ತುಳು ಭಾಷೆ – ಸಾಹಿತ್ಯದ ಒಳಗೆ ‘ಆಧುನಿಕ ತುಳು ಕವಿತೆ’ ಎನ್ನುವ ಕಲ್ಪನೆ ಚಾರಿತ್ರಿಕವಾಗಿ ಆಕಾರಗೊಂಡ ಒಂದು ಸಾಂಸ್ಕೃತಿಕ ರೂಪ. ಇದು ಕಬಿತೆ ಎನ್ನುವ ಪ್ರಕಾರದ ಬಿಡಿ-ಬಿಡಿ ರಚನೆಗಳಿಂದ ಒಟ್ಟಾಗಿ, ರೂಪಿತಗೊಂಡ ಒಂದು ‘ಪರಂಪರೆ’ಯಿಂದ ಚರಿತ್ರೆಯಲ್ಲಿ ನಿಖರತೆಯನ್ನು ಸಾಧಿಸಿಕೊಳ್ಳುತ್ತದೆ. ಬರವಣಿಗೆಯ ಒಟ್ಟು ಕ್ರಿಯಾಚರಣೆಯಲ್ಲಿ ‘ಕವನ’ವೆನ್ನುವ ವಿಶಿಷ್ಟವಾದ ವಲಯವೊಂದು ಚಾರಿತ್ರಿಕವಾಗಿ ತುಳು ವಾಙ್ಮಯದ ಒಳಗೆ ಸ್ಥಾಪಿತಗೊಳ್ಳುವುದು ವಸಾಹತುಶಾಹಿ ಕಾಲದಲ್ಲಿಯೇ ಆಗಿದೆ. ವಸಾಹತುಶಾಹಿಯ ಶೈಕ್ಷಣಿಕ ಅವಕಾಶದ ಮೂಲಕವಾಗಿ ನಡೆದ ಸಾಂಸ್ಕೃತಿಕ ಅನುಸಂಧಾನ ಇಂಡಿಯಾದ ಎಲ್ಲಾ ಪ್ರಾದೇಶಿಕ ಭಾಷೆಗಳ ಮೇಲೆ ವ್ಯಾಪಕ ಪರಿಣಾಮವನ್ನು ಬೀರಿದೆ. ಈ ಹಿನ್ನೆಲೆಯಲ್ಲಿಯೇ ಆಧುನಿಕ ತುಳು ಕವಿತೆ ಎನ್ನುವ ಹಿಸ್ಟಾರಿಯಾಗ್ರಫಿ (ಚರಿತ್ರಾಶಾಸ್ತ್ರ)ಯ ನಿರ್ವಚಕನಕ್ಕೆ ಸಂಬಂಧಿಸಿದ ಮೂಲಭೂತ ತಾತ್ತ್ವಿಕ ಪ್ರಶ್ನೆಗಳು (ತುಳು ಕವಿತೆಯ ಉಗಮ ಪ್ರೇರಣೆಗೆ ಸಂಬಂಧಿಸಿದಂತೆ) ಉತ್ತರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಆಧುನಿಕ ಕನ್ನಡ ಕಾವ್ಯದ ಪರಂಪರೆಗೆ ಮುಖಾಮುಖಿಯಾಗಿಸಿಯೇ ತುಳು ಕವನಗಳನ್ನು ನೋಡಬೇಕಾಗುತ್ತದೆ. ತುಳು ಕವಿತೆಗಳ ಉಗಮ, ವಿಕ್ಕಾಶಕ್ಕೆ ಸಂಬಂಧಿಸಿದಂತೆ ತುಳು ಕವನ ಎನ್ನುವ ಕಲ್ಪನೆಯೇ ಆಧುನಿಕ ಕನ್ನಡ ಕಾವ್ಯದಿಂದ ಬಹಳಷ್ಟು ಪ್ರೇರಣೆ, ಪ್ರಭಾವಗಳನ್ನು ಪಡೆದಿದೆ. ಮಾತ್ರವಲ್ಲದೆ ತುಳು ಕವಿತೆಗಳಿಗೆ ಸಹಜವಾಗಿ ಕನ್ನಡ ರೂಪವೇ (From) ಮಾದರಿಯಾಗಿ ಒದಗಿಬಂದಿದೆ. ಇದಕ್ಕೆ ಮುಖ್ಯ ಕಾರಣ ಸಾಹಿತ್ಯ ಸಂದರ್ಭದಲ್ಲಿ (ನವೋದಯ, ನವ್ಯ, ದಲಿತ – ಬಂಡಾ) ತುಳುವಿನಲ್ಲಿ ಬರೆಯುವ ಹಲವರು ಕನ್ನಡದಲ್ಲಿಯೂ ಬರೆಯುತ್ತಿದ್ದುದು, ಬರೆಯುತ್ತಿರುವುದು. ತುಳುವಿನಲ್ಲಿ ಕವಿತೆಗೆ ಹತ್ತಿರ ಇರುವ ರೂಪವೆಂದರೆ ಪಾಡ್ದನ, ಉರಲ್‌ಮತ್ತು ಸಂಧಿ. ರೂಪದಲ್ಲಿ ಕಥನ ಕವನದ ಹಾಗಿರುವ ನೀಳ್ಗವಿತೆ, ಕತೆ – ಉಪಕತೆಗಳಿಂದ ಬೆಳೆದು ಬಂದ ಕಥನ ಶೈಲಿಗೆ ಸಹಜವಾದ ರೂಪ ಅದಾಗಿದೆ. ಹಾಗೆ ನೋಡಿದರೆ ನರ್ಕಳ ಮಾರಪ್ಪ ಶೆಟ್ಟರಿಂದ ತೊಡಗುವ ಆಧುನಿಕ ಕವಿತೆಗಳಿಗೆ ಒಂದು ಮೂಲರೂಪ ತುಳುವಿನಲ್ಲಿ ಇಲ್ಲ. ಅನಿವಾರ್ಯವಾಗಿ ಕನ್ನಡದ ಕವಿತೆಗಳ ರೂಪವನ್ನು ಅನುಕರಣೆ ಮಾಡುವಂತಹ ಪ್ರಕ್ರಿಯೆ ತುಳು ಸಾಹಿತ್ಯದ ಒಳಗೆ ಕಾಣಿಸಿಕೊಂಡಿದೆ. ಆಧುನಿಕ ಶೈಕ್ಷಣಿಕ ವ್ಯವಸ್ಥೆಯ ಸ್ಥಿತಿಸ್ಥಾಪಕತೆ ಸಾಂಪ್ರದಾಯಿಕ ತುಳು ಕಾವ್ಯದ ಮಟ್ಟುಗಳ್ನು ಬೆಳಕಿಗೆ ಬಾರದಂತೆ ನಿಯಂತ್ರಿಸಿರುವುದರಿಂದ ತುಳು ಕವನ ಪ್ರಕ್ರಿಯೆಯು ಅನ್ಯ ಪ್ರಭಾವವನ್ನು ಶಕ್ತವಾಗಿ ಮೈಗೂಡಿಸಿಕೊಂಡಿದೆ. ಒಟ್ಟಿನಲ್ಲಿ ಪದ್ಯ ಪ್ರಕಾರದ ಸಾಹಿತ್ಯ ಪರಂಪರೆಯೊಂದೆ ಮೌಖಿಕವಾಗಿ ತುಳು ಭಾಷೆಯಲ್ಲಿ ಸಾಕಷ್ಟು ದೀರ್ಘವಾಗಿಯೇ ಇದ್ದು, ತುಳು ಕಾವ್ಯಕ್ಕೆ ಸಂಬಂಧಿಸಿದಂತೆ ‘ಸಂಪ್ರದಾಯ’ ಮತ್ತು ‘ಆಧುನಿಕತೆ’ ಎನ್ನುವ ಪರಿಕಲ್ಪನೆಗಳು ವಿಶೇಷ ಅರ್ಥಗಳನ್ನು ಪಡೆಯುತ್ತವೆ. ಆದುದರಿಂದ ಆಧುನಿಕ ತುಳು ಕವನಗಳ ಪರಿಗಣನೆಯಲ್ಲಿ ಎರಡು ಅಂಶಗಳನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ.

ಒಂದು : ಆಧುನಿಕ ತುಳು ಕವಿತೆ ಎನ್ನುವ ಪ್ರಕಾರ ಸಾಂಪ್ರದಾಯಿಕ ಪದ್ಯ ಪ್ರಕಾರಗಳಿಂದ ಬೇರ್ಪಡಿಸಿಕೊಂಡ ರಚನಾ ಶೈಲಿ.

ಎರಡು : ಆಧುನಿಕ ತುಳು ಕವಿತೆಗಳಲ್ಲಿ ಆಧುನಿಕ ಕನ್ನಡ ಕಾವ್ಯದ ಪ್ರಭಾವ ಎಂದರೆ, ತುಳು ಕವಿಗಳ ಸ್ಪಷ್ಟ ಪ್ರತಿಕ್ರಿಯಾಶೀಲತೆ.

ತುಳು ಕವಿತೆಗಳ ಚರಿತ್ರೆಯ ನಿರ್ವಚನ ಅನುಕೂಲ ದೃಷ್ಟಿಯಿಂದ ಮೂರು ವಿಭಾಗಗಳಲ್ಲಿ ಅವುಗಳನ್ನು ಅರ್ಥೈಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಅವುಗಳೆಂದರೆ:

ಆಧುನಿಕ ತುಳು ಕವಿತೆಗಳು : ಪ್ರಾರಂಬಿಕ ನೆಲೆ, ಪ್ರಾಯೋಗಿಕ ನೆಲೆ, ಪ್ರಕರ್ಷ ನೆಲೆ

೧. ಆಧುನಿಕ ತುಳು ಕವಿತೆಗಳು : ಪ್ರಾರಂಭಿಕ ನೆಲೆ

ಕನ್ನಡದ ನವೋದಯ ಸಾಹಿತ್ಯದ ತಾತ್ತ್ವಿಕತೆಯ ಒಟ್ಟು ಚೌಕಟ್ಟಿನ ಒಳಗೆ ನಿರ್ಬಂಧಿಸಿಕೊಂಡಂತೆ ಆಧುನಿಕ ತುಳು ಕವಿತೆಗಳು ಸಾಕಾರಗೊಂಡಿವೆ. ದಕ್ಷಿಣ ಕನ್ನಡದ ನವೋದಯ ಕಾವ್ಯ ಸಂದರ್ಭವು ಸ್ವಾತಂತ್ರ್ಯ ಹೋರಾಟದ ಜೊತೆಗೆ ಸ್ಥಾಪಿಸಿಕೊಂಡ ಸಂಬಂಧದಲ್ಲಿ ಇವು ನಿಖರತೆಯನ್ನು ಸಾಧಿಸುತ್ತವೆ. ದೇಶದ ಸ್ವಾತಂತ್ರ್ಯ ಹೋರಾಟ, ಅದು ಕೊಡಮಾಡಿದ ರಾಷ್ಟ್ರೀಯ ಕಲ್ಪನೆ, ದೇಶಿಯ ಸುಧಾರಣಾ ಧೋರಣೆಗಳು ದಕ್ಷಿಣ ಕನ್ನಡದಲ್ಲಿ ನವೋದಯ ಕಾವ್ಯದ ಹುಟ್ಟು – ಬೆಳವಣಿಗೆಗೆ ಮತ್ತು ಅದರ ವ್ಯಾಪಕತೆಗೆ ಕಾರಣವಾಗಿದೆ. ಇದರಿಂದ ಪಂಜೆ ಮಂಗೇಶರಾಯ, ಮಂಜೇಶ್ವರ ಗೋವಿಂದ ಪೈ,ಎಂ.ಎನ್‌. ಕಾಮತ್‌, ಉಗ್ರಾಣ ಮಂಗೇಶರಾಯ, ಕದಿರೆ ಶ್ರೀನಿವಾಸ ರಾವ್‌, ಪಾಂಡೇಶ್ವರ ಗಣಪತಿರಾಯ, ಸೇಡಿಯಾಪು ಕೃಷ್ಣಭಟ್ಟ, ಕಡೆಂಗೋಡ್ಲು ಶಂಕರ ಭಟ್ಟ, ಕೊಳಂಬೆ ಪುಟ್ಟಣ್ಣ ಗೌಡ, ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ, ಕಯ್ಯಾರ ಕಿಂಞಣ್ಣ ರೈ, ಅಮ್ಮೆಂಬಳ ಶಂಕರನಾರಾಯಣ ನಾವಡ, ಕೆ. ಹೊನ್ನಯ್ಯ ಶೆಟ್ಟಿ, ಕುರುಕಾಲು ಗಣಪಯ್ಯ ಶೆಟ್ಟಿ ಮೊದಲಾದ ಕವಿಗಳು ಕನ್ನಡದ ತಮ್ಮ ಆರಂಭದ ಸಂಕಲನಗಳಲ್ಲಿ ರಾಷ್ಟ್ರಪ್ರೇಮ, ಸಮಾಜ ಸುಧಾರಣೆಯನ್ನು ಪ್ರೇರೇಪಿಸುವಂಥ ರಚನೆಗಳನ್ನು ಬರೆದವರು. ಕನ್ನಡದ ಬರವಣಿಗೆಯಲ್ಲಿ ತೊಡಗಿಕೊಂಡ ಪ್ರಮುಖ ಕವಿಗಳ ಒಡನಾಟ, ಅವರ ಬರವಣಿಗೆಗಳ ಸಮೀಪದ ಪ್ರಭಾವ ನರ್ಕಳ ಮಾರಪ್ಪ ಶೆಟ್ಟಿ ಎಸ್‌.ಯು. ಪಣಿಯಾಡಿ, ನಾರಾಯಣ ಕಿಲ್ಲೆ, ಮೋಹನಪ್ಪ ತಿಂಗಳಾಯ, ಕೆ. ಗಂಗಾಧರ ರಾಮಚಂದ್ರ, ಸೀತಾನದಿ ಗಣಪಯ್ಯ ಶೆಟ್ಟಿ ಇವರ ಬರೆಹಗಳನ್ನು ಪ್ರೇರೇಪಿಸಿದರೆ, ಆ ಕಾಲದಲ್ಲಿ ಕೆ. ಹೊನ್ನಯ್ಯ ಶೆಟ್ಟಿ, ಕೊರಡ್ಕಲ್‌ಶ್ರೀನಿವಾಸರಾವ್‌, ಸುಬ್ರಹ್ಮಣ್ಯ ಶಾಸ್ತ್ರಿ, ಜನಾರ್ದನಾಚಾರ್ಯರಂತಹ ಕವಿಗಳು ತುಳು – ಕನ್ನಡ ಎರಡು ಭಾಷೆಗಳಲ್ಲೂ ಕವನ ಬರೆವಣಿಗೆಯಲ್ಲಿ ಪ್ರಯತ್ನಶೀಲರಾಗಿದ್ದು ಕಂಡುಬರುತ್ತದೆ.

