೨೦೦೧ರಲ್ಲಿ ಬಂಟ್ವಾಳ ತಾಲೂಕು ಒಡಿಯೂರಿನಲ್ಲಿ ನಡೆದ ತುಳು ಸಾಹಿತ್ಯದ ನೆನಪಿಗಾಗಿ ಹೊರತಂದ ನೆನಪಿನ ಸಂಚಿಕೆ ಒಡಿಯೂರ್ದ ತುಡರ್‌ (೨೦೦೧) ಬಹಳ ಮುಖ್ಯವಾದುದು. ಪಾಲ್ತಾಡಿ ರಾಮಕೃಷ್ಣ ಆಚಾರ್‌ರವರ ಪ್ರಧಾನ ಸಂಪಾದಕತ್ವದಲ್ಲಿ ಮೂಡಿಬಂದ ನೆನಪಿನ ಸಂಚಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಸುನೀತಾ ಶೆಟ್ಟಿಯವರ ಅಧ್ಯಕ್ಷ ಭಾಷಣದ ಜೊತೆಗೆ ಸುಮಾರು ೨೬ ಪ್ರಬಂಧಗಳನ್ನು ಒಳಗೊಂಡಿದೆ. ತುಳುಭಾಷೆ, ಸಂಸ್ಕೃತಿ, ತುಳುನಾಡಿನ ವಿಶಿಷ್ಟ ಹಬ್ಬಗಳು, ತುಳುವರ ಊಟ ತಿಂಡಿ, ಅವಳಿ ದೈವಗಳು, ಮಂದಾರ ರಾಮಾಯಣ ಒಂದು ತುಳು ಬಣ್ಣದ ರಾಮಕತೆ, ತುಳು ಪತ್ರಿಕೋದ್ಯಮ, ಜನಪದ ಆಟಗಳು, ವಿಟ್ಲದ ಅರಸರು, ಎದುರುಕತೆಯಲ್ಲಿ ತುಳುವರ ಜಾಣ್ಮೆ, ತುಳುನಾಡಿನ ಹೆಣ್ಣು ಮತ್ತು ಬೆಳೆ ಸಂಸ್ಕೃತಿ, ತುಳು ಭಾಷೆಯಲ್ಲಿ ಮದಿಪು, ತುಳುನಾಡಿನ ಮೃಗ ಸಂಪತ್ತು ಮತ್ತು ತುಳುವರ ಸಂಬಂಧ, ತುಳುನಾಡಿನ ಜನಪದ ಧರ್ಮ, ಹೊಸ ಕಾಲ ಘಟ್ಟದಲ್ಲಿ ತುಳು ಕಾವ್ಯ ಸಾಹಿತ್ಯದ ಬೆಳವಣಿಗೆ, ಪ್ರವಚನ ಮಾಧ್ಯಮವಾಗಿ ತುಳು ಪೊಲಿ, ಯಕ್ಷಗಾನದಲ್ಲಿ ತುಳುತಿಟ್ಟು, ತುಳುಭಾಷೆ, ಸಾಹಿತ್ಯದ ಬೆಳವಣಿಗೆಯಲ್ಲಿ ಪರದೇಶಿಯವರ ಕೊಡುಗೆ ಮುಂತಾದ ಮಾಹಿತಿಪೂರ್ಣ ಪ್ರಬಂಧಗಳಿವೆ. ಪಾದೇಕಲ್ಲು ವಿಷ್ಣುಭಟ್ಟ, ಬಿ. ವಿ. ಸೂರ್ಯನಾರಾಯಣ, ಶಂಕರ ಖಂಡೇರಿ, ಕಬ್ಬಿನಾಲೆ ವಸಂತ ಭಾರಧ್ವಾಜ, ಮುದ್ದು ಮೂಡುಬೆಳ್ಳೆ, ಸಮೀಚಾಕೋಟೆ, ವಾಮನ ನಂದಾವರ, ಎಂ. ಪ್ರಭಾಕರ ಜೋಶಿ, ಮಲಾರ್‌ಜಯರಾಮ ರೈ, ಪೂವಪ್ಪ ಕಣಿಯೂರು, ದೊಡ್ಡಣ್ಣ ಬರಮೇಲು, ಶಿಮುಂಜೆ ಪರಾರಿ ಮುಂಬಯಿ, ಯಶುವಿಟ್ಲ, ನಾಗವೇಣಿ ಮಂಚಿ, ಸುಂದರ ಕೇನಾಜೆ, ಗಣೇಶ ಅಮೀನ್‌ಸಂಕಮಾರ್‌, ಅಶೋಕ ಆಳ್ವ, ರಾಜಶ್ರೀ ಶೆಟ್ಟಿ ಎಂ. ವೆಂಕಟರಾಜ ಪುಣಿಂಚತ್ತಾಯ, ಪ್ರೊ. ಅಮೃತ ಸೋಮೇಶ್ವರ, ಡಾ. ವಸಂತಕುಮಾರ ಪೆರ್ಲ, ಮುಳಿಯ ಶಂಕರ ಭಟ್‌, ಕೆ. ಎನ್‌. ದೇವಾಡಿಗ, ಭಾಸ್ಕರ ರೈ ಕುಕ್ಕುವಳ್ಳಿ, ಕೆ. ಪದ್ಮನಾಭ ಕೇಕುಣ್ಣಾಯ ಮುಂತಾದವರು ಮೇಲಿನ ಪ್ರಬಂಧಗಳನ್ನು ಬರೆದಿದ್ದಾರೆ. ತುಳುಭಾಷೆ, ಸಾಹಿತ್ಯ ಸಂಸ್ಕೃತಿಯ ಕುರಿತಾಗಿಯೇ ಹೆಚ್ಚಿನೆಲ್ಲಾ ಸ್ಮರಣ ಸಂಚಿಕೆಗಳಲ್ಲಿ ಸಂಶೋಧಿತ ಅಧ್ಯಯನಾತ್ಮಕ ಪ್ರಬಂಧಗಳಿವೆ.

