ತುಳುನಾಡಿನಲ್ಲಿ ತುಳು ಜನರಿಗೆ ಒಗ್ಗುವಂತೆ ತುಳು ಭಾಷೆಯ ಎಲ್ಲಾ ಸಾಧ್ಯತೆಗಳನ್ನು ಹೆಚ್ಚು ಬಳಸಿಕೊಂಡವರು ಮುಖ್ಯವಾಗಿ ನಾಟಕಕಾರರು, ಯಕ್ಷಗಾನ ಪ್ರಸಂಗಕತ್ತರು. ಕಾವ್ಯರೂಪಗಳನ್ನು ಬಿಟ್ಟರೆ ಗದ್ಯದಲ್ಲಿ ಕಾದಂಬರಿ ಹಾಗೂ ಸಣ್ಣ ಕತೆಗಳು ಬಂದಿವೆಯಾದರೂ, ತುಳುಭಾಷೆಯ ವ್ಯಾಪಕತೆ ಮತ್ತು ಸೌಕುಮಾರ್ಯತೆಯ ಜೊತೆಗೆ ಅದಕ್ಕಿರುವ ಸ್ಥಿರತೆ ಮತ್ತು ನಿರ್ದಿಷ್ಟತೆಯ ಗುಣದಿಂದಲಾಗಿ, ಇತ್ತೀಚೆಗೆ ಪ್ರಬಂಧಗಳು, ಸಂಶೋಧನಾ ಲೇಖನಗಳು, ಅಂಕಣ ಬರಹ, ಹಾಸ್ಯ, ಹರಟೆ ಮುಂತಾದ ಪ್ರಕಾರಗಳಾಗಿ ಬರುತ್ತಿವೆ. ಇವುಗಳೆಲ್ಲ ಹೊತ್ತಗೆಯ ರೂಪದಲ್ಲಿ ಬರದಿದ್ದರೂ, ಕೆಲವೊಂದು ತುಳು ಪತ್ರಿಕೆಗಳು, ತುಳು ಅಕಾಡೆಮಿಯಿಂದ ಪ್ರಕಟಗೊಳ್ಳುವ ‘ಮದಿಪು’ ನಂತಹ ತ್ರೈಮಾಸಿಕಗಳು ಇಂತಹ ಬರಹಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಆಧುನಿಕ ಮನಸ್ಸಿನ ಎಲ್ಲಾ ಭಾವನೆಗಳನ್ನು ಸಮರ್ಥವಾಗಿ ಸಂವಹನಿಸುವಷ್ಟು ತುಳುವಿಗೂ ಅರ್ಹತೆ ಇದೆ ಎಂದು ಗಮನಿಸಿರುವ ಲೇಖಕರು ತುಳುವಿನಲ್ಲಿ ವೈವಿಧ್ಯಮಯ ಸಾಹಿತ್ಯವನ್ನು ಬಹಳ ಧೈರ್ಯದಿಂದಲೇ ನೀಡುತ್ತಿದ್ದಾರೆ. ತುಳು ಭಾಷೆಯಲ್ಲಿ ಇಂದು ವೈವಿಧ್ಯಮಯ ಸಾಹಿತ್ಯ ಸೃಷ್ಟಿಯಾಗುತ್ತಿದೆ. ತುಳುವಿನಲ್ಲಿ ಯಾವುದೇ ಪ್ರಕಾರದಲ್ಲಿ ಸಾಹಿತ್ಯ ಬಂದರೂ, ಓದುಗರ ಸಂಖ್ಯೆ ಬಹಳ ಕಡಿಮೆ ಇದ್ದರೂ, ಹೊಸ ಸಾಹಿತ್ಯದ ಪ್ರಕಾರಗಳಿಗೆಲ್ಲ ತೆರೆದುಕೊಳ್ಳುವುದಕ್ಕೆ ಇಂದಿನ ಸಾಹಿತಿಗಳು ಮನಮಾಡಿರುವುದು ನಿಜವಾಗಲೂ ಸಂತಸದ ಸಂಗತಿ. ಇಂದು ಕನ್ನಡ ಅಥವಾ ಇತರ ಭಾಷೆಯ ಸಾಹಿತ್ಯದಲ್ಲಿ ಜನಪ್ರಿಯಗೊಳ್ಳುತ್ತಿರುವ ಪ್ರಕಾರಗಳೆಂದರೆ ಆತ್ಮಚರಿತ್ರೆ, ಪ್ರವಾಸ ಸಾಹಿತ್ಯ, ವ್ಯಕ್ತಿ ಚರಿತ್ರೆ ಇತ್ಯಾದಿ ತುಳುವಿನಲ್ಲಿ ಇಂತಹ ಸಾಹಿತ್ಯ ಪ್ರಕಾರಗಳು ಬರತೊಡಗಿದ್ದು ೧೯೯೦ರ ನಂತರದಲ್ಲಿ.

ಪ್ರವಾಸ ಸಾಹಿತ್ಯ

ಮೊದಲಿನಿಂದಲೂ ತುಳುವರು ಸಾಹಸ ಪ್ರಿಯರು ಹೌದಾದರೂ, ದಾಖಲೀಕರಣ ಮಾಡಿಕೊಳ್ಳುವಲ್ಲಿ ಹಿಂದೆ ಉಳಿದವರು. ಪ್ರವಾಸ ಮಾಡಿದವರು ಯಾರೂ ಬರೆದಿಡಲಿಲ್ಲ. ಪ್ರವಾಸ ವ್ಯಕ್ತಿಯ ಮನಸ್ಸಿಗೆ ಮುದವನ್ನು, ಬದುಕಿಗೆ ಸಂಸ್ಕಾರವನ್ನು, ಜೀವನಕ್ಕೆ ವಿಶೇಷ ಅನುಭವವನ್ನು ನೀಡುತ್ತದೆ. ಜೊತೆಗೆ ತೌಲನಿಕ ಅಧ್ಯಯನ ಶಿಸ್ತನ್ನು ನೀಡುತ್ತದೆ. ಅವುಗಳನ್ನೆಲ್ಲ ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ಮುಂದಿನವರಿಗೆ ಪ್ರಯೋಜನ ನೀಡುತ್ತದೆ. ಪ್ರಾನ್ಸಿಸ್‌ ಬುಖಾನೆನ್‌ ೧೮೦೦ರಲ್ಲಿ ಮಾಡಿದ ತನ್ನ ಕೆನರಾ ಪ್ರವಾಸದ ಸಂದರ್ಭದಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ, ಮುಖ್ಯವಾಗಿ ಕರಾವಳಿಯಲ್ಲಿ ನಡೆದಾಡಿದವನು. ಅದನ್ನು ಎ ಜರ್ನಿ ಫ್ರಮ್‌ ಮೆಡ್ರಾಸ್‌ ತ್ರೂ ದಿ ಕಂಟ್ರಿಸ್‌ ಆಫ್ ಮೈಸೂರು, ಕೆನರಾ ಎಂಡ್‌ ಮಲಬಾರ್‌ ಎಂಬ ಹೆಸರಿನ ಪುಸ್ತಕದಲ್ಲಿ ದಾಖಲಿಸುತ್ತಾನೆ. ಕೆ. ಅನಂತರಾಮುರವರ ‘ದಕ್ಷಿಣ ಸಿರಿನಾಡು’, ಎಚ್‌.ಎಲ್‌. ನಾಗೇಗೌಡರು ಬರೆದ ಪ್ರವಾಸಿ ಕಂಡ ಇಂಡಿಯಾ ಮುಂತಾದ ಗ್ರಂಥಗಳು ಇಂದಿಗೂ ಬಲು ಉಪಯುಕ್ತ ಗ್ರಂಥಗಳಾಗಿವೆ.

ಆದರೆ ತುಳುವರು ತಮ್ಮ ಪ್ರದೇಶ ಬಿಟ್ಟು ಅಥವಾ ತಮ್ಮ ಪ್ರದೇಶಗಳಲ್ಲಿ ಸುತ್ತಾಡಿದ್ದನ್ನು ಪ್ರವಾಸ ಕಥನ ರೂಪದಲ್ಲಿ ದಾಖಲಿಸಿದ ಮೊದಲ ಹೊತ್ತಗೆಯ ಗೌರವ ಎಂ.ಜಾನಕಿ ಬ್ರಹ್ಮಾವರ ಇವರು ಬರೆದ ‘ತಿರ‍್ಗಾಟದ ತಿರ್ಲ್’ (೧೯೯೬) ಕೃತಿಗೆ ಸಲ್ಲುತ್ತದೆ.

ಬ್ರಹ್ಮಾವರದ ಎಸ್‌.ಎಮ್‌.ಎಸ್‌. ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಎಂ. ಜಾನಕಿಯವರು ತುಳು ಕಾದಂಬರಿಗಳನ್ನು ಸಾರಸ್ವತಲೋಕಕ್ಕೆ ನೀಡಿ ಪ್ರಸಿದ್ಧರಾದವರು. ‘ತಿರ‍್ಗಾಟದ ತಿರ್ಲ್’ (ತಿರುಗಾಟದ ತಿರುಳು) ಎಂಬ ಪ್ರವಾಸ ಕಥನವನ್ನು ನೀಡಿ ತುಳು ಸಾಹಿತ್ಯಕ್ಕೆ ಹೊಸಗರಿ ಜೋಡಿಸಿದವರು. ಶ್ರೀಮತಿ ಜಾನಕಿ ಹಾಗೂ ಅವರು ಕುಟುಂಬಿಕರು ದೆಹಲಿಯ ‘ಸನರ್ದ ಟ್ರಾವೆಲ್ಸ್‌’ ಸಂಸ್ಥೆಯ ಮೂಲಕ ಉತ್ತರ ಭಾರತವನ್ನು ಸಂದರ್ಶಿಸಿದ, ಮುಖ್ಯವಾಗಿ ದೆಹಲಿ, ಸಿಮ್ಲಾ, ಕುಲು, ಮನಾಲಿ, ರೊಟ್ಟಾಂಗ್‌ ಪಾಸ್‌, ಮಣಿಕಿರಣ್‌, ಪಿಂಜೊರ್‌ ಗಾರ್ಡನ್‌, ರಾಕ್‌ಕಾರ್ನರ್‌, ಚಂಡೀಗಡಡಡ, ಹರಿಯಾಣ, ಕುರುಕ್ಷೇತ್ರ ಮುಂತಾದ ಕ್ಷೇತ್ರಗಳಿಗೆ ಪ್ರವಾಸ ಹೋದ ವಿವರ ಈ ಕೃತಿಯಲ್ಲಿದೆ. ಪ್ರವಾಸದ ಅನುಭವವನ್ನು ನಾವು ಕಾಣುವಂತೆ, ಅಷ್ಟೊಂದು ನೈಜವಾಗಿ ನಿರೂಪಣೆ ಮಾಡಿದ ಈ ಹೊತ್ತಗೆ ಅತ್ಯಂತ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ಆಯಾಯ ಪ್ರದೇಶದ ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ, ರಾಜಕೀಯ ವಿಚಾರಗಳೊಂದಿಗೆ, ಆಯಾ ಊರಿನ ಬದುಕು, ಬವಣೆಯೊಂದಿಗೆ, ಅಲ್ಲಿನ ಜನರ ವ್ಯಾಪಾರಸ್ಥರ ಮೋದ, ವಂಚನೆಗಳನ್ನು ಸಮಭಾವದಲ್ಲಿ ವಿನೋದದಲ್ಲಿ ಹೇಳಿಕೊಂಡು ಹೋಗುತ್ತಾರೆ. ಎಲ್ಲಿಯೂ ಅತಿರೇಕದ ವರ್ಣನೆಯಾಗಲೀ, ವೈಭವಿಕರಣವಾಗಲೀ ತೋರದು. ತೆಳ್ಳಗಿನ ಹಾಸ್ಯಲೇಪನದೊಂದಿಗೆ, ಇಡೀ ಕೃತಿ ಅನಾವರಣಗೊಳ್ಳುವುದಲ್ಲದೆ, ದೀಪಾವಳಿ, ಸೂರ್ಯಗ್ರಹಣ ಮುಂತಾದವುಗಳ ಆಚರಣೆಯನ್ನು ಉತ್ತರ ಭಾರತದವರು ಹೇಗೆ ಆಚರಿಸುತ್ತಾರೆ ಎಂಬುದನ್ನಯ ಹೇಳುತ್ತಾ, ದಕ್ಷಿಣ ಹಾಗೂ ಉತ್ತರ ಭಾರತಗಳ ನಡುವಿನ ಸಾಂಸ್ಕೃತಿಕ, ಆಚರಣಾತ್ಮಕ ವ್ಯತ್ಯಾಸಗಳನ್ನು ಕಂಡುಕೊಳ್ಳುವಲ್ಲಿ ಸಹಾಯ ಮಾಡುವ ಈ ಕಥನ ಅಮೃತ ಸೋಮೇಶ್ವರರು ತಮ್ಮ ‘ಮೆಚ್ಚುಗೆ ಮಾತಿ’ನಲ್ಲಿ ಹೇಳುವಂತೆ ‘ಪ್ರವಾಸ ಸಾಹಿತ್ಯ ಅಂದರೆ ಆತ್ಮ ಚರಿತ್ರೆಯ ಒಂದು ಭಾಗ. ಅದು ಸೃಜನಶೀಲ ಬರವಣಿಗೆ ಆದರೂ ಕಪೋಲಕಲ್ಪತ ಅಲ್ಲ; ವಾಸ್ತವಿಕ ಸಂಗತಿಗಳನ್ನು ಜೋಡಿಸಿದ ಸತ್ಯಕಥನ. ವೈಯಕ್ತಿಕ ಅನುಭವ ಲಿಖಿತ ರೂಪದಲ್ಲಿ ದಾಖಲೆ ಆದರೆ ಅಲ್ಲಿ ತಾತ್ಕಾಲಿಕ ವೈಯಕ್ತಿಕ ಮಾಸಿ, ಸಾಹಿತ್ಯದ ಪುಟಗಳಲ್ಲಿ ಹೊಸ ಬಣ್ಣ ಪಡೆದು ಆ ಅನುಭವಗಳು ಶಾಶ್ವತವಾಗಿ ಉಳಿಯುತ್ತದೆ’ ಎಂಬ ಅವರ ಮಾತಿನಂತೆ, ಹಾಳಿತವಾದ ಬರವಣಿಗೆ, ಶ್ರೇಷ್ಠ ನಿರೂಪಣೆ, ವಿಶಿಷ್ಟ ನುಡಿಕಟ್ಟುಗಳ ಬಳಕೆ, ಶ್ರೇಷ್ಠ ಮಾತುಗಳು, ಸರಳ ತತ್ತ್ವಜ್ಞಾನ ಮುಂತಾದವುಗಳ ಪಾಕದಿಂದಾಗಿ ತುಳು ಸಾಹಿತ್ಯ ಸಂದರ್ಭದಲ್ಲಿ ಪ್ರಮುಖ ಕೃತಿಯಾಗಿ ಮಿಂಚುತ್ತದೆ.

