೧೯೭೮ – ೧೯೮೮

(ii) ಪ್ರಸ್ತುತ ದಶಕದ ಅವಧಿಯನ್ನು ತುಳುಭಾಷೆಯ ನಿಶಾನೆಗೆ ನೀರು ಹಾರಿಸಿದ ಸುವರ್ಣ ಯುಗವೆನ್ನಬೇಕು. ‘ಅಭಿನವ ಪಣಿಯಾಡಿ’ ಎಂದು ಕರೆಯಲು ಯೋಗ್ಯರಾದ ಶ್ರೀ ಕು.ಶಿ. ಹರಿದಾಸ ಭಟ್ಟರು ಉಡುಪಿಯಲ್ಲಿ ಸದ್ದಿಲ್ಲದೆ ನಡೆಸಿದ ಕ್ರಾಂತಿಯೇ ಇದಕ್ಕೆ ಕಾರಣವೆಂದು ಎಗ್ಗಿಲ್ಲದೆ ಹೇಳಬಹುದು. ಮಣಿಪಾಲದ ಅಕಾಡೆಮಿಯವರು ಧರ್ಮಸ್ಥಳದ ಧರ್ಮಾಧಿಕಾರಿಗಳವರು, ತುಳುವ ಮಂತ್ರಿಗಳಾಗಿದ್ದ ಸುಬ್ಬಯ್ಯ ಶೆಟ್ಟಿ, ವೀರಪ್ಪ ಮೊಯಿಲಿ, ಡಾ. ಜೀವರಾಜ ಆಳ್ವ ಮುಂತಾದವರ ಸಹಕಾರದಿಂದ ತುಳು ನಿಘಂಟು ಯೋಜನೆ ಪ್ರಾರಂಭವಾಯಿತು. ಈ ಹತ್ತು ವರ್ಷಗಳಲ್ಲಿ ಎಷ್ಟೇ ಆಪತ್ತು ಬಂದರೂ ಎದುರಿಸಿ ಹರಿದಾಸ ಭಟ್ಟರು ಮಾಡಿಯೇ ಬಿಡುತ್ತೇನೆಂದು ಕೈ ಹಾಕಿದ ಕೆಲಸ ಫಲ ನೀಡಲು ಪ್ರಾರಂಭವಾಗಿದೆ. (ತೆಂಗು ನೆಟ್ಟವರು ಬಾಳೆಯಷ್ಟೇ ವೇಗದಲ್ಲಿ ಗೊನೆ ಸಿಗಬೇಕೆಂದು ಬಯಸುವುದು ಅವರ ಬುದ್ಧಿಯ ಮಟ್ಟವನ್ನು ತೋರಿಸುತ್ತದಲ್ಲದೆ ಬೇರೇನನ್ನೂ ಅಲ್ಲ). ತುಳುವಿಗೆ ಸಂಬಂಧಪಟ್ಟಂತೆ ನಡೆದ ಕೆಲಸಗಳು ಎಷ್ಟು ಬಗೆಯವು ಎಂಬುದನ್ನು ಅಲ್ಲಿಗೆ ಹೋಗಿ ನೋಡಿಯೇ ತಿಳಿಯಬೇಕು.

ತುಳು ಶಬ್ದಗಳನ್ನು ಸಂಗ್ರಹಿಸಲು ಹೊರಟವರು ಸಂಗ್ರಹಿಸಿದ ಗಾದೆಗಳೆಷ್ಟು? ನುಡಿಗಟ್ಟುಗಳು, ಪಾಡ್ದನಗಳೆಷ್ಟೆಷ್ಟು? ತುಳುವಿನ ರೀತಿ ರಿವಾಜುಗಳನ್ನು ಸಂಗ್ರಹಿಸಿ ದಾಖಲು ಮಾಡಿದರು. ತುಳುನಾಡಿನ ಎಲ್ಲಾ ಊರುಗಳಲ್ಲಿ ಸುತ್ತಿದರು. ಓಣಿ, ಗಲ್ಲಿ, ಕೊಪ್ಪ, ಚಾವಡಿ, ಬೂಡು, ಬಾವ, ಗುತ್ತುಗಳನ್ನು ಬಿಡಲಿಲ್ಲ. ಕೊರಗರು, ಮನ್ಸರು, ಪರವರು, ಪಂಬದರು, ಪೂಜಾರಿಗಳು, ಮಡಿವಾಳರು, ಕೆಲಸಿಗರು (ಕ್ಷೌರಿಕರು), ಮೂಲ್ಯರು (ಕುಲಾಲರು), ಗಾಣಿಗರು, ಕೊಟ್ಟಾರಿಗಳು, ಶೆಟ್ರು, ಭಟ್ರು, ಆಚಾರಿಗಳು, ಮರಾಠಿಗಳು ಮುಂತಾದ ಎಲ್ಲರನ್ನೂ ಮಾತನಾಡಿಸಿದರು. ಕೋಲ, ನೇಮ, ದರ್ಶನ, ನಾಗಮಂಡಲ, ಧ್ವಜಾರೋಹಣ, ರಥೋತ್ಸವ, ಢಕ್ಕೆ, ಬಲಿ, ಚೆಂಡು, ಆರಾಟ, ದೀಪದ ಬಲಿ, ಮೆಚ್ಚಿ ಮೊದಲಾದ ಉತ್ಸವಗಳನ್ನು, ಕೋಳಿ ಅಂಕ, ತಪ್ಪಂಗಾಯಿ, ಕಂಬಳ ಮೊದಲಾದ ಕ್ರೀಡೆ, ಆಟಗಳನ್ನು ನೋಡಿದರು. ಅವುಗಳನ್ನು ಬರಹ ಚಿತ್ರ ಧ್ವನಿಗಳ ಮೂಲಕ ಹಿಡಿದಿಟ್ಟಿದ್ದರು. ತುಳು ಕಡಲಿನಾಳಕ್ಕೆ ಮುಳುಗಿದರು. ಒಳಗಿದ್ದ ಮುತ್ತುರತ್ನಗಳನ್ನು ಹೆಕ್ಕಿದರು.

ಮುತ್ತು – ರತ್ನಗಳ ಜೊತೆಗೆ ಕಸವೂ ಬರಬಹುದು. ಅವುಗಳನ್ನು ಹುಡುಕಿ ತೆಗೆದು, ಪ್ರತ್ಯೇಕಿಸಿ ಉತ್ತಮವಾದುದನ್ನು ಚಿನ್ನದ ಸರಿಗೆಯಲ್ಲಿ ಪೋಣಿಸಬೇಕಾದುದು ಕುಶಲಮತಿಯ ಕೆಲಸ. ಅದರ ಸೂಕ್ಷ್ಮವನ್ನು ಆತನೇ ಬಲ್ಲನು. ಪಾಲ್ತಾಡಿ ರಾಮಕೃಷ್ಣ ಆಚಾರ್, ಪುಂಡೂರು ವೆಂಕಟ್ರಾಜ ಪುಣಿಂಚತ್ತಾಯ, ವಾಮನ ನಂದಾವರ, ರತ್ನಕುಮಾರ ಎಂ., ಗೀತಾ ಸುರತ್ಕಲ್, ಪಾ.ವೆಂ. ಆಚಾರ್ಯ ಇವರು ‘ನಿನ್ನೆ’ ಕಾಲಘಟ್ಟದಲ್ಲಿ ಉತ್ತಮ ಕವಿತೆಗಳನ್ನು ಬರೆದವರು. ರಸಿಕ ಪುತ್ತಿಗೆ, ಅಮೃತ ಸೋಮೇಶ್ವರ, ಸಿ. ಹೊಸಬೆಟ್ಟು, ಏರ್ಯ ಲಕ್ಷ್ಮೀನಾರಾಯಣ ಆಳ್ವ, ದೇ. ಜವರೇಗೌಡ, ಕೆ. ಕುಶಾಲಪ್ಪ ಗೌಡ, ಬಿ. ರಾಮಚಂದ್ರ ರಾವ್, ಎಂ.ರಾಮ, ಪಿ.ಎಸ್.ರೈ, ರಾಮಕೃಷ್ಣ ಟಿ. ಶೆಟ್ಟಿ, ಸುನೀತಾ ಎಂ.ಶೆಟ್ಟಿ, ಎಸ್.ಕೆ. ಹಳಯಂಗಡಿ ಬಿ.ಪಿ. ಕಿಶೋರ್, ಅನಂತರಾಮ ಬಂಗಾಡಿ, ಪೊಳಲಿ ನಿತ್ಯಾನಂದ ಕಾರಂತ ಹೀಗೆ ಎಷ್ಟೋ ಮಂದಿ ತುಳುವಿನ ಕೆಲಸಕ್ಕೆ ಕೈ ಹಾಕಿದ್ದಾರೆ. ತುಳುವಿನಲ್ಲಿ ಬರೆಯುವುದು ಮಾತ್ರವಲ್ಲದೆ ತುಳುವಿನ ಕುರಿತಾಗಿ ಕನ್ನಡ – ಇಂಗ್ಲಿಷ್‌ಗಳಲ್ಲೂ ಬರೆಯುತ್ತಿದ್ದಾರೆ. ಬಿ.ಎ. ವಿವೇಕ ರೈಯವರು ತುಳು ಗಾದೆ ಮತ್ತು ಒಗಟುಗಳನ್ನು ಸಂಪಾದಿಸಿ ಕನ್ನಡ ಅರ್ಥದೊಂದಿಗೆ ಪ್ರಕಟಿಸಿದ್ದಾರೆ. ಯುವಪೀಳಿಗೆಗೆ ತುಳುವರ ಬಗೆಗೆ ಕೆಲಸ ಮಾಡಲು ಸಮರ್ಥ ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದಾರೆ. ಕೆ. ಚಿನ್ನಪ್ಪ ಗೌಡ, ಎ.ವಿ. ನಾವಡ, ಪೀಟರ್ ಜೆ. ಕ್ಲಾಸ್, ಶ್ರೀಕೃಷ್ಣ ಭಟ್ ಅರ್ತಿಕಜೆ ಮೊದಲಾದವರು ಈ ಹಾದಿಯಲ್ಲಿ ಮೌಲಿಕ ಕೆಲಸ ಮಾಡುತ್ತಿದ್ದಾರೆ. ಅಮೃತ ಸೋಮೇಶ್ವರ ಅವರು ಹೊಸ ಗಾದೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ವಾಮನ ನಂದಾವರ ಅವರು ಮರೆಗೆ ಸಂದಿರುವ ತುಳುವಿನ ಚಿಕ್ಕ ಚಿಕ್ಕ ಕತೆಗಳನ್ನು ಸಂಕಲಿಸಿ ಕೊಡುತ್ತಿದ್ದಾರೆ. ಹೊಸ ಹೊಸ ಒಗಟುಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಪ್ರಕಾಶನ ಸಂಸ್ಥೆಯೊಂದನ್ನು ಹುಟ್ಟುಹಾಕಿ ಹಲವಾರು ತುಳು ಕೃತಿಗಳನ್ನು ಅದರ ಮೂಲಕ ಹೊರತಂದಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದಲೂ ಅನೇಕ ಪುಸ್ತಕಗಳು ಪ್ರಕಟವಾಗಿವೆ. ಮಾತ್ರವಲ್ಲದೆ ಅಲ್ಲಿಂದಲೇ ‘ತುಳುವ’ ಎಂಬ ಪತ್ರಿಕೆಯೂ ಪ್ರಕಟವಾಗುತ್ತಿದೆ. ತುಳು ನಿಘಂಟುವಿನ ಸಂಪಾದಕರಾದ ಉಪಾಧ್ಯಾಯ ದಂಪತಿಗಳು ಮಾಡಿದ ಕೆಲಸಕ್ಕೆ ತುಳುವರು ಎಂದೆಂದಿಗೂ ಋಣಿಗಳಾಗಿರಬೇಕು.

