ಆದರೆ ತುಳುನಾಡಿನ ಕಡಲ ತೀರದ ಮಣ್ಣು ನೆರೆಯ ಕೇರಳ ಕೊಂಕಣ ತೀರಗಳ ಮಣ್ಣಿಗಿಂತ ಮೃದುತರವೆಂದೇನೂ ಹೇಳುವಂತಿಲ್ಲ. ಅಲ್ಲದೆ ಈ ನೆಲವೆಲ್ಲ ಪ್ರಾಯಃ ಮುರ (Laterite) ಜಾತಿಯ ಕಲ್ಲುನೆಲವೆಂಬುದನ್ನು ಲಕ್ಷಿಸಿದರೆ ಆ ಊಹೆಗೆ ವಸ್ತು ಸ್ಥಿತಿಯ ಬೆಂಬಲವೇನೂ ಕಾಣುವಂತಿಲ್ಲ. ಮತ್ತು ಗುಣವಾಚಕವಾಗಿ ಪ್ರಯುಕ್ತವಾಗುವ ಈ ಶಬ್ದವು ಮೂಲತಃ ಮೃದುತ್ವವನ್ನು ಹೇಳುವ ಶಬ್ದವಾಗಿದ್ದರೆ ನೀರಸವಾದ (ಹತ್ತಿಯಂತಹ) ಮೃದು ವಸ್ತುಗಳಿಗೂ ಅದು ಪ್ರಯುಕ್ತವಾಗುತ್ತಿತ್ತು. ಹಾಗೆಲ್ಲಿಯೂ ಪ್ರಯುಕ್ತವಾಗುವುದಿಲ್ಲವಾದ ಕಾರಣ ಮತ್ತು ದ್ರವಾಧಿಕವಾದ ಫಲಗಳಿಗೇ ವಿಶೇಷಣವಾಗುವ ಕಾರಣದು ದ್ರವಾಧಿಕ್ಯವನ್ನೇ ಸೂಚಿಸುತ್ತದೆಂದು ನಿಶ್ಚಯಿಸಬೇಕಾಗುತ್ತದೆ. ಹಾಗಾದರೆ ತುಳುನಾಡು ಎಂಬುದು ದ್ರವಾಧಿಕವಾದ ಎಂದರೆ ‘ಜಲಭರಿತವಾದ’ ನಾಡು ಎಂಬರ್ಥವನ್ನು ಸೂಚಿಸುವ ಶಬ್ದವೆಂದಾಗುತ್ತದೆ. ಇದರ ಸಾಮಂಜಸ್ಯವನ್ನು ಪರೀಕ್ಷಿಸೋಣ.

ಈಶಾನ್ಯ ಭಾಗವೊಂದನ್ನು ಬಿಟ್ಟರೆ ಭರತ ಖಂಡದಲ್ಲಿ ಅತಿ ಹೆಚ್ಚು ಮಳೆ ಬರುವ, (ನಮ್ಮ ಆಗುಂಬೆಯ ಅಸ್ಸಾಮಿನ ಚಿರಾಪುಂಜಿಗಿಂತ ಮಾತ್ರ ಕಡಿಮೆ ಮಳೆ ಬೀಳುವ ಸ್ಥಳವೆಂಬುದನ್ನು ಲಕ್ಷಿಸಿರಿ) ಕೆಲವೇ ಅಡಿಗಳಷ್ಟು ಹೊಂಡ ತೋಡಿದೊಡನೆ ಒಸರು ಚಿಮ್ಮುವ, (ಕಾಡುಗಳು ನಿಬಿಡವಾಗಿ ಹಬ್ಬಿದ್ದ ಹಿಂದಿನ ಕಾಲದಲ್ಲಿ) ‘ಮರಿಯಾಲ ಆಜಿ ತಿಂಗೊಳು’ , ‘ಹರುಕು ಕುಕ್ಕೆಯಲ್ಲಿ ಆರು ತಿಂಗಳು ನೀರು ಹೊಯಿದವನೇ ಹೊಯಿದ!’ (ಈ ಮಾತು ದಶಾವತಾರ ಆಟದ ‘ಕೋಡಂಗಿ’ಯದು – ನನ್ನ ಬಾಲ್ಯದಲ್ಲಿ ನಾನು ನೋಡಿದ ಪ್ರತಿಯೊಂದು ಆಟದಲ್ಲಿಯೂ ಇದನ್ನು ಕೇಳಿದ್ದೇನೆ) ಎಂಬಿತ್ಯಾದಿ ನುಡಿಗಟ್ಟುಗಳನ್ನು ಹುಟ್ಟಿಸಿದ, ಎಂಟು ಹತ್ತು ಮೈಲುಗಳಿಗೊಂದರಂತೆ ನದಿಗಳು ಸಮುದ್ರಕ್ಕೆ ಸೇರುವ ಈ ನಾಡಿನ ಜಲಸಮೃದ್ಧಿಯನ್ನು ಮೀರಿಸುವ ಪ್ರಾಕೃತಿಕ ಜಲಸಂಪತ್ತುಳ್ಳ ಪ್ರದೇಶವು ದಕ್ಷಿಣ ಭಾರತದಲ್ಲಿ ಅನ್ಯತ್ರ ಎಲ್ಲಿಯೂ ಇಲ್ಲ. ನಮ್ಮೂರ ಬಯಿಲುಗಳಲ್ಲಿ ಅಡಿಯೊಸರಿಂದಲೇ ಬತ್ತದ ಮೂರನೆಯ ಬೆಳೆಯನ್ನು ಮಾಡುತ್ತಿದ್ದ ಗದ್ದೆಗಳು (ಕೊಳಕೆ ಗದ್ದೆ) ಒಂದು ಕಾಲದಲ್ಲಿ ತುಂಬ ಇದ್ದುವು; ಇಂದು ಕೂಡ ಅಲ್ಲಲ್ಲಿ ಇವೆ. ಹಿಂದಿನ ಕಾಲದಲ್ಲಿ ನಮ್ಮ ಈ ತುಳುನಾಡಿನಲ್ಲಿ ಬೆಟ್ಟು ಗದ್ದೆಗಳುಳ್ಳವನೇ ಭಾಗ್ಯವಂತನೆಂದು ಗಣಿಸಲ್ಪಡುತ್ತಿದ್ದನಂತೆ! ಏಕೆಂದರೆ ಆಗ ಸದಾ ನೀರೊಸರುತ್ತಿದ್ದ ಬಯಿಲು ಗದ್ದೆಗಳಲ್ಲಿ ಸಾಕಷ್ಟು ಬೆಳೆ ಬರುತ್ತಿದ್ದಿಲ್ಲ. ಬೆಟ್ಟುಗದ್ದೆಯಲ್ಲಿ ಬೆಳೆಯುವುದು ಒಂದೇ ಬೆಳೆಯಾದರೂ ಲಭಿಸುವ ಧಾನ್ಯದ ಪ್ರಮಾಣ ಹೆಚ್ಚಾಗಿತ್ತು. ಆದುದರಿಂದ ಆ ಕಾಲದಲ್ಲಿ ಬೆಟ್ಟುಗದ್ದೆಯಿಲ್ಲದವನಿಗೆ ಹೆಣ್ಣು ಸಿಕ್ಕುವುದು ಕಷ್ಟವಾಗಿತ್ತಂತೆ – ಹೀಗೆ ನಮ್ಮ ಅಜ್ಜ ಅಜ್ಜಿ ಹೇಳುತ್ತಿದ್ದರು. ಇಂಥ ಜಲಸಮೃದ್ಧಿಯುಳ್ಳ ನಾಡಿಗೆ ತುಳುನಾಡು ಎಂದರೆ ‘ಜಲಾಧಿಕ್ಯವುಳ್ಳ ದೇಶ’ ‘ಜಲಭರಿತವಾದ ದೇಶ’, ‘ಜಲಾರ್ದ್ರವಾದ ದೇಶ’ ಎಂಬರ್ಥದ ಹೆಸರು ಬಂದರೆ, ಅದು ಸ್ವಾಭಾವಿಕವೂ ಉಚಿತವೂ ಆಗಿದೆ ಎಂಬುದರಲ್ಲಿ ಮತಭೇದವಿರಲಾರದು.

ಯಾವೊಂದು ಶಬ್ದ ಅರ್ಥವನ್ನು ನಿರ್ಣಯಿಸುವುದಕ್ಕೆ ಸಾಧನಗಳು ಎರಡು: ಪ್ರಯೋಗ ಮತ್ತು ನಿಷ್ಪತ್ತಿ. ನಮಗೆ ಲಭ್ಯವಾದ ಒಂದೆರಡು ಪ್ರಯೋಗ ಸಂದರ್ಭಗಳನ್ನು ಪರೀಕ್ಷಿಸಿ, ತುಳು ಎಂಬ ಶಬ್ದಕ್ಕೆ ದ್ರವಾಧಿಕ ಎಂಬರ್ಥವಿರುವುದನ್ನು ಕಂಡುಕೊಂಡೆವು. ಇನ್ನು ಆ ಶಬ್ದದ ನಿಷ್ಪತ್ತಿಯನ್ನೇನಾದರೂ ಊಹಿಸಲು ಸಾಧ್ಯವಾಗುವುದೋ ಎಂದು ನೋಡೋಣ.

ತುಳು ಎಂಬೀ ಶಬ್ದವು, ಮೂಲ ಶಬ್ದಗಳೆಂದು (ಅವ್ಯುತ್ಪನ್ನ ನಾಮ ಶಬ್ದಗಳು) ಭಾವಿಸ್ಪಡುವ ಮನೆ, ಮರ ಇತ್ಯಾದಿಗಳಂತೆ ಎರಡೇ ಎರಡು ಅಕ್ಷರಗಳ, ಎರಡೇ ಮಾತ್ರೆಗಳ, ಏಕಘಟಕವಾದ ದೇಶೀಯ ಶಬ್ದವಾದುದರಿಂದ ಇದರ ನಿಷ್ಪತ್ತಿಯನ್ನು ಕಂಡು ಹಿಡಿಯುವುದು ಅತಿ ಕಷ್ಟಸಾಧ್ಯವಾದ ಅಥವಾ ಅಸಾಧ್ಯವೇ ಆಗಲೂ ಬಹುದಾದ ಕೆಲಸ. ಆದರೂ ಈ ಶಬ್ದದ ವರ್ಣಸಮುದಾಯಕ್ಕೆ ಹೆಚ್ಚು ಕಡಮೆ ಸಮನಾದ ವರ್ಣ ಸಮೂಹದಿಂದ ಘಟಿತವಾದ ಏತದ್ದೇಶಿಯ ಶಬ್ದಗಳಲ್ಲಿ ಎಲ್ಲಾದರೂ, ‘ತುಳು’ ಎಂಬೀ ಶಬ್ದಕ್ಕೆ ಪ್ರಯೋಗಗಳ ಪರೀಕ್ಷೆಯಿಂದ ನಾವು ಕಂಡುಕೊಂಡ ಅರ್ಥದ ಛಾಯೆಯಾದರೂ ಕಂಡುಬರುವುದೋ ಎಂದು ನೋಡುವುದರಿಂದ ನಮಗೆ ಯತ್ಕಿಂಚಿತ್ ಲಾಭವಾಗಲೂಬಹುದು.

