ಮಂದಾರ ಕೇಶವ ಭಟ್‌ (೧೯೧೯-೧೯೯೭)

ಕವಿಯಾಗಿ, ವಿದ್ವಾಂಸರಾಗಿ, ಅಧ್ಯಾಪಕರಾಗಿ, ಯಕ್ಷಗಾನ ಕಲಾವಿದನಾಗಿ, ಅರ್ಥಧಾರಿಯಾಗಿ, ಯಕ್ಷಗಾನದ ಸಂಪನ್ಮೂಲ ವ್ಯಕ್ತಿಯಾಗಿ, ಯಕ್ಷಗಾನ ಗುರುವಾಗಿ ಮಂದಾರರು ಮಾಡಿದ ಕಾರ್ಯಗಳು ಗುರುತರವಾದುವು. ಮಾತೃಭಾಷೆ ಮರಾಠಿಯಾದರೂ ಕನ್ನಡ, ತುಳು ಭಾಷೆಗಳಲ್ಲಿ ಅತೀವ ಆಸಕ್ತಿ ತಳೆದು ಅವರು ರಚಿಸಿದ ಸಾಹಿತ್ಯ ಕೃಷಿ ಬೆರಗು ಮೂಡಿಸುವಂತವು. ತುಳು ಭಾಷೆಗೆ ಮಹಾಕಾವ್ಯದ ಮಾಧ್ಯಮವಾಗುವ ಅರ್ಹತೆ, ಸಾಮರ್ಥ್ಯವಿದೆ ಎಂಬುದನ್ನು ಸಾಬೀತು ಪಡಿಸಿದ ಖ್ಯಾತಿ ಅವರದು. ರಾಮಾಯಣದ ಕತೆಯನ್ನು ತುಳುವಿನ ಜಾಯಮಾನಕ್ಕೆ ಒಗ್ಗಿಸಿ, ತುಳು ಸಂಸ್ಕೃತಿಯನ್ನು ಅಳವಡಿಸಿಕೊಂಡು ಬರೆದಿರುವ ‘ಮಂದಾರ ರಾಮಾಯಣ’ ತುಳು ಮಹಾಕಾವ್ಯವು ತುಳು ಭಾಷೆಯ ಗೆಲುವಿನ ಸಂಕೇತವಾಗಿದೆ. ಇದಲ್ಲದೆ ‘ಬೀರದ ಬೊಳ್ಪು’, ‘ಭರತನ ಮೋಕೆ’, ‘ಮಾಯದ ಶೂರ್ಪನಕಿ’ಗಳನ್ನು ತುಳುವಿನಲ್ಲಿ ಬರೆದು, ಎಲ್ಲವನ್ನೂ ತಾನೇ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅವರ ತುಳು ಕವಿತಾ ಸಂಕಲನ ‘ಜಾಗಂಟೆ’ ಒಂದು ಉತ್ತಮಕೃತಿ. ಕನ್ನಡದಲ್ಲಿ ‘ಮಂದಾರ ಮಾಲೆ’, ‘ಉನ್ಮತ್ತ ರಾಘವ’, ‘ಶ್ರೀರಾಮ ಪರಂಧಾಮ’, ‘ಮಕ್ಕಳ ಗೀತೆಗಳು’ ಇತ್ಯಾದಿ ರಚಿಸಿದ್ದಲ್ಲದೆ ಭಾಸ ಕವಿಯ ‘ಸ್ವಪ್ನವಾಸದತ್ತ’ ನಾಟಕವನ್ನು ‘ಕನತ್ತ ಪೊಣ್ಣು’ ಎಂದು ತುಳುವಿಗೆ ಅನುವಾದಿಸಿದ್ದಾರೆ. ಅವರ ಈ ಬಗೆಯ ಸಾಹಿತ್ಯ ಸಾಧನೆಗೆ ಸಂದ ಪ್ರಶಸ್ತಿಗಳಲ್ಲಿ ಮುಖ್ಯವಾದವು – ಕೇಂದ್ರ ಸಾಹಿತ್ಯ ಅಕಡೆಮಿಯ ಭಾಷಾ ಸನ್ಮಾನ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಡೆ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಇತ್ಯಾದಿ. ನಾಡಿನೆಲ್ಲಡೆ ಸನ್ಮಾನಿತರಾದ ಕೇಶವ ಭಟ್ಟರು ಅಪಾರ ವಿದ್ವತ್ತು, ತತ್ವನಿಷ್ಠೆ, ಕಷ್ಟ ಸಹಿಷ್ಟುತೆ, ಉದಾರತೆ, ವಿನೋದಪ್ರಿಯತೆ, ಸರಳತೆಗಳಿಂದ ಕೂಡಿದ ಸ್ಥಿತಪ್ರಜ್ಞ. ತುಂಬಿದ ಕೊಡದಂತಹ ಸ್ವಭಾವ. ಅವರ ಒಡನಾಡಿಗಳ ಪರಿಚಯದೊಂದಿಗೆ ಅವರ ಬರಹಗಳ ಸೊಗಸಿನತ್ತಲೂ ಗಮನ ಸೆಳೆಯುವ ಈ ಕೃತಿ ರಚನೆಯಲ್ಲಿ ಲೇಖಕ ಎಮ್‌. ಪ್ರಭಾಕರ್‌ ಜೋಶಿಯವರ ಶ್ರಮ ಸಾರ್ಥಕವಾಗಿದೆ.

ಕೆಮ್ತೂರು ದೊಡ್ಡಣ್ಣ ಶೆಟ್ರ್‌ (೧೯೨೭-೧೯೮೬)

‘ತುಳುನಾಟಕ ರಂಗದ ಬ್ರಹ್ಮ’ ಎನ್ನುವಂತಿದ್ದ ಕೆಮ್ತೂರು ದೊಡ್ಡಣ ಶೆಟ್ಟರ ಹೆಸರು ತುಳುನಾಟಕದೊಂದಿಗೆ ಸಮೀಕರಣಗೊಳ್ಳುವ ಮಟ್ಟಿನದು. ತುಳು ಜನತೆಯಲ್ಲಿ ತುಳು ಭಾಷೆಯ ಬಗ್ಗೆ ಅಭಿಮಾನ ಮೂಡಿಸಿ, ತುಳು ಸಾಹಿತ್ಯದತ್ತ ಆಕರ್ಷಿಸಿ, ಅಭಿರುಚಿಯನ್ನು ಉತ್ತೇಜಿಸಿದ ಕೆಮ್ತೂರರು ಬಹುಸಂಖ್ಯೆಯ ತುಳು ನಾಟಕಗಳನ್ನು ಬರೆದು, ನಿರ್ದೇಶಿಸಿ ಪ್ರದರ್ಶಿಸಿದರು. ಅಲ್ಲದೆ ಬಹುಬಗೆಯ ಪಾತ್ರಗಳನ್ನು ಅಭಿನಯಿಸಿದ ಈ ಪ್ರತಿಭಾವಂತ, ರೂಪವಂತ, ತೇಜಸ್ವೀ ಕೆಮ್ತೂರರು ತುಳುನಾಡಿನಲ್ಲಿ ಮನೆಮಾತಾಗಿರುವ ವ್ಯಕ್ತಿ. ತುಳು ರಂಗ ಭೂಮಿಯ ರಂಗುಗಂಗಾಗಿ ಮೆರೆಯುವಂತೆ ಮಾಡಿದ ಖ್ಯಾತಿ ಅವರದು. ತುಳುವರ ಕುಟುಂಬಗಳಲ್ಲಿನ ಪ್ರೀತಿ, ವಿಶ್ವಾಸ, ಬೇನೆ, ಬೇಸರ, ಮಮತೆ, ಮತ್ಸರ, ವ್ಯಥೆ ವಿವಾದಗಳನ್ನು, ವರದಕ್ಷಿಣೆ, ಸ್ರೀ ಶೋಷಣೆಗಳಂತಹ ಸಾಮಾಜಿಕ ಅನಿಷ್ಟಗಳನ್ನು ನಾಟಕದ ವಸ್ತು ವಿಷಯವನ್ನಾಗಿಸಿ, ‘ಬದಿದಾಂತಿ ಮದ್ಮೆ’ ‘ಕಣ್ಣೀರ್ದ ಕರಿಯಮಣಿ’ ‘ಇಂಚಾಂಡ ಎಂಚ?’ ‘ಮಾಮಿಗಾವಂದಿ ಮರ್ಮಾಲ್‌’… ಇಂತಹ ಹಲವಾರು ನಾಟಕಗಳನ್ನು ಹಳ್ಳಿಹಳ್ಳಿಗಳಿಗೂ ಕೊಂಡೊಯ್ದು, ಜನರನ್ನು ಪ್ರಜ್ಞಾವಂತರಾಗಿಸಲು ಹೆಣಗಾಡಿದವರು. ಮೊದಲ ನೋಟಕ್ಕೆ ಸರಳ ಸರಸಮಯವಾಗಿದ್ದರೂ ಸಮಾಜದ ಕಣ್ಣುತೆರೆಸುವ, ಶೋಷಿತರ ಬವಣೆಗಳಿಗೆ ಕನ್ನಡಿ ಹಿಡಿಯುವ ಇಂತಹ ನಾಟಕಗಳಲ್ಲಿ ಕರಮ್ತೂರರು ಅಳವಡಿಸಿಕೊಂಡ ತುಳು ಪದ್ಯಗಳಂತೂ ತುಳುವಿನ ಪೆಂಪನ್ನು ಪಸರಿಸುತ್ತಾ, ಸಂಗೀತ ಸಾಹಿತ್ಯದ ಸವಿಯನ್ನು ಜನ ಸಾಮಾನ್ಯರಿಗೂ ಉಣಬಡಿಸುತ್ತಿದ್ದವು. ಅವರು ರಚಿಸಿದ ಗೀತೆಗಳು ಮಕ್ಕಳ ಹಾಡುಗಳು, ಕತೆಗಳು, ನಾಟಕಗಳು, ಭಜನೆಯ ಹಾಡುಗಳು. ಈಗಲೂ ಜನರ ಬಾಯಲ್ಲಿವೆ. ಕನ್ನಡ ನಾಟಕ ರಂಗದಲ್ಲಿ ಕೈಲಾಸಂರವರು ಬೀರಿದ ಪ್ರಭಾವವನ್ನೇ ತುಳು ನಾಟಕ ರಂಗದಲ್ಲಿ ಕೆಮ್ತೂರರು ಬೀರಿದ್ದರು. ಜನರ ನಡುವೆಯೇ ಹುಟ್ಟಿ ಜನರ ನಡುವಿಗೆ ಸೇರುವಂತಹ ನಾಟಕಗಳನ್ನು ಬರೆಯುತ್ತಾ ಪ್ರದರ್ಶಿಸುತ್ತಾ ಕಷ್ಟಕೋಟಲೆಗಳೊಂದಿಗೆ ಬದುಕು ಸವೆಸುತ್ತಾ, ನಟನೆ ಮತ್ತು ಮಾತಿನ ಚಾತುರ್ಯದಿಂದ ಜನಮನವನ್ನು ರಂಜಿಸುತ್ತಲೇ ಕಣ್ಮರೆಯಾದ ಈ ಹಿರಿಯ ಚೇತನವನ್ನು ಲೇಖಕಿ ಕ್ಯಾಥರಿನ್‌ ರಾಡ್ರಿಗಸ್‌ ಭಾವಪೂರದೊಂದಿಗೆ ಪರಿಚಯಿಸಿದ್ದಾರೆ.

