ಜನಬಳಕೆಯ ಅನೇಕ ಪದಗಳು ಕಾವ್ಯದಲ್ಲಿ ಜಾಗಪಡೆದಿರುವುದೊಂದು ವಿಶೇಷ. ಉದಾಹರಣೆ ಲಗಡಿ, ಬಚ್ಚೇಲು, ಕೆಡೆಂಜೇಲು, ಕಿದ್ಕೀಲ್‌. ಹಾಗೆಯೇ ಅನುವಾದ ಸಂದರ್ಭದಲ್ಲಿ ಸಂಸ್ಕೃತ ಪದಗಳಿಗೆ ತದ್ಭವಗಳ ಸೃಷ್ಟಿಯೂ ಒಂದು ರೀತಿಯಲ್ಲಿ ಕಾವ್ಯದ ಭಾಷಾ ಸೌಂದರ್ಯವನ್ನು ಹೆಚ್ಚಿಸಿದೆ. ಉದಾಹರಣೆಗೆ ಪತಿರುತೆ (೧-೮ಪತಿವ್ರತೆ), ರುಸಿ (೨-೧೨, ಋಷಿ), ಏಗಿತೊ (೨-೧೯ ಯೋಗ್ಯತೆ) ಸಾಪೊ (೨-೨೫, ಶಾಪ) ಸಿಸ್ಟಿ (ಸೃಷ್ಟಿ) ಹೀಗೆ ಅನೇಕ ರಚನೆಗಳನ್ನು ಗುರುತಿಸಬಹುದು. ನಾಮಪದಗಳನ್ನು ತುಳುವೀಕರಿಸಿ ಕಾವ್ಯದಲ್ಲಿ ಬಳಸಿದ್ದು ಗಮನಾರ್ಹ. ಉದಾಹರಣೆಗೆ ಇಸ್ವಾಮಿತ್ರೆ, ರೋಹಿತಾಸ್ವ, ಹರಿಶ್ಚಂದ್ರ, ವಸಿಷ್ಟ ಇತ್ಯಾದಿ.

ಪ್ರಸ್ತುತ ಕೃತಿಯಲ್ಲಿ ೧. ಕತತ್ತ ಮುದೆಲ್‌ ೨. ದೇವಲೊಕೊಡು ವಸಿಷ್ಟ ಇಸ್ವಾಮಿತ್ರೆರೆ ಪಂತೋ ೩. ಸೊರ್ಣೊ ಯಾಗೊ ೪. ಹರಿಸ್ಚಂದ್ರನ ಬೋಂಟೆ ೫. ಇಸ್ವಾಮಿತ್ರ ಸಿಸ್ಟಿದ ಪೊಣ್ಣುಲು ೬. ಹರಿಶ್ಚಂದ್ರಡ ಪೊಣ್ಣುಲೆನ ಚೆರ್ಚೆ ೭. ರಾಜ್ಯದಾನೊ ೮. ಹರಿಸ್ಚಂದ್ರ ಸಾಲೊ ೯. ಅರಸೊತ್ತಿಗೆದ ಹಕ್ಕನ್‌ ಇಸ್ವಾಮಿತ್ರೆಗ್ ದಾನೊ ಮಲ್ಪುನೆ ೧೦. ಹರಿಸ್ಚಂದ್ರನ ಕಸ್ಟೊ ೧೧. ಬಯಡೆದಿ ಮಗನ್‌ ಮಾರ್‌ನೆ. ೧೨. ತನನ್ ತಾನೇ ಮಾರುನೇ ೧೩. ಸುಡ್ಕಿರಿ ಕಾಪುನೆ ಕೆಲಸೊ (ಶ್ಮಶಾನ ಕಾಯುವ ಕೆಲಸ) ೧೪. ರೋಹಿತಾಸ್ವನ ಮರಣೊ ೧೫. ಚಂದ್ರಮತಿ ಬಾಲೆದ ಪುಣನ್ ನಾಡ್ವಲ್‌ ೧೬. ಸುಡುಗಾಡ್‌ ೧೭. ಮಡಿಕೊಂಜಿ ಗಾಯೊ ೧೮. ವಿಸ್ವೇಸ್ವರನಬತಾರೊ ಎಂಬ ಶೀರ್ಷಿಕೆಗಳ ಒಟ್ಟು ೬೬೪ ಸಾಂಗತ್ಯಗಳಲ್ಲಿ ಕಾವ್ಯ ವ್ಯಾಪಿಸಿದೆ.

‘ತುಳು ಜೈಮಿನಿ ಭಾರತ’ (೧೯೯೯) ಡಿ. ವೇದಾವತಿ ಅವರು ರಚಿಸಿದ ಕಾವ್ಯ. ಲಕ್ಷ್ಮೀಶನ ಜೈಮಿನಿ ಭಾರತದ ಅನುವಾದ ರೂಪದಲ್ಲಿ ಪ್ರಸ್ತುತ ಕಾವ್ಯಕೃತಿಯನ್ನು ರೂಪಿಸಿದ್ದಾರೆ. ಆದರೆ ಈ ಕೃತಿ ಕನ್ನಡ ಜೈಮಿನಿ ಭಾರತದ ಯಥಾವತ್ತಾದ ಅನುವಾದವಲ್ಲ. ಕನ್ನಡ ಕಾವ್ಯದ ವಸ್ತು, ನಿರೂಪಣೆ, ಆಶಯ, ಸಂದೇಶಗಳಿಗೆ ಕೊರೆಯಾಗದಂತೆ ತುಳುವಿನಲ್ಲಿ ವಾರ್ದಕ ಷಟ್ಪದಿಯಲ್ಲಿ ಕೃತಿ ರಚಿಸಿದ್ದಾರೆ. ಕನ್ನಡ ಜೈಮಿನಿ ಭಾರತದ ವಿಸ್ತಾರವಾದ ವರ್ಣನೆಗಳನ್ನು ಔಚಿತ್ಯವರಿತು ಕೈಬಿಟ್ಟಿರುವುದರಿಂದ ಒಟ್ಟು ಕಾವ್ಯದ ಗಾತ್ರ ತುಳುವಿನಲ್ಲಿ ಕಿರಿದಾಗಿದೆ. ಕನ್ನಡ ಜೈಮಿನಿ ಭಾರತವು ೩೪ ಸಂಧಿಗಳಲ್ಲಿ ಸುಮಾರು ೧೯೦೦ ಷಟ್ಪದಿಗಳನ್ನು ಒಳಗೊಂಡಿದೆ. ಆದರೆ ತುಳು ಜೈಮಿನಿ ಭಾರತದಲ್ಲಿ ೨೨ ಸಂಧಿಗಳ ಸುಮಾರು ೧೦೫೫ ಷಟ್ಪದಿಗಳಿವೆ. ಕನ್ನಡ ಜೈಮಿನಿ ಭಾರತದ ಪದ್ಯಗಳಿಗೆ ಪರ್ಯಾಯವಾಗಿ ತುಳು ಪದ್ಯಗಳನ್ನು ಸೃಷ್ಟಿಸುವಾಗ ಅನುವಾದಕರು ಹೆಚ್ಚು ಕನ್ನಡ, ಸಂಸ್ಕೃತ ಪದಗಳನ್ನು ಬಳಸಿದ್ದಾರೆ. ಇತರೆ ಕಾವ್ಯಗಳನ್ನು ಗಮನಿಸಿದರೆ ಈ ಕೃತಿ ತುಳು ಸಾಂಸ್ಕೃತಿಕ ಪದಗಳನ್ನು ಹೆಚ್ಚಾಗಿ ಅವಲಂಬಿಸದೆ ಸಂಸ್ಕೃತ ಪದಗಳನ್ನು ಹೆಚ್ಚಾಗಿ ಆಶ್ರಯಿಸಿದೆ. ಈ ಕಾರಣಕ್ಕಾಗಿ ಇದು ಅಲ್ಪಸ್ವಲ್ಪ ತುಳು ಭಾಷೆ ಬಲ್ಲವರಿಗೂ ಸುಲಭವಾಗಿ ಅರ್ಥವಾಗುತ್ತದೆ ಎಂಬುದು ಇದರ ಹಿರಿಮೆ. ಆದರೆ ಅಲ್ಲಲ್ಲಿ ತುಳು ಭಾಷೆಯ ಪದಗಳು, ನುಡಿಗಟ್ಟುಗಳ ಬಳಕೆ ಕ್ವಚಿತ್ತಾಗಿ ಎಡೆಯರಿತು ಬಂದಿವೆ.

ಕೆದಂಬಾಡಿ ಜತ್ತಪ್ಪರೈಯವರು ಮುದ್ದಣನ ‘ಶ್ರೀ ರಾಮಾಶ್ವಮೇಧಂ’ ಕೃತಿಯನ್ನು ‘ಸಿರಿ ರಾಮಾಶ್ವಮೇಧ’ (೧೯೮೮) ಎಂದು ತುಳುವಿಗೆ ಅನುವಾದಿಸಿದ್ದಾರೆ. ಮುದ್ದಣನ ಕಾವ್ಯವನ್ನು ಯಥಾವತ್ತಾಗಿ ಅನುವಾದ ಮಾಡುವ ಪ್ರಯತ್ನವನ್ನಿಲ್ಲಿ ಕಾಣಬಹುದು. ಆದರೂ ಅನುವಾದಕರು ತುಳುನಾಡಿನ ಸಂದರ್ಭದಲ್ಲಿ ತನ್ನ ಕೃತಿ ರೂಪುಗೊಳ್ಳುತ್ತಿದೆ ಎಂಬುದನ್ನು ಮರೆಯಲಾಗದೆ ಪುನರ್‌ ಸೃಷ್ಟಿಸಿದ್ದಾರೆ.

ಉದಾಹರಣೆಗೆ ನೀಲಗಿರಿಯ ರಾಜ ರತ್ನಗ್ರೀವನು ತನ್ನ ಕುಟುಂಬ ಸಹಿತ ರಾಮದೇವರ ದರ್ಶನಕ್ಕಾಗಿ ಹೊರಡುತ್ತಾನೆ. ಆಗ ಅವನ ಜೊತೆಗೆ ಹೊರಟವರಲ್ಲಿ ತುಳುನಾಡಿನ ಸಕಲ ಜಾತಿ ಜನವರ್ಗದ ಜನರೇ ಇದ್ದರು ಎಂಬುದನ್ನು ಅನುವಾದಕರು “ಯಿಂಚ ಊರುಡು ಕೊಂಗ, ಕೊರಮ, ಮಡ್ಯೊಲ, ಕೊಲ್ಲ, ಓಡಾರಿ, ಕಂಚಿಗಾರ, ಸೆಟ್ಟಿ, ಮಾಲೆದಕುಲು, ಸಮಗಾರ ಮರಕ್ಕಲೆರೆ ಕೂಡುಕಟ್ಟುದಕುಲು ಮಾತಾ ರಾಮದೇವರೆನ ಗೇನೋಡು ಅಕುಲಕುಲೆ ಊರು ಕೇರಿನ್‌ಮದತ್ತ್‌ದ್‌ ಅರಸುನೊಟ್ಟುಗು ಪಿದಾಡ್ಯೆರ್‌” (ಪು. ೨೦) ಇಂತಹ ಸಂದರ್ಭಗಳಲ್ಲಿ ಅನುವಾದಕರು ತುಳುನಾಡಿನ ಸನ್ನಿವೇಶವನ್ನು ಮರೆಯದೆ ಅಭಿವ್ಯಕ್ತಿಸುತ್ತಾರೆ. ರಾಮರಾಜ್ಯದ ವರ್ಣನೆ ಮಾಡುವಾಗ ಅನುವಾದಕರು ನಾಡಿನ ವರ್ಣನೆಯನ್ನೇ ಮಾಡಿದ್ದಾರೆ. ಕಾವ್ಯದಲ್ಲಿ ಪಾತ್ರಪೋಷಣೆ, ಸನ್ನಿವೇಶ ನಿರೂಪಣೆ ಮೊದಲಾದವುಗಳಲೆಲ್ಲ ತುಳು ಸಂಸ್ಕೃತಿಯ ಮೇಲ್ಮೆಯನ್ನು ಕೈವಾರಿಸಿದ್ದರೆ.

ಆಧುನಿಕ ಕೃತಿಗಳು

ಆಧುನಿಕ ತುಳು ಸಾಹಿತ್ಯ ನಿರ್ಮಾಣದ ಸಂದರ್ಭದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಅನುವಾದ ಪ್ರಕ್ರಿಯೆಗೆ ಪ್ರಮುಖವಾದ ಸ್ಥಾನವಿದೆ. ಈ ನೆಲೆಯಲ್ಲಿ ಅನೇಕ ಆಧುನಿಕ ಕನ್ನಡ ಕೃತಿಗಳು ತುಳುವಿಗೆ ಅನುವಾದವಾಗಿವೆ.

