ತುಳು ಮೂಲ : ಕು.ಶಿ. ಹರಿದಾಸ ಭಟ್ಟ
ಕನ್ನಡಕ್ಕೆ : ಎ.ವಿ. ನಾವಡ

ಈ ನಮ್ಮ ಕನ್ನಡ ರಾಜ್ಯದ ರಾಜಧಾನಿಯಲ್ಲಿ ಇಂದಿನ ಶುಭದಿನದಲ್ಲಿ, ಈ ಜಾಗದಲ್ಲಿ ಸೇರಿರುವ ತುಳುವ ಗುರಿಕಾರರಿಗೆ, ತುಳು ಸಾಹಿತಿಗಳಿಗೆ, ತುಳು ಪಂಡಿತರಿಗೆ ಹಾಗೇನೇ ತುಳುವ ಮಹಾಜನರಿಗೆಲ್ಲ ವಂದನೆ ಸಲ್ಲಿಸುತ್ತಿದ್ದೇನೆ. ಇಂದಿನ ಸಮ್ಮೇಳನ ತುಳುವಿನ ಮೊದಲ ಸಾಹಿತ್ಯ ಸಮ್ಮೇಳನ ಆಗಿದ್ದು ಅದಕ್ಕೆ ನನ್ನನ್ನು ಬೆಂಗಳೂರು ತುಳುಕೂಟದ ಪದಾಧಿಕಾರಿಗಳು ಅಧ್ಯಕ್ಷನಾಗಬೇಕೆಂದು ಕೇಳಲು ಅವರ ಅಧ್ಯಕ್ಷರನ್ನೇ ಕಳುಹಿಸಿಕೊಟ್ಟು ನನ್ನ ಬಾಯಿ ಕಟ್ಟಿಸಿ ಒಲವಿನ ಹಗ್ಗದಲ್ಲಿ ಕೈಕಾಲು ಕಟ್ಟಿ ಹಾಕಿ ಇಲ್ಲಿಯ ತನಕ ಕರೆದುಕೊಂಡು ಬಂದರು. ನನ್ನ ಗೆಳೆಯ ವಿಶುಕುಮಾರರು ನಮ್ಮ ರಾಜಧಾನಿಯಲ್ಲಿ ತುಳುವಿನ ಬಗ್ಗೆ ಒಂದು ಕೂಟವನ್ನು ಕಟ್ಟಿ ಕೆಲಸ ಮಾಡುತ್ತಿರುವುದು ತಿಳಿದ ವಿಚಾರವಾದರೂ ಅವರ ಪ್ರಥಮ ಸಮ್ಮೇಳನಕ್ಕೆ ಅಧ್ಯಕ್ಷರಾಗಲು ಬೇಕಾದ ಯಾವೊಂದು ಅಪರಾಧವನ್ನೂ ನಾನು ಮಾಡಿದಂತಿಲ್ಲ. ಆದರೆ ಅವರು ಪ್ರೀತಿಯಿಂದ ಕೇಳುವಾಗ ಒಪ್ಪಕೊಳ್ಳುವುದು ನನ್ನ ಕರ್ತವ್ಯ ಎಂದು ಭಾವಿಸಿ ನಾನು ನಿಮ್ಮ ಎದುದು ನಿಂತಿದ್ದೇನೆ. ಒಂದಾನೊಂದು ಕಾಲದಲ್ಲಿ, ಇಂದಿಗೆ ಅರುವತ್ತು ವರ್ಷಗಳ ಪ್ರಾಕಿನಲ್ಲಿ ನಾನು ಹುಟ್ಟಿ ಬೆಳೆದ ಉಡುಪಿ ತುಳು ಚಳುವಳಿಯಲ್ಲಿ ಮುಖ್ಯವಾದ ಕೆಲಸಗಳನ್ನು ದಿವಂಗತ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ನಡೆದ ಕೆಲಸಗಳನ್ನು ಕೇಳಿ ಬಲ್ಲೆ. ಅವರು ಆ ಕಾಲದಲ್ಲಿ ಅಚ್ಚು ಮಾಡಿದ ಕೆಲವು ತುಳು ಪುಸ್ತಕಗಳನ್ನು ನೋಡಿದ್ದೇನೆ. ಅದರ ವಿಶಿಷ್ಟ ತುಳು ವ್ಯಾಕರಣವನ್ನು ಓದಿದ್ದೇನೆ. ಆ ಕಾಲದಲ್ಲಿ ಅವರೂ ಒಂದು ತುಳುಕೂಟ ಕಟ್ಟಿ ತನ್ನ ಗರಡಿಯಲ್ಲಿ ಕೆಲವು ತುಳುಸಾಹಿತಿಗಳಿಗೆ ಇಂಬು ಕೊಟ್ಟ ವಿಷಯ ತುಳು ಸಾಹಿತ್ಯದ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆದಿಡಬೇಕಾದ ವಿಷಯವಾಗಿದೆ. ಯಾವುದೇ ಹಣಕಾಸಿನ ಬೆಂಬಲವಿಲ್ಲದೆ ಇದ್ದ ಕಾಲದಲ್ಲಿ ಪಣಿಯಾಡಿಯವರು ಸುಮಾರು ಇಪ್ಪತ್ತು ವರ್ಷ ಈ ಚಳುವಳಿಯನ್ನು ನಡೆಸಿದ ಒಂಟಿ ಸಾಹಸ ಇಂದಿಗೂ ಆಶ್ಚರ್ಯದ ಸಂಗತಿ. ರಾಷ್ಟ್ರೀಯ ಚಳುವಳಿಯ ಸಂದರ್ಭದಲ್ಲಿ ತುಳುಭಾಷೆಗಾಗಿ ಮಾಡುವ ಸೈದ್ಧಾಂತಿಕ ಕೆಲಸಗಳು ಆ ಕಾಲದ ಜನರಿಗೆ ಸ್ವಾತಂತ್ರ್ಯ ಸಂಗ್ರಾಮದ ಒಂದು ಭಾಗವೆಂದೇ ತೋರಿಬಂದಿತು. ಇಂಗ್ಲಿಷ್‌ಗೆ ವಿರುದ್ಧ ನಾವು ಮಾತನಾಡುತ್ತಿರುವ ದೇಶಭಾಷೆಗಳನ್ನು ಶ್ರೀಮಂತಗೊಳಿಸಿ ಎತ್ತಿ ಕಟ್ಟಬೇಕೆನ್ನುವ ಛಲ ಪಣಿಯಾಡಿಯವರದು. ಅವರ ಜೊತೆ ಕೆಲಸ ಮಾಡಿದ ಪೊಳಲಿ ಶೀನಪ್ಪ ಹೆಗ್ಗಡೆಯವರು, ಮೋನಪ್ಪ ತಿಂಗಳಾಯರು, ನಾರಾಯಣ ಕಿಲ್ಲೆಯವರು ಎಲ್ಲರೂ ತುಳುವ ತಾಯಿಯ ಮಕ್ಕಳು ಎಂಬ ನೆಲೆಯಲ್ಲಿ ಒಂದಾಗಿ ದುಡಿದು ಬಹುಶಃ ಕರ್ನಾಟಕ ರಾಜ್ಯದ ಧುರೀಣರಿಗೆ ತುಳು ಎನ್ನುವ ಒಂದು ಭಾಷೆ ರಾಜ್ಯದೊಳಗೆ ಬೇರುಬಿಟ್ಟು ನೆಲೆಸಿದೆ, ತುಳುನಾಡಿನ ಜನರಿಗೆ ಯಾವ ವಿಷಯವನ್ನು ಹೇಳಬೇಕಾದರೂ ಅದನ್ನು ತುಳುವಲ್ಲೇ ಹೇಳಬೇಕಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಟ್ಟರು. ಇಂತಹ ಒಂದು ಹಠಸಾಧನೆ ಮಾಡಿದವರು ಉಡುಪಿಯನ್ನು ಜನ್ಮಕ್ಷೇತ್ರವನ್ನೂ, ಕಾರ್ಯಕ್ಷೇತ್ರವನ್ನೂ ಆಗಿ ಮಾಡಿಕೊಂಡವರು ಪಣಿಯಾಡಿಯವರು. ಆದುದರಿಂದ ಪ್ರಥಮ ತುಳು ಸಾಹಿತ್ಯ ಸಮ್ಮೇಳನಕ್ಕೆ ಯಾರಾದರೊಬ್ಬ ಉಡುಪಿಯವನನ್ನೇ ಆಯ್ಕೆ ಮಾಡಬೇಕೆನ್ನುವುದು ಕರ್ನಾಟಕದ ತುಳುಕೂಟದ ಗುರ್ಕಾರರು ಉಡುಪಿ ತನಕ ನನ್ನನ್ನು ಹುಡುಕಿಕೊಂಡು ಬಂದಿರಬೇಕೆಂದು ನನಗೆ ಕಾಣಿಸುತ್ತದೆ. ನಿವೃತ್ತರಾಗಿ ಕೆಲಸವಿಲ್ಲದೆ ಕುಳಿತುಕೊಳ್ಳುವ ಬದಲು ತುಳುಭಾಷೆಯಲ್ಲಿ ಶಬ್ದಗಳು ಎಷ್ಟು ಉಂಟೆಂದು ಲೆಕ್ಕ ಮಾಡಲು ಒಂದು ಯೋಜನೆ ಆರಂಭಿಸಿ ಬೆಟ್ಟು ಬಯಲು ತಿರುಗಾಡಿಕೊಂಡು ಸಿಕ್ಕಿದ ಶಬ್ದಗಳನ್ನು ಹೆಕ್ಕಿಕೊಂಡು ಇರುವವನಿಗೆ ತುಳುಕೂಟದ ಮಹಾಜನರು ದೊಡ್ಡ ಭಾರವನ್ನು ಹೊರಿಸಿದ್ದಾರೆ. ಸನ್ಮಾನ ಮಾಡಿದ್ದಾರೆಂದು ಭಾವಿಸಿದ್ದೇನೆ. ತುಳುವರ ಸಂಖ್ಯೆ ಸಣ್ಣದಾದರೂ ಅವರ ಹೃದಯ ಸಣ್ಣದಲ್ಲ; ಅವರ ಹೃದಯವೈಶಾಲ್ಯ ಹಾಗೂ ಔದಾರ್ಯದಿಂದಾಗಿ ತುಳುವಿನಲ್ಲಿ ಏನೂ ಸಾಧನೆ ಮಾಡದ ನನ್ನನ್ನು ಈ ಗೌರವಸ್ಥಾನದಲ್ಲಿ ಕುಳ್ಳಿರಿಸಲು ಸಾಧ್ಯವಾಯಿತೆಂಬುದನ್ನು ನಾನು ಬಲ್ಲೆ.

