ಪಾಶ್ಚಾತ್ಯ ಅಥವಾ ಕನ್ನಡದ ಮಾದರಿಯಲ್ಲಿ ಪ್ರಾಚೀನ ಮತ್ತು ಆಧುನಿಕವೆಂದು ವರ್ಗೀಕರಣ ಮಾಬಹುದಾದ ಗ್ರಂಥಸ್ಥ ಕಥಾ ಪರಂಪರೆ ತುಳುವಿಗೆ ಇರಲಿಲ್ಲವೆಂದೇ ಹೇಳಬೇಕಾಗುತ್ತದೆ. ಪುನರುಜ್ಜೀವನದ ಆಧುನಿಕ ಕಾಲದಲ್ಲಿ ಮೊಳಕೆಯೊಡೆದು ಸಾಗಿ ಬಂದ ಈ ಪ್ರಕಾರದ ವಿವಿಧ ಹಂತಗಳನ್ನು ಇಲ್ಲಿ ಗುರುತಿಸಲಾಗುತ್ತಿದೆ. ಹಾಗೆಂದು ಬಹುಕಾಲ ಮೌಖಿಕ ಪರಂಪರೆಯಲ್ಲೇ ಸಂತುಷ್ಟವಾಗಿ ಪ್ರವಹಿಸಿಕೊಂಡು ಬಂದ ಕಥಾ ಪರಂಪರೆಯನ್ನೂ ಮರೆಯಲಾಗದು.

ತುಳುವರು ಕುಲ ಕಲೆಗಾರರು; ಕುಶಲ ಕತೆಗಾರರು. ತುಳು ಪಾಡ್ದನಗಳು, ಸಂಧಿ, ಕಬಿತೊ, ಗಾದೆಗಳು, ಒಗಟುಗಳು, ನಾಣ್ನುಡಿಗಳು, ನೇಮ ನಡಾವಳಿ-ಆರಾಧನೆ, ಕಟ್ಟುಕಟ್ಟಳೆಗಳು-ಇವೆಲ್ಲದರಲ್ಲೂ ಮೈನವಿರೇಳಿಸುವ ಕತೆಗಳಿವೆ. ಪಾಡ್ದನಗಳು ತುಳುವ ಪುರಾಣ ಇತಿಹಾಸ ತಿಳಿಸುವ ಕಥನಗೀತೆಗಳು. ತುಳು ನಾಡಿನಾದ್ಯಂತ ಮತ್ತು ತುಳುವರು ವಲಸೆ ಹೋದಲ್ಲೆಲ್ಲ ಅದೆಷ್ಟೋ ಜನಪದ ಕಥೆಗಳು ಹುದುಗಿಕೊಂಡಿವೆ. ಅವುಗಳ ರಹಸ್ಯ-ಆಕರ್ಷಕ ಗುಣದಿಂದಾಗಿ ಕೇಳಿದ ನೆನಪಷ್ಟೇ ಸಾಕಾಗಿ ಅವು ತಲೆಮಾರಿನಿಂದ ತಲೆಮಾರಿಗೆ, ಶತಮಾನದಿಂದ ಶತಮಾನಕ್ಕೆ ಬಾಯ್ದೆರೆಯಾಗಿ ಹಾದು ಉಳಿದು ಬರಲು ಶಕ್ತವಾಗಿವೆ.

ತುಳುವಿಗೆ ರಾಜಾಶ್ರಯದ ಕೊರತೆಯಿಂದಾಗಿ ಲಿಖಿತ ಸಾಹಿತ್ಯದ ದಾಖಲೆ ಇತ್ತೀಚಿನವರೆಗೂ ಒದಗಲಿಲ್ಲ. ಅಕ್ಷರಾಭ್ಯಾಸದ ಮೂಲಕ ವಿದ್ಯೆ ಪಡೆಯುವ ಅವಕಾಶ ಪಡೆದಿದ್ದವರು ಕಡಿಮೆ. ಇಲ್ಲಿನ ಕೊರಗರು, ಪರವ, ಪಂಬದ, ಮಾಯಿಲ, ನಲಿಕೆ, ಮೇರ-ಮುಂತಾದ ಆದಿವಾಸಿ ಜನಾಂಗಗಳಿಗಂತೂ ಪ್ರೌಢ ಶಿಕ್ಷಣಾವಕಾಶ ಮತ್ತೂ ವಿಳಂಬವಾಗಿ ಲಭಿಸಿತು. ಆದರೂ ಅದರಿಂದಾದ ಒಂದೇ ಒಂದು ಪ್ರಯೋಜನವೆಂದರೆ ತುಳುವಿನ ಪುರಾತನ ಕಲೆ, ಸಾಹಿತ್ಯ, ಸಂಸ್ಕೃತಿ. ಅದರದೇ ತಕ್ಕಮಟ್ಟಿನ ಮೂಲ ಸ್ವರೂಪದಲ್ಲಿ ಉಳಿದುಕೊಂಡು ಬಂದು ಅದು ಜಾನಪದ ಸಂಗ್ರಹಕಾರರಿಗೆ, ವಿದ್ವಾಂಸರಿಗೆ ಅರ್ವಾಚೀನ ಯುಗದಲ್ಲಿ ಸಂಗ್ರಹಯೋಗ್ಯವಾಗಿ ದೊರೆಯಲು ಸಾಧ್ಯವಾದುದು. ಕ್ರಮೇಣ ಅಕ್ಷರಾಭ್ಯಾಸ, ಶಿಷ್ಟ-ಪಾಶ್ಚಾತ್ಯ ಸಂಸ್ಕೃತಿಯ ಸಂಸರ್ಗದಿಂದಾಗಿ ತುಳು ಭಾಷೆ, ಸಂಸ್ಕೃತಿಯ ಮೂಲಸ್ವರೂಪದಲ್ಲಿ ಕಾಲೋಚಿತ ಬದಲಾವಣೆ ಸ್ವಾಭಾವಿಕವಾಗಿ ಉಂಟಾಯಿತು.

ಕ್ರಿ. ಶ. ೧೫ನೇ ಶತಮಾನದ ಅನಂತಪುರ ಶಾಸನ ತುಳು ಭಾಷೆ ಲಿಪಿಯಲ್ಲಿರುತ್ತೆಂದು ತಿಳಿದು ಬರುತ್ತದೆ. ಸುಮಾರು ೧೫ನೇ ಶತಮಾನದಲ್ಲೇ ಉಡುಪಿಯ ವಾದಿರಾಜ ಸ್ವಾಮಿಗಳು ‘ತುಳು ದಶಾವತಾರ’ ಗೀತೆಯನ್ನು (‘ಉಪ್ಪುನೀರ ಕಡಲಕಟ್ಟ ಕಟ್ಟಿನೇರ್‌ಗಾ| ಅವ್ವೇ ನಮ್ಮ ಶ್ರೀರಾಮದೇವರತ್ತೆಗಾ|… ಇತ್ಯಾದಿ) ರಚಿಸಿ ತುಳು ಶಿಷ್ಟ ಸಾಹಿತ್ಯದ ಮೊದಲ ಚಿಗುರು ಮೊಳೆಯಿಸಿದರು.

ತುಳು ಲಿಪಿಯಲ್ಲಿ ೧೬-೧೭ನೇ ಶತಮಾನದಲ್ಲಿ ವಿಷ್ಣುತುಂಗನೆಂಬ ಕವಿ ಬರೆದ ‘ಶ್ರೀಭಾಗತೊ’ ಮತ್ತು ಸರಿಸುಮಾರು ಅದೇ ಕಾಲಮಾನದಲ್ಲೇ ಹೆಸರು ಕಾಣಿಸಿದ ಕವಿಗಳು ತಾಳೆಯೋಲೆಯಲ್ಲಿ ರಚಿಸಿದ ಕಾವೇರಿ ಹಾಗೂ ‘ತುಳು ದೇವಿ ಮಹಾತ್ಮೆ’-ಈ ಮೂರು ಕಾವ್ಯಗಳನ್ನು ವಿದ್ವಾಂಸರಾದ ವೆಂಕಟರಾಜ ಪುಣಿಂಚತ್ತಾಯರು ಎಂಬತ್ತರ ದಶಕದಿಂದೀಚೆಗೆ ಶೋಧಿಸಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹೀಗಾಗಿ ೧೫-೧೬ನೇ ಶತಮಾನದಲ್ಲೇ ತುಳು ಸಾಹಿತ್ಯ ರಚನೆ ಆರಂಭವಾದುದು ತಿಳಿದು ಬರುತ್ತದೆ.

ತುಳುವಲ್ಲಿ ಸಾಹಿತ್ಯ ರಚನೆ ಹೆಚ್ಚಿದ ಎರಡನೆಯ ಘಟ್ಟ ಉಡುಪಿಯಲ್ಲಿ ೧೯೨೮ರಿಂದ ೧೯೩೮ರವರೆಗೆ ಎಸ್‌. ಯು. ಪಣಿಯಾಡಿಯವರು ನೇತೃತ್ವದಲ್ಲಿ ನಡೆದ ತುಳು ಭಾಷಾ ಚಳುವಳಿಯ ಕಾಲ;

ಮೂರನೆಯ ಘಟ್ಟ ೧೯೭೦ರಲ್ಲಿ ಮಂಗಳೂರಿನಲ್ಲಿ ‘ತುಳುಕೂಟ’ ಹುಟ್ಟಿಕೊಂಡು ಅದರ ಪ್ರೇರಣೆಯಿಂದ ಆರಂಭವಾದ ಸಾಹಿತ್ಯ ಚಟುವಟಿಕೆಗಳು;

ಇದರ ನಂತರ ನಾಲ್ಕನೆಯ ಹಂತ ೧೯೭೬ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಆರಂಭವಾಗಿ ತುಳು ಕಾರ್ಯಕ್ರಮಗಳ ಪ್ರಸಾರಕ್ಕೆ ಅವಕಾಶವಾದುದು.

ಐದನೆಯದಾಗಿ ೧೯೯೪ರಲ್ಲಿ ತುಉ ಸಾಹಿತ್ಯ ಅಕಾಡೆಮಿಯ ಉದಯ.

ಈ ಹರಹಿನಲ್ಲಿ ಸಣ್ಣ ಕಥೆಗಳ ಆರಂಭ ಎಂಬುದನ್ನೂ ಗಮನಿಸೋಣ. ಕನ್ನಡ ಲಿಪಿಯಲ್ಲಿ ತುಳು ಗ್ರಂಥ ಸಾಹಿತ್ಯ ಆರಂಭಿಸಿದವರು ಕ್ರೈಸ್ತ ಮಿಶನರಿಗಳು. ೧೮೪೨ರಲ್ಲಿ ‘ಮತ್ತಾಯನ ಸುವಾರ್ತೆ’ ಎನ್ನುವ ಧರ್ಮಗ್ರಂಥವನ್ನು ತುಳುವಿನ ಪ್ರಥಮ ಗ್ರಂಥವಾಗಿ ಪ್ರಕಟಿಸಿದ ಬಾಸೆಲ್‌ಮಿಶನ್‌ನವರು ಅದೇ ಕಾಲದಲ್ಲಿ ಬೈಬಲಿನ ಕೆಲವು ಕತೆಗಳನ್ನೂ ತುಳುವಲ್ಲಿ ಪ್ರಕಟಿಸಿದರು. ಕಳೆದ ಎರಡು ದಶಕಗಳಿಂದಿಚೇಗೆ ಅನೇಕ ತುಳು ಜನಪದ ಕತೆಗಳನ್ನು ಅಮೃತ ಸೋಮೇಶ್ವರ, ಸೇವ ನಮಿರಾಜ ಮಲ್ಲ, ವಾಮನ ನಂದಾವರ, ಕನರಾಡಿ ವಾದಿರಾಜ ಭಟ್ಟ, ದೂಮಪ್ಪ ಮಾಸ್ತರ್‌, ಪಾಲ್ತಾಡಿ ರಾಮಕೃಷ್ಣ ಆಚಾರ್‌, ಕೆ. ಅನಂತರಾಂ ಬಂಗಾಡಿ-ಮುಂತಾದವರು ಸಂಗ್ರಹಿಸಿ ಪ್ರಕಟಿಸಿದ್ದಾರೆ.