ಯಾವ ಭಾಷೆಯಲ್ಲಾದರೂ ಎಲ್ಲಾ ಶಬ್ದಗಳು ಏಕಕಾಲದಲ್ಲಿ ಹುಟ್ಟಿದವುಗಳಲ್ಲ; ಹುಟ್ಟಲಾರವು. ಭಾಷೆಯ ಆರಂಭದಲ್ಲಿ ಇದ್ದ ಕೆಲವೇ ಶಬ್ದಗಳಿಂದ ಮತ್ತೆ ಮತ್ತೆ ಶಬ್ದ ರೂಪಗಳು ಹುಟ್ಟುತ್ತವೆ. ಮನುಷ್ಯನು ತಾನು ಕಂಡ ವಸ್ತುಗಳ ಸ್ವರೂಪವನ್ನು ಎಂದರೆ ಅರ್ಥವನ್ನು ಇತರರಿಗೆ ತಿಳಿಸುವುದಕ್ಕಾಗಿ ಶಬ್ದಗಳನ್ನು ಸೃಷ್ಟಿಸುತ್ತಾನೆ. ಆ ಮೊದಲು ಅವನು ಕಂಡ ವಸ್ತುವಿನ ಸಮಾನ ಗುಣಧರ್ಮವುಳ್ಳ (ಅಥವಾ ತಜ್ಜನ್ಯವಾ) ವಸ್ತುವನ್ನು ಕಂಡಾಗ, ಪೂರ್ವ ಪರಿಚಿತ ವಸ್ತು ಸ್ವರೂಪವನ್ನು ತಿಳಿಸುವ ತನ್ನ ಹಳೆಯ ಶಬ್ದವನ್ನೇ ಒಂದಿಷ್ಟು ವ್ಯತ್ಯಾಸಗೊಳಿಸಿ, ಹೊಸ ವಸ್ತು ಸ್ವರೂಪವನ್ನು ತಿಳಿಸುವ ಪ್ರಯತ್ನ ಮಾಡುತ್ತಾನೆ. ಆಗ ಆ ಮೂಲ ಶಬ್ದದಿಂದ ಹೊಸ ಶಬ್ದವೊಂದು ಸಾಧಿತವಾಗುತ್ತದೆ. ಉದಾ: ತುಳುವಿನ ತಾರಿಮ, ತಾರೆ (ತಾರಿ ಎಂದರೆ ತಾಳಿ ಮರ;ತಾರೆ ಎಂದರೆ ತೆಂಗಿನ ಮರ) ಹೀಗೆ ಅವನ ಭಾಷೆಯಲ್ಲಿ ಶಬ್ದಗಳು ಬೆಳೆಯುತ್ತ ಹೋಗುತ್ತದೆ. ಎಲ್ಲಾ ಭಾಷೆಗಳ ಕೆಲ ಕೆಲವು ಶಬ್ದ ಸಮುದಾಯಗಳಲ್ಲಿ ಹೀಗೆ ಒಂದು ಮೂಲ ಶಬ್ದವು ಹಲವು ಶಬ್ದರೂಪಗಳನ್ನು ಹುಟ್ಟಿಸುತ್ತ ಹೋದ ಹೆಜ್ಜೆಯ ಗುರುತುಗಳು ಗೋಚರವಾಗುತ್ತವೆ. ಉದಾಹರಣವಾಗಿ ಹಸುರು ಎಂಬ ಶಬ್ದವನ್ನು ತೆಗೆದುಕೊಳ್ಳೋಣ.

ನಾವೀಗ ದ್ರಾವಿಡ ಭಾಷೆಗಳು ದಟ್ಟಡಿಯಿಡುತ್ತಿದ್ದ ಕಾಲದ ಎಂದರೆ, ಪುರಾತನ ಮಾನವ ಕಾಲದ ಪ್ರಾಕೃತ ಪರಿಸರವನ್ನು ಭಾವನಾಬಲದಿಂದ ಊಹಿಸಿಕೊಂಡ, ಅಲ್ಲಿ ನಮ್ಮ ವಿಚಾರದೃಷ್ಟಿಯನ್ನು ತೆರೆಯಬೇಕು.

ಹಸುರು ಎಂಬುದು ನಮಗೀಗ ಒಂದು ಬಣ್ಣದ ಹೆಸರು. ಯಾವುದೊಂದು ಭಾಷೆಯ ಆದಿಕಾಲದಲ್ಲಿಯೇ ವಸ್ತುವರ್ಜಿತವಾಗಿ ನೇರವಾಗಿ ಬಣ್ಣಗಳಿಗೆ ಹೆಸರಿರುವುದು ಸಂಭವನೀಯವಲ್ಲ. ವಸ್ತುವಾಚಕಗಳು ಸಾಕಷ್ಟು ಉತ್ಪನ್ನವಾದ ಮೇಲೆಯೇ ಗುಣ ವಾಚಕಗಳು ಹುಟ್ಟಬಲ್ಲವು. ಯಾವುದೊಂದು ವಿಶಿಷ್ಟ ಗುಣಯುಕ್ತವಾದ ವಸ್ತುವಿನ ಹೆಸರನ್ನು ಆಧರಿಸಿ ಕಾಲಾಂತರದಲ್ಲಿ ಆ ಗುಣವಾಚಕವು ಉತ್ಪನ್ನವಾಗುತ್ತದೆ. ಆದಿ ಕಾಲದ ನಮ್ಮ ಪೂರ್ವಜರು ಹಸುರು ಎಂಬ ಬಣ್ಣವನ್ನು ಪ್ರಕೃತಿಸಿದ್ಧವಾದ ಯಾವ ವಸ್ತುವಿನಲ್ಲಿ ಮೊದಲಾಗಿ ಕಂಡುದಾಗಿರಬಹುದು ಎಂಬ ವಿಚಾರ ಮಾಡುತ್ತಾ ಹೋದರೆ, ಅಂದಿನ ಪರಿಸರದಲ್ಲಿ ನೆಲವನ್ನೆಲ್ಲವೆಂಬಂತೆ ವ್ಯಾಪಿಸಿದ್ದ ಹುಲ್ಲು ಅಥವಾ ಗಿಡ ಮರಗಳ ಎಲೆಗಳು ನಮ್ಮ ಊಹೆಯ ಕಣ್ಣ ಮುಂದೆ ಬಂದು ನಿಲ್ಲುತ್ತವೆ; ಇವುಗಳೊಳಗೆ ಒಂದು ವಸ್ತು ಹಸುರೆಂಬ ಗುಣವಾಚಕವನ್ನು ಹುಟ್ಟಿಸಿರಬೇಕೆಂದೂ ತೋರುತ್ತದೆ. ಹೊಸಗನ್ನಡದ ಹಸುರು ಎಂಬುದರ ಹಳಗನ್ನಡ ರೂಪ ಪಸುರು; ಪಚ್ಚೆ ಎಂಬ ಇನ್ನೊಂದು ರೂಪವೂ ಇದಕ್ಕೆ ಇದೆ. ತುಳುವಿನ ಹಸುರೆಂಬುದನ್ನು ತಿಳಿಸುವ ಗುಣವಾಚಕವು ಪಚ್ಚೆ ಎಂಬುದೇ ಆಗಿದೆ. ‘ಪಸುರ್’ ಎಂಬ ಶಬ್ದದ ವರ್ಣಸಮುದಾಯದ ಸಾಮ್ಯವಿರುವ ‘ಪಜಿರ್’ ಎಂಬೊಂದು ಶಬ್ದವು ತುಳುವಿನಲ್ಲಿದೆ. ಅದರ ಅರ್ಥ ‘ಹಸುರು ಹುಲ್ಲು’ ಅಥವಾ ‘ಹಸಿ ಹುಲ್ಲು’ ಎಂದಾಗಿದೆ. ಹಾಗಾದರೆ ಹಸುರೆಂಬ ಗುಣವಾಚಕವು ಆದಿಕಾಲದಲ್ಲಿ ಹುಲ್ಲು ಎಂಬರ್ಥದ ಶಬ್ದದಿಂದಲೇ ಹುಟ್ಟಿರಬೇಕೆಂಬುದು ತಿಳಿದು ಬರುತ್ತದೆ. ಈ ಶಬ್ದದ ಬೆಳವಣಿಗೆ ಇಲ್ಲಿಗೇ ಕೊನೆಗೊಂಡಿಲ್ಲ. ಪಸಿ-ಹಸಿ, ಪಚ್ಚೆ-ಹಚ್ಚೆ, ತುಳುವಿನ ಪಜಿ (=ಹಸಿ) ಪಂತಿ (=ಹುಲ್ಲು) ಎಂಬವೂ ಆ ಮೂಲದಿಂದಲೇ ಹುಟ್ಟಿದವುಗಳು, ಪಯಿರು (ಪೈರು), ಬಯಿಲು (ಬೈಲು) ಬಯಲು, ಪಸೆ – ಹಸೆ ಎಂಬ ಕನ್ನಡ ಶಬ್ದಗಳೂ, ತುಳುವಿನ ಪಜೆ ಎಂದರೆ ಚಾಪೆ, ಬೈ ಎಂದರೆ ಬತ್ತದ ಹುಲ್ಲು ಇತ್ಯಾದಿ ಇನ್ನೂ ಎಷ್ಟೋ ಶಬ್ದಗಳೂ ಹುಲ್ಲು ಎಂಬರ್ಥದ ಅಸಮ್ಯಕ್‌ಜ್ಞಾತ ರೂಪದ ಯಾವುದೋ ಒಂದು ಮೂಲ ಶಬ್ದದಿಂದ ಹುಟ್ಟಿ ಭಿನ್ನ ಭಿನ್ನ ರೂಪಗಳಲ್ಲಿ ನಾನಾ ಅರ್ಥಗಳನ್ನು ಕೊಡುತ್ತಿರುವುದನ್ನು ಕಾಣಬಹುದಾಗಿದೆ (ಮೇಲೆ ಕಾಣಿಸಿದ ವಿವಿಧ ರೂಪಾಂತರಗಳುಂಟಾದ ಬಗೆ ಭಾಷಾನಿಯಮಸಂಮತವಾಗಿದ್ದು, ಆ ಶಬ್ದಗಳ ಪರಸ್ಪರ ಅರ್ಥ ಸಂಬಂಧ ಪರಂಪರೆಯು ವಿಚಾರಶೀಲರಿಗೆ ಸುಲಭಗ್ರಾಹ್ಯವಾಗಿರುವುದರಿಂದ ಅವುಗಳ ಔಚಿತ್ಯವನ್ನು ಇಲ್ಲಿ ಸವಿಸ್ತರವಾಗಿ ಪ್ರತಿಪಾದಿಸಬೇಕಾದ ಅವಶ್ಯಕತೆ ಇಲ್ಲವೆಂದು ನಂಬಿದ್ದೇನೆ).