ಇಷ್ಟು ದೊಡ್ಡ ಜವಾಬ್ದಾರಿಯನ್ನು ಹೊರುವ ಶಕ್ತಿಯನ್ನು ತುಳುವ ತಾಯಿ ನನಗೆ ಕೊಡಲಿ ಎಂದು ತುಳು ಮಹಾಜನರ ಸಮ್ಮುಖದಲ್ಲಿ ಬೇಡಿಕೊಳ್ಳುತ್ತಿರುವೆ. ನನ್ನ ಮಾತಿನಲ್ಲಿ ಬರುವ ಅಥವಾ ಇರುವ ತಪ್ಪುಗಳನ್ನು ಮಡಿಲಿನಲ್ಲಿ ಹಾಕಿಕೊಂಡು ಸಮ್ಮತವಾದುದನ್ನು ಸ್ವೀಕಾರ ಮಾಡಿಕೊಂಡು ಸಲ್ಲದುದನ್ನು ದೂರ ಮಾಡಿ, ಸರಿಯಲ್ಲದುದನ್ನು ತಿದ್ದಿ ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಮಾತನಾಡುವ ವಿಷಯ ಆಗಲಿ, ಸಂದರ್ಭ ಆಗಲಿ, ಪರಿಹಾರವಾಗಲೀ ಯಾವುದೂ ತುಳುವಿನ ಮೊದಲ ಮಾತಾಗಲೀ, ಕೊನೆಯ ಮಾತಾಗಲೀ ಅಲ್ಲ. ಒಂದು ದೊಡ್ಡ ಭಾಷಾ ಸಮಾಜದ ನಡುವೆ ಒಂದು ಚಿಕ್ಕ ಭಾಷೆ ಯಾವ ರೀತಿಯಲ್ಲಿ ತನ್ನ ಉತ್ತಮಿಕೆಯನ್ನು ಸಾಧಿಸಿಕೊಳ್ಳಬೇಕು. ಯಾವ ಹಾದಿಯಲ್ಲಿ ಸಾಗಿದರೆ ಭಾಷೆ ಬೆಳೆದು ಜನರೂ ಬೆಳೆದು ದೇಶಕ್ಕೆ ಒಳ್ಳೆಯದು ಆದೀತೆಂದು ವಿಚಾರ ಮಾಡುವುದಕ್ಕೆ ನಾಂದಿ ಇಟ್ಟಂತೆ ನಾಲ್ಕು ಮಾತು ಹೇಳಲು ಬಯಸುತ್ತಿದ್ದೇನೆ.

ಮಾನ್ಯರೆ, ಹಿಂದೆ ಮುಂದೆ ನೋಡದೆ ಮಾತನಾಡುವವನು ನಾನಲ್ಲ. ಅದರಲ್ಲೂ ನನ್ನ ಸುತ್ತಮುತ್ತ, ನನ್ನ ಮುಂದೆ ಅನೇಕ ಮಂದಿ ಪಂಡಿತರೂ, ಅಭಿಮಾನಿಗಳೂ ಸಾಕ್ಷಿಗೆ ಇರುವಾಗ ನಾನು ಎಚ್ಚರಿಕೆಯಿಂದ ಮಾತನಾಡುವ ಅಗತ್ಯವಿದೆ. ನನ್ನ ಒಂದು ಸ್ವಭಾವವೆಂದರೆ ಮುಂದೆ ನೋಡುವುದಕ್ಕಿಂತ ಹೆಚ್ಚು ಹಿಂದೆ ನೋಡುವುದು. ನಮ್ಮ ಹಿಂದಿನ ತುಳು ಜನರು ಏನೇನು ಮಾಡಿದ್ದಾರೆ, ಯಾಕಾಗಿ ಮಾಡಿದ್ದಾರೆ, ಅದರ ಪರಿಣಾಮ ಏನಾಗಿದೆ ಎನ್ನುವ ಬಗ್ಗೆ ಒಂದು ಸಮೀಕ್ಷೆ ಮಾಡಬೇಕು. ಬಳಿಕ ಇನ್ನು ಏನಾಗಬೇಕಾಗಿದೆ ಎಂದು ಯೋಚನೆ ಮಾಡಬೇಕಾಗಿದೆ. ತುಳುನಾಡಿನ ಹಿಂದಿನ ಸ್ಥಿತಿಗೂ ಇಂದಿನದಕ್ಕೂ ಬಹಳ ವ್ಯತ್ಯಾಸವಿದೆ. ಮುಂದಿನ ದಿನಗಳಲ್ಲಿ ಈ ತುಳುವರ ಸಾಧನೆಯ ಗುರಿ ಏನೆನ್ನುವುದನ್ನು ದಾಖಲೆ ಮಾಡಬೇಕೆಂದು ನನಗೆ ಕಾಣುತ್ತದೆ. ತುಳುವರು ಈ ಭಾರತ ದೇಶದ ಪ್ರಜೆಗಳಾಗಿಯೂ ಕರ್ನಾಟಕ ರಾಜ್ಯದ ನಾಗರಿಕರಾಗಿಯೂ ತುಳುವರೆನ್ನುವ ವಿಶೇಷ ಚಹರೆ ಅವರಲ್ಲಿ ಏನಿದೆ, ಅದನ್ನು ಬಳಸುವುದು, ಬೆಳೆಸುವ ಬಗೆ ಹೇಗೆ? ಹಲವು ಕಿರುತೊರೆಗಳು ಸೇರಿದಾಗಲೇ ಅದು ಹೊಳೆಯಾಗುತ್ತದೆ. ಯಾವ ಹೊಳೆಯೂ ತನ್ನಡೆಗೆ ಬರುವ ಕವಲುಗಳನ್ನು ಬೇಡವೆಂದು ನಿರಾಕರಿಸುವುದಿಲ್ಲ. ಕೊನೆಯಲ್ಲಿ ಎಲ್ಲಾ ನದಿಗಳು ಕಡಲಿಗೇ ಸೇರಿಬೇಕು. ಅಲ್ಲಿಗೆ ಮುಗಿಯುವುದಿಲ್ಲ. ಭೂಮಿದೇವಿಯ ಮಹಾತ್ಮೆ – ಕಡಲಿನ ಉಪ್ಪು ನೀರು ಸಿಹಿ ನೀರಾಗಿ ಭೂಮಿಗೆ ಬೀಳಬೇಕು, ಬಿದ್ದ ನೀರು ಒಸರಾಗಬೇಕು, ಒಸರು ಅಬ್ಬಿಯಾಗಿ ಮುಂದೆ ಕಾಲುವೆ ಆಗಬೇಕು. ಇಂತಹ ಅಬ್ಬಿಗಳು ತೋಡುಗಳಾಗಿ ಹಲವು ತೋಡುಗಳು ಒಂದಾಗಿ ನದಿಗೆ ಸೇರಬೇಕು. ಇದುವೇ ಪ್ರಕೃತಿಯ ಕರ್ಮಚಕ್ರ. ಅದುವೇ ನಿಯಮ ಭಾಷೆಗೂ. ತುಳುವಿನಿಂದ ಕನ್ನಡದ ಶ್ರೇಯಸ್ಸು, ಕನ್ನಡದಿಂದ ಭಾರತದ ಬಹುಭಾಷಿ ಸರಸ್ವತಿಯ ಶ್ರೇಯಸ್ಸು, ರಾಷ್ಟ್ರದ ಶ್ರೇಯಸ್ಸು, ಒಂದನ್ನು ಬಿಟ್ಟು ಇನ್ನೊಂದಿಲ್ಲ.

