ಋಗ್ವೇದದ ಐತರೇಯ ಬ್ರಾಹ್ಮಣದಲ್ಲಿ (VII.೧೮) ದಕ್ಷಿಣಾಪಥದಲ್ಲಿದ್ದ ಆರ್ಯರ ನೆಲೆವೀಡುಗಳ ಎಲ್ಲೆಗಳಲ್ಲಿ

ಏತೇಂಧ್ರಾಃ ಪುಂಡ್ರಾಃ ಶಬರಾಃ ಪುಲಿಂದಾ
ಮೂತಿಬಾ ಇತ್ಯುದಂತ್ಯಾ ಬಹವೋ ಭವಂತಿ
|
ವೈಶ್ವಾಮಿತ್ರಾ ದಸ್ಯೂನಾಂ ಭೂಯಿಷ್ಠಾ :||

ಆಂಧ್ರರೂ ಪುಂಡ್ರರೂ ಶಬರರೂ ಪುಲಿಂದರೂ ಮೂತಿಬರೊ ವಾಸಿಸುತ್ತಿದ್ದರೆಂದೂ, ಅವರೇ ಮೊದಲಾದ ದಸ್ಯುಗಳು, ಅಂದರೆ ಅನಾರ್ಯರು, ವಿಶ್ವಾಮಿತ್ರನ ಸಂತತಿಯವರೆಂದೂ ಹೇಳಿದೆ. ಆತ ಏವ ಆ ಕಾಲಕ್ಕಿಂತ ಸಾಕಷ್ಟು ಹಿಂದಿನಿಂದಲೇ ಆರ್ಯರ ಅಧಿನಿವೇಶಗಳೂ ದಕ್ಷಿಣ ಭಾರತದಲ್ಲಿ ಇದ್ದಿರಬೇಕು, ಆರ್ಯ ಅನಾರ್ಯರಲ್ಲಿ ಶರೀರ ಸಂಬಂಧವೂ ಆಗುತ್ತಿರಬೇಕು. ಇಲ್ಲಿ ತೀರ ಕೆಲವೇ ಹೇಳಿರುವ ಅನಾರ್ಯರ ಹೆಸರುಗಳಲ್ಲಿ ತುಳುನಾಡಿನವರ ಹೆಸರಿಲ್ಲ.

ಆದರೆ ಇನ್ನೆರಡು ಬಹಳ ಹಳೆಯ ಕಥೆಗಳಿವೆ. ಅವು ಬರೆ ಕಟ್ಟುಕಥೆಗಳಾಗಿರದೆ, ಅವಲ್ಲಿ ಇತಿಹಾಸದ್ದೇ ಅಲ್ಲವಾದರೆ ಐತಿಹ್ಯದ್ದಾದರೂ ಕದಿರುಗಳು ಇವೆಯಾದರೆ, ಅವುಗಳಿಂದ ಈ ಕೊಂಚ ಬೆಳಕಾದರೂ ಹೊರಹೊಮ್ಮುವಂತೆ ತೋರುತ್ತದೆ.

(೧) [1]ಹರಿವಂಶದ ವಿಷ್ಣುಪರ್ವದಲ್ಲಿ (II ಅಧ್ಯಾಯ ೩೭-೩೮) ಹೀಗಿದೆ – ಹರ್ಯಶ್ವನೆಂಬ ಒಬ್ಬ ಅರಸನು ಮಧುವನ (=ಮಥುರಾನಗರದ ಪ್ರದೇಶ)ದ ಅರಸನಾದ ಮಧು ಎಂಬ ದೈತ್ಯನ ಮಗಳಾದ ಮಧುಮತಿಯನ್ನು ಮದುವೆಯಾಗಿ ಆತನಿಂದ ಅನೂಪ ವಿಷಯದಲ್ಲಿಯ ಆನರ್ತ ಎಂಬ ರಾಜ್ಯವನ್ನು ಪಡಕೊಂಡು ಅಲ್ಲಿ ಅರಸುಗೆಯ್ದನು. ಆತನ ಮಗನಾದ ಯದು ಎಂಬವನು ಧ್ರೂಮ್ರವರ್ಣನೆಂಬ ನಾಗರಾಜನ ೫ ಮಂದಿ ಮಗಳಂದಿರನ್ನು ಮದುವೆಯಾಗಿ ಅವರಲ್ಲಿ ೫ ಮಗಂದಿರನ್ನು ಪಡೆದು, ಅವರಲ್ಲಿ ಮಾಧವನೆಂಬವನನ್ನು ತನ್ನ ರಾಜಧಾನಿ ಇದ್ದ ಆನರ್ತದೇಶಕ್ಕೆ ಮುಂದಣ ಅರಸನೆಂದು ನೇಮಿಸಿ, ಇತರರನ್ನು ಬೇರೆ ಬೇರೆ ಎಡೆಗಳಲ್ಲಿ ಹೊಸ ರಾಜ್ಯಗಳನ್ನು ಸ್ಥಾಪಿಸಿ, ಆಳಿರೆಂದು ಕಳಿಸಿದನು. ಅವರಲ್ಲಿ ಮುಚುಕುಂದನು ಅನೂಪದೇಶದಲ್ಲಿ ಮಾಹಿಷ್ಮತಿ ಎಂಬ ನಗರವನ್ನು ನಿರ್ಮಿಸಿ ಅದನ್ನು ತನ್ನ ರಾಜಧಾನಿ ಮಾಡಿಕೊಂಡನು. ಪದ್ಮವರ್ಣನೂ ಸಹ್ಯಪರ್ವತ ಪಾರ್ಶ್ವದಲ್ಲಿ ಪದ್ಮಾವತ ಎಂಬ ರಾಜ್ಯವನ್ನು ರಚಿಸಿ, ಅದರಲ್ಲಿ ಕರವೀರ (:ಈಗಣ ಕೊಲ್ಲಾಪುರ) ಎಂಬ ನಗರವನ್ನು ಸ್ಥಾಪಿಸಿದನು. ಸಾರಸನೆಂಬವನು ವನವಾಸಿ ಎಂಬ ಜನಪದವನ್ನು ನೆಲೆಯಿಸಿ ಅಲ್ಲಿ ಕ್ರೌಂಚಪುರವನ್ನು ಸ್ಥಾಪಿಸಿದನು. ಕೊನೆಯ ಹರೀತನೆಂಬವನು ಸಮುದ್ರದ್ವೀಪದಲ್ಲಿ ರಾಜ್ಯವನ್ನು ಸ್ಥಾಪಿಸಿದನು. ಹರೀಶನ ರಾಜ್ಯದಲ್ಲಿ ಮುದ್ಗರ ಎಂಬ ದಾಶರು, ಅಂದರೆ ಬೆಸ್ತರು ಇದ್ದರು.

ಹರಿತ್ಯೋಪಿ ಸಮುದ್ರಸ್ಯ ದ್ವೀಪಂ ಸಮಭಿಪಾಲಯನ್ ||೨೬||
ತಸ್ಯದಾಶಾ ಜಲೇ ಮಗ್ನಾ ಮುದ್ಗರಾ ನಾಮ ವಿಶ್ರುತಾಃ ||
ಯೇ ಹರಂತಿ ಸದಾ ಶಂಖಾನ್ ಸಮುದ್ರೋದರಚಾರಿಣ:|| ||೩೦||
(ಅಧ್ಯಾಯ ೩೮)

ಯುವರಾಜನಾದ ಮಾಧವನ ಮಗನು ಸಾತ್ತ್ವತನು. ಸಾತ್ತ್ವತನ ಮಠದವರು ಸಾತ್ತ್ವತರೆಂದು ಪ್ರಸಿದ್ಧರಾದರು. ಸಾತ್ತ್ವತನ ಮಗನಾಧ ಭೀಮನು ಆನರ್ತದೇಶದಲ್ಲಿ ಆಳುತ್ತಿದ್ದಾಗ ಶ್ರೀರಾಮನು ಅಯೋಧ್ಯೆಯಲ್ಲಿ ಆಳುತ್ತಿದ್ದನು.