ತುಳು ಪ್ರವಾಸ ಸಾಹಿತ್ಯದಲ್ಲಿ ಎರಡನೇ ಕೃತಿಯೆಂದರೆ ಡಿ. ಸುವಾಸಿನಿ ಹೆಗ್ಡೆಯವರು ಬರೆದ ‘ದೇಸಾಂತ್ರೊಡು’ (೧೯೯೮) ಎಂಬುದು. ಎಂ.ಜಾನಕಿಯವರು ಭಾರತ ಉತ್ತರ ಭಾಗವನ್ನು ಸಂದರ್ಶಿಸಿ, ಪ್ರವಾಸ ಕಥನ ನಿರೂಪಿಸಿದ್ದಾರೆ. ಈ ಕೃತಿ ಭಾರತ ಬಿಟ್ಟು, ಹದಿಮೂರು ದೇಶಗಳನ್ನು ನೋಡಿದ ಮಾಹಿತಿಯನ್ನು ಕೊಡುತ್ತದೆ. ಡಿ. ಸುವಾಸಿನಿ ಹೆಗ್ಡೆಯವರು ವಿಜಯಾ ಬ್ಯಾಂಕಿನಲ್ಲಿ ಶಾಖಾ ಮುಖ್ಯಸ್ಥರಾಗಿದ್ದಾಗ, ತರಬೇತಿಯ ಕಾರಣಕ್ಕಾಗಿ ಇಂಗ್ಲೆಂಡಿಗೆ ಹೋದವರು, ಅಲ್ಲಿಂದ ಫ್ರಾನ್ಸ್‌. ಸ್ವಿಟ್ಜರ್‌ಲೇಂಡ್‌, ಇಟೆಲಿ, ಆಸ್ಟ್ರೀಯಾ, ಜರ್ಮನಿ ಬೆಲ್ಜಿಯಮ್‌, ನ್ಯೂಜೆರ್ಸಿ, ಬಫೆಲೋ, ಅಮೇರಿಕಾದ ಕೆಲವು ಭಾಗಗಳನ್ನು ನೋಡಿಕೊಂಡು ಮಲೇಷಿಯಾ, ಸಿಂಗಾಪುರವಾಗಿ ಭಾರತಕ್ಕೆ ಹಿಂತಿರುವವರೆಗಿನ ಪ್ರವಾಸ ಚಿತ್ರಣವನ್ನು ಇದರಲ್ಲಿ ನೀಡಿದ್ದಾರೆ. ಎಂ. ಜಾನಕಿಯವರು ಮುನ್ನುಡಿಯಲ್ಲಿ ಹೇಳಿದಂತೆ ದೇಶ ನೋಡಬೇಕು, ಖುಷಿ ಹೊಂದಬೇಕು ಎಂಬುದೇ ಈ ತಿರ‍್ಗಾಟದ ಉದ್ದೇಶ. ಆಯಾಯಾ ದೇಶಗಳ ಪ್ರಮುಖ ಐತಿಹಾಸಿಕ, ಪ್ರೇಕ್ಷಣಿಯ ಸ್ಥಳಗಳ ಸಂದರ್ಶನ ವಿವರ ಈ ಹೊತ್ತಗೆಯಲ್ಲಿ ಮೂಡಿಸಿದ್ದಾರೆ. ಅವರ ಆಪ್ತೇಷ್ಟರು, ಶಿಷ್ಯರು ಅವರು ಪ್ರವಾಸಕ್ಕೆ ಸಹಾಯ ಮಾಡಿದ ರೀತಿ, ಅವರು ಹೆಚ್ಚು ಕಾಲ ಕಳೆದ ಲಂಡನ್‌ನಲ್ಲಿ ಆಗಿನ ಭಾರತದ ಪ್ರಧಾನಮಂತ್ರಿ ಶ್ರೀ ಮೊರಾರ್ಜಿ ದೇಸಾಯಿ ಹಾಗೂ ವಿದೇಶ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿಯವರು ಬಂದಾಗ ನಡೆದ ಘಟನೆ ಮುಂತಾದ ಕೆಲವು ಕುತೂಹಲದ ವಿವರಗಳು ಇದರಲ್ಲಿವೆ. ಅಲ್ಲದೆ ಫ್ರಾನ್ಸ್‌ನ ಗಿಲೆಟಿನ್‌ ಚೌಕ, ಸ್ವಿಟ್ಜರ್‌ಲೆಂಡ್‌ನ ಫಿಟ್ಸ್‌ಬರ್ಗ್ ಗುಡ್ಡೆ, ಅಮೇರಿಕಾದ ನ್ಯೂಜೆರ್ಸಿ, ನಯಾಗರದ ನೀರು, ಮಲೇಶಿಯಾದ ಮಸೀದಿಯ ವಾಸ್ತುಶಿಲ್ಪ, ಥೈಲಾಂಡ್‌ನ ಗ್ರಾಂಡ್‌ ಪ್ಯಾಲೇಸ್‌, ಹಾಂಗ್‌ಕಾಂಗ್‌ನ ಟೈಗರ್‌ ಬಾಮ್‌ ಗಾರ್ಡನ್‌ ಮುಂತಾದ ಸ್ಥಳಗಳ ಅಂದ ಚೆಂದ ವ್ಯಾವಹಾರಗಳನ್ನು ಮನದುಂಬು ವಂತೆ ವಿವರಿಸುವ ಡಿ. ಸುವಾಸಿನ ಹೆಗ್ಡೆಯವರ ‘ದೇಸಾಂತ್ರೊಡು’ (ದೇಶಾಂತರದಲ್ಲಿ) ಒಂದು ಅತ್ಯುತ್ತಮ ಪ್ರವಾಸ ಕಥನ.

ತುಳು ಭಾಷೆಯಲ್ಲಿ ಮೊದಲೆರಡು ಪ್ರವಾಸ ಕಥನಗಳು ಮಹಿಳೆಯರಿಂದಲೇ ಬಂದಿರುವುದು ಒಂದು ವಿಶೇಷವೇ. ಮೂರನೆಯ ಕೃತಿ “ನೇಪಾಲ, ಅಮೇರಿಕಾ ಪ್ರವಾಸ” (೨೦೦೫) ಕಥನವನ್ನು ನಿರೂಪಿಸಿದ ಬಿ.ಎ. ಪ್ರಭಾಕರ ರೈಯವರು.

‘ನೇಪಾಲ ಅಮೇರಿಕಾ ಪ್ರವಾಸ’ ಹೊತ್ತಗೆ ಎರಡು ಭಾಗಗಳನ್ನು ಹೊಂದಿದೆ. ಭಾಗ ಒಂದರಲ್ಲಿ ನೇಪಾಲ ಪ್ರವಾಸದ ವಿವರವೂ, ಭಾಗ ಎರಡರಲ್ಲಿ ಅಮೇರಿಕಾ ಪ್ರವಾಸದ ವಿವರವನ್ನು ನೀಡಲಾಗಿದೆ. ನೇಪಾಲದ ಕಾಟ್‌ಮಂಡ್‌, ಅಲ್ಲಿನ ನಗರ ಜೀವನ, ದೇವಾಲಯಗಳು, ಬೌದ್ಧ ಸ್ತೂಪಗಳು, ಪೋಬ್ರಾನ್‌, ಚಿತ್‌ವಾನ್‌ ಮುಂತಾದ ಸುಂದರ ಊರುಗಳು, ಹೋಟೆಲ್‌ ಸ್ಕೈಲ್‌ನ್‌ನ ವಿಶೇಷತೆಗಳು, ನೇಷಾನಲ್‌ ಪಾರ್ಕ್‌‌ನ ವಿವರಗಳು ಮುಂತಾದವುಗಳ ವಿವರಗಳು ಭಾಗ ಒಂದರಲ್ಲಿ ಸೋಪಜ್ಞವಾಗಿ ಮೂಡಿಬಂದಿದೆ. ಭಾಗ ಎರಡರಲ್ಲಿ ಅಮೇರಿಕಾ ಪ್ರವಾಸದಲ್ಲಿ ಫಿಲಡೆಲ್ಪಯಾ, ಅಟ್ಲಾಂಟಿಕ್‌ ಸಿಟಿ, ನ್ಯೂಜೆರ್ಸಿ, ಬೋಸ್ಟನ್‌ ಪಟ್ಟಣಗಳು ನ್ಯೂಯಾರ್ಕ, ನಯಾಗರ ಫಾಲ್ಸ್‌, ಡಿಸ್ನೀಲ್ಯಾಂಡ್‌ ಮುಂತಾದ ಊರುಗಳ ಪ್ರೇಕ್ಷಣೀಯ ಸ್ಥಳಗಳ, ಅಲ್ಲಾದ ಅನುಭವಗಳನ್ನು ಬಹಳ ಸೊಗಸಾಗಿ ಬರೆಯುತ್ತಾರೆ. ಬರವಣಿಗೆಯ ಉದ್ದಕ್ಕೂ ಆಯಾ ಊರಿನಲ್ಲಿ ನಡೆದ ಕೆಲವು ಘಟನೆಗಳ ಸಂಭಾಷಣೆಗಳು. ವಿವರಗಳನ್ನು ಆಂಗ್ಲಭಾಷೆಯಲ್ಲಿ ನೀಡುತ್ತಾರೆ. ಇದೊಂದು ಕೊರತೆ ಎಂದೆನಿಸಿದರೂ ಒಟ್ಟಾರೆಯಾಗಿ ತುಳುವಿನಲ್ಲಿ ಬಂದ ಮೊದಲೆರಡು ಪ್ರವಾಸ ಕಥನಗಳಿಗಿಂತ ಇದು ತೀರಾ ಭಿನ್ನವಾದುದು. ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಕ್ರಮ, ನೋಡುವ ದೃಷ್ಟಿಕೋನಗಳಿಗನುಗುಣವಾಗಿ ಅವರ ಸ್ವೀಕರಣವಿರುತ್ತದೆ. ಅದರಂತೆಯೇ ತುಳುವಿನಲ್ಲಿ ಬಂದ ಮೂರು ಪ್ರವಾಸ ಕಥನ ನಿರೂಪಣೆ ಆಯಾಯ ಲೇಖಕರ ದೃಷ್ಟಿಕೋನಕ್ಕೆ ಅನುಗುಣವಾಗಿ ಮೂಡಿ ಬಂದಿರುವುದು ಸತ್ಯ. ಇದುವರೆಗೆ ಬಂದಿರುವ ಈ ಮೂರು ಪ್ರವಾಸ ಕಥನಗಳು ತುಳು ಸಾಹಿತ್ಯ ಲೋಕಕ್ಕೆ ಅತ್ಯಮೂಲ್ಯ ಕಾಣಿಕೆಗಳಾಗಿವೆ ಮಾತ್ರವಲ್ಲ, ಇತರೇ ಭಾಷೆಗಳಲ್ಲಿ ಪ್ರವಾಸ ಕಥನ ಬರೆವವರಿಗೆ ಮಾದರಿ ರೂಪದಲ್ಲಿ ಇವೆ.

ಗದ್ಯ ಸಾಹಿತ್ಯ

ತುಳು ಭಾಷಾ ಸಾಹಿತ್ಯಲೋಕದಲ್ಲಿ ಗದ್ಯದ ಬನಿ ಶುರುವಾದದ್ದೆ ೧೯೨೦ರ ನಂತರದಲ್ಲಿ. ಕಾವ್ಯ, ನಾಟಕಗಳು ಸೃಜನಶೀಲ ಅಭಿವೃದ್ಧಿಗೆ ಪೂರಕವಾಗಿರುವುದರಿಂದ ಉಳಿದೆಲ್ಲಾ ಪ್ರಮುಖ ಭಾಷೆಗಳಂತೆ ತುಳುವಿನಲ್ಲೂ ಕೂಡಾ ಕಾವ್ಯ ಪ್ರಕಾರವೇ ಹೆಚ್ಚು ವಿಜೃಂಭಿಸಿದಂತಿದೆ. ಬಹುಶಃ ಗದ್ಯ ಬರಹಗಳಿಗೆ ಪೋಷಕರಿಂದ ಹಾಗೂ ವಿಶೇಷವಾಗಿ ಓದುಗರಿಂದ ಸರಿಯಾದ ಪ್ರತಿಕ್ರಿಯೆ ಸಿಗದಿದ್ದುದರಿಂದ, ಜೊತೆಗೆ ತುಳುನಾಡಿನ ಆಡಳಿತ ಭಾಷೆ ಕನ್ನಡವಾಗಿದ್ದುದು ಕೂಡ ಗದ್ಯ ಬರಹಗಳ ನಿರಾಸಕ್ತಿಗೆ ಕಾರಣವಿದ್ದಿರಬೇಕು.

ತುಳು ಜನಪದ ಸಾಹಿತ್ಯದಲ್ಲಿ ಕತೆ, ಗಾದೆ. ಒಗಟುಗಳ ರೂಪದಲ್ಲಿ ಗದ್ಯ ರೂಪ ಹೇರಳವಾಗಿ ಸಿಗುತ್ತದೆ. ಶಿಷ್ಟ ಸಾಹಿತ್ಯದಲ್ಲಿ ತುಳು ಲಿಪಿಯ ಓದು ಒಂದು ಸಮಸ್ಯೆಯಾಗಿದ್ದುದರಿಂದ, ಬ್ರಾಹ್ಮಣೇತರ ಬಹುಸಂಕ್ಯಾತ ವರ್ಗಕ್ಕೆ ಸಾಹಿತ್ಯ ಎಚನೆ ಒಂದು ಸವಾಲಾಗಿಯೇ ಉಳಿಯಿತು. ಜನಪದ ಸಾಹಿತ್ಯದಲ್ಲಿ ಗದ್ಯ ಪದ್ಯಗಳಲ್ಲಿ ಸೃಷ್ಟಿಶೀಲ ಮನಸ್ಸಿನ ನಿರಾಳತೆ ಮತ್ತು ಖಚಿತತೆಯನ್ನು ಗಮನಿಸಬಹುದು. ಆದರೆ ಬರಹದ ರೂಪದಲ್ಲಿ ಯಾವುದೇ ಅಭಿವ್ಯಕ್ತಿ ಮೂಡಿದಾಗ ಶಿಷ್ಟ ಭಾಷೆಗಿರುವ ಗಟ್ಟಿತನ ಹಾಗೂ ಒಂದು ವಿಶಿಷ್ಟ ಚೌಕಟ್ಟಿನಿಂದಾಗಿ ನಿರಾಳತೆಯನ್ನು ಕಾಣುವುದು ಸಾಧ್ಯವಾಗುವುದಿಲ್ಲ. ಬ್ರಾಹ್ಮಣೇತರ ವರ್ಗದ ತುಳು ಜನಪದ ಸಾಹಿತ್ಯಕ್ಕೂ, ಶಿಷ್ಟ ಸಾಹಿತ್ಯಕ್ಕೂ ಇರುವ ವ್ಯತ್ಯಾಸ ಕೂಡ ಇದೇ ಆಗಿದೆ. ತುಳು ಭಾಷಾ ಲಿಪಿಯ ಸಂವಹನದ ತೊಡಕಿನಿಂದಾಗಿ ಅದನ್ನು ಕೇವಲ ಕಾವ್ಯಾಭಿವ್ಯಕ್ತಿಗೆ ಸೀಮಿತಗೊಳಿಸಿದಂತಿದೆ. ಅನಕ್ಷರಸ್ಥ ತುಳುವರ ಜ್ಞಾನ ತುಂಬುತ್ತಿದ್ದರು. ಯಕ್ಷಗಾನ, ತಾಳಮದ್ದಳೆಗಳೇ ಮುಂತಾದ ಕೂಟಗಳು, ಮಾತ್ರವಲ್ಲ ಮಠಮಂದಿರಗಳ ಕೆಲವೊಂದು ವಿಶೇಷ ಕಾರ್ಯಕ್ರಮಗಳಿಂದಾಗಿ, ತುಳು ಭೌಗೋಳಿಕ ಚೌಕಟ್ಟನ್ನು ಆಳಿಕೊಂಡಿದ್ದು, ಸಾಹಿತ್ಯ ರಚನೆಗೆ ತಮ್ಮದೇ ಆದ ಮಿತಿಯೊಳಗೆ ಸಹಕಾರ ನೀಡುತ್ತಿದ್ದ ಸಣ್ಣ ಪುಟ್ಟ ಅರಸರು, ವೈದಿಕ ಮನೆತನಗಳು, ಬ್ರಿಟಿಷರ ಆಡಳಿತ ಇವೇ ಮುಂತಾದ ಕಾರಣಗಳಿಂದ ಪ್ರಾಚೀನ ತುಳು ಭಾಷೆಯಲ್ಲಿ (ಆರಂಭಿಕ ಹಂತ) ಅಭಿವ್ಯಕ್ತಿ ಹಾಗೂ ಸಂವಹನದ ಕೊರತೆಯನ್ನು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಈ ಲೋಪವನ್ನು ತುಂಬಿದವರು ಕ್ರೈಸ್ತ ಮಿಶನರಿಗಳು.

