ಈ ಕೃತಿಯಲ್ಲಿ ಜನಪದ ಆಟಗಳ ಚಿತ್ರಣಗಳೂ ಇವೆ. ನಗರಕೇಂದ್ರಿತವಾದ ಆಧುನಿಕ ಸಮಾಜದಲ್ಲಿ ಕಂಡುಬರದೆ ಇರುವಂಥ ಆಟಗಳಿವೆ. ಈ ಆಟಗಳ ಮೂಲಕ ಸೌಹಾರ್ಧಯುತ ಬದುಕಿನ, ಮನರಂಜನೆಯ ಉದ್ದೇಶವನ್ನು ಕಾಣಬಹುದಾಗಿದೆ. ಮೀನು ಹಿಡಿಯುವುದು, ಹಕ್ಕಿಗಳನ್ನು ಹಿಡಿಯುವುದು ಕೂಡಾ ಆಟಗಳಂತೆ ವ್ಯಕ್ತವಾಗುತ್ತದೆ. ತುಳುನಾಡಿನ ಸಾಂಸ್ಕೃತಿಕ, ಧಾರ್ಮಿಕ ಬದುಕಿನಲ್ಲಿ ಹಾಸುಹೊಕ್ಕಾದ ನಂಬಿಕೆ, ಆಚರಣೆಗಳು, ಸಂಪ್ರದಾಯಗಳ ಉಲ್ಲೇಖಗಳನ್ನು ಈ ಕೃತಿಯಲ್ಲಿ ಗುರುತಿಸಬಹುದು. ಭೂತಾರಾಧನೆಯ ಚಿತ್ರಣವನ್ನು ಲೆಕ್ಕೆಸಿರಿ ಭೂತ ಕಾರ್ಣಿಕದ ವಿವರಗಳಿಂದ ತಿಳಿಯಬಹುದು.

ಈ ಕಾದಂಬರಿಯಲ್ಲಿ ವ್ಯಕ್ತವಾಗುವ ಅಂಶಗಳಲ್ಲಿ ಅತ್ಯಂತ ಪ್ರಧಾನವಾದುದು ಚೆನ್ನಜ್ಜ ಮತ್ತು ಆತನ ಮಕ್ಕಳ ನಡುವಿನ ನಿಲುವುಗಳು. ಬ್ರಾಹ್ಮಣರ ಮನೆಯಲ್ಲಿ ಕೂಲಿ ಕೆಲಸ ಮಾಡುವಂಥ ಸಂಗತಿಗಳ ಕುರಿತ ಉಲ್ಲೇಖಗಳ ಸಂದರ್ಭ ‘ನಮಗೆ ಬ್ರಾಹ್ಮಣರ ಮನೆಯಲ್ಲಿ ಹಾಳೆ ಹಿಡಿಯಲು ಮಾತ್ರ ಗೊತ್ತಿರುವುದು, ಅವರು ಮಾಡಿದಂತೆ ಮಾಡಲು ಗೊತ್ತಿಲ್ಲ. ಅವರೆಲ್ಲ ಗದ್ದೆ ಬೇಕು ಬೇಕು ಎಂದು ಹೇಳಿ ಎಲ್ಲ ತೋಟವನ್ನೇ ಮಾಡಿಬಿಟ್ಟಿದ್ದಾರೆ. (ಮೂಜಂಜ ಆನಗ, ಅನುವಾದ, ಪುಟ ೧೩). ಭೂಮಾಲಿಕರು ಬ್ರಾಹ್ಮಣರಾಗಿದ್ದು ಶೂದ್ರರು ಅವರ ಒಕ್ಕಲು ಮಕ್ಕಳಾಗಿ ಕೃಷಿ ಕಾಯಕದಲ್ಲಿ ನಿರತರಾಗಿದ್ದ ಚಿತ್ರಣ ಇಲ್ಲಿ ಪ್ರಕಟವಾಗುತ್ತದೆ. ಪಾರಂಪರಿಕವಾಗಿ ಬೆಳೆದು ಬಂದ ಈ ಜಮೀನ್ದಾರಿ ಪದ್ಧತಿಯ ಕುರಿತು ಚೆನ್ನಜ್ಜನಿಗೆ ಒಲವು ಇದೆ. ಆತನ ಬದುಕು ಸಾಗಿ ಬಂದದ್ದೇ ಈ ವ್ಯವಸ್ಥೆಯೊಳಗಿನಿಂದ. ಆತನ ಮಕ್ಕಳು ನವಯುವಕರು. ಆಳಾಗಿ ದುಡಿಯುವ ಕುರಿತು ಅಸಮಾಧಾನವೂ ವಿರೋಧವೂ ಅವರಲ್ಲಿದೆ. ಭೂಮಸೂದೆಯ ಕಾನೂನು ಜಾರಿಯಾದ ಕಾರಣ ಜಮೀನು ಹಂಚಿಕೆ, ಹೇಳಿಕೆ (ಡಿಕ್ಲರೇಶನ್‌), ಒಕ್ಕಲೆಬ್ಬಿಸುವಂಥ ಚಿತ್ರಣಗಳೂ ಇವೆ. ಇವೆಲ್ಲ ವಿವರಗಳು ಸಹಜ ಎಂಬ ರೀತಿಯಲ್ಲಿ ತುಳುನಾಡಿನ ಜನಜೀವನದಲ್ಲಿಯೂ ಕಂಡುಬರುವಂಥವು.

ಆಧುನಿಕ ವಿಚಾರಗಳಿಗೆ ಪೂರಕವಾಗಿ ಶೀನನ ಪಾತ್ರ ಕಂಡುಬರುತ್ತದೆ. ಭೂತದ ಗುಡಿ, ಬ್ರಾಹ್ಮಣರಿಗೆ ಹಣ ಕೊಟ್ಟು ಪೂಜೆ ಮಾಡಿಸುವಂಥ ವಿಚಾರಕ್ಕೆ ವಿರೋಧ, ಜಾತಿಯ ಕುರಿತು ಮೇಲು ಕೀಳು ಎಂಬ ವಿಚಾರದ ವಿರೋಧ ಹೀಗೆ ಈ ಎಲ್ಲ ವೈಚಾರಿಕ ಸಂಗತಿಗಳು ಸರಳವಾದ ರೀತಿಯಲ್ಲಿ ನಿರೂಪಿತವಾಗುತ್ತವೆ. ಗ್ರಾಮೀಣ ಬದುಕಿನಲ್ಲಿ ಈ ಎಲ್ಲ ರೀತಿಯ ನಡವಳಿಕೆಗಳು ಸಾಮಾನ್ಯವಾಗಿ ಕಂಡುಬರುವಂಥವು. ಈ ಕಾದಂಬರಿಯಲ್ಲಿಯೂ ಸಹಜವಾಗಿ ಈ ಎಲ್ಲ ಚಿತ್ರಣಗಳು ಮೂಡಿಬಂದಿವೆ.

‘ಸೊರಗೆದ ಪೂ’ (೨೦೦೨) ಎನ್ನುವ ಕಾದಂಬರಿ ಬರೆದವರು ಜಯಂತಿ ಎಸ್‌. ಬಂಗೇರರವರು. ತುಳುನಾಡಿನ ಹಳ್ಳಿಯ ಬದುಕನ್ನು ಈ ಕಥನವೂ ಚಿತ್ರಿಸುತ್ತದೆ. ನಂಬಿಕೆ, ಆರಾಧನೆ, ಭೂತ, ದೆವ್ವಗಳು ಜನತೆಯಲ್ಲಿ ಹಾಸುಹೊಕ್ಕಾಗಿರುವ ವಿಚಾರವನ್ನು ಇಲ್ಲಿ ಅನಾವರಣ ಮಾಡಲಾಗಿದೆ. ಎರಡು ಮನೆತನಗಳ ಸಂಘರ್ಷಾತ್ಮಕ ಕಥೆ ಇಲ್ಲಿದೆ. ಒಂದು ಪಡಿಲೊಟ್ಟು ಮನೆ ಮತ್ತೊಂದು ಬಾರರಿ ಗುತ್ತು. ಪಡಿಲೊಟ್ಟು ಮನೆ ಬಡತನದಿಂದಿದ್ದು ನ್ಯಾಯನಿಷ್ಠೆಯಿಂದ ಕಷ್ಟಪಟ್ಟು ದುಡಿದುಕೊಂಡು ಬಾಳುವೆ ಮಾಡುವ ಕೃಷಿ ಮನೆತನ. ಬಾರರಿ ಗುತ್ತು ಕೂಡಾ ಕೃಷಿ ಮನೆತನವೇ ಆದರೂ, ಸಾಕಷ್ಟು ಶ್ರೀಮಂತಿಕೆಯಿಂದ ಕೂಡಿದ್ದ ಜಮೀನ್ದಾರೀ ಮನೆ. ಮಾತ್ರವಲ್ಲ ದರ್ಪ, ಅಹಂಕಾರ, ದುಷ್ಟತನಗಳ ಪ್ರತೀಕವೆಂಬಂತೆ ಇರುವಂಥದ್ದು. ಪಡಿಲೊಟ್ಟು ಮನೆಯ ಹಿರಿಯ ಕಾಂತಪ್ಪ, ಬಾರರಿಗುತ್ತಿನ ಹಿರಿಯ ವ್ಯಕ್ತಿ ಮಾಬಲ. ಪಡಿಲೊಟ್ಟು ಮತ್ತು ಬಾರರಿ ಎಂಬ ಹೆಸರಿನ ಮೂಲಕವೂ ಭಿನ್ನತೆಯನ್ನು ವ್ಯಕ್ತಪಡಿಸುವ ಆಶಯ ಕಂಡುಬರುತ್ತದೆ.

ಕರ್ಕೊಡೆ ಮುಳ್ಳು ತಾಗಿದ ಗಾಯ ಯಾವ ವೈದ್ಯರ ಔಷಧಿಯಿಂದಲೂ ವಾಸಿಯಾಗದೆ ಇದ್ದುದು ಅಜ್ಜಿಯೊಬ್ಬಳು ಬಂದು ಕೊಡುವ ಬೇರಿನಿಂದ ವಾಸಿಯಾಗುತ್ತದೆ. ಆ ಅಜ್ಜಿ ಹೇಳಿದಂತೆ ಆ ಬೇರನ್ನು ಹುಡುಕಲು ಮನೆಯ ಹಿಂಬದಿಯ ಗುಡ್ಡಕ್ಕೆ ಹೋಗಿ ಹುಡುಕಿದರೂ ಸಿಕ್ಕದೆ ಇದ್ದಾಗ, ಆ ಅಜ್ಜಿಯೇ ಕಾಣಿಸಿಕೊಳ್ಳುತ್ತಾಳೆ. ಬಾಯಾರಿಕೆಗೆ ನೀರಿನ ಹೊಂಡ ತೋರಿಸಿ ಕುಡಿಯುವಂತೆ ಹೇಳುತ್ತಾಳೆ. ಪಡಿಲೊಟ್ಟುವಿನ ಕಾಂತಪ್ಪ ಆ ಗುಡ್ಡದ ತುದಿಯಲ್ಲಿನ ನೀರನ್ನು ಕಂಡು ಇಂಥ ನೀರಿನ ನಿಧಿ ತನ್ನ ಜಾಗದಲ್ಲಿ ಇರುತ್ತಿದ್ದರೆ ತಾನು ಮೂರು ಬೆಳೆ ತೆಗೆಯುತ್ತಿದ್ದೆ ಎಂದು ಆಶಿಸುತ್ತಾನೆ. ಅಜ್ಜಿ ಒಂದು ಕೋಲು ಕೊಟ್ಟು ಇದರಲ್ಲಿ ಗೆರೆ ಹಾಕುತ್ತಾ ಇಳಿದು ಹೋಗು. ನಿನ್ನನ್ನು ಹಿಂಬಾಲಿಸಿ ನೀರು ಬರುತ್ತದೆ ಎನ್ನುತ್ತಾಳೆ. ಹಾಗೆಯೇ ಆಗುತ್ತದೆ. ಕಾಂತಪ್ಪನ ಹೆಂಡತಿ ಕಮಲಳಿಗೆ ಕರ್ಕೊಡೆ ಮುಳ್ಳು ತಾಗಿ ಆದ ಗಾಯ ವಾಸಿಯಾಗುತ್ತದೆ. ಆ ಅಜ್ಜಿ ಆ ಗುಡ್ಡದಲ್ಲಿ ನೆಲೆಯಾಗಿದ್ದ ‘ಲೆಕ್ಕಸಿರಿ’ ಎಂದು ತಿಳಿದು ಅದರ ಆಶಯದಂತೆ ಅದರ ಸೇವೆ ಮಾಡಲಾಗುತ್ತದೆ. ಪಡಿಲೊಟ್ಟು ಕಾಂತಪ್ಪನಿಗೆ ನೀರಿನ ನಿಧಿ ಸಿಕ್ಕಿದುದರಿಂದ ಅಸಮಾಧಾನಿಯಾದ ಬಾರರಿಗುತ್ತು ಮಾಬಲ ಆ ನೀರನ್ನು ತನ್ನ ಭೂಮಿಯತ್ತ ತಿರುಗಿಸಿಕೊರ್ಳಳುತ್ತಾನೆ. ಮೂಲಭೂತವಾಗಿ ಅಹಂಕಾರ, ದುಷ್ಟತನಗಳಿಂದ ಕೂಡಿದ್ದ ಆತ ದೈವದ ಅವಕೃಪೆಗೆ ಒಳಗಾಗುತ್ತಾನೆ. ಸಾತ್ವಿಕನಾಗಿದ್ದ ಕಾಂತಪ್ಪ ಎಲ್ಲರಿಗೂ ಸಹಕಾರ ಮಾಡುತ್ತ ದೈವದ ಕೃಪೆಗೆ ಪಾತ್ರನಾಗುತ್ತಾನೆ.