ಬಿ. ರಾಮ ಕಿರೋಡಿಯನ್‌ (೧೯೨೨-೧೯೯೭)

ತನ್ನ ಮೂರ್ತಿಯನ್ನು ತಾನೇ ಕೆತ್ತಿಸಿಕೊಂಡಂತಹ ಕಲಾ ಶಿಲ್ಪಿ’ಯಾದ ಬಿ.ರಾಮ ಕಿರೋಡಿಯನರು ತುಳುನಾಟಕ ರಂಗದಲ್ಲಿ ಸುಪರಿಚಿತರು. ಕೇವಲ ಪ್ರಾಥಮಿಕ ಹಂತದ ಶಿಕ್ಷಣ ಪಡೆದು, ಜೀವನಕ್ಕಾಗಿ ಹೊಲಿಗೆ ಉದ್ಯೋಗವನ್ನು ಅವಲಂಬಿಸಿ, ನಾಟಕದ ಹವ್ಯಾಸವನ್ನು ಬೆಳೆಸಿಕೊಂಡವರು. ತುಳುನಾಟಕ ರಚನೆ, ನಿರ್ದೇಶ್ನ, ಅಭಿನಯಗಳಲ್ಲೇ ಸಾರ್ಥಕತೆ ಅನುಭವಿಸಿದವರು. ಪೌರಾಣಿಕ, ಐತಿಹಾಸಿಕ ಮತ್ತು ಆಧುನಿಕ ಸಮಾಜದ ಸಂಗತಿಗಳನ್ನು ನಾಟಕದ ವಸ್ತುವಾಗಿಸಿಕೊಂಡು ಐವತ್ತೆರಡಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದರು. ರೇಡಿಯೋ ನಾಟಕಗಳನ್ನು ಬರೆದವರು. ಮಂಗಳೂರು ಮತ್ತು ಬೆಂಗಳೂರು ಆಕಾಶವಾಣಿ ನಿಲಯಗಳಿಂದ ಪ್ರಸಾರಗೊಂಡ ಪ್ರಥಮ ತುಳು ನಾಟಕಗಳು ಇವರದ್ದೇ. ತುಳು ಸಿನೇಮಾ ರಂಗದಲ್ಲೂ ದುಡಿದಿರುವ ಕಿರೋಡಿಯನರು, ಆರು ತುಳು ಸಿನೇಮಾಗಳಿಗೆ ಗೀತ ರಚನೆ ಮಾಡಿದ್ದಾರೆ. ‘ಸರ್ಪ ಸಂಕಲೆ’ ಎನ್ನುವ ಸಿನೇಮಾದ ಕತೆಯೂ ಇವರದು. ತುಳುನಾಡಿನ ಸುಪ್ರಸಿದ್ಧ ನಾಟಕ ಕಲಾವಿದರಿಗೆ ಗುರುವಾಗಿದ್ದ ಕಿರೋಡಿಯನ್ನರು, ಬಡತನವನ್ನು ಲೆಕ್ಕಿಸದೆಯೇ ಕಲಾವಿದರಾಗಿ ಬೆಳೆದವರು. ಅವರ ‘ಮರ್ಲಮನಸ್ಸ್‌’, ‘ಕಾನೂನ್ದ ಕಣ್ಣ್‌’, ‘ ಬದ್ಕ್‌ದ ಬಿಲೆ’, ‘ಧೈರ್ಯೋಗೊಂಜಿ ದೇವೆರ್‌’, ‘ಉಡಲ್ದ ಪುಂಚ’, ‘ಇತ್ಯಾದಿ ನಾಟಕಗಳು ಜನಮನ ಸೂರೆಗೊಂಡವು. ಸಮಾಜ ಸೇವೆಯಲ್ಲೂ ಮುಂದಾಳಾಗಿದ್ದ ಈ ಮಹನೀಯರನ್ನು ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯೂ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ಹಿರಿಯಣ್ಣನಂತಿದ್ದ ಕಿರೋಡಿಯನರ ಬಗೆಗೆ ಅಭಿಮಾನಗಳ ನುಡಿಕಾಣಿಕೆಗಳನ್ನು ಬಳಸಿಕೊಂಡು ಮುಂಡಪ್ಪ ಬೋಳೂರರು ರಚಿಸಿದ ಈ ಕೃತಿ ಒಂದು ಬಗೆಯಲ್ಲಿ ಸಮಗ್ರವಾಗಿದೆ.

ನವಯುಗದ ಹೊನ್ನಯ್ಯ ಶೆಟ್ರ್‌ (೧೯೦೫-೧೯೭೪)

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ, ಸಾಂಸ್ಕೃತಿಕ, ಪತ್ರಿಕಾ ರಂಗಗಳಲ್ಲಿ ಪ್ರಸಿದ್ದಿ ಪಡೆದ ಮಹನೀಯರಲ್ಲಿ ಕೆಮ್ತೂರು ಹೊನ್ನಯ್ಯ ಶೆಟ್ಟರು ಪ್ರಮುಖರು. ಶಿಕ್ಷಕರಾಗಿ ವೃತ್ತಿ ಜೀವನವನ್ನು ಆರಂಭಿಸಿ ಶಿಕ್ಷಣ ವಿಧಾನಗಳಲ್ಲಿ ಪ್ರಯೋಗಗಳನ್ನು ನಡೆಸಿದವರು. ಆ ಬಳಿಕ ಗಾಂಧೀಜಿ ವಿಚಾರದಾರೆಗಳಿಂದ ಪ್ರಭಾವಿತರಾಗಿ, ಸ್ವದೇಶಿ ಚಳುವಳಿ, ಖಾದಿ ಪ್ರಚಾರಕ್ಕೆ ಮುಂದಾದವರು. ಮಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ‘ನವಯುಗ’ ಪತ್ರಿಕೆಯನ್ನು ಉಡುಪಿಗೆ ತಂದು, ಅದನ್ನು ಜನಮೆಚ್ಚಿಕೆಯ ಪತ್ರಿಕೆಯಾಗಿ ಮುನ್ನಡೆಸಿ, ನವಯುಗ ಹೊನ್ನಯ್ಯ ಶೆಟ್ಟರೆಂದೇ ಚಿರಪರಿಚಿತರಾದವರು. ಪತ್ರಿಕೆಯಲ್ಲಿ ಅವರ ಸಂಪಾದಕೀಯ ಮತ್ತು ಅಗ್ರ ಲೇಖನಗಳಲ್ಲಿ ರಾಷ್ಟ್ರೀಯ ದೃಷ್ಟಿಕೋನದ ಖಚಿತ ಧೋರಣೆಗಳಿದ್ದವು. ಪತ್ರಿಕೆಯ ಭಾಗವಾಗಿ ‘ತುಳು ಪುರವಣಿ’ಯನ್ನು ಆರಂಭಿಸಿ, ತುಳುಭಾಷೆ, ತುಳು ನಾಡು, ತುಳು ಸಂಸ್ಕೃತಿಯ ಪ್ರಚಾರಕ್ಕೆ ಪ್ರಯತ್ನಿಸಿದ ಕೀರ್ತಿ ಅವರದು. ಉಡುಪಿಯ ತುಳುಚಳುವಳಿಯ ಸಕ್ರಿಯ ಬೆಂಬಲಿಗರಾಗಿ, ‘ಬಾಲಚಂದ್ರ’, ‘ಅಂತರಂಗ’, ‘ಕಿರಿಯರ ಪ್ರಪಂಚ’ದಂತಹ ವಿಭಿನ್ನ ರುಚಿಯ ಪತ್ರಿಕೆಗಳ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸಿ, ಜನರ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿದವರು. ಪ್ರತಿವರ್ಷ ‘ಪುಸ್ತಕ ಮಾಸ, ಎನ್ನುವ ಸಾಹಿತ್ಯೋತ್ಸವ ನಡೆಸಿ, ಸಾಹಿತ್ಯಾಭಿಮಾನಿಗಳ ಮನಗೆದ್ದವರು. ಹೀಗೆ ಪತ್ರಕರ್ತರಾಗಿ, ಪುಸ್ತಕ ಮಾರಾಟಗಾರರಾಗಿ, ಪ್ರಗತಿಪರ ಚಿಂತಕರಾಗಿ, ಶ್ರೇಷ್ಠ ಸಂಘಟಕರಾಗಿ ಬಾಳಿದ ಹೊನ್ನಯ್ಯ ಶೆಟ್ಟರು, ಸರಳ ಶುದ್ಧ ಸ್ನೇಹ ಶೀಲ ಸ್ವಭಾವದವರು. ನೇರ ನುಡಿಯ ಮಿತ ಭಾಷಿ, ರಾಷ್ಟ್ರದಲ್ಲೇ ಪತ್ರಿಕೋದ್ಯಮದಲ್ಲಿ ಹೆಸರು ಪಡೆದರೂ ಬದುಕಿನಲ್ಲಿ ಅವರು ಎದುರಿಸಿದ ಸವಾಲುಗಳು, ಪತ್ರಿಕೋದ್ಯಮದ ಕಷ್ಟ ನಷ್ಟ ತುಡಿತ ದುಡಿತಗಳು ಮನ ಮಿಡಿಯುವಂಥವು. ಆದರೂ ಸೋಲೊಪ್ಪದೆ, ಛಲವಂತನಾಗಿ ಪ್ರಾಮಾಣಿಕ ದುಡಿಮೆಗಾರನಾಗಿ ಬದುಕಿದ್ದ ಶೆಟ್ಟರ ಬದುಕಿನ ಸಾಹಸಗಾಥೆಯನ್ನು ಪರಿಚಯಿಸುವ ಪ್ರಯತ್ನದಲ್ಲಿ ನರೇಂದ್ರ ರೈಯವರು ಸಫಲರಾಗಿದ್ದಾರೆ.

