ಮಹಾಭಾರತೊ

ಈಗ ದೊರೆತಿರುವ ತುಳು ಕಾವ್ಯ ಕೃತಿಗಳಲ್ಲಿ ಅತ್ಯಂತ ಪ್ರಾಚೀನವಾದುದು ಈ ತುಳು ಮಹಾಭಾರತವೆಂದು ಸಂಪಾದಕ ವೆಂಕಟರಾಜ ಪುಣಿಂಚತ್ತಾಯರು ಅಭಿಪ್ರಾಯಪಟ್ಟುದುಂಟು.

[1]

ಮಹಾಭಾರತವು ಕ್ರಿ.ಶ. ೧೩೮೩ರದೆಂದು ಆಂತರಿಕ ಆಧಾರದಿಂದ ನಿರ್ಧಾರಗೊಂಡಿದೆ. ಮಹಾಭಾರತದಲ್ಲಿ ಶಿವನೆಡುಂಬೂರನ ಉಲ್ಲೇಖವಿದ್ದು[2] ಅವನ ಕಾಲವು ೧೩೮೩ ಎಂದು ಶಾಸನಾಧಾರದಿಂದ ನಿಶ್ಚಿತವಾಗಿದೆ.[3]

ಮಹಾಭಾರತದ ಆದಿ ಪರ್ವದಲ್ಲಿ ಪಾಂಡವ ಕೌರವದಿಗಳ ಉತ್ಪತ್ತಿಯಿಂದ ತೊಡಗಿ ಖಾಂಡವ ವನ ದಹನದವರೆಗಿನ ಕಥೆ ಈ ಗ್ರಂಥದದಲ್ಲಿದೆ. ೨೪ ಸಂಧಿಗಳಲ್ಲಿ ವಿಸ್ತರಿಸಿರುವ ಈ ಕೃತಿಯನ್ನು ‘ಮಹಾಭಾರತೊಂಟ್‌ಸಂಭವಪರ್ವ’ ಎಂದು ಹೇಳಲಾಗಿದೆ. ಒಟ್ಟು ಪದ್ಯಗಳು ೧೬೫೭[4].

ಇತರ ಕೃತಿಗಳು

ಪಳಂತುಳುವಿನಲ್ಲಿ ಒಂದು ಕಾವ್ಯ ಪರಂಪರೆಯಿದ್ದ ವಿವರವನ್ನು ಈ ಕೃತಿ ತಿಳಿಸುತ್ತದೆ.

ಏಣಾಪಾಣಿ ಮುಕುಂದಾ
ನಾಣಿಲ್ತಾಯೆ ಭಜೀತೆ
ಕ್ಷೋಣೀಟುತ್ತಮೆಯಾಸ್ಟೀ ದ್ವಿಜಕುಲಾಢ್ಯೆ
ಜಾಣೇ ನಿರ್ಮಿತೆ ಕಾವ್ಯೊ
ಮಾಣಾನೇ ವಿಕಸೀತ್
ಮಾಣೀ ಯೇನಾಯನ್ ಶಿಷ್ಯೆರೆಕ್ ಶಿಷ್ಯೆ ||
ತಿಳಿವುಳ್ಳಾಕುಳು ಭೂಮಿ
ತುಳ್ಕೆ ರಾಮಾಯಣ ಕಾವ್ಯೊ
ತುಳು ಭಾಷೇ ಕವಿಕುಳು ವಿಸ್ತರಿತೆರೈಯೇರ್
ಅಳಿಯೇನಾಕುಳೆ ಪಾದ
ನಳಿನೊಂತಾ ಮಧುವುಣ್ಕೀ
ಯಿಳೇಟೇ ಭಾರತಕಾವ್ಯೊ ರಚಿಯೀಪುಪ್ಪೆ ||
ಹರಿಶ್ರೀ ರುಕ್ಮಿಣಿ ದೇವಿ
ವರಿಯೀತಿನ್ ಕಥೆ ಭೀಮೆ
ಕೆರ್‌ಯೆ ಕೀಚನೆಸ್ಕೀ ಚರಿತೇ ಬಾಣನ್
ಕರೊ ಸಾರಾ ಮುರವೈರೀ
ತರಿತೀ ಕಥೆಯೊ ವಿ
ಸ್ತರಿತೇ ಗುಡ್ಡೆತರಾಯೆ ನಿರ್ಮಿತೆ ಲೊಕೊಂಟ್ ||
ಲೋಕೋಂಟುತ್ತಮ ಮುತ್ಥ್‌ಚ್
ಏಕಾದ ಶ್ಯುಪವಾಸೊಂ
ತಾ ಕಾವ್ಯೊ ರೆಚಿಯೀತಿ ಮಹಿಮೇ ಕೊಂಡ್
ಶ್ರೀ ಕೃಷ್ಣೆ ತುಣಿಯಾಯನ್
ಆಕರ್ಷಿತೆರೇ ಸಾಕ್ಷಾತ್
ಆ ಕವಿಕುಲ ನಾಥಕಭಿವಂದೀಪ್ಪೆ||

ಈ ನಾಲ್ಕು ಪದ್ಯಗಳಲ್ಲಿ ಮಹಾಭಾರತಕಾರ ಅರುಣಾಬ್ಜನು ತುಳುವಿನ ಕಾವ್ಯ ಪರಂಪರೆಯ ವಿಸ್ತೃತ ವಿವರವನ್ನು ನೀಡಿದ್ದಾರೆ. ತನ್ನ ಗುರುವಿನ ಗುರುವಾದ ನಾಣಿಲ್ತಾಯನೆಂಬ ಕವಿ ‘ಏಣಾಪಾಣಿಮುಕುಂದ’ನನ್ನು (ಶಂಕರನಾರಾಯಣನನ್ನು) ಭಜಿಸಿ ಆ ವಿಷಯದ ಕಾವ್ಯವನ್ನು ರಚಿಸಿದ ಜಾಣಕವಿಯೆಂದು ಮೊದಲ ಪದ್ಯದಲ್ಲಿದೆ.[5]’ಏಣಾಪಣಿ ಮುಕುಂದಾ ನಾಣಿಲ್ತಾಯೆ ಭಜೀತೆ’ ಎಂದರೆ ‘ಏಣಾಪಾಣಿ ಮುಕುಂದವನ್ನು ನಾಣಿಲ್ತಾಯನು ಭಜಿಸಿಯೇ’ ಎಂಬರ್ಥ. ಭಜೀತ್ +ಎ ಎಂದು ವಿಂಗಡಿಸಿಕೊಳ್ಳಬೇಕು. ಎರಡನೆಯ ಪದ್ಯದಲ್ಲಿ ತುಳು ಭಾಷೆಯ ರಾಮಾಯಣ ಕವಿಗಳನ್ನು ಸ್ತುತಿಸಿದೆ. ಮೂರನೆಯ ಪದ್ಯದಲ್ಲಿ ಗುಡ್ಡೆತರಾಯೆ ಎಂಬ ಕವಿ ರಚಿಸಿದ ರುಕ್ಮಿಣಿ, ಸ್ವಯಂವರ, ಕೀಚಕವಧೆ, ಬಾಣಾಸುರವಧೆ ಎಂಬ ಕಾವ್ಯಗಳನ್ನು ಉಲ್ಲೇಖಿಸಿದೆ. ನಾಲ್ಕನೆಯ ಪದ್ಯದಲ್ಲಿ ಏಕಾದಶೀ ಉಪವಾಸ (ಅಂಬರೀಷೋಪಾಖ್ಯಾನ) ಕಾವ್ಯವನ್ನು ಬರೆದು ಶ್ರೀ ಕೃಷ್ಣಾನುಗ್ರಹ ಪಡೆದ ಕವಿ ಕುಲನಾಥನನ್ನು ಸ್ತುತಿಸಿದೆ.

