ಉಡುಪಿಯಿಂದ ಐದು ಮೈಲುಗಳಲ್ಲಿರುವ ಉದ್ಯಾವರ ಎಂಬ ಈಗಣ ಹಳ್ಳಿಯೇ ಆ ಗ್ರೀಕ ಪ್ರಹಸನದ ರಂಗಭೂಮಿ. ಅಲ್ಲಿಯ ಸೋಮೇಶ್ವರ ಎಂಬ ಶಿವಾಲಯದ ದೇವರನ್ನು ಆ ಪ್ರಹಸನದಲ್ಲಿ (S)oumesare (ಬಂ. ೭೮) ಎಂದು ಸಂಭೋದಿಸಿದೆ ಹಾಗೂ ಗ್ರೀಕ ಭಾಷೆಯಲ್ಲಿ Selene ಎಂಬ ಸೋಮ = ಚಂದ್ರ ಶಬ್ದವು ಸ್ತ್ರೀಲಿಂಗವಾಗಿರುವುದರಿಂದ ಆ ಮೇರೆಗೆ ಸೋಮೇಶ್ವರನನ್ನು Thea Selene (ಬ. ೮೮)=GoddesS Moon=ಚಂದ್ರದೇವತೆ (ಸ್ತ್ರೀಲಿಂಗ) ಎಂದಿದೆ. ಉದ್ಯಾವರವು ಬಹುಕಾಲಕ್ಕೆ ಆಳುಪ ಅರಸರ ರಾಜಧಾನಿಯಾಗಿತ್ತು. ಅಲ್ಲಿ ಅವರ ಕ್ರಿ.ಶ. ೭ನೆಯ ಶತಕಕ್ಕಿಂತಲೂ ಹಿಂದಣ ಶಾಸನಗಳಿವೆ.[1] ಅವುಗಳಲ್ಲಿ ಗುಣಸಾಗರ, ರಣಸಾಗರ, ಪೃಥ್ವೀಸಾಗರ, ವಿಜಯಾದಿತ್ಯ ಇತ್ಯಾದಿ ಬಹಳ ಹಳೆಯ ಅರಸರ ಹೆಸರುಗಳಿವೆ. ಆ ಬಳಿಕ ಹೊಯ್ಸಳ ವಿಷ್ಣುವರ್ಧನನ ತಮ್ಮನಾದ ಉದಯಾದಿತ್ಯನು ತನ್ನ ಅಣ್ಣನ ಕೆಯ್ಕೆಳಗೆ ತುಳುದೇಶವನ್ನು ಆಳುತಿದ್ದಂದು ಉದ್ಯಾವರವು ಆತನ ರಾಜಧಾನಿಯಾಗಿತ್ತು.

ಬಾರಕೂರು ಬಹಳ ಹಳೆಯ ಊರು. ರೋಮಿಯ ಪ್ಲಿನಿಯ ಗ್ರಂಥದಲ್ಲಿ Barace ಎಂದಿರುವ ಊರು ಪ್ರಾಯಶಃ ಬಾರಕೂರೇ ಆಗಿರಬೇಕು. ಅಲ್ಲಿ ಆಳುಪರವೂ, ಹೊಯ್ಸಳರವೂ, ವಿಜಯನಗರದ ಅರಸರವೂ ತುಂಬಾ ಶಾಸನಗಳಿವೆ[2] ಹೊಯ್ಸಳ ವಿಷ್ಣುವರ್ಧನನ ಶಾ.ಶ. ೧೦೫೨ ಸೌಮ್ಯ ಸಂ| = ಕ್ರಿ.ಶ. ೧೧೨೯ – ೩೦ರ ಮೈಸೂರು ಸೀಮೆಯ ಹಂತೂರಿನ ಶಿಲಾಲೇಖದಲ್ಲಿ[3] ಅದನ್ನು ‘ಬಾರಕನೂರು’ ಎಂದದೆ. ಪಾಂಡ್ಯ ಚಕ್ರವರ್ತಿ ಭುಜಬಳ ಕವಿಯಾಳ್ಪೇಂದ್ರನ ಶಾ.ಶ. ೧೦೭೭ ಯುವ ಸಂ| = ಕ್ರಿ.ಶ. ೧೧೫೫ರ ಬಾರಕೂರಿನ ಪಂಚಲಿಂಗೇಶ್ವರ ದೇವಾಲಯದ ಶಿಲಾಲೇಖದಲ್ಲಿ[4] ಅದನ್ನು ‘ಬಾರಕನ್ಯಾಪುರ’ ಎಂದಿದೆ. ಅದಕ್ಕೂ ಹಿಂದಣ ದತ್ತಾಳ್ವೇಂದ್ರ ಮಾರ ಒಡ್ಡಮ ದೇವಿ ಎಂಬ ಆಳುಪ ರಾಣಿಯ ಬಾರಕೂರಿನ ಸೋಮೇಶ್ವರ ದೇವಾಲಯದ ತೇದಿಯಿಲ್ಲದ ಶಿಲಾಲೇಖದಲ್ಲಿ[5] ಅದನ್ನು ‘ಬಾರಹಕಂನ್ಯಾಪುರ’ ಎಂದದೆ, ವಿಜಯನಗರದ ಬುಕ್ಕರಾಯನ ಶಾ.ಶ. ೧೨೮೧ ವಿಕಾರಿ ಸಂ| = ಕ್ರಿ.ಶ. ೧೩೫೯ – ೬೦ರ ಅಲ್ಲಿಯದೇ ಮತ್ತೊಂದು ಶಿಲಾಲೇಖದಲ್ಲೂ[6] ಆ ಮೇಲಣ ಶಾಸನಗಳಲ್ಲೂ ಅದನ್ನು ‘ಬಾರಕೂರ ರಾಜ್ಯ’ ಎಂದಿದೆ. ಬಾರಕೂರಲ್ಲಿ ಒಕ್ಕೈ ಮಾಸ್ತಿಯ ಹಾಗೂ ಇಕ್ಕೈ ಮಾಸ್ತಿಯ ಕಲ್ಲುಗಳು ಹಲವಿವೆ.

ಉಡುಪಿ ತಾಲೂಕಿನ ಕಾಪು ಎಂಬಲ್ಲಿಯ ಶ್ರೀ ಜನಾರ್ಧನ ದೇವಸ್ಥಾನದಲ್ಲಿರುವ ಶಾ.ಶ. ೧೪೨೧ ಸಿದ್ದಾರ್ಥಿ ಸಂ| = ಕ್ರಿ.ಶ. ೧೪೯೯ರ ಶಿಲಾಶಾಸನದಲ್ಲಿ[7] ನಿರೂಪಿಸಿರುವ ಒಪ್ಪಂದದಲ್ಲಿ ಇದೊಂದು ಸೊಗಸಾದ ಒಕ್ಕಣೆ ಇದೆ (ಬಂತಿ ೧೧-೧೭) –

ನಂಮೊಳಗೆ ವೊಬ್ಬರ ಯಿದಿರಿಗೆ ವೊಬ್ಬರು ಮಧರಿಂದ (?) ಸಲ್ಲದು.
ನಿಂಮ ಯಿದಿರಿಗೆ ಬಹ ಅನುಸರಿಗಳಿಗೆ (?) ನೆರನ ಕೊಡಸಲ್ಲದು
ವೊಬ್ಬರು ಬಿಟ್ಟು ವೊಬ್ಬರು ನಿಲ್ಲಸಲ್ಲದು. ನಂಮ ಇರುವರ ಕೂಡೆ
ಮೋಹರ್ಸಿ ಬಹಂಥಾವರ ಭಂಡೆ ಬುದ್ಧಿಯಿಂದ ವಧಿಸಿದ ಇಧಿರಾದ
ಅನುಸರಿಗಳನೂ ಜಯಿಸಿಕೊಂಬೆ, ನಂಮ ಯಿಬ್ಬರೊಳಗೆ
ಮನಸ್ತಾಪಗಳು ಬಂದರೆ ಬುದ್ಧಿಯಿಂದಲೇ ಪರಿಹರಿಸಿಕೊಳ್ಳಬೇಕಲ್ಲದೆ
ತುಡುಕಿ ಕಾದಸಲ್ಲದು.