ಮಂಗಳೂರಿನಲ್ಲಿ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ಮೇಲೆ ಅದರ ಆರಂಭದ ಅಧ್ಯಕ್ಷರಾದ ಬಿ. ಎ. ವಿವೇಕ ರೈಗಳ ನೇತೃತ್ವದಲ್ಲಿ ಅಕಾಡೆಮಿಯ ಕೆಲಸ ಕಾರ್ಯಗಳ ವರದಿಯೊಂದಿಗೆ ಕತೆ, ಕಾವ್ಯ, ಲೇಖನ ಮುಂತಾದವುಗಳನ್ನು ಹೊಂದಿದ ‘ಮದಿಪು’ ಎಂಬ ಸಂಚಿಕೆಯನ್ನು ತ್ರೈಮಾಸಿಕವಾಗಿ ಪ್ರಕಟಿಸಲಾಯಿತು. ೧೯೯೬ರಿಂದ ಸತತವಾಗಿ ಇಂದಿಗೂ ಪ್ರಕಟಗೊಳ್ಳುತ್ತಿದೆ. ತುಳುನಾಡಿನ ಅನೇಕರ ಪುಸ್ತಕ ಪರಿಚಯ, ಕವನ, ಕತೆ, ಲೇಖನಗಳು ‘ಮದಿಪು’ ಸಂಚಿಕೆಯಲ್ಲಿ ಪ್ರಕಟಗೊಳ್ಳುತ್ತಿದೆ. ಇದುವರೆಗೆ ಬಂದಿರುವ ಸುಮಾರು ೩೮ ಸಂಚಿಕೆಯಲ್ಲಿ ಹತ್ತಾರು ಪ್ರಬಂಧಗಳು ಪ್ರಕಟಗೊಂಡಿವೆ. ತುಳುಸಾಹಿತ್ಯದ ಬೆಳವಣಿಗೆಯ ನೆಲೆಯಲ್ಲಿ ಈ ಪ್ರಬಂಧಗಳು ಬಹಳ ಮುಖ್ಯವೆನಿಸುತ್ತವೆ. ಒಂದು ವಿಶಿಷ್ಟ ಅಧ್ಯಯನ ಶಿಸ್ತು ಇದ್ದುಕೊಂಡು, ಭಿನ್ನ ಭಿನ್ನ ನೆಲೆಗಳಲ್ಲಿ ಬರೆಯಲ್ಪಟ್ಟವಾದುದರಿಂದ ಇವುಗಳನ್ನು ಪ್ರಬಂಧದ ಚೌಕಟ್ಟಿನಲ್ಲಿ ಬಳಸಿಕೊಳ್ಳಲಾಗಿದೆ. ಮದಿಪು ೧ (೧೯೯೬)ರಲ್ಲಿ ಬೆನೆಟ್‌ ಜಿ. ಅಮ್ಮನ್ನರವರ ನೂರು ವರ್ಷ ಪಿರುವುದ ತುಳು ನಿಘಂಟು (ನೂರು ವರ್ಷ ಹಿಂದಿನ ತುಳು ನಿಘಂಟು), ಸಮಾಜೊಡು ಪೊಣ್ಣ ಸ್ಥಾನಮಾನ (ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ)-ಕೆ. ಲೀಲಾವತಿ, ತುಳು ಯಕ್ಷಗಾನೊ: ಬತ್ತ್‌ನ ಸಾದಿ-ದುಂಬುದ ಸಾದಿ (ತುಳು ಯಕ್ಷಗಾನ-ಬಂದ ದಾರಿ ಮತ್ತು ಮುಂದಿನ ದಾರಿ) -ಎಂ. ಪ್ರಭಾಕರ ಜೋಶಿ ಬರೆದ ಪ್ರಬಂಧಗಳು ಗಮನಾರ್ಹವಾದುದು. ಮದಿಪು ೨(೧೯೯೬)ರಲ್ಲಿ ತುಳುಬಾಸೆದ ವೈಶಿಷ್ಟ್ಯೊ: ಒಂಜಿ ಸಮೀಕ್ಷೆ (ತುಳು ಭಾಷೆಯ ವೈಶಿಷ್ಟ್ಯ : ಒಂದು ಸಮೀಕ್ಷೆ)- ಕುದ್ಕಾಡಿ ವಿಶ್ವನಾಥ ರೈ, ತುಳು ಆಟ ಎದುರಾಪಿ ಸವಾಲ್‌ (ತುಳು ಯಕ್ಷಗಾನದಲ್ಲಿ ಎದುರಾಗುವ ಸವಾಲುಗಳು)-ಕಲ್ಲಾಡಿ ವಿಠಲ ಶೆಟ್ಟಿ ಬರೆದ ಪ್ರಬಂಧಗಳು ಅವರ ಅಧ್ಯಯನಶೀಲತೆ ಹಾಗೂ ಸೂಕ್ಷ್ಮತೆಗಳಿಗೆ ಸಾಕ್ಷಿಗಳಾಗುತ್ತವೆ. ಮದಿಪು ೪ (೧೯೯೭)ರಲ್ಲಿ ನಲಿಕೆ ಜನಾಂಗ ಬೊಕ್ಕ ಆರಾಧನ ಕಲೆ (ನಲಿಕೆ ಜನಾಂಗ ಮತ್ತು ಆರಾಧನಾ ಕಲೆ)-ಚೆನ್ನಪ್ಪ ಅಳಿಕೆ, ದುಡಿ ನಲಿಕೆದ ಪೊರ್ಲತಿರ್ಲ (ದುಡಿ ನಲಿಕೆಯ ಚೆಲುವು)-ಎನ್‌. ಕೊಯಿರಾ ಬಾಳೆಪುಣಿ, ತುಳುಭಾಷೆ ಬೊಕ್ಕ ಸಂಸ್ಕೃತಿಗ್‌ದಲಿತೆರೆ ಕಾನಿಗೆ (ತುಳುಭಾಷೆ ಮತ್ತು ಸಂಸ್ಕೃತಿಗೆ ದಲಿತರ ಕಾಣಿಕೆ)-ಪಿ. ಕಮಲಾಕ್ಷ ಈ ಮೂರು ಲೇಖನಗಳು ಅಧ್ಯಯನಾಸಕ್ತರಿಗೆ ಬಹಳ ಮುಖ್ಯವಾಗುವಂತಹವುಗಳು. ಮದಿಪು ೬ (೧೯೯೭)ನೇ ಸಂಚಿಕೆಯಲ್ಲಿ ಬದಲಾವೊಡಾಯಿನ ನಮ್ಮ ಕೆಲವು ಪರಂಪರೆಲು (ಬದಲಾಗಬೇಕಾದ ನಮ್ಮ ಕೆಲವು ಪರಂಪರೆಗಳು)-ಬ್ರಹ್ಮಾನಂದ ಕೆ., ಬಾಲೆಸಾಂತ್‌; ಮರಾಠಿ ಜನಪದ ನಲಿಕೆ (ಬಾಲೆಸಾಂತ್‌: ಮರಾಠಿ ಜನಪದ ಕುಣಿತ)-ಅಶೋಕ ಆಳ್ವ, ಇವರುಗಳ ಪ್ರಬಂಧಗಳು ಬಹಳ ಮುಖ್ಯವಾದರೆ, ಮದಿಪು ೭(೧೯೯೭)ನೇ ಸಂಚಿಕೆಯಲ್ಲಿ ತುಳುಟ್ಟು ಭಾಷಾ ಸಂಶೋಧನೆತ್ತ ಬೆನ್ನಿ (ತುಳುವಿನಲ್ಲಿ ಭಾಷಾ ಸಂಶೋಧನೆಯ ಕೆಲಸ)-ಎಂ. ರಾಮ ಇವರ ಸಂಶೋಧನಾ ಪ್ರಬಂಧದ ಸಾರ ಬಹಳ ಮುಖ್ಯವಾದ ಬರಹವಾಗಿದೆ. ಮದಿಪು ೮ (೧೯೯೮)ನೇ ಸಂಚಿಕೆಯಲ್ಲಿ ತುಳು ವ್ಯಾಕರಣ-ಟಿ. ರಾಮಕೃಷ್ಣ ಶೆಟ್ಟಿಯವರ ಲೇಖನದಲ್ಲಿದೆ, ಮದಿಪು ೯ (೧೯೯೮)ರಲ್ಲಿ ತುಳು ಜಾನಪದ ಕಲೆ ಎ. ವಿ. ನಾವಡ, ಅಳಿಯ ಸಂತಾನ Vs ಅಪ್ಪೆ ಮಗಳ ಕಟ್ಟ್‌(ಅಳಿಯ ಸಂತಾನ Vsತಂದೆ ಮಗಳ ಕಟ್ಟು/ಸಂಪ್ರದಾಯ)-ಶಂಕರ ಖಂಡೇರಿ, ತಾರೆ -ತಾರಾಯಿ (ತೆಂಗಿನಮರ-ತೆಂಗಿನಕಾಯಿ)- ಪು. ಶ್ರೀನಿವಾಸ ಭಟ್ಟ, ಕಟೀಲು, ಸೇಡಿಯಾಪು ಕೃಷ್ಣ ಭಟ್ರ್‌ಮಳ್ತಿನ ತುಳು ಕೆಲಸೊ-(ಸೇಡಿಯಾಪು ಕೃಷ್ಣ ಭಟ್ಟರು ಮಾಡಿದ ತುಳು ಕೆಲಸ)- ಪಾದೇಕಲ್ಲು ವಿಷ್ಣು ಭಟ್ಟ ಇವರುಗಳ ಲೇಖನ ಬಹಳ ಪ್ರಮುಖವಾಗುತ್ತದೆ. ಮದಿಪು ೧೦ (೧೯೯೮)ರಲ್ಲಿ ‘ಪೊಣ್ಣಾಟಿಕೆದ ಸೊರದನಿ’ (ಹೆಣ್ಣು ಜನ್ಮದ ದನಿ)- ಮಂಜುಳಾ ಶೆಟ್ಟಿ ಇವರ ಪ್ರಬಂಧ ಪ್ರಮುಖವಾದರೆ, ಮದಿಪು ೧೧ರಲ್ಲಿ (೧೯೯೮) ತುಳುರಂಗಭೂಮಿಗ್‌ ಪ್ರೇರಣೆ (ತುಳು ರಂಗಭೂಮಿಗೆ ಪ್ರೇರಣೆ-ಎಚ್ಕೆ ಕರ್ಕೇರಾ, ಮುಂಬಯಿ, ‘ತುಳು ಜಾನಪದ ಲೋಕ ಪೊಸ ಕಾಲೋಗು (ಹೊಸ ಕಾಲದಲ್ಲಿ ತುಳು ಜಾನಪದ)-ಗುರುರಾಜ ಮಾರ್ಪಳ್ಳಿ, ಬಾಸೆ ಬೊಕ್ಕ ಸಂಸ್ಕೃತಿ (ಭಾಷೆ ಮತ್ತು ಸಂಸ್ಕೃತಿ)-ಡಿ. ಯದುಪತಿ ಗೌಡ, ಎನ್ನ ಊರು ಎನ್ನ ಜನೊಕ್ಕುಲು (ನನ್ನ ಊರು ನನ್ನ ಜನ)-ಕೆ. ಟಿ. ಭಂಡಾರಿ ಇವರುಗಳ ಲೇಖನಗಳು ಗಮನಿಸಬೇಕಾದಂತಹವುಗಳು. ಮದಿಪು ೧೨ (೧೯೯೯)ರಲ್ಲಿ ತುಲು, ತುಲುನಾಡ್‌, ತುಲುಪುದರ್‌ (ತುಳು, ತುಳುನಾಡು, ತುಳು ಹೆಸರು)-ಡಿ. ಪಿ. ಡೀಕಯ್ಯ, ಪಾತೆರೊದ ಪದೊಲಿ : ಯಕ್ಷಗಾನ (ಅರ್ಥಗಾರಿಕೆ-ಯಕ್ಷಗಾನ)- ಭಾಸ್ಕರ ರೈ ಕುಕ್ಕುವಳ್ಳಿ, ಕಿಲ್ಲೆರ್‌ ಮುಡೆಯಿನ ಕಬಿತೊಲು (ನಾರಾಯಣ ಕಿಲ್ಲೆಯವರು ರಚಿಸಿದ ಕವಿತೆಗಳು)- ಪಾಲ್ತಾಡಿ ರಾಮಕೃಷ್ಣ ಆಚಾರ್‌ರವರ ಪ್ರಬಂಧಗಳು ಗಮನಿಸುವಂತಾದ್ದು. ಮದಿಪು ೧೩ (೧೯೯೯)ರಲ್ಲಿ ತುಳು ಜಾನಪದ ಹಿನ್ನಲೆಡ್‌ ಒಂಜಿ ಬಾಸೆ (ತುಳು ಜಾನಪದದ ಹಿನ್ನೆಲೆಯಲ್ಲಿ ಒಂದು ಭಾಷೆ)-ಎಸ್‌. ಎ. ಕೃಷ್ಣಯ್ಯ, ಕುಂಟಾರು ಚಾಮುಂಡಿ (ಕುಂಟಾರಿನ ಚಾಮುಂಡಿ ದೈವ)-ಕೇಶವ ಶೆಟ್ಟಿ. ಕೆ. ಆದೂರು, ತುಳು ಜನಪದ ಆಚರಣೆಲು (ತುಳು ಜನಪದ ಆಚರಣೆಗಳು)- ಪಡಾರು ಮಹಾಬಲೇಶ್ವರ ಭಟ್ಟ, ಮಂಚಿ, ತುಳು ಸಾಹಿತ್ಯದ ಉದಿಪು ಬೊಕ್ಕ ಬುಳೆವಣಿಗೆ (ತುಳು ಸಾಹಿತ್ಯದ ಉದಯ ಮತ್ತು ಬೆಳವಣಿಗೆ) – ಕೆ.ಪದ್ಮನಾಭ ಕೇಕುಣ್ಣಾಯ, ನಡಿಯೇಲ್‌ದೈಯಂಗುಳು (ನಡೆಯುವ ದೈವಗಳು) – ಮುಂಡಪ್ಪ ಸಾಲಿಯಾನ್‌ ನಂದಾವರ – ತುಳುನಾಡಿನ ಐತಿಹ್ಯೊಲು (ತುಳುನಾಡಿನ ಐತಿಹ್ಯಗಳು) – ಸುಬ್ಬಣ್ಣ ರೈ ಮುಂತಾದವರ ಪ್ರಬಂಧಗಳು ಬಹಳ ಮುಖ್ಯವಾಗಿ ಪರಿಗಣಿಸಬೇಕಾದಂತಹವುಗಳು. ಮದಿಪು ೧೫ರಲ್ಲಿ (೧೯೯೯) ತುಳು ಕಾದಂಬರಿಲೆ ನಿಲೆಬುಲೆ (ತುಳು ಕಾದಂಬರಿಗಳ ನೆಲೆ ಹಾಗೂ ಬೆಳವಣಿಗೆ) – ಅರುಣಕುಮಾರ್‌ ಎಸ್‌.ಆರ್‌., ತುಳು ಭಾಷೆ ಬೊಕ್ಕ ಕ್ರೈಸ್ತ ಸಾಹಿತ್ಯ (ತುಳು ಸಾಹಿತ್ಯ ಮತ್ತು ಕ್ರೈಸ್ತ ಸಾಹಿತ್ಯ) – ಬೆನಟ್‌ ಜಿ. ಅಮ್ಮನ್ನ, ತುಳು ಬಾಸೆಡ್‌ ಮದಿಪು – ನುಡಿ – ಬೀರ – ಸಂಧಿ (ತುಳು ಭಾಷೆಯಲ್ಲಿ ಮದಿಪು, ನುಡ, ಬೀರ ಸಂಧಿ) – ಗಣೇಶ ಅಮೀನ್‌ ಸಂಕಮಾರ್, ತುಳುವೆರೆನ ಸಂಬೋಧನೆಲು ( ತುಳುವರಲ್ಲಿ ಬಳಕೆಯಲ್ಲಿರುವ ಸಂಬೋಧನೆಗಳು) – ಕುದ್ಕಾಡಿ ವಿಶ್ವನಾಥ ರೈ ಇವರುಗಳು ಲೇಖನ ಬಹಳ ಮುಖ್ಯವಾದುವುಗಳು. ಮದಿಪು ೧೮ (೨೦೦೦)ರಲ್ಲಿ ‘ತುಳುವಪ್ಪೆನ ಸೂಡಿಗೊಂಜಿ ಬಂಗಾರ್‌ದ ಪೂ – ಮಹಾಭಾರತೊ’ (ತುಳು ತಾಯಿಯ ಮುಡಿಗೊಂದು ಬಂಗಾರದ ಹೂ – ತುಳು ಮಹಾಭಾರತ) – ಕೆ. ಪದ್ಮನಾಭ ಕೇಕುಣ್ಣಾಯ, ಅಂತರಾಷ್ಟ್ರೀಯ ಪೊಂಜೊವುಲೆನ ದಿನ (ಅಂತಾರಾಷ್ಟ್ರೀಯ ಮಹಿಳಾ ದಿನ) ಕೆ. ಲೀಲಾವತಿ ಇವರುಗಳ ಲೇಖನ ಮುಖ್ಯವಾದರೆ, ಮದಿಪು ೨೦ (೨೦೦೧)ರಲ್ಲಿ ‘ತುಳುತ್ತ ಮಿತ್ತ್‌ಬಾಕಿ ಬಾಸೆಲೆನ ಪ್ರಭಾವ (ತುಳುವಿನ ಮೇಲೆ ಉಳಿದ ಭಾಷೆಗಳ ಪ್ರಭಾವ) – ಯು.ಪಿ ಉಪಾಧ್ಯಾಯ ಇವರ ಪ್ರಬಂಧ ಬಹಳ ಮುಖ್ಯವಾಗುತ್ತದೆ. ಮದಿಪು ೨೧(೨೦೦೧)ರಲ್ಲಿ ತುಳು ಜನಪದ ಸಂಸ್ಕೃತಿಯ ಕುರಿತಾಗಿ ವಿಶೇಷ ಲೇಖನಗಳಿವೆ. ಮುಖ್ಯವಾಗಿ ಆಣ್‌ಮೇಲ್ಮೆದ ಪೊಣ್ನು ದೈವ : ಕೊಡಮಣಿತ್ತಾಯ (ಗಂಡು ಸ್ವರೂಪದ ಹೆಣ್ಣು ದೈವ: ಕೊಡಮಣಿತ್ತಾಯ) – ಮೈನಾ ಹೆಗ್ಡೆ, ನೀರೆ, ‘ಬದಲಾಯಿ ಸಮಾಜೊಡು ಪೊಣ್ಣು ಪೊಂಜೊವು (ಬದಲಾದ ಸಮಾಜದಲ್ಲಿ ಹೆಣ್ಣು ಹೆಂಗಸು) ಎಂಬ ಬಿ.ಎಂ. ರೋಹಿಣಿಯವರ ಲೇಖನ, ‘ಪೊಣ್ಣುಲೆನ್‌ದೊಂಕಿನ ಆನುಲೆನನ ಗಾದೆಲು’ (ಹೆಂಗಸರನ್ನು ತುಳಿದ ಗಂಡು ಕಟ್ಟಿದ ಗಾದೆಗಳು) – ಶ್ರೀನಾಥ ಮಂಗಲ್ಪಾಡಿಯವರ ವಿಶಿಷ್ಟವಾದ ಬರಹಗಳಿವೆ. ಮದಿಪು ೨೩ (೨೦೦೧)ರಲ್ಲಿ ‘ತುಳುವೆರೆ ಬದ್‌ಕ್‌’ (ತುಳುವರ ಬದುಕು)- ಜ್ಯೋತಿ ಪೆರಾಜೆಯವರ ಪ್ರಬಂಧ, ‘ತುಳುನಾಡ್ದ್‌ ಇಲ್ಲ್‌ಬೊಕ್ಕ ಜನೊಕುಲು (ತುಳುನಾಡಿನ ಮನೆಗಳು ಮತ್ತು ಜನಗಳು) – ಕೆ. ಯಶೋಧರ ಎನ್‌. ಆಚಾರ್ಯ ಮುಂಡ್ಕೂರು ಅವರ ಲೇಖನಗಳು ಗಮನಾರ್ಹವಾದುದು. ಮದಿಪು ೨೪ರಲ್ಲಿ ತುಳು ಸಂಸ್ಕೃತಿದದುನ್ನೊ ಬನ್ನೊ (ತುಳು ಸಂಸ್ಕೃತಿಯ ಕಷ್ಟ ಸುಖ) – ಬಿ.ವಿ. ಸೂರ್ಯ ನಾರಾಯಣ, ಇವರ ಬರಹಗಳಲ್ಲದೆ, ಮದಿಪು ೨೫ರಲ್ಲಿ (೨೦೦೨) ಪುರುಷೆರ ನಲಿಕೆ (ಪುರುಷರ ಕುಣಿತ) – ಪೂವಪ್ಪ ಕಾಣಿಯೂರುರವರ ಪ್ರಬಂಧ ಬಹಳ ಮುಖ್ಯವಾದುದು. ಅದೇ ಸಂಚಿಕೆಯಲ್ಲಿ ಕೆ. ಅನಂತರಾಮ ಬಂಗಾಡಿಯವರ ‘ಬಂಗಾಡಿದ ಬಂಗರಸೆರ್‌ ಇತಿ ಆದಿ (ಬಂಗಾಡಿಯ ಬಂಗರಸರ ಇತಿಹಾಸ) ಎಂಬ ಲೇಖನ ಐತಿಹಾಸಿಕ ಅಧ್ಯಯನನದ ಫಲವಾಗಿ ಮೂಡಿಬಂದಿರುವುದಾಗಿದೆ. ಮದಿಪು ೨೭ರಲ್ಲಿ (೨೦೦೩) ಬೇಟೆಯ ಕುರಿತಾಗಿ ಎರಡು ಪ್ರಬಂಧಗಳು ಪ್ರಕಟಗೊಂಡಿವೆ. ‘ಬೋಂಟೆ ಬೊಕ್ಕ ಅಲೆಮಾರಿತನೊ’ (ಬೇಟೆ ಹಾಗೂ ಅಲೆಮಾರಿತನ) – ಡಿ. ಜಯರಾಮ ಪಡ್ರೆ ಹಾಗೂ ‘ಬೋಂಟೆ’ (ಬೇಟೆ) ಬಿ.ಎ. ಪ್ರಭಾಕರ ರೈ, ‘ಪುದರ್‌’ (ಹೆಸರು) ಕಾವೂರು ಕೇಶವ ಮೊಯಿಲಿ ಇವರುಗಳ ಲೇಖನಗಳು ವಿಶಿಷ್ಟವಾದುದಾಗಿದೆ. ಮದಿಪು ೨೮ (೨೦೦೩) ರಲ್ಲಿ ‘ಭೂಮಿಯಪ್ಪೆ ಮೀಪುನ ಪರ್ಬ : ಕೆಡ್ಡಸ’ (ಭೂಮಿತಾಯಿ ಮೀಯುವ ಹಬ್ಬ -ಕೆಡ್ಡಸ) – ಪ್ರೊ. ಅಮೃತ ಸೋಮೇಶ್ವರ, ‘ಪೊಸ ವರ್ಸೊದೆ ಉದ್ಯೊ : ಬಿಸು’ (ಹೊಸವರುಷದ ಉದಯ: ವಿಷು) – ಚರಣ್ಕುಮಾರ್‌ಪುದು, ಪಾಲ್ತಾಡಿ, ‘ಕಂಡದ ಕೋರಿ : ಭೂಮಿದೇವಿನ ಮದಿಮೆ’ (ಗದ್ದೆಯ ಹಬ್ಬ; ಭೂಮಿ ದೇವಿತ ಮದುವೆ) ಕಡಮಜಲು ಸುಭಾಸ್‌ ರೈ ಇವರುಗಳು ಪ್ರಬಂಧಗಳಲ್ಲದೆ ಕೆ. ಅನಂತರಾಮ ಬಂಗಾಡಿಯವರ ‘ತುಳುವೆರೆನ ಬಲಿಮೆ ಬಜ್ಜನಿಕೆ’ (ತುಳುವರ ಜ್ಯೋತಿಷ್ಯ) ಎಂಬ ಲೇಖನ, ಮಂದಾರ ರಾಮಾಯಣೊದ ವ್ಯಕ್ತಿ ಚಿತ್ರಣೋ ಭಾಗ – ೨ (ಮಂದಾರ ರಾಮಾಯಣದ ವ್ಯಕ್ತಿ ಚಿತ್ರಣ ಭಾಗ – ೨) – ವಿದ್ವಾನ್‌ ತಾಳ್ತಜೆ ಕೃಷ್ಣ ಭಟ್ಟರವರ ವಿಶಿಷ್ಟ ಲೇಖನ ಇದರಲ್ಲಿದೆ. ಮದಿಪು ೨೯ರಲ್ಲಿ ‘ಪತ್ತನಾಜೆ : ಪತ್ತಾಯೋ ಜಿಂಜಾವುನ ಪರ್ಬ’ (ಪತ್ತನಾಜರ : ಒಂದು ಧಾನ್ಯ ಸಂಗ್ರಹದ ಹಬ್ಬ) ಎಂಬ ಲೇಖನವನ್ನು ಪುಷ್ಪಲತಾ ಕೆ.ಯವರು ನೀಡಿದರೆ. ಮದಿಪು ೩೨ರಲ್ಲಿ ‘ತೌಳವ ಸಂಸ್ಕೃತಿ ಅಧ್ಯಯನ : ಒಂಜಿ ಪ್ರಬಂಧವನ್ನು ಉಷಾಕಿರಣರವರು ಬರೆದಿದ್ದಾರೆ. ಮದಿಪು ೩೩ರಲ್ಲಿ (೨೦೦೪) ‘ಕೊರಗ – ಒಂಜಿ ಪ್ರತ್ಯೇಕ ದ್ರಾವಿಡ ಭಾಷೆ’ (ಕೊರಗ – ಒಂದು ಪ್ರತ್ಯೇಕ ದ್ರಾವಿಡ ಭಾಷೆ) ಎಂಬ ಸಂಶೋಧನಾತ್ಮಕ ಪ್ರಬಂಧವನ್ನು ರಾಮಕೃಷ್ಣ ಟಿ. ಶೆಟ್ಟಿಯವರು ನೀಡಿದ್ದಾರೆ. ಮದಿಪು ೩೫ನೇ ಸಂಚಿಕೆ (೨೦೦೫)ಯಲ್ಲಿ ‘ತುಳುವೆರೆ ಬದ್‌ಕ್‌ದ ಕೆಲವು ಆಚರಣೆಲು’ (ತುಳುವರ ಬದುಕಿನ ಕೆಲವು ಆಚರಣೆಗಳು) ಎನ್‌.ಎಮ್‌. ಸಾಲಿಯಾನ್‌ರವರ ವಿಶಿಷ್ಟ ಲೇಖನವಿದೆ. ಮದಿಪು ೩೬ನೇ ಸಂಚಿಕೆಯಲ್ಲಿ (೨೦೦೫) ‘ಬಾಸೆ ಬೊಕ್ಕ ಸಂಸ್ಕೃತಿದ ಸಂಬಂಧೊ’ (ಭಾಷೆ ಮತ್ತು ಸಂಸ್ಕೃತಿಯ ಸಂಬಂಧ) ಎಂಬ ಪ್ರಬಂಧವನ್ನು ಡಿ. ಯದುಪತಿ ಗೌಡ ನೀಡಿದ್ದಾರೆ. ಮದಿಪು ೨೮ರಲ್ಲಿ (೨೦೦೫) ‘ತುಳುವೆರೆ ಪದ್ದೆಯಿ ಬಂಗಾರ್‌ ಒಂಜಿ ವಿವೇಚನೆ’ (ತುಳುವರ ಆಭರಣಗಳು – ಒಂದು ವಿವೇಚನೆ) ಎಂಬ ಅಧ್ಯಯನಾತ್ಮಕ ಲೇಖವನ್ನು ಶ್ರೀಮತಿ ಜ್ಯೋತಿ ಚೇಳಾರುರವರು ನೀಡಿದ್ದಾರೆ.

