ಅಂದಿನ ರಾಜರ ಕರ್ತವ್ಯಗಳಲ್ಲಿ ಪ್ರಜಾರಕ್ಷಣೆ, ರಾಜ್ಯದ ಗಡಿಯ ರಕ್ಷಣೆ, ನ್ಯಾಯ ಪರಿಪಾಲನೆಯೂ ಬಹುಮುಖ್ಯವಾಗಿತ್ತು. ಪ್ರಜೆಗಳಲ್ಲಿ ಸುಖ, ಸಂತೃಪ್ತಿ, ಸಮಾಧಾನಗಳು ನೆಲೆಸಿದ್ದರೆ ತಮ್ಮ ರಾಜ್ಯವು ಸುಸೂತ್ರವಾಗಿ ನಡೆಯುತ್ತದೆಂದು ಅವರು ಭಾವಿಸಿದ್ದರು. ಹೀಗಾಗಿ ಧರ್ಮದ ಚೌಕಟ್ಟಿನ ತಳಹದಿಯ ಮೇಲೆ ನ್ಯಾಯವನ್ನು ಪರಿಪಾಲಿಸಬೇಕಾಗಿ ಬರುತ್ತಿತ್ತು. ತುಳುನಾಡಿನಲ್ಲಿ ಸಿಗುವ ಕೆಲವು ದಾಖಲೆಗಳು ಇದನ್ನು ಸ್ಪಷ್ಟಪಡಿಸುತ್ತವೆ. ಅರಸರು ತಮ್ಮ ತಮ್ಮಲ್ಲಿ ತಲೆದೋರುತ್ತಿದ್ದ ಜಗಳಗಳನ್ನು ತಾವೇ ಪರಿಹರಿಸಿಕೊಳ್ಳುತ್ತಿದ್ದರು. ತಾವು ನಂಬಿಕೊಂಡು ಬಂದ ದೈವ ದೇವರುಗಳ ಮೇಲೆ ಆಣೆ, ಭಾಷೆಗಳನ್ನು ಹಾಕುವ ಸಂಪ್ರದಾಯವಿತ್ತು. ಕಾರ್ಕಳದ ಶಾಸನವೊಂದರಲ್ಲಿ ಕುಮಾರ ಬೈರರಸ ವೊಡೆಯನು ಕೋಲಬಳಿ ಐದು ಸಾವಿರದವರೊಡನೆ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ “ಪೂರ್ವಕಟ್ಟಳೆಯಂತೆ ನಡೆದುಕೊಳ್ಳಬೇಕೆಂದೂ ಇದಕ್ಕೆ ಸೋಮೇಶ್ವರ ಗುಮ್ಮಟಸ್ವಾಮಿಗಳ ಸಾಕ್ಷಿಯಾಗಿ ತಪ್ಪಬಾರದು” ಎಂದು ಹೇಳಿದೆ ೧೦೧. ಕಾಪು ಶಾಸನದಲ್ಲಿ ಕುಂದ ಹೆಗ್ಗಡೆ ಮನೆತನದ ಶಂಕರೊಡೆಯ ಮತ್ತು ಮದ್ದ ಹೆಗ್ಗಡೆ ಮನೆತನದ ತಿರುಮಲೆ ಅರಸರು ತಮ್ಮಲ್ಲಿ ಮನಸ್ತಾಪ ಬಂದರೆ ಬುದ್ಧಿಯಿಂದಲೇ ಪರಿಹರಿಸಬೇಕೆಂದೂ , ಇದಕ್ಕೆ ನಂದಳಿಕೆಯ ದೈವಗಳು ಸಾಕ್ಷಿಯೆಂದೂ ನುಡಿಯುತ್ತಾರೆ[1]. ಇಂಥ ಉದಾಹರಣೆಗಳು ಅರಸರ ಧರ್ಮನಿಷ್ಠೆಯನ್ನು ಸೂಚಿಸುವುದರ ಜೊತೆಗೆ ಧರ್ಮವು ರಾಜಕೀಯ ಕ್ಷೇತ್ರವನ್ನು ಹೇಗೆ ನಿಯಂತ್ರಿಸುತ್ತಿತ್ತೆಂಬುದನ್ನು ಮನವರಿಕೆ ಮಾಡಿಕೊಡುತ್ತದೆ.

