕರಗಳಲ್ಲಿ ಒಂದಾಗಿವೆ. ಹದಿನೆಂಟು ಮತ್ತು ಹತ್ತೊಂಬತ್ತನೆ ಶತಮಾನಗಳಲ್ಲಿ ತುಳುನಾಡಿನಲ್ಲಿ ಧಾರ್ಮಿಕ ಪರಂಪರೆಯ ಚಿತ್ರಣ ಕೈಫಿಯತ್ತುಗಳಲ್ಲಿದೆ. ಇಂತಹ ಕೈಫಿಯತ್ತುಗಳಲ್ಲಿ ಮೆಕನ್ಜಿ ಸಂಗ್ರಹಿಸಿದ ದಾಖಲೆಗಳು ಅಡಕವಾಗಿದೆ. ದೇವ ದೈವ ಮತ್ತು ದೇವಿಗಳ ಭಕ್ತಿಸ್ವರೂಪ, ಅವುಗಳಲ್ಲಿ ಆರಾಧನೆಗಳ ವೈಶಿಷ್ಟ್ಯ, ಧಾರ್ಮಿಕ ಜಾತ್ರೆ, ದೇವಾಲಯಗಳು ಮತ್ತು ಅವುಗಳ ಐತಿಹಾಸಿಕ ಸಂಗತಿಗಳ ಮಾಹಿತಿ ಸಿಗುವುದು ಕೈಫಿಯತ್ತಿನ ಅಧ್ಯಯನದಲ್ಲೇ. ಭೂತಾರಾಧನೆ, ದೇವರ ಜಾತ್ರೆ ಮತ್ತು ಅಲ್ಲಿ ನಡೆಯುತ್ತಿದ್ದ ಕಟ್ಟಳೆಗಳು ಮೂಲದಲ್ಲಿದ್ದ ಐತಿಹಾಸಿಕತೆಯನ್ನು ಮರೆಸಿ ಪೌರಾಣಿಕಕ ಹೊಳಪನ್ನು ಪಡೆದು ಧಾರ್ಮಿಕ ಅವಿಭಾಜ್ಯ ಅಂಗವಾಗಿ ಸೇರಿಹೋಗಿವೆ ಎಂಬ ಐತಿಹಾಸಿಕ ಸಂಗತಿಗಳು ತಿಳಿದುಬರುವುದು ಇಂತಹ ಕೈಫಿಯತ್ತುಗಳ ಅಧ್ಯಯನದಿಂದ.

ಇನ್ನೂ ಕೆಲವು ಅಪ್ರಕಟಿತ ದಾಖಲೆಪತ್ರಗಳಲ್ಲಿ ಸ್ಥಳೀಯ ದೇವಾಲಯದಲ್ಲಿ ನಡೆದುಕೊಂಡು ಬರುತ್ತಿದ್ದ ಧಾರ್ಮಿಕ ಕಟ್ಟಳೆಗಳು ಮತ್ತು ಅವುಗಳಲ್ಲಿ ಸಹಭಾಗಿಯಾಗಿದ್ದ ಜಾತಿ ಪಂಗಡದವರು ಅವರ ಕಟ್ಟಳೆ ನಿಯಮಗಳು ಮತ್ತು ಉತ್ಸವಗಳಲ್ಲಿ ನಡೆಯುವ ಖರ್ಚಿನ ವಿವರಗಳ ಮಾಹಿತಿಗಳೂ ಇವೆ. ಇಷ್ಟಲ್ಲದೆ ದಾಖಲೆ ಸಿಕ್ಕಿದ ಸ್ಥಳಗಳಲ್ಲಿರುವ ದೈವಸ್ಥಾನಗಳು ಮತ್ತು ದೇವಾಲಯದೊಂದಿಗಿರುವ ಹೊಂದಾಣಿಕೆಯ ಮಾಹಿತಿಗಳನ್ನು ಈ ಅಪ್ರಕಟಿತ ದಾಖಲೆಗಳಲ್ಲಿ ನೋಡಬಹುದು. ಇಂತಹ ದಾಖಲೆಲಗಳ ಕಟ್ಟುಗಳು ಅಜ್ಜಾವರ ಸಖಾರಾಮ ರಾಯರ ಮನೆಯಲ್ಲೂ, ಗಂಗೊಳ್ಳಿ ದಿ. ಬೈಲೂರು ರಾಮರಾಯರ ಮನೆಯಲ್ಲೂ ಇವೆ ಮತ್ತು ಚಿತ್ತಾಪುರ ಮಠದಲ್ಲಿದ್ದವು.

ಸಾಹಿತ್ಯ ಕೃತಿಗಳು

ಧಾರ್ಮಿಕ ಜೀವನದ ದೈನಂದಿನ ಕ್ರಮ, ಧಾರ್ಮಿಕ ತತ್ವಗಳು, ಉತ್ಸವಗಳ ವರ್ಣನೆಗಳನ್ನು ತಿಳಿಯುವಲ್ಲಿ ಸಾಹಿತ್ಯಕೃತಿಗಳು ಸಹಾಯಕವಾಗಿವೆ. ಸಾಹಿತ್ಯಕೃತಿಗಳಲ್ಲಿ ಸಂಸ್ಕೃತ, ಕನ್ನಡವಲ್ಲದೇ ಕೊಂಕಣಿ ಮತ್ತು ತುಳು ಭಾಷೆಗಳೂ ಇವೆ. ಸಂಸ್ಕೃತ ಕಾವ್ಯಗಳಲ್ಲಿ ಕರಾವಳಿ ಕರ್ನಾಟಕದ ಧಾರ್ಮಿಕ ಇತಿಹಾಸದ ವಿಹಂಗಮ ನೋಟ ಸಿಗುತ್ತದೆ. ಶೈವ, ವೈಷ್ಣವ, ಶಾಕ್ತ, ಧಾರ್ಮಿಕ ಪರಂಪರೆಗಳು ಶ್ರೀ ಆಚಾರ್ಯರ ಕೃತಿಗಳಿಂದ ಸಿಕ್ಕಿದರೆ, ಪುರಂದರ ಮತ್ತು ಕನಕದಾಸರ ಕೃತಿಗಳಲ್ಲಿ ಸರಳ ರೀತಿಯ ವೈಷ್ಣವ ಧರ್ಮದ ತಿರುಳು ಮತ್ತು ಆಗ ಧಾರ್ಮಿಕದ ನೆರಳಿನಲ್ಲಿ ನಡೆಯುವ ಧಾರ್ಮಿಕ ಡಂಬಾಚಾರಗಳ ಮಾಹಿತಿಗಳು ವ್ಯಕ್ತವಾಗಿವೆ. ಈ ದಾಸರುಗಳು ಈ ಧಾರ್ಮಿಕ ಡಂಬಾಚಾರಗಳನ್ನು ಖಂಡಿಸಿದ್ದರೆಂಬ ಸಂಗತಿ ತಿಳಿದುಬರುವುದು ದಾಸರ ಕೃತಿಗಳಲ್ಲಿ. ಇದಕ್ಕೆ ಮುಖ್ಯ ಉದಾಹರಣೆ ಪುರಂದರ ದಾಸರ ‘ನಗೆಯು ಬರುತಿದೆ ಎನಗೆ ನಗೆಯು ಬರುತ್ತಿದೆ ಜಗದೊಳಿರುವ ಮನುಜರೆಲ್ಲಾ ಹಗರಣ ಮಾಡುವುದ ಕಂಡು ‘ ಎಂಬ ಪದ್ಯ.