ಆದರೆ ತುಳುವಿನಲ್ಲಿ ಶಿಷ್ಟ ಕತೆಗಳ ರಚನೆ ಒಂದಿಷ್ಟು ವಿಳಂಬವಾಗಿಯೇ ಆರಂಭವಾಯಿತು. ಅದು ಈ ಶತಮಾನದ ಎರಡನೆಯ ದಶಕದಲ್ಲಿ ಪಣಿಯಾಡಿಯವರ ನೇತೃತ್ವದ ತುಳು ಭಾಷಾ ಚಳವಳಿ ಸ್ವಾತಂತ್ರ್ಯ ಚಳುವಳಕ್ಕೆ ಕೊಂಡಿಯಾಗಿ ಬೆಸೆದುಕೊಂಡ ಪರಿಣಾಮವಾಗಿ.

೧೯೩೨ರಲ್ಲಿ ಪಣಿಯಾಡಿಯವರು ಉಡುಪಿಯಲ್ಲಿ ‘ತುಳ್‌ನಾಡ್‌ ಪ್ರೆಸ್‌(ಇಂದಿನ ನವಯುಗ ಪ್ರೆಸ್‌’) ಆರಂಭಿಸಿದರು. ‘ತುಳುವ ಸಾಹಿತ್ಯಮಾಲೆ’ಯಲ್ಲಿ ತನ್ನ ಹಾಗೂ ಸಂಗಡಿಗರ ತುಳು ಪುಸ್ತಕಗಳನ್ನು ಪ್ರಕಟಿಸಿದರು. ಎನ್‌. ಎ. ಶೀನಪ್ಪ ಹೆಗಡೆ, ಬಡಕಬಯಿಲ್‌ ಪರಮೇಶ್ವರಯ್ಯ. ಮಟ್ಟಾರು ವಿಠ್ಠಲ ಹೆಗ್ಡೆ, ಸತ್ಯಮಿತ್ರ ಬಂಗೇರ, ಕೆ. ಬಿ. ನಾರಾಯಣ ಶೆಟ್ಟಿ (ಕಿಲ್ಲೆ)- ಮುಂತಾದವರೆಲ್ಲ ಆಗ ಪಣಿಯಾಡಿಯವರ ಜತೆಯಲ್ಲಿ ಬರೆದರು. ಈ ಕಾಲದಲ್ಲಿ ತುಳುವಿನ ಎರಡು ಕಾದಂಬರಿಗಳು ಪ್ರಕಟಗೊಂಡವು. ೧೯೩೫ರಲ್ಲಿ ಶೀನಪ್ಪ ಹೆಗಡೆಯವರ ‘ಮಿತ್ಯನಾರಾಯಣ ಕತೆ’ ೧೯೩೬ರಲ್ಲಿ ಪ್ರಕಟವಾದ ಪಣಿಯಾಡಿಯವರ ‘ಸತಿಕಮಲೆ’ ಇವೇ ಆ ಕೃತಿಗಳು.

ಎಂ. ವಿ. ಹೆಗಡೆ (ಮಟ್ಟಾರು ವಿಠಲ ಹೆಗಡೆ)ಯವರ ‘ಮದಿಮಾಳತ್ತ್‌ ಮದಿಮಾಯ’ ಎನ್ನುವ ಸಣ್ಣಕಥೆ ೧೯೩೩ರಲ್ಲಿ ಪ್ರಕಟವಾಯಿತು. ತುಳು ಸಾಹಿತ್ಯದ ಅರುಣೋದಯದ ಕಾಲದಲ್ಲಿ ಪ್ರಕಟವಾದ ಈ ಕತೆಯೇ ತುಳುವಿನ ಮೊತ್ತಮೊದಲ ಸಣ್ಣ ಕಥೆಯೆಂಬುದಾಗಿ ಇತಿಹಾಸದಲ್ಲಿ ದಾಖಲಾಯಿತು.

ಈ ಕಥೆ ತುಳುನಾಡಿನ ಉಡುಪಿ ಕಡೆಯ ಬಂಟ – ಬಿಲ್ಲವರಿತ್ಯಾದಿ ವರ್ಗದ ಭಾಷೆಯಂದು ಗುರುತಿಸಲಾಗುವ ಮೌಖಿಕ ಸಂಪ್ರದಾಯದ ಆಡುನುಡಿಯ ಸೊಗಡಿನದು. ವಿಶಿಷ್ಟವಾದ ಸರಳ ನಿರೂಪಣೆಯ ಕತೆ. ಬಂಟ ಸಮಾಜ ಜೀವನ ವಿಧಾನದ ಸಂಕ್ರಮಣ ಕಾಲದಲ್ಲಿ ಸೃಷ್ಟಿಯಾದುದು. ಅರುವತ್ತೈದು ವಯಸ್ಸಿನ ಮುದುಕ ಪೇರ್ದಳ್ಳಿಯ ಕೊರಗೆಸೆಟ್ರು ಮದುವೆಯಾದ ನಾಲ್ವರು ಪತ್ನಿಯರೂ ಮಡಿದು ಐದನೆಯ ಹದಿಹರೆಯದ ವಧುವಿನ ಬೇಟೆಯಲ್ಲಿರುವವರು. ಅವರಿಗೆ ಹೇಗಾದರೂ ಮಾಡಿ ಹದಿನೆಂಟರ ಕನ್ಯೆಯೊಂದಿಗೆ ನೆಂಟಸ್ತಿಕೆ ಕುದುರಿಸಲು ಕಟಿಬದ್ಧರಾದವರು ದಲಾಲಿ ಕಾಂತು ಸೆಟ್ರು. ಈ ನಡುವೆ ಕೊರಗಸೆಟ್ರ ಮಗಳು ಲಲಿತ ಮದುವೆಗೆ ಬೆಳೆದು ನಿಂತಿದ್ದಾಳೆ. ಅವಳ ಪ್ರಿಯಕರ ಯುವಪತ್ರಕರ್ತ ಮೋಹನಶೆಟ್ರು-ವರದಕ್ಷಿಣೆ, ಅಸ್ಪೃಶ್ಯತೆ, ಅಮಲು ಸೇವನೆ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟಕ್ಕಾಗಿ ‘ಜವನೆರೆ ಕೂಟ’ ಎನ್ನುವ ಸಂಘಟನೆ ಕಟ್ಟಿದಾತ. ಕಡೆಗೂ ಕೊರಸೆಟ್ಟಿಗೆ ಮದುವೆ ನಿಶ್ಚಯವಾಗಿ ದಿಬ್ಬಣ ಬರುತ್ತದೆ. ಮದುಮಗಳು ಲಗ್ನ ಮಂಟಪಕ್ಕೆ ಬಂದು ವೇಷ ಕಳಚಿದಾಗ ಅದು ಮದುಮಗಳಲ್ಲ; ಮದುಮಗ! (ಮಾದಿಮಾಳಿತ್ತ್‌ಮದಿಮಾಯೆ) ಮಾರುವೇಷದಲ್ಲಿದ್ದ ಮೋಹನ ಸೆಟ್ರು! ಅಲ್ಲಿ ಮದುವೆ ನಡೆಯುವುದು ಮೋಹನ ಸೆಟ್ರು ಮತ್ತು ಲಲಿತೆಗೆ; ಆ ಮೂಲಕ ಕೊರಗ ಸೆಟ್ರ ಮುಖಭಂಗ. ಇದು ಕಥೆಯ ಸಾರಾಂಶ.

‘ಮದಿಮಾಳತ್ತ್‌ ಮದಿಮಾಯೆ’ ಕಥೆಯಲ್ಲಿ ತುಳುನಾಡಿನ ಹಳ್ಳಿಯೊಳಗಣ ರಂಗುರಂಗಿನ ಜೀವನ ಚಿತ್ರಣವಿದೆ. ವಿಡಂಬನೆಯಿದೆ. ಗಾಂಧಿ ಸತ್ಯಾಗ್ರಹ ಸೂತ್ರದ ಪ್ರಭಾವವಿದೆ. ‘ತುಳುವ ಸಾಹಿತ್ಯಮಾಲೆ’ಯಲ್ಲಿ ೧೯೯೩ರಲ್ಲಿ ಪ್ರಕಟವಾದ ಎಂ. ವಿ. ಹೆಗ್ಡೆಯವರು ಈ ಕಥೆ ತುಳು ಸಾಹಿತ್ಯದ ಒಂದು ಮಹತ್ವದ ಮೈಲುಗಲ್ಲು. ಮುಂದೆ ಸುಮಾರು ೩೫ ವರ್ಷಗಳ ಸುದೀರ್ಘ ಅವಧಿಯಲ್ಲಿ ನಾಟಕ ಪ್ರಕಾರವೊಂದನ್ನು ಹೊರತುಪಡಿಸಿ ತುಳುವಲ್ಲಿ ಯಾವುದೇ ಗದ್ಯಸಾಹಿತ್ಯ ರಚನೆ ಯಾಕೋ ಆದಂತಿಲ್ಲ.

ಇದರ ಬಳಿಕ ಬರುವ ಹೆಸರು ರಮೇಶ್‌ ಕಾರ್ನಾಡ್‌ರದು. ೧೯೭೦ರಲ್ಲಿ ನ್ಯಾಯವಾದಿ ಎಸ್‌. ಆರ್‌. ಹೆಗ್ಡೆಯವರು ನೇತೃತ್ವದಲ್ಲಿ ಮಂಗಳೂರಿನಲ್ಲಿ ‘ತುಳುಕೂಟ’ ಸಂಸ್ಥೆ ಸ್ಥಾನಪೆಯಾಯಿತು. ತುಳು ಭಾಷೆ, ಸಂಸ್ಕೃತಿಯ ಪುನರುಜ್ಜೀವನಕ್ಕೆ ಬಗೆ ಬಗೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ತುಳುಪತ್ರಿಕೆಗಳೂ ಒಂದಾದ ಬಳಿಕ ಮತ್ತೊಂದು ಹುಟ್ಟಿಕೊಂಡವು. ಬಹಳ ಮಂದಿ ಬರೆಯಲಾರಂಭಿಸಿದರು. ಈ ಸಂದರ್ಭದಲ್ಲಿ ತುಳು ಕಥಾ ಸಾಹಿತ್ಯಲೋಕದ ನಕ್ಷತ್ರದಂತೆ ಮಿಂಚಿ ಮಾಯವಾದ ಮುಲ್ಕಿಯ ತರುಣ ರಮೇಶ್‌ ಕಾರ್ನಾಡ್‌ ಎರಡು ಕಾರಣಗಳಿಂದ ಮುಖ್ಯರಾಗುತ್ತಾರೆ. ೧೯೭೦ರಲ್ಲಿ ಅವರು ತುಳುಕೂಟಕ್ಕಾಗಿ ‘ತುಳು ವಾಣಿ’ ಎನ್ನುವ ತುಳುಮಾಸ ಪತ್ರಿಕೆಯನ್ನು ಆರಂಭಿಸಿದರು.೧೯೭೨ರಲ್ಲಿ ತನ್ನ ‘ಪೊಸಜೀವನ’ ಎಂಬ ಕಥಾ ಸಂಕಲನ ಹೊರತಂದರು. ಇದು ತುಳುವಿನ ಪ್ರಥಮ ಕಥಾಸಂಕಲನ.

