ಯಾವುದೇ ಭಾಷೆಗೆ ಅನ್ಯಭಾಷಾ ಕೃತಿಗಳು ಯಾವಾಗಲೂ ಸ್ವೀಕಾರವೇ ಆಗಿವೆ. ಅಪರಿಚಿತವಾದ ಜ್ಞಾನ, ವಿಷಯ, ಸಾಹಿತ್ಯ, ಶಿಸ್ತುಗಳ ತಿಳುವಳಿಕೆಗಾಗಿ ಭಾಷಾಂತರ ಮೂಲಕ ಅನ್ಯಭಾಷಾ ಕೃತಿಗಳನ್ನು ಆಶ್ರಯಿಸುವುದು ಸಹಜ. ಯಾವಾಗಲೂ ಭಾಷಾಂತರ ಪ್ರಕ್ರಿಯೆ ನಡೆಯುವಲ್ಲಿ ಭಾಷಾಂತರಗೊಳ್ಳುವ ಕೃತಿ ಹಾಗೂ ಕೃತಿಯ ಪರಿಸರ ಅಪರಿಚಿವಾಗಿರುವುದು ಸಾಮಾನ್ಯ. ಆದರೆ ತುಳುವಿನಲ್ಲಿ ಭಾಷಾಂತರ ಕೃತಿಗಳ ಸಂದರ್ಭವನ್ನು ಮಾತ್ರ ಸ್ವಲ್ಪ ಭಿನ್ನ ರೀತಿಯಲ್ಲಿ ಪರಿಭಾವಿಸಬೇಕಾಗಿದೆ. ಭಾಷಾಂತರ ಕೃತಿಗಳು ರೂಪುಗೊಳ್ಳಲು ಸಾಮಾನ್ಯವಾಗಿ ಇರಬಹುದಾದ ಕಾರಣಗಳನ್ನು ಮೀರಿ ತುಳುವಿನ ಸಂದರ್ಭದಲ್ಲಿ ಕಾರಣಗಳನ್ನು ಹುಡುಕಬಹುದಾಗಿದೆ. ಇದಕ್ಕೆ ಮುಖ್ಯ ಕಾರಣ ತುಳು ಭಾಷೆ ಹುಟ್ಟಿ ಬೆಳೆದ ಸಾಂಸ್ಕೃತಿಕ ಪರಿಸರವೇ ಎಂಬುದು ಪ್ರಮುಖವಾದ ಅಂಶ.

ತುಳು ಲಿಪಿಯಿಲ್ಲದ ಭಾಷೆ, ಅದು ಮಾತಿನ ಭಾಷೆ ಎಂಬಿತ್ಯಾದಿ ವಿವರಗಳನ್ನು ಇಂದು ಅರ್ಥ ಕಳೆದುಕೊಂಡು ತುಳುವಿಗೂ ಲಿಪಿಯಿದೆ, ಅದರಲ್ಲಿ ಅನೇಕ ಸಾಹಿತ್ಯ ಕೃತಿಗಳು ಸೃಷ್ಟಿಯಾಗಿವೆ ಎಂಬಿತ್ಯಾದಿ ವಿಚಾರಗಳು ಸಂಶೋಧನೆಯ ಮೂಲಕ ಸಾಭೀತಾಗಿವೆ. ಈಗ ತುಳುವನ್ನು ಲಿಪಿಯುಳ್ಳ ಸಾಕಷ್ಟು ಸಾಹಿತ್ಯ ಸೃಷ್ಟಿಯಾದ ಭಾಷೆ ಎಂಬ ನೆಲೆಯಲ್ಲಿಯೇ ನೋಡಬೇಕಾಗಿದೆ. ಆದರೆ ಇಂದು ತುಳು ಲಿಪಿಯನ್ನು ಕಲಿತು ಅರಗಿಸಿಕೊಂಡು ತುಳು ಲಿಪಿಯನ್ನು ಬರೆಯುವ ಬರೆಹಗಾರರಿಲ್ಲ ಎಂಬುದೂ ವಾಸ್ತವ ಸಂಗತಿಯೇ ಹೌದು. ತುಳುವರು ಕರ್ನಾಟಕದ ಭೌಗೋಳಿಕ ಪರಿಸರದ ಹಾಗೂ ಆಡಳಿತಾತ್ಮಕವಾಗಿ ಕರ್ನಾಟಕದ ಭಾಗವಾಗಿದ್ದಾರೆ. ಈ ಕಾರಣಕ್ಕಾಗಿ ತುಳುವರ ಆಡಳಿತ ಭಾಷೆ ಕನ್ನಡ, ರಾಜ್ಯು ಭಾಷೆಯೂ ಕನ್ನಡ. ತುಳುವರು ಶಿಕ್ಷಣವನ್ನು ತುಳುವಿನಲ್ಲಿ ಪಡೆಯುವುದಕ್ಕೆ ಅವಕಾಶವಿಲ್ಲದ ಕಾರಣಕ್ಕಾಗಿ ಕನ್ನಡದಲ್ಲಿಯೇ ಪಡೆದು ಅಕ್ಷರಸ್ಥರಾದವರು. ಹಾಗಾಗಿ ತುಳುವೆಂದರೆ ಬಹುತೇಕ ಕನ್ನಡದ ಅಕ್ಷರಜ್ಞಾನವುಳ್ಳವರೇ ಆಗಿದ್ದಾರೆ. ಕರ್ನಾಟಕದ ಹೊರಗಡೆ ನೆಲೆಸಿರುವ ತುಳುವರು ತಾವು ಬದುಕುವ ರಾಜ್ಯದ ಭಾಷೆಯ ಭಾಗವಾಗಿದ್ದರೂ ತುಳು ಅವರಿಗೆ ಮನೆಮಾತು ಮಾತ್ರ. ಹಾಗೆ ಕರ್ನಾಟಕದ ಹೊರಗಡೆ ಬದುಕುವ ತುಳುವರು ತುಳು ಸಾಹಿತ್ಯ ಸೃಷ್ಟಿಯ ಬಗೆಗೆ ಮನಸ್ಸು ಮಾಡಿದಂತಿಲ್ಲ.

ದಕ್ಷಿಣ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ದ. ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ಕನ್ನಡದ ಭಾಗವಾಗಿಯೇ ಬದುಕಿದವರು. ಅವರು ತುಳು ಸಾಹಿತ್ಯ, ಸಂಸ್ಕೃತಿಗಳ ಪ್ರಚಾರಕ್ಕೆ ಆಯ್ದುಕೊಂಡ ಭಾಷಾ ಮಾಧ್ಯಮವೂ ಕನ್ನಡವೇ ಆಗಿದೆ. ಹಾಗಾಗಿ ಕನ್ನಡ ಲಿಪಿಯಲ್ಲಿ ತುಳು ಭಾಷೆಯನ್ನು ಬರೆಯಲು ಹಾಗೂ ಓದಬಲ್ಲವರು. ತುಳುಲಿಪಿ ಕಲಿತು ಕಾವ್ಯಗಳನ್ನು ಶೋಧಿಸಿ, ಸಂಪಾದಿಸಿದವರೂ ಕನ್ನಡ ಕಲಿತ ಸಂಶೋಧಕರೇ ಹೌದು. ತುಳು ಲಿಪಿಯಲ್ಲಿ ಬರೆದ ಕೃತಿಗಳನ್ನು ಹಾಗೂ ಕನ್ನಡ ಲಿಪಿಯಲ್ಲಿ ಬರೆದ ತುಳು ಭಾಷೆಯನ್ನು ಕನ್ನಡ ಬಲ್ಲವರೇ ಆಗಿದ್ದಾರೆ. ಅಂದರೆ ತುಳು ಭಾಷೆಗೆ ಅನುವಾದ ಮಾಡಿ  ಕೃತಿಗಳನ್ನು ಓದುವವರೂ ಕನ್ನಡ ಬಲ್ಲವರೇ ಆಗಿದ್ದಾರೆ. ಮೂಲದಲ್ಲಿ ಓದಲಾಗದವರಿಗಾಗಿ ಕೃತಿಗಳನ್ನು ಭಾಷಾಂತರ ಮಾಡಿ ಲಕ್ಷ್ಯಭಾಷೆಯಲ್ಲಿ ಪ್ರಕಟಿಸಲಾಗುತ್ತದೆ.) ಬಾಷಾಂತರದ ಮೂಲ ಉದ್ದೇಶವನ್ನೇ, ಹಿಮ್ಮೆಟ್ಟಿ ತುಳುವಿನಲ್ಲಿ ಭಾಷಾಂತರ ಕೃತಿಗಳು ಮೂಲ ಭಾಷೆಯಲ್ಲಿಯೂ ಲಕ್ಷ್ಯಭಾಷೆಯವರಿಗೂ) ಏಕಕಾಲಕ್ಕೆ ಓದಬಲ್ಲ ಹಾಗೂ ಲಭಿಸಬಲ್ಲ ಓದುಗರಿಗಾಗಿಯೇ ರೂಪಪಡೆದಿದೆ. ಅಷ್ಟೇ ಅಲ್ಲದೆ ಕನ್ನಡದಲ್ಲಿ ಓದಲಾಗದ ತುಳುವರಿಗೆ ಶ್ರವ್ಯ ಸಾಹಿತ್ಯವೆಂಬ ನೆಲೆಯಲ್ಲಿ ಅನುವಾದಗಳು ಹಿತವಾಗವಲ್ಲವು ಎಂಬ ತಿಳುವಳಿಕೆ ಇಲ್ಲಿ ಸ್ಪಷ್ಟವಾಗಿ ಇದೆ. ಆದ್ದರಿಂದ ತುಳು ಭಾಷಾಂತರ ಕೃತಿಗಳ ಸೃಷ್ಟಿಯ ಹಿಂದಿನ ಉದ್ದೇಶ ಸಾಮಾನ್ಯವಾಗಿ ಭಾಷಾಂತರ ಕೃತಿಗಳ ಹಿ೦ದಣ ಉದ್ದೇಶಕ್ಕಿಂತ ಬೇರೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಕನ್ನಡದಲ್ಲಿ ಪ್ರಕಟವಾದ ಕೃತಿಗಳು ತುಳುವಿಗೆ ಅನುವಾದಗೊಂಡಿವೆ. ಕಾವ್ಯಗಳು ಕಾದಂಬರಿಗಳು, ನಾಟಕಗಳು, ಯಕ್ಷಗಾನ ಪ್ರಸಂಗಗಳು, ಸಣ್ಣಕತೆಗಳು ಹೀಗೆ ಎಲ್ಲ ಪ್ರಕಾರದ ಕನ್ನಡ ಕೃತಿಗಳು ತುಳುವಿನಲ್ಲಿ ಭಾಷಾಂತರವಾಗಿ ಪ್ರಕಟವಾಗಿವೆ. ತುಳುವಿನಲ್ಲಿ ಭಾಷಾಂತರ ಕೃತಿಗಳು ಹುಟ್ಟಿಕೊಂಡುದು ಬಹುಶಃ ೨೦ನೆಯ ಶತಮಾನದ ಮೂರನೆಯ ದಶಕದಲ್ಲಿ. ತುಳುವಿನಲ್ಲಿ ಸಾಹಿತ್ಯ ಸೃಷ್ಟಿಯಾಗಿರುವುದು ೧೩ ಹಾಗೂ ೧೪ನೆಯ ಶತಮಾನದ ವೇಳೆಗೆ ಆಗಿತ್ತು. ಅದೂ ತುಳು ಲಿಪಿಯಲ್ಲಿ. ಅವುಗಳು ಪ್ರಕಟವಾದುದು ೨೦ನೆಯ ಶತಮಾನದ ೮, ೯ನೆಯ ದಶಕಗಳಲ್ಲಿ. ಈ ನಡುವೆ ಕನ್ನಡ ಸಾಹಿತ್ಯದ ನಡುವೆ ಬದುಕಿದ ತುಳುವರು ಸಹ ಆಗಲೇ ಶ್ರೀಮಂತವಾದ ಮೌಖಿಕ ಸಾಹಿತ್ಯವನ್ನು ಹುಟ್ಟು ಹಾಕಿದ್ದರು. ಶ್ರೀಮಂತವಾದ ಜನಪದ ಸಾಹಿತ್ಯದ ಭಾಷೆಯ ಸೊಗಡನ್ನು ಗಮನಿಸಿದ ತುಳು ಸೃಜನಶೀಲ ಬಹರಗಾರರು ಕನ್ನಡಕ್ಕೆ ಪರ್ಯಾಯವಾಗಿ ತುಳು ಸಾಹಿತ್ಯವನ್ನು ಕನ್ನಡ ಲಿಪಿಯಲ್ಲಿ ಬರೆದರು. ಕನ್ನಡದ ಆಗಾಧ ಸಾಹಿತ್ಯ ಪರಂಪರೆಯ ಪರಿಚಯವನ್ನು ಸಹಜವಾಗಿಯೇ ಪಡೆದ ತುಳು ಬರಹಗಾರರು ಅಂತಹ ಕಾವ್ಯಕೃತಿಗಳನ್ನು ತುಳುವಿನ ಮೂಲಕ ಹೇಳುವ ಪ್ರಯತ್ನವನ್ನು ಮಾಡಿದರು. ತುಳು ಭಾಷೆಯನ್ನು ರಾಜಕೀಯವಾಗಿ ಅವಗಣಿಸಿದ ಕಾರಣಕ್ಕಾಗಿ ತುಳು ಭಾಷೆಯ ಪ್ರೌಢಿಮೆಯನ್ನು, ಅಗಾಧ ಸೌಂದರ್ಯವನ್ನು ಅಕ್ಷರ ರೂಪದಲ್ಲಿ ಹಿಡಿದಿಡಬೇಕಾದ ಅಗತ್ಯವನ್ನು ತುಳು ಬರಹಗಾರರು ಮನಗಂಡರು. ಪಂಚದ್ರಾವಿಡ ಭಾಷೆಗಳಲ್ಲಿ ಒಂದೆಂದು ಗುರುತಿಸಲಾದ ತುಳು ಇತರೆ ನಾಲ್ಕು ಭಾಷೆಗಳಿಗೆ ಸರಿಮಿಗಿಲಾದ ಪದಸಂಪತ್ತಿಯನ್ನು ಹೊಂದಿದ್ದರೂ ತುಳು ಭಾಷೆಯ ಸಾಧನೆ ಶಿಷ್ಟ ಸಾಹಿತ್ಯದಲ್ಲಿ ಹೇಳಿಕೊಳ್ಳುವಷ್ಟು ಇದ್ದಿರಲಿಲ್ಲ. ತುಳುವಿನಲ್ಲಿ ಪ್ರಾಚೀನ ಕೃತಿಗಳು ರಚನೆಯಾಗಿದ್ದರೂ ಸಾಮಾಜಿಕ ಕಾರಣಗಳಿಗಾಗಿ ಅವು ಲಭ್ಯವಾಗದೇ ಹೋಗಿರಲೂಬಹುದು. ಅಥವಾ ಕೆಲವೇ ಜನರ ಸೊತ್ತಾಗಿ ಪರಿಗಣಿಸಿ ಬಹಿರಂಗವಾಗಿ ತೋರಿಸದೆ ಕಾಯ್ದಿಟ್ಟು ನಾಶವಾಗಿದ್ದಿರಲೂಬಹುದು. ಒಟ್ಟಿನಲ್ಲಿ ಪ್ರಾಚೀನ ತುಳು ಕೃತಿಗಳು ಇಂದು ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಈ ಕಾರಣಕ್ಕಾಗಿಯೇ ಪಂಚದ್ರಾವಿಡ ಭಾಷೆಯಲ್ಲಿ ತುಳುವಿನದು ಕ್ಷೀಣ ಧ್ವನಿಯಾಯಿತು. ಇದನ್ನು ಮನಗಂಡೇ ತುಳು ಭಾಷೆಯ ಬರಹಗಾರರು ಅದನ್ನೊಂದು ಸವಾಲಾಗಿ ಸ್ವೀಕರಿಸಿ ಸೃಷ್ಟಿಶೀಲ ಸಾಹಿತ್ಯದ ಜೊತೆಗೆ ತುಳು ಭಾಷೆಯಲ್ಲಿ ಭಾಷಾಂತರಗಳ ಮೂಲಕವೂ ಕೃತಿಗಳನ್ನು ರೂಪಿಸಿಕೊಟ್ಟರು.