ಮೇಲಿನವುಗಳೆಲ್ಲವೂ ಲೇಖನ ರೂಪದ ಪ್ರಬಂಧಗಳು. ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಪ್ರಕಾಶಿತ ‘ಮದಿಪು’ ತ್ರೈಮಾಸಿಕದಲ್ಲಿ ಪ್ರಕಟಗೊಂಡಿರುವ ಈ ಬರಹಗಳಿಗೆ ತುಳು ಸಾಹಿತ್ಯ ಸಂದರ್ಭದಲ್ಲಿ ಬಹಳ ಮಹತ್ವವಿದೆ. ಹೆಚ್ಚಿನೆಲ್ಲಾ ಲೇಖನಗಳು ಯಾ ಪ್ರಬಂಧಗಳು ಅಧ್ಯಯನಾತ್ಮಕ, ಸಂಶೋಧನಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ. ಸಂಶೋಧಕರಿಗೆ ಇವುಗಳು ಆಕರವಾಗಬಲ್ಲುವು. ತುಳುನಾಡಿನ ಬೇರೆ ಬೇರೆ ಸ್ತರಗಳ ಮೇಲೆ ನಡೆಸಿದ ಅಧ್ಯಯನದ ಫಲವಾಗಿ ಇವುಗಳು ಮೂಡಿಬಂದಿದ್ದು, ಸಾಹಿತ್ಯ ಚರಿತ್ರೆಯಲ್ಲಿ ತನ್ನದೇ ಆದ ನೆಲೆಗಳನ್ನು ಪಡೆದುಕೊಂಡಿದೆ. ಪುಸ್ತಕ ರೂಪದಲ್ಲಿರದೆ, ಕೇವಲ ಒಂದು ಸಂಚಿಕೆಯಲ್ಲಿ ಲೇಖನರೂಪದಲ್ಲಿರುವ ಇಂತಹ ಬಿಡಿ ಪ್ರಬಂಧಗಳನ್ನು ಸಾಹಿತ್ಯ ಚರಿತ್ರೆಯಲ್ಲಿ ಕಟ್ಟುವ ಸಂದರ್ಭದಲ್ಲಿ ಬಿಡಬಹುದಾದರೂ, ತುಳುಭಾಷೆಯ ಬೆಳವಣಿಗೆ, ಹಾಗೂ ಇಂದಿನ ಸೀಮಿತ ಓದುಗರ ನೆಲೆಯಲ್ಲಿ ಇವುಗಳನ್ನು ಅನುಲಕ್ಷಿಸುವಂತಿಲ್ಲ. ಒಟ್ಟಾರೆಯಾಗಿ ಇಂದಿನ ಅಂದರೆ ಸಮಕಾಲೀನ ತುಳು ಸಾಹಿತ್ಯ, ಪ್ರಬಂಧ ಸಾಹಿತ್ಯ ಎಂಬ ನಮ್ಮ ಗ್ರಹಿಕೆಗೆ ಪೂರಕವಾದ ಬರಹಗಳು ಇಲ್ಲವೆಂದರೂ, ಇದುವರೆಗೆ ಬಂದ ಪುಸ್ತಕಗಳು ಮತ್ತು ಲೇಖನಗಳಲ್ಲಿ ಬಹುಪಾಲು ಭಾಷೆ, ಸಂಸ್ಕೃತಿ, ಜಾನಪದ ಇವೇ ಮೊದಲಾದ ಅಂಶಗಳನ್ನು ಒಳಗೊಂಡಿವೆ. ಭಾಷೆಯೊಂದು ಸಾರ್ವಜನಿಕವಾಗಿ ಹತ್ತಿರವಾಗುವ ಸಾಧ್ಯತೆಗಳು ಕಡಿಮೆಯಿದ್ದಾಗ, ಆ ಭಾಷಾ ಸಂಸ್ಕೃತಿಯ ಕುರಿತಂತೆ ಅಧ್ಯಯನ ಶೀಲ ಬರಹಗಳು ಹೆಚ್ಚು ಬರುತ್ತವೆ. ತುಳು ಸಂಸ್ಕೃತಿಯನ್ನು ಕಳಕೊಳ್ಳುತ್ತಿರುವ ಸಮಕಾಲೀನ ಸಂದರ್ಭದಲ್ಲಿ, ಆ ಭಾಷೆಯಲ್ಲಿ ಬರುವ ಸೃಜನಶೀಲ ಬರಹಗಳು ಸ್ವೀಕರಿಸುವ ಮನೋಧರ್ಮ ಇಲ್ಲದಿದ್ದಾಗ, ಅವುಗಳ ಕುರಿತಂತೆ ಅಧ್ಯನಗಳೇ ಹೆಚ್ಚು ಬರುತ್ತದೆ ಅನ್ನಿಸುತ್ತದೆ. ಈ ಹಿನ್ನೆಯಲ್ಲಿ ತುಳುವಿನಲ್ಲಿ ಬಂದ ಗದ್ಯ ಸಾಹಿತ್ಯಕ್ಕೆ ಶಾಸ್ತ್ರೀಯ ಚೌಕಟ್ಟಿನ ಅಧ್ಯಯನಾತ್ಮಕ ಗುಣವಿರುವುದನ್ನು ಗಮನಿಸಬಹುದು. ‘ಮದಿಪು’ ತ್ರೈಮಾಸಿಕದಲ್ಲಿ ಬಂದ ಪ್ರಬಂಧಗಳಲ್ಲಿ ವ್ಯಕ್ತಗೊಂಡ ಲೇಖಕರ ಇಂದಿನ ಅಧ್ಯಯನ ಶಿಸ್ತು, ಇತರ ಭಾಷಾ ಸಾಹಿತ್ಯ ಸಂಪರ್ಕ, ನಾವೀನ್ಯತೆಗಳಿಂದಾಗಿ ತುಳು ಪ್ರಬಂಧ ಸಾಹಿತ್ಯಕ್ಕೆ ಸಮಗ್ರತೆಯನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಮಾತ್ರವಲ್ಲ ಮುಂದಿನ ಬರಹಗಾರರಿಗೆ ಮಾದರಿಯೆನಿಸಿಕೊಳ್ಳುತ್ತವೆ.