ಅರಸರು ಹೊರಡಿಸಿದ ಆಜ್ಞೆಯನ್ನು ಪಾಲಿಸಲು ಸಂಬಂಧಪಟ್ಟ ಅಧಿಕಾರಿಗಳು ತಪ್ಪಿದರೆ, ಅವರಿಗೆ ದಂಡ ಶಿಕ್ಷೆಯನ್ನು ವಿಧಿಸುತ್ತಿದ್ದರು. ಇಂಥ ಸ್ವಾರಸ್ಯಕರವಾದ ವಿವರವು ಮಂಗಳೂರು ಶಾಸನದಲ್ಲಿ ಕಂಡುಬರುತ್ತದೆ[2]. ಅಲ್ಲಿಯ ದೇವಾಲಯವೊಂದರಲ್ಲಿ ಪೂಜೆ, ನೈವೇದ್ಯ, ಮರ್ಯಾದೆಗಳು ನಡೆಯುವ ಬಗ್ಗೆ ವಿವರಗಳನ್ನು ಬರೆದಿಟ್ಟುಕೊಳ್ಳದಿದ್ದಲ್ಲಿ ಆ ಸ್ಥಳದ ಸೇನಭೋವನಿಗೆ ಹತ್ತೂವರೆ ಹೊನ್ನು ದಂಡವೆಂದು ಅದರಲ್ಲಿ ಹೇಳಿದೆ. ಆ ದೇವಸ್ಥಾನದ ಕೂತಾಡುವ ಬಾಕನಂಗನೆಯರು, ಅಂದರೆ ದೇವದಾಸಿಯರು, ತಮ್ಮ ಸೇವೆಯನ್ನು ಸರಿಯಾಗಿ ಮಾಡದಿದ್ದರೆ ಅವರಿಗೆ ಐದೂವರೆ ಹೊನ್ನು ದಂಡವೆಂದೂ, ಅಲ್ಲಿಯ ಅತಿಕಾರಿಗಳು ಆಯನಕ್ಕೆ ನಡೆಸುವ ಮರ್ಯಾದೆಯನ್ನು ನಡೆಸಿಕೊಂಡು ಬಾರದಿದ್ದರೆ ನೂರೊಂದು ಹೊನ್ನು ದಂಡವೆಂದು ಹೇಳಲಾಗಿದೆ. ಆ ಕಾಲದಲ್ಲಿ ಯಾವುದೇ ಅಪರಾಧಕ್ಕೆ ವಿಧಿಸಲಾಗುವ ದಂಡನೆಯು, ಅಪರಾಧಿಯು ಯಾವ ಜಾತಿಯವನೆಂಬುದರ ಮೇಲೆ ಹೊಂದಿಕೊಂಡಿತ್ತು. ಉದಾಹರಣೆಗೆ ದೇವರಿಗೆ ಬಿಟ್ಟ ದಾನವನ್ನು ಹಾಳು ಮಾಡುವವರಿಗೆ ಒಂದೆಡೆ ದಂಡವನ್ನು ಹೀಗೆ ವಿಧಿಸಲಾಗಿದೆ. “ನಾಲ್ಕು ಜಾತಿಯೊಳು, ಬ್ರಾಹ್ಮಣ ಮಾಡಿದರೆ ನಾಲ್ಕು ಜಾತಿಯಿಂ ಪೊರಗು, ಸೆಟ್ಟಿ ಮಾಡಿದೆಡೆ ಸರ್ವಸ್ಯ ಬಳಂಜದಿಂ ಪೊರಗು, ಒಕ್ಕಲ ಮಕ್ಕಳು ಮಾಡಿದೆಡೆ ತಲೆ ಸಾವಿರ ಹೊನ್ನು ದಂಡವೆಂದು ಹೇಳಲಾಗಿದೆ[3]. ಇದನ್ನು ಸರಿಯಾಗಿ ಪಾಲಿಸದಿದ್ದರೆ ಗಂಗೆ ರಾಮೇಶ್ವರದಲ್ಲಿ ಸಾವಿರಗೋವು ಬ್ರಾಹ್ಮಣರನ್ನುಕೊಂದ ಪಾಪವೆಂದು ಎಚ್ಚರಿಸಲಾಗಿದೆ. ಶಿಕ್ಷೆಯಲ್ಲಿ ಮರಣದಂಡನೆಯನ್ನು ವಿಧಿಸುವ ಪ್ರಸ್ತಾಪವು ಇಲ್ಲಿಯ ಶಾಸನದಲ್ಲಿ ಕಂಡುಬರುವುದಿಲ್ಲ ಆದರೆ ರಾಜದ್ರೋಹಕ್ಕೆ ಅಪರಾಧಿಯ ಕಣ್ಣನ್ನು ಕೀಳಿಸುವ ಸೂಚನೆಯು ಒಂದೆಡೆ ಕಂಡುಬರುತ್ತದೆ. ಕಾರ್ಕಳದ ಅರಸನಾದ ವೀರಭೈರವನು ಸ್ಥಳೀಯ ಹೆಗ್ಗಡೆಗಳೊಡನೆ ಮಾಡಿಕೊಂಡ ಒಪ್ಪಂದವನ್ನು ವಿವರಿಸುವಾಗ ಮನುಷ್ಯತನದಿಂದ ದ್ರೋಹವನ್ನು ಮಾಡಿದರೆ ಅವರ ಕಣ್ಣು ಕೀಳಿಸಬಾರದು ಎಂದು ಹೇಳಲಾಗಿದೆ[4]. ಯಾವುದೇ ಸಂದರ್ಭದಲ್ಲೂ ಬ್ರಾಹ್ಮಣರನ್ನು ಹೊಡೆದು ಕೊಲ್ಲಬಾರದೆಂಬ ನಂಬಿಕೆ ಅಂದಿನ ಕಾಲದಲ್ಲಿತ್ತು. ಇದಕ್ಕೆ ಕಾರಣ ಇವರು ದೇವಸಮಾನರೆಂಬ ಭಾವನೆಯೂ ಕಾರಣವಾಗಿರಬಹುದು. ಒಂದು ಸ್ವಾರಸ್ಯಕರ ಪ್ರಸಂಗ ಒಂದೆಡೆ ಹೀಗೆ ಬಂದಿದೆ[5]. ಬಾರಕೂರು ರಾಜ್ಯವನ್ನು ಮಲೆಯ ದಂಡನಾಯಕರು ಪಾಲಿಸುವಾಗ ಗೋವಿಂದ ಮತ್ತು ಕೃಷ್ಣ ಎನ್ನುವವರು ಯಾವುದೋ ದ್ವೇಷಕಾರಣವಾಗಿ ಬ್ರಾಹ್ಮಣನೋರ್ವನನ್ನು ವಧಿಸಿಬಿಡುತ್ತಾರೆ. ಇದರ ಬಗ್ಗೆ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಅಲ್ಲಿಯ ದೇವಾಲಯಕ್ಕೆ ಧನ, ಕನಕವನ್ನು ನೀಡುವಂತೆ ಆದೇಶಿಸುತ್ತಾರೆ. ಕೆಲವೊಮ್ಮೆ ಅರಸರು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ವಿಶೇಷ ಸೌಲಭ್ಯವನ್ನು ನೀಡುವುದಿತ್ತು. ಚಿಕ್ಕರಾಜರಸ ಚೌಟರ ಕಾಲದಲ್ಲಿ ಮೈಂದ ಎನ್ನುವವನು ರಾಜರಿಗೆ ಆಪ್ತ ಅಧಿಕಾರಿಯಾಗಿದ್ದನು. ಅವನು ಬೆಟ್ಟಕೇರಿಯಲ್ಲಿ ಹೊಸದಾಗಿ ಮನೆಯೊಂದನ್ನು ಕಟ್ಟಿಸುತ್ತಾನೆ. ಆಗ ಚೌಟರಸರು ಈ ಮನೆಯಿಂದ ಪೂರ್ವದಿಕ್ಕಿನ ಎರಡೂ ಸಾಲಿನಲ್ಲಿ ಯಾರೂ ಮನೆಯನ್ನು ಕಟ್ಟಕೂಡದೆಂದು ಆಜ್ಞೆಯನ್ನು ಹೊರಡಿಸಿ, ಈ ಆಜ್ಞೆಯನ್ನು ಮೀರಿದರೆ ಪುತ್ತಿಗೆಯ ಸೋಮನಾಥನಿಗೂ, ಬಿದಿರೆಯ ಪಾರ್ಶ್ವನಾಥನಿಗೂ ತಪ್ಪಿದವರೆಂದೂ, ಚೌಟರಿಗೆ ಸಾವಿರದ ಇನ್ನೂರು ವರಹ ದಂಡ ಕೊಡಬೇಕಾಗುತ್ತೆಂದೂ ಎಚ್ಚರಿಸುತ್ತಾರೆ[6]. ಇಂಥ ದೃಷ್ಠಾಂತಗಳು ಅಂದಿನ ಧಾರ್ಮಿಕ, ಸಾಮಾಜಿಕ ಬದುಕಿನ ಮೇಲೆ ಬೆಳಕನ್ನು ಚೆಲ್ಲುತ್ತವೆ.

ಅಂದಿನ ಪೂಜಾ ಪದ್ಧತಿಗಳಲ್ಲಿ ಸಾತ್ವಿಕ ಮತ್ತು ತಾಮಸ ಪೂಜೆಗಳೆರಡೂ ಕಂಡುಬರುತ್ತವೆ. ಸಮಾಜದ ಮೇಲ್ವರ್ಗಗಳಾದ ಶೈವ, ಜೈನ, ವೈದಿಕ ಸಂಪ್ರದಾಯದ ದೇವಾಲಯಗಳಲ್ಲಿ ಆಯಾ ಪರಂಪರೆಗೆ ಸಂಬಂಧಿಸಿದ ಪೂಜಾ ವಿಧಿಗಳು ನಡೆದರೆ, ಕೆಳವರ್ಗದ ಭೂತಾರಾಧನೆ, ಮಾರಿ, ದುರ್ಗಿ, ಕಾಳಿ ಮೊದಲಾದ ಶಕ್ತಿಪೂಜೆಗಳಲ್ಲಿ ಕುರಿ, ಕೋಳಿ, ಕೋಣಗಳ ಬಲಿಯು ನಡೆಯುತ್ತಿತ್ತು. ಬಾರಕೂರಿನ ಭೈರವ ದೇವಸ್ಥಾನದ ಶಿಲಾಶಾಸನವೊಂದರಲ್ಲಿ ನರಬಲಿ ಕೊಡುವ ಸಂಪ್ರದಾಯವಿತ್ತೆಂದು ತಿಳಿದುಬರುತ್ತದೆ[7]. ಕ್ರಿ.ಶ. ೧೪೫೫ರ ಒಂದು ಶಾಸನದಲ್ಲಿ ದೇವಿಯ ದೇವಾಲಯಕ್ಕೆ ಜಾತ್ರೆ ಸಮಯದಲ್ಲಿ ಯಾವ ಯಾವ ಜನರು, ಯಾವ ಯಾವ ಮಾರ್ಗದಲ್ಲಿ ಆಡು, ಕುರಿ, ಕೋಳಿ, ಅಡಿಕೆ ಮರ, ಪೂಜಾ ಸಾಮಗ್ರಿಗಳನ್ನು ಹಿಡಿದುಕೊಂಡು ಹೊರೆಕಾಣಿಕೆಯ ಮೆರವಣಿಗೆಯಲ್ಲಿ ಹೋಗಬಹುದು ಎನ್ನುವುದನ್ನು ವಿವರಿಸಿದೆ[8]. ಈ ತೀರ್ಮಾನವನ್ನು ಬಾರಕೂರು, ಕಂದಾವರದ ಸಮಸ್ತ ಜನರು ಸೇರಿ ಚಿರುಗುಲಿಗುಂದದ ವಿಷ್ಣುಮೂರ್ತಿ ದೇವಾಲಯದಲ್ಲಿ ತೆಗೆದುಕೊಳ್ಳುತ್ತಾರೆ. ಇಂಥದೇ ಒಂದು ಸ್ವಾರಸ್ಯಕರ ಪ್ರಸಂಗ ಮೂಡಬಿದಿರೆಯ ತಾಮ್ರಶಾಸನದಲ್ಲಿ ಬಂದಿದೆ[9]. ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪಂಜಿನ ಮೆರವಣಿಗೆ ನಡೆದಾಗ ಬೆಳ್ಳಿಕೇರಿಯವರಿಗೂ ಮಡಲಂಗಡಿ ಕೇರಿಯವರಿಗೂ ಜಗಳವುಂಟಾಗಿ ಕಲ್ಲು, ಕವಣಿ, ಹಾರೆಗಳಲ್ಲಿ ಬಡಿದಾಡತೊಡಗಿದರು. ಆಗ ಅಲ್ಲಿಯ ಸಮಂತಭದ್ರ ದೇವರು ಉಪವಾಸ ವ್ರತವನ್ನು ಹಿಡಿದು ಪ್ರತಿಭಟಿಸಿದಾಗ, ಎರಡೂ ಕೇರಿಯವರು ಬಂದು ಕ್ಷಮೆ ಯಾಚಿಸಿ, ಶಾಂತಿ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಾರೆ. ತಾವು ಆಜನ್ಮಪರಿಯಂತ ಪಂಚಪರಮೇಷ್ಠಿಗಳ ಸಾಕ್ಷಿಯಾಗಿ ಹಿಂಸೆಗೆ ತೊಡಗುವುದಿಲ್ಲವೆಂದೂ, ಪ್ರತಿ ವರ್ಷವೂ ಹಬ್ಬದ ಮೂರು ದಿನ ಹೊಸಬಸದಿ ಚಂದ್ರನಾಥ ಸ್ವಾಮಿಯ ಅಂಗಳದಲ್ಲಿ ಹದಿನೈದು ಸಾವಿರ ದೀಪವನ್ನು ಹೊತ್ತಿಸಿ ರಥೋತ್ಸವ ನಡೆಸುವುದಾಗಿಯೂ ತೀರ್ಮಾನಿಸುತ್ತಾರೆ. ಇದೇ ರೀತಿಯ ಮತ್ತೊಂದು ಪ್ರಸಂಗ ಕೋಟೇಶ್ವರದಲ್ಲಿಯೂ ನಡೆಯುತ್ತದೆ[10]. ದೀಪಾವಳಿ ಹಬ್ಬದಂದು ಕೋಟೇಶ್ವರ ದೇವಾಲಯದಲ್ಲಿ ಬ್ರಾಹ್ಮಣರಿಗೂ, ಶೂದ್ರರಿಗೂ ಜಗಳ ನಡೆದು ಕೆಲವು ಹೆಣಗಳು ಬಿದ್ದು, ಗೋಹತ್ಯೆಯಾಗಿ, ದೇವಾಲಯದ ಬಾಗಿಲನ್ನು ಮುಚ್ಚುತ್ತಾರೆ. ಇದಾದ ಆರು ತಿಂಗಳ ತರುವಾಯ ಬಾರಕೂರಿನ ರಾಜ್ಯಪಾಲ ಏಕದಲ ಖಾನನು ವಿಚಾರಣೆ ನಡೆಸಿ ಪ್ರಾಯಶ್ಚಿತ ಮತ್ತು ಶುದ್ಧಿಗಾಗಿ ೩೫ ವರಹ ಹೊನ್ನನ್ನು ದಾನ ನೀಡುತ್ತಾನೆ. ಅಲ್ಲಿಗೆ ಸಮಸ್ಯೆ ಬಗೆಹರಿದು ಶಾಂತಿ ನೆಲೆಸುತ್ತದೆ. ಇಂಥ ಉದಾಹರಣೆಗಳು ತುಳುನಾಡಿನ ಧಾರ್ಮಿಕ, ಸಾಮಾಜಿಕ ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ.

ತುಳುನಾಡಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣವರ್ಗವೊಂದನ್ನು ಬಿಟ್ಟರೆ ಉಳಿದ ಎಲ್ಲಾ ಜನರು ಅಳಿಯ ಸಂತಾನ ಪದ್ಧತಿಯನ್ನು ಆಚರಿಸುತ್ತಾರೆ. ಮಾತೃಪ್ರಧಾನ ಕುಟುಂಬ ಪದ್ಧತಿಯ ಇನ್ನೊಂದು ಮುಖವೇ ಅಳಿಯ ಸಂತನ ಪದ್ಧತಿ. ಕುಟುಂಬದ ಆಸ್ತಿಯ ಒಡೆತನ, ಅಧಿಕಾರವೆಲ್ಲವೂ ಈ ಪದ್ಧತಿಯ ಪ್ರಕಾರ ಹೆಣ್ಣಿಗೆ ಸೇರುತ್ತದೆ. ಗಂಡಿಗೆ ಆಸ್ತಿಯಲ್ಲಿ ಹಕ್ಕುಬಾಧ್ಯತೆಗಳಿರುವುದಿಲ್ಲ. ಇದನ್ನು ಭೂತಾಳಪಾಂಡ್ಯನ ಕುಂಡೋದರ ಭೂತದ ಕಥೆಯ ಮೂಲಕ ಸಮರ್ಥಿಸಿಕೊಳ್ಳುತ್ತಾರಾದರೂ[11], ಇದು ಮೂಲದ್ರಾವಿಡ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ಪದ್ಧತಿಯೆನ್ನಬಹುದು. ಇದನ್ನು ಆರಂಭದಲ್ಲಿ ‘ಬಳಿ’ಯ ಹೆಸರಿನಲ್ಲಿ ಗುರುತಿಸಲಾಗುತ್ತಿತ್ತು. ಅನೇಕ ಕುಟುಂಬಗಳು ಸೇರಿ ಸಮಾಜವಾದಾಗ ಪ್ರತಿಯೊಂದು ಕುಟುಂಬವನ್ನು ಗುರುತಿಸಲು ಒಂದೊಂದು ಹೆಸರನ್ನು ಕೊಡುವುದು ಅಗತ್ಯವಾಯಿತು. ಇದು ಗೋತ್ರಕ್ಕೆ ಸಮಾನವಾದ ಹೆಸರುಗಳಾಗಿದ್ದು, ಸ್ವಗೋತ್ರದಲ್ಲಿ ಗಂಡು-ಹೆಣ್ಣಿನ ವಿವಾಹ ನಿಷೇಧವಿರುವಂತೆ ಒಂದೇ ಬಳಿಯ ಒಳಗಡೆ ವಿವಾಹವೂ ನಿಷೇಧಿಸಲ್ಪಟ್ಟಿತು. ಏಕೆಂದರೆ ಒಂದು ಬಳಿಗೆ ಸೇರಿದವರೆಲ್ಲರೂ ಒಂದೇ ರಕ್ತದ ಕುಟುಂಬದವರಾಗುತ್ತಾರೆ. ಇಂದಿಗೂ ತುಳುನಾಡಿನಲ್ಲಿರುವ ಬಂಟರು, ಬಿಲ್ಲವರು, ಗೌಡರು, ಮೊಗೇರರು, ಮಲೆ ಕುಡಿಯರು ಮುಂತಾದವರಲ್ಲಿ ಈ ಬಳಿ ಪದ್ಧತಿ ರೂಢಿಯಲ್ಲಿದೆ. ಜೈನಮತೀಯರಲ್ಲಿಯೂ ಆರಂಭದಲ್ಲಿ ಈ ಬಳಿಪದ್ಧತಿ ರೂಢಿಯಲ್ಲಿದ್ದರೂ ಈಗ ಅದನ್ನು ತ್ಯಜಿಸಿ ಗೋತ್ರ, ಸೂತ್ರಗಳನ್ನು ಅಳವಡಿಸಿಕೊಂಡಿದ್ದಾರೆ.[12] ಕುಟುಂಬವೊಂದರಲ್ಲಿ ತಂದೆ, ತಾಯಿ, ಬಂಧು ಬಳಗಗಳೆಲ್ಲವೂ ಕೂಡಿ ಬಾಳುವ ಅವಿಭಕ್ತ ಕುಟುಂಬ ವ್ಯವಸ್ಥೆಯು ರೂಢಿಯಲ್ಲಿತ್ತು. ಉದ್ಯೋಗ, ಅಧಿಕಾರ, ಆಸ್ತಿಗಳ ಒಡೆತನಗಳು ವಂಶಪಾರಂಪರ್ಯವಾಗಿಯೇ ಬರುತ್ತಿದ್ದವು. ಉತ್ತರಾಧಿಕಾರಿಗಳಾಗಲೀ ಹತ್ತಿರದ ಬಂಧುಗಳಾಗಲೀ ಇಲ್ಲದವರು ಸತ್ತರೆ, ಅವರ ಆಸ್ತಿಯು ಆ ಊರಿನ ದೇವದಾಯವಾಗಿ ಸೇರಿ, ಧಾರ್ಮಿಕ ಕಾರ್ಯಗಳಿಗೆ ವಿನಿಯೋಗವಾಗುತ್ತಿತ್ತು. ಅರಮನೆ, ಮಾಗಣೆ, ಬೀಡು, ಗುತ್ತುಗಳ ಮಟ್ಟದ ಕುಟುಂಬದಲ್ಲಿ ಆಯಾ ಕುಟುಂಬದ ಹಿರಿಯನಿಗೆ ವಿಶೇಷ ಗೌರವಗಳಿದ್ದವು. ಅವನೇ ಕುಟುಂಬದ ಯಜಮಾನನಾಗಿದ್ದು ಮನೆತನದ ಎಲ್ಲಾ ಜವಾಬ್ಧಾರಿಗಳನ್ನೂ ನಿರ್ವಹಿಸುತ್ತಿದ್ದನು. ಏಕಪತ್ನಿತ್ವವು ರೂಢಿಯಲ್ಲಿರುವಂತೆ, ಕೆಲವರಲ್ಲಿ ಬಹುಪತ್ನಿತ್ವವೂ ರೂಢಿಯಲ್ಲಿತ್ತು. ಪಿರಿಯರಸಿ, ಪಟ್ಟದರಸಿಯೆಂಬ ಮಾತುಗಳು ಶಾಸನಗಳಲ್ಲಿ ಕಂಡುಬರುತ್ತವೆ[13]. ಕುಟುಂಬವರ್ಗದಲ್ಲಿ ಪಟ್ಟದ ರಾಣಿಗೆ ವಿಶೇಷ ಗೌರವಾದರಗಳಿದ್ದವು. ಸಾಮಾನ್ಯವಾಗಿ ತುಳುನಾಡಿನ ಮನೆಗಳು ನಾಲ್ಕು ಚೌಕಿಗಳಿಂದ ಕೂಡಿದ ಎರಡು, ಮೂರು ಅಂತಸ್ತಿನ ದೊಡ್ಡ ಕಟ್ಟಡಗಳಾಗಿದ್ದವು. ಬಲವಾದ ಮಣ್ಣಿನ ಗೋಡೆಗಳನ್ನು ನಿರ್ಮಿಸಿ, ಮೇಲೆ ಹುಲ್ಲು ಅಥವಾ ಹಂಚನ್ನು ಹೊದಿಸುತ್ತಿದ್ದರು. ಅರಮನೆಯನ್ನು ಬಲವಾದ ಶಿಲೆಯ ಕಲ್ಲುಗಳನ್ನು ಬಳಸಿ ಕಟ್ಟುತ್ತಿದ್ದರು. ಮನೆಯ ಎದುರಿನ ಮೊಗಸಾಲೆಗೆ ಚಾವಡಿ, ಪಟ್ಟದ ಚಾವಡಿಯೆಂದು ಕರೆಯಲಾಗುತ್ತಿತ್ತು. ಅದಕ್ಕೆ ಹೊಂದಿಕೊಂಡಂತೆ ಭೂತದ ಕೋಣೆ, ಇತರ ವಾಸದ ಕೋಣೆಗಳಿರುತ್ತಿದ್ದವು[14].

