ಆತನ ಎರಡನೆಯ ಶಿಲಾಲೇಖದಲ್ಲಿ (Rock Edict II) ಹೀಗಿದೆ –

(೧)       ಯೇ ಚ ಅಂತ ಯಥ ಚೋಡ ಪಂಡಿಯ
ಸತಿಯಪುತ್ರೋ ಕೇರಡಪುತ್ರೋ ತಂಬಪಂಣಿ
            (ಶಹಬಾಜಗಢೀ ಪ್ರತಿ)

(೨)       ಯೇ ಚ ಅಂತ ಅಥ ಚೋಡ ಪಂಡಿಯ
ಸತಿಯಪುತ್ರ ಕೇರಲಪುತ್ರೇ ತಂಬಪಣಿ
            (ಮನಸೇರಾ ಪ್ರತಿ)

(೩)       ಏವಮಪಿ ಪ್ರಚಂತೇಸು ಯಥಾ ಚೋಡಾ ಪಾಡಾ
ಸತಿಯಪುತ್ರೋ ಕೇತಲಪುತೋ ಆ ತಂಬಪಂಣೀ

(ಗಿರನಾರ ಪ್ರತಿ)

(೪)       ಯೇ ಚ ಅಂತಾ ಅಥಾ ಚೋಡಾ ಪಂಡಿಯಾ
ಸಾತಿಯಪುತೋ ಕೇಲಲಪುತೋ ತಂಬಪಂನಿ

(ಕಾಲಸೀ ಪ್ರತಿ)

(೫)       ಏ ವಾ ಪಿ ಅಂತಾ ಚೋಡಾ ಪಂಡಿಯಾ
ಸತಿಯಪುತೇ…. ಆ ತಂಬಪಂಣೀ
            (ಔಗಢದ ಪ್ರತಿ)

ಅಂದರೆ ಅಶೋಕನ ಸಾಮ್ರಾಜ್ಯದ ಹೊರಗಣ ಗಡಿನಾಡುಗಳಲ್ಲಿರುವ ಚೋಳರು, ಪಾಂಡ್ಯರು, ಸತಿಯ ಪುತ್ರರು ಅಥವಾ ಸಾತಿಯ ಪುತ್ರರು ಹಾಗೂ ತಾಮ್ರಪರ್ಣಿಯವರೆಗೂ ಉಳ್ಳ (ಕೇರಳ = ಕೇತಳ = ಕೇಲಲ)[1] ಕೇರಲ ಪುತ್ರರು ಎಂದು (ಪುತ್ರ ಎಂದರೆ ಆ ದೇಶದಲ್ಲಿರುವ ಜನರು ಎಂದು) ಅರ್ಥ. ಈ ನಾಲ್ಕೂ ಬಗೆಯ ನಾಡವರನ್ನು ಮಿಕ್ಕ ೪ ಶಾಸನಗಳಲ್ಲಿ ‘ಅಂತ, ಅಂತಾ’ (:ಸಂ. ಅಂತ್ಯಃ, ಅಂತ್ಯಾಃ) = ನೆರೆಹೊರೆಯವರು ಎನ್ನುವುದಕ್ಕಿಂತ ಗಿರನಾರ ಪ್ರತಿಯಲ್ಲಿ ಸ್ಪಷ್ಟವಾಗಿ ‘ಪ್ರಚಂತೇಸು’ (=ಸಂ. ಪ್ರತ್ಯಂತೇಷು) = ಹೊರಗಣ ಗಡಿನಾಡುಗಳಲ್ಲಿ ಇರುವವರೆಂದು ಹೇಳಿರುವುದರಿಂದ ಅವರು ಅಶೋಕನ ಸಾಮ್ರಾಜದಲ್ಲಿ ಸೇರಿರದೆ ತಂತಮ್ಮ ಮಟ್ಟಿಗೆ ಸ್ವತಂತ್ರರಾಗಿದ್ದಿರಬೇಕು. ಆ ನಾಲ್ವರಲ್ಲಿ ಚೋಡಾ ಎಂದರೆ ಪೂರ್ವ ಕರಾವಳಿಯ ಚೋಳರೆಂದೂ, ಪಂಡಿಯಾ ಎಂದರೆ ದಕ್ಷಿಣ ಕರಾವಳಿಯ ಪಾಂಡ್ಯರೆಂದೂ, ಕೇರಲಪುತ್ರರೆಂದರೆ ಕೇರಲ ಎಂಬ ಮಲೆಯಾಳ ದೇಶದವರೆಂದೂ, ತಂಬಪಂಣಿ ಎಂದರೆ ಪಾಂಡ್ಯ ದೇಶಕ್ಕೂ ಕೇರಲ ದೇಶಕ್ಕೂ ನಡುಗಡಿಯಾಗಿರುವ ತಿರುನೆಲ್ವೇಲಿ (Tirnevelly) ಜಿಲ್ಲೆಯಲ್ಲಿ ಹರಿಯುತ್ತಿರುವ ಈಗಲೂ ತಾಮ್ರಪರ್ಣಿ ಎಂಬ ನದಿಯೆಂದೂ ಪ್ರತ್ಯಕ್ಷವಿದೆ. ಹಾಗೂ ಕೇರಲಪುತ್ರರೆಂದರೆ ಕೇರಲ ಎಂಬ ದೇಶದವರೆಂದೂ ಪ್ರತ್ಯಕ್ಷವಿರುವುದರಿಂದ, ಸತಿಯಪುತ್ರ ಅಥವಾ ಸಾತಿಯಪುತ್ರರೆಂದರೆ ಸತಿಯ ಅಥವಾ ಸಾತಿಯ ಸತಿಯ ಅಥವಾ ಸಾತಿಯ ಎಂಬ ದೇಶದವರೆಂದೂ ಸ್ವಯಮೇವ ಸಿದ್ಧವಾಗುತ್ತದೆ. ಆ ಸತಿಯ ಅಥವಾ ಸಾತಿಯ ಎಂಬ ದೇಶ ಯಾವುದು?

