ಈಗ ತುಳು ಎಂಬ ಪದದ ನಿವೃತ್ತಿ ಹೇಗೆ? ಇದನ್ನು ಕುರಿತ ಇವೆರಡು ಐತಿಹ್ಯಗಳಿವೆ –

(೧) ಪರಶುರಾಮನು ಸಮುದ್ರದಿಂದ ಈ ದೇಶವನ್ನು ಪಡಕೊಳ್ಳುತ್ತಲೆ ಅದನ್ನು ಪಾಲಿಸುವುದಕ್ಕಾಗಿ ರಾಮಭೋಜನೆಂಬ ಅರಸನನ್ನು ನೇಮಿಸಿದನು. ಆ ಅರಸನು ಭಾರ್ಗವನ ಆಜ್ಞಾನುಸಾರವಾಗಿ

ತುಲಾಪುರುಷ ದಾನಾನಿ ತುಲಾಭಾರಾಂಶ್ಚ ಸರ್ವಶಃ[1]

ಮಾಡಿ ಅಂದಿನಿಂದ ಆತನಿಗೆ ತುಲಾಭಾರ, ತುಲಾರಾಜ, ತುಲಾದೇಶಾಧಿಪನೆಂದೂ, (ಆತಏವ ಆತನ ದೇಶಕ್ಕೆ ತುಲಾದೇಶವೆಂದೂ), ಆತನ ದೇಶದಲ್ಲಿದ್ದ ಜನರಿಗೆ ತೌಲವರೆಂದೂ ಹೆಸರಾಯಿತು –

ತುಲಾಭಾರ ಇತಿ ಪ್ರಾಹುಸ್ತಂ ನೃಪಂ ದ್ವಿಜಸತ್ತಮಾ || ೩೬ ||
ತುಲಾರಾಜಂ ತಮಪರೇ ತುಲಾದೇಶಾಧಿಪಂ ತಥಾ |
ತದ್ದೇಶೇ ಚ ಸ್ಥಿತಾಃ ಸರ್ವೇ ತೌಲವಾ ಇತಿ ಜಾಭವನ್ || ೩೭ ||62

ಈ ಕಟ್ಟುಕಥೆಯನ್ನು ಅದರಷ್ಟಕ್ಕೆ ನೀಗಿಬಿಡಬಹುದು. ಏಕೆಂದರೆ ಅಚ್ಚ ಅನಾರ್ಯ ದೇಶಗಳಾದ ಚೋಳ, ಪಾಂಡ್ಯ, ಚೇರ (= ಕೇರಳ)ಗಳಿಗೆ ದ್ರಾವಿಡ ಭಾಷೆಗಳಿಂದ ತಾನೆ ಆಯಾ ಹೆಸರಾದಂತೆ, ದ್ರಾವಿಡ ಭಾಷೆಯಿಂದಲ”ಏ ಹುಟ್ಟಿರಬೇಕಾದ ತುಳು ಎಂಬ ಹೆಸರನ್ನು ಸಂಸ್ಕೃತದಿಂದ ಹುಟ್ಟಿಸಲಿಕ್ಕೆ ಹೆಣೆದಿರುವ ಈ ಕಲ್ಪನೆಯಲ್ಲಿ ನೀರು ನಿಲ್ಲುವಂತಿಲ್ಲ.

(೨) ಕುಂದಾಪುರ ತಾಲೂಕಿನ ಕೋಟೀಶ್ವರದಲ್ಲಿ ಆಳಿದ್ದನೆಂಬ ತುಳುಂಬ ಪೆರುಮಾಳ್ ಎಂಬ ಯಾವನೊಬ್ಬ ಅರಸನ ಹೆಸರಿನಿಂದ ಈ ನಾಡಿಗೆ ತುಳು ಎಂದು ಹೆಸರಾಯಿತಂತೆ. ಇದನ್ನು ಒಪ್ಪಲಾಗುವುದಿಲ್ಲ. ಏಕೆಂದರೆ ಆತನು ಐತಿಹಾಸಿಕ ಕಾಲಕ್ಕೆ ಪೂರ್ವದಲ್ಲಿ ಇದ್ದನೆಂದು ಇಟ್ಟುಕೊಂಡರೊ, ಆತನಿಗೆ ಪೆರುಮಾಳ್ (=ಅರಸ) ಎಂಬ ಅಚ್ಚ ತಮಿಳು ಬಿರುದೂ, ತುಳುವ ಎಂಬುದರದೇ ತಮಿಳು ರೂಪಾಂತರವಾದ ತುಳುಂಬ ಎಂಬ ಹೆಸರೂ ಇದ್ದ ಕಾರಣ, ಆತನು ಆ ಹೆಸರಿನಿಂದ ಇಲ್ಲಿ, ಅಲ್ಲ, ತಮಿಳುನಾಡಲ್ಲಿ ತಾನೆ ಪ್ರಸಿದ್ಧನಾಗಿರಬೇಕೆಂದು ಪ್ರತ್ಯಕ್ಷವಿರುವುದರಿಂದ, ಆತನ ಅಂಕಿತ ನಾಮವೇ ತುಳುಂಬ (=ತುಳುವ) ಎಂದಿರದೆ, ತುಳುವರ ಅಥವಾ ತುಳುದೇಶದ ಅರಸನಾಗಿದ್ದುದರಿಂದಲೇ ಆತನು ತುಳುಂಬ ಪೆರುಮಾಳ್ = ತುಳುವ ಅರಸನು ಎಂದು ತಮಿಳು ದೇಶದಲ್ಲಿ ಕರೆಯಲ್ಪಟ್ಟಿರಬಾರದೇಕೆ? ಹಾಗಾದರೆ ಆತನಿಂದ ಈ ನಾಡಿಗೆ ಹಾಗೆ ತಾನೆ ತುಳು ಎಂದು ಹೆಸರು ಬಂದಿರಬಹುದು?
ಹಾಗೆಯೇ ಇದೊಂದು ಊಹೆಯೂ ಇದೆ – ಹಲಸಿನ ಹಣ್ಣಿನಲ್ಲಿ ಗಟ್ಟಿಯಾದ ತೊಳೆಯುಳ್ಳದನ್ನು ತುಳುಭಾಷೆಯಲ್ಲಿ ಬರಿಕೆ -ಬರಿಕ ( = ಕನ್ನಡ ‘ಬಕ್ಕ’) ಎಂದೂ, ಮೆತ್ತಗಾದ ತೊಳೆಯುಳ್ಳದನ್ನು ತುಳುವೆ- ತುಳುವ ಎಂದೂ ಹೇಳುತ್ತಾರೆ. ಆತಏವ ಮೆತ್ತಗಿರುವ ಜನರು, ಮೃದು ಸ್ವಭಾವದವರು, ಸಜ್ಜನರು ಎಂಬ ಅರ್ಥದಲ್ಲಿ ಈ ನಾಡಿನವರನ್ನು ತುಳುವರು ಎಂದೂ, ಆ ಕಾರಣ ಅವರ ದೇಶವನ್ನು ತುಳುದೇಶ ಎಂದೂ, ಪ್ರಾಯುಶಃ ನೆರೆಕರೆಯವರೇನೋ, ಕರೆದಿರಬೇಕು. ಇದನ್ನು ಒಪ್ಪಲಾಗುವುದಿಲ್ಲ. ಏಕೆಂದರೆ ಆಯಾ ಜನರ ಗುಣಾಗುಣಗಳಿಂದ ಆಯಾ ನಾಡುಗಳಿಗೆ ಹೆಸರಾದಂತೆ ತೋರುವುದಿಲ್ಲ. ಮಾತ್ರವಲ್ಲ, ಸಮರ್ಥರು, ಶಕ್ತರು ಎಂದು ಅರ್ಥವುಳ್ಳ ‘ಆರ್ಗಳ್'[2] (ಧಾತು, ‘ಆಱ್) ಎಂಬ ಗುಣನಾಮವನ್ನು ‘ಆರ್ಗಳೆನಲ್ ತುಳುವರ್’ ಎಂದು ಚತುರಾಸ್ಯ ನಿಘಂಟಿನಲ್ಲಿ (I. ೬೦) ತುಳುವರಿಗೆ ಹೊಂದಿಸಿರುವ (ತಕ್ಕಷ್ಟು ಈಚೆಯದಾದರೂ) ಉದಾಹರಣೆಯೂ ಇದೆ ತುಳು(ವ)ಗತ್ತಿ[3] ಎಂಬ ಖಡ್ಗವೂ ಇದೆ. ಆದರೆ ಈ ಊಹೆಯಲ್ಲಿ ಏನಾದರೂ ತಿರುಳಿದ್ದರೆ, ಈ ನಾಡಿನ ಕಡಲ ಕರೆಯ ಮಣ್ಣು ಹೋಲಿಕೆಯಲ್ಲಿ ಸಹಜವಾಗಿ ಮೆತ್ತನಾಗಿರುವುದರಿಂದ, ಮೆದು ಮಣ್ಣಿನ ಪ್ರದೇಶ ಎಂಬ ಅರ್ಥದಲ್ಲಿ ಈ ದೇಶಕ್ಕೆ ತುಳುವ ಎಂದು ಹೆಸರಾಗಿರಬಹುದೇನೋ. ಈ ಬಗ್ಗೆ ರಾಜಪುತಾನದಲ್ಲಿಯ ಮರುಪ್ರದೇಶಕ್ಕೆ ಮರು (ಬಹುವಚನದಲ್ಲಿ ಮರವಃ = Marwar) ಎಂದು ಮೇಲೆ ಕಂಡಿರು ಉದಾಹರಣೆಯಲ್ಲದೆ, ಪಶ್ಚಿಮ ಕರಾವಳಿಯಲ್ಲಿಯ (ಈಗಲೂ ಕಚ್ಛ = Kach ಎಂಬ) ಜವುಗು ಭೂಮಿಯ ಪ್ರದೇಶವನ್ನು ಕಚ್ಛ ( = ಜವುಗು ಭೂಮಿ) ಎಂದಿರುವ ಮಹಾಭಾರತದಲ್ಲಿಯ ಈ ಉದಾಹರಣೆಗಳೂ ಇವೆ –

