ಸಾಮಾನ್ಯವಾಗಿ ತುಳುನಾಡು ಎಂದ ತಕ್ಷಣ ಅದು ತುಳು ಮಾತನಾಡತಕ್ಕ ಪ್ರದೇಶ ಎಂಬುದಾಗಿ ತೀರ್ಮಾನಿಸಿಬಿಡುತ್ತೇವೆ. ಇಂತಹ ತೀರ್ಮಾನ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಮತ್ತು ಕನ್ನಡ ಮಾತನಾಡುವ ಜನರ ಮಧ್ಯೆ ಒಂದು ರೀತಿಯ ಮೈಮನಸ್ಸನ್ನು ಹುಟ್ಟುಹಾಕಿದೆ. ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಭಾಷೆಯ ಬಗ್ಗೆ ಅಭಿಮಾನ ಇರುತ್ತದೆ. ಭಾಷೆ ಧರ್ಮದಂತೆಯೇ ಬಹಳ ಸೂಕ್ಷ್ಮವಾದ ವಿಚಾರ. ಅಂತಹ ಕ್ಷೇತ್ರದಲ್ಲಿ ತಪ್ಪು ಅಭಿಪ್ರಾಯಗಳು ಬೇರುಬಿಟ್ಟಾಗ ಅವು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತವೆ. ಜನರ ಸೌಹಾರ್ದ ಸಂಬಂಧವನ್ನು ಕೆಡಿಸುತ್ತವೆ. ಮನುಷ್ಯ ಮನುಷ್ಯನ ನಡುವೆ ಸಂಪರ್ಕದ ಸೇತುವೆಯನ್ನು ಬಲಿಯಬೇಕಾದ ಭಾಷೆ ಕಂದಕವನ್ನೇ ಸೃಷ್ಟಿಸಿ ವೈಷಮ್ಯಕ್ಕೆ ಎಡೆ ಮಾಡಿಕೊಡುತ್ತದೆ. ಆಗ ಭಾಷೆಯ ಉಪಯೋಗದ ಬದಲು ದುರುಪಯೋಗ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಭಾಷೆಗಳನ್ನು ಸಂಪರ್ಕದ ಮಾಧ್ಯಮವಾಗಿ ಕಾಣುವ ಮತ್ತು ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಷ್ಟು ತಾಳ್ಮೆ ವಹಿಸುವ ಗುಣಗಳನ್ನು ನಾವು ರೂಢಿಸಿಕೊಳ್ಳಬೇಕು. ಒಬ್ಬರು ಇನ್ನೊಬ್ಬರ ಭಾಷೆಯನ್ನು ಗೌರವಿಸಬೇಕು.

ಹಲವು ಭಾಷೆಗಳನ್ನು ಹೊಂದಿಯೂ ಸಹ ಸೌಹಾರ್ದಯುತವಾಗಿ ಬಾಳಿ ಬದುಕಿದ ಈ ಜಿಲ್ಲೆಯಲ್ಲಿ ಇತಿಹಾಸ ಕಾಲದುದ್ದಕ್ಕೂ ಎಂತಹ ಪರಿಸ್ಥಿತಿ ಇತ್ತು. ಕನ್ನಡ ತುಳು ಬಾಂಧವ್ಯ ಹೇಗಿತ್ತು ಎಂಬ ವಿಚಾರವನ್ನು ವಸ್ತುನಿಷ್ಠವಾಗಿ ಪರಿಶೀಲಿಸಿದಾಗ ಇಂತಹ ಯಾವುದೇ ತಪ್ಪು ಕಲ್ಪನೆಗೆ ಎಡೆಯಿರುವುದಿಲ್ಲ. ಇದರೊಂದಿಗೆ ಭಾಷೆ ಎಂದಾದರೂ ಆಡಳಿತ ವಿಭಾಗದ ಮೇರೆಯನ್ನು ರೂಪಿಸಿತ್ತೇ ಎಂಬುದನ್ನೂ ತಿಳಿದುಕೊಳ್ಳುವ ಅಗತ್ಯವಿದೆ.

