ಪ್ರಸ್ತುತ ಆಡುಮಾತಾಗಿ ಬಳಕೆಯಲ್ಲಿರುವ ಯಾವುದೊಂದು ಭಾಷೆಗೆ ಪೂರ್ವರೂಪವೊಂದಿದ್ದರಬೇಕೆಂಬುದು ಖಚಿತವಾದರೂ ಲಿಖಿತ ರೂಪವಿಲ್ಲದಿದ್ದರೆ ಆ ಪೂರ್ವರೂಪವು ಹೇಗಿತ್ತೆಂಬುದನ್ನು ತಿಳಿಯಲು ಸಾಧ್ಯವಿಲ್ಲ. ಲಿಖಿತ ಆಧಾರವಿರುವುದರಿಂದಲೇ ಕನ್ನಡಕ್ಕೆ ಪೂರ್ವದ ಹಳಗನ್ನಡ, ನಡುಗನ್ನಡ, ಹೊಸಗನ್ನಡ – ಎಂಬ ಹಂತಗಳಿವೆ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ. ಕೆಲವೇ ವರ್ಷಗಳ ಹಿಂದಿನವರೆಗೂ ತುಳು ಭಾಷೆಗೆ ಇಂತಹ ಪ್ರಾಚೀನ ರೂಪವೊಂದಿರುವ ಬಗೆಗೆ ಯಾವುದೇ ಆಧಾರವಿಲ್ಲದುದರಿಂದ ಹಳೆಯ ತುಳುವಿನ ಬಗೆಗೆ ಖಚಿತವಾದ ಅಭಿಪ್ರಾಯಗಳನ್ನು ಹೇಳುವಂತಿರಲಿಲ್ಲ. ಆದರೆ ತುಳುವಿನಲ್ಲಿ ಬರೆದ ಪ್ರಾಚೀನ ಗ್ರಂಥಗಳು ದೊರೆತ ಪರಿಸ್ಥಿತಿ ಬದಲಾಗಿದೆ. ಪ್ರಸ್ತುತ ಉಪಲಬ್ಧವಾಗಿರುವ ಹಲವು ಗ್ರಂಥಗಳು ತುಳು ಭಾಷೆಯ ಪ್ರಾಚೀನ ಸ್ವರೂಪವನ್ನು ಖಚಿತವಾಗಿ ಎತ್ತಿ ತೋರಿಸುತ್ತವೆ. ಮಾತ್ರವಲ್ಲ ತುಳುವಿನಲ್ಲಿ ಒಂದು ಸಾಕಷ್ಟು ಸಮೃದ್ಧವಾದ ಸಾಹಿತ್ಯ ಸೃಷ್ಟಿಯ ಕಾಲ ಆಗಿಹೋಗಿರುವುದನ್ನು ವಿಶದಪಡಿಸುತ್ತವೆ.

ಹಳೆಯ ತುಳು ಕಂಡುಬಂದ ಬಗೆ

‘ಪಾಶ್ಚಾತ್ಯ ಕ್ರೈಸ್ತ ಮಿಶನರಿಗಳು ಹತ್ತೊಂಬತ್ತನೆಯ ಶತಮಾನದ ಪೂರ್ವ ಭಾಗದಲ್ಲಿ ಮಂಗಳೂರಿಗೆ ಬಂದು ಕ್ರೈಸ್ತಧರ್ಮ ಪ್ರಚಾರ ಕಾರ್ಯ ಮಾಡುವುದರೊಂದಿಗೆ ತಮ್ಮ ಧಾರ್ಮಿಕ ಕೃತಿಗಳನ್ನು ತುಳುವಿಗೆ ಅನುವಾದ ಮಾಡತೊಡಿಗಿದರು. ಅನಂತರ ತುಳುವಿಗೆ ನಿಘಂಟು, ವ್ಯಾಕರಣ ಕೃತಿಗಳನ್ನು ಇಂಗ್ಲಿಷಿನಲ್ಲಿ ಬರೆದರು. ತುಳುಭಾಷೆಯ ಲೇಖ ವ್ಯವಸಾಯವೆಂಬುದು ಪಾಶ್ಚಾತ್ಯ ಮಿಶನರಿಗಳಿಂದಲೇ ತೊಡಗಿದ್ದು ಹತ್ತೊಂಬತ್ತನೆಯ ಶತಮಾನದ ಉತ್ತರ ಭಾಗದಲ್ಲಿ. ಬಾಯಾರು ಸಂಕಯ್ಯ ಭಾಗವತರೆಂಬ ಯಕ್ಷಗಾನ ಪ್ರಸಂಗಕರ್ತರು ‘ತುಳು ಪಂಚವಟಿ’ ಯೆಂಬ ಪ್ರಸಂಗವನ್ನು ತುಳಿವಿನಲ್ಲಿ ಬರೆದುದು ದೇಶೀಯರ ಮೊದಲ ಸಾಹಿತ್ಯ ರಚನೆ. ಕಾಲ ತಿಳಿಯದ ಜನಪದ ಸಾಹಿತ್ಯ ಮಾತ್ರ ಅಲಿಖಿತ ಸಾಹಿತ್ಯ ರೂಪದಲ್ಲಿ ಅಸ್ತಿತ್ವದಲ್ಲಿತ್ತು. ತುಳು ಲಿಪಿಯೆಂಬೊಂದು ಲಿಪಿ ಪ್ರಭೇದವು ಸಂಸ್ಕೃತದ ಬರವಣಿಗೆಗೆ ಈ ಪ್ರದೇಶದಲ್ಲಿ ಉಪಯೋಗವಾಗುತ್ತಿತ್ತು. ಪಾಶ್ಚಾತ್ಯ ಮಿಶನರಿಗಳು ಕನ್ನಡ ಲಿಪಿಯನ್ನೇ ತುಳು ಭಾಷೆಯ ಬರವಣಿಗೆಗೆ ಉಪಯೋಗಿಸಿದರು ‘ಇದು ಸುಮಾರು ೧೯೮೦ರವರೆಗೂ ತುಳುವಿನ ಬರವಣಿಗೆಯ ಬಗೆಗೆ ಸಾಮಾನ್ಯವಾಗಿ ತಿಳಿದಿದ್ದ ವಿಚಾರ, ೧೯೮೪ರಲ್ಲಿ ‘ಶ್ರೀ ಭಾಗವತೊ’ ಎಂಬ ಹೆಸರಿನ ತುಳು ಭಾಗವತವು ಪ್ರಕಟಗೊಂಡಾಗ ಈ ಅಭಿಪ್ರಾಯವು ಪೂರ್ಣವಾಗಿ ವ್ಯತ್ಯಾಸಗೊಂಡಿತು.

ಕಾಸರಗೋಡಿನ ಸಂಶೋಧನ ವಿದ್ವಾಂಸರಾದ ಶ್ರೀ ವೆಂಕಟರಾಜ ಪುಣಿಂಚತ್ತಾಯರಿಗೆ ಮಧೂರಿನ ಶಿವನಾರಾಯಣ ಸರಳಾಯರ ಮನೆಯಲ್ಲಿ ತುಳು ಬರಹದಲ್ಲಿರುವ ತುಳು ಭಾಷೆಯ ಕಾವ್ಯವೊಂದು ಅನಿರೀಕ್ಷಿತವಾಗಿ ದೊರೆಯಿತು. ಆ ಕಾವ್ಯದ ಭಾಷೆ ತುಳುವೇ ಆದರೂ ಅದನ್ನು ಅರ್ಥಮಾಡಿಕೊಳ್ಳಲು ಅವರಿಗೆ ತುಂಬ ಕಷ್ಟವಾಯಿತು. ಆದರೂ ಅದನ್ನು ಅವರು ಪೂರ್ತಿಯಾಗಿ ಕನ್ನಡಕ್ಕೆ ಲಿಪ್ಯಂತರ ಮಾಡಿ ಅಧ್ಯಯನ ಮಾಡಿದರು. ಪ್ರಸ್ತಾವನೆ, ಟಿಪ್ಪಣಿ, ಅರ್ಥ ಇತ್ಯಾದಿಗಳನ್ನು ಬಹಳ ಪರಿಶ್ರಮದಿಂದ ಬರೆದು ಆ ಏಕೈಕ ಹಸ್ತಪ್ರತಿಯಿಂದ ‘ಶ್ರೀ ಭಾಗವತೊ’ ಎಂಬ ಹೆಸರಿನಲ್ಲಿ ಕೃತಿಯನ್ನು ಸಂಪಾದಿಸಿದರು. ಮಗಳೂರು ವಿಶ್ವವಿದ್ಯಾನಿಲಯವು ೧೯೮೪ರಲ್ಲಿ ಆ ಕೃತಿಯನ್ನು ಪ್ರಕಟಿಸಿತು. ಹೀಗೆ ತುಳುವಿನ ಪ್ರಾಚೀನ ಲೋಕದ ಇನ್ನೊಂದು ಮುಖವು ತೆರೆದುಕೊಂಡಿತು.

ಈ ಸಾಧನೆಯಿಂದ ಇನ್ನಷ್ಟು ಸ್ಫೂರ್ತಿ ಪಡೆದ ಪುಣಿಂಚತ್ತಾಯರು ಕಲ್ಲಿಕೋಟೆ ವಿಶ್ವವಿದ್ಯಾಲಯದ ಹಸ್ತ ಪ್ರತಿ ಭಂಡಾರದಲ್ಲಿರುವ ಅಪೂರ್ಣರೂಪದ ತುಳು ಹಸ್ತ ಪ್ರತಿಯೊಂದನ್ನು ಹುಡುಕಿ ತೆಗೆದು ಅದರಲ್ಲಿದ್ದ ‘ಕಾವೇರಿ’ ಕಾವ್ಯವನ್ನು ತಮ್ಮ ಅನುಭವದ ಹಿನ್ನೆಲೆಯಿಂದ ಸಂಪಾದಿಸಿದರು. ಈ ಕೃತಿಯ ಆದಿ, ಮಧ್ಯ, ಅಂತ್ಯದ ಭಾಗಗಳು ಖಿಲವಾಗಿದ್ದವು. ಆದರೂ ಕೃತಿಗೆ ಐತಿಹಾಸಿಕ ಮಹತ್ತ್ವವಿರುವುದರಿಂದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಈ ಕೃತಿಯನ್ನು ಪ್ರಕಟಿಸಿತು. ಹೀಗೆ ೧೯೮೭ರಲ್ಲಿ ಪ್ರಾಚೀನ ತುಳು ಸಾಹಿತ್ಯಕ್ಕೆ ‘ಕಾವೇರಿ’ಯ ಸೇರ್ಪಡೆಯಾಯಿತು.

ಕಲ್ಲಿಕೋಟೆ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿ ಪುಲ್ಲೂರಿನ ತೆಂಕಿಲ್ಲಾಯ (ತೇಕತ್ತಿಲ್ಲಾಯ) ಮನೆತನದವರಿಂದ ಪಡೆಯಲಾದ ತುಳು ಭಾಷೆಯ ಹಸ್ತಪ್ರತಿ ಪುಣಿಂಚತ್ತಾಯರ ಗಮನಕ್ಕೆ ಬಂದು ಅದನ್ನೂ ಅವರು ಪೂರ್ವ ವಿಧಾನದಂತೆ ಕನ್ನಡಕ್ಕೆ ಲಿಪ್ಯಂತರಗೊಳಿಸಿ ಸಂಪಾದಿಸಿದರು. ಇದು ‘ದೇವೀ ಮಹಾತ್ಮೆ'[1] ಎಂಬ ಗದ್ಯ ಕೃತಿ. ಇದನ್ನು ೧೯೯೧ರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಪ್ರಕಟಿಸಿತು.

