ತುಳುನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಚರಿತ್ರೆಯ ಪೂರ್ವಕಾಲ ಮತ್ತು ಚರಿತ್ರೆಯ ಪ್ರಸ್ತುತ ಕಾಲವೆಂದು ಎರಡು ನೆಲೆಗಳಲ್ಲಿ ವಿಶ್ಲೇಷಿಸಬಹುದು. ಚರಿತ್ರೆಯ ಪೂರ್ವಕಾಲಕ್ಕೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಾಧಾರಗಳು ಇತ್ತೀಚೆಗೆ ನಮ್ಮ ಸಂಶೋಧಕರಿಂದ ಬೆಳಕಿಗೆ ಬರುತ್ತವೆ[1]. ಕ್ರಿಸ್ತಪೂರ್ವ ಕಾಲದಲ್ಲಿ ತುಳುನಾಡಿನಲ್ಲಿ ವಾಸವಿದ್ದ ಜನರು, ಬೃಹತ್ ಶಿಲಾಯುಗ ಮತ್ತು ಕಬ್ಬಿಣಯುಗಕ್ಕೆ ಸೇರಿದವರಾಗಿದ್ದು ಅವರ ವಾಸ್ತವ್ಯಕ್ಕೆ ಸಂಬಂಧಿಸಿದ ಸಮಾಧಿ ಸ್ಥಳಗಳು, ಗವಿಗಳು, ಆಯುಧಗಳು, ಮಣ್ಣಿನ ಗಡಿಗೆ ಪಾತ್ರೆಗಳು, ಬೇರೆ ಬೇರೆ ಪ್ರದೇಶಗಳಲ್ಲಿ ದೊರೆತಿವೆಯಾದರೂ ಆ ಜನರ ಸಾಂಸ್ಕೃತಿಕ ಬದುಕು ಹೇಗಿದ್ದವೆಂದು ತಿಳಿದುಕೊಳ್ಳಲು ಸಂಶೋಧನಾ ಕಾರ್ಯಗಳು, ಉತ್ಖನನಗಳು ಇನ್ನೂ ಚುರುಕಾಗಿ ನಡೆಯಬೇಕಾದ ಅಗತ್ಯವಿದೆ. ಕಾರ್ಕಳ ತಾಲೂಕಿನ ಪರ್ಪಲೆ ಬೆಟ್ಟ, ಧರೆಗುಡ್ಡ, ಕಣಜಾರು, ಬೆಟ್ಟಪ್ರದೇಶ, ರೆಂಜಾಳದ ಬೋರುಕಟ್ಟೆ, ಮೂಡಬಿದರೆಯ ಹತ್ತಿರದ ಕೊಣಾಜೆ ಮೊದಲಾದ ಪ್ರದೇಶಗಳು[2] ಹಾಗೂ ಉಪ್ಪಿನಂಗಡಿಯ ನೇತ್ರಾವತಿ ನದಿಯ ದಡ, ಬಂಟ್ವಾಳದ ಮಾಣಿ[3] ಪ್ರದೇಶಗಳಲ್ಲಿ ಶಿಲಾಯುಗ ಸಂಸ್ಕೃತಿಯ ಮಾನವನ ಅವಶೇಷಗಳು ಬೆಳಕಿಗೆ ಬಂದಿವೆ.

ತುಳುನಾಡಿನ ಪಶ್ಚಿಮಘಟ್ಟ ಮತ್ತು ಕರಾವಳಿ ಪ್ರದೇಶಗಳಲ್ಲಿ ಹಿಂದೆ ದಟ್ಟವಾದ ಕಾಡುಗಳು ಬೆಳೆದಿದ್ದು ಕೊಡಲಿಯ ಉಪಯೋಗವಿಲ್ಲದೆ ಆದಿಮಾನವನು ಈ ಪ್ರದೇಶದಲ್ಲಿ ಬಂದು ನೆಲೆಸುವುದು ಅಸಂಭವವಾಗಿತ್ತೆಂದು ಕೆಲವು ಸಂಶೋಧಕರು ಭಾವಿಸಿದ್ದರು[4]. ಹೀಗಾಗಿ ಕಬ್ಬಿಣದ ಕೊಡಲಿಯ ಉಪಯೋಗ ಬಂದ ಬಳಿಕವೇ ಆದಿಮಾನವನು ಇಲ್ಲಿಗೆ ಬಂದಿರಬೇಕೆಂದು ಭಾವಿಸಿದ್ದರು. ಇದಕ್ಕೆ ಪೂರಕವಾಗಿ ಈ ಪ್ರದೇಶವು ಪರಶುರಾಮನಿಂದ ಸೃಷ್ಟಿಸಲ್ಪಟ್ಟಿತ್ತೆಂಬ ಪುರಾಣದ ಐತಿಹ್ಯಗಳನ್ನು ಸಾಂದರ್ಭಿಕ ಸಾಕ್ಷಿಗಳೆಂದು ಪರಿಗಣಿಸಿದ್ದರು. ಆದರೆ ಈಗ ಬೆಳಕಿಗೆ ಬಂದಿರುವ ಪುರಾತನ ಅವಶೇಷಗಳು ಈ ನಿರ್ಧಾರವನ್ನು ಬದಲಿಸುವಂತೆ ಮಾಡಿದೆ. ಗೋವಾ, ಕೊಂಕಣ, ಕೇರಳ ಪ್ರದೇಶಗಳಲ್ಲಿ ಶಿಲಾಯುಗದ ಆಯುಧಗಳು ದೊರೆತ ಬಳಿಕ ತುಳುನಾಡಿನ ಪ್ರದೇಶವು ಕೂಡ ಆದಿಮಾನವನ ವಾಸ್ತವ್ಯದ ನೆಲೆಯಾಗಿತ್ತೆಂದು ಹೇಳುವುದಕ್ಕೆ ಸಾಧ್ಯವಾಯಿತು. ಅಷ್ಟೇ ಅಲ್ಲ ೧೯೮೩ರಲ್ಲಿ ಡಾ. ಪಿ. ರಾಜೇಂದ್ರನ್ ಅವರು ನೇತ್ರಾವತಿ ನದಿ ಪ್ರದೇಶದ ಉಪ್ಪಿನಂಗಡಿ ಮತ್ತು ಮಾಣಿಯಲ್ಲಿ ಸಂಶೋಧನಾ ಕಾರ್ಯಗಳನ್ನು ಕೈಗೊಂಡಾಗ ಮಧ್ಯ ಹಾಗೂ ಅಂತ್ಯ ಶಿಲಾಯುಗ ಸಂಸ್ಕೃತಿಗೆ ಸಂಬಂಧಿಸಿದ ಶಿಲಾಯುಧಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು. ಈ ಆಧಾರದಂತೆ ಅಂತ್ಯ ಶಿಲಾಯುಗದ ಹೊತ್ತಿಗೆ ಮಾನವನು ಇಲ್ಲಿ ನೆಲೆಸಿದ್ದನೆಂದೂ ಬೇಟೆಯೇ ಆತನ ಮುಖ್ಯ ಕಸುಬಾಗಿತ್ತೆಂದೂ ಹೇಳಲು ಸಾಧ್ಯವಾಯಿತು.

ಬೃಹತ್ ಶಿಲಾ ಚಪ್ಪಡಿಗಳನ್ನು ಜೋಡಿಸಿ ನಿರ್ಮಿಸಿರುವ ಶಿಲಾಕೋಣೆಗಳು, ಮೃತ್ಪಾತ್ರೆಗಳು, ಸಮಾಧಿಗಳು, ಕಲ್ಲಿನ ಬಂಡೆಯನ್ನು ಕೊರೆದು ಮಾಡಿರುವ ಗುಹಾಸಮಾಧಿಗಳು ಬೋರ್ಕಟ್ಟೆ, ಕೊಣಾಜೆಗಳಲ್ಲಿ ಕಂಡುಬಂದಿವೆ. ಆ ಕಾಲದಲ್ಲಿ ಮನುಷ್ಯನು ಮೃತನಾದಾಗ ಆತನನ್ನು ಸುಟ್ಟು, ಮೃತನ ಆಸ್ತಿಗಳನ್ನು ಗೋಲಾಕಾರದ ದೊಡ್ಡ ಗಡಿಗೆಗಳಲ್ಲಿ ತುಂಬಿ ಹೂಳುವ ಪದ್ಧತಿಯು ರೂಢಿಯಲ್ಲಿತ್ತು. ಇಂಥ ಏಳು ಮೃತ್ಪಾತ್ರೆಗಳು ಪುತ್ತೂರಿನ ನಿವೇಶನವೊಂದರಲ್ಲಿ ದೊರೆಕಿವೆ[5]. ಅಲ್ಲಿಯೇ ಮೂರು ಕಾಲುಗಳುಳ್ಳ ಗಡಿಗೆಗಳು, ಅಗಲ ಬಾಯಿಯ ಬಟ್ಟಲಿನಾಕಾರದ ಮಣ್ಣಿನ ಪಾತ್ರೆ, ಆಟಿಕೆಗಳನ್ನು ಹೋಲುವ ಅತಿ ಚಿಕ್ಕ ಮಡಿಕೆ-ಕುಡಿಕೆಗಳು, ಚಿನ್ನದ ಮಣಿಗಳು, ಹಿತ್ತಾಳೆಯ ಚೂರುಗಳು ಕಂಡುಬಂದಿರುವುದು ಕುತೂಹಲದ ವಿಷಯವಾಗಿದೆ. ಇಂಥ ವಸ್ತುಗಳು ಬೇಳೂರು, ವಡ್ಡರ್ಸೆ, ಹಿಡಯಡಕ ಮುಂತಾದ ಕಡೆಗಳಲ್ಲಿಯೂ ಕಂಡುಬಂದಿವೆ. ಇವು ಬೃಹತ್ ಶಿಲಾಯುಗ ಮತ್ತು ಕಬ್ಬಿಣ ಯುಗಕ್ಕೆ ಸಂಬಂಧಿಸಿದ್ದು, ಲೋಹದ ಬಳಕೆ ಮತ್ತು ಆಭರಣಗಳನ್ನು ಧರಿಸಿ ಸಂತೋಷವನ್ನು ವ್ಯಕ್ತಪಡಿಸುವ ಸೌಂದರ್ಯಪ್ರಜ್ಞೆ ಅಂದಿನ ಜನರಲ್ಲಿ ಇದ್ದಿತೆಂದು ಊಹಿಸಬಹುದು. ಇದಕ್ಕಿಂತ ಮುಂದುವರಿದು, ಆ ಕಾಲದ ಸಾಮಾಜಿಕ, ಧಾರ್ಮಿಕ ನೆಲೆಗಳನ್ನು ವಿಶ್ಲೇಷಿಸಲು ನಮಗೆ ಸಾಧ್ಯವಾಗದು.