ಕುದ್ಕಾಡಿ ವಿಶ್ವನಾಥ ರೈಯವರು ತುಳುವಿಗಾಗಿ ದುಡಿದ ಓರ್ವ ಉತ್ಸಾಹಿ ಯುವಕ. ಕೆಲಿಂಜ ಸೀತಾರಾಮ ಆಳ್ವರು ಭಗವದ್ಗೀತೆಯನ್ನು ತುಳುವಿಗೆ ತಂದರು. ಅವರು ಮಹಾಭಾರತವನ್ನು ತುಳುವಿನಲ್ಲಿ ಬರೆಸಿದ್ದಾರೆಂದು ತಿಳಿದುಬಂದಿದೆ. ಕೆದಂಬಾಡಿ ಜತ್ತಪ್ಪ ರೈಯವರು ಶಿವರಾಮ ಕಾರಂತರ ‘ಚೋಮನ ದುಡಿ’ಯನ್ನು ಮೂಲಕ್ಕಿಂತಲೂ ಸೊಗಸಾಗಿ ಅನುವಾದ ಮಾಡಿದ್ದು ಅದು ಹೈದರಾಬಾದಿನಲ್ಲಿ ಪ್ರಕಟವಾಗಿದೆ. ನಿರಂಜನರ ‘ಚಿರಸ್ಮರಣೆ’ ಕಾದಂಬರಿಯನ್ನು, ‘ಶೂದ್ರ ಏಕಲವ್ಯ’ ನಾಟಕವನ್ನು ಅವರು ತುಳುವಿಗೆ ಅನುವಾದಿಸಿದ್ದಾರೆ ಮಾತ್ರವಲ್ಲದೆ ವಿಶ್ವಕವಿ ರವೀಂದ್ರನಾಥ ಠಾಗೂರರ ‘ಕಾಬೂಲಿವಾಲ’ವನ್ನು ರೂಪದಲ್ಲಿ ತುಳುವಿಗೆ ಭಾಷಾಂತರಿಸಿದ್ದಾರೆ.

‘ತುಳು ವಾಲ್ಮೀಕಿ’ ಎಂದೇ ಹೆಸರಾದ ಮಂದಾರ ಕೇಶದ ಭಟ್ಟರು ಭಾಸನ ಸ್ವಪ್ನ ವಾಸವದತ್ತ ನಾಟಕವನ್ನು ‘ಕನತ ಪೊಣ್ಣು’ ಎಂಬ ಹೆಸರಲ್ಲಿ ತುಳುವಿಗೆ ಭಾಷಾಂತರಿಸಿದ್ದಾರೆ. ಗಿರೀಶ್ ಕಾರ್ನಾಡರ ‘ಯಯಾತಿ’ ನಾಟಕವನ್ನು ಬಿ.ಪ್ರೇಮಾನಂದ ಕಿಶೋರ್ ಅವರು ಸೊಗಸಾದ ತುಳುವಿನಲ್ಲಿ ಭಾಷಾಂತರ ಮಾಡಿದರು. ಮುದ್ದು ಮೂಡುಬೆಳ್ಳೆಯವರಂತಹ ಯುವಪೀಳಿಗೆಯ ಅನೇಕರ ಕತೆ, ಕವನ, ನಾಟಕಗಳು ಬೆಳಕು ಕಾಣುತ್ತವೆ. ತುಳು ರಂಗಭೂಮಿ ಚಟುವಟಿಕೆಗಳು ನಡೆಯುತ್ತಿವೆ. ಮಂಗಳೂರಿನ ಪುರಭವನ, ಡಾನ್‌ಬಾಸ್ಕೊ ಹಾಲ್‌ಗಳಲ್ಲಿ ತುಳು ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಲಿದೆ. ಮುಂಬಯಿಯಲ್ಲಿರುವ ವಿಜಯಕುಮಾರ್ ಶೆಟ್ಟಿಯವರ ‘ಕಲಾಜಗತ್ತು’ ಕೂಡ ತುಳುನಾಟಕಗಳ ಜಯಭೇರಿ ಬಾರಿಸಿದೆ. ಅವರು ರಚಿಸಿದ ‘ಮಾರಿಗೊಂಜಿ ಕುರಿ’ ತುಳುನಾಡಲ್ಲಿ ಚಿತ್ರೀಕರಣಗೊಂಡು ಹಿಂದಿ ಧಾರವಾಹಿಯಾಗಿ ದೂರದರ್ಶನದಲ್ಲಿ ಪ್ರಸಾರವಾಯಿತು. ೧೯೮೮ರ ಸಪ್ಟಂಬರ್‌ನಲ್ಲಿ ತುಳುವಿನ ‘ಪೆಟ್ಟಾಯಿ ಪಿಲಿ’ ದೂರದರ್ಶನದಲ್ಲಿ ಪ್ರಸಾರವಾದಾಗ ಅದನ್ನು ನೋಡಿ ಖುಷಿಪಡದವರು ಯಾರಿದ್ದರು? ಆಕಾಶವಾಣಿಯಲ್ಲೂ, ದೂರದರ್ಶನದಲ್ಲೂ ತುಳು ಆಗಾಗ ಬರುತ್ತಿರಬೇಕೆಂಬುದು ತುಳುವರ ಆಶೆ.

೧೯೮೮ರಲ್ಲಿ ತುಳು ಚಳುವಳಿಗೆ ಕೋಡು ಮೂಡಿದ್ದು ಎರಡು ಮುಖ್ಯ ಕಾರಣಗಳಿಂದಲೇ.

ಒಂದು : ತುಳು ನಿಘಂಟಿನ ಮೊದಲ ಸಂಪುಟ ಮುದ್ರಣಗೊಂಡು ಬಿಡುಗಡೆಯಾದುದು ಅ್, ಅ, ಆ, ಇ, ಈ ಎಂಬ ಐದು ಸ್ವರಗಳ ಪದಗಳಿಗೆ ೩೬೦ರಷ್ಟು ಪುಟಗಳು ಬೇಕಾದವು. ಉಳಿದೆಲ್ಲ ಸಂಪುಟಗಳು ಪ್ರಕಟಗೊಂಡಾಗ ಇದು ಲೋಕದ ದೊಡ್ಡ ಭಾಷಾನಿಘಂಟುಗಳ ಸಾಲಿನಲ್ಲಿ ಎದ್ದು ಕಾಣುವ ನಿಘಂಟು ಎನಿಸುವುದರಲ್ಲಿ ಸಂಶಯವಿಲ್ಲ.