ಹೀಗೆ ಶಂಕರನಾರಾಯಣ ಮಹಾತ್ಮೆ, ರಾಮಾಯಣ, ರುಕ್ಮಿಣೀ ಸ್ವಯಂವರ, ಕೀಚಕ ವಧೆ, ಬಾಣಾಸುರನ ವಧೆ, ಅಂಬರೀಷ ಚರಿತ್ರೆ – ಎಂಬ ಕೃತಿಗಳನ್ನು ಉಲ್ಲೇಖಿಸುವ ಈ ಕೃತಿಯಲ್ಲಿ ಪ್ರಸ್ತುತ ಉಪಲಬ್ಧವಿರುವ ದೇವೀ ಮಹಾತ್ಮೆ, ಕಾವೇರಿ, ಭಾಗವತಗಳ ಉಲ್ಲೇಖವೇ ಇಲ್ಲ. ದೇವೀ ಮಹಾತ್ಮೆ ಗದ್ಯವಾದುದರಿಂದ ಉಲ್ಲೇಖಿಸದಿರಬಹುದು. ಉಳಿದುವು ತತ್ವಮಕಾಲೀನ ಮತ್ತು ಅನಂತತಿದವೆಂದು ತಿಳಿಯಬೇಕಾಗುತ್ತದೆ. ಈ ಕಾವ್ಯಗಳ ಸ್ವರೂಪ ನಮಗೆ ತಿಳಿಯದಾದರೂ ಅವೆಲ್ಲ ಪದ್ಯರೂಪದವೇ ಆಗಿರಬೇಕೆಂದು ಊಹಿಸುವಂತಿದೆ.[6]

A Grammar of the Tulu Language ಎಂಬ ಗ್ರಂಥವನ್ನು ಬರೆದ (೧೮೭೨) ಜೆ.ಬ್ರಿಗೆಲ್ ಅವರು ಯಾವುದೋ ಅಜ್ಞಾತ ಕಾವ್ಯದ ನಾಲ್ಕು ಪದ್ಯಗಳನ್ನು ಉದ್ದರಿಸಿರುವುದರ ಕಡೆಗೆ ಪುಣಿಂಚತ್ತಾಯರು ಉಲ್ಲೇಖಿಸಿ ಪದ್ಯಗಳು ಛಂದಸ್ಸಿಗೆ ಸರಿ ಹೊಂದದಂತಿದ್ದರೂ ಅರ್ಥದ ದೃಷ್ಟಿಯಿಂದ ನೋಡಿದಾಗ ಗಿರಿಜಾಕಲ್ಯಾಣದ ಒಂದು ಛಾಯೆ ಅಲ್ಲಿ ಕಾಣುತ್ತದೆಂದು ಊಹಿಸಿದ್ದಾರೆ[7](ಮಹಾಭಾರತೊ ಪ್ರಸ್ತಾವನೆ ಪು. ೧೩-೧೪) ಆ ಕಾವ್ಯ ಉಪಲಬ್ಧವಿಲ್ಲ. ಅಲ್ಲದೆ ಗ್ರಹಸ್ಥಿತಿಯನ್ನು ಉಲ್ಲೇಖಿಸಿರುವ ‘ಕರ್ಣಪರ್ವ’ ಎಂಬ ಕೃತಿಯ ಬಗೆಗೆ ಕೂಡಾ ಪುಣಿಂಚತ್ತಾಯರು ಉಲ್ಲೇಖಿಸಿದ್ದಾರೆ.[8] (ಮಹಾಭಾರತೊ ಅನುಬಂಧ – ೨) ಈ ಕೃತಿಯ ಕವಿ ಅರುಣಾಬ್ಜನ ಸಮಕಾಲೀನನಿರಬಹುದೆಂದೂ ಅವರು ಊಹಿಸಿದ್ದಾರೆ. ಈ ಕೃತಿಯೂ ಪ್ರಾಯಶಃ ಪೂರ್ಣ ಉಪಲಬ್ದವಾಗಿಲ್ಲ.

ಹೀಗೆ ಪಳಂತುಳು ಕೃತಿ ಪ್ರಪಂಚ ಸಾಕಷ್ಟು ವಿಶಾಲವಾದುದೇ ಆಗಿದೆ. ಪರಂಪರಾ ವಿಚ್ಛಿತ್ತಿಯಿಂದಾಗಿ ನಮಗೆ ಅದರ ಅರಿವಿಲ್ಲದಾಗಿದೆ. ತೀವ್ರವಾದ ಸಂಶೋಧನೆಯಿಂದ ಕೆಲವಾದರೂ ಕೃತಿಗಳು ದೊರಕುವ ಸಂಭವ ಇಲ್ಲದಿಲ್ಲವೆಂದು ಆಶಾವಾದಿಗಳಾಗಿರುವುದು ತಪ್ಪಲ್ಲ.

ಪಳಂತುಳು ಕವಿಗಳು

‘ತುಳು ದೇವಿಮಹಾತ್ಮೆ’ಯ ಕವಿ ತೆಂಕಿಲ್ಲಾಯ ವಂಶದವೆಂದು ತಿಳಿಯಲಾಗಿದೆ. ಕೃತಿಯ ಹಸ್ತಪ್ರತಿ ತೆಂಕಿಲ್ಲಾಯರ ವಂಶಸ್ಥರಲ್ಲಿ ದೊರೆತುದರಿಂದ ಈ ಊಹೆಯನ್ನು ಪುಣಿಂಚತ್ತಾಯರು ಮಾಡಿದ್ದಾರೆ.[9] ಈ ಊಹೆ ಅನ್ಯ ಆಧಾರಗಳಿಂದ ಪುಷ್ಟವಾಗಿಲ್ಲ. ಆದರು ತತ್ಕಾಲಕ್ಕೆ ತೆಂಕಿಲ್ಲಾಯ ಕವಿಯೆಂದು ಇರಿಸಿಕೊಳ್ಳಬೇಕಾಗಿದೆ. ಮಹಾಭಾರತವನ್ನು ಬರೆದವನು ಅರುಣಾಬ್ಜ ಕವಿಯೆಂದು ಅದರಲ್ಲೇ ಉಲ್ಲೇಖವಿದೆ. ಇದು ಕವಿಯ ನಿಜನಾಮವಾಗಿರದೆ ಕಾವ್ಯನಾಮವಾಗಿರುವ ಸಾಧ್ಯತೆಯಿದೆ. ಮಹಾಭಾರತದಲ್ಲಿ ಉಲ್ಲೇಖಗೊಂಡಿರುವ ಕವಿಗಳೆಂದರೆ ನಾಣಿಲ್ತಾಯ, ರಾಮಾಯಣ ಕವಿಗಳು, ಗುಡ್ಡೆತರಾಯ ಮತ್ತು ಇನ್ನೊಬ್ಬ ‘ಕವಿ ಕುಲನಾಥ’ ಸಂದರ್ಭವನ್ನಲೋಕಿಸಿದರೆ ರಾಮಾಯಣ ಕವಿಗಳು ನಾಣಿಲ್ತಾಯನ ಶಿಷ್ಯರಾಗಿರುವ ಸಾಧ್ಯತೆ ಇದೆ. ನಾಣಿಲ್ತಾಯ ಎಂಬುದು ಕುಲನಾಮ. ಪ್ರಾಯಶಃ ಗುಡ್ಡೆತರಾಯನೆಂಬುದೂ ಕುಲನಾಮ. ಈ ಕುಲನಾಮದವರು ಈಗ ಇದ್ದಾರೋ ತಿಳಿಯದು.[10] ಶಿವಳ್ಳಿ ಬ್ರಾಹ್ಮಣ ಕುಲನಾಮಗಳ ಬಗೆಗೆ ಅಧ್ಯಯನ ಮಾಡಿದ ಡಾ. ಪದ್ಮನಾಭ ಕೇಕುಣ್ಣಾಯರಲ್ಲಿ ಈ ಬಗೆಗೆ ವಿಚಾರಿಸಿದಾಗ ನಾಣಿಲ್ತಾಯ ಕುಲನಾಮದ ಉಲ್ಲೇಖವು ಅಧ್ಯಯನ ಸಂದರ್ಭದಲ್ಲಿ ದೊರಕಿದುದಾಗಿಯೂ ಗುಡ್ಡೆ ತರಾಯ ಎಂಬುದಕ್ಕೆ ಬೇರೆ ಉಲ್ಲೇಖಗಳು ದೊರಕಿಲ್ಲವೆಂಬುದಾಗಿಯೂ ತಿಳಿಸಿರುತ್ತಾರೆ. ಕವಿಕುಲನಾಥನೆಂದು ಅರುಣಾಬ್ಜನೇ ಗೌರವದಿಂದ ಹೇಳಿರಬೇಕು. ಇದು ಕಾವ್ಯನಾಮವಾಗಿರಲಾರದು. ಅವನ ನಿಜನಾಮ ತಿಳಿದಿಲ್ಲ. ಭಾಗವತದ ಕವಿ ತನ್ನನ್ನು ‘ತುಂಗಕುಲೊಂತಾ ಧರಣೀಸುರೆ ವಿಷ್ಣು’ ಎಂದು ಹೇಳಿಕೊಂಡಿರುವುದರಿಂದ ಅವನ ಹೆಸರು ವಿಷ್ಣುತುಂಗ ಎಂದು ಪುಣಿಂಚತ್ತಾಯರು ನಿಶ್ಚಯಿಸಿರುವುದನ್ನು ಸಂದೇಹಿಸಬೇಕಿಲ್ಲ. ‘ತುಂಗ’ ಕುಲನಾಮದವರು ಕನ್ನಡ ಮನೆಮಾತಿನವರಾದುದರಿಂದ ವಿಷ್ಣು ತುಂಗನು ಕನ್ನಡ ಮನೆಮಾತಿನ ತುಳು ಕವಿಯೆನ್ನಬಹುದು.[11] ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ‘ತುಂಗ’ ಎಂದರೆ ಶುಕ್ರನೆಂದು ಊಹಿಸಬೇಕೆಂದೂ ‘ಕುಲ’ ಎಂದರೆ ಏಳರ ಸಂಕೇತವೆಂದಿರಿಸಿ ಕೊಳ್ಳಬೇಕೆಂದೂ, ತುಂಗ ಎಂದರೆ ಶ್ರೇಷ್ಠ ಎಂಬರ್ಥವನ್ನಿರಿಸಿಕೊಳ್ಳಬಹುದೆಂದೂ ವಾದಿಸಿದ್ದುಂಟು (ಪಳಂತುಳು ಕಾವ್ಯ ಪು.೪೫). ಇದು ತುಂಬ ಊಹಾತ್ಮಕ ಅಭಿಪ್ರಾಯವಾಗಿದೆ. ‘ತುಂಗ’ ಕುಲದ ಬ್ರಾಹ್ಮಣನಾದ ವಿಷ್ಣು ರಚಿಸಿದ ಕಥೆ ಶ್ರೀ ಭಾಗವತಾರ್ಥೊ ಎಂದು ಸ್ಪಷ್ಟವಾಗಿಯೇ ಹೇಳಿರುವುದರಿಂದ ಭಿನ್ನಾಭಿ‌ಪ್ರಾಯಕ್ಕೆ ಎಡೆಯಿಲ್ಲ. ವಿಷ್ಣು ತುಂಗನು ಉಡುಪಿಯವನೆಂದು ಅವರು ಮಾಡಿದ ಊಹೆಯೂ ಆಧಾರವಿಲ್ಲದ ಊಹೆಯೇ ಆಗಿದೆ. ತುಳು ಭಾಗವತದಲ್ಲಿ ಪೂರ್ವ ಕವಿಗಳ ಸ್ಮರಣೆಯಿದೆಯಾದರೂ ಅಲ್ಲಿರುವುದು ಸಂಸ್ಕೃತ ಕನ್ನಡಕವಿಗಳ ಹೆಸರಷ್ಟೇ ಹೊರತು ತುಳು ಕವಿಗಳದಲ್ಲ. ವಿಷ್ಣು ತುಂಗನೇ ಮೊದಲ ತುಳು ಕವಿ. ಅವನ ಕೃತಿಯೇ ತುಳುವಿನ ಆದಿಕಾವ್ಯವೆಂಬರ್ಥದ ಮಾತುಗಳನ್ನು ಪುಣಿಂಚತ್ತಾಯರು ತುಳು ಭಾರತದ ಪ್ರಸ್ತಾವನೆಯಲ್ಲಿ ಬರೆದಿದ್ದು ಮಹಾಭಾರತದ ಪ್ರಸ್ತಾವನೆಯಲ್ಲಿ ಈ ಅಭಿಪ್ರಾಯವನ್ನು ಪರಿಷ್ಕರಿಸಿ ಕೊಂಡಿದ್ದಾರೆ. ‘ವಿಷ್ಣು ತುಂಗನಿಗಿಂತ ಮೊದಲಿನವನಾದ ಅರುಣಾಬ್ಜನಿಗಿಂತಲೂ ಮೊದಲೇ ತುಳುವಿನಲ್ಲಿ ಕಾವ್ಯಕ್ರಿಯೆ ನಡೆದ ಬಗ್ಗೆ ಸೂಚನೆಗಳು. ಸಿಕ್ಕುವುದರಿಂದ ತುಳುವಿನ ಆದಿಕಾವ್ಯ ಯಾವುದೆಂದು ನಿರ್ಣಯವಾಗಿ ಹೇಳಲು ಸಾಧ್ಯವಿಲ್ಲದಂತಾಗಿದೆ’28 ಗಿರಿಜಾ ಕಲ್ಯಾಣ ಕರ್ಣಪರ್ವಗಳ ಕವಿಗಳ ಬಗೆಗೆ ಏನೂ ಹೇಳುವಂತಿಲ್ಲ.

