ತುಳುನಾಡು, ತುಳುದೇಶ, ತುಳುರಾಜ್ಯ, ತುಳುವ, ತೌಳವ ದೇಶ, ತುಳು ವಿಷಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ತುಳುನಾಡಿನ ಎಲ್ಲೆಕಟ್ಟುಗಳನ್ನು ಚಾರಿತ್ರಿಕವಾಗಿ ಗುರುತಿಸುವುದು ಸ್ವಲ್ಪ ಕಷ್ಟದ ಕೆಲಸ. ಏಕೆಂದರೆ ತುಳುನಾಡನ್ನು ತುಳು ಭಾಷಿಕರು ವಾಸಿಸುವ ಪ್ರದೇಶ ಎಂದಷ್ಟೇ ಹೇಳಲಾಗುವುದಿಲ್ಲ. ತುಳು ಭಾಷಿಕರು ವಾಸಿಸುವ ಪ್ರದೇಶದಿಂದ ಹೊರಗಡೆಗೂ ತುಳುನಾಡು ವಿಸ್ತರಿಸಿತ್ತು. ರಾಜಕೀಯವಾಗಿ ಅಥವಾ ಆಡಳಿತಾತ್ಮಕವಾಗಿ ತುಳುನಾಡು ವಿಸ್ತಾರವಾದ ಭೂಪ್ರದೇಶವನ್ನು ಹೊಂದಿತ್ತು. ಹೀಗಾಗಿ ತುಳುಭಾಷೆಯ ಹಿನ್ನೆಲೆಯಲ್ಲಿ ತುಳುನಾಡಿನ ಗುಡಿಗಳನ್ನು ನಿರ್ಧರಿಸುವುದಕ್ಕೂ, ರಾಜಕೀಯವಾಗಿ ನಿರ್ಧರಿಸುವುದಕ್ಕೂ ವ್ಯತ್ಯಾಸಗಳಿವೆ. ತುಳುನಾಡು ಎಂದರೆ ಅದೊಂದು ಆಡಳಿತ ಘಟಕ, ಅದರ ವ್ಯಾಪ್ತಿ ವಿಶಾಲವಾಗಿದ್ದು, ಅದು ಕನ್ನಡ ಮಾತನಾಡುವ ಪ್ರದೇಶಗಳನ್ನೂ ಒಳಗೊಂಡಿತ್ತು. ಭಾಷಿಕ ತುಳುನಾಡಿನ ಪರಿಸರ ಮತ್ತು ಅದರ ಚಾರಿತ್ರಿಕ ಹಾಗೂ ಭೌಗೋಳಿಕ ವೈಶಿಷ್ಟ್ಯಗಳನ್ನು ಅದರ ಮೇರೆಗಳ ಹೊರಗಡೆ ಗುರುತಿಸಲು ಸಾಧ್ಯವಾಗುವುದಿಲ್ಲ. ತುಳುನಾಡನ್ನು ಆ ಪ್ರದೇಶದ ಭೌಗೋಳೀಕ, ಭಾಷಿಕ ಮತ್ತು ರಾಜಕೀಯ ನೆಲೆಗಳಿಂದ ಅಧ್ಯಯನ ನಡೆಸಬೇಕಾಗುತ್ತದೆ. ರಾಜಕೀಯ ತುಳುನಾಡಿನೊಳಗೆ ಭಾಷಿಕ ತುಳುನಾಡು ಸೇರಿಕೊಂಡಿತ್ತು. ಈ ವಿಚಾರವನ್ನು ಸ್ಥಳೀಯ ಚರಿತ್ರೆ ಅಧ್ಯಯನ ವಿಧಾನವನ್ನು ಅನುಸರಿಸುವುದರ ಮೂಲಕ ಚರ್ಚೆಗೆ ಎತ್ತಿಕೊಳ್ಳಬಹುದಾಗಿದೆ. ಆದರೆ ತುಳುನಾಡನ್ನು ಆಳ್ವಿಕೆ ನಡೆಸಿದ ಅರಸುಮನೆತನಗಳ ಆಡಳಿತದ ಸ್ವರೂಪ ಮತ್ತು ವ್ಯಾಪ್ತಿಯ ಕುರಿತಾದ ವೈಭವೀಕೃತ ಚಿತ್ರಣದಿಂದ ಈ ವಿಚಾರವನ್ನು ತಿಳಿಯಲು ಸಾಧ್ಯವಿಲ್ಲ. ಈ ಎಚ್ಚರಿಕೆಯಿಂದ ತುಳುನಾಡಿನ ಭೌಗೋಳಿಕ ಎಲ್ಲೆಕಟ್ಟುಗಳನ್ನು ತಿಳಿಯುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ಭಾಷಿಕ ತುಳುನಾಡಿನ ಮೇರೆಗಳನ್ನು ಪಶ್ಚಿಮದಲ್ಲಿ ಅರಬೀ ಸಮುದ್ರ, ಪೂರ್ವದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ, ದಕ್ಷಿಣದಲ್ಲಿ ಚಂದ್ರಗಿರಿ ಹೊಳೆ ಹಾಗೂ ಉತ್ತರದಲ್ಲಿ ಸೀತಾನದಿ ಎಂಬುದಾಗಿ ಗುರುತಿಸಲಾಗಿದೆ. ಆದರೆ ಇಷ್ಟು ಸುಲಭವಾಗಿ ರಾಜಕೀಯ ತುಳುನಾಡಿನ ಮೇರೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ರಾಜಕೀಯ ಅಥವಾ ಆಡಳಿತದ ಮೇರೆಗಳು ನಿರಂತರ ಬದಲಾವಣೆಗೆ ಒಳಗಾಗುತ್ತಿದ್ದವು. ಪರಶುರಾಮ ಸೃಷ್ಟಿಯ ಪ್ರಕಾರ ಅದು ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸಿತ್ತು. ಈ ರೀತಿಯ ಅನೇಕ ವಿವರಣೆಗಳು ಪುರಾಣ, ಐತಿಹ್ಯ, ಶಾಸನ ಮತ್ತು ಸಾಹಿತ್ಯ ಕೃತಿಗಳಲ್ಲಿ ಸಿಗುತ್ತವೆ. ಅರಸು ಮನೆತನಗಳ ಏಳು-ಬೀಳಿಗೂ ಗಡಿರೇಖೆಗಳಲ್ಲಿ ಬದಲಾವಣೆಗೂ ನೇರ ಸಂಬಂಧವಿದೆ. ಮೌರ್ಯರಿಂದ ಬ್ರಿಟಿಷ್ ಆಳ್ವಿಕೆಯವರೆಗೂ ತುಳುನಾಡು ಹಲವಾರು ರೀತಿ ಸ್ಥಿತ್ಯಂತರಗಳಿಗೆ ಒಳಗಾಗಿತ್ತು. ತುಳುನಾಡು ಆಡಳಿತ ವಿಭಾಗವಾಗಿ ವಿಶಾಲವಾದ-ಭೂಪ್ರದೇಶವನ್ನು ಹೊಂದಿದ್ದರೂ, ಅದು ಆಯಾ ಅರಸುಮನೆತನದ ಸಾಮರ್ಥ್ಯವನ್ನು ಅವಲಂಬಿಸಿಕೊಂಡಿರುತ್ತಿತ್ತು. ಸ್ಥಳೀಯ ಅರಸು ಮನೆತನಗಳು ತಮ್ಮ ತಮ್ಮ ಅಧೀನದಲ್ಲಿದ್ದ ಪ್ರದೇಶಗಳ ಮೇಲೆ ನೇರ ನಿಯಂತ್ರಣ ಹೊಂದಿದ್ದವು. ಆದರೆ ಹೊರಗಿನ ದೊಡ್ಡ ಅರಸು ಮನೆತನಗಳು ಇಡೀ ತುಳುನಾಡಿನ ಮೇಲೆ ತಮ್ಮ ಹತೋಟಿ ಸಾಧಿಸಿದ್ದವು. ತುಳುನಾಡು ಚರಿತ್ರೆಯುದ್ದಕ್ಕೂ ಕನ್ನಡದ ಅಥವಾ ಕನ್ನಡ ನಾಡನ್ನು ಆಳಿದ ಅರಸರ ಅಧೀನದಲ್ಲಿಯೇ ಇತ್ತು. ಹೀಗಾಗಿ ತುಳುನಾಡಿಗೆ ಒಂದು ಆಡಳಿತ ವಿಭಾಗವಾಗಿ ಸ್ಥಿರತೆಯನ್ನು ಕಾಯ್ದುಕೊಂಡು ಬರಲು ಸಾಧ್ಯವಾಗಲಿಲ್ಲ. ಆದರೆ ಅದಕ್ಕಾಗಿ ಪ್ರಯತ್ನಗಳು ನಡೆದಿರುವುದು ಚರಿತ್ರೆಯಿಂದ ತಿಳಿದುಬರುತ್ತದೆ. ಭಾಷಿಕ ಅಥವಾ ಸಾಂಸ್ಕೃತಿಕ ತುಳುನಾಡು ತನ್ನ ವೈಶಿಷ್ಟ್ಯಹಾಗೂ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ತುಳುನಾಡು ತನ್ನ ವೈಶಿಷ್ಟ್ಯ ಹಾಗೂ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ತುಳುನಾಡಿನ ಗಡಿಗಳು ನಿರ್ಧಾರವಾಗಿದ್ದು ಆಡಳಿತಾತ್ಮಕವಾಗಿಯೇ ಹೊರತು ಭಾಷಿಕವಾಗಿಯಲ್ಲ. ಒಂದು ರಾಜ್ಯಕ್ಕೆ ಆಡಳಿತ ನಡೆಸುವ ಉದ್ದೇಶಕ್ಕಾಗಿ ಗಡಿಯ ಅವಶ್ಯಕತೆ ಇರುತ್ತದೆ. ಆದರೆ ಭಾಷೆ ಆ ಗಡಿಯೊಳಗೇ ವ್ಯವಹರಿಸಬೇಕು ಎನ್ನುವ ನಿಯಮವೇನೂ ಇಲ್ಲ. ಅದು ಸಾದ್ಯವೂ ಇಲ್ಲ. ಮಾನವನ ಪರಸ್ಪರ ಸಂಬಂಧಗಳು, ಅದು ವೈವಾಹಿಕ ಅಥವಾ ದುಡಿಮೆಯ ಸಂಬಂಧಗಳು, ಗಡಿಯ ವ್ಯಾಪ್ತಿಯನ್ನು ಮೀರಿ ನಿಂತಿರುವಂತವು.ಆದರೂ ಯಾವುದೇ ಒಂದು ಪ್ರದೇಶದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದು ಆಡಳಿತಾತ್ಮಕ ಗಡಿಗಳೇ. ತುಳುನಾಡು ಅನೇಕ ಬಾರಿ ಆಡಳಿತಾತ್ಮಕ ಕಾರಣಗಳಿಂದಾಗಿ ವಿಭಜನೆಗೊಂಡಿತ್ತು. ವಸಾಹತು ಆಳ್ವಿಕೆಯ ಸಂದರ್ಭದಲ್ಲಿ ಭಾಷಾವಾರು ಹಿನ್ನೆಲೆಯಲ್ಲಿ ನಿರ್ಮಾಣಗೊಂಡ ಕರ್ನಾಟಕ ರಾಜ್ಯದೊಳಗೆ ಒಂದು ಜಿಲ್ಲೆಯಾಗಿ ಕಾಣಿಸಿಕೊಂಡಿತು. ತುಳುನಾಡಿನ ವಿಸ್ತಾರವೆಷ್ಟು ಎನ್ನುವ ಚರ್ಚೆ ಕೊಂಕಣೋತ್ಪತ್ತಿ, ಕೇರಳೋತ್ಪತ್ತಿಯಿಂದ ಹಿಡಿದು ಇತ್ತೀಚೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾಗಿ ವಿಭಜನೆಗೊಂಡಿರುವುದರವರೆಗೆ ವಿಸ್ತರಿಸಿದೆ. ಪ್ರಾಚೀನ ತುಳುನಾಡಿನ ಮೇರೆಗಳನ್ನು ತಿಳಿಯಲು ಗ್ರಾಮ ಪದ್ಧತಿ, ಸಹ್ಯಾದ್ರಿ ಖಂಡ, ಕೇರಳೋತ್ಪತ್ತಿ ಹಾಗೂ ತುಳುನಾಡಿನ ಭೂತಗಳ ಪಾಡ್ದನಗಳು ನೆರವಾಗುತ್ತವೆ.