ವಿವಿಧ ಛಂದಸ್ಸುಗಳ ಬಳಿಕೆ, ವಿವಿಧ ಸಾಹಿತ್ಯ ಪ್ರಕಾರಗಳ ಅನಾವರಣ, ಪದ್ಯ, ಗದ್ಯಗಳ ರಚನೆ ಇವುಗಳಿಗೆಲ್ಲ ಮದರಿಯಾಗಿ ಕನ್ನಡದ ಕೃತಿಗಳು ತುಳು ಬಹರಗಾರರಿಗೆ ಒದಗಿದುವು. ಹಾಗೆಯೇ ಆದರ್ಶವಾಗಿ ಕನ್ನಡದ ಕೃತಿಗಳನ್ನು ಭಾಷಾಂತರ ಮಾಡಿ ತುಳುವಿನ ಭಾಷಾ ಸಂಪತ್ತನ್ನು ಸಾಹಿತ್ಯ ಗಾದಿಗೆ ಏರಿಸುವ ಪ್ರಯತ್ನ ಮಾಡಿದರು. ಕನ್ನಡದಂತಹ ಪ್ರೌಢ ಸಾಹಿತ್ಯ ಪರಂಪರೆಯನ್ನೇ ತುಳುವಿನಲ್ಲಿ ಪುನರ್‌ಸೃಷ್ಟಿಸಬಹುದು ಎಂಬುದನ್ನು ಸಾಧಿಸಿ ತೋರಿಸಲೆತ್ನಿಸಿದರು. ಈ ನೆಲೆಯಲ್ಲಿ ತುಳು ಭಾಷಾಂತರಕಾರರು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಅಕ್ಷರ ರೂಪದಲ್ಲಿ ದಾಖಲಿಸುವುದರ ಮೂಲಕ ತುಳು ಭಾಷೆಯ ಉನ್ನತೀಕರಣಕ್ಕಾಗಿ ಶ್ರಮಿಸುವ ಉದ್ದೇಶವನ್ನು ಹೊಂದಿದ್ದರು. ಭಾಷಿಕವಾದ ಅವಗಣನೆ, ಅವಮಾನ, ನಿರ್ಲಕ್ಷ್ಯಗಳನ್ನು ಮೀರಿ ತುಳುವಿನ ಅನನ್ಯತೆಯನ್ನು ಅಕ್ಷರ ರೂಪದಲ್ಲಿ ಸಾರುವ ಮಹತ್ತರವಾದ ಆಕಾಂಕ್ಷೆಯನ್ನೂ ಈ ಭಾಷಾಂತರಕಾರರು ಉಳಿಸಿಕೊಂಡಿದ್ದರು. ತುಳು ಭಾಷೆಯನ್ನು ಗ್ರಂಥಸ್ಥ ಭಾಷೆಯಾಗಿ ನೋಡುವ ಸಾಹಸದ ಭಾಗವಾಗಿ ಅನುವಾದಗಳು ರೂಪುಗೊಂಡವು.

“ಯಾವುದೇ ವಿಷಯವನ್ನು ಅನ್ಯಭಾಷೆಯಲ್ಲಿ ಓದಿ ತಿಳಿಯುವುದಕ್ಕಿಂತ ಸ್ವಭಾಷೆಯಲ್ಲಿ ಓದಿತಿಳಿದುಕೊಳ್ಳುವುದು ಸುಲಭ ಎಂಬ ಭಾವನೆ ಭಾಷಾಣತರಕಾರರಲ್ಲಿತ್ತು. ತುಳು ಭಾಷೆಯ ಮಲಯಾಳಂಗೆ ಅಲ್ಪಸ್ವಲ್ಪ ಭಿನ್ನವಾದ ಒಂದು ಲಿಪಿಯಿಂದ ಇತ್ತೀಚೆಗಿನವರೆಗೆ ಬರೆಯಲ್ಪಡುತ್ತಿದ್ದರೂ, ತುಳು ಭಾಷೆಗೆ ಪ್ರತ್ಯೇಕ ಲಿಪಿ ಇಲ್ಲದುದರಿಂದಲೇ, ತುಳು ಭಾಷೆಯು ತನ್ನ ನೆರೆಯಲ್ಲಿರುವ ಅದಕ್ಕಿಂತಲೂ ವ್ಯಾಪಕವಾದ ಕನ್ನಡ ಸಂಸ್ಕೃತಿಯಲ್ಲಿ ಮರೆಗೊಂಡುದರಿಂದಲೇ ತುಳೂಭಾಷೆಯ ಗ್ರಂಥಗಳಿಗೆ ಅವಕಾಶ ದೊರೆಯದೇ ಹೋಯಿತು”. ಉಳ್ಳಲ ಮಂಗೇಶರಾವ್‌ಅವರ ಈ ಅಭಿಪ್ರಾಯ ಅನುವಾದದ ದೃಷ್ಟಿಯಿಂದ ಸರಿಯಾದುದೇ ಆಗಿದೆ.

ಅನುವಾದ ಆಂಡ ಬಿಲೆ ಅಕ್‌ ಕಡಮ್ಮೆನೊ
ಓದುದು ತೂಯಂರ್ಡ ತೆರಿವು
ಕಡೊ ಆದ್‌ ಕೊನತ್ತಿನ ಮಡು ಪರಿ ಕಮ್ಯತ್ತ್‌
ಕಡ್ತ್‌೦ಡ್‌ ಮಗುರುಜೊ ಮಲ್ಲವರ
(ಅನುವಾದವಾದರೆ ಬೆಲೆಯದಕೆ ಕಡಿಮೆಯೇ?
ಓದಿ ನೋಡಿದಿರಾದರೆ ತಿಳಿದೀತು
ಕಡವಾಗಿ ತಂದ ಕೊಡಲಿಯ ಹರಿತ ಕಡಿಮೆಯೇನಲ್ಲ
ಕಡಿದರೆ ಉರುಳದಿರುವುದೇ ಹೆಮ್ಮರ?)
(ಅನು : ಹರಿಕೃಷ್ಣ ಭರಣ್ಯ, ಕರ್ನಾಟಕ ಭಾರತಿ, ಪು. ೧೧೮. ಸ.೨೦ ಸಂಚಿಕೆ ೪, ಮೇ ೧೯೮೮)

ತುಳು ಚೋಮನದುಡಿಯ ಅರ್ಪಣೆಯಲ್ಲಿ ಕೆದಂಬಾಡಿಯವರು ಹೇಳಿದ ಈ ಅಭಿಪ್ರಾಯ ಅನುವಾದದ ಪರಿಣಾಮದ ದೃಷ್ಟಿಯಿಂದ ಅರ್ಥವತ್ತಾದುದು. ಕೃತಿ ಮೂಲವೇ ಆಗಲಿ ಅನುವಾದವೇ ಆಗಿರಲಿ ಅವು ಸಮರ್ಥವಾದ ಅಭಿವ್ಯಕ್ತಿಯಿದ್ದರೆ ಓದುಗರನ್ನು ತಲುಪಿಯೇ ತಲುಪುತ್ತದೆ. ಅದಕ್ಕೆ ಕೃತಿ ಮೂಲವೆಂದೋ ಅನುವಾದವೆಂದೋ ವ್ಯತ್ಯಾಸ ಮಾಡಬೇಕಾಗಿಲ್ಲ. ಕೊಡಲಿ ಕಡವಾಗಿ ತಂದಕಾರಕ್ಕೆ ಅದರ ಹರಿತ ಕಡಿಮೆಯಾಗಿರಬೇಕಾಗಿಲ್ಲ. ಕಡಿದರೆ ದೊಡ್ಡಮರವಾದರೂ ಉರುಳಿಯೇ ಉರುಳುತ್ತದೆ. ಈ ದೃಷ್ಟಾಂತದ ಮೂಲಕ ಕೆದಂಬಾಡಿಯವರು ಅನುವಾದದ ಮಹತ್ವವನ್ನು ತಿಳಿಯ ಹೇಳಿದ್ದಾರೆ. ಅನುವಾದ ಸುಲಭದ ಕೆಲಸವಲ್ಲ. ಅದರ ಪರಿಣಾಮವೂ ಕಡಿಮೆಯದಲ್ಲ ಎಂಬುದನ್ನು ಇದರಿಂದ ತಿಳಿಯಬಹುದು.