ಭಾರತ ವರ್ಷದಲ್ಲಿ ಯಾವೆಲ್ಲ ದೇಶಗಳಲ್ಲಿ ಅಶೋಕನ ಶಾಸನಗಳು ಇವೆಯೋ ಆ ದೇಶಗಳು ಆತನ ಸಾಮ್ರಾಜ್ಯದಲ್ಲಿ ಒಳಪಟ್ಟಿದ್ದುವೆಂದು ಮೇಲೆ ಹೇಳಿದೆಯಷ್ಟೆ. ಆ ಮೇರೆಗೆ ಮೈಸೂರು ಸೀಮೆಯ ಚಿತ್ರದುರ್ಗ ಜಿಲ್ಲೆಯಲ್ಲಿಯ ಸಿದ್ಧಾಪುರ, ಬ್ರಹ್ಮಗಿರಿ ಹಾಗೂ ಜಟ್ಟಿಂಗ ರಾಮೇಶ್ವರ[2] ಎಂಬೀ ಸ್ಥಳಗಳಲ್ಲಿ ಆತನ ೧ನೆಯ ಮತ್ತು ೨ನೆಯ ಲಘು ಶಿಲಾಲೇಖಗಳ (Minor Rock Edicts I & II) ಪ್ರತಿಗಳು ಇದ್ದು ಅದಕ್ಕಿಂತ ದಕ್ಷಿಣದಲ್ಲಿ ಆತನ ಯಾವ ಶಾಸನವೂ ಇಲ್ಲದಿರುವುದರಿಂದ, ಆ ಊರುಗಳಿರುವ ಪ್ರದೇಶವು ಆತನ ಸಾಮ್ರಾಜ್ಯದ ತೊಟ್ಟತೆಂಕಣ ಪ್ರದೇಶವಾಗಿರಬೇಕು. ಚೋಳ ದೇಶವೂ ಪಾಂಡ್ಯ ದೇಶವೂ ಹೇಗೆ ಒಂದಕ್ಕೊಂದು ಅಂಟಿಕೊಂಡಿರುತ್ತವೋ, ಹಾಗೆಯೇ ಪಾಂಡ್ಯವೂ ಕೇರಳವೂ ತಮ್ಮ ನಡುವಣ ತಾಮ್ರಪರ್ಣಿಯ ಆಚೀಚೆಯಲ್ಲಿದ್ದು ಹೇಗೆ ಒಂದಕ್ಕೊಂದು ಸಂದು ಕೂಡಿರುತ್ತವೋ, ಅದೇ ರೀತಿಯಲ್ಲಿ ಸತಿಯ ಅಥವಾ ಸಾತಿಯ ದೇಶವೂ ಕೇರಲವೂ ಒಂದಕ್ಕೊಂದು ಅದುಕಿರುವ ದೇಶಗಳಾಗಿರಬೇಕು. ಆದರೆ ಪಾಂಡ್ಯಕ್ಕೂ ಕೇರಳಕ್ಕೂ ನಡುವೆ ತಾಮ್ರಪರ್ಣಿ ಮಾತ್ರವಿದ್ದು ಬೇರೆ ಯಾವೊಂದು ದೇಶವೂ ಇಲ್ಲದಿದ್ದ ಕಾರಣ, ಈ ಶಿಲಾಲೇಖದಲ್ಲಿ ಚೋಡ ಪಂಡಿಯ ಸತಿಯಪುತ್ರ ಕೇರಲಪುತ್ರೇ’ ಎಂದಿರುವಲ್ಲಿ ಒಂದು ಕಡೆಯ ಚೋಳ – ಪಾಂಡ್ಯರಿಗೂ ಮತ್ತೊಂದು ಕಡೆಯ ಸತಿಯ ಪುತ್ರ – ಕೇರಲ ಪುತ್ರರಿಗೂ ನಡುವೆ ತಾಮ್ರಪರ್ಣಿಯನ್ನು ಮೇರೆಯಾಗಿಟ್ಟುಕೊಂಡು, ಆ ಕಡೆ ಚೋಳರನ್ನು ಹೆಸರಿಸಿದ ಬಳಿಕ ಅವರ ತೆಂಕಣ ಹಾಗೂ ಅವರಿಗೆ ತಾಗಿರುವ ಪಾಂಡ್ಯರನ್ನು ಹೇಳಿರುವ ಕ್ರಮದಿಂದಲೇ ಈ ಕಡೆ ಸತಿಯಪುತ್ರರನ್ನು ಹೆಸರಿಸಿದ ಮೇಲೆ ತಾನೆ ಕೇರಲಪುತ್ರರನ್ನು ಹೆಸರಿಸಿರಬೇಕೆಂದು ಪ್ರತ್ಯಕ್ಷವಿರುವುದರಿಂದ, ಸತಿಯ ಅಥವಾ ಸಾತಿಯ ದೇಶವು ಕೇರಲ ದೇಶಕ್ಕೆ ತಾಗಿ ಅದರ ಬಡಗಲಲ್ಲಿರಬೇಕು, ಅಂದರೆ ಅದು ಕೇರಳಕ್ಕೆ ತೀರ ಸನ್ನಿಕೃಷ್ಟವಾಗಿ ಅದೆ ಬಡಗಲಲ್ಲಿ ಪಶ್ಚಿಮ ಕರಾವಳಿಯಲ್ಲಿರುವ ಸತಿಯ ಅಥವಾ ಸಾತಿಯ ದೇಶವೆಂದರೆ ತುಳುನಾಡಲ್ಲದೆ ಇನ್ನಾವುದು?

ಅಶೋಕನ ಶಾಸನಗಳ ಪ್ರಾಕೃತ ಭಾಷೆಯಲ್ಲಿ –

(೧) ಸಂಸ್ಕೃತ ಶ-ಕಾರವು ಸ-ಕಾರವಾಗುತ್ತದೆ; ಉದಾ : (ಸಂಸ್ಕೃತ) ಶಕ್ಯಮ್ = (ಅಶೋಕನ ಪ್ರಾಕೃತ) ಸಕಂ; (ಸಂ) ಶತ = (ಆ) ಸತ; (ಸಂ) ಶಾಶ್ವತಮ್ = (ಅ) ಸಸ್ವತಂ; (ಸಂ) ಶುಶ್ರೂಷಾ = (ಅ) ಸುಶ್ರೂಷಾ, ಇ. ಹೀಗೆ (ಸಂ) ಶಾಂತಿಕ = (ಅ) ಸಾಂತಿಕ ಆಗುತ್ತದೆ.

(೨) ಸಂಸ್ಕೃತ ಅನುನಾಸಿಕವು ಅನುಸ್ವಾರವಾಗಿ, ಆ ಅನುಸ್ವಾರವನ್ನು ಸೂಚಿಸುವ ತಲೆಗಡೆಯ ಬಿಂದುವೂ ಒಮ್ಮೊಮ್ಮೆ ಕೆತ್ತಲ್ಪಡುವುದಿಲ್ಲ; ಉದಾ: (ಸಂ) ಪಾಣ್ದ್ಯ (ಪಾಂಡ್ಯ) = (ಅ) ಪಾಡ; ಕಲಿಙ್ಗ (ಕಲಿಂಗ) = ಕಲಿಗ; ಅಪರಾನ್ತ (ಅಪರಾಂತ) = ಅಪರಾತ; ಮಙ್ಗಲ (ಮಂಗಲ) = ಮಗಲ ಇ. ಹೀಗಾಗಿ (ಸಂ) ಶಾಂತಿಕ = (ಅ) ಸಾತಿಕ ಆಗುತ್ತದೆ.

(೩) ಸಂಸ್ಕೃತ ದೀರ್ಘಾಕ್ಷರಗಳು ಕೆಲವೊಮ್ಮೆ ಹಾಗೆಯೇ ಉಳಿಯುತ್ತವೆ, ಕೆಲವೊಮ್ಮೆ ಹ್ರಸ್ವವಾಗುತ್ತವೆ; ಉದಾ : ಪಾಂಡ್ಯಾಃ ೯ಅ) ಪಾಡಾ, ಪಂಡಿಯಾ; ಗಾಂಧಾರ = ಗಾಂಧಾಲ, ಗಂಧಾರ, ಗಂಧರ; ದಾನ = ದಾನ, ದನ; ಪ್ರಾಣ = ಪ್ರಾಣ, ಪಾನ, -ಪ್ರಣ; ನಾಸ್ತಿ = ನಾಸ್ತಿ, ನಸ್ತಿ ನಥಿ, ಇ ಹೀಗೆ (ಸ) ಶಾಂತಿಕ = (ಅ) ಸಾತಿಕ ಹಾಗೂ ಸತಿಕ ಆಗುತ್ತದೆ.

(೪) ಅಶೋಕನ ಪ್ರಾಕೃತದಲ್ಲೇ ಅಲ್ಲ, ಎಲ್ಲಾ ವಿಧದ ಪ್ರಾಕೃತಗಳಲ್ಲೂ ಸಂಸ್ಕೃತ ಶಬ್ದಗಳ ಕೊನೆಯ ಕ-ಚ-ಟ-ತ-ಪ-ಕಾರಗಳು ಬಿದ್ದು ಹೋಗುತ್ತವೆ. ಆದರೆ ಕೊನೆಯ ಕಂಠ್ಯಗಳೂ ದಂತ್ಯಗಳೂ ಯ- ಕಾರಾದೇಶವನ್ನು ಹೊಂದುತ್ತವೆ; ಉದಾ : (ಸಂ) ಮೌಕ್ತಿಕ = (ಪ್ರಾ) ಮುತ್ತಿಯ; ಅಸಂಖ್ಯಕ = ಅಸಂಖಯ’ ಅಮೃತ = ಅಮಿಯ, ಇ. ಹೀಗೆ (ಸಂ) ಶಾಂತಿಕ = (ಅ) ಸಾತಿಯ ಹಾಗೂ ಸತಿಯ ಎಂದಾಗುತ್ತದೆ.