ಈ ಕಥೆಯಲ್ಲಿ ಹರೀತನು ಸಮುದ್ರ ದ್ವೀಪದಲ್ಲಿ ಆಳುತ್ತಿದ್ದನೆಂದೂ, ಅವನ ರಾಜ್ಯದಲ್ಲಿ ಮುದ್ಗರರೆಂಬ (ದಾಶಾಃ 🙂 ಬೆಸ್ತರು ಇದ್ದರೆಂದು ಹೇಳಿದೆಯಷ್ಟೇ. ಆ ಮುದ್ಗರೆಂಬ ಬೆಸ್ತರೆಂದರೆ ನಮ್ಮ ತಮಿಳುನಾಡಿನ ಮೊಗೇರರೆಂಬ ಬೆಸ್ತರಲ್ಲದೆ ಬೇರೆಯಲ್ಲ. ಮುದ್ಗರ ಎಂಬುದಕ್ಕೆ ಸಂಸ್ಕೃತದಲ್ಲಿ ಬೆಸ್ತ ಎಂದು ಸರ್ವಥಾ ಅರ್ಥವಿಲ್ಲ ಮಾತ್ರವಲ್ಲ, ಈ ಕಥೆಯಲ್ಲಿ ಅವರನ್ನು ‘ಮುದ್ಗರಾ ನಾಮವಿಶ್ರುತಾ:’ ಎಂದಿರುವುದರಿಂದ ಅವರ ಹೆಸರೇ ಅವರ ಜಾತಿಯ ಹೆಸರೇ, ಮುದ್ಗರ ಎಂದಿತ್ತಲ್ಲದೆ, ಮುದ್ಗರ ಎಂಬ ಪದಕ್ಕೆ ಬೆಸ್ತ ಎಂದು ಅರ್ಥವಲ್ಲ ಎಂದೂ ಸ್ಪಷ್ಟವಿದೆ. ಆತ ಏವ ಮುದ್ಗರ ಎಂಬುದು ತುಳುನಾಡಿನ ಬೆಸ್ತರ ಮೊಗೇರ ಎಂಬ ಹೆಸರಿನ ಸಂಸ್ಕೃತಿಸಿದ ರೂಪ ತಾನೆ ಹೊರತು ಅಚ್ಚ ಸಂಸ್ಕೃತಪದವೂ ಅಲ್ಲ. ಆ ಮುದ್ಗರದಿಂದ ಮೊಗೇರ ಎಂದು ತದ್ಭವಿಸಿದುದೂ ಅಲ್ಲ. ಹರೀಶನ ಸಮುದ್ರದ್ವೀಪದಲ್ಲಿಯ ರಾಜ್ಯವನ್ನು ವನವಾಸಿಯ, ಅಂದರೆ ಈಗಣ ಉತ್ತರ ಕನ್ನಡ ಜಿಲ್ಲೆಯಲ್ಲಿಯ ಬಹಳ ಪ್ರಾಚೀನವಾದ ಬನವಾಸಿಯ ಜತೆಯಲ್ಲಿಯೇ ಹೇಳಿರುವುದರಿಂದಲೂ, ದ್ವೀಪ ಎಂದರೆ ನಡುಗಡ್ಡೆಯೇ ಅಲ್ಲ, ಕರಾವಳಿಯ ಮಳಲ ದಂಡೆಯ ಪ್ರದೇಶವೆಂದೂ ಅರ್ಥವಿರುವುದರಿಂದಲೂ ಅದು ತುಳುನಾಡೇ ಸರಿ. ಈ ಕಥಾಕಾಲವು ಶ್ರೀರಾಮಚಂದ್ರನಿಗಿಂತಲೂ ಪೂರ್ವತರವೆಂದು ಇದರಿಂದಲೇ ತಿಳಿಯುವುದರಿಂದ, ಹರೀಶನ ರಾಜ್ಯವಿದ್ದ ತುಳುನಾಡಿನ ಆ ತೀರ ಭೂಮಿ ಅಥವಾ ಅದರ ರಾಜಧಾನಿಯ ಆಗಣ ಹೆಸರನ್ನು ಇದರಲ್ಲಿ ಹೇಳದಿರುವುದು ಶೋಚನೀಯ.

[2]ವಿದ್ಯಾಧರ ಯುವರಾಜನಾದ ಜೀಮೂತವಾಹನನು ಶಂಖಚೂಡನೆಂಬ ನಾಗನ ಪ್ರಾಣವನ್ನು ಉಳಿಸುವ ಬಗ್ಗೆ ತನ್ನ ಪ್ರಾಣವನ್ನು ತೆತ್ತ ಕಥೆ ಬೌದ್ಧರ ಕ್ರಿಸ್ತಪೂರ್ವಕಾಲೀನ ಜಾತಕಟ್ಠಕಥಾ ಎಂಬ ಪಾಲಿ ಭಾಷೆಯ ಗ್ರಂಥದಲ್ಲಿ ಉಂಟಂತೆ. (ಆದರೆ ನಾನದನ್ನು ಕಂಡಿಲ್ಲ.) ಅದೇ ಕಥೆಯನ್ನು ಕ್ರಿ.ಶ. ೨ನೆಯ ಶತಮಾನಕ್ಕೆ ಆಚೆಯಲ್ಲಿದ್ದ ಗುಣಾಢ್ಯನ ಪ್ರಾಕೃತಮೂಲದಿಂದ ಸಂಸ್ಕೃತಿಸಲ್ಪಟ್ಟ ಸೋಮದೇವನ ಕಥಾಸರಿತ್ಸಾಗರದ ೨೨ನೆಯ ಹಾಗೂ ೯೦ನೆಯ ತರಂಗಗಳಲ್ಲಿ ಹೇಳಿದೆ. ಕ್ರಿ.ಶ. ೭ನೆಯ ಶತಕದ ಶ್ರೀ ಹರ್ಷನ ನಾಗಾನಂದ ನಾಟಕದಲ್ಲಿಯೂ ಆ ಕಥೆ ಪ್ರಯೋಗಿಸಲ್ಪಟ್ಟಿದೆ. ಅದನ್ನೇ ಕ್ಷೇಮೇಂದ್ರನ ಬೃಹತ್ಕಥಾಮಂಜರಿಯ ೪ನೆಯ ಹಾಗೂ ೯ನೆಯ ಲಂಬಕಗಳಲ್ಲಿ ಹೇಳಿದೆ, ತಾನೇ ಯಾವೊಂದು ಪುರಾತನ ಪ್ರಾಯಶಃ ಪಾಲಿ ಭಾಷೆಯ ಗ್ರಂಥಾಧಾರದಿಂದ ಸಂಸ್ಕೃತದಲ್ಲಿ ರಚಿಸಿದ ಅವದಾನ ಕಲ್ಪಲತಾ ಎಂಬ ಗ್ರಂಥದ ಕೊನೆಯ ೧೦೮ನೆಯ ಪಲ್ಲವದಲ್ಲೂ ಈ ಕಥೆ ಇದೆ. ಪಶ್ಚಿಮ ಸಮುದ್ರತೀರದಲ್ಲಿಯ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಎಂಬ ಪ್ರಸಿದ್ಧ ತೀರ್ಥಕ್ಷೇತ್ರವೇ ಆ ಕಥೆಯ ರಂಗಭೂಮಿ.

ಜಗಾಮ ಗೋಕರ್ಣತಟಂ ಮಹಾಬ್ದಿ
ತರಂಗ ಹಸ್ತಾರ್ಪಿತ ಘೇನಮಾಲಮ್ || ೧೩೦ ||
(ಅವದಾನ ಕಲ್ಪಲತಾ, ೧೦೮)

ಗೋಕರ್ಣದ ಸಮುದ್ರತೀರವರ್ತಿಯಾದ ಶಿವಾಲಯವು ಗರುಡನು ನಾಗರನ್ನು ಕೊಂದು ತಿನ್ನುತ್ತಿದ್ದ ಆ ವಧ್ಯಭೂಮಿಗೆ ತೀರ ಹತ್ತಿರದಲ್ಲಿತ್ತು ಎಂಬ ಶಂಖಚೂಡನ ಈ ಮಾತುಗಳಿಂದ ತಿಳಿಯುತ್ತದೆ.

ಅಹಂ ಚಾಬ್ಧಿತಟೇ ಗತ್ವಾ ನತ್ವಾ ಗೋಕರ್ಣಮೀಶ್ವರಮ್ ||
ಆಗಚ್ಛಾಮಿ ದ್ರುತಂ ಯಾವನ್ನಾಯಾತಿ ಗರುಡೋsತ್ರ ಸಃ || ೧೪೪ ||
(ಕಥಾಸರಿತ್ಸಾಗರ, ೨೨)

ಗೋಕರ್ಣಮರ್ಣತವಟೇ ತ್ವರಿತಂ ಪ್ರಣಮ್ಯ
ಪ್ರಾಪ್ರೋsಸ್ಮಿ ತಾಂ ಖಲು ಭುಜಂಗಮ ವಧ್ಯ ಭೂಮಿಮ್ ||
(ನಾಗಾನಂದ V)

ಆತ್ರಾಂತರೇ ಶಂಖಚೂಡಃ ಶೋಣ ವಧ್ಯಪಟಾನ್ವಿತಃ |
ಗೋಕರ್ಣಮರ್ಣವತಟೇ ಪ್ರಂಣಮ್ಯಾಶು ಸಮಾಯಯೌ || ೧೫೬ ||
(ಅವದಾನ ಕಲ್ಪಲತಾ, ೧೦೮)