ಶಿವರಾಮ ಕಾರಂತರ ಚೋಮನದುಡಿಯನ್ನು ತುಳುವಿಗೆ ಅನುವಾದಿಸಿದವರು ಕೆದಂಬಾಡಿ ಜತ್ತಪ್ಪರೈ ಅವರು. ಕಾರಂತರೇ ಈ ಕೃತಿಯ ಅನುವಾದವನ್ನು ಕುರಿತು ಮುನ್ನುಡಿಯಲ್ಲಿ ‘ನಾನು ಪುತ್ತೂರಿನಲ್ಲಿ ವಾಸಮಾಡುತ್ತಿದ್ದ ಕಾಲದಲ್ಲಿ ಎಂದರೆ ೧೯೩೪ರ ಸುಮಾರಿಗೆ ಅಲ್ಲಿನ ಮೇದ ಜನಾಂಗದ ಜೀವನವನ್ನು ಕಂಡೇ ಆ ಕಾದಂಬರಿಯನ್ನು ಬರೆಯುವ ಪ್ರೇರಣೆ ಪಡೆದೆ. ಆ ಕಾದಂಬರಿಯ ಕಾರ್ಯಕ್ಷೇತ್ರ ಪುತ್ತೂರಿನದು ಮತ್ತು ಘಟ್ಟದ ಮೇಲಿನ ಕಳಸ ಪ್ರದೇಶ. ಹೀಗಾಗಿ ಈ ಪ್ರದೇಶದ ಪ್ರಧಾನ ಆಡುನುಡಿಯಾದ ತುಳು ಅನುವಾದಕ್ಕೆ, ಕನ್ನಡಕ್ಕಿಂತ ಸ್ವಾಭಾವಿಕವೆನಿಸುವ ಭಾಷೆ.” ಹಾಗಾಗಿ ಇಲ್ಲಿನ ಜೋಮನ ಮಾತೃಭಾಷೆಯೂ ತುಳುವೇ. ಜತ್ತಪ್ಪರೈಯವರು ಆಶಯಕ್ಕೆ ಸ್ವಾಭಾವಿಕವೆನಿಸುವ ತುಳುಭಾಷೆಯಲ್ಲಿ ೧೧೫ ಪುಟಗಳ ಮೂಲ ಕನ್ನಡ ಕಾದಂಬರಿಯನ್ನು ೧೮೩ ಪುಟಗಳಿಗೆ ಹಿಗ್ಗಿಸಿದ್ದಾರೆ. ಇದರಿಂದ ಕಾದಂಬರಿಯ ಆಶಯಕ್ಕೆ ಯಾವುದೇ ತೊಡಕಾಗಿಲ್ಲ. ಕಾದಂಬರಿಯ ಅರ್ಥ ಸಾಧ್ಯತೆಯನ್ನು ವಿಸ್ತರಿಸಿ ತುಳುವಿನಲ್ಲಿ ಆಸ್ವಾದನಾಯೋಗ್ಯವಾಗಿ ಬರೆದಿದ್ದಾರೆ. ಇದರಿಂದ ಕಾದಂಬರಿಗೊಂದು ಹೊಸ ಸೊಗಸು ಪ್ರಾಪ್ತವಾಗಿದೆ. ಕಾರಂತರ ಚೋಮನನ್ನು ಜತ್ತಪ್ಪ ರೈಯವರು ಜೀವತುಂಬಿ ತುಳುವರ ಮುಂದೆ ನಿಲ್ಲಿಸಿದ್ದಾರೆ.

ತುಳು ಚೋಮನ ದುಡಿಯನ್ನು ಅಧ್ಯಯನ ಮಾಡಿದ ಹರಿಕೃಷ್ಣ ಭರಣ್ಯರು (ತುಳುವಿನ ಎರಡು ಕಾದಂಬರಿಗಳು, ಕರ್ನಾಟಕ ಭಾರತಿ ಸಂಪುಟ ೨೦, ಸಂಚಿಕೆ ೪, ೧೯೮೮) ತುಳು ಚೋಮನ ದುಡಿಯನ್ನು ವಿವರಣಾತ್ಮಕವಾದ ಭಾವಾನುವಾದವೆಂದು ಹೇಳಿದ್ದಾರೆ. ಅವರೇ ಗುರುತಿಸುವಂತೆ ಮೂಲ ಕೃತಿಯಲ್ಲಿಲ್ಲದ ಅನೇಕ ಭಾಗಗಳನ್ನು ಕೆದಂಬಾಡಿಯವರು ವಿಸ್ತೃತವಾಗಿ ಕೊಟ್ಟಿದ್ದಾರೆ. ಇದರಿಂದ ತುಳುಭಾಷೆಯ ನುಡಿಗಟ್ಟುಗಳ ಯಶಸ್ವೀ ಹಾಗೂ ಅರ್ಥಪೂರ್ಣ ಪ್ರಯೋಗ ಅನುವಾದದಲ್ಲಿ ಸಾಧ್ಯವಾಗಿದೆ. “ಇದ್ದ ವೇಶದಲ್ಲೇ ಅವರು ಹೊರಡುವರು” ಎಂಬ ಕನ್ನಡದ ಪುಟ್ಟ ವಾಕ್ಯವು ಅನುವಾದದಲ್ಲಿ ‘ಇದ್ದ ವೇದಲ್ಲಿ, ಸುತ್ತಿದ ಬಟ್ಟೆಯಲ್ಲಿ, ತೊಟ್ಟ ಕೋಮಣದಲ್ಲಿ, ಕಟ್ಟಿದ ಪೊಡಂಕಿನಲ್ಲಿ, ಇಟ್ಟ ಮುಟ್ಟಾಳೆಯಲ್ಲಿ ಅವರು ಹೊರಡುವರು” ಎಂದಿದೆ. ಅನುವಾದಕರ ಅನುಭವಗಳಿಂದ ರೂಪುಗೊಂಡ ಅನೇಕ ವರ್ಣನೆಗಳು, ವಿವರಗಳು ಕಾದಂಬರಿಯನ್ನು ಹಿಗ್ಗಿಸಿದೆ. ಬ್ರಾಹ್ಮಣರ ಬಗೆಗಿನ ಚೋಮನ ಕಲ್ಪನೆ, ಮಳೆಗಾಲದ ವರ್ಣನೆ ಇತ್ಯಾದಿಗಳೆಲ್ಲ ಕಾರಂತರಿಗಿಂತ ದೀರ್ಘವಾದ ವಿವರಗಳನ್ನು ಒಳಗೊಂಡಿದೆ.

ಕೆಲವೊಮ್ಮೆ ಕೆದಂಬಾಡಿಯವರ ಕಲ್ಪನಾ ವಿಲಾಸವು ಅನುವಾದದಲ್ಲಿ ಎಡೆಹಾಯ್ದು ಬಂದಿದೆ. ಒಂದು ಕಡೆ ತಿಂಗಳ ಬೆಳಕನ್ನು ‘ಬೊಳ್ಳೆಸೊಪ್ಪು’ ಹರಡಿದಂತಿದೆ ಎಂದು ಬರೆಯುತ್ತಾರೆ. ಚೋಮನು ಕೊಕ್ಕಡದ ಹಾದಿಯನ್ನು ಹಿಡಿಯುತ್ತಲೇ ಎಂಬಲ್ಲಿ ಚೋಮನ ದೈಹಿಕ ಬಳಲಿಕೆಯನ್ನು ಕೆದಂಬಾಡಿಯವರು ವಿಸ್ತರಿಸಿದ್ದಾಎ. “….ಸುಸ್ತಿನಿಂದ ಬೆವರನ್ನು ಒರೆಸಿಕೊಳ್ಳುತ್ತಾನೆ. ಹಣೆಯ ಬೆವರ ಹನಿಯನ್ನು ಸೀಂಟಿ ಸಿಡಿಯುತ್ತಾನೆ. ಧೂಳು ತುಂಬಿದ ಕಾಲುಗಳು ಭಾರವೆನಿಸಿ ಎತ್ತುವುದಕ್ಕೆ ಅಸಾಧ್ಯವೋ ಅಥವಾ ನಡೆಯುವ ಅವಸರಕ್ಕೆ ದಾರಿಯ ಕಲ್ಲುಗೆಡವಿ ಮುಳ್ಳುಗಳು ನಾಟಿಕೊಂಡು ನೋವಾಗಿರುವುದರಿಂದ ನಡಿಗೆಯು ನಿಧಾನವಾದರೂ ಬಳಲಿಕೆಯ ಪರಿವೆಯೇ ಇಲ್ಲದೆ ನಡಿಗೆಯನ್ನು ನಲ್ಲಿಸಲೇ ಇಲ್ಲ” ಇತ್ಯಾದಿ ವಿವರಗಳೇ ಕಾದಂಬರಿಯನ್ನು ಹಿಗ್ಗಿಸಿದೆ.

ಚೋಮನದುಡಿಯ ಡಮ-ಢಕ್ಕ ಢಕ್ಕ ಎಂಬ ಸದ್ದನ್ನು
ಬೆಂದ್‌೦ಡ ಉಣ್ಪ ಬೆಂದ್‌೦ಡ ಉಣ್ಪ
ಬಂಜಾರೊ ಉಣ್ಪ
ಮನ್ಸೆರೆ ಬೊಟ್ಟೊಡು ಗುಮ್ಮೆ ಗೂರೊಡು
ನೂರಿಗುಮ್ಮ ಗೂರಂದೆ ಉಪ್ಪುವೊ?
(ಗೆಯ್‌ದರೆ ತಿನುವೆ ಗೆಯ್‌ದರೆ ತಿನುವೆ ಹೊಟ್ಟೆತುಂಬಾ
ಹೊಲೆಯರ ಗುಡಲಲ್ಲಿ ಗೂಗೆ ಗೂರಲಿ
ಹೊಕ್ಕಗೂಗೆ ಗೂರದಿರುವುದೇ?)

ಎನ್ನುವ ಸಾಂಕೇತಿಕ ಅರ್ಥವನ್ನು ತಂದಿದ್ದಾರೆ. ಕಾದಂಬರಿಯ ಕೊನೆಯ ಸಾಲುಗಳು, ಕನ್ನಡಕ್ಕಿಂತಲೂ ತುಳುವಿನಲ್ಲಿ ಅರ್ಥಪೂರ್ಣವಾಗಿ ಪ್ರಕಟವಾಗಿದೆ.

“ಹಿಡಿದ ದುಡಿ, ಎತ್ತಿದ ಕೈ, ತುಂಬಿದ ಆವೇಶ ಎಲ್ಲವೂ ಇದ್ದಕ್ಕಿದ್ದಂತೆಯೇ ಇವೆ. ಆದರೆ ಚೋಮನಿಲ್ಲ!”

ಕೆದಂಬಾಡಿಯವರು
“ತರ್ಕ್ ಪತ್ತಿ ದುಡಿ, ದೆರ್ತ್ತ್‌ ಪತ್ತಿ ಬಾಗೋಲು, ಒಯ್ತ್‌ಬುಡಿ
ಪೂಂಬೆ ಕೋಲು, ದಿಂಜಿದಿ ದರ್ಸನೊದ ಸರ್ರೊ
ಇತ್ತಿನವು ಮಾತಾ ಇತ್ತಿಲೆಕ್ಕೊನೆ, ಇತ್ತಿನಂಚನೆ
ಇತ್ತಿನವುಲೇ ಉಂಡು,
ಅರಿಪಿ ಬೆಗರ್‌ ಆಜ್‌ದಿಜಿ, ದೊರಿಪ್ಪಿ ಕಣನೀರ್‌ ಮಾಜ್‌ದಿಜಿ,
ಆಂಡ ಚೋಮೆ ಮನಿಪುಜೆ, ದುಡಿ ದುನಿಪ್ಪುಜಿ,
ಅಯ್ಯೊ….
(ತಬ್ಬಿ ಹಿಡಿದ ದುಡಿ, ಹಿಡಿದ ‘ಬಾಕೋಲು’
ಎಳೆದು ಬಿಟ್ಟ ‘ಪೊಂಬೆಕೋಲು’ ಆವೇಶಭರಿತ ಶರೀರ
ಇರುವುದೆಲ್ಲಾ ಇರುವಂತೆಯೇ ಇರುವ ರೀತಿಯಲ್ಲೇ ಇರುವಲ್ಲೇ ಇವೆ.
ಸುರಿವ ಬೆವರು ಆರಿಲ್ಲ, ಒಸರುವ ಕಣ್ಣೀರು ಮಾಸಿಲ್ಲ.
ಆದರೆ ಚೋಮ ಮಾತಾಡುವುದಿಲ್ಲ, ದುಡಿ ಧ್ವನಿಸುವುದಿಲ್ಲ
ಅಯ್ಯೋ… ಭಾವಾನುವಾದ : ಹರಿಕೃಷ್ಣ ಭರಣ್ಯ)

ಜತ್ತಪ್ಪ ರೈಗಳು ಮೂಲ ಕಾದಂಬರಿಯನ್ನು ಬದಲಾಯಿಸಿಕೊಂಡಿಲ್ಲವಾದರೂ ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಭೋಗನ ಹಳ್ಳಿಯ ಬೋಗಾಯನ ಕೇರಿಯೆಂದು, ಸಂಕಪ್ಪಯ್ಯ ಸಂಕಯ್ಯ ಎಂದು ಬದಲಾಗಿದೆ. ಚೋಮನ ನಾಯಿಯು ಬಾಡು ಎಂಬ ಹೆಸರನ್ನು ಪಡೆದಿದೆ. ಹೀಗೆ ಕಾರಂತರ ಜೋಮನದುಡಿಯು ತುಳುವಿನಲ್ಲಿ ಪುನರ್‌ಸೃಷ್ಟಿಯಾಗಿದೆ.