ಅತಏವ ಅಶೋಕನ ಶಾಸನಗಳ ಸಾತಿಯಪುತ್ರ ಅಥವಾ ಸತಿಯಪುತ್ರರ ಸಾತಿಯ ಅಥವಾ ಸತಿಯ ಎಂಬ ದೇಶವು ಶಾಂತಿಕ ಎಂಬ ದೇಶವೇ ಸರಿ, ಆ ಶಾಂತಿಕ ದೇಶವೆಂದರೆ ಆವಂದಿನ ತುಳುನಾಡೇ ಸರಿ.*

೨ ಆಲುವ

ಪರಶುರಾಮ ಪಶ್ಚಿಮ ಸಮುದ್ರದಿಂದ ಸೆಳಕೊಂಡುದೆಂಬ ಆ ತೀರಭೂಮಿಯನ್ನು ಪ್ರಪಂಚ ಹೃದಯ ಎಂಬ ಸಂಸ್ಕೃತ ಗ್ರಂಥದಲ್ಲಿ[3] ಸಪ್ತಕೊಂಕಣ ಎಂದದೆ –

ಸಹ್ಯಪಾದೇ ಪರಶುರಾಮಭೂಮಿಃ | ಸಾ ಸಪ್ತಕೋಂಕಣಾಖ್ಯಾ |
ಕೂಪಕ ಕೇರಲ ಮೂಷಿಕ ಆಲುವ ಪಶು ಕೋಂಕಣ ಪರಕೋಂಕಣ
ಭೇದೇನ ದಕ್ಷಿಣೋತ್ತರಾಯಾಮೇನ ಚ ವ್ಯವಸ್ಥಿತಾ ||

ಅಂದರ ಸಹ್ಯಾಚಲದ ಉಪತ್ಯಕಾ ಪ್ರದೇಶವಾದ ಪರಶುರಾಮ ಭೂಮಿಯನ್ನು ಸಪ್ತಕೊಂಕಣವೆನ್ನುತ್ತಾರೆ; ಅದರಲ್ಲಿ ತೆಂಬಡಗಲಾಗಿ ಕೂಪಕ, ಕೇರಲ, ಮೂಷಿಕ, ಆಲುವ, ಪಶು, ಕೊಂಕಣ ಮತ್ತು ಪರ ಕೊಂಕಣ ಎಂದು ೭ ದೇಶಗಳಿವೆ. ಆತಏವ ಇವೇಳೂ ದೇಶಗಳು ಪಶ್ಚಿಮ ಕರಾವಳಿಯ ತೀರಭೂಮಿಯವೆಂದು ಸ್ಪಷ್ಟವಾಗುತ್ತದೆ.

ಇವೇಳರಲ್ಲಿ ಕೂಪಕ, ಕೇರಲ ಮತ್ತು ಮೂಷಿಕ ಎಂಬ ಮೂರು ದೇಶಗಳು ಈಗಣ ತಿರುವಾಂಕೋಡು (Travancore) ಸಂಸ್ಥಾನ, ಕೊಚ್ಚಿ (Cochin) ಸಂಸ್ಥಾನ ಹಾಗೂ ಮಲೆಯಾಳ (Malabar) ಜಿಲ್ಲೆಗಳಿಗೆ ಸಮನ್ವಯಿಸುತ್ತವೆ. ಈ ಮೂರರಲ್ಲಿ ಕೇರಲ ಮತ್ತು ಮೂಷಿಕ ಎಂಬ ಹೆಸರುಗಳು ಕೇರಳ ಮತ್ತು ಮೂಷಕ ಎಂದು ಚಳುಕ್ಯ ಮಂಗಲೇಶನ ಕ್ರಿ.ಶ. ೬೦೨ರ ಮಹಾಕೂಟದ ಸ್ತಂಭಲೇಖದಲ್ಲಿವೆ[4]. ೬ನೆಯ ಕೊಂಕಣವೆಂದರೆ ಈಗಣ ಗೋವೆಯ (Goa) ಸೀಮೆಯನ್ನೂ ಮುಂಬಯಿ ಆಧಿಪತ್ಯದ ರತ್ನಗಿರಿ (Ratnagiri) ಜಿಲ್ಲೆಯನ್ನೂ ಒಳಗೊಂಡಿರುವ ದಕ್ಷಿಣ ಕೊಂಕಣ. ೭ನೆಯ ಹಾಗೂ ಕೊನೆಯ ಪರಕೊಂಕಣವೆಂದರೆ ಆ ದಕ್ಷಿಣ ಕೊಂಕಣದ ಬಡಗಣ (ಮುಂಬಯಿ ಆಧಿಪತ್ಯದ) ಕುಲಾಬಾ (Kolaba) ಮತ್ತು ಠಾಣಾ (Thana) ಜಿಲ್ಲೆಗಳುಳ್ಳ ಉತ್ತರ ಕೊಂಕಣ.

೫ನೆಯ ಪಶು ಎಂಬ ದೇಶವೆಂದರೆ ಹೈಗದೇಶ ಎಂಬ ಉತ್ತರ ಕನ್ನಡ ಜಿಲ್ಲೆ. ಸಂಸ್ಕೃತದಲ್ಲಿ ನಾಮಪದಗಳಿಗೆ ಕ- ಪ್ರತ್ಯಯವನ್ನು ಹಚ್ಚುವುದರಿಂದ ಹುಟ್ಟುವ ರೂಪಗಳು (‘ಸ್ವಾರ್ಥೇ ಕನ್’) ಸ್ವಾರ್ಥಿಕವೇ ವಿನಾ ಭಿನ್ನಾರ್ಥಕವಲ್ಲ (ಉದಾ = ಕರ್ಣಾಟ = ಕರ್ಣಾಟಕ; ಅಪರಾಂತ – ಅಪರಾಂತಕ; ದ್ರಮಿಲ = ದ್ರಮಿಲಕ ಅಂದರೆ ದ್ರಾವಿಡ ದೇಶ, ವನವಾಸ = ವನವಾಸಕ ಅಂದರೆ ಬನವಾಸಿ, ಇ.) ಎಂಬುದರಿಂದ, ಸಂಸ್ಕೃತದಲ್ಲಿ ಪಶು ಎಂದರೂ ಪಶುಕ ಎಂದರೂ ಒಂದೇ. ಕನ್ನಡದ ಪಸುರ್ – ಹಸಿರು ಎಂಬುದು ಪಯಿರ್ – ಪಯ್ರು – ಪೈರು ಎಂದು ಆದಂತೆ, ಉತ್ತರ ಕನ್ನಡ ಜಿಲ್ಲೆಯ ನಾಡುನುಡಿಯಾದ ಕನ್ನಡದಲ್ಲಿ ಪಶುಕವು ಕ್ರಮೇಣ ಪಯಿಕ (ಪಯ್ಯ) -ಪಯಿಗ (ಪಯ್ಗ) ಎಂದು ತದ್ಭವಿಸಿ, ನಡುಗನ್ನಡದಲ್ಲಿ ಪ – ಕಾರಕ್ಕೆ ಹ – ಕಾರವೂ ಯ – ಕಾರಕ್ಕೆ ಐಕಾರವೂ ತಗುಳುವ ರೂಢಿಗೆ[5] ಈಡಾಗಿ ಪಯಿಗ (ಪಯ್ಗ)ವು ಹಯಿಗ (ಹಯ್ಗ) ಎಂದೂ, ಹಯಿಗ (ಹಯ್ಗ)ವು ಹೈಗ ಎಂದೂ ಸಹಜವಾಗಿ ರೂಪಾಂತರಿಸುತ್ತದೆ. ಆತಏವ ಪಶುದೇವ ಎಂದರೆ ಹೈಗ ಎಂಬ ಉತ್ತರಕನ್ನಡ ಜಿಲ್ಲೆ[6] ಎಂಬಲ್ಲಿ ಸಂಶಯವಿಲ್ಲ.