ಧಾರ್ಮಿಕ ಜೀವನದಲ್ಲಿ ಯಾತ್ರೆಯು ಪ್ರಮುಖ ಪಾತ್ರವನ್ನು ವಹಿಸಿತ್ತೆಂದು ತಿಳಿದುಬರುವುದು. ವಾದಿರಾಜರ ‘ತೀರ್ಥ ಪ್ರಬಂಧ’ ಗ್ರಂಥದಲ್ಲಿ. ಈ ಗ್ರಂಥದಲ್ಲಿ ವಾದಿರಾಜರು ತಾವು ಕಂಡದ್ದನ್ನು ಹಾಗೂ ತಿಳಿದುಕೊಂಡದ್ದನ್ನೂ ಕಥನ ವಿಧಾನದಲ್ಲಿ ವಿವರಿಸಿದ್ದಾರೆ. ಈ ಗ್ರಂಥದ ಪ್ರಥಮ ಭಾಗವಾದ ಪಶ್ಚಿಮ ಪ್ರಬಂಧದಲ್ಲಿ ತುಳುನಾಡಿನ ಪುಣ್ಯಕ್ಷೇತ್ರಗಳ ಐತಿಹಾಸಿಕ ಪರಿಚಯ ತಿಳಿಯುವಲ್ಲಿ ಸಹಾಯವಾಗಿದೆ. ಇದರಲ್ಲಿ ಪಾಜಕ ಕ್ಷೇತ್ರವಲ್ಲದೇ ಕಡೇಶಿವಾಲಯ (ಬಂಟ್ವಾಳ ತಾಲ್ಲೂಕು), ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಕೊಲ್ಲೂರು, ಗೋಕರ್ಣಗಳ ವಿವರಗಳು ಇವೆ. ಇಷ್ಟಲ್ಲದೇ ಈ ತೀರ್ಥಯಾತ್ರೆಯಲ್ಲಿ ಸಿಗುವ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ ಸ್ವಾಮಿಗಳು ತಮ್ಮ ದಾರಿಯಲ್ಲಿ ಎದುರಾದ ವಿಶೇಷ ಪವಿತ್ರ ನದಿಗಳ ಬಗ್ಗೆಯೂ ಮತ್ತು ಪರ್ವತಗಳ ಬಗ್ಗೆಯೂ ಪೌರಾಣಿಕ ಹಿನ್ನೆಲೆಗಳಿಂದ ಕೂಡಿದ ವಿವರಗಳನ್ನು ನೀಡಿದ್ದಾರೆ. ಇದು ತುಳುನಾಡಿನ ಧಾರ್ಮಿಕ ಇತಿಹಾಸ ತಿಳಿಯುವಲ್ಲಿ ಬಹಳ ಉಪಯುಕ್ತ ಆಕರ ಸಾಮಾಗ್ರಿ. ಈ ಗ್ರಂಥದಲ್ಲಿ ವಿವಿಧ ಕ್ಷೇತ್ರಗಳ ಬಗ್ಗೆ ಪ್ರಚಲಿತವಿರುವ ವದಂತಿಗಳನ್ನು ಮತ್ತು ಆಗಿನ ಕಾಲದ (ಕ್ರಿ.ಶ.೬೦೦) ಕ್ಷೇತ್ರಗಳ ಸ್ಥಿತಿಗತಿಗಳ ವಿವರಗಳು ಇದೇ ಗ್ರಂಥದಲ್ಲಿವೆ. ಇದರಿಂದಾಗಿ ವಾದಿರಾಜರ ತೀರ್ಥ ಪ್ರಬಂಧ ಧಾರ್ಮಿಕ ಇತಿಹಾಸ ಸಂಶೋಧಕರಿಗೆ ಉಪಯುಕ್ತ ಆಕರ ಗ್ರಂಥಗಳಲ್ಲಿ ಒಂದಾಗಿದೆ.

ಕನ್ನಡ ಸಾಹಿತ್ಯ ಕೃತಿಗಳಲ್ಲಿ ಹರಿದಾಸರ ಸಾಹಿತ್ಯ ಕೃತಿಗಳೂ ಕಂಠಿರವ (ಆದಿತ್ಯ ಪುರಾಣ ಬರೆದವ. ೧೫೬೦). ತಿರುಮಲ (ಶಿವಗೀತೆ ಬರದವ, ೧೬೦೦), ಕರಾವಳಿ ಕರ್ನಾಟಕದಲ್ಲಿ ವೈಷ್ಣವ, ಶೈವ ಪಂಥಗಳ ಇತಿಹಾಸ ತಿಳಿಯಲು ಪ್ರಮುಖ ಆಕರ ಕಾವ್ಯಗಳು, ಚದುರ ಚಂದ್ರಮನ ಕಾರಕಳ ಗೋಮ್ಮಟೇಶ್ವರ ಚರಿತೆ (೧೬೪೬), ಪದ್ಮನಾಭನ ಜಿನದತ್ತರಾಯ ಚರಿತೆ (೧೭೦೦) ಮತ್ತು ಲಿಂಗಣ್ಣನ ಕೆಳದಿ ನೃಪವಿಜಯಂ (೧೮೦೦) ತುಳುನಾಡಿನ ಕೆಲವು ಧಾರ್ಮಿಕ ಸಂಗತಿಗಳನ್ನು ತಿಳಿಸುತ್ತದೆ. ಮೊದಲಿನ ಎರಡು ಕಾವ್ಯಗಳು ತುಳುನಾಡಿನಲ್ಲಿ (ಕಾರ್ಕಳ ಮತ್ತು ಮೂಲಿಕೆ ಪರಿಸರದಲ್ಲಿ) ಜೈನಧರ್ಮದ ಪ್ರಗತಿಯನ್ನು ತಿಳಿಸುತ್ತವೆ. ಕೊನೆಯಲ್ಲಿ ಕಾವ್ಯ ಅಧ್ಯಯನ ಕ್ಷೇತ್ರದಲ್ಲಿ ವೀರಶೈವ ಪಂಥದ ಬೆಳವಣಿಗೆಯನ್ನು ನೀಡುತ್ತದೆ.

ಜನಸಾಮಾನ್ಯರ ಧಾರ್ಮಿಕ ಜೀವನ ತಿಳಿಯಲು ಜಾನಪದ ಕಾವ್ಯಗಳು ಉತ್ತಮ ಆಕರಗಳಾಗಿವೆ. ಇಂತಹ ಜಾನಪದಗಳಲ್ಲಿ ತುಳು ಪಾಡ್ದನಗಳು ಗಮನಾರ್ಹ, ಪಾಡ್ದನಗಳಲ್ಲಿ ತುಳುವರೇ ಆದ ಬ್ರಹ್ಮ (ಬೆರ್ಮೆರ್) ಆರಾಧನೆ, ಆ ದೇವತೆಯ ಸ್ಥಾನಮಾನ, ನಾಗಬ್ರಹ್ಮ ಸಂಯೋಗ, ಅಲ್ಲಿ ನಡೆಯುತ್ತಿದ್ದ ಪವಾಡಗಳು, ಕೆಲವು ದೇವಸ್ಥಾನಗಳು ಮತ್ತು ದೈವಸ್ಥಾನಗಳು ಮತ್ತು ಇವುಗಳಲ್ಲಿ ನಡೆಯುವ ಧಾರ್ಮಿಕ ಕಟ್ಟಳೆಗಳು, ನಿಯಮಗಳು, ಕೋಲಗಳು ಇತ್ಯಾದಿಗಳ ಮಾಹಿತಿ ಸಿಗುವುದು ಪಾಡ್ದನದ ಅಧ್ಯಯನದಿಂದ, ಒಟ್ಟಿನಲ್ಲಿ ತುಳುನಾಡಿನ ನೈಜ ಧಾರ್ಮಿಕ ಜೀವನ ತಿಳಿಯುವಲ್ಲಿ ಪಾಡ್ದನಗಳು ಅತ್ಯಂತ ಮುಖ್ಯ ಆಕರಗಳಲ್ಲಿ ಒಂದಾಗಿವೆ.