ಆಡು ಭಾಷೆಯ ತುಳು ಗಧ್ಯವನ್ನು, ನುಡಿಗಟ್ಟು, ಗಾದೆ, ಪದಪುಂಜಗಳ ಮೂಲಕ ಕೆದಂಬಾಡಿಯವರ ತುಳು ಚೋಮನ ದುಡಿ ವಿಶಿಷ್ಟ ಮೆರುಗು ಪಡೆದಿದೆ. ಕಾರಂತರ ಚೋಮನಿಗಿಂತಲೂ ತುಳುವರಿಗೆ ಕೆದಂಬಾಡಿಯವರ ಚೋಮ ಆತ್ಮೀಯನಾಗುತ್ತಾನೆ. ಇಲ್ಲಿನ ಅನುವಾದದ ಸ್ವರೂಪ, ವಿಧಾನ ಇತ್ಯಾದಿಗಳ ಬಗೆಗೆ ಬೇರೆ ರೀತಿಯ ಚರ್ಚೆಗಳನ್ನು ಹುಟ್ಟುಹಾಕಬಹುದಾಗಿದೆ. ಆದರೆ ತುಳು ಭಾಷೆಯನ್ನು ಅಕ್ಷರ ರೂಪದಲ್ಲಿ ತರುವಲ್ಲಿ ಕೆದಂಬಾಡಿಯವರಿಗೆ ವಿಶಿಷ್ಟವಾದ ಪ್ರತಿಭೆಯಿದೆ ಎಂಬುದು ಈ ಕಾದಂಬರಿಯ ಮೂಲಕ ಸ್ಪಷ್ಟವಾಗಿದೆ.

ಜಿ. ಪಿ. ರಾಜರತ್ಮಂ ಅವರ ‘ರತ್ನಪದ’ಗಳನ್ನು ನ. ಭೋಜರಾಜ ಕಡಂಬ ಅವರು ‘ರತ್ನನ ಪದೊಕ್ಕುಲು’ (೧೯೭೯) ಎಂಬ ಹೆಸರಿನಲ್ಲಿ ತುಳುವಿಗೆ ಭಾಷಾಂತರ ಮಾಡಿದ್ದಾರೆ. ರತ್ನ ಪದಗಳ ಭಾಷೆಯನ್ನು ಉಳಿಸಿಕೊಂಡೇ ಇಲ್ಲಿ ಭಾಷಾಂತರ ಮಾಡಲಾಗಿದೆ. ಈ ಲಿಖಿತ ಭಾಷಾಂತರ ಓದುಗರಿಗೆ ಆದರೆ ಅದನ್ನು ಜೋರಾಗಿ ಹಾಡುವವರಿಗೆ ಅನುಕೂಲವಾಗುವಂತೆ ಮೌಖಿಕ ಭಾಷೆಯಲ್ಲಿ ತುಳುವಿನ ಧ್ವನಿ, ಉಚ್ಚಾರಗಳಿಗೆ ಅನುಗುಣವಾಗಿ ರತ್ನನ ಭಾಷೆಗೆ ಕನ್ನಡಿ ಎಂಬ ಇನ್ನೊಂದು ವ್ಯಾಖ್ಯಾನಪರ ಅನುವಾದವನ್ನು ಇದರಲ್ಲಿ ಕೊಡಲಾಗಿದೆ. ತುಳುವಿನಲ್ಲಿ ಬರುವ ಅರ್ಧಾಕ್ಷರಗಳನ್ನು ಮುಂದಿನ ಪೂರ್ವಾಕ್ಷರದ ಜೊತೆ ಸೇರಿಸಿ ಓದುವುದರ ಮೂಲಕ ಅರ್ಥಧ್ವನಿ ಮತ್ತು ಸಲೀಸಾಗಿ ಲಯವು ಮುಂದುವರಿಯುತ್ತದೆ. ಈ ಎಚ್ಚರಿಕೆಯನ್ನು ಭಾಷಾಂತರಕಾರರು ಮನಗಂಡು ಓದುವ ವಿಧಾನವನ್ನೂ ಮೊದಲೇ ಸೂಚಿಸಿ ಪೂರ್ಣ ಸಾಹಿತ್ಯದ ಪದ್ಯ ಪಾಠ ಹಾಗೂ ಅರ್ಥಮಾಡಿಕೊಂಡು ಓದುವ ಗದ್ಯ ಪಾಠವನ್ನು ಪ್ರತ್ಯೇಕ ಭಾಷಾಂತರವನ್ನೇ ಮಾಡಿರುವುದು ಈ ಕೃತಿಯ ವಿಶೇಷ.

ಉದಾಹರಣೆಗೆ ‘ಚಿಪ್ಪುಡ್‌ ವಾ ಮುತ್ತ್‌ ಉಂಡೋ’ ಎಂಬ ಪದವನ್ನು ‘ಚಿಪ್ಪುಡ್ವಾ ಮುತ್ತುಂಡೊ’ ಎಂದು ಓದಿಕೊಳ್ಳಬೇಕು ಎಂಬ ಸೂಚನೆಯನ್ನು ಕೊಟ್ಟಿದ್ದಾರೆ.

ಈ ಕೃತಿಯಲ್ಲಿ ೧. ಕುಡ್ಕೆರೆ ಮಾತ್ವೊ ೨. ಮಾನ್ಯನ ಪಾತೆರೊ ೩. ಕನ್ನಡ ಪದೊಕುಲು (ರತ್ನನ ಮೊಕಾಬಿಲೆ) ೪. ಯೆಂಡೊ ೫. ಯೊಂಡೊ ಪರ್ಪುನಕ್ಲು ಯೆಂಕ್ಲು ೬. ಬೇವಾರ್ಸಿಗ್‌ ೭. ರತ್ನ ಕುಸಿ (ಕುಜ್ಲಿದ ಬಕ್ತೆರತ್ನೆ) ೮. ದಾನೆ ಪೆನ್ಕೊಯೆ ಈ ಮರ್ಲ್‌ಗ್‌ ೯. ಮನಸ್ಸ್‌ಗ್‌ ಒಪ್ಪುಬಿ ಪಾತೆರೊ ೧೦. ತ್ರುಪ್ತಿ ೧೧. ಎಂಕ್ಲೆ ಮುನಿಯನ ಜರ್ಬು (ಮುನಿಯನ ಗಿರಾಕಿ ರತ್ನೆ) ೧೨. ಎನ್ನ ಪುಟ್ನಂಜಿನ ರೂಪ ೧೩. ನಿಕ್ಕ್‌ನೆಪ್ಪುಂಡ ನಂಜಿ ೧೪. ಪುಟ್ನಂಜಿ ತೆಲ್ತ್‌ಡ (ಪುಟ್ನಂಜಿನ ರತ್ನೆ) ೧೫. ಚಿಂತೆ ೧೬. ಗ್ನಾನೋದ ದೀಪೊ, ೧೭. ದುಕ್ಕೊ ೧೮. ಜಂಬೊ (ಅಮ್ಸಣಿ) ೧೯.ಉಪದೇಸೊ ೨೦. ರತ್ನನ ಪಾತೆರೋ ೨೧. ಮಲ್ಲಾಯನ ಪುದರ್‌೨೨. ಬಡವನ ದೇವೇರ್‌(ರುಸ್ತುಂ ರತ್ನೆ) ಹೀಗೆ ಇಪ್ಪತ್ತೆರಡು ಪದ್ಯಗಳ ಭಾಷಾಂತರವಿದೆ.

ರತ್ನನ ಪದಗಳ ಮಹತ್ವವನ್ನು ಕುರಿತು ಭಾಷಾಂತರಕಾರರು ವಿವರಿಸಿದ್ದಾರೆ. ಇದು ಕುಡುಕನೊಬ್ಬನು ಕುಡಿದು ಅಮಲೇರಿದಾಗ ಹೇಳಿದ ವಿವರಗಳೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಅದರ ಅಂತರಾರ್ಥವೇ ಬೇರೆ. ಇಲ್ಲಿ ಬರುವ ಕುಡುಕ ರತ್ನೆ ಸಹಜವಾದ ಕುಡುಕನಲ್ಲ. ಬದಲಾಗಿ ಮನುಷ್ಯನ ಅಂತಃಸ್ಸತ್ವವಾದ ಆತ್ಮ. ಅವನನ್ನು ಬೆಂಬಿಡದೆ ಬರುವ ಗೆಳೆಯ ಬೇವರ್ಸಿ ಎಂದರೆ ಆತ್ಮವನ್ನು ಅನುಸರಿಸಿ ಬರುವ ದೇಹ. ಹೆಂಡ ಎಂದರೆ ಜ್ಞಾನ. ಹೆಂಡಮಾರುವ ಮುನಿಯನೆಂದರೆ ಇತರರಿಗೆ ಜ್ಞಾನ ನೀಡುವ ಐಗಳು. ರತ್ನನ ಹೆಂಡತಿ ನಂಜಿಯೆಂದರೆ ಜ್ಞಾನಾರ್ಜನೆಯಿಂದ ಸಿಗುವ ಸುಖ ಅಥವಾ ಆನಂದ. ಕುಜ್ಲಿ (ಗಡಿಗೆ) ಎಂದರೆ ಜ್ಞಾನಲಾಭಕ್ಕಾಗಿ ಬೇಕಾದ ಪುಸ್ತಕ ಅಥವಾ ಇತರೆ ಯಾವುದೇ ಜ್ಞಾನ ಮೂಲದ ಮಾಧ್ಯಮ ಎಂಬ ಧ್ವನಿಸಾಮರ್ಥ್ಯವನ್ನು ಓದುತ್ತಾ ಹೋದಂತೆ ಪಡೆಯಬಹುದೆಂದು ಭಾಷಾಂತರಕಾರರು ಸೂಚಿಸಿದ್ದಾರೆ.

ಕೆದಂಬಾಡಿ ಜತ್ತಪ್ಪರೈ ಅವರ ‘ಅಜ್ಜಬಿರು’ (೧೯೮೨) ತುಳು ಸುಭಾಷಿತಗಳ ಸಂಕಲನ. ‘ಅಜ್ಜಬಿರು’ ಎಂದರೆ ಇಂದ್ರಚಾಪ ಎಂದರ್ಥ. ಇದರಲ್ಲಿರುವ ಬಹುತೇಕ ಸುಭಾಷಿತಗಳನ್ನು ಎಸ್‌. ವಿ. ಪರಮೇಶ್ವರಭಟ್ಟರ ‘ಇಂದ್ರಾಚಾಪ’ದಿಂದ ಆಯ್ದುಕೊಂಡು ತುಳುವಿಗೆ ಭಾಷಾಂತರಿಸಲಾಗಿದೆ. ಕೆಲವು ಅಮ್ಮೆಂಬಳ ಶಂಕರನಾರಾಯಣ ನಾವಡರ ‘ಜೇನು ಹನಿ’ಯಿಂದ ಆಯ್ದುಕೊಂಡವುಗಳು. ಮತ್ತೆ ಕೆಲವು ಸಂಸ್ಕೃತ ಮೂಲದ ಸುಭಾಷಿತಗಳನ್ನು ಆಯ್ದು ಭಾಷಾಂತರ ಮಾಡಲಾಗಿದೆ. ಇಲ್ಲಿನ ಸುಭಾಷಿತಗಳು ಅನುವಾದಗಳಾದರೆ ಅವೆಲ್ಲ ತುಳುವಿನಲ್ಲಿ ನೀತಿ ಹೇಳುವ ಉದ್ದೇಶವುಳ್ಳದ್ದರಿಂದ ತುಳು ಬಳಕೆಯ ನುಡಿಗಳನ್ನು ಸೇರಿಸಿ ಸುಭಾಷಿತಗಳನ್ನು ದೃಶ್ಯವಾಗಿಸಿದ್ದಾರೆ.