ಪಶ್ಚಿಮ ಕರಾವಳಿಯಲ್ಲಿ ದಕ್ಷಿಣದಲ್ಲಿ ಮೂಷಿಕ ದೇಶ ಎಂಬ ಮಲೆಯಾಳಕ್ಕೂ ಉತ್ತರದಲ್ಲಿ ಪಶುದೇಶ ಎಂಬ ಉತ್ತರ ಕನ್ನಡ ಜಿಲ್ಲೆಗೂ ನಡುವಣ ೪ನೆಯ ಅಲುವ ಎಂಬ ದೇಶವಾದರೂ ನಮ್ಮ ತುಳುನಾಡೇ ಎಂದು ಬೇರೆ ಹೇಳಬೇಕೆಂದಿಲ್ಲ. ಪ್ತೊಲೆಮಿಯ ಗ್ರಂಥದಲ್ಲಿ[7] ಅದನ್ನು (Qlokhoira) ಎಂದದೆ. ರಾಷ್ಟ್ರಕೂಟ III ಗೋವಿಂದನ ಆಳೊತ್ತಿನ (ಕ್ರಿ.ಶ. ೭೯೦-೮೧೪) ಮಾವಳಿಯ ಶಿಲಾಲೇಖದಲ್ಲಿ[8] ಅದನ್ನು ಆಳುವಖೇಡ (ಮಱುಸಾಸಿರ – ಬಂತಿ ೩) ಎಂದೂ, ಈ ಕೆಳಗಣ ಹೊಯ್ಸಳನ ಶಾಸನಗಳಲ್ಲಿ ಅದನ್ನು ಆಳ್ವಖೇಟವೆಂದೂ ಹೇಳಿದೆ –

(೧) ಶಾಶ. ೧೦೨೩ ವಿಷು ಸಂ| ವೈಶಾಖ ಬ| ೪ ಶುಕ್ರವಾರ = ಕ್ರಿ.ಶ. ೧೧೦೧ನೆಯ ಏಪ್ರಿಲ್ ೧೯ನೆಯ ತಾರೀಕಿನ ದಬ್ಬೆಯ ಶಿಲಾಶಾಸನದಲ್ಲಿ[9] ‘ಕೊಂಕಣನಾಡಾಳ್ವಖೇಡ’;

(೨) ಹೊಯ್ಸಳ ವಿಷ್ಣುವರ್ಧನನ ಆಳೊತ್ತಿನ (ಕ್ರಿ.ಶ. ೧೧೧೧ – ೧೧೪೧ ಸಿಂದಗಿರಿಯ ಶಿಲಾಶಾಸನದಲ್ಲಿ[10] ‘ಕೊಂಕಣದಾಳ್ವಖೇಡದ’;

(೩) ಶಾ.ಶ. ೧೦೬೬ ರುಧಿರೋದ್ಗಾರಿ ಸಂ| ವೈಶಾಖ ಶು| ೭ ಬ್ರಿಹವಾರ = ಕ್ರಿ.ಶ. ೧೧೪೩ ಏಪ್ರಿಲ್ ೨೨ನೆಯ ತಾರೀಖಿನ ಕಣಿಕಟ್ಟಿಯ ಶಿಲಾಲೇಖದಲ್ಲಿ[11] ‘ಪಡುವಲಾಳ್ವಖೇಡ’;

(೪) ಹೊಯ್ಸಳ I ನರಸಿಂಹನ ಆಳಿಕೆಯ (ಕ್ರಿ.ಶ. ೧೧೪೧-೧೧೭೩) ಸರ್ವಧಾರಿ ಸಂ|ದ (=ಶಾ.ಶ. ೧೦೮೮) ವೈಶಾಖದ ಅಮಾವಾಸ್ಯೆ ಸೋಮವಾರ = ಕ್ರಿ.ಶ. ೧೧೬೬ನೆಯ-ಮೇ ೧ನೆಯ ತಾರೀಕು ಆದಿತ್ಯವಾರದ (ಸೂರ್ಯಗ್ರಹಣದ) ಮಾರನೆಯ ೨ನೆಯ ತಾರೀಕು ಸೋಮವಾರದಂದಿನ ಕಂಬಾಳು ಶಿಲಾಲೇಖದಲ್ಲಿ[12] ‘ಪಡುವಲಾಳ್ವಖೇಡ’;

(೫) ಹೊಯ್ಸಳ II ವೀರ ಬಲ್ಲಾಳನ ಆಳಿಕೆಯ (ಕ್ರಿ.ಶ. ೧೧೭೩ – ೧೨೨೦) ತೇದಿಯಿಲ್ಲದ ಸಂತೆಶಿವರದ ಶಿಲಾಲೇಖದಲ್ಲಿ[13] ‘ಆಳ್ವರಖೇಡ’;

ಆತಏವ ಪ್ತೊಲೆಮಿಯ (Olokhoira) ನೇರಾಗಿ ಆಡುವ ಖೇಡ – ಆಳ್ವಖೇಡದ ಗ್ರೀಕ ರೂಪಾಂತರವೆಂದು ಸ್ಪಷ್ಟವಾಗುತ್ತದೆ.

ಆದರೆ ಪ್ತೊಲೆಮಿ (Olokhoira) ವನ್ನು ಒಂದು ಒಳಊರು (‘inland city’)[14] ಎಂದಿರುವನಷ್ಟೇ, ಅದೆಂತು ನಾಡಿನ ಹೆಸರಾಗಿರಬಹುದು? ಎಂದರೆ ಅದರ ಸಮಾಧಾನ ಹೀಗದೆ-

ಆಳುವ (ಆಳ್ವ) ಖೇಡ ಎಂಬ ಸಮಸ್ತನಾಮದ ಪರಪದದ ನೇರಾದ ಸಂಸ್ಕೃತರೂಪವು ಖೇಟ ಎಂದು, ಸಂಸ್ಕೃತದಲ್ಲಿ ಆ ಹೆಸರು ಆಲುವಖೇಟ ಎಂದು. ಖೇಟ ಎಂದರೆ ಗ್ರಾಮವೆಂದೇ ಮೂಲಾರ್ಥವಾದರೂ31 ಕರ್ಣಾಟಕದ ಚಕ್ರವರ್ತಿಗಳಾಗಿದ್ದ ರಾಷ್ಟ್ರಕೂಟರ ರಾಜಧಾನಿಯ ಹೆಸರು ಮಾನ್ಯ ಖೇಟ (ಅಂದರೆ ಈಗಣ ಹೈದರಾಬಾದು ಸಂಸ್ಥಾನದಲ್ಲಿಯ ಮಾಲಖೇಡ) ಎಂಬುದನ್ನು ಇಲ್ಲಿ ಮನವರಿಸಿದರೆ, ಖೇಟ ಎಂದು ಗ್ರಾಮಕ್ಕೇ ಅಲ್ಲ, ನಗರಕ್ಕೂ ಹೆಸರಿರುವಂತೆ ತಿಳಿಯುವುದರಿಂದ, ಒಮ್ಮೆ ಗ್ರಾಮವಾಗಿದ್ದು ಕ್ರಮೇಣ ನಗರವಾದ ಊರು. ಆಮೇಲೂ ವಾಡಿಕೆಯಾಗಿ ಮಾನ್ಯಖೇಟದಂತೆ ಅಮುಕಖೇಟ ಎಂದು ಆ ಹಿಂದಣ ಹೆಸರಿನಿಂದಲೇ ಕರೆಯಲ್ಪಡುತ್ತದೆಂದು ವ್ಯಕ್ತವಾಗುತ್ತದೆ. ಹಾಗಾದರೆ ಆಲುವ ಎಂದು ತುಳುನಾಡಿಗೇ ಹೆಸರಿತ್ತೆಂದು ‘ಪ್ರಪಂಚಹೃದಯ’ ದಿಂದ ಸ್ಪಷ್ಟವಾಗಿ ತಿಳಿಯುವುದರಿಂದ ಒಮ್ಮೆ ಗ್ರಾಮವಾಗಿದ್ದು ಕ್ರಮೇಣ ನಗರವೂ (ಪ್ತೊಲೆಮಿಯಲ್ಲಿ Olokhoira ವನ್ನು ‘city’ = ನಗರ ಎಂದಿರುವುದನ್ನು ಇಲ್ಲಿ ನೆನವರಿಸಬಹುದು) ಪ್ರಾಯಶಃ ಮುಖ್ಯ ಪಟ್ಟಣವೂ ಆದ ಊರಿಗೆ ಆ ಮೇಲೂ ತನ್ನದೇ ಆದ ಸ್ವತಂತ್ರ ಹೆಸರಿಲ್ಲದೆ, ತುಳುನಾಡಿನ ಆಲುವ ಎಂಬ ಹೆಸರಿನಿಂದಲೇ ಅದು ಅಲುವಖೇಟ ಎಂದು ಕರೆಯಲ್ಪಡುತ್ತಿರಬೇಕು, ಮತ್ತು ಅದನ್ನೇ ಪ್ತೊಲೆಮಿಯಲ್ಲಿ ‘inland city’ ಎಂದಿರುವುದರಿಂದ, ಅದು ಪ್ರಾಯಶಃ ಸಮುದ್ರದ ದಂಡೆಯಲ್ಲೇ ಇದ್ದಿರದೆ (ಈಗ ಮಂಗಳೂರು ಇರುವಂತೆ) ಕಿಂಚಿದ್ದೂರದಲ್ಲಿ ಸಮುದ್ರಗಾಮಿಯಾಗುವ ನದಿಯ ತೀರದಲ್ಲಿಯೋ, ಇಲ್ಲವೆ (ಈಗ ಉಡುಪಿ, ಬಾರಕೂರು ಇರುವಂತೆ) ಮತ್ತೂ ಒಳಗಡೆಯಲ್ಲಿಯೋ ಇದ್ದಿರಬೇಕು.*

