ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರ ಕಾವ್ಯ ಬೆಳವಣಿಗೆಗೆ ‘ದುನಿಪು’ ೨೮ ಕವನಗಳ ಈ ಸಂಕಲನ ಸಾಕ್ಷಿ. ಒರತೂಲೆ ದೇವರೆ, ಎನ್ನ ಕಬಿತೆ, ಬರ್ಪೆರಪ್ಪ ಬರ್ಪೆರ್‌, ಗಾಂಧಿ, ಮೀನ್‌ಪತ್ತೊಡು, ಉಚ್ಚುಲು, ಕರಿಯನ ಪುರಲ್‌, ಪೊರ್ತು ಕಂತ್‌ಡ್‌, ಅರ್ತಿದ ಪೂ ಆದ್‌ಪೋಯ ಇತ್ಯಾದಿ ಕವನಗಳಲ್ಲಿ ವ್ಯಕ್ತಿ ಸಂಬಂಧಗಳು ಆತ್ಮೀಯವಾಗಿ, ಸಂಕೀರ್ಣವಾಗಿ ಹಾಗೂ ಮೂರ್ತವಾಗಿ ಪ್ರತಿಮೆಗಳ ಮೂಲಕ ರೂಪು ಪಡೆಯುತ್ತವೆ. ಪಾಲ್ತಾಡಿಯವರು ಅನುಭವವನ್ನು ಸಡಿಲ ಮಾಡುವ ವರ್ಗದ ರೊಮ್ಯಾಂಟಿಕ್‌ ಕವನಗಳನ್ನು ಬರೆದಿರುವುದು ಹೌದಾದರೂ, ನಾವೀನ್ಯಕ್ಕಾಗಿಯೇ ಸಂಕೀರ್ಣತೆಯನ್ನು ಒಪ್ಪುವ ಕವನಗಳನ್ನು ಕೂಡ ಇವರು ರಚಿಸಿದ್ದಾರೆ. ಭಾಷೆ-ಭಾವಗಳ ಸಂಕೀರ್ಣತೆಯ ಅಂತಹ ಕವನಗಳು ಭಾವಶುದ್ಧತೆಯನ್ನು ಸಾರುತ್ತವೆ.

ತುಳುವಿನಲ್ಲಿ ಶಕ್ತವಾಗಿ ಕವನ ಬರೆಯುತ್ತಿರುವ ಮತ್ತೋರ್ವ ಕವಿ ವಾಮನ ನಂದಾವರ. ೬೯ ಕವನಗಳನ್ನು ಒಳಗೊಂಡ ಇವರ ಸಂಕಲನ ‘ಬೀರ’. ತುಳುನಾಡ ಕವಿತೆ, ಜನಮರ್ಲಾ ಜಾತ್ರೆ ಮರ್ಲಾ?, ಬಯಕೆದ ಪೊದಿಕೆ, ಬುಳೆ ಬೊಂತೆಲ್‌, ಮುರಾನಿದ ಬರ್ಸ, ಪಳ್ಳದ ತೆರೆಕಾಯಿ, ಬರವು, ದುರ್ಮತಿಡೊಂಜಿ ದೂರು, ಬದ್‌ಕ್, ಕುಂಟಿ ಮೈಪು ಪಂಡಿ ಕತೆ, ಬೇಸ ತಿಂಗೊಲ್ದ ಪೂ, ಶಾಂತಿ ಬತ್ತ್‌ಜಲ್‌, ಪುಚ್ಚೆ ಕವುಂತು ದೀನವು, ಮಣ್ಣ್‌ಗಾವಂದಿ ಬಿದೆ, ದೂಮಕೇತುಗೊಂಜಿ ಪಾರಿ ಹೀಗೆ ಹಲವು ಮುಖ್ಯವೆನ್ನುವ ಕವನಗಳು ‘ಬೀರ’ದೊಳಗಿವೆ. ಮಾದರಿಗಾಗಿ ಶಾಂತಿ ಬತ್ತ್‌ಜಲ್‌(ಶಾಂತಿ ಬರಲಿಲ್ಲ) ಎನ್ನುವ ಕವಿತೆಯನ್ನು ನೋಡಬಹುದು. ತುಳುನಾಡಿನ ಮತ್ತು ವ್ಯಕ್ತಿಗಳ ಮನಃಶಾಂತಿಯನ್ನು ಅನ್ವೇಷಿಸುವ ಕವಿತೆ ಇದು.

“ಈ ವೋಲುಲ್ಲ ಶಾಂತಿ?
ಬೂಕುಲೆ ರಾಸಿಲೆಡಾ? ಆಟ ಕೂಟಲೆಡಾ?
ಹೊಟೇಲ್‌ ಗಡಂಗ್‌ ಬಾರ್‌ ಲೆಡಾ?
ಬಬ್ಬು ಕಲ್ಲುರ್ಟಿ ಕೋಲ ನೇಮಲೆಡಾ?
ಮೈಕಾಸುರನ ದೊಂಡೆಡಾ? ಸಿಟಿ ಬಸ್ಸುಲೆ ಕ್ಯಾಸೆಟ್‌ಲೆಡಾ?
ಸರ್ಕಸ್‌ ಸಿನೇಮಾತಿ ಟೆಂಟ್‌ಲೆಡಾ?
ತೊಟ್ಟಿಲ್‌ಡಾ! ಮಟ್ಟೆಲ್‌ಡಾ?
ಅಪ್ಪೆ ಜಕ್ಕೆಲ್‌ಡಾ?” (೧೯೯೨; ೫೯)

(ನೀನು ಎಲ್ಲಿದ್ದೀಯ ಶಾಂತಿ? / ಪುಸ್ತಕ ರಾಶಿಯೊಳಗಾ? ಆಟಕೂಟಗಳೊಳಗಾ? ಹೊಟೇಲ್‌ ಗಡಂಗ್‌ ಬಾರಿನಲ್ಲಿಯಾ / ಬಬ್ಬು ಕಲ್ಲುರ್ಟಿ ಕೋಲ ನೇಮಗಳಲ್ಲಿಯಾ / ಮೈಕಾಸುರನ ಗಂಟಲಿನೊಳಗಾ / ಸಿಟಿ ಬಸ್ಸ್‌ ಕ್ಯಾಸೆಟ್ಟ್‌ಗಳೊಳಗಾ / ಸರ್ಕಸ್‌ ಸಿನಿಮಾ ಟೆಂಟಿನೊಳಗಾ… ತೊಟ್ಟಿಲಲ್ಲಾ / ತಾಯ ಮಡಿಲಲ್ಲಿಯಾ?)

ಹಲವು ಹಂತಗಳ ವಿವರಣೆಗಳಲ್ಲಿ ‘ಶಾಂತಿ’ಯನ್ನು ತೂಗುವ ಕವಿ ಬಳಸುವ ಪ್ರತಿಮೆಯು ಸಾಂಕೇತಿಕ ಅರ್ಥವನ್ನು ಧ್ವನಿಸುವುದು ಕಂಡುಬರುತ್ತದೆ.

ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗವನ್ನು ತುಳುವಿಗೆ ಪೊಳಲಿ ಬಾಲಕೃಷ್ಣ ಶೆಟ್ಟಿ ಅವರು ಅದೇ ಪ್ರೇರಣೆಯಿಂದ ಬರೆದ ‘ಪೆಂಗ ದೂಮನ ಕಬಿತೊಲು’ ಕೃತಿಯ ನಾಲ್ಕು ಸಾಲಿನ ೮೨೯ ಬಿಡಿ ಕವಿತೆಗಳಿಗೆ ತಿಮ್ಮನ ಕಗ್ಗದ ಅರ್ಥ ಶಕ್ತಿ, ಸೊಗಸು ಇದೆ.

“ಬಡವ ಬಡವನುಯೆಂದು ಯಾಕಯೀ ಪರಿಯಳುವೆ
ಲೋಕದಲಿ ನಿಜವಾದ ಸಿರಿವಂತರಿಹರೇ?
ಇದ್ದುದಕೆ ತೃಪ್ತಿಯಿಂದೊಡಲ ಉಲ್ಲಾಸದಲಿ
ಇರುವವನೆ ಶ್ರೀಮಂತ! – ಪೆಂಗದೂಮ’’ (೧೯೯೩;೩೮)

ಕನ್ನಡದ ವಿಶಿಷ್ಟ ಕವಿ ಕಯ್ಯಾರ ಕಿಞ್ಞಣ್ಣ ರೈಯವರು ತುಳುನಾಡು, ನುಡಿಯನ್ನು ವಿಭಿನ್ನ ರೂಪಕಗಳಲ್ಲಿ ಕವಿತೆಯಾಗಿರಿಸಿರುವುದು ಅವರ ‘ಎನ್ನೆಪ್ಪೆ ತುಳುವಪ್ಪೆ’ (ನನ್ನಮ್ಮ ತುಳುವಮ್ಮ) ಕವನ ಸಂಕಲನದಲ್ಲಿ.