‘ಕೆಳದಿ ನೃಪ ವಿಜಯ’

ಕೆಳದಿ ನೃಪವಿಜಯದಲ್ಲಿ (ಅಶ್ವಾಸ ೫ ರಿಂದ ೧೧) ತುಳುನಾಡಿನ ಹಲವು ಊರುಗಳ ಹಾಗೂ ಹಲವು ಹಳ್ಳಿಗಳ ಹೆಸರುಗಳಿವೆ – ಕುಂಬಸೆ (=ಕುಂಭಕಾಶಿ), ದಾನಿವಾಸ, ಹೊಸಂಗಡಿ, ಕೊಲ್ಲೂರು (ಅಲ್ಲಿಯ ಮೂಕಾಂಬಿಕಾ ದೇವಿ), ಬೆಳ್ಳರೆ (=ಬೆಳ್ಳಾರೆ), ಕಾರಕಳ, ವಸುಪುರ (= ಬಸರೂರು), ಬಾರಕೂರು, ಕಲ್ಯಾಣಪುರ, ಸುರಾಲ, ಕ್ರೋಡಪುರ = ಶಂಕರನಾರಾಯಣ, ಕಂಡಲೂರು, ಬೈ(೦)ದೂರು, ಕುಂಬಳೆ, ‘ಉತ್ತುಂಗಶ್ರೀ ಮಂಗಳೂರು, ಕೊಡೆಯಾಲ (=ಮಂಗಳೂರು),[8] ಮೂಡಬಿದರೆ, ಉಳ್ಳಾಲ, ಪುದುವೆಟ್ಟು, ಕಾಂತಮಂಗಲ, ಬಂದ್ಯಡಕ, ಶಿಶಿಲ, ಚಂದ್ರಗಿರಿ, ಬೇಕಲ, ಕಿದುಟು, ಫಣಿಯಾಲ, ಗುಳವಾಡಿ (=ಗುಲ್ವಾಡಿ), ಕುಂದಾಪುರ, ಗಂಗುವಳ್ಳಿ (=ಗಂಗೊಳ್ಳಿ), ಕಾಸರಗೋಡು, ಬೇಕಲ, ಚಿತ್ತಾರಿ, ನೀಲೇಶ್ವರ, ಕೋಟೀಶ್ವರ, ಸುಬ್ರಹ್ಮಣ್ಯ, ಉಡುಪು (=ಉಡುಪಿ), ಮಲಪು (=ಮಲ್ಪಿ), ಕಾಪು, ತೊನಸೆ, ಇ.ಇ. ಅದಲ್ಲದೆ ಕೆಳದಿಯ ಅರಸನಾದ ಸದಾಶಿವನಾಯಕನು (ಕ್ರಿ.ಶ. ೧೫೧೩ – ೧೫೪೬) ಕಾಸರಗೋಡಿನಲ್ಲಿ ‘ತೊಲಗದ ಕಂಬ’ = ಅಚಲವಾದ ಜಯಸ್ತಂಭವನ್ನು ನಿಲ್ಲಿಸಿದನೆಂದೂ (ಅಶ್ವಾಸ ೨) –

ತುಳುವ ರಾಜರ್ಕಳೆಲ್ಲರ್
ಮಲೆತಿರೆ ನಿಗ್ರಹಿಸಿ ಮೆರೆವ ಕಾಸರಗೋಡೊಳ್
|
ತೊಲಗದ ಕಂಬವನಾ ನೃಪ
ತಿಲಕಂ ತಾ ನಿಲಿಸಿ ಮೆರೆದನತಿ ಸಾಹಸಮಂ || ೬೧ ||

ಹಾಗೆಯೇ ಆತನಿಂದ ಈಚೆಯ ಶಿವಪ್ಪ ನಾಯಕನೂ (ಕ್ರಿ.ಶ. ೧೬೪೫ – ೧೬೬೦) ನೀಲೇಶ್ವರದಲ್ಲಿ ಮತ್ತೊಂದು ತೊಲಗದ ಕಂಬವನ್ನು ನಿಲಿಸಿದನೆಂದೂ (ಆಶ್ವಾಸ ೭) –

ಬಳಿಕುರು ನೀಲೇಶ್ವರದು
ಜ್ಜಳಿಪಿಳೆಯಂ ಕೊಂಡು ನಾಯಿಮಾರರ ನೆಲದೊಳ್
ತೊಲಗದ ಕಂಬವನನ್ನುವಿಂ
ನಿಲಿಸಿ ಮಹಾದ್ಭುತಪರಾಕ್ರಮವನುರೆ ಮೆರೆದಂ
|| ೧೦ ||

ಆ ಕಾವ್ಯದಲ್ಲಿ ಹೇಳಿದೆ. ಆದರೆ ಈಗ ಅಲ್ಲಿ ತೊಲಗದ ಕಂಬಗಳಿಲ್ಲ. ಎಲ್ಲಿ ತೊಲಗಿ ಹೋಗಿವೆಯೋ ತಿಳಿಯದು. ಕೆಳದಿಯ ರಾಜ್ಯವನ್ನು ವಿಧ್ವಂಸಿಸಿದ ಹೈದರನೊ ಅಥವಾ ಅವನ ಮಗನಾದ ಟಿಪ್ಪುವೋ ಇಲ್ಲವೆ ಅವರ ಕಡೆಯವರೊ ಅವನ್ನು ಕೆಡವಿಸಿರಬೇಕೆಂದು ಯಥಾವತ್ತಾಗಿ ಊಹಿಸಬಹುದು. ಅದೇ ಗ್ರಂಥದಲ್ಲಿ (ಆಶ್ವಾಸ ೧೧) ವೀರಭದ್ರ ನಾಯಕನ ಮಗನಾದ || ಬಸವಪ್ಪ ನಾಯಕನು (ಕ್ರಿ.ಶ. ೧೭೩೯ – ೧೭೫೪) ಮಲ್ಪಿಯಲ್ಲೂ, ಕಾಪಿನಲ್ಲೂ, ಕಲ್ಯಾಣಪುರದಲ್ಲೂ, ಮಂಗಳೂರಿನಲ್ಲೂ ಕೋಟೆಗಳನ್ನು ಕಟ್ಟಿಸಿದನೆಂದೂ ಹೇಳಿದೆ –

ಉಡುಪಿನ ಬಳಿಯೊಳ್ ಮಲಪಿನ
ಪೊಡವಿಯೊಳಂ ಪಶ್ಚಿಮಾಂಬುಧಿಯ ತೀರದೊಳು
|
ಗ್ಗಡಮೆನೆ ದರಿಯಾಬಾದಿನ
ಗಡಮಂ ನಿರ್ಮಾಣಗೆಯ್ಸಿದಂ ಬಸವ ನೃಪಂ || ೧೯ ||
ಈ ಪರಿಯಲ್ಲದ ಪಡುವಣ
ಕೂಪರದ ತೀರದೊಳ್ವಿರಾಜಿಸುತಿರ್ಪಾ |
ಕಾಪಿನ ಸಮೀಪದೊಳ್ತ
ದ್ಭೂಪಂ ನೆಲೆಗೊಳಿಸಿದಂ ಮನೋಹರಗಡಮಂ || ೨೦ ||
ಭೂನುತ ಕಲ್ಯಾಣಪುರ
ಸ್ಥಾನದೊಳತಿರಮ್ಮಮಾಗೆ ಬಸವ ಮಹೀಶಂ |
ತೋನಸೆಯೆಂಬ ಸುಕೋಟಿಯ
ತಾನುರೆ ನಿರ್ಮಾಣಗೈಯ್ಸಿದಂ ಸಂತಸದಿಂ || ೨೨ ||
ಇಂದ್ರವಿಭವನಿಭವಿಭವ ನ
ರೇಂದ್ರಂ ತಾಂ ಮಂಗಲೂರ ತಾಣದೆ ಶಿವರಾ ||
ಜೇಂದ್ರಗಿರಿಯೆಂಬ ಗಡಮಂ
ಸಾಂದ್ರಯಶಂ ರಚನೆಗೆಯ್ಸಿದಂ ಪೊಸ ಬಗೆಯಿಂ || ೨೬ ||