ಭೌಗೋಳಿಕ ರಚನೆ, ಪ್ರಾಕೃತಿಕ ಸಂಪತ್ತು, ಭೂ-ಶಿಲಾರಚನೆ, ಜಲಸಮೃದ್ಧಿ, ಹವಾಮಾನದ ವೈಪರೀತ್ಯಗಳನ್ನು ಆಧರಿಸಿ ಆಯಾ ಪ್ರದೇಶಗಳ ಸಂಸ್ಕೃತಿಯು ರೂಪುಗೊಳ್ಳುತ್ತದೆ. ತುಳುನಾಡಿನ ಎತ್ತರವಾದ ಪರ್ವತ ಪ್ರದೇಶ, ಇಳಿಜಾರಾದ ಫಲವತ್ತಾದ ಭೂಮಿ, ಸದಾ ಕಾಲ ತುಂಬಿ ಹರಿಯುವ ನದಿಗಳು, ಜಲಾವೃತವಾಗಿರುವ ಕುದುರುಗಳು, ವಿಶಾಲವಾದ ಕರಾವಳಿ ಪ್ರದೇಶ, ವಿಶಾಲವಾದ ಸಮುದ್ರದ ಹರವು… ಇವೆಲ್ಲವೂ ತುಳುನಾಡಿನ ಸಂಸ್ಕೃತಿಯ ವೈವಿಧ್ಯಕ್ಕೆ ಕಾರಣವಾಗಿವೆ. ಅರಣ್ಯಗಳಲ್ಲಿ ಬೇಟೆ, ಪ್ರಾಕೃತಿಕ ಸಂಪತ್ತಿನಿಂದ ಗುಡಿಕೈಗಾರಿಕೆ, ಫಲವತ್ತಾದ ಭೂಮಿಯಲ್ಲಿ ಕೃಷಿ, ಜಲಸಂಪನ್ಮೂಲಗಳಿಂದ ದೊರೆಯುವ ಮೀನು,ಇಲ್ಲಿಯ ಜನರ ಬದುಕನ್ನು ವ್ಯವಸ್ಥೆಗೊಳಿಸಿದೆ. ಕಾಲಕಾಲಕ್ಕೆ ಸುರಿಯುವ ಮಳೆ, ಬದಲಾಗುವ ಋತುಮಾನಗಳು, ಅದಕ್ಕೆ ತಕ್ಕಂತೆ ಪರಿವರ್ತನೆಗೊಳ್ಳುವ ಬದುಕಿನ ಲಯಗಳು, ಇಲ್ಲಿಯ ಜನರ ಸರಳತೆಗೂ ಸಂಕೀರ್ಣತೆಗೂ ಕಾರಣಗಳಾಗಿವೆ. ತುಳುನಾಡಿನ ಚರಿತ್ರೆಯ ಆರಂಭ ಕಾಲದಲ್ಲಿ ಮೂಲದ್ರಾವಿಡ ಸಂಸ್ಕೃತಿಗೆ ಸೇರಿದ ಕೊರಗ, ಪರವ, ಪಂಬರ, ನಲಿಕೆ, ಮಲೆಕುಡಿಯ ಮುಂತಾದಜನ ಸಮುದಾಯಗಳು ವಾಸವಾಗಿದ್ದವು. ಇವರು ತಮ್ಮದೇ ಆದ ಮೂಲಸಂಸ್ಕೃತಿಯ ಕೆಲವು ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಅವರ ಅಧ್ಯಯನದಿಂದ ತಿಳಿದುಬರುತ್ತದೆ. ತುಳು ಇವರ ಮಾತೃಭಾಷೆಯಾಗಿದ್ದು, ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಯಾಗಿದೆ. ಇವರಲ್ಲಿ ಕೊರಗರ ಭಾಷೆ ಮತ್ತು ಆ ಸಂಸ್ಕೃತಿಯ ಬಗ್ಗೆ ತಕ್ಕಮಟ್ಟಿಗೆ ಅಧ್ಯಯನಗಳು ನಡೆದಿವೆ. ಕೊರಗರ ಭಾಷೆಯು ಸ್ವತಂತ್ರ ಭಾಷೆ ಮಾತ್ರವಲ್ಲ, ಅದು ದಕ್ಷಿಣ ದ್ರಾವಿಡ ಭಾಷೆಗಳ ಉಪವರ್ಗಕ್ಕೆ ಸೇರುತ್ತದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ[6]. ತಮಿಳು ಪ್ರಾಚೀನ ಗ್ರಂಥ ಅಗನಾನೂರಿನಲ್ಲಿ ತುಳುನಾಡನ್ನು ಕೋಶರರೆಂಬ ಜನರು ಆಳುತ್ತಿದ್ದರೆಂದು ಹೇಳಲಾಗಿದೆ[7]. ‘ಮೆಯ್ಯಲಿ ಪೆರುಂಪೂಣ್ ಚೆಮ್ಮರ್ಕೋಶರ್ ತುಳುನಾಡು’ ಅಂದರೆ ‘ಸುವರ್ಣ ಆಭರಣಗಳಿಂದ ಅಲಂಕೃತವಾದ ಕೋಶರ್ ಜನಾಂಗದ ತುಳುನಾಡು’ ಎಂದು ಸಂಘಂ ಸಾಹಿತ್ಯದಲ್ಲಿಯೂ ಉಲ್ಲೇಖಿಸಲಾಗಿದೆ[8]. ಇವರು ಸತ್ಯಸಂಧರೂ, ಪ್ರಾಮಾಣಿಕರೂ ಶೌರ್ಯ ಪರಾಕ್ರಮಗಳಲ್ಲಿ ಹೆಸರುವಾಸಿಗಳೂ ಆಗಿದ್ದರು. ಇವರು ತಮಿಳು ಅರಸನಾದ ನನ್ನನ್ ಎಂಬಾತನನ್ನು ತಮ್ಮೂರಿಗೆ (ತುಳುನಾಡಿಗೆ) ಸ್ವಾಗತಿಸಿದ್ದರು[9]. ಶಿಲಪ್ಪದಿಗಾರಂ ತಮಿಳು ಗ್ರಂಥದಲ್ಲಿ ಸೆಂಗುಟ್ಟುವನ್ ಎಂಬ ದೊರೆ, ವಾಂಕಿಯಲ್ಲಿ ಪಟ್ಟಣದೇವಿಗೆ ದೇಗುಲವೊಂದನ್ನು ನಿರ್ಮಿಸಿ ಅದರ ಪ್ರಾರಂಭೋತ್ಸವಕ್ಕೆ ಅನೇಕ ಅರಸರು, ಮನ್ನೆಯರನ್ನು ಆಮಂತ್ರಿಸುವಾಗ ಇಲ್ಲಿಯ ಕೋಶರರನ್ನೂ ಆಮಂತ್ರಿಸಿದನೆಂದೂ ಹೇಳಿದೆ[10]. ಈ ಕೋಶದ ಜನಾಂಗವೆಂದರೆ, ತುಳುನಾಡಿನ ಮೂಲನಿವಾಸಿಗಳಲ್ಲಿ ಒಬ್ಬರಾದ ಕೊರಗರಿರಬೇಕೆಂದೂ, ಅವರು ಸತ್ಯಸಂಧರೂ, ಪ್ರಾಮಾಣಿಕರೂ, ಪ್ರಾಚೀನ ಗಣ ಪದ್ಧತಿಯನ್ನೂ, ಮಾತೃಪ್ರಧಾನ ಕುಟುಂಬ ಪದ್ಧತಿಯನ್ನೂ ಹೊಂದಿದ್ದರೆಂದೂ ಕೆಲವರು ಭಾವಿಸುತ್ತಾರೆ[11], ಇದಕ್ಕೆ ಪೂರಕವಾಗಿರುವ ಐತಿಹ್ಯವೊಂದನ್ನು ಆಧರಿಸಿ, ಕೊರಗರ ಮುಖ್ಯಸ್ಥ ಹುಬಾಸಿಕನು ಮಯೂರಶರ್ಮನೆಂಬ ಅರಸನನ್ನು ಸೋಲಿಸಿದನೆಂದೂ, ಅವನ ಉತ್ತರಾಧಿಕಾರಿಗಳು ಹುಬಾಸಿಕನನ್ನು ಸೋಲಿಸಿ, ಅವನ ಬೆಂಬಲಿಗರನ್ನು (ಕೊರಗರು) ಕಾಡುಮೇಡುಗಳಿಗೆ ಓಡಿಸಿದರೆಂದೂ ಹೇಳಲಾಗುತ್ತದೆ. ಇದೇ ರೀತಿ ಇನ್ನೊಂದು ಐತಿಹ್ಯದಂತೆ ಹುಬಾಸಿಕನು ಮಂಜೇಶ್ವರದ ಅರಸ ಅಂಗಾರವರ್ಮನನ್ನು ಸೋಲಿಸಿದನೆಂದೂ, ಆಗ ಸೋತ ಅರಸನು ತನ್ನ ಮಗಳನ್ನು ಆತನಿಗೆ ಕೊಡುವಂತೆ ನಟಿಸಿ, ದಿಬ್ಬಣ ಬಂದಾಗ ಮದುಮಗನ ಸಹಿತ ಸಾಮೂಹಿಕ ಕೊಲೆ ನಡೆಸಿದಾಗ, ಅಳಿದುಳಿದವರು ಕಾಡುಮೇಡುಗಳಿಗೆ ಓಡಿಹೋದರೆಂದೂ ಹೇಳಲಾಗುತ್ತಿದೆ. ಈ ಎರಡೂ ಐತಿಹ್ಯಗಳ ಸತ್ಯಾಂಶವೇನೇ ಇರಲಿ, ಸಂಶೋಧಕರು ಭಾವಿಸುವಂತೆ[12], ಇಲ್ಲಿಯ ದ್ರಾವಿಡ ಮೂಲ ಜನಾಂಗವು, ಚೌತ್ತರೇಯ ಸಂಸ್ಕೃತಿಯ ತುಳಿತಕ್ಕೆ ಒಳಗಾಗಿ, ತಮ್ಮ ಸಂಸ್ಕೃತಿಯ ಪರಂಪರೆಯನ್ನು ಮರೆತು, ಗಿರಿ-ಕಂದರಗಳಲ್ಲಿ ವಾಸಿಸಲು ತೊಡಗಿರಬೇಕೆಂದು ಹೇಳಬಹುದು. ಆದರೆ ಕೋಶರರೇ ಕೊರಗರು ಎಂದು ನಿರ್ಧರಿಸುವುದಕ್ಕೆ ಇನ್ನೂ ಸ್ಪಷ್ಟವಾದ ಆಧಾರಗಳು ದೊರೆಯಬೇಕಾಗಿದೆ.