ಕು.ಶಿ. ಹರಿದಾಸ ಭಟ್‌ (೧೯೨೪-೨೦೦೦)

ಉಡುಪಿಯ ಕು.ಶಿ. ಹರಿದಾಸ್‌ ಭಟ್‌, ಮಹಾತ್ಮ ಗಾಂಧಿ ಸ್ಮಾರಕ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ವೃತ್ತಿ ಜೀವನದ ಉತ್ಕೃಷ್ಟತೆಯನ್ನು ಮೆರೆದವರು. ಬುದ್ಧಿ, ಪ್ರತಿಭೆ, ಶ್ರದ್ಧೆ, ಪರಿಶ್ರಮಗಳಿಂದ ಸಾಧನೆಯ ಮೆಟ್ಟಲೇರಿದವರು. ದೇ.ಜ.ಗೌ. ಟ್ರಸ್ಟ್‌ ನೀಡುವ ‘ವಿಶ್ವಮಾನವ’ ಪ್ರಶಸ್ತಿ ಪಡೆದವರು. ಅಪೂರ್ವ ವರ್ಚಸ್ಸಿನ ಕು.ಶಿ.ಯವರದು ಒಂದು ಬಗೆಯಲ್ಲಿ ಹೋರಾಟದ ಬದುಕೇ. ಅದರೆ ಸೋಲಿಲ್ಲದ ಸರದಾರ ನಂತಿದ್ದವರು. ಅವರ ಸಂಘಟನಾ ಚತುರತೆಯಂತೂ ಬಹುಶ್ರುತ ಮತ್ತು ಅನುಕರಣೀಯ. ಉಡುಪಿಯಲ್ಲಿ ರಾಷ್ಟ್ರ, ರಾಜ್ಯ, ಸ್ಥಳೀಯ ಮಟ್ಟದ ವಿವಿಧ ಕಮ್ಮಟಗಳನ್ನು, ವಿಚಾರ ಸಂಕಿರಣಗಳನ್ನು, ಸಾಹಿತ್ಯಿಕ ಸಮಾರಂಭಗಳನ್ನು ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸಿ ವ್ಯವಸ್ಥಿತವಾಗಿ, ಯಶಸ್ವಿಯಾಗಿ ನಡೆಸಿದ ಸಮರ್ಥರವರು. ಉಡುಪಿಯನ್ನು ಸಾಂಸ್ಕೃತಿಕ ಕೇಂದ್ರವಾಗಿಸಿದ ಖ್ಯಾತಿ ಅವರದು, ನಾಡಿನ ಸಾಹಿತಿ ದಿಗ್ಗಜರನ್ನು ಜಿಲ್ಲೆಯ ಜನಕ್ಕೆ ಪರಿಚಯಿಸಿದವರು. ಯಕ್ಷಗಾನ ಕಲೆಯನ್ನು ಜಗತ್ತಿನ ಅನೇಕ ದೇಶಗಳಿಗೆ ಕೊಂಡೊಯ್ದು ಪರಿಚಯಿಸುವಲ್ಲಿ ಮುಂದಾಳುತನದ ಹುಮ್ಮಸ್ಸು ಅವರದು. ಉಡುಪಿಯಲ್ಲಿ ‘ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ’ ಮತ್ತು ‘ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ’ ಸ್ಥಾಪನೆ ಅವರ ಮುಂಗಾಣ್ಕೆ ಮತ್ತು ಪ್ರಯತ್ನದ ಫಲವಾಗಿದೆ. ತುಳು ನಿಘಂಟು ಸಂಪುಟಗಳ ಪ್ರಕಟಣೆಯ ಯೋಜನೆಯಲ್ಲೂ ಅವರದು ಗಣನೀಯ ಪಾತ್ರ. ಸ್ವತಃ ಬರಹಗಾರನಾಗಿ, ಅನೇಕ ಪ್ರಕಾರದಲ್ಲಿ ಸಾಹಿತ್ಯ ನಿರ್ಮಿಸಿದ ಸಾಧನೆಯೂ ಸ್ತುತ್ಯರ್ಹ. ಕನ್ನಡ ಪತ್ರಿಕೆ ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದ ಅವರ ಅಂಕಣ ಬರಹದ ‘ಲೋಕಾಭಿರಾಮ’ ಲೇಖನಗಳು ಸಂಗ್ರಹಯೋಗ್ಯವಾದವು. ಫಂಟಮಾರಾ ಅವರು ಅನುವಾದಿಸಿದ ಕಾದಂಬರಿ. ‘ಇಟಾಲಿಯಾ ನಾನು ಕಂಡಂತೆ’, ‘ಜಗದಗಲ’,‘ಒಮ್ಮೆ ರಶಿಯಾ ಇನ್ನೊಮ್ಮೆ ಇಟಾಲಿಯಾ’, ‘ರಂಗಾಯಣ’ದಂತಹ ಪ್ರವಾಸ ಕಥನಗಳು, ‘ನಿವೇದನೆ’ ಎನ್ನುವ ಆತ್ಮ ಚರಿತ್ರೆ ಓದುಗರ ಪಾಲಿಗೆ ರಸದೂಟವೇ. ‘ಕಟ್ಟಂಗೇರಿ ಕೃಷ್ಣ ಹೆಬ್ಬಾರ್‌ಕತೆ ಮತ್ತು ಬದುಕು ಎನ್ನುವ ಕಲಾವಿದನ ಜೀವನ ಚರಿತ್ರೆ ಅಮೂಲ್ಯವಾದೊಂದು ಬೃಹತ್‌ಕೃತಿ. ಈ ಸಾಧಕನನ್ನು ಅರಸಿ ಬಂದ ಪ್ರಶಸ್ತಿ ಪುರಸ್ಕಾರಗಳ ಪಟ್ಟಿಯೂ ದೊಡ್ಡದು. ಇಂತಹ ಮಹನೀಯರನ್ನು ಕುರಿತು ಡಾ. ಗಣನಾಥ ಎಕ್ಕಾರು ಬರೆದಿರುವ ಕೃತಿ ಕಿರಿದಾದರೂ ಮೌಲಿಕವಾಗಿದೆ.

ಅ. ಬಾಲಕೃಷ್ಣ ಶೆಟ್ಟಿ ಪೊಳಲಿ (೧೯೪೧-೨೦೦೧)