ಏನಿದ್ದರೂ ಪಳಂತುಳು ಕವಿಗಳ ಒಂದು ಪರಂಪರೆ ಆಗಿ ಹೋಗಿತ್ತು. ಆ ಕವಿಗಳು ಸಂಸ್ಕೃತ ಕನ್ನಡ ಕಾವ್ಯ ಪರಂಪರೆಯನ್ನು ತುಳುವಿನಲ್ಲಿ ಮುಂದುವರಿಸಿದರು. ವಿಷ್ಣುತುಂಗನ ಮಾತುಗಳಿಂದ ಈ ಅಭಿ‌ಪ್ರಾಯ ಆ ಕವಿಗಳಿಗಿದ್ದುದನ್ನು ತಿಳಿಯಬಹುದು. ತುಳುವಿನ ವಿದ್ವಾಂಸರು, ಕವಿಗಳು ಆ ಕಾಲದಲ್ಲಿ ತುಳು ಕಾವ್ಯಗಳನ್ನು ಅಧ್ಯಯನ ಮಾಡುತ್ತಿದ್ದರು ಎಂಬುದು ಅರುಣಾಬ್ಜನ ಮಾತುಗಳಿಂದ ಸ್ಪಷ್ಟವಾಗುತ್ತದೆ. ‘ವೇದೊಂಕುಳೆ ಸಾರೊ ಪಿನ್‌ಪ್ಪಿ ಜನೋ ತುಳು ಭಾಷೆಂದುವೆಂದ್ ಬೇದಿಪನನೇಪ್ಪೊಡು’ (ವೇದಗಳ ಸಾರವನ್ನು ತಿಳಿದವರು ವಿಷ್ಣು ತುಂಗನು ತುಳು ಭಾಗವತರಲ್ಲಿ (೧-೧೬) ಹೇಳಿರುವುದನ್ನು ನೋಡಿದರೆ ಆ ಕಾಲದ ತುಳು ಕವಿಗಳಿಗೆ ತಮ್ಮ ಭಾಷೆಯ ಬಗೆಗೆ ವಿಶೇಷವಾದ ಆದರವಿದ್ದುದು ಸ್ಪಷ್ಟವಾಗುತ್ತದೆ.

ಪಳಂತುಳು ಹಸ್ತ ಪ್ರತಿಗಳು

ಪಳಂತುಳುವಿನ ಉಪಲಬ್ಧ ಹಸ್ತ ಪ್ರತಿಗಳೆಲ್ಲ ತುಳುನಾಡಿನ ದಕ್ಷಿಣ ಭಾಗದಲ್ಲಿ ದೊರಕಿವೆ. ಅವಾವುವೂ ಮೂಲ ಕವಿಗಳ ಕೃತಿಗಳಲ್ಲ. ಎಲ್ಲವೂ ಪ್ರತಿಕಾರರು ಬರೆದವುಗಳು. ಕಾವ್ಯ ಪರಂಪರೆಯಿದ್ದಂತೆಯೇ ಆ ಕಾವ್ಯಗಳನ್ನು ಪ್ರತಿ ಮಾಡಿ ಇರಿಸಿಕೊಳ್ಳುವ ಪದ್ಧತಿಯೂ ಇತ್ತೆಂಬುದು ಈ ಹಸ್ತಪ್ರತಿಗಳಿಂದ ತಿಳಿದುಬರುತ್ತದೆ. ದೊರಕಿದ ಎಲ್ಲ ಪ್ರತಿಗಳೂ ಏಕೈಕ ಹಸ್ತಪ್ರತಿಗಳು. ವಿವಿಧ ಹಸ್ತಪ್ರತಿಗಳ ಪಾಠಗಳನ್ನು ಹೋಲಿಸಿ ನೋಡಿ ಕವಿಪಾಠವನ್ನು ನಿರ್ಣಯಿಸುವ ಅವಕಾಶವು ಪಳಂತುಳು ಕೃತಿಗಳ ಸಂಪಾದನೆಯ ಸಂದರ್ಭದಲ್ಲಿ ದೊರಕಿಲ್ಲ. ಈಗ ಉಪಲಬ್ಧವಾಗಿರುವ ತುಳು ಭಾಗವತರನ್ನು ಬರೆದ ಲಿಪಿಕಾರನೂ, ಇನ್ನೂ ಪ್ರಕಟಗೊಳ್ಳದ ನವಮಸ್ಕಂಧ ಭಾಗವನ್ನು ಬರೆದ ಲಿಪಿಕಾರನೂ ಬೇರೆ ಬೇರೆಯೇ ಇರಬಹುದು; ಆದರೆ ಆ ಭಾಗಗಳ ಒಂದೊಂದೇ ಪ್ರತಿಗಳು ದೊರಕಿರುವುದರಿಂದ ಪಾಠಗಳ ಹೋಲಿಕೆಯೆಂಬುದು ಸಾಧ್ಯವೇ ಆಗಿಲ್ಲ. ಈ ಕೃತಿಗಳಲ್ಲಿ ಉಪಯೋಗಿಸಲಾದ ಭಾಷಾರೂಪಗಳಲ್ಲಿ ಕೆಲವು ಲಿಪಿಕಾರರ ವೈಶಿಷ್ಟ್ಯಗಳಿರಬಹುದು. ಕೆಲವು ಮೂಲ ಕವಿಯೇ ಬರೆದಿರಬಹುದು. ಆದರೆ ಬೇರೊಂದು ಹಸ್ತಪ್ರತಿ ದೊರೆತು ಅವುಗಳನ್ನು ಹೋಲಿಸಿ ನೋಡದೆ ಖಚಿತ ಪಾಠಗಳನ್ನು ಹೇಳುವಂತಿಲ್ಲ. ಅಪೂರ್ವ ಭಾಷಾ ಸ್ವರೂಪವಿರುವ ಈ ಕಾವ್ಯಗಳ ಎಷ್ಟೋ ಪಾಠ ಗ್ರಂಥಗಳು ಹಲವು ಹಸ್ತಪ್ರತಿಗಳ ಹೋಲಿಕೆಯಿಂದ ಪರಿಹಾರಗೊಳ್ಳುತ್ತಿದ್ದುವು. ಆದರೆ ಆ ಅವಕಾಶ ಪಳಂತುಳುವಿನ ಸಂದರ್ಭದಲ್ಲಿ ಇಲ್ಲವಾಗಿದೆ.[12]

