ಇಲ್ಲಿಯ ಅಹಲ್ಯೆಯ ಪಾತ್ರ ಎಲ್ಲಾ ರಾಮಾಯಣಗಳ ಪಾತ್ರ ಚಿತ್ರಣಗಳಿಗಿಂತ ಹೆಚ್ಚು ವಾಸ್ತವ ಮತ್ತು ವೈಚಾರಿಕವಾಗಿ ಮೂಡಿದೆ. ಆಧುನಿಕ ವೈಚಾರಿಕ ಮನೋಭಾವ ಮಂದಾರರ ಮೇಲೆ ಬೀರಿದ ಪ್ರಭಾವಕ್ಕೆ ಈ ಸನ್ನಿವೇಶ ಒಳ್ಳೆಯ ಉದಾಹರಣೆ. ಇಲ್ಲಿ ಅಹಲ್ಯೆ ಎಲ್ಲಾ ನೋವನ್ನು ಸಹಿಸುವ ಸಾಧ್ವಿಯಂತೆ ಚಿತ್ರಿತವಾಗಿಲ್ಲ. ತನಗಾದ ಅನ್ಯಾಯವನ್ನು ಪ್ರತಿಭಟಿಸುವ ರೀತಿಯು ಸಹಜವಾಗಿ ಮೂಡಿಬಂದಿದೆ. ಕಥೆಯು ವಾಲ್ಮೀಕಿ ಮತ್ತು ಕುವೆಂಪುರವರ ಕೃತಿಗಿಂತ ಭಿನ್ನವಾಗಿರುವುದನ್ನು ಗಮನಿಸಬಹುದಾಗಿದೆ. ಮಿಥಿಲೆಗೆ ಹೋಗುವ ದಾರಿಯಲ್ಲಿ ಗೌತಮರ ಆಶ್ರಮವನ್ನು ನೋಡಿದ ರಾಮನು ಯಾರ ಆಶ್ರಮವೆಂದು ಪ್ರಶ್ನಿಸುತ್ತಾನೆ. ಅಂಗಳದಲ್ಲಿ ಕಲ್ಲಿನಂತೆ ಕುಳಿತ ಹೆಣ್ಣೊಬ್ಬಳು ಅವನ ಗಮನ ಸೆಳೆಯುತ್ತಾಳೆ. ಜೋರಾಗಿ ಮಳೆ ಬಂದಾಗ ಅನಿವಾರ್ಯವಾಗಿ ರಾಮ, ಲಕ್ಷ್ಮಣ, ವಿಶ್ವಾಮಿತ್ರರು ಗೌತಮನ ಆಶ್ರಮಕ್ಕೆ ಹೋಗುತ್ತಾರೆ. ಗೌತಮನ ಶಾಪದ ಸನ್ನಿವೇಶ ಇಲ್ಲಿಲ್ಲ. ಗೌತಮ ಅಹಲ್ಯೆಯರ ಮಧ್ಯೆ ವಿರಸವೇರ್ಪಟ್ಟಿರುತ್ತದೆ. ತಾನು ಹಿಂದೆ ಮೆಚ್ಚಿದ ಇಂದ್ರನನ್ನು ಕನಸಿನಲ್ಲಿ ಕಂಡು ಕನವರಿಸಿದಳು ಎಂಬ ಕಾರಣಕ್ಕೆ ಗೌತಮನು ಕೋಪಗೊಂಡು ಅವಳನ್ನು ಮನೆಯಿಂದ ಹೊರದಬ್ಬುತ್ತಾನೆ. ಹಟದಿಂದ ಅಹಲ್ಯೆ ಎದ್ದು ಗೌತಮನ ಮನೆಯ ಅಂಗಳದಲ್ಲಿಯೇ ಅನ್ನ, ನಿದ್ರೆ ಬಿಟ್ಟು ಸತ್ಯಾಗ್ರಹ ಹೂಡುತ್ತಾಳೆ. ರಾಮನು ತಮ್ಮ ಮುಂದಿನ ಅರಸ ಎಂಬುದನ್ನು ಅರಿತ ಅಹಲ್ಯೆ ಎದ್ದು ಬಂದು ತನ್ನ ಕಥೆಯನ್ನು ರಾಮನಲ್ಲಿ ಹೇಳುತ್ತಾಳೆ. ಹಿಂದೆ ತನ್ನ ತಂದೆ ಬ್ರಹ್ಮದೇವರು ಇಂದ್ರನೊಂದಿಗೆ ತನ್ನ ಮದುವೆ ಮಾಡಲು ಮನಸ್ಸು ಮಾಡಿದಾಗ ಅಲ್ಲಿಗೆ ಬಂದ ಗೌತಮ ತನಗೆ ಹೆಣ್ಣನ್ನು ಕೊಡುವಂತೆ ಕೇಳುತ್ತಾನೆ. ಇಕ್ಕಟ್ಟಿಗೆ ಸಿಕ್ಕಾಗ ಬ್ರಹ್ಮನು ಗಳಿಗೆಯೊಳಗೆ ಇಡೀ ಭೂಮಂಡಲವನ್ನು ಯಾರು ಸುತ್ತುತ್ತಾರೋ ಅವರಿಗೆ ತಾನು ಮಗಳನ್ನು ಕೊಡುವುದಾಗಿ ಹೇಳುತ್ತಾನೆ. ಇಂದ್ರನು ತನ್ನ ಐರಾವತವನ್ನು ಏರಿಕೊಂಡು ಭೂಮಿಯನ್ನು ಸುತ್ತಲಾರಂಭಿಸಿದರೆ, ‘ಗೌತಮನು ಇಲ್ಲಿ ಬುದ್ಧಿವಂತಿಕೆಯಿಂದ ಬ್ರಹ್ಮನ ಹಿತ್ತಲಿನಲ್ಲಿದ್ದ ದನಕ್ಕೆ ಮೂರು ಸುತ್ತು ಬಂದು ತಾನು ಗೆದ್ದೆ ಎನ್ನುತ್ತಾನೆ. ಬ್ರಹ್ಮದೇವರು ಹೇಗೆಂದಾಗ ಯುಕ್ತಿಯಿಂದಲೇ ಉತ್ತರಿಸುತ್ತಾನೆ : “ಭೂಮಿ ಮತ್ತು ದನ ಇದರಲ್ಲಿ ಭೇದವಿಲ್ಲ. ಕಳೆದ ಯುಗದಲ್ಲಿ ಮನು ಇದ್ದ, ಈಗ ನಡೆಯುವ ಯುಗದಲ್ಲಿ ಜನ ಒಪ್ಪುವ ರೀತಿಯಲ್ಲಿ ಧರ್ಮಶಾಸ್ತ್ರವನ್ನು ಬರೆಯಲು ನಾನಿದ್ದೇನೆ, ಹುಲಿಯನ್ನು ಸೃಷ್ಟಿಸಿದ ದೇವರಿಗೆ ದನದ ಮಹಿಮೆಯನ್ನು ಯಾಕೆ ಹೇಳುವುದು? ದನಕ್ಕೊಂದು ಸುತ್ತು ಬಂದರೆ ಭೂಮಿಯನ್ನು ಸುತ್ತುದಂತಾಯಿತು. ನನ್ನ ಲಾಭಕ್ಕಾಗಿ ಶಾಸ್ತ್ರವನ್ನು ಎಂದೂ ಮೀರಲಾರೆ” ಎಂದು ಯುಕ್ತಿಯಿಂದಲೇ ಉತ್ತರಿಸಿ ಅಹಲ್ಯೆಯನ್ನು ಮದುವೆಯಾಗುತ್ತಾನೆ. “ಮೂರು ದಿನದ ಹಿಂದೆ ರಾತ್ರಿ ಕನಸಿನಲ್ಲಿ ದೇವೇಂದ್ರನೊಂದಿಗೆ ಚಕ್ಕಂದವಾಡಿದ್ದೇನೆಂದು ನನ್ನನ್ನು ಎಬ್ಬಿಸಿ, ಮನೆಯಿಂದ ಹೊರಹಾಕಿದರು” ಎಂದು ಅಹಲ್ಯೆ ತನ್ನ ನೋವನ್ನು ರಾಮನಲ್ಲಿ ಹೇಳಿಕೊಳ್ಳುತ್ತಾಳೆ. ಆಗ ಗೌತಮನು ತನ್ನ ಅಳಲನ್ನೂ ಹೇಳಿಕೊಳ್ಳುತ್ತಾನೆ : “ಅಂದು ನಾನು ಮದುವೆಯಾಗುವಾಗ ಇಂದ್ರನ ಮೇಲೆ ಇವಳಿಗಿಷ್ಟವಿತ್ತು. ಒಳ್ಳೆಯ ಮನೆತನದ ಸಂಬಂಧ ಎಂದು ನನ್ನಲ್ಲಿ ಮದುವೆಯಾಗುವ ಬಯಕೆ ಉಂಟಾಗುವುದು ತಪ್ಪೆ? ಇಂದು ಕನಸಿನಲ್ಲಿ ಚಕ್ಕಂದವಾಡುವುದನ್ನು ನೋಡಿದೆ, ನಾಳೆ ನಿಜ ಜೀವನದಲ್ಲಿ ಈ ರೀತಿಯಾದರೆ, ಚಳಿಗಾಲದಲ್ಲಿ ಒದ್ದೆ ಕಂಬಳಿ ಹೊದೆದಂತಾಗದೆ? ಮನಸ್ಸಿಲ್ಲದೆ ಊಟ ಮಾಡಬಾರದು. ಹುಟ್ಟಿದ ರೋಗಕ್ಕೆ ಲೋಕದಲ್ಲಿ ಮದ್ದು ಉಂಟಲ್ಲದೆ ಕೆಟ್ಟ ಶೀಲಕ್ಕೆ ಮದ್ದಿಲ್ಲ” ಎಂದು ತನ್ನನ್ನು ಸಮರ್ಥಿಸಿಕೊಳ್ಳುತ್ತಾನೆ.

ಕಥೆ ಮತ್ತು ಪಾತ್ರಸೃಷ್ಟಿಯ ದೃಷ್ಟಿಯಿಂದಲೂ ಈ ಸನ್ನಿವೇಶ ಉಳಿದ ರಾಮಾಯಣದ ಕಥೆಗಳಿಗಿಂತ ತೀರಾ ಭಿನ್ನವಾಗಿರುವುದನ್ನು ಗಮನಿಸಬಹುದು. ಇದು ಗಂಡ ಹೆಂಡಿರ ಮನಸ್ತಾಪದ ಸಹಜ ಕಾರಣದೊಂದಿಗೆ ಇಲ್ಲಿ ಮೂಡಿದೆ. ಕೌಟುಂಬಿಕ ಜಗಳವೊಂದಕ್ಕೆ ಒಪ್ಪುವ ರೀತಿಯಲ್ಲಿ ಕಥೆ ಹೆಣೆದಿದ್ದಾರೆ. ಯಾವುದೇ ರೀತಿಯ ಅತಾರ್ಕಿಕ ಲೇಪ ಇಲ್ಲಿಲ್ಲ. ಇಲ್ಲಿ ರಾಮನೂ ತನ್ನ ಬುದ್ಧಿವಂತಿಕೆಯಿಂದ ಜಗಳ ಪರಿಗರಿಸುವವನಾಗುತ್ತಾನೆಯೇ ಹೊರತು ದೇವನಾಗಿ ಅಹಲ್ಯೆಯ ಶಾಪ ವಿಮೋಚಕನಾಗುವುದಿಲ್ಲ. ಗಂಡ ಹೆಂಡಿರ ಮಧ್ಯೆ ಇರುವ ಜಗಳವು ಸಹಜವಾಗಿ ಮೂಡಿರುವುದು ಮಂದಾರರು ಪುರಾಣಕಥೆಯೊಂದಕ್ಕೆ ಸಾಮಾಜಿಕ ಆಯಾಮವನ್ನು ಕೊಡಲು ಪ್ರಯತ್ನಿಸಿದಂತೆ ಕಾಣುತ್ತದೆ. ಈ ವಿಚಾರದಲ್ಲಿ ಈ ಸನ್ನಿವೇಶದಲ್ಲಿ ಅವರು ಯಶಸ್ಸನ್ನು ಪಡೆದಿದ್ದಾರೆ. ಶಾಸ್ತ್ರವನ್ನು ಬುದ್ದಿವಂತಿಕೆಯಿಂದ ದುರುಪಯೋಗಪಡಿಸಿ, ವ್ಯಾಖ್ಯಾನಿಸುವ ಶಾಸ್ತ್ರಕಾರರ ಯತ್ನಗಳನ್ನು ವಿಡಂಬಿಸಿದ್ದಾರೆ.