ಉದಾಹರಣೆಗೆ
ಪಟಿಂಗೆ ಮಲ್ತಿನ ಕುಟಿಲೊದ ಕೆಲಸೊದ
ಪಲೋತಿನ್ವಿನಾಕುಲು ಸಜ್ಜನೆರ್‌
ಕೆಂಡೊಂದು ಪೋಯಿನಿ ರಾವಣೆ ಸೀತೆನ್‌
ದಂಡ್‌ನ್‌ ಕೊನತ್ತ್‌ದ್‌ ದಂಡೆನ್‌ ಕಟ್ಟ್‌ದ್‌
ಪರಿಪ್ಪು ಕಟ್ಟೆನಿ ಕಡಲ್ಡತ್ತೊ

ಉಮರಖಯ್ಯಾಮನ ‘ಉಮರನ ಒಸಗೆ’ಯು (೧೯೮೯) ತುಳುವಿನಲ್ಲಿ ‘ಕುಜಿಲಪೂಜೆ’ಯಾಗಿದೆ. ತುಳುವಿನಲ್ಲಿ ಬರೆದವರು ಕೆದಂಬಾಡಿ ಜತ್ತಪ್ಪರೈ. ಉಮರನ ಕಾವ್ಯದಲ್ಲಿ ಅಂತರ್ಗವಾದ ತಿರುಳನ್ನು ಸಮರ್ಥವಾಗಿ ರೈಯವರು ಅನುವಾದಿಸಿದ್ದಾರೆ. ಈ ಅನುವಾದದ ಸಂದರ್ಭದಲ್ಲಿ ಕನ್ನಡದಲ್ಲಿ ಡಿ.ವಿ.ಜಿ., ಗೋವಿಂದ ಪೈ ಹಾಗೂ ಮಟ್ಟಿ ರಾಧಾಕೃಷ್ಣರಾವ್‌ ಅವರ ಕೃತಿಗಳನ್ನು ಅವಲಂಬಿಸಿದ್ದಾರೆ. ರೈಗಳ ಭಾಷಾ ಪ್ರೌಢಿಮೆ ಹಾಗೂ ಬಿಗಿಯನ್ನು ಪಡೆದು ಉಮರನ ರುಬಾಯತುಗಳು ತುಳುವಿನಲ್ಲಿ ದಾಖಲಾಗಿವೆ. ಅವುಗಳ ಗಾಂಭೀರ್ಯ, ಒನಪು, ಒಯ್ಯಾರಗಳನ್ನು ಉದಾಹರಣೆಗಳ ಮೂಲಕ ಪರಿಗ್ರಹಿಸಬಹುದು.

ಲಕ್ಕೆನ್ನ ಮೋಕೆದಾ ಮಂಙಣ್ಣಿ | ತೂಲ ಬಾನಾರ್‌ಬತ್ತ್‌ದ್‌ |
ಕತ್ತಲೆದ ಕಪ್ಪಲ್‌ಗ್‌ ಬಂಗಾರ್ದ ಬೊಗೊರಿನ್ ದಕ್ಕ್‌ದ್‌ ||
ಬೊಳ್ಳಿದಾರ್ಯಾಲೆನ ಪೊಲಿದೊರ್ತ್‌ದೇ ಬುಡ್ತೆ ||
ನಿದೆರಿನವು ಯಾವುದೇ, ಪೊರ್ಲೆದಿಯೆ ಲಕ್ಕ್‌ಬಲ || ೧ ||
ಮುಡಾಯಿದಾ ಬೋಂಟೆ | ದಿಡ್ಕ ಬತ್ತ್‌ದ್‌ ತೂಲ |
ಸುಲ್ತಾನನರಂತಡೆದ ಗುಪೋಪುಗು ಬೀತ್‌ದೆ
ಆಯನ ಉರ್ಲು ಕೆಣಿಪ್ಪುನು ದಕ್ಕ್‌ದ್‌ |
ತೂಲ ಬಲ ಓ ಸೇಲೆ, ಕೊರು ನಿನ್ನ ಬೆರಿಸಕಾಯ || ೨ ||
ಕನೊಂಜಿ ಪುಲ್ಯಕ್ಕೊಲುಗು, ಕಟ್ಟ್‌ನೆನ್‌ಯಾನ್‌ ಪನಡೆಂಚ?
ಗಡಂಗ್‌ದಂಚಿಡ್ಡ್‌ ಸಬ್ದೊಂಜಾಂಡ್‌ ಯಿಂಚ
ಲಕ್ಕ್‌ಲೇ ಜೋಕುಲೇ ಕಂಙಣೊಡು ದಿಂಜವೊನಿ
ನಿಕುಲೆ ಉಡಲ ಕಂಙಣೊದ ಪಸೆಪಾರುನೆಗ್‌ದುಂಬು || ೩ ||

ಆಸೆನಿಯಾಗೊ, ಕಾಂತಗೊಜೋಗಿ (೧೯೯೪) ಆಂಗ್ಲಕವಿ ಬ್ರೌನಿಂಗನ “ದಿ. ಪೈಡ್‌ ಪೈಪರ್‌ ಆಫ್‌ ಹೇಮಲಿನ್‌” ಮತ್ತು ಕುವೆಂಪು ಅವರ “ಕಿಂದರಿಜೋಗಿ”ಯನ್ನು ಆಧಾರವಾಗಿಟ್ಟು ಕೆದಂಬಾಡಿ ಜತ್ತಪ್ಪರೈಯವರು ಬರೆದ ಕೃತಿ. ಬ್ರೌನಿಂಗ್‌ನ ಕೃತಿಯನ್ನು ಆಧಾರವಾಗಿಟ್ಟುಕೊಂಡು ಕುವೆಂಪು ಅವರು “ಬೊಮ್ಮನಹಳ್ಳಿಯ ಕಿಂದರಿಜೋಗಿ” ಬರೆದರು. ಜತ್ತಪ್ಪರೈ ಅವರು ಈ ಎರಡು ಕೃತಿಗಳನ್ನು ಆಧರಿಸಿ “ಅಸೆನಿಯಾಗೋ, ಕಾಂತಗೋಜೋಗಿ”ಯನ್ನು ತುಳುವಿಗೆ ತಂದರು. ಕುದುರೆಮುಖ ಪ್ರದೇಶದ ವರ್ಣನೆಯೊಡನೆ ಆರಂಭವಾಗುವ ಈ ಕಾವ್ಯ ತುಳುನಾಡಿನ ಪರಿಸರದಲ್ಲಿ ಮೈ ಪಡೆದಿದೆ. ಕವಿಯ ಕಾವ್ಯವನ್ನೇ ನೋಡೋಣ.

ಪಡ್ಡೊಯಿಗಟ್ಟ ಕುದುರೆಮುಕೊ
ತುಳು ನಾಡಜದ್ರೊಗು ಬೂಮ್ಯಪ್ಪೆಪತ್ತಿನ ಅಡ್ಡೊ ಮುಗೊ |
ದೇವರೆ ಕೊರಿವರೋ ಸಂಪೊತ್ತು ನಂಕ್‌
ಸೃಷ್ಟಿಗೆ ಉಂದೊಂಜಿ ದೌಲೊತ್ತು
ಕೊರ್ಪುನಿ ಆಯೇ ಕರ್ಬೊದ ಕಿಟ್ಟೊ
ಲೋಕೊದ ಪಾಲ್‌ಗ್‌ ಬಂಗಾರ್‌ದ ಬೊಟ್ಟೊ
ಅರೆಬ್ಬಾಯಿ ಕಡಲ್‌ ಗಡಿತತ್ತ್‌ದ್‌
ಏರೊಂದು ಒಪ್ಪುಂಡೊ ತೂಡೆ ಸೆಂದ್‌
ತರೆದೆರ್ತ್ ದುಂತಿನದೇಕಿನ್‌ ತೂಂಡ
ತುಳುನಾಡ್‌ ಕಾಡ್ಯಪ್ಕರೆ ಗಡಿಪತ್ತ್‌ದುಂತಿನ
ಕಾಪುದಕಾಪಡೆ ಯಿಂಬೈಂದ್‌ಪನ್ಪುನೆಗಡ್ಯುಂಡೆ
ಕುದುರೆ ಮುಕ್ಕೊತ್ತಬಲತ್ತ್‌ಗ್‌ ತೋಜುನ
ಕಡ್ತಿಗಲ್ಲಗಾಟಿದ ಅಡಿಪುಡೆಟ್ಟೆ. ಬೂಮ್ಯಪ್ಪೆ
ನೈದ್ಬುಡಿಜಿಡೆನಾಗೆ ಪರತ್ತೊಂದು ಬರ್ಪುನ್ನೊ?
ಪರಿತ್ತ್‌ದ್‌ ಬರ್ಪಲ್‌ ಸುದೆನೇತ್ರಾವತಿ – ಗಿಲಿ ಗಿಲ
ಗೆಜ್ಜೆದ ಸೊರೊಲಕ್ಕಾವೊಂದು – ಸೊರಿತೊಂದು
ಬುಳೆಸಲೆ-ಸೌಭಾಗ್ಯ ಸಂಪೊತ್ತು (೧-೧೭)

ಕೆದಂಬಾಡಿ ಜತ್ತಪ್ಪ ರೈಯವರು ತುಳುವಿನಲ್ಲಿ ಬರೆದ ನಾಟಕಗಳು ಗಮನಸೆಳೆಯುತ್ತವೆ. ಕುವೆಂಪು ಅವರ ‘ಯಮನ ಸೋಲು’ (೧೯೮೩) ವಿಶ್ವಕವಿ ರವೀಂದ್ರನಾಥ ಠಾಗೋರರ ಕೃತಿಯನ್ನು ಆಧರಿಸಿ ಬರೆದ ‘ಕಾಬೂಲಿವಾಲಾ’ (೧೯೮೬) ಗೋವಿಂದ ಪೈ ಹಾಗೂ ಕುವೆಂಪು ಅವರ ನಾಟಕಗಳನ್ನಾಧರಿಸಿ ಬರೆದ ‘ಸೂದ್ರೆ ಏಕಲ್ಯೆ’ ಈ ಮೂರು ನಾಟಕಗಳು ಕೆದಂಬಾಡಿಯವರ ಲೇಖನಿಯಿಂದ ಮೂಡಿ ಬಂದಿವೆ. ಕೆದಂಬಾಡಿಯವರ ತುಳು ಭಾಷೆಗೆ ಒಂದು ವಿನೂತನ ತೆರನ ಇಂಪಿದೆ. ಅದು ವರ್ಣನೆಯಲ್ಲಾಗಲಿ, ಸಂಭಾಷಣೆಗಳಲ್ಲಾಗಲಿ ಅದು ಗರಿಬಿಚ್ಚಿ ನಿಲ್ಲುತ್ತದೆ. ಈ ನಾಟಕಗಳಲ್ಲಿ ಅವರ ಸಂಭಾಷಣೆಯ ಸೊಗಸನ್ನು ಸವಿಯಬಹುದು.

‘ಮೋಕೆದ ಬೀರೆ ಲೆಮಿಂಕಾಯೆ’ ಪಿನ್ಲೆಂಡ್‌ ದೇಶದ ಮೊದಲ ಕಾವ್ಯವೆಂದೇ ಸಾಂಸ್ಕೃತಿಕ ಮಹತ್ವ ಪಡೆದ ‘ಕಾಲೆವಾಲ’ದ ಐದು ಸಂಧಿಗಳ ಅನುವಾದ. ಕಾಲೆವಾಲ (೧೯೮೫) Cantos keith Bosleyಯು ಇಂಗ್ಲಿಷಿಗೆ ಮಾಡಿದ ಪದ್ಯಾನುವಾದದಲ್ಲಿ Leminkainen ಎಂಬ ವೀರಪುರುಷನ ಪ್ರೇಮ, ಪೌರುಷಗಳ ಮಂತ್ರಮಾಯಗಳ ವೃತ್ತಾಂತವಿದೆ. ಈ ಕೃತಿಯ ತುಳು ಅನುವಾದವನ್ನು ಅಮೃತ ಸೋಮೇಶ್ವರರು ಮಾಡಿದ್ದಾರೆ. ಮೂಲಕೃತಿಗೆ ನಿಷ್ಠವಾಗಿದ್ದೂ ಅನುವಾದಕರು ಸ್ವಾತಂತ್ರ್ಯವನ್ನು ಬಳಸಿ ತುಳು ಪಾಡ್ದನಗಳ ಧಾಟಿಯಲ್ಲಿ ಅನುವಾದ ಮಾಡಿದ್ದಾರೆ. ಕೆಲವೊಂದು ಅಂಕಿತನಾಮ ಇತ್ಯಾದಿಗಳಿಗೂ ತುಳು ಸ್ವರೂಪವನ್ನು ಕೊಟ್ಟಿದ್ದಾರೆ. ಹಾಡುಗಬ್ಬದ ರೀತಿಯಲ್ಲಿ ಗೇಯಗುಣವನ್ನು ಅನುವಾದದಲ್ಲಿ ಉಳಿಸಿಕೊಳ್ಳಲಾಗಿದೆ. ಪಾಡ್ದನದ ‘ಓ ಡೆನಡೆನ್ನಡೆನಡೆನ್ನ’ ಎಂಬ ಆರಂಭ ಹಾಗೂ ನಡು ನಡುವೆ ನುಡಿಯುವ ಅಲಾಪನೆಯ ಸೊಲ್ಲನ್ನು ಅನುವಾದದಲ್ಲಿ ಬಳಸಿಕೊಂಡಿದ್ದರಿಂದ ತುಳು ಧಾಟಿಗೆ ಇನ್ನಷ್ಟು ಒಪ್ಪುತ್ತದೆ.