೧೮೩೪ರಲ್ಲಿ ತುಳುನಾಡಿಗೆ ಬಂದಿಳಿದ ಬಾಸೆಲ್‌ಮಿಶನ್‌, ತುಳು ಸಾಹಿತ್ಯ ಸಂಪತ್ತನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸಿತು. ತುಳು ಭಾಷೆಯ ಸಂವಹನಕ್ಕಾಗಿ ಕನ್ನಡ ಲಿಪಿಯನ್ನು ಅದು ಆಯ್ದುಕೊಂಡಾ ತುಳುಭಾಷೆಯ ಜನಪ್ರಿಯತೆ ಇನ್ನು ಜಾಸ್ತಿಯಾದದ್ದಲ್ಲದೆ, ತುಳುವಿಗೆ ಆಧುನಿಕ ಸಂದರ್ಭದಲ್ಲಿ ಸಾಹಿತ್ಯಿಕ ಮೌಲ್ಯವೂ ಒದಗಿ ಬಂತು. ಹೊಸಗನ್ನಡ ಸಾಹಿತ್ಯದಲ್ಲಿ ಮಿಶನರಿಗಳ ಪಾತ್ರ ಇರುವಂತೆಯೇ, ತುಳು ಸಾಹಿತ್ಯ ಚರಿತ್ರೆಯಲ್ಲಿ ಮಿಶನರಿಗಳು ಕೈಗೊಂಡ ಸಂಶೋಧನೆ, ಅನುವಾದ ಕಾರ್ಯಗಳು ಆರಂಭದಲ್ಲಿ ಹೊಸ ತುಳು ಭಾಷಾ ಬೆಳವಣಿಗೆಗೆ ಪೂರಕ ನೆಲೆಗಳಾದುವು. ಆ ದಿಸೆಯಿಂದಾಗಿ ೧೯೨೫ರಿಂದ ತುಳುವರಿಂದಲೇ ಸೃಜನಶೀಲ ಕೃತಿಗಳು ಬರತೊಡಗಿದವು. ೧೯೨೮ರಲ್ಲಿ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ನಡೆದ ತುಳು ಸಾಹಿತ್ಯ ರಚನಾ ಚಳುವಳಿ ಹೊಸ ತುಳು ಸಾಹಿತ್ಯದ ನವೋದಯ ಕಾಲಘಟ್ಟ ಎಂದು ಕರೆಯಬಹುದು. ಆ ಸಂದರ್ಭದಲ್ಲಿ ತುಳುವಿನ ಕಾವ್ಯ ಪ್ರಕಾರ ಮಾತ್ರವಲ್ಲದೆ, ನಾಟಕ, ಯಕ್ಷಗಾನ ಹಾಗೂ ಕಥೆ ಮುಂತಾದ ಗದ್ಯ ಬರಹಗಳು ಬಂದುವು.

ತುಳುವಿನಲ್ಲಿ ಬಂದ ಗದ್ಯ ಸಾಹಿತ್ಯವನ್ನು ಅವಲೋಕಿಸುವಾಗ, ಆಧುನಿಕ ಸಂದರ್ಭದಲ್ಲಿನ ಒಂದು ಪ್ರಬಂಧದ ಸ್ವರೂಪ, ಪರಿಕಲ್ಪನೆ ಹಾಗೂ ಚೌಕಟ್ಟಿನೊಂದಿಗೆ, ಸಂಶೋಧನಾ ಪ್ರಬಂಧ, ಲೇಖನ ರೂಪದ ಬರಹಗಳನ್ನು ಒಳಗೊಂಡು ಚರ್ಚಿಸಲಾಗಿದೆ. ೧೯೨೮ರಿಂದ ೧೯೩೬ರ ವರೆಗೆ ಉಡುಪಿಯಲ್ಲಿ ನಡೆದ ತುಳು ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ತುಳು ಸಾಹಿತ್ಯ ಮಾಲೆಯಲ್ಲಿ ಹಲವಾರು ಕೃತಿಗಳು ಪ್ರಕಟಗೊಂಡುವು. ಬಡಕಬೈಲು ಪರಮೇಶ್ವರಯ್ಯ ನಂದೊಳ್ಗೆ ಶೀನಪ್ಪ ಹೆಗ್ಗಡೆ, ನಾರಾಯಣ ಕಿಲ್ಲೆ, ಎಸ್‌.ಯು. ಪಣಿಯಾಡಿ. ಎಂ.ವಿ. ಹೆಗ್ಡೆ, ಮಾಧವ ತಿಂಗಳಾಯ, ಸತ್ಯಮಿತ್ರ ಬಂಗೇರ ಮುಂತಾದವರ ಕಾವ್ಯ, ಯಕ್ಷಗಾನ, ಕಾದಂಬರಿ, ವ್ಯಾಕರಣ ಸಂಬಂಧೀ ಕೃತಿಗಳು ಪ್ರಕಟಗೊಂಡುವು. ಅವುಗಳಲ್ಲಿ ಸಂಶೋಧನಾ ಪ್ರಬಂಧದ ಸ್ವರೂಪದಲ್ಲಿರುವ ಮೊದಲ ಕೃತಿ ಎಂದರೆ ಸತ್ಯ ಮಿತ್ರಬಂಗೇರರ ‘ಅಳಿಯ ಸಂತಾನೊದ ಕಟ್ಟ್‌ದ ಗುಟ್ಟು’ (೧೯೩೦) ಈ ಕೃತಿಯಲ್ಲಿ ಅಳಿಯ ಸಂತಾನ ಪದ್ಧತಿ ಹೇಗೆ ಬಂತು? ಅದರ ಕಾಲ, ಅವುಗಳಿಗೆ ಸಂಬಂಧಪಟ್ಟ ದಾಖಲೆಗಳು ಮುಂದಾವುಗಳನ್ನು ನೀಡಿ ಲೇಖಕರು ಆ ವಿಷಯದ ಮೇಲೆ ಸಂಶೋಧನಾತ್ಮಕ ಬೆಳಕು ಚೆಲ್ಲಿದ್ದಾರೆ. ತುಳುನಾಡಿನಲ್ಲಿ ಪ್ರಚಲಿತವಿದ್ದ ಅಳಿಯಸಂತಾನ ಕಟ್ಟಿನ ಕುರಿತು ಆ ಕಾಲದಲ್ಲಿ ಪ್ರಚಲಿತವಿದ್ದ ಅನ್ಯಜ್ಞಾನ ಶಿಸ್ತುಗಳ ಆಧಾರದಲ್ಲಿ ಸ್ವಯಂ ಅಧ್ಯಯನ ಮಾಡಿ, ಸಮಗ್ರ ಮಾಹಿತಿ ನೀಡಲು ಪ್ರಯತ್ನಿಸಿದ ಮೊದಲಿಗರೆಂದರೆ ಸತ್ಯಮಿತ್ರ ಬಂಗೇರರು. ಅದೇ ಕೃತಿಯಲ್ಲಿ ಕೆಲವೊಂದು ಶಾಸ್ತ್ರೀಯ ವಿಚಾರಗಳ ಕುರಿತು ಮಾಹಿತಿ ರೂಪದ ಲೇಖನಗಳನ್ನು ನೀಡಿದ್ದಾರೆ. ಪ್ರಕೃತಿ ಶಾಸ್ತ್ರ, ಮರ್ಮಶಾಸ್ತ್ರ, ಸಂಸಾರ ಶಾಸ್ತ್ರ, ಮನಃಶಾಸ್ತ್ರ, ಮಾನವಶಾಸ್ತ್ರ, ಧರ್ಮಶಾಸ್ತ್ರಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಸತ್ಯಮಿತ್ರ ಬಂಗೇರರು ತುಳುವ ಮಹಾಸಭೆತೋ ವಾರ್ಷಿಕ (೧೯೨೯) ಎಂಬ ಉಡುಪಿಯಿಂದ ಪ್ರಕಟಗೊಂಡ ಪುಸ್ತಕದಲ್ಲಿ ‘ಮಿಶನರಿಕುಲಾ ತುಳುಬಾಸೆಲಾ’ ಎಂಬ ಲೇಖನ ಪ್ರಕಟ ಮಾಡಿದ್ದು ಅದರಲ್ಲಿ ಬಾಸೆಲ್‌ಮಿಶನ್‌ನವರು ತುಳುಭಾಷೆ ಮತ್ತು ಸಾಹಿತ್ಯಕ್ಕೆ ಯಾವ ತೆರನಾದ ಕಾಣಿಕೆ ನೀಡಿದ್ದಾರೆ ಎಂಬುದರ ವಿವರವಿದೆ. ಅದಲ್ಲದೆ ‘ತುಳುವ ಸಂಸ್ಕೃತಿ’ ಎಂಬ ವಿಸ್ತ್ರತವಾದ ಲೇಖನವನ್ನು ಬರೆದಿದ್ದಾರೆ. ಅದರಲ್ಲಿ ತುಳುನಾಡಿನ ವರ್ಣನೆ, ಭೌಗೋಳಿಕ ವಿವರಗಳು, ಹಸಿರು, ಪ್ರಾಣಿಗಳು, ಔಷಧೀಯ ಬಳ್ಳಿ ಬೇರುಗಳು. ಜನರು ಬಳಸುವ ಅಳತೆಯ ಮಾಪನಗಳು, ದೇವಾಲಯ, ಬಸ್ತಿ, ಮಠಗಳ ವಾಸ್ತು, ಬೇಸಾಯಕ್ಕೆ ಬಳಸುವ ವಿವಿಧ ಸಲಕರಣೆಗಳು. ಮೀನುಗಾರಿಕೆ ಸಂಬಂಧೀ ಹಾಡುಗಳು, ಧಾನ್ಯ ಸಂಗ್ರಾಹಕಗಳು, ಅಡುಗೆ ಸಂಬಂಧೀ ವಿಚಾರಗಳು, ಆಚಾರ ವಿಚಾರ, ತುಳುವರಿಗೆ ಇರುವ ವೈಜ್ಞಾನಿಕ ತಳಹದಿ (ಬೆಲ್ಲ ತಯಾರಿಸುವ ಬಗ್ಗೆ) ಮುಂತಾದವುಗಳು ಬಗ್ಗೆ ಸಮಗ್ರ ಒಳನೋಟವನ್ನು ದಾಖಲಿಸುತ್ತಾರೆ. ಇದಲ್ಲದೆ ಸತ್ಯಮಿತ್ರ ಬಂಗೇರರು ನವಯುಗ ಪತ್ರಿಕೆಯ ತುಳು ಸಂಚಿಕೆಯಲ್ಲಿ ಕೆಲವು ಮೌಲ್ಯಯುಕ್ತ ಲೇಖನಗಳನ್ನು ಬರೆದಿದ್ದಾರೆ. ‘ಕತ್ತಲೆಡ್ ತುಳುನಾಡ್‌’ ಎಂಬ ಹೆಸರಿನಲ್ಲಿ ಬರೆದ ಮೂರು ಲೇಖನಗಳು ೨೪ನೇ ಡಿಸೆಂಬರ್‌, ೧೯೩೬, ೭ನೇ ಜನವರಿ ೧೯೩೭; ಹಾಗೂ ೨೫ನೇ ಫೆಬ್ರವರಿ, ೧೯೩೭ ವರ್ಷದ ಸಂಚಿಕೆಗಳಲ್ಲಿ ಪ್ರಕಟಗೊಂಡಿದ್ದವು. ಮೊದಲ ಲೇಖನ ‘ಗ್ರೀಕೆರೆ ಚರಿತ್ರೆಡ್‌ ತುಳುನಾಡು’ ಎಂಬುದು. ಇದರಲ್ಲಿ ಗ್ರೀಕರಿಗೂ ತುಳುನಾಡಿಗೂ ಇರುವ ಅಂತಸ್ಸಂಬಂಧವನ್ನು ಚಚ್ಚಿಸುತ್ತಾರೆ. ಅವರ ಎರಡನೇ ಲೇಖನ ‘ಐಗುಪ್ತನ ಚರಿತ್ರೆಡ್‌ ತುಳುನಾಡ್‌’ (ಐಗುಪ್ತದ ಚರಿತ್‌ಎಯಲ್ಲಿ ತುಳುನಾಡು – ೧೯೩೭) ಇದರಲ್ಲಿ ಈಜಿಪ್ತರು ‘ರಾ’ ಪಕ್ಷಿಯನ್ನು ದೇವರೆಂದು ನಂಬಿಕೊಂಡಿದ್ದರು. ಆ ಪಕ್ಷಿ ಬಾರತದಿಂದ ಬಂದಿರಬೇಕು ಮಾತ್ರವಲ್ಲ ಅಲ್ಲಿ ಪೊಯಿನಿಕ್ಸ್‌(phoenix) ಎಂಬ ಈ ಹೆಸರಿನ ಈ ಹಕ್ಕಿ ತುಳುವಿನ ಬಾನಪಕ್ಕಿಯ ತದ್ಭವ ರೂಪ ಎಂಬುದು ಅವರ ಪ್ರತಿಪಾದನೆ. ಅವರ ಮೂರನೆ ಲೇಖನ ‘ಹೆಲ್ಲೇನಿಸ್ತೆರ್‌ ಚರಿತ್ರೆಡ್‌ ತುಳುನಾಡ್‌’ (ಹೆಲ್ಲೀನಿಸ್ತರ ಚರಿತ್ರೆಯಲ್ಲಿ ತುಳು ನಾಡು – ೧೯೩೭) ಇದರಲ್ಲಿ ಗ್ರೀಕರಿಗೂ, ತುಳುವರಿಗೂ ಇದ್ದ ವ್ಯಾಪಾರೀ ಸಂಬಂಧಕ್ಕಾಗಿ ನಾಣ್ಯಗಳ ಚಲಾವಣೆಯ ಕುರಿತಂತೆ ಇರುವ ಕೆಲವು ಅಂಶಗಳನ್ನು ಚರ್ಚಿಸುತ್ತಾರೆ. ಹೀಗೆ ೧೯೩೭ರ ವರೆಗೆ ಸತ್ಯಮಿತ್ರ ಬಂಗೇರರು ಬರೆದ ಕೆಲವು ಸಂಶೋಧನಾತ್ಮಕ ನೆಲೆ ಉಳ್ಳಂತಹ ಕೆಲವು ಲೇಖನ ಬಿಟ್ಟರೆ, ಉಳಿದಂತೆ ಯಾವ ಲೇಖನವೂ ಉಪಲಬ್ಧವಿಲ್ಲ.