ಎರಡು: ಮಹಾಕಾವ್ಯದ ಕಾಲ ಕಳೆದುಹೋಯಿತು ಎನ್ನುತ್ತಿರುವಾಗಲೇ ತುಳು ಸಾಹಿತ್ಯದಲ್ಲಿ ಮಂದಾರ ಕೇಶವ ಭಟ್ಟರ ಲೇಖನಿಯಿಂದ ಮೂಡಿಬಂದ ೧೨೮೫೦ ಸಾಲುಗಳ ಸಮಗ್ರ ‘ಮಂದಾರ ರಾಮಾಯಣ’ ವನ್ನು ಬೆಳಗಾವಿಯ ದಿ. ಎಂ.ವಿ. ಸಾಮಗರ ಸಹಾಯದಿಂದ ವಜ್ರದೀಪ ಪ್ರಕಾಶನದವರು ಬೆಳಕಿಗೆ ತಂದರು. ಅದನ್ನು ಓದಿದ ಎಲ್ಲರೂ ಇದೊಂದು ಅದ್ಭುತವೆಂದರು. ಪ್ರಭವ ಸಂವತ್ಸರದಲ್ಲಿ ತುಳು ಸಾಹಿತ್ಯವೆಂಬ ತೌಳವ ಮಾಲೆಯ ದೇಗುಲಕ್ಕೆ ಉರಿಸಿದ ಬಂಗಾರದ ಕಳಸವೆಂದು ಕೊಂಡಾಡಿದರು. ಈ ಕೃತಿ ಪ್ರಕಟವಾದುದರಿಂದ ಆದ ಉಪಕಾರವೆಂದರೆ ತುಳುವನ್ನು ತಾತ್ಸಾರ ಮಾಡಲು ಸಾಧ್ಯವಿಲ್ಲವೆಂಬ ಅಭಿಪ್ರಾಯ ಮೂಡಿದುದು. ಹಾಗಾಗಿ ಇನ್ನು ಮುಂದೆ ಪ್ರತೀವರ್ಷ ತುಳುವರಲ್ಲಿ ಬಂದ ಒಂದು ಒಳ್ಳೆಯ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬಹುಮಾನ ನೀಡಲು ನಿರ್ಧರಿಸಿತು. ತುಳುವಿನಲ್ಲಿ ಉತ್ತಮವೆನಿಸುವ ಕೃತಿಗಳನ್ನು ಬರೆಯಲು ಇದು ಪ್ರೋತ್ಸಾಹ ನೀಡಿತೆಂಬುದರಲ್ಲಿ ಎರಡು ಮಾತಿಲ್ಲ.

ಬೇರೆ ಬೇರೆ ಊರುಗಳಲ್ಲಿ ತುಳುವರು ಒಂದಾಗಿ ತುಳುವರ ಸಂಘಗಳನ್ನು ಸ್ಥಾಪನೆ ಮಾಡುತ್ತಿದ್ದಾರೆ. ಬರೋಡಾ – ಮೀರಜ್‌ಗಳಲ್ಲಿ ತುಳು ಭವನ ನಿರ್ಮಿಸಲು ತಯಾರಿ ನಡೆಸುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಅಧ್ಯಯನಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆರ್ಥಿಕ ಸಹಾಯ ನೀಡಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲೂ ತುಳು ಪೀಠ ಸ್ಥಾಪನೆಗೆ ಅಲ್ಲಿನ ತುಳುವರು ಮುಂದಾಗಿದ್ದಾರೆ. ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಈಗ ತುಳುವಿನದ್ದೇ ಹೆಸರು. ನಾಟಕ, ಹರಿಕಥೆ, ಭಾಷಣ, ತಾಳಮದ್ದಳೆ, ಪುರಾಣ ಪ್ರವಚನಗಳಿಗೆ ಬಂದ ತುಳು ಇದೀಗ ಸಿನೆಮಾ, ಆಕಾಶವಾಣಿ, ಪತ್ರಿಕೆ, ಆಟ (ಯಕ್ಷಗಾನ), ಕ್ಯಾಸೆಟ್‌ವರೆಗೆ ತಲುಪಿದೆ. ತುಳು ನಾಟಕಗಳನ್ನು ಕೆ.ಎನ್.ಟೈಲರ್ ಅವರು ದುಬಾಯಿಗೆ ಕೊಂಡೊಯ್ದು ಪ್ರದರ್ಶಿಸುತ್ತಿದ್ದಾರೆ. ಕೊಲ್ಲಿ ರಾಜ್ಯಗಳಲ್ಲಿ ತುಳುವರು ತುಳುವಿನ ವಿಷಯದಲ್ಲಿ ಬಹಳಷ್ಟು ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಮೇಲೆ ವರ್ಷಕ್ಕೆ ಹತ್ತೈವತ್ತು ಪುಸ್ತಕಗಳು ಪ್ರಕಟಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

ಬಾ. ಸಾಮಗರು ಆಯಾ ಊರುಗಳು ಜನರ ಸಹಾಯದಿಂದ ಬೇರೆ ಬೇರೆ ಪಟ್ಟಣಗಳಲ್ಲಿ ಎರಡು ವರ್ಷಗಳಿಗೊಮ್ಮೆ ತುಳು ಸಮ್ಮೇಳನ ನಡೆಸುತ್ತಿದ್ದಾರೆ. ಅವರು ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ದಿ. ವಿಶುಕುಮಾರ್ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ತುಳು ಸಮ್ಮೇಳನದ ‘ಸೊಬಗು’ ಇನ್ನೂ ಕಣ್ಣೆದುರು ನಲಿಯುತ್ತಿದೆ. ಈಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಆಗಾಗ ತುಳುವಿಗೊಂದು ಮಣೆ ಸಿಗುತ್ತಲಿದೆ. ಇಂದು ಮತ್ತೊಮ್ಮೆ ತುಳು ಉತ್ಸವಕ್ಕಾಗಿ ಬಪ್ಪನಾಡಿನಲ್ಲಿ ಧ್ವಜಾರೋಹಣಗೊಂಡಿದೆ.

ನಾಳೆ

ನಿನ್ನೆ ಆಗಿಹೋದುದನ್ನು ನೋಡಿ, ಇಂದು ನಡೆಯುತ್ತಿರುವುದನ್ನು ಪರೀಕ್ಷೆ ಮಾಡಿ, ನಾಳೆ ತುಳು ಭಾಷೆ ಹೇಗಾಗಬೇಕು? ಎಂಬುದನ್ನು ನಾವು ಆಲೋಚನೆ ಮಾಡಬೇಕಾದುದು ಅತ್ಯಂತ ಅಗತ್ಯ.

ನಮಗೆ ತಿಳಿಸಿರುವ ಹಾಗೆ ಇದು ಒಂದು ಜಿಲ್ಲೆಯ (ಅವಿಭಜಿತ ದಕ್ಷಿಣ ಕನ್ನಡ) ಒಳಗಡೆ ಇರುವ ಜನರಾಡುವ ಭಾಷೆ. ಅದರಲ್ಲೂ ಒಂದು ತಾಲೂಕಿನಲ್ಲಿ ತುಳು ಇಲ್ಲ. ಉಳಿದೆಡೆಗಳಲ್ಲೂ ತುಳುವಿನ ಜತೆಗೆ ಕೊಂಕಣಿ, ಕನ್ನಡ, ಮರಾಠಿ, ಮಾಪಿಳ್ಳೆ… ಮುಂತಾದ ಭಾಷೆಗಳಿವೆ. ಈ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ, ದೇಶಗಳಿಗೆ ಹೋದವರು ಇನ್ನು ಕೂಡಾ ಅಲ್ಪಸ್ವಲ್ಪವಾದರೂ ಉಳಿಸಿಕೊಂಡು ಬಂದು ಆಡುತ್ತಿರುವ ಭಾಷೆಯಿದು. ಅಂದಾಜು ಮೂವತ್ತು ಲಕ್ಷದಷ್ಟು ಜನ ತುಳು ಭಾಷೆಯನ್ನು ಆಡುತ್ತಿದ್ದಾರೆ.

ಭಾಷೆಯನ್ನು ಉಳಿಸುವುದು ಮೊದಲನೆಯ ಕೆಲಸ. ಬೆಲೆಸುವುದು ನಂತರದ ಕೆಲಸ. ತುಳುವನ್ನು ಉಳಿಸುವ ಕೆಲಸ ಕಳೆದ ನೂರು ವರ್ಷಗಳಿಂದ ನಡೆದುಕೊಂಡು ಬಂದಿದೆ. ೧೯೨೮, ೧೯೬೮, ೧೯೭೮ – ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ತುಳು ಸಾಹಿತ್ಯವನ್ನು ಬೆಳೆಸುವ ಕಾರ್ಯ ಸ್ವಲ್ಪ ಮಟ್ಟಿಗೆ ಹೆಚ್ಚು ಭರದಿಂದಲೇ ನಡೆಯಿತು. ೧೯೮೮ ಅಂದರೆ ಈ ವರ್ಷ ತುಳುವಿನ ಬಹುದೊಡ್ಡ ಉತ್ಸವದ ಕಾಲವೆಂದೇ ಹೇಳಬೇಕಾಗುತ್ತದೆ. ಕಳೆದ ಹತ್ತು ವರ್ಷಗಳಿಂದೀಚೆಗೆ ತುಳುವಿನ ಬೆಳವಣಿಗೆ ಒಂದು ರೂಪವನ್ನು ಪಡೆದುಕೊಂಡಿದೆ. ಅದಕ್ಕೊಂದು ವ್ಯವಸ್ಥೆಯೂ ಆಗಿದೆ. ಸರಕಾರವು ಕೃಪೆ ತೋರಿ ಹಣ ನೀಡಲು ಒಪ್ಪಿಕೊಂಡಿದೆ. ೧೯೨೮ರಲ್ಲಿ ಪಣಿಯಾಡಿಯವರಿಗೆ ಗಣ್ಯರು ಸಮರ್ಥರು ಬೆಂಬಲ ನೀಡುತ್ತಿದ್ದಾರೆ. ಅವರು ಊರು ಬಿಡದೆ ಉಡುಪಿಯಲ್ಲೇ ಇರುತ್ತಿದ್ದರೆ… ಈ… ರೆ… ಅನ್ನುವುದು ಅಂತ್ಯವಿಲ್ಲದುದು. ಎಷ್ಟೆಷ್ಟೋ ಸಮರ್ಥರಾದ ವಿದ್ಯಾವಂತರಾದ ನಮ್ಮ ತುಳುವರು ನಾವು ಅಪೇಕ್ಷೆ ಪಟ್ಟ ಪ್ರಮಾಣದಲ್ಲಿ ತುಳುವಿನತ್ತ ಮನಸ್ಸು ಕೊಡಲಿಲ್ಲವೆಂಬುದನ್ನು ಈ ಉತ್ಸವದ ಸಂತಸದ ಸಂದರ್ಭದಲ್ಲಿ ಮರೆಯುವಂತಿಲ್ಲ.