ವಿದೇಶಿ ಆಕರಗಳು

ಕರಾವಳಿ ಕರ್ನಾಟಕದ, ಮುಖ್ಯವಾಗಿ ತುಳುನಾಡಿನ, ಧಾರ್ಮಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ವಿದೇಶೀ ಬರಹಗಳು ಉಪಯುಕ್ತವಾಗಿವೆ. ಇಂತಹ ಆಕರಗಳಲ್ಲಿ ವಿದೇಶೀ ದಾಖಲೆ ಮತ್ತು ವಿದೇಶಿಯರ ಪ್ರವಾಸ ವರದಿಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಕ್ರಿ.ಶ. ೧೫ನೇ ಶತಮಾನದಿಂದ ೧೮ನೇ ಶತಮಾನಗಳವರೆಗೆ ತುಳುನಾಡು ಪಾಶ್ಚಿಮಾತ್ಯರ – ಮುಖ್ಯವಾಗಿ ಯುರೋಪಿನವರ ಸಂಪರ್ಕಕ್ಕೆ ಬಂತು. ಈ ರೀತಿಯಲ್ಲಿ ಸಂಪರ್ಕಕ್ಕೆ ಬಂದವರಲ್ಲಿ ಪೋರ್ಚುಗೀಸರು ಮೊದಲಿಗರು. ವ್ಯಾಪಾರ ಮುಖ್ಯ ಉದ್ದೇಶ ಮತ್ತು ಸಾಧ್ಯವಾದಲ್ಲಿ ಕ್ರೈಸ್ತ ಮತ ಪ್ರಚಾರದ ಇರಾದೆಯಿಂದ ತುಳುನಾಡನ್ನು ಸಂಪರ್ಕಿಸಿದ ಪೋರ್ಚುಗೀಸರು ತಾವು ನೋಡಿದ ಸ್ಥಳಗಳ ಮಾಹಿತಿಗಳನ್ನು ತಮ್ಮ ದಾಖಲೆಗಳಲ್ಲಿ ನಮೂದಿಸಿದ್ದರು. ಇಂತಹ ದಾಖಲೆಗಳು ಪೋರ್ಚುಗೀಸರು ಕ್ರೈಸ್ತಮತ ಪ್ರಚಾರ ನಡೆಸುವಲ್ಲಿ ಎದುರಿಸಿದ ಧಾರ್ಮಿಕ ಸಂಗತಿಗಳನ್ನು ಅಲ್ಲಲ್ಲಿ ತಿಳಿಸಿವೆ. ಇಂತಹ ದಾಖಲೆಗಳಲ್ಲಿ ಅತ್ಯಂತ ಗಮನಾರ್ಹವಾದವುಗಳು ಆರ್ಕಿವೊ ಪೋರ್ಚುಗೀಜ್ ಒರಿಯಂಟಲ್ (ಬ್ರಗಾಂಜ ಸಂಪಾದಿಸಿದ್ದು)(Archievo Portuguese Oriental by Braganja Pereira), ಪಿಸ್ಲುರೆಲನಕರ್ ಸಂಪಾದಿಸಿದ ಅಸೆಂಟೊಡು ಕೊಸಸೆಲೊ (Pissurlenkar Assento Conselho Do Estodo), ಒಪ್ಪಂದಗಳ ಸಂಗ್ರಹ (ಸಂಚಿಕೆ) (Calleco de tratados, Ed, Biker) ಮತ್ತು ಕೊಂಡಿ ಲಿನ್ಹಾರೆ ವರದಿ ಇಂತಹ ದಾಖಲೆಗಳು ತುಳುನಾಡಿನಲ್ಲಿ ಕ್ರೈಸ್ತ ಮತ ಪ್ರಚಾರವಾಗುವಾಗ ಸ್ಥಳೀಯ ಮತಗಳ ಸ್ವರೂಪಗಳು ಮತ್ತು ಈ ಮತಗಳು ಕ್ರೈಸ್ತ ಧರ್ಮಕ್ಕೆ ನೀಡಿದ ಪ್ರತಿಕ್ರಿಯೆಯ ವಿವರಗಳು ಇತ್ಯಾದಿ ಮಾಹಿತಿಗಳನ್ನು ತಿಳಿಸುವಲ್ಲಿ ಸಮರ್ಥವಾಗಿವೆ. ಪೋರ್ತುಗೀಜ ವೈಸರಾಯ ಕೊಂಡಿಲಿನ್ಹಾರೆ (೧೬೩೬) ವರದಿಯಲ್ಲಿ ಗಂಗೊಳ್ಳಿಯಲ್ಲಿ ಕ್ರೈಸ್ತ ಮತೀಯರಿಗೂ ಮತ್ತು ಸ್ಥಳೀಯ ಮತಸ್ಥರಿಗೂ ಘರ್ಷಣೆ ನಡೆದು ಅದನ್ನು ಕೆಳದಿ ವೀರಭದ್ರನಾಯಕನು ಯಾವ ರೀತಿಯಲ್ಲಿ ಬಗೆಹರಿಸಿದನೆಂಬ ಸಂಗತಿಯು ಇದೆ. ಜಸುವಿಟರ ಪತ್ರಗಳು (Jesuit letters) ತುಳುನಾಡಿನ ಕ್ರೈಸ್ತ ಧರ್ಮದ ಇತಿಹಾಸ ತಿಳಿದುಕೊಳ್ಳಲು ಉಳ್ಳ ಉತ್ತಮ ಆಕರಗಳಲ್ಲಿ ಒಂದಾಗಿದೆ.

