ಮಹಾಕಥನಗಳಾಗುವಂಥ ಕಾದಂಬರಿಗಳು ಮೌಖಿಕ ನೆಲೆಯ ಸೀಮಿತ ಪ್ರಾದೇಶಿಕ ವ್ಯಾಪ್ತಿಯ ತುಳು ಭಾಷೆಯಲ್ಲಿ ದಾಖಲಾಗುವುದು ಭಾಷೆಯ ಸಾಂಸ್ಥಿಕ ನೆಲೆಯಲ್ಲಿ ಬಹಳ ಮಹತ್ತ್ವದ್ದು. ತುಳುಭಾಷೆಯಲ್ಲಿ ವಿಸ್ತೃತವಾದ ಗದ್ಯಕಥನ ಆರಂಭವಾಗುವುದು ೧೯೩೫ರಲ್ಲಿ ಎನ್‌.ಎ. ಶೀಣಪ್ಪ ಹೆಗ್ಗಡೆಯವರ ‘ಮಿತ್ಯನಾರಾಯಣ ಕತೆ’ಯ ಮೂಲಕ. ಇದಕ್ಕಿಂತ ಪೂರ್ವದಲ್ಲಿ ೧೯೨೯ ರಿಂದ ೧೯೩೬ರ ಅವಧಿಯಲ್ಲಿ ಎಸ್‌.ಯು. ಪಣಿಯಾಡಿಯವರ ನೇತೃತ್ವದಲ್ಲಿ ತುಳು ಬರವಣಿಗೆಯ ಸಾಂಸ್ಥಿಕ ಅವತಾರವನ್ನು ಕಾಣಲಾಗುತ್ತದೆ. ಈ ಮೂಲಕ ತುಳುನಾಡು, ಭಾಷೆ, ಸಾಹಿತ್ಯಗಳ ಕಥಾನಾತ್ಮಕ ಪುನರುಜ್ಜೀವನದ ಆರಂಭವನ್ನು ಗುರುತಿಸಲಾಗುತ್ತದೆ. ‘ತುಳುವ’ ಸಾಹಿತ್ಯಮಾಲೆಯು ಇದಕ್ಕೆ ಪುರಾವೆಗಳನ್ನು ಒದಗಿಸುತ್ತದ. ಆಕ್ಷರಿಕವಾಗಿ ಕನ್ನಡ ಲಿಪಿಯನ್ನು ಸ್ವೀಕರಿಸಿಕೊಳ್ಳುವ ಅನಿವಾರ್ಯಕ್ಕೆ ಒಳಗಾದ ಭಾಷೆ ತುಳು. ೧೯೩೫ರಲ್ಲಿ ‘ಮಿತ್ಯನಾರಾಯಣ ಕತೆ’ಯ ಮೂಲಕ ಅಭಿವ್ಯಕ್ತಿಯ ವ್ಯಾಪ್ತಿಯಲ್ಲಿ ವಿಸ್ತಾರವಾದ ಕಥನ ದಾಖಲಾಗುತ್ತದೆ. ಪದ್ಯಾತ್ಮಕ ಅಭಿವ್ಯಕ್ತಿ ಈ ಪೂರ್ವದಲ್ಲಿಯೇ ಶಕ್ತವಾಗಿ ಸಾಧಿತವಾಗಿರುವುದು ಉಲ್ಲೇಖಾರ್ಹ. ಕಾದಂಬರಿ ಬರವಣಿಗೆ ಎನ್ನುವುದು ವಿಸ್ತಾರವಾದ ಹರಹನ್ನು ಒಳಗೊಳ್ಳುವ ಕತೆಯಾದುದರಿಂದ ಶೀನಪ್ಪ ಹೆಗ್ಗಡೆಯವರು ತಮ್ಮ ಕಥನಕ್ಕೆ ‘ಮಿತ್ಯನಾರಾಯಣ ಕತೆ’ ಎಂದು ಹೆಸರಸಿದ್ದಾರೆ. ಸಾಹಿತ್ಯ ಚಿಂತಕರಲ್ಲಿ ಇದು ಕತೆಯೋ, ಕಾದಂಬರಿಯೋ ಎಂಬ ಕುರಿತು ಚರ್ಚೆ ಇದೆ ಪ್ರಕಾರ ನಿರ್ಧಾರದ ಈ ಚರ್ಚೆ ಸ್ಪಷ್ಟವಾದ ಅಂತಿಮ ತೀರ್ಮಾನ ಪಡೆದುಕೊಂಡಿಲ್ಲ. ಈ ತನಕದ ಸಾಂದರ್ಭಿಕ ಚರ್ಚೆಗಳಲ್ಲಿ ಈ ಕುರಿತು ಪ್ರಸ್ತಾವಿಸುವ ಬರಹಗಾರರು ಸ್ಪಷ್ಟವಾದ ನಿರ್ದೇಶನ ನೀಡದೆ ಬಿಟ್ಟಿದ್ದಾರೆ. ಕನ್ನಡ ಭಾಷೆಯಲ್ಲಿ ಮತ್ತು ಇತರ ಭಾಷೆಗಳಲ್ಲಿ ಕಾದಂಬರಿ ಎಂಬ ಬರವಣಿಗೆ ಪಡೆದುಕೊಂಡ ರೂಪ, ವಿನ್ಯಾಸ ಕ್ರಮ ಮತ್ತು ‘ಮಿತ್ಯನಾರಾಯಣ ಕತೆ’ ಮೈದಳೆದ ರೂಪ, ವಿನ್ಯಾಸಕ್ರಮವನ್ನು ಗ್ರಹೀತವಾಗಿಟ್ಟು ವಿಚಾರ ಮಾಡಿದಾಗ ಸಾಂಪ್ರದಾಯಿಕವಾಗಿ ಕಾದಂಬರಿ ಆವಾಹಿಸಿಕೊಂಡ ಪ್ರಾಕಾರಾಭಿವ್ಯಕ್ತಿಯ ನಡುವೆ ಸರಳವೂ ಸೂಕ್ಷ್ಮವೂ ಆದ ವ್ಯತ್ಯಾಸಗಳಿವೆ. ಕಥನ ಕ್ರಮದಲ್ಲಿನ ಈ ವ್ಯತ್ಯಾಸ ತುಳು ಭಾಷೆಯ ಆರಂಭದ ಈ ಬರವಣಿಗೆಯಲ್ಲಿ ಕಂಡುಬರುವುದು ಒಂದು ನೆಲೆಯಲ್ಲಿ ಸಹಜವೂ ಹೌದು. ಇದು ಪ್ರಕಾರ ನಿರ್ದೇಶಿತ ಸೂತ್ರಗಳ ಚೌಕಟ್ಟಿಗೆ ಪೂರಕವಾಗಿ ನಿರೂಪಿಸಿದ ಕಥನ ಅಲ್ಲ. ಜೊತೆಗೆ ಕಾದಂಬರಿ ಎಂಬ ಬರಹವೂ, ವಿಸ್ತಾರವಾದ ಅಂದರೆ ವಿವರಣಾತ್ಮಕವಾದ ಕತೆಯೇಹ ರತು ಬೇರೆ ಅಲ್ಲ. ಹಾಗಾಗಿಯೇ ಶೀನಪ್ಪ ಹೆಗ್ಗಡೆಯವರು ತನ್ನ ಈ ಬರಹದ ಶೀರ್ಷಿಕೆಯನ್ನು ಸರಳವಾಗಿಯೇ ‘ಮಿತ್ಯನಾರಾಯಣ ಕತೆ’ ಎಂದು ಬಳಸಿಕೊಂಡಿರಬೇಕು. ತನ್ನ ಶೀರ್ಷಿಕೆಯಲ್ಲಿ ‘ಕತೆ’ ಎಂಬ ನಾಮ ನಿರ್ದೇಶಿತ ಸೂಚಕಾಂಶವನ್ನು ಬಳಸಿಕೊಂಡರೂ ಕಥಾ ಜಗತ್ತಿನ ಸಾಂಪ್ರದಾಯಿಕ ವ್ಯಾಪ್ತಿ ಮತ್ತು ಚೌಕಟ್ಟಿನ ನಿರೂಪಕ್ಕಿಂತ ಭಿನ್ನವೂ ವಿಸ್ತಾರವೂ ಆದ ಹರಹು ಮಿತ್ಯನಾರಾಯಣ ಕತೆಯದ್ದು. ಸಾಹಿತ್ಯ ಪ್ರಕಾರ ನಿರ್ದೇಶಿತ ಸಾಂಪ್ರದಾಯಿಕ ಗತಿತರ್ಕದ ಆಧಾರದ ಪ್ರಕಾರ ಈ ಚರ್ಚೆಯನ್ನು ಗೊಂದಲಗೊಳಿಸಿ ಅಥವಾ ಸಮಸ್ಯಾತ್ಮಕವಾಗಿಯೇ ಪರಿಭಾವಿಸುವ ತರ್ಕವನ್ನು ಬಿಟ್ಟು ಮಿತ್ಯನಾರಾಯಣ ಕತೆ ಎಂಬ ಈ ಬರಹವನ್ನು ಕಥನವಾಗಿ ಪರಿಗ್ರಹಿಸಿ ಕಾದಂಬರಿ ಎಂದು ಸ್ವೀಕರಿಸಿಕೊಳ್ಳಬೇಕು.

ಮಿತ್ಯನಾರಾಯಣ ಕತೆ ೧೯೩೫ರಲ್ಲಿ ಪ್ರಕಟವಾದರೆ, ಎಸ್‌. ಯು. ಪಣಿಯಾಡಿಯವರ ‘ಸತೀ ಮಲೆ’ಯು ೧೯೩೬ರಲ್ಲಿ ಪ್ರಕಟವಾಗಿದೆ. ಈ ಎರಡು ಕಥನಗಳು ತುಳು ಭಾಷೆಯಲ್ಲಿ ಪ್ರಕಟವಾದ ಮೊದಲ ಕಾದಂಬರಿಗಳೆಂದು ಪರಿಗಣಿತವಾಗಿವೆ. ಈ ಕೃತಿಗಳು ಪ್ರಕಟವಾದ ಕಾಲಮಾನದ ತುಳುನಾಡು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಸಾಹತುಶಾಹಿಗ ಮುಖಾಮುಖಿಯಾಗುವ ಜಾಯಮಾನದ್ದು. ಪ್ರಾದೇಶಿಕ ಮಿತಿಯಾಗಿ ಒಂದು ಸಣ್ಣ ಭೂವಲಯದ ಜನತೆಯ ಜೀವನಾಡಿಯಾಗಿದ್ದ ತುಳುಭಾಷೆ ದ್ರಾವಿಡ ಭಾಷಾವರ್ಗದ ಐದು ಪ್ರಧಾನ ಭಾಷೆಗಳಲ್ಲಿ ಒಂದಾಗಿದ್ದರೂ ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಿಗೆ ಲಭ್ಯವಾದ ಯಾವುದೇ ಸವಲತ್ತುಗಳು ಅದಕ್ಕೆ ಸಿದ್ಧಿಸದೆ ಉಳಿದಿದೆ. ಈ ನಾಲ್ಕು ಭಾಷೆಗಳು ಪ್ರಾದೇಶಿಕವಾಗಿ ವಿಸ್ತಾರವೂ ರಾಜಕೀಯವಾಗಿ ಪರಿಗಣಿತವಾದ ವ್ಯಾಪ್ತಿಯನ್ನೂ ಪಡೆದಿವೆ. ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಇವು ಘಟನೆಯ ಸ್ಥಾನಮಾನವನ್ನು ಪಡೆದು ಆಡಳಿತ ಮತ್ತು ಶಿಕ್ಷಣದ ಎಲ್ಲ ಸಾಧ್ಯತೆಗಳನ್ನು ತಮ್ಮ ಒಡಲಲ್ಲಿ ಆವಾಹಿಸಿಕೊಂಡಿವೆ. ಪ್ರಾಚೀನ ಕಾಲದಿಂದಲೇ ಲಿಪಿ ಸಂಸ್ಕಾರಕ್ಕೆ ಒಳಗಾಗಿ ಆಯಾಮ ಕಾಲಘಟ್ಟದ ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯ ಗ್ರಹೀತಗಳಿಗೆ ತಮ್ಮದೇ ಆದ ಸ್ವಾಭಿಮುಖ ನೆಲೆಯ ಮೂಲ ಮಾದರಿ ನಿರ್ಮಿಸಿಕೊಂಡಿವೆ. ಶಿಕ್ಷಣ ಸಾಧ್ಯತೆ ಮತ್ತು ಆಡಳಿತಾತ್ಮಕ ಮುನ್ನಡೆ ಈ ಭಾಷೆಗಳಿಗೆ ಒಂದು ರೀತಿಯ ಸಾರ್ವಭೌಮತ್ವವನ್ನು ಪ್ರಾಪ್ತಿಸಿಕೊಟ್ಟಿವೆ. ಆ ಮೂಲಕ ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯದ ಕುರಿತು ಚಿಂತನೆ, ಅಧ್ಯಯನ, ಬರವಣಿಗೆ ಸಾಧ್ಯವಾಗುತ್ತಾ ಬಂದು ಕಾಲಾಬಾಧಿತವಾಗಿ ದಾಖಲೆಯ ಪರಂಪರೆಯನ್ನು ನಿರ್ಮಿಸುತ್ತಾ ಬರಲು ಸಾಧ್ಯವಾಗಿದೆ. ಹಾಗಾಗಿ ಈ ಭಾಷೆಗಳ ಜ್ಞಾನಕ್ಷೇತ್ರಗಳು ವಿಸ್ತಾರವಾಗಿವೆ. ಹೊಸ ವಿಚಾರಗಳು ವೈಚಾರಿಕ ಗತಿತರ್ಕವನ್ನು ಪಡೆದುಕೊಂಡು ಪಾರಂಪರಿಕವಾಗಿ ಸಾಗಿ ಬಂದಂತಹ ಮೌಲ್ಯಗಳೊಡನೆ ಸಂಘರ್ಷಕ್ಕಿಳಿದಿವೆ. ವ್ಯವಸ್ಥೆಯಾಗಿ ರೂಪು ಪಡೆದ ಜಾತಿ. ನಿರ್ಮಿತ ಮತ್ತು ಜಾತ್ಯಾಧಾರಿತ ಶ್ರೇಣೀಕರಣ ಮತ್ತು ಅದರ ಪೋಷಕ ಅಂಶಗಳು ವಸಾಹತುಶಾಹಿ ಭೂಮಿಕೆಯ ಗೃಹೀತಗಳನ್ನು ಆಧುನಿಕವೆಂದು ಜಾಹೀರುಪಡಿಸಿಕೊಂಡು ಆಕ್ಷೇಪಿಸಿದ್ದು, ವಿರೋಧಿಸಿದ್ದೂ ಇದೆ. ಅನುಸಂಧಾನವನ್ನು ಏರ್ಪಡಿಸಿಕೊಂಡು ಜೊತೆ ಜೊತೆಗೆ ಸ್ವೀಕರಿಸಿದ್ದೂ ಇದೆ. ಇಂಡಿಯಾದ ವರ್ಣ ಮತ್ತು ಜಾತ್ಯಾಧಾರಿತ ಶ್ರೇಣೀಕರಣವನ್ನು, ವ್ಯವಸ್ಥೆಯ ಮೇಲ್ಸ್ತರದಲ್ಲಿರುವ ಸವರ್ಣೀಯ ಮನೋಭಾವದ ಆಧುನಿಕತೆಯನ್ನು, ಬದಲಾವಣೆಯ ಧಾಟಿಯಲ್ಲಿ ಸ್ವೀಕರಿಸುತ್ತಾ ಈ ತರ್ಕವನ್ನು ಪ್ರಶ್ನಾತೀತವಾಗಿಸಿಕೊಂಡಂತೆ ರೂಪಿಸಿಕೊಂಡಿದೆ. ಸಾಮಾನ್ಯವಾಗಿ ಇಂಡಿಯಾದ ಯಾವುದೇ ಪ್ರಾಂತ್ಯದ ಚರಿತ್ರೆ ಮತ್ತು ಅವುಗಳ ಪೋಷಕ ಅಂಶಗಳು ತಮ್ಮ ಪಾಡಿಗೆ ಹೊಸತು ಎಂದು ಸ್ವೀಕರಿಸಿಕೊಂಡು ಬಂದ ಸಂಗತಿಗಳ ಕುರಿತು ವಿರೋಧವಿದ್ದಾಗಲೂ ಒಪ್ಪಿಕೊಂಡು ಬಿಡಬೇಕಾದಂಥ ವಾತಾವರಣ ನಿರ್ಮಿಸುತ್ತಾ ಬಂದಿವೆ. ತುಳುವನ್ನು ಹೊರತುಪಡಿಸಿ ಪ್ರಧಾನವಾದ ನಾಲ್ಕು ದ್ರಾವಿಡ ಭಾಷೆಗಳಲ್ಲಿ ನಿರ್ಮಿತವಾದ ಲಿಖಿತ ಸಾಹಿತ್ಯಗಳ ಜೊತೆಗೆ ತುಳುಭಾಷೆ, ಸಾಹಿತ್ಯವನ್ನು ಸರಿಗಟ್ಟಿ ಸಮಾನವಾದ ಕಾರಣಗಳನ್ನು ನಿರೂಪಿಸುವುದು ಸಮರ್ಪಕ ಆಗಲಾರದು. ತುಳುಭಾಷೆಯಲ್ಲಿ ಲಿಖಿತ ಕಾವ್ಯಗಳಿಗೆ ತನ್ನದೇ ಆದ ಸ್ವಂತಿಕೆ ಮತ್ತು ಸ್ವಾಭಿಮಾನದ ಬೇರುಗಳಿವೆ. ಕಥನ, ಗದ್ಯ ಬರವಣಿಗೆಗಳಿಗೆ ಇತರ ದ್ರಾವಿಡ ಭಾಷಾ ಬರವಣಿಗೆಗಳಿಗಿಂತ ಭಿನ್ನವಾದ ನೆಲೆಗಟ್ಟು ಇದೆ. ಭಾಷಾಲಯವನ್ನು ಲಕ್ಷ್ಯದಲ್ಲಿರಿಸಿಕೊಂಡು ತುಳು ಕಥನಗಳನ್ನು ಸ್ವೀಕರಿಸಬೇಕಾಗುತ್ತದೆ. ಅಂದರೆ ಒಂದು ಅರ್ಥದಲ್ಲಿ ತುಳು ಮೌಖಿಕ ಪರಂಪರೆಯ ಭಾಷೆಯಾಗಿ ತನ್ನ ವೈಶಿಷ್ಟ್ಯ ಮೆರೆದಿರುವಂತದ್ದು. ಬರವಣಿಗೆಗಿಂತ, ಓದುವಿಕೆಗಳಿಗಿಂತ ಮಾತಾಡುವಿಕೆಗೆ-ಕೇಳುವಿಕೆಗೆ ಪ್ರಾಧಾನ್ಯ ನೀಡಿರುವಂತೆ ಅಸ್ತಿತ್ವವನ್ನು ಸಾಬೀತುಪಡಿಸಿಕೊಂಡಿರುವಂಥದ್ದು. ಹಿಂದೆ ಒಂದು ಕಾಲದಲ್ಲಿ ತುಳು ಭಾಷೆಯು ತನ್ನ ಅಸ್ತಿತ್ವ ಮತ್ತು ಅಭಿವ್ಯಕ್ತಿಗಾಗಿ ತನ್ನದೇ ಸ್ವತಂತ್ರ ಲಿಪಿಯನ್ನು ಆವಿಷ್ಕರಿಸಿಕೊಂಡಿತ್ತು. ಆದರೆ ಅದನ್ನು ಉಳಿಸಿಕೊಂಡು, ಪರಿಷ್ಕರಿಸಿಕೊಂಡು ಆಧುನೀಕರಿಸಿಕೊಳ್ಳಲು ಸಾಧ್ಯವಾಗದೆಹೋಯಿತು.