ಯಾವುದೇ ಭಾಷೆಯಾಗಲಿ, ಅದನ್ನು ಎಷ್ಟೇ ಕಡಿಮೆ ಜನರು ಮಾತನಾಡಲಿ, ಅದನ್ನು ಕನ್ನಡವೆಂದು ಯಾರೂ ತಿಳಿಯಲು ಕಾರಣವಿಲ್ಲ. ಸಂಖ್ಯೆಯ ಮೇಲೆ ಸೋಲು ಗೆಲುವು ಹೇಳುವ ಕ್ರಮ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕೆಲಸಕ್ಕೆ ಬಂದೀತು; ಉಳಿದ ಸಂದರ್ಭಗಳಲ್ಲಿ ನಾವು ನೋಡಬೇಕಾದುದು ಜನರ ಸ್ವಭಾವ, ಸ್ವಶಕ್ತಿ ಹಾಗೇನೇ ಭಾಷೆಯ ವಿಷಯ ಬಂದಾಗ ಆ ಭಾಷೆಯ ಅಭಿವ್ಯಕ್ತಿ ಸಾಮರ್ಥ್ಯ. ಪ್ರತಿಯೊಂದು ಭಾಷೆಯೂ ನಂಬುವವರಿಗೆ ದೇವರ ಸೃಷ್ಟಿ. ಚಿಕ್ಕ ದೊಡ್ಡದೆನ್ನುವ ಭೇದಭಾವ ದೇವರಿಗೆ ಸುತರಾಂ ಇಲ್ಲ. ಮನುಷ್ಯನ ಬುದ್ಧಿ ಇಂತಹ ಮಿತಿಗಳನ್ನು ಸೃಷ್ಟಿಸಿದ್ದು, ಅದೇ ಬುದ್ಧಿ ಮಿತಿಯನ್ನು ದಾಟಿ ಗಡಿಸೀಮೆಗಳನ್ನು ಮೀರಿ ವಿಚಾರದ ಆಕಾಶದಲ್ಲಿ ಹಕ್ಕಿಯಂತೆ ಹಾರಲು ಸಾಧ್ಯವಿದೆ. ಇಂತಹ ಶಕ್ತಿ ನಮ್ಮ ತುಳುಭಾಷೆಯಲ್ಲಿ ಉಂಟೆಂದು ಹೇಳುವುದಕ್ಕೆ ಒಂದು ಉದಾಹರಣೆಯನ್ನು ಕೊಡುವುದಕ್ಕೆ ನನಗೆ ಅಪ್ಪಣೆ ಕೊಡುವಿರಾ?

ಈ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವ ಮನುಷ್ಯನ ಕಷ್ಟವನ್ನು ತುಳುಕವಿ ದಿ.ಪಾಡಿಗಾರು ವೆಂಕಟರಮಣ ಆಚಾರ್ಯರು ನಿರೂಪಿಸಿದ ನವ್ಯಾತಿನವ್ಯ ರೀತಿಯನ್ನು ಕೊಂಚ ಗಮನಿಸಬೇಕು.

ಇಜ್ಜಿ ದಾಲಾ ಅರ್ತ ತೋಜುಜ್ಜಿ.ಏತ್
ನಾಡ್
ಂಡಲಾ, ಏತ್ ಕೂಡಾದ್ ಕರಿನಾಂಡಲಾ
ಲೆಕ್ಕ ಸಮ ಬರ್ಪುಜ್ಜಿ. ಈ ಬರಿಟ್ ಬತ್ತೆ
ಪಾಡ್
ಂಡ ಆ ಪುಡೆಟ್ ಪೊಲಿಗೆ ಬುಡ್ಪುಂಡು;
ಇಜ್ಜಾಂಡ ನಡ್ಡೆಡೇ ಪಿಸಿವುಂಡು; ಬಯ್ಯ
ಮಲ್ಲಿಗೆ ಬಾಯಿ ಬುಡ್ಪುಂಡು; ಪಡ್ಡಯಿಡ್
ಆರಾಟೊ ಆ ಪುಂಡು; ಗೆಂಡೊಗು ಏರೋ ನೀರ್ ಮೈಪ್ವೆರ್
ಎಕ್ಕಾವೆ, ಎಕ್ಕಾವೆ, ಎಕ್ಕಾವೆ, ನರಮಾನಿ;
ಕಡೆಕ್ ಬಡವಾಪುಂಡು; ಬೈಲ್
ಡಿತ್ತಿನ ಪತ್ತ
ಪಜಿರ್ ಕ ರ್ಪುವೆ; ಕಡೆವನಗ ಮಣ್ಣ್
ಲಾ ತಿಕ್ದ್
ಥಕ್
‌! ಉಬಿಯೊಡುಂದ್ಎಣ್ಣುವೆ; ಬಂಜಿದ ಕರ್ಮ
ಉಬಿಯೆರೆಗ್ ಬುಡ್ಪುಜ್ಜಿ.
ನುಂಗೊಡೇ ನರಮಾನಿ ನುಂಗೊಡೆ!
ಬಂಜಿ ದಿಂಜ್
ಂಡ ಕುಡ ಎಕ್ಕಾವೆರೆಗ್ಸುರು.
ಬಂಜಿ ಒಯ್ಪುಂಡು ನಿಲೊಕ್ಕು, ಮನಸ್
ಬಾಣೊಗು.
ಮೇವೊಂದು, ಮೇವೊಂದು, ನಡ್ಡೆ ನಡ್ಡೆಡ್ ನೀಲ
ಬಾಣೊನು ಕನಂಬರಿತ್ತೊಂದು, ನಿಲೊಟ್ಟೇ
ದುಂಬುದುಂಬು ನಡಪ್ಪೊಡು – ನಡಪ್ಪುವೆ;
ಸುತ್ತು ಸುತ್ತು ನಡಪುವೆ, ಬಲ್ಲ್ ಗೂಂಟೊಗು ಸುತ್ತು
ಬೂರುಂಡು; ಗಿಡ್ಡ್
ಗಿಡ್ಡಾಪುಂಡು. ಕಡೆಕ್ ಒಂಜಿ
ದಿನ ಬಲ್ಲ್ ಮುಗಿವುಂಡು, ಬೈಲ್
ಡ್ಲ ಪಜಿರ್
ಮುಗಿವುಂಡು. ಗಲ್ಪೆರೆಗ್
ಬರಂದಿನ ಗೂಂಟೊಗು
ಬತ್
ದ್ ಉಂತುವೆ.
ನರಮಾನಿನ ಕಷ್ಟ ಇಚಿತ್ರ ಕಷ್ಟ;
ಆಯೆ ಬಾಳ ಇಚಿತ್ರ ಪಕ್ಕಿ; ಆಯಗ್ ಮುಡುಟು
ರೆಂಕೆ ಇಜ್ಜಿ; ಮನಸ್
ಗೇ ಮಾತ್ರ ನೂರು ರೆಂಕೆ
ಬಂಜಿಗ್ ಬೋಡಾದ್ ಕಂಜಿ ಪಂಜಿ ಆಂಡಲಾ,
ಮನಸ್
ಗ್ ಬೋಡಾದ್, ಪಾರುವ ಹಂಸ ಪಕ್ಕಿಡ
‘ಮಾನಸ ಸರ್ವಾರದ ನೀರ್ ಕೊಣಲಾ’ ಪನ್ಪೆ.
ತನಟನೆ ತಾನ್ ಕೋಪ ಮಲ್ತ್
ದ್ ಗಂಗರ ಪರ್ಪೆ