ಪುರಾಣ ಗ್ರಂಥಗಳಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಕಟ್ಟುಗಳ ಕುರಿತು ಕೆಲವೊಂದು ಮಾಹಿತಿಗಳು ಸಿಗುತ್ತವೆ. ತುಳುನಾಡಿನ ಅತ್ಯಂತ ಪ್ರಾಚೀನ ಪೌರಾಣಿಕ ಕಥೆಯು ಪರಶುರಾಮ ಕಾಲದಿಂದ ಆರಂಭವಾಗುತ್ತದೆ. ಪರಶುರಾಮ ಸೃಷ್ಟಿಯಲ್ಲಿರುವ ‘ಸಪ್ತಕೊಂಕಣ’ ಪರಿಸರಗಳಲ್ಲಿ ತುಳುನಾಡುಒಂದು. ತುಳುನಾಡನ್ನು ಸಾಂಪ್ರದಾಯಿಕವಾಗಿ ‘ಪರಶುರಾಮ ಕ್ಷೇತ್ರ’ ಎಂಬುದಾಗಿ ಕರೆಯಲಾಗಿದೆ. ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಸಂಕಲ್ಪ ಮಂತ್ರದಲ್ಲಿ ಇದನ್ನು ಹೆಸರಿಸಲಾಗಿದೆ. ಸ್ಕಂದ ಪುರಾಣದ ‘ಸಹ್ಯಾದ್ರಿ ಖಂಡ’ದಲ್ಲಿರುವ ಸ್ಥಳೀಯ ಐತಿಹ್ಯದಲ್ಲಿ ಪರಶುರಾಮ ಕ್ಷೇತ್ರದ ಕುರಿತಾದ ವಿವರಣೆ ಕಂಡುಬರುತ್ತದೆ. ಅದರ ಪ್ರಕಾರ ಇಪ್ಪತ್ತೊಂದು ಬಾರಿ ಕ್ಷತ್ರಿಯ ಸಂಹಾರಗೈದ ಪರಶುರಾಮನು ಇಡೀ ಭೂಮಿಯನ್ನು ಕಶ್ಯಪನೆನ್ನುವ ಸನ್ಯಾಸಿಗೆ ಮತ್ತು ಬ್ರಾಹ್ಮಣರಿಗೆ ದಾನ ಕೊಡುತ್ತಾನೆ. ಹೀಗಾಗಿ ಪರಶುರಾಮನಿಗೆ ನೆಲೆಸಲು ಸ್ವಂತ ಭೂಮಿಯೇ ಇರುವುದಿಲ್ಲ. ಏಕೆಂದರೆ ದಾನ ಕೊಟ್ಟ ಭೂಮಿಯಲ್ಲಿ ಆತ ನೆಲೆಸುವಂತಿರಲಿಲ್ಲ. ಕಶ್ಯಪ ಮುನಿಯ ಸಲಹೆಯಂತೆ ಪರಶುರಾಮನು ದಕ್ಷಿಣಕ್ಕೆ, ಅದರಲ್ಲೂ ಸಮುದ್ರ ತೀರಕ್ಕೆ ಬಂದು ಸಮುದ್ರರಾಜನಾದ ವರುಣನಲ್ಲಿ ಸ್ವಲ್ಪ ಭೂಮಿಯನ್ನು ಬಿಟ್ಟುಕೊಡುವಂತೆ ಕೇಳುತ್ತಾನೆ. ವರುಣನು ಪರಶುರಾಮನಲ್ಲಿ ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಬಿಸಾಡುವಂತೆ ಹೇಳುತ್ತಾನೆ. ಅದೇ ಪ್ರಕಾರ ಪರಶುರಾಮನು ಪಶ್ಚಿಮ ಘಟ್ಟದ ಮೇಲೆ ನಿಂತು ತನ್ನ ಪರಶುವನ್ನು ಅರಬೀ ಸಮುದ್ರಕ್ಕೆ ಬಿಸಾಡುತ್ತಾನೆ. ಪರಶುರಾಮನು ಪರಶುವನ್ನು ಬಿಸಾಡಿದ ಜಾಗದಿಂದದು ಬಿದ್ದ ಜಾಗದವರೆಗೆ ಅರಬೀ ಸಮುದ್ರವು ಹಿಂದಕ್ಕೆ ಹೋಗುತ್ತದೆ. ಹೀಗೆ ಪಡೆದುಕೊಂಡ ಭೂಮಿಯನ್ನು ಪರಶುರಾಮ ಕ್ಷೇತ್ರ ಎಂಬುದಾಗಿ ಕರೆಯಲಾಯಿತು. ಈ ಪ್ರದೇಶವು ಕೊಂಕಣ, ಕರ್ನಾಟಕ ಮತ್ತು ಕೇರಳವನ್ನು ಒಳಗೊಂಡಿತ್ತು. ಈ ರೀತಿಯ ಮಾಹಿತಿ ಮಹಾಭಾರತದ ಆದಿ, ವನ ಹಾಗೂ ಶಾಂತಿ ಪರ್ವಗಳಲ್ಲಿ, ವಿಷ್ಣುಪುರಾಣ ಮುಂತಾದವುಗಳಲ್ಲಿ ಸಿಗುತ್ತದೆ.

ಬ್ರಹ್ಮಾಂಡ ಪುರಾಣದ ಪ್ರಕಾರ ಗಂಗಾನದಿಯ ನೀರಿನ ಮಟ್ಟ ಏರಿ ಹರಿದು, ಅದರಿಂದಾಗಿ ಸಮುದ್ರ ಮಟ್ಟ ಏರಿ ಗೋಕರ್ಣದಿಂದ ಕೇರಳದವರೆಗಿನ ಭೂಮಿ ಸಮುದ್ರದೊಳಗೆ ಸೇರಿಹೋಗುತ್ತದೆ. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಾಧುಗಳು ಸಹ್ಯಾದ್ರಿ ಪರ್ವತಗಳಲ್ಲಿ ಆಶ್ರಯ ಪಡೆಯುತ್ತಾರೆ. ಅವರ ಮನವಿಯ ಪ್ರಕಾರ ಪರಶುರಾಮನು ತನ್ನ ಪರಶುವನ್ನು ಗೋಕರ್ಣದಿಂದ ದಕ್ಷಿಣಾಭಿಮುಖವಾಗಿ ಬಿಸಾಡುತ್ತಾನೆ. ಆಗ ಗೋಕರ್ಣದಿಂದ ಕೇರಳದವರೆಗಿನ ಭೂಮಿಯ ಮೇಲೆ ಬರುತ್ತದೆ. ಈ ರೀತಿಯಾಗಿ ಪರಶುರಾಮ ಸೃಷ್ಟಿಯನ್ನು ಉಲ್ಲೇಖಿಸುವ ಕಾವ್ಯಗಳು, ಶಾಸನಗಳು, ಐತಿಹ್ಯಗಳು ಅನೇಕ ಸಂಖ್ಯೆಯಲ್ಲಿವೆ. ತುಳುನಾಡು ಪರಶುರಾಮನ ಕೊಡಲಿಯಿಂದ ಹುಟ್ಟಿದ್ದು ಎನ್ನುವುದನ್ನು ಆಧುನಿಕ ವಿಜ್ಞಾನದ ಹಿನ್ನೆಲೆಯಲ್ಲಿ ಒಪ್ಪಲು ಸಾಧ್ಯವಾಗುವುದಿಲ್ಲ. ಆದರೆ ತುಳುನಾಡಿನ ಹುಟ್ಟು ಹಾಗೂ ಆರಂಭದ ಮೇರೆಗಳನ್ನು ಕಂಡುಹಿಡಿಯುವಲ್ಲಿ ಈ ಐತಿಹ್ಯಗಳು ಸ್ವಲ್ಪ ಮಟ್ಟಿಗೆ ನೆರವಾಗುತ್ತವೆ. ಐತಿಹ್ಯಗಳಲ್ಲಿ ಕಂಡುಬರುವ ಸ್ಥಳನಾಮಗಳು, ಭೌಗೋಳಿಕ ವಿವರಗಳು ಹಾಗೂ ವ್ಯಕ್ತಿ ಘಟನೆಗಳ ಕುರಿತ ವಿವರಗಳು ಕುತೂಹಲಕಾರಿ ಅಂಶಗಳಾಗಿ ಕಂಡುಬರುತ್ತವೆ.

