ಜೈನ ಸಂಸ್ಕೃತಿಯ ಸಂವರ್ಧನೆಯ ದೃಷ್ಟಿಯಿಂದ ಜೈನಮುನಿಗಳ ಪಾತ್ರ ಮತ್ತು ಜೈನಮಠಗಳು ವಹಿಸಿದ ಪಾತ್ರ ಹಿರಿದಾದುದು. ತುಳುನಾಡಿನಲ್ಲಿ ಮೂಲಸಂಘದ ಕೊಂಡ ಕುಂದಾನ್ವಯದ ಯತಿಗಳ ಪರಂಪರೆಯು ಕಾರ್ಯಪ್ರವೃತ್ತವಾಗಿದ್ದವು[1]. ಕಠೋರ ತಪಸ್ವಿ ಮಲಧಾರಿದೇವ, ಜೈನಶಾಸನ ರಕ್ಷಾಮಣಿ ಮಾಧವಚಂದ್ರ, ಪರಸಮಯಾದ್ರಿಗೆ ವಜ್ರನಾದ ಪ್ರಭಾಚಂದ್ರ, ಬೆಟ್ಟದ ದಾಮನಂದಿ, ಮುನಿಚೂಡಾಮಣಿ ನೇಮಿಚಂದ್ರ, ಸಿದ್ಧಾಂತೇಶ, ಗುಣಿಶ್ರೀ ಚಂದ್ರಯೋಗಿಗಳನ್ನು ವರಾಂಗದ ಶಾಸನವು ಉಲ್ಲೇಖಿಸುತ್ತದೆ[2]. ಇದೇ ರೀರಿ ನಂದಿಸಂಘ[3], ದ್ರವಿಳ ಸಂಘಗಳೂ[4]ಹಾಗೂ ಕಾಣೂರ್ಗಣ[5], ಬಲತ್ಕಾರಗಣ[6], ದೇಸಿಗಣ[7], ಸೇನಗಣ[8], ಸೂರಸ್ತಗಣ[9], ಸರಸ್ವತೀಗಚ್ಛ[10], ತಿಂತ್ರಿಣೀಗಚ್ಛ[11], ಮೇಷಪಾಷಾಣಗಚ್ಛ[12] ಮೊದಲಾದ ಪರಂಪರೆಯ ಮುನಿಗಳನ್ನು ಇಲ್ಲಿಯ ಶಾಸನಗಳು ಉಲ್ಲೇಖಿಸುತ್ತವೆ. ಇವುಗಳಲ್ಲಿ ಸಂಘವು ಪ್ರದಾನವಾದುದು. ಆದರ ಶಾಖೆಗಳು ಗಣಗಳು, ಗಣದ ಶಾಖೆ ಗಚ್ಛಗಳು. ಗಚ್ಛದ ಶಾಖೆಗಳಿಗೆ ಅನ್ವಯವೆಂದು ಹೆಸರು. ಕಠೋರ ತಪಸ್ಸು, ಉನ್ನತ ತ್ಯಾಗ, ಧರ್ಮಪ್ರಸಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಪಂಡಿತದೇವ, ಪ್ರಭಾಚಂದ್ರ ಭಟ್ಟಾರಕ, ಮಾಘನಂದಿ, ಬಾಳಚಂದ್ರ ತ್ರೈವಿಧ್ಯ, ದೇವಸಚಂದ್ರಸೂರಿ, ಧರ್ಮಚಂದ್ರ, ತುಳುಸಮಂತಭದ್ರ, ದೇವಚಂದ್ರ ಭಟ್ಟಾರಕ, ಮಾಧವಚಂದ್ರ ಭಟ್ಟಾರಕ, ವೀರಸೇನಮುನಿ, ವಿದ್ಯಾನಂದ ಮುಂತಾದ ಹಲವು ಜನರ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುತ್ತವೆ[13]. ಜೈನಶಾಸ್ತ್ರ ಗ್ರಂಥಗಳ ರಚನೆ ಮತ್ತು ರಕ್ಷಣೆಯ ಕಾರ್ಯಗಳು ಇವರಿಂದ ನಡೆದಿವೆ. ಮೂಡಬಿದಿರೆಯ ಚಾರುಕೀರ್ತಿ ಭಟ್ಟಾರಕ ಮಠ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಮಠ, ವರಾಂಗದ ದೇವೇಂದ್ರಕೀರ್ತಿ ಭಟ್ಟಾರಕ ಮಠ, ಗೇರುಸೊಪ್ಪೆ – ಹಾಡುವಳ್ಳಿಯ ಅಕಲಂಕ ಮಠಗಳು, ತುಳುನಾಡಿನಲ್ಲಿ ಜೈನ ಸಾಹಿತ್ಯ, ಕಲೆ, ಧರ್ಮಗಳ ಸಂರಕ್ಷಣೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸಿವೆ. ಈ ಮಠಗಳ ಶಾಖಾಮಠಗಳಾಗಿ ತುಳುನಾಡಿನ ಬೇರೆ ಬೇರೆ ಭಾಗಗಳಲ್ಲಿ ಸಣ್ಣ ಸಣ್ಣ ಮಠಗಳೂ ಹುಟ್ಟಿಕೊಂಡವು. ಜೈನ ಶಿಲ್ಪಕಲೆಯ ಔನ್ನತ್ಯವನ್ನು ಸಾರುವ ಮೂಡಬಿದರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿ, ಗುರುಗಳ ಬಸದಿ, ಕಾರ್ಕಳ ಹಿರಿಯಂಗಡಿಯ ನೇಮೇಶ್ವರ ಬಸದಿ, ಚತುರ್ಮುಖ ಬಸದಿ, ಗೇರುಸೊಪ್ಪೆಯ ಪಾರ್ಶ್ವನಾಥ ಬಸದಿ – ಚತುರ್ಮುಖ ಬಸದಿಗಳನ್ನು ಇಲ್ಲಿ ಹೆಸರಿಸಬಹುದು. ಹಿರಿಯಂಗಡಿಯಲ್ಲಿರುವ ಬೃಹತ್ ಮಾನಸ್ತಂಭ ಕರ್ನಾಟಕದಲ್ಲಿ ಅತ್ಯಂತ ಎತ್ತರವಾದುದು. ಚತುರ್ಮುಖ ಬಸದಿಯ ವಿಶಿಷ್ಟವಾದ ಶೈಲಿ ತುಳುನಾಡಿನ ವೈಶಿಷ್ಟ್ಯ. ಬೇರೆ ಕಡೆಗಳಲ್ಲಿ ಇಂಥ ರಚನೆಗಳು ವಿಶೇಷವಾಗಿಲ್ಲ. ಕಾರ್ಕಳ, ವೇಣೂರು, ಧರ್ಮಸ್ಥಳಗಳಲ್ಲಿರುವ ಮೂರು ಬಾಹುಬಲಿ ಶಿಲ್ಪಗಳು, ಬ್ರಹ್ಮಸ್ತಂಭಗಳ ನಿರ್ಮಾಣ, ತುಳುನಾಡಿನ ಉದ್ದಗಲಗಳಲ್ಲಿ ತಲೆ ಎತ್ತಿರುವ ೧೮೦ ಬಸದಿಗಳು[14] ಜೈನಧರ್ಮದ ಸಮೃದ್ಧಿಗೆ ಸಾಕ್ಷಿ ನುಡಿಯುತ್ತಿವೆ. ಜೈನ ಕವಿಗಳಾದ ಕಲ್ಯಾಣಕೀರ್ತಿ, ಸಾಳ್ವ, ರತ್ನಾಕರವರ್ಣಿ ಮೊದಲಾದವರು ಕಾವ್ಯ, ವ್ಯಾಖ್ಯಾನ, ಶಾಸ್ತ್ರಗ್ರಂಥಗಳನ್ನು ರಚಿಸಿ ಜೈನ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅಪಾರ ಸಂಖ್ಯೆಯ ತಾಡಪತ್ರೀಯ ಲಿಪಿಕಾರರು ಕಾಣಿಸಿಕೊಂಡರು. ಚಿತ್ರಕಲೆ ಅಭಿವೃದ್ಧಿಗೊಂಡಿತು. ಮೂಡಬಿದರೆ, ಕಾರ್ಕಳಗಳ ಜೈನಮಠ, ಬಜಗೋಳಿ, ನೆಲ್ಲಿಕಾರುಗಳಲ್ಲಿರುವ ಶ್ರಾವಕರ ಮನೆಗಳಲ್ಲಿ ಈ ಕಲೆಯನ್ನು ಗುರುತಿಸಬಹುದಾಗಿದೆ. ಈ ಕಲೆಯ ಜೊತೆಗೆ ಜೈನ ಕಾಷ್ಠಕಲೆ, ಲೆಪ್ಪದ ವಿಗ್ರಹಗಳು, ನವರತ್ನಗಳ ಬಿಂಬಗಳು ರಚನೆಗೊಂಡವು. ಸಂಗೀತ, ನೃತ್ಯ, ಕೀರ್ತನೆಗಳೂ ತ್ವರಿತವಾಗಿ ಬೆಳವಣಿಗೆ ಹೊಂದಿದವು. ಜೈನಧರ್ಮದ ಸ್ಥಿತಿಯನ್ನೂ, ಘನತೆಯನ್ನೂ ಪರಿಚಯಿಸುತ್ತ ಮೂಡಬಿದಿರೆಯ ಶಾಸನಕವಿಯೋರ್ವನು[15] “ಜಿನಧರ್ಮ ಮಾರ್ಗರತರಿಂ ಸತ್ಪಾತ್ರದಾನಂಗಳಂ ನಲವಿಂಮಾಳ್ಪ ಸುಭವ್ಯರಿಂ ಜಿನಕಥಾಳಪಂಗಳಿಂ ಸಾಧುಸಂಕುಳದಿಂ ಕೇಳ್ವ ಸುಶೀಲ ಸತ್ಪುರುಷರಿಂ” ಆ ಪಟ್ಟಣವು ಶೋಭಿಸುತ್ತಿತ್ತೆಂದು ಹೇಳುತ್ತಾನೆ. ಹಾಗೂ” ….ಸಂಚರಿಪ ನಾರೀ ವೃಂದದಿಂ ಸಾರಕಾವ್ಯ ನಾವಾರ್ತ್ಥ್ಯಾಮೃತ ಸೇವೆಯಿಂ ತಣಿವ ಕಾವ್ಯ ಪ್ರೌಢರಂ ರತ್ನ ಕಾಂಚನ ಚೀನಾಂಬರ ವಿಕ್ರಯ ಕ್ರಯಿಕರಿಂ ಚೆಲ್ವಾದುದೆತ್ತಂಪುರಂ” ಎಂದು ಜೈನ ಸಮಾಜದ ಚಿತ್ರವನ್ನು ಮನೋಜ್ಞವಾಗಿ ನೀಡುತ್ತಾನೆ[16].

