ಫ್ಲಟಿಕ್‌ ದೊರೆ ಬರೆದ್‌ ಕೊರಿ ಸಂಸಾರದ ಕ್ರಮೊಳು (ಪು. ೫೬)

(ಫ್ಲಟಿಕ್‌ ದೊರೆ ಬರೆದುಕೊಟ್ಟ ಸಂಸಾರದ ಕ್ರಮಗಳು)

೧೯೦೨, ೧೯೧೦ರಲ್ಲಿ ಪ್ರಕಟಗೊಂಡ ಈ ಕೃತಿಯು johann Friedrich Flattich ಎಂಬುವರು ಜರ್ಮನ್ ಭಾಷೆಯಲ್ಲಿ ಬರೆದ ಕೃತಿಯಾಗಿರುತ್ತದೆ. ಇದನ್ನು ಕನ್ನಡಕ್ಕೆ ೧೮೯೭ರಲ್ಲಿ ಜೆ. ಹ್ಯೂಬರ್‌ ಅನುವಾದಿಸಿದ್ದಾರೆ. ಈ ಕೃತಿಯು ಕುಟುಂಬ ಮಾರ್ಗದರ್ಶಿಯ ರೂಪದಲ್ಲಿದ್ದು ಮಿತವ್ಯಯ, ವ್ಯಾಪಾರ, ಕೈಕಸಬು, ಬಡವನಿಗಿಂತ ಶ್ರೀಮಂತನಿಗೆ ಚಿಂತೆ ಹೆಚ್ಚು, ಆಸ್ತಿ ಪಾಸ್ತಿ, ಅನ್ಯಾಯದಲ್ಲಿ ಬದುಕಬೇಡ, ತಾಳ್ಮೆ, ನಂಬಿಕೆ, ಗಂಡ ಹೆಂಡಿರ ಸಂಬಂಧ, ತಾಯಿ ಮಕ್ಕಳ ಸಂಬಂಧ, ದಂಪತಿಗಳು ಗುಣಧರ್ಮಗಳು, ಮಕ್ಕಳನ್ನು ಪಾಲಿಸುವ ರೀತಿ, ತಂದೆ ತಾಯಂದಿರ ಜವಾಬ್ದಾರಿ, ಹವ್ಯಾಸಗಳು ಹೀಗೆ ವಿವಿಧ ವಿಭಾಗಗಳಿದ್ದು ಒಳ್ಳೆ ಸಂಸಾರಿಗಳಾಗಲು ಬೇಕಾಗುವ ಬೋಧನೆಗಳಿವೆ.

ಕ್ರೈಸ್ತೆರ್ ಕಲಿ ಗಂಗಸರ ಮಳ್ತ್‌ದ್‌ ಮಾರುನವು ಸಮಾದುಂಡಾ
(
ಕ್ರೈಸ್ತರು ಶೇಂದಿ, ಶರಾಬು ಮಾಡಿ ಮಾರಾಟ ಮಾಡುವುದು ಸರಿಯೋ)
(೧೮೭೮ ಪು. ೨೦)

ತುಳು ಜಿಲ್ಲೆಯಲ್ಲಿ ಹಿಂದಿನ ಕಾಲದಿಂದಲೂ ತೆಂಗಿನ ಮರದಿಂದ ಶೇಂದಿಯನ್ನು ತೆಗೆದು ಅದನ್ನು ಕುಡಿಯಲು, ಬೆಲ್ಲ ತಯಾರಿಸಲು ಸಿರ್ಕ (ವೆನಿಗರ್‌) ತಯಾರಿಸಲು ಉಪಯೋಗ ಮಾಡುತ್ತಿದ್ದರು. ಮಿಶನರಿಗಳು ಕೈಗೊಂಡ ಮತಾಂತರ ಕಾರ್ಯದಲ್ಲಿ ಕ್ರೈಸ್ತ ಮತಕ್ಕೆ ಮಂತಾತರಗೊಂಡವರಲ್ಲಿ ಹೆಚ್ಚಿನವರು ಬಿಲ್ಲವರು. ಇವರು ಬೇಸಾಯದಿಂದಿಗೆ ಶೇಂದಿ ತೆಗೆಯುವ ಕಸುಬನ್ನು ಅಳವಡಿಸಿಕೊಂಡಿದ್ದರು. ಕ್ರೈಸ್ತರಾಗಿ ಮತಾಂತರ ಹೊಂದಿವರು ಶೇಂದಿ ತೆಗೆದು ಮಾರಾಟ ಮಾಡುವುದನ್ನು ಬಿಡಬೇಕು. ಹಿಂದಿನ ಈ ಕೀಳಾದ ಉದ್ಯೋಗವನ್ನು ಬಿಟ್ಟು ಸಮಾಜ ಒಪ್ಪುವ ಒಳ್ಳೆಯ ನಾಗರಿಕರಾಗಿ ಬಾಳಲು ಬೇಕಾದ ಉದ್ಯೋಗಳನ್ನೇ ಮಾಡಬೇಕು. ಈ ಮೂಲ ಉದ್ದೇಶದಿಂದ ತಯಾರುಗೊಂಡ ಈ ಕೃತಿಯು ಶೇಂದಿಯಿಂದ ಆಗುವ ತೊಂದರೆಗಳು ಮತ್ತು ಯಾವ ರೀತಿ ಬದುಕಬೇಕು ಎಂಬ ಸಂದೇಶಗಳನ್ನೊಳಗೊಂಡಿದೆ. ಶೇಂದಿ ವಿಚಾರದಲ್ಲಿ ಇರುವ ಏಕೈಕ ಕೃತಿ ಇದಾಗಿದ್ದು ಇದರಲ್ಲಿರುವ ವಿವರಗಳನ್ನು ಸಂಕ್ಷಿಪ್ತವಾಗಿ ನೋಡುವ :

“ಮದ್ಯ ವಿಷ ಅದನ್ನು ತಯಾರಿಸಬೇಡಿ, ಮಾರಬೇಡಿ, ಕುಡಿಯಬೇಡಿ – ಈ ಸಂದೇಶವು ಇನ್ನಷ್ಟು ಅರ್ಥಪೂರ್ಣವಾಗಲು ಅದಕ್ಕೆ ಇನ್ನೊಂದೆ ವಾಕ್ಯವನ್ನೂ ಜೋಡಿಸಲಾಯಿತು. ಮೂರ್ತೆದಾರನ ಮೈ ಬಟ್ಟೆ ಬೆರೆ, ಮಾತ್ರವಲ್ಲ ಅವನು ಮುಟ್ಟಿದೆಲ್ಲ ವಾಸನೆ ಹುಟ್ಟಿಸುತ್ತದೆ”.[1]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಮತಕ್ಕೆ ಮತಾಂತರಗೊಂಡ ೧೦ರಲ್ಲಿ ೯ ಮಂದಿ ಬಿಲ್ಲವರು. ಇವರ ಕುಲಕಸಬು ಶೇಂದಿ ತೆಗೆಯುವುದು. ಮತಾಂತರಗೊಂಡ ಬಿಲ್ಲವರು ತಮ್ಮ ಕುಲ ಕಸುಬನ್ನು ಬಿಟ್ಟು ಬೇರೆ ಬೇರೆ ಉದ್ಯೋಗವನ್ನು ಹಿಡಿಯಬೇಕು. ಅಲ್ಲದೆ ಶೇಂದಿ ಸೇವನೆ ಮತ್ತು ಮಾರಾಟದಿಂದ ಆಗುವ ದುಷ್ಪರಿಣಾಮಗಳನ್ನು ಸವಿವರವಾಗಿ ಕೊಡಲಾಗಿದೆ. ಬಿಲ್ಲವರೇ ಶೇಂದಿ ತೆಗೆಯುತ್ತಾರೆಂಬುದಕ್ಕೆ ಗಾದೆಮಾತಿನಲ್ಲಿ ಕೆಲವು ಗಾದೆಗಳನ್ನು ಈ ಕೃತಿಯಲ್ಲಿ ನೋಡಬಹುದು.

ಪುಚ್ಚೆ ಮೀನ್ ತಿನ್ಪಿನೆನ್ ಬುಡ್‌೦ಡ್ ಬಿರುವೆ ಕಲಿ ಬುಡುವೆ (ಬೆಕ್ಕು ಮೀನು ತಿನ್ನವುದನ್ನು ಬಿಟ್ಟರೆ ಬಿಲ್ಲವ ಶೇಂದಿ ಬಿಡುತ್ತಾನೆ) ಬಿರುವೆ ಕಾಶಿಗ್‌ ಪೋಂಡಲಾ ಐತ ಬಾಕಿಲ್‌ಡೇ ಮೂರುನವು ನೆನಪು ಆಂಡ ಬನ್ನಗ ಪಿರ ಬರಯೇನಾ? (ಬಿಲ್ಲವ ಕಾಶಿಗೆ ಹೋದರೂ ಬಾಗಿಲಲ್ಲಿ ಶೇಂದಿ ತೆಗೆಯುವುದು ನೆನಪಾದರೆ ಹಿಂದೆ ಬರಲಿಕ್ಕಿಲ್ಲವೋ?)

“ಬಿಲ್ಲವರ ಕುಲಕಸುಬು ಶೇಂದಿ ತೆಗೆಯುವುದಲ್ಲ. ಅದು ಅವರ ಉಪಕಸುಬು ಎಂಬ ಅಧ್ಯಯನ ಇತ್ತೀಚೆಗೆ ನಡೆದಿದ್ದು ಲೇಖಕರೊಬ್ಬರು ಹೀಗೆ ಬರೆಯುತ್ತಾರೆ :

“ಬಿಲ್ಲವರು ಪ್ರಾಚೀನ ಕಾಲದ ಅಗತ್ಯತೆಗೆ ತಕ್ಕಂತೆ ಒಂದು ಸ್ವಾವಲಂಬಿ ಸಮಾಜವಾಗಿದ್ದರು. ಇವರಲ್ಲಿ ವೃತ್ತಿಗನುಗುಣವಾಗಿ ಅನೇಕ ಉಪನಾಮಗಳಿದ್ದವು. ಮೂರ್ತೆ ಅಥವಾ ಶೇಂದಿ ತೆಗೆಯುವುದನ್ನು ಒಂದು ಉಪವೃತ್ತಿಯಾಗಿ ಸ್ವೀಕರಿಸಿದ ಜನ ಸಮುದಾಯದವರು. ಇಂದೂ ಕೂಡ ಬಿಲ್ಲವರ ಮುಖ್ಯ ಕಸುಬು ಶೇಂದಿ ತೆಗೆಯುವುದಲ್ಲ. ಬಹು ಪ್ರಾಚೀನ ಕಾಲದಿಂದಲೂ ಬೇಸಾಯವೇ ಬಿಲ್ಲವರ ಪ್ರಮುಖ ಕುಲಕಸುಬಾಗಿತ್ತು”.[2]

“ಶೇಂದಿ ತೆಗೆಯುವ ಕೆಲಸವನ್ನು ಬಿಲ್ಲವರಲ್ಲದೆ ಬೇರೆ ಯಾರೂ ಮಾಡುವುದಿಲ್ಲ. ಪಶ್ಚಿಮದಲ್ಲಿರುವ ಲಕ್ಷದ್ವೀಪದಲ್ಲಿ ಮುಸಲ್ಮಾನರು ತೆಗೆಯುತ್ತಾರಂತೆ. ಆದರೆ ಅದರಲ್ಲಿ ಬೆಲ್ಲವನ್ನು ಮಾತ್ರ ತಯಾರಿಸುತ್ತಾರಂತೆ. ಗೋವೆಯಲ್ಲಿಯ ಕೆಥೋಲಿಕ್‌ ಕ್ರೈಸ್ತರು ಶೇಂದಿ ತೆಗೆಯುತ್ತಾರೆ. ಆದರೆ ಶೇಂದಿ ತೆಗೆಯುವವರನ್ನು ಅಲ್ಲಿ ಕೀಳಾಗಿ ನೋಡುತ್ತಾರೆ”. ಬಿಲ್ಲವರೇ ತೆಂಗಿನ ಮರಗಳ ಮೂರ್ತೆ ಕೆಲಸ ಮಾಡುತ್ತಿದ್ದರೆಂಬುದಕ್ಕೆ ೧೯೦೪ (೫ನೇ ಮುದ್ರಣ)ರಲ್ಲಿ ಪ್ರಕಟಗೊಂಡ ಬಾಲಕರ ಗೀತಗಳು ಎಂಬ ಸಂಗೀತ ಪುಸ್ತಕದಲ್ಲಿ ಫರ್ಡಿನಂಡ್‌ ಕಿಟೆಲ್‌ ಬರೆದ ಒಂದು ಸಂಗೀತ ಹೀಗಿದೆ.