ಪ್ರಾಚೀನ ಇತಿಹಾಸ

ಸಮಗ್ರ ಭಾರತ ವರ್ಷವು ಮೌರ್ಯ ಸಾಮ್ರಾಟನಾದ ಚಂದ್ರಗುಪ್ತನಿಗಿಂತ ಮುಂಚಿನಿಂದಲೇ ಅಲ್ಲವಾದರೆ ಆತನ ಹಾಗೂ ಆತನ ಮಗನಾದ ಬಿಂದುಸಾರನ ಕೈಕೆಳಗೆ ಏಕಚ್ಛತ್ರವಾಗಿದ್ದಿತು ಎಂಬ ಐತಿಹಾಸಿಕರ[9] ನಂಬುಗೆಯನ್ನು ನಚ್ಚಿದರೆ, ಬಿಂದುಸಾರನ ಮಗನಾದ ಅಶೋಕ ಚಕ್ರವರ್ತಿ ನಡೆಸಿದ ಕಲಿಂಗ ದೇಶದ ಯುದ್ಧದಲ್ಲಿ ಲಕ್ಷೋಪಲಕ್ಷಮಂದಿ ಕೊಲ್ಲಲ್ಪಟ್ಟರು ಹಾಗೂ ಇತರಥಾ ಸತ್ತುಹೋದರು ಎಂಬ ಪಶ್ಚಾತ್ತಾಪದಿಂದ ಆತನು ಇನ್ನು ಮುಂದೆ ಯಾವ ದೇಶದ ಮೇಲೂ ಅಭಿಯೋಗಿಸೊಲ್ಲೆ, ಯುದ್ಧ ಮಾಡಲೊಲ್ಲೆನೆಂದು ತಟಸ್ಥನಾಗುತ್ತಲೆ, ಮೌರ್ಯ ಸಾಮ್ರಾಜ್ಯದಲ್ಲಿ ಮುಖ್ಯತಃ ಇತ್ತೀಚೆಗೆ ಒಳಪಡಿಸಿದ ದೇಶದವರು ಮೌರ್ಯರ ನೊಗವನ್ನು ಕಳಚಿಬಿಟ್ಟು ತಂತಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಂಡಿರಬೇಕೆಂದು ಸ್ವತಃ ಸಿದ್ಧವಾಗುತ್ತದೆ. ಅವರಲ್ಲಿ ಮೊತ್ತಮೊದಲಲ್ಲಿ ಹೊರಗಾಲನ್ನು ಇಟ್ಟವರೆಂದರೆ ಚಂದ್ರಗುಪ್ತನವರೆಗೆ ಮೌರ್ಯರ ಗಡಿನಾಡುಗಳಲ್ಲಿದ್ದ ದಾಕ್ಷಿಣಾತ್ಯರು. ಈಗ, ಮೇಲೆ ಕಂಡಿರುವ ಅಶೋಕನ ೨ನೆಯ ಶಿಲಾಲೇಖದಲ್ಲಿ ಹಾಗೆ ಸ್ವತಂತ್ರವಾದ ತೆಂಕಣ ದೇಶಗಳನ್ನು ಉಲ್ಲೇಖಿಸುವಲ್ಲಿ ‘ಚೋಡ ಪಂಡಿಯ ಸತಿಯಪುತ್ರ ಕೇರಲಪುತ್ರೇ’ ಎಂದು ಆಯಾ ಜನಪದಗಳ ಹೆಸರುಗಳನ್ನು ಹೇಳಿದೆಯಲ್ಲದೆ, ಅವರವರ ಅರಸರ ಹೆಸರುಗಳನ್ನು ಹೇಳಿಲ್ಲ. ಪ್ರತ್ಯುತ ಆತನ ೧೩ನೆಯ ಶಿಲಾಲೇಖದಲ್ಲಿ (Rock Edict XIII) ಆತನಲ್ಲಿಂದ ‘ಅಷಷು ಪಿ ಯೋಜನ ಸತೇಷು’ (ಮನಸೇರಾ ಪ್ರತಿ) = ನೂರಾರು ಯೋಜನೆಗಳಿಗೆ ದೂರದಲ್ಲಿರುವ ‘ಅಷಷು’ = ಆಸ್ಮ ಖಂಡದಲ್ಲಿ (Asia) ಮೊಟ್ಟ ಮೂಡಲಲ್ಲಿದ್ದ ಅಲ್ಲಲ್ಲಿಯ ಯವನ (Greek) ರಾಜರನ್ನು –

ಅಂತಿಯೊಕೊ ನಮ ಯೋನ ರಜ ಪರಂ ಚ ತೆನ
ಅಂತಿಯೊಕೆನ ಚತುರೆ ೪ ರಜನಿ ತುರಮಯೆ ನಮ
ಅಂತಿಕಿನಿ ನಮ ಮಕ ನಮ ಆಲಿಕಸುದರೊ ನಮ
(ಶಹಬಾಜಗಢೀ ಪ್ರತಿ)

ಸುರಿಯದ (Syria) ಅರಸನಾದ ಅಂತಿಯೊಕ (Antiochus Theos, ಕ್ರಿ.ಪೂ. ೨೬೧ – ೨೪೬), ಐಗುಪ್ತದ (Egypt) ಅರಸನಾದ ಪ್ತೊಲೆಮಿ (Ptolemy Philadelphus,, ಕ್ರಿ.ಪೂ. ೨೮೫ – ೨೪೭) ಮಕೆದೋನ್ಯದ (Macedonia) ಅರಸನಾದ ಅಂತಿಗೊನ (Antigonus Gonatus, ಕ್ರಿ.ಪೂ. ೨೭೭ – ೨೩೯), ಸುರೇನ್ಯದ (Cyrene) ಅರಸನಾದ ಮಗ (Magas, ಕ್ರಿ.ಪೂ. ೨೮೫ – ೨೫೮), ಹಾಗೂ ಎಪಿರದ (Epirus) ಅರಸನಾದ ಅಲೆಕ್ಸಂದರ (Alexander, ಕ್ರಿ.ಪೂ. ೨೭೨ – ೨೫೮) ಎಂದು ಅವರವರ ಹೆಸರೆತ್ತಿ ಹೇಳಿದೆ. ಇದಕ್ಕೆ ಕಾರಣವೇನು? ಎಂದು ವಿಚಾರಿಸಿದರೆ, ಪ್ರಾಯಶಃ ಚೋಳ – ಪಾಂಡ್ಯ – ಶಾಂತಿಕ – ಕೇರಳ ದೇಶಗಳನ್ನು ಆಗ್ಗೆ ಅರಸನಿದ್ದಿಲ್ಲದೆ ಅವು ಪ್ರಜಾಸತ್ತಾತ್ಮಕವಾದ ಗಣರಾಜ್ಯಗಳಾಗಿ (republic) ಇದ್ದುದೇ ಆ ಕಾರಣವೆನಿಸುತ್ತದೆ. ಹಾಗಾದರೆ ಅಶೋಕನ ಕಾಲದಲ್ಲಿ ಸಾತಿಯ = ಶಾಂತಿಕ ದೇಶ ಎಂಬ ತುಳು ದೇಶವು ಗಣರಾಜ್ಯವಾಗಿದ್ದಿತೆಂದು ವ್ಯಕ್ತವಾಗುತ್ತದೆ. ಅಶೋಕನಿಗಿಂತ ಹಿಂದಣ ವಸ್ತುಸ್ಥಿತಿಯಾದರೊ ವಿಚಾರದೃಷ್ಟಿಗೆ ಎಟುಕದು.

ಕರಿಕಾಲ ಚೋಳನೆಂಬ (ಕ್ರಿ.ಶ. ಸು. ೧೫೦ – ೧೮೦) ಚೋಳ ರಾಜನ ಸಮಸಾಮಯಿಕರಾದ ಮಾಮುಲನಾರ್ ಹಾಗೂ ಪರಣರ್ ಎಂಬವರ ತಮಿಳು ಗ್ರಂಥಗಳಲ್ಲಿ[10] ಕೋಶರ್ ಎಂಬ ಜನರು ನನ್ನ ದೇಶವನ್ನು ಹೊಕ್ಕರೆಂದೂ ನನ್ನನಿಗೂ ಅವರಿಗೂ ಆದ ಕಾಳಗದಲ್ಲಿ ನನ್ನನು ತನ್ನ ಪಟ್ಟದಾನೆಯನ್ನು ಕಳಕೊಂಡನೆಂದೂ ಹೇಳಿದೆ. ಮಾಮುಲನಾರ ಗ್ರಂಥದಲ್ಲಿ ನನ್ನನ ರಾಜ್ಯ ತುಳುನಾಡು ಎಂದದೆ. ಹಾಗಾದರೆ ತಮಿಳಿನಲ್ಲಿ ‘ನನ್ನನ್’ = ಕನ್ನಡದಲ್ಲಿ ‘ನನ್ನ’ ಎಂಬ ಅರಸನೊಬ್ಬನು ಕ್ರಿ.ಶ. ೧ನೆಯ ಅಥವಾ ೨ನೆಯ ಶತಮಾನದಲ್ಲಿ ತುಳುನಾಡಿನಲ್ಲಿ ಆಳುತ್ತಿದ್ದನೆಂದು ಗೊತ್ತಾಗುತ್ತದೆ.

