ಬೌದ್ಧ ಧರ್ಮದ ಮಹಾಯಾನದಲ್ಲಿ ಮುಂದೆ ಬುದ್ಧರಾಗಲಿಕ್ಕಿರುವ ದೇವತಾಕಲ್ಪರಾದ ಭೋಧಿಸತ್ವರ ಆರಾಧನೆ ಇದೆ ಎಂದೂ, ಅವರು ಹಲವರಲ್ಲ (೧) ಮೈತ್ರೇಯ, (೨) ಅವಲೋಕಿತೇಶ್ವರ ಅಥವಾ ಲೋಕೇಶ್ವರ ಮತ್ತು (೩) ಮಂಜುಶ್ರೀ ಅಥವಾ ಮಂಜುಘೋಷ (ಹಾಗೂ ಮಂಜುನಾಥ) ಎಂಬ ಮೂವರು ಪ್ರಸಿದ್ಧರೆಂದೂ ಮೇಲೆ ಕಂಡಿರುತ್ತೇವೆ. ಕದಿರೆಯ ಈ ಮೂರ್ತಿಯಾದರೊ ನಿಶ್ಚಯವಾಗಿಯೂ ಇವರಲ್ಲಿ ಲೋಕೇಶ್ವರನೂ ಎಂಬ ಅವಲೋಕಿತೇಶ್ವರನದೇ ವಿಗ್ರಹವಾಗಿರಬೇಕು. ಏಕೆಂದರೆ ಕದಿರೆಯ ವಿಗ್ರಹಕ್ಕೆ ಆತನ ಲೋಕೇಶ್ವರನೆಂಬ ಹೆಸರು ಮಾತ್ರವಲ್ಲ, ಆ ಅವಲೋಕಿತೇಶ್ವರನ ಮೂರ್ತಿಗೆ[1]ಹೇಗೋ ಹಾಗೆಯೇ ಇದಕ್ಕೂ ಮೆಯ್ಯಲ್ಲಿ ಕೆಯ್ಯಲಿ ವಿವಿಧ ಆಭರಣಗಳಿವೆ, ಜನಿವಾರವಿದೆ, ಎರಡರ ಜಟಾಮಕುಟಗಳೂ ಏಕಪ್ರಕಾರವಾಗಿವೆ. ಅವಲೋಕಿತೇಶ್ವರನ ಮೂರ್ತಿ ವರದಂ ದಕ್ಷಿಣೇ ಹಸ್ತೇ[2]ಹೇಗೋ ಹಾಗೆಯೇ ಕದಿರೆಯ ಲೋಕೇಶ್ವರ ಮೂರ್ತಿಯೂ ಬಲಗೆಯ್ಯಿಂದ ವರದ ಮುದ್ರೆಯನ್ನು ತೋರಿಸುವುದಲ್ಲದೆ, ಎರಡು ಕೆಯ್ಗಳುಳ್ಳ ಅವಲೋಕಿತೇಶ್ವರನ ಮೂರ್ತಿಯ ಎಡಗೈಯ್ಯಲ್ಲಿ (ವಾಮೇ ಪದ್ಮಧರಮ್)[3]ಪದ್ಮವಿದೆಯಾದರೆ, ಎರಡೇ ಅಲ್ಲ, ಅನೇಕ ಕೆಯ್ಗಳೂ ಉಳ್ಳ ಅವಲೋಕಿತೇಶ್ವರ (ಲೋಕೇಶ್ವರ)ನ ಮೂರ್ತಿಗಳು ಇರುವುದರಿಂದ,[4] ೬ ಕೆಯ್ಗಳುಳ್ಳ ಕದಿರೆಯ ಲೋಕೇಶ್ವರ ಮೂರ್ತಿಯ ೨ ಕೆಯ್ಗಳಲ್ಲಿ ಪದ್ಮಗಳಿವೆ ಹಾಗೂ ಅವಲೋಕಿತೇಶ್ವರನ ಮೂರ್ತಿಯಂತೆ ನಮ್ಮ ಮೂರ್ತಿಯು ಧ್ಯಾನಮುದ್ರೆಯಲ್ಲಿದೆ. ಇದೆಲ್ಲಕ್ಕಿಂತ ಮಿಗಿಲಾಗಿ, ಬೌದ್ಧರ ಪ್ರತಿಮಾಶಾಸ್ತ್ರದ ಮೇರೆಗೆ ಪ್ರತ್ಯೇಕ ಬೋಧಿಸತ್ತ್ವನ ಜಡೆಯಲ್ಲೂ ಪ್ರಭಾವಳಿಯಲ್ಲೂ ಅವನ ಆಧ್ಯಾತ್ಮಿಕ ಗುರುವಾರ ಧ್ಯಾನಿ ಬುದ್ಧನ ಚಿಕ್ಕ ಮೂರ್ತಿ ಅವಶ್ಯಕವಾಗಿ ರೂಪಿಸಿರಲೇಬೇಕಾಗಿರುವಂತೆ, ಅವಲೋಕಿತೇಶ್ವರನ ಪ್ರತಿಮೆಯ ಜಡೆಯಲ್ಲಿ ಹೇಗೆ ಆತನ ಧ್ಯಾನಿಬುದ್ಧನಾದ ಅಮಿತಾಭ್ ಬುದ್ಧನ ಚಿಕ್ಕ ಮೂರ್ತಿ ಅವಿಯೋಜ್ಯವಾಗಿ ಇದೆಯೊ ಹಾಗೆಯೇ ಅದೇ ಮಾದರಿಯ, ಅದೇ ರೀತಿಯಲ್ಲಿ ಪದ್ಮಾಸನಸ್ಥವಾಗಿ ಕೆಯ್ಗಳನ್ನು ಒಂದರ ಮೇಲೊಂದು ಇಟ್ಟು ಧ್ಯಾನಾವಸ್ಥೆಯಲ್ಲಿರುವ ಚಿಕ್ಕ ಮೂರ್ತಿ ಕದಿರೆಯ ಲೋಕೇಶ್ವರನ ಜಡೆಯಲ್ಲೂ ಇದೆ, ಪ್ರಭಾವಳಿಯಲ್ಲೂ ಇದೆ. ಆತಏವ ಕದಿರೆಯ ಲೋಕೇಶ್ವರನ ವಿಗ್ರಹ ಬೌದ್ಧರ ಬೋಧಿಸತ್ತ್ವನಾದ ಅವಲೋಕಿತೇಶ್ವರನೆಂಬ ಲೋಕೇಶ್ವರನ ವಿಗ್ರಹವೇ ಸರಿ ಎಂಬುದಕ್ಕೆಇದೊಂದೇ ಸಾಕ್ಷ್ಯಸಾಕು, ಬೇರೆ ಪ್ರಮಾಣಗಳನ್ನು ಹುಡುಕಬೇಕೆಂದಿಲ್ಲ. ಮತ್ತೂ ಹೇಳುವುದಾದರೆ, ಆ ವಿಗ್ರಹದ ಪೀಠದಲ್ಲಿಯ ಶಾಸನದಲ್ಲಿ ಅದನ್ನು ಪ್ರತಿಷ್ಠಿಸಿದ ಮಂದಿರವನ್ನು ಕೇವಲ ಬೌದ್ಧ ಪರಿಭಾಷೆಯಲ್ಲಿ ವಿಹಾರ ಎಂದೂ ಹೇಳಿದೆ-

ಶ್ರೀಮತ್ ಕದರಿಕಾ ನಾಮ್ನಿ ವಿಹಾರೇ ಸುಮನೋಹರೇ || ೯ ||

ವಿಹಾರವೆಂದು ಬೌದ್ಧ ದೇವತಾ ಮಂದಿರಗಳಲ್ಲದೆ ಬೇರೆ ಯಾವ ಧರ್ಮದ ದೇವಾಲಯಗಳಿಗೂ ಹೆಸರಾಗದೆಂದು ಮೇಲೆ ಹೇಳಿದೆ. ಆದ ಕಾರಣ ಕದಿರೆಯ ಲೋಕೇಶ್ವರನ ಮೂರ್ತಿ ಬೌದ್ಧ ವಿಗ್ರಹವೂ ಸರಿ, ಅದು ಭೋಧಿಸತ್ತ್ವ ಲೋಕೇಶ್ವರನ ಪ್ರತಿಮೆಯೂ ಸರಿ ಎಂದು ನಿಷ್ಕೃಷ್ಟವಾಗಿ ಸಿದ್ಧವಾಗುತ್ತದೆ.