ವಿದೇಶಿ ಪ್ರವಾಸಿಗರು

ಹಲವಾರು ಉದ್ದೇಶಗಳನ್ನು ಹೊಂದಿದ ವಿದೇಶೀ ಪ್ರವಾಸಿಗರು ಕನ್ನಡ ಕರಾವಳಿಯನ್ನು ಆಗಿಂದಾಗ್ಗೆ ಸಂದರ್ಶಿಸಿ ತಾವು ಇಲ್ಲಿ ನೋಡಿದ ಧಾರ್ಮಿಕ ಸಂಗತಿಗಳನ್ನು ತಿಳಿಸಿದ್ದಾರೆ. ಇವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಅಧ್ಯಯನಿಸಿದಲ್ಲಿ ತುಳುನಾಡಿನ ಧಾರ್ಮಿಕ ಇತಿಹಾಸದ ಕೆಲವು ಪ್ರಮುಖ ಘಟನೆಗಳು ಬೆಳಕಿಗೆ ಬರುತ್ತವೆ. ಇಂತಹ ಪ್ರವಾಸಿಗರಲ್ಲಿ ಕೊಸಮಸ್ (Cosmos) ಕ್ರೈಸ್ತಮತ ಇರುವುದನ್ನು ಸೂಚಿಸಿದ್ದಾರೆ. ಇದು ತುಳುನಾಡಿನ ಕಲ್ಯಾಣಪುರವೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಕ್ರಿ.ಶ. ೬ನೇ ಶತಮಾನದಲ್ಲಿ ಬಂದ ಅಲೆಕ್ಸಾಂಡ್ರಿಯಾದ ಒಬ್ಬ ವ್ಯಾಪಾರಿ ಕಾಸಮಸ್ (Cosmos)ನ ವರದಿಯಲ್ಲಿ ಕೆಲವು ಅತ್ಯಂತ ಕುತೂಹಲಕಾರಿ ಧಾರ್ಮಿಕ ಸಂಗತಿಗಳು ಇವೆ. ಇದರಲ್ಲಿ ನಮ್ಮ ಗಮನಸೆಳೆಯುವುದು ‘ಕಲ್ಲಿಯಾಣದಲ್ಲಿ ಕ್ರೈಸ್ತರ ಚರ್ಚ್ ಇದೆ. ಇಲ್ಲಿ ಪರ್ಷಿಯಾದ ಬಿಷಪ್ಪನಿಂದ ನೇಮಿಸಲ್ಪಟ್ಟ ಒಬ್ಬ ಬಿಷಪ್ಪನೂ ಇದ್ದಾನೆ.’ ಇಲ್ಲಿ ತಿಳಿಸಿದ ಕಲ್ಲಿಯಾಣ ಉಡುಪಿ ಸಮೀಪದ ಕಲ್ಯಾಣಪುರ ಎಂಬ ವಾದವೂ ಇದೆ. ಒಟ್ಟಿನಲ್ಲಿ ಪಶ್ಚಿಮ ಕರಾವಳಿಯಲ್ಲಿ ಕ್ರೈಸ್ತ ಪಂಥ ಇದ್ದ ಸಂಗತಿಯು ತಿಳಿದುಬರುವುದು. ಕೋಸ್‌ಮಸ್‌ನ ಈ ವಾಕ್ಯಗಳಿಂದ, ಅರೇಬಿಯಾ, ಆಫ್ರಿಕಾ, ಪರ್ಶಿಯಾದಿಂದ ಬಂದ ಪ್ರವಾಸಿಗರಾದ ಆಲ್ ಮಸೂದಿ, ಇಬ್ಬನ್ ಬತೂತಾ, ಅಬ್ದುಲ್ ರಝಾಕ್‌ರ ಪ್ರವಾಸಿ ವರದಿಗಳು ಕರಾವಳಿ ಕರ್ನಾಟಕದಲ್ಲಿ ಇಸ್ಲಾಂ ಮತದ ಪ್ರಚಾರದ ಇತಿಹಾಸ ತಿಳಿಸುವುದಲ್ಲದೆ ಅವರು ಇಲ್ಲಿನ ಸ್ಥಳೀಯ ಮತೀಯರೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಂಡಿದ್ದರೆಂಬ ಸಂಗತಿಯನ್ನು ತಿಳಿಸುತ್ತವೆ. ಇದು ಕರಾವಳಿ ಕರ್ನಾಟಕ ಧಾರ್ಮಿಕ ಇತಿಹಾಸದಲ್ಲಿ ಗಮನಿಸುವ ಸಂಗತಿ. ಹದಿನಾರನೇ ಶತಮಾನದಿಂದ ಹದಿನೆಂಟನೇ ಶತಮಾನಗಳ ಅಂತ್ಯದವರೆಗೆ ಬಂದ ಯುರೋಪಿನ ಪ್ರವಾಸಿಗರು ತುಳುನಾಡಿನ ಧಾರ್ಮಿಕ ಇತಿಹಾಸದ ಕೆಲವು ಪ್ರಮುಖ ಘಟನೆಗಳನ್ನು ತಿಳಿಸಿದ್ದಾರೆ. ಉದಾ : ಬಾರ್ಬೋಸ್ (೧೫೧೬), ಪ್ರಿಯತ್ರೊಡೆಲ್ಲಾವೆರ್ಲಿ (೧೬೨೩), ಡಾ. ಪ್ರಾಯರ್ (೧೬೭೬) ಹೆಮಿಲ್ಟನ್ (೧೭೨೦), ಬುಕಾನನ್‌ರು (೧೮೦೧) ದೇವಾಲಯಗಳಲ್ಲಿ ದೇವದಾಸಿ ಪದ್ಧತಿ, ಉಳ್ಳಾಲದಲ್ಲಿ ದೈವ ಆರಾಧನೆ, ಗೋಕರ್ಣದಲ್ಲಿ ರಥೋತ್ಸವ, ಹನುಮಂತನ ಆರಾಧನೆಗಳ ಬಗೆಗೆ ಮಾಹಿತಿಗಳನ್ನು ತಿಳಿಸಿದ್ದಾರೆ. ವಿದೇಶೀ ಪ್ರವಾಸಿಗರು ತಾವು ತಿಳಿದುದಕ್ಕಿಂತ ತಾವು ನೋಡಿದ ಸಂಗತಿಗಳಿಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಇವರ ವರದಿಗಳಲ್ಲಿ ಕೆಲವು ವಿಚಿತ್ರ ಹಾಗೂ ವಿಲಕ್ಷಣ ಸಂಗತಿಗಳು ಬೆಳಕಿಗೆ ಬರುತ್ತವೆ.

ಧಾರ್ಮಿಕ ಇತಿಹಾಸದ ಸಂಶೋಧನೆ

ತುಳುನಾಡಿನ ಧಾರ್ಮಿಕ ಇತಿಹಾಸಕ್ಕೆ ದೀರ್ಘ ಕಾಲದ ಇತಿಹಾಸವಿದ್ದರೂ, ಇದರ ಅಧ್ಯಯನ ನಡೆದದ್ದು ಹದಿನೆಂಟನೇ ಶತಮಾನದ ಅಂತ್ಯದಲ್ಲಿ. ಬುಕಾನನ್ (೧೮೦೧), ವಾಲ್ಟರ್ ಹೆಮಿಲ್ಟನ್ (Walter Hamilton) (೧೮೪೮) ಮತ್ತು ಶಾಸನತಜ್ಞರು ತುಳುನಾಡಿನ ಧಾರ್ಮಿಕ ಇತಿಹಾಸದ ಕೆಲವು ಸಂಗತಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದೂ ಇವುಗಳ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲಿಲ್ಲ. ಹತ್ತೊಂಬತ್ತನೇ ಶತಮಾನದ ಅಂತ್ಯ ಕಾಲದಲ್ಲಿ ಆಂಗ್ಲ ಅಧಿಕಾರಿಗಳು ನೇಮಿಸಿದ ಗಝೆಟೆಡ್ ಅಧಿಕಾರಿಗಳಾದ ಕ್ಯಾಬೆಲ್ಲ (೧೮೮೩) ಮತ್ತು ಸ್ಟರಕ್ (೧೮೯೪) ಬರೆದ ತಮ್ಮ ವರದಿಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಧರ್ಮಗಳು ಮತ್ತು ಅವುಗಳಿಗೆ ಹೊಂದಿಕೊಂಡಿದ್ದ ಜಾತಿ ಕಟ್ಟುಕಟ್ಟಳೆಗಳು ಮತ್ತು ಧಾರ್ಮಿಕ ಸಂಸ್ಥೆಗಳ ಐತಿಹಾಸಿಕ ಮಾಹಿತಿಗಳ ಸಂಗ್ರಹವಿದೆ. ಈ ಪ್ರಯತ್ನದ ಫಲಗಳೇ ಕೆನರಾ ಮತ್ತು ಸೌತ್ ಕೆನರಾ ಡಿಸ್ಟ್ರಿಕ್ಟ್ ಮ್ನಾನುವೆಲ್. ಈ ಗ್ರಂಥಗಳು ತುಳುನಾಡಿನ ಧಾರ್ಮಿಕ ಇತಿಹಾಸದ ಅಧ್ಯಯನದಲ್ಲಿ ನಡೆದ ಪ್ರಥಮ ಪ್ರಯತ್ನ. ಈ ಗ್ರಂಥಗಳು ಮುಂದೆ ಬಂದ ಇತಿಹಾಸ ಸಂಶೋಧಕರಿಗೆ ದಾರಿದೀಪಗಳಾದವು.