ಲೆಪ್ಪುನ್ಯೇರ್‌, ಬತ್ತನೋ ಈ ಬರ್ಪನೋ? ಪನ್ಲೆ ಒಂಜೆ ಸೊರೊಟು, ಸಾರೊ ಎಸಳ್‌ದ ತಾಮರೆ, ತುಳುಗೀತೆ, ತುಳುವಪ್ಪೆಡ, ತುಳುವೆರ್‌ ಇವು ತುಳುನಾಡು-ನುಡಿ-ಸಂಸ್ಕೃತಿಯ ಪ್ರೀತಿಪೂರ್ವಕ ಆರಾಧನೆಯಾಗಿ ರೂಪುಗೊಂಡ ಕವನಗಳಾಗಿವೆ. ಇವರ ಕಾವ್ಯದಲ್ಲಿ ದೇಶಭಕ್ತಿ (ತುಳುನಾಡು), ಸಮಾಜದ ಕಲ್ಪನೆ, ದೈವಿಕ ಶ್ರದ್ಧೆ ಎಲ್ಲವೂಒಂದೇ. ಎಲ್ಲದರ ಆಳದಲ್ಲಿ ಅಡಗಿರುವುದು ವ್ಯಕ್ತಿ ಮತ್ತು ಸಮಾಜದ ನಡುವೆ ಬಿರುಕಿಲ್ಲ ಎಂಬ ನಂಬಿಕೆ. ಕಯ್ಯಾರ ಕಿಞ್ಞಣ್ಣ ರೈಗಳು (೧೯೧೫) ಕಾಸರಗೋಡು-ಕರ್ನಾಟಕ-ಕೇರಳ ಗಡಿ ವಿವಾದ ಹೋರಾಟದ ನೇತಾರನಾಗಿಯೂ ಸ್ವಾತಂತ್ರ್ಯಪ್ರೇಮಿ ಕವಿಯಾಗಿಯೂ ಕಾವ್ಯೋದ್ಯೋಗ ಪ್ರಾರಂಭಿಸಿ, ಸ್ವಾತಂತ್ರ್ಯಾನಂತರ ಜಾತಿ ಪಂಥಗಳ ಐಕ್ಯಕ್ಕಾಗಿ, ಹಿಂದುಳಿದವರ ಉದ್ಧಾರಕ್ಕಾಗಿ ಬದುಕಿನ ಸರ್ವತೋಮುಖ ಏಳಿಗೆಗಾಗಿ ಕನ್ನಡ, ತುಳು ಭಾಷೆಗಳಲ್ಲಿ ಕವನಗಳನ್ನು ರಚಿಸುತ್ತ ಜನಪರ ಕವಿಯಾಗಿ ಬೆಳೆದವರು. ಕಯ್ಯಾರರ ಕವನಗಳಲ್ಲಿ ಕಂಡುಬರುವ ಉಪದೇಶಾತ್ಮಕ ಅಥವಾ ಪೋಷಣಾತ್ಮಕ ಏರುಧ್ವನಿಗೆ ಅವರ ಮನೋಧರ್ಮ, ಕಾರ್ಯಕ್ಷೇತ್ರವೇ ಕಾರಣ. ಈ ಅರ್ಥದಲ್ಲಿ ಕಯ್ಯಾರ ರೈಗಳು ಸ್ವಾತಂತ್ರ್ಯಯೋಧರಾಗಿ, ಸಮಾಜದ ಕುರಿತ ವಾಸ್ತವ ಚಿಂತಕರಾಗಿ ಕರ್ತವ್ಯನಿರ್ವಹಿಸಿ ಕವಿಯಾಗಿ ಮಹತ್ವ ಪಡೆಯುತ್ತಾರೆ.

ಹೊರನಾಡಿನಲ್ಲಿದ್ದು, ಬೇರೆ ಊರುಗಳಲ್ಲಿದ್ದು ಬರೆಯುತ್ತಿರುವ ಬಾ ಸಾಮಗ ಮಲ್ಪೆ, ಬೆಳ್ಳಿಪ್ಪಾಡಿ ಸತೀಶ್‌ ರೈ, ರವಿಕಿರಣ, ಕೋಡು ಭೋಜ ಶೆಟ್ಟಿ, ಶ್ರೀನಿವಾಸ ಮಂಕುಡೆ, ಪೇರೂರು ಜಾರು ಮೊದಲಾದವರ ರಚನೆಗಳು ಭಾವನಾತ್ಮಕತೆಯನ್ನೇ ಪ್ರಧಾನವಾಗಿ ಬಿಂಬಿಸುವಂಥವುಗಳು. ಎಂ. ಜಯರಾಮ ರೈ, ಸಂಜೀವ ಶೆಟ್ಟಿ, ಸುನೀತಾ ಶೆಟ್ಟಿ ಮುಂಬೈಯವರಾಗಿದ್ದು ಇವರ ಕವನಗಳೂ ಭಾವನಾತ್ಮಕತೆಯನ್ನು ಪ್ರಧಾನವಾಗಿ ಗುರುತಿಸಬಹುದಾದರೂ ತುಳು ಸಂಸ್ಕೃತಿಯ ಒಡಲಿನಿಂದ ಬರೆಯುವುದನ್ನು ಕಾಣಬಹುದು. ಜೊತೆಗೆ ಊರು ಬಿಟ್ಟುಹೋದರೂ ತುಳುವರ ನೆಲದೊಂದಿಗೆ ಸಂಬಂಧವಿರಿಸಿದ ನಗರೀಕರಣದ ಅತಂತ್ರತೆ – ಕಷ್ಟನಷ್ಟಗಳು ಅವರ ಕವಿತೆಗಳ ವಸ್ತುಗಳಾಗಿ ಅಭಿವ್ಯಕ್ತಿ ಪಡೆಯುತ್ತವೆ.

ಪ್ರಮೋದ ಕೆ. ಸುವರ್ಣ ತುಳು ಭಾವಗೀತೆಗಳನ್ನು ಹೆಚ್ಚಾಗಿ ಬರೆಯುತ್ತಿರುವ ಕವಯತ್ರಿ. ಪದರಂಗಿತ (೭೯ ಕವನಗಳಿವೆ) ಮಕ್ಕಳಿಗಾಗಿ ಬರೆದ ತಾಟಿ ತೆಂಬರೆ (೫೬ ಕವನಗಳಿವೆ)ಯ ಹಲವು ಕವಿತೆಗಳು ಕ್ಯಾಸೆಟ್‌ಗಳ ಮೂಲಕ ತುಳು ಜನತೆಯನ್ನು ಮುಟ್ಟಿವೆ. ಗೇಯತೆಯ ಗುಣದಿಂದಾಗಿಯೇ ಇವರ ಹಲವು ಕವನಗಳು ಪ್ರಧಾನವಾಗಿ ಗಮನ ಸೆಳೆಯುತ್ತವೆ.

ಸ್ತ್ರೀ ಸಂವೇದನೆಯನ್ನು ಪ್ರತಿಮೆಗಳ ಹಿನ್ನೆಲೆಯಲ್ಲಿ ಸಮರ್ಥವಾಗಿ ಅಭಿವ್ಯಕ್ತಗೊಳಿಸುವ ಕವಯತ್ರಿ ಆತ್ರಾಡಿ ಅಮೃತಾ ಶೆಟ್ಟಿ. ಇವರ ‘ಮದಿಮಾಲೆ ಪಾಡ್ದನ’ದಲ್ಲಿ ೨೪ ಕವನಗಳಿವೆ. ಪರ್ಬ ಪಂಚಮಿ, ಉಮೇದ್‌, ಪಟ್ಟ್‌ಬುಡಿ, ಪಕ್ಕಿದ ಬುಲಿಪು, ಕಲ್ಲಕಲೆ, ಮಾನೊದ ಮದಿಪು, ಅಪ್ಪೆಡ, ಬೆನ್ನಿ ಬೆನ್ಪಾಟ, ಬದ್ಕ್‌, ಏರ್‌ಕಕ್ಕೆ, ಮುದ್ರೆದ ಗಂಟು ಇಂತಹ ಕವನಗಳು; ಸಂವಹನದ ಆಕಾಂಕ್ಷೆಯು ಒಡ್ಡುವ ಸವಾಲನ್ನು ಕವಯತ್ರಿ ಅರ್ಥ ಮಾಡಿಕೊಂಡಿರುವುದರ ಮಾದರಿಗಳಾಗಿವೆ. ಆತ್ರಾಡಿ ಅವರ ಕವನಗಳಲ್ಲಿ ಸ್ತ್ರೀಯರ ‘ವಾಸ್ತವ’ದ ಅರಿವಿದೆ. ಈ ಅರಿವು ಹತಾಶೆ, ಆಕ್ರೋಶಗಳ ನೆಲೆಯ್ಲಿ ಮಾತ್ರ ಕೆಲವು ಕವನಗಳಲ್ಲಿ ಕಾಣಿಸಿಕೊಂಡರೆ, ಅಪ್ಪೆಡೆ (ಅಮ್ಮನಲ್ಲಿ), ಪಕ್ಕಿದ ಬುಲಿಪು (ಹಕ್ಕಿಯ ಕೂಗು) ಇಂತಹ ಕವಿತೆಗಳಲ್ಲಿ ವ್ಯವಸ್ಥೆಯ ನಿಯಂತ್ರಕ ಶಕ್ತಿಗಳ ನಿಜಸ್ವರೂಪವನ್ನು ತೋರಿಸುವ ಹಿನ್ನೆಲೆಯಲ್ಲಿ ಕೀಳರಿಮೆ, ಹತಾಶೆ, ಆಕ್ರೋಶಗಳು ಕಾಣಿಸಿಕೊಳ್ಳುತ್ತವೆ. ಆತ್ಮಶೋಧನೆ ಮತ್ತು ಅನನ್ಯತೆಯ ಹುಡುಕಾಟ ಈ ಕವಯತ್ರಿಯ ತಾತ್ವಿಕ ನಿಲುವಾಗಿ ಕಾಣಿಸುತ್ತದೆ.