ಅಹಲ್ಯೆಗೆ ಹಿಂದೆ ತನಗಾದ ವಂಚನೆ ಮತ್ತು ಗೌತಮ ಬುದ್ಧಿವಂತಿಕೆಯಿಂದ ಭೂಮಿ ಮತ್ತು ದನ ಒಂದೇ ಎಂದು ವಾದಿಸಿ ತನ್ನನ್ನು ಮದುವೆಯಾದ ಬಗ್ಗೆ ಅವಳಿಗೆ ಅಸಮಾಧಾನವಿದೆ. ತನಗಾದ ಅನ್ಯಾಯದ ನೋವು ಆಕೆಯಲ್ಲಿ ಮಡುಗಟ್ಟಿರುವುದು ಅವಳ ಮಾತಿನಲ್ಲಿ ವ್ಯಕ್ತವಾಗುತ್ತದೆ. ಕನಸಿನಲ್ಲಿ ತಾನು ಕಂಡದ್ದನ್ನು ನಿಜವೆಂದು ನಂಬುವ ಗಂಡನ ಮೂರ್ಖತನದಲ್ಲಿ ತನ್ನ ತಪ್ಪಿಲ್ಲವೆಂಬ ಧೈರ್ಯ, ಗಂಡನ ಕುರಿತಾದ ಅಧೈರ್ಯ ಇವೆಲ್ಲವೂ ವ್ಯಕ್ತವಾಗುತ್ತದೆ. ಈ ದೃಷ್ಟಿಯಿಂದ ತನಗಾದ ಅನ್ಯಾಯವನ್ನು ಸಾತ್ವಿಕ ರೀತಿಯಲ್ಲಿ ಪ್ರಟಿಭಟಿಸುವ ದಿಟ್ಟ ಹೆಣ್ಣಾಗಿ ಇಲ್ಲಿ ಅಹಲ್ಯೆಯ ಪಾತ್ರ ಮೂಡಿದೆ.

ತುಳು ಪಾಡ್ದನ ಮತ್ತು ಕಥೆಗಳಲ್ಲಿ ಈ ರೀತಿ ದಿಟ್ಟವಾಗಿ ಪ್ರತಿಭಟಿಸುವ ಹೆಣ್ಣಿನ ಹಲವಾರು ಸನ್ನಿವೇಶಗಳಿವೆ. ತುಳುನಾಡಿನಲ್ಲಿ ಜನಪ್ರಿಯವಾಗಿರುವ ‘ಸಿರಿ ಪಾಡ್ದನ’ವನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ತನ್ನ ಗಂಡ ತನಗೆ ತಂದ ಸೀರೆಯನ್ನು ಸೂಳೆಗೆ ನೀಡಿದ್ದನ್ನು ಪ್ರತಿಭಟಿಸಿ ಸತ್ಯನಾಪುರದ ಸಿರಿ ಗಂಡನಿಗೆ ವಿಚ್ಛೇದನವನ್ನು ಹೇಳುತ್ತಾಳೆ. ಈ ರೀತಿಯ ಹಲವು ಕಥೆಗಳು ತುಳು ಜನಪದ ಸಾಹಿತ್ಯದಲ್ಲಿವೆ. ಇದರ ಪ್ರಭಾವ ಮಂದಾರ ರಾಮಾಯಣದ ಕವಿಯ ಮೇಲಾಗಿದೆ. ಅಲ್ಲದೆ ತುಳುನಾಡಿನ ಸಾಮಾಜಿಕ ಸಂದರ್ಭಗಳಲ್ಲಿ ಈ ರೀತಿಯ ಘಟನೆಗಳು ದೊರೆಯುತ್ತವೆ. ಹೀಗೆ ತುಳು ಜನಪದ ಸಾಹಿತ್ಯ ಮತ್ತು ತುಳುವಿನ ಸಾಮಾಜಿಕ ಸಂದರ್ಭ ಅಹಲ್ಯೆಯ ಕಥಾ ಬದಲಾವಣೆಗೆ ಕವಿಗೆ ಪ್ರೇರಣೆ ನೀಡಿರಬೇಕು. ‘ವಾಲ್ಮೀಕಿ ರಾಮಾಯಣ’ದ ಮತ್ತು ‘ಶ್ರೀ ರಾಮಾಯಣದರ್ಶನಂ’ನ ಅಹಲ್ಯೆಯರು ತಮಗಾದ ಅನ್ಯಾಯವನ್ನು ಮೌನವಾಗಿ ಪ್ರತಿಭಟಿಸಿದ ಸಾಧ್ವಿಯರು. ಆದರೆ ಮಂದಾರ ರಾಮಾಯಣದ ಅಹಲ್ಯೆ ತನಗಾದ ಅನ್ಯಾಯವನ್ನು ನೇರವಾಗಿ ಪ್ರತಿಭಟಿಸುವ ಕೆಚ್ಚೆದೆಯೆ ಹೆಣ್ಣಾಗಿ ಗೋಚರಿಸುತ್ತಾಳೆ.

ಒಟ್ಟಿನಲ್ಲಿ ವಾಲ್ಮೀಕಿಗಿಂತ ಭಿನ್ನವಾಗಿ ವಿಶಿಷ್ಟ ಕಥೆಯ ಮೂಲಕ ಅಹಲ್ಯೆಯ ಪಾತ್ರವನ್ನು ಹೊಸ ರೀತಿಯಲ್ಲಿ ನಿರೂಪಿಸಿದ್ದು ಮಂದಾರರ ಸ್ವತಂತ್ರ ಸೃಷ್ಟಿಗೆ ಒಳ್ಳೆಯ ಉದಾಹರಣೆ. ಇಂಥ ಸನ್ನಿವೇಶಗಳಿಂದ ಮಂದಾರ ರಾಮಾಯಣ ಮೆರುಗನ್ನು ಪಡೆಯುತ್ತದೆ.

ಮಂದಾರ ರಾಮಾಯಣದ ಮಂಥರೆಯ ಪಾತ್ರ ರಾಮಾಯಣದ ಮಂಥರೆಯ ಪಾತ್ರಗಳಿಗಿಂತ ತೀರಾ ಭಿನ್ನವಾದುದು. ಕೈಕೆಯ ಮನಸ್ಸು ಕೆಡಿಸುವ ಸನ್ನಿವೇಶವೊಂದನ್ನು ಬಿಟ್ಟರೆ, ಉಳಿದಂತೆ ಮಂಥರೆಯ ಪಾತ್ರ ಸಾಂಪ್ರದಾಯಿಕ ರಾಮಾಯಣಕ್ಕಿಂತ ಭಿನ್ನವಾಗಿ ವ್ಯಕ್ತವಾಗಿದೆ. ಮಂದಾರ ರಾಮಾಯಣದ ಮಂಥರೆ ಕುರೂಪಿಯಲ್ಲ. ಅತೀವ ಸುಂದರಿ. ರಾಮನನ್ನು ಕಂಡು ಮನಸೋತು ಪ್ರೇಮಿಸಿ ಪ್ರೇಮಭಿಕ್ಷೆಯನ್ನು ಕೇಳಿ, ನಿರಾಶಳಾಗಿ, ರಾಮನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾಳೆ.

ಇನ್ನೊಂದು ವಿಶಿಷ್ಟ ಅಂಶವನ್ನು ಇಲ್ಲಿ ಉಲ್ಲೇಖಿಸಬೇಕು. ಮಂದಾರ ರಾಮಾಯಣದಲ್ಲಿ ಮಥರೆಯನ್ನು ಶಬರಿಯ ಮಗಳೆಂದು ಕರೆಯಲಾಗಿದೆ. ಕೇಕೆಯ ರಾಜನ ಅರಮನೆಯ ದಾಸಿಯಾಗಿದ್ದ ಶಬರಿ ತನ್ನ ಮಗಳಿಂದಾಗಿ ರಾಮನು ಕಾಡಿಗೆ ಹೋದ ವಿಚಾರವನ್ನು ತಿಳಿದು ಕ್ಷಮೆ ಕೇಳಬೇಕೆಂದು ಕಾಡಿಗೆ ಹೋಗುತ್ತಾಳೆ. ರಾವಣ ವಧೆಯ ನಂತರ ರಾಮ ಮರಳಿ ಅಯೋಧ್ಯಗೆ ಬಂದಾಗ ಶಬರಿಯು ಬರುತ್ತಾಳೆ. ಕೊನೆಗೆ ಶಬರಿ ಪಶ್ಚಾತ್ತಾಪದಿಂದ ರಾಮನಲ್ಲಿ ಕ್ಷಮೆ ಯಾಚಿಸುತ್ತಾಳೆ. ಆದರೆ ರಾಮನೊಂದಿಗೆ ಬಂದ ತನ್ನ ತಾಯಿಯನ್ನು ಗುರುತಿಸಲು ಮಂಥರೆ ಅಸಮರ್ಥಳಾದಾಗ ರಾಮನೇ ಅವಳ ತಾಯಿ ಶಬರಿಯನ್ನು ಪರಿಚಯಿಸುತ್ತಾನೆ. ಹೀಗೆ ಮಂಥರೆ ಮತ್ತು ಶಬರಿಯ ಈ ವಿಶಿಷ್ಟ ಸಂಬಂಧ ಮಂದಾರ ರಾಮಾಯಣದಲ್ಲಿ ಹೊಸದಾಗಿದೆ. ಶಬರಿಯ ವೃತ್ತಾಂತವು ಅತ್ಯಂತ ಸುಂದರವಾಗಿ ದೇಸಿ ಹಿನ್ನೆಲೆಯಿಂದ ಅಭಿವ್ಯಕ್ತಗೊಂಡದ್ದು ಕವಿ ಮಂದಾರರ ಪ್ರತಿಭೆಗೆ ಸಾಕ್ಷಿ.

ಮಂದಾರರು ವಾಲ್ಮೀಕಿ ಕುಂಭಕರ್ಣನ ಸ್ವಭಾವವನ್ನು ಗ್ರಹಿಸಿ. ಆದರೆ ಭಿನ್ನವಾದ ರೀತಿಯಲ್ಲಿ ಅವನ ಪಾತ್ರಚಿತ್ರಣ ಮಾಡಿದ್ದಾರೆ. ಮಂದಾರರ ರಾಮಾಯಣದಲ್ಲಿ ರಾವಣ ಶೂರ್ಪನಖಿ, ಇಂದ್ರಜಿತು ಮತ್ತು ಅತಿಕಾಯರನ್ನು ಬಿಟ್ಟರೆ, ಉಳಿದಂತೆ ಲಳಕೆಯ ರಾಕ್ಷಸರೂ ಒಳ್ಳೆಯವರೆಂಬ ಚಿತ್ರಣವಿದೆ. ಕುಂಭಕರ್ಣನ ಉದಾತ್ತೆಯನ್ನು ಅವರು ಎತ್ತಿ ಹಿಡಿದಿದ್ದಾರೆ. ಇದರಿಂದ ವಾಲ್ಮೀಕಿಯ ಕಥಾ ಸನ್ನಿವೇಶವನ್ನು ಕುಂಭಕರ್ಣನ ವೃತ್ತಾಂತದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ಇದಕ್ಕೆ ಇನ್ನೊಂದು ಕಾರಣವನ್ನು ಗುರುತಿಸಬಹುದು. ಮಂದಾರ ರಾಮಾಯಣದ ಮೇಲೆ ಕುಮಾರವಾಲ್ಮೀಕಿಯ ಪ್ರಬಾವ ದಟ್ಟವಾಗಿದೆ. ಕುಂಭಕರ್ಣನ ವೃತ್ತಾಂತಕ್ಕೆ ಸಂಬಂಧಿಸಿದಂತೆ ಕುಮಾರವಾಲ್ಮೀಕಿಯು, ವಾಲ್ಮೀಕಿ ಕಥಾ ಸರಣಿಯನ್ನು ಅನುಸರಿಸಿದರೂ ಒಂದು ವಿಶಿಷ್ಟ ವೃತ್ತಾಂತವು ತೊರವೆ ರಾಮಾಯಣದಲ್ಲಿದೆ : ಕುಂಭಕರ್ಣನ ಸ್ವಭಾವವನ್ನು ಅರಿತ ಲಕ್ಷ್ಮಣನು ತಾನು ಅವನನ್ನು ಕೊಲ್ಲುವುದಿಲ್ಲವೆನ್ನುತ್ತಾನೆ. ವಿಭೀಷಣನ ಮಾರ್ಗವನ್ನು ಅನುಸರಿಸಬೇಕೆಂದು ಹೇಳಿದಾಗ, ಕುಂಭಕರ್ಣನು ಕಲ್ಲುಹೃದಯ ಭಾವದೊಂದಿಗೆ ತನ್ನೊಂದಿಗೆ ಯುದ್ಧ ಮಾಡುವಂತೆ ಸೂಚಿಸುತ್ತಾನೆ. ಉಳಿದಂತೆ ರಾಮನ ವೈಷ್ಣವಾಸ್ತ್ರಕ್ಕೆ ಕುಂಭಕರ್ಣ ಬಲಿಯಾಗುತ್ತಾನೆ.