ದೈವವನ್ನು ಮರೆತರೆ ಅದು ಬಂದು ಎಚ್ಚರಿಸಿ ತನಗೆ ಸೇವೆ ಒದಗಿಸುವಂತೆ ತಿಳಿಸುವ ಸೂಚನೆ ಕೊಡುತ್ತದೆ. ಮಾತ್ರವಲ್ಲ, ಮತ್ತೂ ಅಲಕ್ಷಿಸಿದರೆ ಆ ಮನೆಯ ಯಾರನ್ನಾದರೂ ಸಾಯಿಸುವ ಮೂಲಕ ತಪ್ಪಿನ ಅರಿವು ಮೂಡಿಸುತ್ತದೆ ಎಂಬ ಅಂಶಯವೂ ಪ್ರಕಟವಾಗುತ್ತದೆ. ಇಂಥ ನಂಬಿಕೆಗಳು ತುಳುನಾಡಿನ ಜನತೆಯ ಜೀವನದೊಡನೆ ಹಾಸುಹೊಕ್ಕಾಗಿ ಬಂದಿರುತ್ತವೆ. ನಂಬಿಕೆ ಮತ್ತು ಮೌಲ್ಯಗಳ ವಿಚಾರವಾಗಿ ತಪ್ಪಿ ನಡೆಯುವವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂಬ ಪಾರಂಪರಿಕ ಚಿಂತನೆಗೆ ಈ ಕೃತಿ ಪುರಾವೆ ಒದಗಿಸುವಂತೆ ಇದೆ.

ತುಳುವರ ಬಹಳ ವಿಶಿಷ್ಟ ನಂಬಿಕೆಯ ಎರಡು ಹೂವುಗಳ ಉಲ್ಲೇಖ ಕೂಡಾ ಇಲ್ಲಿದೆ. ಸೊರಗೆದ ಪೂ ಮತ್ತು ಗೋಸಂಪಗೆಯ ಹೂ. ಇವೆರಡು ಹೂವುಗಳು ಸಾಂಕೇತಿಕ ಅರ್ಥದಲ್ಲಿ ಬಳಕೆಯಾಗಿವೆ. ಸಾಮಾನ್ಯವಾಗಿ ಎಲ್ಲ ಹೂವುಗಳು ಅರಳಿದ ಮೇಲೆ ಮುದುಡಿ, ಬಾಡಿ ನಾಶವಾಗಿ ಹೋಗುವಂಥವು. ಆದರೆ ಸೊರಗೆಯ ಹೂವು ಒಣಗಿದ ಮೇಲೆಯೂ ತನ್ನ ಪರಿಮಳವನ್ನು ಕಳೆದುಕೊಳ್ಳುವುದಿಲ್ಲ. ಈ ಎರಡು ಹೂವುಗಳ ಉಲ್ಲೇಖ ಮತ್ತು ಆ ಮೂಲಕ ವ್ಯಕ್ತಪಡಿಸುವ ಆಶಯ ನವಿರಾಗಿ ಪ್ರಕಟವಾಗಿದೆ.

ತುಳುನಾಡಿನ ಗ್ರಾಮೀಣ ಬದುಕಿನ ಚಿತ್ರಣವಾದರೂ ಇಲ್ಲಿ ಆಧುನಿಕ ನಾಗರಿಕ ಜೀವನದ ಚಿತ್ರಣವಾಗಲೀ, ಪಾರಂಪರಿಕ ಜೀವನ ವಿಧಾನ ಮತ್ತು ನಾಗರಿಕ ಜೀವನ ವಿಧಾನಗಳ ನಡುವಿನ ಸಂಘರ್ಷವಾಗಲೀ, ಬೇರೆ ಬೇರೆ ಕಾಲಮಾನದ ಮನುಷ್ಯ ಮನೋಭಾವದ ನಡುವಿನ ಸಂಘರ್ಷವಾಗಲೀ ಇಲ್ಲಿ ಕಾಣಿಸುವುದಿಲ್ಲ. ಬದಲಾಗಿ ಬಡತನ-ಸಿರಿತನ, ಒಳ್ಳೆಯ-ಕೆಟ್ಟ ಎಂಬ ಅಂಶಗಳ ನೆಲೆಯಲ್ಲಿ ಸಾಮಾನ್ಯವಾದ ಕಪ್ಪು ಬಿಳು ಚಿತ್ರದಂತೆ ಸಂಘರ್ಷಗಳನ್ನು ಮುಖಮುಖಿಯಾಗಿ ತಂದಿಡಲಾಗಿದೆ. ಆದರೆ ಒಂದು ನಿರ್ದಿಷ್ಟ ಕಾಲಮಾನದ ಉಲ್ಲೇಖ ಈ ಕೃತಿಯೊಡಲಿನಲ್ಲಿ ಎಲ್ಲೂ ಪ್ರಕಟವಾಗುವುದಿಲ್ಲ. ಹಾಗೆಯೇ ವೈಚಾರಿಕ ವಿಚಾರಗಳೂ ಕಂಡುಬರುವುದಿಲ್ಲ. ಈ ಕೃತಿಯ ಕೆಲವೊಂದು ಸಂದರ್ಭದ ಚಿತ್ರಣಗಳು ಅಸಹಜವೆಂಬಂತೆಯೂ ಅನ್ನಿಸಿಬಿಡುತ್ತದೆ. ಆದರೆ ಭಾಷೆ ಮತ್ತು ನಿರೂಪಣೆ ತಂತ್ರದ ದೃಷ್ಟಿಯಿಂದ ಇಲ್ಲಿನ ಕಥನ ಗಮನ ಸೆಳೆಯುವಂತಿದೆ.

‘ದಳವಾಯಿ ದುಗ್ಗಣ’ (೨೦೦೩) ಪ್ರಭಾಕರ ನೀರ್‌ಮಾರ್ಗ ಬರೆದ ಐತಿಹಾಸಿಕ ಕಾದಂಬರಿ. ಸುಮಾರು ನಾಲ್ಕು- ಐದು ಶತಮಾನದ ಹಿಂದಿನ ತುಳುನಾಡಿನ ರಾಜಕೀಯ ಚರಿತ್ರೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಕಥನಕ್ಕೆ ರೂಪು ಕೊಡಲಾಗಿದೆ. ದಳವಾಯಿ ದುಗ್ಗಣ್ಣನ ಪ್ರಾಮಾಣಿಕತೆ, ಸ್ವಾಮಿನಿಷ್ಠೆ, ಧೈರ್ಯ ಸಾಹಸದಿಂದ ಕೂಡಿದ ಪರಾಕ್ರಮ, ಜೊತೆಗೆ ಜನತೆಯ ಯೋಗಕ್ಷೇಮ ಕಾಪಾಡುವ ತಾತ್ಪರತೆಯನ್ನು ಇಲ್ಲಿ ಚಿತ್ರಿಸಲಾಗಿದೆ. ಮಧ್ಯಕಾಲೀನ ಇತಿಹಾಸದ ಕಾಲಘಟ್ಟದಲ್ಲಿ ತುಳುನಾಡು (೧೪೭೫-೧೫೬೫) ವಿಜಯನಗರದ ಅರಸರ ಸಾಮಂತಿಕೆಯಲ್ಲಿ ಆಡಳಿತ ನಡೆಸುತ್ತಿದ್ದ ಸಂಗತಿ ಇಲ್ಲಿ ವ್ಯಕ್ತವಾಗುತ್ತದೆ. ನಂದಾವರದ ಅರಸನಾದ ಪದ್ಮನಾಭ ಹಳದಿ ಕಾಮಾಲೆ ರೋಗದಿಂದ ಬಳಲುತ್ತಿದ್ದಾಗ ಅರಮನೆಯ ವೈದ್ಯರು, ಶಾಸ್ತ್ರಿಗಳು ಔಷಧಿ ಮಾಡಿದರೂ ಅದರಿಂದ ಗುಣ ಹೊಂದದಿರುವಾಗ, ಮಾವ ಬಿರ್ಮಣ ಬೈದ್ಯನಿಂದ ವೈದ್ಯವನ್ನು ಕಲಿತ ದುಗ್ಗಣ ಕೊಡುವ ಔಷಧಿಯಿಂದ ಕಾಯಿಲೆ ವಾಸಿಯಾಗುತ್ತದೆ. ಬಿರ್ಮಣ ಬೈದ್ಯನ ತಂಗಿಯ ಮಗ ದುಗ್ಗಣ ವ್ಯವಸಾಯದ ಕುಟುಂಬದವನಾಗಿರುತ್ತಾನೆ. ಆದರೆ ಆತನ ತಂದೆ ತಾಯಿಯರಿಗೆ ಮಗ ವೈದ್ಯ ಕಲಿಯಬೇಕೆಂಬ ಇರಾದೆ ಇರುತ್ತದೆ. ಹಾಗಾಗಿ ಹುಟ್ಟಿದ ಊರು ಪುತ್ತೂರಿನ ಸುಳ್ಯಮೆಯಿಂದ ಮಾವನಲ್ಲಿಗೆ ಪಾಣೇರ್‌ಗೆ ದುಗ್ಗಣ ಬರುತ್ತಾನೆ. ಬಿರ್ಮಣ ಬೈದ್ಯ ನಾಟಿ ವೈದ್ಯರಲ್ಲಿ ಒಳ್ಳೆಯ ಹೆಸರು ಮಾಡಿದವ ಮಾತ್ರವಲ್ಲ ಅರಮನೆಯ ರಾಣಿಗೆ ಕಾಯಿಲೆಯಾಗಿದ್ದಾಗ ಇವನ ಔಷಧಿಯಿಂದ ಗುಣಮುಖವಾಗಿ ಅರಸರಿಂದ ಮನ್ನಣೆ ಪಡೆದವನೂ ಆಗಿರುತ್ತಾನೆ. ತನ್ನ ಜೊತೆಗಿದ್ದ ಅಳಿಯ ದುಗ್ಗಣನೂ ತನಗಿಂತ ಹೆಚ್ಚು ಹೆಸರುವಾಸಿಯಾದ ವೈದ್ಯನಾಗುವ ಲಕ್ಷಣ ಕಂಡಾಗ ಸಂತಸಪಡುತ್ತಾನೆ. ದುಗ್ಗಣ ದೈಹಿಕವಾಗಿಯೂ ಕಟ್ಟುಮಸ್ತಾದ ಆಳಾಗಿದ್ದು ಚೆಂಡಾಟ, ಕುಸ್ತಿ, ಬೇಟೆಯಲ್ಲಿ ಅಪ್ರತಿಮ ಸಾಹಸಿಯಾಗಿರುತ್ತಾನೆ. ಅರಸರಿಗೆ ಔಷಧಿ ಮಾಡಿ ಗುಣಮುಖವಾಗಿಸಿದ ಕಾರಣ ಅವರಿಗೆ ಆಪ್ತನಾಗಿರುತ್ತಾನೆ. ಅರಸರ ಜೊತೆ ಬೇಟೆಗೆ ಹೋಗಿದ್ದ ಸಂದರ್ಭದಲ್ಲಿ ಗೆಳೆಯ ಕಂಪಣನನ್ನು ಹುಲಿಯ ಬಾಯಿಯಿಂದ ರಕ್ಷಿಸಿ ಧೈರ್ಯ ಸಾಹಸ ಮೆರೆಯುತ್ತಾನೆ. ಹಾಗಾಗಿ ದಳವಾಯಿಯಾಗಿ ನೇಮಿಸಲ್ಪಡುತ್ತಾನೆ. ಅನಂತರ ಸ್ವಾಭಿಮಾನ, ಸ್ವಾಮಿನಿಷ್ಠೆ, ಕಾರ್ಯತತ್ಪರತೆ, ಮುಂದಾಲೋಚನೆಗಳಿಂದ ರಾಜ ಮತ್ತು ಪ್ರಜೆಗಳೆಲ್ಲರ ಅಭಿಮಾನಕ್ಕೆ ಅದಕ್ಕೆ ಪಾತ್ರನಾಗುತ್ತಾನೆ. ಭಿರ್ಮಣ ಬೈದ್ಯನಿಗೂ ತನ್ನ ಅಳಿಯ ತನಗಿಂತ ಹೆಚ್ಚು ಹೆಸರುವಾಸಿಯಾದುದು ಮೆಚ್ಚುಗೆಯ ಸಂಗತಿಯೇ ಆಗುತ್ತದೆ.