ತುಳುಭಾಷೆಗೆ ಈಗ ಲಿಪಿ ಇದೆ ಎನ್ನುವುದಕ್ಕಿಂತಲೂ ಲಿಪಿ ಇತ್ತು ಎನ್ನುವುದೇ ಲೇಸು. ಸಾಹಿತ್ಯದ ವರ್ತಮಾನದಲ್ಲಿ ಆ ಲಿಪಿ ಸಾಕಾರ ಪಡೆಯದೇ ಉಳಿಯಿತು. ತುಳುಭಾಷೆ ಶೋಧಿಸಿಕೊಂಡ ಆ ಲಿಪಿಯನ್ನು ತಿಗಳಾರ ಲಿಪಿ ಎಂದು ಕರೆಯಲಾಗಿತ್ತು. ತುಳು ಭಾಷೆ ಬರಹಾತ್ಮಕ ದಾಖಲೆಗಳಾಗಿ ಬೆಳೆಯುತ್ತ ಬರುವಾಗ ತನ್ನ ಸ್ವತಂತ್ರ ಲಿಪಿಯನ್ನು ಬಿಟ್ಟು ಕನ್ನಡದ ಲಿಪಿಯನ್ನು ಎರವಲಾಗಿ ಸ್ವೀಕರಿಸಿಕೊಂಡು ಬಿಟ್ಟಿತು. ಹೀಗಾಗಲು ಬಹಳ ಮುಖ್ಯವಾದ ಕಾರಣ ಇಲ್ಲಿಯ ಪ್ರಾದೇಶಿಕ ನೆಲೆಯದ್ದು. ಭಾಷೆ ಮತ್ತು ಲಿಪಿ ನಿರ್ದಿಷ್ಟಗೊಳ್ಳಲು ಅಗತ್ಯವಾದ ಕಾರ್ಯ-ಕಾರಣ ಸಂಬಂಧ ಮತ್ತು ಉದ್ದೇಶಗಳಲ್ಲಿ ಖಚಿತತೆ ಇಲ್ಲವಾದುದು. ತುಳು ಭಾಷೆಯಲ್ಲಿ ಆಡಳಿತ ಮತ್ತು ಶಿಕ್ಷಣದ ಸಾಧ್ಯತೆ ಇಲ್ಲವಾಗಿಹೋದುದು. ಕನ್ನಡ ನಾಡಿನ ಅರ್ಥಾತ್‌ಕರ್ನಾಟಕದ ದಕ್ಷಿಣದ ಸಣ್ಣ ಭೂಭಾಗದಲ್ಲಿ ಮತ್ತು ಕೇರಳ ರಾಜ್ಯಕ್ಕೆ ಸೇರಿಹೋದಂತಿರುವ ಕಾಸರಗೋಡಿನ ಭಾಗದಲ್ಲಿ ಮಾತ್ರ ಬಳಕೆಯಾಗುತ್ತಿರುವುದು. ಈ ಪ್ರದೇಶದ ಬಹುತೇಕ ಎಲ್ಲ ಸಾರ್ವಜನಿಕ ವ್ಯವಹಾರಗಳು ರಾಜ್ಯಭಾಷೆಯಾದ ಕನ್ನಡದಲ್ಲಿಯೇ ಸಾಧಿತವಾಗುತ್ತಾ ಬಂದುದು. ಕೇರಳ ರಾಜ್ಯಕ್ಕೆ ಸೇರಿದಂತಿರುವ ಕಾಸರಗೋಡಿನ ೧೯೫೬ರ ಅನಂತರದ ಎಲ್ಲ ವ್ಯವಹಾರಗಳು, ಆಡಳಿತಾತ್ಮಕ ನಡಾವಳಿಗಳು, ಮಲೆಯಾಳಂ ಭಾಷೆಯ ಮೂಲಕವೇ ನಡೆಯುತ್ತಿರುವುದು ತುಳುವರು ರಾಜ್ಯಭಾಷೆಯಲ್ಲಿ ಅಥವಾ ಇಂಗ್ಲಿಷ್‌ಭಾಷೆಯಲ್ಲಿ ಶಿಕ್ಷಣ ಪಡೆದುಕೊಂಡ ತುಳುಭಾಷೆಯ ಬರಹದ ಸಾಧ್ಯತೆಯನ್ನು ಕನ್ನಡ ಲಿಪಿಯ ಮೂಲಕ ಖಚಿತಪಡಿಸಿಕೊಂಡದ್ದು. ತುಳುವರು ಕನ್ನಡ ಬರಹಗಾರರಾಗಿಯೂ ಇದ್ದು ಕನ್ನಡ ಭಾಷೆಯಲ್ಲಿಯೇ ತಮ್ಮ ಆಲೋಚನೆಗಳಿಗೆ ದಾಖಲೆಯ ಯೋಗ ಕಲ್ಪಿಸಿಕೊಡುತ್ತಾ ತುಳುಭಾಷೆಯಲ್ಲಿ ಬರೆಯುವ ಸನ್ನಿವೇಶದಲ್ಲಿ ಕಲಿತ ಕನ್ನಡ ಲಿಪಿಯನ್ನೇ ಬಳಸಿಕೊಂಡದ್ದು. ಶಿಕ್ಷಣದ ಮೂಲಕ ತುಳು ಭಾಷೆ ಮತ್ತು ಲಿಪಿಯನ್ನು ಕಲಿಯುವ ಅವಕಾಶ ಇರುತ್ತಿದ್ದರೆ ತುಳು ಲಿಪಿ ಉಳಿದುಕೊಂಡು ಪರಿಷ್ಕಾರಕ್ಕೆ ಒಳಗಾಗಿ ಸ್ವತಂತ್ರ ಅಕ್ಷರಾಕೃತಿ ಉಳಿದುಬಿಡುವ ಸಾಧ್ಯತೆ ಇತ್ತು. ಹೀಗಾಗಿ ತುಳುಭಾಷೆ ಲಿಪಿ ಸಂಸ್ಕಾರದಿಂದ ವಂಚಿತವಾಯಿತು.

ಇಂಡಿಯಾದ ಬಹುತೇಕ ಎಲ್ಲ ಭಾಷೆಗಳಲ್ಲಿ, ದ್ರಾವಿಡ ಭಾಷೆಗಳಲ್ಲಿ ಸಾಹಿತ್ಯ ಹುಟ್ಟಿಕೊಂಡಷ್ಟು ಬಿರುಸಿನಿಂದ ತುಳುಭಾಷೆಯಲ್ಲಿ ಸಾಹಿತ್ಯ ಹುಟ್ಟಿಕೊಳ್ಳಲಿಲ್ಲ. ವಸಾಹತುಶಾಹಿತ್ವದ ನೆಲೆಯಲ್ಲಿ ಆಧುನಿಕ ಕಾಲಘಟ್ಟದ ಸಾಹಿತ್ಯ ಸೃಷ್ಟಿಯ ವೈಶಿಷ್ಟ್ಯಗಳೂ ಅದೇ ಜಾಡಿನಿಂದ ಕೂಡಿರುವಂಥವು. ಇಲ್ಲಿ ಸಾಹಿತ್ಯ ಪರಿಪ್ರೇಕ್ಷವೂ ಮೌಖಿಕ ನೆಲೆಯ ತುಳುಭಾಷೆಗೆ ಅಷ್ಟಾಗಿ ಒಗ್ಗಿ ಬಂದಂತೆ ಕಾಣುವುದಿಲ್ಲ. ತುಳು ಭಾಷೆಗೆ ತನ್ನದೇ ಆದ ಒಂದು ಓದುವರ್ಗವನ್ನು ನಿರ್ಮಿಸಿಕೊಳ್ಳುವುದೂ ಸಾಧ್ಯವಾಗದೇ ಹೋಯಿತು. ವಸಾಹತುಶಾಹಿತ್ವಕ್ಕೆ ಪ್ರತಿಕ್ರಿಯೆಯಾಗಿ ಇಂಡಿಯಾ ದೇಶದ ಬಹುತೇಕ ಎಲ್ಲ ಭಾಷೆಗಳು ಸಮಾನ ಭಾವದಿಂದಲೇ ಸ್ಪಂದಿಸಿದವು. ವಿಪುಲವಾದ ಮೌಖಿಕ ಸಾಹಿತ್ಯವನ್ನು ತನ್ನ ಒಡಲಿನಲ್ಲಿ ತುಂಬಿಟ್ಟುಕೊಂಡಂತಹ ತುಳುಭಾಷೆಗೆ ಒಂದರ್ಥದಲ್ಲಿ ರಾಚನಿಕವಾದಂತಹ ಸವಾಲೂ ಎದುರಾಗಿದೆ. ಭಾಷೆ ಮತ್ತು ಬರವಣಿಗೆಯನ್ನು ಒಂದು ಸಾಂಸ್ಥಿಕ ಪ್ರಕ್ರಿಯೆಯಾಗಿ ಪರಿಭಾವಿಸುವ ಮತ್ತು ಹೊಸ ಚಿಂತನೆಯ ಸಾಧ್ಯತೆಗಳಿಗೆ ಒಡ್ಡುವ ಮುಖ್ಯವಾಹಿನಿ ಒದಗದೆ ಹೋಗಿದೆ. ತುಳು ಭಾಷೆಯಲ್ಲಿ ಆಲೋಚಿಸುವ, ವ್ಯವಹರಿಸುವ, ತುಳುವನ್ನು ಮಾತೃಭಾಷೆಯಾಗಿ ಹೊಂದಿರುವ ತುಳುವರು ಕನ್ನಡವನ್ನು ಸಲೀಸಾಗಿ ಅನುಸರಿಸುವ ಮನೋಭಾವದವರಾಗಿದ್ದಾರೆ. ಇದಕ್ಕೆ ಕಾರಣ ತುಳುವಿನ ಕುರಿತು ಕೀಳರಿಮೆ ಖಂಡಿತಾ ಅಲ್ಲ. ಕರ್ನಾಟಕದ ವ್ಯಾಪ್ತಿಯಲ್ಲಿ ಕನ್ನಡವನ್ನು ಪ್ರಾದೇಶಿಕ ನೆಲೆಯ ಭಿನ್ನತೆಗಳಿಂದ ಧಾರವಾಡ ಕನ್ನಡ, ಮೈಸೂರು ಕನ್ನಡ, ಮಂಗಳೂರು ಕನ್ನಡ ಎಂದು ಪ್ರಾದೇಶಿಕ ಅನನ್ಯತೆಯ ಮೂಲಕ ಸಮಗ್ರತೆಯನ್ನು ಗುರುತಿಸಲಾಗುತ್ತದೆ. ತುಳುವಿನಲ್ಲಿಯೂ ಮಂಗಳೂರು ತುಳು, ಪುತ್ತೂರು ತುಳು, ಉಡುಪಿ ತುಳು ಎಂದು ಪ್ರಾದೇಶಿಕ ಭಿನ್ನತೆಯನ್ನು ಲಕ್ಷಿಸಿ ಸಮಗ್ರತೆಯನ್ನು ಗುರುತಿಸಲಾಗುತ್ತದೆ. ಮಾತೃಭಾಷಿಕ ಜನತೆಯ ತುಳುವಿನಲ್ಲಿಯೂ ಭಿನ್ನತೆ ಮತ್ತು ಅನನ್ಯತೆಗಳಿವೆ. ಜನಾಂಗಿಕವಾಗಿ ಶಿವಳ್ಳಿ ಬ್ರಾಹ್ಮಣರ ತುಳು, ಜೈನರ ತುಳು, ಬಂಟರ ತುಳು, ಬಿಲ್ಲವ, ಗೌಡರ ತುಳು, ಪರಿಶಿಷ್ಟ ಜಾತಿ, ಪಂಗಡಗಳ ಹಿನ್ನೆಲೆಯಲ್ಲಿ ಆಯಾಯ ಜಾತಿ, ವರ್ಗದ ದೃಷ್ಟಿಯಲ್ಲಿ ಬಳಸುವ ತುಳು ಭಾಷೆಯನ್ನು ಆಯಾಮ ಹಿನ್ನೆಲೆಯ ಪರಿಭಾಷೆಗಳ ಮೂಲಕ ಗುರುತಿಸಲಾಗುತ್ತದೆ.