ಪಳಂತುಳು ಭಾಷಾ ಸ್ವರೂಪ

ಹೆಸರೇ ಸೂಚಿಸುವಂತೆ ಪಳಂತುಳುವೆಂಬುದು ತುಳುವಿನ ಹಳೆಯ ರೂಪ. ಹತ್ತೊಂಬತ್ತನೆಯ ಶತಮಾನಕ್ಕಿಂತ ಹಿಂದಿನ ತುಳುವನ್ನು ‘ಪಳಂತುಳು’ ಎಂದು ಪರಿಗಣಿಸಬಹುದೆಂದು ತೋರುತ್ತದೆ. ಕನ್ನಡದಲ್ಲಿ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ – ಎಂಬು ಹಂತಗಳನ್ನು ಹೇಳಿದಂತೆ ಪಳಂತುಳುವಿನಲ್ಲಿ ಈ ಹಂತಗಳನ್ನು ಹೇಳಲಾರವು. ಲಿಖಿತ ಆಧಾರಗಳ ಕೊರತೆಯೇ ಅದಕ್ಕೆ ಕಾರಣ. ದೊರಕಿದ ಪಳಂತುಳು ಕೃತಿಗಳು ಕಾಲದ ದೃಷ್ಟಿಯಿಂದ ಅಷ್ಟಿಷ್ಟು ಹಿಂದು ಮುಂದಿನದಿರಬಹುದು. ಆದರೆ ಅವುಗಳೊಳಗಿನ ಭಾಷಾ ಭೇದಗಳ ವ್ಯತ್ಯಾಸವನ್ನು ನಾವು ಆಧಾರ ಸಾಮಗ್ರಿಗಳು ಸಾಲವು. ಎಲ್ಲ ಉಪಲಬ್ಧ ಗ್ರಂಥಗಳ ಭಾಷಾ ಸ್ವರೂಪವನ್ನಿರಿಸಿಕೊಂಡು ಹೊಸ ತುಳುವಿಗೆ ಹೋಲಿಸಿ ಈ ಭಾಷಾ ಸ್ವರೂಪವನ್ನು ನಿರೂಪಿಸಬೇಕಾಗುತ್ತದೆ.

೧. ಪಳಂತುಳುವಿನಲ್ಲಿ ಱ ೞ ದ ಬಳಕೆ:- ಪಳಂತುಳುವಿನಲ್ಲಿ ಎಲ್ಲ ಕೃತಿಗಳಲ್ಲಿಯೂ ಱ ೞದ ಬಳಕೆಯಿದೆ. ಪ್ರತಿಕಾರಕ ಕಾಲಕ್ಕೆ ಱ ೞ ವು ಬಿದ್ದು ಹೋಗಿದ್ದು ಅಷ್ಟಿಷ್ಟು ಬದಲಾವಣೆಯಾಗಿರಬಹುದಾದರೂ ಹೆಚ್ಚಿನೆಡೆಗಳಲ್ಲಿ ಱ ೞ ದಬಳಕೆ ಇದೆ. ಱ ೞ ವು ಹೊಸತುಳುವಿನ ಬ್ರಾಹ್ಮಣ ಉಪಭಾಷೆಯಲ್ಲಿ ಕುಳಳಕಾರವಾಗಿಯೂ ಸಾಮಾನ್ಯ ಉಪಭಾಷೆಯಲ್ಲಿ ರ ಕಾರವಾಗಿಯೂ ಪರಿವರ್ತನೆ ಹೊಂದಿದೆ. ಕನ್ನಡ ಭಾಷೆಯಲ್ಲಿ ಕ್ರಿ.ಶ. ಹದಿಮೂರನೆಯ ಶತಮಾನದವರೆಗೆ ಱ ೞ ದ ಬಳಕೆಯಿತ್ತು. ಪಳಂತುಳು ಕಾವ್ಯಗಳೂ ಪ್ರಾಯಶಃ ಆ ಕಾಲದವೇ ಎಂಬುದನ್ನು ಗಮನಿಸಬೇಕು.

ಪಳಂತುಳು ಹೊಸತುಳು
(ಬ್ರಾ)
ಹೊಸತುಳು
(ಸಾ)
ಕನ್ನಡ
ಉೞಿ ಉಳೆ ಉರೆ ಜಿಂಕೆ
ಒೞಿ ಒಳಿ ಒರಿ ಉಳಿಯು
ಕೊೞಿ ಕೊಳ್ ಕೊರ್ ಕೊಡು
ನ್‌ೞಿಲ್ ನಿಳೆಲ್ ನಿರೆಳ್ ನೆರಳು
ಬೂೞಿ ಬೂಳ್ ಬೂರ್ ಬೀಳು
ಕುೞಿ ಗುಳಿ ಗುರಿ ಕುಳಿ
ತಾೞ್ ತಾಳ್ ತಾರ್ ತಗ್ಗು

೨. ‘ಸ್ಟ್’ ಎಂಬ ಧ್ವನಿಯ ಬಳಕೆ : ಪಳಂತುಳುವಿನ ‘ಸ್ಟ್’ ಧ್ವನಿಯ ಬಗೆಗೆ ಇನ್ನೂ ಖಚಿತ ಅಭಿಪ್ರಾಯ ನಿರೂಪಿತವಾಗಿಲ್ಲ. ಪೋಸ್ಟ್ರ್, ಕೂಡ್‌ಸ್ಟ್, ಆಕೊಸ್ಟ್, ಸಲ್ಲ್‌ಸ್ಟ್‌ಮೊದಲಾದ ಕ್ರಿಯಾರೂಪಗಳಲ್ಲಿ ಅದು ಕೃದಂತ ಪ್ರತ್ಯಯರೂಪದಲ್ಲಿದೆ. ಇವುಗಳ ಹೊಸತುಳು ರೂಪಗಳು ಕ್ರಮವಾಗಿ ಪೋತ್ (ಹೋಗಿ) ಕೂಡ್‌ತ್‌ / ಕೂಡ್‌ದ್‌ (ಕೂಡಿ), ಆಕೊತ್ (ಈ ರೂಪ ತುಳುವಿನಲ್ಲಿಲ್ಲ) ಸಂದ್‌ತ್‌ (ಸಂದು) ಎಂದಾಗುತ್ತದೆ. ಇವೆಲ್ಲ ಕೃದಂತರೂಪಗಳು ಆದರೆ ‘ಸ್ಟ್’ ಎಲ್ಲ ಸಂದರ್ಭಗಳಲ್ಲೂ ಕೃದಂತ ಪ್ರತ್ಯಯವಾಗಿಲ್ಲ. ಆಸ್ಟೆರ್ (ಆಗಿದ್ದರು), ಅಸ್ಟೆಕ್ (ಅದಕ್ಕೆ), ಪಿದಾಡ್‌ಸ್ಟೆನ (ಹೊರಟಿದ್ದೇನೆ), ಪೋಸ್ಟ್‌ಣ್‌ (ಹೋಗಿದೆ), ಆಕಸ್ಟರ್ (ಆಗಿದ್ದೀರಿ), ಪುಷ್ಟ್‌ಸ್ಟೆ (ಹುಟ್ಟಿದವನು) ಮೊದಲಾದೆಡೆಗಳಲ್ಲಿ ‘ಸ್ಟ್‌’ ಬಂದಿದೆ. ‘ಏಯ್ಯ್’ ಎಂದರೆ ‘ಹೇಳು’ ಎಂದರ್ಥ. ‘ಏಯೆಣ್’ (ಹೇಳಿದರು) ಎಂಬ ಪ್ರಯೋಗವಿದ್ದಂತೆ ‘ಏಸ್ಟೆರ್’ ಎಂಬುದೂ ಇದೆ. ಪದಾದಿಯ ಸ್ವರಗಳ ಬದಲಿಗೆ ‘ಸ್ಟ್’ ಬಂದುದಿದೆ.