ಮತ್ತೆ ತುಳುವಿನಲ್ಲಿ ಗದ್ಯ ರೂಪದ ಹೊತ್ತಗೆಯನ್ನು ಪ್ರಕಟಿಸಿದವರು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆಯವರು. ಬಹುಮುಖ ಪ್ರತಿಭಾ ಸಂಪನ್ನರಾದ ಶ್ರೀ ಹೆಗ್ಗಡೆಯವರು ಜನಸಾಮಾನ್ಯರಿಗೂ ತನ್ನ ಅನಿಸಿಕೆಗಳು ತಲುಪಬೇಕೆಂದರೆ ತುಳುಭಾಷೆಯೇ ಅತ್ಯುತ್ತಮ ಎಂದು ಭಾವಿಸಿ ೧೯೪೨ರಲ್ಲಿ ೪ ಕೃತಿಗಳನ್ನು ಪ್ರಕಟಿಸಿದರು. ಅವುಗಳೆಂದರೆ ದೇವೆರ್‌ (ದೇವರು), ಪಾಪಪುಣ್ಯೊ (ಪಾಪ ಪುಣ್ಯ), ಜೈನೆರ್‌( ಜೈನರು) ಹಾಗೂ ಆರಾಧನೋ (ತುಳು ನಿತ್ಯ ವಿಧಿ) ಸರಸ್ವತೀ ಪ್ರೀಟಿಂಗ್‌ವರ್ಕ್ಸ್‌ಲಿಮಿಟೆಡ್‌, ಮಂಗಳೂರು ಇಲ್ಲಿ ಪ್ರಕಟಗೊಂಡಿರುವ ಈ ಕೃತಿಗಳಲ್ಲಿ ದೇವೆರ್‌ (ದೇವರು – ೧೯೪೨) ಪುಸ್ತಕ ಸುಮಾರು ೧೪ ಪುಟದ್ದು. ಆಧ್ಯಾತ್ಮಿಕ ವಿಚಾರಗಳ ಕುರಿತಾಗಿ ಪ್ರಶ್ನೋತ್ತರ ರೂಪದಲ್ಲಿ ಮೂಡಿಬಂದ ಒಂದು ವೈಚಾರಿಕ ಪ್ರಬಂಧ. ಭಗವದ್ಗೀತೆ, ಉಪನಿಷತ್‌, ತತ್ವಾರ್ಥಸೂತ್ರ ಇತ್ಯಾದಿ ಪುಸ್ತಕಗಳ ಸಾರವನ್ನು ಸರಳ ರೀತಿಯಲ್ಲಿ ತುಳುವರಿಗೆ ಹೇಳಬೇಕು ಎಂಬ ಉದ್ದೇಶದಿಂದ, ಲೇಖದದ ಉದ್ದಕ್ಕೂ ಸಣ್ಣ, ಸಣ್ಣ ಪ್ರಶ್ನೆಗಳನ್ನು ಹಾಕಿಕೊಂಡು, ಆ ಪ್ರಶ್ನೆಗಳಿಗೆ ವಿಸ್ತ್ರತವಾದ ಉತ್ತರವನ್ನು ನೀಡುತ್ತಾ, ದೇವರ ಕುರಿತು ತನ್ನದೇ ಆದ ನಿಲುವನ್ನು ವ್ಯಕ್ತಪಡಿಸುತ್ತಾರೆ. ಸಮಕಾಲೀನ ಸಂದರ್ಭದಲ್ಲಿ ದೇವರ ಆರಾಧನೆಯ ಭಿನ್ನ ನೆಲೆಗಳನ್ನು, ಅವುಗಳ ತಾರ್ಕಿಕತೆಯನ್ನು ಬಹಳ ಸೊಗಸಾಗಿ ಚರ್ಚಿಸುತ್ತಾರೆ.

ಅವರ ಇನ್ನೊಂದು ಕೃತಿ ಜೈನರ್‌ (ಜೈನರು – ೧೯೪೨) ಜೈನರು, ಜೀನೇಶ್ವರ, ಆತ್ಮ, ಅರ್ಹಂತರ ಕುರಿತಾದ ವಿವರಣೆಯನ್ನು ಪ್ರಸ್ನೋತ್ತರ ರೂಪದಲ್ಲಿ ನೀಡಿದ ಕೃತಿಯಿದು. ಮಂಜಯ್ಯ ಹೆಗ್ಗಡೆಯವಯವರ ಪಾಪ-ಪುಣ್ಯೊ (ಪಾಪ-ಪುಣ್ಯ-೧೯೪೨) ಎಂಬ ಕೃತಿ ಧಾರ್ಮಿಕ ವಿಚಾರಗಳ ಕುರಿತಂತೆ ಇದ್ದು, ಒಂದೆರಡು ಪಾತ್ರಗಳ ಮೂಲಕ ನಾಟಕದ ಸಂಭಾಷಣೆಯಂತೆ ನಿರೂಪಿಸುತ್ತಾರೆ.

ತುಳು ನಿತ್ಯವಿಧಿ (೧೯೪೨) ಎಂಬುದು ಜೈನ ಮತಾವಲಂಬಿಗಳಿಗೆ ಮಾರ್ಗದರ್ಶಿ ರೂಪದಲ್ಲಿದ್ದು, ದೇವರಾಧನೆಯ ವಿಧಿ ವಿಧಾನಗಳನ್ನು ಸರಳ ಸುಂದರವಾಗಿ ನಿರೂಪಿಸಲಾಗಿದೆ. ಶ್ರೀ. ಡಿ. ಮಂಜಯ್ಯ ಹೆಗ್ಗಡೆಯವರಿಂದ ರಚಿಸಲ್ಪಟ್ಟ ೪ ಪುಸ್ತಕಗಳಲ್ಲಿ ೩ ಪುಸ್ತಕಗಳು ಗದ್ಯರೂಪದಲ್ಲಿದ್ದು, ಅವುಗಳ ಇಂದಿನ ಪ್ರಬಂಧಗಳ ಸ್ವರೂಪಗಳ ಕುರಿತಂತೆ ನಾರ್ಣಾಯಕ ಮಾನದಂಡಗಳು ಇಲ್ಲದಿದ್ದುದರಿಂದ, ಮೇಲಿನವುಗಳು ಗದ್ಯರೂಪದಲ್ಲಿವುದರಿಂದ ಪ್ರಬಂಧ ಯಾ ಲೇಖನಗಳಿಗೆ ಹತ್ತಿರವಾಗಿರುವುದರಿಂದ ಸೇರಿಸಲಾಗಿದೆ.

ಸ್ವಾತಂತ್ರ‍್ಯಾನಂತರದ ಗದ್ಯ ಸಾಹಿತ್ಯ

೧೯೪೫ರ ನಂತರದಲ್ಲಿ ತುಳು ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ವಿಶೇಷವಾದ ರಚನೆಗಳೇನೂ ಆಗಲಿಲ್ಲ. ೧೯೬೯ರಲ್ಲಿ ಮಂಗಳೂರಿನಲ್ಲಿ ತುಳುಕೂಟ ಸ್ಥಾಪನೆಯಾದಂದಿನಿಂದ ತುಳು ಸಾಹಿತ್ಯ ಪ್ರಪಂಚದಲ್ಲಿ ಜಾಗೃತಿ ಮೂಡಿತು. ತುಳುಕೂಟ ಸಭೆ, ಸಮಾರಂಭಗಳನ್ನಲ್ಲದೆತುಳು ಸಮ್ಮೇಳನಗಳನ್ನು ಆಯೋಜಿಸಿತು. ಇದರಿಂದಾಗಿ ವೈವಿಧ್ಯಮಯವಾಗಿ ತುಳುಸಾಹಿತ್ಯ ಬೆಳಗುವುದಕ್ಕೆ ಸಾಧ್ಯವಾಯಿತು. ಕಾವ್ಯ, ಕಾದಂಬರಿ ವಿಶೇಷವಾಗಿ ತುಳು ನಾಟಕಗಳು ರಚನೆಯಾಗಿ ತುಳು ಜನಮನವನ್ನು ಗೆದ್ದವು. ಪ್ರಬಂಧ, ಹರಟೆ, ಅಂಕಣ ಲೇಖನಗಳು ವಿವಿಧ ಲೇಖಕರಿಂದ ತುಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ೧೯೭೭ರ ನಂತರ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಯು.ಪಿ.ಉಪಾಧ್ಯಾಯರ ನೇತೃತ್ವದಲ್ಲಿ ಹಮ್ಮಿಕೊಂಡ ತುಳು ನಿಘಂಟಿನ ಕೆಲಸದಿಂದಾಗಿ ತುಳುಭಾಷಾ ಸಂಹಿತೆಗಳಿಗೆ ಸಮಗ್ರತೆ ಹಾಗೂ ಆಧುನಿಕ ಸಂವೇದನೆಗಳ ಎಲ್ಲಾ ರೀತಿಯ ಸಳವಹನ ಸಾಧ್ಯತೆಗಳು ಮೂಡತೊಡಗಿದವು.

ಸ್ವಾತಂತ್ರೋತ್ತರ ತುಳು ಸಾಹಿತ್ಯ ಸಂದರ್ಭದಲ್ಲಿ ತುಳು ಭಾಷೆ ಸಂಸ್ಕೃತಿಯ ಕುರಿತಾಗಿ ಆಳವಾದ ಅಧ್ಯಯನ ನಡೆಸಿ, ಅವುಗಳ ಫಲಿತಗಳನ್ನು ತುಳುವಿನಲ್ಲೆ ನೀಡಿದ ಮೊದಲಿಗರೆಂದರೆ ರಾಮಕೃಷ್ಣ ಶೆಟ್ಟಿಯವರು. ಅವರ ಮುಖ್ಯ ಕೃತಿಗಳೆಂದರೆ ೧. ತುಳುಟು ಸಂದರ್ಭೊಗು ಸರಿಯಾದ್‌ ಬಳಸುವ ಪ್ರಶ್ನಾವಾಕ್ಯಲು (ತುಳುವಿನಲ್ಲಿ ಸಂದರ್ಭಕ್ಕೆ ತಕ್ಕಂತೆ ಬಳಸುವ ಪ್ರಶ್ನಾವಾಕ್ಯಗಳು – ೧೯೮೩), ತುಳುಭಾಷೆ, ನಾಡ್‌ಪರಂಪರೆ (ತುಳು ಭಾಷೆ, ನಾಡು, ಪರಂಪರೆ -(೧೮೮೬), ತುಳು ಭಾಷೆ (ತುಳು ಭಾಷೆ – ೧೯೮೭), ತುಳುಟಾತಿ ಬುಳೆ (ತುಳುವಿನಲ್ಲಾದ ಸಾಹಿತ್ಯಿಕ ಬೇಸಾಯ – ೧೯೮೭), ತುಳು ಸಂಪೊತ್ತು (ತುಳು ಸಂಪತ್ತು – ೧೯೯೮) ಹೀಗೆ ಹಲವು ಕೃತಿಗಳನ್ನು ಅಧ್ಯಯನ ಪೂರ್ಣ ನೆಲೆಯಲ್ಲಿ ರಚಿಸಿದ್ದಾರೆ. ಅವರ ತುಳು ಸಂಪೊತ್ತು (೧೯೮೮) ಕೃತಿ ತುಳು ಸಾಹಿತ್ಯ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಒಂದು ಪ್ರಮುಖ ಆಕರ ಗ್ರಂಥ. ಅದುವರೆಗೆ ತುಳುವಿನಲ್ಲಿ ನಡೆದ ಸಾಹಿತ್ಯ ಕೃಷಿ, ದ್ರಾವಿಡ ಭಾಷೆಗಳಲ್ಲಿ ತುಳುವಿನ ಸ್ಥಾನ, ಕನ್ನಡ ಹಾಗೂ ಇತರ ಭಾಷಾ ವಿದ್ವಾಂಸರಿಂದ ತುಳುವಿನ ಕುಇತಾಗಿ ನಡೆದ ಸಂಶೋಧನೆಗಳು, ಪತ್ರಿಕಾರಂಗ, ಜಾನಪದ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ನಡೆದ ಅದುವರೆಗಿನ ಸೃಷ್ಟಿ ಹಾಗೂ ಅಧ್ಯಯನಗಳನ್ನು ಕಲೆಹಾಕಿ, ಅವುಗಳನ್ನೆಲ್ಲಾ ಬಹಳ ಅಚ್ಚುಕಟ್ಟಾಗಿ ಒಂದೆಡೆ ಸೇರಿಸಿ ದಾಖಲೀಕರಣ ಸ್ವರೂಪದ ಹೊತ್ತಗೆಯಾಗಿ ತಂದಿರುವುದು ಶ್ಲಾಘನೀಯ ವಿಚಾರ.

ಪಾತೆರ ಕತೆ (೧೯೮೯) ಕೃತಿ ಅ. ಬಾಲಕೃಷ್ಣ ಶೆಟ್ಟಿಯವರಿಂದ ರಚಿತವಾದದು. ಚಿಕ್ಕದಾದ ಕೃತಿಯಾದರೂ, ಭಾಷಿಕ ನೆಲೆಯ ಅಧ್ಯಯನಾಸಕ್ತರಿಗೆ ಮಾರ್ಗದರ್ಶಿ ಕೃತಿಯಿದು. ಭಾಷೆಯೊಂದು ಕಾಲಾನುಸಾರಿಯಾಗಿ, ಸಂದರ್ಭಾನುಸಾರವಾಗಿ ಹೇಗೆ ಕೆಲ ಶಬ್ದಗಳನ್ನು ಪಡಕೊಳ್ಳುತ್ತದೆ? ಮಾತುಕತೆಯಲ್ಲಿ ಅಯಾಚಿತವಾಗಿ ಕೆಲಪದಗಳು ಹೇಗೆ ಬಳಸಲ್ಪಡುತ್ತವೆ ಎಂಬುದನ್ನು ಪಾತೆರಕತೆ ಲೇಖನ ಚರ್ಚಿಸುತ್ತದೆ. ತುಳುವರ ಮಾತುಕತೆಯಲ್ಲಿ ಕೆಲವೊಂದು ಊರಿನ ಹೆಸರುಗಳು ಕೆಲ ವಿಶಿಷ್ಟ ಕಾರಣಗಳಿಗಾಗಿ ಹೇಗೆ ಪ್ರಾಮುಖ್ಯತೆ ಪಡೆಯುತ್ತದೆ ಎಂಬುದನ್ನು ಸೋದಾರಣವಾಗಿ ಚರ್ಚಿಸುತ್ತಾರೆ. ಉದಾಹರಣೆಗೆ ಸುಬ್ರಹ್ಮಣ್ಯದ ಷಷ್ಠಿ, ಉಡುಪಿಯ ಪರ್ಯಾಯ, ಧರ್ಮಸ್ಥಳದ ಲಕ್ಷದೀಪ, ಪೊಳಲಿಯ ಚೆಂಡು, ಕಾರ್ಕಳದ ಗೋಮ್ಮಟೇಶ್ವರ ಉಡುಪಿ ಮಟ್ಟಿಯ ಗುಳ್ಳ ಬದನೆ, ಉಳ್ಳಾಲದ ಮಸೀದಿ ಹೀಗೆ ಆಯಾ ಊರುಗಳು ಮಾತುಕತೆಯಲ್ಲಿ ಬಂದಾಗ ತನ್ನಿಂತಾನಾಗಿಯೇ ಆ ಊರಿನ ವೈಶಿಷ್ಟ್ಯ ನೆನಪಾಗುತ್ತದೆ. ಅದಕ್ಕಾಗಿ ಆಯಾಯೂರುಗಳು ಪ್ರಸಿದ್ಧಿಯನ್ನು ಪಡೆದಿವೆ ಎಂಬುದಾಗಿ ಚರ್ಚಿಸುತ್ತಾರೆ. ತುಳುವರ ಮಾತುಕತೆಯಲ್ಲಿ ನಮ್ಮ ಶರೀರದ ಭಾಗಗಳು ಆಗಾಗ ದ್ವಂದ್ವಾರ್ಥದ ನೆಲೆಯಲ್ಲಿ, ಹಾಸ್ಯದ ಪರಿಭಾಷೆಯಲ್ಲಿ ಬಳಕೆಯಾಗುವುದನ್ನು ಮಾತುಕತೆಯಲ್ಲಿ ನಮ್ಮ ಶರೀರ ಎಂಬ ಲೇಖನದಲ್ಲಿ ಚರ್ಚಿಸುತ್ತಾರೆ. ಬರವಣಿಗೆಯಲ್ಲಿ ತುಳು ಎಂಬ ಲೇಖನವಲ್ಲದೆ, ೧೯೩೬ರಲ್ಲಿ ನಡೆದ ತುಳುವ ಮಹಾಸಭೆಯ ಕುರಿತಾದ ಒಂದು ವರದಿಯನ್ನು ನೀಡುತ್ತಾರೆ. ಇದನ್ನು ತುಳು ಸಾಹಿತ್ಯ ಚರಿತ್ರೆಯಲ್ಲಿ ಒಂದು ಅಮೂಲ್ಯ ದಾಖಲೆ ಎಂದು ಪರಿಗಣಿಸಿರುವ ಅ. ಬಾಲಕೃಷ್ಣ ಶೆಟ್ಟಿಯವರು ೧೯-೧೨-೧೯೩೬ರಂದು ಅಮ್ಮೆಂಬಳ ಶಂಕರ ನಾರಾಯಣ ನಾವಡರ ಅಧ್ಯಕ್ಷತೆಯಲ್ಲಿ ನಡೆದ ನಿರ್ಣಯಗಳನ್ನು ಇಲ್ಲಿ ಪೂರ್ಣ ದಾಖಲಿಸುತ್ತಾರೆ.