ನಿರ್ದಿಷ್ಟವಾಗಿ ೧೯೨೯ರಲ್ಲಿ ಪ್ರಕಟವಾದ ನರ್ಕಳ ಮಾರಪ್ಪ ಶೆಟ್ಟಿ ಅವರ ‘ಅಮಲ್‌ದೆಪ್ಪಡೆ’ ಎನ್ನುವ ಕೃತಿಯೇ ಆಧುನಿಕ ತುಳುವಿನ ಮೊದಲ ಕವನ ಸಂಕಲನ. ‘ಅಮಲ್‌ದೆಪ್ಪಡೆ’ ಕವನ ಸಂಕಲನದಲ್ಲಿ ಅಮಲ್‌ದೆಪ್ಪಡೆ, ಅಮಲ್‌ಬೂತೊಗೆ, ದಾಯೆಗಪ್ಪ ಒಯ್ತೆರ್‌ಯೆ ಇಂಚಿ ಸಿಗರೆಟ್‌, ಬಂಗಿನ್‌ ಪನಿತ್‌ಲ ತಿಂದ್‌ರಡೆ, ಗಂಗಸರೊ ಗಂಗಸರಿ, ಪರಡೆ ಕಲಿ ಗಂಗಸರೊ ಎಂಬ ಐದು ಕವನಗಳಿವೆ. ಮಾದಕ ವಸ್ತುಗಳ ಸೇವನೆ, ಮದ್ಯಪಾನದ ದುಶ್ಚಟವನ್ನು ಹೋಗಲಾಡಿಸಲು ಬರೆದ ಸುಧಾರಣಾ ಮನೋಧರ್ಮದ ಕವನಗಳಲ್ಲಿ ಇಲ್ಲಿವೆ. ಸರಳ ಲಯ, ಸಹಜ ಭಾಷೆ ಸದುದ್ದೇಶದ ಈ ಕವನಗಳು ಆ ಕಾಲದಲ್ಲಿ ಬಹಳ ಜನಪ್ರಿಯವಾಗಿ ಈ ಕೃತಿ ಕೆಲವು ಪುನರ್‌ ಮುದ್ರಣಗಳನ್ನು ಕಂಡಿದೆ. ‘ಪೊರ್ಲಕಂಟ್‌’ (೧೯೩೦) ಮಾರಪ್ಪ ಶೆಟ್ಟಿ ಅವರ ಮತ್ತೊಂದು ಕವನ. ಒಳ್ಳೆಯ ಉದ್ದೇಶ ಸಾಧನೆಗಾಗಿ ಬರೆದ ಕಿರುಹೊತ್ತಿಗೆ ಇದೆಂದು ಅವರ ಆರಂಭದ ಮಾತಿನಲ್ಲಿ ಹೇಳಿಕೊಂಡಿದ್ದಾರೆ. ಓಲ್ಲೆ ಎನ್ನ ಪೊರ್ಲಕಂಟ್‌ (ಎಲ್ಲಿದ್ದಾನೆ ನನ್ನ ಚೆನ್ನಿಗ), ಒಯಿಟ್‌ ಪೊರ್ಲುದ್ದಿ; ಒಯಿಟ್‌ ಪೊರ್ಲುಂಡು (ಯಾವುದರಲ್ಲಿ ಅಂದವಿದೆ, ಯಾವುದರಲ್ಲಿ ಅಂದವಿಲ್ಲ), ಪುಲ್ಯಕಾಲೊ (ಪ್ರಾತಃ ಕಾಲ), ಮೂಜಂಜ ವೊವು ಒನ್ನಗ (ಮುಸ್ಸಂಜೆ ಯಾವುದೆದರ), ಅಕ್ಕರ್ವೊ ಎನ್ನುವ ಐದು ಕವನಗಳು ‘ಪೊರ್ಲರಟ್‌’ ಸಂಕಲದಲ್ಲಿವೆ. ೧೯೩೨ರಲ್ಲಿ ಪ್ರಕಟವಾದ ನಾರಾಯಣ ಕಿಲ್ಲೆಯವರ ‘ಕಾನಿಗೆ’ಯಲ್ಲಿ ೩೨ ಪದ್ಯಗಳಿವೆ. ತುಳುನಾಡ ರಾಣಿ. ಯಕ್ಷಗಾನ, ತಾರೆ, ಕಂಗ್‌, ಗಾಲಿ, ಬರ್ಸ, ಬಾರ್‌, ಗೋವು, ಪುರುಬಾಲೆ, ಕಂಬುಲಾ ಕರೆ ಕಂಬುಲಾ ಎನ್ನುವ ಕವನಗಳು ತುಳು ಸಂಸ್ಕೃತಿ – ಪ್ರಕೃತಿಯನ್ನು ಬಯಲುಗೊಳಿಸುವ ಅನನ್ಯ ರಚನೆಗಳಾಗಿವೆ. ಬಿ.ಎ. ವಿವೇಕ ರೈ ಅವರು ಅಭಿಪ್ರಾಯಪಡುವಂತೆ, ‘ಕಿಲ್ಲೆಯವರು ಯಕ್ಷಗಾನ ಅರ್ಥದಾರಿಯೂ ತುಳು ಹಾಗೂ ಕನ್ನಡ ಸಮರ್ಥ ಭಾಷಣಕಾರರೂ ಆಗಿದ್ದ ಕಾರಣವೇ ಇರಬೇಕು ‘ಕಾನಿಗೆ’ಯ ಕವನಗಳಲ್ಲಿ ತುಳುಭಾಷೆಯ ಸಹಜತೆಯನ್ನೂ ಕಾವ್ಯದ ಶಕ್ತಿಯನ್ನೂ ಕಾಣಬಹುದು. ನವೋದಯ ಕನ್ನಡ ಕಾವ್ಯದ ಆರಂಭದಲ್ಲಿ ಈ ಗ್ರಂಥ ರಚನೆಯಾದ ಕಾರಣ ಸಹಜವಾಗಿಯೇ ಕೆಲವು ಷಟ್ಪದಿಗಳು, ದ್ವಿಪದಿಗಳು, ಮತ್ರಾಲಯಗಳು ಕವನಗಳ ರಾಚನಿಕ ಸ್ವರೂಪದಲ್ಲಿ ಸಿಗುತ್ತವೆ. ಗೇಯತೆಯುಳ್ಳ ಬಹುತೇಕ ಕವನಗಳು ತುಳುನಾಡಿನ ಹಳ್ಳಿಗಳ ಮನೆಮನೆಗಳಲ್ಲಿ ಹೆಂಗಸರ – ಗಂಡಸರ ಬಾಯಲ್ಲಿ ಜನಪದ ಹಾಡುಗಳಂತೆ ಜನಪ್ರಿಯವಾಗಿದ್ದ ಸಂಸ್ಕೃತಿಯು ಈ ಕವನಗಳ ಯಶಸ್ಸನ್ನು ದಾಖಲಿಸುತ್ತದೆ” (ಹರಿದಾಸ ಭಟ್ಟ ಕು.ಶಿ. (ಸಂ.) : ೧೯೮೨ : ೩೧).

ನಾರಾಯಣ ಕಿಲ್ಲೆ ಅವರ ಸಂಕಲನದ ಪ್ರಕಾಶಕರಾದ ಎಸ್‌.ಯು. ಪಣಿಯಾಡಿ ಅವರ ಕಾರ್ಯದರ್ಶಿ – ನೇತೃತ್ವದ ‘ತುಳುವ ಮಹಾಸಭೆತೊ ವಾರ್ಷಿಕ’ (೧೯೩೦) ಕೃತಿಯಲ್ಲಿ ಕೊರಡ್ಕಲ್‌ ಶ್ರೀನಿವಾಸ ರಾವ್‌ (ತುಳುನಾಡ್‌ ಗೀತೆ), ಬಿ. ಮೋಹನಪ್ಪ ತಿಂಗಳಾಯ (ತುಳುನಾಡ್‌ ಗೀತೆ), ಸುಬ್ರಹ್ಮಣ್ಯ ಶಾಸ್ತ್ರಿ (ಪುಟ್ಟುದು ಫಲದಾನೆ), ಕೆ. ಹೊನ್ನಯ್ಯ ಶೆಟ್ಟಿ (ತುಳುವಪ್ಪೆನ ಪಾತೆರ), ಜನಾರ್ದನಾಚಾರ್ಯ (ಸುಭಾಷಿತ) ಎನ್ನುವ ಐದು ಜನ ಕವಿಗಳ ಬಿಡಿ ಕವನಗಳು, ಪ್ರಾತಿನಿಧಿಕವಾಗಿ ಮುಖ್ಯ ರಚನೆಗಳು.

ಬಿ. ಮೋಹನಪ್ಪ ತಿಂಗಳಾಯರು ೧೯೩೦ರಲ್ಲಿ ‘ತುಳು ಪದ್ಯಾವಳಿ’ ಪುಸ್ತಕವನ್ನು ಪ್ರಕಟಿಸಿದ್ದು, ಸಮಾಜದ ಅನಿಷ್ಟ ಪದ್ಧತಿಗಳ ನಿರ್ಮೂಲನವೇ ಅವರ ಕವನಗಳ ರಚನೆಯ ಉದ್ದೇಶವಾಗಿದೆ. ಅವರ ಪತಿತೋದ್ಧರಣ ಪದ್ಯಾವಳಿ (೧೯೩೧) ಅಂತಹದ್ದೇ ಇನ್ನೊಂದು ಪುಸ್ತಕ. ಕೆ. ಗಂಗಾಧರ ರಾಮಚಂದ್ರ ಅವರ ‘ತುಳು ಪದ್ಯಮಾಲಿಕೆ’ (೧೯೩೩) ಹೀಗೆ ಹಲವು ಕವನಗಳ ಸಂಗ್ರಹ ಆ ಅವಧಿಯಲ್ಲಿ ಬೆಳಕಿಗೆ ಬಂದವು. ಇವುಗಳ ಪ್ರಧಾನ ಆಶಯ ತಾಯಿ ಭಾಷೆ, ತಾಯಿ ನೆಲದ ಪ್ರೀತಿ. ಇದಕ್ಕೆ ಮುಖ್ಯ ಕಾರಣ ಎಸ್‌. ಯು. ಪಣಿಯಾಡಿ, ನಂದಳಿಕೆ ಶ್ರೀನಪ್ಪ ಹೆಗ್ಡೆ, ಕೆ.ಬಿ. ನಾರಾಯಣ ಕಿಲ್ಲೆ ಇವರ ನೇತೃತ್ವದ ತುಳು ಚಳುವಳಿ. ದೇಶದ ಸ್ವಾತಂತ್ರ್ಯ ಹೋರಾಟದ ಆರಂಭದಿಂದಲೂ ತುಳುನಾಡಿನ ಜನತೆ ಕಾಣುತ್ತಾ ಬಂದ ಕನಸುಗಳಲ್ಲಿ ಅತ್ಯಂತ ಮುಖ್ಯವಾದದ್ದು ‘ತುಳು ನಾಡು – ನುಡಿ’ಯ ನಿರ್ಮಾಣಕ್ಕೆ ಸಂಬಂಧಿಸಿದ್ದು ಇದರ ಪ್ರಕಟರೂಪವೆಂಬಂತೆ ತುಳು ಸಂಸ್ಕತಿಯ ಆರಾಧನೆ, ಸ್ವಾತಂತ್ರ್ಯದ ಹಂಬಲ ಮತ್ತು ಸಮಾಜ ಸುಧಾರಣೆ ಆರಂಭ ಕಾಲದ ಎಲ್ಲ ಕವಿಗಳ ಕವನ ವಸ್ತುವಾಗಿ ಕಾಣಿಸಿಕೊಳ್ಳುತ್ತದೆ. ೧೯೩೦ರ ದಶಕದಲ್ಲಿ ಬಂದ ಎಂ.ಪಿ.ವಿ.ಶರ್ಮಾ ಅವರ ‘ಕನ್ನಡಕೊ’, ದಾಮೋದರ ಪುಣಿಂಚತ್ತಾಯರ ‘ಸ್ತುತಿ ಪದ್ಯೊಲು’, ಬಾಡೂರು ಜಗನ್ನಾಥ ರೈ ಅವರ ‘ಸತ್ಯದ ಚಿತ್ತೊ’, ಸೀತಾನದಿ ಗಣಪಯ್ಯ ಶೆಟ್ಟರ ‘ತುಳು ಭಜನಾವಳಿ’ ಮೊದಲಾದ ಪುಸ್ತಕಗಳು ತುಳು ಭಾಷೆಯಲ್ಲಿ ಒಲವು ಹುಟ್ಟಿಸುವ ಕಾರ್ಯಮಾಡಿದ್ದು, ಇವು ದಾಖಲಾತಿಯ ದೃಷ್ಟಿಯಿಂದ ಮುಖ್ಯವಾಗುತ್ತವೆ.