ಹಸ್ತಪ್ರತಿ ಸಂಶೋಧನೆಯಲ್ಲಿ ದಣಿವರಿಯದ ಪುಣಿಂಚತ್ತಾಯರಿಗೆ ಕಾಸರಗೋಡು ತಾಲೂಕಿಗೆ ಸೇರಿಕೊಂಡಿರುವ ಪುತ್ತೂರು ತಾಲೂಕಿನ ಮೂಡನೂರು ಗ್ರಾಮದ ಮಂಡ್ಯ ಲಕ್ಷ್ಮಿನಾರಾಯಣ ಕೇಕುಣ್ಣಾಯರೆಂಬವರಲ್ಲಿ ಇನ್ನೊಂದು ಅಪೂರ್ವ ಹಸ್ತಪ್ರತಿ ದೊರಕಿತು. ಅದು ತುಳುವಿನ ಮಹಾಭಾರತ. ಪುಣಿಂಚತ್ತಾಯರು ಅದನ್ನೂ ಕನ್ನಡಕ್ಕೆ ಲಿಪ್ಯಂತರಗೊಳಿಸಿ ಸಂಪಾದಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಅದನ್ನು ಕ್ರಿ.ಶ. ೨೦೦೦ದಲ್ಲಿ ಪ್ರಕಟಿಸಿತು. ಈ ಕೃತಿಯ ಮೂಲಕ ದೊರೆಯಿತು. ತುಳು ಮಹಾಭಾರತದ ಸಮಕಾಲೀನವಾದ ‘ತುಳು ಕರ್ಣಪರ್ವ’ವೆಂಬ ಕೃತಿಯ ಭಾಗ ಮಾತ್ರ ದೊರಕಿದುದನ್ನು ಪುಣಿಂಚತ್ತಾಯರು ಈ ಕೃತಿಯ ಅನುಬಂಧದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆ ಕೃತಿ ಸಂಪಾದಿತವಾಗಿ ಪ್ರಕಟಗೊಂಡಿಲ್ಲ.

ಇದೇ ಸಮಯದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಸಂಸ್ಕೃತಿ ಶೋಧನ ಪ್ರತಿಷ್ಠಾನದ ಹಸ್ತಪ್ರತಿ ಗ್ರಂಥ ಭಂಡಾರದಲ್ಲಿ ‘ತುಳು ರಾಮಾಯಣ’ ವೆಂಬ ಹೆಸರಿನ ಹಸ್ತಪ್ರತಿಯೊಂದಿರುವುದು ತಿಳಿದುಬಂದು ಪ್ರತಿಷ್ಠಾನದ ಸಂಶೋಧಕರಾದ ಎಸ್.ಆರ್. ವಿಘ್ನರಾಜ ಅವರು ಅದರ ಪರಿಚಯ ಲೇಖನವೊಂದನ್ನು (ಕೆಲವು ಉದಾಹರಣ ಪದ್ಯಗಳೊಡನೆ) ಪತ್ರಿಕೆಯಲ್ಲಿ ಪ್ರಕಟಿಸಿದರು. ಅದರ ಆಧಾರದಿಂದ ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಅದು ತುಳು ಭಾಗವತದ ಭಾಗವೇ ಆಗಿರಬೇಕೆಂದು ಊಹಿಸಿದರು. ಪ್ರಸ್ತುತ ಲೇಖಕನೂ ಲಿಪ್ಯಂತರಗೊಳಿಸಿ ಸಿದ್ಧಪಡಿಸಿದ್ದ ಆ ಕಾವ್ಯ ಭಾಗವನ್ನು ಪರಿಶೀಲಿಸಿದಾಗ ಅದು ಭಾಗವತದ ಭಾಗವೇ ಎಂದು ನಿಶ್ಚಿತವಾಯಿತು. ಪ್ರಸ್ತುತ ಈ ಭಾಗವನ್ನು ಎಸ್‌.ಆರ್.ವಿಘ್ನರಾಜ ಅವರು ಪುಣಿಂಚತ್ತಾಯರ ಮಾದರಿಯಲ್ಲೆ ಪ್ರಸ್ತಾವನೆ, ಟಿಪ್ಪಣಿ, ಅನುಬಂಧಗಳೊಡನೆ ಸಂಪಾದಿಸಿ ಪ್ರಕಟಣೆಗೆ ಸಿದ್ಧಪಡಿಸಿರುತ್ತಾರೆ. ಇದೀಗ ಅದೂ ಪ್ರಕಟವಾಗಿದೆ.

ಹೀಗೆ ಈ ಎಲ್ಲ ಕೃತಿಗಳಿಮದ ಹಳೆಯ ತುಳುವಿನ ಹೊಸಲೋಕ ತುಳುನಾಡಿನ ಮುಂದೆ ತೆರೆಯಿತು. ಹಲವರು ಈ ವಿಷಯದಲ್ಲಿ ಆಸಕ್ತಿ ವಹಿಸಿ ಅಧ್ಯಯನ ನಡೆಸುವಂತಾಯಿತು. ಪ್ರಾಚೀನ ಲಿಖಿತ ಸಾಹಿತ್ಯವುಳ್ಳ ಭಾಷೆಗಳ ಸಾಲಿಗೆ ತುಳುವೂ ಸೇರ್ಪಡೆಗೊಂಡಿತು.

ನಿಘಂಟುವಿಗೆ ಆಕರ ಸಾಮಗ್ರಿ

೧೯೭೯ರಿಂದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ತುಳುವಿನ ಬೃಹತ್ ಕೋಶದ ಕಾರ್ಯವು ‘ತುಳು ನಿಘಂಟು ಯೋಜನೆ’ ಎಂಬ ಹೆಸರಿನಲ್ಲಿ ನಡಯುತ್ತಿತ್ತು. ಯೋಜನೆ ಪ್ರಾರಂಭಗೊಂಡಾಗ ತುಳುವಿನ ವಿಸ್ತಾರವಾದ ಪಾಡ್ದನಗಳು[2] ಮತ್ತು ಜನಪದ ಸಾಹಿತ್ಯದ ಹೊರತು ಪ್ರಾಚೀನ ಸಾಹಿತ್ಯದ ಬಗೆಗೆ ಯಾವ ಕಲ್ಪನೆಯೂ ಇದ್ದಿರಲಿಲ್ಲ. ಆದರೆ ತುಳು ಭಾಗವತ, ಕಾವೇರಿ ಕೃತಿಗಳು ಪ್ರಕಟಗೊಂಡಾಗ ಆ ಬೃಹತ್ ನಿಘಂಟವು ಈ ಪ್ರಾಚೀನ ಕೃತಿಗಳ ಶಬ್ದ ರೂಪಗಳನ್ನೂ, ಉದಾಹರಣೆಗಳನ್ನೂ ಹೊಂದಿರುವುದು ಭಾಷಾ ಅಧ್ಯಯನ ದೃಷ್ಟಿಯಿಂದ ಅತ್ಯವಶ್ಯವೆಂದೇ ಭಾವಿಸಲಾಯಿತು. ಈ ಕೃತಿಗಳಿಂದ ಶಬ್ದಗಳನ್ನೂ, ಉದಾಹರಣೆಗಳನ್ನೂ ಆಯ್ದು ಅವುಗಳನ್ನು ನಿಘಮಟು ನಿರೂಪಣಾ ವಿಧಾನಕ್ಕೊಳಪಡಿಸಿದಾಗ ಸಹಜವಾಗಿಯೇ ನಿಘಂಟುವಿನ ಗಾತ್ರ ವೃದ್ಧಿ ಆಯಿತು. ಹಳೆಯ ತುಳುವಿನ ಎಷ್ಟೋ ಶಬ್ದಗಳಿಗೆ ಅರ್ಥ ನಿರ್ಣಯ ಮಾಡುವುದು ವಿದ್ವಾಂಸರಿಗೆ ಮತ್ತು ನಿಘಂಟು ಯೋಜನೆಯ ಸಂಶೋಧಕರಿಗೆ ಸವಾಲಾಗಿಯೂ ಪರಿಣಮಿಸಿತು. ಏನಿದ್ದರೂ ಈ ಕೃತಿಗಳ ಶಬ್ದ ರೂಪಗಳು ನಿಘಂಟುವಿನಲ್ಲಿ ದಾಖಲಾದುವು. ಮಹಾಭಾರತ ಕೃತಿ ಮಾತ್ರ ನಿಘಂಟುವಿನ ಆರು ಸಂಪುಟಗಳು ಹೊರಬಂದ ಮೇಲೆ ಪ್ರಕಟಗೊಂಡುದರಿಂದ ಆ ಕೃತಿಯ ಶಬ್ದಗಳೂ ಉದಾಹರಣೆಗಳೂ ನಿಘಂಟುವಿನೊಳಗಡೆ ಸೇರುವ ಅವಕಾಶ ದೊರೆಯಲಿಲ್ಲ.

ಪಳಂತುಳು

ಈ ಹಳೆಯ ತುಳು ಭಾಷಾ ಪ್ರಭೇದಕ್ಕೆ ‘ಪಳಂತುಳು’ ಎಂಬ ಸೂಕ್ತ ನಾಮಧೇಯವನ್ನಿತ್ತವರು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು. ೨೦೦೧ರಲ್ಲಿ ಅವರು ಉಪಲಬ್ಧ ಪ್ರಾಚೀನ ಸಾಹಿತ್ಯ ಕೃತಿ ಪರಿಚಯ ಲೇಖನಗಳೊಡನೆ ತುಳು ಪಂಚವಟಿ ಮತ್ತು ಮಂದಾರ ರಾಮಾಯಣ ಕೃತಿಗಳ ಪರಿಚಯ ಲೇಖನಗಳನ್ನು ಸೇರಿಸಿ ‘ಪಳಂತುಳು ಕಾವ್ಯ’ ಎಂಬ ಕೃತಿಯನ್ನು ಪ್ರಕಟಿಸಿದರು. ಹಳೆಯ ತುಳು ಕಾವ್ಯಗಳ ಬಗೆಗೆ ಉತ್ತಮ ರೀತಿಯಲ್ಲಿ ಪರಿಚಯ ಅವಲೋಕನ ರೂಪದ ಲೇಖನಗಳ ಸಂಕಲನವಿದು. ಇಲ್ಲಿ ಮೊತ್ತ ಮೊದಲು ‘ಪಳಂತುಳು’ ಎಂಬ ಶಬ್ದ ಪ್ರಯೋಗಗೊಂಡು ಇದೀಗ ರೂಢಿಗೆ ಬಂದಿದೆ. ‘ಹಳಗನ್ನಡ’ ಎಂದು ಭಾಷೆಯನ್ನು ‘ಹಳಗನ್ನಡ ಸಾಹಿತ್ಯ’ ಎಂದು ಆ ಭಾಷಾ ಪ್ರಭೇದದಲ್ಲಿ ರಚಿತವಾದ ಸಾಹಿತ್ಯವನ್ನು ಸೂಚಿಸುವಂತೆ ‘ಪಳಂತುಳು’ ಎಂಬುದು ಭಾಷೆಯನ್ನು ‘ಪಳಂತುಳು ಸಾಹಿತ್ಯ’ವು ಈ ವಿಶಿಷ್ಟ ಭಾಷಾ ಭೇದದಲ್ಲಿ ಇಂದು ಉಪಲಬ್ಧವಿರುವ ಸಾಹಿತ್ಯವನ್ನು ಸೂಚಿಸಬಹುದಾಗಿದೆ.[3]