ತುಳುಭಾಷೆ ಮೌಖಿಕ ನೆಲೆಯಲ್ಲಿಯೇ ತನ್ನ ಅಸ್ತಿತ್ವದ ಸಾರವನ್ನು ದೃಢಪಡಿಸಿಕೊಂಡಿರುವಂಥದ್ದು. ಹೀಗೆ ಹೇಳುವುದರ ಅರ್ಥ ಬರವಣಿಗೆಯ ಮೂಲಕ ದಾಖಲಾತಿ ಈ ಭಾಷೆಯಲ್ಲಿ ಅಸಾಧ್ಯವೆಂದಲ್ಲ. ತುಳು ಭಾಷೆಯಲ್ಲಿ ಪ್ರಾಚೀನ ಕಾವ್ಯಗಳು, ಬರವಣಿಗೆಗಳು ಇವೆ. ಕೆಲವು ಅಮೂಲ್ಯ ಗ್ರಂಥಗಳು ಲಭ್ಯವಾಗಿ ಪ್ರಕಟವಾಗಿವೆ. ಪಾರಂಪರಿಕ ಬರಹಗಳಾಗಲೀ, ಆಧುನಿಕ ಬರಹಗಳಾಗಲೀ ತುಳು ಭಾಷೆಯಲ್ಲಿ ಬಹು ಸಂಖ್ಯಾತವಾಗಿ ಹೊರಬರಲಿಲ್ಲ. ತುಳು ಭಾಷೆಯು ಯಾವತ್ತೂ ಬರಹ ರೂಪದಲ್ಲಿ ತನ್ನ ಪಂಡಿತ ಮಂಡಳಿಯನ್ನು ರೂಪಿಸಿಕೊಳ್ಳಲಿಲ್ಲ. ಮೌಖಿಕ ಸಾಹಿತ್ಯದ ಮಹಾಪೂರವೇ ತುಳು ಭಾಷೆಯಲ್ಲಿದೆ. ಅವುಗಳನ್ನು ಹೇಳುವ ಜನಪದರು ಇದ್ದಾರೆ. ಭಾಷಾ ವಿಶಿಷ್ಟತೆಯನ್ನು ಮೌಖಿಕ ನೆಲೆಯ ಸ್ವಾಭಿಮುಖತೆಯನ್ನು ಬಲ್ಲ ‘ಜನಪದ ವಿದ್ವಾಂಸ’ರಿದ್ದಾರೆ. ಆದರೆ ಲಿಖಿತ ಹಿನ್ನೆಲೆ ಮತ್ತು ಮೌಖಿಕ ಹಿನ್ನೆಲೆಯನ್ನು ಒಂದೇ ಎಂದಾಗಲೀ ಸಮಾನವೆಂದಾಗಲೀ ಪರಿಭಾವಿಸಲು ಸಾಧ್ಯವಾಗುವುದಿಲ್ಲ.

ಇಂಡಿಯಾದ ಬಹುತೇಕ ಎಲ್ಲ ಭಾಷೆಗಳಲ್ಲಿಯೂ ಆಧುನಿಕವೆನ್ನುವ ವಿಚಾರಲಹರಿ ಮತ್ತು ಆ ಹಿನ್ನೆಲೆಯು ವಸಾಹತುಶಾಹಿಯ ಜೊತೆಗಿನ ಮುಖಾಮುಖಿಯಾಗಿ ಪ್ರಕಟವಾಯಿತು. ವಸಾಹತುಶಾಹಿತ್ವವು ಹಲವು ನೆಲೆಗಳಲ್ಲಿ ಪ್ರಾದೇಶಿಕ ಸಂಸ್ಕೃತಿಯ ನಾಡಿ ಮಿಡಿಸಿದೆ. ಪಾರಂಪರಿಕವಾಗಿ ನೆಲೆ ನಿಂತಂಥ ಮೌಲ್ಯಗಳನ್ನು ಪುನರ್ಮನನ ಮಾಡಿಸಿದೆ. ಈ ಜಿಜ್ಞಾಸೆಯು ವಸಾಹತುಶಾಹಿತ್ವವು ಮುಂದಿರಿಸುವ ಬದಲಾವಣೆಯ ಕೆಲವು ಆಶಯಗಳನ್ನು ವಿರೋಧಿಸುವಂತೆ, ಅನುಮಾನಾತ್ಮಕವಾಗಿ ನೋಡುವಂತೆ ಆಗ್ರಹಿಸುತ್ತದೆ. ಮಾತ್ರವಲ್ಲ, ಪಾರಂಪರಿಕ ಮೌಲ್ಯಗಳನ್ನು ನೆಚ್ಚಿಕೊಳ್ಳುವಂತೆ ಒತ್ತಾಯಿಸುವ ಗೊಂದಲವನ್ನು ಸೃಷ್ಟಿಸುತ್ತದೆ. ಬಹಳ ಸಂದರ್ಭದಲ್ಲಿ ಈ ಮನೋಭಾವ ಅಪಸ್ವರವೆಬ್ಬಿಸಿ ಈ ಅಪಸ್ವರವೇ ಮೂಲರಾಗವೆಂದು ಭ್ರಮಿಸಿಕೊಂಡು ಹಿಡಿವ ಹಾದಿಯೇ ಪ್ರಶ್ನಾರ್ಹವಾದರೂ ಅದೇ ಎನಿಸುವಂತೆ ಪ್ರೇರೇಪಿಸುತ್ತದೆ. ಆಧುನಿಕ ಜ್ಞಾನವು ಈ ಮೂಲಕ ಸಾಂಸ್ಕೃತಿಕ ನೆಲೆಗಳನ್ನು ಉದಾರವಾದೀ ಮನೋಭಾವದಿಂದ ನೋಡುವಂತೆ ಮಾಡುತ್ತದೆ. ಈ ಉದಾರವಾದೀ ಸಾಂಸ್ಕೃತಿಕ ನೆಲೆ ಯಾವತ್ತೂ ಮೃದುಭಾವದ ಮೂಲಕವೇ ಜಿಜ್ಞಾಸೆಗಿಳಿದು ಪಾರಂಪರಿಕ ಎನ್ನುವಂಥ ವಿಚಾರಗಳನ್ನು ಉದಾರವಾಗಿಯೇ ಕಂಡಿದೆ. ಈ ಗ್ರಹೀತಗಳಿದಂದಲೇ ಅದು ಮೂಲದೆಡೆಗೆ ನೋಡಿದೆ. ಆಧುನಿಕ ಪಠ್ಯಗಳಾಗಿ ಬರವಣಿಗೆಯ ಮೂಲಕ ಸ್ಥಾಪಿತವಾಗುವ ಜಿಜ್ಞಾಸೆಯೂ ಆಂತರಿಕವಾಗಿ ಹಲವಾರು ಅಸ್ಪಷ್ಟತೆಗಳನ್ನು, ಗೊಂದಲವನ್ನು ಉಂಟುಮಾಡಿ ಬಿಕ್ಕಟ್ಟಿನ ವಾತಾವರಣವನ್ನು ಸೃಷ್ಟಿಸಿದಂತಿದೆ. ಯಾಕೆಂದರೆ ಆಧುನಿಕವಾಗಿ ನಿರ್ಮಿತವಾಗುವ ದಾರಿಯಷ್ಟೇ ಆಧುನಿಕವಾಗಿ ಉಳಿದುಬಿಟ್ಟು ಅದರ ಮೂಲಕ ಸಾಗುವ ಪ್ರಯಾಣವೆಲ್ಲ ಮೂಲದೆಡೆಯದ್ದಾಗುವಂಥದ್ದು. ಗೊಂದಲ, ಅಸ್ಪಷ್ಟತೆ, ಸಮಸ್ಯೆ, ಕುತೂಹಲ ಎಲ್ಲ ಇರುವುದು ಇಲ್ಲಿಯೇ: ಏಕಕೇಂದ್ರಿತ ಸಾಂಸ್ಕೃತಿಕ ಪರಿಪ್ರೇಯ ಗ್ರಹಿಕೆ ಇಂಡಿಯಾದ ನೆಲದಲ್ಲಿ ಸಾಧ್ಯವಾಗದೆ ಬಿಡುವಲ್ಲಿ. ಇದೇ ವಿಚಾರ ಸಾಮಾಜಿಕ ಮತ್ತು ಸಾಹಿತ್ಯದ ಸಂಗತಿಗಳದ್ದೂ ಹೌದು. ಕನ್ನಡವೇ ಆಗಲಿ ಅಥವಾ ಬಹುಭಾಷಿಕ ಇಂಡಿಯಾದ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಅಭಿವ್ಯಕ್ತಿ ಪಡೆದ ಬರವಣಿಗೆಯೇ ಆಗಲಿ, ಅವು ಒಟ್ಟಾರೆಯಾಗಿ ಆಧುನಿಕತೆಯ ಪ್ರವಾಹಕ್ಕೆ ಒಳಪಡುವಾಗ ಗದ್ಯಕ್ಕೆ ಪ್ರಾಧಾನ್ಯವನ್ನು ಕೊಟ್ಟಿವೆ. ಆಂತರಿಕ ಸೂಕ್ಷ್ಮಗಳ ವಿವರಗಳನ್ನು ಬಿಚ್ಚಿಕೊಳ್ಳುವುದಾಗಲೀ, ವೈಚಾರಿಕ ಜಿಜ್ಞಾಸೆಗೆ ಒಳಗಾವುದಾಗಲೀ, ವಿವರಣಾತ್ಮಕತೆಗೆ ಮತ್ತು ವಿಶ್ಲೇಷಣೆಗೆ ಅನುಕೂಲಕರವಾಗಿ ಭಾಷೆಗೆ ಗದ್ಯವೇ ದಕ್ಕುವುದು ಹೊರತು ಪದ್ಯ ಪ್ರಕಾರಗಳಲ್ಲ. ಆಧುನಿಕ ಸಂದರ್ಭದಲ್ಲಿ ಬಹು ನೆಲೆಗಳಲ್ಲಿ ಕಥನ ಸಾಧ್ಯವಾದುದು ಗದ್ಯದಲ್ಲಿಯೇ. ಈ ಕಥನಗಳು ಆಧುನಿಕ ವಸಾಹತುಶಾಹಿತ್ವಕ್ಕೆ ಪ್ರತಿಕ್ರಿಯೆ ನೀಡುತ್ತಾ ಕಣ್ತೆರೆಯುವಾಗ ಎದುರಾದುದು ಪಾರಂಪರಿಕ ಮೌಲ್ಯಗಳು, ನಂಬಿಕೆಗಳು, ಸಂಪ್ರದಾಯ ಹೀಗೆ ವ್ಯಕ್ತಿತ್ವ ರೂಪಿತವಾದ ಯಾ ಆರೋಪಿತ ಆಚಾರ ವಿಚಾರಗಳು. ಇಲ್ಲಿ ಆರೋಪಿತ ಆಚಾರ ವಿಚಾರಗಳು ಎಂದು ಉಲ್ಲೇಖಿಸಲು ಕಾರಣ, ಜನತೆ ಬೇರೆ ಬೇರೆ ಹಿನ್ನೆಲೆಗಳಲ್ಲಿ ಅನುಕರಣೆ ಮಾಡುತ್ತಾ ಬಂದದ್ದು ಮತ್ತು ವರ್ತಮಾನದಲ್ಲಿ ಅನುಕರಣೆ ಮಾಡುತ್ತಿರುವುದು ನಾಗರಿಕತೆ, ಆಧುನಿಕತೆ, ಸಂಸ್ಕೃತೀಕರಣ ಎಂಬ ಅರ್ಥದಲ್ಲಿ. ಬ್ರಾಹ್ಮಣೀಕರಣವನ್ನು ಪರಂಪರೆಯಿಂದಲೇ ಮೇಲ್ಸ್ತರದಲ್ಲಿ ಕಾಣಿಸಿಕೊಂಡ ಈ ವೈದಿಕಶಾಹಿತ್ವ ಕೆಳಸ್ತರದ ಮೇಲೆ ಪೂರ್ಣವಾದ ಹಿಡಿತ ಸಾಧಿಸುವಂತಾದುದು ಶ್ರೇಷ್ಠತೆಯ ಮೂಲಕ ಮತ್ತು ಜ್ಞಾನಕ್ಷೇತ್ರವನ್ನು ತಮ್ಮದಾಗಿಸಿಕೊಂಡ ಮೂಲಕ. ಇದರಿಂದಾಗಿ ನೈಜ ಗತಿತ್ವವನ್ನು ಸಾರರೂಪದಲ್ಲಿ ಗ್ರಹಿಸಲು ತೊಡಕು ಉಂಟು ಮಾಡುತ್ತಿರುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ವಿವೇಚಿಸುವುದಾದರೆ, ಜಾತ್ಯಾಧಾರಿತ ಯಾಜಮಾನ್ಯದ ನೆಲದಲ್ಲಿ ಶ್ರೇಷ್ಠವೆಂದೂ, ಅನುಕರಣೀಯವೆಂದೂ ಮಾದರಿ ನಿರ್ಮಿಸುತ್ತಾ ಬಂದುದು ಬ್ರಾಹ್ಮಣ್ಯ. ಮೊದಲ ಘಟ್ಟದ ಕಾದಂಬರಿ ಕಥನಗಳು ಈ ವಿಚಾರವನ್ನು ಪ್ರತಿನಿಧಿಸುವಂಥವೇ ಆಗಿವೆ.