ಪರಶುರಾಮನಿಂದ ಸೃಷ್ಟಿಗೊಂಡ ಭೂಮಿಯನ್ನು ‘ಸಪ್ತ-ಕೊಂಕಣ’ಎಂಬುದಾಗಿ ಕರೆಯಲಾಗಿದೆ. ಪರಕೊಂಕಣ, ಕೊಂಕಣ, ಪಶು, ಆಲುವ, ಮೂಷಿಕ, ಕೇರಳ ಮತ್ತು ಕೂಪಕಗಳು ‘ಸಪ್ತ ಕೊಂಕಣ’ ಪ್ರದೇಶಗಳು. ಇವುಗಳಲ್ಲಿ ಆಲುವ ಎನ್ನುವ ಪ್ರದೇಶವೇ ತುಳುನಾಡು. ಈ ಪ್ರದೇಶವು ತ್ರಿಕಣ್ಣಿ, ತ್ರಿಕಟ, ತ್ರಿಕನ್ನಾಲ್ವ, ತ್ರಿಚೋಳ, ಕೊಲ್ಲೂರು, ಕೋಮಲಂ, ವೆಲ್ಲಾರ, ವೆಂಗೋಟ್ಟ, ವೆಂಕಟಂ, ಚೆಂಗೋಟ್ಟು, ಕೋಟೇಶ್ವರಂ, ಮಂಜೇಶ್ವರಂ, ಉಡುಪು, ಶಂಕರನಾರಾಯಣ, ಕೋಟ್ಟಂ, ಶಿವಳ್ಳಿ, ಮೊರೋಪಂಚೆ, ವಿಟಲ, ಕುಮಾರ ಮಂಗಲ, ಅನಂತರಪುರ ಮತ್ತು ಕನ್ನಪುರಂ ಎನ್ನುವ ಗ್ರಾಮಗಳನ್ನು ಒಳಗೊಂಡಿತ್ತು ಎನ್ನುವ ವಿವರಣೆ ಉತ್ತರ ಸಹ್ಯಾದ್ರಿ ಖಂಡದ ಕೊಂಕಣೋತ್ಪತ್ತಿಯಲ್ಲಿ ಇದೆ. ಪರಶುರಾಮ ಸೃಷ್ಟಿಯು ದಕ್ಷಿಣ ಕನ್ಯಾಕುಮಾರಿಯಿಂದ ಉತ್ತರದ ಗೋಕರ್ಣದವರೆಗೆ ಹಬ್ಬಿದ ಕಾರಣ ಅದನ್ನು ವಿಂಗಡಿಸಲಾಗಿತ್ತು. ಚಂದ್ರಗಿರಿ ನದಿಯ ಉತ್ತರಕ್ಕಿರುವ ಪ್ರದೇಶವನ್ನು ಉತ್ತರ ಕೇರಳವೆಂದೂ ಚಂದ್ರಗಿರಿ ನದಿಯ ದಕ್ಷಿಣಕ್ಕಿರುವ ಪ್ರದೇಶವನ್ನು ದಕ್ಷಿಣ ಕೇರಳವೆಂದೂ ವಿಂಗಡಿಸಲಾಗಿತ್ತು. ಅದೇ ರೀತಿ ಪರಶುರಾಮ ಸೃಷ್ಟಿಯಲ್ಲಿ ಈ ಪ್ರದೇಶವನ್ನು ನಾಲ್ಕು ಖಂಡಗಳನ್ನಾಗಿಯೂ ವಿಭಜಿಸಲಾಗಿದೆ. ಅವುಗಳೆಂದರೆ ಗೋಕರ್ಣದಿಂದ ಪಯಸ್ವಿನಿ ಅಥವಾ ಚಂದ್ರಗಿರಿ ನದಿಯವರೆಗೆ ತೌಳವ ಅಥವಾ ತುಳುನಾಡು, ಪಯಸ್ವಿನಿಯಿಂದ ಪುದು ಪಟ್ಟಣದವರೆಗೆ ಕೂಪರಾಜ್ಯ (ಈಗಿನ ಮಲಬಾರು), ಪುದುಪಟ್ಟಣದಿಂದ ಕನ್ನೇಟ್ಟಿವರೆಗೆ ಕೊಚ್ಚಿ ರಾಜ್ಯ, ಕನ್ನೇಟ್ಟಿಯಿಂದ ಕನ್ಯಾಕುಮಾರಿಯವರೆಗೆ ಮೂಷಿಕ ರಾಜ್ಯ, (ತಿರುವಾಂಕೂರು) ಗೋಕರ್ಣದಿಂದ ಪಯಸ್ವಿನಿ ನದಿಯವರೆಗೆ ಹಬ್ಬಿದ್ದ ಪ್ರದೇಶವು ತುಳುನಾಡು, ತೌಳವ, ಗೋರಾಷ್ಟ್ರ, ಹೈಗ, ಆಳುವ ಖೇಡ ಮುಂತಾದ ಹೆಸರುಗಳಿಂದ ಕರೆಯಲ್ಪಟ್ಟಿತು.

ಪರಶುರಾಮ ಸೃಷ್ಟಿಯು ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿದ್ದರಿಂದಾಗಿ, ಕೇರಳ ರಾಜ್ಯವು ಗೋಕರ್ಣದಿಂದ ಕನ್ಯಾಕುಮಾರಿಯವರೆಗೂ ವಿಸ್ತರಿಸಿತ್ತು ಎನ್ನುವ ವಾದವು ಕೇರಳೋತ್ಪತ್ತಿಯಲ್ಲಿ ಕಂಡುಬರುತ್ತದೆ. ಪರಶುರಾಮ ಸೃಷ್ಟಿಗೆ ಇಲ್ಲಿ ಬೆಳೆಯುವ ಕಲ್ಪವೃಕ್ಷಗಳಿಂದಾಗಿ ಕೇರಳ ಎಂಬ ಹೆಸರು ಬಂತೆಂದು ತಿಳಿಯಲಾಗಿದೆ. ಆದರೆ ಪ್ರಾಚೀನ ಸಂದರ್ಭದ ಗಡಿಗಳ ಸಮಸ್ಯೆ ಕಾಣಿಸಿಕೊಂಡಿರುವುದು ಆದುನಿಕ ಸಂದರ್ಭದಲ್ಲಿ. ಭಾರತ ಸ್ವತಂತ್ರಗೊಂಡು ಭಾಷಾವಾರು ಹಿನ್ನೆಲೆಯಲ್ಲಿ ರಾಜ್ಯಗಳನ್ನು ಪುನರ್‌ರಚಿಸುವ ಕಾರ್ಯ ಆರಂಭವಾದಾಗ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಬೇಕೆಂಬ ಒತ್ತಾಯಕ್ಕೆ ಕೇರಳೋತ್ಪತ್ತಿವಾದವು ಬಳಕೆಯಾಯಿತು. ಹೀಗೆ ಪುರಾಣ ಮತ್ತು ಐತಿಹ್ಯಗಳಲ್ಲಿ ಉಲ್ಲೇಖಿತವಾಗಿರುವ ವಿಚಾರಗಳು ಆಧುನಿಕ ಸಂದರ್ಭದ ರಾಜಕೀಯಕ್ಕೆ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ.

ಪುರಾಣ ಮತ್ತು ಐತಿಹ್ಯಗಳು ಹೇಳುವ ತುಳುನಾಡಿನ ಭೌಗೋಳಿಕ ಎಲ್ಲೆಕಟ್ಟುಗಳಲ್ಲಿ ಖಚಿತತೆ ಇಲ್ಲವಾದರೂ, ಅವನ್ನು ಸಾರಾಸಗಟಾಗಿ ತಿರಸ್ಕರಿಸುವುದಕ್ಕೆ ಆಗುವುದಿಲ್ಲ. ಏಕೆಂದರೆ ಅವುಗಳಲ್ಲಿ ಉಲ್ಲೇಖಿತವಾಗಿರುವ ಹಲವಾರು ವಿಚಾರಗಳು ತುಳುನಾಡಿನ ಆರಂಭಿಕ ಹಾಗೂ ನಂತರದ ಚರಿತ್ರೆ ಅವಧಿಗಳಲ್ಲಿ ಕಂಡುಬರುತ್ತವೆ. ತುಳುನಾಡನ್ನು ಆಳಿದ ವಿವಿಧ ಅರಸು ಮನೆತನಗಳ ಆಡಳಿತ ವ್ಯಾಪ್ತಿಯೊಳಗೆ ಪುರಾಣ ಮತ್ತು ಐತಿಹ್ಯಗಳಲ್ಲಿ ಉಲ್ಲೇಖಿಸಲ್ಪಟ್ಟ ಹಲವಾರು ಪ್ರದೇಶಗಳು ಇದ್ದುವು ಎನ್ನುವ ವಿಚಾರ ಶಾಸನ ಮತ್ತು ಸಾಹಿತ್ಯ ಆಕರಗಳಿಂದ ತಿಳಿದುಬರುತ್ತದೆ. ತುಳುನಾಡು ಎನ್ನುವ ಆಡಳಿತ ವಿಭಾಗವೊಂದು ಹುಟ್ಟಿಕೊಂಡಿರುವುದು ಅದು ಅರಸು ಮನೆತನವೊಂದರ ಆಳ್ವಿಕೆಗೆ ಒಳಪಟ್ಟಂದಿನಿಂದ, ಈ ಪ್ರಕ್ರಿಯೆಯನ್ನು ಮೌರ್ಯರ ಕಾಲದಿಂದ ಬ್ರಿಟಿಷ್ ಆಳ್ವಿಕೆಯವರೆಗೂ ಕಾಣಬಹುದು.