ಉಳಿದ ಧರ್ಮಗಳಲ್ಲಿ ವೈದಿಕ ಪರಂಪರೆಯ ಅದ್ವೈತ, ದ್ವೈತ ಪಂಥಗಳು, ಶೈವ ಪರಂಪರೆಯ ವೀರಶೈವ ಪಂಥವು ಕ್ರಿ.ಶ. ೧೨ನೇ ಶತಮಾನದ ತರುವಾಯು ತುಳುನಾಡಿನಲ್ಲಿ ವಿಶೇಷವಾಗಿ ಪ್ರಚಾರಕ್ಕೆ ಬಂದವು. ಶಂಕರಾಚಾರ್ಯರಿಂದ (ಕ್ರಿ.ಶ. ೮ನೆಯ ಶತಮಾನ) ಶೃಂಗೇರಿಯಲ್ಲಿ ಅದ್ವೈತ ಮಠವು ಸ್ಥಾಪನೆಗೊಂಡು, ಇಲ್ಲಿಯ ಗುರುಗಳು ಜಗದ್ಗುರುಗಳೆಂದು ಮಾನ್ಯತೆ ಪಡೆದ ಬಳಿಕ ವೇದಾಂತದ ವಿವಿಧ ಮಾರ್ಗವನ್ನು ಅನುಸರಿಸುತ್ತಿದ್ದ ಬ್ರಾಹ್ಮಣವರ್ಗವನ್ನು ಒಂದು ಕಕ್ಷೆಗೆ ತಂದಿತು. ಕಾರ್ಕಳ, ಬೆಳ್ತಂಗಡಿ, ವಿಟ್ಲ, ಸುಳ್ಯ ಪುತ್ತೂರು ಭಾಗಗಳಲ್ಲಿ ನೆಲೆಸಿರುವ ಹವ್ಯಕರಲ್ಲಿ ಅನೇಕ ಒಳ ವಿಭಾಗಗಲೂ ಇವೆ. ಮುಖ್ಯವಾಗಿ ಶಿವಳ್ಳಿ, ಕೋಟ ಮತ್ತು ಹವ್ಯಕರೆಲ್ಲರೂ ಒಂದೇ ಪರಂಪರೆಗೆ ಸೇರಿದವರು[17].    ಅದ್ವೈತ ಸ್ಮಾರ್ತ ವೈದಿಕ ಪಂಥದಲ್ಲಿ ಶ್ರೌತ, ಸ್ಮಾರ್ತ, ಆಚರಣೆಗಳು ಹಾಗೂ ಶಿವ, ವಿಷ್ಣು, ಸೂರ್ಯ, ಗಣಪತಿ, ದೇವಿ ಈ ಪಂಚಾಯತನ ಪೂಜೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸ್ಮಾತವೈದಿಕರು ವಿಜಯನಗರ ಆಡಳಿತ ಕಾಲದಲ್ಲಿ ವಿಶೇಷ ಸ್ಥಾನಮಾನವನ್ನೂ, ಪುರಸ್ಕಾರವನ್ನೂ ಪಡೆದುಕೊಂಡಿದ್ದರು. ವಿಜಯನಗರ ಸಾಮ್ರಜ್ಯರ ಸ್ಥಾಪನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ವಿದ್ಯಾರಣ್ಯರು ಸ್ಮಾರ್ತ ಅದ್ವೈತಿಗಳಾಗಿದ್ದು ನ್ಯಾಯ, ವೈಶೇಷಿಕ, ಮೀಮಾಂಸಾದಿ ದರ್ಶನಗಳನ್ನು ಅನುಸರಿಸಿ ಗ್ರಂಥರಚನೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ತುಳುನಾಡಿನಲ್ಲಿ ೧೩ನೇ ಶತಮಾನದ ಸುಮಾರಿಗೆ ಮಧ್ವಾಚಾರ್ಯರಿಂದ ಪ್ರತಿಪಾದಿತವಾದ ದ್ವೈತ ಸಿದ್ಧಾಂತವು ವಿಷ್ಣುಪಾರಮ್ಯವನ್ನು ಸಾರುವ ಮಾಧ್ವಪಂಥವಾಗಿ ಜನಪ್ರಿಯತೆಯನ್ನು ಗಳಿಸಿತು. ವೈದಿಕ, ಪೌರಾಣಿಕ, ಸ್ಮಾರ್ತ ಆಚರಣೆಗಳು ಇದರಲ್ಲಿದ್ದರೂ ಇವೆಲ್ಲವೂ ಪರಮಾತ್ಮನಲ್ಲಿ ಭಕ್ತಿಯನ್ನು ಉಕ್ಕಿಸಲು ಮಾಡಬೇಕಾದ ಕರ್ತವ್ಯಗಳೆಂದು ನಿರೂಪಿಸಿ, ಭಗವದ್ಭಕ್ತಿಯೇ ಮೋಕ್ಷಸಾಧನೆಯ ಗುರಿಯೆಂದು ಪ್ರತಿಪಾದಿಸಿತು. ಉಡುಪಿಯಲ್ಲಿ ಅಷ್ಟಮಠಗಳು ಸ್ಥಾಪನೆಗೊಂಡವು. ವಾದಿರಾಜರಂಥ ಉತ್ಸಾಹೀ ಹಾಗೂ ವಿದ್ವತ್‌ಪೂರ್ಣ ಯತಿಗಳು ಈ ಸಂಪ್ರದಾಯದ ಹರಡುವಿಕೆಗೆ ಕಾರಣರಾದರು. ಬೆಸ್ತರು, ಅಕ್ಕಸಾಲಿಗರು ಮುಂತಾದ ಸಾಮಾನ್ಯ ಜನರಿಗೂ ಅವರು ದೀಕ್ಷೆ ನೀಡಿ, ಹೊಸ ಅರಿವನ್ನು ಸ್ಫೋಟಿಸಿದರು. ಈ ದೃಷ್ಟಿಯಿಂದ ಉಡುಪಿಯು ವೈಷ್ಣವ ಸಂಪ್ರದಾಯದ ಮುಖ್ಯ ಕೇಂದ್ರವಾಗಿ ಬೆಳೆದು ಸಮಾಜದ ಎಲ್ಲ ವರ್ಗವೂ ಧರ್ಮ ಸಾಮರಸ್ಯದ ನೆಲೆಯಲ್ಲಿ ಒಂದುಗೂಡಿತು. ಹೀಗಾಗಿ ಮಾಧ್ವಸಂಪ್ರದಾಯವು ತುಳುನಾಡು ಭಾರತಕ್ಕೆ ನೀಡಿದ ಒಂದು ಅಪೂರ್ವ ಕೊಡುಗೆಯೇ ಸೈ ಎಂದು ಮುಕ್ತವಾಗಿ ವಿದ್ವಾಂಸರು ಪ್ರಶಂಸಿಸಿದ್ದಾರೆ[18]. ಪೆರ್ಡೂರು, ಅಜೆಕಾರು, ಬ್ರಹ್ಮಾವರ, ಉಜಿರೆ, ಕಾಪು ಹೀಗೆ ಹಲವೆಡೆಗಳಲ್ಲಿ ಜನಾರ್ಧನನ ದೇವಾಲಯಗಳು ನಿರ್ಮಾಣಗೊಂಡವು.