ತತಃ ಕಚ್ಛಗತೋ ಧೀಮಾನ್ ದೂತಾನ್ ಮಾದ್ರವತೀಸುತಃ || ೭೩ ||[4]
ಕಚ್ಛೋ ಗೋಪಲಕಕ್ಷಾಶ್ಚ ಜಾಂಗಲಾಃ ಕುರುಕರ್ಣಕಾಃ || ೫೬ ||[5]

ಹಾಗೂ ಚೇಱು = ಕೆಸರು ಎಂಬುದರಿಂದ ಚೇಱ = ಕೇರಳಕ್ಕೆ ಹೆಸರಾಗಿದೆ ಎಂದೂ ಮೇಲೆ ಕಂಡಿರುತ್ತೇವೆ.

ತಮಿಳನ್ನು ಆಶ್ರಯಿಸಿ ತುಳುವಿನ ನಿಷ್ಪತ್ತಿಯನ್ನು ಕಂಡುಹಿಡಿಯುವುದಾದರೆ ನನಗೆ ಹೀಗೆನಿಸುತ್ತದೆ –

ತಮಿಳಿನಲ್ಲಿ ತುಚೈ[6] ಎಂದರೆ ನೀರಿನಲ್ಲಿ ಹುಟ್ಟುಹಾಕು ಎಂದೂ, ತುಳೈ[7] ಎಂದರೆ ಮುಳುಗು, ನೀರಿನಲ್ಲಿ ಆಡು ಎಂದೂ, ತುಳೈಯಮ್[8] ಎಂದರೆ ನೀರಿನಲ್ಲಿ ಆಡುವಿಕೆ ಎಂದೂ ಅರ್ಥ. ಹರಿವಂಶದಿಂದ ತುಳುನಾಡಿನ ಜನರನ್ನು ಕುರಿತು

ತಸ್ಯ ದಾಶಾ ಜಲೇ ಮಗ್ನಾಃ…. ಸಮುದ್ರೋದರಚಾರಿಣಃ ||

ಎಂದು ಮೇಲೆ ಕಂಡಿರುವಂತೆ ಕಡೆಲ ಕರೆಯ ಪ್ರದೇಶವಾಗಿದ್ದ ಈ ನಾಡಿನಲ್ಲಿ ಆ ಹಳಗಾಲದಲ್ಲಿ ಬೆಸ್ತರೂ ಅಂಬಿಗರೂ ಸಹಜವಾಗಿ ಹೇರಳವಾಗಿದ್ದು ದಾಶಭೂಯಿಷ್ಠವಾಗಿರಬೇಕಾದ ಈ ದೇಶವು ಅದೇ ಕಾರಣ ತುಱು -ತುಳು ಎಂದು ಕರೆಯಲ್ಪಟ್ಟಿರಬೇಕು. ಈ ಬಗ್ಗೆ ಅಂಬಷ್ಠರೆಂಬ ಜನರಿದ್ದ ದೇಶಕ್ಕೆ ಅಂಬಷ್ಠ ಎಂದು ಹೆಸರಾದ ಉದಾಹರಣೆ ಮಹಾಭಾರತದಲ್ಲಿದೆ (ಸಭಾಪರ್ವ, ಅಧ್ಯಾಯ ೩೨)- ‘ಶಿಬಿಂ ತ್ರಿಗರ್ತಾನಂಬಷ್ಠಾನ್’ (ಮುಂದೆ ೩೩-೩೪ನೆಯ ಪುಟವನ್ನು ನೋಡಿ.)

ಹೊಯ್ಸಳರ ಶಾಸನಗಳಲ್ಲೇ ತುಳುನಾಡನ್ನು ಆಳ್ವಖೇಟ ಎಂದೂ ತುಳುನಾಡು ಎಂದೂ ಹೇಳಿರುವುದನ್ನು ಗಮನಿಸಿದರೆ, ಈ ದೇಶವು ಒಮ್ಮೆಯೇ ಆ ಎರಡು ಹೆಸರುಗಳಿಂದಲೂ ಕರೆಯಲ್ಪಡುತ್ತಿದ್ದಿತೆಂದು ವ್ಯಕ್ತವಾಗುತ್ತದೆ.

Canara = ಕನ್ನಡ

ಕ್ರಿ.ಶ. ೧೭ನೆಯ ಶತಕಗಳಲ್ಲಿ ಪಶ್ಚಿಮ ಕರಾವಳಿಯಲ್ಲೆಲ್ಲ ಪೋರ್ತುಗೀಸರ ಹಾವಳಿ ನಡೆಯುತ್ತಿದ್ದಿತು. ಉತ್ತರ – ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಅವರು ಹಲಬಾರಿ ದಾಳಿ ಇಟ್ಟಿದ್ದರು. ಆಗ್ಗೆ ಆ ಜಿಲ್ಲೆಗಳಲ್ಲಿ ಜನರು ಆಡುತ್ತಿರುವ ಕನ್ನಡ ಭಾಷೆಯನ್ನು ಕೇಳಿ, (ಪೋರ್ತುಗೀಸ ಭಾಷೆಯಲ್ಲಿ ಡ-ಕಾರವಿಲ್ಲದ ಕಾರಣ, ಅದರಂತೆಯೇ ಮೂರ್ಧನ್ಯವಾದ ರ-ಕಾರವನ್ನು ಆ ಬಗ್ಗೆ ಉಪಯೋಗಿಸಿ) ಆ ಜಿಲ್ಲೆಗಳನ್ನಉ ಅವರು Canara = ಕನ್ನಡ ಎಂದು ಕರೆದರು; ಉದಾ. ತುಳುನಾಡಿನ ಬಂಗರಾಜನನ್ನು ಅವರು King of Canara = ಕನ್ನಡದ ಅರಸು ಎನ್ನುತ್ತಿದ್ದರು. ಅಲ್ಲಿಂದ ಮುಂದೆ ಅವೆರಡೂ ಜಿಲ್ಲೆಗಳು ಪಾಶ್ಚಾತ್ಯರ ಮಟ್ಟಿಗೆ Canara ಎಂದಾದವು. ಕ್ರಿ.ಶ.೧೭೯೯ರಲ್ಲಿ ಟಿಪ್ಪುವಿನ ಮರಣಾನಂತರ ಈ ಜಿಲ್ಲೆಗಳ ಒಡೆತನಕ್ಕೆ ಬಂದ ಆಂಗ್ಲರೂ ಅದೇ ಹೆಸರನ್ನು ಸ್ಥಿರೀಕರಿಸಿದರು. ಆದರೆ ಕ್ರಿ.ಶ. ೧೭೬೩ರಲ್ಲಿ ಕೆಳದಿಯ ನಾಯಕರ ನಗರ ಸಂಸ್ಥಾನವು ವಿಸ್ಖಲಿತವಾದ ಕಿಯತ್ಕಾಲದಲ್ಲಿ ರಚಿತವಾದ ಲಿಂಗಣ್ಣನ ಕೆಳದಿನೃಪವಿಜಯದಲ್ಲಿ ತುಳುನಾಡನ್ನು ಕನ್ನಡ ಎಂದಿಲ್ಲ.