ಸಾಮಾನ್ಯರೂಪ ಪಳಂತುವಿನ ವಿಶಿಷ್ಟ ರೂಪ ಅರ್ಥ
ಏನ್ ಸ್ಟೇನ್ ನಾನು
ಈ / ಈಯ್ಯ್ ಸ್ಟೀಯ್ಯ್ ನೀನು
ಆಯೆ ಸ್ಟಾಯೆ ಅವನು
ಒಂಜಿ ಸ್ಟೊಂಜಿ ಒಂದು
ಒರಿಯೆ ಸ್ಟೊರಿಯೆ ಒಬ್ಬ
ಇದ್ದಿ ಸ್ಟ್‌ದ್ದಿ ಇಲ್ಲ
ಎಂದ್ ಸ್ಟೆಂದ್ ಎಂದು

ಪದಾದಿಯಲ್ಲಿ ಸ್ವರವಿರುವ ಕೆಲವು ಸಂಸ್ಕೃತದಲ್ಲಿ ಪದಗಳಲ್ಲೂ ಪದಾದಿಯಲ್ಲಿ ‘ಸ್ಟ್’ ಕಾಣಿಸಿಕೊಂಡುದುಂಟು ಸ್ಟರ್ಥೊ (ಅರ್ಥ), ಸ್ಟನುಜೆ (ಅನುಜ), ಸ್ಟರ್ಜುನೆ (ಅರ್ಜುನ), ಸ್ಟಂಬರೊ (ಅಂಬರ) ಇತ್ಯಾದಿ.

ಈ ‘ಸ್ಟ್’ ಧ್ವನಿಯ ಸ್ಥಾನದಲ್ಲಿ ತುಳು ದೇವೀ ಮಹಾತ್ಮೆಯಲ್ಲಿ ‘ಸ್ದ್’ ಎಂಬ ಧ್ವನಿಯಿದೆ. ಎನಸ್ಡ್ (ನನ್ನದು), ಆಕ್‌ಣಸ್ದ್ (ಆಗಿರುವಂತಹದು), ಪಂಡ್‌ನಸ್ಡ್ (ಹೇಳಿದುದು), ಕೂಡ್‌ತ್ನಸ್ಡ್ (ಕೂಡಿದುದು) ಇತ್ಯಾದಿ. ಪದಾದಿಯಲ್ಲಿ ಈ ‘ಸ್ದ್’ ಬರುತ್ತದೆ. ಸ್ದ್‌ಂಡ್, ಸ್ದ್‌ಂಡಾತ್ನಸ್ದ್, ಸ್ದ್‌ಡತ, ಸ್ದ್‌ಡಪುಟ್ಟ್, ಸ್ದ್‌ಳಂಚಿತ್ತಿನಾಯೆ ಇತ್ಯಾದಿ. ಈ ಸ್ದ್ ಕಾರವು ಪಳಂತುಳುವಿನಲ್ಲಿ ಪ್ರಾಚೀನ ರೂಪವನ್ನು ತೋರಿಸುತ್ತದೆಯೇ? ಅಥವಾ ಲಿಪಿಕಾರ ವೈಚಿತ್ರ್ಯವೇ? ನಿಜವಾಗಿ ಇವುಗಳ ಉಚ್ಚಾರಣೆ ಹೇಗೆ?- ಸಮಸ್ಯೆಗಳೇ ಆಗಿವೆ. ವಿವಿಧ ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ಹೇಳಿದ್ದರೂ ಕೊನೆಯ ಅಭಿಪ್ರಾಯ ಮೂಡಿಲ್ಲ.

೩. ಕರ್ಮಣಿ ಪ್ರಯೋಗ:- ದೇವೀ ಮಹಾತ್ಮೆಯಲ್ಲಿ ಕರ್ಮಣಿ ಪ್ರಯೋಗವು ವಿಶಿಷ್ಟವಾಗಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ.29

ಬ್ರಹ್ಮ ದೇವರೆಟಾವ ಸ್ತುತಿಪೋವೊಂಡೆರ್
(ಬ್ರಹ್ಮ ದೇವರಿಂದ ಸ್ತುತಿಸಲ್ಪಟ್ಟಿರುವ)

ರಾಜ್ಯೊ ಎನಟಾವ ಬುಡ್‌ಪೋವಪ್ಪಡ್‌ನ್
(ರಾಜ್ಯವು ನನ್ನಿಂದ ಬಿಡಲ್ಪಟ್ಟಿತು)

ಶ್ರೀ ಹರಿಟಾವ ವಂಚಿಪೋವೊಂಡ್‌ನಾಕುಳು
(ಶ್ರೀ ಹರಿಯಿಂದ ವಂಚಿಸಲ್ಪಟ್ಟವರು)

ಶತ್ರುಕುಳೆತ್ತಾವ ಬಾಧಿಪೊವೊಂಡೆ
(ಶತ್ರುಗಳಿಂದ ಬಾಧಿಸಲ್ಪಟ್ಟನು)
ಇತ್ಯಾದಿ

೪. ‘ಆವ್’ ಪ್ರಯೋಗ : ಬಹುವಚನದ ಪ್ರತ್ಯಯವಾಗಿ ಆವ್ / ಆವು ಎಂಬುದು ಪಳಂತುಳುವಿನಲ್ಲಿದೆ. ಹೊಸತುಳುವಿನಲ್ಲಿ ಇದಿಲ್ಲ. ಮಲಯಾಳದಲ್ಲಿದೆ. ಉದಾ: ರಾಜಾವು, ಕರ್ತಾವು, ಪಿತಾವು, ಮಾತಾವು ಇತ್ಯಾದಿ.

೫. ಕ್ರಿಯಾ ಸಮಾಸ: ‘ಅತಿಥಿವಂಚಿತ್ (ಅತಿಥಿಯನ್ನು ವಂಚಿಸಿ) ಇಲ್ಲಿ ದ್ವಿತೀಯಾ ವಿಭಕ್ತಿ ಲೋಪವಾದ ಕ್ರಿಯಾಸಮಾಸವಿದೆ. ಇಂತಹ ಹಲವು ಪ್ರಯೋಗಗಳು ಪಳಂತುಳುವಿನಲ್ಲಿವೆ.

೬.’ ಇಪು’ ವಿನಿಂದ ಸಾಧಿತ ಧಾತುಗಳು: ಸಂಸ್ಕೃತ ರೂಪಗಳಿಗೆ ‘ಇಸು’ ಪ್ರಯತ್ಯವನ್ನು ಸೇರಿಸಿ ಸಾಕಷ್ಟು ಧಾತುರೂಪಗಳನ್ನು ಸಾಧಿಸಿಕೊಳ್ಳಲಾಗಿದೆ. ವಚೀಪು (ಹೇಳು), ಲೇಭಿಪ್ಪು (ಲಭಿಸು), ಖಂಡಿಪು (ಖಂಡಿಸು), ಸುಖೀಪು (ಸುಖಿನಿ) ಇತ್ಯಾದಿ. ಅಧೋಮುಖ +ಇಪು= ಅಧೋಮುಖಿಪು ಎಂಬ ಪ್ರಯೋಗವೂ ಇದೆ.

೭. ಖಚಿತಾರ್ಥದ ನಕಾರ:- ಪಳಂತುಳುವಿನಲ್ಲಿ ಖಚಿತಾರ್ಥದಲ್ಲಿ ಒಂದು ನಕಾರವು ಬರುತ್ತಿದ್ದು ಹೊಸತುಳುವಿನಲ್ಲಿ ಇದು ಇಲ್ಲವಾಗಿದೆ ಉದಾ: ಮಾಂಪೊಳಿನ (ಮಾಡಬಹುದು), ಪೋಲಯೊನ (ಹೋಲಿಕೆಯಾಗವು), ಆತ್‌ನ (ಅಲ್ಲ), ಅ್ದ್ದಿನ (ಇಲ್ಲ). ಇದು ದೀರ್ಘವಾಗಿ ಪ್ರಯೋಗಗೊಳ್ಳುವುದೂ ಉಂಟು. ಉದಾ: ಚೋಜನ್‌ನಾ (ಕಾಣಿಸು), ಚೂಪ್ಪಿರಿನಾ (ನೋಡಲಿಲ್ಲ), ಆಕೊಯೆನಾ (ಮಾಡಿಸಿದನು)ಇತ್ಯಾದಿ.

