“ತುಳು ಭಾಷೆಗೆ ಲಿಖಿತ ಸಾಹಿತ್ಯವಿಲ್ಲ. ಪಾಡ್ದನ, ಕಬಿತ, ಜನಪದ ಕಥೆ ಮೊದಲಾದ ಮೌಖಿಕ ಸಾಹಿತ್ಯಕ್ಕಷ್ಟೇ ಅದು ಸೀಮಿತ” ಎಂಬ ನಂಬಿಕೆಯನ್ನು ಕಳಚಿಕೊಂಡು ತುಳು ಭಾಷೆಯ ಸಾಹಿತ್ಯ ಈಚೆಗೆ ಬೆಳೆಯುತ್ತಿದೆ. ೧೯೮೪ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಪ್ರಕಟಿಸಿದ ಶ್ರೀ ವೆಂಕಟರಾಜ ಪುಣಿಂಚತ್ತಾಯರ ‘ಶ್ರೀ ಭಾಗವತೋ’ ಕೃತಿಯ ಶೋಧನೆಯು ತುಳು ಸಾಹಿತ್ಯದ ದೃಷ್ಟಿಯಿಂದ ಚಾರಿತ್ರಿಕವಾಗಿದೆ. ಮುಂದೆ ‘ತುಳುದೇವಿ ಮಹಾತ್ಮೆ’,‘ಕಾವೇರಿ’ ಮೊದಲಾದ ಗದ್ಯ-ಪದ್ಯ ಕಾವ್ಯಗಳು ಬೆಳಕಿಗೆ ಬಂದು ಪ್ರಕಟವಾದವು. ಇತ್ತೀಚೆಗೆ ಪ್ರಕಟಗೊಂಡ ‘ಮಹಾಭಾರತೋ’ ತುಳುವಿನ ಮೊದಲ ಕಾವ್ಯವೆಂದು ಕಂಡುಬರುತ್ತದೆ. ಈ ಕೃತಿಯು ಪ್ರಾಚೀನ ತುಳು ಸಾಹಿತ್ಯದ ಕುರಿತಾಗಿ ಮಹತ್ವದ ವಿವರಗಳನ್ನು ನೀಡಿದೆ. ಇದರಿಂದ ತುಳುವಿನಲ್ಲಿ ೧೫ನೇ ಶತಮಾನದಿಂದೀಚೆಗೆ ಮಾರ್ಗಕಾವ್ಯ ಪರಂಪರೆಯೊಂದು ಇತ್ತೆನ್ನುವುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ತುಳುವಿಗೆ ೫೦೦ ವರ್ಷಗಳ ಗ್ರಂಥಸ್ಥ ಸಾಹಿತ್ಯ ಪರಂಪರೆ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುವುದು.

ಈ ಮೇಲಿನ ಪ್ರಜ್ಞೆ ಇಲ್ಲದಾಗಲೇ, ಹತ್ತೊಂಬತ್ತನೇ ಶತಮಾನದ ಕೊನೆ ಮತ್ತು ಇಪ್ಪನೆ ಶತಮಾನದ ಆರಂಭದಲ್ಲಿ ತುಳು ಗ್ರಂಥಸ್ಥ ಸಾಹಿತ್ಯ ರಚನೆಯ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಕಾಣುತ್ತೇವೆ. ೧೫೦೦ರಲ್ಲಿ ಭಾಗವತ ಧರ್ಮ ಪ್ರಚಾರದ ಉದ್ದೇಶದಿಂದ ವಾದಿರಾಜರು ‘ದಶಾವತಾರ’ ಗೀತೆಯನ್ನು ರಚಿಸಿದ್ದಾರೆ. ೧೮೪೦ರಿಂದ ೧೯೨೫ರವರೆಗೆ ಬಾಸೆಲ್‌ಮಿಶನ್‌ರವರ ತುಳು ಭಾಷೆ ಮತ್ತು ಸಾಹಿತ್ಯ ಸೇವೆಯು ಮುಖ್ಯವಾಗುತ್ತದೆ. ೧೯೩೦ರಿಂದ ‘ತುಳು ಚಳವಳಿ’ ಎಂದು ಗುರುತಿಸಲ್ಪಡುವ ಸಾಮೂಹಿಕ ಸಾಹಿತ್ಯ ರಚನೆ ಮತ್ತು ಪ್ರಚಾರಕಾರ್ಯಗಳನ್ನು ಕಾಣುತ್ತೇವೆ. ಅಂದಿನಿಂದ ಇಂದಿನವರೆಗೂ ತುಳುವಿನಲ್ಲಿ ವೈವಿಧ್ಯಮಯ ಸಾಹಿತ್ಯ ರಚನೆಯನ್ನು ಕಾಣಬಹುದು. ಹೀಗೆ ೫೦೦ ವರ್ಷಗಳ ಇತಿಹಾಸವಿರುವ ತುಳು ಸಾಹಿತ್ಯ ಚರಿತ್ರೆಯ ಅಧ್ಯಯನಕ್ಕೆ ಈಗ ಸಂಧಿಕಾಲ.

ಬೆಳೆಯುತ್ತಿರುವ ತುಳು ಭಾಷೆಯ ಸಾಹಿತ್ಯ ಚರಿತ್ರೆಯಲ್ಲಿ ಮಂದಾರ ರಾಮಾಯಣದ ರಚನೆ ಒಂದು ಐತಿಹಾಸಿಕ ಸಂಗತಿ. ಹಲವು ದೃಷ್ಟಿಗಳಿಂದ ಇದು ತುಳು ಭಾಷೆಯ ಮಹತ್ವದ ಕೃತಿಯಾಗಿದೆ. ತುಳು ಭಾಷೆಯ ಬರವಣಿಗೆಗೆ ಖಚಿತತೆಯನ್ನು ನೀಡಿದುದು ಈ ಕೃತಿಯ ಹೆಗ್ಗಳಿಕೆ. ತುಳೂಭಾಷೆ ಮತ್ತು ಆ ಭಾಷೆಯನ್ನಾಡುವ ಜನರ ಸಂಸ್ಕೃತಿಗಳಿಗಿರುವ ಸಂಬಂಧಗಳನ್ನು ಕೃತಿ ರಚನೆಯ ದೃಷ್ಟಿಯಿಂದ ವಿಶ್ಲೇಷಿಸಬಹುದಾಗಿದೆ. ಮಂದಾರ ರಾಮಾಯಣವನ್ನು ಕೇಂದ್ರವಾಗಿಟ್ಟುಕೊಂಡು ತುಳುಭಾಷೆ ಸಂಸ್ಕೃತಿ ಮತ್ತು ತುಳು ಗ್ರಂಥಸ್ಥ ಸಾಹಿತ್ಯ ಚರಿತ್ರೆಯ ಬಗ್ಗೆ ಹಲವು ಮಹತ್ವದ ಸಂಗತಿಗಳನ್ನು ವ್ಯಾಖ್ಯಾನಿಸಲು ಸಾಧ್ಯವಿದೆ.

ಒಂದು ಭಾಷೆಯಲ್ಲಿ ಆಧುನಿಕ ಮಹಾಕಾವ್ಯದ ಪ್ರಕಟಣೆ ಮಹತ್ವದ ಸಂಗತಿ. ಆಧುನಿಕ ಕಾವ್ಯಗಳಲ್ಲಿ ಮಹಾಕಾವ್ಯ ಒಂದು ಭಾಷೆಯ ಬೆಳವಣಿಗೆಯ ಸಂಕೇತ. ಭಾಬಗೀತೆ, ಕವನ, ಕಥನಕಾವ್ಯ, ಖಂಡಕಾವ್ಯಗಳನ್ನು ಮೀರಿದ ಈ ಬೆಳವಣಿಗೆ ಭಾಷೆಯ ಬೆಳವಣಿಗೆಯ ಸಮೃದ್ಧಿಯನ್ನು ತೋರಿಸುತ್ತದೆ. ಮಂದಾರ ರಾಮಾಯಣವು ತುಳುವಿನ ಆಧುನಿಕ ಮಹಾಕಾವ್ಯ. ಆರಂಭದಲ್ಲಿ ಮಂದಾರ ರಾಮಾಯಣವನ್ನು ತುಳುವಿನ ಮೊದಲ ಮಹಾಕಾವ್ಯ ಎಂದು ನಂಬಲಾಗಿತ್ತು. ಮಂದಾರ ರಾಮಾಯಣದ ರಚನೆಯ ನಂತರ ತುಳುವಿನಲ್ಲಿ ಪ್ರಾಚೀನ ಮಹಾಕಾವ್ಯ ಪರಂಪರೆಯ ಶೋಧನೆಯ ಹಿನ್ನೆಯಲ್ಲಿ ಮಂದಾರ ರಾಮಾಯಣವನ್ನು ಆಧುನಿಕ ಮಹಾಕಾವ್ಯ ಎನ್ನಬಹುದು. ಆಧುನಿಕ ಮಹಾಕಾವ್ಯದ ಎಲ್ಲಾ ಲಕ್ಷಣಗಳನ್ನು ಈ ಕೃತಿಯಲ್ಲಿ ಗುರುತಿಸಬಹುದಾಗಿದೆ. ಭಾಷೆ, ಛಂದಸ್ಸು, ಕಥಾನಿರ್ವಹಣೆ, ಪಾತ್ರ ನಿರ್ಮಾಣ, ಆಧುನಿಕ ಪ್ರಭಾವ ಎಲ್ಲಾ ದೃಷ್ಟಯಿಂದಲೂ ಮಂದಾರ ರಾಮಾಯಣ ಆಧುನಿಕವಾಗಿದೆ.

ಮಂದಾರ ರಾಮಾಯಣದ ಎರಡು ಅಧ್ಯಾಯಗಳು ಮೊದಲ ಬಾರಿ ೧೯೭೭ರಲ್ಲಿ ಪ್ರಕಟವಾದುವ. ‘ಪುಂಚದ ಬಾಲೆ’ ಮತ್ತಯ ‘ಬಂಗಾರ್ದ ತೊಟ್ಟಿಲ್‌’ ಎಂಬ ಎರಡು ಅಧ್ಯಾಯಗಳನ್ನು ಮಣಿಪಾಲದ ಕನ್ನಡ ಸಂಘವು ಪ್ರಕಟಿಸಿತು. ೧೯೮೧ರಲ್ಲಿ ಮಂಗಳೂರಿನಲ್ಲಿ ರೂಪುಗೊಂಡ ‘ಮಂದಾರ ರಾಮಾಯಣ ಪ್ರಕಾಶನ ಸಮಿತಿ’ ಈ ಭಾಗದ ಎರಡನೇ ಆವೃತ್ತಿಯನ್ನು ಪ್ರಕಟಿಸಿತು. ಪ್ರಕಟಣೆಯ ಹತ್ತು ವರ್ಷಗಳ ಹಿಂದೆಯೇ ಮಂದಾರ ರಾಮಾಯಣ ಕಾವ್ಯರಚನೆ ಆರಂಭವಾಗಿತ್ತು. ಅಂದರೆ ಅರವತ್ತರ ದಶಕದಲ್ಲೇ ಈ ಪ್ರಯತ್ನವನ್ನು ಮಂದಾರರು ಆರಂಭಿಸಿದ್ದರು. ಆಗಲೇ ಮಹಾಕವಿ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ ಕಾವ್ಯ ಜನಪ್ರಿಯವಾಗಿತ್ತು. ಆಧುನಿಕ ಸಂಕೀರ್ಣ ಬದುಕನ್ನು ಮಹಾಕಾವ್ಯದ ಮೂಲಕ ಹಿಡಿದಿರಿಸುವುದು ಕಷ್ಟವೆಂಬ ಪಾಶ್ಚಾತ್ಯ ಮತ್ತು ಪೌರ್ವಾತ್ಯ ವಿದ್ವಾಂಸರ ಅನಿಸಿಕೆಗಳನ್ನು ಸುಳ್ಳು ಮಾಡಿದೆ ಈ ಮಹಾಕೃತಿ. ಇದು ಹಲವು ಆಧುನಿಕ ಮಹಾಕಾವ್ಯಗಳ ಸೃಷ್ಟಿಗೆ ಕಾರಣವಾಯಿತು. ಮಂದಾರ ರಾಮಾಯಣಕ್ಕೂ ಮೂಲ ಪ್ರೇರಣೆ ನೀಡಿದ್ದು ಈ ಕೃತಿ ಎಂಬುದು ಅಧ್ಯಯನ ಮತ್ತು ಕವಿಯ ಉಲ್ಲೇಖಗಳಿಂದ ಕಂಡುಬರುತ್ತದೆ. ಮಂದಾರರು ಕೃತಿ ರಚನೆ ಆರಮಭಿಸಿದ ಇಪ್ಪತ್ತು ವರ್ಷಗಳ ನಂತರ ೧೯೮೭ರಲ್ಲಿ ಬೆಳಗಾವಿಯ ವಜ್ರದೀಪ ಪ್ರಕಾಶನದ ಮೂಲಕ ಈ ಕಾವ್ಯವನ್ನು ಪ್ರಕಟಿಸಿ, ತುಳು ಸಾಹಿತ್ಯ ಬೆಳವಣಿಗೆಯ ಮೈಲುಗಲ್ಲನ್ನು ಸ್ಥಾಪಿಸಿದರು.