ಹಸುರು ಎಂಬುದನ್ನು ನಾವು ಪರೀಕ್ಷಿಸಿದ ಹಾಗೆಯೇ ತುಳು ಎಂಬ ಶಬ್ದಕ್ಕೆ ವರ್ಣಸಾಮ್ಯವಿರುವ, ಮೂಲ ಶಬ್ದಗಳೆಂದೇ ಭಾವಿಸಲ್ಪಟ್ಟಿರುವ ಕೆಲವು ಶಬ್ದಗಳ ಅರ್ಥವನ್ನೀಗ ಪರೀಕ್ಷಿಸೋಣ.

ಕನ್ನಡ ತುಳು ಅರ್ಥ
ತಿಳಿ ತಳಿ ದ್ರವ ವಸ್ತುವನ್ನು ಚಿಮುಕಿಸು
ತಿಳಿ ತೆಳಿ-ತೆಲಿ ಧ್ಯಾನ್ಯವನ್ನು ಬೇಯಿಸಿ ಬಸಿದ ದ್ರವ
ತೆಳು ತೆಳು(ತೆಳ್ಪು) ತೆಳ್ಳಗಿರುವ, ದ್ರವಾಧಿಕವಾಗಿರುವ
ತೊಳೆ ನೀರಿನಲ್ಲಿ ಸ್ವಚ್ಛಮಾಡು
ತುಳುಕು ದ್ರವ ತುಂಬಿ ಚೆಲ್ಲು,
ತುಳುಂಕು ಪಾತ್ರೆಯೊಳಗೆ ದ್ರವ ಅಲ್ಲಾಡು
ತೊಳಸು ದ್ರವ ವಸ್ತುವನ್ನು ಕಲಕು

ಇಲ್ಲಿ ಉದಾಹರಿಸಿದ ಎಲ್ಲಾ ಶಬ್ದಗಳಲ್ಲಿಲ ಜಲಸಂಬಂಧವೂ ಸ್ಪಷ್ಟವಾಗಿ ಕಾಣುತ್ತದೆ. ಅದುದರಿಂದ ಇವುಗಳೆಲ್ಲ (ತುಳು ಸಹಿತ) ಜಲಾರ್ಥದ ಯಾವುದೋ ಒಂದು ಅಜ್ಞಾತ ಮೂಲದಿಂದ ಹುಟ್ಟಿರಬೇಕೆಂಬುದರಲ್ಲಿ ಸಂಶಯವಿಲ್ಲ. ಹೀಗಿರುವಾಗ, ಪ್ರಯೋಗ ಸಂದರ್ಭ ಪರೀಕ್ಷೆಯಿಂದ ‘ತುಳು’ ಎಂಬುದಕ್ಕೆ ನಾವು ಕಂಡುಕೊಂಡ ‘ಜಲಭರಿತ’ ಎಂಬ ಅರ್ಥವು ಈ ಶಬ್ದ ಪರಿವಾರ ಪರೀಕ್ಷೆಯಿಂದ ಮತ್ತಷ್ಟು ಸ್ಥಿರವಾದಂತಾಯಿತು.

ದಿ| ಗೋವಿಂದ ಪೈಗಳು (ತೆಂಕ ನಾಡು – ಪುಟ ೧೯) ತಮಿಳಿನಲ್ಲಿರುವ ತುೞ, ತುಳೈ, ತುಳೈಯಮ್ ಎಂಬ ಮೂರು ಶಬ್ದಗಳನ್ನು, ಱೞ ಕುಳ ಭೇದವನ್ನು ಗಣಿಸದೆ ಎತ್ತಿಕೊಂಡು, ತುೞ = ಹುಟ್ಟುಹಾಕು; ತುಳೈ = ಮುಳುಗು, ಮುಳುಗಾಡು; ತುಳೈಯಮ್ = ನೀರಿನಲ್ಲಿ ಆಡುವಿಕೆ ಎಂದು ಅರ್ಥಗಳನ್ನು ತೋರಿಸಿ, ಹುಟ್ಟುಹಾಕು ಎಂಬುದನ್ನೇ ಮೂಲಾರ್ಥವಾಗಿ ಸ್ವೀಕರಿಸಿ, ಬೆಸ್ತರಿಂದ ತುಂಬಿದ್ದುದರಿಂದ ಈ ನಾಡಿಗೆ ತುೞು = ತುಳುನಾಡೆಂಬ ಹೆಸರು ಬಂದಿರಬೇಕೆಂಬ ಹೇಳುತ್ತಾರೆ. (ಅವರು ಅಲ್ಲಿ ಱೞ ಕುಳ ಭೇದಗಳನ್ನು ಒಂದಿಷ್ಟು ಹೆಚ್ಚು ಲಕ್ಷಿಸಿದ್ದರೆ, ಸರಿಯಾದ ಗುರಿಗೇ ತಲಪುತ್ತಿದ್ದರೆಂದು ನಾನು ನಮ್ರತೆಯಿಂದ ನಿವೇದಿಸುತ್ತೇನೆ), ಕನ್ನಡದ ಱೞವು ಕುಳವಾಗಿ ಪರಿಣಮಿಸಿದಂತೆ ತಮಿಳಿನಲ್ಲಿ ಆಗದೆ ಇಂದೂ ಹಚ್ಚಗೆ ಉಳಿದಿರುವುದರಿಂದ, ಱೞ ಶಬ್ದಗಳಿಗೂ ಕುಳ ಶಬ್ದಗಳಿಗೂ ಅಲ್ಲಿ ಏಕಾರ್ಥವಾಗಲಿ ಜನ್ಯಜನಕ ಭಾವಗಳಾಗಲಿ ಉಂಟಾಗುವುದು ಅಸಾಧ್ಯ; ಹಿಂದೆ ನಾನು ತೋರಿಸಿದಂತೆ ತುಳುವಿನಲ್ಲೆಲ್ಲ ಱೞವು ರೇಫವಾಗಿದೆ ಹೊರತು ಱೞ ಕುಳಗಳಿಗೆ ಜನ್ಯಜನಕತ್ವವು ತುಳುವಿನಲ್ಲಿಯೂ ಇಲ್ಲ. ಆದುದರಿಂದ ತುೞ ಮತ್ತು ತುಳೈ ಎಂಬ ತಮಿಳು ಶಬ್ದಗಳೂ ಏಕಮೂಲದವಲ್ಲವೆಂಬುದು ಸ್ಪಷ್ಟ. ಇದೇ ಕಾರಣದಿಂದ ‘ತುೞ’ ಎಂಬ ಶಬ್ದದಲ್ಲಿ ‘ತುಳು’ವಿನ ಮೂಲವಿದೆ ಎನ್ನುವುದು ಸತ್ಯವಾಗುವಂತಿಲ್ಲ. ಆದರೆ ‘ತುಳೈ, ತುಳೈಯಮ್’ ಎಂಬ ಕುಳ ಶಬ್ದಗಳ ಅರ್ಥಕ್ಕೂ, ನಾವು ಕಂಡುಕೊಂಡ ತುಳು ಶಬ್ದಾರ್ಥಕ್ಕೂ ನೇರವಾದ ಸಂಬಂಧವಿದೆ. ‘ತುಳೈ’ ಶಬ್ದ ಅರ್ಥದಲ್ಲಿರುವ ಜಲ ಸಂಬಂಧವು ನನ್ನ ಪ್ರತಿಪಾದನೆಯನ್ನೇ ಸಮರ್ಥಿಸುತ್ತದಲ್ಲವೇ?