ಗೋವೆಯಿಂದ ತುಳುನಾಡಿಗೆ ಆಗಮಿಸಿದ ಗೌಡಸಾರಸ್ವತರಲ್ಲಿ ಹೆಚ್ಚಿನವರು ಮಾಧ್ವರಾಗಿದ್ದು ತುಳುನಾಡಿನ ಉದ್ದಗಲಕ್ಕೂ ಅವರು ವೆಂಕಟರಮಣನ ದೇವಾಲಯವನ್ನು ನಿರ್ಮಿಸಿದ್ದಾರೆ. ಮಾಧ್ವರು ವೈಷ್ಣವರಾದರೂ ಶಿವಾರಾಧನೆಯನ್ನು ವಿರೋಧಿಸಿದವರಲ್ಲ. ಶಿವರಾತ್ರಿಯಂದು ಉಪವಾಸಾದಿ ವ್ರತಗಳನ್ನು ಮಾಡುತ್ತಾರೆ. ಇಂದಿಗೂ ತುಳುನಾಡಿನ ಬಹುಪಾಲು ಶಿವಾಲಯಗಳಲ್ಲಿ ಮಾದ್ವರೇ ಅರ್ಚಕರಾಗಿರುವುದು ಉನ್ನತ ಸಂಸ್ಕೃತಿಯೊಂದರ ಲಕ್ಷಣವಾಗಿದೆ. ಹೀಗಾಗಿ ಇಲ್ಲಿಯ ಜನರು ಹರಿಹರರಲ್ಲಿ ಭೇದ ಕಾಣಲಿಲ್ಲ. ತುಳುನಾಡಿನ ಶಂಕರನಾರಾಯಣ, ನಾಲೂರು, ಪಾಂಡೇಶ್ವರ, ಕೊಡಗಿ, ಮೊಗೇರಿ ಮುಂತಾದ ಕಡೆಗಳಲ್ಲಿ ಹಲವು ಶಂಕರನಾರಾಯಣ ದೇವಾಲಯಗಳು ನಿರ್ಮಾಣಗೊಂಡಿವೆ[19]. ರಾಮಾನುಜಾಚಾರ್ಯರು ವಿಷ್ಣುಭಕ್ತಿಯೊಡನೆ ಶ್ರೌತ, ಸ್ಮಾರ್ತ ಆಚರಣೆಗಳನ್ನು ಒಗ್ಗೂಡಿಸಿಕೊಂಡು ಹದಿನೆಂಟು ಕುಲಜಾತಿಗೆ ಸೇರಿದ ಕೆಳವರ್ಗದವರನ್ನು ಒಂದೇ ಧಾರ್ಮಿಕ ಚೌಕಟ್ಟಿಗೆ ತರಲು ಪ್ರಯತ್ನಿಸಿದ್ದರು. ಆದರೆ ಈ ಪಂಥ ತುಳುನಾಡಿನಲ್ಲಿ ಪ್ರಭಾವಿತವಾಗಲಿಲ್ಲ. ಆದರೆ ವೀರಶೈವ ಪಂಥ ಸ್ವಲ್ಪಮಟ್ಟಿಗೆ ಇಲ್ಲಿ ಆಶ್ರಯ ಪಡೆದಿತ್ತು. ಹೊಯ್ಸಳ ಮುಮ್ಮಡಿ ಬಲ್ಲಾಳನ ಸಮಕಾಲೀನನಾದ ಗೋಸಲರಾಯ ಎಂಬಾತನು ತುಳುನಾಡಿಗೆ ಬಂದು ತನ್ನ ಪವಾಡಗಳ ಪ್ರಭಾವದಿಂದ ವೀರಶೈವ ಸಂಪ್ರದಾಯಗಳನ್ನು ಪ್ರಚಾರ ಮಾಡಿದನೆಂದು ಒಂದು ಶಾಸನದಿಂದ ತಿಳಿದುಬರುತ್ತದೆ[20]. ಇದು ಹದಿನಾಲ್ಕನೆಯ ಶತಮಾನದ ಘಟನೆಯಾದರೂ ಕೆಳದಿ ನಾಯಕರ ಆಳ್ವಿಕೆಯಲ್ಲಿ ವೀರಶೈವವು ಆ ರಾಜರ ಪ್ರೋತ್ಸಾಹದಿಂದ ತುಳುನಾಡಿನಲ್ಲಿ ಹರಡಿತು. ಸದಾಶಿವನಾಯಕನು ಕ್ರಿ.ಶ. ೧೫೬೨ರಲ್ಲಿ ಒಂದು ಮಠವನ್ನು ಶಂಕರನಾರಾಯಣದಲ್ಲಿ ಸ್ಥಾಪಿಸಿದ್ದನು. ಎರಡನೇ ವೆಂಕಟಪ್ಪ ನಾಯಕನು ಬಾರಕೂರು, ಬೆಣ್ಣೆಹಳ್ಳಿ, ಮಾರಗ, ಬೋಳೂರು, ಮಂಗಳೂರಿನಲ್ಲಿ ಜಂಗಮ ಮಠಗಳನ್ನು ಕಟ್ಟಿಸಿದನೆಂದು ತಿಳಿದುಬರುತ್ತದೆ[21]. ಗುರುವಾಯನಕೆರೆ, ಗುರುಪುರ, ಗಂಜಿಮಠ, ವಿಟ್ಲಗಳಲ್ಲಿಯೂ ವೀರಶೈವ ಮಠದ ಸ್ಮಾರಕಗಳಿವೆ. ಚೌಟ ಅಬ್ಬಕ್ಕದೇವಿಯ (ಕ್ರಿ.ಶ. ೧೫೭೪) ಶಾಸನವೊಂದರಲ್ಲಿ ವೀರಶೈವರಿಗೂ, ಬ್ರಾಹ್ಮಣರಿಗೂ ಮೂಡಬಿದಿರೆಯ ನೆಲ್ಲಿತೀರ್ಥದಲ್ಲಿ ಶಿವಲಿಂಗವನ್ನು ಕಿತ್ತುಹಾಕಿದ್ದಕ್ಕೆ ವ್ಯಾಜ್ಯ ನಡೆದಾಗ ಅದನ್ನು ಸೌಹಾರ್ದಯುತವಾಗಿ ಪರಿಹರಿಸಿದ ವಿವರಗಳಿವೆ[22]. ಆದರೆ ಕೆಳದಿ ಅರಸರ ಪತನಾನಂತರ ಇದು ತನ್ನ ಪ್ರಭಾವವನ್ನು ಕಳೆದುಕೊಂಡಿತು.