ಆದರೆ ಶಂಖಚೂಡನು ಸರ್ಪ ಎಂಬ ಅರ್ಥದಲ್ಲಿ ತಾನು ನಾಗ ಎನ್ನುವನದರೂ – ‘ಅಹಂ ಶಂಖ ಚೂಡಾಖ್ಯೋ ನಾಗಃ’ (ಕಥಾ ೨೨. ೨೦೮), ‘ನಾಗ ಏವಾಸ್ಮಿ’ (ಅದೇ, ೨೨, ೨೩೪; ೯೦, ೧೬೯), ‘ಶಂಖ ಚೂಡೋ ನಾಮ ನಾಗಃ ಖಲ್ವಹಮ್’ (ನಾಗಾ V) – ಹಾಗೆಯೇ ಆ ಮಾತನ್ನು ಮತ್ತೂ ಬಲಿಸಲೆಂಬಂತೆ ಅವನಿಗೆ ಅವೆಲ್ಲ ಸರ್ಪಲಕ್ಷಣಗಳು ಇದ್ದಂತೆ ಹೇಳಿದೆಯಾದರೂ –

ಕಿಂ ಭ್ರಾಮ್ಯಸಿ ಫಣಾಃ ಕಿಂ ಮೇ ಜಿಹ್ವೇ ದ್ವೇ ಚ ನ ಪಶ್ಯಸಿ ||೧೭೩ ||
(ಕಥಾ ೯೦)

ವಿಸ್ಫೂರ್ಜದ್ವಿಷ ಪೂತ್ಕಾರಂ ರತ್ನಸ್ಪೀತಾ ಫಣಾಶ್ಚ ಮೇ || ೯೧೭ ||
(ಬೃಹತ್ಕರ್ಥಾ)

ನಾಗ ಎಂದರೆ ಇಲ್ಲಿ ಸರ್ವಥಾ ಉರಗವಲ್ಲ. ಏಕೆಂದರೆ ಅಲ್ಲಿಯೇ ಶಂಖಚೂಡನನ್ನು ‘ಪುರುಷಂ ಯುವಾನಮ್’ (ಕಥಾ ೨೨, ೧೨೮), ‘ಯುವಾನಮೇಕಂ ಪುರುಷಂ ದುಃಖಿತಂ ಸುಂದರಾಕೃತಿಮ್’ (ಅದೇ ೯೦, ೧೧೬) ಎಂದಿರುವುದರಿಂದ ಮಾತ್ರವಲ್ಲ, ತನ್ನ ಆಹಾರವಲ್ಲದ ಮನುಷ್ಯನಿಂದ ತನ್ನ ದೈನಿಕ ಆಹಾರವಾದ ಸರೀಸೃಪವನ್ನು ಸಹಜವಾಗಿಯೂ ಸುಲಭವಾಗಿಯೂ ತಿಳಿಯಬಲ್ಲ ಗರುಡನಿಗೆ ತನ್ನ ಮುಂದಿದ್ದ ಜೀಮೂತವಾಹನ – ಶಂಖಚೂಡರಲ್ಲಿ ನರನಾರು? ಉರಗವಾರು? – ‘ದ್ವಯೋರಪಿ ಭವತೋರ್ವಧ್ಯ ಚಿಹ್ನಮ್, ಕಃ ಖಲು ನಾಗ ಇತಿ ನಾವಗಚ್ಛಾಮಿ’ (ನಾಗಾ. V) – ಎಂದು ಭೇದಿಸಲಿಕ್ಕೆ ಆಗದುದರಿಂದಲೂ, ಈಗಲೂ ಗರುಡಪಕ್ಷಿ ಸರ್ಪಗಳನ್ನು ಕೊಂದು ತಿನ್ನುತ್ತದಾದರೂ ಆ ವಸ್ತುಸ್ಥಿತಿಗೆ ತೀರ ವಿರೋಧವಾಗಿ ಗರುಡನು ಇನ್ನು ಮುಂದೆ ತಾನು ನಾಗರನನ್ನು ಕೊಲ್ಲೆನೆಂದು ಅಭಯವಿತ್ತನೆಂಬುದರಿಂದಲೂ –

ಏವಮಸ್ತು ನ ಭೋಕ್ಷ್ಯೇಹಂ ನಾಗಾನ್ ಶಾಂತಮತಃ ಪರಮ್ || ೧೯೫ ||
ಗರುಡೋಪ್ಯಥ ಹೃಷ್ಟಾತ್ಮಾ ವರದಸ್ತೇನ ಯಾಚಿತಃ |
ಪ್ರದದೌ ಸರ್ವ ನಾಗಾನಾಂ ಪುಣ್ಯಾಮಭಯ ದಕ್ಷಿಣಾಮ್ || ೯೩೦ ||
(ಬೃಹತ್ಕಥಾ ೯)

ಶಂಖಚೂಡನು ಉರಗವೂ ಅಲ್ಲ, ಗರುಡನು ವಿಹಗವೂ ಅಲ್ಲ, ಜೀಮೂತವಾಹನನಂತೆಯೇ ಅವರೂ ಮನುಷ್ಯರೆಂದು ಸ್ಪಷ್ಟವಾಗುತ್ತದೆ. ಹಾಗೆಯೇ ಶಂಖಚೂಡ ಎಂಬುದು ಆತನ ಅಂಕಿತನಾಮವಲ್ಲ, ಆದಿಕಾರನಾಮ;ಏಕೆಂದರೆ ಆತನ ಈ ಮಾತುಗಳಿಂದ –

ನ ಖಲು ಶಂಖಧವಲಂ ಶಂಕಪಾಲಕುಲಂ
ಶಂಖಚೂಡೋ ಮಲಿನೀಕರಿಷ್ಯತಿ |
(ನಾಗಾ IV)

ನ ಚಾಹಂ ಮಲಿನೀಕರ್ತುಂ ಶಂಖಪಾಲಕುಲಂಶುಚಿ || ೧೪೧ ||
(ಕಥಾ ೯೦)

ಆತನು ಶಂಖಪಾಲ ಎಂಬ ಕುಲಕ್ಕೆ ಸೇರಿದವನು. ಆ ಶಂಖಚೂಡ ಎಂಬುದರ ಚುಡ ಎಂಬ ಪರಪದದಿಂದ ಆ ಶಂಖಪಾಲ ಕುಲದ ಪ್ರಾಯಶಃ ನಾಯಕನೆಂದು ತಿಳಿಯುತ್ತದೆ.