ರಮೇಶ್‌ ಕಾರ್ನಾಡರ ‘ಪೊಸ ಜೀವನ’ ನಾಲ್ಕು ಕಥೆಗಳ ಸಂಕಲನ, ಹರಿಜನೋದ್ಧಾರ, ವರದಕ್ಷಿಣೆಯ ಪಿಡುಗಿನಿಂದ ನರಳುವ ಬಡ ಹೆಣ್ಣು ಮಕ್ಕಳ ಕರುಣಕಥೆ, ಆದರ್ಶ ಸರಳ ವಿವಾಹದತ್ತ ತರುಣರ ಮನ ಒಲಿಸುವ ಆಶಯ-ಇವೇ ಮೊದಲಾದವು ಕಾರ್ನಾಡರ ಕಥೆಗಳ ವಸ್ತು. ಪಿತ್ಥ ಕಾಮಾಲೆ ಕಾಯಿಲೆಗೀಡಾಗಿ ೧೯೭೬ರಲ್ಲಿ ಎಳೆಯ ವಯಸ್ಸಿನಲ್ಲೆ ತೀರಿ ಹೋಗದಿದ್ದಲ್ಲಿ ರಮೇಶ್‌ಕಾರ್ನಾಡ್‌ಬಹುಶಃ ತುಳು ಕಥಾಸಾಹಿತ್ಯಕ್ಕೆ ಇನ್ನಷ್ಟು ಹಿರಿದಾದ ಕಾಣಿಕೆ ನೀಡಲಿದ್ದರು.

ಆ ಬಳಿಕ ಪತ್ರಿಕೆಗಳ ಮೂಲಕ ಹಲವಾರು ಕಥೆಗಳು ಬೆಳಕಿಗೆ ಬಂದವು. ತುಳುಸಿಇ, ತುಳುಕೂಟ, ತುಳುನಾಡ್‌, ತುಳುವೆರೆ ಬಂಧು, ತುಳುವೆರ್‌, ತುಳು ರಾಜ್ಯ, ತುಳುತೂಟೆ – ಮುಂತಾದ ಪತ್ರಿಕೆಗಳು ಒಂದಾದ ಮೇಲೊಂದು ಆರಂಭವಾದವು. ಹೆಚ್ಚಿನವು ಸ್ವಲ್ಪಕಾಲ ಪ್ರಕಟವಾಗಿ ಬಳಿಕ ನಿಂತು ಹೋದವು. ಈ ಪತ್ರಿಕೆಗಳೆಲ್ಲ ಪ್ರಧಾನವಾಗಿ ಸಣ್ಣಕತೆಗಳನ್ನೇ ಪ್ರಕಟಿದ್ದೆಂಬುದು ಗಮನಾರ್ಹ. ಆರಂಭಿಕ ಪತ್ರಿಕೆಗಳಾದ ತುಳುಕೂಟ, ತುಳುವೆರೆ ಬಂಧು ಈ ಪತ್ರಿಕೆಗಳಿಗೆ ಕಥೆ ಬರೆದ ಕೆ. ಎನ್‌.ದೇವಾಂಗ, ಕೆ. ಜೆ. ಶೆಟ್ಟಿ, ಕಡಂದಲೆ, ಶಶಿಕಲಾ ರಾಜಶೇಖರ್‌, ಶೇಖರ್‌ಚಿತ್ರಾಪು, ಜಗದೀಶ್‌ದೇರಳಕಟ್ಟೆ, ಪಾಲ್ತಾಡಿ ರಾಮಕೃಷ್ಣ ಆಚಾರ್‌, ಗೀತಾ ಸುರತ್ಕಲ್‌, ಯಶವಂತ ಬೋಳೂರು, ಮುದ್ದು ಮೂಡುಬೆಳ್ಳೆ, ಕೆ.ಜೆ.ಕೊಕ್ರಾಡಿ, ಪೆರ್ಡ್ರೂರು ಭಾಸ್ಕರ ಶೆಟ್ಟಿ, ತಿಲಕನಾಥ ಮಂಜೆಶ್ವರ, ವಿ.ಪಿ. ತೆಕ್ಕಾರು, ರಂಜನಿ ದೇವಿ, ಆಶಾಲತಾ ಪೂಜಾರಿ, ಕೆ. ಮೋನಪ್ಪ ಪೂಜಾರಿ, ಕೆ.ಮೋನಪ್ಪ ಗೌಡ ಪುತ್ತುರು, ಮಾಧವ ಕೋಟ್ಯಾನ್‌, ಮಿಜಾರು ಹರಿಶ್ಚಂದ್ರ ಶೆಟ್ಟಿ – ಮುಂತಾದವರಲ್ಲಿ ಹಲವರು ಈ ಪತ್ರಿಕೆಗಳು ಸ್ಥಗಿತಗೊಂಡಾಗ ತಾವು ಕತೆ ಬರೆಯುವುದನ್ನು ನಿಲ್ಲಿಸಿದರು.

‘ತುಳುಕೂಟ’ ಪತ್ರಿಕೆ ಪುನರಾಂಭವಾದಾಗ ಹಿಂದಿನ ಲೇಖಕರು ಮತ್ತೆ ಬರೆಯತೊಡಗಿದರು. ೧೯೮೬ರಲ್ಲಿ ಪ್ರಾರಂಭವಾದ ‘ತುಳು ರಾಜ್ಯ ಮಾಸಪತ್ರಿಕೆಯಲ್ಲಿ ಇತ್ತೀಚಿನವರೆಗೂ ಪ್ರಕಟವಾಗುತ್ತಿದ್ದ ‘ತುಳುಬೊಳ್ಳಿ’ಯಲ್ಲಿ ಹಲವರು ತಮ್ಮ ಬರವಣಿಗೆ ಮುಂದುವರಿಸಿದರು. ಉಡುಪಿಯಾ ರಾ. ಗೋವಿಂದ ಪೈ ಸಂಶೋಧನ ಕೇಂದ್ರದ ತ್ರಿಭಾಷಾ ತ್ರೈಮಾಸಿಕ ‘ತುಳುವ’ ಪ್ರಬುದ್ಧ ಸಂಶೋಧನೆ, ಅಧ್ಯಯನಗಳಿಗೆ ಸಂಬಂಧಿಸಿದ ಬರಹಗಳಿಗಷ್ಟೇ ಸೀಮಿತವಾಗಿದ್ದರೆ ದೆಹಲಿಯ ‘ತುಳುವೆರ್‌’ ಪತ್ರಿಕೆಯಲ್ಲಿ ಸಾಮಾಜಿಕ ಕಾಳಜಿಯ ಸಾಕಷ್ಟು ಕಥೆಗಳು ಪ್ರಕಟವಾದುವು. ಅವುಗಳಲ್ಲಿ ಹೆಚ್ಚಿನೆಲ್ಲವನ್ನು ಬರೆದವರು ಸಂಪಾದಕ ಬಾ. ಸಾಮಗರು, ಬೆಂಗಳೂರಿನಲ್ಲಿ ‘ತುಳು ತೂಟೆ’ ಪತ್ರಿಕೆ ನಡೆಸುತ್ತಿರುವ ಪೇರೂರು ಜಾರು ಅವರೂ ಈ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಈ ಪತ್ರಿಕೆಗಳಲ್ಲದೆ ಸಂಗಾತಿ, ರಾಶಿ, ಗೃಹಪತ್ರಿಕೆ, ಅಕ್ಷಯ, ಬ್ರಹ್ಮಶ್ರೀ, ಸಿಂಚನ ಮುಂತಾದ ಪತ್ರಿಕೆಗಳ ಹಾಗೂ ಇತ್ತೀಚಿನ ಹಲವು ಸಂಜೆ ದೈನಿಕಗಳು ತುಳು ಅಂಕಣಗಳಲ್ಲೂ, ಕೆಲವು ಸ್ಮರಣ ಸಂಚಿಕೆಗಳಲ್ಲೂ ಹಲವು ಬಿಡಿ ಕಥೆಗಳು ಪ್ರಕಟವಾಗಿವೆ.

೧೯೭೬ರ ಡಿಸೆಂಬರ್‌ ತಿಂಗಳಲ್ಲಿ ಆರಂಭವಾದ ಮಂಗಳೂರು ಆಕಾಶವಾಣಿ ಕೇಂದ್ರ ತುಳು ಕಥಾಸಾಹಿತ್ಯದ ಸಮೃದ್ಧ ರಚನೆಗೆ ಅವಕಾಶ ಮಾಡಿಕೊಟ್ಟಿತು. ತುಳು ಕತೆಗಳ ನೂತನ ಅಧ್ಯಾಯವೇ ಇಲ್ಲಿಂದ ಆರಂಭವಾಯಿತೆನ್ನಬಹುದು. ತುಳು ಭಾಷೆಯ ಬೇರೆ ಬೇರೆ ಪ್ರಭೇದಗಳ, ಪ್ರಾದೇಶಿಕ ವೈಶಿಷ್ಟ್ಯಗಳ, ಉಚ್ಚಾರದ ಸೊಗಸು ವೈವಿಧ್ಯಮಯ ಸುಂದರ ಕತೆಗಳನ್ನು ಬರೆದು ರೇಡಿಯೋದಲ್ಲಿ ಓದಿದ ಆರಂಭಿಕರು ನಾ. ಉಜಿರ, ಕೆ.ಜೆ. ಶೆಟ್ಟಿ, ಕೆ.ಎಸ್‌. ಭಂಡಾರಿ, ಮುದ್ದು ಮೂಡುಬೆಳ್ಳೆ (ಮೊದಲ ರೇಡಿಯೋ ಕತೆಗಾರ), ಯಶವಂತ ಬೋಳೂರು, ಮನೋಹರ್ ಪ್ರಸಾದ್, ಕೆ.ಜೆ. ಕೊಕ್ರಾಡಿ, ಗೀತಾ ಸುರತ್ಕಲ್‌, ನಾರಾಯಣ ರೈ ಕುಕ್ಕುವಳ್ಳಿ, ಕೆ. ಲೀಲಾವತಿ, ಮನೋರಮಾ ಕೆ. ರೈ, ಎಂ. ಬಾಬು ಶೆಟ್ಟಿ ನಾರಾವಿ, ವೈ. ಮೋಹನರಾವ್‌, ರಾಂ ಎಲ್ಲಂಗಳ, ಎನ್‌.ಟಿ. ಗುರುವಪ್ಪ, ಬೊಳುವಾರು ಮಹಮದ್ ಕುಂಞ, ಮನು ಇಡ್ಯಾ ಕಟಪಾಡಿ ಶಂಕರ ಪೂಜಾರಿ, ಕ್ಯಾಥರಿನ್‌ ರಾಡ್ರಿಗಸ್‌, ಪಾ. ರಾಮಕೃಷ್ಣ ಶಾಸ್ತ್ರಿ, ಚಂದ್ರಶೇಖರ ಗಟ್ಟಿ, ಚಿದಂಬರ ಬೈಕಂಪಾಡಿ, ದಿ | ವಸಂತ ಮರೋಳಿ, ಕೇಶವ ಎ. ಬಾಬೋಜಿರಾವ್‌, ಆತ್ರಾಡಿ ಉಮಾವನಿತ, ಎಸ್‌.ಪಿ. ಮಂಚಿ, ಅತ್ರಾಡಿ ಅಮೃತಾ ಶೆಟ್ಟಿ, ಪಾ. ಸಂಜೀವ ಬೋಲಾರ, ಚಂದ್ರಶೇಖರ ದಾಮ್ಲೆ, ರಾಜಾ ಬಂಟ್ವಾಳ, ವಸಂತಿ ಶೆಟ್ಟಿ – ಹೀಗೆ ಬಹಳಷ್ಟು ಲೇಖಕರು. ಓದುವುದಕ್ಕಿಂತ ಆಲಿಸುವುದು ಸುಲಭವಾದುದರಿಂದ ಬಾನುಲಿಯ ತುಳು ಕಥೆಗಳು ತುಳುವರಿಗಷ್ಟೇ ಅಲ್ಲದೆ ಆಸಕ್ತ ಇತರ ಭಾಷಾವರ್ಗದ ಜನತೆಗೂ ಕೇಳಲು ದೊರಕಿ ರುಚಿಸಿದವು.