ಪಣೆಪಣೆ ತುಡರ್‌ (೧೯೯೭) ಮ. ವಿಠಲ ಪುತ್ತೂರು ಇವರ ಕೃತಿ ಮ. ವಿಠಲರವರು ತುಳು ಭಾಷೆ, ಸಂಸ್ಕೃತಿಯ ಸಿಂಗಾರಕ್ಕಾಗಿ ಸಾಕಷ್ಟು ಶ್ರಮವಹಿಸಿದ ವ್ಯಕ್ತಿ. ಅವರ ‘ತುಳುವೆರೆ ತುಡರ್‌’ ಪತ್ರಿಕೆಯ ಮೂಲಕ ತನ್ನದೇ ಆದ ನೆಲೆಯಲ್ಲಿ ತುಳುನಾಡಿನ ಸಮಗ್ರತೆಗಾಗಿ ‘ಸೊಂತ ವಿಚಾರ’ (ಸ್ವಂತ ವಿಚಾರ) ಎಂಬ ತಲೆಬರಹದಡಿಯಲ್ಲಿ ಪ್ರಕಟಿಸಿದ ಲೇಖನಗಳಲ್ಲದೆ, ಇತರೇ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಒಟ್ಟಾಗಿಸಿ ಈ ಕೃತಿ ಮೂಡಿಬಂದಿದೆ. ಈ ಹೊತ್ತಗೆಯಲ್ಲಿ ಒಟ್ಟಾರೆ ೭೮ ಬರಹಗಳಿವೆ. ತುಳುಭಾಷೆ, ಸಂಸ್ಕೃತಿ, ನಂಬಿಕೆ ಆರಾಧನೆ, ಸ್ಥಳನಾಮಗಳು, ತುಳುವಿಗಾಗಿ ದುಡಿದ ಮಹನೀಯರುಗಳು ಸಂಘಸಂಸ್ಥೆಗಳು (ತುಳು ಅಕಾಡೆಮಿ ಒಂದು ಹಂತದಲ್ಲಿ ಸರಕಾರದ ಅವಕೃಪೆಗೆ ತುತ್ತಾದಾಗ ಬರೆದ ಲೇಖನಗಳು ಸೇರಿ) ಮುಂತಾದ ವಿಚಾರಗಳಲ್ಲಿ ತಮ್ಮದೇ ಆದ ನಿಲುವನ್ನು ಇಟ್ಟುಕೊಂಡು ಬರೆದವುಗಳಲ್ಲಿ ಕೆಲವು ಲಲಿತ ಪ್ರಬಂಧಗಳಂತೆಯೂ, ಅಂಕಣ ಬರಹಗಳಂತೆಯೂ, ಸುದ್ಧಿ ಬರಹಗಳಂತೆಯೂ ಇವೆ.

ತುಳುನಡಕೆ (೧೯೯೮) ಗಣೇಶ ಅಮೀನ್‌ ಸಂಕಮಾರ್‌ ಅವರು ಬರೆದ ಕೃತಿ. ಇದರಲ್ಲಿ ತುಳು ಸಂಸ್ಕೃತಿಯ ಬೇರೆ ಬೇರೆ ಮುಖಗಳ ಪರಿಚಯಾತ್ಮಕ ಹಾಗೂ ಸಂಶೋಧನಾತ್ಮಕನ ನೆಲೆಯುಳ್ಳ ೬ ಪ್ರಬಂಧಗಳಿವೆ. ತುಳು ಪಾಡ್ದನ, ತುಳು ಕಥೆ ಹಾಗೂ ಒಟ್ಟಾರೆಯಾಗಿ ಜನಪದ ಸಾಹಿತ್ಯದಲ್ಲಿ ಹೆಣ್ಣು ಮಕ್ಕಳ ಚಿತ್ರಣದ ಸೋದಾಹರಣ ವಿವರವನ್ನು ‘ಮಣ್ಣ್‌ಡಿತ್ತಿ ಪೊಣ್ಣನಿರೆಲ್‌’ (ತುಳು ಮಣ್ಣಿನ ಹೆಣ್ಣಿನ ನೆರಳು) ಎಂಬ ಲೇಖನ ಪ್ರಸ್ತುತ ಪಡಿಸುತ್ತದೆ.

‘ಮಾಜೊಂದುಪ್ಪುನ ತುಳು ಸೀಮೆಗೊಬ್ಬುಲು’ (ಅಳಿಯುತ್ತಿರುವ ತುಳುನಾಡಿನ ಜನಪದ ಆಟಗಳು) ಎಂಬ ಲೇಖನದಲ್ಲಿ ತುಳುನಾಡಿನ ಜನಪದರು ಬಳಸುತ್ತಿದ್ದ ಚೆಂಡಾಟ, ಚೆನ್ನಮಣೆ, ಸರಿಮುಗುಳಿ, ಕಾಗೆ ಗಿಳಿ ಮುಂತಾದವುಗಳ ಪರಿಚಯದೊಂದಿಗೆ ಅವುಗಳ ಸಾಹಿತ್ಯವನ್ನು ಕಲೆಹಾಕಿ ಅಧ್ಯಯನ ನಡೆಸಿದ್ದಾರೆ. ಬೇವು, ಬೆಲ್ಲದ ಬಿಸು ಪರ್ಬ (ಬೇವುಬೆಲ್ಲದ ಹಬ್ಬ ವಿಷು) ಎಂಬ ಲೇಖನದಲ್ಲಿ ಹಬ್ಬದ ಕಟ್ಟುಕಟ್ಟಳೆಗಲ್ಲದೆ, ಆಗ ಬಳಕೆಯಲ್ಲಿದ್ದ ನುಡಿಗಟ್ಟುಗಳು, ಮದಿಪುಗಳನ್ನು ನೀಡುತ್ತಾರೆ ಇದಲ್ಲದೆ ಮರೆತುಹೋದ ಬೇಸಾಯದ ಕೆಲಸಗಳು, ತುಳು ಬದುಕಿನ ವೈಶಿಷ್ಟ್ಯಗಳು, ತುಳುನಾಡಿನ ಮುಲ್ಕಿ ಸೀಮೆಯ ಅವಳಿ ವೀರರಾದ ಕಾಂತಬಾರೆ-ಬೂದಬಾರಯಾರು ಮುಂತಾದ ಲೇಖನಗಳು ತುಳು ಮೌಖಿಕ ಸಾಗಿತ್ಯ, ತುಳು ಸಂಸ್ಕೃತಿಯ ಅಧ್ಯಯನದ ಫಲವಾಗಿ ಮೂಡಿ ಬಂದಂತವುಗಳು. ಕ್ಷೇತ್ರಕಾರ್ಯಧಾರಿತ ಲೇಖನಗಳಾಗಿದ್ದು ತುಳು ಸಂಶೋಧನೆ ಹಾಗೂ ಸಾಹಿತ್ಯ ಚರಿತ್ರೆಯ ಹಿನ್ನೆಲೆಯಲ್ಲಿ ಈ ಹೊತ್ತಗೆ ಪ್ರಮುಖವಾಗುತ್ತದೆ.

ತುಳು ಸಾಹಿತ್ಯ ಚರಿತ್ರೆಯನ್ನು ಅವಲೋಕಿಸುವಾಗ, ಆಧುನಿಕ ತುಳು ಸಾಹಿತ್ಯ ಸಂದರ್ಭದಲ್ಲಿ ಬಹಳ ಪ್ರಮುಖ ಬರಹಗಾರರೆಂದರೆ ಮುದ್ದು ಮೂಡುಬೆಳ್ಳ, ತುಳುವಿನಲ್ಲಿ ಕಥೆ, ನಾಟಕ, ವಿಮರ್ಶೆ, ಸಂಶೋಧನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಕಷ್ಟು ವ್ಯವಸಾಯ ಮಾಡಿರುವ ಮೂಡುಬೆಳ್ಳಯವರು “ಪೂವರಿ” (೧೯೯೯) ಎಂಬ ತುಳು ಸಂಸ್ಕೃತಿ ಹಾಗೂ ಭಾಷೆಯ ಕುರಿತಾದ ಲೇಖನಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ತುಳು ಭಾಷಾ ಬೆಳವಣಿಗೆ, ತುಳುವಿಗೆ ಸಂವಿಧಾನ ಮಾನ್ಯತೆ, ತುಳುವಿನ ಸಣ್ಣಕತೆಗಳು, ತುಳುಕಾವ್ಯ, ತುಳುನಾಟಕಗಳ ಕುರಿತಂತೆ ಅಧ್ಯಯನ ಪೂರ್ಣ ಲೇಖನ ಇದರಲ್ಲಿದೆ. ಇನ್ನೊಂದು ವಿಭಾಗದಲ್ಲಿ ತುಳುವರ ಶ್ರೇಷ್ಠತೆ, ವರದಕ್ಷಿಣೆ ಪಿಡುಗು, ತುಳುವರ ಮಳೆಗಾಲದ ಕುರಿತಂತೆ ಸಿದ್ಧತೆ, ಮಾತ್ರವಲ್ಲದೆ, ಹಳ್ಳಿ ಮತ್ತು ನಗರ ಜೀವನದ ಇಂದಿನ ಅವ್ಯವಸ್ಥೆ ಕುರಿತಂತೆ ಮೂಡುಬೆಳ್ಳೆಯವರ ಅಧ್ಯಯನಶೀಲ ಚಿಂತನೆಗಳು ಲೇಖನ ರೂಪದಲ್ಲಿ ಪ್ರಕಟಗೊಂಡಿದೆ. ತುಳು ಸಾಹಿತ್ಯ ಸಮೀಕ್ಷೆಯನ್ನು ‘ವಾಲಸರಿ’ ಎಂಬ ಲೇಖನ ಸಮಗ್ರವಾಗಿ ಮಾಡಿಕೊಡುತ್ತದೆ. ಕೋಟಿ ಚೆನ್ನಯರ ಹುಟ್ಟೂರು ಪಡುಮಲೆ ಎಣ್ಮೂರು ಕುರಿತಂತೆ ಮಾಹಿತಿ ಪೂರ್ಣ ದಾಖಲೆಯನ್ನು ನೀಡುತ್ತಾರೆ. ಮುದ್ದು ಮೂಡುಬೆಳ್ಳೆಯವರ ಈ ಪ್ರಬಂಧ ಸಂಕಲನ ತುಳುನಾಡಿನ ಸಮಕಾಲೀನ ಸಾಂಸ್ಕೃತಿಕ ಹಾಗೂ ಸಾಹಿತ್ಯದ ದಾಖಲೆಗಳ ಒಳನೋಟಗಳನ್ನು ತೆರೆದಿಡುತ್ತದೆ.

ತುಳು ಸಾಹಿತ್ಯ, ಸಂಸ್ಕೃತಿಯ ಕುರಿತಂತೆ ಅಪಾರ ಶ್ರಮವಹಿಸಿ, ದೂರದ ಮುಂಬಯಿಯಲ್ಲಿ ಅಧ್ಯಾಪನ, ಸಾಂಸ್ಕೃತಿಕ ಪ್ರಕರಣ, ಅಧ್ಯಯನ, ಬರವಣೆಯನ್ನು ನಡೆಸಿಕೊಂಡು ಬರುತ್ತಿರುವ ಸುನೀತಾ ಶೆಟ್ಟಿಯವರು ತುಳು ಸಾಹಿತ್ಯ ಸಂದರ್ಭದಲ್ಲಿ ಬಹಳ ಪ್ರಮುಖರಾಗುತ್ತಾರೆ. ಅಂತರ್‌ ಶಾಸ್ತ್ರೀಯ ಅಧ್ಯಯನದ ನೆಲೆಯಲ್ಲಿ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಅಧ್ಯಯನಕ್ಕೊಳಪಡಿಸಿದವರು ಇವರು. ತುಳು ಕಾವ್ಯ ಮುಂತಾದ ಪ್ರಕಾರಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ನೀಡಿರುವ ಸುನೀತಾ ಶೆಟ್ಟಿಯವರು ಹಲವು ಕನ್ನಡ ಕೃತಿಗಳನ್ನು ನೀಡಿದ್ದಾರೆ. ಇದುವರೆಗೆ ತುಳುವಿನಲ್ಲಿ ಪ್ರಕಡಗೊಂಡ ಗದ್ಯಗ್ರಂಥ ಅಥವಾ ಪ್ರಬಂಧ ಸಂಕಲನದಲ್ಲಿ ಬಹಳ ಪ್ರಮುಣವಾದುದೆಂದರೆ ಸುನೀತಾ ಶೆಟ್ಟಿಯವರು ಬರೆದ ‘ಕರಜನ’ (೨೦೦೨) ಎಂಬ ಪುಸ್ತಕ. ಇದರಲ್ಲಿ ಒಟ್ಟು ೨೦ ಮಹತ್ವದ ಲೇಕನಗಳಿವೆ. ಕೆಲವೊಂದು ಲೇಕನಗಳು ಸಂಶೋಧಿತ ಬರಹಗಳಾಗಿದ್ದರೆ, ಇನ್ನು ಕೆಲವು ವಿಮರ್ಶಾತ್ಮಕವಾಗಿಯೂ ಇವೆ. ತುಳು ಸಂಸ್ಕೃತಿಯನ್ನು ಇತರ ಭಾಷಾ ಸಂಸ್ಕೃತಿಯ ಜೊತೆಗೆ ತೌಲನಿಕವಾಗಿ ಅಧ್ಯಯನ ಮಾಡಿದ ಅಪೂರ್ವ ಲೇಕನಗಳು ಇದರಲ್ಲಿವೆ. ತುಳುಭಾಷೆಯ ಸೊಗಸು, ಗೊಮ್ಮಟ- ತುಳುವಿನಲ್ಲಿ ಗುಮ್ಮಟ, ಬದಲಾಗುವ ಸ್ಥಳನಾಮಗಳು, ಸಿರಿಪಾಡ್ದನದ ಸಮಸ್ಯೆಗಳು, ಶ್ರವಣಬೊಳಗೊಳ ಹಾಗೂ ಕೊಂಕಣಿ, ತುಳುಗಾದೆಗಳು ಮತ್ತು ಅವುಗಳ ಪ್ರಸ್ತುತತೆ, ಕನ್ನಡ ಹಾಗೂ ದ್ರಾವಿಡ ನೀಗ್ರೋ ಸಂಬಂಧ, ಕನ್ನಡ ಜನಪದ ಸಾಹಿತ್ಯದ ಕೆರೆಗೆ ಹಾರ ಹಾಗೂ ತುಳುವಿನ ಬಾಲೆಮಾಡೆದಿ, ಮುಂತಾದ ಪ್ರಮುಖ ಲೇಖನಗಳಿಲ್ಲದೆ, ಅರವಂಟಿಗೆ ಎಂಬ ಸಂಶೋಧನಾ ಲೇಖನದಲ್ಲಿ ತುಳುನಾಡಿನ ಜೈನರ ನಂಬಿಕೆಯಲ್ಲಿ ಬ್ರಹ್ಮ, ನಾಗ, ಯಕ್ಷ ಮುಂತಾದ ದೇವತೆಗಳ ಪಾತ್ರ ಜೊತೆಗೆ ಅವುಗಳು ಇತರೆ ಪಂಗಡದವರಿಂದ ಆರಾಧಿಸಲ್ಪಡುವ ರೀತಿಯನ್ನು ವಿಶ್ಲೇಷಣಾತ್ಮಕವಾಗಿ ಚರ್ಚಿಸುತ್ತಾರೆ. ಬಹುಶಃ ತುಳುವಿನಲ್ಲಿ ತುಳುಭಾಷೆ, ಸಂಸ್ಕೃತಿ, ಸಾಹಿತ್ಯದ ಕುರಿತಂತೆ ವೈವಿಧ್ಯಮಯ ಲೇಖನವಿರುವ ಈ ಬಗೆಯ ಹೊತ್ತಗೆ ಬಂದಿರುವುದು ಇದೇ ಮೊದಲೆನಿಸುತ್ತದೆ.