ಒಂದು ಪ್ರದೇಶದ ಜನರ ಬಗ್ಗೆ ಅಥವಾ ಅವರ ಭಾಷೆ – ಸಂಸ್ಕೃತಿಗಳ ಬಗ್ಗೆ ಬೊಟ್ಟು ಮಾಡಿ ತೋರಿಸಿ ಆ ಪ್ರದೇಶವನ್ನು ಹೆಸರಿಸುವ ಅಗತ್ಯ ಹೊರಗಿನವರಿಗೆ ಇದ್ದೇ ಇರುತ್ತದೆ. ಅವರೆಲ್ಲಾ ಈ ಪ್ರದೇಶವನ್ನು ಹೇಗೆ ಕರೆಯುತ್ತಾರೋ ಅದೇ ಹೆಚ್ಚು ಪ್ರಚಾರದಲ್ಲಿ ಬಂದು ಬಿಡುತ್ತದೆ. ಈ ಮಾತು ತುಳುನಾಡಿನ ಬಗ್ಗೆಯೂ ಅನ್ವಯವಾಗುತ್ತದೆ. ‘ತುಳುನಾಡು’ ಎಂಬುದಾಗಿ ಈ ಪ್ರದೇಶವನ್ನು ಮೊದಲು ಕರೆದವರು ಈ ನಾಡಿನಿಂದ ಹೊರಗಿದ್ದ ಜನ. ನಾವು ಇಲ್ಲಿನ ನಮ್ಮ ದಾಖಲೆಗಳಲ್ಲಿ ಈ ಹೆಸರನ್ನು ಬಳಸದೆ ಇದ್ದರೂ ಈ ಪ್ರದೇಶ ಆಳ್ವಖೇಡವೆಂದು ಕರೆಸಿಕೊಳ್ಳುತ್ತಿದ್ದರೂ ಹೊರಗೆ ಈ ಪ್ರದೇಶಕ್ಕೆ ತುಳುನಾಡು ಎಂಬ ಹೆಸರು ಪ್ರಚಲಿತವಿದ್ದುದು ಐತಿಹಾಸಿಕ ದಾಖಲೆಗಳಿಂದ ಸ್ಪಷ್ಟವಾಗುತ್ತದೆ.

ಡಾ. ಕೆ.ವಿ. ರಮೇಶ್ ಮುಂತಾದ ವಿದ್ವಾಂಸರು ಬೊಟ್ಟು ಮಾಡಿ ತೋರಿಸಿರುವಂತೆ ‘ತುಳುನಾಡು’ ಎಂಬ ಹೆಸರಿನ ಬಗ್ಗೆ ಅತ್ಯಂತ ಪ್ರಾಚೀನ ಉಲ್ಲೇಖ ದೊರೆಯುವುದು ತಮಿಳುನಾಡಿನ ಪ್ರಾಚೀನ ಸಾಹಿತ್ಯವಾದ ‘ಸಂಗಮ ಸಾಹಿತ್ಯ’ ದಲ್ಲಿ. ಸ್ಪಷ್ಟವಾದ ಕಾಲ ನಿರ್ಧಾರ ಕಷ್ಟವಾದರೂ ಈ ಸಾಹಿತ್ಯ ಬಹಳ ಪ್ರಾಚೀನವೆಂದು ತಿಳಿಯಲಾಗಿದೆ. ಶಾಸನಗಳಲ್ಲೂ ತುಳುನಾಡಿಗೆ ಅತ್ಯಂತ ಪ್ರಾಚೀನ ಉಲ್ಲೇಖ ದೊರೆಯುವುದು ತಮಿಳುನಾಡಿನಲ್ಲೇ ಇಮ್ಮಡಿ ನಂದಿವರ್ಮನ ಪಟ್ಟತ್ತಾಳ್ ಮಂಗಳಮ್ ಶಾಸನದಲ್ಲಿ ಪಲ್ಲವ ರಾಜನ ಸೇವೆಗಾಗಿ ಕಾಯುತ್ತಿದ್ದವರ ಪಟ್ಟಿಯಲ್ಲಿ ಒಂದು ಆಡಳಿತ ವಿಭಾಗವಾಗಿ ತುಳುವರನ್ನು ನಮೂದಿಸಲಾಗಿದೆ. ಚೋಳ ಒಂದನೆಯ ರಾಜರಾಜನ ಲೇಡನ್ ತಾಮ್ರ ಶಾಸನ (ದೊಡ್ಡದು)ದಲ್ಲೂ ತುಳುನಾಡನ್ನು ಗೆಲ್ಲಲಾಯಿತೆಂದು ಉಲ್ಲೇಖವಿದ್ದರೂ ಅದರ ಮೇರೆಯ ಬಗ್ಗೆ ವಿವರವಿಲ್ಲ.