ಮಂದಾರರು ಇದನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಮಂದಾರರಲ್ಲಿ ಕುಂಭಕರ್ಣ ಸಾಯುವುದಿಲ್ಲ. ರಾಮನು ಅವನನ್ನು ಕರುಣೆದೋರಿ ಬದುಕಿಸುತ್ತಾನೆ. ಕುಂಭಕರ್ಣನ ಪ್ರಸ್ತಾಪ ಮೊದಲು ಅವನ ಮಗ ಸಿಂಗನ ಮೂಲಕ ಬರುತ್ತದೆ. ವಿಭೀಷಣನ ಮಗನಾದ ಸುಬುದ್ಧಿಯೊಂದಿಗೆ ಸಿಂಗನು ಮಾತನಾಡುವಾಗ ಕುಂಭಕರ್ಣನ ಪ್ರಸ್ತಾಪ ಬರುತ್ತದೆ.

…………… ದಾದಾನ ಮಳ್ತ್‌ ದೆರಾನ್ನಮ್ಮೆರೆ
ಗಿಂಚ ಮಳ್ತ್‌ದ್ ಮೊಕುಳು ದುಂಮಾರ್‌ ಇಂಚ ಯಿ
ತ್ತೆರ? ಇತ್ತೆ ತಿಂದೌಂಡ ತಿನ್ಪಿನೇ ತಿನ್ಪಿನ್ನೇ
ತೌಂದಯ್ಕ್‌ ಲೆಕ್ಕಾ ಇಜ್ಜಿ ಜೆತೌಂಡ ಜೆ
ಪ್ಪುನೆ ಯೇತ್‌ ಜೆಪ್ಪೆರಾ? ನಿದ್ರೆ ವಾ ಲೋಕದನ
ಅ ದೇವರೆಗೆ ಗೊತ್ತು……………
(………… ಏನೋ ಮಾಡಿದಾರೆ ನನ್ನ ತಂದೆಗೆ
ಇವರು, ಮೊದಲು ಅವರು ಹೀಗೆ
ಇದ್ದರಾ? ಈಗ ತಿಂದರೆ ತುನ್ನುವುದೆಷ್ಟೆಂದು
ಅದಕ್ಕೆ ಲೆಕ್ಕಾ ಇಲ್ಲ. ಮಲಗಿದರೆ ಮ-
-ಲಗುವುದೇ, ಎಷ್ಟು ಮಲಗುವುದು! ನಿದ್ರೆ ಯಾವ ಲೋಕದ್ದೋ
ದೇವರಿಗೆ ಗೊತ್ತು ………)

ಅಂದರೆ ಕುಂಭಕರ್ಣನನ್ನು ರಾವಣನು ಬುದ್ಧಿಭ್ರಮಣೆ ಮಾಡಿಸಿದ್ದಾನೆ. ಎಂಬುದು ಸಿಂಗನ ವಾದ. ವಾಲ್ಮೀಕಿ ರಾಮಾಯಣದಂತೆ ನಿದ್ದೆ, ಊಟದ ಅತಿ ಇಲ್ಲಿದ್ದರೂ ಈ ವಿಕೃತಿಗೆ ಇಲ್ಲಿ ಸಕಾರವಿದೆ. ಅದು ಕುಂಭಕರ್ಣನ ಮಗ ಸಿಂಗನ ಮಾತಿನಲ್ಲಿ ವ್ಯಕ್ತವಾಗುವಂತೆ ಅದಕ್ಕೆ ಸಂಬಂಧಿಸಿದ ಒಂದು ಉಲ್ಲೇಖ ಇನ್ನೊಂದು ಕಡೆಯೂ ಬರುತ್ತದೆ. ‘‘ಕುಂಭಕರ್ಣನು ರಾವಣನ ತಮ್ಮನಾದರೂ ಸಾಹಸ, ಧೈರ್ಯ, ಸಾಧನೆ, ಗರ್ವದಲ್ಲಿ ರಾವಣನಿಗೆ ಸಮಾನನಾಗಿದ್ದನು. ಒಳ್ಳೆಯ ಗುಣದಿಂದ ಜನಕಕ್‌ಎಲ್ಲ ಬೇಕಾದವನಾಗಿದ್ದು, ಬಡವ – ಬಲ್ಲಿದ ಎಂಬ ಭೇದವಿಲ್ಲದೆ ಮಾನ ಮರ್ಯಾದೆಯನ್ನು ತಿಳಿದಿದ್ದ. ಕುಂಭಕರ್ಣನನ್ನು ವಿಭೀಷಣ ಅಣ್ಣನೆಂದು ಹೇಳುತ್ತಾರಲ್ಲದೆ, ರಾವಣನ ತಮ್ಮನೆಂದು ಯಾರೂ ಹೇಳುವುದಿಲ್ಲ. ರಾವಣನಿಗಿಂತ ಇವನೇ ಅರಸನಾಗಿದ್ದರೆ ಒಳ್ಳೆಯದಿತ್ತೆಂದು ಜನರು ಭಾವಿಸಿದ್ದರು. ಇದರಿಂದಲೇ ರಾವಣನು ತನ್ನ ತಮ್ಮನ ಒಳ್ಳೆಯತನದಿಂದ ಒಂದು ದಿನ ತನಗೆ ಕೇಡಾಗದೆ ಇರದೆಂದು ಯೋಚಿಸಿ, ಅವನಿಗೆ ಮದ್ದು ಹಾಕಿಸುತ್ತಾನೆ. ಆಬಳಿಕ ಕುಂಭಕರ್ಣ ಮಲಗಿದರೆ ಮಲಗುವುದೇ; ತಿಂದರೆ ತಿನ್ನುವುದೇ; ಹೀಗೆ ಬದಲಾದನು. ಇಲ್ಲಿ ರಾವಣನ ದುಷ್ಟತನ ವ್ಯಕ್ತವಾಗುವಂತೆ ಕುಂಭಕರ್ಣನ ಅಸಾಯಕತೆಯು ವ್ಯಕ್ತವಾಗುತ್ತದೆ.

ಒಟ್ಟಿನಲ್ಲಿ ಮಂದಾರರ ಕುಂಭಕರ್ಣನ ಪಾತ್ರ ವಿಶಿಷ್ಟವಾದುದು. ಮಂದಾರರ ವಿಶಿಷ್ಟ ಒಳನೋಟಗಳು, ಮಾನವೀಯ ಅನುಕಂಪ, ಸಾಹಸ ಮತ್ತು ಆಧ್ಯಾತ್ಮಿಕ ಸಮ್ಮಿಲನವನ್ನು ಕುಂಭಕರ್ಣನ ಪಾತ್ರದ ಮೂಲಕ ಗುರುತಿಸಬಹುದು. ಇಂಥ ಸಂದರ್ಭಗಳಲ್ಲೇ ಮಂದಾರರ ಪ್ರತಿಭೆ ಮಿಂಚಿರುವುದು.

ವಾಲ್ಮೀಕೀ ರಾಮಾಯಣ ಹಾಗೂ ಇತರ ರಾಮಾಯಣದ ಕೃತಿಗಳಿಗಿಂತ ಭಿನ್ನವಾದ ಕಬಂಧನ (ರಾಕ್ಷಸ) ವೃತ್ತಾತವು ಮಂದಾರ ರಾಮಾಯಣದಲ್ಲಿದೆ. ತುಳುನಾಡಿನ ಪ್ರಾಚೀನ ಬದುಕಿನ ಯಜಮಾನ ಸಂಸ್ಕೃತಿಯ ಪುಟ್ಟ ಪರಿಚಯವನ್ನು ಈ ವೃತ್ತಾಂತದ ಮೂಲಕ ಮಂದಾರರು ನೀಡುತ್ತಾರೆ. ಈ ಉದ್ದೇಶಕ್ಕಾಗಿಯೇ ಈ ವೃತ್ತಾಂತವನ್ನು ಸಮರ್ಥವಾಗಿ ಬಳಸಿದ್ದಾರೆ.

ರಾಮ – ಲಕ್ಷ್ಮಣರು ಹೋಗುತ್ತಿದ್ದಾಗ ಕಬಂಧನು ಅವರನ್ನು ತಡೆದು ಕೊನೆಗೆ ತಾನೇ ರಾಮ ಬಾಣಕ್ಕೆ ಬಲಿಯಾಗುತ್ತಿದ್ದಾಗ. ಇಲ್ಲಿ ಒಕ್ಕಲಿನವರ ಆಕ್ರಂದನದ ಮೊರೆಯು ವ್ಯಕ್ತವಾಗಿದೆ. ಅವರು ತಮ್ಮ ಸಂಕಷ್ಟವನ್ನು ರಾಮನಲ್ಲಿ ಹೇಳಿಕೊಳ್ಳುತ್ತಾರೆ. ರಾಮನು ಅವರ ದುಃಖವನ್ನು ಪರಿಹರಿಸಿ ಕಬಂಧನ ಭೂಮಿಯನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತಾನೆ. ಆ ಮೂಲಕ ರಾಮನು ಬಡಜನರ ಕಣ್ಣೀರನ್ನು ಒರಸುವ ಮಹಾತ್ಮನಾಗುತ್ತಾನೆ.

ಈ ಸನ್ನಿವೇಶ ಚಿತ್ರಣದಲ್ಲಿ ಡಪ್ಪತ್ತರ ದಶಕದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದ ಭೂಸುಧಾರಣೆಯ ತತ್ವ ಮಂದಾರರ ಮೇಲೆ ಪ್ರಭಾವ ಬೀರಿದಂತಿದೆ. ಮಂದಾರರು ಇದೇ ಕಲ್ಪನೆಯಲ್ಲಿ ಈ ಪಾತ್ರವನ್ನು ಚಿತ್ರಿಸಿದ್ದಾರೆ. ಅಲ್ಲಿ ಕಬಂಧನು ಬೇರೆ ಕಡೆಯಿಂದ ವಲಸೆ ಬಂದವನಂತೆ ನಿರೂಪಿಲಾಗಿದೆ.

ವಾಲಿ – ಸುಗ್ರೀವರನ್ನು ತುಳುನಾಡಿನ ಬಂಟ ಜನಾಂಗದ ರೀತಿಯಲ್ಲಿ ಚಿತ್ರಿಸಲಾಗಿದೆ. ಬಂಟ ಮನೆತನದ ಗುತ್ತಿನವರ ರೀತಿ ನೀತಿಗಳನ್ನು ರುಚ್ಚರಸುವಿನ ಮೂಲಕ ಹಾಗೂ ವಾಲಿ – ಸುಗ್ರೀವರ ಮೂಲಕ ಚಿತ್ರಿಸಲಾಗಿದೆ. ತುಳುನಾಡಿನ ವಿವಿಧ ಜನಾಂಗದವರು ಬೇರೆ ಕಡೆಯಿಂದ ವಲಸೆ ಬಂದು ಇಲ್ಲಿ ವಿಶಿಷ್ಟ ಸಂಸ್ಕೃತಿಯನ್ನು ಆರಂಭಿಸಿದರು ಎಂಬ ಕಲ್ಪನೆಯನ್ನು ರುಚ್ಚರಸುವಿನ ವೃತ್ತಾಂತದ ಮೂಲಕ ಹೇಳಲಾಗಿದೆ. ತುಳುನಾಡಿನ ಸಂಸ್ಕೃತಿಯ ಅನಾವರಣದ ಉದ್ದೇಶದಿಂದ ಈ ಪಾತ್ರ ಚಿತ್ರಣವಾಗಿದೆ.