ಇಪ್ಪತ್ತನೇ ಶತಮಾನದ ಎರಡನೇ ದಶಕಗಳಲ್ಲಿ ಸ್ಥಳೀಯ ವಿದ್ವಾಂಸರು, ಸ್ಥಳೀಯ ಆಕರಗಳನ್ನು ಉಪಯೋಗಿಸಿಕೊಂಡು ತುಳುನಾಡಿನ ಧಾರ್ಮಿಕ ಇತಿಹಾಸದ ಕೆಲವು ಮುಖಗಳನ್ನು ತಿಳಿಸಲು ಪ್ರಯತ್ನಿಸಿದರು. ಇಂತಹ ವಿದ್ವಾಂಸರುಗಳಲ್ಲಿ ನಮ್ಮ ಗಮನ ಸೆಳೆಯುವ ವ್ಯಕ್ತಿಗಳು ಯಾರೆಂದರೆ ಪೊಳಲಿ ಶೀನಪ್ಪ, ಹೆಗ್ಗಡೆ, ಗಣಪತಿ ರಾವ್ ಐಗಳ್ ಮತ್ತು ಲೋಕನಾಥ ಶಾಸ್ತ್ರಿ, ಶೀನಪ್ಪ ಹೆಗ್ಗಡೆಯವರ ಪ್ರಾಚೀನ ತುಳುನಾಡಿನ ಇತಿಹಾಸ ಮತ್ತು ಭೂತಾಳ ಪಾಂಡ್ಯ ರಾಯನ ಕಟ್ಟು, ತುಳುನಾಡಿನ ದೇವಾಲಯಗಳು ಮತ್ತು ದೈವಸ್ಥಾನಗಳು ಮತ್ತು ಅಲ್ಲಿ ನಡೆಯುವ ಧಾರ್ಮಿಕ ಕಟ್ಟುಕಟ್ಟಳೆಗಳ ಮಾಹಿತಿಯನ್ನು ತಿಳಿಸಲು ಸಮರ್ಥವಾಗಿದೆ. ರಾಜಕೀಯ ಹಿನ್ನೆಲೆಯಲ್ಲಿ ತುಳುನಾಡಿನ ಧಾರ್ಮಿಕ ಇತಿಹಾಸವು ಗಣಪತಿ ರಾವ್ ಐಗಳರ ಪುಸ್ತಕದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಪುಟಗಳಲ್ಲಿ ಅಲ್ಲಲ್ಲಿ ನೋಡಬಹುದು. ತುಳುನಾಡಿನ ಜೈನಧರ್ಮದ ಇತಿಹಾಸ ತಿಳಿಸುವ ಪ್ರಥಮ ಪ್ರಯತ್ನವನ್ನು ಲೋಕನಾಥ ಶಾಸ್ತ್ರಿಯವರು ಮಾಡಿದ್ದಾರೆ.

ತುಳುನಾಡಿನ ಧಾರ್ಮಿಕ ಇತಿಹಾಸವನ್ನು ಕ್ರಮಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ತಿಳಿಸುವ ಪ್ರಯತ್ನವನ್ನು ಮಾಡಿದ ಕೀರ್ತಿ ಡಾ. ಭಾಸ್ಕರಾನಂದ ಸಾಲೆತ್ತೂರರಿಗೆ ಸಲ್ಲುತ್ತದೆ. ಇವರು ಸಂಗ್ರಹಿಸಿದ ಮತ್ತು ಅವುಗಳನ್ನು ಉಪಯೋಗಿಸಿಕೊಂಡ ಆಕರಗಳು ಬಹಳ ವಿಸ್ತಾರವಾದುದು. ಶಾಸನಗಳು, ಸಾಹಿತ್ಯಕೃತಿ, ತುಳು ಪಾಡ್ದನಗಳು ಮತ್ತು ಅಲ್ಲಲ್ಲಿ ವಿದೇಶೀ ಪ್ರವಾಸಿಗರ ವರದಿಗಳನ್ನು ಸಂಯೋಜಿಸಿ ಅವುಗಳನ್ನು ಕ್ರಮಬದ್ಧವಾಗಿ ವಿಶ್ಲೇಷಿಸಿ ಮತ್ತು ಅವುಗಳನ್ನು ಸಮರ್ಪಕವಾಗಿ ನಿರೂಪಿಸಿದ್ದು, ಇವರ ಕೃತಿ ಪ್ರಾಚೀನ ಕರ್ನಾಟಕ ತುಳುವ ಇತಿಹಾಸ (Ancient Karnataka History of Tuluvas) (೧೯೩೬) ಗ್ರಂಥದಲ್ಲಿ ನೋಡಬಹುದು. ಈ ಗ್ರಂಥವು ತುಳುನಾಡಿನ ಧಾರ್ಮಿಕ ಇತಿಹಾಸವನ್ನು ಅಧ್ಯಯನಿಸುವಲ್ಲಿ ಅತ್ಯಂತ ಪ್ರಮುಖ ಗ್ರಂಥವಾಗಿದೆ. ಇದೇ ವಿದ್ವಾಂಸರ ಇನ್ನೊಂದು ಗ್ರಂಥ ಮಿಡೀವಲ್ ಜೈನಿಸಂ (Mediaeval Jainism with reference to Karnataka) (೧೯೩೮) ತುಳುನಾಡಿನ ಜೈನಧರ್ಮದ ಕೆಲವು ಅತ್ಯಂತ ಪ್ರಮುಖ ಐತಿಹಾಸಿಕ ಘಟನೆಗಳನ್ನು ಬೆಳಕಿಗೆ ತಂದಿದೆ.

ತುಳುನಾಡಿನ ಕ್ರೈಸ್ತ ಧರ್ಮದ ಇತಿಹಾಸವನ್ನು ತಿಳಿಸುವ ಪ್ರಯತ್ನವನ್ನು ಎಸ್. ಸಿಲ್ವಾ (S. Silva) ರವರು ೧೯೫೬ ಮತ್ತು ೧೯೬೧ರಲ್ಲಿ ಕೈಗೊಂಡಿದ್ದರು. ಇದು ಇವರು ರಚಿಸಿದ ಗ್ರಂಥ ಹಿಸ್ಟರಿ ಆಫ್ ಕ್ರಿಶ್ಚಿಯಾನಿಟಿ ಇನ್ ಕೆನರಾ (History of Christianity in Kanara Vol. I & II) ದಲ್ಲಿದೆ.