ಕನ್ನಡ ಸಾಹಿತ್ಯದಲ್ಲಿ ತುಳುನಾಡಿಗೆ ಪ್ರಪ್ರಥಮ ಉಲ್ಲೇಖವಿರುವುದು ನಯಸೇನನ ಧರ್ಮಾಮೃತದಲ್ಲಿ (ಕ್ರಿ.ಶ. ೧೧೧೫) ಆದರೆ ಇಲ್ಲಿಯೂ ಅದರ ವಿಸ್ತಾರ ಅಥವಾ ಗಡಿಯ ಬಗ್ಗೆ ಪ್ರಸ್ತಾಪವಿಲ್ಲ. ಕನ್ನಡ ಶಾಸನಗಳ ಪೈಕಿ ತುಳುನಾಡನ್ನು ಪ್ರಸ್ತಾಪಿಸುವ ದ.ಕ.ದಿಂದ ಹೊರಗಿನ ಅತ್ಯಂತ ಪ್ರಾಚೀನ ಶಾಸನ ಬಲ್ಮುರಿ ಶಾಸನ (ಕ್ರಿ.ಶ. ೧೦೧೨).

ಈ ಎಲ್ಲಾ ದಾಖಲೆಗಳಲ್ಲಿ ಬಹುರುವ ತುಳುನಾಡು ದಕ್ಷಿಣ ಕನ್ನಡ ಜಿಲ್ಲೆಯೆಂಬುದಾಗಿ ಲೂವಿಸ್ ರೈಸ್ ತೀರ್ಮಾನಿಸಿದರು. ಅಂತೆಯೇ ಇತರ ಲೇಖಕರೂ ಇದನ್ನೇ ಅನುಕರಿಸಿದರು.

ಭಟ್ಕಳ ಮತ್ತು ಗೇರುಸೊಪ್ಪೆ ಪ್ರದೇಶದ ಶಾಸನಗಳಲ್ಲಿ ‘ತುಳು ಕಟಕ’ ಮತ್ತು ‘ತುಳುರಾಜ’ರ ಉಲ್ಲೇಖವಿರುವುದರಿಂದಲೂ ಆಳುಪರು ಆಳುತ್ತಿದ್ದ ಪ್ರದೇಶ ಆಳ್ವಖೇಡವೆಂದು ಕರೆಯಲ್ಪಡುತ್ತಿದುದರಿಂದಲೂ ಮೊದಲು ತುಳುನಾಡು ಮತ್ತು ಆಳ್ವಖೇಡ ಬೇರೆ ಬೇರೆಯಾಗಿದ್ದುವೆಂದು ತಿಳಿಯಲು ಅವಕಾಶವಿದೆಯೆಂದು ಡಾ. ಪಿ. ಗುರುರಾಭಟ್ಟರು ವಾದಿಸಿದ್ದಿದೆ (ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ಚರ್, ಪು. ೯-೧೧).