೧. ಸಮುದ್ರ ತೀರದ ಹತ್ತಿರ
ನಾ ನೋಡಿದೆನೊಂದು ಮರವ

೨. ಆ ತೆಂಗಿನ ಮರದ ಸೋಗೆಯು
ತಂಗಾಳಿಗೆ ಮೆಲ್ಲನಾಡಿತು

೩. ಆ ಮರವ ಹತ್ತಿದ ಬಿಲ್ಲವ
ಸೀಯಾಳವ ಕೆಳಗೆ ಹಾಕಿದ

೪. ಬಾಯಾರುವ ದಾರಿಗ ಬಂದರೆ
ಸೀಯಾಳವ ಕೇಳಿಕೊಳ್ಳನೆ?

೫. ಆ ತೆಂಗಿನ ಮರದೊಳೆಲ್ಲಿಯು
ಅನರ್ಥ ಪದಾರ್ಥವಿರದು

೬. ನಾರ್‌, ಗೆರಟೆ, ಮಡಲು, ಕಟ್ಟಿಗೆ
ವಿಧ ವಿಧದ ಕಾರ್ಯಕ್ಕಾಗುತ್ತೆ.

೭. ಆ ಮರವು ನೂರರ ಮಟ್ಟಿಗೆ
ಧರ್ಮಾರ್ಥವ ಲೋಕಕಿಕ್ಕುತ್ತೆ

೮. ಪರೀಕ್ಷಿಸಿ ನೆಟ್ಟಗೆ ನೋಡೆಲೆ,
ನೂರೊಂದನೆ ಲಾಭ ತೋರದೆ?

೯. ಆ ಮರವ ಬೆಲೆಯ ಎಣಿಸಿ
ನೀವದರ ಹಾಗೆ ಆಗಿರಿ!

“ಒಬ್ಬ ದಿನವೊಂದಕ್ಕೆ ೨೦-೩೦ ತೆಂಗಿನ ಮರಗಳನ್ನು ಹತ್ತಿ ಶೇಂದಿ ಇಳಿಸುತ್ತಾನೆ. ಅದನ್ನು ಮೂರು ತಾಸಿನ ಒಳಗೆ ಮಾಡುತ್ತಾನೆ. ಉಳಿದ ಸಮಯದಲ್ಲಿ ಜೂಜಾಡಿ ಕಾಲ ಕಳೆಯುತ್ತಾನೆ. ಶೇಂದಿ ಮಾರುವ ಯಾ ಶರಾಬು ತಯಾರಿಸುವ ವಿಷಯದಲ್ಲಿ ಶೇಂದಿ ತೆಗೆಯುವವ ಚಿಂತೆ ಮಾಡುವುದಿಲ್ಲ. ಈ ತೆರನಾದ ಮೈಗಳ್ಳತನ ಕ್ರೈಸ್ತರಲ್ಲಿ ಇರಬಾರದು. ಕ್ರೈಸ್ತರ ಮನೆಯಲ್ಲಿ ಶೇಂದಿ ಮಾರಾಟ ಮಾಡುವುದು ಒಳ್ಳೆಯದಲ್ಲ”.

ಓದುನಿ ಶಾಸ್ತ್ರ ಪಾಡುನಿ ಗಾಳ (ಓದುವುದು ಶಾಸ್ತ್ರ ಹಾಕುವುದು ಗಾಳ) ಎಂಬ ಗಾದೆ ಮಾತಿನಂತೆ ಕ್ರೈಸ್ತರು ಗಾಳ ಹಾಕುವಂತಹ ಕೆಲಸ ಮಾಡಬಾರದು. ಕ್ರೈಸ್ತರು ಅಮಲುದಾರರಿಗೆ ಬುದ್ಧಿ ಹೇಳತಕ್ಕವರು. ಆದರೆ ತಾವೇ ಅಮಲು ಪದಾರ್ಥಗಳನ್ನು ಮಾರಾಟ ಮಾಡಿದರೆ ಹೇಗೆ? ಈ ಊರಲ್ಲಿ ಬಿಲ್ಲವರೇ ಹೆಚ್ಚಾಗಿ ಕ್ರೈಸ್ತರಾದವರು. ಶೇಂದಿ ತೆಗೆದು ಮಾರಾಟ ಮಾಡುವುದು ಅವರ ಜಾತಿಯ ಮತ್ತು ಕುಟುಂಬದ ಕಸುಬಾಗಿರಬಹುದು. ಅದನ್ನು ಬಿಟ್ಟುಬಿಡದೆ ಬಿಲ್ಲವರಿಂದ ಬಂದ ಕ್ರೈಸ್ತರು ವಿದ್ಯೆ ಕಲಿತವರು, ತಕ್ಕಷ್ಟು ಬುದ್ಧಿವಂತರೂ ಆಗಿದ್ದರೂ ಅವರು ಬಿಲ್ಲವರೆಂದು ಸರ್ವರಿಗೆ ತಿಳಿಯುವದಲ್ಲದೆ ಅವರು ಕಸುಬಿನಿಂದಲೇ ಶೇಂದಿ ಮಾರಾಟ ಮಾಡುವ ಕ್ರೈಸ್ತರು ಎಂಬ ಹೆಸರು ಬರಲು ಸಾಕು. ಇದರಲ್ಲಿಯೇ ಇದ್ದರೆ ಒಳ್ಳೆಯ ಹೆಸರು ಬರುವುದು ಹೇಗೆ? ಹೀಗೆ ಆದರೆ-

ಬಿರುವೆ ಪಿದಯಿ ಪೋದು ಬೈದೆ ಉಳಯಿ ಪೊಗ್ಗಿಯೆ (ಬಿಲ್ಲವ ಹೊರಗೆ ಹೋಗಿ ಮತ್ತೆ ಒಳಗೆ ಬಂದ) ಎಂಬ ಗಾದೆ ಮಾತಿನಂತೆ ಆಗಬಹುದು.

“ಶೇಂದಿ ವ್ಯಾಪಾರದಲ್ಲಿ ನೀರು ಸೇರಿಸಿ ಮಾರಾಟ ಮಾಡುವುದು, ಅಮಲು ಬರುವ ಹಾಗೆ ಹುಡಿಗಳನ್ನು ಹಾಕಿ ಕಲಬೆರಕೆ ಮಾಡಿ ಮೋಸ ಮಾಡುವುದೂ ಉಂಟು. ಕ್ರೈಸ್ತರು ವ್ಯಾಪಾರದಲ್ಲಿ ನಂಬಿಗಸ್ತರು ಹೇಗೋ ಹಾಗೆ ಎಲ್ಲದರಲ್ಲಿಯೂ ಇರಬಾರದೋ? ತೆಂಗಿನಮರ (ಕಲ್ಪವೃಕ್ಷ) ಅದರಲ್ಲಿ ಬರುವ ಫಲಗಳು ದೇವರ ದಾನವೆಂಬ ಗ್ರಹಿಕೆ ನಮಗಿರಬೇಕು.

ತಾರೆದ ಮುದೆಲ್‌ಡ್‌ ಷೇರ್‌ಪರ್‌ಡ ಕಲಿ ಅಂದ್‌ದ್‌ ಪಣ್‌ಬೆರ್‌ (ತೆಂಗಿನಮರದ ಬುಡದಲ್ಲಿ ಹಾಲು ಕುಡಿದರೂ ಶೇಂದಿ ಎನ್ನುವರು) ಎಂಬ ಗಾದೆ ಮಾತಿನಂತೆ ಶೇಂದಿ ತೆಗೆಯುವುದೂ ಕುಡಿಯುವುದೂ ಒಂದೇ ಆಗಿದೆ. ದೇವರು ಕೊಟ್ಟ ವಸ್ತುವನ್ನು ಅಮಲು ಪದಾರ್ಥವನ್ನಾಗಿ ಮಾಡಿ ಕುಡಿದು ಬದುಕನ್ನು ಹಾಳು ಮಾಡುವುದು ಪಾಪವಾಗಿದೆ. ಇದಕ್ಕೆ ಕ್ರೈಸ್ತರು ಮಾತ್ರವಲ್ಲ ಮರ್ಯಾದೆ ಇರುವವರು ಯಾರಾದರೂ ಒಪ್ಪುತ್ತಾರೆ. ಅಮಲಿನವರ ಶರೀರದ ಕ್ಷೇಮ, ಮನೆಯ ಮರ್ಯಾದೆ, ಆಸ್ತಿ ಸಹ ಹೋಗುವುದಲ್ಲದೆ, ಸಂಸಾರದ ಸಮಾಧಾನವೆಲ್ಲ ಹೋಗಿ ಮನೆಯಲ್ಲಿ ಗಲಾಟೆ, ಅಲ್ಲದೆ ಕೊಲೆ-ಸುಲಿಗೆ ಮುಂತಾದ ಹಲವಾರು ಅನ್ಯಾಯಗಳು ನಡೆಯುತ್ತವೆ”.

“ಶೇಂದಿ ಮಾರುವ ಅಂಗಡಿ ಸುಳ್ಳು ಹೇಳುವಂತಾದ್ದು. ಶೇಂದಿಯನ್ನು ಅಂಗಡಿಗಳಲ್ಲಿ, ಮನೆಯಲ್ಲಿಯೂ ಮಾರಾಟ ಮಾಡುತ್ತಾರೆ. ಇಂತವರಲ್ಲಿಗೆ ಬರುವ ಕ್ರೈಸ್ತರು ಅಮಲುಗಾರರಾಗಿರುವುದಿಲ್ಲವೋ? ಶೇಂದಿಯಿಂದ ‘ಏಕ್‌ಮುಟ್ಟಿ ಸರಾಸರಿ, ದೋ ಮುಟ್ಟಿ ಚರಾಚರಿ, ತೀನ್‌ ಮುಟ್ಟಿ ರಂಬಾರೂಟಿ’ ಎಂಬ ಹಿಂದಿ ಭಾಷೆಯ ಗಾದೆಮಾತು ಜಿಲ್ಲೆಯಲ್ಲಿ ರೂಢಿಯಾಗಲಿಲ್ಲವೇ? ಕ್ರೈಸ್ತರು ಈ ವ್ಯಾಪಾರ ಮಾಡಿದರೆ ಭಾನುವಾರವೂ ಇದನ್ನು ಬಿಡಲಾಗದೆ ದೇವಾಲಯಕ್ಕೆ ಹೋಗುವ ಅವಕಾಶ ತಪ್ಪುತ್ತದೆ. ಮತಾಂತರ ಹೊಂದಿ ಎಲ್ಲವನ್ನೂ ಬಿಟ್ಟು ಈ ಮತಕ್ಕೆ ಬಂದವರು ಎಲ್ಲಾ ಕೆಟ್ಟ ಚಾಳಿಗಳನ್ನು ಬಿಡಬೇಕಾಗಿರುವುದರಿಂದ, ತನ್ನನ್ನು, ಊರನ್ನು, ಕೇಡಿನ ಮಾರ್ಗಕ್ಕೆ ನಡೆಸುವ ಈ ವ್ಯಾಪಾರವನ್ನು ಹಾಳು ಎಂದು ತಿಳಿದು ಖಂಡಿತವಾಗಿಯೂ ಬಿಟ್ಟುಬಿಡಬೇಕು. ಹಿಂದಿನದನ್ನು ಹಿಡಿದುಕೊಂಡೇ ಇದ್ದರೆ ಕ್ರೈಸ್ತರು ಇತರರಿಗಿಂತ ಉತ್ತಮರೆನಿಸಿಕೊಳ್ಳುವುದು ಹೇಗೆ? ಇದ್ದುದರಲ್ಲಿಯೇ ಇದ್ದರೆ-ಕಟ್ಟುನಿ ತೊಡಂಕ್‌ ಮಳ್ಪುನಿ ಮೊಡಂಕ್‌ (ಕಟ್ಟುವುದು ಗಾಳ ಮಾಡುವುದು ಅನ್ಯಾಯ) ಎಂಬ ಗಾದೆ ಮಾತಿನಂತೆ ಆಗುವುದಿಲ್ಲವೇ? ಶೇಂದಿ ತೆಗೆಯುವ ಕೆಲಸವು ಕಡಿಮೆ ಖರ್ಚಿನಲ್ಲಿ ಮಾಡಿ ಬೇಗ ಹಣ ಮಾಡುವ ಸುಲಭ ಮಾರ್ಗದ ಉದ್ಯೋಗವಾಗಿರುತ್ತದೆ. ೪ ಆಣೆಯ ಒಂದು ಕತ್ತಿ (ತರ್ಕತ್ತಿ) ೨ ಆಣೆಯ ಒಂದು ಮಡಕೆ ಇದ್ದು ತೆಂಗಿನ ಮರ ಹತ್ತುವ ಸಾಮರ್ಥ್ಯ ಇದ್ದರೆ ಸಾಕು. ೧೦ ತೆಂಗಿನ ಮರ ಇದ್ದರೆ ದಿನಕ್ಕೆ ಮೂರು ತಾಸಿನ ಕೆಲಸ. ಪ್ರಪಂಚದಲ್ಲಿ ಸುಲಭದ ಲಾಭ ಹುಡುಕುವವರು ಮಾತ್ರ ಈ ಕೆಲಸವನ್ನು ಆರಿಸಿಕೊಳ್ಳುತ್ತಾರೆ.