ಕೃತಿಯ ವಸ್ತು ಹಾಗೂ ಕಾವ್ಯದ ತುಂಬ ಬಳಸಿದ ತುಳು ಪಾರಿಭಾಷಿಕ ಪದಗಳು ಅನುವಾದ ಕೃತಿಯನ್ನು ತುಳು ಸಂಸ್ಕೃತಿನಿಷ್ಠವಾಗಿಸುವಲ್ಲಿ ನೆರವಾಗಿದೆ. ಹಾಗೆ ಬಳಸಿದ ಸುಮಾರು ೪೩೨ ಪದಗಳ ಅರ್ಥವನ್ನು ಅನುವಾದದಲ್ಲಿ ನೀಡಿರುವುದು ತುಳು ಭಾಷೆಯನ್ನು ಸಾಂಸ್ಕೃತಿಕವಾಗಿ ಅರ್ಥೈಸಲು ನೆರವಾಗಿದೆ.

Leminkaimen-ಲೆಮಿಂಕಾಯೆ, Killikk-ಕಿಲ್ಲಕ್ಕೆ, Ainikki-ಐನಕ್ಕೆ, Dripcap ದುಗ್ಗಪ್ಪ, Water Demon ಬೊಬ್ಬಯ್ಯ-ಹೀಗೆ ಇಂಗ್ಲಿಷ್‌ ನಾಮಪದಗಳ ತುಳು ರೂಪಾಂತರವನ್ನು ಅನುವಾದದಲ್ಲಿ ಮಾಡಲಾಗಿದೆ. ಇವುಗಳ ಪಟ್ಟಿಯನ್ನು ಅನುಬಂಧದಲ್ಲಿ ಕೊಡಲಾಗಿದೆ. ಕೃತಿಯ ಒಳಗಡೆ ಆಜೋದ ಅರ್ಕಟ್ಟ್‌, ಅರ್ಕಟ್ಟ್‌ ಕಡಿಂಡ್‌, ಮಾಯೊದ ಮುರ್ಗೊ (ಮಾಯಾಮೃಗ), ಮಾಯೊದ ಉಡಿ, ಕುದ್ರೆ, ನೀರ್ಪಕ್ಕಿ (ಮಾಯದ ಕುದುರೆ, ನೀರುಹಕ್ಕಿ) ಮಗ್ರ್‌ಲುದಿಪನೊ ಹೀಗೆ ಒಟ್ಟು ಐದು ವಿಭಾಗಗಳಿವೆ.

ಇವಷ್ಟೇ ಅಲ್ಲದೆ ನಿರಂಜನರ ಚಿರಸ್ಮರಣೆಯ ತುಳು ಅನುವಾದ ‘ಮದಪ್ಪಂದಿ ನೆಂಪು’, ಮಜಿಬೈಲ್‌ ಭಾಸ್ಕರ ಭಂಡಾರಿಯವರ ‘ಸರ್ವಜ್ಞನ ವಚನ’ ತುಳುವಿನಲ್ಲಿ ಪ್ರಕಟವಾಗಿದೆ. ಪ್ರೇಮಾನಂದ ಕಿಶೋರರು ಅನುವಾದಿಸಿದ ಕಾರ್ನಾಡರ ‘ಯಯಾತಿ’ಯನ್ನು ತುಳುವಿಗೆ ಇಳಿಸಿದ್ದಾರೆ. ಕೆ. ಟಿ. ಗಟ್ಟಿಯವರು ಇಂಗ್ಲಿಷ್‌ ಪ್ರೇಮಗೀತೆಗಳ ತುಳು ಅನುವಾದಗಳನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೆ ಅನೇಕ ತುಳು ಅನುವಾದ ಕೃತಿಗಳು ಅಪ್ರಕಟಿತವಾಗಿಯೇ ಉಳಿದಿವೆ. ಸಾಹಿತ್ಯ ಸಂಶೋಧನೆ ಮೊದಲಾದ ಸಂದರ್ಭದಲ್ಲಿ ಅನೇಕ ಮೌಖಿಕ ಸಾಹಿತ್ಯದ ಭಾಗಗಳು ಅಲ್ಲಲ್ಲಿ ಅನುವಾದಗೊಂಡು ಪ್ರಕಟವಾಗಿವೆ.

ಕನ್ನಡ-ತುಳು ಭಾಷಾಂತರ ಪ್ರಕ್ರಿಯೆಯನ್ನು ಗಮನಿಸಿದಾಗ ಬಹುಮುಖ್ಯವಾದ ಎರಡು ಆಲೋಚನಾ ವಿಧಾನಗಳನ್ನು ಕಾಣಬಹುದು. ಮೊದಲನೆಯದಾಗಿ ಕನ್ನಡದ ಅಧೀನ ಭಾಷೆಯಾಗಿ ತುಳು ವ್ಯವಹಾರದಲ್ಲಿ ಬಳಕೆಯಾಗುತ್ತದೆ ಎಂಬ ನೆಲೆಯಲ್ಲಿ ತುಳು ಕೂಡಾ ಕನ್ನಡದಷ್ಟೇ ಸಮರ್ಥ ಭಾಷೆ ಎಂಬುದನ್ನು ತುಳು ಭಾಷಿಕರಿಗೆ ತೋರಿಸಿಕೊಡಬೇಕಾದ ಅನಿವಾರ್ಯತೆ ಅನುವಾದಕರ ಮುಂದಿತ್ತು. ಇಲ್ಲಿ ಪ್ರಾಚೀನ ತುಳು ಕೃತಿಗಳು ಹುಟ್ಟಿಕೊಂಡುದೂ ಇದೇ ಆಲೋಚನಾ ವಿಧಾನದಿಂದಲೇ ಆಗಿದೆ. ಹಾಗಾಗಿ ಸಂಸ್ಕೃತ ಕೃತಿಗಳನ್ನು ಪ್ರಾಚೀನ ಕವಿಗಳು ತುಳುವಿನಲ್ಲಿ ಬರೆದರು. ಆದರೆ ಆ ಕಾಲಘಟ್ಟದಲ್ಲಿ ತುಳು ಭಾಷೆ ಹಾಗೂ ಲಿಪಿಗೆ ಓದುಗರ ಸಂಖ್ಯೆ ಅಧಿಕವೇ ಇದ್ದಿರಬಹುದು. ಆದರೆ ಆಧುನಿಕ ದಿನಗಳಲ್ಲಿ ತುಳು ಭಾಷೆಯನ್ನು ಓದುವವರು ಕನ್ನಡ ಲಿಪಿ ಬಲ್ಲವರಾಗಿರುವುದರಿಂದ ಅವರಿಗೆ ತುಳುವಿನ ಸೊಗಸನ್ನು ಅಸ್ವಾದಿಸುವ ಅಗತ್ಯ ಮಾತ್ರ ಇತ್ತು.

ತುಳುವಿನಲ್ಲಿ ಕಾವ್ಯ ಸೃಷ್ಟಿಯ ಅಗತ್ಯವನ್ನು ಕುರಿತು ತುಳು ಹರಿಶ್ಚಂದ್ರ ಕಾವ್ಯದ ಮುನ್ನುಡಿಯಲ್ಲಿ ಅಮೃತ ಸೋಮೇಶ್ವರರು ಹೇಳುವ ಮಾತುಗಳನ್ನು ನನಪಿಸಿಕೊಳ್ಳಬಹುದು. ತುಳುವಿನಲ್ಲಿ ಕಾವ್ಯಗಳು ಹುಟ್ಟಿಬರುತ್ತಿರುವುದು ಭಾಷೆಯ ಸಾಮರ್ಥ್ಯದ ಗುರುತು. ತುಳು ಭಾಷೆಯ ಸ್ಥಿತಿಗತಿಗಳು ಹೆಚ್ಚಾಗಬೇಕಾದರೆ ಸೃಷ್ಟಿಕಾರ್ಯ ತುಳು ಭಾಷೆಯಲ್ಲಿ ಆಗಬೇಕು. ಕಾವ್ಯ, ಲಲಿತ ಪ್ರಬಂಧ, ಸಂಶೋಧನೆ, ವಿಮರ್ಶೆ, ಅನುವಾದ ಈ ಎಲ್ಲಾ ಪ್ರಕಾರಗಳಲ್ಲೂ ಸತ್ವವಿರುವ ಕೃತಿಗಳು ಅಧಿಕ ಪ್ರಮಾಣದಲ್ಲಿ ಬರಬೇಕಾಗಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ಅಥವಾ ಇತರೇ ಭಾಷೆಗಳಿಂದ ತುಳುವಿಗೆ ಅನುವಾದಗೊಂಡ ಕೃತಿಗಳಲ್ಲಿ ಮೂರು ಮುಖ್ಯ ವಿಭಾಗಗಳನ್ನು ಮಾಡಬಹುದು. ಮೊದಲನೆಯದು ಧಾರ್ಮಿಕ ಉದ್ದೇಶಗಳಿಗಾಗಿಯೋ ಅಥವಾ ಮತೀಯ ಕಾರಣಗಳಿಗಾಗಿಯೋ ರೂಪುಗೊಂಡ ಅನುವಾದ ಕೃತಿಗಳು. ಇಲ್ಲ ಮುಖ್ಯವಾಗಿ ಬೈಬಲ್‌, ಭಗವದ್ಗೀತೆ, ದಾಸರ ಪದಗಳಂತಹ ಭಕ್ತಿಯ ನೆಲೆಯ ಕೃತಿಗಳನ್ನು ಗುರುತಿಸಬಹುದು. ಇಲ್ಲಿ ಇಂಗ್ಲಿಷ್‌, ಸಂಸ್ಕೃತ, ಕನ್ನಡವೇ ಮೊದಲಾದ ಆಕರ ಭಾಷೆಗಳಲ್ಲಿನ ಕೃತಿಗಳನ್ನು ಆಶಯದ ನೆಲೆಯಿಂದ ಆಯ್ದ ಅನುವಾದ ಮಾಡಿರುವುದನ್ನು ಕಾಣಬಹುದು. ನಿರ್ದಿಷ್ಟ ಜನ ಸಮುದಾಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಅನುವಾದಗಳು ರೂಪುಗೊಂಡಿದೆ.

ಎರಡನೆಯ ವಿಭಾಗದಲ್ಲಿ ಯಕ್ಷಗಾನ ಕೃತಿಗಳ ಅನುವಾದವನ್ನು ಹೆಸರಿಸಬಹುದು. ಇಲ್ಲಿ ಸಮಕಾಲೀನವಾದ ಕಲೆಯೊಂದು ತುಳುನಾಡಿನಲ್ಲಿ ಕನ್ನಡ ಭಾಷೆಯಲ್ಲಿ ಅಭಿವ್ಯಕ್ತಗೊಳ್ಳುತ್ತಿದ್ದು ಅದು ಬಹುತೇಕ ಜನರನ್ನು ತಲುಪುತ್ತಿತ್ತು. ಈ ಕನ್ನಡ ಯಕ್ಷಗಾನಗಳಿಗೆ ತುಳು ಮನೆಮಾತಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಾಗಿದ್ದುದಲ್ಲದೆ ಅದರಲ್ಲಿ ಭಾಗವಹಿಸುವ ಕಲಾವಿದರಲ್ಲೂ ತುಳು ಮನೆಮಾತಿನವರು ಅಧಿಕವಿದ್ದಾರೆ. ಹಾಗಾಗಿ ತುಳುವಿನ ಮೂಲಕ ಯಕ್ಷಗಾನವನ್ನು ಜನಪ್ರಿಯಗೊಳಿಸಬಹುದೆಂಬ ಆಲೋಚನೆ ಮೂಡಿದುದರಲ್ಲಿ ಅಚ್ಚರಿಪಡಬೇಕಾಗಿಲ್ಲ. ಆದರೆ ಆ ಆಲೋಚನೆ ಪ್ರಕಟವಾಗಿ ತುಳು ಯಕ್ಷಗಾನ ಕೃತಿಗಳು ೧೯ನೆಯ ಶತಮಾನದ ಉತ್ತರಾರ್ಧದಲ್ಲಿಯೇ ರೂಪು ಪಡೆದಿವೆ. ಆದರೆ ತುಳು ಯಕ್ಷಗಾನಗಳು ರಂಗಸ್ಥಳದಲ್ಲಿ ಪ್ರಯೋಗಕ್ಕೆ ಬಂದುದು ಮಾತ್ರ ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ಎಂಬುದು ಗಮನಾರ್ಹ.