ಪ್ರಾಚೀನ ಕೃತಿಗಳು

ತುಳುವಿನಲ್ಲಿ ಹೆಸರಿಸಬಹುದಾದ ಮೊದಲ ಅನುವಾದ ಕೃತಿಯೆಂದರೆ “ದೇವಿ ಮಹಾತ್ಮೆ”. ಆದರೆ ಇದು ಆಧುನಿಕ ತುಳು ಸಾಹಿತ್ಯ ನಿರ್ಮಾಣದ ಅಗತ್ಯದ ನೆಲೆಯಿಂದ ರೂಪುಗೊಂಡದಲ್ಲ. ಪ್ರಾಚೀನ ತುಳು ಗದ್ಯಗ್ರಂಥ ‘ದೇವಿ ಮಹಾತ್ಮೆ’ಯ ಸಂಸ್ಕೃತದ ‘ಸಪ್ತಶತೀ’ ಎಂಬ ಕೃತಿಯ ಅನುವಾದ. ಕನ್ನಡದಲ್ಲಿ ಪ್ರಾಚೀಣ ಗದ್ಯ ಗ್ರಂಥವಾದ ವಡ್ಡಾರಾಧನೆಯನ್ನು ನೆನಪಿಗೆ ತರುವ ಕೃತಿಯಿದು. ಪ್ರಾಚೀನ ತುಳು ಭಾಷೆ ಹಾಗೂ ಸಂಸ್ಕೃತಿಗಳ ಸ್ವರೂಪಗಳನ್ನು ತಿಳಿಯುವಲ್ಲಿ ಈ ಗ್ರಂಥಕ್ಕೆ ಮಹತ್ವದ ಸ್ಥಾನವಿದೆ. ತುಳುವಿನಲ್ಲಿ ಲಭ್ಯವಾದ ಅತ್ಯಂತ ಪ್ರಾಚೀನ ಕೃತಿಯಿದು. ಇದರ ಕಾಲವನ್ನು ಕ್ರಿ.ಶ. ೧೨೦೦ ಎಂದು ಅಭಿಪ್ರಾಯ ಪಡಲಾಗಿದೆ. (ಕಬ್ಬಿನಾಲೆ ವಸಂತ ಭಾರದ್ವಾಜ ೨೦೦೧-೧) ಪ್ರಾಚೀನ ತುಳು ಸಾಹಿತ್ಯವನ್ನು ಅಧ್ಯಯನ ಮಾಡಿದ ಕಬ್ಬಿನಾಲೆ ವಸಂತ ಭಾರದ್ವಾಜ ಅವರು ‘ದೇವಿ ಮಹಾತ್ಮೆ’ ಗದ್ಯಕೃತಿಯ ಅನುವಾದದ ಸೊಗಸನ್ನು ಕುರಿತು ಹೇಳಿದ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು. “ಸಂಸ್ಕೃತ ಸಪ್ತಶತೀ ಏಳುನೂರು ಶ್ಲೋಕಗಳುಳ್ಳ ಪ್ರಸಿದ್ಧ ಪಾರಾಯಣ ಕೃತಿ. ದುರ್ಗಾದೇವಿಯ ಆರಾಧನೆಯಲ್ಲಿ ಇಂದಿಗೂ ಬಹುಮುಖ್ಯವಾದ ಈ ಕೃತಿಯಲ್ಲಿ ಹದಿಮೂರು ಅಧ್ಯಾಯಗಳಿವೆ. ಮಾರ್ಕಂಡೇಯ ಪುರಾಣಾಂತರ್ಗತವಾದ ದೇವಿಮಹಾತ್ಮೆಯ ಕಥೆ ಇಲ್ಲಿಯ ಮೂಲ ವಸ್ತು. ಮಧುಕೈಟಭವದೆ, ಮಹಿಷಾಸುರವಧೆ, ಚಂಡಮುಂಡವಧೆ, ಶುಂಭನಿಶುಂಬವಧೆ-ಮುಂತಾದ ಕಥಾ ವಿವರಗಳೊಂದಿಗೆ ದುರ್ಗಾದೇವಿಯನ್ನು ಸ್ತುತಿಸುವ ಸ್ತೋತ್ರಮಾಲಿಕೆ ಇಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಇದರ ತುಳು ಅನುವಾದರೂಪವೇ ಪ್ರಸ್ತುತ ಗದ್ಯ ಕಾವ್ಯ. ಪ್ರತಿ ಅಧ್ಯಾಯದ ವಿಂಗಡಣೆ, ಆರಂಭ, ಅಂತ್ಯ, ಕಥಾಹಂದರ ಎಲ್ಲವೂ ಮೂಲಕೃತಿಯ ಸುಂದರ ಗದ್ಯನಿರೂಪಣೆ ಎಂಬುದು ಮಹತ್ವದ ವಿಚಾರ. ಆದರೆ ಅದನ್ನು ಕೇವಲ ಶುಷ್ಕಾನುವಾದವೆನ್ನುವುದು ಸರಿಯಲ್ಲ. ಸಂಕ್ಷೇಪವಾದ ಶ್ಲೋಕಗಳು ವಿಸ್ತಾರ ಕಥನಕ್ಕೆ ಎಡೆಮಾಡಿರುವುದು ಉಂಟು. ಸಾಂದರ್ಭಿಕವಾದ ಸುಂದರ ಸಂವಾದಗಳಿಂದ ಕೆಲವೆಡೆ ನಾಟಕದ ನೆನಪಾಗುವುದುಂಟು. ಮೂಲಪಠ್ಯದ ಹಿನ್ನೆಲೆಯಿರುವುದರಿಂದ, ಎಷ್ಟೋ ಕಡೆ ಪಳಂತುಳುವಿನ ಪದಪ್ರಯೋಗ ಅರ್ಥನಿರ್ಣಯಕ್ಕೆ ಸಹಕಾರಿಯಾಗುತ್ತದೆ. ಕಬ್ಯಲ (ಸರ್ವ), ಅಗ್ಯಕಾಲ (ಕೆಟ್ಟಕಾಲ), ನುಂಬತೌಳ್‌ (ಅಂಗಣ), ಕಂದಿಕೆ (ನೂಪುರ) -ಮುಂತಾದ ಪದಗಳಿಗೆ ಮೂಲಾರ್ಥವೇನೆಂದು ನಿಷ್ಕರ್ಷಿಸುವುದು ಇದರಿಂದ ಸುಲಭವಾಗುತ್ತದೆ. ಜೊತೆಗೆ ಪದ್ಯಕ್ಕೆ ಸುಲಲಿತವಾಗಿ ಹೇಳುವ ಅರ್ಥದಂತೆ ಹೃದ್ಯವಾಗಿರುವ ಇಲ್ಲಿಯ ಅನುವಾದಶೈಲಿ ಮನಂಬುಗುವಂತಿದೆ. ಕಿರಿದಾದ ಶ್ಲೋಕಪಾದಗಳೂ ಮನೋಜ್ಞವಾಗಿ ಭಾಷಾಂತರಗೊಂಡಿರುವುದನ್ನು ಗಮನಿಸಿದಾಗ ಕವಿಪ್ರತಿಭೆಯ ಸಮ್ಯಕ್‌ ದರ್ಶನವಾಗುತ್ತದೆ (೨೦೦೧, ೨, ೮) ಆಧುನಿಕ ತುಳುವಿನ ಸಂದರ್ಭದಲ್ಲಿ ಸ್ಥಳೀಯವಾಗಿ ಅನುವಾದಕ್ಕೆ ಮೊದಲು ತೆರೆದುಕೊಂಡುದು ಯಕ್ಷಗಾನಕೃತಿ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕನ್ನಡದ ಜನಪ್ರಿಯ ಯಕ್ಷಗಾನ ಪ್ರಸಂಗವನ್ನು ತುಳುವಿನಲ್ಲಿ ಹೇಳುವುದರ ಪ್ರಯತ್ನವಾಗಿ ಅನುವಾದಕ್ಕೆ ಚಾಲನೆ ನೀಡಿದೆ ಎಂಬುದು ತುಳುನಾಡಿನ ಸಾಂಸ್ಕೃತಿಕ ಪರಿಸರದಲ್ಲಿ ಮಹತ್ವದ ಸಂಗತಿಯೇ ಹೌದು. ಯಕ್ಷಗಾನ ಪ್ರಸಂಗಗಳು ಸಹೃದಯರನ್ನು ತಲುಪುವುದು ಶ್ರವ್ಯ ಮಾಧ್ಯಮದಲ್ಲಿ ಎಂಬುದರಿಂದ ಅನುವಾದದ ಉದ್ದೇಶ ತಿಳಿಯುತ್ತದೆ.

ಮಂದಾರ ರಾಮಾಯಣ (೧೯೭೭) ವಾಲ್ಮೀಕಿ ರಾಮಾಯಣವನ್ನು ಅಧರಿಸಿ ಮಂದಾರ ಕೇಶವ ಭಟ್ಟರು ಬರೆದ ತುಳು ಕಾವ್ಯದ ಮೊದಲ ಎಸಳು. ಇದು ತುಳುವಿನ ಪ್ರಥಮ ಮಹಾಕಾವ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ. ರಾಮಾಯಣ ಪೂರ್ಣ ಕಾವ್ಯವು ಪ್ರಸ್ತುತ ಕೃತಿಯಲ್ಲಿ ಪ್ರಕಟವಾಗದೆ ಪುಂಚದಬಾಲೆ, ಬಂಗಾರ್ದ ತೊಟ್ಟಿಲು ಎಂಬ ಮೊದಲ ಎರಡು ಎಸಳುಗಳು ಮಾತ್ರ ಪ್ರಕಟವಾಗಿದೆ. ರಾಮಾಯಣ ಸಂಸ್ಕೃತ ಕಾವ್ಯವವು ಅನೇಕ ಭಾಷೆಗಳಲ್ಲಿ ಮರುಹುಟ್ಟು ಪಡೆವಂತೆ ಪ್ರಸ್ತುತ ತುಳುವಿನಲ್ಲಿಯೂ ಪಡೆದಿದೆ. ರಾಮಾಯಣದ ಮೂಲ ವಸ್ತುವನ್ನು ಆಧರಿಸಿ ತಮಗೆ ಮೆಚ್ಚಿಕೆಯಾದಂತೆ ರೂಪಾಂತರಗಳನ್ನು ಮಾಡಿ ಕೃತಿರಚನೆ ಮಾಡಿದವರು ಅನೇಕರಿದ್ದಾರೆ. ಆ ಕಾರಣಕ್ಕೆ ಭಾರತದಲ್ಲಲ್ಲದೆ, ವಿದೇಶೀಭಾಷೆಗಳಲ್ಲೂ ರಾಮಾಯಣ ಜನಪ್ರಿಯತೆಯನ್ನು ಪಡೆದಿದೆ. ವಿಭಿನ್ನ ದೇಶಗಳ ವಿಭಿನ್ನ ಭಾಷೆಗಳ ರಾಮಾಯಣಗಳಲ್ಲಿ ಮೂಡಿಬಂದ ಕಲ್ಪನಾ ಚಿತ್ರಗಳು, ರೂಪಿಸಿದ ರೂಪಾಂತರಗಳು, ಅಭಿವ್ಯಂಜಿಸಿದ ರಸಭಾವಗಳು ಮೊದಲಾದ ಕಾರಣಗಳಿಗಾಗಿ ಮೊದಲ ಕಾವ್ಯವೆನ್ನಿಸಿ ಗೌರವಕ್ಕೆ ಪಾತ್ರವಾಗಿದೆ. ಏನೇ ಆದರೂ ವಾಲ್ಮೀಕಿಯ ರಾಮಾಯಣವನ್ನು ಮೀರಿಸುವ ಕಾವ್ಯ ಹುಟ್ಟಿಬಂದಿಲ್ಲ. ಎಂಬಷ್ಟರ ಮಟ್ಟಿಗೆ ಉನ್ನತ ಸ್ಥಾನವನ್ನೂ ಉಳಿಸಿಕೊಂಡ ಕೃತಿ. ಅದನ್ನಾಧರಿಸಿ ರಚಿಸಿದ ಯಾವುದೇ ಭಾಷೆಯ ಕೃತಿಗೂ ಆ ಸ್ಥಾನ ಸುಲಭವಾಗಿ ಲಭ್ಯವಾಗುತ್ತದೆ. ಇದಕ್ಕೆ ತುಳು ಮಂದಾರ ರಾಮಾಯಣವೂ ಹೊರತಲ್ಲ.