ಹೊಸತುಳು – ಪಳಂತುಳು

ಹೊಸಕಾಲದಲ್ಲಿ ಬಳಕೆಯಲ್ಲಿರುವ ತುಳುವಿನ ಹಿನ್ನೆಲೆಯಿಂದ ನಾವು ಸಾಮಾನ್ಯ ತುಳುವೆಂದೂ ಬ್ರಾಹ್ಮಣ ತುಳುವೆಂದೂ ಎರಡು ಉಪಭಾಷೆಗಳು. ಉತ್ತರ ಮತ್ತು ದಕ್ಷಿಣ ಎಂದು ಎರಡು ಪ್ರಭೇದಗಳು. ಉತ್ತರ ಪ್ರದೇಶದಲ್ಲಿ ಪೂರ್ವ ಮತ್ತು ಪಶ್ಚಿಮ ಎಂದು ಎರಡು ಪ್ರಭೇದಗಳಾದರೆ ದಕ್ಷಿಣದ ಪ್ರಭೇದದಲ್ಲಿ ಪೂರ್ವ, ಮಧ್ಯ ಮತ್ತು ಪಶ್ಚಿಮ ಎಂದು ಮೂರು ಪ್ರಭೇದಗಳು. ಹೀಗೆ ಐದು ಪ್ರಾದೇಶಿಕ ಭೇದಗಳು.[4] ಪಳಂತುಳು ಗ್ರಂಥಗಳು ತುಳುನಾಡಿನ ಯಾವ ಭಾಗದಲ್ಲಿ ರಚಿತವಾದುವೆಂಬುದು ತಿಳಿಯದು.[5]

ಆದುದರಿಂದ ಪಳಂತುಳು ಕಾವ್ಯಗಳಲ್ಲಿ ಬಳಕೆಗೊಂಡ ತುಳು ಭಾಷೆಯು ತುಳುನಾಡಿನ ಯಾವ ಯಾವ ಭಾಗದಲ್ಲಿ ಆಡುಮಾತಾಗಿತ್ತೆಂಬುದನ್ನು ನಾವು ಹೇಳುವಂತಿಲ್ಲ.

ಹೊಸ ತುಳುವಿನ ಹಿನ್ನೆಲೆಯಿಂದ ಪಳಂತುಳುವಿನ ಬಗೆಗೆ ನಾವು ಈ ಮಾತುಗಳನ್ನು ಹೇಳಬಹುದಾಗಿದೆ.

೧. ಪಳಂತುಳು ಬರವಣಿಗೆಯ ಭಾಷೆಯಾಗಿತ್ತು. ಹಳಗನ್ನಡ ಕಾಲದ ಆಡುಮಾತಿನ ರೂಪವನ್ನು ಹೇಳಲು ಸಾಧ್ಯವಾಗಿರುವಂತೆಯೇ ಪಳಂತುಳುವಿನ ಕಾಲದ ತುಳು ಆಡುಮಾತಿನ ರೂಪವನ್ನು ಹೇಳಲು ಕಷ್ಟ.

೨. ಪಳಂತುಳು ಭಾಷಾ ವಿದ್ವಾಂಸರು ಆ ತುಳುವಿನ ಬರವಣಿಗೆಗೆ ತುಳು ಲಿಪಿಯನ್ನೇ ಬಳಸಿದ್ದಾರೆ. ಆ ವಿಶಿಷ್ಟ ಲಿಪಿಗೆ ತುಳು ಲಿಪಿಯೆಂಬ ಹೆಸರು ಈ ಪರಿಸರದಲ್ಲಿ ಪ್ರಾಚೀನ ಕಾಲದಿಂದಲೇ ಇದೆ.

೩. ಹೊಸ ತುಳುವಿಗಿಂತ ಪಳಂತುಳು ಭಿನ್ನವಾಗಿದ್ದು ಹಳಗನ್ನಡ ಹೊಸಗನ್ನಡಗಳಂತೆಯೇ ವಿಭಿನ್ನ ರೂಪಗಳನ್ನು ಹೊಂದಿವೆ.

೪. ಇಂದು ಬಳಕೆಯಲ್ಲಿಲ್ಲದ ಎಷ್ಟೋ ಶಬ್ದರೂಪಗಳು ಪಳಂತುಳುವಿನಲ್ಲಿವೆ.

೫. ಹೊಸತುಳುವಿನ ಬಳಕೆಯ ಅನೇಕ ಶಬ್ದರೂಪಗಳ ಪೂರ್ವರೂಪಗಳು ಮತ್ತು ರೂಪಭೇದಗಳು ಪಳಂತುಳುವಿನಲ್ಲಿ ಸಿಗುತ್ತವೆ.

೬. ಪಳಂತುಳುವಿನಲ್ಲಿ ಸಂಸ್ಕೃತ ಪದಗಳನ್ನು ಧಾರಾಳವಾಗಿ ಬಳಸಲಾಗಿದೆ. ಪ್ರಾಯಶಃ ಅಷ್ಟು ಸಂಸ್ಕೃತ ಬಳಕೆ ಹೊಸತುಳುವಿನಲ್ಲಿಲ್ಲ.

೭. ಸಂಸ್ಕೃತ ರೂಪಗಳಿಗೆ ತುಳು ಪ್ರತ್ಯಯಗಳನ್ನು ಸೇರಿಸಿ ಸಾಧಿತರೂಪಗಳನ್ನಾಗಿ ಮಾಡಿ ಉಪಯೋಗಿಸಿಕೊಳ್ಳಲಾಗಿದೆ. ಈ ಮೂಲಕವೇ ತುಳುವಿನ ‘ಸಾಹಿತ್ಯ ಭಾಷೆ’ಯನ್ನು ಸಮೃದ್ಧಿಗೊಳಿಸಲಾಗಿದೆ.

೮. ಪಳಂತುಳುವಿನ ಶಬ್ದ ಸೃಷ್ಟಿ ವಿಧಾನ ಹೊಸತುಳುವಿಗೆ ಮಾದರಿಯಾಗಿ ಕಂಡುಬರುತ್ತದೆ. ಹೊಸ ತುಳುವನ್ನು ಬರವಣಿಗೆಗೆ ಉಪಯೋಗಿಸುವಾಗ ಪಳಂತುಳುವಿನ ಶಬ್ದ ಸೃಷ್ಟಿ ವಿಧಾನವನ್ನು ಅನುಸರಿಸಿಕೊಂಡು ಪ್ರಯೋಜನ ಪಡೆಯಬಹುದು.

೯. ಹೊಸ ತುಳುವಿನ ವ್ಯಾವಹಾರಿಕ ಉಪಯೋಗವನ್ನು ಮಾತ್ರ ಮಾಡಿವನು ಪಳಂತುಳುವನ್ನು ನೇರವಾಗಿ ಅರ್ಥಯಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

೧೦. ಹಳಗನ್ನಡ ಮತ್ತು ಸಂಸ್ಕೃತ ಭಾಷಾ ಪರಿಚಯದ ಹಿನ್ನೆಲೆಯಿರುವವರಿಗೆ ಪಳಂತುಳುವಿಗೆ ಪ್ರವೇಶ ಸುಲಭ.

೧೧. ಹೊಸ ತುಳುವಿನ ಸಾಮಾನ್ಯ ರೂಪವನ್ನು ತಿಳಿದವರು ಪಳಂತುಳುವು ಬ್ರಾಹ್ಮಣ ಉಪಭಾಷೆಗೆ ಸಮೀಪವಾದುದೆಂದು ಭಾವಿಸುವಂತಿದೆ.

೧೨. ತುಳುವಿನ ಬರಿಯ ವ್ಯಾವಹಾರಿಕ ರೂಪವನ್ನು ತಿಳಿದವರಿಗೆ ಈ ಪಳಂತುಳು ರೂಪವನ್ನು ಕೇಳಿಸಿದಾಗ ಇದು ತುಳುವೇ ಅಲ್ಲವೆಂಬ ಪ್ರತಿಕ್ರಿಯೆ ಬರುವಂತಿದೆ. (ಮತ್ತು ಬಂದಿದೆ).

೧೩. ಶಬ್ಧ ರೂಪಗಳು ಮಾತ್ರವಲ್ಲದೆ ವಿಭಕ್ತಿ ಪ್ರತ್ಯಯ ಸ್ವರೂಪಗಳು ಮತ್ತು ಕ್ರಿಯಾಪದ ರೂಪಗಳಲ್ಲೂ ಹೊಸ ತುಳುವಿಗಿಂತ ಭಿನ್ನವಾದ ರೂಪಗಳು ಪಳಂತುಳವಿನಲ್ಲಿವೆ.

೧೪. ಪಳಂತುಳು ಭಾಷೆಯನ್ನು ಸಾಹಿತ್ಯೇತರ ಸಂದರ್ಭಗಳಲ್ಲಿ ವ್ಯಾವಹಾರಿಕವಾಗಿ ನಾವು ಬಳಸುವುದು ಸಾಧ್ಯವಾಗದು.

೧೫. ಪಳಂತುಳುವೆಂಬುದು ‘ತುಳು ಲಿಪಿ’ಯಲ್ಲಿ ಬರೆಯಲಾದುದಾದರೂ ಇದು ತುಳು ಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುವ ರೂಢಿಯೇ ಇರುವುದರಿಂದ ತುಳು ಲಿಪಿಯನ್ನೇ ಉಪಯೋಗಿಸುವ ರೂಢಿ ಪುನಃ ಬರುವುದು ಕಷ್ಟ ಸಾಧ್ಯ. ಈಗ ಪ್ರಕಟಗೊಂಡಿರುವ ಪಳಂತುಳು ಕೃತಿಗಳೂ ಕನ್ನಡ ಲಿಪಿಯಲ್ಲಿಯೇ ಮುದ್ರಿತವಾಗಿವೆ.

ಪಳಂತುಳುವಿಗೆ ಬಗೆಗೆ ಇನ್ನಷ್ಟು ವಿಸ್ತೃತವಾದ ಅಧ್ಯಯನಗಳು ನಡೆದಾಗ ಹೊಸತುಳು ಪಳಂತುಳು ಭಾಷಿಕ ಭಿನ್ನತೆಗಳ ಬಗೆಗೆ ಹೆಚ್ಚು ವಿವರಗಳನ್ನು ಹೇಳಬಹುದಾಗಿದೆ. ಮೇಲೆ ಹೇಳಿದ ವಿಚಾರಗಳು ಹೊಸ ತುಳುವನ್ನುಪಯೋಗಿಸುವವನ ಸಾಮಾನ್ಯ ದೃಷ್ಟಿಗೆ ಗೋಚರವಾಗುವ ವೈಶಿಷ್ಟ್ಯಗಳು.