ಆಡುಮಾತಿನ ತುಳುಭಾಷೆಯಲ್ಲಿ ಕನ್ನಡದ ಜನಪ್ರಿಯ ಛಂದಸ್ಸಾದ ಲಲಿತ ರಗಳೆಯಲ್ಲಿ, ೧೭೮೯೦ ಸಾಲುಗಳಲ್ಲಿ ಈ ಕೃತಿ ರಚನೆಯಾಗಿದೆ. ಡೆಮಿ ಅಷ್ಟದಳ ಗಾತ್ರದ ೪೨೨ ಪುಟಗಳ ಈ ಕಾವ್ಯದಲ್ಲಿ ಕೆಳಗಿನ ೨೨ ಅಧ್ಯಾಯಗಳಿವೆ.

೧. ಪುಂಚದ ಬಾಲೆ

೨. ಬಂಗಾರ್ದ ತೊಟ್ಟಿಲ್‌

೩. ಅಜ್ಜೇರ ಸಾಲೆ

೪. ಮದಿಮೆದ ದೊಂಪ

೫. ಸೇಲೆದ ಸೋಲು

೬. ಪಟ್ಟೊಗು ಪೆಟ್ಟ್‌

೭. ತೆಲಿಪುನಡೆ ಬುಲಿಪು

೮. ಮೋಕೆದ ಕಡಲ್‌

೯. ಇರೆತ್ತ ಪುರೆ

೧೦. ಪರಬುನ ವರಸಾರಿ

೧೧. ದಗೆ ತೋಜಾದ್‌ಪಗೆ ಸಾದ್ಯಳ್‌

೧೨. ಬೊಳ್ಪುದ ಗುಡ್ಚಿಲ್

೧೩. ಪುಗೆ ತೂಪಿ ಪಗೆ

೧೪. ಮಿತ್ತ ಲೋಕದ ಬಿತ್ತ್‌

೧೫. ಬೆಂದಿನೆನ್‌ತಿಂದೆ

೧೬. ಪಚ್ಚೆದುಂಗಿಲ

೧೭. ನೀಲದುಂಗಿಲ

೧೮. ಕಡಲದಂಡಗ್‌ ಕಾಡದಂಡ್‌

೧೯. ಪೆಟ್ಟ್‌ದಟ್ಟಣೆ

೨೦. ಮಸಣದ ಕತ್ತಲೆ

೨೧. ಬದ್‌ಕ್‌ದ ಬೊಳ್ಪು

೨೨. ಪರ ಬೂಡುಗು ಪೊಸ ಬೊಳ್ಪು

ಮಂದಾರ ರಾಮಾಯಣವು ಹಲವು ವೈಶಿಷ್ಟ್ಯಗಳಿಂದ ಕೂಡಿದ ಮಹಾಕಾವ್ಯ. ಕಾವ್ಯ ಭಾಷೆಯಿಂದ ಬಿಡಿಸಿಕೊಂಡು, ಆಡುನುಡಿಯನ್ನು ಕಾವ್ಯ ಭಾಷೆಯನ್ನಾಗಿ ಬಳಸಿ ಪೂರ್ಣ ಪ್ರಮಾಣದಲ್ಲಿ ಮಹಾಕಾವ್ಯದ ಘನತೆ – ಗಾಂಭೀರ್ಯಗಳನ್ನು ಒಳಗೊಂಡ ಆಧುನಿಕ ತುಳು ಮಹಾಕಾವ್ಯವಾಗಿ ಮೂಡಿಬಂದಿದೆ. ವಾಲ್ಮೀಕಿ ಪರಂಪರೆಯ ಕನ್ನಡ ರಾಮಾಯಣಗಳಿಂದ ಪ್ರಭಾವಿತವಾಗಿ ಕಥೆಗೆ ಒಂದು ಹೊಸ ಸಾಂಸ್ಕೃತಿಕ ಆಯಾಮವನ್ನು ನೀಡಿದವರು ಮಂದಾರರು. ತುಳುನಾಡಿನ ಜನ-ಸಂಸ್ಕೃತಿ-ಭೌಗೋಳಿಕ ಪ್ರದೇಶಗಳನ್ನು ಒಳಗೊಂಡ ಕಥೆಯಾಗಿದೆ. ತುಳುನಾಡಿನಲ್ಲಿ ತುಳುವರ ನಡುವೆಯೇ ನಡೆದಿದೆ ಎನ್ನುವ ರೀತಿಯಲ್ಲಿ ಕೃತಿಗೆ ಹೊಸ ಆಯಾಮವನ್ನು ನೀಡಿದ್ದಾರೆ. ಕಥೆಯ ಪಾತ್ರ ಮತ್ತು ಪ್ರದೇಶಗಳನ್ನು ರಾಮಾಯಣದಲ್ಲಿದ್ದಂತೆ ಬಳಸಿ ತುಳುನಾಡಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಪತಿಸರದಲ್ಲಿ ನಡೆದಂತೆ ಚಿತ್ರಿಸಲಾಗಿದೆ. “ರಾಮಾಯಣದ ಬೀಜವನ್ನು ತುಳುನಾಡಿನ ಮಣ್ಣು, ಗಾಳಿ, ನೀರು, ಬೆಳಕಿನ ಗುಣಗಳಲ್ಲಿ ಇಲ್ಲಿನ ಸೊಪ್ಪು ಗೊಬ್ಬರದ ಬಲದಲ್ಲಿ ಬೆಳೆ ತೆಗೆಯುವ, ತೆಗೆದ ಬೆಳೆಯ ಗುಣ, ರೀತಿ, ತೂಕ ಹೇಗಿದೆಯೆಂದು ನೋಡಲು ಮಾಡಿದ ಕೆಲಸದ ಫಲವೇ ಮಂದಾರ ರಾಮಾಯಣ’ ಎಂದು ಮಂದಾರರು ಆರಂಭದ ಉಪಕಾರ ಸ್ಮರಣೆಯಲ್ಲಿ ಹೇಳಿದ ಮಾತು ಕಾವ್ಯದ ವೈಶಿಷ್ಟ್ಯವನ್ನು ಸೂಚಿಸುತ್ತದೆ. ಕವಿಗೆ ರಾಮಾಯಣದ ಕಥೆಯನ್ನು ಹೇಳುವಷ್ಟೇ ಆಸಕ್ತಿ ತುಳುನಾಡಿನ ನೆಲ ಮತ್ತು ಸಂಸ್ಕೃತಿಯನ್ನು ವಿವರಿಸುವಲ್ಲಿಯೂ ಇದೆ. ಇದರಿಂದಲೇ “ಕಡಲ ತೀರದ ತುಳುನಾಡಿನ ಬಣ್ಣದ ಬದುಕನ್ನು ಮೂರು ಲೋಕದಲ್ಲಿ ನೋಡುವ ನನ್ನ ಕಣ್ಣಿಗೆ ಕಾಣುವ ಹಾಗೆ ಕಥೆಯನ್ನು ಬರೆಯುತ್ತೇನೆ” ಎನ್ನುತ್ತಾರೆ.

ಮಂದಾರ ರಾಮಾಯಣದ ವೈಶಿಷ್ಟ್ಯವಿರುವುದು ಎರಡು ಅಂಶಗಳಲ್ಲಿ ಒಂದು, ಕವಿ ಬಳಸಿರುವ ತುಳುಭಾಷೆ. ಎರಡು, ಕಾವ್ಯದಲ್ಲಿ ವ್ಯಕ್ತವಾಗಿರುವ ತುಳುನಾಡಿನ ಸಂಸ್ಕೃತಿ. ತುಳುವರ ದಿನನಿತ್ಯ ಬಳಕೆಯ ಆಡುಭಾಷೆಯನ್ನು ಕಾವ್ಯ ಭಾಷೆಯಾಗಿ ಬಳಸಿದ್ದಾರೆ. ಹೆಚ್ಚಿನ ಆಧುನಿಕ ಮಹಾಕಾವ್ಯಗಳಲ್ಲಿ ಆಧುನಿಕ ಸಾಹಿತ್ಯ ಭಾಷೆಯನ್ನು ಬಳಸದೆ ತುಸು ಮಾರ್ಗವೆನ್ನುವ ಶೈಲಿಯನ್ನು ಬಳಸಲಾಗಿದೆ. ಕುವೆಂಪುರವರ ‘ಶ್ರೀರಾಮಾಯಣದರ್ಶನಂ’, ವಿ. ಕೃ. ಗೋಕಾಕರ ‘ಭಾರತ ಸಿಂಧುರಶ್ಮಿ’ ಕೃತಿಗಳನ್ನು ಈ ದೃಷ್ಟಿಯಿಂದ ಗಮನಿಸಬಹುದು. ಆದರೆ ಮಂದಾರರು ಆಡುನುಡಿಯನ್ನು ಮಹಾಕಾವ್ಯದ ಗಾಂಭೀರ್ಯಕ್ಕೆ ಅನುಗುಣವಾಗಿ ಸಮರ್ಥವಾಗಿ ಬಳಸಿದ್ದಾರೆ. ಇದು ಕವಿಯ ಬಹುದೊಡ್ಡ ಸಾಧನೆಯಾಗಿದೆ. ತುಳು ಪಾಡ್ದನ, ಕಬಿತ, ಕಥೆ, ಒಗಟು, ಗಾದೆ ಮುಂತಾದ ತುಳು ಮೌಖಿಕ ಸಾಹಿತ್ಯ ಹಾಗೂ ಆಡುನುಡಿಯಿಂದ ತಮ್ಮ ಭಾಷೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಆರಂಭದಿಂದ ಮುಕ್ತಾಯದವರೆಗೂ ಮಾರ್ಗಶೈಇಯ ಗಂಭೀರ ಸಂಸ್ಕೃತ ಪದಗಳಿಗೆ ಬದಲಾಗಿ ಸೊಗಸಾದ ತುಳು ಪದಗಳನ್ನು ಬಳಸಿದ್ದಾರೆ. ಅಸಂಖ್ಯಾತ ತುಳುನುಡಿಗಳು, ನುಡಿಗಟ್ಟುಗಳು, ಲೋಕೋಕ್ತಿಗಳು, ಗಾದೆಗಳು, ಮಂದಾರ ರಾಮಾಯಣದ ಪುಟ ಪುಟಗಳಲ್ಲಿ ಕಾಣಸಿಗತ್ತವೆ.