ರಾಜ ದರ್ಬಾರ್‌ದಲ್ಲಿ ಶರಾಬು ಮಾಡಲು, ಶೇಂದಿ ತೆಗೆಯಲು ಅವಕಾಶ ಇರಲಿಲ್ಲ. ಆದರೆ ಇಂಗ್ಲಿಷ್‌ ಸರ್ಕಾರ ಇದರಿಂದ ಜನರಿಗೆ ಉಪಕಾರ ಆಗುವುದೋ ಏನೋ ಎಂದು ತಿಳಿದು ಸಂಪಾದನೆಯನ್ನು ಮಾತ್ರ ನೋಡಿ ಅದರಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ಚಿಂತಿಸದೆ ಈ ವ್ಯಾಪಾರಕ್ಕೆ ಅನುವು ಮಾಡಿ ಕೊಟ್ಟಿದ್ದರಿಂದ ಬೇರೆ ಬೇರೆ ಕೇಡು ಕಷ್ಟಗಳು ಬಂದೊದಗಿದವು. ಹಿಂದೆ ಮಂಗಳೂರು ತಾಲೂಕಿನಲ್ಲಿ ಗುತ್ತಿಗೆಯಿಂದ ೫೦೦ ರೂಪಾಯಿಯ ಆದಾಯ ಸರಕಾರಕ್ಕೆ ಸಿಗುತ್ತಿತ್ತು. ಆದರೆ ಈಗ ಅದೇ ತಾಲೂಕಿನಿಂದ ೩೦,೦೦೦ ರೂಪಾಯಿಗಳ ಆದಾಯ ಸಿಗುತ್ತದೆ.

ದ. ಕ. ಜಿಲ್ಲೆಯಲ್ಲಿ ೧೦ರಲ್ಲಿ ೯ ಬಿಲ್ಲವರಿದ್ದಾರೆ. ಇದರಲ್ಲಿ ಕೆಲವರು ಸರಕಾರದ ಉದ್ಯೋಗದಲ್ಲಿದ್ದು ಕೆಲವರು ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿದ್ದರೆ, ಕೆಲವರು ಬೇಸಾಯದೊಂದಿಗೆ ಶೇಂದಿಯ ಕಸುಬನ್ನು ಮಾಡುತ್ತಿದ್ದಾರೆ. ಆದರೆ ಕೆಲವರು ಇದನ್ನೇ ಉದ್ಯೋಗವೆಂದುಕೊಂಡಿದ್ದಾರೆ. ಶೇಂದಿ ಇಳಿಸದಿದ್ದರೆ ತೆಂಗಿನ ಮರಕ್ಕೆ ಏನೂ ನಷ್ಟವಿಲ್ಲ. ತೆಂಗಿನಕಾಯಿ ಆಗುತ್ತದೆ. ಗಾಳಿ ಮಳೆಗೆ ಶೇಂದಿ ತೆಗೆಯುವವರು ಕೈತಪ್ಪಿ ಬಿದ್ದು ಜೀವ ನಷ್ಟವಾಗಬಹುದು. ಬೆಲ್ಲ ಮಾಡಲೆಂದು ಶೇಂದಿ ತೆಗೆಯುವವರು ಶೇಂದಿಯನ್ನು ಉಳಿಸಿಕೊಂಡು ಮನೆಯಲ್ಲಿ ಮಾರಾಟ ಮಾಡುತ್ತಾರೆ.

ಕೆಥೋಲಿಕ್‌ ಕ್ರೈಸ್ತರು ಶೇಂದಿಯ ಕಸುಬನ್ನು ಅವಲಂಬಿಸಿಕೊಂಡಿದ್ದಾರಾ? ಮುಸಲ್ಮಾನರು ಈ ಕೆಲಸದಲ್ಲಿ ದಿನ ಕಳೆಯುತ್ತಾರಾ? ಇವರುಗಳು ಬೇರೆ ಬೇರೆ ರೀತಿಯ ಕೆಲಸ ಮಾಡುವ ಹಾಗೆ ಕ್ರೈಸ್ತರೂ ಮೋಸ ಅನ್ಯಾಯವಿಲ್ಲದ ಕೆಲಸವನ್ನು ಹಿಡಿದು ಶೇಂದಿ ವ್ಯಾಪಾರವನ್ನು ಸಂಪೂರ್ಣವಾಗಿ ತೊರೆದು ಬೇರೆ ಬೇರೆ ಕೆಲಸವನ್ನು ಮಾಡಿ ಸಂಸಾರ ಮಾಡಬಹುದು ಎನ್ನುವುದಕ್ಕೆ ಸಂಶಯವೇ ಇಲ್ಲ. ಕೆಥೋಲಿಕ್‌ ಕ್ರೈಸ್ತರು ಮಳೆಗಾಲದಲ್ಲಿ ಮೆಣಸು, ರಾಗಿ, ತರಕಾರಿ ಮುಂತಾದವುಗಳ ಕೃಷಿ ಮಾಡಿ ಬೆಳಗ್ಗೆಯಿಂದ ಸಂಜೆತನಕ ಎಷ್ಟು ಕಷ್ಟಪಡುತ್ತಾರೆ. ಮುಸಲ್ಮಾನರು ವ್ಯಾಪಾರದಲ್ಲಿ ಇತರ ಉದ್ಯೋಗದಲ್ಲಿ (ಕಲ್ಲು ಕಟ್ಟುವುದು, ದೋಣಿ ಓಡಿಸುವುದು) ಎಷ್ಟು ಕಷ್ಟಪಡುತ್ತಾರೆ. ಬ್ರಾಹ್ಮಣರು, ಕೊಂಕಣಿಗರು ದನಕರುಗಳನ್ನು ಸಾಕಿ ಅದರ ಆದಾಯದಿಂದ ದಿನ ತೆಗೆಯುತ್ತಾರೆ. ಆದ್ದರಿಂದ ಕ್ರೈಸ್ತರಾದವರು ಬೇಸಾಯ, ಪಶು ಸಂಗೋಪನೆ, ಕಬ್ಬು, ತೆಂಗಿನತೋಟ ಇವುಗಳನ್ನು ಜೋಪಾನ ಮಾಡಿ ಬೇರೆ ಬೇರೆ ಕೆಲಸಗಳಾದ ಮರ, ಕಬ್ಬಿಣ, ಕಲ್ಲು ಕಟ್ಟುವುದು, ನೆಯಿಗೆ ಮುಂತಾದವುಗಳನ್ನು ಮಾಡಿ ಜೀವನ ಮಾಡಬಹುದು.

ಮೋಂಟು ನಾಯಿನ್‌ ಬೋಟೆಂಗ್‌ ತುಂಬಿಲೆಕ್ಕ ಆಂಡ್‌ (ಕುಂಟು ನಾಯಿಯನ್ನು ಬೇಟೆಗೆ ತೆಗೆದುಕೊಂಡು ಹೋದಂತೆ) ಎಂಬ ಗಾದೆಮಾತಿನಂತೆ ಒಳ್ಳೆಯ ರೀತಿಯ ಜೀವನ ಮಾಡದವರನ್ನು ಸನ್ಮಾರ್ಗಕ್ಕೆ ಹೇಗೆ ನಡೆಸುವುದು ಎಂಬ ಪರಿಸ್ಥಿತಿ ಬಂದಿದೆ. ಸಮಾಜ ಒಪ್ಪುವ ಕಾರ್ಯಗಳನ್ನು ಮಾಡಿ ಜೀವನ ಸಾಗಿಸಬೇಕೆನ್ನುವ ಮನಸ್ಸು ಎಲ್ಲರಲ್ಲೂ ಇರಬೇಕು. ಮಾತಿನಲ್ಲಿ ಮಾತ್ರ ಅಲ್ಲ ನಡತೆಯಲ್ಲಿ ಒಳ್ಳೆಯ ಜೀವಿತ ತಮ್ಮಲ್ಲಿ ಇರಬೇಕು. ಇಂತಹ ಮನಸ್ಸು ಬರುವ ಹಾಗೆ ದೇವರು ಖಂಡಿತ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಬೋಧನೆಗಳೊಂದಿಗೆ ಈ ಕೃತಿ ಮುಕ್ತಾಯಗೊಳ್ಳುತ್ತದೆ.

ಸಂಗೀತ ಕ್ಷೇತ್ರದಲ್ಲಿ ವಿದೇಶೀಯರು ಕನ್ನಡದಲ್ಲಿ ಸ್ವರಗಳನ್ನು ಕಲಿಯುವ ಪುಸ್ತಕ, ಬಾಲಕರ ಗೀತಗಳು, ಅಭಿನಯ ಗೀತ, ಕನ್ನಡ ಸಂಗೀತಗಳು, ಸ್ವರದ ಪುಸ್ತಕ ಮುಂತಾದ ಕೃತಿಗಳನ್ನು ಪ್ರಕಟಿಸಿದಂತೆ ತುಳುವಿನಲ್ಲಿಯೂ ಹಲವಾರು ಸಂಗೀತಗಳನ್ನು ರಚನೆ ಹಾಗೂ ತರ್ಜುಮೆ ಮಾಡಿರುತ್ತಾರೆ.