ಪಾಡ್ದನಗಳ ಭಾಷೆ ಮತ್ತು ಪಳಂತುಳು

ತುಳುವಿನಲ್ಲಿ ನೂರಾರು ಪಾಡ್ದನಗಳು ಉಪಲಬ್ಧವಿದ್ದು ಜನಪದ ಸಾಹಿತ್ಯವೆಂದು ಗುರುತಿಸುವ ಆ ಭಾಗ ಶ್ರೀಮಂತವಾಗಿದೆ. ಹಲವಾರು ಭೂತ ಪಾಡ್ದನಗಳು ಮತ್ತು ಇತರ ಪಾಡ್ದನಗಳು ಸಂಪಾದಿತವಾಗಿ ಕನ್ನಡಕ್ಕೆ ಅನುವಾದಿತವೂ ಆಗಿದೆ. ಪಾಡ್ದನಗಳು ಇಂದು ನಿನ್ನೆಯ ರಚನೆಗಳಲ್ಲ. ಅವುಗಳಲ್ಲಿ ಕೆಲವು ೪೦೦-೫೦೦ ವರ್ಷಗಳ ಹಿಂದಿನವಾಗಿರುವ ಸಾಧ್ಯತೆಗಳಿವೆ. ಅವುಗಳ ಭಾಷೆ ಹೊಸತುಳುವಿನ ವ್ಯಾವಹಾರಿಕ ರೂಪಕ್ಕಿಂತ ಸಾಕಷ್ಟು ಭಿನ್ನವಾಗಿದೆ. ಹಾಗಾದರೆ ಇದು ಹಳೆಯ ತುಳುವಲ್ಲವೇ? ಪಳಂತುಳುವೆಂದು ಲಿಖಿತವಾಗಿ ದೊರಕಿರುವ ಗ್ರಂಥ ಭಾಷೆಗೂ ಈ ಭಾಷೆಗೂ ಇರುವ ವ್ಯತ್ಯಾಸವೇನು ಎಂಬುದು ಚಿಂತನೀಯವಾಗಿದೆ.

ಇದಕ್ಕೆ ಉತ್ತರವಾಗಿ ವಿಚಾರಿಸಿದಾಗ ತಿಳಿಯುವ ಮುಖ್ಯ ಅಂಶವೆಂದರೆ ಪಳಂತುಳು ಭಾಷೆ ಮತ್ತು ಪಾಡ್ದನಗಳ ಭಾಷೆ ಒಂದೇ ಅಲ್ಲ ಎಂಬುದು. ಪಾಡ್ದನಗಳ ಭಾಷೆ ವಿಶಿಷ್ಟವಾದುದು ಹೌದು; ಹೊಸತುಳುವಿಗಿಂತ ವಿಭಿನ್ನವಾದುದು ಹೌದು. ಈ ಭಿನ್ನತೆ ಮುಖ್ಯವಾಗಿ ಇರುವುದು ಪಾಡ್ದನದ ಭಾಷಾ ಶೈಲಿಯಲ್ಲಿಯೇ ಹೊರತು ಬೇರಲ್ಲ. ಪರಿಶೀಲಿಸಿ ನೋಡಿದರೆ ಪಾಡ್ದನಗಳ ಭಾಷೆಯು ಹೊಸತುಳುವಿಗಿಂತ ತುಂಬ ಭಿನ್ನವಾದುದಲ್ಲ. ಪಾಡ್ದನಗಳ ‘ಶೈಲೀ ಬದ್ಧತೆ’ ಅದನ್ನು ಬೇರೆಯೆಂಬಂತೆ ತೋರ್ಪಡಿಸುತ್ತದೆ. ಪಾಡ್ದನಗಳ ಭಾಷಾ ರೂಪ ಮತ್ತು ಪ್ರಯೋಗ ರೂಪಗಳು ಹೊಸತುಳುವಿನವೇ. ಆದರೆ ಅಲ್ಲಿ ಹಲವು ಹಳೆಯ ಪದಗಳು, ಇಂದು ಉಪಯೋಗದಲ್ಲಿಲ್ಲದ ಪದಗಳು ಬಳಕೆಯಲ್ಲಿ ಉಳಿದಿದೆ. ಮಾತ್ರವಲ್ಲ ಪಾಡ್ದನಗಳಿಗೇ ವಿಶಿಷ್ಟವಾದ ನುಡಿಗಟ್ಟುಗಳು, ಒಕ್ಕಣೆಗಳು ಪಾಡ್ದನಗಳ ರಚನಾ ವಿನ್ಯಾಸದೊಳಗೆ ಸೇರಿಕೊಂಡು ಆ ಭಾಷೆಯನ್ನು ವಿಶಿಷ್ಟವಾಗಿ ಶೈಲೀಬದ್ದಗೊಳಿಸಿವೆ. ಪಾಡ್ದನಗಳು ಅಲಿಖಿತವಾಗಿರುವುದರಿಂದ ಅವುಗಳ ಪದರಚನೆಯಲ್ಲಿಯೂ ಶಬ್ದಕೋಶದಲ್ಲಿಯೂ ಕಾಲಕಾಲಕ್ಕೆ ಸಾಕಷ್ಟು ಬದಲಾವಣೆಗಳಾಗಿರುವ ಸಾಧ್ಯತೆಗಳಿವೆ. ಅರ್ಥಾತ್ ತಲೆಮಾರಿನಿಂದ ತಲೆಮಾರಿಗೆ ಪಾಡ್ದನಗಳು ಶೈಲೀ ಬದ್ಧವಾಗಿಯೇ ಮುಂದುವರಿದರೂ ಭಾಷಾ ಪ್ರಯೋಗದ ದೃಷ್ಟಿಯಿಂದ ಬದಲಾಗುತ್ತಾ ಸಾಗಿರುವ ಸಾಧ್ಯತೆಯಿದೆ.

ಪಳಂತುಳು ಈ ರೀತಿಯ ಶೈಲೀ ಬದ್ಧ ರಚನೆಯಲ್ಲ. ಗ್ರಂಥ ರೂಪದಲ್ಲಿ ರಚಿತವಾದುದರಿಂದ ಒಂದು ಸ್ಥಿರ ರೂಪವನ್ನು ಪಡೆದ ಮೇಲೆ ವ್ಯತ್ಯಾಸವಾಗಿಲ್ಲ. ಅದರಲ್ಲೂ ಪಳಂತುಳುವಿನ ಉಪಲಬ್ಧ ಸಾಹಿತ್ಯದ ಬಹುಭಾಗ ಛಂದೋಬದ್ಧ ಪಠ್ಯರೂಪದಲ್ಲಿರುವುದರಿಂದ ಅಲ್ಲಿ ಬದಲಾವಣೆಗಳಿರುವ ಅವಕಾಶ ಕಡಮೆ. ಒಂದು ಕಾಲದಲ್ಲಿ ತುಳುವಿನಲ್ಲಿ ಱ ೞದ ಪ್ರಯೋಗವಿತ್ತು. ‘ಸ್ಟ್’ ಎಂಬ ವಿಶಿಷ್ಟ ಧ್ವನಿಯ ಪ್ರಯೋಗವಿತ್ತು. ಅವು ಪಳಂತುಳು ಕೃತಿಗಳಲ್ಲಿವೆ. ಆದರೆ ಕಾಲದೊಂದಿಗೆ ಬದಲಾಗುತ್ತಾ ಬಂದ ಪಾಡ್ದನಗಳಲ್ಲಿ ಅವುಗಳ ಬಳಕೆಯಿಲ್ಲ. ಹೊಸ ತುಳು ಅವುಗಳ ಬಳಕೆಯನ್ನು ಕಳೆದುಕೊಂಡ ಕಾಲದಲ್ಲೇ ಪಾಡ್ದನಗಳೂ ಅವುಗಳನ್ನೂ ಕಳೆದುಕೊಂಡಿರಬಹುದು.

ಪಾಡ್ದನಗಳ ಭಾಷೆ ಭೂತಾರಾಧನೆಯೇ ಮೊದಲಾದ ಸಂದರ್ಭಗಳಲ್ಲಿ ಉಪಯೋಗಿಸಲ್ಪಡುತ್ತಲೇ ಬಂದಿರುವುದರಿಂದ ಅವುಗಳ ಅಷ್ಟಿಷ್ಟು ಪರಿಚಯ ತುಳುನಾಡಿನ ಸಾಮಾನ್ಯ ಜನತೆಗಿದೆ. ಆದುದರಿಂದ ಆ ಭಾಷೆ ತುಳುವರಿಗೆ, ತುಳುನಾಡಿನ ಸಾಮಾನ್ಯ ಜನತೆಗಿದೆ. ಆದುದರಿಂದ ಆ ಭಾಷೆ ತುಳುವರಿಗೆ ‘

ಅನ್ಯ’ವೆನಿಸುವುದಿಲ್ಲ. ಆದರೆ ಪಳಂತುಳುವೆಂಬುದು ಸತತವಾಗಿ ಬಳಸಲ್ಪಡುತ್ತದೆ. ‘ವಿಚ್ಛಿತ್ತಿ’ ಉಂಟಾಗಿರುವುದರಿಂದ ಹೊಸಕಾಲದ ತುಳುವರಿಗೆ ಅದು ‘ಅನ್ಯ’ವೆಂಬ ಭಾವನೆ ಬರುವಂತಿದೆ.

ಪಳಂತುಳು ಮತ್ತು ಪರಂಪರಾ ವಿಚ್ಛಿತ್ತಿ

‘ಪಳಂತುಳು ಭಾಷೆ ತುಂಬ ಕೃತಕ, ಕ್ಲಿಷ್ಟ ಮತ್ತು ಕಷ್ಟ. ಅಷ್ಟು ಕಷ್ಟದ ಭಾಷೆಯ ಆವಶ್ಯಕತೆ ಏನು? ಅದು ಸಂಸ್ಕೃತ ಭೂಯಿಷ್ಠವಾದುದರಿಂದ ತುಂಬ ಅಸಹಜ’ – ಎಂಬ ಮಾತುಗಳು ಪಳಂತುಳು ಭಾಷೆಯ ಕೃತಿಗಳು ಪ್ರಕಟಗೊಂಡಾಗ ವ್ಯಕ್ತವಾದ ಕೆಲವು ಅಭಿಪ್ರಾಯಗಳು. ಈ ಅಭಿಪ್ರಾಯಗಳು ಅಸಹಜವೆನ್ನುವಂತಿಲ್ಲ. ಏಕೆಂದರೆ ಪಳಂತುಳುವೆಂಬೊಂದು ಭಾಷಾ ರೂಪದ ಆಸ್ತಿತ್ವದ ಬಗೆಗೇ ತಿಳಿಯದಿರುವ ಹಿನ್ನೆಲೆಯಿಂದ ಈ ಅಭಿಪ್ರಾಯಗಳು ಬರುವುದು ಆಶ್ಚರ್ಯಕರವೆನ್ನುವಂತಿಲ್ಲ. ಹಾಗಾದರೆ ಇದೇ ಪ್ರಶ್ನೆಯನ್ನು ಕನ್ನಡದವರು ಏಕೆ ಕೇಳುವುದಿಲ್ಲ? ಹೊಸಗನ್ನಡದ ಹಿನ್ನೆಲೆಯಿಂದ ಈ ಮೇಲೆ ಹೇಳಲಾದ ಅಭಿಪ್ರಾಯಗಳನ್ನು ಹಳಗನ್ನಡದ ಬಗೆಗೆ ಹೇಳಬಹುದಲ್ಲ. ಆದರೆ ಯಾಕೆ ಹಾಗೆ ಹೇಳುವುದಿಲ್ಲ – ಎಂಬ ಪ್ರಶ್ನೆ ವಿಚಾರಯೋಗ್ಯವಾಗುತ್ತದೆ.

