‘ಜನಜೀವನದ ಪ್ರತಿಬಿಂಬ’ದಂತೆ ಮೂಡಿ ಬರುವ ಸಾಹಿತ್ಯದಲ್ಲಿ ಜೀವನ ಚರಿತ್ರೆಯೂ ಒಂದು ಪ್ರಮುಖ ಪ್ರಕಾರ. ತಮ್ಮ ನಡೆನುಡಿಯ ಉತ್ತಮಿಕೆಯಿಂದ, ನಾಡು, ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿಯ ಮೇಲಿನ ಪ್ರೀತಿ, ಅಭಿಮಾನಗಳಿಂದ, ಬುದ್ಧಿ ಪ್ರತಿಭೆಗಳ ಮೇಲ್ಮೆಯಿಂದ, ‘ಬಹುಜನ ಹಿತಾಯ’ ಆದರ್ಶಗಳಿಂದ, ಸಾಹಸ ಪ್ರವೃತ್ತಿಗಳಿಂದ ಸಾಧನೆಗೈಯ್ಯುತ್ತಾ ಜೀವನ ಪರ್ಯಂತ ಗಂಧದ ಕೊರಡಿನಂತೆ ಸವೆಯುತ್ತಾ ಸಾಗುವ ಸಾರ್ಥಕ ಜೀವಿಗಳ ಜೀವನ ಚರಿತ್ರೆಗಳೂ ಅಮೂಲ್ಯವಾದ, ಪ್ರಭಾವಪೂರ್ಣವಾದ ಸಾಹಿತ್ಯ ಕೃತಿಗಳಾಗುತ್ತವೆ. ಆದ್ದರಿಂದಲೇ ಪ್ರಪಂಚದ ಪ್ರಮುಖ ಭಾಷೆಗಳ ಸಾಹಿತ್ಯ ಭಂಡಾರಗಳು ಈ ಪ್ರಕಾರದ ಸಾಹಿತ್ಯ ಕೃತಿಗಳಿಂದಲೂ ಸಮೃದ್ಧವಾಗಿವೆ.

ದ್ರಾವಿಡ ಮೂಲದ ತುಳು ಭಾಷೆಯೂ ಕನ್ನಡ, ತಮಿಳು, ತೆಲುಗು, ಮಲೆಯಾಳ ಭಾಷೆಗಳಂತೆ ಪ್ರಾಚೀನ ಮತ್ತು ಸಂಪನ್ನ ಭಾಷೆ. ಆದರೆ ರಾಜ್ಯ ಭಾಷೆ ಕನ್ನಡದ ಹೇರಿಕೆಯಿಂದಾಗಿ ತುಳುವರ ಅಮೋಘ ಸಾಹಿತ್ಯಿಕ ಕೊಡುಗೆಗಳು ಕನ್ನಡ ಭಾಷೆಯಲ್ಲಿದ್ದು ತುಳು ಸಾಹಿತ್ಯ ಸಿರಿ ಸೊರಗುವಂತಾಯಿತು. ಈ ಪರಿಸ್ಥಿತಿಯಲ್ಲೂ ತುಳುನಾಡಿನ ಅನೇಕ ಮಹನೀಯರು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಪರಿಪರಿಯಾಗಿ ಶ್ರಮಿಸಿದ್ದಾರೆ. ಪ್ರಚಾರದ ಹಂಬಲವಿಲ್ಲದೇ ದುಡಿದ ಈ ನಿಷ್ಕಾಮಕರ್ಮಿಗಳ ಪರಿಶ್ರಮದ ಫಲಗಳು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪನೆಯಲ್ಲಿ ಪೂರಕ ಅಂಶಗಳಾಗಿ ಸಹಕರಿಸಿವೆ. ಅಂತಹ ಮಹನೀಯರ ಬದುಕಿನ ಬವಣೆ, ಸಾಹಸ, ಸಾಧನೆ ಸಾರ್ಥಕತೆಗಳನ್ನು ಇಂದಿನ, ಮುಂದಿನ ತಲೆಮಾರುಗಳಿಗೆ ಪರಿಚಯಿಸುವ ಸಲುವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ಮದಪ್ಪಿಯೆರಾವಂದಿ ತುಳುವೆರ್‌’ (ಮರೆಯಲಾಗದ ತುಳುವರು)ಎನ್ನುವ ಜೀವನ ಚರಿತ್ರೆಯ ಮಾಲಿಕೆಯನ್ನು ಪ್ರಕಟಿಸುವ ಯೋಜನೆಯನ್ನು ೧೯೯೫ರಲ್ಲಿ ಆರಂಭಿಸಿತು. ಈ ಮಾಲಿಕೆಯಲ್ಲಿ ಪ್ರಕಟವಾದ ಕೃತಿಗಳೇ ತುಳುವಿನ ಮೊದಲ ಜೀವನ ಚರಿತ್ರೆಗಳಾಗಿವೆ. ಈ ಯೋಜನೆಯನ್ನು ಹಮ್ಮಿಕೊಂಡ ತುಳು ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದ ಬಿ. ಎ. ವಿವೇಕ ರೈಯವರು ಕೃತಿಗಳ ಮುನ್ನುಡಿಯಲ್ಲಿ ಉಲ್ಲೇಖಿಸಿದಂತೆ,… ‘ಈ ಹಿರಿಯ ಸಾಧನೆಗಳನ್ನು ಅವರು ಸಲ್ಲಿಸಿದ ಕೊಡುಗೆಗಳನ್ನು ಸರ್ವರಿಗೂ ಪರಿಚಯಿಸುವ ಉದ್ದೇಶದಿಂದ ಪ್ರಕಟಪಡಿಸುವ ಈ ಕೃತಿಗಳು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮಗೆ ಪ್ರೇರಣೆ, ಉತ್ಸಾಹ ನೀಡುತ್ತವೆ. ಮತ್ತು ಮುನ್ನಡೆಯುವ ದಾರಿಯನ್ನು ಸೂಚಿಸುತ್ತವೆ.

ಈ ಮಾಲಿಕೆಯಲ್ಲಿ ಪ್ರಕಟಗೊಳ್ಳಬೇಕಾದ ಮಹನೀಯರ ಚರಿತ್ರೆಗಳು ಎಷ್ಟೋ ಇವೆ. ಈಗಾಗಲೇ ಪ್ರಕಟವಾದವುಗಳ ವಿವರ ಹೀಗಿದೆ.

೧. ರೆವೆರೆಂಡ್‌ ಆಗಸ್ಟ್‌ ಮೇನರ್‌ (೧೯೯೫)- ಪದ್ಮನಾಭ ಕೇಕುಣ್ಣಾಯ.

೨. ಬಾಯಾರು ಸಂಕಯ್ಯ ಭಾಗೋತೆರ್‌ (೧೯೯೫)-ವೆಂಕಟರಾಜ ಪುಣಿಂಚತ್ತಾಯ.

೩. ಬಡಕೈಲ್‌ ಪರಮೇಸ್ರಯ್ಯೆರ್‌ (೧೯೯೫) – ಮಂದಾರ ಕೇಶವ ಭಟ್‌.

೪. ಮೂವೆರ್‌ ತಿಂಗಾಯೆರ್‌ (೧೯೯೫) – ಯಜ್ಞಾವತಿ ಕೇಶವ ಕಂಗೆನ್‌

೫. ಎನ್‌. ಎ. ಶೀನಪ್ಪ ಹೆಗ್ಗಡ್ರ್‌, ಪೊಳಲಿ – (೧೯೯೫) – ಅ. ಬಾಲಕೃಷ್ಣ ಶೆಟ್ಟಿ ಪೊಳಲಿ

೬. ಧರ್ಮಸ್ಥಳ ಮಂಜಯ್ಯ ಹೆಗ್ಗಡೇರ್‌ (೧೯೯೫) – ನಾ. ವುಜಿರೆ.

೭. ನಾರಾಯಣ ಕಿಲ್ಲೆ – (೧೯೯೫) – ಕಯ್ಯಾರ ಕಿಞ್ಞಣ್ಣ ರೈ

೮. ಎಸ್‌. ಯು. ಪಣಿಯಾಡಿ – (೧೯೯೬)- ಮುರಳೀಧರ ಉಪಾಧ್ಯ, ಹಿಡಿಯಡಕ

೯. ದೂಮಪ್ಪ ಮಾಸ್ಟರ್‌ (೧೯೯೭) – ಕೆ. ಲೀಲಾವತಿ

೧೦. ಮಟ್ಟಾರು ವಿಠಲ ಹೆಗ್ಡೆ – (೧೯೯೭) – ರತ್ನಕುಮಾರ್‌ಎಂ.