ತುಳು ಭಾಷೆಯ ಸಹಜ ಸೌಂದರ್ಯ, ಸೊಗಡನ್ನು ಇದ್ದಕ್ಕಿದ್ದಂತೆ ಸಮುದಾಯಕ್ಕೆ ತಲುಪಿಸುವ ಸಮರ್ಥ ಮಾಧ್ಯಮ ಬಾನುಲಿ. ಆದರೆ ಮಾಧ್ಯಮದಲ್ಲಿ ಕೆಲವೊಂದು ಮಿತಿಗಳ ಚೌಕಟ್ಟಿನಲ್ಲಿ ಕಥೆಗಳು ಪ್ರಸಾರವಾಗುತ್ತವೆ.

ಒಂದು ಕಥೆಯ ಸಾರ್ಥಕತೆಗೆ ಘಟನೆ, ಪಾತ್ರ, ಪರಿಸರ, ಭಾಷೆ. ದೃಷ್ಟಿಕೋನ, ನಿರೂಪಣಾ ವಿಧಾನ, ಕಲೆಗಾರಿಕೆ – ಇವೆಲ್ಲದರ ಪಾಲೂ ಇದೆ. ಎಂ.ವಿ. ಹೆಗಡೆಯವರಂಥ ಕೆಲವು ಲೇಖಕರ ಕಥೆಗಳಲ್ಲಿ ಜೀವಂತ ಅನುಭವ ಸಾಮರ್ಥ್ಯ, ಘಟನೆಗಳನ್ನು ಎರಕಹೊಯ್ದು ಕಥೆ, ಹೆಣೆಯುವಾಗ ಒಂದು ಸಂದೇಶ, ದಾರ್ಶನಿಕತೆ ನೈತಿಕ ಕಳಕಳಿ ಗೋಚರಿಸುತ್ತದೆ. ಎಪ್ಪತ್ತರ ದಶಕದಿಂದೀಚೆಯ ಹೊಸ ಬರವಣಿಗೆಯ ಕಾಲದಲ್ಲಿ ಬರೆಯತೊಡಗಿದ ಹೆಚ್ಚಿನವರು ಯುವಜನರು. ಇಲ್ಲಿ ಸಹಜವಾಗಿ ಗಂಡು-ಹೆಣ್ಣಿನ ಪ್ರೇಮ, ತಂತಮ್ಮ ಪರಿಸರದ ಸಾಮಾಜಿಕ, ಕೌಟುಂಬಿಕ ಅನುಭವಗಳು ಸಹಜತೆಗಿಂತ ಒಂದಿಷ್ಟು ಹೆಚ್ಚು ನಾಟಕೀಯವಾಗಿ ಎಂಬಂತೆ ಕೆಲವು ಕಥೆಗಳು ಬಂದದ್ದೂ ಇದೆ.

ರಮೇಶ್‌ಕಾರ್ನಾಡ್‌, ನಾ. ಉಜಿರೆ, ಬೋಳುರು, ಕೆ.ಎಸ್‌. ಭಂಡಾರಿ ಮುಂತಾದವರು ವಿಭಿನ್ನ ವಿಷಯಗಳನ್ನು ಆಯ್ದುಕೊಂಡರೆ ಗೀತಾ ಸುರತ್ಕಲ್‌ ಮನೋರಮಾ ರೈ, ಅಮೃತಾ ಶೆಟ್ಟಿ, ದಿ | ಕೆ. ಲೀಲಾವತಿ, ಪಾ. ರಾಮಕೃಷ್ಣ ಶಾಸ್ತ್ರಿ ಮತ್ತಿತರರು ವರದಕ್ಷಿಣೆಯ ಸಮಸ್ಯೆ, ಹೆಣ್ಣಿನ ಶೋಷಣೆ – ದುಸ್ಥಿತಿಗಳ ಬಗ್ಗೆ ಬರೆದರು. ಅನಂತರಾಮ ಬಂಗಾಡಿ, ಕ್ಯಾಥರಿನ್‌ ರಾಡ್ರಿಗಸ್‌, ಕೆ.ಜೆ. ಕೊಕ್ರಾಡಿ, ಮನು ಇಡ್ಯಾ, ಶಂಕರ ಪೂಜಾರಿ – ಮುಂತಾದವರು ತುಳು ಜಾನಪದವನ್ನು ಅಧ್ಯಯನ ಮಾಡಿ ಆ ಸತ್ವವನ್ನು ಕಥೆಗಳಲ್ಲಿ ಅಳವಡಿಸಿದರು. ಮನೋಹರ ಪ್ರಸಾದ್‌, ಯಶವಂತ ಬೋಲೂರು – ಮತ್ತಿತರ ಕಥೆಗಳಲ್ಲಿ ಮುಖ್ಯವಾಗಿ ಯುವಜನಾಂಗದ ಪ್ರೇಮ ವ್ಯವಹಾರದ ಸಿಹಿ-ಕಹಿ, ಮುಗ್ಧ ಭಾವಜೀವಿಗಳ ನೋವು-ನಲಿವುಗಳ ಚಿತ್ರಣ ಬಂದಿದೆ.

ಎಂ.ಆರ್‌. ಬಂಗೇರ ಮಾರಿಪಳ್ಳ, ದಾಮ್ಲೆ ಮುಂತಾದವರೂ ಕಥಾ ಕೃಷಿ ಮಾಡುತ್ತಿದ್ದಾರೆ. ಸಾಹಿತ್ಯದ ಬೇರೆ ಪ್ರಕಾರಗಳಲ್ಲಿ ಹೆಸರು ಮಾಡಿರುವ ಅಮೃತ ಸೋಮೇಶ್ವರ, ಕೆದಂಬಾಡಿ ಜತ್ತಪ್ಪ ರೈ, ವಾಮನ ನಂದಾವರರೂ ಬಿಡಿ ಬಿಡಿ ತುಳುಕತೆಗಳನ್ನು ಬರೆದಿದ್ದಾರೆ.

ಕೆಲವರು ತುಳು ಸಂಸ್ಕೃತಿಯದೇ ವೈಶಿಷ್ಟ್ಯಗಳಾದ ಕೋಲ, ಕಂಬಳ, ಭುತಾರಾಧನೆ, ನಡಾವಳಿಗಳ ವಸ್ತುವುಳ್ಳ ಕಥೆಗಳನ್ನೂ ಬರದರು. ಆದರೆ ವಿಶಿಷ್ಟವಾದ ಪ್ರಾದೇಶಿಕ ಸಂಸ್ಕೃತಿ, ಜನಪದ ಜೀವನ, ಭಾಷಾ ಬಲ್ಮೆಯನ್ನು ಅಗೆದು ತೋರಣ ಕಟ್ಟಿದವರು ವಿರಳ.

ಸಾಕಷ್ಟು ಬಿಡಿ ಕಥೆಗಳು ತುಳುವಲ್ಲಿ ಪ್ರಕಟವಾದರೂ ಪುಸ್ತಕರೂಪದಲ್ಲಿ ಬಂದುದು ಕಡಿಮೆ. ರಮೇಶ್ ಕಾರ್ನಾಡರ ‘ಪೊಸ ಜೀವನ’ (೧೯೭೨) ದ ದೆಹಲಿಯ ಬಾ. ಸಾಮಗರು. ೧೯೮೭ರಲ್ಲಿ ಮುದ್ದು ಮೂಡುಬೆಳ್ಳ ಅವರ ‘ಉದಿಪು’ ಸಂಕಲನ ಪ್ರಕಟವಾಗಿ ೧೯೮೮ರಲ್ಲಿ ಮರುಮುದ್ರಣಗೊಂಡಿತು. ಬಾ. ಸಾಮಾಗರು ಎರಡನೆಯ ಸಂಕಲನ ‘ಬೋಂಟೆ’ ೧೯೮೮ರಲ್ಲಿ ಪ್ರಕಟವಾಗಿದೆ. ೧೯೮೯ರಲ್ಲಿ ಮನೋಹರ ಪ್ರಸಾದ್‌ ಅವರ ಕಥಾಸಂಕಲನ ‘ಬದ್‌ಕ್‌ದ ಬಂಡಿ’ ಪ್ರಕಟವಾಗಿದೆ.

ಸಾಮಗರು ‘ಕಿನ್ಯಕತೆಕ್ಲು’ ಸಂಕಲನದಲ್ಲಿ ೧೭ ಕತೆಗಳಿವೆ. ತುಳುನಾಡಿನ ಜನಜೀವನ, ಬದುಕಿನ ಸಂದೂಗೊಂದುಗಳ, ಕೊಳೆ, ಕಸ ಮರೆಮೋಸ ದಗಲ್ಬಾಜಿತನ, ಶೋಷಣೆ, ಖಾರ, ಉಪ್ಪು ಬೆರಸಿದ ಆಕರ್ಷಕ ಕಥೆಗಳಿವೆ. ಉದಯವಾಣಿ ಪುಸ್ತಕ ಸಮೀಕ್ಷೆಯಲ್ಲಿ ಮುರಳೀಧರ ಉಪಾಧ್ಯರು ಬರೆದಂತೆ ಇವು ‘ಮಿನಿಕಥೆಗಳು’ ಎನ್ನಬಹುದಾದ ಕಿರುಗತೆಗಳು. ಸಾಮಗರು ಆಯ್ದುಕೊಂಡ ವಸ್ತು ವೈವಿಧ್ಯ. ಅವರ ಭಾಷಾ ಪ್ರಯೋಗ, ಕತೆಗಳ ಗಾತ್ರ – ಇಷ್ಟಲ್ಲದೆ ಕತೆಗಳ ಶಿರ್ಷಿಕೆಗಳಿಂದಲೂ (ಉದಾ: ಸಾಲ ಮೇಳೊಗು ನಲ್ಕೆದ ತೋಮೆ, ಕೊತ್ವಾಲ್‌ ಕಾಳು ತೂವರೆಗ್‌ ಹಾಳ್‌, ಕುಡ್ಲ ಪೇಂಟರಡ್‌ ಬ್ಯಾರದ ಕಮಲ ಹೀಗೆ ಪುಸ್ತಕವನ್ನು ಓದತೊಡಗಿದರೆ ಎಲ್ಲವನ್ನು ಓದಿ ಮುಗಿಸಿಯೇ ಕೆಳಗಿಡಬೇಕು ಎನ್ನುವಷ್ಟು ಓದುಗರನ್ನು ಆಕರ್ಷಿಸಬಲ್ಲ ಸೆಳೆತ ಇದೆ. ದ.ಕ. ಜಿಲ್ಲೆಯ ಜನಜೀವನ, ತುಳುವರು ಹೊರನಾಡುಗಳಿಗೆ ಹೋಗಿ ಜೀವನೋಪಾಯಕ್ಕಾಗಿ ನಡೆಸುವ ಹೋರಾಟ, ವ್ಯವಹಾರ ದಂಧೆಗಳು – ಈ ಎಲ್ಲ ಚಿತ್ರಣದ ರೋಚಕ ಮಸಾಲೆಯುಕ್ತ ಪದಪ್ರಯೋಗಗಳಿದ್ದರೂ ಕೂಡಾ ಆಳದಲ್ಲಿ ಗೋಚರಿಸುವುದು ಮಾನವೀಯ ಮಿಡಿತ. ಅವರ ‘ಬೋಂಟೆ’ ಸಂಕಲನದ ೧೭ ಕಥೆಗಳೂ ಇದೇ ರೀತಿಯವು.