ತುಳುನಾಡಿನ ಇತಿಹಾಸದ ಆರಂಭ ಕಾಲದಲ್ಲಿ ಮೌರ್ಯರ ತುವಾಯ ಶಾತವಾಹನರು, ಕದಂಬರು, ದಕ್ಷಿಣೋತ್ತರ ಕನ್ನಡ ಜಿಲ್ಲೆಗಳನ್ನು ತಮ್ಮ ಆಡಳಿತದ ಕಕ್ಷೆಗೆ ಸೇರಿಸಿಕೊಂಡಿದ್ದರು. ತಾಳಗುಂದದ ಶಾಸನದ ಆಧಾರದಂತೆ[13]ಅವಿಭಕ್ತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಪೂರ್ತಿಯಾಗಿ ಕದಂಬರ ಕೈವಶವಾಗಿತ್ತು. ಇವರ ತರುವಾಯ ಕರ್ನಾಟಕದಲ್ಲಿ ರಾಜ್ಯವಾಳಿದ ಪ್ರತಿಯೊಂದು ಸಾರ್ವಭೌಮ ಅರಸು ಮನೆತವೂ ತುಳುನಾಡನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿರುವುದು, ಇಲ್ಲಿಯ ಚರಿತ್ರೆಯ ಅಧ್ಯಯನದಿಂದ ತಿಳಿದುಬರುತ್ತದೆ. ಮೌರ್ಯ ಸಾಮ್ರಾಟ ಅಶೋಕನ (ಕ್ರಿ.ಪೂ. ೨೭೪-೨೩೫) ಬಂಡೆಗಲ್ಲಿನ ಶಾಸನದಲ್ಲಿ[14] ಆತನ ಸಾಮ್ರಾಜ್ಯದ ಮೇರೆಗಳನ್ನು ಹೇಳುವಾಗ ‘ಸತಿಯ ಪುತ್ರ’ವನ್ನು ಉಲ್ಲೇಖಿಸಿದೆ. ಇದು ತುಳುನಾಡಿರಬಹುದೆಂದು ಹೆಚ್ಚಿನ ವಿದ್ವಾಂಸರ ಅಭಿಮತ. ಆನಂತರ ಸಾತವಾಹನರು ಆಡಳಿತ ನಡೆಸಿದ ತರುವಾಯ, ಕದಂಬರ ಕಾಲದಲ್ಲಿ ಅವರ ಪ್ರತಿನಿಧಿಗಳಾಗಿ, ತುಳುನಾಡಿನ ಅರಸರಾಗಿ ಆಳಿದವರು ಆಳುಪ ಅರಸರು. ಹೆಚ್ಚು ಕಡಿಮೆ ಕ್ರಿಸ್ತಶಕದ ಆರಂಭ ಕಾಲದಿಂದ ಕ್ರಿ.ಶ.ಸು. ೧೫ನೆಯ ಶತಮಾನದಷ್ಟು ದೀರ್ಘಕಾಲ ಆಶ್ರಿತರಾಜರಾಗಿಯೂ, ಸ್ವತಂತ್ರ ರಾಜರಾಗಿಯೂ ಸ್ವಾಯತ್ತತೆಯನ್ನು ಪಡೆದು ಇಲ್ಲಿಯ ಬಹುಮುಖಿ ಸಂಸ್ಕೃತಿಯ ಬೆಳವಣಿಗೆಗೆ ನೆರವಾದರು. ಆರಂಭದಲ್ಲಿ ಇವರ ರಾಜಧಾನಿ ಆಳ್ವಖೇಡವಾಗಿದ್ದು ಆನಂತರ ಮಂಗಳೂರು, ಬಾರಕೂರುಗಳಲ್ಲಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡರು. ಕ್ರಿ.ಶ. ೭ನೆಯ ಶತಮಾನದ ವಡ್ಡರ್ಸೆ ಶಾಸನದಲ್ಲಿ[15]ಇವರದು ಮತ್ಸ್ಯಲಾಂಛನವೆಂದು ಹೇಳಲಾಗಿದೆ. ಇವರು ಸ್ವತಂತ್ರ ನಾಣ್ಯಗಳನ್ನು ಟಂಕಿಸಿದ್ದು ಒಂದು ಬದಿಯಲ್ಲಿ ಎರಡು ಮೀನು, ಶಂಕ, ಪೂರ್ಣಕುಂಭ ಅಥವಾ ಕಾಲುದೀಪವೂ ಇನ್ನೊಂದು ಬದಿಯಲ್ಲಿ ದೇವನಾಗರಿ ಅಥವಾ ಕನ್ನಡ ಲಿಪಿಯಲ್ಲಿ ಪಾಣ್ಡ್ಯಧನಂಜಯ ಎಂಬ ಹೆಸರು ಕಂಡುಬರುತ್ತದೆ. ಚಾಳುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಳುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಟರ ಕಾಲದಲ್ಲಿ ಸ್ವಾಯತ್ತತೆಯನ್ನು ಪಡೆದು ಆಳ್ವಿಕೆ ನಡೆಸುತ್ತಿದ್ದರೂ, ವಿಜಯನಗರ ಆರಸರ ಕಾಲದಲ್ಲಿ ನಗಿರೆ – ಹಾಡುವಳ್ಳಿಯ ಸಾಳುವರು, ತುಂಡರಸರಾಗಿದ್ದ ಕಳಸ – ಕಾರ್ಕಳದ ಭೈರರಸರು, ಬಂಗವಾಡಿಯ ಬಂಗರು, ಪುತ್ತಿಗೆಯ ಚೌಟರು ವೇಣೂರಿನ ಅಜಿಲರು, ಬೈಲಂಗಡಿಯ ಮೂಲರು, ಮುಲ್ಕಿಯ ಸಾವಂತರು, ಇನ್ನಿತರ ಹೆಗ್ಗಡೆ, ಬಲ್ಲಾಳರು ಹಂತ ಹಂತವಾಗಿ ಪ್ರವರ್ಧಮಾನಕ್ಕೆ ಬಂದುದರಿಂದ ಆಲುಪರ ಆಳಿಕೆ, ಕ್ಷೀಣಿಸುತ್ತ ಬಂದು ಪೂರ್ತಿಯಾಗಿ ತಲೆಮರೆಸಿಕೊಂಡಿತು. ಆಲುಪರು ಶೈವ ಮತಸ್ಥರಾದರೂ ಜೈನಮತವನ್ನು ಉದಾರವಾಗಿ ಗೌರವಿಸಿ ಪೋಷಿಸಿಕೊಂಡು ಬಂದಿರುವ ಅಂಶವು ಅವರ ಕಾಲದ ಶಾಸನಗಳಿಂದ ಸ್ಪಷ್ಟವಾಗುತ್ತದೆ.