ಆದರೆ ರಾಜಕೀಯ ಚರಿತ್ರೆಯಲ್ಲಿ ಸಾಮಾನ್ಯವೆಂಬಂತೆ ಕಂಡುಬರುವ ಒಳಪಿತೂರಿಗಳು, ದ್ವೇಷ, ಅಸೂಯೆ, ನೆರೆಕರೆಯ ಸೀಮೆಯವರ ಉಪಟಳ, ಸಂದರ್ಭ ನೋಡಿ ಸಂಚು ಹೂಡುವುದು ಹೀಗೆ ಆಂತರಿಕ ಮತ್ತು ಬಹಿರಂಗದ ಚಟುವಟಿಕೆಗಳು ಕಾಣಿಸಿಕೊಳ್ಳುತ್ತವೆ. ಉತ್ತರದ ಅನ್ಯಧರ್ಮೀಯ ರಾಜರು ಕೂಡಾ ಗುಪ್ತವಾಗಿ ಮಾಹಿತಿ ಸಂಗ್ರಹಿಸಿ ಇಲ್ಲಿನ ರಾಜರನ್ನು ಸೋಲಿಸಿ ಅಧಿಕಾರ ಕಸಿದುಕೊಳ್ಳಲು ಹಾತೊರೆಯುವಂಥ ಸನ್ನಿವೇಶಗಳೂ ಇವೆ. ವ್ಯಾಪಾರ ಕುದುರಿಸುವ ಉದ್ದೇಶದಿಂದ ಬರುವ ಬಶೀರ್‌ಖಾನ್‌ ಮತ್ತು ಜುಲೇಕಾರವರು ಇಂಥ ಪಾತ್ರಗಳು. ನಂದಾವರದ ಅರಸು ಗದ್ದಿಗೆಗೆ ಉತ್ತರಾಧಿಕಾರಿಯಾಗಿ, ರಾಜನಾಗಿ ಪ್ರಜೆಗಳ ರಕ್ಷಕನೂ ಆಗಿ ಯೋಗ್ಯನೆನಿಸಿಕೊಳ್ಳಬೇಕಾಗಿದ್ದ ಯುವರಾಜ ಚಂದ್ರಶೇಖರ ವಿಷಯಲೋಲುಪವಾಗಿ, ದುಷ್ಟ ಗುಣಗಳೆಲ್ಲದರ ಪ್ರತೀಕವಾಗಿ ಗುರುತಿಸಲ್ಪಡುವುದು, ದಳವಾಯಿ ದುಗ್ಗಣ್ಣನ ಮೇಲೆಯೇ ಸಂಚು ಹೂಡಿ ದುಗ್ಗಣ್ಣನನ್ನು ಕೆಟ್ಟವನು ಎಂದು ಚಿತ್ರಿಸಲು ಪ್ರಯತ್ನಿಸುವುದು ಮುಂತಾದ ವಿವರಗಳು ಈ ಕಾದಂಬರಿಯಲ್ಲಿ ನಾಟಕೀಯ ಘಟನೆಗಳಂತೆ ಪ್ರಕಟವಾಗಿ ಕಣ್ಣಿಗೆ ಕಟ್ಟುತ್ತವೆ. ಯಾರಿಂದಲೇ ಆಗಲಿ ಪ್ರಜೆಗಳಿಗೆ ಅನ್ಯಾಯವಾಗುವಂಥ ಕಡೆಗಳಿಗೆ ದಳವಾಯಿ ದುಗ್ಗಣ ಬಂದು ತಲುಪಿ, ಅನ್ಯಾಯವನ್ನು ತಡೆಗಟ್ಟಿ ದುಷ್ಟರ ದುಷ್ಟತನವನ್ನು ಬಹಿರಂಗಪಡಿಸುವುದು ಮತ್ತು ಅಂಥವರ ಯಾವ ಆಟವೂ ನಡೆಯದಂತೆ ತಡೆಯುವ ಕಾರ್ಯವಿಧಾನಗಳು ದುಗ್ಗಣವನ್ನು ಸಮರ್ಥನೆಂದು ಒತ್ತಿ ಹೇಳುವಂಥ ಸಂಗತಿಗಳಾಗಿ ಕಾದಂಬರಿಯನ್ನು ಪುಷ್ಟಿಗೊಳಿಸುತ್ತದೆ.

ಘಟನೆ ಮತ್ತು ಪಾತ್ರಪೋಷಣೆಯ ದೃಷ್ಟಿಯಲ್ಲಿ ಪ್ರಭಾಕರ ನೀರ್‌ಮಾರ್ಗದವರು ಸರಳ ಮತ್ತು ಕುತೂಹಲಕರ ಸಂಗತಿಗಳತ್ತ ಆಸಕ್ತರಾಗಿ ಕೃತಿ ತನ್ನ ಬಂಧದಲ್ಲಿ ಎಲ್ಲೂ ಸಡಿಲವಾಗದಂಥ ಎಚ್ಚರ ವಹಿಸುವುದು ವೇದ್ಯವಾಗುತ್ತದೆ. ತುಳುವರು ಮತ್ತು ತುಳುಭಾಷೆ ದೃಶ್ಯ ಮತ್ತು ಶ್ರವ್ಯಗಳಿಗೆ ಹಿತಕರವಾಗಿ ಒಪ್ಪಿತವಾಗುವಂತೆ ತುಳು ಓದಿಗೂ ಒಂದು ಪಕ್ವವಾದ ವೇದಿಕೆ ಸಿದ್ಧವಾಗಬೇಕೆಂಬ ಆಶಯವೂ ಇಲ್ಲಿ ಸಮರ್ಥವಾಗಿ ಅಭಿವ್ಯಕ್ತವಾಗುತ್ತದೆ. ಆರಂಭದಿಂದ ಅಂತ್ಯದ ತನಕ ಒಂದು ರೀತಿಯ ರೋಚಕವೆನಿಸುವಂಥ ಘಟನೆಗಳು ಮತ್ತು ವಿವರಗಳು ಕಾದಂಬರಿಯ ಒಟ್ಟಾರೆ ಯಶಸ್ಸಿನ ರೂಪಕಗಳಾಗುತ್ತವೆ. ಬಿರ್ಮಣ ಬೈದ್ಯ ರಾಣಿಗೆ ಔಷಶಿ ಮಾಡುವುದು, ದುಗ್ಗಣ ರಾಜರ ಕಾಮಾಲೆ ಕಾಯಿಲೆಗೆ ಔಷಧಿ ಮಾಡುವುದು, ದುಗ್ಗಣ ಬೇಟೆಯಲ್ಲಿ ಹುಲಿಯ ಜೊತೆ ಹೋರಾಡಿ ಜಯ ಪಡೆಯುವುದು, ಸ್ವಾಮಿನಿಷ್ಠ, ಪ್ರಾಮಾಣಿಕತೆಯಿಂದ ಎಲ್ಲರ ಮನ ಗೆಲ್ಲುವುದು, ಒಳ – ಹೊರಗಿನವರ ಪಿತೂರಿಯ ಚಿತ್ರಣಗಳು, ಬಂಟ್ವಾಳದ ಬಂಟಪ್ಪ ಮತ್ತು ಸಿದ್ದಣ್ಣ ಕುಸ್ತಿ ಯುವರಾಜ ಚಂದ್ರಶೇಖರ ಮಗ್ಗದ ಶೀನಪ್ಪನ ಮಗಳ ಜೊತೆಗೆ ಅನುಚಿತವಾಗಿ ವರ್ತಿಸುವ ಘಟನೆ, ಪಾಣೇರಿನ ಒಂದನೇ ಮಾಗಣೆಯ ಗುರಿಕಾರನ ಮಗ ಮತ್ತು ಸಾಲೆತ್ತೂರು ಗುರಿಕಾರನ ಮಗಳ ಮದುವೆ ಸಂದರ್ಭದಲ್ಲಿ ಯುವರಾಜ ಆಕ್ರಮಣ ಮಾಡುವಾಗ ಕಾವಲುಗಾರರು ಸೆರೆಹಿಡಿಯುವುದು, ರಾಜ ತೀರ್ಮಾನ ನೀಡುವುದು, ಮುಂಡಾಸ್‌ಮುಂಡಪ್ಪನ ಮೂಲಕ ಚಾಡಿ ಹೇಳಿಸುವ ಪ್ರಯತ್ನ ಮತ್ತು ಅದರಲ್ಲಿ ವಿಫಲನಾಗುವುದು, ಪರ್ಶಿಯಾದ ವ್ಯಾಪಾರಿಗಳು ಬಶೀರ್‌ಖಾನ್‌ಮತ್ತು ಜುಲೇಕರವರು ಗುಪ್ತವಾಗಿ ಮಾಹಿತಿ ಸಂಗ್ರಹಿಸುವುದು, ರಾಜ್ಯಕ್ಕೆ ಉತ್ತರಾಧಿಕಾರಿ ಆಯ್ಕೆಯ ಸಂಬಂಧವಾಗಿ ದುಗ್ಗಣ ವಿಜಯನಗರದ ಅರಸನಿಗೆ ಪತ್ರ ಬರೆದು ಅರಸರ ನೆರವು ಪಡೆಯುವುದು, ಕೊನೆಗೆ ದಳವಾಯಿ ದುಗ್ಗಣನೇ ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ರಾಜಕುಮಾರ ಪ್ರಾಪ್ತ ವಯಸ್ಕನಾಗುವ ತನಕ ರಾಜನಾಗಿ ಜವಾಬ್ದಾರಿ ಒಪ್ಪಿಕೊಳ್ಳುವುದು ಹೀಗೆ ಒಂದೊಂದು ಘಟನೆಗಳು ಒಟ್ಟಾಗಿ ಕೃತಿಯನ್ನು ಸುಖಾಂತ್ಯಗೊಳಿಸಿ ಬಿಡುತ್ತವೆ. ಇತಿಹಾಸದ ವಿಷಯ ಕಾದಂಬರಿಯ ಕಥನ ಮೂಲಕ ನಿರೂಪಿತವಾಗಿ ವಿಶಿಷ್ಟವೆನಿಸುವ ಸ್ಥಾನ ಪಡೆದುಕೊಳ್ಳಲು ಬೇಕಾಗುವ ಎಲ್ಲ ಸನ್ನಿವೇಶ, ಸಲಕರಣೆಗಳನ್ನು ಕಾದಂಬರಿಕಾರು ಪೂರಕವಾಗಿ ಬಳಸಿಕೊಂಡಿದ್ದಾರೆ.

ಈ ಎಲ್ಲರ ಜೊತೆಗೆ ಕಾದಂಬರಿ ಒಂದು ಐತಿಹಾಸಿಕ ಕೃತಿ ಆಗುವಂಥ ವಸ್ತು ವಿಚಾರಕ್ಕೆ ಇಲ್ಲಿ ನಿರೂಪಿತವಾಗುವಂಥ ವಿವರಗಳು, ಸಮರ್ಥನೆಗೆ ಪ್ರಾಚೀನ ಕಾಲ ನಿರೂಪಿತ ದಾಖಲೆಗಳು, ಐತಿಹ್ಯಗಳು, ಜನಪದ ಸಾಹಿತ್ಯ ಉಲ್ಲೇಖಗಳು ಇವೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ತುಳು ಯಕ್ಷಗಾನ, ತುಳು ನಾಟಕಗಳು ಕೆಲವು ಸಂದರ್ಭಗಳಲ್ಲಿ ರಂಜನೆಗೆ ಒತ್ತುಕೊಟ್ಟು ಕಾಲ್ಪನಿಕ ಸಂಗತಿಗಳನ್ನು ಸತ್ಯ ಅಸತ್ಯವೆಂಬಂತೆ ರಂಗದ ಮೇಲೆ ಪ್ರದರ್ಶಿಸಿ ಅದ್ಭುತ ರಮಣೀಯತೆಯನ್ನು ಮೆರೆಯುವುದಿದೆ ಮತ್ತು ಸಾಹಸವನ್ನು ವೈಭವೀಕರಿಸುವುದಿದೆ. ಆದರೆ ಕಾದಂಬರಿಗಳು ಹಾಗಾಗುತ್ತವೆ ಎಂದಾದರೆ, ಅವು ರೋಚಕವಾದ ಅನುಭವ ಮಾತ್ರ ಓದುಗರಿಗೆ ನೀಡುತ್ತವೆ, ಐತಿಹಾಸಿಕ ಸತ್ಯವನ್ನು ಅಲ್ಲ.

