ಭೀಕರ ಪ್ರಾಕೃತಿಕ ಶಕ್ತಿಗಳು, ವಿನಾಶಕಾರಿ ಕಾಡುಪ್ರಾಣಿಗಳು, ಗತಿಸಿದ ಹಿರಿಯ ವ್ಯಕಿಗಳು, ವೀರರು ಮತ್ತು ಅತಿಮಾನುಷವೆಂದು ನಂಬಲಾಗುವ ಶಕ್ತಿಗಳನ್ನು ಆರಾಧನೆಯ ಮೂಲಕ ತೃಪ್ತಿಗೊಳಿಸಿ ಅವುಗಳಿಂದ ಅಭಿನಯವನ್ನು, ರಕ್ಷಣೆಯನ್ನು ಪಡೆಯುವ ಕ್ರಮವು ಆದಿಮಾನವನಿಂದ ಇಂದಿನ ವೈಜ್ಞಾನಿಕ ಯುಗದ ಮಾನವನವರೆಗೂ ಅನೂಚಾನವಾಗಿ ನಡೆದು ಬಂದಿದೆ. ಕಾಲಾನುಕ್ರಮದಲ್ಲಿ ಸಮಾಜವು ಪ್ರಗತಿ ಹೊಂದಿದಂತೆ, ಮಾನವನು ತನ್ನ ತಿಳುವಳಿಕೆಯನ್ನು ಹೆಚ್ಚಿಸಿಕೊಂಡಂತೆ, ವಿಚಾರಶಕ್ತಿಯನ್ನು ಉಪಯೋಗಿಸಲು ಕಲಿತಂತೆ ತೃಪ್ತಿಗೊಳಿಸುವ ಕ್ರಮದ ವಿಧಾನಗಳು, ರೂಪರೇಷೆಗಳು ಬದಲಾಗುತ್ತಾ ಬಂದರೂ, ಇವುಗಳ ಮೂಲ ಉದ್ದೇಶ ಬದಲಾಗಲೇ ಇಲ್ಲ. ಅಭಯ, ರಕ್ಷಣೆಯ ಹೊರತು ಈ ದೈವೀಶಕ್ತಿಗಳಿಗೆ ಸಮಾಜದ ಉನ್ನತಿ, ಅಭಿವೃದ್ಧಿ, ಸಾಮಾಜಿಕರ ಸಂಪತ್ತಿನ ರಕ್ಷಣೆ, ಜಾನುವಾರಗಳ ರಕ್ಷಣೆ, ರೋಗದಿಂದ ಮುಕ್ತಿ, ಸಮಾಜದೊಳಗೆ, ಸಾಮಾಜಿಕರೊಳಗೆ ಉದ್ಭವಿಸುವ ವಿವಾದಗಳ ಪರಿಹಾರ, ಭೌತಿಕವಾದ ಅವಶ್ಯಕತೆಗಳ ಪೂರೈಕೆಯೇ ಮೊದಲಾದ ಹತ್ತು ಹಲವು ಹೆಚ್ಚುವರಿ ಜವಾಬ್ಧಾರಿಯನ್ನೂ ಈ ಶಕ್ತಿಗಳಿಗೆ ಸಮಾಜವು ಹಚ್ಚಿಕೊಟ್ಟಿತು. ಎಲ್ಲ ತರದ ಈ ಅಭಿವೃದ್ಧಿ ಸಂರಕ್ಷಣೆಯನ್ನು ಒದಗಿಸುವ ಈ ಶಕ್ತಿಗಳಿಗೆ ಸಮಾಜ ಕಾಲದಿಂದ ಕಾಲಕ್ಕೆ ಪೂಜೆ ಪುರಸ್ಕಾರಗಳನ್ನು ಜರಗಿಸುವ ಕ್ರಮವು ರೂಢಿಯಾಯಿತು. ಅಗೆಲು, ತಂಬಿಲ, ವಾಲಸರಿ, ಕೋಲ, ನೇಮ, ಮೆಚ್ಚಿ ಇಂತಹ ಆರಾಧನಾ ವಿಧಾನಗಳಲ್ಲಿ ಕೆಲವು. ಪಾಡ್ದನಗಳ ಅಧ್ಯಯನದಿಂದ ಆರಾಧಕ-ಆರಾಧ್ಯರ ಸಂಬಂಧವು ಒಂದು ರೀತಿಯ ಕರಾರು ಅಥವಾ ನಿಯಮ (ನೇಮ)ವಾಗಿರುವುದು ಕಂಡುಬರುತ್ತದೆ. ಈ ನಿಯಮಗಳ ಅಲ್ಪತರದ ಉಲ್ಲಂಘನೆಯನ್ನೂ ದೈವವು ಕ್ರೂರ ರೀತಿಯಲ್ಲಿ ಪ್ರತೀಕಾರ ಮಾಡಿರುವುದನ್ನೂ ಪಾಡ್ದನಗಳಲ್ಲಿ ಕಾಣಬಹುದು.

ಭೂತದ ಉಗಮ, ಪ್ರಕಟೀಕರಣ, ಹರಿವು, ನೆಲೆಯಾದ ಬೇರೆಬೇರೆ ಸ್ಥಾನಗಳು, ಅವುಗಳ ಪ್ರತಾಪವೇ ಮೊದಲಾದ ವಿವರಗಳನ್ನು ತಿಳಿಸುವ ಕತೆಗಳು ಪಾಡ್ದನಗಳು ಅಥವಾ ಸಂಧಿಗಳು. ಇವುಗಳಲ್ಲಿ ಭೂತಗಳ ಹಾಗೂ ಭೂತಗಳಾದ ವೀರರ ಜೀವನ ಚರಿತ್ರೆಯೂ, ಕೆಲವೊಮ್ಮೆ ಈ ವೀರರು ತಮ್ಮ ಅವಸಾನದ ನಂತರ ನಡೆಸಿದ ಕಾರಣೀಕಗಳೂ ಕ್ರೋಢೀಕರಿಸಲ್ಪಟ್ಟಿವೆ. ಬಾಯ್ದೆರೆಯಾಗಿ ಇವು ಅನುವಂಶಿಕವಾಗಿ ತಂದೆಯಿಂದ ಮಗನಿಗೆ ಅಥವಾ ಕುಟುಂಬದ ಹಿರಿಯರಿಂದ ಕಿರಿಯರಿಗೆ ಹಾಡಿನ ರೂಪದಲ್ಲಿ ಬಂದಿರುತ್ತವೆ. ದೈವಕ್ಕೆ ಕಟ್ಟುವ ಪರವ, ಪಂಬದ, ನಲಿಕೆ, ಮುಗ್ಗರ, ಪಾಣರು ಈ ಪಾಡ್ದನಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಇವರಲ್ಲದೆ, ಪಾಡ್ದನಗಳನ್ನು ಕೇಳಿ ಕಲಿತು ಹಾಡುವ ಅನ್ಯ ಸಮಾಜಿಕರೊ ಇದ್ದಾರೆ. ಕಳೆದ ಶತಮಾನದ ಕೊನೆಯಲ್ಲಿ ಬಾಸೆಲ್ ಮಿಶನ್‌ನವರು ಎ. ಮೆನ್ನರ್ ಸಂಗ್ರಹಿಸಿದ ಕೆಲವು ಪಾಡ್ದನಗಳನ್ನು ಪ್ರಕಟಿಸಿರುತ್ತಾರೆ. ದಕ್ಷಿಣಕನ್ನಡದಲ್ಲಿ ಭೂತಾರಾಧನೆ ಎಂಬ ಲೇಖನವು ಬರ್ನೆಲ್ಲರಿಂದ ಇಂಡಿಯನ್ ಎಂಟಿಕ್ವೆರಿಯಲ್ಲಿ ಪ್ರಕಟಿಸಲ್ಪಟ್ಟಿತು. ಅಲ್ಲಿಂದ ಮುಂದೆ ಆಸಕ್ತರು ಹಾಗೂ ಜಾನಪದದ ಅಭ್ಯಾಸಿಗಳು ಬಹಳಷ್ಟು ಸಂಗ್ರಹ, ವಿಶ್ಲೇಷಣೆ, ಅಧ್ಯಯನವನ್ನು ಮಾಡಿರುತ್ತಾರೆ. ಈಚಿನ ಇಪ್ಪತ್ತು ವರ್ಷಗಳಲ್ಲಿ ಬಹಳಷ್ಟು ಕೆಲಸ ಈ ವಿಭಾಗದಲ್ಲಿ ನಡೆದಿರುತ್ತದೆ. ನಮಗೆ ಈಗ ಲಭ್ಯವಿರುವ ಪಾಡ್ದನಗಳ ಸಾಹಿತ್ಯದಲ್ಲಿ ಪ್ರಾಚೀನವಾದ ತಿರುಳು ಇದ್ದರೂ, ಕಾಲದಿಂದ ಕಾಲಕ್ಕೆ ಹೊಸಹೊಸ ವಿವರಗಳು ಸೇರಿಸಲ್ಪಟ್ಟಿರುವುದನ್ನು ಗುರುತಿಸಲು ಸಾಧ್ಯ. ಇವುಗಳಲ್ಲಿ ಕೆಲವನ್ನು ಸುಲಭದಲ್ಲಿ ಗುರುತಿಸಲು ಸಾಧ್ಯವಾದರೂ, ಹಲವು ತೀರ ನಾಜೂಕಾಗಿ ಸೇರಿಕೊಂಡ ವಿಷಯಗಳನ್ನು ಪ್ರಾಚೀನ ತಿರುಳಿನಿಂದ ಬೇರ್ಪಡಿಸುವುದು ಕಷ್ಟಸಾಧ್ಯ. ಪಾಡ್ದನಗಳ ಈಗಿನ ರೂಪವು ಯಾವ ಕಾಲದಲ್ಲಿ ಸ್ಥಿರವಾಯಿತೆಂಬುದನ್ನು ಗುರುತಿಸುವುದು ಅವುಗಳ ಒಳಗಿನ ಸಾಕ್ಷ್ಯ (ಆಂತರಿಕ ಸಾಕ್ಷ್ಯ)ಗಳಿಂದ ಸಾಧ್ಯವಾಗುತ್ತದೆ.