ಮಂದಾರ ರಾಮಾಯಣದ ಇನ್ನೊಂದು ವೈಶಿಷ್ಟ್ಯವಿರುವುದು ರಾಮಾಯಣದ ಕಥೆಯ ಮೂಲಕ ತುಳುನಾಡಿನ ಸಂಸ್ಕೃತಿಯ ನಿರೂಪಣೆಯಲ್ಲಿ. ಇಂದು ಆಧುನಿಕತೆಯ ಪರಿಣಾಮವಾಗಿ ತುಳುನಾಡಿನ ಮೂಲ ಸಂಸ್ಕೃತಿಯ ಛಾಯೆ ಅಸ್ಪಷ್ಟವಾಗುತ್ತಾ, ತುಳುನಾಡು ಹೊಸ ರೂಪಗಳನ್ನು ಪಡೆಯುತ್ತಿದೆ. ಮೌಖಿಕ ಸಾಹಿತ್ಯ, ಹಿರಿಯರ ಅನುಭವ ಮತ್ತು ಕೆಲವು ನಂಬಿಕೆ, ಆಚರಣೆಗಳಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಕಾಣಲು ಸಾಧ್ಯ. ಈ ದೃಷ್ಟಿಯಿಂದ ಮಂದಾರ ರಾಮಾಯಣವು ಮಹತ್ವದ್ದಾಗುತ್ತದೆ. ತುಳುವಿನ ಪ್ರಾಚೀನ ದೇಸಿ ಸಂಸ್ಕೃತಿಯ ಸಮಗ್ರ ಸ್ವರೂಪವನ್ನು ಮಂದಾರ ರಾಮಾಯಣದಲ್ಲಿ ಗುರುತಿಸಬಹುದಾಗಿದೆ. ತುಳುನಾಡಿನ ಜನ, ಅವರ ರೀತಿ-ನೀತಿಗಳು, ಆಚರಣೆ-ನಂಬಿಕೆಗಳು, ಕಸುಬುಗಳು, ಜನಾಂಗಗಳು, ಅವರ ಭಾವನೆಗಳು ತುಳುನಾಡಿನ ವೈಶಿಷ್ಟ್ಯಳಾದ ಕೋಲ, ನೇಮ, ವತಂಬಿಲ, ಆಲಡೆ, ನಾಗಮಂಡಲ, ಕಂಬಳ, ಕೋಳಿ ಅಂಕ ಇತ್ಯಾದಿಗಳ ವಿವರಗಳು ಸಾಂದರ್ಭಿಕವಾಗಿ ಬಂದಿವೆ. ತುಳುನಾಡಿನ ಸಮಗ್ರ ಸಂಸ್ಕೃತಿಯ ಪೂರ್ಣ ಚಿತ್ರಣವನ್ನು ಕಾಣಬಹುದಾಗಿದೆ.

ವಾಲ್ಮೀಕಿಯ ಪರಂಪರೆಯಲ್ಲಿ ಬಂದ ಕನ್ನಡದ ತೊರವೆ ರಾಮಾಯಣದ ಕಥಾಸರಣಿಯನ್ನು ಅನುಸರಿಸಿದರೂ ಕಥೆಯ ದೃಷ್ಟಿಯಿಂದ ಮಂದಾರ ರಾಮಾಯಣದಲ್ಲಿ ಹಲವು ವ್ಯತ್ಯಾಸಗಳನ್ನು ಮಾಡಿಕೊಳ್ಳಲಾಗಿದೆ. ಕೃತಿಗಳಲ್ಲಿ ಮೂವತ್ತರಷ್ಟು ಕಥಾ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಕೆಲವು ಪಾತ್ರಗಳ ಗುಣಸ್ವಭಾವಗಳಲ್ಲಿ ವ್ಯತ್ಯಾಸ ಮಾಡಲಾಗಿದೆ. ತುಳುನಾಡಿನ ಹಿನ್ನೆಲೆಯಲ್ಲಿ ಹಲವು ಹೊಸ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಈ ಮೇಲಿನ ಹಲವು ದೃಷ್ಟಿಗಳಿಂದ ಮಂದಾರ ರಾಮಾಯಣವು ಅಧ್ಯಯನಯೋಗ್ಯ ಕೃತಿಯಾಗಿದೆ.

ಮಂದಾರ ರಾಮಾಯಣದ ರಚನೆ ತುಳು ಸಾಹಿತ್ಯ ಚರಿತ್ರೆಗೆ ಹೊಸ ತಿರುವನ್ನು ನೀಡಿದೆ. ೧೯೩೦ ರಿಂದ ಈಚೆಗೆ ಭಾಷಾಪ್ರೇಮದಿಂದ ಉಂಟಾದ ತುಳು ಚಳವಳಿಯ ಹೆಸರಿನಲ್ಲಿ ಆರಂಭಗೊಂಡು, ಮುಂದುವರಿದುಕೊಂಡು ಬಂದ ತುಳು ಸಾಹಿತ್ಯಸೃಷ್ಟಿ ಮಂದಾರ ರಾಮಾಯಣದ ರಚನೆಯಿಂದ ಒಂದು ಮುಖ್ಯ ಘಟ್ಟವನ್ನು ತಲುಪಿದೆ. ಇದೇ ಸಂದರ್ಭದಲ್ಲಿ ತುಳುವಿನ ಪ್ರಾಚೀನ ಮಾರ್ಗಕಾವ್ಯ ಪರಂಪರೆಯೂ ಶೋಧನೆಯಾಯಿತು. ಇದರಿಂದ ತುಳು ಸಾಹಿತ್ಯ ಚರಿತ್ರೆಯು ಖಚಿತತೆಯನ್ನು ಪಡೆಯಿತು. ಮಂದಾರ ರಾಮಾಯಣದ ನಂತರ ತುಳು ಸಾಹಿತ್ಯ ರಚನೆ ವಿಶಿಷ್ಟ ವೇಗವನ್ನು ಪಡೆಯಿತು. ತುಳುಭಾಷೆ ಮತ್ತು ಸಾಹಿತ್ಯ ಚರಿತ್ರೆಯ ಅಧ್ಯಯನಕ್ಕೆ ಇಂದು ಸಂಧಿಕಾಲ. ಮಂದಾರ ರಾಮಾಯಣವನ್ನು ಕೇಂದ್ರವಾಗಿಟ್ಟುಕೊಂಡು ಇಡೀ ತುಳು ಸಾಹಿತ್ಯರಚನೆಯ ಹಿನ್ನೆಲೆಯನ್ನು ವಿಶ್ಲೇಷಿಸಬಹುದಾಗಿದೆ.

ಮಂದಾರ ರಾಮಾಯಣದ ಅನನ್ಯತೆಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ರಾಮಾಯಣ ಕಥೆಗಳ ತೌಲನಿಕ ಅಧ್ಯಯನ ಮಹತ್ವದ್ದಾಗಿದೆ. ‘ಮಂದಾರ ರಾಮಾಯಣ’ ತುಳು ಭಾಷೆಯ ಲಿಖಿತ ಪರಂಪರೆಯ ಮೊದಲ ರಾಮಾಯಣ ಕೃತಿಯಾಗಿದೆ. ಈ ಕೃತಿಯು ರಾಮಾಯಣದ ಚೌಕಟ್ಟನ್ನು ಹೊರ ಆವರಣವನ್ನಾಗಿ ಬಳಸಿ, ತುಳು ಸಂಸ್ಕೃತಿಯನ್ನು ಬಿಂಬಿಸುವ ಮಾಧ್ಯಮವಾಗಿರುವುದು ಮೇಲ್ನೋಟದ ಅಧ್ಯಯನದಿಂದ ಸ್ಪಷ್ಟವಾಗುತ್ತದೆ. ಮಂದಾರ ರಾಮಾಯಣದ ಈ ಮಹತ್ವದ ಅಂಶವನ್ನು ಸ್ಪಷ್ಟಪಡಿಸಬೇಕಾದರೆ ಅನ್ಯ ರಾಮಾಯಣ ಕೃತಿಗಳೊಂದಿಗೆ ಅದನ್ನು ಹೋಲಿಸುವುದು ಅನಿವಾರ್ಯವಾಗಿದೆ. ಕಥೆಯ ದೃಷ್ಟಿಯಿಂದ ಅದು ಕೆಲವು ಕಡೆ ಸ್ವತಂತ್ರ ದಾರಿಯನ್ನು ಹಿಡಿದಿದ್ದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಅನ್ಯ ಕೃತಿಗಳಿಂದ ಪ್ರೇರಣೆಯನ್ನು ಪಡೆದಿದೆ. ಸಂಸ್ಕೃತ ಕನ್ನಡ ರಾಮಾಯಣ ಕೃತಿಗಳ ಪ್ರಭಾವವು ದಟ್ಟವಾಗಿದೆ. ವೈದಿಕ-ಜೈನ ರಾಮಾಯಣ ಪರಂಪರೆಗಳ ಪ್ರಭಾವವೂ ಈ ಕೃತಿಯ ಮೇಲಿದೆ.

ಕವಿ ಮಂದಾರರಿಗೆ ಸಂಸ್ಕೃತ ಭಾಷೆಯಲ್ಲಿ ಪರಿಣತಿಯಿತ್ತು. ಸಂಸ್ಕೃತ ರಾಮಾಯಣ ಕೃತಿಗಳು ಮತ್ತು ಕನ್ನಡದ ಮುಖ್ಯ ರಾಮಾಯಣ ಕೃತಿಗಳನ್ನು ಆಳವಾಗಿ ಅವರು ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯದ ಆಳವಾದ ಪರಿಚಯ ಅವರಿಗಿದೆ. ಯಕ್ಷಗಾನದ ಅಪಾರವಾದ ಪರಿಶ್ರಮವು ಇದೆ. ಯಕ್ಷಗಾನ ಕೃತಿಗಳನ್ನು ರಚಿಸಿದ್ದು ಮಾತ್ರವಲ್ಲ, ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. ರಾಮಾಯಣ ಕಥೆಯ ವೈವಿಧ್ಯಮಯ ಬೆಳವಣಿಗೆಯನ್ನು ಯಕ್ಷಗಾನ ರಂಗಭೂಮಿಯಲ್ಲೂ ಗುರುತಿಸಬಹುದು. ಇದರಿಂದ ಯಕ್ಷಗಾನದ ಮೂಲಕವೂ ರಾಮಾಯಣ ಕಥೆಯ ವೈವಿಧ್ಯಮಯ ಪ್ರಯತ್ನಗಳನ್ನು ಅವರು ಕಂಡಿದ್ದಾರೆ. ಜನಪದ ಮೌಖಿಕ ಸಾಹಿತ್ಯದ ಪರಿಚಯದಿಂದಾಗಿ ಪಾಡ್ದನ ಮತ್ತು ಜನಪದ ಕಥೆಗಳು ಕೂಡಾ ಅವರ ಮೇಲೆ ಪ್ರಭಾವ ಬೀರಿವೆ. ಈ ಎಲ್ಲಾ ಪ್ರಭಾವಗಳ ಹಿನ್ನೆಲೆಯಲ್ಲಿ ‘ಮಂದಾರ ರಾಮಾಯಣ’ ರೂಪುಗೊಂಡಿದೆ.

ಮಂದಾರ ರಾಮಾಯಣದ ಮೇಲೆ ರಾಮಾಯಣದ ಕೃತಿಗಳ ಪ್ರಭಾವ

ವಿವಿಧ ರಾಮಾಯಣದ ಪರಂಪರೆಗಳ ಅಧ್ಯಯನದ ಹಿನ್ನೆಲೆಯಲ್ಲಿ ಮಂದಾರ ರಾಮಾಯಣದ ಪರಂಪರೆಯ ಬಗ್ಗೆ ಸ್ಪಷ್ಟ ಅಭಿಪ್ರಾಯಕ್ಕೆ ಬರಬಹುದು. ಬೌದ್ಧ ರಾಮಾಯಣದ ಪ್ರಭಾವ ಈ ಕೃತಿಯ ಮೇಲೆ ಇಲ್ಲ. ಅದರ ಅರಿವು ಕವಿಗೆ ಇದ್ದಂತಿಲ್ಲ. ಜನಪದ ರಾಮಾಯಣದ ಪ್ರಭಾವದ ಬಗ್ಗೆ ಅವರನ್ನು ಸಂದರ್ಶನದಲ್ಲಿ ಪ್ರಶ್ನಿಸಿದಾಗ ಈ ರೀತಿ ಉತ್ತರಿಸುತ್ತಾರೆ. “ಜನಪದ ರಾಮಾಯಣದ ಕಥೆಗಳ ಪ್ರಭಾವವಿಲ್ಲದಿದ್ದರೂ ಜನಪದ ಕಥೆಗಳು ನನ್ನ ಮೇಲೆ ದಟ್ಟ ಪ್ರಭಾವ ಬೀರಿವೆ. ಜನಪದ ಕಥೆಗಳ ‘ಕಾಲ್ಪನಿಕ ಲೋಕ’. ಅದು ವಿಕಾಸಗೊಳ್ಳುವ ಬಗೆ, ಅದರ ಸಂವಿಧಾನಶಿಲ್ಪ ಇವೆಲ್ಲ ಅನನ್ಯವಾದುದು. ಚಿಕ್ಕಂದಿನಲ್ಲಿ ಇಂತಹ ನೂರಾರು ಕಥೆಗಳನ್ನು ಕೇಳಿದ್ದೇನೆ. ಇದರಿಂದ ಜನಪರ ಕಥೆಗಳ ವಿಕಾಸದ ರೀತಿ ನನ್ನ ಮೇಲೆ ಪ್ರಭಾವ ಬೀರಿದೆ. ಅದರಲ್ಲೂ ಅವು ಹೆಚ್ಚು ಕ್ಲಿಷ್ಟವಾಗಿರದೆ ಸರಳವಾಗಿರುವುದು ಮಹತ್ವವಾಗಿದೆ. ಇದರಿಂದ ನಿರೂಪಣೆಯ ದೃಷ್ಟಿಯಿಂದ ಜನಪದ ಕಥೆಗಳು ನನ್ನ ಮೇಲೆ ಪ್ರಭಾವ ಬೀರಿವೆ”. ಮಂದಾರ ರಾಮಾಯಣದಲ್ಲಿ ಈ ಪ್ರಭಾವವನ್ನು ಅಲ್ಲಲ್ಲಿ ಕಾಣಬಹುದಾಗಿದೆ.