ತುಳುನಾಡು ತನ್ನ ಚಾರಿತ್ರಿಕ ಘಟ್ಟವನ್ನು ಗುರುತಿಸಿಕೊಳ್ಳುವುದು ಮೌರ್ಯರ ಕಾಲದಿಂದ; ಅದರಲ್ಲೂ ಮುಖ್ಯವಾಗಿ ಅಶೋಕನ ಆಳ್ವಿಕೆಯ ಅವಧಿಯಿಂದ, ಅಶೋಕನ ಎರಡನೆಯ ಶಾಸನದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪ್ರಸ್ತಾಪ ಬರುತ್ತದೆ. ಮೌರ್ಯ ಸಾಮ್ರಾಜ್ಯದ ದಕ್ಷಿಣದ ಮೇರೆಗಳಾಗಿ ಆ ರಾಜ್ಯಗಳು ಕಂಡುಬರುತ್ತವೆ. ಅವುಗಳಲ್ಲಿ ಸತಿಯ ಪುತ ಅಥವಾ ಸತಿಯ ಪುತ್ರ ಎನ್ನುವುದು ತುಳುನಾಡಿಗೆ ಸಂಬಂಧಿಸಿದ್ದು ಎನ್ನುವ ವಾದವಿದೆ. ಕೆ.ವಿ. ರಮೇಶ್, ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್, ಎಲ್.ಡಿ. ಬಾರ್ನೆಟ್, ಎಂ. ಗೋವಿಂದ ಪೈ ಮುಂತಾದ ವಿದ್ವಾಂಸರು ಸತಿಯ ಪುತ್ರ ತುಳುನಾಡಿಗೆ ಸಂಬಂಧಿಸಿದ್ದ ಹೆಸರು ಎಂಬುದಾಗಿ ಅಭಿಪ್ರಾಯಪಡುತ್ತಾರೆ. ಆದರೆ ಈ ಕುರಿತು ಭಿನ್ನಾಭಿಪ್ರಾಯಗಳಿವೆ. ಸತಿಯ ಪುತ್ರದ ನಿರ್ದಿಷ್ಟ ಪರಿಸರದ ಹಾಗೂ ಅದರ ಮೇರೆಗಳ ಬಗೆಗೂ ಚರ್ಚೆ ನಡೆದಿದೆ. ಸತಿಯ ಪುತ್ರವೆಂಬುದು ತುಳು ಭಾಷಿಕರಿಗೂ ಮಂಗಳೂರು ಸಮೀಪದ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಸತಿಯ ಪುತ್ರವು ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಪಶ್ಚಿಮ ಕರಾವಳಿ ಪ್ರದೇಶದ ಮಧ್ಯದ ಭೂಭಾಗ ಎನ್ನುವ ಅಭಿಪ್ರಾಯವೂ ಇದೆ. ಇದು ತುಳುನಾಡಿನ ಭೌಗೋಳಿಕ ಎಲ್ಲೆಕಟ್ಟುಗಳೂ ಆಗಿರುವುದನ್ನು ಇಲ್ಲಿ ಗಮನಿಸಬಹುದು. ಇದು ನಿಜವೇ ಆದರೆ, ಮೌರ್ಯರ ಕಾಲದಲ್ಲಿಯೆ ತುಳುನಾಡು ಒಂದು ಆಡಳಿತ ಘಟಕವಾಗಿತ್ತು ಎನ್ನುವುದು ಸ್ಪಷ್ಟ. ಕೆ.ವಿ. ರಮೇಶ್ ಅವರ ಪ್ರಕಾರ ‘ಸಹ್ಯ’ ಮತ್ತು ‘ಸತಿಯ’ಗಳ ನಡುವೆ ಹತ್ತಿರದ ಹೋಲಿಕೆಯಿದ್ದು, ಸಹ್ಯವೆಂಬುದು ತುಳುವ ಪ್ರದೇಶವನ್ನು ಒಳಗೊಂಡ ಕೊಂಕಣ ಮೇರೆಯುಳ್ಳ ಪಶ್ಚಿಮ ಘಟ್ಟಗಳ ಒಂದು ಭಾಗಕ್ಕೆ ಕೊಟ್ಟ ಹೆಸರು. ಪಶ್ಚಿಮ ಘಟ್ಟವು ದಕ್ಷಿಣ ಕನ್ನಡದ ಉತ್ತರಕ್ಕೆ ವಿಸ್ತರಿಸಿರುವುದರಿಂದ ಅಶೋಕನ ಶಾಸನದಲ್ಲಿ ಈ ಭಾಗವನ್ನಷ್ಟೇ ನಿರ್ದೇಶಿಸಿರಬಹುದೆಂದು ಕೆ.ವಿ.ರಮೇಶ್‌ಅವರು ಅಭಿಪ್ರಾಯ ಪಡುತ್ತಾರೆ. ತಮಿಳು ಸಂಗಂ ಸಾಹಿತ್ಯದ ಪ್ರಕರ, ಸತಿಯ ಪುತವೆಂಬುದು ತುಳುನಾಡಿನ ಪ್ರದೇಶ. ಸಂಗಂ ಸಾಹಿತ್ಯದಲ್ಲಿ ತುಳುನಾಡಿನ ಕುರಿತು ಅನೇಕ ಮಾಹಿತಿಗಳು ದೊರೆಯುತ್ತವೆ. ತುಳುನಾಡು, ತುಳುಭಾಷೆ ಹಾಗೂ ತುಳುನಾಡಿನಲ್ಲಿ ವಾಸಿಸುತ್ತಿದ್ದ ಕೋಶರ್ ಸಮುದಾಯದ ಕುರಿತ ಉಲ್ಲೇಖಗಳು ಸಂಗಂ ಸಾಹಿತ್ಯದಲ್ಲಿ ಕಂಡುಬರುತ್ತವೆ.

ಮೌರ್ಯರ ನಂತರ ದಕ್ಷಿಣದಲ್ಲಿ ಅಧಿಕಾರಕ್ಕೆ ಬಂದ ಶಾತವಾಹನರು ತುಳುನಾಡಿನ ಮೇಲೆ ನೇತ ಹತೋಟಿ ಹೊಂದಿದ್ದರೇ ಎನ್ನುವುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ, ಆದರೆ ಚುಟುಗಳು ಶಾತವಾಹನರ ಸಾಮಂತರಾಗಿ ಈ ಪ್ರದೇಶವನ್ನು ಆಳುತ್ತಿದ್ದರು ಎನ್ನುವುದಕ್ಕೆ ಆಧಾರಗಳಿವೆ. ಚುಟು ಕುಲದ ಅರಸರು ಕದಂಬ ಅರಸರ ಕೈಕೆಳಗೂ ಆಡಳಿತಗಾರರಾಗಿದ್ದುಕೊಂಡು ತುಳುನಾಡಿನ ಆಡಳಿತ ನೋಡಿಕೊಳ್ಳುತ್ತಿದ್ದರು.ಚುಟುಗಳಿಂದಲೇ ತುಳು ಎನ್ನುವ ಹೆಸರು ಬಂತು ಎನ್ನುವ ಅಭಿಪ್ರಾಯವೂ ಇದೆ. ಬನವಾಸಿಯ ಕದಂಬರ ಭಗೀರಥವರ್ಮನು ತನ್ನ ರಾಜ್ಯದ ಪಶ್ಚಿಮ ಸಮುದ್ರ ತೀರದ ಭಾಗವನ್ನು ರಾಜ್ಯಾಡಳಿತಕ್ಕೆ ಅನುಕೂಲವಾಗುವಂತೆ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದನು. ಅವುಗಳೆಂದರೆ ಕಾಸರಗೋಡು, ಬಾರ್ಕೂರು, ಮಂಗಳೂರು ಮತ್ತು ಕಡಬ ಪ್ರದೇಶಗಳು. ಈ ನಾಲ್ಕು ವಿಭಾಗಗಳು ತುಳು ಭಾಷೆಯನ್ನಾಡುವ ಪ್ರದೇಶಗಳೇ ಆಗಿದ್ದವು. ಕದಂಬರ ಇನ್ನೊಂದು ಶಾಖೆಯಾದ ಹಾನಗಲ್ಲಿನಲ್ಲಿ ಕದಂಬರ ನಾಲ್ಕನೆಯ ಮಯೂರವರ್ಮನು ತುಳುನಾಡಿಗೆ ಬಂದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದನು. ಅದನ್ನು ಕುಂಬಳೆ ರಾಜ್ಯ ಎಂಬುದಾಗಿ ಕರೆಯಲಾಯಿತು. ತುಳುನಾಡಿನ ಅಧಿಕಾರಕ್ಕಾಗಿ ಕದಂಬರು, ಚೋಳರು, ಚಾಲುಕ್ಯರು, ಅಲೂಪರು, ಹೊಯ್ಸಳರು, ಬಂಗರು, ಚೌಟರು, ಅಜಿಲರು, ಭೈರವ ಅರಸರು ಮುಂತಾದ ಮನೆತನದವರು ಶ್ರಮಿಸುತ್ತಿದ್ದರು. ಕುಂಬಳೆ ಸೀಮೆಯ ಅರಸರು ತುಳುನಾಡಿನಲ್ಲಿ ಸ್ವತಂತ್ರ ರಾಜ್ಯವೊಂದನ್ನು ಸ್ಥಾಪಿಸಿದರು.