ಈ ಆರಾಧನಾ ವಿಧಾನವು ಬಹಳ ಪ್ರಾಚೀನವಾದರೂ ನಮ್ಮ ಜಿಲ್ಲೆಯ ಶಿಲಾಶಾಸನ-ತಾಮ್ರಶಾಸನಗಳಲ್ಲಿ ದೈವಗಳ ಉಲ್ಲೇಖಗಳು ಕಂಡುಬರುವುದು ವಿಜಯನಗರದ ಆಧಿಪತ್ಯದ ಕಾಲದಲ್ಲೇ ಎಂಬುದು ಸತ್ಯ. ಹದಿನಾಲ್ಕನೆಯ ಶತಮಾನದ ಅಂತ್ಯಭಾಗದಲ್ಲಿ ಇಂತಹ ಉಲ್ಲೇಖಗಳು ಮೊದಲಿಗೆ ಕಾಣಬರುತ್ತವೆ. ಜನಜೀವನದಲ್ಲಿ ಹಾಸುಹೊಕ್ಕಾಗಿ ಸಾಮಾಜಿಕ – ಧಾರ್ಮಿಕ ಆಚರಣೆಗಳಲ್ಲಿ ಅತ್ಯಂತ ಪ್ರಾಮುಖ್ಯವನ್ನು ಗಳಿಸಿಕೊಂಡಿರುವ, ಈಗಿನವರೆಗೂ ಉಳಿಸಿಕೊಂಡಿರುವ ಈ ದೈವಗಳನ್ನು ಉಲ್ಲೇಖಿಸುವ ಶಾಸನಗಳೂ ತೀರ ವಿರಳ. ಜಿಲ್ಲೆಯಲ್ಲಿರುವ ಸಾವಿರಾರು ಶಾಸನಗಳಲ್ಲಿ ದೈವಗಳ ಉಲ್ಲೇಖಗಳು ಬರುವಂತಹ ಶಾಸನಗಳು ಹತ್ತೋ ಹನ್ನೆರಡೋ ಮಾತ್ರ. ಇವುಗಳಲ್ಲಿ ತೀರ ಪ್ರಾಚೀನವಾದ ಉಲ್ಲೇಖ ಕಾಂತಾವರದ ಕ್ರಿ.ಶ. ೧೩೭೯ರ ಶಾಸನ. (S.I.I. VII ಸಂಖ್ಯೆ 234) ಇದಲರಲ್ಲಿ ದೈವದ ಹೆಸರು ಕಾಣುವುದಿಲ್ಲ. ಅದೇ ಸಂಪುಟದ ಸಂಖ್ಯೆ ೩೫೬ ಬಾರಕೂರಿನ ಮಣಿಹಾರ ಕೇರಿಯ ಶಾಸನ. ಇದರಲ್ಲಿ ಭಗವತಿ ಮತ್ತು ಮೈಲಾರರ ಉಲ್ಲೇಖವಿದೆ. ಭಗವತಿ ಎಂಬ ಹೆಸರು ಕೆಲವೊಮ್ಮೆ ದುರ್ಗಾದೇವಿಗೂ ಅನ್ವಯಿಸುವುದೆಂಬುದು ನಿಜವಾದರೂ, ಮೈಲಾರನ ಉಲ್ಲೇಖವಿರುವ ಕಾರಣ ಈ ಭಗವತಿಯು ಜಾನಪದದ ದೈವವೆಂದು ಅನುಮಾನಿಸಿದರೆ ತಪ್ಪಾಗಲಾರದು. ಇದು ಕ್ರಿ.ಶ. ೧೩೯೪ರ ಶಾಸನ. ಉದ್ಯಾವರದಲ್ಲಿರುವ ಕಲಿಯುಗ ೪೬೦೮ =(೧೫೦೮ ಕ್ರಿ.ಶ.)ರ ಶಾಸನದಲ್ಲಿ ನಂದಳಿಕೆ ಮತ್ತು ನಿಂಜಕೂರ ದೈವಗಳ ಉಲ್ಲೇಖ, ಹಾಗೂ ಅವುಗಳಿಗೆ ನಡೆಯುವ ಬಲಿಪೂಜೆಯ ಸ್ಪಷ್ಟ ಉಲ್ಲೇಖವಿದೆ. ನಂದಳಿಕೆಯ ದೈವಗಳು ಈಗಲೂ ತಮ್ಮ ಪ್ರಸಿದ್ಧಿಯನ್ನು ಉಳಿಸಿಕೊಂಡಿರುವುದರಿಂದ ಇವು ನಮ್ಮ ಜಾನಪದದ ಸಿರಿಯ ಬಳಗವೆಂಬುದು ಸ್ಪಷ್ಟ. ಇದರಿಂದ ಒಂದು ವಿಷಯವು ಸ್ಪಷ್ಟವಾಗುತ್ತದೆ. ೧೫೦೮ ಹೊತ್ತಿಗೆ ಸಿರಿ, ಕುಮಾರ, ಅಬ್ಬಗೆ, ದಾರಗೆ, ಸೊನ್ನೆ, ಗಿಂಡಿಯವರು ದೈವತ್ವವನ್ನು ಪಡೆದಿದ್ದು ಬಲಿಪೂಜೆ ಅವರಿಗೆ ಸಲ್ಲುತ್ತಿದ್ದಿತು. ಅಂದರೆ ಅದಕ್ಕೆ ಹಿಂದೆ ಕನಿಷ್ಠ ನೂರು ವರ್ಷಗಳಷ್ಟು ಮೊದಲು ಸಿರಿಯು ಬಾಳಿರಬೇಕು. ಅದೇ ಕಾಲದ ಕಾಪು ಶಾಸನ (ಸಂಖ್ಯೆ ೨೭೩) ಕೂಡ ನಂದಳಿಕೆ ದೈವಗಳನ್ನು ಉಲ್ಲೇಖಿಸುತ್ತದೆ. ಕ್ರಿ.ಶ. ೧೫೬೪ರ ಬಾರಕೂರಿನ ಶಾಸನ (ಸಂಖ್ಯೆ ೩೬೬) ಬೊಬ್ಬರಿಗನ ಕೊಟ್ಟವನ್ನು ಉಲ್ಲೇಖಿಸುತ್ತದೆ. ಕೊಟ್ಯವೆಂಬುದು ಮೂರು ಗೋಡೆಗಳಷ್ಟೇ ಇದ್ದು ಮಾಡಿಲ್ಲದ ಒಂದು ತರದ ವಿಶಿಷ್ಟ ರಚನೆ. ಕರಾವಳಿಯ ಉದ್ದಕ್ಕೂ ಬೊಬ್ಬರ್ಯನಿಗೆ ಇಂತಹ ಕೊಟ್ಟಗಳಿವೆ. ‘ಬೊಬ್ಬರ್ಯ’ ಶಬ್ದವು ‘ಬರ್ಬರ’ ಶಬ್ದದ ವಿಕಲ್ಪ, ಬರ್ಬರ ಕರಾವಳಿ ಎಂದರೆ ಆಫ್ರಕಾ ಖಂಡದ ಸೋಮಾಲಿಯಾದ ಕಡಲ ತೀರದ ಪ್ರದೇಶ. ಇದು ತುಳುನಾಡಿಗೆ ನೇರ ಪಶ್ಚಿಮದಲ್ಲಿದೆ.