ರತ್ನಾಕರವರ್ಣಿಯಿಂದ ತೊಡಗಿ ಈವತ್ತಿನ ತಕನ ಪ್ರಸಿದ್ಧಿಗೆ ಬಂದ ತುಳುನಾಡಿನ ಅದೆಷ್ಟೋ ಕನ್ನಡ ಕವಿಗಳು ತುಳುವಿನಲ್ಲಿ ಬರೆಯದಿದ್ದುದರಿಂದ ಆದ ನಷ್ಟವನ್ನು ಈಗ ಯೋಚಿಸಿ, ದುಃಖಿಸಿ ಫಲವಿಲ್ಲ. ಕಿಲ್ಲೆಯವರು, ಸಾಮಗರು, ಬಡಕಬೈಲಿನವರು, ತಲ್ಲಂಗಡಿಯವರು, ಶಾಸ್ತ್ರಿಗಳು, ಶೇಣಿಯವರು, ಅಚ್ಯುತದಾಸರು ಹೀಗೆ ಅದೆಷ್ಟೋ ಮಂದಿ ಪರಿಣತರು ಭಾಷಣ, ಹರಿಕಥೆ, ಪ್ರವಚನಗಳ ಮೂಲಕ ತುಳುವಿನ ಸೇವೆ ಮಾಡಿದರು! ಅಳಿಕೆ ರಾಮಯ್ಯ ರೈ, ಬೋಳಾರ ನಾರಾಯಣ ಶೆಟ್ಟಿ, ನಾರಂಪಾಡಿ ಸುಬ್ಬಯ್ಯ ಶೆಟ್ಟಿ, ಮಾಧವ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಮಂಕುಡೆ ಸಂಜೀವ ಶೆಟ್ಟಿ, ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ರಾಮದಾಸ ಸಾಮಗರಂತಹವರು ಯಕ್ಷಗಾನ ರಂಗದಲ್ಲಿ ತುಳುವಿಗೊಂದು ಗಾಂಭೀರ್ಯದ ಶೈಲಿಯನ್ನು ತಂದುಕೊ‌ಟ್ಟರು. ದೇವಸ್ಯ ರಾಮಣ್ಣ ಶೆಟ್ಟಿ, ಕೆ.ಎನ್.ಟೈಲರ್, ಕೆಮ್ತೂರು ದೊಡ್ಡಣ್ಣ ಶೆಟ್ಟಿ, ಮಿಜಾರು ಅಣ್ಣಪ್ಪ ಮುಂತಾದವರು ತುಳುವಿನಲ್ಲಿ ಹಾಸ್ಯವನ್ನು ತರುವುದು ಹೇಗೆ? ಸಂಸ್ಕೃತ ಕನ್ನಡಗಳ ಹಾಗೆ ತುಳುವಿನಲ್ಲೂ ಧ್ವನಿ ಹೊರಡಿಸುವುದು ಹೇಗೆ? – ಎಂಬುದನ್ನು ತೋರಿಸಿಕೊಟ್ಟರು. ಹೀಗೆ ಇದ್ದುದು ಹೌದಾದರೂ ಈ ನಾಣ್ಯದ ಇನ್ನೊಂದು (ಆಚೆಯ) ಮುಖ ಎಂತದೆಂಬುದನ್ನು ಮರೆಯುವಂತಿಲ್ಲ.

ತುಳು – ಕನ್ನಡದ ಕವಲಲ್ಲ. ಪಂಚದ್ರಾವಿಡ ಭಾಷೆಗಳಲ್ಲಿ ಒಂದು. ಉಳಿದ ನಾಲ್ಕು ಭಾಷೆಗಳನ್ನು ಆಡುವ ಜನರ ಸಂಖ್ಯೆ ಕೆಲವು ಕೋಟಿಗಳಲ್ಲಿರುವ ಆಯಾ ರಾಜ್ಯಗಳ ಜನಸಂಖ್ಯೆಗೆ ಸಮ. ಅವು ಎಷ್ಟೋ ಕಾಲದಿಂದ ಆಡಳಿತ ಭಾಷೆಯಾಗಿಯೂ, ವ್ಯಾವಹಾರಿಕ ಭಾಷೆಗಳಾಗಿಯೂ ಬಳಕೆಯಲ್ಲಿದ್ದುವು. ಅವುಗಳಿಗೆ ಸಾವಿರ ವರ್ಷಗಳ ಸಾಹಿತ್ಯ ಚರಿತ್ರೆಯಿದೆ. ಸ್ವಂತ ಲಿಪಿಯೂ ಇವೆ. ಇದು ಯಾವುದೂ ತುಳುವಿಗಿಲ್ಲ. ಹಾಗಾಗಿ ತುಳು ಭಾಷಿಕರು ತುಳುವನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸಿದರಾದರೂ ಅದರ ಉಪಯೋಗವನ್ನು ಹೆಚ್ಚಿಸಿಕೊಳ್ಳಲಿಲ್ಲ. ಬದಲಾಗಿ ವ್ಯವಹಾರಕ್ಕೂ ಕನ್ನಡ ಭಾಷೆಯನ್ನೇ ಬಳಸತೊಡಗಿದರು. ಚಿಕ್ಕಂದಿನಿಂದಲೇ ಕನ್ನಡ ಕಲಿಯುವುದು ಅಗತ್ಯವಾದ ಕಾರಣ ಮತ್ತೊಮ್ಮೆ ತುಳುವಿನಲ್ಲಿ ಬರೆಯುವ ಕಷ್ಟ ಯಾಕೆ? ಎಂಬುದಾಗಿ ಯೋಚಿಸಿದರು. ಹಾಗಾಗಿ ತುಳು ಕನ್ನಡದ ಮರೆಯಲ್ಲಿ ನಿಂತಿತು. ಕನ್ನಡ ಊಳಿಗದ ಭಾಷೆಯಾಯಿತು. ಗುತ್ತಿನ ಒಡತಿಯ ಬಡ ತಂಗಿಯು ತನ್ನ ಅಕ್ಕನ ಮನೆಯಲ್ಲಿ ಮುದುಡಿ ಕುಳಿತಂತೆ ತುಳುವಿನ ಸ್ಥಿತಿಯಾಯಿತು.

ಕಾಲಾನುಕ್ರಮದಲ್ಲಿ ಕೆಲವು ತುಳುವರು ತಮ್ಮ ಭಾಷೆಗಳಲ್ಲಿ ತುಳುವಿನಲ್ಲಿ ಮಾತಾಡುವುದನ್ನೇ ಬಿಡತೊಡಗಿದ್ದಾರೆ. ‘ಅಪ್ಪೆ’, ‘ಅಮ್ಮೆ’ ಹೋಗಿ ಅಪ್ಪ,ಅಮ್ಮ, ಪಪ್ಪ ಮಮ್ಮಿ – ಮಮ್ಮಿ, ಡ್ಯಾಡಿ… ಇಷ್ಟೇ ಆಗಿದ್ದರೆ ಯಾರೂ ಬೇಸರಪಟ್ಟುಕೊಳ್ಳುವ ಅಗತ್ಯವಿರಲಿಲ್ಲ. ಪೂರ್ಣ ಮಾತನ್ನೇ ಕನ್ನಡ ಅಥವಾ ಇಂಗ್ಲಿಷಿನಲ್ಲಿ ಮಾತನಾಡುವ ಸ್ಥಿತಿಗೆ ತಲುಪಲಾಗಿದೆ. ಇಂಗ್ಲಿಷ್ ಸರಿಯಾಗಿ ಬಾರದಿದ್ದರೆ ಡಿಬ್ಲೀಷ್ ಆದರೂ ಪರವಾಗಿಲ್ಲ. ಹೊರನಾಡುಗಳಲ್ಲಿ ಹೋಗಿ ನೆಲೆನಿಂತ ಎಷ್ಟೋ ತುಳು ಸಂಸಾರಗಳು ಮರಾಠಿ, ತಮಿಳು, ಕನ್ನಡ, ಹಿಂದಿ, ತೆಲುಗು, ಇಂಗ್ಲಿಷಿನಂತಹ ಭಾಷೆಗಳಲ್ಲೇ ಮಾತನಾಡಿ, ಮಾತನಾಡಿ ಅವರ ಮಕ್ಕಳಿಗೆ ತುಳು ಬರುವುದೇ ಇಲ್ಲ. ಹೆತ್ತವರು ತುಳುವನ್ನು ಬಳಸುವುದು ಮಕ್ಕಳಿಗೆ ಅರ್ಥವಾಗದ ಹಾಗೆ ಏನನ್ನಾದರೂ ಮಾತನಾಡುವುದು ಮಾತ್ರ. ಅದು ಬಿಟ್ಟು ಅವುಗಳಿಗೆ ಮಾತೃಭಾಷೆಯೇ ಗುಪ್ತಭಾಷೆಯಾಗುವುದು ವಿಪರ್ಯಾಸವಾದರೂ ಅಷ್ಟೇ ನಿ.) ಇದು ಹೀಗೆಯೇ ಮುಂದುವರಿದರೆ ತುಳು ನಮ್ಮ ಭಾಷೆಯೆಂಬುದನ್ನು ಈ ಜನ ಮರೆತು ಬಿಡಬಹುದೇನೋ ಎಂಬ ಆತಂಕ ನಮಗೆ.