ಜೋಕುಳೆ ಗೀತೊಲು (ಮಕ್ಕಳ ಸಂಗೀತಗಳು) (ಪು.೬೬)

೧೮೭೮, ೧೯೧೦ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಶಾಲೆ ಮುಗಿಂಡ್‌, ಪುಲ್ಯಕಾಂಡೆ, ವಣಸ್‌ದ ಸಂಗೀತ, ಬೈಯ್ಯ, ಯಾನ್ಮಂಗಳೂರುದಾಯೆ, ಈ ಊರು ಎಡ್ಡನೇ, ಇನಿ ಶನಿವಾರದಂತ್ಯನೇ, ಬೆನ್ನಿದಾಯೆ, ಮುಂಗುಳಿ, ಕುರಿತ್ತ ಕಿನ್ನಿ ಎಂಬ ಹೆಸರಿರುವ ಸಂಗೀತಗಳಲ್ಲದೆ ಹಬ್ಬದ ದಿನಗಳಲ್ಲಿ ಮಕ್ಕಳು ಹಾಡಬಹುದಾದಂತಹ ಸಣ್ಣ ಸಣ್ಣ ೧೧೫ ಸಂಗೀತ ಕೃತಿಗಳಿವೆ. ಈ ಕೃತಿಯಲ್ಲಿರುವ ಎರಡು ಪದ್ಯಗಳ ಮಾದರಿ ಹೀಗಿವೆ :

ತೂಲೆ ಬಾನ ಪಕ್ಕಿಲು ಮಾತಾ ದಿಕ್ಕ್‌ಡುಳ್ಳ
ಅಂಚಿ ಇಂಚಿ ರಾಪುಂಡು ಮರಿಯಾಳ ಮುಗಿಯು
ತೂಲೆ ಬಾನ ಪಕ್ಕಿಲು ಮಾತಾ ದಿಕ್ಕಡುಳ್ಳ
ಮಾತಾ ಪಕ್ಕಿ ಮಳ್ಪುಂಡು ದೇವೆರೆಗ್‌ಸ್ತೋತ್ರ
ಕಾಂಡೆ ಬಯ್ಯ ಬುಡಂದೆ ಐಕ್ಲೆ ಶಬ್ದ ಕೇಣುವೆ
ದೇವೆರೆಗ್‌ ಮಳ್ಪುಲೆ ನಿತ್ಯ ಸ್ತುತಿ ಸ್ತೋತ್ರ
ಜೋಳುಕಾಯಿ ನಮಲಾ ಸ್ತುತಿ ಸ್ತೋತ್ರ ಕೊರ್ಕ
ಪಕ್ಕಿ ಅಂಚ ಮಳ್ತ್‌೦ಡ ನಮ ಹೆಚ್ಚ ಮಳ್ಪೊಡ್ಚ
ದೇವೆರೆಗ್‌ ಅಪಗ ಸ್ತುತಿ ಸ್ತೋತ್ರ ಕೊರ್ಕ

ಸೃಷ್ಟಿಗಳ ಒಡೆಯನಿಗೆ ಪಕ್ಷಿಗಳು ಉಪಕಾರ ಹೇಳುತ್ತವೆ. ಅದಕ್ಕಿಂತ ಹೆಚ್ಚಾಗಿ ಮಾನವರಾದ ನಾವು ದೇವರಿಗೆ ಉಪಕಾರ ಹೇಳಬೇಕಾಗಿದೆ ಎಂಬ ಅರ್ಥವನ್ನು ಈ ಪದ್ಯ ಕೊಡುತ್ತದೆ.

ಒಂಜಾನೊಂಜಿ ಊರುಡು ವೊರಿ ಆಣ್‌ ಇತ್ತೆ
ಎಳ್‌ ವರ್ಷ ಶಾಲೆಗ್‌ ಪೋಂಡಲಾ ಹೆಡ್ಡೆ ಆದಿತ್ತೆ
ಶಾಲೆ ಬೊಕ್ಕ ಬುಡಿಯೆ
ನನ ಬೇಲೆ ಕಲ್ಪೊಡು ಅಂದ್‌ ಪನೊಂದಿತ್ತೆ
ಅಪಗ ಅಪಡ ಅಮ್ಮೆ ಕೇಂಡೆ ದಾದ ಕಲ್ಪುವ
ಐಕ್‌ ಆಣ್‌ ಅರಿಯೆ ಬೊಕ್ಕ ಪಂಡೆ ಅಂದ್‌
ದಿಂಜದೆಕ್‌ ತೂವೊಂಡೆ ವೊವ್ಲಾ ಸರಿ ಆವಂದ್‌
ಕಲ್ಲ್‌ ಕಟ್ಟುನಾಯೆ ಅಂಡ ಕುಂಟು ಮೈಲೆ ಆವು
ಮರತ ಬೇಲೆದಾಯೆ ಆಂಡ ದಿಂಜ ಬೇಸರಾವು
ನೇಪಿನಾಯೆ ಆಂಡ ಕಣ್ಣ್‌ಮಂದ ಆವು
ಕರ್ಬ ಬೇಲೆದಾಯಗ್‌ ದಿಂಜ ತೂತ ಕಾವು
ಸಮಗಾರೆ ಆವೊಡಾ ಅವು ಹೀನ ಜಾತಿ
ಪೊಲ್ಲುನಾಯೆ ಆನಗ ಯೆಂಕ್‌ದಾನೆ ಗತಿ
ಯೆಂಕ್‌ಕಷ್ಟ ಆವಂದಿ ಒಂಜಿ ಬೇಲೆ ಕಲ್ಪೆ.

ಒಂದು ಊರಲ್ಲಿ ವಿದ್ಯೆ ಕಲಿಯಲು ಮನಸ್ಸಿಲ್ಲದ ದಡ್ಡ ಹುಡುಗನೊಬ್ಬ ಶಾಲೆ ಬಿಟ್ಟು ಕೆಲಸ ಮಾಡಲು ತೊಡಗಬೇಕೆಂದಿದ್ದಾಗ ತಂದೆ ಅವನಲ್ಲಿ ಏನು ಮಾಡುತ್ತಿ ಎಂದು ಕೇಳುತ್ತಾರೆ. ಆಗ ಅವನು ಕೂಗಿಕೊಂಡು, ಕೆಲವನ್ನು ನೋಡಿದೆ ಯಾವುದೂ ಸರಿ ಕಾಣುವುದಿಲ್ಲ. ಕಲ್ಲು ಕಟ್ಟುವ ಕೆಲಸವಾದರೆ ವಸ್ತ್ರ ಕೊಳೆಯಾಗುತ್ತದೆ, ಮರದ ಕೆಲಸವಾದರೆ ತುಂಬ ಬೇಸರವಾಗಬಹುದು, ನೇಯಿಗೆಯವನಾದರೆ ಕಣ್ಣು ಮಬ್ಬಾಗಬಹುದು, ಕಬ್ಬಿಣ ಕೆಲಸದವನಿಗೆ ಯಾವಾಗಲೂ ಬೆಂಕಿಯ ಕಾವು, ಸಮಗಾರ ಆದರೆ ಅವರ ಜಾತಿ ಹೀನ, ಹೊಲಿಗೆಯವನಾದರೆ ನನಗೆ ಏನು ಗತಿ, ನನಗೆ ಕಷ್ಟ ಆಗದ ಯಾವುದಾದರೂ ಒಂದು ಕೆಲಸ ಕಲಿಯುತ್ತೇನೆ ಎಂದ.

‘ತುಳು ಗೀತೊಳು’

ಈ ಕೃತಿಯು ೧೮೭೪ರಲ್ಲಿ ಪ್ರಕಟಗೊಂಡಿದ್ದು ೧೩೮ ಪುಟಗಳಿದ್ದು ೧೩೯ ಸಂಗೀತಗಳಿವೆ. ಇದು ೧೮೭೮, ೧೮೮೬, ೧೮೯೦, ೧೯೦೫, ೧೯೨೨ ಹೀಗೆ ಹಲವಾರು ಬಾರಿ ಪರಿಷ್ಕೃತಗೊಂಡು ಕೊನೆಯ ಆವೃತ್ತಿಯಲ್ಲಿ ೨೫೧ ಸಂಗೀತಗಳಿದ್ದು ಪ್ರಸ್ತುತ ಅದೇ ಗ್ರಂಥವು ಹಲವಾರು ಬಾರಿ ಮರುಮುದ್ರಣಗೊಂಡು ಈಗಲೂ ಬಳಕೆಯಲ್ಲಿದೆ. ೧೮೮೬ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ೧೫೬ ಪುಟಗಳಿದ್ದು ೧೯೬ ಸಂಗೀತಗಳಿವೆ. ಇವುಗಳಲ್ಲಿನ ೧೬೩ ಸಂಗೀತಗಳನ್ನು ಮೆನ್ನರ್‌ರವರೇ ರಚಿಸಿದ್ದು ಕೆಮರರ್‌ ೧೩, ಅಮ್ಮನ್ನ್‌ ೮, ಬ್ರಿಗೆಲ್‌ ೪ನ್ನೂ ಇನ್ನು ಕೆಲವನ್ನೂ ಜೊತೆಯಾಗಿ ಮತ್ತಿತರ ಮಿಶನರಿಗಳು ಬರೆದಿದ್ದಾರೆ. ಕಾಲ ಕಾಲಕ್ಕೆ ಆವೃತ್ತಿಗಳು ಬದಲಾದಂತೆ ಸಂಗೀತಗಳ ಭಾಷಾಂತರಗಳು ಬದಲಾಗಿವೆ. ಅಲ್ಲದೆ ಕೆಲವನ್ನು ನಂತರದ ಆವೃತ್ತಿಗಳಲ್ಲಿ ಸೇರಿಸದೇ ಹಾಗೆ ಬಿಡಲಾಗಿದೆ.

ಕ್ರೈಸ್ತರಿಗೆ ಹೇಗೆ ಸತ್ಯವೇದ ಗ್ರಂಥವು ಪ್ರಾಮುಖ್ಯವೋ ಹಾಗೇ ಸಂಗೀತ ಪುಸ್ತಕವೂ ಪ್ರಮುಖ ಸ್ಥಾನವನ್ನು ಪಡೆದಿದ್ದು ಎಲ್ಲರ ಮನೆಯಲ್ಲಿಯೂ ಈ ಕೃತಿಗಳಿವೆ. ಪ್ರಸ್ತುತ ಬಳಕೆಯಲ್ಲಿರುವ ಕೃತಿಯಲ್ಲಿ ೨೫೧ ಸಂಗೀತಗಳಿದ್ದು ಇವುಗಳಲ್ಲಿ ಹೆಚ್ಚಿನವು ಜರ್ಮನ್‌ ಭಾಷೆಯಿಂದ ತರ್ಜುಮೆ ಮಾಡಲಾಗಿದ್ದು ಜರ್ಮನ್‌ ಸ್ವರಗಳಲ್ಲಿಯೇ ರಚನೆಯಾದವುಗಳಾಗಿವೆ. ಇವುಗಳಲ್ಲಿ ೧೬೮ ಸಂಗೀತಗಳನ್ನು ಮೆನ್ನರ್‌ ರಚನೆ ಹಾಗೂ ತರ್ಜುಮೆ ಮಾಡಿದ್ದರೆ ೫೪ ಸಂಗೀತಗಳನ್ನು ಕೆಮರರ್‌, ಅಮ್ಮನ್ನ್‌, ಬ್ರಿಗೆಲ್‌ ಇಂತಹ ಮಿಶನರಿಗಳು ತರ್ಜುಮೆ ಹಾಗೂ ರಚನೆ ಮಾಡಿದ್ದಾರೆ. ೨೯ ಸಂಗೀತಗಳನ್ನು ದೇಶೀಯರಾದ ತಿಮೋಥಿ ಫುರ್ಟಾಡೊ, ಇ. ಪಿ. ಕಾರಟ್‌, ಜೆ. ಸೊನ್ನ, ಜಿ. ಪ್ರೇಮಯ್ಯ ಇಂತಹವರು ರಚನೆ ಮಾಡಿದ್ದಾರೆ. ಈ ಕೃತಿಯನ್ನು ಕನ್ನಡ ಸಂಗೀತ ಪುಸ್ತಕದೊಂದಿಗೆ ಬೈಂಡ್‌ಮಾಡಲಾಗಿದ್ದು ತುಳು ಭಾಷೆ ಗೊತ್ತಿರುವ ಕಡೆಗಳಲ್ಲಿ ಈಗಲೂ ಉಪಯೋಗವಾಗುತ್ತಿದೆ. ಬೊಂಬಾಯಿಯಲ್ಲಿರುವ ಕನ್ನಡ ಓದಲು ಬಾರದವರಿಗಾಗಿ transliteration Edition ರೂಪಿಸಲಾಯಿತು. ಈ ಸಂಗೀತಗಳು ಭಕ್ತರ ಬದುಕು, ಸೇವೆ, ಪ್ರಾರ್ಥನೆಗಳ ಫಲವಾಗಿದ್ದು, ಪ್ರತಿ ಸಂಗೀತಗಳಲ್ಲಿಯೂ ಬರೆದವರ ಹೃದಯಾಂತರಾಳದಿಂದ ಹೊರಹೊಮ್ಮಿದ ನಂಬಿಕೆಗಳು ಅಡಕವಾಗಿವೆ.