ಪ್ರಾಚೀನ ಕಾಲದಿಂದ ದಕ್ಷಿಣ ಭಾರತದಲ್ಲಿ ನಾಗರೆಂಬ ಅನಾರ್ಯ ಜಾತಿಯ ಜನರು ನೆಲೆಸಿದ್ದರು. ಪ್ರಾಯಶಂ ಅವರೇ ಇಲ್ಲಿಯ ಮೂಲನಿವಾಸಿಗಳೇನೋ. ಬಹಳ ಹಳೆಗಾಲದಲ್ಲಿ ಆಯಾ ಜನರಿಗೆ ಆಯಾ ವಿವಿಧ ಲಾಂಛನಗಳು (Totems) ಇದ್ದಂತೆ, ನಾಗರಿಗೆ ಸರ್ಪಲಾಂಛನವಿದ್ದಿರಬೇಕು. ಪ್ರಾಯಶಃ ಅವರು ನಾಗಪೂಜಕರೂ ಆಗಿರಬೇಕು. ವೇದಗಳಲ್ಲಿ ಸರ್ಪಾರ್ಥದಲ್ಲಿ ನಾಗ ಎಂಬ ಪದವಿಲ್ಲದಿರುವುದರಿಂದ, ಅದನ್ನು ಸಂಸ್ಕೃತದಲ್ಲಿ ಅವರ ಹೆಸರಿಂದ ಎರಕೊಂಡಿರಬೇಕು. ಪುರಾಣಗಳ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪ್ರಾಂತವೂ, ಮೈಸೂರು ಸಂಸ್ಥಾನದ ಶಿವಮೊಗ್ಗ ಜಿಲ್ಲೆಯ ಕೆಲಭಾಗವೂ ದಕ್ಷಿಣ ಭಾರತದ ನಾಗರಖಂಡದಲ್ಲಿ ಸೇರಿದ್ದುವೆಂದು ಸ್ಕಾಂದಪುರಾಣದಿಂದ ತಿಳಿಯುತ್ತದೆ. ಅಲ್ಲಿಂದ ಬಳಿಕ ‘ನಾಗರ ಖಂಡಮೆೞ್ಪತ್ತು’ (=ನಾಗರಖಂಡ ೭೦) ಬನವಾಸಿಯ ಪನ್ನೀರ್ಚ್ಛಾಸಿರದ (=೧೨೦೦೦ ಊರುಗಳುಳ್ಳ ಸೀಮೆಯ) ಒಂದು ಚಿಕ್ಕ ಹೋಬಳಿಯಾಗಿದ್ದಿತೆಂದು ಹಲವು ಶಾಸನಗಳಿಂದ ಕಂಡುಬರುತ್ತದೆ; ಉದಾ.(೧) ಚಳುಕ್ಯ ವಿನಯಾದಿತ್ಯನ ಆಳೊತ್ತಿನ (ಕ್ರಿ.ಶ. ೬೮೦ – ೬೯೬) ಶಿಕಾರಿಪುರ ನಂ. ೧೫೪ನೆಯ ಶಿಲಾಲೇಖ[3] (ಬಂತಿ ೪ – ‘ನಾಯರ್ಖಣ್ಡ’); (೨) ಶಾ.ಶ. ೮೪೦ನೆಯ ಬಹುಧಾನ್ಯ ಸಂ) = ಕ್ರಿ.ಶ. ೯೧೮-೯೧೯ರ ಶಿಕಾರಿಪುರ ನಂ. ೨೧೯ನೆಯ ಬಂದಲಿಕೆಯ ಶಿಲಾಶಾಸನ ಇ.ಇ. ಆತೇವ ಯಾವಂದೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಸಮುದ್ರ ಕರಾವಳಿಯನ್ನೂ ಒಳಕೊಂಡಿದ್ದ ನಾಗರಖಂಡವು ಪುರಾಣಗಳಿಂದ ಈಚೆ ಬರಬರುತ್ತ ಸಂಕುಚಿತವಾಗಿರಬೇಕು. ಈ ನಾಗರಖಂಡ ಎಂಬ ಹೆಸರಲ್ಲಿಯ ನಾಗರವು ಸಂಸ್ಕೃತ ಶಬ್ದ ಹೇಗೂ ಅಲ್ಲ; ಅದು ಅನಾರ್ಯ ಭಾಷೆಯ ‘ನಾಗರ’ ಎಂಬುದರ ರೂಪ ಭೇದವೋ ಇಲ್ಲವೆ ಆ ಬಹುವಚನದ ಷಷ್ಠೀ ವಿಭಕ್ತಿಯ ರೂಪವೊ ಆಗಿರಬೇಕು. ಬಹಳ ಹಿಂದೆ ನಮ್ಮ ಮಂಜೇಶ್ವರಕ್ಕೆ ‘ಸಂಕರಮಲೆ’ ಎಂದು ಹೆಸರಿತ್ತೆಂದು ಪರಂಪರಾಗತವಾದ ಪುರಾತನ ಐತಿಹ್ಯವಿದೆ. ಈ ಹೆಸರೂ ಅರಿಸಮಾಸವೂ ಅಲ್ಲ, ಸ(ಶ)೦ಕರ ಎಂದರೆ ಶಿವನೂ ಅಲ್ಲ, ಇದರ ಅರ್ಥ ಸಂಕ (ಎಂಬ ಜಾತಿಯ ಜನ)ರ ಮೇಲೆ ಮಲೆ (:ಕಾಡು ಅಥವಾ ಗುಡ್ಡ) ಎಂದು. ಈಗಲೂ ದಕ್ಷಿಣ ಕೇರಳದಲ್ಲಿ ಕಡಲ ಕರೆಯ ಒಂದು ಜಾತಿಯ ಬೆಸ್ತರನ್ನು ಚಂಗ (:ಶಂಕ) ಎನ್ನುತ್ತಾರೆ. ತಿರುವಾಂಕೋಡು (Travancore) ಸಂಸ್ಥಾನದ ತೆಂಕಲಲ್ಲಿ ಕೊಲ್ಲಂ (Quilon) ಎಂಬಲ್ಲಿ ಇದ್ದ ಹಳೆಯದೊಂದು ರಾಜ್ಯಕ್ಕೆ ಚಂಗನಾಡು (:ಶಂಕನಾಡು) ಎಂದು ಹೆಸರಿತ್ತು. ಆ ಕೊಲ್ಲಂ ಜಿಲ್ಲೆಯಲ್ಲಿ ಚಂಗನೂರು (:ಶಂಕರನೂರು) ಎಂಬ ಊರು ಇದೆ. ಅದಕ್ಕೂ ತೆಂಕಲಲ್ಲಿ ಕನ್ಯಾಕುಮಾರಿಯ ನೆರೆಯಲ್ಲಿ ನಾಗರಕೊಯಿಲ್ (Nagarcoil) ಎಂಬ ಊರುಇದೆ; ಕೊಯಿಲ್ ಅಥವಾ ಕೊವಿಲ್ ಎಂದರೆ ಅರಮನೆ ಅಥವಾ ದೇವಾಲಯ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಎಂಬ ಆ ಊರಿನ ಹೆಸರಿಗೂ ಸರ್ಪ : ನಾಗ ಎಂದು ಅರ್ಥವಿದೆ[4]. ಬಾದಾಮಿಯ ಪೂರ್ವಚಳುಕ್ಯ ವಂಶದ ಮಂಗಲೇಶನ (ಕ್ರಿ.ಶ. ೫೯೭ -೬೦೯) ಕ್ರಿ.ಶ. ೬೦೨ರ ಮಹಾಕೂಟದ ಸ್ತಂಭಲೇಖದಲ್ಲಿ[5] ‘ತುಳುನಾಡಿನ ಹೆಸರೆಂದು ಮುಂದೆ ತಿಳಿವ ಆಳುಕ ಎಂಬ ದೇಶದ ಹೆಸರಿದೆ ಹಾಗೂ ಆಳುಕ ಎಂದರೆ ಆದಿಶೇಷನ ಹೆಸರೆಂದು ತಿಳಿಯುವುದರಿಂದ[6] ಅದಕ್ಕೂ ಸರ್ಪರಾಜ, ನಾಗರಾಜ ಎಂದು ಅರ್ಥವಿದೆ. ಮಲೆಯಾಳದ ನಾಯರಂ ಎಂಬ ಜನರ ಆ ಹೆಸರು ನಾಗರ್ ಎಂಬುದರಿಂದ ತಾನೆ ಬಂದಿರಬೇಕೆಂಬ ಅನುಮಾನವು ಮೇಲೆ ಕಂಡಿರುವ ಶಿಕಾರಿಪುರ ನಂ. ೧೫೪ನೆಯ ಶಾಸನದಲ್ಲಿ ನಾಗರಖಂಡವನ್ನು ನಾಯರ್ಖಂಡ ಎಂದಿರುವಲ್ಲಿಂದ ದೃಢವಾಗುತ್ತದೆ. ಇದೆಲ್ಲವನ್ನು ಪರ್ಯಾಲೋಚಿಸುವಲ್ಲಿ ಶಂಕ (ಚಂಗ)ವೇ ಸಂಸ್ಕೃತಿಸಲ್ಪಟ್ಟು ಶಂಖ ಎಂದಾದ ಆ ಶಂಖ ಕುಲದ ನಾಗರು ಪಶ್ಚಿಮ ಕರಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದಾದರೂ ಕನ್ಯಾಕುಮಾರಿಯವರೆಗೆ ನೆಲೆಸಿದ್ದರೆಂದು ವ್ಯಕ್ತವಾಗುವುದರಿಂದ, ಪುರಾಣಗಳ ಕಾಲಕ್ಕೆ ಬಹಳ ಹಿಂದಿನಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಪ್ರದೇಶವೂ ನಾಗರಖಂಡದಲ್ಲಿ ಒಳಪಟ್ಟಿರಬೇಕೆಂದೂ, ಆತಏವ ಶಂಖಪಾಲ ಕುಲದವನೆಂಬ ಶಂಖಚೂಡನು ಆ ಶಂಖಜಾತಿಯ ನಾಗನೇ ಸರಿ ಎಂದೂ, ಹಾಗೆಯೇ ಆ ಕರಾವಳಿಯ ತುಳುನಾಡೂ ಆ ಹಳೆಗಾಲದಲ್ಲಿ ಅನಾರ್ಯರಾದ ಆ ಶಂಖರೆಂಬ ನಾಗರ ನೆಲೆವನೆಯಾಗಿದ್ದಿತೆಂದೂ ನಿಷ್ಪನ್ನವಾಗುತ್ತದೆ.