ಹಾಗಾದರೆ ಆ ಮೂರ್ತಿಯನ್ನು ಪ್ರತಿಷ್ಠಿಸಿದ ಆಳುಪ ಅರಸನಾದ ಕುಂದವರ್ಮನನ್ನು ಅದರ ಪೀಠದಲ್ಲಿಯ ಶಾಸನದಲ್ಲಿ –

ಪಾದಾರವಿಂದಭ್ರಮರೋ ಬಾಲಚಂದ್ರಶಿಖಾಮಣೇಃ || ೬ ||

ಶಿವಭಕ್ತನೆಂದು ಹೇಳಿದೆಯಷ್ಟೇ, ಆತನು ಬೌದ್ಧರ ಬೋಧಿಸತ್ತ್ವ ವಿಗ್ರಹವನ್ನು ಪ್ರತಿಷ್ಠಿಸಲಿಕ್ಕೆ ಕಾರಣವೇನು?

ಬೌದ್ಧ ದರ್ಮವು ಬಹಳ ಹಿಂದೊಮ್ಮೆ ಕದಿರೆಯಲ್ಲಿ ನೆಲಸಿತ್ತೆಂದೂ ಕ್ರಿ.ಶ. ೭-೮ನೆಯ ಶತಮಾನದೊಳಗೆ ತುಳುನಾಡಿನಿಂದ ತೀರ ಲುಪ್ತವಾಯಿತೆಂದೂ ಹಿಂದೆ ಕಂಡಿರುವೆವಷ್ಟೆ. ಆದಕಾರಣ ಕಿ.ಶ. ೧೧ನೆಯ ಶತಮಾನದಲ್ಲಿ ಕದಿರೆಯಲ್ಲಿ ಪ್ರತಿಷ್ಠಿತನಾದ ಲೋಕೇಶ್ವರನ ವಿಗ್ರಹವೂ, ಆ ಶಾಸನದಲ್ಲಿ ವಿಹಾರವೆಂದಿರುವ ಕದಿರೆಯ ಮಂದಿರವೂ ಖಾಸಾ ಬೌದ್ಧ ಧರ್ಮದವರಿಂದ ಅಲ್ಲ, ಆ ಧರ್ಮದ ಪ್ರಭಾವಕ್ಕೆ ಶಾನೆ ಈಡಾದ ಉತ್ತರ ಭಾರತದ ಬೇರಾವುದೊಂದು ಬೌದ್ಧೇತರ ಪಂಥದಿಂದ, ಆತಏವ ಹಿಂದೂ ಧರ್ಮದ ಪಂಥದಿಂದ, ನಿರ್ಮಸಲ್ಪಟ್ಟವಾಗಿರಬೇಕು. ಆ ಪಂಥವೆಂದರೆ, ಈಗಲೂ ಕದಿರೆಯ ಗುಡ್ಡದಲ್ಲಿ ಮಠ ಮಾಡಿಕೊಂಡಿರುವ ಜೋಗಿಗಳೆಂಬವರ ಶೈವಧರ್ಮದ ನಾಥಪಂಥವಲ್ಲದೆ ಬೇರೆಯಲ್ಲ. ಈ ನಿರ್ಣಯವನ್ನು ಸಮರ್ಥಿಸಲಿಕ್ಕೆ ಕದಿರೆಯ ದೇವಾಲಯದಲ್ಲಿರುವ ಲೋಕೇಶ್ವರ ಮೂರ್ತಿಯ ಜಡೆಯಲ್ಲಿರುವಂತೆಯೇ ಕದಿರೆಯ ಗುಡ್ಡದಲ್ಲಿರುವ ಜೋಗಿಮಠದ ಹೊರಗಡೆಯ ಆ ಮೂರು ಗುಡಿಯಲ್ಲಿಯ ನಡುವಣ ಗುಡಿಯಲ್ಲಿರುವ ಮತ್ಸ್ಯೇಂದ್ರನಾಥನ ಮಾನುಷ ವಿಗ್ರಹದ ಜಡೆಯಲ್ಲಿರುವ ಆ ಚಿಕ್ಕ ಮೂರ್ತಿಯೊಂದೇ ಸಾಕು.

ನಾಥಪಂಥವು ಬೌದ್ಧಧರ್ಮದ ಮಹಾಯಾನ ಶಾಖೆಯ ವಜ್ರಯಾನವೆಂಬ ಪಂಗಡದಿಂದ ಸಿದ್ಧವಾಯಿತು. ಆತಏವ ಅದು ತಾಂತ್ರಿಕ ಶೈವಮಾರ್ಗವಾಗಿ ಪರಿಣಮಿಸುವ ಮುಂಚೆ ತಾಂತ್ರಿಕ ಬೌದ್ಧ ಮಾರ್ಗದ ಪ್ರಕಾರವಾಗಿದ್ದ ಕಾರಣ, ಅದಕ್ಕೆ ಬೌದ್ಧವೂ ಬ್ರಾಹ್ಮಣವೂ ಅವೆರಡು ಧರ್ಮಗಳ ತಂತ್ರಗಳು ಹೊಂದಿಕೆಯಾಗಿವೆ. ನಾಥಪಂಥವು ಬೌದ್ಧಧರ್ಮದಿಂದ ಶೈವಧರ್ಮಕ್ಕೆ ಮಾರ್ಪಟ್ಟ ವಿಧಾನದಲ್ಲಿ ಅದು ಕೆಲಮಟ್ಟಿಗೆ ಬೌದ್ಧ ಪರಿಬಾಷೆಯನ್ನು ಬಳಸಿಕೊಂಡಿತಷ್ಟೇ ಅಲ್ಲ, ಬೌದ್ಧವೂ ಶೈವವೂ ಧರ್ಮಗಳ ಆಚಾರಗಳನ್ನೂ ಸಿದ್ಧಾಂತಗಳನ್ನೂ ಸಹಜವಾಗಿ ಹೀರಿಕೊಂಡಿತು. ಹೀಗಾಗಿ ನಾಥಪಂಥದ ಆದ್ಯ ಗುರುಗಳು ವಜ್ರಯಾನದ ದೇವತೆಗಳ ಹಾಗೂ ಗುರುಗಳೊಂದಿಗೆ ಸಮೀಕರಿಸಲ್ಪಟ್ಟರು. ತಿಬೇಟದಲ್ಲೂ ನೇಪಾಳದಲ್ಲೂ ನಾಥಪಂಥದ ಪ್ರವರ್ತಕನಾದ ಮತ್ಸ್ಯೇಂದ್ರನಾಥನು ಮಹಾಯಾನದ ದೇವತೆಯಾದ ಬೋಧಿಸತ್ತ್ವ ಅವಲೋಕಿತೇಶ್ವರನೆಂಬ ಲೋಕೇಶ್ವರನೊಡನೆ ಸಮೀಕೃತನಾಗಿ ದೇವತೆಯಾದನು, ಹಾಗೂ ಬಂಗಾಳದಲ್ಲಿ ಆತನೂ ಆತನ ನಿಜ ಶಿಷ್ಯನಾದ ಗೋರಕ್ಷನಾಥನೂ ಬೌದ್ಧ ಮುನಿಗಳೆಂದು ಭಾವಿಸಲ್ಪಟ್ಟರು.