ಹೊಸ ಶತಮಾನದ ಉದಯೋನ್ಮುಖ ಸಂಕಲನಗಳಾಗಿ ವಸಂತ ಕುಮಾರ ಪೆರ್ಲ ಅವರ ‘ಅಜನೆ’ (೨೦೦೦), ರಮೇಶ್‌ ಉಳಯ ಅವರ ‘ಪುಟ್ಟುದಿನ’ (೨೦೦೦), ಅ. ಬಾಲಕೃಷ್ಣ ಶೆಟ್ಟಿ ಪೊಳಲಿ (ಸಂ.) ಅವರ ‘ಜೋಕ್ಲೆದನಿ’ (೨೦೦೦), ಗಣೇಶ್‌ ಅಮೀನ್‌ ಸಂಕಮಾರ್‌ ಅವರ ‘ಮಾಯದ ಮದಿಪು’ (೨೦೦೧), ಭಾ. ಭ. ಮಜಿಬೈಲು ಅವರ ‘ಗಗ್ಗರೊ’ (೨೦೦೦), ಕುಸುಮಾ ಜಿ. ಪಿ. ಅವರ ‘ಸಾದಿ’, ಶಿಮಂತೂರು ಚಂದ್ರಹಾಸ ಸುವರ್ಣ ಅವರ ‘ಒರಲ್‌’ (೨೦೦೨), ಕೆ.ಎಸ್‌. ಮೋಹನ್‌ ಸುವರ್ಣ ಜೋಕಟ್ಟೆ ಅವರ‘ತುಳು ಕಬಿತೆಲು’ (೨೦೦೨), ಅಂಡಾಲ ಗಂಗಾಧರ ಶೆಟ್ಟಿ ಅವರ ‘ಬಿತೆ ಅರಳುವ ಪೊರ್ತು’ (೨೦೦೨), ಅತ್ತಾವರ ಶಿವಾನಂದ ಕರ್ಕೇರ ಅವರ ‘ಕಡಲ್‌’ (೨೦೦೩), ಪ್ರಮೋದ ಕೆ. ಸುವರ್ಣ ಅವರ ‘ಕತೆ ಆಯೆರ್‌ ಪೊಣ್ಣುಲೈವರ್‌’ (೨೦೦೩), ಸಾ. ದಯಾ ಅವರ ‘ಪೊಸ ಬೊಲ್ಲು’ (೨೦೦೩) ಅಲ್ಲದೆ ಹವ್ಯಕ ತುಳುವಿನಲ್ಲಿ ಇರುವ ಪುತ್ತಿಗೆ ಈಶ್ವರ ಭಟ್ಟ ಅವರ ‘ಮಾಣಿಗೆರೆಡ್‌ ಪಾತೆರ’ (೨೦೦೩), ಕೆ.ಟಿ. ಗಟ್ಟಿಯವರ ‘ಪೊದಿಕೆ’ (೨೦೦೪), ಉಷಾ ಪಿ. ರೈಯವರ ‘ಊರುಕೋಲು’ (೨೦೦೪), ರಾಜೇಶ ಶೆಟ್ಟಿ, ದೋಟ ಅವರ ‘ಸಿರಿ ಪಿಂಗಾರ’ (೨೦೦೪), ಶಿಮುಂಜೆ ಪರಾರಿಯವರ ‘ಅಡ್ಡ ಬೂರೊಂಡೆ’ (೨೦೦೫), ಕುದ್‌ರೆಪ್ಪಾಡಿ ಜಗನ್ನಾಥ ಆಳ್ವರ ‘ಕುಡ್ಲದ ಮಲ್ಲಿಗೆ’ (೨೦೦೫), ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ ಅವರ ‘ಪದ್ದೆಯಿ’ (೨೦೦೫) ಅಲ್ಲದೆ ಭಾ.ಭ ಮಜಿಬೈಲು ಇವರ ‘ಸರ್ವಜ್ಞನ ವಚನೊಲು’ (೨೦೦೬) ಹೀಗೆ ಹಲ ಹತ್ತು ಸಂಕಲನಗಳು ಅನಾವರಣಗೊಂಡಿವೆ. ತುಳು ದೇಸಿ ಸೊಗಡನ್ನು ನಾವೀನ್ಯತೆಯ ನೆಲೆಯಲ್ಲಿ ತೆರೆದಿಡುವ ಸಫಲ ಪ್ರಯತ್ನಗಳಾಗಿ ವಸಂತಕುಮಾರ್‌ ಪೆರ್ಲ, ಗಣೇಶ ಅಮೀನ್‌ ಸಂಕಮಾರ್, ಶಿಮಂತೂರು ಚಂದ್ರಹಾಸ ಸುವರ್ಣ, ಅತ್ತಾವರ ಶಿವಾನಂದ ಕರ್ಕೇರ ಇವರ ರಚನೆಗಳು ಕಾಣಿಸಿಕೊಳ್ಳುತ್ತವೆ. ತುಳು ಕವಿತೆಗಳ ಪ್ರಕರ್ಷ (ಶಿಖಿರ) ಕಾಲಘಟ್ಟವಾದ ಈ ಅವಧಿಯಲ್ಲಿ ಕೆದಂಬಾಡಿ ಅವರ ‘ಭರ್ತೃಹರಿನ ನೀತಿ ಶತಕೋ’, ಕೆ.ಟಿ. ಗಟ್ಟಿ ಅವರು ಮಾಡಿದ ಇಂಗ್ಲಿಷ್‌ರೋಮ್ಯಾಂಟಿಕ್‌ಕವನಗಳ ಅನುವಾದ ‘ಎನ್ನ ಮೋಕೆದ ಪೊಣ್ಣು’ ಗಮನಾರ್ಹ ಸಂಕಲನಗಳಾಗಿವೆ.

ಸಂಕಲನಗಳನ್ನು ಹೊರತಂದ ಕವಿಗಳಲ್ಲದೆ, ಬಿಡಿ ಬಿಡಿ ಕವನಗಳನ್ನು ಪ್ರಕಟಿಸುತ್ತ, ಬರೆಯುತ್ತಿರುವ ಕವಿಗಳು ಕೂಡ ಬಹುಸಂಖ್ಯೆಯಲ್ಲಿ ಕಂಡುಬರುತ್ತಾರೆ. ಮಂಗಳೂರು ಆಕಾಶವಾಣಿ, ವಿಶ್ವ ತುಳು ಸಮ್ಮೇಳನ (೧೯೯೪), ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪನೆ (೧೯೯೪) ಅಕಾಡೆಮಿಯು ಹೊರ ತರುತ್ತಿರುವ ತ್ರೈಮಾಸಿಕ ಮದಿಪು ಪತ್ರಿಕೆ ಈ ವಿದ್ಯಮಾನಗಳೆಲ್ಲವೂ ತುಳುವಿನಲ್ಲಿ ಕವನ ಬರೆಯುವವರಿಗೆ ಹೊಸ ಉತ್ತೇಜನ-ಪ್ರೋತ್ಸಾಹಗಳ ವಾಹಕಗಳಾಗಿವೆ.