ಅಂದಿನ ಕಾಲದ ವಿದ್ಯಾಭ್ಯಾಸದ ವಿವರಗಳು, ಕಾವ್ಯ, ಶಾಸನಗಳಲ್ಲಿ ತಕ್ಕಮಟ್ಟಿಗೆ ಕಂಡುಬರುತ್ತವೆ. ಸಮಾಜದಲ್ಲಿ ಮೇಲ್ವರ್ಗದ ಬ್ರಾಹ್ಮಣ, ಜೈನ, ಶೈವರಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಿದ್ದು, ಉಳಿದ ಕೆಳವರ್ಗದವರು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದರು. ಧಾರ್ಮಿಕ ಮಠ, ದೇವಾಲಯ ಬಸದಿಗಳೇ ವಿದ್ಯಾಭ್ಯಾಸದ ಕೇಂದ್ರಗಳಾಗಿದ್ದು, ಆಯಾ ಪರಂಪರೆಯ ಧಾರ್ಮಿಕ ಶಾಸ್ತ್ರಗ್ರಂಥಗಳನ್ನು ಕಲಿಸಲಾಗುತ್ತಿತ್ತು. ಜೊತೆಗೆ ಅಂದಿನ ಕಾಲಕ್ಕೆ ಅಗತ್ಯವಾದ ನಾಟಕ, ತರ್ಕ, ಅಲಂಕಾರ, ಸಂಹಿತೆ, ನಾಟ್ಯ, ಜ್ಯೋತಿಷ್ಯ, ಮಂತ್ರ, ಶಿಲ್ಪ, ನ್ಯಾಯ, ವೇದ, ಪುರಾಣ, ವೈದ್ಯ, ಗಣಿತ, ಗಾಂಧರ್ವ, ಹಸ್ತಶ್ವ, ಸಾಮುದ್ರಿಕ, ಆಯುರ್ವೇದಗಳನ್ನೂ ಕಲಿಸಲಾಗುತ್ತಿತ್ತು[15]. ಜೈನಮತೀಯರಲ್ಲಿ ಸ್ತ್ರೀಯರಿಗೂ ಅವರಿಗೆ ಬೇಕಾದ ವಿದ್ಯೆಗಳನ್ನು ಕಲಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು[16]. ಅವರು ವಿಶೇಷವಾಗಿ ಕಾವ್ಯ, ಗಾಯನ, ಸಂಗೀತ ನೃತ್ಯವಿದ್ಯೆಗಳಲ್ಲಿ ಆಸಕ್ತರಾಗಿದ್ದರು. ಈ ಭಾಗದ ಕವಿಗಳು ತಿಳಿಸಿರುವಂತೆ ಸ್ತ್ರೀಯರು ವೀಣೆ, ವೇಣು, ಕಿನ್ನರಿ, ತಾಳವಾದ್ಯಗಳಲ್ಲಿ ನಿಪುಣೆಯರೂ , ಚಿತ್ರ, ಬಂಧ, ಗರ್ಭ,ಆಶು ಕಾವ್ಯ ರಚನೆಗಳಲ್ಲಿ ಕುಶಲೆಯರಾಗಿದ್ದರೆಂದು ಹೇಳಬಹುದು[17]. ಮೂಡಬಿದಿರೆ, ಕಾರ್ಕಳ, ಗೇರುಸೊಪ್ಪೆಗಳಲ್ಲಿರುವ ಶಿಲ್ಪಕಲೆಗಳನ್ನು ಗಮನಿಸಿದರೆ ಈ ಮಾತು ಸಹಜವೆಂದು ತೋರುತ್ತದೆ.

ಜನರ ಬದುಕಿನ ನಿರ್ವಹಣೆಯಲ್ಲಿ ವಿವಿಧ ಉದ್ಯೋಗ, ವೃತ್ತಿ, ಕಸುಬುಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ಅವರ ಸಾಮಾಜಿಕ ಜೀವನದ ಮಟ್ಟವನ್ನು ನಿರ್ಧರಿಸುವಲ್ಲೂ ಇವು ನೆರವಾಗುತ್ತವೆ. ಜನರು ಕೈಗೊಂಡ ವಿವಿಧ ವೃತ್ತಿಗಳು ಮುಂದೆ ಜಾತಿಗಳಾಗಿ ರೂಪುಗೊಂಡಿರುವುದನ್ನು ಎಲ್ಲೆಡೆ ಕಾಣುತ್ತೇವೆ. ತುಳುನಾಡಿನಲ್ಲಿ ವಿಶ್ವಕರ್ಮ, ನೇಕಾರ, ಗಾಣಿಗ, ಕುಂಬಾರ ಮೊದಲಾದವರನ್ನು ಈ ಹಿನ್ನೆಲೆಯಲ್ಲಿ ಗುರುತಿಸಬಹುದು. ಆದರೆ ಭೂ ಒಡೆತನದ ಹಕ್ಕು ಮೇಲ್ವರ್ಗದವರಾದ ಬ್ರಾಹ್ಮಣ, ಜೈನ, ಬಂಟ ಇವರ ಕೈಯಲ್ಲಿತ್ತು. ಶ್ರೇಣೀಕೃತ ಸಮಾಜದಲ್ಲಿ ಕೆಳವರ್ಗದವರಿಗೆ, ಭೂಮಾಲೀಕತ್ವವನ್ನು ನಿರಾಕರಿಸಲಾಗಿತ್ತು. ಅವರು ವಿವಿಧ ಶ್ರಮದ ಕೆಲಸಗಳಲ್ಲಿ ನಿಯುಕ್ತರಾಗಿದ್ದರು. ದೇವಾಲಯಗಳಲ್ಲಿ ಪುರೋಹಿತ ವೃತ್ತಿ ಬ್ರಾಹ್ಮಣರಿಗೆ ಮೀಸಲಾಗಿದ್ದರೆ, ಉಳಿದ ವ್ಯಾಪಾರ, ವ್ಯವಸಾಯದ ಹಿಡಿತವು ಹೆಚ್ಚಾಗಿ ಜೈನ ಮತ್ತು ಬಂಟರ ಕೈಯಲ್ಲಿದ್ದವು. ಇಲ್ಲಿಯ ಶಾಸನಗಳಲ್ಲಿ ಸೆಟ್ಟಿ-ಸೆಟ್ಟಿಕಾರರು, ನಖರ, ಹಲರು, ಏಳಮೆ ಅಥವಾ ಎಳಮೆಗೊಳಗಾದವರು, ಸಾಲಿಕೆ ಬಲ್ಲಾಳರು ಮುಂತಾದ ವ್ಯಾಪಾರಿ ಸಂಘಗಳನ್ನು ಹೆಸರಿಸಲಾಗಿದೆ[18]. ಇವರು ಸ್ವದೇಶೀಯಮತ್ತು ವಿದೇಶೀಯ ವಸ್ತುಗಳನ್ನು ಮಾರುತ್ತಿದ್ದರು.