ತುಳು ಸಾಹಿತ್ಯ ಚರಿತ್ರೆಯ ಪ್ರಧಾನ ಭೂಮಿಕೆಯ ಒಳಗೆ ನಂತರದ ಮೂರು ದಶಕಗಳಲ್ಲಿ ತುಳು ಕವಿತೆಯ ವ್ಯವಸಾಯಕ್ಕೆ ತೊಡಗಿದವರು ಬೆರಳೆಣಿಕೆಯ ಕವಿಗಳು. ದಾಮೋದರ ಪುಣಿಂಚತ್ತಾಯ (ಕುಂಬಳೆ ಸೀಮೆತ ಚರಿತ್ರೆ), ಬಾಡೂರು ಜಗನ್ನಾಥ ರೈ (ಸ್ತುತಿ ಪದ್ಯೊಲು) ಇವರ ರಚನೆಗಳಲ್ಲದೆ, ಕೆಮ್ಮೂರು ದೊಡ್ಡಣ್ಣ ಶೆಟ್ಟಿ ಅವರ ತುಳು ಭಜನೆಯ ಪದೊಕುಲು ತುಳುನಾಡ್‌ದ ಮಲ್ಲಿಗೆ, ರಾಮಾಯಣದ ಪಾಡ್ದೊನೆ, ಬೊಂಬಾಯಿ ಸಂಗ್ತಿ (ಲಾವಣಿ), ಪಾರೆಸದ ಪದೊಕ್ಲು, ತೆಲ್ಕೆದ ನೆಲ್ಕೆದ ಪದೊಕ್ಲು (ಇವುಗಳಲ್ಲಿ ಪ್ರಕಟಣೆಯ ವರ್ಷ ಇಲ್ಲ. ಆದರೆ ೧೯೬೫ರ ಮುನ್ನ ಪ್ರಕಟವಾಗಬಹುದು), ಸೀತಾನದಿ ಗಣಪಯ್ಯ ಶೆಟ್ಟಿ ಅವರ ಕೋಟಿ ಚೆನ್ನಯ ಪದ್ಯಾವಳಿ, ತುಳು ಭಜನಾವಳಿ ಇಂತಹ ಕೃತಿಗಳು ತುಳು ಕವಿತೆಯ ಓಘವನ್ನು ಮಂದವಾಗಿ ಯಾದರೂ, ಹರಿಯುವುದಕ್ಕೆ ಅನುವು ಮಾಡಿಕೊಟ್ಟವು. ಹೊನ್ನಯ್ಯ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಉಡುಪಿಯಿಂದ ಪ್ರಸಾರಗೊಂಡ ‘ನವಯುಗ’ ಪತ್ರಿಕೆಯು (೧೯೨೧) ‘ನವಯುಗ ತುಳು ಸಂಚಿಕೆ’ ಮಾಸಿಕದಲ್ಲಿ ಮೂರು ವರ್ಷಗಳ ಕಾಲ ಆಗಿನ ಉದಯೋನ್ಮುಖ ತುಳು ಕವಿಗಳಿಗೆ ಕಾವ್ಯ ರಚನೆಯ ಅವಕಾಶ ಕಲ್ಪಿಸಿಕೊಟ್ಟದ್ದು ಗಮನಾರ್ಹ ಅಂಶವಾಗಿದೆ.

ಪ್ರಾರಂಭಿಕ ನೆಲೆಯ ಎರಡನೆಯ ಹಂತದಲ್ಲಿ ಬಿ. ದೂಮಪ್ಪ ಮಾಸ್ತರ್‌, ಗಣಪತಿ ದಿವಾನ, ಬಡಕಬೈಲ್‌ ಪರಮೇಶ್ವರಯ್ಯ ಇವರಂತಹ ಕವಿಗಳನ್ನು ಪರಿಗಣಿಸಬಹುದು. ತುಳುನಾಡಿನ ಜನತೆಯ ಜೀವಮಕ್ರಮ, ಬದಲಾಗುತ್ತಿರುವ ಪರಿಸರವನ್ನು ವಿಭಿನ್ನ ನೆಲೆಗಳಲ್ಲಿ ಗಮನಿಸಿದ ಕವಿಗಳು ಇವರು. ಪರಿಣಾಮವಾಗಿ ಗಣಪತಿ ದಿವಾಣ ಅವರ ‘ಮೀಸೆ ಇತ್ತಿ ಆಣುಕುಳ’ (೧೯೬೨), ತುಳು ಪದ್ಯಾವಳಿ (೧೯೬೪), ಮ. ವಿಠಲ ಪುತ್ತೂರು ಅವರ ‘ಕೇದಗೆ’ (೧೯೭೩) ಅಲ್ಲದೆ, ಬಿ. ದೂಮಪ್ಪ ಮಾಸ್ತರ್‌ಅವರ ‘ಮಾದಿರನ ಗಾದೆ’ (೧೯೭೨), ಬಡಕಬೈಲ್‌ ಪರಮೇಶ್ವರಯ್ಯ ಅವರ ‘ತುಳು ನೀತಿ ಪದ್ಯೊಲು’ (೧೯೭೪) ಎಪ್ಪತ್ತರ ದಶಕದಲ್ಲಿ ಬಂದ ಪ್ರಾಯೋಗಿಕ ಕವನ ಸಂಕಲನಗಳು. ವಾಮನ ನಂದಾವರ ಅವರು ಗುರುತಿಸುವ ಹಾಗೆ; ‘ಮಾದಿರನ ಗಾದೆ’ ತುಳು ಕಾವ್ಯ ಲೋಕದಲ್ಲೇ ಒಂದು ನೂತನ ಪ್ರಯೋಗ. ಅದು ಅಷ್ಟೇ ಜನಪ್ರಿಯ ಕೂಡ. ಸಾವಿರ ತುಳು ಗಾದೆಗಳನ್ನು ಹೊಸೆದು ಕಾವ್ಯರೂಪದಲ್ಲಿ ಸೊಗಸಾಗಿ, ಪರಿಣಾಮಕಾರಿಯಾಗಿ ಮಾಸ್ತರ್‌ಅವರು ಹೇಳುವ ಪ್ರಯತ್ನ ಮಾಡಿದ್ದಾರೆ.

‘ಮರ್ಮಲೆಗ್ ಬುದ್ದಿ ಪಂಡ್‌ದ್‌ ಮಾಮಿಗ್‌ ಬಂಜಿ ಬೈದ್‌೦ಡ್‌ಗೆ’
‘ಮೂಂಕುದಾಂತಿನಾಲೆಗ್‌ ಮೂಂಕುತ್ತಿ ದಾಯೆ ಮಾದಿರ?’

(ಸೊಸೆಗೆ ಬುದ್ಧಿ ಹೇಳಿ ಅತ್ತೆ ಗರ್ಭಿಣಿಯಾದಳು; ಮೂಗು ಇಲ್ಲದವಳಿಗೆ ಮೂಗುತಿ ಯಾಕೆ ಮಾದಿರ?) ನೀತಿ ಹೇಳುವ ಜತೆಗೆ ರಂಜನೆ ನೀಡುವ ಇಂತಹ ಎರಡು ಸಾಲಿನ ಪದ್ಯಗಳು ಈ ಕೃತಿಯಲ್ಲಿವೆ. “ಇಲ್ಲಿ ಮಾದಿ ಎಂದರೆ ಹೇಣ್ಣು, ಮಾದಿರ ಎಂದರೆ Mother. ಮಾತೃ ತಾಯಿ ಎನ್ನುವ ಅರ್ಥಗಳನ್ನು ಅವರು ಮಾಡಿಕೊಂಡಂತಿದೆ” (೧೯೯೨:೧೬). ಬಡಕಬೈಲ್‌ಪರ್ಮೇಶ್ವರಯ್ಯ ಅವರು ‘ತುಳು ನೀತಿ ಪದ್ಯೊಲು’ ಕೃತಿಯ ಒಳಗೂ ನಾಲ್ಕು ಸಾಲಿನ ೯೯ ಪದ್ಯಗಳಿವೆ. ‘ನಡಪೊಡಾಯಿನ ರೀತಿ’ (ನಡೆಯಬೇಕಾದ ರೀತಿ) ಎನ್ನುವ ಪದ್ಯದಲ್ಲಿ ಕವಿಯು

“ಪಾರಂದಲ, ಬರೂಂದಲ
ಜಾರುನಗೂರೊಂದು ಬತ್ತಿ ಕಟ್ಟೊನು ಸುಕೊಮೊ
ದೂರಂದೆಲೆ ಪುಗರಂದೆಲ
ಸೇರೊಡು ನಮ ಮನಸಿಡಿತ್ತಿ ಗುರು ಪದೊಕುಳೆನ್” (೧೯೭೪ :೩)

(ಓಡದೆಯೂ, ಬೀಳದೆಯೂ/ ಜಾರಿಕೊಂಡಂತೆ ಬಂದ ಕಷ್ಟವನ್ನು ಸುಖವನ್ನು / ತೆಗೆಳದೆ, ಹೊಗಳದೆಯೂ / ಸೇರಬೇಕು ನಾವು ಮನದೊಳಗಿನ ಗುರು ಪಾದವನ್ನು) ಎಂದು ಹೇಳುತ್ತಾರೆ. ಅರ್ಥಗರ್ಭಿತವಾದ, ಭಾವಪೂರ್ಣವಾದ, ಸಾಮಾನ್ಯ ಓದುಗನ್ನು ಕೂಡ ಆಕರ್ಷಿಸುವ, ಹಲವು ಪ್ರಾಸ ರಚನೆಗಳನ್ನು ‘ತುಳು ನೀತಿ ಪೆದ್ಯೊಲು’ ಸಂಕಲನದ ಒಡಲು ಒಳಗೊಂಡಿದೆ.

ಆ ಕಾಲದ ತುಳು ಪತ್ರಿಕೆಗಳಾದ ‘ತುಳುಸಿರಿ’ (೧೯೭೧), ‘ತುಳುಕೂಟ’ (೧೯೭೧), ‘ತುಳುವಾಣಿ’ (೧೯೭೯), ‘ತುಳುವೆರೆ ಬಂಧು’ (೧೯೭೬), ‘ತುಳುನಾಡ್‌’ (೧೯೭೯) ಇವುಗಳಲ್ಲಿ ಅಮ್ಮೆಂಬಳ ಬಾಳಪ್ಪ, ರಾಮ ಕಿರೋಡಿಯನ್‌, ಬಾಲಕೃಷ್ಣ ಶೆಟ್ಟಿ ಪೊಳಲಿ, ಎಸ್‌.ಆರ್‌. ಹೆಗ್ಡೆ, ರತ್ನಕುಮಾರ ಎಂ., ಅಮೃತ ಸೋಮೇಶ್ವರ, ಕಲ್ಲಾಯಿ ಜಗನ್ನಾಥ ರೈ, ಕಯ್ಯಾರ ಕಿಞ್ಞಣ್ಣ ರೈ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬನ್ನಂಜೆ ಗೋವಿಂದಚಾರ್ಯರಂತಹ ಕವಿಗಳು ಕವನ ಬರವಣಿಗೆಯಲ್ಲಿ ತೊಡಗಿದ್ದುದು ಕಂಡುಬರುತ್ತದೆ. ಪ್ರಾರಂಭಿಕ ನೆಲೆಯ ಕವನಗಳು ನವೋದಯ ಅಂದರ್ಭ ರಚನೆಗಳಾಗಿರುವುದರಿಂದ, ಇವುಗಳಲ್ಲಿ ಬಹುಪಾಲು ಆತ್ಮನಿಷ್ಠ ಮತ್ತು ವಸ್ತುನಿಷ್ಠ ದೃಷ್ಟಿಗಳನ್ನು ಹೊಂದಿದ್ದು ಕವನಗಳ ವಿಶ್ಲೇಷಣೆಯಿಂದ ತೋರಿಸಬಹುದು. ಈ ಕವಿಗಳ ಮೇಲೆ ಸ್ವಾತಂತ್ರ್ಯ ಚಳುವಳಿ, ಗಾಂಧಿ ಚಳುವಳಿಗಳ ಹತ್ತಿರದ ಪ್ರಭಾವ ವಿದ್ದುದರಿಂದ, ವ್ಯಕ್ತಿಯನ್ನು ಆ ಮೂಲಕ ಸಮಾಜವನ್ನು ತಿದ್ದುವ ಆಶಯವು ಕವನಗಳ ರಚನೆಗೆ ಮೂಲ ಪ್ರೇರಕ ಶಕ್ತಿ ಕೂಡ ಆಗಿತ್ತು. ಹಾಗಾಗಿ ಈ ಹಂತದ ಸಂಕಲನಗಳಲ್ಲಿ ವಸ್ತುನಿಷ್ಠೆ ಹಾಗೂ ಆತ್ಮನಿಷ್ಠಗಳನ್ನು ಸಮತೋಲನವಾಗಿ ಗುರಿತಿಸಬಹುದು.