ಪಳಂತುಳುವಿನ ವಿಭಕ್ತಿ ಪ್ರತ್ಯಯಗಳು ಕ್ರಿಯಾಪದರೂಪಗಳು ಹೊಸ ತುಳುವಿಗಿಂತ ಭಿನ್ನವಾಗಿದೆ. ಇವನ್ನು ಈಗಾಗಲೇ ವಿದ್ವಾಂಸರು ಗುರುತಿಸಿದ್ದಾರೆ.[13]

ಪಳಂತುಳು ಛಂದಸ್ಸು

ಛಂದಸ್ಸಿನ ದೃಷ್ಟಿಯಿಂದ ಪಳಂತುಳು ಕಾವ್ಯಗಳು ವಿಶಿಷ್ಟವಾಗಿವೆ. ಕನ್ನಡದಲ್ಲಿ ಪ್ರಸಿದ್ಧವಾದ (ಖ್ಯಾತ ಕರ್ಣಾಟಕ ಇತ್ಯಾದಿ) ವೃತ್ತಗಳಾಗಲಿ ಭಾಮಿನಿ, ವಾರ್ಧಿಕ ಮೊದಲಾದ ಷಟ್ಪದಿಗಳಾಗಲಿ ಪಳಂತುಳು ಕೃತಿಗಳಲ್ಲಿಲ್ಲ. ಲಯಬದ್ಧವಾದ ಸಂಸ್ಕೃತ ವೃತ್ತಗಳನ್ನು ತೆಗೆದುಕೊಂಡು ಅವುಗಳಲ್ಲಿ ಅಷ್ಟಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಪಳಂತುಳು ಕವಿಗಳು ಪ್ರಯೋಗಿಸಿದ್ದಾರೆ. ಅಕ್ಷರ ವೃತ್ತಗಳ ಮಾದರಿಯನ್ನು ತೆಗೆದುಕೊಂಡು ಮಾತ್ರಾಬಂಧಗಳನ್ನಾಗಿ ಮಾಡಿ ಪ್ರಯೋಗಿಸಿದ್ದು ಇದೆ. ತೋಟಕ ವೃತ್ತ, ತೋಟಕದ ಆದಿಯ ಲಘುಗಳಿಗೆ ಗುರುವನ್ನಿರಿಸಿದ ತೋಟಕ ಜನ್ಮ ವೃತ್ತ, ತೋಟಕಕ್ಕೆ ಮತ್ತೊಂದಷ್ಟು ಭಾಗವನ್ನು ಸೇರಿಸಿದ ತೋಟಕ ದೀರ್ಘ, ವನಮಯೂರ, ಚಿತ್ರಪದ, ದ್ರುತವಿಲಂಬಿತ ಮೊದಲಾದ ವೃತ್ತಗಳನ್ನು ಪ್ರಯೋಗಿಸಲಾಗಿದೆ. ತ್ರಿಮೂರ್ತಿ ಗಣಬದ್ಧ ಷಟ್ಪದಿ ಧಾರಳವಾಗಿ ಬಳಕೆಗೊಂಡಿದೆ,[14] ಅನಂತರ ದೊರಕಿದ ಅರುಣಾಬ್ಜನ ಮಹಾಭಾರತದಲ್ಲಿ ನೂರಾರು ಷಟ್ಪದಿಗಳು ಕಂಡುಬಂದವು. ಈ ವಿಷಯವನ್ನು ಮಹಾಭಾರತದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿ ಶ್ರೀ ಪುಣಿಂಚತ್ತಾಯರು ಹೇಳಿದ ಮಾತು ಹೀಗಿದೆ : ‘ತುಳು ಭಾಗವತದಲ್ಲಿ ನಾನು ಅಂಶಗಣ ಭ್ರಾಂತಿಯನ್ನು ಹುಟ್ಟಿಸುವ ಕೆಲವು ಅಪೂರ್ವ ವೃತ್ತಗಳಿವೆ ಎಂದು ಪ್ರಸ್ತಾಪಿಸಿದ್ದು ಇನ್ನಷ್ಟು ವಿಶ್ಲೇಷಣೆ ಮಾಡಿ ಅವು ಅಂಶಗಣ ಷಟ್ಪದಿಗಳೆಂದು ಗುರುತಿಸಿದವರು ಮಿತ್ರರಾದ ಶ್ರೀ ಪಾದೇಕಲ್ಲು ವಿಷ್ಣುಭಟ್ಟರು. ಆ ಕೀರ್ತಿ ಅವರಿಗೆ ಸಲ್ಲಬೇಕು.'[15] ಪಳಂತುಳು ಕಾವ್ಯಗಳಲ್ಲಿ ಬಳಕೆಗೊಂಡ ಛಂದೋಬಂಧಗಳ ಬಗೆಗೆ ಶ್ರೀ ಪುಣಿಂಚತ್ತಾಯರು ಆಯಾ ಕಾವ್ಯಗಳ ಪ್ರಸ್ತಾವನೆಯನ್ನು ಯೂ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಪಳಂತುಳು ಕಾವ್ಯದಲ್ಲಿಯೂ ವಿವೇಚನೆ ನಡೆಸಿದ್ದಾರೆ.

ಪಳಂತುಳುವಿನ ಕೆಲವು ಉದಾಹರಣೆಗಳು

೧. ತುಳು ಭಾಷೆಯೆಂದು ತಿರಸ್ಕರಿಸಬಾರದೆಂದು ಹೇಳುವ ತುಳುಭಾಗವತದ ಪದ್ಯ:

ವೇದೊಂಕುಳೆ ಸಾರೊ ಪಿನಪ್ಪಿ ಜನೋ ತುಳು ಭಾಷೆಂದುವೆಂದ್
ಖೇದೀಪನನೇಪ್ಪೊಡು ಸೂಕ್ಷಿಪುಟಾ ತೂವಹ್ನಿಹೆನ್ಪ್‌ಪೀ
ವಾದಂತುಳೆಯುಂಡಾ ವಿಕಲ್ಪಮತೀಯ ಯೇನಂದೊಮೆ ನಿತ್ಯೊ
ಶ್ರೀ ದೇವಕಿನಂದನ ಲೀಲೆಕುಳೇ ಕಥೆಕೋರ್ತ್‌‌ಣ್‌ಭೇದೊ
(೧-೧-೧೬)

(ವೇದಗಳ ಸಾರವನ್ನು ತಿಳಿದವರು ಇದು ತುಳು ಭಾಷೆಯೆಂದು ಬೇಸರಿಸಬಾರದು. ಯೋಚಿಸಿದರೆ ತುಳುವಿನ ತೂ ಮತ್ತು ಸಂಸ್ಕೃತದ ವಹ್ನಿ ಬೇರೆ ಬೇರೆಂಬ ವಾದದಲ್ಲಿ ಹುರುಳಿದೆಯೇ? ಅದರಂತೆ ಶ್ರೀ ಕೃಷ್ಣನ ಲೀಲೆಗಳಲ್ಲಿ ಭಾಷೆ ಬೇರಾದರೂ ಭೇದವೆಲ್ಲಿದೆ?)

೨. ದೈವೀಗುಣಗಳ ಅನಂತತೆಯನ್ನು ಹೇಳುವ ತುಳು ಭಾಗವತದ ಪದ್ಯ

ಲೆಕ್ಕೊಮಾಂಪೊಳಿನಂಬರಂಟ್ಪ ಚೋಜಕೀನುಡುಸಂಕುಲಂ
ಲೆಕೊ ಮಾಂಪೊಳಿ ಭೂಮಿಟೇ ನಿದೆಸ್ಟ್
ತ್ತಿ ಧೂಳ್ತ ರಾಶಿನೀ
ಲೆಕ್ಕೊ ಮಾಂಪೊಳಿ ವರ್ಷಧಾರೆನಿ ಸಾಗರಾತಿರಮಾಲೆನೀ
ಲೆಕ್ಕೊ ಮಾಂಪಿಯೆರೇರ್ ಶ್ರೇಷ್ಠರನಂತ ಮೂರ್ತಿಗುಣೊಂಕುಳೆ
(೧-೨-೩೨)

(ಆಕಾಶದಲ್ಲಿ ಕಾಣುವ ನಕ್ಷತ್ರ ಸಮೂಹವನ್ನು ಲೆಕ್ಕ ಮಾಡಬಹುದು, ಭೂಮಿಯ ಧೂಳಿನ ರಾಶಿಯನ್ನು ಲೆಕ್ಕ ಮಾಡಬಹುದು, ಮಳೆನೀರನ್ನೂ ಸಮುದ್ರದ ತೆರೆಗಳ ಮಾಲೆಯನ್ನು ಲೆಕ್ಕಿಸಬಹುದು, ಅನಂತಮೂರ್ತಿಯ ಗುಣಗಳನ್ನು ಲೆಕ್ಕಿಸಲು ಯಾರು ಸಮರ್ಥರು?)

೩. ಅನರ್ಥಗಳುಂಟಾದ ಚಿತ್ರಣದ ಸಂದರ್ಭವನ್ನು ತುಳು ಭಾಗವತದಲ್ಲಿ ಹೀಗೆ ಹೇಳಿದೆ:

ಕುಕ್ಕುಟದ ಸಿಂಜ ಪನಸೊಂಕುಳು ಫಲೀತೊ
ಅಕ್ಕ್
ಡ್ಯೊ ಚೂತಫಲೊ ಮಲ್ಲ ಪಿಲಟಾನಿ
ಬಿರ್ಕ್
‌‌ಟ್ಸ್ಟ್ಚೋಜಿಯೊನ ತಾರಕಿ ದಿವೊಂಟ್
ಕುಕ್ಕುರೆರ್ ಗಾನಿಪುಕೊ ನಾಲ್
ದಿಶೆಟೊಪ್ಪ (೧-೧೩-೫)

(ಮಾವಿನ ಮರದಲ್ಲಿ ತುಂಬ ಹಲಸಿನ ಕಾಯಿಗಳಾದುವು. ದೊಡ್ಡ ಹಲಸಿನ ಮರದಲ್ಲಿ ಮಾವುಗಳು ನೇತಾಡಿದುವು. ಆಕಾಶದಲ್ಲಿ ನಕ್ಷತ್ರಗಳು ಚೆಲ್ಲಾಡಿದವು; ನಾಲ್ಕು ದಿಕ್ಕುಗಳಲ್ಲೂ ನಾಯಿಗಳು ಊಳಿಟ್ಟವು).