ದೇವಾಲಯ, ಮಠ, ಬಸದಿಗಳಿಗೆ ನಾಣ್ಯವನ್ನೂ, ಭೂಮಿಯನ್ನೂ ದಾನವಾಗಿ ಬಿಡುತ್ತಿದ್ದರು. ಅರಸರಿಂದ ಮೊದಲ್ಗೊಂಡು ವಿವಿಧ ಸ್ತರದ ಅಧಿಕಾರಿಗಳು, ಜನಸಾಮಾನ್ಯರೂ ತಮ್ಮ ತಮ್ಮ ಮಿತಿಯಲ್ಲಿ ದಾನ ನೀಡಿದ ದೃಷ್ಟಾಂತಗಳು ಶಾಸನಗಳಲ್ಲಿ ಕಂಡುಬರುತ್ತವೆ[19]. ಕೇವಲ ತಮ್ಮ ತಮ್ಮ ಮತೀಯ ದೇವಾಲಯಗಳಿಗಷ್ಟೇ ಅಲ್ಲ, ಬೇರೆ ಮತೀಯರ ದೇವಾಲಯಗಳಿಗೂ ದಾನ ನೀಡಿದ ದೃಷ್ಟಾಂತಗಳಿವೆ. ಉದಾಹರಣೆಗೆ,ಕಾರ್ಕಳದ ಭೈರರಸರು ಹಿರಿಯಂಗಡಿಯಲ್ಲಿ ಬಸದಿಗಳನ್ನು ನಿರ್ಮಿಸಿ ದಾನ ನೀಡಿದ ಬಳಿಕ ಕಳಸದ ಕಳಸೇಶ್ವರ, ಕೆರೆವಸೆಯ ಮಹಾದೇವ, ಹೆರ್ಮುಂಡೆಯ ವಿಷ್ಣುಮೂರ್ತಿ ಮುಂತಾದ ದೇವಾಲಯಗಳಿಗೆ ದಾನ ನೀಡಿ ಪ್ರೋತ್ಸಾಹಿಸುತ್ತಾರೆ[20]. ಈ ವಂಶದ ಇಮ್ಮಡಿ ಭೈರವದೇವನು ತನ್ನ ಅರಮನೆಯಲ್ಲಿ ಚಂದ್ರಪ್ರಭನನ್ನು ಪ್ರತಿಷ್ಠಾಪಿಸಿದ ಬಳಿಕ ನಾರ್ವೆಯಲ್ಲಿ ಗೋಪಾಲಕೃಷ್ಣ, ಕೊಪ್ಪದಲ್ಲಿ ಸಾಧನ ಚೈತ್ಯಾಲಯವನ್ನು ನಿರ್ಮಿಸುತ್ತಾನೆ. ಕಾರ್ಕಳದಲ್ಲಿ ತಾನು ಕಟ್ಟಿಸಿದ ಜೈನಬಸದಿಯನ್ನೇ ಗೋವಾದಿಂದ ಆಗಮಿಸಿದ ಗೌಡಸಾರಸ್ವತರಿಗೆ ಬಿಟ್ಟುಕೊಟ್ಟು ಅಲ್ಲಿ ಅನಂತಶಯನ ವಿಗ್ರಹಸ್ಥಾಪನೆಗೆಅವಕಾಶ ಕಲ್ಪಿಸುತ್ತಾನೆ[21]. ಇದೇ ರೀತಿ ಮುಲ್ಕಿಯ ಅರಸರು ಸೀಮಂತೂರು ಜನಾರ್ದನ, ಬಂಗರು ಸುರಿಯೆಂದು ನಂದಿಕೇಶ್ವರ, ವೇಣೂರಿನ ಅಜಿಲರು ಬಳಂಜದ ಪಂಚಲಿಂಗೇಶ್ವರ, ಅರ್ಧನಾರೀಶ್ವರ, ಸೋಮನಾಥ ದೇವಾಲಯಗಳನ್ನು ನಿರ್ಮಿಸಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ದಾನ ನೀಡಿ ತಮ್ಮ ಉದಾರತೆಯನ್ನು ಮತ ಸಾಮರಸ್ಯವನ್ನೂ ಮೆರೆದಿದ್ದಾರೆ. ಇಲ್ಲಿಯ ಕೆಲವು ದಾನ ಶಾಸನಗಳನ್ನು ಪರಿಶೀಲಿಸಿದರೆ ಜೈನ ಶೈವ ಸ್ತುತಿಗಳು ಒಂದೇ ಶಾಸನದಲ್ಲಿ ಬಂದಿರುವುದನ್ನೂ, ಫಲಶ್ರುತಿಯಲ್ಲಿ ಜೈನ, ವೈದಿಕ, ಶೈವ ಪರಂಪರೆಯ ಕ್ಷೇತ್ರಗಳನ್ನು ಹೆಸರಿಸಿ ಧರ್ಮ ಸಾಮರಸ್ಯ ಮೆರೆದಿರುವುದನ್ನೂ ಕಾಣುತ್ತೇವೆ. (K.I.VO. III Part-I, No. 16; ARSIE – 1921, No. 48).