ತಮಿಳು ಮಲಯಾಳಗಳಲ್ಲಿ ನೀರಿಗೆ ‘ತಣ್ಣಿ’ ಎಂಬ ಹೆಸರೂ ಇದೆಯಷ್ಟೆ. ಈ ತಣ್ಣಿ ಎಂಬುದು ಒಂದು ಮೂಲ ಶಬ್ದವೋ ಅಥವಾ ತಣ್‌+ನೀರಂ = ತಣ್ಣೀರ್ ಎಂಬುದರ ಅಂತ್ಯ ಲೋಪವಾಗಿ ‘ತಣ್ಣಿ’ ಎಂದಾದ ಸಂಯುಕ್ತ ಶಬ್ದವೊ? ಇದನ್ನು ನಿಶ್ಚಯಿಸುವುದಕ್ಕೆ ಆ ಕುರಿತು ಹೆಚ್ಚಿನ ವಿಚಾರ ಬೇಕು. ಆದರೆ ತಣ್ ಎಂದರೆ ‘ತಣ್ಣಗೆ’ ಎಂಬ ಸ್ಪರ್ಶ ಗುಣವಾಚಕ ಶಬ್ದವನ್ನು ಸೃಷ್ಟಿಸಿಕೊಳ್ಳುವುದಕ್ಕೆ ಆದಿಕಾಲದ ಮಾನವರಿಗೆ ಸಹಾಯಕವಾಗಿದ್ದಿರಬಹುದಾದ ಏತದ್ಗುಣವಿಶಿಷ್ಟವಾದ ವಸ್ತು ಯಾವುದಾಗಿದ್ದಿರಬಹುದು? ಹಿಮವನ್ನು ಕಂಡರಿಯದ ನಮ್ಮ ದಕ್ಷಿಣ ಭಾರತದ ಮಾನವನಿಗೆ, ಶೀತ ಸ್ಪರ್ಶದ ಅನುಭವವನ್ನು ಮಾಡಿಕೊಡುತ್ತಿದ್ದುದ್ದು ನೀರೇ ಆಗಿರಬೇಕೆಂಬುದರಲ್ಲಿ ಸಂದೇಹವಿರಲಾರದು. ಹಿಂದೆ ನಾವು ಉದಾಹರಿಸಿದ ತಳಿ, ತಿಳಿ, ತೆಳು, ತೊಳೆ ಇತ್ಯಾದಿ ಶಬ್ದಗಳಲ್ಲಿರುವ ಳಕಾರವು, ತುಳು ಎಂಬ ಶಬ್ದದಲ್ಲಿ ಹೇಗೋ ಹಾಗೆ, ಶುದ್ಧ ಕುಳ. ಕನ್ನಡದಲ್ಲಿ ಕುಳವು ಣಕಾರವಾಗುವುದು ಬಹುದಾ ಕಂಡುಬರುತ್ತದೆ. ಉದಾ:ಗಿಳಿ-ಗಿಣಿ (ಹಳಗನ್ನಡದ ‘ಮೊೞ’ದ ಱೞವು ಹೊಸಗನ್ನಡದಲ್ಲಿ ‘ಮೊಳ’ವಾಗಿ ರೂಢವಾದ ಮೇಲೆ, ಕಾಲಾಂತರದಲ್ಲಿ ಪುನಃ ವಿಕೃತವಾಗಿ ‘ಮೊಣ’ ಎಂದೂ ಆಗಿದೆ. ಉದಾ: ಮೊಣಕೈ, ಮೊಣಕಾಲು ಇತ್ಯಾದಿ) ಈ ದೃಷ್ಟಿಯಿಂದ ‘ತಣ್’ ಎಂಬುದು ಮೂಲತಃ ‘ತಳ್’ ಎಂದಾಗಿದ್ದಿತೋ ಏನೋ ಎಂದು ತೋರುವುದು. ಹಾಗೆ ಆದುದು ನಿಜವಾಗಿದ್ದರೆ, ಮೇಲೆ ಉದಾಹರಿಸಿದಂತೆ ಜಲಸಂಬಂಧವನ್ನು ಪ್ರಕಟಿಸುತ್ತಿರುವ ತಳಿ, ತಿಳಿ, ತೆಳು, ತೊಳೆ, ತುಳೈ ಮತ್ತು ತುಳು ಇತ್ಯಾದಿ ಶಬ್ದಗಳ ಮೂಲವು, ನೀರು ಎಂಬರ್ಥವನ್ನೇ ನೇರಾಗಿ ಕೊಡುತ್ತಿದ್ದರಬಹುದಾದ, ಹೆಚ್ಚು ಕಡಮೆ ತಳ್, ಪ್ರಾಯಃ ತುಳಂ ಎಂಬ ರೂಪದಲ್ಲಿದ್ದ ಶಬ್ದವಾಗಿದ್ದಿರಬೇಕೆಂದು ಅನುಮಾನಿಸಿದರೆ ಅಯುಕ್ತವೆನಿಸಲಾರದು. ಅದು ಸರಿಯೆಂದಾದರೆ ಕೆಳಗೆ ಇಳಿ ಅಥವಾ ‘ಜಾರು’ ಎಂಬರ್ಥದ ತೂಳ್ (ಶಬ್ದಮಣಿದರ್ಪಣ – ತೂಳ್ ಅವಸರ್ಪಣೇ) ಎಂಬ ಶಬ್ದವು ಸಹ ಪ್ರವಾಹದ ನೀರಿನ ಗುಣಸಾಮ್ಯದಿಂದಾಗಿ, ಜಲವಾಚಕವಾದ ಆ ಮೂಲ ಶಬ್ದದಿಂದ ಹುಟ್ಟಿದ ಕ್ರಿಯಾರ್ಥಕ ಶಬ್ದ (ವ್ಯಾ.ಧಾತು) ವೆಂದು ಊಹಿಸಬಹುದಾಗಿದೆ. ಮತ್ತು ‘ಚಳಿ’ ಎಂಬ ಶಬ್ದವೂ, ತುಳುವಿನ ಚಂಡಿ (ಒದ್ದೆ) ಚೌಳಿ (ತಣ್ಣಗೆ) ಗಳೆಂಬ ಗುಣವಾಚಕಗಳೂ ತೂಂಬು (ನೀರನ್ನು ಹೊರಕ್ಕೆ ಬಿಡುವ ತೂತು ಅಥವಾ ನಳಿಗೆ) ಎಂಬ ನಾಮವೂ ಇದೇ ಮೂಲದಿಂದ ಉತ್ಪನ್ನವಾಗಿ ವಿಕೃತವಾದ ಶಬ್ದಗಳೆಂದೂ ಅನುಮಾನಿಸಬಹುದಾಗಿದೆ. ಯಾವುದಾದರೊಂದು ಪೇಯಕ್ಕೆ ಅಥವಾ ಪಾಯಸಕ್ಕೆ ಇಲ್ಲವೆ ಮೇಲೋಗರಕ್ಕೆ ಜಲಾಂಶ ಹೆಚ್ಚಾದಾಗ ಹವೀಕರು ತಮ್ಮ ಮನೆಮಾತಿನಲ್ಲಿ ‘ಅದು ತೋಳಂಬಟ್ಟೆ’ ಎಂದು ತಿರಸ್ಕಾರದಿಂದ ಹೇಳುವುದುಂಟು. ಇದಕ್ಕೂ ಜಲವಾಚಕವಾದ ಆ ಮೂಲ ಶಬ್ದವೇ ಕಾರಣವೆನ್ನಬಹುದು. ಈ ಮೇಲಿನ ವಿವರಗಳನ್ನೆಲ್ಲ ಸಾವಧಾನವಾಗಿ ಪರಿಶೀಲಿಸಿದರೆ, ತುಳು ಎಂಬ ಶಬ್ದದ ನಿಜವಾದ ಅರ್ಥವು ‘ಜಲಭರಿತ’ ಎಂದೆ ಆಗಿದೆಯೆಂಬುದರಲ್ಲಿ ಯಾವ ಸಂದೇಹವೂ ಉಳಿಯಲಾರದೆಂದು ನಂಬುತ್ತೇನೆ (ಲೇಖನದ ಕೊನೆಯ ವಿ.ಸೂ.ನೋಡಿರಿ).

ಅತಿ ಪುರಾತನ ಕಾಲದಿಂದಲೂ ತುಳುನಾಡಿಗೆ ಆಲುವ, ಆಳುವ, ಆಳುವಖೇಡ, ಆಳ್ವಖೇಡ ಇತ್ಯಾದಿಯಾಗಿ ಅದೊಂದು ಹೆಸರಿದ್ದಿತೆಂದು ಗ್ರಂಥಾಧಾರ ಹಾಗೂ ಶಾಸನಗಳ ಆಧಾರದಿಂದ ದಿ | ಗೋವಿಂದ ಪೈಗಳು ತೋರಿಸಿಕೊಟ್ಟಿದ್ದಾರೆ (ತೆಂಕನಾಡು – ಪುಟ ೧೨-೧೯)ಆದರೆ ಅವರು ಮಹಾಶೇಷನೆಂಬರ್ಥವುಳ್ಳ ಸಂಸ್ಕೃತದ ‘ಆಲುಕ’ ಎಂಬುದರಿಂದಲೂ, ‘ವಿಷ’ವೆಂಬರ್ಥವುಳ್ಳ ‘ಆಲ’ ಎಂಬುದರಿಂದಲೂ ಈ ಶಬ್ದದ ನಿಷ್ಪತ್ತಿಯನ್ನು ಸಾಧಿಸತೊಡಗಿ, ಒಂದಾನೊಂದು ಕಾಲದಲ್ಲಿ ಇಲ್ಲಿ ವಾಸಿಸುತ್ತಿದ್ದಿರಬೇಕೆಂದು ಭಾವಿಸಿಲ್ಪಟ್ಟಿರುವ ನಾಗರೆಂಬ ಜನರ ದೇಶ ಎಂಬರ್ಥವನ್ನು ಅದಕ್ಕೆ ಊಹಿಸಿದ್ದಾರೆ, ಮತ್ತೆ (ಬಹುಶಃ ಆ ಆಧಾರವು ದುರ್ಬಲವೆಂಬುದರಿಂದಲೋ ಏನೋ) ಇನ್ನೊಂದು ಊಹೆಯನ್ನು ಸಾಧಿಸುವುದಕ್ಕಾಗಿ ಲ ಳ ಱೞ ಭೇದವನ್ನು ಲೆಕ್ಕಿಸದೆ, ತಮಿಳಿನ ಅರೞಿವಿ, ಅೞಿವು; ಕನ್ನಡದ ಅೞವೆ, ಅಳವೆ, ಅರುವೆ; ತಮಿಳಿನ ಅೞುವಾಯ್ (=ಮಳಲ ದಿಣ್ಣೆ ಅಥವಾ ರೇವು)ಇತ್ಯಾದಿ ಶಬ್ದಗಳ ಒಟ್ಟು ಆಧಾರದಿಂದ ಸಮುದ್ರತೀರದ ಭೂಮಿ ಎಂಬರ್ಥದಲ್ಲಿ ಯಾವುದೋ ಒಂದು, ಪ್ರಾಯಃ ‘ಆೞುವ’ ಎಂದು (ಈ ಶಬ್ದವು ಅವರ ನಿರ್ಮಿತಿ) ತುಳುವಿನಲ್ಲಿ ರೂಢವಾಗಿದ್ದ ಶಬ್ದವು ತಮಿಳಿನ ‘ಚೋೞ’ವು ಸಂಸ್ಕೃತದಲ್ಲಿ ‘ಚೋಲ’ ವಾದಂತೆ ‘ಆಲುವ’ ಎಂಬ ಸಂಸ್ಕೃತದಲ್ಲಿ ಪ್ರಯುಕ್ತವಾಯಿತೆಂಬುದಾಗಿ ಹೇಳಿದ್ದಾರೆ. ಆದರೆ ಈ ಹಿಂದೆಯೇ ನಿವೇದಿಸಿದಂತೆ, ದ್ರಾವಿಡ ವರ್ಣಪಲ್ಲಟಗಳನ್ನು ಊಹಿಸುವಾಗ, ಱೞ ಕುಳಾದಿ ಭೇದಗಳನ್ನು ಅಲಕ್ಷಿಸಿದರೆ, ಅದು ಯಾಥಾರ್ಥವಾದ ಗುರಿಯನ್ನು ಎಂದೂ ತಲಪುವಂತಿಲ್ಲ.