ಪ್ರಸ್ತುತ ತುಳುವಿನಲ್ಲಿ ಕವನಗಳನ್ನು ಬರೆಯುತ್ತಿರುವ ಕವಿಗಳು ಒಂದು ಯಾದಿಯನ್ನು ನೀಡುವುದಾದರೆ;

ಅಚ್ಯುತ ಕಲ್ಲಾಪು, ಅನಂತರಾಮ ಬಂಗಾಡಿ, ಅನಸೂಯ ಈಶ್ವರಚಂದ್ರ, ಅಮೃತ ಸೋಮೇಶ್ವರ, ಅತ್ರಾಡಿ ಅಮೃತಾಶೆಟ್ಟಿ, ಅಶೋಕ ಎನ್‌. ಕಡೇಶಿವಾಲಯ, ಇದಿನಬ್ಬ ಬಿ.ಎಂ., ಇಂದಿರಾ ಹೆಗ್ಡೆ, ಪಿ ಈಶ್ವರ ಭಟ್ಟ ಪುತ್ತಿಗೆ, ಉಮಾ ಕೊಕ್ಕಪುಣಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕನರಾಡಿ ವಾದಿರಾಜ ಭಟ್ಟ, ಕಯ್ಯಾರ ಕಿಂಞಣ್ಣ ರೈ, ಕಾಂತಿ ಶಿರ್ವ, ಕ್ಯಾಥರೀನ್‌ ರಾಡ್ರಿಗಸ್‌, ಕಸ್ತೂರಿ ಪಂಜ, ಕೆ. ಜೆ. ಶೆಟ್ಟಿ ಕಡಂದಲೆ, ಕಡಂದಲೆ ವಾಸು ಶೆಟ್ಟಿ, ಕುಸುಮ ಜಿ.ಪಿ., ಕುದ್ಕಾಡಿ ವಿಶ್ವನಾಥ ರೈ, ಎನ್‌.ಸಿ. ಕುಡಿಯ ಕಲ್ಲಡ್ಕ ಕೋಡು ಭೋಜ ಶೆಟ್ಟಿ, ಕೋಡಿ ಬೆಂಗ್ರೆ, ಕಬ್ಬಿನಾಲೆ ವಸಂತ ಭಾರದ್ವಾಜ, ಕೆ.ಆರ್.ರೈ, ಕೆಲಿಂಜ ಸೀತಾರಾಮ ಆಳ್ವ, ಟಿ.ಎ.ಎನ್‌. ಖಂಡಿಗೆ, ಗಣೇಶ್‌ಅಮೀನ್ ಸಂಕಮಾರ್, ಕೆ.ಟಿ. ಗಟ್ಟಿ, ಗಣೇಸ ಪ್ರಸಾದ್‌ ಪಾಂಡೇಲು ಗುರುವಪ್ಪ ಎನ್‌.ಟಿ., ಪಿ. ಚೆನ್ನಪ್ಪ ಅಳಿಕೆ, ಕೆ.ಜಿ. ಚಿದಂಬರ ಬೈಕ೦ಪಾಡಿ, ಜಯರಾಮ ರೈ, ಜಾನಕಿ ಬ್ರಹ್ಮಾವರ, ಜಿತು ನಿಡ್ಲೆ, ಜೆ. ತಿಮ್ಮಪ್ಪ ಪೂಜಾರಿ, ತಿಲಕನಾಥ ಮಂಜೇಶ್ವರ, ಧರಣಿದೇವಿ ಮಾಲಗತ್ತಿ, ನಕ್ರೆ ಬಿಪಿನ್‌ಚಂದ್ರಪಾಲ್‌, ನವೀನ್‌ಕುಮಾರ್‌ಮರಿಕೆ, ನಾರಾಯಣ ರೈ ಕುಕ್ಕುವಳ್ಳಿ. ಪದ್ಮನಾಭ ಕೇಕುಣ್ಣಾಯ, ಪಾಲ್ತಾಡಿ ರಾಮಕೃಷ್ಣ ಆರಾರ್‌, ಎಂ. ಪ್ರಭಾಕರ ಜೋಶಿ, ಪ್ರಣಾಕರ ನೀರ್‌ಮಾರ್ಗ, ಕೆ.ಕೆ. ಪೇಜಾವರ, ಪೇರೂರು ಜಾರು, ಪ್ರಮೋದ ಕೆ. ಸುವರ್ಣ, ಭಾಸ್ಕರ ರೈ ಕುಕ್ಕುವಳ್ಳಿ, ಭಾಸ್ಕರ ಶೆಟ್ಟಿ ಪೆರ್ಡೂರು, ಎಂ.ಆರ್‌. ಬಂಗೇರ ಮಾರಿಪಳ್ಳ, ಭಾಸ್ಕರ ಕುಲಾಲ್‌ ಬರ್ಕೆ, ಬೆಳ್ಳಿಪ್ಪಾಡಿ ಸತೀಶ್‌ರೈ, ಬೇಬಿ ನೈಮಾಡಿ, ಮನು ಇಡ್ಯಾ, ಪಡಾರು ಮಹಾಬಲ್ಲೇಶ್ವರ, ಭಟ್ಟ, ಎಸ್‌.ಪಿ. ಮಂಚಿ, ಮುದ್ದು ಮೂಡುಬೆಳ್ಳೆ, ಬಿ. ಮಂಜುನಾಥ್‌, ಮನೋಹರ ಪ್ರಸಾದ್‌, ಮಂಜುಳಾ ಶೆಟ್ಟಿ, ಟಿ. ಮೀನಾಕ್ಷಿ, ಮೈನಾ ಎನ್‌ಶೆಟ್ಟಿ, ನಾ ಮೊಗಸಾಲೆ, ಯಶವಂತ ಬೇಳೂರು, ಯೋಗೀಶ್‌ ಕಾಂಚನ್‌ ಎಂ. ರತ್ನಕುಮಾರ್‌, ರಾಂ. ಎಲ್ಲಂಗಳ, ರವಿಕಿರಣ, ರತ್ನಾಕರ ರಾವ್‌ಕಾವೂರು, ರಘು ಇಡ್ಕಿದು, ರಘುನಾಥ ವರ್ಕಾಡಿ, ರಾಜಕಿರಣ್‌, ವಸಂತಕುಮಾರ್‌ಪೆರ್ಲ, ವಾಮನ ನಂದಾವರ, ವೆಂಕಟರಾಜ ಪುಣಿಂಚತ್ತಾಯ, ವಿಮಲಾ ಕಲ್ಲಡ್ಕ, ವಿಶ್ವನಾಥ ಬದಿಕಾನ, ಮ ವಿಠಲ ಪುತ್ತೂರು, ವಿಠಲ ವಿಠಲ ಕಬಕ, ಎಚ್‌, ಶಕುಂತಲಾ ಭಟ್ಟ್‌, ಶರದಾ ಆರ್. ರಾವ್‌, ಶೀಲಾ ಕೆ. ಶೆಟ್ಟಿ, ಎನ್‌.ಪಿ. ಶೆಟ್ಟಿ. ಶ್ರೀನಿವಾಸ ಕಾರ್ಕಳ, ಶ್ರೀನಿವಾಸ ಮಂಕುಡೆ, ಶ್ಯಾಮ್‌ಗೋಪಾಲನ್‌, ಶಿಮುಂಜೆಪರಾರಿ, ಸಂಜೀವ ಶೆಟ್ಟಿ ಮುಂಬೈ, ಸೀತಾರಾಮ ಆಳ್ವ ಕೆಲಿಂಜ, ಸಂಜೀವ ಸೋಮೇಶ್ವರ, ಸುನೀತಾ ಶೆಟ್ಟಿ ಮುಂಬೈ, ಸುಬ್ರಾಯ ಚೊಕ್ಕಾಡಿ, ಸಂಕಲಕರಿಯ ಕೃಷ್ಣ ಸಾಲ್ಯಾನ್‌, ಸುಜಿಕುರ್ಯ, ಸುಂದರ ಬಾರಡ್ಕ, ಸುಮಿತ್ರಾ ಬಿ.ಯಂ.- ಹೀಗೆ ತುಳುವಿನಲ್ಲಿ ಕವಿಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ.

ತುಳು ಕಾವ್ಯ ಪರಂಪರೆಯಲ್ಲಿ ಸೇರ್ಪಡೆಗೊಳ್ಳುವ ಆಧುನಿಕ ಕವನ ರಚನೆಗಳ ಪ್ರಯೋಗವೆಂದು ಪರಿಗಣಿಸಿದರೆ ಮಾತ್ರ ಈ ವಿಶ್ಲೇಣೆ ನಡೆಸುವುದು ಸುಲಭವಾಗುತ್ತದೆ. ಆದುನಿಕ ತುಳು ಕವಿತೆಯ ಪ್ರಾರಂಭಿಕ ನೆಲೆಯ ಕವನಗಳಲ್ಲಿ ಏಕಸೂತ್ರತೆ ಇದೆ. ಸಾಮಾಜಿಕ ಪ್ರಜ್ಞೆ, ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ರೂಪಕಗಳಾಗಿ ಬಳಸಿಕೊಳ್ಳುವ ನೆಲೆಯಿಂದ ತುಳು ಕವನಗಳ ಅಭಿಜಾತ ಮಾದರಿಗಳೆಂದು ಇವುಗಳನ್ನು ಗುರುತಿಸಬಹುದು. ವಿನೂತನ ಬಂಧ, ಹೊಸ ಶೈಲಿಯ ಆಕರ್ಷಣೆ, ಸ್ವಚ್ಛಂದ ಛಂದದ ಕೆಡೆಗೆ ಹೆಚ್ಚಿನ ಒಲವು, ನವೀನ ಪ್ರತಿಮೆಗಳ ಬಳಕೆ ಕವನಗಳಿಗಿಂತ ಭಿನ್ನವಾಗಿವೆ. ಜೈನ ತುಳು, ಬ್ರಾಹ್ಮಣ ತುಳು, ದೇಸಿ ತುಳು, ಸಾಮಾನ್ಯ ತುಳು ಮುಂತಾಗಿ ವಿವಿಧ ರೂಪಗಳ ಒಂದೇ ಭಾಷೆಯಲ್ಲಿ ನಾವಿನ್ಯತೆಯನ್ನು ಸಾಧಿಸಿದ್ದು, ತುಳು, ಕಾವ್ಯದ ಮುಖ್ಯ ವಿಶಿಷ್ಟತೆಯಾಗಿದೆ. ಜಾನಪದ ಕಲೆಗಳ ಲಯ, ನುಡಿಗಟ್ಟು ಅದರ ಸ್ವರೂಪವನ್ನು ಕವನಗಳ ಒಳಗೆ ಕಸಿ ಮಾಡುವ ಮೂಲಕ ಆಧುನಿಕ ತುಳು ಕವನಗಳು ಹೊಸ ಭಾಷೆಯ ಲಯಗಾರಿಕೆಯನ್ನು ಸಿದ್ಧಿಕೊಂಡಿವೆ. ಕಾವ್ಯಾನುಭವದಲ್ಲಿ ನಾದಮಯತೆ, ನಾಟಕೀಯತೆ ಪ್ರಧಾನವಾಗಿ ಕಾಣಿಸಿಕೊಳ್ಳುತ್ತದೆ. ‘ಸಾಮಾಜಿಕ ಪ್ರಜ್ಞೆ’ಯ ಕವನಗಳಲ್ಲಿ ಸಾಮಾಜಿಕ ಆಕ್ರೋಶವನ್ನು ಮಂದ್ರಸ್ವರದಲ್ಲಿ ಸೂಚಿಸುವ ಪ್ರಯತ್ನವಿದ. ಎಲ್ಲಕ್ಕಿಂತ ಹೆಚ್ಚಾಗಿ ಪರಂಪರೆ ಮತ್ತು ಆಧುನಿಕತೆಯ ಸಮನ್ವಯ ತುಳು ಕವನಗಳ ಮೂಲ ಸೆಲೆಯಾಗಿ ಕಾಣಿಸಿಕೊಳ್ಳುತ್ತದೆ.