‘ಉದಿಪು’ (೧೯೮೭) ಮುದ್ದು ಮೂಡುಬೆಳ್ಳೆಯವರ ಕಥಾಸಂಕಲನ ಈ ಲೇಖಕ ಎಪ್ಪತ್ತರ ಸಧಕದ ಆರಂಭದಿಂದ ತೂಳುವಲ್ಲಿ ಬರೆಯುತ್ತಿದ್ದರೂ ಆ ಬಳಿಕ ಆಕಾಶವಾಣಿಗೆ ಹೆಚ್ಚು ತುಳು ಕಥೆಗಳನ್ನು ಬರೆದರು. ‘ಉದಿಪು’ ಸಂಕಲನದಲ್ಲಿ ಐದು ಕಥೆಗಳಿವೆ. ಉದಯವಾಣಿ ಪುಸ್ತಕ ಸಮೀಕ್ಷೆಯಲ್ಲಿ ಮುರಳೀಧರ ಉಪಾಧ್ಯಾಯ ಈ ಕಥೆಗಳು ಕಥನತಂತ್ರದ ಬಗ್ಗೆ ಬರೆದಿದ್ದರೆ ಪಿ. ಗಣಪತಿ ಭಟ್‌ ಅವರು ಒಂದು ಸಮೀಕ್ಷೆಯಲ್ಲಿ ‘ಉದಿಪು’ ಶೀರೋನಾಮೆಗೂ ಸಂಕಲನದ ಕತೆಗಳ ಮೂಲ ಆಶಯಕ್ಕೂ ಅವಿನಾಭಾವ ಸಂಬಂಧವಿದೆ. ಎಲ್ಲಕತೆಗಳಲ್ಲೂ ತುಳುನಾಡಿನ ಪ್ರಾದೇಶಿಕ ಮತ್ತು ಜನಾಂಗೀಯ ಅಂಶಗಳು. ವಿಶಿಷ್ಟ ಪದಪ್ರಯೋಗಗಳಿವೆ…’ ಎಂದು ಬರೆದಿದ್ದಾರೆ. ಮುಂಗಾರು ಪತ್ರಿಕೆಗೆ ಕೆ. ಕೇಶವ ಶರ್ಮ ಬರೆಯುತ್ತಾ ….‘ ಇಷ್ಟಿದ್ದರೂ ಕತೆಗಳಲ್ಲಿನ ದೋಷವೆಂದರೆ ಆಯ್ಕೆ ಮಾಡಿಕೊಂಡ ವಸ್ತು ಕೃಶವಾಗಿರುವುದು….’ ಮುಂತಾಗಿ ಅಭಿಪ್ರಾಯಪಟ್ಟಿದ್ದಾರೆ.

ಮನೋಹರ್‌ ಪ್ರಸಾದ್‌ ಅವರ ‘ಬದ್‌ಕ್‌ದ ಬಂಡಿ’ ೧೯೮೯ರಲ್ಲಿ ಪ್ರಕಟವಾಗಿದೆ. ಈ ಕಥಾಸಂಕಲನದಲ್ಲಿ ‘ಪಿರಬರಂದ್‌ ಬದ್‌ಕ್‌ ದ ಬಂಡಿ, ಮನ ತೆರೆಯಂದಿ ಬದ್‌ಕ್‌, ಬಲಿ, ಒಂಜಿ ವಾರದ ಕತೆ, ನರಮಾನಿ, ಬಂಡೆಕಲ್ಲ್‌ ಹೀಗೆ ಆರು ಕಥೆಗಳಿವೆ. ಇಲ್ಲಿನ ಹೆಚ್ಚಿನ ಕಥೆಗಳಲ್ಲಿನ ಭಾವನೆಗಳ ಪ್ರವಾಹದ ಸವಿಯಿದೆ. ಆಧುನಿಕತೆಯ ಡಂಬಾಚಾರದ ನಡುವೆ ನರಳುವ ಮುಗ್ಧ ಪ್ರಣಯಿಗಳ ನೋವಿನ – ಸಂತಸದ – ಬಿಸುಪಿನ ಬನಿಯಿದೆ; ಯುಜನರ ಹೃದಯ ಸೂರೆಗೊಳ್ಳಬಲ್ಲ ನಿರೂಪಣೆಯಿದೆ. ಆಕರ್ಷಕ ಕಂಠಶ್ರೀಯೊಂದಿಗೆ ಕತೆಗಳನ್ನು ಪ್ರಸ್ತುಪಡಿಸುವ ರೇಡಿಯೋದ ಜನಪ್ರಿಯ ಕತೆಗಾರರಲ್ಲೊಬ್ಬರಾಗಿಯೂ ಇವರು ಗಮನ ಸೆಳೆದರು.

‘ಬಾರಣೆ’ (೧೯೯೪) ಪ್ರಭಾಕರ ಶಿಶಿಲರ ತುಳು ಕಥಾಸಂಕಲನ ಇದರಲ್ಲಿರುವ ಬೊಣ್ಯ ಬೂರೆಂದುಂಡು, ಗಗ್ಗರೊ, ತಿಮ್ಮನ ಗುಡ್ಡೆ, ಬೋಂಟೆ ಹಾಗೂ ಬಾರಣೆ ಈ ಐದು ಕತೆಗಳು ಗ್ರಾಮ ಜೀವನದ ಸಾಂಸ್ಕೃತಿಕತೆಯ ವಿವಿಧ ಮಗ್ಗುಲುಗಳನ್ನು ಚಿತ್ರಿಸಿವೆ. ಪರಂಪರೆಯ ವಿಧಿನಿಷೇಧ. ನೇಮ ನಡಾವಳಿ ಹಾಗೂ ಆಧುನಿಕ ಮನೋಧರ್ಮದ ನಡುವಣ ಸಂಘರ್ಷವನ್ನು ವೈಚಾರಿಕ ದೃಷ್ಟಿಯಿಂದ ಎತ್ತಿ ತೋರಿಸುತ್ತವೆ. ಸುಳ್ಯ ಪ್ರದೇಶದ ಸುಂದರ ತುಳು ಆಡುನುಡಿಯನ್ನಿಲ್ಲಿ ಶಿಶಿಲರು ಬಳಸಿದ್ದಾರೆ. ತುಳುಮೂಲದ ಅಶಿಕ್ಷಿತ ಬಡಜನರ ನಂಬಿಕೆಗಳು, ಪ್ರಣಯ-ಭೀತಿ, ನಡೆ, ನರ್ತನ, ಆರಾಧನೆಗಳನ್ನೆಲ್ಲ -ಮೇಲ್ವರ್ಗ ಹೇಗೆ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತದೆ ಎನ್ನುವ ಐದು ವಿಭಿನ್ನ ಚಿತ್ರಗಳನ್ನಿಲ್ಲಿ ಶಿಶಿಲರು ಕಟ್ಟಿಕೊಟ್ಟಿದ್ದಾರೆ.

‘ಬಾರಣೆ’ ಕತೆಯಲ್ಲಿ ಶೋಷಣೆಯ ಚಿತ್ರವೊಂದು ಮೈತುಂಬಿ ನಿಂತಿದೆ. ‘ದೊಂಪದ ಬಲಿ’ಯ ದಿನ ನ್ಯಾಯದೈವವಾಗಿ ಊರವ್ಯಾಜ್ಯಗಳನ್ನು ಪರಿಹರಿಸುವ ಭೂತಕಟ್ಟುವ ಪಕ್ರು, ಅವನ ಸುಂದರಿ ಮಗಳು ಬಿಜಿಲು, ಅವಳನ್ನು ವರಿಸಬೇಕೆಂದು ಆಸೆಪಟ್ಟಿರುವ ಪಾಡ್ದನದ ಉಗ್ಗಪ್ಪು – ದಬ್ಬಾಳಿಕೆಗೆ ಬಲಿಯಾದ ಕೆಳವರ್ಗದ ಪ್ರತಿನಿಧಿಗಳಾಗುತ್ತಾರೆ. ಇವರೆಲ್ಲ. ಕೊನೆಯಲ್ಲಿ ಶೋಷಣೆಯ ಸೆಟೆದು ನಿಲ್ಲುತ್ತಾರೆ ಎನ್ನುವಲ್ಲಿ ಕತೆಗಾರರ ಹೆಚ್ಚುಗಾರಿಕೆ ಇದೆ.

‘ಒಸಯೊ’ (೧೯೯೪) ಮುದ್ದು ಮೂಡುಬೆಳ್ಳೆಯವರ ಎರಡನೆಯ ತುಳು ಕಥಾಸಂಕಲನ. ‘ಕಡೆಗಣಿಸಬಾರದ ಕೃತಿ ಒಸಯೊ’ ಎಂಬ ಶೀರ್ಷಿಕೆಯೊಂದಿಗೆ ‘ಹೊಸ ದಿಗಂತ’ ಪತ್ರಿಕೆಗೆ ಈ ಕೃತಿಯನ್ನು ಕುರಿತು ಬರೆದ ರಾಧಾಕೃಷ್ಣ ಬೆಳ್ಳೂರರು ವಸ್ತುವನ್ನು ಹೊಸದಾಗಿ ಕಟ್ಟುವ ಆ ಮೂಲಕ ಹೊಸ ಸಾದ್ಯತೆಗಳಿಗಾಗಿ ಅನ್ವೇಷಿಸುವ ಇಲ್ಲಿನ ವಿಧಾನ ಕುತೂಹಲಕಾರಿಯಾಗಿದೆ. ಕಲೆಗಾರಿಕೆ ಎನ್ನುವದು ಜೀವಂತ ಬದುಕಿನಿಂದ ಒಡಮೂಡಬೇಕು. ಬದುಕಿನ ಸಂಕೀರ್ಣ ಸಂದರ್ಭಗಳು ತಮ್ಮ ಪರಿಣಾಮದ ತೀವ್ರತೆಯಿಂದ ಕಥೆಯಾಗುವ ಕ್ರಮ ‘ಒಸಯೊ’ ಸಂಕಲನದಲ್ಲಿ ಸ್ಪಷ್ಟವಾಗಿದೆ….’ ಕನ್ನಡದಲ್ಲಿ ತೇಜಸ್ವಿ ಈ ಮಾರ್ಗವನ್ನು ತೋರಿಸಿಕೊಟ್ಟೆ, ತುಳುವಿನಲ್ಲಿ ‘ಒಸಯೊ’ ಕತೇಯ ಈ ಚಿಂತನೆಯ ಪುನರುತ್ರಿ ಮುದ್ದು ಮೂಡಬೆಳ್ಳೆಯವರ ಕಥೆಗಳಿಗೆ ಜೀವ ತುಂಬುತ್ತದೆ…’ ಆರಂಭದ ಸಂಭಾಷಣೆಯೇ ತುಳು ಆರಾಧನೆಯ ಪರಿಸರವನ್ನು ಜೀವಂತ ನಿರ್ಮಿಸುತ್ತದೆ….’ ಹೀಗೆ ಬರೆದಿದ್ದಾರೆ. ಈ ಸಂಕಲನದಲ್ಲಿ ಒಸಯೊ, ಬೀಮಾಬಿರು, ಬೋವುಪಾಡಿಡ್‌ ಇಕ್ರಮೆ, ಕಟ್ಟಗಂಡಿ, ಸಾದಿಕತೆ ಇಂತಹ ಹತ್ತು ಕತೆಗಳಿವೆ. ೧೯೯೨-೯೪ ಪ್ರಕಟಣೆಗಳಲ್ಲಿ ‘ಒಸಯೊ’ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.

‘ಕರಿಯವಜ್ಜೆರೆನ ಕತೆಕ್ಕುಲು’ (೧೯೯೬) ಆನಂದ ಕೃಷ್ಣ (ದರ್ಬೆ ಕೃಷ್ಣಾನಂದ ಚೌಟ)ರ ವಿಶಿಷ್ಟ ಕಥಾಸಂಕಲನ. ತುಳು ಸಾಹಿತ್ಯಕ್ಕೆ ನೂತನ ಆಯಾಮ ನೀಡಿದ ಕೃತಿಗಳಲ್ಲಿ ಒಂದಾಗಿರುವ ಈ ಸಂಕಲನಕ್ಕೆ ೧೯೯೬ರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಅರ್ಹವಾಗಿಯೇ ಗಳಿಸಿದೆ.