ಮೂರನೆಯ ವಿಭಾಗದಲ್ಲಿ ಆಧುನಿಕಪೂರ್ವ ಕನ್ನಡ ಕಾವ್ಯಕೃತಿಗಳ ತುಳು ಅನುವಾದಗಳನ್ನು ಸೇರಿಸಬಹುದು. ಇಲ್ಲಿ ಅನುವಾದಕರ ಮುಖ್ಯ ಕಾಳಜಿ ತುಳು ಭಾಷೆಯಲ್ಲೂ ಸಮರ್ಥವಾದ ಅಭಿವ್ಯಕ್ತಿ ಸಾಧ್ಯ ಎಂಬುದನ್ನು ಪ್ರಕಟಪಡಿಸುವುದೇ ಆಗಿದೆ. ಅದಕ್ಕಾಗಿ ಬಹುತೇಕ ಆಧುನಿಕ ಪೂರ್ವ ಕನ್ನಡದ ಕೃತಿಗಳನ್ನು ಅನುವಾದಕರು ಸವಾಲಾಗಿ ಸ್ವೀಕರಿಸಿರುವುದನ್ನು ಕಾಣಬಹುದು. ಹಾಗಾಗಿ ಅವರು ಅನುವಾದಗಳಲ್ಲೂ ನಿರ್ದಿಷ್ಟವಾದ ಛಂದೋಬಂಧಕ್ಕೆ ಬದ್ಧರಾಗಿ ಕಾವ್ಯಗಳನ್ನು ತುಳುವಿನಲ್ಲಿ, ಪುನರ್‌ಸೃಷ್ಟಿಸುವ ಕಾರ್ಯದಲ್ಲಿ ತೊಡಗಿರುವುದನ್ನು ಕಾಣಬಹುದು. ತುಳುವಿನ ಸಾಂಸ್ಕೃತಿಕ ಪದಗಳು, ಕನ್ನಡ, ಸಂಸ್ಕೃತ ಪದಗಳಿಗೆ ಪರ್ಯಾಯವಾಗಿ ತದ್ಭವಗಳ ಸೃಷ್ಟಿಯನ್ನು ಮಾಡುತ್ತಾ ಅನುವಾದ ಕವಿಗಳು ಅನುವಾದವನ್ನು ಮಾಡಿದ್ದಾರೆ. ಮುಖ್ಯವಾಗಿ ಕಾವ್ಯಪ್ರಕಾರಗಳನ್ನು ಆಯ್ದು ಕಾವ್ಯ ಪ್ರಕಾರದಲ್ಲಿಯೇ ಅನುವಾದಗಳನ್ನು ರೂಪಿಸಿದ್ದರಿಂದ ಇದರ ಹಿಂದಿನ ಉದ್ದೇಶವೂ ಸ್ಪಷ್ಟವಾಗುತ್ತದೆ.

ನಾಲ್ಕನೆಯ ವಿಭಾಗದಲ್ಲಿ ಆಧುನಿಕ ಕೃತಿಗಳ ತುಳು ಅನುವಾದಗಳನ್ನು ಗುರುತಿಸಬಹುದು. ಆಧುನಿಕ ತುಳು ಸಾಹಿತ್ಯವನ್ನು ಕನ್ನಡಕ್ಕೆ ಸಮನಾಗಿ ಬಳಸುವ ಪ್ರಯತ್ನದ ಭಾಗವಾಗಿಯೇ ಈ ಅನುವಾದಗಳು ಮುಖ್ಯವಾಗಿವೆ. ಹಿಂದಿನ ಮೂರು ವಿಭಾಗಗಳಲ್ಲಿ ಬಹುತೇಕ ಪದ್ಯರೂಪದ ಕೃತಿಗಳೇ ಮುಖ್ಯವಾದರೆ ಇಲ್ಲಿ ಗದ್ಯ ಕೃತಿಗಳ ಅನುವಾದ ಹೆಚ್ಚು ಗಮನ ಸೆಳೆಉತ್ತದೆ. ಕನ್ನಡ ಕಾದಂಬರಿಗಳ ಅನುವಾದದ ಮೂಲಕ ಆಧುನಿಕ ತುಳು ಗದ್ಯದ ಸಮರ್ಥಾಭಿವ್ಯಕ್ತಿ ಸಾಧ್ಯ ಎಂಬುದನ್ನು ಮನಗಾಣಿಸಿಕೊಡುವ ಉದ್ದೇಶ ಬಹುತೇಕ ಅನುವಾದಗಳ ಹಿಂದೆ ಇದೆ. ತುಳು ಮೌಖಿಕ ಸಾಹಿತ್ಯದಲ್ಲಿ ಪದ್ಯಗಳಿಗೆ ಪ್ರಾಮುಖ್ಯವಿದ್ದು ಬಹುತೇಕ ತುಳು ಅನುವಾದಗಳು ಹಾಗೂ ಸಾಹಿತ್ಯ ಎಂದರೆ ಪದ್ಯ ಸಾಹಿತ್ಯವೇ ಆಗಿತ್ತು. ಯಾವುದೇ ಪಾರಂಪರಿಕ ರಚನೆಗಳಿಲ್ಲದೆ ಆಧುನಿಕ ಗದ್ಯವನ್ನು ರೂಪಿಸುವ ಪ್ರಯತ್ನದ ಭಾಗವಾಗಿ ಈ ಅನುವಾದಗಳಿಗೆ ಮಹತ್ವವಿದೆ.

ಕನ್ನಡ-ತುಳು ಅನುವಾದಗಳ ನೆಲೆಯಿಂದ ಎರಡೂ ಭಾಷಾಕೃತಿಗಳ ತೌಲನಿಕ ಅಧ್ಯಯನ ಸಾಧ್ಯತೆಗಳತ್ತ ಬೆಟ್ಟು ಮಾಡಬಹುದು. ಹಿಂದೆ ಗ್ರೀಕ್‌ಸಹಿತ್ಯವನ್ನು ರೋಮನ್ನರು ಅನುವಾದ ಮಾಡುತ್ತಿದ್ದರು. ಅವರು ಗ್ರೀಕ್‌ನಿಂದ ಭಾಷಾಂತರ ಮಾಡಿದರೂ ಭಾಷಾಂತರ ಸ್ಥಿತಿಯನ್ನು ಓದುವ ಬಹುತೇಕ ಜನರಿಗೆ ಮೂಲ ಗ್ರೀಕ್‌ ಪಠ್ಯದ ಪರಿಚಯವೂ ಇರುತ್ತಿತ್ತು. ಹಾಗಾಗಿ ಅವರು ಕೃತಿಗಳ ಕುರಿತು ಪ್ರತಿಕ್ರಿಯಿಸುವಾಗ ಹಾಗೂ ವಿಮರ್ಶೆ ಮಾಡುವಾಗ ಗ್ರೀಕ್‌ಹಾಗೂ ರೋಮನ್‌ಎಂಬ ಭೇದವನ್ನು ಮಾಡುತ್ತಿರಲಿಲ್ಲ. ಭಾಷಿಕ ಗಡಿಗಳನ್ನು ಮೀರಿದ ಒಂದು ಅಖಂಡ ಸಾಹಿತ್ಯ ಪರಂಪರೆಯಾಗಿ ಅವರು ಸಾಹಿತ್ಯವನ್ನು ನೋಡುತ್ತಿದ್ದರು. ಎಂದರೆ ಆಕರ ಪಠ್ಯದ ಜೊತೆಗೆ ತುಲನೆ ಸಾಧ್ಯವಾಗಲಿ ಎಂದೇ ಅವರು ಭಾಷಾಂತರಗಳನ್ನು ಮಾಡುತ್ತಿದ್ದರು. ಕನ್ನಡ-ತುಳು ಭಾಷಾಂತರಗಳ ಸಂದರ್ಭದಲ್ಲಿಯೂ ಇಂತಹ ಒಂದು ಕುತೂಹಲದ ಮನಸ್ಸು ಹಿನ್ನೆಲೆಯಲ್ಲಿದ್ದಂತಿದೆ. ಮೂಲಪಠ್ಯವನ್ನು ಪರಿಚಯಿಸುವ ಉದ್ದೇಶದಿಂದ ಮಾಡುವ ಭಾಷಾಂತರಗಳು ಬೇರೆ, ಮೂಲದ ಜೊತೆಗೆ ತುಲನೆ ಮಾಡಲೆಂದೇ ಮಾಡುವ ಭಾಷಾಂತರಗಳ ಸ್ವರೂಪ ಬೇರೆ. ಕನ್ನಡ-ತುಳು ಸಂದರ್ಭದಲ್ಲಿ ತುಲನೆ ಮಾಡಲೆಂದೇ ಭಾಷಾಂತರವನ್ನು ರೂಪಿಸಿಕೊಂಡುದು ಗೋಚರವಾಗುತ್ತದೆ. ಒಂದು ಕೃತಿಯನ್ನು ಎರಡು ಭಾಷಿಕ ಸಂಸ್ಕೃತಿಗಳ ನಡುವೆ ಒಂದು ಉಚ್ಚ ಪಠ್ಯ (Meta Text)ವಾಗಿ ರೂಪಿಸುವ ಪ್ರಯತ್ನದ ಭಾಗವಾಗಿಯೂ ಇದನ್ನು ಕಾಣಬಹುದು. ತುಳುವಿನ ಸಂದರ್ಭದಲ್ಲಿ ಚೋಮನ ದುಡಿ ಕನ್ನಡ ಚೋಮನ ದುಡಿಯನ್ನು ಮೀರಿದ ಒಂದು ‘ಉಚ್ಛ ಪಠ್ಯ’ವಾಗಿದೆ. ಆಕರ ಪಠ್ಯಗಳ ಸಾಂಸ್ಕೃತಿಕ ಕೊರತೆಯನ್ನು ನೀಗಿ ರೂಪುಗೊಂಡ ಭಾಷಾಂತರ ಕೃತಿಯಿದು. ಹೀಗೆ ಭಾಷಾಂತರ ಅಧ್ಯಯನಕಾರರಿಗೆ ವಿನೂತನ ಮಾಹಿತಿಗಳನ್ನು ಒದಗಿಸಬಲ್ಲ ಅನೇಕ ಸಂಗತಿಗಳು ಕನ್ನಡ ತುಳು ಭಾಷಾಂತರ ಸಂದರ್ಭದಲ್ಲಿ ಇದೆ ಎಂಬುದು ಮಾತ್ರ ವಾಸ್ತವ.