ತುಳುವಿನ ಈ ರಾಮಾಯಣವು ವಾಲ್ಮೀಕಿಯ ವೃತ್ತಾಂತದಿಂದ ಮೊದಲಾಗುತ್ತದೆ. ಪೂರ್ವಾಶ್ರಮದಲ್ಲಿ ‘ಬೇಡ’ ಆಗಿದ್ದವನು ಮುಂದೆ ಬೇಕಾದವನಾದುದು ಹೇಗೆ ಎಂಬ ವಿಸ್ಮಯಜನಕವಾದ ಸನ್ನಿವೇಶಗಳನ್ನು ಚಿತ್ರಿಸುವಲ್ಲಿಯೂ ರಾಮಾಯಣದಲ್ಲಿ ಎಲ್ಲೆಡೆಯೂ ತುಳುನಾಡಿನ ಮಣ್ಣಿನ ವಾಸನೆಯೇ ಬಡಿಯುತ್ತದೆ. ಇಲ್ಲಿ ಹಾಗೆಯೇ ಮುಂದೆ ಎಲ್ಲೆಲ್ಲೂ – ಬರುವ ತುಳುವಿನ ನುಡಿ, ತುಳುವಿನ ನುಡಿಗಟ್ಟು, ತುಳುವಿನ ಗಾದೆ, ಇವೆಲ್ಲಕ್ಕಿಂತಲೂ ವಿಶೇಷವಾಗಿ ತುಳುವಿನ ಮಾತಿನ ರೀತಿ (ರೀತಿ ನಿಯಮ ಗುಣ ಕ್ಲಿಷ್ಟಪದ ಸಂಘಟನಾ ಮತೌ – ರೀತಿಯೆಂದರೆ ಗುಣಗಳಿಂದ ಕೂಡಿದ ಪದಗಳ ಸಂಘಟನೆ) ತುಳುವರಲ್ಲದವರಿಗೂ ಅತ್ಯಾಕರ್ಷಣೆಯ ವಿಷಯವಾಗುತ್ತದೆ. ಅಲ್ಲದೆ ಪ್ರಕೃತಿ ವರ್ಣನೆಗಳ ಸೊಗಸು, ನವೀನ ಕಲ್ಪನೆಗಳ ಚೆಲುವು, ನಿರೂಪಣೆಯ ವೈಖರಿ ಮೊದಲಾದವುಗಳೆಲ್ಲ ವಾಚಕರನ್ನೂ, ಶ್ರೋತೃಗಳನ್ನು, ಮಂತ್ರಮುಗ್ಧರನ್ನಾಗಿ ಮಾಡಬಲ್ಲುವೆಂದು ಧಾರಾಳವಾಗಿ ಹೇಳಬಹುದು. ಹಿರಿಯರಾದ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಮುನ್ನುಡಿಯ ಮಾತು ಅಕ್ಷರಶಃ ನಿಜವಾಗಿದೆ. (ಮಂದಾರ ರಾಮಾಯಣ, ಪು ೫) ತುಳು ಬಾಷೆಯ ಅಭಿವ್ಯಕ್ತಿ ಸಾಮರ್ಥ್ಯವನ್ನು ವ್ಯಂಜಿಸುವ ದೃಷ್ಟಿಯಿಂದಲೂ ಈ ಕೃತಿಗೆ ಮಹತ್ವದ ಸ್ಥಾನವಿದೆ. ಕಾವ್ಯವನ್ನು ಕುರಿತು ಅಮೃತ ಸೋಮೇಶ್ವರರ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸಬಹುದು. “ಈ ಕಾವ್ಯದಲ್ಲಿ ಮೈದೋರಿದ ಅನೇಕ ನೂತನ ಕಲ್ಪನೆಗಳು ಕವಿಪ್ರತಿಭೆಗೆ ಕನ್ನಡಿ ಹಿಡಿಯುತ್ತವೆ. ಇದರ ವಸ್ತು, ಭಾವ, ತತ್ತ್ವಗಳು, ಕಥನಶೈಲಿಯ ಪ್ರಸಾದಿತ, ಅಲಂಕಾರಗಳ ಸೊಬಗು, ವರ್ಣನೆಗಳ ಚಿತ್ತಾಕರ್ಷಕ ಸಂಭಾಷಣೆಗಳ ಸಹಜತೆ, ಪಾತ್ರಶಿಲ್ಪ, ರಸ ಪರಿಪೋಷಣೆ, ಧ್ವನಿರಮ್ಯತೆ ಇತ್ಯಾದಿಗಳು ಈ ಕೃತಿಗೆ ಮಹಾಕಾವ್ಯದ ಮಣೆಯನ್ನು ಮುಂದುಮಾಡಲು ಸಹಾಯಕವಾಗುತ್ತವೆನ್ನಲು ಅಡ್ಡಿಯಿಲ್ಲ. ಆಧುನಿಕ ಕಾಲದಲ್ಲಿ ಕನ್ನಡದಲ್ಲಿ ಸೃಷ್ಟಿಯಾದ ‘ಶ್ರೀರಾಮಾಯಣ ದರ್ಶನಂ’ ಕಾವ್ಯವನ್ನು ಓದುವಾಗ ಉಂಟಾಗುವ ಭವ್ಯತೆಯ ಅನುಭೂತಿಯ ಈ ತುಳು ಕಾವ್ಯವನ್ನು ಓದುವಾಗಲೂ ಆಗುತ್ತದೆಂಬುದನ್ನು ಉಭಯ ಭಾಷಾ ರಸಜ್ಞರು ಗುರುತಿಸಬಹುದು.

ಪ್ರಕೃತ ತಲೆಮರೆಸಿಕೊಳ್ಳತೊಡಗಿರುವ ತುಳು ನೆಲದ ಸಂಸ್ಕೃತಿಯ ತಿರುಳು ಪುರುಳು ತುಂಬಿದ ದೇಸಿ ವಿವರಗಳನ್ನು ಧಾರಾಳವಾಗಿ ಬಳಸಿ ಕಾವ್ಯಕ್ಕೆ ಒಂದು ವಿಶಿಷ್ಟ ಜೀವಂತಿಕೆಯನ್ನು ನೀಡುವ ಕಲೆಯಲ್ಲಿ ಹಾಗೂ ವರ್ಣನಾ ಚಾತುರ್ಯದಲ್ಲಿ ಶ್ರೀ ಕೇಶವ ಭಟ್ಟರು ಮುದ್ದಣನನ್ನು ನೆನಪಿಗೆ ತರುತ್ತಾರೆ. ಕಾವ್ಯದುದ್ದಕ್ಕೂ ತುಳುನಾಡ ನೆಲದ ಕಂಪು ಅಡಿಗಡಿಗೂ ಸೂಸುತ್ತದೆ” (ಮಂದಾರ ರಾಮಾಯಣ ಪು ii).

ಎರಡನೆಯ ಎಸಳು ಬಂಗಾರ ತೊಟ್ಟಿಲ್‌ನ ಆರಂಬದ ಸಾಲುಗಳಲ್ಲಿ
ಕಾವ್ಯ ಶೈಲಿಯನ್ನು ಕವಿಯ ದೃಷ್ಟಿಯನ್ನು ಕಂಡುಕೊಳ್ಳಬಹುದು.
ನಾರದೆರೆ ಚುಟುಕು ಗೀಮಾಯಣೋಡ್ಡುದ್ದ ವಾ –
ಲ್ಮೀಕಿಲೆನ ರಾಮಾಯನಣ್ಣೊಡೇತೋ ಕುದ್ಯ ಅಂ –
ಚಾಯಿನೇಡ್ಡಿಂದು ಗೀಮಾಯಣಲ ಅತ್ತ್‌ರಾ –
ಮಾಯಣಲ ಇಂದತ್ತ್. ಇಂದೊಂಜಿ ಪಿಟ್ಕಾಯ –
ಣಾಂದೋದಿನಕುಳ ಪಣಿಯೆರೆ ಯಾವು, ಪಣಡಂಚಿ
ಮದಿಮೆ ಆವಂದೆ ಬೆರ್ಮಾಚಾರಿಯಾದಿತ್ತಿ
ನಾರದೆರ್‌ ಯಾನತ್ತ. ಮದಿಮೆ ಆದಾ ಬೊಡದಿ
ಬಾಲೆಲೆನ್‌ ಕಯ್ಬುಡ್ದು ತಪಸ್‌ಡಾ ದೇವೆರೆನ –
ಬಯೊಡು ಕಬಿತೆಗೆಎ ಸುರೂ ಮೂರ್ತ ಮಳ್ತಿಂಚಿ ವಾ –
ಲ್ಮೀಕಿ ರುಸಿ ಯಾನತ್ತ್, ಕಣ್‌ ಮುಚ್ಚೊಂದು ತ –
ನ್ನುಡಲ್‌ಡೇ ಸಿರಿ ರಾಮ ರೂಪೊನೇ ತೂದಿತ್ತೆ
ವಾಲ್ಮೀಕಿ ರುಸಿಕುಳೆನ್‌, ಚರ್ಮದಿಟ್ಟಿಡ್‌ತೂದು
ಸೇವೆ ಮಳ್ತಿನ ಬಂಟೆ ಹನುಮಂತ ದೇವರೆನ್‌
ಮನಸ್‌ಡೆಣ್ತಿದ್‌, ಕಡಲ ಬರಿತು ತುಳು ನಾಡ ಮ –
ಣ್ಣ್‌ದ ಬಣ್ಣ ಬದ್‌ಕ್‌ಲೆನ್‌ ಮೂಜಿ ಲೋಕೊಡು ತೂಪಿ
ನೆನ್ನ ಕಣ್ಣ್‌ಗ್‌ತೋಜು ಲೆಕ್ಕೀ ಕತೆನ್‌ಬರೆಪೆ

(ನಾರದರ ಚುಟುಕು ರಾಮಾಯಣಕ್ಕಿಂತಲೂ ಉದ್ದ ವಾಲ್ಮೀಕಿಯ ರಾಮಾಯಣಕ್ಕಿಂತಲೂ ಗಿಡ್ಡ) ಹಾಗಾಗಿ ಇದು ರಾಮಾಯಣವೂ ಅಲ್ಲ. ಗೀಮಾಯಣವೂ ಅಲ್ಲ. ಇದೊಂದು ಪಿಟ್ಕಾಯಣ | ಎಂದು ಓದಿದವರು ಹೇಳಬಹುದು. ಹೇಳಿಕೊಳ್ಳಲಿ ಅತ್ತ ಮದುವೆಯಾಗದೆ ಬ್ರಹ್ಮಚಾರಿಯಾಗಿರುವ ನಾರದನೂ ನಾನಲ್ಲ. ಮದುವೆಯಾಗಿ ಆ ಹೆಂಡತಿ ಮಕ್ಕಳ ಕೈಬಿಟ್ಟು ತಪಸಿನಲಿ ಆ ದೇವರ | ಭಯದಲ್ಲಿ ಕಾವ್ಯ ಆರಂಭ ಮೂಹೂರ್ತ ಮಾಡಿದ | ವಾಲ್ಮೀಕಿ ಋಷಿ ನಾನಲ್ಲ. ಕಣ್ಣು ಮುಚ್ಚಿ ತನ್ನ| ಒಡಲಲ್ಲೇ ಶ್ರೀರಾಮ ರೂಪವ ನೋಡಿದ | ವಾಲ್ಮೀಕಿ ಋಷಿಗಳನು, ಚರ್ಮದ ಕಣ್ಣುಗಳಿಂದ ನೋಡಿ | ಸೇವೆ ಮಾಡಿದ ಬಂಟ ಹನುಮಂತ ದೇವರನು | ಮನಸ್ಸಲ್ಲೇ, ನೆನೆದು ಕಡಲತೀರದ ತುಳು ನಾಡ | ಮಣ್ಣಿನ ಬಣ್ಣ ಬದುಕುಗಳ ಮೂರು ಲೋಕದಲಿ | ನೋಡುವೆನ್ನ ಕಣ್ಣಿಗೆ ಕಾಣುವಂತೆ ಕತೆಯ ಬರೆವೆ).

ಮಂದಾರ ರಾಮಾಯಣದ ಕನ್ನಡಾನುವಾದವನ್ನು ಮಂದಾರ ಕೇಶವ ಭಟ್ಟರೇ ಮಾಡಿದ್ದಾರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಧಾರ್ಮಿಕ ಕೃತಿಗಳು

ಧಾರ್ಮಿಕ ಉದ್ದೇಶಗಳಿಗೆ ತುಳುವಿನಲ್ಲಿ ಕೃತಿಗಳು ರಚನೆಯಾಗಿದ್ದು ಈ ಅನುವಾದದ ಪ್ರಯತ್ನಗಳು ಆಧುನಿಕ ತುಳುವಿನ ಮುಖ್ಯ ಮಾದರಿಗಳಾಗಿವೆ. ಪ್ರಪಂಚದಲ್ಲಿ ಮೊತ್ತಮೊದಲು ಅನುವಾದದ ಅಗತ್ಯ ಕಂಡು ಬಂದುದು ಧಾರ್ಮಿಕ ಉದ್ದೇಶಗಳಿಗಾಗಿ. ಅದರಲ್ಲೂ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಅನುವಾದಗಳಿರುವುದು ಬೈಬಲ್‌ಗೆ. ಮೂಲ ಆರ್ಮೈಕ್‌ ಭಾಷೆಯಿಂದ ಪ್ರಪಂಚದ ಎಲ್ಲಾ ಭಾಷೆಗಳಿಗೂ ಬೈಬಲ್‌ ಭಾಷಾಂತರವಾಗಿದೆ. ತುಳುವಿನ ಸಂದರ್ಭದಲ್ಲೂ ಕ್ರೈಸ್ತಮತಕ್ಕೆ ಸಂಬಂಧಿಸಿದ ಮೂರು ಅನುವಾದ ಕೃತಿಗಳು ಪ್ರಕಟವಾಗಿವೆ.

ತುಳು ಕ್ರಿಸ್ತಗೀತೆಗಳ ತುಳು ಭಾಷಾಂತರ ೧೮೬೪ ರಲ್ಲಿ ಮೊತ್ತಮೊದಲು ಪ್ರಕಟವಾಯಿತು. ಇದರಲ್ಲಿ ೧೨೦ hymnsಗಳಿವೆ. ಮಿಷನರಿಗಳಾದ ಜೆ. ಅಮ್ಮನ್‌ಮತ್ತು ಕೆ. ಕ್ಯಾಮರರ್ ತುಳು hymnsಗಳನ್ನು ಸಂಕಲಿಸಿದರು. ಅವರ ತರುವಾಯ ಎ. ಮೆನ್ನರ್‌ಇನ್ನಷ್ಟು hymnsಗಳನ್ನು ಸೇರಿಸಿದರು. ೧೮೭೮ರಲ್ಲಿ ಪ್ರಕಟವಾದ ಮೂರನೆಯ ಆವೃತ್ತಿಯಲ್ಲಿ ೧೩೯ hymnsಗಳಿವೆ. ೧೮೯೧ರಲ್ಲಿ ಪ್ರಕಟವಾದ ಐದನೆಯ ಆವೃತ್ತಿಯಲ್ಲಿ ೨೧೯ hymnsಗಳಿವೆ ಮತ್ತೆ ೩೩, ಹೊಸ hymnsಗಳನ್ನು ಒಳಗೊಂಡ ೮ನೆಯ ಆವೃತ್ತಿ ೧೯೬೬ರಲ್ಲಿ ಪ್ರಕಟವಾಯಿತು. ಚರ್ಚ್‌ಗಳಲ್ಲಿ ಕನ್ನಡ hymnsಗಳ ಜೊತೆಯಲಿ ತುಳು hymnsಗಳನ್ನು ಹೇಳುತ್ತಿದ್ದರಂತೆ. ಈ ಕಾರಣಕ್ಕಾಗಿಯೇ ತುಳು hymnsಗಳ ಅನುವಾದ ಕೃತಿಗಳ ಜನಪ್ರಿಯವಾದವು. ಅಲ್ಲದೆ ಅನೇಕ ಆವೃತ್ತಿಗಳನ್ನು ಕಾಣುವಂತಾಯಿತು.