ವಟವೃಕ್ಷದಂತೆ ವಿಶಾಲವಾದ ಅನುಭವೀ ಹಿರಿಯ ಕರಿಯವಜ್ಜ – ತನ್ನ ನೆನಪಿನ ಗಣಿಯಿಂದ ಒಂದೊಂದು ಕತೆಯನ್ನು ಅಗೆದು. ಎದುರು ಕಿವಿಯರಳಿಸಿ ಕೂತ ಮಕ್ಕಳಿಗೆ ಹೇಳುತ್ತ ಹೋಗುತ್ತಾನೆ. – ಬಾಲ ಕರಿಯ ‘ಮುಳ್ಳಿದಿಕ್ಕಲ್‌’ನ ಮೊಲೆಹಾಲು ಕುಡಿದು ದೊಡ್ಡವನಾದ ಕತೆ. ತರುಣ ಕರಿಯಣ್ಣ ‘ಮುಳ್ಳಿ’, ‘ಬೈತರಿತ ಪುಂಡಿ’ ತಿನ್ನುತ್ತಾ ತೋಳುಗಳಲ್ಲ ಕಸುವು ತುಂಬಿಕೊಂಡ ವರ್ಣನೆ, ಗುತ್ತಿನ ಮನೆಯಲ್ಲಿ ‘ಕುಲೆ’ ಬಂದು ಕರಿಯಜ್ಜನಿಗೆ ಸೂತಕವೆಂದು ಹೇಳುವಾಗ ಕೂಡಿದ ಜನರಿಗೆ ಅಚ್ಚರಿ. ಅದೇ ಘಳಿಗೆಗೆ ಅತ್ತಲಿಂದ ‘ಮುಳ್ಳಿ’ ದಿಕ್ಕಲ್‌ ಸತ್ತಳೆಂಬ ಸುದ್ದಿ ಬರುವುದೂ ಮುಖಾಮುಖಿಯಾದ ಕತೆ, ಕರಿಯಜ್ಜ ತನ್ನ ಉಕ್ಕು ತಾರುಣ್ಯದ ದಿನಗಳಲ್ಲಿ ಚೇಳೂರಿನವರು ಕಾಲು ಕೆದರಿ ಜಗಳಕ್ಕೆ ಬಂದಾಗಲೂ – ಸಂಕಮಕ್ಕನ ಕರಿಮಣಿ ಉಳಿಸಲು ಗಪ್‌ಚಿಪ್ಪೆನ್ನದೆ ತೋರಿದ ಸಂಯಮ, ತ್ಯಾಗ; ಗಾಂಧಿತತ್ವ ಚಿಂತನೆಯ ಬೂಟಾಟಿಕೆ ಪ್ರದರ್ಶನವಿಲ್ಲದೆಯೇ ಅದನ್ನು ತನ್ನ ರತ್ಕದಲ್ಲಿ ಹುದುಗಿಕೊಂಡು ಆ ರೀತಿ ನಡೆದ ವಿವರ – ಇದೆಲ್ಲವೂ ಮಕ್ಕಳಿಗೆ ಕತೆಗಳಾಗಿ ಬಿಚ್ಚಿಕೊಂಡು, ಕರಿಯಜ್ಜನೆಂಬ ಗುತ್ತಿಗೆ ಮನೆಯ ಹಿರಿಯಜ್ಜನ ಹಿರಿಯನಾದ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ. ಕಾಸರಗೋಡಿನ ಪ್ರಾದೇಶಿಕ ತುಳು ಭಾಷೆಯ ಸೊಗಡಿನೊಂದಿಗೆ, ಕೆತ್ತಿ ಕೆತ್ತಿ ಇಟ್ಟಂಥ ಪದಪುಂಜಗಳ ವಾಕ್ಯಗಳೊಂದಿಗೆ ಈ ರಚನೆಗಳು ಗಾಢ ಪರಿಣಾಮ ನೀಡುತ್ತವೆ.

‘ಮನಸ್ಸ್‌ ಬದಮಾನಗ’ (೧೯೯೭) ಜಯಂತಿ ಎಸ್‌. ಬಂಗೇರ, ಮೂಡಬಿದಿರೆ ಅವರ ಕಥಾಸಂಕಲನ. ಇದರಲ್ಲಿ ಹನ್ನೊಂದು ಕತೆಗಳಿವೆ. ಬೊಲ್ಪು ಪೊತ್ತಾಂಡ್‌, ಮನಸ್ಸ್‌ ಬದಲಾನಗ, ಬಿರ್ಸೆದಿ, ನಾಗಶ್ರೀ, ಸೋಮಾರಿ ಕಟ್ಟೆ, ತಾವರೆ, ಕಾಲದ ಪ್ರಭಾವ, ಕೊಗ್ಗು, ಪೊಸ ಮದಿಮಾಲ್‌, ಪುಕ್ಕೆಲನ ಸಾಹಸ, ಬೊಂಬಾಯಿ ಅತ್ತ್‌ ದುಬಾಯಿ – ಈ ಎಲ್ಲ ಕತೆಗಳು ಚುಟುಕಾಗಿ ವಿಡಂಬನಾತ್ಮಕವೂ ಆಗಿವೆ.

ಕೆದಂಬಾಡಿ ಜತ್ತಪ್ಪ ರೈ, ಪಾ. ಸಂಜೀವ ಬೋಳಾರ, ನಾ. ಉಜಿರೆ. ಡಾ. ಚಂದ್ರಶೇಖರ ದಾಮ್ಲೆ ಇವರು ಪುಸ್ತಕರೂಪದಲ್ಲಿ ಕತೆಗಳನ್ನೂ ತರದಿದ್ದರೂ ಸ್ವಾರಸ್ಯಭರಿತ ಕತೆಗಳನ್ನು ಬಾನುಲಿಯಲ್ಲಿ ವಾಚಿಸಿ, ಶ್ರೋತೇಗಳ ಮನಸೂರೆಗೊಂಡವರು. ಹೀಗೆಯೇ ಎಂ. ಬಾಬು ಶೆಟ್ಟಿ, ನಾರಾವಿ, ಬಾಬೋಜಿ ರಾವ್‌ ಕಾರ್ಕಳ, ಚಂದ್ರಹಾಸ ಕಣಂತೂರು, ರಘು ಇಡ್ಕಿದು, ಚಂದ್ರಶೇಖರ ಪಾತೂರು, ಮನು ಇಡ್ಯಾ, ಆತ್ರಾಡಿ ಅಮೃತಾ ಶೆಟ್ಟಿ, ಎಂ.ಆರ್‌. ಬಂಗೇರ, ಎಸ್‌.ಪಿ. ಮಂಚಿ ಮತ್ತಿತರರೂ ಆಗಾಗ ರೇಡಿಯೋದಲ್ಲಿ ತುಳುಕತೆಗಳನ್ನು ಓದುತ್ತ ಬಂದವರು.

ಐ. ಗೋವಿಂದ ಭಂಡಾರಿ, ಕೆ. ಹೊನ್ನಪ್ಪ ಬಂಗೇರ, ವಾಸಂತಿ ಅಂಬಲಪಾಡಿ, ಉಷಾ ಸಪಲ್ಯ, ಮುಹಮ್ಮದ್‌ ಕುಳಾಯಿ, ಹೀಹೆ ಅನೇಕರ ಕತೆಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡದ ಹೆಸರಾಂತ ಕತೆಗಾರ ಫಕೀರ್‌ ಮಹಮ್ಮದ್‌ ಕಟ್ಟಾಡಿಯವರ ‘ಗಡಿಹಾರ’ ಎನ್ನುವ ತುಳುಕತೆಯೂ ಬಾನುಲಿಯಲ್ಲಿ ಆಕರ್ಷಕವಾಗಿ ಮೂಡಿಬಂದಿತು.

ಮಹತ್ವದ ಅನೇಕ ಕೃತಿಗಳು ತುಳುವಿನ ಇತರ ಪ್ರಕಾರಗಳಲ್ಲಿ ಸಾಕಷ್ಟು ಪ್ರಕಟವಾಗಿದ್ದರೂ ಸಣ್ಣ ಕತೆಗಳ ಪ್ರಕಾರದಲ್ಲಿ ಪುಸ್ತಕ ರೂಪದಲ್ಲಿ ಬಂದುದು ಕಡಿಮೆಯೇ. ಬಾನುಲಿಯಲ್ಲಿ ಕಳೆದ ಕಾಲು ಶತಮಾನದಲ್ಲಿ ಸುಮಾರು ಸಾವಿರದೈನೂರಕ್ಕೂ ಮಿಕ್ಕ ಕತೆಗಳು ಪ್ರಸಾರವಾಗಿರಬಹುದು. ಆದರೆ ಹೆಚ್ಚಿನವೆಲ್ಲ ಒಮ್ಮೆ ಗಾಳಿಯಲ್ಲಿ ಕೇಳಿ, ಮುಗಿದು ಹೋಗುತ್ತಿವೆ. ಇದನ್ನು ಗಮನಿಸಿ ೧೯೯೬ರಲ್ಲಿ ಮಂಗಳೂರು ಆಕಾಶವಾಣಿ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ‘ಆಕಾಶವಾಣಿ ತುಳು ಕೆತಕ್ಕುಲು’ ಎನ್ನುವ ಕಥಾಸಂಕಲನದ ಪ್ರಕಟಿಸಿದರು. ಇದರ ಸಂಪಾದಕರು ಶ್ರೀವಸಂತಕುಮಾರ ಪೆರ್ಲ. ೧೯೮೫ರಿಂದ ೧೯೯೫ರ ವರೆಗಿನ ಹತ್ತು ವರ್ಷಗಳಲ್ಲಿ ಪ್ರಸಾರವಾದ ಕತೆಗಳಲ್ಲಿ ಇಪ್ಪತ್ತು ಕತೆಗಳನ್ನು ಆರಿಸಿ ಈ ಸಂಕಲನ ಸಿದ್ಧಪಡಿಸಲಾಗಿದೆ. ಸಂಪಾದಕ ಮಾತಿನಂತೆ, ‘ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಐತಿಹಾಸಿಕ – ಹೀಗೆ ತುಳುನಾಡಿನ ಸಮಗ್ರ ಚಿತ್ರವನ್ನು ಒಳಗೊಳ್ಳಬೇಕೆಂದೂ, ವಿವಿಧ ಪ್ರದೇಶದ, ವಿಭಿನ್ನ ವಯೋಮಾನದ ವಿವಿಧ ಸ್ತರಗಳಿಂದ ಬಂದ ಸ್ತ್ರೀ ಪುರುಷ ಕತೆಗಾರರ ಕತೆಗಳನ್ನು ಸಂಕಲಿಸಲಾಗಿದೆ. ಕತೆಯ ವಸ್ತು, ಭಾಷೆ, ಶೈಲಿ, ಬಂಧ, ತಾಂತ್ರಿಕತೆ ನಿರ್ವಹಣೆ – ಇತ್ಯಾದಿಗಳ ಮೇಲೆ ಗಮನವಿರಿಸಿ ಇಲ್ಲಿನ ಆಯ್ಕೆ ಮಾಡಿದ ಸಂಪಾದಕರ ಕೆಲಸ ಶ್ಲಾಘನೀಯವಾಗಿದೆ. ಕೆ. ಅನಂತರಾಮ ಬಂಗಾಡಿಯವರ ಜಾನಪದ ಹಂದರದ ‘ಗಂಗೆನ ಬಲಿದಾನ’ ಕತೆಯಿಂದ ಹಿಡಿದು, ಕೆ.ಜೆ. ಶೆಟ್ಟಿ ಕಡಂದಲೆ (‘ಸಿಲ್ಕ್‌ಸೀರೆ’) ಹೊಸ ತಲೆಮಾರಿನ ಆತ್ರಾಡಿ ಅಮೃತಾ, ‘ನಾ’ ಉಜಿರೆ (ಮಿಲ್ಟ್ರಿ ತ್ಯಾಂಪಣ್ಣೆ) ಎಸ್‌.ಪಿ.ಮಂಚಿ (ಸಾದಿ) – ವರೆಗಿನ ಇಪ್ಪತ್ತು ಕಥೆಗಾರರ ಕತೆಗಳು ಸೇರಿರುವ ಈ ಸಂಕಲನ ಒಂದು ಗಮನಾರ್ಹ ಕೃತಿ. ಇಂತಹ ಹಲವು ಸಂಕಲನಗಳು ವಿವಿಧ ಕಾಲಘಟ್ಟದಲ್ಲಿ ಬರಬೇಕಾದಷ್ಟು ಕತೆಗಳು ರಚನೆಯಾಗಿವೆ. ತುಳುವಿಗೆ ಓದುಗರು ಹೆಚ್ಚಿದಲ್ಲಿ ಮಾತ್ರ ಇಂತಹ ಪ್ರಯತ್ನಗಳಿಗೆ ಕುಮ್ಮಕ್ಕು ದೊರೆತೀತು.