ಸ್ವತಃ ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ, ಸಾಂಸ್ಕೃತಿಕ ನೇತಾರರಾಗಿ ಬದುಕಿ ಕೀರ್ತಿ ಶ್ರೇಷರಾದ ಅಮ್ಮುಂಜೆ ಗುತ್ತು ಬಾಲಕೃಷ್ಣ ಶೆಟ್ಟಿ ತುಳು ಕನ್ನಡ ಭಾಷೆ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಮೋಘವಾದುದು. ಬ್ಯಾಂಕ್‌ ಉದ್ಯೋಗಿಯಾಗಿ, ದೆಹಲಿ, ಮುಂಬಾಯಿ ಮೀರಜ್‌, ಹೈದರಾನಾದ್‌, ಬೆಳಗಾಮ್‌ ಮೊದಲಾದ ಮುಖ್ಯ ನಗರಗಳಲ್ಲಿ ದುಡಿಮೆ ಮಾಡುವಾಗ ….. ಅಲ್ಲಲ್ಲಿನ ಕನ್ನಡಿಗರ, ತುಳುವರ ಸಂಘಟನೆಗೆ ಶ್ರಮಿಸಿದವರು. ಅವರು ಹುಮ್ಮಸ್ಸಿನಿಂದ ಮುನ್ನಡೆಸಿದ ದೆಹಲಿ ತುಳುಕೂಟ ಬೆಳಗಾವಿ ವಜ್ರದೀಪ ಪ್ರಕಾಶನ, ಮಣಿಪಾಲ ಸಾಹಿತ್ಯ ಸಂಘ ಮಂಗಳೂರು ಕನ್ನಡ ಸಂಘದಂತಹ ಹತ್ತಾರು ಸಂಘಸಂಸ್ಥೆಗಳು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಸರು ಗಳಿಸಿವೆ. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ‘ಮದಿಪು’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ, ತುಳು ತೇರನ್ನು ಸಮರ್ಥವಾಗಿ ಮುನ್ನಡೆಸಿದವರು. ಅವರ ಮುತುವರ್ಜಿಯಿಂದ ಪ್ರಕಟಗೊಂಡ ಕೃತಿಗಳಲ್ಲಿ ಕೇಶವ ಭಟ್ಟರ ‘ಮಂದಾರ ರಾಮಾಯಣ’, ಜತ್ತಪ್ಪ ರೈಯವರ ‘ಬೇಟೆಯ ನೆನಪುಗಳು’, ಸೇಡಿಯಾಪು ಕೃಷ್ಣ ಭಟ್ಟರ ‘ತಥ್ಯ ದರ್ಶನ’, ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ‘ನವನೀತ’ ಮುಖ್ಯವಾದವು. ಪೊಳಲಿಯವರು ರಚಿಸಿದ ಸಾಹಿತ್ಯ ಕೃತಿಗಳ ಪಟ್ಟಿ ಹಿರಿದಾದುದು. ‘ಹೆಬ್ಬೆರಳು ಕೃತಿ ದರ್ಶನ’, ‘ರಾಜರತ್ನಂ ವ್ಯಂಗ್ಯ ಸಾಹಿತ್ಯ’, ‘ಶ್ರೀ ಕ್ಷೇತ್ರ ಪೊಳಲಿ’, ‘ಗೌರವದ ಗರಿಗಳು’, ‘ಪೊಳಲಿ ಶೀನಪ್ಪ ಹೆಗ್ಡೆ’, ‘ಸುಮಂಗಲಿ’, ‘ಕಯ್ಯಾರ-೮೦’, ‘ಯಕ್ಷಗಾನ ವಾಚಸ್ಪತಿ’, ಇತ್ಯಾದಿ ಕನ್ನಡ ಕೃತಿಗಳು ಮತ್ತು ‘ಪೆಂಗ ದೂಮನ ಕಬಿತೆಲು’, ‘ಪಾತೆರಕತೆ’, ‘ಪೊಳಲಿ ನುಡಿ ಮಾಲೆ’, ‘ತುಳು ಕೋಡೆ-ಇನಿ-ಎಲ್ಲೆ’, ತೆಲ್ಪು ತೆಲಿಕೆದ ಕತೆಕುಲು ಇತ್ಯಾದಿ ತುಳು ಬರಹಗಳು ಶ್ರೇಷ್ಠ ಮ್ಟದ್ದು. ತುಳು ಕನ್ನಡ ಅನುವಾದದಲ್ಲೂ ಅವರು ಮಿಗಿಲೆಂಬುದಕ್ಕೆ ‘ತುಳುವಾಲ ಬಲಿಯೇಂದ್ರ’ ‘ಮಿತ್ಯ ನಾರಾಯಣ ಕತೆ’, ‘ಪೊಡಂಬ ತಿಮ್ಮನ ಕಗ್ಗ’, ‘ಹುಲಿ ಹಿಡಿದ ಗಡಸು’, ‘ಕರಿಯವಜ್ಜೆರೆ ಕತೆಗಳು’ ಸಾಕ್ಷಿ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಆಕಾಶವಾಣಿಯಲ್ಲಿ ಜನಪ್ರಿಯವಾಗಿವೆ. ತುಳು ಪುಸ್ತಕಗಳಿಗೆ ಪ್ರಚಾರ ಒದಗಿಸುವಲ್ಲಿ, ಪ್ರಾಚೀನ ತುಳು ಕಾವ್ಯಕೃತಿಗಳನ್ನು ಪ್ರಕಟಿಸುವಲ್ಲಿ, ತುಳುವಿಗೆ ಸಂವಿಧಾನದ ಮಾನ್ಯತೆ ಪಡೆಯುವ ಪ್ರಯತ್ನದಲ್ಲಿ ಅವರು ತೋರಿದ ಉತ್ಸಾಹ ಸ್ಮರಣೀಯವಾಗಿದೆ. ಹಿರಿಯರಲ್ಲಿ ಗೌರವ ಕಿರಿಯರಲ್ಲಿ ಒಲವು ವಿಶ್ವಾಸ ತೋರುವ ಪೊಳಿಯವರು ಪತ್ರಲೇಖನದಲ್ಲೂ ಸದಾ ಉತ್ಸಾಹಿಯಾಗಿದ್ದು, ಅನೇಕ ಸಂಘಟನೆಗಳಿಗೆ ಸಲಹಾಕಾರ ರಾಗಿಯೂ, ಕಿರಿಯ ಲೇಖಕರಿಗೆ ಮಾರ್ಗದರ್ಶಕರಾಗಿಯೂ ಸ್ಮರಣೀಯರು. ಅವರ ಪತ್ರಗಳ ಮಾದರಿಯನ್ನು ಈ ಕೃತಿಯಲ್ಲಿ ಅಳವಡಿಸಿಕೊಂಡಿರುವುದು ಸೂಕ್ತವಾಗಿದೆ. ಹೀಗೆ ಓರ್ವ ಸರಸ ಸಜ್ಜನ, ಸ್ನೇಹಶೀಲ ವ್ಯಕ್ತಿಯಾಗಿ, ಚತುರ ಸಂಘಟಕನಾಗಿ, ಶ್ರೇಷ್ಠ ಸಾಹಿತಿಯಾಗಿ ಉನ್ನತಿಯ ಹಂತದಲ್ಲಿದ್ದ ಪೊಳಲಿಯವರನ್ನು ಪ್ರಶಸ್ತಿ ಪುರಸ್ಕಾರಗಳು ಕಾಯುತ್ತಿರುವಾಗಲೇ ಆರು ಲೋಕಕ್ಕೆ ವಿದಾಯ ಹೇಳಿದ್ದು ಅನಿರೀಕ್ಷಿತ. ಅಂಥವರ ಜೀವನ ಮತ್ತು ಸಾಧನೆಯನ್ನು ಲೇಖಕ ಎನ್‌.ಪಿ. ಶೆಟ್ಟಿ ಆತ್ಮೀಯತೆಯ ನೆಲೆಯಲ್ಲಿ ಪರಿಚಯಿಸಿದ್ದಾರೆ.

ಕಲಾ ತಪಸ್ವಿ ಕೆ. ಕೆ. ಹೆಬ್ಬಾರ್‌ (೧೯೧೧-೧೯೯೬)