ಕನ್ನಡದ ವಿದ್ವಾಂಸರಿಗೆ ಹೊಸಗನ್ನಡಕ್ಕೆ ಪೂರ್ವದಲ್ಲಿ ನಡುಗನ್ನಡ ಹಳೆಗನ್ನಡಗಳಿದ್ದ ವಿಷಯ ಎಂದೂ ವಿಸ್ತೃತವಾಗಿರಲಿಲ್ಲ. ಅರ್ಥಾತ್ ಕನ್ನಡದಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡಗಳೆಂಬ ಕನ್ನಡದ ಒಂದು ಪರಂಪರೆ ಮುಂದುವರಿದುಕೊಂಡಉ ಬಂದ ಬಗೆಗೆ ಜನತೆಗೆ ಅರಿವಿತ್ತು ಮತ್ತು ತಮ್ಮ ಆಡುಮಾತಿಗಿಂತ ಬೇರಾದ ಲಿಖಿತ ಭಾಷಾ ರೂಪವಿದ್ದ ಬಗೆಗೆ ತಿಳಿವು ಇತ್ತು. ಆದುದರಿಂದ ಆ ರೀತಿಯ ಆಕ್ಷೇಪಗಳು ಕನ್ನಡಿಗರಲ್ಲಿ ಬರಲಿಲ್ಲ. ಒಂದು ವೇಳೆ ಹಳಗನ್ನಡ ನಡುಗನ್ನಡಗಳ ಯಾವ ಕೃತಿಯೂ ದೊರಕದಿದ್ದು ಅನಿರೀಕ್ಷಿತವಾಗಿ ಹೊಸಗನ್ನಡ ಕಾಲದಲ್ಲಿ ಪಂಪಭಾರತವೋ ಗದಾಯುದ್ಧವೋ ದೊಕಿದ್ದರೆ ಕನ್ನಡಿಗರೂ ಈ ರೀತಿಯ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಿರಬಹುದು. ಆದರೆ ಕನ್ನಡದ ಪರಂಪರೆ, ಅರ್ಥಾತ್ ಲಿಖಿತ ಸಾಹಿತ್ಯ ಪರಂಪರೆ ಅಚಿಚ್ಛಿನ್ನವಾಗಿದುದರಿಂದ ಈ ಆಕ್ಷೇಪಕ್ಕೆ ಅವಕಾಶವಿಲ್ಲವಾಯಿತು. ತುಳುವಿನಲ್ಲಾದರೋ ಲಿಖಿತ ಸಾಹಿತ್ಯ ಪರಂಪರೆಯಿದ್ದುದು ವಿಸ್ತೃತಿಗೆ ಸಂದಿತ್ತು. ಎಂದರೆ ಪರಂಪರಾ ವಿಚ್ಛಿತ್ತಿಯ ಕಾರಣದಿಂದಲೇ ಅಂತಹ ಪ್ರಶ್ನೆಗಳು ಉದ್ಭವಿಸಿದುವು ಹೊರತು ಬೇರೇನಲ್ಲ.

ಪರಂಪರೆ ವಿಚ್ಛಿನ್ನವಾಗಿದ್ದರೂ ಪಳಂತುಳುವನ್ನು ಅರ್ಥಮಾಡಿಕೊಳ್ಳುವ ವಿಧಾನವನ್ನು ತಾವು ಸಂಪಾದಿಸಿದ ಕೃತಿಗಳಲ್ಲಿ ವೆಂಕಟರಾಜ ಪುಣಿಂಚತ್ತಾಯರು ಪರಿಶ್ರಮಪೂರ್ವಕವಾಗಿ ತೋರಿಸಿಕೊಟ್ಟಿದ್ದು ಪಳಂತುಳವನ್ನು ಅರ್ಥ ಮಾಡಿಕೊಳ್ಳಲು ಅವರ ವಿಧಾನವೇ ಮೂಲಾಧಾರವಾಗಿದೆ. ವಿಚ್ಛಿನ್ನ ಪರಂಪರೆಯ ಕಡಿದ ಕೊಂಡಿಯನ್ನು ಜೋಡಿಸುವ ಒಂದು ಮಹಾಕಾರ್ಯ ಪುಣಿಂಚತ್ತಾಯರಿಂದ ನಡೆದಿದ್ದು ಭಾಷಾಧ್ಯಯನಾಸಕ್ತರೆಲ್ಲ ಅವರಿಗೆ ಕೃತಜ್ಞರಾಗಿರಬೇಕಾಗಿದೆ. ಮುಂದೆ ಪಳಂತುಳುವಿನ ಇತರ ಕೃತಿಗಳು ಉಪಲಬ್ಧವಾದಾಗಲೂ ಪುಣಿಂಚತ್ತಾಯರ ಸಂಪಾದಿತ ಕೃತಿಗಳು ಅವುಗಳ ಸಂಪಾದನೆಗೂ ವಿವರಣೆಗೂ ಮಾದರಿಯಾಗಿ ನಿಲ್ಲುತ್ತವೆ.

ಭಾಷಾಭಿಮಾನ – ಭಾಷಾಧ್ಯಯನ – ಪಳಂತುಳು

ಭಾಷೆಯ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತು ಆ ಭಾಷೆಯವರಿಗೆ ಒಂದು ಅಭಿಮಾನದ ಸಂಗತಿಯಾಗಿದೆ. ಆಧುನಿಕ ಕಾಲದಲ್ಲಿ ಅನೇಕ ಅಲಿಖಿತ ಭಾಷೆಗಳು ಅಧ್ಯಯನಕ್ಕೊಳಪಟ್ಟಿದೆ ಮತ್ತು ಎಷ್ಟೋ ಭಾಷೆಗಳಲ್ಲಿ ಹೊಸಕಾಲದಲ್ಲಿ ಲಿಖಿತ ಸಾಹಿತ್ಯ ಬರತೊಡಗಿದೆ. ಆದರೆ ಭಾಷೆಯ ಲಿಖಿತ ರೂಪಕ್ಕೆ ಒಂದು ಇತಿಹಾಸ ಇದೆಯೆಂದಾದರೆ ಆ ಭಾಷೆಗೆ ಸಹಜವಾಗಿಯೇ ಒಂದು ಹಿರಿಮೆ ಪ್ರಾಪ್ತವಾಗುತ್ತದೆ. ತುಳುವಿಗೆ ಅಂತಹ ಹಿರಿಮೆಯಿಲ್ಲವೆಂದು ತಿಳಿಯಲಾಗಿದ್ದುದು ಬದಲಾಗಿ ಪ್ರಾಚೀನ ಪರಂಪರೆಯೊಂದು ಆವಿಷ್ಕೃತವಾದಾಗ ಸಹಜವಾಗಿಯೇ ಈ ಭಾಷೆಗೆ ಒಂದು ಸ್ಥಾನೋನ್ನತಿ ಕಲ್ಪಿತವಾಗುತ್ತದೆ. ಇದು ತುಳು ಭಾಷಿಕರಿಗೆ ಅಭಿಮಾನದ ಸಂಗತಿಯಾಗಿದೆ. ಆದರೆ ಭಾಷಾವಿಷಯದಲ್ಲಿ ಅತ್ಯಭಿಮಾನಿಗಳಲ್ಲದ ತುಳುವರು ಈ ಪಳಂತುಳುವನ್ನು ವಿಶೇಷವಾಗಿ ಭಾವನಾತ್ಮಕವಾಗಿ ಪರಿಗ್ರಹಿಸಿಲ್ಲ. ಪರಂಪರಾವಿಚ್ಛಿತ್ತಿಯೇ ಇದಕ್ಕೆ ಕಾರಣವಿರಬಹುದು. ಪಳಂತುಳುವಿನ ಕೃತಿಗಳು ಆವಿಷ್ಕೃತವಾಗಿ ಹಲವು ವರ್ಷಗಳು ಕಳೆದ ಮೇಲೆಯೂ ತುಳುವಿನ ವಿದ್ವಾಂಸರು ‘ತುಳುವಿನಲ್ಲಿ ಬರವಣಿಗೆಯನ್ನು ಆರಂಭಿಸಿದವರು ಪಾಶ್ವಾತ್ಯ ಮಿಶನರಿಗಳು’ ಎಂಬರ್ಥದ ಮಾತುಗಳನ್ನು ಈಗಲೂ ಹೇಳುತ್ತಿದ್ದಾರೆ. ಇಂತಹ ಮಾತುಗಳಿಗೆ ಅಭಿಮಾನದ ಕೊರತೆಯೂ ಪಳಂತುಳುವಿನ ಅಧ್ಯಯನದ ಕೊರತೆಯೂ ಒಟ್ಟಿಗೇ ಕಾರಣವಾಗಿರಬಹುದು.

ಪಳಂತುಳುವಿನ ಆವಿಷ್ಕಾರವು ತುಳುವರ ಅಭಿಮಾನವನ್ನು ಹೆಚ್ಚಿಸಲಿ, ಬಿಡಲಿ, ಭಾಷಾಧ್ಯಯನ ಕ್ಷೇತ್ರಕ್ಕೆ ಇದರಿಂದ ತುಂಬ ಪ್ರಯೋಜನವಾಗಿರುವುದು ಸತ್ಯ. ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಎಲ್ಲಾ ಭಾಷೆಗಳ ಅಧ್ಯಯನಕ್ಕೂ ಪಳಂತುಳುವಿನ ಉಪಲಬ್ಧಿಯು ಅನುಕೂಲವನ್ನೊದಗಿಸಿದೆ. ದ್ರಾವಿಡ ಜ್ಞಾತಿಕೋಶದಲ್ಲಿ ತುಂಬ ಬದಲಾವಣೆ ಪಳಂತುಳು ಕಾರಣವಾಗಲಿದೆ. ದ್ರಾವಿಡ ಭಾಷಾ ನಿಘಂಟುಗಳಲ್ಲಿ ಶಬ್ದ ನಿಷ್ಪತ್ತಿ ಮತ್ತು ಜ್ಞಾತಿ ರೂಪಗಳನ್ನು ಹೇಳಿದ ಭಾಗಗಳಲ್ಲಿ ಬದಲಾವಣೆಗಳು ಬರಲಿವೆ, ತುಳುವಿನವೇ ಎಷ್ಟೋ ಶಬ್ದಗಳ ಪೂರ್ವರೂಪ ಒದಗಿ ಬಂದು ಅರ್ಥ ಮತ್ತು ಶಬ್ದ ರೂಪಗಳ ಬಗೆಗಿನ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗಿದೆ. ಹಳಗನ್ನಡವನ್ನು ಓದಿ ಹೊಸಗನ್ನಡವನ್ನು ಗಟ್ಟಿಗೊಳಿಸಿಕೊಂಡಂತೆ ಪಳಂತುಳುವನ್ನು ಅಧ್ಯಯನ ಮಾಡಿ ನಾವು ಉಪಯೋಗಿಸುವ ಹೊಸ ತುಳುವನ್ನು ಇನ್ನಷ್ಟು ಸುಪುಷ್ಟಗೊಳಿಸಬಹುದಾಗಿದೆ. ತುಳು ಭಾಷೆಯ ‘ಪರಭಾಷಾಶಾಸ್ತ್ರೀಕರಣ’ ವಿಧಾನವನ್ನು ಇನ್ನಷ್ಟು ತಿಳಿಯಬೇಕಾದರೆ ಪಳಂತುಳುವಿನ ಅಧ್ಯಯನ ಅವಶ್ಯ. ಪಳಂತುಳುವಿನ ಗಂಭೀರ ಅಧ್ಯಯನ ಇನ್ನೂ ನಡೆದಿಲ್ಲ, ನಡೆಯಬೇಕಾಗಿದೆ.