ತುಳು ಭಾಷೆಯಲ್ಲಿ ಕಾದಂಬರಿಗಳೆನ್ನುವ ಆಧುನಿಕ ಕಥನ ಕಾಣಿಸಿಕೊಂಡದ್ದೇ ಬಹಳ ತಡವಾಗಿ. ೧೯೩೫ರಲ್ಲಿ ಎನ್‌. ಎ. ಶೀನಪ್ಪ ಹೆಗ್ಗಡೆಯವರ ಮಿತ್ಯನಾರಾಯಣ ಕತೆಯೂ ೧೯೩೬ರಲ್ಲಿ ಎಸ್‌. ಯು. ಪಣಿಯಾಡಿಯವರ ಸತೀ ಕಮಲೆಯೂ ಪ್ರಕಟವಾಗಿವೆ. ಸತೀ ಕಮಲೆಯು ಈ ಸಂದರ್ಭದಲ್ಲಿನ ಬಹುಮುಖ್ಯವಾದ ವಾಗ್ವಾದವನ್ನು ಮುಂದಿಡುತ್ತದೆ. ವಸಾಹತುಶಾಹಿಯು ಕೊಡಮಾಡಿದ ಆಧುನಿಕವೆನ್ನುವ ಚಿಂತನ ಲಹರಿಗೆ ಇಲ್ಲಿ ವಿರೋಧಾತ್ಮಕ ಪ್ರತಿಕ್ರಿಯೆ ಕಂಡುಬರುತ್ತದೆ. ಪಾರಂಪರಿಕ ಮೌಲ್ಯಗಳೆಂದು ಸ್ವೀಕರಿಸಿಕೊಂಡ ಆಸ್ತಿಕತೆ ಮತ್ತು ಅದು ಮುಂದಿಡುವ ಶ್ರೇಣೀಕೃತ ವ್ಯವಸ್ಥೆ, ಜಾತೀಯ ಸ್ಥಾನಮಾನಗಳು, ಮಹಿಳೆಯರನ್ನು ಗುರುತಿಸುವ ಪುರುಷ ಪ್ರಧಾನ ಮನೋಭಾವದ ಸಾಕ್ಷೀರೂಪ ಹೀಗೆ ಎಲ್ಲ ದೃಷ್ಟಿಗಳಿಂದಲೂ ಪಾರಂಪರಿಕವೆನ್ನುವ ಮೂಲದೆಡೆಗೆ ಮುಖ ಮಾಡಿರುವ ಚಿತ್ರಣಗಳೇ ಕಂಡುಬರುತ್ತವೆ. ಪುನರ್ವಿವಾಹ ವಿರೋಧಿ ನಿಲುವು ಕೂಡಾ ಇಲ್ಲಿ ಸ್ಥಾಯೀಭೂತವಾಗಿ ಪ್ರಕಟವಾಗುತ್ತದೆ. ಸತೀ ಕಮಲೆಯ ನಾಯಕಿ ಕಮಲೆ ವಿಧವೆಯಾಗಿದ್ದು, ಆಧುನಿಕ ವಿದ್ಯಾಭ್ಯಾಸ ಪಡೆಯುವಂಥ ಪ್ರಗತಿಪರ ನಿಲುವು ಇದ್ದರೂ ಕೂಡ ಆಕೆ ಸತೀ ಕಮಲೆಯಾಗಿಯೇ ಉಳಿದುಬಿಡುತ್ತಾಳೆ. ಇಲ್ಲಿ ಪ್ರಕಟವಾಗುವ ಸ್ತ್ರೀ ಪ್ರತಿಮೆಯ ಮೂಲಕ ಸಾಂಪ್ರದಾಯಿಕ ಸಂಕೇತವಾಗಿಬಿಡುತ್ತಾಳೆ. “ನೀತಿ ನಿಷ್ಠೆಯ ಆದರ್ಶದ ಆರಾಧನೆಯ ಕತೆಯಾಗಿ, ಪಾವಿತ್ರ್ಯದ ಪ್ರತಿಮೆಯಾಗಿ ಸತೀ ಕಮಲೆ ಮೂಡಿಬರುವುದು” (ಪನಿಯಾರ, ೧೯೮೯, ಪುಟ ೨೧೩) ಎಂದು ಶಿವರಾಮ ಪಡಿಕ್ಕಲ್‌ಅಭಿಪ್ರಾಯಪಡುತ್ತಾರೆ. ತುಳು ಭಾಷೆಯಲ್ಲಿ ಕಾದಂಬರಿಯಂಥ ಮಹಾಕಥನ ಬರಹರೂಪದಲ್ಲಿ ದಾಖಲಾಗುವ ತುಳುವಿನ ಹಿನ್ನೆಲೆಯಲ್ಲಿ ಕಡೆದಿಡುವ ಈ ಚಿತ್ರಣದ ಹಿಂದಿನ ಆಶಯ ಬ್ರಾಹ್ಮಣ್ಯದ ಮೂಲಕ ರೂಪಿತವಾದುದು ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಆಧುನಿಕ ಇಂಡಿಯಾದ ಬಹುತೇಕ ಭಾಷೆಗಳಲ್ಲಿ ಆಗಲೇ ಇದಕ್ಕಿಂತ ಭಿನ್ನವಾಗಿ ಆಧುನಿಕತಯ ಪ್ರಕ್ರಿಯೆ ಸುಧಾರಣೆಯ ಹಾದಿಯನ್ನು ತುಳಿಯುತ್ತಾ ಪ್ರಕಟವಾಗಿವೆ. ೧೮೯೬ರಲ್ಲಿಯೇ ಗುಲ್ವಾಡಿ ವೆಂಕಟರಾಯರು ಕನ್ನಡದಲ್ಲಿ ‘ಇಂದಿರಾಬಾಯಿ’ ಕಾದಂಬರಿ ಕಥನಗಳೆಲ್ಲ ಉದಾರವಾದಿ ಸಾಂಸ್ಕೃತಿಕ ಹಿನ್ನೆಲೆಯಿಂದಲೇ ಚಿತ್ರಿತವಾಗಿವೆ. ತುಳುನಾಡಿನಲ್ಲಿಯೇ ಮೊದಲು ಈ ಪ್ರಕ್ರಿಯೆ ಕನ್ನಡ ಭಾಷೆಯಲ್ಲಿ ಆರಂಭವಾದುದು. ಆದರೆ ತುಳು ಭಾಷೆಯಲ್ಲಿ ಹೆಚ್ಚು ಕಡಿಮೆ ನಲವತ್ತು ವರ್ಷಗಳ ತರುವಾಯ ಕಾದಂಬರಿಯಂಥ ಸ್ವರೂಪದ ಕಥನ ಆರಂಭವಾದುದು. ಇಷ್ಟು ದೀರ್ಘ ಕಾಲದಲ್ಲಿ ಕನ್ನಡದಲ್ಲಿ ಮತ್ತಷ್ಟು ಮಹತ್ವದ ಕಾದಂಬರಿಗಳು ರಚನೆಯಾಗಿವೆ. ತುಳು ಮಾತೃಭಾಷಿಕರೂ, ತುಳುಭಾಷೆಯಲ್ಲಿ ಕಥನ ರಚನೆಗೆ ತೊಡಗಿದ ಬರಹಗಾರರೂ ಕನ್ನಡದಲ್ಲಿ ಬರೆಯಲಾದ ಕಾದಂಬರಿಗಳನ್ನು ಓದಿರುವ ಸಾಧ್ಯತೆ ಸಹಜವಾಗಿ ಇದ್ದೇ ಇರಬೇಕು. ಆದರೆ ಕನ್ನಡ ಭಾಷೆಯ ಕಾದಂಬರಿಗಳು ತುಳು ಭಾಷೆಯ ಕಾದಂಬರಿಗಳ ಮೇಲೆ ಪ್ರಭಾವ ಬೀರದೆ ಉಳಿದುದು ಆಶ್ಚರ್ಯದ ಸಂಗತಿ ಅಥವಾ ತುಳು ಭಾಷಿಕ ಬರಹಗಾರರು ಕನ್ನಡದ ಕಾದಂಬರಿ ಕಥನಗಳನ್ನು ಪ್ರಭಾವಾತ್ಮಕವಾಗಿ ಸ್ವೀಕರಿಸಿಕೊಳ್ಳದಾದುದು ವಿಪರ್ಯಾಸದಂತೆ ಕಾಣುತ್ತದೆ. ಒಟ್ಟಿನಲ್ಲಿ ತುಳು ಭಾಷೆಯಲ್ಲಿ ಕಾದಂಬರಿ ಪ್ರಕಾರ ಅಂಥ ಯಾವ ಸಾಧನೆಯನ್ನೂ ಮಾಡುವುದು ಸಾಧ್ಯವಾಗಲಿಲ್ಲ. ತುಳು ಮೂಲತಃ ಮೌಖಿಕ ಭಾಷೆಯಾಗಿ ಅಭಿವ್ಯಕ್ತಿ ಪಡೆದಿರುವುದು ಹೌದಾದರೂ, ಕಥನ ಸಾಧ್ಯತೆಗಳು ಅಸಾಧ್ಯವಾಗುವಂಥ ಸನ್ನಿವೇಶಗಳು ಇಲ್ಲ. ಯಾವುದೇ ಭಾಷೆಗಳಲ್ಲಿ ಅಸಾಧ್ಯವೊ ಅಲ್ಲ. ಆದರೂ ಲಿಖಿತ ಸಾಹಿತ್ಯ ಇತರ ಭಾಷೆಗಳಲ್ಲಿ ಪಡೆದುಕೊಂಡ ವಿಸ್ತಾರವಾದ ಹರವು ತುಳು ಭಾಷೆಯಲ್ಲಿ ಸಾಧ್ಯವಾಗಲಿಲ್ಲ.

ತುಳು ಭಾಷೆಯ, ಒಂದು ಜಾನಾಂಗಿಕ ಪ್ರಭೇದವಾದ ಬ್ರಾಹ್ಮಣ ತುಳುವಿನಲ್ಲಿ ‘ಸತೀ ಕಮಲೆ’ ಕಾದಂಬರಿಯನ್ನು ಬರೆಯಲಾಗಿದೆ. ತುಳು ಭಾಷೆಯ ಕುರಿತ ಕಾಳಜಿ ಈ ಕಾದಂಬರಿಯ ಒಡಲಿನ ಮೂಲಕ ಪ್ರಕಟವಾಗುವುದೇ ಆದರೂ ಪ್ರಾದೇಶಿಕವಾಗಿ ಗುರುತಿಸಿಕೊಂಡ ಭೂವಲಯವನ್ನು ದೇಶ ಎಂಬ ಪದದ ಮೂಲಕ ಆವಾಹಿಸಿಕೊಳ್ಳುತ್ತದೆ. ದೇಶ ಎಂಬ ಪದವನ್ನು ಸಾಮಾನ್ಯ ಅರ್ಥದಲ್ಲಿ ಸ್ವೀಕರಿಸಿಕೊಂಡಂತೆಯೂ ಭಾಸವಾಗುತ್ತದೆ. ಯಾಕೆಂದರೆ ಈಗಿನಂತೆ ಸ್ಪಷ್ಟ ರೂಪದ ಗಡಿ ವಿಂಗಡನೆ ಮತ್ತು ಅದನ್ನು ಸಾಧಿಸುವಂತ ಏಕಕೇಂದ್ರೀತ ಪರಿಪ್ರೇಕ್ಷಣೆ ಆಗ ಇದ್ದಂತಿಲ್ಲ. ಐತಿಹಾಸಿಕ ಸಂದರ್ಭಗಳಲ್ಲಿ ರಾಜಾಡಳಿತವಿದ್ದು ಒಬ್ಬ ರಾಜ ಪ್ರಬಲನಾಗಿದ್ದಷ್ಟು ಆತನ ಸಾಮ್ರಾಜ್ಯ ವಿಸ್ತಾರವಾದ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತಿತ್ತು. ದುರ್ಬಲ ರಾಜರನ್ನು ಯುದ್ಧ ಮುಖೇನ ಸೋಲಿಸಿ ಆ ರಾಜನ ಕೈಕೆಳಗಿದ್ದ ಭೂಭಾಗವನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಆಡಳಿತಾತ್ಮಕ ಅನುಕೂಲದ ಹಿನ್ನೆಲೆಯಲ್ಲಿ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಎಂಬಂತೆ ನಿರ್ದಿಷ್ಟ ಅರ್ಥದಲ್ಲಿ ಪ್ರದೇಶ ಸೂಚಕ ಪರಿಭಾಷೆ ಆಗಿನ ಕಾಲದಲ್ಲಿ ರೂಢಿಯಲ್ಲಿ ಇರಲಿಲ್ಲ. ಭಾಷಾವಾರು ನೆಲೆಯಲ್ಲಿ ರಾಜ್ಯಗಳನ್ನು ಕಟ್ಟುವ ಮತ್ತು ಆ ಮೂಲಕ ಪ್ರಾದೇಶಿಕ ಗೊತ್ತುವಳಿಯನ್ನು ನಿರ್ಣಯಿಸುವ ಸೂತ್ರ ತೀರಾ ಇತ್ತೀಚಿನದು. ಹಾಗಾಗಿ ಪುರಾಣ ಪ್ರಭಾವದ ಸಾಮಾನ್ಯ ಅರ್ಥದಲ್ಲಿ ದೇಶ ಎಂಬ ಪದವನ್ನು ತುಳುನಾಡಿಗೆ ಸೀಮಿತವಾಗಿ ಬಳಸಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯನ್ನು ಕೊಡಗು ದೇಶ ಎಂದು ಗುರುತಿಸಲಾಗುವ ಅಂಶವನ್ನು ಗಮನಿಸಿದರೆ ಇಲ್ಲಿ ಬಳಕೆಯಾಗುವ ‘ದೇಸ’ (ದೇಶ) ಎಂಬ ಪದ, ಪ್ರಾದೇಶಿಕತೆಯನ್ನು ಮೀರುವಂಥದ್ದಲ್ಲ. ಪ್ರಾದೇಶಿಕ ತಳ ರಚನೆಗೆ ನಾಮಸ್ವರೂಪವಾಗಿ ನಿರ್ದಿಷ್ಟವಾದ ಒಂದು ಪದ ಬಳಕೆಯಲ್ಲಿ ಇರದಿದ್ದ ಕಾಲಘಟ್ಟದಲ್ಲಿ ಪುರಾಣ ಪ್ರಭಾವಗಳಿಂದಾಗಿ ಹೀಗೆ ದೇಶ ಎಂಬ ಪದವನ್ನು ಬಳಸಿಕೊಳ್ಳಲಾಗಿದೆ ಅಷ್ಟೆ.