೪. ಹರಿಸೇವೆ ಮಾಡದ ಅಂಗಾಂಗಳು ವ್ಯರ್ಥವೆಂಬ ವರ್ಣನೆ ತುಳು ಭಾಗವತದಲ್ಲಿ ಹೀಗಿದೆ :

ಹರಿಕಾವ್ಯೊಮಿ ಕೇಳ್ಯರ ಪೋವನತಾ ಪದೊ ಪಾದಪೊಮತೊ
ಹರಿನಾಮೊಮಿ ಕೇಳನ ಶ್ರೋತ್ರಪುಟೋ ಮರತೊಟ್ಟೆ ಕುಳಾತೊ
ಹರಿಭಕ್ತೆರೆ ಚೂವನ ನೇತ್ರ ಯುಗಂ ಶಿಖಿದೃಷ್ಟಿಕುಳಾತೋ
ಹರಿಕೀರ್ತಿಪನೆಪ್ಪುಟಯೀ ವದನೋ ಬಿಲೊಮಂದ್
ಡೆ ಪಿನ್ನೀ (೨-೩-೧೪)

(ಹರಿಕಾವ್ಯವನ್ನು ಕೇಳಲು ಹೋಗದ ಕಾಲು ಮರಹವಲ್ಲವೆ? ಹರಿನಾಮವನ್ನು ಕೇಳದ ಕಿವಿ ಮರದ ಪೊಟರೆಯಲ್ಲವೆ? ಹರಿಭಕ್ತರನ್ನು ನೋಡದ ಕಣ್ಣುಗಳನ್ನು ನವಿಲುಗರಿಯ ಕಣ್ಣುಗಳಲ್ಲವೆ? ಹರಿಕೀರ್ತನೆ ಮಾಡದ ಬಾಯಿ ಬಿಲವೆಂದು ತಿಳಿ)

೫. ವಸಂತ ಋತು ವರ್ಣನೆ – ಮಹಾಭಾರತದಲ್ಲಿ ಹೀಗಿದೆ :

ಸೀತೊ ಪೋಸ್ಟ್ಣ್ ಮೆಲ್ಲ
ಜಾತೊ ಮಾಸ್ಟ್
ಣ್ ದಾಹೊ
ಕಾತ್
ಟಾಸ್ಟ್ಣಪೇಕ್ಷೆ ನರಕೆಯ್ಯಾ
ಆತಪಾ ಕಿರಣೊಂಕು
ಳಾತಲಾ ಪೊಡಿಯಾಯೆ
ಭೂತಲೊಂಟ್ ವಸಂತೆರ್ ತನ್ನಾಪೂ

(ಶೀತ ಮೆಲ್ಲನೆ ಹೋಯಿತು, ನಿಧಾನವಾಗಿ, ದಾಹ ತೊಡಗಿತು, ಎಲ್ಲ ಮನುಷ್ಯನಿಗೂ ಗಾಳಿಯ ಅಪೇಕ್ಷೆಯುಂಟಾಯಿತು. ಭೂತಲಕ್ಕೆ ವಸಂತನು ಬಂದಾಗ ಬಿಸಿಲಿನ ಝಳಕ್ಕೆ ಎಲ್ಲವೂ ಹುಡಿಯಾಯಿತು)

೬. ಮಹಾಭಾರತದಲ್ಲಿ ಐರಾವತವನ್ನು ತೀರಿಸುವ ಅರ್ಜುನನ ಪ್ರತಿಜ್ಞೆ ಹೀಗಿದೆ :-

ಇಂದ್ರನ್ ಗಜರಾಜನ ಕಲೃಕೊಮಾ ಸುರಧೇನುವಿ ಕೂಡ
ಮಂದೀಪನೆ ತರ್ಪೊವೆ ಚೂಲೆ ನಮಾ ರಾಜಾಂಗಣಂಕಾವ
ಸಂದೇಹಿಪನೇ ಸುರೆರಾ ನರೆರಾ ಬಹುಮಾನಿಪಿನಂದೊ
ಅಂದಾಕವುನೆಪ್ಪುಟ ಮಿತ್ತ್
ಕೆನಾ ಬಿರು ಪತ್ತಯೆನೆಂದೆ (೫-೪೦)

(ಇಂದ್ರನ ಐರಾವತವನ್ನು ಕಲ್ಪವೃಕ್ಷ ಕಾಮಧೇನುಗಳೊಡನೆ ತಡವಿಲ್ಲದೆ ನಮ್ಮ ರಾಜಾಂಗಣಕ್ಕೆ ತರಿಸುತ್ತೇನೆ ನೋಡಿರಿ. ಸಂದೇಹವಿಲ್ಲದೆ ಸುರರೂ ನರರೂ ಗೌರವಿಸುವಂತೆ ಮಾಡದಿದ್ದರೆ ಮುಂದೆ ನನ್ನ ಬಿಲ್ಲನ್ನೂ ಹಿಡಿಯೆನು)

೭. ಸ್ತುತಿ ಪದ್ಯದಲ್ಲಿ ಅನುಪ್ರಾಸಾದಿಗಳು ಬಂದು ಪದ್ಯವು ಕರ್ಣಮನೋಹರವಾದ ಬಗೆಗೆ ಕಾವೇರಿಯಿಂದ ಉದಾಹರಣೆ:

ರಂಗನಾಥ ನಮೋಸ್ತುತೇ ದುರತಾಂಗಭಂಗ ನಮೋಸ್ತುತೇ
ಜಂಗಮಸ್ಥಿರ ದೇವದಾನವ ಮಂಗಲಾತ್ಮ ನಮೋಸ್ತುತೇ
ಅಂಗಜಾಂತಕ ಸಂಗನಂಗ ಪಿತಾಂಗ ಗಂಗ ಮನೋಹರಾ
ಭಂಗಶ್ರೀ ವನಮಾಲಿ ಶೋಭ ಶುಭಾಂಗ ಸ್ವಾಪಿ ನಮೋಸ್ತುತೆ (೮-೭೯)

ಭಾಷೆಯ ಸೊಗಸು ತಿಳಿಯಲು ಉದಾಹರಣೆ ರೂಪದಲ್ಲಿ ಮಾತ್ರ ಇಲ್ಲಿ ಕೆಲವು ಪದ್ಯಗಳನ್ನು ಉದ್ಧರಿಸಿದೆ. ಪಳಂತುಳು ಪರಂಪರೆಯಲ್ಲಿ ಬಂದ ಕಾವ್ಯಗಳ ವಿಸ್ತೃತವಾದ ಅಧ್ಯಯನ ನಡೆಯಬೇಕಿದೆ. ಅದರೊಂದಿಗೆ ಇನ್ನೂ ಪತ್ತೆಯಾಗದ ಕೃತಿಗಳ ಬಗೆಗೆ ಹುಡುಕುವಿಕೆ ನಡೆಯಬೇಕಾಗಿದೆ. ಇತರ ಜ್ಞಾತಿ ಭಾಷೆಗಳೊಡನೆ ತಲೆಯೆತ್ತಿ ನಿಲ್ಲುವಷ್ಟು ಸಾಮರ್ಥ್ಯ ತುಳು ಭಾಷೆಗಿದೆಯೆಂಬುದನ್ನು ಪಳಂತುಳು ಕೃತಿಗಳು ಸಾರಿ ಹೇಳುತ್ತಿವೆಯೆಂದು ಧಾರಾಳವಾಗಿ ಹೇಳಬಹುದಾಗಿದೆ.