ಮೇಲೆ ಉದ್ಧರಿಸಿರುವ ಶಾಸನಗಳಲ್ಲಾದರೆ ಮಾವಳಿಯ ಶಾಸನದಲ್ಲಿ ಹೇಳಿರುವ ‘ಆಳುವಖೇಡ ನುಱು ಸಾಸಿರ’ದಲ್ಲಿಯೂ, ದಬ್ಬೆಯ ಹಾಗೂ ಸಿಂದಗಿರಿಯ ಶಾಸನಗಳಲ್ಲಿ ಕೊಂಕಣ ನಾಡಿನ ಜತೆಯಲ್ಲಿ ಹೇಳಿರುವ – ಆಳ್ವಖೇಡದಲ್ಲಿಯೂ ಆಳುವಖೇಡ – ಆಳ್ವಖೇಡ ಎಂದರೆ ತುಳುನಾಡೇ ಎಂದು ನಿಸ್ಸಂಶಯವಾಗಿ ವ್ಯಕ್ತವಾಗುವುದರಿಂದ, ಮುಖ್ಯ ಪಟ್ಟಣದ ಹೆಸರಿನಿಂದ ಇಡೀ ನಾಡಿಗೂ ಅದೇ ಹೆಸರಾಗುವ (ಉದಾ – ಅಯೋಧ್ಯಾ ದೇಶ, ಆವಂತೀ ದೇಶ, ಬನವಾಸೀ ದೇಶ, ಮೈಸೂರು ರಾಜ್ಯ, ಧಾರವಾಡ ಜಿಲ್ಲೆ, ಮಂಗಳೂರು ತಾಲೂಕು, ಇ.) ಸಾರ್ವತ್ರಿಕವೂ ಸಾರ್ವಕಾಲಿಕವೂ ಆದ ಪದ್ಧತಿಯ ಮೇರೆಗೆ (ಪ್ರಾಯಶಃ ಪ್ತೊಲೆಮಿಯಿಂದ ಈಚೆ) ತುಳುನಾಡಿಗೂ ಆಳುವಖೇಡ – ಆಳ್ವಖೇಡ ಎಂದು ಹೆಸರಾಗಿರಬೇಕು.

ತುಳುನಾಡಿನಲ್ಲೇ[15] ಅಲ್ಲ, ಗಟ್ಟದ ಮೇಲಣ ನಾಡಿನಲ್ಲೂ[16] ಬಹಳ ಹಳಗಾಲದಿಂದ ಆಳುಪ, ಆಳುವ ಹಾಗೂ ಆಳ್ವ, ಆಳು ಎಂಬ ಉಪನಾಮವಿದ್ದ ಅರಸರು ಆಳುತ್ತಿದ್ದರು. ತುಳುನಾಡಿನಲ್ಲಿ ಅವರು ಕ್ರಿ.ಶ. ೧೫ನೆಯ ಶತಮಾನದವರೆಗೆ ಆಳಿರಬೇಕು. ಗಟ್ಟದ ಸೀಮೆಯಲ್ಲಿ ಅವರ ಶಾಸನಗಳು ಕೆಲವೇ ಇದ್ದು ಇಲ್ಲಿ ಹಲವಿರುವುದರಿಂದ ಮಾತ್ರವಲ್ಲ, ಅಲ್ಲಿಯ ಶಾಸನಗಳಿಗಿಂ ಎಷ್ಟೋ ಈಚೆಯವೂ ಎಷ್ಟೋ ಹಳೆಯವೂ ಇಲ್ಲಿ ಇರುವುದರಿಂದಲೂ (ವಿಜಯನಗರದ ತುಳುವ ವಂಶದ ಅರಸರು ಇಲ್ಲಿಂದ ಹೋಗಿ ಅಲ್ಲಿ ಕ್ರಿ.ಶ. ೧೪೯೬ರಿಂದ ೧೫೬೭ರವರೆಗೆ ಆಳಿದಂತೆ), ಅವರು ಪ್ರಾಯಶಃ ತುಳುನಾಡಿನಿಂದಲೇ ಅಲ್ಲಿಗೆ ಹೋಗಿರಬೇಕು. ಅವರ ಉಪನಾಮಕ್ಕೂ ತುಳುನಾಡಿನ ಆಲುವ ಎಂಬ ಹೆಸರಿಗೂ ಬಹಳ ನಿಕಟವಾದ ರೂಪಸಾಮ್ಯವಿರುವುದರಿಂದ, ಪ್ರಾಯಶಃ ಅವರ ಉಪನಾಮದಿಂದ ತಾನೆ ತುಳುನಾಡಿಗೆ ಆ ಹೆಸರಾಗಿರಬಹುದೊ ಎಂದು ಪ್ರಥಮದೃಷ್ಟಿಗೆ ಹೊಳೆಯದಿರದು. ಆದರೆ ಚೋಳ ಎಂಬ ದೇಶದ ಹೆಸರಿಂದ ಅಲ್ಲಿಯ ಅರಸರಿಗೆ ಪಾಂಡ್ಯರೆಂದೂ ಹೆಸರಾದುದನ್ನು ಇಲ್ಲಿ ನೆನವರಿಸಿದರೆ ಹಾಗೂ ಕೇರಲ ಎಂದು ಸಂಸ್ಕೃತಿಸಲ್ಪಟ್ಟ ದೇಶದ ಹೆಸರು ಮೂಲ ತಮಿಳಿನಲ್ಲಿ ಚೇಱ ಎಂದು, ತಮಿಳಿನಲ್ಲಿ ಚೇಱು ಎಂದರೆ ಕೆಸರು, ಆ ಕೇರಳ ದೇಶದ ಅರಸರಿಗೆ ಕೇರಳ ಎಂದು ಉಪನಾಮವಿತ್ತು (ಉದಾ : ವೀರ ಕೇರಳ ತಿರುವಡಿ, ಕ್ರಿ.ಶ. ೧೧೨೬ -೧೧೫೦; ರವಿ ಕೇರಳ, ಕ್ರಿ.ಶ. ೧೨೧೬ – ೧೨೩೭[17]) ಎಂಬುದನ್ನೂ ಮನವರಿಸಿದರೆ, ದೇಶದ ಹೆಸರುಗಳಿಂದ ತಾನೆ ಅರಸರಿಗೆ ಆಯಾ ಉಪನಾಮಗಳೊ ವಂಶನಾಮಗಳೊ ಆಗುವವಲ್ಲದೆ, ಅರಸರ ಹೆಸರುಗಳಿಂದ ಊರುಗಳಿಗೆ ಹೆಸರಾಗಬಹುದಾದರೂ ದೇಶಗಳಿಗೆ ಹೆಸರಾಗವೆಂದು ಸ್ವಯಮೇವ ಸಿದ್ಧವಾಗುತ್ತದೆ. ಹಾಗಾದರೆ ತಮಿಳುನಾಡಿನ ಆಳುವ ಎಂಬ ಹೆಸರಿನ ಮೂಲಾರ್ಥವೇನು? ಅದರ ವ್ಯುತ್ಪತ್ತಿ ಹೇಗಿರಬಹುದು? ಈ ಒಗಟನ್ನು ಹೀಗೆ ಇಬ್ಬಗೆಯಾಗಿ ಬಿಡಿಸಬಹುದು –