ಹೀಗೆ ಕದಿರೆಯ ದೇವಾಲಯದಲ್ಲಿರುವ ಆ ಲೋಕೇಶ್ವರನ ವಿಗ್ರಹವು ಬೌದ್ಧ ಧರ್ಮದ ದೇವತೆಯಾದ ಲೋಕೇಶ್ವರನೊಡನೆ ಸಮೀಕರಿಸಲ್ಪಟ್ಟ, ಶೈವಧರ್ಮದ ಸಂತನಾದ ಮತ್ಸ್ಯೇಂದ್ರನಾಥನ ದೇವತಾಮೂರ್ತಿ, ಅಂದರೆ ದೇವೀಭೂತನಾದ ಮತ್ಸ್ಯೇಂದ್ರನಾಥನ ಮೂರ್ತಿ ಎಂದು ಸ್ಪಷ್ಟವಾಗುತ್ತದೆ. ಹಾಗಾದರೆ ಅವಲೋಕಿತೇಶ್ವರ (ಲೋಕೇಶ್ವರ)ನ ವಿಗ್ರಹದ ಜಡೆಯಲ್ಲಿ ಆತನ ಧ್ಯಾನಿಬುದ್ಧನಾದ ಅಮಿತಾಭನ ಚಿಕ್ಕ ಮೂರ್ತಿ ಇರುವಂತೆ, ಆತನಲ್ಲಿ ಸಮೀಕೃತನಾದ ಮತ್ಸ್ಯೇಂದ್ರನಾಥನ ಈ ವಿಗ್ರಹದ ಜಡೆಯಲ್ಲೂ ಪ್ರಭಾವಳಿಯಲ್ಲೂ ತೋರುವ ಆ ಚಿಕ್ಕ ಮೂರ್ತಿಗಳು ಯಾರವು? ಎಂದು ಸ್ವಾಭಾವಿಕವಾಗಿ ಪೃಚ್ಛಿಸಬಹುದು. ಅದಕ್ಕೆ ಪ್ರತ್ಯುತ್ತರವಿಷ್ಟೆ.-

ಅವಲೋಕಿತೇಶ್ವರನ ಜಡೆಯಲ್ಲಿ ರೂಪಿತವಾದ ಅಮಿತಾಭನು ಹೇಗೆ ಆತನ ಆಧ್ಯಾತ್ಮಿಕ ಗುರುವಾದ ಧ್ಯಾನಿಬುದ್ಧನೊ ಹಾಗೂ ಧ್ಯಾನಿಬುದ್ಧರೆಲ್ಲರೂ ಶಾಶ್ವತರೆಂಬ122ಕಾರಣ ಶಾಶ್ವತನೋ, ಹಾಗಯೇ ಲೋಕೇಶ್ವರನೊಂದಿಗೆ ಸಮೀಕೃತನಾದ ಮತ್ಸ್ಯೇಂದ್ರನಾಥನ (ಕದಿರೆಯ ಮೂರ್ತಿಯ) ಜಡೆಯಲ್ಲೂ ಪ್ರಭಾವಳಿಯಲ್ಲೂ ತೋರುವ ಆ ಚಿಕ್ಕ ಮೂರ್ತಿಯಾದರೂ ಆ ಮತ್ಸ್ಯೇಂದ್ರನಾಥನ ಆಧ್ಯಾತ್ಮಿಕ ಗುರುವೂ ಶಾಶ್ವತನೂ ಆದ ಯಾವನೊಬ್ಬನ ಮೂರ್ತಿ. ಹಾಗಾದರೆ ಶಾಶ್ವತನಾದ ಆ ಗುರು ಯಾರು? ಹೀಗೊಂದು ಕಥೆ ಇದೆ – ಒಮ್ಮೆ ಆದಿನಾಥನಾದ ಶ್ರೀ ಶಿವನು ಪಾರ್ವತಿಗೆ ಯೋಗವನ್ನು ಉಪದೇಶಿಸುತ್ತಿರುವಾಗ, ಮತ್ಸ್ಯೇಂದ್ರನಾಥನು ಒಂದು ಮೀನಿನ ರೂಪದಿಂದಲೊ ಅಥವಾ ಮೀನಿನ ಹೊಟ್ಟೆಯಲ್ಲಿಯೊ ಅಲ್ಲಿದ್ದು ಅದನ್ನು ಕೇಳಿ ಗ್ರಹಿಸಿಕೊಂಡನು. ಆ ಕಾರಣ ಅನಾದ್ಯನಂತನಾಗಿ ಶಾಶ್ವತನಾಗಿ ಇರುವ ಆದಿನಾಥನಾದ ಹಾಗೂ ಯೋಗೇಶ್ವರನಾದ ಶಿವನೇ ಮತ್ಸ್ಯೇಂದ್ರನಾಥನಿಗೆ ಯೋಗವನ್ನು ಉಪದೇಶಿಸಿದ ಗುರು, ಆತಏವ ಆತನ ಆಧ್ಯಾತ್ಮಿಕ ಗುರು ಎಂದು ವ್ಯಕ್ತವಾಗುವುದರಿಂದ, ಕದಿರೆಯ ದೇವಾಲಯದಲ್ಲಿರುವ ಲೋಕೇಶ್ವರನ ಜಡೆಯುಲ್ಲೂ ಪ್ರಭಾವಳಿಯಲ್ಲೂ ಹಾಗೂ ಕದಿರೆಯ ಗುಡ್ಡದಲ್ಲಿರುವ ಜೋಗಿಮಠದ ಹೊರಗಡೆಯ ನಡುವಣ ಗುಡಿಯಲ್ಲಿರುವ ಮತ್ಸ್ಯೇಂದ್ರನಾಥನ ಆ ಮಾನುಷ ವಿಗ್ರಹದ ಜಡೆಯಲ್ಲೂ ಇರುವ ಆ ಚಿಕ್ಕ ಮೂರ್ತಿಗಳಲ್ಲಿ ರೂಪಿತನಾದ ವ್ಯಕ್ತಿ ಯೋಗೀಶ್ವರನಾದ ಶಿವನೇ ವಿನಾ ಬೇರೆ ಯಾರೂ ಅಲ್ಲ. ಆತಏವ ಕುಂದವರ್ಮನು ಕದಿರೆಯಲ್ಲಿ ಪ್ರತಿಷ್ಠಿಸಿದ ಲೋಕೇಶ್ವರನ ವಿಗ್ರಹವಾದರೊ ಆ ಹೆಸರಿನ ಬೋಧಿಸತ್ತ್ವನ ವಿಗ್ರಹವಲ್ಲ, ಪರಶಿವನ ಆಧ್ಯಾತ್ಮಿಕ ಪುತ್ರನಾದ ಹಾಗೂ ದೇವೀಭೂತನಾದ ಮತ್ಸ್ಯೇಂದ್ರನಾಥನು ಲೋಕೇಶ್ವರನಲ್ಲಿ ಐಕ್ಯವಾಗಿದ್ದ ಕಾರಣ, ಅದಕ್ಕಿನ್ನು ಮತ್ಸ್ಯೇಂದ್ರನಾಥನೆಂದಲ್ಲ, ಲೋಕೇಶ್ವರನೆಂದೇ ಹೆಸರು. ಅದರ ಹೆಸರಿನ ಈಶ್ವರ ಎಂಬ ಪರಪದದಿಂದ ಅದು ಈಶ್ವರನಂತೆಯೇ ಪೂಜಾರ್ಹ ಅಥವಾ ಸಾಕ್ಷಾತ್ ಈಶ್ವರನ ವಿಗ್ರಹ ತಾನೆ.