ಬಹುಮುಖಿ ಸಂಸ್ಕೃತಿಯ ತೌರುಮನೆಯಾಗಿರುವ ಭಾರತ ದೇಶದಲ್ಲಿ ಧರ್ಮಕ್ಕೆ ಅದರದ್ದೇ ಆದ ಅನನ್ಯತೆಯಿದೆ. ಈ ಮಾತನ್ನು ಕರ್ನಾಟಕ ಸಂಸ್ಕೃತಿಗೂ, ತುಳುನಾಡಿನ ಸಂಸ್ಕೃತಿಗೂ ಅನ್ವಯಿಸಿಕೊಳ್ಳಬಹುದು. ಯಾವುದೇ ಸಮಾಜದ ಸಂಸ್ಕೃತಿ ತಂತಾನೇ ಸರಳವಾಗಿರುವುದಿಲ್ಲ. ಏಕಮುಖವಾಗಿರುವುದಿಲ್ಲ. “ಸಂಸ್ಕೃತಿಯು ಏಕಕಾಲದಲ್ಲಿ ಸ್ಥಿರವೂ ಚಲನಶೀಲವೂ ಆಗಿರುತ್ತದೆ”[16]ಎಂಬ ಅಂಶವನ್ನು ಗಮನಿಸಬೇಕು. ಮನುಷ್ಯನ ಬದುಕಿನ ವೈರುಧ್ಯತೆಗೂ, ವ್ಯಾಪ್ತಿಗೂಆತನ ಧರ್ಮಶ್ರದ್ಧೆಯು ಮೂಲ ಕಾರಣವಾಗಿ ನಿಲ್ಲುತ್ತದೆ. ಹೀಗಾಗಿ ಸಂಸ್ಕೃತಿಯನ್ನು ನೋಡುವ, ವ್ಯಾಖ್ಯಾನಿಸಿ ವಿಮರ್ಶಿಸುವ ಕ್ರಮವು ಧಾರ್ಮಿಕ ಪರಿಭಾಷೆಯಿಂದ ಕೂಡಿರುತ್ತದೆ. ಧಾರ್ಮಿಕ ನೆಲೆಯಿಂದಲೇ ನೈತಿಕ ಮೌಲ್ಯಗಳು ಆದರ್ಶಗಳು ಜನ್ಮ ತಳೆಯುತ್ತವೆ. ಧರ್ಮವೆಂದಾಗ ದೇವರ ಕಲ್ಪನೆ ಅದರೊಳಗೆ ನುಸುಳಿಕೊಳ್ಳುತ್ತದೆ. ಧರ್ಮ ಮತ್ತು ದೇವರುಗಳಿಲ್ಲದ ಸಂಸ್ಕೃತಿಯ ಪರಿಕಲ್ಪನೆ ಮಾಡಿಕೊಳ್ಳುವುದು ನಮಗೆ ಎಂದಿಗೂ ಸಾಧ್ಯವಾಗುವುದಿಲ್ಲ. ತುಳುನಾಡಿನಲ್ಲಿ ಇಂದು ಬೌದ್ಧಧರ್ಮವನ್ನುಳಿದು ಇತರ ಎಲ್ಲಾ ಧರ್ಮಗಳು ಚಾಲ್ತಿಯಲ್ಲಿವೆ. ಬೌದ್ಧ ಜೈನ ಧರ್ಮಗಳಂತೂ ಕ್ರಿಸ್ತಶಕದ ಆರಂಭದ ಹೊತ್ತಿಗೆ ಇಲ್ಲಿಗೆ ಬಂದು ನೆಲೆಸಿದ್ದವು. ಶೈವಧರ್ಮವಂತೂ ಆಲುಪರ ಧರ್ಮವಾಗಿದ್ದು, ಹೆಚ್ಚುಕಡಿಮೆ ಕ್ರಿಸ್ತ ಪೂರ್ವ ಕಾಲದಲ್ಲಿ ಇಲ್ಲಿಗೆ ಬಂದು ನೆಲೆಸಿರಬೇಕು. ಜೊತೆಗೆ ಗಾಣಪತ್ಯ, ಪಾಶುಪತ, ಭಾಗವತ, ಮಾಧ್ವ, ಕ್ರೈಸ್ತ, ಇಸ್ಲಾಂ ಮತಗಳೂ, ತುಳುನಾಡಿನಲ್ಲಿ ಆಶ್ರಯ ಪಡೆದವು.ಇಲ್ಲಿಯ ಮಣ್ಣಿನ ಸಾರವನ್ನು ಹೀರಿಕೊಂಡು ಸಂವರ್ಧಗೊಂಡವು. ದ್ರಾವಿಡ ಮೂಲ ಸಂಸ್ಕೃತಿಯ ಶಕ್ತಿಪೂಜೆ, ವೃಕ್ಷಪೂಜೆ, ಪ್ರಾಣಿಪೂಜೆ, ಭೂತಾರಾಧನೆಗಳೂ ಇಲ್ಲಿ ಆಚರಣೆಗೆ ಬಂದವು.ಆರ್ಯ – ದ್ರಾವಿಡ ಸಂಸ್ಕೃತಿಯ ಸಮನ್ವಯದಿಂದ ಇನ್ನೂ ಕೆಲವು ಸೂಕ್ಷ್ಮ ಸಂಪ್ರದಾಯಗಳು ಜನರ ಬದುಕಿನಲ್ಲಿ ನೆಲೆಗೊಂಡವು. ಹೀಗೆ ತುಳುವರ ಬದುಕಿನಲ್ಲಿ ಕೊಡು-ಕೊಳ್ಳುವಿಕೆ (ವಿನಿಮಯ) ನಿರಂತರವಾಗಿ ಮತ್ತು ಮುಕ್ತವಾಗಿ ನಡೆಯುತ್ತ ಬಂದು, ಸಂಸ್ಕೃತೀಕರಣವು ತುಳುನಾಡಿನ ವೈಶಿಷ್ಟ್ಯವೆನ್ನುವಷ್ಟರ ಮಟ್ಟಿಗೆ ಗಟ್ಟಿ ಮಾಡಿಕೊಂಡಿತು. ಈ ಸಂಸ್ಕೃತೀಕರಣವು ಕೇವಲ ಯಾಂತ್ರಿಕ ಮಿಶ್ರಣವಾಗದೆ, ರಾಸಾಯನಿಕ ಕ್ರಿಯೆಯಾಗಿ ಹೊರಹೊಮ್ಮಿತು. ಇದರಿಂದ ಧಾರ್ಮಿಕ ಸಮನ್ವಯ, ಐಕ್ಯ, ಪರಸ್ಪರ ನಂಬಿಕೆ, ಸೌಹಾರ್ದತೆಗಳ ತಳಪಾಯದ ಮೇಲೆ ತುಳು ಸಂಸ್ಕೃತಿಯು ಹರಳು ಗಟ್ಟಿ ಅರಳಿಕೊಂಡಿರುವ ಅಂಶವು ಅಧ್ಯಯನದಿಂದ ತಿಳಿದುಬರುತ್ತದೆ.