ಈ ನಡುವೆ ಯಜ್ಞಾವತಿ ಕೇಶವ ಕಂಗೆನ್‌ರವರು ‘ರಂಗೆನಾ ಮಲೆ ಮಂಗೆನಾ?’ (೧೯೯೮) ಎಂಬ ಹೆಸರಿನ ಕಿರು ಕಾದಂಬರಿಯೊಂದನ್ನು ಬರೆದಿದ್ದಾರೆ. ಇಸ್ಪೀಟ್‌ಆಟ ಹೆಂಡ ಕುಡಿತದಲ್ಲಿಯೇ ಕಾಲ ಕಳೆಯುತ್ತಿದ್ದ ರಂಗ ನಾಟಕ ಕಂಪನಿ ಸೇರುವುದು, ರಂಗದಲ್ಲಿ ಅಭಾಸವಾಗಿ ಪ್ರೇಕ್ಷಕರು ಗಲಾಟೆ ಮಾಡಿದಾಗ ಹಾಕಿದ ಋಷಿವೇಶವನ್ನು ಹಾಗಗೆಯೇ ಹೊತ್ತುಕೊಂಡು ರೈಲು ಹತ್ತಿ ಮನೆಯ ಕಡೆ ಬಂದು ಮರದಡಿ ಕೂತಿದ್ದಾಗ ಜನರೆಲ್ಲ ಇವನೊಬ್ಬ ಸಂನ್ಯಾಸಿ ಇರಬೇಕು ಎಂದು ಭಾವಿಸಿ ಕಾಣಿಕೆ ಹಾಕಿ ನಮಸ್ಕಾರ ಮಾಡಿ ಹೋಗುತ್ತಿದ್ದರು. ಇದರಿಂದಾಗಿ ಹಣ ಸಂಪಾದನೆ ಆಗುತ್ತದೆ. ಎಲ್ಲ ಜನರ ಹಾಗೆ ಬಂದ ಆತನ ಹೆಂಡತಿ ರತ್ನಳಿಗೆ ಇದು ತನ್ನ ಗಂಡ ಎಂದು ತಿಳಿಯುತ್ತದೆ. ತನ್ನ ಪಾಡು, ವೇಷಧಾರಿಕೆ ಕಷ್ಟ ಹೇಳಿಕೊಂಡು ಊಟ, ತಿನಿಸಯ ತರಯವಂತೆ, ಬಟ್ಟೆ ತಂದುಕೊಡುವಂತೆ ಹೇಳುತ್ತಾನೆ. ಸೋಮೇಶ್ವರ ಕಡಲ ಕಿನಾರೆಗೆ ಹೋಗಿ ಸ್ನಾನ ಮಾಡಿ ಬಟ್ಟೆ ಬದಲಿಸಿ ದುಬಾಯಿಯಿಂದ ಬರದಂತೆ ಮನೆಗೆ ಬರುತ್ತಾನೆ.

ದೇವರು, ಧರ್ಮ, ಸನ್ಯಾಸಿ ಮುಂತಾಗಿ ಜನತೆಯನ್ನು ಶೋಷಿಸುವಂಥ ವರ್ತಮಾನದ ಪರಿಸ್ಥತಿಯನ್ನು ವ್ಯಂಗ್ಯವಾಗಿ ವಿಡಂಬಿಸುವಂತೆ ಹಾಸ್ಯದ ಮೂಲಕ ಅಭಿವ್ಯಕ್ತಿಸುತ್ತಾ ವೈಚಾರಿಕವಾಗಿ ಚಿಂತಿಸುವಂತೆ ಪ್ರೇರೇಪಿಸುವ ಪ್ರಯತ್ನ ಈ ಬರೆಹಕ್ಕೆ ಇರುವಂತೆ ಕಂಡುಬರುತ್ತದೆ.

ಹೀಗೆ ತುಳುಭಾಷೆಯಲ್ಲಿ ಬರೆಯಲಾಗುವ ಕಾದಂಬರಿ ಎಂಬ ಮಹಾಕಥನ ಹಲವು ನೆಲೆಗಳಲ್ಲಿ ಕುತೂಹಲಕರವೂ ವಿಸ್ಮಯಕರವೂ ಆಗಿರುವುದು ತಿಳಿಯುತ್ತದೆ. ಬಹಳ ಪ್ರಧಾನವಾಗಿ ಒಂದು ಸೀಮಿತ ಪ್ರದೇಶದ ಜನತೆಯ ಆಡುಭಾಷೆಯಾಗಿ, ಮಾತೃಭಾಷೆಯಾಗಿ ಈ ಸೀಮಿತ ಪ್ರದೇಶದ ಭಿನ್ನ ಮಾತೃಭಾಷೆಯುಳ್ಳ ಜನತೆಯ ಸಂಭಾಷಣೆಯ, ವ್ಯವಹಾರದ ಭಾಷೆಯಾಗಿ, ವಿಸ್ತಾರವಾದ ಪರಿಧಿಯಲ್ಲಿ ಸರ್ವೇಸಾಮಾನ್ಯವಾಗಿ ಇಲ್ಲಿನ ಜನತೆ ಕಲಿತ ಭಾಷೆಯಾದ ಕನ್ನಡದ ಜೊತೆಗೆ ಅನುಸಂಧಾನವನ್ನು ಬೆಸೆದುಕೊಂಡು ಉಳಿದು ಬೆಳೆದು ನಿರಂತರ ತನ್ನ ಅಸ್ತಿತ್ವವನ್ನು ಬರವಣಿಗೆಯ ಮೂಲಕ ದಾಖಲಿಸಿ ಕೊಳ್ಳುವ ನೆಲೆಯಲ್ಲಿ ಸವಾಲುಗಳ ಸರಮಾಲೆಗಳನ್ನೇ ಎದುರಿಸಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ತುಳು ಭಾಷೆ ಇದೆ.

ಆಡುಭಾಷೆಯಾಗಿ, ಜಾನಪದೀಯವಾಗಿ, ಸಾಂಸ್ಕೃತಿಕವಾಗಿ ಈ ಭಾಷೆಗೆ ಬಹುದೊಡ್ಡ ಮತ್ತು ಬಿಗುವಾದ ಪಾರಂಪರಿಕ ಹಿಡಿತವಿದೆ. ಕಾವ್ಯ, ನಾಟಕ, ನಾಟಕೀಯತೆ, ಯಕ್ಷಗಾನ ಹೀಗೆ ಹಾಡು, ದೃಶ್ಯ, ಶ್ರವ್ಯ ಪ್ರಧಾನ ಭೂಮಿಕೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಇದೆ. ಆದರೆ ಸಾಹಿತ್ಯ – ಸಾಂಸ್ಕೃತಿಕ ಅಭಿವ್ಯಕ್ತಿಯ ಕಥನಾತ್ನಕ ಬರವಣಿಗೆಯಲ್ಲಿ ತೊಡಗಿಕೊಂಡ ಕಳೆದ ಎಂಬತ್ತು, ನೂರು ವರ್ಷಗಳಲ್ಲಿ ಒಂದು ಅರ್ಥದಲ್ಲಿ ಪ್ರಯೋಗಾತ್ಮಕವಾಗಿಯೇ ಉಳಿದಿದೆ, ಅಥವಾ ಆರಂಭದಲ್ಲಿ ಪ್ರಕಟವಾದ ಎರಡು ಕಾದಂಬರಿಗಳು ಗದ್ಯ ಕಥನಕ್ಕೆ ಒಂದು ನಿಶ್ಚಿತ ತಳಪಾಯವನ್ನು ನಿರ್ಮಿಸುವ ಕುತೂಹಲ ಉಂಟುಮಾಡಲಾರದೆ ಹೋದುದರಿಂದ ಅನಂತರ ೧೯೯೪ರ ತನಕ ದೀರ್ಘ ಮೌನಕ್ಕೆ ಸಂದಂತಾಗಿದೆ. ಅನಂತರ ನಾಣಜ್ಜರ ಮೂಲಕ ಪ್ರಕಟವಾದ ಅದ್ಭುತ ಸಾಹಸಮಯ ವಿಸ್ಮಯ ಜಗತ್ತು ನಿಲೆಯಂಥ ಕಥನ ಸೂಕ್ಷ್ಮ ಪ್ರಣಾಳಿಕೆಯ ಮೂಲಕ ತನ್ನ ಅನುಭವದ ಎಲ್ಲೆ ಮತ್ತು ಇರುವಿಕೆಯ ಅರಿವಿನ ಪರಿಧಿಯನ್ನು ವಿಸ್ತರಿಕೊಂಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ತುಳು ಬರವಣಿಗೆಗೆ ಒಂದು ಸಾಂಸ್ಥಿಕ ಬುನಾದಿ ದೊರೆತಂತಾಗಿದೆ. ತುಳುಭಾಷೆಯಲ್ಲಿ ಗದ್ಯ ಕಥನದ ಬರವಣಿಗೆಯಲ್ಲಿ ಮಹಿಳೆ ಮತ್ತು ಪುರುಷರು ಸಮಾನವಾಗಿ ತೊಡಗಿಸಿಕೊಂಡಂತಿದೆ. ಈ ಎಲ್ಲರನ್ನೂ ಒಂದೇ ಸಮನಾಗಿ ಆಚಾರ ವಿಚಾರ, ನಂಬಿಕೆ ನಡಾವಳಿಗಳು, ಆರಾಧನಾತ್ಮಕ ವೈವಿಧ್ಯಮಯ ಸಂಗತಿಗಳು, ಪ್ರದರ್ಶನಾತ್ಮಕ ಕಲೆಗಳು ಒಟ್ಟಾರೆಯಾಗಿ ಜಾನಪದ ವಸ್ತು ವಿವೇಚನೆಯೇ ಸಾಮಾಜಿಕ ಹಿನ್ನೆಲೆಯಲ್ಲಿ ಅಭಿವ್ಯಕ್ತಿಗೆ ಹಾತೊರೆಯುವಂತೆ ಕಂಡುಬರುತ್ತದೆ. ವ್ಯಾವಹಾರಿಕ ಅನಿವಾರ್ಯವೆಂಬಂತೆ ಬಳಕೆಯಾಗುತ್ತಿದ್ದ ಭಾಷೆ ಲಿಖಿತ ಪರಂಪರೆಯಲ್ಲಿ ದಾಖಲಾತಿಯಾಗುವಾಗ ವಿಶಿಷ್ಟವಾದ ಹೊಸ ನುಡಿಗಟ್ಟುಗಳನ್ನು, ಪಾರಿಭಾಷಿಕ ಪದಗಳನ್ನು ಬಳಸಿಕೊಳ್ಳುವ ಆತುರಲ್ಲಿದ್ದಂತೆ ಕಂಡುಬರುತ್ತದೆ. ಕಾದಂಬರಿಯಂಥ ಗದ್ಯ ಕಥನದ ಅಭಿವ್ಯಕ್ತಿಯ ಸಂದರ್ಭದಲ್ಲಿ ಬರಹಗಾರರು ತಮ್ಮ ತುಳು ಭಾಷಾ ಪಾಂಡಿತ್ಯವನ್ನು ಒರೆಗೆ ಹಚ್ಚುವಂತೆ ವಿಶಿಷ್ಟವೆನಿಸುವ ಪ್ರಯೋಗಗಳಲ್ಲಿ ತೊಡಗಿದ್ದೂ ಇದೆ. ಕನ್ನಡ ಕಲಿತವರೇ ತುಳುಭಾಷೆಯ ಓದುಗರೂ ಆಗಿರುವುದರಿಂದ, ಸುಲಲಿತವಾಗಿ, ಸರಳವಾಗಿ ಓದಿಗೆ ಒದಗುವ ಕನ್ನಡ ಗದ್ಯ ಕಥನದ ನಡುವೆ ತುಳು ರೂಪಿಸಿಕೊಳ್ಳುವ ಪದಸಂಪತ್ತು ಕೂಡಾ ತುಳು ಓದುಗ ವರ್ಗಕ್ಕೆ ಸವಾಲಿನಂತೆ ಭಾಸವಾಗಿದೆ. ಹಾಗಾಗಿ ತುಳುಭಾಷೆಯಲ್ಲಿ ಪ್ರಕಟವಾಗುವ ಕಾದಂಬರಿಯಂಥ ಮಹಾಕಥನಗಳು ಓದುಗರಿಗೆ ತಲುಪದೆ ಉಳಿಯುತ್ತವೆ. ಸುಲಲಿತವಾದ ಓದಿಗೆ ತುಳುಭಾಷೆ ಮತ್ತು ಅದರಲ್ಲಿ ಪ್ರಕಟವಾಗುವ ಬರವಣಿಗೆ ಪಕ್ವವಾಗಬೇಕಾಗಿದೆ. ತುಳುನಾಡಿನ ವಿದ್ಯಾವಂತವರ್ಗ ತುಳುವನ್ನು ಹೆಚ್ಚು ಹೆಚ್ಚು ಓದಲು ತೊಡಗಬೇಕಾದ ಅನಿವಾರ್ಯತೆ ಖಂಡಿತ ಇದೆ.