(೧) ಮೇಲೆ ಕಂಡಿರುವ ಮಹಾಕೂಟದ ಸ್ತಂಭಲೇಖದಲ್ಲಿ (ಕ್ರಿ.ಶ. ೬೦೨) ಕೇರಲ – ಮೂಷಿಕ ದೇಶಗಳ ಮುಂದೆಯೇ ಹಾಗೂ ವೈಜಯಂತಿ ಎಂಬ ಬನವಾಸಿಯ ಜತೆಯಲ್ಲೇ ಆಳುಕ ಎಂಬ ದೇಶವನ್ನು ಹೇಳಿದೆ[18]. ಆತಏವ ಆ ಆಳುಕ ದೇಶವು ತುಳುನಾಡು ಎಂಬಲ್ಲಿ ಸಂಶಯವಿಲ್ಲ. ಈಗ, ಆದಿಶೇಷನಿಗೆ ಆಲುಕ ಎಂದು ಹೆಸರಿದೆ –

ಶೇಷೋ ನಾಗಾಧಿಪೋsನಂತೋ ದ್ವಿಸಹಸ್ರಾಕ್ಷ ಆಲುಕಃ ||[19]

ಆಲುಕದ ಸ್ವಾರ್ಥದ ಕ-ಪ್ರತ್ಯಯವನ್ನು ಕಳಚುತ್ತಲೆ (‘ಸ್ವಾರ್ಥೇಕನ್’) ಆ ಹೆಸರಿಗೆ ಆಲು ಎಂಬ ರೂಪವು ಇದ್ದಿರುವಂತೆ ತಿಳಿಯುತ್ತದೆ. ನೀರ ಹಾವಿಗೆ ಸಂಸ್ಕೃತದಲ್ಲಿ ಆಲ[20] ಎನ್ನುತ್ತಾರೆ. ತಮಿಳಿನಲ್ಲಿ ವಿಷಕ್ಕೆ ಆಲ್, ಆಲಂ (ಉದಾ. ಆಲಕಂಟನ್ = ವಿಷಕಂಠನಾದ ಶಿವ) [21] ಎಂದೂ, ಸರ್ಪಕ್ಕೆ ಆಲವಾಯ್[22] (= ಬಾಯಲ್ಲಿ ವಿಷ ಉಳ್ಳುದು) ಎಂದೂ ಶಬ್ದಗಳು ದೊರೆಯುತ್ತವೆ. ಜೀಮೂತವಾಹನನ ಕಥೆಯಿಂದ ಹಳಗಾಲದಲ್ಲಿ ಇಲ್ಲಿ ಸರ್ಪಲಾಂಛನರಾದ ನಾಗರೆಂಬ ಜನರಿದ್ದರೆಂದು ಮೇಲೆ ಕಂಡಿರುವೆವಷ್ಟೆ. ಅವರ (ಕರಾವಳಿಯ ನಾಗರೆಂಬ ಕಾರಣ ನೀರ ಹಾವುಗಳೆಂಬ ಅರ್ಥದಲ್ಲಿ) ಅಲ, (ಆದಿಶೇಷನ ಸಂತತಿಯವರೆಂಬ ಅರ್ಥದಲ್ಲಿ), ಆಲು (ಸರ್ಪಗಳೆಂಬ ಅರ್ಥದಲ್ಲಿ) ಆಲುವಾಯ್ ಇತ್ಯಾದಿ ಹೆಸರುಗಳಿಂದ ಆಲುವ ಎಂದು ಹೆಸರಾಗಿರಬಹುದೊ ಎನಿಸುತ್ತದೆ.

(೨) ತುಳುವಿನಲ್ಲಿ ಸಾಹಿತ್ಯವಿಲ್ಲದ ಕಾರಣ ಬಹಳ ಹಳೆಯ ಶಬ್ದಗಳನ್ನು ಕಾಪಾಡಿಕೊಂಡಿಲ್ಲ, ಕನ್ನಡದಲ್ಲಿ ಹೇರಳ ಹಳೆಯ ಶಬ್ದಗಳು ಅಪುನಃಪ್ರಾಪ್ಯವಾಗಿ ತೀರ ನಷ್ಟವಾಗಿವೆ. ಆದರೆ ಕನ್ನಡಕ್ಕೂ ತುಳುವಿಗೂ ಸಗೋತ್ರವಾಗಿರುವ ತಮಿಳಿನಲ್ಲಿ ಈವರೆಗೂ ಕಾದಿರಿಸಿಕೊಂಡಿರುವ ಯಾವ ಹಳೆಯ ಶಬ್ದಗಳಿವೆಯೋ ಅವುಗಳಿಗೆ ಸರೂಪವಾಗಿದ್ದ ಶಬ್ದಗಳು ಕನ್ನಡದಲ್ಲೂ ತುಳುವಿನಲ್ಲೂ ಒಮ್ಮೆ ಇದ್ದಿರಬೇಕೆಂದು ಬೇಕಾದಷ್ಟು ನಿಶ್ಚಯವಿದೆ; ಆತಏವ ಅಂಥವನ್ನು ತಮಿಳಿನಲ್ಲಿ ಹುಡುಕಾಡಬೇಕು. ಈಗ, ತಮಿಳಿನಲ್ಲಿ ಅೞಿವಿ, ಅೞಿವು[23] = ಕನ್ನಡದಲ್ಲಿ ಅೞವೆ, ಅಳುವೆ, ಅರುವೆ[24] = ನದೀಮುಖ (mouth of a river, bar); ತಮಿಳಿನಲ್ಲಿ ಅೞುವಂ[25] = ಆಳವಾದ ಸಮುದ್ರ; ಅೞುವಾಯ್[26] = ಮರಳಿನ ದಿಣ್ಣೆ ಅಥವಾ ರೇವು (Sandbank or harbour); ಅೞಿ[27] = ಆಳವಾದ ಸಮುದ್ರ, ಸಮುದ್ರದ ದಂಡೆ ಎಂಬ ಈ ಶಬ್ದಗಳನ್ನು ಪರಿಶೀಲಿಸಿದರೆ, ತುಳುನಾಡು ಸಮುದ್ರದ ತೀರ ಭೂಮಿಯಾಗಿರುವ ಕಾರಣ, ಮಲೆಗಳಿಂದ ಮಲೆಯಾಳ (Malabar) ಎಂದೂ, ಮರುಭೂಮಿಯಿಂದ ಮರ, ಮರವಃ (Marwar) ಎಂದೂ (‘ಸಾಲ್ವಾಸ್ತು ಕಾರಕುಕ್ಷೀಯಾ ಮರವಸ್ತು ದಶೇರಕಾ’ – ಅಭಿದಾನ ಚಿಂತಾಮಣಿ, ಶ್ಲೋ, ೯೫೭) ದೇಶನಾಮವಾದಂತೆ, ಅದಕ್ಕೆ ದೇಶಭಾಷೆಯಲ್ಲಿ ಅೞುವ, ಅೞುವ ಎಂದು ಹೆಸರಿದ್ದು, ತಮಿಳಿನಲ್ಲಿ ಚೋೞ ಎಂದಿರುವ ದೇಶನಾಮವು ಸಂಸ್ಕೃತದಲ್ಲಿ ಚೋಲ ಎಂದಾಗಿರುವ ಮೇರೆಗೆ, ಈ ನಾಡಿನ ಸಂಸ್ಕೃತದಲ್ಲಿ ಆಲುವ ಎಂದು ಹೆಸರಾಗಿರಬೇಕೆಂದು ನಿಶ್ಚಯಿಸಲಾಗುತ್ತದೆ.