ಈ ಲೇಖನದಲ್ಲಿ ಎಲ್ಲ ಕವಿಗಳ ರಚನೆಗಳನ್ನು ಪ್ರಯೋಗಗಳೆಂದೇ ಪರಿಗಣಿಸಿ, ಪ್ರಯೋಗಗಳ ದೋಷಗಳನ್ನು ಕಾವ್ಯದ ದೋಷಗಳೆಂದು ಸಾಧಿಸುವ ಪ್ರಯತ್ನವನ್ನಯ ಇಲ್ಲಿ ನಡೆಸಿಲ್ಲ. ಆದರೆ ಅಭಿಪ್ರಾಯದ ನೆಲೆಯಲ್ಲಿ ಕೆಲವು ಮಾತುಗಳನ್ನು ಖಚಿತವಾಗಿ ಹೇಳಬೇಕಾಗುತ್ತದೆ. ಕವಿಗೋಷ್ಠಿ, ಆಕಾಶವಾಣಿ, ಸ್ಥಳೀಯ ಬೇಡಿಕೆಗಳ ಹಿನ್ನೆಯಿಂದ ಉದಯೋನ್ಮುಖ ರಚನೆಗಳಲ್ಲಿ ಹಲವು ಪ್ರಾಥಮಿಕ ಸ್ವರೂಪದ್ದಾಗಿದೆ. ಕವಿ ಯಾವುದೇ ನೆಲೆಯಲ್ಲಿ ನಿಂತು ಕವನವನ್ನು ರಚಿಸುವುದಿದ್ದರೂ ‘ಕವನ’ದ ರೂಪ (From)ದ ಕುರಿತಂತೆ ಪರಂಪರೆಯ ಸಾತತ್ಯದ ಅಗತ್ಯವಿದ್ದೇ ಇರುತ್ತದೆ. ಹೀಗೆ ಇದ್ದಾಗ ಮಾತ್ರ ಕೃತಿಯನ್ನು ಗ್ರಹಿಸಲು ತಕ್ಕ ಭಿತ್ತಿ ಒದಗಿಬರುತ್ತದೆ. ಇಲ್ಲವಾದರೆ ಸಾಮಾನ್ಯ ಓದುಗ ಕೂಡ ಅಂಥ ರಚನೆಗಳ ಬಗೆಗೆ ಅನಾಸಕ್ತನಾಗುತ್ತಾನೆ. ಕಾವ್ಯ ಮಾಧ್ಯಮದ ಬಗೆಗೆ ಗಂಭೀರವಾದ ಕಾಳಜಿ, ಅನುಭವವನ್ನು ಮತ್ತೊಬ್ಬರಿಗೆ ನಿವೇದನೆ ಮಾಡಬಲ್ಲ ಅಭಿವ್ಯಕ್ತಿ ಶಕ್ತಿ ಈ ಎರಡು ಅಂಶಗಳಿಂದ ರೂಪುಗೊಳಿಸಬಲ್ಲ ಕವಿಯ ದನಿಗೆ ಮಾತ್ರ ಮಹತ್ವ ಒದಗಿಬರುತ್ತದೆ.

ಟಿಪ್ಪಣಿಗಳು

೧. ಇಂಗ್ಲೀಷ್‌ ಮತ್ತು ಜರ್ಮನ್‌ ಭಾಷೆಗಳಲ್ಲಿದ್ದ ಕ್ರಿಸ್ತ ಪ್ರಾರ್ಥನೆಗಳನ್ನು ಜೆ. ಅಮ್ಮನ್‌, ಜಿ. ಕಮರರ್, ಎ. ಮ್ಯಾನರ್, ಆರ್. ಬುನ್ಸ್‌, ಬಿ. ಲೂಧಿ, ಎಚ್‌. ರಿಪ್‌, ಎಚ್‌. ಮೊಗ್ಲಿಂಗ್‌ ಮೊದಲಾದ ವಿದೇಶೀ ಪ್ರಾದ್ರಿಗಳೂ; ಇ.ಪಿ. ಕಾರಟ್‌, ಎ. ಕೌಂಡಿನ್ಯ, ಎಲ್‌.ಜೆ. ದೇವದತ್ತ ಮೊದಲಾದ ಭಾರತೀಯ ಪಾದ್ರಿಗಳು ತುಳುಭಾಷೆಗೆ ಅನುವಾದಿಸಿದ್ದಾರೆ. ೧೮೬೪ರಲ್ಲಿ ೧೨೦ ಸಂಗೀತಗಳನ್ನು (ಪದ್ರಗಳನ್ನು) ಅನುವಾದ ಮಾಡಲಾಗಿದೆ. ೧೯೭೮ ಮತ್ತು ೧೮೯೧ರಲ್ಲಿ ೨೧೯ ಸಂಗೀತಗಳನ್ನು ಅನುವಾದ ಮಾಡಲಾಗಿದೆ. ಕಾಲ ಕಾಲಕ್ಕೆ ಇವನ್ನೆಲ್ಲ ಒಟ್ಟು ಮಾಡಿ ‘ತುಳು ಸಂಗೀತಗಳಿಗೆ ‘ತುಳು ಪ್ರಾರ್ಥನೆಗಳು’, ‘ರತ್ನಮಾಲೆ’ ಮುಂತಾದ ಶೀರ್ಷಿಕೆಗಳಲ್ಲಿ ಪ್ರಕಟಗೊಂಡಿರುವುದು ವ್ಯಕ್ತವಾಗುತ್ತದೆ. ಸಾಹಿತ್ಯಕವಾಗಿ ಇವು ವಿಶೇಷ ಮಹತ್ವವನ್ನು ಪಡೆದವುಗಳಲ್ಲ. ಆದರೆ ಅನುವಾದದ ಮೂಲಕ ತುಳುವಿನಲ್ಲಿ ಹೊಸ ಕವಿತೆಗಳ ಸೃಷ್ಟಿಗೆ ಕಾರಣವಾಗುವ ಈ ಪ್ರಕ್ರಿಯೆ ಮುಖ್ಯವಾಗುತ್ತದೆ.