ಪಳಂತುಳು ಕೃತಿಗಳು

ತುಳು ಭಾಗವತವು ಪಳಂತುಳು ಕೃತಿಗಳಲ್ಲಿ ಮೊದಲು ಉಪಲಬ್ಧವಾದಾಗ ತುಳು ಸಾಹಿತ್ಯ ಪರಂಪರೆಯ ಬಗೆಗೆ ಏನೂ ತಿಳಿದಿರಲಿಲ್ಲವಾದರೂ ಸಂಪಾದಕರಾದ ಪುಣಿಂಚತ್ತಾಯರು, ತುಳುವಿನಲ್ಲಿ ಶಿಷ್ಟ ಸಾಹಿತ್ಯ ಪರಂಪರೆ ಯೊಂದಿತ್ತೆಂಬುದನ್ನು ಊಹಿಸಿದರು. “ಈ ಕಾವ್ಯದ ಸಮಷ್ಟಿರೂಪವನ್ನು ವಿಮರ್ಶಿಸಿದಾಗ, ಇದರ ಪ್ರೌಢತೆಯನ್ನು ಪರಾಮರ್ಶಿಸಿದಾಗ ತುಳುವಿನಲ್ಲಿ ಇದೊಂದೇ ಅಲ್ಲ. ಬೇರೆಯೂ ಕೆಲವು ಸಾಹಿತ್ಯ ಕೃತಿಗಳು ರಚಿತವಾಗಿರಬಹುದು ಎಂಬ ಊಹೆಗೆ ಅವಕಾಶವಿರುವುದು ಅಸಹಜವೇನೂ ಅಲ್ಲ. ಯಾಕೆಂದರೆ ಇಲ್ಲಿನ ಸಾಹಿತ್ಯದ ಬೆಳವಣಿಗೆಯನ್ನು ಪರಿಶೀಲಿಸಿದರೆ, ಇದು ತುಳುವಿನ ‘ಏಕೈಕ ಕೃತಿ’ ಎಂಬ ನಿಲುಗಡೆಗೆ ಬರಲು ಕಷ್ಟವಾಗುತ್ತದೆ. ಒಂದು ಕಾಲದಲ್ಲಿ ತುಳುವಿನಲ್ಲೂ ಸಾಕಷ್ಟು ಶಿಷ್ಟ ಸಾಹಿತ್ಯ ರಚನೆ ನಡೆದಿರಬಹುದು ಎಂದು ಸಂಶಯವನ್ನು ಇಲ್ಲಿನ ಕಾವ್ಯ ಭಾಷೆ ನಮ್ಮಲ್ಲಿ ಮೂಡಿಸುತ್ತದೆ” ಎಂದು ಪುಣಿಂಚತ್ತಾಯರು ಆಗ ಊಹಿಸಿದ್ದರು.[6]

ಪ್ರಕಟಣೆಯ ಅನುಕ್ರಮದಂತೆ ಶ್ರೀ ಭಾಗವತೊ, ಕಾವೇರಿ, ತುಳು ದೇವೀ ಮಹಾತ್ಮೆ ಮತ್ತು ಮಹಾಭಾರತೊ – ಇವು ಉಪಲಬ್ಧ ಪಳಂತುಳು ಕೃತಿಗಳು. ಕೃತಿಗಳ ವಿವರಗಳು ಹೀಗಿವೆ:

ಶ್ರೀ ಭಾಗವತೊ

ಭಾಗವತ ಮಹಾಪುರಾಣದ ತುಳು ರೂಪವಿದು. ಅಪೂರ್ಣ ಕೃತಿಯಾಗಿದೆ. ದೊರಕಿದ ಭಾಗದಲ್ಲಿ ಮೂರು ಸ್ಕಂಧಗಳ ೪೯ ಅಧ್ಯಾಯಗಳ ೧೯೮೭ ಪದ್ಯಗಳಿವೆ. ಕಾವ್ಯದ ಕೊನೆಗೆ ಫಲಶ್ರುತಿ ಅಥವಾ ಪರಿಸಮಾಪ್ತಿಯ ಪದ್ಯಗಳಿರದೆ ಮುಂದಿನ ಅಧ್ಯಾಯದ ಪ್ರಾರಂಭದ ಪದ್ಯವೆನ್ನಬಹುದಾದ ರಚನೆಯಿದೆ. ಈ ಕೃತಿಯು ಪೂರ್ಣವಾಗಿ ರಚಿತವಾಗಿದ್ದಿರಬಹುದೆಂಬ ಊಹೆಗೆ ಆಧಾರವಾದುದು ಈ ಕೃತಿಯ ನವಸ್ಕಂಧದ ಹದಿನೈದು ಅಧ್ಯಾಯಗಳು ‘ತುಳು ರಾಮಾಯಣ’ವೆಂಬ ಹೆಸರಿನಲ್ಲಿ ಉಪಲಬ್ಧವಾಗಿ ಪ್ರಕಟವಾಗಿರುತ್ತದೆ.[7]

ಕೃತಿಗೆ ‘ಶ್ರೀ ಭಾಗವತೊ’ ಎಂಬ ಹೆಸರನ್ನು ಸಂಪಾದಕರು ನೀಡಿರುತ್ತಾರೆ. ಆದರೆ ಜನತೆಯ ಬಳಕೆಯಲ್ಲಿ ಈ ಕೃತಿ ‘ತುಳು ಭಾಗವತ’ವೆಂದೇ ಪ್ರಸಿದ್ಧವಾಗಿದೆ. ಆದರೆ ಈ ಕೃತಿಗೆ ಕವಿ ನೀಡಿದ ಹೆಸರು ‘ಶ್ರೀ ಭಾಗವತಾರ್ಥೋ’ ಎಂದಾಗಿದೆ. ಕೃತಿಯ ಬೇರೆ ಬೇರೆ ಅಧ್ಯಾಯಗಳಲ್ಲಿ ಕವಿಯು ಈ ಹೆಸರನ್ನೇ ಹೇಳಿದ್ದಾನೆ.[8]

ತುಳು ಭಾಗವತವೂ ಅಪೂರ್ಣವಾಗಿಯೇ ಉಪಲಬ್ಧವಾದ ಕೃತಿಯೆಂದು ನಿಶ್ಚಯ. ಹಸ್ತಪ್ರತಿ ಸಂಶೋಧನೆ ಇನ್ನೂ ಮುಂದುವರಿದಾಗ ಉಳಿದ ಭಾಗಗಳು ದೊರಕಲೂಬಹುದು. ಈಗ ದೊರೆತ ಪದ್ಯಗಳ ಆಧಾರದಿಂದ ಹೇಳುವುದಾದಲ್ಲಿ ಅದು ಏನಿದ್ದರೂ ಸುಮಾರು ೭೦೦೦ ಪದ್ಯಗಳಿಗೆ ಕಡಮೆಯಲ್ಲದ ಗಾತ್ರದಲ್ಲಿ ಇದ್ದಿರಬಹುದೆಂದು ಊಹಿಸಬಹುದು.

ತುಳು ಭಾಗವತದ ಕಾಲನಿರ್ಣಯಕ್ಕೆ ಆಧಾರವಾಗಿ ಒಂದು ಗ್ರಹಸ್ಥಿತಿ ಸೂಚಕ ಪದ್ಯವು ಅದರಲ್ಲಿದೆ. ತುಳುವಿನ ಮಹಾಭಾರತದಲ್ಲಿಯೂ ಈ ರೀತಿಯ ಪದ್ಯವಿದೆ. ಕರ್ಣಪರ್ವರೆಂಬ ಅಪೂರ್ಣ ಅಪ್ರಕಟಿತ ಕೃತಿಯಲ್ಲಿಯೂ ಈ ರೀತಿಯ ಗ್ರಹಸ್ಥಿತಿ ಸೂಚಕ ಪದ್ಯವಿದೆ.[9] ಈ ಜಾತಕ ಪದ್ಯವು ಕವಿಯ ಜನ್ಮಕಾಲದ ಸ್ಥಿತಿಯನ್ನು ತಿಳಿಸುವ ಪದ್ಯವೆಂದು ಶ್ರೀ ವೆಂಕಟರಾಜ ಪುಣಿಂಚತ್ತಾಯರು ಪರಿಗಣಿಸಿದ್ದಾರೆ. ಡಾ. ಕಬ್ಬಿನಾಲೆಯವರೂ ಆ ಅಭಿಪ್ರಾಯವನ್ನೇ ಅನುಮೋದಿಸಿದ್ದಾರೆ.[10]’ಕವಿಯು ತನ್ನ ಜಾತಕವನ್ನು ಇಲ್ಲಿ ಹೇಳಿರುವುದು ವಿಶೇಷವಾಗಿದೆ. ಆದರೆ ಇದು ಕವಿಯ ಜಾತಕವಾಗಿರದೆ ಕವಿಯು ಕಾವ್ಯರಚನೆಗೆ ತೊಡಗಿದ ಕಾಲವನ್ನು ಸೂಚಿಸುವಂತಹದೆಂದು ಪರಿಶೀಲನೆಯಿಂದ ತಿಳಿಯುತ್ತದೆ.[11]

ಗುರುಕನ್ಯೆಟ್ ತಾಲಿಟ್ ಚಂದ್ರಮೆಯಾ ಬುಧೆ ಧಾರಿಣಿ ಪುತ್ರೆ
ವರ ಭಾಸ್ಕರೆ ಚೇಳ್‌ಟ್‌ಸೂರ್ಯಜೆಲಾ ಚಾಪೊಂಟಣೆಸ್ಟ್‌ಪ್ಟಾ
ಉರಗೇ ಮಕರೊಂಟ್‌ಪ ಕರ್ಕಿಟ್‌ಪಾ ಶಿಖಿ ತುಂಗಕುಲೊಂತಾ
ಧರಣೀಸುರೆ ವಿಷ್ಣು ರೆಚೀತಿ ಕಥೆ ಶ್ರೀ ಭಾಗವತಾರ್ಥೊ

(ಶ್ರೀ ಭಾಗವತೊ ೧-೧-೧೭)