ತಂದೆಯ ಮಾತಿನ ಪರಿಪಾಲನೆ, ಸತ್ಯನಿಷ್ಠೆ, ಅನ್ಯಸುಖಾಕಾಂಕ್ಷೆ, ಶಿಷ್ಟ ಪರಿಪಾಲನೆ, ದುಷ್ಟ ಶಿಕ್ಷೆ – ಇವು ವಾಲ್ಮೀಕಿ ರಾಮಾಯಣದ ರಾಮನ ಪಾತ್ರದ ಆದರ್ಶ. ಇದಕ್ಕಿಂತಲೂ ಮುಖ್ಯವಾಗಿ ರಾಮನು ವಿಷ್ಣುವಿನ ದಶಾವತಾರಗಳಲ್ಲಿ ಒಂದು ಎಂಬ ನಂಬಿಕೆ ಎಲ್ಲಾ ವೈದಿಕ ರಾಮಾಯಣಗಳ ಮೂಲಕೇಂದ್ರವಾಗಿದೆ. ವಾಲ್ಮೀಕಿ ರಾಮಾಯಣದ ಬಾಲಕಾಂಡದ ಹದಿನೈದನೆ ಸರ್ಗದಲ್ಲಿ ಇದಕ್ಕೆ ಸಂಬಂಧಿಸಿದ ಒಂದು ಘಟನೆಯು ವ್ಯಕ್ತವಾಗುತ್ತದೆ. ಲೋಕ ಕಂಟಕನಾದ ರಾವಣನನ್ನು ವಧಿಸಲು ಬ್ರಹ್ಮನಲ್ಲಿ ಕೇಳಿಕೊಂಡಾಗ, ಅವನು ಮನುಷ್ಯರಿಂದಲ್ಲದೆ ಬೇರೆ ಯಾರಿಂದಲೂ ರಾವಣ ಸಾಯಲು ಸಾಧ್ಯವಿಲ್ಲವೆಂದೂ ಹೇಳುತ್ತಾನೆ. ಅಲ್ಲಿಗೆ ಬಂದ ವಿಷ್ಣುವನ್ನು ದೇವತೆಗಳು ದಶರಥ ಪುತ್ರನಾಗಿ ಜನಿಸುವಂತೆ ಪ್ರಾರ್ಥಿಸುತ್ತಾರೆ. ವಿಷ್ಣುವು ಅದಕ್ಕೆ ಒಪ್ಪುತ್ತಾನೆ. ಹೀಗೆ ವಿಷ್ಣುವಿನ ಅವತಾರವೆಂದು ವಾಲ್ಮೀಕಿ ನಿರೂಪಿಸಿರುತ್ತಾನೆ. ಆದರ್ಶ ಮೌಲ್ಯಗಳ ಪರಿಪಾಲನೆಯ ಉದ್ದೇಶದೊಂದಿಗೆ ದುಷ್ಟಶಿಕ್ಷೆಯ ಮಹತ್ವದ ಉದ್ದೇಶವು ಆ ಅವತಾರದಲ್ಲಿದೆ. ಎಲ್ಲಾ ವೈದಿಕ ರಾಮಾಯಣಗಳು ಈ ಉದ್ದೇಶವನ್ನು ಯಥಾವತ್ತಾಗಿ ಪಾಲಿಸಿವೆ. ಬದಲಾವಣೆ ಏನಿದ್ದರೂ, ಈ ಮೂಲ ಉದ್ದೇಶಕ್ಕೆ ಸಂಬಂಧಪಡದ ಘಟನೆಗಳೊಂದಿಗೆ ಮಾತ್ರವಾಗಿದೆ.

ಆದರೆ ಮಂದಾರ ರಾಮಾಯಣವು ಮೇಲಿನ ಉದ್ದೇಶಕ್ಕೆ ಹೆಚ್ಚು ಮಹತ್ವವನ್ನು ನೀಡಿಲ್ಲ. ಅದನ್ನು ಕೇವಲ ಅನುಸರಿಸಿದೆ. ಅದರ ಮೂಲಭೂತ ಉದ್ದೇಶ ತುಳು ಸಾಂಸ್ಕೃತಿಕ ಬದುಕಿನ ನಿರೂಪಣೆ. ರಾಮನನ್ನು ದೇವರಾಗಿ ಸೃಷ್ಟಿಸುವುದರಿಂದ ಇದು ಸಾದ್ಯವಾಗುವುದಿಲ್ಲ. ಇದರಿಂದಲೇ ದೇವತೆಗಳಿಗೆ ವಿಷ್ಣು ಆಶ್ವಾಸನೆ ನೀಡುವ ಪೌರಾಣಿಕ ವೃತ್ತಾಂತ ಇಲ್ಲಿಲ್ಲ. ಮಂದಾರ ರಾಮಾಯಣದ ಉದ್ದೇಶವು ಆರಂಭದಲ್ಲಿಯೇ ಸ್ಪಷ್ಟವಾಗಿದೆ.

………. ಲೋಕೊಗು ನೀತಿ ಸಾರ್ರೆ ಈ ಪಂಡಿ ಪಾತೆರನೆ
ತಿರ್ಲಾದುಪ್ಪುನೊಂಜಿ ಕಬಿತೆ ಬರೆಲ
ತನ್ನ ಗುಣ ನಡಕೆಲೆಡ್‌ ನರಮಾನಿ ದೇವೆರಾ
ಯೆರೆ ತೀರು ಪನ್ಪಿನೆನ್‌ತನ್ನ ಬದ್ಕ್‌ಡ್‌ ತಾನಾ
ನಡತ್‌ದುಪ್ಪುನ ರಾಮಕತೆ ಬರೆಲ
(ಲೋಕಕ್ಕೆ ನೀತಿ ಸಾರಲು ನೀನು ಹೇಳಿದ
ಮಾತೇ ತಿರುಳಾಗುವಂಥ ಕಾವ್ಯ ಬರೆ,
ತನ್ನ ಗುಣನಡತೆಯಿಂದ ಮನುಷ್ಯನೇ ದೇವ
ರಾಗಲು ಸಾಧ್ಯ ಎಂಬುದನ್ನು ತನ್ನ ಬದುಕಿನಲ್ಲಿ ತಾನು
ನಡೆದು (ಸಾಧಿಸಿ) ತೋರಿಸಿದ ರಾಮನ ಕಥೆ ಬರೆ)

ಎಂದು ನಾರದರು ವಾಲ್ಮೀಕಿಗೆ ರಾಮಾಯಣ ಬರೆಯುವಂತೆ ಸೂಚಿಸುವಲ್ಲಿ ಹೇಳುವ ಮಾತಿನ ಉದ್ದೇಶ ಸ್ಪಷ್ಟವಾಗಿದೆ. ರಾಮನನ್ನು ಅವತಾರ ಪುರುಷನಂತೆ ಚಿತ್ರಿಸುವುದು ಕವಿಯ ಮುಖ್ಯ ಉದ್ದೇಶವಲ್ಲ. ಸಾಮಾನ್ಯ ಮನುಷ್ಯನೂ ತನ್ನ ಆದರ್ಶ ಜೀವನದಿಂದ ದೇವರಾದ ರೀತಿಯನ್ನು ವಿವರಿಸುವುದು ಮುಖ್ಯವಾಗಿದೆ. ತಂದೆಯ ಮಾತಿನ ಪರಿಪಾಲನೆ, ಶಿಷ್ಟರ ರಕ್ಷಣೆ, ಸತ್ಯ, ನಿಷ್ಠೆ, ಆದರ್ಶಗಳನ್ನು ಸಾರುವುದು – ಮುಖ್ಯ ಉದ್ದೇಶ. ಈ ದೃಷ್ಟಿಯಿಂದ ರಾಮನ್ನು ಮಾನವನಾಗಿ ಚಿತ್ರಿಸುವಲ್ಲಿ ಕವಿಯ ಆಸಕ್ತಿ ಹೆಚ್ಚು. ಹಾಗೆಂದು ರಾಮ ದೇವರ ಅವತಾರವೆಂಬ ಕಲ್ಪನೆ ಕವಿಗಿದೆ. ‘ಬೊಳ್ಪುದು ಗುಡ್ಚಿಲ್‌’ ಅಧ್ಯಾಯದಲ್ಲಿ ಜನರು ರಾಮನ ಬಗ್ಗೆ ಆಡುವ ಮಾತಿನಲ್ಲಿ ಇದು ವ್ಯಕ್ತವಾಗುತ್ತದೆ.

…….. ಭೂಮಿಗಿತ್ತೇ ರಾ
ಮಾನ್ಪಿನ ಪುದರ್‌ಡಾ ನಾರಾಯ್ಣು ದೇವೆರೇ
ನರಮಾನ್ಯಬತಾರ ದೆತೊಂದು ಮಿತ್ತ್‌ರ್ದ್
ಜತಾದೌ ಬತ್ತೆರಿನ್ಪಿ ನಂಬಿಕೆಡೌ ತಪ್ಪತೌ
(………… ಭೂಮಿಗೆ ರಾ
ಮನೆಂಬ ಹೆಸರಿನಲ್ಲಿ ನಾರಾಯಣ ದೇವರೇ
ಮನುಷ್ಯಾವತಾರದಲ್ಲಿ ಮೇಲಿನಿಂದ
ಇಳಿದು ಬಂದರೆಂಬ ನಂಬಿಕೆ ತಪ್ಪಲ್ಲ)

ಆದರೆ ಇಲ್ಲಿ ‘ಜನರು ಹೀಗೆ ಮಾತನಾಡುತ್ತಾರೆ’ ಎಂದು ಕವಿ ಹೇಳುತ್ತಾನೆಯೇ ಹೊರತು, ಪೌರಾಣಿಕ ದೃಷ್ಟಾಂತದಿಂದ ಸ್ಪಷ್ಟಪಡಿಸುವುದಿಲ್ಲ ಅಲ್ಲದೆ ರಾಮನ ಆದರ್ಶವೇ ಜನರು ಹಾಗೆ ಮಾತನಾಡಲು ಕಾರಣವೆಂದು ಕವಿ ಮುಂದೆ ವಿವರಿಸುತ್ತಾನೆ. ಜನ ರಾಮನನ್ನು ದೇವರೆಂದಾಗ ಅವನೇ ಅದನ್ನು ನಿರಾಕರಿಸುವ ಸುಂದರ ವೃತ್ತಾಂತವಿದೆ. ಕಬಂಧನನ್ನು ಕೊಂದ ಬಳಿಕ ಜನರೆಲ್ಲಾ ಒಂದಾಗಿ ಬಂದು ‘ರಾಮ ದೇವರೇ’, ‘ಓ ರಾಮ ದೇವರೇ’, ‘ಸಿರಿ ರಾಮದೇವರೇ’, ‘ಬಿರು ರಾಮ ದೇವರೇ’, ‘ದೇವರೇ ದೇವರೇ’ ಎಂದು ಸ್ತುತಿಸಿದಾಗ ರಾಮ ಅದನ್ನು ಅಲ್ಲಗಳೆಯುತ್ತಾನೆ.

ಮನುಷ್ಯನೇ ತನ್ನ ಸಚ್ಚಾರಿತ್ರ್ಯ, ಸದ್ಗುಣ ಮತ್ತು ಮಾನವೀಯ ಗುಣಗಳಿಂದ ದೇವರಾಗುತ್ತಾನೆ ಎಂಬ ಕಾವ್ಯದ ಉದ್ದೇಶವನ್ನು ಕವಿ ಮಂದಾರರು ಕೊನೆಯವರೆಗೂ ಉಳಿಸಿಕೊಂಡಿದ್ದಾರೆ. ರಾಮನ ಪಾತ್ರ ಚಿತ್ರಣದಲ್ಲಿ ಪ್ರತಿಕ್ಷಣದಲ್ಲೂ ಎಚ್ಚರದಿಂದ ಈ ಸಿದ್ಧಾಂತವನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿದ್ದಾರೆ. ಇದಕ್ಕಾಗಿ ಹಲವು ವಿಶಿಷ್ಟ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ವೈದಿಕ ರಾಮಾಯಣ ಪರಂಪರೆಯ ಯಾವುದೇ ಕೃತಿಯಲ್ಲಿ ರಾಮನಿಗೆ ಒಂದಲ್ಲ ಒಂದು ಕಳಂಕ ಅಂಟಿಕೊಂಡಿದೆ. ಆದರೆ ಮಂದಾರರು ರಾಮ ನಿಜವಾಗಿಯೂ ರಾಮರಾಜ್ಯದ ರಾಜ. ನಿಜವಾದ ಮಾನವೀಯ ಆದರ್ಶ.

ರಾಮಾಯಣದ ರಾಮ – ರಾವಣರ ಸಂಘರ್ಷ ಒಂದು ಸಾಂಕೇತಿಕವಾದ ಘಟನೆ. ಅದು ನೈತಿಕ – ಅನೈತಿಕ, ಆದರ್ಶ – ಅಧಃಪತನ, ಸದ್ಗುಣ – ದುರ್ಗುಣಗಳ ಸಂಘರ್ಷವೆಂದೇ ವ್ಯಾಖ್ಯಾನಿಸಲಾಗುತ್ತದೆ. ಈ ಮೌಲ್ಯಗಳಿಗೆ ಮಾನವ ಸ್ವಭಾವದ ಚಿತ್ರಣದ ಮೂಲಕ ಇಡೀ ರಾಮಾಯಣದ ಘಟನೆ ರೂಪುಗೊಂಡಿದೆ. ಇದರಿಂದಲೇ ರಾಮನ್ನು ಆದರ್ಶೀಕರಣಗೊಳಿಸಿದರೆ. ರಾವಣನದು ಖಳನಾಯಕನ ಪಾತ್ರ. ವಾಲ್ಮೀಕಿ ಪರಂಪರೆಯ ರಾಮಾಯಣದಲ್ಲಿ ಎಂದೂ ಬದಲಾವಣೆಯನ್ನು ಬಯಸುವುದಿಲ್ಲ. ಬದಲಾದರೆ ಅದು ಇಡೀ ಕಥೆಯ ಕೇಂದ್ರ ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ.