ತುಳುನಾಡಿನ ಚರಿತ್ರೆಯನ್ನು ಅವಲೋಕಿಸಿದರೆ ಕ್ರಿ.ಶ. ಆರಂಭದ ಕಾಲಘಟ್ಟದಲ್ಲಿ ಬೌದ್ಧ, ಜೈನಧರ್ಮಗಳು ಆಗಮಿಸಿ ಇಲ್ಲಿ ಸ್ಥಿರೀಕರಣಗೊಂಡಿದ್ದವೆಂದು ಹೇಳಬಹುದು. ಆದರೆ ಆರ್ಯೀಕರಣ ಎಂದಾಯಿತೆಂಬುದು ತಿಳಿಯದ ವಿಚಾರ. ಕ್ರಿ.ಪೂ. ೧ನೆಯ ಶತಮಾನದಲ್ಲಿ ಆಳುತ್ತಿದ್ದ ಶಾತವಾಹನರು ಬ್ರಾಹ್ಮಣರಾಗಿದ್ದು, ಬನವಾಸಿಯವರೆಗೆ ತಮ್ಮ ರಾಜ್ಯವನ್ನು ಹೊಂದಿದ್ದರು. ಮುಂದೆ ಕದಂಬರ ಆಳ್ವಿಕೆಯ ಕಾಲಕ್ಕೆ ಭಾರೀ ಪ್ರಮಾಣದಲ್ಲಿ ಆರ್ಯರ ವಸತಿ ತುಳುನಾಡಿನಲ್ಲಿ ಆಯಿತೆಂಬುದನ್ನು ಸ್ಕಾಂದ ಪುರಾಣಾಂತರ್ಗತವಾದ ನಂಬಲರ್ಹ ಪರಂಪರೆಯ ಆಧಾರದ ಮೇಲೆ ಚರಿತ್ರೆಕಾರರು ನಿರ್ಧರಿಸಿದ್ದಾರೆ[17]. ಬೌದ್ಧ ಜೈನ ಧರ್ಮಗಳೆರಡೂ ಉತ್ತರ ಭಾರತದ ಶ್ರವಣ ಪರಂಪರೆಗೆ ಸೇರಿದವುಗಳಾಗಿದ್ದು,ಆ ಕಾಲದ ಧಾರ್ಮಿಕ ಜರೂರಿನಿಂದ ಉಗಮಗೊಂಡು ಜನಸಾಮಾನ್ಯರ ಅದರಲ್ಲೂ ಕೆಳವರ್ಗದ ಗಮನವನ್ನು ಸೆಳೆದುಕೊಂಡಿದ್ದವು. ಇವು ಕರ್ನಾಟಕಕ್ಕೆ ಆಗಮಿಸಿ, ತುಳುನಾಡಿಗೆ ಕಾಲಿರಿಸಿದಾಗ, ಸ್ಥಳೀಯ ಜನರನ್ನು ತೀವ್ರವಾಗಿ ಆಕರ್ಷಿಸಿರಬೇಕು. ಏಕೆಂದರೆ ಬೌದ್ಧಧರ್ಮವನ್ನು ಸ್ವೀಕರಿಸಿದ ಅಶೋಕನು (ಕ್ರಿ.ಪೂ. ೨೭೪ – ೨೩೫) ರಕ್ಷಿತನೆಂಬ ಬೌದ್ಧಭಿಕ್ಷುವನ್ನು ಧರ್ಮಪ್ರಚಾರಕ್ಕಾಗಿ ವನವಾಸಿಗೆ (ಕರಾವಳಿಯ ಬನವಾಸಿ) ಕಳುಹಿಸಿದಾಗ, ಅರವತ್ತು ಸಾವಿರ ಜನರು ಆ ಧರ್ಮವನ್ನು ಸ್ವೀಕರಿಸಿದರೆಂದೂ, ಮೂವತ್ತೇಳು ಸಾವಿರ ಜನರು ಬೌದ್ಧಭಿಕ್ಷುಗಳಾದರೆಂದೂ ಹೇಳಲಾಗಿದೆಯಲ್ಲದೆ ರಕ್ಷಿತನು ಸ್ವತಃ ಐದುನೂರು ಬೌದ್ಧವಿಹಾರಗಳನ್ನು ನಿರ್ಮಿಸಿದನೆಂದೂ ಹೇಳಿದೆ[18]. ಇದು ತೀರ ಸರಳ ಹೇಳಿಕೆಯಾಗಿರದೆ ಆ ಕಾಲದ ಜನರು ಹೊಸ ಧರ್ಮಕ್ಕೆ ಹೇಗೆ ಪಲ್ಲಟಗೊಳ್ಳುತ್ತಿದ್ದರೆಂಬ ಮಹತ್ವದ ಅಂಶಕ್ಕೆ ಸಾಕ್ಷಿಯಾಗಿದೆಯೆನ್ನಬಹುದು.ಇದೇ ರೀತಿ ಕ್ರಿ.ಪೂ. ೧೦೧ – ೭೭ರಲ್ಲಿ ಸಿಂಹಳದಲ್ಲಿ ಆಳೀದ ದುಟ್ಟಗಾಮಿಣಿ ತನ್ನ ರಾಜಧಾನಿ ಅನುರಾಧಪುರದಲ್ಲಿ ಮಹಾಸ್ತೂಪವನ್ನು ನಿರ್ಮಿಸುವ ಸಮಾರಂಭಕ್ಕೆ ಬನವಾಸಿಯಿಂದ ಥೇರ ಚಂದ್ರಗುಪ್ತನ ನೇತೃತ್ವದಲ್ಲಿ ೮೦ ಸಾವಿರ ಭಿಕ್ಷುಗಳು ಹೋದ ವಿಚಾರ ‘ಮಹಾವಂಸ’ ಗ್ರಂಥದಲ್ಲಿದೆ[19]. ಚರಿತ್ರೆಕಾರರು ಊಹಿಸಿರುವಂತೆ, ಸತಿಯಪುತದ (ತುಳುನಾಡು) ಉಲ್ಲೇಖ ಅಶೋಕನ ಶಾಸನದಲ್ಲಿ ಬಂದಿರುವುದರಿಂದ, ಬೌದ್ಧಭಿಕ್ಷುಗಳು ಧರ್ಮಪ್ರಚಾರಕ್ಕೆ ತುಳುನಾಡಿಗೂ ಬಂದಿರಬೇಕೆಂದು ಹೇಳಬಹುದು. ಹಾಗೆ ಬಂದಾಗ ಅನೇಕ ಜನರು ಬೌದ್ಧಧರ್ಮವನ್ನು ಸ್ವೀಕರಿಸಿರಬೇಕು. ಇದನ್ನು ದೃಢೀಕರಿಸಬಲ್ಲ ಕೆಲವು ಸಾಕ್ಷ್ಯಾಧಾರಗಳು ಬೆಳಕಿಗೆ ಬಂದಿವೆ. ಈ ಹಿಂದೆ ಪ್ರಸ್ತಾಪಿಸಿರುವಂತೆ, ಆಲುಪರು ಶೈವಾರಾಧಕರೂ ಬೌದ್ಧ ಮತಕ್ಕೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದರು. ಮಂಗಳೂರಿನ ಕದರಿಕಾ ವಿಹಾರ, ಅಲ್ಲಿರುವ ಅವಲೋಕಿತೇಶ್ವರ, ಬುದ್ಧ, ಮಂಜುಶ್ರೀ ಲೋಹದ ವಿಗ್ರಹಗಳು, ದೇವಾಲಯದ ಎದುರು ಎಡಭಾಗದಲ್ಲಿ ಬುದ್ಧನ ಕೆತ್ತನೆಯುಳ್ಳ ಚಿಕ್ಕ ಶಿಲಾಸ್ತಂಭ (ಸ್ತೂಪ), ಕದಿರೆಗುಡ್ಡದಲ್ಲಿರುವ ಗವಿಗಳು ನಮಗೆ ಸಾಕ್ಷಿಗಳಾಗಿವೆ. ಅದರಲ್ಲೂ ಅವಲೋಕಿತೇಶ್ವರನ ಪಾದಪೀಠದ ಮೇಲೆ ಒಂಬತ್ತು ಸಾಲುಗಳ ಗ್ರಂಥಲಿಪಿಯ ಶಾಸನವು, ಆಳುಪರಾಜ ಕುಂದವರ್ಮನು ಕ್ರಿ.ಶ. ೯೬೮ರಲ್ಲಿ ಕದರಿಕಾ ವಿಹಾರದಲ್ಲಿ ಲೋಕೇಶ್ವರ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ಮಹತ್ವದ ಸಂಗತಿಯನ್ನು ತಿಳಿಸುತ್ತದೆ[20]. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಕದಿರೆಯ ಬೌದ್ಧ ವಿಹಾರವು ನಾಥಪಂಥೀಯರ ಪ್ರಭಾವಕ್ಕೊಳಗಾಗಿ ನಾಥಪಂಥದ ಮತವಾಗಿ ಪರಿವರ್ತಿತವಾಗಿರಬೇಕೆಂದು ಹೇಳಲಾಗುತ್ತಿದೆ[21]. ಇದರಿಂದ ಮಂಜುಶ್ರೀ ಬೋಧಿಸತ್ವನ ಹೆಸರು ಪರಿವರ್ತಿತವಾಗಿ ಮಂಜುನಾಥ ಎಂದಾಯಿತು. ಇದರ ಜೊತೆಗೆ ಮೂಡಬಿದಿರೆಯ ಪುತ್ತಿಗೆಯಲ್ಲಿ ಅಕ್ಷೋಭ್ಯ ಬೋಧಿಸತ್ವನ ವಿಗ್ರಹ ಬೆಳಕಿಗೆ ಬಂದಿರುವುದು[22], ಉಡುಪಿ ಸಮೀಪ ಕಾಪು ಮೂರೂರಿನಲ್ಲಿ ದೊರೆತ ಭೂ-ಸ್ಪರ್ಶಮುದ್ರೆಯ ಬುದ್ಧನ ವಿಗ್ರಹ[23], ಮಂಗಳೂರು ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿರುವ ಬೋಧಿಸತ್ವ ಮಂಜುಘೋಷನ ವಿಗ್ರಹ[24] ಇವು ಬೌದ್ಧಧರ್ಮ ಸ್ಥಿರೀಕರಣಕ್ಕೆ ಸಾಕ್ಷಿಗಳು. ಇದಕ್ಕೆ ಪೂರಕವಾಗಿ, ಹೊನ್ನಾವರದ ಹೈಗುಂದದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಎರಡು ಬುದ್ಧನ ವಿಗ್ರಹಗಳು[25], ಗೋಕರ್ಣ ಸಮೀಪ ತೊರ್ಕೆಯಲ್ಲಿ ಕಂಡುಬಂದ ಬೌದ್ಧ ಗುಹೆಗಳು[26], ಅಂಕೋಲಾ ಬಬ್ರುವಾಡದ ಗುಡಿಯಲ್ಲಿರುವ ಪದ್ಮಾಸನ ಭಂಗಿಯ ಬುದ್ಧನ ವಿಗ್ರಹ[27], ಬನವಾಸಿಯಲ್ಲಿ ಬೆಳಕಿಗೆ ಬಂದಿರುವ ಮೈತ್ರೇಯ ಬುದ್ಧ, ತಾರಾ ಭಗವತಿಯ ವಿಗ್ರಹಗಳೆಲ್ಲವೂ ಬೌದ್ಧಧರ್ಮದ ವ್ಯಪಕ ಪ್ರಭಾವಕ್ಕೆ ನಿದರ್ಶನಗಳಾಗಿವೆ. ಸ್ಥಳೀಯ ಅರಸರು, ಅಧಿಕಾರಿಗಳು, ವ್ಯಾಪಾರಿಗಳು ಮತ್ತು ಜನಸಾಮಾನ್ಯರು ಈ ಧರ್ಮವನ್ನು ಸ್ವೀಕರಿಸಿ ಚೈತ್ಯಾಲಯ, ವಿಹಾರಗಳನ್ನು ನಿರ್ಮಿಸಿದರು. ಬನವಾಸಿಯ ಶ್ರೇಷ್ಠ ಭೂತಪಾಲನಿಂದ ಕಾರ್ಲೆಯಲ್ಲಿ ನಿರ್ಮಿತವಾದ ಬೌದ್ಧ ಚೈತ್ಯಾಲಯವು ಜಂಬೂ ದ್ವೀಪದಲ್ಲೇ ಉತ್ತಮವಾದುದೆಂದು ಹೇಳಲಾಗಿದೆ[28]. ತುಳುನಾಡಿನಲ್ಲಿ ವ್ಯಾಪಕವಾಗಿ ಪ್ರಚಾರಗೊಂಡ ಬೌದ್ಧಧರ್ಮವು ಕ್ರಿ.