ಇಲ್ಲಿ ಜನಪದ ಕಥೆ, ಕಾವ್ಯಗಳ ಪ್ರಭಾವ ಮಂದಾರ ರಾಮಾಯಣದ ಮೇಲಾಗಿದೆ ಎಂಬುದು ಸ್ಪಷ್ಟವಾದರೂ ಜನಪದ ರಾಮಾಯಣ ಪರಂಪರೆಯ ಪ್ರಭಾವ ಈ ಕೃತಿಯ ಮೇಲಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುವುದು. ಜೈನ ರಾಮಾಯಣ ಪರಂಪರೆಯ ನಾಗಚಂದ್ರನ ಪ್ರಭಾವ ಕವಿಯ ಮೇಲಾಗಿದೆ. ಪಾತ್ರ ಚಿತ್ರಣ ಮತ್ತು ಪ್ರಕೃತಿ ವರ್ಣನೆಯಲ್ಲಿ ಮಾತ್ರ ಈ ಪ್ರಭಾವವನ್ನು ಗುರುತಿಸಬಹುದು. ಉಳಿದಂತೆ ವೈದಿಕ ಪರಂಪರೆಯ ಕೃತಿಗಳಿಂದಲೇ ಮಂದಾರ ರಾಮಾಯಣ ಪ್ರಭಾವಿತವಾಗಿದೆ. ವೈದಿಕ ರಾಮಾಯಣದ ಕೃತಿಗಳಾದ ಸಂಸ್ಕೃತದ ವಾಲ್ಮೀಕಿ ರಾಮಾಯಣ, ಕನ್ನಡದ ‘ತೊರವೆ ರಾಮಾಯಣ’ ಮತ್ತು ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ನಂತಹ ಕೃತಿಗಳಿಂದ ಪ್ರಭಾವಿತವಾಗಿದೆ. ಈ ಪರಂಪರೆಗಳ ಪ್ರಭಾವದಿಂದ ಮಂದಾರ ರಾಮಾಯಣ ರೂಪುಗೊಂಡುದನ್ನು ಹೀಗೆ ಗುರುತಿಸಬಹುದು.

ವಾಲ್ಮೀಕಿ ರಾಮಾಯಣ ಮತ್ತು ಮಂದಾರ ರಾಮಾಯಣ

ಮಂದಾರ ರಾಮಾಯಣ ಕೃತಿಗೆ ವಾಲ್ಮೀಕಿ ರಾಮಾಯಣವೇ ಮೂಲ ಪ್ರೇರಣೆ. ಕಥಾ ಸಂದರ್ಭದಲ್ಲಿ ಕವಿ ಪ್ರತಿ ಹಂತದಲ್ಲೂ ವಾಲ್ಮೀಕಿ ರಾಮಾಯಣದ ಕಥೆಯನ್ನೇ ಅನುಸರಿಸಿದ್ದಾರೆ. ಆದರೆ ಭೌಗೋಳಿಕ ಮತ್ತು ಸಾಂಸ್ಕೃತಿಕ ವಿವರಗಳಲ್ಲಿ ಕೃತಿಯ ಸ್ವಂತಿಕೆ ಎದ್ದು ಕಾಣುತ್ತದೆ. ಅಲ್ಲದೆ ಕಥಾರೀತಿಯನ್ನು ಬದಲಾವಣೆ ಮಾಡಿಕೊಂಡು ಬರೆದಿರುವುದು ಸ್ಪಷ್ಟವಾಗುತ್ತದೆ.

“ನಾರದೆರೆ ಚುಟುಕು ಗೀಮಾಯಣೊಡ್ಡದ. ವಾ
ಲ್ಮೀಕಿನ ರಾಮಾಯಣೋಡ್ಡೇತೋ ಕುದ್ಯ. ಅಂ
ಚಾಯಿ ನೆದ್ದುಂದು ಗೀಮಾಯಣಲ ಅತ್ತ್‌, ರಾ
ಮಾಯಣಲಾ ಇಂದತ್ತ್‌, ಇಂದೊಂಜೆ ಪಿಟ್ಕಾಯಣ”
(ನಾರದರ ‘ಗುಟುಕು ರಾಮಾಯಣ’ಕ್ಕಿಂತ ಉದ್ದ, ವಾ
ಲ್ಮೀಕಿಯ ರಾಮಾಯಣಕ್ಕಿಂತ ಎಷ್ಟೋ ಗಿಡ್ಡ, ಅದ
ದಿಂದಾಗಿದು ಗೀಮಾಯಣವೂ ಅಲ್ಲ ರಾ
ಮಾಯಣವೂ ಅಲ್ಲ. ಇದೊಂದು ಪಿಟ್ಕಾಯಣ).

ಈ ಮೇಲಿನ ಮಾತು ಮಂದಾರ ರಾಮಾಯಣವು ವಾಲ್ಮೀಕಿ ರಾಮಾಯಣವನ್ನು ಅನುಸರಿಸಿರುವುದನ್ನು ಸ್ಪಷ್ಟಪಡಿಸುತ್ತದೆ. ೨೪,೦೦೦ ಶ್ಲೋಕಗಳಿರುವ ಮಹಾಕೃತಿ ವಾಲ್ಮೀಕಿ ರಾಮಾಯಣ. ಆದರೆ ಮಂದಾರ ರಾಮಾಯಣವು ೪೨೫ ಪುಟಗಳ ೧೨,೮೫೦ ಸಾಲುಗಳಿರುವ ಸರಳ ರಗಳೆ ಛಂದಸ್ಸಿನ ಕೃತಿ. ಗಾತ್ರದ ದೃಷ್ಟಿಯಿಂದ ವಾಲ್ಮೀಕಿಯ ಕೃತಿ ಎಷ್ಟೋ ದೊಡ್ಡದು. ಇದರಿಂದಾಗಿ ಮಂದಾರ ರಾಮಾಯಣದ ಕವಿ ಕಥಾಚಲನೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ವಾಲ್ಮೀಕಿ ರಾಮಾಯಣದ ಆರಂಭವು ಮಂದಾರ ರಾಮಾಯಣಕ್ಕಿಂತ ಭಿನ್ನವಾಗಿರುವುದನ್ನೂ, ವಿವರವಾಗಿರುವುದನ್ನೂ ಗಮನಿಸಬಹುದಾಗಿದೆ. ವಾಲ್ಮೀಕಿ ರಾಮಾಯಣದ ಆರಂಭದಲ್ಲಿ ನಾರದು ವಾಲ್ಮೀಕಿಗೆ ಹೇಳಿದ ಸಂಕ್ಷಿಪ್ತ ರಾಮಾಯಣದ ಕಥೆ ಬರುತ್ತದೆ. ಎರಡನೇ ಸರ್ಗದಲ್ಲಿ ವಾಲ್ಮೀಕಿಗೆ ಬ್ರಹ್ಮನ ಅನುಗ್ರಹ ಮತ್ತು ರಾಮಾಯಣದ ಕಾವ್ಯರಚನೆಯ ವಿವರಗಳು ದೊರೆಯುತ್ತವೆ. ಮೂರನೇ ಸರ್ಗದಲ್ಲಿ ರಮಾಯಣದ ಕಥಾ ಸಾರಾಂಶವೂ, ನಾಲ್ಕನೇ ಸರ್ಗದಲ್ಲಿ ಲವಕುಶರು ರಾಮಾಯಣದ ಕಥೆಯನ್ನು ಗಾನ ಮಾಡಿದ ವಿಚಾರವೂ ಬರುತ್ತದೆ. ಹೀಗೆ ನಾಲ್ಕು ಸರ್ಗಗಳು ಪೀಠಿಕಾ ರೂಪದಲ್ಲಿದ್ದರೆ, ಐದನೇ ಸರ್ಗದಿಂದಲೇ ನಿಜವಾದ ಕಥೆ ಆರಂಭವಾಗುವುದು.

ಆದರೆ ಮಂದಾರ ರಾಮಾಯಣದ ಆರಂಭವು ವಾಲ್ಮೀಕಿಯ ಕೃತಿಗಿಂತ ತೀರಾ ಭಿನ್ನವಾಗಿದೆ. ಇಲ್ಲಿ ಗುರು-ಹಿರಿಯರ ಮತ್ತು ದೇವತಾ ಪ್ರಾರ್ಥನೆಯ ಬಳಿಕ ವಾಲ್ಮೀಕಿಯ ಪೂರ್ವಾಶ್ರಮದ ಕಥೆಯ ಐತಿಹ್ಯವೊಂದನ್ನು ವಿವರವಾಗಿ ನಿರೂಪಿಸಲಾಗಿದೆ. ಈ ನಿರೂಪಣೆಯಲ್ಲಿ ಕವಿಯ ಸ್ವಂತಿಕೆ ಎದ್ದು ಕಾಣುತ್ತದೆ. ಬಳಿಕ ನಾರದರ ಕಥಾ ಬೋಧನೆ ಕೆಲವೇ ಚರಣಗಳಲ್ಲಿ ಮುಗಿಯುತ್ತದೆ. ಬ್ರಹ್ಮನ ಅನುಗ್ರಹದ ವಿವರಗಳು ಸಂಕ್ಷಿಪ್ತವಾಗಿ ಮೊದಲ ಅಧ್ಯಾಯದಲ್ಲೇ ಬಂದಿವೆ. ಹೀಗೆ ಕಥಾರಂಭದಲ್ಲಿ ವಲ್ಮೀಕಿ ರಾಮಾಯಣದ ಹೊಳಹುಗಳಿದ್ದರೂ, ಅದಕ್ಕಿಂತ ಭಿನ್ನವಾದ ರೀತಿಯಲ್ಲಿ ಕಥಾ ಚಲನೆಯಿದೆ. ಈ ಬದಲಾವಣೆಗೆ ಅನ್ಯ ರಾಮಾಯಣ ಕೃತಿಗಳು ಪ್ರಭಾವ ಬೀರಿವೆ ಎನ್ನಬಹುದು.

ವಾಲ್ಮೀಕಿಯ ಪರಂಪರೆ ಮಂದಾರ ರಾಮಾಯಣಕ್ಕೆ ತೊರವೆ ರಾಮಾಯಣದ ಮೂಲಕ ಬಂದಿದೆ. ಕವಿ ತೊರವೆ ನರಹರಿಯು ವಾಲ್ಮೀಕಿ ಕಥೆಯನ್ನು ಅನುಸರಿಸಿದ್ದಾನೆ. ಕೆಲವು ಸನ್ನಿವೇಶಗಳನ್ನು ಮಾತ್ರ ಬದಲಾವಣೆ ಮಾಡಿಕೊಳ್ಳಲಾಗಿದೆ. ಕಥಾಸರಣಿಯಲ್ಲಿ ವಾಲ್ಮೀಕಿಗಿಂತ ತೊರವೆ ರಾಮಾಯಣಕ್ಕೆ ಹತ್ತಿರವಾಗಿದೆ. ಇದರಿಂದ ವಾಲ್ಮೀಕಿಯ ಕಥೆಯನ್ನು ತೊರವೆ ರಾಮಾಯಣದ ಮೂಲಕ ತುಸು ಭಿನ್ನವಾಗಿ ಮಂದಾರ ರಾಮಾಯಣವು ಹೊಂದಿದೆ. ಇದು ತೊರವೆ ಮತ್ತು ವಾಲ್ಮೀಕಿ ರಾಮಾಯಣದ ಮಧ್ಯಮ ಮಾರ್ಗವನ್ನು ಅನುಸರಿಸಿದೆ. ಮಂದಾರ ರಾಮಾಯಣವು ವಾಲ್ಮೀಕಿ ರಾಮಾಯಣದ ದಾರಿಗಿಂತ ಭಿನ್ನವಾಗಿ ನಡೆಯಲು ತೊರವೆ ರಾಮಾಯಣವೇ ಪ್ರೇರಣೆಯಾಗಿದೆ.

ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’ವು ಮಂದಾರ ರಾಮಾಯಣದ ಮೇಲೆ ಪ್ರಭಾವ ಬೀರಿದ ಏಕೈಕ ಕೃತಿ. ಆದರೆ ರಾಮಾಯಣ ಕಥಾಪರಂಪರೆಯ ದೃಷ್ಟಿಯಿಂದ ಈ ಕೃತಿಯೂ ಸೇರಿದಂತೆ ಜೈನ ರಾಮಾಯಣದ ಪ್ರಭಾವ ಏನೇನೂ ಇಲ್ಲ. ಪಾತ್ರಚಿತ್ರಣ ಹಾಗೂ ಸನ್ನಿವೇಶ ಕಲ್ಪನೆಯ ಮೇಲೆ ಈ ಪ್ರಭಾವವಿದೆ. ಜೈನ ರಾಮಾಯಣದ ಪ್ರಭಾವ ಮಂದಾರ ರಾಮಾಯಣದ ಮೇಲೆ ಪರಂಪರೆಯ ದೃಷ್ಟಿಯಿಂದ ಇಲ್ಲವೆನ್ನಬಹುದು.

ಮಂದಾರ ರಾಮಾಯಣದ ಮೇಲೆ ಪರಿಣಾಮ ಬೀರಿದ ಮಹತ್ತರ ಕೃತಿ ಕುವೆಂಪುರವರ ‘ಶ್ರೀ ರಾಮಾಯಣದರ್ಶನಂ’. ಪ್ರಕೃತಿ ವರ್ಣನೆ, ಪಾತ್ರಚಿತ್ರಣ, ಸನ್ನಿವೇಶ ಕಲ್ಪನೆ ಎಲ್ಲಾ ದೃಷ್ಟಿಯಿಂದಲೂ ಈ ಕಾವ್ಯದ ಪ್ರಭಾವವಿದೆ. ವಾಲ್ಮೀಕಿಯ ಕಥೆಯನ್ನೇ ಅನುಸರಿಸಿದರೂ, ಕುವೆಂಪುರವರು ತೋರಿಸುವ ನವೀನ ದೃಷ್ಟಿ ಮಂದಾರ ರಾಮಾಯಣಕ್ಕೆ ಮಾದರಿಯಾಗಿದೆ.

ಯಕ್ಷಗಾನದ ಪ್ರಭಾವವು ಪಾತ್ರಚಿತ್ರಣ ಮತ್ತು ಸನ್ನಿವೇಶ ಕಲ್ಪನೆಯ ಮೂಲಕ ಹರಿದುಬಂದಿದೆ. ಯಕ್ಷಗಾನದ ಸ್ವಚ್ಛಂದ ಕಥಾರಚನೆಯ ‌ಸ್ವಾತಂತ್ರ್ಯವು ಮಂದಾರ ರಾಮಾಯಣದ ಕಥಾ ಚೌಕಟ್ಟಿನ ರಚನೆಗೆ ಪ್ರೇರಣೆಯನ್ನು ಒದಗಿಸಿದೆ. ಸಂಭಾಷಣೆ, ಪಾತ್ರ ರಚನೆಯಲ್ಲೂ ಯಕ್ಷಗಾನದ ಸ್ಪಷ್ಟ ಪ್ರಭಾವವಿದೆ.

ಹೀಗೆ ವೈದಿಕ ಪರಂಪರೆಯ ಕಥೆಯನ್ನು ಅನುಸರಿಸಿದ ಮಂದಾರ ರಾಮಾಯಣವು ಹಲವು ಕನ್ನಡ ಕೃತಿಗಳು ಮತ್ತು ಅನ್ಯಪ್ರೇರಣೆಯಿಂದ ವೈಶಿಷ್ಟ್ಯಪೂರ್ಣವಾಗಿ ರಚನೆಯಾಗಿದೆ.

ಮಂದಾರ ರಾಮಾಯಣದ ಹುಟ್ಟಿನ ಹಿಂದಿರುವ ಪ್ರೇರಣೆ-ಪ್ರಭಾವಗಳನ್ನು ಹೀಗೆ ಗುರುತಿಸಬಹುದು.

೧. ತುಳು ಚಳವಳಿ ಮತ್ತು ತುಳು ಸಾಹಿತ್ಯ ರಚನೆಗಳು

೨. ಕನ್ನಡದ ರಾಮಾಯಣ ಮತ್ತು ಇತರ ಕೃತಿಗಳು

೩. ತುಳು ಜಾನಪದ ಮತ್ತು ಸಂಸ್ಕೃತಿ ಪುನರುಜ್ಜೀವನದ ಮನೋಭಾವ

೪. ಯಕ್ಷಗಾನ-ತಾಳಮದ್ದಳೆಗಳ ಪ್ರಭಾವ

೫. ತುಳುನಾಡಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರ

೬. ಇತರ ಪ್ರಭಾವಗಳು

ಮಂದಾರ ರಾಮಾಯಣವು ತುಳುನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದಲ್ಲಾಗುತ್ತಿದ್ದ ಕ್ರಿಯೆಗಳ ಪರಿಣಾಮದ ಅಭಿವ್ಯಕ್ತಿಯಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ತುಳುನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ವಿಶ್ಲೇಷಿಸಿದಾಗ ಇದು ಸ್ಪಷ್ಟವಾಗುತ್ತದೆ. ತುಳು ಚಳವಳಿಯಿಂದ ಆರಂಭಗೊಂಡು ಇಂದಿನವರೆಗೂ ಇಲ್ಲಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರುತ್ತಿರುವ ತುಳು ಸಂಸ್ಕೃತಿಯ ಪುನರುಜ್ಜೀವನ ಮತ್ತು ಸಂಸ್ಕೃತಿಯನ್ನು ಉಳಿಸುವ ಭಾವನಾತ್ಮಕ ಮನೋಭಾವ ಮಂದಾರ ರಾಮಾಯಣದ ರಚನೆಯ ಮೇಲೆ ಮಹತ್ವದ ಪ್ರಭಾವ ಬೀರಿದೆ.

ಮಂದಾರ ರಾಮಾಯಣದಲ್ಲಿ ಕಥಾ ವ್ಯತ್ಯಾಸಗಳು

ವಾಲ್ಮೀಕಿ ರಾಮಾಯಣದ ಕಥೆಯನ್ನು ತೊರವೆ ರಾಮಾಯಣದ ಮೂಲಕ ಪಡೆದ ಮಂದಾರ ರಾಮಾಯಣ ‘ವೈದಿಕ ರಾಮಾಯಣ’ ಪರಂಪರೆಯ ಕೃತಿಯಾದರೂ ಕವಿಯು ಮೇಲೆ ಚರ್ಚಿಸಿದ ಕಾರಣಗಳಿಂದಾಗಿ ಕಥಾ ಹಂದರದಲ್ಲಿ ಹಲವು ವ್ಯತ್ಯಾಸಗಳನ್ನು ಮಾಡಿಕೊಂಡಿದ್ದಾರೆ. ಈ ವ್ಯತ್ಯಾಸಗಳಿಂದಾಗಿಯೇ ಕೃತಿಯು ವೈಶಿಷ್ಟ್ಯಪೂರ್ಣವಾಗಿದೆ. ಕೆಲವುಮುಖ್ಯ ವ್ಯತ್ಯಾಸಗಳನ್ನು ಸಂಕ್ಷಿಪ್ತವಾಗಿ ಹೀಗೆ ಸಂಗ್ರಹಿಸಬಹುದು.

೧. ಮಂದಾರ ರಾಮಾಯಣದ ವಾಲ್ಮೀಕಿ ಬೇಡನಲ್ಲ. ಅವನು ತುಳುನಾಡಿನ ಗುಡ್ಡಗಾಡಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯದ ಮಲೆಕುಡಿಯ. ಹೊಟ್ಟೆ ತುಂಬಿಸುವುದಕ್ಕಾಗಿ ದರೋಡೆಯನ್ನು ವೃತ್ತಿಯಾಗಿಸಿಕೊಂಡು ಋಷಿಗಳಿಂದ ಪರಿವರ್ತಿತನಾಗಿ ಮಹಾಕವಿಯಾಗುತ್ತಾನೆ.

೨. ಮಂದಾರ ರಾಮಾಯಣದ ಕಥೆ ನಡೆದದ್ದು ಅಯೋಧ್ಯೆಯಲ್ಲಾದರೂ ಈ ಅಯೋಧ್ಯೆಯನ್ನು ತುಳುನಾಡೆಂದು ಚಿತ್ರಿಸಲಾಗಿದೆ. ತುಳುನಾಡಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ವಿವರಗಳು ಕೃತಿಯಲ್ಲಿ ದಟ್ಟವಾಗಿವೆ. ಕವಿಗೆ ರಾಮಾಯಣದ ಕಥೆಯ ಮೂಲಕ ತುಳುನಾಡಿನ ಸಾಂಸ್ಕೃತಿಕ ವಿವರಗಳ ವರ್ಣಣೆಯ ಆಸಕ್ತಿ ಎದ್ದು ಕಾಣುತ್ತದೆ. ಇದನ್ನು ಹಲವಾರು ಸಂದರ್ಭಗಳಲ್ಲಿ ಗಮನಿಸಬಹುದಾಗಿದೆ.

೩. ವಾಲ್ಮೀಕಿ ರಾಮಾಯಣದ ಅತ್ಯಂತ ಮನನೀಯ ಸನ್ನಿವೇಶವಾದ ಕ್ರೌಂಚ ಮಿಥುನದ ಕಥೆ ಇಲ್ಲಿಲ್ಲ. ತೊರವೆ ರಾಮಾಯಣದಲ್ಲಿ ಈ ಸನ್ನಿವೇಶ ಅತ್ಯಂತ ಸಂಕ್ಷಿಪ್ತವಾಗಿ ಬರುತ್ತದೆ. ಆದರೆ ಮಂದಾರ ರಾಮಾಯಣದಲ್ಲಿ ಇದನ್ನು ಕೈಬಿಡಲಾಗಿದೆ. ಬದಲಾಗಿ ಹುತ್ತದ ಮಗುವಾದ ವೃದ್ಧ ವಾಲ್ಮೀಕಿಗೆ ಕನಸಿನಲ್ಲಿ ತನ್ನೊಡಲಿನಿಂದಲೇ ಕಾವ್ಯಕನ್ನಿಕೆ ಪ್ರತ್ಯಕ್ಷಳಾಗುತ್ತಾಳೆ. ಆಕೆಯನ್ನು ಆತ ಅಪ್ಪಿಕೊಂಡಿದ್ದಕ್ಕಾಗಿ ಜನ ಹಗುರವಾಗಿ ಮಾತನಾಡಿದಾಗ ನೊಂದು ಕೆರಳಿದ ಕವಿಯಿಂದ ಹೊರಹೊಮ್ಮಿದ ಶಾಪವಾಕ್ಯವೇ ರಾಮಾಯಣಕ್ಕೆ ಕಾರಣವಾಗುತ್ತದೆ. ಕಾವ್ಯಸೃಷ್ಟಿಯ ಈ ವಿಶಿಷ್ಟವಾದ ಕಲ್ಪನೆ ಕವಿ ಮಂದಾರರ ಪ್ರತಿಭಾ ಸೃಷ್ಟಿಯಾಗಿದೆ.