ಕುಂಬಳೆ ರಾಜ್ಯವು ಉತ್ತರದಲ್ಲಿ ನೇತ್ರಾವತಿಯಿಂದ ದಕ್ಷಿಣದಲ್ಲಿ ಚಂದ್ರಗಿರಿವರೆಗೆ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಪಶ್ಚಿಮದಲ್ಲಿ ಅರಬೀ ಸಮುದ್ರ ಮೇರೆಯುಳ್ಳದ್ಧಾಗಿತ್ತು. ತುಳುನಾಡಿನ ದಕ್ಷಿಣ ತುದಿಯಲ್ಲಿರುವ ಕುಂಬಳೆಯು ಈ ರಾಜ್ಯದ ಕೇಂದ್ರವಾಗಿತ್ತು. ಮಯೂರವರ್ಮನು ಆಡಳಿತದ ಅನುಕೂಲಕ್ಕಾಗಿ ತುಳುನಾಡನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿದನು. ಅವುಗಳೆಂದರೆ ದಕ್ಷಿಣದಲ್ಲಿ ಚಂದ್ರಗಿರಿ ಅಥವಾ ಪಯಸ್ವಿನಿ ನದಿ, ಉತ್ತರದಲ್ಲಿ ನೇತ್ರಾವತಿ ನದಿ, ಪಶ್ಚಿಮದಲ್ಲಿ ಅರಬೀ ಸಮುದ್ರ ಮತ್ತು ಪೂರ್ವದಲ್ಲಿ ಪಶ್ಚಿಮ ಘಟ್ಟಗಳು ಮೇರೆಗಳಾಗಿರುವ ಕುಂಬಳೆ ರಾಜ್ಯ ಹಾಗೂ ಉತ್ತರದಲ್ಲಿ ಸುವರ್ಣಾ ನದಿ, ಪೂರ್ವದಲ್ಲಿ ಪಶ್ಚಿಮ ಘಟ್ಟಗಳು, ದಕ್ಷಿಣದಲ್ಲಿ ನೇತ್ರಾವತಿ ಮತ್ತು ಪಶ್ಚಿಮದಲ್ಲಿ ಅರಬೀ ಸಮುದ್ರ ಮೇರೆಗಳಾಗಿರುವ ಮಂಗಳೂರು ಅಥವಾ ಬಾರ್ಕೂರು ರಾಜ್ಯ. ಕುಂಬಳೆ ರಾಜ್ಯವನ್ನು ಕುಂಬಳೆ ಅರಸರು ನೋಡಿಕೊಳ್ಳುತ್ತಿದ್ದಂತೆ, ಮಂಗಳೂರು ಅಥವಾ ಬಾರ್ಕೂರು ರಾಜ್ಯವನ್ನು ಆಳುಪರು ಆಳುತ್ತಿದ್ದರು. ಆಳುಪರು ಮೊದಲು ಬಾರ್ಕೂರಿನಲ್ಲಿದ್ದು ನಂತರ ತಮ್ಮ ರಾಜಧಾನಿಯನ್ನು ಮಂಗಳೂರಿಗೆ ವರ್ಗಾಯಿಸಿಕೊಂಡರು ಎನ್ನುವ ಅಭಿಪ್ರಾಯವೂ ಇದೆ. ತುಳುನಾಡನ್ನು ಆಳಿದ ಅರಸರಲ್ಲಿ ಆಳುಪರಿಗೆ ವಿಶಿಷ್ಟವಾದ ಸ್ಥಾನವಿದೆ. ಆಳುಪರು ಕ್ರಿ.ಶ. ಒಂದನೆ ಶತಮಾನದಿಂದ ೧೫ನೆಯ ಶತಮಾನದವರೆಗೂ ಕೆಲವೊಮ್ಮೆ ಸ್ವತಂತ್ರರಾಗಿಯೂ ಮತ್ತೆ ಕೆಲವೊಮ್ಮೆ ಮಾಂಡಲಿಕರಾಗಿಯೂ ಅಧಿಕಾರ ನಡೆಸಿದರು. ಇವರು ಕ್ರಮವಾಗಿ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಹಾಗೂ ವಿಜಯನಗರದರಸರ ಮಂಡಲೇಶ್ವರರಾಗಿದ್ದರು ಎಂಬುದಾಗಿ ತಿಳಿದುಬರುತ್ತದೆ. ಕ್ರಿ.ಶ. ಒಂದನೆ ಶತಮಾನದಿಂದಲೂ ತುಳುನಾಡನು ಆಳ್ವಖೇಡ ಎಂಬುದಾಗಿ ಕರೆಯಲಾಗುತ್ತಿತ್ತು. ಎಂಬುದಾಗಿ ತಿಳಿದು ಬರುತ್ತದೆ. ಆಳುಪರು ಆಳಿದ ರಾಜ್ಯವನ್ನು ಆಳ್ವಖೇಡ ೬೦೦೦ ಎಂದು ಹೆಸರಿಸಲಾಗಿದೆ. ಇದು ಆಳುಪರ ರಾಜ್ಯದ ಮೇರೆಯನ್ನು ತಿಳಿಸುತ್ತದೆ. ಇವರು ಮೊದಲು ಮಂಗಳಾಪುರ (ಮಂಗಳೂರು)ದಿಂದ ನಂತರ ಉದಯಾಪುರ (ಉದ್ಯಾವರ)ದಿಂದ ರಾಜ್ಯಭಾರ ಮಾಡಿದರು. ಪ್ರಾಚೀನ ಆಳುಪರು ತುಳುನಾಡನ್ನಷ್ಟೇ ಅಲ್ಲದೆ ಪೊಂಬುಚ್ಚ ಪ್ರದೇಶ ಹಾಗೂ ಕದಂಬ ಮಂಡಲವನ್ನು ತಮ್ಮ ಆಳ್ವಿಕೆಯ ವ್ಯಾಪ್ತಿಗೆ ಸೇರಿಸಿಕೊಂಡಿದ್ದರು. ಹಾಗಾಗಿ ಅವರ ಮೇರೆಗಳು ವಿಸ್ತರವಾಗಿದ್ದವು. ಮಂಗಳಾಪುರ (ಮಂಗಳೂರು), ಪೊಂಬುಚ್ಚಪುರ (ಹುಂಬಜ) ಮತ್ತು ಬನವಾಸಿ ಆಳುಪರ ರಾಜಧಾನಿಗಳಾಗಿದ್ದವು. ಆದರೆ ಕ್ರಮೇಣ ಕದಂಬ ಮಂಡಲ ಮತ್ತು ಪೊಂಬುಚ್ಚ ಪ್ರದೇಶಗಳನ್ನು ಆಳುಪರು ಕಳೆದುಕೊಂಡರು. ಮಧ್ಯಕಾಲೀನ ಆಳುಪರ ಆಳ್ವಿಕೆಯ ಅವಧಿಯಲ್ಲಿ ಮಂಗಳಾಪುರ ಮತ್ತು ಬಾರ್ಕೂರು ರಾಜಧಾನಿಗಳಾಗಿದ್ದವು. ಹೀಗೆ ಆಳುಪರ ರಾಜ್ಯದ ಮೇರೆಗಳು ರಾಜಕೀಯ ಕಾರಣಗಳಿಂದಾಗಿ ನಿರಂತರ ಬದಲಾವಣೆಗೆ ಒಳಗಾಗುತ್ತಿದ್ದವು.

ಆಳುಪರು ಆಳಿದ ವಿಶಾಲ ತುಳುನಾಡು ಹಲವಾರು ಕನ್ನಡ ಪ್ರದೇಶಗಳನ್ನೂ ಒಳಗೊಂಡಿತ್ತು. ಉದಾಹರಣೆಗೆ, ಕದಂಬ ಮಂಡಲ ಮತ್ತು ಪೊಂಬುಚ್ಚ ಪ್ರದೇಶಗಳು. ಆಳ್ವಖೇಡ ೬,೦೦೦, ಬನವಾಸಿ ೧೨,೦೦೦, ಕೊಂಕಣ ೯೦೦, ಹೈವೆ ೫೦೦ ಈ ಎಲ್ಲ ವಿಭಾಗಗಳು ಹೆಚ್ಚು ಕಡಿಮೆ ಒಂದೇ ಭಾಗಗಳಲ್ಲೂ ಅಧಿಕಾರ ನಡೆಸುತ್ತಿದ್ದರು ಎಂದ ಮಾತ್ರಕ್ಕೆ ಅವೆಲ್ಲವೂ ಆಳ್ವಖೇಡ ೬,೦೦೦ ವಿಭಾಗಕ್ಕೆ ಸೇರಿದ್ದವು ಎಂದಲ್ಲ. ಕೆಲವು ಸಂದರ್ಭಗಳಲ್ಲಿ ಆಳುಪರು ಆಳ್ವಖೇಡ ಹೊರಗಿನ ಪ್ರದೇಶಗಳ ಮೇಲೂ ತಮ್ಮ ಹತೋಟಿಯನ್ನು ಸಾಧಿಸಿದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಅವರ ಅಧಿಕಾರ ಆಳ್ವಖೇಡಕ್ಕಷ್ಟೇ ಸೀಮಿತವಾಗಿರುತ್ತಿತ್ತು. ಆಳುಪರ ರಾಜ್ಯದ ಮೇರೆಗಳನ್ನು ಗುರುತಿಸುವಾಗ ಈ ಸಮಸ್ಯೆಗಳು ಎದುರಾಗುತ್ತವೆ. ಆಳ್ವಖೇಡ ೬,೦೦೦ ಒಂದು ಆಡಳಿತ ವಿಭಾಗವಾಗಿದ್ದು, ಇನ್ನುಳಿದ ಹೊರಗಿನ ಪ್ರದೇಶಗಳು ತುಳುನಾಡಿನ ಕೇಂದ್ರಗಳಾಗಿದ್ದವು. ತುಳುನಾಡಿನ ಅನೇಕ ಕೇಂದ್ರಗಳು ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಇದ್ದವು. ಗೇರುಸೊಪ್ಪೆ, ನಗಿರೆ, ಹಾಡುವಳ್ಳಿ, ಹೊನ್ನಾವರ, ಭಟ್ಕಳ, ಬಾರ್ಕೂರು ಮುಂತಾದವು ಇದಕ್ಕೆ ಉತ್ತಮ ಉದಾಹರಣೆಗಳು.ಆಳುಪರಾಗಲಿ, ಸಾಳುವರಾಗಲಿ ಅಥವಾ ತೊಳಹರಾಗಲಿ ಸ್ವತಂತ್ರ ಅರಸರಾಗಿರಲಿಲ್ಲ. ಅವರೆಲ್ಲರೂ ಚಾಲುಕ್ಯರ, ರಾಷ್ಟ್ರಕೂಟರ, ಹೊಯ್ಸಳರ ಹಾಗೂ ವಿಜಯನಗರದರಸರ ಅಧೀನದಲ್ಲಿದ್ದರು. ಹೀಗಾಗಿ ಅವರ ರಾಜ್ಯದ ಮೇರೆಗಳು ಅವರಿಂದಷ್ಟೇ ನಿರ್ಧಾರವಾಗುತ್ತಿರಲಿಲ್ಲ.