೧. ಈ ನಿನ ಮಾರ್ಗೊಳೆನ್‌, ನಿಕ್ಕುಪ್ಪು ಕಷ್ಟೊನು, ಸ್ವಾಮಿಗ್‌
ಪಂಡೊಣು!
ಮುಗಲ್‌ ಗಾಳಿಲೆಗ್‌ ತೋಜಾವೆ ಮಾರ್ಗೊನೇ,
ಅವ್ವೇ ಪ್ರಕಾರ ನಿಕ್ಕ್‌ ಮಳ್ಪಂದೆ ಕುಳ್ಳಯೆ.

೨. ಸಂಪೊತ್ತು ಆವೊಡಾಂಡ ಸ್ವಾಮಿನ್‌ ನಂಬೊಡು
ಸ್ವಕಾರ್ಯ ಉಂತೊಡಾಂಡ ಆಯನ್‌ ತೂವೊಣು!
ಈ ಮಳ್ಪು ಮಾತ ಕಷ್ಟ, ಆಯಡ ನಟ್ಟಂದೆ
ವ್ಯರ್ಥಾದ್‌ ಪೋವು ಸ್ಪಷ್ಟ; ಮಳ್ಪುಲ ಪ್ರಾರ್ಥನೆ.

(ನೀನು ನಿನ್ನ ಮಾರ್ಗಗಳನ್ನು, ನಿನಗಿರುವ ಕಷ್ಟಗಳನ್ನು ಸ್ವಾಮಿಗೆ ಹೇಳಿಕೋ. ಮೋಡ ಗಾಳಿಗಳಿಗೆ ದಾರಿ ತೋರಿಸುತ್ತಾನೆ. ಅದೇ ಪ್ರಕಾರ ನಿನಗೆ ಮಾಡದೆ ಬಿಡನು. (೨) ಸಂಪತ್ತು ಆಗಬೇಕಾದರೆ ಸ್ವಾಮಿಯನ್ನು ನಂಬಬೇಕು, ಸ್ವಕಾರ್ಯಗಳು ನಿಲ್ಲಬೇಕಾದರೆ ಆತನನ್ನು ನೋಡಿಕೋ. ನೀನು ಮಾಡುವ ಎಲ್ಲಾ ಕಷ್ಟ ಆತನಲ್ಲಿ ಬೇಡದೆ ಮಾಡಿದರೆ ಅದು ವ್ಯರ್ಥವಾಗಿ ಹೋಗುವುದು ಸ್ಪಷ್ಟ, ಮಾಡು ಪ್ರಾರ್ಥನೆ)

೧. ಪುಟ್ಟುನಾನಿ ಯಾನ್‌ ದಾನೆ ಕೊಂಡತ್ತೆ?
ಸುರುಟೇ ಬಾಲೆಗುಂಡು ದಾನೆ?
ಬೋರು ಮೆಯ್ಟ್‌ ಆನಿ ಬೈದೆ
ಸೈನಗ ಸಹಿತ ಪೋವೆ ಬಜೀ ಕೈಟೆ

(ಹುಟ್ಟುವಾಗ ನಾನ ಏನು ತೆಗೆದುಕೊಂಡು ಬಂದೆ, ಮೊದಲಿಗೆ ಮಗುವಿಗುಂಟು ಏನು, ಬೋಳು ಮೈಯಲ್ಲಿ ಅಂದು ಬಂದೆ, ಸಾಯುವಾಗ ಸಹಿತ ಹೋಗುವೆ ಬರೀ ಕೈಯಲ್ಲಿ)

ಇಂತಹ ಅರ್ಥಗರ್ಭಿತವಾದ ಕಾಲ ಕಾಲಕ್ಕೆ ಆದರಣೆ ನೀಡುವಂತಹ ಹುಟ್ಟುಹಬ್ಬ, ಮದುವೆ, ನಾಮಕರಣ, ದೃಢೀಕರಣ, ಬೆಳೆ ಹಬ್ಬ, ಬೆಳಗ್ಗೆ, ಸಾಯಂಕಾಲಗಳ ಪ್ರಾರ್ಥನೆ, ನಂಬಿಕೆ, ಸುಮಾರು ೫೦ ವಿಭಾಗಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಉಪಯೋಗ ಮಾಡಲು ಬೇರೆ ಬೇರೆ ಸಂಗೀತಗಳು ಇದರಲ್ಲಿವೆ.

ನಮ ರಾಗೊಳು (ನಮ್ಮ ಸಂಗೀತಗಳು)

೧೮೪೮ರಲ್ಲಿ ಪ್ರಕಟಗೊಂಡಿದ್ದು ೨೩ ಪುಟಗಳನ್ನೊಳಗೊಂಡಿದ್ದು ಹಲವಾರು ಸಂಗೀತಗಳೂ, ಕೋರಸ್‌ಗಳೂ ಪ್ರಕಟವಾಗಿವೆ. ಇದೇ ಕೃತಿ ೧೮೫೪ರಲ್ಲಿ ಮರುಮುದ್ರಣಗೊಂಡಿದ್ದು ೩೬ ಪುಟಗಳನ್ನೊಳಗೊಂಡಿದೆ. ಇವುಗಳಲ್ಲಿರುವ ಸಂಗೀತಗಳೂ ಜರ್ಮನ್‌ ಭಾಷೆಯಿಂದ ತರ್ಜುಮೆಯಾದವುಗಳು. ಇದರಲ್ಲಿಯ ಹಲವು ಸಂಗೀತಗಳನ್ನು ತುಳು ಸಂಗೀತಗಳು ಎಂಬ ಪುಸ್ತಕದಲ್ಲಿ ಸೇರಿಸಲಾಗಿದೆ.

ಸುವಾರ್ತಾ ಸೇವಾ ಸಂಗೀತಗಳು: ಕನ್ನಡ ಮತ್ತು ತುಳು

೩೫ ಪುಟಗಳಿರುವ ಈ ಕೃತಿ ೧೯೫೩ರಲ್ಲಿ ಮರುಮುದ್ರಣಗೊಂಡಿದ್ದು ಇದನ್ನು ಜಾದೋಕ್‌ ಅಮ್ಮನ್ನ ಎಂಬ ದೇಶೀಯ ಬೋಧಕರೊಬ್ಬರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಸಣ್ಣ ಸಣ್ಣ ಪದ್ಯಗಳಿದ್ದು ಇವು ಇಂಗ್ಲಿಷ್‌ನ ಎಲೀಮ್‌ ಕೋರಸುಗಳು ಎಂಬ ಸಂಗ್ರಹಗಳಿಂದ ಆರಿಸಿ ಭಾಷಾಂತರಿಸಿದುದಾಗಿದೆ. ಈ ಸಂಗ್ರಹದಲ್ಲಿ ೨೬ ತುಳು ಪದ್ಯಗಳಿವೆ. ಇವುಗಳೆಲ್ಲವೂ ಮೊದಲು ಕ್ರೈಸ್ತ ಸಭೆಗಳಲ್ಲಿ, ಕ್ರೈಸ್ತ ಪ್ರಾರ್ಥನಾಕೂಟಗಳಲ್ಲಿ ಉಪಯೋಗಿಲ್ಪಡುತ್ತಿತ್ತು. ಇದರಲ್ಲಿರುವ ಪದ್ಯಗಳ ಮಾದರಿಗಳು ಹೀಗಿವೆ.

ಬೊಳ್ಪಂಚ ಪಗೆಲ್‌ಡ್‌
ಲೋಕೊನು ದಿಂಜುಂಡಾ
ಅಂಚೆನೇ ದೈವ ಪ್ರೀತಿ
ಹೃದಯೊಡು ದಿಂಜೊಡು
(ಬೆಳಕು ಹೇಗೆ ಲೋಕವನ್ನು ತುಂಬಿಸುತ್ತದೋ
ಹಾಗೆ ದೇವರ ಪ್ರೀತಿ ಹೃದಯದಲ್ಲಿ ತುಂಬಬೇಕು)
ಯಾನ್‌ಮಳ್ತಿ ಸತ್ಯಪ್ರಮಾಣ
ಸ್ವಾಮಿಯೇ, ಸ್ವಾಮಿಯೇ
ಕೈಕೊಣಿಯೆರೆ ದೃಢ ಮನಸ್‌
ದಯೆ ಮಳ್ಪುಲ
(ನಾನು ಮಾಡಿದ ಸತ್ಯ ಪ್ರಮಾಣವನ್ನು ಪೂರ್ಣಗೊಳಿಸಲು
ದೃಢವಾದ ಮನಸ್ಸನ್ನುನನಗೆ ದಯಮಾಡು ಸ್ವಾಮಿಯೇ)

ಕನ್ನಡ ಮತ್ತು ತುಳು ಗೀತಗಳಿಗೆ ತಕ್ಕ ರಾಗಗಳು (ಪುಟ ೨೬೬)

೧೮೬೫, ೧೯೦೫, ೧೯೩೦ರಲ್ಲಿ ವಿಸ್ತೃತ ಆವೃತ್ತಿಗಳಲ್ಲಿ ಪ್ರಕಟಗೊಂಡ ಈ ಕೃತಿಯು ಸಂಗೀತಗಳ ಸ್ವರಗಳನ್ನು ಹೇಳುವ ಪುಸ್ತಕವಾಗಿದ್ದು ೩೧೧ ಸಂಗೀತಗಳ ದಾಟಿಗಳಿವೆ. ಬಾಸೆಲ್‌ಮಿಶನ್‌ಪ್ರಕಟಿಸಿದ ಕನ್ನಡ ಮತ್ತು ತುಳು ಸಂಗೀತಗಳನ್ನು ನುಡಿಸಲು ಈ ಪುಸ್ತಕವನ್ನು ಉಪಯೋಗಿಸಲಾಗುತ್ತದೆ. ಸಂಗೀತಗಳ ಜರ್ಮನ್‌ಧಾಟಿಯಲ್ಲಿ ಹೇಳುವ ಕೃತಿ ಇದಾಗಿದ್ದು ಹಾರ್ಮೋನಿಯಂ, ಆರ್ಗನ್‌, ವಯೋಲಿನ್‌, ಗಿಟಾರ್‌ನುಡಿಸುವವರು ಇದನ್ನು ಉಪಯೋಗಿಸುತ್ತಿದ್ದು ಈಗಲೂ ಬಾಸೆಲ್‌ಮಿಶನ್‌ಸ್ಥಾಪಿಸಿದ ಸಭೆಗಳಲ್ಲಿ ಉಪಯೋಗವಾಗುತ್ತಿದೆ.

ಭಾಷಾ ಪ್ರಕಾರ

ಈ ಪ್ರಕಾರದಲ್ಲಿ ಶಬ್ದಕೋಶ, ಪಠ್ಯ, ವ್ಯಾಕರಣ ಹೀಗೆ ಮೂರು ವಿಭಾಗಗಳನ್ನು ಮಾಡಬಹುದು.