ತುಳುನಾಡಿನಲ್ಲಿ ಗಾಣಪತ್ಯ ಮತ್ತು ಸೌರಪಂಥಗಳು ಪ್ರತ್ಯೇಕವಾಗಿ ಆಚರಣೆಯಲ್ಲಿದ್ದವೇ ಎನ್ನುವುದಕ್ಕೆ ಆಧಾರಗಳಿಲ್ಲ. ಆದರೆ ತುಳುನಾಡಿನಲ್ಲಿ ಅಸಂಖ್ಯ ಗಣಪತಿಯ ಗುಡಿಗಳಿವೆ. ಗೋಕರ್ಣ, ಇಡಗುಂಜಿಯ ಗಣಪತಿಗಳಂತೂ ಕ್ರಿ.ಶ. ೪ನೆಯ ಶತಮಾನದ ರಚನೆಗಳೆಂದು ಹೇಳಲಾಗುತ್ತಿದೆ. ಸ್ವತಂತ್ರ ಸೂರ್ಯ ದೇವಾಲಯಗಳು ನಾರಾವಿ, ಕೆಲ್ಲಪುತ್ತಿಗೆ, ಕಡಂದಲೆ, ಕುಂಭಾಶಿ, ಮರೋಳಿ ಬೆಳ್ವೆಗಳಲ್ಲಿವೆ. ಈ ಹಿಂದೆ ಪ್ರಸ್ತಾಪಿಸಿರುವಂತೆ ಶೈವ ಪರಂಪರೆಯ ಶಾಕ್ತ ಮತ್ತು ನಾಥ ಪಂಥಗಳು ಪ್ರಾಚೀನ ಕಾಲದಿಂದಲೂ ಪ್ರಚಲಿತವಿವೆ. ಶೈವ ಸಪ್ತ ಪೀಠಗಳಾದ ರಜತಪೀಠ (ಉಡುಪಿ), ಕುಮಾರಪರ್ವತ, ಕುಂಭಕಾಶಿ, ಧ್ವಜೇಶ್ವರ (ಕೋಟ), ಕ್ರೋಡ (ಶಂಕರನಾರಾಯಣ), ಗೋಕರ್ಣ ಮತ್ತು ಕೊಲ್ಲೂರುಗಳು ಕರ್ನಾಟಕದಲ್ಲಿ ಪ್ರಾಚೀನ ಶಿವಪೀಠಗಳಾಗಿವೆ. ಶಾಸನಗಳಲ್ಲಿ ಕಂಡುಬರುವ ಕುಂದೇಶ್ವರ, ಕಾಂತೇಶ್ವರ, ಬಂಕೇಶ್ವರ, ಮಾರ್ಕಂಡೇಶ್ವರ, ತಿಮಿರೇಶ್ವರ, ಸೇನೇಶ್ವರ, ನಖರೇಶ್ವರ ದೇವಾಲಯಗಳು ತುಳುನಾಡಿನ ಪ್ರಸಿದ್ಧ ಶಿವದೇವಾಲಯಗಳಾಗಿವೆ. ತುಳುನಾಡಿನಲ್ಲಿ ಪ್ರಾಚೀನ ಕಾಲದಿಂದಲೂ ಕಂಡುಬರುವ ಸ್ಥಾನಿಕರು, ಅದ್ವೈತ ಸಂಪ್ರದಾಯದ ಅನುಯಾಯಿಗಳಾಗಿದ್ದಾರೆ. ಇವರನ್ನು ಗೊರವರು ಎಂದು ಕರೆಯಲಾಗುತ್ತಿದ್ದು ಉದ್ಯಾವರದ ಶಾಸನದಲ್ಲಿ ಇವರ ಉಲ್ಲೇಖವಿದೆ[23]. ಶಂಕರರ ಶಿಷ್ಯರಾದ ಹಸ್ತಾಮಲಕರು ಉಡುಪಿಗೆ ಬಂದು ಕೃಷ್ಣನ ಆದಿಯಾಗಿ ದೇವರುಗಳ ಪ್ರತಿಷ್ಠಾಪನೆ ಮಾಡಿದರೆಂದು ಶಂಕರವಿಜಯದಲ್ಲಿ ಉಲ್ಲೇಖಿಸಿದೆ[24]. ತುಳುನಾಡಿನಲ್ಲಿ ಕೌಮಾರಪಂಥ ಕಂಡುಬರದಿದ್ದರೂ, ಸುಬ್ರಹ್ಮಣ್ಯನ ಆರಾಧನೆ ಸಾರ್ವತ್ರಿಕವಾಗಿ ಕಂಡುಬರುವುದು ಕುತೂಹಲದ ವಿಷಯ. ಸಪ್ತಮಾತೃಕೆಯರ ಆರಾಧನೆಗೂ ಇಲ್ಲಿ ಚಾಲನೆ ದೊರೆತಿದೆ. ಪೊಳಲಿಯ ಒಂದು ಶಾಸನದಲ್ಲಿ ಆಳುಪೇಂದ್ರನು ಸಪ್ತಮಾತೃಕೆಯರಿಂದ ರಕ್ಷಿತನೆಂದು ಹೇಳಿಕೊಂಡಿದ್ದಾನೆ[25]. ನಾಥಪಂಥಧ ಜುಗಾದಿ ಕುಂಡಲನೆಂಬ ಜೋಗಿಗೆ ಚೌಟ ಅರಸರು ಭೂದಾನ ಮಾಡಿದ ಉಲ್ಲೇಖವು ಒಂದು ಶಾಸನದಲ್ಲಿ ಬಂದಿದೆ[26]. ಕ್ರಿ.ಶ ೧೪೭೫ರಲ್ಲಿ ಗೋರಖನಾಥನ ಪೂಜೆಗಾಗಿ ಕದಿರೆಯಲ್ಲಿ ಜೋಗಿಮಂಗಲನಾಥನಿಗೆ ಭೂದಾನ ಮಾಡಿದ ಉಲ್ಲೇಖ ಮತ್ತೊಂದು ಶಾಸನದಲ್ಲಿದೆ75a. ಕ್ರಿ.ಶ. ೧೪೯೧ರ ಬಾರಕೂರು ಶಾಸನದಲ್ಲಿ ಸುಬುದ್ಧಿ ಒಡೆಯನ ಶಿಷ್ಯನಾದ ಅನೂಪನಾಥನಿಗೆ ಜೋಗಿಮಠದ ಸೇವೆಗಾಗಿ ದಾನ ನೀಡಿದ ಉಲ್ಲೇಖವು ಕಂಡುಬರುತ್ತದೆ[27]. ಇದರಿಂದ ಕ್ರಿ.ಶ. ೧೫-೧೬ನೇ ಶತಮಾನದವರೆಗೂ ನಾಥಪಂಥವು ತುಳುನಾಡಿನಲ್ಲಿ ಪ್ರಚಾರದಲ್ಲಿತ್ತೆಂದು ತಿಳಿಯಬಹುದಾಗಿದೆ.