. ಶಾಂತಿಕ

ಭರತಖಂಡದ ಪಶ್ಚಿಮ ಕರಾವಳಿಯಲ್ಲಿ ಪಶ್ಚಿಮ ಘಟ್ಟವೆಂಬ ಸಹ್ಯಾದ್ರಿಯ ಪಡುಗಡೆಗೆ, ಬಡಗಲು ಮುಂಬಯಿ ಅಧಿಪತ್ಯದ ಠಾಣಾ (Thana) ಜಿಲ್ಲೆಯಲ್ಲಿಯೇ ವೈತರಣೀ ನದಿಯಿಂದ ತೆಂಕಲು ಕನ್ಯಾಕುಮಾರೀ ಭೂತೀರದ (Cape Comorin) ವರೆಗೆ ಚಾಚಿರುವ ಪ್ರದೇಶವು ಪ್ರಾಚೀನ ಕಾಲದಿಂದ ಶೂರ್ಪಾರಕ ಕ್ಷೇತ್ರ ಅಥವಾ ಶೂರ್ಪಾರಕ ದೇಶವೆಂದೂ, ಪರಶುರಾಮನ ‘ಹುತವಹ ಬಾಣದಿಂದಮಿಸೆತೂಳ್ದ’ (ಗದಾಯುದ್ಧ I, ೨೪) ಸಮುದ್ರವು ಆತನಿಗೆ ಬಿಟ್ಟುಕೊಟ್ಟ ಹೊಸ ಭೂಮಿ ಅದೆಂಬ ಐತಿಹ್ಯದ ದೊರೆಗೆ ಪರಶುರಾಮ ಸೃಷ್ಟಿ ಅಥವಾ ಪರಶುರಾಮ ಭೂಮಿ ಎಂದೂ ಕರೆಯಲ್ಪಡುತ್ತದೆ. ಉದಾ :

(೧) ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ –[7]
ನವೀನಂ ನಿರ್ಮಿತಂ ಕ್ಷೇತ್ರಂ ಶೂರ್ಪಾರಕಮನುತ್ತಮಮ್ || ೨೩ ||
ವೈತರಣ್ಯಾ ದಕ್ಷಿಣೇ ತು* ಸುಬ್ರಹ್ಮಣ್ಯಾಸ್ತಥೋತ್ತರೇ |
ಸಹ್ಯಾತ್ಸಾಗರ ಪರ್ಯಂತಂ ಶೂರ್ಪಾಕಾರಂ ವ್ಯವಸ್ಥಿತಮ್ || ೨೪ ||
(*ಕನ್ಯಾಕುಮಾರಿ)

(೨) ಮಹಾಭಾರತದ ಶಾಂತಿಪರ್ವ (ಅಧ್ಯಾಯ ೪೯)ದಲ್ಲಿ –
ತತಃ ಶೂರ್ಪಾರಕಂ ದೇಶಂ ಸಾಗರಸ್ತಸ್ಯ ನಿರ್ಮಮೇ |
ಸಹಸಾ ಜಾಮದಗ್ನ್ಯಸ್ಯ ಸೋಪರಾಂತ ಮಹೀತಲಮ್ || ೬೬ ||

ಶಾಂತಿ ಪರ್ವದ ಈ ಉದ್ಧಾರದಲ್ಲಿ ಶೂರ್ಪಾರಕ ದೇಶವನ್ನು ಅಪರಾಂತ ಎಂದೂ ಹೇಳಿದೆಯಷ್ಟೇ. ಅಪರಾಂತ ಎಂಬ ದೇಶನಾವು ಮಹಾಭಾರತದ ಭೀಷ್ಮಪರ್ವ (ಅಧ್ಯಾಯ ೯)ದಲ್ಲೂ ಇದೆ –

ಅಪರಾಂತಾಃ ಪರಾಂತಾಶ್ಚ ಪಂಚಾಲಾಶ್ಚರ್ಮ ಮಂಡಲಾಃ || ೪೭ ||

ಅದೇ ಅಪರಾಂತದ ಹೆಸರು ಕ್ರಿ.ಶ. ೨ನೆಯ ಶತಮಾನದ ಆದಿಭಾಗದಲ್ಲಿದ್ದ ಐಗುಪ್ತ (Egypt) ದೇಶದ ಗ್ರೀಕ (Greek) ಭೌಗೋಲಿಕನಾದ ಪ್ತೂಲೆಮಿ (Ptolemy) ತನ್ನಂದಿನ ಭಾರತ ವರ್ಷದ ದೇಶಗಳನ್ನು ಕುರಿತು ಬರೆದ ಗ್ರಂಥದಲ್ಲೂ Andron Apeiranton[8] = ‘ಅಪರಾಂತದ ಜನರು’ ಎಂದಿದೆ. ಅಪರಾಂತ ಎಂಬ ಹೆಸರು ಮಿಕ್ಕ ಹಲವು ಗ್ರಂಥಗಳಲ್ಲಿ ಎಲ್ಲೆಲ್ಲಿ ಬಂದಿರುತ್ತದೊ ಅದರ ಜತೆಯಲ್ಲಿ ಶಾಂತಿಕ ಎಂಬ ದೇಶನಾಮವೂ ಇದೆ.

ಮಾರ್ಕಾಂಡೇಯ ಪುರಾಣದಲ್ಲಿ (ಅಧ್ಯಾಯ ೫೮) ಜಂಬೂ ದ್ವೀಪವು ಕೂರ್ಮ ರೂಪದಿಂದ ಪ್ರಾಙ್ಮಖನಾಗಿ ನಿಂದಿರುವ ಮಹಾವಿಷ್ಣುವಿನಲ್ಲಿ ನೆಲೆಸಿದೆಯೆಂದು ಆ ಕೂರ್ಮ ಚಕ್ರದ ಆಯಾ ಅಂಗಗಳಲ್ಲಿ ವಾಸಿಸಿರುವ ವಿವಿಧ ಜನಪದಗಳು ಇಂತಿಂಥವೆಂದು ಹೇಳಿದೆ. (ಮತ್ತು ಆ ಪುರಾಣದ ಈ ಭಾಗವು ಹೇಗೋ ಕ್ರಿ.ಶ. ೩ನೆಯ ಶತಕಕ್ಕಿಂತ ಹಿಂದಿನದ್ದೆಂದು ನಿರ್ಣಯಿಸಲ್ಪಟ್ಟಿದೆ[9]). ಆ ಕೂರ್ಮನ ಬಾಲದಲ್ಲಿ ಅಂದರೆ ಪಶ್ಚಿಮ ದಿಕ್ಕಿನಲ್ಲಿ ನೆಲೆಸಿರುವ ಜನಪದಗಳಲ್ಲಿ ಈ ಕೆಲವರ ಹೆಸರುಗಳಿವೆ.

ಅಪರಾಂತಿಕ ಹೈಹಯಾಶ್ಚ ಶಾಂತಿಕಾ ವಿಪ್ರಶಸ್ತಕಾಃ |
ಕೋಂಕಣಾಃ ಪಂಚನದಕಾ ವಾಮನಾ ಹ್ಯವರಾಸ್ತಥಾ || ೩೪ ||

ಕ್ರಿ.ಶ. ಐದನೆಯ ಶತಮಾನದಲ್ಲಿದ್ದ ವರಾಹಮಿಹಿರನ ಬೃಹತ್ಸಂಹಿತೆಯಲ್ಲಿ (ಅಧ್ಯಾಯ ೧೪) ಭಾರತ ವರ್ಷದ ಪಡುಗಡೆಯಲ್ಲಿರುವ (‘ಅಪರಾಸ್ಯಮ್ ದಿಶಿ’) ದೇಶಗಳನ್ನು ಹೆಸರಿಸುವಲ್ಲಿ ಈ ಕೆಲವು ದೇಶ ನಾಮಗಳಿವೆ.

ಅಪರಾಂತಕ ಶಾಂತಿಕ ಹೈಹಯ ಪ್ರಶಸ್ತಾದ್ರಿ ವೋಕ್ಕಾಣಾಃ || ೩೭ ||

ಇವಲ್ಲಿಯ ಅಪರಾಂತಿಕ, ಅಪರಾಂತಕ ಹಾಗೂ ಅಪರಾಂತ ಎಂಬ ಹೆಸರು ವಿರಲಾರ್ಥದಲ್ಲಿ ಉತ್ತರ ಕೊಂಕಣಕ್ಕೂ ಬಹುಳಾರ್ಥದಲ್ಲಿ ಗೋವೆಯ ದಕ್ಷಿಣ ಸೀಮೆಯವರೆಗುಳ್ಳ ಉತ್ತರ – ದಕ್ಷಿಣ ಕೊಂಕಣಗಳಿಗೂ ಮಾತ್ರವಲ್ಲ ಶಾಂತಿ ಪರ್ವದಲ್ಲಿ (ಅಪರಾಂತಂ ಮಹಿತಲಮ್) ಎಂದಿರುವಲ್ಲಿಂದ ಆ ಹೆಸರು ಮೇಲೆ ಹೇಳಿರುವಂತೆ ಸಮಗ್ರ ಶೂರ್ಪಾರಕಕ್ಕೆ ಸಮನ್ವಯಿಸುವಂತೆಯೂ ತೋರುವುದರಿಂದ ಅಂದರೆ ಒಮ್ಮೊಮ್ಮೆ ಇಡಿಯ ಪಶ್ಚಿಮ ಕರಾವಳಿಗೂ ಬಳಸಲ್ಪಡುವುದರಿಂದ (ಉದಾಹರಣೆ ಪಶ್ಚಿಮ ಸಮುದ್ರ ಸಂಹಿತೆ ಅಪರಾಂತ ದೇಶಃ[10]) ಕೊಂಕಣ ಎಂಬ ದಕ್ಷಿಣ ಕೊಂಕಣವನ್ನು ಪ್ರತ್ಯೇಕವಾಗಿ ಹೇಳಿರುವ ಮಾರ್ಕಾಂಡೇಯ ಪುರಾಣದಲ್ಲಿ ಅಪರಾಂತಕವೆಂದರೆ ಉತ್ತರ ಕೊಂಕಣವೆಂದು ಹಾಗೆ ಹೇಳಿಲ್ಲದ ಬೃಹತ್‌ಸಂಹಿತೆಯಲ್ಲಿ ಅಪರಾಂತಕವೆಂದರೆ ಉತ್ತರ – ದಕ್ಷಿಣ ಕೊಂಕಣಗಳೆಂದು ಅರ್ಥೈಯಿಸಿಕೊಳ್ಳಬೇಕು. ಅದರೊಂದಿಗೆ ಹೇಳಿರುವ ಹೈಹಯ ಎಂದರೆ ಯಾವ ದೇಶ?