ಉಡುಪಿಯ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರು ಹುಟ್ಟು ಕಲಾಪ್ರತಿಭೆಯ ಬಲದಿಂದ, ಉನ್ನತಿಗೇರುವ ಛಲದಿಂದ ಜಗಮಾನ್ಯ ಚಿತ್ರಕಲಾವಿದರಾಗಿ ಬೆಳೆದವರು. ಹುಟ್ಟೂರಿನಲ್ಲಿ ಬಡತನದಲ್ಲೇ ಬಾಲ್ಯ ಕಳೆದ ಹೆಬ್ಬಾರರು, ಮುಂಬಯಿಗೆ ಹೋಗಿ ‘ಜೆ. ಜೆ ಸ್ಕೂಲ್‌ ಆಫ್‌ ಆರ್ಟ್‌’ನಲ್ಲಿ ಕಲಿತು, ಅನಂತರ ಪ್ಯಾರಿಸ್‌ನಲ್ಲಿ ಅಧ್ಯಯನ ಮುಂದುವರಿಸಿ, ಚಿತ್ರಕಲಾ ಪರಿಣತರಾದವರು. ವಿಶ್ವಕಲಾರಂಗದ ವೈವಿಧ್ಯಪೂರ್ಣವಾದ ಮಹತ್ವದ ಕೃತಿಗಳನ್ನು ಕಂಡು, ಅರಿತು, ಆನಂದಿಸಿ, ತನ್ನದೇ ಸ್ವಂತಿಕೆಯ ಶೈಲಿಯನ್ನು ರೂಢಿಸಿಕೊಂಡವರು. ಭಾರತೀಯ ಸಂಸ್ಕೃತಿಯಲ್ಲಿದ್ದ ಕಲೆಯ ಅಂಶಗಳನ್ನು ಆಧುನಿಕ ಶೈಲಿಯಲ್ಲಿ ಮೂಡಿಸಿ ಜಗತ್ತಿಗೆ ತೋರಿದವರು. ದೇಶ ವಿದೇಶಗಳಲ್ಲಿ ಚಿತ್ರಕಲಾ ಪ್ರದರ್ಶನ ನೀಡಿ ಪ್ರಖ್ಯಾತಿ ಪಡೆದ ಹೆಬ್ಬಾರರ ಜೀವನ ಚರಿತ್ರೆ ಒಬ್ಬ ಕಲಾವಿದನ ಸಾಧನೆಯ ರೋಚಕ ಕತೆಯಂತಿದೆ. ಅವರ ಪ್ರಶಸ್ತಿ ವಿಜೇತ ಕೃತಿಗಳಾದ ‘ಜಾನುವಾರು ಜಾತ್ರೆ’, ‘ಪಂಡಿತರು’, ‘ಗೌಳಿತಿಯರು’, ‘ಜೀವನೋಲ್ಲಾಸ’, ‘ಹೋಳಿ ನೃತ್ಯ’, ‘ಕಲಾವಿದ ಮತ್ತು ತಾಯಿ’…. ಇತ್ಯಾದಿ ಬಹುಸಂಕ್ಯೆಯ ಚಿತ್ರಗಳನ್ನು ಕಂಡು ಮೆಚ್ಚಿದ ವಿದೇಶಿಯರೇ ಇಲ್ಲವೆ ‘ಭಾರತದ ಆತ್ಮ’ ಎಂದು ಉದ್ಗರಿಸಿರುವುದು ಹೆಬ್ಬಾರರ ಕಲಾ ಸಿದ್ಧಿಗೆ ಸಾಕ್ಷಿ. ಅವರ ‘ನಾಗಮಂಡಲ’, ‘ಯಕ್ಷಗಾನ’, ‘ಶಿವರಾಮ ಕಾರಂತ’ ಮೊದಲಾದ ರೇಖಾ ಚಿತ್ರಗಳೂ ಅದ್ವಿತೀಯವೇ. ಕಲಾ ವಿಮರ್ಶಕರ ಅಭಿಪ್ರಾಯದಲ್ಲಿ ‘ಹೆಬ್ಬಾರರು ಕಲೆಯಲ್ಲಿ ಆಧುಮಿಕರು, ಹೃದಯಲ್ಲಿ ಪ್ರಾಚೀನರು.. ಅವರ ಕಲೆಯಲ್ಲಿ ಪ್ರಾಮಾಣಿಕತೆ, ಸಮತೂಕ, ಅರ್ಥ ಅರಿವುಗಳಿವೆ’ ಒಬ್ಬ ಕಲಾ ತಪಸ್ವಿಯಾಗಿ, ನಿಸರ್ಗ ಪ್ರೇಮಿಯಾಗಿ, ಹಮ್ಮು ಅಹಂಕಾರಗಳಿಲ್ಲದೆ ಬಾಳಿದ ಹೆಬ್ಬಾರರು, ಮಗುವಿನ ಮುಗ್ಧತೆ, ಸರಳ, ಸ್ಪಷ್ಟ ಸತ್ಯ ಮಾತಿನ ಧೀಮಂತ ವ್ಯಕ್ತಿ. ‘ಕಲಾವಿದನ ಶೋಧ’ ಎಂಬ ಆತ್ಮ ಕಥನ ‘ಕಲಾಶಿಕ್ಷಣ ಮತ್ತು ಅದರ ಭವಿಷ್ಯ’ ದಂತಹ ಪ್ರಬಂಧಗಳ ಬರಹದಲ್ಲೂ ಹೆಬ್ಬಾರರು ತನ್ನ ಗಟ್ಟಿತನವನ್ನು ತೋರಿದ್ದಾರೆ. ಕಲಾಸಾಧನೆಗಾಗಿ ಮುಂಬಯಿ ಸರಕಾರದ ರಾಜ್ಯ ಪ್ರಶಸ್ತಿ, ಕೇಂದ್ರ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪಶಸ್ತಿ, ಲಲಿತ ಕಲಾ ಅಕಾಡೆಮಿಯ ಫೆಲೋಶಿಪ್‌, ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್‌, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಸ್ಥಾನ, ಕರ್ನಾಟಕ ರಾಜ್ಯ ಪ್ರಶಸ್ತಿ, ಸೋವಿಯತ್‌ ಲ್ಯಾಂಡ್‌ ನೆಹರೂ ಪ್ರಶಸ್ತಿ.. ಹೀಗೆ ಉನ್ನತ ಪ್ರಶಸ್ತಿಗಳ ಸರಮಾಲೆಯನ್ನೇ ಪಡೆದರೂ ಸರಳತೆಯ ಸಾಕಾರದಂತೆ ಬದುಕಿದವರು. ೧೯೯೧ರಲ್ಲಿ ಸ್ಥಾಪನೆಗೊಂಡ ‘ಕೆ. ಕೆ. ಹೆಬ್ಬಾರ್‌ ಆರ್ಟ್ ಫೌಂಡೇಶನ್‌’ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿರುವುದು ಅವರ ಉದಾರತೆಯ ಸಂಕೇತವಾಗಿದೆ. ತುಳುನಾಡಿನ ಈ ಮಹಾನ್‌ ಕಲಾವಿದನ ಬಗ್ಗೆ ಬರೆದ ಈ ಕಿರುಕೃತಿಯಲ್ಲಿ ಲೇಖಕಿ ಸುನೀತಾ ಶೆಟ್ಟಿ ಕೆಲವು ಫೋಡೊಗಳನ್ನು ಅಳವಡಿಸಿಕೊಂಡು ಅವರ ಜೀವನ, ಸಾಧನೆಗಳ ವಿವರಗಳನ್ನು ಕುತೂಹಲಕರವಾಗಿ ನಿರೂಪಿಸಿದ್ದಾರೆ.

ಡಾ. ಶಿವರಾಮ ಕಾರಂತೆರ್‌ (೧೯೦೨-೧೯೯೭)

ಧೀಮಂತಿಕೆ, ಛಲವಂತಿಕೆ, ಅಪಾರ ಜ್ಞಾನ ಅನುಭವಗಳಿಂದ ‘ಕಡಲಂತೆ ಕಾರಂತ’ ಅನ್ನಿಸಿಕೊಂಡ ‘ಕಡಲ ಕರೆಯ ಭಾರ್ಗವ’ ರೆನಿಸಿದ ಕಾರಂತರ ಜೀವನ ಮತ್ತು ಸಾಧನೆಗಳನ್ನು ಸಂಗ್ರಹ ರೂಪದಲ್ಲಿ ತುಳುವಿನಲ್ಲಿ ಬರೆದು ಪರಿಚಯಿಸುವ ಪ್ರಯತ್ನ ಮಾಡಿದವರು ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್‌. ಮಾತೃಭಾಷೆ ಕನ್ನಡವಾದರೂ ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕಾರಂತರಿಗಿದ್ದ ಒಲವು ಆಸಕ್ತಿಗಳನ್ನು ಬೇರೆ ಬೇರೆ ನಿಟ್ಟಿನಲ್ಲಿ ಗುರುತಿಸಿ ವಿಶ್ಲೇಷಿಸಿದ ಲೇಖಕರು ಕಾರಂತರ ಮೇರುಸದೃಶ ಸಾಧನೆಗಳನ್ನು ಗೌರವಪೂರ್ವಕವಾಗಿ ದಾಖಲಿಸಿದ್ದಾರೆ. ಮೂಢನಂಬಿಕೆ, ಶೋಷಣೆಗಳಂತಹ ಅನಿಷ್ಟಗಳನ್ನು ಕಂಡರೆ ಕಿಡಿಕಾರುವ ಕಾರಂತರು ಸಮಾಜ ಉದ್ಧಾರದ ಚಿಂತನೆ ನಡೆಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡು, ಸ್ವದೇಸಿ ಚಳುವಳಿ, ದಲಿತೋದ್ಧಾರ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಜನಜೀವನವನ್ನು ಮಾನವೀಯ ನೆಲೆಯಲ್ಲಿ ಚಿತ್ರಿಸುವ ಅವರ ‘ಮರಳಿ ಮಣ್ಣಿಗೆ’ ‘ಚೋಮನ ದುಡಿ’, ‘ಕುಡಿಯರ ಕೂಸು’, ತುಳುನಾಡಿನ ಸಾಂಸ್ಕೃತಿಕ ಅಂಶಗಳಾದ ಭೂತಾರಾಧನೆ, ನಾಗಾರಾಧನೆ, ತುಳುವರ ಜನಪದ ಕುಣಿತಗಳು, ಜನಪದ ಸಾಹಿತ್ಯ, ಆಟ ಕ್ರೀಡೆಗಳು, ಕುಲಕಸುಬುಗಳು, ಎಲ್ಲದರ ಬಗ್ಗಯೂ ಅವರಿಗೆ ಆಸಕ್ತಿಯಿತ್ತು. ಸಾಹಿತ್ಯ, ಚಿತ್ರ, ಶಿಲ್ಪ, ನೃತ್ಯ, ಸಂಗೀತ, ನಾಟಕ, ಸಮಾಜ ಸೇವೆ, ದೇಶ ಸೇವೆ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ನಿರಂತರ ತೊಡಗಿಸಿಕೊಂಡ ಕರ್ಮಯೋಗಿ ಕಾರಂತರು ಪುತ್ತೂರಿನಲ್ಲಿ ‘ಬಾಲವನ’ ಸ್ಥಾಪಿಸಿ ಮಕ್ಕಳಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲ. ಅದ್ಭು ಜಗತ್ತನ್ನು ಮಕ್ಕಳಿಗೆ ಪರಿಚಯಿಸುವ ವೈಜ್ಞಾನಿಕ ವಿಚಾರ ಸಂಪನ್ನ ಗ್ರಂಥಗಳನ್ನೂ ರಚಿಸಿದರು. ಯಕ್ಷಗಾನ ಕಲೆಯ ಪುನರುತ್ಥಾನದ ಚಿಂತನೆ ನಡೆಸಿದರು. ಯಕ್ಷಗಾನ ಬಯಲಾಟ, ಕಲಾ ಪ್ರಪಂಚದಂತಹ ಗ್ರಂಥಗಳನ್ನೂ ಬರೆದರು. ದೇಶವಿದೇಶಗಳಲ್ಲಿ ಯಕ್ಷಗಾನವನ್ನು ಪ್ರಚುರಪಡಿಸಲು ಶ್ರಮಿಸಿದರು. ಪ್ರವಾಸದ ಅನುಭವಗಳನ್ನು ಅಲ್ಲಲ್ಲಿನ ಜನಜೀವನ ಕಲೆ ಸಂಸಕೃತಿಯ ಜ್ಞಾನ ನೀಡುವ ಪ್ರವಾಸ ಕಥನಗಳಾಗಿಸಿದರು. ಪರಿಸರವಾದಿ ಪರಿಸರ ಉಳಿಸುವ ಚಳುವಳಿಯನ್ನು ಬೆಂಬಲಿಸಿದರು. ಜ್ಞಾನ ಪೀಠ ಪ್ರಶಶ್ತಿ, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇಶಿಕೋತ್ತಮ ಪ್ರಶಸ್ತಿ, ತುಲಸೀ ಸಮ್ಮಾನ್‌, ನಾಡೋಜ ಪ್ರಶಸ್ತಿಗಳಂತಹ ಮೂವತ್ತಮೂರು ಉನ್ನತ ಪ್ರಶಸ್ತಿ ಗಳಿಸಿ, ದೇಸ ವಿದೇಶಗಳಲ್ಲಿ ವಿಖ್ಯಾತರಾದ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂಬಂತಹ ಬಹುಮುಖೀ ಸಾಧನೆಗಳನ್ನು ಪರಿಚಯಿಸುವಲ್ಲಿ ಲೇಖಕರು ಸಾಕಷ್ಟು ಸಫಲರಾಗಿದ್ದಾರೆ. ತುಳುನಾಡಿನ ಪ್ರಕೃತಿ, ಕಸುಬು, ಕಲೆಗಳ ಕೆಲವು ವಿಶಿಷ್ಟ ಛಾಯಾಚಿತ್ರಗಳನ್ನು ಅಳವಡಿಸಿಕೊಂಡು ಕಾರಂತರು ಕ್ಯಾಮರಾ ಕಣ್ಣಿನಲ್ಲಿ ಸಮಾಜವನ್ನು ಕಂಡುಕೊಂಡ್ದರ ಬಗ್ಗೆ ಕುತೂಗಹಲ ಮೂಡಿಸಿದ್ದಾರೆ……