ತುಳುನಾಡಿನ ಉಪಜಾತಿಗಳಲ್ಲಿ ಬಂಟರು, ಗೌಡರು, ಬಿಲ್ಲವರು ಪ್ರಮುಖರಾಗಿದ್ದಾರೆ. ಜೊತೆಗೆ ಕುಂಬಾರರು, ಗಾಣಿಗರು, ಮೊಗೇರರು, ರಾಣೆಯರು, ಮಲೆಕುಡಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಒಂದು ವರದಿಯ ಪ್ರಕಾರ ತುಳುನಾಡಿನಲ್ಲಿ ೩೨ ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆಂದು ತಿಳಿದುಬರುತ್ತದೆ[28]. ಇವರೆಲ್ಲರೂ ಸ್ಥಳೀಯ ಭೂತಾರಾಧನೆ, ನಾಗಾರಾಧನೆಗಳಲ್ಲಿ ವಿಶ್ವಾಸವುಳ್ಳವರು. ಬಳಿ ಪದ್ಧತಿಯನ್ನು ಆಚರಿಸುವವರಾಗಿದ್ದಾರೆ. ಇವರ ಬಗ್ಗೆ ಗ್ರಾಂಥಿಕ ರೂಪದ ಉಲ್ಲೇಖಗಳು ಹೆಚ್ಚಾಗಿ ಕಂಡುಬರುವುದಿಲ್ಲ. ಬಂಟರು ಬೇರೆ ಕಡೆಗಳಿಂದ ವಲಸೆ ಬಂದು ಇಲ್ಲಿ ನೆಲಸಿದವರಾಗಿದ್ದಾರೆ. ಇವರಲ್ಲಿ ಸಾಮಾನ್ಯ ಬಂಟರು, ನಾಡ ಬಂಟರು, ಪರಿವಾರ ಬಂಟರು, ಜೈನ ಬಂಟರೆಂಬ ನಾಲ್ಕು ಪ್ರಭೇದಗಳಿವೆ[29]. ಕ್ರಿ.ಶ. ೧೪೧೭ರ ಕಾಯ್ಕಿಣಿಯ ಶಾಸನದಲ್ಲಿ[30] ನಾಡವರ ಉಲ್ಲೇಖವೂ, ಕ್ರಿ.ಶ. ೧೪೭೪ರ ಹಾಡುವಳ್ಳಿಯ ಇಂದ್ರರಸನ ಶಿರೂರು ಶಾಸನದಲ್ಲಿ[31] ಬಂಟರ ಉಲ್ಲೇಖವೂ ಪ್ರಥಮ ಬಾರಿಗೆ ಕಂಡುಬರುತ್ತದೆ. ತುಳು ಪಾಡ್ದನ, ಜನಪದ ಸಾಹಿತ್ಯದಲ್ಲಿ ಇವರ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಿವೆ. ತುಳುನಾಡಿನಲ್ಲಿ ಇವರು ಜೈನಮತೀಯರಂತೆ ಮಾಗಣೆ, ಗುತ್ತು, ಬೀಡುಗಳ ಮಟ್ಟದ ಅಧಿಕಾರಿಗಳಿದ್ದರು. ದಕ್ಷಿಣ ಕನ್ನಡದಾದ್ಯಂತ ಬಂಟರ ಬೀಡು, ಗುತ್ತುಗಳಿವೆ. ಇವರು ವಿಜಯನಗರ ಅರಸರ ಕಾಲದಲ್ಲಿ ಸೈನಿಕ ಹುದ್ದೆಯಲ್ಲಿದ್ದರೆಂದು ಹೇಳಲಾಗುತ್ತಿದೆ. ಗೌಡರು ಕೂಡ ವಿಜಯನಗರ ಸಾಮ್ರಾಟರ ಕಾಲದಲ್ಲಿ ಸೈನ್ಯದಲ್ಲಿದ್ದು, ತಾಳೀಕೋಟೆಯ ಪತನಾನಂತರ ಕೆಳದಿಗೆ ಬಂದು ಐಗೂರು ಸೀಮೆಯಲ್ಲಿ ನೆಲೆಸಿದರೆಂದೂ, ಆ ಬಳಿಕ ತುಳುನಾಡಿಗೆ ವಲಸೆ ಬಂದು ಕೃಷಿ ವ್ಯವಸಾಯದಲ್ಲಿ ತೊಡಗಿದರೆಂದೂ ಹೇಳಲಾಗುತ್ತಿದೆ[32]. ಇದರಲ್ಲೂ ಅನೇಕ ಒಳಪಂಗಡಗಳಿವೆ. ವೆಂಕಟರಮಣನನ್ನು ಕುಲದೇವರೆಂದು ಪೂಜಿಸುತ್ತಾರೆ. ಬಿಲ್ಲವರು ತುಳುನಾಡಿನ ಮೂಲನಿವಾಸಿಗಳೆಂದೂ, ಬಿಲ್ಲುವಿದ್ಯೆಯಲ್ಲಿ ಪರಿಣಿತರಾಗಿದ್ದು ಬೇಟೆಯಲ್ಲಿ ಆಸಕ್ತಿ ವಹಿಸುತ್ತಿದ್ದರೆಂದೂ ಹೇಳಲಾಗುತ್ತಿದೆ. ಇವರನ್ನು ಮೂರ್ತೆದಾರರೆಂದೂ ಕರೆಯುತ್ತಾರೆ. ತುಳುನಾಡಿನ ಜೈನ ಅರಸರ ನೆಚ್ಚಿನ ಬಟರಾಗಿದ್ದು, ಸೈನ್ಯದಲ್ಲಿ ನಿಯುಕ್ತಗೊಂಡಿದ್ದರು. ಕೋಟಿ – ಚೆನ್ನೆಯರ ಪಾಡ್ದನದಲ್ಲಿ ಇವರ ಬಗ್ಗೆ ಮಾಹಿತಿ ದೊರೆಯುತ್ತದೆ. ಈಗ ಬ್ರಹ್ಮಶ್ರೀ ನಾರಾಯಣ ಗುರುವನ್ನು ತಮ್ಮ ಕುಲದೇವರೆಂದು ಸ್ವೀಕರಿಸಿದ್ದಾರೆ. ಗಾಣಿಗರು ಕೂಡ ಕರ್ನಾಟಕದ ಇತರ ಭಾಗಗಳಿಂದ ಇಲ್ಲಿಗೆ ಬಂದು ನೆಲೆಸಿದವರು[33]. ಆನೆಗುಂದಿಯ ವ್ಯಾಸರಾಯರ ಮಠದ ಮುಖ್ಯಸ್ಥರನ್ನು ತಮ್ಮ ಕುಲದೇವರೆಂದು ಸ್ವೀಕರಿಸಿದ್ದಾರೆ. ಶೃಂಗೇರಿಯ ಮಠದ ಭಕ್ತರೂ ಹೌದು. ಗಾಣದಿಂದ ಎಣ್ಣೆ ತೆಗೆಯುವುದು ಇವರ ಮುಖ್ಯ ಉದ್ಯೋಗ. ಚೌಡೇಶ್ವರಿಯನ್ನು ಮುಖ್ಯ ದೇವತೆಯೆಂದು ಪೂಜಿಸುತ್ತಾರೆ. ಇವರಲ್ಲಿ ಶೈವ ಮತ್ತು ವೈಷ್ಣವ ಈ ಎರಡೂ ಪರಂಪರೆಗೆ ಸೇರಿದವರಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮೊಗೇರರು ತುಳುನಾಡಿನ ಎಲ್ಲೆಡೆ ವಾಸವಾಗಿದ್ದಾರೆ. ಮೇರರೆಂದು ಇವರನ್ನು ಕರೆಯುತ್ತಾರೆಸ. ತುಳು ಪಾಡ್ದನಗಳಲ್ಲಿ ಇವರ ಬಗ್ಗೆ ಸಾಕಷ್ಟು ವಿವರಗಳಿವೆ. ಗ್ರೀಕ್ ಪ್ರಹಸನದಲ್ಲಿ ಬರುವ ಬಾರ್ಬೆರಿಕರು ಮೊಗೇರ ಜನಾಂಗವಾಗಿರಬಹುದೆಂದು ಜಾನಪದ ತಜ್ಞರು ಭಾವಿಸುತ್ತಾರೆ[34]. ಇಲ್ಲಿ ಮೂಲನಿವಾಸಿಗಳಲ್ಲಿ ಒಬ್ಬರಾದ ಈ ಜನಾಂಗದವರು ಸ್ವತಂತ್ರ ಕೋಟೆಗಳನ್ನು ಕಟ್ಟಿ, ಆಡಳಿತ ನಡೆಸುತ್ತಿದ್ದರೆಂದು ಹೇಳುತ್ತಾರೆ[35]. ಬಂಟ್ವಾಳದ ಒಂದು ಶಾಸನದಲ್ಲಿ[36]. ಮೊಗೇರರು ಕಣಂತೂರು ಆಡಳಿತ ಮಂಡಳಿಯ ರಕ್ಷಕರೆಂದು ಉಲ್ಲೇಖಿಸಿರುವುದು ಕುತೂಹಲದ ವಿಷಯ. ರಾಣೆಯರ ಮೂಲದ ಬಗ್ಗೆಯೂ ಸ್ಪಷ್ಟ ಆಧಾರಗಳಿಲ್ಲ. ಕಾರ್ಕಳ, ಬೈಲೂರು, ಮೂಡಬಿದಿರೆ, ಕಾಪು, ಕಿನ್ನಿಗೋಳಿ ಈ ಆರು ಕಡೆಗಳಲ್ಲಿ ರಾಣೆಯರು ವಿಶೇಷವಾಗಿ ನೆಲೆಸಿದ್ದಾರೆ. ಟಿಪ್ಪು ಸುಲ್ತಾನನ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ರಾಣೆಬೆನ್ನೂರಿನಿಂದ ಬಂದಿರಬೇಕೆಂದು ಕೆಲವರು ಭಾವಿಸಿದರೆ, ಮತ್ತೆ ಕೆಲವರು ಮೈಸೂರು ಪ್ರಾಂತ ಅಥವಾ ಉಚ್ಚಂಗಿಯವರಿರಬಹುದೆಂದು ಭಾವಿಸುತ್ತಾರೆ[37]. ಹಾಡುವಳ್ಳಿಯ ಇಂದ್ರರಸನ ಕ್ರಿ.ಶ ೧೪೭೪ರ ಶಿರೂರು ಶಾಸನ[38]ದಲ್ಲಿ ಇವರ ಉಲ್ಲೇಖವಿದೆ. ಇವರೂ ಕೂಡ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಲೆಕುಡಿಯರು, ಮಾಯಿಲರು, ಭೈರರು ಹಾಗೂ ಇನ್ನೂ ಕೆಲವು ಮೂಲ ಪಂಗಡಗಳವರು ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದಾರೆ. ಅವರದೇ ಆದ ಕೆಲವು ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬಂದಿರುವುದು ಕುತೂಹಲದ ಅಂಶವಾಗಿದೆ. ಇತ್ತೀಚೆಗೆ ತುಳುನಾಡಿನ ಜಾನಪದ ನಂಬಿಕೆ, ಆಚರಣೆ, ಕುಟುಂಬ ಪದ್ಧತಿ, ಆಹಾರ, ಉಡುಗೆ – ತೊಡಿಗೆ, ಉದ್ಯೋಗ, ಕ್ರೀಡೆ ಮೊದಲಾದ ಸಾಂಸ್ಕೃತಿಕ ಬದುಕಿನ ವಿವಿಧ ಮುಖಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ತುಳುನಾಡಿನ ಶಿಷ್ಟ ಸಂಸ್ಕೃತಿ ಮತ್ತು ಜಾನಪದ ಸಂಸ್ಕೃತಿಗಳ ಕೆಲವು ಮುಖ್ಯ ಅಂಶಗಳನ್ನೂ, ಮೌಲ್ಯಗಳನ್ನೂ ಇಲ್ಲಿ ವಿವೇಚಿಸಬಹುದು. ಶಿಷ್ಟ ಸಂಸ್ಕೃತಿಗಳಲ್ಲಿ ಶೈವ, ಜೈನ, ವೈಷ್ಣವ ಧರ್ಮಗಳು, ತುಳುವರ ಬದುಕಿನಲ್ಲಿ ವಿಶಿಷ್ಟವಾದ ಪಾತ್ರವನ್ನು ವಹಿಸುತ್ತ ಬಂದಿವೆ. ಈ ಧರ್ಮಗಳೊಳೆಗೆ, ಎಲ್ಲಿಯೂ ಘರ್ಷಣೆ ನಡೆದ ಉದಾಹರಣೆಗಳು ಕಂಡುಬರುವುದಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸ, ಸಹಿಷ್ಣುತೆ ಮತ್ತು ಐಕ್ಯತೆಯ ತಳಹದಿಯ ಮೇಲೆ, ತುಳುನಾಡಿನ ಸಂಸ್ಕೃತಿಯನ್ನು ಸುಂದರವಾಗಿ ರೂಪಿಸಿದ್ದಾರೆ. ವಿಶ್ವಕ್ಕೇ ಮಾದರಿಯಾಗುವ ರೀತಿಯಲ್ಲಿ ಅತ್ಯಂತ ಉದಾರವಾಗಿಯೂ, ಮಾನವೀಯವಾಗಿಯೂ, ಜನಪದರೊಡನೆ ಸ್ಪಂದಿಸುತ್ತ ಬಂದಿದ್ದಾರೆ. ಇಲ್ಲಿಯ ಆಡಳಿತ ಪದ್ಧತಿ, ಕುಟುಂಬ ವ್ಯವಸ್ಥೆ, ಆರಾಧನಾ ವಿಧಾನಗಳು, ನಂಬಿಕೆ ನಡವಳಿಕೆಗಳನ್ನು ವಿಶ್ಲೇಷಿಸಿದರೆ ಇದಕ್ಕೆ ಸಾಕಷ್ಟು ನಿದರ್ಶನಗಳು ಕಂಡುಬರುತ್ತವೆ.