ತುಳು – ಇಂಗ್ಲಿಷ್‌ ನಿಘಂಟು : (೧೮೮೬)

೧೮೫೪ರಲ್ಲಿ ಭಾರತಕ್ಕೆ ಬಂದ ಕೆಮರರ್‌ ಎಂಬವರು ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ೧೮೫೮ರಲ್ಲಿ ಅಕಾಲ ಮರಣಕ್ಕೆ ತುತ್ತಾದ ಅವರು ತುಳು ಜಿಲ್ಲೆಯಲ್ಲಿ ವಾಸವಾಗಿದ್ದ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ತುಳು ನಿಘಂಟಿಗೆಂದು ೨೦೦೦ ಶಬ್ದಗಳ ಸಂಗ್ರಹ ಮಾಡಿಟ್ಟಿದ್ದರು. ಇವರು ಸಂಗ್ರಹಿಸಿದ್ದ ಸಂಗ್ರಹಗಳನ್ನು ೧೮೫೭ರಲ್ಲಿ ಭಾರತಕ್ಕೆ ಬಂದ ಆಗಸ್ಟ್‌ಮ್ಯಾನರ್‌ ಎಂಬವರು ಕೈಗೆ ತೆಗೆದುಕೊಂಡು ಶಬ್ದಗಳನ್ನು ಸಂಗ್ರಹ ಮಾಡುತ್ತಾ ಸುಮಾರು ೨೦,೦೦೦ ಶಬ್ದಗಳನ್ನೊಳಗೊಂಡ ತುಳುವಿನ ಮೊದಲ ನಿಘಂಟನ್ನು ರಚಿಸಿದರು. ಈ ಕೃತಿಯು ೧೮೮೬ರಲ್ಲಿ ಪ್ರಕಟಗೊಂಡಿತು. ಎರಡು ವರ್ಷದೊಳಗೆ (೧೮೮೮) ಇಂಗ್ಲಿಷ್‌ ತುಳು ನಿಘಂಟು ಸಹಾ ಪ್ರಕಟಗೊಂಡಿತು. ದೇಶೀಯರಾದ ಕಾಪುವಿನ ಮಧ್ವರಾಯರು, ಮೂಲ್ಕಿಯ ಸೀತಾರಾಮ, ಮಂಗಳೂರಿನ ಸರ್ವೋತ್ತಮ ಪೈ, ಇಸ್ರಾಯೇಲ್‌ ಆರೋನ್ಸ್‌, ಶಿವರಾಜ್‌ ಇವರುಗಳ ಸಹಾಯದಿಂದ ಈ ಬೃಹತ್‌ ಕಾರ್ಯವನ್ನು ಮುಗಿಸಿದ್ದಾರೆ. ಡಬ್ಲ್ಯು ರೀವ್‌ನ ಕನ್ನಡ ನಿಘಂಟು, ಎಚ್‌. ಗುಂಡರ್ಟನ ಮಲಯಾಳಂ ನಿಘಂಟು, ಟಿ. ಬೆನ್ಫೆನ ಸಂಸ್ಕೃತ ನಿಘಂಟುಗಳ ಆಕರಗಳನ್ನು ಬಳಸಿಕೊಂಡಿದ್ದಾರೆ. ನಿಘಂಟಿನಲ್ಲಿ ಕಾಣಸಿಗುವ ಭಾರತದ ೬೦೦ ಗಿಡಮೂಲಿಕೆಗಳ ಅರ್ಥದಲ್ಲಿ ಸ್ವಲ್ಪವನ್ನು ಸಿ. ಸ್ಟೋಲ್ಸ್‌ಬರೆದ ‘ಫೈವ್‌ ಹಂಡ್ರೆಡ್‌ ಇಂಡಿಯನ್‌ ಪ್ಲ್ಯಾಂಟ್ಸ್‌’ ಎಂಬ ಪುಸ್ತಕದಿಂದ ಆರಿಸಿ ತೆಗೆಯಲಾಗಿದೆ. ೧೮೮೩ರಲ್ಲಿ ಮುದ್ರಣಗೊಳ್ಳಲು ತಯಾರಾದಾಗ ಇದರ ಮುದ್ರಣದ ಖರ್ಚು ವೆಚ್ಚಗಳನ್ನು ಭರಿಸಲು ಮದ್ರಾಸು ಸರಕಾರವು ಸಹಾಯಹಸ್ತ ನೀಡಿತು.

“ಸಾಮಾನ್ಯವಾಗಿ ಎಲ್ಲಾ ನಿಘಂಟುಗಳಲ್ಲಿ ಮುಖ್ಯ ಉಲ್ಲೇಖ ಹಾಗೂ ಉಪ ಉಲ್ಲೇಖಗಳಿವೆ. ಮುಖ್ಯ ಉಲ್ಲೇಖವೆಂದರೆ ಅರ್ಥ ಮಾಡಿಕೊಡಲು ತೆಗೆದುಕೊಳ್ಳುವ ಪೂರ್ಣ ಶಬ್ದ, ಉಪ ಉಲ್ಲೇಖವೆಂದರೆ ಆ ಮುಖ್ಯ ಉಲ್ಲೇಖದ ಮೊದಲಿಗೆ ಅಥವಾ ಕೊನೆಯಲ್ಲಿ ಒಟ್ಟಿಗೆ ಸೇರಿರುವ ಶಬ್ದ. ಉದಾ : ತೆರೆ (ತಲೆ) ಎನ್ನುವ ಶಬ್ದವನ್ನು ಮುಖ್ಯ ಉಲ್ಲೇಖವಾಗಿ ಕೊಟ್ಟರೆ ಅದರ ಕೆಳಗೆ ತರೆ ಕೊರ್ಪುನೆ (ತಲೆ ಕೊಡುವುದು), ತರೆ ಗಿರಿಪುನೆ (ತಲೆ ಬಿಚ್ಚುವುದು), ತರೆಕ್ಕ್‌ಪಾಡಾನು (ತಲೆಗೆ ಹಾಕುವುದು), ತರೆ ಪಾಡುನು (ತಲೆ ಹಾಕುವುದು), ತರೆ ಬೇನೆ (ತಲೆ ನೋವು) ಇದು ಉಪ ಉಲ್ಲೇಖಗಳಾಗುತ್ತವೆ. ಅರ್ಥ ಕೊಡಲಾಗುವ ಮುಖ್ಯ ಉಲ್ಲೇಖದ ತುಳುಶಬ್ದವನ್ನು ಮೊದಲಿಗೆ ಕನ್ನಡ ಲಿಪಿಯಲ್ಲಿ ಕೊಟ್ಟು ಅದರ ಎದುರಿಗೆ ಕನ್ನಡ ಲಿಪಿ ಗೊತ್ತಿಲ್ಲದವರಿಗೆ ತುಳು ಶಬ್ದಗಳನ್ನು ಓದಲು ಇಂಗ್ಲಿಷ್‌ಅಕ್ಷರಗಳಲ್ಲಿ ಲಿಪ್ಯಂತರವನ್ನೂ ಕೊಡಲಾಗಿದೆ.

ಉದಾ: ತುಳುವೆ – Tuluve, ತರೆ – Tare, ಪಾಡುನಿ – Paduni, ನಾಡುನಿ – Naduni ಶಬ್ದಗಳ ಅರ್ಥಗಳನ್ನು ಇಂಗ್ಲಿಷ್‌ನಲ್ಲಿಯೂ ಕೊಡಲಾಗಿದೆ. ಕೊಡಲಾದ ಅರ್ಥದಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೆ ಬೇರೆ, ಬೇರೆ ಅರ್ಥಗಳನ್ನೂ, ೧, ೨, ೩ ಹೀಗೆ ಅಂಕೆ ಹಾಕಿ ಕೊಡಲಾಗಿದೆ. ಮ್ಯಾನರ್‌ ತನ್ನ ನಿಘಂಟಿನಲ್ಲಿ ಹಲವಾರು ಗಾದೆಗಳನ್ನೂ, ನುಡಿಗಟ್ಟುಗಳನ್ನೂ ಬಳಸಿಕೊಂಡಿದ್ದಾರೆ. ಉದಾ : “‘ಪ್ರಾಯ ಬನ್ನಗ’ ಎನ್ನುವ ಶಬ್ದವನ್ನು ಕೆಳಗೆ There is a saying about the different stages of human life; namely ಪತ್ತೆಡ್‌ಮರ್ಲ್‌, ಇರ್ವೊಡು ಪೊರ್ಲು, ಮುಪ್ಪೊಡು ಯವ್ವನ, ನಲ್ಪೊಡು ಜವನ, ಐವೊಡು ಅಜಕೆ, ಅಜ್ಪೊಡು ಬಯಕೆ, ಎಳ್ಪೊಡು ದಂಟೆ, ಎಣ್ಪೊಡು ಕುಂಟೆ, ಸೊನ್ಪೊಡು ಶಯನ, ನೂದೆಟ್ಟ್‌ಪಯಣ. (Childness at ten years, beauty at twenty, youth at thirty, manhood at forty, Dotage at fifty, longing at sixty, a stick at seventy, cripple at eighty, prostration at ninety and departure at hundred).

ಕೆಲವು ಗಾದೆಗಳಲ್ಲಿ ಹೇಗೆ ಬೇರೆ ಬೇರೆ ಭಾಷೆಗಳ ಶಬ್ದಗಳು ಸೇರಿಕೊಳ್ಳುತ್ತವೆ ಎನ್ನುವುದಕ್ಕೂ ಈ ನಿಘಂಟಿನಲ್ಲಿ ಉದಾಹರಣೆಗಳು ಸಿಗುತ್ತವೆ. ಮುಟ್ಟಿ – (ಸಣ್ಣ ಮಡಕೆ) ಎನ್ನುವ ಶಬ್ದ ಅರ್ಥದೊಟ್ಟಿಗೆ, ಯೇಕ್‌ಮುಟ್ಟಿ ಸರಾಸರಿ, ದೋ ಮುಟ್ಟಿ ಚರಾಚೆರಿ, ತೀನ್‌ಮುಟ್ಟಿ ರಂಬಾರೂಟಿ (one pot full of toddy will make one lighthearted, two will make him talkative, three will make him turbulent) ಎಂಬ ಹಿಂದಿ ಗಾದೆಯನ್ನು ಬಳಸಿಕೊಳ್ಳಲಾಗಿದೆ. ಗಿಡಗಳು ಅಥವಾ ಮರಗಳು ಅರ್ಥಗಳನ್ನು ಕೊಡುವಾಗ ಸಸ್ಯಶಾಸ್ತ್ರೀಯ ನಾಮಾಂಕನವನ್ನು ನೀಡಲಾಗಿದೆ.

ಭಾಷೆ ನಿಂತ ನೀರಲ್ಲ, ಅದಕ್ಕೆ ಬೇರೆ ಭಾಷೆಗಳಿಂದಲೂ ಹಲವಾರು ಶಬ್ದಗಳು ಕಾಲ ಕಾಲಕ್ಕೆ ಬಂದ ಸೇರುತ್ತವೆ. ತುಳುವಿನಲ್ಲಿಯೂ ಅಂತಹ ಹಲವಾರು ಶಬ್ದಗಳಿವೆ. ಈಗ ಅವು ತುಳುವಿನದೇ ಆಗಿಹೋಗಿದೆ. ಹಾಗಾಗಿ ತುಳು ನಿಘಂಟುಗಳಲ್ಲಿ ಅವುಗಳೂ ಸೇರಬೇಕಾಗಿವೆ. ಮ್ಯಾನರ್‌ನ ಕಾಲದಲ್ಲಿಯೇ ಅಂತಹ ನೂರಾರು ಶಬ್ದಗಳು ತುಳುವಿನದೇ ಎನ್ನುವ ರೀತಿಯಲ್ಲಿ ಆಗಿ ಹೋಗಿರುವ ಕಾರಣ ಈ ನಿಘಂಟಿನಲ್ಲಿ ಅಂತಹ ಶಬ್ದಗಳಿಗೂ ಅವಕಾಶ ಮಾಡಿಕೊಡಲಾಗಿದೆ.