೩ ತುಳು

(೧) ಪಂಚವ ಮಹಾರಾಯನೆಂಬ ಕೊಂಗಾಳ್ವ ಅರಸನೊಬ್ಬನ ಶಾಸ ೯೩೪ ಪರಿಧಾವಿ ಸಂ| = ಕ್ರಿ.ಶ. ೧೦೧೨ರ ಬಲ್ಮುರಿಯ ಶಾಸನದಲ್ಲಿ[28] ತುೞವ ಎಂದು ತುಳುನಾಡಿನ ಹೆಸರಿದೆ. ಇದುವರೆಗೆ ದೊರೆತಿರುವ ಶಾಸನಗಳಲ್ಲಿ ಆ ಹೆಸರಿನ ಪ್ರಾಯಃ ಮೊತ್ತಮೊದಲಿನ ಉಲ್ಲೇಖ ಇದೇ ಏನೋ.

(೨) ಹೊಯ್ಸಳ ವಿಷ್ಣುವರ್ಧನನ (ಕ್ರಿ.ಶ. ೧೧೧೧-೪೧) ಒಂದು ಶಾಸನದಲ್ಲಿ[29] ಏಳು ತುಳುದೇಶಗಳನ್ನು ಹೇಳಿದೆ. (ಸಪ್ತ ಕೊಂಕಣದ ಅವೇಳು ದೇಶಗಳನ್ನೇ ಏಳು ತುಳುದೇಶಗಳೆಂದಿರಬಹುದೆ?) ಹೊಯ್ಸಳರ ಇತರ ಶಾಸನಗಳಲ್ಲಿ

(೩) ಶಾ.ಶ ೧೦೭೭ ಯುವ ಸಂ| ಮಾಘ ಶು| ೧೩ ವಡ್ಡವಾರ = ಕ್ರಿ.ಶ. ೧೧೫೬ನೆಯ ಜನವರಿ ೭ನೆಯ ತಾರೀಕು ಶನಿವಾರದ ಮುದುಗೆರೆಯ ಶಿಲಾಶಾಸನದಲ್ಲಿಯೂ[30]

(೪) ಶಾ.ಶ. ೧೦೯೫ ವಿಜಯ ಸಂ| = ಕ್ರಿ.ಶ. ೧೧೬೩ನೆಯ ಹಳೆಬೀಡಿನ ಶಾಸನದಲ್ಲಿಯೂ[31]

(೫) ಹೊಯ್ಸಳ I ನರಸಿಂಹನ ಆಳಿಕೆಯ (ಕ್ರಿ.ಶ. ೧೧೫೧ – ೭೩) ವಿಭಯ ಸಂ| ಶ್ರಾವಣ ಶು| ೧೫ ಬ್ರಿಹವಾರ = ಕ್ರಿ.ಶ. ೧೧೪೯ ಜುಲಾಯಿ ೨೧ನೆಯ ತಾರೀಕು ಗುರುವಾರದ ಹಳೆಬೆಳವಾಡಿಯ ಶಿಲಾಶಾಸನದಲ್ಲಿಯೂ[32] ತುಳುದೇಶ ಎಂದೂ,

(೬) ಶಾ.ಶ. ೧೧೦೪ ಶುಭಕೃತ್ ಸಂ| = ಕ್ರಿ.ಶ. ೧೧೮೨ರ ಹಿರೇಹಳ್ಳಿಯ ಶಾಸನದಲ್ಲಿ[33] ತುಳುನಾಡು ಎಂದೂ ಇದೆ.

(೭) ತುಳುನಾಡಿನಲ್ಲಿ ಆಳಿದ ಆಳುಪರ ಶಾಸನಗಳಲ್ಲಿ ಶಾ.ಶ. ೧೨೨೫ನೆಯ ಶುಭಕೃತು ಸಂ|ದ ಮೇಷ ಮಾಸೆ ೭ನೆಯ ಆದಿತ್ಯವಾರ = ಕ್ರಿ.ಶ. ೧೨೦೩ ಏಪ್ರಿಲ್ ೧ನೆಯ ತಾರೀಕು ಆದಿತ್ಯವಾರದಂದಿನ ಮಂಗಳೂರಿನ ಗೊಲ್ಲರ ಗಣಪತಿ ದೇವಸ್ಥಾನದ ಮುಂದಣ ಶಿಲಾಶಾಸನದಿಂದ[34] ಆಗ್ಗೆ ‘ಮಂಗಳಾಪುರದರಮನೆ’ಲ್ಲಿದ್ದು ಆಳುತ್ತಿದ್ದನೆಂದು ತಿಳಿವ ಬಂಕಿದೇವ ಆಳುಪೇಂದ್ರನ ಆಳೊತ್ತಿನ ತೇದಿಯಿಲ್ಲದ (ತುಳುನಾಡಿನಲ್ಲಿಯ) ಬಾರಕೂರಿನ ಮೂಡಕೇರಿಯ ಸೋಮೇಶ್ವರ ದೇವಾಲಯದ ಶಿಲಾಶಾಸನದಲ್ಲಿಯೂ[35] ಅಲ್ಲಿಯದೇ ಒಂದು ವೀರಕಲ್ಲಿನಲ್ಲಿಯೂ[36] ತುಳು ವಿಷಯ ಎಂದಿದೆ.

ಆ ಮೇಲಣ ವಿಜಯನಗರದವರ ಆಳ್ವಿಕೆಯ ಶಾಸನಗಳಲ್ಲಿ ಇದನ್ನು ತುಳುದೇಶವೆಂದೂ[37], ತೌಳವ ದೇಶವೆಂದೂ[38], ತುಳು ರಾಜ್ಯವೆಂದೂ[39] (ಮಾತ್ರವಲ್ಲ ಬಾರಕೂರ ರಾಜ್ಯವೆಂದೂ[40], ಬಾರಕೂರ ತುಳು ರಾಜ್ಯವೆಂದೂ[41], ಮಂಗಲೂರು ಬಾರಕೂರ ರಾಜ್ಯವೆಂದೂ[42] ಮಂಗಲೂರ ರಾಜ್ಯವೆಂದೂ[43]) ಹೇಳಿದೆ.

ಹರಿಹರನ (ಕ್ರಿ.ಶ. ಸು. ೧೧೫೦ – ೧೨೩೦) ಬಸವರಾಜ ದೇವರ ರಗಳೆಯಲ್ಲಿ (೯ನೆಯ ಸ್ಥಲ) ‘ಇದು ತುಳುವ ಮಲೆಯಾಳ ದೇಶಗಣ ದೊತ್ತೊತ್ತಿ’ ಎಂಬಲ್ಲಿ ತುಳುದೇಶದ ಹೆಸರಿದೆ.

ತುಳುನಾಡಿನಲ್ಲಿ ಬ್ರಾಹ್ಮಣೇತರರು ಆರಾಧಿಸುವ ಹಾಗೂ ಬ್ರಾಹ್ಮಣರು ಅರ್ಚಿಸುವ ಭೂತಗಳಿವೆಯಷ್ಟೆ. ಅವುಗಳಲ್ಲಿ ಪ್ರತ್ಯೇಕ ಭೂತಕ್ಕೆ ಅದರ ಚರಿತ್ರೆಯನ್ನು ಹೊಗಳುವ ಪಾಡ್ದನೆ (= ಸಂಸ್ಕೃತ, ಪ್ರಾರ್ಥನೆ) ಎಂಬ ತುಳು ಭಾಷೆಯ ಹಲವು ವಚನ ಕಾವ್ಯಗಳಿವೆ. ಅವನ್ನು ಆಯಾ ಭೂತದ ‘ಆಯನ’ (= ಉತ್ಸವ)ದ ಸಮಯದಲ್ಲಿ ಮೇಯ್ತುಂಬುವವನ ಬಳಗದವರು ಅದರ ಗುಡಿಯ ಬಳಿಯಲ್ಲಿ ಕುಳಿತು ಹಾಡುವುದುಂಟು ಅಥವಾ ಇತ್ತು. ಆ ಪಾಡ್ದನೆಗಳ ಕೆಲವಲ್ಲಿ ತುಳು ರಾಜ್ಯ ಎಂದು – ಉದಾ. ‘ತುಳು ರಾಜ್ಯೊ ಗಟ್ಟಿ ಜಪ್ಪೊಡು, ತುಳುವೆರೆನ್ ತೂವೊಡಂದೆರ್'[44] (= ತುಳು ರಾಜ್ಯಕ್ಕೆ ಗಟ್ಟವನ್ನು ಇಳಿದು ಹೋಗಬೇಕು, ತುಳುವರನ್ನು ನೋಡಬೇಕು ಎಂದರು) – ಇದೆಯಾದರೂ, ಅವುಗಳಲ್ಲಿ (ಮುಂದೆ ತಿಳಿವಂತೆ) ಅರಬೀ ಭಾಷೆಯವೇ ಮೊದಲಾದ ಅನ್ಯದೇಶಗಳು ಇದ್ದು, ಆ ಪಾಡ್ದನಗಳು ಹೆಚ್ಚಾದರೆ ಕೆಲ ನೂರಷ್ಟೇ ವರ್ಷಗಳ ಹಿಂದಣವಲ್ಲದೆ ಶಾನೆ ಹಳೆಯವಲ್ಲ ಎಂದು ಸಿದ್ಧವಾಗುವುದರಿಂದ ಆ ಆಧಾರ ಅಷ್ಟು ಉಪಯೋಗಿಯಲ್ಲ.