ಈ ಜಿಲ್ಲೆಯ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಿದಾಗ ‘ತುಳು’ ಒಂದು ಆಡಳಿತ ವಿಭಾಗವಾಗಿ ಪ್ರಸ್ತಾಪಿಸಲ್ಪಡುವಕ ಪ್ರಥಮ ದಾಖಲೆ ಬಾರಕೂರಿನದ್ದು. ಹನ್ನೊಂದನೆಯ ಶತಮಾನದ ಈ ಶಾಸನದಲ್ಲಿ (ಸಾಮಾನ್ಯ ಒಂದೇ ವಿಷಯವನ್ನು ಹೊಂದಿದ ಎರಡು ಶಾಸನಗಳ ಪೈಕಿ ಒಂದು ಅಪೂರ್ಣ) ‘ತುಳು ವಿಷಯ’ದ ಉಲ್ಲೇಖವಿದೆ. ಚೋರರ ದಾಳಿಯಿಂದಾಗಿ ಅವರ ಅಧೀನದಲ್ಲಿ ಬಂದಿದ್ದ ಈ ಪ್ರದೇಶವನ್ನು ಸಾಂತರ ಅರಸನೊಬ್ಬ ಅವರನ್ನು ಹಿಮ್ಮಟ್ಟಿಸಿ ಏಳು ಮಲೆ, ಏಳು ಕೊಂಬು ಹಾಗೂ ೧೨೦ ಮಂಡಳಿಗರನ್ನು ಬಂಕಿದೇವನ ಅಧೀನದಲ್ಲಿ ತಂದುಕೊಟ್ಟನೆಂದು ತಿಳಿಸುವ ಈ ಶಾಸನದಲ್ಲಿ ಇನ್ನೊಂದು ವಿಚಾರವಿದೆ. ಅದೇನೆಂದರೆ ಬಂಕಿದೇವನಿಗೆ ಅಧೀನನಾಗಿದ್ದ ಈ ರಾಜ ತುಳು ವಿಷಯದಲ್ಲಿ ‘ನಿಜಾಜ್ಞೆ’ಯನ್ನು ನಿಲ್ಲಿಸಿದನೆಂಬುದು ಬಂಕಿದೇವನನ್ನು ನಿಜಸ್ವಾಮಿಯೆಂದು ಕರೆಯುವಲ್ಲಿ ‘ನಿಜ’ ಎಂಬ ಪದಕ್ಕೆ ತನ್ನ (ಸ್ವಂತದ) ಎಂಬ ಅರ್ಥವನ್ನು ನೀಡುವಾಗ ನಿಜಾಜ್ಞೆ ಎಂಬಲ್ಲಿ ಆ ಸಾಂತರ ಅರಸನ ಅಧಿಕಾರವೆಂದೇ ತಿಳಿಯಬೇಕಾಗುತ್ತದೆ.ಸ ಸಾಂತರ ಅರಸನ ಸಾಧನೆಗಳನ್ನೂ ಅವನ ವ್ಯಕ್ತಿತ್ವವನ್ನೂ ಹೊಗಳುವ ಈ ಶಾಸನ ಅವನ ‘ಪ್ರಶಸ್ತಿ’ಯಾಗಿದೆ ಎಂದು ತಿಳಿಯಬಹುದು (ಶಾಸನದಲ್ಲಿ ಅವನ ಹೆಸರು ದೊರೆಯುವುದಿಲ್ಲ) ರಾಜಕೀಯವಾಗಿ ಆಳುಪರ ಅಧೀನ ಸ್ಥಾನವನ್ನು ಹೊಂದಿದ್ದ ಸಾಂತರರು ದಕ್ಷಿಣ ಕನ್ನಡದ ಉತ್ತರ ಭಾಗದಲ್ಲಿ ಆಡಳಿತ ನಡೆಸುತ್ತಿದ್ದರು. ಬಾರಕೂರು ಆಗಿನ್ನೂ ಆಳುಪರ ರಾಜಧಾನಿಯಾಗಿರಲಿಲ್ಲವಾದ್ದರಿಂದ ಬಾರಕೂರಿನಲ್ಲೂ ಸಾಂತರರು ತಮ್ಮ ಅಧಿಕಾರವನ್ನು ಆಗ ಹೊಂದಿದ್ದಿರಬಹುದು. ಅವರ ರಾಜಧಾನಿಯಾಗಿದ್ದುದು ಘಟ್ಟದ ಮೇಲಣ ಹೊಂಬುಜ (ಹುಂಚ), ಅವರ ಅಧಿಕಾರದಲ್ಲಿದ್ದ ಘಟ್ಟದ ಕೆಳಗನ ಪ್ರದೇಶವನ್ನು ಅವತು’ತುಳು ವಿಷಯ’ (ಎಲ್ಲಾ ಪ್ರದೇಶ ತುಳು ಮಾತನಾಡುವ ಪ್ರದೇಶವಲ್ಲದಿದ್ದರೂ)ವೆಂದು ಕರೆದಿರುವುದು ಸ್ವಾಭಾವಿಕ. ‘ವಿಷಯ’ ಎಂಬುದು ಇಡೀ ರಾಜ್ಯವಾಗಿರದೆ ಒಂದು ಸಣ್ಣ ಆಡಳಿತ ವಿಭಾಗ ಮಾತ್ರ ಎಂಬುದನ್ನೂ ಗಮನಿಸಬೇಕು. ಈ ಪ್ರದೇಶ ಸಾಂತರರ ಆಡಳಿತಕ್ಕೊಳಪಟ್ಟಿದ್ದರೂ ಅಧಿಪತಿಗಳು ಆಳುಪರೇ. ತುಳುನಾಡಿನ ಅರಸರ ರಾಜ್ಯದ ಒಂದು ಭಾಗವಾದ್ದರಿಂದಲೂ ಜಿಲ್ಲೆಯ ಉತ್ತರದ ಭಾಗವನ್ನು ‘ತುಳು ವಿಷಯ’ ವೆಂದು ಸಾಂತರರು ಕರೆದಿರುವ ಸಾಧ್ಯತೆಯಿದೆ.