ಆಧುನಿಕ ತುಳು ಕವಿತೆ : ಪ್ರಾಯೋಗಿಕ ನೆಲೆ

ಎಂಬತ್ತರ ದಶಕದಲ್ಲಿ ತುಳು ಕವಿತೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಹಲವು ಹತ್ತು ರಚನೆಗಳು ಕಾಣಿಸಿಕೊಳ್ಳುತ್ತವೆ. ೧೯೮೦ರ ನಂತರದ ತುಳು ಕವನಗಳು ರಚನೆಗಳಲ್ಲಿ ಕನ್ನಡ ಕಾವ್ಯ ಸಂದರ್ಭದ ನವ್ಯ – ಬಂಡಾಯ ದಲಿತರ ಪ್ರೇರಣೆ ಪ್ರಬಾವಗಳನ್ನು ನಿಚ್ಛಳವಾಗಿ ಗುರುತಿಸುವುದು ಸಾಧ್ಯವಾಗುತ್ತದೆ. ಬೆಳಕಿಗೆ ಬಂದ ಸಂಕಲನಗಳ ಹಿನ್ನೆಲೆಯಲ್ಲಿ ಮೊಗೇರಿ ಗೋಪಾಲಕೃಷ್ಣ ಅಡಿಗರ (೧೯೧೮ – ೧೯೯೨) ಪ್ರಭಾವ ತುಳು ಕವಿಗಳ ಮತ್ತು ಸಾಹಿತ್ಯಾಸಕ್ತರ ಮೇಲೆ ದೊಡ್ಡ ಪ್ರಮಾಣದಲ್ಲಿ ಆಗಿದೆ, ಮತ್ತು ಇದು ಹತ್ತೊಂಬತ್ತನೆ ಶತಮಾನದ ಉತ್ತರಾರ್ಧದ ತುಳು ಸಾಹಿತ್ಯದ ದಿಕ್ಕನ್ನು ವಿಭಿನ್ನ ದಿಕ್ಕಿಗೆ ಬದಲಾಯಿಸಿದೆ. ಪ.ವೆಂ. ಆಚಾರ್ಯ, ವೆಂಕಟರಾಜ ಪುಣಿಂಚತ್ತಾಯ, ರಸಿಕ ಪುತ್ತಿಗೆ, ಅಮೃತ ಸೋಮೇಶ್ವರ, ಕೊಡಂಕಾಪಿನ ಏರ್ಯ ಲಕ್ಷ್ಮೀನಾರಾಯಣ ಆಳ್ವ, ರಸಿಕ ಪುತ್ತಿಗೆ ಮೊದಲಾದ ಕವಿಗಳು ಅಡಿಗರ ಕಾವ್ಯಶೈಲಿಯನ್ನು ಅನುಸರಿಸಿ ತುಳುವಿನಲ್ಲಿ ಕವನ ರಚಿಸುವ ಪ್ರಯತ್ನ ನಡೆಸಿದ್ದಾರೆ. ಕಾಲವಾಚಕ ಕ್ರಿಯಾಪದ ರಹಿತ ವಾಕ್ಯಗುಚ್ಛಗಳನ್ನು ಬಳಸುವ ಮೂಲಕ ಕವನದ ಚಿತ್ರಕ ಶೈಲಿಗೆ ಗದ್ಯ ಲಯದಲ್ಲಿ ರಗಳೆಯ ಪ್ರಬೇಧಗಳನ್ನು ತುಳುವಿನಲ್ಲಿ ಬಳಸಿಕೊಂಡ ಕವಿಗಳಿವರು. ಪ್ರಾರಂಭಿಕ ಕಾಲದಿಂದಲೇ ಬರೆಯಲು ಪ್ರಾರಂಭಿಸಿದ ಪಾ.ವೆಂ. ಆಚಾರ್ಯ, ವೆಂಕಟರಾಜ ಪುಣಿಂಚತ್ತಾಯ, ಅಮೃತ ಸೋಮೇಶ್ವರ ಮೊದಲಾದವರ ಸಂಕಲನದಲ್ಲಿ ಕನ್ನಡ ನವೋದಯ ಪ್ರೇರಣೆಯಿಂದ ಬರೆದ ಕವನಗಳು ಕಂಡುಬರುವುದು ಗಮನಾರ್ಹವಾಗಿದೆ. ಬಂಡಾಯ ಮತ್ತು ಅದರ ಒಳಸುಳಿಯಾಗಿ ಕಾಣಿಸಿಕೊಳ್ಳುವ ದಲಿತ ಸಾಹಿತ್ಯದ ಪ್ರಭಾವ ಕೂಡ ತುಳು ಕವಿಗಳ ಮೇಲೆ ಹೆಚ್ಚು ಕ್ರಿಯಾಶೀಲವಾಗಿದೆ. ಜನಪರ ಆಲೋಚನೆಗಳು ತುಳುವಿನಲ್ಲಿ ಕಾವ್ಯಾಭಿವ್ಯಕ್ತಿಯನ್ನು ಪಡೆಯುವುದು ಸಾಧ್ಯವಾಗಿದೆ.

ತುಳು ಸಂಸ್ಕೃತಿಯ ಸುತ್ತು ಇದ್ದ ಚಾರಿತ್ರಿಕ ಇಕ್ಕಟ್ಟುಗಳು ಕವನಗಳಲ್ಲಿ ನೈತಿಕ ಚೈತನ್ಯವನ್ನು ಮೈಗೂಡಿಸಿಕೊಂಡು ಬಂಡಾಯದ ಅಭಿವ್ಯಕ್ತಿಯಾಗಿ ಕಾಣಿಸಿಕೊಂಡಿದೆ. ಬಾ.ಸಾಮಗ ಮಲ್ಪೆ, ಅಮೃತ ಸೋಮೇಶ್ವರ, ರಸಿಕ ಪುತ್ತಿಗೆ, ರತ್ನಕುಮಾರ ಎಂ., ಪಾಲ್ತಾಡಿ ರಾಮಕೃಷ್ಣ ಆಚಾರ್‌, ಯಸ್‌.ಪಿ. ಮಂಚಿ ಮೊದಲಾದ ಕವಿಗಳಲ್ಲಿ ಸಮಕಾಲೀನ ತುಳು ಸಂಸ್ಕೃತಿಯು ಅರ್ಥಪೂರ್ಣ ಆಯಾಮಗಳಿಂದ, ಹೊಸ ಬಗೆಯ ಅನುಭವಗಳಾಗಿ ಅನಾವರಣಗೊಂಡಿವೆ. ಈ ಸಂದರ್ಭದ ಕವಿಗಳ ಸಾಮಾಜಿಕ, ರಾಜಕೀಯ ಪ್ರಜ್ಞೆಗಳು ಸೂಕ್ಷ್ಮಯಿಂದ ಕೂಡಿರುವುದನ್ನು ಗುರುತಿಸಬಹುದು. ಎಂಬತ್ತರ ದಶಕದಲ್ಲಿ ಸೃಜನಾತ್ಮಕ ದೃಷ್ಟಿಯಿಂದ ಕವಿತೆಯ ರಚನೆಗೆ ಮನಸ್ಸು ಮಾಡಿದ ಮತ್ತು ಅದನ್ನು ಸಾಧಿಸಿದ ಹಿನ್ನೆಲೆಯಿಂದ ಇಪ್ಪತ್ತಕ್ಕಿಂತಲೂ ಹೆಚ್ಚಿನ ಕವಿಗಳು ಮತ್ತು ಕವನ ಸಂಕಲನಗಳು ಈ ಅವಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಬಾ. ಸಾಮಗ ಮಲ್ಪೆ ಅವರ ‘ಬದ್‌ಕೊಂದುಲ್ಲರಾ?’ (೧೯೮೦), ಯಂ. ಜಯರಾಮ ರೈಗಳ ಬೇರ್‌ಮರ್ದ್‌’ (೧೯೮೦), ಪಾ.ವೆಂ. ಆಚಾರ್ಯರ ‘ಬಯ್ಯಮಲ್ಲಿಗೆ’ (೧೯೮೧), ವೆಂಕಟರಾಜ ಪುಣಿಂಚತ್ತಾಯ ಅವರ ‘ಆಲಡೆ’ (೧೯೮೩), ಕೆದಂಬಾಡಿ ಜತ್ತಪ್ಪ ರೈ ಅವರ ‘ಅಜ್ಜಬಿರು’ (ಅನು) (೧೯೮೦), ಅಮೃತ ಸೋಮೇಶ್ವರ ಅವರ ‘ತಂಬಿಲ’ (೧೯೮೪) ಮತ್ತು ‘ರಂಗಿತ’ (೯೧೮೭) ಎನ್ನುವ ಎರಡು ಸಂಕಲನಗಳು, ಯಶವಂತ ಬೋಳೂರು ಅವರ ‘ಬುಲೆ ಕಾನಿಗೆ’ (೧೯೮೪), ಕನಬಾಡಿ ವಾದಿರಾಜ ಭಟ್ಟರ ‘ಜೋಕ್ಲೆ ಪದಕ್ಲು’ (೧೯೮೬) ಮತ್ತು ‘ಜೀವನ ಪಾಡ್ದನ’ (೧೯೮೯), ರತ್ನಕುಮಾರ್ ಅವರ ‘ರತ್ನನ ಕರ್ಮ’ (೧೯೮೯) ಮತ್ತು ‘ರುಕುಮನ ಪದ’ (೧೯೮೭), ಪಾಲ್ತಾಡಿ ರಾಮಕೇಷ್ಣ ಆಚಾರ್‌ಅವರ ‘ಪಚ್ಚೆಕುರಲ್‌’ (೧೯೮೭), ಯಸ್‌.ಪಿ.ಮಂಚಿ ಅವರ ‘ರ್ಪೊ’ (೧೯೮೭), ಬೆಳ್ಳಿಪ್ಪಾಡಿ ಸತೀಶ್‌ರೈ ಅವರ ‘ತುಳುನಾಡ್ದ ಬೊಳ್ಳಿಲು’ (೧೯೮೮), ರಸಿಕ ಪುತ್ತಿಗೆ ಅವರ ‘ಪರಬನ ಮೋಕೆ’ (೧೯೮೮), ಮ.ನಿ.ಪು. ಅವರ ‘ಕೇದಯಿ ಬೊಕ್ಕ ಓಬಯ್ಯನ ಅತಿಕಲ್ಪ’ (೧೯೮೯), ಯೋಗೀಶ್‌ ಕಾಂಚನ್‌ ಬೈಕಂಪಾಡಿ ಅವರ ‘ಕಂಚಿಲ್‌’ (೧೯೮೯), ಪೇರೂರು ಜಾರು ಅವರ ‘ಉರಲ್‌ ತೂಟೆ’ (೧೯೮೯), ಪದೆಮೋದ ಕೆ. ಸುವರ್ಣ ಅವರ ‘ಪುಮಾಲೆ’ (೧೯೮೯) ಹೀಗೆ ಎಂಬತ್ತರ ದಶಕದ ನೂರಆರು ತುಳು ಕವನಗಳು ಪ್ರಾಯೋಗಿಕವಾಗಿ ಕಾಣಿಸಿಕೊಳ್ಳುತ್ತವೆ. ಈ ಕಾಲಾವದೀಯಲ್ಲಿ ತುಳುನಾಡು ವ್ಯಕ್ತಿಯಾಗಿ, ಸಮೂಹವಾಗಿ, ಶಕ್ತಿಯಾಗಿ ಪ್ರಕಟಗೊಂಡಿದೆ. ಕವನಗಳ ಕೇಂದ್ರ ಧಾರೆಯಲ್ಲಿ ಬದುಕನ್ನು ಅಲುಗಾಡಿಸುವ ವಿಷಯಗಳು ಮಾತ್ರ ಮನೋಧರ್ಮವಾಗಿ ಹರಿಯದೆ, ತುಳುವನ್ನು ಅನ್ಯರ ಮೇಲೆ ಹಾಯುವ ಅಸ್ತ್ರವಾಗಿ ಬಳಸದೆ, ತುಳುನಾಡು ಹಾಗೂ ತುಳುವ ಬದುಕನ್ನೆ ಸಮಗ್ರವಾಗಿ ಕಂಡುಕೊಳ್ಳುವ ಮಾಧ್ಯಮಾಗಿ ಈ ಕವನಗಳು ಹುಟ್ಟನ್ನು ಸಾಧಿಸಿವೆ. ಒಂದರ್ಥದಲ್ಲಿ ಇವು ತುಳು ಕಾವ್ಯ ಓದುಗ ವರ್ಗದಲ್ಲಿ ಆಸಕ್ತಿ ಅರಳುವಂತೆ ಮಾಡಿವೆ.

ಪಾ.ವೆಂ. ಆಚಾರ್ಯ (ಪಾಡಿಗಾರು ವೆಂಕಟರಮಣ ಆಚಾರ್ಯ ೧೯೧೫ – ೧೯೯೨) ನವೋದಯದಿಂದ ನವ್ಯಕ್ಕೆ ಬಂದ ಪ್ರಮುಖ ಕವಿಗಳಲ್ಲಿ ಒಬ್ಬರು. ನವ ನೀರದ (೧೯೫೨) ಮತ್ತು ಕೆಲವು ಪದ್ಯಗಳು (೧೯೭೮) ಇವು ಕನ್ನಡದಲ್ಲಿ ಬಂದ ಅವರ ಸಂಕಲನಗಳು.

ಇವರ ‘ಬಯ್ಯಮಲ್ಲಿಗೆ’ ಕೃತಿಯಲ್ಲಿ ತುಳುನಾಡ್‌ದ ನಿನೆಪು, ರಾಮದೇವರ ಸತ್ಯ, ಗೋಪಿ, ಅರ್ತ, ಬಡವು ಎನ್ನುವ ಗಮನಾರ್ಹ ಕವಿತೆಗಳಿವೆ. ಬಡವು (ಹಸಿವು) ಎನ್ನುವ ಶೀರ್ಷಿಕೆಯಡಿಯಲ್ಲಿ ಕಿಡಿ ೧ರಿಂದ ಕಿಡಿ ೫ರವರೆಗಿನ ಕವನಗಳು ಬಡತನದ ಸ್ವರೂಪಗಳನ್ನು ತೆರೆದಿಡುತ್ತವೆ.

ಕಿಡಿ ೧ ಕವನದ ಸಾಲುಗಳಿವು

‘ಬಡವುದ ನಿರೆಟ್ಟ್‌ ಕಬಿತೊ ಓದಡೆ ಕವಿಕ್ಲೆ
ಬಡವುದ ಕಾಡ್‌ಡ್‌ ಆಸ್ರಮ ಕಟ್ಟಡ ರುಸಿಕ್ಲೆ
ಬಡವುದ ಶಾಸ್ತ್ರೊಡು ಸತ್ಯದ ಸುದ್ದಿ ಕಲೆವಡೆ
ಬಡವುದ ಪ್ರಾಂತೊಡು ನ್ಯಾಯೊದ ಸಾಸ್ತ್ರ ಕಿಲೆಪಡೆ
ಬಡವುದ ಬಟ್ಟಲ್‌ಗ್‌ ಸೊರ್ಗದ ಅಡ್ಡೆ ಬಲಸಡೆ
ಬಡವುಗು ಕಣ್ಣಿಜ್ಜಿ, ಬಡವುಗು ಕೆಬಿ ಇಜ್ಜಿ
ಬಡವುಗು ಕೋಟೆ ಇಜ್ಜಿ ಅಯಿಕ್‌ ಎಲ್ಲೆಲ್ಲ ಇಜ್ಜಿ
ಬಡವುಗು ಬಯ್ಯ ಇಜ್ಜಿ ಇತ್ತೆ ಮಾತ್ರ
ಬಡವುದ ಕಣ್ಣ್‌ ಕೆಬಿ ತರೆ ತರೆ ಮಾತ ಬಂಜಿ ಮಾತ್ರ” (೧೯೮೧ : ೩೬)