ಮದು ಮದಿಪು ನುಟಿಕಟ್ಟಲು (೨೦೦೬) ಎಂಬ ಪುಟ್ಟ ಕೃತಿಯನ್ನು ಬರೆದವರು ಮುಲ್ಕಿಯ ಹರಿಶ್ಚಂದ್ರ ಪಿ. ಸಾಲ್ಯಾನ್‌ರವರು. ತುಳುನಾಡಿನಲ್ಲಿ ದೀಪಾವಳಿ ಹಬ್ಬದ ನಂತರ ನಡೆಯುವ ಭೂತಾರಾಧನೆಯ ಸಂದರ್ಭದಲ್ಲಿ ದೈವಪಾತ್ರಿ ಅಥವಾ ದರ್ಶನಪಾತ್ರಿ ಮತ್ತು ದೈವ ಕಟ್ಟಿದವರಲ್ಲಿ ದೈವಗಳು ಮೈದುಂಬಬೇಕಾದರೆ, ಅವುಗಳ ಹುಟ್ಟು, ಪ್ರಸರಣ, ನೆಲೆಗಳ ಕುರಿತಂತೆ ಹೊಗಳಿಕೆಯ ಮತನ್ನಾಡಿ ಪ್ರಾರ್ಥನೆ ಬಹಳ ಅಗತ್ಯ. ಇದನ್ನು ಮದು ಹೇಳುವುದೆನ್ನುತ್ತಾರೆ. ಈ ರೀತಿ ಹೇಳುವವನು ಊರಿನ ಪ್ರಮುಖ ವ್ಯಕ್ತಿ ಅಥವಾ ಗುತ್ತು ಮನೆಯ ಯಜಮಾನನೋ ಅಥವಾ ಸಂಬಂಧಿತ ದೈವಕ್ಕೆ ವಾರೀಸುದಾರನೋ ಆಗಿರುತ್ತಾನೆ. ದೈವಕ್ಕೆ ಆಪ್ತವಾದ ಪರಿಭಾಷೆಯನ್ನು ಬಳಸಿ ಪಾತ್ರಿಯು ದೈವದ ಸಂಮೋಹನಕ್ಕೆ ಒಳಗಾಗುವ ಹಾಗೆ ಮಾಡುವ ಈ ಮಾತಿನ ಸರಪಣಿಯನ್ನು ಜನಸಾಮಾನ್ಯರಲ್ಲಿ ಎಲ್ಲರಿಂದಲೂ ಹೇಳಲಸಾಧ್ಯ. ಅನುಭವ, ಭಾಷೆಯ ಮೇಲಿನ ಹಿಡಿತ, ದೈವದ ಕುರಿತಾಗಿ ಅಪಾರ ಶ್ರದ್ಧೆ, ನಂಬಿಕೆ ಇರಬೇಕಾಗುತ್ತದೆ. ಅಂತಹವರಿಂದ ನಿರರ್ಗಳವಾಗಿ ಮೂಡಿಬಂದು ದೈವವೇ ತಲೆದೂಗಿ ನುಡಿ ಹೇಳುವಂತಿರುತ್ತದೆ. ಇಂತಹ ಮದು, ಮದಿಪು, ನುಡಿಗಟ್ಟುಗಳು ಭೂತಾರಾಧನೆಯ ಬೇರೆ ಬೇರೆ ಮಜಲುಗಳಲ್ಲಿ, ಮುಖ್ಯವಾಗಿ ಭಂಡಾರ ಇಳಿಸುವಾಗ, ಗಗ್ಗರ ಕಟ್ಟುವ ಸಂದರ್ಭಗಳಲ್ಲಿ ಹೇಳಲ್ಪಡುತ್ತವೆ. ದೈವ ಮತ್ತು ಭಕ್ತರ ನಡುವಿನ ಆಂತರಿಕ ಸಂದರ್ಭವನ್ನು ಹತ್ತಿರವಾಗಿಸುವ, ಹಗುರವಾಗಿಸುವ ಈ ಗದ್ಯರೂಪದ ಸಾಹಿತ್ಯವನ್ನು ಹರಿಶ್ಚಂದ್ರ ಸಾಲ್ಯಾನರು ಸಂಗ್ರಹಿಸಿ ನೀಡಿದ್ದಾರೆ. ಬದುಕು, ಭಕ್ತಿ, ಭಾವಗಳ ಸಂಗಮಗಳ ಒಳನೋಟಗಳಾಗಿರುವ ಈ ಮೌಖಿಕ ಸಾಹಿತ್ಯ ಅತೀಂದ್ರಿಯ ಶಕ್ತಿಗಳ ನಡುವೆ ಸಂಬಂಧಗಳನ್ನು ಸುಲಭ ಸಾಧ್ಯವಾಗಿಸುವುದಲ್ಲದೆ ತುಳುಜನರ ಬುದ್ಧಿಮತ್ತೆ, ಜೀವನದರ್ಶನ ಮತ್ತು ಲೋಕದೃಷ್ಟಿಯ ಜೊತೆಗೆ ಸಾಹಿತ್ಯಾಸಕ್ತಿಯ, ಚೈತನ್ಯದ ಪರಿಪೂರ್ಣ ಅನಾವರಣವೆನಿಸುತ್ತದೆ. ತುಳುನಾಡಿನಲ್ಲಿ ಪ್ರದೇಶದಿಂದ ಪ್ರದೇಶಕ್ಕೆ, ದೈವಗಳಿಂದ ದೈವಕ್ಕೆ ಈ ಮದು, ಮದಿಪು, ನುಟಿಕಟ್ಟು ಸಾಹಿತ್ಯದಲ್ಲಿ ವ್ಯತ್ಯಾಸವಿರಬಹುದು. ಯಾಕೆಂದರೆ ಆಯಾಯ ಪ್ರದೇಶ ಸಂಸ್ಕೃತಿ, ಹೇಳುವವನ ಜೀವನ ಸಂಸ್ಕಾರಕ್ಕೆ ಅನುಗುಣವಾಗಿ ಇವುಗಳು ಸೃಷ್ಟಿಯಾಗಬಹುದು. ಹರಿಶ್ಚಂದ್ರ ಸಾಲ್ಯಾನರು ತನ್ನ ಅನುಭವ ಹಾಗೂ ಅಧ್ಯಯನವ್ಯಾಪ್ತಿಯ ನೆಲೆಯಲ್ಲಿ ಅವುಗಳನ್ನು ಕಲೆ ಹಾಕಿ ನೀಡಿದ್ದಾರೆ. ಕೆಲವೊಂದು ದೈವಗಳ ಬಗ್ಗೆ ಮಾತ್ರ ಇಲ್ಲಿ ಈ ಬಗೆಯ ಸಾಹಿತ್ಯವಿದೆ. ಸೀಮಿತತೆಯೊಳಗೂ, ತುಳು ಸಾಹಿತ್ಯ ಸಂದರ್ಭದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆಯೆಂದೆನಿಸುತ್ತದೆ.

ನೆನಪಿನ ಸಂಚಿಕೆಗಳು

ತುಳು ಸಾಹಿತ್ಯದ ಬೆಳವಣಿಗೆಯಲ್ಲಿ ಗದ್ಯ ಲೇಖಕರ ಸಾಹಿತ್ಯ ಮತ್ತು ಕೊಡುಗೆ ಕಡಿಮೆ. ಬರೆದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಸಿದವರಂತೂ ಬೆರಳೆಣಿಕೆಯ ಮಂದಿ. ಇಂತಹವರಿಗೆ ಅವರ ಲೇಖನಗಳನ್ನು ಪ್ರಕಟಣೆಗೆ ಅವಕಾಶ ನೀಡಿದವುಗಳೆಂದರೆ ನಾಡಿನ ಅಲ್ಲಲ್ಲಿ ಜರುಗಿದ ತುಳು ಸಮ್ಮೇಳನಗಳು. ಸಮ್ಮೇಳಗಳ ಸವಿನೆನಪಿಗಾಗಿ ಹೊರತರುವ ಸಂಚಿಕೆಗಳು ವಿದ್ವಾಂಸರಿಗೆ, ಲೇಖಕರಿಗೆ ಅವರ ಲೇಖನಗಳನ್ನು ಪ್ರಕಟಿಸುವ ಹೊತ್ತಿಗೆ ಎನಿಸಿಕೊಂಡವು.

ಎಂಬತ್ತರ ದಶಕದ ನಂತರದಲ್ಲಿ ತುಳು ಸಮ್ಮೇಳನಗಳು ಸಂಘಟನೆಗೊಂಡು, ಪ್ರಬಂಧ ಮಢನೆಗಾಗಿ, ಲೇಖಗಳ ಸಂಕಲನಕ್ಕಾಗಿ ಮಾತ್ರವಲ್ಲ, ಸ್ಮರಣಸಂಚಿಕೆಗಳಿಗಾಗಿ ಲೇಖನಗಳನ್ನು ಆಹ್ವಾನಿಸುವ ವಾಡಿಕೆ ಮೊದಲಾದದ್ದರಿಂದ ತುಳು ಸಾಹಿತ್ಯ, ಸಂಸ್ಕೃತಿ ಹಾಗೂ ಜನಪದದಲ್ಲಿ ಆಸಕ್ತಿ ಹೊಂದಿದ ವಿದ್ವಾಂಸರು ಲೇಖನಗಳನ್ನು ಕೊಡತೊಡಗಿದರು. ಈ ಕಾರಣಕ್ಕಾಗಿ ಸಂಶೋಧನಾ ಪ್ರಬಂಧಗಳು, ಲೇಖನಗಳು, ತುಳುವಿನ ಬೇರೆ ಬೇರೆ ನೆಲಗಳ ಕುರಿತು ಸಿದ್ಧಗೊಂಡವು. ತುಳು ಸಮ್ಮೇಳಗಳು ತುಳುಭಾಷೆ, ಸಂಸ್ಕೃತಿಯ ಕುರಿತಂತೆ ಪ್ರೀತಿ ಹಾಗೂ ಎಚ್ಚರವನ್ನು ಮೂಡಿಸಿದಂತೆಯೇ ಆ ಸಂದರ್ಭದಲ್ಲಿ ಮೂಡಿಬಂದ ಸ್ಮರಣಸಂಚಿಕೆಗಳು ತುಳುವಿನ ಕುರಿತಾದ ವಿವಿಧ ಮಗ್ಗುಲುಗಳ ಅಧ್ಯಯನದ ಪ್ರಾತಿನಿಧಿಕ ಲಿಖಿತ ದಾಖಲೆಗಳಾಗಿ ಮೂಡಿ ಇಂದಿಗೂ ಸ್ಮರಣೀಯವೆನಿಸಿದೆ. ಬಹುಶಃ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತರುವ ಅನುಕೂಲ ಮತ್ತು ಅಗತ್ಯತೆಯ ಕುರಿತಂತೆ ನುಇಲುವುಗಳು ಅಸ್ಪಷ್ಟವಾಗಿದ್ದಾಗಲೂ, ಸ್ಮರಣಸಂಚಿಕೆಯ ಔಚಿತ್ಯ ಕಂಡುಕೊಂಡು (ಸ್ಮರಣಸಂಚಿಕೆಗಳ ಮೂಲ ಉದ್ದೇಶವಿದ್ದುದು ಸಮ್ಮೇಳನಕ್ಕೆ ಹಣಕಾಸಿನ ಅಥವಾ ಇತರ ರೂಪದ ಸಹಕಾರ ನೀಡಿದ ನಾನಿಗಳು, ಮ್ಹಾಲಕರ ಹೆಸರು ಹಾಗೂ ವ್ಯಾಪಾರದ ನೆಲೆಗಳನ್ನು ಹೇಳಿ ಪ್ರಕಟಿಸುವುದಾಗಿತ್ತು.) ಅಂತಹ ಲೇಖನಗಳ ಪ್ರಕಟಣೆಗೆ ಚಾಲನೆ ದೊರೆತದ್ದು ನಿಜವಾಗಲೂ ಒಂದು ಪ್ರಶಂಸನೀಯ ಕೆಲಸ. ಇಂದಿಗೂ ಇಂತಹ ಸ್ಮರಣಸಂಚಿಕೆಗಳು ಔಚಿತ್ಯಪೂರ್ಣವಾಗಿ ತುಳು, ಕನ್ನಡಗಳೆರಡರಲ್ಲೂ ಪ್ರಕಟಗೊಳ್ಳುತ್ತಿವೆ.

ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತಂತೆ ಪ್ರಪ್ರಥಮ ಸಮ್ಮೇಳನ ವಿಶುಕುಮಾರರ ಹಿರಿತನದಲ್ಲಿ ಜರಗಿದ್ದು ಬೆಂಗಳೂರಿನಲ್ಲಿ. ಈ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕು.ಶಿ. ಹರಿದಾಸ ಭಟ್ಟರು. ಈ ಸಂದರ್ಭದಲ್ಲಿ ಬಿಡುಗಡೆಯಾದ ತುಳುವಿನ ಮೊದಲ ನೆನಪಿನ ಸಂಚಿಕೆಯ ಹೆಸರು ‘ಪೊರ್ಲು’ (೧೯೮೩). ನಿಜವಾದ ಅರ್ಥದಲ್ಲಿ ಬಹಳ ಸುಂದರವಾಗಿ ಮೂಡಿಬಂದ ಅಧ್ಯಯನಾತ್ಮಕ ಸಂಗ್ರಾಹ್ಯ ಸಂಚಿಕೆಯಿದು.