೨. ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಕಾಣಿಸಿಕೊಂಡ ರಾಜಕೀಯ ವಿದ್ಯಮಾನಗಳು ಎಂದರೆ, ೧೯೨೦ರಲ್ಲಿ ಗಾಂಧಿಜಿಯವರು ಮೌಲಾನೌ ಶೌಕತಾಲಿಯವರೊಂದಿಗೆ ಮಂಗಳೂರಿಗೆ ಬಂದು ಬೃಹತ್‌ ಸಭೆಯಲ್ಲಿ ಸತ್ಯಾಗ್ರಹ ಸಂದೇಶ ನೀಡಿದ್ದು, ೧೯೨೨ರಲ್ಲಿ ಸರೋಜಿನಿ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಅಖಿಲ ಕರ್ನಾಟಕ ಕಾಂಗ್ರೆಸ್ ಅಧಿವೇಶನ ನಡೆದದ್ದು, ಕಾರ್ನಾಟು ಸದಾಶಿವ ರಾಯರು ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿಕೊಂಡದ್ದು, ಕಾಸರಗೋಡನಲ್ಲಿ ಮೂಡಬಿದ್ರೆ ಉಮೇಶರಾಯರು, ಖಂಡಿಗೆ ಕೃಷ್ಣ ಭಟ್ಟರು, ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು, ಚೆಯ್ಯಂದೆ ಬೀರು ಶೆಟ್ಟರು ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡದ್ದು ಉಡುಪಿಯಲ್ಲಿ ‘ಉಡುಪಿಯ ಗಾಂಧಿ’ ಎಂದು ಪ್ರಸಿದ್ಧರಾಗಿದ್ದ ಸಾಂತ್ಯಾರು ಅನಂತ ಪದ್ಮನಾಭ (ಕವಿ ಸಾತ್ಯಾರು ವೆಂಕಟರಾಜೆ ತಂದೆ) ಖಾದಿ ಪ್ರಚಾರ, ಹರಿಜನೋದ್ಧಾರೆ, ರಾಷ್ಟ್ರೀಯ ಶಾಲೆ ಮುಂತಾದ ಚಟುವಟಿಕೆಗಳನ್ನು ನಡೆಸುತ್ತಿದ್ದುದು ಇತ್ಯಾದಿ ರಾಜಕೀಯ ಚಟುವಟಿಕೆಗಳು ಆ ಕಾಲದ ದಕ್ಷಿಣ ಕನ್ನಡದ ಕವಿಗಳ ಮೇಲೆ ಪ್ರಭಾವ ಬೀರಿವೆ. ಸ್ವಾತಂತ್ರ್ಯದ ಹಂಬಲ ಮತ್ತು ಅಸ್ಪೃಶ್ಯತಾ ನಿವಾರಣೆಯ ಆಶಯಗಳುಳ್ಳ ಕವನ ರಚನೆಗಳಿಗೆ, ಕವಿಗಳ ಮನೋಧೋರಣೆಗಳಿಗೆ ಆಗಿನ ರಾಜಕೀಯ ಸಂದರ್ಭವು ಸಹ ಕಾರಣವಾಗಿದೆ.

ತುಳುವಿನಲ್ಲಿ ಪ್ರಕಟವಾಗಿರುವ ಕವನ ಸಂಕಲನಗಳು

೧. ತುಳು ಜೋಕುಲೆ ಗೀತೊಲು (ಸಂಗ್ರಹ : ಜಿ. ರಿಟ್ಟರ್‌). ೧೮೭೯

೨. ಪಾಡ್ದನೊಳು (ಸಂಗ್ರಹ : ಎ. ಮ್ಯಾನರ್), ೧೮೮೬

೩. ತುಳು ಸಂಗಿತಗಳು (ಚರ್ಚ್ ಪಾರ್ತನೆಲು), ೧೮೯೧

೪. ತುಳು ಕನ್ಯೋಪದೇಶ – ಎಂ. ಆರ್. ಸುಬ್ರಹ್ಮಣ್ಯ ಶಾಸ್ತ್ರಿ, ೧೯೧೬

೫. ಅಮಲ್‌ದೆಪ್ಪಡೆ, ನರ್ಕಳ ಮಾರಪ್ಪ ಶೆಟ್ಟಿ, ೧೯೨೯

೬. ಪೊರ್ಲಕಂಟ್‌, ನರ್ಕಳ ಮಾರಪ್ಪ ಶೆಟ್ಟಿ, ೧೯೩೦

೭. ತುಳು ಪದ್ಯಾವಳಿ, ಬಿ. ಮೋಹನಪ್ಪ ತಿಂಗಳಾಯ, ೧೯೩೦

೮. ಕಾನಿಗೆ, ನಾರಾಯಣಪ್ಪ ಕಿಲ್ಲೆ, ೧೯೩೨

೯. ತುಳು ಪದ್ಯಮಾಲಿಕೆ, ಕೆ. ಗಂಗಾಧರ ರಾಮಚಂದ್ರ, ೧೯೩೩

೧೦. ಕನ್ನಡಕೊ, ಎಂ.ಪಿ.ವಿ. ಶರ್ಮಾ

೧೧. ಸ್ತುತಿ ಪದ್ಯೊಲು, ದಾಮೋದರ ಪುಣಿಂಚತ್ತಾಯ

೧೨. ಸತ್ಯದ ಚಿತ್ತೊ, ಬಾಡೂರು ಜಗನ್ನಾಥ ರೈ

೧೩. ತುಳು ಭಜನಾವಳಿ, ಸೀತಾನದಿ ಗಣಪಯ್ಯ ಶೆಟ್ಟಿ

(ಈ ಕೃತಿಗಳು ೧೯೩೦ರ ದಶಕದಲ್ಲಿಯೇ ಪ್ರಕಟಗೊಂಡಿರಬೇಕು. ಕೃತಿಯೊಳಗೆ ಈ ವಿವರಗಳಿಲ್ಲ)

೧೪. ಗೀತೆಮಲ್ಲಿಗೆ, ಮುಲ್ಕಿ ನರಸಿಂಗರಾವ್‌, ೧೯೩೪

೧೫. ತುಳು ಭಗವದ್ಗೀತೆ, ವಿ. ರಾಮಶರ್ಮ

೧೬. ತುಳು ಕೀರ್ತನಮಾಲೆ, ಈಶ್ವರ ಭಾಗವತ ಜತ್ತಿ ಬಾಯರು, ೧೯೩೮

೧೭. ಕುಂಬಳೆ ಸೀಮೆತ ಚರಿತ್ರೆ ಮತ್ತು ಸ್ತುತಿ ಪದ್ಯೊಲು, ದಾಮೋದರ ಪುಣಿಂಚತ್ತಾಯ (ದ್ವಿ. ಮು. ೧೯೫೯)

೧೮. ತುಳು ನಾಟಕೊದ ತುಂಡು ಪದೊಕುಲು, ಕೆಮ್ತೂರು ದೊಡ್ಡಣ್ಣ ಶೆಟ್ಟಿ

೧೯. ತುಳು ಭಜನೆದ ಪದೊಕುಲು, ಕೆಮ್ತುರು ದೊಡ್ಡಣ್ಣ ಶೆಟ್ಟಿ

೨೦. ತುಳುನಾಡ್‌ದ ಮಲ್ಲಿಗೆ, ಕೆಮ್ತೂರು ದೊಡ್ಡಣ್ಣ ಶೆಟ್ಟಿ

೨೧. ರಾಮಾಯಣದ ಪಾಡ್ದೊನೆ, ಕೆಮ್ತೂರು ದೊಡ್ಡಣ್ಣ ಶೆಟ್ಟಿ

೨೨. ಬೊಂಬಾಯಿ ಸಂಗ್ತಿ (ಲಾವಣಿ), ಕೆಮ್ತೂರು ದೊಡ್ಡಣ್ಣ ಶೆಟ್ಟಿ

೨೩. ದೇವಿ ಭಜನೆ, ಕೆಮ್ತೂರು ದೊಡ್ಡಣ್ಣ ಶೆಟ್ಟಿ

೨೪. ಸಾರೆಸದ ಪದೊಕ್ಲು, ಕೆಮ್ತೂರು ದೊಡ್ಡಣ್ಣ ಶೆಟ್ಟಿ

೨೫. ತೆಲ್ಕೆ ನಲ್ಕೆದ ಪದೊಕ್ಲು, ಕೆಮ್ತೂರು ದೊಡ್ಡಣ್ಣ ಶೆಟ್ಟಿ

(ಕ್ರ. ಸಂ. ೨೧ ರಿಂದ ೨೯ : ಇವುಗಳಲ್ಲಿ ಪ್ರಕಟಣೆಯ ವರ್ಷ ಇಲ್ಲ. ಆದರೆ ೧೯೬೫ರ ಪೂರ್ವದಲ್ಲಿ ಪ್ರಕಟವಾಗಿದೆ)

೨೬. ಕೋಟಿ ಚೆನ್ನಯ ಪದ್ಯಾವಳಿ, ಸೀತಾನದಿ ಗಣಪಯ್ಯ ಶೆಟ್ಟಿ

೨೭. ಮೀಸೆ ಇತ್ತಿ ಅಣುಕುಳು, ಗಣಪತಿ ದಿವಾನ, ೧೯೬೨

೨೮. ತುಳು ಪದ್ಯಾವಳಿ, ಗಣಪತಿ ದಿವಾನ, ೧೯೬೨

೨೯. ಮಾದಿರನ ಗಾದೆ, ಬಿ. ದೂಮಪ್ಪ ಮಾಸ್ತರ್‌, ೧೯೭೨

೩೦. ತುಳು ಪದ್ಯೊಲು, ಕೆ. ಎಸ್‌. ಭಂಡಾರಿ, ನಿಟ್ಟೂರು, ೧೯೭೨

೩೧. ಕೇದಗೆ, ಮ. ವಿಠಲ ಪುತ್ತೂರು, ೧೯೭೩

೩೨. ತುಳು ನೀತಿ ಪದ್ಯೊಲು, ಬಡಕಬೈಲ್‌ ಪರಮೇಶ್ವರಯ್ಯ, ೧೯೭೪

೩೩. ಕೋಟಿ ಚೆನ್ನಯ ಕತೆ ತುಳುಪದ, ಬಿ. ದೂಮಪ್ಪ ಮಾಸ್ತರ್‌, ೧೯೭೫

೩೪. ತುಳು ಭಜನಾವಳಿ, ಯಂ. ವಿ. ನಾಯಕ್‌, ೧೯೭೫ (ಒಟ್ಟು ೬ ಮುದ್ರಣ ಕಂಡಿದೆ)