ಈ ಗ್ರಹಸ್ಥಿತಿ ಕ್ರಿ.ಶ. ೧೬೩೬ರಲ್ಲಿ ಬರುತ್ತದೆಂದೂ ತುಳು ಭಾಗವತದಲ್ಲಿ ಕುಮಾರವ್ಯಾಸನ ಹೆಸರು. ನಿತ್ಯಾತ್ಮ ಶುಕಯೋಗಿಯ ಕನ್ನಡ ಭಾಗವತದ ಅನುಸರಣೆ ಇದ್ದು ಕುಮಾರವ್ಯಾಸ ನಿತ್ಯಾತ್ಮ ಶುಕಯೋಗಿಗಳ ಕಾಲವಾದ ೧೪೩೦-೧೫೦೦ರ ಅನಂತರವೇ ಈ ಕೃತಿ ರಚಿತವಾಗಿದೆಯೆಂದೂ ನಿರ್ಣಯಕ್ಕೆ ಪುಣಿಂಚತ್ತಾಯರು ಬಂದಿದ್ದರು. ಆದರೆ ಗ್ರಹಸ್ಥಿತಿ ಪ್ರಕಾರ ಇದಕ್ಕೆ ೨೬೬ ವರ್ಷಗಳ ಹಿಂದಕ್ಕೂ ಈ ಗ್ರಹಸ್ಥಿತಿ ಬರುವುದೆಂದು ಅವರು ತಿಳಿಸಿದ್ದಾರೆ. ಆದುದರಿಂದ ಈ ಕೃತಿಯ ಕಾಲವು ೧೬೩೬ಕ್ಕೆ ೨೬೬ರಷ್ಟು ಹಿಂದೆ ಎಂದರೆ ೧೩ ಎಂದು ನಿರ್ಣಯಿಸಲು ಸಾಧ್ಯವಾಗುತ್ತದೆ. ತುಳು ಮಹಾಭಾರತದ ಕಾಲ ಕ್ರಿ.ಶ. ೧೩೮೦ ಎಂಬುದಕ್ಕೆ ಕೃತಿಯಲ್ಲಿ ಉಲ್ಲೇಖಿಸಲ್ಪಟ್ಟ ಶಿವನೆಡುಂಬೂರನ ಬಗೆಗಿನ ಶಾಸನದ ಆಧಾರವಿದೆ. ಈ ಕಾರಣದಿಂದ ಈ ಎರಡೂ ಕೃತಿಗಳು ಸಮಕಾಲೀನವಾಗುತ್ತವೆ. ಎರಡೂ ಕೃತಿಗಳೂ ಕುಮಾರವ್ಯಾಸನ ಅನಂತರವು ಎಂಬುದು ಸ್ಪಷ್ಟ. ಆಗ ಕುಮಾರವ್ಯಾಸನ ಕಾಲವು ಗೋವಿಂದ ಪೈಗಳು ಊಹಿಸಿದಂತೆ ಸೂ. ೧೨೩೦ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ನಿತ್ಯಾತ್ಮ ಶುಕಯೋಗಿಯ ಕಾಲವು ಸು. ೧೩೦೦ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಹೀಗೆ ತುಳು ಭಾಗವತ, ಮಹಾಭಾರತಗಳು ಕನ್ನಡ ಕವಿಗಳ ಕಾಲ ನಿರ್ಣಯದ ಪುನರಾಲೋಚನೆಗೆ ಕಾರಣವಾಗಿವೆ.[12] ಒಟ್ಟಿನಲ್ಲಿ ತುಳು ಭಾಗವತದ ರಚನಾ ಕಾಲ ಕ್ರಿ.ಶ. ೧೩೭೦ ಎಂಬುದು ಸದ್ಯಕ್ಕೆ ಖಚುತವಾಗಿ ಹೇಳಬಹುದಾದ ಮಾತು.

ಕಾವೇರಿ

ಸ್ಕಂಧ ಪುರಾಣಾಂತರ್ಗತವಾದಿ ‘ಕಾವೇರಿ ಮಹಾತ್ಮೆ’ಯನ್ನು ವಸ್ತುವಾಗುಳ್ಳ ಕಾವ್ಯವಿದು. ಕಾವ್ಯದ ಅಷ್ಟಿಷ್ಟು ಖಂಡಗಳಷ್ಟೇ ಉಳಿದುಕೊಂಡಿದೆ. ಆದುದರಿಂದ ಕಾವ್ಯದ ಪೂರ್ಣಸ್ವರೂಪವನನ್ನು ತಿಳಿದುಕೊಳ್ಳಲಾಗುವುದಿಲ್ಲ. ಮೂಲದ ಆಧಾರದಿಂದ ೧೫ ಅಧ್ಯಾಯಗಳು ಕೃತಿಯಿದೆಂದು ಸಂಪಾದಕ ವೆಂಕಟರಾಜ ಪುಣಿಂಚತ್ತಾಯರು ಊಹಿಸಿದ್ದಾರೆ. ಪ್ರಾರಂಭದ ಸ್ವಲ್ಪ ಭಾಗ, ಮಧ್ಯದ ಸ್ವಲ್ಪ ಭಾಗ ಮತ್ತು ಕೊನೆಯ ಸ್ವಲ್ಪ ಭಾಗ ತ್ರುಟಿತವಾಗಿದೆ, ಒಟ್ಟು ಕಾವ್ಯದ ಸುಮಾರು ಮೂರನೆಯ ಒಂದು ಭಾಗದಷ್ಟು ಮಾತ್ರ ಉಪಲಬ್ಧವಾಗಿದೆ.

ಈ ಕಾವ್ಯಕ್ಕೆ ‘ಕಾವೇರಿ’ ಎಂಬ ಹೆಸರು ಸಂಪಾದಕರೇ ಇತ್ತುದಾಗಿದೆ. ಕವಿಕೊಟ್ಟ ಹೆಸರೇನೋ ತಿಳಿಯದು. ಭಾಷಾ ಪ್ರಯೋಗದ ದೃಷ್ಟಿಯಿಂದ ತುಳು ಭಾಗವತದ ಭಾಷೆಯನ್ನೇ ಹೋಲುವುದರಿಂದ ಅದೇ ಕಾಲದ್ದಿರಬಹುದೆಂಬ ಊಹೆಯನ್ನು ಸಂಪಾದಕರು ಮಾಡಿದ್ದಾರೆ.

ಪ್ರಾಜೋತ್ಪತ್ಯ ಸಂವತ್ಸರೊಂಟೀ ಕಥೆನೊರಿ ಬ್ರಾಹ್ಮಣಮುಖ್ಯೆ
ಈ ಜೀವಕುಳೇನನುರಾಗತೆಟೇ
ಮಹಲೋಕಹಿತೊಂಕ್
ವ್ಯಾಜೋ ತೆರಿತಾತ್ ರಚೀತ್‌ಣವೂ ಸರ್ವಜ್ಞೆರ್ ಕೇಂಡ್
ಸೂಜೀ ಮನೆತಾತ ಸರೋವರನಂದಮೆ ತಿರ್ದ್‌‌ಕ್‌ಣಯ್ಯೋ

(ಕಾವೇರಿ ೧೦-೬೧)

ಈ ಪದ್ಯವು ಕೃತಿಯ ಕಾಲವನ್ನು ಸೂಚಿಸುವಂತಹದಾದರೂ ಇಲ್ಲಿ ಕೊಡಲಾದ ಮಾಹಿತಿ ಅಪೂರ್ಣವಾಗಿದೆ. ತುಳು ಭಾಗವತದ ಕಾಲ ಕ್ರಿ.ಶ. ೧೩೭೦. ಆ ಸಮಯಕ್ಕೆ ಸಮೀಪವರ್ತಿಯಾದ ಪ್ರಜೋತ್ಪತ್ತಿ ಸಂವತ್ಸರವೆಂದರೆ ಕ್ರಿ.ಶ. ೧೩೯೧ರಲ್ಲಿ ಬಂದುದಾಗಿದೆ. ಆದುದರಿಂದ ಅದೇ ಕೃತಿಯ ಕಾಲವೆಂದು ಡಾ. ಕಬ್ಬಿನಾಲೆಯವರು ಮಾಡಿರುವ ಊಹೆಯನ್ನು ಸದ್ಯಕ್ಕೆ ಒಪ್ಪಿಕೊಳ್ಳಬಹುದಾಗಿದೆ.[13]

ತುಳು ದೇವೀ ಮಹಾತ್ಮೆ

ಮಾರ್ಕಂಡೇಯ ಪುರಾಣಾಂತರ್ಗತವಾದ ದೇವೀ ಮಹಾತ್ಮೆ ಅಥವಾ ಸಪ್ತ ಶತೀ ಗ್ರಂಥವನ್ನು ತುಳು ಗದ್ಯರೂಪದಲ್ಲಿ ಅನುವಾದಿಸಿದ ಗ್ರಂಥವಿದು. ಪಳಂತುಳುವಿನ ಉಪಲಬ್ಧ ಕೃತಿಗಳಲ್ಲಿ ಏಕಮಾತ್ರ ಗದ್ಯ ಕೃತಿಯಿದು. ‘ಕನ್ನಡದ ವಡ್ಡಾರಾಧನೆಯನ್ನು ನೆನಪಿಗೆ ತರುವ ದೇವೀ ಮಹಾತ್ಮೆ ತುಳು ಭಾಷೆಯ ಪ್ರಾಚೀನ ರೂಪವನ್ನು ನಮ್ಮ ಮುಂದೆ ತೆರೆದಿಡುತ್ತದೆ’ ಎಂದು ಡಾ. ಕಬ್ಬಿನಾಲೆ ಯವರು ಈ ಕೃತಿಯನ್ನು ಕುರಿತು ಹೇಳಿದ್ದಾರೆ.[14]’ಈ ಉಪಭಾಷೆಯ ಸ್ವರೂಪವೂ ಶ್ರೀ ಭಾಗವತೊ – ಕಾವೇರಿ ಕಾವ್ಯಗಳ ಭಾಷೆಗಿಂತ ಅನೇಕಾಂಶಗಳಲ್ಲಿ ಭಿನ್ನವಾಗಿದೆ. ಪದಪ್ರಯೋಗ, ವಾಕ್ಯರಚನೆ, ಶೈಲಿ ಎಲ್ಲವೂ ಇಲ್ಲಿ ಅಪೂರ್ವವಾಗಿ ಕಾಣಿಸುತ್ತದೆ. ಶ್ರೀ ಭಾಗವತೋ – ಕಾವೇರಿ ಕೃತಿಗಳು ಪದ್ಯರೂಪದಲ್ಲಿರುವುದರಿಂದ ಅಲ್ಲಿನ ಭಾಷೆ ಹೆಚ್ಚು ಕಾವ್ಯಾತ್ಮಕವಾಗಿದ್ದರೆ ಇಲ್ಲಿನ ಭಾಷೆ ಗದ್ಯ ರೂಪದಲ್ಲಿದ್ದು ಬಹುಮಟ್ಟಿಗೆ ವಿವರಣಾತ್ಮಕವಾಗಿದೆ…. ಇದು ಹಳೆಯ ತುಳು ಭಾಷೆಯಲ್ಲಿರುವುದರಿಂದ ಅತ್ಯಂತ ಮೌಲಿಕವಾಗಿದೆ. ಆಧುನಿಕ ತುಳುವಿನಲ್ಲಿಲ್ಲದ, ಶ್ರೀ ಭಾಗವತೊ ಕಾವೇರಿಗಳಲ್ಲೂ ಇಲ್ಲದ ಕೆಲವು ಅಪೂರ್ವ ತುಳು ಪದಗಳು ಇಲ್ಲಿ ಕಾಣಸಿಗುತ್ತವೆ’ ಎಂದು ಈ ಕೃತಿಯ ಮಹತ್ವದ ಬಗೆಗೆ ಸಂಪಾದಕ ವೆಂಕಟರಾಜ ಪುಣಿಂಚತ್ತಾಯರು ಹೇಳಿದ್ದಾರೆ.[15]