ದಿ | ಗೋವಿಂದ ಪೈಗಳು ಹೇಳುವಂತೆ ‘ಆೞುವ’ ಎಂದಿದ್ದಿರಬಹುದಾದ ಶಬ್ದವು ಸಂಸ್ಕೃತೀಕೃತವಾಗಿ ಆಲುವ ಮತ್ತು ಆಳುವ ಎಂದಾಗಿರಬೇಕೆಂಬುದು ಸಂಭವನೀಯವಲ್ಲ. ಏಕೆಂದರೆ ತುಳುವಿನಲ್ಲಿ ಱೞವು ರೇಫವೇ ಆಗುವುದರಿಂದ ‘ಆೞುವ’ ಎಂದು ರೂಢವಾಗಿದ್ದ ಶಬ್ದವು ವಿಕೃತಿ ಹೊಂದಿದ್ದರೆ ‘ಆರುವ’ ಎಂದೇ ಈ ನಾಡಿನಲ್ಲಿ ಬಳಕೆಗೆ ಬರುತ್ತಿತ್ತು. ದೇಶನಾಮವಾದುದರಿಂದ ಸಂಸ್ಕೃತ ಶಾಸನದಲ್ಲಿಯೂ ಆರುವ ಎಂದೇ ಕಾಣಸಿಕೊಳ್ಳುತ್ತಿ‌ತ್ತು. ಅಷ್ಟು ಮಾತ್ರವಲ್ಲ, ಚಾಳುಕ್ಯ ರಾಜರ ಏಳನೆಯ ಶತಮಾನದ ಕನ್ನಡ ಲಿಪಿಯ ಸಂಸ್ಕೃತ ಶಾಸನವೊಂದು (ಕನ್ನಡ ಲಿಪಿಯ ಉಗಮ ಮತ್ತು ವಿಕಾಸ- ಚಿತ್ರ ೬೩ ಹಾಗೂ ಪುಟ ೧೨೫ ನೋಡಿರಿ) ಇದು ಱೞವೋ ಎಂಬ ಶಂಕೆಯನ್ನು ಅಳಿಸಿಬಿಡುತ್ತದೆ. ಅಲ್ಲಿ ಉಕ್ತವಾದ ದೇಶೀಯವಾದ ಹೆಸರುಗಳಲ್ಲಿ ಬರುವ, ಱ-ೞ-ಳ ಇವುಗಳು ಯಥಾವತ್ತಾಗಿ ‘ಕಿಱುಕಾಗಮಾಸಿ, ಎದೆವಾೞಲ್, ಸಿರಿಗಾಳು’ ಎಂದೇ ಲಿಖಿತವಾಗಿರುವ ಆ ಶಾಸನದಲ್ಲಿ ‘ಶ್ರೀ ಮದಾಳುವ ರಾಜ ವಿಜ್ಞಾಪನಯಾ’ ಎಂದು ಶುದ್ಧ ಳಕಾರವನ್ನೇ ‘ಆಳುವ’ ಶಬ್ದದಲ್ಲಿ ಕಾಣುತ್ತೇವೆ. ಏಳನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ (ಪ್ರಾಯಃ ತುಳುನಾಡಿನಲ್ಲೂ) ಱೞದ ಉಚ್ಚಾರವೂ ಪ್ರಸ್ಫುಟವಾಗಿದ್ದುದರಲ್ಲಿ ಯಾವ ಸಂದೇಹವೂ ಇರಲಾರದು. ಆದುದರಿಂದ ‘ಆಳುವ’ ಶಬ್ದವು ಱೞಮೂಲವಾಗಿರಬಹುದೆಂದು ಶಂಕೆಗೆ ಇನ್ನು ಎಡೆಯೇ ಇರಲಾರದು.

ಚರಿತ್ರೆಯ ಪುಸ್ತಕಗಳಲ್ಲಿ ‘ಅಲೂಪ’ರೆಂದು ಪ್ರಸಿದ್ಧರಾದ ರಾಜರ ಶಾಸನಗಳಲ್ಲಿ ಅವರ ಹೆಸರನ್ನು ಆಲುಪ, ಆಳುಪ ಎಂದು ಕಾಣಬಹುದು (ತುಳುನಾಡಿನಲ್ಲಿ ಆಳಿದವರ ಹೆಸರುಗಳಲ್ಲಿ ನಮಗೆ ತಿಳಿದಿರುವ ಮಟ್ಟಿಗೆ ಇದು ಅತಿ ಹಳೆಯ ಹೆಸರೆಂಬುದು ವಿಶೇಷವಾಗಿ ಇಲ್ಲಿ ಲಕ್ಷಿಸತಕ್ಕುದ್ದಾಗಿದೆ). ಈ ಹೆಸರು ವಂಶವಾಚಕವೆಂದೇ ತಿಳಿಯಲ್ಪಟ್ಟಿರುವುದಾದರೂ, ಮೂಲತಃ ಅದು ದೇಶವಾಚಕವೇ ಆಗಿದ್ದಿರಬೇಕೆಂದು ನನಗೆ ತೋರುತ್ತದೆ. ಶಾಸನಗಳಲ್ಲಿ, ಒಂದೇ ವಕ್ಕನೆಯಲ್ಲಿ ‘ಆಲುಪೇಂದ್ರ… ಪಾಂಡ್ಯ” ಇತ್ಯಾದಿ ಕಾಣುತ್ತದೆ. ಪಾಂಡ್ಯ ಎಂಬೀ ಶಬ್ದವು ತುಳುನಾಡಿನವರಿಗಾರಿಗೂ ಸ್ವವಂಶವಾವಕವಲ್ಲದೆ ಸ್ವದೇಶ ವಾಚಕವಾಗದಷ್ಟೇ? ಏಕೆಂದರೆ ತಮಿಳುನಾಡಿಗೆ ‘ಪಾಂಡ್ಯದೇಶ’ ಎಂಬ ಹೆಸರು ಎಂದೂ ಇರಲಿಲ್ಲವೆಂಬುದು ನಿರ್ವಿವಾದ. ತಮಿಳು ನಾಡಿನ ಪಾಂಡ್ಯರಾಜರ ಸಾಮಂತರೆಂದು ತೋರಿಸುವುದಕ್ಕಾಗಿ ‘ಪಾಂಡ್ಯ’ ಎಂಬುದು ಈ ರಾಜರ ಹೆಸರಲ್ಲಿ ಸೇರಿದ್ದಿರಬಹುದೆಂದು ದಿ|ಪೈಗಳ ಹೇಳಿಕೆ (ತೆಂಕನಾಡು) ಆದರೆ ತಮಿಳುನಾಡಿನ ಪಾಂಡ್ಯರ ಅಧೀನದಲ್ಲಿ ತುಳುನಾಡು ಎಂದಾದರೂ ಇತ್ತೋ ಎಂಬುದು ಸಂದೇಹಾಸ್ಪದ; ಮತ್ತು ಹದಿನೈದನೇ ಶತಮಾನದ ತುಳುರಾಜರ ಹೆಸರಲ್ಲಿಯೂ ‘ಪಾಂಡ್ಯ’ ಎಂಬುದು ಸೇರಿರುವುದನ್ನು ಶಾಸನಗಳಲ್ಲಿ ಕಾಣುತ್ತೇವೆ. ಆ ಶತಮಾನದಲ್ಲಂತೂ ತಮಿಳುನಾಡಿನಲ್ಲಿಯೇ ಪಾಂಡ್ಯರ ಆಧಿಪತ್ಯವಿರಲಿಲ್ಲ. ಆಗ ಅಧಿರಾಜರಾಗಿದ್ದವರು ವಿಜಯನಗರದ ನರಪತಿಗಳು. ಹೀಗಿರುವಾಗ ತುಳುನಾಡಿನ ಅರಸರ ಹೆಸರಿಗೆ ಅಂಟಿರುವ ಪಾಂಡ್ಯ ಎಂಬುದು ವಂಶದ ಹೆಸರೆಂದೆ ಹೇಳುವುದು ಯುಕ್ತ. ತುಳುನಾಡಿನ ಕೆಲವು ಮನೆತನದವರಿಗೂ ಈಗಲೂ ‘ಪಾಂಡಿ’ ಎಂಬ ಕುಲನಾಮ (Surname) ವಿರುವುದು ನನ್ನ ಈ ಊಹೆಗೆ ಪೋಷಕವಾಗಿದೆ. (ಪಾಂಡ್ಯ ಎಂಬ ಶಬ್ದದ ಅರ್ಥದ ಕುರಿತು ನನ್ನ ವಿಚಾರಗಳು ಬೇರೆಯೆ ಇವೆ; ಅವು ಇಲ್ಲಿ ಅಪ್ರಸ್ತುತ)ಆದುದರಿಂದ ‘ಆಲುಪೇಂದ್ರ… ಪಾಂಡ್ಯ ಎಂಬ ವಕ್ಕಣೆಯಲ್ಲಿ ಪಾಂಡ್ಯ ಎಂಬುದು ನಿಸ್ಸಂಶಯವಾಗಿ ವಂಶವಾಚಕ ವಾದುದರಿಂದಲೂ, ಒಂದೇ ವಾಕ್ಯದಲ್ಲಿ ಎರಡು ವಂಶ ವಾಚಕಗಳಿರುವುದು ಪ್ರಾಯಃಸ ಅಸಂಭವವೆಂದು ಕಾಣುವುದರಿಂದಲೂ, ಆಲುಪ ಎಂಬುದು ಅಲ್ಲಿ ದೇಶವಾಚಕವೆಂದು ಭಾವಿಸಬಹುದಾಗಿದೆ ಅಥವಾ ಆಲುಪ ಎಂಬುದು ಅಲ್ಲಿ ವಂಶವಾಚಕವಾಗಿ ಪ್ರಯುಕ್ತವಾಗಿದ್ದರೆ, ಮೂಲತಃ ಅದು ಆಲುವ, ಆಳುವ ಇತ್ಯಾದಿಗಳಂತೆಯೆ ದೇಶವಾಚಕವಾಗಿದ್ದು – ‘ಜನಪದ ವಚನಾಃ ಕ್ಷತ್ರಿಯಮಾಚಕ್ಷತೇ’ (ಮಲ್ಲಿನಾಥ – ರಘು. ವ್ಯಾಖ್ಯಾನ ಸರ್ಗ ೪-೩೫) ಎಂದರೆ ‘ದೇಶದ ಹೆಸರುಗಳೂ ಆಳುವವರಿಗೆ ಸಲ್ಲುತ್ತವೆ’ ಎಂಬ ಸಾರ್ವಕಾಲಿಕ ನಿಯಮದಂತೆ, ಚೋಳದೇಶದ ರಾಜರೂ ಚೋಳರೇ ಆದಂತೆ, ಇಂದು ಕೂಡ ಆಯಾ ದೇಶದ ಸರಕಾರಕ್ಕೆ ಆಯಾ ದೇಶದ ಹೆಸರೇ ಪ್ರಪಂಚದ ಸಕಲ ಭಾಗಗಳಲ್ಲೂ ಸಕಲ ಭಾಷೆಗಳಲ್ಲೂ ರೂಢವಾಗಿರುವಂತೆ – ಈ ನಾಡಿನ ರಾಜರ ಹೆಸರಾಗಿ ಮಾರ್ಪಟ್ಟಿರಬೇಕು. ನಾನು ಹೀಗೆ ಹೇಳುವುದಕ್ಕೆ ಕಾರಣವೇನೆಂದರೆ ಆಲುವ, ಆಳುವ, ಆಳ್ವ ಇತ್ಯಾದಿಯಾಗಿ, ನಿಸ್ಸಂದಿಗ್ಧವಾಗಿ ದೇಶವಾಚಕವಾಗಿಯೆ ಪ್ರಯುಕ್ತವಾಗಿರುವ ಶಬ್ದಕ್ಕೂ ಆಲುಪ – ಆಳುವ ಎಂಬ ಶಬ್ದಕ್ಕೂ ಸುಸ್ಪಷ್ಟವಾಗಿ ತೋರುವ ಶಬ್ದ ಸ್ವರೂಪದ ಮತ್ತು ಅರ್ಥದ ಬಾಂಧವ್ಯ. ವರ್ಣ ಪಲ್ಲಟ ನಿಯಮದಂತೆ, ಪಕಾರವಿರುವ ಆಲುಪ, ಆಳುಪ ಎಂಬ ರೂಪಗಳಿಂದ ತಾನೆ ಆಲುವ, ಆಳುವ ಇತ್ಯಾದಿಯಾದ ವಕಾರವಿರುವ ರೂಪಗಳಿಂದ ತಾನೆ ಆಲುವ, ಆಳುವ ಇತ್ಯಾದಿಯಾದ ವಕಾರವಿರುವ ರೂಪಗಳುಂಟಾಗಬೇಕು; ‘ಆಲುವ’ ದಿಂದ ‘ಆಲುಪ’ ಹುಟ್ಟುವ ಸಂಭವ ಇಲ್ಲ. ಎಲ್ಲ ದ್ರಾವಿಡ ಭಾಷೆಗಳಲ್ಲೂ ಪಕಾರವು ವಕಾರವಾಗುವುದು ವ್ಯಾಕರಣ ಸಮ್ಮತವಾದ ಸಾಮಾನ್ಯ ನಿಯಮ. ಉದಾ: ವಾಪಿ=ಬಾವಿ, ದೀಪಿಕೆ=ದೀವಿಗೆ, ಪೆಸರ್+ಪಡೆ=ಪೆಸರ್ವಡೆ, ಕಪಿಲೆ=ಕವಿಲೆ, ಅಪ್ಪೆ(ಅಬ್ಬೆ)=ಅವ್ವೆ ಇತ್ಯಾದಿ. ವಕಾರವು ಕ್ವಚಿತ್ ಪಕಾರವಾಗುವುದು ವಿಶಿಷ್ಟ ಸನ್ನಿವೇಶದಲ್ಲಿ ಮಾತ್ರ. ಉದಾ: ಮಾಡು +ವ = ಮಾೞ್ಪ. ಇದರ ಹೆಚ್ಚಿನ ವಿವೃತ್ತಿ ಇಲ್ಲಿ ಅನವಶ್ಯ. ಏಕೆಂದರೆ ಅಂತಹ ವಿಶಿಷ್ಟ ಸನ್ನಿವೇಶವಿಲ್ಲದ ಆಲುಪ ಆಲುವಗಳಿಗೆ ಇದು ಅನ್ವಯಿಸಲಾರದು. (ಜಿಜ್ಞಾಸುಗಳು ಶಬ್ದಮಣಿದರ್ಪಣವನ್ನು ಅವಲೋಕಿಸಬಹುದು) ಆದುದರಿಂದ ದೇಶವಾಚಕಗಳೇ ಆದ ಆಲುವ ಆಳುವಗಳು, ಆಲುಪ ಆಳುಪಗಳು ರೂಪಾಂತರಗಳೆಂದು ಸಿದ್ಧವಾಗುತ್ತದೆ.