ಮಿತ್ಯನಾರಾಯಣ ಕತೆ ಮತ್ತು ಸತೀ ಕಮಲೆ ಪ್ರಕಟವಾದ ಮೇಲೆ, ತುಳು ಭಾಷೆಯಲ್ಲಿ ಕಾದಂಬರಿ ಎನ್ನುವ ಕಥನ ಕಣ್ಮರೆಯಾಗಿದೆ. ಹೆಚ್ಚು ಕಡಿಮೆ ಸುಮಾರು ಅರುವತ್ತು ವರ್ಷಗಳಷ್ಟು ಕಾಲದ ಸುದೀರ್ಘ ಮೌನವಿದೆ. ಈ ಅವಧಿಯಲ್ಲಿ ಇತರೆಲ್ಲ ಪ್ರಾಂತ್ಯಗಳು ಆಧುನಿಕತೆಯ ಸಮ್ಮೋಹನಕ್ಕೆ ಒಳಗಾದಂತೆ ತುಳುನಾಡು ಕೂಡಾ ಒಳಗಾಗಿದೆ. ಕರಾವಳಿ ಕರ್ನಾಟಕದ ಬಹುಮುಖ್ಯ ಪ್ರದೇಶವಾದುದರಿಂದ ಬಹಳ ಬಿರುಸಿನಿಂದಲೇ ಆಧುನೀಕರಣದ ತೆಕ್ಕೆಯೊಳಗೆ ಸರಿದುಹೋಗಿದೆ. ಸಂಸ್ಕೃತಿ ಮತ್ತು ಜನಜೀವನವು ಕೃತಿ ಸ್ವರೂಪದಲ್ಲಿ ಬರಹದ ಮೂಲಕ ದಾಖಲಾಗುವ ಉದಾರವಾದೀ ಸಾಂಸ್ಕೃತಿಕ ಧೋರಣೆಯನ್ನು ಮೈಗೂಡಿಸಿಕೊಂಡಿದೆ. ಆಧುನಿಕತೆಯ ಜೊತೆಗಿನ ಮುಖಾಮುಖಿ ಸೃಷ್ಟಿಸಿದ ಆತಂಕ-ತಲ್ಲಣಗಳು, ಮೂಲದೆಡೆಗೆ ಹಿಂತಿರುಗಿ ನೋಡುವಂತೆ ಪ್ರೇರೇಪಿಸಿವೆ. ಆದರೆ ತುಳು ಭಾಷಾ ಬರವಣಿಗೆಯ ವಿಚಾರದಲ್ಲಿ ಮಾತ್ರ ತೀರಾ ಭಿನ್ನವಾದ ಚಿತ್ರಣ ಕಂಡುಬರುತ್ತದೆ. ವಿಪುಲವಾದ ಬರವಣಿಗೆ ಕಂಡುಬರದೆ ಹೋಗಿದೆ. ಅವಕಾಶ ವಂಚಿತ ಭಾಷೆಯಂತೆ ಭಾಸವಾಗುತ್ತದೆ. ಮಾತೃಭಾಷಾ ತುಳುವರು, ತುಳುನಾಡಿನಲ್ಲಿ ವಾಸ್ತವ್ಯವಿದ್ದು ತುಳು ಭಾಷೆಯನ್ನು ಆಡುಮಾತಾಗಿ ಬಲ್ಲವರು, ತುಳು ಭಾಷೆಯಲ್ಲಿ ಬರೆಯುವ ಸಾಮರ್ಥ್ಯವಿದ್ದರೂ ಕನ್ನಡ ಭಾಷೆಯಲ್ಲಿ ಬರೆದಿರುವವರು ಹೀಗೆ ಎಲ್ಲ ವರ್ಗಗಳ ಜನತೆಯೂ ತುಳುವಿನಲ್ಲಿ ಬರೆಯಬಹುದಾದ ಕುರಿತು ಗಂಭೀರವಾಗಿ ಯೋಚಿಸಿದಂತಿಲ್ಲ. ತುಳುಭಾಷಾ ಪ್ರಾಂತ್ಯವಾದ ತುಳುನಾಡನ್ನು ಅರ್ಥಾತ್‌ದಕ್ಷಿಣ ಕನ್ನಡ ಜಿಲ್ಲೆಯನ್ನು ತನ್ನ ರಾಜ್ಯ ವ್ಯಾಪ್ತಿಯೊಳಗೆ ಹೊಂದಿರುವ ಕರ್ನಾಟಕ ಮತ್ತು ಈ ರಾಜ್ಯದ ಭಾಷೆಯಾದ ಕನ್ನಡದಲ್ಲಿ ವಿಪುಲವಾದ ಸಾಹಿತ್ಯ ಸೃಷ್ಟಿಯಾಗಿದೆ. ಆಧುನಿಕವಾದ ಪರಿಚಯ ಪಡೆದ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬಹುದೊಡ್ಡ ಸಾಧನೆ ಮೆರೆಯಲು ಸಾಧ್ಯವಾಗಿದೆ. ಶ್ರೇಷ್ಠ ದರ್ಜೆಯ ಬರವಣಿಗೆಗಳು ಪ್ರಕಟವಾಗಿವೆ. ಆದರೆ ತುಳುಭಾಷೆಯಲ್ಲಿ ಈ ಕುರಿತು ದೀರ್ಘ ಮೌನವಿದೆ. ಅದರಲ್ಲೂ ಕಾದಂಬರಿಯಂಥ ಆಧುನಿಕ ಗದ್ಯ ಕಥನ ತುಳುಭಾಷೆಯಲ್ಲಿ ಸಾಧ್ಯವಾಗದೆ ಹೋಗಿದೆ. ಮಿತ್ಯನಾರಾಯಣ ಕತೆ ಮತ್ತು ಸತೀ ಕಮಲೆಗೆ ಬರಹಗಾರರನ್ನು ಉತ್ತೇಜಿಸಿ ತನ್ನ ಎಡೆಗೆ ಸೆಳೆದುಕೊಳ್ಳಲು ಸಾಧ್ಯವಾಗದೆ ಹೋಗಿದೆ. ಓದುಗ ವರ್ಗವನ್ನು ನಿರ್ಮಿಸಿ ತುಳು ಓದುವ ಭಾಷೆಯಾಗಿ ಜನಪ್ರಿಯವಾಗಿಸಲು ಸಾಧ್ಯವಾಗಲಿಲ್ಲ. ಆಕ್ಷರಿಕವಾಗಿ ತುಳುಭಾಷೆ ಕನ್ನಡ ಲಿಪಿಯನ್ನು ಸ್ವೀಕರಿಸಿಕೊಂಡರೂ ಪ್ರಯೋಗಶೀಲತೆಗೆ ಎರವಾದಂಥ ಅಂಶ ಹಲವು ಸಂದೇಹಗಳಿಗೆ ಎಡೆ ಮಾಡಿಕೊಡುತ್ತದೆ. ಮೌಖಿಕ ನೆಲೆಯ ತುಳುಭಾಷೆ ಲಿಖಿತ ನೆಲೆಯಲ್ಲಿ ದಾಖಲಾತಿಯ ಅವಕಾಶಗಳಿಗೆ ಒಳಗಾದರೂ ಅದು ಸಾಧಿತವಾಗದಂತಾದುದು, ಬರವಣಿಗೆಯ ಸಂಸ್ಕೃತಿಯನ್ನು ಸಮರ್ಥವಾಗಿ ನಿಭಾಯಿಸಲಾಗದೆ ಉಳಿದದ್ದು, ಓದುಗರ ಕಣ್ಣನ್ನು ತುಳು ಭಾಷೆಯ ಕನ್ನಡ ಲಿಪಿ ಸೆಳೆಯಲಾರದೆ ಅರ್ಥದ ಅಂತರಾತ್ಮ ತಟ್ಟಿದೆ, ಭಾವಕೋಶವನ್ನು ಮುಟ್ಟದೆ ಹೋದುದು ವಿಸ್ಮಯಕರವಾಗಿದೆ. ದೇಶೀಯ ಮತ್ತು ವಿದೇಶೀಯ ಸಾಂಸ್ಕೃತಿಕ, ಸಾಹಿತ್ಯದ ಆಕ್ರಮಣಕಾರಿ ಮನೋಭಾವದೆದುರು ತಳೆದ ಧೀರ್ಘ ಮೌನಕ್ಕೆ ತುಳು ಕಾದಂಬರಿ ಶರಣಾದಂತದೆ. ಜೀವನ ಪದ್ಧತಿ ಮತ್ತು ಸಾಂಸ್ಕೃತಿಕವಾಗಿ ಅನನ್ಯವಾಗುವಂಥ ಬಹುಮುಖತೆಗಳನ್ನು ಏಕರೂಪಾತ್ಮಕವಾಗಿ ಪರಿಭಾವಿಸುವಂಥ ಜರೂರನ್ನು ಅಧಿಕಾರಾತ್ಮಕವಾಗಿ ಹೇರಲಾಗುತ್ತಿರುವಂಥ ಈ ಕಾಲದಲ್ಲಿ ತುಳು ಮತ್ತು ತುಳುವಿನಂಥ ಪ್ರಾದೇಶಿಕ ಸೀಮಿತ ವ್ಯಾಪ್ತಿಯೊಳಗಡೆ ಚಾಲ್ತಿಯಲ್ಲಿರುವಂಥ ಎಲ್ಲ ಭಾಷೆಗಳೂ ಅತಂತ್ರ ಸ್ಥಿತಿಗೆ ಒಳಗಾಗಿವೆ. ಸಾಂಸ್ಕೃತಿಕ ಮತ್ತ ಸಾಹಿತ್ಯದ ವರ್ತಮಾನದಲ್ಲಿ ಎದುರಾಗುತ್ತಿರುವ ಅಧಿಕಾರಸ್ತ ಏಕರೂಪಾತ್ಮಾಕ ವಿಶ್ವಸ್ತ ದೇಶಭಾಷೆಯ ಒಂದು ಸ್ಥಾನಮಾನ ದಕ್ಕದೆ ಹೋದುದರಿಂದ ಕಥನಾಭಿವ್ಯಕ್ತಿ ಸಾಧ್ಯವಾಗದೆ ಉಳಿದಿದೆ. ಪ್ರಧಾನವಾಗಿ ತುಳು ಭಾಷೆಯಲ್ಲಿ ಯೋಚನೆ ಮಾಡಬಲ್ಲಂಥ, ಬರೆಯಬಲ್ಲಂಥ ಬರಹಗಾರ ವರ್ಗ, ಪಂಡಿತವರ್ಗ ಪ್ರಯೋಗಾತ್ಮಕ ಪ್ರಯತ್ನದತ್ತಲೂ ತೆರೆದುಕೊಳ್ಳಲಿಲ್ಲ. ಅಧಿಕಾರ, ಶಿಕ್ಷಣ ಮತ್ತು ಸಾರ್ವಜನಿಕ ರಂಗಗಳಲ್ಲಿ ಯಾಜಮಾನ್ಯ ಇಲ್ಲವಾದುದು ಪ್ರತ್ಯಕ್ಷ-ಪರೋಕ್ಷವಾಗಿ ಹಿಂದುಳಿಯುವಂತೆ ಮಾಡಿದೆ. ಬರವಣಿಗೆಗೆ ಪ್ರೋತ್ಸಾಹಕವಾಗಬಲ್ಲ ಓದುಗ ವರ್ಗ ಹೊಸ ವಿಚಾರಗಳಿಗೆ ಭದ್ರವಾದ ತಳರಚನೆ, ಭಾಷಾಭಿಮಾನವನ್ನು ಒಗ್ಗೂಡಿಸಬಲ್ಲ ಸಂಘ ಸಂಸ್ಥೆಗಳು, ಪ್ರಕಾಶನ ಕೇಂದ್ರಗಳು ದಕ್ಕದೆ ಉಳಿಯಿತು. ಇರುವ ಓದುಗ ವರ್ಗ ಪಡೆದ ಅರಿವು, ಕನ್ನಡದ ಜೊತೆಗೆ ಸಾಮರಸ್ಯ ಬೆಳೆಸುವಂತೆ ಪ್ರಚೋದಿಸದೆ ಆಕ್ಷರಿಕವಾಗಿ ಅಪರಿಚಿತ ಭಾವ ಕಾಡಿದಂತಾಯಿತು. ತುಳು ಭಾಷೆ ತನ್ನ ಒಡಲಲ್ಲಿ ಒಂದು ವಿಮರ್ಶಾತ್ಮಕ ಏಕಸ್ವಾಮ್ಯವನ್ನು ಸಾಧಿಸಲಾರದೆ, ಜಾತಿ ಮತ್ತು ಪ್ರದೇಶವಾರು ಭಿನ್ನತೆಯನ್ನು ಆಸ್ಮಿತೆಯಾಗಿಸಿಕೊಳ್ಳಲೂ ಸಾಧ್ಯವಾಗದಂಥ ಅಸಹಾಯ ಪರಿಸ್ಥಿತಿಗೆ ಪಕ್ಕಾಯಿತು. ಎಸ್‌. ಯು. ಪಣಿಯಾಡಿಯವರು ‘ತುಳುವ ಸಾಹಿತ್ಯ ಮಾಲೆ’ಯನ್ನು ಸ್ಥಾಪಿಸಿ ತುಳು ಬರವಣಿಗೆಗೆ ಪ್ರೋತ್ಸಾಹ ಕಲ್ಪಿಸುವ ಪ್ರಯತ್ನ ಮಾಡಿದರಾದರೂ ಈ ‘ತುಳುವ ಸಾಹಿತ್ಯ ಮಾಲೆ’ ಬಹುಕಾಲ ಬಾಳಿ ಬದುಕದೆ ಸ್ಥಗಿತವೂ ಆಯಿತು. ಅದರ ಪ್ರಕಟಣೆಗಳಿಗೆ ತುಳುವರಿಂದ ಪ್ರೋತ್ಸಾಹವೂ ಲಭಿಸದೆ ಹೋಯಿತು. ಈ ದೀರ್ಘ ಮೌನಕ್ಕೆ ಕಾರಣವನ್ನು ನಿರೂಪಿಸುವಂತೆ, ಬಿ. ಎ. ವಿವೇಕ ರೈಯವರು “ತುಳುವರು ತುಳುವನ್ನು ಓದುವುದಕ್ಕಿಂತ ಹೆಚ್ಚಾಗಿ ತುಳುವನ್ನು ಕೇಳುವಲ್ಲಿ, ತುಳುವನ್ನು ಮಾತನಾಡುವುದಕ್ಕೆ ಮರುಳಾಗಿ ಬಂದವರು. ಹೀಗಾಗಿ ಈಗಲೂ ತುಳು ನಾಟಕ, ಯಕ್ಷಗಾನಗಳು ತುಳುವರ ಮನಸ್ಸನ್ನು ಒಡಲನ್ನು ಹಿಡಿದುಕೊಂಡಂತೆ ಕಾದಂಬರಿಯಂಥ ಓದುವ ಬರವಣಿಗೆಗಳು ತುಳುವರನ್ನು ಸೆಳೆದುಕೊಳ್ಳಲು ಸಾಧ್ಯವಾಗಲಿಲ್ಲ. ಕನ್ನಡ ಪೇಪರುಗಳನ್ನು, ಕನ್ನಡ ಪುಸ್ತಕಗಳನ್ನು ಓದಿ ಹೊಳಪಾದ ಕಣ್ಣುಗಳಿಗೆ, ಮನಸ್ಸುಗಳಿಗೆ ತುಳು ಭಾಷೆಯನ್ನು ಓದುವ ಮಾನಸಿಕ ಸಿದ್ಧತೆ, ಇನ್ನೂ ಸರಿಯಾಗಿ ಆಗದೆ ಉಳಿದಿದೆ” (ನಾರ್ಣಜ್ಜೆರ್‌ ಸುದೆ ತಿರ್ಗಾಯೆರ್‌, ಮುನ್ನುಡಿ) ಎನ್ನುತ್ತಾರೆ.