ರಾವಣನ ದುಷ್ಟತನ ಮತ್ತು ಹೇಡಿತನ ಎರಡೂ ಆಗಾಗ ವ್ಯಕ್ತವಾಗುತ್ತದೆ. ಮುಖ್ಯವಾಗಿ ಎರಡು ಘಟನೆಗಳನ್ನು ಇದಕ್ಕೆ ಉದಾಹರಿಸಬಹುದು. ಅದರಲ್ಲಿ ಮುಖ್ಯವಾದುದು ಸೀತಾಪಹರಣದ ಪ್ರಸಂಗ. ಮೂಲ ರಾಮಾಯಣಕ್ಕಿಂತ ಈ ಘಟನೆ ಇಲ್ಲಿ ಭಿನ್ನವಾಗಿದೆ. ತನಗೆ ಅವಮಾನ ಮಾಡಿದ ರಾಮ – ಲಕ್ಷ್ಮಣರಿಗೆ ಬುದ್ಧಿ ಕಲಿಸಲು ಸೀತೆಯನ್ನು ಅಪಹರಿಸುವಂತೆ ಶೂರ್ಪನಖಿ ರಾವಣನನ್ನು ಪ್ರಚೋದಿಸುತ್ತಾಳೆ. ಈ ಹಿಂದೆಯೇ ಸ್ವಯಂವರದ ಮೂಲಕ ಸೀತೆಯನ್ನು ಪಡೆಯಬೇಕೆಂಬ ರಾವಣನ ಬಯಕೆ ವಿಫಲವಾದುದು, ರಾವಣನು ಸೀತೆಯನ್ನು ಅಪಹರಿಸಲು ಮುಖ್ಯ ಕಾರಣ. ಆದರೆ ಧನುಸ್ಸುನ್ನು ಮುರಿದ ರಾಮನ ಬಗೆಗೆ ರಾವಣನಿಗೆ ಭಯ. ಇದರಿಂದ ಉಪಾಯದಿಂದ ಸೀತೆಯನ್ನು ಅಪಹರಿಸುತ್ತಾನೆ. ರಾವಣನು ಮಲೆಕುಡಿಯನ ವೇಷವನ್ನು ಧರಿಸುತ್ತಾನೆ. ಶೂರ್ಪನಖಿ ಜಿಂಕೆ ಮರಿಯಾಗುತ್ತಾಳೆ. ಈ ಜಿಂಕೆ ಮರಿಯೊಂದಿಗೆ ರಾಮ – ಲಕ್ಷ್ಮಣರ ಕುಟೀರಕ್ಕೆ ಬಂದ ಕುಡಿಯನ ಕೈಯಲ್ಲಿದ್ದ ಜಿಂಕೆ ಮರಿಯನ್ನು ನೋಡಿ ಸೀತೆ ಮನಸೋಲುತ್ತಾಳೆ. ಜಿಂಕೆ ಮರಿಯನ್ನು ಹೊರಗೆ ತೆಗೆದುಕೊಂಡು ಹೋದಾಗ ಅದು ಅವಳನ್ನು ಎಳೆದುಕೊಂಡು ಓಡುತ್ತದೆ. ಸೀತೆ ಕೂಗಿದಾಗ ರಾಮ -ಲಕ್ಷ್ಮಣರ ಬಿಲ್ಲು ಬಾಣಗಳೊಂದಿಗೆ ಬಂದು ಹುಲಿಯನ್ನು ಓಡಿಸಿಕೊಂಡು ಹೋಗುತ್ತಾರೆ. ಆ ಹುಲಿಯ ರೂಪದಲ್ಲಿದ್ದ ಮಾರೀಚ ರಾಮ – ಲಕ್ಷ್ಮಣರ ಬಾಣಕ್ಕೆ ಬಲಿಯಾಗುತ್ತಾನೆ. ರಾವಣನು ತಾನು ಕುಡಿಯನಾಗಿ ಗಿಡ – ಮೂಲಿಕೆಗಳನ್ನು ಮಾರಲು ತಂದ ಬುಟ್ಟಿಯನ್ನೇ ಪುಷ್ಪಕ ವಿಮಾನವನ್ನಾಗಿ ಮಾರ್ಪಡಿಸಿ ಸೀತೆಯನ್ನು ಅಪಹರಿಸುತ್ತಾನೆ. ಹೀಗೆ ಇಲ್ಲಿಯೂ ರಾವಣನನ್ನು ದುಷ್ಟ ಹಾಗೂ ಹೇಡಿಯಂತೆ ಚಿತ್ರಿಸಲಾಗಿದೆ.

ರಾವಣನ ದುಷ್ಟತನಕ್ಕೆ ಇನ್ನೊಂದು ಉದಾಹರಣೆ ತನ್ನ ಸ್ವಂತ ತಮ್ಮನಾದ ಕುಂಭಕರ್ಣನಿಗೆ ಮದ್ದು ಹಾಕಿಸಿ ಅವನ ತಲೆ ಕೆಡಿಸಿದ್ದು. ಇದರಿಂದ ಕುಂಭಕರ್ಣನು ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡು ಮಂಕಾಗಿರುತ್ತಾನೆ. ತಮ್ಮನ ಮೇಲಿನ ಸಂಶಯದಿಂದ ಈ ರೀತಿ ಮಾಡಿದ್ದು ರಾವಣನ ದುಷ್ಟತನವನ್ನು ಹಾಗೆಯೇ ಸೂಚಿಸುತ್ತದೆ. ತನ್ನ ತಂಗಿ ಶೂರ್ಪನಖಿಯ ಗಂಡನು ತನ್ನ ಅಂಕೆಗೆ ಒಳಪಡದಾಗ ಅವನನ್ನು ಕೊಲ್ಲಿಸಿ ದುಃಖಿಸಿದವನಂತೆ ನಟಿಸುತ್ತಾನೆ. ಈ ರೀತಿ ದುಷ್ಟತನದೊಂದಿಗೆ ಕುತಂತ್ರವೂ ರಾವಣನ ವ್ಯಕ್ತಿತ್ವದ ಒಂದು ಅಂಗವಾಗಿರುತ್ತದೆ. ಇದರಿಂದಲೇ ಸದ್ಗುಣಿ, ಸಾಧ್ವಿಯಾದ ಮಡದಿ ಮಂಡೋದರಿಯ ಹಿತವಚನಗಳು ರಾವಣನ ಕಿವಿಯನ್ನು ತಲುವುವುದೇ ಇಲ್ಲ. ರಾವಣನ ನೀಚತನವನ್ನು ವ್ಯಕ್ತಪಡಿಸಲು ಕಾವ್ಯದಲ್ಲಿ ಒಂದು ಸುಂದರ ಸನ್ನಿವೇಶವಿದೆ.

ಲಂಕೆಗೆ ಹೊರಡಲು ಸಿದ್ಧತೆಯಲ್ಲಿರುವಾಗ ಜಾಂಬವರ ಮೂಲಕ ರಾಮ – ಲಕ್ಷ್ಮಣರಿಗೆ ಅಪ್ಪಣ್ಣ ಗುರಿಕಾರನ ಪರಿಚಯವಾಗುತ್ತದೆ. ಆಗ ಅಪ್ಪಣ್ಣ ಗುರಿಕಾರನಲ್ಲಿ ರಾಮನು ರಾವಣನ ವ್ಯಕ್ತಿತ್ವ ಹೇಗೆ ಎಂದು ಪ್ರಶ್ನಿಸಿದಾಗ, ಅವರು ನೀಡುವ ಉತ್ತರದಲ್ಲಿ ರಾವಣನ ನೈಜ ಸ್ವಭಾವ ವ್ಯಕ್ತವಾಗಿದೆ.

(ರಾವಣನೇ? ಒಳ್ಳೆಯ ಮನುಷ್ಯ ಇಷ್ಟೊಂದು ತೆಗೆದು ಹಾಕಿದ ವ್ಯಕ್ತಿಯಾದುದು ಇದುವರೆಗೆ ನೋಡಿಲ್ಲ. ಇವನು ದೊಡ್ಡ ಋಷಿಯೊಬ್ಬನಿಗೆ ಹುಟ್ಟಿದವನಂತೆ, ಮದುವೆ ಆಗಿದೆಯೋ ಗೊತ್ತಿಲ್ಲ. ಕೊರಳಲ್ಲಿ ನೂಲಿದೆ – ಒಂದು ಆನೆ ಕಟ್ಟಬಹುದು. ಕುಡಿಯುವುದೆಂದರೆ ಬಹಳ. ಹೇಳಬಾರದು, ಮಾರಿ ಮನ್ಸರಿಗಿಂತ ಕಡೆ. ಅವನೊಂದಿಗೆ ಕೆಲವು ಗಂಡಗಣಗಳು ಇವೆ, ಏನೂ ಮಾಡಲು ಹೇಸದವು. ಇಷ್ಟಲ್ಲದೆ, ಹೆಣ್ಣು ಹುಚ್ಚೆಂದರೆ ಅದು ಚಂದ ಇರಬೇಕಾಗಿಲ್ಲ, ಹೆಣ್ಣಾದರಾಯಿತು. ಸೀರೆ ಉಡಿಸಿದರೆ ಕಲ್ಲನ್ನಾದರೂ ಹೋಗಿ ಅಪ್ಪಿಕೊಳ್ಳುತ್ತಾನೆ. ಈಗೀಗ ಮುದುಕನಾಗಿದ್ದರೂ ಈ ಬುದ್ಧಿಯನ್ನು ಬಿಟ್ಟಿಲ್ಲ. ಋಷಿಯ ಮಗ ಎಂದಲ್ಲದಿದ್ದರೆ, ಇಷ್ಟೊತ್ತಿಗೆ ಮುಗಿಸುತ್ತಿದೆ, ಎಂಜಲು ಕೊಳಕಿನಲ್ಲಿ ಹೊರಳಾಡಿದರೂ ಬೆರಳು ಹೇಗೆ ತೋರಿಸುವುದು? ಹೆಡೆ ಎತ್ತುತ್ತದೆ. ನಾನು ಸೋತದ್ದು ಹಾಗೆ. ಜನಿವಾರವೊಂದು ಅಲ್ಲದಿದ್ದರೆ, ಅವನ ಅಸ್ತಿತ್ವವಿತ್ತೆ?)

ಅಪ್ಪಣ್ಣ ಗುರಿಕಾರನ ರಂಜನೆಯ ಮಾತುಗಳು ರಾವಣನ ವ್ಯಕ್ತಿತ್ವ ಮತ್ತು ಮನೋಭಾವದ ದ್ಯೋತಕವಾಗಿದೆ. ಮಹತ್ವಾಂಕ್ಷೆ, ರಸಿಕತೆ ದುಷ್ಟತನ, ಸ್ತ್ರೀ ಲಂಪಟತನ, ಪರಪೀಡೆ – ಇತ್ಯಾದಿ ರಾವಣನ ಗುಣಗಳೆಂದು ಗೊತ್ತಾಗುತ್ತದೆ. ಜಾತಿಯಲ್ಲಿ ಬ್ರಾಹ್ಮಣನಾದರೂ, ಮಹಾಋಷಿಯೊಬ್ಬನ ಮಗನಾದರೂ, ಪ್ರವೃತ್ತಿಯಲ್ಲಿ ರಾಕ್ಷಸನೆಂಬ ವಿಚಾರವು ವ್ಯಕ್ತವಾಗುತ್ತದೆ. ಹೀಗೆ ರಾವಣನ ಪಾತ್ರವನ್ನು ವಾಲ್ಮೀಕಿಯ ಪಾತ್ರದ ಚೌಕಟ್ಟಿನಲ್ಲಿ ಕವಿ ಮಂದಾರರು ರಚಿಸಿದ್ದಾರೆ. ವಾಲ್ಮೀಕಿಯ ರಾವಣದಲ್ಲಿ ಅಲ್ಪವಾದರೂ ಧರ್ಮದೃಷ್ಟಿಯಿದೆ. ಆದರೆ ಮಂದಾರರ ರಾವಣನಲ್ಲಿ ದುಷ್ಟತನವೇ ಮೈವೆತ್ತಂತಿದೆ. ಲಂಕೆಯನ್ನು ತುಳುನಾಡೆಂದು ವರ್ಣಿಸಿ, ರಾವಣನು ತುಳುನಾಡಿನ ಬಂಟನೆಂಬಂತೆ ಚಿತ್ರಿಸಿರುವುದನ್ನು ಬಿಟ್ಟರೆ ರಾವಣನದು ಸಾಂಪ್ರದಾಯಿಕ ಪಾತ್ರ ಎನ್ನಬಹುದು.