ಕದಿರೆಯ ದೇವಾಲಯದಲ್ಲೇ ದಕ್ಷಿಣಾಭಿಮುಖವಾಗಿ ಕುಳತಿರುವ ಹಾಗೂ ಪೀಠದಲ್ಲಿ ದೊಡ್ಡ ಮತ್ಸ್ಯಲಾಂಛನವೂ ಇರುವ ಮತ್ಸ್ಯೇಂದ್ರನಾಥನದೇ ತೀರ ಮಾನುಷಾಕೃತಿಯೊಂದು ಬೇರೆ ಶಿಲಾಮೂರ್ತಿಯೂ ಇದೆ.[5]ಅದಕ್ಕೆ ಒಂದೇ ಮೊಗ, ಎರಡೇ ಕೆಯ್ಗಳು, ಜನಿವಾರವಿದೆ, ಆಭರಣವೇನೂ ಇಲ್ಲ ಹಾಗೂ ಪ್ರಭಾವಳಿಯಲ್ಲಿ ಕೀರ್ತಿಮುಖ ಮಾತ್ರವಲ್ಲದೆ, ಜಡೆಯಲ್ಲಾಗಲಿ ಪ್ರಭಾವಳಿಯಲ್ಲಾಗಲಿ ಧ್ಯಾನಾಸಕ್ತನಾದ ಆ ಯೋಗಿಯ ಚಿಕ್ಕ ಮೂರ್ತಿಯೂ ಇಲ್ಲ ಆತಏವ ಆ ಮೂರ್ತಿ ಮತ್ಸ್ಯೇಂದ್ರನಾಥನು ಲೋಕೇಶ್ವರದಲ್ಲಿ ಸಮೀಕೃತನಾಗಿ ದೇವೀಭೂತನಾಗುವುದಕ್ಕಿಂತ ಮುಂಚಿನದಾಗಿರಬೇಕು. ಈಗ ಕದಿರೆಯ ಲೋಕೇಶ್ವರನ ಮೂರ್ತಿ ಆ ಬೌದ್ಧ ದೇವತೆಯೊಂದಿಗೆ ಸಮೀಕರಿಸಲ್ಪಟ್ಟ ನಾಥಪಂಥದ ಮೂಲಪುರುಷನಾದ ಈ ಮತ್ಸ್ಯೇಂದ್ರನಾಥನ ವಿಗ್ರಹವೆಂಬುದರಿಂದ ಅದು ಸ್ವಾಭಾವಿಕವಾಗಿ ಆತನ ದೇವತ್ವಕ್ಕಿಂತ ಈಚೆಯದಾಗಿರಬೇಕು. ಆ ಲೋಕೇಶ್ವರನ ಮೂರ್ತಿ ಕ್ರಿ.ಶ. ೧೦೬೮ರಲ್ಲಿ ಪ್ರತಿಷ್ಠಿತವಾದ ಕಾರಣ, ಮತ್ಸ್ಯೇಂದ್ರನಾಥನು ಕ್ರಿ.ಶ. ೧೦೬೮ರ ಹಿಂದೆಯೇ ದೇವೀಭೂತನಾಗಿರಬೇಕು. ಆತನ ದೇವತ್ವವು ಅವನ ಮರಣಾನಂತರ ಹೆಚ್ಚಾದರೆ ೫೦ ವರ್ಷಗಳೊಳಗೆ ಎನ್ನೋಣ, ಅವನಿಗೆ ಪ್ರಾಪ್ತಿಸಿರಬೇಕೆಂದು ಯಥಾಯುಕ್ತವಾಗಿ ಊಹಿಸಲಾಗುವುದರಿಂದಲೂಹಾಗೂ ಉತ್ತರ ಭಾರತದಲ್ಲಿ ಅತನು ಹೊಂದಿದ ಆ ದೇವತ್ವದ ವಿಷಯವು ಅಲ್ಲಿಂದ ಎಷ್ಟೋ ದೂರದಲ್ಲಿಯ ತುಳುನಾಡಿನಲ್ಲಿ ತಿಳಿದುಬರುವರೆ ಹೆಚ್ಚು ಕಡಮೆ ಮತ್ತೂ ೫೦ ವರ್ಷಗಳು ಸಂದಿರಬೇಕು ಎಂಬುದರಿಂದಲೂ, ಆತನು ಕನಿಷ್ಠ ಪಕ್ಷಕ್ಕೆ ಕ್ರಿ.ಶ. ೯೫೦ ರಿಂದ ಆಚೆಯೇ ವಿನಾ ಈಚೆ ಇದ್ದಿರಲಾರನು. ಆತನೂ ಆತನ ನಿಜ ಶಿಷ್ಯನಾದ ಗೋರಕ್ಷನಾಥನೂ ಕ್ರಿ.ಶ. ೮ನೆಯ ಶತಮಾನದ ಉತ್ತರಾರ್ಧದಲ್ಲಿ ಅಥವಾ ೯ನೆಯ ಶತಮಾನದ ಪೂವಾರ್ಧದಲ್ಲಿ ಆಗಿಹೋಗಿರಬೇಕೆಂದುನಾನು ಅನ್ಯತ್ರ ನಿಶ್ಚಯಿಸಿರುತ್ತೇನೆ.