೩. *‘ಮಂಗಳೂರು ತಾಲೂಕು

ರೋಮಿಯಾ ಪ್ಲಿನಿಯ (Pliny, ಕ್ರಿ.ಶ. ೨೩ -೭೯) ಗ್ರಂಥದಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿಯ Nitrias ಎಂಬ ಒಂದು ವ್ಯಾಪಾರ ಸ್ಥಳವನ್ನೂ (Mart), ಪ್ತೊಲಮಿಯ (ಕ್ರಿ.ಶ.ಸು. ೧೧೦) ಗ್ರಂಥದಲ್ಲಿ ಅದೇ ಕರಾವಳಿಯಲ್ಲಿ Nitra ಎಂಬ ರೇವನ್ನೂ (Port) ಹೇಳಿದೆ. ನೇತ್ರಾವತಿ ಎಂಬ ಊರಾಗಲಿ ಹೊಳೆಯಾಗಲಿ ನಾನು ಬಲ್ಲಷ್ಟರ ಮಟ್ಟಿಗೆ ಹಿಂದುಸ್ಥಾನದಲ್ಲಿ ತುಳುನಾಡಿನಲ್ಲೇ ವಿನಾ ಅನ್ಯತ್ರ ಇಲ್ಲದಿರುವುದರಿಂದ, Nitras = Nitra ಎಂಬ ಹೆಸರು ಮಂಗಳೂರಿನಲ್ಲಿ ಸಮುದ್ರಗಾಮಿಯಾಗುವ ಹೊಳೆಯದೇ ಹೆಸರೆಂದು ಪ್ರತ್ಯಕ್ಷವಿದೆ. ಅವರದನ್ನು ಹೊಳೆ ಎನ್ನದೆ ವ್ಯಾಪಾರದ ಊರು, ರೇವು ಎಂದಿರುವುದರಿಂದ, ಆಗ್ಗೆ ಆ ಹೊಳೆಗೇ ಅಲ್ಲ, ಅದರ ದಂಡೆಯಲ್ಲಿರುವ ಮಂಗಳೂರಿಗೂ ನೇತ್ರಾವತಿ ಎಂದೇ ಹೆಸರಿದ್ದಿರಬೇಕು. ಈ ಬಗ್ಗೆ ತುಳುನಾಡಿನ ಪುಲಿನಾ ಎಂಬ ಗುರುಪುರ ಹೊಳೆಯ ತೀರದಲ್ಲಿರುವ (ಈಗ ಲೋಕೋಕ್ತಿಯಲ್ಲಿ ಪೊಳಲಿ ಎಂದು ಕರೆಯಲ್ಪಡುವ) ಊರಿಗೆ ಪುಲಿನ (ಪುರ) ಎಂದು ಹೆಸರಿರುವ ಉದಾಹರಣೆ ಇದೆ. ರೋಮಿಯಾ ರಾಜ್ಯದ ಆರ್ಯಿನ್ (Arrian) (ಕ್ರಿ.ಶ. ಸು. ೧೦೦-೧೭೨) ಎಂಬವನ Indica ಎಂಬ ಗ್ರಂಥದಲ್ಲಿ ಮಂಗಳೂರನ್ನು Mandegora ಎಂದರೆ, ಕ್ರಿ.ಶ. ೬ನೆಯ ಶತಕದಲ್ಲಿದ್ದ Kosmos Indikopleustes ಎಂಬವನ Christian Topography ಎಂಬ ಗ್ರಂಥದಲ್ಲಿ Mangarouth ಎಂಬ ರೇವನ್ನು ಹೇಳಿದೆ. ಅದೂ ಪ್ರಾಯಶಃ ಮಂಗಳೂರೇ ಸರಿ. ಕ್ರಿ.ಶ. ಸು. ೭೭೦ರ ವೆಲ್ವಿಕುಡಿಯ ತಾಮ್ರಪಟ್ಟದಲ್ಲಿ[9] ಅಂದಿನ ಪಾಂಡ್ಯ ಅರಸನಾದ ನೆಡುಂ ಜಟೆಯ್ಯನ್ ಎಂಬ ಜಟಿಲ ಪರಾಂತಕನ ಅಜ್ಜನಾದ ಮಧುರ ಕರುನಾಟಕನ್ (= ಇಂಪಾದ ಕರ್ಣಾಟಕನು) ಎಂದು ಬಿರುದಿದ್ದ ಜಟೆಯ್ಯನ್ ಎಂಬ ಪಾಂಡ್ಯ ರಾಜನು ಕ್ರಿ.ಶ. ಸು. ೭೧೫ರಲ್ಲಿ ‘ಮಂಗಲಪುರಮೆನ್ನುಂ ಮಹಾ ನಗರುಣ್ ಮಹಾರಥರೈ’ ಅಂದರೆ ಮಹಾರಥರೆಂಬ ಬಾದಾಮಿಯ ಚಾಳುಕ್ಯರನ್ನು ಮಂಗಲಪುರ ಎಂಬ ಮಹಾನಗರದಲ್ಲಿ ಸೋಲಿಸಿದನೆಂದಿದೆ. ಈ ಮಂಗಲಪುರ ಎಂದರೆ ಮಂಗಳೂರೇ ಎಂದು ಗೊತ್ತುಹಚ್ಚಿದೆ. ಹಾಗಾದರೆ ೮ನೆಯ ಶತಮಾನದಲ್ಲಿ ಮಂಗಳೂರು ದೊಡ್ಡ ಪಟ್ಟಣವಾಗಿದ್ದಿರಬೇಕು. ಕ್ರಿ.ಶ. ೭ನೆಯ ಶತಮಾನದ ಅರಬೀ ಗ್ರಂಥಗಳಲ್ಲೂ ಮಂಗಳೂರಿನ ಹೆಸರಿದೆಯಂತೆ. ಆನಂತರದವುಗಳಲ್ಲಿ (ಗ – ಕಾರಣವಿಲ್ಲದ ಅರಬೀ ಭಾಷೆಯಲ್ಲಿ) ಅದನ್ನು ಮಂಜರೂರ್ ಎಂದದೆ. ಮಂಗಳೂರಿನಲ್ಲಿರುವ ಅನೇಕ ಶಾಸನಗಳಲ್ಲಿ[10] ಹೇಗೂ ಅದರ ಹೆಸರಿದೆಯಷ್ಟೆ.

ಮಂಗಳೂರಲ್ಲಿಯ ಅತ್ತಾವರವನ್ನು ಅಲ್ಲಿಯದೇ ಒಂದು ಶಾಸನದಲ್ಲಿ[11] ಅರ್ಥಪುರ ಎಂದರೆ. ಮಂಗಳೂರಿನ ಕದಿರೆಯ ಗುಡ್ಡದ ಮೇಲೆ ನಾಥಪಂಥದ ಜೋಗಿಗಳ ಮಠವಿದೆ. ಕೆಳಗೆ ಶ್ರೀ ಮಝುನಾಥ ದೇವಾಲಯದಲ್ಲಿರುವ ಲೋಕೇಶ್ವರನ ಕಂಚಿನ ವಿಗ್ರಹದ ಪೀಠದಲ್ಲಿ ಕುಂದವರ್ಮನೆಂಬ ಆಳುಪ ಅರಸನ ಕ್ರಿ.ಶ. ೧೦೬೮ನೆಯ ಇಸವಿಯ ಶಾಸನವಿದೆ. [12] (ಈ ಕುರಿತು ಮುಂದೆ ಹೇಳಲ್ಪಡುವುದು) ಆಳುವ ಅರಸರಲ್ಲಿ ಹೆಚ್ಚು ಮಂದಿಗೆ ಪಾಂಡ್ಯ ಚಕ್ರವರ್ತಿ ಎಂದೂ ಕುಲಶೇಖರ ಎಂದೂ ಮಧುರೆಯ ಪಾಂಡ್ಯರ ಬಿರುದುಗಳಿದ್ದುವು. [13] ಅವರಲ್ಲಿ ಯಾವೊಬ್ಬನೋ, ಪ್ರಾಯಶಃ ಪಾಂಡ್ಯ ಚಕ್ರವರ್ತಿ ಪಾಂಡ್ಯದೇವ[14] ಎಂಬಾತನೇನೋ ಮಂಗಳೂರಲ್ಲಿಯ ಪಾಂಡೇಶ್ವರದ ಪಾಂಡ್ಯೇಶ್ವರ ಎಂಬ ಶಿವಾಲಯವನ್ನು ನಿರ್ಮಿಸಿರಬೇಕು. ಆ ಆಳುಪ ಅರಸರ ಅರಮನೆ ಕುಲಶೇಖರದಲ್ಲಿ ಇದ್ದಿರಬಹುದಾದ ಕಾರಣವೇನೋ ಮಂಗಳೂರಿನ ನೆರೆಯ ಕುಲಶೇಖರಕ್ಕೆ ಆ ಹೆಸರಾಗಿರಬೇಕು.

ಮಂಗಳೂರಿನಿಂದ ೫ ಮೈಲಿಗೆ ದಕ್ಷಿಣದಲ್ಲಿರುವ ಹರೆಕಳದಲ್ಲಿಯ ನರಹರಿ ಪರ್ವತ ಎಂಬ ದಿನ್ನೆಯಲ್ಲಿ ಶ್ರೀ ನರಸಿಂಹಸ್ವಾಮಿಯ ಗುಡಿಯೂ ಅದರ ಪಕ್ಕದಲ್ಲಿ ಶ್ರೀ ಶಾರದಾಂಬೆಯ ಗುಡಿಯೂ ಇವೆ. ಆ ನೃಸಿಂಹಮೂರ್ತಿ ವಿಜಯನಗರದಲ್ಲಿರುವ ಉತ್ತುಂಗವಾದ ಒಗ್ಗಲ್ಲಿನ ಉಗ್ರ ನರಸಿಂಹ ಮೂರ್ತಿಯ ಸಣ್ಣಿಸಿದ ಪ್ರತಿಕೃತಿ ಹಾಗೂ ಆ ಶಾರದೆಯ ಮೂರ್ತಿ ಶೃಂಗೇರಿಯ ಶಾರದಾ ಮೂರ್ತಿಯ ಪ್ರತಿಕೃತಿ. ತುಳುನಾಡಿನಲ್ಲಿ ಪ್ರಾಯಶಃ ಶಾರದೆಯ ದೇವಾಲಯ ಇದೊಂದೇ ಏನೋ. ಮಂಗಳೂರಿನಿಂದ ಮೂಲ್ಕಿಗೆ ಹೋಗುವ ದಾರಿಯಲ್ಲಿಯ ಪಾವಂಜ ಎಂಬ ಹಳ್ಳಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ವಿಜಯನಗರದ || ದೇವರಾಯನ ಆಳೊತ್ತಿನ ಶಾ.ಶ. ೧೩೪೦ ಹೇವಿಲಂಬಿ ಸಂ| = ಕ್ರಿ.ಶ. ೧೪೧೭ -೧೮ರ ಶಾಶನದಲ್ಲಿ[15] ಆ ಹಳ್ಳಿಯ ಹೆಸರು ಪಾಳಉಂಜ ಎಂದದೆ. ಮಂಗಳೂರು ತಾಲೂಕಿನ ಪೊಳಲಿ (=ಪುಲಿನಪುರ) ಎಂಬಲ್ಲಿಯ ಶ್ರೀ ರಾಜರಾಜೇಶ್ವರೀ ದೇವಾಲಯವನ್ನು ಕ್ರಿ.ಶ. ೧೪೪೮ರಲ್ಲಿ ಸಂದರ್ಶಿಸಿದ ಪಾರ್ಶಿಸ್ತಾನದ ರಾಯಭಾರಿಯಾದ ಅಬ್ದುಲ್ ರಜಕನು ಅದರ ವಿಪುಲ ಸಂಪತ್ತನ್ನು ತುಂಬಾ ಹೊಗಳಿ ಬರೆದಿರುತ್ತಾನೆ.