ಶ. ೯-೧೦ನೆಯ ಶತಮಾನದವರೆಗೂ ತನ್ನ ಪ್ರಭಾವವನ್ನು ಉಳಿಸಿಕೊಂಡಿತಾದರೂ, ಆ ಬಳಿಕ ಆಂತರಿಕ ಮತ್ತು ಬಾಹ್ಯ ಒತ್ತಡಗಳಿಗೆ ಮಣಿದು ಶೈವ – ಪಾಶುಪತ ಧರ್ಮಕ್ಕೆ ಪರಿವರ್ತಿತವಾಯಿತು. ನಾಥ ಪಂಥವು ಮೂಲತಃ ಬೌದ್ಧ ಮಹಾಯಾನ ಶಾಖೆಯ ವಜ್ರಯಾನದಿಂದ ಹುಟ್ಟಿದ ತಾಂತ್ರಿಕ ಸಂಪ್ರದಾಯಕ್ಕೆ ಸೇರಿದೆ. ಆನಂತರ ಇದು ಶೈವಧರ್ಮದ ತಾಂತ್ರಿಕ ಶಾಖೆಯಾಗಿ ಪರಿವರ್ತಿತವಾಯಿತು. ನವನಾಥರು ಹಾಗೂ ಚೌರಾಸೀ ಸಿದ್ಧರನ್ನು ಇವರ ಮೂಲಪುರುಷರೆಂದು ಹೇಳಲಾಗುತ್ತಿದೆ[29]. ಮಂಗಳೂರಿನ ಕದ್ರಿಯಲ್ಲಿ ಮತ್ತು ವಿಟ್ಲದಲ್ಲಿ ಈ ಮತಕ್ಕೆ ಸೇರಿದ ಜೋಗಿ ಸಮಾಜದವರಿದ್ದಾರೆ. ಬೌದ್ಧ ತಾಂತ್ರಿಕ ಪಂಥದಲ್ಲಿ ವಜ್ರಯಾನದ ಜೊತೆಗೆ ಸಹಜಯಾನ, ಕಾಲಚಕ್ರಯಾನಗಳೆಂಬ ಶಾಖೆಗಳಿದ್ದು ಮಂತ್ರಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಮಂತ್ರಗಳು ಅಕ್ಷರಗಳಲ್ಲಿ ಅಡಕವಾಗಿ ಇದರಲ್ಲಿ ಶಕ್ತಿಯು ಸುಪ್ತವಾಗಿದೆಯೆಂದೂ, ಇವುಗಳ ಉಚ್ಚಾರದಿಂದ ಜಾಗೃತಗೊಳ್ಳುತ್ತವೆಂದೂ ಹೇಳಲಾಗುತ್ತಿದೆ[30]. ಇದರಿಂದ ಬುದ್ಧನ ಪೂಜಾಕ್ರಮದಲ್ಲಿ ವೈವಿಧ್ಯ, ಇತರ ದೇವ-ದೇವಿಯರ ಪೂಜೆ, ತಾಂತ್ರಿಕ ಆಚರಣೆಗಳು ಹೆಚ್ಚು ಬಳಕೆಗೆ ಬಂದು ಹಿಂದೂ ಧರ್ಮದ ಮೇಲೂ ಪ್ರಭಾವವನ್ನು ಬೀರಿದವು. ಬುದ್ಧ ಮತ್ತು ಶಿವನ ಕಲ್ಪನೆಯಲ್ಲಿ ಅಭೇದವುಂಟಾಗಿ, ಲೋಕೇಶ್ವರನೂ ತ್ರಿಲೋಕೇಶ್ವರನಾಗಿ ಪರಿವರ್ತಿತನಾದನು. ಮಂಜುಶ್ರೀಗೆ ಬ್ರಹ್ಮನೆಂದೂ, ಬುದ್ಧನಿಗೆ ವ್ಯಾಸನೆಂದೂ ಪುನರ್ನಾಮಕರಣವಾಯಿತು[31]. ಬೌದ್ಧಾಲಯಗಳು ಶಿವದೇವಾಲಯಗಳಾಗಿ, ತಾರ ಭಗವತಿಯ ಗುಡಿಗಳು, ದುರ್ಗಾದೇವತೆಯ ಗುಡಿಗಳಾದವು. ತುಳುನಾಡಿನಲ್ಲಿರುವ ಹೆಚ್ಚಿನ ಶಿವಾಲಯಗಳು ಮತ್ತು ದುರ್ಗಾ ಗುಡಿಗಳು, ಬೌದ್ಧ ವಾಸ್ತುಕಲೆಯ ವೈಶಿಷ್ಟ್ಯವಾದ ಗಜಪೃಷ್ಠಾಕಾರದಲ್ಲಿರುವುದನ್ನು ವಿದ್ವಾಂಸರು ಎತ್ತಿತೋರಿಸಿದ್ದಾರೆ[32]. ತುಳುನಾಡಿನ ಪ್ರಾಚೀನ ಬೆಳ್ಮಣ್ಣು ಶಾಸನದಲ್ಲಿ ಶಾಕ್ತಪಂಥ ದೇವತೆ ವಿಂಧ್ಯಾವಾಸಿನಿಯ ಉಲ್ಲೇಖ[33]. ಮಂಗಳೂರಿನಲ್ಲಿರುವ ಮಂಗಳಾದೇವಿ, ಬಾರಕೂರಿನಲ್ಲಿರುವ ಹಿಂಗುಳಾದೇವಿ, ಪೊಳಲಿಯ ರಾಜರಾಜೇಶ್ವರಿ ಈಗ ಶೈವ ಶಕ್ತಿದೇವತೆಯ ಆರಾಧನಾ ಕ್ಷೇತ್ರಗಳಾಗಿದ್ದರೂ ಮೂಲತಃ ಇವು ಬೌದ್ಧಗುಡಿಗಳಾಗಿರಬೇಕೆಂಬ ವಿದ್ವಾಂಸರ ಅಭಿಪ್ರಾಯವನ್ನು ಅಲ್ಲಗಳೆಯುವಂತಿಲ್ಲ[34]. ಬೌದ್ಧ ಸದ್ಧರ್ಮ ಪುಂಡರೀಕ ಕೃತಿಯಲ್ಲಿ ಅವಲೋಕಿತೇಶ್ವರನ ಬಗ್ಗೆ ಹೇಳುತ್ತ; ಭಕ್ತರ ಭಾವಕ್ಕೆ ತಕ್ಕಂತೆ ಆತನು ರೂಪಧಾರಣೆ ಮಾಡಿ, ಧರ್ಮಬೋಧೆ ಮಾಡುತ್ತಾನೆಂದೂ ಬಯಸಿದಂತೆ ಈಶ್ವರನಿಂದ ಉಪದೇಶಿತರಾಗಬೇಕಾದವರಿಗೆ ಆ ರೂಪದಲ್ಲಿ ಧರ್ಮಬೋಧೆ ಮಾಡುತ್ತಾನೆಂದೂ ಹೇಳಿದೆ[35]. ಇದಕ್ಕೆ ನಿದರ್ಶನವಾಗಿ ಹ್ಯುಯೆನ್‌ತ್ಯಾಂಗನು (ಕ್ರಿ.ಶ. ೭ ಶತಮಾನ) ಕೇರಳದ ಹತ್ತಿರದ ಪೋತಲತ ಪರ್ವತವು ಬೋಧಿಸತ್ವ ಅವಲೋಕಿತೇಶ್ವರನ ನೆಲೆಯೆಂದು ಸ್ಪಷ್ಟಪಡಿಸಿ, ಅಲ್ಲಿ ನೆಲೆಸಿದ ಅವಲೋಕಿತೇಶ್ವರನು ಭಕ್ತರಿಗೆ ಪಾಶುಪತ, ತೀರ್ಥಕ ಅಥವಾ ಮಹೇಶ್ವರನ ಮಾರುವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆಂದು ಹೇಳುವ ಮಾತು ಗಮನಾರ್ಹವಾದುದು[36]. ಹೀಗೆ ಬೌದ್ಧಧರ್ಮವು ಒಂದೆಡೆ ಶೈವ ಪಾಶುಪತ ಧರ್ಮಕ್ಕೆ ಪರಿವರ್ತನೆಯಾಗುತ್ತಿದ್ದಂತೆ ಇನ್ನೊಂದೆಡೆ ಬುದ್ಧನು ವಿಷ್ಣುವಿನ ಅವತಾರವೆಂಬ ಕಲ್ಪನೆಯು ಬಲವತ್ತರಗೊಂಡು ವೈಷ್ಣವ ಧರ್ಮದಲ್ಲಿಯೂ ಅದು ಐಕ್ಯತೆಯನ್ನೂ ಪಡೆದುಕೊಂಡಿತ್ತು. ಇದರಿಂದ ಬೌದ್ಧ, ಶೈವ, ವೈಷ್ಣವ ಧರ್ಮಗಳು ಸಮನ್ವಯಗೊಂಡು ಸಂಸ್ಕೃತೀಕರಣಕ್ಕೆ ದಾರಿ ಮಾಡಿಕೊಟ್ಟಿತು. ಈ ಕಾಲಘಟ್ಟದಲ್ಲಿ ಅಂದರೆ ಕ್ರಿ.ಶ.ಸು. ೧೨-೧೩ನೆಯ ಶತಮಾನದಲ್ಲಿ ಬೌದ್ಧ ವಿಹಾರಗಳು ಮತ್ತು ವಿಗ್ರಹಗಳು ವ್ಯಾಪಕವಾಗಿ ಪರಿವರ್ತನೆಗೊಂಡವು. ಈ ಸಂದರ್ಭದಲ್ಲಿ ಕದಿರೆಯ ಮೂಲವಿಗ್ರಹವನ್ನು ಹೊರಜಗುಲಿಗೆ ಸ್ಥಳಾಂತರಿಸಿ, ಗರ್ಭಗೃಹದಲ್ಲಿ ಮಂಜುನಾಥನ ಶಿವಲಿಂಗವನ್ನು ಪ್ರತಿಷ್ಠಾಪಿಸಿರಬೇಕೆಂಬ ವಿದ್ವಾಂಸರ ಅಭಿಪ್ರಾಯವು[37] ಪ್ರಾಯಶಃ ಸರಿಯೆಂದು ತೋರುತ್ತದೆ.