೧೧. ಸತ್ಯಮಿತ್ರ ಬಂಗೇರ – (೧೯೯೭) – ಪೀಟರ್‌ ವಿಲ್ಸನ್‌ ಪ್ರಭಾಕರ್‌

೧೨. ವಿಶುಕುಮಾರ್‌ (೧೯೯೭) – ಮಾಧವ ಕುಲಾಲ್‌

೧೩. ನರ್ಕಳ ಮಾರಪ್ಪ ಶೆಟ್ರ್‌ (೧೯೯೭) – (ಮೂಲ ಕನ್ನಡ ಕೃತಿ) ಎನ್‌. ರಘುನಾಥ ಶೆಟ್ಟಿ ತುಳು ಅನುವಾದ-ಕೆ. ಲೀಲಾವತಿ.

೧೪. ಮಂದಾರ ಕೇಶವ ಭಟ್ರ್‌ (೧೯೯೮) – ಎಂ. ಪ್ರಭಾಕರ ಜೋಶಿ

೧೫. ಕೆಮ್ತೂರು ದೊಡ್ಡಣ್ಣ ಶೆಟ್ರ್‌ (೧೯೯೮) – ಕ್ಯಾಥರಿನ್‌ ರಾಡ್ರಿಗಸ್‌

೧೬. ಬಿ. ರಾಮ ಕಿರೋಡಿಯನ್‌ (೧೯೯೮) – ಮುಂಡಪ್ಪ ಬೋಳೂರು.

೧೭. ನವಯುಗದ ಹೊನ್ನಯ್ಯ ಶೆಟ್ರ್‌ (೧೯೯೯) – ನರೇಂದ್ರ ರೈ, ದೇರ್ಲ

೧೮. ಕು. ಶಿ. ಹರಿದಾಸ ಭಟ್ರ್‌ (೨೦೦೧) – ಗಣನಾಥ ಶೆಟ್ಟಿ, ಎಕ್ಕಾರು

೧೯. ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ – (೨೦೦೨) – ಎನ್‌. ಪಿ. ಶೆಟ್ಟಿ

೨೦. ಕಲಾ ತಪಸ್ವಿ, ಕೆ. ಕೆ. ಹೆಬ್ಬಾರ್‌ (೨೦೦೨) – ಸುನೀತ ಎಂ. ಶೆಟ್ಟಿ

೨೧. ಡಾ. ಶಿವರಾಮ ಕಾರಂತೆರ್‌ – (೨೦೦೩) – ಪಾಲ್ತಾಡಿ ರಾಮಕೃಷ್ಣ ಆಚಾರ್‌

೨೨. ಕೆದಂಬಾಡಿ ಜತ್ತಪ್ಪ ರೈ – (೨೦೦೪) – ಕೆದಂಬಾಡಿ ತಿಮ್ಮಪ್ಪ ರೈ.

‘ಮರೆಯಲಾಗದ ಮಹನೀಯರು’ ತುಳು ಮಾಲಿಕೆಯಲ್ಲಿನ ಈ ಕೃತಿಗಳ ಲೇಖಕರಲ್ಲಿ ಕೆಲವರು ತಮ್ಮ ಸಮಕಾಲೀನರಲ್ಲದ ಹಿರಿಯರ ವ್ಯಕ್ತಿತ್ವಕ್ಕೆ ಮಾರುಹೋಗಿ, ಹರಸಾಹಸದಿಂದ ಅವರ ಬದುಕಿನ ಒಂದಿಷ್ಟು ಸಂಗತಿಗಳನ್ನು ಕಲೆ ಹಾಕಿ ಕ್ರೋಡೀಕರಿಸುವ ಪ್ರಯತ್ನ ನಡೆಸಿದ್ದಾರೆ. ಇನ್ನು ಕೆಲವರು ಅವರ ಕಥಾನಾಯಕರ ಸಮಕಾಲೀನರಾಗಿದ್ದು ಅವರಿಂದ ಪ್ರಭಾವಿತರಾದವರು. ಕೆಲವರು ನಿಕಟ ಸಂಬಂಧ, ಪರಿಚಯ, ಒಡನಾಟ ಇದ್ದವರು. ಹಾಗಾಗಿ ಎಲ್ಲ ಕೃತಿಗಳೂ ಶ್ರದ್ಧೆ, ವಿಶ್ವಾಸ, ಗೌರವ, ಸಹಾನೂಭೂತಿಗಳ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಆದರೂ ಪ್ರಶಂಸೆಯ ಅತಿರೇಕವಿಲ್ಲದೆ ಸತ್ವಯುತವಾಗಿವೆ.

ರೆವರೆಂಡ್‌ ಆಗಸ್ಟ್‌ ಮೇನರ್‌ (೧೮೨೮-೧೮೯೧)

ಜರ್ಮನಿಯ ಬಾಸೆಲ್‌ಮಿಶನರಿ ಸಂಸ್ಥೆಯ ವತಿಯಿಂದ ಕ್ರೈಸ್ತಮತ ಪ್ರಚಾರಕ್ಕಾಗಿ ತುಳುನಾಡಿಗೆ ಬಂದು ಧರ್ಮಗುರುವಾಗಿ ಕಾರ್ಯನಿರ್ವಹಿಸಿದ ಆಗಸ್ಟ್ ಮೇನರರು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲೇ ತುಳು ಭಾಷೆ, ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದವರು. ಮತ ಪ್ರಚಾರದಲ್ಲಿ ಜನಸಂಪರ್ಕಕ್ಕಾಗಿ ತುಳು ಕಲಿತವರು. ಬೈಬಲನ್ನು ತುಳುವಿಗೆ ಅನುವಾದ ಮಾಡಿದ್ದಲ್ಲದೆ, ತುಳು-ಇಂಗ್ಲಿಷ್‌ನಿಘಂಟು, ಇಂಗ್ಲಿಷ್‌ತುಳು ನಿಘಂಟುಗಳನ್ನು ರಚಿಸಿದವರು. ತುಳು ಪಾಡ್ದನಗಳನ್ನು ಸಂಗ್ರಹಿಸಿ ಪ್ರಕಟಿಸಿದವರು. ತುಳು ಸಂಸ್ಕೃತಿಯ ಭೂತ ಕೋಲದ ವಿವರಗಳುಳ್ಳ ‘A tract on Bhutas-,ಹಾಗೆಯೆ ತುಳುನಾಡಿನ ಕಸುಬಿಗೆ ಸಂಬಂಧಿಸಿದ ‘Manufacture of Toddy and Arrack’ ಕೃತಿಗಳನ್ನು ರಚಿಸಿದ ಮೇನರರು ತುಳು ಕವನಗಳನ್ನು ಬರೆದು ತುಳುವನ್ನು ಬರಹದ ಭಾಷೆಯನ್ನಾಗಿ ಮಾಡಲು ಪ್ರಯತ್ನಿಸಿದವರು, ಅವರ ಜೀವನ ವಿಚಾರಗಳ ದಾಖಲೆಗಳ ಕೊರತೆ ಇದ್ದುದರಿಂದ ಮಂಗಳೂರು ಬಾಸೆಲ್‌ಮಿಶನ್‌ ಕಛೇರಿಯಲ್ಲಿ ಸಿಕ್ಕಿದಷ್ಟು ಸಂಗತಿಗಳಿಂದ ಮತ್ತು ಕರ್ನಾಟಕ ಥಿಯೊಲಾಜಿಕಲ್‌ ಕಾಲೇಜಿನ ಗ್ರಂಥಪಾಲಕ ಬೆನೆಟ್‌ ಅಮ್ಮನ್ನರು ಒದಗಿಸಿದ ವಿವರಗಳಿಂದ ಲೇಖಕ ಪದ್ಮನಾಭ ಕೆ. ಈ ಕಿರು ಕೃತಿಯನ್ನು ರಚಿಸಿದ್ದಾರೆ. ಸ್ವತಃ ನಿಘಂಟು ರಚನೆಯ ಅನುಭವವುಳ್ಳ ಲೇಖಕರು ಮೇನರರು ತುಳು ಇಂಗ್ಲಿಷ್‌ನಿಘಂಟು ರಚಿಸಿದ ಕ್ರಮವನ್ನು ವಿಶ್ಲೇಷಿಸಿ, ಆ ದಿನಗಳಲ್ಲಿ ಅವರು ಅಂತಹ ನಿಘಂಟು ರಚಿಸಿದ್ದು ಬಹುದೊಡ್ಡ ಸಾಧನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೃತಿಯ ಕೊನೆಯಲ್ಲಿ ಇಂಗ್ಲಿಷ್‌ತುಳು ನಿಘಂಟಿನ ಪುಟಗಳ ಮಾದರಿಯೂ ಇದೆ.