ನನ್ನ ಚಿಕ್ಕಂದಿನಲ್ಲಿ ಮಂಜೇಶ್ವರದ ಬೊಬ್ಬರ್ಯನ ಕೊಟ್ಯದ ಬಳಿ ಕುಳಿತಿದ್ದಾಗ ಗೋವಿಂದ ಪೈಗಳು ಹೇಳಿದ ಕತೆ ನೆನಪಾಗುತ್ತದೆ. ಬೊಬ್ಬರ್ಯನು ಒಂದು ಕಾಲನ್ನು ಈ ಕೊಟ್ಯದ ಬಳಿ ಇರವು ಬಂಡೆ ಕಲ್ಲುಗಳ ಮೇಲೂ, ಇನ್ನೊಂದು ಕಾಲನ್ನು ಬರ್ಬರ ಕರಾವಳಿಯ ಮೇಲೂ ಇಟ್ಟುಕೊಂಡು ನಿಂತಿದ್ದನಂತೆ. ಇನ್ನೊಂದ ಕತೆಯ ಪ್ರಕಾರ ಬೊಬರ್ಯನು ಒಂದು ಕಾಲನ್ನು ಪಶ್ಚಿಮ ಘಟ್ಟಗಳ ಮೇಲೂ, ಇನ್ನೊಂದನ್ನು ಸಮುದ್ರದಾಚೆ ಆಫ್ರಿಕಾ ಕರಾವಳಿಯ ಮೇಲೂ ಇಟ್ಟು ನಿಂತಿದ್ದ. ಈ ಜಿಲ್ಲೆಗೆ ಬರುವ ದೈವಗಳೆಲ್ಲ ಅವನ ದೊಗ್ಗಾಲಿನಡಿಯಿಂದ ಹಾಯಬೇಕು ಎಂಬುದು ಅವನ ಉದ್ದೇಶವಂತೆ. ರಾಮಲಕ್ಷ್ಮಣರು ಹಡಗದಲ್ಲಿ ಈ ತುಳುನಾಡಿಗೆ ಬಂದರಂತೆ (ಪ್ರಾಯಶಃ ಲಂಕೆಯಿಂದ?). ಅವರಿಗೆ ಈತನ ಕಾಲ ಕೆಳಗಿನಿಂದ ಹಾದು ಹೋಗುವುದು ಅಪಮಾನಕರವೆಂದು ಕಂಡಿತು. ಲಕ್ಷ್ಮಣನು ತನ್ನ ಬಿಲ್ಲಿಗೆ ಬಾಣವನ್ನೇರಿಸಿ ಬೊಬ್ಬರ್ಯನ ಸೊಕ್ಕು ಮುರಿಯಲು ಹೊರಟ. ರಾಮನು ಅವನನ್ನು ಸಮಾದಾನ ಪಡಿಸಿ ಬೊಬ್ಬರ್ಯನೊಡನೆ ಮಾತುಕತೆಯಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಂಡನಂತೆ. ಆದರೆ ಇನ್ನೊಂದು ರಾಜದೈವ ಘಟ್ಟದ ಮೇಲಿಂದ ತುಳುನಾಡಿಗೆ ಬರುತ್ತಿರುವಾಗ ಈ ದೊಗ್ಗಾಲಿನಾಚೆಯೇ ವಿರಮಿಸಿದ. ಅದೇ ದಾರಿಯಾಗಿ ಬರುತ್ತಿದ್ದ ಕೋಡ್ದಬ್ಬು ಈ ರಾಜದೈವದೊಡನೆ ಅವನ ಮುಜುಗರವನ್ನು ಕೇಳಿ ತಿಳಿದು ಬೊಬ್ಬರ್ಯನ ಸೊಕ್ಕು ಮುರಿಯಲು ಅವನ ಕಾಲನ್ನು ತನ್ನ ಕತ್ತಿಯಿಂದ ಕಡಿದು ಹಾಕಿದ, ಬೊಬ್ಬರ್ಯ ಅಡ್ಡಬಿದ್ದ. ರಾಜದೈವ ಬೊಬ್ಬರ್ಯನ ಮೇಲಿಂದ ದಾಟಿ ಘಟ್ಟವನ್ನಿಳಿದ. ಬಸರೂರಿನ ಕ್ರಿ.ಶ. ೧೫೪೬ರ ಶಾಸನ (S.I.I. IX Part II ಸಂಖ್ಯೆ ೬೨೦) ಭೂಮಿಯ ಮೇರೆಗಳನ್ನು ತಿಳಿಸುವಲ್ಲಿ ಬೊಬ್ಬರಿಯನ ತೋಟವನ್ನು ಉಲ್ಲೇಖಿಸುತ್ತದೆ. ಜಿಲ್ಲೆಯ ಕೆಲವು ಜೈನ ತುಂಡರಸರು ಪರಸ್ಪರ ಮಾಡಿಕೊಂಡ ಒಪ್ಪಂದಗಳಲ್ಲಿ ಈ ಕರಾರನ್ನು ಮೀರಿದವರನ್ನು ನಂದಳಿಕೆಯ ದೈವಗಳು ನೋಡಿಕೊಳ್ಳುತ್ತವೆ ಎಂಬ ಉಲ್ಲೇಖವೂ ಇದೆ. ಸಾಮಾನ್ಯವಾಗಿ ಶಾಸನಗಳಲ್ಲಿ ಸೂರ್ಯ,ಚಂದ್ರ, ಆಕಾಶ, ಅಗ್ನಿ, ವಾಯು ಮೊದಲಾದವರನ್ನು ‘ಸಾಕ್ಷಿ’ಗಳಾಗಿ ಹೇಳುವುದಿದೆ. ಈ ಶಾಸನಗಳಲ್ಲಿ ದೈವಗಳ ಉಲ್ಲೇಖ ಬರುವುದರಿಂದ ಈ ಕಾಲಕ್ಕೆ ಸುಮಾರು ೧೫-೧೬ನೇ ಶತಮಾನದ ಹೊತ್ತಿಗೆ ಸಾಮಾಜಿಕ-ಧಾರ್ಮಿಕ ಜೀವನದಲ್ಲಿ ಅತ್ಯಂತ ಪ್ರಾಮುಖ್ಯವನ್ನು ಪಡೆದವು ಎಂಬುದನ್ನು ನಾವು ಅನುಮಾನಿಸಬಹುದು.

ನಮ್ಮ ಜಿಲ್ಲೆಯಲ್ಲಿ ನೂರಾರು ವೀರಗಲ್ಲುಗಳು ಇವೆ. ಯುದ್ಧಗಳಲ್ಲಿ ಊರಳಿವಿನಲ್ಲಿ, ಗೋವುಗಳ ರಕ್ಷಣೆಯಲ್ಲಿ ಕಾದು ಸತ್ತ ವೀರರಿಗೆ ಸ್ಮಾರಕಗಳಾಗಿ ಈ ಕಲ್ಲುಗಳನ್ನು ಅವರ ಸಂಬಂಧಿಕರೋ, ಊರವರೋ, ಕೆಲವೊಮ್ಮೆ ಅವರ ಒಡೆಯರೋ ನಿರ್ಮಿಸುತ್ತಾರೆ. ಇಂತಹ ವೀರರ ಹೆಂಡಂದಿರು ಸತಿ ಹೋದರೆ ಅವರ ಸ್ಮಾರಕವಾಗಿ ಸತಿಗಲ್ಲು-ಮಹಾಸತಿಗಲ್ಲು-ಮಾಸ್ತಿಕಲ್ಲುಗಳು ನಿಲ್ಲಿಸಲ್ಪಡುತ್ತವೆ. ಈ ಕ್ರಮವೂ ಪ್ರಾಚೀನ. ಬಹಳ ಹಿಂದೆ ಇಂತಹವರಿಗೆ ಊರ ಹೊರಗಡೆ ಏನೊ ಚಿತ್ರಣಗಳು ಬರಹಗಳು ಇಲ್ಲದ ತುಸು ಮೊನಚಾದ ಹೆಚ್ಚು ಕಡಿಮೆ ತ್ರಿಕೋಣಾಕಾರದ ಕಲ್ಲುಗಳು ನಿಲ್ಲಿಸಲ್ಪಡುತ್ತಿದ್ದವು. ಮುಂದೆ ಶಿಲಾಫಲಕಗಳಲ್ಲಿ ಕಾಳಗದ ದೃಶ್ಯ, ವೀರನ ಮರಣ, ಸ್ವರ್ಗಾರೋಹಣ ಮೊದಲಾದವನ್ನು ಚಿತ್ರಿಸುವ ಪರಿಪಾಠ ಬಂತು. ಮೃತನ ಹೆಸರು ಪರಾಕ್ರಮಗಳನ್ನು ವರ್ಣಿಸುವ ಸಾಹಿತ್ಯವೂ ಅದರಲ್ಲೇ ಕೆತ್ತಲ್ಪಡುವುದೂ ಇದೆ. ಸುಮಾರು ಕ್ರಿ.