ಪೊರ್ಲುವಿನಲ್ಲಿ ಹೆಚ್ಚಿನವು ತುಳು ಲೇಖನಗಳೆ ಆಗಿದ್ದರೂ, ಇಂಗ್ಲಿಷ್‌, ಕನ್ನಡ ಭಾಷೆಯಲ್ಲಿರುವ ಲೇಖನಗಳು ತುಳುನಾಡಿನ ಭಾಷೆ, ಸಂಸ್ಕೃತಿಯ ಕುರಿತಂತೆ ಬರೆದವುಗಳಾಗಿವೆ. ಯು.ಪಿ. ಉಪಾಧ್ಯಾಯರ ಬರೆದ ‘ದ್ರಾವಿಡ ಬಾಸೆಲೆಡ್‌ ತುಳುತ ಸ್ಥಾನ’ (ದ್ರಾವಿಡ ಭಾಷೆಗಳಲ್ಲಿ ತುಳುವಿನ ಸ್ಥಾನ) ಎಂಬ ಲೇಖನದಲ್ಲಿ ತುಳು ಮತ್ತು ಇತರ ದ್ರಾವಿಡ ಭಾಷೆಗಳಿಗಿರುವ ವ್ಯತ್ಯಾಸ ಹಾಗೂ ಸಾಮ್ಯತೆಯನ್ನು ಸೋದಾರಣವಾಗಿ ಚರ್ಚಿಸಲಾಗಿದೆ. ಬಿ. ರಾಮಚಂದ್ರರಾವ್‌ರವರು ಬರೆದ ‘ದ್ರಾವಿಡ ಭಾಷೆಲೆಡ್‌ ತುಳುತ ಸ್ಥಾನ’ (ದ್ರಾವಿಡ ಭಾಷೆಗಳಲ್ಲಿ ತುಳುವಿನ ಸ್ಥಾನ) ಎಂಬ ಲೇಖನದಲ್ಲಿ ಊರಿನ ಹೆಸರುಗಳ, ಬಹುವಚನ ಪ್ರತ್ಯಗಳು, ಕ್ರಿಯಾರೂಪಗಳು ಮೊದಲಾದವುಗಳ ಬಗ್ಗೆ ಖಚಿತವಾದ ಮಾಹಿತಿಯನ್ನು ನೀಡುತ್ತಾರೆ. ‘ತುಳು ನಾಟಕ ರಂಗ ಎಡ್ಡೆ ಆವಾ’ (ತುಳು ರಂಗಭೂಮಿ ಪ್ರಗತಿಯಾದೀತೇ) ಎಂಬ ಲೇಖನವನ್ನು ಖ್ಯಾತ ನಾಟಕಕಾರ ಬಿ. ರಾಮ ಕಿರೋಡಿಯನ್‌ರವರು ಬರೆದಿದ್ದು ತುಳುವಿನ ಅಂದಿನ ರಂಗಭೂಮಿಯ ಸ್ಥಿತಿ, ಪರಿವರ್ತನಶೀಲ ಸಮಾಜದಲ್ಲಿ ಆಧುನಿಕತೆಯ ಮೆರುಗಿನೊಂದಿಗೆ ತುಳು ರಂಗಭೂಮಿಗೆ ನೀಡಬೇಕಾದ ಕಾಯಕಲ್ಪದ ಕುರಿತಂತೆ ಈ ಲೇಖನ ಚರ್ಚಿಸುತ್ತದೆ. ‘ತುಳು ಪೊಂಜೊವು ಆನಿ -ಇನಿ’ (ತುಳುವಿನ ಹೆಂಗಸರು ಅಂದು -ಇಂದು) ಎಂಬ ಲೇಖನದಲ್ಲಿ ಗೀತಾ ಕುಲಕರ್ಣಿಯವರು ಆ ಕಾಲದ ತುಳುನಾಡ ಹೆಂಗಸರ ಸ್ಥಾನಮಾನ ಮತ್ತು ಇಂದಿಗೆ ಅವರು ಸ್ಪಂದಿಸಬೇಕಾದ ಸ್ಥತಿಯ ಕುರಿತಂತೆ ಚರ್ಚಿಸುವ ಪ್ರಯತ್ನ ಮಾಡುತ್ತಾರೆ. ಡಾ. ಯು.ಪಿ. ಉಪಾಧ್ಯಾಯ ದಂಪತಿಗಳು ‘ತುಳು ಸಂಸ್ಕೃತದ ಸಂರಕ್ಷಣೆ’ (ತುಳು ಸಂಸ್ಕೃತಿಯ ಸಂರಕ್ಷಣೆ) ಎಂಬ ಲೇಖನದಲ್ಲಿ ತುಳುವಿನ ಭೌಗೋಳಿಕ, ಸಾಂಸ್ಕೃತಿಕ, ಭಾಷಿಕ ಜೀವನದ ರಕ್ಷಣೆ, ಹೇಗೆ ಸಾಧ್ಯ ಎಂಬುದರ ಬಗ್ಗೆ ತಮ್ಮದೇ ಆದ ಕಾರ್ಯಸಾದ್ಯ ಕೆಲ ಕಲ್ಪನೆಗಳನ್ನು ಇಲ್ಲಿ ಹಂಚಿ ಕೊಂಡಿದ್ದಾರೆ. ಆ ಮೂಲಕ ಸಂಸ್ಕೃತಿಯ ಸಂರಕ್ಷಣೇ ನಮ್ಮಿಂದಾಗಬೇಕೆಂದು ಅವರ ಕಾಳಜಿಯಾಗಿತ್ತು. ವರದಕ್ಷಿಣೆಯ ಕುರಿತಂತೆ ಸುನೀತಾ ಶೆಟ್ಟಿಯವರ ‘ಬದಿ ಲೇಖನ ಕ್ಷೇತ್ರಕಾರ್ಯಾಧಾರಿತ ಅಧ್ಯಯನದ ಫಲವಾಗಿ ಮೂಡಿಬಂದುದಾಗಿದೆ. ಈ ಅನಿಷ್ಟ ಪದ್ಧತಿಯ ಕುರಿತಂತೆ ಅವರ ದೃಷ್ಟಿಕೋನಗಳನ್ನು ಸವಿವರವಾಗಿ ಅಂಟಿಕೊಳ್ಳುತ್ತಾರೆ.

‘ಯಕ್ಷಗಾನೊಡು ತುಳು, ಅತ್ತಡ ತುಳ್‌ಟ್‌ ಯಕ್ಷಗಾನ ಅಂದ್‌ದ್‌’ (ಯಕ್ಷಗಾನದಲ್ಲಿ ತುಳು ಅಥವಾ ತುಳುವಿನಲ್ಲಿ ಯಕ್ಷಗಾನ) ಎಂಬ ಲೇಖನ ಮಲ್ಪೆ ಶಂಕರನಾರಾಯಣ ಸಾಮಗರದ್ದು. ತುಳು ಪ್ರಸಂಗಗಳನ್ನು ಅಧರಿಸಿ ಬಂದ ಯಕ್ಷಗಾನದ ಆ ಮೊದಲ ದಿನಗಳ ಅನುಭವ, ಅದಕ್ಕೆ ಬಂದ ತುಳುವರ ಪ್ರತಿಕ್ರಿಯೆ, ಪೌರಾಣಿಕ ಪ್ರಸಂಗಗಳಿಗಿಂತಲೂ, ಐತಿಹಾಸಿಕ ಪ್ರಸಂಗಗಳು ಮುಖ್ಯವಾಗಿ ಕೋಟಿಚೆನ್ನಯ, ಕಾಂತಬಾರೆ ಬೂದಬಾರೆ, ತುಳುನಾಡ ಸಿರಿಯಂತಹ ಪ್ರಸಂಗಗಳನ್ನು ಜನ ಒಪ್ಪಿಕೊಂಡ ಬಗೆಯನ್ನು ಅವರ ಸ್ವಾನುಭವದ ನೆಲೆಯಲ್ಲಿ ಚರ್ಚಿಸಿದ್ದಾರೆ. ತುಳು ಯಕ್ಷಗಾನದ ಆರಂಣದ ಹಂತಕ್ಕೆ ಸಿಕ್ಕಿದ ಪ್ರತಿಕ್ರಿಯೆಗಳನ್ನು ಸ್ವತಃ ಮೇಳದ ಕಲಾವಿದರಾಗಿದ್ದುಕೊಂಡು ಅವರು ಅನುಭವಿಸಿದ ಬರೆದ ಈ ಲೇಖನಕ್ಕೆ ಐತಿಹಾಸಿಕ ಮಹತ್ವವಿದೆ.

ಇದಲ್ಲದೆ ತುಳು ಇತಿಹಾಸ, ಪರಂಪರೆ, ಸಂಸ್ಕೃತಿ, ನಾಟಕ, ಸಿನಿಮಾ ಆರ್ಥಿಕ ಪ್ರಗತಿಯ ಕುರಿತಂತೆ ಕೇಳಿದ ಕೆಲ ನಿರ್ದಿಷ್ಟ ವಿಷಯಗಳಲ್ಲಿನ ಪ್ರಶ್ನೆಗಳಿಗೆ ಕೆಲವು ಜನ ತುಳು ವಿದ್ವಾಂಸರು, ಪ್ರಸಂಗಕರ್ತರು, ನಾಟಕಕಾರರು, ಯಕ್ಷಗಾನ ರಂಗದವರು ಉತ್ತರಿಸಿದ್ದಾರೆ. ಆ ಪ್ರಶ್ನೆಗಳು ಒಂದೇ ಬಗೆಯಾದರೂ ಬೇರೆ ಬೇರೆ ವಿಭಾಗದ ನಿಷ್ಣಾತರು ಅವರ ಅನುಭವ, ಪಾಂಡಿತ್ಯ ಹಾಗೂ ಆಸಕ್ತಿಗಳಿಗನುಗುಣವಾಗಿ ನೀಡಿದ ಉತ್ತರಗಳು ಓದುಗರಿಗೆ ವಿಶಾಲ ಅನುಭವದ ತಳಹದಿಯನ್ನು ನೀಡುತ್ತದೆ. ತುಳು ಮತ್ತು ಕನ್ನಡದಲ್ಲಿ ಉತ್ತರಗಳಿದ್ದ ಇದೊಂದು ವಿನೂತನ ಪ್ರಯೋಗವಾಗಿದೆ.

‘ತುಳು ಕವಿತೆದ ಮೂಲ ಪಾಡ್ದನ’ ಎಂಬ ಕಯ್ಯಾರ ಕಿಞ್ಞಣ್ಣರೈಯವರ ಲೇಖನದಲ್ಲಿದೆ. ಎಂ. ರಾಮ ಹಾಗೂ ನಯಂಪಳ್ಳಿ ಸಾಂಬಶಿವ, ಜತ್ತಣ್ಣ, ರಾಮಕೃಷ್ಣ ಟಿ. ಶೆಟ್ಟಿಯವರ ತುಳು ಜೀವನದ ಕುರಿತಾದ ಇಂಗ್ಲಿಷ್‌ಲೇಖನಗಳು, ಪಾ. ವೆಂ. ಆಚಾರ್ಯ ಮಂದಾರ ಕೇಶವ ಭಟ್ಟ, ವೆಂಕಟರಾಜ ಪುಣಿಂಚತ್ತಾಯ, ವಾಮನ ನಂದಾವರ, ಏರ್ಯ ಚಂದ್ರಭಾಗಿ ರೈ, ಕುದ್ಕಾಡಿ ವಿಶ್ವನಾಥ ರೈ, ಎಚ್‌. ಶಕುಂತಲಾ, ಪ್ರಭಾಕರ ಶಿಶಿಲ, ಪಾಲ್ತಾಡಿ ರಾಮಕೃಷ್ಣ ಆಚಾರ್‌, ಎಚ್‌. ಜೆ. ಸುಂದರ ಬಂಗೇರ, ಪುರುಷೋತ್ತಮ ಬಿಳಿಮಲೆ, ಬೆಳ್ಳೆ ಚಂದ್ರಶೇಖರ ಶೆಟ್ಟಿ, ಎಂ. ಜಯರಾಮ ರೈ ಮೊದಲಾದವರ ಕತೆಗಳು ಪ್ರಕಟವಾಗಿವೆ. ತುಳು ಸ್ಮರಣಸಂಚಿಕೆಗಳಲ್ಲಿ ಮೊದಲಿನದಾಗಿದ್ದೂ, ಅದರ ಸಮಗ್ರತೆ ಹಾಗೂ ವಿಷಯ ಜೋಡಣೆಯ ನೆಲೆಯಲ್ಲಿ ಆಕರದ ನೆಲೆಯಲ್ಲಿ ಬಹಳ ಮಹತ್ವದ್ದು ಎನಿಸಿಕೊಳ್ಳುತ್ತದೆ.

ಎಂಬತ್ತರ ದಶಕದ ನಂತರದಲ್ಲಿ ೧೯೭೦ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ತುಳುಕೂಟ ತನ್ನ ನೇತೃತ್ವದಲ್ಲಿ ನಡೆವ ತುಳುಹಬ್ಬ (ತುಳು ಸಮ್ಮೇಳನ)ದ ನೆನಪಿಗಾಗಿ (೧೯೮೪ರಲ್ಲಿ) ಮದಿಪು ಎಂಬ ಹೆಸರಲ್ಲಿ ನೆನಪು ಸಂಚಿಕೆಯನ್ನು ಹೊರತಂದಿತು. ಆಮೇಲೆ ಸಾಮಾನ್ಯವಾಗಿ ಸಮ್ಮೇಳನಗಳು ಆದಾಗ ನೆನಪು ಸಂಚಿಕೆಯನ್ನು ತರುವುದು ವಾಡಿಕೆಯಾಯಿತು. ಇವುಗಳಲ್ಲಿ ವ್ಯವಸ್ಥಿತವಾಗಿ, ಅಧ್ಯಯನಾತ್ಮಕವಾದ ಅನೇಕ ಸಾಹಿತಿಗಳ ಬರಹಗಳು ಮೂಡಿಬಂದುವು. ತುಳುಕೂಟ ಹೊರತಂದ ಮದಿಪು (೧೯೮೪) ನೆನಪಿನ ಸಂಚಿಕೆಯಲ್ಲಿ ಅನೇಕ ಹಿರಿಯ ಲೇಖಕರ ಕವನ, ಕತೆಗಳು ಮರು ಅಚ್ಚಾಗಿದ್ದವು. ಮುಖ್ಯವಾಗಿ ಎಂ. ವಿ. ಹೆಗ್ಗಡೆಯವರ ಅಧ್ಯಕ್ಷೀಯ ಮಾತು ಪ್ರಕಟಗೊಂಡಿದೆ. ಅದು ಬಹಳ ಮೌಲಿಕವಾದುದು. ತುಳುಸಾಹಿತ್ಯ ಚಳುವಳಿ ಮತ್ತು ಭಾಷಾ ಬೆಳವಣಿಗೆಯ ಕುರಿತು ಈ ಲೇಖನದಲ್ಲಿನ ಎಂ. ವಿ. ಹೆಗ್ಗಡೆಯವರ ಮಾತುಗಳು ಬಹಳ ಮುಖ್ಯವಾಗುತ್ತದೆ.