ಬಾಯಾರು ಸಂಕಯ್ಯ ಭಾಗವತರು (೧೮೨೦-೧೮೮೦)

ತುಳು ಯಕ್ಷಗಾನದ ಮೊದಲ ಓಜರೆಂದೇ ಪರಿಗಣಿಸಲ್ಪಟ್ಟ ಸಂಕಯ್ಯ ಭಾಗವತರು ತುಳುಭಾಷೆಯಲ್ಲಿ ಯಕ್ಷಗಾನದ ಚೆಲುವನ್ನು ಕಾಣಬಯಸಿ, ಪ್ರಯತ್ನಿಸಿದ ಫಲವಾಗಿ ಇಂದು ‘ತುಳುತಿಟ್ಟು’ ಎಂಬ ಪ್ರತ್ಯೇಕ ಶೈಲಿಯೂ ನಿರ್ಮಾಣವಾಗುವಂತಾಗಿದೆ. ಸಾವಿರದ ಎಂಟುನೂರ ಎಂಬತ್ತೇಳರಲ್ಲೇ ‘ಪಂಚವಟಿ ವಾಲಿ ಸುಗ್ರೀವೆರೆ ಕಾಳಗೊ’ ಎಂಬ ತುಳು ಪ್ರಸಂಗಕರ್ತರಾಗಿ ಸಂಕಯ್ಯ ಭಾಗವತರು ತುಳು ಪ್ರಸಂಗಗಳ ಮೂಲ ಪುರುಷರೆಂದು ಖ್ಯಾತರಾಗಿದ್ದಾರೆ. ಅವರ ಜೀವನದ ವಿವರಗಳು ಹೆಚ್ಚು ಲಭ್ಯವಿಲ್ಲದ್ದರಿಂದ ಈ ಕೃತಿಯಲ್ಲಿ ಅವರ ಕೌಟುಂಬಿಕ ಹಿನ್ನೆಲೆ, ಜನನ ಮರಣ ಇತ್ಯಾದಿ ಮಾತ್ರವಿದ್ದು ಉಳಿದೆಲ್ಲ ವಿಚಾರಗಳು ಅವರ ಯಕ್ಷಗಾನದ ಆಸಕ್ತಿ ಮತ್ತು ಆ ಕಲಾರಂಗದಲ್ಲಿ ಅವರ ಸಾಧನೆಗೆ ಸಂಬಂಧಿಸಿದ್ದಾಗಿದೆ. ಕನ್ನಡದಲ್ಲೂ ‘ಕೃಷ್ಣಾರ್ಜುನ ಕಾಳಗ’, ‘ಬಭ್ರುವಾಹನ ಕಾಳಗ’, ‘ಅತಿಕಾಯ ಇಂದ್ರಜಿತು’, ‘ಮೈರಾವಣ ಕಾಳಗ’ ಪ್ರಸಂಗಗಳನ್ನು ಮತ್ತು ‘ಚೌಪದನ’ ಎನ್ನುವ ನೂರು ಕನ್ನಡ ಭಕ್ತಿಗೀತೆಗಳ ಸಂಕಲನವನ್ನು ರಚಿಸಿರುವ ಭಾಗವತರ ಪ್ರತಿಭೆ ಮತ್ತು ಬರಹದ ಚೆಲುವನ್ನು ಸಾದರಪಡಿಸುವ ವೆಂಕಟರಾಜ ಪುಣಿಂಚತ್ತಾಯರ ಶ್ರಮ ಸಾರ್ಥಕವಾಗಿದೆ.

ಬಡಕೈಲ್‌ ಪರಮೇಶ್ವರಯ್ಯ (೧೮೮೧-೧೯೪೯)

ದೇಶದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸ್ಥಳೀಯ ತುಳು ಚಳುವಳಿಯಲ್ಲಿ ಆಸಕ್ತರಾಗಿ, ತುಳು, ಕನ್ನಡ ಕವಿಯಾಗಿ, ಹರಿಕತೆಯಲ್ಲಿ ಪರಿಣತರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಪ್ರಹಸನಕಾರರಾಗಿ, ನಾಟಕಕಾರರಾಗಿ ಪ್ರಸಿದ್ಧರಾದ ಪರಮೇಶ್ವರಯ್ಯ ಬಹುಮುಖ ಪ್ರತಿಭಾವಂತರು. ತುಳುವಿನ ‘ಕಿಷ್ಣರಾಜಿ ಪ್ರಸಂಗ’ ಅವರ ಶ್ರೇಷ್ಠ ಕೃತಿ. ‘ಬಜಗೋವಿಂದ’ವನ್ನು ತುಳುವಿಗೆ ಭಾಷಾಂತರಿಸಿದವರಾಗಿದ್ದು, ಭಾಷಾಂತರದಲ್ಲೂ ಹೊಸ ಹೊಸ ಶಬ್ದ ಪ್ರಯೋಗಗಳಲ್ಲಿ ಪರಿಣತರು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ತುಳುವಿನಲ್ಲೆ ಭಾಷಣ ಮಾಡಿ ಕನ್ನಡ ಅರಿಯದ ಅನಕ್ಷರಸ್ಥರಿಗೂ ರಾಜಕೀಯದ ಸಂಗತಿಗಳನ್ನು ಮನವರಿಕೆ ಮಾಡಿಸಿದವರು. ನೀತಿ ಪ್ರಧಾನವಾದ ಕಂದ ಪದ್ಯಗಳನ್ನು ತುಳು ಭಜನೆಗಳನ್ನು ಬರೆದು ಪ್ರಚಾರಗೊಳಿಸಿ, ತುಳುವನ್ನು ಸಮರ್ಥವಾದ ಸಾಹಿತ್ಯಿಕ ಭಾಷೆಯಾಗಿಸಲು ಪ್ರಯತ್ನಿಸಿದ ಪರಮೇಶ್ವರಯ್ಯನ ಬಗ್ಗೆ ಬರೆದ ಈ ಕಿರುಕೃತಿಯಲ್ಲಿ ಅವರ ಆದರ್ಶ ವ್ಯಕ್ತಿತ್ವವನ್ನು ಪರಿಚಯಿಸುವ ಅನೇಕ ಮುಖ್ಯ ಸಂಗತಿಗಳನ್ನು ಲೇಖಕ ಮಂದಾರ ಕೇಶವ ಭಟ್ಟರು ಸಂಗ್ರಹವಾಗಿ ಒದಗಿಸಿದ್ದಾರೆ.

ಮೂವರು ತಿಂಗಳಾಯರು – ಮೋಹನಪ್ಪ – ಕೃಷ್ಣಪ್ಪ – ಮಾಧವ…

ತಿಂಗಳಾಯ ಕುಲನಾಮದ ಒಂದೇ ಕುಟುಂಬದ ಈ ಮೂವರು ಮಹನೀಯರ ಬಗ್ಗೆ, ಅದೇ ಕುಟುಂಬದಲ್ಲಿ ಜನಿಸಿದ ಯಜ್ಞಾವತಿ ಕೇಶವ ಕಂಗೆನ್‌ ಬರೆದಿರುವ ಸಂಕ್ಷಿಪ್ತ ಜೀವನ ಚರಿತ್ರೆಯಿದು. ಈ ಮೂವರು ತಮ್ಮ ಬದುಕನ್ನು ದೇಶ ಸೇವೆ, ಸಮಾಜ ಸೇವೆ, ಕಲೆ ಮತ್ತು ಸಾಹಿತ್ಯ ಸೇವೆಗೆ ಮುಡಿಪಿಟ್ಟವರು. ಅಸಹಕಾರ ಚಳುವಳಿಯ ಸಲುವಾಗಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಸಕ್ರಿಯ ಕಾರ್ಯಕರ್ತರಾದವರು. ಬಡತನ ನಿರುದ್ಯೋಗ, ಮೂಢನಂಬಿಕೆಗಳ ನಿವಾರಣೆಗೆ ಶ್ರಮಿಸಿದವರು. ‘ಕರ್ನಾಟಕ ಜ್ಞಾನೋದಯ ಸಮಾಜ ಸ್ಥಾಪಿಸಿದ ಮೋಹನಪ್ಪ ತಿಂಗಳಾಯರು ಆ ಮೂಲಕ ಮಧ್ಯಪಾನ ನಿಷೇಧ, ಅಸ್ಪೃಶ್ಯತಾ ನಿವಾರಣೆಗೆ ಪ್ರಯತ್ನಿಸಿದ್ದರು. ತುಳು ಗೀತೆಗಳನ್ನು ರಚಿಸಿ ಹಾಡುತ್ತಿದ್ದರು. ಅವರ ಸೋದರಳಿಯ ಎಚ್‌. ಕೃಷ್ಣಪ್ಪ ತಿಂಗಳಾಯರು ಮಾವ ನಡೆದ ಹಾದಿಯಲ್ಲೇ ಮುಂದುವರಿಯುತ್ತಾ ನಾಟಕದ ಮೇಲಿನ ಅಪಾರ ಆಸಕ್ತಿಯಿಂದ ೧೯೧೯ರಲ್ಲಿ ‘ಶ್ರೀ ಸತ್ಕಾರ್ಯೋತ್ತೇಜಕ ನಾಟಕ ಸಭಾ’ ಸ್ಥಾಪಿಸಿದರು. ಊರು ಪರವೂರುಗಳಲ್ಲಿ ‘ತುಳುನಾಡಿನ ಗತವೈಭವ’, ‘ಮಾರಿಗುಡಿಯ ಮಾರಮ್ಮ’, ‘ತುಳುವೆರೆ ಅಭ್ಯುದಯ’, ‘ಗಡಂಗ್‌ದ ಗಮ್ಮತ್ತ್‌’… ಇಂತಹ ನಾಟಕ ಪ್ರದರ್ಶನದಿಂದ ಜನಜಾಗೃತಿಗೊಳಿಸಲು ಪ್ರಯತ್ನಿಸಿದ್ದರು. ಅವರ ಸೋದರಳಿಯ ಮಾಧವ ತಿಂಗಳಾಯರು ಪ್ರಭಾತ ಫೇರಿ, ಅಸಹಕಾರ ಚಳುವಳಿ, ಖಾದೀ ಪ್ರಚಾರ, ಮದ್ಯಪಾನ ನಿಷೇಧ, ಉಪ್ಪಿನ ಸತ್ಯಾಗ್ರಹದಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡ ಉತ್ಸಾಹೀ ತರುಣ, ‘ವಾನರ ಸೇನೆ, ‘ನಾಗಾ ಸೈನ್ಯ’ಗಳನ್ನು ಸಂಘಟಿಸಿ ದುಡಿದವರು. ‘ಸ್ವದೇಶಿ ಪ್ರಚಾರ’ ಪತ್ರಿಕೆಯಲ್ಲಿ ಬರೆಯುತ್ತಿದ್ದವರು. ‘ಯುವ ಸೇವಾದಳ’ ನಾಟಕ ಮಂಡಳಿಯನ್ನು ಆರಂಭಿಸಿ ‘ಬದಿ ರಕ್ಕಸ’, ‘ಜನ ಮರ್ಲ್‌’ (ಜನ ಮರಳು), ‘ಧರ್ಮದ ಉದಲ್‌’ (ಧರ್ಮದ ಗೆದ್ದಲು), ‘ಜನ ಮರುಳೋ ಜಾತ್ರೆ ಮರುಳೋ’, ‘ಪತಿತೋದ್ಧರಣ’ ಇತ್ಯಾದಿ ಸಾಮಾಜಿಕ, ಐತಿಹಾಸಿಕ ನಾಟಕಗಳನ್ನು ತುಳು ಕನ್ನಡಗಳಲ್ಲಿ ಬರೆದು ಪ್ರದರ್ಶಿಸಿ ಅಪಾರ ಜನಪ್ರಿಯತೆ ಗಳಿಸಿದವರು. ಈ ‘ಮೂವರು ತಿಂಗಳಾಯರು’ ಎನ್ನುವ ಜೀವನ ಚರಿತ್ರೆಯು, ಮೂವರು ತಿಂಗಳಾಯ ಬಂಧುಗಳು ಹಿಂದುಳಿದ ವಗರಗಗಳ ಉದ್ಧಾರಕ್ಕೆ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಉನ್ನತಿಗೆ ಪರಿಶ್ರಮಿಸಿದ ಹಾದಿಯ ಚಿತ್ರಣವೂ ಆಗಿ ಮೌಲಿಕವಾಗಿದೆ.