ಹಾಸ್ಯ ಸಾಹಿತ್ಯ

ಮೂಲಭೂತವಾಗಿ ತುಳುಭಾಷೆಯಲ್ಲಿ ಪುಳಕಗೊಳ್ಳುವ ನವಿರಾದ ಲಯ, ಅದರ ಒಳಪದರದಲ್ಲಿ ಚೈತನ್ಯಯುಕ್ತ ಹಾಸ್ಯ ಮಿಶ್ರಣ, ಜೊತೆಗೆ ಇಂಪು, ಮಾಧುರ್ಯವಿದೆ. ಮಾತ್ರವಲ್ಲ ವ್ಯಂಗ್ಯ, ವಿಡಂಬನೆ, ವೈಯಾರ, ತೀಕ್ಷ್ಮಣತೆಗಳಿಗೆ ಹಿಗ್ಗುವ ಬಗ್ಗುವ ಸೊಗಸಾದ ಗುಣವಿದೆ. ಕನ್ನಡ ಭಾಷೆ ತುಳುನಾಡಿನ ಜನಜೀವನದಲ್ಲಿ ಸಾಮಾಜಿಕವಾಗಿ, ಆಡಳಿತ ಭಾಷೆಯಾಗಿ ಬೆಳೆಯುತ್ತಿದ್ದರೂ (ಅಂದಿನಿಂದಲೂ) ತುಳು ಕೆಲವು ಬ್ರಾಹ್ಮಣ ಹಾಗೂ ಬ್ರಾಹ್ಮಣೇತರ ಪಂಗಡದಲ್ಲಿ ಆಡುಭಾಷೆಯ ನೆಲೆಯಲ್ಲಿ ಸಮೃದ್ಧವಾಗಿಯೇ ಇದೆ. ಇದಕ್ಕೆ ಪ್ರಬಲ ಕಾರಣವೆಂದರೆ ಆ ಭಾಷೆಯಲ್ಲಿ ಸಂವಹನವಾಗುವ ಆತ್ಮೀಯ ಭಾವ, ಜೊತೆಗೆ ಸಮೃದ್ಧವಾದ ಸಂವಹನ ಸಾಧ್ಯತೆ. ಮಾತಿನಲ್ಲಿ ಹಾಸ್ಯಯುಕ್ತ ಗಾದೆ, ಒಗಟು, ಹಾಸ್ಯ ಚಟಾಕಿಗಳು ಹೇರಳವಾಗಿ ಬಳಸಲ್ಪಡುತ್ತಿದ್ದುದು ಕೂಡ ಈ ಕಾರಣದಿಂದಾಗಿ, ತುಳು ಜನಪದ ಸಾಹಿತ್ಯದಲ್ಲಿ ಮುಖ್ಯವಾಗಿ ಪಾಡ್ದನ, ಕಬಿತೆ, ಕಥೆ, ಗಾದೆ, ಒಗಟುಗಳಲ್ಲಿ ಸಾಕಷ್ಟು ಹಾಸ್ಯ, ವಿನೋದ, ವ್ಯಂಗ್ಯಗಳು ಮಿಳಿತವಾಗಿ ಸಾಹಿತ್ಯದ ಫಲಶ್ರುತಿಯ ಸಾಧ್ಯತೆಯನ್ನು ಹೆಚ್ಚಿಸಿವೆಯಲ್ಲದೆ, ಇಂದಿಗೂ ಲೋಕಸೃಷ್ಟಿಯ ಸಾರ್ಥಕತೆಯನ್ನು ಪಡೆದಿದೆ.

ತುಳು ಜನಪದರ ಬಾಯಿಮಾತಿನಲ್ಲಿ ಹಾಸ್ಯ ಹಾಸುಹೊಕ್ಕಿದ್ದರೂ, ಅವುಗಳು ಬರಹ ರೂಪಕ್ಕೆ ಇಳಿದುದು ತುಳುವಿನಲ್ಲಿ ಸಾಮಾಜಿಕ ನಾಟಕಗಳು ರಚನೆಯಾದ ಮೇಲೆ. ೧೯೩೩ರಲ್ಲಿ ಮಾಧವ ತಿಂಗಳಾಯರು ಬರೆದ ‘ಜನಮರ್ಲ್‌’ ನಾಟಕದಿಂದ ಮೊದಲ್ಗೊಂಡು ಕೆಮ್ತೂರು ದೊಡ್ಡಣ್ಣ ಶೆಟ್ಟಿ, ಕೆ. ಎನ್‌. ಟೈಲರ್‌, ಸಂಜೀವ ದಂಡಕೇರಿ, ಪಿ. ಎಸ್‌. ರಾವ್‌, ಬಾಲಕೃಷ್ಣ ಮುದ್ಯ, ಮಚ್ಚೇಂದ್ರನಾಥ ಪಾಂಡೇಶ್ವರ ಮುಂತಾದವರ ನಾಟಕಗಳು ಹಾಸ್ಯ ಲೇಪನದಿಂದಾಗಿ ಬಹಳ ಜನಪ್ರಿಯತೆ ಗಳಿಸಿದ್ದವು. ತುಳು ನಾಟಕಗಳಲ್ಲಿ ಹಾಸ್ಯ ಇಲ್ಲದೆ ನಾಟಕಗಳೇ ಬರೀ ಶೂನ್ಯ ಎಂಬುವಲ್ಲಿಗೆ ಜನಸಾಮಾನ್ಯರು ತೀರ್ಮಾನಕ್ಕೆ ಬಂದಂತೆ ಇಂದು ಕೂಡ ವರ್ತಿಸುತ್ತಾರೆ.

ಅದರಂತೆ ತುಳು ಯಕ್ಷಗಾನದಲ್ಲಿ ಹಾಸ್ಯ ಇಂದಿಗೂ ಕಾಣಬಹುದು. ಬಡಕಬೈಲು ಪರಮೇಶ್ವರಯ್ಯರು, ಪೆರುವಡಿ ಸಂಕಯ್ಯ ಭಾಗವತರಿಂದ ಹಿಡಿದು ದೇರಂಬಳ ತ್ಯಾಂಪಣ್ಣ ಶೆಟ್ಟಿ, ಕೆಮ್ತೂರು ದೊಡ್ಡಣ್ಣ ಶೆಟ್ಟಿ, ಕಿನ್ನಿಮಜಲು ಈಶ್ವರ ಭಟ್ಟ, ಪಂದಬೆಟ್ಟು ವೆಂಕಟರಾಯರು, ಅನಂತರಾಮ ಬಂಗಾಡಿ ಮುಂತಾದವರು ತುಳುಯಕ್ಷಗಾನ ಪ್ರಸಂಗಗಳನ್ನು ರಚಿಸಿದವರು. ನಿತ್ಯಾನಂದ ಕಾರಂತ ಪೊಳಲಿ, ಮನೋಹರ ಕುಮಾರ್‌, ರತ್ನಾಕರ ರಾವ್‌ಕಾವೂರು, ಬೊಟ್ಟಿಕೆರೆ ಪುರುಷೋತ್ತಮ, ತಾರಾನಾಥ ಬಲ್ಯಾಯ ಮುಂತಾದವರು ಹೊಸ ರೀತಿಯಲ್ಲಿ ಪ್ರಸಂಗಗಳನ್ನು ನೀಡಿ ಪ್ರೇಕ್ಷಕರಿಗೆ ಧಾರಾಳವಾಗಿ ಹಾಸ್ಯವನ್ನು ಉಣಬಡಿಸಿದರು.