(ಹಸಿವಿನ ನೆಲೆಯಲ್ಲಿ ಕಬಿತೆ ಓದದಿರೆ ಕವಿಗಳೇ / ಹಸಿವಿನ ಕಾಡಿನಲ್ಲಿ ಆಶ್ರಮ ಕಟ್ಟದಿರಿ ಋಷಿಗಳೇ / ಹಸಿವಿನ ಶಾಸ್ತ್ರದಲ್ಲಿ ಸತ್ಯದ ಸುದ್ದಿ ಕಳೆಯದಿರಿ / ಹಸಿವಿನ ಪ್ರಾಂತ್ಯದಲ್ಲಿ ನ್ಯಾಯದ ಶಾಸ್ತ್ರ ಸಾರದಿರಿ / ಹಸಿವಿನ ಬಟ್ಟಲಿಗೆ ಸ್ವರ್ಗದ ಎಡೆ ಬಳಸದಿರಿ / ಹಸಿವಿಗೆ ಕಣ್ಣಿಲ್ಲ, ಹಸಿವಿಗೆ ಕಿವಿ ಇಲ್ಲ / ಹಸಿವಿಗೆ ಕೋಟೆ ಇಲ್ಲಲ / ಅದಕೆ ಎಲ್ಲೆಯೂ ಇಲ್ಲ / ಹಸಿವಿಗೆ ಸಂಜೆ ಎಂಬುದಿಲ್ಲ ಈಗ ಮಾತ್ರ? ಹಸಿವಿನ ಕಣ್ಣು ಕಿವಿ ತಲೆ ಕೊನೆ ಎಲ್ಲ ಹೊಟ್ಟೆ ಮಾತ್ರ)

ಹೀಗೆ ಶಕ್ತವಾಗಿ ಹಸಿವಿನ ಆತ್ಯಂತಿಕ ಸ್ವರೂಪ, ಅದರ ತೀವ್ರತೆಯನ್ನು ಕವಿ ಅನಾವರಣಗೊಳಿಸಿದ್ದಾರೆ. ಅರ್ಥ ಎನ್ನುವ ಕವಿತೆಯಲ್ಲಿ :

(“ಮಾನವೆಂದರೆ ಗೂಟ ಬಿಟ್ಟು ಮೇಯಲು ಕಟ್ಟಿದ ಕರು
ಹೊಟ್ಟೆ ಎಳೆಯುವುದೆ ನೆಲಕ್ಕೆ ಮನಸು ಬಾನಿಗೆ
ಮಾನವ ಕಷ್ಟವದು ವಿಚಿತ್ರ, ಕಷ್ಟ ಅವನ ವಿಚಿತ್ರ ಪಕ್ಷ
ಬಗಲಿಗೆ ರೆಕ್ಕೆ ಇಲ್ಲ-ಮನಸಿಗೆ ಮಾತ್ರ ನೂರು ರೆಕ್ಕೆ)” (೧೯೮೧: ೧೪)

ಎಂದು ವ್ಯಕ್ತಿ ಶಕ್ತಿಗಳ ಮನಸ್ಸನ್ನು ಬಿಡಿಸಿದ್ದಾರೆ. “೧೯೮೩ರ ಇಸವಿಯ ಮೈಸೂರಿನ ದಸರಾ ಕವಿಗೋಷ್ಠಿಯಲ್ಲಿ ಪಾ. ವೆಂ. ಆಚಾರ್ಯರು ಓದಿದ ‘ಆಯೆ ಬತ್ತೆ -ಉಂಬ್ಯೆ ಬತ್ತೆ’ (ಅವನು ಬಂದ ಇವನು ಬಂದ) ಇತ್ತೀಚಿನ ತುಳು ಕಾವ್ಯದ ಒಂದು ಒಳ್ಳೆಯ ಕವಿತೆ. ‘ರಾಮ ಬಂದ, ಕೃಷ್ಣ / ಬಂದ / ಬುದ್ಧ ಬಂದ ಕ್ರಿಸ್ತ ಬಂದ / ಬಸವ ಬಂದ ಗಾಂಧಿ ಬಂದ, ಕೃಷ್ಣ ಬಂದ / ಬುದ್ಧ ಬಂದ ಕ್ರಿಸ್ತ ಬಂದ / ಬಸವ ಬಂದ ಗಾಂಧಿ ಬಂದ / ಎಲ್ಲ ಬಿಟ್ಟ ಜಿನ ಬಂದ’ – ಹೀಗೆ ಈ ಕವಿತೆ ಆರಂಭವಾಗುತ್ತದೆ. ಕವಿ ಪಾ. ವೆಂ. ಆಚಾರ್ಯರು ದೇವರನ್ನು ನಂಬದ ನಾಸ್ತಿಕರಾದರೂ ಯಾರು ಬಂದು ಏನು ಮಾಡಿದರು ಎಂದು ಕೇಳಿದರೂ, ಧರ್ಮದಿಂದ ಒಳ್ಳೆಯದಾಗಬೇಕೆನ್ನುವ ಹಸಿ ಆಸೆ, ಕನಸು ಇಲ್ಲಿದೆ” (ಚಿನ್ನಪ್ಪಗೌಡ (ಸಂ.) : ೧೯೮೯; ೧೯೨).

ಬಾ. ಸಾಮಗ ಮಲ್ಪೆ ಅವರ ‘ಬದ್‌ಕೊಂದುಲ್ಲರಾ’ ಪ್ರಾಯೋಗಿಕವಾಗಿ ಆ ಕಾಲದ ಗಮನಾರ್ಹ ಸಂಕಲನ. ಬದ್‌ಕೊಂದುಲ್ಲರಾ? (ಬದುಕುತ್ತಿದ್ದೀರಾ), ಬೊಲ್ಲ (ನೆರೆ), ಒಂಜಿ ನಾಯಿದ ಆತ್ಮಕಥೆ (ಒಂದು ನಾಯಿಯ ಆತ್ಮಕಥೆ), ಆಣಗೊಂಜಿ ಪ್ರೇಮಪತ್ರ (ಹುಡುಗನಿಗೊಂದು ಪ್ರೇಮಪತ್ರ), ಕಡಲ್‌ದ ಬರಿಟ್‌ (ಕಡಲಿನ ದಡದಲ್ಲಿ) ಇಂತಹ ಕವನಗಳು ಅವರ ಕವಿತ್ವ ಶಕ್ತಿಯ ನಿದರ್ಶನಗಳಾಗಿ ಕಾಣಿಸಿಕೊಳ್ಳುತ್ತವೆ. ‘ದಲಿತೆ X ಬಿರಣೆ’ ಈ ಕವಿತೆಯಲ್ಲಿ:

“ದಲಿತ / ಬೀರಣಾ
ಒಂಜಿ ಸಮಾಧಾನದ ಇತ್ಯರ್ಥ
ವಂತೆ ಸಮಯ ದಲಿತೆ ಬಿರಣೆ
ಬೊಕ್ಕಂತೆ ಸಮಯ ಬಿರಣೆ ದಲಿತೆ
ಕುಯ್‌ಪುಗ್‌ಛುಂಯ್‌ಕ್‌ಪೆಂಡ್‌೦ದ್‌
ಒಗ್ಗರಣೆ
ಒ-
ಗ್ಗ-
ರ-
ಣೆ-
ಪಾಡ್‌೦ಡನೇ ರುಚಿರುಚಿ” (೧೯೮೦;೧೦).

ದಲಿತ ಮತ್ತು ಬ್ರಾಹ್ಮಣನ ಸಾಮಾಜಿಕ ಸ್ಥಾನಪಲ್ಲಟದ ಅನಿವಾರ್ಯತೆಯನ್ನು ಈ ಕವನ ಧ್ವನಿಸುತ್ತದೆ. ಅಲ್ಲದೆ ರಚನಾ ಶೈಲಿಯ ದೃಷ್ಟಿಯಿಂದ ನವ್ಯದ ಪ್ರಭಾವವನ್ನು ಇದರಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ಪಾ. ವೆಂ. ಆಚಾರ್ಯರಂತೆ ಕನ್ನಡ ಮತ್ತು ತುಳು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ತುಳುವಿನ ಮತ್ತೋರ್ವ ಕವಿ ಅಮೃತ ಸೋಮೇಶ್ವರ ಪ್ರಧಾನವಾಗಿ ರಸಮಯ ಕಾವ್ಯಗಳನ್ನು ಬರೆದವರು. ಕನ್ನಡದಲ್ಲಿ ೧೯೫೯ರ ಪೂರ್ವದಲ್ಲೇ ಕವನ ಬರೆವಣಿಗೆಗೆ ತೊಡಗಿದ ಈ ಕವಿ ಕನ್ನಡದಲ್ಲಿ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ (ವನಮಾಲೆ ೧೯೫೯, ಭ್ರಮಣ ೧೯೭೪, ಉಪ್ಪುಗಾಳಿ ೧೯೯೩). ಇವರ ‘ತಂಬಿಲ’ ೨೮ ಕವನಗಳ ಸಂಚಯ. ‘ರಂಗಿತ’ ಕೃತಿಯೊಳಗೆ ೨೬ ಕವನಗಳಿವೆ. ನವಿರಾದ ಭಾಷೆಯಲ್ಲಿ ತುಳುನಾಡಿನ ಪ್ರಕೃತಿ, ಜಾನಪದ ಸಂಸ್ಕೃತಿ ಇವರ ಕವನಗಳೊಳಗೆ ಕಾಣಿಸಿಕೊಳ್ಳುವುದೇ ಒಂದು ಬಗೆಯ ದೇಸೀ ರಮ್ಯ ರಚನೆಗಳಾಗಿ. ಸ್ಥಳೀಯ ಸಮಾಜದ ವಿಭಿನ್ನ ಮುಖಗಳು, ರಾಜಕಾರಣ, ಅಸಮಾನತೆಗಳು ವಿಭಿನ್ನ ಬಗೆಯಲ್ಲಿ ಬಂಡಾಯದ ಕೇಂದ್ರ ಕಾಳಜಿಯಾಗಿ ಕಾಣಿಸಿಕೊಳ್ಳುತ್ತವೆ. ಚಿಲ್ಲರೆ ಜನೊ, ಕುಡ್ತುಲಕ್ಕ್‌, ಬರಡೆ ಬಾಪೂ! ಈ ಕವನಗಳಲ್ಲಿ ತುಳಿತಕ್ಕೊಳಗಾದವರ ಸಾಮಾನ್ಯ ವ್ಯಕ್ತಿಗಳ ಕಲ್ಪನೆಗಳಿಗಿಂತ ಖಚಿತವಾಗಿ ಧ್ವನಿ ಪಡೆಯುತ್ತಾರೆ. ಅಮೃತರು ಚಿತ್ರಿಸುವ ಕವನಗಳ ಒಳಗೆ ಶ್ರಮ ಮೂಲವಾದ ಸಂಸ್ಕೃತಿಯು ವಿಕಾಸವಾಗುತ್ತ ಬೌದ್ಧಿಕ ವಲಯವನ್ನೂ ಒಳಗೊಂಡು ವಿಶಾಲ ವ್ಯಾಪ್ತಿಯನ್ನು ಪಡೆಯುತ್ತದೆ. ಅಲ್ಲದೆ ತುಳಿತಕ್ಕೊಳಗಾದವರ ನೆಲೆಯಿಂದ ಸಂಸ್ಕೃತಿಯನ್ನು ನೋಡುವ ಕ್ರಮವು ವ್ಯಕ್ತಿ ಸಮಾಜಕ್ಕೆ ತೋರಿಸುವ ಗೌರವವೂ ಆಗಿ ಕಾಣಿಸಿಕೊಳ್ಳುತ್ತದೆ.

“ಅಂಗೈಡ್‌ ಭಾಗ್ಯ ರೇಖೆದ ಬರವು ಇಜ್ಜಂದಿನ
ಮುಂಗೈಕ್‌ ಏರೋ ಪತ್ತಾದಿನ ಬೆಲ್ಲೊದ ಪಸೆಟ್‌
ಪಾಯಸೊದ ಕನ ಕಟ್ಟೊಂದಿನ
ಸಾವಿರ ಲಕ್ಷೊದ ಲೆಕ್ಕಾಚಾರ ತೆರಿಯಂದಿನ
ತರೆಟ್‌ ಬೆಪ್ಪರ್‌ ಕೊಂಬುದಪುದೆ ಇಜ್ಜಂದಿನ
ಸುದ್ದಿ ಸೂಕೆಗ್‌ ಬೂರಂದಿನ, ಪಣೊಕು ಮೋಣೆ ಒಡ್ಡಂದಿನ
ಪುದರ್‌ಗದರ್‌ಗ್‌ ಪುಣಿವಂದಿನ
ಈ ಸಾದಾಸೀದಾ ಎಲ್ಯ ಚಿಲ್ಲರೆ ಜನೊ
ಎನ್ನಾಕುಳು” (೧೯೮೪, ೯)

(ಅಂಗೈಯಲ್ಲಿ ಭಾಗ್ಯರೇಖೆಯ ಬರೆಹವಿಲ್ಲದ / ಮುಂಗೈಗೆ ಯಾರೋ ಹಚ್ಚಿದ ಬೆಲ್ಲದ ತೇವ / ಪಾಯಸದ ಕನಸು ಕಟ್ಟಿಕೊಂಡು / ಸಾವಿರ ಲಕ್ಷದ ಲೆಕ್ಕಾಚಾರ ಅರಿಯದ / ತಲೆಗೆ ಚಪ್ಪರ ಸೂರಿಲ್ಲದ / ಸುದ್ದಿ ಸೂಟೆಗೆ ಬೀಳದ, ಹಣಕೆ ಮುಖ ಒಡ್ಡದ / ಹೆಸರು ಹೇಳಿಕೆಗೆ ಶ್ರಮಿಸದ / ಈ ಸಾದಾಸೀದಾ ಚಿಕ್ಕಪುಟ್ಟ ಚಿಲ್ಲರೆ ಜನ / ನನ್ನವರು!)

ಸಿದ್ಧಲಿಂಗಯ್ಯನವರ ‘ನನ್ನ ಜನ’ ಕವಿತೆಯ ಪ್ರೇರಣೆಯಿಂದ ಕವಿ ಈ ಕವನವನ್ನು ರಚಿಸಿರುವ ಸಾಧ್ಯತೆ ಇದೆ. ಶೋಷಕರ ಕುರಿತು ಹೇಳುವ ‘ಪಗೆಲ್‌ಮೈಲಿಗೆ’ ಒಂದು ವಿಡಂಬನಾತ್ಮಕ ಕವನ. (ಸೀಮೆಯ ದೇವಸ್ಥಾನದ ಮಗ್ಗಲು / ಕೊನೆಗಿದ್ದಳು ಹೆಣ್ಣು / ದೇವಸ್ಥಾನದ ಮಡಿ ಮಡಿ ಮಂದಿಗಳು/ನೋಡಿದರೆಷ್ಟೋ ಬಾರಿ / ಹಗಲಲಿ ಜಾತಿಯ ಸೂಚಕ / ಇರುಳಲಿ ಪ್ರೀತಿಯ ಮುದ್ದಾಟಿಕೆ / ಹಗಲಲಿ ಮೈಲಿಗೆ ಕಾಟ / ಇರುಳು ಮಲ್ಲಿಗೆ ಕಣ್ಣ-ಮುಚ್ಚಾಲೆಯಾಟ! / (೧೯೧೮;೨೯) ಶೋಷಣೆಯ ಪ್ರತಿಯಾಗಿಯೇ ಅಮೃತರು ‘ಕುಡ್ತ್ ಲಕ್ಕ್‌’ (ಕೊಡವಿ ನಿಲ್ಲು) ಎಂದು ಕರೆ ಕೊಡುತ್ತಾರೆ.