ಎನ್‌. ಎ. ಶೀನಪ್ಪ ಹೆಗ್ಡೆ, ಪೊಳಲಿ (೧೮೮೯-೧೯೬೬)

ತುಳುನಾಡು ಮತ್ತು ತುಳು ಭಾಷೆ, ಸಾಹಿತ್ಯದ ಮೇಲ್ಮೆಗಾಗಿ ನಿರಂತರ ಪರಿಶ್ರಮಿಸಿ ‘ತುಳುವಾಲ’ ಎಂಬ ಬಿರುದು ಪಡೆದ ಪುಣ್ಯಜೀವಿ ಹೆಗ್ಡೆಯವರ ಈ ಜೀವನ ಚರಿತ್ರೆಯು ಅವರ ಮೊಮ್ಮಗ ಅ. ಬಾಲಕೃಷ್ಣ ಶೆಟ್ಟಿ, ಪೊಳಲಿಯವರಿಂದ ರಚಿತವಾಗಿದೆ. ಹೆಗ್ಡೆಯವರ ಹುಟ್ಟು ಬೆಳವಣಿಗೆ ಸಂಕ್ಷಿಪ್ತ ಮಾಹಿತಿಯೊಂದಿಗೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಸೆರೆಮನೆ ವಾಸ, ತುಳು ಚಳುವಳಿ, ಸಮಾಜದ ಸೇವೆ, ಕಲೆ, ಸಂಸ್ಕೃತಿಯ ಪ್ರೀತಿ, ಸಾಹಿತ್ಯ ಸಾಧನೆ ಜಾನಪದ ಒಲವು, ಸಂಶೋಧನೆಯ ಆಸಕ್ತಿಗಳ ವಿವರಗಳಿಂದ ಈ ಕೃತಿ ಸಮಗ್ರವಾಗಿದೆ. ಹೆಗ್ಡೆಯವರ ಅಮೂಲ್ಯ ತುಳು ಕೃತಿಗಳಾದ ‘ತುಳುವಾಲ ಬಲಿಯೇಂದ್ರ (ತುಳು ಖಂಡ ಕಾವ್ಯ), ‘ಮಿತ್ಯ ನಾರಾಯಣ ಕತೆ’ (ತುಳು ಕಾದಂಬರಿ), ‘ಬಂಗಾರ್ದಂಗಿದ ಕತೆ’, ‘ಅಜ್ಜೆರೆನ ಮಂಡಲ ಮದಿಪು’ ಇತ್ಯಾದಿಗಳ ಬಗ್ಗೆ ‘ಪುಳಿನಾಪುರ ಮಹಾತ್ಮೆ’ (ಕನ್ನಡ ಸ್ಥಳ ಪುರಾಣ)‘ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ’, ‘ಭೂತಾಳ ಪಾಂಡ್ಯರಾಯನ ಅಳಿಯ ಕಟ್ಟು’, ‘ಅಕ್ಕೆರಸು ಪೂಂಜೆದಿ ತುಳುನಾಡ ಸಿರಿಯ ಕತೆ’ ಇತ್ಯಾದಿ ಕನ್ನಡ ಕೃತಿಗಳ ಬಗ್ಗೆ ವಿವರಗಳಿವೆ. ಅವರ ತುಳು ಬರಹದ ಚೆಲುವನ್ನು ಸಾದರಪಡಿಸಿದ ಲೇಖಕರು ಸರ್ವಹಿತಾಕಾಂಕ್ಷಿಯಾದ ಅವರ ಸ್ವಭಾವದ ವಿಶೇಷತೆಯನ್ನು, ಅವರ ಅಪಾರ ವಿದ್ವತ್ತನ್ನು, ಆತ್ಮೀಯತೆ ಮತ್ತು ಗೌರವದ ನೆಲೆಯಲ್ಲಿ ಪರಿಚಯಿಸಿದ್ದಾರೆ. ಅವರ ಪ್ರಕಟಿತ ಕೃತಿಗಳ ಮತ್ತು ಅವರನ್ನು ಕುರಿತು ಪ್ರಕಟವಾದ ಗ್ರಂಥಗಳ ಮಾಹಿತಿಗಳನ್ನು ಕೊನೆಯಲ್ಲಿ ಸಂಕಲಿಸಲಾಗಿದೆ.

ನಾರಾಯಣ ಕಿಲ್ಲೆ (೧೯೦೧-೧೯೫೩)