ಬೌದ್ಧ ಧರ್ಮದಂತೆಯೇ ಜೈನಧರ್ಮವೂ ಕುಡ ಸಂಸ್ಕೃತೀಕರಣದಲ್ಲಿ ಪ್ರಧಾನ ಪಾತ್ರವನ್ನು ವಹಿಸಿದೆ. ತುಳುನಾಡಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಅದು ಇತರ ಎಲ್ಲಾ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅನನ್ಯತೆಯನ್ನು ಪಡೆದುಕೊಂಡು ವರ್ಚಸ್ವೀ ಧರ್ಮವಾಗಿ ನೆಲೆ ನಿಂತಿರುವುದನ್ನು ಕಾಣುತ್ತೇವೆ. ಕ್ರಿಸ್ತಪೂರ್ವ ಕಾಲದಲ್ಲಿ ಬನವಾಸಿಗೆ ಬಂದು ತಳವೂರಿದ ಈ ಧರ್ಮವು ಕದಂಬರ ಆಳ್ವಿಕೆ ಆರಂಭಗೊಳ್ಳುವ ನಸುಕಿನ ಹಂತದಲ್ಲಿ ತುಳುನಾಡಿಗೆ ಬಂದು ನೆಲೆಸಿತ್ತು[38]. ಬನವಾಸಿಯಲ್ಲಿ ಜೈನರ ಪವಿತ್ರವಾದ ಧವಳಾ ಗ್ರಂಥವು ಲಿಪಿಬದ್ಧವಾದ ಘಟನೆ[39], ಹಲ್ಮಿಡಿ ಶಾಸನದಲ್ಲಿ ಉಕ್ತರಾದ ಜೈನ ಕೆಲ್ಲ ಅರಸರ ಪ್ರಸ್ತಾಪ[40]. ಪ್ರಾಚೀನ ಅಳುಪರು ಜೈನಧರ್ಮವನ್ನು ಪ್ರೋತ್ಸಾಹಿಸಿ ಆಶ್ರಯ ನೀಡಿದ್ದು, ಆಲುಪ ಎರಡನೆಯ ಚಿತ್ರವಾಹನನು (ಕ್ರಿ.ಶ. ೭೦೭) ಚಾಳುಕ್ಯ ವಿಕ್ರಮಾದಿತ್ಯನ ತಂತಿ ಕುಂಕುಮದೇವಿಯನ್ನು ವಿವಾಹವಾಗುವ ಘಟನೆ[41], ಘಟ್ಟದ ಮೇಲಿನ ಜೈನ ಶಾಂತ ಅರಸರ ಜೊತೆಗಿನ ಆಲುಪರ ಸಂಬಂಧ ಮತ್ತು ವೈವಾಹಿಕ ಘಟನೆಗಳು[42], ಆಲುಪರ ಆಂತರಿಕ ಯುದ್ಧದಲ್ಲಿ ಜೈನ ಯೋಧರಾದ ನಾಗದತ್ತ, ಶ್ರೀಮಾರ, ಶಾಂತರ ಆಳು ಮೆದುಮಾಣನ್, ಜುದ್ಧಮಲ್ಲನ ಆಳು ರಣಮಂಡೆ, ವಿಜಣನಾಯಕ, ಪಾಯ್ಬ (ಪಾಯಪ್ಪ), ಶೂದ್ರಕ, ಸಿಂಗದತ್ತ, ಕುಮಾರ ಎಱೆಗ, ಅಡಿಯಪ್ಪ ಸೆಟ್ಟಿ (ಆದಿಯಪ್ಪ ಸೆಟ್ಟಿ), ನಗಕುಮಾರನ್ (ನಾಗಕುಮಾರ), ನೃಪಮಲ್ಲ, ರಾಚಮಲ್ಲ ಮೊದಲಾದವರು ವಹಿಸಿದ ನಿರ್ಣಾಯಕ ಪಾತ್ರ[43]. ಸ್ಥಳೀಯ ತುಂಡರಸರಾದ ಚೌಟ, ಬಂಗ, ಭೈರರಸ, ಅಜಿಲ, ತೊಳಹರ ಮೊದಲಾದವರು ಜೈನಮತೀಯರಾಗಿರುವುದು ಇವೇ ಮೊದಲಾದ ಆಧಾರಗಳು, ಜೈನಧರ್ಮದ ಸ್ಥಿರೀಕರಣ ಮತ್ತು ವ್ಯಾಪಕತೆಯನ್ನು ಮನದಟ್ಟು ಮಾಡಿಕೊಡುತ್ತದೆ. ಇದು ಶಿಷ್ಟ ಸಂಸ್ಕೃತಿಯ ಹಲವಾರು ವೈಶಿಷ್ಟ್ಯಗಳನ್ನು ಸ್ವೀಕರಿಸಿ. ಸಾಂಸ್ಕೃತಿಕ ಸಮತೋಲನವನ್ನು ಸಾದಿಸಿರುವುದು ಮಹತ್ವ ಸಂಗತಿಯಾಗಿದೆ. ಅಳಿಯಕಟ್ಟು[44], ಬಳಿ ಪದ್ಧತಿ[45], ಭೂತಾರಾಧನೆ[46], ನಾಗಾರಾಧನೆ[47], ಬ್ರಹ್ಮಾರಾಧನೆ[48], ಕಂಬಳಕ್ರೀಡೆ[49] ಮುಂತಾದ ಕಲಾಪಗಳಲ್ಲೂ ಸಕ್ರಿಯ ಪಾತ್ರವನ್ನು ವಹಿಸುತ್ತ ಬಂದಿದೆ.