೧೯೪೬ರಲ್ಲಿ ಪ್ರಕಟವಾದ ‘ಪೊಸ ಒಡಂಬಡಿಕೆ’ಯ The New testaments ತುಳು ಅನುವಾ. ಮದ್ರಾಸ್‌ ಆಕ್ಸಿಲ್ಲರಿಯ ಬ್ರಿಟಿಷ್‌ ಎಂಡ್ ಫಾರಿನ್‌ ಬೈಬಲ್‌ ಸೊಸೈಟಿಯವರು ಪ್ರಕಟಿಸಿದ ಈ ಕೃತಿಯನ್ನು ಮೂಲ ಗ್ರೀಕ್‌ ಭಾಷೆಯಿಂದ ತುಳುವಿಗೆ ಅನುವಾದ ಮಾಡಲಾಗಿದೆ ಎಂದು ಹೇಳಿದ್ದಾರೆ. ಸುಮಾರು ೧೫೦ ಕೀರ್ತನೆಗಳನ್ನು ತುಳುವಿಗೆ ಸಮರ್ಥವಾಗಿ ಭಾಷಾಂತರ ಮಾಡಲಾಗಿದೆ.

ದೇವತಾರಾಧನೆ ಕ್ರಮ (೧೮೯೭ ಎರಡನೆಯ ಆವೃತ್ತಿ) ಕ್ರಿಶ್ಚಿಯನ್‌ ಸಮುದಾಯದವರಿಗೆ ಚರ್ಚ್‌ನಲ್ಲಿ ಪ್ರಾರ್ಥನೆ ಕೈಗೊಳ್ಳುವ ಸಲುವಾಗಿ ತುಳುವಿನಲ್ಲಿ ಬರೆದ ಕೃತಿ. ಹಾಗಾಗಿ ಇತರೇ ಭಾಷೆಗಳ ಅನುವಾದದ ಸಂದರ್ಭದಲ್ಲಿಯಂತೆ ತುಳುವಿಗೆ ಅನುವಾದಗಳ ಸಂದರ್ಭದಲ್ಲಿಯೂ ಮಿಶನರಿಗಳ ಕೊಡುಗೆ ಗಮನಾರ್ಹವೇ ಆಗಿದೆ.

ಗೀತ ಮಲ್ಲಿಗೆ (೧೯೩೪) ಎಂಬ ಹೆಸರಿನಲ್ಲಿ ಭಗವದ್ಗೀತೆಯನ್ನು ಮೂಲ್ಕಿ ನರಸಿಂಗರಾವ್‌ಅವರು ತುಳುವಿಗೆ ಭಾಷಾಂತರಿಸಿದ್ದಾರೆ. ಸಂಸ್ಕೃತದ ಲಯವನ್ನು ಉಳಿಸಿಕೊಂಡು ಇಲ್ಲಿನ ಶ್ಲೋಕಗಳನ್ನು ರಚಿಸಿದ್ದಾರೆ. ತುಳು ಮಾತೃಭಾಷೆಯ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ಹೃದ್ಯವಾಗುವಂತೆ ಇಲ್ಲಿ ಛಂದೋ,ಬಳಕೆಯನ್ನು ಮಾಡಿದ್ದಾರೆ. ಅನುವಾದದಲ್ಲಿ ಸ್ವಾಭಾವಿಕವಾಗಿ ಸಂಸ್ಕೃತ ಪದಗಳ ಬಳಕೆ ಅಧಿಕವಾಗಿದೆ. ಬ್ರಾಹ್ಮಣ ತುಳುಭಾಷೆಯನ್ನು ಇಲ್ಲಿನ ಅನುವಾದದಲ್ಲಿ ಬಳಸಲಾಗಿದೆ. ಉದಾಹರಣೆಗೆ ಈ ಕೆಳಗಿನ ಸಾಲುಗಳನ್ನು ಗಮನಿಸಬಹುದು.

ಪಂಡಿತಕ್ಕಾ ಲೋಕೊಟುಪ್ಪುನು ರಡ್ಡ್‌ ತರತಾ ನಿಷ್ಠಳೇ
ಜ್ಞಾನಂವೇಗನೆ ಸಾಂಖ್ಯರೇನವು ಕರ್ಮಯೋಗಿನೆ ಯೋಗಿಳೇ
ಕರ್ಮ ಮಳ್ಪಾಂದೆಸೇ ಕರ್ಮತ್ಯಾಗತಾ ಫಲ ತಿಕ್ಕುಜೀ
ಕರ್ಮ ಸನ್ಯಾಸತಾ ಫಲವಾತ್‌ ಸಿದ್ಧಿ, ಅರ್ಜುನ, ದಕ್ಕುಜೀ
ದೀತ್‌ ಕಮೋಂದೀತೇ ನಿಯಮೊಡು ಮನಸು
ಬಜೀ ಮೂಢಾತ್ಯಾಗ್‌ಮಿಥ್ಯಾಚಾರಿ ಅನ್ಪೇರಾ ಜನಾ (ಪು.೧೨)

ಧಾರ್ಮಿಕ ಅಗತ್ಯಗಳನ್ನು ಪೂರೈಸುವ ಸಲುವಾಗಿ ಅಲ್ಲವಾದರೂ ತುಳು ಮಾತೃಭಾಷಿಕರ ಅನುಕೂಲವಾಗುವಂತೆ ಅನುವಾದ ಸೃಷ್ಟಿಸಿದ್ದಾರೆ.

ಪುರಂದರದಾಸರ ಕೆಲವು ಕೀರ್ತನೆಗಳ ಅನುವಾದಗಳೂ ಈ ಕೃತಿಯಲ್ಲಿವೆ. ಯಾರಿಗೆ ಯಾರುಂಟು ಎರವಿನ ಸಂಸಾರ, ಆಚಾರವಿಲ್ಲದ ನಾಲಿಗೆ, ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ, ಚಿಂತೆ ಯಾತಕೋ ಬಯಲು ಭ್ರಾಂತಿ ಯಾತಕೋ, ಸ್ವಾಮಿ ಬಂದಾ ಮಹಾ ಸ್ವಾಮೀ ಬಂದಾ, ನಾ ನಿನ್ನ ಧ್ಯಾನದೊಳಿರಲು ಇತ್ಯಾದಿ ಕೀರ್ತನೆಗಳನ್ನು ಕನ್ನಡದ ಲಯವನ್ನು ಉಳಿಸಿಕೊಂಡೇ ಭಾಷಾಂತರ ಮಾಡಿದ್ದಾರೆ. ಕನ್ನಡದ ಧಾಟಿಯಲ್ಲಿಯೇ ಇವುಗಳನ್ನು ಹಾಡಬಹುದು. ಇವುಗಳನ್ನು ಗಮನಿಸಿದರೆ ಧಾರ್ಮಿಕ ಅಗತ್ಯಗಳಿಗಾಗಿಯೇ ಅನುವಾದಗಳನ್ನು ಪ್ರಕಟಿಸಿದಂತೆ ತೋರುತ್ತದೆ. ವಾದಿರಾಜ ಸ್ವಾಮಿಗಳ ‘ಲಕ್ಷ್ಮೀಶೋಭಾನೆ’ಯನ್ನು ದೇವೇಂದ್ರ ಪೆಜತ್ತಾಯ ಅವರು ಅನುವಾದ ಮಾಡಿದ್ದಾರೆ. ಶಿವಳ್ಳಿ ಬ್ರಾಹ್ಮಣರ ಮದುವೆಯ ಸಂದರ್ಭಗಳಲ್ಲಿ ಇದನ್ನು ಹಾಡುವ ದೃಷ್ಟಿಯಿಂದಲೇ ಇದನ್ನು ರೂಪಿಸಿದ್ದಾರೆ. ಶಿವಳ್ಳಿ ಬ್ರಾಹ್ಮಣ ತುಳು ಹಾಗೂ ಸಾಮಾನ್ಯ ತುಳು ಎಂಬ ಪ್ರತ್ಯೇಕ ಅನುವಾದಗಳ ಆವೃತ್ತಿಗಳನ್ನೇ ಅವರು ಸಿದ್ಧಪಡಿಸಿ ಪ್ರಕಟಿಸಿದ್ದಾರೆ.

ಯಕ್ಷಗಾನ ಕೃತಿಗಳು

ವಾಲಿಸುಗ್ರೀವೆರ ಕಾಳಗೂ (ಪಂಚವಟಿ ರಾಮಾಯಣ) ಇದು ಕುಂಬಳೆ ಪಾರ್ತಿಸುಬ್ಬ ಕವಿ ವಿರಚಿತ ‘ಪಂಚವಟಿ ವಾಲಿಸಂಹಾರ’ ಎಂಬ ಪ್ರಸಂಗದ ತುಳು ರೂಪ. ಇದನ್ನು ೦೬.೦೫.೧೮೮೭ರಂದು ಶುಕ್ರವಾರವೇ ಬರೆದು ಮುಗಿಸಿದ್ದು ೧೯೨೯ರಲ್ಲಿ ಮೂರನೆಯ ಮುದ್ರಣವಾಗಿ ಪ್ರಕಟವಾಗಿದೆಯೆಂದು ಅದರ ಪ್ರತಿಗಳು ಮುಗಿದು ಹೋಗಿ ಅವುಗಳನ್ನು ಪರಿಷ್ಕರಿಸಿ ೧೯೬೮ರಲ್ಲಿ ಜತ್ತಿಕೃಷ್ಣ ಭಟ್ಟರು ಪ್ರಕಟಿಸಿದರು. ಅನುವಾದವನ್ನು ಕುರಿತು ಮೊದಲ ಮಾತಿನಲ್ಲಿ’ ಕಯ್ಯಾರ ಕಿಞ್ಞಣ್ಣ ರೈಯವರು ಕುಂಬಳೆಯ ಪಾರ್ತಿಸುಬ್ಬ ಕವಿಯಿಂದ ರಚಿತವಾದ “ಪಂಚವಟಿ ವಾಲಿಸುಗ್ರೀವರ ಕಾಳಗ” ಎಂಬ ಪ್ರಸಂಗವು ಸಾಹಿತ್ಯ ಮತ್ತು ಕಲಾದೃಷ್ಟಿಗಳಲ್ಲಿ ಅತ್ಯಂತ ಶ್ರೇಷ್ಠವಾದ ಯಕ್ಷಗಾನ ಕೃತಿಯಾಗಿದೆ. ಇದನ್ನು ಯಥವತ್ತಾಗಿ ಮೂಲ ಕನ್ನಡ ಭಾಷೆಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ಬರುವಂತೆ, ತುಳು ಭಾಷೆಯಲ್ಲಿ ಬರೆದುದು ಸಂಕಯ್ಯ ಭಾಗವತರ ಪ್ರತಿಭಾ ವಿಶೇಷವೆನ್ನಬೇಕು ಸರಿಯಾದ ಛಂದಸ್ಸು, ಮೂಲ ಕೃತಿಯ ರಾಗತಾಳಗಳಿಗೆ ಸಮವಾದ ರಾಗತಾಳಗಳ – ಹೀಗೆ ಪಾರ್ತಿಸುಬ್ಬನ ಕೃತಿ ಸಂಕಯ್ಯ ಭಾಗವತರ ಈ ರಚನೆಯಿಂದ ಮತ್ತಷ್ಟು ಜನಪ್ರಿಯವಾಯಿತು (ಪು. Iv, v).

ಕವಿ, ಕೃತಿ ಪರಿಚಯವನ್ನು ಮಾಡುತ್ತ ಟಿ.ಕೇಶವ ಭಟ್ಟರು ಇದು ಪಾರ್ತಿಸುಬ್ಬನ ಪ್ರಸಂಗದ ಪ್ರತಿಕೃತಿ ಅಥವಾ ಪರಿವರ್ತನೆ ಆದರೂ ಮಕ್ಕಿಕಾಮಕ್ಕಿ ಅಲ್ಲ ಎಂಬುದನ್ನು ಹೇಳಿದ್ದಾರೆ. ಇದರಲ್ಲಿ ಕವಿ ಸ್ವತಂತ್ರ ಪ್ರತಿಭೆಯನ್ನು ಮೆರೆದಿದ್ದಾರೆ. ವಿಟ್ಲಸೀಮೆಯ ಬ್ರಾಹ್ಮಣೇತರ ತುಳು ಭಾಷೆಯಲ್ಲಿ ಇಲ್ಲಿನ ಪದ್ಯಗಳನ್ನು ರಚಿಸಲಾಗಿದೆ. ಟಿ. ಕೇಶವ ಭಟ್ಟರು ಹೇಳುವಂತೆ “ಕನ್ನಡದಲ್ಲಿ ಈ ಪ್ರಸಂಗದ ಕಥೋಪಕ್ರಮವು ಶ್ರೀರಾಮ ಸೀತಾಲಕ್ಷ್ಮಣರು ಪಂಚವಟಿಗೆ ತಲುಪುವುದಕ್ಕಿಂತಲೂ ಮೊದಲಿನಿಂದ ತುಳುವಿನ ಈ ಪ್ರಸಂಗದ ಕಥೆ ಶೂರ್ಪನಖಿಯ ಮಾನಭಂಗಾನಂತರ ಪ್ರಾರಂಭಿಸಿದೆ. ಕನ್ನಡದ ಪ್ರಸಂಗದಲ್ಲಿ ೨೫೫ ಪದ್ಯಸಂಖ್ಯೆಯಾದರೆ ಇದರಲ್ಲಿ ೩೬೦ ಪದ್ಯಗಳಿವೆ. ರಾಗ, ತಾಳವಿವರ, ಪದರೂಪ (ಛಂದಸ್ಸು) ಇವು ಮೂಲ ಕೃತಿಯನ್ನು ಅನುಸರಿಸಿದ್ದರೂ ಪದಗಳ ಪರಿಶೀಲನೆಯಿಂದ ಹೊಳೆಯದಿರು. ಕನ್ನಡದ ಯಕ್ಷಗಾನ ಪ್ರಸಂಗವು ‘ಸುಗ್ರೀವ ಪಟ್ಟಾಭಿಷೇಕ’ದಲ್ಲಿ ಕೊನೆಗೊಳ್ಳುವುದು. ಆದರೆ ತುಳುವಿನಲ್ಲಿ ಇಲ್ಲಿಂದ ಮುಂದುವರಿದು ಸಂಕ್ಷೇಪವಾಗಿ ರಾಮಾಯಣದ ಮುಂದಿನ ಎಲ್ಲ ಕಥೆಯೂ ಬರುತ್ತದೆ. ಶ್ರೀರಾಮನ ‘ರಾಮರಾಜ್ಯ’ದ ನಡೆವಳಿ ನಾಲ್ಕು ವಾರ್ಧಕ ಷಟ್ಟದಿಗಳಲ್ಲಿ ಮನಮುಟ್ಟುವಂತೆ ಇಲ್ಲಿ ವರ್ಣಿತವಾಗಿದೆ. ಇದರಿಂದ ಕೃತಿಗೆ ‘ಪಂಚವಟಿ ರಾಮಾಯಣ’ ಎಂಬ ಹೆಸರೇ ಇರುವುದು ಔಚಿತ್ಯಪೂರ್ಣವಾಗಿದೆ. ತುಳು ಭಾಷೆಯ ಮತ್ತು ತುಳು ಜನಜೀವನದ ಜಾಯಮಾನಕ್ಕೊಪ್ಪುವ ತಿರುಳ್ನುಡಿಗಳು ಈ ಕೃತಿಯುದ್ಧಕ್ಕೂ ಅಲ್ಲಲ್ಲಿ ಕಂಗೊಳಿಸುತ್ತಿವೆ” (ಪು ix)

ವಾಲಿಸುಗ್ರೀವರ ಯುದ್ಧದ ಸಂದರ್ಭದಲ್ಲಿ ತುಳು ಭಾಷೆಯನ್ನು ಕವಿ ಸ್ವತಂತ್ರವಾಗಿ ದುಡಿಸಿಕೊಂಡಿರುವುದನ್ನು ಕಾಣಬಹುದು. ಉದಾಹರಣೆಗೆ ಗಿಟ್ಟಮುಟ್ಟ ಬತ್ತಿಗುಡ್ಡೆ | ಗಟ್ಟಿ ಗಟ್ಟ ಮರಲ ಚಟ್ಟೆ | ಮೊಳ್ತ್‌ಡೆಂಗ್ಯೆರಾಕ್ಕ್‌ | ಜಟ್ಟಿ ಕಾಲಗೋ || ಪೆಟ್ಟ್‌ ಪೆಟ್ಟ್‌ ಬೆರಿಕ್ಕ್‌ ಮೆಯ್ಡ್‌ | ತುಟ್ಟು ಕುಟ್ಟ ತರೆಕ್‌ ಬುಜೋಕ್ಕ್‌ | ಮುಟ್ಟು ಮುಟ್ಟ್‌ ತಳ್ಳೆ ಗಳ್ಳೆ | ಗೊಟ್ಟು ತಾದ್ಯೆರ್‌ (ಪು. ೩೪)

ದೇರಂಬಳ ತ್ಯಾಂಪಣ್ಣ ಶೆಟ್ಟಿ (೧೯೩೮) ಅವರೂ ಪಂಚವಟಿ ವಾಲಿ ಸುಗ್ರೀವರ ಪ್ರಸಂಗವನ್ನು ತುಳುವಿಗೆ ಅನುವಾದಿಸಿದ್ದಾರೆ.

ತುಳು ‘ಕಿಟ್ಣರಾಜಿ’ ಪ್ರಸಂಗೊ ಕನ್ನಡ ಕೃಷ್ಣಸಂಧಾನ ಯಕ್ಷಗಾನ ಪ್ರಸಂಗದ ಅನುವಾದ. ಇದನ್ನು ತುಳುವಿಗೆ ಅನುವಾದಿಸಿದವರು ಬಡಕಬೈಲ್‌ಪರಮೇಶ್ವರಯ್ಯೆ. ಪುಸ್ತಕದ ಎಡ ಪುಟಗಳಲ್ಲಿ ಮೂಲ ಕನ್ನಡ ಕೃಷ್ಣಸಂಧಾನ ಪ್ರಸಂಗವನ್ನು ಬಲಪುಟಗಳಲ್ಲಿ ತುಳು ಅನುವಾದವನ್ನು ಪ್ರಕಟಿಸಲಾಗಿದೆ. ಮೂಲ ಕನ್ನಡ ಕೃತಿಯ ಯಥಾವತ್ತಾದ ಅನುವಾದವಿದು. ತುಳು ಭಾಷೆಯ ಹಿರಿಮೆಯನ್ನು ಅನುವಾದದಲ್ಲಿ ಮೆರೆದಿದ್ದಾರೆ. ಯಾವುದೇ ಉಪಭಾಷೆಯನ್ನು ಬಳಸದೆ ತುಳುವಿನ ಪ್ರಮಾಣ ಭಾಷೆಯನ್ನು ಅನುವಾದದಲ್ಲಿ ಉಳಿಸಿಕೊಂಡಿದ್ದಾರೆ. ಆದರೆ ಕೆಲವು ನಾಮಪದಗಳನ್ನು ಸಹ ಅನುವಾದ ಮಾಡಿದ್ದು ಒಂದು ವಿಶೇಷ. ಕೃಷ್ಣ – ಕಿಟ್ಣ, ವನಜಾಕ್ಷ-ನೀರ್ತುಳಯಿ ಪುಟ್ಟಿ ಕಣ್ಣಾರೆ, ಕಪಟ ನಾಟಕ – ಸುಳ್ಳು ಗೊಬ್ಬುದಯ ಇತ್ಯಾದಿ ಪದಗಳ ಸೊಗಸು ಮೂಲಕೃತಿಗಿಂತ ಹೊಸನೆಲೆಯ ಅರ್ಥವನ್ನು ಧ್ವನಿಸುವಂತಾ ಮಾಡಿದೆ.

ನೀತಿಯೇ ಕರುಣಾಳು ನಿನಗೆ ವಿ | ಘಾತವೆಣಿಸಿದ ದುಷ್ಟನೊಳು ಸಂ
ಪ್ರೀತಿಯೇ ಸಂಧಾನಕನುವಾಗುವೆಯ ಪೇಳನಲೂ |
ಖ್ಯಾತ ಧರ್ಮಜ ನುಡಿದನನಿಬರ | ಪಾತಕವು ಮಗುಳವರ ಹೊದ್ದಿರ |
ಲಾತನಲಿ ಸಂಧಿಯ ಪ್ರಯತ್ನವ ಮಾಡಿ ಬಹುದೆಂದಾ | (ಕನ್ನಡ)
ನಾಯನೊ ದಯತಾಯ ನಿಕ್ಕ್ | ನ್ನಾಯಗೆರೆಯಿ ದುಟ್ಟಡಪ ದಯ
ನಾಯಡಪ ರಾಜಾಪಿತಿಕ ಪೇಚಾಡ್ಡ್‌ಬರೊಡುಂದೇ || (ತುಳು)
ಧರಣಿಗೋಸುಗ ನೀವು ನಿಜಸೋದರರು ಹಳಚುವಿರೇಕ ಭೂಮಿಯಂ
ಸ್ಥಿರವದಾರಿಗೆ ನೀವು ಪಾಂಡರೇಕವಿರೆ ನಾವೂ ||
ಹರುಷಗೊಂಬೆವು ಸರುವಥಾ ಸಂಗರವು ಬೇಡೈ ನಿನಗೆ ಸಾಲಿದೆ
ಮರಳಿ ಹರಿಹಂಚಾದರೆಂಬಕೀರ್ತಿ ಬಹುದೆಂದಾ ||
(ಮಣ್‌ಗಾತ್‌ರ ದಾಯೆ ನಿಜಮೆಗಿ ಯಣ್ಣ ನಾಕುಳು ತಡಿಪುವಾರೀ
ಬೆನ್ನಿ ಯೇರೆಗ್‌ತಿರ ನಿಕುಳು ಪಾಂಡವರ ವೊಂಜಾಂಡಾ
ಕೇಣ್ಣಿ ಸಂತಸ ನಂಕ್‌ ಪೊಕ್ಕಡೆ ದೊಣ್ಣೆ ಪತ್ತಡೆ ನಿಕ್ಕ್ ಸಾರ್‌ದೆ
ಎಣ್ಣಿ ಜಪುದಾಚೀರಯಿನ ಬುಗುಲಾವು ಪಿಂದೊಣುಲಾ (ಪು.೧೦-೧೧)
ಪಂದಬೆಟ್ಟು ವೆಂಕಟರಾಯ ಅವರ ಕೋಟಿ ಚೆನ್ನಯ (೨೦೦೩).

ಕನ್ನಡ ಯಕ್ಷಗಾನ ಪ್ರಸಂಗವನ್ನು ತುಳುವಿನಲ್ಲಿ ಬರೆದವರು ಬಿ. ಮಧುಕುಮಾರ್‌ ನಿಸರ್ಗ ಅವರು. ‘ಕೋಟಿ ಚೆನ್ನಯ’ ಪ್ರಸಂಗದ ಪದ್ಯ ಕನ್ನಡದಲ್ಲಿ ಅರ್ಥ ತುಳುವಿನಲ್ಲಿ ಹೀಗೆ ಪ್ರಯೋಗಗಳು ನಡೆಯುತ್ತಿದ್ದುವು. ಮಧುಕುಮಾರ್ ಅವರು ರಂಗಪ್ರಯೋಗಕ್ಕೆ ಅನುಕೂಲವಾಗುವಂತೆ ತುಳುವಿನಲ್ಲಿ ಪ್ರಸಂಗ ರಚಿಸಿದ್ದಾರೆ.

ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರ ‘ಅಂಗದ ಸಂಧಾನೊ’, ಅನಂತರಾಮ ಬಂಗಾಡಿಯವರ ‘ವೀರಭಕ್ತೆ ಅತಿಕಾಯೆ’ ಮೊದಲಾದ ಅನುವಾದ ಕೃತಿಗಳನ್ನು ಇಲ್ಲಿ ಹೆಸರಿಸಬಹುದು.