ಕಾಸರಗೋಡು ತಾಲೂಕು

ಕಾಸರಗೋಡಿನಲ್ಲಿ ಕೆಳದಿಯ ನಾಯಕರು ಕಟ್ಟಿಸಿದ ಒಂದು ಕೋಟೆ ಇದೆ. ಅಡೂರಿನಲ್ಲಿ ಬಾದಾಮಿಯ ಚಾಳುಕ್ಯ || ಕೀರ್ತಿವರ್ಮನ ಆಳೊತ್ತಿನ (ಕ್ರಿ.ಶ. ೭೪೩ – ೭೫೩) ಒಂದು ಶಾಸನವಿದೆ. ಮಂಜೇಶ್ವರದಿಂದ ೨ ಮೈಲುಗಳಲ್ಲಿರುವ ಕಣ್ವತೀರ್ಥದಲ್ಲಿ ಶ್ರಿ ಮಧ್ವಾಚಾರ್ಯರು (ಕ್ರಿ.ಶ. ೧೨೩೮ – ೧೩೧೮) ಉಡುಪಿಯ ಅಷ್ಟಮಠದ ಯತಿಗಳಿಗೆ ಆಶ್ರಮವಿತ್ತವರೆಂದು ಪ್ರತೀತಿ ಇದೆ. ಅವರ ಅಪರವಯಸ್ಸಿನಲ್ಲಿ ಅವರು ಕಣ್ವತೀರ್ಥದಲ್ಲಿ ಒಂದು ಚಾತುರ್ಮಾಸ್ಯವನ್ನು ಕಳೆಯುತ್ತಿದ್ದಾಗ ಒಂದು ಸೂರ್ಯಗ್ರಹಣವಾಯಿತೆಂದೂ (ಮಧ್ವವಿಜಯ XV ೧೪೦; XVI. ೧೦), ಆ ಚಾತುರ್ಮಾಸ್ಯ ಸಂದ ಬಳಿಕ ಅವರು ದಕ್ಷಿಣಾಭಿಮುಖವಾಗಿ ಮುಂದುವರಿಯುತ್ತಿದ್ದಾಗ (ಸರ್ಗ XVI)

ಸ ಪ್ರಯಾದಿಹ ಪರಿತೋ ನೃಸಿಂಹ ಗೇಹನ್ || ೩೦ ||

ಒಂದು ನೃಸಿಂಗ ದೇವಸ್ಥಾನವನ್ನು ಪ್ರದಕ್ಷಿಣೀಕರಿಸಿ ಮುನ್ನಡೆದರೆಂದೂ ಮಧ್ವವಿಜಯದಲ್ಲಿ ಹೇಳಿದೆ. ಆ ಸೂರ್ಯಗ್ರಹಣವು ಕ್ರಿ.ಶ. ೧೨೯೩ನೆಯ ಜುಲಾಯಿ ೫ನೆಯ ತಾರೀಕು ರವಿವಾರದಂದಿನ ಕಿಚಿನ್ನ್ಯೂನ ಪೂರ್ಣಗ್ರಹಣವೋ ಅಥವಾ ಕ್ರಿ.ಶ. ೧೩೦೦ನೆಯ ಅಗೋಸ್ತು ೧೫ನೆಯ ತಾರೀಕು ಸೋಮವಾರದ ಪಾರ್ಶ್ವಗ್ರಹಣವೊ ಆಗಿರಬೇಕು. ಅವರು ಬಲವಂದ ನೃಸಿಂಹ ದೇವಸ್ಥಾನವೆಂದರೆ ಮಂಜೇಶ್ವರದ ಶ್ರೀ ನರಸಿಂಹ ದೇವಾಲಯವೇ ಸರಿ. ಆ ದೇವಸ್ಥಾನದಲ್ಲಿ ವಾಸುಕಿ ಎಂಬ ನಾಗನ ಹುತ್ತವಿದ್ದು ಸುಬ್ರಹ್ಮಣ್ಯ (ಸುಬ್ಬರಾಯ)ನೆಂಬ ಹೆಸರಿನಿಂದ ಶೇಷನೂ ಆರಾಧಿಸಲ್ಪಡುತ್ತಾನೆ.

ಪುತ್ತೂರು ತಾಲ್ಲೂಕು

ತುಳುನಾಡಿನಲ್ಲಿ ಬಹಳ ಹಳೆಗಾಲದಲ್ಲಿ ನಾಗರೆಂಬ ಜನರು ವಾಸಿಸಿದ್ದರೆಂದು ಹಿಂದೆ ಕಂಡಿರುವೆವಷ್ಟೆ. ಅವರು ನಾಗಪೂಜಕರಾಗಿದ್ದ ಕಾರಣ ನಾಗರೆಂದು ಕರೆಯಲ್ಪಟ್ಟರೊ, ಅಲ್ಲ ನಾಗವು ಅವರ ಲಾಂಛನವಾಗಿದ್ದ ಕಾರಣ ಅವರಿಗೆ ಆ ಹೆಸರಾಯಿತೊ ಎಂದು ನಿಷ್ಕೃಷ್ಟವಾಗಿ ವಿವೇಚಿಸಲಾಗುವುದಿಲ್ಲ. ಹೇಗೂ ಈಗಲೂ ತುಳುನಾಡಿನಲ್ಲಿ ನಾಗಾರಾಧನೆ ಹಲವು ದೇವಾಲಯಗಳಲ್ಲೇ (ಉದಾ. : ಸುಬ್ರಹ್ಮಣ್ಯ, ಮಂಜೇಶ್ವರ, ಕುಡ್ಪು, ಬಳ್ಳಮಂಜು, ಕಾಡಕುಕ್ಕೆ ಇ.) ಅಲ್ಲ, ಮನೆ ಮನೆಯಲ್ಲೂ (ಪ್ರತಿವಾರ್ಷಿಕ ನಾಗಪಂಚಮಿಯಂದಾದರೂ) ಇದ್ದಿರುವುದರಿಂದ, ಆ ಪದ್ಧತಿ ಪ್ರಾಯಶಃ ಪ್ರಾಚೀನ ಕಾಲದ ಆ ನಾಗರ ಆಚರಣೆಯಿಂದಲೇ ಬಂದಿರಬೇಕೆಂದು ನಿರ್ಣಯಿಸಬಹುದು. ಆದರೆ ತುಳುನಾಡಿನ (ಹಾಗೂ ಕೇರಳದ) ದೇವಾಲಯಗಳಲ್ಲಿಯದಾದರೂ ಒಂದು ವಿಶೇಷವಾದ ಸಂಪ್ರದಾಯವೆಂದರೆ ನಾಗದೇವತೆಯನ್ನು ಶ್ರೀ ಶಿವನ ಮಗನಾದ ಶ್ರೀ ಸ್ಕಂದನೊಂದಿಗೆ ಸಮೀಕರಿಸಿ (ಲೋಕೋಕ್ತಿಯಲ್ಲಿ ಸುಬ್ಬರಾಯನೆಂಬ) ಸುಬ್ರಹ್ಮಣ್ಯನೆಂದು ಪೂಜಿಸುವಿಕೆ ಹಾಗೂ ಆ ನಾಗದೇವಾಲಯಗಳಲ್ಲಿ ಆಗುವ ಪ್ರತಿ ಸಾವಂತ್ಸರಿಕ ರಥೋತ್ಸವವನ್ನು ಮಾರ್ಗಶಿರ ಶುಕ್ಲ ೬ಯ ಸ್ಕಂದಷಷ್ಠಿಯಂದು ಜರಗಿಸುವಿಕೆ; ಇದು ಮಿಕ್ಕ ಎಲ್ಲಿಯೂ ಕಾಣಬರುವುದಿಲ್ಲ. ಇಂಥಾ ಪ್ರಸಿದ್ಧವಾದ ನಾಗಯತನಗಳಲ್ಲಿ ಪುತ್ತೂರು ತಾಲೂಕಿನ ಸುಬ್ರಹ್ಮಣ್ಯದಲ್ಲಿಯ ದೇವಾಲಯವು ಒಂದು. ಅದು ಬಹಳ ಪ್ರಾಚೀನವಾಗಿರಬೇಕು. ಅದರ ಪೂರ್ವತಮವಾದ ಹೆಸರು ನಾಡನುಡಿಯಲ್ಲಿ ಕುಕ್ಕೆ ಎಂದು. ಅಲ್ಲಿಯ ದೇವಾಲಯದಲ್ಲಿ ಶೇಷನ ಸರ್ಪ ವಿಗ್ರಹವೂ ಇದೆ, ಸ್ಕಂದನ ವಿಗ್ರಹವೂ ಇದೆ. ಅಲ್ಲಿ ಮಧ್ವಾಚಾರ್ಯರ ಕಾಲದಲ್ಲಿ ಸ್ಥಾಪಿತವಾದ ವಿಷ್ಣು ತೀರ್ಥಾಚಾರ್ಯರ ಮಠವೂ ಇದೆ.