ಭೂತಾಳ ಪಾಂಡ್ಯನ ಹೆಸರನ್ನು ಕೇಳಿಲ್ಲದವರು ತುಳುನಾಡಿನಲ್ಲಿ ಪ್ರಾಯಶಃ ಯಾರೂ ಇಲ್ಲ, ಇದ್ದರೆ ತೀರ ವಿರಳ. ಆದರೆ ಆತನು ಇದುವರೆಗೆ ಯಾವನೊಬ್ಬ ಬರೇ ಸ್ವಪ್ನಸೃಷ್ಟಿ, ಪೌರಾಣಿಕ ವ್ಯಕ್ತಿ ಕಟ್ಟುಕಥೆಯ ಅರಸನೆಂದು ಬಗೆಯಲ್ಪಟ್ಟಿರುವುನಾದರೆ ಅದು ಸರಿಯಲ್ಲ. ಆತನೊಬ್ಬ ಕೇವಲ ವಾಸ್ತವಿಕ, ಐತಿಹಾಸಿಕ ವ್ಯಕ್ತಿ ತಾನೆ. ಅಹನಾನೂಱು ಮತ್ತು ಪುಱನಾನೂಱು ಎಂಬ ಬಹಳ ಹಳೆಯ ತಮಿಳು ಗ್ರಂಥಗಳಲ್ಲಿ ಒಲ್ಲೈಯೂತ್ ತಂದ ಭೂತಪ್ಪಾಂಡಿಯನ್’ = ಒಲ್ಲೈಯೂರ (ಎಂಬ ಊರ)ನ್ನು ಹಿಡಕೊಂಡ ಭೂತಪಾಂಡ್ಯನು (ತಮಿಳು) ದಿತಿಯನ್ = (ಕನ್ನಡ) ದಿತಿಯ ಎಂಬುವನನ್ನು ಸೋಲಿಸಿದನೆಂದು ಉಲ್ಲೇಖಿಸಿರುವುದರಿಂದ ಭೂತಪಾಂಡ್ಯನು ಮೊತ್ತಮೊದಲಿನ ೧ – ೨ನೆಯ ಶತಕಗಳಿಗೆ ಸರಿಹೋಗುತ್ತಾನೆ[11] ಈ ಭೂತಪಾಂಡ್ಯನೇ ತುಳುನಾಡಿನ ಐತಿಹ್ಯದ ಭೂತಾಳ ಪಾಂಡ್ಯನೆಂಬಲ್ಲಿ ಸಂಶಯವಿಲ್ಲ. ತಮಿಳರ ಐತಿಹ್ಯದಲ್ಲಿ ಆತನು ಪಾಂಡ್ಯ (ದೇಶದ) ಅರಸನೆಂದೂ, ತಿರುವಾಂಕೋಡಿನ ತೆಂಕಲಲ್ಲಿ ಪಾಂಡ್ಯನಾಡಿನ ಗಡಿಯಲ್ಲಿರುವ (ತ) ಭೂತಪ್ಪಾಂಡಿ = (ಕ) ಭೂತಪಾಂಡಿ ಎಂಬ ಊರಿನವನೆಂದೂ ಹೇಳಿದೆ.[12] (ಪ್ರಾಯಶಃ ಆತನಿಂದಲೇ ಆ ಊರಿಗೆ ಆ ಹೆಸರಾಗಿರಬಹುದೇನೋ.) ತುಳುನಾಡಿನ ಐತಿಹ್ಯದಲ್ಲೂ ಆತನು ಪಾಂಡ್ಯದೇಶದವನೆಂದೂ, ಅಲ್ಲಿಂದ ಇಲ್ಲಿಗೆ ಬಂದನೆಂದೂ ಇದೆ. ಹಾಗಾದರೆ ಅಲ್ಲಿಂದ ಆತನು ಬಡಗಲಾಗಿ ಬಂದು ತುಳುನಾಡನ್ನು ಗೆದ್ದೊ ಅಥವಾ ಬೇರೆ ಹೇಗೋ ಇಲ್ಲಿ ನೆಲೆಸಿರಬೇಕು. ತುಳುನಾಡಿನಲ್ಲಿ ಆತನನ್ನು ಭೂತಾಳಪಾಂಡ್ಯನೆಂದೇ ಅಲ್ಲ, ಭೂತಾಳು ಪಾಂಡ್ಯನೆಂದೂ ಹೇಳುತ್ತಾರೆ. ಈಗ, ಭೂತಾಳ (ಳು) ಪಾಂಡ್ಯದಲ್ಲಿಯ ಭೂತ ಎಂಬ ಹೆಸರು ಬೂತು – ಬೂದು ಎಂದು ತುಳುನಾಡಿನ ಬ್ರಾಹ್ಮಣೇತರ ತುಳುವರಲ್ಲಿ ಈಗಲೂ ಬಳಕೆಯಲ್ಲಿದೆ. ಆ ಭೂತಕ್ಕೆ ಕೂಡಿಸಿದ ಆಳ – ಆಳು ಎಂದರೇನು? ಎಂದು ವಿಚಾರಿಸಿದರೆ ಆತನ ನೇರಾದ ಸಮಸ್ತನಾಮವು ಭೂತ-ಆಲುಪ+ಪಾಂಡ್ಯ = ಭೂತಾಳುಪ ಪಾಂಡ್ಯ ಎಂದಿದ್ದು, ಅದರಲ್ಲಿಯ ಸವರ್ಣಗಳಾದ ಹಿಂದುಮುಂದಣ ಅವೆರಡು ಪ-ಕಾರಗಳಲ್ಲಿ ಮೊದಲನೆಯ ಪ-ಕಾರವು ಲೋಕೋಕ್ತಿಯಲ್ಲಿ ಕ್ರಮೇಣ ಸಹಜವಾಗಿ ಲೋಪಿಸಿಯೋ ಅಥವಾ ಆಳುಪ ಅರಸರಿಗೆ (ಮೇಲೆ ಕಂಡಿರುವಂತೆ) ಆಳು ಎಂದೂ ಇದ್ದ ಉಪನಾಮವನ್ನು ಆತನು ತಾಳಿಯೋ ಆ ಹೆಸರು ಕೊನೆಗೆ ಭೂತಾಳು (ಳ) ಪಾಂಡ್ಯ ಎಂದು ಆಗಿರುವಂತೆ ತೋರುತ್ತದೆ. ಆತನು ಪಾಂಡ್ಯದೇಶದಿಂದ ಇಲ್ಲಿಗೆ ಬಂದ ಬಳಿಕ ತಾನೆ, ಅಲ್ಲಿ ನಿರರ್ಥವಾದ ಹಾಗೂ ಇಲ್ಲಿ ಸಾರ್ಥವಾದ ಆಳುಪ ಅಥವಾ ಆಳು ಎಂಬ ವಂಶನಾಮವನ್ನು ತನ್ನ ಹೆಸರಿಗೆ ಕೂಡಿಸಿಕೊಂಡಿರಬೇಕು. ತುಳುನಾಡಿನ ಆಳುಪ ಅರಸರಲ್ಲಿ ಅನೇಕರ ಹೆಸರಿಗೆ ಈಗಣ ಮಧುರಾ, ರಾಮನಾಡು, ತಿರುನೆಲ್ವೇಲಿ ಜಿಲ್ಲೆಗಳನ್ನು ಒಳಕೊಂಡಿರುವ ಪಾಂಡ್ಯ ದೇಶದ ಅರಸರ ಪಾಂಡ್ಯ ಎಂಬ ಉಪನಾಮವಿರುವುದರಿಂದ[13] ಎಂದು ಅನುಮೇಯಿಸಲಾಗುತ್ತದೆ. ಹಾಗಾದರೆ ತಮಿಳು ಗ್ರಂಥಗಳಲ್ಲಿ ಪಾಂಡ್ಯರಾಜನೆಂದಿರುವ ಭೂತಾಳುಪಾಂಡ್ಯನು ಪಾಂಡ್ಯರ ಉಪರಾಜನಾಗಿರುವುದಕ್ಕಿಂತ ಮೇಲಾಗಿ ಆಳುಪರ ಹಾಗೂ ಪಾಂಡ್ಯರ ಪರಸ್ಪರ ಶರೀರಸಂಬಂಧದಿಂದ ಹುಟ್ಟಿದವನಾಗಿರಬೇಕು. ಆತನು ತುಳುನಾಡಿನಲ್ಲಿ ಅಳಿಯಕಟ್ಟಿನ ಪ್ರವರ್ತಕನೆಂದು ಪ್ರಖ್ಯಾತನಾಗಿರುವ ಕಾರಣ, ಆತನ ತಂದೆ ಪಾಂಡ್ಯ ಅರಸನಾಗಿದ್ದು, ಆತನ ತಾಯಿ ಆಳುಪ ವಂಶದವಳಾಗಿರುವ ಕಾರಣವೆ ಆತನು ಇಲ್ಲಿಗೆ ಬಂದು, ತನ್ನ ಸೋದರಮಾವನ ಮರಣಾನಂತರ ಆತನ ತುಳುನಾಡಿನ ಗದ್ದುಗೆಯನ್ನು ಏರಿಯೋ ಅಥವಾ ತುಳುನಾಡನ್ನು ಗೆದ್ದುಕೊಂಡೋ ಇಲ್ಲಿ ಆಳುತ್ತಿರಬೇಕು. ಹಾಗಾದರೆ ಆಳುಪರಿ ಅವನಿಗಿಂತಲೂ ಹಿಂದಣಿಂದಲೇ ತುಳುನಾಡಿನಲ್ಲಿ ಆಳುತ್ತಿರಬೇಕು.

ತುಳುನಾಡಿನಲ್ಲಿ ಸಲುವಳಿಯಲ್ಲಿರುವ ಐತಿಹ್ಯದ ಮೇರೆಗೆ ಭೂತಾಳ ಪಾಂಡ್ಯನು ಶಾ.ಶ ೧ನೆಯ ಈಶ್ವರ ಸಂ| ಮಾಘ ಶು| ೩ ಶುಕ್ರವಾರ = ಕ್ರಿ.ಶ. ೭ನೆಯ ದಶಂಬರ ೨೫ನೆಯ ತಾರೀಕಿನಂದು ಪಟ್ಟಾಭಿಷಿಕ್ತನಾದಂತೆ.[14] ಈ ತೇದಿಯನ್ನು ಎಷ್ಟರಮಟ್ಟಿಗೆ ನಂಬಬಹುದೊ ತಿಳಿಯದು. ಬಾರಕೂರು ಆತನ (ಹಾಗೂ ಆತನ ಪೀಳಿಗೆಯವರ) ರಾಜಧಾನಿಯಾಗಿತ್ತಂತೆ. ಈ ಐತಿಹ್ಯವನ್ನು ಕೆಳದಿ ನೃಪವಿಜಯದಲ್ಲೂ (ಆಶ್ವಾಸ ೫) ಕಾಪಾಡಿದೆ –

ಅವನೀಶ ಭೂತಪಾಂಡ್ಯೋ
ದ್ಫವರ್ಗಳ್ ಮುನ್ನಾಳ್ದ ಪರಮವೈಭವದಿಂದೊ
|
ಪ್ಪುವ ಭಾರಕೂರ ಸಂಸ್ಥಾ
ನ……………………………. || ೫೦ ||