ಶ. ಎಂಟನೇ ಶತಮಾನದಿಂದ ಹದಿನಾರನೆಯ ಶತಮಾನದವರೆಗಿನ ವೀರಗಲ್ಲುಗಳು ನಮ್ಮ ಜಿಲ್ಲೆಯಲ್ಲಿ ಕಂಡು ಬರುತ್ತವೆ. ಹದಿನಾರನೆಯ ಶತಮಾನದಲ್ಲಿ ಈ ಪರಿಪಾಠವು ಪಕ್ಕನೆ ನಿಂತುಹೋಗುತ್ತದೆ. ಈ ಸಮಯದಲ್ಲಿ ಜಿಲ್ಲೆಯ ತುಂಡರಸುಗಳ ಒಳಗೆ ಅನೇಕ ಕಾದಾಟಗಳು, ಒಪ್ಪಂದಗಳು ನಡೆದಿರುವುದಕ್ಕೆ ಶಾಸನಗಳ ಆಧಾರವಿದೆ. ಆದರೆ ಈ ಕಾಳಗಗಳಲ್ಲಿ ಸತ್ತವರಿಗೆ ವೀರಗಲ್ಲುಗಳನ್ನು ನಿಲ್ಲಿಸಿರುವುದು ಕಾಣುವುದಿಲ್ಲ. ವೀರರು ಮಡಿದು ಭೂತ ದೈವಗಳಾಗಿ ತಮ್ಮ ಪ್ರತಾಪವನ್ನು ಮೆರೆಯುತ್ತಾರೆ. ಕೋಟಿಚೆನ್ನಯರು ಘಟ್ಟದಡಿಯ ಪಂಜ ಪ್ರದೇಶದಿಂದ ಮೆರೆಯುತ್ತಾರೆ. ಕೋಟಿಚೆನ್ನಯರು ಘಟ್ಟದಡಿಯ ಪಂಜ ಪ್ರದೇಶದಿಂದ ಬಯಲುಸೀಮೆಗೂ, ತುಳುನಾಡಿನಿಂದ ಹೊರಗಾದ ಜಿಲ್ಲೆಯ ಉತ್ತರ ಭಾಗದಲ್ಲೂ ಮೆರೆದು ಗರಡಿಗಳನ್ನು ಮಾಡಿಸಿಕೊಂಡು ಮೆರೆಯುತ್ತಾ ಇದ್ದಾರೆ. ಇವರ ಸಮಾಧಿಗಳನ್ನು ಗುರುತಿಸಿದ್ದಾರೆ.ಆದರೆ ಇವರಿಗಾಗಿ ವೀರಗಲ್ಲುಗಳನ್ನು ನಿಲ್ಲಿಸಿರುವುದು ಕಂಡುಬಂದಿಲ್ಲ. ಅಂತೆಯೇ ಕಾಂತಬಾರೆ-ಬೂದಬಾರೆ, ದೇವುಪೂಂಜರು. ಇವರಿಗೆ ಗರಡಿಗಳಲ್ಲಿ ಪಾಪೆಗಳಿವೆಯಾದರೂ, ವೀರಗಲ್ಲುಗಳು ಇಲ್ಲ. ಇದರಿಂದ ಒಂದು ಸಂಶಯ ಮೂಡುತ್ತದೆ. ವೀರಗಲ್ಲುಗಳ ಬದಲು ಪಾಪೆಗಳನ್ನು ನಿರ್ಮಿಸಿ, ಅವುಗಳಿಗೆ ಸುಣ್ಣ ಬಣ್ಣ ಬಳಿದು ಅಲಂಕರಿಸಿ ಗರಡಿಗಳಲ್ಲಿ ಅಥವಾ ಸ್ಥಾನಗಳಲ್ಲಿ ಇರಿಸುವ ಪದ್ಧತಿಯು ಪ್ರಾರಂಭವಾಗಿ ಜನಪ್ರಿಯವಾಗಿ ವೀರಗಲ್ಲುಗಳನ್ನು ಸ್ಥಾಪಿಸುವ ಕ್ರಮವನ್ನು ಅತಿಕ್ರಮಿಸಿತೇ ಎಂಬುದು. ಈ ಕಾಲದಿಂದಲೇ ನಮಗೆ ಸಿಗುವ ಪಾಪೆಗಳು ಮೊದಲವು ನಂದಳಿಕೆ, ಕರ್ಜೆ, ಮೆಕ್ಕಿಕಟ್ಟು, ಬೋಳ ಇಲ್ಲಿರುವ ಪಾಪೆಗಳಲ್ಲಿ ಪ್ರಾಚೀನವಾದವು ಈ ಕಾಲದವು. ಅಲ್ಲಿಂದ ಮುಂದೆ ಆಧುನಿಕ ಕಾಲದಲ್ಲೂ ಪಾಪೆಗಳ ನಿರ್ಮಾಣವಾಗುತ್ತಿರುವುದನ್ನು ಕಾಣಬಹುದು. ಈ ಪಾಪೆಗಳಲ್ಲಿ ವೀರರು ಮಾತ್ರವಲ್ಲ, ಪೆರ್ಗಡೆಗಳು, ಅವರ ಸೇವಕ, ಸೇವಕಿಯರು, ಬಿಕ್ರ ಮೇಲಾಂಟ-ಮಾಯಂದಾಳ್ಸ ಮೊದಲಾದವರ ಪಾಪೆಗಳನ್ನು ಉಲ್ಲೇಖಿಸಬಹುದು.ಬಿಕ್ರ ಮೇಲಾಂಟನಿಗೆ ಚಿಕ್ಕ ಗುಡಿಯಿದೆ. ಮಾಸ್ತಿಯಮ್ಮನ ದೇವಾಲಯಗಳೂ ಇವೆ. ಪ್ರಾಸಂಗಿಕವಾಗಿ ಕನ್ನಡದ ತೀರ ಪ್ರಥಮ ಶಿಲಾ ಶಾಸನ-ಹಲ್ಮಿಡಿ ಶಾಸನ (ಸುಮಾರು ಕ್ರಿ.ಶ. ೫/೬ನೇ ಶತಮಾನದ್ದು) ಕಾಳಗದಲ್ಲಿ ಪ್ರತಾಪವನ್ನು ಮೆರೆದ ವೀರನಿಗೆ ಮೆಚ್ಚಿ ಕೊಟ್ಟದ್ದನ್ನು ಹೇಳುವ ಶಾಸನ. ಇದರಲ್ಲಿ ಉಲ್ಲೇಖಿಸಲ್ಪಟ್ಟ ವ್ಯಕ್ತಿಗಳಲ್ಲಿ ಇಬ್ಬರು ಅಳುಪ ಗಣ ಪಶುಪತಿ ಹಾಗೂ ಕೆಲ್ಲ ಭಟಾರಿ (ಶಾಸನದ ಸಂಪಾಕರು ಎಲ್ಲ ಭಟರಿ ಎಂದು ಹೇಳಿರುವುದು ತಪ್ಪು) ಇಬ್ಬರೂ ತುಳುವರೇ.

ತುಳುವಿನಲ್ಲಿ ಈಚೆಗೆ ಲಭ್ಯವಾದ ಮಧ್ಯಕಾಲೀನ ಲಿಖಿತ ಕೃತಿಗಳಲ್ಲಿ ಯಾವುದೇ ಉಲ್ಲೇಕ ಇಲ್ಲದಿರುವುದರಿಂದ ತುಳುವಿನ ಸೋದರ ಭಾಷೆ ಕನ್ನಡದಲ್ಲಿರುವ, ಕಾಲಮಾನ ತಿಳಿದಿರುವ ಸಾಹಿತ್ಯದಿಂದ ಭೂತ, ದೈವಗಳ ಬಗೆಗೆ ಏನನ್ನಾದರೂ ತಿಳಿದುಕೊಳ್ಳಲು ಸಾಧ್ಯವೋ ನೋಡೋಣ. ತುಳುನಾಡು ಇತಿಹಾಸದ ಮೊದಲಿನಿಂದಲೂ ಕನ್ನಡದ ಅರಸರ ರಾಜ್ಯದ ಭಾಗವಾಗಿತ್ತೆಂಬುದನ್ನು ನಾವು ಮರೆಯದಿರೋಣ. ಕದಂಬರಿಂದ ವಿಜಯನಗರದವರೆಗೂ ಈ ಪ್ರದೇಶದ ಮೇಲರಸರು ಕನ್ನಡಿಗರು, ಬ್ರಿಟಿಷ್ ಅಧಿಪತ್ಯದಲ್ಲಿ ಈ ತುಳುನಾಡು ಮದ್ರಾಸು ಪ್ರಾಂತ್ಯಕ್ಕೆ ಸೇರಿಸಲ್ಪಟ್ಟಿತು.