ಮಹಾಯಾನವು ಕ್ರಿ.ಶ. ೧ ರಿಂದ ೬-೭ನೆಯ ಶತಕಗಳವರೆಗೆ ಭಾರತ ವರ್ಷದಲ್ಲೆಲ್ಲ ಉಚ್ಛ್ರಾಯದಲ್ಲಿದ್ದು ಕೊನೆಗೆ ೭ – ೮ನೆಯ ಶತಕದಿಂದ ಇಳತರವಾಗಿ ಬಿದ್ದುಹೋಯಿತೆಂದು ಮೇಲೆ ಹೇಳಿದೆ. ಒಮ್ಮೆ ಅದು ಎಲ್ಲೆಲ್ಲ ನೆಲಸಿತ್ತೊ, ಪ್ರಾಯಶಃ ಅಲ್ಲಲ್ಲಿ ಈಗ ನಾಥಪಂಥದ ನೆಲೆವೀಡುಗಳು ಕಾಣುತ್ತವೆ. ಕಾರಣವೇನೆಮದರೆ, ಅದು ನೆಲಸಿದ್ದಲ್ಲೆಲ್ಲ ಕ್ರಮೇಣ ಕ್ಷೀಣದಶೆಗೆ ಬರುತ್ತಲೆ, ಅದರಿಂದಲೇ ಹುಟ್ಟಿದ ನಾಥಪಂಥವು ಅಲ್ಲಲ್ಲಿ ಹೊಕ್ಕು ಮನೆ ಮಾಡಿಕೊಂಡಿರಬೇಕು. ಮತ್ಸ್ಯೇಂದ್ರನಾಥನು ತನ್ನ ಶಿಷ್ಯರನ್ನು ಒಡಗೂಡಿ ಮಂಗಳೂರಿಗೆ ಬಂದಿದ್ದು, ಆಗ ಕಗ್ಗಾಡಾಗಿದ್ದ ಅಲ್ಲಿಯ ಕದಿರೆಯಲ್ಲಿ ಒಂದು ಮಠವನ್ನು ಸ್ಥಾಪಿಸಿ ಉತ್ತಾರಾಪಂಥಕ್ಕೆ ಮರಳಿದನೆಂದು ಒಂದು ಐತಿಹ್ಯವಿದೆ.[6](ಕದಿರೆಯ ದೇವಾಲಯದಲ್ಲಿ ದಕ್ಷಿಣಮುಖವಾಗಿರುವ ಆತನ ಮಾನುಷ್ಯಾಕೃತಿಯ ಶಿಲಾಮೂರ್ತಿ ಆತನು ಮಂಗಳೂರಿಗೆ ಬಂದು ಹೋದ ಕೆಲಕಾಲದಲ್ಲೇ ಆತನಿ ಅಲ್ಲಿ ಇರಿಸಿದ ಶಿಷ್ಯರಿಂದಲೊ ಅಥವಾ ಅಷ್ಟರಲ್ಲಿ ಅಲ್ಲಿ ಬೆಳೆದ ಆತನ ನಾಥಪಂಥದ ಅನುಯಾಯಿಗಳಿಂದಲೊ ಮಾಡಿಸಲ್ಪಟ್ಟಿರಬೇಕು; ಹೇಗೂ ಆ ಮೂರ್ತಿ ಆತನ ದೇವತ್ವಕ್ಕೆ ಮುಂಚೆ ನಿರ್ಮಿಸಲ್ಪಟ್ಟಿರಬೇಕು.) ಹಾಗಾದರೆ ಆತನು ಕ್ರಿ.ಶ.ಸು. ೯ನೆಯ ಶತಮಾನದಲ್ಲಿ ಮಂಗಳೂರಿಗೆ ಬರುವ ಮೊದಲೇ ಕದಿರೆಯಲ್ಲಿ ಮಹಾಯಾನದ ಬೌದ್ಧ ವಿಹಾರವಿದ್ದು, ಅದು ಪ್ರಾಯಶಃ ಹೀನಾವಸ್ಥೆಗೆ ಇಳಿತಂದೊ, ಅಥವಾ ತೀರ ಹಾಳುಬಿದ್ದೊ ಇದ್ದುದನ್ನು ಆತನು ಅಲ್ಲಿಗೆ ಬಂದಾಗ ಕಂಡು ತಾನೆ ತನ್ನ ನಾಥಪಂಥದ ಮಠವನ್ನು ಅಲ್ಲಿ ಸ್ಥಾಪಿಸಿರಬೇಕು.

ಕ್ರಿ.ಶ. ೧೦೬೮ ರಲ್ಲಿ ಕದಿರೆಯ ವಿಹಾರದಲ್ಲಿ ಲೋಕೇಶ್ವರನ ಕಂಚಿನ ವಿಗ್ರಹವನ್ನು ಪ್ರತಿಷ್ಠಿಸುವಂದು ಅಥವಾ ಅದಕ್ಕೂ ಹಿಂದೆ ಕ್ರಿ.ಶ. ಸು. ೯ನೆಯ ಶತಕದಲ್ಲಿ ಮತ್ಸ್ಯೇಂದ್ರನಾಥನು ಕದಿರೆಗೆ ಬರುವಂದು, ಆ ಬೋದಿಸತ್ತ್ವ ಮಂಜುನಾಥನ (=ಮಂಜುಶ್ರೀಯ) ಮೂರ್ತಿ ಆ ವಿಹಾರದಲ್ಲಿ ಆಗ್ಗೆ ಇತ್ತೊ ಎಂದು ನಿಷ್ಕೃಷ್ಟವಾಗಿ ಹೇಳಬರುವುದಿಲ್ಲ. ಆದರೂ ತತ್ಕಾಲಕ್ಕೆ ಸ್ಥೂಲದೃಷ್ಟಿಗೆ ತೋರುವ ಮೇರೆಗೆ ಹೇಳುವುದಾದರೆ, ಕ್ರಿ.ಶ. ೧೦೬೮ರಲ್ಲಿ ಲೋಕೇಶ್ವರನ ವಿಗ್ರಹವನ್ನು ಪ್ರತಿಷ್ಠಿಸಿದ ಆಳುಪೇಂದ್ರನಾದ ಕುಂದವರ್ಮನು ತನ್ನನ್ನು ಮಹಾಶಿವಭಕ್ತನೆಂದು, ಆತಏವ ಪ್ರತ್ಯಕ್ಷವಾಗಿ ಬೌದ್ಧಧರ್ಮಕ್ಕೆ ಬಾಹ್ಯನೆಂದು, ಹೇಳಿಕೊಂಡಿರುವುದರಿಂದ, ಆ ಲೋಕೇಶ್ವರನ ವಿಗ್ರಹವನ್ನು ಪ್ರತಿಷ್ಠಿಸಿದ ಆ ವಿಹಾರದಲ್ಲಿ, ಅಂದರೆ ಈಗಣ ಕದಿರೆಯ ದೇವಾಲಯದಲ್ಲಿ, ಇಂದು ಹೇಗೋ ಹಾಗೆಯೇ ಅಂದೂ, ಹಾಗೂ ಆ ಲೋಕೇಶ್ವರನ ಪ್ರತಿಷ್ಠೆಗೆ ಮೊದಲೂ, ಮಂಜುನಾಥ ಎಂಬ ಶಿವಲಿಂಗವೇ ಪೂಜಾಸ್ಥಾನದಲ್ಲಿ ಇದ್ದಿರಬೇಕೆಂದು ಅನುಮೇಯಿಸಲಾಗುತ್ತದೆ. ಆದಕಾರಣ ಅದಕ್ಕೂ ಹಿಂದೆ ಕದಿರೆಯಲ್ಲಿದ್ದ ಬೋಧಿಸತ್ತ್ವ ಮಂಜುನಾಥನ ವಿಹಾರವು ಯಾವೊಮ್ಮೆಯೂ ಹಾಳುಬಿದ್ದು ಕ್ರಿ.ಶ.ಸು.೯ನೆಯ ಶತಮಾನದಲ್ಲಿ ಆಲ್ಲಿ ಗಯ್ದಿದ ಮತ್ಸ್ಯೇಂದ್ರನಾಥನು ಅದನ್ನು ಕಂಡು, ಶಿವನಿಗೆ ಮಂಜುನಾಥ ಎಂಬ ಹೆಸರು ಸರ್ವಥಾ ಇಲ್ಲವಾದರೂ, ಮಹಾಯಾನವು ಶೈವಧರ್ಮವೂ ಸಮ್ಮಿಳಿತವಾದ ತನ್ನ ನಾಥಪಂಥದ ಧೋರಣೆಗೆ ಅನುರೂಪವಾಗಿ, ಬಿದ್ದುಹೋದ ಆ ಭೋಧಿಸತ್ತ್ವನ ಮಂಜುನಾಥ ಎಂಬ ಹೆಸರನ್ನು ಪ್ರಾಯಶಃ ಊರ್ಜಿಸುವ ಬಗ್ಗೆ, ಇನ್ನೂ ಆತನ ಹೆಸರಿಂದಲೇ ಕರೆಯಲ್ಪಡುವ ಆ ವಿಹಾರದಲ್ಲಿ ಆತನ ಮೂರ್ತಿ ಇದ್ದೆಡೆಯಲ್ಲಿ ಅದೇ ಮಂಜುನಾಥ ಎಂಬ ಹೆಸರಿನ ಶಿವಲಿಂಗವನ್ನು ಪ್ರತಿಷ್ಠಿರಬೇಕೆಂದು ಊಹಿಸಬಹುದು. ಹೀಗೆ ನಾಥ ಪಂಥವು ಕದಿರೆಯಲ್ಲಿ ಕ್ರಿ.ಶ. ಸು. ೮ನೆಯ ಶತಮಾನದಲ್ಲಿ ನೆಲೆಸಿತೆಂದು ಸಿದ್ಧವಾಗುತ್ತದೆ.