ಹಾಗಾಗಿ ತುಳುವನ್ನು ಉಳಿಸುವ ಕೆಲಸವನ್ನು ಊರು – ಪರವೂರುಗಳಲ್ಲಿರುವ ಎಲ್ಲಾ ತುಳುವರು ಮನಸ್ಸಿಟ್ಟು ಮಾಡಬೇಕು. ನಮ್ಮ ಮಾತೃಭಾಷೆ ತುಳುವಾಗಿದ್ದರೂ ಮನೆಯಲ್ಲಿ ಕನ್ನಡ ಮಾತನಾಡುವವರು ತುಳುನಾಡಲ್ಲೇ ಇದ್ದಾರೆ. ಅಂತವರು ಈ ಕಡೆಗೆ ಸ್ವಲ್ಪ ಗಮನ ಹರಿಸಬೇಕು. ಮನೆಯಲ್ಲಿ ತುಳುವಿನಲ್ಲೇ ಮಾತನಾಡುವ ನಿಶ್ಚಯ ಕೈಗೊಳ್ಳಬೇಕು. ಊರಿನ ಮಣ್ಣಿನ ಋಣ ಕಡಿದುಹೋಗಿರಲೂ ಸಾಕು. ಆದರೆ ನಮ್ಮ ಹಿರಿಯರು ಇಲ್ಲಿನ ಗಾಳಿ, ನೀರು, ಮಣ್ಣು, ಅನ್ನ ತಿನಿಸುಗಳಿಂದಲೇ ಬೆಳೆದುಬಂದವರೆಂಬುದನ್ನು ನೆನಪಿಟ್ಟುಕೊಳ್ಳಬೇಕು. ಅಮ್ಮನನ್ನು ಮರೆತವರು ಮನುಷ್ಯರಲ್ಲವಂತೆ. ಮಾತೃಭಾಷೆಯನ್ನು ಮರೆತವರು ಅದೇ ರೀತಿಯಂತೆ. ರೂಪಾಯಿ – ಪೈಸೆಗಳ ಲೆಕ್ಕಾಚಾರದಲ್ಲಿ ತಾಯನ್ನು, ತಾಯ್ನುಡಿಯ ವ್ಯವಹಾರವನ್ನು ಕಾಣಲಾಗದು. ರಷ್ಯಾದಂತಹ ಭಾರೀ ಮುಂದುವರಿದ ಕಮ್ಯೂನಿಸ್ಟ್ ದೇಶದ ವಿಜ್ಞಾನಿ, ಜಪಾನಿನ ಸಾಧಕರು – ಇವರೆಲ್ಲಾ ಎಷ್ಟು ಕಲಿತಿದ್ದರೂ ಮಾತೃಭಾಷೆಯನ್ನು ಮರೆತವರಲ್ಲ. ನಮ್ಮ ಭಾಷೆಯನ್ನು ನಾವು ಎತ್ತಿ ಹಿಡಿಯುವುದು ಅಗತ್ಯವೆಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಎರಡನೆಯದಾಗಿ ತುಳುವನ್ನು ಬೆಳೆಸುವ ಕೆಲಸ. ಅದನ್ನು ವ್ಯವಹಾರಕ್ಕೆ ತರುವ ಕಾರ್ಯ ತಕ್ಷಣದಿಂದ ನಡೆಯಬೇಕಾಗಿದೆ. ಗೆಳೆಯ – ಗೆಳೆಯರಿಗೆ, ಗಂಡ – ಹೆಂಡತಿಯರಿಗೆ, ಮಕ್ಕಳು – ಅಪ್ಪ, ಅಮ್ಮಂದಿರಿಗೆ, ತಂಗಿ – ಅಕ್ಕನಿಗೆ ಬರೆಯುವ ಪತ್ರಗಳಲ್ಲಿ ಕನ್ನಡ, ಇಂಗ್ಲಿಷ್‌ಗಳ ಜಾಗದಲ್ಲಿ ತುಳು ಕಾಣಿಸಿಕೊಳ್ಳಬೇಕು. ಇಲ್ಲಿ ತನಕ ತುಳುನಾಡಿನ ವಿದ್ಯಾವಂತರು ಈ ಕಡೆಗೆ ಹೆಚ್ಚಿನ ಗಮನ ಹರಿಸಿಲ್ಲ. ಕೊಂಕಣಿಗರು ಲಿಪಿ ಯಾವುದನ್ನು ಬಳಸಿದರೂ ತಮ್ಮ ತಮ್ಮೊಳಗೆ ಪರಸ್ಪರ ಪತ್ರವ್ಯವಹಾರ ನಡೆಸಲು ಕೊಂಕಣಿ ಭಾಷೆಯನ್ನೇ ಬಳಸುತ್ತಾರೆ. ಕ್ರೈಸ್ತರು ತಲಾ ಶೇಕಡಾ ೭೫ರಷ್ಟು ಇದನ್ನು ಪಾಲಿಸುತ್ತಾರೆ. ನಮ್ಮ ಭಾಷೆಗೆ ಲಿಪಿಯಲ್ಲವೆಂದು ಸಂಕೋಚಪಟ್ಟುಕೊಳ್ಳದೆ ತುಳು ಭಾಷೆಯಲ್ಲೇ ಪತ್ರವ್ಯವಹಾರ ಪ್ರಾರಂಭ ಮಾಡಿದರೆ ಭಾಷೆಯ ಬೆಳವಣಿಗೆಗೆ ತನ್ನಿಂದ ತಾನೇ ಅನುಕೂಲ ಕಲ್ಪಿಸಿಕೊಟ್ಟಂತಾಗುತ್ತದೆ. ಪ್ರಾರಂಭದಲ್ಲಿ ಬರೆಯುವುದಕ್ಕೂ, ಓದುವುದಕ್ಕೂ ಕೆಲವರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಕೆಲ ದಿನಗಳಲ್ಲೇ ಎಲ್ಲಾ ಸರಿಹೋಗಬಹುದೆಂಬುದರಲ್ಲಿ ಸಂಶಯವಿಲ್ಲ. ಹೊರನಾಡುಗಳಲ್ಲಿರುವ ತುಳುವರಿಗೆ ತುಳುವಿನಲ್ಲಿ ಪತ್ರ ಬರೆದರೆ ಎಷ್ಟು ಖುಷಿಯಾಗುತ್ತದೆಂಬುದನ್ನು ನಾನು ಬ್ಯಾಂಕ್ ವ್ಯವಸ್ಥಾಪಕನಾಗಿದ್ದು, ಗ್ರಾಹಕರಿಗೆ ಬರೆಯುವ ಮೂಲಕ ಕಂಡುಕೊಂಡಿದ್ದೇನೆ. ಅದಲ್ಲದೆ ತುಳುನಾಡಿನ ಬೇರೆ ಬೇರೆ ಸಂಘ – ಸಂಸ್ಥೆಗಳ ನಡಾವಳಿಗಳನ್ನು ತುಳುವರ ವಿವಿಧ ಜಾತಿ ಸಂಸ್ಥೆಗಳ ನಡಾವಳಿಗಳನ್ನು ತುಳು ಭಾಷೆಯಲ್ಲೇ ಹೊರಡಿಸಲು ತೊಡಗಿದರೆ ಒಳಿತಾದೀತೆಂದು ನನ್ನ ಒಂದು ಸಲಹೆ.