ನಂತರ ಹೊಯ್ಸಳರ ಹಾಗೂ ವಿಜಯನಗರದವರ ಅಧಿಕಾರ ದಕ್ಷಿಣ ಕನ್ನಡದಲ್ಲಿ ಸ್ಥಾಪಿಸಲ್ಪಟ್ಟಾಗ ಜಿಲ್ಲೆಯ ಉತ್ತರ ಭಾಗ ಮೊದಲು ‘ತುಳು ವಿಷಯ’ವೆಂದು ಕರೆಸಿಕೊಳ್ಳುತ್ತಿದ್ದುದರಿಂದಲೇ ಬಾರಕೂರು ತುಳು ರಾಜ್ಯ ಅಥವಾ ಬರೇ ತುಳುರಾಜ್ಯವೆಂಬ ಹೆಸರು ಈ ಪ್ರದೇಶಕ್ಕೆ ಬಳಸಲ್ಪಟ್ಟಿತು. ಮಂಗಳೂರು ರಾಜ್ಯವನ್ನು ಬರೇ ಮಂಗಳೂರು ರಾಜ್ಯವೆಂದು ಹೇಳುವಾಗಲೂ ಬಾರಕೂರನ್ನು ‘ಬಾರಕೂರು ತುಳುರಾಜ್ಯ’ ವೆಂದು ನಮೂದಿಸಿದ ಹಿನ್ನೆಲೆ ಇದೇ ಇರಬಹುದು.

ಇದರೊಂದಿಗೆ ಇನ್ನೊಂದು ಅಂಶವನ್ನೂ ನಾವು ಗಮನಿಸಬೇಕು. ಪ್ರಾಚೀನ ಆಳುಪರ ಕಾಲದಲ್ಲಿ ದಕ್ಷಿಣ ಕನ್ನಡಕ್ಕಿಂತ ಹೊರಗೆ ಅವರ ಆಧಿಪತ್ಯ ಪಸರಿಸಿದ್ದು ಬನವಾಸಿ ಮಂಡಲವೂ ಅವರ ಆಳ್ವಿಕೆಗೆ ಒಳಪಟ್ಟಿತ್ತು (ಚಾಲುಕ್ಯರ ಅಧೀನದಲ್ಲಿ). ಆ ಕಾಲದಲ್ಲಿ ತುಳುವರು ಭಟ್ಕಳ ಗೇರುಸೊಪ್ಪೆ ಪ್ರದೇಶಗಳಲ್ಲಿ ಅಧಿಕಾರಿಗಳಾಗಿ ತುಂಡರಸರಾಗಿ ನೆಲೆಸಿರುವ ಸಾಧ್ಯತೆಯಿದೆ. ಹದಿನಾಲ್ಕನೆ ಶತಮಾನದ ಕಾಯ್ಕಿಣಿ ಶಾಸನದಲ್ಲೆ ಅಲ್ಲಿನ ಅರಸರನ್ನು ತುಳು ಅರಸರೆಂದು ನಮೂದಿಸಲು ಮತ್ತು ಅವರ ಸೈನ್ಯವನ್ನು ತುಳು ಕಟಕವೆಂದೂ ತುಳುವ ತಂತ್ರವೆಂದೂ ಕರೆಯಲು ೧. ಅವರು ಮೂಲತಃ ತುಳುವರಾಗಿದ್ದುದು ಅಥವಾ ೨. ಅವರ ಆಳ್ವಿಕೆಯ ಪ್ರದೇಶ ತುಳುನಾಡಿನೊಳಗೆ ಸೇರಿದ್ದುದು ಕಾರಣವಾಗಿದ್ದಿರಬೇಕು. ಇದೇ ಸಂದರ್ಭದಲ್ಲಿ ಗೇರುಸೊಪ್ಪೆಯನ್ನು ಶಾಸನಗಳಲ್ಲಿ ತುಳುನಾಡಿನ ಪ್ರಸಿದ್ಧ ನಗರವೆಂದು ಉಲ್ಲೇಖಿಸಿದ್ದನ್ನೂ ಗಮನಿಸಬಹುದು. ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಆ ಪ್ರದೇಶ ಮಾತ್ರ ತುಳುನಾಡು ಎಂಬುದಾಗಿ ತಿಳಿಯುವುದರಾಗಲೀ (ಇನ್ನುಳಿದ ಆಳುಪರ ಆಳ್ವಿಕೆಯ ಪ್ರದೇಶ ಆಳ್ವಖೇಡವಾಗಿದ್ದುದರಿಂದ ಅಥವಾ ಅಲ್ಲಿ ತುಳುಭಾಷೆ ಪ್ರಚಲಿತವಿತ್ತು ಎಂದು ತೀರ್ಮಾನಿಸುವುದಾಗಲೀ ಸಾಧ್ಯವಿಲ್ಲ.ಸ

ಈ ಎಲ್ಲಾ ಅಂಶಗಳನ್ನು ಗಮನಿಸುವಾಗ ತುಳುನಾಡು ತುಳು ಮಾತನಾಡುವ ಪ್ರದೇಶಕ್ಕಿಂತ ಬಹಳ ವಿಸ್ತಾರವಾದ ಪ್ರದೇಶ ಹಾಗೂ ಅದು ಒಂದು ಆಡಳಿತ ವಿಭಾಗ ಸೂಚಕ ಶಬ್ದವೇ ಹೊರತು ಒಂದು ಭಾಷೆ ಪ್ರಚಲಿತವಿದ್ದ ಸೀಮಿತ ಪ್ರದೇಶವಾಗಿರಲಿಲ್ಲ ಎಂಬುದು ಸ್ಪಷ್ಟ. ಕೇವಲ ಭಾಷೆಗೆ ತುಳುನಾಡಿನ ಗಡಿಯನ್ನು ಸೀಮಿತಗೊಳಿಸುವುದಾಗಲೀ ಕಾಸರಗೋಡಿನ ಪಯಸ್ವಿನಿ ಅಥವಾ ಚಂದ್ರಗಿರಿಯಿಂದ ಕಲ್ಯಾಣಪುರ ಹೊಳೆಯವರೆಗೆ ತುಳುನಾಡು ಎಂಬುದಾಗಿ ತಿಳಿಯಬೇಕಾಗುತ್ತದೆ. ಆದರೆ ಉತ್ತರದಲ್ಲಿ ಕಲ್ಯಾಣಪುರ ಹೊಳೆ ಎಂದೂ ಇಂತಹ ಆಡಳಿತ ವಿಭಾಗದ ರಾಜ್ಯದ ಗಡಿಯಾಗಿರಲಿಲ್ಲ. ಪ್ರಾಚೀನ ಆಳುಪರೆ ರಾಜ್ಯದ ಉತ್ತರದ ಮೇರೆಯೂ ಇದಲ್ಲ. ನಂತರ ಬಾರಕೂರು ತುಳು ರಾಜ್ಯದ ದಕ್ಷಿಣದ ಮೇರೆಯೂ ಈ ಹೊಳೆಯಲ್ಲ. ಅದು ಕಾಪುವಿನವರೆಗೆ ಚಾಚಿಕೊಂಡಿತ್ತು. ಹೀಗಾಗಿ ಭಾಷೆಯ ಆಧಾರದಲ್ಲಿ ತುಳುನಾಡಿನ ಮೇರೆ ನಿರ್ಧರಿತವಾಗಿರಲಿಲ್ಲ. ಆದುದರಿಂದಲೇ ಪೋರ್ಚುಗೀಸ್ ಪ್ರವಾಸಿ ದುವಾರ್ತೆ ಬೊರ್ಬೋಸತ ತುಳುನಾಡು ಪಯಸ್ವಿನಿಯಿಂದ ಹೊನ್ನಾವರದವರೆಗೆ ಪಸರಿಸಿತ್ತೆಂದು ತಿಳಿಸುತ್ತಾನೆ. ‘ಕೇರಳೋತ್ಪತ್ತಿ’ಲ್ಲಿ ತುಳುನಾಡಿನ ಉತ್ತರದ ಗಡಿ ಗೋಕರ್ಣವೆಂದೇ ಉಲ್ಲೇಖಿಸಲ್ಪಟ್ಟಿದೆ. ಹಾಗೆ ನೋಡಿದರೆ ದ.ಕ. ಜಿಲ್ಲೆ ತುಳುನಾಡಿನ ಒಂದು ಭಾಗ ಮಾತ್ರ.