೩೫. ಅಗೋಳಿ ಮಂಜಣ್ಣ ಕತೆ, ದೂಮಪ್ಪ ಮಾಸ್ತರ್‌, ೧೯೭೬

೩೬. ಬಾಮಕುಮಾರ ಸಂಧಿ (ಸಂ.), ಅಮೃತ ಸೋಮೇಶ್ವರ, ೧೯೭೮

೩೭. ರತ್ನನ ಪದೊಕುಲು (ಅನುವಾದ), ಬೋಜರಾಜ ಕಡಂಬ, ೧೯೭೯

೩೮. ಬದ್‌ಕೊಂದಲ್ಲರಾ? ಬಾ ಸಾಮಗ ಮಲ್ಪೆ, ೧೯೮೦

೩೯. ಬೇರ್‌ಮರ್ದ್‌, ಯಂ. ಜಯರಾಮ ರೈ, ೧೯೮೦

೪೦. ಬಯ್ಯ ಮಲ್ಲಿಗೆ, ಪಾ. ವೆಂ. ಆಚಾರ್ಯ, ೧೯೮೧

೪೧. ಗೀತೆದ ತಿರ್ಲ್‌(ಅನುವಾದೊ), ಕೆಲಿಂಜ ಸೀತಾರಾಮ ಆಳ್ವ, ೧೯೮೧

೪೨. ಅಜ್ಜಬಿರು (ಎಸ್‌. ವಿ. ಪರಮೇಶ್ವರ ಭಟ್ಟರ ಇಂದ್ರಚಾಪ ಮತ್ತು ಇತರ ಕೆಲವು ಕವನಗಳ ಅನುವಾದ), ಕೆದಂಬಾಡಿ ಜತ್ತಪ್ಪ ರೈ, ೧೯೮೨

೪೩. ಆಲಡೆ, ವೆಂಕಟರಾಜ ಪುಣಿಂಚತ್ತಾಯ, ೧೯೮೩

೪೪. ಶ್ರೀ ಭಾಗವತೊ (ಪ್ರಾಚೀನ ಮಹಾಕಾವ್ಯ-ವಿಬ್ಣುತುಂಗ) ಸಂಶೋಧನೆ: ವೆಂಕಟರಾಜ ಪುಣಿಂಚತ್ತಾಯ, ೧೯೮೪

೪೫. ತಂಬಿಲ, ಅಮೃತ ಸೋಮೇಶ್ವರ, ೧೯೮೪

೪೬. ಬುಳೆಕಾನಿಗೆ, ಯಶವಂತ ಬೋಳೂರು, ೧೯೮೪

೪೭. ತುಳು ದೈವಿಕ ಭಜನಾವಳಿ (ದ್ವಿ. ಮು.), ಬಿ. ಭಾಸ್ಕರ ಶೆಟ್ಟಿ, ೧೯೮೫

೪೮. ಮೋಕೆದ ಬೀರೆ ಲೆಮಿನ್ಕಾಯೆ (ಫಿನ್ಲೆಂಡಿನ ಜನಪದ ಮಹಾಕಾವ್ಯ ಕಾಳೇವಾಲದ ಒಂದು ಭಾಗದ ಅನುವಾದ), ಅಮೃತ ಸೋಮೇಶ್ವರ, ೧೯೮೫

೪೯. ರತ್ನನ ಕರ್ಮ (ಸಂ.), ಎಂ. ರತ್ನಕುಮಾರ್‌, ೧೯೮೬, ಭಾಗ ೧, ಭಾಗ ೨.

೫೦. ಪಿಂಗಾರ, ಪಡಾರು ಮಹಾಬಲೇಶ್ವರ ಭಟ್ಟ, ೧೯೮೬

೫೧.ಜೋಕುಳೆ ಪದೊಕುಲು-೧, ಕನರಾಡಿ ವಾದಿರಾಜ ಭಟ್ಟ, ೧೯೮೬

೫೨. ಪಿಂಗಾರ, ಶ್ರೀಮತಿ ಸುನೀತಾ ಶೆಟ್ಟಿ, ೧೯೮೬

೫೩. ರುಕುಮನ ಪದ, ಎಂ. ರತ್ನಕುಮಾರ್‌, ೧೯೮೭

೫೪. ಪಚ್ಚೆಕುರಲ್‌, ಪಾಲ್ತಾಡಿ ರಾಮಕೃಷ್ಣ ಆಚಾರ್‌, ೧೯೮೭

೫೫. ಪುರ್ಪೊ, ಎಸ್‌. ಪಿ. ಮಂಚಿ, ೧೯೮೭

೫೬. ಕಾವೇರಿ (ಪ್ರಾಚೀನ ಕಾವ್ಯ), ಸಂಶೋಧನೆ : ವೆಂಕಟರಾಜ ಪುಣಿಂಚತ್ತಾಯ, ೧೯೮೭

೫೭. ರಂಗಿತ, ಅಮೃತ ಸೋಮೇಶ್ವರ, ೧೯೮೭

೫೮. ಮಂದಾರ ರಾಮಾಯಣ, ಮಂದಾರ ಕೇಶವ ಭಟ್‌, ೧೯೮೭

೫೯. ತುಳುನಾಡ್ದ ಬೊಳ್ಳಿಲು, ಬೆಳ್ಳಿಪ್ಪಾಡಿ ಸತೀಶ್‌ರೈ, ೧೯೮೮

೬೦. ಪರಬನ ಮೋಕೆ, ರಸಿಕ ಪುತ್ತಿಗೆ, ೧೯೮೮

೬೧. ಪೊಡಂಬು ತಿಂನ ಕಗ್ಗ (ಡಿವಿಜಿಯವರ ಮಂಕುತಿಮ್ಮನ ಕಗ್ಗದ ಅನುವಾದ), ಅ. ಬಾಲಕೃಷ್ಣ ಶೆಟ್ಟಿ ಪೊಳಲಿ, ೧೯೮೮