ಆಲುವ-ಆಳುವ-ಆಳ್ವ (ಆಳ್ವಖೇಡ) ಎಂಬಿಷ್ಟನ್ನು ದೇಶವಾಚಕಗಳೆಂದೂ, ಆಲುಪ ಆಳುವ ಎಂಬೆರಡರನ್ನು ಮಾತ್ರ ವಂಶವಾಚಕಗಳೆಂದೂ ಭೇದಿಸುವುದರಲ್ಲಿ ಔಚಿತ್ಯವಾಗಲಿ ತಥ್ಯವಾಗಲಿ ಇರುವಂತೆ ನನಗೆ ತೋರುವುದಿಲ್ಲ. ಕೇವಲ ದೇಶವಾಚಕಗಳೆಂದೇ ಹೇಳಲ್ಪಡುತ್ತಿರುವ ಆಳುವ -ಆಳ್ವಗಳೂ ಕೆಲವೆಡೆ ವಂಶವಾಚಕಗಳಾಗಿಯೂ ಕಂಡುಬರುತ್ತವೆ. (ತೆಂಕನಾಡು. ಪು.೧೫) ‘ಆಳ್ವ’ ಎಂಬ ಕುಲನಾಮವೂ ಹಲವು ಮನೆತನಗಳಿಗೆ ಈಗಲೂ ಇರುವುದನ್ನು ಎಲ್ಲರೂ ಬಲ್ಲರು. ವಂಶವಾಚಕವಾದ ಈ ಹೆಸರು ಅವರ ಪೂರ್ವಜರಿಗೂ ಆಳುಪವಂಶಕ್ಕೂ ಇದ್ದ ಸಂಬಂಧವನ್ನೇ ಸೂಚಿಸುತ್ತದೆ. ಆದುದರಿಂದ ಆಲುವ -ಆಳುವ-ಆಲುಪ-ಆಳುಪ-ಆಳ್ವ-ಇವುಗಳೆಲ್ಲ ಒಂದೇ ಅರ್ಥದ ಶಬ್ದಗಳೆಂದೂ ಮೂಲತಃ ಅವು ದೇಶವಾಚಕವೇ ಆಗಿದ್ದು, ದೇಶದ ಹೆಸರು ಆಳುವವರ ಹೆಸರೆ ಆಗುವ ವಿಶ್ವಮಾನ್ಯವಾದ ರೂಢಿಯಂತೆ ಆಗಿರುತ್ತದೆಂದು ನನಗೆ ತೋರುತ್ತದೆ.

ಆಲುಪ-ಆಳುಪ, ಆಲುವ-ಆಳುವ ಹೀಗೆ ಈ ಶಬ್ದಭೇದಗಳಲ್ಲಿ ಲಕಾರವು ಳಕಾರವೂ ಒಂದರ ಸ್ಥಾನದಲ್ಲಿ ಇನ್ನೊಂದು ಐಚ್ಛಿಕವಾಗಿ ಪ್ರಯುಕ್ತವಾದುದು ಶಾಸನಗಳಲ್ಲಿ ಕಂಡುಬರುತ್ತದೆ. ಕನ್ನಡದಲ್ಲಾಗಲಿ ಶುದ್ಧ ತುಳುವಿನಲ್ಲಾಗಲಿ ಲ-ಳಗಳು ಅಭಿನವಲ್ಲ; ಅವು ಬೇರೆ ಬೇರೆ ಮೂಲ ವರ್ಣಗಳು. ಅವುಗಳೊಳಗೆ ಒಂದರ ಬದಲಾಗಿ ಮತ್ತೊಂದನ್ನು ಪ್ರಯೋಗಿಸಿದರೆ ಅರ್ಥಹಾನಿಯಾಗದುಳಿಯದು. ಹೀಗಿರುವಾಗ, ಆಲುವ-ಆಳುವ ಎಂದು ಮೂಲತಃ ಭಿನ್ನವಾದ ವರ್ನಗಳನ್ನು ಏತದ್ದೇಶಿಯರು ಲಳಯೋರಭೇದವಾಗಿ ಬಳಸುವುದು ಕೇವಲ ಅಸಂಭವ. ಅದು ಸಂಸ್ಕೃತ ಶಬ್ದವಾದರೆ ಮಾತ್ರ ಅಲ್ಲಿ ಲ-ಳಗಳಿಗೆ ಭೇದವಿಲ್ಲ. (ಉದಾ: ಕಮಲ-ಕಮಳ, ಕೋಮಲ-ಕೋಮಳ, ಕಲಶ-ಕಳಶ-ಕಳಸ ಇತ್ಯಾದಿ) ಆದುದರಿಂದ ಆ ಆಲುವ-ಆಳುಪಾದಿಗಳು ಸಂಸ್ಕೃತ ಮೂಲದವುಗಳೆಂದೆ ಅಂದಿನವರ ಅಭಿಪ್ರಾಯವಿದ್ದಿರಬೇಕು. ಆದಕಾರಣವೇ ಅವರು ಅಲ್ಲಿ ಲ-ಳ ಭೇದವಿಲ್ಲವೆಂಬಂತೆ ಭಾಸವಾಗಬಹುದು. ಆದರೆ ಅವರ ಮಾತಿನಲ್ಲಿಯೂ ಳಕಾರ ಸ್ಥಾನಗಳಲ್ಲಿ ಲಕಾರವು ಕಂಡುಬರುವುದು ವಿನಾ, ಲಕಾರ ಸ್ಥಾನವನ್ನು ಳಕಾರವು ಆಕ್ರಮಿಸುವುದಿಲ್ಲವೆಂದು ಪರೀಕ್ಷಿಸಿದರೆ ತಿಳಿದುಬರುವುದು. ಉದಾ: ಮೀನಿನ ‘ಬಲೆ’ ಯನ್ನು ‘ಬಳೆ’ ಎಂದು ಯಾರೂ ಉಚ್ಚರಿಸುವುದಿಲ್ಲ. ಆದರೆ ಧಾನ್ಯಾದಿಗಳ ‘ಬೆಳೆ’ ಎಂಬುದನ್ನು ಬುಳೆ-ಬುಲೆ ಎಂದು ಐಚ್ಛಿಕವಾಗಿ ಉಚ್ಚರಿಸುತ್ತಾರೆ. ಒಳನಾಡಿನ ತುಳುಮಾತಿನಲ್ಲಿ ಸುಸ್ಪಷ್ಟವಾಗಿ ಲ-ಳ ಭೇದ ಇಂದೂ ಇದ್ದೇ ಇದೆ. ಆದುದರಿಂದ ಪುರಾತನ ತುಳುವಿನಲ್ಲಿ ‘ಲಳಯೋರಭೇದ’ವನ್ನು ಸರ್ವಥಾ ಶಂಕಿಸುವಂತಿಲ್ಲ). ಹಾಗಾದರೆ ಆಳುವ ಆಲುಪಾದಿಗಳ ಸಂಸ್ಕೃತ ಮೂಲ ಯಾವುದಾಗಿರಬಹುದು?