ಇಂದಿಗೆ ಸುಮಾರು ೫೦ ವರ್ಷಗಳ ಹಿಂದೆ (೧೮೯೭) ಐಗುಪ್ತ (Egypt) ದೇಶದ ತಗ್ಗಿನಲ್ಲಿಯ Oxyrhynchus ಎಂಬಲ್ಲಿ ಕೆಯ್ಕೊಂಡ ಅಗೆತದಲ್ಲಿ ದೊರೆತ ಅನೇಕಾನೇಕ ಪ್ರಾಕ್ಕಾಲೀನ ವಲ್ಕಲೇಖಗಳಲ್ಲಿಯ ಒಂದರಲ್ಲಿ ಇರುವ ಗ್ರೀಕ ಭಾಷೆಯದೊಂದು ಚಿಕ್ಕ ಪ್ರಹಸನ (ನಂ. ೪೧೩) ೧೯೦೩ ರಲ್ಲಿ ಪ್ರಕಟವಾಗಿದೆ.[15] ಅದು ಕ್ರಿ.ಶ. ೨ನೆಯ ಶತಮಾನದಲ್ಲಿ ರಚಿತವಾಯಿತೆಂದೂ ಅದೇ ಗ್ರಂಥದಲ್ಲಿ (ಪು. ೪೧) ನಿರ್ಧರಿಸಿದೆ. ಅದರಲ್ಲಿ ಗ್ರೀಕೇತರ ಯಾವೊಂದು ಭಾಷೆಯ ಹಲವು ಶಬ್ದಗಳಿವೆ. ಅದನ್ನು ಪರಿಶೀಲಿಸಿ ಅವು ಕನ್ನಡ ಭಾಷೆಯ ಶಬ್ದಗಳೆಂದು ಆ ಪ್ರಹಸನವನ್ನು ಕುರಿತು ಹಲವು ವರ್ಷಗಳ ಹಿಂದೆ ಬರೆದಿರುವ ಲೇಖದಲ್ಲಿ[16] ನಾನು ಗೊತ್ತುಹಚ್ಚಿರುತ್ತೇನೆ. ಅವುಗಳಲ್ಲಿ ಕೆಲವು ಹೀಗಿವೆ –

(೧) ಬಂ ೧೯೭ : echousi (ಉಚ್ಚಾರ – ಏ ಕೂಸೀ). ಈ ಶಬ್ದಕ್ಕೆ ಗ್ರೀಕ ಭಾಷೆಯಲ್ಲಿ ‘ಅವರೊಂದಿಗೆ ಇದೆ’ (they have) ಎಂದು ಅರ್ಥ, ಕನ್ನಡದಲ್ಲಿ ‘ಏ ಕೂಸೇ’ = ಎಲೇ ಹುಡುಗಿಯೇ[17] ಎಂದು ಅರ್ಥ.

(೨) ಬಂ. ೧೯೮ : Kraunou. ಇದು ಕನ್ನಡದಲ್ಲಿ ‘ಕರೆವನೌ’ ಅಥವಾ ‘ಕರೆವನೋ? ಎಂದು ಧ್ವನಿಸುತ್ತದೆ.

(೩) ಬಂ. ೧೯೯ : ‘Lalle’ = ಕನ್ನಡ ‘ಅಲ್ಲೇ’. ಉಚ್ಚಾರದ ಸೌಕರ್ಯಕ್ಕಾಗಿ ‘ಅಲ್ಲೇ’ (‘alle’) ಎಂಬುದರ ಆದ್ಯಕ್ಷರವಾದ ‘a’ಯ ಹಿಂದೆ ‘1’ (ಲ-ಕಾರ)ವನ್ನು ಹಚ್ಚಿದೆ.

(೪) ಬ. ೨೦೦ : (L)aita (L)iantala – (I)alle = (ಕನ್ನಡ) ‘ಐತಾ’ ಎಂತಾಳಲ್ಲೆ? = ಆಕೆ ನಮ್ಮನ್ನು ಬಾ ಎಂದು ಕರೆದವಳಲ್ಲವೆ? ಇಲ್ಲಿಯೂ ಉಚ್ಚಾರದ ಸೌಕರ್ಯಕ್ಕಾಗಿ ಲ-ಕಾರವನ್ನು ಹಚ್ಚಿದೆ.

(೫) ಬಂ. ೨೦೪ : boethi = (ಕನ್ನಡ) ‘ಬೈತಿ’ = ಬಯ್ಯುತ್ತಿ.

(೬) ಬಂ. ೨೦೫ : alemaka = (ಕನ್ನಡ) ‘ಅಲ್ಲ, ಎಮ್ಮ ಅಕ್ಕ!’

(೭) ಬ. ೨೧೦ : porde = (ಕನ್ನಡ) ‘ಪೊರೆಟೆ’ = ಹೊರಟೆನು.

(೮) ಬ. ೭೦ : (S) kal-maka-ta-bap-teiragoumi= (ಕನ್ನಡ) ಕಳ್+ಮೊಗ+ತಾ+ಒಪ್ಪು+ತೆರಕಮ್+ಈ = ಕಳ್ಳನ್ನು (=ಹೆಂಡವನ್ನು) ಮೊಗೆದು ತೆಕ್ಕೊಂಡು ಬಾ, ಎಲ್ಲರೂ ಒಪ್ಪುವ ತೆರದಲ್ಲಿ (=ರೀತಿಯಲ್ಲಿ) ಈ (=ಕೊಡು).

(೯) ಬಂ. ೭೭ : Seo Sarachis = ಶಿವ, ಸಂರಕ್ಷಿಸು ಇಇ.

ಆ ಪ್ರಹಸನದ ಕಥೆ ಇಷ್ಟೇ – ಯಾವಳೊಬ್ಬ ಗ್ರೀಕ್ ಕನ್ನಿಕೆ ಹಡಗೊಡೆದು ತುಳುನಾಡಿನ ಕರಾವಳಿಯ ಒಂದು ಊರನ್ನು ಸೇರಿ, ಅಲ್ಲಿಯ ಅರಸನ ಆಶ್ರಯದಲ್ಲಿ ಇರುತ್ತಾಳೆ. ಅವಳನ್ನು ಹುಡುಕಾಡಿ ಬಂದ ಕೆಲವು ಗ್ರೀಕರು ಅವಳನ್ನು ಅಲ್ಲಿ ಕಂಡು ಆಕೆಯನ್ನು ಕರಕೊಂಡು ಹೋಗುತ್ತಾರೆ. ಆ ಹೊತ್ತಿಗೆ ಅಲ್ಲಿ ಪಾನಗೋಷ್ಠಿಯಾಗುತ್ತದೆ. ಆ ಪ್ರಹಸನದಲ್ಲಿ ಹಿಂದು ಮಹಾಸಾಗರವನ್ನೂ (‘Indian Ocean’ – ಬಂ. ೨೧೫), ಹಿಂದೀಯ ನಾಯಕರನ್ನೂ (‘Indian Chiefs – ಬಂ. ೯೦) ಹೇಳಿರುವುದರಿಂದ ಅದರ ಕಾರ್ಯಕ್ಷೇತ್ರವು ಭಾರತ ವರ್ಷವೇ ಎಂದೂ, ‘paral…’ (ಗ್ರೀಕ paralios ಅಥವಾ paralion) = ಕಡಲ ಕರೆಯೂ, ಕನ್ನಡ ಮಾತುಗಳು ಇರುವುದರಿಂದ, ಅದರ ರಂಗಭೂಮಿ ಪಶ್ಚಿಮ ಕರಾವಳಿಯ ತುಳುನಾಡೆಂದೂ, ಅದರಲ್ಲಿ Ouamesare ಎಂಬ ಶಬ್ದದಲ್ಲಿ ಬಿಟ್ಟು ಹೋಗಿರುವ ಆದ್ಯ ‘S’ ನ್ನು ಅಲ್ಲಿ ಕೂಡಿಸಿಕೊಂಡಲ್ಲಿ ಆಗುವ Souamesaros ಎಂಬುದರ ಸಂಬೋಧನೆ ವಿಭಕ್ತಿಯ ಏಕವಚನ ಎಂಬುದರಿಂದಲೂ ತುಳುನಾಡಿನಲ್ಲಿ ಉಡುಪಿಯ ಬಳಿಯ ಉದ್ಯಾವರದಲ್ಲಿ ಸೋಮೇಶ್ವರ ಎಂಬ ಶಿವಾಲಯವಿರುವುದರಿಂದಲೂ, ಆ ಪ್ರಹಸನದ ಕಥಾಕ್ಷೇತ್ರ ಆ ಉದ್ಯಾವರವೇ ಆಗಿರಬೇಕೆಂದು ನಾನು ನಿರ್ಣಯಿಸಿರುತ್ತೇನೆ.