ಕದಿರೆಯಲ್ಲೇ ಅಲ್ಲ, ಪುತ್ತೂರು ತಾಲೂಕಿನ ವಿಟ್ಲದಲ್ಲಿಯೂ ನಾಥಪಂಥದ ಜೋಗಿಮಠ ಇದೆ. ಉಡುಪಿ ತಾಲೂಕಿನ ಸೂಡ ಎಂಬಲ್ಲಿಯೂ ಇತ್ತು. ಅದೀಗ ಅಳಿದುಹೋಗಿದೆ. ಕಾಸರಗೋಡು ತಾಲೂಕಿನಲ್ಲಿ ಮಂಗಲಪಾಡಿಯಿಂದ ಸು. ೮-೯ ಮೈಲಿಗೆ ಮೂಡಲಾಗಿ ಪೊಸಡಿಗುಂಪೆ ಎಂದು ಒಂದು – ಗುಡ್ಡವಿದೆ, ಅಲ್ಲಿಯ ಗವಿಗಳಲ್ಲಿ ನಾಥಪಂಥದವರ ವಾಸ್ತವ್ಯವಿತ್ತಂತೆ. ಅವಲ್ಲಿ ಈಗಲೂ ತುಂಬ ವಿಭೂತಿ ಇದೆಯಂತೆ; ಜೋಗಿಗಳು ಅಲ್ಲಿ ಇದ್ದಿರಬೇಕೆಂಬುದಕ್ಕೆ ಅದೊಂದು ತಕ್ಕ ನಿದರ್ಶನ. ತುಳುನಾಡಿನಲ್ಲಿ ಮತ್ತೂ ಇತರ ಕಡೆಗಳಲ್ಲಿ ಅವರ ಮಠಗಳು ಇದ್ದಿರಬೇಕು.

ವೀರಶೈವ ಧರ್ಮ

ವಿಜಯನಗರ ಸಾಮ್ರಾಜ್ಯವು ವಿಧ್ವಸ್ತವಾಗುತ್ತಲೆ ತುಳುನಾಡಿನ ಒಡೆತನದ ಮಟ್ಟಿಗೆ ಆ ಅರಸರ ಹಾವಿಗೆಗಳನ್ನು ಮೆಟ್ಟಿ ಅವರ ಉತ್ತರಾಧಿಕಾರಿಗಳಾದ ಕೆಳದಿಯ ನಾಯಕರೆಂಬ ಇಕ್ಕೇರಿಯ ಅರಸರು ಈ ದೇಶವನ್ನು ಗೆದ್ದುಕೊಂಡು ಆಳತೊಡಗಿದವರೆಗೆ ಇಲ್ಲಿ ವೀರಶೈವ ಧರ್ಮವು ತಕ್ಕಷ್ಟಾದರೂ ಪಸರಿಸಿದ್ದಂತೆ ಅಥವಾ ನೆಲೆಸಿದ್ದಂತೆ ಕುರುಹುಗಳೇನೂ ತೋರುವುದಿಲ್ಲ. ಇಕ್ಕೇರಿಯ ವೀರಶೈವ ಅರಸರಲ್ಲಿ ೨ನೆಯವನಾದ ಸದಾಶಿವ ನಾಯಕನು (ಕ್ರಿ.ಶ. ೧೫೧೩ -೧೫೪೫) ತುಳುನಾಡಿಗೆ ಇಳಿತಂದು ಮೇಲೆ ಕಂಡಿರುವಂತೆ ಕಾಸರಗೋಡಿನಲ್ಲಿ ತೊಲಗದ ಕಂಬವನ್ನು ನಿಲಿಸಿ ತುಳುನಾಡನ್ನು ಸ್ವಾಧೀನಗೆಯ್ದುಕೊಂಡಂದಿನಿಂದ ಮೊದಲಾಗಿ ಮೇಲೆ ಕಂಡಿರುವಂತೆ ಮಲ್ಪಿಯಲ್ಲಿ, ಕಾಪಿನಲ್ಲಿ, ಕಲ್ಯಾಣಪುರದಲ್ಲಿ, ಮಂಗಳೂರಲ್ಲಿ ಕೋಟೆಗಳನ್ನು ಕಟ್ಟಿಸಿದ. || ಬಸಪ್ಪನಾಯಕನು (ಕ್ರಿ.ಶ. ೧೭೩೯ – ೧೭೫೪) ವರೆಗೆ ಪ್ರತ್ಯೇಕ ಅರಸನೂ ತುಳುನಾಡಿನಲ್ಲಿ ಜೈತ್ರಯಾತ್ರೆಯನ್ನು ನಡೆಸಿದಂತೆ ತಿಳಿಯುವುದರಿಂದ ನಗರ ಸಂಸ್ಥಾನ ಎಂಬ ಕೆಳದಿಯ ರಾಜ್ಯವು ಬಾಳಿದ್ದ (ಕರಿ. ಶಕ. ೧೫೦೦ – ೧೭೬೩) ಹೆಚ್ಚುಕಡಿಮೆ ೨೫೦ ವರ್ಷಗಳವರೆಗೆ ತುಳುನಾಡು ಆ ರಾಜ್ಯದಲ್ಲಿ ಸೇರಿತ್ತು. ಆತಏವ ರಾಜಧರ್ಮವಾದ ಶಿವಾಚಾರವನ್ನು ಇಲ್ಲಿಯ ಅನೇಕರು ಸಾಹಜಿಕವಾಗಿ ಸ್ವೀಕರಿಸಿಯೂ, ಹಾಗೂ ಆ ಗಟ್ಟದ ಸೀಮೆಯಿಂದ ಅನೇಕ ವೀರಶೈವರು ಇಲ್ಲಿ ಬಂದು ನೆಲೆಸಿಯೂ, ಆ ಧರ್ಮವು ದಿನೇ ದಿನೇ ಈ ದೇಶದಲ್ಲಿ ಹಬ್ಬುತ್ತ ಬಂದಿರಬೇಕು. ಆದರೆ ವೀರಶೈವ ಗುರುಗಳು ತಮ್ಮ ಧರ್ಮವನ್ನೂ ಊರೂರಲ್ಲಿ ಸಾರುವ ಕೆಲಸವನ್ನು ಕೆಯ್ಕೊಳ್ಳದೆ ಬರೇ ರಾಜಾಶ್ರಯವನ್ನೇ ನೆಮ್ಮಿ ಕುಳಿತಿದ್ದ ಕಾರಣವೇನೋ, ಕೆಳದಿಯ ರಾಜ್ಯ ನಾಶವಾದಂದಿನಿಂದ ಆ ಧರ್ಮಕ್ಕೆ ರಾಜಾಶ್ರಯ ತಪ್ಪಿ ಅದೀಗ ಇಲ್ಲಿ ಕ್ರಮೇಣ ಗ್ಲಾನವಾಗುತ್ತ ಬಂದು ಕೊನೆಗೆ ತೀರ ಎಂಬಂತೆ ಅಳಿದುಹೋಗಿದೆ.