ವ್ಯವಸಾಯವು ಜೀವನೋಪಾಯದ ಪ್ರಧಾನ ವೃತ್ತಿಯಾಗಿದ್ದು ಭತ್ತ, ಕಬ್ಬು, ತೆಂಗು, ಅಡಿಕೆ, ಬಾಳೆ, ಮೆಣಸುಗಳನ್ನು ಬೆಳೆಯಲಾಗುತ್ತಿತ್ತು. ಭೂಮಿಯ ಗುಣಮಟ್ಟ, ಬೆಳೆಗಳನ್ನು ಆಧರಿಸಿ ಬಯಲು, ಬೆರಿಕೆಯ ಭೂಮಿ, ಬೀಳಗದ್ದೆ, ಹದಹು, ಹಡಲು, ಹಕ್ಕಲು, ಕಂಬಳಗದ್ದೆ, ಕರಿಕೆಯ ಬಯಲು, ಕುದುರು, ಮಜಲು,ಮಕ್ಕಿ, ಕಾರುಗದ್ದೆ ಎಂದು ಮುಂತಾಗಿ ವಿಂಗಡಿಸುತ್ತಿದ್ದ ವಿಚಾರವು ಶಾಸನಗಳಿಂದ ಸ್ಪಷ್ಟವಾಗುತ್ತದೆ[22]. ಭೂಮಿಯ ಒಡೆತನದ ಹಿಡಿವಳಿದಾರನಿಗೆ ಮೂಲಕಾರ, ಗೇಣಿಕಾರ, ವೃತ್ತಿಕಾರ ಎನ್ನಲಾಗುತ್ತಿತ್ತು. ಒಕ್ಕಲು, ಆಳುಗಳ ಹೆಸರುಗಳೂ ಶಾಸನಗಳಲ್ಲಿ ಕಂಡುಬರುತ್ತವೆ[23]. ಭೂ ವ್ಯವಸಾಯದ ಹುಟ್ಟುವಳಿಯನ್ನು ಆಧರಿಸಿ ತೆರಿಗೆಯನ್ನು ನೀಡಬೇಕಾಗುತ್ತಿತ್ತು. ಅರಸರಿಗೆ ಭೂಮಿಯ ಮೇಲೆ ಸಲ್ಲಬೇಕಾದ ಆದಾಯಕ್ಕೆ ನೆಲಸುಂಕವೆಂದೂ, ಸಮುದ್ರ, ನದಿಯ ಮೇಲಿನ ತೆರಿಗೆಗೆ ಜಲಸುಂಕವೆಂದೂ ಕರೆಯುತ್ತಿದ್ದರು[24]. ಜಮೀನುದಾರರು ವಸೂಲಿ ಮಾಡುತ್ತಿದ್ದ ತೆರಿಗೆಗೆ ಭುಕ್ತಿ, ಸಮುದಾಯವೆನ್ನುತ್ತಿದ್ದರು. ಬೇಸಾಯದ ಹೊಲಗಳ ಮೇಲೆ ಬಾಳುತೆರೆಯನ್ನು ವಿಧಿಸಲಾಗುತ್ತಿತ್ತು. ಇವುಗಳ ಜೊತೆಗೆ ಕಟ್ಟುಂದೆರೆ, ಬೀಡಾರುವಾರ, ಬೆಡುಗುಳ, ಬೆಡುಗೂಳು, ಮೇಲಾಯ, ಆರುವಾರ, ಕುಳಾಗ್ರ ಮೊದಲಾದ ಹೆಸರುಗಳೂ ಶಾಸನಗಳಲ್ಲಿ ಕಂಡುಬರುತ್ತವೆ[25]. ತುಳುನಾಡಿನಲ್ಲಿ ಚಲಾವಣೆಯಲ್ಲಿದ್ದ ಕಂಚು, ಕೀಳ್ಗಂಚು ಹೆಸರಿನ ಎರಡು ನಾಣ್ಯಗಳ ಉಲ್ಲೇಖಗಳು ವಡ್ಡರ್ಸೆ ಶಾಸನದಲ್ಲಿ ಬಂದಿವೆ[26]. ಬಾರಕೂರು ಶಾಸನದಲ್ಲಿ ಪಾಂಡ್ಯಗದ್ಯಾಣದ ಉಲ್ಲೇಖವಿದೆ[27]. ಜೊತೆಗೆ ಬಾರಕೂರು, ಗದ್ಯಾಣ, ಮಂಗಳೂರು ಗದ್ಯಾಣಗಳ ಉಲ್ಲೇಖಗಳೂ ಕಂಡುಬರುತ್ತವೆ[28]. ವಿಜಯನಗರ ಕಾಲದಲ್ಲೂ ವಾಣಿಜ್ಯೋದ್ಯಮವು ಬೆಳವಣಿಗೆಯಾದಂತೆ ವಿವಿಧ ಮಾನದ ನಾಣ್ಯಗಳು ಬಳಕೆಗೆ ಬಂದವು. ವರಹ, ಹೊನ್ನು, ಕಾಟಿಗದ್ಯಾಣ, ಅರ್ಧಕಾಟಿಗದ್ಯಾಣ, ಸಣ್ಣಪ್ರತಾಪ ಗದ್ಯಾಣ, ದೊಡ್ಡ ವರಹ, ಘಟ್ಟಿವರಹ, ಕಾಟಿಹೊನ್ನು, ಕಾಟಿಹಣ ಮುಂತಾದವುಗಳನ್ನು ಇಲ್ಲಿ ಉದಾಹರಿಸಬಹುದು[29]. ತುಳುನಾಡಿನಲ್ಲಿ ಸ್ವತಂತ್ರ ನಾಣ್ಯಗಳನ್ನು ಹೊರಡಿಸಿದ ತುಂಡರಸರಲ್ಲಿ ಗೇರುಸೊಪ್ಪೆಯ ಸಾಳುವರು ಮುಖ್ಯರು. ಇವರು ಬೆಳ್ಳಿ, ಬಂಗಾರ, ತಾಮ್ರದ ನಾಣ್ಯಗಳನ್ನು ಟಂಕಿಸಿದ್ದಾರೆ[30].

ಸಾಹಿತ್ಯ, ಕ್ರೀಡೆ, ಕಲೆಗಳಿಗೆ ಸಂಬಂಧಿಸಿದಂತೆ ಹಲವಾರು ಸಾಂಸ್ಕೃತಿಕ ವಿವರಗಳು ತುಳುನಾಡಿನುದ್ದಕ್ಕೂ ಕಂಡುಬರುತ್ತವೆ. ಸಾಹಿತ್ಯ ನಿರ್ಮಾಣವು ಜೈನಕವಿಗಳಿಂದಲೇ ಆರಂಭಗೊಳ್ಳುತ್ತದೆ. ಕಾರ್ಕಳದ ನೆಲ್ಲಿಕಾರಿನ ಕಲ್ಯಾಣಕೀರ್ತಿ – (ಕ್ರಿ.ಶ. ೧೪೦೦) ತುಳುನಾಡಿನ ಪ್ರಥಮ ಪ್ರಾಚೀನ ಕವಿ. ಕನ್ನಡದಲ್ಲಿ ಎಂಟು ಕೃತಿಗಳನ್ನು ರಚಿಸಿ ಪ್ರಸಿದ್ಧಿ ಪಡೆದಿದ್ದಾನೆ.

ಇತ್ತೀಚಿ ಅಧ್ಯಯನದಿಂದ ತುಳುನಾಡಿನ ೨೬ ಜೈನಕವಿಗಳು ಕನ್ನಡದಲ್ಲಿ ೬೯ ಕೃತಿಗಳನ್ನೂ; ಸಂಸ್ಕೃತದಲ್ಲಿ ೧೧ ಕವಿಗಳು, ೧೩ ಕೃತಿಗಳನ್ನೂ; ಯಶಃಕೀರ್ತಿ (ಕ್ರಿ.ಶ. ೧೪೪೩) ಹೆಸರಿನ ಕವಿಯೋರ್ವನು ಪ್ರಾಕೃತದಲ್ಲಿ ಎರಡು ಕೃತಿಗಳನ್ನೂ ರಚಿಸಿವುದಾಗಿ ತಿಳಿದುಬಂದಿದೆ[31]. ಇದೇ ರೀತಿ ವೈದಿಕ ಪರಂಪರೆಯ ವೇದ, ಉಪನಿಷತ್ತು, ಗೀತೆ ಮುಂತಾದ ಗ್ರಂಥಗಳಿಗೆ ಸಂಬಂಧಿಸಿದ ವ್ಯಾಖ್ಯಾನ ಗ್ರಂಥಗಳೂ, ರಾಮಾಯಣ, ಭಾರತ, ಭಾಗವ, ಸ್ತೋತ್ರ, ತಂತ್ರ ಹಾಗೂ ಮಾಧ್ವ ಸಿದ್ಧಾಂತಕ್ಕೆ ಸಂಬಂಧಿಸಿದ ಕನ್ನಡ, ಸಂಸ್ಕೃತ ಭಾಷೆಗಳ ಗ್ರಂಥಗಳೂ ಸಾಕಷ್ಟು ಸಂಖ್ಯೆಯಲ್ಲಿ ರಚನೆಗೊಂಡಿರುವುದು ಬೆಳಕಿಗೆ ಬಂದಿವೆ[32]. ಇವುಗಳಲ್ಲಿ ಹೆಚ್ಚಿನ ಗ್ರಂಥಗಳು ತಿಗಳಾರಿ ಲಿಪಿಯಲ್ಲಿದ್ದು, ಸಂಸ್ಕೃತ, ಕನ್ನಡ ಭಾಷೆಯಲ್ಲಿರುವುದು ಕುತೂಹಲವನ್ನು ಹೆಚ್ಚಿಸುತ್ತದೆ. ಉಡುಪಿಯ ಅಷ್ಟಮಠ, ಎಡನೀರು, ಸುಬ್ರಹ್ಮಣ್ಯ, ಬಾಳೆಕುದ್ರು, ಚಿತ್ತಾಪುರ ಮಠಗಳಲ್ಲಿ ಹಾಗೂ ಧರ್ಮಸ್ಥಳದ ಸಂಸ್ಕೃತಿ ಪ್ರತಿಷ್ಠಾನದಲ್ಲಿ ಇಂಥ ಗ್ರಂಥಗಳನ್ನು ನೋಡಬಹುದು. ಜೊತೆಗೆ ತುಳುನಾಡಿನ ಪ್ರಸಿದ್ಧ ಯಕ್ಷಗಾನಕ್ಕೆ ಸಂಬಂಧಿಸಿದ ಪ್ರಸಂಗಗಳೂ, ಆಯುರ್ವೇದ ಗ್ರಂಥಗಳೂ, ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ. ಯಕ್ಷಗಾನ ಕವಿಗಳಲ್ಲಿ ಪಾರ್ತಿಸುಬ್ಬ, ಮಧ್ವದಾಸ, ದೇವಿದಾಸ, ಗೇರುಸೊಪ್ಪೆ ಶಾಂತ, ಹಟ್ಟಿಯಂಗಡಿ ರಾಮಭಟ್ಟ, ಪರಮೇಶ್ವರ, ಹಳೇಮಕ್ಕಿರಾಮ, ತರಳರಾಮ, ಧ್ವಜಪುರದ ನಾಗಪ್ಪಯ್ಯ, ವಿಷ್ಣು ಮೊದಲಾದವರು ಉತ್ತಮ ಕೃತಿಗಳನ್ನು ರಚಿಸಿದ್ದಾರೆ[33]. ತುಳುಬಾಷೆಯಲ್ಲಿ ರಚನೆಗೊಂಡಿರುವ ಕಾವ್ಯಗಳೂ ಈಗ ಬೆಳಕಿಗೆ ಬರುತ್ತಿವೆ. ಇವುಗಳಲ್ಲಿ ವಿಷ್ಣುತುಂಗನ ತುಳುಭಾಗವತೋ, ಕಾವೇರಿ, ದೇವಿಮಹಾತ್ಮೆ, ಅರುಣಾಬ್ಜ ಕವಿಯ ತುಳು ಮಹಾಭಾರತ ಮುಂತಾದ ಕೃತಿಗಳನ್ನು ಇಲ್ಲಿ ಉಲ್ಲೇಖಿಸಬಹುದು[34]. ತುಳು ಮೌಖಿಕ ಸಾಹಿತ್ಯಕ್ಕೆ ಸಂಬಂಧಪಟ್ಟ ಪಾಡ್ದನ, ಕಬಿತೆ, ಒಗಟು, ಗಾದೆ ಮುಂತಾದ ಸಾಹಿತ್ಯ ಪ್ರಕಾರಗಳೂ, ಸಿರಿ, ಪಂಜುರ್ಲಿ ಮುಂತಾದ ಅತ್ಯುತ್ತಮ ಜನಪದ ಮಹಾಕಾವ್ಯಗಳೂ ಈಗ ಬೆಳಕಿಗೆ ಬಂದಿವೆ. ಇಷ್ಟಾಗಿಯೂ ತುಳುನಾಡಿನ ಮನೆ, ಮಠಗಳಲ್ಲಿ ಇನ್ನೂ ಸಾವಿರಾರು ಸಂಖ್ಯೆಯ ಹಸ್ತಪ್ರತಿಗಳು ಬೆಳಕಿಗಾಗಿ ಕಾಯುತ್ತಿವೆ ಇವುಗಳ ಅಧ್ಯಯನ ಇನ್ನೂ ನಡೆಯಬೇಕಿದೆ.