ಉದಾ : ಮಜ್ಬೂತ್‌, ಬೇಖೂಬ್‌, ಮಲಾಮತ್, ಮಕ್ಕರ್ ಇತ್ಯಾದಿ ಇವುಗಳಲ್ಲದೆ ಸಂಸ್ಕೃತ ಶಬ್ದಗಳನ್ನೂ ಬಳಸಿಕೊಳ್ಳಲಾಗಿದೆ. ೧೮೮೬ರಲ್ಲಿ ಬಂದ ಈ ನಿಘಂಟು ರಚನೆಯ ಕ್ರಮ ಇಂದಿಗೂ ಒಪ್ಪುವಷ್ಟು ವೈಜ್ಞಾನಿಕವಾಗಿದೆ. ಈ ನಿಘಂಟು ತುಳುವಿನ ಮೊದಲ ನಿಘಂಟು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಗ್ಲಿಷ್‌ ತುಳು ನಿಘಂಟು (೧೮೮೮) ಮ್ಯಾನರ್‌ರವರು ಈ ನಿಘಂಟನ್ನು ತುಳು – ಇಂಗ್ಲಿಷ್‌ ನಿಘಂಟಿನೊಂದಿಗೆ ತಯಾರಿಸಿರಬೇಕು. ಈ ನಿಘಂಟುನಲ್ಲಿಯೂ ಶಬ್ದ ಅರ್ಥಗಳನ್ನು ಕೊಡಮಾಡಿದ ಹಾಗೆಯೇ ಇದೆ. ಇಂಗ್ಲಿಷ್‌ ಅಥವಾ ಬೇರೊಂದು ಭಾಷೆಗೆ ತುಳುವಿನಲ್ಲಿ ಅರ್ಥ ಕೊಡುವ ನಿಘಂಟು ಇಂದಿಗೂ ಒಂದೇ ಆಗಿದೆ. ಹಾಗಾಗಿ ತುಳು ಕಲಿಯಲು ಬಯಸುವ (ಇಂಗ್ಲಿಷ್‌ಬಲ್ಲವರಿಗೆ) ಜನರಿಗೆ ಇದು ಒಂದು ಒಳ್ಳೆಯ ಸಹಾಯ ಮಾಡುವ ಕೃತಿಯಾಗಿದೆ’’.[3]

ತುಳುವಿನಲ್ಲಿ ಪ್ರಾಥಮಿಕ ಶಿಕ್ಷಣ

ಪಠ್ಯಪುಸ್ತಕ ವಿಭಾಗದಲ್ಲಿ ಎರಡು ಕೃತಿಗಳನ್ನು ಪ್ರಕಟಿಸಿದ್ದು ಈ ಪುಸ್ತಕದ ವಿವರಗಳನ್ನು ನೋಡುವುದಕ್ಕಿಂತ ಮೊದಲು ಬಾಸೆಲ್‌ಮಿಶನ್‌ಸಂಸ್ಥೆಯು ತುಳುವಿನಲ್ಲಿ ಯಾಕೆ ಪಠ್ಯಪುಸ್ತಕವನ್ನು ರಚಿಸಿತು ಎನ್ನುವುದನ್ನು ಸ್ವಲ್ಪ ವಿಚಾರಿಸೋಣ.

“ತುಳುವಿನಲ್ಲಿ ಯಾಕೆ ಪ್ರಾಥಮಿಕ ಶಿಕ್ಷಣವಿಲ್ಲ ಎಂಬ ವಿಚಾರ ಬಾಸೆಲ್‌ ಮಿಶನ್ನಿನವರಿಗೆ ತಲೆದೋರಿತು. ಆ ದೃಷ್ಟಿಯನ್ನಿಟ್ಟುಕೊಂಡು ಅವರು ತುಳುವಿನಲ್ಲಿ ಪಠ್ಯಪುಸ್ತಕಗಳನ್ನು ಪ್ರಕಟಿಸಿದರು. ಕನ್ನಡವೇ ಈ ಜಿಲ್ಲೆಯ ಆಡಳಿತದ, ವ್ಯವಹಾರದ ಭಾಷೆಯಾಗಿದ್ದರೂ ಇಲ್ಲಿಯು ತುಳು ಮಕ್ಕಳಿಗೆ ಕನ್ನಡ ಲಿಪಿಯನ್ನು ಮೊದಲು ರೂಢಿಸಿಕೊಳ್ಳಲು ಸಹಾಯಕವಾಗಬೇಕು. ತುಳು ಭಾಷಾ ಶಿಕ್ಷಣವನ್ನು ಆಗಿನ ಮದ್ರಾಸು ಪ್ರಾಂತದ ಶಿಕ್ಷಣ ಖಾತೆಯು ಮಾನ್ಯ ಮಾಡಿರಬೇಕಿತ್ತು. ಹಾಗೇನೂ ಮಾಡಿರಲಿಲ್ಲ”.

ಆದಾಗ್ಯೂ ಬಾಸೆಲ್‌ ಮಿಶನ್‌ನವರು ತಾವು ನಡೆಸುತ್ತಿರುವ ಶಾಲೆಗಳಲ್ಲಿ ಈ ತಮ್ಮ ಪ್ರಯೋಗವನ್ನು ತರಬೇಕು ಎಂದು ನಿರ್ಧರಿಸಿದರು. ಶಿಕ್ಷಣಖಾತೆಗೆ ಉಭಯ ಭಾಷಾ ಸಂಬಂಧದ ಅರಿವಿದ್ದಿಲ್ಲವೆಂತಲ್ಲ. ಯಾಕೆಂದರೆ ಶಿಕ್ಷಣ ಖಾತೆಯೇ ಒಂದು ಪುಸ್ತಕಕ್ಕೆ ಮಾನ್ಯತೆ ಕೊಟ್ಟಿತ್ತು. ಅಲ್ಲದೆ ಶಿಕ್ಷಣ ಖಾತೆಯು ಬಾಸೆಲ್‌ಮಿಶನ್‌ನವರ ಈ ಪ್ರಯತ್ನವನ್ನು ಅಮಾನ್ಯ ಮಾಡಹೋಗಲಿಲ್ಲ. ಆದರೆ ಇಸ್‌ ಆದೌರ್‌ ಎಂಬಾತ ದಿ. ೧೭-೯-೧೮೯೧ರ Christian patriot ಎಂಬ ಸಾಪ್ತಾಹಿಕದಲ್ಲಿ ವಾಚಕ ಪತ್ರವನ್ನು ಬರೆದಾಗಲೇ ಇದು ಸಾರ್ವಜನಿಕರ ಗಮನಕ್ಕೆ ಬಂದದ್ದು. ಅಲ್ಲಿಂದ ವಿರೋಧಿ ಪತ್ರಗಳ ವಾಗ್ಬಾಣ ಸುರುವಾಯಿತು.

“ನಮ್ಮ ಮಂಗಳೂರು ಜಿಲ್ಲೆಯಲ್ಲಿ ಕೊಂಕಣಿ ಮುಂತಾದ ಬೇರೆ ಹಲವು ಭಾಷೆಗಳೂ ಇವೆ. ಆ ಭಾಷೆಗಳಿಗೆ ಇಂತಹ ಮೊದಲ ಇಯತ್ತೆಯ ಕನ್ನಡ ಲಿಪಿಯುಳ್ಳ ಪುಸ್ತಕಗಳು ಸಿದ್ಧವಾಗಬೇಕೆ? ಆ ಭಾಷಿಗರು ಒಪ್ಪುತ್ತಾರೆಯೇ?

ತುಳುವಿನಲ್ಲಿ ಅರ್ಧ ಸ್ವರದ, ದ್ವಿಸ್ವರ ಭಾರದ (double sound) ಶಬ್ದಗಳಿವೆ. ಅವನ್ನು ಕನ್ನಡದ ಲಿಪಿ ಸಮರ್ಪಕವಾಗಿ ಧ್ವನಿಸಲಾರದು. ತುಳು ಭಾಷಾಪುಸ್ತಕ ಎಂದಾದರೆ ಅದು ತುಳು ಲಿಪಿಯಲ್ಲೇ ಇರಬೇಕಾದದ್ದು.”

ತುಳುವಿನ ಲಿಪಿ ಬಳಕೆಯಲ್ಲಿಲ್ಲದಿದ್ದರೂ ಅದನ್ನೇಕೆ ಪುನರುಜ್ಜೀವಿಸಬಾರದು? ಇಷ್ಟಕ್ಕೂ ಪ್ರಮಾಣ ತುಳು ಎಂಬುದು ಇದೆಯಲ್ಲ? ಪ್ರದೇಶಿಕವಾದ ಭೇದಗಳು ತುಂಬಾ ಇವೆ. ಮಕ್ಕಳು ಯಾವ ತುಳುವನ್ನು ಕಲಿಯಬೇಕು? ಶಾಲೆಯಲ್ಲಿ ತುಳು ಕಲಿತವರಿಗೆ ವ್ಯಾವಹಾರಿಕವಾಗಿ ಅದಾವ ಪ್ರಯೋಜನವಿದೆ? ತುಳು ಮಾತಿನ ಮಗು ಹಿಂದೆ ಬಿದ್ದರೆ ಎಂಬ ಮಾತಿದೆ.

“ಅಂತೂ ಈ ನಿಮಿತ್ತ ಜಿಲ್ಲೆಯಲ್ಲಿ ಕನ್ನಡ ತುಳು ಭಾಷೆಗಳ ಸಂಬಂಧ ಏನು? ಹೇಗಿರಬೇಕು ಎಂಬುದನ್ನು ಕೂಲಂಕೂಷವಾಗಿ ಚರ್ಚಿಸಿದಂತಾಗಿತ್ತು. ಅದೇನಿದ್ದರೂ ವಿರೋಧವೇ ಬಹಳವಾದ್ದರಿಂದ ಬಾಸೆಲ್‌ಮಿಶನಿಗರು ತುಳು ಕಲಿಕೆಯ ತಮ್ಮ ಪ್ರಯೋಗವನ್ನು ನಿಲ್ಲಿಸಿಬಿಟ್ಟರು.”[4]

ಈ ಕೃತಿಯ ವಿಚಾರವಾಗಿ ೧೮೯೧ ಒಕ್ಟೋಬರ ೧೫ರ The Christian Patriot ಎಂಬ ಪತ್ರಿಕೆಯೊಂದರಲ್ಲಿ The Tulu First Book published by the Basic Missionsries as a stepping stone to the study of the Canarese alphabet ಎಂಬ ಲೇಖನವೊಂದು ಬಂದಿದ್ದು ಈ ವಿಚಾರವಾಗಿ ಹೊಸಬೆಳಕು ಚೆಲ್ಲುತ್ತದೆ.

ತುಳು ಪಠ್ಯವಿಭಾಗದಲ್ಲಿ ಮಿಶನರಿಗಳ ಕಾಲದಲ್ಲಿ ಎರಡು ಕೃತಿಗಳು ಹೊರಬಂದಿವೆ. ಈ ಎರಡೂ ಕೃತಿಗಳ ರಚನೆಯು ಸಾರ್ವಕಾಲಿಕ ಸ್ಥಿತಿಯಲ್ಲಿದ್ದು ಒಂದು ವೇಳೆ ಈಗ ತುಳುವನ್ನು ಪಠ್ಯವಾಗಿ ತರುವುದಾದರೆ ಈ ಎರಡು ಕೃತಿಗಳ ಮಾದರಿಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಬಹುದು.

ತುಳು ಅಕ್ಷರಮಾಲೆ (ಪುಟ ೮೪)

೧೮೯೦, ೧೮೯೮ರಲ್ಲಿ ಪ್ರಕಟವಾಗಿದೆ. ಅಕ್ಷರಮಾಲೆಯಿಂದ ಪ್ರಾರಂಭವಾಗುವ ಈ ಪುಸ್ತಕವು ಕನ್ನಡದ ಎಲ್ಲಾ ಅಕ್ಷರಗಳನ್ನು ಉಪಯೋಗಿಸಿ ತುಳುವನ್ನು ಬರೆಯುವ ಕ್ರಮಗಳನ್ನು ಉದಾಹರಣೆ ಸಹಿತ ವಿವರಿಸುತ್ತದೆ. ಕೊನೆಯಲ್ಲಿ ಅಂಕೆಗಳು, ಚಿಹ್ನೆಗಳು, ವಾರಗಳು, ತಿಂಗಳು, ಅಳತೆಗಳು ಮುಂತಾದವುಗಳನ್ನೂ ಕೊಡಲಾಗಿದೆ.

ತುಳು ಪಾಠಾಳೇ ರಡ್ಡನೇ ಪುಸ್ತಕ (ತುಳು ಪಾಠಗಳ ಎರಡನೇ ಪುಸ್ತಕ)

(Second book of lessons in Tulu, Translation into Tulu order of the Director of Public Instruction 1862- p.132)

ಈ ಕೃತಿಯು ಆರು ತಿಂಗಳು ಎಂಬುದಾಗಿ ವಿಭಾಗ ಮಾಡಿ ಒಂದೊಂದು ತಿಂಗಳುಗಳ ಕೆಳಗೆ ತಲೆ, ಭೂಮಿ, ಪ್ರಾಣಿ, ಋತುಗಳು, ಮನುಷ್ಯ, ಪಕ್ಷಿ, ದೇಶಗಳು, ಗಾಳಿ, ಸಿಡಿಲು, ಹಿಂದೂ ದೇಶ, ಆಂಗ್ಲ ದೇಶ, ಸೂರ್ಯ, ಚಂದ್ರ, ನಕ್ಷತ್ರ, ಆಕಾಶ ಹೀಗೆ ಹೆಚ್ಚಿನ ವಿಷಯಗಳ ಮೇಲೆ ಪಾಠಗಳಿವೆ. ಅಲ್ಲದೆ ಕೆಲವು ಕತೆಗಳು, ಬುದ್ಧಿ ಮಾತುಗಳು, ಪತ್ರ ಬರೆಯುವ ರೀತಿ, ಪತ್ರಿಕೆಗೆ ಬರೆಯುವ ರೀತಿ. ಗಣಿತ ಹೇಗೆ ಹೆಚ್ಚಿನ ವಿಷಯಗಳನ್ನು ಕಲೆ ಹಾಕಲಾಗಿದ್ದು ಒಂದು ಭಾಷೆಯನ್ನು ಕಲಿಸಲು ಬೇಕಾದ ರೀತಿಯಲ್ಲಿ ಈ ಕೃತಿಯನ್ನು ರಚಿಸಲಾಗಿದೆ.