ಕೆದಂಬಾಡಿ ಜತ್ತಪ್ಪ ರೈ (೧೯೧೬-೨೦೦೩)

ಮೂಲತಃ ಕೃಷಿಕರಾದ ಜತ್ತಪ್ಪ ರೈಯವರು ಎಳವೆಯಿಂದಲೇ ಬೇಟೆಯ ಹವ್ಯಾಸವನ್ನು ರೂಢಿಸಿಕೊಂಡವರು. ಶ್ರೀಮಂತ ಮನೆತನದಲ್ಲಿ ಜನಿಸಿಯೂ, ವಿದ್ಯಾಭ್ಯಾಸದಲ್ಲಿ ಮುಂದುವರಿಯುವ ಅವಕಾಶಗಳನ್ನು ಕಡೆಗಣಿಸಿ ಬೇಟೆಯ ಗೀಳಿನಲ್ಲೇ ಉತ್ತಮ ಈಡುಗಾರನಾಗುವ ಸಾಧನೆ ಮಾಡಿದವರು. ಆದರೆ ಯೌವನ ಕಳೆಯುತ್ತಲೇ ಬೇಟೆಯ ಜೀವನಕ್ಕೆ ಇತಿಶ್ರೀ ಹಾಡಿ ಯಾವುದೋ ಪ್ರೇರಣೆಯಿಂದ ಬರಹದ ಪ್ರಯತ್ನಕ್ಕೆ ತೊಡಗಿದ್ದು ತುಳು ಕನ್ನಡ ಸಾಹಿತ್ಯದ ಅದೃಷ್ಟವೆನ್ನಬಹುದು. ಕೋವಿ ಹಿಡಿದಾಡಿದ ಬೇಟೆಯ ಗಾಢ ಅನುಭವವೇ ಹೊರಹೊಮ್ಮಿ ರಸಭರಿತ ಸಾಹಿತ್ಯ ಸೃಷ್ಟಿಯಾಯಿತು. ಪ್ರಥಮ ಕೃತಿ ‘ಬೇಟೆಯ ಉರುಳು’, ‘ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ’… ಇವೆಲ್ಲವೂ ಕುತೂಹಲಕಾರಿ ರಸಪ್ರಸಂಗಗಳಿಂದ ಸಂಪನ್ನವಾಗಿವೆ. ಬರಹದ ಗೀಳು ಮುಂದುವರಿದಂತೆ ಅನುವಾದದಲ್ಲಿ ಮಿಗಿಲೆನಿಸುತ್ತಾ ಸಾಗಿದ ರೈಯವರು. ಕೆ. ರಾಮಯ್ಯ ರೈಯವರ ‘ಟೆಲ್‌ ಟೆಲ್‌ ಟೀತ್‌’ ಕೃತಿಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿ ‘ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ’ ಎಂಬ ಸತ್ಯಕತೆ ಬರೆದರು. ಇದು ‘ತರಂಗ’ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ಅತ್ಯಂತ ಜನಪ್ರಿಯವವಾಗಿತ್ತು. ‘ಸಿರಿ ರಾಮಾಶ್ವಮೇದೋ’, ‘ಅಶನಿಯಾಗೊ ಕಾಂತಗೊ ಜೋತಿ’, ‘ಕುಜಿಲಿ ಪೂಜೆ’, ‘ಶೂದ್ರೆ ಏಕಲವ್ಯೆ’, ‘ಯಮನ ಸೋಲು’, ‘ಅಜ್ಜಬಿರು’, ‘ಕಾಬೂಲಿವಾಲಾ’, ‘ಮದಿಪ್ಪಂದಿ ನೆಂಪು’, ‘ಪಡಿಲ್‌ಪಂಪ’, ‘ಚೋಮನ ದುಡಿ’ ಇವು ತುಳುವಿಗೆ ಅನುವಾದಗೊಂಡ ಮಹತ್ವದ ಕೃತಿಗಳು. ರೈಯರಿಗಿದ್ದ ತುಳುನಾಡಿನ ಸಾಂಸ್ಕೃತಿಕ ಪರಿಸರದ ಪರಿಜ್ಞಾನ ಮತ್ತು ತುಳು ಭಾಷಾ ಪ್ರಭುತ್ವಕ್ಕೆ ಈ ಕೃತಿಗಳೇ ಸಾಕ್ಷಿ. ತುಳುಕನ್ನಡ ಸಾಹಿತ್ಯ ಸೇವೆಗಾಗಿ ರೈಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್‌ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ., ಇತ್ಯಾದಿಗಳಿಂದ ಪುರಸ್ಕೃತರಾದವರು. ಈ ಕೃತಿಯಲ್ಲಿ ತನ್ನ ತಂದೆಯ ಬದುಕಿನ ವಿವರ, ಬರಹಗಳ ಪರಿಚಯ, ವ್ಯಕ್ತಿತ್ವದ ವಿಶಿಷ್ಟತೆಗಳನ್ನು ನಿರೂಪಿಸಿದ ಡಾ. ಕೆದಂಬಾಡಿ ತಿಮ್ಮಪ್ಪ ರೈಯವರ ಅಭಿಪ್ರಾಯದಂತೆ ‘ಜತ್ತಪ್ಪ ರೈಯವರ ಬಾಳು ಗ್ರಾಮೀಣ ಬದುಕಿನ ಕಷ್ಟ- ನಿಷ್ಠುರ, ರೂಕ್ಷತೆ, ರಸಿಕತೆ, ಶೌರ್ಯ, ಔದಾರ್ಯ, ಛಲ, ಗ್ರಾಮ್ಯ ರಾಜಕೀಯದ ಬಿರುಸು, ಬಿಂಕ, ಠೀವಿ, ಠೇಂಕಾರ, ಸ್ನೇಹ, ವಿರಸ, ವಿಯೋಗ, ವಿನೋದ ಇತ್ಯಾದಿ ಅನುಭವದಿಂದ ನಿಬಿಡವಾಗಿತ್ತು.’ ಈ ಕೃತಿಯಲ್ಲಿನ ಹೂರಣ ಲೇಖಕರ ಅಭಿಪ್ರಾಯಗಳನ್ನು ಸಮರ್ಥಿಸುವಂತಿವೆ.

ಪುಲ್ಯಾನಗ ನೆನೆಪೊಡಾಯಿನ ಎಸ್‌. ಆರ್‌. ಹೆಗ್ಡೆ (೧೯೩೪-೧೯೯೬)