ಲಕ್ಷ್ಮಣನ ಪಾತ್ರದಲ್ಲಿ ಶೌರ್ಯ, ಧೈರ್ಯ, ಆತ್ಮವಿಶ್ವಾಸ, ಚಿಂತನೆ, ಒಳನೋಟಗಳು ವ್ಯಕ್ತವಾಗಿವೆ. ಲಕ್ಷ್ಮಣನ ವ್ಯಕ್ತಿತ್ವ ಅತ್ಯಂತ ತೂಕಯುಕ್ತವಾದುದೆಂದು ಅವನ ಮಾತುಗಳಿಂದ ಕಂಡು ಬರುತ್ತದೆ. ಹೀಗೆ ವಾಲ್ಮೀಕಿಗಿಂತ ಭಿನ್ನವಾದ ಲಕ್ಷ್ಮಣನ ಚಿತ್ರಣ ಮಂದಾರ ರಾಮಾಯಣದಲ್ಲಿದೆ. ಭರತ ಶತ್ರುಘ್ನರ ಪಾತ್ರದಲ್ಲಿ ಮಂದಾರರು ಹೊಸತನವನ್ನೇನೂ ಚಿತ್ರಿಸಿಲ್ಲ. ವಾಲ್ಮೀಕಿ ರಾಮಾಯಣದಲ್ಲಿರುವ ಭರತನ ವ್ಯಕ್ತಿತ್ವವೇ ಇಲ್ಲಿ ಅಭಿವ್ಯಕ್ತಗೊಂಡಿದೆ. ವಾಲಿಯ ವಧೆ, ಅದನ್ನು ರಾಮ ಸಮರ್ಥಿಸುವ ರೀತಿ ವಾಲ್ಮೀಕಿಗಿಂತ ಹೆಚ್ಚು ಸೂಕ್ತವಾಗಿದೆ. ವಾಲಿ ಸುಗ್ರೀವರ ವೃತ್ತಾಂತ ಮೂಲ ರಾಮಾಯಣದ ರೀತಿಯಲ್ಲಿದೆ.

ವಾಲ್ಮೀಕಿ ರಾಮಾಯಣ ಮತ್ತು ಕನ್ನಡ ರಾಮಾಯಣಗಳ ಸೀತೆಯ ಪಾತ್ರ ತೀರಾ ಸಾಂಪ್ರದಾಯಿಕವಾದುದು. ಆದರೆ ಮಂದಾರರು ಈ ಸಾಂಪ್ರದಾಯಿಕ ಸ್ವಭಾವ ಚಿತ್ರಣವನ್ನು ಸ್ವೀಕರಿಸಿಯೂ ಹೊಸತೆನ್ನುವಂಥ ರೀತಿಯಲ್ಲಿ ಸೀತೆಯ ಪಾತ್ರವನ್ನು ಚಿತ್ರಿಸಲು ತುಳು ಜನಪದ ಮಹಾಕಾವ್ಯಗಳು ಸ್ತ್ರೀಯರ ಪಾತ್ರಗಳ ಕಾರಣವಾಗಿವೆ. ಕೆಲವು ಪಾಡ್ದನಗಳಲ್ಲೂ ಇದೇ ಮನೋಭಾವದ ಸ್ತ್ರೀಯರ ಚಿತ್ರಣವಿದೆ.

ಅಪ್ಪಣ್ಣ ಗುರಿಕಾರನ ಪಾತ್ರ ಮಂದಾರರ ವಿಶಿಷ್ಟ ಸೃಷ್ಟಿ. ಯಕ್ಷಗಾನ ಪಾತ್ರಗಳ ಪರಿಚಯವಿದ್ದ ಮಂದಾರರು ಅದರ ಪ್ರಭಾವದಿಂದಲೇ ಈ ಪಾರವನ್ನು ಸೃಷ್ಟಿಸಿದಂತಿದೆ. ಅಪ್ಪಣ್ಣನ ಮಾತುಗಾರಿಕೆ, ಯಕ್ಷಗಾನದ ಹಾಸ್ಯ ಪಾತ್ರಗಳ ಮಾತುಗಾರಿಕೆಯಂತಿದೆ. ಅಪ್ಪಣ್ಣ ಗುರಿಕಾರನ ಪಾತ್ರದ ಮೂಲಕ ಸಮುದ್ರಕ್ಕೆ ಸೇತುವೆ ಕಟ್ಟುವ ಕಾಲ್ಪನಿಕ ವೃತ್ತಾಂತವೊಂದಕ್ಕೆ ಮಂದಾರರು ವಾಸ್ತವ ರೂಪ ನೀಡಿದ್ದಾರೆ. ಇಲ್ಲಿ ಮೀನುಗಾರರ ಗುರಿಕಾರನಾದ ಅಪ್ಪಣ್ಣ ಗುರಿಕಾರನ ಸಹಾಯದಿಂದ ರಾಮನ ಸೈನ್ಯವು ಸಮುದ್ರ ದಾಟುತ್ತದೆ.

ಮಂದಾರರ ವಿಶಿಷ್ಟ ಸೃಷ್ಟಿಯ ಪಾತ್ರ ತೂಚಣ್ಣ ಪಂಡಿತನದು. ಇವನೊಬ್ಬ ಜನಪದ ವೈದ್ಯ. ತೂಚಣ್ಣ ಪಂಡಿತನ ಮೂಲಕ ಮಂದಾರರು, ಜನಪದ ವೈದ್ಯದ ಕುರಿತಾದ ಜನಪದ ನಂಬಿಕೆಗಳನ್ನು ವಿವರಿಸಿದ್ದಾರೆ. ಜನಪದ ವೈದ್ಯದ ಮೂಲವನ್ನು, ಜನಪದ ಜೀವನದಲ್ಲಿ ಅದಕ್ಕಿರುವ ಗೌರವವನ್ನು ವಿವರಿಸಿದ್ದಾರೆ. ಸುಗ್ರೀವನ ಸೈನ್ಯದೊಂದಿಗೆ ತೂಚಣ್ಣ ಕಿಷ್ಕಿಂಧೆಯಿಂದ ಬಂದ ಪಂಡಿತರಾಗಿದ್ದಾರೆ. ಲಕ್ಷ್ಮಣ ಮತ್ತು ಇಂದ್ರಜಿತು ಯುದ್ಧ ಮಾಡುತ್ತಿದ್ದಾಗ, ಇಂದ್ರಜಿತು ವಿಷದ ಬಾಣವನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸುತ್ತಾನೆ. ಇದರಿಂದ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ರಾಮನು ಅತ್ಯಂತ ದುಃಖದಲ್ಲಿರುವಾಗ ತೂಚಣ್ಣ ಪಂಡಿತನು ಅವನನ್ನು ಸಮಾಧಾನಪಡಿಸಿ, ಜನಪದ ವೈದ್ಯದ ಮೂಲಕ ಲಕ್ಷ್ಮಣನನ್ನು ಎಚ್ಚರಿಸುತ್ತಾನೆ.

ಕುಂಭಕರ್ಣನ ಮಗನಾಗಿರುವ ಸಿಂಗನ ಪಾತ್ರ ಮಂದಾರರ ಸ್ವತಂತ್ರ ಸೃಷ್ಟಿ. ಧರ್ಮಬುದ್ಧಿ ಇರುವ ಮತ್ತು ನೀತಿವಂತನಾದ ಸಿಂಗನಿಗೆ ರಾವಣನ ಪ್ರವೃತ್ತಿ ಹಿಡಿಸುವುದಿಲ್ಲ. ಆದರೆ ನೇರವಾಗಿ ರಾವಣನನ್ನು ಎದುರಿಸುವ ಧೈರ್ಯ ಅವನಿಗಿರುವುದಿಲ್ಲ. ಆದರೆ ನೇರವಾಗಿ ರಾವಣನನ್ನು ಎದುರಿಸುವ ಧೈರ್ಯ ಅವನಿಗಿರುವುದಿಲ್ಲ. ಇದರಿಂದಲೇ ಹನುಮಂತನು ರಾವಣನ ಆಸ್ಥಾನದಲ್ಲಿ ರಾವಣನಿಗೆ ವಿರುದ್ಧ ಮಾತನಾಡಿದಾಗ ಸಿಂಗ ಅವನಲ್ಲಿ ವಕ್ರೋಕ್ತಿಯಿಂದ ಮಾತನಾಡುತ್ತಾನೆ. ಸೂರ ದಶರಥನ ಬಂಟ ಸ್ವರ್ಗವನ್ನು ಹೊಕ್ಕು ದೇವತೆಗಳು ಅಲ್ಲಾಡುವಂತೆ ಮಾಡಿದ, ರಾಕ್ಷಸರ ಹೊಟ್ಟೆಯನ್ನು ಬಗೆದ ಈ ದಶರಥನ ವೀರ ಎನ್ನುತ್ತಾನೆ.

ರಾಮಾಯಣದಲ್ಲಿ ಹನುಮಂತನು ಮಹತ್ವದ ಪಾತ್ರವಾದರೂ, ಮಂದಾರರು ವಾಲ್ಮೀಕಿಯ ಪರಂಪರೆಯನ್ನು ಮುಂದುವರಿಸಿದ್ದಾರೆ. ರಾಮ – ಲಕ್ಷ್ಮಣರ ಹಿನ್ನೆಲೆಯನ್ನು ತಿಳಿದುಕೊಂಡು ಸುಗ್ರೀವನಿಗೆ ಹೇಳಿ ಹನುಮನು ರಾಮ-ಸುಗ್ರೀವರ ಸ್ನೇಹಕ್ಕೆ ಕಾರಣನಾಗುತ್ತಾನೆ. ಲಂಕೆಗೆ ಹೋಗಿ ಸೀತೆಯನ್ನು ಶೋಧಿಸಿ, ರಾಮನ ಸಂದೇಶವನ್ನು ನೀಡುತ್ತಾನೆ. ಹೀಗೆ ಎಲ್ಲಾ ಸನ್ನಿವೇಶಗಳು ಮೂಲ ರಾಮಾಯಣದಂತೆ ಇವೆ. ಇಲ್ಲಿ ಹನುಮಂತನನ್ನು ಸುಗ್ರೀವನ ಅಳಿಯನೆಂದು ಕರೆಯಲಾಗಿದೆ.

ಮಂದಾರರು ತುಳುನಾಡಿನ ಬಡ ಕುಟುಂಬದ ಗೃಹಿಣಿಯೊಬ್ಬಳ ಚಿತ್ರಣವನ್ನು ಕುಡಿಯನ ಪತ್ನಿಯ ಮೂಲಕ ನೀಡಿದ್ದಾರೆ. ಬಡಕುಟುಂಬದ ಗೃಹಿಣಿಯೊಬ್ಬಳ ದೈನಂದಿನ ದಿನಚರಿಯ ಚಿತ್ರಣವನ್ನು ಇಲ್ಲಿ ನೀಡಿದ್ದಾರೆ. ರಾಮಾಯಣ ಕೃತಿಗಳಲ್ಲಿ ಬರುವ ಬೇಡನ ಹೆಂಡತಿಯ ಚಿತ್ರಣಕ್ಕಿಂತ ಭಿನ್ನವಾದ ತುಳುನಾಡಿನ ಬಡ ಗೃಹಿಣಿಯೊಬ್ಬ ಚಿತ್ರಣ ಆಕರ್ಷಕವಾಗಿ ಮೂಡಿಬಂದಿದೆ. ಸೋಮಕ್ಕ ವಿಭೀಷಣನ ಮಗಳು. ಸೀತೆಯನ್ನು ಅತ್ಯಂತ ಗೌರವದಿಂದ ಕಾಣುತ್ತಾಳೆ. ರಾಮನಿಗೆ ಸೀತೆಯ ಕುರಿತಾದ ಸಂದೇಶವನ್ನು ಸೀತೆ ಸೋಮಕ್ಕನ ಮೂಲಕ ಕಳುಹಿಸುತ್ತಾಳೆ. ದೊಂಬರ ಕಣಿಯನದು ಮಂದಾರರು ಸೃಷ್ಟಿಸಿದ ವಿಶಿಷ್ಟ ಪಾತ್ರ. ಅದರೊಂದಿಗೆ, ಇಲ್ಲಿ ತುಳುನಾಡಿನ ಮಾಟ ಮಾಡುವ ಸನ್ನಿವೇಶದ ಮೂಲಕ ಪರಿಪೂರ್ಣವಾಗಿ ಚಿತ್ರಿಸಲಾಗಿದೆ. ನೀಲಪ್ಪ ಕಿಷ್ಕಿಂಧೆಯ ಸುಗ್ರೀವನ ಸೈನಿಕನಾಗಿ ರಾವಣನ ಸೈನ್ಯದೊಂದಿಗೆ ಹೋರಾಡುವ ವಿಚಾರ ಹಲವು ಸಂದರ್ಭಗಳಲ್ಲಿ ಬರುತ್ತದೆ.

ತುಳು ಸಂಸ್ಕೃತಿಯ ನಿರೂಪಣೆಯಲ್ಲಿ ಮಂದಾರ ರಾಮಾಯಣದ ರಚನೆಯ ವೈಶಿಷ್ಟ್ಯ ಮತ್ತು ಉದ್ದೇಶವಿದೆ. ಕಾವ್ಯದಲ್ಲಿ ರಾಮಾಯಣದ ಕಥೆ ಕೇವಲ ನೆಪಮಾತ್ರವಾಗಿ ಬಂದಿದೆ. ರಾಮಾಯಣದ ಕಥಾವಸ್ತುವನ್ನು ತುಳುನಾಡಿನ ಪರಿಸರ ಮತ್ತು ಸಂಸ್ಕೃತಿಯ ನಿರೂಪಣೆಗೆ ಹೊಂದಿಸಿಕೊಳ್ಳಲಾಗಿದೆ. ರಾಮಾಯಣದ ಕಥೆಯನ್ನು ನಿರೂಪಸುವುದಕ್ಕಿಂತಲೂ, ಕವಿಯ ಮೂಲಭೂತ ಉದ್ದೇಶವಿರುವುದು ತುಳುನಾಡಿನ ಭೌಗೋಳಿಕ ಪರಿಸರ ಮತ್ತು ಸಂಸ್ಕೃತಿಯನ್ನು ಅಭಿವ್ಯಕ್ತಗೊಳಿಸುವುದಾಗಿದೆ. ಒಂದು ರೀತಿಯಲ್ಲಿ ವೈಭವೀಕರಣವನ್ನು ಅಲ್ಲಿ ಕಾಣಬಹುದು.