ಗೇರುಸೊಪ್ಪೆ ಮತ್ತು ಹಾಡುವಳ್ಳಿಯ ಸಾಳುವರು ವಿಜಯನಗರ ಅರಸರ ಕೈಕೆಳಗೆ ಮಹಾಮಂಡಲೇಶ್ವರರಾಗಿದ್ದು ತುಳು, ಹೈವೆ, ಕೊಂಕಣ ಮೊದಲಾದ ರಾಜ್ಯಗಳ ಆಳ್ವಿಕೆ ನಡೆಸುತ್ತಿದ್ದರು. ಮೂಡಬಿದಿರೆಯ ಶಾಸನವೊಂದು ಗೇರುಸೊಪ್ಪೆಯನ್ನು ತುಳುದೇಶದ ರಾಜಧಾನಿಯಾಗಿತ್ತೆಂದು ಹೇಳುತ್ತದೆ. ಕಾರ್ಕಳದ ಭೈರರಸ ಒಡೆಯರ ಆಳ್ವಿಕೆಯ ಪ್ರದೇಶವನ್ನು ಕಳಸ – ಕಾರ್ಕಳ ರಾಜ್ಯವೆಂದು ಕರೆಯಲಾಗಿದೆ. ಘಟ್ಟದ ಮೇಲಿನ ಕಳಸ ಸೀಮೆ ಮತ್ತು ಘಟ್ಟದ ಕೆಳಗಿನ ಕಾರ್ಕಳ ಸೀಮೆ ಈ ವಂಶದವರ ಆಡಳಿತಕ್ಕೊಳಪಟ್ಟ ಪ್ರದೇಶವಾಗಿತ್ತು. ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು ತಾಲೂಕುಗಳು ಮತ್ತು ಕಾರ್ಕಳ ತಾಲೂಕಿನ ಕೆಲವು ಭಾಗಗಳ ಮೇಲೆ ತಮ್ಮ ರಾಜಕೀಯ ಅಧಿಕಾರವನ್ನು ಹೊಂದಿದ್ದರು. ಇವರು ವಿಜಯನಗರದ ಅರಸರು ಹಾಗೂ ಅವರು ನೇಮಿಸಿದ್ದ ಮಂಗಳೂರಿನ ರಾಜ್ಯಪಾಲರುಗಳೊಡನೆ ಉತ್ತಮ ಸಂಬಂಧ ಹೊಂದಿದ್ದರು. ಹೊಸಂಗಡಿಯನ್ನು ರಾಜಧಾನಿಯನ್ನಾಗಿಸಿ ತುಳುನಾಡಿನ ಆಳ್ವಿಕೆ ನಡೆಸಿದ ಹೊನ್ನೆಯ ಕಂಬಳಿಯರಸರು ಕುಂದಾಪುರ ತಾಲೂಕಿನ ಕೊಲ್ಲೂರು, ಹೊಸಂಗಡಿ, ಬಗ್ಗವಾಡಿ, ಮುನಿವಾಡು, ಆರುನಾಡು, ಕದರಿ, ಕಬ್ಬುನಾಡು ಸೀಮೆ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದ್ದರು. ಕೆಳದಿ ನೃಪವಿಜಯದಲ್ಲಿ ಉಲ್ಲೇಖಿಸಿರುವಂತೆ ಈ ವಂಶದವರು ದಕ್ಷಿಣ ಕನ್ನಡದಿಂದ ಘಟ್ಟದ ಮೇಲಿನ ಶಿವಮೊಗ್ಗ ಜಿಲ್ಲೆಯ ಪಟ್ಟಗುಪ್ಪೆ ಮತ್ತು ಬಿದನೂರಿನವರೆಗೂ ತಮ್ಮ ಆಡಳಿತವನ್ನು ವಿಸ್ತರಿಸಿಕೊಂಡಿದ್ದರು. ವೇಣೂರನ್ನು ರಾಜಧಾನಿಯನ್ನಾಗಿ ಹೊಂದಿದ್ದ ಅಜಿಲರು ಕಾರ್ಕಳ ಮತ್ತು ಬೆಳ್ತಂಗಡಿ ತಾಲೂಕಿನ ಕೆಲವು ಪ್ರಾಂತ್ಯವನ್ನೊಳಗೊಂಡ ಪ್ರದೇಶವನ್ನು ಆಳುತ್ತಿದ್ದರು. ಅವರ ರಾಜ್ಯವು ೧೩ ಮಾಗಣೆ ಮತ್ತು ೮೦ ಗ್ರಾಮಗಳನ್ನು ಒಳಗೊಂಡಿತ್ತು. ಇವರು ಹೊಯ್ಸಳ, ವಿಜಯನಗರ ಹಾಗೂ ಕೆಳದಿ ಅರಸರ ಪ್ರಭುತ್ವವನ್ನು ಒಪ್ಪಿಕೊಂಡು ತುಳುನಾಡನ್ನು ಆಳಿದವರು.

ತುಳುನಾಡನ್ನು ಆಳಿದ ಇನ್ನೊಂದು ಪ್ರಮುಖ ಅರಸು ಮನೆತನವೆಂದರೆ ಪುತ್ತಿಗೆಯ ಚೌಟರು, ಪುತ್ತಿಗೆ, ಮೂಡಬಿದಿರೆ, ಉಳ್ಳಾಲ-ಸೋಮೇಶ್ವರಗಳಿಂದ ಆಳ್ವಿಕೆ ನಡೆಸಿದ ಚೌಟರು ವಿಶಾಲವಾದ ಪ್ರದೇಶವನ್ನು ಹೊಂದಿದ್ದರು. ಪುತ್ತಿಗೆ ರಾಜ್ಯದ ಗಡಿವ್ಯಾಪ್ತಿ ಬಹಳ ವಿಶಾಲವಾಗಿತ್ತು. ಉಳ್ಳಾಲ, ತಲಪಾಡಿ, ಅಮ್ಮೆಂಬಳ, ಮಿಜಾರು, ಮಳಲಿ, ಕಡಂದಲೆ, ಪೇಜಾವರ, ಪುತ್ತಿಗೆ, ಹೆಜಮಾಡಿ ಮತ್ತು ಮುಂಡ್ಕೂರು ಮಾಗಣೆಗಳು; ಬಾಳೆಪುಣಿ, ಕೈರಂಗಳ, ಬೊಳುಮ, ಬಾಳ – ಕಳವರು, ಸಾಣೂರು ಮತ್ತು ಪಟ್ಟೆ ಗ್ರಾಮಗಳು ಪುತ್ತಿಗೆ ರಾಜ್ಯಕ್ಕೆ ಸೇರಿದ್ದವು. ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ ಇನ್ನೊಂದು ಅರಸು ಮನತನವಾದ ವಿಟ್ಲದ ಡೊಂಬ ಹೆಗ್ಗಡೆ ಅರಸು ಮನೆತನವು ವಿಟ್ಲವನ್ನು ರಾಜಕೀಯ ಕೇಂದ್ರವನ್ನಾಗಿಸಿ ಸುತ್ತಮುತ್ತಲಿನ ಹತ್ತೊಂಬತ್ತು ಗ್ರಾಮಗಳನ್ನೊಳಗೊಂಡ ವಿಟ್ಲ ೨೦೦೦ ಸೀಮೆಯನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡಿತ್ತು. ಮೂಲ್ಕಿ ಸೀಮೆಯನ್ನು ಕ್ರಿ.ಶ. ೧೪ ರಿಂದ ೧೮ನೆಯ ಶತಮಾನದವರೆಗೆ ಆಳಿದ ಸಾವಂತರಸರು ಶಾಂಭವಿ ಹೊಳೆಯಿಂದ ದಕ್ಷಿಣಕ್ಕೆ ನಂದಿನಿ ಹೊಳೆಯವರೆಗಿನ ಪ್ರದೇಶವನ್ನು ಹೊಂದಿದ್ದರು. ಮೂಲ್ಕಿ ಸೀಮೆಯಲ್ಲಿ ಅಯಿಕಳ, ಅತ್ತೂರು, ಕುಬೆವೂರು, ಪಂಜ, ಒಳಲಂಕೆ, ಕಾರ್ನಾಡು, ಬಪ್ಪನಾಡು, ಕುಡೆತ್ತೂರು, ತಾಳಿಪಾಡಿಗಳೆಂಬ ಒಂಬತ್ತು ಮಾಗಣೆಗಳು ಹಾಗೂ ೪೦ ಗುತ್ತುಗಳು ಸೇರಿದ್ದವು. ವಿಜಯನಗರ ಕಾಲದ ತುಳುನಾಡಿನ ಅಧ್ಯಯನ ಕೈಗೊಳ್ಳುವಾಗ ಮೇಲೆ ಹೆಸರಿಸಿದ ಎಲ್ಲ ಸ್ಥಳೀಯ ಅರಸು ಮನೆತನಗಳ ಆಳ್ವಿಕೆಯ ಕುರಿತಾದ ವಿವರಗಳು ಸಿಗುತ್ತವೆ. ಅದೇ ರೀತಿ ಪ್ರತಿಯೊಂದು ಅರಸು ಮನೆತನವೂ ತುಳುನಾಡಿನ ಎಷ್ಟೆಷ್ಟು ಭಾಗವನ್ನು ತನ್ನ ಅಧೀನದಲ್ಲಿಟ್ಟುಕೊಂಡಿತ್ತು ಎನ್ನುವುದೂ ತಿಳಿದುಬರುತ್ತದೆ.

ವಿಜಯನಗರ ಕಾಲದ ತುಳುನಾಡಿನ ಮೇರೆಗಳು ಯಾವುವು ಎಂಬುದಾಗಿ ನೋಡುವಾಗ ಎರಡು ವಿಚಾರಗಳು ಪ್ರಮುಖವೆನಿಸುತ್ತವೆ. ಅವುಗಳೆಂದರೆ ವಿಜಯನಗರದ ಅರಸರು ತುಳುನಾಡನ್ನು ಮಂಗಳೂರು ರಾಜ್ಯ ಹಾಗೂ ಬಾರಕೂರು ರಾಜ್ಯ ಎಂಬುದಾಗಿ ವಿಂಗಡಿಸಿ ಗಡಿಗಳನ್ನು ನಿರ್ಧರಿಸಿರುವುದು ಹಾಗೂ ಸ್ಥಳೀಯ ಅರಸು ಮನೆತನಗಳು ತಮ್ಮದೇ ಆದ ಆಡಳಿತ ಗಡಿಗಳನ್ನು ಹೊಂದಿರುತ್ತಿದ್ದುದು. ಸ್ಥಳೀಯ ಅರಸುಮನೆತನಗಳು ವಿಜಯನಗರದ ಅರಸರು ನೇಮಿಸುತ್ತಿದ್ದ ಅಧಿಕಾರಿಗಳಿಗೆ ವಿಧೇಯರಾಗಿರಬೇಕಾಗಿತ್ತು. ಮಂಗಳೂರು ಮತ್ತು ಬಾರಕೂರು ರಾಜ್ಯಗಳ ಆಡಳಿತವನ್ನು ನೋಡಿಕೊಳ್ಳಲು ವಿಜಯನಗರದ ಅರಸರು ರಾಜ್ಯಪಾಲರನ್ನು ನೇಮಕ ಮಾಡಿದ್ದರು. ಈ ರಾಜಪ್ರತಿನಿಧಿಗಳು ಸ್ಥಳೀಯ ಅರಸುಮನೆತನಗಳ ಆಳ್ವಿಕೆಯನ್ನು ನಿಯಂತ್ರಿಸುತ್ತಿದ್ದರು. ಬಾರಕೂರು ರಾಜ್ಯವು ಉಡುಪಿ ಮತ್ತು ಕುಂದಾಪುರ ತಾಲೂಕುಗಳನ್ನು ಒಳಗೊಂಡಿದ್ದರೆ, ಮಂಗಳೂರು ರಾಜ್ಯವು, ಮಂಗಳೂರು, ಕಾರ್ಕಳ, ಪುತ್ತೂರು ಮತ್ತು ಕಾಸರಗೋಡು ತಾಲೂಕುಗಳನ್ನು ಒಳಗೊಂಡಿತ್ತು. ಮಂಗಳೂರು ರಾಜ್ಯವು ಪೂರ್ತಿಯಾಗಿ ತುಳು ಭಾಷಿಕ ಪ್ರದೇಶವೇ ಆಗಿತ್ತು. ಬಾರಕೂರು, ರಾಜ್ಯದೊಳಗೆ ಉಡುಪಿ, ಯರ್ಮಾಳು, ಕಾಪು ಮೊದಲಾದ ತುಳು ಭಾಷೆ ಪ್ರಚಾರದಲ್ಲಿರುವ ತುಳುನಾಡಿನ ಭಾಗಗಳು ಸೇರಿದ್ದವು. ಈಗಿನ ಉತ್ತರ ಕನ್ನಡ ಜಿಲ್ಲೆಯ ಮುಂಡೊಳ್ಳಿ, ಭಟ್ಕಳ ಮೊದಲಾದ ಪ್ರದೇಶಗಳು ಬಾರಕೂರು ರಾಜಧಾನಿಯಾಗಿದ್ದ ‘ತುಳು ದೇಶ’ದಲ್ಲಿ ಸೇರಿದ್ದವು ಎಂಬುದಾಗಿ ವಿಜಯನಗರದ ಅರಸರ ಕೆಲವು ಶಾಸನಗಳು ಹೇಳುತ್ತವೆ.