ಕಾದಂಬರಿ ಮತ್ತು ಅಂಥ ಮಹಾಕಥನಗಳ ಹೊರತಾಗಿ ನಾಟಕ, ಯಕ್ಷಗಾನಗಳಂಥ ಕೇಳುವ ಮತ್ತು ನೋಡುವ ಸಾಧ್ಯತೆ ಪ್ರಧಾನವಾಗಿರುವ ಪ್ರದರ್ಶಕ ಮಾಧ್ಯಮದ ಸಾಹಿತ್ಯ ತಕ್ಕಮಟ್ಟಿಗೆ ವಿಪುವಲಾಗಿ ಪ್ರಕಟವಾಗಿವೆ. ತುಳು ಭಾಷೆಯಲ್ಲಿ ಕಾದಂಬರಿಗಳನ್ನು ಜನಪ್ರಿಯಗೊಳಿಸುವ, ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಡುಪಿ ತುಳುಕೂಟದವರು ಪಣಿಯಾಡಿಯವರ ಹೆಸರಿನಲ್ಲಿ ತುಳು ಕಾದಂಬರಿ ಸ್ಪರ್ಧೆಯನ್ನು ನಡೆಸುತ್ತಿರುವುದು ಗಮನಾರ್ಹವಾದುದು. ತುಳು ಭಾಷೆಯಲ್ಲಿ ಮಹಾಕಥನಗಳ ಕೊರತೆಯನ್ನು ಕಳೆಯುವ ಸ್ತುತ್ಯರ್ಹ ಪ್ರಯತ್ನವಿದು. ತುಳುವ ಭಾಷೆ ಸಾಹಿತ್ಯ ಸಂಸ್ಕತಿಯ ಅಭಿವೃದ್ಧಿಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ೧೯೯೪ರಲ್ಲಿ ಕರ್ನಾಟಕ ಸರಕಾರ ಆರಂಭಿಸಿದೆ. ಅನಂತರ ತುಳು ಭಾಷಾ ಬರವಣಿಗೆ ಸಾಂಸ್ಥಿಕ ರೂಪ ಪಡೆದುಕೊಂಡು ವಿಶ್ವಾತ್ಮಕವಾಗಿ ಆತ್ಮವಿಶ್ವಾಸದಿಂದ ಮುಂದುವರಿಯುವಂತಿದೆ. ಈ ನಡುವೆ ಕೆದಂಬಾಡಿ ಜತ್ತಪ್ಪ ರೈಯವರು ೧೯೮೩ರಲ್ಲಿ ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯನ್ನು ಹೆಸರಿನಲ್ಲಿ ಮತ್ತು ೧೯೮೪ರಲ್ಲಿ ನಿರಂಜನರ ‘ಚಿರಸ್ಮರಣೆ’ ಕಾದಂಬರಿಯನ್ನು ‘ಮದಪ್ಪಂದಿನೆಂಪು’ ಎಂದು ತುಳುವಿಗೆ ಅನುವಾದಿಸಿ ಪ್ರಕಟಿಸಿರುತ್ತಾರೆ. ಮೂಲಭೂತವಾಗಿ ಕನ್ನಡ ಭಾಷೆಯಲ್ಲಿರುವ ಈ ಕಾದಂಬರಿಗಳು ತುಳುನಾಡಿನ ಮಣ್ಣಿನ ಪರಿಮಳದಿಂದ ಅಚ್ಚು ಪಡೆದಿರುವಂಥವು. ಈ ಕಾದಂಬರಿಗಳ ಈ ವಿಶಿಷ್ಟತೆಗಳಿಂದಾಗಿಯೇ ಕೆದಂಬಾಡಿಯವರು ತುಳುವಿನಲ್ಲಿ ಇವುಗಳನ್ನು ಓದುವ ಅವಕಾಶ ಕಲ್ಪಿಸಿದರು.

ಕೆದಂಬಾಡಿಯವರ ತುಳುಭಾಷೆಯ ಬಳಕೆ ತುಳುವ ಸಂಸ್ಕೃತಿಯ ವಿಶಿಷ್ಟ ದಾಖಲೆಯಂತೆ ಛಾಪು ಒತ್ತುವಂಥದ್ದು. ತುಳು ಭಾಷೆಯೊಂದಿಗೆ ಅಂತಸ್ತವಾಗಿರುವ ಭಾಷಿಕ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವೆಂಬಂತೆ ಕೆದಂಬಾಡಿಯವರ ತುಳುಭಾಷಾ ಬಳಕೆ. ಇದೆ ವರ್ತಮಾನದ ಸಾಮಾಜಿಕ ಸನ್ನಿವೇಶ ಆಧುನೀಕರಣಕ್ಕೆ ಒಳಗಾಗುತ್ತಾ ವಸಾಹತುಶಾಹಿತ್ತ್ವದ ಜೊತೆಗೆ ಮುಖಾಮುಖಿಯಾಗುತ್ತಾ ತನ್ನ ಒಡಲ ಸಾಂಸ್ಕೃತಿಕ ಅನನ್ಯತೆಗಳನ್ನು ಕಳೆದುಕೊಂಡು ಬಿಡುವಂಥ ಬಿಕ್ಕಟ್ಟಿನ ಸನ್ನಿವೇಶದಲ್ಲಿ, ಜಾನಪದೀಯ ಹಿನ್ನೆಲೆಯ ಮೂಲಾರ್ಥದ ಪದಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾಗಿರುವ ತುಡಿತವನ್ನು ಈ ಮೂಲಕ ಪ್ರಸ್ತಾವಿಸುತ್ತಾರೆ. ಜೊತೆಗೆ ಈ ಪ್ರಯತ್ನವೂ ತುಳು ಮತ್ತು ಕನ್ನಡ ಸಾರಸ್ಯಕ್ಕೆ ಒಂದು ಮುನ್ನುಡಿಯ ಸ್ವರೂಪದ್ದೂ ಆಗುವಂತಿದೆ. ಅನ್ಯಭಾಷಾ ಪದ ಸ್ವೀಕಾರಕ್ಕಿಂತ ಪೂರ್ವದಲ್ಲಿ ತುಳು ಭಾಷೆ ದಕ್ಕಿಸಿಕೊಂಡ ಭಾಷಾ ಸೊಗಡು, ಶಬ್ದ ಸಂಪತ್ತು, ಭಾಷಾ ಲಾಲಿತ್ಯವನ್ನು ಈ ಕೃತಿಗಳಲ್ಲಿ ಕೆದಂಬಾಡಿಯವರು ದಾಖಲಿಸಿದ್ದಾರೆ. ಈ ತುವಾಯ ಸುಮಾರು ಹತ್ತು ವರ್ಷ ತುಳುವಿನಲ್ಲಿ ಕಾದಂಬರಿಗಳ ಅನುವಾದವಾಗಲೀ ಸ್ವತಂತ್ರ ಕಾದಂಬರಿಗಳ ಸೃಷ್ಟಿಯಾಗಲೀ ಪ್ರಕಟವಾಗಿಲ್ಲ.

ಅನಂತರ ೧೯೯೪ರಲ್ಲಿ ಮಹಾಲಿಂಗ ಭಟ್ಟರು ತುಳು ಭಾಷೆಯಲ್ಲಿ ಕಾದಂಬರಿ ಬರೆದು ಪ್ರಕಟಿಸಿ ದೀರ್ಘ ನಿದ್ರೆಯಿಂದ ಎಚ್ಚರಿಸಿದರು. ಈ ತರುವಾಯ ಕೆಲವಾರು ಕಾದಂಬರಿಗಳು ತುಳುಭಾಷೆಯಲ್ಲಿ ಪ್ರಕಟವಾದವು. ‘ನಾರ್ಣಜ್ಜೆರ್‌ಸುದೆ ತಿರ್ಗಾಯೆರ್’ ಎನ್ನುವುದು ಮಹಾಲಿಂಗ ಭಟ್ಟರು ತುಳುಭಾಷೆಯಲ್ಲಿ ಬರೆದ ಕಾದಂಬರಿ. ತುಳುಭಾಷೆಯ ಹಿನ್ನೆಲೆಯಲ್ಲಿ ಇದು ಮಹತ್ತ್ವದ ಕೃತಿ. ಇದರ ಪ್ರಧಾನ ಪಾತ್ರ ನಾರ್ಣಪ್ಪಯ್ಯ. ಅಪಾರ ಕರ್ತೃತ್ವ ಶಕ್ತಿ ವ್ಯಕ್ತಿತ್ವವನ್ನು ಹೊಂದಿದವರು ಕಲ್ಪನೆಗೆ ಬಂದುದನ್ನು ಎಷ್ಟೇ ಕಷ್ಟವಾದರೂ ಮಾಡಿ ಜಯಿಸುವ ಕ್ರಿಯಾಶೀಲ, ಪರಿಶ್ರಮ ಜೀವಿ – ಸಾಹಸಿ ವ್ಯಕ್ತಿ. ಗುಡ್ಡವನ್ನು ಕಡಿದು ಗದ್ದೆ ಮಾಡಿ ಬೆಳೆ ಬೆಳೆದು ಫಲ ಉಂಡ ವ್ಯಕ್ತಿ. ವೃದ್ಧಾಪ್ಯ ಸಮೀಪಿಸುತ್ತಿದ್ದರೂ ಹೊಳೆ ಹರಿವ ದಿಕ್ಕನ್ನು ಬದಲಿಸುವ, ಆ ಮೂಲಕ ಪ್ರಕೃತಿ ನಿಯಮವನ್ನು ಬದಲಿಸಲಿಚ್ಛಿಸಿದ ಸಾಹಸಿ. ಸೀತಾಪಹರಣ ಯಕ್ಷಗಾನ ಬಯಲಾಟದಲ್ಲಿ ಪುಷ್ಟಕ ವಿಮಾನದಲ್ಲಿ ರಾವಣ ಸೀತೆಯನ್ನು ಕದ್ದುಕೊಂಡು ಹೋಗುವಂಥ ದೃಶ್ಯವನ್ನು ವಸ್ತುಶಃ ಪ್ರಯೋಗಿಸಿ ತೋರಿಸಿದವರು. ಹಿರಣ್ಯಾಕ್ಷ ಭೂಮಿಯನ್ನು ಅಪಹರಿಸಿದಾಗ ವರಾಹ ರೂಪದಲ್ಲಿ ವಿಷ್ಣು ಭೂಮಿಯನ್ನು ಎತ್ತಿಕೊಂಡು ಬರುವಂಥ ಸನ್ನಿವೇಶವನ್ನು ರಂಗಭೂಮಿಯಲ್ಲಿಯೇ ಸುರಂಗ ನಿರ್ಮಿಸಿ ದೃಶ್ಯೀಕರಿಸಿದವರು. ಅಬ್ಬಿಯ ನೀರನ್ನು ದೂರದ ಗದ್ದೆಗೆ ಬಿಡುವ ತಂತ್ರದಲ್ಲಿಯೂ ಯಶಶ್ವಿಯಾದ ವ್ಯಕ್ತಿ. ತನ್ನ ಎಲ್ಲ ಇಚ್ಛಾಶಕ್ತಿಯನ್ನು ಎರಕ ಹೊಯ್ದಂತೆ ಒಂದಿಲ್ಲೊಂದು ಕ್ರಿಯಾಶೀಲತೆಯಲ್ಲಿ ತೊಡಗುತ್ತಿದ್ದುದರಿಂದ ಸುತ್ತಮುತ್ತಲ ಜನತೆಯಿಂದ ಅಪಹಾಸ್ಯಕ್ಕೆ ಒಳಗಾಗುತ್ತಿದ್ದರೂ ಅವ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಪ್ರಯೋಗಶೀಲರಾಗಿ ಬದುಕಿದವರು. ಕವಲಾಗಿ ಗುಡ್ಡಕ್ಕೆ ಸುತ್ತ ಹಾಕಿಕೊಂಡು ಹರಿಯುವ ನದಿಯನ್ನು, ಈ ನದಿಯ ದಿಕ್ಕನ್ನು ಬದಲಿಸಲು ಹೊರಟವರು.

ಖಾಸಗಿ ಬದುಕಿನಲ್ಲಿಯೂ ಕ್ರಾಂತಿಕಾರಿಯಂತೆ ನಿರ್ಧಾರ ತೆಗೆದು ಕೊಂಡವರು. ಹುಟ್ಟಿನಿಂದ ಬ್ರಾಹ್ಮಣರಾದರೂ ಬ್ರಾಹ್ಮಣ್ಯಕ್ಕೆ ಕಟ್ಟು ಬೀಳದೆ ಮಾನವೀಯತೆ ಮೆರೆದವರು. ಮನೆಯ ಅಡುಗೆಯ ಕೆಲಸದ ಆಳನ್ನಾಗಿ ಘಟ್ಟದ ಗೌಡನೊಬ್ಬನನ್ನು ನೇಮಿಸಿಕೊಂಡವರು. ಅನ್ಯ ಜಾತಿಯ ಸ್ತ್ರೀಯನ್ನು ಮದುವೆ ಆಗಿ ಸ್ವಾಭಿಮಾನದ ಬದುಕು ಕಂಡವರು. ಅಪರೂಪಕ್ಕೆ ಬರುಮ ಪೂಜಾರಿಯಿಂದ ಶೇಂದಿ ತರಿಸಿ ಕುಡಿಯುವ ಜೀವನ ಪ್ರೀತಿಯ ಕುತೂಹಲಕರ ವ್ಯಕ್ತಿಯಾಗಿದ್ದವರು. ಹೀಗೆ ನಾರ್ಣಪ್ಪನವರ ವ್ಯಕ್ತಿತ್ವದ ಬಹುಮುಖಗಳು ಕಾದಂಬರಿಯುದ್ದಕ್ಕೂ ಅನಾವರಣಗೊಳ್ಳುತ್ತಾ ಒಂದಿಲ್ಲೊಂದು ನೆಲೆಗಳಲ್ಲಿ ಕುತೂಹಲ ಕೆರಳಿಸುತ್ತಿರುತ್ತವೆ. ಸಾಂದರ್ಭಿಕವಾಗಿ ತುಳುನಾಡಿನ ಪ್ರಾದೇಶಿಕ ಸಂಸ್ಕೃತಿಯ ವಿಶಿಷ್ಟ ನಡಾವಳಿಗಳು ಪ್ರಕಟವಾಗುತ್ತವೆ. ಪ್ರಕೃತಿಯ ಸಹಜ ಚಲನಶೀಲತೆಗೆ ವಿರುದ್ಧವೆನ್ನುವಂತೆ ನಾರ್ಣಪ್ಪಯ್ಯ ತೊಡಗಿಸಿಕೊಳ್ಳುವ ಕ್ರಿಯಾಶೀಲ ಪ್ರವೃತ್ತಿಗಳಿಗೆ ಸಮಾಜ ವ್ಯವಸ್ಥೆಯ ಸಹಮತ ಇಲ್ಲ ಎಂಬ ಅಂಶ ಮಠದ ಸ್ವಾಮಿ, ಭೂತದ ನೇಮ, ಪುರೋಹಿತ ಹಾಗೂ ಜನರ ಗುಂಪಿನ ಸಂಭಾಷಣೆಗಳಲ್ಲಿ ಪ್ರಕಟವಾಗುತ್ತವೆ.

ನಿರೂಪಣೆಯಲ್ಲಿ ಕಾದಂಬರಿಯುದ್ದಕ್ಕೂ ಪ್ರಕಟವಾಗುವ ಹಾಸ್ಯ ಚಮತ್ಕಾರ, ಕುತೂಹಲಕರ ವಿವರಣೆಗಳು ತುಳು ಭಾಷೆಯಲ್ಲಿ ಲಿಖಿತ ರೂಪದಲ್ಲಿ ಓದುವ ಒತ್ತಡವನ್ನು, ಪ್ರೀತಿಯನ್ನು ಉಂಟು ಮಾಡುವಂತಿದೆ. ಗುಡ್ಡ ಕಡಿದು ನದಿ ಹರಿವನ್ನು ಬದಲಿಸಿ ಹೊಸ ದಾರಿ ಕಲ್ಪಸಿ ಕೊಟ್ಟ ಕಾರಣ ಮೂರು ದಿವಸಗಳ ಕಾಲ ಇಲ್ಲಿ ನೀರು ಹರಿಯುತ್ತದೆ. ಹೊಳೆ ಹರಿವ ದಿಕ್ಕು ದಾರಿ ಬದಲಾದರೆ, ಅದರಿಂದಾಗಿ ನೀರಿಲ್ಲದಾಗುವ ಸಮಸ್ಯೆಯ ಕುರಿತು ಪೋಣಿಯ ಮಗಳು ಮಾತನಾಡುತ್ತಾಳೆ. ಬಡವರಿಗೆ ಉಂಟಾಗಬಹುದಾದ ಹಾನಿ, ಸಮಸ್ಯೆಗಳ ಕುರಿತು ಅರಿವು ಮೂಡಿಸುವಂಥ ಮಾತು ಈ ಮೂಲಕ ವ್ಯಕ್ತವಾಗುತ್ತದೆ. ಸೋಲು – ಗೆಲುವು ಎಂಬ ತರ್ಕದ ಮೂಲಕ ಬದುಕನ್ನು ಪರಿಭಾವಿಸದಿದ್ದ ನಾರ್ಣಪ್ಪಯ್ಯ ಯಾರಿಗೂ ತೊಂದರೆ ನೀಡುವಂಥ ಮನೋಭಾವದವರಲ್ಲ ಎನ್ನುವುದೂ ವ್ಯಕ್ತವಾಗುತ್ತದೆ. ಹೊಳೆ ಹರಿವ ಪಥ ಬದಲಿಸುವ ಯೋಜನೆ ಕ್ರಿಯಾಶೀಲತೆಯ ಕುರುಹಾಗಿದ್ದರೂ ಗುಡ್ಡ ಜರಿದು ಹೊಳೆಯ ಹರಿವು ಯಥಾಸ್ಥಿಯದ್ದಾಗುತ್ತದೆ. ಮೂರು ದಿವಸಗಳೊಳಗೇ ಹೀಗಾದುದರಿಂದ ತನ್ನ ಸಾಹಸ ಕ್ಷೇತ್ರ ಕುದ್ರೆಮೂಲೆಯನ್ನು ಬಿಟ್ಟು ಸುಳ್ಯದ ಕಡೆಗೆ ಹೋದುದನ್ನು ನಿರೂಪಿಸಲಾಗಿದೆ. ಇದು ಪ್ರಕೃತಿಯ ಸಹಜ ವ್ಯಾಪಾರದ ಎದುರು ಮಾನವನ ಕರ್ತೃತ್ವಶಕ್ತಿ ಏನಿದ್ದರೂ ಆತ್ಯಂತಿಕವಾಗಿ ಗೆಲುವನ್ನು ಪಡೆಯಲಾರದು ಎಂಬ ಇಂಗಿತವನ್ನು ವ್ಯಕ್ತಪಡಿಸುವಂತಿದೆ. ಆದರೆ ಮನುಷ್ಯನ ಜೀವನ ಕ್ರಮವೇ ಪ್ರಕೃತಿಯನ್ನು ಪರಿಪೂರ್ಣವಾಗಿ ಪ್ರಕೃತಿಯಾಗಿಯೇ ಸ್ವೀಕರಿಸುವಂಥದ್ದಲ್ಲ. ಬುದ್ಧಿಪೂರ್ವಕವಾಗಿ ಪ್ರಕೃತಿಯನ್ನು ಸಂಸ್ಕರಿಸಿ ತನಗೆ ಅನುಕೂಲಕರವಾಗಿಸಿಕೊಳ್ಳುವಂಥದ್ದು, ಸಂಸ್ಕೃತಿಯಾಗಿಸುವಂಥದ್ದು.

ಈ ಕಾದಂಬರಿಯಲ್ಲಿ ಬರುವಂಥ ಬಹುತೇಕ ಎಲ್ಲ ಸನ್ನಿವೇಶಗಳು ಎಲ್ಲೂ ಮೆಲೋಡ್ರಾಮಾಟಿಕ್‌ (Melo dramatic) ಆಗದಂಥ ಕೌಶಲಯುತ ನಿರೂಪಣೆಯಾಗಿದೆ. ಈ ಕೃತಿಗೆ ಮುನ್ನುಡಿ ಬರೆಯುತ್ತಾ ಬಿ.ಎ. ವಿವೇಕ ರೈಯವರು “ತುಳು ಸಾಹಿತ್ಯದಲ್ಲಿ ಸಾಹಿತ್ಯ ಲ್ಲ ಎಂದುಕೊಂಡು ಸಿನಿಮಾಗಳನ್ನು ನಾಟಕ ಮಾಡುವವರ ಕಣ್ಣನ್ನು ಈ ಕಾದಂಬರಿ ತೆರೆಸೀತು ಎಂದು ನಾನು ಆಶಿಸುತ್ತೇನೆ. ನಾಟಕದಂತಿದ್ದ ದೃಶ್ಯ ಮತ್ತು ಶ್ರವ್ಯ ಮಾಧ್ಯಮ ವದ್ಯಯನ್ನು ಕಾದಂಬರಿಯಂಥ ಓದುವ ಮಾಧ್ಯಮಕ್ಕೆ ತಿರುಗಿಸಿ ಸಾಹಸವನ್ನು ಮಹಾಲಿಂಗ ಭಟ್ಟರು ಇಲ್ಲಿ ಮಾಡಿದ್ದಾರೆ. ಹಾಗಾಗಿ ‘ನಾರ್ಣಜ್ಜೆರ್‌ಸುದೆ ತಿರ್ಗಾಯೆರ್‌’ ಅಂದರೆಂದರೆ ಮಹಾಲಿಂಗರು ತುಳು ಕಾದಂಬರಿಯನ್ನು ತಿರುಗಿಸಿದರು ಎನ್ನುವುದೇ ಅರ್ಥ’ ಎಂದು ಅಭಿಪ್ರಾಯಪಡುತ್ತಾರೆ. ಈ ಆಶಯವನ್ನು ಪೋಷಿಸುವಂತೆ ಈ ತರುವಾಯ ತುಳು ಭಾಷೆಯಲ್ಲಿ ಹೆಚ್ಚು ಹೆಚ್ಚು ಕಾದಂಬರಿಗಳು ಪ್ರಕಟವಾಗತೊಡಗಿವೆ.

ಕೆ.ಟಿ. ಗಟ್ಟಿಯವರು ‘ಬೊಂಬಾಯಿದ ಇಲ್ಲ್‌’ (೧೯೯೪) ಎಂಬ ಕಾದಂಬರಿ ಬರೆದಿದ್ದಾರೆ. ಬಡತನ, ಉದ್ಯೋಗ ನಿಮಿತ್ತ ರಾಮಣ್ಣ ಮುಂಬಯಿಗೆ ಹೋಗಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿ ದುಡಿದು ಸಂಪಾದಸಿ ಸ್ವಂತ ಹೋಟೆಲ್‌, ಮನೆ, ಗ್ಯಾರೆಜ್‌ ಮಾಡಿ ಶ್ರೀಮಂತಿಕೆಯನ್ನು ಗಳಿಸಿದ ಸಂಗತಿ ಈ ಕಾದಂಬರಿಯಲ್ಲಿದೆ. ರಾಮಣ್ಣ ತುಂಗಕ್ಕೆಯನ್ನು ಮದುವೆ ಆಗಿ ಮೂರು ಗಂಡು ಎರಡು ಹೆಣ್ಣು ಮಕ್ಕಳನ್ನು ಪಡೆದು ಅವರಿಗೆ ಶಿಕ್ಷಣ ನೀಡಿ ಗಂಡು ಮಕ್ಕಳಿಗೆ ದುಡಿಯಲು ಯೋಗ್ಯ ದಾರಿ ರೂಪಿಸಿಕೊಡುತ್ತಾನೆ. ಹೆಣ್ಣು ಮಕ್ಕಳ ಮದುವೆಯ ವಿಚಾರದಲ್ಲಿ ಹೆಣ್ಣನ್ನು ನೋಡಲು ಬರುವ ಗಂಡುಗಳೆಲ್ಲ ಚೆಲುವೆಯಾದ ಕಿರಿಯ ಮಗಳನ್ನು ಹೆಣ್ಣನ್ನು ಬಯಸುವಂತಾಗುತ್ತದೆ. ಹಿರಿಯ ಮಗು ಅಷ್ಟು ಸುಂದರಿಯಲ್ಲದ ಕಾರಣ ಆಕೆಯ ಮದುವೆ ಒಂದು ದೊಡ್ಡ ಸಮಸ್ಯೆಯಂತೆ ಆಗುತ್ತದೆ.