“ಸೊಲ್ಮೆ ಉಳ್ಳಯ ಪಾಡ್ದ್‌ ಮೊರಂಪು ತರೆಯಿನ ಯ್ಯಾರು
ಬಗ್ಗ್‌ದಿನ ಬೆರಿ ಸರ್ತ ಮಲ್ತ್‌ತೂಲ
ನಿನ್ನ ಬೆಗರ್‌ದ ಬಿಲೆನ್ ತೆರಿಯೊಂದು ನಿನ್ನುಳಯಿ
ವಿಶ್ವಾಸದೊಂಜಿ ಪೊಸ ಬೊಳ್ಪುದೀಲ” (೧೯೮೬;೨೩)

(ದನಿಗಳಿಗೆ ನಮಿಸಿ ಮಂಡಿ ಸವೆಸಿದ್ದು ಸಾಕು / ಬಾಗಿದ ಬೆನ್ನು ನೇರ ಮಾಡಿ ನೋಡು / ನಿನ್ನ ಬೆವರಿನ ಬೆಲೆಯ ಅರಿತು ನಿನ್ನೊಳಗೆ / ವಿಶ್ವಾಸದೊಂದು ಹೊಸ ದೀಪವ ಹಚ್ಚಿ ಇಡು)

ಶಕ್ತವಾಗಿ ಕವನ ಸಾಲುಗಳನ್ನು ಪೋಣಿಸುವ ಅಮೃತ ಸೋಮೇಶ್ವರರ ಅವರ ಕಲೆಗಾರಿಕೆ ಅನಾವರಣಗೊಳ್ಳುವುದು ‘ರಂಗಿತ’ ಸಂಕಲನದೊಳಗಿನ ಗೇಯಾತ್ಮಕ ಕವನಗಳಲ್ಲಿ. ಹಚ್ಚಿನ ತುಳು ಜನತೆ ಅವರ ಭಾವಗೀತಗಳನ್ನು ಕ್ಯಾಸೆಟ್‌ರೂಪದೊಳಗೆ ಮೆಚ್ಚಿಕೊಂಡಿದ್ದಾರೆ. “ಕನ್ನಡದಲ್ಲಿ ಕೆ. ಎಸ್‌. ನರಸಿಂಹಸ್ವಾಮಿ ‘ಮೈಸೂರು ಮಲ್ಲಿಗೆ’ಯಲ್ಲಿ ಪ್ರೇಮ ಪದ್ಯಗಳನ್ನು ಬರೆದಂತೆ ಅಮೃತರು ತುಳುವಿನಲ್ಲಿ ಗಂಡು-ಹೆಣ್ಣಿನ ಪ್ರೀತಿಯ ಪದ್ಯಗಳನ್ನು ಬರೆದಿದ್ದಾರೆ” (ಚಿನ್ನಪ್ಪ ಗೌಡ)(ಸಂ.), ೧೯೮೯; ೧೯೦.

ಯಶವಂತ ಬೋಳೂರು ಅವರ ‘ಬುಲೆಕಾನಿಗೆ’ಯಲ್ಲಿ ಕತ್ತಿ ಬೊಕ್ಕ ಪ್ರೀತಿ, ರಕ್ಕಸದಿಗಿನ, ಮಹಾತ್ಮನ ಮೊಗದೀ ತೆರ್‌, ತುಳುನಾಡ್‌, ದೂರೊದ ಘಟ್ಟ ತೂವರೆ ಪೊರ್ಲು, ನೇಲೈಕಬಿತೆ ಮುಂತಾಗಿ ೨೩ ಕವಿತೆಗಳಿವೆ.

ಕನರಾಡಿ ವಾದಿರಾಜ ಭಟ್ಟರ ‘ಜೋಕ್ಲೆ ಪದಕ್ಲು’ (ಮಕ್ಕಳ ಹಾಡು)ಗಳು ತುಳು ಭಾಷೆಯ ಮಕ್ಕಳ ಸಾಹಿತ್ಯಕ್ಕೆ ಒಂದು ವಿಶಿಷ್ಟ ಸ್ಥಾನವನ್ನು ಒದಗಿಸಿಕೊಟ್ಟಿದೆ. ಮಕ್ಕಳ ಮನಸಿಗೆ ಮುದ ನೀಡುವ ಅಜ್ಜ – ಅಜ್ಜಿ, ಬಾಲೆ – ತೆಮ್ಮ, ಪುಚ್ಚೆ, ಚೆಂಡಾಟ, ಗಂಟ್ಟಿ – ಇಂಚೆ, ಜೊಕ್ಲೆಗ್‌ಕುಸಿಯಾಪಿನ ಜನೊಕ್ಲು, ಪ್ರಾಣಿಲು, ಗೊಬ್ಬು, ತಿನಸ್‌ದ ಬಗ್ಗೆ ಇತ್ಯಾದಿ ೧೩ ವಿಶಿಷ್ಟ ರಚನೆಗಳಿವೆ. ಹತ್ತು ಕವನಗಳನ್ನು ಒಳಗೊಂಡ ‘ಜೀವನ ಪಾಡ್ದನ’ ಇವರ ಎರಡನೆಯ ಕವನ ಸಂಕಲನ. ತುಳು ಬದುಕನ್ನು ಗ್ರಹಿಸಿದ ನಿರ್ಮಿತಿಗಳಾಗಿ ಕನರಾಡಿ ವಾದಿರಾಜ ಭಟ್ಟರ ಸಂಕಲನಗಳು ಮುಖ್ಯ ಬಿಂಬವಾಗುತ್ತವೆ.

ರತ್ನಕುಮಾರ್ ಎಂ. ಅವರು ಬರೆದ ‘ರತ್ನನ ಕರ್ಮ’ದಲ್ಲಿ ತುಳು ಬಾಸೆ, ಪತ್ತನಾಜೆ, ಮಗೆ – ಮಗಲ್‌ ಏರಡ್ಡೆ? ದಿಗಂಬರೆ ದಾಯಾತೆ? ತುಳುನುಡಿ – ನಾಡ್‌, ನಿನೆಪು, ಆಯೆ ಆತೆ – ಪೋತೆ, ದೇವರೆಶಕ್ತಿ, ಪ್ರಸಾದೊದ ಗಂಧ, ರುಚಿತೊಣಸು ಬಟ್ಟಲ್, ತಮ್ಮನ ಇತ್ಯಾದಿ ಒಟ್ಟು ೩೦ ಕವನಗಳಿವೆ. ಇವರ ಕವನಗಳಲ್ಲಿ ಹೆಚ್ಚಿನವು ತುಳುನಾಡು – ನುಡಿಗೆ, ಆಚರಣೆಗಳಿಗೆ, ಗಂಡು – ಹೆಣ್ಣಿನ ಸಂಬಂಧಗಳಿಗೆ ಸಂಬಂಧಿಸಿದವು. ಇವರ ಕವನಗಳ ಸರಳ ನಡೆಗೆ ಉದಾಹರಣೆಯಾಗಿ ‘ತಮ್ಮನ’ ಕವನವನ್ನು ನೋಡಬಹುದು. ‘ತಮ್ಮನ’ (ಸತ್ಕಾರ) ಪ್ರಾದೇಶಿಕ ಆಚಾರವನ್ನು ಬಿಂಬಿಸುವ ಕವನ. (ಬನ್ನಿ ಬನ್ನಿ! ಕೂರಿ ಕೂರಿ! ಬಾಯಾರಿಕೆ ಬೇಕೆ? ಮಜ್ಜಿಗೆ ನೀರಾದಿತಾ? ಬೆಲ್ಲದ ನೀರಾಗಬಹುದೆ? ಹೇಗೆ ಬಂದಿರಿ? ಬಾರೀ ಬಿಸಿಲು! ಎಂತಹ ಧಗೆ/ ಮನೆ ಕಡೆ ಸೌಖ್ಯ ತಾನೆ? ಇರಲಪ್ಪ ದೇವರು ದೊಡ್ಡವರು… ಎಂಬ ಚುಚ್ಚುನುಡಿ ಬೇರೆ (೧೯೮೯); ೧೬).

ರತ್ನಕುಮಾರ್ ಅವರು ‘ರುಕುಮನ ಪದ’ ಸಂಕಲನದ ಕವನಗಳನ್ನು ತುಳುವಿಗೆ ಪ್ರಬೇಧವಾದ ಜೈನರ ತುಳುವಿನಲ್ಲಿ ಬರೆದಿದ್ದಾರೆ ಎನ್ನುವುದು ಮುಖ್ಯವಾಗುವುದು ದಾಖಲಾತಿಯ ದೃಷ್ಟಿಯಿಂದಲೇ ಆಗಿದೆ.

ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ‘ಪಚ್ಚೆ ಕುರಲ್‌’ ೨೮ ಕವನಗಳನ್ನು ಒಳಗೊಂಡ ಸಂಕಲನ. ಪಾಲ್ತಾಡಿಯವರ ಹೆಚ್ಚಿನ ಕವನಗಳಲ್ಲಿ ನೋವಿನನಿವೇದನೆಯನ್ನು ಹೇಗೋ ಹಾಗೆಯೇ ಸಂತೋಷದ ಆರಾಧನೆಯನ್ನು ಕೂಡ ಸಮಾನವಾಗಿ ಗುರುತಿಸಬಹುದು. ಜೀವನಮಗ್ನತೆ ಮತ್ತು ಜೀವನ ಸಂತೋಷಗಳ ವೈಭವೀಕರಣ ಅವರ ತುಳು ಕವಿತೆಗಳಿಗಿರುವ ವಿಶಿಷ್ಟ ಶಕ್ತಿ. ‘ಪಾರಿಜಾತೊದ ಪೂವು’ ವ್ಯಕ್ತಿ ಜೀವನದ ವಿವರಗಳಿಗೆ ಪ್ರಕೃತಿ – ಪ್ರತಿಮೆಗಳನ್ನು ಬಳಸಿಕೊಂಡ ಆಕರ್ಷಕ ಕವನ.

“ತೂಲ ಅಲ ಮರತಡಿಟ್‌ ಬೂರ್ದುಂಡು
ಪಾರಿಜಾತದ ಪೂಕುಲು
ಜಾಲ ಬರಿಟವು ಪೊರ್ಲು ತೋಜುಂಡು
ಗಾಳಿ ಕಮ್ಮೆನೊ ಬೀಜುಂಡು
ಕರಿನ ರಾತ್ರೆಡ್‌ ಪೊಣ್ಣು ಆಣಗ್‌
ಪೂತ ಹಾಸಿಗೆ ಪಾಡ್ಯಲೋ” (೧೯೮೭; ೩೭)

ಹೀಗೆ ಬೆಳೆಯುವ ಕವನದಲ್ಲಿ ರಚನಾ ಸಾಮರ್ಥ್ಯದ ಲಯಗಾರಿಕೆ ಎದ್ದು ಕಾಣುತ್ತದೆ.

ಪಾಲ್ತಾಡಿಯವರಂತೆ ಜೀವನದ ಅನುಭವಗಳನ್ನು ಹೆಕ್ಕಿ ಕವಿತೆ ಯಾಗಿಸುವ ಕಲಾವಂತಿಕೆಯನ್ನು ಯಸ್‌.ಪಿ. ಮಂಚಿ ಅವರ ‘ಪರ್ಪು’ ಕೃತಿ ಬಿಡಿಸಿ, ಪುಂಚ, ಆಯನೊ, ಗುಡ್ಡೆಗ್‌ ಗುಡ್ಡೆ ಅಡ್ಡ, ಮದಿಮೆ ತಿರ್ಲ್ ಈ ಕವನಗಳಲ್ಲಿ ಪ್ರಾದೇಶಿಕ, ನಾದಮಯತೆ, ಜನಪದೀಯತೆ ಮುಂತಾದ ಗುಣಗಳನ್ನು ಆಯಾ ವಸ್ತು ವಿವರಣೆಯ ಸೃಜನಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ಇವರು ಬಳಸುತ್ತಾರೆ.

ಮುಂಬೈಯಲ್ಲಿ ವಾಸ್ತವ್ಯವಿರುವ ಸುನೀತಾ ಶೆಟ್ಟಿ ಪಿಂಗಾರ ಮತ್ತು ಸಂಕ್ರಾಂತಿಯ ಸಂಕಲನಗಳಿಂದ ತುಳುನಾಡಿನ ಮೊದಲ ಸಮರ್ಥ ಕವಯಿತ್ರಿಯಾಗಿ ಕಾಣಿಸಿಕೊಳ್ಳುತ್ತಾರೆ. ಗರ್ತಿ ಮುತ್ತೇಸಿ, ಕೆಡ್ಡಸ, ಸಾದಿ ಬುಡುಲೆ, ಕೊಂಬು ಪತುವೆರ್‌, ಪೊರ್ಲು, ಈ ಓಲ್ಲು ಇತ್ತಿನಾಯೆ ಇಂತಹ ಕವನಗಳಿಂದ ಅವರು ತುಳು ಜಾನಪದ ಮಟ್ಟುಗಳ ಕಡೆಗೆ ಆಕರ್ಷಿತರಾಗಿರುವುದು ಕಂಡುಬರುತ್ತದೆ. ಮಾತ್ರವಲ್ಲದೆ, ಅವುಗಳನ್ನು ಸಹಜವಾಗಿ ಬಳಸಿಕೊಳ್ಳುವ ಪ್ರಯೋಗಶೀಲತೆಯ ಒಳಗೆ ಪರಂಪರೆಯ ಜೊತೆಗಿನ ಗಾಢವಾದ ಶ್ರದ್ಧೆಯಿದೆ. ತುಳು ಸಂಸ್ಕೃತಿಯ ಸತ್ವದ ಅರಿವಿನಲ್ಲಿ ಭಾಷೆಯ ಮೂಲಕ ಹೊಸದನ್ನು ಹುಡುಕುವ ಪ್ರಯತ್ನವನ್ನು ಸುನೀತಾ ಶೆಟ್ಟಿ ಅವರು ಕವನಗಳಲ್ಲಿ ಸಾಧಿಸಿದ್ದಾರೆ. “ಇವರ ಭಾಷೆ ಕೆದಂಬಾಡಿ ಜತ್ತಪ್ಪರೈಗಳ ತುಳುವಿನ ಹಾಗಿನದು. ಲಯ ಸೌಂದರ್ಯ, ಮಣ್ಣಿನ ವಾಸನೆ ಇರುವ ತುಳುಭಾಷೆ” (ಚಿನ್ನಪ್ಪಗೌಡ(ಸಂ.); ೧೯೮೯, ೧೯೩). ಸುನೀತಾ ಶೆಟ್ಟಿ ಅವರು ಅದನ್ನು ಕವಿತೆಯಾಗಿಸುವುದು ವಿಶಿಷ್ಟತೆಯ ಮತ್ತೊಂದು ಮುಖ್ಯ ಅಂಶ. ಭಾವನೆಯೇ ಇರಲಿ, ವಿಚಾರವೇ ಇರಲಿ ಇಂದ್ರಿಯಗಮ್ಯವಾದ ಪ್ರಕ್ರಿಯೆಗಳ ಮೂಲಕವೇ ಸಂವಹನವಾಗಬೇಕೆಂನ ನಿಲುವು ಇವರ ಕವನಗಳನ್ನು ಕೇಂದ್ರೀಯವಾಗಿ ಬೆಸೆಯುತ್ತವೆ.