೧೯೮೬, ಏಪ್ರಿಲ್‌೧೫ ಮತ್ತು ೧೬ ರಂದು ಮೂಲ್ಕಿಯ ಬಪ್ಪನಾಡಿನಲ್ಲಿ ಜರಗಿದ ಅಖಿಲಭಾರತ ತುಳು ಸಮ್ಮೇಳನ ಅಂಗವಾಗಿ ಕೆ. ಚಿನ್ನಪ್ಪ ಗೌಡರವರ ಸಂಪಾದನೆಯಲ್ಲಿ ಹೊರಬಂದ ನೆನಪು ಸಂಚಿಕೆ ಪನಿಯಾರ (೧೯೮೬) ಬಹಳ ಅಚ್ಚುಕಟ್ಟಾಗಿ, ಸಮಗ್ರವಾಗಿ ಮೂಡಿಬಂದ ಸಂಚಿಕೆ. ಈ ಸಂಚಿಕೆಯಲ್ಲಿ ಮೂರು ವಿಭಾಗಗಳಿದ್ದು ೧ನೇ ಭಾಗದಲ್ಲಿ ಸಮ್ಮೇಳನಾಧ್ಯಕ್ಷರಾದ ಅಮೃತ ಸೋಮೇಶ್ವರರ ಅಧ್ಯಕ್ಷೀಯ ಮಾತು. ೨ನೇ ಭಾಗದಲ್ಲಿ ಅಮೃತ ಸೋಮೇಶ್ವರರ ಪುಸ್ತಕಗಳ ವಿಮರ್ಶೆ. ಮೂರನೇ ಭಾಗದಲ್ಲಿ ೨೧ ಅತ್ಯುತ್ತಮ ಲೇಖನಗಳಿವೆ. ತುಳುನಾಡಿನ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಜಾನಪದೀಯ ಮುಂತಾದ ಎಲ್ಲಾ ಕ್ಷೇತ್ರಗಳ ಸಮಗ್ರ ಅಧ್ಯಯನದ ವಿವರಗಳು ಅವುಗಳಲ್ಲಿ ಅಡಕಗೊಂಡಿವೆ. ಅ. ಬಾಲಕೃಷ್ಣ ಶೆಟ್ಟಿ, ಪೊಳಲಿಯವರ ತುಳು: ಕೋಡೆ-ಇನಿ ಎಲ್ಲೆ (ತುಳು : ನಿನ್ನೆ-ಇಂದು-ನಾಳೆ), ವೆಂಕಟರಾಜ ಪುಣಿಂಚತ್ತಾಯರ ತುಳು ಬಾಸೆದ ಅಮೂಲ್ಯ ಕಾವ್ಯ ಗ್ರಂಥೊಲು (ತುಳುಭಾಷೆಯ ಅಮೂಲ್ಯ ಕಾವ್ಯ ಗ್ರಂಥಗಳು), ರಾಮಕೃಷ್ಣ ಟಿ. ಶೆಟ್ಟಿಯವರ ತುಳುಭಾಷೆ (ತುಳುಭಾಷೆ), ಪಾಲ್ತಾಡಿ ರಾಮಕೃಷ್ಣ ಆಚಾರ್‌ರವರ ತುಳುನಾಡ್‌ದ ಜನಪದ ನಲಿಕೆಲು (ತುಳುನಾಡಿನ ಜನಪದ ಕುಣಿತಗಳು), ಪೀಟರ್‌ ಜೆ. ಕ್ಲಾಸ್‌ರವರು ಬರೆದ ಎ. ವಿ. ನಾವಡರವರು ಅನುವಾದಿಸಿದ ಸಿರಿ ಜಾತ್ರೆ. ಒಸಯೋ ರೂಪೊದ ಆರಾಧನೆ (ಸಿರಿಜಾತ್ರೆ: ಆವೇಶ ರೂಪದ ಆರಾಧನೆ), ತಾಳ್ತಜೆ ವಸಂತಕುಮಾರ್‌ ಹಾಗೂ ಎ. ಸುಬ್ಬಣ್ಣ ರೈಯವರ ತುಳುನಾಡ್‌ದ ಐತಿಹ್ಯೊಲು (ತುಳುನಾಡಿನ ಐತಿಹ್ಯಗಳು), ಸಿದ್ಧಾಪುರ ವಾಸುದೇವ ಭಟ್ಟರ ನಾಗರಾಧನೆ, ಸುಶೀಲಾ ಪಿ. ಉಪಾಧ್ಯಾಯರವರ ಪಾಡ್ದನ ಭೂತಾರಾಧನೆತ ಸಂಶೋಧನೆ (ಪಾಡ್ದನ-ಭೂತಾರಾಧನೆಯ ಸಂಶೋಧನೆ), ಭಾಸ್ಕರ ರೈ ಕುಕ್ಕುವಳ್ಳಿಯವರ ತುಳು ಯಕ್ಷಗಾನಃ ಸಾಹಿತ್ಯ ಬೊಕ್ಕ ರಂಗಪ್ರಯೋಗೊ (ತುಳು ಯಕ್ಷಗಾನ: ಸಾಹಿತ್ಯ ಮತ್ತು ರಂಗಪ್ರಯೋಗ), ಅಗ್ರಾಳಪುರಂದರ ರೈಯವರ ತುಳು ಯಕ್ಷಗಾನ ಕವಿಕುಳು (ತುಳು ಯಕ್ಷಗಾನ ಕವಿಗಳು), ಯು. ಪಿ. ಉಪಾಧ್ಯಾಯರ ತುಳುಭಾಷೆದ ನಿಘಂಟು (ತುಳುಭಾಷೆಯ ನಿಘಂಟು), ಎಸ್‌. ಪದ್ಮನಾಭ ಭಟ್‌ ಎಕ್ಕಾರ್‌ರವರ ತುಳು ಪತ್ರಿಕೋದ್ಯಮ, ಅಭಯಕುಮಾರ್‌ ಕೌಕ್ರಾಡಿಯವರ ತುಳುನಾಡ್‌ದ ಕಂಬುಳ ಬೊಕ್ಕ ಕೋರಿದ ಕಟ್ಟ (ತುಳುನಾಡಿನ ಕಂಬಳ ಹಾಗೂ ಕೋಳಿ ಅಂಕ), ವಾಮನ ನಂದಾವರರ ತುಳುನಾಡ್‌ದ ಜನಾಂಗೊಲೆ ಅಧ್ಯಯನ (ತುಳುನಾಡಿನ ಪಂಡಿತರು ಹಾಗೂ ತುಳುಭಾಷೆ ಸಂಸ್ಕೃತಿ ಅಧ್ಯಯನ), ಗೀತಾ ಕೆ. ಯವರ ತುಳುವೆರೆ ಅಟಿಲ್ದ ತಿರ್ಲ್‌ಪೊರ್ಲ (ತುಳುವರ ಅಡುಗೆಯ ಸೊಗಸು), ಮುದ್ದು ಮೂಡುಬೆಳ್ಳೆಯವರ ತುಳುತ್ತ ಕಿನ್ಯ ಕತೆಕ್ಕುಲು (ತುಳುವಿನ ಸಣ್ಣ ಕತೆಗಳು), ಮುರಳೀಧರ ಉಪಾಧ್ಯ, ಹಿರಿಯಡಕ ಇವರ ತುಳುಕಾವ್ಯ-ಕಬಿತೆ ಸಂಕಲನೊಲು (ತುಳುಕಾವ್ಯ ಕವಿತಾ ಸಂಕಲನಗಳು), ಐ. ಕೆ. ಬೊಳುವಾರರ ತುಳುನಾಟಕೊಲು-ನಾಲ್‌ಪಾತೆರೊ (ತುಳು ನಾಟಕಗಳು-ನಾಲ್ಕು ಮಾತು), ಶಿವರಾಮ ಪಡಿಕ್ಕಾಲ್‌ ಬರೆದ ಬಿ. ಶಿವರಾಮ ಶೆಟ್ಟಿಯವರಿಂದ ಅನುವಾದಿತಗೊಂಡ ವಸಾಹತು ಚರಿತ್ರೆದ ನೆಯ್ಗೆ : ತುಳು ಕಾದಂಬರಿ (ವಸಾಹತು ಚರಿತ್ರೆಯ ಬಂಧನ: ತುಳುಕಾದಂಬರಿ), ಬಿ. ಶಿವರಾಮ ಶೆಟ್ಟಿಯವರ ತುಳುತ್ತ ಬೆನ್ನಿ : ಓಲು? ಏಪ? ಎಂಚ? (ತುಳುಸಾಹಿತ್ಯ ಕೃಷಿ: ಎಲ್ಲಿ? ಯಾವಾಗ? ಹೇಗೆ?) ಎಂಬ ಮಾಹಿತಿ ರೂಪದ ಲೇಖನವೂ ಸೇರಿದಂತೆ ಆಧುನಿಕ ಪ್ರಬಂಧ ಸಾಹಿತ್ಯದ ನೆಲೆಗಟ್ಟಿನಲ್ಲಿ ರಚಿತವಾದ ಮತ್ತು ತುಳುಸಾಹಿತ್ಯ ಕ್ಷೇತ್ರದಲ್ಲಿ ಮೈಲಿಗಲ್ಲಾಗುವ ಬರಹಗಳಿವು. ತುಳು ಸಾಹಿತ್ಯ, ಸಂಸ್ಕೃತಿ ಅಧ್ಯಯನಾಸಕ್ತರಿಗೆ ಒಂದು ಅತ್ಯಮೂಲ್ಯ ಆಕರವಾಗುವ ನೆನಪಿನ ಸಂಚಿಕೆಯಿದು.

ಇದೇ ಪರಿಯಲ್ಲಿ ಕೆ. ಲೀಲಾವತಿಯವರ ಸಂಪಾದನೆಯಲ್ಲಿ ಮಂಗಳೂರಿನಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ನೆನಪಿಗಾಗಿ ಕದಿಕೆ (೧೯೯೪) ಎಂಬ ಸಂಚಿಕೆಯನ್ನು ಅಖಿಲ ಭಾರತ ಒಕ್ಕೂಟ (ರಿ) ಮಂಗಳೂರು ಇವರು ಹೊರತಂದರು. ಇದರಲ್ಲಿ ಬಿ. ವಸಂತ ಶೆಟ್ಟಿ, ಎಸ್‌. ಆರ್‌. ವಿಘ್ನರಾಜ, ಎಂ. ಪ್ರಭಾಕರ ಜೋಶಿ, ಅಮೃತ ಸೋಮೇಶ್ವರ, ವಾಮನ ನಂದಾವರ, ಬಿ. ಎ. ವಿವೇಕ ರೈ, ಕೆ. ಚಿನ್ನಪ್ಪ ಗೌಡ, ಬಿ. ಶಿವರಾಮ ಶೆಟ್ಟಿ, ಅಶೋಕ ಆಳ್ವ, ಸುನೀತಾ ಶೆಟ್ಟಿ, ಪಿ. ಕಮಲಾಕ್ಷ, ರತ್ನಕುಮಾರ್‌ಎಂ, ಸುಶೀಲಾ ಪಿ. ಉಪಾಧ್ಯಾಯ ಮುಂತಾದವರು ತುಳುನಾಡಿನ ಪ್ರಾಚೀನತೆ, ತುಳುಲಿಪಿ, ತುಳುಧಾರ್ಮಿಕ ರಂಗ, ತುಳುನಾಡಿನ ಹಬ್ಬಗಳು, ಸಸ್ಯ ಜಾನಪದ, ಪ್ರಾಣಿ ಜಾನಪದ ಮುಂತಾದ ವಿಷಯಗಳ ಮೇಲೆ ಪ್ರಬಂಧಗಳನ್ನು ಬರೆದಿದ್ದಾರೆ. ಕದಿಕೆಯಲ್ಲಿ ಪ್ರಕಟಗೊಂಡ ಎಲ್ಲಾ ಪ್ರಬಂಧಗಳು ಅಧ್ಯಯನಾಸಕ್ತರಿಗೆ ಅತ್ಯಮೂಲ್ಯ ಆಕರಗಳಾಗಿವೆ.

ಯು. ಪಿ. ಉಪಾಧ್ಯಾಯನರ ಸಂಪಾದಕತ್ವದಲ್ಲಿ ಉಡುಪಿ ತುಳುಕೂಟದ ೧೦ನೇ ವರ್ಷದ ಆಚರಣೆಯ ನೆನಪಿಗಾಗಿ ಹೊರತಂದ ಪತ್ತಾಯೊ (೧೯೯೫) ಎಂಬ ನೆನಪಿನ ಸಂಚಿಕೆ ಕೂಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಬಹಳ ಪ್ರಮುಖವಾಗುತ್ತದೆ. ಇದರಲ್ಲೂ ತುಳುನಾಡಿನ ಬೇರೆ ಬೇರೆ ವಿಚಾರಗಳ ಕುರಿತ ಹಲವಾರು ಪ್ರಬಂಧಗಳು ಪ್ರಕಟಗೊಂಡಿವೆ. ಐದು ವಿಭಾಗಗಳಲ್ಲಿ ತುಳುನಾಡಿನ ಅಂದ ಚೆಂದ, ಭಾಷೆ, ಚಳುವಳಿ, ಪ್ರಾಚೀನ ಕಾವ್ಯಗಳು, ತುಳುವರ ಆಚರಣೆಗಳು ದೈವಾವೇಶ, ಜನಪದ ಕುಣಿತಗಳು, ಯಕ್ಷಗಾನ, ರಂಗಭೂಮಿ ಮುಂತಾದ ವಿಷಯಗಳ ಕುರಿತಾಗಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಯು. ಪಿ. ಉಪಾಧ್ಯಾಯ, ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ, ಕುದ್ಕಾಡಿ ವಿಶ್ವನಾಥ ರೈ, ನಾಗೇಂದ್ರ ರಾವ್‌, ಪಿ. ವೆಂಕಟರಾಜ ಪುಣಿಂತ್ತಾಯ, ಕೆ. ಪದ್ಮನಾಭ ಕೇಕುಣ್ಣಾಯ, ಪಾದೇಕಲ್ಲು ವಿಷ್ಣು ಭಟ್ಟ, ಕೆ. ಎಸ್‌. ಭಂಡಾರಿ ನಿಟ್ಟೂರು, ಶ್ರೀರಮಣ ಆಚಾರ್ಯ ಅಲೆವೂರು, ಪ್ರೊ. ಜಿ. ಆರ್‌. ರೈ, ಸುಶೀಲಾ ಪಿ. ಉಪಾಧ್ಯಾಯ, ಅತ್ರಾಡಿ ಅಮೃತಾ ಶೆಟ್ಟಿ, ನರೇಂದ್ರ ರೈ ದೇರ್ಲ, ಅಮೃತ ಸೋಮೇಶ್ವರ, ಗಂಗಾಧರ ಕಿದಿಯೂರು, ಯನ್‌. ನಾರಾಯಣ ಶೆಟ್ಟಿ, ಕಿನ್ನಿಗೋಳಿ, ಡಿ. ಯದುಪತಿ ಗೌಡ, ಅರುಣಕುಮಾರ್‌ ಎಸ್‌. ಆರ್‌., ಅಶೋಕ ಆಳ್ವ ಕೆ., ಕೆ. ಸುಧಾ ಹರಿದಾಸ ರಾವ್‌, ಕೆ. ಅನಂತರಾಮ ಬಂಗಾಡಿ, ಅ. ವಿಠಲ ಕಬಕ, ಆರ್ಯಾಪು ಮುಂತಾದವರು ಬರೆದ ಸುಮಾರು ೨೫ ಪ್ರಬಂಧಗಳಿವೆ.