೪. ಈ ಕಾವ್ಯದಲ್ಲಿ ಬರುವ ಮಂಥರೆ ಕುರೂಪಿಯಲ್ಲ. ಅತ್ಯಂತ ಚೆಲುವೆ. ಆಕೆ ಶ್ರೀರಾಮನಿಂದ ಆಕರ್ಷಿತಳಾಗಿ ಶ್ರೀರಾಮನಲ್ಲಿ ಪ್ರಣಯ ಭಿಕ್ಷೆ ಬೇಡುತ್ತಾಳೆ. ಶ್ರೀರಾಮ ತಿರಸ್ಕರಿಸಿದಾಗ ಸೇಡು ತೀರಿಸಿಕೊಳ್ಳಲು ಕೈಕೆಯನ್ನು ಬಳಸಿಕೊಂಡು ಶ್ರೀರಾಮ ಕಾಡಿಗೆ ಹೋಗುವಂತೆ ಮಾಡುತ್ತಾಳೆ.

೫. ಸೀತಾಪಹರಣದ ಸನ್ನಿವೇಶ ವಾಲ್ಮೀಕಿ ರಾಮಾಯಣ ಮತ್ತು ತೊರವೆ ರಾಮಾಯಣಕ್ಕಿಂತ ತೀರಾ ಭಿನ್ನವಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ರಾವಣ ಸೀತಾಪಹರಣಕ್ಕಾಗಿ ಸನ್ಯಾಸಿ ವೇಷದಲ್ಲಿ ಬರುತ್ತಾನೆ. ಆದರೆ ಇಲ್ಲಿ ಮಲೆಕುಡಿಯುವ ವೇಷದೊಂದಿಗೆ ಬರುತ್ತಾನೆ. ಅವನೊಂದಿಗೆ ಒಂದು ಜಿಂಕೆ ಮರಿಯು ಇರುತ್ತದೆ. ಅದರ ಚೆಲುವಿಗೆ ಮನಸೋತ ಸೀತೆ ಅದನ್ನು ಕೈಗೆತ್ತಿಕೊಳ್ಳುತ್ತಾಳೆ. ಆಕೆಯಿಂದ ತಪ್ಪಿಸಿಕೊಂಡ ಜಿಂಕೆ ಓಡುತ್ತಾ ಆಶ್ರಮದ ಅಂಗಳ ದಾಟುತ್ತಿದ್ದಂತೆ ಪೊದೆಯೊಳಗಿಂದ ಹುಲಿಯೊಂದು ಕಾಣಿಸಿಕೊಂಡು ಆ ಜಿಂಕೆ ಮರಿಯನ್ನು ಕಚ್ಚಿ ಒಯ್ಯುತ್ತದೆ. ರಾಮ ಲಕ್ಷ್ಮಣರಿಬ್ಬರೂ ಅದರ ಮೇಲೆ ಬಾಣವೆಸೆಯುತ್ತಾರೆ. ಹುಲಿಯು ಮಾರೀಚನ ರೂಪ ತಾಳುತ್ತದೆ. ಜಿಂಕೆಮರಿ ಶೂರ್ಪನಖಿಯ ರೂಪ ತಾಳಿ ಇಬ್ಬರೂ ಸಾಯುತ್ತಾರೆ. ರಾವಣನು ತಾನು ತಂದಿದ್ದ ಬುಟ್ಟಿಯಲ್ಲಿ ಸೀತೆಯನ್ನು ಅಪಹರಿಸುತ್ತಾನೆ.

೬. ಕನಸಿನಲ್ಲಿ ಇಂದ್ರನಿಗಾಗಿ ಹಂಬಲಿಸಿದಳೆಂದು ವಾಸ್ತವದಲ್ಲಿ ಗೌತಮನು ಅಹಲ್ಯೆಯನ್ನು ಶಂಕಿಸುತ್ತಾನೆ. ಅಹಲ್ಯೆ ಗೌತಮನ ಮೇಲೆ ರೊಚ್ಚಿಗೆದ್ದು ಕಲ್ಲಾಗಿ ಕುಳಿತುಕೊಳ್ಳುತ್ತಾಳೆ. ಕವಿಯ ವಿಶಿಷ್ಟ ನಿರೂಪಣೆ ಶೈಲಿಯಿಂದ ಅಹಲ್ಯೆಯ ಪ್ರಸಂಗ ಹೆಚ್ಚು ವಾಸ್ತವವಾಗಿ ಮೂಡಿಬಂದಿದೆ.

೭. ರಾವಣ, ಶೂರ್ಪನಖಿ ಮೊದಲಾದ ಪಾತ್ರಗಳು ಸಹಜ ಮನುಷ್ಯರಂತೆ ಚಿತ್ರಣವಾಗಿವೆ. ಕವಿಯು ಪ್ರವೃತ್ತಿಯಲ್ಲಿ ಮಾತ್ರ ರಾಕ್ಷಸತ್ವವನ್ನು ವ್ಯಕ್ತಪಡಿಸುವ ಮೂಲಕ ರಾಮಾಯಣಕ್ಕಿಂತ ಭಿನ್ನ ಕಲ್ಪನೆಯನ್ನು ಇಲ್ಲಿ ಪಡಿಮೂಡಿಸಿದ್ದಾರೆ.

೮. ವಾಲ್ಮೀಕಿ ರಾಮಾಯಣದಲ್ಲಿ ವಾಲಿಸುಗ್ರೀವರ ವೈರಕ್ಕೆ ಕಾರಣವಾಗುವ ಕಥೆಯನ್ನು ಸುಗ್ರೀವನೇ ಹೇಳುತ್ತಾನೆ. ಆದರೆ ಇಲ್ಲಿ ಶಬರಿಯು ವಾಲಿ ಸುಗ್ರೀವರ ಕಥೆಯನ್ನು ಹೇಳುತ್ತಾಳೆ.

೯. ವಾಲಿ ಸುಗ್ರೀವರನ್ನು ದಲಿತರೆಂದು ಚಿತ್ರಿಸಿದಂತೆ ಕಂಡುಬರುತ್ತದೆ.

೧೦. ವಾಲ್ಮೀಕಿ ರಾಮಾಯಣ ಮತ್ತು ತೊರವೆ ರಾಮಾಯಣಗಳಲ್ಲಿ ಇಲ್ಲದ ಎಷ್ಟೋ ಐತಿಹ್ಯಗಳು ಮಂದಾರ ರಾಮಾಯಣದಲ್ಲಿವೆ. ಅಪ್ಪಣ್ಣ ಗುರಿಕಾರರು ಹೇಳುವಂಥ ಜನಪದ ಐತಿಹ್ಯಗಳ ವಿವರಗಳು ಅಲ್ಲಿವೆ.

೧೧. ವಾಲ್ಮೀಕಿ ಮತ್ತು ಕುಮಾರವಾಲ್ಮೀಕಿ ಇಬ್ಬರಲ್ಲೂ ಇಲ್ಲದ ರಾವಣನ ಮನಃಪರಿವರ್ತನೆಯ ವಿಶಿಷ್ಟ ಸನ್ನಿವೇಶವನ್ನು ಮಂದಾರ ರಾಮಾಯಣದಲ್ಲಿ ಕಾಣಬಹುದಾಗಿದೆ.

೧೨. ಕಬಂಧನನ್ನು ತುಳುನಾಡಿನ ಯಜಮಾನ ಸಂಸ್ಕೃತಿಯ ಪ್ರತೀಕವೆಂಬಂತೆ ಚಿತ್ರಿಸಲಾಗಿದೆ. ವಾಲ್ಮೀಕಿಯಲ್ಲಿದ್ದ ಕಬಂಧನ ಶಾಪವಿಮೋಚನೆಯ ಸನ್ನಿವೇಶ ಮಂದಾರರಲ್ಲಿಲ್ಲ.

೧೩. ಮಂದಾರ ರಾಮಾಯಣದಲ್ಲಿ ಜಟಾಯು ಒಂದು ಹಕ್ಕಿಯಲ್ಲ. ತುಳುನಾಡಿನ ಬೀದಿಗಳಲ್ಲಿ ಕಾಣಿಸಿಕೊಳ್ಳುವ ‘ಪಕ್ಕಿ ಪತ್ತುನಾಯೆ’ (ಹಕ್ಕಿ ಹಿಡಿಯುವವನು) ಈ ಬದಲಾವಣೆ ವಾಸ್ತವಿಕವಾಗಿ ಮೂಡಿದೆ.

೧೪. ಯುದ್ಧಕ್ಕಾಗಿ ಲಂಕೆಗೆ ಹೋಗಲಿರುವ ವಾನರ ಸೈನ್ಯವು, ವಾಲ್ಮೀಕಿಯಲ್ಲಿ ಸಮುದ್ರರಾಜನ ಸಹಾಯದಿಂದ ಸೇತುವೆ ನಿರ್ಮಿಸಿ ಸಮುದ್ರ ದಾಟಿದರೆ, ಮಂದಾರ ರಾಮಾಯಣದಲ್ಲಿ ಬೆಸ್ತ ಅಪ್ಪಣ್ಣನ ಸಹಕಾರದಿಂದ ನಾವೆಗಳ ಮೂಲಕ ಸಮುದ್ರ ದಾಟುತ್ತದೆ.

೧೫. ಶಬರಿಯ ವೃತ್ತಾಂತವು ಮೂಲ ರಾಮಾಯಣಕ್ಕಿಂತ ಭಿನ್ನವಾಗಿ ಚಿತ್ರಣವಾಗಿದೆ. ಮೂಲ ರಾಮಾಯಣದಂತೆ ಶಬರಿ ಮತಂಗಮುನಿಯ ಶಿಷ್ಯೆಯಲ್ಲ. ಇಲ್ಲಿ ಶಬರಿ ಕೇಕೆಯ ನಾಡಿನವಳು. ಮಂಥರೆಯ ತಾಯಿ. ಕಾಡಿನಲ್ಲಿ ಶ್ರೀರಾಮನನ್ನು ಕಂಡು ವಾಲಿ – ಸುಗ್ರೀವರ ವೃತ್ತಾಂತವನ್ನು ಹೇಳುತ್ತಾಳೆ. ಭರತನು ಶಬರಿಯನ್ನು ಮಂಥರೆಯ ತಾಯಿಯೆಂದು ಗುರುತಿಸುತ್ತಾನೆ. ಶ್ರೀರಾಮನು ಮಂಥರೆಯನ್ನು ಶಬರಿಯ ಸೇವೆಗಾಗಿ ನಿಯಮಿಸುತ್ತಾನೆ.

೧೬. ವಾಲಿ – ಸುಗ್ರೀವರ ಹಿನ್ನೆಲೆ ಮತ್ತು ವೃತ್ತಾಂತಗಳಲ್ಲಿ ಕವಿ ಹಲವು ವ್ಯತ್ಯಾಸಗಳನ್ನು ಮಾಡಿಕೊಂಡಿದ್ದಾರೆ. ವಾಲಿ -ಸುಗ್ರೀವರ ತಂದೆ ರುಚ್ಚರಜಸುವಿನ ವೃತ್ತಾಂತ ಹೊಸದೆಂಬಂತೆ ಮೂಡಿಬಂದಿದೆ.

೧೭. ವಾಲ್ಮೀಕಿಯಲ್ಲಿ ಶ್ರೀರಾಮನನ್ನು ದೇವರ ಅವತಾರವೆಂಬಂತೆ ಕವಿ ಚಿತ್ರಿಸಿದ್ದಾನೆ. ಇಲ್ಲಿ ತನ್ನ ಆದರ್ಶ ನಡೆನುಡಿಗುಣಗಳಿಂದ ಮನುಷ್ಯನೇ ದೇವರಾಗುವ ರೀತಿಯನ್ನು ಶ್ರೀರಾಮನ ಮೂಲಕ ಚಿತ್ರಿಸಲಾಗಿದೆ.

೧೮. ವಿಭೀಷಣನ ಮಗಳು ಸೋಮಕ್ಕಳನ್ನು ವಾಲಿಯ ಮಗ ಅಂಗದನಿಗೆ ವಿವಾಹ ಮಾಡಿಕೊಡುವ ವಿಶಿಷ್ಟ ಸನ್ನಿವೇಶವಿದೆ.