೬೨. ಜೋಕುಲೆ ರಾಗೊಲು, ಪೇರೂರು ಜಾರು, ೧೯೮೮

೬೩. ಕೇದಯಿ ಬೊಕ್ಕ ಓಬಯ್ಯನ ಅತಿಕಲ್ಪ, ಮ. ನಿ. ಪು., ೧೯೮೯

೬೪. ಕಂಚಿಲ್‌, ಯೋಗೀಶ್‌ ಕಾಂಚನ್‌ ಬೈಕಂಪಾಡಿ, ೧೯೮೯

೬೫. ಉರಲ್‌ ತೂಟೆ, ಪೇರೂರು ಜಾರು, ೧೯೮೯

೬೬.ಸಂಕ್ರಾಂತಿ, ಸುನೀತಾ ಶೆಟ್ಟಿ, ೧೯೮೯

೬೭. ಪೂಮಾಲೆ, ಪ್ರಮೋದ ಕೆ. ಸುವರ್ಣ, ೧೯೮೯

೬೮. ಎಳುವೆರೆ ದೆಯ್ಯಾರ್‌, ಅಮೃತ ಸೋಮೇಶ್ವರ, ೧೯೯೦

೬೯. ತುಳುವಾಲ ಬಲಿಯೇಂದ್ರೆ, ಅಮೃತ ಸೋಮೇಶ್ವರ ೧೯೯೦

೭೦. ಅರ್ಲು ಕಬಿತೆಲು ಪೊರ್ಲು ಕಬಿತೆಲು, ಕೃಷ್ಣಾನಂದ ಹೆಗ್ಡೆ (ಸಂ.), ೧೯೯೦

೭೧. ಜಾಗಂಟೆ, ಮಂದಾರ ಕೇಶವ ಭಟ್ಟ, ೧೯೯೧

೭೨. ತುಳು ಕಬಿತೆಲು, ರವಿಕಿರಣ, ೧೯೯೧

೭೩. ದೀಪದ ಮಲ್ಲಿ, ಮ. ವಿಠ್ಠಲ, ೧೯೯೧

೭೪. ಪೊರ್ಲು, ಶ್ರೀನಿವಾಸ ಮಂಕುಡೆ, ೧೯೯೨

೭೫. ಬೀರ, ವಾಮನ ನಂದಾವರ, ೧೯೯೨

೭೬.ಜೋಕುಳೆ ಪದೊಕುಲು, ಕನರಾಡಿ ವಾದಿರಾಜ ಭಟ್ಟ, ೧೯೯೨

೭೭. ಗೊಂಚಿಲು, ಕೋಡು ಭೋಜ ಶೆಟ್ಟಿ, ೧೯೯೨

೭೮. ಅಟಿಲ್‌ (ಒಂಬತ್ತು ಮಂದಿ ಕವಿಗಳ ಕವಿತಾ ಸಂಗ್ರಹ) ಸಂಪಾದಕ : ಎಸ್‌. ಆರ್‌. ಹೆಗ್ಡೆ, ೧೯೯೨

೭೯. ದುನಿಪು, ಪಾಲ್ತಾಡಿ ರಾಮಕೃಷ್ಣ ಆಚಾರ್‌,೧೯೯೩

೮೦. ತೆರಿವು, ರತ್ನಕುಮಾರ್‌ಎಂ., ೧೯೯೩

೮೧. ಶೂದ್ರನ ಕಾನಿಗೆ, ಪೆರ್ಡೂರು ಭಾಸ್ಕರ ಶೆಟ್ಟಿ, ೧೯೯೩

೮೨. ಪೆಂಗ ದೂಮನ ಪದೊಕುಲು, ಅ. ಬಾಲಕೃಷ್ಣ ಶೆಟ್ಟಿ ಪೊಳಲಿ, ೧೯೯೩

೮೩. ಬಾಣ ಪೂ, ಪಡಾರು ಮಹಾಬಲೇಶ್ವರ ಭಟ್ಟ, ೧೯೯೩

೮೪. ತುಳು ಕಬಿತೆಲು ಬೊಕ್ಕ ಗಾದೆಲು, ತುಳುಕೂಟ ಬೆಂಗಳೂರು, ೧೯೯೩

೮೫. ಮುಡಿಪು, ಪ್ರಮೋದಾ ಕೆ. ಸುವರ್ಣ, ೧೯೯೪

೮೬. ಕೂಕುಳು, ತಿಮ್ಮಪ್ಪ ಪೂಜಾರಿ ಜೆ, ೧೯೯೪

೮೭. ಎನ್ನಪ್ಪೆ ತುಳುವಪ್ಪೆ, ಕಯ್ಯಾರ ಕಿಞ್ಞಣ್ಣರೈ, ೧೯೯೪

೮೮. ಪ್ರಾತಿನಿಧಿಕ ತುಳು ಕಬಿತೆಲು, ವಸಂತಕುಮಾರ ಪೆರ್ಲ, ೧೯೯೪

೮೯. ಬೊಲ್ಪಾಂಡ್‌, ಕೆ. ಸಂಜೀವ ಶೆಟ್ಟಿ, ೧೯೯೪

೯೦. ನಾಗಸಂಪಿಗೆ, ಸುನೀತಾ ಶೆಟ್ಟಿ, ೧೯೯೪

೯೧. ತುಳುನಾಡ್‌ದ ಪೊರ್ಲು, ಬೆಳ್ಳಿಪ್ಪಾಡಿ ಸತೀಶ್‌ರೈ, ೧೯೯೪

೯೨. ಅಸೆನಿಯಾಗೊ ಕಾಂತಗೊ ಜೋಗಿ, ಕೆದಂಬಾಡಿ ಜತ್ತಪ್ಪರೈ, ೧೯೯೪

೯೩. ತಿರ್ಗಾಸ್‌, ಟಿ. ಎ. ಎಸ್‌. ಖಂಡಿಗೆ, ೧೯೯೫

೯೪. ಮದಿಮಾಲೆ ಪಾಡ್ದನ, ಅತ್ರಾಡಿ ಅಮೃತಾ ಶೆಟ್ಟಿ, ೧೯೯೫

೯೫. ಕಬಿತೆಲು ಚಿತ್ರೊಲು, ರವಿಕಿರಣ, ೧೯೯೫

೯೬. ವ್ಹಾ ವ್ಹಾರೆ ಕಮ್ಮೆನ, ನಿಟ್ಟೂರು ಕೆ. ಸಂಜೀವ ಭಂಡಾರಿ, ೧೯೯೫

೯೭. ತಿಬಿಲೆ, ಲೀಲಾವತಿ ಕೆ., ೧೯೯೬

೯೮. ಕೊಂಬು ವಾದ್ಯ, ಗಣಪತಿ ದಿವಾಣ, ೧೯೯೬

೯೯. ಪದರಂಗಿತ, ಪ್ರಮೋದ ಕೆ. ಸುವರ್ಣ, ೧೯೯೬

೧೦೦. ಬಾನೊ ತೋರೊಂದುಂಡು, ಎಸ್‌. ಪಿ. ಮಂಚಿ, ೧೯೯೭

೧೦೧. ಪರ್ವ ಪರ್ಬದ ಪೊರ್ಲು ಕಬಿತೆಲು, ಮುದ್ದು ಮೂಡುಬೆಳ್ಳೆ (ಸಂ.) ೧೯೯೭

೧೦೨. ಮುಗುರು, ಶ್ಯಾಮಗೋಪಾಲ, ೧೯೯೮

೧೦೩. ಬಂಗಾರ್‌ ಪರ್ಬೊದ ಸಿಂಗಾರೆ ಪದೊಕುಲು ಪಿ. ಎಸ್‌. ರಾವ್‌ (ಸಂ.), ೧೯೯೮

೧೦೪. ಎನ್ನ ಮೋಕೆದ ಪೊಣ್ಣು, ಕೆ. ಟಿ. ಗಟ್ಟಿ, ೧೯೯೬

೧೦೫. ದಾದ ಉಂಡು ಮಾರಾಯರೆ, ಬಿ. ಎ. ಪ್ರಭಾಕರ ರೈ, ೧೯೯೯

೧೦೬. ಪರವೂರ್ದ ಸುಬಗೆ, ಕೋಡು ಭೋಜ ಶೆಟ್ಟಿ, ೧೯೯೯

೧೦೭. ಆಜನೆ, ವಸಂತಕುಮಾರ ಪೆರ್ಲ, ೨೦೦೦

೧೦೮. ಪುಟ್ಟುದಿನ, ರಮೇಶ್‌ ಉಳಯ, ೨೦೦೦

೧೦೯. ಗಗ್ಗರೊ, ಭಾ. ಭ. ಮಜಿಬೈಲು, ೨೦೦೦

೧೧೦.ಜೋಕ್ಲೆದನಿ, ಅ. ಬಾಲಕೃಷ್ಣ ಶೆಟ್ಟಿ ಪೊಳಲಿ (ಸಂ.), ೨೦೦೦

೧೧೧. ಮಾಯದ ಮದಿಪು, ಗಣೇಶ್‌ ಅಮೀನ್‌ ಸಂಕಮಾರ್‌, ೨೦೦೧

೧೧೨. ಯಾನ್‌ ಪಣ್ಪಿನಿ ಇಂಚ, ಶಿಮುಂಜೆ ಪರಾರಿ, ೨೦೦೧

೧೧೩. ಸಾದಿ, ಕುಸುಮಾ ಜಿ. ಪಿ., ೨೦೦೨

೧೧೪. ಒರಲ್‌, ಶಿಮಂತೂರು ಚಂದ್ರಹಾಸ ಸುವರ್ಣ, ೨೦೦೨

೧೧೫. ತುಳು ಕಬಿತೆಲು, ಸುವರ್ಣ ಜೋಕಟ್ಟೆ, ೨೦೦೨

೧೧೬. ಕಬಿತೆ ಅರಳುನ ಪೊರ್ತು, ಅಂಡಾಲ ಗಂಗಾಧರ ಶೆಟ್ಟಿ, ೨೦೦೨

೧೧೭. ಕಡಲ್‌, ಅತ್ತಾವರ ಶಿವಾನಂದ ಕರ್ಕೇರಾ, ೨೦೦೩.

೧೧೮. ಕತೆ ಆಯೆರ್‌ ಪೊಣ್ಣು ಲೈವೆರ್‌, ಪ್ರಮೋದ ಕೆ. ಸುವರ್ಣ, ೨೦೦೩

೧೧೯. ಪೊಸ ಬೊಲ್ಪು, ಸಾ. ದಯಾ, ೨೦೦೩

೧೨೦. ಮಾಣಿಗೆರಡ್‌ ಪಾತೆರ, ಪುತ್ತಿಗೆ ಈಶ್ವರ ಭಟ್ಟ, ೨೦೦೩

೧೨೧. ಪೊದಿಕೆ, ಕೆ. ಟಿ. ಗಟ್ಟಿ, ೨೦೦೪

೧೨೨. ಊರುಕೋಲು, ಕೆ. ಉಷಾ ಪಿ. ರೈ. ೨೦೦೪

೧೨೩. ಸಿರಿ ಪಿಂಗಾರ, ರಾಜೇಶ ಶೆಟ್ಟಿ ದೋಟ, ೨೦೦೪

೧೨೪. ಕುಡ್ಲದ ಮಲ್ಲಿಗೆ, ಕುದ್ರೆಪ್ಪಾಡಿ ಜಗನ್ನಾಥ ಆಳ್ವ, ೨೦೦೫

೧೨೫. ಅಡ್ಡ ಬೂರೊಂಡೆ, ಶಿಮುಂಜೆ ಪರಾರಿ, ೨೦೦೫

೧೨೬. ಪದ್ದೆಯಿ, ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ, ೨೦೦೫

೧೨೭. ಸರ್ವಜ್ಞನ ವಚನೊಲು, ಭಾ. ಭ. ಮಜಿಬೈಲು, ೨೦೦೬.