‘ಕೇದಯಿ ಬೊಕ್ಕ ಓಬಯನ ಅತಿಕಲ್ಪ’ ಸಂಕಲನದಲ್ಲಿ ಬಂಡಾಯ ಧ್ವನಿಯಿರುವ ಕವನಗಳನ್ನು ಬರೆದು ‘ದೀಪದ ಮಲ್ಲಿ’ ಸಂಕಲನಕ್ಕಾಗುವ ವೇಳೆಯಲ್ಲಿ ಸಂವೇದನೆಯಲ್ಲಿ ಮೃದುವಾಗಿ ಕಾಣಿಸಿಕೊಳ್ಳುವ ಕವಿ ಮ.ನಿ.ಪು (ಮ.ವಿಠಲ) ಮಾಸಿರಿಕ್‌ ದುಂಬ, ನೆತ್ತರ್ದ ಕನ, ಓಬಯ್ಯನ ಅತಿಕಲ್ಪ, ಎನ್ಕೆ-ಮನ ಆ ಕವನಗಳು ವ್ಯಕ್ತಿ ಹಾಗೂ ಸಂಸ್ಕೃತಿಯ ಸಂಬಂಧವನ್ನು ಸಂಘರ್ಷಾತ್ಮಕವಾಗಿ ಸಂಕೀರ್ಣ ರೂಪದಲ್ಲಿತೆರೆದಿಡುತ್ತದೆ. ‘ಎನ್ಕೆ – ಮನ’ ಕವನದಲ್ಲಿ ಪರಂಪರಾಗತವಾಗಿ ಪ್ರಚಲಿತಗೊಂಡು ಆಚರಣೆಯಲ್ಲಿರುವ ‘ಕೋಳಿ ಅಂಕ’ದ ಹಿಂದಿರುವ ಹಿಂಸೆ ಮತ್ತು ಕ್ರೌರ್ಯದ ಮಾರ್ಮಿಕ ವಿಡಂಬನೆ ಇದೆ.

“ಕಟ್ಟಗೇ ಮೇಲ್‌ – ಕೋರಿದ ಬಾಲ್‌
ತುಳು ಸಂಸ್ಕೃತಿನಂಚ ಕಾದವಡೆ
ಬತ್ತುನ ಸೋಲ್‌ – ತಿಕ್ಕಿನ ಗೇಲ್‌
ಪೆಜ್ಜುನ ಪತ್ತ್ ರೂಪ್ಯಾ ಪೊಕ್ಕಡೆ”

(ಅಂಕ (ಕೋಳಿ ಅಂಕ) ಮೇಲು ಕೋಳಿಯ ಬಾಳು / ತುಳು ಸಂಸ್ಕೃತಿಯ ಹಾಗೆ ಕಾದಾಡಿಸದಿರಿ / ಬಂದ ಸೋಲು – ಸಿಕ್ಕುವ ಗೆಲುವು / ಹೆಕ್ಕುವ ಹತ್ತು ರೂಪಾಯಿ ಸುಮ್ಮನೆ)

‘ದೀಪದ ಮಲ್ಲಿ’ ಸಂಕಲನದ ಅಂಗಲಾಪು, ರೈತ ಮಿಲನ, ನುಪ್ಪು ಅಗುರಾನಗ, ಅಡ್ಡರೆಗಂಟ ಇಂತಹ ಕವನಗಳು ಸಮಾಜ ಮತ್ತು ವ್ಯಕ್ತಿಗಳ ಜೀವನ ವಿಧಾನಗಳ ನಡುವಿನ ಸಂಬಂಧದ ಬಗೆಗೆ ಕವಿಯ ದೃಷ್ಟಿಕೋನಗಳಾಗಿ ಕಾಣಿಸಿಕೊಳ್ಳುತ್ತವೆ.

ಎಂಬತ್ತರ ದಶಕದಲ್ಲಿ ತುಳುವಿನಲ್ಲಿ ರಚನೆಗೊಂಡ ಮಹಾಕಾವ್ಯ ‘ಮಂದಾರ ರಾಮಾಯಣ’ (೧೯೮೭). ಇದನ್ನು ಬರೆದ ಕವಿ ಮಂದಾರ ಕೇಶವ ಭಟ್ಟರು ತುಳುನಾಡಿನ ಸಂಸ್ಕೃತಿ-ಪ್ರಕೃತಿಯನ್ನು ರಾಮಾಯಣದ ಕತೆಯೊಳಗೆ ರಗಳೆ ಛಂದಸ್ಸಿನಲ್ಲಿ ಪರಿಣಾಮಕಾರಿಯಾಗಿ ಬೆಸೆದು ಕಟ್ಟಿದ್ದಾರೆ. ತುಳುವ ಜನ ಜೀವನದ ಬಗ್ಗೆ ಈ ಕಾವ್ಯದಲ್ಲಿ ಯಥೇಚ್ಛ ಒಳನೋಟಗಳು ದೊರೆಯುತ್ತವೆ.

ಇದೇ ದಶಕದಲ್ಲಿ ಬಂದ ಗಂಭೀರವಾದ ಅನುವಾದ ರಚನೆಗಳೆಂದರೆ ಕೆಲಿಂಜ ಸೀತಾರಾಮ ಆಳ್ವ ಅವರ ಗೀತೆದ ತಿರ್ಲ (೧೯೮೧), ಎಸ್‌.ವಿ. ಪರಮೇಶ್ವರ ಭಟ್ಟರು ಇಂದ್ರಚಾಪ ಮತ್ತು ಇತರ ಕೆಲವು ಕವನಗಳ ಅನುವಾದ ಮಾಡಿ ಕೆದಂಬಾಡಿ ಜತ್ತಪ್ಪ ರೈಗಳು ಹೊರತಂದ ‘ಅಜ್ಜಬಿರು’ (೧೯೮೨ ಅಲ್ಲದೆ ‘ಉಮರ್‌ ಖಯ್ಯಾಮನ ರುಬಾಯತ್‌’ ಅನುವಾದ ‘ಕುಜಲಿಪೂಜೆ’ (೧೯೮೯), ಅಮೃತ ಸೋಮೇಶ್ವರ ಅವರು ಅನುವಾದ ಮಾಡಿದ ಫಿನ್ಲೆಂಡಿನ ಜನಪದ ಮಹಾಕಾವ್ಯ ಕಲೇವಾಲದ ಒಂದು ಭಾಗ ‘ಮೋಕೆದ ಬೀರೆ ಲೆಮಿನ್ಕಾಯೆ’ (೧೯೮೫), ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ವನ್ನು ಅನುವಾದಿಸಿದ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಅವರ ‘ಪೊಡಂಬು ತಿಂಮನ ಕಗ್ಗ’ (೧೯೮೮).

ಎಂಬತ್ತರ ದಶಕದ ಕವಿಗಳ ಕವನಗಳಲ್ಲಿ ಸಾಮಾಜಿಕ ಪ್ರಜ್ಞೆ ಹೊಸ ರೂಪದಲ್ಲಿ ಅಭಿವ್ಯಕ್ತಗೊಂಡಿವೆ. ಇಲ್ಲಿ ಸಾಮಾಜಿಕ ಸಮಸ್ಯೆಗಳು ಕಾಲದ ನಿರ್ದಿಷ್ಟ ಚೌಕಟ್ಟಿಗೆ ಸೀಮಿತವಾಗಿದ್ದರೂ, ಪುನರಾವೃತ್ತವಾಗುವ ಮಾನವೀಯ ಅನುಭವಗಳು ಭಾಗವೆಂಬಂತೆ ಈ ಕವಿಗಳು ಸಾಧಾರಣೀಕರಿಸಿ ನೋಡುವುದು ಮುಕ್ಯವಾಗುತ್ತದೆ.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾಷೆಗಳು ಧರ್ಮಗಳು ಸಹಬಾಳ್ವೆ ಮಾಡಲೇಬೇಕಾದ ಒತ್ತಡ ಇದೆಯಲ್ಲ. ಅದು ಬಹಳ ಜಿಲ್ಲೆಗಳಲ್ಲಿ ಈ ಒತ್ತಡ ರೂಪದಲ್ಲಿಲ್ಲ. ಮುಸಲ್ಮಾನರ ಸಂಸ್ಕೃತಿ ದಕ್ಷಿಣ ಕನ್ನಡ ಜಿಲ್ಲೆಯದು; ತುಳುವರ ಸಂಸ್ಕೃತಿ ದಕ್ಷಿಣ ಕನ್ನಡ ಜಿಲ್ಲೆಯದು; ಕನ್ನಡ ಸಂಸ್ಕೃತಿಯು ಇಲ್ಲಿಯದು ಬಜೈನರು ಇಲ್ಲಿಯವರು…. ಸಹಬಾಳ್ವೆ ಮುಖಾಂತರವೇ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಒಂದು ಒತ್ತಡ ಇಲ್ಲಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ” (ಜಯಪ್ರಕಾಶ ಮಾವಿನಕುಳಿ (ಸಂ.), ೧೯೮೮; ೧೪.

ಅನಂತಮೂರ್ತಿಯವರು ಅಭಿಪ್ರಾಯ ಪಡುವ ಮೇಲಿನ ಮಾತುಗಳಿಗೆ ಸಮರ್ಥನೀಯವಾಗಿ ತುಳು ಕವಿಗಳ ಕಾವ್ಯಾಭಿವ್ಯಕ್ತಿಯನ್ನು ಪರಿಶೀಲಿಸಬಹುದು. ಎಂಬತ್ತರ ದಶಕದ ಕವನಗಳು ಸಂವೇದನೆಯ ದೃಷ್ಟಿಯಿಂದ ಕನ್ನಡದ ಕವಿಗಳು ಸಾಧಿಸಿದ ಉತ್ಕರ್ಷವನ್ನು ಪಡೆದಿಲ್ಲ. ಆದರೆ, ಅಭಿವ್ಯಕ್ತಿಯ ನೆಲೆಯಿಂದ ಪರಿಶೀಲಿಸಿದರೆ, ಸಾಮಾಜಿಕ ಪ್ರಜ್ಞೆಯನ್ನು ಒಂದು ಕಾಲಘಟ್ಟದ ಘೋಷಣೆಗಳನ್ನಾಗಿ ಮಾತ್ರ ಕಾಣಿಸಿಕೊಳ್ಳುವುದರ ಬದಲು ಕಾವ್ಯಾನುಭವದ ಅನುವಾರ್ಯ ಪ್ರಕ್ರಿಯೆಯಾಗಿ ರೂಪುಗೊಂಡಿರುವುದು ಪ್ರಾಯೋಗಿಕ ನೆಲೆಯ ಕವನಗಳ ಪ್ರದಾನ ವಿಶಿಷ್ಟತೆಯಾಗಿದೆ. ಎಂಬತ್ತರ ದಶಕದ ಸಂದರ್ಭವು ಗಂಭಿರವಾದ ತುಳು ಕವನಗಳ ರಚನೆಗಳಿಗೆ ಚಾಲನೆಯನ್ನು ನೀಡಿದೆ. ಈ ಅವಧಿಯಲ್ಲಿ ತುಳು ಕವನಗಳು ಪಡೆಯಬಹುದಾದ ಪಕ್ವತೆ, ಸಮಗ್ರತೆಯನ್ನು ಪಡೆದುಕೊಂಡಿರುವುದು ವ್ಯಕ್ತವಾಗುತ್ತದೆ. ಜೀವನ ಪ್ರೇಮದ ಅಭಿವ್ಯಕ್ತಿ ಸಮನ್ವಯವೂ, ವ್ಯಾಪಕವೂ ಆಗಿ ಪ್ರಕಟಗೊಂಡಿವೆ. ಇಲ್ಲಿನ ಕವಿಗಳ ಸಂವೇದನೆಯ ಒಂದು ಮುಖ್ಯ ಅಂಶವೆಂದರೆ, ಹೊರಗಿನ ಸಂವೇದನೆಗಳನ್ನು ಮುಕ್ತವಾಗಿ ಬರಮಾಡಿಕೊಂಡು ಅವುಗಳನ್ನು ಅರಗಿಸಿಕೊಂಡು ಬದುಕಿನ ಭಾಗವಾಗಿ ಮಾಡಿಕೊಳ್ಳುವುದು. ಇದು ಅಭಿವ್ಯಕ್ತಿಯಲ್ಲಿ ದುರ್ಬಲವಾಗಿ ಕಂಡರೂ, ಶಕ್ತಿ ಸಂಚಯನವಾಗಿಯೂ ಪರಿಣಮಿಸುವುದು ವ್ಯಕ್ತವಾಗುತ್ತದೆ.