ಕನ್ನಡದ ಆದಿಕವಿ ಪಂಪನಲ್ಲಿ ಹಲಕೆಲವು ಸ್ವಾರಸ್ಯಕರವಾದ ಉಲ್ಲೇಖಗಳಿವೆ. ದಶಕಂಧರ ರಾವಣನು ಫಕ್ಕನೆ ಭೂತಾವೇಶ ಹೊಂದಿದವನಂತೆ ಹಾಡಿ ಕುಣಿದ (೯-೫೩). ಭೀಷ್ಮನಿಗೆ ಸೇನಾಧಿಪತಿಯಾಗಿ ಪಟ್ಟಕಟ್ಟಿದಾಗ ಕರ್ಣನು ಬಲವಾಗಿ ಪ್ರತಿಭಟಿಸಿ ರೇಗಿ ಕೂಗಾಡಿದಾಗ ಭೀಷ್ಮನು ಇದನ್ನು ತುಚ್ಛವಾಗಿ ‘ಭಗವತಿ ಏರು’ ಎಂದು ಹೇಳಿ ಮುಗಿಸುತ್ತಾನೆ. ಭಗವತಿಯ ಆವೇಶ ಬರುವಾಗ ಮೊದಲು ಪಾತ್ರಿಯು ನಿಧಾನವಾಗಿ ಕಂಪಿಸುತ್ತ, ಮೆಲ್ಲಗೆ ಮಾತಾಡುತ್ತಾ ಇದ್ದು ಆಮೇಲೆ ಫಕ್ಕನೆ ಅತಿಯಾಗಿ ಕಂಪಿಸುತ್ತಾ ಆರ್ಭಟಿಸುತ್ತಾ ಇರುವಂತೆ ಕರ್ಣನಲ್ಲಿಯೂ ಭಗವತಿ ಏರಿದೆ. ಮತ್ತೆ ಇಳಿಯುತ್ತದೆ ಎಂಬುದು ಕವಿಯ ಆಶಯ (೧೦-೧೬). ಪಂಪನು ಇಂತಹ ಭಗವತಿ ದರ್ಶನವನ್ನು ಕಂಡಿರಬೇಕೆನ್ನುವುದು ಇದರಿಂದ ಸ್ಪಷ್ಟ. ಹಳೆಗನ್ನಡದಲ್ಲಿ ಭೂತವನ್ನೂ, ಹೇಡಿಯನ್ನೂ ‘ಬೂತು’ ಎಂದು ಹೇಳುವುದಿದೆ. ಇದೇ ಕಾವ್ಯದ (೧೩-೭೬)ರಲ್ಲಿ ಈ ಬೂತು ತನ್ನ ಧ್ವನಿಯನ್ನು ಕೇಳದೆ ಹೊರಡದು ಎಂದು ಭೀಮ ಹೇಳುವಾಗ ‘ಬೂತು’ ಎಂಬ ಶಬ್ದಕ್ಕೆ ಹೇಡಿ ಎಂದು ಅರ್ಥವನ್ನು ಹಲವರು ಹೇಳುತ್ತಾರೆ. ಜಲಸ್ತಂಭನ ಮಾಡಿದ ದುರ್ಯೋಧನನಿಗೆ ಭೀಮ ಮಾತಾಡುವುದಿರಲಿ, ಆರ್ಭಟಿಸಿದರೂ ನೀರೊಳಗೆ ಕೇಳಲಾರದು ಎಂಬುದು ಖಚತ. ಭೀಮನು ದುರ್ಯೋಧನನನ್ನು ಭೂತವೆಂದೂ, ತನ್ನನ್ನು ಉಚ್ಛಾಟಿಸುವ ಗ್ರಹವಾದಿ ಎಂದೂ ತಿಳಿದುಕೊಂಡರೆಯೇ ಅರ್ಥ ಸ್ಪಷ್ಟವಾದೀತು. ಗ್ರಹವಾದಿಯೂ ಭೂತವನ್ನು ಮಾತನಾಡಿಸುವಾಗ ಜಲವೇ ಮೊದಲಾದ ಯಾವ ಮಾಧ್ಯಮಗಳೂ ಅಡ್ಡಿಯಾಗವು. ಇವೆಲ್ಲ ಪಂಪಭಾರತದಿಂದ ಆಯ್ದ ಕೆಲವು ವಿವರಗಳು.

ಕನ್ನಡದ ತೀರ ಪ್ರಾಚೀನ ಗದ್ಯ ವಡ್ಡಾರಾಧನೆ. ಇದು ಶಿವಕೋಟಿ ಆಚಾರ್ಯನಿಂದ ೧೦ನೇ ಶತಮಾನದಲ್ಲಿ ರಚಿಸಲ್ಪಟ್ಟಿತು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದು ಜೈನಮತದ ಹೆಗ್ಗಳಿಕೆಯನ್ನು ತಿಳಿಸುವ ಕತೆಗಳ ಸಂಗ್ರಹವಾದರೂ ಅಲ್ಲಲ್ಲಿ ಸಮಕಾಲೀನ ಜೀವನದ ಬಿಂಬಗಳು, ಲಿಖಿತ ಸಾಹಿತ್ಯ ಹಾಗೂ ಜನಪದ ಸಾಹಿತ್ಯಗಳಲ್ಲಿ ಸಮಾನವಾಗಿ ವ್ಯವಹರಿಸುವ ಪಡೆನುಡಿಗಳು ಅಲ್ಲಲ್ಲಿ ಕಂಡುಬರುತ್ತವೆ. ಅರಸುಕುಮಾರ ತನ್ನ ಅರಮನೆಯ ಏಳನೆಯ ಉಪ್ಪರಿಗೆಯಲ್ಲಿ ಮಲಗಿದ್ದಾನೆ. ಅಲ್ಲಿಂದ ಏನೋ ಕುತೂಹಲಕರವಾದ ದೃಶ್ಯವನ್ನು ಕಾಣುತ್ತಾನೆ. ಇದು ವಡ್ಡಾರಾಧನೆಯ ಹಲವು ಕತೆಗಳಲ್ಲಿ ಕಾಣಬರುತ್ತದೆ. ತುಳು ಪಾಡ್ದನಗಳಲ್ಲೂ ಏಳನೆಯ ಉಪ್ಪರಿಗೆಯ (ನೆಲೆಯ) ಉಲ್ಲೇಖ ಹಲವೆಡೆ ಕಂಡುಬರುತ್ತದೆ. ಹುಚ್ಚನ್ನು ಆ ಕಾಲದ ಜನರು ಭೂತಗಳಿಂದ ಹಿಡಿಯಲ್ಪಟ್ಟುದರ ಪರಿಣಾಮವೆಂದು ತಿಳಿದುಕೊಂಡಿದ್ದರು. ಭೂತ, ಪಿಶಾಚ, ಮರುಳ ಇವೆಲ್ಲ ವಡ್ಡಾರಾಧನೆಯಲ್ಲಿ ಸಮಾನಾರ್ಥಕವಾಗಿ ಬಳಕೆಯಾಗಿವೆ. ಗ್ರಹ ಕೂಡ ಕೆಟ್ಟ ಶಕ್ತಿಯೇ. ತುಳುವಿನ ‘ಗಿರಾವು’ನಂತೆ. ಭೂತದಿಂದ ಹಿಡಿಯಲ್ಪಡುವುದಕ್ಕೆ ‘ಬೂತುಗೊಳ್’ ಎಂಬ ಪ್ರಯೋಗ ವಡ್ಡಾರಾಧನೆಯಲ್ಲೂ ಪಂಪಭಾರತದಲ್ಲೂ ಕಂಡುಬರುತ್ತದೆ. ಕಾರ್ತೀಕರಿಸಿಯ ಕತೆಯಲ್ಲಿ ಪಗರಣಿಗರು ಮರದ ಮೊಗಗಳನ್ನು ಇಟ್ಟುಕೊಂಡು ಹಾಡಿ, ಕುಣಿದು ಜನರನ್ನು ನಗಿಸುತ್ತಿದ್ದರಂತೆ. ಈ ಮೊಗಗಳು ನಮ್ಮ ಭೂತಾರಾಧನೆಯಲ್ಲಿ ಒಂದು ಪ್ರಧಾನವಾದ ಪರಿಕರ. ತೀರ ಸಾಮಾನ್ಯವಾದ ಹಾಳೆಯ ಮೊಗ, ಮರದ ಮೊಗ, ಚಂದನದ ಮೊಗ, ಕಂಚಿನ ಮೊಗ, ಬೆಳ್ಳಿಯ ಮೊಗ ಹಾಗೂ ಶ್ರೀಮಂತ ದೈವಸ್ಥಾನಗಳಲ್ಲಿ ಚಿನ್ನದ ಮೊಗವು ಇರುತ್ತದೆ. ಉತ್ಸವದ ಸಮಯದಲ್ಲಿ ಹೊರಕ್ಕೆ ಬರುತ್ತದೆ. ಉಳಿದಂತೆ ಭಂಡಾರದಲ್ಲಿ ಇದ್ದುಕೊಂಡು ಪಂಚಪರ್ವಗಳಲ್ಲಿ ಪೂಜೆಗೊಳ್ಳುತ್ತದೆ. ಅನಂತಾಡಿಯ ಉಳ್ಳಾಲ್ತಿಗೆ ಚಂದನ ಮೊಗವೂ, ಬೆಳ್ಳಿಯ ಮೊಗವು ಇದೆ. ಕೆಲವು ವರ್ಷಗಳಿಂದ ಚಿನ್ನದ ಮೊಗವನ್ನು ಮಾಡಿಸಬೇಕೆಂದು ಕೇಳುತ್ತಾ ಇದ್ದಾಳೆ.