ತುಳುನಾಡಿನ ಮಟ್ಟಿಗೆ ರಾಜವರ್ಮನೆಂದರೆ ಜೈನಧರ್ಮ. ಪ್ರಾಚೀನ ಆಳುಪರ ಕಾಲದಲ್‌ಪ್ರೋತ್ಸಾಹ ಗಳಿಸಿಕೊಂಡು, ವಿಜಯನಗರ ಕಾಲದವೆರಗೆ ವರ್ಚಸ್ವೀ ಧರ್ಮವಾಗಿ ಮೆರದಿತ್ತು[39]. ಇದು ಸಂಕುಚಿತ ಏಕಾಂತ ದೃಷ್ಟಿಯನ್ನಿಟ್ಟುಕೊಳದೆ ವಿಶಾಲ ಮನೋಧರ್ಮವುಳ್ಳ ಅನೇಕಾಂತ ದೃಷ್ಟಿಯನ್ನಿಟ್ಟುಕೊಂಡು ತುಳುನಾಡಿನಲ್ಲಿ ಪ್ರಾಯೋಗಿಕವಾಗಿ ನಡೆದು ತೋರಿಸಿದೆ. ಶೈವ, ವೈಷ್ಣವ ಧರ್ಮಗಳೊಡನೆ ಮುಕ್ತವಾಗಿ ಹೊಂದಾಣಿಕೆಯನ್ನು ಮಾಡಿಕೊಂಡು ಜಾನಪದೀಯ ನಂಬಿಕೆಗಳನ್ನು ಪುರಸ್ಕರಿಸಿದೆ. ಭೂತಾರಾಧನೆಯನ್ನು ಸಮ್ಯಕ್ತ್ವಕ್ಕೆ ವಿರೋಧವಾದ ಮಿಥ್ಯಾದೃಷ್ಟಿಯೆಂದು ಅಲ್ಲಗೆಳೆಯದೆ ಅದನ್ನು ತೀರ್ಥಂಕರ ಭಕ್ತಿಯ ಜೊತೆಗೆ ಸಮೀಕರಿಸಿದ್ದನ್ನು ಕಾಣುತ್ತೇವೆ. ಇದರ ಒಳಹರವು, ಸಂಬಂಧಗಳು ತುಳು ಸಂಸ್ಕೃತಿಯೊಡನೆ ಅನನ್ಯವಾಗಿ ಬೆಸೆದುಕೊಂಡಿರುವುದನ್ನು ಕಾಣುತ್ತೇವೆ. ಉದಾಹರಣೆಗೆ ಧರ್ಮಸ್ಥಳ ಕ್ಷೇತ್ರವನ್ನು ಇಲ್ಲಿ ಉದಾಹರಿಸಬಹುದು. ಇಲ್ಲಿಯ ಮೂಲದೇವರು ಶಿವ, ಅರ್ಚಕರು ವೈಷ್ಣವರು. ಆಡಳಿತ ನೋಡಿಕೊಳ್ಳುವವರು ಜೈನ ಹೆಗ್ಗಡೆಯವರು. ಮಂಜುನಾಥ ಎಂಬ ಹೆಸರು ಬೌದ್ಧ ಮೂಲದ್ದು. ಸ್ಥಳೀಯ ಜಾನಪದ ಮೂಲದ ದೈವದೇವರುಗಳಾದ ಅಣ್ಣಪ್ಪ ಸ್ವಾಮಿ, ಕಾಳರಾಹು, ಕಾಳರ್ಕಾಯಿ, ಕನ್ಯಾಕುಮಾರಿಯವರಿಗೂ ಪ್ರಾಶಸ್ತ್ಯವಿದೆ. ಜೊತೆಗೆ ಗಣಪತಿಗೂ ಪೂಜೆ ಸಲ್ಲುತ್ತದೆ. ಜೈನ ಪರಂಪರೆಯ ಎಂಟನೇ ತೀರ್ಥಂಕರನಾದ ಚಂದ್ರನಾಥನಿಗೂ ಸಮಾನ ಪೂಜೆ, ಗೌರವಗಳು ಸಲ್ಲುತ್ತದೆ. ಸಮಾಜದ ಎಲ್ಲ ವರ್ಗದವರು ಈ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಾರೆ. ಅತ್ಯುನ್ನತ ಮಾನವೀಯ ನೆಲೆಯ ಕೇಂದ್ರವಾಗಿರುವ ಇಂಥ ಕ್ಷೇತ್ರವನ್ನು ಬೇರೆಡೆ ಎಲ್ಲಿ ಕಾಣಲು ಸಾಧ್ಯ? ಜೈನ ತುಂಡರಸರಿಗೆ ಸಂಬಂಧಿಸಿದ ಅರಮನೆ, ಮಾಗಣೆ, ಬೀಡು, ಗುತ್ತು ಮಟ್ಟದ ಅಧಿಕಾರಿಗಳು ಇಂದಿಗೂ ತುಳುನಾಡಿನಲ್ಲಿ ವಾಸ್ತವ್ಯವಿದ್ದು ಇದೇ ಪರಂಪರೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ[40]. ಉದಾಹರಣೆಗೆ :

೧. ಪುತ್ತಿಗೆಯ ಚೌಟರಸರ ಕುಲದೈವ ಚಂದ್ರನಾಥ; ಆರಾಧ್ಯ ದೈವ ಸೋಮನಾಥ; ಜುಮಾದಿ, ಪಂಜುರ್ಲಿ, ಇತರ ದೈವಗಳು.

೨. ಬಂಗವಾಡಿಯ ಬಂಗರಸರ ಕುಲದೈವ ಶಾಂತಿನಾಥ; ಆರಾಧ್ಯ ದೈವ ಸೋಮನಾಥ, ಮುರ್ತುರಾಯೆ, ಪಂಜುರ್ಲಿ ಇತರ ದೈವಗಳು.

೩. ವೇಣೂರಿನ ಅಜಿಲ ಅರಸರ ಕುಲದೈವ ಪಾರ್ಶ್ವನಾಥ; ಆರಾಧ್ಯದೈವ ಮಹಾಲಿಂಗ, ಜುಮಾದಿ, ಪಂಜುರ್ಲಿ, ಇತರ ದೈವಗಳು.

೪. ಕಾರ್ಕಳದ ಭೈರರಸರ ಕುಲದೈವ ಪಾರ್ಶ್ವನಾಥ; ಆರಾಧ್ಯ ದೈವ ಕಲಸೇಶ್ವರ, ಕಲ್ಕುಡ, ಕಲ್ಲುರ್ಟಿ ಇತರ ದೈವಗಳು.

೫. ಸುರಾಲಿನ ತೋಳಹರ ಕುಲದೈವ ಪಾರ್ಶ್ವನಾಥ; ಆರಾಧ್ಯದೈವ ಮಹಾಲಿಂಗೇಶ್ವರ, ಬೊಬ್ಬರ್ಯ, ಚಿಕ್ಕು ಇತರ ದೈವಗಳು.

೬. ಮುಲ್ಕಿಯ ಸಾಮಂತರ ಕುಲದೈವ ಅನಂತನಾಥ; ಆರಾಧ್ಯದೈವ ಆದಿಜನಾರ್ದನ; ಜುಮಾದಿ, ಪಂಜುರ್ಲಿ, ಇತರ ದೈವಗಳು.

೭. ಎರ್ಮಾಳು ಬೀಡಿನ ಕುಲದೈವ ಚಂದ್ರನಾಥ; ಆರಾಧ್ಯ ದೈವ ಜನಾರ್ಧನ, ಜುಮಾರ್ದಿ, ಪಂಜುರ್ಲಿ, ಇತರ ದೈವಗಳು

೮. ಪಣಪಿಲು ಅರಮನೆಯ ಕುಲದೈವ ಅನಂತನಾಥ; ಆರಾಧ್ಯ ದೈವ ವಿಠಲ, ಪಂಜುರ್ಲಿ, ಕಲ್ಲುರ್ಟಿ, ಕೊಡಮಣಿತ್ತಾಯ ಇತರ ದೈವಗಳು.

೯. ಪಡುಬಿದಿರೆ ಬೀಡಿನ ಕುಲದೈವ ಮುನಿಸೂವ್ರತ; ಆರಾಧ್ಯ ದೈವ ಮಹಾಲಿಂಗೇಶ್ವರ, ಧೂಮಾವತಿ, ಜಾರಂದಾಯೆ, ಇತರ ದೈವಗಳು.

೧೦. ಕೂಳೂರು ಬೀಡಿನ ಕುಲದೈವ ಪಾರ್ಶ್ವನಾಥ; ಆರಾಧ್ಯ ದೈವ ಮಹಾಲಿಂಗೇಶ್ವರ, ಜಾರಂದಾಯ, ಕಾಂತುನೆಕ್ರಿ, ಧೂಮಾವತಿ, ಮೈಸಂದಾಯ, ಕಲ್ಲುರ್ಟಿ, ಕಲ್ಕುಡ, ಪಂಜುರ್ಲಿ, ಗುಳಿಗ, ಇತರ ದೈವಗಳು.