ಕನ್ನಡ ರೂಪ

ಇಲ್ಲ ಏನೂ ಅರ್ಥ ತೋರುವುದಿಲ್ಲ. ಎಷ್ಟು
ಹುಡುಕಿದರೂ, ಎಷ್ಟು ಕೂಡಿಸಿ ಕಳೆದರೂ
ಲೆಕ್ಕ ಸರಿಹೋಗುವುದಿಲ್ಲ. ಈ ಮಗ್ಗುಲಲ್ಲಿ ತೇಪೆ
ಹಾಕಿದರೆ ಆ ಮಗ್ಗುಲಲ್ಲಿ ಹೊಲಿಗೆ ಬಿಡುತ್ತದೆ;
ಇಲ್ಲವಾದರೆ ನಡುವೆಯೇ ಹರಿಯುತ್ತದೆ; ಸಂಜೆ
ಮಲ್ಲಿಗೆ ಅರಳುತ್ತದೆ; ಪಡುವಲಲ್ಲಿ
ಆರಾಟ ಆಗುತ್ತದೆ; ಕೆಂಡಕ್ಕೆ ಯಾರೋ ನೀರೆರೆಯುತ್ತಾರೆ.
ಎಟಕಿಸುತ್ತಾನೆ, ಎಟಕಿಸುತ್ತಾನೆ, ಎಟಕಿಸುತ್ತಾನೆ, ನರಮನುಷ್ಯ
ಕೊನೆಗೆ ಹಸಿವಾಗುತ್ತದೆ. ಬೈಲಲ್ಲಿದ್ದ ಹಸಿರು
ಹುಲ್ಲು ಕಡಿಯುತ್ತಾನೆ; ಕಡಿವಾಗ ಮಣ್ಣು ಕೂಡಾ ಸಿಕ್ಕಿ
ಥಕ್
‌! ಉಗುಳಬೇಕೆಂದು ಎಣಿಸುತ್ತಾನೆ; ಹೊಟ್ಟೆಯ ಕರ್ಮ
ಉಗುಳಲು ಬಿಡುವುದಿಲ್ಲ.
ನುಂಗಬೇಕು ನರಮನುಷ್ಯ ನುಂಗಲೇಬೇಕು!
ಹೊಟ್ಟೆ ತುಂಬಿದರೆ ಮತ್ತೆ ಖಾಲಿಯಾಗಲು ಸುರು
ಹೊಟ್ಟೆ ಎಳೆಯುತ್ತದೆ ನೆಲಕ್ಕೆ, ಮನಸ್ಸು ಆಗಸಕ್ಕೆ.
ಮೇಯುತ್ತ ಮೇಯುತ್ತ ನಡುನಡುವೆ ನೀಲ
ಆಗಸವನ್ನು ಕನವರಿಸುತ್ತ, ನೆಲದಲ್ಲೆ
ಮುಂದೆ ಮುಂದೆ ನಡೆಯಬೇಕು – ನಡೆಯುತ್ತಾನೆ;
ಸುತ್ತು ಸುತ್ತು ನಡೆಯುತ್ತಾನೆ, ದಾರ ಗೂಟಕ್ಕೆ ಸುತ್ತು
ಬೀಳುತ್ತದೆ; ದಾರದ ಉದ್ದ ಕುಳ್ಳಾಗುತ್ತದೆ. ಕಡೆಗೆ ಒಂದು
ದಿನ ದಾರ ಮುಗಿಯುತ್ತದೆ. ಗದ್ದೆ ಬೈಲಲ್ಲೂ ಹಸುರುಹುಲ್ಲು
ಮುಗಿಯುತ್ತದೆ. ಕೀಳಲು ಬಾರದ ಗೂಟಕ್ಕೆ
ಬಂದು ನಿಲ್ಲುತ್ತಾನೆ.
ನರಮನುಷ್ಯನದು ವಿಚಿತ್ರ ಕಷ್ಟ
ಆತ ಬಹಳ ವಿಚಿತ್ರ ಪಕ್ಷಿ; ಅವನಿಗೆ ಪಕ್ಕೆಲುಬಲ್ಲಿ
ರೆಕ್ಕೆ ಇಲ್ಲ; ಮನಸ್ಸಿಗೆ ಮಾತ್ರ ನೂರು ರೆಕ್ಕೆ
ಹೊಟ್ಟೆಗೆ ಬೇಕಾಗಿ ಹಸುಕರು ಹಂದಿ ಆದರೂ
ಮನಸ್ಸಿಗೆ ಬೇಕಾಗಿ, ಹಾರುವ ಹಂಸ ಪಕ್ಷಿಯಲ್ಲಿ
‘ಮಾನಸ ಸರೋವರದ ನೀರು ತಾ’ ಎನ್ನುತ್ತಾನೆ
ತನ್ನಲ್ಲೇ ಕೋಪಿಸಿಕೊಂಡು ಹೆಂಡ ಕುಡಿಯುತ್ತಾನೆ.

ಬದುಕಿನ ಅರ್ಥ ಏನೆಂದು ಬಿನ್ನಾಣದ ಶೈಲಿಯಲ್ಲಿ ಹೇಳಲು ಬರುವ ಭಾಷೆಯ ಶಕ್ತಿ ಸಾಮಾನ್ಯವಲ್ಲ. ಬರಿಯ ಸೊಗಸಿಗೆ ಮರುಳಾಗದೆ ಒಳಗಿನ ಕೆಚ್ಚು, ವಿಷಯವನ್ನು ನಿರೂಪಿಸುವ ಸಾಮರ್ಥ್ಯ ನಮ್ಮ ಭಾಷೆಗೆ ಎಲ್ಲಿಂದ ಬಂತೆನ್ನುವುದರ ಮೂಲದ ಶೋಧನೆ ಮಾಡೋಣ.