ತುಳು ಸಂಸ್ಕೃತಿಯ ಅನೇಕ ಆಶಯಗಳನ್ನು ಪ್ರತಿಬಿಂಬಿಸುವ ಆಟಗಳು, ಕ್ರೀಡೆಗಳೂ ಇಂದಿಗೂ ಪ್ರಚಲಿತವಿವೆ. ಕೆಲವು ಮನೋರಂಜನೆಯ ಆಟಗಳಾದೆರೆ, ಇನ್ನೂ ಕೆಲವು ಧಾರ್ಮಿಕ ಆಚರಣಾತ್ಮಕ ಆಟಗಳಾಗಿವೆ. ಕಾಗೆ-ಗಿಳಿ, ಕುಟ್ಟಿದೊಣ್ಣೆ, ಕಂಬಾಣ, ಎಕ್ಕಡಿ, ಸೊಪ್ಪಾಟಗಳು ಮನೋರಂಜನೆಯ ಆಟಗಳಲ್ಲಿ ಮುಖ್ಯವಾದವುಗಳು. ಧಾರ್ಮಿಕ ಆಚರಣಾತ್ಮಕ ಆಟಗಳಲ್ಲಿ ಕಂಬುಲ, ಕೋಳಿ ಅಂಕ, ಚೆನ್ನೆಮಣೆ, ಚೆಂಡಾಟ, ತೂಟೆದಾರ ಮುಂತಾದ ಆಟಗಳು ಗಮನಾರ್ಹವಾದವು. ಈ ಆಚರಣಾತ್ಮಕ ಆಟಗಳ ಸ್ವರೂಪ, ಇತಿಹಾಸಗಳನ್ನು ತುಳು ಮೌಖಿಕರೂಪದ ಪಾಡ್ದನ, ಕಬಿತ, ಕಥೆಗಳಲ್ಲಿ ಗುರುತಿಸಬಹುದು. ಅದರಲ್ಲೂ ಕಂಬುಲ ಕ್ರೀಡೆಯು ತುಳು ಸಂಸ್ಕೃತಿಯ ಬಹುಮುಖ್ಯವಾದ ಕ್ರೀಡೆಯಾಗಿದೆ. ಇದಕ್ಕೆ ಸುಮಾರು ಎಂಟುನೂರು ವರ್ಷಗಳ ಇತಿಹಾಸವಿದ್ದು ಅನೇಕ ಶಾಸನಗಳಲ್ಲಿ ಇದರ ಉಲ್ಲೇಖವು ಕಂಡುಬರುತ್ತದೆ[35]. ಆಳುಪ ರಾಣಿ ಬಲ್ಲ ಮಹಾದೇವಿಯ (ಕ್ರಿ.ಶ. ೧೨೦೦)ಶಾಸನವೊಂದರಲ್ಲಿ ಕಂಬಳದ ಪ್ರಥಮ ಉಲ್ಲೇಖವು ಕಂಡುಬರುತ್ತದೆ[36]. ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಈ ಕ್ರೀಡೆಯು ಉಳುಮೆಗೆ ಸಂಬಂಧಿಸಿದ ಪೂಜೆಯಾಗಿತ್ತೆಂದೂ ಕೆಲವರು ಭಾವಿಸುತ್ತಾರೆ[37]. ಇಲ್ಲಯ ದೇವಾಲಯಗಳ ಕಾಲಾವಧಿ ಜಾತ್ರೆಯ ಸಂದರ್ಭ ದೇವರ ಕಂಬುಲಗದ್ದೆಯಲ್ಲಿ ಕಂಬುಲ ನಡೆಯುವುದನ್ನು ಕಾಣಬಹುದು. ಅರಮನೆ, ಬೀಡು, ಗುತ್ತುಗಳ ಅಧಿಕಾರಿಗಳಾದ ಬಲ್ಲಾಳ, ಹೆಗ್ಗಡೆಯವರು ತಮ್ಮ ಸಾಮಾಜಿ ಪ್ರತಿಷ್ಠೆಯ ಅಂಗವಾಗಿಯೂ ಕಂಬುಲ ಕ್ರೀಡೆಯನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ತುಳುನಾಡಿನಲ್ಲಿ ಆರಂಭದಿಂದಲೂ ಭೂಮಿಯ ಒಡೆತನದ ಹಕ್ಕುಗಳು ಜೈನ, ಬಂಟ ವರ್ಗಕ್ಕೆ ಸೇರಿರುವುದರಿಂದ ಕಂಬುಲವೂ ಕೂಡ ಇವರ ಸುಪರ್ದಿಗೆ ತಾನಾಗಿ ಸೇರಿಕೊಂಡಿತು.