ಪಟ್ಟದ ಅಧಿಕಾರಿಯು ಧರಿಸುವ ಪಟ್ಟದ ಉಂಗುರದಲ್ಲಿಅವರು ಆರಾಧಿಸುವ ಆರಾಧ್ಯದೈವದ ಹೆಸರು ಇರುತ್ತದೆ. ಉದಾ : ಕೂಳೂರು ಅರಸರ ಉಂಗುರದಲ್ಲಿ ‘ಶ್ರೀ ಮಹಾಲಿಂಗೇಶ್ವರ ಪ್ರಸನ್ನಾ’ ಎಂದು ಬರೆದಿದೆ[41]. ಇದೇ ರೀತಿ ಈ ಅರಸರುಗಳ ಪಟ್ಟಾಭಿಷೇಕ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾದದು[42]. ಇದು ದೇವಾಲಗಳಲ್ಲಿಯೇ ಹೆಚ್ಚಾಗಿ ನಡೆಯುತ್ತದೆ. ಮುಲ್ಕಿ, ಪಡುಬಿದಿರೆ, ಧರ್ಮಸ್ಥಳ, ಅಳದಂಗಡಿ, ಕೂಳೂರುಗಳಲ್ಲಿ ಈ ಕಾರ್ಯಕ್ರಮ ಇಂದಿಗೂ ನಡೆದುಕೊಂಡು ಬರುತ್ತಿದೆ. ಇದೊಂದು ಸಾಂಸ್ಕೃತಿಕವಾಗಿ ಮಹತ್ವದ ಕಲಾಪವಾಗಿದ್ದು, ಆ ಮನೆತನದ ಅಧಿಕಾರವನ್ನು ಪಟ್ಟಾಭಿಷೇಕದ ಮೂಲಕ ಸ್ವೀಕರಿಸುವ ಪದ್ಧತಿಯು ಉನ್ನತ ಮೌಲ್ಯಕ್ಕೆ ನಿದರ್ಶನ, ಅಧಿಕಾರಗ್ರಹಣ ಮಾಡಿದ ವ್ಯಕ್ತಿಯು ತನ್ನ ಕೌಟುಂಬಿಕ ಸಂಬಂಧಗಳನ್ನು ಕಳಚಿಕೊಂಡು ತನ್ನ ಸಮುದಾಯದ ಪ್ರತಿನಿಧಿಯಾಗುತ್ತಾನೆ. ಆ ಊರಿನ ಬಸದಿ, ದೇವಾಲಯ, ಭೂತಾಲಯಗಳ ಪ್ರತಿನಿಧಿಯಾಗಿಯೂ ಮಾನ್ಯನಾಗುತ್ತಾನೆ. ಹೀಗೆ ವ್ಯಕ್ತಿಸಂಬಂಧವನ್ನು ಕಳಚಿಕೊಂಡು ತನ್ನ ಸುತ್ತಲಿನ ಸಮಾಜದ ಧ್ವನಿಯಾಗುವ ಮತ್ತು ಅಗೋಚರ ಜಗತ್ತಿನ ದೇವರು, ದೈವಗಳ ಮುಖವಾಣಿಯಾಗುವ ಈ ಪ್ರಕ್ರಿಯೆಯ ತುಳುಸಂಸ್ಕೃತಿಯ ವಿಶಿಷ್ಟವಾದ ಆಚರಣೆ. ಇಂಥ ಸಂದರ್ಭದಲ್ಲಿ ವ್ಯಕ್ತಿಯು ಮೃತನಾದಾಗ ಶವಸಂಸ್ಕಾರದಿಂದ ಮೊದಲ್ಗೊಂಡು, ಸೂತಕ – ಪಾತಕಗಳೆಲ್ಲವೂ ಆತನ ಕೈಕೆಳಗಿನ ಅಧಿಕಾರಿ ವರ್ಗದವರಿಗೆ ಮೀಸಲು. ಕುಟುಂಬ ವರ್ಗಕ್ಕೆ ಸೂತಕವಿಲ್ಲ. ಈ ಅಂಶವನ್ನು ಗಮನಿಸಬೇಕು.

ರಾಜ್ಯದ ಆಡಳಿತದಲ್ಲಿ ರಾಜನದೇ ಅಗ್ರಸ್ಥಾನ. ಆತನು ‘ದುಷ್ಟ ನಿಗ್ರಹ, ಶಿಷ್ಟ ಪರಿಪಾಲಕನಾಗಿ ಸುಖಸಂಕಥಾ ವಿನೋದದಿಂದ’ ರಾಜ್ಯಭಾರವನ್ನು ನಡೆಸುತ್ತಿದ್ದನು[43]. ಆಡಳಿತದ ವಿವಿಧ ರಂಗಗಳಲ್ಲಿ ತನಗೆ ಸಹಾಯಕರಾಗಿ ನಿಷ್ಠಾವಂತರನ್ನು ನಿಯಮಿಸುತ್ತಿದ್ದನು. ಇಂಥ ನಿಷ್ಠಾವಂತ ಅಧಿಕಾರಿಗಳು ರಾಜನ ಆಸ್ಥಾನದಲ್ಲಿ ತುಂಬಿರುತ್ತಿದ್ದರು. ಉದಾಹರಣೆಗೆ ರಜನ ಒಡ್ಡೋಲಗದ ಚಿತ್ರವನ್ನು ಒಂದು ಶಾಸನವು ಹೀಗೆ ನೀಡುತ್ತದೆ[44]. “ರಾಜಧಾನಿ ಬಾರಹಕನ್ಯಾಪುರದ ಅರಮನೆಯಲ್ಲಿ ಸ್ಥಿರ ಸಿಂಹಾಸನರೂಢನಾಗಿ ವಡ್ಡೋಲಗಂಗೊಟ್ಟಿರೆ ಒಡ್ಡಮದೇವ ನರಸಿಂಹ ಪೆರ್ಗಡೆ ಮಾರದಮ್ಮ ಅಧಿಕಾರಿಯಂತಿವರು ಮುಖ್ಯವಾದ ಸಮಸ್ತ ಪ್ರಧಾನರುಂ ಪುರೋಹಿತರುಂ ಗ್ರಾಮ ಮುನ್ನೂರ್ವರುಂ ಕೂಡಿ” ಪಾಂಡ್ಯದೇವ ಆಳುಪೇಂದ್ರನು ರಾಜ್ಯವನ್ನು ಪಾಲಿಸುತ್ತಿದ್ದನೆಂದು ವಿವರಿಸುತ್ತದೆ. ಮತ್ತೊಂದು ಶಾಸನದಲ್ಲಿ “ರಾಜಧಾನಿ ಮಂಗಳಪುರದ ಅರಮನೆಯ ಮೊಗಸಾಲೆಯಲ್ಲಿ ರಾಜನು ಸಮಸ್ತ ಪ್ರಧಾನರುಂ ಬಾಹತ್ತರ ನಿಯೋಗಿಗಳಂ ದೇಶೀ ಪುರುಷರುಂ ಋಷಿಪುರುಷರುಂ ರಾಣಿ ವಾಸದವರು ರಾಜಕುಮಾರರು ಇತರ ಅಧಿಕಾರಿಗಳು ಇರಲು ಬಹಳಗೊಂದಳಾ ಸ್ಥಾನದಿಂ ಒಡ್ಡೋಲಗಂಗೊಟ್ಟಿರೆ” – ಎಂದು ವರ್ಣಿಸುತ್ತದೆ[45]. ಇದರಿಂದ ಅ ಕಾಲದ ರಾಜನ ಸಭೆಯ ವೈಭವದಿಂದ ಕೂಡಿತ್ತೆನ್ನಬಹುದು. ರಾಜನ ಆಡಳಿತದಲ್ಲಿ ರಾಣಿಯರೂ, ರಾಜಕುಮಾರರೂ, ರಾಜಕುಮಾರಿಯವರೂ ಪಾಲ್ಗೊಳ್ಳುತ್ತಿದ್ದರು. ಕೆಲವು ಅರಸಿಯರು ಅರಸನಿಗೆ ಸಹಾಯಕರಾಗಿಯೂ, ಕೆಲವೊಮ್ಮೆ ಸ್ವತಂತ್ರವಾಗಿಯೂ ಆಡಳಿತವನ್ನು ನಡೆಸುತ್ತಿದ್ದರು. ಕವಿ ಆಳುಪೇಂದ್ರನ ಪಟ್ಟದ ರಾಣಿ ಪಾಂಡ್ಯ ಮಹಾದೇವಿಯು ಪನ್ನಿರ್ಪಳ್ಳಿಯೆಂಬ ಗ್ರಾಮದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರೆ[46], ಹೊಯ್ಸಳ ವೀರಬಲ್ಲಾಳನ ಪಟ್ಟಮಹಿಷಿ ಚಿಕ್ಕಾಯಿತಾಯಿ[47], ಚೌಟರಾಣಿ ಅಬ್ಬಕ್ಕದೇವಿ[48], ಮೂಲರರಾಣಿ ಶಂಕರದೇವಿ[49], ಮೂಲ್ಕಿ ಸಾಮಂತರ ರಾಣಿ ಚೆನ್ನಮ್ಮದೇವಿಮೊದಲಾದವರು ಸ್ವತಂತ್ರವಾಗಿ ಆಳ್ವಿಕೆಯನ್ನು ನಡೆಸುತ್ತಿದ್ದರು. ಆ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇತರ ಅಧಿಕಾರಿಗಳೆಂದರೆ ಪ್ರಧಾನರು, ಸೇನಭೋವ, ಪೆರ್ಗಡೆ ಅಥವಾ ಹೆಗ್ಗಡೆ, ಶ್ರೀಕರಣ, ಊರಾಳುವ, ಸಾಹಣಿ, ದೇಶೀ ಪುರುಷರು, ಪುರೋಹಿತ, ಸೆಟ್ಟಿಕಾರ, ಎಳಮೆ, ನಕರ ಮೊದಲಾದವರು[50]. ವ್ಯವಸ್ಥಿತ ಆಡಳಿತಕ್ಕಾಗಿ ರಾಜ್ಯವನ್ನು ಕೆಲವೊಮ್ಮೆನಾಡು, ಸೀಮೆ, ಮಾಗಣೆ, ಗ್ರಾಮ, ಗುತ್ತುಗಳ ಮಟ್ಟದಲ್ಲಿ ವಿಂಗಡಿಸಲ್ಪಡುತ್ತಿತ್ತು. ಅಧಿಕಾರವು ವಂಶಪಾರಂಪರ್ಯವಾಗಿ ಮುನ್ನಡೆದುಕೊಂಡು ಬರುತ್ತಿತ್ತು. ಅದನ್ನು ಪಟ್ಟಬಂಧ ಮಹೋತ್ಸವದ ಮೂಲಕ ನೆರವೇರಿಸುತ್ತಿದ್ದರು[51]. ತಮ್ಮ ಆಡಳಿತದ ಒಳಗಡೆಯಲ್ಲಿರುವ ದೇವಾಲಯ, ಬಸದಿ, ಭೂತದೈವಗಳ ವ್ಯವಸ್ಥೆಯನ್ನು ನೋಡಿಕೊಳ್ಳುವುದರ ಜೊತೆಗೆ ಯಾವುದೇ ರೀತಿಯ ವ್ಯಾಜ್ಯ, ಜಗಳ, ಮನಸ್ತಾಪಗಳನ್ನು ಆ ಅರಸರು ಬಗೆಹರಿಸಬೇಕಿತ್ತು. ತಪ್ಪಿತಸ್ಥರನ್ನು ಶಿಕ್ಷಿಸುವ, ಅವರಿಗೆ ದಂಡ ವಿಧಿಸುವ ಅಧಿಕಾರವೂ ಇತ್ತು. ಅರಸನ ಆಡಳಿತದ ಕ್ಷೇತ್ರದೊಳಗೆ, ವಿವಿಧ ಜಾತಿ, ಪಂಗಡ, ಮತದವರು ಅವರವರ ಸಂಪ್ರದಾಯದಂತೆ ಜೀವಿಸುವ ಅಧಿಕಾರವನ್ನು ಪಡೆದಿದ್ದರು.