 

[1] ಅಶೋಕನ ಶಾಸನಗಳ ಪ್ರಾಕೃತದಲ್ಲಿ ಲ-ಕಾರವು ಡ-ಕಾರವಾಗುತ್ತದೆ (ಉದಾ : ಚೋಲ = ಚೊಡ) ಹಾಗೂ ರ-ಕಾರವೂ ಲ – ಕಾರವೂ ಕೆಲವೊಮ್ಮೆ ತ-ಕಾರವೂ ಆಗಿರುತ್ತದೆ. ಪ್ರಾಯಶಃ ಕನ್ನಡದಲ್ಲೂ ‘ಕೇರಲ’ವು ‘ಕೇತಲ’ ಎಂದಾಗುವ ಬಗ್ಗೆ ಹಾಂಗಲದ ಕಾದಂಬರ ಅರಸನಾದ ಕಾಮದೇವನ (ಕ್ರಿ.ಶ. ಸು. ೧೧೮೧ – ೧೨೦೭) ಅರಸಿಯ ಕೇತಲದೇವಿ (=ಕೇರಲದೇವಿ) ಎಂಬ ಹೆಸರೂ (FKI) ಪು. ೧೬೩), ಬಸವಪುರಾಣದಲ್ಲಿ (ಕ್ರಿ.ಶ. ೧೩೬೯) ಒಬ್ಬ ಕೇತಲದೇವಿಯ (೫೯) ಹೆಸರೂ ಇವೆ.

[2] E.C.XI. ಮೊಳಕಾಲ್ಮುರು ಸಂ.೧೪, ೨೧ ಮತ್ತು ೩೪. * Krishnaswami Aiyangar Commemoration Volume (1936) ರಲ್ಲಿ ಪ್ರಕಟವಾದ ನನ್ನ Satiyaputra of Asoka’s Edict II (ಪು. ೩೩ – ೪೭) ಎಂಬ ಲೇಖವನ್ನು ನೋಡುವುದು.

[3] Trivandrum Sanskrit Series, ನಂ. ೪೫, ಪು. ೩ – ೪.

[4] FKD, ಪು. ೨೮೧, ೩೪೫, ೩೪೯.

[5] ಶಬ್ದಮಣಿದರ್ಪಣ (ಮಂಗಳೂರಿನ ಪ್ರತಿ, ೧೯೨೦) ಸೂತ್ರಗಳು ೧೫೭ (ಪು. ೨೨೩) ಮತ್ತು ೧೫೯ (ಪು. ೨೨೫)

[6] NKG II, ಪು. ೭೬

[7] Ptolemy ಪು. ೧೮೦

[8] EC. VIII, ಸೊರಬ ೧೦.

[9] EC.V, ಬೇಲೂರು ೧೯೯

[10] EC.VI, ಚಿಕ್ಕಮಗಳೂರು, ೧೬೦.

[11] E.C.V ಅರಸೀಕರೆ ೫೫

[12] ಅದೇ, ಚನ್ನರಾಯಪಟ್ಟಣ ೨೦೪

[13] ಅದೇ ಚನ್ನರಾಯಪಟ್ಟಣ, ೨೨೦

[14] ಖೇಟ : ಸ್ಯಾದ್ಗ್ರಮಭೇದೇ (ಹೇಮಚಂದ್ರನ ಅನೇಕಾರ್ಥ ಸಂಗ್ರಹ, ಶ್ಲೋ. ೧೦೧)

* ಮಂಗಳೂರು ತಾಲೂಕಿನ ಅಳಪೆ ಎಂಬ ಈಗಣ ಹಳ್ಳಿ ಆಲುವ (ಖೇಟ) ವಾಗಿರಬಹುದೇ?

[15] South Indian Inscriptions (S I I ) VII : ನಂ. 177, 185, 191, 222, 223, 237, 279, 283, 284, 290, 293 ಇ.ಇ.

[16] EC, VI ಕೊಪ್ಪ ೩೮; VIII ಸೊರಬ ೧೦, ೫೭೧; XI, ದಾವಣಗೆರೆ ೬೬

[17] Historical Inscriptions of Southern India (HISI) ಪು. ೩೬೦.

[18] FKD. ಪು. ೨೮೧, ೩೦೪, ೩೪೫.

[19] ಹೇಮಚಂದ್ರನ ಅಭಿಧಾನ ಚಿಂತಾಮಣಿ, ಶ್ಲೋ ೧೩೦೭.

[20] Cambridge History of India (CHI) Vol. I, ಪು. ೨೪೬.

[21] Madras University Tamil – English Lexicon (TEL) ಪು. ೨೪೬.

[22] ಅದೇ, ಪು. ೨೪೭.

[23] ಅದೇ, ಪು. ೧೬೪.

[24] Kittel : Kannada – English Dictionary, ಪು. ೧೩೯

[25] TEL, ಪು. ೧೬೬

[26] ಅದೇ, ಪು. ೧೬೪

[27] ಅದೇ, ಪು. ೨೫೩

[28] EC III, ಶ್ರೀರಂಗಪಟ್ಟಣ ೧೪೦; Mysore and Coorg from Inscriptions, ಪು. ೧೪೪-೪೫

[29] FKD, ಪು. ೪೯೯

[30] EC,V, ಹಾಸನ ೬೯.

[31] ಅದೇ, ಬೇಲೂರು ೧೧೪.

[32] ಅದೇ, ಬೇಲೂರು ೧೭೧.

[33] ಅದೇ, ಬೇಲೂರು ೧೭೭

[34] SII, VII, ೧೭೭.

[35] ಅದೇ, ೩೪೨೭.

[36] ಅದೇ, ೩೨೮

[37] ಅದೇ, ೧೯೬, ೨೦೨.

[38] ಅದೇ, ೨೦೬, ೨೦೭.

[39] ಅದೇ, ೨೯೭, ೩೪೨, ೩೪೪, ೩೪೭, ೩೫೧.

[40] ಅದೇ, ೨೮೮, ೨೯೬, ೨೯೯, ೩೦೬, ೩೧೦ ಇ.ಇ.

[41] ಅದೇ ೩೦೯, ೩೧೧ ಇ.

[42] ಅದೇ ೨೧೨, ೨೨೮, ೨೩೬ ಇ.

[43] ಅದೇ, ೧೭೯, ೧೮೨ಇ.

[44] ಮಂಗಳೂರಿನ Basel Mission Pressನಲ್ಲಿ ಪ್ರಕಟವಾದ (೧೮೮೬) ‘ಪಾಡ್ದನೊಳು’ (ಅತ್ತಾವರ ದೆಯ್ಯೊಂಗುಳುಪು. ೨೫; ತೊಡಕಿನಾರ, ಪು. ೩೧).