ಆ ರಾಜ್ಯವು ಕೊನೆಗೊಂಡ ಕ್ರಿ.ಶ. ೧೭೬೩ರಲ್ಲಿ ತುಳುನಾಡಿನಲ್ಲಿ ಅದರ ರಾಜಪ್ರತಿನಿಧಿಯಾಗಿದ್ದ ವೀಸಂಗಯ್ಯನೆಂಬುವನ ಮಂಗಳೂರಿನ ಡೊಂಗರಕೇರಿಯಲ್ಲಿದದ ಮಹಮನೆಯನ್ನು ಹೈದರನು ಕೆಡವಿಸಿ ಅದರ ಕಲ್ಲುಗಳಿಂದ ಕಟ್ಟಿಸಿದ ಮಸೀದಿ ಈಗಲೂ ಅಲ್ಲಿದೆ. ಅದರ ಸುತ್ತಮುತ್ತಲಿನ ಬಸವನಗುಡಿಯ ಬೀದಿಯ ವಟಾರವು ವೀರಶೈವ ಮುಖ್ಯ ವಾಸ್ತವ್ಯವಾಗಿತ್ತು, ಸು. ೫೦ ವರ್ಷಗಳ ಹಿಂದೆ ಅಲ್ಲಿ ಕೆಲವು ಲಿಂಗವಂತರ ಮನೆಗಳಿದ್ದುವು. ಬಸವನ ಗುಡಿಯಲ್ಲಾದರೆ ಈಗಲೂ ಪೂಜೆ ನಡೆಯುತ್ತದೆ. ಮಂಗಳೂರು ತಾಲೂಕಿನ ಗುರುಪುರದ ಹೆಸರು ಈಗಲೂ ಅಲ್ಲಿರುವ ಗಂಜಿಮಠ ಎಂಬ ಜಂಗಮ ಮಠದ ಗುರುವಿಂದ ಬಂದಿದೆ. ಮೂಲ್ಕಿ ಬಾಹೆಯಲ್ಲಿರುವ ಚರಂತಿಪೇಟೆಯಲ್ಲಿ[7] ಈಚೆಯವರೆಗೆ ಲಿಂಗವಂತರ ಹಲವು ಮನೆಗಳಿದ್ದುವು. ಈಗ ಪ್ರಾಯಶಃ ಒಂದೂ ಇಲ್ಲ. ಕಾಸರಗೋಡಿನ ನೆಲ್ಲಿಕುಂಜೆಯಲ್ಲಿ ಒಂದು ಲಿಂಗಾಯತ ಮಠವಿದೆ. ಅಲ್ಲಿಯ ರಾಜಮಾರ್ಗಕ್ಕೆ ಆ ಕಾರಣವೇ ಮಠದ ಬೀದಿ ಎಂದು ಹೆಸರಾಗಿದೆ; ಆದರೆ ಅಲ್ಲಿ ಈಗ ಲಿಂಗವಂತರಿಲ್ಲ. ಕಾರ್ಕಳದಲ್ಲಿ ಈಗಲೂ ಪೂಜೆ ನಡೆಯುತ್ತಿರುವ ವೀರಭದ್ರನ ಗುಡಿ ಇದೆ. ಪುತ್ತೂರು ತಾಲೂಕಿನ ಗುರುವಯ್ಯನ ಕೆರೆ ಎಂಬ ಊರಿಗೆ ಅಲ್ಲಿದ್ದ ವೀರಶೈವ ಗುರುಮಠದಿಂದ ಆ ಹೆಸರಾಗಿದೆ. ಕುಂದಾಪುರ ತಾಲೂಕಿನ ಬಸರೂರಲ್ಲಿಯೂ ಹೊಸಂಗಡಿಯ ಬಳಿಯ ತೊಂಬಟ್ಟು ಎಂಬಲ್ಲಿಯೂ ಇದ್ದ ಮಠಗಳು ಹಾಳುಬಿದ್ದಿವೆ. ಅಲ್ಲೀಗ ವೀರಶೈವರ ವಸತಿ ಇಲ್ಲ. ತುಳುನಾಡಿನ ಮತ್ತೂ ಹಲ ಊರುಗಳಲ್ಲಿ ಹಾಳುಬಿದ್ದ ಲಿಂಗಾಯತ ಮಠಗಳು ಇದ್ದಿರಬಹುದು, ಒಮ್ಮೆ ಅವರ ವಸತಿಯೂ ಸಾಕಷ್ಟು ಇದ್ದಿರಬೇಕು. ಆದರೆ ಈಗ ಇಲ್ಲಿ ಅವರ ಗುಡಿಕಟ್ಟು ತೀರ ವಿರಳ.