೧೯. ರಾವಣನ ತಮ್ಮನಾದ ಕುಂಭಕರ್ಣನ ವಿಶಿಷ್ಟ ವೃತ್ತಾಂತವಿದೆ. ಇಲ್ಲಿ ಕುಂಭಕರ್ಣನು ದುಷ್ಟನಲ್ಲ. ಅತ್ಯಂತ ಮಾನವೀಯ ವ್ಯಕ್ತಿ. ರಾವಣನು ಮದ್ದು ಹಾಕಿ ಅವನ ತಲೆ ಕೆಡಿಸುತ್ತಾನೆ. ಕೊನೆಗೆ ತೂಚಣ್ಣ ಪಂಡಿತನು ಅವನನ್ನು ಸರಿಪಡಿಸುತ್ತಾನೆ. ರಾವಣನ ನಂತರ ಕುಂಭಕರ್ಣನಿಗೆ ಲಂಕೆಯ ಪಟ್ಟವಾಗುತ್ತದೆ.

ಈ ಮೇಲಿನ ಮುಖ್ಯ ಕಥಾ ವ್ಯತ್ಯಾಸಗಳಲ್ಲದೆ ಇನ್ನು ಹಲವಾರು ಸಾಂದರ್ಭಿಕ ವ್ಯತ್ಯಾಸಗಳನ್ನು ಕೃತಿಯಲ್ಲಿ ಅಲ್ಲಲ್ಲಿ ಕಾಣಬಹುದಾಗಿದೆ.

ಮಂದಾರ ರಾಮಾಯಣದ ಕೆಲವು ಮುಖ್ಯ ಪಾತ್ರಗಳು

ತುಳುನಾಡಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ಕಥಾಹಂದರಕ್ಕೆ ಬಳಸಿಕೊಂಡಿರುವುದರಿಂದ ಪಾತ್ರಕಲ್ಪನೆಯಲ್ಲಿ ಅನಿವಾರ್ಯ ಬದಲಾವಣೆಗಳಾಗಿವೆ. ಪಾತ್ರಶಿಲ್ಪದ ರಚನೆಯಲ್ಲಿ ಇಲ್ಲಿನ ಸಂಸ್ಕೃತಿಯು ಪ್ರಭಾವವನ್ನು ಬೀರಿದೆ. ಎಲ್ಲಾ ಪಾತ್ರಗಳನ್ನು ಮೂಲ ರಾಮಾಯಣದ ಸ್ವರೂಪದಲ್ಲೇ ಉಳಿಸಿಕೊಂಡರೂ, ಸ್ಥಳೀಯ ಸಂಸ್ಕೃತಿಯ ಛಾಯೆ ಪಾತ್ರಗಳ ಮೇಲೆ ದಟ್ಟವಾಗಿದೆ. ಕೆಲವು ಮುಖ್ಯ ಪಾತ್ರಗಳ ಸ್ವರೂಪದಲ್ಲೇ ಬದಲಾವಣೆಗಳಾಗಿವೆ. ರಾಮ, ಲಕ್ಷ್ಮಣ ಮುಂತಾದ ಪಾತ್ರಗಳಲ್ಲಿ ಮೂಲ ಸ್ವರೂಪವಿದ್ದರೂ, ಅಲ್ಲಲ್ಲಿ ಬದಲಾವಣೆಗಳಾಗಿವೆ. ವಾಲ್ಮೀಕಿ, ಶಬರಿ, ಅಹಲ್ಯೆ, ಶೂರ್ಪನಖಿ, ವಾಲಿ, ಸುಗ್ರೀವ ಮುಂತಾದ ಪಾತ್ರಗಳ ಸ್ವರೂಪದಲ್ಲೇ ಬದಲಾವಣೆಗಳಾಗಿವೆ. ಕೆಲವು ಸಂದರ್ಭಗಳಲ್ಲಿ ಮೂಲ ರಾಮಾಯಣಕ್ಕಿಂತ ಭಿನ್ನವಾದ ಕಥಾ ಹಂದರವಿದೆ. ಈ ಕಥಾ ಹಂದರವೂ ಪಾತ್ರಗಳ ಮೂಲ ಸ್ವರೂಪವನ್ನು ಬದಲಾಯಿಸಿದೆ. ಅಹಲ್ಯೆ, ಮಂಥರೆ ಮುಂತಾದ ಪಾತ್ರಗಳ ಸ್ವಭಾವಗಳಲ್ಲಿ ಇದನ್ನು ಗುರುತಿಸಬಹುದಾಗಿದೆ. ಅಪ್ಪಣ್ಣ ಗುರಿಕಾರ, ತೂಚಣ್ಣ ಪಂಡಿತ, ಸೋಮಕ್ಕ ಮೊದಲಾದ ಪಾತ್ರಗಳನ್ನು ಹೆಸರಿಸಬಹುದಾಗಿದೆ.

ಪಾತ್ರ ನಿರ್ಮಾಣದ ಮೇಲೆ, ಅನ್ಯ ರಾಮಾಯಣ ಕೃತಿಗಳ ಪ್ರಭಾವವೂ ಇದೆ. ಮುಖ್ಯವಾಗಿ ತೊರವೆ ರಾಮಾಯಣ, ರಾಮಚಂದ್ರಚರಿತ ಪುರಾಣಗಳ ಪ್ರಭಾವವಿದೆ. ರಾಮನ ಸಾತ್ವಿಕತೆ, ಸಜ್ಜನಿಕೆ, ಶೀಲ ಪ್ರತಿಪಾದನೆಯಲ್ಲಿ ಈ ಎರಡೂ ಕೃತಿಗಳ ಪ್ರಭಾವವು ಸ್ಪಷ್ಟವಾಗುತ್ತದೆ. ಅಹಲ್ಯೆ ಮಂಥರೆಯ ಪಾತ್ರಗಳನ್ನು ‘ಶ್ರೀರಾಮಾಯಣ ದರ್ಶನಂ’ ಮೂಲ ಪ್ರೇರಣೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಾಟಕೀಯತೆ ಕೃತಿಯ ಹೆಚ್ಚಿನ ಪಾತ್ರಗಳ ಸ್ವಭಾವದಲ್ಲಿ ವ್ಯಕ್ತವಾಗಿದೆ ಮತ್ತು ಹೊಸ ಪಾತ್ರಗಳ ಸೃಷ್ಟಿಯಲ್ಲೂ ಇದನ್ನು ಗುರುತಿಸಬಹುದಾಗಿದೆ. ಈ ನಾಟಕೀಯತೆಗೆ ಮುಖ್ಯ ಪ್ರೇರಣೆ ಯಕ್ಷಗಾನಗಳ ರಾಮಾಯಣದ ಕಥೆಗಳಾಗಿವೆ. ಹೀಗೆ ಅನ್ಯಪ್ರಭಾವವೂ ಕೃತಿಯ ಮೇಲಿರುವುದನ್ನು ಗುರುತಿಸಬಹುದಾಗಿದೆ. ಅಧ್ಯಯನದ ದೃಷ್ಟಿಯಿಂದ ಮಂದಾರ ರಾಮಾಯಣದ ಪಾತ್ರಗಳನ್ನು ಈ ರೀತಿ ವಿಂಗಡಿಸಿ ಅಧ್ಯಯನ ಮಾಡಬಹುದು:

೧. ಬದಲಾವಣೆಗೆ ಒಳಗಾದ ಪಾತ್ರಗಳು

೨. ಮೂಲ ಸ್ವರೂಪದಲ್ಲೇ ಇರುವ ಮುಖ್ಯ ಪಾತ್ರಗಳು

೩. ಹೊಸ ಪಾತ್ರಗಳ ಸೃಷ್ಟಿ

ಕಥಾರಂಭದಲ್ಲೇ ವಾಲ್ಮೀಕಿಯ ಪಾತ್ರವನ್ನು ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆಗೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಮೂಲ ರಾಮಾಯಣದಲ್ಲಿ ರಾಮಾಯಣದ ಸೃಷ್ಟಿಗೆ ಕಾರಣವಾದ ವಾಲ್ಮೀಕಿಯ ಪೂರ್ವಾಶ್ರಮಕ್ಕೆ ಸಂಬಂಧಿಸಿದ ಐತಿಹ್ಯವು ಇಲ್ಲಿ ವಿಕಸನಗೊಂಡಿದೆ. ಮಂದಾರ ರಾಮಾಯಣದಲ್ಲಿರುವ ಈ ಐತಿಹ್ಯದ ಕಥೆಯನ್ನು ತೊರವೆ ರಾಮಾಯಣದಿಂದ ಪಡೆದುಕೊಳ್ಳಲಾಗಿದೆ. ತೊರವೆ ರಾಮಾಯಣದ ಐತಿಹ್ಯ ಪ್ರೇರಿತ ಈ ಕಥೆಗೆ ಇಲ್ಲಿ ವಿಶಿಷ್ಟ ರೂಪವನ್ನು ನೀಡಲಾಗಿದೆ.

ತುಳುನಾಡಿನ ಗುಡ್ಡ-ಕಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಮಲೆಕುಡಿಯ ಜನಾಂಗದವನೆಂದು ವಾಲ್ಮೀಕಿಯನ್ನು ಚಿತ್ರಿಸಲಾಗಿದೆ. ಕಥೆಯೊಂದಿಗೆ ರಾಮಾಯಣ ಆರಂಭವಾಗುತ್ತದೆ. ತೊರೆವೆ ರಾಮಾಯಣದಲ್ಲಿ ವಾಲ್ಮೀಕಿ ಒಬ್ಬ ಬೇಡ. ದರೋಡೆ ಮಾಡಿ ಹೊಟ್ಟೆ ತುಂಬಿಸುವ ದುಷ್ಟ. ಸಪ್ತರ್ಷಿಗಳು ಪಾಪದ ಕುರಿತಾಗಿ ಅವನನ್ನು ಪ್ರಶ್ನಿಸುತ್ತಾರೆ. ಈ ಕಥಾನಕದ ಹಿನ್ನೆಯಲ್ಲಿ ಅವನ ಮನಸ್ಸು ಪರಿವರ್ತಿತವಾಗಿ ತಪಸ್ಸಿನ ಕಾರಣದಿಂದ ಋಷಿಯಾಗುತ್ತಾನೆ. ಮುಂದೆ ನಾರದರ ಅಪ್ಪಣೆಯಂತೆ ರಾಮಾಯಣದ ಕಥೆಯನ್ನು ಬರೆಯುತ್ತಾನೆ.

ಮಂದಾರ ರಾಮಾಯಣದಲ್ಲೂ ಇದೇ ಕಥಾ ಹಂದರವನ್ನು ಉಳಿಸಿಕೊಳ್ಳಲಾಗಿದೆ. ಆದರೆ ತೊರವೆ ರಾಮಾಯಣದಲ್ಲಿ ಬೇಡನಾಗಿರುವ ವಾಲ್ಮೀಕಿಯನ್ನು ಮಲೆಕುಡಿಯನಂತೆ ಚಿತ್ರಿಸಿರುವುದರಲ್ಲಿ ವೈಶಿಷ್ಟ್ಯವಿದೆ. ಮಂದಾರ ರಾಮಾಯಣದ ಕಥೆಯ ಆರಂಭದ ವಾಕ್ಯದಲ್ಲಿ ಈ ಉಲ್ಲೇಖ ಬರುತ್ತದೆ “ಬಡಕಾಯಿ ಮೆಯ್ಟೊಂಜಿ ಊರು ಇತ್ತ್‌೦ಡವುಳು ಕಂಡೊಡ್ಡು ಕಾಡೆಚ್ಚ, ಕುಡಿಯೆರೆನ ಕಾಡು ಹೆಚ್ಚು, ಕುಡಿಯೆಚ್ಚ” (ಬಡಗು ದಿಕ್ಕಿನಲ್ಲಿ ಊರು ಇತ್ತೊಂದು ಅಲ್ಲಿಗದ್ದೆಗಳಿಗಿಂತ ಕಾಡು ಹೆಚ್ಚು, ಕುಡಿಯರ ಪಡೆ ಹೆಚ್ಚು) ಎಂದು ಗುಡ್ಡ – ಕಾಡುಗಳಲ್ಲಿ ವಾಸಿಸುವವರೆಂಬುದಾಗಿ ವಿವರಿಸಲಾಗಿದೆ. ಬಳಿಕ ಕುಡಿಯನ ದೈನಂದಿನ ಚಟುವಟಿಗಳ ಸುಂದರ ಚಿತ್ರಣವಿದೆ.