ಈ ತಾಲೂಕಿನ ಮತ್ತೊಂದು ಪ್ರಸಿದ್ಧವಾದ ಸ್ಥಳವೆಂದರೆ ಧರ್ಮಸ್ಥಳ. ಅದರ ಹಳೆಯ ಮೂಲ ಹೆಸರು ಕುಡುಮ ಎಂದು. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆಮಠದ ಶ್ರೀ ವಾದಿರಾಜ ಸ್ವಾಮಿಯವರು (ಕ್ರಿ.ಶ. ೧೪೮೦ – ೧೬೦೦) ಒಮ್ಮೆ ಕುಡುಮದ ದಾರಿಯಾಗಿ ಹಾದುಹೋಗುತ್ತ ದೇವಾಲಯವಿಲ್ಲದಲ್ಲಿ ತಾವು ತಂಗವೆಂದೂ ಭಿಕ್ಷೆ ಮಾಡೆವೆಂದೂ ಅಲ್ಲಿಂದ ಮುಂದುವರಿಯಲಿಕ್ಕೆ ಕಾಲು ತೆಗೆದಾಗ, ಅಲ್ಲಿಯ ಪ್ರಖ್ಯಾತನಾದ ಅಣ್ಣಪ್ಪ ಎಂಬ ಭೂತವು ಮಂಗಳೂರಿನ ಕದಿರೆಯ ದೇವಸ್ಥಾನದಲ್ಲಿದ್ದ ಮಂಜುನಾಥ ಎಂಬ ಶಿವಲಿಂಗದ ಮೇಲ್ಭಾಗವನ್ನು ಕಿತ್ತು ತಂದು ಅದನ್ನು ಅವರಿಂದ ಅಲ್ಲಿ ಪ್ರತಿಷ್ಠೆ ಮಾಡಿಸಿ ಅವರನ್ನು ಅಲ್ಲಿ ಕೆಲಕಾಲ ಉಳಿಸಿಕೊಂಡಿತೆಂದೂ, ಆ ಕಾರಣ ಅಲ್ಲಿಯ ಲಿಂಗಕ್ಕೆ ಮಂಜುನಾಥ ಎಂದು ಹೆಸರಾಯಿತೆಂದೂ ಐತಿಹ್ಯವಿದೆ. ಧರ್ಮಸ್ಥಳದ ನೆರೆಯಲ್ಲಿ ಜಮಾಲಗಡ ಎಂಬ ಉನ್ನತವಾದ ಒಗ್ಗಲ್ಲಿನ ಕೋಟೆಯುಂಟು. ಅದನ್ನು ಹೊಯ್ಸಳ ಅರಸನಾದ I ನರಸಿಂಹನೇನೋ (ಕ್ರಿ.ಶ. ೧೧೪೧ – ೧೧೭೩) ಕಟ್ಟಿಸಿದ ಕಾರಣ ಅದರ ಮೂಲನಾಮ ನರಸಿಂಹಗಡ ಎಂದು ಇತ್ತಂತೆ. ಅದಕ್ಕೆ ಟಿಪ್ಪು ತನ್ನ ತಾಯಿಯ ಹೆಸರಿತ್ತುದರಿಂದ ಅದು ಜಮಾಲಗಡ ಎಂದೂ, ಅದರ ಬುಡದಲ್ಲಿಯ ಊರು ಜಮಾಲಾಬಾದ ಎಂದೂ ಆಯಿತು. ಆ ಕೋಟೆಯಲ್ಲಿ ಒಂದು ಕೆರೆಯೂ ಟಿಪ್ಪುವಿನ ಕಾಲದ ಗುಂಡುಗಳೂ ಇವೆ. ಕೆಳಗಣ ಊರಾದರೊ ಈಗ ತೀರ ನಿರ್ಜನ.

ಕಾರ್ಕಳ ತಾಲ್ಲೂಕು

ಕಾರ್ಕಳದಲ್ಲಿಯ ೪೧ ೧/೨ ಅಡಿ ಎತ್ತರವಿರುವ ಗೊಮ್ಮಟ ಮಹಾಮೂರ್ತಿಯ ಪಾರ್ಶ್ವದಲ್ಲಿ ಕೆತ್ತಿರುವ ಸಂಸ್ಕೃತ ಶಾಸನದಿಂದ –

ಸ್ವಸ್ತಿ ಶ್ರೀ ಶಕಭೂಪತೇಸ್ತ್ರಿ ಶರವಹ್ನೀಂದೋರ್ವಿರೋಧ್ಯಾದಿ ಕೃ
ದ್ವರ್ಷೇ ಫಾಲ್ಗುನ ಸೌಮ್ಯವಾರ ಧವಲ ಶ್ರೀ ದ್ವಾದಶೀ ಸತ್ತಿಥೌ
|
ಶ್ರೀ ಸೋಮಾನ್ವಯ ಭೈರವೇಂದ್ರತನುಜ ಶ್ರೀ ವೀರಪಾಂಡ್ಯೇಶಿನಾ
ನಿರ್ಮ್ಮಾಪ್ಯ ಪ್ರತಿ ಮಾತ್ರ ಬಾಹುಬಲಿನೋ ಜೀಯಾತ್ಪ್ರತಿಷ್ಠಾಪಿತಾ ||

ಅದನ್ನು ಭೈರವ (=ಭೈರರಸರ) ವಂಶದ ವೀರಪಾಂಡ್ಯನೆಂಬ ಅರಸನು ಶಾ.ಶ. ೧೩೫೩ ವಿರೋಧಿಕೃತ್ ಸಂ| ಫಾಲ್ಗುಣ ಶು| ೧೨ ಬುಧವಾರ = ಕ್ರಿ.ಶ ೧೪೩೨ನೆಯ ಫೆಬ್ರವರಿ ೧೩ನೆಯ ತಾರೀಕಿನಂದು ಸ್ಥಾಪಿಸಿದನೆಂದೂ, ಅಲ್ಲಿಯದೇ ಚಿಕ್ಕ ಬೆಟ್ಟದಲ್ಲಿರುವ ಚತುರ್ಮುಖ ಬಸ್ತಿ ಎಂದು ಪ್ರಖ್ಯಾತವಾದ ಬಸ್ತಿಯನ್ನು ಅದೇ ವಂಶದ ಇಮ್ಮಡಿ ಭೈರರಸನು ಕಟ್ಟಿಸಿ ಶಾ.ಶ. ೧೫೦೮ನೆಯ ವ್ಯಯ ಸಂ| ಚೈತ್ರ ಶು| ೬ ಬುಧವಾರ = ಕ್ರಿ.ಶ. ೧೫೮೬ ಮಾರ್ಚಿ ೧೬ನೆಯ ತಾರೀಕಿನಂದು ಅದರ ಪ್ರತಿಷ್ಠೆಯಾಯಿತೆಂದೂ ತಿಳಿಯುತ್ತದೆ. ಅದೇ ಇಮ್ಮಡಿ ಭೈರರಸನು ಕ್ರಿ.ಶ. ೧೫೮೪ರಲ್ಲಿ ಸನಾತನ ಧರ್ಮಿಗಳಿಗೆ ಅಲ್ಲಿ ಅನಂತಶಯನ ದೇವಸ್ಥಾನವನ್ನು ಕಟ್ಟಿಸಿಕೊಟ್ಟನು. ಈ ಭೈರರಸರು ಪ್ರಾಯಶಃ ಮೂಲತಃ ಗಟ್ಟದ ಸೀಮೆಯವರು; ಅವರಿಗೆ ಅಲ್ಲಿ ಕಳಶದ ರಾಜ್ಯವಿತ್ತು. ಗಟ್ಟದ ಕೆಳಗೆ ಇಲ್ಲಿ ಕಾರ್ಕಳದ ರಾಜ್ಯವಿತ್ತು. ಅವರ ಕಾರ್ಕಳ ರಾಜ್ಯದ ರಾಜಧಾನಿ ಕಾರ್ಕಳದ ಬಳಿಯಲ್ಲಿ ಅವರು ಪಾಂಡ್ಯನಗರ ಎಂದು ಹೆಸರಿತ್ತ ಈಗಣ ಹಿರಿಯಂಗಡಿಯಲ್ಲಿ ಇತ್ತು. ಅವರು ಪ್ರಾಯಶಃ ಅಳಿಯಕಟ್ಟನ್ನು ಆಚರಿಸುತ್ತಿದ್ದರು ಎಂದು ಶಾ.ಶ. ೧೪೩೮ರಂದು ವರ್ತಮಾನ ಧಾತು ಸಂ| ಶ್ರಾವಣ ಶು| ೧೫ ಆದಿತ್ಯವಾರ = ಕ್ರಿ.ಶ. ೧೫೧೭ನೆಯ ಆಗೋಸ್ತು ೨ನೆಯ ತಾರೀಖಿನ ಕಳಸದ ಶಿಲಾಶಾಸನದಿಂದ[16] ಹೀಗೆ ತಿಳಿಯುತ್ತದೆ – “ಅರಿರಾಯಗಂಡರಡಾವಣಿ ಶ್ರೀ ವೀರ ಹಿರಿಯ ಭೈರರ್ಸ್ ಒಡೆಯರು ಕಳಸ ಕಾರಕಳದ ರಾಜ್ಯವನ್ನಾಳುತ್ತಿಹಲ್ಲಿ” (ಬಂತಿ ೮-೧೨)