ಮಂದಾರ ರಾಮಾಯಣದ ಅಯೋಧ್ಯೆ ಮೂಲ ರಾಮಾಯಣದ ಅಯೋಧ್ಯಯಲ್ಲ. ಅದು ತುಳುನಾಡಿನ ಅಯೋಧ್ಯೆ. ಕೃತಿಯಲ್ಲಿ ಬರುವ ಪ್ರತಿಯೊಂದು ಪ್ರದೇಶವೂ ರಾಮಾಯಣದ ಹೆಸರನ್ನು ಒಳಗೊಂಡಿದ್ದರೂ ಅದು ನಿರೂಪಣೆಯಲ್ಲಿ ತುಳುನಾಡಿನ ಪ್ರದೇಶವಾಗಿದೆ. ಕೃತಿಯ ಪ್ರಕಾರ ತುಳುನಾಡಿನಲ್ಲಿ ರಾಮಾಯಣದ ಕಥೆ ನಡೆಯುತ್ತದೆ. ಪ್ರಾಚೀನ ತುಳುನಾಡಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಹಾಗೂ ಸೌಂದರ್ಯವನ್ನು ಕೃತಿ ಅನಾವರಣಗೊಳಿಸುತ್ತದೆ. ಇದನ್ನು ಕೃತಿಯ ಆರಂಭದಲ್ಲೇ ಗುರುತಿಸಬಹುದಾಗಿದೆ. ಪ್ರಾರ್ಥನಾ ಪದ್ಯದಲ್ಲಿ ತುಳುನಾಡಿನ ಸಂಸ್ಕೃತಿಯ ನಿರೂಪಣೆಯಿದೆ.

“ನಾನು ಬರೆಯುತ್ತಿರುವುದಕ್ಕೆ ಯಾವ ಕಷ್ಟವೂ ಅಡ್ಡ ಬಂದು ಸೋಂಕದ ಹಾಗೆ ಅದನ್ನು ದೂರ ರಾಜ್ಯಕ್ಕೆ ಹಾಕಿ, ಉದ್ದೇಶವನ್ನು ಕೈಸೇರುವಂತೆ ದಯಮಾಡಿ ಕಾಪಾಡೆಂದು ಬೇಡುತ್ತೇನೆ. ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ನನ್ನನ್ನು ಹೆತ್ತು ಗಂಡು ಮಗುವೆಂದು ತಿಳಿದಾಗಲೇ ಹೆತ್ತ ನೋವನ್ನು ಮರೆತು, ನನ್ನ ಮೈಮುಖ ಕಣ್ಣುಗಳನ್ನು ಕೈಕಾಲುಗಳನ್ನು ಒಳ್ಳೆಯ ಜೇನು ಕಲ್ಲುಸಕ್ಕರೆ ಮಿಶ್ರಣದ ಗಂಟಲು ಕತ್ತರಿಸುವಂತಿದ್ದರೂ ಇನ್ನೂ ತಿನ್ನುವಂಥ ರೀತಿಯ ಪಾಕದ ಸಿಹಿಯ ಯಾರು ಮುಟ್ಟದೆ, ಬಿಟ್ಟ ಕಣ್ಣಲ್ಲೇ ನೆಕ್ಕುತ್ತಾ, ಬಾಣಂತಿಗೆ ಕೊಟ್ಟ ಕಷಾಯದ ಕಹಿಯನ್ನು ನುಂಗಿ ನನ್ನ ಬಗ್ಗೆ ಸದಾ ಪ್ರೀತಿ ತುಂಬುತ್ತಾ, ಮೈತುಂಬಾ ಚಿಮ್ಮುವ ಮೊಲೆ ಹಾಲನ್ನು ಕುಡಿಸಿ, ನಾನಿದ್ದ ಹಾಳೆಯನ್ನು ಪಕ್ಕದಲ್ಲೇ ಇಟ್ಟು, ಹಗಲು ರಾತ್ರಿಯಿರಲಿ ನಾನು ಅಳುವಾಗ ಜೋಗುಳ ಹಾಡುತ್ತಾ, ತೆಂಗಿನಕಾಯಿಯನ್ನು ಇಳಿಸಿದ ತೊಟ್ಟಿಲಿನಲ್ಲಿ ಇಟ್ಟು ತೂಗಿದ ಆ ತಾಯಿಯನ್ನು, ಸಾಕಿದ ತಾಯಿ ತಂದೆಯನ್ನು ನೆನೆಯುತ್ತಾ, ತುಳು ಕವಿಗಳಿಗೆ ಕೈಮುಗಿದ ಕಥೆ ಬರೆಯುತ್ತೇನೆ. ತುಳು ಮಾತೆಯೆದುರು ಕಾಣಿಕೆ ಇಡುತ್ತೇನೆ”.

ಗಣಪತಿ ಸ್ತುತಿಯ ಬಳಿಕ ಭೂತಾರಾಧನೆಯ ಸುಪ್ರಸಿದ್ಧ ನುಡಿಗಟ್ಟೊಂದನ್ನು ಬಳಸಲಾಗಿದೆ. ತುಳುನಾಡಿನಲ್ಲಿ ಭೂತಗಳೇ ಆರಾಧ್ಯ ದೇವರು. ಇತರ ದೇವರುಗಳಿಗಿಂತ ಭೂತಗಳಿಗೆ ಹೆಚ್ಚು ಪ್ರಾಧಾನ್ಯ. ಈ ದೃಷ್ಟಿಯಿಂದ ಭೂತಗಳನ್ನು ಬೇಡಿಕೊಳ್ಳುವ ಈ ಜನಪ್ರಿಯ ನುಡಿಗಟ್ಟನ್ನು ಪ್ರಾರ್ಥನಾ ಪದ್ಯದಲ್ಲಿ ಬಳಸಿಕೊಳ್ಳಲಾಗಿದೆ. ತುಳುವಿನ ಪ್ರಾಚೀನ ಎಲ್ಲಾ ಮಹಾಕಾವ್ಯಗಳಲ್ಲಿ ಕನ್ನಡ ಇಲ್ಲವೇ ಸಂಸ್ಕೃತದ ಮಾದರಿಯಲ್ಲೇ ಪ್ರಾರ್ಥನಾ ಪದ್ಯಗಳ ರಚನೆಯಿದ್ದರೆ, ಮಂದಾರ ರಾಮಾಯಣದಲ್ಲಿ ಭೂತಾರಾಧನೆಯ ನುಡಿಗಟ್ಟನ್ನು ಬಳಸಿರುವುದು ಮತ್ತು ಪ್ರಾರ್ಥನಾ ಪದ್ಯದಲ್ಲಿ ತುಳುನಾಡಿನ ಬಾಣಂತಿಯೊಬ್ಬಳ ಚಿತ್ರವನ್ನು ನೀಡಿ, ತಂದೆ-ತಾಯಿಯರನ್ನು ಸ್ಮರಿಸಲಾಗಿದೆ. ಅದರೊಂದಿಗೆ ತುಳು ಕವಿಗಳನ್ನು ಮತ್ತು ತುಳು ಮಾತೆಯನ್ನು ಪ್ರಾರ್ಥಿಸಲಾಗಿದೆ.

ಹೀಗೆ ಪ್ರಾರ್ಥನಾಪದ್ಯದಲ್ಲೇ ಕಾವ್ಯವು ತುಳುನಾಡಿನ ವಿಶಿಷ್ಟ ಸಂಸ್ಕೃತಿಯನ್ನು ಅಭಿವ್ಯಕ್ತಗೊಳಿಸುವ ಮಾಧ್ಯಮವಾಗಿದೆ ಎಂಬ ಸೂಚನೆ ದೊರೆಯುತ್ತದೆ. ಕೃತಿಯು ವಾಲ್ಮೀಕಿಯಂಥ ಸಂಸ್ಕೃತ ಕವಿಗಳಿಂದ ಕುಮಾರ ವಾಲ್ಮೀಕಿ, ನಾಗಚಂದ್ರ, ಕುವೆಂಪು ಮೊದಲಾದ ಕನ್ನಡ ಕವಿಗಳು ಮತ್ತು ಯಕ್ಷಗಾನ ಕವಿಗಳಿಂದ ಉಪಕೃತವಾಗಿದ್ದರೂ, ಪ್ರಾರ್ಥನಾ ಪದ್ಯದಲ್ಲಿ ಯಾರ ಸ್ಮರಣೆಯನ್ನೂ ಮಾಡದಿರುವುದಕ್ಕೆ ಮುಖ್ಯ ಕಾರಣ ಕವಿಯ ದೃಷ್ಟಿ ತುಳುನಾಡನ್ನು ಕಾವ್ಯದ ಮೂಲಕ ಸೃಷ್ಟಿಸುವ ಉದ್ದೇಶವನ್ನು ಹೊಂದಿರುವುದೇ ಆಗಿದೆ ಎನ್ನಬಹುದು. ಈ ಭಾವನಾತ್ಮಕ ಉದ್ದೇಶ ಕಾವ್ಯದ ಪ್ರತಿ ಸಂದರ್ಭದಲ್ಲಿ ಕ್ರಿಯಾಶೀಲವಾಗಿದೆ. ಈ ದೃಷ್ಟಿಯಿಂದ ತುಳುನಾಡಿನ ಪ್ರಕೃತಿ -ಸಂಸ್ಕೃತಿಗಳು ಕಾವ್ಯದಲ್ಲಿ ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ. ಅದು ತುಳು ಸಂಸ್ಕೃತಿಯ ಸಮಗ್ರ ಚಿತ್ರಣವನ್ನು ನೀಡುತ್ತದೆ.

ಮಂದಾರ ರಾಮಾಯಣದ ಭಾಷೆ ಮತ್ತು ಶೈಲಿಯ ಕುರಿತಾಗಿ ಈ ಕೆಳಗಿನ ವಿಚಾರಗಳನ್ನು ಗಮನಿಸಬಹುದು:

ಮಂದಾರ ರಾಮಾಯಣದಲ್ಲಿ ಕವಿ ಮಂದಾರರು ಹೊಸ ಶೈಲಿಯನ್ನು ಬಳಸಿದ್ದಾರೆ. ತುಳುವಿನ ಪ್ರಾಚೀನ ಮಹಾಕಾವ್ಯಗಳ ಶೈಲಿ ಮತ್ತು ಭಾಷೆಯ ಪ್ರಭಾವ ಮಂದಾರ ರಾಮಾಯಣದ ಮೇಲಾಗಿಲ್ಲ. ತುಳುವಿನ ಆಧುನಿಕ ಸಾಹಿತ್ಯದಭಾಷೆ ಮ್ತು ಶೈಲಿಯ ಪ್ರಭಾವ ಮಂದಾರ ರಾಮಾಯಣದ ಮೇಲಾಗಿದೆ. ಈ ಶೈಲಿಯ ದಾರಿಯಲ್ಲೇ ಮಂದಾರರು ತಮ್ಮ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ತುಳು ಆಡುಮಾತು ಮತ್ತು ಮೌಖಿಕ ಸಾಹಿತ್ಯದ ಪ್ರಭಾವ ಮಂದಾರ ರಾಮಾಯಣದ ಶೈಲಿಯ ಮೇಲಾಗಿದೆ. ಮುಂದಿನ ತುಳು ಸಾಹಿತ್ಯದ ಮೇಲೆ ಮಂದಾರ ರಾಮಾಯಣದ ಶೈಲಿಯ ಪ್ರಭಾವವು ಅಧ್ಯಯನಯೋಗ್ಯವಾಗಿದೆ.