ಮುಂದೆ ನಿಧಾನ ಗತಿಯಲ್ಲೇ ಆದರೂ ಕೆಲವು ಪ್ರಬುದ್ಧ ಸಂಕಲನಗಳು ಪ್ರಕಟವಾದವು. ‘ದೋಲು’ (೧೯೯೮) ಗಣೇಶ್‌ ಅಮೀನ್‌ ಸಂಕಮಾರರ ಕಥಾಸಂಕಲನ, ‘ಡುಲುಂ ಡುಲುಂ. ಕೈಕನಟೆ, ಡುಲುಂ ಡುಲಂ ಕೈಕನಟೆ’ – ಪುಲ್ಯಕಾಂಡೆನೇ ಪೀಂಚಿಲಿನ ದೋಲುದ ಸೊರೆ ಕೇನರೆ ಸುರವಾತ್‌ಡ್‌ (ಡುಲುಂ… ಸದ್ದಿನೊಂದಿಗೆ ಬೆಳಾಗತವೆ ಪೀಂಚಿಲನ ಡೋಲಿನ ದನಿ ಕೇಳತೊಡಗಿದೆ) – ಹೀಗೆ ಅಚ್ಚ ದೇಸೀಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಧಾಟಿಯಲ್ಲೇ ಆರಂಭವಾಗುವ ಕತೆ ‘ದೋಲು’ – ಮಾರ್ಮಿಕವಾದ ಕತೆ, ದಟ್ಟ ಪರಿಸರ ಚಿತ್ರಣ, ಮೇಲ್ನೋಟಕ್ಕೆ ಸಾಮರಸ್ಯದಂತೆ ಕಂಡೂ, ತುಳುವ ಪ್ರದೇಶವೊಂದರ ಒಳ ಆವರಣದಲ್ಲಿಯ ಜಾತೀಯತೆ, ಡೋಲಿನ ಸದ್ದಡಗಿಸುವ ಹುನ್ನಾರ, ಬೂಟಾಟಿಕೆ, ವಂಚನೆ, ಶೋಷಣೆಗಳನ್ನು ಸುಪುಷ್ಪ ಭಾಷೆಯಲ್ಲಿ ಸುಂದರವಾಗಿ ಕಟ್ಟಿಕೊಡುತ್ತದೆ. ಹೆಚ್ಚು ಕಡಿಮೆ ಇಂಥವೇ ವಸ್ತುವುಳ್ಳ ‘ಒಂಜಿ ಮರ್ಯಾದಿದ ಕತೆ’ಯಲ್ಲಿ ಭೂಮಸೂದೆ ಜ್ಯಾರಿಯ ಹಿನ್ನೆಲೆಯಲ್ಲಿ ತುಳುವ ಸಮಾಜದ ಶ್ರೇಣಿಕರಣ ಪಲ್ಲಟದ ಧ್ವನಿ ಇದೆ; ‘ಪುನ ಪಂಡಿತ ಕತೆ’,‘ನನ ದಾಯೆ’,‘ಒಂಜಿ ಸಾದಿದ ಪೊಣ್ಣು’,‘ಮೋಕೆ ಮಲ್ತಿನ ಮೋಸ’ – ಹೀಗೆ ಈ ಸಂಕಲನದಲ್ಲಿರುವ ಒಟ್ಟು ಆರೂ ಕತೆಗಳು ಕತೆಗಾರರ ಹುರುಪನ್ನೂ, ಬೆಳೆಯುವು ಲಕ್ಷಣಗಳನ್ನು ಹೊಂದಿವೆ. ಸುಂದರ ನುಡಿಗಟ್ಟುಗಳೊಂದಿಗೆ ಬಳಸಿರುವ ಭಾಷೆ ಆಕರ್ಷಕವಾಗಿದೆ.

ಈ ನಡುವೆ ಕೆ. ಅಶೋಕ್ ಎಂ. ಭಂಡಾರಿಯವರ ‘ಪಿನಿ ಹಾಸ್ಯದ ಪನಿ ಕತೆಕುಲು’ ಎನ್ನುವ ಬಹುಪುಟಗಳ ಕರಪತ್ರದಂತಹ ಪುಟ್ಟ ಕೃತಿಯೊಂದು ೧೯೯೫ರಲ್ಲಿ ಪ್ರಕಟವಾಗಿದೆ. ಇದರಲ್ಲಿ ೧. ಮಾಮಿ-ಮರ್ಮಲ್‌ ೨. ಚೀಂಕ್ರನ ಚೆಲ್ಲರೆ ಸುದ್ದಿ ೩. ಗಡಿಬಿಡಿ ಗುಂಡೆ ೪. ಬೋರೆ ಸೆಂಚುರಿ ಹಾಕಿನಿ ೫. ಪಂಡಿತ ಸೋಲು ೬. ಗುರುಶಿಷ್ಯರು (ಚುಟುಕು) – ಇಷ್ಟು ಪುಟ್ಟ ಸ್ವಾರಸ್ಯಕರ ಹಾಸ್ಯ ಪ್ರಸಂಗಗಳಿವೆ.

‘ತನಿಕೆ (೨೦೦೧) ಶಂಕರ ಖಂಡೇರಿಯವರ ಕೃತಿ. ಇದರಲ್ಲಿ ಬಲಿ ತನಿಖೆ, ಅಪ್ಯ, ಪೂವಕ್ಕೆ ಕೂಲಿ – ಹೀಗೆ ಐದು ಕತೆಗಳಿವೆ. ತಂದೆ ಮಾಡಿದ ‘ಪಾಪ್ಪ’ಕ್ಕೆ ಮಗಳು ಬಲಿಯಾಗುವ ದುರಂತ ಕತೆ ‘ಬಲಿ’ ಯಾದಾದರೆ ‘ಅಪ್ಪೆ’ ಮಕ್ಕಳು ಕೇಳಿದ್ದನ್ನೆಲ್ಲ ಕೊಡುವ ತಾಯಿಯಾಗದೆ, ಮಕ್ಕಳಿಗೆ ಕೊಡಬೇಕಾದ್ದೇನು ಎನ್ನುವುದನ್ನು ತಿಳಿದು ನಡೆದ ಸಿರಿವಂತ ತಾಯಿ ಸುಲೋಚಬಾ ದೇವಿಯ ಚಿತ್ರಣ ‘ತನಿಕೆ’ ವರದಕ್ಷಿಣೆಯ ದುರಾಸೆಯಿಂದ ಮೊದಲ ಪತ್ನಿಯನ್ನು ಕೊಲೆ ಮಾಡಿ, ಮತ್ತೊಬ್ಬಳನ್ನು ಮದುವೆ ಮಾಡಿಕೊಂಡ ಧೂರ್ತನ ಕತೆ, ‘ಪೂವಕ್ಕೆ’ ತಾರುಣ್ಯದಲ್ಲೆ ವಿಧವೆಯಾದಾಕೆಯನ್ನು ಮೋಹದ ಬಲೆಗೆ ಸೆಳೆಯಬಹಸಿದ ವಿವಾಹಿತನೊಬ್ಬನ್ನು ತಿದ್ದಿ ಸರಿದಾರಿಯಲ್ಲಿ ನಡೆಸಿದ ಪರಿಶುದ್ಧ ಹೃದಯಿಯೋರ್ವಳ ಮನೋಜ್ಞ ಚಿತ್ರಣ. ‘ಕೂಲಿ’ – ಸಮಾಜದ ನಯವಂಷಕ ಕತೆ. ಇತರರೆದುರು ಆದಶ್ದ ಭಾಷಣ ಬಿಗಿದು, ತನ್ನ ಕೈಕೆಳಗಿನ ಕೂಲಿಯವನ ಹೊಟ್ಟೆಗೆ ಹೊಡೆಯುವವರ ರೋಚಕ ವಿಡಂಬನೆ, ಕಾಸರಗೋಡು ಪ್ರದೇಶದ ಆಕರ್ಷಕ ತುಳು ಭಾಷೆಯಲ್ಲಿ ಅಷ್ಟು ಕಲಾತ್ಮಕವಾಗಿ ಇಲ್ಲಿನ ಕತೆಗಳಿವೆ.