ಉಜ್ವಲ ದೇಶ ಪ್ರೇಮಿಯಾಗಿ, ಧೀಮಂತ ಸತ್ಯಾಗ್ರಹಿಯಾಗಿ, ಮಾನವೀಯ ಅಂತಃಕರಣದ ಸಮಾಜ ಸೇವಕರಾಗಿ, ಪ್ರಚಂಡ ವಾಗ್ಮಿಯಾಗಿ ತುಳು ಕನ್ನಡ ಭಾಷೆಗಳೆರಡರಲ್ಲೂ ಸುಪ್ರಸಿದ್ಧ ಕವಿಯಾಗಿ, ಯಕ್ಷಗಾನ ಕಲಾವಿದನಾಗಿ, ಶ್ರೇಷ್ಠ ಅರ್ಥಧಾರಿಯಾಗಿ ಜಿಲ್ಲೆಯಾದ್ಯಂತ ಪ್ರಖ್ಯಾತರಾದ ನಾರಾಯಣ ಕಿಲ್ಲೆಯವರ ಬಗ್ಗೆ ಕಯ್ಯಾರ ಕಿಞ್ಞಣ್ಣ ರೈಯವರು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ಉತ್ತಮ ರೀತಿಯಲ್ಲಿ ನಿರೂಪಿಸಿದ್ದಾರೆ. ಬ್ರಿಟಿಷ್‌ ಸರಕಾರದ ಉದ್ಯೋಗವನ್ನು ತೊರೆದು ನಾಡು, ನುಡಿಗೆ ತನ್ನ ಶಕ್ತಿ ಮೀರಿ ಸೇವೆ ಸಲ್ಲಿಸಿದ ಕಿಲ್ಲೆಯವರು ಓರ್ವ ಅವಿಶ್ರಾಂತ ಕರ್ಮಯೋಗಿ. ಸತ್ಯಾಗ್ರಹ ನಿಮಿತ್ತ ವೆಲ್ಲೂರು, ಮಧುರೆಯ ಸೆರೆಮನೆ ವಾಸದ ಅವಧಿಯಲ್ಲಿ ತುಳು ಕನ್ನಡ ಕವಿತೆ, ಲೇಖನಗಳನ್ನು ಬರೆದವರು. ಜಿಲ್ಲೆಗೆ ಆಗಮಿಸಿದ ಗಾಂಧಿ, ನೆಹರು ಮೊದಲಾದ ರಾಷ್ಟ್ರನಾಯಕರ ಭಾಷಣಗಳನ್ನು ವೇದಿಕೆಯಲ್ಲೇ ತಕ್ಷಣ ಭಾಷಾಂತರಿಸಿ ಜನಮನಕ್ಕೆ ರವಾನಿಸುವಲ್ಲಿ ನಿಷ್ಣಾತರು. ಕಿಲ್ಲೆಯವರ ಸ್ವಾತಂತ್ರ್ಯ ಜಾಗೃತಿ ಮೂಡಿಸುವ ಭಾಷಣದ ಪ್ರಭಾವವೂ ಸಾಮಾನ್ಯದ್ದಲ್ಲ. ಕಿಲ್ಲೆಯವರ ರಾಷ್ಟ್ರಗೀತೆ, ಭಕ್ತಿಗೀತೆ, ಪ್ರಕೃತಿ ಗೀತೆಗಳ ಸಂಗ್ರಹದಂತಿರುವ ತುಳುವಿನ ‘ಕಾನಿಗೆ’ ಮತ್ತು ಕನ್ನಡದ ‘ಮುರಲಿ’ ಕವನ ಸಂಕಲನಗಳು ಮತ್ತು ಗದ್ಯ ಕೃತಿಗಳಾದ ‘ಭಾರತದ ಕರ್ಣ’, ‘ಪ್ರಾಚೀನ ತುಳುನಾಡು’ಗಳ ಪರಿಚಯದೊಂದಿಗೆ ಸ್ನೇಹಶೀಲ, ಕ್ರಿಯಾಶೀಲ ಕಿಲ್ಲೆಯವರು ದೇಶದ ಗಣ್ಯಮಾನ್ಯರಿಂದ ಪಡೆದ ಪ್ರಶಂಸೆಯ ನುಡಿಗಳ ಸಂಗ್ರಹವೂ ಇದರಲ್ಲಿದೆ. ಆಕರ್ಷಕ ವ್ಯಕ್ತಿತ್ವ, ಆದರ್ಶ ಗುಣ, ಬಹುಮುಖ ಪ್ರತಿಭೆಗಳಿಂದ ಕೂಡಿದ ಕಿಲ್ಲೆಯವರ ಜೀವನದ ತ್ಯಾಗ ಬಲಿದಾನದ ಕತೆಯಾಗಿ ಕಯ್ಯಾರರ ಈ ಕೃತಿ ಮೂಡಿ ಬಂದಿದೆ.

ಧರ್ಮಸ್ಥಳ ಮಂಜಯ್ಯ ಹೆಗ್ಗಡೆ (೧೮೮೯-೧೯೫೫)

ತುಳುನಾಡಿನ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಯಾಗಿ ಕ್ಷೇತ್ರದ ಕೀರ್ತಿಯನ್ನು ಬೆಳಗಿಸಿ ಪಸರಿಸಿದ ಮಂಜಯ್ಯ ಹೆಗ್ಗಡೆಯವರು ಹಲವು ಗುಣಗಳ ಗಣಿ. ಕ್ಷೇತ್ರದ ಧಾರ್ಮಿಕ ಕಾರ್ಯಗಳ ಜತೆಜತೆಯಲ್ಲೇ ಸಮಾಜ ಸೇವಾ ಕಾರ್ಯಗಳಾದ ಪರಿಸರ ಶುದ್ಧಿ, ಆರೋಗ್ಯ ರಕ್ಷಣಾ ಕ್ಷಮಗಳು, ರಸ್ತೆ ನಿರ್ಮಾಣ, ಕುಡಿಯುವ ನೀರಿನ ಪೂರೈಕೆಯತ್ತಲೂ ಗಮನ ಹರಿಸಿದವರು. ಮೂಢನಂಬಿಕೆಗಳ ನಿರ್ಮೂಲನೆ, ಪ್ರಾಣಿಬಲಿ ನಿಷೇಧದಲ್ಲಿ ಯಶಸ್ವಿಯಾದವರು. ಆಸುಪಾಸಿನ ದೇವಸ್ಥಾನ, ಬಸದಿಗಳ ಜೀರ್ಣೋದ್ಧಾರಗೈದವರು. ಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ನಡೆಸುತ್ತಾ ನಡೆಸುತ್ತಾ ಬಂದವರು. ವಿದ್ಯಾ ಪ್ರಸಾರಕ್ಕಾಗಿ ಶ್ರೀ ಸಿದ್ಧವನ ಗುರುಕುಲ, ಪ್ರೌಢ ಶಾಲೆಗಳ ಸ್ಥಾಪನೆ ಮಾಡಿ ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಊಟದ ಏರ್ಪಾಡು ಮಾಡಿದವರು. ಗಾಂಧಿವಾದಿಯಾಗಿ, ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹೆಗ್ಗಡೆಯವರು, ೧೯೨೭ರಲ್ಲಿ ಮದ್ರಾಸು ಲೆಜಿಸ್ಲೇಟಿವ್‌ ಕೌನ್ಸಿಲಿನ ಸದಸ್ಯರಾಗಿ ಜನಹಿತಕ್ಕಾಗಿ ದುಡಿದವರು. ಚಿತ್ರಕಲಾವಿದರೂ, ಸಾಹಿತ್ಯ ಮತ್ತು ಯಕ್ಷಗಾನ ಪ್ರೇಮಿಯೂ ಆಗಿ, ಕಲೆ ಮತ್ತು ಕಲಾವಿದರನ್ನು, ಸಾಹಿತಿಗಳನ್ನು ಬಹುಬಗೆಯಲ್ಲಿ ಪ್ರೋತ್ಸಾಹಿಸುತ್ತಾ ಬಂದುದಲ್ಲದೆ ಕ್ಷೇತ್ರದಲ್ಲಿ ‘ಮಹಾನಡಾವಳಿ’ ಸೇವೆಯನ್ನು ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ದಾನ ಸಹಿತವಾಗಿ, ಅದ್ದೂರಿಯಾಗಿ ನಡೆಸಿದ ಪುಣ್ಯವಂತರು. ಸ್ವತಃ ಸಾಹಿತಿಯಾಗಿ ಕನ್ನಡದಲ್ಲಿ ‘ನನ್ನ ಪೂರ್ವ ವೃತ್ತಾಂತ’ ಮತ್ತು ತುಳುವಿನಲ್ಲಿ ‘ದೇವೆರ್‌ (ಪರಮಾತ್ಮೆ)’, ‘ಅಂದೇ ಸ್ವಾಮಿ, ಪಾಪ-ಪುಣ್ಯ ಎಂಚಾ?’, ‘ಜೈನೆರ್‌’, ‘ತುಳುನಿತ್ಯವಿಧಿ’ ಎಂಬ ನಾಲ್ಕು ಕೃತಿಗಳನ್ನು ರಚಿಸಿದವರು. ಹೀಗೆ ಬಹುಮುಖ ಪ್ರತಿಭಾವಂತರಾಗಿ, ದೂರದೃಷ್ಟಿ ಮತ್ತು ಮಾನವೀಯತೆಗಳಿಂದ ಬಾಳಿ ಬೆಳಗಿದ ಮಂಜಯ್ಯ ಹೆಗ್ಗಡೆಯವರ ಬದುಕು ಮತ್ತು ಸಾಧನೆಗಳನ್ನು ಲೇಖಕ ನಾ. ವುಜಿರೆಯವರು ಸಂಗ್ರಹವಾಗಿ, ಸಮಗ್ರವಾಗಿ ದಾಖಲಿಸಿದ್ದಾರೆ.