ತುಳುವಿನ ಅನುವಾದ ಕೃತಿಗಳನ್ನು ಗಮನಿಸಿ ಭಾಷೆಯ ದೃಷ್ಟಿಯಿಂದ ಕೆಲವು ವೈಶಿಷ್ಟ್ಯಗಳನ್ನು ಕಾಣಬಹುದು. ತುಳು ಮಾತಿನ ಭಾಷೆ. ಅಲ್ಲಿ ಮೌಖಿಕವಾಗಿ ಜನಪದ ಸಾಹಿತ್ಯವಿದೆ. ಯಾವುದೇ ಜೀವಂತ ಭಾಷೆಯೂ ಸಮುದಾಯದಿಂದ ಸಮುದಾಯಕ್ಕೆ ವಿಭಿನ್ನವಾಗಿ ಬಳಕೆಯಾಗುವಂತೆ ತುಳುವಿನಲ್ಲಿಯೂ ಅಷ್ಟೇ ವೈವಿಧ್ಯವಿದೆ. ಬ್ರಾಹ್ಮಣರ ತುಳು, ಬಂಟರ ತುಳು, ಶೂದ್ರರ ತುಳು ಎಂಬಿತ್ಯಾದಿ ಜಾತಿ ಸಮುದಾಯಗಳಲ್ಲಿ ವ್ಯತ್ಯಸ್ಥ ತುಳು ಭಾಷೆಗಳು ಬಳಕೆಯಲ್ಲಿವೆ. ಪ್ರತಿ ಇಪ್ಪತ್ತು ಮೈಲಿಗಳ ಅಂತರದ ಪ್ರದೇಶದ ತುಳುಭಾಷೆಗಳಲ್ಲೂ ವ್ಯತ್ಯಾಸವಿದೆ. ತುಳು ಲಿಪಿಯ ಮೂಲಕ ದಾಖಲಾದ ಸಾಹಿತ್ಯವಿರದ ಕಾರಣಕ್ಕೆ ಮೌಖಿಕವಾಗಿ ತುಳು ವಿಭಿನ್ನ ಆಯಾಮಗಳಲ್ಲಿ ಬೆಳೆಯುತ್ತಾ ಬಂತು. ಗ್ರಂಥಲಿಪಿ ಎಂಬುದನ್ನು ತುಳು ಲಿಪಿ ಎಂದು ಗುರುತಿಸಲಾಗಿದೆಯಾದರೂ ಅದು ಕೇವಲ ತುಳುವಿಗೆ ಮಾತ್ರ ಸೀಮಿತವಾದ ಲಿಪಿಯಲ್ಲ. ಹಾಗಾಗಿ ಕನ್ನಡ ಲಿಪಿಯಲ್ಲಿ ರೂಪುಪಡೆದ ತುಳು ಅನುವಾದ ಸಾಹಿತ್ಯದಲ್ಲಿ ಮುಖ್ಯವಾಗಿ ಮೂರು ಭಾಷಾ ಪ್ರಭೇದಗಳನ್ನು ಗುರುತಿಸಬಹುದು. ಒಂದು ತುಳು ಜಾನಪದದ ಸೊಗಡನ್ನು ತನ್ನೊಳಗೆ ಹುದುಗಿಸಿಕೊಂಡ ದೇಸಿಭಾಷೆ. (ಕೆದಂಬಾಡಿ ಜತ್ತಪ್ಪರೈ, ಕೆಲಿಂಜ ಸೀತಾರಾಮ ಆಳ್ವ, ನ. ಭೋಜರಾಜ ಕಡಂಬ ಇವರ ಕೃತಿಗಳ ಭಾಷೆ) ಎರಡು ಸಂಸ್ಕೃತದ ಪ್ರಭಾವದಲ್ಲಿ ರೂಪುಪೆದ ಭಾಷೆ (ಉದಾಹರಣೆಗೆ ಮಂದಾರ ಕೇಶವಭಟ್ಟ, ವೇದಾವತಿ ಮೊದಲಾದವರ ಅನುವಾದ ಕೃತಿಗಳ ಭಾಷೆ) ಮೂರು ಕನ್ನಡದ ಪ್ರಭಾವದಲ್ಲಿ ರೂಪು ಪಡೆದ ತುಳುಭಾಷೆ. ಅಮೃತ ಸೋಮೇಶ್ವರ, ಎನ್‌. ಪಿ. ಶೆಟ್ಟಿ ಮೊದಲಾದವರ ಭಾಷಾಂತರ ಕೃತಿಗಳನ್ನು ಇಲ್ಲಿ ಹೆಸರಿಸಬಹುದು. ತುಳು ದೇಸೀ ನುಡಿಗಳನ್ನು ಎಲ್ಲಾ ಭಾಷಾಂತರಕಾರರು ಬಳಸಿರುವುದನ್ನು ಕಾಣಬಹುದು. ಈ ಮೂರು ತೆರನ ಭಾಷಾ ಬಳಕೆಯ ನಡುವೆ ಅಮೃತ ಸೋಮೇಶ್ವರ ಅವರು ಸಂವಹನ ಸಾಧ್ಯತೆಯೆಡೆಗೆ ಗಮನ ಕೇಂದ್ರೀಕರಿಸಿ ಒಂದು ಪ್ರಮಾಣಬದ್ಧ ತುಳು ಭಾಷೆಯನ್ನು ಬಳಸಿರುವುದನ್ನು ಗಮನಿಸಬಹುದು.

ಅನುವಾದ ಕೃತಿಗಳ ಆಶಯ ಏನೇ ಇರಲಿ, ಆದರೆ ಅನುವಾದಕರು ಬಳಸಿದ ಭಾಷಾ ಪದಗಳಲ್ಲಿ ಸ್ವೀಕೃತ ಪದಗಳು, ಸೃಷ್ಟಿಸಿದ ಪದಗಳು, ತದ್ಭವೀಕರಿಸಿದ ಪದಗಳು ತುಳುವಿನಲ್ಲಿ ಟಂಕಿಸಿದ ಪದಗಳು ಇತ್ಯಾದಿಗಳ ನೆಲೆಯಿಂದ ಅನುವಾದ ಭಾಷೆಯನ್ನು ರೂಪಿಸಿರುವುದನ್ನು ನೋಡಬಹುದು. ಇಂತಹ ವಿವರಗಳ ಬಳಕೆಯೇ ಅನುವಾದದ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ. ಒಟ್ಟಿನಲ್ಲಿ ಅನುವಾದಗಳ ಮೂಲಕ ತುಳು ಭಾಷೆಯ ಪದಸಂಪತ್ತು, ಅಭಿವ್ಯಕ್ತಿ ಸಾಮರ್ಥ್ಯದ ಸ್ಪಷ್ಟ ಅರಿವು ಆಗುತ್ತದೆ. ಕನ್ನಡ ಚಿಂತನಾ ವಿಧಾನಗಳನ್ನು ತುಳುವಿನಲ್ಲಿ ಗ್ರಹಿಸಿ ನೀಡಿದ ಅಭಿವ್ಯಕ್ತಿಗಳು ಭಾಷಾಂತರ ಪ್ರಕ್ರಿಯೆಯ ಮೂಲಕ ಪ್ರಕಟವಾಗಿದೆ. ಹಾಗೆ ಗ್ರಹಿಕೆಯ ಅಭಿವ್ಯಕ್ತಿಗೆ ಕೃತಿಯನ್ನು ಮುಖ್ಯವಾಗಿ ಪರಿಗಣಿಸದೆ ಕೃತಿಯ ಮುಖ್ಯ ಆಶಯವನ್ನು ಗ್ರಹಿಸಿ ಅದರ ಸಾರವನ್ನು ತುಳುವಿನಲ್ಲಿ ನೀಡಲು ಪ್ರಯತ್ನಿಸುವುದೇ ಇಲ್ಲಿ ಮುಖ್ಯವಾಗಿ ಕಾಣಿಸುತ್ತದೆ. ಒಂದು ಕೃತಿಯ ಯಥಾವತ್ತಾದ ಅನುವಾದ ಎಂಬ ನೆಲೆ ಆಧುನಿಕ ತುಳು ಕೃತಿಗಳ ಸಂದರ್ಭದಲ್ಲಿಯೂ ಇಲ್ಲ. ಹಾಗೆ ಕೃತಿ ರಚಿಸುವಾಗ ಅನೇಕರು ಒಂದಕ್ಕಿಂತ ಹೆಚ್ಚು ಕೃತಿಗಳನ್ನು ತಮ್ಮ ಗ್ರಹಿಕೆಯ ವ್ಯಾಪ್ತಿಗೆ ತೆಗೆದುಕೊಂಡು ತುಳುವಿನಲ್ಲಿ ಪುನರ್‌ಸೃಷ್ಟಿಸಿದ್ದಾರೆ. ಹಾಗಾಗಿ ಇಲ್ಲಿನ ಕೃತಿಗಳೆಲ್ಲ ಭಾಷಾಂತರ ಕೃತಿಗಳೆಂದು ಗುರುತಿಸಿ ಅದಕ್ಕೊಂದು ಮೂಲಕೃತಿಯೆಂದು ಹೆಸರಿಸುವಷ್ಟಕ್ಕೇ ಸೀಮಿತವಾಗಿ ಉಳಿಯುವುದಿಲ್ಲ. ಒಂದು ಕೃತಿ ಅದಕ್ಕೆ ಪೂರಕವಾದ ಅನೇಕ ಕೃತಿಗಳು ಪೋಷಕವಾಗಿ ಇಲ್ಲಿನ ತುಳು ಕೃತಿಯು ರೂಪುಗೊಳ್ಳುವಲ್ಲಿ ನೆರವಾಗಿವೆ. ಈ ದೃಷ್ಟಿಯಿಂದ ನೋಡಿದರೆ ಬಿಡಿ ಕೃತಿಗಳ ಅಥವಾ ಸಮಗ್ರ ಕೃತಿಯ ಅನುವಾದಗಳಿಗಿಂತ ಒಂದು ಸಮಗ್ರ ಚಿಂತನೆಯ ಭಾಗವಾಗಿ ತುಳುವಿನಲ್ಲಿ ಕೃತಿಗಳ ರಚನೆಯಾಗಬೇಕು ಎಂಬ ಲೇಖಕರ ಧೋರಣೆ ಅನುವಾದಗಳಲ್ಲಿ ಸ್ಪಷ್ಟವಾಗುದೆ. ಪ್ರಸ್ತುತ ಬರೆಹವನ್ನು ಪ್ರಾಚೀನ ಕೃತಿಗಳು, ಧಾರ್ಮಿಕ ಕೃತಿಗಳು, ಯಕ್ಷಗಾನ ಕೃತಿಗಳು, ಮಧ್ಯಕಾಲೀನ ಕನ್ನಡ ಕೃತಿಗಳು ಹಾಗೂ ಆಧುನಿಕ ಕೃತಿಗಳು ಎಂಬ ಉಪಶೀರ್ಷಿಕೆಗಳಲ್ಲಿ ವಿಂಗಡಿಸಲಾಗಿದೆ. ಇದು ಕೇವಲ ವರ್ಗೀಕರಿಸುವ ಅನುಕೂಲಕ್ಕಾಗಿ ಹೆಸರಿಸಿದ ಶೀರ್ಷಿಕೆಗಳು. ಹಾಗೆ ನೋಡಿದರೆ ‘ದೇವೀ ಮಹಾತ್ಮೆ’ ಎಂಬ ಪ್ರಾಚೀನ ಕೃತಿಯನ್ನು ಹೊರತುಪಡಿಸಿ ಇಲ್ಲಿನ ಎಲ್ಲಾ ಕೃತಿಗಳು ಆಧುನಿಕ ಚಿಂತನೆಯ ಭಾಗವಾಗಿ ಸಮಕಾಲೀನ ತುಳುಭಾಷೆ ಸಂಸ್ಕೃತಿಗಳ ಅರಿವಿನಿಂದ ರೂಪುಪಡೆದಿರುವುದರಿಂದ ಎಲ್ಲವೂ ಆಧುನಿಕ ಕೃತಿಗಳೇ ಆಗುತ್ತವೆ. ಧಾರ್ಮಿಕ ಕೃತಿಗಳೇ ಇರಲಿ, ಯಕ್ಷಗಾನ ಕೃತಿಗಳೆ ಇರಲಿ ಅಥವಾ ಕಾವ್ಯಕೃತಿಗಳೆ ಇರಲಿ ಅವೆಲ್ಲ ತುಳುವರಿಗೆ ತುಳು ಲಿಖಿತ ಭಾಷೆಯ ಮೂಲಕವೇ ಹೇಳಬೇಕೆಂಬ ಅದಮ್ಯ ಆಸೆಯಿಂದ ರೂಪು ಪಡೆದವುಗಳು. ಇವು ತುಳು ಸಾಹಿತ್ಯ, ಭಾಷೆ, ಸಂಸ್ಕೃತಿಯನ್ನು ಪೋಷಿಸುವಲ್ಲಿ ನೆರವಾಗಿವೆ.