ತುಳು ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಸಮೃದ್ಧ ಭಾಷೆಗಳಲ್ಲಿ ಒಂದು ಎನ್ನುವ ಸರ್ವ ಸಮ್ಮತದ ನುಡಿಗೆ ಪ್ರತಿ ಇಲ್ಲ. ಜಗತ್ತಿನ ದೊಡ್ಡ ದೊಡ್ಡ ಭಾಷಾವಿಜ್ಞಾನಿಗಳು ಈ ಮಾತಿಗೆ ಸಾಕ್ಷಿ ನುಡಿದಿದ್ದಾರೆ. ೧೯ನೆಯ ಶತಮಾನದಲ್ಲಿ ಆಗಿ ಹೋದ ಕಾಲ್ಡ್‌ವೆಲ್ಲರು ಇದಕ್ಕೆ ಸರಿಯಾದ ಪ್ರಮಾಣಪತ್ರ ನೀಡಿದ್ದಾರೆ. ಸಾಮಾನ್ಯ ಜನರಿಗೆ ಸಾಹಿತ್ಯವಿಲ್ಲದ ಭಾಷೆಯೆಂದರೆ ಗುಡ್ಡಗಾಡಿನ ಅಸಂಸ್ಕೃತ ಜನರ ಭಾಷೆ ಎನ್ನುವ ಭಾವನೆ ಇದ್ದರೂ ಈ ತುಳುಭಾಷೆ ಲಿಖಿತಸಾಹಿತ್ಯ ಇಲ್ಲದ ಭಾಷೆ (ಈ ಲೇಖನ ಬರೆದ ಬಳಿಕ ತುಳುವಿನಲ್ಲಿ ನಾಲ್ಕು ಲಿಖಿತ ಭಾಷಾ ಕೃತಿಗಳು ಲಭ್ಯವಾಗಿವೆ – ಅನುವಾದಕ) ಆದರೂ ಸುಸಂಸ್ಕೃತ ಜನಾಂಗದ ಭಾಷೆ, ಚೆನ್ನಾಗಿ ವಿಕಾಸ ಹೊಂದಿದ ಭಾಷೆ ಎಂದು ತೋರಿಸಿದ್ದಾರೆ. ತುಳು ಭಾಷಿಕರು ಇಷ್ಟೊಂದು ಸುಸಂಸ್ಕೃತ ವಿದ್ಯಾವಂತ ಜನಾಂಗ ಆದರೂ ಈ ಭಾಷೆಯನ್ನು ಲಿಖಿತ ಭಾಷಾ ಕೃತಿಗಳು ಲಭ್ಯವಾಗಿವೆ – ಅನುವಾದಕ) ಆದರೂ ಸುಸಂಸ್ಕೃತ ಜನಾಂಗದ ಭಾಷೆ, ಚೆನ್ನಾಗಿ ವಿಕಾಸ ಹೊಂದಿದ ಭಾಷೆ ಎಂದು ತೋರಿಸಿದ್ದಾರೆ. ತುಳು ಭಾಷಿಕರು ಇಷ್ಟೊಂದು ಸುಸಂಸ್ಕೃತ ವಿದ್ಯಾವಂತ ಜನಾಂಗ ಆದರೂ ಈ ಭಾಷೆಯನ್ನು ಲಿಖಿತ ರೂಪದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಏಕೆ ಪ್ರಚಾರ ಮಾಡಲಿಲ್ಲ, ಶಿಕ್ಷಣ ಮಾಧ್ಯಮಕ್ಕೆ ಅಣಿಗೊಳಿಸಲಿಲ್ಲ ಏಕೆ ಎನ್ನುವುದು ಜಗತ್ತಿನ ಭಾಷಾಶಾಸ್ತ್ರದ ವಿದ್ವಾಂಸರಿಗೆ ದೊಡ್ಡ ಸಮಸ್ಯೆ, ದೊಡ್ಡ ಆಶ್ಚರ್ಯ.

ಈ ವಿಷಯದಲ್ಲಿ ನಮಗೂ ಕೆಲವು ಪೂರ್ವಾಗ್ರಹ, ತಪ್ಪು ಕಲ್ಪನೆ, ಕೀಳರಿಮೆ ಹೋಗಿಲ್ಲ ಎಂದು ಹೇಳಬಹುದು. ಈ ಭಾಷೆಯಲ್ಲಿ ಲಿಖಿತ ಸಾಹಿತ್ಯ ಸಾಕಷ್ಟು ಇಲ್ಲವಲ್ಲ. ಇದಕ್ಕೆ ಸ್ವತಂತ್ರ ಲಿಪಿ ಇಲ್ಲವಲ್ಲ, ಇದು ಬಾಯ್ಮಾತಿನಲ್ಲೇ ಇರುವ ಉಪಭಾಷೆ ಮಾತ್ರ ಎನ್ನುವ ಭಾವನೆ ನಮ್ಮವರಲ್ಲಿ ಇನ್ನೂ ಇದ್ದಂತೆ ಕಾಣುತ್ತದೆ. ಆದರೆ ಬರೆಹವೂ, ಶಿಷ್ಟ ಸಾಹಿತ್ಯವೂ ಉಂಟೆಂದಾದರೆ ಮಾತ್ರ ಒಂದು ಭಾಷೆ ವಿಕಾಸವಾದ ಭಾಷೆ ಎಂದಾಗಲಾರದು. ಲೋಕದಲ್ಲಿ ಇರುವ ಎಷ್ಟೋ ಸಾವಿರ ಭಾಷೆಗಳಲ್ಲಿ ಕೆಲವಕ್ಕೆ ಮಾತ್ರ ಲಿಪಿ ಇರುವುದನ್ನು ನಾವು ಗಮನಿಸಬೇಕು. ಭಾಷೆ ಉಂಟಾದುದು ನಮ್ಮ ಮನಸ್ಸಿನ ಭಾವನೆಗಳನ್ನು ಇನ್ನೊಬ್ಬರಿಗೆ ತಿಳಿಸುವ ಸಲುವಾಗಿ. ಭಾಷೆಯ ಮೂಲರೂಪ ಮಾತು. ಲಿಪಿಯನ್ನು ಉಪಯೋಗ ಮಾಡಲು ಆರಂಭಿಸಿದುದು ಆ ಬಳಿಕ. ಕೆಲವೊಂದು ಚಾರಿತ್ರಿಕ, ಸಾಮಾಜಿಕ ಕಾರಣಗಳಿಂದಾಗಿ ಲಿಪಿಯ ಬಳಕೆ ಬಂದಿತು. ಆ ಲಿಪಿಯ ಮೂಲಕ ಸಾಹಿತ್ಯ ಸೃಷ್ಟಿಯೂ ಆಯಿತು. ಆದರೆ ಲಿಪಿಯ ಮೂಲಕ ಬರೆದು ಸಾಹಿತ್ಯ ರಚನೆಯಾಗುವ ಮೊದಲೇ ಜನರು ಜನಪದ ಸಾಹಿತ್ಯವನ್ನು ಸೃಷ್ಟಿಸಿದ್ದರು.

ಭಾಷಾವಿಜ್ಞಾನಿಗಳ ದೃಷ್ಟಿಯಲ್ಲಿ ತುಳುವಿಗೆ ದ್ರಾವಿಡ ಭಾಷೆಗಳಲ್ಲಿ ಒಂದು ಮಹತ್ವದ ಸ್ಥಾನ ಉಂಟು. ದ್ರಾವಿಡ ಭಾಷೆಗಳಲ್ಲಿ ಉತ್ತರದ್ರಾವಿಡ, ಮಧ್ಯದ್ರಾವಿಡ, ದಕ್ಷಿಣ ದ್ರಾವಿಡ ಎಂದು ಮೂರು ವಿಭಾಗ ಮಾಡಿದ್ದಾರಷ್ಟೇ! ನಮ್ಮ ತುಳುಭಾಷೆ ದಕ್ಷಿಣ ದ್ರಾವಿಡಭಾಷೆಗಳಾದ ತಮಿಳು, ಕನ್ನಡ, ಕೋಟ, ತೋಡ, ಬಡಗ, ಕೊಡಗು ಸರಹದ್ದುಗಳಲ್ಲಿ ಬಳಕೆಯಲ್ಲಿದ್ದರೂ ಇದರಲ್ಲಿ ಮಧ್ಯದ್ರಾವಿಡದ ಕೆಲವು ಅಂಶಗಳು ಉಳಿದುಹೋಗಿವೆ. ಮಧ್ಯದ್ರಾವಿಡವೆಂದರೆ ಕೋಲಾಮಿ, ಪರ್ಜಿ, ಕುವಿ, ಕುಯೀ ಇತ್ಯಾದಿ ಭಾಷೆಗಳು. ಇದಕ್ಕೇನು ಕಾರಣ? ಭಾಷೆಗಳಲ್ಲಿ ಮೂಲದ ಎಷ್ಟು ಅಂಶಗಳು ಉಳಿದಿವೆ, ಎಷ್ಟು ಬದಲಾವಣೆಗೆ ಒಳಗಾಗಿವೆ ಎಂಬ ಆಧಾರದಲ್ಲಿ ಎರಡು ಭಾಷೆಗಳು ಒಂದರಿಂದ ಒಂದು ಯಾವಾಗ ಬೇರೆ ಆಗಿವೆ ಎನ್ನುವುದನ್ನು ತಿಳಿಸುವ Lexio – Statistics ಶಾಸ್ತ್ರದ ಮೂಲಕ ನಾವು ಯೋಚನೆ ಮಾಡುವಾಗ ತುಳು ಸಾಧಾರಣ ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಬೇರೆ ಆಗಿ ಸ್ವತಂತ್ರ ಭಾಷೆ ಆಯಿತು ಎನ್ನುವುದು ತಿಳಿಯುತ್ತದೆ.