ಅಖಿಲ ಭಾರತ ತುಳು ಒಕ್ಕೂಟ (ರಿ) ಮಂಗಳೂರು, ೧೯೯೮ರಲ್ಲಿ ಪ್ರಕಟಪಡಿಸಿದ ಈ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಹೆಗ್ಡೆಯವರ ನಿಕಟವರ್ತಿ ರತ್ನಕುಮಾರ್‌ ಎಮ್‌. ರಚಿಸಿರುತ್ತಾರೆ. ಎಸ್‌. ಆರ್‌. ಹೆಗ್ಡೆಯವರು ತುಳುವರಿಗೆ ಪ್ರಾತಃಸ್ಮರಣೀಯರು… ೧೯೭೦ರಲ್ಲಿ ಮಂಗಳೂರಿನಲ್ಲಿ ತುಳುಕೂಟ ಸ್ಥಾಪನೆಗೆ ಕಾರಣರಾಗಿ, ಆ ಮೂಲಕ ಉಡುಪಿಯಲ್ಲಿ ಆರಂಭವಾಗಿ ನಿಂತುಹೋದ ತುಳು ಚಳುವಳಿಗೆ ಮತ್ತೊಮ್ಮೆ ಚಾಲನೆ ನೀಡಿದವರು. ಆ ಬಳಿಕ ಪುತ್ತೂರು, ಮಡಿಕೇರಿ, ಬೆಂಗಳೂರು, ಮುಂಬಯಿ… ದುಬೈ, ಬೆಹರಿನ್‌… ಹೀಗೆ ಎಲ್ಲೆಲ್ಲಿ ತುಳುವರು ತಳವೂರಿರುವರೋ ಅಲ್ಲಲ್ಲಿ ತುಳುಕೂಟ ಸ್ಥಾಪನೆಗೆ ಮಂಗಳೂರು ತುಳುಕೂಟವೇ ಪ್ರೇರಣೆಯಾಯಿತು. ಖ್ಯಾತ ವಕೀಲರಾದ ಹೆಗ್ಡೆಯವರು ಕದ್ರಿಯಲ್ಲಿ ತುಳುನಾಡ್‌ ಪ್ರೆಸ್‌ ಸ್ಥಾಪಿಸಿದರು. ‘ತುಳುವಾಣಿ’ ಪತ್ರಿಕೆ ಪ್ರಕಟಣೆಗೆ ಸಹಕರಿಸಿದರು. ತುಳು ನಾಟಕ ಸ್ಪರ್ಧೆಗಳನ್ನು ನಡೆಸಿದರು. ತುಳು ಸಿನೇಮಾಗಳ ಉತ್ತಮ ನಟ, ನಟಿ, ದಿಗ್ದರ್ಶನ, ಛಾಯಾಚಿತ್ರ, ಚಿತ್ರಗೀತೆ, ಸಾಹಿತ್ಯ ಸಂಭಾಷಣೆಗಳಿಗೆ ‘ನವಭಾರತ ತುಳುಕೂಟ ಪ್ರಶಸ್ತಿ’ಗಳನ್ನು ಆಯೋಜಿಸಿ ಸತತ ಮೂರು ವರ್ಷ ವಿತರಿಸಿದರು. ಮಂಗಳೂರಿನಲ್ಲಿ ತುಳು ಸಾಹಿತ್ಯ ಸಮ್ಮೇಳನಗಳನ್ನು ನಡೆಸುವಲ್ಲಿ, ೧೯೯೪ರಲ್ಲಿ ನಡೆದ ಮೂರುದಿನಗಳ ವಿಶ್ವ ತುಳು ಸಮ್ಮೇಳನಗಳ ಯಶಸ್ಸಿನಲ್ಲಿ ಹೆಗ್ಡೆಯವರ ಪರಿಶ್ರಮದ ಹಿರಿದಾದುದು. ೧೯೭೭ರಿಂದ ನಾಟಕ ಬರಹದ ಸ್ಪರ್ಧೆಯನ್ನು ನಡೆಸಿ, ಪ್ರತಿ ವರ್ಷವೂ ‘ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ ‘ನೀಡುವ ಯೋಜನೆಯಲ್ಲಿ ಸಹಕರಿಸಿದರು. ವರದಕ್ಷಿಣಾ ವಿರೋಧಿ ಸಂಘ ಸ್ಥಾಪನೆಗೂ ಪ್ರೇರಕರಾದರು. ಮಂಗಳೂರು ಆಕಾಶವಾಣಿಯಲ್ಲಿ ತುಳುವಿನಲ್ಲಿ ಪ್ರಾದೇಶಿಕ ವಾರ್ತೆ ಪ್ರಸಾರವಾಗಬೇಕೆಂಬುದನ್ನು ಒತ್ತಾಯಪೂರ್ವಕ ಮನವಿಯಿಂದ ನೆರವೇರಿಸಿಕೊಂಡರು. ಹೀಗೆ ತುಳು ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಶೆಟ್ಟಿಬೆಟ್ಟು ರಮಾನಂದ ಹೆಗ್ಡೆಯವರು ಸಜ್ಜನ, ಸಾತ್ವಿಕ, ಸ್ನೇಹಮಯಿ, ನಿಗರ್ವಿ, ಸಂಘಟಕ. ಆದರೆ ಹರೆಯ ಮೀರುವ ಮುನ್ನ ವಿಧಿವಶರಾದುದು ತುಳುವಿಗೆ ತುಂಬಲಾರದ ನಷ್ಟವೆಂಬುದು ಸ್ಪಷ್ಟ. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಶೋಕತಪ್ತ ಗಣ್ಯರಾಡಿದ ಅಂತಃಕರಣದ ನುಡಿಗಳನ್ನು ಲೇಖಕರು ಈ ಕೃತಿಯಲ್ಲಿ ಸಂಕಲಿಸಿ, ಹೆಗ್ಡೆಯವರು ವ್ಯಕ್ತಿತ್ವದ ಹಿರಿಮೆಯನ್ನು ಅರ್ಥೈಸಿದ್ದಾರೆ.

ಬಾಬಾ ಸಾಹೇಬ ಅಂಬೇಡ್ಕರ್‌ – ಒಂಜಿ ಪರಿಚಯ (೧೮೯೧-೧೯೫೬)

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ವಿಶೇಷ ಘಟಕ ಯೋಜನೆಯಲ್ಲಿ ೧೯೯೭ರಲ್ಲಿ ಪ್ರಕಟಸಿದ ಬಾಬಾ ಸಾಹೇಬ ಅಂಬೇಡ್ಕರರ ಪರಿಚಯ ಕೃತಿ ತುಳುವಿನ ಇನ್ನೊಂದು ಜೀವನ ಚರಿತ್ರೆ. ಜಾತೀಯತೆಯ ಭೀಕರತೆಯಲ್ಲಿ ತುಳಿತಕ್ಕೊಳಗಾದ ಅಸಂಖ್ಯಾತ ದೀನ ದಲಿತ ಭಾರತೀಯರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಉದ್ದೀಪಿಸಲು ಬದುಕಿನುದ್ದಕ್ಕೂ ಶ್ರಮಿಸಿದ, ‘ದಲಿತ ಸೂರ್ಯ’ನೆಂದು ಪರಿಗಣಿಸಲ್ಪಟ್ಟ ಡಾ. ಬಿ. ಅರ್‌. ಅಂಬೇಡ್ಕರರ ಕೌಟುಂಬಿಕ ಹಿನ್ನೆಲೆ, ಬಡತನ, ಸಾಮಾಜಿಕ ಸ್ಥಿತಿ-ಗತಿ-ಸಂಘರ್ಷಗಳ ಚಿತ್ರಣ ಇದರಲ್ಲಿದೆ. ಮತ್ತು ಹೋರಾಟದ ಬದುಕಿನಲ್ಲಿ ಕೃತಾರ್ಥರಾದ ಬಗೆಯನ್ನು ಅವರ ಅಧ್ಯಯನ ಶೀಲತೆ, ವಿದ್ವತ್ತು, ಕೆಚ್ಚುನೆಚ್ಚುಗಳನ್ನು, ಅವರ ಬರಹದ ವಿಸ್ತಾರವನ್ನು, ಸಂವಿಧಾನ ಶಿಲ್ಪಿಯಾಗಿ ನಿರ್ವಹಿಸಿದ ಕಾರ್ಯದ ಘನತೆಯನ್ನು ಅವರು ಪಡೆದ ಸ್ಥಾನ, ಮಾನ, ಪದವಿಗಳನ್ನೂ ಸಂಗ್ರಹವಾಗಿ ನಿರೂಪಿಸಲಾಗಿದೆ. ಈ ಕೃತಿ ರಚನೆ ಮಾಡಿದ ಪಿ. ಡೀಕಯ್ಯನವರು ಈ ಮಹಾ ಮೇಧಾವಿ ಅಂಬೇಡ್ಕರರ ವ್ಯಕ್ತಿತ್ವದ ಮಹಿಮೆಯನ್ನು ಅರ್ಥೈಸುವುದರೊಂದಿಗೆ, ನಿರಂತರ ಜ್ಞಾನದಾಹಿಯಾಗಿದ್ದ ಅಂಬೇಡ್ಕರರ ಬಗ್ಗೆ ತುಳುವರು ಜ್ಞಾನದಾಹಿಗಳಾಗುವಂತೆ ಮಾಡಿದ್ದಾರೆ…

ಆತ್ಮಚರಿತ್ರೆ

ವ್ಯಕ್ತಿ ಸ್ವತಃ ತನ್ನ ಬದುಕಿನ ಘಟನೆಗಳನ್ನು ಮೆಲುಕು ಹಾಕಿ ಬರೆಯುವ ಆತ್ಮ ಚರಿತ್ರೆ ಪ್ರಕಾರವು ಬರಹಗಾರನ ವ್ಯಕ್ತಿತ್ವವನ್ನು ಬೆಳಕಿಗೆ ತರುವಂತಹುದು. ಬರಹಗಾರನ ಜೀವನ ಸಿದ್ಧಾಂತಗಳಿಗೆ ಪ್ರೇರಕವಾದ ಘಟನೆಗಳ ಹಿನ್ನೆಲೆಯೊಂದಿಗೆ ಆಯಾಯ ಕಾಲದ ಜನಜೀವನದ ವಿವರಗಳೂ ಇದರಿಂದ ಒದಗುತ್ತವೆ. ಜನರು ಅಂಗೀಕರಿಸಿ, ಅನುಸರಿಸಿದ ಧ್ಯೇಯ ಧೋರಣೆಗಳನ್ನು ಇವು ಪ್ರತಿಬಿಂಬಿಸುತ್ತವೆ. ಆತ್ಮಚರಿತ್ರೆ, ಬರಹಗಾರನಿಗೆ ಆತ್ಮತೃಪ್ತಿ ನೀಡುವ ಮತ್ತು ಸಿಹಿ ಕಹಿ ನೆನಪುಗಳನ್ನು ಹಂಚಿಕೊಳ್ಳುವ ಅವಕಾಶವೂ ಆಗಿರುತ್ತದೆ. ಚರಿತ್ರಕಾರರಿಗೂ ಮೂಲ ಸಾಮಾಗ್ರಿ ಒದಗಿಸುವ ಆಕರಗಳಾಗುವುದೂ ಉಂಟು. ಆತ್ಮಕಥನಗಳು ಮೌಲ್ಯಭರಿತ ಸಾಹಿತ್ಯ ಕೃತಿಗಳಾಗಿ ಮೂಡಿ ಬರಬೇಕಿದ್ದರೆ, ಆತ್ಮಕಥನಕಾರನಿಗೆ ತನ್ನ ಅನಿಸಿಕೆ, ಅನುಭವಗಳನ್ನು, ಘಟನೆಗಳ ಸತ್ಯಾಂಶಗಳನ್ನು ಭಾಷೆಯಲ್ಲಿ ಸೊಗಸಾಗಿ ಪರಿಣಾಮಕಾರಿ ಹೊರಹೊಮ್ಮಿಸುವ ಸಾಮರ್ಥ್ಯವಿರಬೇಕು. ತನ್ನ ಬೇಕು ಬೇಡಗಳಿಂದ ಸಂಪೂರ್ಣ ಪ್ರಭಾವಿತನಾಗದೆ, ಭಾವೋದ್ರೇಕಕ್ಕೆ ಒಳಗಾಗದೆ ಜೀವನ ಸಂಬಂಧೀ ವಿಚಾರಗಳನ್ನು, ಘಟನೆಗಳನ್ನು ಸಮುದೃಷ್ಟಿಯಿಂದ, ಆತ್ಮ ಪ್ರಶಂಸೆಯಿಲ್ಲದೆ ನಿರೂಪಿಸುವ ಸಂಯಮ, ಸತ್ಯನಿಷ್ಠೆ, ವಿಮರ್ಶಾದೃಷ್ಟಿ ಇದ್ದಾಗ ಆತ್ಮಚರಿತ್ರೆಯೂ ಉತ್ಕೃಷ್ಟ ಸಾಹಿತ್ಯ ಕೃತಿಯಾಗಿದೆ.