A Grammar of the Tulu Language (೧೮೭೨- ಪುಟ ೧೩೯)

ಜೆ. ಜೆ. ಬ್ರಿಗಲ್‌ ಈ ಕೃತಿಯ ಲೇಖಕ. ಈ ಕೃತಿಯು ಇಂಗ್ಲಿಷ್‌ನಲ್ಲಿಯೇ ಇದೆ. ಈ ಕೃತಿಯು phonology, Etymology, Syntax ಎಂದು ಮೂರು ಬಾಗಗಳಾಗಿ ರಚಿಸಲ್ಪಟ್ಟಿದ್ದು ಒಂದೊಂದು ಭಾಗದಲ್ಲಿ ಮತ್ತು ಮೂರು ಭಾಗಗಳಾಗಿ ವಿಂಗಡಿಸಿ ವಿವರವಾಗಿ, ಅಕ್ಷರಮಾಲೆ, ಸಂಜ್ಞೆಗಳು, ಉಚ್ಚಾರಗಳು, ಸಂಧಿ, ವರ್ಗ ಹೀಗೆ ಹಲವಾರು ಬಗೆಗಳಲ್ಲಿ ರಚಿಸಲಾಗಿದೆ. ಗ್ರಂಥದ ಕೊನೆಯಲ್ಲಿ ೫೦ ತುಳು ಗಾದೆಗಳನ್ನೂ ಕೊಟ್ಟಿದ್ದು ಅದರ ಅರ್ಥವನ್ನು ಇಂಗ್ಲಿಷ್‌ನಲ್ಲಿಯೂ ಕೊಡಲಾಗಿದೆ.

“ಬ್ರಿಗೆಲ್‌ ತನ್ನ ತುಳು ವ್ಯಾಕರಣವನ್ನು ಪಾಶ್ಚಾತ್ಯ ವ್ಯಾಕರಣ ತತ್ವಕ್ಕನುಗುಣವಾಗಿ ರಚಿಸಿದ್ದಾರೆ. ತುಳುವನ್ನು ಕನ್ನಡ ಲಿಪಿಯಲ್ಲಿ ಬರೆಯುವ ಕಾರಣ ತುಳು ವರ್ಣಮಾಲೆ ಕನ್ನಡ ಅಕ್ಷರ ಕ್ರಮದಿಂದಲೇ ವರ್ಣಿತವಾಗಿದೆ. ಇದನ್ನು ಗ್ರಂಥಕರ್ತರೇ ಮೊದಲು ವಿಶದಪಡಿಸುತ್ತಾರೆ. ಇದನ್ನು ಆಧುನಿಕ ತುಳುವಿನ ವರ್ಣಮಾಲೆಯೆನ್ನಬಹುದು ಎಂದಿದ್ದಾರೆ. ವಿಜ್ಞಾನದಲ್ಲಿ ೧೫ ಸ್ವರಗಳು, ೨ ಮಧ್ಯಸ್ವರಗಳು ಮತ್ತು ೩೪ ವ್ಯಂಜನಗಳನ್ನು ಗುರಿತಿಸಲಾಗಿದೆ. ಸ್ವರಗಳು ಹ್ರಸ್ವ ಧೀರ್ಘ (೬), ಸಂಧ್ಯಕ್ಷರಗಳು (೨), ಮತ್ತು ಇನ್ನೊಂದು ಅನಿರ್ದಿಷ್ಟ ಎಂದರೆ ಪದಾಂತ್ಯದಲ್ಲಿ ಬರುವ ಅರ್ಧ ಊ ಕಾರವನ್ನು ಕೊಡಲಾಗಿದೆ. ವ್ಯಂಜನಗಳಲ್ಲಿ ವರ್ಗೀಯಗಳು ೨೫ ಮತ್ತು ಅವರ್ಗೀಯಗಳು ೯ ಎಂದು ವಿಭಾಗಿಸಿದ್ದಾರೆ. ಕನ್ನಡ ವರ್ಣಮಾಲೆಯ ಸಂಪ್ರದಾಯದಂತೆಯೇ ಇವುಗಳನ್ನು ಕೊಡಲಾಗಿದೆ. ಆದುದರಿಂದ ಧ್ವನಿಮಾ ರೀತಿಯಿಂದ ಅನಗತ್ಯವೆನಿಸುವ ಕೆಲವು ವ್ಯಂಜನಗಳು ಸೇರಿಕೊಂಡಿವೆಯೆನ್ನದೆ ಉಪಾಯವಿಲ್ಲ. ಆದರೆ ಸರಳತೆ ಮತ್ತು ಸೌಷ್ಠವಕೋಸ್ಕರ ಹೀಗೆ ಕೊಡುವುದು ವಿದೇಶೀಯ ಅಭ್ಯಾಸಿಗಳಿಗೆ ಅನುಕೂಲಕರವಾಗಿ ಪರಿಣಮಿಸಬಹುದು. ಮುಂದೆ ಆಯಾ ಅಕ್ಷರಗಳ ಉಚ್ಚಾರಣಾ ರೂಪ ಇಂಗ್ಲಿಷ್‌ ಭಾಷಾ ಪದಗಳ ಉಚ್ಚಾರಣೆಗೆ ಬಹುಶಃ ಸಮಾನವಾಗಿರುವಂತೆ ಇಲ್ಲವೇ ಅವುಗಳಿಗೆ ಆದಷ್ಟು ಸವಿಸ್ತಾರವಾಗಿರುವಂತೆ ಪ್ರಯತ್ನಪೂರ್ವಕವಾಗಿ ಕೊಟ್ಟಿದ್ದಾರೆ.”

“ವ್ಯಾಕರಣ ರೀತಿಯಲ್ಲಿ ತುಳುವಿನ ಪದಗಳನ್ನು ಐದು ವಾಕ್ಯಾಂಶಗಳೆಂದು ವಿಶ್ಲೇಷಿಸುತ್ತಾರೆ. ನಾಮಪದ, ಸರ್ವನಾಮ, ಸಂಖ್ಯಾವಾಚಕ, ಕ್ರಿಯೆ ಮತ್ತು ಅವ್ಯಯಗಳು ಎಂದೂ, ನಾಮಪದದಲ್ಲಿ ಮೂರು ಸಾಮಾನ್ಯ ಲಿಂಗಗಳು ಪ್ರಥಮಾ, ಗಂಡಸರು ಮತ್ತು ದೇವರುಗಳ ಹೆಸರುಗಳು, ಪುಲ್ಲಿಂಗ ವರ್ಗ ಹೆಂಗಸರು ಮತ್ತು ದೇವಿಯರ ಹೆಸರಗಳು ಸ್ತ್ರೀಲಿಂಗವರ್ಗ; ಮತ್ತುಳಿದ ಪ್ರಾಣಿಗಳು ಮತ್ತು ನಿಜೀರ್ವ ವಸ್ತುಗಳೆಲ್ಲ ನಪುಂಸಕ ವರ್ಗಗಳು ಎಂದಿದ್ದಾರೆ. ತುಳು ಭಾಷೆಯ ಅಧ್ಯಯನದ ಅದ್ಯಪ್ರವರ್ತಕರಲೊಬ್ಬರಾಗಿ ಬ್ರಿಗೆಲ್‌, ತುಳುಭಾಷಾ ಅಧ್ಯಯನಕ್ಕೆ ಸಲ್ಲಿಸಿದ ಸೇವೆ ಅಮೂಲ್ಯವಾದುದು. ಪ್ರಾಯೋಗಿಕವಾಗಿ ತುಳು ಭಾಷೆ ಕಲಿಯುವವರಿಗೆ, ಮುಖ್ಯವಾಗಿ ಆಗಿನ ಕಾಲದ ವಿದೇಶೀ ಮತಪ್ರವಾಚಕರಿಗೆ ಇದರಿಂದ ತುಂಬ ಸಹಾಯವಾಗಿರಬೇಕೆಂಬುದು ನಿಸ್ಸಂದೇಹ. ತಮ್ಮ ಮತ ವಿಚಾರಗಳನ್ನು ವ್ಯಾಕರಣ, ಉದಾಹರಣೆಗಳ ಸಂದರ್ಭದಲ್ಲಿ ಅಲ್ಲಲ್ಲಿ ಕೊಟ್ಟಿದ್ದಾರೆ. ಬರು ಬರುತ್ತಾ ಅವುಗಳನ್ನು ಕನ್ನಡದಲ್ಲಿ ಮಾತ್ರ ಕೊಟ್ಟಿದ್ದಾರೆಂಬುದು ಗಮನ ಸೆಳೆಯುತ್ತದೆ. ಅಂದರೆ ಒಂದು ಘಟ್ಟದ ನಂತರ ಆ ಪದಗಳನ್ನೋ, ವಾಕ್ಯಗಳನ್ನೋ ಮೂಲ ಕನ್ನಡ ಲಿಪಿಯಲ್ಲಿ ಓದುವ ಸಾಮರ್ಥ್ಯ ಅಭ್ಯಾಸಿಗೆ ಖಂಡಿತ ಬಂದಿರುತ್ತದೆ. ಅಥವಾ ಬರಬೇಕು ಎಂಬುದು ಇದಕ್ಕೆ ಹಿನ್ನೆಲೆಯಾಗಿರಬೇಕೆಂದು ಕಾಣುತ್ತದೆ. ಅಧ್ಯಯನ ಪಟುಗಳಿಗೆ ಸೂಕ್ಷ್ಮ ವಿಶ್ಲೇಷಣೆಗೆ ಬ್ರಿಗೆಲರ ತುಳು ವ್ಯಾಕರಣ ಗ್ರಾಸವಾಗಿ ಉಳಿದಿದೆ”.[5]

 

[1] ಪಾ. ಸಂಜೀವ ಬೋಳಾರ, ಪು ೬೭, ಬ್ರಹ್ಮ ಶ್ರೀನಾರಾಯಣ ಗುರು

[2] ಬಾಬು ಶಿವಪೂಜಾರಿ, ಪು. ೯, ಬಿಲ್ಲವರು – ಒಂದು ಅಧ್ಯಯನ

[3] ಪದ್ಮನಾಭ ಕೇಕುಣ್ಣಾಯ – ಆಗಸ್ಟ್‌ಮ್ಯಾನರ್‌(ಮದಿಪೆಯೆರಾವಂದಿ ತುಳುವೆರ್‌), ಪ್ರ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

[4] ಶ್ರೀನಿವಾಸ ಹಾವನೂರ (ಲೇಖಕ : ತುಳುವಿನಲ್ಲಿ ಪ್ರಾಥಮಿಕ ಶಿಕ್ಷಣ ಪು. ೪೪೬), ಸಿರಿ.

[5] ಕೆ ಕುಶಾಲಪ್ಪಗೌಡ – ಲೇಖನ ರೆ. ಜೆ ಬ್ರಿಗೆಲ್‌ಅವರ ತುಳು ವ್ಯಾಕರಣ ಒಂದು ಅವಲೋಕನ ಪುಟ ೪೪೦, ಸಿರಿ ಪ್ರ : ಅಮೃತ ಸೋಮೇಶ್ವರ ಅಭಿನಂದನ ಗ್ರಂಥ ಸಂ. ಬಿಳಿಮಲೆ ಪುರುಷೋತ್ತಮ ಮತ್ತು ಎ.ವಿ ನಾವಡ