ಹೀಗೆ ಬೇರ್ಪಟ್ಟ ಸಮಯದಲ್ಲಿ ಮಧ್ಯದ್ರಾವಿಡವೂ, ದಕ್ಷಿಣ ದ್ರಾವಿಡವೂ ಒಂದೇ ರೀತಿ ಇದ್ದ ಕಾರಣದಿಂದಾಗಿ ಕೆಲವು ಅಂಶಗಳು ಮಧ್ಯದ್ರಾವಿಡದಲ್ಲಿ ಇದ್ದವು ತುಳುವಲ್ಲಿ ಉಳಿದುಹೋಯಿತು. ದ್ರಾವಿಡಭಾಷೆಯನ್ನು ಮಾತಾಡುತ್ತಿದ್ದ ಜನರಲ್ಲಿ ಮಧ್ಯದ್ರಾವಿಡ, ದಕ್ಷಿಣ ದ್ರಾವಿಡ ಎಂದು ಕವಲು ಒಡೆದು ಬರುವ ಮೊದಲೇ ತುಳು ಮಾತನಾಡುವ ಜನಾಂಗ ಕ್ರಿಸ್ತಪೂರ್ವ ಆರನೆಯ ಶತಮಾನದಲ್ಲಿ ಪಡುವಣ ಕರಾವಳಿಗೆ ಬಂದಿರಬೇಕೆಂದು ತಿಳಿಯುತ್ತದೆ. ಈ ಕಾರಣದಿಂದಾಗಿ ಈ ಭಾಷೆಯಲ್ಲಿ ಕೆಲವು ಮಧ್ಯದ್ರಾವಿಡದ ಮೂಲರೂಪಗಳು ಉಳಿದುಹೋದುವು. ದಕ್ಷಿಣ ದ್ರಾವಿಡದ ಬೇರೆ ಬೇರೆ ಕವಲುಗಳು ಈ ಕಡೆಗೆ ಬಂದ ಬಳಿಕ ಇವರ ಸಂಪರ್ಕ ಹೆಚ್ಚಾಗಿ ತುಳುವಿನಲ್ಲಿ ದಕ್ಷಿಣ ದ್ರಾವಿಡದ ಲಕ್ಷಣಗಳೂ ಬೆಳೆದು ಬಂದುವು. ಹೀಗೆ ದಕ್ಷಿಣ ದ್ರಾವಿಡ ಭಾಷೆ ಬೇರೆ ಬೇರೆ ಭಾಷೆಗಳಾಗಿ ವಿಕಾಸಗೊಳ್ಳುವ ಮೊದಲೇ ಈ ಕವಲಿನಿಂದ ಮೊದಲು ಒಡೆದುಬಂದ ಟಿಸಿಲು ತುಳು ಎಂದು ಹೇಳಬಹುದು.

ತುಳುಭಾಷೆಯ ಪ್ರಾಚೀನತೆಯನ್ನು ಹೇಳುವ ಸಂದರ್ಭದಲ್ಲಿ ಕ್ರಿಸ್ತಪೂರ್ವ ಎರಡನೆಯ ಶತಮಾನದಲ್ಲಿ ರಚಿತವಾದ ಗ್ರೀಕ್ ನಾಟಕದಲ್ಲಿ ತುಳುವಿನ ಮಾತುಗಳು, ಸಂಭಾಷಣೆಗಳು ಉಂಟು ಎಂಬ ವರ್ತಮಾನ ನಮ್ಮ ಕಿವಿಗೆ ಬಿದ್ದಿದೆ. ಕೆಲವು ಹಿಂದಿನ ವಿದ್ವಾಂಸರು ಇವು ಕನ್ನಡದ ಶಬ್ದಗಳಾಗಿರಬೇಕೆಂದು ಯೋಚನೆ ಮಾಡಿದರು. ಆದರೆ ಇತ್ತೀಚೆಗೆ ಮಿಲಿಟರಿಯಿಂದ ನಿವೃತ್ತರಾಗಿ ಸಂಶೋಧನೆ ಮಾಡುತ್ತಿರುವ ಶ್ರೀ ಪಿ.ಎಸ್. ರೈ ಎನ್ನುವವರು ಇದು ಪೂರ್ತಿ ತುಳುಭಾಷೆ ಎಂದು ಹೇಳುತ್ತಾರೆ. ಪಣಂಬೂರಿನ ಅಮ್ಮನಕಟ್ಟೆಯ ಬಲಿ ಇತ್ಯಾದಿ ಮಾತು ಬರುವ ತುಳುನಾಟಕದಲ್ಲಿ ಗ್ರೀಕ್ ಹೆಣ್ಣು ಪಣಂಬೂರಿನ ಸಮೀಪದ ಒಬ್ಬ ರಾಜನಲ್ಲಿ ಇದ್ದಳು. ಗ್ರೀಕರು ಅವಳನ್ನು ಅಪಹರಿಸಿಕೊಂಡು ಹೋದರು ಎಂದು ತಿಳಿಯುತ್ತದೆ. ‘ಮಾತ’, ‘ಮಲ್ಪುನಿ’, ‘ಅಕುಲು’, ‘ಉಬ್ಬಿ’, ‘ಓಲು’, ‘ಪುಸ್ಕಟೆ’, ‘ಬೆರಿ’, ‘ಪೆಜ್ಜ’, ‘ಕೊರ್ತ’, ‘ಕೊರು’, ‘ತಿರ್ಗಾವುನಿ’, ‘ದೆಪ್ಪು’, ‘ಕುತ್ತ’, ‘ಬಿರಾದ್’, ‘ತೂಕುದು’, ‘ಪರ್’, ‘ಅಯ್ಯೆರ ಮಿಂಡಿ’ ,’ಮಾರಿ’, ‘ಬಾಯಿಗ್‌ಗೂಸು’ ಇತ್ಯಾದಿ ನೂರಕ್ಕೂ ಹೆಚ್ಚು ತುಳು ಶಬ್ದಗಳು ಆ ನಾಟಕದೊಳಗೆ ಸಿಗುವುದಾಗಿ ಸ್ಕ್ವಾಡ್ರನ್ ಲೀಡರ್ ಪಿ.ಎಸ್.ರೈ ಹೇಳುತ್ತಾರೆ. ಇದನ್ನು ವಿದ್ವಾಂಸರು ಒಪ್ಪಿದಲ್ಲಿ ಎರಡು ಸಾವಿರ ವರ್ಷಗಳಿಂದ ಹಿಂದೆಯೇ ತುಳು ಒಂದು ಸಾಹಿತ್ಯ ಗ್ರಂಥದಲ್ಲಿ ಉಪಯೋಗವಾಗಿತ್ತೆಂದು ನಾವು ನಿರ್ಧಾರಕ್ಕೆ ಬರಬಹುದು.

ತುಳುಭಾಷೆಯ ಹಳೆಯ ಪಾಡ್ದನಗಳ ಸರಿಯಾದ ಸಂಶೋಧನೆ ಮಾಡಿ ಅವುಗಳಲ್ಲಿರುವ ಪ್ರಾಚೀನ ಪದಗಳ ರೂಪುಗಳನ್ನು ನೋಡಿದರೆ, ತುಳುವಿನ ಬೇರೆ ಬೇರೆ ಉಪಭಾಷೆಗಳ ಅಧ್ಯಯನ ಮಾಡಿ ನೋಡಿದರೆ ದ್ರಾವಿಡ ಭಾಷೆಗಳಲ್ಲಿ ತುಳುವಿನ ಸ್ಥಾನ ಏನು ನಿರ್ಧರಿಸಲು ಅನುಕೂಲವಾದೀತು. ಅದು ದ್ರಾವಿಡ ಭಾಷಾವಿಜ್ಞಾನದ ಅಧ್ಯಯನಕ್ಕೆ ವಿಶೇಷ ಕಾಣಿಕೆ ಕೊಟ್ಟೀತು ಎಂದು ಜಗತ್ತಿನ ದೊಡ್ಡ ದೊಡ್ಡ ಭಾಷಾವಿಜ್ಞಾನಿಗಳು ಹೇಳುತ್ತಾರೆ.