ವಿಜಯನಗರದ ಪತನದ ಬಳಿಕ ತುಳುನಾಡಿನ ರಾಜಕೀಯ ಜೀವನದಲ್ಲೂ ಮಹತ್ತರ ಬದಲಾವಣೆಗಳುಂಟಾದವು. ಇಕ್ಕೇರಿಯ ನಾಯಕರು ಸ್ವತಂತ್ರರಾಗಿ ತುಳುನಾಡಿನ ಮೇಲೆ ಅಧಿಕಾರ ಸ್ಥಾಪಿಸಿದರು. ಇದರಿಂದಾಗಿ ತುಳುನಾಡಿನ ಹಿಂದಿನ ರಾಜಕೀಯ ಗಡಿಗಳೆಲ್ಲವೂ ಬದಲಾವಣೆಗೊಂಡವು. ಯುರೋಪಿಯನ್ನರ ಹಾಗೂ ಮೈಸೂರು ಸುಲ್ತಾನರ ಆಗಮನ ತುಳುನಾಡಿನ ರಾಜಕೀಯ ಜೀವನದ ದಿಕ್ಕನ್ನೇ ಬದಲಾಯಿಸಿತು. ತುಳುನಾಡಿನ ಅರಸು ಮನೆತನಗಳು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಅತಂತ್ರ ಸ್ಥಿತಿಯನ್ನು ತಲುಪಿದವು. ಕೆಳದಿ, ಇಕ್ಕೇರಿ, ಬಿದನೂರು ಮತ್ತು ಮೈಸೂರಿನ ಅರಸರು ತುಳುನಾಡಿನ ಗಡಿಗಳನ್ನು ತಮಗೆ ಬೇಕಾದಂತೆ ರಚಿಸಿಕೊಂಡರು. ಹೈದರ್ ಆಲಿ ಮತ್ತು ಟಿಪ್ಪುಸುಲ್ತಾನ್ ಪಾಳೆಯಗಾರರ ವಿರುದ್ಧ ಸಮರವನ್ನೇ ಸಾರಿ ಅವರ ರಾಜ್ಯಗಳೆಲ್ಲವನ್ನೂ ಸ್ವಾಧೀನಪಡಿಸಿಕೊಂಡರು. ಪೋರ್ಚುಗೀಸರಿಗೂ ಹಾಗೂ ಇಕ್ಕೇರಿಯ ನಾಯಕರಿಗೂ ನಡೆದ ಹೋರಾಟ ಹಾಗೂ ಒಪ್ಪಂದಕ್ಕೆ ತುಳುನಾಡು ಕೇಂದ್ರ ಬಿಂದುವಾಗಿತ್ತು. ಅದೇ ರೀತಿ ಮೈಸೂರು ಸುಲ್ತಾನರಿಗೂ ಹಾಗೂ ಬ್ರಿಟಿಷರಿಗೂ ತುಳುನಾಡು ಆಕರ್ಷಣೆಯ ಕೇಂದ್ರವಾಗಿತ್ತು. ತುಳುನಾಡು ಕರಾವಳಿ ತೀರವನ್ನು ಹಾಗೂ ಉತ್ತಮ ಬಂದರನ್ನು ಹೊಂದಿದ್ದುದೇ ಇದಕ್ಕೆ ಕಾರಣ. ಹೀಗಾಗಿ ತುಳುನಾಡು ಈ ಅವಧಿಯಲ್ಲಿ ತನ್ನ ಸ್ವಂತ ಅಸ್ತಿತ್ವವನ್ನು ಕಳೆದುಕೊಂಡು ಹೊರಗಿನ ಶಕ್ತಿಗಳ ಹಿತಾಸಕ್ತಿಗಳನ್ನು ಕಾಪಾಡುವ ಪ್ರದೇಶವಾಗಿ ಕಾಣಿಸಿಕೊಂಡಿತ್ತು. ಟಿಪ್ಪುವಿನ ಪತನ ಬಳಿಕ ತುಳುನಾಡು ನೇರವಾಗಿ ಬ್ರಿಟಿಷರ ಅಧೀನಕ್ಕೆ ಬಂತು. ಬ್ರಿಟೀಷರು ತಮ್ಮ ವ್ಯಾಪಾರ ಮತ್ತು ಆಡಳಿತದ ಅನುಕೂಲತೆಯನ್ನು ನೋಡಿಕೊಂಡು, ಅದಕ್ಕೆ ತಕ್ಕ ಹಾಗೆ ಗಡಿಗಳನ್ನು ಪುನರ್ ರಚಿಸಿಕೊಂಡರು.

ಟಿಪ್ಪುವಿನ ಪತನದ ಬಳಿಕ (೧೭೯೯) ಬ್ರಿಟಿಷರು ತುಳುನಾಡನ್ನು ಸೇರಿಸಿಕೊಂಡು ಹೊಸ ಕೆನರಾ ಜಿಲ್ಲೆಯನ್ನು ರಚಿಸಿದರು. ಕೆನರಾ ಜಿಲ್ಲೆ ಅಥವಾ ಪ್ರಾಂತ್ಯದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿಕೊಂಡಿದ್ದವು. ಈ ಪ್ರಾಂತ್ಯ ಮದರಾಸು ಪ್ರೆಸಿಡೆನ್ಸಿಯ ಆಳ್ವಿಕೆಗೆ ಒಳಪಟ್ಟಿತು. ಸರ್ ಥಾಮಸ್ ಮನ್ರೋನನ್ನು ಈ ಪ್ರಾಂತ್ಯದ ಕಲೆಕ್ಟರ್ ಆಗಿ ನೇಮಕ ಮಾಡಲಾಯಿತು. ನವೆಂಬರ್ ೧೮೦೦ರಲ್ಲಿ ಈ ಜಿಲ್ಲೆಯನ್ನು ಎರಡು ವಿಭಾಗಗಳನ್ನಾಗಿ ವಿಭಜಿಸಲಾಯಿತು. ಅವುಗಳೆಂದರೆ ಉತ್ತರ ಮತ್ತು ದಕ್ಷಿಣ ವಿಭಾಗಗಳು. ಈ ವಿಭಾಗಗಳಿಗೆ ಇಬ್ಬರು ಕಲೆಕ್ಟರುಗಳನ್ನೂ ನೇಮಿಸಲಾಯಿತು. ಉತ್ತರ ವಿಭಾಗಕ್ಕೆ ಹೊನ್ನಾವರವು ಕೇಂದ್ರವಾದರೆ, ದಕ್ಷಿಣ ವಿಭಾಗಕ್ಕೆ ಮಂಗಳೂರು ಕೇಂದ್ರವಾಯಿತು. ಇಂದಿನ ಉಡುಪಿ ಜಿಲ್ಲೆಯ ಕುಂದಾಪುರವು ಉತ್ತರ ವಿಭಾಗಕ್ಕೆ ಸೇರಿತ್ತು. ೧೮೧೭ರಲ್ಲಿ ಈ ಜಿಲ್ಲೆಯು ಮತ್ತೆ ಒಬ್ಬನೇ ಕಲೆಕ್ಟರನ ಆಳ್ವಿಕೆಗೆ ಒಳಪಟ್ಟಿತ್ತು. ೧೮೬೨ಲ್ಲಿ ಈ ಜಿಲ್ಲೆಯು ಮತ್ತೊಮ್ಮೆ ವಿಭಜನೆಗೊಂಡಿತು. ಉತ್ತರ ಕನ್ನಡವನ್ನು ಮುಂಬಯಿ ಪ್ರೆಸಿಡೆನ್ಸಿಗೂ, ದಕ್ಷಿಣ ಕನ್ನಡವನ್ನು ಮದರಾಸು ಪ್ರೆಸಿಡೆನ್ಸಿಗೂ ಸೇರಿಸಿಕೊಳ್ಳಲಾಯಿತು. ಹೀಗೆ, ಬ್ರಿಟಿಷರು ತಮ್ಮ ಅನುಕೂಲತೆಗೆ ತಕ್ಕ ಹಾಗೆ ಈ ಪ್ರದೇಶವನ್ನು ವಿಭಜಿಸಿಕೊಂಡರು.