ಪ್ತೊಲಮಿಯ ಗ್ರಂಥದಲ್ಲಿ Aioi (ಐಒಯ್) ಎಂಬ ಅದೊಂದೇ ಹೆಸರಿನ ಎರಡು ಅನನ್ಯ ಸ್ಥಳಗಳಿವೆ. ಅವಲ್ಲಿಯ ಒಂದರಲ್ಲಿ[11] Komaria (ಕೊಮಾರಿಯ) ಎಂಬ ಹೆಸರಿನ ಭೂಶಿರವನ್ನು ಹೇಳಿರುವುದರಿಂದ ಅದು (ಕನ್ಯ) ಕುಮಾರಿ ಭೂಶಿರವನ್ನು ಅದೇ ಹೆಸರಿನ ಊರನ್ನು ಒಳಕೊಂಡಿರುವ ಈಗಣ ತಿರುವಾಂಕೂರು ರಾಜ್ಯದ ದಕ್ಷಿಣ ಭಾಗವೆಂದು ಪ್ರತ್ಯಕ್ಷವಿದೆ. ಮತ್ತೊಂದು Aioe[12] ತುಳುನಾಡೆಂದು ಮುಂದೆ ತಿಳಿವ Olokhoira = ಆಲುವ ಖೇಟದ ತಕ್ಕಷ್ಟು ಜತೆಯಲ್ಲಿ ಹೇಳಿರುವುದರಿಂದ ಮಾತ್ರವಲ್ಲ ಈ Aioeಯಲ್ಲಿಯದೆಂದು ಪ್ತೊಲೆಮಿಯಲ್ಲಿ ಹೇಳಿರುವ ಹಾಗೂ ಗ್ರೀಕಿನಲ್ಲಿ Morounda ಎಂದು ಬರೆದಿರುವ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊನ್ನಾವರದಿಂದ ೧೩ ಮೈಲು ದಕ್ಷಿಣಕ್ಕೆ ಕಡಲ ಕರೆಯಲ್ಲಿರುವ ಈಗಣ ‘ಮುರುಡೇಶ್ವರ'[13] ಎಂಬ ಊರೆಂದು ಸಾಕಷ್ಟು ಸ್ಪಷ್ಟವಿರುವುದರಿಂದಲೂ ರಾವಣನಿಂದ ಸೃಷ್ಟಿತವಾದುದೆಂಬ ಶಿವಲಿಂಗವು ಮುರುಡೇಶ್ವರದಲ್ಲಿ ಸಮುದ್ರ ತೀರದ ಒಂದು ಮೊರಡಿಯಲ್ಲಿ[14] ಇರುವುದರಿಂದ ಈ ಕಾರಣ ಪುಣ್ಯಕ್ಷೇತ್ರವೆನಿಸುವ ಮುರುಡೇಶ್ವರವು ಬಹಳ ಹಳಗಾಲದಿಂದ ಇದ್ದಿರುವ ಊರಾಗಿರಬೇಕೆಂಬುದರಿಂದಲೂ, ಈ Aioi ಉತ್ತರಕನ್ನಡ ಜಿಲ್ಲೆಯೊಂದಿಗೆ ಸುಲಭವಾಗಿಯೂ, ಯಥಾಯೋಗ್ಯವಾಗಿ ಸಮೀಕರಿಸಲಾಗುತ್ತದೆ. ಈಗ ಗ್ರೀಕ್ ಭಾಷೆಯಲ್ಲಿ ಹಕಾರವು ಉಚ್ಚಾರದಲ್ಲಿ ಮಾತ್ರ ಇತ್ತಲ್ಲದೆ ಅದಕ್ಕೆ ನಿಯತವಾದ ಪ್ರತ್ಯೇಕ ವರ್ಣವಿದ್ದಿಲ್ಲದುದರಿಂದ, ಈ ಮಹಾಪ್ರಾಣ (Spiritus asper) ಹೊಂದಿದ್ದ ಸ್ವರಗಳ ತಲೆಗಡೆಯಲ್ಲಿ ಬಲಮುರಿಯಾಗಿ ( ‘ ) ಆಂಗ್ಲ ಅಲ್ಫವಿರಾಮದ (Comma) ಚಿಹ್ನೆಯನ್ನು ಕೇವಲ ಅಲ್ಪಪ್ರಾಣವೇ (Spiritus Lenis) ಹೊಂದಿರುವ ಸ್ವರಗಳ ತಲೆಗಡೆಯಲ್ಲಿ ಆಂಗ್ಲ ಅಲ್ಪವಿರಾಮದ ಚಿಹ್ನೆಯನ್ನು (,) ಆಯಾ ಸ್ವರಗಳಿಗೆ ಮಾತ್ರ ಅಥವಾ ಈ ಸ್ವರಗಳಿಂದ (diphthong) ಆರಂಭಿಸುವ ಶಬ್ದಗಳಲ್ಲಿ ಎರಡನೆಯ ಸ್ವರಕ್ಕೆ ಮಾತ್ರ ಹಚ್ಚಬೇಕಲ್ಲದೆ ಅವುಗಳಲ್ಲಿಯ ಮಿಕ್ಕ ಸ್ವರಗಳಿಗೆ ಹಚ್ಚಬಾರದು. ಹೀಗೆ ಈ ಚಿಹ್ನೆಗಳು ಈಷನ್ಮಾತ್ರ ಭಿನ್ನವಾಗಿರುವುದರಿಂದ ಅಲ್ಪಪ್ರಾಣದ ಚಿಹ್ನೆಯನ್ನು ಬಲಮುರಿಯಾಗಿ ಬರೆದರೆ ಮಹಾಪ್ರಾಣದ ಚಿಹ್ನೆಯನ್ನು ಎಡಮುರಿಯಾಗಿ ಬರೆದರೆ ಅಲ್ಪಪ್ರಾಣವು ಸುಲಭವಾಗಿ ಆಗುತ್ತದೆ ಎಂದು ಪ್ರತ್ಯಕ್ಷವಿರುವುದರಿಂದ ಗ್ರೀಕರಿಗೆ ನೂತನವು ಅಪರಿಚಿತವಾದ ಭಾರತ ವರ್ಷದ ಸ್ಥಳನಾಮಗಳನ್ನು ಬರೆದಿಡುವಲ್ಲಿ ಪ್ತೊಲೆಮಿಯಿಂದ ಹಲವು ತಪ್ಪುಗಳಾಗಿರಬೇಕೆಂಬುದಕ್ಕೆ ನಮ್ಮ ಈಗಣ ವಿಚಾರದ ಮಟ್ಟಿಗೆ ಹೇಳುವುದಾದರೆ ಆತನು ಹಿಮವತ್ ಪರ್ವತವನ್ನು Imaos (ಪುಟ ೩೫; ೩೪೨) ಎಂದು ಭಾವನಗರದ ಬಳಿಯಣ ಈಗಣ ಹಾಥಬ (Hathab) ಎಂಬ ಹಳೆಯ ಹಸ್ತಕವಪ್ರ ಎಂಬ ಊರನ್ನು Astakapra (ಪುಟ ೧೫೦) ಎಂದು ಬರೆದಿರುವ ಸಾಕ್ಷ್ಯವಿದೆ. ಹೀಗಾಗಿ ಆತನ Ai-Oi ಎಂಬ ಗ್ರೀಕ್ ರೂಪಾಂತರದ ನೇರಾದ ಉಚ್ಚಾರವು Hai-Hoi ಎಂದೇ ಸರಿ. ಅಂದರೆ ಈ ದೇಶದ ಇಲ್ಲಿಯ ಹೆಸರು ಹೈಹಯ ಎಂದೇ ಹೆಸರು. ಆದ ಕಾರಣ ಹೈಹಯ ಎಂದರೆ ಉತ್ತರಕನ್ನಡ ಜಿಲ್ಲೆಯೇ ಸರಿ” ಆತವಿವ ಅದರ ಜೊತೆಯಲ್ಲೇ ಹೇಳೀರುವ ಪಶ್ಚಿಮ ಕರಾವಳಿಯ ಶಾಂತಿಕ ಎಂದರೆ ತುಳುನಾಡೇ ಸರಿ. ಆದರೂ ನೋಡೋಣ.