ಎಸ್.ಯು. ಪಣಿಯಾಡಿ (೧೯೯೭-೧೯೫೯)

ಸಂಸ್ಕೃತ ವಿದ್ವಾಂಸರಾಗಿದ್ದೂ, ತುಳು ಭಾಷೆ, ಸಾಹಿತ್ಯ, ತುಳು ಸಂಸ್ಕೃತಿ, ತುಳುನಾಡು ಇವೆಲ್ಲದರ ಬಗ್ಗೆ ಅಪಾರ ಪ್ರೀತಿ, ಅಭಿಮಾನ, ಕಾಳಜಿಗಳಿದ್ದ ಪಣಿಯಾಡಿಯವರ ಚಿಂತನೆ ಮತ್ತು ಸಾಧನೆಗಳ ಪಕ್ಷಿನೋಟ ಈ ಕಿರುಕೃತಿಯಲ್ಲಿದೆ. ದಾರ್ಶನಿಕ ನಿಲುವಿನ ಎಸ್‌. ಯು. ಪಣಿಯಾಡಿ ದೇಶದ ಸ್ವಾತಂತ್ರ್ಯ ಚಳುವಳಿಯ ಜತೆ ಜತೆಯಲ್ಲೇ ‘ತುಳುನಾಡಿನ ಆತ್ಮೋದ್ಧಾರಕ್ಕೆಂದು’ ಉಡುಪಿಯಲ್ಲಿ ತುಳು ಚಳುವಳಿಯನ್ನು ಆರಂಭಿಸಿದವರು. ೧೯೨೮ರಲ್ಲಿ ತುಳುವ ಮಹಾಸಭೆಯನ್ನು ಸಂಘಟಿಸಿ, ತುಳು ಜಾಗೃತಿ ಮೂಡಿಸುವ ಯೋಜನೆ ಹಮ್ಮಿಕೊಂಡವರು. ಸ್ವದೇಶಿ ಚಳುವಳಿಯ ಹೆಸರಿನಲ್ಲಿ ತುಳುನಾಡ್‌ ಬ್ಯಾಂಕ್‌, ತುಳುನಾಡ್‌ ಪ್ರೆಸ್‌ ಸ್ಥಾಪಿಸಿದ್ದಲ್ಲದೆ, ತುಳು ಸಾಹಿತ್ಯ ಕೃಷಿಯನ್ನು ಪ್ರೋತ್ಸಾಹಿಸಲು, ‘ತುಳು ಸಾಹಿತ್ಯ ಮಾಲೆ’ಯನ್ನು ಆರಂಭಿಸಿ ಕತೆ, ಕಾದಂಬರಿ, ಕವನ, ನಾಟಕ, ಸಂಶೋಧನಾ ಬರಹಗಳು, ವ್ಯಾಕರಣ ಇತ್ಯಾದಿ ಅಮೂಲ್ಯ ಕೃತಿಗಳನ್ನು ಪ್ರಕಟಿಸಿ, ಹೊಸ ಕಾಲದ ತುಳು ಸಾಹಿತ್ಯಕ್ಕೆ ಪಂಚಾಂಗ ಹಾಕಿದವರು. ಸ್ವತಃ ‘ಸತೀ ಕಮಲೆ’ ಎಂಬ ತುಳು ಕಾದಂಬರಿ ಮತ್ತು ‘ತುಳು ವ್ಯಾಕರಣ’ ಕೃತಿ ಬರೆದು ಪ್ರಕಟಿಸಿ, ತುಳುವನ್ನು ಉನ್ನತಿಗೇರಿಸಲು ಸಹಕರಿಸಿದವರು. ‘ಅಂತರಂಗ’ ಕನ್ನಡ ಪತ್ರಿಕೆಯ ಮೂಲಕವೂ ಅನೇಕ ಬರಹಗಾರರನ್ನು ಹುರಿದುಂಬಿಸಿದ್ದಲ್ಲದೆ, ತುಳುವರು ಯಾರೆಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ತುಳು ಜಿಲ್ಲೆ ರಚನೆಯಾಗುವ ಅಗತ್ಯವನ್ನು ಒತ್ತಿ ಹೇಳಿದವರು. ದೇಶದ ಸ್ವಾತಂತ್ರ್ಯ ಮತ್ತು ತುಳು ಚಳುವಳಿಯ ಹಾದಿಯಲ್ಲಿ ಪರಿಕ್ರಮಿಸುತ್ತಾ ತನ್ನೆಲ್ಲ ಸಂಪತ್ತನ್ನು ಕಳೆದುಕೊಂಡರೂ, ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆವಾಸ ಮಾಡಿದ್ದಕ್ಕೆ ಸರಕಾರ ಕೊಡಲಿಕ್ಕಿದ್ದ ಹದಿನೈದು ಎಕ್ರೆ ಜಾಗವನ್ನು ‘ನಾನು ಜೈಲಿಗೆ ಹೋದದ್ದು ಆಸ್ತಿ ಸಿಗುತ್ತದೆಂಬ ಇರಾದೆಯಿಂದಲ್ಲ’ ಎಂದು ನಿರಾಕರಿಸಿದವರು. ಅಂತಹ ಒಬ್ಬ ಸಜ್ಜನ, ನಿಸ್ವಾರ್ಥಿಯ ಬದುಕಿನ ಕೆಚ್ಚು, ನೆಚ್ಚುಗಳನ್ನು, ಸೋಲು ಗೆಲವುಗಳನ್ನು ದಾಖಲಿಸುವಲ್ಲಿ ಮುರಳೀಧರ ಉಪಾಧ್ಯರು ಸಫಲರಾಗಿದ್ದಾರೆ.

ದೂಮಪ್ಪ ಮಾಸ್ಟರ್‌ (೧೯೦೮-೧೯೮೩)

ತುಳುವಿನಲ್ಲಿ ಮಾತನಾಡುವುದು, ಬರೆಯುವುದು, ಅವಮಾನವೆಂದು ಕೊಳ್ಳುವವರ ನಡುವೆಯೇ ತುಳುವಿನ ಏಳಿಗೆಗಾಗಿ ಪರಿಶ್ರಮಿಸಿ ಗಣ್ಯರೆನ್ನಿಸಿಕೊಂಡ ಓರ್ವ ಸಜ್ಜನ ಸಾತ್ವಿಕ ‘ಗುರು’ ಧೂಮಪ್ಪ ಮಾಸ್ಟರ್‌. ವೃತ್ತಿಯಲ್ಲಿ ಅಧ್ಯಾಪಕನಾಗಿ, ಗಾಂಧಿ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸರಳ, ಶಿಸ್ತಿನ, ಪರಿಶ್ರಮದ ಜೀವನ ಶೈಲಿಯನ್ನು ರೂಢಿಸಿಕೊಂಡವರು. ವಿಶೇಷ ವಿದ್ವತ್ತು, ಜಾನಪದ ಒಲವು, ಹಾಸ್ಯ ಪ್ರವೃತ್ತಿ, ಸಾಮಾಜಿಕ ಅನಿಷ್ಟ ನಿವಾರಣೆಯಲ್ಲಿ ಆಸಕ್ತಿ, ಪ್ರಗತಿಪರ ಚಿಂತನೆಗಳೆಲ್ಲದರ ಫಲವಾಗಿ ಮೂಡಿ ಬಂದ ಅವರ ಬರಹಗಳು ಶ್ರೇಷ್ಠ ಮಟ್ಟದ್ದೇ. ತುಳುಗಾದೆಗಳನ್ನು ಹೆಣೆದು ತುಳುಜನಪದ ಕುಣಿತಕ್ಕೆ ಅಳವಡಿಸಲಾಗುವಂತೆ ರಚಿಸಿದ ‘ಮಾದಿರನ ಗಾದೆ’ ಕವನ ಕೃತಿ ಎಂದೆಂದಿಗೂ ಸಲ್ಲುವ ಗಾದೆಗಳಂತೆ ಚಿರಂತನವೇ. ಅವರ ‘ಕೋಟಿ ಚೆನ್ನಯ’ ಮತ್ತು ‘ಅಗೋಳಿ ಮಂಜಣ್ಣ’ ಕತೆಗಳೂ ‘ಒರಿ ಮಗೆ ಶಿವಣ್ಣೆ’, ‘ಸಾಲದ ಬೂತ’ ‘ಮಾತೆರ‍್ಲಾ ಬರಾವು ಕಲ್ಪೊಡು’ ಮುಂತಾದ ನಾಟಕಗಳೂ ಜನಪ್ರಿಯವಾದುವು. ಜನಪದ ಸೊಗಡಿನ ಅವರ ಕವಿತೆಗಳೂ ಹಾಡುಗಬ್ಬಗಳಾಗಿವೆ. ಹೀಗೆ ತುಳುವಿನ ಬಗ್ಗೆ ತುಳುವರಲ್ಲಿ ಅಭಿಮಾನ ಉಕ್ಕುವಂತೆ ಹಬುಬಗೆಯಲ್ಲಿ ಶ್ರಮಿಸಿದ ದೂಮಪ್ಪ ಮಾಸ್ಟರರು ಬದುಕಿನ ಬಗೆಯನ್ನು ಕಂಡು, ಗೌರವ ಮೂಡಿಸಿಕೊಂಡ ಲೇಖಕಿ, ಕೆ. ಲೀಲಾವತಿ ಅವರ ಸಾಹಿತ್ಯಿಕ, ಸಾಂಸ್ಕೃತಿಕ ಸಾಧನೆಗಳನ್ನು ಆತ್ಮೀಯವಾಗಿ ನಿರೂಪಿಸಿದ್ದಾರೆ.