ಭಾರತ ಸ್ವತಂತ್ರಗೊಂಡು ಭಾಷವಾರು ಹಿನ್ನೆಲೆಯಲ್ಲಿ ರಾಜ್ಯಗಳು ಪುನರ್ ರಚನೆಗೊಳ್ಳುವ ಸಂದರ್ಭದಲ್ಲಿ ತುಳುನಾಡಿನ ಗಡಿರೇಖೆಗಳು ಮತ್ತೊಮ್ಮೆ ಚರ್ಚೆಯ ವಸ್ತುವಾದವು. ಹರಿದುಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವನ್ನೂ ಒಟ್ಟು ಸೇರಿಸಿ ನವೆಂಬರ್ ೧, ೧೯೫೬ರಂದು ಮೈಸೂರು (೧೯೭೩ರಲ್ಲಿ ಕರ್ನಾಟಕವೆಂದು ಮರುನಾಮಕರಣ ಮಾಡಲಾಯಿತು.) ರಾಜ್ಯವೂ ಅಸ್ತಿತ್ವಕ್ಕೆ ಬಂದಿತು. ಆದರೆ ಪ್ರಾಚೀನ ಕಾಲದಿಂದಲೂ ತುಳುನಾಡನ್ನು ಆಳಿದ ಅರಸುಮನೆತನಗಳ ಅಧೀನದಲ್ಲಿದ್ದ ಹಾಗೂ ತುಳುಭಾಷಿಕರಿರುವ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿತು. ಕರ್ನಾಟಕ ಏಕೀಕರಣಗೊಂಡರೂ, ತುಳು ಭಾಷೆಯನ್ನಾಡುವ ಪ್ರದೇಶಗಳು ಏಕೀಕರಣಗೊಳ್ಳಲಿಲ್ಲ. ರಾಜಕೀಯವಾಗಿ ಹಾಗೂ ಭಾಷಿಕವಾಗಿ ತುಳುನಾಡಿನ ಭಾಗವಾಗಿದ್ದ ಕಾಸರಗೋಡನ್ನು ಕೇರಳ ರಾಜ್ಯದೊಂದಿಗೆ ಸೇರಿಸಿದ ಕ್ರಮವನ್ನು ವಿರೋಧಿಸಿ ಅಂದಿನಿಂದ ಇಂದಿನವರೆಗೂ ಗಡಿ ಚಳವಳಿ ನಡೆಯುತ್ತಲೇ ಬಂದಿದೆ. ಕರ್ನಾಟಕ ಮತ್ತು ಕೇರಳದ ಗಡಿಯು ಚಂದ್ರಗಿರಿ ನದಿಯಾಗಿರಬೇಕೆಂದು ಹೋರಾಟಗಾರರು ತಮ್ಮ ಮನವಿಗಳಲ್ಲಿ ಪ್ರಸ್ತಾಪಿಸಿದರು. ಆಡಳಿತಾತ್ಮಕ ಕಾರಣ ಎಂದು ಕಾಸರಗೋಡನ್ನು ಕೇರಳಕ್ಕೆ ಸೇರಿಸಿದ್ದನ್ನು ಬಿ.ಎಸ್. ಕಕ್ಕಿಲ್ಲಾಯ, ಕಯ್ಯಾರ ಕಿಞ್ಞಣ್ಣರೈ ಕೆ.ಆರ್. ಕಾರಂತ, ಕೆ.ಸಿ.ಆಳ್ವ ಮುಂತಾದವರು ವಿರೋಧಿಸಿದರು.ಗಡಿ ಸಮಸ್ಯೆಯ ಪರಿಹಾರಕ್ಕಾಗಿ ನೇಮಕ ಮಾಡಲಾಗಿದ್ದ ಮಹಾಜನ ಆಯೋಗವು ಎಲ್ಲ ಮನವಿಗಳನ್ನು ಗಮನಿಸಿ ಚಂದ್ರಗಿರಿ ನದಿಯ ಉತ್ತರಭಾಗದ ಕಾಸರಗೋಡು ಮೈಸೂರಿಗೆ ಸೇರಬೇಕಾದ್ದು ಅನಿವಾರ್ಯ ಎಂದು ಏಕಪಕ್ಷೀಯವಾಗಿ ನಿರ್ಧರಿಸಿತು. ಆದರೆ ಮಹಾಜನ ವರದಿಯು ಜಾರಿಯಾಗಲಿಲ್ಲ. ಹೀಗಾಗಿ ತುಳುನಾಡಿನ ಗಡಿರೇಖೆಗಳು ಕುಗ್ಗಬೇಕಾಗಿ ಬಂತು .

ತುಳುನಾಡಿನ ಚರಿತ್ರೆಯೆಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆಯು ಹೌದು. ಈ ಜಿಲ್ಲೆಯ ಕೆಲವು ತಾಲೂಕಗಳಲ್ಲಿ ತುಳು ಭಾಷಿಕರು ಇಲ್ಲದಿದ್ದರೂ, ಅವರೆಲ್ಲರೂ ಒಂದೇ ಆಡಳಿತ ಘಟಕಕ್ಕೆ ಸೇರಿದವರು. ದಕ್ಷಿಣ ಕನ್ನಡ ಜಿಲ್ಲೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾಗಿ ವಿಭಜನೆಗೊಳ್ಳುವವರೆಗೂ ಇಡೀ ಪ್ರದೇಶ ರಾಜಕೀಯವಾಗಿ ಒಂದುಗೂಡಿತ್ತು. ಕರ್ನಾಟಕ ರಾಜ್ಯದ ಜಿಲ್ಲೆಗಳ ಪುನರ್ವಿಂಗಡಣೆಯ ಸಂದರ್ಭದಲ್ಲಿ (೧೯೯೭)ಈ ಜಿಲ್ಲೆಯು ಎರಡು ಜಿಲ್ಲೆಗಳಾಗಿ ಒಡೆದು ಹೋಯಿತು. ಉಡುಪಿ ಜಿಲ್ಲೆಯು ಕುಂದಾಪುರ, ಉಡುಪಿ ಮತ್ತು ಕಾರ್ಕಳ ತಾಲೂಕುಗಳನ್ನು ಪಡೆದುಕೊಂಡಿತು. ಉಡುಪಿಯು ಜಿಲ್ಲಾ ಕೇಂದ್ರವಾಯಿತು. ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕುಗಳು ಸೇರಿಕೊಂಡವು. ಮಂಗಳೂರು ಜಿಲ್ಲಾ ಕೇಂದ್ರವಾಯಿತು. ತುಳು ಭಾಷಿಕರು ಎರಡೂ ಜಿಲ್ಲೆಗಳಲ್ಲಿ ಹಂಚಿಹೋಗಿರುವುದನ್ನು ಕಾಣಬಹುದಾಗಿದೆ. ಹೀಗೆ ತುಳುನಾಡಿನ ಎಲ್ಲೆಕಟ್ಟುಗಳು ಪ್ರಾಚೀನದಿಂದ ಪ್ರಕ್ರಿಯೆಗಳಿಗೆ ಒಳಗಾಗುತ್ತಲೇ ಇದ್ದವು. ಆಯಾ ಸಂದರ್ಭದ ರಾಜಕಾರಣ ಗಡಿರೇಖೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು.

ಆಕರಸೂಚಿ

೧. ಸ್ಟರಕ್ ಜೆ. (ಸಂ.) ಮದ್ರಾಸ್ ಡಿಸ್ಟ್ರಿಕ್ಟ್ ಮ್ಯಾನ್ಯುವಲ್, ಸೌತ್ ಕೆನರಾ, ಸಂಪುಟ ೧, ಮದ್ರಾಸ್, ೧೮೯೮

೨. ಸ್ಟುವರ್ಟ್ ಎಚ್.ಎ. (ಸಂ.) ಮದ್ರಾಸ್ ಡಿಸ್ಟ್ರಕ್ಟ್ ಮ್ಯಾನ್ಯುವಲ್, ಸೌತ್ ಕೆನರಾ, ಸಂಪುಟ ೨, ಮದ್ರಾಸ್, ೧೮೯೫.

೩. ಗಣಪತಿ ರಾವ್ ಐಗಳ್ ಎಂ., ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ, ಶಾರದಾ ಪ್ರೆಸ್, ಮಂಗಳೂರು, ೧೯೨೩

೪. ಸಾಲೆತ್ತೂರ್ ಬಿ., ಏನ್‌ಶ್ಯಂಟ್ ಕರ್ನಾಟಕ ಸಂಪುಟ ೧, ಹಿಸ್ಟರಿ ಆಫ್ ತುಳುವ, ಓರಿಯಂಟಲ್ ಬುಕ್ ಏಜೆನ್ಸಿ, ಪೂನ, ೧೯೩೬.

೫. ರಮೇಶ್ ಕೆ.ವಿ., ಎ ಹಿಸ್ಟರಿ ಆಫ್ ಸೌತ್ ಕೆನರಾ, ಕರ್ನಾಟಕ ಯುನಿವರ್ಸಿಟಿ, ಧಾರವಾಡ, ೧೯೭೦.

೬. ಗುರುರಾಜ ಭಟ್ ಪಿ, ಸ್ಟಡೀಸ್ ಇನ್ ತುಳುವ ಹಿಸ್ಟರಿ ಎಂಡ್ ಕಲ್ಚರ್, ಕಲ್ಯಾಣಪುರ, ೧೯೭೫.

೭. ವಿವೇಕ ರೈ ಬಿ.ಎ., ತುಳು ಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೮೫.

೮. ಪರ್‌ಸ್ಪೆಕ್ಟಿವ್ ಇನ್ ದಕ್ಷಿಣ ಕನ್ನಡ ಎಂಡ್ ಕೊಡಗು, ಮಂಗಳೂರ್ ಯುನಿವರ್ಸಿಟಿ ಡೆಸೆನ್ಯಲ್ ವಾಲ್ಯೂಮ್, ಮಂಗಳೂರು, ೧೯೯೧

೯. ಸುಬ್ಬಣ್ಣ ರೈ ಎ., ದಕ್ಷಿಣ ಕನ್ನಡ ಜಿಲ್ಲೆಯ ಐತಿಹ್ಯಗಳು, ಮಾಣಿ ಜೂನಿಯರ್ ಛೇಂಬರ್, ಮಾಣಿ, ೧೯೯೪

೧೦. ಪುರುಷೋತ್ತಮ ಬಿಳಿಮಲೆ, ನಾವಡ ಎ.ವಿ. (ಸಂ.) ‘ಸಿರಿ’ ಶ್ರೀ ಅಮೃತ ಸೋಮೇಶ್ವರ ಅಭಿನಂದನ ಸಂಪುಟ, ಕಲಾಗಂಗೋತ್ರಿ, ಉಚ್ಚಿಲ, ೧೯೯೫

೧೧. ಉದಯವರ್ಮ ರಾಜ, ತುಳುನಾಡಿನ ಗತವೈಭವ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ, ಕಾಸರಗೋಡು, ೧೯೯೮

೧೨. ಹೆರಂಜೆ ಕೃಷ್ಣ ಭಟ್ಟ, ಶೆಟ್ಟಿ ಎಸ್‌ಡಿ (ಸಂ.), ತುಳು ಕರ್ನಾಟಕ ಅರಸು ಮನೆತನಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೦

೧೩. ಸುರೇಂದ್ರ ರಾವ್ ಬಿ., ಚಿನ್ನಪ್ಪಗೌಡ ಕೆ. (ಸಂ.) ದಿ ರಿಟ್ರೀವ್ಡ್ ಏಕರ್, ಪ್ರಸಾರಾಂಗ, ಮಂಗಳೂರು, ಯುನಿವರ್ಸಿಟಿ, ಮಂಗಳಗಂಗೋತ್ರಿ, ೨೦೦೩.