ಶಾಸನಗಳ ಆಕರವನ್ನಾಗಿ ಉಪಯೋಗಿಸಿಕೊಂಡು ತುಳುನಾಡಿನ ಧಾರ್ಮಿಕ ಇತಿಹಾಸದ ಕೆಲವು ಪ್ರಮುಖ ಘಟನೆಗಳನ್ನು ಕೆ.ವಿ. ರಮೇಶರು ತಮ್ಮ ಬರವಣಿಗೆಗಳಲ್ಲಿ ಬೆಳಕಿಗೆ ತಂದಿದ್ದಾರೆ. ವಾಸ್ತುಶಿಲ್ಪ ಶಾಸನಗಳು ಮತ್ತು ಸಾಹಿತ್ಯ ಕೃತಿಗಳನ್ನು ಆಕರಗಳನ್ನಾಗಿ ಬಳಸಿಕೊಂಡು ತುಳುನಾಡಿನ ಕೆಲವು ವಿಶಿಷ್ಟ ಧಾರ್ಮಿಕ ಪರಂಪರೆಗಳನ್ನು ತಿಳಿಸಿ ಧಾರ್ಮಿಕ ಕಟ್ಟಳೆಗಳ ಐತಿಹಾಸಿಕ ಮಹತ್ವ, ದೇವಾಲಯ ಮತ್ತು ಅವುಗಳಲ್ಲಿರುವ ಮೂರ್ತಿಗಳನ್ನು ಗುರುತಿಸುವ, ಅವುಗಳ ಕಾಲ ನಿರ್ಣಯ ಕೆಲವನ್ನು ಪಿ. ಗುರುರಾಜ ಭಟ್ಟರು ನಡೆಸಿದ್ದು. ಮನ ಮೆಚ್ಚಿಸುವ ಸಂಗತಿಯಾಗಿದೆ. ಇವರ ಗ್ರಂಥ ಮುಖ್ಯವಾಗಿ ‘ಸ್ಟಡೀಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್’ (೧೯೭೪) ತುಳುನಾಡಿನ ಧಾರ್ಮಿಕ ಇತಿಹಾಸ ಅಧ್ಯಯನ ನಡೆಸುವಲ್ಲಿ ಗಮನಾರ್ಹ ಗ್ರಂಥವಲ್ಲದೇ, ಇದು ಒಂದು ಮುಖ್ಯ ಮೈಲಿಗಲ್ಲು. ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಗಮನಿಸಬೇಕಾದ ಗ್ರಂಥಗಳು ಸ್ಟಡಿಸ್ ಇನ್ ಇಂಡೋ-ಪೋರ್ತುಗೀಜ ಹಿಸ್ಟರಿ (೧೯೮೧) ಮತ್ತು ಗೋವಾ ಕೆನರಾ ಪೋರ್ತುಗೀಜ ರಿಲೇಶನ್ (೨೦೦೦). ಇದರ ಗ್ರಂಥಕರ್ತರು ಬಿ.ಎಸ್. ಶಾಸ್ತ್ರಿಯವರು. ಪೋರ್ತುಗೀಜ ದಾಖಲೆಗಳ ಆಧಾರದಿಂದ ಕ್ರೈಸ್ತ ಧಮ್ಮ ತುಳುನಾಡಿನಲ್ಲಿ ಹೇಗೆ ಬೆಳೆದುಬಂದಿತು ಮತ್ತು ಈ ಧರ್ಮಕ್ಕೆ ಸ್ಥಳೀಯರ ಪ್ರತಿಕ್ರಿಯೆಗಳನ್ನು ಕ್ರಮಬದ್ಧವಾಗಿ ನಿರೂಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಧಮ್ಮದ ಇತಿಹಾಸವನ್ನು ವಾಹಾಬ್ ದೊಡ್ಡಮನೆ ತಮ್ಮ ಮುಸ್ಲಿಂಸ್ ಇನ್ ದಕ್ಷಿಣ ಕನ್ನಡ ಎಂಬ ಗ್ರಂಥದಲ್ಲಿ ಹೇಳಿದ್ದಾರೆ. ಇದು ೧೯೯೩ರಲ್ಲಿ ಬೆಳಕಿಗೆ ಬಂತು. ಈ ಗ್ರಂಥದಲ್ಲಿ ಕೆಲವು ಮುಸ್ಲಿಂ ಧರ್ಮ ಪ್ರಚಾರಕರು ಇಸ್ಲಾಂ ಮತಪ್ರಚಾರ ಮಾಡಲು ಉಪಯೋಗಿಸಿದ ವಿಧಿವಿಧಾನಗಳ ವಿವರಣೆಗಳು ಇವೆ. ಇದರ ಅಧ್ಯಯನದಿಂದಾಗಿ ಇಸ್ಲಾಂ ತುಳುನಾಡಿನಲ್ಲಿ ರಾಜಕೀಯ ಒತ್ತಡವಿಲ್ಲದೆ ಶಾಂತ ರೀತಿಯಲ್ಲಿ ಪ್ರಚಾರವಾಯಿತಲ್ಲದೆ ಸ್ಥಳೀಯ ಮತ ಸಂಪ್ರದಾಯಕ್ಕೆ ಹೊಂದಿಕೊಂಡು ಬೆಳೆಯಿತೆಂಬ ಸತ್ಯವನ್ನು ತಿಳಿಸುತ್ತದೆ. ಇದು ಈ ಗ್ರಂಥದಲ್ಲಿ ಗಮನಿಸಬೇಕಾದ ಸಂಗತಿ.

೧೯೯೦ರಲ್ಲಿ ಪ್ರಕಟವಾದ ಕರಾವಳಿ ಕರ್ನಾಟಕದ ಕ್ರೈಸ್ತರ ಇತಿಹಾಸ ಗ್ರಂಥವು ಲೆಟಿನ್. ಕೊಂಕಣಿ, ಪೋರ್ತುಗೀಜ ದಾಖಲೆ ಆಕರಗಳ ಹಿನ್ನೆಲೆಯಲ್ಲಿ ಈ ಮತದ ಇತಿಹಾಸವನ್ನು ತಿಳಿಸುತ್ತದೆ. ಈ ಗ್ರಂಥದ ರಚಕರು ಪಿ.ಯಸ್. ಪಿಡೆಲಿಸ್ ಪಿಂಟೊ. ಈ ಗ್ರಂಥದ ಸಂಶೋಧನಾ ದೃಷ್ಟಿಯಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ ಹೊಸ ಆಕರಗಳ ಪರಿಚಯ. ಕ್ರೈಸ್ತರು ಸಮಕಾಲೀನ ಸಮಾಜಕ್ಕೆ ನೀಡಿದ ಸೇವೆ ಮತ್ತು ಚರ್ಚುಗಳ ಆಡಳಿತ ವ್ಯವಸ್ಥೆ. ಒಟ್ಟಿನಲ್ಲಿ ಈ ಗ್ರಂಥಕರ್ತರು ’ಯುರೋ-ಕೇಂದ್ರಿತ ಧರ್ಮ ಹಾಗೂ ಭಾರತೀಯ ಪ್ರಾದೇಶಿಕ ದೃಷ್ಟಿಗಳೆರಡನ್ನೂ ಸಂಯೋಜಿಸುವ ಒಂದು ಪ್ರಯತ್ನವನ್ನು ಮಾಡಿದ್ದಾರೆ.’.

ತುಳುನಾಡಿನ ಧಾರ್ಮಿಕ ಇತಿಹಾಸದ ಕೆಲವು ನೋಟಗಳ ಅಧ್ಯಯನವನ್ನು ಪಿ.ಎನ್. ನರಸಿಂಹಮೂರ್ತಿ, ಕೆ.ಜಿ. ವಸಂತ ಮಾಧವ, ಶೈಲಾ ಟಿ. ವಮ್ಮ, ಕೆ. ಮೋಹನ ಕೃಷ್ಣ ರೈವರ ಗ್ರಂಥಗಳಲ್ಲಿ ನೋಡಬಹುದು. ಎಸ್.ಡಿ. ಶೆಟ್ಟಿಯವರ ‘ತುಳುನಾಡಿನ ಜೈನಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ’ (೨೦೦೨) ಗ್ರಂಥವು ಇಲ್ಲಿನ ಜೈನ ಧಮ್ಮದ ಅಧ್ಯಯನದ ದೃಷ್ಟಿಯಿಂದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿದೆ.