ಮಿತ್ತಬೈಲ್‌ ಯಮುನಕ್ಕೆ – ಒಂಜಿಗುತ್ತುದ ಕತೆ (೨೦೦೫) ಆನಂದಕೃಷ್ಣರವರು ಬರೆದ ಕಾದಂಬರಿ. ಈ ಸಂಕಥನದ ಕುರಿತು ಬರೆಯುತ್ತಾ ಬಿ.ಎ.ವಿವೇಕ ರೈಯವರು “ತುಳು ಸಾಹಿತ್ಯದ ಪರಂಪರೆಯನ್ನು ನವೀನವಾಗಿ ಅರ್ಥೈಸುವ ಮಹತ್ತ್ವದ ಕೃತಿ. ತುಳುನಾಡಿನ ಪರಂಪರಾಗತ ಕೃಷಿ ಸಂಸ್ಕೃತಿಯ ಒಡೆತನದ ರೂಪಕವಾದ ‘ಗುತ್ತು’ ಎಂಬುದು ಪ್ರಭುತ್ವದ ಸಂಕೇತವೂ ಹೌದು, ದರ್ಪ ದುಮ್ಮಾನಗಳನ್ನು ಸುಖ ಸಂಕಷ್ಟಗಳನ್ನು ಗರ್ಭೀಕರಿಸಿಕೊಂಡ ದುರಂತ ಕತೆಯೂ ಹೌದು. ಹೀಗಾಗಿಯೇ ಈ ಕಾದಂಬರಿಯಲ್ಲಿ ಕಾಲವು ಕೇವಲ ಸಮಯವನ್ನು ಮಾತ್ರ ಸೂಚಿಸದೆ, ಭಿನ್ನ ತಲೆಮಾರುಗಳ ಭಿನ್ನ ಜಾತಿಗಳ, ಭಿನ್ನ ಸಮಿದಾಯಳ ಗಂಡು ಹೆಣ್ಣಿನ ವೈರುಧ್ಯದ ಬದುಕುಗಳ ಸಂಕೀರ್ಣ ಗಾಥೆಯಾಗಿಯೂ ಕಾಣಿಸಿಕೊಳ್ಳುತ್ತದೆ. ಆ ಕಾಲ ಮತ್ತು ಈ ಕಾಲ ಎನ್ನುವ ಎರಡು ಪರಿಮಾಣಗಳ ಮೂಲಕ ವಿಚ್ಛೇದನಗೊಳ್ಳುವ ಈ ಕಾದಂಬರಿ ಅಂತಿಮವಾಗಿ ಆ ಎರಡು ಕಾಲಗಳನ್ನು ಮುಖಾಮುಖಿಯನ್ನಾಗಿಸಿ ಬಹುರೂಪಿ ಸಂಕಥನಗಳನ್ನು ಕಟ್ಟಿಕೊಡುತ್ತದೆ” ಎಂದು ಅಭಿಪ್ರಾಯ ಪಡುತ್ತಾರೆ. ತುಳುನಾಡಿನ ಬಂಟ ಜನಾಂಗ ಹೊಂದಿದ್ದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿಡಿತದ ದ್ಯೋತಕವಾಗಿ ಗುತ್ತುದ್‌ ಇಲ್ಲ್‌ ಕಂಡುಬರುತ್ತದೆ. ಪಾರಂಪರಿಕವಾಗಿ ಕೃಷಿ ಮೂಲದ ಕುಟುಂಬ ಭೂಮಿಯ ಒಡೆತನ ಹೊಂದಿ ಆರ್ಥಿಕವಾಗಿ ಬಲಿಷ್ಠವಾಗುತ್ತಾ ಬಂದ ಹಾಗೆ ಅಧಿಕಾರ ಕೇಂದ್ರಿತ ಧ್ವನಿಯನ್ನು ಪಡೆದುಕೊಳ್ಳುತ್ತದೆ. ಅದಕ್ಕೆ ಉಪಮೇಯಯಾಗಿ ಗುತ್ತುದ ಇಲ್ಲ್‌ ಪ್ರಧಾನ್ಯ ಪಡೆದುಕೊಳ್ಳುತ್ತದೆ. ಆನಂದ ಕೃಷ್ಣ ಅವರು ಈ ಕಾದಂಬರಿ ಬರೆಯುವದಕ್ಕಿಂತ ಪೂರ್ವದಲ್ಲಿ ಬರಹ ಸಂಬಂಧಿತವಾಗಿ ಸಾಕಷ್ಟು ಪೂರ್ವತಯಾರಿ, ಅಧ್ಯಯನ ಮಾಡಿದ್ದಾರೆ. ಈ ಕೃತಿ ಸಾಕಷ್ಟು ವಿಸ್ತಾರವಾದ ವ್ಯಾಪ್ತಿಯನ್ನು ಪಡೆದುಕೊಂಡಿದ್ದರೂ ಎಲ್ಲೂ ವಿವರಗಳು ಅನಗತ್ಯ ಎಂದು ಅನಿಸದಿರುವಷ್ಟು ಸಾಂದ್ರವಾಗಿ ನಿರೂಪಿತವಾಗಿದೆ. ಗಾತ್ರ ಮತ್ತು ಮೌಲ್ಯದ ಹಿನ್ನೆಲೆಯಲ್ಲಿ ಇಷ್ಟೊಂದು ವ್ಯಾಪ್ತಿ ಮತ್ತು ವಿಶಿಷ್ಟವೆನಿಸುವ ಬೇರೆ ಕಾದಂಬರಿ ತುಳುಭಾಷೆಯಲ್ಲಿ ಪ್ರಕಟವಾಗಿರುವುದಿಲ್ಲ. ತುಳುನಾಡಿನ ಪ್ರಾದೇಶಿಕ ಸಂಸ್ಕೃತಿ ಮತ್ತು ತುಳು ಭಾಷೆ ನಿಕಟವಾದ ಬಾಂಧವ್ಯ ಹೊಂದಿರುವಂಥದ್ದು .ಇಲ್ಲಿನ ಪ್ರಾದೇಶಿಕವೆನಿಸುವ ಆಡಳಿತ ರೀತಿ ರಿವಾಜುಗಳು ಆರಾಧನಾ ಪದ್ಧತಿ, ಸಾಮಾಜಿಕ ವ್ಯವಸ್ಥೆ, ಆಚಾರ ವಿಚಾರಗಳು, ಕೃಷಿ ಪರಂಪರೆ ಈ ಪ್ರಾದೇಶಿಕ ಸಂಸ್ಕೃತಿಯನ್ನು ಅಭಿವ್ಯಕ್ತಿಸುವ ತಿಂಡಿ ತಿನಿಸು, ಆಹಾರ ಪದ್ಧತಿ, ಆಟ-ಕೂಟ, ಬೇಟೆ ಹೀಗೆ ಬಹಳಷ್ಟು ಸಂಗತಿಗಳನ್ನು ಈ ಕಾದಂಬರಿ ತನ್ನ ಒಡಲಿನಿಂದ ಅಭಿವ್ಯಕ್ತಿಸುತ್ತದೆ. ಇಂಥ ಸೂಕ್ಷ್ಮ ವೆನಿಸುವ ಮತ್ತು ಮುಖ್ಯವೆನಿಸುವ ವಿವರಗಳು ಇತ್ಯಾತ್ಮಕವಾಗಿ ಕಥನ ಜಗತ್ತನ್ನು ಕಟ್ಟುವ ಮಾದರಿಗಳು ಅನನ್ಯವೆನಿಸುವಂಥದ್ದು.

ಈ ಕಥನ ಶರೀರ ೧೮ ಅಧ್ಯಾಯಗಳ ಮೂಲಕ ಅಂಗಾಂಗ ಸೌಷ್ಠವ ಸಾಧಿಸುತ್ತ ಬರುತ್ತದೆ. ಈ ಎಲ್ಲ ಅಧ್ಯಾಯಗಳು ಒಂದೊಂದು ಶೀರ್ಷಿಕೆಗಳ ಮೂಲಕ ನಿರೂಪಿತವಾಗುತ್ತವೆ. ಜೊತೆಗೆ ಅಧ್ಯಾಯ ಆರಂಭವಾಗುವುದಕ್ಕೆ ಮುನ್ನ ವಿಶಿಷ್ಟವೆನಿಸುವ ವಿನೂತನ ಅರ್ಥ ಸಾಧ್ಯತೆಗಳಿಂದ ಕೂಡಿದ ನುಡಿಗಟ್ಟನ್ನು, ಪಾಡ್ದನ, ಸಂಧಿಗಳನ್ನು ನೀಡಲಾಗಿದೆ. ಇವು ಆಯಾಯ ಅಧ್ಯಾಯಗಳ ಅರ್ಥಸಾಧ್ಯತೆಯನ್ನು ವಿಸ್ತರಿಸುವಂತೆಯೂ, ಕ್ರೋಡೀಕರಿಸಿ ಹೇಳುವಂತೆಯೂ ಇವೆ. ಅಂದರೆ ಉಲ್ಲೇಖಿತ ಮಾತುಗಳ ಧ್ವನಿ ಸಾಧ್ಯತೆ ಈ ರೀತಿಯದ್ದು. ಓದುಗರ ಬೌದ್ಧಿಕ ಅಗತ್ಯವನ್ನು ಸಾಕ್ಷೀಭವಿಸುವಂಥದ್ದು. ಇವೆಲ್ಲದರ ಜೊತೆಗೆ ತಾಂತ್ರಿಕ ಅಂಶವೆಂಬಂತೆ ‘ಆಕಾಲ’ ಮತ್ತು ‘ಈ ಕಾಲ’ ಎಂಬ ವಿಭಾಗದ ಅಡಿಯಲ್ಲಿ ಬದಲಾವಣೆಯ ನಿರೂಪವನ್ನು ಕಾಲ ಸೂಚಕ ಸಾಂಕೇತಿಕತೆಯ ಮೂಲಕವೂ ಓದುಗರ ಮುಂದಿಡುವ ಪ್ರಯತ್ನ ಮಾಡಲಾಗಿದೆ. ಆದರೆ ಇಲ್ಲಿ ‘ಈ ಕಾಲ’ ಎನ್ನುವುದು ಈ ಕಾದಂಬರಿಕಾರನ ಒಡಲೊಳಗಿನಿಂದ ಲಿಖಿತ ದಾಖಲೆಯಾದಂಥೆ ಈ ಆಧುನಿಕ ವರ್ತಮಾನದ ಕಾಲ ಅಲ್ಲವೆನಿಸುತ್ತದೆ. ಕೃಷಿ, ಗುತ್ತುಮನೆಯ ಸಂಸ್ಕೃತಿ ವೈಭವಪೂರಿತವಾಗಿ ಹಿಂದೆ ಇದ್ದ ಮತ್ತು ಶಿಥಿಲವಾಗುತ್ತ ಬಂದು ನಿಂತ ಸ್ಥಿತಿಯನ್ನು ಅಭಿವ್ಯಕ್ತಿಸುವುದಕ್ಕಾಗಿ ಈ ಉಲ್ಲೇಖಗಳಿವೆ. ಈ ಅಂಶಕ್ಕೆ ಪೂರಕವಾಗಿಯೇ ಇತಿಹಾಸದ ಕೆಲವು ಘಟನೆಗಳನ್ನು ಮತ್ತು ಅವುಗಳಿಗೆ ಕಾರಣ ಕರ್ತರಾದ ಐತಿಹಾಸಿಕ ವ್ಯಕ್ತಿಗಳನ್ನು ಪಾತ್ರಗಳಾಗಿ ಬಿಂಬಿಸಲಾಗಿದೆ. ಈ ಆಶಯವು ಪ್ರಾದೇಶಿಕ ಹಿನ್ನೆಲೆಯಲ್ಲಿಯೂ ಮಹತ್ತ್ವದ ಪಾತ್ರ ವಹಿಸುವಂತಿದೆ. ಮಾತ್ರವಲ್ಲ ಈ ಕಥನದ ವಿವರಗಳಿಗೆ ಅಧಿಕೃತತೆಯನ್ನು ವಾಸ್ತವವಾದಿ ನಿರೂಪಣಾ ವೈಖರಿಯನ್ನು ಒದಗಿಸುತ್ತವೆ. ಕಾದಂಬರಿಕಾರರಾದ ಆನಂದ ಕೃಷ್ಣರು ‘ಒಂಜಿ ಅರಿಕೆ’ ಎಂಬ ತನ್ನ ನಿವೇದನೆಯಲ್ಲಿ “ಇಷ್ಟು ದೊಡ್ಡದಾದ, ಒಂದು ನೂರು ವರ್ಷದ ಕತೆಯನ್ನು ಬರೆಯುವಾಗ ಆ ಕಾಲದ ಐತಿಹಾಸಿಕ ವ್ಯಕ್ತಿಗಳು, ಕತೆಗಳು ಪಾತ್ರವಾಗಿ ಬಂದು ಹೋಗಿವೆ. ಕುಂಬಳೆಯ ರಾಮಂತರಸರು, ಬಡಾಜೆಯ ತಂತ್ರಿಗಳು, ಸುಬ್ರಾಯ ಸೇನವರು, ಕಲ್ಯಾಣಪ್ಪ, ಗುಲ್ಲು ಸುಬ್ರಾಯ, ಕೋಟ್ಯಣ್ಣಾಳ್ವರು, ನಂತರದ ಕಾಲದ ಗಾಂಧೀಜಿಯವರು, ದೇವಪ್ಪಾಳ್ವರು ಎಲ್ಲ ಐತಿಹಾಸಿಕ ವ್ಯಕ್ತಿಗಳು, ಕೆಲವರು ಹಾಗಿದ್ದ ವ್ಯಕ್ತಿಗಳು ಪ್ರತಿರೂಪಗಳು” ಆದರೆ ಇವರ ಮಂಜಣ್ಣಾಳ್ವ’ ದೇವಯ ಭಂಡಾರಿ, ದುರ್ಗಪ್ಪ, ಆದಿ ಸೆಟ್ಟಿ, ಬೀರಣ್ಣ, ಮಾಯಿಲ ಎಲ್ಲ ಸೃಜನಶೀಲ ಕಾದಂಬರಿಯ ಕಲ್ಪನೆಯ ವ್ಯಕ್ತಿಗಳು. ಇವರೆಲ್ಲ ಐತಿಹಾಸಿಕವೂ ಅಲ್ಲ. ಐತಿಹಾಸಿಕ ವ್ಯಕ್ತಿಗಳು ಪ್ರತಿರೂಪವೂ ಅಲ್ಲ. ಯಮುನಕ್ಕ, ಸುಬ್ಬಯಣ್ಣ, ಮಾಂಕರಾಲರು, ತ್ಯಾಂಪಣ್ಣ, ಪರಿವಾರ ಎಲ್ಲ ಶುದ್ಧ ಕ್ರಿಯಾ ಶಕ್ತಿಯ ಸೃಷ್ಟಿಗಳು. (ತುಳುವಿನಿಂದ ಕನ್ನಡಕ್ಕೆ ಅನುವಾದ ಆನಂದ ಕೋಡಿಂಬಳ) ಎಂದು ನಿರೂಪಿಸುತ್ತಾರೆ. ಹೀಗೆ ಉಲ್ಲೇಖಿಸುವ ಮೂಲಕ ಓದುಗರಿಗೆ ಆಗಬಹುದಾದ ಗೊಂದಲವನ್ನು ನಿವಾರಿಸುತ್ತಾರೆ.