ತುಳು ಅನುವಾದ ಕೃತಿಗಳು

೧೮೯೭ – ದೇವತಾರಾಧನೆದ ಕ್ರಮ – (ಎರಡನೆಯ ಮುದ್ರಣ) ಮಂಗಳೂರು ಬಾಸೆಲ್‌ ಮಿಷನ್‌ ಬುಕ್‌ ಮತ್ತು ಟ್ರಾಕ್ಟ್‌ ಡಿಪೋಸಿಟರಿ, ಪು. ೨೫೯+xvi

೧೯೧೬ – ತುಳು ಕನ್ಯೋಪದೇಶ-(ನಾಲ್ಕನೆಯ ಮುದ್ರಣ)ಅನು: ಎಮ್‌. ಆರ್‌. ಸುಬ್ರಹ್ಮಣ್ಯ ಶಾಸ್ತ್ರಿ, ‌ಶ್ರೀಮನ್‌ ಮಧ್ವ ಸಿದ್ಧಾಂತ ಗ್ರಂಥಾಲಯ, ಉಡುಪಿ, ಪು ೨೮

೧೯೨೯ – ಕಿಟ್ಣರಾಜಿ ಪರ್ಸಂಗೊ ಬಡಕಯಿಲ್‌ ಪರಮೇಶ್ವರಯ್ಯ ಎಸ್‌. ಯು. ಪಣಿಯಾಡಿ, ಶ್ರೀ ಭಾರತ್‌ ವಸ್ತು ಮಂದಿರ ಉಡುಪಿ

೧೯೩೪ – ಗೀತ ಮಲ್ಲಿಗೆ-ಮೂಲ್ಕಿ ನರಸಿಂಗರಾವ್‌ ಅನು : ಸರಸ್ವತಿ ಪ್ರಿಂಟಿಂಗ್‌ ವರ್ಕ್ಸ್‌ ಲಿಮಿಟೆಡ್‌, ಮಂಗಳೂರು ಪು ೬೯+viii

೧೯೪೬ – ಪೊಸ ಒಡಂಬಡಿಕೆ – ಬ್ರಿಟಿಷ್‌ ಎಂಡ್‌ ಪೋರಿನ್‌ ಬೈಬಲ್‌ ಸೊಸೈಟಿ ಮದ್ರಾಸು ಆಕ್ಸ್‌ಲಿಯರಿ ಪು. ೧೬೮

೧೯೬೬ – ತುಳು ಗೀತೆಗಳು – (ನಾಲ್ಕನೇ ಮುದ್ರಣ) ಬಾಸೆಲ್‌ ಮಿಷನ್‌ ಬುಕ್‌ ಡಿಪೊ, ಮಂಗಳೂರು.

೧೯೬೮ – ಪಂಚವಟಿ ರಾಮಾಯಣ ವಾಲಿಸುಗ್ರೀವರ ಕಾಳಗೊ-ಸಂಕಯ್ಯ ಭಾಗವತರು, ಜತ್ತಿ ಕೃಷ್ಣಭಟ್ಟ, ಮಾನ್ಯ, ಬೇಳಗ್ರಾಮ ಕಾಸರಗೋಡು ಪು. ೪೬+x

೧೯೭೭ – ಮಂದಾರ ರಾಮಾಯಣ-ಮಂದಾರ ಕೇಶವ ಭಟ್ಟ, ಸಾಹಿತ್ಯ ಸಂಘ, ಮಣಿಪಾಲ ಪು. ೪೪

೧೯೭೯ – ರತ್ನನ ಪದೊಕ್ಕುಲು – ಮೂಲ : ರತ್ನನ ಪದಗಳು ಜಿ.ಪಿ.ರಾಜರತ್ನಂ ಅನು : ನ. ಭೋಜರಾಜ ಕಡಂಬ (ದ್ವಿತೀಯ ಮುದ್ರಣ) ರಾಜರತ್ನಂ ಸಂಸ್ಮರಣೆ, ಹಿರಿಯಡಕ, ಪು.೯೨

೧೯೮೧ – ಗೀತೆದ ತಿರ್ಲ್‌ ಎನ್‌. ಸೀತಾರಾಮ ಆಳ್ವ, ವಿಶ್ವಹಿಂದೂ ಪರಿಷದ್‌ ಸ್ಥಾನೀಯ ಸಮಿತಿ, ಕೆಲಿಂಜ (ದ.ಕ) ಪು. ೧೧೦ ಬೆಲೆ ರೂ.೮.೦೦

೧೯೮೩ – ತುಳು ಚೋಮನದುಡಿ ಅನು: ಕೆದಂಬಾಡಿ ಜತ್ತಪ್ಪರೈ, ಮೂಲ: ಶಿವರಾಮ ಕಾರಂತ, ತೆಕ್ಕುಂಜ ಅಭಿಮಾನಿ ಬಳಗ, ಹೈದ್ರಾಬಾದ್‌ ಪು. ೧೮೩

೧೯೮೩ – ಯಮನ ಸೋಲು – ಕೆದಂಬಾಡಿ ಜತ್ತಪ್ಪ ರೈ, ಮೂಲ : ಕುವೆಂಪು ಸಂತೋಷ್‌ ಪ್ರಿಟರ್ಸ್‌, ಪುತ್ತುರು ಪು.೩೫

೧೯೮೪ – ಮದಪ್ಪಂದಿ ನೆಂಪು ಅನು : ಕೆದಂಬಾಡಿ ಜತ್ತಪ್ಪರೈ, ಮೂಲ: ಚಿರಸ್ಮರಣೆ ‘ನಿರಂಜನ’ ಸ್ಪಂದನ ಪ್ರಕಾಶನ ಬೆಂಗಳೂರು, ಪು. xii+ ೩೪೬ ಬೆಲೆ ೨೭.೦೦

೧೯೮೫ – ಫಿನ್ಲಂಡ್‌ದೊ ಆದಿಕಾವ್ಯೊ ಕಾಲೆವಾಲ (ಸಂಧಿ ೧೧-೧೫) ಮೋಕೆದ ಬೀರೆ ಲೆಮಿಂಕಾಯೆ – ಅನು: ಅಮೃತ ಸೋಮೇಶ್ವರ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಎಂ.ಜಿ.ಎಂ ಕಾಲೇಜು, ಉಡುಪಿ

೧೯೮೯ – ಕಾಬೂಲಿವಾಲಾ – ಕೆದಂಬಾಡಿ ಜತ್ತಪ್ಪ ರೈ ಆಧಾಋ : ರವೀಂದ್ರನಾಥ ಠಾಗೋರ್‌, ಕೆದಂಬಾಡಿ ಪ್ರಕಾಶನ ಪಿ.೩೯

೧೯೮೬ – ಸೂದ್ರೆ ಏಕಲವ್ಯೆ – ಕೆದಂಬಾಡಿ ಜತ್ತಪ್ಪ ರೈ, ಭಾರದ್ವಾಜ ಪ್ರಕಾಸನ ಕದಿರೆ, ಮಂಗಳೂರು ಪು. ೬೮

೧೯೮೮ – ಪೊಡುಂಬ ತಿಮ್ಮನ್‌ ಕಗ್ಗ – ಅನು : ಬಾಲಕೃಷ್ಣ ಶೆಟ್ಟಿ ಪೊಳಲಿ ಮೂಲ: ಮಂಕುತಿಮ್ಮನ ಕಗ್ಗ ಡಿ.ವಿ.ಜಿ. ಸಾಹಿತ್ಯ ಸಂಘ, ಮಣಿಪಾಲ

೧೯೮೮ – ಸಿರಿರಾಮಾಶ್ವಮೇದೊ – ಅನು: ಕೆದಂಬಾಡಿ ಜತ್ತಪ್ಪ ರೈ, ಮೂಲ: ಮಹಾಕವಿ ನಂದಳಿಕೆ ಮುದ್ದಣ್ಣ, ಕೆದಂಬಾಡಿ ಪ್ರಕಾಶನ, ಪಾಣಾಜೆ, ಪು.೧೦೮+೨೫

೧೯೮೯ – ಕುಜಿಲಿ ಪೂಜೆ – ಮೂಲ: ರುಬಾಯತ್‌, ಯಮರ ಖಯ್ಯಾಮ್‌ ಅನು: ಕೆದಂಬಾಡಿ ಜತ್ತಪ್ಪ ರೈ ಪ್ರಕಾಶನ ಲೇಖಕರು ಪು. ೩೮

೧೯೯೨ – ಬತ್ತೆ ಕೆತ್ತರೆ ಉತ್ತರೆ – ಮೂಲ ಆಧಾರ : ಕುಮಾರ ವ್ಯಾಸ, ಎನ್‌.ಪಿ ಶೆಟ್ಟಿ, ಅಭಿನವ ಪ್ರಕಾಶನ, ಪು.೪೪+೮

೧೯೯೪ – ಅಸೆನಿಯಾಗೊ ಕಾಂತಗೊಜೋಗಿ – ಕೆದಂಬಾಡಿ ಜತ್ತಪ್ಪ ರೈ, ತುಳುಕೂಟ ಉಡುಪಿ ಸಾಹಿತ್ಯಸಂಘ, ಮಣಿಪಾಲ, ಪು.೩೪

೧೯೯೪ – ತುಳು ಹರಿಶ್ಚಂದ್ರ ಕಾವ್ಯೊ – ಕೆಲಿಂಜ ಸೀತಾರಾಮ ಆಳ್ವೆರ್‌, ತುಳುವೆರೆಂಕುಲ, ಕುಡಲ ಪು.೧೪೦ ಬೆಲೆ ೩೪.೦೦

೧೯೯೯ – ತುಳು ಜೈಮಿನಿ ಭಾರತೊ – ವೇದಾವತಿ ಡಿ. ಸಿರಿ ಪ್ರಕಾಸನ ಅಗೋಲಿ ಮಂಜನ ಜನಪದ ಕೇಂದ್ರ, ಪವಂಜೆ, ಹಳೆಯಂಗಡಿ ೫೭೪೧೪೬ ಪು.೮+೨೨೨

೨೦೦೩ – ಕೋಟಿ ಚೆನ್ನಯ – ಅನು : ಮಧುಕುಮಾರ್‌ನಿಸರ್ಗ ಮೂಲ ಕನ್ನಡ : ಪಂದಬೆಟ್ಟು ವೆಂಕಟರಾಯ ಬೋಳೂರು ಪು. ೨೩

೨೦೦೪ – ತಪ್ಪುಗು ತೆರೆದಂಡ -ಎನ್.ಪಿ ಶೆಟ್ಟಿ, ಅಭಿನವ ಪ್ರಕಾಶನ ಪು. ೬೬

೨೦೦೬ – ಸರ್ವಜ್ಞನ ವಚನಗಳು ಅನು: ಮಜಿಬೈಲು ಭಾಸ್ಕರ ಭಂಡಾರಿ ಮೂಲ: ಸರ್ವಜ್ಞನ ವಚನಗಳು

೧೯೮೬ – ಕನತ್ತಪೊಣ್ಣು ಅನು: ಮಂದಾರ ಕೇಶವಭಟ್ಟ ಮೂಲ : ಸ್ವಪ್ನವಾಸವ ದತ್ತ, ಶ್ರೀನಿವಾಸ ಪ್ರಕಾಶನ, ಕುಡುಪು ಮಂಗಳೂರು ೫೭೧೫೦೮ (ಕರ್ನಾಟಕ ಬ್ಯಾಂಕಿನ ವಜ್ರಮಹೋತ್ಸವ ವರ್ಷ)

೧೯೮೨ – ತುಳುತ್ತಪೊರ್ಲು (ಕನ್ನಡ ಹಾಗೂ ಸಂಸ್ಕೃತ ಸುಭಾಷಿತಗಳ ಸನುವಾದ) ಅನು: ಕೆದಂಬಾಡಿ ಜತ್ತಪ್ಪರೈ

೧೯೭೯ – ಯಯಾತಿ ಅನು : ಪ್ರೇಮಾನಂದ ಕಿಶೋರ್‌, ಮೂಲ: ಗಿರೀಶ್‌ ಕಾರ್ನಾಡ್‌

೧೯೯೮ – ಎನ್ನ ಮೋಕೆದ ಪೊಣ್ಣು ಇಂಗ್ಲಿಷಿನ ಪ್ರೇಮಗಿತೇಗಳ ಅನುವಾದ ಅನು: ಕೆ.ಟಿ.ಗಟ್ಟಿ

ಆಕರ ಸೂಚಿ

೧. ಕೆದಂಬಾಡಿ ತಿಮ್ಮಪ್ಪ ರೈ (೨೦೦೪) – ಕೆದಂಬಾಡಿ ಜತ್ತಪ್ಪರೈ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು – ೫೭೫ ೦೦೩

೨. ಕನ್ನಿನಾಲೆ ವಸಂತ ಭಾರದ್ವಾಜ, (೨೦೦೧), ಪಳಂತುಳು ಕಾವ್ಯ, ಮಧುಮತಿ ಪ್ರಕಾಶನ, ೧೨೩ನೇ ತಿರುವು, ಬಸವೇಶ್ವರ ಬಡಾವಣೆ, ವಿಜಯನಗರ, ಬೆಂಗಳೂರು – ೫೬೦ ೦೪೦.

೩. ಹರಿಕೃಷ್ಣ ಭರಣ್ಯ, ೧೯೮೮, ತುಳುವಿನ ಎರಡು ಕಾದಂಬರಿಗಳು, ಕರ್ನಾಟಕ ಭಾರತಿ, ಸಂ. ೨೦, ಸಂಚಿಕೆ ೪, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.