ತುಳುವಿನಲ್ಲಿ ಆತ್ಮಚರಿತ್ರೆಯ ಸಾಹಿತ್ಯ ಪ್ರಕಾರ ರಚನೆಯಾದುದೇ ಈ ಶತಮಾನದಲ್ಲಿ ೨೦೦೩ರಲ್ಲಿ ‘ಸಾತ್ವಿಕ ಪ್ರಕಾಶನ’ದ ಮೂಲಕ ಪ್ರಕಟವಾದ ಬಿ. ಎ. ಪ್ರಭಾಕರ ರೈಯವರ ‘ಮದಪ್ಪಂದಿ ನೆಂಪು’ (ಮರೆಯಲಾಗದ ನೆನಪು) ತುಳುವಿನ ಪ್ರಥಮ ಆತ್ಮಚರಿತ್ರೆಯಾಗಿದೆ.

ಪುತ್ತೂರು ತಾಲೂಕಿನ ಬೆದ್ರಾಳದಲ್ಲಿ ೧೯೪೦ರಲ್ಲಿ ಜನಿಸಿದ ಪ್ರಭಾಕರ ರೈಯವರು ಬ್ಯಾಂಕ್‌ ಉದ್ಯೋಗದಲ್ಲಿ ನಲವತ್ತೆರಡು ವರ್ಷಗಳನ್ನು ಕಳೆದು, ೧೯೯೯ರಲ್ಲಿ ನಿವೃತ್ತಿ ಹೊಂದಿದ ಬಳಿಕ, ಬರವಣಿಗೆಗೆ ತೊಡಗಿದವರು. ತುಳು ಕನ್ನಡ ಭಾಷೆಗಳಲ್ಲಿ ಬರಹ ಮುಂದುವರಿಸಿ, ಹತ್ತನೆಯ ಕೃತಿಯಾಗಿ ‘ಮದಪ್ಪಂದಿ ನೆಂಪು’ ಆತ್ಮಚರಿತ್ರೆ ಬರೆದಿರುವರು. ತಮ್ಮ ಸಂಸಾರಿ ಜೀವನದ, ವೃತ್ತಿ ಜೀವನದ ಸಂಭ್ರಮದ ಕ್ಷಣಗಳನ್ನು ನೆನಪಿಸುವ ಅನೇಕ ಛಾಯಾಚಿತ್ರಗಳ ಸಹಿತ ಆರಂಭಗೊಳ್ಳುವ ಈ ಆತ್ಮಕಥನದಲ್ಲಿ ಐವತ್ತು ಅಧ್ಯಾಯಗಳಿವೆ. ಕೌಟುಂಬಿಕ ಹಿನ್ನೆಲೆ, ಹೆಂಡತಿ ಮಕ್ಕಳು, ಇಷ್ಟಮಿತ್ರರ ವ್ಯಕ್ತಿತ್ವ ಚಿತ್ರಣ ಮತ್ತು ಬ್ಯಾಂಕ್‌ ಉದ್ಯೋಗದಲ್ಲಿನ ಸಾಧನೆಗಳು, ಪಡೆದ ಅಧಿಕಾರದ ಸ್ಥಾನಮಾನಗಳು ಪಡೆದ ಸನ್ಮಾನ ಬಹುಮಾನಗಳ ವಿವರಗಳೊಂದಿಗೆ, ಊರಿಂದೂರಿಗೆ ವರ್ಗಾವಣೆಗೊಂಡಾಗಿನ ಸಿಹಿ ಕಹಿ ಅನುಭವಗಳ ನಿರೂಪಣೆ ಇದೆ. ತನ್ನ ಸಾಧನೆಯ ಹಾದಿಯಲ್ಲಿ ಎಡರುತೊಡರುಗಳನ್ನು ನಿರ್ಮಿಸಿ, ಹಗೆ ಮತ್ಸರ ಅಸಡ್ಡೆಗಳಿಂದ ಸತಾಯಿಸಿದವರ ಬಗ್ಗೆ ನಿಷ್ಠುರ ನುಡಿಗಳಿವೆ. ಬಂದ ವಿಪತ್ತುಗಳನ್ನು ನಿಭಾಯಿಸಿ ಗೆದ್ದ ವಿವರಣೆ ಈ ಆತ್ಮಕಥನದ ರೋಚಕ ಭಾಗವಾಗಿದೆ.

‘ನನ್ನತನವನ್ನು ಉಳಿಸಿಕೊಂಡು ಯಾರಿಗೂ ಬಗ್ಗದೆ, ಯಾವ ಶಿಕ್ಷೆಗೂ ಹೆದರದೆ, ಹಿಡಿದ ಕೆಲಸವನ್ನು ಹಿಂದಕ್ಕೆ ಹಾಕದೆ, ಸತ್ಯ ನ್ಯಾಯ ಧರ್ಮಕ್ಕೆ ಕಿಂಚಿತ್ತು ತೊಂದರೆ ಆಗದಂತೆ ದಿನ ನೂಕಿರುವೆ’ ಎಂದು ಸ್ವತಃ ಲೇಖಕರೇ ‘ವಿಜ್ಞಾಪನೆ’ಯಲ್ಲಿ ಹೇಳಿಕೊಂಡಿದ್ದಾರೆ. ಈ ನುಡಿಗಳನ್ನು ಆತ್ಮಕಥನ ಭಾಗ ಪೂರ್ಣವಾಗಿ ಸಮರ್ಥಿಸುತ್ತದೆ. ಲೇಖಕರ ಬುದ್ಧಿ ಮತ್ತೆ, ಕಾರ್ಯಕುಶಲತೆ, ಆತ್ಮಾಭಿಮಾನ, ಸಮಾಜ ಸೇವಾಕಾಂಕ್ಷೆ ಗಮನ ಸೆಳೆಯುವಂತಿದ್ದು, ಅವರ ಕಷ್ಟ ಸುಖಗಳಲ್ಲಿ ವಾಚಕರು ಸಹಾನುಭೂತಿ ಪರರಾಗುವಂತಿದೆ. ತುಳುವಿನ ನುಡಿಗಟ್ಟುಗಳನ್ನೂ ತುಳುವರ ಕೆಲವು ನಂಬಿಕೆಗಳನ್ನು ಅಲ್ಲಲ್ಲಿ ಬಳಸಿಕೊಂಡು, ಈ ನಿರರ್ಗಳ ಬರಹವು, “….. ಮಾನವನ ಒಳಮಗ್ಗುಲಿನ ಅನೇಕ ಚಿತ್ರಣಗಳನ್ನು ನೀಡುತ್ತದೆ. ಮನುಷ್ಯನ ರಾಗ ದ್ವೇಷ, ದೌರ್ಬಲ್ಯ, ಅಲ್ಪತನ ಮಾತ್ರವಲ್ಲ ಮಾನವೀಯ ಅಂತಃಕರಣದ ಸತ್ವವೂ ಅನುಭವಕ್ಕೆ ಬರುವಂತಿದೆ.’ ಎಂದು ಮುನ್ನುಡಿಯಲ್ಲಿ ಅಮೃತ ಸೋಮೇಶ್ವರರು ಅಭಿಪ್ರಾಯಪಟ್ಟಿದ್ದಾರೆ.

ಸಮಾಜದ ಲೋಪದೋಷಗಳಿಗೆ ಕನ್ನಡಿ ಹಿಡಿದು ಪ್ರತಿಬಿಂಬಿಸುವ ಸಾಮಾಜಿಕ ಬದ್ಧತೆ ಈ ಲೇಖಕರಿಗಿರುವುದು ಸ್ಪಷ್ಟ. ಆದರೆ ತನಗಾದ ಅವಮಾನ, ಅನ್ಯಾಯಗಳಿಗೆ ಕಾರಣರಾದವರ ಮೇಲೂ ಇದ್ದಿರಬಹುದಾದ ಉದ್ದಿಮೆ ರಂಗದ ಒತ್ತಡ ಅಥವಾ ದೂರದರ್ಶಿತ್ವದ ಯಾವುದೇ ಸುಳಿವು ಸೂಚನೆಗಳಿಲ್ಲದೆ, ಲೇಖಕರ ಖಾಸಗಿ ಹೋರಾಟದ ಹೃದಯ ಸ್ಪರ್ಶಿ ನಿರೂಪಣೆಯೇ ಇದರ ವಿಶೇಷತೆ.