ಮಧ್ಯಕಾಲೀನ ಕನ್ನಡ ಕಾವ್ಯಕೃತಿಗಳು

ಮಧ್ಯಕಾಲೀನ ಕನ್ನಡದ ಕಾವ್ಯಗಳನ್ನು ಆಧರಿಸಿ ತುಳುವಿನಲ್ಲಿಯೂ ಕೃತಿಗಳನ್ನು ರಚಿಸಿ ಆ ಭಾಷೆಯ ಸಾಮರ್ಧ್ತವನ್ನು ಮೆರೆದು ತೋರಿದ ಕವಿಗಳಿದ್ದಾರೆ. ಕಾವ್ಯಗಳಲ್ಲಿ ಛಂದಸ್ಸಿನ ಬಳಕೆಯನ್ನು ಸಮರ್ಥವಾಗಿ ಮಾಡಿ ಕನ್ನಡದ ಸರಿ ಸಮನಾಗಿ ತುಳು ಭಾಷೆಯನ್ನು ಅಭಿವ್ಯಕ್ತಿಸುವ ಉತ್ಸಾಹವನ್ನು ಇವುಗಳಲ್ಲಿ ಕಾಣಬಹುದು. ಈ ಕೃತಿರಚನೆಯಲ್ಲಿ ಅನುವಾದಕ್ಕಿಂತ ಹೆಚ್ಚು ಅನುಸೃಷ್ಟಿಯೇ ಮುಖ್ಯವಾಗಿ ಗೋಚರಿಸುತ್ತದೆ. ಆಕರ ಕಾವ್ಯಗಳ ಭಾವಗಳನ್ನು ಆಧರಿಸಿ ಅದೇ ಭಾವ ಪ್ರಕಟಣೆಯ ಪದ್ಯಗಳನ್ನು ರಚಿಸಿದ್ದು ಇವುಗಳ ವೈಶಿಷ್ಟ್ಯ. ಕುಮಾರವ್ಯಾಸನ ಕೃತಿಯನ್ನಾಧರಿಸಿ ಭಾಮಿನಿಷಟ್ಪದಿ ಕಾವ್ಯಗಳು, ಲಕ್ಷ್ಮೀಶನ ಜೈಮಿನಿಭಾರತವನ್ನಾಧರಿಸಿದ ರಾಘವಾಂಕನ ಹರಿಶ್ಚಂದ್ರ ಚಾರಿತ್ರ್ಯವನ್ನು ಆಧರಿಸಿ ತುಳು ಸಾಮಗತ್ಯ ಕಾವ್ಯ ಇಲ್ಲವೇ ಇಲ್ಲಿ ಪ್ರಮುಖವಾಗಿ ಗೋಚರಿಸುತ್ತವೆ.

‘ಬತ್ತೆ ಕೆತ್ತರೆ ಉತ್ತರ (೧೯೯೨) ಕುಮಾರವ್ಯಾಸ ಭಾರತವನ್ನು ಆಧರಿಸಿ ಎನ್‌.ಪಿ. ಶೆಟ್ಟಿ ಬರೆದ ತುಳು ಕಾವ್ಯ. ಇದು ೧೭೪ ತುಳು ಭಾಮಿನಿ ಷಟ್ಪದಿಗಳ ಪುಟ್ಟ ಕಾವ್ಯ ಇದರಲ್ಲಿ ಮಹಾಭಾರತದ ಬೇರೆ ಬೇರೆ ಸನ್ನಿವೇಶಗಳನ್ನು ಆಯ್ದು ತುಳುವಿನಲ್ಲಿ ಅನುವಾದಿಸಿದ್ದಾರೆ. ಪರಕೆತಿ ಮದಿಪು …… ಮಗದನ್‌ ಮುಗಿತಿ ಕತೆ (ಮಾಗದ ವಧೆ), ಕರ್ಣಂಗ್‌ಕತ್ತೆರಿ (ಕರ್ಣನಿಗೆ ಕತ್ತರಿ), ತೂಕಿಟಿ ಬಾಲೆ (ಬೆಂಕಿಯ ಕಿಡಿ ಮಗು), ಕರ್ಣನ ಕಡೆ (ಕಣಾಧವಸಾನ), ಬತ್ತೆ ಕೆತ್ತರೆ ಉತ್ತರ (ಬಂದ ಕೆತ್ತುವುದಕ್ಕೆ ಉತ್ತರ – ಬಂದ ಜಂಭಕೊಚ್ಚಿಕೊಳ್ಳುವುದಕ್ಕೆ ಎಂಬ ಧ್ವನ್ಯರ್ಥದಲ್ಲಿ) ಈ ಆರು ಸನ್ನಿವೇಶಗಳನ್ನು ತುಳುವಿನಲ್ಲಿ ಬರೆದಿದ್ದಾರೆ.

ತುಳು ಗಾದೆಗಳು, ನುಡಿಗಟ್ಟುಗಳು ಕಾವ್ಯಭಾಷೆಗೊಂದು ಮೆರುಗನ್ನು ಕೊಟ್ಟಿವೆ. ಸಾಂಪ್ರದಾಯಕವಾದ ಭಾಮಿನಿ ಛಂದಸ್ಸಿನಲ್ಲೂ ತುಳುಭಾಷೆಯನ್ನು ಲೀಲಾಜಾಲವಾಗಿ ಪಳಗಿಸಿರುವುದನ್ನು ಈ ಕೃತಿಯಲ್ಲಿ ಕಾಣಬಹುದು.

ಅಂಕದರಸುಲೆ ಬಿಂಕ ಬೆರಣೆರ
ಸಂಕ ಪಾತ್ರದ ಬೇದ ಮಂತ್ರೊದ
ತಂಕೋ ವಿರಹಿತ ತಂಪು, ಯೋಗಿಲೆಗುಂದು ತತ್ವಾರ್ತೊ
ಸುಂಕ ಲೆಕ್ಕದ ಸಾತ್ರ ಶಾರದೆ
ಕಿಂಕರೆರಗೀ ಬರವುದಿಂಜಿದ್‌
ಎಂಕ್‌ ಗುರು ಆ ನಾರಣಪ್ಪೆರ್‌ಒಲಿದ್‌ತಿದ್ದಿಯೆರ್

ನಾರಣಪ್ಪನನ್ನು ಗುರುವಾಗಿ ಸ್ವೀಕರಿಸಿ ಕಾವ್ಯವನ್ನು ಆಧರಿಸಿ ಸ್ವತಂತ್ರವಾಗಿ ರಚಿಸಿದ ಕೃತಿಯಿದು.

‘ತಪ್ಪುಗು ತರೆದಂಡ (೨೦೦೪) ಎನ್‌.ಪಿ ಶೆಟ್ಟರು ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾ ಮಂಜರಿಯ ಕೀಚಕ ಪ್ರಸಂಗವನ್ನು ಆಧರಿಸಿ ಬರೆದ ಇನ್ನೊಂದು ಕಾವ್ಯ. ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಈ ಕಾವ್ಯವನ್ನು ಒಂದು ಅನುವಾದ ಕೃತಿ ಎನ್ನುವಂತಿಲ್ಲ. ಇದು ಕುಮಾರವ್ಯಾಸ ಭಾರತವನ್ನು ಆಧರಿಸಿ ರಚಿಸಿದ ಒಂದು ಸ್ವತಂತ್ರ ಕೃತಿ. ಮಹಾಭಾರತದ ಕೀಚಕವಧೆಯ ಕತೆಗೆ ತುಳು ಸಂಸ್ಕೃತಿಯ ಲೇಪನಮಾಡಿ ಬರೆದ ಸ್ವತಂತ್ರ ಕಾವ್ಯ. ಕವಿ ಇಲ್ಲಿ ಅನೇಕ ತುಳು ಭಾಷಾ ವಿವರಗಳನ್ನು ಬಳಸಿದ್ದಷ್ಟೇ ಅಲ್ಲ ಕಾವ್ಯವನ್ನೂ ತುಳುವಿನ ಸಾಂಸ್ಕೃತಿಕ ಸಂದರ್ಭಕ್ಕೆ ಅನುಗುಣವಾಗಿ ಮಾರ್ಪಡಿಸಿಕೊಂಡಿದ್ದಾರೆ. ಕಾವ್ಯ ಸಂದರ್ಭದ ಅನೇಕ ಉಪಮೇಯಗಳೂ ತುಳುವಿನ ಸಾಂಸ್ಕೃತಿಕ ಸಂದರ್ಭದಿಂದ ನೀಡಿದ್ದಾರೆ. ದ್ವಿತೀಯಾಕ್ಷರ ಪ್ರಾಸವನ್ನು ಉಳಿಸಿಕೊಂಡೇ ಕವಿ ಭಾಮಿನಿ ಷಟ್ಪದಿಯಲ್ಲಿ ಕೃತಿ ರಚಿಸಿದ್ದಾರೆ.

ಕುಮಾರವ್ಯಾಸನ ಶ್ರೀವನಿತೆಯರಸನೆ ಎಂಬೀ ನಾಂದೀ ಪದ್ಯವು

ಸಿರಿನ ಕೈಪತಿನಾರ್‌ ಮಣೆತಾ
ಮರೆಟ್‌ ಕುಲುದಿನ ದೇವರಮ್ಮೆರ್‌
ಬರೆದ್‌ ಓದುನ ಸುಗಿಪು ಸುಲೆಕದ ಸುಡೊಕು ಕಾರಣೆರ್‌
ಶರಣ ಜನೋಕುಲೆಗಿಂಬುಕೊರ್ತೆರ್‌
ದುರುಳ ರಾವಣ ತರೆನ್‌ ಕಡ್ತೆರ್‌
ಕರುಣ ದೀದೆಂಕುಲೆನ್‌ ಕಾಪೊಡು ಉಡುಪಿ ಸಿರಿಕೃಷ್ಣ.

ಅನುವಾದದಲ್ಲಿ ಷಟ್ಪದಿಯ ಕೊನೆಯ ಸಾಲಿನ ಗದುಗಿನ ವೀರ ನಾರಾಯಣನ ಬದಲಿಗೆ ಉಡುಪಿ ಸಿರಿಕೃಷ್ಣ ಎಂದು ಬದಲಿಸಿದ್ದನ್ನು ಗಮನಿಸಬಹುದು.

ರೂಪಕ್ಕೆ ಮನಸೀತು ಹಿಂದೆಬಿದ್ದ ಕೀಚಕನ ದ್ರೌಪದಿ ನೀಡುವ ಉತ್ತರ :

ಮರತ ಕೈಪುಡಿ ಪತ್‌ದ್‌ ತಾಂಗ್‌ದ್‌
ಮರನೆ ಕಡ್ಪುನ ಕುಡರಿ ಈ ನಿನ
ಗಿರವು ಕುಟುಮದ ತರೆನ್‌ ಕರತ್‌ದ್‌ ಗೋರಿನೇರಾರೆ
ಒರ ವೊಡೇರ್‌ಲ ಆಟಿಪರ್ಬೊಗು
ಇರಟ್‌ ಬಲಸರೆ ಕುಲೆಕುಲೆದುರುಡು
ಏರುಯೆರೆಗ್‌ ನೀರ್‌ಜ್ಜಿ ಬಾಯಿಗ್‌, ಬೊಡ್ಚಿನಿನ ಪಿರ್ಕಿ

ತುಳುನಾಡಿನಲ್ಲಿ ಆಟಿ (ಕರ್ಕಟಕ) ತಿಂಗಳ ಅಮವಾಸ್ಯೆ ಹಾಗೂ ಇತರ ಹಬ್ಬ ಹರಿದಿನಗಳಲ್ಲಿ ಪ್ರೇತಗಳಿಗೆ ಬಡಿಸುವ ಸಂಪ್ರದಾಯವಿದೆ. ಇದನ್ನು ಕವಿ ಕಾವ್ಯ ಸಂದರ್ಭದಲ್ಲಿ ಬಳಸಿಕೊಂಡಿದ್ದಾರೆ.

ತುಳುನಾಡಿನಲ್ಲಿ ಕೋಣಗಳ ಓಟದ ಸ್ಪರ್ಧೆಯನ್ನು ಏರ್ಪಡಿಸುವ ಕಂಬಳವಿದೆ, ಅದೇ ರೀತಿಯಲ್ಲಿ ವಿರಾಟನಗರದಲ್ಲಿ ಎತ್ತುಗಳನ್ನು ಓಡಿಸುವ ಸ್ಪರ್ಧೆಗಾಗಿ ಇನ್ನೊಂದು ಕಂಬಳದ ಗದ್ದೆಯ ನಿರ್ಮಾಣ ಕೆಲಸ ನಡೆದಿದೆ. ಅದಕ್ಕಾಗಿ ರೂಪಿಸುವ ಯುವಕ ಮಂಡಲದ ಅಧ್ಯಕ್ಷನನ್ನಾಗಿ ಯುವಕರು ಕೀಚಕನನ್ನು ನೇಮಿಸಿದ್ದಾರೆ ಎಂಬಿತ್ಯಾದಿ ವಿವರಗಳ ಮೂಲಕ ಕಾವ್ಯ ತುಳುನಾಡಿನ ಸಾಂಸ್ಕೃತಿಕ ಪರಿವೇಶವನ್ನು ಕಟ್ಟಿ ಕೊಡುತ್ತದೆ. ಇಲ್ಲಿನ ದ್ರೌಪದಿ ಹೇಳುವಂತೆ ಮೇಲಿನ ಲೋಕದ ಅವಳ ಗಂಡದಿರು ಕೀಚಕನನ್ನು ಕೋರಿ ಪತ್‌ದ್‌ಪುಜೆಂಕಿ ಲೆಕ್ಕನೆ ಕೆರ್ದ್ ದಕ್ಕಿಯೆರ್‌ (ಕೋಳಿಯ ಕತ್ತುಹಿಸುಕಿ ಕೊಂದಹಾಗೆ ಕೊಂದು ಎಸೆದರು) ಎಂದೇ ಹೇಳುತ್ತಾಳೆ. ಈ ದ್ರೌಪದಿಯೂ ತುಳುನಾಡಿನವಳಾಗಿ ಪ್ರಖ್ಯಾತವಾಗುತ್ತಾಳೆ.