ಭೂತಪೂಜೆ

ಈ ಧರ್ಮಗಳಲ್ಲದೆ ತುಳುನಾಡಿನ ಪ್ರಾಯಶಃ ಮೂಲಧರ್ಮವಾದ ಭೂತಪೂಜೆಯೂ ಇದೆ. ಭೂತಪೂಜೆ ಎಂದರೆ ಪ್ರಕೃತಿಯ ಅಥವಾ ಸಂಸಾರದಲ್ಲಿಯ ವಿಶೇಷ ದರ್ಶನಗಳನ್ನು ಅಥವಾ ಸಂಭವಗಳನ್ನು ಇಲ್ಲವೆ ಕೆಲವೊಮ್ಮೆ ವ್ಯಕ್ತಿಗಳನ್ನು ಏವಂಚ ಕಣ್ಣಗೆ ಕಾಣುವ ಹಾಗೂ ಮನಸ್ಸಿನಲ್ಲಿ ಒತ್ತುವ ವಿಷಯಗಳನ್ನು ವ್ಯಕ್ತೀಕರಿಸಿ ಹಾಗೂ ಅವನ್ನು ದೈವೀಕರಿಸಿ ಆರಾಧಿಸುವಿಕೆ. ಆ ವ್ಯಕ್ತಿಗಳನ್ನು ತುಳುವಿನಲ್ಲಿ ‘ದೆಯ್ಯೊ(೦ಗುಳು)’ = ದೆವ್ವ(ಗಳು) ಎನ್ನುತ್ತಾರೆ. ಅವುಗಳಲ್ಲಿ ಗಂಡು ಭೂತಗಳು (ಉದಾ. ಅಣ್ಣಪ್ಪ, ಜಾರಂತಾಯೆ, ಮಗ್ರಂದಾಯೆ, ಕಲ್ಕುಡೆ, ಕೋಟಿ – ಚೆನ್ನಯೆ, ಇ.) ಇವೆ, ಹೆಣ್ಣು ಭೂತಗಳೂ (ಉದಾ. ಉಳ್ಳಾಳ್ದಿ, ಜುಮಾದಿ, ಕಲ್ಲುರ್ಟಿ, ದೇವಿ ಬೈದ್ಯೆದಿ ಇ.) ಇವೆ; ಈ ದೇಶದವೂ (ಉದಾ. ಮಗ್ರಂದಾಯೆ ಇ.) ಇವೆ, ಗಟ್ಟದ ಸೀಮೆಯಿಂದ ಇಲ್ಲಿಗೆ ಬಂದುವೂ (ಉದಾ. ತೊಡಕಿನಾರ್ ಇ.) ಇವೆ; ಇಲ್ಲಿಯವೇ ಆಯಾ ಊರುಗಳ ಕೆಲ ವಿಶಿಷ್ಟ ವ್ಯಕ್ತಿಗಳು ಸತ್ತು ಭೂತವಾದುವೂ (ಉದಾ. ಕೋಟಿ – ಚೆನ್ನಯೆ, ಕಾಂತುನೆಕ್ರಿ, ದೇಯಿ ಬೈದ್ಯೆದಿ ಇ.) ಇವೆ; ಕೆಲವು ಸನಾತನ ಧರ್ಮದಿಂದ ಎರಕೊಂಡವೂ (ಉದಾ. ಜುಮಾದಿ = ಧೂಮಾವತಿ; ಪಂಜುರ್ಲಿ = ವಾರಾಹಿ; ಚಾವುಂಡಿ = ಚಾಮುಂಡಿ. ಇ.) ಇವೆ. ಅತ್ಯಂದ ಪ್ರಕ್ಕಾಲದವು. ಅಂದರೆ ಸನಾತನ ಧರ್ಮ ಇಲ್ಲಿಗೆ ಬರುವುದಕ್ಕಿಂತ ಮುಂಚಿನವಾದರೆ ಈಗ ಪ್ರಾಯಶಃ ಒಂದೂ ಇಲ್ಲ. ಇವುಗಳ ಗುಡಿಗಳು ತುಳುನಾಡಿನ ಪ್ರತ್ಯೇಕ ಊರಲ್ಲಿ ಎಂಬಂತೆ ಸರ್ವತ್ರ ಇವೆ. ಆ ಗುಡಿಗಳಲ್ಲಿ ವರ್ಷಕ್ಕೊಮ್ಮೆ ಬಂಡಿ ಇರುವ ‘ಸಾನ’ (=ಸ್ಥಾನ, ಅಂದರೆ ಭೂತದ ಗುಡಿ)ಗಳಲ್ಲಿ ಬಂಡಿ ಎಳೆಯುವ, ಇಲ್ಲದಲ್ಲಿ ಸಾಮಾನ್ಯವಾದ ‘ಆಯನ’ (=ಉತ್ಸವ)ಗಳು ಆಗುವುದುಂಟು; ಆ ಆಯನಕ್ಕೆ ‘ನೇಮ’ ಎನ್ನುತ್ತಾರೆ. ಅವಂದು ಆ ಭೂತಗಳ ಚರಿತ್ರಗಳನ್ನು ಆದ್ಯಂತವಾಗಿ ಬಣ್ಣಿಸುವ ‘ಪಾಡ್ದನೆ’ (=ಪ್ರಾರ್ಥನೆ) ಗಳೆಂಬ ವಚನಕಾವ್ಯಗಳನ್ನು ಆಯಾ ಭೂತದ ಗುಡಿಯಲ್ಲಿ ಅದರ ತೂಳು ಬಂದವನ ಬಳಗದವರು ಹಾಡುವ ಪದ್ಧತಿ ಉಂಟು ಅಥವಾ ಇತ್ತೆಂದು ಮೇಲೆ ಹೇಳಿದೆ. ಆ ಪಾಡ್ದನೆಗಳಲ್ಲಾದರೊ ‘ಪಳ್ಳಿ’ ಎಂದು ತುಳುನಾಡಿನಲ್ಲಿ ಮಸೀದಿಯ ಹೆಸರೂ, ‘ಮಕ್ಕ’ ಎಂದು ಅರಬಸ್ತಾನದ ಮಕ್ಕಾಪಟ್ಟಣದ (Mecca) ಹೆಸರೂ, ‘ಚಾಕಿರಿ’ (=ಸೇವೆ), ‘ಮೈದಾನ’ (=ಬಯಲು), ‘ಸುಲ್ತಾನ’ (=ಅರಸು), ‘ಕ (ಖ)ಜಾನೆ’ (=ಬೊಕ್ಕಸ), ‘ಅಂದಾಜಿ’ (=ಅನುಮಾನ), ‘ಖಲಾಸಿ’ (=ಹಡಗಿನ ಆಳು) ಎಂಬ ಇವೇ ಮೊದಲದ ಅರಬಿ, ಪಾರ್ಶಿ ಭಾಷೆಗಳ ಶಬ್ದಗಳೂ ಮಾತ್ರವಲ್ಲ, ‘ಪರೆಂಗಿ ಬಾಳ್’ = ಪೋರ್ಚುಗೀಸರ (ಅಥವಾ ಇಂಗ್ಲೀಷರ?) ಖಡ್ಗ, ‘ನಾಲ್ ಕಾರ್ ಪರೆಂಗಿ ಮಕ್ಕಾಲಿಗೆ ‘ = ಅವರ ನಾಲ್ಕು ಕಾಲಿನ ಕುರ್ಚಿ, ಪರೆಂಗಿ ಪೇಂಟೆ’ = ಮಂಗಳೂರಿನ ಬಳಿಯ ಅರ್ಕುಳ ಎಂಬ ಗ್ರಾಮದ ನೆರೆಯಲ್ಲಿ ‘ಫರಂಗಿ’ ಎಂದು ಕರೆಯಲ್ಪಡುತ್ತಿದ್ದ ಪೋರ್ತುಗೀಸರು ಕ್ರಿ.ಶ ೧೭ – ೧೮ನೆಯ ಶತಮಾನಗಳಲ್ಲಿ ನೆಲೆಸಿದ್ದಂದಿನಿಂದ ಫರಂಗಿಪೇಟೆ ಎಂದು ಈಗಲೂ ಹೆಸರುಳ್ಳ ಹಳ್ಳಿ ಮೊದಲಾದ ಇತ್ತೀಚೆಯ ಶಬ್ದಗಳೂ ಇರುವುದರಿಂದ ಆ ಪಾಡ್ದನೆಗಳ ನಿರ್ಮಾಣವೂ, ಆತಏವ ತುಳುನಾಡಿನಲ್ಲಿ ಈಗ ಗೊತ್ತಿರುವ ಭೂತಗಳ ಪ್ರಾದುರ್ಭಾವವೂ ಶಾನೆ ಹಿಂದಕ್ಕೆಹೋಗುವಂತಿಲ್ಲ.

 

[1] Catalogue of the Museum of Archaeology at Sarnath (1914) ಪು. ೧೧೪, ೧೨೧, ೧೭೯ ಇಇ. ಹಾಗೂ ಅದರಲ್ಲಿ ಚಿತ್ರಪಟ XII (b).

[2] ಅದೇ, ಪು. ೧೧೮, ೧೨೨.

[3] KIB, ಪು. ೯೬.

[4] ಅದೇ, ಪು. ೬೪.

[5] ಈ ಮೂರ್ತಿಯ ಚಿತ್ರದ ಬಗ್ಗೆ Madras Epigraphical Report (1921)ನ ೨ನೆಯ ಚಿತ್ರಪಟದಲ್ಲಿ ೫ನೆಯ ಚಿತ್ರವನ್ನೂ (Plate II, No.5) ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ದ ೭೪ನೆಯ ಪುಟದಲ್ಲಿಯ ಚಿತ್ರವನ್ನೂ ನೋಡುವುದು.

[6] Statical Appendix together with a Supplement to the two District Manuals South Kanara District, ಪು. ೩೮೧ – ೮೨.

[7] ಬ್ರಹ್ಮಚಾರಿಯಾದ ಲಿಂಗವಂತನಿಗೆ ಚರಂತಿ(ಯಪ್ಪ) ಎನ್ನುತ್ತಾರೆ.