ಸಂಸ್ಕೃತ ಗ್ರಂಥಗಳಲ್ಲಿ ಭೂಸ್ಥಿತಿಯ ಪ್ರಾಕೃತಿಕ ಗುಣವನ್ನಲಂಬಿಸಿ ದೇಶಗಳನ್ನು ಎಂದರೆ ಭೂಭಾಗಗಳನ್ನು ಎರಡು ಬಗೆಯಾಗಿ ನಿರೂಪಿಸಿರುವುದು ಕಂಡುಬರುತ್ತದೆ. ಅವುಗಳಲ್ಲೊಂದು ಅನೂಪದೇಶವೆಂದೂ ಇನ್ನೊಂದು ಜಾಂಗಲ ದೇಶವೆಂದೂ ಹೆಸರಿಸಲ್ಪಟ್ಟಿದೆ. ಅನೂಪದೇಶವೆಂದರೆ ಜಲಾಧಿಕ್ಯವುಳ್ಳ ಆರ್ದ್ರ ಪ್ರದೇಶ, ಜಾಂಗಲ ದೇಶವೆಂದರೆ ಜಲವು ಅಲ್ಪವಾದ ಶುಷ್ಕಪ್ರದೇಶ. ಅನೂಪದೇಶದ ಲಕ್ಷಣವು ಹೀಗೆ ಹೇಳಲ್ಪಟ್ಟಿದೆ:

ನಾನಾದ್ರುಮಲತಾ ವೀರುತ್ ನಿರ್ಝರಪ್ರಾಂತ ಶೀತಲೈಃ |
ವನೈಃ ವ್ಯಾಪ್ತಂ ಅನೂಪಂ ತತ್
ಸಸ್ಯೈಃವ್ರೀಹಿಯವಾದಿಭಿಃ ||

ಈ ಶ್ಲೋಕದ ತಾತ್ಪರ್ಯ

ನಾನಾ ಬಗೆಯ ಗಿಡ ಮರ ಬಳ್ಳಿ ಪೊದರುಗಳಿಂದಲೂ ಬೆಟ್ಟಗಳಿಂದ ಧುಮುಕುವ ತೊರೆಗಳಿಂದಲೂ ಕೂಡಿದ ತಂಪಾದ ಕಾಡುಗಳೂ, ಬತ್ತ ಜವೆ ಮೊದಲಾದ ಧಾನ್ಯ ಸಸ್ಯಗಳೂ ತುಂಬಿರುವ ಪ್ರದೇಶಕ್ಕೆ ‘ಅನೂಪ’ವೆಂದು ಹೆಸರು. ಈ ಲಕ್ಷಣದಂತೆ, ನಮ್ಮಿ ತುಳುನಾಡು ‘ಅನೂಪ’ ಎಂಬ ಹೆಸರಿಗೆ ಅತ್ಯುತ್ತಮ ನಿದರ್ಶನವಾಗಿದೆ. ‘ತುಳುನಾಡು’ ಹಾಗೂ ಅನೂಪದೇಶ’ ಎಂಬ ಹೆಸರುಗಳ ಅರ್ಥವನ್ನು ಪರಿಭಾವಿಸಿದರೆ, ಅವುಗಳ ಒಂದು ಮತ್ತೊಂದರ ಭಾಷಾಂತರವೆಂಬಷ್ಟರ ಮಟ್ಟಿಗೆ ಏಕಾರ್ಥವನ್ನು ಕೊಡುತ್ತವೆಂಬುದು ಕಂಡುಬಾರದಿರದು. ಎಂದರೆ, ತುಳುನಾಡು ಎಂಬ ದೇಶಿಯ ಶಬ್ದಕ್ಕೂ ಅನೂಪದೇಶವೆಂಬ ಸಂಸ್ಕೃತ ಶಬ್ದಕ್ಕೂ ‘ಜಲಭರಿತವಾದ ಭೂಮಿ’ ಎಂಬುದೊಂದೇ ಅರ್ಥ.