ಮಟ್ಟಾರು ವಿಠಲ ಹೆಗ್ಡೆ (೧೯೧೩-೧೯೮೫)

ಸ್ವಾತಂತ್ರ‍್ಯ ಸಂಗ್ರಾಮದ ‘ಕ್ವಿಟ್‌ ಇಂಡಿಯಾ ಚಳುವಳಿ’ಯಲ್ಲಿ ಪಾಲ್ಗೊಂಡು ಸೆರೆಮನೆ ಸೇರಿಯೂ, ಸರಕಾರದ ಸವಲತ್ತುಗಳೊಂದನ್ನು ನಿರಿಕ್ಷೀಸದ ಪ್ರಾಮಾಣಿಕ ದೇಶಭಕ್ತ ವಿಠಲ ಹೆಗ್ಡೆಯವರು ಉಡುಪಿಯಲ್ಲಿ ಪಣಿಯಾಡಿಯವರು ಆರಂಭಿಸಿದ ತುಳು ಚಳುವಳಿಯಲ್ಲೂ ನಿಷ್ಠಯಿಂದ ದುಡಿದವರು. ವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ಸುಮಾರು ಐವತ್ತು ವರ್ಷಗಳವರೆಗೆ ಬಾಳು ಸವೆಸಿದರು. ಮಂಗಳೂರಿನ ‘ನವಭಾರತ’ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಸಂಪಾದಕೀಯ ಬರಹವು ಕನ್ನಡ ನಾಡಿನೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿತ್ತು. ತುಳುವ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾದ ಅವರ ಕತೆ ‘ಮದ್‌ಮಾಳತ್ತ್‌ ಮದಿಮಾಯೆ’ ಜನಮನ ಮಿಡಿಸಿರುವಂತೆ. ಉಡುಪಿಯ ನವಯುಗ ಪತ್ರಿಕೆಯ ತುಳು ಸಂಚಿಕೆಯಲ್ಲೂ ತುಳು ಕವಿತೆಗಳು ಪ್ರಕಟಗೊಂಡಿವೆ. ತುಳು ಕನ್ನಡ, ಗದ್ಯ ಪದ್ಯಗಳೆರಡರ ರಚನೆಯಲ್ಲೂ ನಿಷ್ಣಾತರಾದ ಹೆಗ್ಡೆಯವರು ಕತೆ, ಕವನ, ಚುಟುಕು, ವಿಡಂಬನೆ, ಹಾಸ್ಯ ಲೇಖನಗಳನ್ನು ಯಥೇಚ್ಛ ಬರೆದದ್ದಲ್ಲದೆ, ಪತ್ರಿಕೋದ್ಯಮದ ಅಗತ್ಯಕ್ಕನುಸಾರವಾಗಿ, ಆಗಿಂದಾಗಲೇ, ಆಹಾರ ವಿಹಾರ ವಿರಾಮದ ಗೊಡವೆಯಿಲ್ಲದೇ ಬರೆಯಬಲ್ಲವರಾಗಿದ್ದರು. ‘ವಿಷ್ಣುವಿನ ದಶಾಪರಾಧಗಳು ಅರ್ಥಾತ್‌ ದಶಾವತಾರಗಳು’ ಅವರ ವೀಶೆಷ ಚಿಂತನೆಯಿಂದ ಕೂಡಿದ ಒಂದು ವಿಶಿಷ್ಟ ಹಾಸ್ಯ ಲೇಖನ. ಮಂಗಲೂರಿನಲ್ಲಿ ನಡೆದ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದ ಹೆಗ್ಡೆಯವರು ಯಾವತ್ತೂ ಪ್ರಚಾರಪ್ರಿಯರಲ್ಲದೆ ಎಲೆಮರೆಯ ಕಾಯಿಯಂತೆ ಬದುಕಿದವರು. ಆದ್ದರಿಂದಲೆ ಲೇಖಕ ಎಂ. ರತ್ನಕುಮಾರ್‌, ವಿಠಲ ಹೆಗ್ಡೆಯವರು ಬಗೆಗೆ ಗಣ್ಯರ ಅಭಿಪ್ರಾಯಗಳನ್ನು ಸಂಕಲಿಸಿ ಬಳಸಿಕೊಂಡು ಅವರ ಉನ್ನತ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ.

ಸತ್ಯಮಿತ್ರ ಬಂಗೇರ (೧೮೭೮-೧೯೪೦)

ಬಾಸೆಲ್‌ಮಿಶನ್ ಸಂಸ್ಥೆಯ ಮಿಶನರಿಗಳ ಮತ ಪ್ರಚಾರದಿಂದ ಪ್ರಚೋದಿತವಾದ ಕುಟುಂಬದ ಹಿನ್ನೆಲೆಯಿದ್ದ ಸತ್ಯಮಿತ್ರ ಬಂಗೇರರ ಈ ಜೀವನ ಚರಿತ್ರೆಯನ್ನು ಬರೆದ ಲೇಖಕ ಪೀಟರ್‌ ವಿಲ್ಸನ್‌ ಪ್ರಭಾಕರ್‌ ಬಾಸೆಲ್‌ಮೀಸನ್‌ ಸಂಸ್ಥೆಯ ಪರಿಚಯದೊಂದಿಗೆ ಕೃತಿಯನ್ನು ಆರಂಭಿಸಿದ್ದಾರೆ. ಬಂಗೇರರ ಜೀವನ ವಿಚಾರಗಳ ಬಗ್ಗೆ ಸಾಕಷ್ಟು ದಾಖಲೆಗಳಿಲ್ಲದ್ದರಿಂದ ಸಂಕ್ಷಿಪ್ತ ಮಾಹಿತಿಯಷ್ಟನ್ನೇ ನೀಡಿದ ಲೇಖಕ ಅವರ ಸಾಹಿತ್ಯ ಸಾಧನೆಯ ಬಗ್ಗೆ ಹೆಚ್ಚು ವಿವರ ನೀಡಿದ್ದಾರೆ. ತುಳು ಚಳುವಳಿಯ ಕಾಲದಲ್ಲಿ ಪಣಿಯಾಡಿಯವರ ತುಳು ಸಾಹಿತ್ಯ ಮಾಲೆಯಲ್ಲಿ ಪ್ರಕಟವಾದ ‘ಅಳಿಯ ಸಂತಾನ ಕಟ್ಟ್ ದ ಗುಟ್ಟು’ ಎನ್ನುವುದು ಬಂಗೇರರ ಒಂದು ಮಹತ್ವದ ಕೃತಿ. ತುಳುವರ ಕೂಡುಕಟ್ಟುಗಳ ಬಗೆಗಿನ ಈ ಕೃತಿಯಲ್ಲಿ ಬಂಗೇರರ ಸಂಶೋಧನಾ ಚತುರತೆ ಮತ್ತು ವಿಚಾರ ಮಂಡನೆಯ ಷ್ಪಷ್ಟತೆಯನ್ನು ಗುರುತಿಸಬಹುದು. ಕೆಲವು ಶಬ್ದಗಳ ಅರ್ಥ ವಿವರಣೆಯೂ ಇದರಲ್ಲಿದ್ದು ಉಪಯುಕ್ತವಾಗಿದೆ. ಅವರ ಜ್ಞಾನಾಸಕ್ತಿ ವಿಶೇಶ ಎಂಬುದಕ್ಕೆ ಅವರ ಪ್ರಕೃತಿ ಶಾಸ್ತ್ರ, ಮರ್ಮಶಾಸ್ತ್ರ, ಸಂಸಾರ ಶಾಸ್ತ್ರ, ಮನಶಾಸ್ತ್ರ, ಧರ್ಮಶಾಸ್ತ್ರ ಕುರಿತ ಅಭಿಪ್ರಾಯಗಳೆ ಸಾಕ್ಷಿ. ‘ಹೇಮಾಶ್ರು ಪತ್ರ’, ‘ಕ್ರಿಸ್ತೀಯ ರಾಜ್ಯ’ ಎಂಬ ಕೃತಿಗಳಲ್ಲದೆ, ‘ಕತ್ತಲೆಡ್‌ ತುಳುನಾಡ್‌’, ‘ತುಳುವ ಸಂಸ್ಕೃತಿ’ ಮೊದಲಾದ ಲೇಖನಗಳನ್ನು, ಅನೇಕ ತುಳು ಕವಿತೆಗಳನ್ನು ಬರೆದು ತುಳು ಗದ್ಯ ಪದ್ಯಗಳಿಗೆ ಒಳ್ಳೆಯ ಶೈಲಿಯನ್ನು ಸಿದ್ಧಗೊಳಿಸಿದ್ದರು. ಬೇರೆ ಬೇರೆ ಊರುಗಳಲ್ಲಿ ಅಧ್ಯಾಪಕರಾಗಿ ದುಡಿದು, ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲೂ ಪಾಲುಗೊಂಡು ಪಾಡುಪಟ್ಟ ಬಂಗೇರರ ಕಷ್ಟ ಸಹಿಷ್ಣುತೆ, ಸೌಜನ್ಯಸೀಲತೆ ಮತ್ತು ನಿಸ್ವಾಥರಥ ನಿಲುವನ್ನು ಈ ಕೃತಿ ಸಾದರಪಡಿಸುತ್ತದೆ.