ಬೆಂಗಳೂರಿನ ನಿವೃತ್ತ ಬ್ಯಾಂಕ್‌ ಅಧಿಕಾರಿ ಬಿ.ಎ ಪ್ರಭಾಕರ ರೈಯವರು ‘ಆತ್ಮಜ್ಯೋತಿ’ ಹಾಗೂ ‘ಪರಿವರ್ತನೆ’ ಎಂಬೆರಡು ಕಥಾಸಂಕಲನ ಹೊರತಂದಿದ್ದಾರೆ. ‘ಆತ್ಮಜ್ಯೋತಿ’ ೨೦೦೧ರಲ್ಲಿ ಪ್ರಕಟವಾಗಿದೆ. ಹದಿನೈದು ಕತೆಗಳಿರುವ ಈ ಸಂಕಲನದ ಮೊದಲ ಕತೆ ‘ಪರಮಕುಶಿ’ಯ ಆರಂಭದ ಕೆಲಸಾಲುಗಳು’, ತೆರಿದಿನಗ್‌ಲೇ ಪನ್ಪುಲೆಗೊನೆ ಈ ಪ್ರಪಂಚ ಒಂಜಿ ಹೋಟೆಲ್‌ದಲೆಗೊನೆ. ನಾಲ್‌ದಿನೊ ಮುಲ್ಪ ಉಂತುದು ಪೋಪುನ ಪ್ರವಾಸಿಗೆರ್‌ನಮೊ….. ಒಂಜಿ ಕಥೆ ಕೇಣ್ಣೆ. ರಡ್ಡ್‌ಜನ ಸೈಯ್ಯರೆ ತಯಾರಾಯಿನಗ್ಲೆನ್‌ ಒಂಜಿ ಆಸ್ಪತ್ರೆಗ್‌ ಪಾಡಿಯೆರ್‌….’ ಅಕ್ಕಪಕ್ಕದ ಹಾಸಿಗೆಗಳಲ್ಲಿದ್ದ ರೋಗಿಗಳಲ್ಲೊಬ್ಬ ತಾನು ಸ್ವತಃ ಕುರುಡನಾಗಿದ್ದೂ, ಇನ್ನೊಬ್ಬನನ್ನು ಸಂತೋಷ ಪಡಿಸುತ್ತಿದ್ದ ಕೌತುಕವನ್ನು ಕತೆಯಾಗಿ ಹೆಣೆದ ಶೈಲಿ ಇಲ್ಲಿದೆ. ‘ಆತ್ಮಜ್ಯೋತಿ’ ಕತೆಯಲ್ಲಿ ಅನ್ಯೋನ್ಯವಾಗಿ ಬದುಕಿನ ಗಂಡ ಹೆಂಡತಿ; ಗಂಡ ಮಡಿದ ಮೇಲೆ ಪ್ರೇತವಾಗಿ ಹೆಂಡತಿಯ ನೆರಳಾಗಿ ಕಾಯುವು ಸುಂದರ ಕಲ್ಪನೆಯಿದ್ದರೆ, ಅತ್ಯಾಸೆ ಗತಿಗೇಡ್‌ ‘ಕತೆಯ ಹಾಸುಗೆಯಿದ್ದಷ್ಟೇ ಕಾಲು ಚಾಚಬೇಕೆನ್ನುವ ನೀತಿ, ‘ಕುರುಡು ಪ್ರೀತಿ’ಯಲ್ಲಿ ತಾನು ಬಯಸಿದಾತನನ್ನು ತನ್ನವನ್ನಾಗಿ ಮಾಡಿಕೊಳ್ಳಬೇಕೆಂದು ಹೆಣ್ಣೋರ್ವಳು ಮಾಡುವ ನಿರರ್ಥಕ ಪ್ರಯತ್ನ, ‘ಅಮ್ಮಾ ಈರೆ ಬುಡ್ಲೆ ಪುಗೆ’ಯಲ್ಲಿ ದಿಶ್ಚಟಕ್ಕೆ ಬಲಿಯಾಗಿ ದುರಂತ ಸಾವನ್ನು ಕಾಣುವ ಮಗನೊಬ್ಬನ ಕತೆ ‘ಪರಿವರ್ತನೆ’, ‘ವಿಚಿತ್ರ ಪ್ರೇಮ’, ‘ಬೊಡ್ಡಪ್ಪಾ ಅಮೇರಿಕಾದ ಆಣ್‌’, ‘ಸತ್ಯಾದಿಗೆ ವಕೀಲ್‌ ಶಂಭೂನಾಥ್‌’, ‘ಮಾಮಿಗೊಂಜಿ ಕಾಲೊ, ಮಾರ್ಮಾಳೆಗೊಂಜಿ ಕಾಲೊ’ ಮತ್ತು ‘ತನ್ನ ಪೋರ್ಲೇ ತನ್ನ ನಾಲಗೆಗೊಂಜುರ್ಲು’ – ಹೀಗೆ ಇಲ್ಲಿನ ಹದಿನೈದು ಜೀವಾನುಭವದ ಚಿತ್ರಣಗಳಾಗಿ ಆಕರ್ಷಕವಾಗಿ ಓದಿಕೊಂಡು ಹೋಗುತ್ತವೆ. ‘ಪರಿವರ್ತನೆ’ ಒಂದು ನೀಳ್ಗತೆ. ಅಜ್ಞಾನದಲ್ಲಿದ್ದ ಸಮಾಜವೊಂದು ಸಾತ್ವಿಕ ಮಠಾಧಿಪತಿ (ಹರಿ)ಯಿಂದಾಗಿ ಏಳಿಗೆ ಹೊಂದಿದ ಮೇಲೆ ಹೇಗೆ ಸ್ವಾರ್ಥ ಸಾಧಕರಾಗಿ ಕೃತಘ್ನರಾದರೂ ಎಂಬುದನ್ನು ಒಂದಿಷ್ಟು ಫ್ಯಾಂಟಿಸಿ ಬೆರೆಸಿ ಬೆಳೆಸಿದ ಕಥೆಯಿದು. ‘ವಿಚಿತ್ರೊ ಪ್ರೇಮ’, ‘ಬೊಡ್ಡಪ್ಪಾ ಅಮೇರಿಕಾದ ಆಣ್’ ಈ ಕತೆಗಳು ಅಮೇರಿಕಾದ ಗಂಡಿಗೆ ಆಸೆ ಮೋಸ ಹೋದವರ ನೈಜ ವಿಡಂಬನೆಗಳಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯೂರುವಂಥಹ ಸರಳ ಬರವಣಿಗೆ ಇಲ್ಲಿನದು.

‘ಪತ್ತ ಪಜ್ಜೇಲು’ (೨೦೦೧) ಆನಂದಕೃಷ್ಣರ ದ್ವಿತೀಯ ಕಥಾಸಂಕಲನ. ಇದರಲ್ಲಿ ಕತೆಯಾದ್ ಪೋಯರ್‌, ಅದ್ರಾಮಜ್ಞೆ ಮಾರ್‌ನ ಮೀನ್‌, ಬಚ್ಚಂಗಾಯಿದ ಇರ್ವ ರೂಪಾಯಿ, ನತದೃಷ್ಟೆದಿ, ಬದಿತ್ತ ಸಾಯ, ಕಲೆಂಬಿ ಸಂಕರೆ, ಮದಿಮೆ ಆಯಲು, ಮಸರಂಷೊಡು ತಿಕ್ಕೊಡು ಮತ್ತು ಸ್ವೇಶನ್‌ ಬತ್ತ್‌೦ಡ್‌ ಹೀಗೆ ಹತ್ತು ಕತೆಗಳಿವೆ.

ಕೊನೆಯ ಎರಡು ಕತೆಗಳು ಲೇಖಕರು ಎಲ್ಲೋ ಕೇಳಿದ, ಎಂದೋ ಓದಿದ ಪಾಶ್ಚಾತ್ಯ ಕತೆಗಳ ಮರುರೂಪ. ತೀಕ್ಷ್ಣ ನೋಟ, ಲವಲವಿಕೆಲ್ಲೂ ನಿರುದ್ವಿಗ್ನ ನಿರೂಪಣೆ, ಸೊಗಸಿನ ಭಾಷೆಯೊಂದಿಗೆ ನಡೆದು ಹೋದ ಸಂಗತಿಗಳನ್ನು ಕತೆಯಾಗಿಸುವ ಇಲ್ಲಿನ ಕಲಾತ್ಮಕತೆ ಸಂಸ್ಕೃತಿಜನ್ಯವೂ ಧ್ವನಿಪೂರ್ಣವೂ ಆಗಿದೆ.

ತುಳು ಭಾಷೆಯಲ್ಲಿ ಇಂದಿಗೂ ಎಷ್ಟೋ ಲೇಖಕರು ಕಥಾರಚನೆ ಮಾಡುತ್ತಿದ್ದಾರೆ. ಮುಖ್ಯವಾಗಿ ಬಾನುಲು ಪ್ರಸಾರಕ್ಕಾಗಿ ವಸಂತಿ ಶೆಟ್ಟಿ ಬ್ರಹ್ಮಾವರ, ಮಹಮ್ಮದ್‌ ಕುಳಾಯಿ ಮತ್ತಿತರ ಕತೆಗಳು ಗಮನಸೆಳೆದಿವೆ. ತುಳು ಅಕಾಡೆಮಿಯ ತ್ರೈಮಾಸಿಕ ‘ಮದಿಪು’ ಪ್ರತಿ ಸಂಚಿಕೆಯಲ್ಲೂ ಒಂದಿಷ್ಟು ಕತೆಗಳು ಪ್ರಕಟಣೆಗೂ ಅವಕಾಶ ಮಾಡಿಕೊಡುತ್ತಿದೆ. ಆದರೆ ಉಳಿದಂತೆ ಪ್ರಕಟಣಾವಕಾಶದ ಕೊರತೆ, ತೊಡಕುಗಳಿಂದಾಗಿ ಹೆಚ್ಚಿನವು ಸಂಗ್ರಹರೂಪದಲ್ಲಿ ಬಂದಿಲ್ಲವಾಗಿ ಒಂದು ಸಮಗ್ರ ಪರಿಶೀಲನೆಗೆ ಅವು ದಕ್ಕದೆ ಹೋಗುತ್ತಿವೆ. ತುಳುವರ ಬದುಕು ತುಳುನಾಡಿನಲ್ಲೂ, ಹೊರನಾಡಿನಲ್ಲೂ ಅನೇಕ ಪ್ರಭಾವಗಳಿಗೆ ಒಳಗಾಗುತ್ತ, ಬೆಳವಣಿಗೆಗೂ ಮೌಲ್ಯ ಸಂಘರ್ಷಕ್ಕೂ ಒಳಗಾದ ಸಂಕ್ರಮಣ ಸ್ಥಿತಿಯನ್ನು ಕಳೆದೆರಡು ದಶಕಗಳಿಂದ ಕಾಣುತ್ತಿದೆ. ಕತೆಗಾರನ ಮುಂದೆ ಸಾಕಷ್ಟು ಕಥಾವಸ್ತುಗಳ ಸವಾಲುಗಳೂ ಈ ಆಧುನಿಕ ಸಂದರ್ಭದಲ್ಲಿ ಇವೆ. ಮಾನವೀಯ ಸಮಸ್ಯೆಗಳ, ಮೌಲ್ಯ ಮರುಚಿಂತನೆಯ, ನೆಲದ ಸಂಸ್ಕಾರ ಚಿಂತನೆಯ ಚಿತ್ರಣ ತುಳು ಸಂಸ್ಕೃತಿಯ ಹಿನ್ನೆಲೆಯಲ್ಲಿ ಮೂಡಿಬಂದು ಕಥಾ ಸಂವಿಧಾನದಲ್ಲಿ ವೈವಿಧ್ಯತೆಗೆ ಅವಕಾಶಗಳಿವೆ. ಇನ್ನಷ್ಟು ತುಳು ಪತ್ರಿಕೆಗಳೂ, ಮುದ್ರಿತ ಸಾಹಿತ್ಯವನ್ನು ಓದುವವರ ಸಂಕ್ಯೆಯೂ ಬೆಳೆದರೆ ತುಳುವಿನಲ್ಲಿ ಆಧುನಿಕ ಕಥಾಸಾಹಿತ್ಯ ಸೃಷ್ಟಿ ಇನ್ನಷ್ಟು ಪ್ರವರ್ಧಮಾನವಾಗುವುದು ಸಾಧ್ಯ.

ತುಳುವಿನಲ್ಲಿ ಪ್ರಕಟವಾಗುವ ಕಥಾ ಸಂಕಲನಗಳು

೧. ಪೊಸ ಜೀವನ ೧೯೭೨ ದಿ. ರಮೇಶ್‌ಕಾರ್ನಾಡ್‌
೨. ಕಿನ್ಯ ಕತೆಕ್ಕುಲು ೧೯೮೬ ಬಾ. ಸಾಮಗ
೩. ಉದಿಪು ೧೯೮೭ ಮುದ್ದು ಮೂಡುಬೆಳ್ಳೆ
೪. ಬೋಂಟೆ ೧೯೮೮ ಬಾ. ಸಾಮಗ
೫. ಬದ್ಕ್‌ದ ಬಂಡಿ ೧೯೮೯ ಮನೋಹರ ಪ್ರಸಾದ್‌
೬. ಒಸಯೊ ೧೯೯೪ ಮುದ್ದು ಮೂಡುಬೆಳ್ಳ
೭. ಬಾರಣೆ ೧೯೯೪ ಬಿ. ಪ್ರಭಾಕರ ಶಿಶಿಲ
೮. ಕರಿಯವಜ್ಞೆರ ಕತೆಕ್ಕುಲು ೧೯೯೬ ಆನಂದಕೃಷ್ಣ
೯. ಆಕಾಶವಾಣಿ ತುಳುಕತೆಕ್ಕುಲು ೧೯೯೬ (ಸಂ.) ವಸಂತಕುಮಾರ್‌ಪೆರ್ಲ
೧೦. ಮನಸ್ಸ ಬದಲಾನಗ ೧೯೯೭ ಜಯಂತಿ ಎಸ್‌. ಬಂಗೇರ
೧೧. ದೋಲು ೧೯೯೮ ಗಣೇಸ್‌ಅಮೀನ್‌ಸಂಕಮಾರ್‌
೧೨. ತನಿಕೆ ೨೦೦೧ ಶಂಕರ ಖಂಡೇರಿ
೧೩. ಆತ್ಮಜ್ಯೋತಿ ೨೦೦೧ ಬಿ.ಎ. ಪ್ರಭಾಕರ ರೈ
೧೪. ಪತ್ತ್‌ಪಜ್ಜೆಲು ೨೦೦೧ ಆನಂದಕೃಷ್ಣ
೧೫. ಪರಿವರ್ತನೆ ೨೦೦೨ ಬಿ.ಎ. ಪ್ರಭಾಕರ ರೈ