‘……………………..ಚಳಿ
ತಗ ಪುಡದಿನ ಲೂತಿದಾಯ ಕಾರಡಿತಂಚ
ಅವುಳುವುಳು ದರಿದ ಗೋಡೆಲು ಕಟ್ಟಿ ಮಡಲ ಮುಡೆ
ದರಿದಿ ಕಡ್ಯದ ನಾಲಿ ನೂರಾಯಿ ಗಿಳಿಕಂಡಿ
ಮಾಡ್ದಡಿಟ್ಟೊರಗಾದಿ ಬಾಕಿಲ್ದ ತಟ್ಟಿ”
(ಚಳಿಗಾಲದಲ್ಲಿ ಒಡೆದ ಕಾಲಿನ ಹಾಗೆ
ಅಲ್ಲಲ್ಲಿ ಒಡೆದ ಗೋಡೆಗಳೂ, ಕಟ್ಟಿದ ಮಡಲಿನ ಮಧ್ಯೆ
ಒಡೆದ ಮಣ್ಣಿನ ಮಡಕೆಯ ವೃತ್ತಾಕಾರ ಬಾಯಿಯಿಂದ ನಿರ್ಮಿಸಿದ ಗಿಳಿಕಿಂಡಿ
ಮಾಡಿನ ಕೆಳಗೆ ಒರಗಿಸಿ ಇಟ್ಟ ಬಾಗಿಲ ತಟ್ಟಿ)

ಎಂದು ಕುಡಿಯನ ಮನೆಯ ವರ್ಣನೆಯಲ್ಲಿ ಅವನ ಬಡತನ ಚಿತ್ರಣವನ್ನು ಕಾಣಬಹುದಾಗಿದೆ. “ತಾನೊರಿ ಬೆಂದ್‌ದ್ ಕುಟುಮೊನೆತೆದಾಂತೆ ನುಪ್ಪು ಕುಟುಂಗು ಜದ್ರದಾಂತೆ ನಡಪಾವೊಂದು ಬರ್ಪೇದೆ ಮಲೆಕುಡಿಯೆ (ತಾನೊಬ್ಬ ದುಡಿದು ಕುಟುಂಬವನ್ನು ಯಾವುದೇ ವ್ಯಥೆಯಿಲ್ಲದೆ, ಅನ್ನ – ಬಟ್ಟಗೆ ಬರ ಇರದಂತೆ ನಡೆಸಿಕೊಂಡು ಬರುತ್ತಿದ್ದ ಮಲೆ ಕುಡಿಯ) ಎಂಬಲ್ಲಿ ಅವನು ಮಾಡುತ್ತಿದ್ದ ದರೋಡೆಗೂ ಸಕಾರಣವನ್ನು ನೀಡಲಾಗಿದೆ. ಬಡತನದಿಂದ ತೊಳಲಾಡುತ್ತಿದ್ದ ಕುಡಿಯನ ಅಸಹಾಯಕತೆಯ ಚಿತ್ರಣವನ್ನು ನೀಡಲಾಗಿದೆ. ತುಳುನಾಡಿನ ಬಡ ಕುಟುಂಬವೊಂದರ ಬೆಳಗಿನ ದಿನಚರಿಯ ವಾಸ್ತವ ಚಿತ್ರಣವು ವ್ಯಕ್ತವಾಗಿದೆ.

ಮಲೆಕುಡಿಯನ ಬದುಕಿನ ಚಿತ್ರಣವನ್ನು ಬಿಟ್ಟರೆ ಉಳಿದಂತೆ ಕಥೆ ತೊರವೆ ರಾಮಾಯಣದ ಕಥೆಯಂತೆ ಮುಂದುವರಿಯುತ್ತದೆ. ತುಳು ಭಾಷೆಗಿರುವ ನಾಟಕೀಯ ಸಂಭಾಷಣೆಯ ಶಕ್ತಿಯು ಈ ಸನ್ನಿವೇಶದಲ್ಲಿ ವ್ಯಕ್ತವಾಗುವುದು ಬಿಟ್ಟರೆ ಉಳಿದಂತೆ ಸಾಮಾನ್ಯ ಕಥೆಯೇ ಇದೆ. ಸಪ್ತ ಋಷಿಗಳನ್ನು ಕುಡಿಯನು ತಡೆಯುವುದು; ಅವರಿಂದ ಅವನು ಮಾಡುತ್ತಿರುವ ಪಾಪಕೃತ್ಯದ ವಿವರಣೆ; ಪಾಪದಲ್ಲಿ ಹೆಂಡತಿ ಮಕ್ಕಳ ಪಾಲಿದೆ ಎಂದು ಕುಡಿಯ ಹೇಳುವುದು, ಅದನ್ನು ಹೆಂಡತಿಯಲ್ಲಿ ಕೇಳುವಂತೆ ಸಪ್ತ ಋಷಿಗಳು ಹೇಳಿದಾಗ, ಕುಡಿಯ ಮನೆಗೆ ಹೋಗಿ ಹೆಂಡತಿಯಲ್ಲಿ ಕೇಳುವುದು; ಅವಳು “ಅಡ್ಡಿನಾಳೆ ಕಯ್ಯತ್ತಂದೆ ಕರಬಿಸಲೆಡಿತ್ತಿ ಕರಿ ಉಣ್ಣಿನಾಯಗ್‌ ತಾಗುನೆಂಚ ಯಿರೊರ ಪಣ್ಳೆ” (ಅಡುಗೆ ಮಾಡುವವಳ ಕೈಗಲ್ಲದೆ, ಪಾತ್ರೆಗಳ ಮಸಿ, ಊಟ ಮಾಡುವವನಿಗೆ ತಾಗಲು ಹೇಗೆ ಸಾದ್ಯ?) ಎಂದು ತನಗೆ ಪಾಪದಲ್ಲಿ ಪಾಲಿಲ್ಲ ಎನ್ನುತ್ತಾಳೆ. ಇಲ್ಲಿ ಬರುವ ಕುಡಿಯ ಮತ್ತು ಅವನ ಮಡದಿಯ ಮಧ್ಯೆ ನಡೆಯುವ ದೇಸಿ ಶೈಲಿಯ ಸಂಭಾಷಣೆ ಆಕರ್ಷಕವಾಗಿದೆ.

ರಾಮಾಯಣದ ಅಹಲ್ಯೆಯ ಪಾತ್ರ ಮತ್ತು ಕಥೆ ವಿಶಿಷ್ಟವಾದುದು. ಹೆಣ್ಣೊಬ್ಬಳ ದುರಂತದ ಚಿತ್ರಣವು ಹೃದಯಸ್ಪರ್ಶಿಯಾಗಿ ವ್ಯಕ್ತವಾಗಿದೆ. ಸೀತೆಯ ನಿರಂತರ ದುಃಖದ ಕಥೆ ಹೆಣ್ಣಿನ ದುರಂತದ ಒಂದು ಮುಖವಾದರೆ, ಅಹಲ್ಯೆಯ ಬದುಕಿನಲ್ಲಿ ಪುರುಷರ ಸ್ವಾರ್ಥ ಮತ್ತು ಮಗತ್ವಾಕಾಂಕ್ಷೆ ಎಬ್ಬಿಸುವ ಬಿರುಗಾಳಿ ದುರಂತದ ಇನ್ನೊಂದು ಮುಖವನ್ನು ಸೂಚಿಸುತ್ತದೆ. ಕಥಾನಾಯಕ ಶ್ರೀರಾಮಚಂದ್ರನ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಈ ವೃತ್ತಾಂತವಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅಹಲ್ಯೆಯ ವೃತ್ತಾಂತವು ಹಲವು ಕವಿಗಳ ಚಿಂತನೆಗೆ ಕಾರಣವಾಗಿದೆ. ಕೆಲವು ಕವಿಗಳಲ್ಲಿ ಅಹಲ್ಯೆ ಕಲ್ಲಾಗಿದ್ದರೆ, ಇನ್ನು ಕೆಲವು ಕವಿಗಳ ಚಿತ್ರಣದಲ್ಲಿ ಆಕೆ ಕಲ್ಲಾಗದೆ ಗೌತಮನ ಶಾಪದಿಂದ ವೇದನೆ ಪಟ್ಟಿರುತ್ತಾಳೆ.

ಮಂದಾರ ರಾಮಾಯಣದಲ್ಲಿ ಅಹಲ್ಯೆಯ ಪ್ರಸಂಗ ವಾಲ್ಮೀಕಿ ಮತ್ತು ಈ ಪರಂಪರೆಯ ಇತರ ಕವಿಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಕವಿ ಯಾವುದೇ ಪರಂಪರೆಯ ಕಥೆಯನ್ನು ಅನುಸರಿಸಿದೆ ಸ್ವತಂತ್ರ ಕಥೆಯನ್ನು ಹೆಣೆದಿದ್ದಾರೆ. ಆದರೆ ಈ ತೀತಿಯ ಸ್ವಾತ್ರಂತ್ರ್ಯಕ್ಕೆ ಮೂಲ ಪ್ರೇರಣೆ ಕುವೆಂಪುರವರ ‘ಶ್ರೀ ರಾಮಾಯಣದರ್ಶನಂ’ ಎನ್ನಬಹುದು. ವಾಲ್ಮೀಕಿ ರಾಮಾಯಣಕ್ಕಿಂತ ತುಸು ಭಿನ್ನವಾಗಿ ಮತ್ತು ಹೃದಯಂಗಮವಾಗಿ ‘ಶ್ರೀ ರಾಮಾಯಣ ದರ್ಶನಂ’ ನಲ್ಲಿ ಈ ಸನ್ನಿವೇಶದ ಚಿತ್ರಣವಿದೆ. ವಾಲ್ಮೀಕಿ ರಾಮಾಯಣದಲ್ಲಿ ವಿಶ್ವಾಮಿತ್ರ ಅಹಲ್ಯೆಯ ಕಥೆಯನ್ನು ರಾಮನಿಗೆ ಹೇಳಿ, ಅವನನ್ನು ಅಲ್ಲಿಗಗೆ ಕರೆದು ತರುತ್ತಾನೆ. ಅಲ್ಲದೆ ಆಕೆಯ ಶಾಪ ವಿಮೋಚನೆ ಮಾಡುವಂತೆ ಹೇಳುತ್ತಾನೆ. ಆದರೆ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಈ ಕಾರ್ಯ ರಾಮನಿಗೆ ಅರಿವಿಲಲ್ದೆಯೇ ನಡೆಯುತ್ತದೆ. ಮಿಥಿಲೆಗೆ ಹೋಗುವ ದಾರಿಯಲ್ಲಿ ರಾಮ, ಗೌತಮನ ಆಶ್ರಮದ ಸಮೀಪದಲ್ಲಿ ಭಾವಾವೇಶಕ್ಕೆ ಒಳಗಾಗಿ ನರ್ತಿಸುತ್ತಾ ಆಶ್ರಮವನ್ನು ಪ್ರವೇಶಿಸುತ್ತಾನೆ. ಅವನ ಸ್ಪರ್ಶಕ್ಕೆ ಕಲ್ಲಾದ ಅಹಲ್ಯೆ ಜೀವ ಸ್ಪರ್ಶ ಪಡೆಯುತ್ತಾಳೆ. “ಪೆತ್ತತಾಯಂ ಮತ್ತೆ ತಾಂಪಡೆದಂತೆ” ಮಾತೃಪ್ರೇಮ ಸ್ವರೂಪವಾದ ಈ ಲೌಕಿಕ ಘಟನೆ ಜರಗುತ್ತದೆ. ವಾಲ್ಮೀಕಿಯಲ್ಲಿ ವಿಶ್ವಾಮಿತ್ರನ ಆಜ್ಞೆಯಂತೆ ಈ ಕಾರ್ಯ ನಡೆದರೆ ಕುವೆಂಪುರವರಲ್ಲಿ ಸಹಜವಾಗಿಯೇ ಅನಿರೀಕ್ಷಿತವಾಗಿ ಅತ್ಯಂತ ಭಾವುಕ ಮತ್ತು ಮಾನವೀಯ ಸನ್ನಿವೇಶದಲ್ಲಿ ಇದು ಘಟಿಸುತ್ತದೆ. ಕುವೆಂಪುರವರು ಮಾಡಿದ ಈ ಬದಲಾವಣೆಯೇ ಕವಿ ಮಂದಾರರಿಗೆ ಅಹಲ್ಯೆಯ ಕುರಿತಾದ ಹೊಸ ಕಥೆ ಸೃಷ್ಟಿಸಲೂ ಸ್ಫೂರ್ತಿ ನೀಡಿದೆ.