ನರ್ಕಳ ಮಾರಪ್ಪ ಶೆಟ್ಟಿ (೧೮೯೪-೧೯೮೭)

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ‘ಮರೆಯಬಾರದ ತುಳುವರು’ ಕನ್ನಡ ಮಾಲಿಕೆಯಲ್ಲಿ ಪ್ರಕಟವಾದ ಕೃತಿಯ ತುಳು ಭಾಷಾಂತರ ಕೃತಿ ಇದು. ಮೂಲ ಲೇಖಕ ಮಾರಪ್ಪ ಶೆಟ್ಟರ ಮಗ ಎನ್‌. ರಘುನಾಥ ಶೆಟ್ಟಿ ತುಳು ತರ್ಜುಮೆ ಕೆ. ಲೀಲಾವತಿ…. ನರ್ಕಳ ಮಾರಪ್ಪ ಶೆಟ್ಟರು ತುಳು, ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯವಿದ್ದವರು, ಉತ್ತಮ ಶಿಕ್ಷಕರು, ನಿಸ್ವಾರ್ಥ ಸಮಾಜ ಸೇವಕರು. ತುಳು ಸಾಹಿತ್ಯ ಭಂಡಾರಕ್ಕೆ ಅವರ ಕೊಡುಗೆ ಅಮೂಲ್ಯವಾದುದು. ಗಾಂಧಿಯವರ ತತ್ವಗಳನ್ನು ಹಳ್ಳಿಗರ ಮನ ಮುಟ್ಟಿಸುವ ಸಲುವಾಗಿ ಜನರಾಡುವ ತುಳುಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ ಪ್ರಯೋಗಶೀಲ ವ್ಯಕ್ತಿ. ಅವರು ಪ್ರಕಟಿಸಿದ ‘ಪೊರ್ಲಕಂಟ್‌’ (ಚೆಲುವೋ ಚೆಲುವು) ಮತ್ತು ‘ಅಮಲ್‌ದೆಪ್ಪಡೆ’ (ಅಮಲು ಸೇವನೆ ಮಾಡದಿರಿ) ಎನ್ನುವ ಕವನ ಸಂಕಲನಗಳು ಕವನದ ವಸ್ತು, ಭಾಷೆ, ಧಾಟಿಗಳಲ್ಲಿ ಸರಳ ಸುಂದರವಾಗಿದ್ದು ತುಳುವರ ಬಾಯಲ್ಲಿ ಸದಾಕಾಲ ಉಳಿಯುವಂಥವು. ಶುಚಿರುಚಿಯಾದ ಈ ಕವಿತೆಗಳಿಂದ ತುಳು ಸಾಹಿತ್ಯದಲ್ಲಿ ನವೋದಯ ಬಂದಂತಾಗಿತ್ತು. ತುಳು’ ಮಣ್ಣಿನ ಮಾರ್ಮಿಕ ಕಥೆಯನ್ನೊಳಗೊಂಡ ‘ಮಂಜಟ್ಟಿಗೋಣ’ ಎನ್ನುವ ಸುದೀರ್ಘ ಕವಿತೆ ಕನ್ನಡ ಸಾಹಿತ್ಯಕ್ಕೊಂದು ಉತ್ತಮಕೊಡುಗೆ. ತುಳು ಕನ್ನಡ ಯಕ್ಷಗಾನ ಪ್ರಸಂಗಗಳು, ಮಕ್ಕಳ ಸಾಹಿತ್ಯ, ರಾಷ್ಟ್ರಪ್ರೇಮದ ಗೀತೆಗಳು ಹವ್ಯಕ ಕನ್ನಡದಲ್ಲಿ ನಾಟಕ, ‘ತುಳುನಾಡು’ ‘ತುಳುನಾಡಿನ ಸ್ಥಳನಾಮಗಳು’ ಎನ್ನುವ ಸಂಶೋಧನಾ ಪ್ರಬಂಧಗಳು… ಹೀಗೆ ವಿಭಿನ್ನ ಪ್ರಕಾರದ ಸಾಹಿತ್ಯ ನಿರ್ಮಿತಿಯೊಂದಿಗೆ ತುಂಬು ಬಾಳು ಬಾಳಿದ ಶೆಟ್ಟರ ಬದುಕು ಬರಹಗಳ ಚಿತ್ರಣ ನೀಡುವ ಈ ಕೃತಿಯಲ್ಲಿ ಲೇಖಕರು ಅವರ ಕೆಲವು ಸಾಹಿತ್ಯ ಸ್ವರೂಪವನ್ನು ಮಾದರಿಯಾಗಿ ಬಳಸಿಕೊಂಡಿದ್ದಾರೆ.

ವಿಶುಕುಮಾರ್ (೧೯೩೭-೧೯೮೬)

ನಾಟಕ, ಸಾಹಿತ್ಯ, ಸಂಘಟನೆ ಮತ್ತು ಸಿನೇಮಾ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿಶುಕುಮಾರ್‌ ಅವರು ಬದುಕು ಒಂದು ಸಾಹಸಗಾಥೆ! ನೇರ ನಡೆ ನುಡಿ, ಕಾರ್ಯದಕ್ಷತೆ ಮತ್ತು ಪರಹಿತ ಚಿಂತನೆಗಳಿಂದ ಕಿರುಹರೆಯದಲ್ಲೇ ಪ್ರಸಿದ್ಧಿ ಪಡೆದ ವಿಶುಕುಮಾರರ ಸಾಹಿತ್ಯ ಸೇವೆಯೂ ಅಮೋಘ! ನೆತ್ತರ ಗಾನ, ಭಗವಂತನ ಆತ್ಮಕಥೆ, ಗಗನಗಾಮಿಗಳು, ಮಿಯಾಂ ಕಾಮತ್‌, ಕರಾವಳಿ, ಮದರ್, ಹಂಸಕ್ಷೀರ, ವಿಪ್ಲವ, ಭೂಮಿ, ಕಾಮುಕರು, ಈ ಪರಿಯ ಬದುಕು, ಭಟ್ಕಳದಿಂದ ಬೆಂಗಳೂರಿಗೆ, ಕಪ್ಪು ಸಮುದ್ರ, ಪ್ರಜೆಗಳು ಪ್ರಭುಗಳು… ಹೀಗೆ ಹದಿನಾಲ್ಕು ಕಾದಂಬರಿಗಳು… ಮನೆಯಿಂದ ಮಸಣಕ್ಕ, ಶಕುಂತಳ ದುಷ್ಯಂತ, ಬಲಾತ್ಕಾರದ ಬಯಲಲ್ಲಿ, ಡೊಂಕು ಬಾಲದ ನಾಯಕರು, ಅಸ್ತಮಾನ, ಕುರುಕ್ಷೇತ್ರ ಇತ್ಯಾದಿ ಹನ್ನೊಂದು ಕನ್ನಡ ನಾಟಕಗಳು ಮತ್ತು ತುಳುವಿನಲ್ಲಿ ‘ಮಿಸ್ಟರ್‌ ಬಾಂಬೆ’, ‘ಕೋಟಿ ಚೆನ್ನಯ’, ‘ಗರ್ವದ ಎಣ್ಣೆ’ಯಂತಹ ನಾಟಕಗಳನ್ನು ಬರೆದವರು. ಅವರು ಸಿದ್ಧಪಡಿಸಿದ ಕೋಟಿ-ಚೆನ್ನಯ ಸಿನೇಮಾ ತುಳುಜನರ ಮನಗೆದ್ದಿದೆ. ‘ತುಳುಸಿರಿ’ ಪತ್ರಿಕೆಯಲ್ಲೂ ಅವರ ದುಡಿಮೆ ವಿಶೇಷವಾಗಿತ್ತು. ಬೆಂಗಳೂರಿನ ತುಳುಕೂಟದ ಅಧ್ಯಕ್ಷರಾಗಿ ತುಳು ಸಾಹಿತ್ಯ ಸಮ್ಮೇಳನ ನಡೆಸಿದವರು ತುಳು ಸಾಹಿತ್ಯ, ಸಂಸ್ಕೃತಿ, ಜನಸೇವೆ, ಸಂಘಟನೆಗಳಲ್ಲಿ ಸದಾ ತೊಡಗಿಸಿಕೊಂಡಿರುತ್ತಿದ್ದ, ಪ್ರತಿಭೆಯ ಪುಂಜದಂತಿದ್ದ ವಿಶುಕುಮಾರ್‌ ರೋಗಪೀಡಿತರಾಗಿ ಅಕಾಲ ಮರಣಕ್ಕೀಡಾದ ಸಂಗತಿಯನ್ನು ಹೃದಯಸ್ಪರ್ಶಿ ವಿವರಣೆಯೊಂದಿಗೆ, ‘ತುಳುನಾಡಿನೊಂದು ಬೆಳ್ಳಿ ಮರೆಯಾಯಿತೆಂದು’ ಜನಸ್ತೋಮ ಮರುಗುವಲ್ಲಿ ಮರೆಯಲಾಗದ ವಿಶುಕುಮಾರರ ಜೀವನ ಚರಿತ್ರೆಯನ್ನು ಲೇಖಕ ಬಿ. ಮಾಧವ ಕುಲಾಲ್‌ ಮುಕ್ತಾಯಗೊಳಿಸಿದ್ದಾರೆ.