ಆದರೆ ತುಳು ಗದ್ಯ ಸಾಹಿತ್ಯ ಪ್ರಕಾರದ ಆರಂಭದಲ್ಲಿ ಹಾಸ್ಯ ಬರಹಗಳು ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ೧೮೩೪ರಲ್ಲಿ ಬಂದಿಳಿದ ಬಾಸೆಲ್ ಮಿಶನ್‌ನ ಮಿಶನರಿಗಳು ನೀಡಿದ ತುಳು ಸಾಹಿತ್ಯದಲ್ಲಿ ಶೀರ್ಷಿಕೆಗಳು ಹಾಸ್ಯದ ಲೇಪನವಿದ್ದರೂ, ಒಳತಿರುಳು ಅಥವಾ ಒಳಮುಖದಲ್ಲಿ ಗಂಭೀರ ವಿಚಾರಗಳ ಪ್ರಸ್ತಾಪವಿದೆ. ಉದಾಹರಣೆಗೆ ‘ದೇವೆರೆನ್‌ ನಂಬಿನಾಯಗ್‌ ಇಂಬು, ನಂಬಂದಿನಾಯಗ್‌ ಅಂಬು’, ‘ಕ್ರೈಸ್ತೆರ್‌ ಕಲಿಗಂಗಸರ ಮಳ್ತ್‌ದ್‌ ಮಾರುನವು ಸಮಾದುಂಡಾ’ ಮುಂತಾದ ಪುಸ್ತಕಗಳು ಸಿಗುತ್ತವೆ. ನಂತರದಲ್ಲಿ ತುಳುನಾಟಕ, ತುಳು ಯಕ್ಷಗಾನದಲ್ಲಿ ಹೇರಳವಾಗಿ ಹಾಸ್ಯ ಪ್ರಸಂಗಗಳು ಬಂದು, ತುಳುವರ ಮನತುಂಬುತ್ತಿದ್ದರೂ, ತುಳುವಿನ ಗದ್ಯದಲ್ಲಿ ಹಾಸ್ಯ ವಿಡಂಬನೆ ಪ್ರತ್ಯೇಕವಾಗಿ ಮೂಡಿದ್ದು ೧೯೮೦ರ ನಂತರದಲ್ಲಿ. ಇಂತಹ ತುಳುವಿನ ಹಾಸ್ಯ ಸಾಹಿತ್ಯ ಪ್ರಕಾರದಲ್ಲಿ ಬೆರಳೆಣಿಕೆಯಷ್ಟು ಪುಸ್ತಕಗಳು ಬಂದಿವೆ. ಅವುಗಳಲ್ಲಿ ಮೊದಲಿಗೆ ಸಿಗುವಂತಾದ್ದು ‘ತುಳುವೆರೆ ಕುಸಾಲ್‌ ಕುಸೆಲ್‌’ (೧೯೮೭) ಎಂಬ ಹೊತ್ತಗೆ. ವಾಮನ ನಂದಾವರರು ಸಂಪಾದಿಸಿದ ಈ ಪುಸ್ತಕದಲ್ಲಿ ತುಳು ಜನಪದರು ಬೇರೆ ಬೇರೆ ಸಂದರ್ಭಗಳಲ್ಲಿ, ಮುಖ್ಯವಾಗಿ ಕೆಲಸದ ಸಂದರ್ಭಗಳಲ್ಲಿ, ಮುಖ್ಯವಾಗಿ ಕೆಲಸದ ಸಂದರ್ಭದಲ್ಲಿ ತಮ್ಮ ಕೆಲಸದ ನೋವು ಕಳೆದು ಮನಸ್ಸಿನಲ್ಲಿ ಉಲ್ಲಾಸಕ್ಕಾಗಿ ವಿನೋದದ ಮಾತುಗಳನ್ನಾಡಿ, ಒಬ್ಬರಿಗೊಬ್ಬರು ಸಂತೋಷಪಟ್ಟುಕೊಳ್ಳುವ, ಇನ್ನೊಬ್ಬನ ಹಾಸ್ಯ ಚಟಾಕಿಯಿಂದ ತನ್ನ ನೋವುಗಳನ್ನು ಮರೆಯುವ ಹಾಸ್ಯ ಪ್ರಸಂಗಗಳನ್ನು ಇಲ್ಲಿ ದಾಖಲಿಸುತ್ತಾರೆ. ಜನಪದರ ಆಡುಮಾತಿನಲ್ಲಿ ಕೆಲವು ವಿನೋದವಾಗಿದ್ದರೆ, ಇನ್ನು ಕೆಲವು ಚಾಟೂಕ್ತಿಗಳಾಗಿವೆ. ತುಳುವೆರೆ ಕುಸಾಲ್‌ ಕುಸೆಲ್‌ (ತುಳುವರ ತಮಾಷೆ ಹಾಗೂ ವ್ಯಂಗ್ಯ), ಮಾಮಿ ಇಂಚ! ಸೊಸೆ ಹೇಗೆ?), ಅಲ್ಲೆಗೆಲ್ಲ್‌ಡ್‌ ಮುಲ್ಲೆ ಪಕ್ಕಿ (ಅಲ್ಲಿ ಗೆಲ್ಲಿನಲ್ಲಿ ಮುಲ್ಲೆ ಹಕ್ಕಿ), ಪನ್ಯೆರಾವಂದ್‌ಪತ್ಯೆ ರಾವಂದ್‌ (ಹೇಳಲಾಗದು, ಹಿಡಿಯಲಾಗದು), ಎದುರು ಕತೆಕೊಂಜಿ ಪಿರವುಕತೆ (ಎದುರುಕತೆಗೊಂದು ಹಿಂದಿನ ಕತೆ), ಮಣ್ಣ್‌ಕಮ್ಮೆನೊದ ಪದಕುಲು (ಮಣ್ಣುವಾಸನೆಯ ಪದಗಳು), ಜೋಕುಳೆ ಕಲ್ಪೋ (ಮಕ್ಕಳೇ ಕಲಿವರು), ಪಾಡ್ದನೊಡು ತುಳುವೆರೆ ಗೊಬ್ಬು (ಪಾಡ್ದನಗಳಲ್ಲಿ ತುಳುವರ ಆಟಗಳು), ಭೂತಾರಾಧನೆಡ್‌ಸಾಹಿತ್ಯದ ಪೊರ್ಲು ಪೊಲಿಕೆ (ಭೂತಾರಾಧನೆಯಲ್ಲಿ ಸಾಹಿತ್ಯದ ಚೆಲುವು) ಮುಂತಾದ ವಿಭಾಗಗಳಲ್ಲಿ ತುಳುವರ ಮಾತಿನಲ್ಲಿ ಪ್ರಾಸ, ವ್ಯಂಗ್ಯದೊಂದಿಗೆ ಧ್ವನಿ, ಅಲಂಕಾರ, ಪ್ರತಿಮೆ, ಸಾಂಕೇತಿಕತೆಯ ಜೊತೆಗೆ ಕೇಳುಗರ ಮನಸ್ಸಿಗೆ ಸಂತೋಷವೂ, ಬುದ್ಧಿಗೆ ಚುರುಕು ಮುಟ್ಟಿಸುವ ಹಾಸ್ಯ ಹೇಗೆ ಮೂಡಿಬಂದಿದೆ ಎಂಬುದನ್ನು ಹೇಳುತ್ತಾ, ತುಳುವರ ಸೃಜನಶೀಲ, ಸೃಷ್ಟಿಶೀಲ ಭಾಷಿಕ ಭಂಡಾರವನ್ನು ಒಡೆದು ತೋರಿಸುವ ಕೆಲಸವನ್ನು ವಾಮನ ನಂದಾವರರ ಈ ಹೊತ್ತಿಗೆ ಮಾಡುತ್ತದೆ.

ತುಳುಟು ಪನಿಕತೆ (ಪಗ್ಗೆ ಒಂಜಿ)-(೧೯೮೮)-ವಾಮನ ನಂದಾವರರ ಈ ಪುಸ್ತಕ ತುಳುವಿನಲ್ಲಿ ಪ್ರಚಲಿತವಿರುವ ಗಾದೆ, ನುಡಿಗಟ್ಟುಗಳ ಹಿಂದಿರುವ, ಜನಪದರಾಡಿಕೊಳ್ಳುವ ಪುಟ್ಟ ಕತೆಯನ್ನು ನಿರೂಪಿಸುತ್ತದೆ. ಈ ಕತೆಗಳ ಒಳಗಿರುವ ನೀತಿ, ಆದರ್ಶ, ನಿರೂಪಣೆಗಳು ತುಳುವರಲ್ಲಿ ಬಾಯಿಂದ ಬಾಯಿಗೆ ಹರಿದುಬಂದಿದ್ದನ್ನು, ವಾಮನ ನಂದಾವರರು ಒಂದಷ್ಟು ಒಪ್ಪ ನೀಡಿ, ಸುಮಾರು ೧೬ ಪುಟ್ಟ ಕತೆಗಳನ್ನು ಕೊಡುತ್ತಾರೆ. ಇದೇ ರೀತಿ ತುಳುಟು ಪನಿಕತೆ (ಪಗ್ಗೆ ರಡ್ದ್‌) ಎಂಬ ಉಪಶೀರ್ಷಿಕೆಯಡಿಯಲ್ಲಿ ‘ಒಂಜಿ ಕೋಪೆ ಕತೆಕುಲು’ (೧೯೮೮) ಎಂಬ ಹೆಸರಿನಲ್ಲಿ ಮತ್ತೊಂದು ಪುಸ್ತಕವನ್ನು ಪ್ರಕಟಿಸಿದ್ದಾರೆ. ಹನಿಕತೆ, ಗಾದೆ, ಒಗಟು (ಎದುರುಕತೆ)ಗಳನ್ನು ಹಿರಿಯರ ಬಾಯಿಂದ ಕೇಳಿಸಿಕೊಂಡು, ಅವುಗಳ ಸತ್ಯಾಸತ್ಯತೆ, ಅನುಭವದೊಂದಿಗೆ ಇರುವ ವಿಮರ್ಶಕ, ಚಿಕಿತ್ಸಕ ಮನೋಧರ್ಮವನ್ನು ನಗುವಿನಲ್ಲೇ ಉಣಬಡಿಸುವ ಜನಪದ ಮನಸ್ಸನ್ನು ವಾಮನ ನಂದಾವರರು ಸಂಗ್ರಹಿಸಿದ ಈ ಕತೆಗಳಲ್ಲಿ ನಾವು ಕಾಣಬಹುದು. ‘ಒಂಜಿ ಕೋಪೆ ಕತೆಕುಲು’ (೧೯೮೮)ಈ ಪುಸ್ತಕದಲ್ಲಿ ೨೫ ಹಾಸ್ಯಕತೆಗಳಿವೆ.

ಅದೇ ವರ್ಷ ಬಂದ ಇನ್ನೊಂದು ಕೃತಿಯೆಂದರೆ ‘ಬೆಸ್ನೀರ್‌ಕೇಣ್ವೇ!’ (ಶಿವಳ್ಳಿ ಬ್ರಾಹ್ಮಣೆಕ್ಕೆನೊ ತುಲು ಭಾಷೆಡ್‌ಹಾಸ್ಯಕೃತಿ)-(೧೯೮೮)-ಪಿ. ಈಶ್ವರ ಭಟ್ಟ, ಪುತ್ತಿಗೆಯವರದ್ದು. ತುಳುಕೂಟ ಸದಸ್ಯರಾಗಿದ್ದ ಪಿ. ಈಶ್ವರ ಭಟ್ಟರು ಶಿವಳ್ಳಿ ಬ್ರಾಹ್ಮಣರ ತುಳುವಿನಲ್ಲಿ ತುಳುಕೂಟದ ಪತ್ರಿಕೆಯಲ್ಲಿ, ಜೊತೆಗೆ ತುಳುನಾಡು, ತುಳುಸಿರಿ ಪತ್ರಿಕೆಯಲ್ಲಿ ಹಾಸ್ಯಲೇಖನ ಬರೆಯುತ್ತಿದ್ದರು. ನಾಟಕ, ಯಕ್ಷಗಾನ, ಹರಿಕಥೆ ಮುಂತಾದ ಕಲಾವಿಭಾಗಗಳಲ್ಲಿ ಕಲಾವಿದರಾಗಿದ್ದ ಈಶ್ವರ ಭಟ್ಟರು ಗ್ರಾಮೀಣ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರು. ಭಾಮಿನಿ ಷಟ್ಪದಿಯಲ್ಲಿ ಹಲವಾರು ಕೃತಿ ರಚಿಸಿದ ಶ್ರೀ ಭಟ್ಟರು ಬೆಸ್ನೀರ್‌ಕೇಣ್ವೇ (ಬಿಸಿ ನೀರು ಕೇಳುತ್ತಾನೆ) ಎಂಬ ಸ್ವತಂತ್ರ, ಸೃಜನಶೀಲ ಹಾಸ್ಯ ಕೃತಿಯನ್ನು ನೀಡಿದ ಮೊದಲಿಗರೆನಿಸಿಕೊಳ್ಳುತ್ತಾರೆ. ಈ ಕೃತಿಯಲ್ಲಿ ಮೂರು ಪ್ರಸಂಗಗಳನ್ನು ಉಲ್ಲೇಖಿಸುತ್ತಾರೆ. ಬೆಸ್ನೀರ್‌ಕೇಣ್ವೆ, ಮದಿಮೆದೋ ಮಾಣ್ಯಪ್ಪು, ಎಚ್ಚಣ್ಣನೊ ಜಾಂಬವ ವೇಷ ಎಂಬ ಈ ಪ್ರಸಂಗಗಳಲ್ಲಿನ ನಾಟಕೀಯ ಮಾತು ಮತ್ತು ಘಟನೆಗಳಿಂದ ಓದುಗರಿಗೆ ನಗು ಬರಿಸುತ್ತದೆ.