 

[1] ಅದೇ ಪುಟ ೫೪

[2] ಡಾ. ರಮೇಶ ಕೆ.ವಿ. : ತುಳುನಾಡಿನ ಶಾಸನಗಳು, ಶಾಸನ ಸಂಖ್ಯೆ ೩೯.

[3] A.R. No. 528 of 105

[4] ಡಾ. ಗುರುರಾಜ ಭಟ್ಟ ಪಿ. : ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿ, ಪುಟ ೪೩೦

[5] S.I.I. Vol. VII. No. 370

[6] S.I.I. Vol. VII. No. 216

[7] S.I.I. Vol. VII. No. 346

[8] S.I.I. Vol. VII. No. 212

[9] ಡಾ. ನಾಯಕ ಸದಾನಂದ : ಸಾಹಿತ್ಯ ಸಂಶೋಧನೆ ಮತ್ತು ಸಮಾಲೋಚನೆ ಪುಟ ೯೨ ಸಮಾಜ ಪುಸ್ತಕಾಲಯ, ಧಾರವಾಡ

[10] A.R. No. 528 of 1928-29

[11] ಡಾ. ರಮೇಶ ಕೆ.ವಿ. : ತುಳುನಾಡಿನ ಶಾಸನಗಳು, ಶಾಸನ ಸಂಖ್ಯೆ ೮೭

[12] ಅದೇ ಶಾಸನ ಸಂಖ್ಯೆ ೩೯

[13] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ ಪುಟ ೧೨೨, ಪೂರ್ವೋಕ್ತ

[14] ಅದೇ, ಪುಟ ೩೯೭, ಅನುಬಂಧ II

[15] S.I.I. Vol. VII No. 195

[16] ಅದೇ, No. 195

[17] ಡಾ. ಎಸ್.ಡಿ.ಶೆಟ್ಟಿ (ಸಂ.) : ಬೆಳ್ತಂಗಡಿ ಪರಿಸರದ ಜನಾಂಗೀಯ ಅಧ್ಯಯನ ಪುಟ ೯, ಕನ್ನಡ ವಿಭಾಗ, ಧ.ಮಂ. ಕಾಲೇಜು, ಉಜಿರೆ, ೨೦೦೩.

[18] ಡಾ. ಸೂರ್ಯನಾಥ ಕಾಮತ್ : ತುಳುನಾಡಿನ ಧಾರ್ಮಿಕ ಪರಂಪರೆ ಪುಟ ೧೩, ದಿ. ರತ್ನವರ್ಮ ಹೆಗ್ಗಡೆ ಉಪನ್ಯಾಸ ಮಾಲೆ, ಶ್ರೀ ಧ.ಮಂ. ಕಾಲೇಜು, ಉಜಿರೆ, ೧೯೭೫

[19] ಅದೇ ಪುಟ ೧೪

[20] ಅದೇ ಪುಟ ೨೦

[21] ಅದೇ ಪುಟ ೨೦

[22] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ – ಒಂದು ಸಾಂಸ್ಕೃತಿಕ ಅಧ್ಯಯನ, ಪುಟ ೪೦೬.

[23] ಡಾ. ಸೂರ್ಯನಾಥ ಕಾಮತ್ : ತುಳುನಾಡಿನ ಧಾರ್ಮಿಕ ಪರಂಪರೆ, ಪುಟ ೧೦.

[24] ಡಾ. ಸೂರ್ಯನಾಥ ಕಾಮತ್ : ತುಳುನಾಡಿನ ಧಾರ್ಮಿಕ ಪರಂಪರೆ, ಪುಟ ೧೦.

[25] ಅದೇ, ಪುಟ ೧೨, ARSIE 1927-28, No. 375

[26] AR. No. 476 of 1928-29

75a S.I.I. Vol. VII, No. 194

[27] ಡಾ. ಸೂರ್ಯನಾಥ ಕಾಮತ್ : ತುಳುನಾಡಿನ ಧಾರ್ಮಿಕ ಪರಂಪರೆ, ಪುಟ ೧೫.

[28] ಡಾ. ಎಸ್.ಡಿ.ಶೆಟ್ಟಿ : ಬೆಳ್ತಂಗಡಿ ಪರಿಸರದ ಜನಾಂಗೀಯ ಅಧ್ಯಯನ, ಪುಟ ೫೪.

[29] ಅದೇ, ಪುಟ ೨೪

[30] ಡಾ. ಗುರುರಾಜ ಭಟ್ಟ ಪಿ. : ತುಳುನಾಡು, ಪುಟ ೨೭೦

K.I. Vol. I, No. 41 of 1939-40

[31] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ – ಒಂದು ಸಾಂಸ್ಕೃತಿಕ ಅಧ್ಯಯನ, ಪುಟ ೪೦೩.

[32] ಡಾ. ಎಸ್.ಡಿ.ಶೆಟ್ಟಿ : (ಸಂ.) ಬೆಳ್ತಂಗಡಿ ಪರಿಸರದ ಜನಾಂಗೀಯ ಅಧ್ಯಯನ, ಪುಟ ೩೦.

[33] ಅದೇ, ಪುಟ ೪೨.

[34] ಅದೇ, ಪುಟ ೪೬.

[35] ಉದಯವಾಣಿ ದಿನಪತ್ರಿಕೆ ೩.೪.೧೯೮೬, ಉಪ್ಪಂಗಳ ರಾಮಭಟ್ಟ ಲೇಖನ

[36] ಡಾ. ಎಸ್.ಡಿ.ಶೆಟ್ಟಿ : (ಸಂ.) ಬೆಳ್ತಂಗಡಿ ಪರಿಸರದ ಜನಾಂಗೀಯ ಅಧ್ಯಯನ, ಪುಟ ೪೭.

[37] ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ ಪುಟ ೬೩ ಲೇಖನ ನೋಡಿ. ಡಾ. ಎಲ್.ಜಿ. ಭಟ್ಟ – ಕಾರ್ಕಳದ ರಾಣೆ ಜನರು, ೧೯೮೫.

[38] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ, ಪುಟ ೪೦೩., ಪೂರ್ವೋಕ್ತ

[39] ಅದೇ, ಪುಟ ೫೫

[40] ಅದೇ, ಪುಟ ೩೫೯

[41] ಇತಿಹಾಸ ದರ್ಶನ, ಸಂಪುಟ ೧೬, ಪುಟ ೨೧೯, ಕರ್ನಾಟಕ ಇತಿಹಾಸ ಅಕಾಡೆಮಿ

[42] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ, ಪುಟ ೯೬., ಪೂರ್ವೋಕ್ತ

[43] S.I.I. Vol. VII, No. 177

[44] ARSIE : 1927, No. 370

[45] ಡಾ. ರಮೇಶ ಕೆ.ವಿ. : ತುಳುನಾಡಿನ ಇತಿಹಾಸ : ಪುಟ ೬೬

[46] ಡಾ. ರಮೇಶ್ ಕೆ.ವಿ., ಅದೇ ಪುಟ ೫೬.

[47] ARSIE : 1901 No. 122: S.I.I. Vol – VII, No. 312

[48] A.R. No. : 3 of 1940-41 Appendix -A

[49] ಡಾ. ವಸಂತ ಮಾಧವ : ಮುಲ್ಕಿಯ ಇತಿಹಾಸ, ಪುಟ ೩೧, ವಿಜಯ ಕಾಲೇಜು, ಮುಲ್ಕಿ, ೧೯೮೮.

[50] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ, ಪುಟ ೯೭

[51] S.I.I. Vol. : VII, No. 245