 

[1] Dr. Gururaj Bhat P., : Studies in Tuluva History and Culture, Preview III-X.

Dr. Sundara A. : Some Aspects of the Neolithic Sites in Malnad. OIMS -L IX – 1969.

Dr. Sundara A. : Megaliths in the Western Coast and Ghat Regions of Karnataka, Journal of Karnataka University Dharwar Vol. : X

Dr. Rajendra P. : The Pre-history of Kerala, Journal of Kerala Studies Vol : IV, Part IV.

Dr. Ganapayya Bhat : Megalithic Rock – Cut. Caves of Coastal Karnataka – Archaeological Studies Vol. III – 1978.

Dr. Ganapayya Bhat : Pre-history of Coastal Karnataka OIMS Vol. : LXX No. 1 – 2, 1979.

[2] ಕಾರ್ಕಳ ಒಂದು ಪ್ರಾದೇಶಿಕ ಅಧ್ಯಯನ : ಲೇಖನ.ನೋಡಿ, ‘ಇತಿಹಾಸ’ – ಡಾ. ಪಿ.ಎನ್. ನರಸಿಂಹಮೂರ್ತಿ, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ, ಪುಟ ೧ – ೨, ೧೯೮೫.

[3] ನೇತ್ರಾವತಿ : ಎರಡನೆಯ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ ಲೇಖನ. ನೋಡಿ ‘ಇತಿಹಾಸಪೂರ್ವ ದಕ್ಷಿಣ ಕನ್ನಡ – ಹೊಸ ಸಂಶೋಧನೆಗಳು’ ಡಾ. ಪುಂಡಿಕ್ಯಾ ಗಣಪಯ್ಯ ಭಟ್ಟ, ಪುಟ ೧ – ೬, ೧೯೮೫.

[4] ಅದೇ

[5] ಅದೇ

[6] ಅದೇ ಲೇಖನ ನೋಡಿ. ದ್ರಾವಿಡ ಭಾಷಾ ವರ್ಗದಲ್ಲಿ ಕೊರಗ ಸ್ಥಾನ, ಡಾ. ರಾಮಕೃಷ್ಣ ಟಿ. ಶೆಟ್ಟಿ, ಪು. ೫೯.

[7] ಡಾ. ರಮೇಶ ಕೆ.ವಿ. : ತುಳುನಾಡಿನ ಇತಿಹಾಸ, ಪುಟ ೧೮-೧೯, ಗೋವಿಂದ ಪೈ ಸ್ಮಾರಕ ಸಂಶೋಧನಾ ಕೇಂದ್ರ, ಉಡುಪಿ, ೧೯೬೮

[8] ಅದೇ

[9] ಡಾ. ತಾಳ್ತಜೆ ವಸಂತಕುಮಾರ : ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ಪುಟ ೪೮, ವಿನಯ ಪ್ರಕಾಶನ, ಬೆಂಗಳೂರು, ೧೯೮೮

[10] ಅದೇ ಪುಟ ೪೮

[11] ಅದೇ ಪುಟ ೪೮ -೫೨.

[12] ಅದೇ, ಪುಟ ೪೮-೫೨.

[13] Dr. B.R. Gopal – Corpus of Kadamba Inscriptions Vol. I Kadamba Institute of Culture Studies, Sirsi, 1985.

[14] ತೆಂಕನಾಡು : ಸಂ. ಸೇಡಿಯಾಪು ಕೃಷ್ಣ ಭಟ್ಟ, ಕಯ್ಯಾರ ಕಿಞ್ಞಣ್ಣ ರೈ ಲೇಖನ ನೋಡಿ – ಗೋವಿಂದಪೈ, ‘ತುಳುನಾಡು’ ಪೂರ್ವಸ್ಮೃತಿ – ಪುಟ ೧೦ – ೧೧, ಸ್ವಾಗತ ಸಮಿತಿ, ೩೧ನೆಯ ಕನ್ನಡ ಸಾಹಿತ್ಯ ಸಮ್ಮೇಳ:ನ, ಕಾಸರಗೋಡು, ೧೯೪೭.

[15] ಡಾ. ರಮೇಶ್ ಕೆ.ವಿ. : ತುಳುನಾಡಿನ ಶಾಸನಗಳು ಸಂಪುಟ ೧, ಪುಟ ಅ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಂಶೋಧನ ಕೇಂದ್ರ, ಉಡುಪಿ, ೧೯೭೮, ARISE – 1931, 32, No. 296.

[16] ಕೊರವರ ಸಂಸ್ಕೃತಿ : ಮಾನಸ, ಲೇಖನ ನೋಡಿ : ‘ಸಂಸ್ಕೃತಿ – ಉಪಸಂಸ್ಕೃತಿ’, ಬರಗೂರು ರಾಮಚಂದ್ರಪ್ಪ, ಪ್ರಸ್ತಾವನೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೨, ೧೯೯೩.

[17] ಡಾ. ಸೂರ್ಯನಾಥ ಕಾಮತ್ : ತುಳುನಾಡಿನ ಧಾರ್ಮಿಕ ಪರಂಪರೆ, ಪುಟ ೩ ದಿ. ಶ್ರೀ.ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ ಉಪನ್ಯಾಸ ಮಾಲೆ -೧, ೧೯೭೫.

[18] ಕನ್ನಡ ವಿಷಯ ವಿಶ್ವಕೋಶ : ಪುಟ ೧೦೭೦, ಮೈಸೂರು ವಿಶ್ವವಿದ್ಯಾನಿಲಯ

[19] ಅದೇ

[20] ARISE -1901, No. 27-B, S.I.I. Vol. – VII, No. 191.

[21] ಡಾ. ಸೂರ್ಯನಾಥ ಕಾಮತ್ : ತುಳುನಾಡಿನ ಧಾರ್ಮಿಕ ಪರಂಪರೆ, ಪುಟ ೧೪-೧೫

[22] ತಾಳ್ತಜೆ ವಸಂತಕುಮಾರ : ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ಪುಟ ೪೬

[23] ಅದೇ

[24] ಅದೇ

[25] Karnatak State Gazetteers, North Kanara District Page 921, Bangalore

[26] ತಾಳ್ತಜೆ ವಸಂತಕುಮಾರ್, ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ಪುಟ ೨೩-೨೪.

[27] ಸ್ವತಃ ಪರಿಶೀಲನೆ

[28] ಕನ್ನಡ ವಿಷಯ ವಿಶ್ವಕೋಶ, ಪುಟ ೧೦೭೦

[29] ತೆಂಕನಾಡು – ಗೋವಿಂದ ಪೈ ‘ತುಳುನಾಡು ಪೂರ್ವಸ್ಮೃತಿ’ ಪುಟ ೪೬.

[30] ತಾಳ್ತಜೆ ವಸಂತಕುಮಾರ್ : ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ ಪುಟ ೨೩ – ೨೪.

[31] ಸಮರ್ಪಣ (ಸಂ) ವೀ ಸೀತಾರಾಮಯ್ಯ, ಪುಟ ೬, ನೋಡಿ : ತಾಳ್ತಜೆ ವಸಂತಕುಮಾರ – ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ ೧೫೪.

[32] ಡಾ. ಸೂರ್ಯನಾಥ ಕಾಮತ : ತುಳುನಾಡಿನ ಧಾರ್ಮಿಕ ಪರಂಪರೆ, ಪುಟ ೧೪

[33] ಡಾ. ರಮೇಶ್ ಕೆ.ವಿ. : ತುಳುನಾಡಿನ ಶಾಸನಗಳು, ಪುಟ ೧೨, ಸಂಖ್ಯೆ ೩.

[34] ತಾಳ್ತಜೆ ವಸಂತಕುಮಾರ : ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ಪುಟ ೭೮-೮೭.

[35] ಅದೇ, ಪುಟ ೧೫೦

[36] ಅದೇ ಪುಟ ೧೫೦-೧೫೧, ನೋಡಿ : Beal S., Buddhist Records of the Western World Pt II, P.L – 233

[37] ಅದೇ ಪುಟ ೧೫೫.

[38] ಡಾ. ಎಸ್.ಡಿ. ಶೆಟ್ಟಿ : ತುಳುನಾಡಿನ ಜೈನಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ ಪುಟ ೫೦, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ೨೦೦೨.

[39] ಶಾಸ್ತ್ರಿ ಸುಬ್ಬಯ್ಯ (ಸಂ.) ಷಟ್ಖಂಡಾಗಮ, ಪುಟ ೧೫-೨೪, ಶ್ರೀ ಜೈನೇಂದ್ರ ಗ್ರಂಥಮಾಲಾ, ಚೌಡೇಶ್ವರೀ ಗುಡಿಬೀದಿ, ಬೆಂಗಳೂರು ೧೯೭೮.

[40] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ, ಒಂದು ಸಾಂಸ್ಕೃತಿಕ ಅಧ್ಯಯನ, ಪುಟ ೫೦, ಪೂರ್ವೋಕ್ತ

[41] EP Ind XXXII, PP 317.

ಡಾ. ರಮೇಶ್ ಕೆ.ವಿ : ತುಳುನಾಡಿನ ಇತಿಹಾಸ, ಪು ೩೦.

[42] ಡಾ. ಎಸ್.ಡಿ.ಶೆಟ್ಟಿ : ತುಳುನಾಡಿನ ಜೈನಧರ್ಮ – ಒಂದು ಸಾಂಸ್ಕೃತಿಕ ಅಧ್ಯಯನ ಪುಟ ೪೮, ಪೂರ್ವೋಕ್ತ.

[43] ಅದೇ ಪುಟ ೪೯

[44] ಅದೇ ಪುಟ ೨೧೭

[45] ಅದೇ ಪುಟ ೧೩೨

[46] ಅದೇ ಪುಟ ೧೮೭ – ೧೯೪

[47] ಅದೇ ಪುಟ ೧೯೪-೧೯೬

[48] ಅದೇ ಪುಟ ೧೯೬-೧೯೮

[49] ಅದೇ ಪುಟ ೨೫೪-೨೫೬