ಆ ಪ್ರಹಸನದಲ್ಲಿ (ಬಂ. ೮೧) ಇದೊಂದು ಸಾಕೂತವಾದ ಮಾತಿದೆ – Malpi niakouroukou – koubi – karko (+ndu+ba) =ಮಲ್ಪಿ + ನಾಯಕರುಕು + ಕೂಬಿ + ಕರಕೊ(೦ಡು) ಬಾ. ಇಲ್ಲಿ ‘ಮಲ್ಪಿ ನಾಯಕ’ ಎಂಬಲ್ಲಿಂದ ಮೊದಲ ಕಣ್ಣಿಗೆ (ಉಡುಪಿಯ ಬಳಿಯ) ಮಲ್ಪಿಯ ನಾಯಕ, ಅಂದರೆ ಮಲ್ಪಿಯ ಅರಸನೊ, ಹೆಗ್ಗಡೆಯೋ, ಗೌಡನೋ ಆಗಿರಬೇಕೆಂದು ತೋಚುತ್ತದೆ. ಆದರೆ ಈಗ ಮಲ್ಪಿ ಎಂಬಾ ರೇವಿಗೆ ಇಂದಿಗೆ ೧೮೦೦ ವರ್ಷಗಳ ಹಿಂದೂ ಅದೇ ಹೆಸರಿದ್ದಿರಬಹುದೋ ಎಂಬ ಶಂಕೆಯನ್ನು ತಟ್ಟನೆ ನಕಾರಿಸಲಾಗದ ಕಾರಣವೂ, ಈ ಮಾತನ್ನು ಆ ಪ್ರಹಸನದಲ್ಲಿ Bas. (ಅಂದರೆ ಗ್ರೀಕ, Basileus) = ಅರಸು ಎಂದು ಸಂಕೇತಿಸಿರುವ ಪಾತ್ರವೇ ನುಡಿಯುವುದರಿಂದ, ತನ್ನನ್ನೇ ಕರಕೊಂಡು ಬಾರೆಂದು ತಾನೆನ್ನುವ ಆತನ ಹೇಳಿಕೆಗೆ ಅರ್ಥವಿಲ್ಲದ ಕಾರಣವೂ ಆ ಶಬ್ದವನ್ನು ಇದ್ದಕ್ಕಿದ್ದಂತೆ Malpi = ಮಲ್ಪಿ ಎಂಬ ಊರೆಂದು ಒಪ್ಪಲಾಗುವುದಿಲ್ಲ. ಈಗ, ಗ್ರೀಕ ಭಾಷೆಯಲ್ಲಿ ಸ್ವರದಿಂದ ಆರಂಭಿಸುವ ಶಬ್ದಗಳ ಮೊದಲಲ್ಲಿ, ಪ್ರಾಯಶಃ ಉಚ್ಚಾರದ ಸೌಕರ್ಯಕ್ಕಾಗಿ ಏನೋ, ಒಂದು ಮ-ಕಾರವನ್ನು (m) ಹೊಂದಿಸುವುದುಂಟು Malpi – niak ಎಂಬಲ್ಲಿಯೂ ಹಾಗೆ ಆಗಿದೆಯಾದರೆ, ಮತ್ತು ಹಾಗಾದರೆ ಮಾತ್ರ, ಆ ಮ-ಕಾರವನ್ನು ಕಳಚುತ್ತದೆ ಅದು Alpi-naik = ಅಲ್ಪಿನಾಯಕ ಎಂದಾಗುತ್ತದೆ. ಆ ಅಲ್ಪಿನಾಯಕನೆಂದರೆ ಆ ಪ್ರಹಸನದ ಕಥಾ ಭೂಮಿಯಾದ ಉದ್ಯಾವರದ ಅರಸನೇ ಸರಿ. ಆತಏವ ಬಹಳ ಹಳಗಾಲದಿಂದ ತುಳುನಾಡಿನ ಆ ಉದ್ಯಾವರವೇ ಆಳುಪ ಅರಸರ ರಾಜಧಾನಿ ಎಂದು ತಿಳಿಯುವುದರಿಂದ, ಆ ಪ್ರಹಸನದ Alpi-niak ಎಂದರೆ ಆವಂದಿನ ಆಲುಪ ಅರಸನೇ ಆಗಿರಬೇಕು. ಹಾಗಾದರೆ ಕ್ರಿ.ಶ. ೨ನೆಯ ಶತಕಕ್ಕೂ ಹಿಂದಿನಿಂದಲೇ ತುಳುನಾಡಿನಲ್ಲಿ ಆಳುಪ ಅರಸರ ಆಳ್ತನವಿತ್ತೆಂದು ವ್ಯಕ್ತವಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಮಳವಳ್ಳಿಯಲ್ಲಿಯ ಶಿಲಾಸ್ತಂಭದಲ್ಲಿ ಹಾರಿತೀಪುತ್ತ ವಿಣ್ಹುಕಡ್ಡ ಚುಟುಕು ಲಾನನ್ದ ಸಾತಕಣ್ಣಿ = ಹಾರತೀ ಪುತ್ರ ವಿಷ್ಣುಸ್ಮಂದ ಉಟುಕುಲಾನಂದ ಶಾತಕರ್ಣಿ ಎಂಬೊಬ್ಬ ಅರಸನ ಆಳೊತ್ತಿನ ೨ನೆಯ ವರ್ಷದ = (ಸವ್ವಚ್ಛರಂ ತೀಬಿಯಂ) ಪ್ರಾಕೃತಭಾಷೆಯ ಶಾಸನವಿದೆ[18]. ಅದರಲ್ಲಿ ಆತನನ್ನು ವೈಜಯಂತಿಯ ಅಂದರೆ ಬನವಾಸಿ ಅರಸನೆಂದದೆ (=ವೈಜಯನ್ತೀ ಪುರರಾಜಾ). ಬನವಾಸಿಯಲ್ಲೂ ಅದೇ ಅರಸನ ಆಳೊತ್ತಿನ ೧೨ನೆಯ ವರ್ಷದ (= ಸವಛರಂ ೧೨) ಪ್ರಾಕೃತ ಭಾಷೆಯ ಮತ್ತೊಂದು ಶಾಸನವಿದೆ[19]. ಅದರಲ್ಲಿ ಆತನನ್ನು ‘ಡುಟುಕುಲಾನನ್ದ’ ಎಂದದೆ ಹಾಗೂ ಅದರಲ್ಲಿ ‘ವಸ ಸತಾಯ’ = ೧೦೦ನೆಯ ವರ್ಷದಲ್ಲಿ ಎಂದು ಮತ್ತೊಂದು ತೇದಿಯೂ ಇದೆ. ಈ ೧೦೦ನೆಯವೆಂದರೆ ಶಾತವಾಹನ ಸಮ್ರಾಟನಾದ ಗೌತಮೀಪುತ್ರ ಶಾತಕರ್ಣಿಯಿಂದ (ಕ್ರಿ.ಶ. ೬೦-೯೧) ಕ್ರಿ.ಶ.೭೮ ರಲ್ಲಿ ಸ್ಥಾಪಿಸಲ್ಪಟ್ಟ ಶಾಲಿವಾಹನ ಶಕದ ೧೦೦ನೆಯ ವರ್ಷ, ಅಂದರೆ ಕ್ರಿ.ಶ. ೧೭೭ – ೭೮ ಎಂದು ನಾನು ಅನ್ಯತ್ರ ಸಕಾರಣವಾಗಿ ಹಾಗೂ ಸಾಧಾರಣವಾಗಿ ಪ್ರತಿಪಾದಿಸುತ್ತೇನೆ. ಹಾಗಾದರೆ ವಿಷ್ಣುಸ್ಕಂದ ಚು(ಡು)ಟುಕುಲಾನಂದ ಶಾತಕರ್ಣಿ ಕ್ರಿ.ಶ. ೧೬೫ರಿಂದ ಆಳತೊಡಗಿರಬೇಕು. ಈಗ, ಆತನ ವಂಶದ ಹೆಸರಾದ ‘ಚು(ಡು)ಟು’ವಿಗೂ ತುಳುನಾಡಿನ ‘ತುಳು’ವಿಗೂ ನಿಕಟತಮವಾದ ರೂಪ ಸಂಬಂಧವಿರುವುದರಿಂದ, ‘ಚುಟು’ವಿನಿಂದ ತುಳುವೊ, ‘ತುಳು’ವಿನಿಂದ ‘ಚುಟು’ವೊ ಎಂದು ಮಾರ್ಪಟ್ಟಿರಬೇಕೆಂದು ಊಹಿಸಲಿಕ್ಕೆ, ಅಂದರೆ ತುಳುನಾಡಿಗೆ ಆತನ ಕಾಲಕ್ಕೂ ಹಿಂದೆ ಯಾವೊಮ್ಮೆ ‘ಚುಟು’ (ದೇಶ) ಎಂದು ಹೆಸರಿದ್ದು ಆಮೇಲೆ ಕ್ರಮೇಣ ಅದು ‘ತುಳು’ ಎಂದಾಯಿತೊ ಎಂದು ಅನುಮಾನಿಸಲಿಕ್ಕೆ ಸಾಕಷ್ಟು ಇಂಬಿದೆ. ತುಳುನಾಡಿನ ಬ್ರಾಹ್ಮಣೇತರರಲ್ಲಿ ಈಗಲೂ ಸಲುವಳಿಯಲ್ಲಿರುವ ‘ಚೌಟ’ ಎಂಬ ಕುಲನಾಮವೂ ಪ್ರಾಯಶಃ ಇದೇ ‘ಚುಟು’ವಿನಿಂದ ಹುಟ್ಟಿರಬೇಕು. ಇದು ಸರಿಯಾದರೆ ಆತನ ವಂಶವು ತುಳುನಾಡಿನಿಂದಲೇ ಮೊದಲಾಗಿ, ಆತನೊ ಆತನ ಹಿರಿಯರಾರೊ (ವಿಜಯನಗರದ ತುಳುವ ಅರಸರಂತೆ) ಇಲ್ಲಿಂದ ಬನವಾಸಿಗೆ ಹೋಗಿ ಅಲ್ಲಿ ರಾಜ್ಯ ಕಟ್ಟಿಕೊಂಡು ತಮ್ಮ ರಾಜಧಾನಿಯನ್ನು ಅಲ್ಲಿರಿಸಿ ಆ ದೇಶ ಮಾತ್ರವನ್ನೊ, ಅಥವಾ (ಭೈರರಸು ಗಟ್ಟದ ಮೇಲೆ ಕಳಸದ ಸೀಮೆಯನ್ನೂ ಕೆಳಗೆ ಕಾರ್ಕಳದ ಸೀಮೆಯನ್ನೂ ಆಳುತ್ತಿದ್ದಂತೆ) ಗಟ್ಟದ ಮೇಲೆ ಬನವಾಸಿ ಪ್ರಾಂತವನ್ನೂ ಕೆಳಗೆ ತುಳುನಾಡನ್ನೂ ಒಳಕೊಂಡ ದೇಶವನ್ನೊ ಆಳುತ್ತಿರಬೇಕು.