ವೇಣೂರಿನಲ್ಲಿರುವ ೩೫ ಅಡಿ ಎತ್ತರದ ೩ನೆಯ ಗೊಮ್ಮಟ ಮಹಾಮೂರ್ತಿಯ ಆಯಾ ಪಕ್ಕಗಳಲ್ಲಿರುವ ಸಂಸ್ಕೃತವೂ ಕನ್ನಡವೂ ಶಾಸನಗಳಿಂದ –

ಶ್ರೀ ಶಕವರ್ಷಮಂ ಗಣಿಸೆ ಸಾಸಿರದಿಂ ಮಿಗುವಯ್ದು ಲೆಕ್ಕಮು
ಳ್ಳಾ ಶತದಿಪ್ಪತಾರನೆಯ ಶೋಭಕ್ಕದಬ್ದದ ಫಾಲ್ಗುನಾಖ್ಯ ಮಾ
|
ಸಾಶ್ರಿತ ಶುಕ್ಲ ಪಕ್ಷ ದಶಮೀ ಗುರುಪುಷ್ಯದ ಯುಗ್ಮಲಗ್ನದೊಳ್
ದೇಶಿಗಣಾಗ್ರಗಣ್ಯ ಗುರುಪಂಡಿತದೇವನ ದಿವ್ಯವಾಕ್ಯದಿಂ || ೧ ||

ರಾಯಕುಮಾರನೊಪ್ಪುವಳಿಯಂ ಸತಿ ಪಾಂಡ್ಯಕದೇವಿಯ ಪುತ್ರನತ್ರ ಸೋ
ಮಾಯತವಂಶಧುರ್ಯ್ಯನುರುಸಾಹಸಿ ಪಾಂಡ್ಯನೃಪಾನುಜನುದ್ಘದಾನು ರಾ
ಧೇಯನುದಾರ ಪುಂಜಳಿಕೆ ಪಟ್ಟವನಾಳ್ವ ನೃಪಾಗ್ರಣಿ ತಿಂಮಭೂಭುಜಂ
ಶ್ರೀಯುತನಂ ಪ್ರತಿಷ್ಠಿಸಿದನಾದಿ ಜಿನಾತ್ಮಜನಂ ಜಿನ ಗುಮ್ಮಟೇಶನಂ
|| ೨ ||

ಆ ವಿಗ್ರಹವನ್ನು ಪುಂಜಳಿಕೆಯ ಅರಸನಾದ ತಿಮ್ಮರಾಜನು ಶಾ.ಶ. ೧೫೨೬ ಶೋಭಕೃತ್ ಸಂ| ಫಾಲ್ಗುಣ ಶು| ೧೦ ಪುಷ್ಯಾ ನಕ್ಷತ್ರದಿಂದ ಕೂಡಿದ ಗುರುವಾರ = ಕ್ರಿ.ಶ. ೧೬೦೪ನೆಯ ಮಾರ್ಚಿ ೧ನೆಯ ತಾರೀಕಿನಂದು ಪ್ರತಿಷ್ಠಿಸಿದನೆಂದು ಸಿದ್ಧವಾಗುತ್ತದೆ. ಇವಲ್ಲಿಯ ೨ನೆಯ ವೃತ್ತವಾದರೊ ಅಪೂರ್ವವಾದೊಂದು ವೃತ್ತ. ಅದರ ಪ್ರತಿ ಚರಣದಲ್ಲಿ ೨೩ ಅಕ್ಷರಗಳು ಇರುವುದರಿಂದ ಅದು ೨೩ನೆಯ ವಿಕೃತಿ ಎಂಬ ಛಂದಸ್ಸಿನದೆಂದು ಮಾತ್ರ ಹೇಳಬಹುದಲ್ಲದೆ, ಅದರ ಹೆಸರೇನೋ ತಿಳಿಯದು. ಕನ್ನಡ ಸಾಹಿತ್ಯದಲ್ಲಿ ಆ ವೃತ್ತ ಬೇರೆಲ್ಲಿಯೂ ಇರುವಂತೆ ತೋರುವುದಿಲ್ಲ.

ಮೂಡಬಿದರೆಯಲ್ಲಿ ಅನೇಕ ಜೈನಬಸದಿಗಳಿವೆ. ಅವುಗಳಲ್ಲಿ ಶಿಲ್ಪದೃಷ್ಟಿಯಿಂದ ಶ್ರೇಷ್ಠವಾದ ಹಾಗೂ ಸಾವಿರ ಕಂಬದ ಬಸ್ತಿ ಎಂದು ಲೋಕವಿಶ್ರುತವಾದ ತ್ರಿಭುವನ ಚೂಡಾಮಣಿ ಎಂಬ ಚೈತ್ಯಾಲಯವನ್ನು ಶಾ.ಶ. ೧೩೫೧ನೆಯ ಸೌಮ್ಯ ಸಂ| ಮಾಘ ಶು| ೫ ಗುರುವಾರ = ಕ್ರಿ.ಶ. ೧೪೩೧ನೆಯ ಜನವರಿ ೧೮ನೆಯ ತಾರೀಕಿನಂದು ನಿರ್ಮಿಸಿದರೆಂದು ಅದರ ಗದ್ದಿಗೆ ಮಂಪಟದಲ್ಲಿಯ ಶಿಲಾಲೇಖನದಲ್ಲಿದೆ. [17] ಅದರಲ್ಲಿ ತುಳುದೇಶವನ್ನೂ ಮಂಗಳೂರನ್ನು ಈ ರೀತಿಯಾಗಿ ಬಣ್ಣಿಸದೆ-

ಸಾರತರ ದ್ರುಮಪ್ರತತಿಯಿಂ ಪರಿಶೋಭಿಪ ಗೋಪ್ರತಾನದಿಂ
ಕೀರ ಮರಾಳ ಸಾರಸದಿನೊಪ್ಪುವ ನಂದನ ವೃಂದಿಂ ಪಯಃ
|
ಪೂರ ಸರಃ ಸರೋಜವನದಿಂ ಬಿನದಕ್ಕೆಡೆಯಾದ ತಾಣದಿಂ
ದಾರ ಮನಕ್ಕೆ ಮಾಡದೊಲವಂ ತುಳುದೇಶಮನೇಕ ದೇಶದೊಳ್ || ೫ ||
|| ಆ ತುಳುದೇಶದಲ್ಲಿ ||
ಚಲದೊರ್ಮ್ಮಿವ್ರಾತಜಾತ ಪ್ರಹರಣರಣಕೃದ್ವಾರ್ಧಿಯಿಂ ಮುಂದೆ ಸಾಲಂ
ಬಳಸಲ್ನಾನಾ ಮಣಿಪ್ರಸ್ಫುರಿತ ಪರಿವೃಢಾಗಾರದಿಂ ವಾರನಾರೀ |
ಕುಲದಿಂ ಸ್ವರ್ಣಾದಿ ಪೂರ್ಣಾಪಣಗಣದಿನಣಂ ಶೋಭಿಕುಂ ಮಂಗಲೂರಾ
ಸ್ಥಲದೊಳ್ ವ್ರೀಹ್ಯಾದಿ ಸಸ್ಯೋತ್ಕರುಷ ಹರುಪಿತಾತ್ಮೀಯ ಪೌರ
ಪ್ರತಾನಂ || ೬ ||

ಆ ಬಸದಿಯ ಭೈರಾದೇವಿ ಮಂಟಪದ ಕೆಳಗಲ್ಲುಗಳಲ್ಲಿ ಒಂದರಲ್ಲಿ ಜಿರಾಫೆ (Giraffe) ಎಂಬ ಆಫ್ರಿಕದ ಕಾಡುಜಿಂಕೆಯಂಥಾ ಬಲು ಉದ್ದವಾದ ಕತ್ತು ಉಳ್ಳ ಪ್ರಾಣಿಯ ಹಾಗೂ ಮತ್ತೊಂದರಲ್ಲಿ ಚೀನ ದೇಶದವರ ಪುರಾಣ ಪ್ರಾಣಿಯಾದ ಡ್ರೆಗನ್ (Dragon) ಎಂಬ ನಕ್ರಾಕೃತಿಯ ಒಂದು ಜೀವಿಯ, ಭಾರತ ವರ್ಷದಲ್ಲಿ ಪ್ರಾಯಶಃ ಆ ಕಾಲದ ಕಟ್ಟಡಗಳಲ್ಲಿ ಇತರತ್ರ ಕಾಣಸಿಗದ, ಅತೇವ ತೀರ ವಿಸ್ಮಯಕರವಾದ ಚಿತ್ರಗಳು ಕೆತ್ತಲ್ಪಟ್ಟಿವೆ.[18] ಮೂಡಬಿದರೆಯಲ್ಲಿರುವ ಚೌಟರ ಅರಮನೆಯಲ್ಲಿ ಬಹಳ ಸೊಗಸಾದ ಮರದ ಕೆತ್ತನೆಯ ಜಾಲಾಕ್ಷ ಕಿಟಕಿಗಳೂ ಕಂಬಗಳೂ ಇವೆ. ಅವಲ್ಲಿ ಪಟ್ಟದ ಚಾವಡಿಯಲ್ಲಿರುವ ಕಂಬಗಳಲ್ಲಿ ಕೆತ್ತಿರುವ ಪಂಚನಾರೀ ತುರಗವೂ (ಅಂದರೆ ೫ ಹೆಂಗಸರು ಹೆಣೆದುಕೊಂಡು ಆದ ಕುದುರೆ) ನವನಾರೀ ಕುಂಜರವೂ (ಅಂದರೆ ೯ ಹೆಂಗಸರು ಹೆಣೆದುಕೊಂಡು ಮಾಡಿದ ಆನೆ)[19] ಬಲು ರಮಣೀಯವಾಗಿವೆ.