ಗುತ್ತು ಮನೆ ಮತ್ತು ಆ ಹಿನ್ನೆಲೆಯ ಇಡಿ ವೃತ್ತಿಯನ್ನು ಕೇಂದ್ರವಾಗಿ ಪರಿಗಣಿಸಿಕೊಂಡು ಬೆಳೆಯುವ ಒಟ್ಟು ಕಥನ ಈ ನಾಡಿನ ಮಣ್ಣಿನ ವಾಸನೆಯ, ಸಾಂಸ್ಕೃತಿಕ ಹಿರಿಮೆಯ ದ್ಯೋತಕವೂ ಆಗುತ್ತದೆ. ಕೃಷಿ ಮೂಲವಾಗಿರುವ ಕೂಡು ಕುಟುಂಬ ಅದರಲ್ಲೂ ಗುತ್ತಿನ ಮನೆ ಆ ಪ್ರದೇಶದ ಪ್ರಾದೇಶಿಕತೆಯ ದೃಷ್ಟಿಯಲ್ಲಿ ಪ್ರಮುಖವಾಗುವಂಥದ್ದು. ಆ ಪ್ರದೇಶದಲ್ಲಿ ನಡೆಯುವ ಎಲ್ಲ ದೈನಿಕ, ವಾರ್ಷಿಕ ಆವೃತ್ತಗಳಾಗಿ, ಜಾತ್ರೆ, ಕೋಲ, ಉತ್ಸವಗಳು ಆರಾಧನೆಗಳು, ನಂಬಿಕೆ, ನಡಾವಳಗಳು, ಪೂರಕೆ, ಗದ್ದೆ ಗೋರುವುದು, ಕಂಬಳ, ಹೊಸ ಅಕ್ಕಿ, ಊಟ, ಮನೆ ಒಕ್ಕಲು, ಬಿಸು, ಕೆಡ್ಡಸ ಮುಂತಾದ ತುಳುನಾಡಿನ ಪ್ರತ್ಯೇಕವಾಗಿರುವ ಹಬ್ಬ-ಹರಿದಿನಗಳು, ಆರೋಗ್ಯ ಪೂರ್ಣ ಆಟಗಳು ಮುಂತಾದವುಗಳ ವಿವರಗಳು ಬರುತ್ತವೆ. ಈ ಎಲ್ಲ ವಿವರಗಳು ಕೃತಿಯ ಒಡಲನ್ನು ವಿಸ್ತರಿಸುತ್ತವೆ ಮಾತ್ರವಲ್ಲ ಗುತ್ತು ಮನೆಯ ಕೇಂದ್ರದಲ್ಲಿ ಪರಂಪರೆಯ ಪ್ರತಿಷ್ಠೆಯನ್ನು ಮೆರೆಯುತ್ತವೆ. ಈ ಮೂಲಕ ಒಂದು ಸಾಹಿತ್ಯಿಕ ಕೃತಿಯಲ್ಲಿ ದಾಖಲಾತಿ ಪಡೆದು ತನ್ನ ಅನನ್ಯೆತೆಯನ್ನು ಸಾರುತ್ತವೆ. ಕೆಲವು ಸಂದರ್ಭದಲ್ಲಿ ಅತಿ ಎಂಬಂತೆ ಕಂಡುಬರುವಂತಿದ್ದ ಕಾದಂಬರಿಯ ಒಪ್ಪಂದಕ್ಕೆ ಅವು ಭಾರವಾಗುವಂತೆ ಭಾಸವಾಗುವುದಿಲ್ಲ. ಕೃತಿಕಾರ ಆನಂದ ಕೃಷ್ಣರು ತುಳುನಾಡಿನ ಪಾರಂಪರಿಕ ಮೌಲ್ಯವನ್ನು ಸಾರರೂಪಿಯಾಗಿ ಚಿತ್ರಿಸುವ ಪ್ರಯತ್ನವಾಗಿ ಈ ವಿವರಗಳು ಗಮನಸೆಳೆಯುತ್ತವೆ. ಹಾಗೆಯೇ ಪಾರಂಪರಿಕ ಸಮೃದ್ಧತೆಯ ಸೂಚಿಯಾಗಿಯೂ ನಿವೇದಿತವಾಗುತ್ತವೆ.

‘ಸತ್ಯದ ಸುರಿಯ ಸಾಯದ ಪಗರಿ’ – ಇದು ಮುದ್ದು ಮೂಡು ಬೆಳ್ಳೆಯವರು ಬರೆದ ಕಾದಂಬರಿ. ಇದಕ್ಕೆ ಉಡುಪಿಯ ತುಳುಕೂಟದ ಎಸ್‌.ಯು ಪಣಿಯಾಡಿ ಪ್ರಶಸ್ತಿಯು ಇದಕ್ಕೆ ಸಂದಿದೆ. ತುಳು ಜಾನಪದದಲ್ಲಿ ಐತಿಹ್ಯಾತ್ಮಕವಾಗಿ, ಆರಾಧನೆಗೆ ಒಳಗಾಗಿರುವ ‘ಕಾಂತಾಬಾರೆ ಬೂದಾಬಾರೆ’ ಯನ್ನು ಆಧರಿಸಿ ಈ ಕಾದಂಬರಿಯನ್ನು ಬರೆಯಲಾಗಿದೆ. ಐತಿಹ್ಯವನ್ನು ಕಥನವಾಗಿಸುವಾಗ ಮುದ್ದು ಮೂಡು ಬೆಳ್ಳೆಯವರು ಸಾಕಷ್ಟು ನಾವಿನ್ಯತೆಯನ್ನು ಸಾಧಿಸಿಕೊಂಡಿದ್ದಾರೆ. ಜೊತೆಗೆ ಈ ಐತಿಹ್ಯದ ಮೂಲ ಆಶಯಕ್ಕೆ ಕುಂದು ಬರದ ರೀತಿಯ ಜವಾಬ್ದಾರಿಯು ಎಚ್ಚರವೂ ಅವರಿಗಿದೆ. ಆದುದರಿಂದ ಈ ಕಾದಂಬರಿಯ ಮೂಲಕ ತುಳುನಾಡಿನ ಪಾರಂಪರಿಕ ಮೌಲ್ಯದ ವಸ್ತು ನಿಷೇಧವನ್ನು ಆಧುನಿಕ ಸಂದರ್ಭದ ತೆಕ್ಕೆಯೊಳಗಿಟ್ಟು ನೋಡುವ ಮತ್ತು ಹಾಗೆ ಪರಿಭಾವಿಸುವಾಗ ಮೂಲ ಸ್ವಾರಸ್ಯವು ತನ್ನೆಲ್ಲ ರಕ್ತ – ಸಂಚಾರಿತ ನರನಾಡಿಗಳಲ್ಲಿ ಹೊಸ ಚೈತನ್ಯ ಉಕ್ಕಿಸುವ ಸಾದ್ಯತೆಯನ್ನು ವಿಸ್ತರಿಸುವ ಮನೋಭಾವವನ್ನು ಇಲ್ಲಿ ಕಾಣಬಹುದಾಗಿದೆ. ಐತಿಹ್ಯದ ಕತೆಯನ್ನು ಸರಳವಾದ, ನೇರವಾದ ರೀತಿಯಲ್ಲಿ ಇರುವ ಹಾಗೆಯೇ ನಿರೂಪಿಸುತ್ತಾ ಹೋಗುತ್ತಿದ್ದರೆ ಅದು ಹೊಸ ಸಾದ್ಯತೆಗಳತ್ತ ಗಮನ ಹರಿಸದಂಥ ಉಲ್ಲೇಖ ಮಾತ್ರ ಆಗುತ್ತಿತ್ತು. ಮೂಡು ಬೆಳ್ಳೆಯವರು ಇದನ್ನು ಕಥನಗಾರಿಕೆಯ ಸೂಕ್ಷ್ಮ ಸಂವೇದನೆಯಿಂದ ಆಧುನಿಕ ತಂತ್ರಜ್ಞಾನದ ಕಂಪ್ಯೂಟರ್‌, ಇಂಟರ್‌ನೆಟ್‌, ಈ-ಮೇಲ್‌ಯುಗದ ಜೊತೆಗೆ ಅಪೂರ್ವವಾಗಿ ಹೆಣೆದು ಓದುಗರ ಮುಂದಿಟ್ಟಿದ್ದಾರೆ. ಈ ತಂತ್ರ ಒಂದರ್ಥದಲ್ಲಿ ಸರಳವಾಗಿ ಕಂಡರೂ ಕತೆಯ ನೇಯ್ಗೆಯ ದೃಷ್ಟಿಯಿಂದ ಪರಂಪರಾಗತ ಮೌಲ್ಯವೆನಿಸುವ ಸಂಗತಿಗಳ ಜೊತೆಗೆ ಮುಖಾಮುಖಿ ಆಗ ಬೇಕಾದ ತಾತ್ತ್ವಿಕತೆಯಲ್ಲಿ ಇಂಥ ಒಂದು ಆವರಣ ನಿರ್ಮಾಣ ಮಾಡುವುದು ಅಗತ್ಯವೂ ಹೌದು. ಹಾಗೆ ಪಡೆದುಕೊಳ್ಳುವ ಪ್ರಾದೇಶಿಕತೆಯನ್ನು ನಿಭಾಯಿಸುವ ಎಚ್ಚರ ಮತ್ತು ಜಾಣತನ ಲೇಖಕರ ದೃಷ್ಟಿಯಿಂದ ಮುಖ್ಯವಾಗುತ್ತದೆ. ತುಳು ಸಂಸ್ಕೃತಿಯ ತಾಯಿ ಬೇರಿನಂತಿರುವ ನಂಬಿಕೆ, ನಡಾವಳಿಗಳನ್ನು ಹೊಸ ತಲೆಮಾರಿನ ಜನತೆಗೆ ಈ ಮೂಲಕ ತಲುಪಿಸುವ ಕೆಲಸ ಸ್ತುತ್ಯರ್ಹವಾದುದೇ ಆಗಿದೆ.