ಈ ವಿಷ್ಣುಸ್ಕಂದನ ಸಾತಕಣ್ಣಿ = ಶಾತಕರ್ಣಿ ಎಂಬ ಉಪನಾಮ ಸಾತವಾಹನ ಸಾಮ್ರಾಟರಲ್ಲಿ ಹಲವರಿಗಿತ್ತು. ಉದಾ. ಗೌತಮೀಪುತ್ರ ಶಾತಕರ್ಣಿ, ವಾಸಿಷ್ಠೀಪುತ್ರ ಶಾತಕರ್ಣಿ ಇ. ಉಪರಾಜರು ತಮ್ಮ ಅಧಿರಾಜರ ಉಪನಾಮಗಳನ್ನೊ ಬಿರುದುಗಳನ್ನೊ ತಾಳುತ್ತಿದ್ದರೆಂದು ಮೇಲೆ ಕಂಡಿರುವುದರಿಂದ, ವಿಷ್ಣುಸ್ಕಂದನು ಸಾತವಾಹನರ ಉಪರಾಜನಾಗಿದ್ದು, ಆ ಕಾರಣವೇ ತನ್ನ ಅಧಿರಾಜನಾದ ತನ್ನಂದಿನ ಗೌತಮೀಪುತ್ರ ಶ್ರೀ ಯಜ್ಞ ಶಾತಕರ್ಣಿಯ (ಕ್ರಿ.ಶ. ೧೫೨ – ೧೮೧) ಶಾತಕರ್ಣಿ ಎಂಬ ಉಪನಾಮವನ್ನು ತಾನೂ ಅಂತಿರಬೇಕು.

ನಂದುರಾಯನ ಭಂಡಾರ ನಾಯಿನರಿ ತಿಂದು ಹೋಯಿತು, ನಂದಿರಾಯನ ಬದುಕು ನರಿನಾಯಿ ತಿಂದು ಹೋಯಿತು ಎಂಬ ಗಾದೆ ತುಳುನಾಡಿನಲ್ಲಿ ಜನಜನಿತವಾಗಿದೆ. ಆ ರಾಯನು ತೊಗಲಿಲ ಹಣವನ್ನು ಮಾಡಿಸಿದ್ದನಂತೆ. ಆತನ ಮರಣಾನಂದರ ಆ ಚರ್ಮದ ನಾಣ್ಯಗಳು ಸಲುವಳಿಯಾಗದೆ ಹೊರಗೆ ಬಿಸುಡಲ್ಪಟ್ಟು ನರಿನಾಯಿಗಳ ಪಾಲಾದವಂತೆ. ತುಳು ದೇಶದಲ್ಲಿ ಬಳಕೆಯಲ್ಲಿರುವ ಐತಿಹ್ಯದ ಮೇರೆಗೆ ನಂದು ಅಥವಾ ನಂದಿರಾಯನು ಬರೇ ಗಾದೆಯ ಅರಸನಲ್ಲ. ಆತನೊಬ್ಬ ಅಸ್ಪೃಶ್ಯ ಜಾತಿಯ ಅರಸನಾಗಿದ್ದು ಬಹಳ ಹಳಗಾಲದಲ್ಲಿ ಮಂಗಳೂರು ತಾಲೂಕಿನ ನಂದಾವರದಲ್ಲಿ ಆಳುತ್ತಿದ್ದನಂತೆ ಹಾಗೂ ಆತನಿಂದಲೇ ನಂದಾವರಕ್ಕೆ ಆ ಹೆಸರಾಯಿತಂತೆ. ಮಂಗಳೂರು ತಾಲೂಕಿನ ಹರಿಜನರಲ್ಲಿ ಈಗಲೂ ನಂದಿ, ನಂದು ಎಂಬ ಹೆಸರುಗಳಿವೆ. ತುಳುನಾಡಿನ ಐತಿಹ್ಯದಲ್ಲಿ ಮತ್ತೊಬ್ಬ ಹರಿಜನ ಅರಸನ ಹೆಸರಿದೆ. ಮಯೂರವರ್ಮ ಚರಿತ್ರೆ ಎಂಬ ಇನ್ನೂ ಪ್ರಾಯಶಃ ಅಚ್ಚಾಗದಿರುವ ಗ್ರಂಥದಲ್ಲಿ ಆತನ ಹೆಸರು ಹೊಬಕೂಸ ಎಂದಿದೆ. ಕ್ರಿ.ಶ. ೧೯ನೆಯ ಶತಮಾನದ ಮುಂಭಾಗದಲ್ಲಿ ತುಳುನಾಡನ್ನು ಸಂದರ್ಶಿಸಿದ ಬುಕ್ಕನನನ (Buchanan) ಗ್ರಂಥದಲ್ಲಿ[20] ಆತನನ್ನು ಹಬಶಿಕ (Habashika) ಎಂದದೆ. ಮಯೂರವರ್ಮ ಚರಿತ್ರೆಯಲ್ಲಿ ಚಂದ್ರಸಾಯಣನೆಂಬ ಇನ್ನೊಬ್ಬ ಹರಿಜನ ಅರಸನ ಹೆಸರೂ ಇದೆ. ಇವರು ಯಾವಂದಿನವರು, ಸ್ವತಂತ್ರರಾದ ಅರಸರೊ, ತುಂಡರಸರೊ, ಪಾಳೆಯಗಾರರೊ ಎಂದು ನಿಶ್ಚಯಿಸಲಿಕ್ಕೆ ಸಾಧ್ಯವಲ್ಲವಾದರೂ ಹೇಗೊ ಐತಿಹಾಸಿಕ ವ್ಯಕ್ತಿಗಳೆಂದು ಒಪ್ಪಿಕೊಳ್ಳಬೇಕು.[21]