ಕುಂದಾಪುರ ತಾಲೂಕು

ಈ ತಾಲೂಕಿನಲ್ಲಿಯ ಕೊಲ್ಲೂರು, ಶಂಕರನಾರಾಯಣ (ಕ್ರೋಡಪುರ) ಹಾಗೂ ಬಸರೂರು (ವಸುಪುರ) ಎಂಬ ಊರ ಹೆಸರುಗಳು ಕೆಳದಿ ನೃಪವಿಜಯದಲ್ಲಿ ಅನೇಕಧಾ ಬಂದಿವೆ ಕೊಲ್ಲೂರಿನ ಶ್ರೀ ಮೂಕಾಂಬಿಕೆಯ ದೇವಸ್ಥಾನದಲ್ಲಿ ಶ್ರೀ ಶಂಕರಚಾರ್ಯರು ಸ್ಥಾಪಿಸಿದ ಶ್ರೀಚಕ್ರವಿದೆ ಹಾಗೂ ಆ ದೇವತೆಯ ವಿಪುಲಾಭರಣಗಳಲ್ಲಿ ಅಂಗೆಯ್ಯ ಗಾತ್ರದ ಪಚ್ಚೆಯೂ ಇದೆ. ಶಂಕರನಾರಾಯಣದ ದೇವಾಲಯದಲ್ಲಿ ಕ್ರಿ.ಶ. ೧೭೪೩ ಎಂದು ಇಸವಿ ಕೆತ್ತಿರುವ ಕ್ರೈಸ್ತ ಇಗರ್ಜಿಯದೊಂದು ದೊಡ್ಡ ಗಂಟೆ ಇದೆ; ಅದರ ಸ್ವರ ೫ ಮೈಲುಗಳವರೆಗೆ ಕೇಳಿಸುತ್ತದಂತೆ. ರೋಮಿಯ ಪ್ಲಿನಿಯ (ಕ್ರಿ.ಶ. ೨೩ – ೭೯) ಗ್ರಂಥದಲ್ಲಿ Barace ಎಂದಿರುವ ಊರು ಬಸರೂರೊ ಅಥವಾ (ಉಡುಪಿ ತಾಲೂಕಿನಲ್ಲಿಯ) ಬರಕೂರೊ ಆಗಿರಬೇಕು.

ಉಡುಪಿ ತಾಲೂಕು

ಈಗ ಉಡುಪಿ ಎಂಬ ಊರಿನ ಹೆಸರು ನಿಜವಾಗಿ ಹಾಗಲ್ಲ, ಅಲ್ಲಿಯ ಶಾಸನಗಳಲ್ಲೂ[20] ಕೆಳದಿ ನೃಪವಿಜಯದಲ್ಲೂ (IX, ೧೯) ಅದರ ಷಷ್ಠೀ ವಿಭಕ್ತಿಯ ಏಕವಚನವು ‘ಉಡುಪಿನ’ ಎಂದಿರುವುದರಿಂದ ಅದು ನೇರಾಗಿ ‘ಉಡುಪು’ ಎಂದಿರಬೇಕು. ತುಳುವಿನಲ್ಲೂ ಅದನ್ನು ಉಡ್ಪು – ಒಡ್ಪು ಎನ್ನುತ್ತಾರೆ.

ಉಡುಪಿಯಲ್ಲಿ ಪ್ರಖ್ಯಾತವಾದ ಶ್ರೀಕೃಷ್ಣನ ಮಠವಿದೆ. ಅಲ್ಲಿಯ ಶ್ರೀಕೃಷ್ಣನ ವಿಗ್ರಹವನ್ನು ಶ್ರೀ ಮಧ್ವಾಚಾರ್ಯರು (ಕ್ರಿ.ಶ. ೧೨೩೮ – ೧೩೧೮) ಕ್ರಿ.ಶ. ಸು. ೧೨೭೦ – ೮೦ರಲ್ಲಿ ಪ್ರತಿಷ್ಠಿಸಿದರು. ಆ ಮಠದಲ್ಲಿ ಹಲವು ಶಾಸನಗಳಿವೆ. ಅವಲ್ಲಿಯ ವಿಶಿಷ್ಟವಾದ ೨ ಶಾಸನಗಳಲ್ಲಿ[21] ಪೋರ್ತುಗೀಸರ ಬಲಾತ್ಕಾರಕ್ಕೆ ಈಡಾಗಿ ತಮ್ಮ ಮಾತೃಭೂಮಿಯಾದ ಗೋವೆಯನ್ನು ಬಿಟ್ಟು ಬಂದು (ಕ್ರಿ.ಶ. ಸು. ೧೫೬೦) ತುಳುನಾಡಿನಲ್ಲಿ ಮನೆ ಮಾಡಿ ನಿಂತ ಸಾರಸ್ವತ ಬ್ರಾಹ್ಮಣರು ಶಾ. ಶ. ೧೫೩೬ = ಕ್ರಿ.ಶ. ೧೬೧೩ – ೧೪ರಲ್ಲಿ ಶ್ರೀಕೃಷ್ಣನ ಮಠಕ್ಕೆ ಭೂಸ್ವಾಸ್ಥೆಯನ್ನು ಬಿಟ್ಟ ಉಲ್ಲೇಖವಿದೆ. ಆ ಮಠದ ಮಗ್ಗುಲಲ್ಲಿರುವ ಈಗ ಅನಂತೇಶ್ವರ ಎಂಬ (ಹಾಗೂ ಮಧ್ವರು ಅನಂತಾಸನ ಎಂಬ) ದೇವಸ್ಥಾನವು ಬಹಳ ಹಿಂದಣ ಕಾಲದಲ್ಲಿ ಜೈನ ಬಸದಿಯಾಗಿದ್ದಿರಬೇಕು ಎಂಬುದಕ್ಕೆ ಶಿವನಿಗೆ ಅನಂತ ಎಂಬ ಹೆಸರು ಸರ್ವಥಾ ಸಲ್ಲದೆಂಬ[22] ಪ್ರಮಾಣವೇ, ಅಲ್ಲ ಆ ದೇವಾಲಯದ ಮುಂಗಡೆಯಲ್ಲಿರುವ, ಹಾಗೂ ಜೈನ ಬಸದಿಗಳ ಮುಂದೆ ಮಾತ್ರವಲ್ಲದೆ (ತುಳುನಾಡಿನಲ್ಲಾದರೂ) ಜೈನೇತರರ ಯಾವ ದೇವಸ್ಥಾನಗಳಲ್ಲೂ ಇಲ್ಲದ, ಇರಸಲ್ಲದ ಮಾನಸ್ತಂಭದ ಅಚಾಲ್ಯವೂ ಬಲವತ್ತರವೂ ಆದ ಸಾಕ್ಷ್ಯವೂ ಇದೆ. ಆವಂದು ಅದು ಜೈನರ ೧೪ನೆಯ ತೀರ್ಥಂಕರನಾದ ಅನಂತನಾಥನ ಬಸದಿಯಾಗಿದ್ದು, ಕ್ರಮೇಣ ಜೈನರು ಉಡುಪಿಯನ್ನು ಬಿಟ್ಟು ಹೋಗಿಯೋ ಅಥವಾ ಅನ್ಯಥಾ ಕ್ಷೀಣವಾಗಿಯೋ, ಹೇಗೂ ಯಾವಂದೊಮ್ಮೆ ಹಾಳುಬಿದ್ದ ಆ ಬಸದಿಯನ್ನು ಸನಾತನ ಧರ್ಮಿಗಳು ಅಳಿದು ಹೋಗಗೊಡದೆ ಅಲ್ಲಿ ಅದೇ ಹೆಸರಿನ ಶಿವಲಿಂಗವನ್ನು ಪ್ರತಿಷ್ಠಿಸಿ ಅದನ್ನು ಅನಂತೇಶ್ವರ ಎಂದು ಕರೆದಿರಬೇಕು. ಅದರ ಪಕ್ಕದಲ್ಲಿರುವ ಈಗ ಚಂದ್ರಮೌಳೀಶ್ವರ ಎಂಬ ದೇವಸ್ಥಾನವು ಅದೇ ಹಿಂಗಾಲದಲ್ಲಿ ಜೈನರ ೮ನೇ ತೀರ್ಥಂಕರನಾದ ಚಂದ್ರಪ್ರಭನೂ ಎಂಬ ಚಂದ್ರನಾಥನ ಬಸದಿಯಾಗಿದ್ದು ಕೊನೆಗೆ ಅಲ್ಲಿಯೂ ಶಿವಲಿಂಗವನ್ನು ಸ್ಥಾಪಿಸಿ, ಅದನ್ನು ಚಂದ್ರನಾಥ ಎಂಬ ಹೆಸರಿಗೆ ಓರಗೆಯಾಗಿ ಚಂದ್ರಮೌಳೀಶ್ವರ ಎಂದಿರಬೇಕು. ಅವೆರಡೂ ಬಸದಿಗಳು ವೈಷ್ಣವರಾದ ಮಧ್ವಾಚಾರ್ಯರ ಕಾಲದಲ್ಲಿ ಅಲ್ಲ (ಏಕೆಂದರೆ ಮಧ್ವವಿಜಯದಲ್ಲಿ ಅನಂತೇಶ್ವರ ದೇವಸ್ಥಾನದ ಉಲ್ಲೇಖವಿದೆ), ಅದಕ್ಕೆ ಶಾನೆ ಹಿಂದೆ ಉಡುಪಿಯಲ್ಲಿ ಶೈವಧರ್ಮ ಪ್ರಬಲವಾಗಿದ್ದಾಗ ತಾನೆ, ಪ್ರಾಯಶಃ ಶ್ರೀ ಶಂಕರಚಾರ್ಯರು (ಕ್ರಿ.ಶ. ಸು. ೮ನೆಯ ಶತಮಾನ) ತುಳುನಾಡನ್ನು ಸಂದರ್ಶಿಸಿದಾಗಲೊ ಇಲ್ಲವೆ ಅದಕ್ಕೂ ಹಿಂದೆಯೊ ಕೆಲ ಬಳಿಕಲೊ ಶಿವಾಲಯಗಳಾಗಿ ಮಾರ್ಪಟ್ಟಿರಬೇಕು. ಉಡುಪಿಯಿಂದ ಕೆಲವೇ ಮೈಲು ದೂರವಿರುವ ಪಾಜಕ ಕ್ಷೇತ್ರವೆಂಬ ಈಗಣ ಕುಂಜಾರು ಎಂಬ ಗ್ರಾಮದಲ್ಲಿ ದ್ವೈತ ಸಿದ್ಧಾಂತ ಪ್ರವರ್ತಕರಾದ ಮಧ್ವಾಚಾರ್ಯರು ಕ್ರಿ.ಶ. ೧೨೩೮ರಲ್ಲಿ ಹುಟ್ಟಿದರು.