ಕುದ್ರೆಪ್ಪಾಡಿ ಜಗನ್ನಾಥ ಆಳ್ವರು ಬರೆದ ‘ಗುತ್ತುದ ಗೌರವೊ’ ಕಾದಂಬರಿಯ ೨೦೦೫ರ ಪಣಿಯಾಡಿ ಪ್ರಶಸ್ತಿ ಪಡೆದ ಕೃತಿ. ಈ ಕೃತಿ ಸರಳ ನಿರೂಪಣೆಯ ಸಾಧಾರಣವಾದ ಒಂದು ಚಿತ್ರಣವನ್ನು ನಿರೂಪಿಸುತ್ತದೆ. ಗುತ್ತುದ ಗೌರವೊ ಎಂಬ ಹೆಸರೇ ಸೂಚಿಸುವಂತೆ ಗುತ್ತಿನ ಮನೆ ಮತ್ತು ಅದರ ಸುತ್ತ ಹೆಣೆಯಲಾದ ಕತೆಯಾಗಿದೆ. ಗುತ್ತಿನ ಮನೆತನ ದೈವ ದೇವರುಗಳನ್ನು ಆರಾಧನೆ ಮಾಡಿಕೊಂಡು ಪಾರಂಪರಿಕ ನೆಲೆಯಲ್ಲಿ ಮೌಲ್ಯವನ್ನು ಉಳಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ‘ಗುತ್ತುದ ಗೌರವೊ’ ಎಂದು ನಿರುಪಿಸಲಾಗಿದೆ. ಇಲ್ಲಿ ಬೋಲಾಡಿ ಗುತ್ತುವಿನ ಕೋಟ್ಯಣ್ಣ ರೈ ಮನೆತನದ ಚಿತ್ರಣ, ಕೋಟ್ಯಣ್ಣ ರೈ ಮತ್ತು ಅವರ ತಮ್ಮ ಸಂಕಪ್ಪ ರೈಯವರ ಮನೋಭಾವ, ವ್ಯಕ್ತಿತ್ವದ ಚಿತ್ರಣಗಳಿಗೆ ಮಹತ್ತ್ವ ನೀಡಲಾಗಿದೆ. ಹಾಗೆಯೇ ‘ಕುದ್ರೆಪ್ಪಾಡಿ ಗುತ್ತು’ವಿನ ವಿಚಾರಗಳನ್ನೂ ವಿವರಿಸಲಾಗಿದೆ. ಸಂಬಂಧಾತ್ಮಕವಾಗಿ ಗುತ್ತಿನ ಮನೆಗಳ ನಡುವೆ ನಡೆಯುವ ಕೊಳು-ಕೊಡೆ ವಿಚಾರಗಳಿಗೆ ಪ್ರಾಧ್ಯಾನ್ಯತೆ ನೀಡಲಾಗಿದೆ. ‘ಗುತ್ತಿನ ಗೌರವೊ’ ಕೃತಿಯನ್ನು ಕ್ರುದ್ರೆಪ್ಪಾಡಿ ಜಗನ್ನಾಥ ಆಳ್ವರು ಕಾದಂಬರಿ ಎಂದು ಕರೆದಿದ್ದರೂ ಈ ಬರವಣಿಗೆಯು ಕಾದಂಬರಿ ಪ್ರಕಾರದ ಬಂಧದ, ಶೈಲಿಯ ಬಿಗುವು ಇಲ್ಲದೆ ಬಹಳ ಸಂದರ್ಭಗಳಲ್ಲಿ ಒಂದು ರೀತಿಯ ನಿರೂಪಣೆಯ ಶಿಥಿಲತೆಯಿಂದ ಸೊರಗಿದಂತೆ ಇದೆ. ಕಾದಂಬರಿಯ ನಿರೂಪಕನೇ ಆಗಲಿ, ಒಳಶರೀರದಲ್ಲಿ ಪ್ರಕಟವಾಗುವ ಪಾತ್ರಗಳೇ ಇರಲಿ ಜಿಔಂತಿಕೆಯಿಂದ ಕೂಡಿದ ಚಲನಶೀಲತೆಯ ಮೂಲಕ ಪಕ್ವವಾಗದೆ ಅಶಕ್ತಯಿಂದ ಕೂಡಿದ ಸರಳವಾದ ಪಾತ್ರವಾಗಿದೆ. ಸನ್ನಿವೇಶಗಳ ಚಿತ್ರಣ, ಪಾತ್ರ ಪೋಷಣೆ, ಕಥಾ ಸಂವಿಧಾನವೂ ಈ ಬರವಣಿಗೆಯನ್ನು ಒಟ್ಟಂದದಲ್ಲಿ ಕಾದಂಬರಿಯಾಗಿಸುವಲ್ಲಿ ಸೋತಿದೆ.

ಬನ್ನಂಜೆ ಬಾಬು ಅಮೀನರು ‘ಪೂ ಪೊದ್ದೊಲು’ ಮತ್ತು ‘ಮಾನೆಚ್ಚಿ’ ಎನ್ನುವ ಎರಡು ಕಾದಂಬರಿಗಳನ್ನು ತುಳು ಭಾಷೆಯಲ್ಲಿ ಬರೆದಿದ್ದಾರೆ. ಪೂ ಪೊದ್ದೊಲು ೨೦೦೩ರಲ್ಲಿ, ಮಾನೆಚ್ಚಿ ೨೦೦೫ರಲ್ಲಿ ಪ್ರಕಟವಾಗಿದೆ. ‘ಪೂ ಪೊದ್ದೊಲು’ ಕಾದಂಬರಿಯು ತುಳು ನಾಡಿನ ಒಂದು ಅಳಿಯ ಸಂತಾನದ ಕೂಡು ಕುಟುಂಬದ ಕತೆಯನ್ನು ಒಳಗೊಂಡ ಕಾದಂಬರಿ. ಮುಖ್ಯ ಭೂಮಿಕೆಯಲ್ಲಿ ಯೆಂಕಣ್ಣ ಎನ್ನುವ ಪಾತ್ರ ಬರುತ್ತದೆ. ಆತ ಊರಿನ ಗುರಿಕಾರರಾದ ಮೈಂದ ಪೂಜಾರಿಯ ಆಶ್ರಮದಲ್ಲಿ ಇರುತ್ತಾನೆ. ತಂಗಿಯಾದ ಬೊಗ್ಗಿಗೆ ಮತ್ತು ತಮ್ಮನಿಗೆ ಮದುವೆ ಮಾಡಿಸಿ ತಾನು ಮದುವೆಯಾಗದೆ ಊರಿಗೆ ಉಪಕಾರಿಯಾಗಿ ಇರುವ ನಿರ್ಧಾರ ಮಾಡುತ್ತಾನೆ. ಊರಿಗೆ ಪಟೇಲರ ಮೊಮ್ಮಗ ಸುಬ್ಬಯ್ಯ ಮತ್ತು ಯೆಂಕಣ್ಣ ಗೆಳೆಯರಾಗುತ್ತಾರೆ. ಮತ್ತು ಊರಿನ ಎಲ್ಲ ವಿಚಾರಗಳಿಗೆ, ಕೆಲಸ ಕಾರ್ಯಗಳಿಗೆ ನೆರವಾಗುತ್ತಾ ಇರುತ್ತಾರೆ. ಕೃಷಿ, ಕೋಲ, ಕಂಬಳ, ಬಿಸಿಲು, ಮಳೆಗಾಲ, ಮದುವೆ, ಪೂಜೆ ಹೀಗೆ ಊರಿನಲ್ಲಿ ಒಂದಲ್ಲ ಒಂದು ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಪೆರಲ ಎನ್ನುವ ಈ ಊರಿನಲ್ಲಿ ಆಧುನಿಕತ ಪ್ರವೇಶಿಸುವಂತೆ ಶಾಲೆ, ಬಸ್ಸು ಹಾಗೆ ಮುಂಬಯಿಯಿಂದ ಹಡಗು ಬರುವುದಿದೆ. ತನ್ನ ಅಳಿಯಂದಿರಾದ ಕೋಟಿ ಮತ್ತು ಚೆನ್ನಯ್ಯರನ್ನು ಯೆಂಕಣ್ಣ ತನ್ನ ಜವಾಬ್ದಾರಿಯಲ್ಲಿಯೇ ಸಾಕಿ ಸಲಹಿ ಅವರನ್ನು ಮುಂಬಯಿಗೆ ಕಳುಹಿಸುತ್ತಾನೆ. ಊರಿಗೆ ಸಾಂಕ್ರಾಮಿಕ ರೋಗ ಹರಡಿ ಉಂಟಾಗುವ ತೊಂದರೆ ತಾಪತ್ರಯಗಳಿಗೆಲ್ಲ ಊರಿನ ಎಲ್ಲರೂ ಒಗ್ಗಟ್ಟಿನಿಂದ ಇರುವುದು ಹೀಗೆ ಊರು ಒಂದು ಆದರ್ಶದ ಊರಾಗಿ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಈ ಕಾದಂಬರಿಯು ಉಡುಪಿಯ ಪ್ರಾದೇಶಿಕ ತುಳು ಭಾಷೆಯನ್ನು ಮತ್ತು ಸುಮಾರು ಐವತ್ತು ಎಪ್ಪತ್ತು ವರ್ಷದ ಹಿಂದಿನ ಸಾಂಸ್ಕೃತಿಕ ಚರಿತ್ರೆಯನ್ನು ಮುಂದಿಡುವಂತಿದೆ. ಕಾದಂಬರಿಯ ತಾಂತ್ರಿಕತೆಯಲ್ಲಿ ಆಧುನಿಕತೆ ಅಥವಾ ನಾವಿನ್ಯತೆ ಕಂಡುಬರದೆ ಸಾಂಪ್ರದಾಯಿಕತೆ ಮಾದರಿಯಲ್ಲಿಯೇ ಘಟನಾವಳಿಗಳನ್ನು ಹೆಣೆದುಕೊಂಡು ಹೋಗಲಾಗಿದೆ. ಹೀಗೆ ನಿರೂಪಿಸುತ್ತಾ ಹೋಗುವಾಗ ಬನ್ನಂಜೆ ಬಾಬು ಅಮೀನರು ವಿವರಣಾತ್ಮಕತೆಗೆ ಹೆಚ್ಚು ಒತ್ತು ಕೊಟ್ಟು ಭಾವನಾತ್ಮಕವಾಗಿ ಬಿಡುತ್ತಾರೆ ಎನ್ನಿಸುತ್ತದೆ. ಆದರೆ ಒಟ್ಟಂದದಲ್ಲಿ ಕಾದಂಬರಿಯಾಗಿಸುವ ಸೂತ್ರಬದ್ಝತೆ ಮತ್ತು ನಿರೂಪಣಾ ಕೌಶಲ್ಯ ಹೃದ್ಯವಾಗಿದೆ.

‘ಮಾನೆಚ್ಚಿ’ ಬನ್ನಂಜೆ ಬಾಬು ಅಮೀನರ ಎರಡನೇ ತುಳು ಕಾದಂಬರಿ. ಇದು ೨೦೦೫ರಲ್ಲಿ ಪ್ರಕಟವಾಗಿದೆ. ಮಾನೆಚ್ಚಿ ಅಂದರೆ ಮನುಷ್ಯನ ಮೈಮೇಲೆ ದೈವ ದರ್ಶನ ಬರುವುದು ಎಂದು ಅರ್ಥ. ಒಂದು ರೀತಿಯಲ್ಲಿ ಈ ಹೆಸರು ಕೃತಿಯ ಒಡಲನ್ನು ಮತ್ತು ಒಟ್ಟು ನೋಟವನ್ನು ಸೂತ್ರರೂಪದಲ್ಲಿ ನಮ್ಮ ಮುಂದಿಡುವಂತಿದೆ. ಇದು ಕೂಡಾ ಇವರ ಹಿಂದಿನ ಕಾದಂಬರಿ ‘ಪೂ ಪೊದ್ದೊಲು’ನಂತೆ ಸುಮಾರು ಅರುವತ್ತು – ಎಪ್ಪತ್ತು ವರ್ಷಗಳಷ್ಟು ಹಿಂದಿನ ಕತೆಯನ್ನೇ ನಿರೂಪಿಸುವ ಕೃತಿ. ಆಧುನಿಕ ಪೂರ್ವದ ತುಳುನಾಡಿನಲ್ಲಿದ್ದ ಕೂಡು ಕುಟುಂಬ, ಗುತ್ತು ಮನೆಗಳು ಸಾಮಾನ್ಯವಾಗಿ ಆಯಾಯ ಊರಿನ ಸಾಂಸ್ಕೃತಿಕ ನೆಲೆಯಲ್ಲಿ ಪ್ರಧಾನವಾದ ಪಾತ್ರವನ್ನು ಹೊಂದಿರುತ್ತವೆ. ಊರಿನ ಸಮಸ್ತರು ಸಾಮಾನ್ಯವಾಗಿ ಇಂಥ ಕೇಂಸ್ರಸ್ಥಾನದ ಸುತ್ತ ಒಂದಲ್ಲ ಒಂದು ಕಾರಣಗಳ ಮೂಲಕ ಸಂಬಂಧ ಹೊಂದಿವರಾಗಿರುತ್ತಾರೆ. ಕೂಡು ಕುಟುಂಬ ಅಥವಾ ಗುತ್ತಿನ ಮನೆಗಳು ಕೃಷಿ ಪ್ರಧಾನವಾದ ವೃತ್ತಿಯನ್ನೇ ಆಶ್ರಯಿಸಿರುವುದಾದರೂ ಊರಿನ ಬಹುಭಾಗ ಭೂಮಿಯೂ ಈ ಮನೆಯ ಒಡೆತನಲ್ಲಿದ್ದು ಉಳಿದ ಬಹುತೇಕ ಜನತೆ ಒಕ್ಕಲುಗಳಾಗಿ ಮೂಲ ಮನೆಯ ಆಶ್ರಯ ಹೊಂದುವುದು ಅನಿವಾರ್ಯತವೂ ಆಗಿಬಿಡುತ್ತಿತ್ತು. ಜೊತೆಗೆ ಆರ್ಥಿಕ ಶ್ರೀಮಂತಿಕೆಯೂ ಈ ಯಜಮಾನ್ಯತೆಯನ್ನು ಪ್ರತಿನಿಧೀಕರಿಸುತ್ತಿತ್ತು. ಇಂಥ ಕೂಡು ಕುಟುಂಬದಲ್ಲಿ ಮನೆಯ ಹಿರಿಯ ಅಣ್ಣ ತಮ್ಮ ಇಬ್ಬರಿದ್ದರೆ ಅಣ್ಣ ತೀರ ಸಾತ್ತ್ವಿಕ ಮನೋಭಾವದವನಾಗಿಯೂ ತಮ್ಮ ರಾಜಸ ಪ್ರವೃತ್ತಿಯವನಾಗಿಯೂ ಇರುವುದು ಸಾಮಾನ್ಯವೆಂದು ಕಾಣುವ ಅಂಶ. ತುಳುನಾಡಿನಲ್ಲಿ ಸಾಮಾನ್ಯವಾಗಿ ಇಂಥ ಚಿತ್ರಣ ಕಂಉಹರುತ್ತದೆ. ಇವು ವಿಶಿಷ್ಟವಾಗಿಯೂ ಇರುತ್ತವೆ.