ಅಂತೂ ತುಳುನಾಡು ತುಳು ಭಾಷೆ ಮಾತನಾಡತಕ್ಕ ಪ್ರದೇಶಕ್ಕಿಂತ ತುಂಬಾ ವಿಸ್ತಾರವಾಗಿದ್ದ ಪ್ರದೇಶ. ಅದರಲ್ಲಿ ಎಲ್ಲಾ ಕಾಲಕ್ಕೂ ಕನ್ನಡ ಮಾತನಾಡುವ ಪ್ರದೇಶವೂ ಒಳಗೊಂಡಿತ್ತು. ಭಾಷೆಯ ಆಧಾರದ ಮೇಲೆ ಆಡಳಿತ ವಿಭಾಗದ ಮೇರೆಯ ನಿರ್ಣಯ ಅಂದು ಅಗಿರಲಿಲ್ಲ. ಒಂದೇ ಆಡಳಿತ ವಿಭಾಗದೊಳಗೆ ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರು ಇದ್ದರೂ ಯಾವ ಗೊಂದಲಕ್ಕೂ ಇದು ಕಾರಣವಾಗಿರಲಿಲ್ಲ. ಶುದ್ಧ ಕುಂದ ಕನ್ನಡ ಭಾಷೆ ಮಾತನಾಡುವ ಕುಂದಾಪುರ ತಾಲ್ಲೂ ಮತ್ತು ಉಡುಪಿ ತಾಲೂಕಿನ ಉತ್ತರ ಭಾಗವೂ ತುಳುನಾಡೇ ಆಗಿತ್ತು. ಕನ್ನಡ ಪ್ರದೇಶವಾಗಿದ್ದ ಬಾರಕೂರು ೫೦೦ ವರ್ಷ ತುಳುನಾಡಿನ ರಾಜಧಾನಿಯಾಗಿ ಮೆರೆಯಿತೆಂದರೆ ಈ ಭಾಷಾಗೊಂದಲಕ್ಕೆಡೆಯೆಲ್ಲಿ? ಅಂತಹ ಯಾವುದೇ ಸಮಸ್ಯೆ ನಿರ್ಮಾಣವಾಗುವ ಬದಲು ಕನ್ನಡ ತುಳು ಕೊಡುಕೊಳ್ಳುವಿಕೆಯಿಂದಾಗಿ ಭಾಷಾ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಾಗಿದೆ. ಕನ್ನಡ ಪ್ರದೇಶವಾದ ಕೋಟೇಶ್ವರದ ‘ಕೊಡಿ’ ಹಬ್ಬಕ್ಕೆ ಇಡೀ ತುಳುನಾಡಿನ ಜನ ಸೇರುತ್ತಿದ್ದರೆಂಬ ಉಲ್ಲೇಖವಾಗಲೀ ಜಿಲ್ಲೆಯ ಉತ್ತರ ಭಾಗದ ನಾಥ ಪಂಥದವರಿಗೆಲ್ಲಾ ಮಂಗಳೂರು ಕೇಂದ್ರ ಸ್ಥಾನವಾಗಿದ್ದುದಾಗಲೀ ಅಥವಾ ಇನ್ನಿತರ ಅನೇಕ ಇಂತಹ ಉದಾಹರಣೆಗಳು ಕನ್ನಡ – ತುಳು ಪ್ರದೇಶಗಳ ಧಾರ್ಮಿಕ – ಸಾಂಸ್ಕೃತಿಕ ಸಂಬಂಧ ಹೇಗೆ ಹೆಣೆದುಕೊಂಡಿತ್ತು ಎಂಬುದನ್ನು ಸೂಚಿಸುತ್ತವೆ.