ಆಧುನಿಕ ತುಳು ಕವಿತೆ : ಪ್ರಕರ್ಷ ನೆಲೆ

ತೊಂಬತ್ತರ ದಶಕದ ನಂತರ ಕಾಲಘಟ್ಟವನ್ನು ಆಧುನಿಕ ತುಳು ಕವಿತೆಗಳ ಪ್ರಕರ್ಷದ ನೆಲೆ ಎಂದು ಗುರುತಿಸಬಹುದು. ತೊಂಬತ್ತರ ದಶಕದ ಅವಧಿಯಲ್ಲಿ ಸುಮಾರು ಮೂವತ್ತಕ್ಕಿಂತ ಹೆಚ್ಚಿನ ಸಂಕಲನಗಳು ತುಳುವಿನಲ್ಲಿ ಪ್ರಕಟಗೊಂಡಿವೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದಯೋನ್ಮುಖ ಕವಿಗಳು ಕಾಣಿಸಿಕೊಂಡಿದ್ದಾರೆ. ಕೃಷ್ಣಾನಂದ ಹೆಗ್ಡೆ ಅವರ ಸಂಪಾದಕತ್ವದಲ್ಲಿ ಹೊರಬಂದ ‘ಅರ್ಲು ಕಬಿತೆಲು ಪೊರ್ಲು ಕಬಿತೆಲು’ (೧೯೯೦), ಮಂದಾರ ಕೇಶವ ಭಟ್ಟರ ‘ಜಾಗಂಟೆ’ (೧೯೯೧), ರವಿಕಿರಣ ಅವರ ‘ತುಳು ಕಬಿತೆಲು’ (೧೯೯೧), ಶ್ರೀನಿವಾಸ ಮಂಕುಡೆ ಅವರ ‘ಪೊರ್ಲು’ (೧೯೯೨), ಕೋಡು ಭೋಜ ಶೆಟ್ಟಿ ಅವರ ‘ಗೊಂಚಿಲ್‌’ (೧೯೯೨), ಎಸ್‌. ಆರ್‌. ಹೆಗ್ಡೆ ಅವರು ಸಂಪಾದಿಸಿದ ‘ಅಟಿಲ್‌’ (ಒಂಬತ್ತು ಮಂದಿ ಕವಿಗಳ ಕವಿತಾ ಸಂಗ್ರಹ, ೧೯೯೨), ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರ ‘ದುನಿಪು’ (೧೯೯೨), ವಾಮನ ನಂದಾವರ ಅವರ ‘ಬೀರ’ (೧೯೯೨), ರತ್ನಕುಮಾರ ಎಂ. ಅವರ ‘ತೆರಿವು’ (೧೯೯೩), ಪೆರ್ಡೂರು ಭಾಸ್ಕರ ಶೆಟ್ಟಿ ಅವರ ‘ಶೂದ್ರನ ಕಾನಿಗೆ’ (೧೯೯೩), ತುಳುಕೂಟ ಬೆಂಗಳೂರು ಪ್ರಕಾಶನದಿಂದ ಬಂದ ‘ತುಳು ಕಬಿತೆಲು ಬೊಕ್ಕ ಗಾದೆಲು’ (೧೯೯೩), ಪ್ರಮೋದಾ ಕೆ. ಸುವರ್ಣ ಅವರ ‘ಮುಡಿಪು’ (೧೯೯೪) ಮತ್ತು ‘ಪದರಂಗಿತ’ (೧೯೯೬), ಕಯ್ಯಾರ ಕಿಂಞ್ಞಣ್ಣ ರೈಗಳ ‘ಎನ್ನಪ್ಪೆ ತುಳುವಪ್ಪೆ’ (೧೯೯೪), ತಿಮ್ಮಪ್ಪ ಪೂಜಾರಿ ಜೆ. ಅವರ ‘ಕೂಕುಳು’ (೧೯೯೪), ವಸಂತಕುಮಾರ ಪೆರ್ಲ ಅವರು ಸಂಪಾದಿಸಿದ ಪ್ರಾತಿನಿಧಿಕ ‘ತುಳು ಕಬಿತೆಲು (೧೯೯೪),ಕೆ. ಸಂಜೀವ ಶೆಟ್ಟಿ ಇವರ ‘ಬೊಲ್ಪಾಂಡ್‌’ (೧೯೯೪), ಸುನೀತಾ ಶೆಟ್ಟಿ ಕೆ. ಇವರ ‘ನಾಗಸಂಪಿಗೆ’ (೧೯೯೪), ಬೆಳ್ಳಿಪ್ಪಾಡಿ ಸತೀಶ್‌ ರೈಗಳ ‘ತುಳುನಾಡ್‌ದ ಪೊರ್ಲು’ (೧೯೯೪), ಟಿ. ಎ. ಎಸ್‌. ಖಂಡಿಗೆ ಅವರ ‘ತಿರ್ಗಾಸ್‌’ (೧೯೯೫), ಅತ್ರಾಡಿ ಅಮೃತಾ ಶೆಟ್ಟಿ ಅವರ ‘ಮದಿಮಾಲೆ ಪಾಡ್ದನ’ (೧೯೯೫), ರವಿಕಿರಣರ ‘ಕಬಿತೆಲು ಚಿತ್ರೊಲು’ (೧೯೯೫), ಶ್ರೀನಿವಾಸ ಮಂಕುಡೆ ಅವರ ‘ನೆಂಪು’ (೧೯೯೫), ನಿಟ್ಟೂರು ಕೆ. ಸಂಜೀವ ಭಂಡಾರಿ ಅವರ ‘ವ್ಹಾವ್ಹಾರೆ ಕಮ್ಮೆನ’ (೧೯೯೫), ಎಸ್‌. ಪಿ. ಮಂಚಿ ಇವರ ‘ಬಾನ ತೋರೊಂದುಂಡು’ (೧೯೯೭), ಮುದ್ದು ಮೂಡುಬೆಳ್ಳೆ ಇವರ ಸಂಪಾದನೆಯಲ್ಲಿ ಹೊರಬಂದ ‘ಪರ್ವ ಪರ್ಬದ ಪೊರ್ಲು ಕಬಿತೆಲು’ (೧೯೯೭) ಶ್ಯಾಮ್‌ ಗೋಪಾಲರ ‘ಮುಗುರು’ (೧೯೯೮), ಪಿ. ಎಸ್‌. ರಾವ್‌ ಅವರ ಸಂಪಾದಕತ್ವದ ‘ಬಂಗಾರ್‌ಪರ್ಬೊದ ಸಿಂಗಾರ ಪದೊಕುಲು’ (೧೯೯೮), ಬಿ. ಎ. ಪ್ರಭಾಕರ ರೈಗಳ ‘ದಾದ ಉಂಡು ಮಾರಾಯರೆ?’ (೧೯೯೯), ಕೋಡು ಭೋಜಶೆಟ್ಟಿ ಅವರ ‘ಪರವೂರ ಸುಬಗೆ’ (೧೯೯೯) ಹೀಗೆ ಸಂಕಲನಗಳ ಸಂಖ್ಯೆಯ ನೆಲೆಯಿಂದ ತುಳುಕಾವ್ಯದ ಪ್ರಕರ್ಷದ ಸವಿ ಇದಾಗಿದೆ. ಈ ಅವಧಿಯಲ್ಲಿ ಕಾವ್ಯಲೋಕ ಕಟ್ಟಿದ ‘ಮನೋಧರ್ಮ’ವನ್ನು ಅರ್ಥೈಸಿಕೊಳ್ಳುವ ಸಲುವಾಗಿ ಕೆಲವು ಕವಿಗಳ ಸಂಕಲನವನ್ನು ಸಮೀಕ್ಷಿಸುವುದಾದರೆ;

ಸಹಜ ಕವಿ ಮಂದಾರ ಕೇಶವ ಭಟ್ಟರ ‘ಜಾಗಂಟೆ’ ಹದಿನಾರು ಕವನಗಳನ್ನು ಒಳಗೊಂಡ ಸಂಕಲನ. ಮಹಾಕಾವ್ಯವನ್ನು ಬರೆದ ಕವಿಯು ವೈವಿಧ್ಯಮಯ ವಸ್ತುವಿಷಯದ ಬಿಡಿ ಕವಿತೆಗಳಲ್ಲಿ ಅನುಸಂಧಾನ ಮಾಡುವ ಅವಕಾಶವನ್ನು ಅರಿಸಿಕೊಂಡಾಗಲೂ ಅವರ ರಚನೆಗಳು ಅಸಾಧಾರಣವಾದ ಪ್ರತಿಭೆ ಮತ್ತು ಔಚಿತ್ಯವನ್ನು ಬಿಂಬಿಸುತ್ತವೆ. ಇವರ ಕವಿತೆಯೊಳಗೆ ಲೋಕ ವಸ್ತುವು ಪ್ರವೇಶಿಸುವ ಬಗೆಯೇ ಅನನ್ಯವಾದುದ್ದು. ಯಾವುದೇ ವಸ್ತುವಿರಲಿ ಕೇವಲ ತಾನಾಗಿ ಉಳಿಯದೆ ಬೇರೆ ಯಾವುದರ ಮೇಲೋ ಬೆಳಕು ಚೆಲ್ಲುವ, ಸೂಚಕವಾಗುವ ಅಲಂಕಾರದ ಅಂತರವನ್ನು ಅವರ ಎಲ್ಲಾ ಕವನಗಳಲ್ಲೂ ಗ್ರಹಿಸಬಹುದು. ಕನ್ನಡದ ರಗಳೆ, ಛಂದಸ್ಸನ್ನು ತುಳುವಿಗೆ ಬೇಕಾದ ಹಾಗೆ ಬಳಸುವ ಮೂಲಕ ಆಧುನಿಕ ತುಳು ಕವನಗಳ ಯಾಂತ್ರಿಕ ನಡೆಗೆ ಸಾಂಪ್ರದಾಯಿಕ ಮೆರಗು ನೀಡುವುದರಿಂದ, ಕವನಗಳು ಭಾಷೆಯ ಲಾಲಿತ್ಯ ಪ್ರಧಾನವಾಗಿ ಗಮನ ಸೆಳೆಯುತ್ತವೆ. ಪ್ರತಿಮೆಗಳಿಗೆ ಹೋಲಿಸಿದರೆ ಈ ಕವಿ ರೂಪಕ ಸೃಷ್ಟಿ ಮತ್ತು ಉಪಮೆಗಳ ಬಳಕೆಯಲ್ಲಿ ಹೆಚ್ಚಿನ ಪರಿಣತಿಯನ್ನು ತೋರಿಸಿದ್ದಾರೆ. ‘ಜಾಗಂಟೆ’ಯಲ್ಲಿ ಇರುವ ಹೆಚ್ಚಿನ ಕವನಗಳನ್ನು ಕವಿಯ ‘ಜೀವನ ದೃಷ್ಟಿ’ ಹಾಗೂ ಕಾವ್ಯದ ಬಗ್ಗೆ ಒಪ್ಪಿಕೊಂಡಿದ್ದ ಪೂರ್ವಕಲ್ಪನೆ (ಛಂದಸ್ಸಿಗೆ ಸಂಬಂಧಿಸಿದಂತೆ) ಇವುಗಳಿಂದ ಪ್ರತ್ಯೇಕಿಸಿ ನೋಡಲಾಗುವುದಿಲ್ಲ.

ಗಣಪತಿ ದಿವಾಣ ಅವರು ‘ಮೀಸೆ ಇತ್ತಿ ಅಣುಗಳು’, ‘ಬೆಣ್ಪುನ ನರಮಾನಿ’ ಸಂಕಲನಗಳ ಕವನಗಳನ್ನು ಸೇರಿಸಿಕೊಂಡಂತೆ ‘ಕೊಂಬುವಾದ್ಯೊ’ ಎನ್ನುವ ಮೂರನೆಯ ಸಂಕಲನವನ್ನು ಹೊರತಂದಿದ್ದಾರೆ. ಸಂಕಲನದ ೨೭ ಕವನಗಳಲ್ಲಿ ತುಳುತ ತೇರ್‌ ಒಯ್ಪುಕೋ, ಯಾನ್‌ ಒರೊ ಸೈತ್ತ್‌ದಿತೆ, ಭೂತೊಕೋಲೊ, ಕೊಡಿ, ದ್ಯಾತವೀ ಸ್ವಾತಂತ್ರ್ಯ?, ಕುಕ್ಕುದ ಮರೊ ಇಂತಹ ಕವನಗಳು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತವೆ. ಸಾಮಾಜಿಕ ವಿಡಂಬನೆಯೇ ಇವರ ಕವನಗಳ ಸಂಕೀರ್ಣತೆಯನ್ನು ಹೆಚ್ಚಿಸುವ ಮುಖ್ಯ ಅಂಶವಾಗಿದೆ. ‘ಮೀಸೆ ಇತ್ತಿ ಆಣುಗುಲು’ ಅದೇ ಮಾದರಿಯದ್ದು.

“ಮೀಸೆ ಇತ್ತಿ ಆಣುಗುಳು ತುಳುನಾಡ್‌ಟಿದ್ಯರೊ?
ಉಳ್ಳೆರಪ್ಪ ಉಳ್ಳೇರ್‌ನಿದ್ರೆ ತೂಕೊಂದುಳ್ಳೇರ್‌
ದೀರ ವೀರ ರಾಜೆರ್‌
ರಾಜ್ಯಭಾರ ಮಾಲ್ತೇರ್‌
ಭಾರಿ ಬಿರ್ಸ ಬಂಟೆರ್‌
ಭಾರಿ ಬಿರ್ಸ ಬಂಟೆರ್‌
ಧರ್ಮ ನ್ಯಾಯೊ ಪಂಡೆರ್‌| ಮೀಸೆ ಇತ್ತಿ… (೧೯೯೬;೨೯)

(ಮೀಸೆ ಇದ್ದ ಗಂಡಸರು ತುಳುನಾಡಿನಲ್ಲಿಲ್ಲವೋ? ಇದ್ದಾರಪ್ಪ ಇದ್ದಾರೆ ನಿದ್ರೆ ತೂಗುತ್ತಿದ್ದಾರೆ / ಧೀರ ವೀರರಾಜರು / ರಾಜ್ಯಭಾರ ಮಾಡಿದರು / ಭಾರಿ ಹುಷಾರಿ ಬಂಟರು/ಧರ್ಮನ್ಯಾಯ ಹೇಳಿದರು/ಮೀಸೆ ಇದ್ದ….)