ಹಾಗೇನೇ ತುಳುವಿನಲ್ಲಿ ಪ್ರಾಕ್ಕಾಲದಲ್ಲಿ ಬರೆದಿಟ್ಟ ಶಿಷ್ಟ ಸಾಹಿತ್ಯವಿಲ್ಲವೆಂದು ಅದು ಸಾಹಿತ್ಯವಲ್ಲದ ಭಾಷೆ ಎಂದು ಹೇಳಲು ಸಾಧ್ಯವಾಗದು. ಬರೆದಿಟ್ಟ ಸಾಹಿತ್ಯ (ಉಪನ್ಯಾಸ ನೀಡಿದ ಸಂದರ್ಭ ೧೯೮೨ರ ಹೊತ್ತಿಗೆ ತುಳುವಿನಲ್ಲಿ ‘ಭಾಗವತೊ’ ಮುಂತಾದ ಯಾವುದೇ ಶಿಷ್ಟ ಗ್ರಂಥಗಳು ಪ್ರಕಟವಾಗಿರಲಿಲ್ಲ – ಸಂಪಾದಕರು) ಇಲ್ಲದಿದ್ದರೂ ಪ್ರಾಚೀನ ಕಾಲದಿಂದಲೂ ಇಳಿದುಬಂದ ಜನಪದ ಸಾಹಿತ್ಯ ದೊಡ್ಡ ರಾಶಿಯೇ ಉಂಟು. ತುಳು ಭಾಷೆಯ ಸೊಗಸು, ಮಾತಿನ ಜಾಣ್ಮೆ, ವರ್ಣನೆಯ ಹೊಳಪು, ಅಲಂಕಾರದ ವೈಭವ ಎಲ್ಲವನ್ನೂ ಈ ಜನಪದ ಸಾಹಿತ್ಯದಲ್ಲಿ ನೋಡಬಹುದು. ಪಾಡ್ದನ, ಸಂಧಿ, ಉರಲ್, ಕಬಿತೆ, ಲೇಲೆ ಪದಗಳು, ಓಬೇಲೆ ಪದ, ಗಾದೆ, ಒಗಟು ಇತ್ಯಾದಿ ಬೇರೆ ಬೇರೆ ರೂಪಗಳಲ್ಲಿ ಬೆಳೆದು ಬಂದು ಈ ಸಾಹಿತ್ಯ ಯಾವುದೇ ಶಿಷ್ಟ ಸಾಹಿತ್ಯಕ್ಕೆ ಕಡಿಮೆ ಇಲ್ಲ. ಭೂತಗಳ ಪ್ರತಾಪ (ಕಾರ್ಣಿಕ)ವನ್ನು ಹೇಳುವ ಪಾಡ್ದನ, ಸಾಮಾಜಿಕ ಕತೆಗಳ ಪಾಡ್ದನ ಇತ್ಯಾದಿಗಳು ಯಾವುದೇ ಜನಪದ ಮಹಾಕಾವ್ಯ, ಖಂಡಕಾವ್ಯಗಳ ಸಾಲಿನಲ್ಲಿ ಇರಿಸಲು ಯೋಗ್ಯವಾದವು. ಕೆಲವು ಪಾಡ್ದನಗಳು ಭೂತಗಳ ಹುಟ್ಟು, ಪ್ರಸಾರ, ಪ್ರತಾಪ ಇತ್ಯಾದಿಗಳಿಗೆ ಸಂಬಂಧಿಸಿದ್ದರೆ, ಇನ್ನು ಕೆಲವು ತುಳುನಾಡಿನ ವೀರಪುರುಷರ ಸಾಹಸದ, ತ್ಯಾಗದ, ಕ್ರಾಂತಿಕಾರಿ ಮನೋಧರ್ಮದ, ಸಮಾಜ ಸುಧಾರಣೆಯ ಕತೆಗಳು. ಕೆಲವು ನಮ್ಮ ಊರಿನ ಪತಿವ್ರತಾ ಮಹಿಳೆಯರ ತ್ಯಾಗ, ಕಷ್ಟಗಳ ವರ್ಣನೆಯಾದರೆ ಇನ್ನು ಕೆಲವು ಅವರ ಮೇಲೆ ಆಗಿರುವ ಅತ್ಯಾಚಾರ, ಅನ್ಯಾಯದ ಕತೆ. ಇನ್ನು ಕೆಲವು ದೊಡ್ಡವರು ಬಡವರಿಗೆ, ಅನಾಥರಿಗೆ, ಕೆಳವರ್ಗದವರಿಗೆ ಮಾಡಿದ ಅನ್ಯಾಯ, ಅತ್ಯಾಚಾರ, ಶೋಷಣೆಯ ಕರುಣಾಪೂರ್ಣ ವರ್ಣನೆ. ದುರಂತ ಕಥೆಗಳಿಗೆ ಪ್ರಸಿದ್ಧವಾದ ಈ ಪಾಡ್ದನಗಳಲ್ಲಿ ನಮ್ಮ ಮನಸ್ಸನ್ನು ಮುಟ್ಟಿ, ಹಿಂಡಿ ಕಣ್ಣೀರು ಬರುವಂತೆ ಮಾಡುವ ಅನೇಕ ಮಾರ್ಮಿಕ ಕಥೆಗಳುಂಟು.

ಈ ಪಾಡ್ದನಗಳಲ್ಲಿ ಬರುವ ವರ್ಣನೆ, ಚಿತ್ರಣಗಳು ಒಂದು ಶಿಷ್ಟಕಾವ್ಯ ಪರಂಪರೆಯಲ್ಲಿ ಕಂಡುಬರುವ ಚಿತ್ರಣಗಳಿಗೆ ಯಾವ ದೃಷ್ಟಿಯಿಂದಲೂ ಕಡಿಮೆಯಿಲ್ಲ. ಕ್ಷೌರಿಕ ಭಂಡಾರಿಯನ್ನು ಓಲೆ ಬರೆದು ತರಿಸಿ ಕ್ಷೌರ ಮಾಡಿಸಿಕೊಂಡು ಎಣ್ಣೆ ಹಚ್ಚಿ ಬಿಸಿನೀರಿನ ಅಭ್ಯಂಜನ ಮಾಡಿ, ಹೊಸಬಟ್ಟೆ ಉಟ್ಟು ಸಿಂಗಾರ ಮಾಡಿಕೊಂಡು ಹೆಂಡತಿ ಮಾಡಿದ ಮುನ್ನೂರು ಬಗೆ ಪದಾರ್ಥಗಳ ಊಟು ಮುಗಿಸಿ ಯುದ್ಧಕ್ಕೆ ಹೊರಟುನಿಂತ ಪೂಂಜರ ವರ್ಣನೆ ಆಗಲಿ, ಗುಬ್ಬಿಗಳ ಕಾಳಗ, ಸೂಳೆಯರ ಮೇಳದೊಂದಿಗೆ ದಿಬ್ಬಣ ಹೋಗುವ ವರ್ಣನೆ ಆಗಲೀ, ಒಂದು ಹೆಣ್ಣಿನ ಮೇಲಿನ ವ್ಯಾಮೋಹದಲ್ಲಿ ತನ್ನಲ್ಲಿದ್ದ ಹಣ, ಬಂಗಾರ, ಮೈಮೇಲಿನ ಬಂಗಾರ, ಉಡುಪು ಸಹಿತ ಎಲ್ಲವನ್ನೂ ಕಳೆದುಕೊಂಡ ಕಾಮುಕನ ವರ್ಣನೆ ಆಗಲಿ, ಪತಿವ್ರತೆ ಹೆಣ್ಣು ತನ್ನ ಸತ್ವಪರೀಕ್ಷೆಗಾಗಿ ಕುದುಯೆಣ್ಣೆಯಲ್ಲಿ ಮುಳುಗಿ ಮೇಲೆ ಬಂದು ತಲೆಗೂದಲು ಕೊಡಹಿದಾಗ ಚಿಮ್ಮಿದ ಎಣ್ಣೆಯ ಹನಿ ಜನರ ಮೈಮೇಲೆ ಬಿದ್ದು ಗುಳ್ಳೆ ಬರುವ ವರ್ಣನೆ ಆಗಲಿ, ಯಾವುದೇ ವಿಷಯದಲ್ಲಿ ತುಳುವಿನ ಪಾಡ್ದನ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿ ಕುಳಿತುಕೊಳ್ಳಲು ಯೋಗ್ಯವಾದುದಾಗಿದೆ.