ಮಾಮಿ-ಮರ್ಮಾಲ್‌ (ಅತ್ತೆ-ಸೊಸೆ) (೧೯೯೫) ಎಂಬ ಕೃತಿಯನ್ನು ಕೆ. ಅಶೋಕ ಎಂ. ಭಂಡಾರಿಯವರು ನೀಡಿದರು. ಸುಮಾರು ೭ ಪುಟ್ಟ ಹಾಸ್ಯ ಪ್ರಸಂಗಗಳ ಸಂಕಲನದ ಪುಟ್ಟ ಪುಸ್ತಕ, ತುಳುವರಲ್ಲಿ ಓದುವ ಸಾಧ್ಯತೆಗಳು ಹೆಚ್ಚಾದಾಗ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕಗಳು ಜಾಸ್ತಿ ಬಂದುವು. ಹಾಸ್ಯದ ಬರಹಗಳು ಸೃಜನಶೀಲ ನೆಲೆಯಲ್ಲಿ ಸೃಷ್ಟಿಯಾದವು. ಅವುಗಳಲ್ಲಿ ಕೋಡು ಭೋಜ ಶೆಟ್ಟಿಯವರು ಬರೆದ-ಪುಲಿ-ಮುಂಚಿ’ (ಹುಳಿ-ಮೆಣಸು) -(೨೦೦೧) ಬಹಳ ಪ್ರಮುಖವಾಗುತ್ತದೆ. ಪುತ್ತಿಗೆ ಈಶ್ವರ ಭಟ್ಟರ ಹಾಸ್ಯ ಬರಹಗಳ ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ರಚನೆಯಾದುದೆಂದರೆ ಕೋಡು ಭೋಜ ಶೆಟ್ಟಿಯವರಿಂದಲೇ ಸಾಹಿತ್ಯ ಲಹರಿ ಪ್ರಕಾಶನ ಔರಂಗಾಬಾದ್‌ನಿಂದ ಪ್ರಕಟಗೊಂಡ ಈ ಪುಸ್ತಕದಲ್ಲಿ ಸುಮಾರು ೩೫೦ರಷ್ಟು ತುಳು ಹಾಸ್ಯ ಚುಟುಕುಗಳಿವೆ. ನಕ್ಕು ಕಲಿಸುವ ಈ ಚುಟುಕುಗಳು ಕಥಾನಕ ರೂಪದಲ್ಲಿರದೆ, ಅವುಗಳು ೫ ಸಾಲಿನ ಪದ್ಯ ರೂಪದಲ್ಲಿದ್ದರೂ, ಓದುವಾಗ ಗದ್ಯದ ಅನುಭವವಾಗುವುದು ಇದರ ವೈಶಿಷ್ಟ್ಯ. ನಡುನೆತ್ತಿ ಎನ್ನುವಂತಹ ಚುಟುಗೊಂದು ಹೀಗಿದೆ ನೋಡಿ:

ಎನ್ನ ಬೋರು ಮಂಡೆ ತೂದು ದೋಸ್ತಿ ಪಂಡೆ
ಈರ್‌ ದಿನ ಪೋಯಿಲೆಕ್ಕ ಉದ್ದ ಆಪರ?
ದಾಯೆ ಕೇಂಡಿನೆಕ್ಕ್‌ ಪಂಡೆ – ಇಂಚಪ್ಪ
ಇರೆನ ಮಂಡೆದ ಕುಜಲ್‌ಸೈಡ್‌ ಪತೊಂದುಂಡು
ನಡುನೆತ್ತಿ ಮಿತ್ತ್‌ ತೋಜೊಂದುಂಡು!
(ನನ್ನ ಬೋಳುಮಂಡೆ ನೋಡಿ ಗೆಳೆಯ ಹೇಳಿದ
ನೀವು ದಿನ ಹೋದಂತೆ ಉದ್ದ ಆಗುತ್ತೀರಾ?
ಯಾಕೆ ಎಂದು ಕೇಳಿದ್ದಕ್ಕೆ ಹೇಳಿದ – ಈಗೀಗ
ನಿಮ್ಮ ತಲೆಯ ಕೂದಲು ಪಕ್ಕಕ್ಕೆ ಅಂಟಿಕೊಂಡು
ನಡುನೆತ್ತಿ ಮೇಲೆ ಕಾಣುತ್ತಿದೆ)

ಇಂತಹ ರಚನೆಗಳು ಕೇವಲ ಹಾಸ್ಯದ ಚಟಾಕಿಯಾಗಿರದೆ, ಸಮೃದ್ಧ ಜೀವನ ದರ್ಶನವನ್ನು ಮಾಡುತ್ತದೆ. ಮುಂಬೈಯಲ್ಲಿರುವ ಕೋಡು ಭೋಜ ಶೆಟ್ಟಿಯವರು ತುಳು ಕವಿತೆ, ನಾಟಕ, ಕತೆ ಬರಹಗಾರರಾಗಿ ಪ್ರಸಿದ್ಧರು. ಪುಲಿ -ಮುಂಚಿಯ ಮೂಲಕ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಹಾಸ್ಯ ಚಟುವಟಿಕೆಗಳನ್ನು ನೀಡಿದ ಸಾಹಿತ್ಯಕ್ಕೆ ಕೋಡು ಮೂಡಿಸಿದವರು.

ಮುಂದೆ ಇಂತಹುದೇ ರೀತಿಯಲ್ಲಿ ಗದ್ಯ ಕತೆಗಳನ್ನು ನೀಡಿದವರು ಆ ಬಾಲಕೃಷ್ಣ ಶೆಟ್ಟಿ ಪೊಳಲಿಯವರು. ಅವರ ‘ತೆಲ್ಪು ತೆಲಿಕೆದ ಕತೆಕುಲು’ (೨೦೦೨)- ಸಣ್ಣ ನಗುವಿನ ಕತೆಗಳು) ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದ್ದು, ಇದರಲ್ಲಿ ೮೫ ಕತೆಗಳಿವೆ. ಕೇವಲ ಒಂದೇ ಒಂದು ಘಟನೆಯ ನಿರೂಪಣೆಯಲ್ಲಿ ಹಾಸ್ಯದ ಹೊನಲನ್ನು ಹರಿಸುವ ಕತೆಗಳಾಗಿದ್ದು ಬದುಕಿನ ಬೇರೆ ಬೇರೆ ಮಗ್ಗುಲಿನಿಂದ ಹರಿದು ಬಂದಿದೆ. ಕೋರ್ಟು ಕಚೇರಿಯ ಕತೆಗಳು, ಬೊಗ್ಗು ಪುರಾಣ, ತಿಂಡಿ ತಿನಸಿನ ಕತೆಗಳು, ಆಟ ಕೂಟದ ಕತೆಗಳು, ಬಿರುದು ಬಾವಲಿಯ ಕತೆಗಳು, ಅತಿಥಿ ಪುರಾಣ, ಸುಮ್ಮನೆ ಚರ್ಚೆ, ಬಾದರಾಯಣ ಸಂಬಂಧ, ಹಣ ಆಭರಣಗಳ ಕತೆಗಳು ಹೀಗೆ ವಿಭಾಗೀಕರಣಕೊಂಡು ಓದುಗರಿಗೆ ಅಲ್ಲಲ್ಲಿನ ಸೂಕ್ಷ್ಮ ಪರಿಚಯದೊಂದಿಗೆ, ಬದುಕಿನ ಬೇರೆ ಬೇರೆ ವಿನ್ಯಾಸಗಳನ್ನು, ವಿಷಾದಗಳನ್ನು ತೆರೆದು ತೋರಿಸುತ್ತದೆ. ಆಟ, ಕೂಟ, ತುಳು ಮದ್ದಳೆ, ಅಂಗಡಿ, ಹೊಟೇಲು ಹೀಗೆ ಬೇರೆ ಆವರಣಗಳಲ್ಲಿ ಹುಟ್ಟಿಕೊಳ್ಳುವ, ಹುಟ್ಟಿಕೊಂಡ ಕತೆಗಳಾಗಿದ್ದು, ವ್ಯಕ್ತಿಯ ಒಳಹೊರಗು, ಒಂದು ಜನಾಂಗದ ಯಾವ ಒಂದು ಸಂಸ್ಕೃತಿಯ ಸೂಕ್ಷ್ಮವಾಗಿ ಹೇಳುವ ಕತೆಗಳಾಗಿದ್ದು, ಪಟ್ಟಾಂಗದ ಸಂದರ್ಭಗಳಲ್ಲಿ ಬಿಚ್ಚಿಕೊಳ್ಳುತ್ತವೆ, ಅವುಗಳನ್ನು ಕ್ರೋಢೀಕರಿಸಿ ಅ. ಬಾಲಕೃಷ್ಣ ಶೆಟ್ಟಿ ಪೊಳಲಿಯವರು ನೀಡಿದ್ದಾರೆ.