ಸಿರಿ ಪಾಡ್ದನದಲ್ಲಿ ಚೆನ್ನೆಮಣೆ ಆಟದ ಜೊತೆಗೆ ‘ಎಕ್ಕುಡಿ’, ‘ಪೊಕ್ಕಡಿ’, ‘ಚದುರಂಗ’ದ ಆಟಗಳ ಉಲ್ಲೇಖವಿದೆ. ಇದೇ ರೀತಿ ಕೋಟಿ ಚೆನ್ನಯ, ಬಾಮಕುಮಾರ ಸಂಧಿಯಲ್ಲಿ ‘ಚೆಂಡಾಟ’ದ ಉಲ್ಲೇಖವು ಕಂಡುಬಂದರೆ, ಕೋರ್ದಬ್ಬು ಪಾಡ್ದನದಲ್ಲಿ ‘ಕುಟ್ಟಿದೊಣ್ಣೆ’ ಆಟದ ಪ್ರಸ್ತಾಪವಿದೆ. ಮಂಜೊಟಿಗೋಣಕ ಪಾಡ್ದನದಲ್ಲಿ ‘ಕೋಲಿ ಅಂಕ’ದ ಉಲ್ಲೇಖವಿದ್ದರೆ, ಪೊವಲಕ್ಕೆ ಪಾಡ್ದನದಲ್ಲಿ ‘ಎಕ್ಕಡಿ ಗೊಬ್ಬಿನ’ ಉಲ್ಲೇಖವಿದ್ದು ಇದನ್ನು ವಯಸ್ಸಿಗೆ ಬಂದ ಹೆಂಗಸರು ಮಾತ್ರ ಆಡಬೇಕೆಂದು ಹೇಳಲಾಗಿದೆ. ಚೆನ್ನೆಮಣೆ ಆಟವೊಂದರಲ್ಲಿಯೇ ೨೮ ಪ್ರಕಾರದ ಆಟಗಳಿದ್ದು, ಅವುಗಳಲ್ಲಿ ೧೮ ಪ್ರಕಾರಗಳ ಮಾಹಿತಿಯನ್ನು ಜಾನಪದ ಸಂಶೋಧಕರು ಗುರುತಿಸಿದ್ದಾರೆ[38]. ಇದು ವ್ಯಕ್ತಿಗೆ ಸಾಮಾಜಿಕ ಆರ್ಥಿಕ, ಧಾರ್ಮಿಕ ವಿವರಗಳನ್ನು ನೀಡುವುದರ ಜೊತೆಗೆ, ಸಮಗ್ರ ಸಂಸ್ಕೃತಿಯ ಪರಿಚಯವನ್ನೂ ಮಾಡಿಸುತ್ತದೆಂದು ಹೇಳಲಾಗಿದೆ. ಈ ಎಲ್ಲಾ ಆಟ, ಕ್ರೀಡೆಗಳು ಒಟ್ಟೂ ಜನಾಂಗಕ್ಕೆ ಸಂಬಂಧಿಸಿದ್ದು ಅವರ ದೈಹಿಕ, ಮಾನಸಿಕ ಸಂವರ್ಧನೆಗೆ ಪೋಷಕವಾಗಿರುತ್ತವೆ. ತುಳುನಾಡಿನಲ್ಲಿ ಇವು ಸಮಾಜದ ಅಭಿರುಚಿಯ ಅಂಗವಾಗಿ ಬೆಳೆದುಕೊಂಡು ಬಂದಿದ್ದು ಒಟ್ಟೂ ಧಾರ್ಮಿಕ ಪರಿಕಲ್ಪನೆಗಳೊಡನೆ ಹಾಸುಹೊಕ್ಕಾಗಿ ಬೆಸೆದುಕೊಂಡಿರುವುದನ್ನೂ ಕಾಣಬಹುದು. ಹೀಗೆ ತುಳು ಸಂಸ್ಕೃತಿಯ ಒಳ ಆಯಾಮಗಳ ಅಧ್ಯಯನದಿಂದ ಅದರ ಜೀವನದೃಷ್ಟಿಯೇನೆಂಬುದನ್ನು ಅರ್ಥೈಸಿಕೊಳ್ಳಬಹುದು. ವಿಶಾಲವಾದ ಮಾನವೀಯ ನೆಲೆಯಲ್ಲಿ ಪರಸ್ಪರ ಸಮನ್ವಯ, ಸಾಮರಸ್ಯ, ಐಕ್ಯತೆಗಳ ಮೂಲಕ, ನೂತನ ದೃಷ್ಟಿಕೋನವೊಂದನ್ನು ಪ್ರಚುರಪಡಿಸಿ ಅದು ವಿಶ್ವಕ್ಕೆ ಮಾದರಿಯಾಗಿದೆಯೆನ್ನಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] S.I.I. Vol. : VII, No. 273

[2] S.I.I. Vol. VII, No. 185, A.R.No. : 23 – B. of 1901

[3] ಅದೇ

[4] S.I.I. Vol. VII, No. 273

[5] ಡಾ. ರಮೇಶ್ ಕೆ.ವಿ. : ತುಳುನಾಡಿನ ಇತಿಹಾಸ ಪುಟ ೧೩೦.

[6] S.I.I. Vol. VII, Nos. 226, 227

[7] Dr. P. Gururaja Bhat : STHC Plate, 388 (b)

[8] S.I.I. Vol. IX pt II, No. 457

[9] ಡಾ. ರಮೇಶ್ ಕೆ.ವಿ. ಮತ್ತು ಶರ್ಮ ಎಂ.ಜೆ : ತುಳುನಾಡಿನ ಅರಸು ಮನೆತನಗಳು ಪುಟ ೫೮, ೧೯೮೫, ಶ್ರೀ ಧ.ಮಂ. ಪ್ರಕಾಶನಮಾಲೆ, ಉಜಿರೆ

[10] S.I.I. Vol. IX pt II, No. 621

[11] ಶೀನಪ್ಪ ಹೆಗ್ಡೆ ನಂದೊಳ್ಗೆ ಅಮುಣಿಂಜೆ ಗುತ್ತು (ಸಂ.), ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು ಪುಟ ೭೦, ೧೯೮೧

[12] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ ಪುಟ. ೧೩೨.

[13] S.I.I. Vol. VII, No. 312,247,251

[14] ತುಳುನಾಡಿನಲ್ಲಿರುವ ತೋಳಹ ಅರಸರ ಅರಮನೆ, ಮೂಡಬಿದಿರೆಯ ಚೌಟರ ಅರಮನೆ, ಅಳದಂಗಡಿಯ ಅಜಿಲರ ಅರಮನೆಗಳನ್ನೂ, ಕೂಳೂರು, ಎರ್ಮಾಳ್, ಪಡುಬಿದ್ರಿ ಅರಸರ ಮನೆಗಳನ್ನೂ ಪರಿಶೀಲಿಸಬಹುದು.

[15] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ, ಪುಟ ೨೩೩.

[16] ಅದೇ, ಪುಟ ೨೩೭

[17] ಅದೇ, ಪುಟ ೨೩೮

[18] ಅದೇ, ಪುಟ ೨೩೯

[19] ಅದೇ, ಪುಟ ೧೪೫ – ೧೫೫.

[20] ಅದೇ, ಪುಟ ೩೬೧.

[21] ಅದೇ, ಪುಟ ೨೬೨.

[22] ಡಾ. ರಮೇಶ ಕೆ.ವಿ. : ತುಳುನಾಡಿನ ಇತಿಹಾಸ, ಪುಟ ೧೩೪.

[23] ಅದೇ, ಪುಟ ೭೩ -೭೫

[24] ಅದೇ

[25] ಅದೇ

[26] ARSIE – 1931 – 32, No. 296, ಡಾ. ರಮೇಶ್ ಕೆ.ವಿ. : ತುಳುನಾಡಿನ ಶಾಸನಗಳು, ಸಂಖ್ಯೆ ೧

[27] ಡಾ. ಗುರುರಾಜ ಭಟ್ಟ ಪಿ. : STHC, Preview, Plate XVI

[28] S.I.I. Vol. VII, Nos. 330, 335, 381

[29] ಡಾ. ರಮೇಶ ಕೆ.ವಿ. : ತುಳುನಾಡಿನ ಇತಿಹಾಸ, ಪುಟ ೧೩೬.

[30] ಮಂಜುವಾಣಿ ಮಾಸಪತ್ರಿಕೆ, ಜುಲೈ ೧೯೯೪, ನೋಡಿ ‘ಗೇರುಸೊಪ್ಪೆ ಸಾಳುವ ಮಲ್ಲನ ಬೆಳ್ಳಿಯ ನಾಣ್ಯ’ – ಎಸ್.ಡಿ.ಶೆಟ್ಟಿ

[31] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ, ಪುಟ ೨೭೩ – ೨೭೫.

[32] ಡಾ. ಎಸ್.ಡಿ.ಶೆಟ್ಟಿ : ದ.ಕ. ಜಿಲ್ಲೆಯ ಜೈನಧರ್ಮ ಪರಂಪರೆ, ಪುಟ ೪೧, ಶ್ರೀ ಧ.ಮಂ. ಪ್ರಕಾಶನಮಾಲೆ, ೨೦೦೦.

[33] ಅದೇ, ಪುಟ ೪೫

[34] ಅದೇ, ಪುಟ ೩೮.

[35] S.I.I. VII, No. 369

[36] ಪೊಲಿ – ಕೆನರಾ ೨೦೦೦, ಪುಟ ೩೯೮, ಲೇಖನ ನೋಡಿ : ಡಾ. ಗಣನಾಥ ಎಕ್ಕಾರು, ಜನಪದ ಆಟಗಳ ಸಾಂಸ್ಕೃತಿಕ ಅಧ್ಯಯನ

[37] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ, ಪುಟ ೨೫೪.

[38] ಪೊಲಿ – ಕೆನರಾ ೨೦೦೦, ಪುಟ ೩೯೮, ಅದೇ.