ಮುಂಬಯಿಯ ಮನೆ, ಹೋಟೆಲ್‌, ಗ್ಯಾರೇಜ್‌ಗಳನ್ನು ಮಾರಿ ಮರಳಿ ಊರಿಗೆ ಬಂದು ಸುರತ್ಕಲ್‌ನಲ್ಲಿ ಭವ್ಯವಾದ ಬಂಗಲೆಯಂಥ ಮನೆಯನ್ನು ಕಟ್ಟಲಾಗುತ್ತದೆ. ಆ ಮನೆಯೇ ‘ಬೊಂಬಾಯಿದ ಇಲ್ಲ್’ ಎಂದು ಕರೆಸಿಕೊಳ್ಳುವಂಥದ್ದು. ನಾಟಕದ ಕಯಾಲಿಯ ದೇವಪ್ಪನ ಕವಿತೆಗಳ ಸಂಕಲನವನ್ನು ಪ್ರಕಟಿಸಿ, ಅವನ ಮಗ ದೀಲಿಪನಿಗೆ ಕಿರಿಯಮಗಳು ಮಾಲತಿಯನ್ನು ತೋರಸಿ ಹಿರಿಯ ಮಗಳು ಜಯಂತಿಯನ್ನು ಮದುವೆ ಮಾಡಿಕೊಡಲಾಗುತ್ತದೆ. ಹೀಗೆ ಮಾಡುತ್ತಿರುವ ವಿಷಯ ಸ್ವತಃ ಜಯಂತಿಗೆ ತಿಳಿಸಿರುವುದಿಲ್ಲ. ಆರ್ಥಿಕವಾಗಿ ಶ್ರೀಮಂತರಾದ ರಾಮಣ್ಣನ ಕುಟುಂಬದವರಿಗೆ ಜಯಂತಿಯ ಮದುವೆ ಸಮಸ್ಯೆಯಾಗಿ ಕಾಡುವಂತಾದಾಗ ಹೀಗೆ ಮೋಸ ಮಾಡಿಯಾದರೂ ಮದುವೆ ಮಾಡಿಸುವುದು ಉಪಾಯವಾಗಿ ಕಾಣುತ್ತದೆ. ಐದು ಲಕ್ಷದಷ್ಟು ಮೊತ್ತದ ವರದಕ್ಷಿಣೆ ಕೊಡುವ ಯೋಚನೆ ಇರುತ್ತದೆ. ಬಡತನವಿದ್ದರೂ ಕಷ್ಟಪಟ್ಟು ಕಲಿತು ಇಂಜಿನಿಯರ್‌ವೃತ್ತಿ ಸಂಪಾದಿಕೊಂಡ ದೀಲಿಪ ವರದಕ್ಷಿಣೆ ಬಯಸದೆ ತಾನು ನೋಡಿದ ಸುಂದರ ಹುಡುಗಿತನ್ನು ಮದುವೆಯಾಗಲು ಒಪ್ಪುತ್ತಾನೆ. ಮದುವೆ ಕಳೆದು ರಾತ್ರಿ ಮದುವೆಯಲ್ಲಿ ಆದ ಮೋಸ ತಿಳಿಯುತ್ತದೆ. ಈ ಎಲ್ಲ ಘಟನೆಗಳು ಒಂದು ರೀತಿಯ ಸಿನಿಮೀಯತೆಯಿಂದ ಕೂಡಿದಂತೆ ಅನಿಸುತ್ತದೆ. ಮುಂಬಯಿಗೆ ಹೋಗಿ ಶ್ರೀಮಂತಿಕೆಯನ್ನು ಸಂಪಾದಿಸಿಕೊಂಡು, ಊರಿಗೆ ಬಂದು ಮನೆ, ಗ್ಯಾರೇಜ್‌, ಕಾರು ಮುಂತಾದ ನೆಲೆಗಳಲ್ಲಿ ದರ್ಪ ತೋರುವುದು ಮತ್ತು ಹಣದ ಮೂಲಕ, ಅಂತಸ್ತಿನ ಮೂಲಕ ಮೋಸದ ತಂತ್ರ ಹೂಡುವುದು ಕಂಡುಬರುತ್ತದೆ. ಜಯಂತಿ ಅಷ್ಟೇನೂ ಕುರೂಪಿ ಅಲ್ಲದಂತೆ ಆಕೆಯನ್ನು ಚಿತ್ರಿಸಿದರೂ ಮದುವೆಯಂಥ ವಿಚಾರದಲ್ಲಿ ಮುಂದಿಡುವ ತರ್ಕ ನ್ಯಾನೋಚಿತವೆನಿಸುವಂತಿಲ್ಲ. ತಂಗಿಯನ್ನು ವಧು ಪರೀಕ್ಷೆಯ ಸಂದರ್ಭದಲ್ಲಿ ಮುಂದಿಟ್ಟು ಅಕ್ಕನನ್ನು ಮದುವೆ ಮಾಡಿಸಿಕೊಡುವಂಥ ಉಪಾಯ ತುಳುನಾಡಿನ ಸಾಮಾನ್ಯ ವರ್ಗದ ಮನೆಗಳಲ್ಲಿ ಅಪರೂಪಕ್ಕೆಂಬಂತೆ ಕಂಡುಬರುತ್ತಿರುತ್ತದೆ. ತವರುಮನೆಗೆ ಕಳುಹಿಸಿಕೊಟ್ಟ ಮೇಲೆ ಮಗುವಾಗಿ ಮರಳಿ ಗಂಡನ ಮನೆಗೆ ಕಳುಹಿಸುವಂಥ ಸನ್ನಿವೇಶ ನಿರ್ವಹಣೆಯಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವ, ಸಂಧಾನಿಸುವ ಮಾಲತಿಯ ವಿಚಾರ ಮತ್ತು ಅದಕ್ಕೆ ಪೂರಕವಾಗಿ ಅವಳ ಮದುವೆ ಸಂಬಂಧವಾಗಿ ಅವಳ ನಿಲುವು ಪ್ರಗತಿಪರ ಆಶಯದಿಂದ ಕೂಡಿದೆ. ಬಡವರಾದರೂ ದಿಲೀಪನ ತಂದೆ ತಾಯಿ ಮತ್ತು ವೃತ್ತಿಯಲ್ಲಿ ಇಂಜಿನಿಯರ್‌ಆದರೂ ದಿಲೀಪ ಮಾನವೀಯ ಅಂತಃಕರಣದ ಪಾತ್ರಗಳಂತೆ ಚಿತ್ರಿತರಾಗಿದ್ದಾರೆ. ಆದರೂ ಮರಳಿ ಹೆಂಡತಿ ಮತ್ತು ಮಗುವನ್ನು ತನ್ನ ಜೊತೆ ಕರೆಯಿಸಿಕೊಳ್ಳುವಲ್ಲಿ ತರ್ಕ ಬಹಳ ಸಡಿಲವಾಗಿ ನಿರೂಪಿತವಾಗಿ ಮದುವೆಯ ಮೂರನೇ ದಿನವೇ ಜಯಂತಿಯನ್ನು ತವರು ಮನೆಗೆ ಅಟ್ಟಿದ್ದ ಕಾರ್ಯಕಾರಣದ ನೆಲೆ ಅಷ್ಟು ಸಮರ್ಥವಾದ ರೀತಿಯಲ್ಲಿ ಪ್ರತಿಪಾದಿತವಾದಂತಿಲ್ಲ. ಇಂತೆಲ್ಲ ಸಂದರ್ಭಗಳಲ್ಲಿ ಕಾದಂಬರಿ ಮುಂದಿಡುವ ಸಂಘರ್ಷಬ ಹಳ ಸರಳವಾದ ನಿರೂಪಣೆಯಾಗಿದೆ. ಆದರೂ ಮಹಿಳಾ ಸಶಕ್ತತೆಗೆ ಒತ್ತು ಕೊಡಲಾಗಿದೆ. ಶ್ರೀಮಂತಿಕೆ ಪ್ರಾಪ್ತವಾದಾಗ ನಗರ ಜೀವನದಲ್ಲಿ ಪಳಗಿದ ಪುರುಷವರ್ಗ ತನ್ನ ಘನತೆಯ ಹಿನ್ನೆಲೆಯಲ್ಲಿ ಯಾವ ರೀತಿಯ ತಂತ್ರವನ್ನು ಹೂಡಿ ಕಾರ್ಯಸಾಧಿಸಬಲ್ಲರು ಎಂಬ ಸಂಗತಿಯನ್ನು ‘ಬೊಂಬಾಯಿದ ಇಲ್ಲ್‌’ ಕಾದಂಬರಿ ಮುಂದಿಡುತ್ತದೆ.

ಎಂ. ಜಾನಕಿ ಬ್ರಹ್ಮಾವರ ಇವರು ತುಳು ಭಾಷೆಯಲ್ಲಿ ಮೂರು ಕಾದಂಬರಿಗಳನ್ನು ಬರೆದಿರುತ್ತಾರೆ. ಅವು ‘ಕುದುರುದ ಕೇದಗೆ’ (೧೯೯೪), ‘ಕಪ್ಪು ಗಿಡಿ’ (೧೯೯೮) ಮತ್ತು ‘ಯುಗ ಮಗ್‌ರ್ನಗ’ (೨೦೦೨). ಜಾನಕಿಯವರು ತಮ್ಮ ಕಾದಂಬರಿಗಳಲ್ಲಿ ತುಳುನಾಡಿನ ಸಂಸ್ಕೃತಿಗೆ, ತುಳುವ ಸಂಸ್ಕೃತಿಯೊಳಗಿನ ನಂಬಿಕೆ, ಆಚರಣೆ, ಆರಾಧನೆಗಳಿಗೆ ಮತ್ತು ಪ್ರಾದೇಶಿಕತೆಗೆ ಬಹಳ ಮಹತ್ವ ಕೊಟ್ಟು ಕಾದಂಬರಿಯೊಳಗೆ ವಿವರಣಾತ್ಮಕವಾಗಿ ಚಿತ್ರಿಸುತ್ತಾರೆ. ಹಾಗೆಯೇ ತುಳುವರ ಮುಂಬಯಿ ವಲಸೆ, ಆ ಮೂಲಕ ಮಹಾನಗರದ ಬದುಕು ಮತ್ತು ತುಳುನಾಡಿನ ಬದುಕಿನ ನಡುವೆ ಸಂಘರ್ಷವನ್ನು ಮುಂದಿಡುತ್ತಾರೆ. ‘ಕುದುರುದ ಕೇದಗೆ’ ಎನ್ನುವುದು ಇವರ ಮೊದಲ ತುಳು ಕಾದಂಬರಿ. ತುಳುನಾಡಿನ ಒಂದು ಪ್ರಾದೇಶಿಕ ಪರಿಸರ ‘ಕದುರು’ವಿನ ಜನರ ಬಡತನ ಮತ್ತು ಅಸಹಾಯಕ ಬದುಕು ಹಾಗೂ ಮುಂಬಯಿ ನಗರದ ಸಂಕೀರ್ಣ ಬದುಕುಗಳ ಮೂಲಕ ವಸ್ತು ವಿವೇಚನೆ ಮಾಡುತ್ತಾರೆ. ಸ್ತ್ರೀ ಶೋಷಣೆಯ ಕಾರಣ ಮತ್ತು ಪರಿಣಾಮಗಳನ್ನು ಕೇಂದ್ರ ಆಶಯವಾಗಿಯೂ ಚಿತ್ರಿಸಲಾಗಿದೆ. ಕುದುರು ಆಧುನಿಕತೆಯ ಪ್ರವೇಶ ಸಾಧ್ಯವಾಗದಂಥ ಮೂಢನಂಬಿಕೆಗಳಿಂದ ಕೂಡಿದ ಪ್ರದೇಶವಾಗಿದೆ. ಜಾತಿ ಪದ್ಧತಿಯ ಕಟ್ಟಕಟ್ಟಳೆ ಸಹಜ ಎನ್ನುವಂತೆ ಇಲ್ಲಿದೆ. ಜನರ ನಂಬಿಕೆಗಳನ್ನು ದುರುಪಯೋಗಪಡಿಸಿಕೊಳ್ಳಲು ದರ್ಶನ, ದೈವ ದೇವರ ಹೆಸರುಗಳನ್ನು ಬಳಸಿಕೊಳ್ಳುವಂತ ವ್ಯಕ್ತಿಗಳಾಗಿದ್ದಾರೆ. ಹೆಂಗುಸರನ್ನು ವ್ಯವಸ್ಥಿತವಾಗಿ ಮುಂಬಯಿಯ ವೇಶ್ಯಾ ಕೇಂದ್ರಕ್ಕೆ ಮಾರಿ, ಹಣಕ್ಕಾಗಿ ವೇಶ್ಯಾವಾಟಿಕೆ ನಡೆಸುವ ಹುನ್ನಾರವಿದೆ. ದೇವರ ಹುಂಡಿಯಿಂದ ಹಣ ಕದ್ದು ಮೋಜು ಮಾಡುವುದು, ಜೀವಿತದ ಬಹುಭಾಗವನ್ನು ಕೋಳಿ ಅಂಕದಲ್ಲಿ ಕಳೆದು ಬಿಡುವುದು, ಕಾಯಿಲೆ ಬಂದಾಗ ವೈದ್ಯಕೀಯ ಚಿಕಿತ್ಸೆ ಮಾಡಿಸದೆ ನಾಗದೋಷ, ಭೂತದ ಚೇಷ್ಟೆ ಎಂದು ಪರಿಹಾರ ಶಾಂತಿಗಾಗಿ ಪರದಾಡುತ್ತಾ ಸರಿಯಾದ ಶುಶ್ರೂಷೆ ಮಾಡದೆ ಪ್ರಾಣ ಕಳೆದುಕೊಳ್ಳುವಂಥ ಚಿತ್ರಣಗಳಿವೆ.

‘ಕುದುರುದ ಕೇದಗೆ’ ಕಾದಂಬರಿಯ ಕೇಂದ್ರ ಪಾತ್ರವಾದ ಶಂಕರ ವಿದ್ಯಾವಂಥ ಮಾತ್ರವಲ್ಲ ಆಧುನಿಕ ಮನೋಭಾವದ ತರುಣ. ಮುಂಬಯಿಯಲ್ಲಿದ್ದು ನಾಲ್ಕು ವರ್ಷಗಳ ತರುವಾಯ ಆತ ಹಳ್ಳಿಗೆ ಬರುತ್ತಾನೆ. ಹರಿಜನ ಯುವಕ ವಾಸು ಶಂಕರನ ಬಾಲ್ಯದ ಗೆಳೆಯನಾಗಿರುತ್ತಾನೆ. ಇವನ ಪ್ರೇಯಸಿ ಕುಸುಮ. ಸೋಂಕು ರೋಗ ಹಿಡಿದು ವಾಸು ಹಾಸಿಗೆ ಹಿಡಿದಿರುತ್ತಾನೆ. ನಾಗಬನದ ಕೆರೆಯ ಮೀನು ಹಿಡಿದು ತಿಂದು ಆ ಕಾರಣದಿಂದ ಆತ ರೋಗಕ್ಕೆ ತುತ್ತಾಗಿದ್ದಾನೆಂದು ಈ ಹಳ್ಳಿಯ ಜನ ನಂಬಿರುತ್ತಾರೆ. ಹಳ್ಳಿಗೆ ಬಂದ ಶಂಕರ ವಾಸುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ವಾಸು ಸಾಯುತ್ತಾನೆ. ವಾಸುವಿನ ಸಾವಿನಿಂದಾಗಿ ಬದುಕಿನ ಆಸರೆ ಕಳೆದುಕೊಂಡ ಕುಸುಮ ಕಾಮುಕರ ಬಲೆಗೆ ಬೀಳುವಂತಾಗುತ್ತದೆ. ಕುಸುಮ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿರುವುದು, ತಾಯಿ ಕುಡಿತದ ಚಟಕ್ಕೆ ಬಲಿಯಾಗಿರುವುದು, ಹೀಗೆ ತನ್ನವರು ಎನ್ನುವವರು ಇಲ್ಲದಂತಾಗಿ ಕುಸುಮಳ ಬದುಕು ಅತಂತ್ರದಿಂದ ಕೂಡಿದುದಾಗುತ್ತದೆ. ಶಂಕರ ಕುಸುಮಳನ್ನು ಮದುವೆಯಾಗುವ ನಿರ್ಧಾರ ಮಾಡಿದರೂ ಅವಳ ಅಪಹರಣವನ್ನು ತಪ್ಪಿಸಲು ಅವನಿಂದ ಸಾಧ್ಯವಾಗುವುದಿಲ್ಲ. ಸ್ನೇಹಿತ ಪಿರೇರಾನಿಗೆ ಶಂಕರ ವಿಷಯ ತಿಳಿ ಮುಂಬಯಿಯ ಕಾಮಾಟಿಪುರದಿಂದ ಕುಸುಮಳನ್ನು ಕರೆತರಲು ಹೋಗುತ್ತಾನೆ. ಹೀಗೆ ಒಂದೊಂದೇ ಘಟನೆಗಳ ಮೂಲಕ ಕಾದಂಬರಿಯ ಶರೀರ ಅನಾವರಣಗೊಳ್ಳುತ್ತದೆ.