ಈಶ್ವರ ಪುರಾಣ ಭಾಗ-೨ (೨೦೦೩) – ಪುತ್ತಿಗೆ ಈಶ್ವರ ಭಟ್ಟರು ಬರೆದಿರುವ ತುಳುಹಾಸ್ಯ ಕೃತಿ. ೧೯೭೯ರಲ್ಲಿ ಈಶ್ವರ ಪುರಾಣ ಭಾಗ-೧ನ್ನು ಭಾಮೀನಿ ಷಟ್ಪದಿಯಲ್ಲಿ ಈಶ್ವರ ಭಟ್ಟರು ರಚಿಸಿದ್ದು, ಅವುಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ. ೧೯೮೨ರಲ್ಲಿ ಈಶ್ವರ ಪುರಾಣ ಭಾಗ-೨ ಪ್ರಥಮ ಮುದ್ರಣ ಕಂಡಿತ್ತು. ೨೦೦೩ರ ದ್ವಿತೀಯ ಮುದ್ರಣಗೊಂಡ ಈಶ್ವರ ಪುರಾಣ ಭಾಗ-೨ರಲ್ಲಿ ಶಿವಳ್ಳಿ ಬ್ರಾಹ್ಮಣರ ತುಳುವಿನಲ್ಲಿ ‘ಪರ್ಕಟ್‌ ಪಕ್ಷೊಂಕ್ಳೆನೊ ಕುಳಿಪ್ಪಟ್‌ ಮನುಷ್ಯೆರ್‌ ಕೆರೆ!’ (ಹರುಕು ಮುರುಕು ಪಕ್ಷಿಗಳ ಕೊಳೆತ ಮನುಷ್ಯರು) ಎಂಬ ಪ್ರಸಂಗದಲ್ಲಿ ನಿರೂಪಿಸುತ್ತಾರೆ. ವಿವಿಧ ರಾಜಕೀಯ ಪಕ್ಷಗಳ ಮತಯಾಚನೆ, ಭಾಷಣ, ಪಕ್ಷಗಳ ಚಿಹ್ನೆಗಳ ಅವ್ಯವಸ್ಥೆ, ಮತಕ್ಕಾಗಿ ಮಾಡುವ ಕಸರತ್ತುಗಳು ಮುಂತಾದುದನ್ನು ವ್ಯಂಗ್ಯ, ವಿಡಂಬನಾತ್ಮಕವಾಗಿ ಹೇಳುತ್ತಾ, ಸ್ವಾತಂತ್ರ್ಯೋತ್ತರ ಭಾರತದ ಚುನಾವಣೆಗಳ ಹಿಂದಿರುವ ಅಧಿಕಾರ ಲಾಲಸೆ, ಹಣ ದುರುಪಯೋಗ ಮುಂತಾದವುಗಳಿಗಾಗಿ ಜನ ತಮ್ಮ ಮಾನವನ್ನು ಹೇಗೆ ಹರಾಜು ಹಾಕುತ್ತಾರೆ ಎಂಬುದನ್ನು ಮಾರ್ಮಿಕವಾಗಿ ಹಾಸ್ಯಲೇಪನದೊಂದಿಗೆ ಹೇಳುವ ಈಶ್ವರ ಭಟ್ಟರು ಗದ್ಯ ಹಾಸ್ಯ ಸಾಹಿತ್ಯ ರಚನೆಯಲ್ಲಿ ಮಿಂಚಿದವರು. ವಿವಿಧ ತುಳು ಪತ್ರಿಕೆಗಳಲ್ಲಿ ಹಾಸ್ಯ ಲೇಖನಗಳನ್ನು ಬರೆದಿರುವ ಈಶ್ವರ ಭಟ್ಟರು ಸಂಗ್ರಹದಲ್ಲಿ ಎರಡು ಅಪ್ರಕಟಿತ ಹಾಸ್ಯ ಕೃತಿಗಳಿವೆ.’ ಎನ್ನೊ ಹಣೆಬರ ಪಂಡೆ ಆತಂತೆ ಎರೇರ್ನೊ ಹಣೆಬರೊಂಕ್ಳು’ (ನನ್ನ ಹಣೆಬರಹ ಹೇಳಿದರೆ ಅಷ್ಟಲ್ಲದೆ ಯಾರ್ಯಾರಾದೋ ಹಣೆಬರಹಗಳು) ಇದರಲ್ಲಿ ೧೨೮ ಹಾಸ್ಯ ಲೇಖನಗಳಿವೆ. ಇನ್ನೊಂದು ‘ಗೋಪಾಲೆ ಭಾರೀ ವ್ಯಾಪಾರ ಅಂತರಕೆರೆ, ಆತಂತೆ ಬೇತೆ ಏತೋ ವೈವಾಟುಳು’ ಗೋಪಾಲೆ ಭಾರೀ ವ್ಯಾಪಾರ ಅಂತರಕೆರೆ, ಆತಂತೆ ಬೇತೆ ಏತೋ ವೈವಾಟುಳು’ (ಗೋಪಾಲ ಭಾರೀ ವ್ಯಾಪಾರ ಮಾಡಿದ್ದಾನಂತೆ, ಅಲ್ಲದೆ ಬೇರೆ ಎಷ್ಟೋ ವಹಿವಾಟುಗಳು) ಎಂಬ ೬೯ ಹಾಸ್ಯ ಲೇಖನಗಳ ಸಂಗ್ರಹ ಅವರಲ್ಲಿದೆ. ಇದಲ್ಲದೆ ೫೬೮ರಷ್ಟು ಹಾಸ್ಯ ಲೇಖನಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದಿದ್ದಾರೆ. ೯೨೧ ಹೊಸ ಗಾದೆಗಳನ್ನು ನೀಡಿರುವ ಈಶ್ವರ ಭಟ್ಟರು, ತುಳುವಿನಲ್ಲಿ ೧೧ ಕಾದಂಬರಿಗಳನ್ನು, ೧೩೫೫ ವಚನಗಳನ್ನು, ೮೮ ನವ್ಯ ಕವಿತೆಗಳನ್ನು ೪ ನಾಟಕಗಳನ್ನು ಬರೆದಿದ್ದಾರೆ. ತುಳು ಸಾಹಿತ್ಯದ ಬೆಳವಣಿಗೆಯಲ್ಲಿ ಅಪಾರ ದೇಣಿಗೆ ಸಲ್ಲಿಕೆಯಾಗಿರುವುದು ಮುಖ್ಯವಾಗಿ ಈಶ್ವರ ಭಟ್ಟರಿಂದ ಅದೂ ಹಾಸ್ಯ ಸಾಹಿತ್ಯ ಪ್ರಕಾರದಲ್ಲಿ.

‘ಜೋಕುಳು ತೆಲಿಪುಲೆ ತುಕಾs’(೨೦೦೩) ಎಂಬ ಕೃತಿ ರತ್ನಾಕರ ಶೆಟ್ಟಿ ಮುಂಬಯಿ ಇವರಿಂದ ರಚಿತವಾದುದು. ಮಕ್ಕಳೇ ನಗಾಡಿ ನೋಡುವಾ (ಜೋಕುಳು ತೆಲಿಪುಲೆ ತುಕಾs) ಈ ಕೃತಿಯಲ್ಲಿ ಮುನ್ನೂರಕ್ಕೂ ಮಿಕ್ಕಿ ತುಳು ಹಾಸ್ಯ ಚುಟುಕುಗಳಿವೆ. ಕೋಡು ಭೋಜ ಶೆಟ್ಟಿಯವರ ಪುಲಿಮುಂಚಿ (ಹುಳಿ-ಮೆಣಸು)ಯಂತೆಯೇ ಇದು ಕೂಡ ೫ ಸಾಲಿನ ಚುಟುಕುಗಳ ರೂಪದಲ್ಲಿ, ಸಮಾಜದಲ್ಲಿ, ಬದುಕಿನಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಸಂಭವಿಸುವ ತಮಾಸೆಯ ಘಟನೆಗಳನ್ನು, ಸಂದರ್ಭಗಳನ್ನು ನಿರೂಪಿಸುತ್ತದೆ. ಪೋಂಕ್ರ ಎಂಬ ನಾಯಕ ಎಲ್ಲಾ ಚುಟುಕಗಳಲ್ಲಿ ಕಂಡುಬರುತ್ತಾನೆ. ‘ನಗಲು ಮುನ್ನೂರು ಕಾರಣಗಳು’ ಎಂಬ ಉಪಶೀರ್ಷಿಕೆಯನ್ನು ನೀಡಿರುವ ರತ್ನಾಕರ ಶೆಟ್ಟಿಯವರ ಚುಟುಕುಗಳು ಬಾಯಿ ತುಂಬಾ ನಗಿಸುತ್ತವೆ ಜೊತೆಗೆ ಆಲೋಚನೆಗೂ ಹಚ್ಚುತ್ತವೆ. ಉದಾಹರಣೆಗೆ-

ಇತ್ತಿನೆನ್‌ ಕೇನೊಡಾ? (ಇದ್ದದ್ದನ್ನು ಕೇಳಬೇಕಾ?)
ದೇವಸ್ಥಾನೊಗೊ ಮೂಜಿ ವರ್ಷದ ಬಾಲೆ ಪೋಂಕ್ರನ್‌
ಅಪ್ಪೆಮ್ಮೆ ಲೆಸೊಂದು ಪೋಪೆರ್‌, ಅಪ್ಪೆ
ದೇವೆರೆಗ್‌ ಅಡ್ಡ ಬೂರ್ದು ಬುದ್ಧಿ ಕೊರ್ಲೋಂದ್‌ ಪನ್‌
ಮಗಾ ಇಂದ್‌ದ್‌ ಪಂಡಿನೆಕ್ಕ್‌, ಪಿರತಿರ್ಗ್‌ದ್‌
ಬಾಲೆ ಕೇನುಂಡು, ನಂಕ್‌ ಬುದ್ಧಿ ಉಪ್ಪುಜಾ?
(ದೇವಸ್ಥಾನಕ್ಕೆ ಮೂರು ವರ್ಷದ ಮಗು ಪ್ರೋಂಕನನ್ನು
ತಂದೆ ತಾಯಿ ಕರೆದುಕೊಂಡು ಹೋಗುತ್ತಾರೆ, ಅಮ್ಮ
ದೇವರಿಗೆ ಅಡ್ಡ ಬಿದ್ದು, ಬುದ್ದಿ ಕೊಂಡೂಂತ ಕೇಳಿಕೋ
ಮಗಾ ಅಂತ ಹೇಳಿದ್ದಕ್ಕೆ, ಹಿಂದೆ ನೋಡಿ
ಮಗು ಕೇಳುತ್ತದೆ! ನಮಗೆ ಬುದ್ಧಿ ಇರುವುದಿಲ್ಲವೇ?)

ಇದೊಂದು ಮಾದರಿ. ಚಿಂತನೆಗೆ ಹಚ್ಚುವ ಇಂತಹ ಮುನ್ನೂರು ಹಾಸ್ಯ ಚಟಾಕಿ ‘ಜೋಕುಳು ತೆಲಿಪುಲೆ ತುಕಾs’ ಹೊತ್ತಗೆಯಲ್ಲಿದೆ. ತುಳು ಸಾಹಿತ್ಯದ ಹಾಸ್ಯ ಕಣಜಕ್ಕೆ ಇದೊಂದು ಅತ್ಯುತ್ತಮ ಸೇರ್ಪಡೆ. ಇದಲ್ಲದೆ ತುಳು ಅಕಾಡೆಮಿಯ ಮದಿಪು ತ್ರೈಮಾಸಿಕದಲ್ಲಿ ಒಂದೆರಡು ಹಾಸ್ಯ ಲೇಖನಗಳು ಪ್ರಕಟಗೊಂಡಿವೆ.

ತುಳು ಭಾಷೆಯಲ್ಲಿ ಮಾತನಾಡುವವರಿಗಿಂತಲೂ ಓದುಗರ ಸಂಖ್ಯೆ ತೀರಾ ಕಡಿಮೆ. ಈ ಭಯದಿಂದಲೋ ಅಥವಾ ಪ್ರಕಟಣೆಯ ಭಯದಿಂದಲೋ, ಒಟ್ಟಿನಲ್ಲಿ ತುಳುವಿನಲ್ಲಿ ಹೇರಳವಾಗಿ ಹಾಸ್ಯ ಕೃತಿಗಳು ಬರುತ್ತಿಲ್ಲ. ಲೇಖಕರ ಕೊರತೆ ಒಂದೆಡೆಯಾದರೆ, ಇಂದಿನ ಸಮೂಹ ಮಾಧ್ಯಮಗಳು ಇತ್ಯಾದಿಗಳ ಭರಾಟೆಯಿಂದ ತುಳುವಿನಲ್ಲಿ ಸಾಹಿತ್ಯ ಕೃಷಿ ಅಷ್ಟೊಂದು ಭರದಿಂದ ಸಾಗುತ್ತಿಲ್ಲ. ಆದರೂ ೧೯೩೦, ೪೦ರ ದಶಕಕ್ಕೆ ಹೋಲಿಸಿದರೆ ತುಳುವಿನಲ್ಲಾಗುತ್ತಿರುವ ಈಗಿನ ಸಾಹಿತ್ಯ ಕೃಷಿ ಮೆಚ್ಚುವಂತಾದ್ದೇ ಆಗಿದೆ. ವಾಮನ ನಂದಾವರರ ತುಳುವೆರೆ ಕುಸಾಲ್‌ಕುಸೆಲ್‌ಬಂದ ನಂತರ ಇಂದು ತುಳು ಹಾಸ್ಯದ ಸೃಜನಶೀಲ ಗದ್ಯ ಬರಹಗಳಲ್ಲಿ ಸಮಕಾಲೀನ ಯುಗ ಧರ್ಮದ ಮೌಲ್ಯ, ಮಾಹಿತಿ, ದರ್ಶನ, ಜೊತೆಗೆ ಬದುಕಿನ ಕುರಿತಾದ ಚರ್ಚೆಯನ್ನು ವ್ಯಂಗ್ಯ, ವಿನೋದದ ಮೂಲಕ ದಾಖಲಿಸಿರುವುದು ನಿಜವಾಗಲೂ ಪ್ರಶಂಸನೀಯ ಸಂಗತಿ ಮಾತ್ರವಲ್ಲ, ಸಾಹಿತ್ಯದ ಚಲನಶೀಲತೆಯ ಸಂಕೇತವೂ ಆಗಿದೆ.