ಮೂರನೆಯದಾಗಿ ತುಳುವಿನಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಬೇಕಾದ ಅಗತ್ಯ. ಓದುಗರ ಸಂಖ್ಯೆ ಕಡಿಮೆಯೆಂದು ಮನಸ್ಸು ಚಿಕ್ಕದು ಮಾಡಿಕೊಳ್ಳದೆ ಕೀಳರಿಮೆ ಪಟ್ಟುಕೊಳ್ಳದೆ ಕನ್ನಡದಲ್ಲಿ ಬರೆಯುತ್ತಿರುವ ತುಳುವ ಸಾಹಿತಿಗಳು ಕೊಂಚ ಮನಸ್ಸು ಮಾಡಿದರೆ ತುಳುವಿನಲ್ಲಿ ಎಂತೆಂತಹ ಮೌಲಿಕ ಕೃತಿಗಳು ಬರಬಹುದೆಂದು ಹೇಳಲು ಸಾಧ್ಯವಿಲ್ಲ !ಕಯ್ಯಾರರ ಕವಿತೆಗಳು ಬರಬೇಕು. ಬನ್ನಂಜೆಯವರ ಪ್ರವಚನಗಳ ಸಾರಾಂಶವನ್ನು ಸ್ವತಃ ಅವರೇ ತುಳುವಿನಲ್ಲಿ ಬರೆಯಬೇಕು. ಯಕ್ಷಗಾನ ತಾಳಮದ್ದಳೆಗಳೇ ತುಳುವಿನಲ್ಲಿ ನಡೆದು, ಅವರ ಸಾರ ಜನರ ಹೃದಯಕ್ಕೆ ನೇರವಾಗಿ ಪ್ರವೇಶಿಸಬೇಕು. ಇದಕ್ಕೆ ಸ್ವಲ್ಪ ಮಟ್ಟಿನ ತ್ಯಾಗವೂ ಅಗತ್ಯ. ಬಿ.ಎ.ವಿವೇಕ ರೈ, ಅಮೃತ ಸೋಮೇಶ್ವರ, ವಾಮನ ನಂದಾವರರಂಥ ಮಹನೀಯರು ಈ ಕೆಲಸಕ್ಕೆ ಕೈಹಾಕಿದ್ದಾರೆ. ತುಳುವಿನ ಹಿರಿಮೆಯನ್ನು ಅನ್ಯ ಪ್ರದೇಶಗಳರಿಗೆ ಪರಿಚಯಿಸುವ ಕೆಲಸವನ್ನು ಮಾಡಿದವರಲ್ಲಿ ರಾಷ್ಟ್ರಕವಿ ಗೋವಿಂದ ಪೈ, ಬಿ.ಎ.ಸಾಲೆತ್ತೂರು, ಎಂ.ಮರಿಯಪ್ಪ ಭಟ್, ಪಿ.ಗುರುರಾಜ್ ಭಟ್, ತೆಕ್ಕುಂಜ ಗೋಪಾಲಕೃಷ್ಣ ಭಟ್, ಕು.ಶಿ.ಹರಿದಾಸ ಭಟ್, ಸೇಡಿಯಾಪು ಕೃಷ್ಣ ಭಟ್, ಕೆ.ವಿ.ರಮೇಶ್ – ಮೊದಲಾದವರ ಹೆಸರು ಉಲ್ಲೇಖನೀಯ. ಈ ದಿಸೆಯಲ್ಲಿ ಇನ್ನೂ ಬಹಳಷ್ಟು ಕೆಲಸ ಆಗಬೇಕಾಗಿದೆ. ತುಳುವಿನ ಬುದ್ಧಿವಂತ ವಿದ್ವಾಂಸರು ಈ ಕೆಲಸಕ್ಕೆ ಕೈಹಾಕಬೇಕು. ಬಹುದೂರ ಸಾಗಬೇಕೆಂಬ ಧೈರ್ಯ ಬಂದಿದೆ. ತುಳುವಿನಲ್ಲಿ ಉತ್ತಮ ಪುಸ್ತಕಗಳು ಬಂದರೆ ಅದಕ್ಕೆ ರಾಜಮರ್ಯಾದೆ ಸಿಗುವ ಸಂದರ್ಭವೂ ಇದೆ.

ಇವರ ಜೊತೆಗೆ ನಮ್ಮ ತುಳು ಜನರ ಮೇಲೂ ಒಂದು ಜವಾಬ್ದಾರಿ ಇದೆ. ಮುದ್ರಣಗೊಂಡು ಬಂದ ಪುಸ್ತಕಗಳನ್ನು ವರ್ಷಾನುಗಟ್ಟಲೆ ಕಪಾಟುಗಳಲ್ಲಿಟ್ಟು ಹುಳು, ಜಿರಳೆ, ಒರಳೆ (ಗೆದ್ದಲು), ಇಲಿಗಳಿಂದ ರಕ್ಷಿಸಿಕೊಂಡು ಬರುವುದೇ ಒಂದು ಕೆಲಸವಾದರೆ ಎಷ್ಟು ಮಂದಿ ತಾವು ಬರೆದುದನ್ನು ಪ್ರಕಟಿಸಲು ಮುಂದೆ ಬಂದಾರು? ತುಳು ಆಟ, ನಾಟಕಗಳಿಗೆ ನೀಡುವ ಪ್ರೋತ್ಸಾಹದ ಶೇಕಡಾ ಒಂದರಷ್ಟಾದರು ತುಳು ಪುಸ್ತಕಗಳಿಗೆ, ಪ್ರತಿಕೆಗಳಿಗೆ ಸಿಗುವಂತಾದರೆ ಅವುಗಳು ಬದುಕಿಕೊಂಡಾವು. ತುಳುವಿನಲ್ಲಿ ಬರೆದ ಪುಸ್ತಕಗಳ ಒಂದು ಸಾವಿರ ಪ್ರತಿಗಳು ವರ್ಷದೊಳಗೆ ಖರ್ಚಾದರೆ ಬರೆಹಗಾರರಿಗೆ ಬರೆಯಬೇಕೆಂಬ ಉತ್ಸಾಹ ಇನ್ನಷ್ಟು ಹೆಚ್ಚಾಗುತ್ತದೆ.

ತುಳುಕೂಟ, ತುಳು ಸಂಘದವರು ತುಳು ಸಾಹಿತ್ಯವನ್ನು ಬೆಳೆಸುವತ್ತ ಗಮನ ಹರಿಸಬೇಕು. ಸಮ್ಮೇಳನಗಳಂತಹ ಉತ್ಸವಗಳಲ್ಲಿ ಪ್ರದರ್ಶಿಸಲು ‘ಒಳಗೆ ಗೋಳಿಸೊಪ್ಪು’ ಆದರೆ ಏನು ಫಲ? ಹಾಗಾಗಿ ಪ್ರತಿಯೊಂದು ಪುಸ್ತಕ ಹೊರಬರುವಾಗ ೧೦೦ ಪ್ರತಿಗಳನ್ನು ನಾವು ಮಾರಾಟ ಮಾಡಿಕೊಡುತ್ತೇವೆಂಬ ಧೈರ್ಯವನ್ನು ಎಲ್ಲಾ ಸಂಘ – ಸಂಸ್ಥೆಗಳವರೂ ನೀಡಿದರೆ, ವ್ಯಾಪಾರಿಗಳಿಗೆ ಕೊಡುವ ರಿಯಾಯಿತಿ ದರದಲ್ಲೇ ಅವರಿಗೂ ಪುಸ್ತಕಗಳನ್ನು ಒದಗಿಸಿದರೆ ಎರಡೂ ಕಡೆಯವರಿಗೂ ಪ್ರಯೋಜನವಾದೀತು. ಈಗ ತುಳುವಿನಲ್ಲಿ ಎಲ್ಲಾ ಬಗೆಯ ಸಾಹಿತ್ಯ ಕೃತಿಗಳೂ ರಾಶಿ ರಾಶಿ ಬರಬೇಕು. ಹಾಗೆ ಬಂದದ್ದರಲ್ಲಿ ನಾಲ್ಕು ಉತ್ತಮವೆನಿಸದಿರಲೂ ಸಾಕು. ಅಂಥದ್ದನ್ನು ಜನರೇ ಗುರುತಿಸುತ್ತಾರೆ. ಆದರೆ ಬರೆಯುತ್ತಿರುವಾಗಲೇ ಬಿಸಿ ನೀರೆರೆಯದೆ, ಮೊಳಕೆ ಕರಟಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ತುಳುವರು ವಹಿಸಿಕೊಳ್ಳಬೇಕು. ಮಿಠಾಯಿಯನ್ನು ಶುದ್ಧ ತುಪ್ಪ ಹಾಕಿಯೇ ಮಾಡಿದರೂ ಅದರ ಪರಿಮಳಕ್ಕೆ ಕೇವಲ ನೊಣಗಳಷ್ಟೆ ಬರುವಂತಾದರೆ ಆತ ಅಂಗಡಿ ಮುಚ್ಚಬೇಕಲ್ಲವೇ ನಮ್ಮ ತುಳು ವಿದ್ವಾಂಸರು ತುಳುವಿನಲ್ಲಿ ಬರೆಯಲು ಹಿಂದೇಟು ಹಾಕುತ್ತಿರುವುದು ಈ ಕಾರಣಕ್ಕಾಗಿಯೇ. ಕನ್ನಡದ ಕವಿಯೊಬ್ಬ ಬಹು ಹಿಂದೆಯೇ ಹೇಳಿದಂತೆ ಮಾರಾಟಕ್ಕಿಟ್ಟದ್ದನ್ನು ತೆಗೆದುಕೊಳ್ಳುವವರು ಬೇಕು, ಅಗತ್ಯ ಬೇಕು. ಅದಿಲ್ಲದಿದ್ದರೆ ಯಾವ ಭಾಷೆಯ ಬೆಳವಣಿಗೆಯೂ ಸಾಧ್ಯವಾಗದು. ಸಂಗೀತ ಕೇಳಬೇಕೆಂದು ಸಂಗೀತಗಾರರನ್ನು ಉಪವಾಸವಿರಿಸಿದರೆ ಮತ್ತೆ ಕೇಳಿಬರುವುದು ಆತನ ಹೊಟ್ಟೆಯೊಳಗಿನ ಹುಳುಗಳ ಸದ್ದು ಮಾತ್ರ.

ತುಳು ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದಲೇ ಪಣಿಯಾಡಿಯವರು ತುಳು ಸಾಹಿತ್ಯಮಾಲೆಯನ್ನು ಪ್ರಾರಂಭಿಸಿ, ಒಳ್ಳೊಳ್ಳೆಯ ಪುಸ್ತಕಗಳನ್ನು ತುಳುವರಿಗೆ ಒಪ್ಪಿಸಿದ ಉದಾಹರಣೆ ನಮ್ಮ ಮುಂದಿದೆ. ಈಗ ಮತ್ತೊಮ್ಮೆ ಅಂತಹುದೇ ಒಂದು ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಬೇಕಾದ ಅವಶ್ಯಕತೆಯಿದೆ. ತುಳುಪೀಠಕ್ಕಿಂತಲೂ ಮುನ್ನ ಆಗಬೇಕಾದ ಕೆಲಸವಿದು. ತುಳುನಾಡು, ಹೊರರಾಜ್ಯ, ಹೊರ ದೇಶಗಳಲ್ಲಿರುವ ತುಳುವರು, ತುಳು ಅಭಿಮಾನಿಗಳು ಸೇರಿ ಹತ್ತಿಪ್ಪತ್ತು ಲಕ್ಷ ರೂಪಾಯಿಗಳನ್ನು ಒಟ್ಟು ಮಾಡಿ ಅದರ ಬಡ್ಡಿಯಲ್ಲಿ ನಾಲ್ಕಾರು ಪುಸ್ತಕಗಳನ್ನು ಪ್ರಕಟಿಸಬೇಕು. ಸಾಧ್ಯವಾದರೆ ಇಬ್ಬರು – ಮೂವರು ಉದಯೋನ್ಮುಖ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಿ, ಅವರಿಗೆ ಪ್ರೋತ್ಸಾಹ ನೀಡಬೇಕು.

ಆಗಬೇಕಾದ ಇನ್ನೊಂದು ಅಗತ್ಯದ ಕೆಲಸವೆಂದರೆ ತುಳುವಿನಲ್ಲಿ ಸರಿಯಾಗಿ ಬರೆಯಲು ತರಬೇತಿ ನೀಡುವ ಕಮ್ಮಟಗಳನ್ನು ಏರ್ಪಡಿಸುವುದು. ಹೇಗಾದರೂ ಬರೆಯಲಿ, ತುಳುವರಲ್ಲವೇ? ‘ಹೆತ್ತವಳಿಗೆ ಹೆಗ್ಗಣ ಮುದ್ದು’ ಎಂಬ ಗಾದೆಯಂತೆ ! ಈ ಸ್ಥಿತಿ ಹೆಚ್ಚು ಕಾಲ ಮುಂದುವರಿಯುವುದು ಆರೋಗ್ಯದ ಲಕ್ಷಣವಲ್ಲ. ಭತ್ತ ಬೆಳೆದರೆ ಮಾತ್ರ ಅದರಲ್ಲಿ ಜಳ್ಳು ಯಾವುದೆಂದು ಹುಡುಕಿ ತೆಗೆಯಬಹುದು. ಇಲ್ಲವಾದಲ್ಲಿ ಭತ್ತದ ಗುರುತೇ ಮರೆತುಹೋದೀತು. ಅನ್ಯ ಭಾಷಿಕರು

ತುಳು ಅಂದರೆ ಇಷ್ಟೇನಾ? ಕನ್ನಡದ ಉಪರೂಪವೆ? ಹಿಂದಿನ ಧಾಟಿಯಲ್ಲಿ ಬರೆದ ಮಾತ್ರಕ್ಕೆ ಅದನ್ನೂ ಸಾಹಿತ್ಯವೆಂದು ಒಪ್ಪಿಕೊಳ್ಳಬೇಕೆ? ಎಂಬ ಅವಹೇಳನಕಾರಿ ಮಾತುಗಳನ್ನು ಕೇಳಬೇಕಾದೀತು. ಈ ರೀತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯಿಂದ ಕಮ್ಮಟವನ್ನು ಏರ್ಪಡಿಸಬೇಕು.

ತುಳುವಿಗೊಂದು ಸ್ವತಂತ್ರ ಲಿಪಿ[1], ತುಳುವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಲಿಸುವುದು, ಈ ರಾಜ್ಯಕ್ಕೆ ತುಳುನಾಡೆದಂದು ನಾಮಕರಣ ಮಾಡುವುದು[2] – ಇತ್ಯಾದಿಗಳೆಲ್ಲ ತುಳು ಭಾಷೆಯ ಬೆಳವಣಿಗೆಗೆ ಹೇಗೆ ಸಹಕಾರಿ ಎಂಬುದರ ಬಗೆಗೆ ವಿದ್ವಾಂಸರಾದವರು ವಿರಾಮದಲ್ಲಿ ಕುಳಿತು ಸಮಾಲೋಚನೆ ನಡೆಸುವುದೊಳ್ಳೆಯದು. ತುಳು ಭಾಷೆಗೊಂದು ಗ್ರಾಂಥಿಕ ರೂಪವನ್ನು ತಂದುಕೊಡುವುದು ಉತ್ತಮವೆಂದು ಅಭಿಪ್ರಾಯ. ತುಳುವಿನಲ್ಲಿ ಬರೆಯುವವರಿಗೆ ಪ್ರೋತ್ಸಾಹ ನೀಡಲೋಸುಗ ಉದಾರಿ ಸಂಘ – ಸಂಸ್ಥೆಗಳು, ಜನರು ಸೇರಿ ಕನ್ನಡದಂತೆಯೇ ಬೇರೆ ಬೇರೆ ಪ್ರಕಾರಗಳಿಗೆ ಬಹುಮಾನ ನೀಡಬೇಕು. ಅದರ ಮೊತ್ತ ಎಷ್ಟೆಂಬುದು ಮುಖ್ಯವಲ್ಲ; ಪ್ರೋತ್ಸಾಹ ಮುಖ್ಯ. ತುಳುಕೂಟದವರು ಧರ್ಮಸ್ಥಳದ ದಿ. ರತ್ನವರ್ಮ ಹೆಗ್ಗಡೆಯವರ ಹೆಸರಲ್ಲಿ ಉತ್ತಮ ನಾಟಕ ರಚನೆಗೆ ಪ್ರತಿವರ್ಷ ಬಹುಮಾನ ನೀಡುತ್ತಿದ್ದಾರೆ. ಕತೆ, ಕವಿತೆ, ಮಕ್ಕಳ ಕವಿತೆ, ವಿಚಾರ ಲೇಖನ – ಹೀಗೆ ವಿವಿಧ ಪ್ರಕಾರಗಳಿಗೆ ಬಹುಮಾನ ನೀಡಿದರೆ ಆಯಾ ಪ್ರಕಾರಗಳಲ್ಲಿ ಹೆಚ್ಚೆಚ್ಚು ಜನ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಸಾಧ್ಯವಾದರೆ ಮಹಿಳೆಯರಿಗಾಗಿ ಒಂದು ಬಹುಮಾನ ನೀಡಿದರೆ ಒಳಗಡೆಯಿರುವ ತೌಳವ ಮಾತೆಯರ ಲೆಕ್ಕಣಿಕೆಗಳು ಕನ್ನಡದಿಂದ ತುಳುವಿನತ್ತ ಹೊರಳಲೂ ಸಾಕು. ಶಾಲೆ, ಕಾಲೇಜುಗಳ ಮಕ್ಕಳಿಗಾಗಿ ತುಳುವಿನಲ್ಲಿ ಬರೆಯುವ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಬೇಕು.

ಈ ತೆರನಾದ ಸಲಹೆಗಳನ್ನು ಎಷ್ಟೋ ಕೊಡುತ್ತಾ ಹೋಗಬಹುದು. ಅವುಗಳಲ್ಲಿ ತಕ್ಷಣವೇ ಆಗಬೇಕಾದ ಈ ಕೆಲವನ್ನು ಎಲ್ಲಾ ತುಳುವರೂ ಸೇರಿ ನಡೆಸಲು ಮನಸ್ಸು ಮಾಡಿದರೆ ತುಳುವಿಗೆ ನಾಳೆ ಉತ್ತಮ ಭವಿಷ್ಯವಿದೆಯೆನ್ನುವುದರಲ್ಲಿ ಎಳ್ಳಿನ ಏಳು ಭಾಗದಷ್ಟು ಅನುಮಾನವಿಲ್ಲ.

ನಮ್ಮ ತೌಳವಮಾತೆ ಉಳ್ಳಾಲ್ತಿ, ತುಳುನಾಡ ದೇವಿ ರಾಜರಾಜೇಶ್ವರಿ ಮುಗುಳು ನಗೆಯ ಅದೊಂದು ಸೊಬಗಿನಿಂದ ಸುತ್ತಲೂ ಸ್ತುತಿಗೈಯ್ಯುತ್ತಿರುವ ತುಳುವರಿಗೆ ಒಳಿತಾಗಲೆಂದು ಅಭಯ ನೀಡುತ್ತಾ ಈ ಕಡೆ – ಈ ಕಡೆಗಿರುವ ಕನ್ನಡ, ಮಲಯಾಳಂ, ತೆಲುಗು, ತಮಿಳು ಅಕ್ಕಂದಿರ ಜೊತೆಗೆ ಭಾರತ ಮಾತೆಗೆ ತಲೆ ತಗ್ಗಿಸಿ ನಿಂತಿರುವ ಚೆಲುವನ್ನು ನಾವು ನೋಡಬೇಕು.

‘ಅಯ್ಯಯ್ಯ ಎಂಚ ಪೊರ್ಲಾಂಡೆ’ಂದು (ಅಯ್ಯಯ್ಯಾ ಎಂಥ ಚೆಲುವಾಯ್ತೆಂದು) ಎಲ್ಲರೂ ಕೊಂಡಾಟ ಮಾಡಿ ತುಳುವನ್ನು ಹೊಗಳಬೇಕು. ಇದು ನಮ್ಮ ‘ನಾಳೆ’.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಭಾಷೆಗೆಸ್ವಂತಲಿಪಿಯಾಗೆಅಗತ್ಯವೆಂಬುದನ್ನುಮುಕ್ತಮನಸ್ಸಿನಿಂದಬಿಡಿಸಿಬಿಡಿಸಿನೋಡಬೇಕಾದಅಗತ್ಯವಿದೆ. ಹೇಳುವವರು, ಕೇಳುವವರುಪೂರ್ವಗ್ರಹಿತಅಭಿಪ್ರಾಯಗಳನ್ನುಬದಿಗಿಟ್ಟುಸಮಾಧಾನದಿಂದಚಿಂತನೆನಡೆಸಬೇಕಾಗಿದೆ. ತುಳುನಾಡಿನಶಾಲೆಗಳಲ್ಲಿತುಳುವನ್ನುಕಲಿಸುವವಿಷಯಕ್ಕೂಇದುಅನ್ವಯವಾಗುತ್ತದೆ. ಬ್ರಿಟಿಷರಕಾಲದಲ್ಲಿತುಳುನಾಡಿನಶಾಲೆಗಳಲ್ಲಿಇನ್‌ಸ್ಪೆಕ್ಟರ್‌ಗಳುತುಳುವಿನಲ್ಲಿಪಾಠಮಾಡುತ್ತಿದ್ದುದರಬಗೆಗೆದಾಖಲೆಗಳಿವೆ.

[2] ಈಜಿಲ್ಲೆಗೆತುಳುನಾಡೆಂದುನಾಮಕರಣಮಾಡಬೇಕೆಂಬಕೂಗೆಬ್ಬಿಸಿದವರುಅದುದೇಶದ್ರೋಹವೆಂದುಕೆಲವುಕರ್ನಾಟಕರಿಗೆಅನಿಸುತ್ತದೆ. ತುಳುಮಯನಾಗಾಲ್ಯಾಂಡ್, ಗೂರ್ಖಾಲ್ಯಾಂಡ್ಹಾಗೆಪ್ರತ್ಯೇಕರಾಜ್ಯವನ್ನುಕೇಳುತ್ತಿಲ್ಲ.ಕರ್ನಾಟಕದಒಳಗಡೆಈಪಶ್ಚಿಮಕರಾವಳಿಯಜಿಲ್ಲೆಗೆ’ತುಳುಜಿಲ್ಲೆ’ ಎಂದುಹಿಂದೆಇದ್ದಹೆಸರನ್ನೇಮತ್ತೊಮ್ಮೆಇರಿಸುವಂತೆಕೇಳುತ್ತಿದ್ದರೆಂದುಬಿಡಿಸಿಹೇಳಿದರೂಅದುಅವರಕಿವಿಗೆಹೋಗುತ್ತಿಲ್ಲ. ಹಿಂದೆಕೊಡವರಿಗೆಕೊಡಗುರಾಜ್ಯವೆಂದುಪ್ರತ್ಯೇಕರಾಜ್ಯವಿತ್ತು. ೧೯೫೬ರಲ್ಲಿಆಡಳಿತದಅನುಕೂಲಕ್ಕಾಗಿಅಂದುಕೊಡಗುಜಿಲ್ಲೆಯೆನಿಸಿಕರ್ನಾಟಕದಒಳಗಡೆಸೇರಿಹೋಯಿತು. ಅಲ್ಲಿರುವವರುಕೊಡವರುಮಾತ್ರವಲ್ಲ. ಈ೨೩ವರ್ಷಗಳಅವಧಿಯಲ್ಲಿಕೊಡವರಿಂದಇತರರಿಗೆಏನುತೊಂದರೆಯಾಯಿತು? ಕೊಡಗುನಮ್ಮದೆಂದುಇತರರನ್ನುಅವರುತುಳಿದರೇ? ಇಲ್ಲ. ಬೇರೆಜಿಲ್ಲೆಗಳಲ್ಲಿರುವಂತೆಯೇಎಲ್ಲರೂಅಣ್ಣತಮ್ಮಂದಿರಹಾಗೆಬಾಳುತ್ತಿದ್ದಾರೆ. ಆದರೆಈಜಿಲ್ಲೆಗೆ’ಕೊಡಗು’ ಎಂಬಹೆಸರನ್ನುತೆಗೆದು’ಮಡಿಕೇರಿ’ ಎಂಬಹೆಸರನ್ನೇಇರಿಸುತ್ತಾರೆಯೇ? ಇಲ್ಲ. ಮಾತ್ರವಲ್ಲಅದುಅಸಾಧ್ಯಕೂಡಾ. ಹಾಗಿರುವಾಗತುಳುವರೇತುಂಬಿರುವಈಜಿಲ್ಲೆಗೆ’ತುಳುನಾಡು’ ಎಂಬ ನಾಮಕರಣಮಾಡಿದಮಾತ್ರಕ್ಕೆಆಗಬಹುದಾದಅನಾಹುತವಾದರೂಏನು? ಕೊಡವಭಾಷಿಕರೇಒಪ್ಪಿಕೊಂಡಿರುವಾಗಹಾಗೆಆಭಾಷೆಗಿಂತಬಹಳಷ್ಟುಮುಂದೆಸಾಗಿರುವತುಳುಭಾಷಿಕರತಮ್ಮಜಿಲ್ಲೆಗೆಹಿಂದಿನಕಾಲದಲ್ಲಿದ್ದ’ತುಳುನಾಡು’ ಎಂಬಹೆಸರನ್ನಿರಿಸಿಎಂದುಕೇಳುವುದುತೀರಾನಿರಪಾಯದಹಾಗೂನ್ಯಾಯಯುತಬೇಡಿಕೆ. ಬ್ರಿಟಿಷರಕಾಲದಲ್ಲಿತಮಿಳರರಾಜ್ಯಕ್ಕೆಸೇರಿಸಿಇದೀಗಏನೂಅರ್ಥವಿಲ್ಲದದಕ್ಷಿಣಕನ್ನಡಎಂದುಹೆಸರಿಸಿರುವುದನ್ನುತೆಗೆದು’ತುಳುನಾಡು’ ಎಂಬನ್ಯಾಯಯುತವಾದಹೆಸರಿನ್ನಿರಿಸಿಬಹುಕಾಲದಿಂದನಾವುನೋಡುತ್ತಾಬಂದಿರುವಂತೆತುಳುವರುಮೊದಲುಮಾನವ, ಆಮೇಲೆ, ದೇಶ, ಆಮೇಲೆಕನ್ನಡಎಂಬನೆನಪುಳ್ಳವರು.

ಈಬೇಡಿಕೆಯನ್ನು೧೯೨೮ರಲ್ಲಿನೋಡಿದಷ್ಟುಹಗುರವಾಗಿನೋಡದೆರಾಜಕೀಯದಲ್ಲಿರುವನಮ್ಮತುಳುವರುಸರ್ಕಾರದಮನವೊಲಿಸುವಅಗತ್ಯವಿದೆ. ಈಜಿಲ್ಲೆಯಲ್ಲಿರುವಅನ್ಯಭಾಷಿಕರನ್ನುಒಟ್ಟುಗೂಡಿಸಿಒಮ್ಮತದಿಂದಈಬೆಳವಣಿಗೆಯನ್ನುಸರ್ಕಾರದಮುಂದೆಪರಿಣಾಮಕಾರಿಯಾಗಿಮಂಡಿಸಿಆದಷ್ಟುಶೀಘ್ರದಲ್ಲಿಈಡೇರಿಸಿಕೊಳ್ಳಬೇಕಾಗಿದೆ. ಪ್ರಯತ್ನಮಾಡಿದರೆಯಾವಕೆಲಸವೂಸಾಧ್ಯಎಂಬುದಕ್ಕೆಈರಾಜ್ಯದಹೆಸರನ್ನು’ಕರ್ನಾಟಕ’ ಎಂದುಬದಲಾಯಿಸುವುದರಮೂಲಕದಿ.ದೇವರಾಜಅರಸುಅವರುತೋರಿಸಿಕೊಟ್ಟಉದಾಹರಣೆನಮ್ಮಮುಂದಿದೆ. ತುಳುನಾಡೆಂಬಹೆಸರುಕೇಳುವುದುತುಳುರಾಜ್ಯಕ್ಕೆಂದುಅಪಾರ್ಥಮಾಡಿಕೊಳ್ಳುವವರತ್ತಕಿವಿಗೊಡದೆಮತ್ತೆಮತ್ತೆತುಳುಸಮ್ಮೇಳನಗಳಲ್ಲಿಈಬೇಡಿಕೆಗೆಸಂಬಂಧಿಸಿದನಿರ್ಣಯಗಳನ್ನುಕೈಗೊಳ್ಳಲುಅವಕಾಶನೀಡದೆತೀರ್ಮಾನಕೈಗೊಳ್ಳುವಹೊಣೆಯನ್ನುನಮ್ಮಜಿಲ್ಲೆಯಎಲ್ಲಾರಾಜಕೀಯಮುಖಂಡರುಒಟ್ಟಾಗಿವಹಿಸಿಕೊಳ್ಳಬೇಕು. ಅವರಿಗೆಎಲ್ಲಾಗಣ್ಯರು, ಬುದ್ಧಿವಂತರು, ತುಳುವರುಬೆಂಬಲನೀಡಬೇಕೆಂದುವಿನಂತಿಸಿಕೊಳ್ಳುತ್ತೇನೆ.