ತುಳು ಭಾಗವತಕ್ಕಿಂತ ಇದು ಪ್ರಾಚೀನವೆಂದು ಪುಣಿಂಚತ್ತಾಯರ ಅಭಿಪ್ರಾಯ. ಕಬ್ಬಿನಾಲೆಯವರೂ ಇದನ್ನು ಮಾನ್ಯ ಮಾಡುತ್ತಾರೆ.[16] ಪುಣಿಂಚತ್ತಾಯರು ಬೇರೆ ಕೆಲವು ಕಾರಣಗಳನ್ನು ಕೊಟ್ಟು ಇದು ಪ್ರಾಚೀನವೆಂದು ಪ್ರತಿಪಾದಿಸಿರುತ್ತಾರೆ. (೧) ಶ್ರೀ ಭಾಗವತೊ – ಕಾವೇರಿ ಕಾವ್ಯಗಳ ಪ್ರಭಾವ ಈ ಗ್ರಂಥದಲ್ಲಿ ಕಾಣಿಸುವುದಿಲ್ಲ. (೨) ಈ ಗ್ರಂಥಕಾರನ ಕಾಲಕ್ಕೆ ತುಳುವಿನಲ್ಲಿ ಶಿಷ್ಟ ಕಾವ್ಯಗಳ ರಚನೆ ಆರಂಭವಾದಂತೆ ಅನಿಸುವುದಿಲ್ಲ. (೩) ಶ್ರೀ ಭಾಗವತೊ ಕಾವೇರಿಗಳಲ್ಲಿರುಷ್ಟು ಪರಿಷ್ಕೃತ ಭಾಷೆ ಇದಲ್ಲ. (೪) ಶ್ರೀ ಭಾಗವತೊ ಕಾವೇರಿಗಳಲ್ಲಿ ಸ್ಟ್‌ಕಾರದ ಬಳಿಕೆಯಿರುವುದಿಲ್ಲ. ಈ ಕೃತಿಯಲ್ಲಿ ಸ್ಟ್‌ಕಾರದ ಬಳಕೆಯಿಂದ. (೫) ಱ ೞಯುಕ್ತ ಪದಗಳ ಬಳಕೆ ಹೆಚ್ಚಿದೆ – ಈ ಕಾರಣಗಳಿಂದ ದೇವೀ ಮಹಾತ್ಮೆಯು ಉಳಿದೆರಡು ಕೃತಿಗಳಿಗಿಂತ ಪ್ರಾಚೀನ ಎಂಬುದು ಪುಣಿಂಚತ್ತಾಯರ ಅಭಿಪ್ರಾಯ.[17]’ಕಾವ್ಯದಲ್ಲಿ ಬಳಕೆಯಾಗಿರುವ ಭಾಷಾ ಶೈಲಿಯಂತೂ ತುಳುವಿನ ಅತ್ಯಂತ ಪ್ರಾಚೀನರೂಪವೆಂಬುದನ್ನು ಗಮನಿಸಿದಾಗ, ಈ ಕೃತಿಯ ಕಾಲವನ್ನು ಸು.ಕ್ರಿ.ಶ. ೧೨೦೦ಕ್ಕೆ ಒಯ್ಯಲು ಸಾಧ್ಯವಿದೆ. ಇತ್ತೀಚೆಗೆ ದೊರೆತ ಅರುಣಾಬ್ಜ ಕವಿಯ ‘ಮಹಾಭಾರತೊ’ ಕಾವ್ಯದ ಕಾಲವನ್ನು ಕ್ರಿ.ಶ. ೧೬೮೩ ಎಂದು ನಿರ್ಣಯಿಸಲು ಸಾಧ್ಯವಾಗಿರುವುದರಿಂದ, ‘ದೇವೀ ಮಹಾತ್ಮೆ’ ಅದಕ್ಕಿಂತಲೂ ಎರಡು ಶತಮಾನದಷ್ಟು ಹಿಂದೆಯೇ ರಚನೆಗೊಂಡಿರಬೇಕೆಂದು ತರ್ಕಿಸಬಹುದು’ ಎಂಬುದು ಡಾ. ಕಬ್ಬಿನಾಲೆಯವರ ಅಭಿಪ್ರಾಯ.

 

[1] ಪಾಡ್ದನಗಳ ಮೂಲಕ ತುಳುವಿನ ಪ್ರಾಚೀನ ಲೋಕವೊಂದರ ಪರಿಚಯ ಆದಾಗಲೇ ಸಾಕಷ್ಟು ಆಗಿತ್ತು.

[2] ಸಂಪಾದನೆಯಲ್ಲಿ ಪಾಠ ಪರಿಷ್ಕರಣೆ, ಊಹಾಪಾಠ ನಿರ್ಣಯ, ಶಬ್ದಾರ್ಥ ನಿರ್ಣಯಗಳನ್ನು ಸಹಕರಿಸುವ ಅವಕಾಶವು ಪ್ರಸ್ತುತ ಲೇಖಕನಿಗೂ ದೊರಕಿತ್ತೆಂಬುದು ಸಂತೋಷದ ವಿಷಯವಾಗಿದೆ.

[3] ಪಳಂತುಳು – ಎಂಬಲ್ಲಿ ೞ ಪ್ರಯೋಗವಾಬೇಕು. ಪಳಂತುಳು ಭಾಷೆಯಲ್ಲಿ ೞ ದ ಬಳಕೆಯಿದೆ. ಧ್ವನಿ ವ್ಯತ್ಯಾಸದ ನಿಯಮಗಳಂತೆ ೞ ಗಳು ತುಳುವಿನಲ್ಲಿ ರೇಫವಾಗಿ ಪರಿವರ್ತಿತವಾಗುತ್ತವೆ. ಪೞ > ಪರ. ಪರತ್ತ್ ಎಂದರೆ ಹಳೆಯದೆಂದರ್ಥ. ಇದು ಸಾಮಾನ್ಯ ತುಳುವಿನ ಪರಿಸ್ಥಿತಿ. ಆದರೆ ತುಳುವಿನ ಬ್ರಾಹ್ಮಣ ಉಪಭಾಷೆಯಲ್ಲಿ ಅದು ಳಕರವಾಗಿ ಉಳಿದುಕೊಂಡಿದೆ. ಆದುದರಿಂದ ಬ್ರಾಹ್ಮಣ ಉಪಭಾಷೆಯಲ್ಲಿ ಪೞ > ಪಳ. ಪಳತ್ತ್‌ಎಂದರೆ ಹಳೆಯದೆಂದರ್ಥ. ಆದುದರಿಂದ ‘ಪಳಂತುಳು’ ಎಂಬ ಪ್ರಯೋಗ ಅಸಹಜವೇನಲ್ಲ.

[4] ಈ ಐದು ಪ್ರಾದೇಶಿಕ ಭೇದಗಳನ್ನು ತುಳು ನಿಘಂಟುವಿನಲ್ಲಿ ಕ್ರಮವಾಗಿ NW, NE, SW, SC ಮತ್ತು SE ಎಂದು ಸಂಕೇತಿಸಲಾಗಿದೆ. ಈ ಪ್ರಾದೇಶಿಕ ಭೇದಗಳೊಳಗೆ ವಿವಿಧ ಜಾನಾಂಗಿಕ ಭೇದಗಳನ್ನೂ ನಿಘಂಟಿನಲ್ಲಿ ವಿವಿಧ ಸಂಕೇತಾಕ್ಷರಗಳ ಮೂಲಕ ಗುರುತಿಸಲಾಗಿದೆ.

[5] ದೊರಕಿದ ಗ್ರಂಥಗಳೆಲ್ಲ ತುಳುನಾಡಿನ ದಕ್ಷಿಣ ಭಾಗದಲ್ಲಿ ಮುಖ್ಯವಾಗಿ ಕಾಸರಗೋಡು ಪರಿಸರದಲ್ಲಿ ಪ್ರತಿ ಮಾಡಲ್ಪಟ್ಟುವು. ಪ್ರಾಯಶಃ ತುಳು ಮಹಾಭಾರತವು ಉಡುಪಿ ಪರಿಸರದಲ್ಲಿ ಎಂದರೆ ತುಳುನಾಡಿನ ಉತ್ತರ ಭಾಗದಲ್ಲಿ ರಚಿತವಾದುದು.

[6] ಶ್ರೀ ಭಾಗವತೊ ಪ್ರಸ್ತಾವನೆ ಪು. ೧-೨ ಈ ವಿಷಯವು ಸತ್ಯವೆಂದು ಮುಂದೆ ಖಚಿತವಾಯಿತು.

[7] ಪ್ರಕಟಣೆಗೆ ಸಿದ್ಧವಾಗಿರುವ ಈ ಕೃತಿಯು ೨೦೦೫ರಲ್ಲಿ ಹೊರಬಂದಿದೆ.

[8] ಈ ವಿಷಯವನ್ನು ಮೊದಲು ಗಮನಿಸಿದವರು ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು. ನೋ.ಪಳಂತಲು ಕಾವ್ಯ ಪು.೪೩-೪೪

[9] ನೋ.ತುಳು ಮಹಾಭಾರತೊ – ಅನುಬಂಧ ೨ ಪು. ೨೪೬

[10] ನೋ. ಪಳಂತುಳು ಕಾವ್ಯ ಪು. ೪೩.

[11] ಈ ಅಭಿಪ್ರಾಯವನ್ನು ನಾನು ಬೇರೊಂದು ಲೇಖನದಲ್ಲಿಯೂ ವ್ಯಕ್ತ ಪಡಿಸಿದ್ದೇನೆ. ನೋ. ‘ಪ್ರಾಚೀನ ತುಳು ಕೃತಿಗಳಿಂದ ಕನ್ನಡದ ಮೇಲೆ ಬೆಳಕು’ ಉದಯವಾಣಿ ೨-೨-೨೦೦೧. ಇದನ್ನು ಡಾ. ಕಬ್ಬಿನಾಲೆಯವರೂ ಉಲ್ಲೇಖಿಸಿದ್ದಾರೆ. ಪಳಂತುಳು ಕಾವ್ಯ, ಪು.೪೩

[12] ಈ ಅಭಿಪ್ರಾಯವನ್ನು ‘ಪ್ರಾಚೀನ ತುಳು ಕೃತಿಗಳಿಂದ ಕನ್ನಡದ ಮೇಲೆ ಬೆಳಕು’ ಎಂಬ ಲೇಖನದಲ್ಲಿ (ಉದಯವಾಣಿ ೨-೨-೨೦೦೧). ನಾನು ಪ್ರತಿಪಾದಿಸಿದ್ದು ಈ ಅಭಿಪ್ರಾಯವನ್ನು ಡಾ. ಕಬ್ಬಿನಾಲೆಯವರು ಪೂರ್ತಿಯಾಗಿ ಮಾನ್ಯ ಮಾಡಿದ್ದಾರೆ. ನೋಡಿ ‘ಪಳಂತುಳು ಕಾವ್ಯ’ ಪು.೪೬)

[13] ಪಳಂತುಳು ಕಾವ್ಯ ಪು.೬೯

[14] ಪಳಂತುಳು ಕಾವ್ಯ. ಪು. ೧

[15] ತುಳು ದೇವೀ ಮಹಾತ್ಮೆ ಪ್ರಸ್ತಾವನೆ, ಪು.೯.

[16] ತುಳು ದೇವೀ ಮಹಾತ್ಮೆ, ಪ್ರಸ್ತಾವನೆ ಪು.೧೨ ಮತ್ತು ಪಳಂತುಳು ಕಾವ್ಯ ಪು.೧.

[17] ತುಳು ದೇವೀ ಮಹಾತ್ಮೆ, ಪ್ರಸ್ತಾವನೆ, ಪು.೧೨