ನಯಸೇನನ ಧರ್ಮಾಮೃತ ೧೨ನೇ ಶತಮಾನದ ಚಂಪೂಕೃತಿ. ಇದರಲ್ಲಿಯೂ ಜೈನಮತದ ಹೆಗ್ಗಳಿಕೆಯನ್ನು ಹೇಳುವ ಕತೆಗಳೇ ಇದ್ದರೂ, ಆ ಕಾಲದ ಜನಜೀವನ ಇನ್ನೂ ಹೆಚ್ಚಿನ ವಿವರಗಳಿಂದೊಡಗೂಡಿ ಪ್ರತಿಬಿಂಬಿತವಾಗಿದೆ. ನಯಸೇನನಿಗೆ ತುಳುನಾಡು ಕೂಡ ಪರಿಚಿತ. “ತುಳುನಾಡು ಸತ್ತ ಮನೆಯಲ್ಲಿ ಪಳಯಿಸುವಂತೆ ಪಳಯಿಸುವರು” ಎಂದು ಒಂದು ಉಪಮೆಯಲ್ಲಿ ಹೇಳುತ್ತಾನೆ. ಗ್ರಹ, ಭೂತ, ಪಿಶಾಚ, ಮರುಳ, ಪರ್ವಡೆ (ಶಿವಗಣ), ಗ್ರಹವಾದಿ (ಮಂತ್ರವಾದಿ), ಉಚ್ಛಾಟನೆ, ಭೂತಗಳು ಜನರನ್ನು ಹಿಡಿದುಕೊಂಡು ಉಪಟಳ ಕೊಡುವುದು, ಈ ‘ಕಿರುಕುಳ ವ್ಯಂತರ’ಗಳ ಉಪಾಸನೆ ಫಲಪ್ರದವಲ್ಲವೆಂಬ ಹೇಳಿಕೆ-ಇವನ್ನೆಲ್ಲ ಅಲ್ಲಿ ಕಾಣಬಹುದು.ಹೊಲೆಯರ ಭೂತದ ಪೂಜೆಯ ಬಗ್ಗೆ ಕಾಣಿಕೆ ಕೊಟ್ಟು ಮೇಲ್ಜಾತಿಯವರು ಅದನ್ನು ಸಮರ್ಥಿಸಲು ಪಾಡುಪಡುವ ಉಲ್ಲೇಖ ಇದೆ. ಅಧ್ಯಾಯ ೯ ಪದ್ಯ ೧೦೧ರಲ್ಲಿ ಕಿರುಕುಳ ವ್ಯಂತರಗಳ ಪಟ್ಟಿಯೇ ಇದೆ. ಎಕಲವಿರಿ, ಬನದಬ್ಬೆ, ಮಹಾಲಕ್ಷ್ಮಿ, ಕಂಚಿಯ ಕಾಮಕೋಟಿ, ಕೊಳ್ಳಿಪಾಕೆಯ ಭೂತಕೋಟಿ, ಮಾರಿಕಬ್ಬೆ, ಪೀಠಾಪುರದ ಶಾಕಿನಿ, ಪೊಣರ್ಮಾಲೆಯ ಮಂಗಳಾದೇವಿ, ಮೈಲಾಪುರದ ಕಾಮಾಕ್ಷಿ ಮೊದಲಾದವರು ಈ ಪಟ್ಟಿಯಲ್ಲಿ ಸೇರಿದ್ದಾರೆ. ಹಿಂದುಗಳು ದೇವಿಯೆಂದು ಪೂಜಿಸುವ ಕೆಲವು ಶಕ್ತಿಗಳು ಜೈನನಾದ ನಯಸೇನನಿಗೆ ‘ಕಿರುಕುಳ ವ್ಯಂತರಗಳೇ’, ನಮಗೆ ಈ ಪಟ್ಟಿಯಲ್ಲಿ ತುಂಬ ಆಸಕ್ತಿಯಿರುವುದು ‘ಎಕ್ಕಲವಿರಿ’ ಯಲ್ಲಿ. ಈ ಎಕ್ಕಲವಿರಿ ದೈತ್ಯಗಾತ್ರದ ಕಾಡುಹಂದಿ, ನಮ್ಮ ಪಂಜುರ್ಲಿ, ಮಲರಾಯರಂತೆ (ಕುದುರೆಗಿಂತ ದೊಡ್ಡವ, ಆನೆಗಿಂತ ಸ್ವಲ್ಪ ಕಿರಿಯದೆಂದು ಪಾಡ್ದನಗಳಲ್ಲಿ ಹೇಳಿದೆ). ನಡುಗನ್ನಡ ಸಾಹಿತ್ಯದ ಅಧ್ಯಯನದಿಂದ ಇನ್ನು ಹತ್ತು ಹಲವು ವಿಷಯಗಳು ಮೂಡಿಬರಬಹುದು. ನಯಸೇನ ಒಬ್ಬಳು ಜೈನರಾಣಿಯನ್ನು ಸೀತೆಗೆ ಹೋಲಿಸಿ ಸೀತೆಗಿಂತ ‘ನಾಲ್ವೆರಳ್’ ಮಿಗಿಲು ಎನ್ನುತ್ತಾನೆ. ಇಂತಹದೇ ಒಂದು ಪ್ರಯೋಗ ‘ಮುಂಡತ್ತಾಯ ಭೂತಗಳಿಗಿಂತ ಎರಡು ಮುಷ್ಟಿ ದೊಡ್ಡವ, ದೇವರಿಗಿಂತ ಒಂದು ಮುಷ್ಟಿ ಚಿಕ್ಕವ’ ಎಂಬಲ್ಲಿಯೂ ಕಾಣುತ್ತದೆ. ಈ ಎರಡೂ ಪ್ರಯೋಗಗಳಲ್ಲಿ ಭೌತಿಕ ಎತ್ತರದ ಅಳತೆಯಾದ ಬೆರಳು, ಅಂಗುಲ, ಮುಷ್ಟಿಗಳನ್ನು ಭೌತಿಕವಲ್ಲದ ಗುಣವಿಶೇಷಗಳ ಅಳತೆಗೆ ಉಪಯೋಗಿಸಲಾಗಿದೆ. ಮರುಳು ಪಿಶಾಚ ವೇಷಧಾರಿ ಕಪ್ಪು ಬಟ್ಟೆಯನ್ನುಟ್ಟು, ಮೈಗೆ ಕಪ್ಪು ಬಣ್ಣ ಹಚ್ಚಿ, ಬಾಯಲ್ಲಿ ಕವಡೆಗಳನ್ನು ಹಲ್ಲಿನಂತೆ ಧರಿಸಿ ಕೈಯಲ್ಲಿ ನವಿಲು ಗರಿಯ ಪಿಚ್ಛವನ್ನು ಹಿಡಿದುಕೊಳ್ಳುತ್ತಿದ್ದನಂತೆ.