ಮೌರ್ಯ ಸಾಮ್ರಾಜನಾದ ಅಶೋಕನು (ಕ್ರಿ.ಪೂ. ಸು ೨೭೫ – ೨೩೯ ಅಥವಾ ೨೩೯) ಪಟ್ಟಾಭಿಷಕ್ತನಾದ ೧೩ನೆಯ ವರ್ಷದಲ್ಲಿ ಆತನ ಊರು, ಪರವೂರುಗಳಲ್ಲಿ ಬೌದ್ಧಧರ್ಮವನ್ನು ಅರ್ಪಿಸಲಿಕ್ಕಾಗಿ ಧರ್ಮ ಮಹಾಮಾತ್ರರೆಂಬವರನ್ನು ನೇಮಿಸಿ ಅವರನ್ನು ಅಲ್ಲಲ್ಲಿಗೆ ಕಳಿಸಿಹನೆಂದಿರುವ ಆತನ ಐದನೆಯ ಶಿಲಾಲೇಖದಲ್ಲಿ (Rock Edict V) ಹೇಳಿರುವ ಯವನರ (ಅಂದರೆ ಆಶಿಯಾ ಖಂಡದ ಪಡುಗಡೆಯಲ್ಲಿರುವ ಗ್ರೀಕ್ ಅರಸರ) ಕಾಂಬೋಜರ, ಗಾಂಧಾರರ, ಋಷ್ಟಿಕ್ತರ, ಪೈಠಣಿಕರ,[15] ಜತೆಯಲ್ಲಿ ಅಪರಾಂತರ ಹೆಸರೂ ಇದೆ –

(೧)       ಯೋನ ಕಂಬೋಯ ಗಂಧರನಂ ರಸ್ತಿಕನಂ
ಪಿತಿನಿಕನಂ ಯೇ ವ ಪಿ ಅಪರಂತ
            (ಶಹಬಾಜಗಢೀ ಪ್ರತಿ)[16]

(೨)       ಯೋನ ಕಂಬೋಜ ಗಧರನ ರಠಿಕ
ಪಿತಿನಿಕನ ಯೇ ವ ಅಞೇ ಅಪರತ

(ಮನಸೇರಾ ಪ್ರತಿ)

(೩)       ಯೋನ ಕಂಬೋಜ ಗಂಧಾರಾನಂ ರಿಸ್ಟಿಕ
ಪೈತೆಣಿಕಾನಂ ಯೇ ವಾಪಿ ಅಂಞೇ ಅಪರಾತಾ

(ಗಿರನಾರ ಪ್ರತಿ)

(೪)       ಯೋನ ಕಂಬೋಜ ಗಂಧಾಲಾನಂ
ವಿ ವಾಪಿ ಅಂಞೇ ಅಪಲಂತಾ

(ಕಾಲಸೀ ಪ್ರತಿ)

(೫)       ಯೋನ ಕಂಬೋಜ ಗಾಂಧಾಲೇಸು ಲಠಿಕ
ಪಿತಿನಿಕೇಸು ಏ ವಾ ಪಿ ಅಂಞೇ ಅಪಲಂತಾ

(ಧೌಲೀ ಪ್ರತಿ)

ಹಾಗೂ ಅಪರಾಂತದಲ್ಲಿಯ ಠಾಣಾ ಜಿಲ್ಲೆಯ ಸುಪಾರ (Sopara) ಎಂಬಲ್ಲಿ ಆತನದೊಂದು ಒಡಕು ಶಾಸನವೂ ಇದೆ[17]. ಆತನ ಸಾಮ್ರಾಜ್ಯದ ಎಲ್ಲೆಗಳ ಒಳಗಡೆಯೇ ವಿನಾ ಹೊರಗೆ ಆತನ ಒಂದೂ ಶಾಸನವಿಲ್ಲದಿರುವುದರಿಂದ ಅಪರಾಂತವು ಆತನ ಸಾಮ್ರಾಜ್ಯದಲ್ಲಿ ಒಳಪಟ್ಟಿದ್ದಿದ್ದಿತೆಂದು ಸಹಜವಾಗಿ ಸಿದ್ಧವಾಗುತ್ತದೆ.

 

[1] The upper limit of the date of ‘Harivamsa’ is 200 A.C. and the lower limit 400 A.C.; the work should be placed perpectually in the 3rd Century (Hopkins : Great Epic of India pp, 387 & 398)

[2] ಅಭಿದಾನ ರತ್ನಮಾಲ (||| ಪಾತಾಳ ಕಾಂಡ) : ಸೈಕತಂ ಪುಳಿನಂ ದ್ವೀಪಂ – ಈ ೩ ಮಳಲ ದಿಣ್ಣೆಯ ಹೆಸರುಗಳು (ಸೈಕತ = Sandy shore)

[3] Epigraphia Carnatica (EC), VII

[4] ಗೋಕರ್ಣಃ ಪ್ರಮಥಾಂತರೇ || ಅಂಗುಷ್ಠಾನಾಮಿಕೋನ್ಮಾನೇ ಮೃಗೇಶ್ವತರ ಸರ್ಪಯೋಃ || (ಹೇಮಚಂದ್ರನ ಅನೇಕಾರ್ಥ ಸಂಗ್ರಹ ಶ್ಲೋ. ೩೯೯ – ೮೦೦.)

[5] Fleet’s Kanarese Dynasties (FKD), ಪು. ೨೮೧,೩೦೯

[6] ಅದೇ ಪು. ೨೮೧, ೨೦೯; ಶೇಷೋ ನಾಗಾದಿಪೋsನಂತೋ ದ್ವಿಸಹಸ್ರಾಕ್ಷ ಆಲುಕಃ || (ಹೇಮಚಂದ್ರನ ಅಭಿದಾನ ಚಿಂತಾಮಣಿ, ಶ್ಲೋ. ೧೩೦೭) ಹೇಮಚಂದ್ರನ ಅಭಿದಾನ ಚಿಂತಾಮಣಿ (ಶ್ಲೋ. ೧೩೧೦) – ‘ಶಂಖಸ್ತು – ಶ್ವೇತೋ (ನಾಗಃ)

[7] ಸಹ್ಯಾದ್ರಿಖಂಡ (ಮುಂಬಯಿ, ೧೮೭೭), ಪು. ೩೦೩

[8] ಈಗ ಪ್ರಕಟವಾಗಿರುವ ಪ್ತೊಲೆಮಿಯ ಮೂಲ ಗ್ರೀಕ್ ಭಾಷೆಯ ಗ್ರಂಥದಲ್ಲಿ ಈ ಹೆಸರು ‘Andron peiraton’ ಎಂದೂ ತಪ್ಪಾಗಿ ಅಚ್ಚಾಗಿದ್ದು ಅದಕ್ಕೆ ‘ಕಡಲುಗಳ್ಳರಾದ (pirates) ಜನರು’ ಎಂದು ತಿರ ತಪ್ಪಾಗಿ ಅರ್ಥ ಮಾಡಿದೆ. ಪಡುಗಡಲಿನ ದಂಡೆಯ ಜನರನ್ನು ಕುರಿತ ಈ ಹೆಸರನ್ನು ಪ್ತೊಲೆಮಿ ನೇರಾಗಿ ‘Andron Apeiranton’ ಎಂದು ಬರೆದಿರಬೇಕು.

[9] Markndeya Purana (English translation) by Pargiter Bibilotheca Indica), ಪ್ರಸ್ತಾವನೆ, ಪು. ೨೦

[10] ವಾತ್ಸ್ಯಾಯನನ ಕಾಮಸೂತ್ರಕ್ಕೆ ಜಯಮಂಗಲನು ರಚಿಸಿದ ಟೀಕೆಯಲ್ಲಿ.

[11] Mc Crindli : Ancient India as described by Ptolemy, Calcutta, 1927 (Ptolemy), ಪು. ೫೩-೫೪.

[12] ಅದೇ, ಪು. ೧೮೦, ೧೮೨.