ಆಕರಸೂಚಿ

೧. ವೆಂಕಟರಾಜ ಪುಣಿಂಚತ್ತಾಯ, ಶ್ರೀ ಭಾಗವತೊ (ಸಂ.), ೧೯೮೪, ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ

೨. ವೆಂಕಟರಾಜ ಪುಣಿಂಚತ್ತಾಯ, ಕಾವೇರಿ (ಸಂ.), ೧೯೮೭, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ

೩. ವೆಂಕಟರಾಜ ಪುಣಿಂಚತ್ತಾಯ, ತುಳು ದೇವೀ ಮಹಾತ್ಮೆ, (ಸಂ.), ೧೯೯೧, ರಾಷ್ಟ್ರಕವಿ ಗೋವಿಂದ ಪೈ, ಸಂಶೋಧನ ಕೇಂದ್ರ ಉಡುಪಿ

೪. ವೆಂಕಟರಾಜ ಪುಣಿಂಚತ್ತಾಯ, ಮಹಾಭಾರತೊ (ಸಂ.), ೨೦೦೦, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

೫. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಪಳಂತುಳು ಕಾವ್ಯ, ೨೦೦೧, ಮಧುಮಲೆ ಪ್ರಕಾಶನ, ಬೆಂಗಳೂರು

 

[1] ಪಳಂತುಳು ಕಾವ್ಯ ಪು.೧

[2] ಮಹಾಭಾರತೊ, ಪ್ರಸ್ತಾವನೆ, ಪು.೧೧

[3] ವನಜಾತೀ ಸಮೆ ಶಿವಾನೆಡುಂಬುರಾರಂ, ಮಹಾಭಾರತೊ ೧-೧೬.

[4] ಮಹಾಭಾರತೋ ಅನುಬಂಧ ೨, ಪು.೨೪೪.

[5] ಪದ್ಯಗಳನ್ನು ‘ಪಾಡ್‌’ ಎಂದು ಹೇಳಲಾಗಿದೆ. ಇದು ವಿಶಿಷ್ಟ ಪ್ರಯೋಗವಾಗಿದೆ. ಈ ಗ್ರಂಥವು ಪ್ರಾಯಶಃ ಕವಿಯ ಪೂರ್ಣಕೃತಿಯೆನ್ನಬಹುದು. ಕೊನೆಯ ಸಂಧಿಯಲ್ಲಿ ಗ್ರಂಥ ಪರಿಸಮಾಪ್ತಿಯ ಮತ್ತು ಫಲಶ್ರುತಿಯ ಪದ್ಯಗಳಿವೆ.

[6] ‘ಏಣಾಪಾಣಿಮುಂಕುಂದ’ – ಎಂಬುದಕ್ಕೆ ‘ಶಂಕರನಾರಾಯಣ’ ಎಂಬರ್ಥವನ್ನು ವೆಂಕಟರಾಜ ಪುಣಿಂಚತ್ತಾಯರು ನೀಡಿದ್ದು ಅದು ನಾಣಿಲ್ತಾಯ ವಂಶದ ಕವಿಯ ಹೆಸರೆಂದೂ ಊಹಿಸಿದ್ದಾರೆ. ಆದರೆ ಸೂಕ್ಷ್ಮವಾಗಿ ಪರೀಶೀಲಿಸಿದರೆ ಅದು ಕವಿಯ ಹೆಸರಾಗಿರದೆ ಕವಿ ಸ್ತುತಿಸಿದ ದೇವರ ಹೆಸರೆಂದು ತಿಳಿಯುತ್ತದೆ. ಆ ಪದ್ಯಕ್ಕಿಂತ ಹಿಂದೆಯೇ ಕೊಡವೂರಿನ ಮೃಡರಾಮನನ್ನು ಸ್ತುತಿಸಿದೆ. ಕೊಡವೂರಿನ ಶಂಕರನಾರಾಯಣ ದೇವಾಲಯ ಪ್ರಸಿದ್ಧ. ಅದೇ ಶಂಕರನಾರಾಯಣವನ್ನು ಏಣಾಪಾಣಿ ಮುಂಕುಂದನೆನ್ನಲಾಗಿದ್ದು ಅವನನ್ನು ಭಜಿಸಿಯೇ ಆ ಬಗೆಗೆ (?) ಅವನು ಕಾವ್ಯವನ್ನು ರಚಿಸಿದನೆಂದು ಅರ್ಥವಾಗುತ್ತದೆ.

[7] ಗುಡ್ಡೆತ ರಾಯನ ಕೃತಿಗಳನ್ನು ಹೊರತಾಗಿ ಎಲ್ಲವನ್ನೂ ಕಾವ್ಯವೆಂದೇ ಉಲ್ಲೇಖಿಸಲಾಗಿದೆ. ಗುಡ್ಡೆತರಾಯದ ಕೃತಿಗಳನ್ನು ಮಾತ್ರ ಕಥೆ, ಚರಿತೆ ಎಂದು ಉಲ್ಲೇಖಿಸಿದೆ. ಆದುದರಿಂದ ಅವನ ಕೃತಿಗಳು ಗದ್ಯವೇ ಎಂಬ ಸಂಶಯವನ್ನು ವ್ಯಕ್ತ ಪಡಿಸುವಂತಿದೆ. ಈ ಕಾವ್ಯಗಳೆಲ್ಲ ಸು.ಕ್ರಿ.ಶ ೧೨೦೦ – ೧೩೫೦ ರಚನೆಗಳೆಂದೂ ಊಹೆ ಮಾಡಬಹುದಾಗಿದೆ.

[8] ಆದರೂ ಸಂಪಾದಕರಾದ ವೆಂಕಟರಾಜ ಪುಣಿಂಚತ್ತಾಯರು ಸಮರ್ಥವಾದ ಊಹಾಪಾಠಗಳನ್ನು ನೀಡಿ ಅದಷ್ಟು ಪರಿಶುದ್ಧವಾಗಿ ಕೃತಿ ಹೊರಬರಲು ಪ್ರಯತ್ನಿಸಿದ್ದಾರೆ. ಏಕೈಕ ಹಸ್ತಪ್ರತಿಯಿಂದ ಗ್ರಂಥ ಸಂಪಾದನೆ ಮಾಡುವಲ್ಲಿಲ ತುಳುವಿನದೇ ಒಂದು ವಿಶಿಷ್ಟ ವಿಧಾನವಾಗಿ ಪರಿಗಣಿತವಾಗುತ್ತದೆ.

[9] ತುಳು ದೇವಿ ಮಹಾತ್ಮೆ, ಪ್ರಸ್ತಾವನೆ, ಪು.೧೦

[10] ತುಳು ದೇವೀ ಮಹಾತ್ಮೆ, ಪ್ರಸ್ತಾವನೆ ಪು.೧೬-೧೭ ಮತ್ತು ಪಳಂತುಳು ಕಾವ್ಯ ಪು. ೪

[11] ವೆಂಕಟರಾಜ ಪುಣಿಂಚತ್ತಾಯ ಮಹಾಭಾರತೊ, ಪ್ರಸ್ತಾವನೆ ಪು. ೨೧

[12] ವಿವರಗಳಿಗೆ ಶ್ರೀ ಭಾಗವತೊ ಪ್ರಸ್ತಾವನೆ, ಪು. ೨೧-೨೪; ತುಳು ದೇವೀ ಮಹಾತ್ಮೆ, ಪ್ರಸ್ತಾವನೆ, ಪು. ೧೬-೧೭, ಪಳಂತುಳು ಕಾವ್ಯ ಪು.೧೫-೧೮, ೧೮-೫೦ – ಇವುಗಳನ್ನು ನೋಡಬಹುದು.

[13] ತುಳು ಭಾಗವತದ ಪ್ರಸ್ತಾವನೆಯಲ್ಲಿ ಪುಣಿಂಚತ್ತಾಯರು ಕೆಲವು ಪದ್ಯಗಳ ಬಗೆಗೆ ಅಂಶಗಣ ಭ್ರಾಂತಿಯನ್ನುಂಟು ಮಾಡುವ ವೃತ್ತಗಳೆಂದು ಹೇಳಿದ ಸೂಚನೆಯನ್ನು ಮುಂದುವರಿಸಿ ವಿವೇಚಿಸಿದಾಗ ಇಡಿಯ ಕೃತಿಯಲ್ಲಿ ಹದಿನಾರು ತ್ರಿಮೂರ್ತಿಗಣಬದ್ದ (ಅಂಶಗಣ ಬದ್ದ) ಷಟ್ಪದಿಗಳು ಕಂಡುಬಂದವು. ಈ ಕುರಿತು ಪ್ರಸ್ತುತ ಲೇಖಕನು ಒಂದು ಲೇಖನವನ್ನು ಬರೆದಿದ್ದು ಅದು ಕರ್ಣಾಟಕ ಲೋಚನ, ದಶಂಬರ ೧೯೯೦ ಪತ್ರಿಕೆಯಲ್ಲಿ ಪ್ರಕಟಗೊಂಡಿತು.

[14] ಮಹಾಭಾರತೊ, ಪ್ರಸ್ತಾವನೆ ಪು.೨೨

[15] ಶ್ರೀ ರಾಧಾಕೃಷ್ಣ ಬೆಳ್ಳೂರು ಅವರು ಪಳಂತುಳು ಕಾವ್ಯಗಳ ಛಂದಸ್ಸಿನ ಬಗೆಗೆ ಅಧ್ಯಯನ ನಡೆಸಿ ಪಿಎಚ್.ಡಿ. ಪ್ರೌಢ ಪ್ರಬಂಧ ರಚಿಸಿದ್ದಾರೆ. ಆ ಪ್ರಬಂಧದಲ್ಲಿ ಈ ಬಗೆಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಬಹುದು.