ನಿಘಂಟು ಯೋಜನೆ – ಇತಿಹಾಸ

ರೆವರೆಂಡ್ ಕೆಮ್ಮರರ್ ಎಂಬ ಮಹಾನುಭಾವರು ೧೮೮೬ರ ಪೂರ್ವದಲ್ಲೇ ಸುಮಾರು ಎರಡು ಸಾವಿರ ತುಳು ಶಬ್ದಗಳ ಸಂಗ್ರಹ ಮಾಡಿದ್ದರು. ಆದರೆ ಅದನ್ನು ನಿಘಂಟು ರೂಪಕ್ಕೆ ತರುವ ಮೊದಲೇ ತೀರಿಹೋದರು. ರೆವರೆಂಡ್ ಮ್ಯಾನರ್ ಆ ಕೆಲಸವನ್ನು ಮುಂದುವರಿಸಿ ಕಾಪು ಮಧ್ವರಾಯರು, ಮುಲ್ಕಿಯ ಸೀತಾರಾಮರು ಹಾಗೂ ಮಂಗಳೂರಿನ ಸರ್ವೋತ್ತಮ ಪೈ ಇವರ ನೆರವು ಪಡೆದುಕೊಂಡು ಸುಮಾರು ೧೮ ಸಾವಿರ ಶಬ್ದಗಳಿದ್ದ ತುಳು ಇಂಗ್ಲೀಷ್ ಕೋಶವನ್ನು ೧೮೮೬ರಲ್ಲಿ ಪ್ರಕಟಿಸಿದರು.

ಸುಮಾರು ನೂರು ವರ್ಷಗಳ ಕೆಳಗೆ ಪ್ರಕಟವಾದ ಈ ನಿಘಂಟುವಿನಲ್ಲಿ ಭಾಷಾವೈಜ್ಞಾನಿಕ ರೀತಿಯಲ್ಲಿ ಶಬ್ದಗಳನ್ನು ಕನ್ನಡ ಲಿಪಿಯಲ್ಲೂ ಡಯಾಕ್ರಿಟಿಕಲ್ ಚಿಹ್ನೆಗಳನ್ನು ಹಾಕಿದ ರೋಮನ್ ಲಿಪಿಯಲ್ಲೂ ಬರೆದು ಮೂರ್ಧನ್ಯ ವ್ಯಂಜನಕ್ಕೆ ಟ,ಡ,ಣ,ಫ ಇತ್ಯಾದಿಗಳನ್ನು ತುಳುಭಾಷೆಯ ವಿಶಿಷ್ಟ ಎಕಾರಕ್ಕೆ ಪ್ರತ್ಯೇಕ ಚಿಹ್ನೆಗಳನ್ನು ನೀಡಿ ಸರಿಯಾದ ಉಚ್ಚಾರಣೆಗೆ ಸಹಾಯ ಮಾಡಿ ದೊಡ್ಡ ಕೆಲಸವನ್ನು ಮಾಡಿದ್ದಾರೆ. ಶಬ್ದಗಳ ವ್ಯಾಕರಣ ರೂಪ, ಬೇರೆ ಬೇರೆ ಅರ್ಥ ವಿಶೇಷ, ಸಾಧಿತ ಶಬ್ದಗಳು ಇತ್ಯಾದಿಗಳಿಗೆಲ್ಲ ಇಂಗ್ಲಿಷ್ ಅರ್ಥಗಳನ್ನೂ ನೀಡಿದ್ದು ಒಂದು ದೊಡ್ಡ ಸಾಧನೆ. ತುಳುನಾಡಿನ ಸುಮಾರು ಆರುನುರೂ ವಿಶಿಷ್ಟ ಗಿಡಮರಗಳ ಹೆಸರುಗಳೂ ಅದರಲ್ಲಿವೆ, ಕ್ರೈಸ್ತ ಮಿಶನರಿಗಳ ವಿದ್ವತ್ ಕೆಲಸಕ್ಕೆ ಸಾಕ್ಷಿಯಾಗಿ ಉಂಟು – ಹದಿನೆಂಟು ಸಾವಿರ ಶಬ್ದಗಳ ಈ ನಿಘಂಟು.

ಇದು ತುಳುವಿನ ಒಂದು ಸಣ್ಣ ಕೋಶವಾದರೂ ನೂರು ವರ್ಷಗಳ ಹಿಂದೆ ರಚಿತವಾದದ್ದು ಹಾಗೂ ಆ ಕಾಲದಲ್ಲಿ ಭಾಷಾವೈಜ್ಞಾನಿಕ ತತ್ವಗಳು ಸರಿಯಾಗಿ ಬೆಳೆದು ಬಂದಿಲ್ಲದಿರುವುದು ಈ ಕೋಶದಲ್ಲಿ ಕಾಣಿಸುವ ಕೆಲವೊಂದು ಕೊರತೆಗಳಿಗೆ ಕಾರಣವಾಗಿರಬಹುದು. ತುಳುವಿನ ವಿವಿಧ ಉಪಭಾಷೆಗಳ, ಆಡುಮಾತುಗಳ ಒಂದು ಸರ್ವೇಕ್ಷಣೆ ನಡೆಸಿ ಶಬ್ದ ಸಂಗ್ರಹಿಸುವ ಕೆಲಸ ನಡೆದಿಲ್ಲ. ಅದಕ್ಕೆ ಬೇಕಾದ ಸೌಕರ್ಯ ಅವರಿಗಿರಲಿಲ್ಲ. ತುಳುನಾಡಿನ ಬೇರೆ ಬೇರೆ ಕೃಷಿ, ವೃತ್ತಿ, ಕಸುಬು, ಕೈಗಾರಿಕೆಗಳಿಗೆ ಸಂಬಂಧಿಸಿದ ಶಬ್ದಗಳಿಗೆ ಅಯಾ ಜಾಗಗಳಿಗೆ ಹೋಗಿ ಕಂಡು ಶಬ್ದ ಸಂಗ್ರಹ ಮಾಡುವ ಅವಕಾಶ ಅವರಿಗೆ ಸಿಕ್ಕಿಲ್ಲ.

ತುಳುನಾಡಿಗರ ಮದುವೆ – ಸೀಮಂತ, ತಿಂಡಿ – ತಿನಿಸು, ಹಬ್ಬ ಜಾತ್ರೆ, ಕೋಲ – ನೇಮ, ಅಗೆಲು – ತಂಬಿಲ, ಮರಣ – ಉತ್ತರಕ್ರಿಯೆ, ಕಂಬಳ – ಕೋಳಿ ಅಂಕ ಇತ್ಯಾದಿಗಳಲ್ಲಿ ಕಂಡುಬರುವ ಸಾವಿರಗಟ್ಟಲೆ ಮಾತುಗಳನ್ನು ಸಂಗ್ರಹ ಮಾಡುವುದು ಅವರಿಗೆ ಸಾಧ್ಯವಾಗಲಿಲ್ಲ. ನಮ್ಮ ನಿತ್ಯ ಜೀವನದಲ್ಲಿ ಉಪಯೋಗ ಮಾಡದ ಎಷ್ಟೋ ಸಂಸ್ಕೃತ ಶಬ್ದಗಳೂ ಅದರಲ್ಲಿ ಸೇರಿಹೋಗಿವೆ.

ಮದರಾಸು ವಿಶ್ವವಿದ್ಯಾಲಯದ ಪ್ರೊ.ಮರಿಯಪ್ಪ ಭಟ್ಟರು, ಡಾ. ಶಂಕರ ಕೆದಿಲಾಯರೂ ಸೇರಿ ೧೯೬೭ರಲ್ಲಿ ಒಂದು ಕಿರು ನಿಘಂಟನ್ನು ಸಿದ್ಧಪಡಿಸಿದರು. ಮ್ಯಾನರ್ ನಿಘಂಟಿನ ಸಂಸ್ಕೃತ ಶಬ್ದಗಳನ್ನೆಲ್ಲ ತೆಗೆದುಹಾಕಿ ಈನ ನಮ್ಮ ನಿತ್ಯಜೀವನದಲ್ಲಿ ಕಂಡುಬಾರದ ಪದಗಳನ್ನೆಲ್ಲ ಕಿತ್ತು ಹಾಕಿ ಅವರು ವಾಸ ಮಾಡಿದ ಪುತ್ತೂರು ಪ್ರದೇಶದ ಪದಕೋಶಗಳನ್ನು ಸೇರಿಸಿ ಒಟ್ಟು ಸುಮಾರು ಎಂಟು ಸಾವಿರ ಶಬ್ದಗಳ ನಿಘಂಟನ್ನು ತಯಾರಿಸಿದರು. ಆದರೆ ಈ ಕಿರು ನಿಘಂಟಿನಲ್ಲಿ ತುಳುಭಾಷೆಯ ಎಲ್ಲಾ ಸಾಮಾಜಿಕ – ಸಾಂಸ್ಕೃತಿಕ ಸಂದರ್ಭಗಳಲ್ಲಿ ಉಪಯೋಗ ಮಾಡುಬ ಶಬ್ದಗಳನ್ನು, ಎಲ್ಲಾ ವೃತ್ತಿ ಕಸುಬುಗಳ ಸಂದರ್ಭಗಳಲ್ಲಿ ಪ್ರಯೋಗ ಮಾಡುವ ಶಬ್ದಕೋಶಗಳ ಒಂದು ಸಮಗ್ರ ರೂಪವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ತುಳು ಶಬ್ದಗಳ ಬೇರೆ ಬೇರೆ ಸಾಮಾಜಿಕ, ಭೌಗೋಳಿಕ ಪ್ರಭೇದಗಳು ಇಲ್ಲಿ ಸಿಗುತ್ತಿಲ್ಲ.

ತುಳುಭಾಷೆಯ ಸರ್ವ ಸಂಗ್ರಾಹಕವಾಗಿರುವ ಬಂದು ಬೃಹತ್ ನಿಘಂಟಿನ ರಚನೆ ಮಾಡಬೇಕೆಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಯೋಜನೆ ಹಾಕಿಕೊಂಡಿತು. ತುಳು ಸಂಸ್ಕೃತಿಯ ಪುನರುಜ್ಜೀವನ ಕಾಲದಲ್ಲಿ ಆಗಬೇಕಾದ ಕೆಲಸ ಇದೆಂದು ವಿದ್ವಾಂಸರು ಅಭಿಪ್ರಾಯಪಟ್ಟರು. ಆಧುನಿಕ ಭಾಷಾವಿಜ್ಞಾನ, ಭಾಷಾಪ್ರಭೇದಗಳ ವೈಜ್ಞಾನಿಕ ಅನ್ವೇಷಣೆ, ನಿಘಂಟು ರಚನಾ ಶಾಸ್ತ್ರ – ಇವುಗಳ ಎಲ್ಲಾ ತತ್ವಗಳನ್ನು ಅಳವಡಿಸಿಕೊಂಡು ತುಳು ಭಾಷೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಜನವರ್ಗದ ನಡುವೆ ಹೇಗೆ ಜೀವಂತವಾಗಿ ಇದೆ, ಅವುಗಳ ಎಲ್ಲ ರೂಪವನ್ನು ಸಂಗ್ರಹ ಮಾಡಬೇಕು. ಎಲ್ಲಾ ವೃತ್ತಿ ಕಸುಬುದಾರರ, ಎಲ್ಲಾ ಸಾಮಾಜಿಕ ಧಾರ್ಮಿಕ ಸಂದರ್ಭಗಳಲ್ಲಿ ಪ್ರಕಟವಾಗುವ ಭಾಷಾರೂಪಗಳನ್ನು ಸಂಗ್ರಹ ಮಾಡಿ ಇಡಬೇಕೆನ್ನುವ ಈ ಯೋಜನೆಗೆ ಕರ್ನಾಟಕ ಸರಕಾರ ಕೂಡಾ ಸಹಾಯ ಮಾಡಲು ಮುಂದೆ ಬಂದಿದೆ.

ಪ್ರತಿಯೊಂದು ಶಬ್ದಕ್ಕೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಜನರ ನಡುವೆ ಪ್ರಚಾರದಲ್ಲಿರುವ ರೂಪಗಳನ್ನು ಕನ್ನಡ ಲಿಪಿಯಲ್ಲೂ, ರೋಮನ್ ಲಿಪಿಯಲ್ಲೂ ಬರೆದು ಕನ್ನಡದಲ್ಲೂ, ಇಂಗ್ಲಿಷ್‌ನಲ್ಲಿ ಅರ್ಥ ಹೇಳಿ ಆ ಮೂಲದಿಂದ ಹುಟ್ಟಿದ ಸಮಾಸ ಶಬ್ದಗಳನ್ನು, ಅವುಗಳ ಪ್ರಯೋಗ, ನುಡಿಗಟ್ಟು, ಗಾದೆ ಮುಂತಾದವುಗಳನ್ನು ತೋರಿಸಿ, ಇತರ ಸೋದರ ಭಾಷೆಗಳಾದ ತಮಿಳು, ಕನ್ನಡ, ಮಲೆಯಾಳಂ ಇತ್ಯಾದಿಗಳಲ್ಲಿ ಅವುಗಳ ಸಮಾನ ರೂಪಗಳನ್ನು ನೀಡಿ ಸಾಮಾಜಿಕ ಸಾಂಸ್ಕೃತಿಕ ಶಬ್ದಗಳಿಗೆ ವಿವರಣೆ ನೀಡಿ ಒಂದು ಸರ್ವ ಸಂಗ್ರಾಹಕ ನಿಘಂಟು ರಚನೆ ಮಾಡುವುದೇ ಇದರ ಉದ್ದೇಶ. ಇನ್ನು ಮುಂದೆ ತುಳುಭಾಷೆ ಸಂಸ್ಕೃತಿಯ ಮೇಲೆ ಸಂಶೋಧನೆ ಮಾಡುವವರಿಗೆ ಆಕರ ಗ್ರಂಥ ಆಗಬೇಕು ಎನ್ನುವುದು ಇದರ ಉದ್ದೇಶ.

ಈ ಧ್ಯೇಯ ಸಾಧನೆಗಾಗಿ ಈಗ ಮೂರು ವರ್ಷಗಳ ಹಿಂದೆ ತುಳುನಾಡಿನ ಸುಮಾರು ಇಪ್ಪತ್ತೈದು – ಮೂವತ್ತು ಹಳ್ಳಿಗಳಿಗೆ ನಮ್ಮ ಸಂಶೋಧಕರು ತೆರಳಿ ಅಲ್ಲಿನ ಆಧಾರಭೂತ ಶಬ್ದಾವಳಿಯನ್ನು ಸಂಗ್ರಹ ಮಾಡಿ, ಅಲ್ಲಿನ ವೃತ್ತಿ, ಕೈಗಾರಿಕೆ, ಕಸುಬುಗಳು ನಡೆವ ಜಾಗದಲ್ಲೇ ನಿಂತು ಅವನ್ನು ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಕೋಲ – ನೇಮ, ಮದುವೆ – ಸೀಮಂತ, ಅಂಕ – ಆಯನ, ಕಂಬಳ – ಕೋಳಿ ಅಂಕ ಇತ್ಯಾದಿಗಳಲ್ಲಿ ಕಾಣಿಸುವ ಸಂಪ್ರದಾಯ, ಕಟ್ಟುಕಟ್ಟಳೆ ಇವುಗಳನ್ನೆಲ್ಲ ನೋಡಿ ವಿವರಣೆ ಸಂಗ್ರಹ ಮಾಡಿದ್ದಾರೆ. ಸುಮಾರು ೧೫೦ ಗಂಟೆಗಳ ಕಾಲ ಪಾಡ್ದನಗಳನ್ನು ಟೇಪ್‌ರೆಕಾರ್ಡ್‌ ಮಾಡಿ ಅವುಗಳನ್ನು ಲಿಪ್ಯಂತರಗೊಳಿಸಿ ಇರಿಸಿದ್ದಾರೆ. ಒಟ್ಟಿಗೆ ೩೦ ಸಾವಿರ ಮುಖ್ಯ ಶಬ್ದಗಳ ಸಂಗ್ರಹ ಮಾಡಿದ್ದಾರೆ. ಇನ್ನೂ ಹತ್ತಿಪ್ಪತ್ತು ಹಳ್ಳಿಗುಡ್ಡ ಕಾಡುಗಳಿಗೆ ತೆರಳಿ ಕೆಲವು ಆಚರಣೆಗಳನ್ನು ನೋಡಬೇಕು. ಸುಮಾರು ೫೦ ಸಾವಿರವಾದರೂ ಶಬ್ದಗಳ ಸಂಗ್ರಹ ಆಗಬಹುದು.

ಈ ಕಾರ್ಯದಲ್ಲಿ ಸರಕಾರ ಮಾತ್ರವಲ್ಲ, ತುಳುನಾಡಿನ ಜನರೂ ಬೇಕಾದ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ.

ಬೇರೆ ಬೇರೆ ಊರಿನ ನಮ್ಮ ಪ್ರತಿನಿಧಿಗಳಾದ ವಿದ್ವಾಂಸರು, ಹಳ್ಳಿಗಾಡಿನ ಶಾಲಾ ಮಾಸ್ತರರು, ಪಂಚಾಯತು ಅಧ್ಯಕ್ಷರು, ಜಮೀನ್ದಾರರು, ಬ್ಯಾಂಕ್ ಮ್ಯಾನೇಜರುಗಳು, ಸಮಾಜಸೇವಕರು ಎಲ್ಲರೂ ಸಹಕಾರ ನೀಡಿದ್ದಾರೆ. ಮಾಹಿತಿ ನೀಡುವ ಕೆಲಸದಲ್ಲಿ ಪರವ, ಪಂಬದ, ಮೇರರಿಂದ ಹಿಡಿದು ಬಂಟ, ಬ್ರಾಹ್ಮಣ, ಜೈನರವರೆಗೆ ಮಕ್ಕಳು, ಮುದುಕರು, ಗಂಡಸರು, ಹೆಂಗಸರು ಎಲ್ಲರೂ ಸಹಾಯ ಮಾಡುತ್ತಿದ್ದಾರೆ. ಎಲ್ಲರ ಸಹಕಾರದಿಂದ ಈ ಕಾರ್ಯ ಇನ್ನು ಮೂರು – ನಾಲ್ಕು ವರ್ಷಗಳಲ್ಲಿ ಸಂಪನ್ನಗೊಳ್ಳುವ ಆತ್ಮವಿಶ್ವಾಸ ನಮಗುಂಟು.

ತುಳು ಸಂಸ್ಕೃತಿಯ ಪುನರುಜ್ಜೀವನದ ಮೊದಲ ಯುಗದಲ್ಲಿ ತುಳು ಬರವಣಿಗೆ ಕನ್ನಡ ಲಿಪಿಯ ಮೂಲಕ ಮುದ್ರಣ ರೂಪ ಪಡೆದರೂ ಕ್ರಿಶ್ಚಿಯನ್ ಮಿಶನರಿಗಳ ಉದ್ದೇಶ ಬೇರೆಯೇ ಇದ್ದಿತ್ತಾದುದರಿಂದ ಅದು ಸಂಪೂರ್ಣ ಯಶಸ್ವಿಯಾಗಲಿಲ್ಲ. ಎರಡನೆಯ ಯುಗದಲ್ಲಿ ಚಳುವಳಿ ಬಿರುಸಿನಿಂದ ನಡೆದರೂ ಸ್ವಾತಂತ್ರ್ಯ ದೊರೆತ ಬಳಿಕ ಅದರ ಸದ್ದು ಅಡಗಿತು. ಮುಖ್ಯ ಚಾಲಕಶಕ್ತಿಯಾಗಿದ್ದ ಪಣಿಯಾಡಿ ಉಪಾಧ್ಯಾಯರೂ, ಅವರ ಸಹೋದ್ಯೋಗಿಗಳೂ ಈ ಕ್ಷೇತ್ರವನ್ನು ಬಿಟ್ಟುಹೋದುದೇ ಇದಕ್ಕೆ ಕಾರಣ. ಅವರು ತೋರಿಸಿಕೊಟ್ಟ ದಾರಿಯಲ್ಲಿ ಜನರನ್ನು ಮುನ್ನಡೆಸಲು ಯಾರೂ ಮುಂದೆ ಬರಲಿಲ್ಲ.

ಈ ಮೂರನೆಯ ಯುಗದಲ್ಲಿ ತುಳುನಾಡಿನ ಜನರು ನಿಜವಾಗಿಯೂ ಜಾಗೃತರಾದರು. ತುಳು ಭಾಷೆ – ಸಂಸ್ಕೃತಿಯ ಮೇಲೆ ಸಾಮಾನ್ಯ ಜನರಿಗೂ, ಪ್ರೀತಿ-ಅಭಿಮಾನ ಹುಟ್ಟುತ್ತಿದೆ. ಇದರಿಂದಾಗಿ ಸಾಹಿತ್ಯ ಕ್ಷೇತ್ರದ್ಲೂ ಸಂಶೋಧನೆಯ ಕ್ಷೇತ್ರದಲ್ಲೂ ಕೆಲಸ ನಡೆಯಲು ಆರಂಭವಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯಲ್ಲಿ ಸ್ಥಾಪನೆ ಆದ ಬಳಿಕ ನಮ್ಮ ಜಿಲ್ಲೆಯ ಭಾಷೆ ಮತ್ತು ಸಂಸ್ಕೃತಿ ವಿಶೇಷಗಳನ್ನು ಅಧ್ಯಯನ ಮಾಡಬೇಕೆನ್ನುವ ಉದ್ದೇಶ ಮೆಲ್ಲಗೆ ಫಲಿಸುತ್ತಿದೆ. ೧೯೭೦ರ ದಶಕದಲ್ಲಿ ಅಲ್ಲಿ ಎಸ್.ವಿ.ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಈಗ ಡಾಕ್ಟರರಾಗಿರುವ ವಿವೇಕ ರೈಯವರು ‘ತುಳು ಗಾದೆಗಳು’, ‘ತುಳು ಒಗಟುಗಳು’, ‘ತೌಳವ ಸಂಸ್ಕೃತಿ’, ‘ತುಳುವ ಅಧ್ಯಯನ’ ಎನ್ನುವ ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ ಮಂಗಳಗಂಗೋತ್ರಿಯಲ್ಲಿ ಕಲಿಯುವ ಕನ್ನಡ ಎಂ.ಎ.ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡದ ಪ್ರಾದೇಶಿಕ ಅಧ್ಯಯನವೆನ್ನುವ ವಿಷಯವನ್ನು ಬೋಧಿಸುವಾಗ ಅದರಲ್ಲಿ ನೂರು ಅಂಕದ ಮೂರು ವಿಷಯಗಳಲ್ಲಿ ಒಂದು ತುಳುನಾಡಿನ ಇತಿಹಾಸ, ಎರಡು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಮೂರನೆಯದು ಯಕ್ಷಗಾನ – ಇವುಗಳನ್ನು ಸೇರಿಸಿದ್ದಾರೆ. ಕನ್ನಡದ ಜೊತೆ ತುಳು ತಂಗಿಯನ್ನು ಪ್ರೀತಿಯಿಂದ ಸೇರಿಸಿಕೊಳ್ಳಲು ಕಾರಣವಾದ ಮೈಸೂರಿನ ದೇ.ಜವರೇಗೌಡರಿಗೂ, ಡಾ. ಹಾ.ಮಾ. ನಾಯಕರಿಗೂ ತುಳುವರ ನಮಸ್ಕಾರ. ತುಳುವ ಅಧ್ಯಯನ ವಿಷಯದಲ್ಲಿ ವಿದ್ಯಾರ್ಥಿಗಳು ತುಳುನಾಡಿನ ಸ್ಥಳನಾಮ, ತುಳು ಜಾನಪದದ ಬೇರೆ ಬೇರೆ ಶೋಭೆಗಳನ್ನೂ, ತುಳುವಿನ ಪ್ರಾದೇಶಿಕ ವೈವಿಧ್ಯಗಳನ್ನೂ ಪರಿಶೀಲಿಸಿ ಪ್ರಬಂಧ ಬರೆದಿದ್ದಾರೆ. ಈ ವಿಭಾಗದಲ್ಲೇ ಬೋಧಿಸುತ್ತಿರುವ ಡಾ. ವಿವೇಕ ರೈಯವರು ಕಳೆದ ವರ್ಷ ತುಳು ಜನಪದ ಸಾಹಿತ್ಯದ ಮೇಲೆ ಬರೆದ ಪ್ರಪ್ರಥಮ ಮಹಾಪ್ರಬಂಧಕ್ಕೆ ಮೈಸೂರು ವಿಶ್ವಿವಿದ್ಯಾಲಯ ಡಾಕ್ಟರೇಟ್ ನೀಡಿದೆ.

ಇತ್ತೀಚೆಗೆ ನಮ್ಮ ಈ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ಬಂದ ಡಾ. ಶ್ರೀನಿವಾಸ ಹಾವನೂರ ಅವರು ಸ್ಥಾಪನೆ ಮಾಡಿದ ವಾಙ್ಮಯ ಮಾಹಿತಿ ಕೇಂದ್ರದಲ್ಲಿ ತುಳುವಿಗೆ ಒಂದು ಪ್ರತ್ಯೇಕ ಸ್ಥಾನ ನಿರ್ದೇಶನ ಮಾಡಿದ್ದಾರೆ. ತುಳು ಭಾಷೆ – ಸಂಸ್ಕೃತಿ ಈ ವಿಷಯಗಳ ಬಗ್ಗೆ ಸಂಶೋಧನೆ ಮಾಡುವವರಿಗೆ ಅನುಕೂಲವಾಗುವಂತೆ ವಿಷಯವಾರು ಫೈಲುಗಳು, ನೆರಳಚ್ಚು ಪ್ರತಿಗಳು ನೋಡುವುದಕ್ಕೂ ಪಡೆಯುವುದಕ್ಕೂ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜೊತೆಗೆ ತುಳುಲಿಪಿಯ ಹಸ್ತಪ್ರತಿಗಳ ಭಂಡಾರವನ್ನೂ ಆರಂಭಿಸಿದ್ದಾರೆ. ತುಳು ಲಿಪಿಯಲ್ಲಿರುವ ಶಾಸನಗಳ ಶೋಧನೆಯೂ ಆಗಬೇಕು. ಇದರಿಂದ ಕಾಲಾನುಕಾಲಕ್ಕೆ ತುಳುನಾಡಿನ ಇತಿಹಾಸ ರಚನೆಗೆ ಅನುಕೂಲವಾಗಬಹುದು. ತುಳು ವಾಙ್ಮಯ ಸೂಚಿ ಮುಂದಿನ ವರ್ಷಗಳಲ್ಲಿ ಪ್ರಕಟವಾದಲ್ಲಿ ಈ ತನಕ ತುಳುವಿನಲ್ಲಿ ನಡೆದ ಕೆಲಸಗಳ ಸಮಗ್ರ ಮಾಹಿತಿ ಒಂದೆಡೆ ದೊರೆಯುವಂತಾದೀತು. ಪಿಎಚ್.ಡಿ. ಪದವಿಗಾಗಿ ವಿದ್ಯಾರ್ಥಿಗಳು ತುಳು ವಿಷಯವನ್ನೇ ತೆಗೆದುಕೊಳ್ಳುವಂತೆ ಅವರಿಗೆ ಪ್ರೋತ್ಸಾಹ ನೀಡಬೇಕಾಗಿದೆ.

ತುಳು ಭಾಷೆ, ಸಂಸ್ಕೃತಿಯ ಮೇಲೆ ಇಷ್ಟೆಲ್ಲ ಕೆಲಸ ನಡೆದ ಬಳಿಕವೂ ಜಾನಪದ ಸ್ಥಿತಿಯಲ್ಲೇ ಇರುವುದನ್ನು ನಾವು ತೀವ್ರವಾಗಿ ಗಮನಿಸಬೇಕಾಗಿದೆ. ಈ ಕೆಲಸ ಹಿಂದಿನ ಅರುವತ್ತು ವರ್ಷಗಳಿಂದ ಮಾತ್ರವೇ ನಡೆದುಕೊಂಡು ಬಂದಿದೆ. ಅದರ ಹಿಂದೆ ಮಿಶನರಿಗಳು ಮಾತ್ರ ಈ ಕೆಲಸವನ್ನು ಮಾಡಿಕೊಂಡು ಬಂದರು. ಅಂದರೆ ತುಳು ಸಮಾಜದ ಚಳುವಳಿಯ ರೂಪದಲ್ಲಿ ತುಳುವಿನ ಕೆಲಸ ನಡೆದದ್ದು ಈಚಿನ ಅರವತ್ತು ವರ್ಷಗಳ ಲಾಗಾಯ್ತು ಎನ್ನುವುದನ್ನು ಗಮನಿಸಬೇಕು. ಇದರಲ್ಲಿ ನೂರರಲ್ಲಿ ತೊಂಬತ್ತೊಂಬತ್ತರಷ್ಟು ಕೆಲಸ ಜನರ ಉತ್ಸಾಹದಿಂದಲೇ ನಡೆದ ಸಂಭ್ರಮಗಳು. ಇದಕ್ಕೆ ಸರಕಾರ ಏನೂ ಸಹಾಯ ಮಾಡಿದ್ದಿಲ್ಲ. ತುಳು ಸಿನೇಮಾಗಳಿಗೆ ಕೊಟ್ಟ ಧನಸಹಾಯ ಹಾಗೂ ಈ ಮೂರು ನಾಲ್ಕು ವರ್ಷಗಳಲ್ಲಿ ತುಳು ನಿಘಂಟಿಗಾಗಿ ವರ್ಷಕ್ಕೆ ಒಂದೂ ಕಾಲು ಲಕ್ಷ ಕೊಡುತ್ತಿರುವ ಸಹಾಯ ಬಿಟ್ಟರೆ ಸರ್ಕಾರಕ್ಕೆ ತುಳು ವ್ಯವಸಾಯದ ಕೆಲಸದಲ್ಲಿ ನಾವೇನು ಕೆಲಸ ನೀಡಿಲ್ಲ. ಇದೀಗ ತುಳು ತಲುಪಿರುವ ಹಂತವನ್ನು ಗಮನಿಸಿ ಸರಕಾರ ಕಣ್ಣು ತೆರೆಯಬೇಕು, ಆ ಕಣ್ಣು ತೆರೆಸುವ ಕೆಲಸ ಆಗಬೇಕಾಗಿದೆ ಎಂದು ಕಾಣುತ್ತದೆ. ‘ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುತ್ತಾಳೆ’ ಎಂದರೆ ಚಿಕ್ಕಮ್ಮ ಕೊಡಬೇಕಾದರೆ ಸ್ವಲ್ಪ ಗಟ್ಟಿಯಾಗಿಯೇ ಅಳಬೇಕೆಂದು ತೋರುತ್ತದೆ. ತುಳು ಕೂಟಗಳ ಮುಖ್ಯ ಪ್ರಯೋಜನ ಇರುವುದು ಇಲ್ಲೇ. ತುಳು ಜನರನ್ನು ಒಂದಾಗಿಸಿ, ಒಂದೆಡೆ ಸೇರಿಸಿ ಒಗ್ಗಟ್ಟಿನಲ್ಲಿ ತಮ್ಮ ತಮ್ಮ ಅಗತ್ಯಗಳನ್ನು ಪ್ರಕಟ ಮಾಡುವ ಸಲುವಾಗಿ ನಾವು ಇಂದು ಇಲ್ಲಿ ಸಭೆ ಸೇರಿದ್ದೇವೆ.

ತುಳುನಾಡಿನ ಇಂದಿನ ಸ್ಥಿತಿ ನೋಡುವಾಗ ನನಗೆ ಇಂಜಿನ್ ತಪ್ಪಿಹೋದ ರೈಲ್‌ಗಾಡಿಯಂತೆ ಕಾಣುತ್ತದೆ. ಇಂಜಿನಿಗೂ ಡಬ್ಬಗಳಿಗೂ ಕೊಳಿಕೆ ತಪ್ಪಿದರೆ ಇಂಜಿನ್ ಮಾತ್ರ ಮುಂದೆ ಹೋಗುತ್ತದೆ. ರೈಲು ಡಬ್ಬಿಗಳು ನಿಲ್ದಾಣದಲ್ಲೇ ನಿಂತಿರುತ್ತವೆ. ತುಳುಭಾಷೆಯೇ ಡಬ್ಬಿ. ನಮ್ಮ ತುಳು ವೀರರು ಯಾವ ಯಾವ ಊರಿನಲ್ಲಿ ಕಷ್ಟದ ದುಡಿಮೆ ಮಾಡಿಕೊಂಡು, ಸಾಹಸದಲ್ಲಿ ತಮ್ಮ ಶ್ರೇಷ್ಠ ಸಾಧನೆ ಮಾಡಿಕೊಂಡು ಎಲ್ಲದರಿಂದಲೂ ಶಾಭಾಸ್ ತೆಗೆದುಕೊಳ್ಳುವ ಜನರು, ವಿದ್ಯಾವಂತರು, ಅವಿದ್ಯಾವಂತರು, ಇಂಜಿನಿಯರುಗಳು, ಡಾಕ್ಟರುಗಳು, ಪ್ರೊಫೆಸರುಗಳು, ವ್ಯಾಪಾರಿಗಳು, ದುಡಿಮೆಗಾರರು, ಬೊಂಬಾಯಿ, ಮದರಾಸು, ಕುವೈಟ್, ಅಬುದಾಬಿ, ಲಂಡನ್, ನ್ಯೂಯಾರ್ಕ್‌ಎಲ್ಲಾದರೂ ಅಲ್ಲಿ ನೆಲೆಯೂರಿ ಊರಲ್ಲಿರುವ ತಂದೆ ತಾಯಿಗಳಿಗೆ ಜರಿ ಸೀರೆ ಉಡಿಸಿದವರು – ಇವರೇ ರೈಲು ಇಂಜಿನು, ಊರಿನಲ್ಲಿ ಚಾಪೆ ಹಿಡಿದು ಕೊಂಡಿರುವ ನಾವೆಲ್ಲರೂ ರೈಲಿನ ಡಬ್ಬಿಗಳು. ಇಂಜಿನ ಹಾಗೂ ಡಬ್ಬಿಗಳು ಒಟ್ಟೊಟ್ಟಾಗಿ ಹೋಗಲೆಂದು ಸೃಷ್ಟಿ ಆಗಿದ್ದರೂ ಕಾಲಗತಿಯಲ್ಲಿ ಇಂಜಿನ್ ಮಾತ್ರ ಮುಂದೆ ಹೋಗಿದೆ. ಈ ವಿಷಯ ನಾನು ಪ್ರಸ್ತಾಪ ಮಾಡಲು ಕಾರಣ ಏನೆಂದರೆ ತುಳು ಸಮಾಜ ಎರಡು ಪದರುಗಳಲ್ಲಿ ಜೀವನ ಮಾಡಿಕೊಂಡಿದೆ ಎಂದು ಹೇಳಿದುದನ್ನು ಸಾಬೀತುಪಡಿಸುವ ಸಲುವಾಗಿ ನಮ್ಮ ಜನರಲ್ಲಿ ಕೆಲವರು ಪ್ರಪಂಚದ ಯಾವ ಜನರಿಗೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಂಡು ಇಪ್ಪತ್ತನೆಯ ಶತಮಾನ ಬಿಡಿ ಇಪ್ಪತ್ತೊಂದಕ್ಕೆ ನೆಗೆಯಲು ಬೇಕಾದ ಬುದ್ಧಿಶಕ್ತಿ, ಸಾಮರ್ಥ್ಯವನ್ನು ಸಂಪಾದಿಸಿಕೊಂಡು ಇದ್ದರೆ, ತುಳುನಾಡಿನ ಒಳಗೆ ಇನ್ನೊಂದು ಬಗೆಯ ಬದುಕು ಸಾಗುತ್ತಿದೆ. ಎರಡು ಪದರುಗಳಲ್ಲೂ ತುಳುಭಾಷೆಗೆ ಪಡಸಾಲೆಯ ಒಳಗೆ, ಅಡುಗೆ ಮನೆಯ ಒಳಗೆಯೇ ಕೆಲಸವಲ್ಲದೆ ಅದನ್ನು ಹೊರಗೆ ಅಂಗಳಕ್ಕೆ ನಾವು ತರುತ್ತಿಲ್ಲ. ತುಳು ಇಂದಿನ ಇಪ್ಪತ್ತನೆಯ ಶತಮಾನದ ನಮ್ಮ ಜನರ ಸಂಸ್ಕೃತಿ ಭಾಷೆ ಆಗಿಲ್ಲ. ಹಾಗೆ ಆಗಬೇಕೆಂದು ನಾವು ಆಸೆ ಮಾಡಿಲ್ಲ. ನಮ್ಮ ದಿನನಿತ್ಯದ ವ್ಯವಹಾರಕ್ಕೆ ಯಾವ ಭಾಷೆಯಾದರೇನು ಎಂದು ಕನ್ನಡ, ಮಲಯಾಳ, ಇಂಗ್ಲಿಷ್, ಹಿಂದಿ, ಯಾವುದೇ ಭಾಷೆಯನ್ನು ಅಂಗೀಕಾರ ಮಾಡಿ ತಾಯಿಗೆ ಮನೆಯೊಳಗೆ ಮಾತ್ರ ಸ್ಥಾನ ನೀಡಿದುದು ಒಂದು ದೋಷವೇ ಆಗಿ ನಿಂತಿದೆ. ತುಳುವಿನಲ್ಲಿ ಪತ್ರಿಕೆ ಮಾಡಿದರೆ, ಪುಸ್ತಕ ಬರೆದರೆ, ಸಿನೆಮಾ, ನಾಟಕ ಮಾಡಿದರೆ ಯಾವ ಸಹಾಯವೂ ಸಿಗುತ್ತಿಲ್ಲ. ಖಾತ್ರಿಯಾದ ಕಷ್ಟನಷ್ಟ ಅನುಭವಿಸಲು ತುಳುವನ ಸಮೀಪ ಬಂದರೆ ಸರಿ – ನಿಮ್ಮ ಬಯಕೆ ಈಡೇರುವುದು.

ಅಭಿಮಾನ ನಮ್ಮಲ್ಲಿ ತುಂಬಿ ಹರಿಯುವಷ್ಟು ಇದ್ದರೂ ಅದಕ್ಕೆ ರೂಪಾಯಿ ನಯಾ ಪೈಸೆಯ ಕತೆ ತಿಳಿದಿಲ್ಲ. ಪತ್ರಿಕೆ ಮಾಡಿದಾತ, ತುಳು ಪುಸ್ತಕ ಬರೆದಾತ, ಸಿನೆಮಾ ಮಾಡಿದಾತ ಇವರನ್ನೆಲ್ಲ ಕೇಳಿರಿ. ಹುಚ್ಚು ಹಿಡಿದುದರಿಂದ ಕೆಲಸ ಮಾಡುತ್ತಾ ಬಂದುದೇ ಹೊರತು ಫಲ ಸಿಗುತ್ತದೆ ಎಂದಲ್ಲ ಎಂದು ಅವರು ಹೇಳಿಯಾರು. ಈ ತನಕ ಕೆಲಸ ಮಾಡಿದಂತೆಯೇ ಮುಂದೆ ಮಾಡಲು ಸಾಧ್ಯವಿಲ್ಲವೇ ಎಂದು ಕೇಳಬಹುದು. ನೆಟ್ಟಗೆ ಕುಳಿತರೆ ಎರಡು ಸಾವಿರ ವರ್ಷದ ಹೊತ್ತಿಗೂ ನಮಗೆ ಇದೇ ಗತಿ. ಭಾರತ ದೇಶದ ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಸಂಸ್ಕೃತಿಗೂ ಒಂದು ರಕ್ಷಣೆ ಉಂಟು. ಅಲ್ಪಸಂಖ್ಯಾತರೆಂದರೆ ಬರೀ ಮತೀಯ ಅಲ್ಪಸಂಖ್ಯಾತರೆಂದು ಒಂದು ತಪ್ಪು ಕಲ್ಪನೆ ಪ್ರಚಾರದಲ್ಲಿದೆ. ಭಾಷಾ ಅಲ್ಪಸಂಖ್ಯಾತರ ಸಲುವಾಗಿ ಒಬ್ಬ ಕಮಿಶನರೇ ನೇಮಕಗೊಂಡಿದ್ದಾರೆ. ಯಾವುದೇ ರಾಜ್ಯದ ಗಡಿ ಪ್ರದೇಶಗಳಲ್ಲಿ ಸಹಜವಾಗಿರುವ ಸಣ್ಣ ಭಾಷೆಗಳ ಗುಂಪಿಗೆ ಅನ್ಯಾಯವಾದರೆ ಈ ಪುಣ್ಯಾತ್ಮ ಆಯಾ ಸರಕಾರಕ್ಕೆ ಕಾಗದ ಬರೆಯುತ್ತಾನಂತೆ. ಆದರೆ ಅದಕ್ಕೆ ಯಾವ ಸರಕಾರವೂ ಉತ್ತರ ನೀಡುವುದಿಲ್ಲವಂತೆ. ಮತ್ತೆ ಒಂದು ಪತ್ರವನ್ನು ಮೇಲಿನವರಿಗೆ ಬರೆಯುವುದು ಈ ಅಧಿಕಾರಿಯ ಕೆಲಸವಂತೆ. ಭಾಷಾವಾರು ರಾಜ್ಯ ವಿಂಗಡಣೆ ಮಾಡುವ ಮೂಲಕ ದೊಡ್ಡ ಭಾಷೆಗಳಿಗೆ ಮನ್ನಣೆ ನೀಡಲಾಯಿತು. ಚಿಕ್ಕ ಭಾಷೆಗಳು ದೊಡ್ಡ ಭಾಷೆಗಳ ನಡುವೆ ಹೇಗಾದರೂ ಬದುಕಬಹುದು ಎನ್ನುವ ಧೋರಣೆ ಇಂಡಿಯಾ ಸರಕಾರದ್ದು. ತನ್ನ ಭಾಷೆಯೆಂದು ಸಣ್ಣವರು ಹೇಳಲು ಆರಂಭಿಸಿದರೆ ಅಂದೇ ಭಾರತದ ಕೂಡುಕಟ್ಟಿನ ಒಕ್ಕೂಟವನ್ನು ಸಡಿಲು ಮಾಡುತ್ತೀರಾ, ದೇಶ ಮುಖ್ಯ ಎಂದು ಅವರು ಹೆದರಿಸುತ್ತಾರೆ. ಅಂತಹವರಿಗೆ ನಾವು ಹೇಳಬೇಕು, ಈ ಬಗೆಯ ನೀತಿಪಾಠ ನಮಗೆ ಬೇಡ, ದೇಶಕ್ಕೆ ನಾವು ಅಡ್ಡ ಅಲ್ಲ, ಅದಕ್ಕಾಗಿ ಜೀವ ಬಿಡಲು ನಾವೂ ಸಿದ್ಧರು. ಆದರೆ ಬದುಕಿಕೊಂಡಿರುವಾಗ ನಮ್ಮ ಭಾಷೆಗೆ ಸ್ವಲ್ಪ ಹಾಲೂಡುತ್ತೇವೆಂದು ಹೇಳಿದಾಗ ದೇಶವನ್ನು ನಮ್ಮೆದುರು ತರಬೇಡಿ. ಹೆಚ್ಚೆಂದರೆ ೧೦ಲಕ್ಷ ಜನ ತುಳುನಾಡಿನ ಒಳಗೆ, ನಾಲ್ಕು ಲಕ್ಷ ಜನ ಹೊರಗೆ ತುಳುಭಾಷೆಯ ಜನರು ಇರುವುದು. ಅವರು ದೇಶಕ್ಕೆ ತೊಂದರೆ ಕೊಡುವುದಕ್ಕೆ ಹುಟ್ಟಿದವರಲ್ಲ. ಈಗ ಅವರಿಗೆ ಸ್ವಲ್ಪ ನ್ಯಾಯ ಕೊಡಿರಿ. ಪ್ರಾದೇಶಿಕ ಭಾವನೆಗಳು ದೇಶಕ್ಕೆ ಆತಂಕಕಾರಿ ಎಂದು ತಿಳಿಯುವುದೇ ಮೊದಲ ತಪ್ಪು. ಪ್ರಾದೇಶಿಕತೆಗೂ ದೇಶಕ್ಕೂ ನಡುವೆ ಒಂದು ಕೊಂಡಿ ಇತ್ತು. ಅದನ್ನು ಜಾರಿಗೊಳಿಸಿದವರು ತುಳುವರಲ್ಲ. ಸ್ವಾತಂತ್ರ್ಯಕ್ಕೂ, ಸಮಾನತೆಗೂ ನಡುವೆ ಸೋದರಿಕೆಯ ಒಂದು ಗುಣ ಇರಬೇಕಾದುದನ್ನು ಇಂದು ದೇಶದಿಂದ ತೆಗೆಯುವವರು ಯಾರು? ನಾವಲ್ಲ. ರಾಷ್ಟ್ರಭಾಷೆ, ರಾಜ್ಯಭಾಷೆ – ಇವೆಲ್ಲ ಒಂದು ವ್ಯವಹಾರಕ್ಕೆ ಸಂದಿರುವ ವಿಷಯ ಹೊರತು ಒಂದರ ಮೇಲೆ ಒಂದು ಶತ್ರು ಅಲ್ಲ. ರಾಜ್ಯಭಾಷೆಗೆ ಬೇರೆ ಚಿಕ್ಕಭಾಷೆಗಳ ಮೇಲೆ ಪ್ರೇಮ ಇರಬೇಕು. ಕರ್ನಾಟಕದವರ ಮೇಲೆ ನಾವು ಬೇಕಾದಷ್ಟು ಪ್ರೀತಿ ತೋರಿಸಿದ್ದೇವೆ. ಕವಿ ಮುದ್ದಣನಿಂದ ತೊಡಗಿ ಇಂದಿನವರೆಗೆ ನಾವು ತುಳುವರು ಕನ್ನಡ ಸಾಹಿತ್ಯದಲ್ಲಿ ಭಾಷೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಅದನ್ನು ಪ್ರೀತಿಯಿಂದ ಮಾಡಿದ್ದೇವೆ. ಅದೇ ಪ್ರೀತಿಯನ್ನು ಈಗ ಕನ್ನಡದವರು ನಮ್ಮ ಮೇಲೆ ತೋರಿಸಬೇಕು. ಪಡಸಾಲೆಯಲ್ಲಿರುವ ನಮ್ಮ ತುಳುತಾಯಿಯನ್ನು ಹೆಬ್ಬಾಗಿಲಿಗೆ ತರುವ ನಮ್ಮ ಪ್ರಯತ್ನಕ್ಕೆ ಅವರೂ ಸ್ವಲ್ಪ ಕೈ ನೀಡಿ ಸಹಕರಿಸಬೇಕೆಂದು ನಾನು ಅವರಲ್ಲಿ ಪ್ರಾರ್ಥಿಸಿಕೊಳ್ಳುವೆ.

ಭಾಷಾಲೋಕದಲ್ಲಿ ಚಿಕ್ಕದು, ದೊಡ್ಡದು ಎನ್ನುವ ಭೇದ ಇಲ್ಲದಿರುವುದರಿಂದ ನಮ್ಮ ದೃಷ್ಟಿಧೋರಣೆಗಳೆರಡೂ ಬದಲಾಗಬೇಕಾಗಿದೆ. ತುಳು – ಕನ್ನಡ – ಹಿಂದಿ – ಇಂಗ್ಲಿಷ್ ಯಾವ ಭಾಷೆಯೇ ಇರಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಕೆಲಸ ಉಂಟು. ಪ್ರತಿ ಭಾಷೆಯೂ ದೇಶದ ಭಾಷೆ. ಅದು ದೇವರ ಕೊಟ್ಟ ಭಾಗ್ಯ, ಸಂಪತ್ತು. ಕರ್ನಾಟಕ ರಾಜ್ಯದ ಕೋಲಾರದಲ್ಲಿ ಬಂಗಾರ, ಕುದುರೆಮುಖದಲ್ಲಿ ಕಬ್ಬಿಣ, ಚಿತ್ರದುರ್ಗದಲ್ಲಿ ತಾಮ್ರ ದೊರೆತಷ್ಟೇ ಮುಖ್ಯ ಕರಾವಳಿಯ ಒಂದು ಜಿಲ್ಲೆಯಲ್ಲಿ ತುಳು ದೊರೆತಿರುವುದು ಎನ್ನುವುದನ್ನು ಕರ್ನಾಟಕದ ಧುರೀಣರಿಗೆ ನಾವು ಸಾಬೀತು ಮಾಡಬೇಕು. ನಾವು ನಾವೇ ನಾಟಕ, ಸಿನೇಮಾ, ಪತ್ರಿಕೆ, ಪುಸ್ತಕ ಮಾಡಿ ನಗುವ ಅಥವಾ ಅಳುವ ಕೆಲಸ ಮಾಡಿಕೊಂಡು ಬಂದೆವು. ಇನ್ನು ನಮ್ಮ ಸುತ್ತಿನ ಕನ್ನಡದವರಿಗೂ ಇದರಲ್ಲಿ ಪಾಲು ಕೊಡಬೇಕೆಂದು ನಾಳೆ ಮುಖ್ಯಮಂತ್ರಿಯವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲು ತುಳುಕೂಟ ಏರ್ಪಾಟು ಮಾಡಿ ಜಾಣ್ಮೆಯನ್ನು ತೋರಿಸಿದೆ ಎಂದು ನಾನು ಭಾವಿಸುತ್ತೇನೆ.

ಈ ವಿಷಯದಲ್ಲಿ ರಶಿಯಾ ದೇಶದ ಅನುಭವ ನಮ್ಮ ಭಾರತ ದೇಶಕ್ಕೂ ಪ್ರಯೋಜನಕ್ಕೆಧ ಬಂದೀತೆಂದು ನಾನು ಭಾವಿಸುವೆ. ಮೊನ್ನೆ ರಶಿಯಾಕ್ಕೆ ಹೋಗಿ ಬಂದುದರಿಂದ ಹೀಗೆ ಹೇಳುತ್ತಿದ್ದೇನೆಂದು ಯಾರೂ ಭಾವಿಸಬೇಡಿ. ಇತ್ತೀಚಿನ ಕೆಲವು ವರ್ಷಗಳಿಂದ ನಾನು ನಮ್ಮ ದೇಶದ ಭಾಷಾ ಸಮಸ್ಯೆಗೆ ಉತ್ತರ ಹುಡುಕುತ್ತಿದ್ದೇನೆ. ಹಾಗೇನೇ ಓದಿ ನೋಡಿ ವಿಚಾರಿಸಿಕೊಂಡಾಗ ರಶಿಯಾ ದೇಶ ಮಾಡಿದ ಸಾಧನೆ – ಏಕ ರಾಜಕೀಯ ವ್ಯವಸ್ಥೆ ಕಾರಣವಾಗಿರಬಹುದು ಅಥವಾ ಅಲ್ಲಿನ ಕೇಂದ್ರ ಶಕ್ತಿಯ ಹೈ ವೋಲ್ಟೇಜ್‌ನ ಧೋರಣೆಗಳು ಕಾರಣವಿರಬಹುದು. ಏನೇ ಇರಲಿ, ಅವರ ಸಾಧನೆ ನಮ್ಮ ಕಣ್ಣೆದುರು ನಿಲ್ಲುತ್ತದೆ. ಆ ಭಾಷೆಯನ್ನೇ ಕಲಿಯಬೇಕು, ಈ ಭಾಷೆಯನ್ನೇ ಕಲಿಯಬೇಕು ಎನ್ನುವ ಕಡ್ಡಾಯ ಇರದೆ ಪ್ರತಿಯೊಬ್ಬನಿಗೂ ಅವನವನ ಭಾಷೆಯಲ್ಲಿ ತನ್ನ ಮಕ್ಕಳಿಗೆ ಶಿಕ್ಷಣ ನೀಡುವ ಪೂರ್ಣ ಸ್ವಾತಂತ್ರ್ಯವನ್ನು ರಶಿಯಾದ ಸಂವಿಧಾನ ನೀಡಿದೆ. ಕೊಟ್ಟ ಬೆನ್ನಿಗೇ ಐವತ್ತು ಬಾಯ್ಮಾತಿನ ಭಾಷೆಗಳಿಗೆ ಅಕ್ಷರ ರೂಪ ಧಾರಣೆ ಮಾಡಿಸಿ, ಶಾಲೆ ತೆರೆದು ಇದೀಗ ಅರವತ್ತು ವರ್ಷಗಳಿಂದ ಭಾರೀ ಸಿದ್ಧಿ ತೋರಿಸಿ ಜಗತ್ತಿಗೇ ಮಾದರಿ ಹಾಕಿತು. ಉಜ್ವಕಿಸ್ತಾನ, ಕಜಾಕಸ್ತಾನ, ಅಜರ್‌ಬೈಜಾನ, ಕುರ್ತು ಮೆನಿಸ್ತಾನ – ಈ ಪ್ರದೇಶದ ಭಾಷೆಗೆ ಒಂದೊಂದು ರಾಜ್ಯವನ್ನೇ ಕಟ್ಟಿಕೊಟ್ಟಿದೆ. ಇಲ್ಲಿ ೫೦ ಲಕ್ಷದಿಂದ ನೂರು ಲಕ್ಷದವರೆಗೆ ಆಯಾ ಭಾಷೆಯನ್ನು ಮಾತನಾಡುವವರು ಇದ್ದಾರೆ. ನಾನು ಕಿರ್ಗಿಜಿಯೆನ್ನುವ ಒಂದು ಚಿಕ್ಕ ಪರ್ವತ ರಾಜ್ಯದಲ್ಲಿ ಒಂದು ವಾರ ಇದ್ದೆ. ಅಲ್ಲಿನ ಸಂಸ್ಕೃತಿಯ ಕೆಲಸ ಮಾಡುವ ಕಾರ್ಯದರ್ಶಿ ನನ್ನ ಜೊತೆಗಿದ್ದ ಕಿರ್ಗಿಜ್ ಭಾಷೆ ಮಾತನಾಡುವವರು. ೬೦ ವರ್ಷಗಳ ಹಿಂದೆ ಬರೀ ಕುರಿ ಕಾದುಕೊಂಡಿದ್ದರು. ಅವರ ಜನಸಂಖ್ಯೆ ಈಗ ೧೫ -೨೦ಲಕ್ಷ. ಅವರ ಪುಸ್ತಕದಂಗಡಿ ನೋಡಿ ನಾನು ಬೆರಗಾದೆ. ಕಿರ್ಗಿಜ್ ಭಾಷೆಯಲ್ಲಿ ಐವತ್ತು ಕವಿಗಳ ಪುಸ್ತಕ ನೋಡಿದರೆ, ಅವರ ಸಂಗೀತಶಾಲೆ, ಬ್ಯಾಲೆಶಾಲೆ, ಸಾಮ್ರಾಜ್ಯ, ಫ್ಯಾಕ್ಟರಿ, ಬ್ಯಾಂಕ್, ಡಿಪಾರ್ಟ್‌‌ಮೆಂಟ್‌ಸ್ಟೋರ್ ಎಲ್ಲೆಡೆಯೂ ಕಿರ್ಗಿಜ್ ಭಾಷೆನೇ. ರಶಿಯನ್ ಭಾಷೆಯನ್ನು ೧೫ ಕೋಟಿ ಜನ ಮಾತನಾಡುತ್ತಾರೆ. ಆದರು ಎಲ್ಲರೂ ಅದನ್ನೇ ಸ್ವೀಕಾರ ಮಾಡಬೇಕೆನ್ನುವ ಹಟ ಇಲ್ಲ. ೨೦ ಲಕ್ಷ ಮಾತನಾಡುವವರಿಗೂ ಸಮಾನ ಸನ್ಮಾನ, ಉಪಚಾರ. ಒಂದು ಜನಾಂಗಕ್ಕೂ ಒಂದು ಭಾಷೆಗೂ ಒಟ್ಟೊಟ್ಟಿಗೆ ಸಮಕಟ್ಟಾದ ಉದ್ಧಾರ ಮಾಡಿಕೊಳ್ಳುವ ಕ್ರಮ ಇದು. ನಮ್ಮ ದೇಶಕ್ಕೆ ಅದರ ರಾಜಕೀಯ ಪದ್ಧತಿ ಬೇಕಾಗಿಲ್ಲವಾದರೂ (ಇದು ನನ್ನ ವೈಯಕ್ತಿಕ ಅಭಿಪ್ರಾಯ) ಅಲ್ಲಿನ ಸಂಸ್ಕೃತಿ ಸಹಜವಾಗಿ ಒಂದು ಮಾದರಿ ಆದೀತೆಂದು ನನಗೆ ತೋರುತ್ತದೆ.

ರಶಿಯಾದ ಮೂರು ಲಕ್ಷಕ್ಕೂ ಕಡಿಮೆ ಜನ ಮಾತಾಡುವ ಕೆಲವು ಭಾಷೆಗಳ ಒಂದು ಪಟ್ಟಿ ನೀಡಿದ್ದೇನೆ.

ಭಾಷೆ ಲಕ್ಷಗಳಲ್ಲಿ
ಬುರ್ಯಾತ್
ಯಾಕೂಟ್
ಕಾರಾಕಲ್ಪಕ್
ಕಾಮಿಕ್
ಗಾಗೋಜ್
ಕಲ್ಮೈಕ್
ತುವಿನಿಯನ್
ಬಾಕಾಸ್
ಅಲ್ಪಾಯಿಕ್
ನೊಗಾಯ್ ೫೧, ೦೦೦
ಎವೆರಿಕ್ ೫೦,೦೦೦
ನಾನಾಯ್ ೧೦,೦೦೦

ಈ ಭಾಷೆಗಳಿಗೆ ಬರವಣಿಗೆಯ ಸಾಹಿತ್ಯ ಹಾಗೂ ಮಕ್ಕಳ ಪ್ರೈಮರಿ ಶಾಲೆ – ಇಷ್ಟನ್ನು ನೀಡಿದ್ದಾರೆ. ಕೆಲವಲ್ಲಿ ಹೈಸ್ಕೂಲ್ ಶಿಕ್ಷಣ ನೀಡುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಪೇಪರ್, ರೇಡಿಯೋ, ಟಿ.ವಿ. ಕಾರ್ಯಕ್ರಮ ನೀಡುತ್ತಿದ್ದಾರೆ.

ರಶಿಯಾ ದೇಶದ ಸಂಕಲ್ಪಶಕ್ತಿ ನಮಗೆ ಭಾಷೆಯ ವಿಷಯದಲ್ಲಿ ಖಂಡಿತಾ ಇಲ್ಲ. ಮತ್ತೆ ಕಿರ್ಗಿಜಿಯದ ಕಥೆ ಹೇಳುತ್ತೇನೆ. ಅಲ್ಲ ಐದು ಲಕ್ಷ ಸಾಲಿನ ಮನಾಸ್ ಎಂಬ ಹೆಸರಿನ ಒಂದು ಮಹಾಕಾವ್ಯ ಇದೆ. ನಮ್ಮ ಮಹಾಭಾರತಕ್ಕೂ ದೊಡ್ಡದು. ಅದು ಬಾಯಿಯಿಂದ ಬಾಯಿಗೆ ಬಂದು ಈಗ ಅಕ್ಷರರೂಪಕ್ಕೆ ಇಳಿದಿದೆ. ಜನ ಅದನ್ನು ತಲೆ ಮೇಲೆ ಇರಿಸಿಕೊಂಡು ಅಭಿಮಾನಪಡುತ್ತಿದ್ದಾರೆ. ಎಲ್ಲಿ ನೋಡಿದರೂ ಅದರದೇ ನಾಟಕ, ಬ್ಯಾಲೆ, ಕಥೆ, ಕಾದಂಬರಿ ಕಾಣಸಿಗುತ್ತದೆ. ಸಂಸ್ಕೃತಿಯ ಬೇರನ್ನು ಹುಡುಕಿ ಹಿಡಿದು ಅದಕ್ಕೆ ನೀರೆರೆಯದೆ ಯಾವ ಪ್ರಗತಿಯೂ ಸಾಧ್ಯವಿಲ್ಲವೆಂಬ ಅರಿವು ಅವರಿಗೆ ಗಟ್ಟಿಯಾಗಿದೆ. ನಮಗೆ, ನಮಗೇನು ಕಡಿಮೆ ಇದೆ? ಪಾಡ್ದನಗಳನ್ನೆಲ್ಲ ಒಟ್ಟು ಮಾಡಿದರೆ ಅವು ಖಂಡಿತಾ ೫ ಲಕ್ಷ ಸಾಲುಗಳಿಂದ ಹೆಚ್ಚಾದೀತು. ಶಾಲಾ ಶಿಕ್ಷಣ ಪಡೆಯದವರು ಈ ಸಂಪತ್ತನ್ನು ತಮ್ಮ ಬಾಯಿಯೊಳಗೆ, ಜೀವದೊಳಗೆ ರಕ್ಷಣೆ ಮಾಡಿಕೊಂಡು ಬಂದರು. ನಾವು ಶಿಕ್ಷಣ ಪಡೆದವರು ವರ್ಷಾವಧಿ ಕೋಲ ನೇಮದ ದಿನ ಅವುಗಳನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುತ್ತಿದ್ದೇವೆ. ಯಾಕೆಂದರೆ ನಮಗೆ ಇದರ ಬೆಲೆ ಇನ್ನೂ ಗೊತ್ತಾಗಿಲ್ಲ. ಈಗ ಅಮೇರಿಕಾದ ಪ್ರೊಫೆಸರುಗಳು ಹುಡುಕಿಕೊಂಡು ಬಂದು ವರ್ಷಗಟ್ಟಲೆ ಈ ಭೂತಗಳ ಭಾಷೆಯಲ್ಲಿರುವ ಜಾನಪದ ಸಂಪತ್ತನ್ನು ವಿಶ್ಲೇಷಣೆ ಮಾಡಿ ನಮಗೇ ತಿರುಮಂತ್ರ ಹಾಕುತ್ತಿದ್ದಾರೆ. ಇಂತಹ ವಿಶಿಷ್ಟ ಸಂಪತ್ತನ್ನು ಕರ್ನಾಟಕ ರಾಜ್ಯ ಜಗತ್ತಿಗೇ ತನ್ನ ಕೊಡುಗೆಯೆಂದು ತಿಳಿದು ಇದಕ್ಕೆ ಧಾರಾಳ ನೆರವು ನೀಡಬೇಕು. ಇಲ್ಲವಾದರೆ ಇದು ಕಾಲದ ಮಹಾಪ್ರವಾಹದಲ್ಲಿ ಮುಳುಗಿ, ಕರಗಿ ಮಾಯ ಆಗಬಹುದು. ಧ್ವನಿಮುದ್ರಣ, ಫೊಟೋಗ್ರಫಿ ಇಂತಹ ಸೌಕರ್ಯದ ಯುಗದಲ್ಲಿ ಬದುಕಿರುವ ನಮಗೆ ಇದರ ರಕ್ಷಣೆ ಮಾಡುವುದು ದೊಡ್ಡ ಕಷ್ಟವೇನೂ ಆಗಲಾರದು. ಸಮಾಜದ, ಸರಕಾರದ ಶಕ್ತಿಯ ಒಂದು ಭಾಗ ಹಣದ ರೂಪದಲ್ಲಿ ಈ ಕೆಲಸಕ್ಕೆ ಸಿಗಬೇಕು.

ಅಕ್ಷರ ತಿಳಿಯದ ಲಕ್ಷಾಂತರ ಜನ ತುಳುನಾಡಿನಲ್ಲಿ ಇನ್ನೂ ಇದ್ದಾರಷ್ಟೆ! ಅವರ ಸಲುವಾಗಿ ತುಳುವಿನಲ್ಲಿ ಪಾಠ ಪ್ರವಚನ, ಭಾಷಣ ಮುಂತಾದ ಕಾರ್ಯಕ್ರಮಗಳು ಮಂಗಳೂರು ರೇಡಿಯೋದಲ್ಲಿ ಇನ್ನೂ ಹೆಚ್ಚು ಪ್ರಸಾರವಾಗಬೇಕು. ದೆಹಲಿಯ ಕಾರ್ಯಕ್ರಮ ಕೇಳುವವರು ದೆಹಲಿ ಸ್ಟೇಶನ್ ತಿರುಗಿಸಲಿ, ಪ್ರತಿ ರೇಡಿಯೋ ಸ್ಟೇಶನ್ ಕೂಡಾ ಅದನ್ನೇ ರಿಲೇ ಮಾಡುವುದು ಏತಕ್ಕೆ? ನಮ್ಮ ಸ್ಟೇಷನ್ ನಮ್ಮ ಪ್ರಾದೇಶಿಕ ಸಂಸ್ಕೃತಿಯ ಪ್ರಚಾರಕ್ಕಾಗಿ ಮಾಡಿದ್ದಾಗಿದೆ. ಇಲ್ಲಿ ತುಳುವಿಗೆ ಹೆಚ್ಚಿನ ಪ್ರಚಾರ ಸಮಯ ಸಿಗಬೇಕು.

ಪ್ರಾಥಮಿಕ ಶಾಲೆಯ ಮಟ್ಟದಲ್ಲಿ ತುಳುವನ್ನು ಮಕ್ಕಳಿಗೆ ಬೋಧಿಸುವಲ್ಲಿ ಸರಕಾರ ಬೆಂಬಲ ಕೊಡಬೇಕು. ತುಳು ಭಾಷಾ ಮಾಧ್ಯಮದ ಒಂದು ವಿಭಾಗ ತುಳುನಾಡಿನ ಶಾಲೆಗಳಲ್ಲಿ ಪ್ರಾರಂಭವಾಗಲಿ – ಕಾಲಕ್ರಮೇಣ ತುಳುವರಿಗೆ ತುಳುವಿನದೇ ಪ್ರಾಥಮಿಕ ಶಿಕ್ಷಣ ದೊರೆಯುವಂತಾಗಲಿ. ತುಳು ಕಲಿಸುವಾಗಲೇ ಕನ್ನಡವನ್ನು ಕಲಿಯುವ ವ್ಯವಸ್ಥೆ ಇರಲಿ. ಹೀಗೆ ಹೇಳುವಾಗ ನನಗೆ ಸ್ವಲ್ಪ ಹೆದರಿಕೆಯೂ ಆಗುತ್ತದೆ. ಕನ್ನಡವನ್ನು ಬಿಟ್ಟು ಹಳ್ಳಿಪಳ್ಳಿಗಳಲ್ಲಿ ಇಂಗ್ಲಿಷ್ ಶಾಲೆ – ಕಾನ್ವೆಂಟ್ ಶಾಲೆಗೆ ಮಕ್ಕಳನ್ನು ಕಳುಹಿಸುವ ‘ದೊಡ್ಡವರು’ ಇದಕ್ಕೆ ಏನು ಹೇಳಿಯಾರು? ಊರಿನ ದೊಡ್ಡ ಜನರು ಕನ್ನಡ ಶಾಲೆಗೂ ಇಂಗ್ಲಿಷ್ ಶಾಲೆಗೂ ಮಕ್ಕಳನ್ನು ಕಳುಹಿಸಿ ತುಳು ಶಾಲೆ ಬಡವರಿಗೆಂದಾವರೆ ಅರ್ಥಹೀನ ಕೆಲಸವಾದೀತು. ಆದುದರಿಂದ ಪ್ರಯೋಗದ ಮಟ್ಟದಲ್ಲಿ ನಾವು ಶಾಲೆ ಆರಂಭಿಸಿ ಅನುಭವ ಪಡೆದುಕೊಳ್ಳುಬೇಕೆಂದು ನನಗೆ ತೋರುತ್ತದೆ.

ಮಂಗಳೂರು ವಿಶ್ವವಿದ್ಯಾನಿಲಯ ತುಳುನಾಡಿನ ಜನರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆ ಆದುದು. ಇಲ್ಲಿ ತುಳುವಿಗೆ ಮಣೆ ಹಾಕಬೇಕು, ಹಾಗೇನೇ ಕೊಂಕಣಿ, ಕೊಡವಕ್ಕೂ ಹಾಕೋಣ. ಮೊದಲ ಕೆಲಸ, ಪಂಡಿತರ ಕೆಲಸ, ಅದರ ಜೊತೆ ಜೊತೆಗೆ ಸಾಹಿತ್ಯ ಸೃಷ್ಟಿಸುವ ಕೆಲಸವೂ ನಡೆಯಲಿ. ಪಾಡ್ದನಗಳ ದಾಖಲಾತಿ ಆಗಬೇಕು. ನಿಘಂಟಿಗೆ ಒಂದು ಶಾಶ್ವತ ನೆಲೆ ತೋರಿಸಬೇಕು. ಇದೀಗ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಇನ್ನು ೩-೪ ವರ್ಷಗಳಲ್ಲಿ ಸಿದ್ಧವಾಗುವ ನಿಘಂಟು ಐದೈದು ವರ್ಷಕ್ಕೊಮ್ಮೆ ಪರಿಷ್ಕೃತಗೊಂಡು ಬರಬೇಕಾಗುತ್ತದೆ. ನಮ್ಮ ಜನರಿಗೆ ನಿಘಂಟಿನ ಬಗ್ಗೆ ಸರಿಯಾದ ಕಲ್ಪನೆ ಇಲ್ಲದುದರಿಂದ ಯಾವಾಗ ತುಳು ನಿಘಂಟು ಮುಗಿಯುತ್ತದೆ, ಕಕಾರ ಆಯಿತೇ, ಬಕಾರಕ್ಕೆ ಬಂತೇ ಎಂದು ಕೇಳುತ್ತಾರೆ. ಬಾಯಿಯಲ್ಲಿ ಅಡಗಿರುವ ಶಬ್ದಗಳನ್ನು ಬಾಯಿಯಿಂದಲೇ ಕೇಳಿ, ಒಂದು ಶಬ್ದದ ನಾನಾ ಪ್ರಾದೇಶಿಕ ರೂಪಾಂತರಗಳನ್ನು ಹುಡುಕಿ ತೆಗೆದು ಅದಕ್ಕೆ ಅರ್ಥ ನಿರ್ಣಯಿಸಿ ಸಂದರ್ಭ ನೋಡಿ ಗಾದೆಗಳನ್ನು ಸೇರಿಸಿ ಹೊಸ ಮಾದರಿಯ ಅಂದರೆ ಈ ಇಪ್ಪತ್ತನೆಯ ಶತಮಾನದ ತುಳುವರು ‘ಎಂಚ ಪೊರ್ಲಾಂಡ್ಂದ್’ ಕೇಳುವಂತೆ ಮಾಡುವುದು ಕಷ್ಟದ ಕೆಲಸ. ಅದು ಕಾಲಾವಕಾಶ ಕೋರುವ ಕೆಲಸ – ಇದ ಒಂದು ಭಾಗ. ಎರಡನೆಯ ಭಾಗ ಈಗ ಒಂದು ನಿಘಂಟು ತಯಾರಾದ ಬಳಿಕ ಅದರ ಬೆನ್ನಿಗೆ ಅದನ್ನು ಪುನರಪಿ ಶೋಧನೆ ಮಾಡುವ ಕೆಲಸ ನಡೆಯಬೇಕು. ಅದು ಮತ್ತೆ ೫-೧೦ ವರ್ಷಕ್ಕೊಮ್ಮೆ ವಿಸ್ತಾರಗೊಂಡು ಹೊರಬರಬೇಕು. ಈ ಎರಡನೆ ಭಾಗದ ಕೆಲಸ ಆಗಬೇಕಾದರೆ ಆಗ ವಿಶ್ವವಿದ್ಯಾಲಯ ಮುಂದೆ ಬರಬೇಕು. ವಿಶ್ವವಿದ್ಯಾಲಯದಲ್ಲಿ ಆ ಕಾಲದಲ್ಲಿ ಒಂದು ನಿಘಂಟಿನ ವಿಭಾಗವೇ ತೆರೆಯುವಂತೆ ಸರಕಾರ ವಿಶೇಷ ಅನುದಾನ ಕೊಡಬೇಕಾದೀತು. ಮಲೆಯಾಳಂ ಭಾಷೆಗೆ ಹೀಗೆ ಏರ್ಪಾಟು ಮಾಡಿಕೊಂಡಿದ್ದಾರೆ. ತಿರುವನಂತಪುರದಲ್ಲಿ ಕೇರಳ ವಿಶ್ವವಿದ್ಯಾಲಯದಲ್ಲಿ ಶಾಶ್ವತವಾದ ಒಂದು ನಿಘಂಟಿನ ಘಟಕ ಕೆಲಸ ಮಾಡಿಕೊಂಡುಂಟು. ತುಳು – ಕೊಂಕಣಿ – ಕೊಡವಕ್ಕೆ ಆದ್ಯತೆ ನೀಡುವ ಸಲುವಾಗಿಯೇ ನಮ್ಮ ವಿಶ್ವವಿದ್ಯಾಲಯವನ್ನು ಮಂಗಳೂರಿಗೆ ಕರೆದುಕೊಂಡು ಬಂದುದೆಂದು ತಿಳಿಯೋಣ. ಅಲ್ಲಿನ ಕನ್ನಡ ವಿಭಾಗವನ್ನು ದೊಡ್ಡ ಭಾಷಾ ವ್ಯಾಸಂಗ ಕೇಂದ್ರವೆಂದು ಅದಕ್ಕೊಂದು ವಿಶಿಷ್ಟ ಸ್ಥಾನಮಾನ ನೀಡುವ ಅಗತ್ಯವುಂಟು.

ಹೀಗೆ ಪಂಡಿತ ಕೆಲಸ ಒಂದು ಕಡೆ ನಡೆದುಕೊಂಡು ಬರಲು ವ್ಯವಸ್ಥೆ ಮಾಡಿದಂತೆಯೇ ತುಳು ಭಾಷೆ, ಸಾಹಿತ್ಯ, ನಾಟಕ ಇತ್ಯಾದಿಗಳಿಗೆ ಪ್ರೋತ್ಸಾಹ ಕೊಡುವ ಸಲುವಾಗಿ ಒಂದು ಪ್ರತ್ಯೇಕ ತುಳು ಅಕಾಡೆಮಿಗೆ ಸರಕಾರ ಅವಕಾಶ ಮಾಡಿಕೊಡಬೇಕು. ಬೇಕಾದರೆ ಕೊಂಕಣಿ, ಕೊಡವ, ಲಂಬಾಣಿ ಈ ಮೂರು ಭಾಷೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನೂ ಈ ತುಳು ಅಕಾಡೆಮಿಗೆ ಒಂದು ಒಳ್ಳೆಯ ಹೆಸರು ನೀಡಿ ಕೆಲಸ ವಹಿಸಿಕೊಡಲಿ. ಇಲ್ಲಿಯ ತನಕ ಏನೂ ಮಾಡದ ಸರಕಾರ ಇದೊಂದು ಒಳ್ಳೆಯ ಕೆಲಸ ಸಣ್ಣ ಕೆಲಸಕ್ಕೆ ತೊಡಗಲಿ. ಕರ್ನಾಟಕದಲ್ಲಿ ರಾಜ್ಯಭಾಷೆ, ಆಡಳಿತ ಭಾಷೆ ಕನ್ನಡವೆನ್ನುವುದನ್ನು ಅಂಗೀಕಾರ ಮಾಡಿದ ಬಳಿಕವೂ ಉಳಿದ ಭಾಷೆಗಳಿಗೆ ಪ್ರೀತಿಯಲ್ಲಿ ಕೊಟ್ಟಂತೆ ‘ಪತ್ರಂ ಪುಷ್ಪಂ ಫಲಂ ತೋಯಂ’ – ಈ ಲೆಕ್ಕಾದಲ್ಲಾದರೂ ವರ್ಷಕ್ಕೆ ಕೆಲವು ಲಕ್ಷ ಕೊಟ್ಟುಕಂಡು ಬರಲಿ. ಅಷ್ಟು ಇಷ್ಟು ಎಂದು ನಾನು ಹೇಳಲಾರೆ. ಆದರೆ ಒಂದು ೨೫ ಲಕ್ಷದಲ್ಲಿ ನಮ್ಮ ಖಾತೆ ಆರಂಭಿಸೋಣ ಆಗದೆ? ಒಂದು ಸಾವಿರ ಕೋಟಿಯ ಬಜೆಟ್ ಮಾಡುವ ಸರಕಾರಕ್ಕೆ ಈ ಬಗೆಯ ಸಾಂಸ್ಕೃತಿಕ ಕೆಲಸಕ್ಕೆ ಇಪ್ಪತ್ತೈದು ಲಕ್ಷ ಹೆಚ್ಚೆಂದು ನನಗೆ ತೋರದು.

ಕರ್ನಾಟಕ ರಾಜ್ಯದಲ್ಲಿ ಎರಡು ಕೋಟಿ ಜನ ಕನ್ನಡ ಮಾತನಾಡುವವರು ಇದ್ದಲ್ಲಿ ಒಂದು ಕೋಟಿ ಜನ ಬೇರೆಯವರೂ ಇದ್ದಾರಷ್ಟೆ! ಅವರಿಗೂ ಒಂದು ಭಾಷೆಯಿದೆಯಷ್ಟೆ ! ಅದನ್ನು ಕನ್ನಡಿಗರು ತಮ್ಮ ತಾಯಿಯನ್ನು ಹೇಗೆ ಪ್ರೀತಿಸುವರೋ ಹಾಗೆಯೇ ಪ್ರೀತಿಸುವರಷ್ಟೆ. ಇದನ್ನು ಸರ್ಕಾರಕ್ಕೆ ತಿಳಿಸುವ ಸಲುವಾಗ ನಾವು ಅಲ್ಲಿ ಸಭೆ ಸೇರಿದ್ದೇವೆ.

೧೯೭೧ರ ಖಾನೇಶುಮಾರಿ ಪ್ರಕಾರ ಜನಸಂಖ್ಯಾ ವಿವರ ಹೀಗಿದೆ

ಕನ್ನಡ : ಸುಮಾರು ಎರಡು ಕೋಟಿ

ತುಳು : ೧೦.೪ ಲಕ್ಷ(ವಿಶೇಷವಾಗಿ ದಕ್ಷಿಣಕನ್ನಡದಲ್ಲಿ)

ಕೊಂಕಣಿ : ೩.೪ ಲಕ್ಷ

ಕೊಡವ : ೦.೭೦ ಲಕ್ಷ

ಏಕಭಾಷಾ ರಾಜ್ಯ ಏಕಭಾಷಾ ಜಿಲ್ಲೆ ಎಂದು ನಾವು ಎಷ್ಟು ಸಾರಿದರೂ ನಮ್ಮ ವಸ್ತು ಸ್ಥಿತಿ ದ್ವಿಭಾಷೆಯ (Bilingualism) ಸ್ಥಿತಿಯೇ ಆಗಿರುವುದನ್ನು ಗಮನಿಸಬೇಕು. ಹತ್ತು ಲಕ್ಷ ತುಳುವರಲ್ಲಿ ನಾಲ್ಕೂವರೆ ಲಕ್ಷ ಜನರಿಗೆ ಕನ್ನಡ ಬರುತ್ತದೆ. ಹನ್ನೊಂದು ಸಾವಿರ ಜನಕ್ಕೆ ಇಂಗ್ಲಿಷ್, ಮೂರು ಸಾವಿರ ಜನ ಮಲಯಾಳಂ ಬಲ್ಲವರಿದ್ದಾರೆ. ಬೇರೆ ಬೇರೆ ಭಾಷೆಗಳ ಜ್ಞಾನ ಒಂದು ವಿಶೇಷ ಶಕ್ತಿ – ಇದನ್ನು ಹಗುರವಾಗಿ ಪರಿಗಣಿಸಬಾರದು. ತುಳುನಾಡಿನ ಜನರ ಉದಾರ ಮನೋಧರ್ಮ ಯಾವತ್ತೂ ಉಳಿಯಬೇಕಾದ ಒಂದು ಗುಣ. ಅದನ್ನು ನನ್ನ ಗುರುಗಳೂ, ಕನ್ನಡದ ಉದ್ಧಾಮ ಪಂಡಿತರೂ ಆಗಿರುವ ಸೇಡಿಯಾಪು ಕೃಷ್ಣಭಟ್ಟರು ಹೀಗೆ ಹೇಳಿದ್ದಾರೆ ತುಳು ಕನ್ಯೆಗೆ ಈಗ ಯೌವನ ಬಂದಿದೆ. ಆಕೆಯ ಮುಖಮಂಡಲದಲ್ಲಿ ಮಂದಾರ ರಾಮಾಯಣದಂತಹ ಕಾವ್ಯದ ಮುದ್ದಣ(ಮುಖದ ಮೇಲಿನ ಗುಳ್ಳೆ) ಮುತ್ತಿನಂತೆ ಏಳಲು ಆರಂಭವಾಗಿದೆ. ಇನ್ನು ಸ್ವಲ್ಪ ಸಮಯದಲ್ಲಿ ದಕ್ಷಿಣ ಕನ್ನಡದಲ್ಲಿ ಕನ್ನಡ ಮಾತ್ರ ಶಾಲಾಭಾಷೆಯಾಗಿ ಇರದು ಎನ್ನುವುದನ್ನು ಕರ್ನಾಟಕವೂ ತಿಳಿದಿರಬೇಕು. ಈ ನಡುವೆ ನಮ್ಮ ಬದುಕಿನ ಪ್ರತಿ ಭಾಗವೂ ರಾಜಕೀಯದ ಕಾಯಿಲೆಗೆ ಸಿಗುವ ಸಂಭವ ಇರುವ ಕಾಲದಲ್ಲಿ ಹಿಂದಿನ ಕಾಲದಿಂದ ಲಗಾಯ್ತು ನಮ್ಮ ಜಿಲ್ಲೆಯಲ್ಲಿ ನೆಲೆಯಾಗಿರುವ ಭಾಷಾಬಾಂಧ್ಯವ್ಯಕ್ಕೆ ಯಾವ ರೀತಿಯಲ್ಲೂ ಊನ ಬಾರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ತುಳು – ಕನ್ನಡ – ಕೊಂಕಣಿ (ಕೊಡವನ್ನು ನಾನು ಇದರ ಜೊತೆ ಸೇರಿಸುತ್ತೇನೆ) ಸಮನ್ವಯ ಭಾವದಲ್ಲಿ, ಒಂದು ತಾಯಿಗೆ ಹುಟ್ಟಿದ ಸಹೋದರಿಯರಂತೆ ಬೆಳೆದು ಬರಬೇಕು.

ಈ ಹಿರಿಯರ ಆಸೆಯೇ ಈಗ ಸಮ್ಮೇಳನಕ್ಕೊಂದು ಆಶೀರ್ವಾದ ಎಂದು ತಿಳಿದುಕೊಳ್ಳಬೇಕು ಎಂದು ಹೇಳುತ್ತಾ ತುಳುವಿನ ಮಹಾನುಭಾವರಿಗೂ, ನನ್ನ ಸಮ್ಮುಖದ ಮಹಾಜನರಿಗೂ ಅವರ ಅಭಿಮಾನಕ್ಕೆ, ತಾಳ್ಮೆಗೆ ಇನ್ನೊಮ್ಮೆ ಧನ್ಯವಾದ ಹೇಳಿ ವಿದಾಯ ಕೋರುವೆ. ತುಳುಸಿರಿ ಏಳ್ಗೆ, ಸಿರಿಗನ್ನಡಂ ಗೆಲ್ಗೆ, ಭಾರತಂ ಬಾಳ್ಗೆ.*

 

* ೧೯೮೦ಫೆಬ್ರವರಿ೨೦ಮತ್ತು೨೧ರಂದುಬೆಂಗಳೂರಿನಲ್ಲಿಜರಗಿದಪ್ರಥಮಅಖಿಲಭಾರತತುಳುಸಾಹಿತ್ಯಸಮ್ಮೇಳನದಅಧ್ಯಕ್ಷಭಾಷಣದಕನ್ನಡರೂಪ.