ತುಳುನಾಡಿನಲ್ಲಿ ಒಂದು ಊರಿಗೆ ಯಾವುದೇ ಹೆಸರು ಸೂಚಿತವಾಗಿ ಬರಲು ಆ ಊರಿನ ಪ್ರಾದೇಶಿಕತೆಯ ವಿಶಿಷ್ಟ ಕಾರಣಗಳು, ಏರು-ತಗ್ಗು, ನೀರಿನ ಆಶ್ರಯ, ಮಣ್ಣಿನ ಲಕ್ಷಣ, ಮರ-ಗಿಡ-ಹುಲ್ಲು ಹಸುರು ಮನೆತನ ಅಥವಾ ಹಿಂದಿನ ಕಾಲದಲ್ಲಿ ಅಲ್ಲಿ ನೆಲೆಸಿದ್ದ ಯಾವುದಾದರೂ ವ್ಯಕ್ತಿಗಳ ವಿಶಿಷ್ಟತೆ, ಯಾವುದಾದರೂ ಜಾತಿ ಜನತೆಯ ಸೂಚಿತವಾಗಿ ಊರಿನ ಹೆಸರು ಚಾಲ್ತಿಗೆ ಬಂದು ಬಿಟ್ಟಿರುತ್ತದೆ. ಈ ಕಾದಂಬರಿಯಲ್ಲಿ ನಿರೂಪಿತವಾಗುವ ಪ್ರದೇಶ ಕೈಕೊಟ್ಟು, ಬೆರಂದೊಟ್ಟು ಎಂಬ ಹೆಸರು ಬರಲು ಕಾರಣವಾಗಿರುವ ಕತೆಯನ್ನು ನಿರೂಪಿಸುತ್ತ ಬರವಣಿಗೆಯನ್ನು ಹೃದ್ಯವಾಗಿಸುವ ನಡೆಯನ್ನೂ ಈ ಕೃತಿಯಲ್ಲಿ ಕಾಣಬಹುದಾಗಿದೆ. ಇಲ್ಲಿ ಇನ್ನೊಂದು ವಿಶಿಷ್ಟವೆನಿಸುವ ಅಂಶವೆಂದರೆ ಕಥನಗಾರಿಕೆ. ಈ ವಿವರಗಳು ಸಾಮಾನ್ಯವೆನಿಸುವಂತಿದ್ದರೂ ಕಥನಗಾರಿಕೆಯಿಂದಾಗಿ ಗಮನಸೆಳೆವಂತಿವೆ. ಕೈರೊಟ್ಟು ಹೆಸರಿನ ಹಿಂದಿನ ಕತೆ, ಬೆರಂದೊಟ್ಟು ಹೆಸರಿನ ಹಿಂದಿನ ಕತೆ, ಪಿಲ್ಚಂಡಿ ಭೂತದ ಕಾರಣಿಕದ ಕತೆ, ಪಿಜಿನ ಪಂಡಿತರ ವ್ಯಕ್ತಿತ್ವ, ಎರಡು ಊರುಗಳನ್ನು ಧಾರ್ಮಿಕವಾಗಿ ಬೆಸೆಯುವ ಮಹಾಲಿಂಗೇಶ್ವರ ದೇವಸ್ಥಾನದ ಕುರಿತ ವಿವರಗಳು, ಊರಿನ ಜಾತಿವಾರು ಹಿನ್ನೆಲೆಯಲ್ಲಿ ಪಟೇಲಗಿರಿಯನ್ನು ಗೌರವಿಸುವುದು, ಯೆಂಕಪ್ಪ ಪೂಂಜರ ವ್ಯಕ್ತಿತ್ವ, ಸೀಂತ್ರಿ ಸುಬ್ಬಯ್ಯಣ್ಣ ಹೀಗೆ ನಾನಾ ವಿವರಗಳು ಸಮೃದ್ಧವಾದ ಸ್ಮೃತಿ ಕೋಶಗಳಂತೆ ಭಾಸವಾಗುತ್ತವೆ.

ಊರಿಗೆ ಆಧುನಿಕತೆ ಪದಾರ್ಪಣೆ ಮಾಡುವಂತೆ ಶಾಲೆಯಲ್ಲಿ ಪ್ರೌಢ ಶಿಕ್ಷಣಕ್ಕೆ ಅವಕಾಶ, ಬಸ್ಸು ಪ್ರವೇಶ, ನಾಗರಿಕತೆ, ಸರಕಾರ ಬೆಳೆಯುವಂತೆ ಜನತೆಯ ಒಲವು ಹೊಸತರತ್ತ ಆಕರ್ಷಿತವಾಗುವುದು ಪಾರಂಪರಿಕ ಮೌಲ್ಯವನ್ನು ಒಪ್ಪಿಕೊಂಡು, ನೆಚ್ಚಿಕೊಂಡು ಆಧುನಿಕ-ನಾಗರಿಕ ವಿದ್ಯಮಾನಗಳ ಜೊತೆ ಹೊಂದಿಕೊಂಡು ಬರುವ ಸಹಜವೆನಿಸುವ ವಿದ್ಯಮಾನಗಳು ಚೇತೋಹಾರಿ ಯಾಗಿವೆ. ತುಳುನಾಡಿನ ಬದುಕಿನ ವಾಸ್ತವ ಚಿತ್ರಣವಾಗಿ ಇವು ಕಾದಂಬರಿಯಲ್ಲಿ ಮುಖ್ಯವಾಗುತ್ತವೆ.

ಬನ್ನೆಂಜೆ ಬಾಬು ಅಮೀನರು ಬಳಸುವ ತುಳು ಭಾಷೆ ಉಡುಪಿ ಪರಿಸರದ ಪ್ರದೇಶಿಕತೆಗೆ ಸೇರಿದ್ದು. ಅಂದರೆ ತುಳು ಭಾಷೆಯೊಂದು ಸಮಗ್ರ ತುಳುನಾಡಿನ ವ್ಯಾಪ್ತಿಯಲ್ಲಿ ಬಳಕೆಯಲ್ಲಿ ಇರುವುದೇ ಆದೂ ಇಲ್ಲೂ ಪ್ರಾದೇಶಿಕ ಭಿನ್ನತೆ ಮತ್ತು ವಿಶಿಷ್ಟತೆ ಇದೆ. ಉಡುಪಿ ತುಳು, ಮಂಗಳೂರು ತುಳು, ಕಾರ್ಕಳದ ತುಳು, ಪುತ್ತೂರು ತುಳು ಎಂದು ಪ್ರಾದೇಶಿಕ ವಿಭಾಗಗಳಾಗಿ ಪರಿಭಾವಿಸುವುದಿದೆ. ಅಮೀನರು ಬಳಸುವ ತುಳು ಭಾಷೆ ಕೇವಲ ಉಡುಪಿ ತುಳು ಎಂಬ ಕಾರಣಕ್ಕೆ ಮುಖ್ಯವಾಗುವುದಲ್ಲ. ಅವರು ಈ ಭಾಷೆತ ಸತ್ತ್ವವನ್ನು ಕಟ್ಟಿಕೊಡುವ ಮತ್ತು ಭಾಷೆಯ ಸಹಜ ಸೌಂದರ್ಯಕ್ಕೆ ಮಹತ್ತ್ವ ನೀಡುವ ರೀತಿಯಲ್ಲಿ ಬಳಸುವುದು ಆ ಭಾಷೆಯೊಳಗಿನ ಸೂಕ್ಷ್ಮತೆ, ಕಾವ್ಯಾತ್ಮಕತೆ, ಗಾದೆಯ ಗುಂಗು ಶಕ್ತವಾಗಿಯೇ ಕಥನದ ಕಲಾತ್ಮಕತೆಯನ್ನು ಹಿಗ್ಗಿಸಿದೆ.

ಆಕರ ಸೂಚಿ

೧. ಪನಿಯಾರ; ಚಿನ್ನಪ್ಪ ಗೌಡ ಕೆ. (ಸಂ) : ೧೯೮೯, ಅಖಿಲ ಭಾರತ ತುಳು ಸಮ್ಮೇಳನ ಸಂಸ್ಕರಣ ಸಂಪುಟ; ತುಳುಕೂಟ, ಮಂಗಳೂರು

೨. ತುಳುವ ಬದುಕು ಕೆಲವು ಮುಖಗಳು; ಅಮೃತ ಸೋಮೇಶ್ವರ; ೧೯೮೪, ಪ್ರಕೃತಿ ಪ್ರಕಾಶ, ಕೋಟೆಕಾರು

೩. ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನ ಸಾಮಾಜಿಕ ಇತಿಹಾಸ; ಕಮಲಾಕ್ಷ ಪಿ, ೧೯೯೮, ಅಂಬೇಡ್ಕರ್‌ನಗರ, ಮಂಗಳೂರು

೪. ತುಳುನಾಡಿನ ಇತಿಹಾಸ; ರಮೇಶ್‌ಕೆ.ವಿ. ೧೯೬೯, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ

೫. ಮಿತ್ಯನಾರಾಯಣ ಕತೆ, ೧೯೩೫, ಶೀನಪ್ಪ ಹೆಗ್ಡೆ

೬. ಸತೀ ಕಮಲೆ, ೧೯೩೬, ಎಸ್‌.ಯು. ಪಣಿಯಾಡಿ

೭. ಚೋಮನ ದುಡಿ, ೧೯೮೩, ಕೆದಂಬಾಡಿ ಜತ್ತಪ್ಪ ರೈ(ಡಾ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯ ತುಳು ಅನುವಾದ)

೮. ಮದಪ್ಪಂದಿ ನೆಂಪು, ೧೯೮೪, ಕೆದಂಬಾಡಿ ಜತ್ತಪ್ಪ ರೈ (ನಿರಂಜನರ ‘ಚಿರಸ್ಮರಣೆ’ ಕನ್ನಡ ಕಾದಂಬರಿಯ ತುಳು ಅನುವಾದ)

೯. ನಾಣಜ್ಜೆರ್‌ಸುದೆ ತಿರ್ಗಾಯೆರ್‌, ೧೯೯೪. ಮಹಾಲಿಂಗ ಭಟ್‌

೧೦. ಬೊಂಬಾಯಿದ ಇಲ್ಲ್‌, ೧೯೯೪. ಕೆ.ಟಿ. ಗಟ್ಟಿ

೧೧ಕುದುರದ ಕೇದಗೆ, ೧೯೯೪, ಜಾನಕಿ ಬ್ರಹ್ಮಾವರ

೧೨. ಲೆಕ್ಕಿಸಿರಿ, ೧೯೯೬, ಕುದ್ಕಾಡಿ ವಿಶ್ವನಾಥ ರೈ

೧೩. ಚಂದ್ರಳ್ಳಿಡ್‌ ಬೊಳ್ಪಾಂಡ್‌, ೧೯೯೭, ಸಂಕಲಕರಿಯ ಕೃಷ್ಣ ಸಾಲಿಯಾನ್‌

೧೪. ನಿಲೆ, ೧೯೯೭, ಮಾಧವ ಪೆರಾಜೆ

೧೫. ಕಪ್ಪು ಗಿಡ, ೧೯೯೮, ಜಾನಕಿ ಬ್ರಹ್ಮಾವರ

೧೬. ಮೂಜಂಜ ಆನಗ, ೧೯೯೯, ಜಿತು ನಿಡ್ಲೆ

೧೭. ಯುಗ ಮಗ್‌ರ್ನಗ, ೨೦೦೨, ಜಾನಕಿ ಬ್ರಹ್ಮಾವರ

೧೮. ಸೊರಗೆದ ಪೂ, ೨೦೦೨, ಜಯಂತಿ ಬಂಗೇರ

೧೯. ದಳವಾಯಿ ದುಗ್ಗಣ, ೨೦೦೩, ಪ್ರಭಾಕರ ನೀರ್‌ಮಾರ್ಗ

೨೦. ರಂಗೆನಾ ಮಲೆ ಮಂಗೆನಾ, ೧೯೯೮, ಯಜ್ಞಾವತಿ ಕೇಶವ ಕಂಗೆನ್‌