[13] Morounda ವನ್ನು ಪ್ತೊಲೆಮಿಯಲ್ಲಿ ಒಳ ಊರೆಂದು (ಪು. ೧೮೦ – ‘inland town’ = ಪು. ೧೮೨; ‘inland city’) ಹೇಳಿದೆಯಲ್ಲ? ಅದನ್ನೆಂತು ಕಡಲ ಕರೆಯ ಮುರಡೇಶ್ವರ ಎನ್ನಬಹುದು? ಎಂದರೆ, ಪ್ತೊಲೆಮಿ ಇದ್ದ ಕ್ರಿ.ಶ. ೨ನೆಯ ಶತಕದಲ್ಲಿ ಅದು ಸಮುದ್ರತೀರದಿಂದ ತಕ್ಕಷ್ಟು ದೂರದ ಒಳಊರೇ ಆಗಿದ್ದು, ಆ ಬಳಿಕ ಕಡಲಿನ ಕೊರೆತದಿಂದ ಕ್ರಮೇಣ ನಡುಭೂಮಿ ಸವೆದು ಹೋಗುತ್ತಲೆ ಅದು ಬರಬರುತ್ತ ಕರಾವಳಿಯ ಊರಾಗಿರಬಹುದು. ಅಥವಾ ಭಾರತಭೂಮಿಗೆ ಬಂದಿಲ್ಲದೆ, ಅದನ್ನು ಕಣ್ಣಾರೆ ಕಂಡಿಲ್ಲದೆ ಆತನಿದ್ದ ಐಗುಪ್ತಕ್ಕೂಇಲ್ಲಿಗೂ ಹೇರಳ ವ್ಯಾಪಾರ ಸಂಬಂಧವಿದ್ದುದರಿಂದ ಆ ನಿಮಿತ್ತ ಇಲ್ಲಿಗೆ ಬಂದು ಹೋಗುತ್ತಲಿದ್ದ ನಾವಿಕರ ಹಾಗೂ ಪ್ರವಾಸಿಗಳ ಕಥನಗಳನ್ನು ನೆಚ್ಚಿ ಬರೆದ ಆತನ ಗ್ರಂಥದಲ್ಲಿ Kasperia ಎಂಬ ಕಾಶ್ಮೀರ ನಗರವು ಐರಾವತೀ ಎಂಬ ರಾವೀ ನದಿಯ ದಕ್ಷಿಣಮಾರ್ಗದಲ್ಲಿದೆ (ಪು. ೩೬೯) ಎಂದು ಹೇಳಿರುವಂತೆ, ಇದೂ ಆತನ ಅಂತಹದೇ ಹಲವು ತಪ್ಪುಗಳಲ್ಲಿ ಒಂದಾಗಿರಬಹುದು. ಈಗ ಮುರುಡೇಶ್ವರದ ಪೂರ್ವಪದವು ಸಂಸ್ಕೃತವಲ್ಲ, ದಿಬ್ಬ – ದಿನ್ನೆ – ಬೆಟ್ಟು ಎಂಬ ಅರ್ಥದ ಮೊರಡಿ – ಮೊರಡು – ಮೊರಡೆ (Kittel’s Kannada Dictionary, ಪು. ೧೩೦೫ -೬) ಎಂಬ ಕನ್ನಡ ಶಬ್ದವೆಂಬಲ್ಲಿ ಸಂಶಯವಿಲ್ಲ. ಆ ಸುಸ್ಪಷ್ಟವಾದ ಸೀಮಾಚಿಹ್ನದಂತಿರುವ ದಿಬ್ಬದ ದೆಸೆಯಿಂದಲೇ ಆ ಊರಿಗೂ ಮೊರಡಿ – ಮೊರಡು – ಮೊರಡೆ ಎಂದು ಹೆಸರಾಗಿ, ಅಲ್ಲಿಯ ಶಿವಲಿಂಗವೂ ಲೋಕೋಕ್ತಿಯಲ್ಲಿ ಅದೇ ಹೆಸರಿಂದ ಕರೆಯಲ್ಪಟ್ಟಿರಬೇಕು. ಎಱಂಕೆ = ಎಱಕೆ, ಸೆಱಂಗು = ಸೆಱಗು, ಮುರುಂಟು = ಮುರುಟು, ಅವುಂಡು = ಅವುಡು, ನಾಂದು = ನಾದು, ಅಲುಂಬು = ಅಲುಬು ಎಂಬಂತೆ ಮೊರಂಡಿ = ಮೊರಂಡು ಎಂದಿದ್ದ ಮೂಲ ಶಬ್ದವೇ ನಡುವಣ ಅನುನಾಸಿಕದ ಲೋಪದಿಂದ ಕ್ರಮೇಣ ಮೊರಡಿ – ಮುರಡಿ, ಮೊರಡು – ಮುರಡು ಎಂದಾಗಿರಬೇಕು. ಆ ಮೊರಂಡಿ – ಮೊರಂಡು ಎಂಬುದೇ ಪ್ತೊಲಮಿಯಲ್ಲಿ Morounda ಆಗಿದೆ, ಮೊರಂಡೀಶ್ವರವೇ ಈಗ ಮುರುಡೇಶ್ವರ ಆಗಿದೆ. ಅಥವಾ ಮೊರಡಿ – ಮೊರಡುಗಳ ಮೂಲರೂಪವು ಮೊರಂಡಿ – ಮೊರಂಡು ಎಂದು ಇದ್ದಿರಲಾರದೆಂದರೂ ಪಾಟಲೀಪುತ್ರ ಎಂಬ ಊರಿನ ಹೆಸರಲ್ಲಿ ಇಲ್ಲದ ಅನುನಾಸಿಕವನ್ನು ಅದರಲ್ಲಿ ಸೇರಿಸಿ ಅದನ್ನು Palimbothra ಎಂದಿರುವ ಪ್ತೊಲೆಮಿಯಲ್ಲಿ (ಪು. ೧೩೭ -೧೬೯) ಮೊರಡಿ – ಮೊರಡು ಎಂಬ ಹೆಸರು Marounda ಎಂದಾದುದು ಏನೂ ಚೋದ್ಯವಲ್ಲ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಎಂಬಲ್ಲಿಯ ಶಾ.ಶ. ೯೮೧ ವಿಕಾರ ಸಂ| ಮಾರ್ಗಶಿರ ಶುಕ್ಲ ೨ ಬುಧವಾರ = ಕ್ರಿ.ಶ. ೧೦೫೯ ನವಂಬರ ೧೦ನೆಯ ತಾರೀಕಿನ ಶಿಲಾಲೇಕದಲ್ಲಿ (Annual Reporton South Indian Epigraphy 1929; Appendix E.ಪು. ೫೬, ನಂ. ೨೩೯) ಆ ಊರನ್ನು ಮೊರಂಬ ಎಂದದೆ.

[14] North Kanara Gazetteer (N.K.G.) part II (1883), ಪು.೩೩೫ ಧಾರವಾಢದ Journal of the Literary Committee of the L.E. Association, vol. I (1941) ಪು. ೨೧೧ – ೨೩೯ರಲ್ಲಿ ಪ್ರಕಟವಾದ ನನ್ನ ‘ಹೈಗ, ಹೈವೆ’ ಎಂಬ ಲೇಖನವನ್ನು ನೋಡುವುದು.

[15] ಯವನರ, ಕಂಬೋಜರ, ಗಾಂಧಾರರ ಹೆಸರುಗಳು ಭೀಷ್ಮಪರ್ವದಲ್ಲಿ (ಅ.IX) ಇವೆ –

ಯವನಾಶ್ಚೀನ ಕಂಬೋಜಾ ದಾರುಣಾ ಮ್ಲೇಚ್ಛಜಾತಯಃ || ೬೫ ||

ಕಾಶ್ಮೀರಾಃ ಸಿಂಧು ಸೌವೀರಾ ಗಾಂಧಾರ ದರ್ಶಕಾಸ್ತಥಾ || ೫೩ ||

ಋಷ್ಟಿಕರ ಹೆಸರನ್ನು ರಾಮಾಯಣದಲ್ಲಿ (ಕಿಷ್ಕಿಂದಾ ಕಾಂಡಾ, ಅಧ್ಯಾಯ ೪೧) ವಿದರ್ಭರ ಜತೆಯಲ್ಲಿ ಹೇಳಿದೆ –

ವಿದರ್ಭಾನ್ ಋಷ್ಟಿಕಾಂಶ್ಚೈವ ರಮ್ಯಾನ್ ಮಾಹೀಷಕಾನಪಿ || ೧೦ ||

ಪೈಠಣಿಕರೆಂದರೆ ಈಗ ಹೈದರಾಬಾದು ಸಂಸ್ಥಾನದಲ್ಲಿರುವ ಪೈಠಣ ಎಂಬ ದಕ್ಷಿಣ ಪ್ರತಿಷ್ಠಾನದವರು.

[16] ಹಿಂದುಸ್ಥಾನದಲ್ಲಿ ಶತಬಾಜ, ಗಢೀ, ಮನಸೇರಾ, ಗಿರನಾರ, ಕಾಲಸೀ, ಧೌಲೀ, ಜೌಗಢ ಮೊದಲಾದ ಊರುಗಳಲ್ಲಿ ಆಶೋಕನ ಶಿಲಾಲೇಖಗಳಿವೆ.

[17] Vincent Smith – Asoka. ಪು. ೧೨೯