ಸರಳ ರಗಳೆ ಕನ್ನಡದ ಆಧುನಿಕ ಮಹಾಕಾವ್ಯದ ಜನಪ್ರಿಯ ಛಂದಸ್ಸು, ಸಾಂಪ್ರದಾಯಿಕ ಛಂದಸ್ಸಿನ ಆಕರ್ಷಣೆಯಿರುವ ಮಂದಾರರು, ಸಹಜವಾಗಿಯೇ ಸರಳ ರಗಳೆಯನ್ನು ಆರಿಸಿದ್ದಾರೆ. ಅವರ ಇತರ ಕೃತಿಗಳಲ್ಲೂ ಸಂಪ್ರದಾಯನಿಷ್ಠ ಛಂದಸ್ಸಿನ ಬಳಕೆಯನ್ನು ಕಾಣಬಹುದಾಗಿದೆ. ತುಳುವಿನ ಆಡುಮಾತಿನ ಅಭಿವ್ಯಕ್ತಿಗೆ ಲಲಿತರಗಳೆ ಯೋಗ್ಯವಾಗಿದೆ. ತುಳು ಮೌಖಿಕ ಸಾಹಿತ್ಯವಾದ ಪಾಡ್ದನ, ಕಬಿತಗಳಲ್ಲಿ ನಿಯತವಾದ ಲಯವಿಲ್ಲದಿದ್ದರೂ, ಲಲಿತಗಳೆಯ ಓಟವನ್ನು ಅವು ಹೆಚ್ಚು ಕಡಿಮೆ ಹೋಲುತ್ತವೆ. ಸರಳ ರಗಳೆಯಿಂದ ಪ್ರಭಾವಿತರಾಗಿ ಸರಳ ರಗಳೆಯನ್ನು ಕವಿ ಬಳಸಿದ್ದಾರೆ.

ಭಾಷೆಯ ಬಳಕೆಯಲ್ಲಿ ಮಂದಾರರು ವೈಶಿಷ್ಟ್ಯವನ್ನು ಮೆರೆದಿದ್ದಾರೆ. ತುಳುವಿನಲ್ಲಿ ಬಳಕೆಯಿರುವ ಮಂದಾರರು ವೈಶಿಷ್ಟ್ಯವನ್ನು ಮೆರೆದಿದ್ದಾರೆ. ತುಳುವಿನಲ್ಲಿ ಬಳಕೆಯಿರುವ ಆಡುಮಾತಿನ ಶಬ್ಧಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಕನ್ನಡ ಸಂಸ್ಕೃತಗಳ ಪ್ರಭಾವ ಅತಿ ಕಡಿಮೆ. ಮೌಖಿಕ ಸಾಹಿತ್ಯದಲ್ಲಿ ಬಳಕೆಯಿರುವ ಶಬ್ದಗಳು, ಲೋಕೋಕ್ತಿ, ಗಾದೆಮಾತು, ನುಡಿಗಟ್ಟುಗಳನ್ನು ಬಳಸಿದ್ದಾರೆ. ವರ್ಣನೆಯಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಕಾಣಬಹುದು. ಹೊಸ ಶಬ್ದಗಳನ್ನು ತುಳುವಿಗೆ ಒಪ್ಪುವ ರೀತಿಯಲ್ಲಿ ಸೃಷ್ಟಿಸಿದ್ದಾರೆ. ಈ ದೃಷ್ಟಿಯಿಂದ ಆಧುನಿಕ ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಮಂದಾರ ರಾಮಾಯಣದ ಕೊಡುಗೆ ವಿಶಿಷ್ಟವಾದುದು.

ಈ ಮೇಲಿನ ಚರ್ಚೆಯ ಹಿನ್ನೆಲೆಯಲ್ಲಿ ತುಳು ಸಾಹಿತ್ಯಕ್ಕೆ ಮಂದಾರ ರಾಮಾಯಣದ ಕೊಡುಗೆಯನ್ನು ಹೀಗೆ ಗುರುತಿಸಬಹುದಾಗಿದೆ: ಮಂದಾರ ರಾಮಾಯಣ ತುಳುವಿನ ಮೊದಲ ಅಧಿಕೃತ ರಾಮಾಯಣ ಕೃತಿಯಾಗಿದೆ. ತುಳುವಿನ ಮೊದಲ ಆಧುನಿಕ ಮಹಾಕಾವ್ಯವೂ ಆಗಿದೆ. ತುಳುಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಮಂದಾರ ರಾಮಾಯಣ ರಚನೆ ಮಹತ್ವದ ಪರಿಣಾಮವನ್ನು ಬೀರಿದೆ. ತುಳು ಗ್ರಾಂಥಿಕ ಸಾಹಿತ್ಯದ ಭಾಷೆ ಮತ್ತು ರೂಪದ ರಚನೆಗೆ ಮಂದಾರ ರಾಮಾಯಣವು ಸ್ಪಷ್ಟತೆಯನ್ನು ನೀಡಿದೆ. ತುಳು ಭಾಷೆಯನ್ನು ಕಾವ್ಯಭಾಷೆಯಾಗಿ ಬಳಸಬಹುದೆಂಬುದನ್ನು ಮಂದಾರ ರಾಮಾಯಣವು ಸಮರ್ಥವಾಗಿ ತೋರಿಸಿಕೊಟ್ಟಿತು. ಇದರಿಂದ ಎಂಭತ್ತರ ದಶಕದ ಬಳಿಕ ತುಳು ಸಾಹಿತ್ಯ ರಚನೆಯು ಸ್ಪಷ್ಟದಾರಿಯನ್ನು ಹಿಡಿಯಿತು. ತುಳುವಿಗೂ ಗ್ರಂಥಸ್ಥ ಸಾಹಿತ್ಯದ ಮನ್ನಣೆ ದೊರೆಯಲಾರಂಭಿಸಿತು. ಹಲವು ವಿಶಿಷ್ಟ ಭಾಷಾಂತರ, ರೂಪಾಂತರ ಹಾಗೂ ಸ್ವತಂತ್ರ ಕೃತಿಗಳು ರೂಪುಗೊಳ್ಳುವಲ್ಲಿ ಮಂದಾರ ರಾಮಾಯಣದ ಪ್ರಭಾವ ಸ್ಪಷ್ಟವಾಗಿದೆ.

ತುಳು ಜಾನಪದ ಸಂಸ್ಕೃತಿಯನ್ನು ಸಮಗ್ರವಾಗಿ ಈ ಕೃತಿಯಲ್ಲಿ ಕಾಣಬಹುದಾಗಿದೆ. ತುಳುಭಾಷೆಯ ಅಪರೂಪದ ಶಬ್ದಗಳ ಸ್ವರೂಪವನ್ನು ಕೃತಿಯಲ್ಲಿ ಗುರುತಿಸಬಹುದು. ಒಂದು ರೀತಿಯಲ್ಲಿ ಮಂದಾರ ರಾಮಾಯಣವು ತುಳುನಾಡಿನ ಜನಪದ ಮತ್ತು ತುಳುಭಾಷೆಯ ವಿಶ್ವಕೋಶದಂತಿದೆ.

ರಾಮಾಯಣ ಪರಂಪರೆಯ ದೃಷ್ಟಿಯಿಂದಲೂ ಮಂದಾರ ರಾಮಾಯಣದಲ್ಲಿ ಹಲವು ವಿಶಿಷ್ಟ ಅಂಶಗಳಿವೆ. ಪ್ರಾದೇಶಿಕ ಸಂಸ್ಕೃತಿಯೊಂದಕ್ಕೆ ಅನ್ವಯಿಸಿ ಆ ಸಂಸ್ಕೃತಿಯ ಹಿನ್ನೆಲೆಯಲ್ಲಿ ರಾಮಾಯಣ ಕೃತಿರಚನೆ, ಭಾರತೀಯ ಭಾಷೆಗಳ ಗ್ರಂಥಸ್ಥ ಸಾಹಿತ್ಯದಲ್ಲೇ ಮಂದಾರ ರಾಮಾಯಣ ಮೊದಲನೆಯದಾಗಿದೆ. ಹಲವು ವಿಶಿಷ್ಟ ಸನ್ನಿವೇಶ ಮತ್ತು ಪಾತ್ರಚಿತ್ರಣಗಳು ರಾಮಾಯಣ ಪರಂಪರೆಯ ಹಿನ್ನೆಲೆಯಲ್ಲಿ ಹೊಸದಾಗಿದೆ. ಹಲವು ಒಳನೋಟಗಳೂ, ದರ್ಶನಗಳೂ ಆಧುನಿಕ ವಿಚಾರಗಳಿಗೆ ಪೂರಕವಾಗಿ ಮಂದಾರ ರಾಮಾಯಣದಲ್ಲಿ ವ್ಯಕ್ತವಾಗಿವೆ.

ಆಕರಸೂಚಿ

ಕನ್ನಡ ಗ್ರಂಥಗಳು

೧. ನಾಗಭೂಷಣ ಸ್ವಾಮಿ ಓ. ಎಲ್‌., ೧೯೯೩: ‘ಪುರಾಣ’ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

೨. ನಾವಡ ಎ. ವಿ, ೧೯೯೮; ‘ಸಿರಿ ಮಹಾಕಾವ್ಯ’, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.

೩. ಬಸವರಾಜು ಎಲ್‌., ಬಸವಾರಾಧ್ಯ ಎಸ್‌., (ಸಂ.), ೧೯೫೮, ‘ತೊರವೆ ರಾಮಾಯಣ ಸಂಗ್ರಹ’, ಗೌರಿಶಂಕರ ಬುಕ್‌ ಡಿಪೋ, ಮೈಸೂರು.

೪. ಬ್ಯಾತನಾಳ ಎಸ್‌. ಎಸ್‌., ೧೯೮೧, ‘ಕುಮಾರ ವಾಲ್ಮೀಕಿ ವಿರಚಿತ ತೊರವೆ ರಾಮಾಯಣ ಕಥಾವಸ್ತು ವಿವೇಚನೆ’, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೫. ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ೧೯೬೬, ‘ಆದಿಕವಿ ವಾಲ್ಮೀಕಿ’, ಜೀವನ ಕಾರ್ಯಾಲಯ, ಬೆಂಗಳೂರು.

೬. ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ೧೯೮೧, ‘ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ’, ಜೀವನ ಕಾರ್ಯಾಲಯ, ಬೆಂಗಳೂರು.

೭. ಲಕ್ಕಪ್ಪಗೌಡ ಎಚ್‌. ಜಿ., ೧೯೯೨, ‘ಶ್ರೀರಾಮಾಯಣದರ್ಶನಂ – ಒಂದು ವಿಮರ್ಶಾತ್ಮಕ ಅಧ್ಯಯನ’, ಸಹ್ಯಾದ್ರಿ ಪ್ರಕಾಶನ, ಮೈಸೂರು.

೮. ವತ್ಸಲ ವಿ. ಎಸ್‌., ೧೯೮೯, ‘ಕನ್ನಡದಲ್ಲಿ ರಾಮಾಯಣ ಮಹಾಕಾವ್ಯಗಳು’, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪಿಎಚ್‌.ಡಿ. ಪದವಿಗಾಗಿ ಸಲ್ಲಿಸಿದ ಮಹಾಪ್ರಬಂಧ.

೯. ವಿಯಾದಬ್ಬೆ, ೧೯೮೩, ‘ನಾಗಚಂದ್ರ-ಒಂದು ಅಧ್ಯಯನ’, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೧೦. ವಿವೇಕ ರೈ ಬಿ. ಎ., ಡಿ. ಯದುಪತಿ ಗೌಡ, ೧೯೯೬, ‘ಮಲೆಕುಡಿಯರು’ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.

೧೧. ಸೀತಾರಾಮಾಚಾರ್ಯ ಹೊಸಬೆಟ್ಟು, ೧೯೮೩, ‘ಕುಮಾರ ವಾಲ್ಮೀಕಿ’, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.

೧೨. ಸೀತಾರಾಮಾಚಾರ್ಯ ಹೊಸಬೆಟ್ಟು, ೧೯೭೬, ‘ಕುಮಾರ ವಾಲ್ಮೀಕಿ ಒಂದು ಅಧ್ಯಯನ’, ಪ್ರಸಾರಾಂಗ, ಮೈಸೂರು.

ಕನ್ನಡ ಲೇಖನಗಳು

೧೩. ರೋಹಿಣಿ ಬಿ. ಎಂ., ‘ಮಂದಾರ ರಾಮಾಯಣದ ಶೂರ್ಪನಖಿ, ಮಂಥೆಯರು’, ಹೊಸದಿಗಂತ ಪತ್ರಿಕೆ, ೨೯ ಮೇ ೧೯೯೪.

೧೪. ಸೀತಾರಾಮ ಆಚಾರ್ಯ ಹೊಸಬೆಟ್ಟು, ೧೯೯೭, ‘ತುಳು ಕಂಪು ಹರಡಿ ಕಣ್ಮರೆಯಾದ ಮಹಾಕವಿ’, ಉದಯವಾಣಿ, ದಿನಾಂಕ ೨೦.೦೩.೧೯೯೭.

೧೫. ‘ಮಂದಾರ ಕೇವ ಭಟ್‌ ಪರಿಚಯ’, ತುಳುವೆರೆ ತುಡರ್‌ ವರದಿ, ೧೫ ಆಗಸ್ಟ್‌೧೯೯೩, ತುಳು ಗ್ರಂಥಗಳು.

೧೬. ಪ್ರಭಾಕರ ಜೋಶಿ ಎಂ., ೧೯೯೮, ‘ಮಂದಾರ ರಾಮಾಯಣ’, ವಜ್ರದೀಪ ಪ್ರಕಾಶನ, ಬೆಳಗಾವಿ.