ಗದ್ದೆಯ ಕೆಲಸ ಮಾಡುವಾಗ ಹೇಳುವ ಕಬಿತವಾಗಲಿ, ಉಳುವಾಗ ಹೇಳುವ ಉರಾಲ್ ಆಗಲಿ ಕಾವ್ಯಮಯವಾಗಿದ್ದು, ಶೃಂಗಾರದ ಸಿಹಿ, ಹಾಸ್ಯದ ಉಪ್ಪಿನಕಾಯಿ, ಸಮಾಜ ವಿಮರ್ಶೆಯ ಖಾರ ಎಲ್ಲವೂ ಸೇರಿ ಗಾದೆ, ಒಗಟುಗಳ ಒಗ್ಗರಣೆ ಸೇರಿ ದೊಡ್ಡ ರಸಮಯ ಊಟ ಆಗಿ ನಮಗೆ ದೊರೆತಿದೆ. ಭೂತಕ್ಕೆ ವೇಷ ಕಟ್ಟುವಾಗ, ಆಟಿ ಕಳಂಜ, ಕಂಗಿಲೊ, ಮಾಯಿಲೊ, ಮಾದಿರ ಇತ್ಯಾದಿ ಕುಣಿತಗಳನ್ನು ಮಾಡುವಾಗ, ಗದ್ದೆ ಉಳುವಾಗ, ನೇಜಿ ನೆಡುವಾಗ, ಮಗುವನ್ನು ತೊಟ್ಟಿಲಲ್ಲಿ ತೂಗುವಾಗ ಎಲ್ಲ ಸಾಮಾಜಿಕ ಸಂದರ್ಭಗಳಲ್ಲಿ ಹೇಳುವ ಈ ಗೀತ – ಪಾಡ್ದನಗಳು ತುಳುನಾಡ ಸಂಸ್ಕೃತಿಯನ್ನು ತೋರಿಸುವ ಸಾಹಿತ್ಯ ಕೃತಿಗಳು.

ತುಳು ಜನಪದ ಸಾಹಿತ್ಯ ಇಷ್ಟು ವ್ಯಾಪಕವಾಗಿ ಬೆಳೆದು ಬಂದರೂ ಬರಹದ ಸಾಹಿತ್ಯ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವುದು ಆಶ್ಚರ್ಯವೇ ಸರಿ. ಅದಕ್ಕೆ ರಾಜಾಶ್ರಮ ಸಿಕ್ಕದೆ ತುಳುನಾಡಿನ ಸಾಮಂತ ದೊರೆಗಳು ಹಾಗೂ ಗಟ್ಟದ ಮೇಲಿನ ಮಹಾರಾಜಗಳು ಕೂಡಾ ಕನ್ನಡ ಭಾಷೆಯನ್ನೇ ಆಡಳಿತ ಭಾಷೆ ಆಗಿ ಸ್ವೀಕಾರ ಮಾಡಿದುದು ಒಂದು ಕಾರಣವಾಗಿರಬಹುದು. ಮತ್ತೊಂದು ಕಾರಣ ಇದಕ್ಕೊಂದು ಸರಿಯಾದ ಲಿಪಿ ಇಲ್ಲದಿರುವುದು ತುಳು ಮಲೆಯಾಳಂ ಲಿಪಿ ಎನ್ನುವ ಒಂದು ಲಿಪಿಯನ್ನು ಕೇರಳದವರೂ, ಇಲ್ಲಿಂದ ಕೇರಳಕ್ಕೆ ಹೋದ ಬ್ರಾಹ್ಮಣರೂ ಉಪಯೋಗ ಮಾಡಿಕೊಂಡಿದ್ದರು. ಬ್ರಾಹ್ಮಣರು ಮಂತ್ರಗಳನ್ನು ಈ ಲಿಪಿಯಲ್ಲೇ ಇಂದಿಗೂ ಬರೆಯುತ್ತಿದ್ದಾರೆ. ಆದರೆ ಜನಸಾಮಾನ್ಯರಲ್ಲಿ ಆ ಲಿಪಿ ಬಳಕೆಗೆ ಬರಲಿಲ್ಲ.

ಇನ್ನೊಂದು ಕಾರಣವೆಂದರೆ ಲಿಖಿತ ಸಾಹಿತ್ಯವನ್ನು ಪ್ರಚಾರಕ್ಕೆ ತರುವವರು ವಿದ್ಯಾವಂತರು. ಅಂದಿನ ಕಾಲದಲ್ಲಿದ್ದ ವಿದ್ಯಾವಂತ ಬ್ರಾಹ್ಮಣರು ಅಥವಾ ವಿದ್ಯಾವಂತ ಉಚ್ಚ ವರ್ಗದವರು ಸಾಹಿತ್ಯ ರಚನೆಗೆ ಪ್ರಯತ್ನ ಮಾಡದೆಹೋದರು. ಅದರಿಂದಾಗಿ ತುಳು ಸಾಹಿತ್ಯ ರಚನೆಗೆ ಪ್ರೋತ್ಸಾಹ ಸಿಗಲಿಲ್ಲ. ೧೫ನೆಯ ಶತಮಾನದ ಅನಂತಪುರ ಶಾಸನವು ತುಳುಲಿಪಿಯಲ್ಲಿ ತುಳುಭಾಷೆಯಲ್ಲಿ ದೊರೆತಿರುವುದನ್ನು ಗಮನಿಸಬೇಕು.

ಗ್ರಂಥ ಸಾಹಿತ್ಯದ ಪ್ರಾರಂಭ ಇದೀಗ ೧೫೦ ವರ್ಷಗಳ ಈಚೆಗೆ ಆಯಿತು. ಈ ಪರಂಪರೆಗೆ ಪ್ರೇರಣೆ ಕೊಟ್ಟವರು ಕ್ರಿಶ್ಚಿಯನ್ ಮಿಶನರಿಗಳು. ಮತಪ್ರಚಾರ ಅವರ ಉದ್ದೇಶ ಆಗಿದ್ದರೂ ಅವರಿಂದ ತುಳು ಲಿಖಿತ ಸಾಹಿತ್ಯ ರಚನೆಗೆ ಪ್ರೋತ್ಸಾಹ ಸಿಕ್ಕಿತೆಂದು ಹೇಳಬಹುದು.

ಮಿಶನರಿ ಸಾಹಿತ್ಯದಲ್ಲಿ ಅನುವಾದವೇ ಹೆಚ್ಚು. ೧೮೪೨ರಲ್ಲಿ ‘ಗೋಸ್ಪೆಲ್ ಆಫ್ ಸೈಂಟ್ ಮ್ಯಾಥ್ಯೂ’ನ ತುಳು ಭಾಷಾಂತರ, ೧೮೪೭ರಲ್ಲಿ ನ್ಯೂಟೆಸ್ಟಮೆಂಟ್ ಬೈಬಲ್ ಭಾಷಾಂತರ ಪ್ರಕಟವಾಯಿತು. ಇದೇ ಸಮಯದಲ್ಲಿ ‘ಸುವಾರ್ತೆಲು’, ‘ನೀತಿ ವಚನೊಲು’, ‘ದೇವತಾರಾಧನೆದ ಕ್ರಮ’, ‘ಕೀರ್ತನೆಲು’, ‘ಪ್ರಾರ್ಥನೆಲು’, ‘ಬೈಬಲ್ ಕತೆಕುಲು’, ‘ಗೀತೆಲು’ – ಎಂಬ ಪುಸ್ತಕಗಳು ಪ್ರಕಟವಾದುವು. ಇವೆಲ್ಲ ಬೈಬಲ್ ಸಾಹಿತ್ಯದ ಅನುವಾದ.

ಮಿಶನರಿಗಳ ಸಾಹಿತ್ಯ ಸೇವೆಯಿಂದಾಗಿ ತುಳುಭಾಷೆ ಕಲಿಯಲು ಕೆಲವು ಪುಸ್ತಕಗಳು ದೊರಕಿದವು. ‘ತುಳು ಪಾಠಳೆ ದುಂಬುದ ಪುಸ್ತಕ’, ‘ತುಳು ಅಕ್ಷರಮಾಲೆ’ ,’ಕನ್ನಡ ತುಳು ಇಂಗ್ಲಿಷ್ ಮಂಜರಿ’ – ಇವು ಹತ್ತೊಂಬತ್ತನೆಯ ಶತಮಾನದಲ್ಲೆ ಪ್ರಕಟವಾದವು.