‘ತುಳು ಹರಿಶ್ಚಂದ್ರ ಕಾವ್ಯೊ’ (೧೯೯೪)ವನ್ನು ಬರೆದವರು ಕೆಲಿಂಜ ಸೀತಾರಾಮ ಆಳ್ವ. ರಾಘವಾಂಕ ಕವಿಯ ಹರಿಶ್ಚಂದ್ರ ಚಾರಿತ್ರ್ಯ ಕೃತಿಯನ್ನು ಆಧರಿಸಿ ಇದನ್ನು ರಚಿಸಲಾಗಿದೆ. ಕನ್ನಡದ ವಾರ್ಧಕ ಷಟ್ಪದಿಯ ಕಾವ್ಯವನ್ನು ಆಧರಿಸಿ ತುಳುವಿನಲ್ಲಿ ಸಾಂಗತ್ಯ ಕೃತಿಯನ್ನು ಆಳ್ವರು ಬರೆದಿದ್ದಾರೆ. ಕನ್ನಡ ಹರಿಶ್ಚಂದ್ರ ಕಾವ್ಯವನ್ನು ಅನುಸರಿಸಿದರೂ ತುಳು ಕವಿ ಇಲ್ಲಿ ತಮ್ಮ ಸ್ವಂತಿಕೆಯನ್ನು ಮೆರೆದಿದ್ದಾರೆ. ಷಟ್ಪದಿ ಕಾವ್ಯವನ್ನು ಸಾಂಗತ್ಯದಲ್ಲಿ ಸೃಷ್ಟಿಸಿದ್ದೇ ಇವರ ಸೃಜನಶೀಲತೆಗೊಂದು ನಿದರ್ಶನ. ಅಲ್ಲದೆ ತುಳು ನುಡಿಗಟ್ಟುಗಳನ್ನು ಗಾದೆಗಳನ್ನು ಅಲ್ಲಲ್ಲಿ ಬಳಸಿ ತುಳು ಭಾಷೆಯ ಸೊಗಡನ್ನು ಕಾವ್ಯದ ಮೂಲಕ ಹರಿಸಿದ್ದಾರೆ. ಹಾಗೆಯೇ ವರ್ಣನೆಗಳ ಸಂದರ್ಭದಲ್ಲಿಯೂ ತುಳು ಸಂಸ್ಕೃತಿಯ ಹಾಗೂ ಭಾಷೆಯ ವಿಶಿಷ್ಟಲಯವನ್ನು ಕಾವ್ಯಾತ್ಮಕವಾಗಿಸುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಕವಿ ಕನ್ನಡದ ಹರಿಶ್ಚಂದ್ರ ಕಾವ್ಯವನ್ನು ತುಳುವಿನಲ್ಲಿ ಎರಕ ಹೊಯ್ದು ತುಳು ಕಾವ್ಯ ಕನ್ನಿಕೆಯಾಗಿಸಿದ್ದಾರೆ.

ತುಳುಕವಿ ರಾಘವಾಂಕನ ಕನ್ನಡ ಹರಿಶ್ಚಂದ್ರ ಕಾವ್ಯದ ಆಶಯಕ್ಕೆ ನಿಷ್ಠರಾಗಿದ್ದಾರೆ. ಕಾವ್ಯದ ಧ್ಯೇಯ, ಧೋರಣೆಗಳಲ್ಲಿ ಬದಲಾವಣೆಗಳು ಕಾಣುವುದಿಲ್ಲವಾದರೂ ತುಳು ಕವಿ ಭಾಷಿಕವಾಗಿ ಸ್ವಂತಿಕೆಯನ್ನು ಮೆರೆದಿರುವುದು ಕಾಣುತ್ತದೆ. ತುಳು ನಾಡಿನ ಸಂದರ್ಭದಲ್ಲಿ ಪ್ರಚಲಿತವಿರುವ ಅನೇಕ ಗಾದೆಮಾತುಗಳು ಹಾಗೂ ನುಡಿಗಟ್ಟುಗಳನ್ನು ಔಚಿತ್ಯವರಿತು ಬಳಸಿ ಕಾವ್ಯವನ್ನು ತುಳುವಿನಲ್ಲಿ ಅನುಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಕತ್ತೆಗ್‌ ಕೈಲಾಸೋ ಗೊಂತ್ತಿದ್ದಿ’ (ಕತ್ತೆಗೆ ಕೈಲಾಸ ಗೊತ್ತಿಲ್ಲ)

‘ನಾಯಿಗ್‌ ದಾಯೆಗ್‌ ನಾರಂಗಾಯಿದುಪ್ಪಡ್‌’
(ನಾಯಿಗೆ ಯಾಕೆ ನಿಂಬೆ ಹಣ್ಣಿನ ಉಪ್ಪಿನಕಾಯಿ)
ನೆತ್ತರ್‌ ಮಾಸೊಡು ಬೇದೊ ಎಂಚಿನ ಉಂಡು?
(ರಕ್ತ ಮಾಂಸದಲ್ಲಿ ವ್ಯತ್ಯಾಸವೇನುಂಟು?)
ಬೊಂಟೆಂಗ್‌ ಪೋನಗ ನಾಯಿಡ ಕೇನ್ವೆರೊ
(ಬೇಟೆಗೆ ಹೋಗುವಾಗ ನಾಯಿಯಲ್ಲಿ ಕೇಳುತ್ತಾರೊ)

ಈ ತೆರನ ಅನೇಕ ಗಾದೆಮಾತುಗಳು ಕಾವ್ಯದಲ್ಲಿ ಎಡೆಯರಿತು ಬಂದಿವೆ. ತುಳು ಕಾವ್ಯದ ಸ್ವಂತಿಕೆಯನ್ನು ಸೂಚನೆಯ ಮೊದಲ ಪದ್ಯದಲ್ಲಿಯೇ ಗುರುತಿಸಬಹುದು. ಕನ್ನಡದ ‘ಶ್ರೀಪತಿಗೆ ಸೊಬಗನು…’ ಷಟ್ಪದಿಯ ಬದಲಿಗೆ ತುಳು ಕವಿ

ಸಾರದಪ್ಪೆಗ್‌ ಮದವೂರುದ ಗಣಪಗ್‌
ಊರುದುಳ್ಳಾಲ್ದೀಗ್‌ ಯಾನ್‌ ||
ಈ ತುಳುನಾಡ್‌ದ ದೈವೊ ದೇಬೆರೆಗಿತ್ತೆ |
ಪಾಡಿಪರಡೊ ಪಂಕನುಂದು ||
(ಶಾರದಮ್ಮಗೆ ಮದವೂರಿನ ಗಣಪಗೆ ಊರ ದೇವಿಗೆ ನಾನು ||

ಈ ತುಳುನಾಡಿನ ದೈವೋ ದೇವರಿಗಿತ್ತ ಬಾರಿ ಹರಕೆ ಹೇಳುವೆನೆಂದು)

ತುಳುನಾಡಿನ ದೈವ ದೇವತೆಗಳನ್ನು ಭಕ್ತಿಯಿಂದ ನೆನೆದುಕೊಳ್ಳುತ್ತಾರೆ. ಕನ್ನಡದ ಕವಿ ರಾಘವಾಂಕ ಹಂಪೆಯ ವಿರೂಪಾಕ್ಷನ ಭಕ್ತ. ಹಾಗೆಯೇ ಕಥಾನಾಯಕ ಹರಿಶ್ಚಂದ್ರನೂ ಭಕ್ತ. ಆದರೆ ತುಳು ಕವಿ ಮಾತ್ರ ಉಳ್ಳಾಲ್ಡಿಯ ಬಗೆಗೆ ನಿಷ್ಠೆಯುಳ್ಳವರು.

ತುಳುವಿನ ಪ್ರಾದೇಶಿಕ ಸಂವೇದನೆಯನ್ನು ಕವಿ ದಾಖಲಿಸುವ ಬಗೆಗೊಂದು ಉದಾಹರಣೆ…

ಹರಿಶ್ಚಂದ್ರ ರಾಯೆನೆ ವೈರಿಲೆ ತೆಗಲೆಡ್‌|
ಬಜಿಲೆಡ್ಪಿ ಸವ್ದೊ ಲಕ್ಕಾದ್‌ |
ಸಿರಿ ಬೂಡುದರಮನೆ ಸಿಸ್ಮೊಪೀಟೊನುವಿರ್ದ್‌
ಪ್ರಜೆ ಪರಿವಾರೊಲೆನಾಳ್ವೆ

(ಹರಿಶ್ಚಂದ್ರ ರಾಯನ ವೈರಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟುವ ಶಬ್ದ ಎಬ್ಬಿಸಿ ಶ್ರೀ ಬೂಡಿನರಮನೆ ಸಿಂಹಾಸನವೇರಿ ಪ್ರಜೆ ಪರಿವಾರಗಳನಾಳುತ್ತಿದ್ದ)

ಎದೆಬಡಿತದ ಶಬ್ದವನ್ನು ತುಳುನಾಡಿನ ಸಂದರ್ಭದಲ್ಲಿ ಹೇಳುವ ‘ಬಜಿಲೆಡ್ಪಿಸಬ್ದೊ’ ರೂಪಕದ ಮೂಲಕ ತುಳುವಿನಲ್ಲಿ ತಂದಿದ್ದಾರೆ. ‘ಬೂಡು’ ಇತ್ಯಾದಿಗಳು ತುಳುನಾಡಿನ ಸಾಂಸ್ಕೃತಿಕ ಸಂಗತಿಗಳನ್ನು ಪ್ರತಿನಿಧಿಸುತ್ತವೆ.

ಎಡೆಯರಿತ ಗಾದೆ ಮಾತಿನ ಮೂಲಕ ತುಳು ಕಾವ್ಯ ಸ್ವಾರಸ್ಯವನ್ನು ಈ ಕೆಳಗಿನ ಪದ್ಯದಲ್ಲಿ ಗುರುತಿಸಬಹುದು.

ಕರುಂಬುದ ಕೋಲುಡು ಕೋಲ್ಚಕಟ್ಟ್‌ನ ಲೆಕೋ
ಅರಸುನ ಕೈಪತ್ತ್‌ನಾಲ್‌ ||
ಆಣ್ ಬಾಲೆನ್‌ ಒಂಜಿ ಪೆದ್ದ್‌ದ್‌ ವಂಸೋದ |
ಬೂರುಗು ತೆಗ್‌ಲೆಪುಟ್ಟಯಲ್‌ (೧-೧೧) ||

(ಕಬ್ಬಿನ ಕೋಲಿನಲ್ಲಿ ಕೋಲ್ಜೇನು ಕಟ್ಟುವ ಹಾಗೆ ಅರಸನ ಕೈಹಿಡಿದವಳು ಗಂಡು ಮಗುವನೊಂದನು ಹಡೆದು ವಂಶದ ಬಳ್ಳಿಯ ಹುಟ್ಟಿಸಿದಳು)

‘ಕಬ್ಬಿನ ಕೋಲಿನಲ್ಲಿ ಕೋಲ್ಜೇನು ಕಟ್ಟುವಂತೆ’ ಎಂಬ ಗಾದೆ ಮಾತು ಇಲ್ಲಿ ಗಂಡಹೆಂಡಿರ ಸಾಮರಸ್ಯವನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ.

ಕತೆಯ ಸಾತತ್ಯಕ್ಕೆ, ಆಶಯಕ್ಕೆ ಲೋಪವಾಗದಂತೆ ಕನ್ನಡ ಕಾವ್ಯದ ವರ್ಣನೆಯ ಭಾಗಗಳನ್ನು ತುಳು ಕಾವ್ಯದಲ್ಲಿ ಕೈಬಿಡಲಾಗಿದೆ. ಆದರೆ ಷಟ್ಪದಿಯೊಂದರ ಆಶಯವನ್ನು ಎರಡೆರಡು ಸಾಂಗತ್ಯಗಳಲ್ಲಿ ಸಮರ್ಥವಾಗಿ ಅನುವಾದ ಮಾಡಿದ್ದನ್ನು ಇಲ್ಲಿ ಕಾಣಬಹುದು.

ನಟ್ಟುನಾಯಗ್‌ ಆನೆಯಂಗಾದ್‌ತಿಗ್‌ನೆಯಿ
ತಿಕ್ಕದ್‌ ಪಲೊದಾನೆ ಪನ್‌ಲೆ
ಕಸ್ತ್‌ ಕಾಯಿಲೆಡಿತ್ತ್‌ನಾಯಗ್‌ರಂಬೆನೊ
ಸೈಪ್ಸುನಾಯಗ್‌ ದ್ರವ್ಯೊದಾಯೆ (೬-೫)
ಉರಿದೊಂಬು ಹಾಡ್‌ದ್‌ತರೆ ತಿರ್ಗುನಂಕ್ಲೆಗ್‌
ಮಣಿರತ್ನೊ ಮಾಲೆನ ಬೋಡೊ |
ಕಡಲ ನೀರ್‌ಡ್‌ ಮುರ್ಕುನಾಯಗ್‌ ತೆಪ್ಪೊನು
ಒದಗಾದ್‌ ಕೊರಿಲೆಕೊ ಈರ್‌ (೬-೬)