ಧಾರ್ಮಿಕ ಇತಿಹಾಸ

ತುಳಿನಾಡಿನ ಧಾರ್ಮಿಕ ಇತಿಹಾಸದ ಸ್ಪಷ್ಟ ಚಿತ್ರ ಸಿಗುವುದು ಕ್ರಿ.ಶ. ಆರನೇ ಶತಮಾನದ ನಂತರವಾದರೂ ದೀರ್ಘ ಕಾಲದವರೆಗೆ ನಮ್ಮ ಅಧ್ಯಯನ ಕ್ಷೇತ್ರದಲ್ಲಿ ತನ್ನದೇ ಆದ ಧಾರ್ಮಿಕ ಪರಂಪರೆ ಇದ್ದಿತು. ಇದು ನಿಸರ್ಗ, ಪ್ರಾಣಿ, ಪಕ್ಷಿ ಮತ್ತು ಪ್ರೇತಾತ್ಮ ಆರಾಧನಾ ಕ್ರಮಕ್ಕೆ ಹೊಂದಿಕೊಂಡಿರುತ್ತದೆ. ಕೆಲವು ಪ್ರಾಚೀನ ಸ್ಮಾರಕಗಳ ಅಧ್ಯಯನದಿಂದ ತಿಳಿದುಬರುತ್ತದೆ. ಉದಾಹರಣೆಗೆ ತುಳಿನಾಡಿನಲ್ಲಿ ಕಂಡುಬಂದಿರುವ ಬೃಹತ್ ಶಿಲಾಸಮಾಧಿ ಪ್ರಾಗೈತಿಹಾಸ ಕಾಲದ ಧರ್ಮವನ್ನು  ಸೂಚಿಸುತ್ತದೆ. ಕುಂದಾಪುರ ತಾಲೂಕಿನ ಗಾವಳಿಯ ಬಂಡೆಕಲ್ಲಿನಲ್ಲಿ ಕೆತ್ತಿದ ಗೂಳಿಯ ಚಿತ್ರ ಈ ಪ್ರಾಣಿಯ ಆರಾಧನೆ ಇದ್ದಿರಬೇಕೆಂದು ಅಭಿಪ್ರಾಯಪಡಲು ಅವಕಾಶ ನೀಡುತ್ತದೆ. ಇದರೊಂದಿಗೆ ಇನ್ನಿತರ ಅವಶೇಷಗಳಾದ ಮೃತ್ಪಾತ್ರೆ ಸಮಾಧಿ ಅಮಾಸೆಬೈಲಲ್ಲಿ ದೊರೆತಿದ್ದು ತೂಂತಕಲ್ (ದೊಡ್ಡ ಶಿಲಾಚಪ್ಪಡಿಗಳನ್ನು ನಿರ್ಮಿಸಿದ ಗೋರಿಯ ಒಂದು ಭಾಗ, ಬೇಳೂರು ಚಮ್ತಾಡಿಯಲ್ಲಿ ಸಿಕ್ಕದ್ದು) ಕೆಂಪು ಕಲ್ಲಿನಲ್ಲಿ ಕೊರೆದು ನಿರ್ಮಿಸಿದ ಗೋರಿಗಳು (ಹಳ್ಳಾಡಿ-ಹರ್ಕಾಡಿ-ಕಡಾಸೆ ಎಲ್ಲಾ ಕುಂದಾಪುರ ತಾಲೂಕು) ಇತ್ಯಾದಿಗಳೂ ಆಗಿನ ಕಾಲದ ಧಾರ್ಮಿಕ ಆಚರಣೆ ಹಾಗೂ ನಂಬಿಕೆಗಳನ್ನು ತಿಳಿಯುವಲ್ಲಿ ಸಹಾಯಕವಾಗಿದೆ. ಗಾವಳಿಯ ಗೂಳಿಯ (ನಂದಿ) ಚಿತ್ರದ ಮೇಲ್ಭಾಗ (ಕೋಡು ಮತ್ತು ಭುಜಗಳ ನಡುವಿನ ಭಾಗ)ದಲ್ಲಿ ಕೆತ್ತಿರುವ ತ್ರಿಶೂಲದ ಚಿಹ್ನೆ ಶೈವ ಮತದ ಕುರುಹು ಎಂದು ಕೆಲವು ವಿದ್ವಾಂಸರು ವಾದಿಸಿ ಈ ಪಂಥ ಬಹಳ ಹಿಂದೆ ಈ ಪ್ರದೇಶದಲ್ಲಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಕ್ರಿ.ಶ. ಆರನೇ ಶತಮಾನದ ನಂತರ ತುಳುನಾಡಿನಲ್ಲಿ ಶೈವ ಪಂಥವು ವರ್ಧಿಸಿದಂತೆ ತೋರುತ್ತದೆ. ಈ ಶೈವ ಪಂಥವು ಪಾಶುಪತದ ವರ್ಚಸ್ಸಿಗೆ ಒಳಗಾಗಿರಬೇಕು. ಈ ಅಭಿಪ್ರಾಯ ಹಲ್ಮಿಡಿ ಶಾಸನದಲ್ಲಿ ಸೂಚಿತವಾಗಿದೆ. ಕ್ರಮೇಣ ಶೈವ ಪಂಥವೇ ಹೆಚ್ಚು ಹೆಚ್ಚು ವೃದ್ಧಿಯನ್ನು ಹೊಂದಿತು. ಇದು ಕೆಲವು ಶಾಸನಗಳ ಅಧ್ಯಯನದಿಂದ ತಿಳಿಯುತ್ತದೆ. ಉದ್ಯಾವರ, ಶಿವಳ್ಳಿ, ವಡ್ಡರ್ಸೆ ಇತ್ಯಾದಿಗಳು ಪ್ರಮುಖ ಶೈವಾರಾಧನ ಕೇಂದ್ರಗಳಾಗಿದ್ದವು. ಇವುಗಳಲ್ಲಿ ’ಶಿವಳ್ಳಿ’ (ಈಗ ಮಣಿಪಾಲ) ಕಾಶಿಯಷ್ಟೇ ಪವಿತ್ರವಾಗಿತ್ತು. ಈ ದೇವತೆಯ ಆರಾಧನೆಯು ’ಲಿಂಗ’ ಸ್ವರೂಪಿಯಾಗಿತ್ತು. ಕೆಲವು ಶಾಸನಗಳಲ್ಲಿ ಈ ಶಿವನನ್ನು ’ಪಂಚಮುಖ’ ಶಿವನೆಂದು ತಿಳಿಸದೆ. ಇದಕ್ಕೆ ಮುಖ್ಯ ಉದಾಹರಣೆ ಧರ್ಮಸ್ಥಳದಲ್ಲಿ ಸಿಕ್ಕಿದ ಶಕ ೬೦೮ರ ತಾಮ್ರ ಶಾಸನ (Epigraphical Society 1995 PP 28-31).