ಇನ್ನು ತುಳು ಪಾಡ್ದನಗಳ ಬಗೆಗೆ ಎರಡು ಮಾತು. ನಮಗೆ ಈಗ ಲಭ್ಯವಿರುವ ಪಾಡ್ದನದ ಪಾಠಗಳಲ್ಲಿ ಮೂಲದಲ್ಲಿ ಇದ್ದಿರಬಹುದಾದ ತಿರುಳಾಗಿ ಪ್ರಾದೇಶಿಕವಾಗಿಯೂ, ವೈಯಕ್ತಿಕವಾಗಿಯೂ ಹಲವು ವಿಷಯಗಳು ಸೇರಿಕೊಂಡದ್ದನ್ನು ಕಾಣಬಹುದು. ಇವುಗಳಲ್ಲಿ ವಿಜಯನಗರದ ಉಲ್ಲೇಖ ಹಲವಾರು ಬಾರಿ ಬರುತ್ತದೆ. ಘಟ್ಟ ಇಳಿದು ದೈವಗಳು ಬರುವ ಉಲ್ಲೇಖಗಳೂ ಇವೆ. ಘಟ್ಟ ಇಳಿಯುವಾಗ ಬೇರೆ ಬೇರೆ ದಾರಿಗಳಲ್ಲಿ ಅವುಗಳ ರಕ್ಷಕ ದೈವಗಳು ತುಳುನಾಡಿಗೆ ಬಂದು ಆಮೇಲೆ ತಮ್ಮ ಬರವನ್ನು ಸೂಚಿಸಲು ಹಟ್ಟಿಯಲ್ಲಿ ಜಾನುವಾರುಗಳಿಗೆ ಕಾಯಿಲೆಯೇ ಮೊದಲಾದ ಉಪಟಳ ಕೊಡುವುದು ಕಾಣಬಹುದು. ಅಂತೆಯೇ ಬೇರೆಬೇರೆ ಸ್ಥಳಗಳಲ್ಲಿ ತಮಗೆ ನೆಲೆಯನ್ನು ಕಲ್ಪಿಸಿಕೊಂಡದ್ದನ್ನೂ ಕಾಣಬಹುದು. ಪಾಡ್ದನದ ಅರಸುಕುಮಾರನಿಗೆ ಮುಖದಲ್ಲಿ ಕಲಿ ಬಂದರೆ ಅದನ್ನು ಬೋಳಿಸಲು ಕನ್ನಡ ಕೆಲಸಿಮಗ ವೀಜಾ ನಗರದಿಂದ ಬರಬೇಕು.

ಅರಬೀ ಮೂಲದ ಅನೇಕ ಶಬ್ದಗಳು ಆಡುಭಾಷೆಯಲ್ಲಿ ಸೇರಿಕೊಂಡಂತೆ ತುಳುಪಾಡ್ದನ-ಸಂಧಿಗಳಲ್ಲೂ ಸೇರಿಕೊಂಡಿವೆ-ಅಂದಾಜ್, ಕಲಾಸಿ, ಸುಲ್ತಾನ, ಖಜಾನೆ, ಚಾಕರಿ ಇತ್ಯಾದಿ. ಪೋರ್ಚುಗೀಸರನ್ನು ಪರೆಂಗಿ ಎಂದು ಕರೆದಿರುವುದು ಇದೆ. ಕ್ರೂಜಾತ್-ಮಾಲೆ ಎಂಬ ಚಿನ್ನದ ಸರದ ಉಲ್ಲೇಖಗಳಿವೆ. ‘ಕ್ರೂಜಾತ್’ ಎಂಬುದು ಕ್ರಿಶ್ಚಿಯನ್ನರ ಶಿಲುಬೆ (cross) ಚಿಹ್ನೆಯಿರುವ ಚಿನ್ನದ ನಾಣ್ಯದ ಹೆಸರು. ಇದನ್ನು ಪೋರ್ಚುಗೀಸರು ಗೋವೆಯಲ್ಲಿ ಬಳಕೆಗೆ ತಂದರು. ಬೆಡಿ ಎಂದು ಕೋವಿಯ ಉಲ್ಲೇಖ ಬಂದಿದೆ. ವಿಜಯನಗರ ಕಾಲದಲ್ಲಿಯೂ, ಅದಕ್ಕೂ ಸ್ವಲ್ಪಮೊದಲು ಮುಸಲ್ಮಾನರ ಹಂಜಮಾನಗಳು ಕರಾವಳಿಯ ಹಲವು ಪಟ್ಟಣಗಳಲ್ಲಿ ನೆಲೆಯಾಗಿದ್ದುವು. ಅವರ ಸಂಪರ್ಕದಿಂದ, ಪೋರ್ಚುಗೀಸರವ್ಯಾಪಾರ ಸಂಬಂಧದಿಂದ ಈ ಶಬ್ದಗಳು ಆಡುಭಾಷೆಯನ್ನು ಸೇರಿಕೊಂಡಿರುವುದು ಸಹಜ. ಆರಾಧನಾ ವಿಧಾನಗಳಲ್ಲಿ ‘ನಾಗಮಂಡಲ’ವೆಂಬ ವಿಧಾನವಿದೆಯಷ್ಟೆ? ಅಲ್ಲಿ ಹಾಡುವ ಪದಗಳಲ್ಲಿ ಬಿಜಾಪುರದ ಬಾದಶಾಹನ ಉಲ್ಲೇಖವಿದೆ. ಇಲ್ಲಿ ಹಾಡುವ ಅನೇಕ ಹಾಡುಗಳು ದಾಸರ ಪದಗಳು. ಹೀಗೆ ಈ ಎರಡು ಆರಾಧನಾ ಕ್ರಮಗಳು ಈಗ ತಳೆದಿರುವ ರೂಪ, ಹಾಡು ಪಾಡ್ದನಗಳ ೧೬/೧೭ನೇ ಶತಮಾನದ ಕಾಲಕ್ಕೆ ಸ್ಥಿರವಾಗಿರಬಹುದೆಂದು ಅನುಮಾನಿಸಬಹುದು. ಕೋಟಿ-ಚೆನ್ನಯ್ಯ, ಕಾಂತಬಾರೆ, ಬೂದಬಾರೆ, ಬಿಕ್ರಮೇಲಾಂಟ, ದೇವುಪೂಂಜ ಮೊದಲಾದ ವೀರರೂ ಹೆಚ್ಚು ಕಡಿಮೆ ಇದೇ ಕಾಲಮಾನದವರು. ಹೀಗಿರುವಾಗ ಪಾಡ್ದನಗಳ ಸಾಹಿತ್ಯವನ್ನು ‘ಅನಾದಿ’ ಎಂದೂ, ಅಥವಾ ಈ ಕತೆಗಳ ಮೂಲ ಬಾಹ್ಯಾಕಾಶ (Space)ದಲ್ಲಿತ್ತು. ಇತ್ಯಾದಿಯಾಗಿ ಪರಿಗಣಿಸುವುದೂ ಎಷ್ಟು ಉಚಿತವೆಂಬುದನ್ನು ವಿಮರ್ಶಿಸಬೇಕು.

ಪಾಡ್ದನಗಳ ಸಾಹಿತ್ಯದಲ್ಲಿ ಹೊಸ ವಿಷಯಗಳನ್ನು ತುರುಕಿದ್ದು ಕಂಡುಬರುತ್ತದೆ. ಸುಬ್ಬಿಯಮ್ಮ ಪಾಡ್ದನದ ಸುಬ್ಬಿಯಮ್ಮನು ತನ್ನ ತಂದೆಯೊಡನೆ ಮಂಜೇಶ್ವರಕ್ಕೆ ರೈಲಿನಲ್ಲಿ ಹೋದಳೆಂದು ಹೇಳುತ್ತದೆ. ಸಿರಿ ಪಾಡ್ದನಕ್ಕೆ ಹಲವು ಪ್ರಾದೇಶಿಕ ಪಾಠಾಂತರಗಳಿವೆ. ನನ್ನ ಸಂಗ್ರಹದ ಬೆಳ್ತಂಗಡಿ ಉಜ್ರೆ ಕಡೆಯ ಪಾಠಾಂತರದಲ್ಲಿ ಬಿರ್ಮು ಆಳ್ವ ಆಲಡೆಯನ್ನು ಕಟ್ಟಿಸಲು ಮಣ್ಣಿನ ಕೆಲಸವನ್ನು ಮಣ್ಣಿನ ಆಚಾರಿಗೆ ಕಂಟ್ರಾಕ್ಟ್ ಕೊಟ್ಟ ಎಂಬ ಉಲ್ಲೇಖವಿದೆ. ಪಂಜುರ್ಲಿ ಪಾಡ್ದನದಲ್ಲಿ ಈಶ್ವರ ದೇವರು ಹಂದಿ ಮರಿಗಳನ್ನು ‘ಬೆಡಿ’ ಹಾಕಿ ಕೊಲ್ಲಲು ಹೇಳಿರುವುದು-ಇವು ಕೂಡಲೇ ಕಣ್ಣಿಗೆ ಅಪ್ಪಳಿಸುತ್ತವೆ. ಇವನ್ನು ಬಿಟ್ಟು ಬಿಟ್ಟರೂ ಪಾಡ್ದನದ ಕತೆಯ ಓಟಕ್ಕಾಗಲೀ ವಿಷಯಕ್ಕಾಗಲೀ ಯಾವುದೇ ಕೊರತೆ ಬಾರದು. ಆದರೆ ಪಾಡ್ದನದ ಕತೆಯಲ್ಲಿ ಬಿಡಲಿಕ್ಕಾಗದ ಪ್ರಮುಖ ಘಟನೆಗಳ ಬಗ್ಗೆ ಏನೆನ್ನೋಣ? ಸಿರಿ ಪಾಡ್ದನದಲ್ಲಿ ಕಾಂತಣ್ಣ ಆಳ್ವ (ಪೂಂಜ) ಸಿರಿಗೋಸ್ಕರ ಬಯಕೆ ಸೀರೆ ಖರೀದಿಸಲು ಹೊರಡುವ ಸನ್ನಿವೇಶ. ಕಾಂತಣ್ಣ ಆಳ್ವ ಕಲ್ಲ ಕಲೆಂಬಿಯಿಂದ ಬೇಕಾದಷ್ಟು ರೂಪಾಯಿಗಳನ್ನು ತೆಗೆದುಕೊಳ್ಳುತ್ತಾನೆ. ಮನೆ ಬಿಟ್ಟು ಹೊರಡುವಾಗ ಸಿರಿ ಅವನ ಕೈಯಲ್ಲಿ ಒಂದು ಬೆಳ್ಳಿ ರೂಪಾಯಿಯನ್ನು ಕೊಟ್ಟು ಅವಶ್ಯಕತೆಗೆ ಒದಗಿ ಬರಲಿ ಎಂದು ಹೇಳುತ್ತಾಳೆ. ಕಾಂತಣಾಳ್ವ ಸೀರೆ ಮಾರಾಟ ಮಾಡುವ ನವಾಯತ (ಮುಸ್ಲಿಂ-ಭಟ್ಕಳದವ)ನ ಅಂಗಡಿಗೆ ಹೋಗಿ ಸಾಕ್ಷಿಗಳ ಮುಂದೆ ವ್ಯಾಪಾರಿಯು ಬೇಡಿದ ಸೀರೆಯಷ್ಟೇ ತೂಕದ ಬೆಳ್ಳಿ ರೂಪಾಯಿ ಕೊಡಲು ಒಪ್ಪುತ್ತಾನೆ. ತಾನು ತಂದ ಎಲ್ಲ ರೂಪಾಯಿಗಳನ್ನು ತ್ರಾಸಿನ ತಟ್ಟೆಗೆ ಹಾಕಿದರೂ ಸೀರೆಯ ತೂಕಕ್ಕಿಂತ ಕಡಿಮೆಯಾಗುತ್ತದೆ. ಆಗ ಸಿರಿ ಕೊಟ್ಟ ರೂಪಾಯಿಯನ್ನು ತಟ್ಟೆಗೆ ಹಾಕಿದ ಕೂಡಲೇ ಬೆಳ್ಳಿಯ ತೂಕ ಹೆಚ್ಚಾಗಿ ತಟ್ಟೆ ಕೆಳಕ್ಕೆ ಇಳಿಯುತ್ತದೆ. ಈ ತಟ್ಟೆಯಿಂದ ಹೆಚ್ಚಿನ ರೂಪಾಯಿಯನ್ನು ಒಂದೊಂದಾಗಿ ತೆಗೆಯುತ್ತ ಕೊನೆಗೆ ಸಿರಿ ಕೊಟ್ಟ, ಒಂದೇ ರೂಪಾಯಿ ಸೀರೆಯ ತೂಕಕ್ಕೆ ಸಮನಾಗುತ್ತದೆ. ಈ ಘಟನೆಯನ್ನೂ ಮೂಲ ಕತೆಗೆ ಸೇರಿಸಿದೆ ಎಂದು ಹೇಳುವಂತಿಲ್ಲ. ರೂಪಾಯಿ ಎಂಬ ನಾಣ್ಯ ಈ ಪ್ರದೇಶದಲ್ಲಿ ೧೭ನೇಯ ಶತಮಾನದಲ್ಲಷ್ಟೇ ಬಳಕೆಗೆ ಬಂದಿತು, ಅದೂ ಈಸ್ಟ್ ಇಂಡಿಯಾ ಕಂಪೆನಿಯಿಂದ, ಅದಕ್ಕೆ ಮೊದಲು ದಕ್ಷಿಣ ಭಾರತದಲ್ಲೆಲ್ಲ ಬಳಕೆಯಲ್ಲಿದ್ದುದು ಬಂಗಾರದ ವರಹ ಹಾಗೂ ಅದರ ಅಂಶ-ಹಣ, ಬೇಳೆ, ವೀಸ ಇತ್ಯಾದಿ. ಇದೇ ಕತೆಯಲ್ಲಿ ಸಿರಿಗೆ ತಲೆಗೆ ಹಚ್ಚಲು ಒಬ್ಬಳು ಕೊಂಕಣಿ ಹೆಂಗಸು ಎಣ್ಣೆ ಕೊಡುತ್ತಾಳೆ. ಕ್ರಿಶ್ಚಿಯನ್ ಮಹಿಳೆ ಮುಡಿಯಲು ಮಲ್ಲಿಗೆ ಕೊಡುತ್ತಾಳೆ. ಕೊಂಕಣಿಗರು ಈ ಪ್ರದೇಶಕ್ಕೆ ಗಣನೀಯ ಸಂಖ್ಯೆಯಲ್ಲಿ ವಲಸೆ ಬಂದುದು ೧೬ನೇ ಶತಮಾನದಲ್ಲಿ. ಕ್ರಿಶ್ಚಿಯನ್ನರು ಅದಕ್ಕಿಂತಲೂ ಮುಂದೆ ೨೫-೩೦ ವರ್ಷಗಳ ಆನಂತರ ಬಂದರು. ಈ ಎಲ್ಲ ಆಂತರಿಕ ಸಾಕ್ಷ್ಯಗಳು ಸಿರಿ ಪಾಡ್ದನದ ಈಗ ಲಭ್ಯವಿರುವ ಪಾಠ ೧೭ನೇ ಶತಮಾನದಲ್ಲಷ್ಟೇ ಸ್ಥಿರವಾಯಿತು ಎಂದು ಹೇಳುತ್ತವೆ.

ಇತರ ಪಾಡ್ದನಗಳಲ್ಲೂ ಇಂತಹ ಆಂತರಿಕ ಸಾಕ್ಷ್ಯಗಳು ಒದಗುತ್ತವೆ. ಹೀಗೆ ಪಾಡ್ದನಗಳ ಅಧ್ಯಯನದಿಂದ ಅವುಗಳು ರಚಿಸಲ್ಪಟ್ಟ ಕಾಲದ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿಬೇಕು.

ಇಷ್ಟೆಲ್ಲ ಹೇಳಿದ ಮೇಲೆ ಪುನಃ ಒಂದು ಮಾತು ಹೇಳಲೇಬೇಕಾಗುತ್ತದೆ. ಆರಾಧನೆಯ ರೂಪ ಪ್ರಾಚೀನ ಕಾಲದಲ್ಲಿ ಇದ್ದುದಕ್ಕಿಂತ ಬದಲಾಗುತ್ತಾ ಬಂದಿದೆ. ಈ ಬದಲಾವಣೆಯನ್ನು ಭೂತಗಳಿಗೆ ನಡೆಯುವ ನೇಮ-ಕೋಲಗಳ ವಿಧಾನದಲ್ಲೂ, ದೈವತ್ವವನ್ನು ಪಡೆದ ಉಳ್ಳಾಲ್ತಿ ಮೊದಲಾದವರ ಆರಾಧನ ವಿಧಾನಗಳಲ್ಲೂ ಕಾಣಬಹುದು. ಹೀಗೆ ರೂಪ ಬದಲಾಗುತ್ತಾ ಬಂದ ಕಾಲದಲ್ಲಿ ಮೂಲ ಕತೆಗೆ ಬೇರೆಬೇರೆ ಉಪಕತೆಗಳು ಸೇರಿಕೊಂಡಿರುವುದು ಸಾಧ್ಯ. ಭಾಷೆಯ ಶೈಲಿಯಲ್ಲಿ ಬದಲಾವಣೆ ಆಗಿರುವುದೂ ಸಾಧ್ಯ. ಆದುದರಿಂದಲೇ ಈ ಲೇಖದಲ್ಲಿನ ‘ಪಾಡ್ದನಗಳ ಪ್ರಸ್ತುತ ಲಭ್ಯವಿರುವ ಪಾಠ’ ವೆಂದು ಪದೇ ಪದೇ ಹೇಳಬೇಕಾಗಿದೆ. ಪಾಡ್ದನಗಳ ಅಧ್ಯಯನ, ಆರಾಧನಾ ವಿಧಾನಗಳ ಅಧ್ಯಯನ ಈಗಾಗಲೇ ಹಲವು ಆಸಕ್ತರ, ಪರಿಣತರ ಗಮನವನ್ನು ಸೆಳೆದಿವೆ. ಈ ದಿಶೆಯಲ್ಲಿ ಕೆಲಸವೂ ಆಗುತ್ತಾ ಇದೆ, ಇದು ಸಂತೋಷದ ವಿಷಯ. ಅನತಿ ದೂರದ ಭವಿಷ್ಯದಲ್ಲಿ ಈ ವಿಷಯಗಳ ಬಗ್ಗೆ ಖಚಿತವಾದ ನಿರ್ಧಾರಗಳು ಬರುವುದು ಸಾಧ್ಯ.