ಆಕರಸೂಚಿ

೧.ಎಂ. ಜಾನಕಿ ಬ್ರಾಹ್ಮಾವರ, ೧೯೯೬ ತಿರ್ಗಾಟದ ತಿರ್ಲ್‌. ಹೇಮಾಂಶು ಪ್ರಕಾಶನ, ದೃಶ್ಯ, ಗೊಲ್ಲಚ್ಚಿಲ್‌, ದೇರೆಬೈಲ್‌, ಮಂಗಳೂರು-೫೭೬-೨೧೩.

೨. ಡಿ. ಸುವಾಸಿನಿ ಹೆಗ್ಡೆ, ೧೯೯೮, ದೇಸಾಂತ್ರೊಡು, ಹೇಮಾಂಶು ಪ್ರಕಾಶನ, ದೃಶ್ಯ, ಗೊಲ್ಲಚ್ಚಿಲ್‌, ದೇರೈಬಲ್‌, ಮಂಗಳೂರು-೫೭೬-೨೧೩.

೩. ಬಿ. ಎ. ಪ್ರಭಾಕರ ರೈ, ೨೦೦೫, ನೇಪಾಲ ಅಮೆರಿಕಾ ಪ್ರವಾಸ, ಸಾತ್ವಿಕ ಪ್ರಕಾಶನ, ೩೪೫, ಸಮೃದ್ಧ, ಲಕ್ಷ್ಮೀ ರಸ್ತೆ, ೭ನೇ ತಿರುವು, ಶಾಂತಿನಗರ, ಬೆಂಗಳೂರು-೨೭

೪. ಸತ್ಯಮಿತ್ರ ಬಂಗೇರ, ೧೯೩೦, ಅಳಿಯ ಸಂತಾನ ಕಟ್ಟ್‌ದಗುಟ್ಟು, ತುಳುವ ಸಾಹಿತ್ಯ ಮಾಲೆ, ಶ್ರೀಕೃಷ್ಣ ಪ್ರೆಸ್‌, ಉಡುಪಿ.

೫. ಪೀಟರ್‌ವಿಲ್ಸನ್‌ಪ್ರಭಾಕರ್‌, ೧೯೯೭, ಸತ್ಯಮಿತ್ರ ಬಂಗೇರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಾಲ್‌ಬಾಗ್‌, ಮಂಗಳೂರು-೩

೬. ನಾಗರಾಜ ಪೂವಣಿ, ೧೯೯೭, ಧರ್ಮಸ್ಥಳ ಶ್ರೀ ಮಂಜಯ್ಯ ಹೆಗ್ಗಡೆಯವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಾಲ್‌ಬಾಗ್‌, ಮಂಗಳೂರು-೩

೭. ಧರ್ಮಸ್ಥಳ ಮಂಜಯ್ಯ ಹೆಗ್ಗಡೆ, ೧೯೪೨, ಜೈನೆರ್‌, ಸರಸ್ವತೀ ಪ್ರಿಂಟಿಂಗ್‌ ವರ್ಕ್ಸ್‌ ಲಿಮಿಟೆಡ್‌, ಮಂಗಳೂರು.

೮. ರಾಮಕೃಷ್ಣ ಟಿ. ಶೆಟ್ಟಿ, ೧೯೮೮, ತುಳು ಸಂಪೊತ್ತು, ತುಳುವೆರ್‌ ಪ್ರಕಾಶನಾಲಯ, ನ್ಯೂದೆಹಲಿ.

೯. ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ, ೧೯೮೯, ಪಾತೆರ ಕತೆ, ಹೇಮಾಂಶು ಪ್ರಕಾಶನ, ಕಾಟಪಳ್ಳ,

೧೦. ಮ. ವಿಠಲ ಪುತ್ತೂರು, ೧೯೯೭, ಪಣೆ ಪಣೆ ತುಡರ್‌, ತುಳು ಅಭಿಮಾನಿ ಬಂಧುಗಳು, ಮಂಗಳೂರು.

೧೧. ಗಣೇಶ ಅಮೀನ್‌ ಸಂಕಮಾರ್‌, ೧೯೯೮, ತುಳುನಡಕೆ, ‘ಸಿರಿ’ ಪ್ರಕಾಶನ, ಅಗೋಳಿ ಮಂಜಣ ಜಾನಪದ ಕೇಂದ್ರ, ಪಾವಂಜೆ, ಹಳೆಯಂಗಡಿ-೫೭೪ ೧೪೬

೧೨. ಮುದ್ದು ಮೂಡುಬೆಳ್ಳೆ, ೧೯೯೯, ಪೂವರಿ, ಸಾಹಿತ್ಯ ಸಂಸ್ಕೃತಿ ವೇದಿಕೆ, ಬೆಳ್ಳೆ ಅಂಚೆ: ಮೂಡುಬೆಳ್ಳೆ -೫೭೬ ೧೨೦, ಉಡುಪಿ.

೧೩. ಸುನೀತಾ ಎಂ. ಶೆಟ್ಟಿ, ೨೦೦೨, ಕರಜನ, ಅಕ್ಷಯ ಪ್ರಕಾಶನ, ಮುಂಬೈ.

೧೪. ಮದಿಪು ಸಂಚಿಕೆ, ೧೯೮೪, ತುಳುಕೂಟ, ಮಂಗಳೂರು.

೧೫. ಕೆ. ಚಿನ್ನಪ್ಪ ಗೌಡ (ಸಂ) ೧೯೮೯, ‘ಪನಿಯಾರ’ ನೆನಪಿನ ಸಂಚಿಕೆ, ತುಳುಕೂಟ (ರಿ), ಮಂಗಳೂರು.

೧೬. ಕೆ. ಲೀಲಾವತಿ (ಸಂ) ೧೯೯೪, ‘ಕದಿಕೆ’ ನೆನಪಿನ ಸಂಚಿಕೆ, ಅಖಿಲ ಭಾರತ ತುಳು ಒಕ್ಕೂಟ (ರಿ), ಮಂಗಳೂರು.

೧೭. ಯು.ಪಿ. ಉಪಾಧ್ಯಾಯ (ಸಂ) ೧೯೯೫, ‘ಪತ್ತಾಯೊ’ ನೆನಪಿನ ಸಂಚಿಕೆ, ತುಳುಕೂಟ, ಉಡುಪಿ.

೧೮. ಪಾಲ್ತಾಡಿ ರಾಮಕೃಷ್ಣ ಆಚಾರ್‌, ೨೦೦೧, ‘ಒಡಿಯೂರ್ದ ತುಡರ್‌’ ನೆನಪಿನ ಸಂಚಿಕೆ, ತುಳು ಸಾಹಿತ್ಯ ಸಮ್ಮೇಳನ ಸಮಿತಿ, ಶ್ರೀ ಗುರುದೇವದತ್ತ ಸಂಸ್ಥಾನ, ಒಡಿಯೂರು, ಬಂಟ್ವಾಳ ತಾಲೂಕು, ದ. ಕ. ಜಿಲ್ಲೆ, -೫೭೫ ೨೪೩

೧೯. ‘ಮದಿಪು’ ತ್ರೈಮಾಸಿಕ ಸಂಚಿಕೆಗಳು, ೧೯೯೬-೨೦೦೬, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಬಾಗ್‌, ಮಂಗಳೂರು.

೨೦. ಕು. ಶಿ. ಹರಿದಾಸ ಭಟ್ಟ (ಸಂ) ೧೯೮೩, ತುಳುವ ತ್ರೈಮಾಸಿಕ, ಸಂಪುಟ ೪, ಸಂಚಿಕೆ ೧, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ.

೨೧. ಕು. ಶಿ. ಹರಿದಾಸ ಭಟ್ಟ (ಸಂ.) ೧೯೮೨, ಸ್ವಾತಂತ್ರ್ಯ ಪೂರ್ವ ತುಳು ಸಾಹಿತ್ಯ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ. ಎಂ. ಜಿ. ಎಂ. ಕಾಲೇಜು, ಉಡುಪಿ-೨

೨೨. ನರೇಂದ್ರ ರೈ ದೇರ್ಲ, ೨೦೦೫, ನೆಲೆ, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅಭಿನಂದನ ಗ್ರಂಥ, ಡಾ. ಪಾಲ್ತಾಡಿ ಅಭಿನಂದನಾ ಸಮಿತಿ, ಸವಣೂರು ಅಂಚೆ, ಪುತ್ತೂರು ತಾಲೂಕು, ದ. ಕ. ಜಿಲ್ಲೆ.

೨೩. ವಾಮನ ನಂದಾವರ, ೧೯೮೭, ತುಳುವೆರೆ ಕುಸಾಲ್‌ಕುಸೆಲ್‌, ಹೇಮಾಂಶು ಪ್ರಕಾಶನ, ೫/೧೯೦, ಕೃಷ್ಣಾಪುರ, ಕಾಟಿಪಳ್ಳ-೫೭೪-೧೪೯, ದ. ಕ.

೨೪.ವಾಮನ ನಂದಾವರ, ೧೯೮೮, ತುಳುಟ್‌ ಪನಿಕತೆ, (ಪಗ್ಗೆ ಒಂಜಿ) ಹೇಮಾಂಶು ಪ್ರಕಾಶನ, ಕಾಟಿಪಳ್ಳ-೫೭೪ ೧೪೯, ದ. ಕ.

೨೫. ವಾಮನ ನಂದಾವರ, ೧೯೮೮, ಒಂಜಿ ಕೋಪೆ ಕತೆಕುಲು (ಪಗ್ಗೆರಡ್ಡ್‌) ಹೇಮಾಂಶು ಪ್ರಕಾಶನ, ಕಾಟಿಪಳ್ಳ -೫೭೪ ೧೪೯, ದ. ಕ.

೨೬. ಕೆ. ಅಶೋಕ ಎಂ. ಭಂಡಾರಿ, ೧೯೯೮, ಮಾಮಿ-ಮರ್ಮಾಲ್‌, ಸರಸ್ವತೀ ಪ್ರಿಂಟರ್ಸ್‌ ಸುರತ್ಕಲ್‌.

೨೭. ಪಿ. ಈಶ್ವರ ಭಟ್ಟ ಪುತ್ತಿಗೆ, ೧೯೮೮, ಬೆಸ್ನೀರ್‌ ಕೇಣ್ವೇ, ಶ್ರೀ ಶಾರದಾ ಪ್ರಕಾಶನ, ಪುತ್ತಿಗೆ ದೇವಿಕೃಪಾ, ಮಿತ್ತಬೈಲು, ಮೂಡಬಿದ್ರಿ, ದ. ಕ.

೨೮. ಕೋಡು ಭೋಜ ಶೆಟ್ಟಿ, ೨೦೦೧, ಪುಲಿಮುಂಚಿ, ಸಾಹಿತ್ಯ ಲಹರಿ ಪ್ರಕಾಶನ, ಔರಂಗಾಬಾದ್‌ ೪೩೧ ೦೦೫

೨೯. ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ, ೨೦೦೨, ತೆಲ್ಪು ತೆಲಿಕೆದ ಕತೆಕುಲು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಬಾಗ್‌, ಮಂಗಳೂರು-೩

೩೦. ಪುತ್ತಿಗೆ ಈಶ್ವರ ಭಟ್ಟ, ೨೦೦೩, ಈಶ್ವರ ಪುರಾಣ, ಅನಂತ ಪ್ರಕಾಶ ಗಾಯತ್ರೀ ಪ್ರಕಾಶನ, ಕಿನ್ನಿಗೋಳಿ-೫೭೪ ೧೫೦.

೩೧. ರತ್ನಾಕರ ಶೆಟ್ಟಿ, ೨೦೦೩, ಜೋಕುಲು ತೆಲಿಪುಲೆ ತುಕಾs! ಸಾಹಿತ್ಯ ಬಳಗ ಮುಂಬೈ-೪೦೦ ೭೦೫