ತುಳುನಾಡಿನಲ್ಲಿ (ತೇದಿಯಿಲ್ಲದಿದ್ದರೂ ಲಿಪಿಯಿಂದಲೂ ಭಾಷೆಯಿಂದಲೂ ಕ್ರಿ.ಶ. ೬-೭ನೆಯ ಶತಕದವು ಎಂದು ನಿಶ್ಚಯಿಸಲಾಪ) ಆಳುವ ಅರಸರ ಬಹಳ ಹಳೆಯ ಶಾಸನಗಳಿವೆ. ಮೇಲೆ ಕೊಟ್ಟಿರುವ ಈ ದೇಶದ ಸಂಭಾವ್ಯವಾದ ಪ್ರಾಚೀನ ಇತಿಹಾಸದ ಪಾಂಡುಲೇಖದಿಂದ ಆಳುಪರು ಇಲ್ಲಿ ಕ್ರಿಸ್ತ ಶಕಕ್ಕೆ ಹಿಂದಿನಿಂದಲೇ ಅಲ್ಲವಾದರೆ ಅದರ ೧ – ೨ನೆಯ ಶತಮಾನದಿಂದಲಾದರೂ ಆಳುತ್ತಿದ್ದಂತೆ ವ್ಯಕ್ತವಾಗುತ್ತದೆ. ಬಾದಾಮಿಯ ಚಾಳುಕ್ಯ ವಂಶದ ಸಾಮ್ರಾಟನಾದ II ಪುಲಕೇಶಿಯ ಐಹೊಳೆ ಶಾಸನದ (ಕ್ರಿ.ಶ. ೬೩೪) ೧೮ನೆಯ ಪದ್ಯದಲ್ಲಿ ಆತನು ವನವಾಸಿಯ, ಅಂದರೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ರಾಜ್ಯವನ್ನು ಗೆದ್ದುದನ್ನೂ, ೨೦ನೆಯ ಪದ್ಯದಲ್ಲಿ ಕೊಂಕಣವನ್ನು, ಅಂದರೆ ಗೋವೆಯಿಂದ ಠಾಣಾ ಜಿಲ್ಲೆಯ ವರೆಗಣ ಪಶ್ಚಿಮ ತೀರಭೂಮಿಯನ್ನು ಗೆದ್ದುದನ್ನೂ ಹೇಳಿದುದರ ನಡುವಣ ೧೯ನೆಯ ಪದ್ಯದಲ್ಲಿ ಆತನು ಸೋಲಿಸಿದ ‘ಗಂಗಾಲುಪೇಂದ್ರಾಃ’ ಎಂಬವರಲ್ಲಿ ಗಂಗರೆಂದರೆ ಮೈಸೂರಲ್ಲಿ ಆಳಿದ ತಲಕಾಡಿನ ಗಂಗರು, ಆತಏವ ಆಲುಪರೆಂದರೆ ತುಳುನಾಡಿನ ಆಲುಪ ಅರಸರು ಎಂದು ನಿಶ್ಚಯಿಸಲಾಗುತ್ತದೆ. ಈ ಆಳುಪರು ತುಳುನಾಡಿನಲ್ಲಿ ವಿಜಯನಗರದ ಪ್ರಾದುರ್ಭಾವವಾದ ಮೇಲೆ ಹೆಚ್ಚು ಕಡಮೆ ಒಂದು ಶತಮಾನದ ತನಕ ಪರಂಪರವಾಗಿ ಇಲ್ಲಿ ಆಳುತ್ತಿದ್ದು ಅಲ್ಲಿಂದ ಮುಂದೆ ಅವರ ಆಳ್ವಿಕೆ ಕೊನೆಗೊಂಡಿತು. ಆತಏವ ಮೂಡಬಿದರೆಯ ಬಳಿಯ ಪ್ರಾಂತ ಎಂಬಲ್ಲಿಯ ಗೌರೀ ದೇವಾಲಯದಲ್ಲಿರುವ ಶಾ. ೧೩೬೩ – ೪೫ರ ಶಿಲಾಲೇಖದ[22] ಪಾಂಡ್ಯ ಚಕ್ರವರ್ತಿ ಕುಲಶೇಖರ ಎಂದೂ ಮಧುರೆಯ ಪಾಂಡ್ಯರ ಎರಡೂ ಹೆಸರುಗಳಿದ್ದ) ಅರಸನು ಆಳುಪರ ಪೀಳಿಗೆಯಲ್ಲಿ ಕೊನೆಯವನೇನೋ.

 

[1] SII.VII, ನಂ. ೨೭೯, ೨೮೩, ೨೮೪, ೨೯೦, ೨೯೩ ಮತ್ತು Epigraphia Indica IX, ಪು. ೧೭ – ೨೩.

[2] SII.VII, ನಂ. ೩೦೯ -೩೯೦.

[3] EX. VI, ಮೂಡಗೆರೆ ೨೨.

[4] SII. VII. ನಂ. ೩೭೬.

[5] ಅದೇ, ನಂ. ೩೧೪.

[6] ಅದೇ, ನಂ. ೩೩೦.

[7] ಅದೇ, ನಂ. ೨೭೩.

[8] ಮಂಗಳೂರಿನ ತೆಂಕಣ ಎಡಗಡೆಯಿಂದ (ಕುಮಾರಧಾರಾ ಸಂಗತವಾದ) ನೇತ್ರಾವತೀ ನದಿಯೂ, ಬಡಗಣ ಬಲಗಡೆಯಿಂದ ಫಲ್ಗುನೀ ಅಥವಾ ಪುಲಿನಾ ನದಿಯೆಂಬ ಗುರುಪುರ ಹೊಳೆಯೂ ಹರಿದು ಬಂದು ಮಂಗಳೂರಲ್ಲಿ ಸಂಗಮಿಸಿ, ಅಲ್ಲಿಯೇ ಮುಂಗಡೆಯ ಸಮುದ್ರವನ್ನು ಸೇರುವುದರಿಂದ, ಆ ಹೊಳೆಗಳು ಕೂಡುವಲ್ಲಿರುವ ಮಂಗಳೂರಿಗೆ ಬಹಳ ಹಿಂದಣಿಂದಲೇ ಕೂಡಲ – ಕೂಡಾಲ ಎಂದು ಹೆಸರಿದೆ. ಅದೇ ಕೊಡೆಯಾಲ – ಕೊಡಿಯಾಲ ಎಂದು ರೂಪಾಂತರಿಸಿದೆ. ತುಳುವಿನಲ್ಲಿ ಮಂಗಳೂರನ್ನು ಈಗಲೂ ಎನ್ನುವುದು ಕೂಡಲ ಎಂದು, ಕನ್ನಡದಲ್ಲಾದರೆ ಕೊಡೆಯಾಲ – ಕೊಡಿಯಾದ ಎಂದು ರೂಪಾಂತರಿಸಿದೆ. ತುಳುವಿನಲ್ಲಿ ಮಂಗಳೂರನ್ನು ಈಗಲೂ ಎನ್ನುವುದು ಕೂಡಲ ಎಂದು, ಕನ್ನಡದಲ್ಲಾದರೆ ಕೊಡೆಯಾಲ – ಕೊಡಿಯಾಲ ಎಂದು. ಮಂಗಳೂರಿನ ಒಂದು ಭಾಗಕ್ಕೆ ಈಗಲೂ ಕೊಡಿಯಾಲಬೈಲು ಎಂದು ಹೆಸರಿದೆ.

[9] Hemachandra Raychaudhari : Political HIstory of Ancient India (1927), ಪು. ೧೬೭ – ೬೮ ಮತ್ತು ೧೮೫ ಅಡಿಬರೆಹ ೨, ಆ ಅಡಿಬರೆಹದಲ್ಲಿ ತಮಿಳಿನ ‘ತುಳಿಯನ್’ (ತಮಿಳು, ‘ತುಳಿ’ = ಬಿಂದು) ಎಂದು ಹೆಸರಾಗುವ ಬಿಂದುಸಾರನಿಂದ (‘ತುಳು’ = ನಾಡಿಗೆ ಆ ಹೆಸರಾಯಿತು ಹಾಗೂ) ತುಳುನಾಡು ರಚಿಸಲ್ಪಟ್ಟಿತು ಎಂದು ಹೇಳಿದೆ. ಇದು ಎಷ್ಟರಮಟ್ಟಿಗೆ ನಿಜವಾಗಿರಬಹುದೋ ಹೇಳತೀರದು.

[10] Krishnaswami Aiyangar : Bdginnings of South Indian History, ಪು. ೮೪ – ೮೫ – ೮೬ – ೮೮ ಮತ್ತು ೯೩.

[11] South Indian Epigraphy Report for 1926 – 1927 (SIER) ಪು. ೧೦೭.

[12] SII, VII. ನಂ. ೧೭೭, ೧೮೫, ೨೨೧, ೨೨೪, ೧೩೭, ೩೫೪, ಇ.

[13] SIER (1926-27) ಪು. ೧೦೭.

[14] ಭೂತಾಳಪಾಂಡ್ಯ (ಧರ್ಮಪ್ರಕಾಶ ಛಾಪಖಾನೆ, ಮಂಗಳೂರು, ೧೯೧೫) ಪು.೧.

[15] ‘Egypt Exploration Fund : Graeco – Roman Branch. The Oxyrhunchus Papyri : Part III’. Edited with translation and notes by Grenfell and Hunt. (Oxford University Press, 1903)

[16] ಪ್ರಬುದ್ಧ ಕರ್ನಾಟಕ (ಸಂಪುಟ ೧೧, ಸಂಚಿಕೆ ೧-೨; ಪು. ೧-೩೬, ೩೭-೩೬)ರಲ್ಲಿ ಪ್ರಕಟವಾದ ನನ್ನ ‘ಗ್ರೀಕ ಪ್ರಹಸನದಲ್ಲಿ ಕನ್ನಡ ಮಾತುಗಳು’ ಎಂಬ ಲೇಖನವನ್ನು ನೋಡಿ.

[17] Kittel’s Dictionary (ಪು. ೪೫೯) : ಕೂಸು = Maiden, young virgin.

[18] E.C. VII, ಶಿಕಾರಿಪುರ ೨೬೩.

[19] Indian Antiquary, XIV, ಪು. ೩೩೩ -೩೩೪.

[20] Buchanan’s Mysore and Canara, III ಪು. ೧೬೩.

[21] ಇವರಲ್ಲದೆ ಮಂಜೇಶ್ವರದ ಬಾಹೆಯ ಬಡಾಜೆ ಎಂಬ ಗ್ರಾಮದಲ್ಲಿ ಬಡಜನೆಂಬ ಹರಿಜನ, ಅರಸನೂ ಅಲ್ಲಿಂದ ಕಿಯದ್ದೂರದಲ್ಲಿಯ ಪಟ್ಟದ ಮುಗರು ಎಂಬ ಗ್ರಾಮದಲ್ಲಿ ಮುಗ್ರನೆಂಬ ಹರಿಜನ ಅರಸನೂ ಆಳುತ್ತಿದ್ದರೆಂದೂ, ಅವರ ಹೆಸರುಗಳಿಂದ ಆಯಾ ಹಳ್ಳಿಗಳಿಗೆ ಆ ಹೆಸರುಗಳಾದುವೆಂದೂ ಐತಿಹ್ಯವಿದೆ.

[22] SII.VII.ನಂ. ೨೨೪.