[ಗೋವಿಂದ ಪೈಗಳು, ೧೯೨೭ರಲ್ಲಿ ಪ್ರಕಟವಾದ ‘ಪಂಚಕಜ್ಞಾಯ’ ದೊಳಗಿನ ತಮ್ಮ ತುಳುನಾಡಿನ ಕುರಿತಾದ ಲೇಖನದಲ್ಲಿ.] ಈ ಅನೂಪ ಎಂಬುದರಿಂದಲೇ ಆಲೂಪ-ಆಲುಪ ಇತ್ಯಾದಿಗಳುಂಟಾಗಿರಬೇಕೆಂಬ ಅಭಿಪ್ರಾಯವನ್ನು ಸಮರ್ಥಿಸಿದ್ದಾರೆ. ಆದರೆ, ಆದೇ ವಿಷಯವಾಗಿ ಕಾಲಾಂತರದಲ್ಲಿ ಅವರು ಬರೆದಿರುವ ಇನ್ನೊಂದು ಲೇಖನದಲ್ಲಿ (ತೆಂಕನಾಡು-ನೋಡಿರಿ) ಆಲುಪ, ಆಳುವ ಇತ್ಯಾಗಿಗಳಿಗೂ ‘ಅನೂಪ’ ಶಬ್ದಕ್ಕೂ ಇರುವ ಸಂಬಂಧವನ್ನು ಗಣನೆಗೆ ತೆಗೆದುಕೊಂಡಿಲ್ಲ. ಶಾಸನಗಳಲ್ಲಿ ಆಲುಪ, ಆಳುಪ ಎಂಬ ರೂಪಗಳೇ ಕಂಡುಬರುವುದರಿಂದ, ಅಲೂಪ ಎಂಬುದು ಶಾಸನಗಳಲ್ಲಿ ಕಾಣದಿರುವುದರಿಂದ, ಅವರು ಅಲೂಪವನ್ನೂ ಅದರ ಮೂಲವೆಂದು ಸ್ಪಷ್ಟವಾಗಿ ತೋರುವ ಅನೂಪವನ್ನೂ ಕೈಬಿಟ್ಟಿರಬಹುದೆಂದು ತೋರುತ್ತದೆ. ಆದರೆ ಆ ಮೊದಲು ವಿದ್ವಾಂಸರೂ ರಾಜವಂಶದವರನ್ನು ‘ಆಲೂಪ’ರೆಂದೇ ತಮ್ಮ ಬರವಣಿಗೆಗಳಲ್ಲಿ ಕಾಣಿಸಿದ್ದಾರೆ. ಆದುದರಿಂದ ‘ಆಲೂಪ’ ಎಂಬ ಶಬ್ದರೂಪವು ನಿರಾಧಾರವಾಗಿದ್ದಿರಲಾರದೆಂದೆ ಹೇಳಬೇಕು. ಅದಕ್ಕೆ ಎಲ್ಲಿಯೋ ಒಂದು ಆಕರವನ್ನು ಆ ವಿದ್ವಜ್ಞನರು ಕಂಡುದಿರಲೇಬೇಕು. ಪೈಗಳು ಸಹ ತಮ್ಮ ಒಂದು ಕವನದಲ್ಲಿ ರಾಜರ ಹೆಸರನ್ನು ಆಲೂಪರೆಂದೆ ನಿರೂಪಿಸಿದ್ದಾರೆ. ‘ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು’- (ಕನ್ನಡಿಗರ ತಾಯಿ) ಒಂದು ವೇಳೆ ‘ಅಲೂಪ’ ಎಂಬ ಶಬ್ದರೂಪಕ್ಕೆ ಅಸ್ತಿತ್ವವೇ ಇಲ್ಲವೆಂದು – ಇದು ಅಸಂಭವ – ಸಂಶೋಧನೆಯಿಂದ ಸಿದ್ಧವಾಯಿತೆಂದೆ ಆದರೂ, ‘ಅನೂಪ’ ಎಂಬುದು ‘ಆಲುಪ’ ಎಂದು ನೇರವಾಗಿಯೇ ತದ್ಭವವಾಗಲು ಭಾಷಾ ನಿಯಮದ ಆತಂಕವೇನೂ ಇಲ್ಲ. ಹೀಗಿರುವಲ್ಲಿ ಎಂದರೆ ಅನೂಪ ದೇಶ ಮತ್ತು ತುಳುನಾಡು ಎಂಬುವು ಸಮಾನಾರ್ಥಕವಾಗಿರುತ್ತಿರುವಲ್ಲಿ, ದೇಶವಾಚಕವಾದ ಈ ‘ಅನೂಪ’ವೇ ಅಲೂಪ, ಆಲುಪ-ಆಳುಪ, ಆಲುವ – ಆಳುವ-ಆಳ್ವ ಎಂಬ ರೂಪಗಳನ್ನು ಪಡೆದರಿಬೇಕೆಂದು ಊಹಿಸುವುದು ತಪ್ಪಾಗಲಾರದು. ನ-ಲಕಾರಗಳು ಏಕಸ್ಥಾನಿಗಳಾದುದರಿಂದಲೂ, ಲಕಾರವು ಸಾನುನಾಸಿಕವಾಗಿಯೂ (ಶಬ್ದಮಣಿದರ್ಪಣ) ಉಚ್ಚರಿಸಲ್ಪಡುವ ಇನ್ನೊಂದು ಎಷ್ಟೋ ವೇಳೆ ಆಕ್ರಮಿಸಿಬಿಡುತ್ತವೆ. ಉದಾ:ನೆತ್ತ – ಲೆತ್ತ, ಲಿಂಬೆ -ನಿಂಬೆ, ನಾಳಿ-ಲಾಳಿ, ಗೊನೆ-ಗೊಲೆ ಇತ್ಯಾದಿ (ಹಣ್ಣಿನ ಗೊಂಚಲು ಎಂಬರ್ಥದ ‘ಗೊನೆ’ ಎಂಬ ಶಬ್ದಕ್ಕೆ ಮೈಸೂರಿನ ಪ್ರಾದೇಶಿಕ ರೂಪ ‘ಗೊಲೆ-ಕಿಟ್ಟೆಲ್. ವಿಟ್ಲ ಪುತ್ತೂರು ಕಡೆಯ ಮಾಪಿಳ್ಳೆಯರ ಮಾತಿನಲ್ಲಿ ಬಾಳೆಗೊನೆಯನ್ನು ‘ಗೊಲೆ’ ಎಂದೇ ಹೇಳುವುದು ರೂಢಿ.) ಇಲ್ಲಿ ಉದಾಹರಿಸಿದ ಶಬ್ದಗಳಲ್ಲಿ ನಕಾರವು ಲಕಾರವಾಗಿಯೂ, ಲಕಾರವು ನಕಾರವಾಗಿಯೂ ಮಾರ್ಪಟ್ಟಿರುವುದನ್ನು ನೋಡಬಹುದು. ಆದುದರಿಂದ ‘ಅನೂಪ’ ಶಬ್ದದೊಳಗಿನ ನಕಾರವು ತದ್ಭವ ರೂಪಗಳಲ್ಲಿ ಲಕಾರವನ್ನು ಹಾಗೂ ಅದು ಸಂಸ್ಕೃತ ಮೂಲವಾಗಿರುವುದರಿಂದ ಐಚ್ಛಿಕವಾಗಿ ಳಕಾರವನ್ನು ಪಡೆಯುವುದು ಸಹಜ ಕ್ರಮವೇ ಸರಿ. (ಪಕಾರವಾಗುವ ಕುರಿತು ಹಿಂದೆಯೆ ವಿವೃತವಾಗಿದೆ.) ಇನ್ನು ಅನೂಪ ಎಂಬುದರ ಆದಿಯ ಹ್ರಸ್ವವು ಆಲುಪ – ಆಳುವಾದಿಗಳಲ್ಲಿ ದೀರ್ಘವಾದುದೇಕೆಂಬ ಒಂದು ಪ್ರಶ್ನೆ ಉಳಿಯಬಹುದು. ಅದಕ್ಕೆ ಉತ್ತರ ಹೀಗೆ: ನಾವು ಸಾಮಾನ್ಯವಾಗಿ ತದ್ಭವಗಳ ವಿಚಾರ ಮಾಡುವಾಗ, ಅಲ್ಲಿಯ ವ್ಯಂಜನಗಳ ರೂಪಾಂತರಕ್ಕೆ ಹೆಚ್ಚಿನ ಲಕ್ಷ್ಯವನ್ನು ಕೊಡುತ್ತೇವೆ. ಏಕೆಂದರೆ-ಸಂಸ್ಕೃತಾದಿ ಅನ್ಯಭಾಷೆಗಳ ಶಬ್ದಗಳಿಗೂ ಅಚ್ಚಗನ್ನಡ ಹಾಗೂ ಇತರ ದ್ರಾವಿಡ ಶಬ್ದಗಳಿಗೂ ಮುಖ್ಯವಾದ ವ್ಯತ್ಯಾಸಗಳಿರುವುದು ವ್ಯಂಜನಗಳಲ್ಲಿ ಮತ್ತು ವ್ಯಂಜನ ಸಂಯೋಗ ರೂಪಗಳಲ್ಲಿ. ಸಂಸ್ಕೃತದ ಮತ್ತು ದ್ರಾವಿಡ ಭಾಷೆಗಳ ಸ್ವರವರ್ಣಗಳು ಹೆಚ್ಚು ಕಡಮೆ ಏಕರೂಪದವುಗಳಾದುದರಿಂದ ಸಂಸ್ಕೃತದ ಸ್ವರಗಳನ್ನು ಕನ್ನಡದ ಬಾಯಿ ಸರಿಯಾಗಿಯೇ ಉಚ್ಚರಿಸಬಲ್ಲುದಾದರೂ, ಸ್ವರಸನ್ನಿವೇಶ ಸ್ವರೂಪದಲ್ಲಿ ಸಂಸ್ಕೃತದಲ್ಲಿರುವ ಸಕಲ ರೂಪಗಳು ಕನ್ನಡ ಮೊದಲಾದುವಲ್ಲಿ ಇಲ್ಲವಾದುದರಿಂದ ತದ್ಭವ ಹುಟ್ಟುವಾಗ ನಮ್ಮ ಬಾಯಿಗೆ ಒಗ್ಗದಿದ್ದ ಸ್ವರ ಸನ್ನಿವೇಶದ ಸ್ವರೂಪವು ಬದಲಾಗಿ ಬಿಡುತ್ತದೆ. ಉದಾ: ಪ್ರಮಾದ-ಹಮ್ಮದ. ಅಲೇಖ-ಅಳಕ ಇತ್ಯಾದಿ. ಕನ್ನಡದ ನಾಮ ಶಬ್ದಗಳು ಲಗಾದಿಯಾಗಿ, ಎಂದರೆ ಮೊದಲಿನ ಅಕ್ಷರವು ಲಘವಾಗಿ ಎರಡನೆಯದು ಗುರುವಾಗಿರುವುದು ಇಲ್ಲವೆಂದೇ ಹೇಳವಷ್ಟು ವಿರಳವಾಗಿವೆ. ಇದರಿಂದ ಲಗಾದಿಯಾದ ಉಚ್ಚಾರದಲ್ಲಿ ನಮ್ಮ ನುಡಿಗೆ ಇಷ್ಟ ಕಡಮೆಯೆಂಬುದು ಅವಗತವಾಗುತ್ತದೆ. ಹೀಗದುದರಿಂದಲೇ ಹುಟ್ಟುಗನ್ನಡದ ವ್ಯಂಜನಗಳೇ ಇರುವ, ಯಾವ ಅನ್ಯ ವ್ಯಂಜನದ ಸಂಯೋಗವೂ ಇರದ, ಸಂಸ್ಕೃತ ಹಾಗೂ ಅನ್ಯ ಭಾಷಾ ಶಬ್ದಗಳೂ ತದ್ಭವತ್ವವನ್ನು ಪಡೆದಿವೆ. ಉದಾ: ವಿನೋದ-ಬಿನದ, ಕಲಾಸ-ಕಾಳಸ, ಕಲೇಜಾ-ಕಾಳಜ, ಟೆರೇಸ್-ತಾರಸಿ ಇ‌ತ್ಯಾದಿ. ಈ ಲಗಾದಿಯಾದ ಉಚ್ಚಾರವು ಕನ್ನಡಕ್ಕೆ ಹಿತವಾಗಿರಲಿಲ್ಲವೆಂಬುದು, ಕನ್ನಡದ ದೇಶೀಯ ಛಂದೋಗಣಗಳ ಸ್ವರೂಪವನ್ನು ಪರಿಶೀಲಿಸುವುದರಿಂದಲೂ ದೃಢವಾಗುತ್ತದೆ. ನಮ್ಮ ಹಳೆಯ ‘ಕರ್ನಾಟಕ ವಿಷಯ ಜಾತಿ’ ಛಂದಗಳಮತ್ತು ಅನಂತರ ಕಾಲದ ಆರು ವಿಧದ ಷಟ್ಪದಿಗಳ ಅಪಾರ ಗ್ರಂಥರಾಶಿಯಲ್ಲಿ, ಒಂದೆ ಒಂದು ಗಣವೂ ಲಗಾದಿಯಾಗಿಲ್ಲದಿರುವ ಈ ವಿಶೇಷತೆಗೆ ಮೂಲ ಕಾರಣವು ಇದೇ ಆಗಿದೆ. (ಈ ಕುರಿತು ಜಿಜ್ಞಾಸೆಯುಳ್ಳವರು, ೧೯೩೩ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ಯಲ್ಲಿ ಪ್ರಕಟವಾಗಿರುವ ‘ಕನ್ನಡ ಛಂದಸ್ಸು’ ಎಂಬ ನನ್ನ ನಿಬಂಧವನ್ನು ನೋಡಬಹುದು)ಇದೇ ಕಾರಣದಿಂದ ‘ಅನೂಪ’ ಎಂಬುದು ಆಲುಪ, ಆಳುಪ ಇತ್ಯಾದಿಯಾಗಿ, ಕಲಾಸ – ಕಾಳಸವಾದಂತೆ ಕಲೇಜಾ-ಕಾಳಜವಾದಂತೆ, ರೂಪಾಂತರ ಪಡೆಯಬೇಕಾಯಿತು. ಹೊರತು, ‘ಅನೂಪ’ ಎಂಬ ಶಬ್ದದ ಯಾವ ವರ್ಣವೂ ಕನ್ನಡಕ್ಕಾಗಲಿ, ತುಳುವಿಗಾಗಲಿ ಅನ್ಯವಲ್ಲ. (ಅನೂಪ ಎಂಬ ಲಗಾದಿ ರೂಪವು ಕನ್ನಡದಲ್ಲಿ ಹೆಚ್ಚಿನ ಬಳಕೆಗೆ ಬಾರದೆ, ಆಲುಪಾದಿಗಳೇ ನಮ್ಮ ಶಾಸನಗಳಲ್ಲಿ ಕಂಡುಬರುವುದಕ್ಕೂ ಇದುವೇ ಕಾರಣವಾಗಿದ್ದಿರಬಹುದು).