ಶಕ್ತಿದೇವತೆ, ಗಣಪತಿ, ಸೂರ್ಯ ಮತ್ತು ಸ್ಕಂದ ಆರಾಧನೆಗಳು ಶಿವನ ಉಪಾಸನೆಯೊಂದಿಗೆ ಹೊಂದಿಕೊಂಡು ಬೆಳೆಯಿತು. ಈ ಎಲ್ಲಾ ಪಂಥಗಳು ಶೈವ ಪಂಥದ ಆಶ್ರಯದಲ್ಲಿ ಬೆಳೆದು ಪ್ರಗತಿ ಹೊಂದುತ್ತಿರುವುದನ್ನು ಮುಂದಿನ ಕೆಲವು ಶತಮಾನಗಳಲ್ಲಿ ನೋಡಬಹುದು. ಇದು ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಕಂಡುಬಂದ ಒಂದು ಐತಿಹಾಸಿಕ ವೈಶಿಷ್ಟ್ಯ. ಶಾಕ್ತ ಪದ್ಧತಿಯ ಆರಾಧನೆಯಲ್ಲಿ ಸಪ್ತಮಾತೃಕೆ, ವಿಂಧ್ಯವಾಸಿನಿ, ಬ್ರಾಹ್ಮಿ, ದುರ್ಗಾ, ಹಾರಿತಿ, ಕ್ರಮೇಣ ಭಗವತಿ ಉಪಾಸನೆಗಳು ಸೇರಿಕೊಂಡವು. ಕಾಲಕ್ರಮೇಣ ಲಕ್ಷ್ಮಿಯ ಆರಾಧನೆಯು ಸಹ ಇದರಲ್ಲಿ ಅಳವಡಿಸಿಕೊಂಡಿತು. ಈ ದೇವತೆಯು ಮುಂದಿನ ದಿನಗಳಲ್ಲಿ ವೈಷ್ಣವ ಶಕ್ತಿದೇವತೆಯಾಗಿ ಪೂಜಿಸಲ್ಪಟ್ಟವು. ಶ್ರೀ ಲಕ್ಷ್ಮೀವಾಸ್ಥಳ ಎಂದು ವೇಣೂರಿನ ಶಲಾಶಾಸನ (ಕಾಲ ೯೬೯)ದಲ್ಲಿ ತಿಳಿಸಿದ್ದು ವೈಷ್ಣವ ಶಕ್ತಿಯ ಪಂಥ ಇರುವುದನ್ನು ಸೂಚಿಸುತ್ತದೆ. ಆದರೆ ಇದು ತುಳುನಾಡಿನಲ್ಲಿ ಆ ಸಮಯದಲ್ಲಿ ಅಷ್ಟೊಂದು ಪ್ರಬಲವಾಗಿರಲಿಲ್ಲ. ಪ್ರಾಚೀನ ತುಳುನಾಡಿನಲ್ಲಿ ಶೈವ ಪಂಥವು ಪ್ರಾಬಲ್ಯವನ್ನು ಗಳಿಸಿದರೂ ಇಲ್ಲಿ ಆಳಿದ ಅರಸರುಗಳು (ಮುಖ್ಯವಾಗಿ ಆಳುಪರು) ಅನ್ನ ದೇವತೆಗಳ ಆರಾಧನೆಗೆ ಪ್ರೋತ್ಸಾಹ ನೀಡಿದರು. ಇದಕ್ಕೆ ಉದಾಹರಣೆ ಅಳುಪ ಒಂದನೇ ಚಿತ್ರವಾಹನನ ಪತ್ನಿ ಕುಂಕುಮದೇವಿ ಜಿನಮತಕ್ಕೆ ನೀಡಿದ ಪ್ರೋತ್ಸಾಹ. ಇವಳು ಪುರಿಗೆರೆಯಲ್ಲಿ ಒಂದು ಬಸದಿಯನ್ನು ಕಟ್ಟಿಸಿದ್ದಲ್ಲದೇ ಇದಕ್ಕೆ ಗುಡಿಗೇರಿ ಗ್ರಾಮವನ್ನು ದಾನ ನೀಡುವಂತೆ ಇವಳ ಪತಿ ಚಿತ್ರವಾಹನನ್ನು ಚಾಳೂಕ್ಯ ಚಕ್ರವರ್ತಿಯಲ್ಲಿ ವಿಜ್ಞಾಪನೆ ಮಾಡಿಕೊಂಡಿದ್ದನು. ಒಟ್ಟಿನಲ್ಲಿ ಕ್ರಿ.ಶ. ಎಂಟನೆಯ ಶತಮಾನದ ಆರಂಭ ಕಾಲದಲ್ಲಿ ಶೈವ ಪಂಥ ಮತ್ತು ಇದನ್ನು ಆಶ್ರಯಿಸಿಕೊಂಡು ಹಲವಾರು ದೇವ ದೇವಿಯರ ಆರಾಧನಾ ಪದ್ಧತಿ ಇಲ್ಲಿ ನಡೆಯುತ್ತಿತ್ತು. ಕ್ರಿ.ಶ. ಎಂಟನೇ ಶತಮಾನದ ಅಂತ್ಯದಲ್ಲಿ ಒಂದು ಪ್ರಮುಖ ಘಟನೆ ತುಳುನಾಡಿನ ಧಾರ್ಮಿ ಕ್ಷೇತ್ರದಲ್ಲಿ ನಡೆಯಿತು. ಆ ಘಟನೆ ಶಂಕರಾಚಾರ್ಯರ ಆಗಮನ ಮತ್ತು ಇವರು ನಡೆಸಿದ ಧಾರ್ಮಿಕ ಚಟುವಟಿಕೆಗಳು. ಆಚಾರ್ಯರು ಇಲ್ಲಿ ನಡೆಸಿದ ಮುಖ್ಯ ಚಟುವಟಿಕೆಗಳಲ್ಲಿ ಗಮನಾರ್ಹವಾದುದು ಆರಾಧನಾ ಕ್ರಮದಲ್ಲಿ ಪಂಚಾಯತನ ಪೂಜಾಪದ್ಧತಿಯನ್ನು ಆಚರಣೆಗೆ ತಂದದ್ದು. ಇಲ್ಲಿರುವ ಕ್ಷುದ್ರರ, ದೇವ ದೇವಿಯರ ಉಗ್ರತೆಯನ್ನು ಕುಗ್ಗಿಸಿ ಶಾಂತಗೊಳಿಸದ್ದು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಪುನರ್ ಸಂಯೋಜಿಸಿದ್ದು. ಇದರ ಪರಿಣಾಮವಾಗಿ ತುಳುನಾಡಿನ ಧಾರ್ಮಿಕ ಇತಿಹಾಸಕ್ಕೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿತ್ತು. ಸ್ಥಳೀಯ ದೇವತೆಗಳು ವೈದಿಕ ಆರಾಧನಾ ಪದ್ಧತಿಯ ಕಕ್ಷೆಯೊಳಗೆ ಬಂದುವು. ಇವುಗಳು ಹೆಚ್ಚಾಗಿ ವೈದಿಕ ದೇವ ದೇವಿಯರ ರಕ್ಷಣಾ ದೇವತೆಗಳಾಗಿ ಪರಿವರ್ತನೆಗೊಂಡವು.

ಇದೇ ೮ನೇ ಶತಮಾನದ ಕಾಲದಲ್ಲಿ ತುಳುನಾಡು ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಸಂಪರ್ಕಕ್ಕೆ ಒಳಗಾಗಿತ್ತೆಂದು ಕಾಸರಗೋಡಿನ ತಳಂಗೆರೆ ಶಾಸನ ಮತ್ತು ಕೊಸಮಸ್ನ ವರದಿಯಿಂದ ತಿಳಿದುಬರುತ್ತದೆ. ಆದರೆ ಈ ಧರ್ಮಗಳು ಹೆಚ್ಚು ಜನಪ್ರಿಯವಾಗದೇ ಕೆಲವೇ ಸ್ಥಳಗಳಿಗೆ ಸೀಮಿತಗೊಂಡಿದ್ದವು ಎಂದು ಐತಿಹಾಸಿಕ ಅಧ್ಯಯನಗಳ ದಾಖಲೆಯಿಂದ ತಿಳಿದುಬರುತ್ತದೆ. ಬೌದ್ಧ ಧರ್ಮ ತುಳುನಾಡಿನಲ್ಲಿದ್ದ ಬಗ್ಗೆ ಕೆಲವು ಐತಿಹಾಸಿಕ ದಾಖಲೆಗಳು ಸಿಕ್ಕಿದರೂ ಈ ಧರ್ಮ ತುಳುನಾಡಿನಲ್ಲಿದ್ದ ಬಗ್ಗೆ ಕೆಲವು ಐತಿಹಾಸಿಕ ದಾಖಲೆಗಳು ಸಿಕ್ಕಿದರೂ ಈ ಧರ್ಮ ಹೆಚ್ಚು ಪ್ರಬಲವಾಗಿರಲಿಲ್ಲ. ಆದರೆ ಈ ಧರ್ಮದ ಪ್ರಭಾವ ತುಳುನಾಡಿನ ಕೆಲವು ವಾಸ್ತುಶಿಲ್ಪಗಳ ಮೇಲೆ ನಡೆಯಿತು. ಇದಕ್ಕೆ ಮುಖ್ಯ ಉದಾಹರಣೆಗಳು ಹೈಗುಂದದ ಯಕ್ಷ (ಉ.ಕ. ಹೊನ್ನಾವರ), ಇಡಗುಂಜಿ ಗಣಪತಿ ಮತ್ತು ಕದಿರೆಯಲ್ಲಿರುವ ದೇವಾಲಯದ ವಾಸ್ತು ಮತ್ತು ಪ್ರತಿಮಾ ಶಿಲ್ಪಗಳು. ಈ ವಾಸ್ತು ಮತ್ತು ಪ್ರತಿಮಾ ಶಿಲ್ಪಗಳೂ. ಈ ವಾಸ್ತುಶಿಲ್ಪಗಳು ಬೌದ್ಧಧರ್ಮದ್ದೇ ಆಗಿವೆ. ಬೌದ್ಧ ಧರ್ಮದ ಕೆಲವು ತತ್ವಗಳು ಕೆಲವು ಶೈವ ಪಂಥಗಳ ಮೇಲೆ ಪರಿಣಾವನ್ನು ಬೀರಿವೆ. ಇದಕ್ಕೆ ಮುಖ್ಯ ಉದಾಹರಣೆ ಗೋರಖನಾಥ ಪಂಥ.