ಕ್ರಿ.ಶ. ೨ನೆಯ ಶತಕದೊಂದು ಗ್ರೀಕ ಭಾಷೆಯ ಪ್ರಹಸನದಲ್ಲಿ (farce) ಅನೇಕ ಕನ್ನಡ ಮಾತುಗಳಿವೆ. (ಈ ಕುರಿತು ಮುಂದೆ ಸೋದಾಹರಣವಾಗಿ ಹೇಳಲ್ಪಡುವುದು.) ಅವಲ್ಲಿ ಒಂದು ಇದು – Malpiniakouroukou-korubi-karako (ndu ba) = ಮಲ್ಪಿ ನಾಯಕರಕ್ಕು ಕೂಬಿ ಕರಕೊ(೦ಡು ಬಾ), ಅಂದರೆ ಮಲ್ಪಿ ನಾಯಕರನ್ನು ಕೂಗಿ ಕರಕೊಂಡು ಬಾ ಎಂದು ಅರ್ಥ (ಬಂತಿ ೮೧). ಈ ಶಬ್ದಗಳಲ್ಲಿ ಆದ್ಯಪದವಾದ Malpi = ಮಲ್ಪಿ ಎಂದರೆ ಉಡುಪಿಯ ರೇವು ಮಲ್ಪೆ ಎಂದು ಪ್ರಥಮದೃಷ್ಟಿಗೆ ತೋರುತ್ತದೆ. ಹಾಗಾದರೆ ಆ ಹಳಗಾಲದಲ್ಲೂ ಆ ರೇವಿಗೆ ಇಂದಿರುವ ಅದೇ ಹೆಸರಿದ್ದಿತಾದರೆ ಮತ್ತು ಹಾಗಿದ್ದರೆ ಮಾತ್ರ ಅಲ್ಲಿ ಮಲ್ಪಿಯನ್ನು ಹೆಸರಿಸಿದೆ ಎಂದು ತಿಳಿಯುತ್ತದೆ.

 

[1] ರಜತಪೀಠಪುರ ಮಹಾತ್ಮ್ಯ (ಉಡುಪಿ ೧೯೧೩), ಅಧ್ಯಾಯ ೨.

[2] ಶಬ್ದಮಣಿದರ್ಪಣ, ಸೂತ್ರ ೪೧ (ಪು. ೫೯) – ನೆಗೞ್ತಿಯಾರ್ಗಳ್

[3] Kittel : Kannada – English Dictionary, ಪು. ೭೩೫.

[4] ಸಭಾಪರ್ವ, ಅಧ್ಯಾಯ ೩೨.

[5] ಭೀಷ್ಮಪರ್ವ, ಆಧ್ಯಾಯ ೯.

[6] TEL, ಪು. ೨೦೦೦

[7] ಅದೇ, ಪು. ೨೦೦೨.

[8] ಅದೇ, ಪು. ೨೦೦೩.

* ಮಂಗಳೂರು ಎಂಬ ಹೆಸರಿನ ನೇರಾದ ಪರಪದವಾದರೊ’ಪುರ’ ವೇ ವಿನಾ ‘ಊರು’ ಅಲ್ಲ. ಬಾಗಲಕೋಟೆ ತಾಲೂಕಿನಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇರುವ ‘ಸಿರೂರು’ ಎಂಬ ಊರಿನ ಮೂಲನಾಮವಾದ ತ್ರೀಪುರ = ಸಿರಿವುರ = ಸಿರಿಉರ = ಸಿರೂರ (=ಸಿರೂರು) ಆದರಂತೆ, ಮಂಗಲ (ಅಥವಾ ಮಂಗಲಾ)ಪುರ = ಮಂಗಲಪುರ = ಮಂಗಲುರ = ಮಂಗಳೂರ ಎಂದಾದುದರ ಪರಪದವೆನಿಸುವ ‘ಊರ’ವನ್ನು ಕನ್ನಡ ‘ಊರು’ ಎಂದು ಭ್ರಮಿಸಿ ಕೊನೆಗೆ (ಸಿರೂರ ಹಾಗೆಯೇ) ಮಂಗಳೂರು ಎಂದಾಯಿತಷ್ಟೇ.

[9] Quarterly Journal of Mythic Society, XIII (Oct. 1922), ಪು. ೪೪೮, ೪೫೫.

[10] SII, VII ನಂ. ೧೭೭, ೧೭೯, ೧೮೨, ೧೮೫, ೧೮೭, ೧೮೯, ೧೯೪, ೧೯೫ ಇಇ.

[11] ಅದೇ.ನಂ. ೧೮೭.

[12] ಅದೇ, ನಂ. ೧೯೧.

[13] ಅದೇ, ನಂ. ೧೭೭, ೧೭೮, ೧೮೫, ೧೮೮, ೨೨೨, ೨೨೩, ೨೨೪ ಇ.

[14] ಅದೇ, ನಂ. ೨೩೭.

[15] ಅದೇ, ನಂ. ೨೬೧.

[16] E.C.VI, ಮೂಡಗೆರೆ ೪೧.

[17] S II, VII ನಂ. ೧೯೬.

[18] ಮಂಗಳೂರಿನ ‘ರಾಷ್ಟ್ರಬಂದು’ವಿನ ಯುಗಾದಿಯ ಕಾಣಿಕೆ (೧೯೩೦)ಯ ೩೦ನೇ ಪುಟದಲ್ಲಿ ಜಿರಾಫದ ಚಿತ್ರವಿದೆ.

[19] ಅದೇ. ಪು. ೨೩ ಮತ್ತು ೨೪ರಲ್ಲಿ ಈ ಆಯಾ ಚಿತ್ರಗಳಿವೆ.

[20] SII, VII ನಂ. ೨೯೬ (ಬಂತಿ ೧೯); ೨೯೭ (ಬಂ. ೧೬); ೨೯೯ (ಬಂ.೫), ೩೦೧ (೧ ಬಂ.೩), ೩೦೩ (ಬಂ. ೨೩, ೨೫)ಇಇ.

[21] ಅದೇ, ನಂ. ೩೦೧ ಮತ್ತು ೩೦೨.

[22] ಶೇಷೇ ವಿಷ್ಣಾವನಂತಃ (ತ್ರಿಕಾಂಡ ಶೇಷ. ಶ್ಲೋ. ೬೯೬); ಅನಂತಸ್ತ್ರೀರ್ಥ ಕೃದ್ಭಿದಿ ವಿಷ್ಣೌತೀಷೇ (ಹೇಮಚಂದ್ರನ ಅನೇಕಾರ್ಥ ಸಂಗ್ರಹ, ಶ್ಲೋ. ೮೩೭-೩೮)